ಉದಯಿಸುತ್ತಿರುವ ಸೂರ್ಯನೊಂದಿಗೆ ಹೆಜ್ಜೆಯಿಡುವ ತವಕದಲ್ಲಿ. ತೇರೂವೋ ಮೂಲ ಗೌರಿ ದೇಶಪಾಂಡೆ ಕನ್ನಡಕ್ಕೆ- ಚಂದ್ರಕಾಂತ ಪೋಲಳೆ ಬೆಲೆ-೮೦ ನನಗೆ ಬೇರೆ ಭಾಷೆಗಳಿಂದ ಅನುವಾದಗೊಂಡ ಕಾದಂಬರಿಗಳ ಹುಚ್ಚು ಹಿಡಿಸಿದ್ದು ಸೃಷ್ಟಿ ನಾಗೇಶರವರು. ಅವರ ಸೃಷ್ಟಿ ಪ್ರಕಾಶನ ಎಂದರೆ ಅನುವಾದಗಳಿಗಾಗಿಯೇ ಮೀಸಲಾಗಿರುವ ಪ್ರಕಾಶನ. ಜಗತ್ತಿನ ಅದ್ಭುತ ಕಾದಂಬರಿಗಳ ಅನುವಾದಗಳನ್ನು ನಾನು ಓದಿದ್ದು ಸೃಷ್ಟಿ ಪ್ರಕಾಶನದ ಪುಸ್ತಕಗಳಿಂದಾಗಿಯೇ. ತಮ್ಮ ಪ್ರಕಾಶನದ ಪುಸ್ತಕಗಳನ್ನು ತಲುಪಿಸುವ ಸೃಷ್ಟಿ ನಾಗೇಶ ಇದನ್ನು ಮೊದಲು ಓದಿ, ಈ ಪುಸ್ತಕ ಅದ್ಭುತವಾಗಿದೆ ಓದಿ ಎಂದೆಲ್ಲ ಸಲಹೆ ಮಾಡಿಯೇ ಕಳುಹಿಸುತ್ತಾರೆ. ಅವರ ಸಲಹೆ ಯಾವತ್ತೂ ತಪ್ಪಾಗಿದೆ ಎನಿಸಿದ್ದೇ ಇಲ್ಲ ನನಗೆ. ತೆರೂವೋ ಕಳಿಸಿದಾಗಲೂ ಅಷ್ಟೇ. ಅದರ ಜೊತೆ ಇನ್ನೂ ನಾಲ್ಕೈದು ಪುಸ್ತಕಗಳನ್ನು ಕಳುಹಿಸಿದ್ದರೂ ‘ಮೊದಲು ತೆರೂವೋ ಓದಿ ನಂತರ ಬೇರೆಯದ್ದನ್ನು ಓದಿ’ ಎಂದೇ ಕಳುಹಿಸಿದ್ದರು. ಅವರು ಹೇಳಿರುವ ಕಾರಣಕ್ಕಾಗಿಯೇ ಮೊದಲು ತೆರೂವೋ ತೆರೆದವಳು ಕಕ್ಕಾಬಿಕ್ಕಿಯಾಗಿದ್ದೆ. ನಾಗೇಶ್ ಯಾಕೆ ಈ ಪುಸ್ತಕ ಸಜೆಸ್ಟ್ ಮಾಡಿದ್ದಾರೆ ಎಂಬುದೇ ಅರ್ಥವಾಗದೇ ಅದೆಷ್ಟು ಕಂಗಾಲಾಗಿದ್ದೆ ಎಂದರೆ ನಾನೇನು ಓದುತ್ತಿದ್ದೇನೆ ಎಂಬುದೇ ನನಗೆ ಅರ್ಥವಾಗುವಂತಿರಲಿಲ್ಲ. ಅದೇನು ‘ಜಿ’? ಅದೇನು ತಿಂಗಳುಗಳ ಹೆಸರುಗಳು? ಅದ್ಯಾಕೆ ತೆರೂವೋಗೆ ಪತ್ರ ಬರೆಯಬೇಕು? ಮಧ್ಯೆ ಬರುವ ಈ ಜಿ ಆಕೆಗೆ ಏನಾಗಬೇಕು? ಯಾವುದೂ ಅರ್ಥವಾಗದೆ ಅಯೋಮಯದ ಓದಾಯ್ತಲ್ಲ ಇದು ಎಂದುಕೊಂಡಿದ್ದೆ. ಆದರೂ ನಾಗೇಶ್ ಓದಲು ಹೇಳಿದ್ದಾರೆ ಎಂದರೆ ಅದಕ್ಕೇನೋ ಅರ್ಥವಿದ್ದಿರಲೇಬಹುದು ಎಂದುಕೊಳ್ಳುತ್ತ ಮತ್ತೊಮ್ಮೆ ಓದಿದೆ, ಬರೀ ತೇರೂವೋಗೆ ಬರೆದ ಪತ್ರಗಳನ್ನು, ನಂತರ ಪ್ರಿಯ ಜೆ ಎಂದಿದ್ದದ್ದನ್ನು, ಮತ್ತೊಮ್ಮೆ ಬರಿದೇ ತಿಂಗಳುಗಳ ಹೆಸರಿರುವುದನ್ನು, ಇನ್ನೊಮ್ಮೆ ಅವಳ ಮಾತುಗಳನ್ನು ಓದಿಕೊಂಡೆ. ಆಗ ಶುರುವಾಯ್ತು ನೋಡಿ ಕ್ರಶ್. ಕಾದಂಬರಿಯ ಮೇಲಲ್ಲ, ಕಥಾನಾಯಕಿ ಹೇಳುವ ತೆರೂವೊ ಎಂಬ ಜಪಾನಿನ ಐವತ್ತು ವರ್ಷದ ವ್ಯಕ್ತಿಯ ಮೇಲೆ, ಅದರ ಜೊತೆಜೊತೆಗೇ ಕಥಾನಾಯಕಿಯ ನೇರವಾದ ಮಾತುಗಳ ಮೇಲೆ, ಪ್ರೀತಿಸಿದ್ದನ್ನು ಹಪಾಹಪಿಯಿಂದ ಪಡೆದುಕೊಳ್ಳುವುದರ ಮೇಲೆ, ಮತ್ತು ಪ್ರೀತಿಸಿದ್ದರೂ ಆ ಪ್ರೀತಿ ತನ್ನದಲ್ಲ ಎಂದು ಆಕೆ ಎಚ್ಚರಿಕೆ ವಹಿಸಿದ ರೀತಿಯ ಮೇಲೆ. ಇಡಿ ಕಾದಂಬರಿ ಮೊದಲ ಓದಿಗೆ ತಲೆಬುಡವೂ ಅರ್ಥವಾಗುವುದಿಲ್ಲ ಎಂಬುದು ನಿಜವಾದರೂ ಎರಡನೆಯ ಓದಿನ ನಂತರ ಆ ಪುಸ್ತಕ ಇಷ್ಟವಾಗುವುದರ ಜೊತೆಗೆ ತೆರೂವೋ ಮೇಲೆ ಪ್ರೀತಿ ಹುಟ್ಟದಿರಲು ಸಾಧ್ಯವೇ ಇಲ್ಲ. ಯಾಕೋ ನನಗೆ ಜಪಾನಿಯರ ಮೇಲೆ ಮೊದಲಿನಿಂದಲೂ ಪೂರ್ವಾಗ್ರಹ. ಬಹುಶಃ ಎರಡನೇ ಮಹಾಯುದ್ಧದ ಸಮಯದಲ್ಲಿ ಅವರು ಬಾಂಗ್ಲಾ ದೇಶದ ಮೇಲೆ ಹಾಗೂ ಆಗಿನ ಬರ್ಮಾ ಎಂಬ ಹೆಸರಿನ ಈಗ ಮಾಯನ್ಮಾರ್ ಎಂದು ಕರೆಯಿಸಿಕೊಳ್ಳುವ ಭೂಭಾಗದ ಮೇಲೆ ನಡೆಸಿದ ಪೈಶಾಚಿಕ ಕೃತ್ಯ ಯಾಕೋ ಮತ್ತೆ ಮತ್ತೆ ಕಣ್ಣೆದುರಿಗೆ ರುದ್ರನರ್ತನವನ್ನಾಡಿದಂತಾಗುತ್ತದೆ. ಇತಿಹಾಸದ ಓದು ಜಾಸ್ತಿಯಾದರೆ ಇಂತಹುದ್ದೊಂದು ಪೂರ್ವಾಗ್ರಹ ತಾನಾಗಿಯೇ ಮೂಡುತ್ತದೆಯೇ? ಕೆಲವು ದಿನಗಳ ಹಿಂದೆ ವಿಕಿ ಕ್ರುಕ್ ಬರೆದ ‘ಎಲಿಫಂಟ್ ಕಂಪನಿ’ ಓದುತ್ತಿದ್ದೆ. ಅಲ್ಲಿ ಜಪಾನಿಯರು ಯುದ್ಧ ಕೈದಿಗಳನ್ನು ನಡೆಸಿಕೊಳ್ಳುತ್ತಿದ್ದ ಭೀಕರ ಅನುಭವ ದಾಖಲಾಗಿತ್ತು. ಯುದ್ಧ ಕೈದಿಗಳನ್ನು ಮರಕ್ಕೆ ಕಟ್ಟಿಹಾಕಿ ಹರಿತವಾದ ಕತ್ತಿಯಿಂದ ಉದ್ದಕ್ಕೆ ಸೀಳಿಬಿಡುತ್ತಿದ್ದರಂತೆ. ನೆತ್ತಿಯಿಂದ ನಡುವೆ ಎರಡು ಭಾಗ ಮಾಡಿ ಎಸೆಯುತ್ತಿದರಂತೆ. ಸೆರೆ ಸಿಕ್ಕ ವಿರೋಧಿ ಸೈನ್ಯದ ಆನೆಗಳನ್ನು ಕೂಡ ಬಿಡದೆ ಕ್ರೂರವಾಗಿ ಹಿಂಸಿಸಿ ಕೊಲ್ಲುವ ಚಿತ್ರ ಈ ಪುಸ್ತಕ ಓದಿದ ನಂತರ ನನ್ನ ಮನದಲ್ಲಿ ಅಚ್ಚೊತ್ತಿಬಿಟ್ಟಿದೆ. ಹೀಗಾಗಿ ಜಪಾನಿಗಳು ಎಂದ ತಕ್ಷಣ ಪುಟ್ಟ ಕಣ್ಣಿನ, ಚಂದದ ನಗುವಿನ, ಕುಳ್ಳಗಿನ ಜನ ನೆನಪಾಗುವಂತೆಯೇ ಈ ಕ್ರೂರತನದ ಚಿತ್ರಣವೂ ಅದರ ಜೊತೆ ಜೊತೆಗೇ ನೆನಪಾಗಿ ಬಿಡುತ್ತದೆ. ಆದರೆ ತೆರೂವೋ ಓದಿದ ನಂತರ ನನ್ನ ಮನದೊಳಗೆ ಮೂಡಿದ್ದ ಜಪಾನಿಯರ ಚಿತ್ರ ಒಂದಿಷ್ಟು ಪಲ್ಲಟವಾಗಿ ಒಂದಿಷ್ಟು ಅಲ್ಲಲ್ಲ ತುಸು ಹೆಚ್ಚೇ ಎನ್ನಿಸುವಷ್ಟು ಪ್ರೇಮಮಯವಾದ ಒಂದು ಚಿತ್ರ ಕಾಣಿಸಿಕೊಂಡಿದ್ದಂತೂ ಸುಳ್ಳಲ್ಲ. ಬಹಳಷ್ಟು ಸಲ ನನ್ನನ್ನು ನಾನೇ ಕೇಳಿಕೊಳ್ಳುವುದಿದೆ. ಈ ಪ್ರೀತಿ ಪ್ರೇಮವೆಲ್ಲ ಯಾವತ್ತಾದರೂ ಹೇಳಿಕೇಳಿ ಹುಟ್ಟುತ್ತವೆಯೇ? ‘ಒಬ್ಬ ಇಷ್ಟವಾದ’ ಎಂದು ಹೆಣ್ಣು ಹೇಳುವುದಕ್ಕೆ ಅದೆಷ್ಟು ಒದ್ದಾಡಬೇಕು ಎಂದರೆ ಭಾರತೀಯ ಸಂಸ್ಕೃತಿಯಲ್ಲಿ ಈಗಲೂ, ಈ ಕ್ಷಣಕ್ಕೂ ಅದು ಅಸಾಧ್ಯವೇ. ನಾವು ತೀರಾ ಮುಂದುವರಿದಿದ್ದೇವೆ ಎಂದುಕೊಂಡ ಈ ಜಮಾನಾದಲ್ಲೂ ‘ಆತ ಇಷ್ಟವಾದ’ ಎಂದು ಬಾಯಿ ಮಾತಿಗೂ ಹೇಳುವುದು ಅಪರಾಧವೇ ಆಗಿದೆ. ಹಾಗೇನಾದರೂ ಹೆಣ್ಣೊಬ್ಬಳು ಹೇಳಿ ಬಿಟ್ಟರೆ ಈ ಸಮಾಜ ಅವಳನ್ನು ನೋಡುವ ದೃಷ್ಟಿಕೋನವೇ ಬೇರೆ. ನನ್ನ ಗೆಳತಿಯೊಬ್ಬಳು ಒಬ್ಬನನ್ನು ಇಷ್ಟಪಟ್ಟು, ಅದನ್ನು ಆತನ ಬಳಿ ಮುಚ್ಚುಮರೆ ಇಲ್ಲದೇ ಹೇಳಿಕೊಂಡು ಒದ್ದಾಡಿದ ಪರಿಯನ್ನು ತೀರಾ ಹತ್ತಿರದಿಂದ ನೊಡಿದ್ದೇನೆ. ಈ ಸಮಾಜ ರೀತಿ ರಿವಾಜುಗಳಿಂದಷ್ಟೇ ಅಲ್ಲ, ಅದು ಕಟ್ಟಳೆಗಳಿಂದ ತನ್ನನ್ನು ತಾನೇ ಬಿಗಿದುಕೊಂಡ ಬಂಧನ. ಹೀಗಾಗಿ ಯಾವ ಕಾರಣಕ್ಕೂ ಹೆಣ್ಣು ತನ್ನೊಳಗಣ ಪ್ರೇಮವನ್ನು ಬಿಚ್ಚಿಡುವಂತೆಯೇ ಇಲ್ಲ ಎಂಬುದು ಹಲವಾರು ಸಲ ಸಾಬೀತಾಗಿದೆ. ಹೆಣ್ಣು ಪ್ರೀತಿಸುವುದನ್ನು ಸಮಾಜ ಒಪ್ಪಿಕೊಳ್ಳಬಹುದು. ಆದರೆ ತಾನಾಗಿಯೇ ಮುಂದುವರೆದು ಪ್ರೀತಿಸುತ್ತೇನೆ ಎಂದರೆ ಅದನ್ನು ಯಾರಿಗಾಗಿ ಹೇಳಿದ್ದಳೋ ಆ ಹುಡುಗನೂ ಆಡಿಕೊಳ್ಳುವುದೆಂದರೆ ಅದೊಂದು ಹಿಂಸಾರತಿಯೆಂದೇ ನನಗೆ ಭಾಸವಾಗುತ್ತದೆ. ಪ್ರೀತಿಸಿ ಮದುವೆಯಾದವರನ್ನು ಕೇಳಿ ನೋಡಿ. ಅದರಲ್ಲೂ ಹುಡುಗಿಯೇ ಮುಂದುವರೆದು ಪ್ರೀತಿಸುತ್ತೇನೆ ಅಂದುಬಿಟ್ಟರಂತೂ ಮುಗಿದೇ ಹೋಯಿತು. ಪ್ರೀತಿಸುವಾಗೇನೋ ಖುಷಿಯಿಂದಲೇ ಪ್ರೀತಿಸುತ್ತಾರೆ. ಮದುವೆಯಾಗಲೂ ಅಂಂತಹುದ್ದೇನೂ ತಕರಾರು ಕಾಡುವುದಿಲ್ಲ. ಆದರೆ ಸಂಸಾರ ನಡೆಸುವಾಗ ಏನಾದರೂ ಮಾತಿಗೆ ಮಾತು ಬೆಳೆದರೆ ‘ನಂಗೊತ್ತಿಲ್ವಾ ನೀನೇನು ಅಂತ? ಯಾವ ಹೆಣ್ಣು ನಾಚಿಕೆ ಬಿಟ್ಟು ಪ್ರೀತಿಸ್ತೇನೆ ಅಂತಾ ಬರ್‍ತಾಳೆ? ನೀನಾಗೇ ಮೊದಲು ಪ್ರಪೋಸ್ ಮಾಡಿದಾಗಲೇ ನಾನು ಎಚ್ಚರಿಕೆ ವಹಿಸಬೇಕಾಗಿತ್ತು.’ ಎನ್ನುವ ತರಹದ ಮಾತುಗಳು ಬರುವ ಬಗ್ಗೆ ಹಲವಾರು ಸ್ನೇಹಿತೆಯರು ಅಂತರಂಗದಲ್ಲಿ ತೋಡಿಕೊಂಡಿದ್ದಾರೆ. ಅಂದರೆ ಪ್ರೀತಿಯನ್ನು ಹೇಳಿಕೊಳ್ಳುವುದಕ್ಕೂ ಈ ಸಮಾಜದಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ಇಲ್ಲದಿರುವಾಗ ಲೈಂಗಿಕತೆಯ ಬಗ್ಗೆ ಮಾತನಾಡಲು ಕನಿಷ್ಟ ಅವಕಾಶವೂ ಇಲ್ಲ ಎಂದರ್ಥ. ಆದರೆ ಅಚ್ಚರಿಯೆಂದರೆ ಅದು ಭಾರತವಿರಲಿ ಅಥವಾ ಜಪಾನ್ ಇರಲಿ, ಬಹುಶಃ ಪೌರಾತ್ಯ ದೇಶಗಳಲ್ಲಿ ಅಂತಹ ವ್ಯತ್ಯಾಸ ಕಂಡು ಬರುವುದಿಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಅಲ್ಪಸ್ವಲ್ಪವಾದರೂ ಧಾರಾಳತನ ದೊರಕಬಹುದೇನೋ. ಯಾಕೆಂದರೆ ಜಪಾನಿನಲ್ಲಿರುವಾಗ ನಮ್ಮ ಕಥಾ ನಾಯಕಿ ತನ್ನ ಗಂಡ ಜನಕನೊಡನೆ ಮೊದಲ ಸಲ ಪಾರ್ಟಿಗೆಂದು ಬಾರಿಗೆ ಹೋದಾಗ ಅಲ್ಲಿ ನೆರೆದಿದ್ದ ಗಂಡಸರಿಗೆಲ್ಲ ಅಚ್ಚರಿ. ಅಲ್ಲಿ ಪ್ರತಿಯೊಬ್ಬ ಗಂಡಸಿಗೂ ತನ್ನದೇ ಫೆವರಿಟ್ ಬಾರ್ ಇರುತ್ತದೆ. ಅದರ ಜೊತೆಗೇ ಕಂಪನಿ ಕೊಡಲು ಮಾಮಾಸಾನ ಮತ್ತು ಪ್ರತಿಯೊಬ್ಬರಿಗೂ ಕುಡಿತದ ಖುಷಿ ಅನುಭವಿಸಲು, ಖಾಲಿಯಾದ ಮಧು ಸೀಸೆಯನ್ನು ತುಂಬಿಸಲು, ಅಪ್ಪಲು, ಮುದ್ದಿಸಲು ಪೆವರಿಟ್ ಕಂಪಾನಿಯನ್ ಕೂಡ ಇರುತ್ತಾಳೆ. ಆದರೆ ಅವರೇ ನೇರವಾಗಿ ಹೇಳುವಂತೆ ಹೆಂಡತಿಯನ್ನು ಜೊತೆಗೆ ಕರೆದುಕೊಂಡು ಹೋಗುವ ಪದ್ದತಿ ಅಲ್ಲಿಲ್ಲ. ಹೆಣ್ಣೊಬ್ಬಳು ಬಾರಿಗೆ ಬರುವುದೇ ಅವರಿಗೆ ಹೊಸ ಆಲೋಚನೆ. ಆದರೆ ಅಲ್ಲಿಯ ಗಂಡಸೊಬ್ಬ ನಿಮ್ಮೊಂದಿಗೆ ಹರಟೆ ಹೊಡೆಯಲು ತುಂಬಾ ಉತ್ಸಾಹ ಬರುತ್ತದೆ. ಆದರೆ ನಾನು ಲಗ್ನವಾದರೆ ನಿಮ್ಮಂಥವರನ್ನು ಅಲ್ಲಪ್ಪ. ಹೆಂಡತಿ ಹೇಗಿರಬೇಕೆಂದರೆ, ಸಂತೋಷದಿಂದ ಮನೆಯಲ್ಲೇ ಕುಳಿತಿರಬೇಕು. ಎನ್ನುತ್ತಾನೆ. ಅಂದರೆ ಜಗತ್ತಿನ ಸುಖಗಳೆಲ್ಲವನ್ನೂ ಸೂರೆ ಹೊಡೆಯುವುದು ಗಂಡಸರ ಕೆಲಸ. ಆದರೆ ಹೆಣ್ಣು ಮಾತ್ರ ಮನೆಯೊಳಗೇ ಜಗದ ಸುಖವನ್ನೆಲ್ಲ ಕಲ್ಪಿಸಿಕೊಂಡು ಸಂತೃಪ್ತರಾಗಬೇಕು. ಆದರೆ ತೆರೂವೋದಲ್ಲಿ ಕಾದಂಬರಿಕಾರ್ತಿ ತುಂಬಾ ಮುಕ್ತವಾಗಿ ಹೆಣ್ಣಿನ ಬಾಯಿಂದ ಲೈಂಗಿಕ ಸ್ವಾತಂತ್ರ್ಯದ ಕುರಿತು ಹೇಳಿಸುತ್ತಾರೆ. ಕಾದಂಬರಿಯ ನಾಯಕಿಗೆ ಓಡಾಡುವ ಹೊಸ ಹೊಸ ದೇಶಗಳಿಗೆ ಪಯಣಿಸುವ ಮಹತ್ವಾಕಾಂಕ್ಷೆ. ಎಲ್ಲಿಗಾದರೂ ಪ್ರವಾಸ ಹೋಗುವುದನ್ನು ನಿರಾಕರಿಸುವುದೆಂದರೆ ಅದು ಮುದಿತನ ಆವರಿಸಿದಂತೆ ಎಂದೇ ಭಾವಿಸುವ ಸ್ವಚ್ಛಂದ ಮನಸ್ಸಿನ ಹೆಣ್ಣು. ಸ್ವತಃ ಆಕೆಯ ಗಂಡ ಒಂದೆಡೆ ತಮಾಷೆಯಿಂದ ‘ಅವಳು ಯಾರ ಯಾರ ಪ್ರೇಮದಲ್ಲಿ ಬಿದ್ದಿದ್ದಾಳೆ ಎಂಬ ಪಟ್ಟಿಯ ಆಧಾರದಿಂದ ಅವಳು ಯಾವ ಯಾವ ಸ್ಥಳ ನೋಡಿದ್ದಾಳೆಂದು ಪರೀಕ್ಷಿಸಬೇಕಾಗುತ್ತದೆ! ಟೋನಿ, ಯೊಹಾನ್, ಯೆಆಕಿಮ್ ಕುರ್ಟ, ಎಂಜೆಲೋ, ಪಾವುಲೋ, ನಿಕೋಣ, ಇವಾನ್. ಅಸಂಖ್ಯ ಪ್ರಾಣಿಗಳು ಅವರ ಜೊತೆಗೆ ಹಿಂದುಸ್ಥಾನದ ಜನರನ್ನು ಸೇರಿಸಿದರಂತೂ ನೋಡುವುದೇ ಬೇಡ! ಸಿಕ್ಕ ಸಿಕ್ಕವರನ್ನು ಪ್ರೀತಿಸುವ ಚಟವೇ ಬಿದ್ದಿದೆ ಅವಳಿಗೆ.’ ಎನ್ನುತ್ತಾನೆ. ಭಾರತೀಯ ಗಂಡನೊಬ್ಬ ಹೀಗೆ ಮುಕ್ತವಾಗಿ ಹೇಳಿಕೊಳ್ಳುವುದು ಅಸಂಭವವೇ ಆಗಿದ್ದಾಗಲೂ ಕೂಡ ಇದೊಂದು ತಮಾಷೆಯ ದಾಖಲಾತಿಯಾಗಿದ್ದರಿರಬಹುದೆಂದು ಕೊಂಡರೂ ಸ್ವತಃ ಕಥಾನಾಯಕಿ ಕೂಡ ಬೇರೆ ಬೇರೆ ದೇಶಗಳ ಗಂಡಸರ ಬಗ್ಗೆ ಮಾತನಾಡುತ್ತಾಳೆ. ಅದರಲ್ಲೂ ಆಕೆ ಜಪಾನಿನ ತೆರೂವೋ ಎನ್ನುವ ಯಾಮಾಹಾಸಾನನ ಪ್ರೀತಿಯಲ್ಲಿ ತೊಡಗಿಸಿ ಕೊಂಡಿದ್ದರ ಚಿತ್ರಣವಂತೂ ಅತ್ಯಪೂರ್ವ. ಅದಷ್ಟೇ ಆಗಿದ್ದರೆ ಅದೊಂದು ಅಪೂರ್ಣ ಚಿತ್ರಣವಾಗುತ್ತಿತ್ತು. ಅವಳು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ತೆರೂವೋ ಪ್ರೀತಿಸುವುದಿದೆಯಲ್ಲ ಅದು ಅತ್ಯದ್ಭುತ. ತೆರೂವೋ ಎನ್ನುವ ನಲವತ್ತೈದು ಐವತ್ತು ವರ್ಷದ ಮಧ್ಯವಯಸ್ಸನ್ನೂ ದಾಟಿದ ಪುರುಷನೊಂದಿಗೆ ನಲವತ್ತೈದರ ಕಥಾನಾಯಕಿಯ ಪ್ರೇಮ ನಮ್ಮೆಲ್ಲ ಹೊಸ ಪ್ರೇಮಕಥೆಗಳನ್ನೂ ನಾಚಿಸುವಂತಿದೆ. ತೆರೂವೊನ ದೇಹದ ಕಣಕಣವನ್ನೂ ಹೀರಿ ಒಂದು ತುತ್ತನ್ನು ಮಾಡಿ ನುಂಗಿ ಬಿಡಬೇಕು ಎನ್ನುವ ಆಕೆಯ ಮಾತು ಒಂದು ಕ್ಷಣ ಓದುಗನನ್ನು ಪ್ರೇಮದ ಕಡಲಲ್ಲಿ ಮುಳುಗಿ ಹೋಗುವಂತೆ ಮಾಡದಿರಲು ಸಾಧ್ಯವೇ ಇಲ್ಲ. ಹೀಗಾಗಿಯೇ Drink to me only with thine Eyes and I will pledge with mine Or leave a kiss within the cup And I’ll not look for wine ಎನ್ನುವ ಸಾಲುಗಳು ಅವಳಿಗಿಷ್ಟ. ಮತ್ತು ಅದನ್ನೆಲ್ಲ ತಿಳಿದ ನಂತರವೂ ತೆರೂವೋ ಅವಳನ್ನೆಷ್ಟು ಪ್ರೀತಿಸುತ್ತಾನೆಂದರೆ ಜಪಾನಿ ಕೌಟುಂಬಿಕ ನಿಯಮಗಳಿಗೆ ವಿರುದ್ಧವಾಗಿ ಅವಳನ್ನು ಪ್ರೀತಿಸುತ್ತಾನೆ, ಜಪಾನಿನ ಸಾಮಾಜಿಕ ನಿಯಮಗಳನ್ನು ಮೀರಿ ನಡುಮಧ್ಯಾಹ್ನವೇ ಕುಡಿದು ಮತ್ತೇರುವಷ್ಟು ಅವಳನ್ನು ಪ್ರೇಮಿಸುತ್ತಾನೆ. ಅಂತಹ ಪ್ರೇಮದಲ್ಲಿ ದೇಹ ಸಂಪರ್ಕವೆಂಬುದು ಅಷ್ಟೊಂದು ಪ್ರಧಾನವಾದ ವಿಷಯವೇ ಆಗುವುದಿಲ್ಲ. ಹಾಗೆಂದು ದೇಹದ ಮಿಲನವಾಗದೇ ಪ್ರೇಮ ಫಲಿಸುವುದೂ ಇಲ್ಲ. ಹೀಗಾಗಿಯೇ ಕಥಾನಾಯಕಿ ‘ಪರಸ್ಪರರ ಬಗೆಗಿನ ಭಾವವು ಅದೆಷ್ಟು ಸಂಪೂರ್ಣ ಮತ್ತು ಸರ್ವವ್ಯಾಪಿಯಾಗಿರುತ್ತದೆ ಎಂದರೆ ಪ್ರಣಯಕ್ರಿಯೆಯೂ ಸಹ ಅದರದ್ದೇ ಒಂದು ಭಾಗವಾಗಿ ಬಿಡುತ್ತದೆ. ಅದನ್ನು ಮಾಡುವುದಾಗಲಿ ಮಾಡದೇ ಇರುವುದಾಗಲಿ ಅಷ್ಟೊಂದು ಮಹತ್ವದ್ದಾಗಿ ಉಳಿಯುವುದಿಲ್ಲ. ಒಬ್ಬರು ಮತ್ತೊಬ್ಬರಿಂದ ಪಡೆಯುವುದು ಒಂದು ಬಗೆಯ ಅನುಭವವಾದರೆ, ಒಬ್ಬರು ಮತ್ತೊಬ್ಬರಿಗೆ ನೀಡುವುದು ಮತ್ತೊಂದು ಬಗೆಯ ಸುಖ.’ ಎನ್ನುತ್ತಾಳೆ. ಹೀಗೆಂದೆ ತನ್ನ ಮತ್ತು ಅವಳ ಪ್ರೇಮದ ಕುರಿತಾಗಿ ಅವಳ ಗಂಡನಿಗೆ ತಿಳಿದರೆ ಏನಾಗಬಹುದು ಎಂದು ತೆರೂವೋ ಕೇಳಿದಾಗ ‘ಅದಕ್ಕೂ ಜನಕನಿಗೂ ಏನು ಸಂಬಂಧ?’ ಎನ್ನುತ್ತಾಳೆ. ‘ಮದುವೆ ಮಾಡಿಕೊಂಡಿಲ್ಲವೇ?’ ಎಂದರೆ ‘ಮಾಡಿಕೊಂಡರೇನಾಯಿತು? ಇಂಥ ಭಾವನೆ, ಇಂಥ ಅನುಭವ, ಇಂಥ ಕೃತಿಯು ಅವನ ಮಾಲಿಕತ್ವದ್ದು ಆಗಿ ಬಿಡುತ್ತದೆಯೇ?’ ಎನ್ನುವ ಮಾತುಗಳು ಅವಳೆಷ್ಟು ಸ್ವತಂತ್ರ ಮನೋಭಾವದವಳು ಎಂಬುದನ್ನು ತೋರಿಸುತ್ತದೆ. ತನ್ನ ಪ್ರೇಮ, ತನ್ನ ಕಾಮ ತನ್ನ ವೈಯಕ್ತಿಕ ಮಾತ್ರ ಎನ್ನುವ ಅವಳ ಭಾವನೆ ನಿಜಕ್ಕೂ ಒಮ್ಮೆ ನಿಟ್ಟುಸಿರಿಡುವಂತೆ ಮಾಡುತ್ತದೆ. ಇದೆಲ್ಲದರ ನಡುವೆಯೂ ಅವಳ ಅಪ್ಪನ ಸ್ನೇಹಿತನಾದ ‘ಜಿ’ ಯನ್ನು ಆಕೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾಳೆ. ಅವರಿಬ್ಬರ ನಡುವಿನ ಸಂಬಂಧವೇ ಅಚ್ಚರಿ ಹುಟ್ಟಿಸುವಂತಹುದ್ದು. ಅವಳ ಎಲ್ಲ ಪ್ರೇಮ ಸಂಬಂಧಗಳ ಬಗೆಗೆ ಅರಿವಿರುವ ಜಿ ಕೂಡ ಅವಳನ್ನು ಆಳವಾಗಿ ಪ್ರೀತಿಸುವುದು ಅವಳ ಮಾತುಗಳಿಂದಲೇ ಅರಿವಾಗುತ್ತದೆ. ‘ನಾನೇನಾದರೂ ದೂರದ ದೇಶಕ್ಕೆ ಹೋದರೆ ಅದರಿಂದ ಕಂದಕವುಂಟಾಗುವುದು ಜಿ ಜೀವನದಲ್ಲಿ ಮಾತ್ರ’ ಎನ್ನುವ ಅವಳ ಮಾತುಗಳು ಈ ಸತ್ಯವನ್ನೇ ಹೇಳುತ್ತದೆಯಾದರೂ ಜಪಾನಿಗೆ ಹೋದ ಮೇಲೆ ಆಕೆ ತೆರೂವೋನ ಕುರಿತಾಗಿ ‘ಜಿ’ಯಲ್ಲಿ ಹೇಳಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ತೆರೂವೋ ಜೊತೆಗಿನ ಪ್ರೇಮವನ್ನು ಎದೆಯೊಳಗೇ ಮುಚ್ಚಿಟ್ಟುಕೊಂಡು, ಜೀವನಪೂರ್ತಿ ಒಬ್ಬಳೇ ಆಸ್ವಾದಿಸುವ ಆಸೆ
ಗುಂಡಪ್ಪೆಯ ಮಳೆಗಾಲ ಈ ಮಾವಿನಹಣ್ಣಿಗೂ ಮಳೆಗಾಲಕ್ಕೂ ಒಂಥರಾ ಅವಿನಾಭಾವ ಎನ್ನುವಂಥ ಸಂಬಂಧ. ಮೊದಲಮಳೆಯೆನ್ನುವ ಸಂಭ್ರಮ ನಮ್ಮೊಳಗೊಂದು ಹೊಸ ಚೈತನ್ಯ ತುಂಬುವ ಸಮಯದಲ್ಲಿ, ಸಕಲ ಸೊಬಗಿನ ದೇವಕನ್ಯೆಯೊಬ್ಬಳು ಭುವಿಗಿಳಿದಂತೆ ಮಾವಿನಹಣ್ಣೊಂದು ನೆಲಕ್ಕುರುಳುತ್ತದೆ. ಹೀಗೆ ಕಳಚಿಬಿದ್ದ ಮಾವಿನಹಣ್ಣಿನ ಮೇಲೆ ಮಳೆಹನಿಗಳೆಲ್ಲ ಮುತ್ತಿನಂತೆ ಹೊಳೆದು, ಗೌಜು-ಗದ್ದಲವಿಲ್ಲದ ಹೊಸ ಲೋಕವೊಂದು ಸೃಷ್ಟಿಯಾಗುತ್ತದೆ. ಹೀಗೆ ಗದ್ದೆಬಯಲಿನಲ್ಲೋ, ಬೆಟ್ಟದ ತುದಿಯಲ್ಲೋ ನಿರಾತಂಕವಾಗಿ ಹುಟ್ಟಿಕೊಳ್ಳುವ ಈ ಸೊಬಗಿನ ಪ್ರಪಂಚಕ್ಕೆ ಮಳೆಯೊಂದು ಜೀವ ತುಂಬುವ ಪರಿ ಅನನ್ಯ. ಮಳೆ ಆಗೊಮ್ಮೆ ಈಗೊಮ್ಮೆ ಅವಾಂತರಗಳನ್ನು ಸೃಷ್ಟಿಸಿದರೂ ಅದೊಂದು ಮಾಯೆಯಾಗಿ ಮೈ-ಮನಗಳನ್ನು ಆವರಿಸಿಕೊಂಡು ಹೃದಯವನ್ನು ಹಗುರಾಗಿಸುವ ಕ್ಷಣವೊಂದು ಎಲ್ಲರ ಜೀವನದಲ್ಲೂ ಇರುತ್ತದೆ. ಮುಂಗಾರು ನಮ್ಮೊಳಗೆ ಹುಟ್ಟಿಸುವ ಸಂಚಲನ ಎಷ್ಟೋ ಸಲ ಅದೆಷ್ಟು ತೀವ್ರವಾಗಿರುತ್ತದೆಯೆಂದರೆ ಹವಾಮಾನದ ವರದಿಗಳನ್ನೆಲ್ಲ ನಿರುಮ್ಮಳವಾಗಿ ಬದಿಗೊತ್ತಿ ಮೊದಲಮಳೆಗೆ ಕಾಯತೊಡಗುತ್ತೇವೆ. ಅಂಗೈಯನ್ನೋ, ಮುಖವನ್ನೋ ಅಥವಾ ಕೊನೆಪಕ್ಷ ದೃಷ್ಟಿಯನ್ನೋ ಮಳೆಗೊಡ್ಡಿ ನಿಲ್ಲುವ ಬಯಕೆಯೊಂದು ಎಲ್ಲರ ಎದೆಯೊಳಗೂ ಸದಾ ಜೀವಂತ. ಈಗಿನ್ನೂ ಪ್ರಪಂಚ ನೋಡುತ್ತಿರುವ ಮಗುವಿಗೆ ಮಳೆಯೊಂದು ವಿಸ್ಮಯವೆನ್ನಿಸಿದರೆ, ಪ್ರೀತಿ ತುಂಬಿದ ಹೃದಯವೊಂದು ಮಳೆಗೆ ಕವಿತೆಯಾಗಿ ಅರಳುತ್ತದೆ; ರೈತನೊಬ್ಬ ಭತ್ತವೊಂದು ಮೊಳಕೆಯೊಡೆವ ಕನಸ ಕಾಣತೊಡಗಿದರೆ, ಹಪ್ಪಳ-ಸಂಡಿಗೆಗಳೆಲ್ಲ ಸರತಿಯಲ್ಲಿ ಅಟ್ಟ ಹತ್ತಿ ಬೆಚ್ಚಗೆ ಕೂರುತ್ತವೆ; ಹಳೆಯ ಪಾರ್ಕೊಂದರಿಂದ ತೇಲಿಬಂದ ನೇರಳೆಹಣ್ಣಿನ ಬೀಜವೊಂದು ಬೇರುಬಿಡಲು ತವಕಿಸುತ್ತಿರುವಾಗ, ಪಾರ್ಕಿನ ಪಕ್ಕದ ಶಾಲೆಯೊಂದರಲ್ಲಿ ಕನಸುಗಳು ಅರಳುತ್ತವೆ. ಶಾಲೆ ಎನ್ನುವ ಜಾಗವೊಂದು ಜೀವನಕ್ಕೆ ಕಟ್ಟಿಕೊಡುವ ಮೌಲ್ಯಗಳು, ನೆನಪುಗಳು ಅಗಾಧ. ಜಗತ್ತನೆಲ್ಲ ಸುತ್ತಿ ಬಂದರೂ ಬಾಲ್ಯದ ನೆನಪುಗಳಿಗಾಗಿ ಹಂಬಲಿಸಿದಾಗಲೋ, ಹಳೆಯ ಕಾದಂಬರಿಯೊಂದನ್ನು ಓದಿದಾಗಲೋ ಅಥವಾ ಫೇಸ್ ಬುಕ್ ನಲ್ಲೆಲ್ಲೋ ಬಾಲ್ಯದ ಗೆಳತಿಯೊಬ್ಬಳು ಅಚಾನಕ್ಕಾಗಿ ಮಾತಿಗೆ ಸಿಕ್ಕಾಗಲೋ ಶಾಲೆ ಎನ್ನುವ ನಮ್ಮದೇ ಮುಗ್ಧ ಪ್ರಪಂಚವೊಂದನ್ನು ಆವಾಹಿಸಿಕೊಳ್ಳುತ್ತೇವೆ. ಆ ಪ್ರಪಂಚದಲ್ಲೊಂದಿಷ್ಟು ಬೆಟ್ಟದ ನೆಲ್ಲಿಕಾಯಿಗಳು ಬಾಯಲ್ಲಿ ನೀರೂರಿಸಿದರೆ, ಬಣ್ಣದ ರಿಬ್ಬನ್ನುಗಳು ಹೂವುಗಳಾಗಿ ಅರಳುತ್ತವೆ; ಬಾವಿಯ ಸಿಹಿನೀರು ತೆಂಗಿನಬುಡವನ್ನು ತಂಪಾಗಿಸಿದರೆ, ಮೇ ಫ್ಲವರ್ ಗಿಡವೊಂದು ಹೂವಿನ ಭಾರಕ್ಕೆ ಬಳುಕುತ್ತಿರುತ್ತದೆ; ಮಳೆಗಾಲವೊಂದು ಪಠಾಣ್ಸಿನ ಜೊತೆ ಕೊಡೆಯೊಂದಿಗೆ ಅಂಗಳಕ್ಕಿಳಿಯುತ್ತದೆ. ಮೊದಲಮಳೆಯೊಂದು ಮೊದಲಪ್ರೇಮದಂತೆ ಹೃದಯವನ್ನು ಅರಳಿಸಿದರೆ, ಮಳೆಗಾಲವೊಂದು ಮರೆತೂ ಮರೆಯದಂತಿರುವ ನೆನಪುಗಳನ್ನೆಲ್ಲ ತಂದು ಮಡಿಲಿಗೆ ಸುರಿಯುತ್ತದೆ. ಈ ಪಠಾಣ್ಸಿನ ಕಥೆ ಶುರುವಾಗುವುದು ಹೀಗೆ. ನಾನು ನಾಲ್ಕನೇ ಕ್ಲಾಸು ಮುಗಿಸಿ ಐದನೇ ಕ್ಲಾಸಿಗೆ ಕಾಲಿಟ್ಟ ಗರ್ವದ ಜೂನ್ ತಿಂಗಳು ಅದು. ಐದನೇ ಕ್ಲಾಸು ಎಂದರೆ ಅದರ ಗತ್ತು-ಗೈರತ್ತುಗಳೇ ಬೇರೆ. ಒಂದರಿಂದ ನಾಲ್ಕನೇ ಕ್ಲಾಸಿನ ಮಕ್ಕಳ ಎದುರಿಗೆ ಹೀರೋಗಳ ಚಮಕ್ಕನ್ನು ತೋರಿಸುತ್ತ, ಆರು ಮತ್ತು ಏಳನೇ ಕ್ಲಾಸಿನವರೆದುರಿಗೆ ಚಿಕ್ಕವರಂತೆ ಪೋಸ್ ಕೊಡುತ್ತ ಒಳ್ಳೆಯವರಾಗಿಬಿಡುವ ಜಾಣತನ ಐದನೇ ಕ್ಲಾಸಿಗೆ ಸಿದ್ಧಿಸಿರುತ್ತಿತ್ತು. ಗಾರ್ಡನ್ನಿಗೆಂದು ಅಂಗಳ ಹದಗೊಳಿಸುವ, ಬೆಳಿಗ್ಗೆ ಬೇಗ ಬಂದು ಕಸ ಗುಡಿಸಿ ಒರಸುವಂತಹ ಕೆಲಸವನ್ನೆಲ್ಲ ಆರು-ಏಳನೇ ಕ್ಲಾಸಿನವರು ವಹಿಸಿಕೊಳ್ಳುತ್ತಿದ್ದರು. ಗಾರ್ಡನ್ನಿನ ಕಳೆ ತೆಗೆಯುವುದು, ಕ್ಲಾಸ್ ರೂಮಿನ ಹೊರಗೆ ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದ ಚಪ್ಪಲಿಗಳನ್ನು ಜೋಡಿಸುವುದು ಇಂತಹ ಕೆಲಸಗಳೆಲ್ಲ ಮೂರು-ನಾಲ್ಕನೇ ಕ್ಲಾಸಿನ ಮಕ್ಕಳ ಜವಾಬ್ದಾರಿಗಳಾಗುತ್ತಿದ್ದವು. ಐದನೇ ಕ್ಲಾಸು ಮಾತ್ರ ಕ್ಲಾಸು ತಪ್ಪಿದರೆ ಆಟದ ಮೈದಾನಕ್ಕೆ ಇಳಿಯುತ್ತಿತ್ತು. ಇಂಥ ಸೌಕರ್ಯಕರ ಐದನೇ ಕ್ಲಾಸು ಶುರುವಾದ ಜೂನ್ ನಲ್ಲಿ ಮಳೆಗಾಲವೂ ಶುರುವಾಗಿತ್ತು. ಪುಟ್ಟಪುಟ್ಟ ಮಕ್ಕಳ ಬಣ್ಣದ ರೇನ್ ಕೋಟ್ ಗಳು, ಹೊಸಹೊಸ ಹಸಿರು-ನೀಲಿ ಸ್ಕರ್ಟ್ ಗಳು, ಆಗಷ್ಟೇ ಹಳ್ಳಿಗಳಿಗೆ ಕಾಲಿಟ್ಟಿದ್ದ ಬಟನ್ ಛತ್ರಿಗಳು ಎಲ್ಲದರ ಮಧ್ಯೆ ಇಡೀ ಶಾಲೆಯ ಗಮನ ಸೆಳೆದದ್ದು ಏಳನೇ ಕ್ಲಾಸಿನ ಹುಡುಗಿಯೊಬ್ಬಳ ಪಠಾಣ್ಸು. ಕಪ್ಪು ಬಣ್ಣದಲ್ಲಿ ಮಿರಮಿರ ಮಿಂಚುತ್ತಿದ್ದ ಆ ರಬ್ಬರಿನ ಚಪ್ಪಲಿಯೊಳಗೆ ಅವಳ ಇಡೀ ಪಾದ ಮುಳುಗಿಹೋಗಿ ನಾಲ್ಕು ಬೆರಳುಗಳು ಮಾತ್ರ ಒಂದಕ್ಕೊಂದು ಅಂಟಿಕೊಂಡು, ಹೊರಗಿನಿಂದ ನೋಡುವವರಿಗೆ ಉಸಿರುಗಟ್ಟಿ ಒದ್ದಾಡುತ್ತಿರುವಂತೆ ಕಾಣಿಸುತ್ತಿದ್ದವು. ಮಳೆಗಾಲಕ್ಕೆಂದೇ ವಿಶೇಷವಾಗಿ ತಯಾರಾಗಿದ್ದ ಆ ಚಪ್ಪಲಿಯಿಂದ ಒಂದೇ ಒಂದು ಹನಿ ನೀರು ಕೂಡಾ ಅವಳ ಸ್ಕರ್ಟಿಗೆ ಸಿಡಿದಿರಲಿಲ್ಲ. ಬೆನ್ನಿನವರೆಗೂ ಮಳೆಯ ನೀರು ಸಿಡಿದು ಸ್ಕರ್ಟಿನ ತುಂಬಾ ರಂಗೋಲಿಯ ಚುಕ್ಕಿಯಂತಹ ಮಣ್ಣಿನ ಕಲೆಗಳಾಗಿ ನೊಂದಿರುತ್ತಿದ್ದ ನಮಗೆಲ್ಲ ಪಠಾಣ್ಸಿನ ಮೇಲೆ ವಿಪರೀತ ಪ್ರೇಮ ಹುಟ್ಟಿಕೊಂಡಿತು. ಆ ಪ್ರೇಮದ ತೀವ್ರತೆ ಎಷ್ಟಿತ್ತೆಂದರೆ ಮಳೆಗಾಲ ಮುಗಿಯುವುದರೊಳಗೆ ನನ್ನ ಹಠಕ್ಕೆ ಮಣಿದು ಅಪ್ಪ ನನಗೂ ಒಂದು ಮಣ್ಣಿನ ಬಣ್ಣದ ಪಠಾಣ್ಸು ತಂದುಕೊಟ್ಟ. ಹೀಗೆ ಪಠಾಣಿ ಚಪ್ಪಲಿಯೊಂದು ಪಠಾಣ್ಸಾಗಿ ಮನೆಗೆ ಆಗಮಿಸಿ ಮಳೆಗಾಲದ ಮಜಾ ಇನ್ನಷ್ಟು ಹೆಚ್ಚಿತು; ನೀಲಿ, ಹಸಿರು ಸ್ಕರ್ಟುಗಳೆಲ್ಲ ಖುಷಿಯಿಂದ ಕುಣಿದಾಡಿದಂತೆನ್ನಿಸಿತು. ಪ್ರತೀವರ್ಷ ಮಳೆಗಾಲ ಮುಗಿದೊಡನೆ ಪ್ಲಾಸ್ಟಿಕ್ ಕವರಿನೊಳಗೆ ಸೇರಿದ ಪಠಾಣ್ಸು ಭದ್ರವಾಗಿ ಜಗಲಿಯ ಮೇಲಿನ ಗೂಡೊಂದನ್ನು ಸೇರಿಕೊಳ್ಳುತ್ತಿತ್ತು. ಹೀಗೆ ಹೈಸ್ಕೂಲು ಮುಗಿಯುವವರೆಗೂ ಪಾದದ ಬೆಳವಣಿಗೆಗನುಗುಣವಾಗಿ ಹಿಗ್ಗುತ್ತಾ, ನನ್ನ ಮಳೆಗಾಲದ ಚಟುವಟಿಕೆಗಳನ್ನೆಲ್ಲ ತಕರಾರಿಲ್ಲದೇ ಸಹಿಸಿಕೊಂಡ ಪಠಾಣ್ಸು ನೆನಪಿನ ಶೂ ರ‍್ಯಾಕ್ ನಲ್ಲಿ ಈಗಲೂ ಭದ್ರವಾಗಿದೆ. ಪಠಾಣ್ಸಿನ ಸಂಭ್ರಮದೊಂದಿಗೆ ಮಳೆಗಾಲದ ಇನ್ನೊಂದು ಮಜವೆಂದರೆ ಮಾವಿನಹಣ್ಣಿನದು. ಕೇರಿಯ ತುದಿಯಿಂದ ಶುರುವಾಗುವ ವಿಸ್ತಾರವಾದ ಗದ್ದೆಬಯಲಿನ ತುದಿಯಲ್ಲಿ ಮಾವಿನಮರಗಳ ಸಾಲೊಂದಿತ್ತು. ಆ ಮಾವಿನಮರಗಳ ವಿಶೇಷತೆಯೆಂದರೆ ಅವು ಮಳೆಗಾಲದಲ್ಲಿ ಉದುರಿಸುತ್ತಿದ್ದ ಅಪ್ಪೆಹಣ್ಣುಗಳು. ಅತ್ತ ಹುಳಿಯೂ ಅಲ್ಲದ, ಪೂರ್ತಿ ಸಿಹಿಯೂ ಅಲ್ಲದ ಪುಟ್ಟಪುಟ್ಟ ಮಾವಿನಹಣ್ಣುಗಳಿಗೆ ವಿಶಿಷ್ಟವಾದ ರುಚಿಯಿರುತ್ತಿತ್ತು. ಸಂಜೆ ಶಾಲೆಯಿಂದ ಬರುತ್ತಿದ್ದಂತೆಯೇ ಕೇರಿಯ ಮಕ್ಕಳ ಗ್ಯಾಂಗೊಂದು ಮಾವಿನಮರದ ಬುಡವನ್ನು ತಲುಪುತ್ತಿತ್ತು. ಆ ಮರಗಳ ಸಾಲಿನಲ್ಲಿ ನಮ್ಮೆಲ್ಲರ ಪ್ರೀತಿಯ ಗುಂಡಪ್ಪೆಯ ಮರವಿತ್ತು. ನೋಡಲು ಗುಂಡುಗುಂಡಾಗಿ ಅಚ್ಚಹಸಿರು ಬಣ್ಣದಲ್ಲಿ ಹೊಳೆಯುತ್ತಿದ್ದ ಗುಂಡಪ್ಪೆಯನ್ನು ಹುಲ್ಲುಗಳ ಮಧ್ಯದಿಂದ ಹೆಕ್ಕಿ ಸ್ಕರ್ಟಿನ ಜೇಬಿಗೆ ಸೇರಿಸುವುದೆಂದರೆ ಎಲ್ಲಿಲ್ಲದ ಸಂಭ್ರಮ. ಉಳಿದ ಹಣ್ಣುಗಳೆಲ್ಲ ಮಾವಿನಹಣ್ಣು ಹೆಕ್ಕಲೆಂದೇ ಸ್ಕರ್ಟಿನ ಜೇಬಿನಲ್ಲಿರುತ್ತಿದ್ದ ಪ್ಲಾಸ್ಟಿಕ್ ಕವರನ್ನು ಸೇರಿದರೆ, ಗುಂಡಪ್ಪೆ ಮಾತ್ರ ವಿಶೇಷ ಅಕ್ಕರೆಯಿಂದ ಜೇಬನ್ನು ಸೇರುತ್ತಿತ್ತು. ಮನೆಗೆ ಬಂದು ಪಠಾಣ್ಸನ್ನು ಉಜ್ಜಿ ತೊಳೆದು ಜಗಲಿಯ ಮೂಲೆಯಲ್ಲಿಟ್ಟು, ಅಪ್ಪೆಹಣ್ಣುಗಳನ್ನು ತೊಳೆಯುವ ಕಾಯಕ ಶುರುವಾಗುತ್ತಿತ್ತು. ಯಾರ ಅಪ್ಪಣೆಗೂ ಕಾಯದೇ ಗುಂಡಪ್ಪೆಗಳೆಲ್ಲ ನಿರಾತಂಕವಾಗಿ ಹೊಟ್ಟೆ ಸೇರಿದರೆ, ಉಳಿದವು ಅಡುಗೆಮನೆಯಲ್ಲಿ ಜಾಗ ಕಂಡುಕೊಳ್ಳುತ್ತಿದ್ದವು. ಹೀಗೆ ಪಠಾಣ್ಸೆನ್ನುವ ಸಂಭ್ರಮದಿಂದ ಶುರುವಾಗುವ ಮಳೆಗಾಲವೊಂದು ಗುಂಡಪ್ಪೆಯನ್ನು ಜೀರ್ಣಿಸಿಕೊಳ್ಳುವ ಸಮಾರಂಭದಲ್ಲಿ ಮುಗಿಯುತ್ತಿತ್ತು. ಆಸ್ತಿ, ಹಣ, ಅಂತಸ್ತು ಯಾವ ಹಂಗೂ ಇಲ್ಲದ ಮಳೆಗಾಲವೆಂಬ ಸೃಷ್ಟಿಯ ಸಡಗರ ನೆನಪುಗಳಿಗೆ ಹೊಸ ಜೀವ ತುಂಬಲಿ; ಬದುಕಿಗೊಂದಿಷ್ಟು ಕನಸು ದೊರಕಿ ಗುಂಡಪ್ಪೆಯಂತೆಯೇ ಹಸಿರಾಗಿ ಹೊಳೆಯುತ್ತಿರಲಿ. ************* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ
ಪುಸ್ತಕ ಸಂಗಾತಿ
ನಾನು ಮತ್ತು ಆಕಾಶ ಡಾ.ಧನಂಜಯ ಕುಂಬ್ಳೆ ಕವಿಮಿತ್ರ ಡಾ.ಧನಂಜಯ ಕುಂಬ್ಳೆಯವರ ‘ನಾನು ಮತ್ತು ಆಕಾಶ’ ವಿಮರ್ಶಾ ಸಂಕಲನದ ಬರಹಗಳನ್ನು ಮರುಓದುವ ಅವಕಾಶ ಲಭಿಸಿದೆ. ಹದಿನಾರು ವರ್ಷಗಳ ಹಿಂದೆ ಪುಟ ತಿರುವಿ ದೃಷ್ಟಿ ಹಾಯಿಸಿದ್ದೆ ಅಷ್ಟೆ. ಈಗ ಅನುಭವಿಸಿದ ಸಾರ್ಥಕ ಭಾವ. ೨೦೦೩ರಲ್ಲಿ ಮೂಡಬಿದಿರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪುಸ್ತಕ ಪ್ರಕಾಶನ ಧನಸಹಾಯ ಯೋಜನೆಯಲ್ಲಿ ಆಯ್ಕೆಯಾದ ಈ ಕೃತಿಯನ್ನು ಪುತ್ತೂರಿನ ಅನನ್ಯ ಪ್ರಕಾಶನ ಹೊರ ತಂದಿದೆ. ಧನಂಜಯ ಅವರ ಭಾವಗಳು, ಸಂವೇದನೆಗಳು, ಚಿಂತನೆಗಳು ತ್ರಿಮುಖಿ ಲಹರಿಗಳಾಗಿ ಇದರಲ್ಲಿ ಹರಿದಿದೆ. ಅವರ ಅನುವಭವಕ್ಕೆ ದಕ್ಕಿದ ಆಕಾಶದ ಆಕಾರ, ವಿಕಾರ ಬೆಡಗಿನೊಳಗೆ ಬೆರಗು ಮೂಡಿಸುತ್ತದೆ. ನೆಲದ ಧ್ಯಾನದಲ್ಲಿ ಎಲ್ಲವನ್ನೂ ಧೇನಿಸಿದ್ದಾರೆ. ವ್ಯಕ್ತಿ- ಕೃತಿ- ಪ್ರೀತಿ ಅಕ್ಷರಗಳಲ್ಲಿ ದಾಖಲಾಗಿದೆ. ಒಟ್ಟು ೨೫ ಬರಹಗಳಿರುವ ಈ ಪುಟ್ಟ ಸಂಕಲನಕ್ಕೆ ಪ್ರೊ.ತಾಳ್ತಜೆ ವಸಂತಕುಮಾರ್ ಮುನ್ನುಡಿ ಬರೆದಿದ್ದಾರೆ. “ತಮ್ಮ ಬರಹಗಳಲ್ಲಿ ಏಕತಾನತೆಯ ಬದಲಾಗಿ ವೈವಿಧ್ಯವನ್ನು ಆರಿಸಿಕೊಳ್ಳುವ ಧನಂಜಯರ ಹುರುಪು ಮೆಚ್ಚುಗೆಯನ್ನುಂಟು ಮಾಡುತ್ತದೆ. ಹೀಗಾಗಿ ಈ ಕೃತಿಯಲ್ಲಿ ವ್ಯಕ್ತಿಚಿತ್ರಗಳೂ, ಸಾಹಿತ್ಯ ವಿಮರ್ಶೆಯೂ, ಸಮಕಾಲೀನ ವಿದ್ಯಮಾನಗಳೂ ಎಡೆಪಡೆಯುತ್ತವೆ. ಇದರಿಂದಾಗಿ ಓದುಗರ ಆಸಕ್ತಿಯೂ ಕದಡದಂತೆ ಕಾಯ್ದುಕೊಳ್ಳುವುದರ ಜೊತೆಗೆ ಬರಹಗಳ ಬಂಧ ಗಟ್ಟಿಯಾಗಿರುವಂತೆ ಜಾಗ್ರತೆ ವಹಿಸುವ ವಸ್ತುವಿನ ಆಯ್ಕೆಯ ಸ್ವಾತಂತ್ರ್ಯದ ಸಂಭ್ರಮವನ್ನು ಅನುಭವಿಸುವ ಸೌಲಭ್ಯಗಳನ್ನು ಅವರು ಕಲ್ಪಿಸಿಕೊಳ್ಳುತ್ತಾರೆ. ಆ ಮೂಲಕ ಆಪ್ತರಾಗುತ್ತಾರೆ” – ಇದು ತಾಳ್ತಜೆಯವರ ಮಾತು. ಆಕಾಶ ಸಾವಿರಾರು ನಕ್ಷತ್ರಗಳನ್ನು ಅರಳಿಸುತ್ತಿರುವಾಗ ಧನಂಜಯರು ಅವರೊಳಗಿನ ನಕ್ಷತ್ರ ಸದೃಶ ಸೃಜನಶೀಲತೆಯನ್ನು ಅರಳಿಸಿದ್ದಾರೆ. ಅವುಗಳು ಬರಹ ರೂಪದಲ್ಲಿ ಅಭಿವ್ಯಕ್ತವಾಗಿವೆ. ಸಾಹಿತ್ಯದ ದಾರಿಗನಿಗೆ ದೀಪಗಳಾಗಿ ಕಾಣಿಸಿಕೊಳ್ಳುತ್ತವೆ. ‘ನಾನು ಮತ್ತು ಆಕಾಶ’ದಲ್ಲಿ ಕಲೆ ಹಾಕಿರುವ ಬರಹಗಳಲ್ಲಿ ಹೆಚ್ಚಿನವುಗಳು ಅಂಕಣಸ್ವರೂಪದವುಗಳು. ವಿಷಯವನ್ನು ಹಿಗ್ಗಿಸುವ ಜಾಣ್ಮೆ ಲೇಖಕರಿಗಿದ್ದರೂ ಅಂಕಣಬರಹಗಳ ಇತಿ ಮಿತಿಗಳಿಗನುಗುಣವಾಗಿ ಸಂಕ್ಷಿಪ್ತಗೊಳಿಸಿದ್ದಾರೆ. ಬರವಣಿಗೆ ಸರಳವಾಗಿದ್ದರೂ ಪ್ರಬುದ್ಧತೆ ಬಂದುಬಿಟ್ಟಿದೆ. ಸರಸ ನಿರೂಪಣೆ, ಬಿಚ್ಚು ಮನಸ್ಸಿನ ಅಭಿವ್ಯಕ್ತಿ. ಆಳವಾದ ಅಧ್ಯಯನ ಎದ್ದು ಕಾಣುತ್ತದೆ. ಅಪಾರವಾದ ಓದಿನಿಂದ ಪಡೆದ ಜ್ಞಾನ ಪ್ರಜ್ವಲಿಸುತ್ತದೆ. ಮುನ್ನುಡಿಯಲ್ಲಿ ಬರಹಗಳ ಅಂತರ್ದರ್ಶನವಿದ್ದರೆ ನಲ್ನುಡಿಗಳ ಮೂಲಕ ಡಾ. ಶ್ರೀಧರ ಎಚ್. ಜಿ.ಯವರು ಕುಂಬ್ಳೆಯವರ ವ್ಯಕ್ತಿತ್ವವನ್ನು ಸ್ಪರ್ಶಿಸಿದ್ದಾರೆ. ಒಟ್ಟು ಬರಹಗಳನ್ನು ಮೂರಾಗಿ ವಿಭಾಗಿಸಲಾಗಿದೆ. ಮೊದಲ ಭಾಗ ‘ಭಾವ ಲಹರಿ’ಯಲ್ಲಿ ಏಳು, ಎರಡನೇಯ ಭಾಗ ‘ವಿಮರ್ಶಾ ಲಹರಿ’ಯಲ್ಲಿ ಹತ್ತು, ಕೊನೆಯ’ವ್ಯಕ್ತಿ ಲಹರಿ’ಯಲ್ಲಿ ಎಂಟು ಲೇಖನಗಳಿವೆ. ‘ಜೀವನ ವನದಲ್ಲಿ ಕವನ ಮಯೂರ’ ಶೀರ್ಷಿಕೆಯ ಲೇಖನದಲ್ಲಿ ಕಾವ್ಯ ಮಿಮಾಂಸೆಯಿದೆ. ಕಾವ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಹಾಗೂ ಬರೆದದ್ದೆಲ್ಲ ಕಾವ್ಯ ಎಂದುಕೊಂಡವರು ಇದನ್ನು ಓದಲೇಬೇಕು. ವಿದ್ಯಾರ್ಥಿಗಳಿಗಂತೂ ಉಪಯುಕ್ತವಾದ ಲೇಖನವಿದು. ‘ಕಾಲದ ಅನಿರ್ವಚನೀಯತೆ’ಯಲ್ಲಿ ಕಾಲದ ಕುರಿತಾದ ವ್ಯಾಖ್ಯಾನವಿದೆ. ಸೇಡಿಯಾಪು ಅವರ ಬರಹಗಳನ್ನು ಇದು ನೆನಪಿಸುತ್ತದೆ. ‘ಬುದ್ಧ ಮತ್ತು ಅಕ್ಕ’ ಒಂದು ಸಂಶೋಧನಾ ಪ್ರಬಂಧಕ್ಕೆ ಅಗತ್ಯವಾದ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ನೀಡುತ್ತದೆ. ಶ್ರೀಮಂತಿಕೆಯನ್ನು ತ್ಯಜಿಸಿ ಸಾಂಸಾರಿಕತೆಯನ್ನು ಹರಿದು ಆಧ್ಯಾತ್ಮವನ್ನು ಬಾಳಿದ ಗೌತಮ ಬುದ್ಧ ಮತ್ತು ಅಕ್ಕ ಮಹಾದೇವಿ ಭಾರತದ ಬೆಳಕಾದವರು. ‘ಮನಸು ಹರಿದಾಗ’ ಸಾಹಿತ್ಯದ ಸ್ವಾನುಭವವನ್ನು ನಿವೇದಿಸುತ್ತದೆ. ಎರಡು ಮೂರು ಉಪಕಥೆಗಳ ಮೂಲಕ ಬದುಕಿನ ‘ಭಾವ- ಅಭಾವ’ವನ್ನು ಚಿತ್ರಿಸಿದ ಕುಂಬ್ಳೆಯವರು ರಮಣ ಮಹರ್ಷಿಯ ಸಂದೇಶವನ್ನು ಉಲ್ಲೇಖಿಸುತ್ತಾರೆ. ಸಾಕ್ರಟೀಸ್, ಪ್ಲೇಟೊ, ಕ್ರೀಟೊ ಆಸ್ಕ್ಲಿಪಿಯಸ್ ಮೊದಲಾದವರ ಬಗ್ಗೆ ಕುತೂಹಲ ಮೂಡಿಸುತ್ತಾರೆ. ನಾಟ್ಯ ಚಪಲವಿರುವವರಲ್ಲಿ ಕಾಪಟ್ಯವೂ ಇದೆ ಎನ್ನುವ ಸತ್ಯದ ಕುರಿತಾದ ಚರ್ಚೆ ‘ನಾಟ್ಯ ಲಹರಿ’ಯಲ್ಲಿದೆ. ನಾಟ್ಯ ಎನ್ನುವುದು ಬೇರೆ ಬೇರೆ ಸಂದರ್ಭಗಳಲ್ಲಿ ಅದನ್ನು ರೂಢಿಸಿಕೊಂಡ ಬೇರೆ ಬೇರೆ ವ್ಯಕ್ತಿಗಳಲ್ಲಿ ವಿಭಿನ್ನ ಅರ್ಥ ಪಡೆದುಕೊಳ್ಳುವುದನ್ನು ಗಮನಿಸಬಹುದು. ‘ಬೆಳಕಿನ ಹಾದಿ’ ಒಂದು ಸುಂದರ ರೂಪಕ. ಧನಂಜಯ ಅವರು ಪ್ರಾಚೀನ ತುಳು ಸಾಹಿತ್ಯದ ಬಗ್ಗೆ ಅಧ್ಯಯನ ನಡೆಸಿದವರು. ಈ ಸಂಕಲನದಲ್ಲಿ ಅದಕ್ಕೆ ಸಂಬಂಧಿಸಿದ ಎರಡು ಲೇಖನಗಳಿವೆ. ಅವುಗಳಲ್ಲಿ ಒಂದು ‘ತುಳು ಸಾಹಿತ್ಯ- ಕೆಲವು ಟಿಪ್ಪಣಿಗಳು’. ಇನ್ನೊಂದು ‘ತುಳು ಕಾವ್ಯಕ್ಕೆ ಕಾಸರಗೋಡಿನ ಕೊಡುಗೆ’. ತುಳುವಿಗೆ ಪ್ರಾಚೀನ ಲಿಖಿತ ಸಾಹಿತ್ಯ ಪರಂಪರೆಯಿತ್ತು ಎಂಬುದನ್ನು ಸಾಬೀತು ಪಡಿಸುವ ಬರಹಗಳಿವು. ಕುಂಬ್ಳೆಯವರ ವಿಮರ್ಶಾ ಪ್ರಜ್ಞೆಗೆ ಸಾಕ್ಷಿಯಾಗ ಬಲ್ಲ ಲೇಖನಗಳು ವ್ಯಕ್ತಿಚಿತ್ರಗಳಾಗಿಯೂ, ಕೃತಿ -ಸ್ಮೃತಿಗಳಾಗಿಯೂ ಇಲ್ಲಿ ದಾಖಲಾಗಿವೆ. ಬೇಂದ್ರೆ, ಕಾರಂತ, ಸೇಡಿಯಾಪು, ಕಯ್ಯಾರ, ಏರ್ಯ, ಅಮೃತ, ಚಿತ್ತಾಲ, ವೇಣುಗೋಪಾಲ ಕಾಸರಗೋಡು, ಜನಾರ್ದನ ಎರ್ಪಕಟ್ಟೆ ಮೊದಲಾದವರ ಕೃತಿಗಳ ಅನನ್ಯತೆಯನ್ನು ಅಧ್ಯಯನಾತ್ಮಕವಾಗಿ ವಿಶ್ಲೇಷಿಸಿದ್ದಾರೆ. ‘ಹೊಸ ಕಾವ್ಯದ ಹೆಜ್ಜೆ’ ಲೇಖನದಲ್ಲಿ ನವೋದಯ, ನವ್ಯ, ನವ್ಯೋತ್ತರ ಕಾಲಘಟ್ಟದ ಆಶಯ ಮತ್ತು ಆಕೃತಿಗಳ ಬಗ್ಗೆ ಚರ್ಚಿಸಲಾಗಿದೆ. ಅಡಿಗ, ಎಕ್ಕುಂಡಿ, ರಾಮಾನುಜನ್, ತಿರುಮಲೇಶ್ ಮೊದಲಾದವರ ಸತ್ವವನ್ನು ಮೈಗೂಡಿಸಿಕೊಂಡು ತನ್ನದೇ ಆದ ಹೊಸ ಕಾವ್ಯ ಮಾರ್ಗವನ್ನು ರೂಪಿಸಿದ ಡಾ. ರಾಧಾಕೃಷ್ಣ ಬೆಳ್ಳೂರು ಅವರ ‘ಅಗ್ನಿ ಜಿಹ್ವಾ’ ವನ್ನು ಪರಾಮರ್ಶಿಸಲಾಗಿದೆ. ಶಿವರಾಮ ಕಾರಂತರು ತಾವು ಪರಂಪರೆಯನ್ನು ಮುರಿಯುವುದರ ಮೂಲಕ ಪರಂಪರೆಯ ಬಗೆಗೆ ಹೊಸ ಎಚ್ಚರವನ್ನು ಮೂಡಿಸಿದವರು. ಈ ಮಾತಿಗೆ ಪೂರಕವಾಗುವಂತೆ ಕಾರಂತರು ಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಹೊಸ ಪ್ರಯೋಗಗಳ ಬಗ್ಗೆ ‘ಯಕ್ಷಗಾನ ಮತ್ತು ಕಾರಂತ’ ಲೇಖನದಲ್ಲಿ ತಿಳಿಸಲಾಗಿದೆ. ‘ಸೇಡಿಯಾಪು: ಒಂದು ನೆನಪು’ ಲೇಖನದಲ್ಲಿ ಸೇಡಿಯಾಪು ಅವರ ಬರವಣಿಗೆಯನ್ನು ಸೃಜನಶೀಲ, ಶಾಸ್ತ್ರೀಯ ಮತ್ತು ವೈಯುಕ್ತಿಕ ನೆಲೆಯಲ್ಲಿ ಸ್ಥೂಲವಾಗಿ ಗುರುತಿಲಾಗಿದೆ. ಆ ಪ್ರಖಾಂಡ ಪಂಡಿತನ ನೆನಪಿನಲ್ಲಿ ಕುಂಬ್ಳೆ ಬರೆದ ಭಾವನಾತ್ಮಕ ಕವನವನ್ನು ಅಳವಡಿಸಲಾಗಿದೆ. ಮೂಡಬಿದಿರೆಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಂವಾದ ಗೋಷ್ಠಿಯಲ್ಲಿ ಬಿತ್ತರಗೊಂಡ ವಿಚಾರ ಲಹರಿಯ ಟಿಪ್ಪಣಿ ‘ವೃತ್ತ್ತಿ-ಪ್ರವೃತ್ತಿ’. ಡಾ. ನಾ ಮೊಗಸಾಲೆ, ಈಶ್ವರಯ್ಯ, ಚೊಕ್ಕಾಡಿ, ವೈದೇಹಿ, ಮಾವಿನಕುಳಿ ಹೀಗೆ ಸಾಹಿತ್ಯ ಕಲಾ ಪ್ರಕಾರದ ಪಂಚರನ್ನು ಪರಿಚಯಿಸಲಾಗಿದೆ. ಕನ್ನಡ ಸಾಹಿತ್ಯದಲ್ಲಿ ಚುಟುಕು ಪ್ರಕಾರದ ಸ್ಥಾನ-ಮಾನ ಬಗೆಗಿನ ‘ಚುಟುಕು ಕನ್ನಡದ ಸ್ಫಟಿಕ’ ಅಧ್ಯಯನ ಯೋಗ್ಯ. ಕನ್ನಡ ಕಾವ್ಯ ಪ್ರಪಂಚವನ್ನು ಸಹೃದಯ ಭಾವ ಪ್ರಪಂಚಕ್ಕೆ ಧಾರೆಯೆರೆದ ಗಮಕಿ ಶಕುಂತಲಾಬಾಯಿ ಕುರಿತಾದ ಬರಹವೂ ರಸಾರ್ದ್ರವಾಗಿದೆ. ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಮತ್ತು ಫ್ರೊ.ವೇಣುಗೋಪಾಲ ಕಾಸರಗೋಡು ಗಡಿನಾಡಿನ ಎರಡು ಕಣ್ಣುಗಳು. ಸಾಹಿತ್ಯ ರಚನೆ ಮತ್ತು ಸಂಘಟನೆ, ಕನ್ನಡ ಹೋರಾಟಗಳಲ್ಲೂ ಬದುಕನ್ನು ಕಳೆದವರು. ಮಹತ್ವದ ಸಾಹಿತ್ಯ ಕೃತಿಗಳನ್ನು ರಚಿಸಿ ಅಖಿಲ ಕರ್ನಾಟಕದ ಗಮನ ಸೆಳೆದವರು. ಕಯ್ಯಾರರ ಶಿಶುಗೀತೆಗಳ ಬಗ್ಗೆ ಕುಂಬ್ಳೆಯವರು ಪರಾಮರ್ಶಿಸಿದ್ದಾರೆ. ಅದೇ ರೀತಿ ವೇಣುಗೋಪಾಲರ ‘ದೃಷ್ಟಿ ಮತ್ತು ಸೃಷ್ಟಿ’ಗಳ ಕುರಿತಾಗಿ ಹೊಸ ಬೆಳಕು ನೀಡಿದ್ದಾರೆ. ಔಚಿತ್ಯ ಪೂರ್ಣ ಮೌಲಿಕ ಬರಹಗಳಿವು. ‘ನಾನು ಮತ್ತು ಆಕಾಶ’ ಪ್ರಕಟವಾದಾಗ ಡಾ.ಧನಂಜಯ ಕುಂಬ್ಳೆಯವರು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು. ಆ ಬಳಿಕ ಮೂಡಬಿದಿರೆ ಆಳ್ವಾಸ್ ಕಾಲೇಜಿಗೆ ಸೇರಿ ಅದೇ ವೃತ್ತಿಯಲ್ಲಿ ಮುಂದುವರಿದರು. ಈಗ ಕೆಲವು ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, ಪ್ರಕೃತ ಕನಕದಾಸ ಅಧ್ಯಯನ ಪೀಠದ ನಿರ್ದೇಶಕರು. ಬೋಧನೆ, ಶೋಧನೆ, ಸಂಘಟನೆ, ಕಾರ್ಯಕ್ರಮಗಳ ಆಯೋಜನೆ, ನಿರೂಪಣೆ, ನಿರಂತರ ಸಾಹಿತ್ಯ ರಚನೆಯ ಮೂಲಕ ನಾಡಿನಾದ್ಯಂತ ಗುರುತಿಸಲ್ಪಟ್ಟಿದ್ದಾರೆ. ನಾಲ್ಕು ಕವನ ಸಂಕಲನ, ವಿಮರ್ಶೆ, ವ್ಯಕ್ತಿಚಿತ್ರ, ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ‘ಅರುಣಾಬ್ಜ ಮತ್ತು ಕುಮಾರವ್ಯಾಸ: ತೌಲನಿಕ ಅಧ್ಯಯನ’ಕ್ಕಾಗಿ ಪಿ.ಎಚ್.ಡಿ ಪಡೆದಿದ್ದಾರೆ. ಸುದೀರ್ಘ ಕಾಲದ ಅಧ್ಯಯನ ಮತ್ತು ಅನುಭವದಿಂದ ಅವರ ಮನಸ್ಸು ಪಕ್ವವಾಗಿದೆ. ದೇಹ ಪುಷ್ಟವಾಗಿದೆ. ಸ್ನೇಹ (ವಲಯ) ವಿಸ್ತಾರವಾಗಿದೆ. ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಇನ್ನೂ ಹಲವಾರು ಕೃತಿಗಳನ್ನು ನೀಡುವ ಶಕ್ತಿ ಅವರಿಗಿದೆ. ******* ರಾಧಾಕೃಷ್ಣ ಕೆ ಉಳಿಯತ್ತಡ್ಕ –
ಕಾವ್ಯಯಾನ
ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ನೆನಪು ಮರೆಯಲು ಮದಿರೆಯ ಸಂಗ ಮಾಡಿದ್ದೆ ಸಖಿವ್ಯಸನ ತೊರೆಯಲು ಸುರೆಯ ಹಂಗ ಬಿಡದಾಗಿದೆ ಸಖಿ ಮಧುವಿನ ದಾಸನಾಗಿ ದಾಸ್ಯದಿ ಬದುಕ ನೂಕುತಿರುವೆತುಟಿಯಂಚಿಗಿಟ್ಟ ಬಟ್ಟಲಿನಲ್ಲಿ ನೀನು ಕಾಣುತಿರುವೆ ಮರೆಯದಾಗಿದೆ ಸಖಿ ನೀರವ ಮೌನದ ಕತ್ತಲೆಯಲಿ ಸಿಗಬಹದೆಂದು ಹುಡುಕಿರುವೆಶರಾಬಿನ ಸಿಸೆಯೊಳಗೂ ನಿನ್ನದೆ ಬಿಂಬವ ಕಾಣುತಿದೆ ಸಖಿ ಮರೆಯಲಾಗದ ಹವ್ಯಾಸ ನನ್ನನು ಬೆಂಬಿಡದೆ ಕಾಡಿದೆಅವಳನು ಮರೆಯುವ ಮಾತಾಡಿಮಿಣುಕು ದೀಪದ ಮುಂದೆ ಕುಳಿತಿದ್ದೆ ಸಖಿ ಸುರಪಾನದ ಸುಖದಲಿ ತೇಲಾಡಿ ನೊಂದ ಮರುಳನು ಮರುಗುತಿರುವನುಆದದ್ದೇಲ್ಲ ಮರೆತು ಹೊಸಬಾಳ್ವೆಗೆ ಹೊಂದಿ ನಡೆಯ ಬೇಕೆಂದಿದ್ದೆ ಸಖಿ ***********
ಕಥಾಯಾನ
ಮರಳಿನ ಕಥೆ ರಮೇಶ್ ನೆಲ್ಲಿಸರ ತುಂಗಾನದಿಯ ನೀರನ್ನು ಕುಡಿದೊ ಅಥವಾ ಬೆಳೆಗಳಿಗೆ ಹಾಯಿಸಿ ಬದುಕು ಕಟ್ಟಿಕೊಂಡವರು ಹಲವರಾದರೆ ತುಂಗೆಯ ಒಡಲ ಬಗೆದು ಮರಳು ತೆಗೆಯುವುದರ ಮೂಲಕ ಸಿರಿತನದ ಸುಪ್ಪತ್ತಿಗೆಯನ್ನು ಅನುಭವಿಸುತ್ತಿರುವವರು ಕೆಲವೇ ಕೆಲವರು, ರಾಜಕೀಯದ ವಾಸನೆ ತುಂಗೆಯ ಎಡಬಲದ ಮರಳು ಕ್ವಾರಿಗಳ ಪ್ರತಿ ಮರಳಿನ ಕಣದಲ್ಲಿ ಹಿಂದೆಯೂ ಇತ್ತು ಈಗಲೂ ಇದೆ. ಅಂದ ಹಾಗೆ ನಾನು ಹೇಳ ಹೊರಟಿದ್ದು ಈ ಮರಳು ಮಾಫಿಯಾದ ಕುರಿತು ಅಲ್ಲ!, ಈ ಮರಳು ದಂಧೆಗೆ ಅಂಟಿಕೊಂಡಿರುವ ಕೆಲಸಗಾರರ ಕುರಿತು, ಆಗ 2002-03 ರ ಸಮಯ ತೀರ್ಥಹಳ್ಳಿಯಿಂದ ಗಾಜನೂರು ಡ್ಯಾಮಿನ ಇಕ್ಕೆಲಗಳಲ್ಲಿಯೂ ಮರಳು ಕ್ವಾರಿಗಳ ಗಿಜಿಗಿಜಿ, ಪ್ರತಿ ಮರಳು ಕ್ವಾರಿಗಳಲ್ಲೂ ನೂರಾರು ಲಾರಿಗಳ ಸಾಲು, ಮರಳಿನ ಧೂಳಿಗೆ ಹಸಿರು ಬಿದಿರುಗಳ ಬಣ್ಣ ಮುಚ್ಚಿಹೋಗಿತ್ತು, ಪ್ರತಿ ಕ್ವಾರಿಯಲ್ಲೂ ಒಂದು ಟೀ- ಕಾಫಿ ಹಾಗೂ ಮೀನಿನ ಊಟದ ಹೋಟೆಲ್ಲುಗಳು. ಡ್ರೈವರ್ರುಗಳು ಲಾರಿಗಳನ್ನು ಲೋಡಿಗೆ ಬಿಟ್ಟು ಅರ್ಧರ್ಧ ಎಣ್ಣೆಯನ್ನು ಏರಿಸಿ ನೆರಳಿನ ಮರದ ಕೆಳಗೆ ಇಸ್ಪೀಟು ಎಲೆಗಳ ಆಟದಲ್ಲಿ ಮಗ್ನರಾಗುತ್ತಿದ್ದದ್ದು ಮಾಮೂಲು ನೋಟವಾಗಿತ್ತು, ಆಟದ ಮಧ್ಯಕ್ಕೆ ಜಗಳಗಳು ಎದ್ದು ಮಾರಿಮಾರಿಯಂತು ಸಾಮಾನ್ಯದ ದೃಶ್ಯ, ಮರಳು ಕ್ವಾರಿಯ ಮಾಲಿಕ ಯಾರೋ ಒಂದಿಷ್ಟು ಓದಿರುವ ಇಬ್ಬರು ಹುಡುಗರನ್ನು ಬಿಟ್ಟು ಮರಳಿನ ರಾಯಾಲ್ಟಿ ವಸೂಲಿ ಮಾಡುಸುತ್ತಿದ್ದರು. ಮರಳು ಕ್ವಾರಿಯ ಮಾಲಿಕರಿಗೂ ಲಾರಿಗಳ ಮಾಲಿಕರ ಒಳ ಒಪ್ಪಂದದಿಂದಾಗಿ ಸರ್ಕಾರದ ಪಾಲು ಸರ್ಕಾರಕ್ಕೆ ಮುಟ್ಟುವುದು ಅಷ್ಟಕಷ್ಟೆ!. ರಾತ್ರಿಹಗಲು ಮರಳು ನಗರಗಳ ಹೊಟ್ಟೆಯನ್ನು ಅನಾಮತ್ತಾಗಿ ಸೇರುತ್ತಲೇ ಇತ್ತು. ಮಂಡಗದ್ದೆಯ ನೆಲ್ಲಿಸರದ ಹದ್ದುಬಂಡೆಯ ಬಳಿ ಹೊಳೆಯ ಆಚೆ ಒಂದು ಮರಳು ಕ್ವಾರಿಯಿತ್ತು, ಅದು ಚಿಕ್ಕಮಗಳೂರಿಗೆ ಸೇರುತ್ತದೆಯಾದರೂ ಮರಳು ತುಂಬುವ ಲಾರಿಗಳು ಮತ್ತು ಅದರ ಮರಳು ಮಾತ್ರ ಶಿವಮೊಗ್ಗ ನಗರದ ಹೊಟ್ಟೆಗೆ ದಕ್ಕುತ್ತಿತ್ತು. ನಾವು ನೆಲ್ಲಿಸರದ ಮೀನುಗಾರಿಗೆ ಮರಳುಕ್ವಾರಿಯಿಂದ ಒಂದಿಷ್ಟು ಅನುಕೂಲವೇ ಇತ್ತು, ನಾವು ಹಿಡಿಯುವ ಮೀನಿಗೆ ಅರ್ಧ ನಶೆಯೇರಿದ ಡ್ರೈವರ್ರುಗಳು ಮತ್ತು ಮರಳು ಹೊರುವವರು ಹೆಚ್ಚಿನ ಬೆಲೆಗೆ ಕೊಂಡುಕೊಳ್ಳುತ್ತಿದ್ದರಿಂದ ನಮಗೆ ಊರೂರು ತಿರುಗಿ ಮೀನು ಮಾರುವ ತಾಪತ್ರಯ ತಪ್ಪಿಹೋಗಿತ್ತು. ನಾನಾಗ ಪಿಯುಸಿ ಓದುತ್ತಿದ್ದೆ ಆಗಾಗ ಅಣ್ಣನ ಜೊತೆಗೆ ಕುಲಕಸುಬಾದ ಮೀನುಗಾರಿಕೆಗೆ ಹೋಗುತ್ತಿದ್ದೆ, ಆಗ ಮೀನು ಹಿಡಿದು ತೆಪ್ಪವನ್ನು ಮರಳಿನ ಮೇಲೆ ಎಳೆದು ಅಲ್ಲೆ ಕ್ವಾರಿಯಲ್ಲಿದ್ದ ಹೋಟೆಲ್ ನ ಬಳಿ ಹೋದರೆ ಸಾಕು ಮೀನಿಗಾಗಿ ಜನ ಮುತ್ತಿಕೊಳ್ಳುತ್ತಿದ್ದರು , ಆದರೆ ಮೀನೊ ಒಂದೋ ಎರಡೋ ಕೆಜಿ ಇರುತ್ತಿದ್ದವು,ಹೆಚ್ಚಿನ ಬೆಲೆಗೆ ಅವನು ಕೊಟ್ಟು ಹೋಟೆಲ್ಲಿನಲ್ಲಿ ತಿಂಡಿ ಕಾಫಿ ಮುಗಿಸುತ್ತಿದ್ದೆವು. ಅಣ್ಣ ಕೆಲವೊಮ್ಮೆ ಪರಿಚಯದ ಡ್ರೈವರ್ರುಗಳ ಜೊತೆ ಯಾವುದಾದರೂ ಲಾರಿಯನ್ನು ಹತ್ತಿಕೊಂಡು ಶಿವಮೊಗ್ಗಕ್ಕೆ ಹೋಗುತ್ತಿದ್ದ, ಮರಳು ಅನ್‍ಲೋಡ್ ಮಾಡಿ ಬರುವ ಬಾ ಎಂದು ಅವನನ್ನು ಕರೆಯುತ್ತಿದ್ದರು ನಾನು ಅವನು ಬರುವವರೆಗೆ ಅಲ್ಲೇ ಹೋಟೆಲ್‍ನಲ್ಲಿ ಕೂತಿರುತ್ತಿದ್ದೆ. ಹೀಗೆ ಹೀಗೆ ಕೂತಿರುವಾಗ ಹಲವು ಜನರು ಮಾತನಾಡಿಸುತ್ತಿದ್ದರು, ಅಣ್ಣನ ಪರಿಚಯದ ಡ್ರೈವರ್ರುಗಳು ಏನಾದರು ತಿಂಡಿ ಕೊಡಿಸುತ್ತಿದ್ದರು, ಹೀಗೆ ಬೇಸಿಗೆ ರಜೆಯಲ್ಲಿ ನನಗೂ ಹಲವರು ಪರಿಚಯವಾದರು ಅವರಲ್ಲಿ ರಾಜಣ್ಣ ಕೂಡ ಒಬ್ಬರು ಮಧ್ಯವಯಸ್ಕರಾದ ಅವರು ನನ್ನನ್ನು ಮಗನಂತೆಯೇ ಕಾಣುತ್ತಿದ್ದರು, ನನಗೋ ಅವರಿವರ ಕಥೆಗಳನ್ನು ಕೇಳುವುದು ಎಂದರೆ ಇಷ್ಟ. ಅವರ ಊರಿನ ಬಗ್ಗೆ ಹಾಗೂ ಮನೆಯವರ ಕುರಿತು ಕೇಳುತ್ತಿದ್ದೆ, ಪ್ರಾರಂಭದಲ್ಲಿ ಏನನ್ನೂ ಹೇಳದಿದ್ದರೂ ನಂತರ ಅವರಾಗೆ ಮಾತನಾಡುತ್ತಿದ್ದರು. ರಾಜಣ್ಣನ ಊರು ಗದಗದ ಬಳಿಯ ರೋಣದ ಬಳಿಯ ಯಾವುದೋ ಹಳ್ಳಿ, ಹದಿನಾರು ತುಂಬುವಾಗಲೇ ಅವರಿಗೆ ಮೊದಲನೇ ಮದುವೆಯಾಯ್ತಂತೆ, ಗಂಡ- ಹೆಂಡತಿ ಇಬ್ಬರೂ ಸಣ್ಣವರು ತಾಯಿ ಇರುವವರೆಗೆ ಎಲ್ಲವೂ ಸರಿಯಿತ್ತು , ಅಬ್ಬೇಪಾರಿ ತಿರುಗುತ್ತಿದ್ದ ಇವರು, ತಾಯಿ ಸತ್ತಾಗ ದುಡಿಯಲು ಹೋಗಲೇ ಬೇಕಾಯ್ತು! ಆದರೆ ಹೊಲದಲ್ಲಿ ಗೇಯಲು ಬರದು ಹಲವು ತಿಂಗಳುಗಳು ಹೀಗೆ ಕಳೆದವು ಹೆಂಡತಿಗೆ ಅದೇನು ಅನಿಸಿತೋ ಏನೋ ಗಾರೆ ಕೆಲಸದವನ ಜೊತೆ ಓಡಿ ಹೋದವಳ ಸುಳಿವೇ ಸಿಗಲಿಲ್ಲ, ಮರ್ಯಾದೆಗೆ ಅಂಜಿ ಸಿಕ್ಕಿದ ಲಾರಿಯನ್ನು ಹತ್ತಿ ಶಿವಮೊಗ್ಗಕ್ಕೆ ರಾಜಣ್ಣ ತಲುಪಿದ, ಅದೇ ಲಾರಿಯ ಕ್ಲೀನರ್ ಆಗಿ ಸೇರಿಕೊಂಡ ,ಮಂಡಿಗೆ ಅಡಿಕೆ ಸಾಗಿಸುವ ಲಾರಿ ಅದು ,ಅವನಿಂದಲೇ ರಾಜಣ್ಣ ಡ್ರೈವಿಂಗ್ ಮಾಡುವುದನ್ನೂ ಕಲಿತ. ಲಾರಿಯ ಮಾಲಿಕ ಅಲ್ಲಿಲ್ಲಿ ಸಾಲಮಾಡಿಕೊಂಡು ಫೈನಾನ್ಸ್ ನಿಂದ ಹಣ ಪಡೆದು ಲಾರಿ ಕೊಂಡಿದ್ದ, ಸರಿಯಾಗಿ ಲಾರಿಯ ಸಾಲದ ಕಂತನ್ನೂ ಕಟ್ಟದೆ ತಪ್ಪಿಸಿಕೊಂಡು ಓಡಾಡುತ್ತಿದ್ದ, “ಇಂದು ಒಮ್ಮೆಗೆ ಎಲ್ಲ ಸಾಲವನ್ನು ತೀರಿಸುತ್ತೇನೆ” ಎಂದು ಹೋದವನು ಹೆಣವಾಗಿಯೇ ಹಿಂದಿರುಗಿದ್ದು. ಶಿವಮೊಗ್ಗದ ತುಂಗಾ ಸೇತುವೆಯ ಮೇಲಿಂದು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ಪಾಪ ಆತ. ಹೇಗೂ ಲಾರಿಯನ್ನು ಓಡಿಸಿ ಮಾಲಿಕರ ಮನೆಗೆ ಹಣ ಕೂಡಿಸಿಕೊಡುವುದು ಎಂದು ರಾತ್ರಿ – ಹಗಲು ದುಡಿಯುತ್ತಿದ್ದವನಿಗೆ ಮಾಲಿಕನ ಹೆಂಡತಿಯ ಜೊತೆಗೆ ಸಂಬಂಧವೂ ಬೆಳೆದೋಯ್ತು!, ಎಲ್ಲರಿಗೂ ವಿಷಯ ತಿಳಿದು ರಾಜಣ್ಣನನ್ನು ಓಡಿಸಿದರು. ಅದಾಗಲೇ ಶಿವಮೊಗ್ಗ ಬೆಳೆಯುತ್ತಿತ್ತು ಮರಳು ಲಾರಿಗಳು ಎಗ್ಗಿಲ್ಲದೆ ಓಡಾಡುವುದಕ್ಕೆ ಪ್ರಾರಂಭ ಮಾಡಿದವು, ರಾಜಣ್ಣ ಮಂಡ್ಲಿಯ ಹುಸೇನ್ ಸಾಬರ ಬಳಿ ಕೆಲಸಕ್ಕೆಂದು ಸೇರಿದನಂತೆ , ಒಂದೆರಡು ವರ್ಷದ ಬಳಿಕ ಸಾಬರೆ ಒಂದು ಹುಡುಗಿಯನ್ನು ಇವನಿಗೆ ಕಟ್ಟಿ ಸಕ್ರೆಬೈಲಿನಲ್ಲಿ ಒಂದು ಬಾಡಿಗೆ ಮನೆ ಗೊತ್ತುಮಾಡಿ ಬಿಟ್ಟರು, ರಾಜಣ್ಣ ಆಗಲೇ ಕುಡಿತದ ದಾಸನಾಗಿದ್ದ ಹೆಂಡತಿಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದ ಈ ನಡುವೆ ಒಂದು ಹೆಣ್ಣು ಮಗವೂ ಆಯಿತು, ಆದರೂ ರಾಜಣ್ಣ ಬದಲಾಗಲಿಲ್ಲ, ಈ ವಿಷಯ ಅದು ಹೇಗೋ ಹುಸೇನ್ ಸಾಬರಿಗೆ ತಿಳಿದು ಇವನಿಗೆ ನಾಲ್ಕು ಬಾರಿಸಿ ಬುಧ್ದಿ ಹೇಳಿ ಹೋದರು. ರಾಜಣ್ಣನಿಗೆ ಅವಮರ್ಯಾದೆ ಆದಂತಾಗಿ ಹೆಂಡತಿಗೂ ಮಗುವಿಗೂ ಕೂಡಿ ಹಾಕಿ ಮನಸೊ ಇಚ್ಚೆ ಹೊಡೆದ, ರಾತ್ರಿ ಬೆಳಗಾಗುವ ವರೆಗೆ ಇವನ ಹೆಂಡತಿ ಮಗುವಿನೊಂದಿಗೆ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಳು. ಪೋಲಿಸರು ರಾಜಣ್ಣನಿಗೆ ಒದ್ದು ನಾಲ್ಕಾರು ನಾಲ್ಕಾರು ತಿಂಗಳು ಜೈಲು ಶಿಕ್ಷೆಯನ್ನೂ ಅನುಭವಿಸಿ ಬಂದವನಿಗೆ ಹುಸೇನ್ ಸಾಬರು ಕೈಬಿಡಲಿಲ್ಲ, ಡ್ರೈವರ್‍ಗಳು ಸಿಗುವುದೇ ಅಪರೂಪವಾಗಿದ್ದರಿಂದ ಮತ್ತೆ ಮರಳುಲಾರಿಯ ಪಯಣವೂ ಆರಂಭವಾಯಿತು, ಹೆಂಡತಿ-ಮಗುವನ್ನು ನೆನೆದು ಈಗಲೂ ಕಣ್ಣೀರಾಗುತ್ತಾರೆ. ದುಡಿದ್ದದ್ದು ಏನು ಮಾಡುತ್ತೀರಿ ಕೇಳಿದೆ? ಕುಡಿಯುವುದು, ತಿನ್ನುವುದು ಸಾಯಲೂ ಆಗದೆ ಬದುಕಲೂ ಆಗದೆ ಇದ್ದೇನೆ ಎಂದು ನಿಟ್ಟುಸಿರು ಬಿಟ್ಟರು. ರಾಜಣ್ಣನ ಹಾಗೆ ಕ್ವಾರಿಯ ಪ್ರತಿಯೊಬ್ಬರದು ಒಂದೊಂದು ಕಥೆ ಸಿಗಬಹುದು, ರಾತ್ರಿ- ಹಗಲು ಕೆಲಸ ಹಲವರು ಮನಗೇ ಹೋಗುತ್ತಿರಲಿಲ್ಲ, ಕ್ವಾರಿಯಲಿ ರಾತ್ರಿ ಕೈಬಳೆಗಳ ಸದ್ದು ಸಾಮಾನ್ಯವಾಯಿತು! , ಅಕ್ರಮ ಮರಳುಗಾರಿಕೆ ಆರಂಭವಾಗಿ ನದಿಯ ಒಡಲಿನಿಂದಲೇ ಮೋಟಾರುಗಳ ಮೂಲಕ ಮರಳು ತೆಗೆಯುವುದು ಆರಂಭವಾಯಿತು, ವರುಷಗಳು ಕಳೆದವು ರಾಜಣ್ಣ ಆತ್ಮಹತ್ಯೆ ಮಾಡಿಕೊಂಡ ಎಂದು ಯಾರೋ ಹೇಳಿದರು, ಏಕೆ? ಹೇಗೆ? ಯಾರ ಬಳಿಯೂ ಉತ್ತರವಿರಲಿಲ್ಲ, ಖಿನ್ನತೆಯೆಂಬ ಖಾಯಿಲೆ ರಾಜಣ್ಣನ ಅಂಗಾಂಗವೆಲ್ಲ ವ್ಯಾಪಿಸಿತ್ತು! ಈಗಲೂ ಮರಳು ಮಾಫಿಯಾದ ಸುದ್ಧಿಗಳು ಪೇಪರ್‍ನಲ್ಲಿ ಕಂಡಾಗ ಹಳೆಯ ನೆನಪುಗಳು ಒತ್ತರಿಸಿ ಬರುತ್ತದೆ. ತುಂಗೆಯ ಒಡಲ ಮರಳ ಬಗೆದು ಶ್ರೀಮಂತರಾಗುತ್ತಿರುವ ಜನರ ನಡುವೆ ಅವರಿಗಾಗಿಯೇ ಹಗಲಿರುಳು ದುಡಿದು ಅಳಿದು ಹೋಗುವವರು ಯಾರ ಲೆಕ್ಕಕ್ಕೂ ಸಿಗುತ್ತಿಲ್ಲ, ಅಂದ ಹಾಗೆ ಇವರ ಲೆಕ್ಕ ಯಾರಿಗೂ ಬೇಕಾಗಿಯೂ ಇಲ್ಲ… ************
ಕಾವ್ಯಯಾನ
ಜಕ್ಕವಕ್ಕಿಗಳು ಕಮಲಾ ಹೆಮ್ಮಿಗೆ ೧. ನೆನಪಿದೆಯೆ ನಿಮಗೆ ಕಣವಿಯವರೆ ಜಯನಗರದ ಹಳಿ ದಾಟಿದರೆ ಹಳದೀ ಹೂವು ಚೆಲ್ಲಿದ ರಸ್ತೆ ‘ ಚೆಂಬೆಳಕು’! ಹಕ್ಕಿ ಗೂಡಂಥ ನಿಮ್ಮ ಮನೆ ಆಚೀಚೆ ಕೂತ ನೀವುಗಳು,ನಡುವೆ ಬೂದಿ ಮುಚ್ಚಿದ ಕೆಂಡದಂಥ ನಾನು….ಮಧ್ಯೆ ವ್ಯಸ್ತ,ಮೂಸಿನೋಡುವ ನಿಮ್ಮ ‘ಗೂಫಿ’ನಾಯಿ!………. ಗುಟುಕರಿಸುತ್ತ ಚಹಾ,ಮಾತು,ಬದುಕಿನ ಪಾಡು………………………… ಜsರ್ ಮಳೆಯಿದ್ದಲ್ಲಿ, ದಾಟಿಸುತ್ತಿದ್ದಿರಿ ಬ್ರಿಡ್ಜು,ಛತ್ರಿ ಹಿಡಿದು….. ೨. ನಿಮ್ಮ ಅಧ್ಯಕ್ಷತೆಯಲ್ಲಿ ಮೈಸೂರಿನಲ್ಲೊಮ್ಮೆ ಓದಬೇಕಿತ್ತು ನಾನೂ,ಒಂದು ಕವಿತೆ ರೈಲಲ್ಲಿ ಒಂದೇ ಬೋಗಿ….ಧಡಖ್ ಧಡಖ್ ಧಡಖ್ ಧಡಖ್….. ಮೆಲ್ಲಗೆ ಬಂದಿರಿ ಲಯಕೆ ತಕ್ಕಂತೆ.... ‘ ಮನಿಯವರು ನಿಮಗು ಬುತ್ತಿ ಕಟ್ಯಾರೆ’ ಎಂದಾಗ, ಒಣರೊಟ್ಟಿ ಬದಿಗೆ ಸರಿಸಿದ್ದೆ ನಾನು…… ನೀವು ನೀಡಿದಿರಿ ಚಪಾತಿ, ಮೊಸರನ್ನ ಮತ್ತು ಹೆಚ್ಚಿಟ್ಟ ಹಣ್ಣಿನ ವಾತ್ಸಲ್ಯದ ಹೋಳು,ಮಿನುಗಿತ್ತು ಕಣ್ಣು…… ೩. ಕಳೆದಬಾರಿ,ಕಲ್ಯಾಣನಗರಕ್ಕೆ ಬಂದಾಗ ‘ ಕವಿನೆರಳು’! ನೀವೇ ಒಳಹೋಗಿ ಚಹ ತಂದಿರಿ. ‘ ಇವರಿಗೆ ಮಂಡೀನೋವು,ಸದ್ಯ ನನಗಿಲ್ಲ’ ….ನಕ್ಕಿರಿ….. ಹೊರಡುವಾಗ ಅಚಾನಕ ಕಾಲಿಗೆರಗಿದೆ ನಾನು…. ಅಸ್ಪಷ್ಟ ಏನೋ ಉಲಿದಿರಿ,ತುಂಬು ಮನದಿಂದ ನೀವು! ೪. ಈಗ ‘ಹಾರಿತು ಜಕ್ಕವಕ್ಕಿಗಳಲ್ಲೊಂದು’ ಎಂದಾರು, ಆಲಂಕರಿಕವಾಗಿ ಮಂದಿ! ಒಂಟಿಹಕ್ಕಿ ನೆನಪು ಹಾರೀತು ಆದರೆ ……..ನೀವು? —– ಜsರ್ — ಒಂದುವೇಳೆ , ಕವಿನೆರಳು Twilight (ಹಿರಿಯ ಲೇಖಕಿ ಶಾತಾದೇವಿ ಕಣವಿಯವರು ತೀರಿದ ಸಂದರ್ಭ)
ಕಾವ್ಯಯಾನ
ನಿನ್ನದೇ ಜಪದಲ್ಲಿ ವೀಣಾ ಪಿ. ಏಕಪತ್ನಿ ರಾಮನಿಗೆ ವನ-ವೈಭೋಗಗಳಲಿಅನ್ಯ ಸ್ತ್ರೀಯಿಲ್ಲ ಸತಿ ಸೀತೆ ಹೊರತು.. ಕೃಷ್ಣನನೆದೆಯಲ್ಲಿ ಅನುರಣಿತ ರಾಗದಲಿಅನ್ಯ ಪ್ರೇಮವದಿಲ್ಲಅನುರಾಗಿ ರಾಧೆ ಹೊರತು.. ಮೀರಾ-ಶಬರಿಯರಲ್ಲಿ ಅನ್ಯ ತುಡಿತವದಿಲ್ಲಕೃಷ್ಣ-ರಾಮರ ಪರಮ ಕಾಮ್ಯದ ಹೊರತು.. ಸ್ವರ-ಶೃತಿಯ ಬೆಸೆಯುವ ಸರಸತಿಯ ಮೀಟು ತಂತಿಅನ್ಯವಾದ್ಯವಲ್ಲವದು ವೀಣಾ.. ಹಂಗಿನರಮನೆ ತೊರೆದ ಪ್ರೇಮದೀ ಗುಡಿಯಲ್ಲಿಬೇರೆ ಮಾತುಗಳಿಲ್ಲ ನಿನ್ನ ಜಪದ ಹೊರತು.. *******
ಕವಿತೆ ಕಾರ್ನರ್
ತಬ್ಬಲಿ ಕವಿತೆ ಮಾತುಗಳ ಅಟ್ಟಹಾಸದೊಳಗೆ ಅಪಹಾಸ್ಯಕ್ಕೀಡಾದ ಮೌನ ಶಬ್ದಗಳ ಜಾತ್ರೆಯೊಳಗೆ ತೇರಿನ ಗಾಲಿಯಡಿ ಅಪ್ಪಚ್ಚಿಯಾಯಿತು. ಮುಳ್ಳುಗಳ ಕಾವಲಿನಲಿದ್ದ ಹೂಗಳು ನಗುವುದನ್ನೆ ಮರೆತುಬಿಟ್ಟವು ವಿರಹದಲಿ ಬಣ್ಣಗೆಟ್ಟ ಚಿಟ್ಟೆಗಳು ಹಸಿವಿನಲಿ ಕಂಗೆಟ್ಟವು. ನಿನ್ನೆ ಸಂಜೆಯ ಮುದಿಬಿಸಿಲಲಿ ಅಕಾಲ ಮಳೆಸುರಿಯುತು ವಿದಾಯದ ಹೊತ್ತಿನಲಿ ಬಿಕ್ಕಿದವಳ ನೋಡಿ ಒಂಟಿಹಕ್ಕಿ ಮಮ್ಮುಲ ಮರುಗಿತು. ಕವಿತೆಯೊಂದ ಕಟ್ಟುವ ನೆಪದಲಿ ಶಬ್ದಗಳ ಮಾರಣಹೋಮ ಕವಿಯ ಸಮಾದಿಯ ಮೇಲೆ ಅಪರಿಚಿತ ಓದುಗನ ಹೂಗುಚ್ಚ. ಎರಡು ಸಾಲಾದರು ಬರೆದು ಹೋಗು ಗೋಗರೆದ ಕವಿತೆಯೀಗ ತಬ್ಬಲಿ. ******** ಕು.ಸ.ಮಧುಸೂದನ
ಕಾವ್ಯಯಾನ
ಇನ್ನಷ್ಟು ಯೌವನ ಕೊಡು ಮಂಜುನಾಥ ನಾಯ್ಕ ಹಾಲುಮಾರುವ ಹುಡುಗ ಕಾಜುಗಣ್ಣಿನ ವಿನೋದನೊರೆ ಹಾಲಿನಂತವನು ಪೇಟೆಯ ತುಂಬಹಾಲು ಹಂಚುವ ಉಮೇದಿಕಾಜುಗಣ್ಣ ಬಿಂಬಗೊಳಗೆಉಫ್ ಉಫ್ ಎಂದು ರಸ್ತೆ ಉಬ್ಬಿನಲಿ ತುಳಿದಿದ್ದಕ್ಕೆ ಸೈಕಲ್ಲುಬಿದ್ದು ರಕ್ತಕಾರಿಕೊಂಡ ಹೆಬ್ಬಟ್ಟಿನ ಉರಿ ಬ್ರೇಕೊತ್ತಿದೆಸೈಕಲ್ಲಿನ ವೇಗಕ್ಕೆಅಪ್ಪನ ಕ್ಯಾನ್ಸರಿಗೆ, ಅಮ್ಮನ ಮಧುಮೇಹಕ್ಕೆಚಂದನದ ಕೊರಡುತೇಯುತ್ತಿದೆ ಬೀದಿಯಲಿಕಾಯುತ್ತಿದೆಹಾಲಿನ ಮನಸ್ಸೊಂದುಮಗನ ಬರುವಿಕೆಗೆಅಡುಗೆ ಮನೆಯಲಿ ಬೇನೆಯಲಿಬೇಯುವ ಹಂಚಿನ ರೊಟ್ಟಿ ಐನೋರ ತೋಟದ ಮರದ ತುದಿಗೇರಿ ಅಡಿಕೆಗೊನೆ,ಸಿಂಗಾರ,ಸಿಯಾಳಕಾಯಿ ಕೊಯ್ವ ಈರಜ್ಜಕಸರತ್ತುಗಯ್ಯುತ್ತಾಆಕಾಶ ಮುಟ್ಟುವಂತೆಮರದ ತುದಿಯಲಿಒಂದೊಂದೇ ಫಲಗಳಎಸೆಯುವ ಕೆಳಗೆನುಣ್ಣಗೆ ಜಾರುವ ಮರತಡವರಿಸುವುದು ಒಮ್ಮೊಮ್ಮೆ ಈರನ ಕಾಲುಕೆಳಗೆ ಭೂಮಿ ಬಾಯ್ತೆರೆದು ಕಾದಿದೆಬಿಡಾರದೊಳಗೆ ಈರಜ್ಜನಗುಡಿಸಲೊಡತಿಕೊಳೆ ಅಡಿಕೆ ಅಂಬಡಿ ಎಲೆಗೆತಿಕ್ಕುತ್ತಾ ಚಿಪ್ಪೆಕಲ್ಲಿನ ಸುಣ್ಣವ ನುಣ್ಣಗೆ ಬೈಗಿನಲಿಈರಜ್ಜನಡೆದು ಬರುವ ತೋಡಿನಲಿಇಣುಕಿಣುಕಿ ನೋಡುತ್ತಾಬೆಚ್ಚಗಾಗುತಿದೆ ಬಿಸಿನೀರುಹಬೆ ಹಬೆ ಹಂಡೆಯಲಿಬೆಚ್ಚನೆಯ ಬದುಕ ಗೂಡೊಳಗೆ ನಸುಕಲಲ್ಲಿ ಬೈಗೆ ಬಂಗುಡೆಸಮದಾಳೆ,ಕುಡುತ್ಲಿ,ಪೇಡಿ ಏಡಿಗಳ ಹೊತ್ತು ಬರುವ ನಮ್ಮೂರ ಬೆಸ್ತರ ಪದ್ಮಕ್ಕನ ಮಗಳು ತುಂಬು ಬಸುರಿಪಾತಿದೋಣಿಗೆ ಗಂಡಉದರದ ಗೇಣಿಗೆ ಅವ್ವದಣಪೆಯಾಚೆ ನಿಂತು ನೀಕುವಳುಖಾಲಿ ಬುಟ್ಟಿಹೊತ್ತ ಅಮ್ಮನನಿರಾಳ ಹೆಜ್ಜೆ ಸದ್ದಿಗೆಪೇಟೆಯಲಿ ಪದ್ಮಕ್ಕನ ಮೀನಿಗೆಚೌಕಾಸಿಯ ಕೂಗು ಜೋರಾಗಿದೆಸಾಸಿವೆಯ ದರಕ್ಕೆ ಮಾರಿಮನೆಯ ದಾರಿ ಹಿಡಿದಿದ್ದಾಳೆಅಲ್ಲಿ ತುಂಬು ಬಸುರಿಯವೇದನೆ ಜೋರಾಗಿದೆ ಸಾಗುವ ಹೆಜ್ಜೆಗಳಿಗೆಲ್ಲಾಇನ್ನಷ್ಟು ಯೌವನ ಕೊಡು ದಿವ್ಯವೇಕಾಯುವ ಹೃದಯಗಳೆಲ್ಲಾಹಸುಳೆಯಂತದ್ದು. ************
ಪುಸ್ತಕ ಸಂಗಾತಿ
ಹಾಲಕ್ಕಿ ಕೋಗಿಲೆ ಮಾರ್ಚ್ ತಿಂಗಳಿನಲ್ಲಿ ಬರಹ ಓಡಾಟ ಎಂದುಕೊಂಡು ಸದಾ ಕೆಲಸದ ಒತ್ತಡದಲ್ಲಿದ್ದ ನನಗೆ ಒಮ್ಮೆಲೆ ಅನಿರೀಕ್ಷಿತವಾಗಿ ಕೋವಿಡ- 19 ನಿಂದಾಗಿ ಲಾಕ್ಡೌನ ಆದಾಗಿನಿಂದ ಮಾನಸಿಕ ಗೊಂದಲ.ಭಯದಿಂದ ಮನೆಯ ನಾಲ್ಕು ಗೋಡೆಗಳ ನಡುವೆ ಸುಧಾರಿಸಿಕೊಳ್ಳಲು ಕೆಲವು ದಿನಗಳು ಬೇಕಾದವು.ಬಳಿಕ ನಾವೆಲ್ಲ ನಮ್ಮ ಆಸಕ್ತಿಗೆ ತಕ್ಕಂತೆ ಮನಸ್ಸು ಪ್ರಪುಲ್ಲಗೊಳಿಸಿಕೊಳ್ಳಲು ಮಾರ್ಗ ಹುಡುಕುತ್ತಿದ್ದಾಗ ಕಣ್ಣಿಗೆ ಬಿದ್ದದ್ದು ಅಕ್ಷತಾಕೃಷ್ಣಮೂರ್ತಿ ಅವರ ಹಾಲಕ್ಕಿ ಕೋಗಿಲೆ. ಮುಖಪುಟದಲ್ಲಿದ್ದ ಮುಗ್ಧ ನಗುವಿನ ಸುಕ್ರಜ್ಜಿಯನ್ನು ಕಂಡ ಮೇಲಂತೂ ಒಂಥರಾ ಖುಷಿ. ಇದಕ್ಕೆ ಒಂದು ತಿಂಗಳ ಮೊದಲಷ್ಟೆ ಬಡಗೇರಿಯ ಸುಕ್ರಜ್ಜಿಯವರ ಮನೆಯಂಗಳದಲ್ಲಿ ವೈಶಿಷ್ಟಪೂರ್ಣವಾಗಿ ಕವಿ ಕಥೆಗಾರ ಜಯಂತಕಾಯ್ಕಿಣಿಯವರು ಬಿಡುಗಡೆಗೊಳಿಸಿದ ಕೃತಿ ಇದು.ಆ ಬಿಡುಗಡೆಯ ಕ್ಷಣ ಮರೆಯಲಾಗದು.ನಿರಾಡಂಬರವಾದ ಸರಳ ಸಮಾರಂಭದಲ್ಲಿ ಅತ್ಯಂತ ಆತ್ಮೀಯ, ಪ್ರೀತಿಯ, ಒಂದು ರೀತಿಯಲ್ಲಿ ದಿವ್ಯ ಎನಿಸಬಹುದಾದ ವಾತಾವರಣದಲ್ಲಿಜಾನಪದ ಹಾಡುಗಾರ್ತಿಯರಾದ ಪದ್ಮಾವತಿ, ಕುಸಲಿ, ಲಲಿತಾ ಅವರ ಹಾಡಿನ ಹಿನ್ನೆಲೆಯಲ್ಲಿ ಜಯಂತಕಾಯ್ಕಿಣಿ ಅವರು ಪುಸ್ತಕ ಬಿಡುಗಡೆಗೊಳಿಸಿ ಸುಕ್ರಜ್ಜಿಯವರ ಕೈಗಿಟ್ಟ ಅಪರೂಪದ ಘಳಿಗೆಯಲ್ಲಿ ನಾನೂ ಪಾಲುದಾರಳಾಗಿದ್ದೆ. ಈ ಹಾಲಕ್ಕಿ ಹಾಡುಗಾರ್ತಿಯರ ಹೃದಯ ತುಂಬುವ ಮನಸ್ಸು, ಮುಖದಲ್ಲಿನ ಸಂತೃಪ್ತ ಭಾವ, ಜೀವನ ಪ್ರೀತಿ, ಪ್ರಾಮಾಣಿಕ ಪಾರದರ್ಶಕ ವ್ಯಕ್ತಿತ್ವ ಇತರರಿಗೆ ಮಾರ್ಗದರ್ಶನ ಎನಿಸುವಂತಹುದ್ದು.ಕನ್ನಡ ಜಾನಪದ ಸಾಹಿತ್ಯದ ವೈಶಿಷ್ಟಪೂರ್ಣ ಬೆಳವಣಿಗೆಯಲ್ಲಿ ಇವರ ಕೊಡುಗೆ ಅಪೂರ್ವವಾದದ್ದು. ನಾಡೋಜ ಪದ್ಮಶ್ರೀ ಪ್ರಶಸ್ತಿ ವಿಜೇತ ಹಾಲಕ್ಕಿ ಒಕ್ಕಲು ಬುಡಕಟ್ಟಿನ ಸುಕ್ರಿ ಬೊಮ್ಮಗೌಡ ಅವರ ಜೀವನ ಪರಿಚಯಿಸುವ ಇಪ್ಪತ್ತೊಂದು ಲೇಖಕರ ಬರಹಗಳ ಗುಚ್ಛವೇ ಹಾಲಕ್ಕಿ ಕೋಗಿಲೆ. ಸುಕ್ರಜ್ಜಿ ಬದುಕಿನ ಶೈಲಿ, ಸರಳತೆ, ಜಾನಪದ ಜಗತ್ತಿಗೆ ಅವರ ಕೊಡುಗೆ, ಅವರ ಸಮಾಜಮುಖಿ ವ್ಯಕ್ತಿತ್ವ ಮುಂತಾದ ವಿಷಯಗಳ ಕುರಿತು ಹತ್ತಿರದಿಂದ ಸುಕ್ರಜ್ಜಿಯವರನ್ನು ಕಂಡ ಲೇಖಕರು ಸರಳ ಸುಂದರವಾಗಿ, ಆತ್ಮೀಯವಾಗಿ ತೆರೆದಿಟ್ಟಿದ್ದಾರೆ. ಇದು ಜಾನಪದದಲ್ಲಿ ಅರಳಿದ ಹೂವಿಗೆ ಸರಳವಾಗಿ ಸುಂದರವಾಗಿ ಸಂದ ಗೌರವವೆನಿಸುತ್ತದೆ. ಸುಕ್ರಜ್ಜಿಯ ಸಾಮಾಜಿಕ ಕಳಕಳಿ, ಔಷಧೀಯ ಸಸ್ಯಗಳ ಕುರಿತು ಜ್ಞಾನವು ತುಂಬ ಮಹತ್ವಪೂರ್ಣವಾದದ್ದು. ಸಾವಿರಗಟ್ಟಲೇ ಹಾಡುಗಳ ಧ್ವನಿಭಂಡಾರವಾದ ಸುಕ್ರಜ್ಜಿಗೆ ಅಕ್ಷತಾ ಅವರು ಬಳಸಿದ `ಧ್ವನಿದೂತೆ’ ಪದ ಮಾರ್ಮಿಕ ವೆನಿಸಿತು. ಹಲವಾರು ಲೇಖಕರು ಸುಕ್ರಜ್ಜಿಯವರ ಕಷ್ಟದ ಜೀವನದ ಕ್ಷಣಗಳನ್ನು ಎಳೆಎಳೆಯಾಗಿ ಬಿಡಿಸುತ್ತ ಸುಕ್ರಜ್ಜಿಯವರ ಜಾನಪದ ಹಾಡುಗಳ ಧಾರೆಯಿಂದಲೇ ಅಭಿನಂದನೆ ಸಲ್ಲಿಸಿದ್ದಾರೆ. ಸಾಂಸ್ಕೃತಿಕ ರಾಯಭಾರಿಯಾಗಿ ಸುಕ್ರಜ್ಜಿಯ ಪ್ರತಿಭೆ, ನಮ್ಮ ನಾಡಿನ ಹೆಮ್ಮೆಯಾಗಿ ಸುಕ್ರಜ್ಜಿ, ಜಾನಪದದ ಅಗಣಿತ ನಿಧಿಯಾಗಿ, ಲೋಕಸಿರಿಯಾಗಿ, ಕಲಾಸಿರಿಯಾಗಿ ಸುಕ್ರಜ್ಜಿಯ ಜೀವನ ಸುಂದರವಾಗಿ ಈ ಕೃತಿಯಲ್ಲಿ ಅನಾವರಣಗೊಂಡಿದೆ. `ನೀನೊಂದುಕೋಗಿಲೆಯೋ’ ಜನಪದ ಜಗದ ಬಾಗಿನವೋ’ ಎಂಬುದಾಗಿ ಹಿರೇಗುತ್ತಿಯವರು ರೂಪಕ ನೀಡಿರುವುದು ಉತ್ಫ್ರೇಕ್ಷೆ ಅನಿಸುವುದಿಲ್ಲ. ಸುಕ್ರಜ್ಜಿಯ ಸರಳ ಬದುಕು, ಪ್ರತಿಭೆ, ಸಮಾಜಮುಖಿ ವ್ಯಕ್ತಿತ್ವ ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿ ನಿಲ್ಲುವಲ್ಲಿ ಪ್ರಸ್ತುತ ಕೃತಿ ಪ್ರೇರಣೆಯಾಗಿ ನಿಲ್ಲುತ್ತದೆ. ಇಂತಹ ಅಮೂಲ್ಯಕೃತಿ ಲೋಕಾರ್ಪಣೆ ಮಾಡಿದ ಅಕ್ಷತಾಕೃಷ್ಣಮೂರ್ತಿ ಹಾಗೂ ಅವರ ವಿವರ ಕಟ್ಟಿಕೊಟ್ಟ ಲೇಖಕರಿಗೆ ವಂದನೆಗಳು.ಜೊತೆಗೆ ಈ ಕೃತಿಗೆ ಕರ್ನಾಟಕ ಜಾನಪದ ಪರಿಷತ್ತಿನ ಲೋಕ ಸರಸ್ವತಿ ಪ್ರಶಸ್ತಿ ಬಂದಿರುವುದಕ್ಕೆ ಅಭಿನಂದನೆಗಳು. ************ ಡಾ. ಪ್ರೀತಿ ಭಂಡಾರಕರ್








