ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ಸುಜಾತಾ ಲಕ್ಮನೆ ಗಂಟಿಕ್ಕಿ ಹುರಿ ಹುಬ್ಬು ಹಾರಿಸಿದಂತೆಲ್ಲ ನಾನೇನೂ ಬೆದರುವುದಿಲ್ಲಪೊದೆ ಮೀಸೆಯಲ್ಲೇ ರೋಷ ಉಕ್ಕಿಸಬೇಡ ಸೊಪ್ಪು ಹಾಕುವುದಿಲ್ಲ ತವರಲ್ಲಿ ಮುದ್ದಾಗಿ ಅಂಗೈಲೇ ಬುವಿ ಬಾನು ದೋಚಿದವಳು ನಾನುಕಣ್ಣಲ್ಲೇ ಕೆಣಕಿದಂತೆಲ್ಲ ಮೈ ಮನದ ಕಣಗಳೆಲ್ಲ ನವಿರೇಳುವುದಿಲ್ಲ ನಿನ್ನಂತೆಯೇ ಆಡಿ ನಲಿದು ಬಣ್ಣದ ಲಂಗದಲಿ ಕನಸ ಜೀಕಿದವಳುಮಾತು ಮೌನಕೆ ಮಣಿವ ಬೆಳ್ನಗೆಯಲಿ ಸ್ವಂತಿಕೆ ನಳನಳಿಸುವುದಿಲ್ಲ ನಿನ್ನ ಸೇವೆಯೇ ಎನ್ನ ಜೀವನದ ಪರಮ ಗುರಿಯೆಂಬ ಭ್ರಮೆಯೇಕೆಸದಾ ಕೀಲುಗೊಂಬೆಯಂತೆ ನಡೆವ ಪರಿ ನನಗೂ ಇಷ್ಟವಾಗುವುದಿಲ್ಲ ಕಾಲ ಮೇಲೆ ಕಾಲು ಹಾಕಿ ಕೂತು ಗಂಡು ಜನ್ಮವೆಂಬ ಬೀಗುವಿಕೆಯೇಮಗ್ಗಲಿಗೆಳೆದು ಬರಸೆಳೆದರೆ ಹಗಲಿಡಿಯ ದರ್ಪ ಮರೆಯಾಗುವುದಿಲ್ಲ ಒಮ್ಮೆಯಾದರೂ ಅಹರ್ನಿಶಿ ನಾ ಏಗಿದಂತೆ ಏಗಬಲ್ಲೆಯ ನೀನೂನುಒಡಲಗುದಿಯ ಸವರದಿರೆ ದಾಂಪತ್ಯ ಒಳಗೊಳಗೆ ಪದುಳಿಸುವುದಿಲ್ಲ ನಿನಗಿರುವಂತೆಯೇ “ಸುಜೂ” ಗೂ ತನ್ನವರ ಹಿತಾಸಕ್ತಿ ಇರಬಾರದೇನುನಿನ್ನ ವರ್ತುಲವೇ ಅಂತಿಮವಾದರೆ ಸಾಮರಸ್ಯ ಸೊಗಯಿಸುವುದಿಲ್ಲ *************

ಕಾವ್ಯಯಾನ Read Post »

ಇತರೆ, ಜೀವನ

ಅನುಭವ

                      ಮನೆ……. ಹಕ್ಕಿ ಮನೆ ಅನುಪಮಾ ರಾಘವೇಂದ್ರ                       ಮನೆ……. ಹಕ್ಕಿ ಮನೆ        ಈ ಮರೆವು  ಅನ್ನೋದು ಮನುಷ್ಯರಿಗೆ ಮಾತ್ರವೋ….? ಅಲ್ಲಾ ಪ್ರಾಣಿ ಪಕ್ಷಿಗಳಿಗೂ ಇರುತ್ತೋ…..? ನನಗೀ ಸಂಶಯ ಬರಲು ಕಾರಣವೇನೋ ಇದೆ. ಕೆಲವು ದಿನಗಳ ಹಿಂದಿನ ಘಟನೆ……          ಸಂಜೆ ವೇಳೆ ಹಟ್ಟಿ ಬಳಿಗೆ ಹೋದಾಗ ಹಟ್ಟಿಯ ಒಳಗಿನಿಂದ ಹಕ್ಕಿಯೊಂದು ಪುರ್ರನೆ ಹಾರಿ ಹೋಯ್ತು. ಮರುದಿನ ಬೆಳಗ್ಗೆಯೂ ಅದೇ ರೀತಿ ಹಕ್ಕಿ  ಹಾರುವುದು ಕಂಡಿತು. ಹಕ್ಕಿಗಳ ಕಿಚ ಪಿಚ ಸುಮಧುರವಾದ ಸಂಗೀತ…… ನಾನು ಹೋದ ಕ್ಷಣದಲ್ಲಿ ನಿಂತು ಬಿಡುತ್ತದೆ. ನಾನು ಹೋಗುವುದನ್ನು ದೂರದಿಂದಲೇ ಕಂಡು  ಹಾರಿ ಹೋಗುತ್ತದೆ. ಪದೇ ಪದೇ ಘಟನೆ ಮರುಕಳಿಸಿದಾಗ ಏನೋ ಕುತೂಹಲ……. ಅಡಗಿ ನಿಂತು ಗಮನಿಸಿದೆ. ಹಟ್ಟಿಯ ಗೋಡೆಯಲ್ಲಿ ಹಲವಾರು ಕಿಂಡಿಗಳಿವೆ.  ಒಂದು ಕತ್ತಲಿನ ಮೂಲೆಯ ಕಿಂಡಿಯಲ್ಲಿ ಹಕ್ಕಿಯೊಂದು ಮನೆ ಕಟ್ಟಿಕೊಂಡಿದೆ.        ಹುಲ್ಲಿನ ಮನೆಯೋ….., ಹಂಚಿನ ಮನೆಯೋ…..,ತಾರಸೀ ಮನೆಯೋ….. ವ್ಯತ್ಯಾಸವೇ ಇಲ್ಲ. ಮಣ್ಣಿನ ನೆಲವೋ…. , ಸಿಮೆಂಟ್ ನೆಲವೋ…., ಗ್ರಾನೈಟ್ ನೆಲವೋ….. ಸಂಶಯವೂ ಇಲ್ಲ.  ಆಹಾ…… ಬೇರು ನಾರುಗಳನ್ನು ಸೇರಿಸಿ ನಿರ್ಮಿಸಿದ ಸುಂದರವಾದ ಮನೆ. ಮನೆ ಅನ್ನುವುದಕ್ಕಿಂತಲೂ ಪುಟ್ಟ ಗೂಡು ಎನ್ನುವುದೇ ಸೂಕ್ತವಲ್ಲವೇ…..  ಗೂಡಿನ ಸುತ್ತಮುತ್ತ ಸೂಕ್ಷ್ಮವಾಗಿ ಗಮನಿಸಿದೆ. ಒಂದು ಕಿಂಡಿಯಲ್ಲಿ ಗೂಡು , ಪಕ್ಕದ ಎರಡು ಕಿಂಡಿಗಳಲ್ಲಿ ಅಲ್ಪ ಸ್ವಲ್ಪ ಬೇರು ನಾರುಗಳು , ಅರೆಬರೆ ಕಟ್ಟಿದ ಗೂಡು….! ಇದೇಕೆ ಹೀಗೆ….? ಗೂಡು ಕಟ್ಟುವಾಗ ಯಾವ ರೀತಿಯ ನಾರುಗಳು ಬೇಕು ಎಂಬ ಆಯ್ಕೆಗಾಗಿ ತಂದು ಇಟ್ಟಂತೆಯೂ ಕಾಣುವುದಿಲ್ಲ.  ಗೂಡು ಕಟ್ಟಲು ಆರಂಭಿಸಿದ ಹಕ್ಕಿಗೆ ತಾನು ಯಾವ ಕಿಂಡಿಯಲ್ಲಿ ಗೂಡು ಕಟ್ಟುತ್ತಿರುವೆ ಎಂಬುದು ಮರೆತು ಹೋಗಿರಬಹುದೇ….? ‘ಮರೆವು ಎಂಬುದು ಮನುಷ್ಯರಿಗೆ ಮಾತ್ರವೇ…? ಪ್ರಾಣಿ ಪಕ್ಷಿಗಳಿಗೂ ಇದೆಯೇ…..?’ ಎಂಬ ಸಂಶಯ ನನಗೆ ಬಂದದ್ದು ಈ ಕಾರಣಕ್ಕಾಗಿ.         ದಿನದಲ್ಲಿ ಕಡಿಮೆಯೆಂದರೆ ನಾಲ್ಕು ಬಾರಿಯಾದರೂ ಹಟ್ಟಿಗೆ ಹೋಗಿ ನೋಡುವ ಹುಚ್ಚು. ಇಷ್ಟಾದರೂ ಹಕ್ಕಿ ನನ್ನ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸಿಕೊಳ್ಳಲೇ ಇಲ್ಲ.  ಆ ದಿನ ಗೂಡಿನಲ್ಲಿ ಕಂಡದ್ದು ಮೂರು ಮೊಟ್ಟೆ! ತವರಿಗೆ ಬಂದವಳ ಬಾಣಂತನ ಮಾಡಿಸಿ ಕಳುಹಿಸುವ ಜವಾಬ್ದಾರಿ ಇಲ್ಲವೇ….. ಪ್ರತಿದಿನ ಹಟ್ಟಿಯ ಒಂದು ಮೂಲೆಯಲ್ಲಿ ಒಂದಿಷ್ಟು  ಗೋಧಿ, ಭತ್ತ, ಅಕ್ಕಿಕಾಳುಗಳನ್ನು ಇಟ್ಟೆ. ಹಕ್ಕಿ ಮೊದಲೆರಡು ದಿನ ನಾನಿಟ್ಟ ಕಾಳುಗಳ ಕಡೆ ತಿರುಗಿಯೂ ನೋಡದ್ದು ನನ್ನ ಮನಸಿಗೇಕೋ ಬೇಸರ. ಮತ್ತೆರಡು ದಿನ ಕಳೆದಾಗ ನಾನಿಡುವ ಕಾಳುಗಳನ್ನು ಆಸೆಯಿಂದ ಆರಿಸಿಕೊಂಡದ್ದು ಸುಳ್ಳಲ್ಲ. ಮೊಟ್ಟೆಯೊಡೆದು ಮರಿಗಳು ಹೊರ ಬರುವ ಕ್ಷಣಕ್ಕಾಗಿ ತಾಯಿ ಹಕ್ಕಿಗಿಂತ ಹೆಚ್ಚು ಕಾತರದಿಂದ ಕಾದುಕೊಂಡಿರುವವಳು ನಾನೇ ಏನೋ……?    ಅದೊಂದು ದಿನ ಗೂಡನ್ನು ಇಣುಕಿ ನೋಡುವಾಗ ಮುದ್ದು ಮುದ್ದಾದ ಮೂರು ಪುಟಾಣಿಗಳು. ನಾನು ಅಲ್ಲಿಗೆ ಹೋಗುತ್ತಿದ್ದಂತೆ ಇನ್ನೂ ಕಣ್ಣು ಬಿಡದ ಪಾಪಚ್ಚಿಗಳು ಕೊಕ್ಕನ್ನು ದೊಡ್ಡದಾಗಿ ತೆರೆದು , ಚಿಂವ್ ಚಿಂವ್ ದನಿಯೊಂದಿಗೆ ತಲೆ ಎತ್ತಿದವು. ಪಾಪ…. ಅಮ್ಮ ಬಂದಿರಬಹುದೆಂಬ ಭಾವ. ಅಮ್ಮ ಎಲ್ಲೋ ಆಹಾರದ ಅನ್ವೇಷಣೆಯಲ್ಲಿರಬಹುದು. ಅವುಗಳಿಗೇನು ನಮ್ಮಂತೆ ಎಣ್ಣೆ- ನೀರೇ…… ಬಾಣಂತನವೇ…. ನನಗೆ ಮಗ ಹುಟ್ಟಿದ ಸಮಯದಲ್ಲಿ ಎರಡು ತಿಂಗಳು ಕೋಣೆಯೊಳಗೆ ಬಂಧಿಯಾಗಿದ್ದು, ಎಣ್ಣೆ ಹಚ್ಚಿ , ಬಿಸಿ ನೀರು ಸ್ನಾನ , ಪಥ್ಯದ ಊಟ , ವಿಶ್ರಾಂತಿ ಎಲ್ಲ  ನೆನಪುಗಳೂ ಮರುಕಳಿಸಿದವು. ಅಷ್ಟೊತ್ತಿಗಾಗಲೇ ಒಂದು ಹಕ್ಕಿ ಬಾಯಿಯಲ್ಲಿ ಏನನ್ನೋ ಕಚ್ಚಿಕೊಂಡು ಹಾರಿ ಬರುವುದು ಕಂಡೆ. ಅದರ ಅಮ್ಮನೋ …. ಅಪ್ಪನೋ ಅರಿಯೆ . ನನ್ನನ್ನು ಕಂಡು ದೂರದಲ್ಲೇ ಕುಳಿತುಕೊಂಡಿತು. ನನ್ನಿಂದಾಗಿ ಪುಟಾಣಿಗಳು ಹಸಿದುಕೊಂಡಿರುವುದು ಬೇಡವೆಂದು ದೂರ ಸರಿದೆ. ಮಕ್ಕಳಿಗೆ ತಿನ್ನಿಸಿ ಪುರ್ರನೆ ಹಾರಿ ಹೋಯಿತು.       ಮನೆಯೊಳಗಿದ್ದರೂ ನನ್ನ ಮನಸೆಲ್ಲ ಪುಟ್ಟ ಕಂದಮ್ಮಗಳ ಕಡೆಗೇ ಇತ್ತು. ಮೂರು ಮಕ್ಕಳಲ್ಲಿ ಎಷ್ಟು ಹೆಣ್ಣು….?  ಎಷ್ಟು ಗಂಡು …?ಎಂಬ ಯೋಚನೆ ಒಂದು ಕಡೆ .  ಪ್ರಾಣಿ ಪಕ್ಷಿಗಳು ಹೆಣ್ಣು ಗಂಡೆಂಬ ಬೇಧ ಭಾವ ಮಾಡುತ್ತವೆಯೇ…? ಅದೇನಿದ್ದರೂ ನಮ್ಮಂತಹ ಮನುಷ್ಯರಿಗೇ ಎಂಬ ಯೋಚನೆ ಇನ್ನೊಂದು ಕಡೆ. ನಮಗೆ ಮನೆಯೊಳಗೆ ಗಂಡು ಬೇಕು . ಹಟ್ಟಿಯಲ್ಲಿ ಹೆಣ್ಣೇ ಬೇಕು. ಎಲ್ಲದರಲ್ಲಿಯೂ ತನ್ನ ಲಾಭವನ್ನೇ ನೋಡುವ ಸ್ವಾರ್ಥಿಗಳು….!       ಆಗಾಗ ಹೋಗಿ ಗೂಡನ್ನು ಇಣುಕಿ ನೋಡುವುದು ಅಭ್ಯಾಸವಾಯ್ತು. ಸಣ್ಣ ಸದ್ದಾದರೂ  ತಿನ್ನಲು ಬಂದಿರಬಹುದೆಂದು ಬಾಯಿ ತೆರೆಯುವುದು, ಉಳಿದ ಸಮಯದಲ್ಲಿ ನಿದ್ದೆ ಮಾಡುವುದು ಈ ಮರಿಗಳಿಗೆ ಇಷ್ಟೇ ಕೆಲಸವೋ….. ನನ್ನ ಕಲ್ಪನೆಗೆ ನನಗೇ ನಗು ಬಂತು. ಚಿಕ್ಕ ಮಗುವಿನ ಮೂಗು, ತುಟಿಗಳನ್ನು ಮುಟ್ಟಿದರೆ ತಿನ್ನಲು ಬಾಯಿ ತೆರೆಯುತ್ತದೆ. ಉಳಿದ ಸಮಯದಲ್ಲಿ ಮಲಗಿ ನಿದ್ರಿಸುತ್ತದೆ. ಇದು ಸಹಜ ತಾನೇ…. ಎಲ್ಲಾ ಜೀವಿಗಳೂ ಅದರದರ ಕಾಲಕ್ಕೆ ಆಯಾ ಕೆಲಸ ಕಾರ್ಯಗಳನ್ನು ಕಲಿತು ನಡೆಸಿಕೊಂಡು ಹೋಗುತ್ತವೆ.            ನನ್ನ ಹೆಜ್ಜೆಯ ಸದ್ದಿಗೆ ಎಚ್ಚರಗೊಳ್ಳುವ ಮರಿಗಳು ಚಿಂವ್ ಚಿಂವ್ ಎನ್ನುತ್ತಾ ದೊಡ್ಡದಾಗಿ ಬಾಯಿ ಅಗಲಿಸುವುದನ್ನು ನೋಡುವುದೇ ಚಂದ.  ನನಗೆ ಇದೊಂದು ಆಟ. ಆ ಮರಿಗಳಿಗೆ ಎಷ್ಟು ಸಂಕಟವಾಗಿತ್ತೋ ಆ ದೇವರೇ ಬಲ್ಲ. ಈ ದೃಶ್ಯಗಳನ್ನು ಮೊಬೈಲಿನಲ್ಲಿ ಸೆರೆ ಹಿಡಿಯುವ ಬಯಕೆಯಾಗಿ ಮೊಬೈಲ್ ಹಿಡಿದು ಹಟ್ಟಿಯ ಕಡೆಗೆ ನಡೆದೆ. ಎಲ್ಲಿದ್ದನೋ ನನ್ನ ಮಗ…! ಕಣ್ಣೆದುರು ಪ್ರತ್ಯಕ್ಷ. ನನ್ನನ್ನು ತಡೆದು ನಿಲ್ಲಿಸಿ “ಏನು ಆಪುಟಾಣಿಗಳ ವಿಡಿಯೋ ಮಾಡುವ ಯೋಚನೆಯಾ…..?” ಕೇಳಿದ. “ಹೌದು ಎಷ್ಟು ಸುಂದರ ಮರಿಗಳು . ಅವುಗಳ ಚಿಂವ್ ಚಿಂವ್ ಕೂಗು, ಬಾಯಿ ಅಗಲಿಸುವ ದೃಶ್ಯ ಎಲ್ಲವೂ ಅದ್ಭುತ” ಎಂದೆ. “ಇನ್ನೂಕಣ್ಣು ಬಿಡದ ಮರಿಗಳಿಗೆ ಯಾಕೆ ಹಿಂಸೆ ಕೊಡುತ್ತೀ…? ಅವುಗಳಿಗೆ ನಿನ್ನಿಂದಾಗಿ ತೊಂದರೆ “ ಎಂದ. “ತೊಂದರೆ ಏನಿಲ್ಲ. ನಾನು ಅವುಗಳನ್ನು ಮುಟ್ಟುವುದೇ ಇಲ್ಲ. ಸುಮ್ಮನೆ ನೋಡಿ ವಿಡಿಯೋ ಮಾಡಿ ಬರುವೆ” ಎಂದೆ. “ ನಿನ್ನಿಂದಾಗಿ ಆ ಮರಿಗಳ ನಿದ್ರೆ ಹಾಳಾಗಲೂ ಬಹುದು. ನಿನ್ನನ್ನು ಅಲ್ಲಿ ಕಂಡು ಅದರ ಅಮ್ಮ ಹತ್ತಿರ ಬರದೇ ಇರಲೂ ಬಹುದು. ನಿನಗೆ ನೆಮ್ಮದಿಯಲ್ಲಿರುವವರನ್ನು ಕಂಡರೆ ಹೊಟ್ಟೆ ಉರಿಯಾ…? ನಾನು ಬೆಳಗ್ಗೆ ಒಳ್ಳೆ ನಿದ್ದೆಯಲ್ಲಿರುವಾಗಲೂ ಹೀಗೇ ಕಿರಿಕಿರಿ ಮಾಡ್ತಾ ಇರ್ತೀಯ….” ಅಂದ. ಅವನ ಮಾತಿಗೆ ಬೆಲೆ ಕೊಟ್ಟು ಆ ದೃಶ್ಯಗಳನ್ನು ಸೆರೆ ಹಿಡಿಯುವ ಯೊಚನೆ ಬಿಟ್ಟೆ. ಆದರೂ ಸಮಾಧಾನವೇ ಇಲ್ಲ. ಒಂದೆರಡು ಸಲ ಮೊಬೈಲ್ ತರುವ ಪ್ರಯತ್ನ ಮಾಡಿ ಸಿಕ್ಕಿ ಬಿದ್ದದ್ದೂ ಆಯ್ತು. ಮಗನ ಹದ್ದಿನ ಕಣ್ಣನ್ನು ತಪ್ಪಿಸಲು ಸಾಧ್ಯವಾಗಲೇ ಇಲ್ಲ. ಕೊನೆಗೆ ,  ಫ್ಲ್ಯಾಷ್ ಲೈಟ್ ಹಾಗೂ ಮೊಬೈಲ್ ಕಿರಣಗಳು ಪ್ರಾಣಿ ಪಕ್ಷಿಗಳಿಗೆ ಎಷ್ಟು ಹಾನಿಕಾರಕ .ಅದರಲ್ಲೂ ಇನ್ನೂ ಕಣ್ಣು  ಬಿಡದ ಮರಿಗಳಿಗೆ ಎಷ್ಟು ಮಾರಕ. ಇದು ಅಪರಾಧ ಕೂಡಾ….  ಎಂಬುದನ್ನು ಇಂಟರ್ ನೆಟ್ಟಿನಲ್ಲಿ ತೋರಿಸಿಕೊಟ್ಟ. ಮಕ್ಕಳಿಂದಲೂ ನಾವು ಕಲಿಯುವುದು ಸಾಕಷ್ಟಿದೆ ಎಂಬುದನ್ನು ಅರಿತುಕೊಂಡೆ. ಇದಾದ ಮೇಲೆ ಮನಸ್ಸು ಹಟ್ಟಿಯ ಕಡೆಗೆ ಸೆಳೆದರೂ ದೇಹಕ್ಕೆ ಕಡಿವಾಣ ಹಾಕಿ ನಿಲ್ಲಿಸಿದೆ. ದಿನಕ್ಕೊಂದೆರಡು ಬಾರಿ ದೂರದಿಂದಲೇ ನೋಡಿ ಸಮಾಧಾನ ಪಟ್ಟುಕೊಂಡೆ.     ಆ ಹಕ್ಕಿಯ ಹೆಸರೇನೆಂದು ತಿಳಿಯುವ ಕುತೂಹಲದಿಂದ ಗೂಗಲಣ್ಣನಲ್ಲಿ ಜಾಲಾಡಿದೆ. ಹಕ್ಕಿಯನ್ನು ಸ್ಪಷ್ಟವಾಗಿ ನೋಡದ ಕಾರಣ ಗೂಗಲಣ್ಣ ಸರಿಯಾದ ಮಾಹಿತಿ ನೀಡಲಿಲ್ಲ.  ಅಲ್ಲೂ ಒಂದೇ ರೀತಿಯ ಹಕ್ಕಿಗಳು ಹಲವಾರು. ನಮ್ಮ ಆತ್ಮೀಯರೊಬ್ಬರಲ್ಲಿ ವಿಚಾರಿಸಿದಾಗ ,ಈ ಹಕ್ಕಿ ಕೆಂಪು ಕೊರಳಿನ ನೊಣ ಹಿಡುಕ (Tickle’s Blue flycatcher) ಎಂದು ತಿಳಿಯಿತು. ದಿನ ನಿತ್ಯ ನವಿಲು, ಕಾಗೆ , ಕೊಕ್ಕರೆ , ಮರಕುಟಿಗ , ಮಡಿವಾಳ ಹಕ್ಕಿಗಳನ್ನು ನೋಡಿ ಪರಿಚಯವಿದ್ದರೂ ಈ ಹೆಸರು ನನಗೆ ಹೊಸದು.        ಕೊನೆಗೂ ಆ ದಿನ ಬಂದೇ ಬಂತು…….. ನಾನು ಹಟ್ಟಿಯ ಕಡೆಗೆ ಹೋಗುವಾಗ ದೊಡ್ಡ ಹಕ್ಕಿ ಅಲ್ಲೇ ಪಕ್ಕದಲ್ಲಿದ್ದ ಮರದಲ್ಲಿ ಕುಳಿತು ಜೋರಾಗಿ ಚೀರುತ್ತಿತ್ತು. ಆಶ್ಚರ್ಯವೆಂದರೆ ಯಾವತ್ತೂ ನನ್ನನ್ನು ಕಂಡ ಕೂಡಲೇ ಹಾರಿ ಹೋಗುತ್ತಿದ್ದ ಹಕ್ಕಿ ಇಂದು ಜಾಗ ಬಿಟ್ಟು ಕದಲಲೇ ಇಲ್ಲ. ಗೂಡಿನ ಕಡೆಗೆ ನೋಡಿದೆ . ಮರಿಗಳಿಲ್ಲ. ನನ್ನೆದೆ ಧಸಕ್ಕೆಂದಿತು. ಏನಾಗಿರಬಹುದು…..?  ಬೇರೆ ಯಾವುದಾದರೂ ಹಕ್ಕಿಗಳು ಧಾಳಿ ಮಾಡಿರಬಹುದೇ…….? ಹಾವೋ… ಬೆಕ್ಕೋ…… ಇನ್ಯಾವುದಾದರೂ ಪ್ರಾಣಿಗಳೋ ಆಕ್ರಮಣ ಮಾಡಿರಬಹುದೇ….? ನನ್ನ ಕೈ ಕಾಲುಗಳಲ್ಲಿ ಸಣ್ಣ ನಡುಕ. ನನಗೇ ಇಷ್ಟು  ಭಯವಾಗಿದೆ. ಇನ್ನು ಆ ಕಂದಮ್ಮಗಳ  ಅಪ್ಪ ಅಮ್ಮನ ಪರಿಸ್ಥಿತಿ …….. ಅಯ್ಯೋ…. ಯಾರಿಗೂ ಬೇಡಪ್ಪಾ…… ಆದರೂ ನನ್ನ ಕಣ್ಣುಗಳು ಸುತ್ತ ಮುತ್ತ ಹುಡುಕುತ್ತಲೇ ಇದ್ದವು. ಮರದ ಮೇಲಿದ್ದ ಹಕ್ಕಿಯ ಚೀರಾಟವನ್ನು ಗಮನಿಸಿದೆ. ಅದರ ದೃಷ್ಟಿ ಅಲ್ಲೇ ಕೆಳಗೇ ಇತ್ತು. ಆ ಕಡೆಗೆ ನೋಡಿದೆ. ಅಬ್ಬಾ…..ಮರಿ ಅಲ್ಲೇ ಇದೆ. ಹಾಗಿದ್ದರೆ ಹಕ್ಕಿಯ ಕಿರುಚಾಟ ಯಾಕಾಗಿ…..? ಆ ಮರಿ ಗೂಡಿನಿಂದ ಅಲ್ಲಿವರೆಗೆ ಹೇಗೆ ಬಂತು…? ಹೋ…… ಮಗ ಮೊತ್ತ ಮೊದಲ ಬಾರಿಗೆ ಅಂಬೆಗಾಲಿಟ್ಟು ಮುಂದೆ ಮುಂದೆ ಬರುವಾಗ ಮುಗ್ಗರಿಸಿದ್ದು , ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆಯಲು ಅಪ್ಪನ ಕೈಯ ಆಸರೆ ಬಯಸಿದ್ದು ಒಂದೊಂದಾಗಿ ಕಣ್ಣ ಮುಂದೆ ಬಂತು. ಅಂದರೆ ಈ ಮರಿಯೂ ಹಾರಲು ಕಲಿಯುತ್ತಿದೆ. ಮರದಲ್ಲಿದ್ದ ಹಕ್ಕಿ ಹುರಿದುಂಬಿಸುತ್ತಿದೆ. ಇನ್ನಷ್ಟು ಹತ್ತಿರದಿಂದ ಮರಿಯ ಫೊಟೋ ತೆಗೆಯಲು  ಹತ್ತಿರ ಹತ್ತಿರ ಹೋಗುತ್ತಿದ್ದಂತೆ ಆ ಮರಿಯೂ ಪುರ್ರನೆ ಹಾರಿ ಹೋಯ್ತು. ಅಷ್ಟು ಹೊತ್ತು ಚೀರಾಡುತ್ತಿದ್ದ ಹಕ್ಕಿ ಸಂತೋಷದಿಂದ ಹಾಡುತ್ತಾ ಹಾರಿತು. ಹಕ್ಕಿ ಮನೆಯೊಂದಿಗೆ ನನ್ನ ಮನವೂ ಬರಿದಾಯ್ತು.       ಆ ಗೂಡು ಹಕ್ಕಿ ಜೋಡಿಯ ನಿರೀಕ್ಷೆಯಲ್ಲಿದೆಯೋ……. ಇಲ್ಲವೋ….  ನಾನರಿಯೆ. ನಾನಂತೂ ಇನ್ನೊಂದು ಹಕ್ಕಿ ಜೋಡಿಯ ನಿರೀಕ್ಷೆಯಲ್ಲಿರುವೆ. ************

ಅನುಭವ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ತೇಜಾವತಿ ಹೆಚ್.ಡಿ. ಅಸಲಿಗೆ ನಕಲಿಯ ಲೇಪನ ಬಳಿದಿರಬಹುದು ನೋಡುಕಂಗಳಿಗೆ ಆವರಿಸಿರುವ ಪೊರೆಯ ಸರಿಸಿ ಅರಿಯಬಹುದು ನೋಡು ಭಿತ್ತಿಯ ಮೇಲೆ ಬಿದ್ದ ಛಾಯೆಯು ಮಿಥ್ಯವಿರಬಹುದು ಒಮೊಮ್ಮೆಅಂತಃಕರಣದ ಅಕ್ಷಿಯರಳಿಸಿ ದಿಟವ ತಿಳಿಯಬಹುದು ನೋಡು ತಳವಿಲ್ಲದ ಬಾವಿ ಅನಂತ ಆಳವ ತೋರಿರಬಹುದು ಅಲ್ಲಿಭ್ರಮೆಯಿಂದ ಹೊರಬಂದು ನೈಜತೆಯ ಕಾಣಬಹುದು ನೋಡು ದಿಗಂತವು ಇಳೆ ಆಗಸವು ಸಂಧಿಸಿದಂತೆ ಭಾಸವಾಗುವುದುವಿಶ್ವವನ್ನೊಮ್ಮೆ ಪರ್ಯಟಿಸಿ ಅವಲೋಕಿಸಬಹುದು ನೋಡು ಅಖಂಡ ಆಗಸವು ನೀಲವರ್ಣದಿ ಗೋಚರಿಸುವುದು ಮೇಲೆಬೆಳಕಿನ ಮೂಲದ ಸತ್ಯಾಸತ್ಯತೆಯನ್ನು ಪರಾಮರ್ಶಿಸಬಹುದು ನೋಡು ********

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

“ಪಮ್ಮಿ” ಹನಿಗವಿತೆಗಳು ಕನ್ನಡದಲ್ಲಿ ಚುಟುಕು ಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆ.ನಮ್ಮ‌ಜನಪದ ತ್ರಿಪದಿಗಳು ಮೂರೆ ಸಾಲಿನಲ್ಲಿ ಥಟ್ ಅಂತ ಒಂದು ವಸ್ತುವಿಷಯದ ಮೇಲೆ ಬೆಳಕು ಚೆಲ್ಲಿ ಬೆಳಗಿಸಿಬಿಡುವ ಮಿಣುಕು ಹುಳುಗಳಂತಹವು.ಜೀವನಾನುಭವದಿಂದ ಮೂಡಿದ ನುಡಿಮುತ್ತುಗಳು.ಹೊಸಗನ್ನಡದಲ್ಲಿ ಚುಟುಕುಗಳ ಬ್ರಹ್ಮನೆಂದೆ ಖ್ಯಾತರಾದ ದಿನಕರ ದೇಸಾಯಿ ಅವರ ದ್ವಿಪದಿ, ಬೀಚಿ ಅವರ ಹಾಸ್ಯದ ಚುಟುಕುಗಳು,ದುಂಡೀರಾಜ್ ಅವರ ಪಂಚ್ ಗಳು ಪ್ರಸಿದ್ದಿಯಾದವು.ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗದ ಕಂದ ಪದ್ಯಗಳು ತಾತ್ವಿಕ ವಿಚಾರಗಳನ್ನು ತುಂಬಿಕೊಂಡೆ‌ ತೆನೆಗಳು.ಚುಟುಕುಗಳ ಮುಖ್ಯ ಲಕ್ಷಣವೇ ಯಾವ ವಿಷಯವನ್ನಾದರೂ ಪರಿಣಾಮಕಾರಿಯಾಗಿ ಚಿಕ್ಕದಾಗಿ ಚೊಕ್ಕಾವಾಗಿ ಭಾವ ಸ್ಪುರಿಸುವಂತೆ ಹೇಳಿಬಿಡುವುದು.ಕೊನೆಯಲ್ಲಿ ಪಂಚ್ ಇರಬೇಕು ಅಂತಾರ,ಅದು ಪದಗಳ ಮೂಲಕ ಇಲ್ಲಾ ಅರ್ಥದಲ್ಲಿ ಮೂಡಿಸುವ ಪಂಚ್ ಆದರೂ ಆಗಬಹುದು.ಒಟ್ಟಿನಲ್ಲಿ ಹನಿಯಲ್ಲಿ ಕಡಲು,ಕನ್ನಡಿಯಲ್ಲಿ ಕರಿ ಎಂಬಂತೆ ಮೂರು ನಾಲ್ಕೋ ಸಾಲಿನಲ್ಲೇ ಬ್ರಹ್ಮಾಂಡ ತೋರಿಬಿಡುವ ಶಕ್ತಿಯುಳ್ಳವು ಚುಟುಕುಗಳು.ಕೆಲವು ಗಂಭೀರ,ಕೆಲವು ಹಾಸ್ಯಭರಿತ, ಮತ್ತೆ‌ ಕೆಲವು ಜಟಿಲ,ಮತ್ತಷ್ಟು ಸರಳ,ಸರಾಗ ..ಹೀಗೆ ಧೊಪ್ಪೆಂದು ಆಗಸದಿಂದ ಗಟ್ಟಿ ಮಳೆಹನಿಯೊಂದು ಕಾರ್ಮೋಡ ಸೀಳಿಕೊಂಡು ಧರೆಗೆ ಬಿದ್ದಂತೆ. ” ಮೌನವೆಂದರೆ…ಮಾತಿಲ್ಲದ ಮನೆಯೇಮಾತುಬಾರದ ಮಗಳೆಇದ್ಯಾವುದೂ ಇಲ್ಲವಾದರೆ! ‌‌‌‌‌‌‌‌‌ ಮೌನವೆಂದರೆ…ಮುನಿಸಿಕೊಂಡಮಾತಿರಬೇಕು.”.. ದೇಸು ಆಲೂರು ಮಾತು ಮೌನದ ನಡುವಿನ ಸಂಬಂಧ ಮತ್ತು ವ್ಯತ್ಯಾಸವನ್ನು ಹೇಳುವ ಈ ಚುಟುಕು ದೇಸು ಆಲೂರು ಅವರದು.ಬಾಯಿ ತೆರೆದರೆ ಸಾಕು ಹಾಸ್ಯ ಚಟಾಕಿಗಳ ಹಾರಿಸುತ್ತಾ,ಎಲ್ಲರನ್ನೂ ನಗಿಸಿ,ತನ್ನ ಸುತ್ತಮುತ್ತ ಸದಾ ಉತ್ಸಾಹದ ಅಲೆಯನ್ನು ಮೂಡಿಸಿಕೊಂಡುಬಿಡುವ ಚುಟುಕು ಕವಿ ದೇಸು ಅವರು.ಶಾಲೆ ಕಾಲೇಜುಗಳಿಗಿಂತ ಭಿನ್ನವಾದ ಕಲಿಕೆಯನ್ನು ಜೀವನದುದ್ದಕ್ಕೂ ಕಲಿಯುತ್ತಾ ಬಂದಿರುವ ದೇಸು ಅವರು ಬದುಕನ್ನೇ ಪಾಠಶಾಲೆಯಾಗಿಸಿಕೊಂಡವರು.ದುಡಿಮೆಯನ್ನೇ ದೈವವಾಗಿಸಿ ಬದುಕುತ್ತಿರುವವರು. “ಪಮ್ಮಿ”.. ಹರಿಣಿ ಹೆಸರಿನ ಹೆಂಡತಿಯನ್ನು ಪಮ್ಮಿಯಾಗಿಸಿ,ಆಗಾಗ ತಮಾಷೆಗೆ ಡುಮ್ಮಿ ಎನ್ನುತ್ತಾ,ಸಮಯಕ್ಕೆ ತಕ್ಕಂತೆ ನೀನೀಗ ಎರಡು ಮಕ್ಕಳ ಮಮ್ಮಿ ಎನ್ನುತ್ತಲೂ ತಮ್ಮ ದಾಂಪತ್ಯ ಜಗತ್ತನ್ನು ತೆರೆದಿಡುವ ದೇಸು ಅವರ ಚುಟುಕುಗಳು ಕಚಗುಳಿಯಿಡುವ ಮಾತ್ರೆಗಳು.ಪಮ್ಮಿ ಸಂಕಲನದ ಬಹುಪಾಲು ಹನಿಗವನಗಳು ಹಾಸ್ಯದ ಪಟಾಕಿಗಳೇ. ” ತವರಿನಲ್ಲಿದ್ದನನ್ನಾಕೆಗೆ ಕಾಗದ ಬರೆದೆ..ಪ್ರಿಯೆ,ಈ ಓಲೆ ತಲುಪಿದತಕ್ಷಣನಿನ್ನ ಕ್ಷೇಮದ ವಿಚಾರತಿಳಿಸತಕ್ಕದ್ದುಅತ್ತ ಕಡೆಯಿಂದ ಕಾಗದಬಂತು..ರೀ….ನಿಮ್ಮ ಕಾಗದ ಸಿಕ್ಕಿದೆ,ಆದರೆ…ವಾಲೆ‌ ಮಾತ್ರ ಸಿಕ್ಕಿಲ್ಲ..” ಹೆಂಡತಿಯನ್ನು ಪೆದ್ದತನದಲಿ ಕಾಣಿಸುವ ಇವರ ಬಹಳಷ್ಟು ಚುಟುಕುಗಳು ಅವಳು ಮೊದ್ದು,ಪೆದ್ದು,ಮುದ್ದು,ಸಿಡುಕು,ಕ್ಯಾತೆ ತೆಗೆವಾಕೆ ಎನ್ನುತ್ತಲೇ ಅವಳಿಲ್ಲದೆ ಬಾಳಿಲ್ಲಾ.ಅವಳ ಮಾತು,ಮುನಿಸು,ಸಿಟ್ಟಿಲ್ಲದೆ ಇರಲಾಗುವುದಿಲ್ಲವೆಂಬ ಪ್ರೀತಿಯನ್ನೂ ತೋರುತ್ತದೆ. ” ಪಮ್ಮಿಗೂ..ನನಗೂ ನಿತ್ಯ ಕದನಕದನದಲ್ಲೂ ಹೊಳೆಯುವುದುನನ್ನವಳ ವದನ “ ಪಮ್ಮಿ ತುಂಬಾ ಒಳ್ಳೆಯವಳಂತೆ ಪಕ್ಕದ ಮನೆಯಾಕೆ ಹೇಳ್ತಿದ್ರು ಎನ್ನುವ ದೇಸು,ಮಡದಿಯನ್ನು ರೇಗಿಸುತ್ತಾ,ಕಿಚಾಯಿಸುತ್ತಾ,ನಗಿಸುತ್ತಾ ಇಬ್ಬರು ಮಕ್ಕಳೊಡನೆ ಬಾಳ ಕಡಲನ್ನು ನಗುತ್ತಲೇ ಈಜುತ್ತಿದ್ದಾರೆ‌. ‘ ಮಹಿಳೆ..ಮಧ್ಯದ ಅಕ್ಷರ ತೆಗೆದರೆ ಹೊಳೆ..ತೆಗೆಯದಿದ್ದರೆ ಮಹಿಳೆಮಳೆ ಪ್ರತೀ ಜೀವನಾಡಿಯ ಉಸಿರು..ಮಹಿಳೆ,ಗಂಡಿನ ಯಶಸ್ಸಿನ ಉಸಿರು.. “ ಎಂದೆನ್ನುತ್ತಾ ಪಮ್ಮಿಯೆ ಎಲ್ಲಾ ಎನ್ನುತ್ತಾರೆ. ” ಗತ್ತು..ಅದೇನು ಗತ್ತೇ ಹುಡುಗಿಆ ಮುಂಗುರುಳಿಗೆ..!ಬಾಚಿ ತಬ್ಬಿ ನಗುತಿದೆನಿನ್ನ ಕೊರಳಿಗೆ..” ” ಸಾಂಗತ್ಯ.. ಶೃಂಗಾರ ಸಂಗತ್ಯ,ನವರಸದ ನೇಪಥ್ಯಸಮರಸದ ದಾಂಪತ್ಯ, ಕಾಲನಿಗೂ ಅಭೇದ್ಯ..” ಎಂದು ದಾಂಪತ್ಯದ ಅರ್ಥ ತಿಳಿದವರು ದೇಸು.ಮಡದಿ,ಮಗಳ ಕಣ್ಣುಗಳೇ ಮನೆಯ ನಾಲ್ಕು ಕಣ್ಣುಗಳೆಂದು ಸಂಭ್ರಮಿಸಿ,ಸಂಬಂಧಗಳೇ ಸತ್ತ ಮೇಲೆ ಭಾವನೆಗಳಿಗೆ ಕೆಲಸವಿಲ್ಲವೆಂದು ಸಂಬಂಧಗಳ ಜೋಪಾನ ಮಾಡುವವರು. ” ಅಮ್ಮನ ಮಾತಿಗೆ ಮನಸು ನಗುತದೆಮುಂದೆ ಹೋಗುತಿಲ್ಲ ಅಪ್ಪನ ವಯಸ್ಸುಹತ್ತು ವರ್ಷದಿಂದ ಒಂದೇ ಮಾತುನಿಮ್ಮಪ್ಪನಿಗಿನ್ನೂ ಐವತ್ತು..” ಎನ್ನುತ್ತಲೇ ಅಗಲಿದ ಅಮ್ಮನನ್ನು ಆಕಾಶದ ಚುಕ್ಕಿಗಳಲ್ಲಿ ಕಾಣುತ್ತಾ,ಅಲ್ಲಿ ಚನ್ನಾಗಿರಮ್ಮಾ..ಇಲ್ಲಿ ನಾವು ಚನ್ನಾಗಿರುತ್ತೇವೆ ಎಂದು ಭಾವುಕರಾಗಿಬಿಡುತ್ತಾರೆ. ” ದೇಸು ಕನ್ನಡದ ಕೂಸು” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಈ ಕನ್ನಡಮ್ಮನ ಮಗ,ಕನ್ನಡ ಸಾಹಿತ್ಯ ಸೇವೆಗೆ ಸದಾ ನಿಂತಿರುವ ಕನ್ನಡದ ಬಂಟ. ಏನಕ್ಕಾ ಸಮಾಚಾರ ಎಂದೆನ್ನುತ್ತಾ ಕಣ್ಣರಳಿಸಿ ನಗುಮೊಗದಲಿ ಎದುರಾಗುವ ಈ ತಮ್ಮನ ಮನೆ, ಮನ ಸದಾ ಹೀಗೇ ಸಂತಸದಿಂದಿರಲಿ..ಇವರಿಂದ ಇನ್ನಷ್ಟು ಮತ್ತಷ್ಟು ಹನಿಗವನಗಳೊಂದಿಗೆ ಗಂಭೀರ ಸೃಜನಶೀಲ ಸಾಹಿತ್ಯದ ಹಲವು ಪ್ರಕಾರಗಳ ಬೆಳೆ ಉಲುಸಾಗಿ ಬೆಳೆಯಲಿ. ” ಕಬ್ಬಿಗರೆದೆಯಲಿ ನಲಿದಿದೆಕನ್ನಡಹಿಗ್ಗಿದೆ ಕನ್ನಡ ಹಿರಿದಿದೆ ಕನ್ನಡಕನ್ನಡಿಗರ ಮನೆ ಮನದಲಿನೆಲೆಸಿದೆ ಕನ್ನಡ” ಕನ್ನಡಕ್ಕಾಗಿ ಮಿಡಿವ,ತುಡಿವ ದೇಸುರವರ ಕನ್ನಡ ಸೇವೆ ‌ನಿರಂತರವಾಗಲಿ. |******* ಸುಜಾತಾ ಲಕ್ಷ್ಮೀಪುರ

ಪುಸ್ತಕ ಸಂಗಾತಿ Read Post »

ಅಂಕಣ ಸಂಗಾತಿ, ದಿಕ್ಸೂಚಿ

ದಿಕ್ಸೂಚಿ

ಸೋಲು ಒಪ್ಪಿಕೊಳ್ಳುವ ಮುನ್ನ ಕೊಂಚ ಪ್ರಶ್ನಿಸಿಕೊಳ್ಳಿ ಜಯಶ್ರೀ ಅಬ್ಬಿಗೇರಿ ನಾನು ಕೈ ಹಾಕಿದ ಯಾವ ಕೆಲಸದಲ್ಲೂ ಗೆಲುವು ಸಿಗುತ್ತಲೇ ಇಲ್ಲ. ನನ್ನ ಹಣೆ ಬರಹವೇ ಚೆನ್ನಾಗಿಲ್ಲ. ನಸೀಬು ಕೆಟ್ಟಿದೆ. ಸಾಲು ಸಾಲು ಸೋಲುಗಳು ನನ್ನ ಬೆನ್ನು ಹತ್ತಿವೆ. ಹೀಗೇ ಇನ್ನೊಂದಿಷ್ಟು ಸಮಯ ಕಳೆದರೆ ಜೀವನದ ಆಸೆಗಳೇ ಕಮರಿ ಹೋಗಿ ಬಿಡುತ್ತವೆ. ನನ್ನಿಂದೇನೂ ಮಾಡಲು ಸಾಧ್ಯವಿಲ್ಲವೆಂದು ಊಟ ತಿಂಡಿ ಬಿಟ್ಟು ಕೈ ಕಟ್ಟಿ ಕುಳಿತು ಚಿಂತಿಸಿದರೆ ಬದುಕು ನಿಂತ ನೀರಾಗಿ ಬಿಡುತ್ತದೆ. ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತವೆ. ಉಗ್ರ ರೂಪ ತಾಳಿ ಜೀವ ತಿನ್ನುತ್ತವೆ. ಬದುಕು ಬದಲಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಅದೃಷ್ಟ ಹಳಿಯುವುದನ್ನು ಬಿಟ್ಟು ನಾನೇಕೆ ಸೋಲುತ್ತಿದ್ದೇನೆ? ಎಲ್ಲಿ ಎಡುವುತ್ತಿದ್ದೇನೆ ಎಂದು ಕೊಂಚ ಆತ್ಮಾವಲೋಕನ ಮಾಡಿಕೊಂಡರೂ ಸರಿ, ನಮ್ಮ ತಪ್ಪುಗಳು ನಮ್ಮ ಕಣ್ಣಿಗೆ ರಾಚದೇ ಇರವು. ಸೋಲೊಪ್ಪಿಕೊಳ್ಳುವ ಮುನ್ನ ಈ ಸಂಗತಿಗಳತ್ತ ಗಮನ ಹರಿಸಿ. ಕೊಂಚ ಪ್ರಶ್ನಿಸಿಕೊಳ್ಳಿ . ನಿಮ್ಮ ಇಷ್ಟವೇ ಗುರಿ ಆಗಿದೆಯೇ? ನೀವಿಟ್ಟುಕೊಂಡ ಗುರಿ ನಿಮಗೆ ಇಷ್ಟವಾಗಿದೆಯೇ? ನಮ್ಮ ಮನೆಯಲ್ಲಿ ಎಲ್ಲರೂ ಇಂಜಿನೀಯರ್ ಆಗಿದಾರೆ. ನಾನು ಬೇರೆ ಕ್ಷೇತ್ರದಲ್ಲಿ ಮಿಂಚುವ ಅವಕಾಶ ಕಮ್ಮಿ . ನನಗೆ ಸಾಮರ್ಥ್ಯವಿದೆಯೋ ಇಲ್ಲವೋ ಗೊತ್ತಿಲ್ಲ. ನನಗೆ ಟೀಚರ್ ಆಗೋಕೆ ಇಷ್ಟ. ಆದರೆ ಅಪ್ಪನ ಆಸೆ ಈಡೇರಿಸೋಕೆ ಇಂಜನೀಯರಿಂಗ್ ಸೇರಿಕೊಂಡಿದಿನಿ. ನನ್ನ ಗೆಳತಿಯರು ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡಿದಾರೆ. ನನಗೆ ಲೆಕ್ಕಶಾಸ್ತ್ರ ಅಂದ್ರೆ ಪಂಚ ಪ್ರಾಣ. ಆದರೆ ಇಷ್ಟು ದಿನ ಕೂಡಿ ಕಲಿತ ಗೆಳತಿಯರ ಬಿಟ್ಟು ಹೊಸ ಪರಿಸರ ಹೊಸ ಸ್ನೇಹಿತರ ಜೊತೆ ಹೊಂದಿಕೊಳ್ಳುವುದು ಕಷ್ಟ ಹೀಗಾಗಿ ನಾನೂ ಇದನ್ನೇ ಮಾಡುವೆ ಎಂದು ನಿಮಗಿಷ್ಟವಿಲ್ಲದ ಓದಿಗೆ ಸೇರಿಕೊಳ್ಳುವುದು ಎಷ್ಟು ಸರಿ. ಯಾರಿಗಾಗಿಯೋ ನಿಮ್ಮ ಆಸೆ ಆಕಾಂಕ್ಷೆಗಳನ್ನು ಬಲಿ ಕೊಡುವುದು ಸರಿಯಲ್ಲ. ಅಲ್ಲದೇ ನೀವು ಆಯ್ಕೆ ಮಾಡಿಕೊಂಡಿರುವ ದಾರಿ ನಿಮ್ಮ ಇಷ್ಟದ ದಾರಿ ಅಲ್ಲವೇ ಅಲ್ಲ ಎಂದಾಗ ಮುನ್ನಡೆಯುವುದಾದರೂ ಹೇಗೆ? ನಿಮ್ಮ ಶಕ್ತಿ ಸಾಮರ‍್ಥ್ಯ ಯಾವುದಿದೆಯೋ ನಿಮ್ಮ ಮನಸ್ಸು ಯಾವುದಕ್ಕೆ ಬಲವಾಗಿ ಮಿಡಿಯುತ್ತಿದೆಯೋ ಅದನ್ನೇ ಗುರಿಯಾಗಿಸಿಕೊಳ್ಳಿ. ಇಚ್ಛಾ ಶಕ್ತಿ ಬಲಪಡಿಸಿಕೊಳ್ಳಿ. ‘ಇಚ್ಛಾ ಶಕ್ತಿ ಎಲ್ಲಕ್ಕಿಂತ ಬಲಶಾಲಿಯಾದದ್ದು. ಅದರ ಮುಂದೆ ಎಲ್ಲವೂ ನಡು ಬಗ್ಗಿಸಬೇಕು.’ ಎಂಬ ಪ್ರೇರಣಾತ್ಮಕ ನುಡಿ ಸ್ವಾಮಿ ವಿವೇಕಾನಂದರದು. ಅದು ಸಾರ‍್ವಕಾಲಿಕ ಸತ್ಯವೂ ಕೂಡ. ಯೋಜನೆಗಳನ್ನು ಹಾಕಿಕೊಂಡಿದ್ದೀರಾ? ನಿರ್ದಿಷ್ಟ ಗುರಿ ನಿರ್ಧರಿಸಿಯಾದ ಮೇಲೆ, ಗುರಿ ಸಾಧಿಸಲು ಯೋಜನೆಗಳನ್ನು ಹಾಕಿಕೊಳ್ಳಿ. ಯೋಜನೆ ಎನ್ನುವುದು ಮಾನಸಿಕ ದೃಶ್ಯ. ನಾನು ನನ್ನ ಗುರಿಯ ಬಗ್ಗೆ ಸದಾ ಯೋಚಿಸುತ್ತಲೇ ಇರುತ್ತೇನೆ ಆದರೆ ಅದನ್ನು ಇನ್ನೂ ತಲುಪಲಾಗುತ್ತಿಲ್ಲ ಎಂದು ಹಳ ಹಳಿಸಿದರೆ ಪ್ರಯೋಜನವಿಲ್ಲ. ನೀವು ಸದಾ ಯಾವುದರ ಬಗ್ಗೆ ಆಲೋಚಿಸುತ್ತಿದ್ದೀರೋ ಅದೇ ಆಗುವ ಸಂಭವನೀಯತೆ ಹೆಚ್ಚಿದೆ. ಅಂದುಕೊಂಡದ್ದನ್ನು ಸಾಧಿಸಲು ಒಂದು ದಾರಿ ಬೇಕಲ್ಲ ಅದುವೇ ಯೋಜನೆ. ಯೋಜನೆ ಇರದಿದ್ದರೆ ಗಾಳಿ ಬೀಸಿದ ಕಡೆ ಗಂಧ ತೇಲುವಂತೆ ನಿಮ್ಮ ಗುರಿಯ ಪಯಣವೂ ಎಲ್ಲೆಲ್ಲೋ ದಾರಿ ತಪ್ಪಿ ಬಿಡುತ್ತದೆ ಅಲನ್ ಲಕೀನ್ ಹೇಳಿದಂತೆ,’ಯೋಜಿಸಲು ವಿಫಲರಾದರೆ, ವಿಫಲರಾಗಲು ಯೋಜಿಸಿದಂತೆ.’ ಆದ್ದರಿಂದ ದಿನಕ್ಕಿಷ್ಟು ತಿಂಗಳಿಗಿಷ್ಟು ವರ‍್ಷಕ್ಕಿಷ್ಟು ಸಾಧಿಸ್ತೀನಿ ಎಂದು ಯೋಜನೆ ಹಾಕಿಕೊಂಡು ಅದರಂತೆ ಜಾರಿಗೊಳಿಸಬೇಕು. ಫಲ ಸಿಗುವವರೆಗೆ ತಾಳ್ಮೆ ಇದೆಯಾ? ಗೆಲುವಿಗಾಗಿ ಕೆಲಸ ಮಾಡುವುದೆನೋ ಸರಿ. ಆದರೆ ಅದಕ್ಕಾಗಿ ಅದೆಷ್ಟು ದಿನ ಇನ್ನೂ ಕಾಯಬೇಕು.? ಕಾಯುವುದಕ್ಕೆ ಒಂದು ಮಿತಿ ಇಲ್ಲವೇ? ಎಂದು ಬೇಸರಿಸಿಕೊಳ್ಳದಿರಿ. ಗೆಲುವು ರಾತ್ರೋ ರಾತ್ರಿ ಸಿಗುವಂಥದ್ದಲ್ಲ. ವರ‍್ಷಗಳವರೆಗೆ ತಪಸ್ಸನ್ನಾಚರಿಸಿದಂತೆ. ಧಿಡೀರ್ ಗೆಲುವು ಕಾಣಿಸಿಕೊಳ್ಳಲು ಅದೇನು ನಮ್ಮ ಕೈಯಲ್ಲಿ ಗೆಲುವಿನ ಮಂತ್ರದಂಡ ಇದೆಯೇ? ಕೊನೆ ಕ್ಷಣದಲ್ಲಿ ಸಹನೆ ಕಳೆದುಕೊಳ್ಳುವುದು ಸೋಲಿಗೆ ಕಾರಣವಾಗುತ್ತದೆ. ಅದಕ್ಕೆ ತಾಳ್ಮೆಗೆ ಬೇಲಿ ಹಾಕದೇ ಪ್ರಯತ್ನಿಸಿ. ಕವಿ ರುಡ್ಯಾರ್ಡ್ ಕಿಪ್ಲಿಂಗ್ ರ ಅನುಭವೋಕ್ತಿಯಲ್ಲಿ,’ ಮರೆಯಲಾರದ ನಿಮಿಷವನ್ನು ಅರವತ್ತು ಸೆಕೆಂಡುಗಳ ಬೆಲೆಯ ಓಟದ ದೂರದೊಂದಿಗೆ ತುಂಬಿದರೆ ಭೂಮಿಯೂ ನಿಮ್ಮದಾಗುತ್ತದೆ. ಮತ್ತು ಅದರೊಳಗಿರುವ ಎಲ್ಲವೂ ಸಹ.’ ಕಾರ‍್ಯಕ್ಷಮತೆ ಕೊನೆಯವರೆಗೂ ಇರಲಿದೆಯೇ? ಗುರಿ ನಿರ‍್ಧರಿಸಿ, ಯೋಜನೆಗಳನ್ನು ಸಿದ್ದ ಪಡಿಸಿದ ನಂತರ ಅತ್ಯುತ್ಸಾಹದಿಂದ ಆತ್ಮವಿಶ್ವಾಸವನ್ನಿಟ್ಟುಕೊಂಡು ಬಹಳ ದಿನಗಳವರೆಗೆ ತೊಡಗಿಸಿಕೊಂಡು, ಆಮೇಲೆ ಇದ್ಯಾಕೋ ಸರಿ ಹೋಗುತ್ತಿಲ್ಲವೆಂದು ಇಟ್ಟ ದಿಟ್ಟ ಹೆಜ್ಜೆಯನ್ನು ಮುಂದುವರೆಸಲು ಅನುಮಾನ ವ್ಯಕ್ತ ಪಡಿಸದಿರಿ. ಏಕೆಂದರೆ ಇನ್ನೇನು ಗೆಲ್ಲುವುದಕ್ಕೆ ಕೆಲವೇ ಹೆಜ್ಜೆಗಳಿರುತ್ತವೆ. ಅಂಥ ಸಮಯದಲ್ಲಿ ಹಿಂದಡಿ ಇಟ್ಟರೆ ಗೆಲುವು ಮರೀಚಿಕೆಯಾಗುವುದು ಖಚಿತ. ಒತ್ತಡದ ಒಂದು ಕ್ಷಣದಲ್ಲಿ ಶಾಂತತೆಯನ್ನು ಕಾಯ್ದಿರಿಸಿಕೊಂಡರೆ ವಿಜಯದ ಮಾಲೆ ನಿಮ್ಮ ಕೊರಳನ್ನು ಅಲಂಕರಿಸುವುದು. ಸಕಾರಾತ್ಮಕ ಪ್ರೇರಣಾತ್ಮಕ ಅಂಶಗಳತ್ತ ಮಾತ್ರ ಗಮನ ಹರಿಸಿದರೆ ದಣಿವಿನ ಸಮಯದಲ್ಲೂ ಪುಟಿದೇಳುವ ಉತ್ಸಾಹವನ್ನು ಪಡೆಯುತ್ತೀರಿ. ಮಾಂಟ್ವೇನ್ ಹೇಳಿದರು.’ ಮನುಷ್ಯರ ಶ್ರೇಷ್ಠ ಮತ್ತು ಭವ್ಯ ಕಲೆಯೆಂದರೆ ಅಂದುಕೊಂಡದ್ದಕ್ಕೆ ತಕ್ಕಂತೆ ಬದುಕುವುದು.’ ಅಂದುಕೊಂಡಂತೆ ಗುರಿ ಸಾಧನೆಗೆ ಕಾರ‍್ಯಕ್ಷಮತೆ ಪ್ರಮಾಣ ಕುಗ್ಗದಿರಲಿ. ಪರರ ಮಾತಿಗೆ ಕಿವಿಗೊಡುತ್ತಿದ್ದಿರಾ? ಯಶಸ್ಸಿಗಾಗಿ ನೀವು ಪಡುವ ಶ್ರಮವನ್ನು ಕಂಡ ನಿಮ್ಮ ಆಪ್ತರು ಸ್ನೇಹಿತರು ಕುಟುಂಬ ಸದಸ್ಯರು ನಾವೂ ನಿಮ್ಮ ಹಿತವನ್ನೇ ಬಯಸುತ್ತೇವೆ. ಗೆಲುವಿಗಾಗಿ ಪಡುತ್ತಿರುವ ಕಷ್ಟವನ್ನು ನಮ್ಮಿಂದ ನೋಡಲಾಗುತ್ತಿಲ್ಲ. ಇದರಲ್ಲಿ ನಿನಗೆ ಗೆಲವು ಗೋಚರಿಸುತ್ತಿಲ್ಲವೆಂದು ತಿಳಿ ಹೇಳಿ, ನೀವು ಹಿಡಿದ ದಾರಿ ಬದಲಿಸಲು ಸಲಹೆ ನೀಡುತ್ತಾರೆ. ಕೆಲವೊಮ್ಮೆ ಒತ್ತಾಯಿಸುತ್ತಾರೆ. ಇದೇ ಪ್ರಯತ್ನವನ್ನು ಬೇರೆಡೆಗೆ ಹಾಕಿದರೆ ಇಷ್ಟೊತ್ತಿಗಾಗಲೇ ಗೆಲುವಿನ ದಡ ತಲುಪಿರುತ್ತಿದ್ದಿ ಎಂಬ ಮಾತುಗಳನ್ನು ಕೇಳುತ್ತೀರಿ. ನಿಮ್ಮ ಹಿತೈಷಿಗಳು, ಹತ್ತಿರದವರೂ ಇದೇ ಮಾತನ್ನು ಆಡಬಹುದು. ಆಗ ನಿಮ್ಮ ಮನಸ್ಥಿತಿ ಬದಲಿಸದಿರಿ. ಗುರಿಯತ್ತ ಇಟ್ಟ ಹೆಜ್ಜೆ ಕದಲಿಸದಿರಿ. ಬದ್ಧತೆ ಸಡಿಲಿಸುತ್ತಿದ್ದೀರಾ? ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದ ಅಪರೂಪದ ಸಾಧನೆಗೈದ, ಇತಿಹಾಸದ ಪುಟದಲ್ಲಿ ಮಿಂಚುತ್ತಿರುವ ಮಹಿಳೆಯೆಂದರೆ ಮೇಡಮ್ ಕ್ಯೂರಿ. ಪತಿಯನ್ನು ಕಳೆದುಕೊಂಡ ದುಃಖದ ನಂತರವೂ ಸಂಶೋಧನೆಯನ್ನು ಮುಂದುವರೆಸಿದರು.ವೈದ್ಯಕೀಯ ಕ್ಷೇತ್ರದಲ್ಲಿ ರೇಡಿಯಂ ಉಪಯೋಗಗಳನ್ನು ಪ್ರತಿಪಾದಿಸಿದ್ದಕ್ಕಾಗಿ ನೋಬೆಲ್ ಪ್ರಶಸ್ತಿಗೆ ಭಾಜನರಾದರು. ಇದು ಕ್ಯಾನ್ಸರ್ ರೋಗಿಗಳಿಗೆ ವರದಾನವಾಯಿತು. ಸ್ವಲ್ಪ ಯೋಚಿಸಿ, ಒಂದು ವೇಳೆ ಪತಿಯ ಮರಣದ ದುಃಖದಲ್ಲಿ ಸಂಶೋಧನೆಯ ಬಗೆಗೆ ಇರುವ ಬದ್ಧತೆಯನ್ನು ಬದಿಗೊತ್ತಿದ್ದರೆ ಆಕೆಯ ಸಂಶೋಧನೆಯ ಫಲ ಜನ ಸಮುದಾಯಕ್ಕೆ ಲಭಿಸುತ್ತಿತ್ತೇ? ಬದ್ಧತೆ ಇದ್ದರೆ ಯಾವ ನೋವು ಸಂಕಟಗಳೂ ನಮ್ಮನ್ನು ಬಾಧಿಸವು. ನಿಮ್ಮೊಂದಿಗಿದ್ದವರು ಈಗಾಗಲೇ ಗೆಲುವಿನ ದಡ ಸೇರಿದ್ದಾರೆ ಎಂಬ ಭಯದಲ್ಲಿ ನಿಮ್ಮ ಬದ್ಧತೆಯನ್ನು ಸಡಿಲಿಸಬೇಡಿ. ಅಡ್ಡ ದಾರಿಗಳನ್ನು ಆಯ್ಕೆ ಮಾಡಿಕೊಂಡಿದ್ದೀರಾ? ಗೆಲುವು ಸಾಧಿಸಲು ಯಾವುದೇ ಅಡ್ಡ ದಾರಿಗಳಿಲ್ಲ. ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳದೇ ಇದ್ದರೆ ಸೋಲಿಗೆ ಆಹಾರವಾಗಿಸುತ್ತದೆ. ಯಶಸ್ಸು ಧುತ್ತನೇ ದೊರೆಯಬೇಕೆಂದು ಅಡ್ಡದಾರಿಗಳ ಬೆನ್ನು ಹತ್ತದಿರಿ. ಎಲ್ಲರೆದರೂ ಮಾನ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ವಿಜಯ ಪಥ ಧೀರ್ಘವಾಗಿರುತ್ತದೆ. ಧೀರೂಬಾಯಿ ಅಂಬಾನಿಯವರು ಕಟ್ಟಿದ ೬೫ ಸಾವಿರ ಕೋಟಿ ರೂಪಾಯಿಯ ದೊಡ್ಡ ರಿಲಾಯನ್ಸ್ ಕಂಪನಿ ರಾತ್ರೋ ರಾತ್ರಿ ಎದ್ದು ನಿಂತಿಲ್ಲ. ಧೀರೂಬಾಯಿಯವರ ಹಲವಾರು ವರ್ಷಗಳ ಅವಿರತ ಶ್ರಮವೇ ಸಂಸ್ಥೆಯು ಬೃಹದಾಕಾರವಾಗಿ ಬೆಳೆದು ನಿಲ್ಲಲು ಕಾರಣವಾಯಿತು. .ಹಾಲಿನಲ್ಲಿ ಕರಗಿಸಿದ ಸಕ್ಕರೆಯಂತೆ ಗೆಲುವಿಗೆ ಬೇಕಾದ ಅಂಶಗಳೆಲ್ಲವೂ ನಮ್ಮೊಳಗೇ ಇವೆ. ಅವುಗಳನ್ನು. ಸೋಲು ಒಪ್ಪಿಕೊಳ್ಳುವ ಮುನ್ನ ತಪ್ಪದೇ ಪಾಲಿಸಿದರೆ ಗೆಲುವಿನ ರುಚಿ ನೋಡಲು ಖಂಡಿತ ಸಾಧ್ಯ. *************** .

ದಿಕ್ಸೂಚಿ Read Post »

ಅಂಕಣ ಸಂಗಾತಿ, ಮುಖಾಮುಖಿ

ಬಣ್ಣ-ರೇಖೆಗಳ ಜೊತೆಯಾಟ ಪಕ್ಷಾತೀತ ಕಲಾವಿದ ಅನಾಥ ಶಿಶುವಿನಂತೆ’ ಎಂ.ಎಲ್.ಸೋಮವರದ ಎಂ.ಎಲ್.ಸೋಮವರದ ದೇಶ ಕಂಡ ಉತ್ತಮ ಕಲಾವಿದರಲ್ಲಿ ಒಬ್ಬರು. ಮಂಡ್ಯದ ವಿ.ವಿ.ನಗರದ ಕಲ್ಲಹಳ್ಳಿ ನಿವಾಸಿ. ತುಂಬಾ ನಿಷ್ಠುರ ವ್ಯಕ್ತಿತ್ವದ ಸೋಮವರದ , ಜೀವನದಲ್ಲಿ ಕಷ್ಟಗಳನ್ನೇ ಹೆಚ್ಚು ಹೊದ್ದವರು. ನ್ಯಾಯ, ನೈತಿಕ ಮತ್ತು ವೈಚಾರಿಕ ನಿಲುವಿನ ಕಲಾವಿದ. ವೈಚಾರಿಕ ಮನೋಭಾವದಿಂದ ಅನೇಕ ಅವಕಾಶಗಳನ್ನು ಕಳೆದುಕೊಂಡವರು. ಎಂ.ಎಲ್.ಸೋಮವರದ ಬೆಂಗಳೂರಿನ ಕೆನ್ ಕಲಾ ಶಾಲೆಯಿಂದ 1987ರಲ್ಲಿ ಡಿ.ಎಂ.ಸಿ. ಪದವಿ ಪಡೆದವರು. 2008 ರಲ್ಲೇ ಮೈಸೂರು ಮುಕ್ತ ವಿ.ವಿ.ಯಿಂದ ಬಿ.ಎಫ್.ಎ. ಅಧ್ಯಯನ ಮಾಡಿದರು. ಮಂಡ್ಯ, ಮೈಸೂರು, ಶ್ರೀರಂಗ ಪಟ್ಟಣ, ಕಾರವಾರ ಸೇರಿದಂತೆ ಹತ್ತು ಹಲವು ಕಡೆ ಚಿತ್ರಕಲಾ ಶಿಬಿರಗಳಲ್ಲಿ ಭಾಗವಹಿಸಿ, ತಮ್ಮ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಚಿತ್ರಗಳನ್ನು ಶಿಬಿರಗಳಲ್ಲಿ ಬಿಡಿಸಿದ್ದಾರೆ. ಕಲಾ ಜಾತ್ರೆ, ಚಿತ್ರ ಸಂತೆ, ಜಪಾನ್ ಮಾದರಿ ಗದ್ದೆಚಿತ್ರ, ಬಹುರೂಪಿ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. 2014ರಲ್ಲಿ ಟ್ಯಾಗೋರ್ ಚಿತ್ರ ಕಲಾಶಾಲೆ ಕಾರವಾರದಲ್ಲಿ ಚಿತ್ರಕಲಾ ಪ್ರದರ್ಶನ ಮಾಡಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಗುಟ್ಟು ಹೇಳಿಕೊಟ್ಟಿದ್ದಾರೆ. 2019ರಲ್ಲಿ ಲಲಿತಾ ಕಲಾ ಅಕಾಡೆಮಿ ಏರ್ಪಡಿಸಿದ್ದ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಸೋಮವರದ ಇಲ್ಯುಸ್ಟ್ರೈಷನ್ ,ಅಕ್ಷರ ವಿನ್ಯಾಸ ಮಾಡುವುದರಲ್ಲಿ, ರೇಖಾಚಿತ್ರ ಬಿಡಿಸುವುದರಲ್ಲಿ ಪಳಗಿದವರು. ಇವರ ಚಿತ್ರಗಳು ಮಯೂರದಲ್ಲಿ ಕತೆ, ಕವಿತೆ. ಲೇಖಕರ ಪರಿಚಯದ ವಿಭಾಗಗಳಲ್ಲಿ ಪ್ರಕಟವಾಗಿವೆ. ಅಲ್ಲದೇ ಪ್ರಜಾವಾಣಿ, ಭಾವನಾ, ಸುಧಾ, ಕಸ್ತೂರಿ, ಅನ್ವೇಷಣೆ,ಪೈರು ಪಚ್ಚೆ, ವಿಜಯಕರ್ನಾಟಕ, ಚಂದ್ರಿಕೆ ಹೀಗೆ ಹಲವು ದಿನ ಪತ್ರಿಕೆ, ವಾರ ಪತ್ರಿಕೆ, ಮಾಸ, ತ್ರೈಮಾಸಿಕ ಪತ್ರಿಕೆಗಳಲ್ಲಿ ಅವರ ಚಿತ್ರಗಳು ಪ್ರಕಟವಾಗಿವೆ. ಸೋಮವರದ ವೈಚಾರಿಕ ಪ್ರಜ್ಞೆಗೆ ಚಿತ್ರಕಲೆಯನ್ನು ಬಳಸಿದ ಕಲಾವಿದರೂ ಹೌದು. ನಾಡಿನ ವಿವಿಧ ಲೇಖಕರ ಕಥಾ, ಕವಿತಾ, ಪ್ರಬಂಧ ಸಂಕಲನಗಳಿಗೆ ಮುಖಪುಟ ರಚಿಸಿದ್ದಾರೆ. “ಕಡಲ ದಂಡೆಗೆ ಬಂದ ಬಯಲು” ಕಥಾ ಸಂಕಲನ ಹಾಗೂ “ಬಿಸಿಲ ಬಯಲ ಕಡಲು” ಕವನ ಸಂಕಲನಕ್ಕೆ ಮುಖಪುಟವನ್ನು ಸಹ ಕಲಾವಿದ ಎಂ.ಎಲ್.ಸೋಮವರದ ಮಾಡಿದ್ದಾರೆ. ಅಮೆರಿಕಾದಲ್ಲಿನ ಕೆಲ ಕನ್ನಡಿಗರು ಸೋಮವರದ ಅವರ ಚಿತ್ರಗಳನ್ನು ಕೊಂಡು ಅವರ ಮನೆಗಳನ್ನು ಅಲಂಕರಿಸಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಸಾವಯವ ಸಮ್ಮೇಳನಕ್ಕೆ ಬಂದಿದ್ದ ಮಲೇಷಿಯಾದ ಓರ್ವ ಮಹಿಳೆ, ಇವರು ಸೀರೆ ಮೇಲೆ ರೂಪಿಸಿದ ವಿನ್ಯಾಸ ಇಷ್ಟಪಟ್ಟು ಖರೀದಿಸಿದ್ದರು. ಜರ್ಮನಿಯ ಪ್ರಜೆ ಇವರ ಒಂದು ಕಲಾಕೃತಿಯನ್ನು ಸಹ ಕೊಂಡುಕೊಂಡಿದ್ದರು.…………………………………………………………………….. ಪ್ರಶ್ನೆ : ನೀವು ಚಿತ್ರಗಳನ್ನು ಏಕೆ ಬರೆಯುತ್ತೀರಿ? ಉತ್ತರ : ನನ್ನ ಮತ್ತು ನನ್ನಕುಟುಂಬದ ಅನಿವಾರ್ಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಚಿತ್ರ ಮತ್ತು ಬಣ್ಣಗಳ ಜೊತೆ ಆಟವಾಡಿ ಹಣ ಸಂಪಾದಿಸುತ್ತೇನೆ. ಪ್ರಶ್ನೆ :ಚಿತ್ರ ಹುಟ್ಟುವ ಕ್ಷಣಯಾವುದು? ಉತ್ತರ: ಕಲೆ ಮತ್ತು ಚಿತ್ರ ಗ್ರಾಹಕರ , ಚಿತ್ರಗಳ ಖರೀದಿಸುವವರ ಅವಶ್ಯಕತೆಯ ಅಪೇಕ್ಷೆಯ ವಿನ್ಯಾಸಗಳಾದುದರಿಂದ , ಹೆಚ್ಚಿನ ಪಾಲು ಹಣ ಸಂಪಾದನೆಯ ಕ್ಷಣವಾಗಿರುತ್ತದೆ. ಪ್ರಶ್ನೆ : ನಿಮ್ಮ ಚಿತ್ರಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಉತ್ತರ : ನನ್ನ ಚಿತ್ರಗಳ ವಸ್ತು ಹೆಚ್ಚಿನ ಪಾಲು ಗ್ರಾಹಕರ ಇಚ್ಛೆಗನುಸಾರವಾಗಿರುತ್ತದೆ. ವೈಯಕ್ತಿಕ ಕಲಾಪ್ರದರ್ಶನದ ಉದ್ದೇಶದ ಸಂದರ್ಭದಲ್ಲಿ ನನ್ನ ಸುತ್ತಲಿನ ಜಗತ್ತಿನ ಅನುಭವಗಳನ್ನು ನನ್ನದೇ ರೀತಿಯಲ್ಲಿ ಅಭಿವ್ಯಕ್ತಿಗೊಳಿಸುತ್ತೇನೆ. ಪದೇ ಪದೇ ಕಾಡುವ ವಿಷಯ ಮನುಷ್ಯನ ಸ್ವಾರ್ಥ ಮತ್ತು ಭ್ರಷ್ಟಾಚಾರ. ಪ್ರಶ್ನೆ : ಕವಿತೆಗಳಲ್ಲಿ ಬಾಲ್ಯ,ಹರಯಇಣುಕಿದೆಯೇ? ಉತ್ತರ : ನನ್ನರೇಖಾ ಚಿತ್ರಗಳಲ್ಲಿ ಬಾಲ್ಯಕ್ಕಿಂತ ಹೆಚ್ಚಾಗಿ ಹರೆಯ ಇಣುಕಿದೆ. ಪ್ರಶ್ನೆ : ರೇಖೆಗಳು ಕಲೆಯ ಶಾಸ್ತ್ರೀಯ ನೆಲೆ ಅಂತಾರೆ , ಈ ಬಗ್ಗೆ ಏನು ಹೇಳುವಿರಿ ? ಉತ್ತರ : ರೇಖೆಗಳು ಚಿತ್ರಕಲೆಯ ಜೀವಾಳ. ಒಟ್ಟು ಚಿತ್ರಕಲೆಯೇ ಶಾಸ್ತ್ರೀಯ. ಪ್ರಶ್ನೆ : ಬೇಲೂರು ಹಳೇಬೀಡು ಮತ್ತು ಬಾದಾಮಿ, ಪಟ್ಟದಕಲ್ಲಿನ ಶಿಲ್ಪಗಳಲ್ಲಿನ ವಿಶೇಷತೆ ಏನು ? ಉತ್ತರ : ಬೇಲೂರು, ಹಳೇಬೀಡಿನ ಶಿಲಾಬಾಲಕಿಯರಲ್ಲಿ ಬೆಡಗು, ಬಿನ್ನಾಣ, ಸೂಕ್ಷ್ಮಕುಸುರಿ ಇದ್ದು ಕೌಶಲ್ಯವೇ ಮೇಲುಗೈ ಸಾಧಿಸಿದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲಿನ ಶಿಲಾಬಾಲಿಕೆಯರಲ್ಲಿ ಕಲಾತ್ಮಕತೆ ಮೇಲುಗೈ ಸಾಧಿಸಿದೆ. ಪ್ರಶ್ನೆ: ಪ್ರಸ್ತುತರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಉತ್ತರ : ಪ್ರಸ್ತುತ ರಾಜಕೀಯ ಸನ್ನಿವೇಶ ಪ್ರಜಾಪ್ರಭುತ್ವದ ಬೇರುಗಳನ್ನು ಕತ್ತರಿಸುತ್ತಾ ಸಮಾಜ ಸುಧಾರಣೆಯ ಮುಖವಾಡತೊಟ್ಟು ಕೇಕೆ ಹಾಕಿ ವಿಜೃಂಭಿಸುತ್ತಿದೆ. ಪ್ರಶ್ನೆ: ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವು ಏನು? ಉತ್ತರ :ಧರ್ಮ ಬೇಕಿಲ್ಲ. ದೇವರೂ ಬೇಕಿಲ್ಲ. ಮನುಷ್ಯತ್ವವಿರುವ ಮನುಷ್ಯರು ಬೇಕು. ಪ್ರಕೃತಿ ಸಹಜವಾಗಿರಬೇಕು. ಪ್ರಶ್ನೆ: ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನು ಹೇಳಬೇಕು ಅನಿಸುತ್ತಿದೆ ? ಉತ್ತರ : ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಭ್ರಷ್ಟಾಚಾರದಿಂದ ಬದುಕುತ್ತಿದೆ. ನಿಜವಾದ ಸಂಸ್ಕೃತಿ ಕೊನೆಯುಸಿರೆಳೆಯುತ್ತಿದೆ. ಪ್ರಶ್ನೆ: ಚಿತ್ರಕಲಾ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಉತ್ತರ :ಚಿತ್ರ, ಕಲಾಲೋಕವೇ ರಾಜಕಾರಣದಲ್ಲಿ ಮುಳುಗಿ ತೇಲುತ್ತಿದೆ. ಯಾವ ಪಕ್ಷಕ್ಕೆ ಯಾವ್ಯಾವ ಕಲಾವಿದರು ಎಷ್ಟೆಷ್ಟು ನಿಷ್ಠರೋ , ಅಷ್ಟರ ಮಟ್ಟಿಗೆ ಫಲಾನುಭವಿಗಳು.ಪಕ್ಷಾತೀತ ಕಲಾವಿದ ಮಾತ್ರ ಅನಾಥ ಶಿಶುವಿನಂತೆ. ಪ್ರಶ್ನೆ: ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತಿದೆ? ಉತ್ತರ : ದೇಶದ ಚಲನೆ ಬುಲ್ಡೋಜರ್ ನಂತಾಗಿದೆ. ಪ್ರಶ್ನೆ: ಚಿತ್ರಕಲೆಯ ಬಗ್ಗೆ ನಿಮ್ಮ ಕನಸುಗಳು ಏನು? ಉತ್ತರ :ಆರ್ಟ್ ಪೈಂಟಿಂಗ್ಸ್ ನನ್ನನ್ನು ಪೋಷಿಸುವುದರ ಜೊತೆಗೆ ನನ್ನ ಭಾವನೆಗಳ ಅಭಿವ್ಯಕ್ತಿ ಮಾಧ್ಯಮವಾಗಿ ದೃಶ್ಯ ಸಂಪುಟವಾಗಬೇಕು. ಪ್ರಶ್ನೆ: ನಿಮ್ಮಇಷ್ಟದ ಸ್ವದೇಶಿ ಚಿತ್ರಕಲಾವಿದರು ಯಾರು ? ಉತ್ತರ :ಕರ್ನಾಟಕದ ಆರ್.ಎಂ.ಹಡಪದ್, ಎಂ.ಬಿ.ಪಾಟೀಲ್, ವಿ.ಬಿ.ಹಿರೇಗೌಡರ್, ಯೂಸುಫ್ ಅರಕ್ಕಲ್, ಕೆ.ಕೆ.ಹೆಬ್ಬಾರ್ ಹಾಗೆಯೇ ದೇಶದ ಹೆಸರಾಂತ ಕಲಾವಿದರಾದ ಎಂ.ಎಫ್.ಹುಸೇನ್, ಜಾಮಿನಿರಾಯ್, ಕೆ.ಜಿ.ಸುಬ್ರಹ್ಮಣ್ಯಮ್, ರವಿವರ್ಮ ಇವರು ನನ್ನ ಕಾಡಿದ ಕಲಾವಿದರು. ಪ್ರಶ್ನೆ: ನಿಮ್ಮಇಷ್ಟದ ವಿದೇಶಿ ಚಿತ್ರಕಲಾವಿದರು ಯಾರು ? ಉತ್ತರ : ವಿದೇಶದ ಕಲಾವಿದರಾದ ಮೈಕೆಲ್ ಏಂಜೆಲೋ, ಲಿಯೋನಾರ್ಡ್ ಡಾವಿಂಚಿ, ರೆಂಬ್ರಾಂಟ್, ಸಾಲ್ವೆಡರ್ಡಾಲಿ, ವ್ಯಾನ್ಗಾಗ್, ಪಿಕಾಸೋ. ———–. ಕಲಾವಿದರ ಕೃತಿಗಳ ಫೋಟೊ ಆಲ್ಬಂ *********** ನಾಗರಾಜ ಹರಪನಹಳ್ಳಿ ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

You cannot copy content of this page

Scroll to Top