ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕಾರ್ಮಿಕ ದಿನದ ವಿಶೇಷ-ಲೇಖನ

ಪ್ರತಿಯೊಬ್ಬರೂ ಕಾರ್ಮಿಕರೇ ಶೃತಿ ಮೇಲುಸೀಮೆ ಪ್ರತಿಯೊಬ್ಬರೂ ಕಾರ್ಮಿಕರೇ ಇಂದು ಮೇ ಒಂದು, ಅಂತಾರಾಷ್ಟ್ರೀಯ ಕಾರ್ಮಿಕ ದಿನ. ಇದನ್ನು 1886, ಮೇ 4 ರಂದು ಚಿಕಾಗೋದಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಖಂಡಿಸಿದ ಪ್ರತೀಕದ ಕುರುಹುವಾಗಿ ಆಚರಿಸುತ್ತಾ ಬರಲಾಗುತ್ತದೆ. ಈ ಕಾರ್ಮಿಕ ದಿನದ ಮೂಲ ಕುರುಹು ಇರುವುದು ಅಮೆರಿಕದಲ್ಲಿ, ಅಲ್ಲಿ ಕಾಲರಾಡೋ ರಾಜ್ಯ 1887ರಲ್ಲಿ ಮಾರ್ಚ್ 15 ರಂದು ಕಾರ್ಮಿಕ ದಿನ ಆಚರಣೆಗೆ ಕಾನೂನನ್ನು ಮಾನ್ಯ ಮಾಡಿತು. ಭಾರತದಲ್ಲಿ ಈ ದಿನವನ್ನು 1927ರಿಂದ ಆಚರಿಸುತ್ತಾ ಬರಲಾಗುತ್ತಿದೆ. ಇಂದು ವಿಶ್ವದ ಅನೇಕ ಕಡೆಗಳಲ್ಲಿ ಮೆರವಣಿಗೆ, ಪ್ರದರ್ಶನ,ಭಾಷಣ,ಕ್ರೀಡೆಗಳ ಮೂಲಕ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಬಲಾಢ್ಯರು ದುರ್ಬಲರ ಮೇಲೆ ಅನಾದರ ತೋರುತ್ತಾ, ತುಳಿತಕ್ಕೀಡು ಮಾಡುತ್ತಾ ಬಂದಿದ್ದಾರೆ. ಈ ದಬ್ಬಾಳಿಕೆಯು ಪ್ರಾಚೀನ ಕಾಲದ ಶೂದ್ರರು, ಮಧ್ಯಯುಗದಲ್ಲಿ ಗುಲಾಮರನ್ನು, ಆಧುನಿಕ ಯುಗದ ಆರಂಭದಲ್ಲಿ ಕಾರ್ಮಿಕರನ್ನು ಒಳಗೊಂಡಂತೆ ಮುಂದುವರೆದಿದೆ. ಯುಕ್ತಿ ಮತ್ತು ಶಕ್ತಿ ಇದ್ದರೆ ಇಡೀ ಜಗತ್ತನ್ನೇ ಆಳಬಹುದು ಎಂಬ ನಿದರ್ಶನಗಳು ಸಾಕಷ್ಟಿವೆ. ಪ್ರಸ್ತುತತೆಯನ್ನು ಗಮನಿಸುವುದಾದರೆ ಬಡವ ಬಲ್ಲಿದರ ನಡುವಿನ ಅಂತರ ಇಂದೆಂದಿಗಿಂತಲೂ ಹೆಚ್ಚುತ್ತಿದೆ. ಕೂಲಿ ಎಂಬ ಬಿಡಿಗಾಸು ನೀಡಿ,ತಮ್ಮ ಜೇಬು ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ನಮ್ಮನ್ನು ನಮ್ಮೆದುರೇ ಸದ್ದಿಲ್ಲದೆ ಶೋಷಿಸುತ್ತಿದ್ದರೆ. ನಮ್ಮ ಹಿಟ್ಟಿನ ಚೀಲಕ್ಕೆ ಕಲಬೆರಿಕೆಯಂತಹ ವಿಷದ ಪುಡಿ ಬೆರೆಸಿ ಕೊಡುತ್ತಿದ್ದರೂ ಕಾಣದಂತೆ ಕುರುಡಾಗಿವೆ ನಮ್ಮ ಕಣ್ಣುಗಳು. ಇಂತಹ ಸ್ಥಿತಿಯಲ್ಲಿರುವ ಸಮಾಜವನ್ನು ನಾವು ಉತ್ತಮ ಗೊಳಿಸಿಕೊಳ್ಳಬೇಕಿದೆ, ನಮ್ಮ ಮುಂದಿನ ಸಮಾಜಕ್ಕೆ ಬದುಕು ಎಂದರೆ ಕೇವಲ ದುಡಿತ, ಸಂಪಾದನೆ ಎಂದು ತಿಳಿಸದೆ, ಬದುಕಿರುವುದು ಬದುಕಲಿಕ್ಕೆ ವಿನಃ ಹಣ ಸಂಪಾದನೆಯೊಂದೇ ನಮ್ಮ ಗುರಿಯಾಗಬಾರದು ಎಂದು ತಿಳಿ ಹೇಳಬೇಕಿದೆ. ಒಂದಲ್ಲಾ ಒಂದು ವೃತ್ತಿ ಮಾಡುತ್ತಿರುವ ಪ್ರತಿಯೊಬ್ಬರು ಇಲ್ಲಿ ಕಾರ್ಮಿಕರೇ,ಯಾವುದೇ ಕೆಲಸ ಇರಲಿ ಅದರಲ್ಲಿ ಮೇಲು ಕೀಳು ಎಂಬುದಿಲ್ಲ ಎಲ್ಲಾ ಕೆಲಸನೂ ಸಮವಾದದ್ದು, ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಭರದಿಂದ, ಕೈ ಮೀರಿದ ಶೈಕ್ಷಣಿಕ ಸಂಸ್ಥೆಗಳಿಗೆ ಸೇರಿಸಿ ಏನೋ ಸಾಧಿಸುವ ಛಲದಿಂದ ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರದೆ ಅವರ ಬಾಲ್ಯವನ್ನು ಕಿತ್ತುಕೊಳ್ಳದೆ, ಅವರಿಗೂ ಅವರ ಬದುಕಿನಲ್ಲಿ ಸೋಲು-ಗೆಲುವು ಮೆಟ್ಟಿ ನಿಂತು ಮೇರು ಪರ್ವತ ಏರಲು ಬಿಡಿ. ಜೊತೆಗಿದ್ದು ಬದುಕಿನ ದಡ ಸೇರಿಸಿ, ಆದರೆ ಅವರ ಜೀವನವನ್ನು ನೀವೇ ಜೀವಿಸಬೇಡಿ!!

ಕಾರ್ಮಿಕ ದಿನದ ವಿಶೇಷ-ಲೇಖನ Read Post »

ಕಥಾಗುಚ್ಛ

ಕಾರ್ಮಿಕ ದಿನದ ವಿಶೇಷ-ಕಥೆ

ಕಥೆ ಕರ್ಮ ಮತ್ತು ಕಾರ್ಮಿಕ!  ಪೂರ್ಣಿಮಾ ಮಾಳಗಿಮನಿ ಕರ್ಮ ಮತ್ತು ಕಾರ್ಮಿಕ!  ಎಲ್ಲರ ಮನೆಯ ದೋಸೆಯೂ ತೂತೇ, ಹಾಗಂತ ತೂತಿಲ್ಲದ ದೋಸೆಗಾಗಿ ಹಾತೊರೆಯುವುದನ್ನು ರಾಗಿಣಿ ಬಿಟ್ಟಿರಲಿಲ್ಲ. ಮನೆಯೊಳಗಿನ ಸಣ್ಣ ಪುಟ್ಟ ಜಗಳಗಳಿಗೆ, ಮೂವತ್ತೈದು ವರ್ಷಕ್ಕೇ ಜೀವನವೇ ಸಾಕಾಗಿ ಹೋಗಿದೆ, ಎಂದು ಕೈ ಚೆಲ್ಲಿ ಕುಳಿತ ಹೆಂಡತಿ ರಾಗಿಣಿಯನ್ನು ಮ್ಯಾರೇಜ್ ಕೌನ್ಸಲರ ಬಳಿ ಕರೆದೊಯ್ಯುವ ವಿಚಾರ ಮಾಡಿದ್ದು ಪ್ರಶಾಂತನೇ. ಮಕ್ಕಳೂ ಆಗಿಲ್ಲವೆಂದ ಮೇಲೆ ನಿಮ್ಮ ಹೆಂಡತಿ ಟೈಮ್ ಪಾಸ್ ಮಾಡುವುದಾದರೂ ಹೇಗೆ ಎಂದು  ದಬಾಯಿಸಿ, ಕೌನ್ಸಲರ ಒಂದು ನಾಯಿ ಮರಿ ಸಾಕಿ ಕೊಳ್ಳಿ ಎಂದು ಉಪದೇಶ ಮಾಡಿದ್ದರು.ನಾಯಿ ಮರಿಯನ್ನಾದರೆ ಪದೇ ಪದೇ ಒಂದು, ಎರಡು ಮಾಡಿಸಲು ಮನೆ ಹೊರಗೆ ಕರೆದೊಯ್ಯ ಬೇಕು, ಅದರ ಬದಲು ಬೆಕ್ಕು ಸಾಕಿಕೊಳ್ಳಿ, ಟಾಯ್ಲೆಟ್ ಟ್ರೈನ್ಡ್ ಸಿಗುತ್ತವೆ ಎಂದು ಪಕ್ಕದ ಮನೆ ನಯನ ಹೇಳಿದಾಗ ಫೇಸ್ಬುಕ್ ಮೂಲಕ ಎರಡು ಮುದ್ದಾದ ಬೆಕ್ಕಿನ ಮರಿಗಳನ್ನು ತಂದು ಪ್ರಶಾಂತ ರಾಗಿಣಿ ಮಡಿಲಿಗೆ ಹಾಕಿ, ಇನ್ನಾದರೂ ಶಾಂತಿ ಸಿಗಬಹುದು ಎಂದು ಆಶಿಸಿ, ತನ್ನ ಕೆಲಸದಲ್ಲಿ ಮತ್ತೆ ಮುಳುಗಿ ಬಿಟ್ಟಿದ್ದ. ಹೊಸದಾಗಿ ಸಿಕ್ಕ ಸ್ನೇಹಿತರನ್ನು ಬಹಳ ಹಚ್ಚಿಕೊಂಡ ರಾಗಿಣಿ, ಅವುಗಳ ಆರೈಕೆ, ಊಟ, ವ್ಯಾಕ್ಸೀನ್, ಸ್ನಾನ ಮಾಡಿಸುವುದು, ಹೇನುಗಳಾಗದಂತೆ ಕೂದಲನ್ನು ಬಾಚುವುದು, ದಿನಕ್ಕೊಂದು ಹೊಸ ಸಾಮಾನಿನ ಶಾಪಿಂಗ್, ಎಲ್ಲದರ ಮಧ್ಯೆ ಪ್ರಶಾಂತನೊಂದಿಗೆ ಜಗಳ ಆಡುವುದು ಮರೆತು ಬಿಟ್ಟಳು.  ಹೆಸರುಘಟ್ಟದಲ್ಲಿದ್ದ ಕೃಷಿ ಇಲಾಖೆಯ ಸಾವಿರಾರು ಎಕರೆ ಜಮೀನಿನಲ್ಲಿ ತರಕಾರಿ ಹಣ್ಣು ಹಂಪಲುಗಳ ಕುರಿತು ಸಂಶೋಧನೆ ಮಾಡುವ ವಿಜ್ಞಾನಿಯಾಗಿದ್ದರೂ ಅಪ್ಪಟ ಮಣ್ಣಿನ ಮಗನಾಗಿಬಿಡುತಿದ್ದ  ಪ್ರಶಾಂತನಿಗೆ ತನ್ನ ಕೆಲಸದಲ್ಲಿ ಬಹಳ ಶ್ರದ್ಧೆ ಮತ್ತು ಆಸಕ್ತಿ. ತರಕಾರಿಗಳ ಹೊಸ ಹೊಸ ತಳಿಗಳನ್ನು ಬೆಳೆಸಿ, ಅದಕ್ಕಾಗಿ ಹಗಲಿರುಳೂ ಶ್ರಮಿಸುತ್ತಾ ತನ್ನದೇ ಲೋಕದಲ್ಲಿರುತಿದ್ದ. ಒಮ್ಮೊಮ್ಮೆ ಇಲಾಖೆಯಿಂದ ಅವನಿಗೆ ಒದಗಿಸುತಿದ್ದ ಕೂಲಿ ಆಳುಗಳು ಬರದಿದ್ದರೆ, ತನ್ನ ಆಫೀಸ್ ಕೋಣೆಯಲ್ಲಿ ಇಟ್ಟುಕೊಂಡಿದ್ದ ಒಂದು ಟಿ ಶರ್ಟ್ ಮತ್ತು ಶಾರ್ಟ್ಸ್ ಹಾಕಿಕೊಂಡು ತಾನೇ ಗಿಡಗಳಿಗೆ ಪಾತಿ ಮಾಡುವುದು, ನೀರು ಬಿಡುವುದು ಮಾಡುತ್ತಿದ್ದ. ಮರುದಿನ ಅವರು ಕೈಗೆ ಸಿಕ್ಕಾಗ ನೀರು ಬಿಡದೆ ಗಿಡ ಒಣಗಿಸಿದ್ದಕ್ಕೆ ಚೆನ್ನಾಗಿ ಬೈಯ್ಯ ಬೇಕೆಂದುಕೊಂಡಿದ್ದರೂ, ದಿನಗೂಲಿ ಕಂಟ್ರಾಕ್ಟರ್ ತಿಮ್ಮಾ ರೆಡ್ಡಿ, ತಮ್ಮನ್ನು skilled labour ಅಂತ ಸೇರಿಸಿಕೊಂಡರೂ, unskilled labour ಸಂಬಳವನ್ನೇ ಕೊಡುತ್ತಿದ್ದಾನೆಂದು ಕೂಲಿ ಆಳುಗಳು ದುಃಖ ತೋಡಿಕೊಂಡಾಗ, ಪ್ರಶಾಂತ ತನ್ನ ಥರ್ಮಾಸ್ ನಲ್ಲಿ ತಂದ ಚಹವನ್ನೂ ಅವರಿಗೆ ಬಸಿದುಕೊಟ್ಟು, ಜೇಬಿನಿಂದ ಐದು ನೂರು ಕೊಟ್ಟು ಹಂಚಿಕೊಳ್ಳಿ ಎಂದು ಹೇಳಿ ಹೋಗಿಬಿಡುತಿದ್ದ. ಪ್ರಶಾಂತನ ಸಹೋದ್ಯೋಗಿ, ಅನೂಪ್ ವರ್ಮಾ, ಇದೇ ಕೂಲಿಯಾಳುಗಳು ತಮ್ಮ ಊಟದ ಡಬ್ಬಿಯಲ್ಲಿ ಆರ್ಕಿಡ್, ಕ್ಯಾಕ್ಟಸ್, ಅಣಬೆ, ವಿಭಿನ್ನ ಬಣ್ಣದ ಗುಲಾಬಿ ಮುಂತಾದ ದುಬಾರಿ ಗಿಡಗಳನ್ನು ಬಚ್ಚಿಟ್ಟುಕೊಂಡು ಹೋಗಿ ತಿಮ್ಮಾ ರೆಡ್ಡಿಗೆ ಮಾರಿಕೊಳ್ಳಲು ಕೊಡುತ್ತಿದ್ದುದನ್ನು ತಾನು ಕಣ್ಣಾರೆ ನೋಡಿದ್ದೇನೆ ಎಂದಾಗ, “ಇವರು ಬರೀ ಕಾರ್ಮಿಕರು, ಕರ್ಮದ ಫಲ ಏನೇ ಆಗಿದ್ದರೂ ಅದನ್ನು ಮಾಡಿಸಿದ ರೆಡ್ಡಿ ಅಷ್ಟೇ ಅನುಭವಿಸುತ್ತಾನೆ ಬಿಡಿ.” ಎಂದು ಉಪೇಕ್ಷಿಸಿದ್ದ.   ಪ್ರಶಾಂತನಿಗೆ ಸ್ವಲ್ಪ ಹಣ ಖರ್ಚು ಮಾಡಿದರೆ ಮನಃಶಾಂತಿ ಸಿಗುತ್ತದೆ ಎಂದರೆ ಅದಕ್ಕಿಂತ ಉತ್ತಮ ಒಪ್ಪಂದ ಬೇರೆ ಇಲ್ಲವೆಂದೇ ನಂಬಿಕೆ.  ರೆಡ್ಡಿ ತನ್ನ ಮಾತು ಕೇಳದಿದ್ದರೆ, ಎಂತದ್ದೇ ತುರ್ತು ಪರಿಸ್ಥಿತಿಯಿದ್ದರೂ ಆಳುಗಳಿಗೆ ರಜೆ ಕೊಡುತ್ತಿರಲಿಲ್ಲ. ಎಷ್ಟೋ ಬಾರಿ ಕೆಂಡದಂತೆ ಮೈ ಸುಡುತ್ತಿದ್ದರೂ, ದಿನಗೂಲಿ ಕಳೆದುಕೊಂಡರೆ ಮನೆ ಮಂದಿಯೆಲ್ಲಾ  ಊಟಕ್ಕೆ ಪರೆದಾಡುವಂತಾದೀತು ಎಂದು ಕೂಲಿ ಆಳು ನರಸಯ್ಯ ಕೆಲಸಕ್ಕೆ ಬರುತಿದ್ದುದನ್ನು ಪ್ರಶಾಂತ ನೋಡಿದ್ದ. ಇದ್ದುದರಲ್ಲೇ ಮೈ ಕೈ ತುಂಬಿಕೊಂಡಿದ್ದ ಪುಟ್ಟಮ್ಮ ಮಾತ್ರ ತಿಂಗಳಲ್ಲಿ ನಾಲ್ಕಾರು ಬಾರಿ ರಜೆ ಹಾಕಿ, ಪೂರ್ತಿ ಇಪ್ಪತ್ತಾರು ದಿನಗಳ ಕೂಲಿ ತೆಗೆದುಕೊಳ್ಳುತ್ತಿದ್ದಳು. ಅವಳ ಬಗ್ಗೆ ಮತ್ಸರವಿದ್ದರೂ, ಹೆಂಗಸರಿಗೂ, ಗಂಡಸರಿಗೂ ದಿನಗೂಲಿ ಒಂದೇ ಎಂದು ಹೇಳಿ, ಅವಳಂತೆ ಉಳಿದ ಹೆಂಗಸರಿಗೆ ರೆಡ್ಡಿಯಿಂದ ಆಗುತ್ತಿದ್ದ ಅನ್ಯಾಯವನ್ನೂ ನರಸಯ್ಯನೇ ತಪ್ಪಿಸಿದ್ದ.  ಅದೊಂದು ದಿನ ರಾಗಿಣಿ, “ಈ ಮೂಕ ಪ್ರಾಣಿಗಳಿಗೆ ಆಶ್ರಯ ಕೊಟ್ಟಿದ್ದೇನೋ ಸರಿ. ಆದರೆ ನನಗೆ ಇನ್ನೂ ಏನಾದರೂ ಸಮಾಜ ಸೇವೆ ಮಾಡಬೇಕು ಅನಿಸುತ್ತಿದೆ ಕಣ್ರೀ.” ಎಂದು ರಾಗ ಎಳೆದಾಗ ಪ್ರಶಾಂತ ಆಶ್ಚರ್ಯದಿಂದ ಅವಳನ್ನೇ ಒಂದು ಗಳಿಗೆ ನೋಡಿದ.  “ನಿಜಕ್ಕೂ ಸಮಾಜ ಸೇವೆ ಮಾಡಬೇಕೆಂದಿದ್ದರೆ, ನಮ್ಮ ಕ್ಯಾಂಪಸ್ಸಿಗೆ ಬಂದುಬಿಡು. ನೂರಾರು ಕೂಲಿ ಆಳುಗಳಿರುತ್ತಾರೆ. ಅವರಲ್ಲಿ ಒಂದಿಬ್ಬರಿಗಾದರೂ ಆರೋಗ್ಯ ಸರಿ ಇರುವುದಿಲ್ಲ. ಅಂತವರಿಗೆ ಮರದಡಿ ಮಲಗಲು ಹೇಳಿ, ಅವರ ಕೆಲಸ ನೀನು ಮಾಡು. ಹೇಗೆ?” ಎಂದು ಕೇಳಿ ತನ್ನ ಅದ್ಭುತ ಯೋಚನೆಗೆ ತಾನೇ ತಲೆದೂಗಿ ಕೇಳಿದ.  “ನನಗೆ ಮೊದಲಿನಿಂದಲೂ ಅನುಮಾನ ಇತ್ತು, ನಿಮಗೆ ತಲೆ ಸರಿ ಇಲ್ಲಾಂತ.” ಎಂದು ಬುಸುಗುಡುತ್ತಾ ಹೋದ ರಾಗಿಣಿ ಅಷ್ಟಕ್ಕೇ ಸುಮ್ಮನಾಗಲಿಲ್ಲ.  ‘ಹೆಂಡತಿಗೇ ಕೂಲಿ ಮಾಡಲು ಹೇಳುತ್ತಿದ್ದಾನೆ, ಎಂತಹ ಕ್ರೂರಿ’ ಎಂದು ಅಪ್ಪ ಅಮ್ಮನಿಂದಲೂ ಮತ್ತು ಅತ್ತೆ ಮಾವಂದಿರಿಂದಲೂ ಸರಿಯಾಗಿ ಪೂಜೆ ಮಾಡಿಸಿದಳು. ಪ್ರಶಾಂತ ತೆಪ್ಪನಾದ!  ವಾರ್ಷಿಕ ಕೃಷಿ ಮೇಳಕ್ಕೆ ಇನ್ನು ಎರಡೇ ತಿಂಗಳು ಉಳಿದಿದ್ದುವು. ಸಂಸ್ಥೆಯಲ್ಲಿ ಎಲ್ಲರೂ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಮೂರು ದಿನಗಳ ಕಾಲ ನಡೆಯುವ ಕೃಷಿ ಮೇಳದಲ್ಲಿ ಕಾರ್ಯಾಗಾರ, ಬೋಧನೆ, ಪ್ರದರ್ಶನ ಎಲ್ಲದಕ್ಕೂ ಕೂಲಿ ಆಳುಗಳ ಸಹಕಾರ ಬೇಕೇಬೇಕು. ಆದ್ದರಿಂದ ಪ್ರಶಾಂತ ತನ್ನ ತಂಡದಲ್ಲಿದ್ದ ಕೂಲಿಯವರನ್ನು ಖುಷಿಯಾಗಿಟ್ಟುಕೊಳ್ಳಲು ಪ್ರಯತ್ನಿಸುತಿದ್ದ. ಪ್ರತಿದಿನವೂ ಆರೈಕೆ ಬೇಡುವ ಸಸಿಗಳು ಭಾನುವಾರ ರಜೆ ಎಂದರೆ ಮಾತು ಕೇಳಬೇಕಲ್ಲ? ಒಂದು ದಿನವೂ ಮನೆಯಲ್ಲಿರುವುದಿಲ್ಲ ಎಂದು ರಾಗಿಣಿ ರಂಪ ಮಾಡಿದರೂ ಪ್ರಶಾಂತ ಭಾನುವಾರವೂ ತಪ್ಪದಂತೆ ಆಫೀಸಿಗೆ ಬಂದು ಕೆಲಸ ಮಾಡುತಿದ್ದ. ಇದರ ನಡುವೆಯೇ ದಾವಣಗೆರೆಯಲ್ಲಿದ್ದ ಪ್ರಶಾಂತನ ಅಪ್ಪನಿಗೆ ಇದ್ದಕ್ಕಿದ್ದಂತೆ ರಕ್ತದೊತ್ತಡ ಹೆಚ್ಚಾಗಿ ಬಿಟ್ಟಿತು. “ಬಿಡುವಿದ್ದಿದ್ದರೆ ನಾನೇ ಬರುತ್ತಿದ್ದೆ, ಆದರೆ ಕೆಲಸದೊತ್ತಡ ಬಹಳ ಇರುವುದರಿಂದ ಡ್ರೈವರ ಜೊತೆಯಲ್ಲಿ ಬಂದು ಬಿಡಿ.” ಎಂದು ಕಾರು ಕಳಿಸಿದ. ಬೆಂಗಳೂರಿಗೆ ಬಂದಿಳಿದ ಸಂಜೆಯೇ ಅಮ್ಮನಿಗೆ ಭೇದಿ ಕಿತ್ತುಕೊಂಡಿತು. ಅದಕ್ಕೆ ದಾರಿಯಲ್ಲಿ ಮಾಡಿದ ಹೋಟೆಲು ಊಟವೇ ಕಾರಣ ಎಂದು ಡ್ರೈವರಿಗೆ ಅಮ್ಮ ಹಿಡಿ ಶಾಪ ಹಾಕಿದಾಗ, ಪ್ರಶಾಂತ ಮನದೊಳಗೇ ನಡುಗಿದ. ಏಕೆಂದರೆ ಯಾವ ಹೋಟೆಲಿನಲ್ಲಿ ಊಟಕ್ಕೆ ನಿಲ್ಲಿಸಬೇಕು ಎಂದು ಕೂಡ ಪ್ರಶಾಂತನೇ ಡ್ರೈವರಿಗೆ ಹೇಳಿದ್ದ! ಅಮ್ಮನ ಶಾಪ ಯಾರಿಗೆ ತಗಲುವುದೋ ಎಂದು ಹೆದರುತ್ತಲೇ, ಅವಳ ಆರೈಕೆ ಮಾಡಿದ.  ರಾಗಿಣಿ ಅಪರೂಪಕ್ಕೆ ಬಂದ ಅತ್ತೆ ಮಾವಂದಿರ ಸೇವೆಯನ್ನು ಎರಡು ದಿನ ಪ್ರೀತಿಯಿಂದಲೇ ಮಾಡಿದಳು. ಆದರೆ ಅವರು, ಮನೆ ತುಂಬಾ ರಾಜಾರೋಷವಾಗಿ ಓಡಾಡಿಕೊಂಡಿದ್ದ, ಕೊಬ್ಬಿದ್ದ ಬೆಕ್ಕುಗಳನ್ನು ಸಹಿಸುವುದು ಆಗದು, ಅವುಗಳನ್ನು ಈ ಕೂಡಲೇ ಹೊರಗಟ್ಟಿರಿ, ಎಂದಾಗ ಕೆರಳಿದಳು. ಎಲ್ಲೆಂದರಲ್ಲಿ ಅವುಗಳ ಕೂದಲುಗಳೇ; ಅಡುಗೆ ಮನೆಯಲ್ಲಿ ಎಲ್ಲ ಪಾತ್ರೆಗಳಿಗೂ ಬಾಯಿ ಹಚ್ಚಿ ಬಿಡುತ್ತಿದ್ದುದು ನೋಡಿದಾಗಲಂತೂ ಅಮ್ಮ ತನಗೆ ಊಟವೇ ಬೇಡವೆಂದು ಹಠ ಮಾಡಿದರು. ಆಫೀಸಿನ ಕೆಲಸದ ನಡುವೆ ಅಪ್ಪನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆಯಿಂದ ಪ್ರಶಾಂತ ಆಗಲೇ ಚಡಪಡಿಸುತ್ತಿದ್ದ. ಇದರ ನಡುವೆ ಬೆಕ್ಕುಗಳದೇ ದೊಡ್ಡ ತಲೆನೋವಾಗಿ ಬಿಟ್ಟಿತು. ರಾಗಿಣಿ ಅಡುಗೆ ಮಾಡುವುದನ್ನಷ್ಟೇ ಅಲ್ಲದೆ ಮಾತು ಕೂಡ ಬಿಟ್ಟಿದ್ದಳು. ಮನೆಗೆ ಬರುವುದು ಎಂದರೆ ಬಹಳ ಧೈರ್ಯಸ್ಥರ ಕೆಲಸ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾದಾಗ, ಮನೆಮಂದಿಯನ್ನೆಲ್ಲಾ ಕೌನ್ಸಲರ ಬಳಿ ಕರೆದುಕೊಂಡು ಹೋಗಬಾರದೇಕೆ ಎನ್ನುವ ಯೋಚನೆ ಬಂದರೂ ಅದನ್ನು ತಳ್ಳಿ ಹಾಕಿ, ಪ್ರಶಾಂತ ಒಂದು ಉಪಾಯ ಮಾಡಿದ.  “ನೋಡು ರಾಗಿಣಿ, ಅಪ್ಪ ಅಮ್ಮ ಇರುವತನಕ ಬೆಕ್ಕುಗಳನ್ನು ನಮ್ಮ ಇಲಾಖೆಯ ಜಮೀನಿನಲ್ಲಿ ಬಿಟ್ಟಿರುತ್ತೇನೆ. ಅವುಗಳನ್ನು ನೋಡಿಕೊಳ್ಳಲು ಒಬ್ಬ ಕೂಲಿ ಹುಡುಗನಿಗೆ ಹೇಳಿ ಸ್ವಲ್ಪ ದುಡ್ಡು ಕೊಟ್ಟಿರುತ್ತೇನೆ. ಆಮೇಲೆ ಮತ್ತೆ ಕರೆ ತಂದರಾಯಿತು.” ಎಂದು ಹೇಳಿದ.  ಸ್ವಭಾವತಃ ದುರ್ಬುದ್ದಿಯವಳೇನಲ್ಲದ ರಾಗಿಣಿ ಬಹಳ ಹೊತ್ತು ಪುಸಲಾಯಿಸಿದ ಮೇಲೆ ಒಪ್ಪಿದಳು.  “I love you ಕಣೇ” ಎಂದು ಪ್ರಶಾಂತ ಅವಳ ಹಣೆಗೆ ಮುತ್ತಿಟ್ಟು, ಅವಳು ಮನಸ್ಸು ಬದಲಾಯಿಸುವ ಮೊದಲೇ ದೊಡ್ಡ ಬುಟ್ಟಿಯೊಂದರಲ್ಲಿ ಎರಡೂ ಮರಿಗಳನ್ನು ಹಾಕಿಕೊಂಡು ಕಾರಿನತ್ತ ನಡೆದ. ಏನನ್ನೋ ನೆನೆಸಿಕೊಂಡು ಹಿಂದೆಯೇ ಬಂದ ರಾಗಿಣಿ, “ಅಲ್ಲಾ ರೀ, ಇವತ್ತು ತಾರೀಖು ಮೇ, ಒಂದು, ತಾನೇ? ಲೇಬರ್ಸ್ ಡೇ, ರಜೆ ಅಲ್ವಾ?” ಎಂದು ಕೇಳಿ, ಇನ್ನೊಂದು ದಿನ ಬೆಕ್ಕುಗಳನ್ನು ಜೊತೆಯಲ್ಲಿಟ್ಟುಕೊಳ್ಳಬಹುದೇನೋ ಎಂದು ಆಸೆಯಿಂದ ನೋಡಿದಳು.  “ರಜೆ ತಕೊಳ್ಳೋಕೆ ನಾನೇನು ಲೇಬರ್ ಏನೇ? ಸೀನಿಯರ್ ಸೈಂಟಿಸ್ಟ್ ನಾನು. ತಲೆಗೆ ಕೆಲಸ ಕೊಡದೆ ಹೇಳಿದ ಕೆಲಸ ಮಾಡುವವರು ಲೇಬರ್ಸು. ದಡ್ಡಿ.” ಎಂದು ತನ್ನ ಜೋಕಿಗೆ ತಾನೇ ನಗುತ್ತ ಪ್ರಶಾಂತ ಹೊರಟೇ ಬಿಟ್ಟ.  ಅವನೆಣಿಕೆಯಂತೆ ಅಂದೂ ಕೂಡ ದಿನಗೂಲಿ ಆಸೆಗೆ ಸುಮಾರು ಜನ ಕೂಲಿ ಆಳುಗಳು ಬಂದಿದ್ದರು. ಆಗಲೇ ಎಷ್ಟೋ ಜನ ವಿವಿಧ ಖಾನೆಗಳಲ್ಲಿ ಬೆಳೆದ ಗಿಡಗಳಿಗೆ ಗೊಬ್ಬರ ಹಾಕುವುದು, ಔಷದಿ ಹೊಡೆಯುವುದು, ಕುಂಬಳ ಕಾಯಿಗಳಿಗೆ ಪ್ಲಾಸ್ಟಿಕ್ ಕವರು ಕಟ್ಟುವುದು, ಪಾತಿ ಮಾಡುವುದು, ಮಣ್ಣಿಗೆ ನೇರವಾಗಿ ಬಿಸಿಲು ಬಿದ್ದು ಒಣಗದಂತೆ ಕಾಪಾಡಲು ಗಿಡಗಳ ಮಧ್ಯೆ ತಾಡಪಾಲು ಹಾಸುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದರು. ನರಸಯ್ಯನೂ ಅಣತಿ ದೂರದಲ್ಲೇ ಕಂಡಾಗ, ಪ್ರಶಾಂತ ಅವನನ್ನು ಕಾರಿನ ಬಳಿ ಬರುವಂತೆ ಕರೆದ.  “ನರಸಯ್ಯ, ಒಂದು ಸ್ವಲ್ಪ ದಿನ ಈ ಬೆಕ್ಕಿನ ಮರಿಗಳನ್ನು ಇಲ್ಲೇ ಹೊಲದಲ್ಲಿ ಬಿಟ್ಟಿರ್ತೀನಿ, ನೋಡಿ ಕೊಳ್ತೀಯಾ?” ಎಂದು ಕಾರಿನ ಹಿಂದಿನ ಸೀಟಿನಲ್ಲಿ ಬುಟ್ಟಿಯೊಳಗಿಂದ ಒಂದೇ ಸಮನೆ ದೈನ್ಯತೆಯಿಂದ ಕೂಗಿ ಕೊಳ್ಳುತ್ತಿದ್ದ ಬೆಕ್ಕಿನ ಮರಿಗಳನ್ನು ತೋರಿಸಿ, ಒಂದು ಸಾವಿರ ರೂಪಾಯಿಗಳನ್ನು ಕೈಯ್ಯಲ್ಲಿ ಹಿಡಿದು ಚಾಚಿದ.   “ಸಾವಿರಾರು ಎಕರೆ ಜಾಗ ಇದು ಬುದ್ದಿ. ಹಾವು, ನಾಯಿ, ನರಿ ಏನಾದರೂ ಒಂದೇ ದಿನಕ್ಕೆ ಕೊಂದಾಕ್ ಬುಡ್ತಾವೆ.” ಮರುಕದಿಂದ ನರಸಯ್ಯ ಹೇಳಿದ.  ಪ್ರಶಾಂತ ತನ್ನೆದುರೇ ಹಾದು ಹೋದ ಕಾರು ತನ್ನ ಡೈರೆಕ್ಟರದು ಎಂದು ಗುರುತಿಸಿ ಅವಸರ ತೋರಿದ. ಮತ್ತೆ ಜೇಬಿಗೆ ಕೈ ಹಾಕಿ ಇನ್ನೊಂದು ಸಾವಿರ ರೂಪಾಯಿಗಳನ್ನು ಸೇರಿಸಿದ.  “ಕಾಸ್ ಕೊಟ್ ಬುಟ್ಟಿ ಪಾಪ ಎಂಗ್ ಕಳಕಂಡೀರಿ ಬುದ್ದಿ? ನಾನೆಷ್ಟೇ ಆದ್ರೂ ನೀವ್ ಯೋಳಿದ್ ಕೆಲ್ಸ ಮಾಡೋ ಕಾರ್ಮಿಕ ಅಷ್ಟೇಯಾ, ಅಲ್ಲವುರಾ? ಅದರ ಪಾಪ ಪುಣ್ಯ ಎಲ್ಲಾ… ”  ಪ್ರಶಾಂತ ಪೆಚ್ಚಾಗಿ ನರಸಯ್ಯನನ್ನು ನೋಡುತ್ತಲೇ ಇದ್ದ.  “ಇವತ್ತು ಕಾರ್ಮಿಕರ ದಿನ ಅಂತ ನಮ್ಮ ರೆಡ್ಡಿ ಸಾಬು ಸ್ವೀಟ್ ಕೊಡ್ತಾವ್ನೆ ಎಲ್ಲಾರಗುವೆ,” ಎಂದು ಹೇಳಿ ಮೂಕನಾಗಿದ್ದ ಪ್ರಶಾಂತನ ಕೈಯಿಂದ ಹಣ ಪಡೆದುಕೊಂಡು, “ಇವತ್ತೊಂದಿನ ಕಾರ್ಮಿಕನಂಗೆ ಯೋಳಿದ್ ಕೆಲ್ಸ ಮಾಡಾಕಿಲ್ಲ ಬುದ್ದಿ. ಈ ಮರಿಗೋಳ್ನ ಮನೆಗ್ ಎತ್ಗವೋಯ್ತಿನಿ, ಬುಡಿ.” ಎನ್ನುತ್ತಾ ಕಾರಿನ ಹಿಂದಿನ ಬಾಗಿಲು ತೆಗೆದು ಬುಟ್ಟಿಯನ್ನು ಕೈಗೆತ್ತಿಕೊಂಡ.       *******

ಕಾರ್ಮಿಕ ದಿನದ ವಿಶೇಷ-ಕಥೆ Read Post »

You cannot copy content of this page

Scroll to Top