ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ನೋಡ ನೋಡುತ್ತಿದ್ದ ಹಾಗೆ ಬೆಳಗಾಗಿಬಿಟ್ಟಿತು ಕನವರಿಸುತ್ತಿದ್ದಂತೇ ಕನಸು ಹರಿದುಬಿಟ್ಟಿತು ಹಂಬಲಿಸಿದ್ದೆಷ್ಟು ತಯಾರಿಯ ಸಂಭ್ರಮವೆಷ್ಟು ತಾಸೆರಡು ತಾಸಿನಲ್ಲಿ ‘ಆಟ’ ಮುಗಿದೇಬಿಟ್ಟಿತು ಹೊಳೆ ಮೈಲು ದೂರವಿರುವಾಗಲೇ ಸಿದ್ಧನಿದ್ದೆ ಪಾದವನ್ನೂ ನೆನೆಸದೆ ನೀರು ಸರಿದುಬಿಟ್ಟಿತು ಭಾರವನ್ನು ಅವರೂ ಹೊರುವ ನಿರೀಕ್ಷೆಯಿತ್ತು ನನ್ನ ತಲೆಗೇ ಎಲ್ಲ ಕಟ್ಟಿ ಮಂದಿ ಕೈಬಿಟ್ಟಿತು ಬೆಳಗಾದರೆ ಪರಿಹಾರ ಸಿಗುವ ವಿಶ್ವಾಸವಿತ್ತು ನಸೀಬು ಖೊಟ್ಟಿ, ರಾತ್ರಿಯೇ ಎಣ್ಣೆ ತೀರಿಬಿಟ್ಟಿತು ಕೈಗೆ ಸಿಗದೇ ನಡೆಯುವ ‘ಜಂಗಮ’ನ ಕೇಳಬೇಕು ಇರವು-ಅರಿವಿನ ನಡುವೇಕೆ ಬಿರುಕುಬಿಟ್ಟಿತು ******

ಕಾವ್ಯಯಾನ Read Post »

ಅಂಕಣ ಸಂಗಾತಿ

ಗಾಳೇರ್ ಬಾತ್

ಗಾಳೇರ್ ಬಾತ್ -03 ಬದುಕು ಏನೆಲ್ಲಾ ಮಾಡಿಸುತ್ತದೆ…….. ಇವನೌನ್ ಇವನೇನು ಬರಿತಾನ ಅಂತೀರಲಾ….. ನಿಜ ಕಣ್ರೀ ನಾನು ಬೇರೆ ಏನು ಬರೆಯುವುದಿಲ್ಲ! ನಮ್ಮ-ನಿಮ್ಮ ನಡುವೆ ನಡೆಯುವ ದಿನ ನಿತ್ಯದ ಘಟನೆಗಳೇ ನನ್ನ ಬರವಣಿಗೆಗಳಿಗೆ ಶೃಂಗಾರ.          ಆಗ ತಾನೆ ನಾನು duty ಮುಗಿಸಿಕೊಂಡು restroom ನಲ್ಲಿ ಏನೋ ಯೋಚಿಸುತ್ತ ಕೂತಿದ್ದೆ. Duty ನಾ.. ಯಾವ duty….  ಅಂತ ಜಾಸ್ತಿ ತಲೆ ಕೆಡಿಸ್ಕೋಬೇಡಿ. ಅದೇ ನಾನು ಮಾಡ್ತಿದ್ನಲ್ಲ housekeeping ಕೆಲಸ. ಹೀಗೆ ಕೂತಿರಬೇಕಾದ್ರೆ ಪ್ರಕಾಶ ಎಲ್ಲಿಂದ ಬಂದ್ನೋ ಗೊತ್ತೆ ಆಗಲಿಲ್ಲ. ಬಂದವನೇ “ಮಗ ಸುಜಾತಾ ಆಂಟಿ ಮತ್ತು ಮಹೇಶ್ ಇಬ್ರೂ ರಜೆ ಹಾಕಿದರೋ” ಅಂತೇಳಿ ಪೆಚ್ಚುಮೋರೆ ಹಾಕಿಕೊಂಡಿದ್ದ. ನಾನು ಈ ಮಾತಿಗೆ ಜಾಸ್ತಿ ತಲೆಕೆಡಿಸಿಕೊಳ್ಳದೆ “ಹೌದಾ….!” ಅಂತ ಹೇಳಿ ಸುಮ್ಮನೆ ಆದೆ. ಅಷ್ಟಕ್ಕೇ ಬಿಡದೆ ಮಹೇಶ “ಗುರು ಸುಜಾತಾ ಆಂಟಿ ಸರಿ ಇಲ್ಲ ಗುರು” ಅಂದಾಗ ನನ್ನ ಕುತೂಹಲ ಹೆಚ್ಚಾಯಿತು. “ಯಾಕೆ ಪ್ರಕಾಶ ಏನಾಯ್ತು, ಸುಜಾತ ಆಂಟಿ ನಿನಗೇನು ಮಾಡಿದ್ಲು”. ಆಗ ಪ್ರಕಾಶ “ಗುರು ನಾನು ಮೂರು ತಿಂಗಳಿಂದ ಆಂಟಿನ love ಮಾಡ್ತಾಯಿದೀನಿ ಕಣೋ. ಅವಳು ಕೂಡ ನಂಜೊತೆ Park, film, Mall ಅಂತ ಸುತ್ತಿದಾಳೆ, ಹಣ ಕೂಡ ತುಂಬಾ ಕೊಟ್ಟಿದ್ದೇನೆ ಮಗ, ಇವತ್ತು ನೋಡಿದ್ರೆ ಮಹೇಶನ ಜೊತೆ filmಗೆ ಹೋಗಿದ್ದಾಳಂತೆ” ಅಂತ ಬೇಜಾರು ಮಾಡ್ಕೊಂಡ. ಹೀಗೆ ಬೇಜಾರು ಮಾಡಿಕೊಂಡಿದ್ದ ಪ್ರಕಾಶನನ್ನು ನಾನು ಸಮಾಧಾನ ಪಡಿಸಲು “ಗುರು ಹೆಣ್ಣು-ಹೊನ್ನು-ಮಣ್ಣು ಈ ಮೂರರ ಹಿಂದೆ ಯಾವತ್ತೂ ಹೋಗಬಾರದು” ಅಂತ ಹೇಳಿದೆ. ಆಗ ಅವನು “ಹೌದು ಗುರು… ನೀನು ಹೇಳಿದ್ದು ನಿಜ! ನೀನು ಬಿಡಪ್ಪ gentleman” ಅಂತ ಹೇಳಿ ಹೊರಟು ಹೋದ.         ಅವನೇನು ಹೊರಟು ಹೋದ! ಆದರೆ ನನಗೆ ಸುಜಾತ ಆಂಟಿಯ ಬಗ್ಗೆ ತಿಳಿದುಕೊಳ್ಳಲು ತುಂಬಾ ಕುತೂಹಲ ಹುಟ್ಟಿತು. ಹಾಗೋ ಹೀಗೋ ಹೇಗೋ ಮಾಡಿ ಸುಜಾತಾ ಆಂಟಿಯ ಬಗ್ಗೆ information ಕಲೆ ಹಾಕಿದಾಗ ತಿಳಿತು. ಅವಳು ಹೀಗೆ ಹತ್ತು ವರ್ಷದ ಕೆಳಗೆ ಮಂಡ್ಯದ ಯಾವುದೋ ಹಳ್ಳಿಯಿಂದ ತನ್ನ ಗಂಡನೊಂದಿಗೆ ದುಡಿಯಲು ಬೆಂಗಳೂರಿಗೆ ಬಂದಳೆಂದು. ಮೂವತ್ತೈದು ರಿಂದ ನಲವತ್ತು ವಯಸ್ಸಿನ ಆಜುಬಾಜಿನವಳಾದ ಅಂಟಿ ನೋಡಲು ತುಂಬಾ ಅಪ್ಸರೆಯಂತೆ ಕಾಣುತ್ತಿದ್ದಳು. ಎರಡು ಮಕ್ಕಳ ತಾಯಿಯಾದರೂ ಸಹ ಅವಳ ಅಂದದ ಕಡಲೆನೂ ಕಪ್ಪಗಿರಲಿಲ್ಲ. ಯಾವುದೇ ವಯಸ್ಸಿನ ಹುಡುಗರಾಗಲಿ ವಯಸ್ಕರರಾಗಲಿ ಅವಳು ನೋಡುವ ನೋಟಕ್ಕೆ ಅವಳ ಬಲೆಗೆ ಬೀಳುವುದರಲ್ಲಿ ಅನುಮಾನವಿಲ್ಲ. ಆದರೆ ಸುಜಾತಾ ಆಂಟಿ ಮಾತ್ರ ಯಾವತ್ತೂ ನನ್ನ ಆ ರೀತಿ ನೋಡಿರಲಿಲ್ಲ. ನನ್ನಷ್ಟೇ ಅಲ್ಲ ನನ್ನಂತೆ ಸೌಜನ್ಯವಾಗಿ ವರ್ತಿಸುವ ಯಾವುದೇ ಯುವಕರನ್ನು ಕೂಡ ಅವಳು ತನ್ನ ಕಡೆ ಸೆಳೆಯುತ್ತಿರಲಿಲ್ಲ. ಕಾಮಲೆ ತುಂಬಿದ ಪಡ್ಡೆ ಹುಡುಗರನ್ನು ಮಾತ್ರ ಅವಳು ತನ್ನ ಬಲೆಗೆ ಬೀಳಿಸಿ ಕೊಳ್ಳುತ್ತಿರುವುದು ದಿನಗಳೆದಂತೆ ಗೊತ್ತಾಯ್ತು. Sex ಎನ್ನುವುದು ಮೂಲಭೂತ ಅಲ್ಲದಿದ್ದರೂ ಸಹ. ಅದು ಸಹಜವಾಗಿಯೇ ಮನುಷ್ಯನಲ್ಲಿ ಮೂಲಭೂತ ವಸ್ತುವಿನಂತೆ ಬೆರೆತು ಬಿಡುತ್ತದೆ. ಇದಕ್ಕೆ ಯಾವೊಬ್ಬ ಹೆಣ್ಣು ಮತ್ತು ಗಂಡು ಕೂಡ ಹೊರತಾಗಿಲ್ಲ.         ನಾನು ಒಂದು ದಿನ housekeeping ಕೆಲಸ ಮುಗಿಸಿಕೊಂಡು ಶಾಂತಿನಗರದ ಯಾವುದೋ ಗಲ್ಲಿಯಲ್ಲಿ ಒಂಟಿಯಾಗಿ ಸಾಗುತ್ತಿರಬೇಕಾದರೆ. ಯಾವುದೋ ಚಿಕ್ಕ ಅಡ್ಡ ರಸ್ತೆಯಲ್ಲಿ ಸಿಕ್ಕ ಸುಜಾತ ಅಂಟಿ “ಏನು ಗಾಳೇರ ಇಲ್ಲಿ”. ಎಂದಾಗ ಅವಳ ಜೊತೆ ಮಾತಿಗಿಳಿಯಲು ನನಗೆ ಒಂತರ ಇರಿಸು ಮುರಿಸು ಉಂಟಾದರು ಮಾತಿಗಿಳಿಯದೆ ಬೇರೆ ಮಾರ್ಗವಿಲ್ಲ ಎಂದು “ಆಗೆ ಆಂಟಿ ಸುಮ್ಮನೆ ಬೆಂಗಳೂರನ್ನು ಸುತ್ತೋಣವೆಂದು ಬಂದೆ”. “ಹೌದಾ….. ಇಲ್ಲೇ ನಮ್ಮ ಮನೆ, ಬಾ ಮನೆಗೆ ಹೋಗೋಣ” ಎಂದಾಗ ನನಗೆ ಮಾತು ಬರದಾಯಿತು. ಯಾಕೆಂದರೆ ನನ್ನ ಮನಸ್ಸಿನಲ್ಲಿ ಅವಳೊಬ್ಬ ವೇಶ್ಯೆ ಎಂಬ ಪಟ್ಟ ಕಟ್ಟಿಕೊಂಡಿತ್ತು. ಯಪ್ಪಾ ಸೂಳೆ ಮನೆಗೆ ಹೋಗುವುದಾ! ಎಂದು ಮನಸ್ಸಿನಲ್ಲಿ ಭಯ ಶುರುವಾಯಿತು. ತಕ್ಷಣ ಅವಳು ನನ್ನ ಯೋಚನೆಯನ್ನು ಅರ್ಥಮಾಡಿಕೊಂಡವಳಂತೆ “ಪ್ರಕಾಶ ಮತ್ತು ಮಹೇಶ ಅವರು ನನ್ನ ಜೊತೆ ಮಾತನಾಡುವುದು ಬಿಟ್ಟು ತುಂಬಾ ದಿನಗಳಾಗಿವೆ ಅವರು ನಮ್ಮ ಮನೆಗೆ ಈಗ ಬರುವುದಿಲ್ಲ. ನೀನು ಬಂದಿದ್ದು ಯಾರು ನೋಡುವುದಿಲ್ಲ ಯೋಚಿಸಬೇಡ ಬಾ ಗಾಳೇರ” ಎಂದು ನನ್ನ ಕೈಯನ್ನು ಹಿಡಿದುಕೊಂಡಾಗ ಅವಳ ಕಣ್ಣಲ್ಲಿ ಕಾಮದ ಭಾವ ತುಂಬಿದೆ ಎಂದು ನನಗೆ ಅನಿಸಲಿಲ್ಲ. ಯಾವಾಗಲೂ ಅಪ್ಸರೆ ಕಣ್ಣುಗಳಂತೆ ಕಾಣುತ್ತಿದ್ದ ಅವಳ ಕಣ್ಣುಗಳು. ಮಮತೆಯ ತುಂಬಿದ ಮಡಿಲಿನ ತಾಯಿ ಹೃದಯದಂತೆ ಶಾಂತವಾಗಿದ್ದವು. ಅವಳು ಸ್ಪರ್ಶಿಸಿದಾಗ ರೋಮಾಂಚನಗೊಳ್ಳಬೇಕಿದ್ದ ದೇಹ ಜಡವಾಗಿತ್ತು. ಹೀಗೆ ನನ್ನಲ್ಲಾದ ಬದಲಾವಣೆಗಳನ್ನು ಅರಿತ ಮೇಲೆ ಅವಳ ಹಿಂದೆ ಹೊರಟೆ.      ಹಲವಾರು ಯುವಕರೊಂದಿಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದ  ಸುಜಾತ ಅಂಟಿ ಅದೆಷ್ಟು ದುಡ್ಡು ಮಾಡಿರಬಹುದು. ಅವಳ ಮನೆ ಹೇಗೆಲ್ಲಾ ಐಶಾರಾಮಿ ಹೊಂದಿರಬಹುದು! ಎಂದು ಮನಸ್ಸಿನಲ್ಲಿ ಏನೇನೋ ವಿಚಾರಗಳನ್ನು ಮಾಡುತ್ತಾ ಅವಳ ಹಿಂದೆ ಹೋದೆ. ಅದೊಂದು ದೊಡ್ಡ ಚರಂಡಿ ಸರಿಸುಮಾರು ಬೆಂಗಳೂರಿನ ಮುಕ್ಕಾಲು ಏರಿಯಾದ wastewater ಆ ಚರಂಡಿಯಲ್ಲಿ ಹರಿಯುತ್ತಿತ್ತು. ಅದರ ಪಕ್ಕ ಸಾಲಾದ ಮನೆಗಳು. ಆ ಮನೆಗಳಿಗೆಲ್ಲಾ ಒಂದೇ toilet. ಆ ಮನೆಗಳ ಚಾವಣಿಗಳನ್ನ ಸಿಮೆಂಟಿನ ತಗಡುಗಳಿಂದ ಹೊದಿಸಲಾಗಿತ್ತು. ಅದರಲ್ಲಿ ಸುಜಾತ ಆಂಟಿದು ಒಂದು. ಅದು ಸ್ವಂತದ್ದಲ್ಲ ಬಾಡಿಗೆಯ ಮನೆ. ” ಬಾ ಗಾಳೇರ ಒಳಗೆ” ಎಂದಾಗ “ಹಾ ಅಂಟಿ” ಎಂದು ಆಚೆ ಈಚೆ ನೋಡುತ್ತಾ ಒಳಗಡೆ ಕಾಲಿಟ್ಟೆ. ಎರಡು ಕೋಣೆಗಳನ್ನು ಹೊಂದಿದ ಆ ಮನೆಯಲ್ಲಿ hall ಮತ್ತು kitchen ಬೇರೆ ಬೇರೆ ಆಗಿರಲಿಲ್ಲ. ಎರಡು ಚಿಕ್ಕ ಹೆಣ್ಣು ಮಕ್ಕಳು ಓದುತ್ತ ಕುಳಿತಿದ್ದವು. ಆ ಮಕ್ಕಳ ಹೋಲಿಕೆ ಸುಜಾತ ಅಂಟಿ ತರ ಇದ್ದುದರಿಂದ ಅಂಟಿಯ ಮಕ್ಕಳಿರಬಹುದು ಅನಿಸಿತು. ಇನ್ನೊಂದು ಮೂಲೆಯಲ್ಲಿ ರಗ್ಗು ಒದ್ದು ಕೊಂಡು ಮಲಗಿದ ವೆಕ್ತಿ ಅಂಟಿಯ ವಯಸ್ಸಾದ ತಂದೆ ಇರಬಹುದೆಂದು ಅಂದು ಕೊಂಡೆ. ಅಲ್ಲೇ ಪಕ್ಕದಲ್ಲಿ ಒಂದು ಮಂಚ. ಅದನ್ನು mostly ಆಂಟಿ ಬೆಂಗಳೂರಿಗೆ ಬಂದ ಹೊಸತನದರಲ್ಲಿ ತಂದಿರಬಹುದೆನಿಸುತ್ತಿತ್ತು. ಯಾಕೆಂದರೆ ಆ ಮಂಚ ತಗ್ಗು-ದಿಮ್ಮಿ ಇಂದ ಕೂಡಿತ್ತು. ಅದರ ಮೇಲೆ ಹಳೆಯದಾದ ಕೌದಿ. ಅದನ್ನು ನೋಡಿದ ತಕ್ಷಣ ನನಗೆ ಪ್ರಕಾಶ ಮತ್ತು ಮಹೇಶ ಅಷ್ಟೇ ಅಲ್ಲದೆ ಇನ್ನೂ ಎಷ್ಟೋ ಯುವಕರು ಈ ಮಂಚದ ಮೇಲೆ ಹತ್ತಿ ಇಳಿದಿದ್ದಾರೋ….. ಎಂದು ಯೋಚಿಸುತ್ತಾ ಕುಳಿತಿರಬೇಕಾದರೆ. ಆಂಟಿ ಒಳಗಿನಿಂದ “ಗಾಳೇರ ಟೀ ಕುಡಿತೀರಾ…..” ಎಂದಾಗ ವಾಸ್ತವಕ್ಕೆ ಮರಳಿದೆ.        ಮೂಲೆಯಲ್ಲಿ ರಗ್ಗನ್ನು ಒದ್ದು ಕೊಂಡು ಮಲಗಿದ್ದ ವೆಕ್ತಿ. “ಏನೇ ಸುಜಿ ಔಷಧಿ ತಂದೆಯಾ” ಎಂದಾಗ ನನಗೆ ಆಶ್ಚರ್ಯವಾಯಿತು. ಅಲ್ಲಿವರೆಗೆ ಸುಜಾತಳ ತಂದೆ ಎಂದುಕೊಂಡಿದ್ದ ನಾನು ಆ ವ್ಯಕ್ತಿ ಆಂಟಿಯನ್ನು ಸುಜಿ ಅಂದಾಗ ಓ ಇವರು ಆಂಟಿಯಾ ಗಂಡ ಇರಬೇಕೆಂದುಕೊಂಡೆ. ಆಗ ಆಂಟಿ “ಹಾ ತಂದಿದ್ದೀನಿ ಇರು ವಸಿ ಕೊಡ್ತೀನಿ” ಎಂದಳು. ಆಗ ನನ್ನ ಮನಸ್ಸಿನಲ್ಲಿ ಮತ್ತೆ ಯೋಚನೆಗಳ ಲಹರಿಯೇ ತೇಲಿದವು. ಓ ಆಂಟಿಯ ಗಂಡ ರೋಗಿಷ್ಟನದ್ದರಿಂದ ಆಂಟಿ ತನ್ನ ದೇಹದ ಆಸೆ ತಾಳಲಾಗದೆ ಯುವಕರಿಗೆ ಬಲೆ ಬೀಸುತ್ತಿದ್ದಾಳೆಂದು ಯೋಚಿಸುತ್ತಿರುವಾಗಲೇ…..ಅಂಟಿ “ಏನು ಗಾಳೇರ… ಏನು ಯೋಚಿಸ್ತಾ ಇದ್ದೀಯ. ಅವರು ನಮ್ಮ ಯಜಮಾನ್ರು. ನಾನು ಅವರನ್ನು ಹೀಗೆ ಇಪ್ಪತ್ತು ವರ್ಷಗಳ ಕೆಳಗೆ ಲವ್ ಮಾಡಿ ಮದುವೆಯಾಗಿ ಹಳ್ಳಿ ಬಿಟ್ಟು ಬೆಂಗಳೂರು ಸೇರಿಕೊಂಡೆವು. ಆಗ ನಮಗೆ ಹುಟ್ಟಿದ್ದೇ ಈ ಎರಡು ಹೆಣ್ಣು ಮಕ್ಕಳು. ನನ್ನ ಗಂಡ ಎಂತಹ ಕಾಯಿಲೆಯಿಂದ ಬಳಲುತ್ತಿದ್ದರೂ ಕೂಡ ನನಗೆ ಸಮಯಕ್ಕೆ ಸರಿಯಾಗಿ ಊಟ ಆಯಿತಾ ಎಂದು ಕೇಳದೆ ಇರಲಾರ. ಅಷ್ಟೊಂದು ಪ್ರೀತಿ ನನ್ನ ಗಂಡನಿಗೆ…..” ಎಂದು ನಿಟ್ಟುಸಿರು ಬಿಟ್ಟಳು. “ಆಗಿದ್ದರೆ ಪ್ರಕಾಶ ಮತ್ತು ಮಹೇಶನನ್ನೂ…..” ಎಂದು ಮಾತನ್ನು ತೊದಲಿಸಿದಾಗ; ಅಂಟಿ “ಗಾಳೇರ ಇಲ್ಲಿ ನೋಡು ನನ್ನ ಗಂಡನಿಗೆ ಏಡ್ಸ್ ರೋಗ, ಇದಕ್ಕೆ ಕಾರಣ ಏನು ಗೊತ್ತಾ ನಾನು ಇವರನ್ನು ಮದುವೆ ಆಗುವುದಕ್ಕಿಂತ ಮುಂಚೆ ಇವರು ಅದೆಷ್ಟು ಮಹಿಳೆಯರೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದರು ಗೊತ್ತಿಲ್ಲ. ಅದರ ಪ್ರತಿಫಲವೇ ಈ ರೋಗ. ಆದರೆ ಮದುವೆಯಾದ ಮೇಲೆ ನನ್ನ ಬಿಟ್ಟು ಬೇರೆ ಯಾರನ್ನೂ ಕೂಡ ಕಣ್ಣೆತ್ತಿ ನೋಡಿಲ್ಲ. ಏನು ಪ್ರಯೋಜನ! ಮಿಂಚಿ ಹೋದ ಕಾಲ ಮತ್ತೆ ಬರುವುದೆ. ಅದಕ್ಕೆ ಪ್ರಕಾಶ ಮತ್ತು ಮಹೇಶ ಇನ್ನೂ ಏನು ಅರಿಯದ ಯುವಕರು ಇವಾಗಲೇ ಹಲವಾರು ಹುಡುಗಿಯರ ಹಿಂದೆ ಬಿದ್ದರೆ ನನ್ನ ಗಂಡನಂತೆ ಮೂಲೆಯಲ್ಲಿ ಮಲಗುತ್ತಾರೆ ಅವರ ಹೆಂಡತಿಯರು ನನ್ನಂತೆ ರೋಗಿಷ್ಟ ಗಂಡನನ್ನು ಕಟ್ಟಿಕೊಂಡು ದಿನನಿತ್ಯ ಕಣ್ಣೀರು ಹಾಕಬಾರದೆಂದು ಅವರನ್ನು ನನ್ನತ್ತಾ ಸೆಳೆದುಕೊಂಡು. ಮತ್ತೆ ಹೆಣ್ಣಿನ ಬಗ್ಗೆ ಜಿಗುಪ್ಸೆ ಬರುವಂತೆ ಮಾಡಿದೆ. ಈಗ ನೋಡು ಅವರು ಯಾವ ಹೆಣ್ಣನ್ನು ಸಹ ನೋಡುವುದಿಲ್ಲ. ಇದಕ್ಕೆ ನಾನು ಅವರಿಂದ ಪ್ರತಿಫಲವಾಗಿ ದುಡ್ಡನ್ನು ಪಡೆದುಕೊಂಡು ನನ್ನ ಗಂಡನಿಗೆ ಔಷಧಿ ತರುತ್ತಿದ್ದೆ” ಎನ್ನುವ ಮಾತುಗಳನ್ನು ಕೇಳಿದ ನನಗೆ ಕಣ್ಣಂಚಿನಲ್ಲಿ ನೀರು ತಾನಾಗಿಯೇ ಹರಿಯಿತು. ಅಷ್ಟರಲ್ಲಿ ಪಕ್ಕದಲ್ಲಿ ಕುಳಿತ ಮಕ್ಕಳು “ಅಮ್ಮ ಈ homework ಹೇಳಿ ಕೊಡಮ್ಮ” ಎಂದಾಗ; ಅಂಟಿ “ನಾನು ಅಡುಗೆ ಮಾಡಬೇಕು ಇವತ್ತು ಅಣ್ಣ ಹೇಳಿಕೊಡತಾನೆ ಅಂತ ನನ್ನ ಕಡೆ ತೋರಿಸಿದಾಗ” ನನ್ನ ಮನಸ್ಸು ಶಾಂತತೆಯ ಕಡಲಿಗೆ ಜಾರಿತು. ******** ಮೂಗಪ್ಪ ಗಾಳೇರ

ಗಾಳೇರ್ ಬಾತ್ Read Post »

ಕಾವ್ಯಯಾನ

ಕಾವ್ಯಯಾನ

ಜೇಡ ರಾಜೇಶ್ವರಿ ಭೋಗಯ್ಯ ಕಾವ್ಯಕ್ಕೆ ವಸ್ತುವಾಗಲೆಂದು ಜೇಡವನ್ನು ಆರಿಸಿಕೊಂಡಿದ್ದೆ ಕವಿಯೊಬ್ಬರು ಹೇಳಿದ್ದರು , ವಸ್ತು ಯಾವುದಾದರೂ ಆಗಬಹುದು ಕವನ ಕಟ್ಟುವುದಕ್ಕೆ, ಒಡೆದ ದೋಣಿ ,ಮುರಿದ ಏಣಿ ಹೀಗೆ… ಜೇಡ ಕಟ್ಟುತ್ತಲೇ ಇತ್ತು ಬಲೆಯನ್ನು ನಾ ಕೆಡವುತ್ತಲೇ ಇದ್ದೆ ಪದೇ ಪದೇ ಅದರ ಬದುಕನ್ನು ಕೂತು ನೋಡಿದ್ದೇ ಬಂತು, ಪದಗಳು ಬರಲಿಲ್ಲ ರಾಜ ಬಲೆ ಹೆಣವುದ ನೋಡಿಯೇ ಸ್ಪೂರ್ತಿಗೊಂಡನಲ್ಲ ಜೇಡ ಬಲೆಯನ್ನು ಹೆಣೆಹೆಣೆದು ಕಟ್ಟಿಯೇ ಬಿಟ್ಟಿತು ತನ್ನರಮನೆಯನ್ನು ದಿಕ್ಕೆಟ್ಟಿದ್ದವ ಅವ, ಜೇಡ ಮನೆಕಟ್ಟಿದ್ದ ನೋಡಿ ತಾನೂ ಕಟ್ಟಿದ ಪುನಃ ಸೈನ್ಯವ ನಾನೋ ಯಾರಿಗೂ ಆಗಿರಲಿಲ್ಲ ರಾಜ ಮುಳುಗಿರಲಿಲ್ಲ ಸಾಮ್ರಾಜ್ಯ ಸುಖಾಸುಮ್ಮನೆ ಯಾರು ಯಾರಿಗೋ ಮೂಡುವುದಿಲ್ಲ ಪದಗಳು ಜೀವ ತಲ್ಲಣಿಸದೆ ಕಟ್ಟಲಾಗುವುದಿಲ್ಲ ಬಲೆಯನ್ನೂ , ಬದುಕನ್ನು. *********

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಕನ್ನಡ ಮೂಲ: ರಾಜು ಹೆಗಡೆ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಹುಟ್ಟು ಹುಟ್ಟು ದೇವರಾಣೆ! ನನಗೆ ಗೊತ್ತಿರಲಿಲ್ಲ. ನಾನು ಹುಟ್ಟುತ್ತೇನೆಂದು ಹುಟ್ಟಿ ಇಷ್ಟು ವರ್ಷವಾದರೂ ಹುಟ್ಟಲಾಗಲೇ ಇಲ್ಲ. ಖಾಲಿ ಆಕಾಶದ ಕೆಳಗೆ ಬಟಾಬಯಲ ಒಳಗೆ ಬೋಳು ಮರದಡಿಯಲ್ಲಿ ಕೂರುತ್ತಿರಲಿಲ್ಲ ಹೀಗೆ ನಾನು ಹುಟ್ಟಿದ್ದರೆ ನಿರುದ್ಯೋಗ ಕಲಿಯದಿದ್ದರೆ ಇರುತ್ತಿರಲಿಲ್ಲ ಹೀಗೆ ನಾ ಹುಟ್ಟಿದ್ದರೆ ಕ್ಷಮಿಸಿ, ನನ್ನ ಕೈಲಿನ್ನೂ ಹುಟ್ಟಲಾಗಲೇ ಇಲ್ಲ.. -********** Birth ——- Swear God! I didn’t know that I would be born. After the birth Years passed many more, but I couldn’t be born. Below the empty sky within the open plain under a leafless tree I wouldn’t sit If i was born Unemployment,,, if I didn’t learn I wouldn’t be like this If I was born. Forgive me, for not born yet. ********

ಅನುವಾದ ಸಂಗಾತಿ Read Post »

ಇತರೆ

ಲಹರಿ

ಎಮ್ಮೆ ಮತ್ತು ಜೋತಿಷ್ಯ ಅನುಸೂಯ ಎಂ.ಆರ್. ನಮ್ಮ ಅಮ್ಮ ಗಟ್ಟಿ ಮುಟ್ಟಾಗಿರುವ ತನಕ ನಾವು ಹಾಲು ಕೊಂಡು ಕೊಳ್ಳುತ್ತಿರಲಿಲ್ಲ.ನಮ್ಮ ಮನೆಯಲ್ಲಿ ಹಾಲು ಕರೆಯುವ ಒಂದು ಎಮ್ಮೆ ಸದಾ ಇದ್ದೇ ಇರುತ್ತಿತ್ತು. ಬೆಳಿಗ್ಗೆ ನಾಲ್ಕೈದು  ಲೀಟರ್ ಮತ್ತು ಸಂಜೆ ಅಷ್ಟೇ ಪ್ರಮಾಣದಹಾಲು ಕೊಡುವಂತಹವು.ಆಗ ನಮ್ಮ ಮನೆಯಲ್ಲಿ ಸದಾಹಾಲು,ಮೊಸರು,ತುಪ್ಪಗಳ ಸಮೃದ್ಧಿಯ ಸುವರ್ಣಯುಗ. ನಮ್ಮಮ್ಮ ಹಸುಗಳನ್ನು ಸಾಕುತ್ತಿರಲಿಲ್ಲ,ಹಸು ನಮಗೆ ಆಗಿ ಬರುವುದಿಲ್ಲ ಎಂದು ಹೇಳುತ್ತಿದ್ದರು. ನಮ್ಮಮ್ಮನ ದಿನಚರಿ ಆರಂಭವಾಗುವುದೆ,  ಹಾಲು ಕರೆಯುವುದರಿಂದ ಸೌದೆ ಒಲೆಯ ಸಣ್ಣ ಉರಿಯಲ್ಲಿ ಹಾಲು ಕಾಯಿಸುತ್ತಿದ್ದ ಕಾರಣ ರೊಟ್ಟಿಯಂತೆ ಕೆನೆ ಕಟ್ಟುತ್ತಿತ್ತು.ನಂತರ ಮಜ್ಜಿಗೆ ಕಡೆಯುವುದು.ಪ್ರತಿದಿನ ಒಂದು ಮುದ್ದೆ ಗಾತ್ರದ ಬೆಣ್ಣೆ ತೆಗೆಯುತ್ತಿದ್ದರು.ನಮ್ಮ ಅಕ್ಕ ಪಕ್ಕದ ಮನೆಯವರಿಗೆಲ್ಲಾ ಮಜ್ಜಿಗೆ ದಾನ. ನಮ್ಮ ಮನೆಯಲ್ಲಿ ಇಡ್ಲಿ, ರೊಟ್ಟಿ, ಚಟ್ನಿ ಯೊಂದಿಗೆ ಬೆಣ್ಣೆಸಹಾ.ಬೆಣ್ಣೆ ಕಾಯಿಸುವಾಗ ಮನೆಯೆಲ್ಲಾ ಘಮಘಮ. ಬೆಣ್ಣೆ ಕಾಸುವಾಗ ಹಾಕುವ ವೀಳ್ಯದೆಲೆಗೆ  ಭಾರಿ ಬೇಡಿಕೆ. ಹಾಗಾಗಿ ನಮ್ಮ ಮನೆಯಲ್ಲಿ ತುಪ್ಪವಿಲ್ಲದೆ  ತುತ್ತು ಎತ್ತುತಿರಲಿಲ್ಲ.ನಮ್ಮಮನೆಯಲ್ಲಿದ್ದ ಮಹಿಷಿಯರು ಸದಾ ಹೆಣ್ಗರುಗಳನ್ನೇ ಕೊಡುತ್ತಿದ್ದುದ್ದು ನಮ್ಮಮ್ಮನಿಗೆ ಒಂದು ರೀತಿಯ ಹೆಮ್ಮೆ. ನಮ್ಮಮನುಷ್ಯ ಜಾತಿಯ ಲೆಕ್ಕಚಾರವೇ ಹಾಗೆ,ಹಸು, ಎಮ್ಮೆಗಳಲ್ಲಿ ಮಾತ್ರ ಹೆಣ್ಗರು ಬೇಕು.ಏಕೆಂದರೆ ಅದರಿಂದ ಹಾಲು ತುಪ್ಪಗಳ ಜೊತೆಗೆ ಕರುಗಳ ಲಾಭ.ಆದರೆ ಇದನ್ನು ಮಾನವ ಕುಲಕ್ಕೆಅನ್ವಯಿಸುವಾಗ ಗಂಡೇ ಬೇಕು ! ನನ್ನ ಮಗ ಹುಟ್ಟುವ ಮುಂಚೆ ಅಂದರೆ ಒಂದು ವಾರದ ಮುಂಚೆ ಕೊಟ್ಟಿಗೆಯಲ್ಲಿ ಎಮ್ಮೆ ಹೆಣ್ಗರು ಹಾಕಿತ್ತು. ಆಗ ನಮ್ಮತೋಟದ ಕೆಲಸಗಾರ ಹಟ್ಟೀಲಿ ಹೆಣ್ಣು ಮನೇಲೀ ಗಂಡು ಹುಟ್ಟುತ್ತೆ ಅಂದಿದ್ದರು. ಅದು ನಿಜವಾದರೂ ಕಾಕತಾಳೀಯವಿರಬಹುದು. ಇಷ್ಟೆಲ್ಲ ಸಮೃದ್ಧವಾದ  ಕ್ಷೀರಧಾರೆ  ಹರಿಸುತ್ತಿದ್ದ ನಮ್ಮ ಮನೆಯ ಮಹಿಷಿಯರು  ಮತ್ತೇರಿದಾಗ ಕೆಲವೊಮ್ಮೆ ನಮಗೆ ತಲೆ ನೋವಾಗುತ್ತಿದ್ದ ಪ್ರಸಂಗಗಳೇನು ಕಡಿಮೆಯಿಲ್ಲ. ನಮ್ಮಮನೆ ಪಕ್ಕದ ತೋಟದಲ್ಲೆ ಮೇಯಲು ಬಿಡುತ್ತಿದ್ದು ದರಿಂದ ಅವುಗಳ ಹಸಿರು ಮೇವಿಗೇನು ಕೊರತೆಯಿಲ್ಲ. ಆದರೂ ಈ ಮಹಿಷಿಯರು  ಒಮ್ಮೊಮ್ಮೆಅದ್ಯಾವ ಮಾಯದಲ್ಲೋ ತೋಟದಿಂದ ಪರಾರಿಯಾಗುತ್ತಿದ್ದವು. ಕೆಲವೂಮ್ಮೆ ಸಂಜೆ ಆದರೂ ಸುಳಿವಿರುತ್ತಿರಲಿಲ್ಲ. ರಾತ್ರಿ ಕಳೆದು ಬೆಳಗಾದರೂ ಬರದಿದ್ದರೆ ನಮ್ಮಮ್ಮ ಮೊರೆ ಹೋಗುತ್ತಿದ್ದುದು ಕೇವಲ ಇಬ್ಬರಲ್ಲಿ ಮಾತ್ರ. ಒಬ್ಬರು ಧರ್ಮಸ್ಥಳದ ಮಂಜುನಾಥಸ್ವಾಮಿ. ಆ ದೇವರಲ್ಲಿ ನಮ್ಮಮ್ಮನಿಗೆ ವಿಶೇಷ ನಂಬಿಕೆ. ಇನ್ನೊಬ್ಬರು ಸಂಗೀತ ಮೇಷ್ಟ್ರು ಅಂದ್ರೆ ಅವರು ಹೇಳುವ ಜ್ಯೋತಿಷ್ಯ.ಅವರು ಸ.ಹಿ. ಪ್ರಾ. ಶಾಲೆಯಲ್ಲಿ ಸಂಗೀತ ಮೇಷ್ಟ್ರಾಗಿದ್ದರಿಂದ ಅದೇ ಅವರ ಅನ್ವರ್ಥನಾಮವಾಗಿತ್ತು. ಅವರಲ್ಲಿ ತುಂಬಾ ಜನರು ಜೋತಿಷ್ಯ ಕೇಳಲು, ಜಾತಕ ಬರೆಸಲು ಹೋಗುತ್ತಿದ್ದರು. ಸದಾ ಗಿಜಿಗುಡುವ ಜನರು. ನಮ್ಮ ತಾಯಿ ಎಮ್ಮೆ ಓಡಿ ಹೋದಾಗಲೆಲ್ಲಾ  ಎಲೆ,ಅಡಿಕೆ . ಬಾಳೆ ಹಣ್ಣು ದಕ್ಷಿಣೆಯನ್ನು ಕೊಟ್ಟು  ಯಾರನ್ನಾದರೂ ನಂಬಿಕಸ್ಥರನ್ನು ದೂತನನ್ನಾಗಿಸಿ  ಎಮ್ಮೆಯ ಅನ್ವೇಷಣಾ  ಕಾರ್ಯಕ್ಕೆ ಕಳಿಸುತ್ತಿದ್ದರು.  ಸಂಗೀತ ಮೇಷ್ಟ್ರು ನಮಗೆ ಗುರುಗಳಾಗಿದ್ದವರು.  ಮನೆ ಬಿಟ್ಟು  ಓಡಿಹೋಗುತ್ತಿದ್ದ ಮಹಿಷಿಯನ್ನು ಪತ್ತೆ ಹಚ್ಚುವಲ್ಲಿ ಅವರು ಹೇಳುತ್ತಿದ್ದ ಶಾಸ್ತ್ರ 90 % ನಿಖರವಾಗಿರುತ್ತಿತ್ತು. ಒಮ್ಮೆ ಅವರು ಒಂದು ನಿರ್ದಿಷ್ಟವಾದ ದಿಕ್ಕನ್ನು ಸೂಚಿಸಿ ಆ ಕಡೆ ಹೋದರೆ ನಿಮ್ಮ ಎಮ್ಮೆ ಸಿಗುತ್ತದೆ ಎಂದು ಹೇಳಿದಾಗ ನಮ್ಮ ದೂತರು ಆ ಜಾಡನ್ನಿಡಿದು ಹೊರಟಾಗ ಅಲ್ಲಿದ್ದ ದೊಡ್ಡಿಯೊಂದರಲ್ಲಿ ಕೂಡಿ ಹಾಕಿದ್ದರು. ದೂತರು ದಂಡ ಕಟ್ಟಿ ಬಿಡಿಸಿಕೊಂಡು ಸೆರೆವಾಸದಿಂದ  ಮುಕ್ತಗೊಳಿಸಿದರು. ಮಹಿಷಿ ಮರಳಿ ಮನೆಗೆ ಬಂದಳು. ಮತ್ತೊಮ್ಮೆ ಮಹಿಷಿ ಮನೆ ಬಿಟ್ಟಾಗ ಸಂಗೀತ ಮೇಷ್ಟ್ರು ಹೇಳಿದ  ಶಾಸ್ತ್ರ ನಿಜವಾಯಿತು. ನಿರ್ದಿಷ್ಟ ದಿಕ್ಕಿನಲ್ಲಿರುವ ಹಳ್ಳಿಯ ರೈತರೊಬ್ಬರ ತೋಟದ ಮನೆಯಲ್ಲಿದೆಯೆಂದು ಹೇಳಿದರು. ಹಳ್ಳಿ ಹಾಗೂ ರೈತರಹೆಸರಿನ ಪ್ರಸ್ತಾಪವಿರಲಿಲ್ಲ. ಈ ಬಾರಿ ನಮ್ಮ ದೂತರು ಬಾತ್ಮಿದಾರರೊಂದಿಗೆ ಬೇಹುಗಾರಿಕೆ ನಡೆಸಿ  ಹಳ್ಳಿಯ ತೋಟದ  ಮನೆಯಲ್ಲಿದ್ದ ಮಹಿಷಿಯನ್ನು ಅಶೋಕ ವನದಲ್ಲಿದ್ದ ಸೀತೆಯನ್ನು ಕರೆತರುವಂತೆ ಕರೆತರಲಾಯಿತು ಆ ರೈತರು ಹೊಟ್ಟೆ ತುಂಬಾ ಮೇವನ್ನು ಹಾಕಿ ಹಾಲನ್ನು ಕರೆದು ಕುಡಿದಿದ್ದರು. ಕಟ್ಟಿ ಹಾಕಿ ಮೇಯಿಸುವಂತೆ ಬಿಟ್ಟಿ ಸಲಹೆ ನೀಡಿ ಬೀಳ್ಕೊಟ್ಟಿದ್ದರು. ಮಗದೊಮ್ಮೆ ಮಹಿಷಿ ಕಣ್ಮರೆಯಾದಾಗ ಯಥಾ ಪ್ರಕಾರ ಸಂಗೀತ ಮೇಷ್ಕ ಮನೆ ಬಾಗಿಲಿಗೆ ಹೋದಾಗ ಎಲ್ಲಿ ಹುಡುಕಿದರೂ ಸಿಗುವುದಿಲ್ಲ.ತಾನೆ ತಾನಾಗಿ ಮನೆಗೆ ಮರಳುವುದೆಂದು ಹೇಳಿದರು.  ಮನಸ್ಸು ತಡೆಯದೆ ನಮ್ಮಮ್ಮ ಮಂಜುನಾಥ ಸ್ವಾಮಿಗೆ ಹರಕೆ ಕಟ್ಟಿಕೊಂಡಿದ್ದು ಆಯ್ತು. ಎರಡು ದಿನ ಕಳೆದರೂ ಬಾರದಿದ್ದಾಗ ಈ ಬಾರಿ ಸಿಕ್ಕಿದರೆ ಮಾರಾಟ ಮಾಡಿ  ಕೈತೊಳೆದುಕೊಳ್ಳಬೇಕು ಅನ್ನುವಷ್ಟರ ಮಟ್ಟಿಗೆ ಮಾತುಕತೆ ನಡೆಯಿತು. ಮೂರನೆ ದಿನ ಮಹಿಷಿ ಸೋತು ಸುಣ್ಣವಾಗಿ ಮೇವಿಲ್ಲದೆ ಸೊರಗಿ ಬಂದಿದ್ದಳು. ಕದ್ದು ಓಡಿ ಹೋಗಿದ್ದ ಕಾರಣ ಒಂದು ವಾರ ಗೃಹ ಬಂಧನದಲ್ಲಿದ್ದಳು. ಆಗಲೇ ಧರ್ಮಸ್ಥಳದ  ಮಂಜುನಾಥ ಸ್ಟಾಮಿಗೆ ಹರಕೆಯ ಹಣ ಸಂದಾಯವಾಯಿತು. ವರ್ಷಕ್ಕೆರಡು ಮೂರು ಬಾರಿ ಮನೆ ಬಿಡುವ ಚಾಳಿ ಅವಳದು. ಕರು ದೊಡ್ಡವಾದ ಮೇಲೆಯೇ ಇಂತಹ ಪ್ರಸಂಗಗಳು ಹೆಚ್ಚು   ಎಳೆಗರುವನ್ನು ಬಿಟ್ಟು ಹೋಗುವಂಥ ಕೆಟ್ಟ ತಾಯಿ  ಅವಳಂತೂ ಅಲ್ಲ ! ಕರು ಹಾಕಿದ ಎರಡನೆ ದಿನದ  ಹಾಲಿನಿಂದ ಮಾಡುವ ಗಿಣ್ಣು ಈಗ ನಮಗೆ  ಅಪರೂಪ.  ಹಾಲು ಕರೆಯುವ ಮುನ್ನ ಎಳೆಗರುವಿಗೆ ಕುಡಿಸಿ, ತಾಯಿ ಮುಂದೆ ಕರುವನ್ನು ಕಟ್ಟಿದಾಗ  ಕರುವಿನ ಮೈಯನ್ನು ನಾಲಿಗೆಯಿಂದ ನೆಕ್ಕುವ ಆ ಮಮತೆಗೆ ಸಾಟಿ ಇಲ್ಲವೇ ಇಲ್ಲ.  ಹಾಲು ಕರೆದ ನಂತರ ಕರುವಿಗಾಗಿ ಬಿಡುವ  ಹಾಲನ್ನು ಇನಿತೂ ಬಿಡದೆ ಕುಡಿದ  ಆ ಎಳೆಗರುವಿನ  ನೆಗೆದಾಟ, ಕುಣಿದು ಕುಪ್ಪಳಿಸುವಾಟ ಓಡುವ  ಚಿನ್ನಾಟದ ಸೊಗಸನ್ನು ಕಂಡವರು ಮರೆಯಲು ಸಾಧ್ಯವೇ !  ಕರು  ಕುಡಿಯುವ ತನ್ನ ತಾಯಿ  ಹಾಲಲ್ಲೂ ಪಾಲು ಕೇಳುವ ನಾವು ನಮ್ಮ ಮಕ್ಕಳಿಗೆ ಸ್ತನ್ಯ ಪಾನ ಅತಿ ಶ್ರೇಷ್ಟವೆಂದೂ ಸಾರಿ ಸಾರಿ ಹೇಳುತ್ತೇವೆ !   ಅಮ್ಮನಿಗೆ ಶಕ್ತಿಗುಂದಿದ ಮೇಲೆ  ತೋಟದ ಕೆಲಸಗಾರರ ಕೊರತೆಯ ನಂತರ  ಎಮ್ಮೆಗಳ ಪಾಲನೆಗೆ ಪೂರ್ಣ ವಿರಾಮ ಬಿತ್ತು *********

ಲಹರಿ Read Post »

ಕಾವ್ಯಯಾನ

ಕಾವ್ಯಯಾನ

ಮತ್ತೆ ವಸಂತ ತೇಜಾವತಿ.ಹೆಚ್.ಡಿ ಮರಳ ಅಂಗಳದೊಳಗೆ ಬಾಳರಂಗೋಲಿ ಬಿಡಿಸುವುದು ಬೇಡ ಗೆಳೆಯ… ಶಿಲೆಗಳಲ್ಲಿ ಕೆತ್ತೋಣ ಶಾಶ್ವತವಾಗಿ… ! ಭುವಿಯಾಗಸ ಚಂದ್ರಾರ್ಕರ ಸಾಕ್ಷಿ ಸಾಕು.. ತೊಟ್ಟ ಬಟ್ಟೆ ಒಳಗಿನ ಕಾಯ ಕುಳಿತ ಜಾಗ ಕೊಚ್ಚಿಹೋಗುವ ಮುನ್ನ ಎದ್ದು ನಡೆಯೋಣ.. ಗತದ ಕಹಿನೆನಪುಗಳ ದೊರೆತಿರುವ ಒಲವಿನಲಿ ಮುಳುಗಿಸಿಬಿಡು! ಒಡಲ ದಹಿಸಿದ ವ್ಯರ್ಥ ಮಂದಾಗ್ನಿಯ ಉಗುಳಿಬಿಡು.. ಮತ್ತೆ ಸ್ವಚ್ಛಂದವಾಗಿ ನಾ ನಿನಗೆ, ನೀ ನನಗೆಂದು ಒಲವಸಾಗರದಲ್ಲಿ ಮತ್ಸ್ಯಗಳಾಗೋಣ.. ! ಬೇರೆಲ್ಲ ಬದಿಗಿರಲಿ ಮೊದಲು ನಮ್ಮ ತನವ ಮೆರೆಯೋಣ. . ಹಮ್ಮು ಬಿಮ್ಮುಗಳ ದಾಟೋಣ ಅನರ್ಥ ಮೌಢ್ಯಗಳ ತೂರೋಣ ಜಡ ಮನಗಳಲಿ ಕಾಂತಿಯ ದೀಪ ಬೆಳಗೋಣ ಕೊಳಕು ಮನಸುಗಳ ಘಮದ ಸುಮಗಳಲಿ ಕಂಪು ಪಸರಿಸೋಣ… ಮತ್ತೆ ಬಂದಿದೆ ವಸಂತ.. ! ಕೋಗಿಲೆಯಾಗಿ ಕೂಗೋಣ ಗೆಳೆಯ ನವಬದುಕಿಗೆ ನಾಂದಿ ಹಾಡೋಣ ******

ಕಾವ್ಯಯಾನ Read Post »

You cannot copy content of this page

Scroll to Top