ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಸ್ಮಿತಾ ಅಮೃತರಾಜ್ ಯಾವುದೋ ಒಂದು ಅದೃಶ್ಯ ಗಳಿಗೆಯಲ್ಲಿ ಹೇಗೋ ಬಂದು ನುಸುಳಿಕೊಂಡಿದೆಯಲ್ಲ ನನ್ನ_ನಿನ್ನ ನಡುವಲ್ಲೊಂದು ತೆಳು ಗೆರೆ. ಎಳೆದದ್ದು ನೀನಲ್ಲವೆಂದೆ ನಾನಂತೂ ಮೊದಲೇ ಅಲ್ಲ ಕಂಡೂ ಕಾಣದಂತಿರುವ ಎಳೆ ಸೂಕ್ಷ್ಮ ಗೆರೆ ಹಾಗಾದರೆ ಬಂದದ್ದಾದರೂ ಎಲ್ಲಿಂದ? ಇಂಚಿಂಚೇ ಬೆಳೆಯುತ್ತಿದೆ ಬಲಿಯುತ್ತಿದೆ. ಇಬ್ಬರಿಗೂ ಅದರ ಮೇಲೆ ಅಸಡ್ಡೆ ಎಳೆಯದ ಗೆರೆಯನ್ನು ಅಳಿಸುವುದೇತಕೆ? ಮಿತಿ ಮೀರಿ ಬೆಳೆದು ಗೆರೆಯೇ ಗೊಡೆಯಾದರೆ ನನಗೆ ನೀನು,ನಿನಗೆ ನಾನು ಕಾಣಿಸುವುದಾದರೂ ಎಂತು? ಗೆರೆಯ ಮೊನಚು ಈಗ ಎದೆಯವರೆಗೂ ಬಂದು ತಾಕಿ ಭಯ ಹುಟ್ಟಿಸುತ್ತಿದೆ. ಗೆರೆಗಳು ಒಂದನ್ನೊಂದು ಕೂಡಿಸುತ್ತದೆ. ಕೆಲವೊಮ್ಮೆ ಗುಣಿಸಿ,ಭಾಗಿಸಿ,ಕಳೆದು ಬರೇ ಶೇಷವನ್ನಷ್ಟೇ ಉಳಿಸಿಬಿಡುತ್ತದೆ ಕೂಡ… ಇಲ್ಲಿ ತೀರಾ ನಿಗಾ ಬೇಕು. ಬಿಡು, ಹೇಗೋ ಹುಟ್ಟಿಕೊಂಡಿದೆ ಸಧ್ಯ ಕಂಡಿತಲ್ಲ! ಬಿಗುಮಾನ ಬಿಟ್ಟು ಬಾ ಬೇಗ ಅಳಿಸಿ ಬಿಡೋಣ. ಆ ನಡುವಲ್ಲಿ ಕಂಡೂ ಕಾಣದಂತಿರುವ ಕನ್ನಡಿಯೊಂದ ತೂಗಿ ಬಿಡೋಣ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಾವು ಕಾರ್ಮಿಕರು ರಾಜು ದರ್ಗಾದವರ ಕಲ್ಲುಬಂಡೆ ತಲೆ ಮೇಲೆ ಹೊತ್ತು ಆಗಸದಗಲ ನಗುವ ಬಯಸಿ ಕಷ್ಟನಸ್ಟ ಪಕ್ಕಕ್ಕಿಟ್ಟು ಜೋಳಿಗೆಯಲ್ಲಿ ಕೂಸುಬಿಟ್ಟು ದೂರದ ಬೆಟ್ಟಕ್ಕೆ ಲಗ್ಗೆ ಜಡಿದು ಹಗಲುಗನಸು ಅದರೊಂದಿಗೆ ಬೆಸೆದು ಇರುಳು ಕಳೆದು, ಹಗಲು ಬರುವ ದಿಕ್ಕಿನಡಿಗೆ ಬಿಸಿಲುಬಾಗಿಲ ಬಡಿದು, ಗಟ-ಗಟ ಗಂಟಲ ಸಪ್ಪಳದಿ ಹೊಟ್ಟೆಯ ಹಸಿವನ್ನು ತಳಕು ಹಾಕಿದವರು ನಾವು ಕಾರ್ಮಿಕರು,ನಾವು ಕಾರ್ಮಿಕರು ಕೊಳಕುಬಟ್ಟೆ ಮೈಮೇಲೆ ಉಟ್ಟು ಮನದ ತುಂಬ ಪಿರುತಿ ಹೊಯ್ದು ಉಪ್ಪುನೀರು ಹರಿಯಲುಬಿಟ್ಟು ಎಚ್ಚತ್ತ ಕಣ್ಣು ಮಲಗದಂತೆ,ಬೆಚ್ಚನೆ ಕಣ್ಣೀರಿಗೆ ಕರಿಗಲ್ಲ ತೊಯ್ದು ಕಾರು,ಬಂಗ್ಲೆ ಆಸೆ ಗಂಟುಮಾಡಿ ಸುಟ್ಟುಬಿಟ್ಟು ಹೊತ್ತುಗಂಜಿ ಆಸೆಪಟ್ಟು ಕುದಿಯುವ ರೋಡಿಗೆ ಬರಿಗಾಲ ಎದೆಯ ಬಡಿದು ಹಳ್ಳಿಯಿಂದ ಮುಖ ತಿರುವಿ,ದುಡಿವ ಮೈಯ ಕೊಡವಿ, ಪಟ್ಟಣದ ಗರ್ಭವ ಸೇರಿ ಎತ್ತೆತ್ತರ ಕಟ್ಟಡದ ಅಂಗಾಲಲಿ ಬಗ್ಗಿ ನಡೆದು ಅಣಿಕಿಸಿಹೋಗುವ ಹೊತ್ತು ಕಳೆದವರು ನಾವು ಕಾರ್ಮಿಕರು, ನಾವು ಕಾರ್ಮಿಕರು *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಖಾಲಿಯಾಗುಳಿಸಿದವನು ಶಿವಲೀಲಾ ಹುಣಸಗಿ ಈಗೆಲ್ಲಿ ಮಾಯವಾದೆ ನಿನ್ನೊಡನಾಟದ ಬಿಸಿಯೊಳಗೆ ಬೀಸಿದಬ್ಬರದ ಬಿರುಗಾಳಿಯಲಿ ಸಿಲುಕಿ ಹೊಯ್ದಾಡುತಿಹೆ ದೇಹದ ಕಣಕಣದಲೂ ಬೆರೆತ ನೀನು ಬಯಸಿದಾಗ ಕೈ ಜಾರುವ ಮೀನು ಹೆಪ್ಪುಗಟ್ಟಿದ ನರಗಳಲಿ ನೆತ್ತರು ಹರಿಸಿ ನೀನಪ್ಪಿದಾಗ ಬಯಕೆ ಕಾಡಿತ್ತು ನಿನ್ನೊಳಗೊಂದಾಗುವ  ಕ್ಷಣದೆ  ಬಟಾಬಯಲು ಗಾಳಿಯ ಹುಯಿಲು ಮರುಚಣ ಮುತ್ತಿದ ಮೌನದ ಹೊರತಾಗೇನು ಉಳಿದಿಲ್ಲವಿಲ್ಲಿ ಕನಸಿಗೆ ಮುನ್ನುಡಿಯಾದವನು ಬೆನ್ನುಡಿಯಾಗಲಿಲ್ಲ ನನಸಿಗೆ ಇಲ್ಲೀಗ ಅದೇ ಕೋಣೆ ಅದೇ ಕನಸುಗಳು ಅದೇ ಹಾಸಿಗೆದಿಂಬುಗಳು ಮತ್ತೆ ಮರಳುವೆಯೇನು ಹಸಿವಾದಾಗ? ಎದೆಗೊರಗಿ ಮಲಗಿದವ ಹೇಳಿ ಹೋಗಬಾರದಿತ್ತೇನು ಪಿಸುಮಾತಿನಲಾದರೂ! *******

ಕಾವ್ಯಯಾನ Read Post »

ಅಂಕಣ ಸಂಗಾತಿ

ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಗಝಲ್ ಲೋಕ ಏಳನೇ ಅದ್ಯಾಯ ಕನ್ನಡ ಗಜಲ್ ಅಲ್ಲಿ ಉರ್ದು ಪದ ಬಳಕೆ ಕೆಲವೊಂದು ಗಜಲಗಳನ್ನು ಓದಿರುತ್ತೀರಿ… ಅವು ಹೇಗಿರುತ್ತವೆ ಎಂದರೆ ಮೊಹಬ್ಬತ್ತ, ಗೋರಿ, ಜಿಂದಾ,ಜಿಂದಗಿ, ಇಷ್ಕ, ಅವಾಜ್, ಪಿರ್, ಮುದ್ದಾಮ, ಖುದಾ, ಹಕಿಕತ್ ಮೊದಲಾದ ಉರ್ದು ಪದಗಳು ಆ ಕನ್ನಡದ ಗಜಲ್ ಅಲ್ಲಿ ಅಲ್ಲಲ್ಲಿ ನುಸುಳಿರುತ್ತವೆ. ಹೀಗೆ ಉರ್ದು ಮಿಶ್ರಿತ ಗಜಲ್ ಬರೀತಾ ಇದ್ದಿದ್ದು ಆರಂಭದಲ್ಲಿ ಒಬ್ಬರೇ ಖ್ಯಾತ ಗಜಲಕಾರರು. ಈಗ ನೋಡಿದರೆ ಅದೇ ರೀತಿಯ ಗಜಲ್ ಬರೆಯುತ್ತಿರುವವರು ನಮಗೆ ಹತ್ತು ಹನ್ನೆರಡು ಜನ ಸಿಗತಾರೆ, ಈ ಸಂಖ್ಯೆ ಇನ್ನೂ ಹೆಚ್ಚಾದರೂ ಸಹ ಹೆಚ್ಚಾಗಬಹುದು ಮತ್ತು ಅವರಲ್ಲಿ ಬಹುತೇಕರು ಇತ್ತೀಚೆಗೆ ಗಜಲ್ ಬರೆಯಲು ಆರಂಭಿಸಿದವರೇ ಆಗಿದ್ದಾರೆ. ಹಾಗಾದರೆ ಕನ್ನಡ ಗಜಲ್ ಅಲ್ಲಿ ಕೆಲವು ಉರ್ದು ಪದಗಳ ಬಳಕೆ ಸೂಕ್ತವೇ ಎಂಬುದು ತುಂಬಾ ಉದಯೋನ್ಮುಖ ಬರಹಗಾರರ ಪ್ರಶ್ನೆ ಆಗಿದೆ. ಈ ವಿಷಯದ ಉತ್ತರ ಮತ್ತು ಸಾಹಿತ್ಯದಲ್ಲಿ ಹೀಗೆ ಅನ್ಯಭಾಷೆಯ ಪದ ಬಳಕೆಯ ಅರಿವಿದ್ದೂ ನನಗೆ ಆ ಸ್ಪಷ್ಟವಾಗಿದ್ದರೂ ಇದನ್ನು ಹಲವಾರು ಖ್ಯಾತ ಗಜಲಕಾರರ ಬಳಿ ಪ್ರಶ್ನಿಸಿ ಚರ್ಚಿಸಿ ಅವರ ಅಭಿಪ್ರಾಯವನ್ನು ಸಹ ತಿಳಿದು ಸಂತಸವಾಯಿತು ಮತ್ತು ಅದೇ ಸಮಯಕ್ಕೆ ಇಂತಹ ಪದ ಬಳಕೆಯ ಬಗ್ಗೆಯೂ ಸಹ ತುಂಬಾ ಬರಹಗಾರರು ತಮ್ಮ ಬೇಜಾರನ್ನು ವ್ಯಕ್ತಪಡಿಸಿದರು. ಅದೊಂದು ವಿಭಿನ್ನ ಪ್ರಯೋಗವೇ? ಇದರ ವಿಷಯ ಇಷ್ಟೇ, ಇಂತಹ ಬೆಳವಣಿಗೆಗೆ ಕಾರಣ ಏನೆಂದರೆ ಮೊದಮೊದಲು ಹಾಗೆ ಗಜಲ್ ಬರೆಯುತ್ತಿದ್ದ ಆ ಖ್ಯಾತನಾಮರ ಗಜಲ್ ಓದುತ್ತಿದ್ದ ಬರಹಗಾರರು ಓದುತ್ತಾ ಹೋದಂತೆ ಅಂತಹ ಪದ ಬಳಕೆಯ ಕಡೆ ಶುರುವಾದ ಕುತೂಹಲ ಆಕರ್ಷಣೆಯಾಗಿ ಮಾರ್ಪಾಟ್ಟು ಏನೋ ಒಂಥರಾ ಚೆನ್ನಾಗಿ ಇದೆ ಅಲ್ವಾ, ವಿಭಿನ್ನ ಪ್ರಯೋಗ ಎಂದೆನಿಸಿ ನಾವು ಯಾಕೆ ಹಾಗೆ ಬರೆಯಬಾರದು ಅಂದುಕೊಂಡು ಬರೆಯತೊಡಗಿದ್ದಾರೆ. ಇನ್ನೂ ಕೆಲವರು ಹಾಗೆ ಉರ್ದು ಪದಗಳನ್ನು ಬಳಸುವುದೇ ಗಜಲ್ ಎಂದು ಮತ್ತು ಅದೇ ಅದರ ಲಕ್ಷಣ, ಹಾಗೆ ಬರೆಯುವುದೇ ಶ್ರೇಷ್ಠ ಎನ್ನುವ ಭ್ರಮೆಗೊಳಗಾಗಿದ್ದಾರೆ. ಇದಕ್ಕಾಗಿ ಹಿಂದಿ, ಉರ್ದು ಬಾರದಿದ್ದರೂ ಸಹ ಎಲ್ಲೆಲ್ಲಿಂದಲೋ ಯಾವುದೋ ಪದಗಳನ್ನು ಹೆಕ್ಕಿ ತಂದು ಅಲ್ಲಿ ಒಂದು ಕನ್ನಡ ಪದದ ಬದಲಾಗಿ ಇದನ್ನು ತೂರಿಸಿ ಬಿಡುತ್ತಾರೆ. ಹೀಗೆ ಮಾಡಿದ ತಕ್ಷಣ ಆ ಗಜಲ್ ತನ್ನ ಕಾವ್ಯಾತ್ಮಕ ಗುಣಗಳನ್ನು ಕಳೆದುಕೊಳ್ಳುತ್ತದೆ ಎನ್ನುವುದೇ ಅವರಿಗೆ ಗೊತ್ತಿರುವುದಿಲ್ಲ. ಇಂತಹ ಪದಗಳನ್ನು ತೂರಿಸಿರುವುದಲ್ಲದೆ ಆ ಉರ್ದು ಪದಗಳ ಅರ್ಥವನ್ನು ಗಜಲನ ಕೊನೆಯಲ್ಲಿ ಕೆಲವರು ನೀಡಿರುತ್ತಾರೆ. ಅಲ್ಲಿಗೆ ಈ ವಿಷಯ ಸ್ಪಷ್ಟವಾಗುತ್ತೆ ಶಿವಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ ಅಭಾಸವಾಗುವ ಅಸಂಗತ ಪದಗಳನ್ನು ತುರುಕಿಸಲಾಗಿದೆ ಎನ್ನುವುದೇ ಅಲ್ಲಿ ಪರೋಕ್ಷ ವಿವರಣೆ ಆಗಿರುತ್ತದೆ. ಹಾಗಿದ್ದರೆ ಈ ತರಹ ಬಳಸುವುದು ಸರಿಯಾದ ಕ್ರಮ ಅಲ್ಲವೇ ಎನ್ನುವ ನಿಮ್ಮ ಪ್ರಶ್ನೆಗೆ ಹೌದು, ಅದು ಖಂಡಿತ ಸಲ್ಲದು ಎನ್ನುವುದೇ ಸಾಹಿತ್ಯದ ಅಂತಿಮ ಉತ್ತರವಾಗಿರುತ್ತದೆ. ಯಾವುದೇ ಭಾಷೆಯ ಯಾವುದೇ ಪ್ರಕಾರದ ಸಾಹಿತ್ಯವನ್ನು ತಗೊಳ್ಳಿ, ಅದು ಸದಾ ತನ್ನ ಭಾಷೆಗೆ ನಿಷ್ಠವಾಗಿರುತ್ತದೆ. ಉರ್ದು ಖವ್ವಾಲಿಗಳಲ್ಲಿ ಇಂಗ್ಲೀಷ್ ಪದಗಳು ಕಂಡು ಬರತಾವಾ, ಖಂಡಿತ ಇಲ್ಲ… ಅಂತೆಯೇ ಹಿಂದಿ ಗಜಲ್ ಅಲ್ಲಿ ತೆಲುಗು ಪದಗಳು ಬರತಾವಾ, ಸಾಧ್ಯವೇ ಇಲ್ಲ… ತಮಿಳು ಕಾವ್ಯದಲ್ಲಿ ಮರಾಠಿ ಪದಗಳು ಸ್ಥಳ ಆಕ್ರಮಿಸಿಕೊಳ್ಳುತ್ತಾವಾ???? ಖಂಡಿತ ಇವು ಯಾವುವು ಎಂದಿಗೂ ಸಾಧ್ಯ ಇಲ್ಲದ ಅಂಶಗಳು. ಯಾವುದೇ ಭಾಷೆಯ ಯಾವುದೇ ಸಾಹಿತ್ಯ ಪ್ರಕಾರವು ಇದನ್ನು ಒಪ್ಪುವುದಿಲ್ಲ. ಒಂದು ವೇಳೆ ಹಾಗಾದರೆ ಅದು ಆ ಸಾಹಿತ್ಯಕ್ಕೆ ಕೊಂಚ ಧಕ್ಕೆಯಾಗದಂತೆ ಮತ್ತು ಆ ಮೂಲಕ ತಡಬಡಾಯಿಸಿದಂತೆ ಅರ್ಥ. ಕಮರ್ಷಿಯಲ್ ಆದ ಚಿತ್ರ ಗೀತೆಗಳಲ್ಲಿ ಯಾವಾಗಲೋ ಎಂದೋ ಯಾವುದರಲ್ಲೋ ಒಮ್ಮೆ ಪ್ರಾಸಕ್ಕೋಸರವೋ ಅಥವಾ ಜನಪ್ರಿಯ ನುಡಿಗಟ್ಟು ಎಂತಲೋ ಬಳಸಬಹುದು. ಅದು ವಾಣಿಜ್ಯತ್ಮಾಕವಾಗಿ ಆ ಸೀಮಿತ ಹಾಡಿನ ಮಟ್ಟಿಗೆ ಮಾತ್ರ ಸರಿ ಎಂದರೂ ಅಷ್ಟು ತಕ್ಕುದಾದಲ್ಲ ಎಂದೇ ಹೇಳಬಹುದು ಪರಿಣಾಮಕಾರಿ ಬಳಕೆ ಯಾವುದು? ಇನ್ನೂ ಹೀಗೆ ಉರ್ದು ಬಳಕೆಯ ಕುರಿತು ಹೇಳುವುದಾದರೆ ಮೊಘಲರ ಕಾಲಘಟ್ಟದಲ್ಲಿ ಅವರ ಆಳ್ವಿಕೆಯ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಉರ್ದು ಜನ ಸಾಮಾನ್ಯರ ಭಾಷೆಯಾಗಿತ್ತೇನೋ ಎನ್ನುವುದು ಸರಿ ಅಷ್ಟೇ. ಆದರೆ ಇಂದು ಉರ್ದು ಎನ್ನುವುದು ಯಾವುದೋ ಪ್ರದೇಶದ ಅಥವಾ ಯಾವುದೋ ಊರಿನ ಹಾಗೂ ಹತ್ತು ಹಲವಾರು ಸಾಮಾನ್ಯ ಜನರು ಆಡುವ ಭಾಷೆಯಾಗಿ ಉಳಿದಿಲ್ಲ. ಅದು ಇಂದು ಒಂದು ಸಮುದಾಯದ ಜನರು ಮಾತ್ರ ಆಡುವ ಭಾಷೆಯಾಗಿ ಮಾತ್ರ ಭಾರತದಲ್ಲಿ ಪ್ರಚಲಿತದಲ್ಲಿದೆ. ಆದ್ದರಿಂದ ಹೀಗೆ ಒಂದು ಪಂಥ, ಮತದ ಭಾಷೆಯನ್ನು ಇನ್ನೊಂದು ಭಾಷೆಯಲ್ಲಿ ಬಳಸುವುದರಿಂದ ಅದನ್ನು ನೋಡುವ ದೃಷ್ಟಿಕೋನವು ಸಹ ಸಾಕಷ್ಟು ಜನರಲ್ಲಿ ಬದಲಾಗುತ್ತದೆ ಮತ್ತು ತನ್ನ ವಿಶಾಲ ವ್ಯಾಪ್ತಿಯನ್ನು ಮೀರಿ ಧೀರ್ಘವಧಿಯಲ್ಲಿ ಸಂಕುಚಿತಗೊಳ್ಳುತ್ತಾ ಹೋಗುತ್ತದೆ. ಸಾಹಿತ್ಯಕ್ಕೆ ಇಂತಹ ಬೇಧ ಎಂದೂ ಸಹ ಸಲ್ಲದು. ಅದಕ್ಕೆ ಅಂತಹ ತಡೆಗೋಡೆ ಹಾಕಕೂಡದು. ಆದ್ದರಿಂದ ಯಾರೋ ಬರೆದ ಹಾಗೆ ಇನ್ನೂ ಯಾರೋ ಅದನ್ನು ಹಿಂದೂ ಮುಂದೂ ನೋಡದೆ ಅನುಸರಿಸುವುದು ತರವಲ್ಲ. ಇಂತಹ ಮಿಶ್ರಿತ ಬರಹಗಳು ಆರಂಭದಲ್ಲಿ ಒಂದಿಷ್ಟು ಪರಿಣಾಮಕಾರಿ ಎನಿಸುವುದಾದರೂ ಅದರ ಪ್ರಭಾವ ಓದುಗರ ಮೇಲೆ ಬಹು ಬೇಗ ಕುಂದಿ ಹೋಗಿ ಬಿಡುತ್ತದೆ. ಭಾಷೆ ಎನ್ನುವ ಸಂವಹನ ಅದರ ವೈಶಾಲ್ಯತೆಯ ಮನೋಭಾವದಲ್ಲಿ ಉತ್ತಮ ಬಳಕೆ, ವಿಧಾನ ಮತ್ತು ತಂತ್ರಗಳನ್ನು ಆ ಒಂದು ಸಾಹಿತ್ಯದಲ್ಲಿ ಅಳವಡಿಸಿಕೊಂಡಿದ್ದರೆ ಅದು ಮನಸ್ಸು ಮುಟ್ಟಲು ಸರಳವಾಗಿರುತ್ತದೆ. ಭಾಷೆಯ ಚತುರತೆಯೊಂದಿಗೆ ಭಾವನೆಗಳ ಚಕಮಕಿಯಾದಾಗಲೇ ಅದರ ಹರಿವು ಸಹ ಸರಾಗವಾಗಿ ಮುಂದುವರಿಯಲು ಅನುಕೂಲ. ಸಾಹಿತ್ಯದ ಧ್ವನಿ ಕೇವಲ ಕನ್ನಡ ಭಾಷೆ ಅಂತಹ ಏನಲ್ಲ, ಅದು ಯಾವುದೇ ಭಾಷೆಯಾದರೂ ಸರಿ ಅದು ಸಾಹಿತ್ಯದ ಧ್ವನಿಯನ್ನು ಕ್ಷೀಣಿಸುವ, ಮೂಲ ಭಾಷೆಯನ್ನೆ ಕುಗ್ಗಿಸುವ ಬರಹವಾಗಿರಬಾರದು. ಒಂದು ಭಾಷೆ ಕೇವಲ ಅದು ಸಂವಹನ ಮಾಧ್ಯಮ ಮಾತ್ರ ಆಗಿರುವುದಿಲ್ಲ. ಪ್ರತಿ ಭಾಷೆಯು ತನ್ನ ಭಾಷೆಯಲ್ಲಿ ತನ್ನದೇ ಆದ ನೆಲ, ಜಲ, ಸಂಸ್ಕೃತಿ, ಸೊಗಡು, ಆಚರಣೆ, ಸಾಮಾಜಿಕ ಶಿಷ್ಟಾಚಾರ, ಕಟ್ಟುಪಾಡುಗಳು, ಆಚಾರ ವಿಚಾರ, ಆಹಾರ, ಜೀವನ ಕ್ರಮ, ಮಾನವೀಯ ಮೌಲ್ಯಗಳೂ ಇತರೆ ಮೊದಲಾದ ಬಹುಮುಖ್ಯ ಲಕ್ಷಣಗಳನ್ನು ಒಳಗೊಂಡು ಸಂಪದ್ಬರಿತವಾಗಿರುತ್ತದೆ. ಜೊತೆಗೆ ಒಂದನ್ನೊಂದು ಅವಲಂಬಿಸಿ ಪ್ರತಿಯೊಂದು ಅದರೊಂದಿಗೆ ತಳುಕು ಹಾಕಿಕೊಂಡು ರಾಗ ತಾಳ ಮೇಳಗಳು ಕೂಡಿಕೊಂಡು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಸಂಪರ್ಕ ಸೇತುವೆಯು ಆಗಿರುತ್ತದೆ. ಆದ್ದರಿಂದ ಆಕ್ರಮಣ ಕನ್ನಡದಂತಹ ವಿಶಾಲ ನುಡಿಗೆ ಮಾರಕವಲ್ಲದಿದ್ದರೂ ಇಲ್ಲಿನ ಸೊಗಡು ಅಂತಹ ಅನ್ಯಭಾಷೆಗಳಿಗೆ ಕಾಣಲು ಸಾಧ್ಯವಿರದ ಕಾರಣ ನಮ್ಮದು ಎನ್ನುವುದು ಸಹಜವಾಗಿಯೇ ಅರಗಿಸಿಕೊಳ್ಳಲು ಆಗಲಾರದಂತದ್ದು. ತಾಯ್ನಾಡಿಯ ಪ್ರೇರಣೆಯೇ ಬೇರೆ ತರಹ ಇರುತ್ತೆ. ಇತರೆ ಯಾವುದೇ ನುಡಿಯ ವರ್ತನೆ ಎಂದಿಗೂ ಅದರ ಮುಂದೆ ಕಳೆಗುಂದುವ ಅಂಶವೇ ಆಗಿದೆ. ಅಂತೆಯೇ ಗಜಲನ ಅಭಿವ್ಯಕ್ತಿ ಸೂಕ್ಷ್ಮ ಸಂವೇದನೆಶೀಲತೆ ಮತ್ತು ಸೃಜನಾತ್ಮಕ ಲಕ್ಷಣಗಳನ್ನು ಹೊಂದಲು ಕನ್ನಡ ಗಜಲಗಳ ಪ್ರತಿ ಪದವೂ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು ಒಂದು ಪದಕ್ಕೆ ಅದೇ ಅರ್ಥವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಟ್ಟಿ ಕೊಡಬಲ್ಲಂತಹ ಐವತ್ತು ಬೇರೆ ಬೇರೆ ಪದಗಳು ಕನ್ನಡದಲ್ಲಿ ಇವೆ. ಇಷ್ಟು ವಿಸ್ತಾರವಾದ ಶಬ್ದ ಸಂಪತ್ತು ಇನ್ನೊಂದು ಭಾಷೆಯಲ್ಲಿ ಖಂಡಿತವಾಗಿಯೂ ಕಂಡು ಬರುವುದಿಲ್ಲ. ಆದ್ದರಿಂದ ಅಂತಹ ಅನಿವಾರ್ಯವೇ ಉದ್ಭವ ಆಗದ ಕಾರಣ ಕನ್ನಡ ಗಜಲಗಳು ಕನ್ನಡ ಗಜಲ್ ಎಂದೆನಿಸಿಕೊಳ್ಳಲು ಅದರ ಪ್ರತಿ ಪದವೂ ಸಹ ಕನ್ನಡಮಯವೇ ಆಗಿರಬೇಕು. ******** ಬಸವರಾಜ ಕಾಸೆ

ಗಝಲ್ ಲೋಕ Read Post »

ಕಥಾಗುಚ್ಛ

ಕಥಾಯಾನ

ಮಧುವಂತಿ ಅಂಜನಾ ಹೆಗಡೆ “ನೀನ್ಯಾಕೆ ಮದ್ವೆ ಆದೆ?” ರಜನಿ ಅವಿನಾಶನನ್ನು ಭೇಟಿಯಾದಾಗ ಕೇಳಿದ ಮೊದಲನೇ ಪ್ರಶ್ನೆ ಇದು. ಬೆಂಗಳೂರಿನ ಲಾ ಕಾಲೇಜೊಂದರ ಉಪನ್ಯಾಸಕ ಅವಿನಾಶ ಅವನ ಅಸಂಬದ್ಧ ಮಾತುಕತೆಗಳಿಂದ, ನಡೆವಳಿಕೆಯಿಂದ ರಜನಿಗೆ ಉಪನ್ಯಾಸಕ ಅಂತ ಅನ್ನಿಸುತ್ತಲೇ ಇರಲಿಲ್ಲ. ವಾರದ ಐದೂ ದಿನ ಬೆಳಗಿನ ಕ್ಲಾಸು ಮುಗಿಸಿ, ಊಟ ಮಾಡಿ ಮಲಗಿ ಎದ್ದವ ರಜನಿಗೊಂದು ಫೋನ್ ಮಾಡುವುದು ಅವಿನಾಶನ ದಿನಚರಿಗಳಲ್ಲೊಂದು. ಇವತ್ತು ಕ್ಲಾಸಲ್ಲಿ ಹಾಗಾಯ್ತು ಹೀಗಾಯ್ತು , ಹುಡುಗಿಯೊಬ್ಬಳು ಪಾಠ ಮಾಡುವಾಗ ನನ್ನನ್ನೇ ನೋಡ್ತಾ ಇದ್ಲು ಅಂತೆಲ್ಲ ಅವಿನಾಶ ಹೇಳುತ್ತಿದ್ದರೆ, “ಕ್ಲಾಸಿನಲ್ಲಿ ಪಾಠ ಮಾಡುವವನನ್ನ ನೋಡುವುದು ಕ್ಲಾಸ್ ರೂಮಿನ ನಿಯಮ ಮಾರಾಯ; ಅದಕ್ಕೆ ಲ್ಯಾಂಡ್ ಮಾರ್ಕ್ ಕೇಸುಗಳು ಬೇಕಿಲ್ಲ” ಎಂದು ಅವನ ಗರಿಗೆದರಿದ ಕನಸಿಗೆ ಪೂರ್ಣವಿರಾಮ ನೀಡುವುದು ರಜನಿಯ ದಿನಚರಿಯ ಭಾಗವಾಗಿತ್ತು ಕೂಡಾ. ಫ್ಯಾಮಿಲಿ ಲಾ ಅರೆದು ಕುಡಿದವನ ಹಾಗೆ ಮಾತನಾಡುತ್ತಿದ್ದ ಅವಿನಾಶನಿಗೆ ಕುಟುಂಬ ವ್ಯವಸ್ಥೆಯ ಕುರಿತಾಗಲೀ ಅಥವಾ ತಾನು ಪೂಜಿಸುವ ದೇವರ ಮೇಲೇ ಆಗಲಿ ಜಾಸ್ತಿ ಅಭಿಮಾನ-ಗೌರವಗಳು ಇರುವಂತೆ ರಜನಿಗೆ ಯಾವತ್ತೂ ಅನ್ನಿಸದೇ ಇರಲಿಕ್ಕೆ ಕಾರಣ ಅವನ ಮಾತನಾಡುವ ದಾಟಿಯೂ ಇರಬಹುದು. ಅವಳ ಮಾತಿನಲ್ಲಿ ಸ್ವಲ್ಪ ಕುತೂಹಲ ಕಾಣಿಸಿದರೂ “ನೀನೇನಕ್ಕೆ ಎಲ್ಲವನ್ನೂ ಕೆದಕ್ತೀಯಾ, ಹೇಳಿದಷ್ಟು ಅರ್ಥ ಮಾಡಿಕೊಂಡರೆ ಬೇಕಾದಷ್ಟಾಯ್ತು” ಎಂದು ಪ್ರತಿಕ್ರಿಯಿಸುತ್ತಿದ್ದ ಅವಿನಾಶನ ಆಕ್ರಮಣಕಾರಿ ಮನಸ್ಥಿತಿ ರಜನಿಗೆ ಅರ್ಥವೇ ಆಗದೇ ಒಂದು ವರ್ಷ ಕಳೆದಿತ್ತು ಅವರ ಸ್ನೇಹಕ್ಕೆ. ಅವಿನಾಶ ಫೇಸ್ ಬುಕ್ ನಲ್ಲಿ ಮದುವೆಯ ಕುರಿತು ಬರೆದ ಲೇಖನವೊಂದು ಯಾವುದೋ ಗ್ರೂಪ್ ನಲ್ಲಿ ಹರಿದಾಡಿದಾಗ “ನಾವ್ಯಾಕೆ ಕಡುಸಂಪ್ರದಾಯದ ಮನಸ್ಥಿತಿಯಿಂದ ಹೊರಗೆ ಬಂದು ಸಮಕಾಲೀನ ದೃಷ್ಟಿಕೋನದಲ್ಲಿ ಮದುವೆ-ಕುಟುಂಬಗಳ ಬಗ್ಗೆ ಚರ್ಚಿಸಬಾರದು?” ಎಂದು ರಜನಿ ಪ್ರತಿಕ್ರಿಯಿಸಿದ್ದು ಅವಿನಾಶನಿಗೆ ಆಕ್ಷೇಪಾರ್ಹ ಎನ್ನಿಸಿದ್ದು ಇನ್ಯಾರದೋ ಮುಖಾಂತರ ಗೊತ್ತಾಗಿತ್ತು ರಜನಿಗೆ. ಆಗಲೇ ರಜನಿ ಅವಿನಾಶನ ಫೇಸ್ ಬುಕ್ ಪ್ರೊಫೈಲ್ ತೆಗೆದು ನೋಡಿದ್ದು. ಅವನ ಓದಿಗೂ, ಮಾಡುವ ಕೆಲಸಕ್ಕೂ, ಆಸಕ್ತಿ-ಅಭಿರುಚಿಗಳಿಗೂ, ಜೀವನದ ಸ್ಥಿತಿಗತಿಗಳಿಗೂ ಹೊಂದಾಣಿಕೆಯೇ ಆಗದಂತೆ ಚಲ್ಲಾಪಿಲ್ಲಿಯಾಗಿ ಪ್ರೊಫೈಲ್ ತುಂಬಾ ಬಿದ್ದಿದ್ದ ಫೋಟೋಗಳು, ಅಪ್ ಡೇಟ್ ಗಳು ಅವನನ್ನೊಬ್ಬ ವಿಲಕ್ಷಣ ಜೀವಿಯಂತೆ ಚಿತ್ರಿಸುವಲ್ಲಿ ಸಫಲವಾಗಿದ್ದವು. ಅನಾಸಕ್ತಿಯಿಂದ ಕಣ್ಣಾಡಿಸುತ್ತಿದ್ದವಳಿಗೆ ಗಮನ ಸೆಳೆದದ್ದು ಇವೆಲ್ಲವುಗಳ ಮಧ್ಯೆ ಶೇರ್ ಆಗಿದ್ದ ಒಂದು ಭೈರವಿ ಭಜನೆ. ಹತ್ತು ನಿಮಿಷದ ವಿಡಿಯೋ ನೋಡಿದವಳು, ಮೆಸೆಂಜರ್ ನಲ್ಲಿ ಅವಿನಾಶ್ ರಾವ್ ಎಂದು ಹುಡುಕಿ “ನಿಮ್ಮ ಭೈರವಿಯ ವಿಡಿಯೋ ತುಂಬಾ ಇಷ್ಟವಾಯ್ತು; ನಾನು ಮದುವೆಯ ಬಗ್ಗೆ ಪ್ರತಿಕ್ರಿಯಿಸಿದ್ದು ನಿಮಗೆ ಇಷ್ಟವಾದಂತಿಲ್ಲ ಕ್ಷಮಿಸಿ” ಎಂದು ಮೆಸೇಜ್ ಕಳಿಸಿ, ಜೊತೆಗೆ ರಿಕ್ವೆಸ್ಟ್ ಕಳಿಸಿ ಹಾಸಿಗೆಯ ಮೇಲೆ ಅಡ್ಡಾದವಳಿಗೆ ಎಚ್ಚರವಾಗಿದ್ದು ಅಮ್ಮನ ಫೋನ್ ಬಂದಾಗ. “ಇವತ್ತು ಮಾರುತಿ ದೇವಸ್ಥಾನದಲ್ಲಿ ನಿನ್ನ ಹೆಸರಿನ ಪೂಜೆ ಇತ್ತು; ಮೂವತ್ತು ವರ್ಷವಾಯಿತು ಕಣಮ್ಮ ನೀನು ಹುಟ್ಟಿ, ಇನ್ನಾದರೂ ಮದುವೆ ಬಗ್ಗೆ ಯೋಚನೆ ಮಾಡಬಾರದಾ?” ಎಂದಳು ಅಮ್ಮ. ಅಮ್ಮ ಕಳೆದ ವರ್ಷ ವೈಶಾಖ ಪಾಡ್ಯಕ್ಕೂ ‘ನಿನಗೆ ಇಪ್ಪತ್ತೊಂಬತ್ತು ತುಂಬಿತು ಇನ್ನಾದರೂ ಮದುವೆ ಆಗು’ ಅಂದಿದ್ದು ನೆನಪಿದೆ ರಜನಿಗೆ. ಓದು ಮುಗಿದ ದಿನದಿಂದ “ಇನ್ನು ರಜನಿಗೆ ಒಂದು ಒಳ್ಳೇ ಗಂಡು ಹುಡುಕಿ ಮದುವೆ ಮಾಡಿದರೆ ಜವಾಬ್ದಾರಿ ಕಳೀತು” ಅಂತ ಹೇಳುತ್ತಲೇ ಬಂದಿರುವ ಅಮ್ಮನಿಗೆ, “ನಾನೆಂದರೆ ಯಾಕೆ ಜವಾಬ್ದಾರಿ ನಿನಗೆ, ಪ್ರೀತಿ ಎಲ್ಲಿಗೆ ಹೋಯಿತು?” ಎಂದು ಕೇಳಿಬಿಡುವ ಮನಸ್ಸು ರಜನಿಗೆ. ಚಿಕ್ಕವಳಿದ್ದಾಗಲೇ ಅಪ್ಪನ ಕಣ್ಣು ತಪ್ಪಿಸಿ ರೊಮ್ಯಾಂಟಿಕ್ ಕಾದಂಬರಿಗಳನ್ನು ಓದುತ್ತಿದ್ದ ಅವಳಿಗೆ ಮದುವೆ, ಮಕ್ಕಳು, ಸಂಸಾರ ಎಲ್ಲ ಸಲೀಸು ಎಂಬ ಭ್ರಮೆ ತೀರಿದ್ದು ಕೆಲಸಕ್ಕೆ ಸೇರಿದಾಗಲೇ. ಹೊಸ ದಿನಕ್ಕೊಂದು ಹೊಸ ಸುಂದರ ಅನುಭೂತಿ ದೊರಕಿಸುತ್ತಿದ್ದ ಬದುಕು ಅಕ್ಕಪಕ್ಕದ ಬದುಕುಗಳ ಅನುಭವಗಳಿಗೆ ದಕ್ಕುತ್ತ ಜಡವಾಗುತ್ತ ಹೋಗಿದ್ದಕ್ಕೆ ಅವಳಿಗೆ ಬೇಸರವಿದೆ. ಎಂಟು ವರ್ಷಗಳಿಂದ ಅಮ್ಮನ ಅದೇ ಜವಾಬ್ದಾರಿಯ ಮಾತು ಕೇಳುತ್ತಾ ಬಂದಿರುವ ರಜನಿಗೆ ಈಗೀಗ ಸಂಬಂಧಗಳೆಲ್ಲವೂ ಬಣ್ಣ ಬದಲಾಯಿಸಿ, ಜವಾಬ್ದಾರಿಯಾಗಿ ರೂಪವನ್ನೂ ಬದಲಾಯಿಸಿ ಬರಿದಾಗುತ್ತವೆ ಎನ್ನುವ ಯೋಚನೆ ಭಯ ಹುಟ್ಟಿಸುತ್ತದೆ. ನನಗೆ ಮದುವೆ ಆಗುವ ಯಾವುದೇ ಉದ್ದೇಶವಿಲ್ಲ ಎಂದು ಅಮ್ಮನಿಗೆ ಹೇಳಿಬಿಡಬೇಕು ಅಂತ ಯೋಚಿಸುತ್ತಾ ಕುಳಿತಿದ್ದ ಒಂದು ಸಂಜೆ ಅವಿನಾಶನ ಮೆಸೇಜು, “ಬಿಡುವಿದ್ದಾಗ ಫೋನ್ ಮಾಡಿ, ಮಾತನಾಡೋಣ” ಎಂದು ನಂಬರ್ ಕೊಟ್ಟಿದ್ದ. ಹಾಗೆ ಶುರುವಾದ ಅವರಿಬ್ಬರ ಸ್ನೇಹ ವಿಚಿತ್ರವಾಗಿಯೇ ಓಡುತ್ತಿತ್ತು. ಪ್ರೀತಿಯ ಮಾತುಗಳಿಗೆಲ್ಲ ವ್ಯಂಗ್ಯವಾಗಿಯೋ, ಕುಹಕದಿಂದಲೋ ಪ್ರತಿಕ್ರಿಯಿಸುತ್ತಿದ್ದ ಅವಿನಾಶ ಯಾವುದೋ ನಿರಾಶೆ-ತಲ್ಲಣಗಳ ಸ್ಥಿತ್ಯಂತರಕ್ಕಾಗಿ ಹೋರಾಡುತ್ತಿರುವಂತೆ ಭಾಸವಾಗುತ್ತಿದ್ದ. “ಸಾಕು ಎನ್ನಿಸುವಷ್ಟು ಸಿಗದೇ ಇರುವುದರ ಮೇಲೆ ಮನುಷ್ಯನಿಗೆ ಸಾಯುವವರೆಗೂ ಆಸೆ ಇರುತ್ತೆ ಕಣೇ” ಎನ್ನುತ್ತಾ ಎಳೆಪ್ರಾಯದ ಹುಡುಗಿಯರ ಎದೆಯ ಬಗ್ಗೆ ಮಾತಾಡುತ್ತಿದ್ದ. ವಿದ್ಯಾರ್ಥಿನಿಯೊಬ್ಬಳು ಯಾವುದೋ ಕೇಸ್ ಬಗ್ಗೆ ಮಾಹಿತಿ ಬೇಕೆಂದು ತನ್ನ ಡೆಸ್ಕಿಗೆ ಬಂದಾಗ ತಾನವಳ ಎದೆ ನೋಡಿದ್ದು, ಅವಳಿಗೆ ಅದು ಗೊತ್ತಾಗಿ “ಏನ್ಸಾರ್, ಯಾವ ಬಣ್ಣದ ಬ್ರಾ ಹಾಕಿದೀನಿ ಅಂತ ನೋಡ್ತಾ ಇದೀರಾ ಅಂತ ಕಣ್ಣು ಮಿಟಕಿಸಿದಳು; ಈಗಿನ ಕಾಲದ ಹುಡುಗೀರು ತುಂಬಾ ಫಾಸ್ಟ್” ಅಂತೆಲ್ಲ ಕಿರಿಕಿರಿಯಾಗುವಂತೆ ಮಾತನಾಡುವಾಗ ಇವನಿಗೆ ಕೌನ್ಸೆಲಿಂಗ್ ಅಗತ್ಯವಿದೆ ಎನ್ನಿಸುತ್ತಿತ್ತು ರಜನಿಗೆ. ಮದುವೆಯಾಗಿ ಇಬ್ಬರು ಮಕ್ಕಳಿರುವ ಐವತ್ತು ವರುಷದ ಗಂಡಸೊಬ್ಬ ಹುಡುಗಿಯರ ಎದೆ, ಬ್ರಾ ಬಗ್ಗೆ ಮಾತನಾಡುವಾಗ ಮದುವೆಯ ಬಗ್ಗೆ ಇರುವ ಆಸಕ್ತಿ ಗೌರವಗಳೆಲ್ಲ ಇನ್ನಷ್ಟು ಕಡಿಮೆಯಾಗುತ್ತಿದ್ದವು. ಒಂದಿನ ಕ್ಲಾಸ್ ಮುಗಿಸಿದವನೇ ಫೋನ್ ಮಾಡಿ, “ಈ ವೀಕೆಂಡ್ ಚೌಡಯ್ಯದಲ್ಲೊಂದು ಒಳ್ಳೆ ಸಂಗೀತ ಕಾರ್ಯಕ್ರಮ ಇದೆ, ಎರಡು ಪಾಸ್ ಇದೆ; ಎಂಟಿಆರ್ ನಲ್ಲಿ ನಿಂಜೊತೆ ಊಟ ಮಾಡಬೇಕು ನಾನು; ಹೇಳೋದು ಮರೆತಿದ್ದೆ, ಆವತ್ತೊಂದು ವಾಟ್ಸಾಪ್ ಸ್ಟೇಟಸ್ ಹಾಕಿದ್ಯಲ್ಲ ಹಳದಿಸೀರೇದು, ಆ ಸೀರೆ ಉಟ್ಕೊಂಡು ಬಾ ಚೆನ್ನಾಗಿ ಒಪ್ಪುತ್ತೆ ನಿಂಗೆ; ಆ ಬಳೆ ಕೂಡಾ ಚೆನ್ನಾಗಿದೆ ಕಣೇ, ನೀ ಬಳೆ ಹಾಕಿದ್ದನ್ನು ನೋಡಿಯೇ ಇರಲಿಲ್ಲ ನಾನು” ಎಂದ. ಪರಿಚಯವಾಗಿ ಒಂದು ವರ್ಷವಾಗಿದ್ದರೂ ಒಮ್ಮೆಯೂ ಭೇಟಿಯಾಗಲು ಆಸಕ್ತಿ ತೋರಿಸದಿದ್ದ ಅವಿನಾಶ ಇದ್ದಕ್ಕಿದ್ದಂತೆ ಸಂಗೀತ ಕಾರ್ಯಕ್ರಮಕ್ಕೆ ಹೋಗೋಣ ಎಂದಿದ್ದು, ನಿಂಜೊತೆ ಊಟ ಮಾಡಬೇಕು ಎಂದಿದ್ದು, ತನ್ನ ಬಗ್ಗೆ ಯಾವತ್ತೂ ಒಳ್ಳೆಯ ಮಾತುಗಳನ್ನೇ ಆಡದ ಮನುಷ್ಯ ಸೀರೆ, ಬಳೆಗಳ ಬಗ್ಗೆ ಮಾತಾಡಿದ್ದು! ತಾನು ಗಮನಿಸಿಯೇ ಇರದ ಅವಿನಾಶನ ಇನ್ನೊಂದು ಮುಖವೆನ್ನಿಸಿತು ರಜನಿಗೆ. ಅಷ್ಟಕ್ಕೂ ನಾವು ಬದುಕಿನಲ್ಲಿ ಕಳೆದುಕೊಳ್ಳುವುದು ಗಮನಕ್ಕೆ ಬಾರದವುಗಳನ್ನೇ ಅಲ್ಲವೇ! ಫೋಟೋಗಳಲ್ಲಿ, ಮಾತುಗಳಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ಸುಂದರವಾಗಿದ್ದಾನೆ ಅನ್ನಿಸಿತು ಭೇಟಿಯಾದಾಗ. ಅಲ್ಲಲ್ಲಿ ಬೆಳ್ಳಗಾದ ಗಡ್ಡದ ಮೇಲೆ ಕೈಯಾಡಿಸುತ್ತ ವಿಶ್ ಮಾಡಿದವನ ಕಣ್ಣುಗಳು ಹೊಳೆದವು. “ಹೋಗ್ಲಿ, ಹೆಂಡತಿ ಮಕ್ಕಳ ಫೋಟೋವನ್ನಾದರೂ ತೋರಿಸು ಮಾರಾಯ” ಎಂದಿದ್ದಕ್ಕೆ, ಮುದ್ದಾಗಿ ನಗುತ್ತ “ಯಾಕೆ ನನ್ನ ಮದ್ವೆ ಹಿಂದೆ ಬಿದ್ದಿದೀಯಾ, ನೀ ಯಾಕೆ ಮದ್ವೆ ಆಗಲಿಲ್ಲ ಅದನ್ನ ಹೇಳು” ಎಂದ. ನಿನ್ನಂಥ ಗಂಡಸು ಸಿಗಲಿಲ್ಲ ಎಂದು ರೇಗಿಸಬೇಕೆಂದುಕೊಂಡ ರಜನಿ, “ಯಾಕೋ ಬಂಧನಗಳ ಬಗ್ಗೆ ಆಸಕ್ತಿ ಉಳಿದಿಲ್ಲ” ಎಂದು ಸುಮ್ಮನಾದಳು. ಫ್ರೆಂಚ್ ಸಿನೇಮಾಗಳಿಂದ ಹಿಡಿದು ಪುರಂದರದಾಸರ ಕೀರ್ತನೆಗಳವರೆಗೆ ನಿರರ್ಗಳವಾಗಿ ಮಾತನಾಡುತ್ತ ಊಟ ಮುಗಿಸಿದ ಅವಿನಾಶ ಸಿಗರೇಟು ಅಂಟಿಸುತ್ತ, “ನಾನು ಮದುವೆಯಾದಾಗ ನನಗೆ ನಲವತ್ತು. ದೇಹಕ್ಕೆ ಒಂದು ಹೆಣ್ಣು ಬೇಕಿತ್ತು ಅದಕ್ಕೇ ಮದುವೆ ಆದೆ” ಎಂದ. ಬಣ್ಣದ ಮಾತುಗಳಿಲ್ಲದ ಅವನ ಕಣ್ಣುಗಳೊಳಗಿನ ಪ್ರಾಮಾಣಿಕತೆ ರಜನಿಯನ್ನು ಕಲಕಿತು; ಯಾರದೋ ಹೃದಯದ ಸತ್ಯದ ತುಣುಕೊಂದು ಇನ್ಯಾರದೋ ಫೇಸ್ ಬುಕ್ ಗೋಡೆಗೆ ಅಂಟಿಕೊಂಡಂತೆ! ಅವಿನಾಶ ಹುಟ್ಟಿದ್ದು ಶಿವಮೊಗ್ಗದ ಹತ್ತಿರದ ಹಳ್ಳಿಯೊಂದರಲ್ಲಿ. ಬಡತನಕ್ಕೆ ದಣಿದು ಅಮ್ಮ ತೀರಿಕೊಂಡಾಗ ಇವನಿನ್ನೂ ಹತ್ತನೇ ಕ್ಲಾಸು ಮುಗಿಸಿದ್ದ. ನಾಲ್ವರು ಹೆಣ್ಣುಮಕ್ಕಳ ಮದುವೆ ಮಾಡಿ ಸೋತಿದ್ದ ಅಪ್ಪ ಅವಿನಾಶನಿಗೂ, ಅವನ ಅಣ್ಣನಿಗೂ ಮುಂದೆ ಓದಿಸಲಾರದಷ್ಟು ಸಾಲದಲ್ಲಿದ್ದ. ಆಗ ಅವಿನಾಶನಿಗೆ ದಾರಿ ತೋರಿಸಿದ್ದು ಹೈಸ್ಕೂಲ್ ಹೆಡ್ ಮಾಸ್ಟರ್ ಅವಧಾನಿಯವರು. ಅವಧಾನಿಯವರ ವಯಸ್ಸಾದ ಅಕ್ಕನನ್ನು ನೋಡಿಕೊಳ್ಳಲೆಂದು ಬೆಂಗಳೂರಿಗೆ ಬಂದವ ಇಲ್ಲೇ ಕಾನೂನು ಪದವಿ ಮುಗಿಸಿ, ಸ್ಕಾಲರ್ ಶಿಪ್ ನಲ್ಲೇ ಮಾಸ್ಟರ್ಸ್ ಮುಗಿಸಿ ಕೆಲಸ ಹಿಡಿಯುವವರೆಗೂ ನೋಡಿದ್ದು ಸಾವು ನೋವುಗಳನ್ನ. ಅವಧಾನಿಯವರ ಅಕ್ಕ ತೀರಿಕೊಂಡಮೇಲೆ ಅಮೆರಿಕಾಲ್ಲಿದ್ದ ಮಗ ಬಂದು ಇಲ್ಲಿಯ ಆಸ್ತಿಗಳನ್ನೆಲ್ಲ ಮಾರಿ ರಾಜಾಜಿನಗರದ ಹಳೆಯ ಮನೆಯೊಂದನ್ನು ಅವಿನಾಶನಿಗೆ ಬಿಟ್ಟು ಹೋಗಿದ್ದ. ವಠಾರದಂತೆ ಅಂಟಿಕೊಂಡ ಮನೆಗಳ ಮಧ್ಯದ ಮನೆಯೊಂದರಲ್ಲಿ ಅವಳ ಅಮ್ಮನೊಂದಿಗೆ ವಾಸಿಸುತ್ತಿದ್ದವಳು ಸುಷ್ಮಾ. ಮೂವರು ಹೆಣ್ಣುಮಕ್ಕಳಲ್ಲಿ ಕೊನೆಯವಳಾಗಿದ್ದ ಸುಷ್ಮಾ ಚಿಕ್ಕಬಳ್ಳಾಪುರದ ಪ್ರಾಥಮಿಕ ಶಾಲೆಯೊಂದರ ಟೀಚರಾಗಿದ್ದವಳು ಮನೆಗೆ ಬರುತ್ತಿದ್ದದ್ದು ಶನಿವಾರದ ಸಂಜೆ. ಎರಡು ಬಿಯರ್ ಕುಡಿದು ಒಬ್ಬನೇ ಕುಳಿತು ಪುಸ್ತಕ ಓದುತ್ತಲೋ, ಸಿನೆಮಾ ನೋಡುತ್ತಲೋ ಕಾಲ ಕಳೆಯುತ್ತಿದ್ದ ಅವಿನಾಶನಿಗೆ ಅವಳಮ್ಮ ಕಳುಹಿಸುತ್ತಿದ್ದ ಒಬ್ಬಟ್ಟನ್ನೋ, ಕಜ್ಜಾಯವನ್ನೋ ಕೊಡಲಿಕ್ಕೆಂದು ಬಂದವಳು ಇವನಲ್ಲಿ ಆಸೆ ಹುಟ್ಟಿಸಲಾರಂಭಿಸಿದಳು. ಸುಷ್ಮಾ ಮೂವತ್ತೈದಾದರೂ ಮದುವೆಯಾಗದೇ ಉಳಿದಿದ್ದು ಅವಳ ಸಾಧಾರಣ ರೂಪದಿಂದಾಗಿ. ಅಕ್ಕಂದಿರ ಮದುವೆಗೆಂದು ಮಾಡಿದ್ದ ಸಾಲ ತೀರಿಸುವಷ್ಟರಲ್ಲಿ ಅವಳ ಅಪ್ಪ ತೀರಿಕೊಂಡಿದ್ದ. “ಅವಳ ಅಮ್ಮನಿಗೆ ನಾನು ಮಗಳಿಗೆ ತಕ್ಕ ವರ ಎನ್ನಿಸಿರಬಹುದು. ಇವಳು ನಮ್ಮನೆಗೆ ಬರುವಾಗ ಬ್ರಾ ಹಾಕ್ತಾನೇ ಇರಲಿಲ್ಲ ಗೊತ್ತಾ. ಒಬ್ಬಟ್ಟಿನ ನೆಪದಲ್ಲಿ ನನ್ನ ಮೈ ಕೈ ಮುಟ್ಟುತ್ತಾ ಅವಳು ನನ್ನ ಕೆರಳಿಸಲಿಕ್ಕೆ ಪ್ರಯತ್ನಿಸಿದ್ದು ನನಗೆ ತಿಳಿದಿಲ್ಲವೆಂದೇ ಈಗಲೂ ಅಂದುಕೊಂಡಿದ್ದಾಳೆ. ನಾನೂ ಹೇಳುವುದಿಲ್ಲ ಬಿಡು. ಸುಳ್ಳುಗಳೇ ಸಂಬಂಧವನ್ನು ಸಲಹುತ್ತವೆ ಒಮ್ಮೊಮ್ಮೆ. ಅವುಗಳಿಂದ ಬಿಡಿಸಿಕೊಂಡ ಕ್ಷಣಕ್ಕೆ ಸಂಬಂಧಗಳೂ ಬಿಡಿಸಿಕೊಂಡು ದೂರಾಗಿಬಿಡಬಹುದು. ಒಮ್ಮೆ ಬಂಧನಕ್ಕೆ ಬಿದ್ದ ಮನುಷ್ಯ ಎದ್ದು ಓಡುವುದಾದರೂ ಎಲ್ಲಿಗೆ ಹೇಳು. ನೀನೂ ಅಷ್ಟೇ ನನ್ನಿಂದ ತಪ್ಪಿಸಿಕೊಳ್ಳಲಾರೆ. ನಿನಗೆ ಮಧುವಂತಿ ಅಂತ ಹೆಸರಿಡಬೇಕಿತ್ತು ಕಣೇ. ಇನ್ನೊಂದಿನ ಹೇಳ್ತೀನಿ ನಿಂಗೆ ಮಧುವಂತಿ ರಾಗದ ಬಗ್ಗೆ. ಬಾ ಹೊರಡೋಣ” ಎನ್ನುತ್ತಾ ಹೆಗಲು ಬಳಸಿದ. ಮುಸ್ಸಂಜೆಯ ರಾಗಗಳೆಲ್ಲ ಒಂದೊಂದಾಗಿ ಹೆಜ್ಜೆಹಿಡಿದವು. ********

ಕಥಾಯಾನ Read Post »

ಇತರೆ

ಸಿನಿಮಾ

ಥಪ್ಪಡ್ ಮಡದೀಯ ಬಡಿದಾನ…   ಮಡದೀಯ ಬಡಿದಾನ…  ಈಚೆಗೆ ‘ಥಪ್ಪಡ್’ ಎಂಬ ಹಿಂದಿ ಸಿನೆಮಾ ನೋಡಿದೆ. ಕೇವಲ ‘ಒಂದು ಏಟು’ ಎಂದು ನಿರ್ಲಕ್ಷ್ಯ ತೋರಿ ಮರೆತುಬಿಡುವ ಪ್ರಸಂಗವನ್ನು ‘ಹೆಣ್ಣಿನ ಆತ್ಮಗೌರವ’ದ ಹೆಸರಿನಲ್ಲಿ ತೆರೆಯ ಮೇಲೆ ತೋರಿಸಿರುವ ರೀತಿ ಸ್ತ್ರೀಕುಲದ ಆತ್ಮಸಾಕ್ಷಿಯಂತಿದೆ. ಸಂಕುಚಿತ ಸಮಾಜಕ್ಕೆ ಮಾಡಿದ ಕಪಾಳಮೋಕ್ಷವಾಗಿದೆ. ನಿಜಕ್ಕೂ ಈ ಸಿನೆಮಾ ಸೂಕ್ಷ್ಮವಾಗಿ ಸಮುದಾಯಕ್ಕೆ ದಾಟಿಸುವ ಸಂದೇಶ ಇದೆಯಲ್ಲಾ ಅದು ಅದ್ಭುತ..!   ಜನಪದ ಗೀತೆಯೊಂದಿದೆ,    “ಮಡದೀಯ ಬಡಿದಾನ ಮನದೊಳಗೆ   ಮರುಗ್ಯಾನ, ಒಳಹೋಗಿ ಸೆರಗ ಹಿಡಿದು   ತಾ ಕೇಳಾನ ನಾ ಹೆಚ್ಚೋ ನಿನ್ನ ತವರು ಹೆಚ್ಚೋ…”       ಜನಪದ ಗೀತೆಯ ಮಾತಿಗೇ ಬರೋಣ. ಹೆಂಡತಿಗೆ ಯಾವುದೋ ಮಾತಿಗೋ, ಕಾರಣಕ್ಕೋ ಹೊಡೆದು ಬಿಡುವ ಗಂಡನು ಅನಂತರ ಸಮಜಾಯಿಷಿ ಕೊಡಲಿಕ್ಕೋ ಅಥವಾ ಅವಳನ್ನು ರಮಿಸಲಿಕ್ಕೋ ಆಕೆ ಬಳಿಹೋದಾಗಿನ ಪ್ರಸಂಗದ ವಿವರಣೆ ಇಲ್ಲಿದೆ.    ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’ ಎನ್ನುವ ಜಾಯಮಾನ ಉಳ್ಳ ಸಮಾಜದವರಾದ ನಾವು, ಹೆಣ್ಣಿನ ಮನದಾಳದ ಭಾವನೆಗಳಿಗೂ ನಮ್ಮದೇ ಬಣ್ಣ ಕಟ್ಟುವವರು. ಈ ಹಾಡೂ ಅಂತೆಯೇ.. ಹೆಂಡತಿಗೆ ಬಡಿದ ಗಂಡನಿಗೆ ತನ್ನ ಬಡಿತದಿಂದ ಆಕೆ ಮುನಿದುಕೊಂಡಿದ್ದರೆ, ಸಿಟ್ಟಿಗೆದ್ದಿದ್ದರೆ ಆಕೆ ತವರನ್ನು ನೆನೆದಿರಬಹುದು ಎಂದು ಯೋಚಿಸುವಂತೆ ಮಾಡಿಸುತ್ತದೆ. ಇದಕ್ಕೇನು ಹೇಳುವುದು? ಇದು ಸಮಾಜವು ಹೆಣ್ಣನ್ನು ಅರ್ಥೈಸಿಕೊಂಡಿರುವ ಬಗೆ ಎಂದು ಹೇಳಬಹುದಷ್ಟೇ. ಆದರೆ  ತವರಿನಲ್ಲಿ ಇದಕ್ಕೂ ನಿಕೃಷ್ಟವಾದ ಬದುಕು ಆಕೆಯದಿದ್ದರೆ  ಖಂಡಿತ ತವರನ್ನು ಆಕೆ ನೆನೆದಿರುತ್ತಾಳೆಯೇ..? ಹಾಗೆಯೇ ಮೊದಲ ಸಾಲಿನಲ್ಲಿರುವ ‘ಮಡದೀಯ ಬಡಿದಾನ’ ಎಂಬಲ್ಲಿ ಬಳಕೆಯಾಗಿರುವ ‘ಬಡಿದಾನ’ ಪದವು ಕೇಳಲು ಎಷ್ಟು ಕಠೋರವಾಗಿದೆ. ದನಕ್ಕೆ ಬಡಿದ ಹಾಗೆ.., ಸುತ್ತಿಗೆ ಬಡಿದ ಹಾಗೆ.., ಬಡಿದು ಬಿಸ್ಹಾಕು..,ಇಲ್ಲೆಲ್ಲಾ ಬಡಿದು ಎನ್ನುವುದು ಬಹಳ ಘೋರವಾದ ಅತೀ ಕಠಿಣತಮ ಶಬ್ಧಾರ್ಥವಾಗಿ ಪ್ರಯೋಗವಾಗಿದೆ. ಬಡಿಯುವುದು ಗಂಡಿನ ಜನ್ಮಸಿದ್ಧ ಹಕ್ಕು ಹಾಗೂ ಬಡಿಸಿಕೊಳ್ಳುವುದು ಹೆಣ್ಣಿನ ಹಣೆಬರಹ ಎಂಬುದು ಸಮಾಜದ ಸೃಜನೆಯಾಗಿರುವಾಗ ಗಂಡನಾದವನು ಬಡಿಯದೇ ಮತ್ತೇನು ಮಾಡಿಯಾನು?! ಮಡದಿಯೂ ಸಹ ಒಂದು ಪ್ರಾಣಿಯೋ ವಸ್ತುವೋ ಎಂದು ಭಾವಿಸಿ ಬಡಿದಿರುವ ಆತ ತನ್ನ ಮನದಲ್ಲಿ ತನ್ನ ಕೃತ್ಯಕ್ಕಾಗಿ ಖಂಡಿತ ಮರುಗಿರುತ್ತಾನೆಯೇ..?      ಜನಪದದ ಕಾಲ ನಿರ್ಣಾಯಕವಾಗಿಲ್ಲ. ನೂರಾರು ವರ್ಷಗಳಿಂದಲೂ ಹುಟ್ಟಿ ಹರಿದು ಬಂದಿರುವ ಜನಪದ ತೊರೆಯ ಮೂಲ ಯಾವುದೆಂದು ಕಾಣುವುದು ಅಷ್ಟು ಸುಲಭವಲ್ಲ. ಹಾಗಾದ ಮೇಲೆ ಇಂತಹ ಜನಪದ ಹಾಡುಗಳಿಗೂ ಇಪ್ಪತ್ತೊಂದನೆಯ ಶತಮಾನದ ‘ಥಪ್ಪಡ್’ ನಂತಹ ಸಿನೆಮಾದಲ್ಲಿ ತೋರಿರುವ ಹೆಣ್ಣಿನ ಕುರಿತ ಅಸಡ್ಡೆಯ ಭಾವನೆಗೂ ಅವಿನಾಭಾವ ಸಂಬಂಧವಿದೆ. ಹಾಗಾದರೆ, ಅನಾದಿಯಿಂದ ಇಂದಿನವರೆಗೂ ಹೆಣ್ಣಿನ ಸ್ಥಿತಿಗತಿಯಲ್ಲಿ, ಆಕೆಯ ಕುರಿತ ಸಮಾಜದ ಮನೋಭಾವದಲ್ಲಿ ಬಹಳ ಸುಧಾರಣೆಯೇನೂ ಕಂಡಿಲ್ಲ ಎಂದಾಯಿತಲ್ಲವೇ..?     ಹೀಗೆ ಕೇಳುವ ಪ್ರಶ್ನೆಗಳನ್ನೂ ಅಪಹಾಸ್ಯಕ್ಕೆ ಗುರಿಮಾಡುವ  ಸಮುದಾಯದ ನಡುವೆ ಮಹಿಳೆಯರಿದ್ದಾರೆ. ಅಭಿಮಾನ, ಆತ್ಮಗೌರವ, ಸ್ವಾಭಿಮಾನ, ಸ್ವಾಭಿಪ್ರಾಯ ಮೊದಲಾದ ಪದಗಳಿಗೆ ಮಹಿಳೆಯರ ಪದಕೋಶದಲ್ಲಿ ಸ್ಥಾನ ನೀಡದವರ ನಡುವಲ್ಲಿ ಮಹಿಳೆಯರು ಛಲದಿಂದ ಬದುಕಬೇಕಿದೆ. ಅಂಥ ನಿರ್ಭಾವುಕ ಜನರ ನಿರ್ಲಕ್ಷ್ಯಕ್ಕಿಂತಲೂ ಭಾವುಕ ಮನಸ್ಸಿನ ಮಹಿಳೆಯರ ನಿರೀಕ್ಷೆಗಳು ಮಹತ್ವವಾದವು ಎಂಬುದನ್ನು ಅರಿಯಲು ‘ಥಪ್ಪಡ್’ ನಂತಹ ಸೂಕ್ಷ್ಮ ನಿರ್ದೇಶನದ ಚಿತ್ರವನ್ನು ಎಲ್ಲರೂ ನೋಡಬೇಕು.       ಇನ್ನು ‘ತಾಪ್ಸಿ ಪನ್ನು’ ಎನ್ನುವ ನಟನಾಲೋಕದ ಧ್ರುವತಾರೆ ತನ್ನಕಾಲದ ಇತರೆ ಹೀರೋಯಿನ್ ಗಿಂತ ಹೇಗೆ ಭಿನ್ನ, ಆಕೆ ನಟನೆಗೆ ಆರಿಸಿಕೊಳ್ಳುವ ಸಿನೆಮಾಗಳ ವಸ್ತು ವಿಷಯ ಎಷ್ಟು ಅರ್ಥಪೂರ್ಣ, ವೈವಿಧ್ಯವಾಗಿರುತ್ತವೆ ಮತ್ತು ಆಕೆಯ ನಟನೆ ಎಷ್ಟು ಸಹಜವಾಗಿರುತ್ತದೆ ಎಂಬುದನ್ನು ಆಕೆ ಅಭಿನಯಿಸಿರುವ ಸಿನೆಮಾ, ಕಿರುಚಿತ್ರ ( short films) ಗಳನ್ನು ನೋಡಿಯೇ ತಿಳಿಯಬೇಕು.    ‘ಥಪ್ಪಡ್’ ಕೇವಲ ಒಂದು ಸಿನೆಮಾ ಅಲ್ಲ ಅಥವಾ ‘ಮಡದೀಯ ಬಡಿದಾನ..’ ಎನ್ನುವುದು ಕೇವಲ ಒಂದು ದೈನಂದಿನ ಸಂಗತಿಯಲ್ಲ. ಈ ಲೇಖನದ ಮೂಲಕ ಆ ಕುರಿತ ವಿಚಾರವೊಂದನ್ನು ಆತ್ಮಶೋಧನೆಗೆ ಹಚ್ಚುವ ಪ್ರಯತ್ನ ಮಾಡಲಾಗಿದೆ. ಏಕೆಂದರೆ, ‘ಹೆಣ್ಣಿನ ಘನತೆ ಬಿಟ್ಟಿಬಿದ್ದಿಲ್ಲ…’ 

ಸಿನಿಮಾ Read Post »

You cannot copy content of this page

Scroll to Top