ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಬುದ್ಧ ಪೂಣಿಮಾ ವಿಶೇಷ-ಕವಿತೆ

ಯಶೋಧರೆಯ ಸ್ವಗತ ಶೋಭಾ ನಾಯ್ಕ ಬಾನ ಚೆಂದಿರನನ್ನೇ ಇಳಿಸಿಬಿಟ್ಟೆ ನಿನ್ನ ಪ್ರೀತಿಗೆ ಎಂದು ಕಂದನ ಕೈಗಿತ್ತವ ನೀನು ಜೊತೆ ಇರುವೆನೆಂದು ಜೊತೆ ಹೆಜ್ಜೆ ಇಟ್ಟು ನಕ್ಷತ್ರಗಳ ಜಾತ್ರೆಯನ್ನೆಲ್ಲ ಸುತ್ತಿಸಿ‌ ಬಂದವ ನೀನು ಬದುಕ ಸಿಹಿ ಕಡಲಿನಲ್ಲಿ ಈಜಾಡಿಸಿ ದಡ ಸೇರುವುದರೊಳಗೆ ಹೊರಟು ಹೋದೆಯಲ್ಲಾ ? ಹೊದೆದ ಹೊದಿಕೆಯನ್ನೂ ಅಲುಗಾಡಿಸದಂತೆ ರಥಬೀದಿಯ ಗುಟ್ಟು ಗೊತ್ತಿರದ ನೆಲ,ಗೋಡೆ ಕಿಡಕಿಗಳೆಲ್ಲ ನನ್ನನ್ನೇ ಜರಿದಂತೆ ಭಾಸವಾಗುತ್ತದೆ! ಒಣಗಿ ಹಾಕಿರುವೆ ಕಣ್ಣ ನೀರಲ್ಲೇ….ನೆಂದ ಚಾದರವ ಅದರದ್ದೂ….ದಿವ್ಯಮೌನ ಯಾರ ಬಳಿ ಹೇಳಲಿ ನನ್ನೊಡಲ ನೋವ? ಮಗನೀಗ‌ ಕಲಿತು ಕಥೆ ಕೇಳುತ್ತಿದ್ದಾನೆ! ಯಾರ ಕಥೆ ಹೇಳಲಿ ರಾತ್ರೋರಾತ್ರಿ ಎದ್ದು‌ಹೋದ ನಿನ್ನದೋ? ನಿದ್ದೆಯಿರದ ನನ್ನದೋ?

ಬುದ್ಧ ಪೂಣಿಮಾ ವಿಶೇಷ-ಕವಿತೆ Read Post »

ಇತರೆ

ಬುದ್ಧ ಪೂರ್ಣಿಮಾ ವಿಶೇಷ

ಆಸೆಯೇ ದು:ಖಕ್ಕೆ ಮೂಲ ಚಂದ್ರು ಪಿ.ಹಾಸನ ಆಸೆಯೇ ದುಃಖಕ್ಕೆ ಮೂಲ ಎಂಬುದೇ ಜ್ಞಾನ಻ಯೋಗಿಯ ಪ್ರಸಿದ್ಧ ತತ್ವ ಏಕತೆಯು ನಿಸ್ವಾರ್ಥ ಗುಣಗಳನ್ನು ಎತ್ತಿ ಹಿಡಿಯುತ್ತದೆ. ಆಗ ಸ್ವಾರ್ಥತೆ ಕಡಿಮೆಯಾಗಿ ಮಾನವೀಯ ಮೌಲ್ಯಗಳು ಹೊರಹೊಮ್ಮುತ್ತದೆ. ಒಟ್ಟಾರೆಯಾಗಿ ಮಾನವ ತನ್ನ ಜೀವನದಲ್ಲಿ ಸ್ವಾರ್ಥತೆಯ ಬಿಟ್ಟು ನಿಸ್ವಾರ್ಥ ಸೇವೆ ಮಾಡುವುದಲ್ಲಾ ಮಾನವೀಯ ಮೌಲ್ಯಗಳಾಗುತ್ತವೆ. ಅದಕ್ಕಾಗಿ ಮಾನವ ಬೆಳೆಸಿಕೊಳ್ಳಬೇಕಾದ ಒಳ್ಳೆಯ ಗುಣಗಳೇ  ಮೌಲ್ಯಗಳು. ನಮ್ಮ ಸಮಾಜದಲ್ಲಿ ಅಂಧಕಾರ, ದಾರಿದ್ರ್ಯ, ಅನಾಚಾರಗಳು ತಾಂಡವ ಮಾಡುತ್ತಿದ್ದಾಗ ಈ ಮಾನವೀಯ ಮೌಲ್ಯಗಳು ತಲೆಎತ್ತಿದರೆ ಈ ಸಮಸ್ಯೆಗಳಿಗೆ ಭಹುಶಃ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬಹುದು. ಈ ನಿಟ್ಟಿನಲ್ಲಿ ಮಾನವೀಯ ಮೌಲ್ಯಗಳ ತನ್ನಲ್ಲಿ ಅಡಗಿಸಿಕೊಂಡು, ಅಹಿಂಸೆಯ ಮಾರ್ಗ ಹಿಡಿದು,ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ, ಬೌದ್ಧ ಧರ್ಮದ ಸಂಸ್ಥಾಪಕ ಶ್ರೀ ಭಗವಾನ್ ಗೌತಮ ಬುದ್ಧರು.  ಜನನ (ಕ್ರಿ ಪೂ ೫೫೭) ಗೌತಮ ಬುದ್ಧರ ಹುಟ್ಟಿದ ಸ್ಥಳ ಲುಂಬಿನಿ ಗ್ರಾಮ. ತಂದೆ ಶುದ್ಧೋಧನ ತಾಯಿ ಮಾಯದೇವಿ. ಮೊದಲ ಹೆಸರು ಸಿದ್ದಾರ್ಥ. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಬುದ್ಧನನ್ನು ಗೌತಮಿ ಎಂಬ ಸ್ತ್ರೀಯೊಬ್ಬಳು ಸಾಕುತ್ತಾಳೆ. ಆದುದರಿಂದ ಸಿದ್ದಾರ್ಥ ‘ಗೌತಮ’ನೆಂದು ಕರೆಯಲ್ಪಡುತ್ತಾರೆ. ತಂದೆ ಶುದ್ಧೋಧನ ಮಗ ಚಕ್ರವರ್ತಿಯಾಗಬೇಕೆಂಬ ಆಶಯದಿಂದ ಅವನಿಗೆ ದುಃಖದ ಸನ್ನಿವೇಶಗಳೇ ಕಾಣದಂತಹ ಕೃತಕ ವಾತಾವರಣವನ್ನು ಸೃಷ್ಟಿಸಿ, ಅವನನ್ನು ಬೆಳೆಸುತ್ತಾರೆ. ಯಶೋಧರೆ ಎಂಬ ಸುಂದರ ಕನ್ಯೆಯೊಂದಿಗೆ ಅವನ ವಿವಾಹವನ್ನು ಮಾಡುತ್ತಾರೆ. ಗೌತಮನಿಗೆ ‘ರಾಹುಲ’ ಎಂಬ ಮಗನು ಹುಟ್ಟುತ್ತಾನೆ. ಮಗುವಿಗೆ ವರ್ಷ ತುಂಬುವುದರೊಳಗೆ ಸಿದ್ದಾರ್ಥನಿಗೆ ದುಃಖದ ‘ದಿವ್ಯದರ್ಶನ’ವಾಗುತ್ತದೆ. ಇಡೀ ಜಗತ್ತಿನ ಘೋರ ದುಃಖವನ್ನು ಕಂಡು ಬೆಚ್ಚಿಬಿದ್ದ ಸಿದ್ದಾರ್ಥ, ಸೇವಕ ಚೆನ್ನನೊಡನೆ ಜಗವೆಲ್ಲಾ ಮಲಗಿರುವಾಗ ಬುದ್ದನಾಗಲೂ ಹೊರಟು, ದುಃಖಕ್ಕೆ ಶಾಶ್ವತ ಪರಿಹಾರವನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಾರೆ.  ಸನ್ಯಾಸಿ ಜೀವನ ಮತ್ತು ಬೋಧನೆ ವಿವಿಧ ಪಂಥಗಳ ಗುರುಗಳ ಹತ್ತಿರ ಸತತವಾಗಿ ೬ ವರ್ಷಗಳ ಕಾಲ ಅವರು ಹೇಳಿದಂತೆ ದೇಹ ದಂಡನೆ ಮಾಡಿ ಇದರಿಂದ ಯಾವುದೇ ಪ್ರತಿ ಫಲ ಮತ್ತು ಶಾಂತಿ ಸಿಗದೆ ಅಂತಿಮವಾಗಿ ಪರಮ ಸತ್ಯ ಕಾಣಲು ಮುಂದಿನ ೬ ವರ್ಷಗಳು ಬೋಧಿ ವೃಕ್ಷದ ಕೆಳಗೆ ನಿರಂತರ ಧ್ಯಾನ ತಪಸ್ಸು ಮಾಡುವುದರ ಮೂಲಕ ಪರಿಪೂರ್ಣ ಜ್ನಾನೋದಯ ಪಡೆದುಕೊಂಡರು. ಗೌತಮ ಬುದ್ಧರು ಮುಂದಿನ ೪೫ ವರ್ಷಗಳು ನಿರಂತರವಾಗಿ ಧಮ್ಮೋಪದೇಶಗಳನ್ನು ಜನಸಾಮಾನ್ಯರಿಗೆ ನೀಡುವ ಮೂಲಕ ಮಾನವನ ದುಖ ನಿವಾರಣೆಗೆ ತ್ರಿಸರಣ ಬೋಧನೆ ಮಾಡಿದರು. ಈ ಮೂರು ಬೌದ್ಧ ಧಮ್ಮದ ಮೂಲ ಸಂಕೇತಗಳು.ಇವುಗಳನ್ನು ಪ್ರತಿಯೋಬ್ಬರ ಜೀವನ ಧ್ಯೇಯಗಳಾಗಿ ಒಪ್ಪಿಕೊಂಡು ಸಂತೋಷವಾಗಿರುವುದು. ಅವುಗಳೆಂದರೆ, ಬುದ್ಧಂ ಶರಣಂ ಗಚ್ಚಾಮಿ(ನಾನು ಬುದ್ಧನಿಗೆ ಶರಣಾಗುತ್ತೆನೆ.) ಧಮ್ಮಂ ಶರಣಂ ಗಚ್ಚಾಮಿ(ನಾನು ಧಮ್ಮಕ್ಕೆ ಶರಣಾಗುತ್ತೆನೆ.) ಸಂಘಂ ಶರಣಂ ಗಚ್ಚಾಮಿ(ನಾನು ಸಂಘಕ್ಕೆ ಶರಣಾಗುತ್ತೆನೆ.) ಗಚ್ಚಾಮಿ ಎಂದರೆ, ಸತ್ಯದಿಂದ ಬೌದ್ಧ ಧಮ್ಮ ಸ್ವೀಕರಿಸುತ್ತೆನೆ ಎಂದು ಅರ್ಥೈಸುತ್ತದೆ. ಈ ಮೂರು ಶರಣ್ಯಗಳನ್ನು ಉಪಾಸಕರು ಮೂರು ಬಾರಿ ಉಚ್ಚರಿಸುವ ಮೂಲಕ ತಾವು ಬೌದ್ಧ ಧಮ್ಮಾಚಾರಿಗಳೆಂದು ಘೋಷಿಸುತ್ತಾರೆ.  ಸಂರ್ಪೂರ್ಣ ಮುಕ್ತಿ ಮಾರ್ಗ ಸಿದ್ಧಿಗೆ ಭಿಕ್ಕುಗಳ ಮತ್ತು ಸಂಘಗಳು ಜೀವನ ನಡವಳಿಕೆಗೆ ಸಂಬಂಧಿಸಿದಂತೆ ತ್ರಿಪಿಠಕಗಳನ್ನು ಭೋಧಿಸಿದ್ದಾರೆ. ಅವುಗಳೆಂದರೆ: ೧.ವಿನಯ ಪಿಟಕ: ಭಿಕ್ಕು ಮತ್ತು ಭಿಕ್ಕು ಸಂಘಗಳ ನಡವಳಿಕೆಗಳಿದೆ ಸಂಬಂಧಿಸಿದ ನಿಯಮಗಳನ್ನು ಕ್ರೋಢೀಕರಿಸಲಾಗಿದ ಗ್ರಂಥವಾಗಿದೆ. ೨.ಸುತ್ತ ಪಿಟಕ: ನಾಲ್ಕು ಆರ್ಯ ಸತ್ಯಗಳಿಗೆ ಸಂಬಂಧಿಸಿದಂತೆ ಅನೇಕ ಸಂಭಾಷಣೆಗಳು, ಗೀತೆಗಳು, ಕಥೆ ಉಪಕಥೆಗಳು ಮುಂತಾದವುಗಳನ್ನು ಸಂಗ್ರಹಿಸಿದ ಗ್ರಂಥವಾಗಿದೆ. ೩. ಅಭಿಧಮ್ಮ ಪಿಟಕ : ಸುತ್ತ ಪಿಟಕದಲ್ಲಿನ ಬೋಧನೆಗಳನ್ನು ಮೂಲ ತತ್ವಗಳನ್ನು ವಿಶಾದೀಕರಿಸಿದ ಗ್ರಂಥವಾಗಿದೆ. ಈಗೆ ತನ್ನ ಸ್ವಸಾಮಾರ್ಥ್ಯದಿಂದ , ಅತ್ಯುನ್ನತ ಜ್ಞಾನ ಪಡೆದು ಜಗತ್ತಿನ ಪರಮ ಸತ್ಯವನ್ನು ಬೋಧಿಸಿದ ಮಹಾಗುರು.ಮದ್ಯಮ ಮಾರ್ಗದ ಮೂಲಕ ಮೈತ್ರಿ, ಕರುಣೆ,ದಯೇ , ಸಮತೆ, ಪ್ರೀತಿ, ಅನುಕಂಪ, ಮತ್ತು ಜ್ಞಾನದೊಂದಿಗೆ ಅಷ್ಠಾಂಗ ಮಾರ್ಗಗಳನ್ನು ತೋರಿಸಿಕೊಟ್ಟರು. ಈ ಸತ್ಯ ವನ್ನು ನಾವು ಪರಿಪಾಲಿಸಿದರೆ ನಮ್ಮ ಜೀವನದಲ್ಲಿ ಬುದ್ಧತ್ವವನ್ನು ಪಡೆಯಬಹುದು. ಪರಿಶುದ್ದವಾದ ಜೀವನ ನಡೆಸುವುದು ಪ್ರತಿಯೋಬ್ಬರ ಕರ್ತವ್ಯವಾಗಿದೆ. ಇದರಿಂದ ದುಃಖ ನಿವಾರಣೆ ಸಾದ್ಯ. ಧರ್ಮವೆಂದರೆ  ಸತ್ಯದ ಬೆಳಕು ಇದರಿಂದ ಜೀವನ ಸಾಕ್ಷಾತ್ಕಾರವನ್ನು ಪಡೆಯ ಬಹುದು. ಮನುಷ್ಯರು ಮನಸ್ಸಿನ ಶುದ್ಧಿ ಮತ್ತು ಅಂತರ್ ದೃಷ್ಟಿಯಿಂದ ಅಂತಿಮವಾಗಿ ನಿಬ್ಬಾಣ ಹೊಂದಬಹುದು ಎಂದಿದ್ದಾರೆ. ಬುದ್ಧರ ಉಪದೇಶಗಳು ಜ್ಞಾನ ಮಾರ್ಗವನ್ನು ಬೋಧಿಸಿದೆ. ಅದರೊಂದಿಗೆ  ಅಹಿಂಸಾ ಮಾರ್ಗ ಕರುಣೆ, ಅನುಕಂಪಗಳ ದಾರಿ ಹಿಡಿದು ಸಮಾಜ ಸುಧಾರಣೆಗಳನ್ನು ಮಾಡಿದ್ದರು. ಇಂತಹ ದಿವ್ಯ ಮಾರ್ಗ ದರ್ಶಕರು ಪ್ರತೀ ಸಹಸ್ರ ವರ್ಷಗಳಿಗೊಮ್ಮೆ ಉದಯವಾಗತಿದ್ದರೇ ಬಹುಶಃ ನೈತಿಕತೆ ಸಾತ್ವಿಕತೆ ಹೆಚ್ಚಿ ಅಪರಾಧ ಗಂಟು ಕಡಿತಗೊಳಿಸಬಹುದು. *********

ಬುದ್ಧ ಪೂರ್ಣಿಮಾ ವಿಶೇಷ Read Post »

ಇತರೆ

ಬುದ್ಧ ಪೂರ್ಣಿಮಾ ವಿಶೇಷ

  ‘ಮುಟ್ಟಿದರೆ ಕೆಡುಕಿಲ್ಲ ಮುಟ್ಟದಿರೆ ಒಳಿತು’  ವಸುಂಧರಾ ಕದಲೂರು   ‘ಮುಟ್ಟಿದರೆ ಕೆಡುಕಿಲ್ಲ ಮುಟ್ಟದಿರೆ ಒಳಿತು’              ಈ ಸಾಲುಗಳು ಮಾಸ್ತಿಯವರ ‘ಯಶೋಧರ’ ನಾಟಕದಲ್ಲಿದೆ ಎಂಬ ನೆನಪು.            ರಾಜಕುಮಾರನಾಗಿದ್ದ ಸಿದ್ಧಾರ್ಥನು ಬುದ್ಧನಾಗಿ, ಜೀವನದ ಪರಮಸತ್ಯವನ್ನು ಕಂಡು, ಅದನ್ನು ಜಗತ್ತಿಗೆ ಬೋಧಿಸಿದ. ತನ್ನ ಉಪದೇಶ ಮಾತ್ರದಿಂದಲೇ ಲೋಕದ ಕಣ್ತೆರೆಸಿದವನು, ಜನರ ದುಃಖ ಮರೆಸಿದವನು, ಕಣ್ಣೀರನು ಒರೆಸಿದವನು ಹೀಗೆಲ್ಲಾ ಹೇಳುತ್ತಾರೆೆ. ಬುದ್ಧನ ವಿಚಾರದಲ್ಲಿ ಇದೆಲ್ಲಾ ನಿಜವಿರಬಹುದು.        ಮುಂದೆ ಯಾವಾಗಲೋ ಸಿದ್ಧಾರ್ಥನಿಂದ ಬುದ್ಧನಾಗಿ ಪರಿವರ್ತಿತನಾದ ಮಹಾನುಭಾವನು  ಒಮ್ಮೆ ಮರಳಿ ತನ್ನೂರಿಗೆ ಬಂದಿರುತ್ತಾನೆ. ಆತನಿಂದ ಆಶೀರ್ವಚನ ಪಡೆಯಲು ಗುಂಪುಗಟ್ಟುವ ಮಂದಿಯಲ್ಲಿ  ಪೂರ್ವಾಶ್ರಮದ ಪತ್ನಿ ‘ಯಶೋಧರಾ’ ಸಹ ತನ್ನ ಮಗ ರಾಹುಲನೊಡನೆ ನಿಂತಿರುತ್ತಾಳೆ.     ಒಂದು ಕಾಲದ ತನ್ನ ಪ್ರಿಯ ಪತಿ ಈಗ ಜಗತ್ತಿನ ಮಹತ್ತಿನ ಧರ್ಮಶ್ರೇಷ್ಠನಾಗಿದ್ದಾನೆ. ಆತನನ್ನು ಇದಿರುಗೊಂಡಿರುವ ತಾನು ಆತನನ್ನು ಮುಟ್ಟಿ ಆಶೀರ್ವಾದ ಪಡೆಯಬಹುದೇ? ಮುಟ್ಟುವುದು ತಪ್ಪೇ..? ಮುಟ್ಟದಿರುವುದು ಸರಿಯೇ..? ಹೀಗೆ ಜಿಜ್ಞಾಸೆಯಲಿ ಮುಳುಗಿರುವ ಯಶೋಧರಾ ತನ್ನ ಈ ಗೊಂದಲ ನಿವಾರಿಸುವಂತೆ ಬುದ್ಧನನ್ನೇ ಕೇಳಿಕೊಂಡಾಗ ಆ ಮಹಾನುಭಾವ “ಮುಟ್ಟಿದರೆ ಕೆಡುಕಿಲ್ಲ ಮುಟ್ಟದಿರೆ ಒಳಿತು” ಎಂದನಂತೆ..!       ಇದು ಮಾಸ್ತಿಯಂತಹ ಮಹಾನ್ ಮಾನವತಾವಾದಿ ಬರಹಗಾರರ ಕಲ್ಪನಾ ಮೂಸೆಯಿಂದ ಮೂಡಿ ಬಂದಿರುವ ಪರಮಾದ್ಭುತ ಸಾಲು!           ಈ ಸಾಲಿನಲ್ಲಿ ನಮಗೆ, ಬಿಟ್ಟು ಹೋದ ಗಂಡ ಮರಳಿ ಬಂದಾಗ ಆತನ ರೂಪಾಂತರವನ್ನು ಒಪ್ಪುವ ಯಶೋಧರೆ ಒಂದೆಡೆ ಕಂಡರೆ, ಪತ್ನಿ ಪರಿತ್ಯಜಿಸಿ ಪರಿವ್ರಾಜಕನಾಗಿ ಬಂದರೂ ಸಹ ಪೂರ್ವಾಶ್ರಮದ ವಾಸನೆಗೆ ಪುನಃ ಸಿಲುಕುವ ಅಭದ್ರತೆಯ ಭಾವ ಕಾಡಿರಬಹುದಾದ ಬುದ್ಧನನ್ನು ಮತ್ತೊಂದೆಡೆ ಕಾಣದಿರಲಾಗದು.  ಇರಲಿ, ಇದೆಲ್ಲಾ ಓದುಗರ ಊಹೆಗೆ ಬಿಟ್ಟ ವಿಚಾರಗಳು.       ಬುದ್ಧನನ್ನು ‘ಏಷ್ಯಾದ ಜ್ಯೋತಿ’ ಎನ್ನುತ್ತಾರೆ. ಅದರ ಬಗ್ಗೆ ಸ್ವತಃ ಯಶೋಧರೆಗೂ ತಕರಾರಿರಲಾರದು. ಆದರೆ ಆತ ಕೆಲವು ನಿರ್ವಹಿಸಲೇಬೇಕಾದ ಕರ್ತವ್ಯಗಳನ್ನು ಮರೆತುದಕ್ಕೆ, ನಿರ್ವಹಿಸದೇ ಇದ್ದುದಕ್ಕೆ ಹೆಣ್ಣಾಗಿ ಆಕೆ ಒಮ್ಮೆಯಾದರೂ ಆಕ್ಷೇಪಿಸದಿರಲಾರಳೇ?! ಅಂದು ಯಶೋಧರೆಯ ಮನಸ್ಥಿತಿ ಹೇಗಿತ್ತೋ ಗೊತ್ತಿಲ್ಲ. ಆದರೆ ಹೆಣ್ಣಾಗಿ ನಮ್ಮ ಭಾವಕೋಶದ ಆದ್ಯತೆಯನ್ನು ನಾವು ಊಹಿಸಲಾರೆವೆ?             ನನ್ನ ಹೆರಿಗೆಯ ದಿನ ವೈದ್ಯರೊಡನೆ ಚರ್ಚೆ, ನಿಗದಿತ ಫಾರ್ಮ ಭರ್ತಿ ಮಾಡುವುದು, ಶುಲ್ಕ ತುಂಬುವುದು, ಆಸ್ಪತ್ರೆ- ಮನೆಯ ನಡುವಿನ ಓಡಾಟ, ಆಪರೇಷನ್ ಥಿಯೇಟರಿನ ಮುಂದೆ ಚಡಪಡಿಕೆಯಲ್ಲಿ ಕಾಯುವುದು ಹೀಗೆ ಇಡೀ ದಿನ ಅವಿಶ್ರಾಂತರಾಗಿದ್ದ ನನ್ನ ಗಂಡ, ಮಗುವನ್ನೂ ನನ್ನನ್ನೂ ವಾರ್ಡ್ ಗೆ ಸ್ಥಳಾಂತರಿಸಿದ ಮೇಲೆ ತಡರಾತ್ರಿಯವರೆಗೂ ಜೊತೆಯಲ್ಲಿದ್ದರು. ಆಸ್ಪತ್ರೆಯ ಸಮಯ ಮೀರಿದಂತೆ, ಬಾಣಂತಿ ಹಾಗೂ ಮಗುವಿನೊಡನೆ ಒಬ್ಬರಿಗೆ ಮಾತ್ರ ಆಸ್ಪತ್ರೆಯಲ್ಲಿ ಇರಬಹುದಾದ ಅವಕಾಶ ಇದ್ದುದರಿಂದ ಸಹಜವಾಗಿ ನನ್ನ ತಾಯಿ ನನ್ನೊಡನೆ ಉಳಿದರು. ಗಂಡ, ಅತ್ತೆ-ನಾದಿನಿ, ಅಕ್ಕ- ಭಾವ ಮೊದಲಾದ ಸಕಲ ಬಂಧುಗಳು ಅನಿವಾರ್ಯ ಮನೆಗೆ ಮರಳಿದರು.        ನನಗೋ ಹೆರಿಗೆಯ ಅನಂತರ ಮುದ್ದು ಮಗುವಿನ ಮುಖ ನೋಡಿದ ಸಂಭ್ರಮ ಒಂದೆಡೆಯಾದರೆ, ಸಿಸೇರಿಯನ್ನಿನ ನೋವು, ಹಾಲು ಕುಡಿಯಲೂ ಬಾರದ ಮಗುವಿನ ಅಸಹಾಯಕತೆ, ಹೊಟ್ಟೆ ಹಸಿವಿನಿಂದಲೋ ಅಥವಾ ಸುರಕ್ಷಿತವಾಗಿದ್ದ ಗರ್ಭದಿಂದ ಈಗ ಎಲ್ಲಿಗೆ ಬಂದಿರುವೆ ಎಂಬ ಅಭದ್ರತೆಯ ಭಾವದಿಂದಲೋ ಅಳುವ ಮಗುವನ್ನು ನೋಡಿ ನನಗೂ ಅಳು. ವಾಸ್ತವ ಹಾಗೂ ಕಲ್ಪನೆಯ ಸಮ್ಮಿಶ್ರಭಾವದಲ್ಲಿ, ಸುಖದುಃಖಗಳ  ಮೇಳೈಸುವಿಕೆಯಲ್ಲಿ ಮುಳುಗೇಳುತ್ತಿದ್ದೆ. ನನಗೆ ಯಾವಾಗ ನಿದ್ದೆ ಬಂತೋ…         ಬೆಳಗಾದುದೇ ತಡ ಮಗುವಿನ ಅಪ್ಪ ಯಾವಾಗ ಬಂದಾರೋ ಎಂಬ ಕಾತರ. ಆಗಲೇ ಗಂಡನ ಸ್ಥಾನದಿಂದ ಅಪ್ಪನ ಸ್ಥಾನದಲ್ಲಿಟ್ಟು ನೋಡಬಯಸಿದ ನನ್ನ ಮನಸ್ಥಿತಿಯ ಬಗ್ಗೆ ನನಗೇ ಅಚ್ಚರಿಯಾಗಿತ್ತು. ಡ್ಯೂಟಿ ಡಾಕ್ಟರ್ ಬಂದು ನನ್ನ ಆರೋಗ್ಯ ವಿಚಾರಿಸಿಕೊಂಡರು, ಮಕ್ಕಳ ತಜ್ಞರು ಬಂದು ಮಗುವಿನ ಆರೋಗ್ಯ ಪರೀಕ್ಷಿಸಿದರು, ಆಸ್ಪತ್ರೆಯ ನರ್ಸ್ ಮಗುವನ್ನು ಶುಚಿಗೊಳಿಸಿ ತಂದುಕೊಟ್ಟರು, ಗಂಟೆ ಅಂತೂ ಇಂತು ಒಂಬತ್ತೂವರೆ ದಾಟಿ ಹತ್ತರ ಬಳಿ ಸಾಗುತ್ತಿತ್ತು. ನಾನೂ ಸಹ ಅಮ್ಮ ಹಾಗೂ ಆಸ್ಪತ್ರೆಯ ಸಹಾಯಕರ ಸಹಕಾರದಿಂದ ಶುಚಿಯಾಗಿ, ಬೇರೆ ಬಟ್ಟೆ ಧರಿಸಿದೆ. ಆಸ್ಪತ್ರೆಯವರೇ ಕೊಟ್ಟ ಕಾಫಿ- ತಿಂಡಿ ಮುಗಿಸಿದೆ.. ಆದರೆ ಇನ್ನೂ ‘ಅವರು’ ಬಂದಿರಲಿಲ್ಲ…     ಇಷ್ಟು ಬೇಗ ನನ್ನನ್ನೂ ಮಗುವನ್ನೂ ಮರೆತು ಬಿಟ್ಟರೇ…? ಎಂದು ತಳಮಳಿಸಿದೆ. ಮಗುವಿನ ಅಳುವನ್ನು ನೆಪವನ್ನಾಗಿ ಇಟ್ಟುಕೊಂಡು ನಾನೂ ಅಳಲು ಶುರುಮಾಡಿದ್ದೆ. ಅಷ್ಟರಲ್ಲಿ ‘ಇವರು’ ಬಂದರು.        ಛೇ, ನೆನ್ನೆ ಇಡೀ ದಿನ ಒಬ್ಬರೇ ಓಡಾಡಿ ದಣಿದಿರುತ್ತಾರೆ. ತಡ ರಾತ್ರಿ ಮನೆ ತಲುಪಿದ್ದರಿಂದ ಮಲಗುವುದೂ ತಡವಾಗಿರುತ್ತದೆ. ಹಾಗಾಗಿ ಆಯಾಸದಿಂದ ಬೆಳಿಗ್ಗೆ ಬೇಗನೆ ಎದ್ದಿಲ್ಲ ಎಂದು ಆ ದಿನ ಅವರು ತಡವಾಗಿ ಬಂದುದೇಕೆ ಎಂಬುದರ ಸತ್ಯ ನನಗೆ ಬಹಳ ದಿನಗಳಾದ ಮೇಲೆ ಹೊಳೆಯಿತು.         ’ಇವರು‘ ಬಂದದ್ದೇ ಅಮ್ಮ ಎದ್ದು ಹೊರಗೆ ಹೋದರು.  ಯಾರೂ ಇಲ್ಲದ್ದರಿಂದ ನನ್ನ ಹತ್ತಿರ ಬಂದವರೇ ಹೂಮುತ್ತನಿತ್ತು, ಮೃದುವಾಗಿ ಕೆನ್ನೆಚಿವುಟಿ, ಮಗು ಮಲಗಿದ್ದ ತೊಟ್ಟಿಲಿನತ್ತ ಬಾಗಿದಾಗ ನನ್ನ ಅಳು ಮಾಯವಾಗಿ ಹೃದಯ ಒಲವಿನ ನಗಾರಿ ಬಾರಿಸಿತ್ತು.        ಆ ಯಶೋಧರೆ ಕೂಡ ಸಾವಿರಾರು ವರ್ಷಗಳ ಹಿಂದೆ ಹೀಗೇ ಹಡೆದು ಮಲಗಿದ್ದಳಲ್ಲವೇ? ಮಗುವಿನ ಬಳಿ ಅದರ ಅಪ್ಪ ಎಂದು ಬಂದಾನೆಂದು ಕಾದಿದ್ದಳಲ್ಲವೇ? ಅವಳ ಕಾಯುವಿಕೆ ಕೊನೆಗೊಂಡದ್ದು ಯಾವಾಗ? ಆ ಯಶೋಧರೆ ಬಯಸಿದ್ದು ಅಥವಾ ಕಳೆದುಕೊಂಡದ್ದು ಏನು? ಹೆಣ್ಣೊಬ್ಬಳ ಮನಸ್ಸಿನ ವಿಚಾರಗಳು ಜಗತ್ತಿನ ಉದ್ಧಾರದ ವಿಷಯ ಬಂದಾಗ ಮಹತ್ತಿನದ್ದು ಎನಿಸುವುದೇ ಇಲ್ಲವಲ್ಲ…!      ಏಕೋ ಬುದ್ಧನ ವಿಷಯ ಪ್ರಸ್ತಾಪವಾದಾಗೆಲ್ಲಾ ಹಡೆದು ಮಲಗಿದ ಯಶೋಧರೆ ; ಅಪ್ಪನಿಗಾಗಿ ಅರಸಿದ ರಾಹುಲ ನೆನಪಾಗುತ್ತಾರೆ…. ಬುದ್ಧ ನನಗೆ ಮರೆಯಾಗುತ್ತಾನೆ. *******

ಬುದ್ಧ ಪೂರ್ಣಿಮಾ ವಿಶೇಷ Read Post »

ಇತರೆ

ಬುದ್ಧ ಪೂರ್ಣಿಮಾ ವಿಶೇಷ

ಜ್ಞಾನದ ದಿವ್ಯ ಬೆಳಕು ಚೆಲ್ಲುವ ‘ಬುದ್ಧ ಪೌರ್ಣಿಮೆ’ ಜ್ಞಾನದ ದಿವ್ಯ ಬೆಳಕು ಚೆಲ್ಲುವ ‘ಬುದ್ಧ ಪೌರ್ಣಿಮೆ’..! ಬುದ್ಧ ಪೌರ್ಣಿಮೆಯ ದಿನ ಇದೇ ದಿನಾಂಕ 7 ರಂದು ಇದೆ. ಆ ನೆಪದಲ್ಲಿ ಈ ಬುದ್ಧನ ನೆನೆದು ಈ ಲೇಖನ… ಬೆಳದಿಂಗಳ ತಂಪು, ಆಹ್ಲಾದ, ನಿರ್ಲಿಪ್ತತೆ, ಶಾಂತಿ, ಏಕಾಂತ, ಪ್ರೇಮ, ಪ್ರಶಾಂತತೆ, ತೇಜಸ್ಸು- ಇವೆಲ್ಲಕ್ಕೂ ಸಂಕೇತವಾಗಿದೆ ಬುದ್ಧ ಪೌರ್ಣಿಮೆ. ತನ್ನ ಅಂಗಳದಲ್ಲಿ ಚೆಲ್ಲಿರುವ ಬೆಳದಿಂಗಳು ತನ್ನದೆಂಬಂತೆ ಕಂಡರೂ ಅದು ತನ್ನದಲ್ಲ ಎಂಬುದು ಮನುಷ್ಯರಲ್ಲಿ ಅಂತರ್ಗತವಾದ ಎಚ್ಚರ. ಬದುಕಿನ ಪ್ರತಿ ಹೆಜ್ಜೆಯಲ್ಲೂ ಈ ಎಚ್ಚರವನ್ನೂ ಕಾಪಿಟ್ಟುಕೊಳ್ಳುವುದೇ ಗುರು ಗೌತಮನ ಉಪದೇಶಗಳಲ್ಲಿ ಮಹತ್ವದ್ದಾಗಿದೆ..! ಬುದ್ಧ ಹೇಳುವಂತೆ ಬದುಕೆಂಬುದು ಶುದ್ಧ ಬೆಳಕು. ಇಲ್ಲಿ ಯಾವುದೂ ಯಾರ ಸ್ವತ್ತೂ ಅಲ್ಲ. ಸುಖವನ್ನು ವಸ್ತುಗಳಲ್ಲಿ ಅರಸಲು ಹೋಗುವುದರಿಂದಲೇ ಮನುಷ್ಯ ದುಃಖಕ್ಕೀಡಾಗುತ್ತಾನೆ ಎಂದು ಗೌತಮ ಬುದ್ಧ ಹೇಳಿದ್ದರು. ಯಾವುದನ್ನೂ ಸ್ವಂತವೆಂದು ಪರಿಗಣಿಸದವನಿಗೆ ನೋವೂ ಇಲ್ಲ, ನಲಿವೂ ಇಲ್ಲ… ಅಂತಹ ನಿರ್ಲಿಪ್ತ ಸಮಚಿತ್ತ ಮಾತ್ರ ಬುದ್ಧನ ನಗೆಯಂತಹ ಕಿರು ನಗೆಯನ್ನು ಹೊಳೆಯಬಹುದು. ಆ ನಿರ್ಮಲ ಧ್ಯಾನಸ್ಥ ಮಂದಹಾಸದಲ್ಲಿ ಆತ ಪೂರ್ಣಚಂದ್ರನಷ್ಟು ಶಾಂತ, ದೇದೀಪ್ಯಮಾನ. ತನ್ನ ಮಾತುಗಳು ಮನುಷ್ಯನ ಆಂತರಿಕ ಗುಣವನ್ನು ಕುರಿತು ಹೇಳುವುದರಿಂದ ಅವನ್ನು ಗ್ರಹಿಸುವುದು ಲೌಕಿಕದ ಲಾಲಸೆಗಳಲ್ಲಿ ಮುಳುಗಿರುವವರಿಗೆ ಸುಲಭವಲ್ಲ ಎಂದು ಗೌತಮನಿಗೆ ತಿಳಿದಿತ್ತು… ಬಯಕೆಗಳ ಗಾಢಾಂಧಕಾರದಲ್ಲಿ ದಾರಿತಪ್ಪಿದವರಿಗೆ ತನ್ನ ಮಾತು ಪಥ್ಯವಾಗುವುದೆ? ಅಂಥವರಿಗೆ ಉಪದೇಶ ನೀಡಲು ಹೋಗಿ ತಾನು ದಣಿಯಲಾರೆನೆ? ಪ್ರಶ್ನೆಗಳು ಎದುರಾಗಿದ್ದವು. ಅದು ತರ್ಕದ ನಿಲುಕಿಗೆ ಮೀರಿದ್ದು. ಒಳಗಣ್ಣಿಗೆ ಮಾತ್ರ ಸ್ವಷ್ಟವಾಗುವಂಥದ್ದು ಅಂತ ತಿಳಿದಿದ್ದರೂ ಸಹಜೀವಿಗಳ ಬಗ್ಗೆ ಅಮಿತ ಕರುಣೆಯ ಬುದ್ಧ ಯಾರ ಆತ್ಮಗಳು ಸತ್ಯವನ್ನು ಕಾಣಲು ತೆರೆದಿರುತ್ತವೋ ಅಂಥವರಿಗೆ ನಾನು ಹೇಳುವುದು ಅರ್ಥವಾದೀತು ಎಂಬ ನಂಬಿಕೆಯಿಂದ ಜನರಲ್ಲಿ ಆತ್ಮಜ್ಞಾನದ ಬಗ್ಗೆ ಒಲವು ಮೂಡಿಸಿದ… ಒಮ್ಮೆ ಝೆನ್ ಗುರು ಲಿಂಜಿ ಭಿಕ್ಷುಗಳನ್ನುದ್ದೇಶಿಸಿ ಮಾತನಾಡುತ್ತ, ನಾವು ಯಾವುದೇ ಧಾರ್ಮಿಕ ರೀತಿಯಲ್ಲಿ ವರ್ತಿಸಬೇಕಾದ ಅಗತ್ಯವಿಲ್ಲ. ಸಹಜವಾಗಿದ್ದರಷ್ಟೇ ಸಾಕು. ಯಾವುದನ್ನೂ ಹುಡುಕುವ ಅಗತ್ಯವೂ ಇಲ್ಲ. ಕಡೆಗೆ ಬುದ್ಧನನ್ನೂ ಕೂಡ. ಎಷ್ಟೆಂದರೂ ಬುದ್ಧ ಎನ್ನುವುದು ಕೇವಲ ಒಂದು ಶಬ್ದ ಅಷ್ಟೆ, ಸಂಕೇತವಷ್ಟೇ ಎನ್ನುತ್ತಾನೆ… ಬುದ್ಧ ವ್ಯಕ್ತಿ ಪೂಜೆಯನ್ನು ಪ್ರೋತ್ಸಾಹಿಸಲಿಲ್ಲ ಎಂಬುದರ ನಿರ್ದಿಷ್ಟ ಸಾಕ್ಷಿ ಇದು. ಪೂರ್ಣಚಂದ್ರ ತೇಜಸ್ಸಿನ ಬುದ್ಧ ಅರಮನೆ, ಗುಡಿಸಲು ಎನ್ನದೆ ಎಲ್ಲರ ಅಂಗಳದಲ್ಲೂ ಯಥೇಚ್ಛ ಬೆಳದಿಂಗಳು ಹರಿಸುತ್ತ ನಡೆದ. ರಾಜ ಬಿಂಬಸಾರನೂ, ಕೊಲೆಗಡುಕ ಅಂಗುಲೀಮಾಲನೂ ಅವನ ಕರುಣೆಗೆ ಸಮಾನ ಪಾತ್ರರು… ಬೆಳದಿಂಗಳನ್ನು ನೋಡಿ ದಣಿವ ಚೇತನ ಪ್ರಾಯಶಃ ಇರಲಾರದು. ಮನಸ್ಸು ಸಂಪೂರ್ಣ ಶಾಂತವಾದಾಗ. ಯೋಗಸೂತ್ರದಲ್ಲಿ ಹೇಳಿರುವಂತೆ ಉಂಟಾಗುವ ಕೇವಲ ಕುಂಭಕ ಅಥವಾ ಕೆಲ ಗಳಿಗೆಗಷ್ಟೆ ಉಸಿರು ಸ್ತಂಭಿತಗೊಳಿಸುವ ಅನುಭವ ಕೊಡುವಂಥದು ಪೌರ್ಣಮಿಯ ಚಂದಿರನ ಬೆಳ್ಳಿ ಕಿರಣಗಳು. ಕ್ಷಣಾರ್ಧದಲ್ಲಿ ಒಳಗಣ್ಣನ್ನು ತೆರೆಸಿ, ಬದುಕಿನ ಕ್ಷಣಭಂಗುರತೆ, ಪ್ರಕೃತಿಯ ಅಗಾಧತೆಗಳ ಕುರಿತು ಧ್ಯಾನಿಸುವಂತೆ ಮಾಡುವಂಥದು… ವೈಶಾಖ ಶುದ್ಧ ಪೌರ್ಣಿಮಿಯ ರಾತ್ರಿ ಸಿದ್ಧಾರ್ಥ ಬಿಟ್ಟು ಹೊರಟಿದ್ದು ಅರಮನೆಯನ್ನಲ್ಲ. ಸಹಜೀವಿಗಳೊಂದಿಗೆ ಬೆರೆಯಲಾಗದಂತೆ ಮೇಲು-ಕೀಳು ಎಂಬುದನ್ನು ಸೃಷ್ಟಿಸುವ ಅಧಿಕಾರದ ಗದ್ದುಗೆಯನ್ನು; ಪದವಿ, ಐಶ್ವರ್ಯಗಳಿಂದ ಸುಖ ಸಿಗುತ್ತದೆ ಎಂಬ ಭ್ರಾಂತಿಯನ್ನು ಮನುಷ್ಯನ ಮೂಲಭೂತ ಕೊರತೆಗಳನ್ನು ಅರಸೊತ್ತಿಗೆಯಿಂದ ನೀಗಿಸಲು ಸಾಧ್ಯವಿಲ್ಲ ಎಂಬುದನ್ನು ಸಿದ್ಧಾರ್ಥ ಗಮನಿಸುತ್ತಾನೆ..! ರಾಜಕುಮಾರನೆಂಬ ಭ್ರಮಾಕೋಶ ಕಳಚಿ ಜನರಲ್ಲಿಗೆ ಹೋದಾಗ ಮಾತ್ರ ಅವರ ದುಃಖವನ್ನು ತಾನು ಅರ್ಥಮಾಡಿಕೊಳ್ಳಬಲ್ಲೆ. ಮನುಕುಲಕ್ಕೆ ಸುಖ-ಸಂತೃಪ್ತಿ ದೊರಕುವ ಮಾರ್ಗ ಯಾವುದು ಎಂಬುದಕ್ಕೆ ಉತ್ತರವನ್ನು ಕಂಡುಕೊಳ್ಳಬಲ್ಲೆ ಎಂದು ಬೆಳದಿಂಗಳ ಆ ಇರುಳಿನಲ್ಲಿ ರಾಜ ಪದವಿ ತೊರೆದು ಜನರ ನಡುವೆಯೇ ಹುಡುಕಹೊರಟವನು ಸಿದ್ಧಾರ್ಥ… ಮಾನವರ ದುಃಖವನ್ನು ದೂರಮಾಡುವ ಮುನ್ನ ಅದರ ಮೂಲವನ್ನು ಆತ ಅರಿಯ ಬೇಕಿತ್ತು. ಆ ಅರಿವಿನ ಹಾದಿ ಹುಡುಕುತ್ತ ಆತ ಮೊದಲು ದೇಹ ದಂಡಿಸಿಕೊಳ್ಳುತ್ತಾನೆ. ಎಷ್ಟೋ ದಿನ ಅನ್ನ, ನೀರು ತೊರೆದು ಪ್ರಕೃತಿಯ ಸರ್ವ ಕಾಠಿಣ್ಯವನ್ನು ತನ್ನನ್ನು ತೆರೆದುಕೊಂಡು ಸತ್ಯ ಅರಿಯಲು ಯತ್ನಿಸುತ್ತಾನೆ… ಮೂಲತಃ ಪ್ರಜ್ಞಾವಂತನಾದ ಆತ, ದೇಹ ದಂಡನೆಯಿಂದ ಹೆಚ್ಚಿನ ಲಾಭವಿಲ್ಲವೆಂದು ಬೇಗ ಕಂಡುಕೊಳ್ಳುತ್ತಾನೆ. ಸುಜÁತಳಿಂದ ಆಹಾರ ಸ್ವೀಕರಿಸಿ ತನ್ನ ಉಪವಾಸ ಅಂತ್ಯಗೊಳಿಸುತ್ತಾನೆ. ಮೋಕ್ಷವನ್ನರಸುತ್ತಿದ್ದಾನೆ ಎಂದು ನಂಬಿ ಅವನೊಂದಿಗೆ ತಪಶ್ಚರ್ಯೆ ಪಾಲಿಸುತ್ತಿದ್ದ ಐದು ಮಂದಿ ಅನುಯಾಯಿಗಳು ಆತ ಕಷ್ಟಗಳಿಗೆ ಮಣಿದು ಲೌಕಿಕಕ್ಕೆ ಮರಳಿದನೆಂದು ಭ್ರಮಿಸಿ ಆತನ ಸಖ್ಯ ತೊರೆದು ಬಿಡುತ್ತಾರೆ..! ಇಷ್ಟರಲ್ಲಿ ಬುದ್ಧನಿಗೆ ತಾನು ನಡೆಯಬೇಕಾದ ಹಾದಿ ಧ್ಯಾನ ಮಾರ್ಗವೆಂದು ಮನವರಿಕೆಯಾಗುತ್ತದೆ. ಜಗತ್ತಿನ ಆಗುಹೋಗುಗಳಿಗೆ, ಮನುಷ್ಯನ ತುಮುಲಗಳಿಗೆ ಕಾರ್ಯಕಾರಣ ಸಂಬಂಧದ ಎಳೆ ಹಿಡಿದು ಧ್ಯಾನಿಸಿ ಆತ ಕಂಡುಕೊಂಡದ್ದು ಅತ್ಯಂತ ಸರಳವೆಂದು ಕಾಣುವ ಆಸೆಯೇ ದುಃಖಕ್ಕೆ ಮೂಲ-ಎಂಬ ಸತ್ಯವನ್ನು. ತನ್ನ ಹುಟ್ಟಿದ ದಿನವೂ ಆದ ಒಂದು ಪೌರ್ಣಮಿಯ ದಿನ ಬೋಧಿವೃಕ್ಷದ ಕೆಳಗೆ, ಜಗತ್ತು ಜ್ಞಾನೋದಯ ಎಂತ ಕರೆಯುವ ಅರಿವಿನ ಬೆಳದಿಂಗಳಿನಲ್ಲಿ ಮಿಂದು ಸಿದ್ದಾರ್ಥ ನಿರ್ಮೋಹಿ ಬುದ್ಧನಾದ..! ಹೀಗೆ ಬುದ್ಧ ಅರಿವಿನ ಪರಮಾನಂದವನ್ನು ಸವಿಯುತ್ತಿದ್ದಾಗ ಒಬ್ಬ ಗರ್ವಿಷ್ಟ ಪಂಡಿತನೊಬ್ಬ ನಿಜವಾದ ಪಂಡಿತನ ಗುಣವಿಶೇಷಗಳೇನು ಎಂದು ಸವಾಲೆಸೆದ. ಅಹಂಕಾರದಿಂದ ಮುಕ್ತನಾದವನು, ಶುದ್ಧನಾಗಿದ್ದು ಆತ್ಮ ನಿಗ್ರಹವುಳ್ಳವನು, ತಿಳಿದವನೂ ಜ್ಞಾನಿಯೂ ಆದವನು. ಪಾಪಕೃತ್ಯಗಳನ್ನು ತೊರೆದವನು, ತನ್ನ ವರ್ತನೆಯಿಂದ ಇತರ ಜೀವಿಗಳಿಗೆ ಹಾನಿಯುಂಟು ಮಾಡದವನು ಮತ್ತು ಈ ಎಲ್ಲ ಕಾರಣಗಳಿಂದಾಗಿ ಪೂಜ್ಯನಾದವನು ಮಾತ್ರ ನಿಜವಾದ ಪಂಡಿತ ಎಂದ ಬುದ್ಧ… ಒಮ್ಮೆ ಟೊಕುಸಾನ್ ಎಂಬ ಭಿಕ್ಷು ರುಟಾನ್ ಎಂಬ ಹಿರಿಯ ಭೀಕ್ಷುವನ್ನು ಭೇಟಿಯಾದ. ಆದಾಗಲೇ ಮುಸ್ಸಂಜೆಯಾಗಿತ್ತು. ಟೊಕುಸಾನ್ ತನ್ನನ್ನು ಕಾಡುತ್ತಿದ್ದ ಹಲವಾರು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದ. ಕೆಲ ಸಮಯದ ಬಳಿಕ, ಈಗ ರಾತ್ರಿ ಬಹಳವಾಗಿದೆ. ಮಲಗಿ ವಿಶ್ರಾಂತಿ ತೆಗೆದುಕೋ ಹೋಗು ಅಂತ ರುಟಾನ್ ಅವನನ್ನೆಬ್ಬಿಸಿದ. ಟೊಕುಸಾನ್ ತಲೆಬಾಗಿ, ತೆರಳುವುದಕ್ಕೆಂದು ಬಾಗಿಲ ಬಳಿ ಹೋದವನು, ಹೊರಗೆ ಬಹಳ ಕತ್ತಲೆ ಎಂದು ನಿಂತುಕೊಂಡ… ದೀಪವೊಂದನ್ನು ಹಚ್ಚಿ ಅದನ್ನು ಟೊಕುಸಾನ್‍ಗೆ ಕೊಡಲು ಹೋದ ರುಟಾನ್, ಇನ್ನೇನು ಟೊಕುಸಾನ್ ಅವನ ಕೈಯಿಂದ ದೀಪ ತೆಗೆದುಕೊಳ್ಳಬೇಕು ಎನ್ನುವಾಗ ಅದನ್ನು ಊದಿ ಆರಿಸಿಬಿಟ್ಟ ಒಡನೆಯೇ ಜ್ಞಾನೋದಯವಾದ ಟೊಕುಸಾನ್ ಬೆಳಿಗ್ಗೆ ಎದ್ದವನೇ ರುಟಾನ್ ಬಳಿ ಬಂದು, ಕೇಳಲು ನನ್ನಲ್ಲಿ ಯಾವ ಪ್ರಶ್ನೆಯೂ ಉಳಿದಿಲ್ಲ. ಬರುತ್ತೇನೆ ಎಂದು ಹೇಳುತ್ತಾ ಹೊರಟೇಬಿಟ್ಟ. ಇದು ಝೇನ್ ಕತೆ. ಎಷ್ಟೋ ಬಾರಿ ಅನೇಕ ಪ್ರಶ್ನೆ, ತರ್ಕ, ಜಿಜ್ಞಾಸೆಗಳಿಂದ ದೊರಕದ ಉತ್ತರ ಯಾವುದೋ ಪುಟ್ಟ ಘಟನೆಯಿಂದ ಕ್ಷಣಮಾತ್ರದಲ್ಲಿ ಹೊಳೆದುಬಿಡುತ್ತದೆ..! ಝೇನ್ ಗುರುವೊಬ್ಬ ಹೇಳುವಂತೆ ಸಂಪೂರ್ಣ ಜ್ಞಾನವನ್ನು ಒಂದು ಕ್ಷಣಮಾತ್ರ, ಒಂದು ಕ್ಷಣ ಮಾತ್ರವೇ, ಸಾಕ್ಷಾತ್ಕರಿಸಿಕೊಳ್ಳಬಹುದು. ಮೋಡ ಕವಿದ ಒಂದು ಹುಣ್ಣಿಮೆಯ ರಾತ್ರಿ ಆಗಸದಲ್ಲಿ ನೋಡ ನೋಡುತ್ತಿರುವಂತೆಯೇ ಮೂಡುವ ದಟ್ಟ ಕಾರ್ಮೋಡಗಳ ನಡುವಿನ ಕಿರು ಅಂತರದಲ್ಲಿ ಪೂರ್ಣ ಚಂದ್ರ ಫಕ್ಕನೆ ಪ್ರತ್ಯಕ್ಷವಾಗಿ ಮತ್ತೆ ಮೋಡದ ಮರೆಗೆ ತೆರಳಿದರೆ ಹೇಗೋ ಹಾಗೆ… ನೋಡುಗನ ಮನಸ್ಸಿನಲ್ಲಿ ಉಳಿಯುವುದು ಕಾರ್ಮೋಡವಲ್ಲ. ಹಾಗೆ ಚಕ್ಕನೆ ದರ್ಶನ ನೀಡಿದ ಪೌರ್ಣಮಿಯ ಚಂದಿರ. ಅರಿವಿಲ್ಲದೇನೇ ಆ ಕ್ಷಣದಲ್ಲಿ ಆಹ್ ಎಂಬ ಉದ್ಗಾರ ಹೊರಟು ಸ್ತಬ್ಧವಾಗಿ ನಿಲ್ಲಬಹುದು… ಜಗತ್ತಿನ ಮತ್ತು ತನ್ನ ನಡುವಿನ ಸಂಬಂಧದ ಗೂಢವನ್ನು ಮನುಷ್ಯ ಅರ್ಥಮಾಡಿಕೊಂಡಾಗಲೂ ಇದೇ ಬಗೆಯ ದಿವ್ಯ ಆನಂದದ ಅನುಭವವಾಗುತ್ತದೆ ಎನ್ನುತ್ತಾನೆ ಗೌತಮ… ಮಾನವ ಜೀವಿತದಲ್ಲಿ ಬರುವ ಹುಣ್ಣಿಮೆಗಳು ಅವೆಷ್ಟೋ. ಎಷ್ಟೆಷ್ಟೊ ಬೆಳದಿಂಗಳ ರಾತ್ರಿಗಳಲ್ಲಿ ಆತ ಅನುಭವಿಸಿದ ನೋವು, ಅಪಮಾನ, ಹತಾಶೆ, ಕ್ರೌರ್ಯಗಳ ನೆರಳಿನಲ್ಲಿ ಬೆಳದಿಂಗಳ ತಂತ್ರ ಕಿರಣಗಳೂ ಆತನಿಗೆ ನೋವು ತರಲು ಸಾಧ್ಯವಿದೆ… ಪ್ರಕ್ಷುಬ್ಧ ಮನಸ್ಸಿನ ಎಲ್ಲ ನೇತ್ಯಾತ್ಮಕ ಭಾವನೆಗಳನ್ನು ಬಡಿದೆಬ್ಬಿಸಿ ನಿಟ್ಟುಸಿರಿಡುವಂತೆ ಮಾಡುವ ಆ ಎಲ್ಲ ಧಗೆಯ ಬೆಳದಿಂಗಳ ರಾತ್ರಿಗಳಲ್ಲಿ ಮತ್ತದೇ ಬುದ್ಧನ ಸ್ನೇಹಮಯಿ, ಪ್ರಶಾಂತ ಬೆಳದಿಂಗಳಿನಂತಹ ಅರಿವಿನ ನಗೆಯಷ್ಟೆ ಸಾಂತ್ವನ, ಸ್ಥೈರ್ಯ ನೀಡಬಲ್ಲದು. ಅಂತಹ ಪ್ರತಿ ಬೆಳದಿಂಗಳ ಜ್ಞಾನಿಗೆ, ಗುರುವಿಗೆ ಶರಣೋ ಶರಣು..! ************************** ಕೆ.ಶಿವು. ಲಕ್ಕಣ್ಣವರ

ಬುದ್ಧ ಪೂರ್ಣಿಮಾ ವಿಶೇಷ Read Post »

You cannot copy content of this page

Scroll to Top