ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ನಿನ್ನ ಧ್ಯಾನ ಮಲ್ನಾಡ್ ಮಣಿ ಅರಳು ಮಲ್ಲಿಗೆಯ ಮಾಲೆ ಮಾಡಿ ನಿನ್ನ ಕೊರಳ ಧ್ಯಾನಿಸುತ್ತಲಿರುವೆ. ಎಂದು ಬರುವೆಯೆಂದು ದಾರಿ ಕಾಯುವ ಶಬರಿ ನಾನು. ದೇಹ ಮಲ್ಲಿಗೆ ಗೀಡವು ಭಾವ ಅದರ ಹೂವು, ನಿನ್ನ ನೆನಪಿನ ನೀರನೆರೆದು ಹೂ ಕಿತ್ತು ಕಟ್ಟಿ ಮಾಲೆ ಮಾಡಿದೆ. ನಿನ್ನ ದಾರಿ ಕಾದು ಮತ್ತೆ ಮಲ್ಲೆ ಹೂವ ಕಂಡೆ, ಅರಳು ಮಲ್ಲಿಗೆ ನಗುವ ಬೀರಿತು. ಹೊತ್ತು ಹಾದು ಹೋದರು ನಿನ್ನ ಸುಳಿವು ಕಾಣದು ಬರುವ ಸಂಜೆಗೆಂಪು ನಗುವ ಮಾಸಿತು. ನೆರಳಿನಲ್ಲಿ ನನ್ನ ನೆರಳು ಮುಳುಗಿ ಮಾಯವಾಯಿತು ಮತ್ತೆ ಮಲ್ಲೆ ಹೂವ ಕಂಡೆ ಹೂವು ಭಿರಿದು ಬಾಡಿತು. ನಿನ್ನ ದಾರಿ ಕಾಯುತಿರುವ ಕಾಯ ತಣಿಯದು. ಮತ್ತೆ ನಿನ್ನ ನೇನಪ ಎರೆದು ಭಾವದೊಲುಮೆಯ ಹೂವ ಅರಳಿಸಿ ಮತ್ತೆ ಮಾಲೆ ಮಾಡಿ ಕಾಯುವೆ. ********

ಕಾವ್ಯಯಾನ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಅಭಿವೃದ್ಧಿಯಾಗಬೇಕಾದ ‘ಹೆಳವರು’..! ಅಭಿವೃದ್ಧಿಯಾಗಬೇಕಾದ ‘ಹೆಳವರು’..! ಇವರ ಒಟ್ಟು ಸಂಖ್ಯೆ ಸುಮಾರು 80 ಸಾವಿರಬಹುದು. ಇದಿಷ್ಟೇ ಈ ಜಾನಂಗದ ಜನರಿಗೆ 180 ಕ್ಕೂ ಹೆಚ್ಚು ಬೆಡಗುಗಳು ಅಥವಾ ಕುಲಗಳು ಇರಬಹುದು. ಅಂದರೆ, ಪ್ರತಿ 444 ಜನರಿಗೆ ಒಂದು ‘ಕುಲ’ವಾಯಿತು..! ಅಲ್ಪಸ್ವಲ್ಪ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರೂ ಇವರ ಮೂಲ ವೃತ್ತಿ ಭಿಕ್ಷಾಟನೆಯಾಗಿದೆ. ಈ ಜನಾಂಗ ಇವರ ಮೂಲ ಕಸುಬಾದ ಭಿಕ್ಷಾಟನೆ ಬಿಟ್ಟಿಲ್ಲ.ಅದೂ ಈ ಜನರು ಎಲ್ಲರ ಮನೆಗೆ ಅಂದರೆ ಕಂಡ, ಕಂಡವರ ಮನೆಗೆ ಭಿಕ್ಷಾಟನೆಗೆ ಹೋಗುವುದಿಲ್ಲ. ತಮ್ಮ ಒಕ್ಕಲು ಮನೆಯವರ ಮನೆಗೆ ಮಾತ್ರ ಭಿಕ್ಷಾಟನೆಗೆ ಹೋಗುತ್ತಾರೆ ಅಷ್ಟೇ… ಇವರು ಅಂಗವಿಕಲರಲ್ಲ. ಆದರೂ ಅಂಗವೈಕಲ್ಯತೆಗೆ ಸಮಾನವಾದ ಪದದಿಂದ ಇವರನ್ನು ಸಂಬೋಧಿಸಲಾಗುತ್ತದೆ… ಅವರೇ ಈ ಹೆಳವರು…– ಗ್ರಾಮೀಣ ಪ್ರದೇಶದಲ್ಲಿ ಹೆಳವ ಎಂದರೆ ಸ್ವಾಧೀನ ಕಳೆದುಕೊಂಡ ಕಾಲನ್ನು ಹೊಂದಿರುವವನೆಂದರ್ಥ. ಹೆಳವ ಎಂಬುದು ಒಂದು ‘ಬುಡಕಟ್ಟು ಸಮುದಾಯದ’ ಹೆಸರು ಮಾತ್ರ. ಈ ಸಮುದಾಯಕ್ಕೆ ಹೆಳವ ಎಂಬ ಹೆಸರು ಬಂದಿದ್ದಕ್ಕೆ ಹಲವಾರು ಐತಿಹ್ಯಗಳಿವೆ. ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ವ್ಯವಸಾಯ ಮಾಡುವ ಒಂದು ಕುಟುಂಬದಲ್ಲಿ 6 ಮಂದಿ ಗಂಡು ಮಕ್ಕಳಿರುತ್ತಾರೆ. ಅದರಲ್ಲಿ ಒಬ್ಬನಿಗೆ ಕಾಲು ಊನವಾಗಿರುತ್ತದೆ. ಆದರೆ, ಉಳಿದ ಐವರಿಗೆ ಈತನನ್ನು ಕಂಡರೆ ಆಗಿಬರುತ್ತಿರಲಿಲ್ಲ. ಏಕೆಂದರೆ ನಾವೆಲ್ಲಾ ದುಡಿದು ತಂದಿದ್ದನ್ನು ಈತ ತಿನ್ನುತ್ತಾನೆ ಎಂಬ ಅಲಕ್ಷ್ಯ ಅವರಿಗಿತ್ತು. ಆದರೆ, ತಾಯಿಗೆ ಮಾತ್ರ ಈ ಊನ ಮಗನನ್ನು ಕಂಡರೆ ಎಲ್ಲಿಲ್ಲದ ಅಕ್ಕರೆ. ಇದರಿಂದ ಆಕ್ರೋಶಗೊಂಡ ಐವರು ಅಣ್ಣತಮ್ಮಂದಿರು ಕುಂಟ ಸೋದರನನ್ನು ಹತ್ಯೆ ಮಾಡಲೂ ಮುಂದಾಗುತ್ತಾರೆ. ಆದರೆ, ಮನೆಯಲ್ಲಿ ಸಾಕಿದ್ದ ಬಸವ(ಎತ್ತು) ಪ್ರತಿ ಸಂದರ್ಭದಲ್ಲೂ ಕುಂಟನ ನೆರವಿಗೆ ಬರುತ್ತದೆ. ಕಡೆಗೊಂದು ದಿನ ಆಸ್ತಿ ಪಾಲು ಮಾಡುವ ಸಂದರ್ಭದಲ್ಲಿ ಮನೆಯ ಹಿರಿಯರೆಲ್ಲಾ ಮಕ್ಕಳನ್ನು ಕೂರಿಸಿ ಐವರು ಮಕ್ಕಳಿಗೆ ಆಸ್ತಿ ಪಾಲು ಮಾಡುತ್ತಾರೆ. ಕುಂಟನಿಗೆ ಸ್ವಂತಕ್ಕೆ ದುಡಿದು ತಿನ್ನುವ ಶಕ್ತಿ ಇಲ್ಲ ಎಂಬ ಕಾರಣಕ್ಕೆ ಆತನ ಮುದ್ದಿನ ಎತ್ತು ಮತ್ತು ಗಂಟೆಯನ್ನು ನೀಡುತ್ತಾರೆ. ಈತ ಪ್ರತಿ ವರ್ಷ ಸುಗ್ಗಿ ಕಾಲದಲ್ಲಿ ಎತ್ತಿನ ಮೇಲೆ ಸವಾರಿ ಮಾಡಿ ಗಂಟೆಯನ್ನು ಬಾರಿಸುತ್ತಾ ಐವರು ಸೋದರರ ಮನೆಗೆ ಹೋಗಿ ತನ್ನ ಪಾಲಿನ ಕಾಳು ಕಡ್ಡಿಯನ್ನು ಭಿಕ್ಷಾ ರೂಪದಲ್ಲಿ ತಂದು ತಿನ್ನಬೇಕೆಂಬ ಷರತ್ತು ವಿಧಿಸುತ್ತಾರೆ. ಕಾಲಕ್ರಮೇಣ ಈ ಕುಂಟನ ವಂಶವೃಕ್ಷ ಬೆಳೆಯಿತಾದರೂ ಕುಟುಂಬದಲ್ಲಿ ಯಾರೂ ಊನಗೊಂಡವರಿರಲಿಲ್ಲ. ಆದರೆ, ಅಪ್ಪ ಮಾಡಿದ ಭಿಕ್ಷಾಟನೆಯನ್ನು ಮಕ್ಕಳು, ಅವರ ಮಕ್ಕಳು ಮುಂದುವರೆಸುತ್ತಾ ಬಂದರು. ಇದು ಮುಂದೊಂದು ದಿನ ದೊಡ್ಡ ಸಂಸಾರವಾಗಿ ರೂಪುಗೊಂಡಿದೆ. ಇದೇ ಕಾರಣಕ್ಕಾಗಿ ಈ ಕುಟುಂಬ ಅಥವಾ ವಂಶವನ್ನು ‘ಹೆಳವ’ ಎಂದು ಕರೆಯಲಾಯಿತು ಎಂಬ ಪ್ರತೀತಿ ಪುರಾಣಗಳಲ್ಲಿ ದಾಖಲಾಗಿದೆ..! ಭಿಕ್ಷಾಟನೆ ಒಕ್ಕಲಿಗರ ಅಥವಾ ಕೃಷಿಕರ ಮನೆಯಲ್ಲಿ ಭಿಕ್ಷೆ ಎತ್ತುವ ಈ ಕಾಯಕ ಇಂದಿಗೂ ಮುಂದುವರೆದಿದೆ… ಎತ್ತಿನ ಮೇಲೆ ಸವಾರಿ ಮಾಡುತ್ತಾ ಇಡೀ ಕುಟುಂಬದೊಂದಿಗೆ ಊರಿಂದ ಊರಿಗೆ ಅಲೆಯುತ್ತಾ ಬಂದಿದ್ದ ಈ ಸಮುದಾಯವನ್ನು ಅಲೆಮಾರಿಗಳೆಂದು ಪರಿಗಣಿಸಲಾಗಿದೆ. ಇವರನ್ನು ಬುಡಕಟ್ಟು ವರ್ಗದವರೆಂದು ಹೇಳಲಾಗುತ್ತಿದ್ದರೂ ಕಾಡು ಮೇಡುಗಳಲ್ಲಿ ಜೀವಿಸುವುದಿಲ್ಲ. ಜನವಸತಿ ಪ್ರದೇಶಗಳಲ್ಲಿ ಜನರೊಂದಿಗೆ ಬೆರೆತು ಜೀವನ ಸಾಗಿಸುತ್ತಿದ್ದಾರೆ. ಅಲೆಮಾರಿಗಳು ಎಂದು ಕರೆಯಿಸಿಕೊಂಡಿದ್ದರೂ ಇತ್ತೀಚಿನ ದಿನಮಾನದಲ್ಲಿ ಹೆಳವರು ಒಂದು ಊರಿನಲ್ಲಿ ನೆಲೆ ನಿಂತಿದ್ದಾರೆ. ಆ ಊರಿನಿಂದಲೇ ತಮ್ಮ ಭಿಕ್ಷಾಟನೆ ಕಾಯಕವನ್ನು ನಡೆಸುತ್ತಿದ್ದಾರೆ… ಈ ಸಮುದಾಯದ ಹೆಚ್ಚು ಜನ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲೇ ವಾಸವಾಗಿದ್ದರೆ. ಅಂದರೆ, ಈ ಜಿಲ್ಲೆಯಲ್ಲಿ ಸುಮಾರು 14 ಸಾವಿರದಷ್ಟು ಜನ ಇದ್ದಾರೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಸುಮಾರು 12 ಸಾವಿರದಷ್ಟಿದ್ದಾರೆ… ಉಳಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಹರಿದು ಹಂಚಿ ಹೋಗಿರುವ ಸಮುದಾಯದ ಒಟ್ಟು ಕುಟುಂಬಗಳ ಸಂಖ್ಯೆ ಸುಮಾರು 14 ಸಾವಿರ ಇದ್ದರೆ, ಜನಸಂಖ್ಯೆ ಸುಮಾರು 80 ಸಾವಿರ… ಈ ಸಮುದಾಯದಲ್ಲಿ ಪ್ರಮುಖವಾಗಿ ಎತ್ತಿನ ಹೆಳವರು, ಗಂಟೆ ಹೆಳವರು ಮತ್ತು ಚಾಪೆ ಹೆಳವರು ಎಂದು ಗುರುತಿಸಲಾಗಿದೆ… ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಎತ್ತಿನ ಹೆಳವರು ಕಂಡುಬಂದರೆ, ದಕ್ಷಿಣ ಕರ್ನಾಟಕದಲ್ಲಿ ಗಂಟೆ ಹೆಳವರಿದ್ದಾರೆ. ಅದೇ ರೀತಿ ಬೀದರ್, ಗುಲ್ಬರ್ಗಾ, ಬಳ್ಳಾರಿ ಮತ್ತು ಶಿವಮೊಗ್ಗ, ಗದಗ ಸುತ್ತಮುತ್ತಲಿನ ಪ್ರದೇಶಗಳ ಜಿಲ್ಲೆಗಳಲ್ಲಿ ಚಾಪೆ ಹೆಳವರು ಜೀವಿಸುತ್ತಿದ್ದಾರೆ… ಎತ್ತಿನ ಹೆಳವರು ಮತ್ತು ಗಂಟೆ ಹೆಳವರು ಚಾಪೆ ಹೆಳವರಿಗಿಂತ ಮೇಲ್ದರ್ಜೆಯವರೆಂದು ಹೇಳಲಾಗುತ್ತದೆ. ಏಕೆಂದರೆ, ಎತ್ತಿನವರು ಮತ್ತು ಗಂಟೆ ಹೆಳವರ ಸಂಪ್ರದಾಯಗಳಲ್ಲಿ ಬಹುತೇಕ ಸಾಮ್ಯತೆ ಕಂಡುಬರುತ್ತದೆ. ಗಂಟೆ ಹೆಳವರು ತಮ್ಮ ಬಗಲಲ್ಲಿ ದೊಡ್ಡ ಜೋಳಿಗೆ ಹಿಡಿದು ಗಂಟೆ ಬಾರಿಸುತ್ತಾ ನಿಗದಿತ ಒಕ್ಕಲುಗಳಿಗೆ ಅಂದರೆ ಕೃಷಿ ಮಾಡುವ ಒಂದು ಸಮುದಾಯದ ಮನೆಗಳಿಗೆ ಹೋಗಿ ಭಿಕ್ಷೆ ಎತ್ತುತ್ತಾರೆ. ಅವರು ಬಾರಿಸುವ ಗಂಟೆಯನ್ನು ಅವರ ಒಕ್ಕಲುಗಳೇ ಕೊಡಿಸಿರುತ್ತಾರೆ. ಅವರು ಕೊಡಿಸಿದ ಗಂಟೆಯನ್ನು ಅದೇ ಒಕ್ಕಲುಗಳಲ್ಲಿ ಬಾರಿಸಬೇಕು. ಒಂದು ಒಕ್ಕಲಿನ ಗಂಟೆಯನ್ನು ಮತ್ತೊಂದು ಒಕ್ಕಲಲ್ಲಿ ಬಾರಿಸಿದರೆ ಅದು ಅಪರಾಧವಾದಂತೆ… ಆದರೆ, ಎತ್ತಿನ ಹೆಳವರು ಎತ್ತಿನ ಮೇಲೆ ಸವಾರಿ ಮಾಡಿಕೊಂಡು ಭಿಕ್ಷಾಟನೆ ಮಾಡುತ್ತಾರೆ. ಇದೊಂದು ವೈರುಧ್ಯ ಬಿಟ್ಟರೆ ಎರಡೂ ಪಂಗಡಗಳಲ್ಲಿ ಒಂದೇ ರೀತಿಯ ಸಂಪ್ರದಾಯವಿದೆ… ಆದರೆ, ಭಿಕ್ಷಾಟನೆಯಲ್ಲಿ ತೊಡಗಿದರೂ ಚಾಪೆ ಹೆಳವರು ಹಂದಿಯನ್ನು ಸಾಕುತ್ತಾರೆ. ಇವರಿಗೆ ಇಂತಹದ್ದೇ ಒಕ್ಕಲಲ್ಲಿ ಭಿಕ್ಷೆ ಬೇಡಬೇಕೆಂಬ ನಿಬಂಧನೆಯೂ ಇಲ್ಲ. ಹೀಗಾಗಿ ಈ ಸಮುದಾಯ ಕೀಳು ಎಂಬ ಸಂಪ್ರದಾಯ ಕೆಲವರಲ್ಲಿ ಇದೆ… ಎತ್ತಿನ ಮತ್ತು ಗಂಟೆ ಹೆಳವರ ಮಧ್ಯೆ ವೈವಾಹಿಕ ಸಂಬಂಧಗಳು ಇವೆಯಾದರೂ ಈ ಪಂಗಡಗಳು ಚಾಪೆ ಹೆಳವರ ಜತೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ… ಕೆಲವೇ ಕೆಲವು ಸಾವಿರದಷ್ಟು ಜನಸಂಖ್ಯೆ ಇರುವ ಈ ಮೂರು ಪಂಗಡಗಳಲ್ಲಿ ಅರಳಿ ಕುಲ, ಬಳಗಾರ ಕುಲ, ಬೆಳಗೂಗಿನವರು, ಬೇವಿನವರು, ಬೊಮ್ಮ, ಮಂಗಲವರು, ಮುತ್ತಿನ ಸತ್ತರಗಿಲವರು, ಮನೆಗಲವರು, ವಜಮೂನಿಯವರು, ಸಂಕಲವರು, ಸದರಿನವರು, ಹಾವುಲವರು, ಬಂಡಿಕುಲ, ಬಂಗಾರ ಕುಲ, ಗಂಟ ಕುಲ, ಜ್ಯೋತಿಕುಲ ಹೀಗೆ ಬರೋಬ್ಬರಿ 180 ಕ್ಕೂ ಅಧಿಕ ಬೆಡಗುಗಳಿವೆ… ಇವರನ್ನು ‘ಕುಲ ಕೊಂಡಾಡುವರು’ ಎಂತಲೂ ಕರೆಯಲಾಗುತ್ತದೆ. ಏಕೆಂದರೆ, ಕೈಲೊಂದು ದಪ್ಪನೆಯ ಪುಸ್ತಕ. ಆ ಪುಸ್ತಕದಲ್ಲಿ ಭಿಕ್ಷಾಟನೆಗೆ ಹೋಗುವ ಒಕ್ಕಲುಗಳ ವಂಶವಾಳಿಯನ್ನು ನಮೂದಿಸಿರುತ್ತಾರೆ. ಇದನ್ನೇ ಭಿಕ್ಷಾಟನೆ ಸಂದರ್ಭದಲ್ಲಿ ಹೇಳಿ ಭಿಕ್ಷೆ ನೀಡುವಂತೆ ಮನವೊಲಿಸುತ್ತಾರೆ. ಇಂತಹ ಬೃಹತ್ ಪುಸ್ತಕಕ್ಕೆ ‘ಚಿಪ್ಪೋಡು’ ಎನ್ನಲಾಗುತ್ತದೆ… ಅನಾದಿ ಕಾಲದಿಂದಲೂ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿಯುತ್ತಾ ಬಂದಿರುವ ಹೆಳವರ ಪರಿಸ್ಥಿತಿಯಲ್ಲಿ ಪ್ರಸ್ತುತ ಯಾವುದೇ ಬದಲಾವಣೆ ಕಾಣಲು ಸಾಧ್ಯವಾಗಿಲ್ಲ. ಕೃಷಿಯನ್ನು ಅವಲಂಬಿಸಿದ್ದ ಒಕ್ಕಲುಗಳಲ್ಲಿ ಬಹುತೇಕ ಮಂದಿ ವೃತ್ತಿಯನ್ನು ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಇಲ್ಲವೇ ಪರ್ಯಾಯ ಉದ್ಯೋಗ ಮಾಡುತ್ತಿದ್ದಾರೆ. ಹೀಗಾಗಿ ಈ ಒಕ್ಕಲುಗಳನ್ನೇ ನಂಬಿದ್ದ ಹೆಳವರಿಗೆ ಭಿಕ್ಷೆ ಇಲ್ಲವಂತಲ್ಲ, ಈ ಜನರು ಈಗ ಕಡಿಮೆಯಾಗಿದೆ ಅಷ್ಟೇ… ಹೀಗಾಗಿ ಭಿಕ್ಷಾಟನೆಯೂ ಕಡಿಮೆಯಾಗುತ್ತದೆ. ಬಹುತೇಕ ಕುಟುಂಬಗಳು ಕೂಲಿ ನಾಲಿ ಬದುಕು ಸವೆಸುವಂತಹ ದುಸ್ಥಿತಿ ಬಂದೊದಗಿದೆ. ಆದರೆ, ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಬೆರಳೆಣಿಕೆಯಷ್ಟು ಕುಟುಂಬಗಳು ಮೂಲ ವೃತ್ತಿಯನ್ನು ಬಿಡದೇ ಮುಂದುವರೆಸಿಕೊಂಡು ಬಂದಿವೆ. ಇನ್ನೂ ಕೆಲವರು ಅಲ್ಪಸ್ವಲ್ಪ ಕೃಷಿ ಭೂಮಿ ಹೊಂದಿ ಕೃಷಿಯತ್ತ ವಾಲಿದ್ದಾರೆ… ಇನ್ನು ಶೈಕ್ಷಣಿಕವಾಗಿ ಒಂದೊಂದೇ ಹೆಜ್ಜೆ ಮುಂದೆ ಬರುತ್ತಿರುವ ಸಮುದಾಯದ ಕೆಲವರು ನ್ಯಾಯಾಧೀಶರು, ವಕೀಲರು, ವೈದ್ಯ ವೃತ್ತಿ ಸೇರಿದಂತೆ ಮತ್ತಿತರೆ ಉನ್ನತ ಹುದ್ದೆಗೇರಿದ್ದಾರೆ. ಆದರೆ, ಇಂತಹವರ ಸಂಖ್ಯೆ ಗೌಣವಾಗಿದೆ. ಆದರೆ, ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಎಂಬುದು ಮರೀಚಿಕೆಯೇ ಎನ್ನಬಹುದು… ತೀರಾ ಕೆಳಸ್ತರದ ಜೀವನ ಸಾಗಿಸುತ್ತಿರುವ ಸಮುದಾಯವನ್ನು ಸರ್ಕಾರಗಳು ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿವೆ. ಆದರೆ, ಇದರಿಂದಾಗಿ ಇತರೆ ಸಮುದಾಯಗಳ ಜತೆ ಮೀಸಲಾತಿ ವಿಚಾರದಲ್ಲಿ ಸ್ಪರ್ಧಿಸಲಾಗದೇ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿದೆ… ಸಮಾಜದಲ್ಲಿ ತೀರಾ ಹಿಂದುಳಿದಿರುವ ಹೆಳವರು ಬುಡಕಟ್ಟು ವರ್ಗಕ್ಕೆ ಸೇರಿದವರಾಗಿದ್ದಾರೆ. ಆದರೆ, ಇವರನ್ನು ಇತರೆ ಹಿಂದುಳಿದ ವರ್ಗಕ್ಕೆ ಸೇರಿಸಿರುವುದರಿಂದ ಸೂಕ್ತ ರೀತಿಯಲ್ಲಿ ಸರ್ಕಾರದ ಯಾವುದೇ ಮೀಸಲಾತಿ ಸೌಲಭ್ಯಗಳು ಸಿಗಂತಾಗಿವೆ. ಈ ಹಿನ್ನೆಲೆಯಲ್ಲಿ ಹೆಳವರು ಸೇರಿದಂತೆ ಎಲ್ಲಾ ಬುಡಕಟ್ಟು ಸಮುದಾಯಗಳಿಗೆ ಎಸ್ಸಿ, ಎಸ್ಟಿ ಮಾದರಿಯಲ್ಲಿ ಪ್ರತ್ಯೇಕ ವರ್ಗವನ್ನು ರೂಪಿಸಿ ಪ್ರತ್ಯೇಕ ಮೀಸಲಾತಿ ನೀಡಬೇಕು. ಈ ಮೂಲಕ ಇವರಿಗೆ ಸಂವಿಧಾನಬದ್ಧವಾದ ಸೌಲಭ್ಯಗಳನ್ನು ಕಲ್ಪಿಸಿ ಅವರ ಶ್ರೇಯೋಭಿವೃದ್ಧಿಗೆ ನಾಂದಿ ಹಾಡಬೇಕಿದೆ… (ಡಾ.ಎ.ಎಸ್. ಪ್ರಭಾಕರ. ಬುಡಕಟ್ಟು ಅಧ್ಯಯನ ವಿಭಾಗದ ಮಾಹಿತಿ ಹೆಕ್ಕಿ ತೆಗೆಯಲಾಗಿದೆ, ಕನ್ನಡ ವಿಶ್ವವಿದ್ಯಾಲಯ) ****** ಕೆ.ಶಿವು ಲಕ್ಕಣ್ಣವರ

ಸ್ವಾತ್ಮಗತ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಈ ಬೆಳಗು ಎಂದಿನಂತಿಲ್ಲ ಈ ಬದುಕು ಎಂದಿನಂತಿಲ್ಲ ಅಲೆಗಳೆಷ್ಟು ಕ್ಷುಬ್ಧವಾಗಿವೆ ಈ ಕಡಲು ಎಂದಿನಂತಿಲ್ಲ ಮಧುಶಾಲೆಗೇ ಗರ ಬಡಿದು ಈ ಗುಟುಕು ಎಂದಿನಂತಿಲ್ಲ ಎಂಥ ಮರುಳಿತ್ತು ಸಂಜೆಯಲ್ಲಿ ಈ ಇರುಳು ಎಂದಿನಂತಿಲ್ಲ ಮುಖ ತಿರುಗಿಸಿ ನಡೆದಳಲ್ಲ ಯಾಕವಳು ಎಂದಿನಂತಿಲ್ಲ ಎದೆಯೂಟೆ ಬತ್ತಿಹೋಯಿತೇ ಈ ಮಡಿಲು ಎಂದಿನಂತಿಲ್ಲ ಬಾಂದಳಕೆ ಬೆಂಕಿ ಬಿದ್ದಿದೆ ಈ ಮುಗಿಲು ಎಂದಿನಂತಿಲ್ಲ ಸಾಂತ್ವನವ ಅರಸಿದೆ ‘ಜಂಗಮ’ ಈ ಹೆಗಲು ಎಂದಿನಂತಿಲ್ಲ ********

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಹಿಂದಿನ ಬೆಂಚಿನ ಹುಡುಗಿಯರು ಕೃತಿ: ಹಿಂದಿನ ಬೆಂಚಿನ ಹುಡುಗಿಯರು ಲೇಖಕಿ :- ಶೈಲಜಾ ಹಾಸನ  # ಸಾಬು :-             ತನಗೆಷ್ಟೇ ಕಷ್ಟಗಳಿದ್ದರೂ ಮಗ  ತನ್ನಂತೆ ಆಗಬಾರದೆಂದು ಹೊಟ್ಟೆ ಬಟ್ಟೆ ಕಟ್ಟಿ, ಬೀದಿ ಬೀದಿ ಅಲೆದು ಕಷ್ಟಪಟ್ಟು ಮಗನನ್ನು ದೊಡ್ಡ ವ್ಯಕ್ತಿ ಯಾಗಿಸುವ ತಂದೆ. ಇಳಿ ವಯಸ್ಸಿನಲ್ಲಿ ತನ್ನ ತಂದೆ ತಾಯಿಗೆ  ಮತ್ತೊಂದು ಮಗುವಾಗುವುದನ್ನು ಅರಿತು ಅವರನ್ನು ದೂರ ಮಾಡುವ ಮಗ. ಹುಟ್ಟಲಿರುವ ಮಗುವಿನ ಬದುಕನ್ನು ಕಟ್ಟಲು ಮತ್ತೆ ತನ್ನ ವೃದ್ಧಾಪ್ಯದಲ್ಲಿ ಪಾತ್ರೆ ಪಗಡೆ ಮಾರಾಟಕ್ಕೆ ಹೊರಡುವ ಅಪ್ಪ.          ಇಲ್ಲಿ ಯಾರದ್ದು  ಸರಿ ಯಾರದ್ದು  ತಪ್ಪು ಎಂದು ಏಳುವ ಪ್ರಶ್ನೆಗಳು. ಸುಂದರವಾಗಿ ಹೆಣೆಯಲ್ಪಟ್ಟ ಕಥೆ ಬಂದು ನಿಲ್ಲುವುದು ನೂರಾರು ಪ್ರಶ್ನೆಗಳನ್ನು ಓದುಗನ ಮನದಲ್ಲಿ ಹುಟ್ಟು ಹಾಕುತ್ತಾ.          ಸಾಬುವಿಗೆ ತನ್ನ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಇರುವವಳು ಗೌರಕ್ಕ. ಇಲ್ಲಿ ಜಾತಿ ಭೇದಗಳಿಂದ ಹೊರತಾಗಿ ಅರಳುವ ಮನಸ್ಸುಗಳು, ಸುಂದರ ಸ್ನೇಹ ಸಂಬಂಧಗಳನ್ನು ನಾವು ಕಾಣಬಹುದು.           ಹೌದು, ಮಾನವೀಯ ದೃಷ್ಟಿಯಿಂದ ಮಗನೇಕೆ ಅಪ್ಪನನ್ನು ತನ್ನೊಡನೆ ಇರಿಸಿಕೊಳ್ಳಬಾರದು?, ಅರಿವಿಲ್ಲದೆ ವೃದ್ಧಾಪ್ಯದಲ್ಲಿ ಕಾಲಿರಿಸುತ್ತಿರುವಾಗ ಮತ್ತೊಂದು ಮಗು ಹುಟ್ಟುವುದು ಅಕ್ಷಮ್ಯ ಅಪರಾಧವೇ?, ಸರಿ ಸಾಬುವಿನದು ಅವಿವೇಕವೇ ಅಂದುಕೊಳ್ಳೋಣ ,ಆಗಿ ಹೋದ ಕಾರ್ಯಕ್ಕೆ ಏನು ಮಾಡಲು ಸಾಧ್ಯ?, ಇವೆಲ್ಲದರ ನಡುವೆ ಜಗತ್ತಿಗೆ ಕಾಲಿರಿಸಿ ಹೊರಟ ಮುಗ್ಧ ಜೀವದ ತಪ್ಪೇನು? ಹೀಗೆ ಕತೆಯನ್ನು ಓದಿದ ನಂತರ ಹುಟ್ಟಿಕೊಳ್ಳುವ ಹತ್ತು ಹಲವಾರು ಪ್ರಶ್ನೆಗಳು. # .ಮೌನ ಮನದ ವೀಣೆ :-                ಪ್ರೀತಿಯಂತಹ ವಿಚಾರ ಬಂದಾಗ ಮನಸ್ಸುಗಳು ಒಡೆದು, ಹೆತ್ತವರು ಹಾಗೂ ಮಕ್ಕಳ ನಡುವೆ ಕಿತ್ತಾಟ ನಡೆದು, ಮಕ್ಕಳು ಹೆತ್ತವರನ್ನು ತೊರೆದು ಸಾಗುವ ದೃಶ್ಯವೇ ಎಲ್ಲೆಡೆ ಕಾಣ ಸಿಗುವುದು. ಆದರೆ ಇಲ್ಲಿ ಕಥೆಯಲ್ಲಿ ಮಗನೆನಿಸಿಕೊಂಡವ ಪ್ರೀತಿಸಿ ಮದುವೆಯಾದರೂ, ತಾಯಿ ಅವನ ಬಳಿ ಮಾತೇ ಆಡದೆ ಇದ್ದರೂ, ಅವನು ಮಾತ್ರ ತನ್ನೆಲ್ಲ ದಿನಚರಿ, ಹೆಂಡತಿ ಮಗುವಿನ ಜತೆಗಿನ ಒಡನಾಟ ಎಲ್ಲವನ್ನೂ ವರದಿ ಒಪ್ಪಿಸುತ್ತಿರುತ್ತಾನೆ. ಆದರೆ ಆ ಅಮ್ಮನೆಂಬ ದೇವತೆ ಮಾತ್ರ ಕಲ್ಲು ಆಗಿರುತ್ತಾಳೆ. ಇಲ್ಲಿ ಅವಳೇಕೆ ಅವಳ ಮನಸ್ಸಿನಲ್ಲಿರುವ ಬಿಗುಮಾನವನ್ನು  ಮರೆತು ಮಗನನ್ನು ಸ್ವೀಕರಿಸಬಾರದು ಅನ್ನುವ ಪ್ರಶ್ನೆ ಏಳುತ್ತದೆ. ಮಗನಾದರೂ ಅಷ್ಟೇ ತನ್ನ ಹೆಂಡತಿ ಮಗುವನ್ನು ಜೊತೆಗೆ ಕರೆದುಕೊಂಡು ಹೋಗಿ ಅಮ್ಮನನ್ನು ಓಲೈಸಿ ಸಂತೈಸ ಬಾರದೆ?. ಹಠವೆಂಬುದು ಹಾಗೇನೇ ಮನಗಳನ್ನು ಸೇರಿಕೊಂಡ ಬಳಿಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಸಾಗುತ್ತದೆ. ಒಮ್ಮೆ ಆವರಿಸಿ ದಲ್ಲಿ ಅದರ ಹಿಡಿತದಿಂದ ಹೊರಬರುವುದು ಕಷ್ಟ.           ಬಾಲ್ಯದಲ್ಲಿ ತಾನು ಇಷ್ಟಪಡದ ವಿಚಾರವನ್ನೇ ಅವನ ಮಗಳು ಬಹಳ ಇಷ್ಟಪಟ್ಟಾಗ ಕಥಾನಾಯಕನಿಗೆ ಅದು ಅಪ್ಯಾಯಮಾನವಾಗುತ್ತದೆ. ಆದರೆ ಚಿಕ್ಕವನಿರುವಾಗ ಆ ವಿಚಾರ ಅವನಮ್ಮ ಇಷ್ಟಪಟ್ಟಾಗ ಅವಳು ಅದರಿಂದ ವಿಮುಖಳಾಗುವಷ್ಟು ಹಠ ಹಿಡಿದು ಅವಳು ಅದರ ಪ್ರತಿ ಆಕರ್ಷಿತಳಾಗದಂತೆ  ಹಠ ಹೂಡಿರುತ್ತಾನೆ. ಇಲ್ಲಿ ಸ್ಪಷ್ಟವಾಗಿ ಕಾಣುತ್ತಿರುವುದು ಪ್ರತಿಯೊಬ್ಬನ ಸ್ವಾರ್ಥ. ” ಮೌನ ಮನದ ವೀಣೆಯ ಝೇಂಕಾರ, ಕೇಳದಷ್ಟು ಹೃನ್ಮನಗಳಿಲ್ಲಿ ದೂರ, ಬದುಕೋ…  ಸ್ವಾರ್ಥ,  ಹಠ,  ಛಲಗಳೇ ತುಂಬಿ ಭೋರ್ಗರೆಯೋ ಸಾಗರ, ಆಗಿರಲು ಹೇಗಾದೀತು ಪ್ರೀತಿ, ಪ್ರೇಮ,  ಮಮತೆಯ ತಂಗಾಳಿಯ ಸಂಚಾರ??? “. #. ಹಿಂದಿನ ಬೆಂಚಿನ ಹುಡುಗಿಯರು :-           ಹದಿ ಹರೆಯ ಕಾಲಿಡುವ ಹೊತ್ತಿನ ಬದುಕಿನ ಅನಾವರಣ. ಹೆಣ್ಣು ಹೂವಂತೆ, ಅರಳುವ ಪ್ರಾಯದ ತವಕ, ತಲ್ಲಣ, ಅರೆ ಬಲಿತ ಮನಸ್ಸುಗಳು ಹೇಗಿರುತ್ತವೆ ಅನ್ನುವುದರ ಕುರಿತಾದ ವಿವರ. ಮುಗ್ಧತೆಯ ಪರಮಾವಧಿಯ ವಯಸ್ಸು .ಒಳಿತು ಕೆಡುಕಿನ ನಡುವಿನ ವ್ಯತ್ಯಾಸ ಅರಿಯದ ಪ್ರಾಯ. ಶಾಲೆಯಂತಹ ದೇಗುಲದಲ್ಲಿ ಎಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇರುತ್ತಾರೆ ಹಾಗೂ ಗೋಮುಖ ವ್ಯಾಘ್ರ ದಂತಹ ಮುಖವಾಡಧಾರಿ ಅಧ್ಯಾಪಕರುಗಳು ಇರುತ್ತಾರೆ ಅನ್ನುವುದನ್ನು ಬಯಲಾಗಿಸುವ ಕಥೆ. ಗುರುವೆಂದರೆ ದೇವರ ಸಮಾನ. ಆದರೆ ಈ ಗೌರವವನ್ನು ಉಳಿಸಿಕೊಳ್ಳುವಂತಹ ಯೋಗ್ಯತೆ ಹಲವರಲ್ಲಿ ಇರುವುದಿಲ್ಲ. ಏನೂ ಅರಿಯದ ಮುಗ್ಧ ಹೂವುಗಳು ಅರಳುವ ಮುನ್ನವೇ ಕಮರುವಂತೆ ಮಾಡುವ ರಾಕ್ಷಸರು ಬಹಳ ಮಂದಿ ಇರುತ್ತಾರೆ ಗುರುವಿನ ರೂಪದಲ್ಲಿ. ಇವತ್ತಿನ ದಿನಗಳಲ್ಲಿ ಇಂತಹ ಸಮಸ್ಯೆ ಬಹಳ ಹೆಚ್ಚಾಗಿದೆ. “ಹಿಂದಿನ ಬೆಂಚಿನ ಹುಡುಗಿಯರು” ಕಥೆಯ ಮೂಲಕ ಇಲ್ಲಿ ಲೇಖಕಿ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಊರುಗಳ ಶಾಲೆಗಳಲ್ಲಿ ಕಾಣ ಸಿಗುವಂತಹ ಒಂದು ಸಾಮಾಜಿಕ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದ್ದಾರೆ. ವಿದ್ಯೆ ಹೇಳಿಕೊಡುವ ಗುರುವೇ ಕಾಮ ಪಿಪಾಸುವಾದರೆ ಏನು ಮಾಡಬಹುದು….?         ಹದಿಹರೆಯದ ವಯಸ್ಸೇ ಹಾಗೆ ಎಲ್ಲದರಲ್ಲೂ ಕುತೂಹಲ, ಏನೂ ಅರಿಯದ ಪ್ರಾಯ ಈ ವಯಸ್ಸಲ್ಲಿ ಬದುಕು ಹಳಿ ತಪ್ಪಿದರೆ ಮುಂದೆ ಬಾಳು ನರಕ ದೃಶ್ಯವೇ ಸರಿ. #. ಎಲ್ಡು ಕೊಡ ನೀರು :-             ಕೆಲವು ಬಡವರ ಬೀದಿಗಳಲ್ಲಿ ಕುಡಿಯುವ ನೀರಿನ ಬವಣೆ ಎಷ್ಟಿದೆ ಎನ್ನುವ ಚಿತ್ರಣವನ್ನು ಓದುಗರ ಕಣ್ಣ ಮುಂದೆ ಬಿಚ್ಚಿಡುವ ಕಥೆ. ಎರಡು ಕೊಡ ನೀರು ಒಂದು ಜೀವವನ್ನು ಬಲಿ ಪಡೆದ ಘಟನೆ ಹೃದಯವಿದ್ರಾವಕ . ಇಲ್ಲಿ ಜನರ ಅನಾಗರಿಕ ವರ್ತನೆ ಅಷ್ಟೇ ಅಲ್ಲ, ಕೆಳವರ್ಗದವರ ಮೇಲೆ ಮೇಲ್ವರ್ಗದ ಜನ ನಡೆಸುವ ದೌರ್ಜನ್ಯ, ಶೋಷಣೆ, ದರ್ಪ ಎಷ್ಟೆಂಬುದು ಅನಾವರಣಗೊಳ್ಳುತ್ತ ಸಾಗುತ್ತದೆ. ಉಳ್ಳವರು ಇಲ್ಲದವರನ್ನು ಕಾಡುವ ಪರಿ ಕಣ್ಣಿಗೆ ಕಟ್ಟುತ್ತದೆ. ಎರಡು ಕೊಡ ನೀರು ಪಡೆದಿದ್ದನ್ನು ಮಹಾಪರಾಧ ಆಗಿಸಿ ಇಡೀ ಊರನ್ನು ಸ್ಮಶಾನ ವಾಗಿಸಿದ ಜನರ ಅವಿವೇಕ ಕಥೆಯಲ್ಲಿ ತೆರೆದುಕೊಳ್ಳುತ್ತ ಸಾಗುತ್ತದೆ.         ಒಂದು ಸಣ್ಣ ವಿಷಯ ಹೇಗೆ ಇಡೀ ಊರಿಗೆ  ಊರನ್ನೇ ಭಸ್ಮವಾಗಿಸಬಲ್ಲದು ಅನ್ನುವ ವಾಸ್ತವವನ್ನು ಶೈಲಜಾ ಅವರು ತಮ್ಮ ಕಥೆಯ ಮೂಲಕ ಓದುಗರಿಗೆ ಮನದಟ್ಟಾಗುವ ಪ್ರಯತ್ನವನ್ನು ಮಾಡಿದ್ದಾರೆ. ಇದು ಈ ಜಗತ್ತಿನ ಇವತ್ತಿನ ಸತ್ಯ ಕೂಡ. #. ತುಮುಲ :-             “ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ”- ಅನ್ನುವ ದಾಸರ ಪದವನ್ನು ಜ್ಞಾಪಿಸುವ ಕಥೆ. ಈ ಜಗದಲ್ಲಿ ಪ್ರತಿಯೊಬ್ಬನೂ ಸ್ವಾರ್ಥಿಯೆ. ಎಲ್ಲರೂ ಅವರವರದೇ ಆದ ಮನೆ ಸಂಸಾರವನ್ನು ಕಟ್ಟಿಕೊಂಡಿರುತ್ತಾರೆ. ಇಲ್ಲಿ ಯಾರೂ ಯಾರ ಜವಾಬ್ದಾರಿಯನ್ನು ಹೊರಲು ತಯಾರಿರುವುದಿಲ್ಲ. ತನ್ನ ಕೆಲಸವಾಗ ಬೇಕಾದಲ್ಲಿ ಮಾತ್ರ ಇನ್ನೊಬ್ಬರ ನೆನಪಾಗುವುದು ಇಲ್ಲಿ. ಅದಾದ ಮೇಲೆ ನೀನ್ಯಾರೋ ನಾನ್ಯಾರೋ. ಬದುಕೆಂಬ ಸಂತೆಯಲ್ಲಿ ಪ್ರೀತಿ, ವಿಶ್ವಾಸ, ಅಂತಃ ಕರಣಗಳೆಲ್ಲ ಸೀಮಿತ ಪರಿಧಿಯೊಳಗಷ್ಟೇ ಇದೆ. ಆ ರೇಖೆಯನ್ನು ದಾಟಿ ಇವೆಲ್ಲೂ ಕಾಣಸಿಗವು. ಅತಿಯಾದ ನಿರೀಕ್ಷೆಯನ್ನು ಇಲ್ಲಿ ಯಾರ ಮೇಲೂ ಇಡುವಂತಿಲ್ಲ. ಈ ಎಲ್ಲಾ ಸಂದೇಶಗಳನ್ನು ತನ್ನೊಳಗೆ ಅಡಗಿಸಿಕೊಂಡಿರುವ ಕಥೆ “ತುಮುಲ “. #. ಅಮ್ಮ :-          ಅತ್ತೆಯೂ ಅಮ್ಮನಾಗಿ ಸೊಸೆಯನ್ನು ಮಗಳಂತೆ ಕಾಣಬಲ್ಲಳು ಅನ್ನುವುದನ್ನು ಪರಿಚಯಿಸುವ ಮನ ಮಿಡಿಯುವಂತೆ ಕಥೆ. ಅತ್ತೆ ಸೊಸೆಯ ಸಂಬಂಧವೆಂದರೆ ಎಣ್ಣೆ ಸಿಗೇಕಾಯಿ ಅನ್ನುವ ಭಾವ ಎಲ್ಲರಲ್ಲೂ. ಹೊಂದಿಕೊಂಡು ಹೋಗುವುದಿಲ್ಲ ಇಬ್ಬರು ಅನ್ನುವ ಅಭಿಪ್ರಾಯ. ಆದರೆ ಇದು ಸುಳ್ಳು. ಹೊಂದಾಣಿಕೆಯ ಸೂತ್ರ ಯಾವ ಮನಗಳಲ್ಲಿ ಗಟ್ಟಿಯಾಗಿ ನೆಲೆಯೂರುತ್ತದೊ ಅಂತಹವರು ಎಲ್ಲ ಕಡೆ ಅನುಸರಿಸಿಕೊಂಡು ಸಂಬಂಧಗಳನ್ನು ಬೆಸೆಯುತ್ತಾ ಸಾಗುತ್ತಾರೆ. ಅತ್ತೆಯಾಗುವ ಮೊದಲು ಅವಳು ಒಬ್ಬ ಸೊಸೆಯಾಗಿರುತ್ತಾಳೆ. ಸಾಕಷ್ಟು ಆಗು ಹೋಗುಗಳನ್ನು ಕಂಡಿರುತ್ತಾಳೆ. ಹಾಗಾಗಿ ತನಗೆ ಸೊಸೆಯಾಗಿ ಬಂದವಳನ್ನು ಅವಳು ಹೇಗೆ ಮಗಳಂತೆ ಕಾಣದೇ ಇರಲು ಸಾಧ್ಯ ?. ಎಲ್ಲ ಘಟನೆಗಳಿಗೂ ಆಯಾಯ ಸಂದರ್ಭವೇ ಕಾರಣ ಹೊರತು ಮನುಷ್ಯರಲ್ಲ. ಸೊಸೆಯಾದವಳು ಅತ್ತೆಯನ್ನು ಅಮ್ಮನಂತೆ ಪ್ರೀತಿಸಿದಾಗ ಅತ್ತೆ ಅವಳನ್ನು ಮಗಳಂತೆ ಕಾಣುತ್ತಾಳೆ. ಭಿನ್ನಾಭಿಪ್ರಾಯಗಳು ಮೂಡದ ಮನಗಳಿಲ್ಲ, ಮನೆಗಳಿಲ್ಲ. ಆದರೆ ಈ ಭಿನ್ನಾಭಿಪ್ರಾಯವನ್ನು ಪರಿಹರಿಸುವಲ್ಲಿ ಹೊಂದಾಣಿಕೆಯೇ ಮೂಲ ಸೂತ್ರ. ಪ್ರೀತಿ ವಾತ್ಸಲ್ಯ ಎಂತಹ ಮನಸ್ಸುಗಳನ್ನು ಬದಲಾಯಿಸಬಲ್ಲುದು ಅನ್ನುವುದೇ ಸತ್ಯ. #. ವಿಪರ್ಯಾಸ :-           ಸ್ವಾರ್ಥ ಮನುಷ್ಯನನ್ನು ಅವನ ಮನುಷ್ಯತ್ವವನ್ನು ಯಾವ ಮಟ್ಟಿಗೆ ಬದಲಾಯಿಸುತ್ತದೆ ಅನ್ನುವ ಪ್ರಶ್ನೆಯನ್ನು ಮನಸ್ಸಲ್ಲಿ ಎಬ್ಬಿಸಿದ ಒಂದು ಕಥೆ ಇದು. ತನ್ನ  ಬಳಿ ಇಲ್ಲದೇ ಇದ್ದಾಗ ಯಾವ ವಿಚಾರವೇ ಇರಲಿ ಅದು ಬೇರೆಡೆಯಿಂದ ದೊರೆತಾಗ ದೊಡ್ಡ ನಿಧಿ ದೊರೆತ ಅನುಭವ. ಆದರೆ ಅದುವೇ ವಸ್ತು, ವ್ಯಕ್ತಿ ಅಥವಾ ಯಾವುದೇ ವಿಚಾರ ಇರಬಹುದು ತನ್ನ ಸ್ವಂತದ್ದು ದೊರೆತಾಗ ಈ ಸಿಕ್ಕಿದ್ದಕ್ಕೆ ಯಾವ ಬೆಲೆಯೂ ಇಲ್ಲ. ಮಾನವ ಯಾಕೆ ಹೀಗೆ ಸಂಕುಚಿತ ಗುಣ ಸ್ವಾರ್ಥಪರ ನಾಗುತ್ತಾನೆ ಎಂದು ಕಾಡುವ ಪ್ರಶ್ನೆ …. #. ದಾರಿ ಯಾವುದಯ್ಯ :-            ಕಣ್ಣಿಗಂಟಿದ ಭ್ರಮೆಯ ಪರದೆ ಸರಿದಾಗ ವಾಸ್ತವದ ದರ್ಶನ. ಈ ವಿಶಾಲ ಜಗತ್ತಲ್ಲಿ ಯಾರೂ ಒಬ್ಬಂಟಿಯಲ್ಲ. ಎಲ್ಲರಿಗೂ ಒಂದಲ್ಲ ಒಂದು ಆಸರೆ ದೊರೆತೇ ದೊರೆಯುತ್ತದೆ. ಎಲ್ಲವೂ ಕಾಲದ ಮೇಲೆ ಅವಲಂಬಿತ. ಇಲ್ಲಿ ಎಲ್ಲವೂ ನಾನೇ ಎಲ್ಲವೂ ನನ್ನಿಂದಲೇ ಅನ್ನುವುದು ಸುಳ್ಳು. #. ಚಂದೂ ಮಾಮ:-            ಎಲ್ಲರನ್ನು ಅತಿಯಾಗಿ ಪ್ರೀತಿಸಿ ನಂಬುವ ವ್ಯಕ್ತಿ. ಅಷ್ಟೇ ಪ್ರೀತಿ ಮರಳಿ ಸಿಗಬೇಕೆಂಬ ನಿರೀಕ್ಷೆ. ಈ ನಿರೀಕ್ಷೆಯೇ ಅವನನ್ನು ಸಾವಿನ ಮನೆಯ ಬಾಗಿಲನ್ನು ತಟ್ಟುವಂತೆ ಮಾಡಿದ್ದು ದುರಂತ. ಇವತ್ತಿದ್ದ ವ್ಯಕ್ತಿ ನಾಳೆಯೂ ಇರುತ್ತಾನೆ ಎಂಬ ನಂಬಿಕೆ ಇಲ್ಲ, ನಾಳೆ ಅಲ್ಲ ಮತ್ತೊಂದು ಕ್ಷಣವೇ ಏನು ಬೇಕಾದರೂ ಆಗಬಹುದು. ಹಾಗಾಗಿ ಮಾಡಬೇಕು ಮಾತಾಡಬೇಕು ಅನ್ನಿಸಿದ್ದನ್ನು ಕೂಡಲೇ ನಮ್ಮ ಹಮ್ಮನ್ನು ತೊರೆದು ತಮ್ಮ ಆಪ್ತರೊಡನೆ ಆಡಿ ಮುಗಿಸಬೇಕು. ಇನ್ನೊಂದು ಕ್ಷಣ ಇಲ್ಲಿ ಏನಾಗುವುದೆಂದು ಯಾರಿಗೂ ಗೊತ್ತಿಲ್ಲ. ಕೊನೆಯಲ್ಲಿ ಉಳಿಯುವುದು ಪಶ್ಚಾತ್ತಾಪ ಮಾತ್ರ. #. ಆಳ :-            ಕಥಾ ಸಂಕಲನದ ಕೊನೆಯ ಕಥೆ. ಬಹಳ ಹಿಂದಿನಿಂದಲೂ ತನ್ನನ್ನು ತಾನು ಕಾಪಾಡಿಕೊಳ್ಳುವಲ್ಲಿ ಹೆಣ್ಣಾದವಳ ಹೋರಾಟ ಬಹಳ ದೊಡ್ಡದು. ಅವಳು ಈ ನಿಟ್ಟಿನಲ್ಲಿ ಅನುಭವಿಸುವ ಯಾತನೆ, ನೋವು, ಕಷ್ಟ, ಅವಮಾನಗಳು, ಹಿಂಸೆ ಲೆಕ್ಕವಿಲ್ಲದಷ್ಟು. ಹಿಂದಿನಿಂದಲೂ ಹೆಣ್ಣು ಒಂದಲ್ಲ ಒಂದು ವಿಧದಲ್ಲಿ ಶೋಷಣೆಗೆ ಒಳಗಾಗುತ್ತಾ ಬಂದಿದ್ದಾಳೆ. ಗಂಡಿನ ದೃಷ್ಟಿಯಲ್ಲಿ ಹೆಣ್ಣೆಂದರೆ ಭೋಗದ ವಸ್ತು. ಹೂವಿನಂತಹ ಅವಳನ್ನು ಹೆಜ್ಜೆ ಹೆಜ್ಜೆಗೂ ಕ್ರೂರಿಯಾಗಿ ಹೊಸಕಿ ಹಾಕುವ ಪ್ರಯತ್ನಗಳೇ ಹಲವು ಕಡೆ. ಇದರಿಂದ ತಪ್ಪಿಸಿಕೊಳ್ಳಲು ಅವಳು ನಡೆಸುವ ಹೋರಾಟ ಹೆಣಗಾಟಗಳು ಅವೆಷ್ಟೋ . ಅಪ್ಪ, ಅಣ್ಣ ತಮ್ಮ ಅನ್ನಿಸಿಕೊಂಡವರು ಕೂಡ ತಮ್ಮ ಮಗಳು, ತಂಗಿ, ಅಕ್ಕನನ್ನು ಕಾಮದ  ತೃಷೆಗೆ ಬಲಿ ಕೊಡುವಂತಹ  ಅವೆಷ್ಟೋ ಜೀವಂತ ಉದಾಹರಣೆಗಳು ಕಣ್ಣ ಮುಂದೆ ಬರುತ್ತವೆ. ಇಂತಹುದೇ ಕ್ರೂರ ಮೃಗಗಳ ಕೈಯಿಂದ ತಪ್ಪಿಸಿಕೊಂಡು ಬದುಕಲು ಹಾತೊರೆಯುವ ಒಂದು ಹೆಣ್ಣಿನ ಕಥೆ “ಆಳ “.                 ಶೈಲಜಾ ಅವರು ಎಲ್ಲಿಯೂ ತಮ್ಮ ಕಥೆಗಳಲ್ಲಿ ಆ ಘಟನೆಗಳಿಗೆ ಸಂಬಂಧಿಸಿದಂತೆ ತಮ್ಮ ಅನಿಸಿಕೆ, ತೀರ್ಪನ್ನು ನೀಡಿಲ್ಲ. ಎಲ್ಲವನ್ನೂ ಓದುಗರ ಅರಿವಿಗೆ ಬಿಟ್ಟಿದ್ದಾರೆ. ಆದರೆ ವಾಸ್ತವಗಳನ್ನು ಬಹಳ ಚೆನ್ನಾಗಿ ತೆರೆದಿಟ್ಟಿದ್ದಾರೆ. ನಮ್ಮ ಸುತ್ತಮುತ್ತಲಿನ ಆಗು ಹೋಗುಗಳನ್ನು ಒಳಗೊಂಡಿರುವಂತಹ ಸುಂದರ ಕಥಾಸಂಕಲನ- “ಹಿಂದಿನ ಬೆಂಚಿನ ಹುಡುಗಿಯರು”.  ಇಲ್ಲಿನ ಪ್ರತಿಯೊಂದು ಬರಹವೂ, ಕಥೆಯೂ ಬಹಳ ಸರಳವಾಗಿದೆ ಹಾಗೂ ಓದುಗರ ಮನಸ್ಸನ್ನು ತಟ್ಟುವಂತಿದೆ. ********** ನಯನ ಬಜಕೂಡ್ಲು        

ಪುಸ್ತಕ ಸಂಗಾತಿ Read Post »

You cannot copy content of this page

Scroll to Top