ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

“ಕತ್ತೆಗೊಂದು ಕಾಲ”

An Update from WVS India's Donkey Clinics // WVS

 ಅದು ಗಿರಿಕಂದರ ಪರ್ವತ ಶ್ರೇಣಿಗಳ ನಾಡು. ಅಲ್ಲಿ ಜಯದೇವ ಅರಸನು ರಾಜ್ಯ ಆಳುತಿದ್ದನು. ಆತ ತನ್ನ ಆಸ್ಥಾನದಲ್ಲಿ ಕುದುರೆಗಳ ಜೊತೆಗೆ ಕತ್ತೆಗಳನ್ನು ಸಾಕಿದ್ದನು. ಎಲ್ಲ ರಾಜರು ಕುದುರೆ ಸಾಕುತಿದ್ದರೆ, ಈತ ಮಾತ್ರ ಎರಡನ್ನು ಸಾಕುತಿದ್ದನು. ಈ ಮಾತು ರಾಜ್ಯದ ಎಲ್ಲ ಜನರಿಗೆ ಅಷ್ಟೆ ಅಲ್ಲ, ಕುದುರೆಗಳಿಗೂ ಆಶ್ಚರ್ಯವಾಗಿತ್ತು.

               ಒಂದು ದಿನ ಸೇವಕರು ಕುದುರೆ ಮತ್ತು ಕತ್ತೆ ಒಟ್ಟಿಗೆ ಬಯಲಲ್ಲಿ ಮೈಯಲು ಬಿಟ್ಟರು. ಆಗ ಮೈಯುತ್ತಾ ಕುದುರೆ ಒಮ್ಮೇಲೆ ಹುಂಕರಿಸುತ್ತಾ ಕತ್ತೆಗೆ, “ಏ.. ಕತ್ತೆ, ನಿನ್ನದೇನೆ ಇಲ್ಲಿ ಕೆಲಸ..?” ಎಂದು ತೆಗಳಿ ನಕ್ಕಿತು. ಆಗ ಕತ್ತೆ, “ಕುದುರೆಯಣ್ಣಾ, ನಾವು  ಏನಾದರೂ ರಾಜನಿಗೆ ಉಪಯೋಗ ಬರುತ್ತಿರಬಹುದು, ಆ ಕಾರಣವೇ ಆತ ನಮಗೆ ಸಾಕಿರಬೇಕಲ್ಲ..!” ಎಂದು ಹೇಳಿ  ಸುಮ್ಮನೆ ಹುಲ್ಲು ತಿನ್ನುವದು. ಆದರೆ ಕುದುರೆ ಸುಮ್ಮನಾಗದೆ, “ ಏ.. ಮುರ್ಖ ಕತ್ತೆ, ನಿನಗೆ ತಿನ್ನುವದನ್ನು ಬಿಟ್ಟು ಮತ್ತೇನು ಬರುತ್ತೆ ಹೇಳು. ನೋಡು, ಯುದ್ಧ ಮಾಡಲು ನಾವು ಹೋಗುತ್ತೇವೆ, ಪ್ರಯಾಣ ನಮ್ಮಿಂದಲೆ, ಓಟದ ಸ್ಪರ್ಧೆಯಾಗಲಿ ಹಬ್ಬ ಉತ್ಸವ ಆಗಲಿ ನಮ್ಮನ್ನೆ ಬಳಿಸುವರು. ನಿನ್ನ ಒಂದಾದರೂ ಉಪಯೋಗ ಹೇಳು ನೊಡೋಣ..” ಎಂದು ಮತ್ತೆ ಕೆಣಕಿತು. ಆಗ ಅದು, “ಕುದುರೆಯಣ್ಣಾ ನೀನು ಜಾಣ ಎಂಬುದು ನನಗೆ ಗೊತ್ತು. ಆದರೆ ಪ್ರತಿಯೊಂದು ಪ್ರಾಣಿಗಳು ಹುಟ್ಟಿದ್ದು, ಏನಾದರೂ ಮಾಡಲಿಕ್ಕೆ. ನಮಗೂ ಒಂದು ಕಾಲ ಬರುತ್ತೆ..” ಎಂದು ಹೇಳಿ ಕತ್ತೆ ದೊಡ್ಡಿಗೆ, ಕುದುರೆ ಲಾಯಕ್ಕೆ ಹೋದವು. 

           

Indian Horses - Horse Safari in India

ಕೆಲ ದಿನಗಳ ನಂತರ ವೈರಿ ರಾಜನು ಯುದ್ಧ ಸಾರಿ ಹೊರಟಾಗ ಜಯದೇವನು ಪ್ರತಿ ಹಲ್ಲೆಗಾಗಿ ಅಶ್ವದಳದ ಸಿದ್ಧತೆ ಮಾಡಿಕೊಳ್ಳಿ ಎಂದು ಅಪ್ಪಣೆ ಕೊಟ್ಟನು. ಆಗ ಸೇವಕರು ಕುದುರೆಗಳಿಗೆ ಹೆಚ್ಚಿನ ಶಕ್ತಿದಾಯಕ ಆಹಾರ ಕೊಡಲು ಪ್ರಾರಂಭ ಮಾಡುತ್ತಾರೆ. ಕುದುರೆ ಲಾಯ ಮತ್ತು ಕತ್ತೆಯ ದೊಡ್ಡಿಯ ಮಧ್ಯ ತಂತಿಯ ಸಂರಕ್ಷಣೆ ಅಷ್ಟೆ. ಆಗ ಕತ್ತೆಯನ್ನು ನೋಡಿ ಕುದುರೆ, “ನೋಡಿದಿಯಾ ಕತ್ತೆ, ನಾವು ಯುದ್ಧಕ್ಕೆ ಹೊರಟಿದ್ದೇವೆ. ಅದಕ್ಕೆ ನಮಗೆ ಒಳ್ಳೊಳ್ಳೆ ರುಚಿಕರ ಚಂದಿ, ನಿನಗೆ ಬರಿ ಹುಲ್ಲು..” ಎಂದು ಹುಂಕರಿಸಿ ನಗುತ್ತದೆ. ಆಗ ಅದು ಮರು ಏನು ಮಾತನಾಡದೆ, “ಶುಭಾಶಯ ಕುದುರೆಯಣ್ಣಾ, ಗೆಲುವು ನಿನ್ನದಾಗಲಿ..” ಎಂದು ಶುಭ ಕೋರುತ್ತದೆ.         

ಕುದುರೆ ರಣರಂಗದಲ್ಲಿ ಭೀಮ ಪರಾಕ್ರಮದಿಂದ ಕಾದಾಡಿ ಯುದ್ಧ ಗೆದ್ದು ಬರುತ್ತದೆ. ಅಲ್ಲಿಂದ ಓಡುತ್ತಾ ಓಡುತ್ತಾ ತನ್ನ ಲಾಯಕ್ಕೆ ಬರುವಾಗ ಮತ್ತೆ ಕತ್ತೆಯನ್ನು ನೋಡಿ, “ಎಲೇ.. ಕತ್ತೆ, ನಾವು ಯುದ್ಧ ಗೆದ್ದು ಬಂದೇವು. ವೈರಿ ಸೈನ್ಯ ಕಾಲಲ್ಲಿ ಹಾಕಿ ತುಳಿದೇವು. ಇದರಿಂದ ಸಂತೋಷನಾದ ರಾಜ, ನಾಳೆ ನಮ್ಮ ಮೆರವಣಿಗೆ ಇಟ್ಟಿದ್ದಾನೆ..” ಎಂದು ಜೋರಾಗಿ ಹೇಳಿತು. ಅದಕ್ಕೆ ಕತ್ತೆ, “ಗೆಲುವಿಗಾಗಿ ಶುಭಾಶಯ, ಕುದುರೆಯಣ್ಣಾ..”ಎಂದು ಹೇಳಿ ಸುಮ್ಮನೆ ಹುಲ್ಲು ತಿನ್ನುತ್ತದೆ. ಆದರೆ ಕುದುರೆ ಮಾತ್ರ ಸುಮ್ಮನಾಗುವದಿಲ್ಲ, “ಇಲ್ಲಾ, ನಮ್ಮ ರಾಜನು ಎಷ್ಟು ಮುರ್ಖನಿರಬಹುದು. ನಿಮ್ಮಂತಹ ಮೂರ್ಖ ಪ್ರಾಣಿಗಳನ್ನು ಕಟ್ಟಿಕೊಂಡು ಸುಮ್ಮನೆ ರಾಜ್ಯದ ವೆಚ್ಚ ಹೆಚ್ಚಿಗೆ ಮಾಡಿಕೊಳ್ಳುತಿದ್ದಾನೆ..” ಎಂದಾಗಲೂ ಕತ್ತೆ ಏನು ಮಾತನಾಡದೆ ಸುಮ್ಮನಿರುತ್ತದೆ.          

         

ಮರುದಿನ ರಾಜಧಾನಿಯಲ್ಲಿ ರಾಜನ ಮೆರವಣಿಗೆ ಆಗುತ್ತದೆ. ಅಲ್ಲಿ ಕುದುರೆಗಳ ಹೊಗಳಿಕೆ ಆಗುತ್ತದೆ. ಎಲ್ಲ ಜನರು ರಾಜ ಮತ್ತು ಕುದುರೆಗಳ ಮೇಲೆ ಪುಷ್ಪಾರ್ಪಣೆ ಮಾಡುತ್ತಾರೆ. ಅಂದು ರಾಜ ವೈರಿ ಮುಕ್ತನು ಆಗಿರುತ್ತಾನೆ. ಆದರೂ ಆತ ದೂರದ ಶತ್ರುಗಳಿಂದ ಯಾವ ತೊಂದರೆ ಆಗಬಾರದೆಂದು ಸಮೀಪದ ಎತ್ತರ ಪರ್ವತದ ಮೇಲೆ ಕೋಟೆ ಕಟ್ಟುವದಾಗಿ ಘೋಷಣೆ ಮಾಡುತ್ತಾನೆ. ಕೋಟೆ ಕಟ್ಟಬೇಕಾದರೆ ಕಲ್ಲು, ಮಣ್ಣು, ಕಟ್ಟಿಗೆ, ಸಿಮೇಂಟ್‍ಗಳಂತಹ ಭಾರವಾದ ವಸ್ತುಗಳನ್ನು ಮೇಲೆ ತಲುಪಿಸಬೇಕಿತ್ತು. ಕುದುರೆಗಳಿಂದ ಈ ಕಾರ್ಯ ಅಸಾಧ್ಯ ಎಂಬುದು ರಾಜನಿಗೆ ಮಾತ್ರ ಗೊತ್ತಿರುತ್ತದೆ. ಅದಕ್ಕಾಗಿ ಆತ, ‘ಕೋಟೆಯ ಕೆಲಸಕ್ಕೆ ಕತ್ತೆಗಳನ್ನು ಬಳಿಸಿಕೊಳ್ಳಿ..’ಎಂದು ಅಪ್ಪಣೆ ಕೊಡುತ್ತಾನೆ. ಎಲ್ಲ ಜನರಿಗೆ ಇದು ವಿಚಿತ್ರ ಅನಿಸುವದು, ಆದರೂ ಸೇವಕರು ಬಂದು ಕತ್ತೆಗಳನ್ನು ಒಯ್ಯುವಾಗ ಮತ್ತೆ ಕುದುರೆ ಕತ್ತೆಯನ್ನು ನೋಡಿ, “ಹೋಗು ಕತ್ತೆ ಹೋಗು.. ಅದು ನಿಮ್ಮಿಂದ ಆಗದ ಕೆಲಸ. ರಾಜನಿಗೆ ನಾಳೆಯಿಂದ ಮತ್ತೆ ನಮ್ಮನ್ನೆ ಕರೆಸಬೇಕಾಗುತ್ತದೆ..” ಎಂದು ನಸು ನಕ್ಕಿತು.             ಕತ್ತೆಗಳೆಲ್ಲಾ ಹೋಗಿ ಸಂಯಮದಿಂದ ಭಾರ ವಸ್ತುಗಳನ್ನು ಅತ್ಯಂತ ಕಾಳಜಿಯಿಂದ ಒಯ್ದು ಪರ್ವತದ ಮೇಲೆ ಚೆಲ್ಲುತ್ತವೆ. ಆ ದಿನ ಕತ್ತೆಗಳ ಶ್ರಮ ಮತ್ತು ಪ್ರಾಮಾಣಿಕತೆ ನೋಡಿ ರಾಜನಿಗೆ ಬಹಳ ಸಂತೋಷವಾಯಿತು. ಆಗ ಆತ, “ನಮ್ಮ ಕೋಟೆಯ ಕೆಲಸ ಮುಗಿಯುವ ವರೆಗೆ ಕುದುರೆಗಳ ಆಹಾರ ಕಡಿಮೆ ಮಾಡಿ ಕತ್ತೆಗಳಿಗೆ ಕೊಡಿ..” ಎಂದು ಸೇವಕರಿಗೆ ಅಪ್ಪಣೆ ಮಾಡುತ್ತಾನೆ. ಅಂದು ಕತ್ತೆಗೆ ಬಹಳ ದಣಿವು. ಅದು ಹುಲ್ಲು, ಚಂದಿ ತಿಂದು ಸುಮ್ಮನೆ ಮಲಗಿ ಬಿಟ್ಟಿತು. ಆದರೆ ಕುದುರೆ ಮಾತ್ರ ಅದನ್ನು ನೋಡಿ ಮೂಗು ಮುರಿಯುತ್ತಿತ್ತು. ಪ್ರತಿ ದಿನ ಕುದುರೆ ಕತ್ತೆಯನ್ನು ಏನಿಲ್ಲಾ ಒಂದು ಮಾತು ಹೇಳಿ ಹಿಯಾಳಿಸುತ್ತಿತ್ತು. ಆದರೆ ಅದು ಮಾತ್ರ ಕೋಟೆಯ ಕೆಲಸ ಮುಗಿಯುವ ವರೆಗೆ ಕುದುರೆಯ ಯಾವ ಮಾತಿನತ್ತ ಗಮನ ಕೊಡಲಿಲ್ಲ.            

 ಕತ್ತೆಗಳ ಪರಿಶ್ರಮದಿಂದ ಬ್ರಹತ್ ಕೋಟೆ ನಿರ್ಮಾಣ ಆಯಿತು. ಇದರಿಂದ ಸಂತೋಷನಾದ ರಾಜನು ಅಲ್ಲಿಯೆ ಪಟ್ಟಾಭಿಷೇಕ ಮಾಡಿಕೊಳ್ಳುವದಾಗಿ ಡಂಗುರು ಸಾರಿದನು. ಸುತ್ತಲಿನ ರಾಜರಿಗೆ ಆಮಂತ್ರಣ ಕಳುಹಿಸಿದನು. ರಾಜನ ಸಿಂಹಾಸನ ಕೂಡ ಕತ್ತೆಗಳೆ ಮೇಲಕ್ಕೆತ್ತಿ ಒಯ್ದವು. ಅಲ್ಲಿ ಬಂದವರೆಲ್ಲಾ ಕೋಟೆಯ ಅದ್ಭುತತೆ ಮಾತನಾಡುತ್ತಿದ್ದರು. ಇಷ್ಟು ಎತ್ತರ ರಾಜ ಭಾರವಸ್ತು ಹೇಗೆ ತಂದನು ಎಂದು ಆಶ್ಚರ್ಯ ಪಟ್ಟರು. ಆಗ ಜಯದೇವನು ಇದರ ಎಲ್ಲ ಶ್ರೇಯ ಕತ್ತೆಗಳಿಗೆ ಕೊಡುತ್ತಾನೆ. ಅಲ್ಲಿ ಬಂದ ರಾಜರು ಸಹ ಕತ್ತೆಗಳ ಕೆಲಸವನ್ನು ಮೆಚ್ಚುತ್ತಾರೆ. ಅಂದು ಮಾತ್ರ ಅಲ್ಲಿಯ ಭವ್ಯ ಕಾರ್ಯಕ್ರಮಕ್ಕೆ ಕತ್ತೆಗಳ ಉಪಸ್ಥಿತಿ ಇತ್ತು ಆದರೆ ಕುದುರೆಗಳನ್ನು ಕೆಳಗಡೆಯ ಮೈದಾನದಲ್ಲಿ ಕಟ್ಟಲಾಗಿತ್ತು.              

महाराणा प्रताप का गधा ⋆ Making India

ಮರುದಿನ ಕತ್ತೆ ಬಂದು ಕುದುರೆಗೆ, “ನೋಡಿದಿಯಾ ಕುದುರೆಯಣ್ಣಾ, ನಾನು ಅಂದು ಹೇಳಿದಂತೆ ಈ ಜಗತ್ತಿನಲ್ಲಿ ಪ್ರತಿಯೊಬ್ಬನಿಗೂ ಒಂದು ಒಳ್ಳೆಯ ಕಾಲ ಬರುತ್ತದೆ. ಅದಕ್ಕೆ ಕಾಯಬೇಕು ಅಷ್ಟೆ. ಆದರೆ ಎಲ್ಲಕ್ಕಿಂತ ಮಹತ್ವದ್ದು ನಮಗೆ ಸಿಕ್ಕ ಅವಕಾಶವನ್ನು ನಾವು ಪರಿಶ್ರಮದಿಂದ ಪ್ರಾಮಾಣಿಕವಾಗಿ ಮಾಡಬೇಕು. ಆವಾಗ ಎಲ್ಲರು ಜಯಕಾರ ಹಾಕುತ್ತಾರೆ..” ಎಂದು ವಿನಯದಿಂದ ಹೇಳಿತು. ಕುದುರೆಗೆ ತನ್ನ ತಪ್ಪಿನ ಅರಿವಾಯಿತು. ಮುಂದೆ ಅದು ತನ್ನ ಅಹಂಕಾರ ಬಿಟ್ಟು ಸ್ನೇಹದಿಂದ ಬಾಳುತ್ತದೆ.

*********

ಮಲಿಕಜಾನ ಶೇಖ

About The Author

11 thoughts on “ಮಕ್ಕಳ ಕಥೆ”

  1. Masali Chanabasappa

    ನೀತಿ ಕತೆ ಚನ್ನಾಗಿದೆ,ಎಲ್ಲರಿಗೂ ಗೌರವದಿಂದ ಕಾಣುವ ಸಂದೇಶ ತಿಳಿಸುತ್ತದೆ ಈ ಬರಹ

  2. ತುಂಬಾ ಒಳ್ಳೆಯ ನೀತಿ ಕಥೆ ಇದೆ.
    ಮತ್ತೊಬ್ಬರನ್ನು ಹಿಯಾಳಿಸಬಾರದು.

    1. ಧನ್ಯವಾದಗಳು ಸರ್
      ಋಣಿ ಆಗಿದ್ದೇನೆ…

      ತಮ್ಮ ಹೆಸರು ಗೊತ್ತಾಗುತ್ತಿಲ್ಲ ದಯವಿಟ್ಟು.. ಸರ್/ಮೇಡಂ

  3. ಅವರ್ಣನೀಯ ಕಥೆ..ಮಕ್ಕಳ ಬಗ್ಗೆ ತುಂಬಾ ಅದ್ಭುತವಾಗಿ ಬರೆದಿರುವಿರಿ

  4. Dinesh Thambad

    ಅತ್ಯುತ್ತಮ ಕಥೆ ಗುರುಗಳೇ ಕಥೆಯ concept ಬಹಳ ಅರ್ಥ ಗರ್ಭಿತ ಹಾಗೂ ಕಥೆಯ ನಿರೂಪಣೆ ಓದುಗರ ಕುತೂಹಲ ಹೆಚ್ಚಿಸುತ್ತದೆ ಹಾಗೂ ಕಥೆಯಲ್ಲಿ ದುಡಿಯುವ ಜೀವಗಳು ಪರಸ್ಪರ ಹಿಯಾಳಿಸದೇ ಸಹಬಾಳ್ವೆ ಹಾಗೂ ಸಹೋದರತ್ವದ ಭಾವನೆ ಹೊಂದಬೇಕು ಹಾಗೂ ಪ್ರತಿಯೊಂದು ಪ್ರಾಣಿ ಹುಟ್ಟಿದ ಮೇಲೆ ತನ್ನದೇ ಆದ ಯೋಗದಾನ ಮಾಡೇ ಮಾಡುತ್ತದೆ ಆದರೆ ಅದರ ಕಾಲ ಕೂಡಿ ಬರಬೇಕು ಎಂಬುದಕ್ಕೆ ಈ ಕಥೆ ಅತ್ಯುತ್ತಮ ಉದಾಹರಣೆ ಗುರುಗಳೇ… ಅತ್ಯಂತ ಸೃಜನಶೀಲ ಕಥೆ ಗುರುಗಳೇ ಧನ್ಯವಾದಗಳು ಹಾಗೂ ಅಭಿನಂದನೆಗಳು ನನ್ನ ಸಹೃದಯಿ ಸ್ನೇಹಿತರು ಶ್ರೀ ಮಲಿಕ್ ಜಾನ್ ಶೇಖ ಗುರುಗಳಿಗೆ…. ಭಾವೈಕ್ಯತೆಯ ಭಾವಬಿಂದು ಹಿಂದೂ ಮುಸ್ಲಿಂ ಸಹೋದರತ್ವದ ಸಂಕೇತ “ಈದ್ ಉಲ್ ಫಿತ್ರ” ಪವಿತ್ರ ರಮಜಾನ ಹಬ್ಬದ ಗೌರವಪೂರ್ವಕವಾಗಿ ಶುಭಾಶಯಗಳು ಈದ್ ಮುಬಾರಕ್ ಭಾಯಿಜಾನ್

  5. ಶಾಮ ಸ್ವಾಮಿ

    ಸುಂದರ ನೀತಿ ಕಥೆ … ಎಲ್ಲರಿಗೂ ಒಂದು ಯೋಗ್ಯ ಸಮಯ ಬಂದೇ ಬರುತ್ತದೆ..

Leave a Reply

You cannot copy content of this page

Scroll to Top