ಬುದ್ಧನಾಗದೇ ನಿನ್ನ ಗ್ರಹಿಸಲಾರೆ

ಡಾ.ಗೋವಿಂದ ಹೆಗಡೆ

ನಾನು ಕೇವಲ ಮನುಷ್ಯ.
ಮಾನುಷ ಅನುಭವಗಳ ಬಗ್ಗೆ
ಹೇಳಬಲ್ಲೆ
ಅವ ಎತ್ತರ ಇವ ಕುಳ್ಳು
ಇವ ಜಾಣ ಅವ ದಡ್ಡ
ಅವನೋ ಕ್ರೂರಿ ಇವ ದಯಾಮಯಿ-
ಹೀಗೆ
ದೈವಿಕ ಅನುಭವಗಳ ಒರೆಗೆ ಹಚ್ಚಲಿ
ಹೇಗೆ
‘ನಾವು
ಮನುಷ್ಯರಾಗಿ ಬಂದಿಲ್ಲ
ಮನುಷ್ಯರಾಗಲು
ಬಂದಿದ್ದೇವೆ’
ಅನ್ನುತ್ತಾರೆ
‘ನಾವು
ಮನುಷ್ಯರಾಗಿ ದೈವಿಕತೆಯನ್ನು
ಹುಡುಕುತ್ತಿಲ್ಲ,
ದಿವಿಜರೇ
ಆಗಿದ್ದು ಮಾನುಷ ಅನುಭವ
-ವನ್ನು
ಹಾಯುತ್ತಿದ್ದೇವೆ’
ಎಂಬ ಮತವೂ ಇದೆ
ನನಗೆ ಎರಡೂ ಅರಿವಿಗೆ ದಕ್ಕದೆ…
ನೀನು ದೈವತ್ವದ ಕುರಿತು ಉಸಿರೆತ್ತಲಿಲ್ಲ
ಕೇವಲ
ಮನುಜನ ಬಿಡುಗಡೆಯ ಮಾತಾಡಿದೆ
ಸದ್ವಿಚಾರ,
ಸನ್ನಡತೆ, ಸತ್ಕರ್ಮಗಳ
ಮೂಲಕ
ಯಾತನೆಯಿಂದ
ಬಿಡುಗಡೆಯ
ಮಾತನಾಡಿದೆ
ನಿನ್ನ ಮಾತನ್ನು ಅರಿಯಬಲ್ಲೆ
ಮೌನವನ್ನು
ಹೇಗೆ ಗ್ರಹಿಸುವೆ
ನಿನ್ನನರಿಯಲು
ನಾನು-ನೀನೇ
ಆಗಬೇಕೇ
?
•• ಗೋವಿಂದ
ಹೆಗಡೆ



