ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನುಡಿ ನಮನ

ಹೊರಗಣ್ಣ ಮುಚ್ಚಿದರೆ ಒಳಗಣ್ಣು ತೆರೆಯುವುದು
ಕಾಣುವುದು ಎಲ್ಲೆಲ್ಲು ವಿಶ್ವರೂಪ_ _ಕೆ.ಎಸ್.ನಿಸ್ಸಾರ

ಒಬ್ಬ ಕವಿಯಾಗಿ,ಭಾವ ಜೀವಿಯಾಗಿ,ನಾನೆಂಬ ಪರಕೀಯರೊಳು ಒಂದಾಗಿ,ಪ್ರೇಮ ಕವಿಯಾಗಿ, ನಿತ್ಯೋತ್ಸವದ ಜೀವವಾದ ಕವಿ,ಲೇಖಕನ ಸೇವೆ ಅಗಣಿತವಾದ ಪರಿಧಿಯೋಳು ನೆಲೆನಿಲ್ಲಲು ಇವರ ಕವಿತೆಗಳೇ ಸಾಕ್ಷಿ..! ನಾಡು ನುಡಿಗೆ ಕಹಳೆಯುದಿದ ನಿಷ್ಠಾವಂತ ಯೋಧ…

** “ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ
ನೀರೆಂದರೆ ಬರಿ ಜಲವಲ್ಲ ಅದು ಪಾವನತೀರ್ಥ”….

ಇಡೀ ಕರುನಾಡ ಸೊಗಡನ್ನು ಕನ್ನಡಿಗರಿಗೆ ಎಳೆಎಳೆಯಾಗಿ ಕಟ್ಟಿಕೊಟ್ಟಿದ್ದಾರೆ.ಕನ್ನಡ ನಾಡಲ್ಲಿ ಹುಟ್ಟುವುದೇ ಪುಣ್ಯ.ಇದು ಬರಿ ಗಡಿನಾಡಲ್ಲಿ ಗುರುತಿಸಿದ ನಾಡಲ್ಲ..ಕನ್ನಡಿಗರ ಉಸಿರು‌ ಬೆರೆತ ನಾಡು..ಎಂದು ನುಡಿವಲ್ಲಿ ಅವರ ಆಂತರ್ಯದ ಅಭಿಮಾನಕ್ಕೆ ಹಿಡಿದ ಕನ್ನಡಿಯಾಗಿದೆ.

  • ನಿತ್ಯೋತ್ಸವ *
    *೧೯೭೮ *ರಲ್ಲಿ ಇಡೀ ನಾಡಿನಾದ್ಯಂತ ಕನ್ನಡಿಗರ ತನು ಮನದಲ್ಲಿ ಚಿರಸ್ಥಾಯಿಯಾದ ಕವಿತೆಗಳ ಗುಚ್ಛ.
    “ಜೋಗದ ಸಿರಿ ಬೆಳಕಿನಲ್ಲಿ,ತುಂಗೆಯ ತೆನೆ ಬಳುಕಿನಲ್ಲಿ
    ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
    ನಿತ್ಯಹರಿದ್ವರ್ಣವನದ ತೇಗ,ಗಂಧ ತರುಗಳಲ್ಲಿ
    ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ”…
    ಈ ‌ಕವಿತೆಯ ಸಾಲುಗಳು ನಾವ್ ಪ್ರೀತಿಸುವ ಕನ್ನಡಾಂಬೆಯ ಉಸಿರು ಪ್ರತಿಯೊಬ್ಬ ಕನ್ನಡಿಗನ ನಾಡಿ ಮಿಡಿತವೆಂದರೆ ತಪ್ಪಾಗಲಾದು.
  • ಪ್ರೇಮಕವಿಯ ಅಂತರಂಗದಾ ಸೆಳೆತಗಳು*
  • ನೆನೆದೆ ನೆನೆಯುವೆ.
    “ಕಂಡ ಸಾವಿರ ಅನ್ಯ ಮೊಗದ ಭಂಗಿಗಳಲ್ಲಿ ನನ್ನ ದೈನ್ಯವ ನೊಂದು ಹೋಲಿಸಿದಾಗ ಕಣ್ಣಂಚ ಹೆದೆಯಲ್ಲಿಬಿಗಿಗೊಂಡ ನೋವೊಂದು ನೇರ ನಿನ್ನೆದೆಯತ್ತ ತೂರಿದಾಗ”.
    ಎಂಬ ಭಾವ ಕವಿಯ ಮನಸ್ಸಿಗಾದ ಗಾಯವನ್ನು ಸುಲಭವಾಗಿ ಅರ್ಥೈಸುವಂತೆ ನನ್ನ ನೆನಪು ಛಾಯೆಯಂತೆ ನಿನ್ನೆದುರಿಗೆ ನಿಲ್ಲುವಾಗ ನೆನೆಯದೆ ಇರಲಾರೆಯೆಂಬ ಸತ್ಯ ಪ್ರೇಮದ ಸ್ವರೂಪವಾಗಿದೆ.

** ನಾ ನಿನ್ನ ಕಂಡಾಗ…
ನಾ ನಿನ್ನ ಕಂಡಾಗ ಎಷ್ಟೊಂದು ನಲಿವಿತ್ತು
ಎಷ್ಟೊಂದು ಗೆಲುವಿತ್ತು,ಅಷ್ಟೊಂದು ನಗುವಿತ್ತು
ಹಗಲೆಲ್ಲ ನಿನ್ನ ಧ್ಯಾನ,ಇರುಳೆಲ್ಲ ನಿನ್ನ ಸ್ವಪ್ನ
ನೀ ನಡೆವ ದಾರಿಯಲ್ಲಿ ಅನುದಿನವು ನನ್ನ ಪಯಣ
ನೀ ಸುಳಿದರೆನ್ನ ಬಳಿಗೆ ನೆರೆ ಬಂದ ಹಾಗೆ ಹೊಳೆಗೆ
ನನ್ನೆದೆಯ ತೋಟದಲ್ಲಿ ಆಡಾಡು ಓ ನವಿಲೇ..
ನೆನೆದಾಗ ನಿನ್ನ ರೂಪ ಎದೆಗತ್ತಲಲ್ಲಿ ದೀಪ…!
” ಕವಿಯ ಸುಕೋಮಲ ಹೃದಯ ಪ್ರೇಮವೆಂಬ ಆಕಾಶದಲ್ಲಿ ಪ್ರೇಯಸಿಯ ನೆನೆದು ಅಗೋಚರ ಪ್ರೀತಿಯ ಸುಧೆಯ ಹರಿಸಿ ಆರಾಧಿಸುವ ಕಲೆ ಒಬ್ಬ ಪ್ರೇಮಿಗೆ ಮಾತ್ರ ದೇವರು ಕೊಟ್ಟ ವರವೆಂದರೆ ವಿಶೇಷವೆನಿಲ್ಲ..ಆ ಪ್ರೇಮಿ ಕವಿ ನಿಸ್ಸಾರರು.

** ನೆನಪು ಕವಿತೆ
ನಿನ್ನ ನಗೆಗಳ ಜಾಹಿರಾತಿಗೊಲವಿನ ಅರ್ಜಿ
ಗುಜರಾಯಿಸುತ ಪ್ರತಿಸಲವು ಉತ್ತರಕೆ ತತ್ತರಿಸಿ
ಮುಖಭಂಗವಾಗಿರುವ ಹಣೆಬರಹ ಚಿತ್ತದ
‘ನಿರ್ಭಾಗ್ಯ’ ನಿನ್ನಾಸೆಗೆಳ್ಳುನೀರನು ಬಿಟ್ಡು
ವರ್ಷಗಳ ಕಳೆದಿವೆ ಚಿಹ್ನೆಗಳು ಉಳಿದಿವೆ
ನನ್ನೆದೆಯ ಹಸುರಲ್ಲಿ…
” ಹಿಂದಿನಪಘಾತಕ್ಕೆ ಎಚ್ಚರಿಕೆ ಕೆತ್ತಿಹುದು
ನಿನ್ನತ್ತ ಧಾವಿಸುವ ಭಾವಗಳು ಸತ್ತಿಹವು……..

  • ಪ್ರೇಮದ ಕರಿನೆರಳಿಗೆ ಆಘಾತವಾದ ಮನಸು ಚೇತರಿಸಿಕೊಂಡು ಬದುಕ ಕಟ್ಡಿದರು,ಪ್ರೇಮದ ಅಲೆಯಲಿ ನೋವ ಮರೆತು,ಮತ್ತೆ ಮರಳಲಾರದ ಸ್ಥಿತಿ ಪ್ರತಿಯೊಬ್ಬನದೆಂಬಂತೆ ನೆನಪ ಹಂಚಿರುವುದು.ನೊಂದವರಿಗೆ ಮಾದರಿ.

** ಬೇಸರವಾಗಿದೆ ಮಾತು ಕವಿತೆಯಂತು……
ಭಾರವಾಗಿದೆ ಮೌನ
ನೋವು ಕರಗಿದ ಕಣ್ಣಲಿ
ಅಡಿಗೆ ಚುಚ್ಚಿದ ಮುಳ್ಳು ಒಳಗಡೆ ಮುರಿದಂತೆ
ಭಾವ ಕುಟಿಕಿದೆ ಮನದಲಿ
ಮುರಿದ ಪ್ರೀತಿಯ ಮರೆಯೇ ಬಾಳಿನೊಳ ಹೊಕ್ಕಿರಲು
ಸಾವ…ಭಯ ತಾನೆರಗಿತೋ
ಯಾವ ಗವಿ ಗತ್ತಲಿನಲಿ ಮೌನಭಾರವ ಕನಸಿ‌ ಇದ್ದ ಹಕ್ಕೆಯ ಬಿಟ್ಟಿತೋ….

  • ಹೃದಯದಲಡಗಿದ ಪ್ರೀತಿ ಕಮರಿ ಕಣ್ಮರೆಯಾದ ಗಳಿಗೆಗಳು ಪುನಃ ಬೇರುರದೇ.ನಶಿಸುವ ಕ್ಷಣಗಳ ಕವಿಯು ಅನುಭವಿಸದೇ ಹೇಳಲಾರನೆಂಬುದಕೆ ಸಾಕ್ಷಿ…
  • ನಿನ್ನ ಮೈತ್ರಿ..ಕವನದ ಸಾಲುಗಳು ಅತ್ಯದ್ಭುತ.
  • ನಿನ್ನೆದೆಯ ಗೆದ್ದಿರುವ ಹೆಮ್ಮೆಯಿಂದೆಷ್ಟೋಸಲ ಎನಿಸುವುದು,ನನಗಿಂತ ಇಲ್ಲ ಧನ್ಯ.ನನಾ ಪಾತ್ರನೋ ಏನೋ ನಿನ್ನಮಲ ಪ್ರೇಮಕ್ಕೆ,ನನಗಂತೂ ದಕ್ಕಿಹುದು ಜೀವದಾನ.
    ಬಾಳ ದುರ್ಗಮ ಪಥದ ಪಾದಯಾತ್ರೆ ಚಿರರಕ್ಷೆಯಾಗಿರಲಿ ನಿನ್ನ ಮೈತ್ರಿ……
  • ಕವಿ ನಿಸ್ಸಾರರ ಅಭೂತಪೂರ್ವ ಕವಿತೆಗಳಲ್ಲಿ ಒಂದಾದ ಕವಿತೆ… ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೆ…..ಕವಿಯೆಯಂತೂ ಇಹಪರ ಚಿಂತನೆಗೆ ಒರೆಹಚ್ಚದಿರಲಾರದು.

** ಇನ್ನೊಂದು ಕವನ “ಮತ್ತದೇ ಬೇಸರ”… ಕವಿತೆ ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ
ನಿನ್ನ ಜೊತೆಯಿಲ್ಲದೆ ಮಾತಿಲ್ಲದೆ ಮನ ವಿಭ್ರಾಂತ
ಆಸೆಗಳ ಹಿಂಡಿನ ತುಳಿತಕ್ಕೆ ಹೋಲನನ್ನೀದೇಹ
ಬರುವೆಯೇ,ಬಾರೆಯೇ ನೀ ನೆನಿಸುತಿದೆ ಹಾ.ಸಂದೇಹ..

*ಕವಿ ಬರೆದ ಕವಿತೆ….
ಕವಿ ಬರೆದ ಲೆಕ್ಕಣಿಕೆಯಲ್ಲಿ ತನ್ನ ಎದೆಯನ್ನೆ ಇರಿದಿರಿದು
ಆಂತರ್ಯ ಸಂಚಯಿತ ಬಾಧೆಯನೇ ಸುರಿದೆರೆದು..
ಬರೆದಾಗ ಪ್ರೇಮದ ಕುಣಿಕೆ ಆಂತರ್ಯದಲಿ ಚಿಗುರೊಡೆದಿದ್ದು ಆಶ್ಚರ್ಯವೇ…

** ರೂಪ ಕವಿತೆ….ಅಮೂರ್ತದಿಂದ ಮೂರ್ತದೆಡೆಗೆ…
ಕವಿತೆಯಲ್ಲಂತೂ ಕವಿಯ ತುಮುಲಗಳು,ತುಡಿತಗಳು, ಮೇಳೈಸಿದಂತೆ
” ಮತ್ತೆ ಆ ರೂಪ ಎದೆಗೆ ಹಾಯುತಿದೆ
ಚಿತ್ತ ಸಂತಾಪದಲ್ಲಿ ಬೇಯುತಿದೆ.
ಎಂದೋ ಹುಗಿದಂಥ ನೆನಹ ಕೆದಕುತಿದೆ
ಮೌನದುತ್ತಾಪದಲ್ಲಿ ಹೊಗೆಯಿತಿದೆ
ಇದ್ದಕ್ಕಿದ್ದಂತೆ ಹೃದಯ ಹೌಹಾರಿ
ಸದ್ದೆ ಇರದಂತೆ ರೋಧಿಸಿದೆ ಬೇಲಿ
ಇಲ್ಲಮೆಯ ಭಾವ ಮುಸುಕಿ ಮಿಡುಕುತಿದೆ
ಜೀವ ಏನನ್ನೋ ಬೇಡಿ ದುಡುಕುತಿದೆ ….ಮತ್ತೆ ಆ ರೂಪ.!
ಹೇಳುತ್ತಾ ಹೊರಟರೆ ಕವಿಯ ಮನವರಳುತ್ತಾ ಸಾಗುವುದು.ಕಾರಣ ಕನ್ನಡ ನಾಡಿನ ಅಪರೂಪದ ರತ್ನ..ಜಾತಿ ಮತ ಧರ್ಮ ಭೇದಗಳ ಮೆಟ್ಟಿನಿಂತು. ಸಾಗಿದ ಬದುಕು ದಿಗಂತದಂತೆ ಅನಂತ. ಕವಿಯೇ ಹೇಳುವಂತೆ…
ಸಂಜೆ ಐದರಮಳೆ ಕವನ ಸಂಕಲನದೊಂದು ಕವಿತೆ… “ನಿಮ್ಮೊಡನಿದ್ದೂ ನಿಮ್ಮಂತಾಗದ
ಜಗ್ಗಿದ ಕಡೆ ಬಾಗದೇ
ನಾನು ನಾನೆ ಆಗಿ ಈ ನೆಲದಲ್ಲೆ ಬೇರೂತ್ತಿದ್ದರು ಬೀಗಿ ಪರಕೀಯವಾಗಿ ತಲೆಯೆತ್ತುವುದೆದೆ ನೋಡಿ ಅದು ಬಲು ಕಷ್ಟದ ಕೆಲಸ………..ವೆಂದು ನುಡಿಯುವಾಗ ಕವಿಯ ಅಂತರಾತ್ಮ ಎಷ್ಟೊಂದು ಮರುಗಿರಬಹುದು..
ಕವಿಯೆಲ್ಲವನ್ನು ಮೀರಿ ತನ್ನಾತ್ಮದೊಳು ನೆಲೆನಿಂತು ಸಾಗಿ ಮನೆಮನಗಳಲ್ಲಿ ಮನೆಮಾತಾಗಿರುವ ಅಚ್ಚ ಕನ್ನಡಿಗ ನಮ್ಮ ಮೆಚ್ಚಿನ ಕವಿ ನಿತ್ಯೋತ್ಸವದ ಹರಿಕಾರ….ಕೆ.ಎಸ್.ಎನ್…….ಇಂದು ನೆನಪಿನ ಬಿತ್ತಿಯೋಳು ಮಿನುಗುವ ನಕ್ಷತ್ರ. “ನಾದವಿರದ ಬದುಕು ಇದ್ದು ಸತ್ತಂತೆ ಎಂದು ಸಾರುತ್ತಾ”……ಬದುಕಿರುವಷ್ಟು ಗಳಿಗೆ ನಾಡು.ನುಡಿಗೆ ಮಿಸಲಿಟ್ಟು………..” ಬಿಸುಸುಯ್ಯುವ ಹಂಬಲವೋ ಶುಭ ಸಮ್ಮಿಲನದ ಕಾತರವೋ ಬಾ ಇನಿಯ,ಕರೆವ ನೊಂದು ಬರದೆ ಹೋದೆ ನೀನು,ಮರೆತು ಹೋದೆ ನೀನು.”
ನೋವಿನಧಾರೆಯ ನಮ್ಮೊಡಲಿಗಿಟ್ಟು ಮತ್ತದೇ ಬೇಸರದ ನಾದವಾಗಿ ಮರೆಯಾದ ಪ್ರೇಮ ಕವಿಗೆ ಕೋಟಿಕೋಟಿ ನಮನಗಳು.

**************************

ಶಿವಲೀಲಾ ಹುಣಸಗಿ

About The Author

1 thought on “ನುಡಿ ನಮನ”

  1. ನಾಗರಾಜ್ ಹರಪನಹಳ್ಳಿ

    ನಿಸಾರ್ ಅಹಮ್ಮದ್ ಅವರ ನಿತ್ಯೋತ್ಸವ ಇಲ್ಲದೇ ಕನ್ನಡ ಸಾಹಿತ್ಯ ಊಹಿಸಲಸಾಧ್ಯ…
    ನಿಸಾರ್ ಅವರಿಗೆ ನಮನಗಳು…

Leave a Reply

You cannot copy content of this page

Scroll to Top