ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಬದಲಾಗದ ಕ್ಷಣಗಳು… ಶಾಲಿನಿ ಆರ್. ಬದಲಾಗದ ಕ್ಷಣಗಳು, ನೀ’ ಬಂದು ಹೋದ ಘಳಿಗೆಗಳು, ಅದೇ ಚಳಿಗಾಳಿಯ ಇರುಳುಗಳು, ಚಂದ್ರಿಕೆಯ ಸುರಿವ ಬೆಳದಿಂಗಳು, ನಿನ್ನರಸುವ ಕಣ್ಣರೆಪ್ಪೆಗಳು, ಹ್ಞಾಂ, ಕಣ್ಣಂಚಿನಾ ಕೊನೆಯಲಿ ಕಂಡು ಕಾಣದ್ಹಾಂಗೆ ಜಿನುಗಿದ ಹನಿಗಳು, ಮತ್ತೇನಿಲ್ಲ,! ಮೌನದುಯ್ಯಾಲೆಯಲಿ ಬಿಗಿದ ಕೊರಳು, ಒಣನಗೆ , ದಾಹ! ಅಷ್ಟೇ, ಸಂಜೆಯ ಚಳಿಗಾಳಿಯಿರುಳಲಿ ನೀ ನಡೆದ ದಾರಿಯುದ್ದಕ್ಕೂ ಮಂಜುಮುಸುಕಿದ ಧೂಳ ಕಣಗಳು, ಮನದಾಳದಲ್ಲಿ ಅಲ್ಲ, ಮತ್ತೆ! ಯಾವುದು ಬದಲಾಗಿಲ್ಲ ನೀ ಬಂದು ಹೋದ ಘಳಿಗೆಗಳು, ಅದೇ ಚಳಿಯ ಇರುಳುಗಳು, ಚಂದ್ರಿಕೆಯ ಸುರಿವ ಬೆಳದಿಂಗಳು, ಸುಳಿಯದ ನಿದಿರೆಯ ಹೊರತು! *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪ್ರೀತಿಯ ಗೆಳೆಯರೇ ಮೂಗಪ್ಪ ಗಾಳೇರ ಪ್ರೀತಿಯ ಗೆಳೆಯರೇ……. ನಿಮಗೊಂದು ಕತೆ ಹೇಳಬೇಕೆಂದಿರುವೆ ಎರೆಮಣ್ಣ ಕರಿ ಚೆಲುವು ಸುಳಿಗಾಳಿಯ ಅಲೆಮಾರಿಯ ನಡಿಗೆ ಬೈಕೊಂಡು ಹುರ್ಕೊಂಡು ಸರಿಯಾಗಿ ಕೇಳಿ ನಾ ಹೇಳುವ ಕಥೆಯಾ……..! ಪ್ರೀತಿಯ ಗೆಳೆಯರೇ……. ನಿಮಗೊಂದು ಪತ್ರ ಬರೆಯುವೆ ನಿಟ್ಟುಸಿರು ಬಿಡದೆ ಬಿಟ್ಟ ಕಣ್ಣುಗಳ ಮುಚ್ಚದೆ ಓದಿ ಅಲ್ಲಲ್ಲಿ ಹುಡುಕಿ ತಡಕಿ ಭಯಬಿದ್ದ ಮನಸ್ಸುಗಳನ್ನು ಪತ್ರದಲ್ಲಿ ಬಚ್ಚಿಟ್ಟಿರುವೆ……..! ಪ್ರೀತಿಯ ಗೆಳೆಯರೇ…… ನಿಮಗೊಂದು ಗುಟ್ಟು ಹೇಳಬೇಕೆಂದಿರುವೆ ಬಾರದ ದಿನಗಳಲ್ಲಿ ಕಳೆದ ಕಂಬನಿಯ ಕನಸುಗಳು ಚಿರತೆ ನಡಿಗೆ ಕದ್ದ ಪೂರ್ವಜರ ಉಸಿರು ಒಲವಿನ ಬಗೆಬಗೆಯ ಗುಟ್ಟನ್ನು ಬೆಂಕಿಯ ಹೃದಯದಲ್ಲಿ ಹೊರಬಂದ ತಣ್ಣನೆಯ ನಾಲಿಗೆಯ ಗುಟ್ಟೊಂದು ಹೇಳುವೆ…….! ಪ್ರೀತಿಯ ಗೆಳೆಯರೇ…… ನಿಮಗೊಂದು ಕವಿತೆ ಕೇಳಿಸಬೇಕೆಂದಿರುವೆ ಇರುಳ ಕತ್ತಲೆಯಲ್ಲಿ ಖಾಲಿಯಾದ ಕನಸುಗಳನ್ನು ಬಯಲುಗಳಲ್ಲಿ ಒಂಟಿಯಾದ ಜೀವಿಗಳ ಒಲವನ್ನು ಕಾಡು ಕಡಲ ಮಡಿಲಲ್ಲಿ ಜಂಡು ಜನಗಳ ಅಸಾಯಕ ತೋಳುಗಳ; ಶಬ್ದಶ್ಮಶಾನದಾಚೆ ಇರುವ ಕಡಲಾಳದ ಕವಿತೆಯೊಂದು ಕೇಳಿಸುವೆ………! ********

ಕಾವ್ಯಯಾನ Read Post »

ಇತರೆ

ಪ್ರಬಂಧ

ಮಠದ ಆನೆ ರೇಶ್ಮಾ ಗುಳೇದಗುಡ್ಡಾಕರ್ ಆನೆ ಎಂದರೆ ಸಂಭ್ರಮ, ಸಡಗರ  ದೈವೀಕತೆ ಆಶ್ಚರ್ಯ ಹತ್ತು ಹಲವು ಉದ್ಗಾರ. ಊರಿನಲ್ಲಿ ಕಂಡರೆ .ಅದೆ ಆನೆ ಅಚಾನಕ್ ಅಗಿ ನಾವು ಹೋಗುವ ದಾರಿಯಲ್ಲಿ ,ಕಾಡಿನಲ್ಲಿ ಊರ ಬಯಲಿನಲ್ಲಿ ಕಂಡರೆ !!!! ಹೃದಯ ವೇ ಬಾಯಿಗೆ ಬಂದಂತಾಗುತ್ತದೆ .  ಅಲ್ಲವೇ ಅದನ್ನು ದೈರ್ಯ ವಾಗಿ ಸ್ವಾಗತಿಸುವರು ಸ್ವಲ್ಪ ಕಡಿಮೆಯೇ .     ಆನೆ ಎಂದರೆ ನೆನಪಾಗುವದು ಅದರ  ಗಾತ್ರ  ಗತ್ತು ರಾಜಗಾಂಭಿರ್ಯ ನಡಿಗೆ ಅದರ ತೊಕದಷ್ಟೇ ಇರುವ ಸಂಮಯಮ .ಆನೆ ಒಂದು ಅದರೆ ಅದು ತಿಳಿಸುವ ನೀತಿ ಪಾಠ ಹಲವು ತಿಳಿದರೆ!ಇಂತಹ ಆನೆ ನಮ್ಮೊರಿಗೊ ಬರುತ್ತದೆ ವರ್ಷಕ್ಕೆ ೨ ಬಾರಿ ಅದು ಮಠದಿಂದ  ಅದೇ ರಾಜಗಾಂಭೀರ್ಯ ಗತ್ತು  ಅದೇ ಸಂಮಯಮದಿಂದ ಮಾವುತನನ್ನು ತನ್ನ ಮೇಲೆ ಹೊತ್ತುಕೊಂಡು ತನ್ನ ಬಹುಗಾತ್ರ ದೇಹವನ್ನು ಲೆಕ್ಕಿಸದೆ ಅವನ ಆಣತಿಗೆ ತಲೆಬಾಗುತ್ತಾ!   ಆಗ ಊರಲ್ಲಿರುವ ಶ್ವಾನ ಬಳಗವೇ ಅದನ್ನು ಮೊದಲು ಸ್ವಾಗತಿಸುವದು!  ತಮ್ಮ ಅಸಹನೆಯನ್ನು ಹೊಳಿಡುವದರ ಮೂಲಕ ಹೊರಹಾಕುತ್ತಾ .ಆ ಗಜರಾಜನನ್ನು ಕಂಡರೆ ಈ ಶ್ವಾನ ಪಡೆಗೆ ಎಕೆ ಅಂತಹ ಕೋಪವೋ ನಾ ಅರಿಯೆ ಮಾರುದೊರದಲ್ಲಿ ನಿಂತು ಒಂದೇ ಉಸಿರಿನಲ್ಲಿ ಹೊಳಿಡುತ್ತವೆ !? ಇದ್ಯಾವುದನ್ನೊ ಗಜರಾಜ ಗಮನಿಸುವದಿಲ್ಲ ತನ್ನ ಶಕ್ತಿಯನ್ನೊ  ಆ ತೃಣಮಾತ್ರಗಳ ಮೇಲೆ ಪ್ರಯೋಗಿಸುವ ಗೋಜಿಗೊ ಹೊಗುವದಿಲ್ಲ     ಗಜರಾಜ ಬೀದಿಯಲ್ಲಿ ಬರುತ್ತಿದ್ದರೆ ಅದನ್ನು ನೋಡುವದೇ ಒಂದು ಸೊಬಗು . ಎಂದಿನಂತೆ ನಿಧಾನವಾಗಿ ಸಾಗುತ್ತದೆ ಅವನ ನಡಿಗೆಗೆ ಅವನ ಕೊರಳಲ್ಲಿ ರುವ ಗಂಟೆಯ ನಾದವೋ ಜೊತೆಯಾಗಿರುತ್ತದೆ ತಲೆ ಬಾಗಿದವರಿಗೆ ಆಶಿರ್ವದಿಸುತ್ತಾ.ಹಣ್ಣು ,ಬೆಲ್ಲ ನೀಡಿದರೆ ವಿನಮ್ರವಾಗಿ ಸ್ವೀಕರಿಸುತ್ತಾ  ಹಣ ನೀಡಿದರೆ ತನ್ನ ಒಡೆಯನಿಗೆ ಕೊಡುತ್ತಾ !      ಎಂತಹ ಗುಣ ಮನುಜರು ಕಲಿಯಬೇಕು ಎನಿಸುತ್ತದೆ ಇರಲಿ  ಮಠದ ಆನೆ ಬಂತೆದರೆ ನನ್ನ ಪುತ್ರನಿಗೊ ಎಲ್ಲಿಲ್ಲದ ಹರ್ಷ .ಪಟಪಟನೆ ಓಡಿಹೊಗಿ ನನ್ನ ಪುಟಾಣಿ ಅದರ ಮುಂದೆ ನಿಲ್ಲುತ್ತಾನೆ ನನ್ನೊ ಕೆರೆದ್ಯೊಯಿದು “ಮಮ್ಮಿ ಬಾಹುಬಲಿ ,ಮಮ್ಮಿ ಬಾ ಬಾಹುಬಲಿ ” ಎನ್ನುತ್ತಾ   ಬಾಹುಬಲಿ ೨ ಚಿತ್ರದಲ್ಲಿ ನಾಯಕ ಆನೆಯನ್ನು  ಅದರ ಸೊಂಡಿಲಿನ ಮೂಲಕ ಎರುತ್ತಾನೆ ಇದು ಪ್ರತಿ ಬಾರಿ ಆನೆ ಬಂದಾಗಲೂ ಅವನು ಅದರ ಸೊಂಡಿಲನ್ನು ಗಮನಿಸುತ್ತಾ ನಿಲ್ಲುತ್ತಾನೆ …!!ನನ್ನ ಬಾಹುಬಲಿ ಆನೆಯನ್ನು ಮುಟ್ಟಲು ,ಅವನಿಗೆ ಕುತೊಹಲ ನನಗೊ ಅಷ್ಟು ದೈತ್ಯಾಕಾವನ್ನು ಹತ್ತಿರದಿಂದ ನೋಡಿ ತಳಮಳ ಟಿ.ವಿ ಯಲ್ಲಿ ನೋಡುವದು ಬೇರೆ  ಈಗ real zoom ಅಲ್ಲಿ ನೋಡುವದೇ ಬೇರೆ.              ಗಜರಾಜ ಮಾತ್ರ ಯಾವುದನ್ನು ಗಮನಿಸದೆ  ವಿನಮ್ರತೆಯಿಂದ ನಿಂತಿರುತ್ತಾನೆ  ಹಣ್ಣನ್ನು ಸ್ವೀಕರಿಸಿ, ಆಶೀರ್ವದಿಸುತ್ತಾನೆ  ಅವನಿಗಾಗಿ ಕಾಯುತ್ತಿರುವವರ ಬಳಿಸಾಗುತ್ತಾನೆ    ಭಕ್ತಗಣ ಎಷ್ಟೇ ದೊಡ್ಡ ದಿದ್ದರೂ ಎಂತಹ ವಾದ್ಯಗಳ ಘೋಷ ಮೊಳಗಿದ್ದರೊ ,ತನ್ನ ಆಗಾಧ ಶಕ್ತಿಯನ್ನು ಮರೆತು,ಮೃಗತ್ವ ತೊರೆದು , ಜನಮಾನಸದಲ್ಲಿ ಬೇರೆಯುತ್ತಾನೆ..‌!!            ಗಜರಾಜ ಹಲವು ಮಾತುಗಳನ್ನು ತನ್ನ ಮೌನದಿಂದಲೇ ಹೇಳುತ್ತಾನೆ ಅನಿಸುತ್ತದೆ  ನನಗೆ .ನಮ್ಮಲ್ಲಿ ಒಂದು ಮಾತು ಇದೆ “ಆನೆ ಹೊಗುತ್ತಿರುತ್ತದೆ,ಶ್ವಾನ ಬೊಗಳುತ್ತಿರುತ್ತದೆ” ಅಂತ ಇದು ಬಹಳ ಅರ್ಥ ಗರ್ಭಿತ ಮಾತು ಅಲ್ಲವೆ? .ಲೋಕದಲ್ಲಿ    ಟೀಕೆ-ಹೊಗಳಿಕೆ, ವಿಮರ್ಶೆ ,ನಿಂದನೆ , ಸಹಜ ಅದಕ್ಕೆ ನಮ್ಮ ಗುರಿಯನ್ನು ಬಿಟ್ಟು ಶಕ್ತಿ ,ಅಥವಾ ಯುಕ್ತಿ ಪ್ರದರ್ಶನ ಎಕೆ ಮಾಡಬೇಕು ? ನಿಂದಿಸುವರು ,ತೆಗಳುವರು ಇರಲಿ ನಾವು ನಮ್ಮ ಗಮನ ನಮ್ಮ ಸಾಧನೆತ್ತ  ಹಾಗೊ ನಮ್ಮ ಕೆಲಸದತ್ತ ಇರಬೇಕು .                ಆನೆ ಅಷ್ಟು ಶಕ್ತಿ ಶಾಲಿಯಾದರೂ ಶ್ವಾನಗಳ ವಿರುದ್ದ ನಿಲ್ಲುವದಿಲ್ಲ .ಮಾವುತನ ಆಣತಿ ಮೀರುವದಿಲ್ಲ ….ಅದರ ತಾಳ್ಮೆ ಕೆಟ್ಟಿತೆಂದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ …!! ಇದು ನಮ್ಮೆಲ್ಲರಿಗೊ ಗೊತ್ತು ಅಂತಹ ಗಜರಾಜ ಶಾಂತ ಮೂರ್ತಿ ಯಾಗಿ ನಮ್ಮೆದರು ನಿಂತಾಗ ….. ಆ ದೈವವೇ ಬಂದತೆ ಭಾಸವಾಗುತ್ತದೆ .ಪ್ರಾಣಿ ಯಾದರೊ ಹೃದಯದ  ಭಾಷೆ ಅರಿಯುತ್ತದೆ ….!!! ಅದರೆ ನಾವು ಒಮ್ಮೊಮ್ಮೆ  ಮನುಷ್ಯತ್ವ ಮರೆತು ಬದುಕುತ್ತೆವೆ ….!!?? ನಮ್ಮವರ ಮರೆಯುತ್ತೆವೆ …ಜವಾಬ್ದಾರಿ ಯಿಂದ ನುಣುಚಿಕೊಳ್ಳುತ್ತೆವೆ … ಪ್ರಾಣಿ ಪಕ್ಷಿ ಗಳಲ್ಲಿ ಇರುವ ಪ್ರೀತಿ ಬಾಂಧವ್ಯ ನಮ್ಮಲ್ಲಿ    ನೇಪಥ್ಯಕ್ಕೆ ಸರಿಯುತ್ತಿದೆ ದಿನ ಕಳೆದಂತೆ  ಹಣ ಅಧಿಕಾರ ದಿಂದ ಸ್ನೇಹ ,ಸಂಬಂಧ ಅಳೆಯುತ್ತೆವೆ ,ನಮ್ಮ ನಮ್ಮಲ್ಲೆ ಕೋಟೆ ಕಟ್ಟಿಕೊಳ್ಳುತ್ತೇವೆ ಮಾನವೀಯತೆ ತೊರೆದು ಜೀವಿಸುತ್ತಿದ್ದೆವೆ ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳತ್ತೆವೆ …..ನಮಗೆ ಬದುಕಲು ಹಲವು ಅಯಾಮಗಳಿವೆ ಪ್ರಣಿಗಳಿಗೆ ನಮ್ಮಂತೆ ಯಾವ ಸೌಲಭ್ಯ ಇಲ್ಲ ಹಣ ,ಆಸ್ತಿ, ಮೊಬೈಲ್, ಸಾಮಾಜಿಕ ಜಾಲತಾಣ , ಯಾವುದೊ ಇಲ್ಲ …!! ಅದರೊ ಅವು ಬದುಕುತ್ತವೆ ನಾವು ಸಾಯುತ್ತೆವೆ ಇಲ್ಲ ಸೋಲುತ್ತೇವೆ .ಸೋಲು ಗೆಲುವಿನ ಮೆಟ್ಟಿಲು ಎಂಬು ಅರಿಯಲು ವಿಫಲವಾಗುತ್ತೇವೆ           “ಇದು ಮಾನವ ಜನ್ಮ ಹಾಳುಮಾಡಿಕೊಳ್ಳ ಬೇಡಿ ಹುಚ್ಚಪ್ಪಗಳಿರಾ ” ಎಂಬ ದಾಸರ ನಾಣ್ಣುಡಿಯನ್ನು ಗಜರಾಜ ನಮಗೆ ಹೇಳಿಹೋದಂತೆ  ಅನಿಸುತ್ತದೆ. ಪ್ರಾಣಿ ಗಳಿಂದ ಜನರಿಗೆ ಅಗಾಗ , ತೊಂದರೆ ಅದರೆ ಅದರೆ ನಮ್ಮಲ್ಲೆ ಬೇಕಾದಷ್ಟೊ ನಿತ್ಯ ನಡೆಯುತ್ತವೆ ಹಲವು ರೊಪದಲ್ಲಿ ….!!ಯಾವ ಪ್ರಾಣಿ ಪಕ್ಷಿ ಯನ್ನು ಅನ್ಯಥಾ  ಕೆಣಕುವದು ತಪ್ಪು ಅವಕ್ಕೊ ನಮ್ಮಂತೆ ಬದುಕಲು ಹಕ್ಕಿದೆ ಈ ಜೀವ ಜಗತ್ತಲ್ಲಿ ಅದರದ್ದೇ ಆದ ನಿರ್ದಿಷ್ಟ ಜವಾಬ್ದಾರಿ ಇದೆ .ಎಂಬುದನ್ನು ನಾವು ಮನದಟ್ಟು ಮಾಡಿ ಕೊಳ್ಳಬೇಕು .                      ಗಜರಾಜನ  ಆಗಮನ ಕ್ಕಾಗಿ ಅವನ ಘಂಟೆಯ ನಾದವನ್ನು ನನ್ನ ಪೋರ ಮತ್ತೆ  ಕಾಯುತ್ತಿರುತ್ತಾನೆ .ನನಗೆ ಗಜರಾಜನ ಮಾತುಗಳು ಅವನು ಹೊದ ದಾರಿಯಲ್ಲೆಲ್ಲಾ ಮಾರ್ದನಿಸುತ್ತಿದೆ ಎನಿಸುತ್ತದೆ *******                                           

ಪ್ರಬಂಧ Read Post »

ಕಾವ್ಯಯಾನ

ಕಾವ್ಯಯಾನ

ಅನ್ವೇಷಾ  ರಶ್ಮಿ ಕಬ್ಬಗಾರ ಅನ್ವೇಷಾ    ೧ ಮತ್ತೆ ಹೊಸದಾಗಿ ನಿನ್ನ ಪ್ರೀತಿಸ ಬೇಕೆಂದಿದ್ದೇನೆ ನೀ ನನ್ನ ಮಹತ್ವಾಕಾಂಕ್ಷೆಯೋ ಹಳೇ ಪ್ರೇಮಿಯೋ ಪತ್ತೆ ಮಾಡಬೇಕಿದೆ      ೨         ಇಲ್ಲ ಮತ್ತೆ ಮತ್ತೆ ನಿನ್ನ ಕಾಯಿಸುವ ಇರಾದೆಯಿಲ್ಲ ಸೀದ ಇಳಿದು ಮನವೊಲಿದಲ್ಲಿ ಮಳೆ ಕರೆದು ಮೊಳೆವೆ ೩ ರಾಗ ರಂಜನೆ ಧ್ಯಾನ ಸಾಧನೆಗೆಲ್ಲ ವ್ಯವಧಾನವಿಲ್ಲೀಗ ಇದು ಕವಿ ಹುಟ್ಟುವ ಪದ ಪಾದ ನಾಭಿಯೊಳ್ ಮುಟ್ಟುವ ಖುಷಿ ಋಷಿ ಮೊಟ್ಟೆಯೊಡೆದುಟ್ಟುವ ಮುಂಜಾವು ಮತ್ತೀಗ  ಗಾಳಿಗೆ ಬೆಂಕಿ ಎದುರಾದಂತೆ ಎದು ರಾಗಬೇಕಿದೆ ನಾವು . *****

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ

ಪ್ರಭುಲಿಂಗ ಲೀಲೆ ಚಾಮರಸ  ಚಾಮರಸನ ಮಹಾಕಾವ್ಯ ‘ಪ್ರಭುಲಂಗಲೀಲೆ’ಯೂ..! ಚಾಮರಸನು ಕನ್ನಡದ ಪ್ರಸಿದ್ಧ ಕವಿ. ಇವರು ‘ಪ್ರಭುಲಿಂಗ ಲೀಲೆ’ಯು ಭಾಮಿನಿ ಷಟ್ಪದಿಯಲ್ಲಿ ಬರೆಯಲಾದ ಈತನ ಪ್ರಸಿದ್ಧ ಕಾವ್ಯವಾಗಿದೆ. ಇವರು ಇಮ್ಮಡಿ ಪ್ರೌಢದೇವರಾಯನ ರಾಜಾಶ್ರಯದಲಿದ್ದವನು. ಅನ್ಯಮತ ಕೋಳಾಹಲ, ವೀರಶೈವಾಚಾರ ಮಾರ್ಗ ಸಾರೋದ್ಧಾರ ಇವನಿಗೆ ಸಂದಿದ ಬಿರುದುಗಳು… ನಡುಗನ್ನಡದ ಶ್ರೇಷ್ಠ ಕಾವ್ಯ ಎಂದು ಪ್ರಸಿದ್ಧವಾಗಿರುವ ‘ಪ್ರಭುಲಿಂಗಲೀಲೆ’ಯ ಕರ್ತೃ ಈತ. ವೀರಶೈವ ಕವಿ. ವಿಜಯನಗರದ ಪ್ರೌಢ ದೇವರಾಯನ ಕಾಲದ ನೂರೊಂದು ವಿರಕ್ತರಲ್ಲಿ ಗಣನೆಯಾಗಿದ್ದಾನೆ. ವೀರಶೈವಾಚಾರ ಮಾರ್ಗಸಾರೋದ್ಧಾರ, ಅನ್ಯಮತ ಕೋಳಾಹಳ ಎಂಬ ಬಿರುದುಗಳನ್ನು ಪಡೆದಿದ್ದ ಈತನ ಸ್ಥಳ ಗದಗ ಇಲ್ಲವೇ ನಾಗಣಾಪುರ ಎಂದು ಹೇಳಲಾಗಿದೆ…. ಹರಿಹರ, ರಾಘವಾಂಕರ ತರುವಾಯ ಐತಿಹಾಸಿಕ ವ್ಯಕ್ತಿಗಳನ್ನು ಕುರಿತು ಕಾವ್ಯ ಬರೆದವರಲ್ಲಿ ಚಾಮರಸ ಅಗ್ರಗಣ್ಯನಾಗಿದ್ದನು. 25 ಗತಿಗಳು ಮತ್ತು 1111 ಪದ್ಯಗಳನ್ನು ಒಳಗೊಂಡಿರುವ ‘ಪ್ರಭುಲಿಂಗಲೀಲೆ’ ಮಧ್ಯಮ ಗಾತ್ರದ ಕಾವ್ಯವಾಗಿದೆ. ‘ಪ್ರಭುಲಿಂಗಲೀಲೆ, ಎಂದರೆ ಪ್ರಭುವೇ ಲಿಂಗಲೀಲೆಯಲ್ಲಿ ಮೆರೆದುದು ಎಂಬ ಭಾವ ಬರುವಂತೆ ಹೆಸರಿಸಿ, ಕಾವ್ಯದ ಉದ್ದಕ್ಕೂ ಅದೇ ರೀತಿ ಅಲ್ಲಮನ ಚರಿತ್ರೆಯನ್ನು ಕವಿ ಉಜ್ಜ್ವಲವಾಗಿ ಚಿತ್ರಿಸಿದ್ದಾನೆ. ಕವಿಯ ವಿಷಯವಾಗಿ ಹೆಚ್ಚಿನ ಯಾವ ಮಾಹಿತಿ ಸಿಗದಿದ್ದರೂ ಆತ ಚಿತ್ರಿಸಿರುವ ಅಲ್ಲಮನ ಚರಿತ್ರೆಯನ್ನೇ ಆಧರಿಸಿ ಊಹಿಸುವುದಾದರೆ ಚಾಮರಸನೂ ತನ್ನ ಕಥಾನಾಯಕನಂತೆ ವಿರಕ್ತನೂ, ಸಂಯಮಿಯೂ ಸದಾಜಾರ ಸಂಪನ್ನನೂ ಆಗಿದ್ದನೆಂದು ಊಹಿಸಬಹುದಾಗಿದೆ… ಹನ್ನೆರಡನೆಯ ಶತಮಾನದಲ್ಲಿ ಮಾನವಕುಲದ ಉದ್ಧಾರಕ್ಕಾಗಿ ನಡೆದ ಶಿವಶರಣರ ಕ್ರಾಂತಿಯಲ್ಲಿ ಅಲ್ಲಮಪ್ರಭು ಜ್ಞಾನನಿಧಿಯಾಗಿ ವೈರಾಗ್ಯ ಮೂರ್ತಿಯಾಗಿ ಕಂಗೊಳಿಸಿದ್ದಾನೆ. ಅಂಧಾಭಿಮಾನಕ್ಕೆ ಒಳಗಾಗದೆ ಸಾಧಕರ ಲೋಪ ದೋಷಗಳ ಮೇಲೆ ಜ್ಞಾನದ ಬೆಳಕನ್ನು ಬೀರಿ ಅವರನ್ನು ಒರೆದು, ಕೆಡೆನುಡಿದು, ದಾರಿ ತೋರಿ ಸಮಸ್ತಜಾತಿಯ ಜಾಲವನ್ನು ಸರ್ವವನ್ನು ಕರುಣಿಸಿ, ಉದ್ಧರಿಸುತ್ತ ಸಾಗಿದ ಈ ಮಹಾತ್ಮನ ದಿವ್ಯ ವ್ಯಕ್ತಿತ್ವವನ್ನು ಈ ಕಾವ್ಯ ಅಪೂರ್ವವಾದ ರೀತಿಯಲ್ಲಿ ಚಿತ್ರಿಸುತ್ತದೆ. ಅಲ್ಲಮ ಪ್ರಭುವಿನ ಚರಿತ್ರೆಯನ್ನು ಮೊಟ್ಟಮೊದಲು ಬರೆದ ಹರಿಹರ ತನ್ನ ಪ್ರಭುದೇವರ ರಗಳೆಯಲ್ಲಿ ಅಲ್ಲಮ ಕಾಮಲತೆಗೆ ಮರುಳಾಗಿ ವಿರಹದಿಂದ ಬೆಂದು ವೈರಾಗ್ಯ ಪಡೆದಂತೆ ಚಿತ್ರಿಸಿದ್ದರೆ `ಲಲಿತನಿರ್ಮಲ ಚಂದ್ರಕಾಂತದ ಶಿಲೆಯ ಹತ್ತಿರ ಲತೆಯ ದಾವಾನಳನು ಕೊಳಲಾಜ್ವಾಲೆಯಾ ಶಿಲೆಯೊಳಗೆ ತೋರ್ಪಂತೆ ತಿಳಿಯದಯದ ಜನಕೆ ಮಾಯೆಯ ತಳಿತ ಕಾಮಜ್ವಾಲೆಯಲ್ಲಮನೊಳಗೆ ಪ್ರತಿಬಿಂಬಿಸಿದುದಾತನೆ ಕಾಮಿಯೆಂಬಂತೆ-ಎಂದು ಚಾಮರಸ ಅಲ್ಲಮನ ಗುರುಗುಹೇಶ್ವರ ಸ್ವರೂಪದ ದರ್ಶನ ಮಾಡಿಸಿದ್ದಾನೆ. ತನ್ನ ಕಾವ್ಯ `ಸತ್ತವರ ಕಥೆಯಲ್ಲ ಜನನದ ಕುತ್ತದಲ್ಲಿ ಕುದಿ ಕುದಿದು ಕರ್ಮದ ಕತ್ತಲೆಗೆ ಸಿಲುಕುವರ ಸೀಮೆಯ ಮಾತು ತಾನಲ್ಲ ಎಂದು ಘೋಷಿಸಿ `ಸತ್ಯಶರಣರು ತಿಳಿವುದೀ ಪ್ರಭುಲಿಂಗಲೀಲೆಯನು’ ಎಂದಿರುವುದು ಕವಿಯ ಉದ್ದೇಶಕ್ಕೆ ಸಾಕ್ಷಿ… ಮಲಯಜದ ಮರ ಗಾಳಿ ಸೋಂಕಿನಲುಳಿದ ಮರ ಪರಿಮಳಿಸುವಂತೆ ಅಲ್ಲಮನ ದಿವ್ಯ ಸಂಪರ್ಕದಿಂದ ಬಸವಣ್ಣ, ಸಿದ್ಧರಾಮ, ಗೊಗ್ಗಯ್ಯ, ಗೋರಕ್ಷ, ಮಾಯಾದೇವಿ, ಮಹಾದೇವಿಯಕ್ಕ, ಮುಕ್ತಾಯಕ್ಕಮೊದಲಾದವರು ಕಣ್ಗೆಸೆದರೂ ಆಯಾ ಪಾತ್ರವೃಕ್ಷಗಳು ತಮ್ಮ ಸತ್ತ್ವದಿಂದಲೇ ಬೆಳೆದು, ತಂತಮ್ಮ ನೆಲೆಯಲ್ಲಿ ನಿಂತು ಅಲ್ಲಮನ ಪಾದಕ್ಕೆ ಬಾಗಿ ಹೂ ಬಿಟ್ಟಿವೆ. ಒಂದು ದೃಷ್ಟಿಯಿಂದ ಪಾರ್ವತಿಯ ತಾಮಸಕಳೆಯಾಗಿ ಬಂದ ಮಾಯೆ ಅವಳಿಗೆ ತಿಳಿವನ್ನು ಕೊಟ್ಟ ವಿಮಳೆ, ಸಾತ್ತ್ವಿಕ ಕಳೆಯಾಗಿ ಬಂದ ಅಕ್ಕಮಹಾದೇವಿ, ಸುಜ್ಞಾನಿ ನಿರಹಂಕಾರರ ಮಗನಾಗಿ ಹುಟ್ಟಿದ ಅಲ್ಲಮ-ಈ ಮುಂತಾದ ಕಥಾರಚನೆಯಲ್ಲಿ ಆಧ್ಯಾತ್ಮಿಕವಾದ ಸಾಂಕೇತಿಕ ಧ್ವನಿಯ ಏಕತೆ ಕಾಣುತ್ತದೆ. `ಶಿವನ ನಟ ನಾಟಕದ ಮಹಿಮೆಯನ್ನು ತೆರೆದು ತೋರಿಸುವ ಈ ಕಾವ್ಯದಲ್ಲಿ ಎಲ್ಲ ಪಾತ್ರಗಳೂ ಜೀವಕಳೆಯಿಂದ ಕೂಡಿ ಶಿವಕಳೆಯನ್ನು ಬೆಳಗುತ್ತವೆ… ತಿಳಿಗನ್ನಡದ ತುಂಬಿದ ತೊರೆಯಂತೆ ನಿರರ್ಗಳವಾಗಿ ಹರಿಯುವ ಚಾಮರಸನ ಭಾಮಿನೀ ಷಟ್ಟದಿಯ ಶೈಲಿಯನ್ನು ಕುಮಾರವ್ಯಾಸನೊಡನೆ ಹೋಲಿಸಬಹುದಾದರೂ ಇವನ ಭಾಷೆ ನಯಗಾರಿಕೆಯಿಂದ ಕೂಡಿದೆ. ಆ ಕಾಲದ ಶಿವಶರಣರ ವಚನಗಳನ್ನು ಕವಿ ಚೆನ್ನಾಗಿ ಅಭ್ಯಾಸ ಮಾಡಿದ್ದ ಎಂಬುದಕ್ಕೆ ಇವನ ವಾಣಿ ಸಾಕ್ಷಿ ಹೇಳುತ್ತದೆ. ಭಾವ ಭಾಷೆಗಳಲ್ಲಿನ ಅಪೂರ್ವವಾದ ಹೊಂದಾಣಿಕೆಯಿಂದಲೂ ಉಜ್ಜ್ವಲವಾದ ಉಪಮೆ ರೂಪಕ ದೃಷ್ಟಾಂತಗಳಿಂದಲೂ ಸಮಯೋಚಿತವಾದ ವರ್ಣನೆ ಮತ್ತು ದೇಶೀಯ ಬೆಡಗಿನ ಪರಿಣಾಮದ ಉತ್ಕಟತೆಯಿಂದಲೂ ಇವನ ಶೈಲಿ ಇವನ ಸ್ವತಂತ್ರ ಕವಿತಾಮಾರ್ಗದ ಮುಖಬಿಂಬದಂತಿದೆ… ಚಾಮರಸನ ‘ಪ್ರಭುಲಿಂಗಲೀಲೆ’ ಸಂಸ್ಕೃತ, ತಮಿಳು, ತೆಲುಗು ಹಾಗೂ ಮರಾಠಿ ಭಾಷೆಗಳಿಗೆ ಪರಿವರ್ತನ ಹೊಂದಿದ ಕೀರ್ತಿ ಪಡೆದ ಏಕಮಾತ್ರ ಕನ್ನಡ ಕಾವ್ಯವಾಗಿದೆ..! ಹೀಗೆಯೇ ಚಾಮಾರಸನ ಕಾವ್ಯ ಸಾಗುತ್ತದೆ… ಲೇಖನ ಸಹಕಾರ– ಎಚ್. ವೃಷಬೇಂದ್ರಸ್ವಾಮಿಯವರ ಕೃತಿ. ******** ಕೆ.ಶಿವು.ಲಕ್ಕಣ್ಣವರ                  

ಪುಸ್ತಕ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ರೇಮಾಸಂ ಡಾ.ರೇಣುಕಾತಾಯಿ.ಎಂ.ಸಂತಬಾ ಸುಳ್ಳು ಶಬ್ದಗಳ ಪೋಣಿಸಿ ಸರಮಾಲೆ ಹಾಕದಿರು ಗೆಳೆಯ/ ಪೊಳ್ಳು ಮಾತಿನಲಿ ಸಿಲುಕಿಸಿ ಬಲೆಯ ಬೀಸದಿರು ಗೆಳೆಯ// ಚಂದಿರ ನಕ್ಕಾನು ನಕ್ಷತ್ರಗಳನು ಪಿಡಿದು ಮುಡಿಸುವ ಪರಿಗೆ/ ವಾಸ್ತವಕ್ಕೆ ಮರಳು ಹಗಲುಗನಸು ಕಾಣದಿರು ಗೆಳೆಯ// ಎದೆಯ ಹೊಲದಲಿ ಪ್ರೀತಿ ಬಿತ್ತಲು ಬೇಕೆನು ಕಾಣಿಕೆ/ ಧನವೇ ಮನವನು ಗೆಲ್ಲುವದೆಂದು ತಿಳಿಯದಿರು ಗೆಳೆಯ// ವಾಸ್ತವಿಕತೆ ಕನ್ನಡಿಯನು ಗಮನಿಸಿ ನೋಡಲಾರೆಯೇನು/ ಪ್ರೇಮದಲಿ ಮಿಂದ ಕಣ್ಣ ದೃಷ್ಟಿ ಬದಲಿಸಿದಿರು ಗೆಳೆಯ// ಉಷೆಯಿಂದ ನಿಶೆಯವರೆಗೆ ನಿನ್ನ ನೆನೆಯುವಳು ನೆನಪಿಲ್ಲವೇ/ ಪರರ ನಶೆಯಲಿ ರೇಮಾಸಂನು ಮರೆಯದಿರು ಗೆಳೆಯ// *****************************

ಕಾವ್ಯಯಾನ Read Post »

ಇತರೆ

ನೆನಪು

ಜ್ಯೋತಿಬಾ ಫುಲೆಯವರ ಜಯಂತಿ “ಜ್ಯೋತಿ ಬೆಳಗೋಣ ಬನ್ನಿ”          ಏಪ್ರೀಲ ತಿಂಗಳು ನಿಜಕ್ಕೂ ಭಾರತ ದೇಶಕ್ಕೆ ಎರಡು ತಾರೆ ನೀಡಿತು. ಒಬ್ಬರು ಮಹಾಮಾನವ ಬಾಬಾಸಾಹೇಬ ಅಂಬೇಡ್ಕರರು ಮತ್ತು ಇನ್ನೊಬ್ಬರು ಕ್ರಾಂತಿಜ್ಯೋತಿ ಮಹಾತ್ಮಾ ಜ್ಯೋತಿಭಾ ಫುಲೆ. ಜ್ಯೋತಿರಾವರು ಹುಟ್ಟಿದ್ದು ೧೧ ಏಪ್ರೀಲ ಮತ್ತು ಅಂಬೇಡ್ಕರರು ಹುಟ್ಟಿದ್ದು ೧೪ ಏಪ್ರೀಲ. ದಮನಿತ ಮತ್ತು ಶೋಷಿತ ಸಮಾಜದ ಏಳಿಗೆಗೆ ಶ್ರಮಿಸಿ, ಅಂಧಕಾರವನ್ನು ಹೋಗಲಾಡಿಸಿ, ದೇಶದ ಆಂತರಿಕ ಸ್ವಾತಂತ್ರö್ಯ ಮತ್ತು ಸಾತ್ವಿಕ ಸ್ವಾತಂತ್ರಕ್ಕೆ ಹೋರಾಡಿದ ಇರ್ವರೂ ತಾರೆಗೆ ಸಮಾನರು. ಅಂಬೇಡ್ಕರರಿಗೆ ಆದರ್ಶರಾದ ಜ್ಯೋತಿರಾವರು ಭಾರತದ ಆಧುನಿಕತೆಗೆ ಹಾಕಿದ ಬದ್ರ ಬುನಾದಿ ಇಂದು ದೇಶವನ್ನು ಜಗತ್ತಿನಲ್ಲಿ ಮಿನುಗುವಂತೆ ಮಾಡಿದೆ.                        ಫುಲೆಯವರು ೧೧ ಏಪ್ರೀಲ್ ೧೮೨೭ ರಂದು ಮಹಾರಾಷ್ಟದ ಸಾತಾರಾ ಜಿಲ್ಲೆಯ ‘ಕಟ್ಗುಣ’ ಹಳ್ಳಿಯಲ್ಲಿ ತರಕಾರಿ ಮಾರುವವನ ಮನೆಯಲ್ಲಿ ಜನಿಸಿದರು. ಸಮಾನತೆ ಬೋಧಿಸಿದ ಸಂತ ತುಕಾರಾಮ, ಸಮಾನತೆಯ ತತ್ವದಡಿಯಲ್ಲಿ ರಾಜ್ಯ ಸ್ಥಾಪಿಸಿದ ಶಿವಾಜಿ ಮಹಾರಾಜರು, ಅನ್ಯಾಯದ ವಿರುದ್ಧ ಹೋರಾಡಿದ ಮಾರ್ಟಿನ್-ಲೂಥರ್-ಕಿಂಗ್ ಮತ್ತು ಮಾನವ ಹಕ್ಕು ಹೋರಾಟಗಾರ ಲೇಖಕ ಥಾಮಸ್ ಪೇನ್‌ರ ಪ್ರಭಾವಕ್ಕೆ ಒಳಗಾಗಿ ಭಾರತ ದೇಶದಲ್ಲಿ ದಮನಿತ ಮತ್ತು ಶೋಷಿತ ವರ್ಗದ ದಂಡನಾಯಕನಾಗಿ ಒಂಟಿ ಸಲಗದಂತೆ ಕಾದಾಡಿದ ವೀರ. ಕುಟುಂಬದ ಮತ್ತು ಸಮಾಜದ ಎಷ್ಟೆ ಒತ್ತಡ ಇದ್ದರೂ ಅತ್ಯಂತ ಜಿದ್ದಿನಿಂದ ಶಿಕ್ಷಣ ಪಡೆದರು. ನೌಕರಿ ಮಾಡುತ್ತಾ ಆರಾಮಾಗಿ ಇರಬಹುದಿತ್ತು. ಆದರೆ ಹಾಗೆ ಮಾಡದೆ ಸಮಾಜ ಸೇವೆಗೆ ತಮ್ಮನ್ನು ತಾವು ಮುಡುಪಾಗಿಟ್ಟರು.                ೧೮೪೮ರಲ್ಲಿ ಜ್ಯೋತಿರಾವರು ತಮ್ಮ ಮೇಲ್ವವರ್ಗದ ಆತ್ಮೀಯ ಸ್ನೇಹಿತನ ಮದುವೆಗೆ ಹೋದಾಗ ಸಂಭವಿಸಿದ ಅವಮಾನವು ಅವರ ಕಣ್ಣು ತೆರೆಸಿತು. ಈ ಅನಿಷ್ಠ ರೂಢಿ-ಪರಂಪರೆ ಮತ್ತು ಜಾತಿವ್ಯವಸ್ಥೆ ಮಣ್ಣುಗೂಡದೆ ಸಮಾಜದ ಮತ್ತು ದೇಶದ ಏಳಿಗೆ ಸಾಧ್ಯವಿಲ್ಲ. ಇದಕೆಲ್ಲಾ ಕಾರಣ ಅಜ್ಞಾನ. ಅಜ್ಞಾನ ತೊಲಗಬೇಕಾದರೆ ವಿದ್ಯೆಯೆ ಬಹುದೊಡ್ಡ ಅಸ್ತç ಎಂದು ತಿಳಿದು ಸಮಾಜದ ಪ್ರತಿಯೊಂದು ವರ್ಗಕ್ಕೆ ಶಿಕ್ಷಣ ಸಿಗುವಂತೆ ಪಣ ತೋಡುತ್ತಾರೆ.   “ವಿದ್ಯೆಯಿಲ್ಲದೆ ಮತಿ ಹೋಯಿತು ಮತಿ ಇಲ್ಲದೆ ನೀತಿ ಹೋಯಿತು ನೀತಿ ಇಲ್ಲದೆ ಗತಿ ಹೋಯಿತು ಗತಿ ಇಲ್ಲದೆ ವಿತ್ತ ಹೋಯಿತು ವಿತ್ತವಿಲ್ಲದೆ ಶೂದ್ರನು ಕುಸಿದ.             ಇಷ್ಟೆಲ್ಲಾ ಒಂದು ಅವಿದ್ಯೆ ಮಾಡಿತೆಂದು ಅವರು ಆ ವರ್ಷವೆ ಅಗಸ್ಟ ೧೮೪೮ ರಲ್ಲಿ ಪುಣೆಯಲ್ಲಿ ಶಾಲೆಯನ್ನು ತೆರೆಯುತ್ತಾರೆ. ಶಾಲೆಯಲ್ಲಿ ಪಾಠಕ್ಕೆ ಪತ್ನಿ ಸಾವಿತ್ರಿಬಾಯಿ ಫುಲೆಯವರಿಗೆ ಸ್ವತಃ ವಿದ್ಯೆ ಕಲಿಸಿ ದೇಶದ ಪ್ರಥಮ ಶಿಕ್ಷಕಿಯನ್ನಾಗಿ ಮಾಡುತ್ತಾರೆ. ಶಾಲೆಯ ಮುಖ ನೋಡದ ಸಾವಿತ್ರಿ ಪತಿಯ ವಿಚಾರಗಳಿಗಾಗಿ ತನ್ನ ಜೀವನವನ್ನೆ ಮುಡುಪಾಗಿಟ್ಟ ಧೀಮಂತ ಮಹಿಳೆ. ಶಾಲೆ ಕಲಿಸಲು ಹೋರಟಾಗ ಮೇಲ್ವರ್ಗದ ಕಿಡಗೇಡಿತನಕ್ಕೆ ಭಯಪಡದೆ ತಮ್ಮ ಕಾಯಕ ಚಾಲ್ತಿಯಿಟ್ಟರು. ಈ ಕಾರಣಕ್ಕೆ ಅವರಿಗೆ ಕುಟುಂಬದಿಂದ ಬಹಿಷ್ಕಾರಕ್ಕೆ ಒಳಗಾಗಬೇಕಾಯಿತು. ಅದಕ್ಕೂ ಅಂಜದ ಅವರು ಮುಂದೆ ೧೮೫೧ ರಲ್ಲಿ ಹೆಣ್ಣು ಮಕ್ಕಳಿಗಾಗಿ ಮತ್ತೊಂದು ಶಾಲೆಯನ್ನು ಪ್ರಾರಂಭ ಮಾಡಿದರು. ಮೊದಲಿಗೆ ಸಮಾಜದ ಭಯದಿಂದ ಕೇವಲ ೮ ಹೆಣ್ಣು ಮಕ್ಕಳು ಮಾತ್ರ ಶಾಲೆಗೆ ಬರುತಿದ್ದರು. ಆದರೆ ಇಂದು ದೇಶದಲ್ಲಿ ಕೋಟ್ಯಾವಧಿ ಹೆಣ್ಣು ಮಕ್ಕಳು ವಿದ್ಯೆ ಪಡೆದುಕೊಳ್ಳುತಿದ್ದಾರೆ, ಇದರ ಶ್ರೇಯ ನಿಜಕ್ಕೂ ಈ ದಂಪತಿಗಳಿಗೆ ಸಲ್ಲಬೇಕು.                       ಜ್ಯೋತಿರಾವ ಇಷ್ಟಕ್ಕೆ ನಿಲ್ಲದೆ ೧೮೫೨ ರಲ್ಲಿ ಅಸ್ಪೃಶ್ಯ ಜಾತಿಗಳಾದ ಮಹಾರ ಮತ್ತು ಮಾಂಗ ಮಕ್ಕಳಿಗೆ ಶಾಲೆಯನ್ನು ತೆರೆದರು. ದಾರಿದ್ರ್ಯ, ಬಡತನ, ಮೇಲು-ಕೀಳು, ಮೂಡನಂಬಿಕೆ ನಿರ್ಮೂಲನೆ ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಕೃಷಿಕ ಮತ್ತು ಕಾರ್ಮಿಕ ವರ್ಗದವರಿಗೂ ಜ್ಞಾನದ ಬಾಗಿಲನ್ನು ತೆರೆದರು. ಏಕೆಂದರೆ ಬ್ರಿಟೀಷ ಸರಕಾರವು ಕೃಷಿಕ ಮತ್ತು ಕಾರ್ಮಿಕರ ಅಜ್ಞಾನದ ಲಾಭ ಪಡೆದುಕೊಂಡು ವಿಪರಿತ ಕಂದಾಯ ವಸೂಲಿ ಮಾಡುತ್ತಿತ್ತು. ಕಷ್ಟ ಮಾಡುವದು ಇವರು ಆದರೆ ವಸೂಲಿ ಮಾಡುವ ಅಧಿಕಾರಿಗಳು ಮಾತ್ರ ಮೇಲ್ವರ್ಗದವರು. ಅದಕ್ಕಾಗಿ ಫುಲೆಯವರು ಪ್ರಥಮ ಬಾರಿಗೆ ಬ್ರಿಟಿಷರ ವಿರುದ್ಧ ಈ ಬಗ್ಗೆ ಧ್ವನಿ ಎತ್ತಿದರು. ಜಮೀನ್ದಾರ ಪದ್ಧತಿ, ಸಾಮಂತಶಾಹಿ, ಸಾಹುಕಾರ ಪದ್ಧತಿ ಹೋಗಲಾಡಿಸಬೇಕು ಮತ್ತು ಕೃಷಿಕರಿಗೆ ಅತ್ಯಾಧುನಿಕ ಸಲಕರಣೆ ಕೊಡಬೇಕು ಎಂದು ನೇರ ಶಬ್ದಗಳಲ್ಲಿ ಕೇಳಿಕೊಂಡರು.                    ಜ್ಞಾನ ಮುಚ್ಚಿಟ್ಟು ಉಳಿದ ಸಮಾಜದ ಕತ್ತು ಹಿಸುಕುವ ಮೇಲ್ವರ್ಗದ ಜೊತೆ ಬಹಿರಂಗ ಸಮರ ಸಾರಿದ್ದರು. ಪ್ರಥಮ ಬಾರಿಗೆ ಪುರೋಹಿತನಿಲ್ಲದ ಮದುವೆಯನ್ನು ಮಾಡಿಸಿ ತಮ್ಮ ಸಮಾಜದಿಂದ ಬಹಿಸ್ಕೃತಗೊಂಡರು. ಬಾಲ್ಯವಿವಾಹದ ನಿರ್ಭಂದನೆಗೆ ಹೋರಾಡಿದರು. ಬಾಲ್ಯವಿವಾಹ ಪರಿಣಾಮವೆಂದರೆ ಸಮಾಜದಲ್ಲಿ ವಿಧವೆಯರ ಸಂಖ್ಯೆ ಹೆಚ್ಚಾಗಿತ್ತು. ಅಂದಿನ ಸಮಾಜವು ಈ ವಿಧವೆಯರಿಗೆ ಅತ್ಯಂತ ಹೀನವಾಗಿ ನೋಡಿಕೊಳ್ಳುತಿತ್ತು. ಅವರನ್ನು ಕೇಶಮುಂಡನೆ ಮಾಡಿಸಿ ಕತ್ತಲೆ ಕೋಣೆಯಲ್ಲಿ ಇಡಲಾಗುತಿತ್ತು. ಯೌವನದಲ್ಲಿಯೆ ವಿಧವೆಯರಾಗಿ ಅನೈತಿಕ ಮಾರ್ಗದಿಂದ ಗರ್ಭೀಣಿಯಾದರೆ ನವಜಾತ ಮಕ್ಕಳನ್ನು ಬಿಸಾಕಬೇಕಾಗುತ್ತಿತ್ತು ಇಲ್ಲದಿದ್ದರೆ ಎಲ್ಲಾದರು ಬಿಡಬೇಕಾಗುತ್ತಿತ್ತು. ಫುಲೆಯವರು ಇವರಿಗಾಗಿ ಮುಂದೆ ಬಂದು ವಿಧವೆ ಮತ್ತು ಮಕ್ಕಳ ಸಲುವಾಗಿ ೧೮೬೩ರಲ್ಲಿ ಅನಾಥಾಲಯ ತೆರೆದರು. ೧೮೭೩ ರಲ್ಲಿ ಬ್ರಾಹ್ಮಣ ವಿಧವೆಗೆ ಅನೈತಿಕ ಮಾರ್ಗದಿಂದ ಜನಿಸಿದ ಮಗುವನ್ನು ದತ್ತು ತೆಗೆದುಕೊಂಡು ಸಮಮಾಜದಲ್ಲಿ ಹೊಸ ಆದರ್ಶ ನಿರ್ಮಾಣ ಮಾಡಿದರು.                     ಸಮಾಜಕ್ಕೆ ಸತ್ಯದ ಅರಿವಾಗಬೇಕೆಂದು ೧೮೭೩ ರಲ್ಲಿ ‘ಸತ್ಯಶೋಧಕ ಸಮಾಜ’ ದ ಸ್ಥಾಪನೆ ಮಾಡುತ್ತಾರೆ. ಈ ಮೂಲಕ ಸಮಾಜದಲ್ಲಿಯ ಅನಿಷ್ಠ ಪದ್ಧತಿಗಳನ್ನು ಮೊಟಕುಗೊಳಿಸಿ ಸುಧಾರಣೆ ಮಾಡುವಂತೆ ಬ್ರಿಟೀಷ ಸರಕಾರಕ್ಕೆ ಶಿಪಾರಸು ಮಾಡಿದಾಗ ಸರಕಾರವು ‘ಎಗ್ರಿಮೆಂಟ್ ಆಕ್ಟ’ ಪಾಸು ಮಾಡುತ್ತದೆ. ೧೮೮೮ ರಲ್ಲಿ ಇಂಗ್ಲೇಂಡ್ ರಾಣಿಯ ಪುತ್ರ ಭಾರತ ಭೇಟಿಗೆ ಬಂದಿದ್ದರು. ಅವರ ಕಾರ್ಯಕ್ರಮದಲ್ಲಿ ಫುಲೆಯವರು ಒಕ್ಕಲಿಗರ ಪಾರಂಪರಿಕ ವೇಷ-ಭೂಷದಲ್ಲಿ ಹೋಗಿ ದೇಶದ ಪರಿಸ್ಥಿತಿಯ ಬಗ್ಗೆ ರಾಣಿಯವರಿಗೆ ಮನವರಿಕೆ ಮಾಡಿಕೊಟ್ಟರು.                         ‘ರಾಷ್ಟಿçಯ ಕಾಂಗ್ರೇಸ್’ ಪಕ್ಷವು ೧೮೮೯ರ ತನ್ನ ಸಮಾವೇಶ ಮುಂಬಯಿಯಲ್ಲಿ ಇಟ್ಟಿಕೊಂಡಿತು. ಅಲ್ಲಿ ಕೂಡ ಫುಲೆಯವರು ರೈತನ ಭೆತ್ತ ಮತ್ತು ಹುಲ್ಲಿನ ಗಂಟಿನ ಜೊತೆ ಹೋಗಿ ವಿರೋಧ ವ್ಯಕ್ತ ಪಡಿಸಿದ್ದರು. ರಾಷ್ಟಿçಯ ಕಾಂಗ್ರೇಸ ಪಕ್ಷವನ್ನು ವಿರೋಧ ಮಾಡಿದವರು ಮೊದಲಿಗರೆಂದು ಹೇಳಬಹುದು. ಏಕೆಂದರೆ ಇದರಲ್ಲಿ ಇರುವವರೆಲ್ಲಾ ಮೇಲ್ವರ್ಗದದವರು, ಸಮಾಜದ ಆಂತರಿಕ ಸ್ವಾತಂತ್ರದ ವಿಷಯ ಇರಲಿಲ್ಲ. ಅದಕ್ಕಾಗಿ ಇವರು ಈ ಪಕ್ಷದ ದೇಶಕ್ಕೆ  ಯಾವ ಅವಶ್ಯಕತೆ ಇಲ್ಲವೆಂದು ಹೇಳಿದ್ದರು.                   ಈಶ್ವರ ಒಬ್ಬನೆ ಇದ್ದಾನೆ ಅವನಿಗಾಗಿ ದಲ್ಲಾಲಿಗಳ ಅವಶ್ಯಕತೆ ಇಲ್ಲ. ಅದಕ್ಕಾಗಿ ಸಮಯ ಮತ್ತು ದುಡ್ಡು ವ್ಯರ್ಥ ಮಾಡದೆ, ವಿದ್ಯೆಯ ಉನ್ನತಿಗಾಗಿ ಶ್ರಮಿಸಿರಿ ಅದುವೆ ಶಾಂತಿ ನೆಲೆಸಲು ಸಹಕಾರಿ ಆಗುತ್ತದೆ ಎಂದು ಹೇಳಿದ್ದರು. ಸಮಾಜದ ಉನ್ನತಿಯ ಜೊತೆಗೆ ಇವರ ಸಾಹಿತ್ಯ-ಕೃಷಿಯು ಅತ್ಯಂತ ಮಹತ್ವದ್ದಾಗಿದೆ. ಅವರು ಬರೆದ ಶಿವಾಜಿ ಪುವಾಡ, ಬ್ರಾಹ್ಮಣರ ಕುಯುಕ್ತಿ, ದಾಸ್ಯ, ರೈತನ ಚಾಟ, ಸಾರ್ವಜನಿಕ ಸತ್ಯ-ಧರ್ಮ ಇಂತಹ ಹಲವಾರು ಮಹತ್ವದ ಕೃತಿಗಳು ಇಂದಿಗೂ ಅದೆಷ್ಟೋ ಸಲ ವಿಮರ್ಶೆಗೆ ಬರುತ್ತಿವೆ. ಬದುಕಿನ ಕೊನೆಗೆ ಇವರು ಪಾರ್ಶ್ವವಾಯಿವಿನ ಆಘಾತದಿಂದ ತಮ್ಮ ಬಲಗೈ ಶಕ್ತಿ ಹೀನವಾದಾಗ ಎಡಗೈಯಿಂದ ಸಮಾಜ ಪ್ರಬೋಧನೆ ಕುರಿತು ಬರೆದ ಮಹಾನುಭಾವರು. ಇಂತಹ ಮಹಾನ್ ಚೇತನ  ೨೮ ನವ್ಹೆಂಬರ ೧೮೯೦ಕ್ಕೆ ನಮ್ಮನ್ನು ಅಗಲಿದರು.                  ಇವರ ಆದರ್ಶ ಮುಂದೆ ಮಹಾರಾಷ್ಟç ಸಾಮಾಜಿಕ ಚಳುವಳಿಯ ಮುಖ್ಯ ಕೇಂದ್ರಬಿಂದು ಆಗುತ್ತದೆ. ಮಹಾತ್ಮಾ ಗಾಂಧೀಜಿ, ಶಾಹೂ ಮಹಾರಾಜ, ಇಂದಿನ ಛಗನ್ ಭುಜಬಳದ ವರೆಗೆ ಅನೇಕ ನಾಯಕರು ಇವರ ಕಾರ್ಯದ ಪ್ರೇರಣೆ ಪಡೆದಿದ್ದಾರೆ. ಕೆಲವರ ಅಭಿಪ್ರಾಯದಂತೆ ಮಹಾತ್ಮಾ ಗಾಂಧೀಜಿಯವರೆ ಇವರಿಗೆ ಪ್ರಥಮಬಾರಿಗೆ ‘ಮಹಾತ್ಮಾ’ ಎಂದು ಕರೆದರು. ಆದರೆ ೧೮೮೦ರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನೋಡಿ ಮುಂಬಯಿ ಸರಕಾರ ಮತ್ತು ಜನರು ಇವರಿಗೆ ‘ಮಹಾತ್ಮಾ’ ಎಂದು ಕರೆಯುತ್ತಾರೆ.                     ಪ್ಲೇಟೋ ಹೇಳಿದಂತೆ ‘ಅಜ್ಞಾನವು ಎಲ್ಲ ಕೆಡಕುಗಳ ಮೂಲ ಮತ್ತು ಮಹಾಮಾರಿ.’ ಆ ಅಜ್ಞಾನವನ್ನೆ ಕಿತ್ತೊಗೆಯಲು ಪ್ರಯತ್ನಸಿದ ಫುಲೆಯವರ ವಿಚಾರಗಳು ಇಂದು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬಂದಿವೆ ನಾವು ಭಾರತಿಯರು ಕೇಳಿಕೊಳ್ಳುವದು ಅವಶ್ಯಕವಾಗಿದೆ. ಸುಮಾರು ೧೭೫ ವರ್ಷಗಳ ಹಿಂದೆ ದೇಶಕ್ಕೆ ಬೆಳಕಿನ ಮಾರ್ಗ ತೋರಿಸಿದ ಜ್ಯೋತಿರಾವರ ಜ್ಯೋತಿಯನ್ನು ಇಂದಿಗೂ ಅದೆಷ್ಟೋ ಹುಳಗಳು ಆರಿಸುವ ಪ್ರಯತ್ನ ಮಾಡುತ್ತಿವೆ. ಅದಕ್ಕಾಗಿ ನಾವು ಭಾರತಿಯರು ಸತ್ಯವನ್ನು ಅರಿತುಕೊಂಡು ಅವರ ಜ್ಯೋತಿಯನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಬೇಕಿದೆ. ಅವರು ಒಂದು ಮಾತನ್ನು ಸದಾ ಹೇಳುತ್ತಿದ್ದರು, “ಒಂದು ವೇಳೆ ಜನರು ನೀವು ಮಾಡುವ ಸಂಘರ್ಷದಲ್ಲಿ ಬಂದರೆ, ದಯವಿಟ್ಟು ಅವರ ಜಾತಿ ಕೇಳಬೇಡಿ.” ಆದರೆ ಇಂದು ನಾವು ಮುಂಜಾನೆ ‘ವಾಕಿಂಗ್’ ಹೋಗುವಾಗ ಸಹ ಜಾತಿ ನೋಡುತ್ತೇವೆ. ದೇಶದ ರಾಜಕಾರಣವಂತು ಹೇಳಲಿಕ್ಕೆ ಬಾರದಷ್ಷು ಹದಗೆಡುತ್ತಿದೆ. ಪ್ರತಿಯೊಂದನ್ನು ನಾವು ಜಾತಿ-ಧರ್ಮದ ಆಧಾರದ ಮೇಲೆ ನೋಡುತ್ತೇವೆ.              ಅಂದಶೃದ್ಧೆ ಎಷ್ಟರ ಮಟ್ಟಿಗೆ ನಮ್ಮಲ್ಲಿ ಹೂತಿದೆ ಅಂದರೆ ಮುಂಜಾನೆ ಎರಡು ಗಂಟೆಗಳ ಕಾಲ ಎಲ್ಲ ವಾಹಿನಿಗಳ ಭವಿಷ್ಯ ನೋಡದೆ ಹೊರಗೆ ಬರುವದಿಲ್ಲ. ಇಂದು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾದ ಯುವಕ ಬಂಧುಗಳು ಇಲ್ಲದ-ಸಲ್ಲದ ವಿಚಾರಗಳನ್ನು ಚರ್ಚೆ ಮಾಡುವದಕ್ಕಿಂತ, ನಾವು ನಿಜಕ್ಕೂ  ದಾಸ್ಯದಿಂದ ಮುಕ್ತರಾ..? ನಮಗೆ ಸ್ವತಂತ್ರ ಇದೆಯಾ..? ಸ್ತಿçಯರು ಮುಕ್ತರಾಗಿದ್ದಾರಾ..? ಬಾಲ್ಯವಿವಾಹ ಪದ್ಧತಿ ಕೊನೆ ಆಯಿತಾ..? ದೇಶ ಬಡತನ ಮುಕ್ತ ಆಗಿದೆಯೆ..? ದಾರಿದ್ರ್ಯ ಅಂದರೇನು..? ದೇಶದಲ್ಲಿ ಸಮಾನತೆಯೆ ಇದೆಯಾ..? ಯಾರಾದರೂ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರಾ? ನಿಜವಾದ ಧರ್ಮ ಮತ್ತು ದೇವರು ಯಾರು..? ಈ ಪ್ರಶ್ನೆಗಳನ್ನು ಕೇಳಿಕೊಂಡು ಅದಕ್ಕೆ ಉತ್ತರ ಕಂಡುಕೊಳ್ಳುವದು ಒಳ್ಳೆಯದೆಂದು ಅನಿಸುತ್ತದೆ. ಬಹುತೇಕ ಇಂದು ಕೊರೋನಾ ಮಹಾಮಾರಿ ಈ ಎಲ್ಲ ಪ್ರಶ್ನೆಗಳನ್ನು ಕೇಳುವಂತೆ ಮಾಡುತ್ತದೆ ಎಂಬುದು ನನ್ನ ಭಾವನೆ. ***************************************************   ಮಲಿಕಜಾನ ಶೇಖ                                                                                                                 

ನೆನಪು Read Post »

You cannot copy content of this page

Scroll to Top