ಹೊತ್ತಾರೆ
ಅಮ್ಮನೂರಿನ ನೆನಪುಗಳು. ಅಮೇರಿಕಾದಿಂದ ಅಶ್ವಥ್ ಸಾಮ್ರಾಜ್ಯ ಪ್ರೈಮರಿ ಸ್ಕೂಲಿನಲ್ಲಿ ವೀರಮಾತೆ ಜೀಜಾಬಾಯಿ ಅನ್ನುವ ಶಿವಾಜಿಯ ಒಂದು ಪಾಠ ಇತ್ತು. ಜೀಜಾಬಾಯಿ ಶಿವಾಜಿಯ ಬಾಲ್ಯದಲ್ಲಿ ಪುರಾಣಕತೆಗಳನ್ನೂ, ವೀರಪುರುಷರ ಸಾಹಸಗಳನ್ನೂ ಬಾಲಕ ಶಿವಾಜಿಗೆ ಮನಮುಟ್ಟುವ ಹಾಗೆ ಪಾಠ ಹೇಳಿಕೊಡುತ್ತಿದ್ದಳು. ಇಂತಹ ವೀರಮಾತೆಯ ಪಾಲನೆಯಲ್ಲಿಯೇ ಬೆಳೆದ ಶಿವಾಜಿ ಒಂದು ದಿನ ತನ್ನ ತಂದೆಯು ಸ್ವಾಭಿಮಾನ ಮರೆತು ಸುಲ್ತಾನರ ಮುಂದೆ ತಲೆಬಾಗಿ ನಮಸ್ಕರಿಸುವುದು ಸಹಿಸಿಕೊಳ್ಳಲಾಗದೇ ತನ್ನದೇ ಸಾಮ್ರಾಜ್ಯವನ್ನು ಸ್ಥಾಪಿಸುವ ಶಪಥ ಮಾಡಿದ್ದನು. ಇದು ಪಾಠದ ಸಾರಾಂಶವಾಗಿತ್ತು. ಮೊದಲನೇ ಸಾರ್ತಿ ಈ ಪಾಠ ಕೇಳಿಸಿಕೊಂಡಾಗ, ನನ್ನ ವೀರಮಾತೆಯೂ ಇಂತಹದ್ದೇ ಪುರಾಣಕತೆಗಳನ್ನೂ, ವೀರಪುರುಷರ ಸಾಹಸಗಳನ್ನೂ ಹೇಳಿಕೊಡಲಿದ್ದಾಳೆ. ನನ್ನ ತಂದೆಗೆ ಸುಲ್ತಾನರಾರೂ ಇಲ್ಲದಿದ್ದರೂ, ಸರಕಾರದ ಖಾಯಂ ತೆರಿಗೆದಾರರಾಗಿ ನಿತ್ಯ ಸಂಜೆಹೊತ್ತಿನಲ್ಲಿ ರಾಜರತ್ಮಂ ರ ಅಭಿಮಾನಿಯೇನೋ ಎನ್ನುವಂತೆ ತೂರಾಡುತ್ತಾ ತಲೆಬಾಗಿ ಸ್ವಾಭಿಮಾನ ಮರೆಯುತ್ತಿದ್ದರಿಂದ, ತತ್-ಕ್ಷಣದಲ್ಲೇ ನನ್ನದೇ ಸಾಮ್ರಾಜ್ಯವನ್ನು ಸ್ಥಾಪಿಸುವ ಕನಸೊಂದು ಚಿಗುರೊಡೆದಿತ್ತು. ನಾನು ಓದಿದ ಹಿರಿಯ ಪ್ರಾಥಮಿಕ ಶಾಲೆಗೆ ಮೊದಲು, ಮೂರು ಕೊಠಡಿಗಳಿದ್ದವು. ಅದರಲ್ಲಿ ನಾಡಹೆಂಚಿನ ಒಂದು ಕೊಠಡಿಯನ್ನು ಹಾಲು ಉತ್ಪಾದಕರ ಸಹಕಾರ ಸಂಘದವರು ದಂಡೆತ್ತಿ ಬಂದು ಆಕ್ರಮಿಸಿಕೊಂಡುಬಿಟ್ಟಿದ್ದರು. ಅದು ನಮ್ಮಪಾಲಿಗೆ ಪಾಕ್ ಆಕ್ರಮಿತ ಕಾಶ್ಮೀರದ ರೀತಿಯಾಗಿಬಿಟ್ಟಿತು! ಇನ್ನುಳಿದಿದ್ದು ಎರಡೇ ಕೊಠಡಿಗಳು. ಒಂದರಿಂದ ನಾಲ್ಕನೇ ತರಗತಿಗೆ ಒಂದು ಕೊಠಡಿ. ಐದರಿಂದ ಏಳನೇ ತರಗತಿಗೆ ಮತ್ತೊಂದು! ಮೊದಲ ನಾಲ್ಕೂ ವರ್ಷಗಳಲ್ಲಿ ಒಬ್ಬರೇ ಮೇಷ್ಟರು. ನಾನು ನಾಲ್ಕನೇ ಕ್ಲಾಸಿಗೆ ಬರುವ ಹೊತ್ತಿಗೆ ಇನ್ನೊಬ್ಬರು ಮೇಷ್ಟರು ಬರುವಂತಾಯ್ತು. ಅದರ ನಂತರ ಮೂರನೇ ಮೇಷ್ಟರ ಭಾಗ್ಯವೂ ನಮ್ಮ ಪಾಲಿಗೆ ಒದಗಿಬಂದಿದ್ದರಿಂದಾಗಿ ಆ ಪಾಕ್ ಆಕ್ರಮಿತದ ಹಾಗಿದ್ದ ಹಳೆ ಶಾಲೆಯ ಕೊಠಡಿಯ ಅರ್ಧಭಾಗವನ್ನು ಮತ್ತೆ ನಮ್ಮ ಸುಪರ್ದಿಗೆ ತೆಗೆದುಕೊಂಡು ಅಲ್ಲಿ ಕಿರಿಯ ಪ್ರಾಥಮಿಕದ ನಾಲ್ಕು ತರಗತಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ, ಒಟ್ಟು ಮೂರು ಶಾಲಾ ಕೊಠಡಿಗಳನ್ನಾಗಿಸುವಲ್ಲಿ ಮೂರೂ ಮೇಷ್ಟರುಗಳ/ದಂಡನಾಯಕರ ಮುಂದಾಳತ್ವದಲ್ಲಿ ನಾವು ಸಫಲರಾದೆವು. ಇಷ್ಟರಲ್ಲಿ ನಾನು ನಾಲ್ಕನೇ ತೇರ್ಗಡೆಯಾಗಿ ಐದನೇ ಕಡೆ ತೇರು ಎಳೆಯುವವನಾಗಿದ್ದೆ. ಹಾಗಾಗಿ ವೀರಮಾತೆ ಜೀಜಾಬಾಯಿಯ ಪಾಠವನ್ನು ಒಂದೇ ಕೊಠಡಿಯಲ್ಲಿ ಮೂರು ವರ್ಷ ಪುನರಾವರ್ತನೆಯಿಂದ ಕೇಳುವ ಭಾಗ್ಯ! ಮೊದಲನೇ ವರ್ಷದಲ್ಲೇ ನನ್ನ ವೀರಮಾತೆ ಕತೆ ಹೇಳುವುದರ ಬಗ್ಗೆ ಕನಸು ಕಾಣುತ್ತಲಿದ್ದರೂ, ನಾನಿದ್ದಿದ್ದು ಮಾತೆಯ ತವರುಮನೆಯಾದ ನನ್ನ ಅಜ್ಜಿಯ ಮನೆಯಲ್ಲಿ. ಹಾಗಾಗಿ ಮಾತೆ ಅಕ್ಕನನ್ನು ಏನಿದ್ದರೂ ನಿತ್ಯದ ಕನಸಿನಲ್ಲಿ ಕಾಣಬಹುದಾಗಿತ್ತೇ ಹೊರತು ಬೆಳಗು ಬೈಗಿನಲ್ಲಿ ಮುಖಾಮುಖಿಯಾಗುವ ಅವಕಾಶವಿರಲಿಲ್ಲ. ಆದರೂ ಏನಂತೆ, ಗೌರಿಹಬ್ಬಕ್ಕೊಂದು ಸಾರ್ತಿ ಮಹಾಲಯ ಅಮಾವಾಸ್ಯೆಗೊಂದು ಸಾರ್ತಿ, ಮತ್ತೆ ಮುಂಗಾರು ಕೆಲಸ ಮುಗಿದಾದ ಮೇಲೆ ಒಂದು ಸಾರ್ತಿ, ಸಂಕ್ರಾಂತಿಗೊಂದು ಸಾರ್ತಿ ಭೇಟಿಯಾಗುವ ಅವಕಾಶವಿತ್ತು. ಅಕ್ಕನ ಇಲ್ಲದಿರುವಿಕೆ ನನಗೆ ಎಂದೂ ಕೊರಗಾಗಿರಲಿಲ್ಲ. ಹಾಗಾಗಿಯೇ ನಾನು ಇಂದಿಗೂ ನನಗೆ ಅಮ್ಮ(ಅಜ್ಜಿ), ಅಕ್ಕ, ಚಿಕ್ಕಮ್ಮ ಈ ಮೂವರೂ ತಾಯಂದಿರು ಅಂತಲೇ ಹೇಳುವುದು. ನಾನು ಅಪ್ಪನೂರಿಗೆ ಹೋದಾಗ ಅಥವಾ ಅಕ್ಕ ನಮ್ಮೂರಿಗೆ ಬಂದಾಗ ಯಾವ ಪುರಾಣದ ಕತೆಗಳನ್ನಾಗಲೀ, ವೀರಪುರುಷರ ಕತೆಗಳನ್ನಾಗಲೀ ಹೇಳುತ್ತಿರಲಿಲ್ಲ. ಆದರೆ, ನನ್ನ ತಮ್ಮಂದ್ರು ಅಂತ ಶುರುವಾದರೆ ಆಯ್ತು! ಅಲ್ಲಿ ನಿತ್ಯವೂ ನನ್ನ ಜೊತೆಯಲ್ಲೇ ಇರುತ್ತಿದ್ದ ಸೋದರಮಾವಂದಿರ ಸಾಹಸಮಯ ದಂತಕತೆಗಳು ಸುತ್ತುವರಿಯುತ್ತಿದ್ದವು. ತನ್ನ ಅಣ್ಣಂದಿರ ಬಗ್ಗೆಯೂ ಅಷ್ಟೇ ಸಾಹಸಮಯ ಕತೆಗಳಿದ್ದರೂ, ಹಿರಿಯಣ್ಣ ವಿವಾಹಿತರೂ ಆಗಿ ಬೇರೆ ವಾಸ್ತವ ಹೂಡಿದ್ದರಿಂದಾಗಿ ನನ್ನ ಬಾಲ್ಯಕ್ಕೆ ಹೊಂದಿಸಿ, ಅವರ ಬಗ್ಗೆ ಹೇಳಬಹುದಾದ ಕತೆಗಳು ವಿರಳವಾಗಿದ್ದವು. ತನ್ನ ಹಿರಿಯಣ್ಣ ಒಂದು ಕೆಲಸ ಹಿಡಿದರೆ ಅದು ಬರುವುದಿಲ್ಲ ಅಂದದ್ದೇ ಇರಲಿಲ್ಲ; ಮರಗೆಲಸ, ಗಾರೆ ಕೆಲಸ, ಮನೆಕಟ್ಟುವ ಕೆಲಸ ಯಾವುದನ್ನೂ ಎಂಥಾ ಕಸುಬುದಾರರಿಗೂ ಕಡಿಮೆಯಿಲ್ಲದ ಹಾಗೆ ಮಾಡುತ್ತಿದ್ದ ಅನ್ನುತ್ತಿದ್ದರು. ಆದರೆ ತಮ್ಮಂದಿರ ದಂತಕತೆಗಳಿಗೆ ಹೋಲಿಸಿದರೆ ಇವು ಸ್ವಲ್ಪ ಪೇಲವವೇ. ಮಾತೆತ್ತಿದರೆ, ನನ್ನ ತಮ್ಮಂದಿರು, ಮೂರನೇ ಕ್ಲಾಸಿಗೇ ಕುಂಟೆ ಹೊಡೀತಿದ್ದರು, ಐದನೇ ಕ್ಲಾಸಿಗೆ ಹೊಲ ಉಳ್ತಾ ಇದ್ದರು, ಏಳನೇ ಕ್ಲಾಸಿಗೆ ಮಂಡಿಯುದ್ದ ಊತುಹೋಗುತ್ತಿದ್ದ ಉಸುಬು ಗದ್ದೆ ಉಳ್ತಿದ್ದರು. ಅವರು ಬಿತ್ತನೆಯ ಸಾಲು ಹೊಡೆಯುವುದನ್ನು ಊರಿನ ಎಲ್ಲರೂ ಹೊಗಳುತ್ತಿದ್ದರು. ಅಚ್ಚುಕಟ್ಟಾಗಿ ಮಾಡಿದರಷ್ಟೇ ಬೇಸಾಯ! ಇಲ್ಲಾಂದ್ರೆ ಊರಿನವರೆಲ್ಲಾ ಹೊಲದ ಬದುವಿನಲ್ಲಿ ನಿಂತು, ಯಾವ ಹೆಗ್ಗಣ ಕೆರೆದಿದ್ದೋ ಈ ನೆಲವಾ… ಅನ್ನುತ್ತಿದ್ದರಂತೆ. ಹೀಗೆ ಹಿರಿಯರೂ ಸಹ ಬೇಸಾಯ ಅಂದರೆ ಅಚ್ಚುಕಟ್ಟು ಅನ್ನುವುದನ್ನು ಇವರನ್ನು ನೋಡಿ ಕಲಿಯಬೇಕು ಅನ್ನುವ ಹಾಗೆ ಕೆಲಸ ಮಾಡ್ತಿದ್ದರಂತೆ. ಅಕ್ಕನಿಗೆ ಇಬ್ಬರು ತಮ್ಮಂದಿರು ಮೂವರು ಅಣ್ಣಂದಿರು. ಬಹುಸಂಖ್ಯಾತ ಅಣ್ಣಂದಿರ ಒಂದೆರಡು ದಂತಕತೆಗಳನ್ನು ಹೊರತುಪಡಿಸಿದರೆ, ಮಿಕ್ಕವೆಲ್ಲವೂ ತಮ್ಮಂದಿರದೇ ಆಗಿರುತ್ತಿದ್ದರಿಂದ, ಕೆಲವೊಮ್ಮೆ ಅಕ್ಕನ ಈ ದಂತಕತೆಗಳಂತೂ ಗುರುರಾಜುಲು ನಾಯ್ಡು ಅವರ ಹರಿಕತೆಯ ಕ್ಯಾಸೆಟ್ಟುಗಳ ಹಾಗನಿಸಿದ್ದೂ ಉಂಟು. ಆದರೂ ನನ್ನ ಕಣ್ಣೆದುರೇ ಇರುವ ಮಾವಂದಿರ ಸಾಧನೆಗಳನ್ನು ಕೇಳುವುದೊಂದು ರೀತಿಯ ಕುತೂಹಲ, ಹಾಗೂ ಬಾಲ್ಯದ ದಿನಗಳಲ್ಲಿ ಒಂದು ರೀತಿಯ ವಿಸ್ಮಯವೂ ಆಗಿರುತ್ತಿದ್ದವು. ಆದರೂ ಏನೋ ಕಸಿವಿಸಿ, ಈ ಸೋದರಮಾವಂದಿರ ದಂತಕತೆಗಳಿಂದ ಸ್ವಂತ ಸಾಮ್ರಾಜ್ಯ ಕಟ್ಟುವುದಾದರೂ ಹೇಗೆ? ವೀರಮಾತೆ ಜೀಜಾಬಾಯಿಗೆ ಅಕ್ಕ ಸಮನಲ್ಲವೋ ಅಥವಾ ಪುರಾಣಪುರುಷರಿಗೆ ನನ್ನ ಸೋದರ ಮಾವಂದಿರು ಸಮನಲ್ವೋ ಎನ್ನುವುದೇ ಗೊಂದಲವಾಗಿರುತ್ತಿತ್ತು. ಆದರೆ ಮಾವಂದಿರ ಕೆಲಸ ಗಮನಿಸಿದ್ದ ನನಗೆ, ವಿಜ್ಞಾನದ ಪ್ರಾಥಮಿಕದ ವಿಜ್ಞಾನದಲ್ಲಿ ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿರುವುದರಿಂದ ಚಿರತೆಗಳಿಗೆ ಎಷ್ಟು ಓಡಿದರೂ ಆಯಾಸವಾಗುವುದಿಲ್ಲ ಅನ್ನುವ ಅಂದಿನ ಪಾಠವನ್ನು ಸೋದರಮಾವಂದಿರ ಕೆಲಸದಲ್ಲಿ ಕಾಣುತ್ತಿದ್ದೆ. ಮುಂಗಾರಿನ ಸಮಯದಲ್ಲಂತೂ ಬೆಳಗಾಗಿ ಕೆಲಸಕ್ಕೆ ನಿಂತರೆ ಊಟ ತಿಂಡಿಯ ವಿರಾಮದ ಹೊರತಾಗಿ ಕತ್ತಲಾಗುವ ತನಕ ನಿರಾಯಾಸವಾಗಿ ಕೆಲಸ ಮಾಡುತ್ತಿದ್ದರು. ಮಾಡುವ ಕೆಲಸವ್ಯಾವುದೂ ಅಚ್ಚುಕಟ್ಟಿಲ್ಲದೆ ಇರುತ್ತಿರಲಿಲ್ಲ. ಬೇಸಾಯ ಅನ್ನುವುದು ಆಗ ಯುವಕರಾಗಿದ್ದ ಅವರಿಗೆ ಒಂದು ತನ್ಮಯತೆಯಾಗಿತ್ತು. ಯುಗಾದಿಯ ಹೊನ್ನಾರಿಗೆ ನನ್ನನ್ನು ಮೊದಲು ನೇಗಿಲು ಹಿಡಿ ಅನ್ನುತ್ತಿದ್ದು, ಆಯುಧಪೂಜೆಯಲ್ಲಿ ಫ್ಲೋರ್ ಮಿಲ್ ಆನ್ ಮಾಡಿಸುವುದು, ಬಿತ್ತನೆಯ ದಿನ ಮೊದಲ ಆಲೂಗಡ್ಡೆ ತುಂಡು ನೆಡಿಸುವುದು, ಮೊದಲ ಭತ್ತದ ಪೈರು ನೆಡಿಸುವುದು ಗಮನಿಸುತ್ತಿದ್ದ ನನಗೆ ಅದೇ ನನ್ನ ಅಧಿಕೃತ ಬೇಸಾಯದ ತರಬೇತಿಯೇನೋ ಅನಿಸುತ್ತಿತ್ತು. ಆದರದು ಅವರ ಶುಭಶಕುನಕ್ಕೆ ಸಂಕೇತವೆನ್ನುವುದು ಆಮೇಲೆ ತಿಳಿಯಿತು. ಕಿರಿಯ ಸೋದರ ಮಾವ, ಒಂದು ದಿನದಲ್ಲಿ ಐವತ್ತು ಅರವತ್ತು ಅಡಿ ಎತ್ತರದ ಎಂಟು ತೆಂಗಿನ ಮರಗಳನ್ನು ಐದು-ಹತ್ತು ನಿಮಿಷಗಳ ಅಂತರದಲ್ಲಿ ಹತ್ತುತ್ತಿದ್ದರು. ಸಾಮಾನ್ಯವಾಗಿ ಬೇರೆಲ್ಲರೂ ಒಂದು ಹಂತದಲ್ಲಿ ಕಾಲು ಮೇಲೇರಿಸುತ್ತಾ, ಆಮೇಲೆ ಪಾದಗಳನ್ನು ಬಿಗಿಯಾಗಿ ನೆಟ್ಟು ಕೈಗಳನ್ನು ಮೇಲೇರಿಸಿಕೊಂಡು ಉಠ್-ಬೈಠ್ ನ ರೀತಿಯಲ್ಲಿ ಮರವನ್ನು ತಬ್ಬಿಹಿಡಿದು ಹತ್ತುವುದಾದರೆ, ನನ್ನ ಮಾವ ನಡೆಯುವ ರೀತಿಯಲ್ಲಿ ಲೆಫ್ಟ್-ರೈಟ್, ಲೆಫ್ಟ್-ರೈಟ್ ನ ಕವಾಯತಿನಂತೆ ಹತ್ತುತ್ತಿದ್ದರು. ಎಡಗೈ ಮತ್ತು ಬಲಗಾಲು ಒಮ್ಮೆ ಮೇಲಕ್ಕೆ, ನಂತರ ಬಲಗೈ ಎಡಗಾಲು. ಹೀಗೇ ನಾನೂ ಒಮ್ಮೆ ಮರ ಏರಿಯೇಬಿಡುವ ಮನಸ್ಸಾಯಿತು. ಎಡವಟ್ಟಾದರೆ ಅಕ್ಕನ ಎದುರು ಏನು ಹೇಳುವುದೆಂಬ ಅಳುಕು ಮನದಲ್ಲೇ ಇದ್ದರೂ, ಸೋದರಮಾವಂದಿರು ಆಗ್ಗಾಗ್ಗೆ ಗದರಿಸಿಕೊಂಡೇ ಬೇಸಾಯ ಕಲಿಯಬೇಕೆನ್ನುವುದನ್ನು ನಿಯಮಿತವಾಗಿ ಹೇಳುತ್ತಲೇ ಇರುತ್ತಿದ್ದರು. ಸುಮಾರು ಹದಿನೈದು ಅಡಿ ಎತ್ತರವಿರುವ ಹೊಸ ತೆಂಗಿನ ಮರಕ್ಕೆ ಹತ್ತುವುದಕ್ಕೆ ಅನುಮತಿ ಸಿಕ್ಕಿತು. ಬಾಗಿಕೊಂಡಿದ್ದ ಬುಡವನ್ನು ನಾನೂ ಸಹ ಸಾಹಸಿ-ಸೋದರಳಿಯ ಅನ್ನುವುದನ್ನು ಸಾಬೀತು ಮಾಡುವವನ ಹಾಗೆ ಮೂರು ಲೆಫ್ಟ್ ರೈಟುಗಳನ್ನು ಮಾಡಿದೆ. ಅಷ್ಟಕ್ಕೆ ಬಲಕುಸಿದಂತಾಗಿ ಕೆಳಕ್ಕೆ ನೋಡತೊಡಗಿದೆ. ಮೂರೇ ಅಡಿ ಅಂತರ. ಆ ವಯಸ್ಸಿಗಾಗಲೇ ಹುಣಸೆ ಮರದಿಂದ, ನೇರಳೆ ಮರದಿಂದ ಕುಪ್ಪಳಿಸುವುದು, ಅಲ್ಲದೇ ಮರಕೋತಿ ಆಟ ಆಡುವುದೆಲ್ಲ ಗೊತ್ತಿದ್ದ ನನಗೇ ಖುದ್ದು ನಾಚಿಕೆಯಾಗುವಷ್ಟು ಅಂತರವಾಗಿತ್ತು ಅದು. ಏನೂ ತೊಂದರೆಯಿಲ್ಲ. ಲೆಫ್ಟ್-ರೈಟ್ ನಡಿಗೆಯಲ್ಲದಿದ್ದರೇನು, ಉಠ್-ಬೈಠ್ ಆದರೂ ಆದೀತು ಅಂತಲೇ ಮರವನ್ನು ತಬ್ಬಿ ಹತ್ತುವುದಕ್ಕೆ ಆರಂಭಿಸಿದೆ. ಒಂದು, ಎರಾಆಡು……….ಮೂಊಊಊಊಊರೂಊ……. ನಾ…. , ಮುಕ್ಕಿರಿದು ಬಿಗಿಯಾಗಿ ಮರವನ್ನು ಹಿಡಿದು ಏದುಸಿರು ಬಿಡುತ್ತಾ ಮತ್ತೆ ನೆಲದ ಅಂತರ ನೋಡಿದೆ… ಅರ್ಧ ಮರದ ಅಂತರ ಆಕ್ರಮಿಸಿದ್ದೇನೆ…. ಓಹ್, ಇನ್ನು ನಾಲ್ಕೇ ಪಟ್ಟು….. ಮತ್ತೆ ಹಿಡಿದೆ, ಒಂಂಂಂಂಂಂಂದೂ…… ಇನ್ನು ಅಸಾಧ್ಯ! ಮುಕ್ಕಾಲು ಕ್ರಮಿಸಿದ್ದೇನೆ. ಇಳಿದರೆ ಅವಮಾನ, ಏರುವುದಕ್ಕೆ ತ್ರಾಣವಿಲ್ಲ. ಅಲ್ಲೇ ನಿಂತು ಮಾವನ ಸಲಹೆಗಾಗಿ ಕಾಯುತ್ತಲಿದ್ದೆ. ‘ಥತ್, ಹತ್ತಾ ಗ್ಯಾದೆ! ಉಸ್ರುಯ್ತಾನೆ ಹತ್ತಡಿ ಮೇಲಕ್ಕೆ ಹೋಗೋಷ್ಟ್ರಲ್ಲಿ’, ಅನ್ನಬೇಕೇ ಸೋದರಮಾವ, ಅಲ್ಲೇ ಪಕ್ಕದ ಜಮೀನಿನವರೂ ಇದ್ದವರು ಬಂದು, ‘ಮರ ಹತ್ತಾ ಟ್ರೈನಿಂಗೋ?’ ಅನ್ನುತ್ತಾ ಜೊತೆಯಲ್ಲಿ ನಿಂತರು. ಇನ್ನು ಮಾನ ಮೂರುಕಾಸಿಗೆ ಹರಾಜು ಮಾಡಿಕೊಳ್ಳುವುದರ ಬದಲು ಉಸಿರು ಕಟ್ಟಿಕೊಂಡಾದರೂ ಮರದ ಮೇಲೆ ಹೋಗಿ ಕುಳಿತುಬಿಡುವುದೆನ್ನುವ ನಿರ್ಧಾರದಿಂದ ಸಕಲಬಲವನ್ನೂ ಪರೀಕ್ಷೆಗಿಟ್ಟು ಬಲವಾಗಿ ನನ್ನನ್ನು ನಾನೇ ಎಳೆದುಕೊಂಡು ಹೋಗಿ ಅಂತೂ ತೆಂಗಿನ ಗರಿ ಹಿಡಿದೆ. ‘ಸ್ವಲ್ಪ ಸುಧಾರಿಸಿಕೋ’ ಅಂದವರು ಆ ಮರದಲ್ಲಿದ್ದ ಕಾಯಿ ಬೀಳಿಸಿದ ಮೇಲೆ. ಸುಸ್ತಾಗಿದ್ದರೆ ಇಳಿಯೋದಕ್ಕಿಂತ ಮೊದಲು ಒಂದೆಳನೀರು ಕುಡಿದು ಆರಾಮನಿಸಿದ ಮೇಲೆ ನಿಧಾನವಾಗಿ ಇಳಿ, ಹತ್ತೋದು ಸುಲಭ, ಇಳಿಯೋದು ಚೂರು ಕಷ್ಟ!” ಅಂದರು. ಇದ್ದ ನೂರಕ್ಕೆ ನೂರು ಪಾಲು ಶಕ್ತಿಯನ್ನೂ ವಿನಿಯೋಗ ಮಾಡಿದ್ದಾದ ಮೇಲೆ ಇನ್ನು ಇಳಿಯುವುದು ಕಷ್ಟ ಅನ್ನುವುದನ್ನು ಕೇಳಿ ಒಂದು ಎಳನೀರು ಸಾಕಾಗಲಿಕ್ಕಿಲ್ಲ ಅಂದುಕೊಂಡು ಅಲ್ಲಿದ್ದ ಒಟ್ಟು ಲೆಕ್ಕ ಮಾಡುತ್ತಾ ಕುಳಿತೆ. ಅಷ್ಟರಲ್ಲಿ ಮಾವ ಉಳಿದ ಕೆಲವು ಮರಗಳ ಬಲಿತ ಕಾಯಿಗಳನ್ನೆಲ್ಲ ಉದುರಿಸಿ ಇಳಿದು ಗಾಡಿಗೆ ತುಂಬಿ, ಇನ್ನೂ ಇಳಿಯದ ನನ್ನನ್ನು ಏನು ನಿದ್ರೆ ಹೋದೆನೋ ಅನ್ನುವಂತೆ ‘ಆಯ್ತಾ? ಇಳಿ ಹೋಗನಾ’ ಅಂದರು. ನಾನಿನ್ನೂ ಮೊದಲನೇ ಎಳನೀರು ಕುಕ್ಕುತ್ತಾ ಇದ್ದೆ. ಆತುರದಿಂದ ತೂತು ಮಾಡಿದವನೇ ಒಂದೆಳನೀರು ಸ್ವಾಹಾ ಮಾಡಿ, ಇಳಿಯುವುದಕ್ಕೂ ಮೊದಲು ಆಳ ನೋಡಿಕೊಂಡೆ. ಅಕಾಸ್ಮಾತ್ ತೋಳ್ಬಲ ಕಡಿಮೆಯಾಗಿ ಕೈಬಿಟ್ಟರೆ ಏನು ಮುರಿಯಬಹುದು, ಮಂಡಿಯೋ ಸೊಂಟವೋ, ಬೆನ್ನುಮೂಳೆಯೋ ಅಂದುಕೊಂಡು ಗರಿ ಹಿಡಿದು ಮರದ ಕಡೆ ವಾಲಿದೆ. ಅಷ್ಟರಲ್ಲಿ ಲೆಫ್ಟುರೈಟೂ ಇಲ್ಲ, ಉಠ್ ಬೈಠೂ ಇಲ್ಲ, ಪಾದಗಳು ಸಾಲದೆಂಬಂತೆ ಇಡೀ ಕಾಲನ್ನು ಮರದ ಸುತ್ತ ಆವರಿಸಿಕೊಂಡುಬಿಟ್ಟೆ. ‘ಹಂಗ್ ಕೂತ್ಕಂಡ್ರೆ ಅಲ್ಲೇ ನೇತಾಕೋಂಡಿರ್ತೀಯಾ ಸಂಜೆ ತನಕ’, ಅನ್ನುತ್ತಾ ಮಾವ ಕೈ ಹೀಗೆ, ಕಾಲು ಹೀಗೆ ಅನ್ನುತ್ತಾ ಸಲಹೆ ಕೊಡುತ್ತಾ ಹೋದರು. ನಾನು ಅದ್ಯಾವುದನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಇದ್ದ ಭಂಗಿಯನ್ನೇ ಸ್ವಲ್ಪ ಸಡಿಲಿಸಿದೆ…… ಸೊರ್‌ರ್ ರ್ ಅಂತೊಂದಿಷ್ಟು ದೂರ ಜಾರಿದೆ. ಅಜ್ಜಿ ಹಾಕಿ ಕಳಿಸಿದ್ದ ಚಡ್ಡಿ ಚೆಲ್ಲಾಪಿಲ್ಲಿಯಾಯ್ತು, ಅಲ್ಲದೇ ನನ್ನ ಕಾಲು, ಮೊಣಕೈಯೆಲ್ಲವೂ ಮುಕ್ಕಾಲು ತರಚಿಕೊಂಡವು. ಅಬ್ಬಾ, ಅರ್ಧ ಮರ ಕ್ರಮಿಸಿದ್ದೇನೆ ಅನ್ನುವ ಸಮಾಧಾನದೊಳಗೆ ನೋವು ಕಾಣಿಸಲಿಲ್ಲ. ಇನ್ನರ್ಧ ಮರವನ್ನು ಹಾಗೇ ಕ್ರಮಿಸಿದ್ದರೆ ಚಡ್ಡಿಯ ಜೊತೆ ನನ್ನ ಚರ್ಮವೂ ಚೆಲ್ಲಾಪಿಲ್ಲಿಯಾಗಿ ಮಾವ ನನ್ನನ್ನು ನೇರ ಆಸ್ಪತ್ರೆಗೇ ಒಯ್ಯಬೇಕಿತ್ತೇನೋ. ಅಷ್ಟರಲ್ಲಿ ಜಾಗೃತನಾದ ಮಾವ, ‘ಇತ್ಲಾಗ್ ನೋಡು, ಇಲ್ಲಿ, ಇಲ್ಲಿ, ಈ ಕಡೆ ಜಂಪ್ ಮಾಡು. ಹಂಗ್ ಜಾರಿಕೊಂಡು ಇಳೀಬೇಡ’ ಅನ್ನುತ್ತಾ ಧಾವಿಸಿ, ವಿಕೆಟ್ ಕೀಪರ್ ಚೆಂಡಿಗಾಗಿ ಕೈಚೆಲ್ಲುವ ಹಾಗೆ ನಿಂತರು. ಅಂತೂ ಕಡೆಗೆ ಭೂಸ್ಪರ್ಷ ಮಾಡಿದೆ. ಪಕ್ಕದ ಬೇಲಿಯಲ್ಲಿದ್ದ ಸೊಪ್ಪಿನ ರಸ ಹಿಂಡಿ ಪ್ರಥಮಚಿಕಿತ್ಸೆ ಮಾಡಿದ ಮಾವ, ‘ನಾನು ಮರ ಹತ್ತೋವಾಗ ನೋಡ್ಕೊಳ್ತಾ ಇರಲಿಲ್ವಾ?’ ಅನ್ನುವ ಪಾಪದ ನೋಟದೊಳಗೂ ಬೇಸರ ಕೋಪ ಮಿಶ್ರಿತ ಮನಸ್ಸಿನಿಂದ ಇನ್ನೊಂದು ಎಳನೀರು ತಂದುಕೊಟ್ಟು ಸಮಾಧಾನ ಮಾಡಿದ್ದರು. ಅಕ್ಕನ ದಂತಕತೆಗಳಲ್ಲಿ ಹುರುಳಿರುವುದು ನಿಜ ಅನ್ನುವುದಕ್ಕೆ ನನಗೆ ಇದೊಂದು ನಿದರ್ಶನವಾಗಿತ್ತು. ನಾನು ಆಗ ಐದನೇ ಕ್ಲಾಸು. ಅಕ್ಕನ ಪ್ರಕಾರ ನಾನೂ ಇಷ್ಟರಲ್ಲಿ ಕುಂಟೆ ಹೊಡೆಯುವವನಾಗಿದ್ದು ಹೊಲ ಉಳುಮೆ ಕರಗತಮಾಡಿಕೊಂಡಿದ್ದು ಭತ್ತದ ಗದ್ದೆಗಿಳಿಯುವುದಕ್ಕೆ ಸನ್ನದ್ಧನಾಗಿರಬೇಕಿತ್ತು. ನನಗೆ ಇನ್ನೂ ಇದ್ಯಾವುದರ ತರಬೇತಿಯೂ ಇರಲಿಲ್ಲ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ನನ್ನ ಮೂರನೇ ಸೋದರಮಾವನ


