ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ

ತೆಲುಗು ಮೂಲ- ಡಾ.ಕತ್ತಿ ಪದ್ಮಾರಾವು ಕನ್ನಡಕ್ಕೆ ನಾರಾಯಣಮೂರ್ತಿ ಬೂದುಗೂರು ಯಾರು ಕೊಲೆಪಾತಕರು? ಸಮುದ್ರ ಹಿಮದಿಂದ ಗಾಢವಾಗಿ ಗಡ್ಡೆಕಟ್ಟಿದೆ ನಡುವೆ ಒಂದು ನೀರಿನ ಝರೀ ತಿಮಿಂಗಲಗಳು ಈಜುತ್ತಾ ಸಾಗುತ್ತಿವೆ ಹೆಚ್ಚಾಗಿ ಇಬ್ಬನಿ ಸುರಿದಾಗ, ಅವಕ್ಕೆ ಉಸಿರಾಡಲು ಕಷ್ಟವೆನಿಸುತ್ತದೆ ಈಗ ತಿಮಿಂಗಲಗಳದೇ ಬೇಟೇ ಬಲೆಗಳೆಲ್ಲಾ ಖಾಲೀ,ಖಾಲೀ ಬಿದ್ದಿವೆ ಇತ್ತೀಚೆಗೆ ಮೀನುಗಳೂ… ಬಲೆಯನ್ನು ಗುರ್ತು ಹಚ್ಚುತ್ತಿವೆ. ಆ ಕಾಲುವೆ ಬದಿಯಲ್ಲಿ ತುಂಬಾ ನಾಯೀಕೊಡೆಗಳ ಸಾಲು ರಸ್ತೆ ಒದ್ದೆ ಒದ್ದೆಯಾಗಿ ಕಿರುಪಾದಗಳ ಸಪ್ಪಳಕೆ ನೀರು ಚೆಲ್ಲುತಿದೆ. ಮನುಷ್ಯನಿಗೆ  ಈ ಚಳೀಯಲ್ಲೂ ಬೆವರು ಕಿತ್ತುಬರುತ್ತಿದೆ ಕಟಕಟೆಯಲ್ಲಿ ಒಬ್ಬೊಬ್ಬರೇ ನಿಂತು ತಪ್ಪುಗಳನ್ನ ಒಪ್ಪಿಕೊಳ್ಳುತ್ತಿದ್ದಾರೆ. ಆ ನೀರಿನ ಮೋಟಾರುಪಂಪು ನಿಂತುಹೋಗಿದೇ ಗದ್ದೆಗಳೆಲ್ಲಾ ಒಣಗಿಹೋಗಿವೆ. ಬಿತ್ತನೆಯ ಕತ್ತನ್ನು ಯಾರೋ ಹೊಸಕಿಹಾಕಿದರು. ರಿಲಯನ್ಸ್ ಷಾಪಿನೊಳಗೆ ಹೊಳೆಯುತ್ತಿರುವ ಆಪಲ್ ಒಳಗೆಲ್ಲಾ ಕೊಳೆತುಹೋಗಿದೆ. ತಿನ್ನಬಾರದೇ ಮತ್ತೇ… ಗಾಜಿನ ಒಳಗೆ, ಏಸೀ ಯಲ್ಲಿ ಇಟ್ಟಿದ ತೊಗರೀ ಬೇಳೇ ಆರ್ಗಾನಿಕ್ ಪದ್ದತಿಯಲ್ಲಿ ಬೆಳದದ್ದು ಎನ್ನುತ್ತಾರೇ. ಬೆಲೆ ಮಾತ್ರ ಬೆಟ್ಟದಷ್ಟು. ನರಕಾಸುರನನ್ನ ಕೃಷ್ಣ ಸಾಯಿಸಿದ್ದಕ್ಕೆ ಇಷ್ಟು ಕಾಲುಷ್ಯವೇಕೇ? ನರಕಾಸುರ, ಜರಾಸಂಧ ಒಬ್ಬರೇನು ? ಎಷ್ಟೋಜನರನ್ನ ಸಾಯಿಸಿದ, ಸಾಯುವಂತೆ ಮಾಡಿದ ಕೃಷ್ಣನಿಗೆ ಯಾವ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಶಂಭೂಕನ ಶಿರಚ್ಚೇದನೇ ಮಾಡಿದ, ವಾಲಿಯನ್ನ ಹಿಂಬದಿಯಿಂ ಕೊಂದ ರಾಮನಿಗೆ ಯಾವ ಶಿಕ್ಷೆ ವಿದಿಸಿದರು. ಕೊಲೆಪಾತಕರೆಲ್ಲರೂ ದೇವರುಗಳೇ. ಅವರ ಕೈಯಲ್ಲಿ ಮಾರಣಾಯುಧಗಳು. ಸತ್ತವ ರಾಕ್ಷಸ ಸಾಯಿಸಿದವ ದೈವ ಇದೆಲ್ಲಿಯ ನ್ಯಾಯ ? ಅನಾರ್ಯರೆಲ್ಲಾ ದುಷ್ಟರು ಆರ್ಯರೆಲ್ಲಾ ಶಿಷ್ಟರಾ ? ನ್ಯಾಯ ಎಲ್ಲರಿಗೂ ಒಂದೇ ಅಲ್ಲವೇ ? ಈಗ ಕಾರಾಗೃಹಗಳೆಲ್ಲಾ ಸಾಮಾನ್ಯರಿಗಲ್ಲಾ….. ಅಸಾಮಾನ್ಯರಿಗೇನೇ. ಹಡುಗು ತುಂಬಾ ಮಾದಕ ವಸ್ತುಗಳು ಅಮದಾಗುತ್ತಿವೆ. ನಿಜಾನೇ ಅಕ್ಷರಗಳ ತುಂಬಾ ವ್ಯಾಪಾರವೇ ಅಕ್ಷರ ದೊಳಗಿನ ಜ್ಞಾನವೆಂಬ ತಿರುಳನ್ನು ತೆಗೆದು ಹಾಕಿ ಅಮಲನ್ನು (ನಿಷೆ) ತುಂಬಿಸುತ್ತಿದ್ದಾರೆ. ನಿರಕ್ಷರಕುಕ್ಷಿಯಾ ! ಅಕ್ಷರಸ್ಥನಾ!! ಎನ್ನುವುದಲ್ಲ ಭ್ರಷ್ಟಾಚಾರವೇ ಒಂದು ಕಿರೀಟವಾಗಿದೆ. ಈಗ ಯೋಚಿಸುವವನೇ ನಿಜವಾದ ಮನುಷ್ಯ. ಆ ಅನ್ವೇಷಣೆಯಲ್ಲೇ ಈ ಪಯಣ. ================= ಕನ್ನಡಾನುವಾದ: ನಾರಾಯಣ ಮೂರ್ತಿ ಬೂದುಗೂರು ಮೂಲ ತೆಲುಗು ರಚನೆ: ಡಾ.ಕತ್ತಿ ಪದ್ಮಾರಾವು ಬಿ.ಕಾಂ.ಎಲ್.ಎಲ್.ಬಿ ವೃತ್ತಿ: ಬೆಂಗಳೂರಿನಲಿ ವಕೀಲರು ಹವ್ಯಾಸ: ಕನ್ಶಡ ಮತ್ತು ತೆಲುಗು ಸಾಹಿತ್ಯ, ಓದುವುದು, ಸಣ್ಣಪುಟ್ಟ ಬರೆಯುವುದು, ಅನುವಾದ ಮಾಡುವುದು. ಮೊ: 9448316432

ಅನುವಾದ Read Post »

ಕಾವ್ಯಯಾನ

ಮಕ್ಕಳ ವಿಭಾಗ

ಕೆಂಚಬೆಕ್ಕಿಗೆ ಏನಾಯ್ತು? ವಿಜಯಶ್ರೀ ಹಾಲಾಡಿ ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡಗಡ ಚಳಿಗೆ ಬಿಸಿಬಿಸಿ ಬೋಂಡಾ ಪಾಕಂಪಪ್ಪನು ತಿಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಮೀನಿನ ಮುಳ್ಳು ದೊಂಡೆಗೆ ಸಿಕ್ಕಿ ಕೆಮ್ಮಿ ಕೆಮ್ಮಿ ಸುಸ್ತಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡವ ಬೆಕ್ಕು ಹೊಯ್ ಕಯ್ ಮಾಡಿ ಕಾಲಿನ ಮೂಳೆ ಮುರಿದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಟ್ರಾಫಿಕ್ ಜಾಮಲಿ ರಸ್ತೆಯ ಕಾದು ಬೋರು ಬೋರು ಹೊಡೆದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ನೆತ್ತಿಗೆ ಸಿಟ್ಟು ಸರ್ರನೆ ಏರಿ ಬಾಗಿಲು ಜಡಿದು ಮಲಗಾಯ್ತು!! ವಿಜಯಶ್ರೀ ಹಾಲಾಡಿ ಕವಿ ಪರಿಚಯ: ಆರು ಕೃತಿಗಳು ಪ್ರಕಟವಾಗಿವೆ.ಮಕ್ಕಳ ಸಾಹಿತ್ಯ ಕೃತಿ ‘ ಪಪ್ಪು ನಾಯಿಯ ಪೀಪಿ’ ಇದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.ಸದ್ಯ ಪ್ರೌಢಶಾಲಾಶಿಕ್ಷಕರಾಗಿದ್ದಾರೆ

ಮಕ್ಕಳ ವಿಭಾಗ Read Post »

ಅಂಕಣ ಸಂಗಾತಿ

ಶಾನಿಯ ಡೆಸ್ಕಿನಿಂದ…

ಚಂದ್ರಾವತಿ ಬಡ್ಡಡ್ಕ ನಾನು- ಛೇ ನೀವು ಎಲ್ಲಿ ಹೋದ್ದು? ಸಚಿನ್ ಸರೀ ಹೊಡ್ದ, ನೋಡ್ಬೇಕಿತ್ತು… ಅಮ್ಮ- ಹೊಡ್ದನಾ…. ಯಾರಿಗೆ ಹೊಡ್ದಾ? ಆಚೆ ಪಾರ್ಟಿಯವನಿಗೆ ಹೊಡ್ದದ್ದದ್ದಾ…. ಯಾಕೆ ಹೊಡ್ದದ್ದು…? ಶ್ರೀಪತಿ- ಅಲ್ಲಮ್ಮಾ ರನ್ ಬಾರಿಸಿದ. ಅಮ್ಮ- ಹ್ಞಾ.. ಹಾಗಾ…. ನಾನು ಆಚೆ ಪಾರ್ಟಿಗೆ ಹೊಡ್ಡದ್ದದ್ದಾ ಅಂತ ನೆನ್ಸಿದೆ. ನಾನು- ಹ್ಹೋ…. ವೋ….. ವಿಕೆಟ್…. ಇಲ್ಲ ಥರ್ಡ್ ಅಂಪಾಯರ್ ಅಮ್ಮ- ಏನಾಯ್ತು….ಏನಾಯ್ತು… ನಾನು- ಸ್ವಲ್ಪ ಇರಿ…. ಧರ್ಡ್ ಅಂಪಾಯರ್‌ಗೆ ಹಾಕಿದ್ದಾರೆ ಅಮ್ಮ- ಅದ್ಯಾರು? ನಾನು- ವಿವರಿಸಿ ಎಂಬಂತೆ ಇವರತ್ತ ನೋಡಿದೆ. ಶ್ರೀಪತಿ- ಥರ್ಡ್ ಅಂಪಾಯರ್ ಅಂದ್ರೇ….(ಸಾಗಿತು ವಿವರಣೆ) ನಾನು- ಅಬ್ಬಾ… ನಾಟೌಟ್! ಅಮ್ಮ- ಇಲ್ವಾ ಸದ್ಯ. ಸ್ವಾಮೀ ದೇವರೇ… (ಮಿಕ್ಕಂತೆ ದೇವರನ್ನು ನಂಬದವರು) ಶ್ರೀಪತಿ- ಆಹಾ…. ಆರ್ರ್ಹಾ…… ಫೋರ್… ಯೇ… ಇಲ್ಲಲ್ಲ ಸಿಕ್ಸ್ ಅಮ್ಮ- ಅದೆಂಥ? ನಾನು- ಫೋರ್ ಅಂದ್ರೇ…..(ಫೋರ್- ಸಿಕ್ಸ್ ಬಗ್ಗೆ ಸಣ್ಣ ಉಪನ್ಯಾಸ) ನಾನು- ವ್ಹಾವ್….. ಹ್ಯೂಜ್ ಸಿಕ್ಸ್! ಶ್ರೀಪತಿ- ಮತ್ತೊಂದು ಸಿಕ್ಸ್ (ಅಷ್ಟರಲ್ಲಿ ನಾನು ಎದ್ದು ಟಾಯ್ಲೆಟ್‌ಗೆ ಹೋದೆ) ಅಮ್ಮ- ನೀನು ಎಲ್ಲಿ ಹೋದ್ದು…? ಅಂವ ಸುಮಾರು ಬೌಂಡರಿ ಹೊಡ್ದ. ಆದ್ರೆ ಆಚೆಯ ಹಸಿರು ಡ್ರೆಸ್ ಹಾಕಿದವರು ಗೆರೆ ದಾಟಲು ಬಿಡುವುದೇ ಇಲ್ಲ…… ಶ್ರೀಪತಿ- ಅಯ್ಯೋ ಅದು ಅವರ ಆಟ ಅಮ್ಮಾ. ಇವರು ಬೌಂಡರಿ ಹೊಡೆಯದಂತೆ ತಡೆಯೋದೆ ಅವರ ಕೆಲಸ ಮತ್ತು ಚಾಕಚಕ್ಯತೆ. ಅಮ್ಮ- ಹೌದಾ….. ಹಾಗಾ.. (ಅಷ್ಟರಲ್ಲಿ ಮೈದುನನ ಅಗಮನ) ಅಮ್ಮ-  ಹೇ… ನೀನು ಯಾಕೆ ಊಟಕ್ಕೆ ಬರ್ಲಿಲ್ಲಾ….. ಆಞ… ಅದೆಂಥ ಕೈಯಲ್ಲಿ….. ಈಗ ಊಟ ಮಾಡ್ತಿಯಾ…. ರಾತ್ರಿ ಊಟಕ್ಕಿದ್ದಿಯಾ….. ಬೇಗ ಬಾ ಮನೆಗೆ…. (ಹೀಗೆ ಮೈದುನ ಹಿಂದೆ ಹೋಗಿ ಒಂದು ಹದ್ನೈದು ನಿಮಿಷ ಹೋಯ್ತು) ಶ್ರೀಪತಿ: ಹೇ…. ನೋಡ್ನೋಡ್ನೋಡು ಹೇಗೆ ಡೈವ್ ಹೊಡ್ದ. ಎಕ್ಸೆಲಂಟ್ ಕ್ಯಾಚ್……. (ಅವರಿಗೆ ಇಷ್ಟವಾಗಿದ್ದ ಹಳೆಯ ಕ್ಯಾಚ್‌ಗಳ ವಿವರಣೆ…..) ಅಮ್ಮ: ಮರಳಿ ಬಂದು ಅವರ ಜಾಗದಲ್ಲಿ ಕುಳಿತು, ಏನಾಯ್ತು, ಎಷ್ಟಾಯ್ತು…? ನಂಗೆ ಟೆನ್ಷನ್ ಆಗ್ತದೆ… ನಾನು:  ಯಾಕೆ? ಅಮ್ಮ: ಇಂಡಿಯಾ ಸೋತರೇ….? ನಾನು: ಸೋತರೆ ಏನಾಯ್ತು? ಆಟವನ್ನು ಆಟವಾಗಿ ನೋಡಿ, ಯಾರು ಚೆನ್ನಾಗಿ ಆಡ್ತಾರೋ ಅವರೇ ಗೆಲ್ತಾರೆ. ಅಮ್ಮ: ನಂಗೆ ಟೆನ್ಷನ್ ಆಗ್ತದೆ…. ಶ್ರೀಪತಿ: ಈ ಅಮ್ಮನಿಗೆ ಹೀಗೆ ಬೇಡದ ವಿಷಯಕ್ಕೆ ಟೆನ್ಷನ್ ಮಾಡೇ ಬಿಪಿ ಜಾಸ್ತಿ ಆಗೋದೂ…….. ಅಮ್ಮ: ಲಲಿತ್ಮಾಯಿಗೆ ಫೋನ್ ಮಾಡ್ತೇನೆ…. ನಾನು:  ಯಾಕೆ? ಅಮ್ಮ: ಅವಳಿಗೆ ಕ್ರಿಕೆಟ್ ಚೆನ್ನಾಗಿ ಗೊತ್ತು. ಭಾರತ ಸೋಲ್ತದ ಗೆಲ್ತದಾಂತ ಅವಳು ಹೇಳ್ತಾಳೆ. ನಾನು ಇವರು ಮುಖ-ಮುಖ ನೋಡ್ಕೊಂಡೆವು (ವರ್ಷಗಳ ಹಿಂದೆ ಕ್ರಿಕೆಟ್ ನೋಡ್ತಿದ್ದಾಗ ಬರೆದಿದ್ದೆ. ಅರ್ಧಕ್ಕೆ ಬರೆದಿದ್ದ ಇದು ಭೂ(ಕಂಪ್ಯೂಟರ್)ಗತ ವಾಗಿತ್ತು. ಮತ್ತೆ ಹೇಗೆ ಮುಂದುವರಿಸಬೇಕಿದ್ದೆ ಎಂಬುದ ನಂಗೆ ಈಗ ಮರೆತು ಹೋಗಿದೆ. ಹೇಗಿತ್ತೋ ಹಾಗೇ ಪೋಸ್ಟ್ ಮಾಡೋಣ ಅನ್ನಿಸಿತು, ಹಾಗೇ ಮಾಡುತ್ತಿದ್ದೇನೆ) ಚಂದ್ರಾವತಿ ಬಡ್ಡಡ್ಕ. ಲೇಖಕರ ಪರಿಚಯ: ಚಂದ್ರಾವತಿ ಬಡ್ಡಡ್ಕ, ಪತ್ರಿಕೆ ಗಳಲ್ಲಿ ಪೋರ್ಟಲ್ ಗಳಲ್ಲಿ ಕೆಲಸ ಮಾಡಿ ಅನುಭವ . ಸದ್ಯಕ್ಕೆ ವೃತ್ತಿಪರ ಅನುವಾದಕಿ

ಶಾನಿಯ ಡೆಸ್ಕಿನಿಂದ… Read Post »

ಇತರೆ

ಅಂತರಂಗದ ಅಲೆಗಳು

                         ಸುಜಾತ ರವೀಶ್ ಹೌದು. ಮನವೆಂಬುದು ಅದೆಷ್ಪೋ ಲಕ್ಷ GBಗಳಾಗಿಂತ ಶಕ್ತಿಯುತ ಚಿಪ್. ಅಂತರಾಳದ ಪದರ ಪದರಗಳಲ್ಲಿ ಅಸಂಖ್ಯಾತ ನೆನಪಿನಲೆಗಳೇಳುತ್ತಲೇ ಇರುತ್ತವೆˌ ಈ ಭರತಕ್ಕೆ ಹುಣ್ಣಿಮೆ ಅಮಾವಾಸ್ಯೆಗಳ ಹಂಗಿಲ್ಲ. ಅವಿರತ ನಿರಂತರ ಅನಂತ.ಎಂದೋ ಎಲ್ಲೋ ಆದ ಅನುಭವದ ನೆನಹು ಇನ್ನೆಂದೋ ಇನ್ನೆಲ್ಲೋ ಧುತ್ತನೆ ಮನದಂಗಳದಲಿ ಪ್ರತ್ಯಕ್ಷ.ಕವಿವಾಣಿ ನುಡಿದಂತೆ “ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮಜಲದಾ ತಂಪು” ಇಂದಿಗೂ ತಾಜಾ ತಾಜಾ ಹಸಿ ಹಸಿ. ಇವತ್ತು ಬರೆಯಹೊರಟಿರುವ ವಿಷಯ ತುಂಬಾ ದಿನದಿಂದ ಮನದಲ್ಲಿತ್ತು. ಮುಂದೂಡೂತ್ತಲೇ  ಇದ್ದೆ. ಹಾಗಾಗಿ ಈಗ ನಿಮ್ಮ ಮುಂದೆ ನನ್ನ ಅಂತರಂಗದಲೆಯ ನರ್ತನ. ಮನೆಯ ಬಳಿಯೇ  ಉದ್ಯಾನವಿದ್ದರೂ ರಿಂಗ್ ರಸ್ತೆಯಲ್ಲಿ ಗೆಳತಿಯೊಡನೆ ನಡೆದಿತ್ತು ನನ್ನ ಮುಂಜಾವಿನ ವಾಯುವಿಹಾರ. ಗೆಳತಿ ಬೆಂಗಳೂರಿಗೆ ಶಿಫ್ಟ್  ಆದ್ದರಿಂದ ಒಬ್ಬಳೇ ತಾನೇ ಇನ್ನು ಮುಂದೆ ಉದ್ಯಾನವನಕ್ಕೇ ಹೋಗೋಣ ಎಂದು ನಿರ್ಧರಿಸಿದೆ. ಸರಿ ಆ ಬೆಳಿಗ್ಗೆ ಹೊರಟಿತು ನನ್ನ ಸವಾರಿ.ಹಿಂದಿನ ರಾತ್ರಿ ಜೋರಾಗಿ ಮಳೆ ಗಾಳಿ ಬಂದ ಕಾರಣ ವಾತಾವರಣವೆಲ್ಲಾ ತಂಪು ತಂಪು ಹಾಯಿ ಹಾಯಿ. ಗೇಟಿನ ಬಳಿ ಹೋಗುತ್ತಿದ್ದಂತೆ ತಡೆದು ನಿಲ್ಲಿಸಿತು  ಆ ಕಂಪು. ಏನೋ ಪರಿಚಿತ ಅನ್ನಿಸ್ತಿದೆ ಆದರೆ ನಿಖರವಾಗಿ ಗೊತ್ತಾಗ್ತಾಯಿಲ್ಲ.ಒಂದು ಕ್ಷಣ ನೆನಪಿಸಿಕೊಂಡ ನಂತರ ಯಾವುದೋ ಹೂವಿನದು ಅನ್ನಿಸಿತು.ಮೆದುಳಿಗೆ ಮತ್ತಷ್ಟು ಕೆಲಸ ಕೊಡುವಷ್ಟರಲ್ಲಿ ಕಣ್ಣಿಗೆ ಬಿತ್ತು ಆಕಾಶಮಲ್ಲಿಗೆಯ ಮರ. ತಕ್ಷಣ ಹೊಳೆಯಿತು ಅದು ಆಕಾಶಮಲ್ಲಿಗೆ ಹೂವಿನ ನರುಗಂಪು ಎಂದು.ಈ ಸುಗಂಧದ ಬಂಧ ಬಾಲ್ಯದ ನಂಟು.ಚಿಂತಾಮಣಿಯಲ್ಲಿ ಅಜ್ಜಿಮನೆಯ ದಾರಿಯುದ್ದಕ್ಕೂ ಮತ್ತು ಅಲ್ಲಿದ್ದ ಪಾರ್ಕಿನಲ್ಲೂ ಇವೇ ಮರಗಳು. ಸಾಮಾನ್ಯವಾಗಿ ನಾವು ಹೋಗುತ್ತಿದ್ದುದು ಏಪ್ರಿಲ್ ಮೇ ತಿಂಗಳಾದ್ದರಿಂದ ಮರತುಂಬಾ ನಕ್ಷತ್ರದಂತಹ ಹೂಗಳುˌ! ಬೆಳಿಗ್ಗೆ ರಸ್ತೆಯಿಡೀ ಬಿದ್ದಿರುತ್ತಿದ್ದವು. ನೋಡಲು ಥೇಟ್ ಸುಗಂಧರಾಜದಂತೆಯೇ!ಅದರೆ ಅಷ್ಟು ತೀಕ್ಷ್ಣ ಪರಿಮಳವಿಲ್ಲ.ದೇವರ ಪೂಜೆಗೆ ಅರ್ಹವಿಲ್ಲ ಅಂತಿದ್ರು ದೊಡ್ಡವರು.ನಾವು ಮಕ್ಕಳು ಅವನ್ನು ಆರಿಸಿ ತೊಟ್ಟ ಲಂಗಗಳಲ್ಲಿ ಉಡಿ ತುಂಬಿಸಿಕೊಂಡು ತರುತ್ತಿದ್ದೆವು.ಆ ನಂತರ ರಂಗವಲ್ಲಿ ಚಿತ್ತಾರ ಮಾಡಿಯೋ ಮಾಲೆಯೋ ಕಟ್ಟುತ್ತಿದ್ದೆವು. ದೇಟು (ತೊಟ್ಟು) ಉದ್ದವಾದ್ದುದರಿಂದ ಹೊಸದಾಗಿ ಹೂ ಕಟ್ಟಲು ಕಲಿಯುವವರಿಗೆ ಸುಲಭ ಆಗುತ್ತಿತ್ತು. ನಂತರದ ದಿನಗಳಲ್ಲಿ ಅದರ ಒಡನಾಟವೇ ಇಲ್ಲ.ˌ ಹಾಂ! “ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ” ಹಾಡು ಕೇಳಿದಾಗಲೆಲ್ಲಾ ಈ ನೆನಪು ಸುಳಿದು ಹೋಗುತ್ತಿದ್ದುದು ಉಂಟು. 35_40 ವರ್ಷಗಳ ಹಿಂದೆ ಆಘ್ರಾಣಿಸಿದ ಆ ಕಂಪು ಇನ್ನೂ ಮನದಲ್ಲಿ ಉಳಿದಿದೆಯೆಂದರೆ ಮಾನವನ ಮಿದುಳು ಚಮತ್ಕಾರವಲ್ಲದೇ ಇನ್ನೇನು?ಆಗತಾನೇ ಬಿದ್ದಿದ್ದ ಕಾಲ್ತುಳಿತಕ್ಕೆ ಸಿಕ್ಕದ ಹೂಗಳನ್ನು ಆರಿಸಿ ತಂದು ಫೋಟೋ ತೆಗೆದು ಹೂದಾನಿಯಲ್ಲಿಟ್ಟೆ.3_4  ದಿನಗಳವರೆಗೂ ಬಾಡದೆ ಮನೆಯೆಲ್ಲಾ ಆ ಮಂದ್ರ ಪರಿಮಳ ಆವರಿಸಿತ್ತು ಅಂತೇ  ಮನದ ತುಂಬಾ ಕಳೆದ ಆ ಬಾಲ್ಯದ ದಿನಗಳ ಮೆಲುಕೂ! ಜೀವನವೇ ಹೀಗೇ….. ಬಾಳ ಕಡಲಿನಲಿ ನೆನಪಿನ ಹಾಯಿದೋಣಿಯ ಯಾನ. ಸುಜಾತ ರವೀಶ್ ಲೇಖಕರ ಪರಿಚಯ: ಜೀವ ವಿಮಾ ನಿಗಮದಲ್ಲಿ ಉನ್ನತ ದರ್ಜೆ ಸಹಾಯಕಿ.ಅಂತರಂಗದ ಆಲಾಪ ಕವನ ಸಂಕಲನ ಪ್ರಕಟಣೆಯಾಗಿದೆ. ಮುಖವಾಡಗಳು ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಪದವಿ ಪಠ್ಯ ಪುಸ್ತಕಕ್ಕೆ ಆಯ್ಕೆಯಾಗಿದೆ.ಕೆಲವು ಕವನಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

ಅಂತರಂಗದ ಅಲೆಗಳು Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಬಿದಲೋಟಿ ರಂಗನಾಥ್ ಕೃತಿಯ ಹೆಸರು: ನನ್ನಪ್ಪ ಒಂದು ಗ್ಯಾಲಕ್ಸಿ ( ಕವನಸಂಕಲನ) ಕವಿ: ನೂರುಲ್ಲಾ ತ್ಯಾಮಗೊಂಡ್ಲು ” ಹೊಸ  ತಲೆಮಾರಿನ ನಿಜದ ಕಾವ್ಯಾಭಿವ್ಯಕ್ತಿ ”      ಗೆಳೆಯ ನೂರುಲ್ಲಾ ತ್ಯಾಮಗೊಂಡ್ಲು ಮತ್ತು ನನ್ನ ಸ್ನೇಹ ಸುಮಾರು ಆರುವರೆ ವರ್ಷದ್ದು, ಸಿಟ್ಟು ಸಿಡುಕು ಆವೇಶ ಅವರಲ್ಲಿ ಕಂಡಂತೆ ಅವರ ಕವಿತೆಗಳಾಲ್ಲೂ ಇದೆ. ಯಾವುದನ್ನೇ ಆಗಲಿ ಖಡಕ್ಕಾಗಿ ಪ್ರತಿಭಟಿಸುವ ನೇರ ಮಾತಿನ ನಿಷ್ಠೂರವಾದಿ ಮನುಷ್ಯ. ಅಷ್ಟು ಸುಲಭವಾಗಿ ರಾಜಿಯಾಗದ ನಡತೆ.      “ನನ್ನಪ್ಪ ಒಂದು ಗ್ಯಾಲಕ್ಸಿ” ಅವರ ಎರಡನೆಯ ಕವನ ಸಂಕಲನ. ಕಾವ್ಯಮನೆ ಎಂಬ ಪ್ರಕಾಶನ ಗಝಲ್ ಮಾಂತ್ರಿಕೆ ಮೆಹಬೂಬ್ ಬೀಯವರ ಸಹಕಾರದಿಂದ ಪ್ರಕಟಿಸಿದೆ. ಇದರಲ್ಲಿ ಐವತ್ತೊಂದು ಕವಿತೆಗಳಿವೆ. ಎನ್ಟಿ ಎಂದೇ ಹೆಸರಾಗಿರುವ ಇವರ ಕವಿತೆಗಳು ಭ್ರಮೆಯ ಹಂಗನ್ನು ತೊರೆದು ನೇರವಾಗಿ ಖಡಕ್ಕಾಗಿ ಕೈ ತೋರಿಸಿ ಮಾತಾಡಿಸುತ್ತವೆ. ಹಬ್ಬಿದ ಕತ್ತಲೆಯ ಪರದೆಯನ್ನು ಸರಿಸಿ ಬೆಳಕಿನ ಕಿರಣಗಳನ್ನು ತೊಟ್ಟು ಬೆಳಗುವ ಇವರ ಈ  ಕವಿತೆಗಳನ್ನು ಐದು ಭಾಗಗಳಲ್ಲಿ ನೋಡಬೇಕಾಗುತ್ತದೆ. ಒಂದನೇ ಭಾಗದಲ್ಲಿ ಭುಗಿಲೆದ್ದ ಹಾಡು, ಗನ್ನುಹಿಡಿದ ಕೈ, ದಿನ ಪತ್ರಿಕೆ, ಟ್ರೈಗೀಸ್ ನದಿ ದಂಡೆ-ನಿಮ್ಮದು, ಹಸಿವು, ಖಾಲಿಜೇಬುಗಳು, ಮೌನ ತ್ರಿವರ್ಣಧ್ವಜ, ರಾಜಬೀದಿ, ಬಂದೂಕು …ಬದುಕು, ಒಂದು ಅಸ್ಮಿತೆ ಕವಿತೆಗಳು ಸಮಾಜದಲ್ಲಿ ಮನೆ ಮಾಡಿರುವ ಧರ್ಮಾಂಧಕಾರ ,ಜಾತಿಯತೆ ಮೌಢ್ಯತೆಯ ವಿರುದ್ಧ ನೋವಿನಿಂದಲೇ ತೊಡೆ ತಟ್ಟಿ ನಿಂತು ಗದರಿಸುವಲ್ಲಿ ಯಶಸ್ವಿಯಾಗಿವೆ.  “ಇಂಡಿಯಾದ ಇಂಡಿಪೆಂಡೆಂಟಿನ ದಿನಗಳು ಸತ್ತು ಬೂದಿಯಾಗಿ ಎಷ್ಟೋ ದಿನಗಳಾಗಿ ನಿನಗೆ ಮಾತ್ರ ಖಬರಿಲ್ಲ”        ದೇಶದ ಹೆಸರಲ್ಲಿನ ಸ್ವಾತಂತ್ರ್ಯ ನೆಪ ಮಾತ್ರ. ಇಲ್ಲಿನ ಗುಲಾಮತನ ಜಾತಿಯತೆ ಅಸಮಾನತೆ ಮೌಢ್ಯತೆ ಅಂಧಕಾರ ಇನ್ನೂ ಅಳಿಸಿಲ್ಲ. ಸಮಾನತೆಯ ಶ್ರೀರಕ್ಷೆಗಾಗಿ ಈಗಲೂ ಒದ್ದಲಾಡುತ್ತಿರುವ ದಲಿತರು ಅಲ್ಪಸಂಖ್ಯಾತರು ನಮ್ಮ ಕಣ್ಣ ಮುಂದಿದ್ದಾರೆ. ಜಾತಿಯ ಹೆಸರಲ್ಲಿ , ತಿನ್ನುವ ಆಹಾರದ ಹೆಸರಲ್ಲಿ ಶೋಷಣೆ ನಡೆಯುತ್ತಲೇ ಬಂದಿದೆ. ಖಾಕಿಯ ಕೋಮು ನಡೆ, ಬ್ರಷ್ಟತೆ; ಕಾವಿಯ  ಪಕ್ಷಪಾತದ ಕಾವು; ಖಾದಿಯ ಗುಂಡಾಗಿರಿ ಅಧಿಕಾರದ ದಾಹ, ಮದ, ಮತ ಭ್ರಷ್ಟತೆ, ಸೋಗಲಾಡಿತನ ಬಡವರ ಬದುಕನ್ನು ಹೈರಾಣಾಗಿಸಿದೆ. ಇವರೆಲ್ಲರ ಕಾಲಡಿ ಬಂಧಿಯಾಗಿರುವ ಸ್ವತಂತ್ರ ನಿಜಕ್ಕೂ ಸತ್ತು ಬೂದಿಯಾಗಿದೆ ಎಂದು ಕವಿ ಇಂದಿನ ರಾಜಕೀಯ ನಡೆ ನುಡಿಯನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ.  “ಗನ್ನು ಹಿಡಿದ ಕೈ ” ಇದೊಂದು ಆಶಾವಾದದ ಕವಿತೆ. ಕ್ರೂರ ಮೃಗತ್ವದ ಮನಸುಗಳು ಅಕ್ಷರದ ವ್ಯಾಮೋಹಕ್ಕೆ ಬೀಳದೆ ಗನ್ನು ಹಿಡಿದ ರಾಕ್ಷಸಿ ಕೃತ್ಯವನ್ನು ನೇರವಾಗಿ ತಳ್ಳಿಹಾಕುತ್ತಾರೆ. ಈ ಕವಿತೆಯಲ್ಲಿ ವ್ಯಕ್ತಪಡಿಸಿರುವಂತೆ ಒಂದುವೇಳೆ ಪೆನ್ನು ಹಿಡಿದಿದ್ದರೆ ಮೃದುತ್ವದ ಬುದ್ದತ್ವ ಧೋರಣೆ  ತಾಳುತ್ತಿದ್ದರೇನೋ ಎಂಬುದು ಕವಿಯ ಆಶಯ. “ನಾಳೆಯಾದರೂ ಉಳಿಯಲಿ ಈ ನೆಲದ ನಾಗರೀಕತೆ ಸಂಸ್ಕೃತಿ-ಮನುಕುಲತೆ” ಎಂದು ಹೇಳುವ ಕವಿಯ ಆಶಯ ಪ್ರಜ್ಞೆ ಈ ಹೊತ್ತಿನ ಜೀವಂತ ಕಾವ್ಯದನಿ. “ಬಾ ಇನ್ನು ಕಾಲ ಮಿಂಚಿಲ್ಲ ಮತ ಧರ್ಮಗಳ ಬಂಧವನ್ನು ಮುರಿದು ಪ್ರೇಮದ ಋಜುತ್ವವಿದೆ ಹೃದಯದ ಚಿಲುಮೆಯಲಿ ಒಂದಿಷ್ಟು ಕುಡಿದು ನಿರಾಳಿಸೋಣ” ಎನ್ನುವ ಕವಿಯ ಪ್ರೇಮ ಭಾಷೆ ವರ್ತಮಾನಕ್ಕೆ ಅಪ್ಯಾಯಾಮಾನವಾಗಿರುವಂಥದ್ದು.        ವಿಮರ್ಶಕ ಡಿ ಆರ್ ನಾಗರಾಜ್ ರವರು ಹೇಳುವಂತೆ “ಕಾವ್ಯ ಬರೀ ಲೋಲಪತೆ ಅಲ್ಲ .ವರ್ತಮಾನದಲ್ಲಿಲ್ಲದ ಆದರೆ ಭವಿಷ್ಯದ ಗರ್ಭದಲ್ಲಿರುವ ಸಮಾಜದ ಅಮೃತಕ್ಕೆ ಹಾರುವ ಗರುಡ ಅದು. ಆದರೆ ಗರುಡನಿಗೆ ಕಾಲ ಕೆಳಗೆ ಹರಿವ ಹಾವಿನ ಕಡೆಗೂ ಗಮನವಿರಬೇಕು. ಅಂದರೆ ಸಾಮಾಜಿಕ ವೈರುಧ್ಯಗಳಿಗೂ ತೀವ್ರವಾಗಿ ಪ್ರತಿ ಸ್ಪಂದಿಸಬೇಕು. ಉದಾಹರಣೆ ಎಂಬಂತೆ ಇಲ್ಲಿನ ಮೊದಲ ಭಾಗದಲ್ಲಿನ ಕವಿತೆಗಳಲ್ಲಿ ಅಂಥಹ ವೈರುಧ್ಯತೆ, ತಳಮಳ ಬಂಡಾಯ ಪ್ರಜ್ಞೆ  ಚುರುಕಾಗಿವೆ. “ಪ್ರಶ್ನಿಸಬೇಕಿದೆ ನಮ್ಮ ಎದೆಗಳಿಗೆ ಗುಂಡು ಹೊಡೆಯುವ ಚಂಡ ಶೂರರನ್ನು ಕ್ರೂರ ಕಿರಾತಕರನ್ನು ನಮ್ಮ ಸುಂದರ ಬದುಕನ್ನು ಕಸಿಯುತ್ತಿರುವ ಗೋಮುಖ ವ್ಯಾಘ್ರರನ್ನು ದೇಶಕ್ಕೆ ದಾರಿದ್ರ್ಯದ ಮುಸುಕನ್ನು ಹೊದಿಸುತ್ತಿರುವ ಮೂಲಭೂತವಾದಿಗಳನ್ನು.” ಹೌದು ಯಾವುದನ್ನು ಪ್ರಶ್ನಿಸದ ಹೊರತು ಪಡೆಯಲಾಗದ ಸ್ಥಿತಿಯನ್ನು ತಲುಪಿರುವ ದೇಶದಲ್ಲಿ. ಪ್ರಶ್ನಿಸಲಾರದೇ ಎಷ್ಟೋ ಜನರ ಬದುಕು ಮಣ್ಣಾಗಿದೆ, ಮುರಾಬಟ್ಟೆಯಾಗಿದೆ. ಅಂಥ ದೇಶದಾರಿದ್ರ್ಯತೆಗೆ ನಮ್ಮ ಅಭಿವ್ಯಕ್ತತೆ ಪ್ರಶ್ನೆಯೇ ಪುರುಷೋತ್ತಮನ ಅಸ್ತ್ರವಾಗಲಿದೆ.  ಎರಡನೇ ಭಾಗದಲ್ಲಿ  ನೋಡುವ  ಕವಿತೆಗಳು ಸೂಫಿ ಹೃದಯ ಸಮುದ್ರದ ಬೆಳಕಿನ ಹಾದಿಯದು. ಇಲ್ಲಿನ  ರಾಬಿಯಾ ಬಸ್ರಿ, ಪ್ರೇಮ ಸಮಾಧಿ, ಆದಿ, ಒಂದಿಷ್ಟು ಕರುಣೆ ಸಾಕು, ಸಾಕಿ ನಾನೊಂದು ಹುಲ್ಲೆಸಳು, ಫಕೀರರ ಗೂಡು, ಬೆತ್ತಲೆ ಫಕೀರ , ಆತ್ಮ ಯಾವ ಕುಲ? ಯಶಸ್ವಿ ಕವಿತೆಗಳು.     ಪ್ರೇಮಾನುಸಂಧಾನ ಸೂಫಿ ಕಾವ್ಯತತ್ಪರತೆ. ಅಂಥ ಒಂದು ಕವಿತೆ “ಆತ್ಮ ಯಾವ ಕುಲ”?  “ನೀನು ಕುಲದ ಪ್ರಶ್ನೆಯೆತ್ತುಕೊಂಡಾಗ ನನ್ನೊಳಗೆ ಕಲಕಿದ್ದು ಮತ್ತೆ ಅದೇ ಪ್ರಶ್ನೆ ಆತ್ಮ ಯಾವ ಕುಲ ?”      ಆತ್ಮದ ಚಲಿಸುವ ದಾರಿಯಲ್ಲಿ ಯಾವುದೇ ಕತ್ತಲೆಯ ಕೂಪಗಳು ಇರುವುದಿಲ್ಲ . ಅದು ತತ್ವಪದ ಶಾರೀರಿಕ ನೆರಳಿನಲ್ಲಿ ವಿಶ್ರಮಿಸುವ ಒಂದು ಮುಕ್ತ ತಾವು. ತಾನು ದೇವರು ಪ್ರೀತಿಯ ನಡುವಿನ ಮುಕ್ತ ಮೆದು ಮಾತುಕತೆ. ಅಲ್ಲಿ ಯಾವ ಗೋಜಲುಗಳ ಶಂಖ ಮೊಳಗುವುದಿಲ್ಲ. ಅಲ್ಲಿ ಪ್ರೀತಿ ಮಂಪರಲ್ಲಿ ತೇಲುವ ಮತ್ತೇರಿದ ಧ್ಯಾನದ ಜಾಡು. ತನ್ನ ಶರೀರದಲ್ಲಡಗಿದ ಬೆಳಕಿನ ಹುಡುಕಾಟದಲ್ಲಿ ನಡೆಯುವ ಸೂಫಿಗಳು ಎಲ್ಲವನ್ನೂ ತ್ಯಜಿಸಿ ಬೆತ್ತಲೇ ಫಕೀರನ ಹಾಗೆ ಚಲಿಸುವ ಬೆಳ್ತಿಂಗಳು. ಅಲ್ಲಿ ಹೊಸ್ತಿಲ ಸಂಸ್ಕಾರವಿಲ್ಲದ ಚಂದನೆಯ ರೆಕ್ಕೆ ಬೀಸುವ ಮೌನ ಹಕ್ಕಿಯು ನುಲಿದ ಮೃದು ದೋರಣೆ ಎಂತಹವರನ್ನು ಮುಖವನ್ನಾಗಿಸುತ್ತದೆ. ಅದೊಂದು ಮುಕ್ತ ಭಾವ ಸಂವೇದಿ ಕ್ರಿಯೆ . ಸೂಫಿ ತತ್ವಪದಕಾರರಿಗೆ ನೆಲೆ ಕುಲವಿಲ್ಲದ ಅಲೆಮಾರಿಗಳಂತೆ ಚಲಿಸುವ ಮೌನ ಸಂಭಾಷಣೆ, ಧ್ಯಾನದ ಹಂಗು. ತನಗೇನು ಬೇಕಿಲ್ಲದ ತನಗಾಗೀ ಏನೂ ಸಂಪಾದಿಸಿ ಕೊಳ್ಳದ ಏಕತಾರಿಯ ತಂತಿಯೊಳಗಣ ಶಬ್ಧವು ಹರಿದ ಜಾಡಿನಲ್ಲಿ ಕಂಡುಕೊಂಡ ಮಮತೆ ಪ್ರೀತಿಯ ಬುತ್ತಿ ಹೊತ್ತ ಅವರಿಗೆ ಬಾಹ್ಯ ಜಗತ್ತಿನ ಕನಸುಗಳೇ ನಗಣ್ಯ.       ಸೂಫಿ ನಡೆ  ಮುಕ್ತವಾಗಿ ಚಲಿಸುವ ಹಕ್ಕಿಯ ಮುಖವಿಲ್ಲದ ದಿಕ್ಕು. ಕವಿಯೇ ಹೇಳುವಂತೆ ಹೊರಗಿನ ದೀಪ ಆರಿದರೂ ಎದೆಯೊಳಗಿನ ಬೆಳಕು ಎಂದೂ ಸಾಯುವುದಿಲ್ಲ. ಅದು ನಿರಾಢಂಬರ ಜಂಗಮ ನಿಲುವು. ಘಟಶೋಧನೆಯಲ್ಲಿ ದೇಹ  ತೊರೆಯುವ ಜೀವ ದೇವರು ಪ್ರೀತಿಯೆಂಬ ತಾದ್ಯತ್ಮದ ಮುಖಾಮುಖಿ. ಸೂಫಿಗಳು ಆ ಬೆಳಕಿನ ಹೆಗಲ ಮೇಲೆ ಕೂತು ಚಲಿಸುವ ಪರಿ ನಿಜಕ್ಕೂ ಮೆಚ್ಚುವಂತಹದ್ದು. ಈ ಸಂಕಲನದ ಸೂಫಿ ಕವಿತೆಗಳನ್ನು ಧ್ಯಾನಿಸಿದರೆ ಆ ತಾದ್ಯತ್ಮದ ಬೆಳಕು  ಘೋಚರಿಸುತ್ತದೆ. ಸೂಫಿಗಳ ಗಾಢ ಪ್ರಭಾವ ಕವಿಯ ಹೃದಯ ಕಮಲದಲ್ಲಿ ಕೂತು ಜೀಕುವ ಪರಿ ಕವಿತೆಗಳಲ್ಲಿ ಕಾಣಿಸುತ್ತಾದರೂ ಕವಿಯೊಳಗಿನ ಸಂಸಾರದ ತಾಕಲಾಟಗಳು ಧ್ಯಾನದ ಮುಕ್ತಪ್ರವೇಶಕ್ಕೆ ಅಡ್ಡಿಯ ಛಾಯೇ ಇದ್ದೆ ಇದೆ . ಸಂಸಾರಿಕ ಜೀವನದ ನೆಲೆಗಟ್ಟೇ ಎಲ್ಲಾಕ್ಕೂ ಮೂಲ ಬೇರು. ಅಲ್ಲಿದ್ದುಕೊಂಡೇ ತನ್ನೊಳಗೆ ಮಾಗುವ ಭಾವದ ಬೆಳಕು ಸೂಫಿಯ ಅಂತರಂಗವನ್ನ ತಟ್ಟಬೇಕು. ಅಪ್ಪಬೇಕು. ಆಗ ಜಂಗಮ ಫಕೀರನ ಜೋಳಿಗೆಯಲ್ಲಿ ಭೌದ್ಧಿಕತೆಯ ಕಾವು ಪಸರಿಸುತ್ತದೆ.ಅದರ ಸಿದ್ಧಾಂತ ಅರಿವಿನ ದಾರಿ ತೆರೆದುಕೊಳ್ಳುತ್ತದೆ.        ಸಂಕಲನದ ಮೂರನೇ ಭಾಗದಲ್ಲಿನೋಡುವ ಕವಿತೆಗಳು ” ‘  ಕಾಲ ಮತ್ತು ನಾನು, ಕಾವ್ಯವೆಂದರೆ, ಕವಿತೆ ನನ್ನದು, ಕವಿತೆಯ ಸತ್ಯ , ನೆರಳ ಮುಂದೆ ಬೆಳಕು. ಕಾವ್ಯದ ಬೆರಗನ್ನು ಜೀವ ಸತ್ವದ ನೆಲೆಯಲ್ಲಿ ತಳವೂರುವ ಕಾವ್ಯ ಮಿಮಾಂಸೆಯ ಜಾಡು. ಇಲ್ಲಿನ ಕವಿತೆಗಳ ನೆರಳು. “ಕಾವ್ಯವೆಂದರೆ ಹಾಗೆ ಒಂದು ಉತ್ಕಟ ಭಾವ ಕವಿಯ ಕಣ್ಣ ಒಂದು ಸಣ್ಣ ಬೆಳಗು ಕಡಲುಪ್ಪಿನ ಕಿನಾರೆಯಲಿ ಚಿಪ್ಪುಗಳನಾಯ್ವ ಗೂನು ಬೆನ್ನಿನ ಆಕ್ರಂದನ ಮೂರ್ತ ಅಮೂರ್ತ ಕಲ್ಪನೆಯ ಚಕ್ರ” “ನಾ ನೇಯುವ ಕಾವ್ಯ ಯಾವತ್ತೂ ನನ್ನದಲ್ಲ ನನ್ನ ಮತ್ತು ಕಾವ್ಯದ ಸಂಬಂಧ ಇರುವುದಾದರೂ ಒಂದಿಷ್ಟು ಹೊತ್ತು ಮಾತ್ರ” ಕವಿತೆ ಬರೆದಾದ ನಂತರ ಕವಿ ಅಲ್ಲಿರುವುದಿಲ್ಲ, ಕವಿತೆ ಮಾತ್ರ ಇರುತ್ತದೆ ಎಂಬ ಅರಿವು ಪ್ರತಿಯೊಬ್ಬ ಕವಿಗೂ ಇರಬೇಕು .ಆಗ ಮಾತ್ರ ಕವಿತೆ ಜೀವಂತ ಇರುತ್ತದೆ ಎಂಬ ಅರಿವು ಕವಿಗೆ ಇದೆ. ಆ ನಿಟ್ಟಿನಲ್ಲಿನಲ್ಲಿ ಕವಿತ್ವ ಗೆದ್ದಿದೆ.        ಕವಿ ಅಭಿವ್ಯಕ್ತಿ ತೆರೆದು ಕೊಂಡಿರುವ ಬಗೆಯೇ ವಿಭಿನ್ನ. ಕಾವ್ಯದ ಬಗ್ಗೆ ಮಿಮಾಂಸಕರು ಬರೆದ ಹೊಳಹುಗಳ ಬೆಳಕಲ್ಲಿ ಇಲ್ಲಿನ ಕವಿ ನಡೆಯುವ ಕಾವ್ಯ ದಾರಿ ಹೂವಿನೆಸಳು ಎತ್ತಿದಷ್ಟೇ ಸಲೀಸು.        ಇನ್ನು ನಾಲ್ಕನೆ ಭಾಗದಲ್ಲಿ ಗುರುತಿಸಿರುವ ಕವಿತೆಗಳು ಹೆಣ್ಣಿನ ಅಸ್ಮಿತೆಯನ್ನು , ಆಕೆಯ ಸಂಕಟದ ನೋವಿನ ನಲ್ಲಿ ಬಂದಿಯಾದ  ಕವಿತೆಗಳಾಗಿವೆ “ಅದೊಂದು ಅಸಾಹಾಯಕ ರಾತ್ರಿಯಲಿ ಕಡು ಕತ್ತಲೆಯ ಕೋಣೆಯಲಿ ನನ್ನ ಮೈ ಮನಸುಗಳ ಮೇಲೆ ಹರಿದಾಡಿ ನನ್ನಾತ್ಮವನ್ನು ನಂಜು ಮಾಡಿ ಹೋದ ಈ ಕರಿನಾಗರವನ್ನು ಸುಡುವ ಒಂದು ಕೊನೆ ಕ್ಷಣಕ್ಕಾಗಿ ಕಾಯುತ್ತಲೇ ಇದ್ದೇನೆ ಹೀಗೆ ಮತ್ತೆ ಮತ್ತೆ ಸುಟ್ಟು ಹೋಗುತ್ತಲೇ ಇದ್ದೇನೆ” ನೋಡಿ ಇಲ್ಲಿನ ಕವಿತೆಯ ಆಕ್ರೋಶದ ದನಿಯು ಹೃದಯವನ್ನೇ ಕಲಕುತ್ತದೆ ಹಾಗೂ ದ್ವನಿಸುತ್ತದೆ. ದೇಹ ಮನಸ್ಸನ್ನು ಬರ್ಬರವಾಗಿ ಶೋಷಿಸಿದ ಗಂಡೆಂಬ ಕರಿನಾಗರನನ್ನು ಸುಡುವ ಶಪಥ ಇಲ್ಲಿ ಮೊನಾಚಾಗಿ ಬಂದಿದೆ.  ಆ ನಿಟ್ಟಿನಲ್ಲಿ ಕವಿ ಹೆಣ್ಣಿನ ನೋವಿನ ಪದರುಗಳನ್ನು ಬಿಚ್ಚಿಡುತ್ತಾರೆ ಆದರೆ ಹೆಣ್ಣಿನ ಪ್ರತಿಕಾರ ಸಾಧಿಸಿದ ಅಥವಾ ಸಬಲೆಯ ಕಾವ್ಯ ಈ ಸಂಕಲನದಲ್ಲಿ  ಕೊಟ್ಟಿಲ್ಲ. ಹೆಣ್ಣು ಸಾಧಿಸಿದ ಬದುಕಿನ ಚಿತ್ರಣಗಳು ಕಾವ್ಯವಾಗಿಸುವಲ್ಲಿ ಮರೆತಿದ್ದಾರೆ ಅನ್ನಿಸುತ್ತದೆ.       ಇನ್ನು ಕೊನೆಯದಾಗಿ ಸಂಸಾರದ ಭಾಗವಾಗಿರುವ ಭವ ಬಂಧನದ ಕವಿತೆಗಳು ಓದುತ್ತಾ ಹೋದಂತೆ ಹಲವು ಪ್ರಜ್ಞೆಯ ಹೊಳಹುಗಳು ತೆರೆದುಕೊಳ್ಳುತ್ತವೆ. ಸಂಕಲನದ ಶೀರ್ಷಿಕೆಯ ಕವನವಂತೂ ಅಪ್ಪನ ಮೇಲಿನ ಪ್ರೀತಿ ಜೋಗು ನೆಲವಾಗಿದೆ. ನಿಜದ ಬದುಕಿನ ಅನಾವರಣದ ಬೆಳಕನ್ನು ಚೆಲ್ಲುವ ಕವಿತೆ ನಿಜಕ್ಕೂ ಗಮನ ಸೆಳೆಯುತ್ತದೆ. ಅಲ್ಲಿ ತಾಳಿರುವ ರೂಪಕಗಳು ಪ್ರತಿಮೆಗಳು ಕವಿತೆಯನ್ನು ಮತ್ತೆ ಮತ್ತೆ ಓದಿಸುತ್ತದೆ. ದೀಪಗಳು ಆರಬಹುದು ಆದರೆ ಎದೆಯೊಳಗಿನ ಬೆಳಕಲ್ಲ. “ಅಪ್ಪ ಆ ರುದ್ರ ಕಿರಣಗಳನ್ನು ಮುರಿದು ಬಂಡೆಗೆ ಕಾವು ಕೊಡುತ್ತಾನೆ ನನ್ನಪ್ಪ ಈಗಲೂ ನಾಳೆಯೂ ಬರಿಯ ಸೂರ್ಯನಲ್ಲ ಒಂದು ಗೆಲಾಕ್ಸಿ”        ಅಪ್ಪನ ಬದುಕನ್ನು ಕಣ್ಣಾರೆ ಕಂಡಿರುವ ಕವಿ. ಅಪ್ಪನ ಬಂಡೆ ಕೀಳುವ ಕೆಲಸದ ಮಜಲುಗಳನ್ನು ವಿವಿಧ ರೂಪಗಳಲ್ಲಿ ವರ್ಣಿಸುವ ಪರಿ ವರ್ಣಿಸಲಸದಳ. ಕವಿಯ ಎದೆಯಾಳದಲ್ಲಿ ಬೇರು ಬಿಟ್ಟ ಕಾವ್ಯದ ಕಾವು ಹೂವಾಗಿ ಅರಳಿ ಘಮಿಸುವಂತಿದೆ. ಜೀವಕೊಟ್ಟ ಅಪ್ಪನಿಗೊಂದು ಉಡುಗೊರೆಯಂತಿದೆ ಈ ಕವನ. ಇನ್ನು ಐದುವರ್ಷದ ನಡಿಗೆ ಕವನ ಮತ್ತೆ ನಮ್ಮನ್ನು ಬಾಲ್ಯಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದೆ. ಮೃದು ತಾಯ್ತನದ ಭಾವ ಹೃದಯ ಕಲಕುತ್ತದೆ. ಅಜ್ಜನ ಸುಕ್ಕುಗಳು, ಅವ್ವನೆಟ್ಟ ಮೆಹಂದಿಗಿಡ ನೆನಪುಗಳ ಬುತ್ತಿ ಬಿಚ್ಚಿ ಉಣಬಡಿಸುವಲ್ಲಿ ಇಷ್ಟವಾಗುವ ಕವನಗಳಾಗಿವೆ.      ಈ ಸಂಕಲನದ ಅನೇಕ ಕವಿತೆಗಳಲ್ಲಿ ಹಸಿವು ಧರ್ಮಾಂಧಕರದ ವಿರುದ್ದ ಸಿಡಿದೆದ್ದಿರುವ ಲಕ್ಷಣಗಳು ಘೋಚರಿಸದಿರದು.ಆ ವಿಷಯದ ಮೇಲೆ ಪದೆ ಪದೆ ಕವನಗಳ ಶರೀರ ರೂಪುಗೊಂಡಿರುವುದು ತುಸು ಕ್ಲಿಷೆ ಎನಿಸಿದರೂ  ಸಂಕಲನದ ಎಲ್ಲಾ ಕವಿತೆಗಳು ಎದೆಗಪ್ಪಿಕೊಳ್ಳಬಹುದಾದ ಕವಿತೆಗಳೇ ಆಗಿವೆ. ಗೆಳೆಯ ಎನ್ಟಿಗೆ ಆತ್ಮೀಯ ಅಭಿನಂದನೆ. ಬಿದಲೋಟಿ ರಂಗನಾಥ್ ವಿಮರ್ಶಕರ ಪರಿಚಯ: ತುಮಕೂರು ಜಿಲ್ಲೆಯವರಾದ ಕವಿ, ಕಥೆಗಾರ, ವಿಮರ್ಶಕ, ಬಿದಲೋಟಿ ರಂಗನಾಥ ವೃತ್ತಿಯಿಂದ ವಕೀಲರು.ಅವರು ಮಾಡುವ ಕೆಲಸಕ್ಕೂ ಸಾಹಿತ್ಯಕ್ಕೂ ಅಜಗಜಾಂತರವಾದರೂ ಸಾಹಿತ್ಯವೆಂದರೆ ಅವರು, ಅವರೆಂದರೆ ಸಾಹಿತ್ಯ ಎನ್ನುವಷ್ಟು ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಇವರು ಬಿ ರಂ ಎಂದೇ ಹೆಸರಾದವರು.ಅವರ ಪ್ರಕಟಿತ ಸಂಕಲನಗಳು ಮಣ್ಣಿಗೆ ಬಿದ್ದ ಹೂಗಳು ,ಬದುಕು ಸೂಜಿ ಮತ್ತು ನೂಲುತಾಲ್ಲೋಕು ರಾಜ್ಯೋತ್ಸವ ಪ್ರಶಸ್ತಿ,ಸಂಕ್ರಮಣ ಕಾವ್ಯ ಬಹುಮಾನ ಬಂದಿವೆ.ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಇವರ ಕವಿತೆ ಕಥೆ ವಿಮರ್ಶೆಗಳು

ಪುಸ್ತಕ ವಿಮರ್ಶೆ Read Post »

ಇತರೆ

ವಿಶೇಷ

ಕನ್ನಡ ಬರಹಗಾರ ಮತ್ತು ಜಾಲತಾಣಗಳು.  ಡಿ.ಎಸ್.ರಾಮಸ್ವಾಮಿ         ಕನ್ನಡಕ್ಕೂ ಮತ್ತು ಅದರ ಸಾಹಿತ್ಯ ಚರಿತ್ರೆಗೂ ಶತಮಾನಗಳ ಇತಿಹಾಸವೇ ಇದೆ. ಮೌಖಿಕ ಪರಂಪರೆಯಿಂದ ಹಿಡಿದು ಇವತ್ತು ನಾವು ನೀವೆಲ್ಲ ಬಳಸುತ್ತಿರುವ ಸಾಮಾಜಿಕ ಜಾಲತಾಣಗಳವರೆಗೂ ಅದರ ವಿಸ್ತರತೆ ಇದೆ. ಇಂಗ್ಲಿಷಿಗೆ ತರ್ಜುಮೆಯಾಗದ ಏಕೈಕ ಕಾರಣಕ್ಕೆ ಶ್ರೇಷ್ಠ ಸಾಹಿತ್ಯ ಕೃತಿಗಳಾಗಿದ್ದೂ ವಿಶ್ವ ಮನ್ನಣೆ ಪಡೆಯುವ ಹಲವಾರು ಬಹುಮಾನಗಳಿಂದ ಕನ್ನಡದ ಲೇಖಕರು ವಂಚಿತರಾಗಿರುವುದೂ ಮತ್ತು ಇಂಗ್ಲಿಷಿಗೆ ಅನುವಾದಗೊಂಡ ಕಾರಣಕ್ಕೇ ಸಾಮಾನ್ಯ ಲೇಖಕರೂ ವಿಶ್ವ ವ್ಯಾಪೀ ಪ್ರಚಾರ ಪಡೆದುದೂ ಇದೆ.      ಅಂದರೆ ಕನ್ನಡ ನೆಲದ ಅಸ್ಮಿತೆ ಲೋಕ ಖ್ಯಾತವಾಗಲು ಬಳಸಬಹುದಾದ ಹಲವು ಏರುಮಣೆಗಳನ್ನು ಬಳಸುವ ಚಾಕಚಕ್ಯತೆ ಇದ್ದವರು ಮುನ್ನೆಲೆಗೆ ಬಂದಿದ್ದಾರೆ ಹಾಗೇ ಆಯಾ ಕಾಲದ ಮಾಧ್ಯಮಗಳನ್ನು ಬಳಸಿಕೊಳ್ಳದ ಜಾಣ್ಮೆ ಇಲ್ಲದಿದ್ದವರು ಅವಕಾಶ ವಂಚಿತರಾಗಿದ್ದಾರೆ. ಇದು ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದೊಟ್ಟಿಗೆ ಸಂಪರ್ಕವಿರಿಸಿಕೊಂಡಿರುವ ಎಲ್ಲರ ಅನುಭವವೂ ಹೌದು. ಸಣ್ಣ ಹಳ್ಳಿಯೊಂದರಲ್ಲಿ ತನ್ನ ಪಾಡಿಗೆ ತಾನು ಸ್ವಾದಿಷ್ಠವೂ ರಸಭರಿತವೂ ಆದ ಆಹಾರವನ್ನು ತಯಾರು ಮಾಡುವ ಬಾಣಸಿಗ ಸ್ಟಾರ್ ಹೋಟೆಲಿನ ಛೆಫ್ ತರಹ ಪ್ರಸಿದ್ಧನಾಗುವುದೇ ಇಲ್ಲ! ಏಕೆಂದರೆ ಛೆಫ್ ಗೆ ಇರುವ ಅವಕಾಶ ಮತ್ತು ಅವಕಾಶವಾದಿತನ ಹಳ್ಳಿಯ ಬಾಣಸಿಗನಿಗೆ ದಕ್ಕುವುದಿಲ್ಲ. ವರ್ತಮಾನದ ಸಾಹಿತ್ಯ ಸಂದರ್ಭವೂ ಇದಕ್ಕಿಂತ ಹೆಚ್ಚೇನೂ ವ್ಯತ್ಯಾಸದಲ್ಲಿ ಇಲ್ಲ. ತನ್ನ ಪಾಡಿಗೆ ತಾನು ಒಳ್ಳೆಯ ಓದು ಮತ್ತು ಬರಹದಲ್ಲಿ ಸುಖ ಕಂಡಂತೆ ಇರುವ ಅದೆಷ್ಟೋ ಬರಹಗಾರರು ಎಲೆ ಮರೆಯ ಕಾಯಂತೆ ಇದ್ದರೆ ಒಂದಷ್ಟು ಚಾಕಚಕ್ಯತೆ ಮತ್ತು ಲೋಕನುಭವದಿಂದ ಸತ್ಯವನ್ನು ಅರಿತವರು ಯಾರನ್ನು ಯಾವಾಗ ಮತ್ತು ಹೇಗೆ ಹಿಡಿದರೆ ತಾವು ಸಲ್ಲಬಹುದು ಖ್ಯಾತರಾಗಬಹುದು ಎಂಬ ಅಂದಾಜಿದ್ದವರೇ ಇವತ್ತು ವೇದಿಕೆಗಳಲ್ಲಿ ಮಿಂಚುತ್ತಿದ್ದಾರೆ. ಅಂಥವರೇ ತಮ್ಮದೇ ಗುಂಪುಗಳನ್ನು ಕ್ಷಮಿಸಿ ಸಮಾನ ಮನಸ್ಕರನ್ನು ಒಂದೆಡೆ ಸೇರಿಸಿ ಸಾಹಿತ್ಯ ಸಾಂಸ್ಕೃತಿಕ ಲೋಕದ ನಿಯಂತ್ರಣಕ್ಕೆ ಕಟಿಬದ್ಧರಾಗಿರುತ್ತಾರೆ. ಆದರೂ ಖುಷಿಯೆಂದರೆ ಈ ಎಲ್ಲ ಗುಂಪು ಗದ್ದಲ ಮತ್ತು ಗೋಜುಗಳಾಚೆಯೂ ಅತ್ಯುತ್ತಮ ಎನ್ನಬಹುದಾದ ಹಲವು ಸಂಕಲನಗಳು ಬರುತ್ತಿವೆ ಮತ್ತು ಘೋಷಿತ ವಲಯಕ್ಕೂ ಅಚ್ಚರಿ ಮತ್ತು ಗಾಬರಿಗಳನ್ನು ಹುಟ್ಟಿಸುತ್ತಲೂ ಇವೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇಣುಕು ಹಾಕದ ಬರಹಗಾರರು ಇಲ್ಲವೇ ಇಲ್ಲ ಎಂದು ಧೈರ್ಯವಾಗಿ ಹೇಳಬಹುದು. ಅಂಡ್ರಾಯ್ಡ್ ಫೋನು ಮತ್ತು ಅಂತರ್ಜಾಲ ಸುಲಭಕ್ಕೆ ಸಿಗುತ್ತಿರುವ ಕಾಲದಲ್ಲಿ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮತ್ತು ಭಾಗವಹಿಸುವಿಕೆ ಪ್ರತಿಷ್ಠೆಯಾಗಿಯೂ ಬದಲಾಗುತ್ತಿದೆ. ಫೋನಿನ ಡಾಟ ಬಟನ್ ಒತ್ತಿದ ತಕ್ಷಣವೇ ಓತ ಪ್ರೋತ ಬಂದೆರಗುವ ಹೆಚ್ಚಿನ ಸಂದೇಶಗಳು ಓದದೇ ಫಾರ್ವರ್ಡ್ ಆದವೇ ಆಗಿರುತ್ತವೆ. ಓದುವ ಮುನ್ನವೇ ಲೈಕ್ ಕೊಡುವ ಇಮೋಜಿಯನ್ನೋ ಚಿತ್ರವನ್ನೋ ಪ್ರತಿಕ್ರಿಯೆಯಾಗಿ ಹರಿಯಬಿಡುವುದು ತೀರ ಸುಲಭದ ಕೆಲಸವಾಗಿ ಬಿಟ್ಟಿದೆ. ಇಂಥ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳು ಸಾಹಿತ್ಯದ ಬೆಳವಣಿಗೆಗೆ ಪೂರಕವೋ ಮಾರಕವೋ ಎಂದು ಚಿಂತಿಸುವುದು ಪ್ರೌಢಶಾಲೆಯ ಚರ್ಚಾ ಸ್ಪರ್ದೆಯ ವಿಷಯವಾಗಬಹುದೇ ವಿನಾ ಅದರಾಚೆಗೆ ಅದರ ವ್ಯಾಪ್ತಿ ಇಲ್ಲ. ಏಕೆಂದರೆ ಈ ಜಾಲತಾಣಗಳ ಭೇಟಿ ಇವತ್ತು ಚಟವಾಗಿ ಬದಲಾಗಿದೆಯೇ ವಿನಾ ಅದು ರಸಾನುಭವದ ಕೊಡು ಕೊಳ್ಳುವಿಕೆಯ ವೇದಿಕೆಯಾಗಿ ಉಳಿದಿಲ್ಲ. ಜೊತೆಗೆ ಈ ಜಾಲತಾಣಗಳು ಸಾಮಾಜಿಕ ಆರ್ಥಿಕ ರಾಜಕೀಯ ವಲಯಗಳ ಸುಳ್ಳು ವದಂತಿಗಳ ಹಂಚುವಿಕೆಗೆ ಮತ್ತು ವ್ಯಕ್ತಿ ಹಾಗು ಪಂಥದ ವಿರುದ್ಧದ ವ್ಯವಸ್ಥಿತ ಸಂಚಾಗಿ ಬಳಕೆಯಾಗುತ್ತಿರುವುದನ್ನೂ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲವಾಗಿದೆ.    ಆದರೂ ಅಪರೂಪಕ್ಕೆಂಬಂತೆ ಒಂದೆರಡು ವಾಟ್ಸ್ ಅಪ್ ಗುಂಪುಗಳು ಒಳ್ಳೆಯ ಊಟ ಉಪಾಹಾರಗಳ ತಯಾರಿಕೆ ಮತ್ತು ಪ್ರದರ್ಶನಗಳಿಗೆ ವೇದಿಕೆ ಕಲ್ಪಿಸಿದಂತೆಯೇ ಕತೆ, ಕವಿತೆಗಳ ಪ್ರಕಟಣೆಗೆ ವಿಮರ್ಶೆಗೆ ಪರಸ್ಪರರ ಭೇಟಿ ಮಾತುಕತೆಗೆ ನೆರವಾಗುತ್ತಿವೆ. ಆದರೆ ಇವುಗಳ ಸಂಖ್ಯೆ ತೀರ ಕಡಿಮೆ. ಜಾತಿ,ಕೆಲಸ,ನಂಬಿಕೆಯ ತಳಹದಿಯ ಮೇಲೇ ರಚಿತವಾಗುವ ಜಾಲತಾಣಗಳು ಹೆಚ್ಚೇನನ್ನೂ ಸೃಜಿಸಲಾರವು.   ನಿಜಕ್ಕೂ ಹೇಳಬಹುದೆಂದರೆ ಸಾಮಾಜಿಕ ಜಾಲತಾಣ ಒಂದು ಬಗೆಯ ಸಂತೆ ಇದ್ದಂತೆ. ಇಲ್ಲಿ ಎಲ್ಲರಿಗೂ ಬೇಕಾದ ವಿವಿಧ ಬಗೆಯ ಸಾಮಾನು ಸರಂಜಾಮು ಮಾರಾಟಕ್ಕೆ ಇದೆ. ತನಗೆ ಬೇಕಾದ್ದನ್ನು ಬೇಕಾದವರು ಅರಸಿ ಹೋಗಿ ಖರೀದಿಸುವಂತೆ ತನ್ನಿಷ್ಟದ ಸಾಹಿತ್ಯದ ಪ್ರಕಾರಕ್ಕೆ ಚಂದಾದಾರನಾಗುವುದು ಚಂದಾ ನೀಡುವುದು ಅಥವ ಚಂದವಾಗಿ ಎದ್ದು ಹೊರ ನಡೆಯುವುದು ಆಯಾಯ ವ್ಯಕ್ತಿಯ ಬೌದ್ಧಿಕ ಮಾನಸಿಕ ಮತ್ತು ಸಾಮಾಜಿಕ ನಿಲುವು ಮತ್ತು ಒಲವುಗಳ ವಿಷಯವಾಗಿದೆಯೇ ವಿನಾ ಅದೇ ಸಾಹಿತ್ಯ ಜಗತ್ತಿನ ಹೆಬ್ಬಾಗಿಲಾಗಿಲ್ಲ ಎನ್ನುವುದು ನನ್ನ ನಿಲುವು. ಡಿ.ಎಸ್.ರಾಮಸ್ವಾಮಿ. ಲೇಖಕರ ಪರಿಚಯ: ಭಾರತೀಯ ಜೀವವಿಮಾ ನಿಗಮದಲ್ಲಿ ಆಡಳಿತಾಧಿಕಾರಿಯಾಗಿರುವ ಇವರು ಮೂಲತ: ಕವಿಯಾಗಿದ್ದು,ಇವರ ಉಳಿದ ಪ್ರತಿಮೆಗಳು ಕವನಸಂಕಲನಕ್ಕೆ 2006ರ ಮುದ್ದಣ ಕಾವ್ಯ ಪ್ರಶಸ್ತಿ ಬಂದಿರುತ್ತದೆ.

ವಿಶೇಷ Read Post »

ಕಥಾಗುಚ್ಛ

ಕಥಾಗುಚ್ಛ

ಮುಡಿಯೇರಿದ ಹೂವು! ಸಂತೇಬೆನ್ನೂರು ಫೈಜ್ನಾಟ್ರಾಜ್ ಹುಡ್ಗಿ ಮನೆ ಪಕ್ಕಾನೇ ಇದ್ ಬಿಟ್ರೆ ಪ್ರೀತಿ ಹುಟ್ ಬಿಡುತ್ತಾ ? ಹುಡುಗೀರೂ ಥಕ್ ಅಂತ ತೆಕ್ಕೆಗೆ ಬಿದ್ ಬಿಡ್ತಾರಾ ? ಅದೆಲ್ಲಾ ನಮ್ಮಂಥಾ ಹುಚ್ ಹುಡುಗರ ಬೆಚ್ ಕಲ್ಪನೆಗಳು ! ಈಗ ಈ ರೇಷ್ಮಾ ನಮ್ಮ ಪಕ್ಕದ್ಮನೇಲೇ ಇರೋದು ; ಆಕೆ ಬಂದು ಸರಿ ಸುಮಾರು ವರ್ಷ ಆಗ್ತಾ ಬಂತು. ತಲೆ ಮೇಲಿನ ದಾವಣಿ ಸರೀಲಿಲ್ಲ. ತಲೆ ಎತ್ತಿ‍ ಯಾರನ್ನೂ ನೋಡ್ಲಿಲ್ಲ. ತಾನು, ತನ್ನ ಕೆಲ್ಸ ಅಂತ ಸದಾ ಮೌನದ ಮೂಟೆಯಾಗ ಇರತಿದ್ಲು !           ನಾನೇ ಅಲ್ವೆ ಹಳೇ ಸಿನೆಮಾದ ವಹಿದಾ ರೆಹಮಾನ್, ಜೀನತ್ ಅಮಾನ್, ಮಮ್ತಾಜ್ ಮುಂತಾದವರ ಹೋಲಿಕೆ ಕೊಟ್-ಕೊಟ್ ಮಾತಿಗಿಳ್ಸಿದ್ದು, ಅದೂ ಹ್ಞಾಂಜಿ, ಹ್ಞೂಂಜಿ, ಬೋಲೋಜಿ ಅಷ್ಟೆ! ಪಾಪ ಅವಳೇನ್ ಇಲ್ಲೇ ಪರ್ಮನೆಂಟಾಗಿ ಇರ್ತಾಳೆಯೇ? ಈಗ್ಲೋ ಆಗ್ಲೋ ತನ್ನೂರಿಗೆ ಹೋಗ್ತಾಳೆ; ಚಿಕ್ಕಮ್ಮ ಕಾಯಿಲೆ ಅಂತ ಸಹಾಯಕ್ಕೆ ಬಂದಿರೋದಲ್ವೆ ? ಬಂದಾಗ್ಲಿಂದಾಕೆಗೆ ಕಣ್ಣಲ್ಲಿ ಕಣ್ ಕೂಡ್ಸಕ್ ಪ್ರಯತ್ನ ಪಟ್ಟು ಪಟ್ಟು ಕಣ್ ಕರಗಿದ್ವೇ ಹೊರತು. ರೇಷ್ಮಾಳ ನೆರಳೂ ನನ್ ಮೇಲೆ ಬಿದ್ದಿರಲಿಲ್ಲ. ನನ್ನ ಈ ಪ್ರೀತಿ ಪ್ರಯತ್ನ ಪಾಪ ಅವಳಿಗೂ ಗೊತ್ತಿತ್ತು; ನಾನು ಹಳೇ ಹಾಡು ಹೇಳೋದು, ಹಿಂದಿ ರಾಜ್‌ಕುಮಾರ್‌ನ ಶಾಯರಿ ಬಿಸಾಕೋದು, ನಮ್ ತಂಗಿ ಮೇಲೆ ಹಾಕಿ ಮಾತಾಡೋದು ಎಲ್ಲಾ ತಿಳಿದೂ  ಮೂಕಿ ಹಾಗೆ ಇದ್ದ ಕಾರಣ ತಿಳೀತಾನೆ ಇರ್ಲಿಲ್ಲ. ಮೊನ್ನೆ ಅವಳಾಗಿ ಜುಮ್ಮಾ ನಮಾಜ್ ವೇಳೆ ಯಾರೂ ಇಲ್ಲದ ಸಮಯಕ್ಕೆ ಮಾತಾಡಲು ಹಿತ್ತಲ ಹುಣಸೇಮರದ ಎದುರಿನ ಗೋರಂಟಿ ಬಳ್ಳಿ ನೆರಳಿಗೆ ಕರೆಯುವರೆಗೂ !           ಎದೆಯಲ್ಲಿ ಹೂವರಳಿ ಘಂಗುಡ್ತಿದ್ವು; ಮನಸ್ಸು ಪಾರಿವಾಳವಾಗಿ ಹೋಗಿತ್ತು. ನಾ ಹೋದ ಅರ್ಧ ನಿಮಿಷಕ್ಕೆ ರೇಷ್ಮಾ ರಕ್ತ ಬಣ್ಣದ ನೈಟಿಯಲ್ಲಿ ಬಂದೇ ಬಿಟ್ಟಳು. ನನಗೋ ನೀರು ಎಲ್ಲೆಂದರಲ್ಲಿ ಒಸರುತ್ತಿತ್ತು. ‘ನೋಡಿ ಸಾಬ್ ನಾನು ನೀವಂದ್ ಕೊಂಡಂತೆ ಇಲ್ಲ. ನಿಮ್ಮ ಪ್ರೀತಿ, ಪ್ರೇಮ ಎಲ್ಲಾ ನಿಮ್ ತಂಗಿಯಿಂದ ಮಾಲೂಮ್ ಹೈ, ಮಗರ್ ನಾ ಅದಕ್ಕೆ ಅರ್ಹಳಲ್ಲ;  ನನ್ನಿಂದ ನೀವೇನೂ ಬಯಸದಿದ್ದರೆ ಒಳ್ಳೆಯದು -ಎಂದು ಮೌನವಾದಳು ಕಣ್ಣಲ್ಲಿ ನೀರು ಕವಿತೆ ಹಾಡುತ್ತಿದ್ದವು! ಅಲ್ಲಾ ರೇಷ್ಮಾ ಮೈ ತುಮ್‌ಸೆ ಪ್ಯಾರ್ ಕರ್ತಾ ಹುಂ -ಶಾದಿ ಕೆ ಲಿಯೇ ಭಿ ತಯಾರ್ .. .. ನಾ ನಿವೇದಿಸಿಕೊಂಡೆ.           ಆಕೆ ದುಃಖಿತಳಾಗಿ ನುಡಿದಳು; ನೋಡಿ ಸಾಬ್, ನಾನೂ ಜೀವನದ ಬಗ್ಗೆ ಬಹುತ್ ಬಹೂತ್ ಆಸೆ ಇಟ್ಕೊಂಡಿದ್ದವಳು. ಬಾಳನ್ನು ಬೆಲ್ಲದಂತೆ ಸವಿಯ ಬೇಕೆಂದುಕೊಂಡಿದ್ದವಳು, ಈ ನಸೀಬ್ ಹಾಳಾದ್ದು! ನನ್ನ ಒಳ್ಳೆತನಾನೇ ನನ್ನ ಹೀಗ್ ಮಾಡ್ತು ನಾ ಯಾರ್ಯಾರನ್ನ ಗೆಳೆಯರು ಅಂತ ನಮ್ಮೂರಲ್ಲಿ ನಂಬ್ಕೊಂಡಿದ್ನೊ ಅವ್ರೆ ಪಿಕ್ನಿಕ್ ನೆಪದಲ್ಲಿ ಕರೆದುಕೊಂಡು ಹೋಗಿ ಸಾಮೂಹಿಕ ಬಲತ್ಕ್ಕಾರದಿ ನರಬಾದ್ ಮಾಡಿದ್ರು. ಅದರ ನೋವು ಮರೆಯೋಕೆ ಇಲ್ಲಿಗೆ ಚಿಕ್ಕಮ್ಮನ ನೆಪಕ್ಕೆ ಬಂದೆ. ನಿಮ್ಮ ಪ್ರಾಮಾಣಿಕ ಪ್ರೀತಿ, ನಡೆ-ನುಡಿ ವರ್ಷದಿಂದ ನೋಡಿ, ಕೇಳಿ ಗೊತ್ತಿದೆ, ನಿಮ್ಮಂಥವರಿಗೆ ನಾ ತಕ್ಕವಳಲ್ಲ ಅಂತಲೇ ನಾ ಪ್ರೀತಿಯ ಹಾತ್ ನೀಡಲಿಲ್ಲ. ಈಗ ಹೇಳಿ ಈಗ್ಲೂ ಮೊದಲಿನಂತೆ ಪ್ರೀತಿ, ಪ್ರೇಮದ ಮಾತಾಡ್ತೀರಾ ? ಮದ್ವೆ ಯಾಗ್ತೀರಾ? ಎಂದಳು ರೇಷ್ಮಾ ಒಂದೇ ಉಸಿರಿಗೆ !           ನಾನು ದಿಜ್ಞೂಡನಾಗಿದ್ದೆ! ಎದೆಲಿ ಏನೋ ಇರಿದಂಗ್ ಅನುಭವ ! ರೇಷ್ಮಾ ಕಣ್ಣು ಹೊಳೆಯಾಗಿದ್ದವು ; ನೀರು ಧಾರಾಕಾರ ಸುರೀತಿದ್ವು ! ನಾ ಎರಡೂವರೆ ನಿಮಿಷದ ದೀರ್ಘ ಮೌನ ಚಿಂತನೆಯ ನಂತರ ದೊಡ್ ಉಸಿರ್ ಬಿಟ್ಟು ಹೇಳಿದೆ -’ರೇಷ್ಮಾ ಮೈ ತುಂಸೆ ಹಿ ಶಾದಿಕರೂಂಗ ..”           ಆಕೆ ಈಗ ತಲೆ ಎತ್ತಿ ಕಣ್ಕೂಡಿಸಿ, ಕಣ್ಣರಳಿಸಿ ನೋಡಿದಳು: ನೀರಲ್ ತೇಲೋ ನಕ್ಷತ್ರದಂತೆ ಕಣ್ ಕಂಡವು ! ಮಾತಾಡದೆ ಆಕೆ ಬರೀ ನನ್ನೇ, ನನ್ನ ಬೆಕ್ಕಿನ ಕಣ್‌ಗಳನ್ನೆ ನೋಡ್ತಾ ನಿಂತ್ ಬಿಟ್ಲು ! ನಾ ನಕ್ಕೆ…. ಅವಳು ನಗಲಿಲ್ಲ ಅಡಿಯ ಹೂ ಮುಡಿಗೇರಿತ್ತು ! ಸಂತೇಬೆನ್ನೂರು ಫೈಜ್ನಾಟ್ರಾಜ್ ಕಥೆಗಾರರ  ಪರಿಚಯ: ಕನ್ನಡ ಅಧ್ಯಾಪಕರು,.ನಾಡಿನೆಲ್ಲಾ ಪತ್ರಿಕೆ ಗಳಲ್ಲಿ ಕತೆ ಕವನ,ಪ್ರಬಂಧ, ಲೇಖನ, ಹನಿಗವನ ಪ್ರಕಟಗೊಂಡಿವೆ.ಈಗಾಗಲೇ ಎರಡು ಕವನ ಸಂಕಲನ,ಒಂದು ಮಕ್ಕಳ ಕಥಾ ಸಂಕಲನ,ಒಂದು ಮಕ್ಕಳ ಕವನ ಸಂಕಲನ,ಒಂದು ಕಥಾ ಸಂಕಲನ ಒಟ್ಟು ಐದು ಕೃತಿ ಬಿಡುಗಡೆ ಆಗಿವೆ,ಸ್ನೇಹ ಶ್ರೀ ಪ್ರಶಸ್ತಿ,ಸಂಚಯ ಕಾವ್ಯ ಪುರಸ್ಕಾರಹಾಮಾನಾ ಕಥಾ ಪ್ರಶಸ್ತಿಪಡೆದಿದ್ದಾರೆ…

ಕಥಾಗುಚ್ಛ Read Post »

ಕಥಾಗುಚ್ಛ

ಕಥಾಗುಚ್ಛ

ಟೊಮ್ಯಾಟೊ ಕೆಚಪ್ ಡಾ.ಅಜಿತ್ ಹರೀಶಿ ಹಲೋ ಸನಾ, ನಾನ್ಯಾರು ಗೊತ್ತಾಯ್ತಾ? ಒಂದು ವಾರದಿಂದ ವಾಟ್ಸ್ ಆಪ್ ಮಾಡದೆ, ನಿನ್ನ ಸಂದೇಶಕ್ಕೆ ಉತ್ತರ ಕೊಡದೆ ಸುಮ್ಮನಿದ್ದನಲ್ಲ… ಜಯ್.. ನಾನು ಜಯ್ ಅಲ್ಲ. ನನ್ನ ಹೆಸರು ಸುಹಾನ್. ನಾನೀಗ ಮೇಲ್ ಮಾಡಿದ್ದು ನಿನಗೆ ಸತ್ಯ ಹೇಳಲಿಕ್ಕೆ… ಸನಾ, ಅಡಿಗೇನೆ ಬರದ ನೀನು, ಮೆಟ್ರಿಮೋನಿಯಲ್ ನ ಪ್ರೊಫೈಲ್ ನಲ್ಲಿ ನನಗೆ ಒಪ್ಪಿಗೆ ಆದಾಗ್ಯೂ, ವಧು ಪರೀಕ್ಷೆ ಮಾಡೋದಿಕ್ಕೆ ಅಂತ ನಾನೊಂದು ವೇಷ ಹಾಕಿದೆ. ಜಯ್, ಕಂಪ್ಯೂಟರ್ ಇಂಜಿನಿಯರ್ ಅಂತ. ನಿಂಗೆ ಟೊಮ್ಯಾಟೊ ಕೆಚಪ್ ಇಷ್ಟ ಅಲ್ವ.. ಅದೂ ಟಿ.ಕೆ ರೆಸ್ಟೋ ದು. ಹೌದು ಕಣೇ.. ಆ ರೆಸ್ಟೋರೆಂಟ್‌ ಮಾಲಿಕ ನಾನು. ನಿಂಗೊತ್ತಾ, ಕೆಚಪ್ ಪಕ್ವ ಟೊಮ್ಯಾಟೊಗಳ ಹೂರಣ. ಪಕ್ವತೆಯ ಪರೀಕ್ಷೆಗೊಳಪಟ್ಟ ಆಯ್ದ ಹಣ್ಣುಗಳಿಂದ ತಯಾರಾಗೋ ಗೊಜ್ಜು. ತಾಜಾತನದ ಖುಷಿಗೆ, ಹೋಟೆಲಿನಲ್ಲೇ ಸಿದ್ಧ ಪಡಿಸುವ ಕಲ್ಪನೆಯೊಂದಿಗೆ, ಹೋಟೆಲ್  ಹೆಸರನ್ನೂ ಅದೇ ಇಟ್ಟು ನಾನು ಉದ್ಯಮ ಪ್ರಾರಂಭಿಸಿದ್ದು. ನಮ್ಮಪ್ಪ ಗೌತಮ್ ಗೋರ್ ನನ್ನ ಬೆನ್ನಿಗೆ ನಿಂತರು. ನಮಗೆ ಕೆಲವು ಪ್ರಾರಂಭಿಕ ಸವಾಲುಗಳಲ್ಲಿ ಉತ್ತಮ ಚೆಫ್ ಅಗತ್ಯವೂ ಒಂದಾಗಿತ್ತು. ಟಿ.ಕೆ ಹೋಟೆಲ್ ನ ಅಡುಗೆಮನೆಗೆ ವಿಶಿಷ್ಟ ರುಚಿಗಳ ಸಮಮಿಳಿತಗಳ ಹೆಗ್ಗಳಿಕೆ ಇರುವ ಚೆಫ್ ಸಮೀರ್ ವಿಜೇತನ ಪ್ರವೇಶವಾದ ನಂತರ, ಹೋಟೆಲ್ ನ ಮೆನುಕಾರ್ಡ್ ಗೆ ಒಂದು ಹೊಸ ಆಯಾಮ ದೊರೆತು, ಉದ್ಯಮ ಬೆಳೆಯತೊಡಗಿತು. ಕೆಚಪ್ ನ ರುಚಿಯ ಚಟ ಹತ್ತಿದವರ ತಿನ್ನುವ ಖಾಯಂ ಅಡ್ಡಾ ಅನ್ನುವಂತಾಯಿತು. ಟಿ.ಕೆ. ಹೋಟೆಲ್ ಹೋಗಿ ರೆಸ್ಟೋರೆಂಟ್ ಆಗಿ, ಕಟ್ಟಡವೂ ಸ್ಥಾನಪಲ್ಲಟ, ನವೀಕರಣಗಳೊಂದಿಗೆ ಬೆಳೆಯುವ ಹೊತ್ತಿಗೆ ಚೆಫ್ ಸಮೀರನ ರುಚಿ ಟಿ.ಕೆ. ರೆಸ್ಟೋಗೆ ಏಕತನದ ಗುರುತಾಯಿತು. ವ್ಯಾಪಾರದ ಕುರುಹಾಯಿತು. ದಿವಸವೂ ಕೆಚಪ್ ಗಾಗಿಯೇ ಅಡುಗೆಮನೆಯ ಒಂದು ಭಾಗ ಮತ್ತು ತಂಡ ಬೇಕು ಅನ್ನುವಷ್ಟು. ದುಡ್ಡುಳ್ಳ ದೊಡ್ಡಜನರ ಖಾಸಗೀ ಸಮಾರಂಭಗಳಿಗೂ, ಭೋಜನಾತಿಥ್ಯದ ಗುತ್ತಿಗೆ ಸಿಗುವಷ್ಟು ಬೆಳೆದು ಕೆಚಪ್ ಒಂದು ನಿತ್ಯ ತಯಾರಾಗಲೇ ಬೇಕಾಯಿತು. ಹೀಗೆ ನಮ್ಮ ಉದ್ಯೋಗ ಉತ್ತುಂಗದಲ್ಲಿದ್ದಾಗಲೇ ನಮ್ಮಪ್ಪ ಅಮ್ಮ ನನಗೆ ಮದುವೆ ಮಾಡ್ಕೋ ಅಂತ ಒತ್ತಾಯ ಹೇರಿದ್ರು. ಬರೀ ಉದ್ಯೋಗದಲ್ಲೇ ಮುಳುಗಿ ಹೋಗಿದ್ದ ನನಗೆ ನಿನ್ನ ಮೆಟ್ರಿಮೋನಿಯಲ್ ಪ್ರಪೋಸಲ್ ಬಂದ ನಂತರ ಸ್ವಲ್ಪ ಮನಸ್ಸು ಸಂಸಾರದ ಕಡೆ ವಾಲಿದೆ. ನಿನಗೆ ನೆನಪಿದೆಯಾ‌… ಕಳೆದ ಭಾನುವಾರ ಅತೀ ಸಂದಣಿಯಿರುವ ಸಂಜೆಯಲ್ಲಿ ಫಾಮಿಲಿ ರೂಮಿನ ಎರಡು ಜನರ ಖಾಲಿ ಟೇಬಲ್ ನ್ನು ಅರಸಿ ನಾನು ಮತ್ತು ನೀನು ಟಿ.ಕೆ.ರೆಸ್ಟೋದಲ್ಲಿ ಕುಳಿತಿದ್ದು. ಅದು ನಮ್ಮ ಮೂರನೆಯ ಭೇಟಿ ಆಗಿತ್ತಲ್ವ. ಮಾಟ್ರಿಮೊನಿಯಲ್ ನ ವಧು -ವರರ ಪಟ್ಟಿಗಳಲ್ಲಿ  ನಾವೇ ಆಯ್ದಕೊಂಡು, ಅಂತೂ ಮಾತನಾಡುವುದು ಅಂತ ಆಗಿ, ಮೊದಲನೇ ಭೇಟಿಯು ಎರಡನೆಯದಕ್ಕೂ, ಮುಂದೆ ಮೂರನೆಯದಕ್ಕೂ ಸಾಗಿ, ಸಾಕಷ್ಟು ಮೆಸೆಂಜರ್, ವಾಟ್ಸಪ್ ಸಂದೇಶಗಳು ಹರಟೆಗೆ ತಿರುಗಿ, ಅಪರಿಚತೆಯು ಪರಿಚಿತ ಅನ್ನುವಷ್ಟಾಗಿ ಇಂದು ಸಲುಗೆ ಎನ್ನುವ ಮಟ್ಟಿಗೆ ಒಡನಾಟ ಬೆಳೆದಿದ್ದು.  ಈ ಸಂದೇಶ, ಪುರಾಣಗಳಲ್ಲಿ ಒಂದೂ ಹೇಳಿಕೊಳ್ಳುವಂತಹ, ನಾನಿಲ್ಲಿ ನಮೂದಿಸಬೇಕಾದಂತಹದ್ದೇನೂ ಇಲ್ಲವಾಗಿ ನನಗೆ ಅದೊಂದು ಶೀತಲ ಮಾತುಕತೆ ಎಂದಷ್ಟೇ ಹೇಳಬಲ್ಲೆ. ಆದರೆ, ಸನಾ… ನನಗೆ ನಿನ್ನ ಆಂತರ್ಯ ಅರಿಯಬೇಕಾಗಿತ್ತು. ನೀನು ಚೆಂದದಿಂದ ನನ್ನ ಮನಸ್ಸು ಗೆದ್ದಿದ್ದರೂ…. ಆ ಮೂಲೆಯ ಟೇಬಲ್ ಆಯ್ಕೆ ನಿನ್ನ ಇಚ್ಛೆಗೆ ವಿರುದ್ಧವಾಗಿ ನಡೆದದ್ದು. ನಿನಗೆ ಮೂಲೆ ಜಾಗ ಇಷ್ಟವಿಲ್ಲ ಅಂತ ಆವತ್ತೇ ಗೊತ್ತಾಗಿದ್ದು ನನಗೆ. ಅಷ್ಟು ಕಿಕ್ಕಿರಿದ ಹೋಟೆಲ್ ನಲ್ಲಿ ಮತ್ತೆಲ್ಲೂ ಅವಕಾಶವಿರದ ಕಾರಣ ಅನಿವಾರ್ಯವಾಗಿ ಕುಳಿತೆ ಅಲ್ವಾ.. ಇಲ್ಲಿಂದಲೇ ಆರಂಭ.. ನಿನ್ನ ಆಂತರಿಕ ಕಿರಿಕಿರಿ, ನನ್ಮುಂದೆ ಹೇಳಿಯೇ ಬಿಟ್ಟೆ ಅದನ್ನೂ… ನಾನೇನೋ ನಿನ್ಜೊತೆ ಕೂತಿದ್ದೆ. ಆದರೆ ಆವತ್ತು ಅಡುಗೆಮನೆಯ ಕೆಚಪ್ ವಿಭಾಗದಲ್ಲಿ ಒಂದು ಸಂಗತಿ ನಡೆದಿತ್ತು ಗೊತ್ತಾ… ಸಿದ್ಧ ಕೆಚಪ್ ನ ಸಂಗ್ರಹವು ಕೊನೆಯಾಗುವ ಹಂತದಲ್ಲಿ… ಆದರೆ ನೈಸರ್ಗಿಕವಾಗಿ ಕಳಿತ ಹಣ್ಣುಗಳ ಸರಬರಾಜು, ಅಂದು ಆಕಸ್ಮಿಕವಾಗಿ ನಮ್ಮ ರೆಸ್ಟೋರೆಂಟ್ ಗೆ ಇಲ್ಲದಂತಾಗಿ, ಟೇಬಲ್ ನ ಆರ್ಡರ್ ಗಳಿಗೆ ಯಥೇಚ್ಛವಾಗಿ ಸೇವೆಯಾಗುತ್ತಿದ್ದ ಕೆಚಪ್ ಗೆ ಕತ್ತರಿ ಬಿತ್ತು. ಮತ್ತೊಮ್ಮೆ ಕೇಳಿದವರಿಗೆ ಮಾತ್ರ ಕೆಚಪ್ ಅನ್ನು ಬಡಿಸುವ ಆದೇಶ ನಾನೇ ಕೊಟ್ಟಿದ್ದೆ. ನಿನ್ನನ್ನ ಪಾರಲೆಲ್ ರೋಡಿನಿಂದ ಪಿಕ್ ಅಪ್ ಮಾಡಿದ್ನಲ್ಲ, ಅಲ್ಲಿಗೆ ಬರೋ ಮುಂಚೇನೆ ಎಲ್ಲ ವೇಟರ್ ಗಳಿಗೂ, ಚೆಫ್ ಗೂ ಹೀಗೆ ಹೇಳಿದ್ದೆ. ನೀನು ಬಂದು ಕುಳಿತಾಗ, ನಾನು ಎಲ್ಲರಂತೆ ಗಿರಾಕಿ ಅನ್ನೋ ಹಾಗೆ ನಡೆಸಿಕೊಳ್ಳಲು ಮೊದಲೇ ಎಲ್ಲರಿಗೂ ಹೇಳಿಯೇ ಇದ್ದೆ. ಅದಾಗಲೇ ನಾನು, ಮೆನು ಕಾರ್ಡ್ ಒಮ್ಮೆ ಕಣ್ಣಾಡಿಸಿ ಪನೀರ್ ಮಂಚೂರಿಯನ್ ತಿನ್ನುವುದು, ನಿನ್ನನ್ನು ಕೇಳಿ, ನಿನಗೂ ಇಷ್ಟವಾದರೆ ಆರ್ಡರ್ ‌ಕೊಡುವುದೆಂದು… ಅಂದು ಕೊಂಡಿದ್ದೆ. ಆದರೆ ನೀನು ಅಮೇರಿಕನ್ ಕ್ರಿಸ್ಪಿ ನೂಡಲ್ಸ್ ಗೆ ಆರ್ಡರ್ ಕೂಡ ಕೊಟ್ಟಾಗಿತ್ತು… ನೀನೇ ಮೊದಲು ಹೇಳಿದ್ದರಿಂದ, ಈಗ ವಿಧಿಗಳೇನೂ ಇಲ್ಲವಾಗಿ ನನಗಾಗಿ ಆರ್ಡರ್ ಇತ್ತೆ. ಟೇಬಲ್ ನ ಆಯ್ಕೆ, ಇಬ್ಬರ ಬೇರೆ ಬೇರೆ ರುಚಿಗಳು ನನ್ನ ಗಮನಕ್ಕೆ ಬಂದಿತ್ತು ಆವತ್ತೇ.  ಒಂದು ತಾಸು ಕುಳಿತು, ಎದ್ದು ಹೋಗಬಹುದಾದ ಜಾಗ,  ಚಾಟ್ ವಿಷಯದಲ್ಲೇ ವೈರುಧ್ಯ. ಇನ್ನೂ ಏನೇನು ಭೇದವಿದೆಯೋ ಎಂಬ ಕುತೂಹಲ ಥಟ್ಟನೆ ಕೆರಳಿತ್ತು  ನನಗೆ. ಸನಾ, ಅದಾಗಲೇ ನೀನು ಸೆಲ್ಫೀ ಮೋಡ್ ಅನ್ನೇ ಕನ್ನಡಿಯಾಗಿಸಿ ಮೋರೆಯನ್ನು ನೋಡಿ, ಓರೆ ಕೋರೆಗಳಲ್ಲಿ ಮುಳುಗಿದ್ದೆ. ಇನ್ನು ಖಾಲಿ ಟೇಬಲ್, ತಿನ್ನಲು ಏನೂ ಇಲ್ಲ. ಸುಮ್ಮನೆ ಕೂರುವ ಬದಲು ಮಾತಿಗೆಳೆಯಲಾ? ಹೀಗೇ ಇಂದಿನ ಭೇಟಿ, ಹಿಂದಿನ ಎರಡೂ ಭೇಟಿಗಳೂ ನೀನೇ ಮೊದಲು ಕೇಳಿಯೇ ಆಗಿದ್ದು. ನಾನು ಒಪ್ಪಿ ಬಂದಿದ್ದೆ ಅಷ್ಟೇ. ದುಡ್ಡು ಮಾತ್ರ ನಾನೇ ಕೊಟ್ಟಿದ್ದೆ. ಗಂಡಸಿನ ಸಾರ್ವಕಾಲಿಕ ಕರ್ತವ್ಯ. ಹೆಣ್ಣಿಗಾಗಿ ತೆರು, ಹೆಣ್ಣಿನ ಭಾರ ಹೊರು, ಹೆಣ್ಣಿನಿಂದಲೇ ಶುರು, ಅಂತೆಲ್ಲಾ ನಾನೇ ಮನಸ್ಸಲ್ಲೇ ಅಳೆದು ತೆಗೆದು, ಕೊನೆಗೆ ನಾನು ಪ್ರಶ್ನೆ ಕೇಳಿದ್ದೆ ‘ನೀನು ತಿಂಗಳಲ್ಲಿ ಎಷ್ಟು ಖರ್ಚು ‌ಮಾಡ್ತೀಯಾ?’ ಅಂತ. ನಿನ್ನ ನಿರ್ವಹಣೆ ನನ್ನಿಂದ ಸಾಧ್ಯವೇ ಎಂಬ ವ್ಯಾವಹಾರಿಕ ಮತ್ತು ಅತ್ಯಂತ ಪ್ರಾಯೋಗಿಕವಾಗಿ ನಿನ್ನ ಬಗ್ಗೆ ಅರಿಯಲು. ಈ ಪ್ರಶ್ನೆ, ಹಿಂದೆಂದೂ ನಾನು ನಿನಗೆ ಕೇಳಿದ್ದಿಲ್ಲ.  ಉತ್ತರ ಸಿದ್ಧವೂ‌ ಇರಲಿಲ್ಲ ನಿನ್ನಲ್ಲಿ ಅಲ್ವಾ? ಯಾವತ್ತಾದರೂ ಖರ್ಚುವೆಚ್ಚಗಳ ದಾಖಲಿಸಿಟ್ಟಿರ್ತೀಯಾ ಅಂತ‌? ನೀನೆಷ್ಟು ಗಲಿಬಿಲಿಯಾಗಿದ್ದೆ ಗೊತ್ತಾ? ನನಗೆ ಇನ್ನೊಂದು ಅಸಮತೆ ಗುರುತು ಹತ್ತಿತು.  ‘ಇರಲಿ‌ ಬಿಡು, ನೀನೆಷ್ಟು ದುಬಾರಿ ನನಗೆ ಅಂತ ತಿಳಿಯಲು ಕೇಳಿದೆ’ ಅಂದು ಮಾತು ಬದಲಿಸಿದ್ದೆ.  ಆದರೆ ಸನಾ, ನಿನ್ನ ಉತ್ತರ ನನಗೆ ಸ್ವಲ್ಪ ಜಾಸ್ತಿನೇ ಶಾಕ್ ಕೊಟ್ಟಿತು.  ‘ನಂದೇ ದುಡ್ಡು. ನಾನೇ ಖರ್ಚು‌ ಮಾಡೋದು. ನಿನಗ್ಯಾಕೆ ಲೆಕ್ಕ ಕೊಡ್ಬೇಕು?  ನಾನು ಇಂಡಿಪೆಂಡೆಂಟ್‌’ ಅಂದೆ. ಮತ್ತೆ ಮೊಬೈಲ್ ನ ಜೊತೆ ಚಕ್ಕಂದ ಆಡ್ತಾ ಕುಳಿತೆ. ನೀನು ಇಷ್ಟು ಹೇಳಿದ್ರಿಂದ ನನಗೆ ಇನ್ನೊಂದು ಅಂಶ ಕಂಡುಕೊಂಡಂತೆ ಆಯಿತು. ಇಂಡಿಪೆಂಡೆಂಟ್‌ ‌ಆಗಿ ಬದುಕೋದಾದ್ರೆ, ನಮ್ಮಿಚ್ಛೆಯಂತೆಯೇ ನಡ್ಕೊಳೋದಾದ್ರೆ ಮದುವೆ ಯಾಕಾಗ್ಬೇಕು? ಒಂಚೂರು ಒಟ್ಟೊಟ್ಟಿಗೆ ಹೊಂದಿಕೊಂಡು ಹೋಗ್ಲಿಕ್ಕೆ ಮದುವೆ‌ ಅಲ್ವ? ಒಂಟಿ ಬದುಕಬಹುದು.. ಹಕ್ಕಿ ಹಾಗೇ ಸ್ವತಂತ್ರವಾಗಿ. ಆದರೆ ಜೊತೆಗೆ ಇನ್ನೊಂದು ಜೀವ ಒಟ್ಟಿಗೇ ಹೆಜ್ಜೆ ಇಡೋದಿದ್ರೆ ಜೀವನದ ದಾರಿ ಬೇಸರವಾಗದಂತೆ ಸವೆದು ಹೋಗುತ್ತೆ ಅಲ್ವಾ?  ಅಷ್ಟು ಹೊತ್ತಿಗೆ ನಮ್ಮಿಬ್ಬರ ಮುಂದೂ ತಿಂಡಿಯು ಬಂದು, ವೇಟರ್ ಬಡಿಸಿ ಹೋದ. ನೂಡಲ್ಸ್ ಕ್ರಿಸ್ಪಿ ಇದ್ದರೂ ಅದನ್ನು ಅದ್ದಿ ತೆಗೆದು ಬಾಯಿಗಿಡುವ ಮುನ್ನ ನೀನು ಚಿಲ್ಲಿ ಸಾಸ್ ಮತ್ತು ಟೊಮ್ಯಾಟೋ ಕೆಚಪ ಅನ್ನು ನಿನ್ನದೇ ಆದ ಹದದಲ್ಲಿ ಬೆರೆಸಿ ತಿನ್ನುವವಳು ಅಂತ‌ ಆವತ್ತು ಗೊತ್ತಾಯ್ತು. ಕೆಚಪ್ ಪುಟ್ಟದೇ ಕಪ್ ನಲ್ಲಿ ಮಿತಿಯಲ್ಲಿ ತಂದಿಟ್ಟಿದ್ದು, ನಿನಗೆ ಇನ್ನೊಂದಿಷ್ಟು ಬೇಕು ಅನಿಸ್ತು. ಸಾಸ್ ಗಿಂತ ಕೆಚಪ್ ಅನ್ನು ಜಾಸ್ತಿ‌ ಬೆರೆಸಿಕೊಳ್ಳುವ ನೀನು, ನಿನ್ನ ಪ್ಲೇಟ್ ಅನ್ನು ನಿನ್ನ ರುಚಿಗೆ ತಕ್ಕಂತೆ ಪರಿವರ್ತಿಸುವ ಕ್ರಿಯೆಯಲ್ಲಿ ತಲ್ಲೀನಳಾಗಿದ್ದೆ. ಇದನ್ನೆಲ್ಲಾ ಗಮನಿಸ್ತಾ, ಅದಾಗಲೇ ಪನೀರ್ ಮಂಚೂರಿಯನ್ ರುಚಿಯ ಹಿಡಿದು ಆಸ್ವಾದದಲ್ಲಿ ತೊಡಗಿದ್ದೆ ನಾನು. ಸರಳ ಲೆಕ್ಕದ ನನಗೆ ಎಲ್ಲವೂ ಹದದಲ್ಲೇ‌ ಇದೆ ಎನಿಸಿತ್ತು. ನೀನು ಕೆಚಪ್ ನ ಆರ್ಡರ್ ಮಾಡಲು ವೇಟರ್ ನ್ನು ಕೂಗಿ, ಆದೇಶವಿತ್ತೆ. ಅವನು‌ ಹೋದವನು ಮತ್ತೆ ಬರಲಿಲ್ಲ.. ಯಾಕೆ ಬರಲಿಲ್ಲ ನಿಂಗೆನಾದರೂ ಗೊತ್ತಾಯ್ತಾ? ಇದೇ ಸಮಯ, ಸನಾ …. ಅಡಗೆಮನೆ ಒಳಗೆ ಏನು ಆಗ್ತಾ ಇತ್ತು ಗೊತ್ತಾ? ಗಳಿತ ಕೆಂಪು ಹಣ್ಣುಗಳ ಹಿಸುಕಿದರೆ‌ ಮಾತ್ರ ಕೆಚಪ್ ಸಿದ್ಧವಾಗೋದು ಕಣೇ. ಕೆಚಪ್ ಗೆ ಅಚ್ಚ ಕೆಂಪು ಹೊಳಪಿನ ಬಣ್ಣ ಬರಬೇಕಾದರೆ, ಕಳಿತ ಹಣ್ಣುಗಳನ್ನು ಆಯ್ದು,  ಹವೆಯಲ್ಲಿ ಬಣ್ಣ ಬದಲಾಗದಂತೆ, ಸಿಪ್ಪೆ ಮಾತ್ರ ಬೇರೆಯಾಗುವಂತೆ ಬೇಯಿಸಿಕೊಳ್ಳುವುದು ಕ್ರಮ. ಹವೆಯೊಳಗೇ ಬೇಯುವ ಕ್ರಿಯೆಯಲ್ಲಿ ಸಿಪ್ಪೆ ಬೇರೆ, ಗುಳ ಬೇರೆಯಾಗಿ, ಹಣ್ಣಿಗೆ ಹಣ್ಣೇ ಹೊರಗಿನ ತೆಳುವಾದ ಆದರೆ ಪ್ಲಾಸ್ಟಿಕ್ ನಂತಹ ಪದರದಿಂದ ಬೇರ್ಪಡುವುದು. ಇದು ಹಿಸುಕುವ ಕ್ರಿಯೆಗೆ ಪೂರ್ವ ತಯಾರಿ‌. ಆವತ್ತು ಕೆಚಪ್ ಗೆ ತಕ್ಕ ಹಣ್ಣುಗಳು ಹೋಲ್ ಸೇಲ್ ಸಪ್ಲೈ ಮಾಡುತ್ತಿದ್ದ ತರಕಾರಿ ಮಾರುಕಟ್ಟೆಯಿಂದ ಆಗದೆ, ಅರೆಬರೆ ಹಂಪು, ಹಣ್ಣಾಗುತ್ತಿರುವ ಟೊಮ್ಯಾಟೊ ಗಳ ರಾಶಿ ಬಂದು ಬಿದ್ದಿತ್ತು. ಇಂತಹ ಅಪಕ್ವ ಟೊಮ್ಯಾಟೊ ಬೇಯಿಸಿದರೂ ಸರಿಯಾಗಿ ಸಿಪ್ಪೆಯಿಂದ ಬೇರ್ಪಡದು, ಕೆಚಪ್ ಗೆ ಬಣ್ಣವೂ ಬರದು. ಸಿದ್ಧಗೊಳಿಸಬೇಕಾಗಿದ್ದ ಪ್ರಮಾಣದಲ್ಲಿ ಗಣನೀಯ ಕಡಿತ ಮಾಡುವಂತಾಯಿತು. ರಾಶಿಯಿಂದ ಆಯ್ದು, ಮುಂದಿನ ಕ್ರಿಯೆಗೆ ತೊಡಗಿದ ತಂಡಕ್ಕೆ ಕೆಚಪ್ ನ ಬಣ್ಣ, ತಿಳಿಯಾಗಿದ್ದು ಅವರ ಮನಸ್ಸಿನಲ್ಲಿ ಇರಿಸುಮುರಿಸು ತಂದಿತ್ತು. ಬಣ್ಣಕ್ಕೆಂದು ಬೇರೆ ಯಾವುದನ್ನು ಸೇರಿಸಿದರೂ‌ ರುಚಿ ಹೋಗುವುದು. ಚೆಫ್ ಸಮೀರನ ತಲೆಯಲ್ಲಿ ಇದೇ ಸಮಯದಲ್ಲಿ ಬರೀ ಯೋಚನೆಗಳು. ಒಂದನ್ನೂ ಪ್ರಯೋಗಕ್ಕಾಗಿ ಕಾರ್ಯಗತಗೊಳಿಸಲು ಆಗುತ್ತಿಲ್ಲ. ತಂಡಕ್ಕೆ ಮಾಡಬೇಕಾದ ಬದಲೀ ಕೆಲಸ ಹೇಳಲಾಗುತ್ತಿಲ್ಲ. ಆಗಲೇ ನಾನು ಎದ್ದು ಹೋಗಿದ್ದು. ನಿನಗೆ ನೆನಪಿದೆಯಾ? ಫ್ರೆಷ್ ಆಗಲು ಹೋಗಿಬರುವ ನೆಪದಲ್ಲಿ, ನಮ್ಮ ಕಿಚನ್ ಗೆ ಹೋಗಿ ಬಂದೆ.  ಗಳಿತ ಹುಣಸೇಹಣ್ಣಿನ ಕಲ್ಕವನ್ನು ರುಚಿಗೆ ಮತ್ತು ಬಣ್ಣ ಬದಲಾವಣೆಗೆ ಬೆರೆಸಿ ಉಪ್ಪು, ಸಕ್ಕರೆ, ವಿನೆಗರ್ ನ ಹದವನ್ನು ರುಚಿ ನೋಡುತ್ತಾ ಬೆರೆಸಲು ಖುದ್ದು ಜವಾಬ್ದಾರಿ ಹೊರಲು, ಸಮೀರ್ ಗೆ ಹೇಳಿ ಬಂದೆ. ಕೆಚಪ್ ನ ಸಂಗ್ರಹ ಮುಗಿದೇ ಹೋಯಿತು ಅನ್ನುವಾಗ ನೀನು ಇಟ್ಟಿದ್ದ‌ ಆರ್ಡರ್ ‌ಟೇಬಲ್ ಗೆ ತಲುಪದೇ, ನಿನಗೆ ಅಸಮಾಧಾ‌ನ ಹೆಚ್ಚಾಗಿ, ಟೇಬಲ್ ನ ಸಪ್ಲೈರ್ ಗೆ, ಹೋಟೆಲ್ ನ ಸಿಬ್ಬಂದಿಗೆ ಹರಿಹಾಯ್ದು, ರಂಪಾಟವಾಗಿ, ನೆನಪಿದೆ ಅಲ್ವಾ…. ನಿನ್ನನ್ನು ಸಮಾಧಾನ ಮಾಡಲು ಸಾಧ್ಯವಿಲ್ಲ ಎನಿಸಿತ್ತು ಆ ಹೊತ್ತಿಗೆ.‌ ಮೊದಲು ಹೊರಗೆ ಹೋಗಬೇಕೆನ್ನುವಷ್ಟು‌ ವಿಚಿತ್ರ ಹಿಂಸೆ ನನಗೆ. ಕೋಪ, ಅಸಹನೆ, ಆಹಾರದ ಬಗ್ಗೆ, ಬೇರೆಯವರ ಬಗ್ಗೆ ಅಗೌರವ…. ನೀನು ನಡೆದುಕೊಂಡ ರೀತಿ ಯಾವುದನ್ನೂ ಅನುಭವಿಸಲಾಗದೆ ನನ್ನ ಮನಸ್ಸಿಗೇ ರೇಜಿಗೆ ಹುಟ್ಟಿತ್ತು ಆ ಸಂಜೆಯ ಬಗ್ಗೆ, ನಿನ್ನ ವರ್ತನೆಯ ಬಗ್ಗೆ. ಹೋಟೆಲ್ ನ ಆಂತರಿಕ ವಿಷಯವನ್ನು ಖುದ್ದು ಮ್ಯಾನೇಜರ್ ಬಂದು ನಿನ್ನಲ್ಲಿ ವಿನಯವಾಗಿ, ವಾಸ್ತವವಾಗಿ ನಡೆದದ್ದನ್ನು ವಿವರಿಸದ ಮೇಲೂ ನಿನ್ನ ಮನಸ್ಸಿಗೆ ಇಳಿಯಲೇ ಇಲ್ಲ.. ಗಯ್ಯಾಳಿ ಹಾಗಿತ್ತು… ನಿನ್ನ ವರ್ತನೆ ನನ್ನನ್ನು ಇನ್ನಷ್ಟು ದೂರ ನೂಕಿತ್ತು.. ಈ ಮಾಟ್ರಿಮೋನಿಯಲ್ ಮುಲಾಕಾತ್ ಬಗ್ಗೆ. ಒಂದೂ ಮಾತನಾಡದೆ, ಸಿಬ್ಬಂದಿಗಳಿಗೆ, ಕ್ಷಮಿಸಿ ಅಂದಷ್ಟೇ ಹೇಳಿ ಹೊರಡುವವನಿದ್ದೆ…. ಆದರೆ,..

ಕಥಾಗುಚ್ಛ Read Post »

ನಿಮ್ಮೊಂದಿಗೆ

ಅನುವಾದ

ಮೂರು ಅನುವಾದಿತ ಗಜಲುಗಳು. ಉತ್ತಮ ಯಲಿಗಾರ ಗಜಲ್-ಒಂದು ಹೆಜ್ಜೆ ಶಬ್ದವೊಂದು ಕೇಳಿಸಿದರೆ ಅನಿಸುವದು ನೀನೆಂದು ನೆರಳೊಂದು ಬಳಿ ಸುಳಿದರೆ ಅನಿಸುವದು ನೀನೆಂದು ಹೂದೋಟದಲಿ ರೆಂಬೆಯೊಂದನು ಮುಟ್ಟಲು ನಾಚಿ ನಲಿದಾಡಿದರೆ ಅನಿಸುವದು ನೀನೆಂದು ಚಂದನದಿ ಸುವಾಸಿತ ಮದಭರಿತ ಗಾಳಿಯು ಅನಂದದಿ ಮೈಸೋಕಲು ಅನಿಸುವದು ನೀನೆಂದು ತಾರೆಗಳ ಮಿನುಗುವ ಹೊದಿಕೆ ಹೊದ್ದುಕೊಂಡು ನದಿಯೊಂದು ಹರಿದಾಡಿದರೆ ಅನಿಸುವದು ನೀನೆಂದು ಸರಿರಾತ್ರಿಯಲಿ ಬಂದು ಒಂದು ಹೊನ್ನ ರಶ್ಮಿ ನನ್ನೊಂದಿಗೆ ಉರುಳಾಡಿದರೆ ಅನಿಸುವದು ನೀನೆಂದು. ಮೂಲ: ಜಾನ್ ನಿಸ್ಸಾರ್ ಅಖತರ್ (ಉರ್ದು) ============================== ಗಜಲ್ -2 ದ್ವೇಷವೇ ಇರಲಿ, ಮನ ನೋಯಿಸಲಾದರೂ ಬಾ ಬಾ ಮತ್ತೆ ನನ್ನ ತೊರೆದು ಹೋಗಲಾದರೂ ಬಾ  ಇರಲಿ ಚೂರು ಭರವಸೆ ನನ್ನ ಹೆಮ್ಮೆಯ ಒಲವ ಮೇಲೆ ನನ್ನ ಮನವೊಲಿಸಲು ನೀ ಒಮ್ಮೆಯಾದರೂ ಬಾ ಮೊದಲಿನಂತಿಲ್ಲ ನಿಜ ನನ್ನ ನಿನ್ನ ಬಾಂಧವ್ಯ ಜಗದ ನಿಯಮವನ್ನೇ ಪಾಲಿಸಲಾದರೂ ಬಾ ವರ್ಷಗಳಿಂದ ವಂಚಿತ ನಾನು ಅಳುವಿನ ಆಹ್ಲಾದದಿಂದ ನನ್ನನು ಈ ಹೊತ್ತು ಅಳಿಸಲಾದರೂ ಬಾ ಯಾರ್ಯಾರಿಗೆ ವಿವರಿಸಲಿ ನೀ ಹೋದ ಕಾರಣ ನನ್ನ ಮೇಲೆ ಕೋಪವಿರಲು ಜಗಕಾಗಿಯಾದರೂ ಬಾ ಈ ಹುಚ್ಚು ಮನಸಿಗಿದೆ ಇನ್ನೂ ನಿನ್ನಿಂದ ಆಕಾಂಕ್ಷೆ ಆ ಅಂತಿಮ ಆಶಾದೀಪವನ್ನು ನಂದಿಸಲಾದರೂ ಬಾ. ಮೂಲ: ಅಹ್ಮದ್ ಫರಾಜ್ (ಉರ್ದು) ========================================= ಗಜಲ್ -3 ನೋವುಗಳೆಲ್ಲ ಹೀಗೆ ಒಳಗೊಳಗೇ ಚುಚ್ಚುವದಿಲ್ಲ ಹೃದಯದ ನೋವು ಇದು,  ವ್ಯರ್ಥವಾಗುವದಿಲ್ಲ ಯಾವ ಸ್ನೇಹಿತನೂ ಇಲ್ಲ, ರಹಸ್ಯ ಹಂಚಿಕೊಂಡವನಿಲ್ಲ ಹೃದಯವೊಂದಿತ್ತು ನನ್ನದು, ಅದೂ ದಯೆ ತೋರುವದಿಲ್ಲ ನನ್ನ ಆತ್ಮದ ನಿಜಾಂಶ , ನನ್ನ ಅಶ್ರುಗಳನು ಕೇಳು ನನ್ನ ತೋರಿಕೆಯ ನಗು,  ನನ್ನ ನಿಜಾನುವಾದವಲ್ಲ ಆ ಕೂದಲನ್ನು ಕೂಗು , ಆ ನಯನವನ್ನು ಕೋರು ತುಂಬಾ ಬಿಸಿಲು ಇಲ್ಲಿ, ಯಾವ ಸೂರು ಇಲ್ಲ ಈ ಕಲ್ಲುಗಳ ಮೇಲೆ ನಡೆದು ಬರುವದಾದರೆ ಹೊರಡು ನನ್ನ ಮನೆಯ ದಾರಿಯಲ್ಲಿ ಅಕಾಶಗಂಗೆ ಇಲ್ಲ ಮೂಲ : ಮುಸ್ತಫಾ ಜೈದಿ ================================== ಕವಿ ಪರಿಚಯ: ಉತ್ತಮ ಯಲಿಗಾರ ಬೆಳಗಾವಿಯಲ್ಲಿ ಹುಟ್ಟಿ ಅಲ್ಲೇ ಎಂಜಿನಿಯರಿಂಗ್ ವರೆಗೆ ಶಿಕ್ಷಣ ಪಡೆದು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿ BSNL ನಲ್ಲಿ ಉಪಮಂಡಲ ಅಭಿಯಾತರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಕನ್ನಡ, ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಹವ್ಯಾಸಿಯಾಗಿ ಕೆಲಸ ಮಾಡುತ್ತಿದ್ದು ಮೂರೂ ಭಾಷೆಯಲ್ಲಿ ಕವನ ಸಂಕಲನ ಹೊರತರುವ ಕನಸು ಹೊತ್ತಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕವನ ಹಂಚಿಕೊಳ್ಳುವ ಇವರಿಗೆ ಉರ್ದುವಿನ ಪ್ರಸಿದ್ಧ ಗಜಲ್ ಗಳನ್ನು ಕನ್ನಡಕ್ಕೆ ತರುವ ಹಂಬಲ. ವಿವಿಧ ವೇದಿಕೆಗಳಲ್ಲಿ (ಕಹಳೆ, ಯುವರಕೋಟ್, ರಾಸ್ಯಮ್ ಇತ್ಯಾದಿ) ವಿಭಿನ್ನ ಶೈಲಿಯಲ್ಲಿ ಕವನವಾಚನ ಮಾಡುವದು ಇವರ ಹವ್ಯಾಸ.

ಅನುವಾದ Read Post »

ನಿಮ್ಮೊಂದಿಗೆ

ಅನುವಾದ

ಹಿಂದಿ ಮೂಲ:    ಅದ್ನಾನ್ ಕಾಫೀಲ್ ದರ್ವೇಶ್ ಪರಿಚಯ: ಕವಿ ಅದ್ನಾನ್ ಕಾಫೀಲ್ ದರ್ವೇಶ್ ಉತ್ತರ ಪ್ರದೇಶದ ಬಾಲಿಯಾದವರು. ಪ್ರಸ್ತುತ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಸಂಶೋಧಕರು. ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಬರೆಯುತ್ತಾರೆ. ಹಿಂದಿಯ ಪ್ರಖ್ಯಾತ ಪತ್ರಿಕೆಗಳಲ್ಲಿ ಅವರ ಕವನಗಳು ಬೆಳಕು ಕಂಡಿವೆ. ಅವರು ಅನುವಾದದಲ್ಲಿಯೂ ತೊಡಗಿಕೊಂಡಿದ್ದಾರೆ. ಅವರ ಕಾವ್ಯಕ್ಕೆ ಈಗಾಗಲೇ ಮೂರು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಕನ್ನಡಕ್ಕೆ: ಕಮಲಾಕರ ಕಡವೆ ಪರಿಚಯ: ಕಮಲಾಕರ ಕಡವೆ, ಮೂಲತಃ ಉತ್ತರಕನ್ನಡದ ಶಿರಸಿಯ ಕಡವೆ ಗ್ರಾಮದವರು, ಈಗ ಮಹಾರಾಷ್ಟ್ರದ ಅಹಮದನಗರದಲ್ಲಿ ಕಾಲೇಜು ಪ್ರಾಧ್ಯಾಪಕರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ ಭಾಷೆಗಳಲ್ಲಿ ಬರವಣಿಗೆ, ಅನುವಾದ ನಡೆಸುವ ಅವರು ಇವರೆಗೆ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ: ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017). ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ (ಕುವೆಂಪು ಭಾಷಾ ಭಾರತಿ, 2018). ಕನ್ನಡದ ಸಮಕಾಲೀನ ಕಾವ್ಯದ ಇಂಗ್ಲೀಷ ಅನುವಾದಗಳ ಪುಸ್ತಕವೊಂದರ ತಯಾರಿಯಲ್ಲಿ ಇದ್ದಾರೆ. ಸಾವಿಗೀಡಾದ ಕವಿ ದುಃಖ ಯಾವಾಗ ನನ್ನ ಅಂತರಂಗದ ಸಂದುಗೊಂದುಗೊಳಗಿಂದೆಲ್ಲ ಜಿನುಗುತ್ತಿತ್ತೋ ನಾನು ಹುಚ್ಚನಂತೆ ತಲೆ ಚಚ್ಚಿಕೊಳ್ಳುತ್ತಿದ್ದೆ ಕನಸಿನಲ್ಲೂ ಎಲ್ಲೆಲ್ಲೋ ಓಡುತ್ತಿದ್ದೆ ಆಗಾಗ ಅಲ್ಲಿಲ್ಲಿ ಬೀಳುತ್ತಿದ್ದೆ ಕಗ್ಗತ್ತಲ ದ್ವೀಪದ ಕಿನಾರೆಯಲ್ಲಿ ನಿಂತು ನರಳುತ್ತಿದ್ದೆ ಗೊತ್ತಿತ್ತು ನನಗೆ ನನ್ನ ಈ ನರಕದ ಅಂತ ನಿನಗೆ ತಿಳಿಯ ಬೇಕಿರುವುದು ಇದು ಮಾತ್ರ: ನಾನೊಬ್ಬ ಕವಿ ಮತ್ತು ಕಾವ್ಯದ ಅನಂತ ಏಕಾಂತದಲ್ಲಿ ಸಾವಿಗೀಡಾಗಿದ್ದೆ ========================= ನಗುತಿರುವೆ ನಾನೀಗ ದೂರು ಇನಿತಿಲ್ಲ ನೋಡು ನಿನ್ನ ಮೇಲೆ ಕೋಪವೂ ಇನಿತಿಲ್ಲ ನಿಷ್ಠೆಯೂ ಇಲ್ಲ, ನೇಮವೂ ಉಳಿದಿಲ್ಲ ಈಗ ನಿನ್ನಿಂದಾಗಿ ಶಿಕ್ಷೆಯೂ ಇನಿತಿಲ್ಲ ಅವಳು ನನ್ನ ಜೊತೆಗೀಗ ಇಲ್ಲವೇನೋ ಹೌದು ನಿಜವೆಂದರೆ ನಮ್ಮ ನಡುವೆ ದೂರವೂ ಇನಿತಿಲ್ಲ ಸೊರಗಿ ಹೋದೆ ಉಸಿರೇ ನಿಂತಂತೆ ಅವಳ ಪವಾಡವೇ! ನನ್ನ ಚಲನೆಯೂ ಇನಿತಿಲ್ಲ ಎರಡೂ ಬದಿ ಶವವೊಂದು ಬಿದ್ದಿದೆ ಉಸಿರು ನಿಂತ ಗುರುತೂ ಇನಿತಿಲ್ಲ ತಲೆ ಚಚ್ಚಿ ಕೊಳುವ ದಿನಗಳು ಕಳೆದವು ದರವೇಶನಿಗೆ ದೇವದಯೆಯೂ ಇನಿತಿಲ್ಲ. ============================== ಕಮಲಾಕರ ಕಡವೆ

ಅನುವಾದ Read Post »

You cannot copy content of this page

Scroll to Top