ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಲಹರಿ

ಸಂಬಂಧಗಳ ಸಂಭ್ರಮ ದೀಪಾಜಿ ಪುಟ್ಟ ಪುಟ್ಟ ಸಂಭ್ರಮಗಳನ್ನು ಬದುಕಿನುದ್ದಕ್ಕೂ ಹಿಡಿದಿಟ್ಟುಕೊಳ್ಳುವುದು ತುಂಬ ಮುಖ್ಯ. ಹೀಗೆ ಹಿಡಿದಿಟ್ಟುಕೊಂಡ ಆ ಮಧುರ ಕ್ಷಣಗಳನ್ನ ಆಗಾಗ ಮೆಲಕು ಹಾಕುತ್ತ ಅಂತ ಸಂದರ್ಭಕ್ಕೆ ಸಾಕ್ಷಿಯಾದ ಸಂಬಂಧಿಗಳನ್ನು, ಸ್ನೇಹಬಳಗವನ್ನು ನೆನೆಯುತ್ತ, ಅವಕಾಶ ಸಿಕ್ಕಾಗ ಮತ್ತೆ ಮತ್ತೆ ಭೇಟಿ ಮಾಡುತ್ತ, ಕಡಿಮೆ‌ ವೆಚ್ಚದ ಕೂಟಗಳನ್ನ ಏರ್ಪಡಿಸುತ್ತ , ಸಂಬಂಧಗಳನ್ನ ಹಸಿರಾಗಿಟ್ಟುಕೊಳ್ಳುವ ಅನಿವಾರ್ಯತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ದಿನ ದಿನಕ್ಕೆ ಬದುಕು ನಾವು ಉಹಿಸಿದ್ದಕ್ಕಿಂತಲೂ ಹೆಚ್ಚು ದುರ್ಬರವಾಗುತ್ತ ನಡೆದಿದೆ. ಸಣ್ಣ ಪುಟ್ಟ ಮಾತುಗಳು ದೊಡ್ಡ ದೊಡ್ಡ ಸಂಬಂಧಗಳ ಕತ್ತು ಹಿಸುಕಿ ಕೊಂದು ಮತ್ತೆಂದೂ ಒಬ್ಬರಿಗೊಬ್ಬರು ಎದುರಾಬದುರು‌ ನಿಂತು ಅಕ್ಕರೆಯಿಂದ ಮಾತನಾಡಿಸದಂತೆ ಒಂದು ದೊಡ್ಡ ಅಡ್ಡ ಗೋಡೆಯನ್ನೆ ನಿರ್ಮಿಸುತ್ತಿವೆ. ಎದುರಿಗಿರುವವ ಕೂಡಿ ಆಡಿದವ, ಒಂದೇ ವೇದಿಕೆಯ ಮೇಲೆ ದನಿ ಕುಗ್ಗಿದಾಗ ತನ್ನ ದನಿ ಏರಿಸಿ ಹಾಡಿ ಅಂದದ ರಾಗ ಸಂಯೋಜಿಸಿದವ, ನಾಟಕದ ಡೈಲಾಗ್ ಮರೆತಾಗ “ಏಲವೋ ವೈರಿ ಮತ್ತಿನ್ನೆನೋ ಚಿಂತಿಸುತ್ತ ನಿಂತೆ!? ಹೇಳು ಹೇಳು ನಿನ್ನೊಳಗಿನ ಅಂತರಂಗದ ಮಾತು ಬಯಲು ಮಾಡು” ಎಂದು ನೂರಾರು ಮಂದಿಯ ಮುಂದೆ‌ ಬಾಯಿಪಾಠ ಮರೆತು ಹೋದನೆಂಬ ಗೊಂದಲ ಸೃಷ್ಟಿಯಾಗದಂತೆ ತನ್ನ ಪಾತ್ರದ ಜೊತೆ ನಿನ್ನ ಪಾತ್ರವನೂ ಎತ್ತಿ ಹಿಡಿದ ಗೆಳೆಯ, ಮುಟ್ಟಾದ ದಿನಗಳಲ್ಲಿ ನೀನು ಕ್ಲಾಸುಬಿಟ್ಟೆದ್ದು ಬಾರದೆ ಇದ್ದ ಫಜೀತಿ ಕಂಡು ತಾನು ನಿನ್ನೊಡನೆಯ ಉಳಿದುಕೊಂಡ ಗೆಳತಿ, ಓಡಲಾಗದೆ ಬಿದ್ದ ಅಣ್ಣನನ್ನು ಹಿಂದೆ ಬಂದು ಅವನ ಪಾಠಿಚೀಲದೊಂದಿಗೆ ನಿನ್ನ ಪಾಠಿಗಂಟನ್ನು ಮನೆತನಕ ಹೊತ್ತು ತಂದ ತಮ್ಮ, ನಿನ್ನೋದಿಗಾಗಿ ತನ್ನ ಓದು-ಬದುಕು ಎರಡನ್ನು ಮೊಟಕುಗೊಳಿಸಿ ಕುಳಿತಿರುವ ಅಕ್ಕ. ಗದ್ದದ‌ಮೇಲೆ ಗಡ್ಡಮೊಳಕೆ ಒಡೆಯುತ್ತಿದ್ದ ಕಾಲದಲ್ಲಿ ಪಕ್ಕಡಿಗೆ ತಿವಿದು ಮೊಟ್ಟಮೊದಲ ರೋಮಾಂಚನಕ್ಕೆ ನಾಂದಿಹಾಡಿದ ಗೆಳತಿ, ಹೀಗೆ ಅಂತ್ಯವೇ ಇರದ ಖುಷಿಗಳನ್ನ ಕೊಟ್ಟ ಸಂಬಂಧಗಳ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ.. ‌‌‌ ‌‌‌ ಅಪ್ಪ ಅಮ್ಮರಂತೂ ನಮ್ಮ ನಿಮ್ಮ ಚೋಟುದ್ದದ ಬದುಕು ಕಟ್ಟಿಕೊಡಲು ತಮ್ಮ ಬೆವರಿನೊಂದಿಗೆ ರಕ್ತವನ್ನು ಬಸಿದಿದ್ದಾರೆ. ಆದರೂ ಈ ಸ್ವಾವಲಂಬಿ ಬದುಕಿಗಾಗಿ ನಾನು ಅದೆಷ್ಟು ಕಷ್ಟಪಟ್ಟಿದ್ದೇನೆ ಗೊತ್ತಾ ಎಂಬ ಉದ್ಘಾರವಾಚಕ ಉಸುರುವಾಗ ಇವರೆಲ್ಲ ನೆನಪಾಗುವುದೆ ಇಲ್ಲ. ನಾವ್ಯಾರು ಆಕಾಶದಿಂದ ಉದುರಿ ಬಿದ್ದಿಲ್ಲ ಬದಲಾಗಿ ಹೊಸೆದು ಕೊಂಡ ಕರುಳ ಬಳ್ಳಿ ಕತ್ತರಸಿ ರಕ್ತ ಜೀನುಗದಂತೆ ಗಂಟಾಕಿಸಿಕೊಂಡು ಬಾಣಂತಿಕೊಣೆಯಿಂದ ಆಚೆ ಬಂದವರು. ಬೆಳೆಯುವಾಗಲು ಅಷ್ಟೆ ಅಲ್ಲೆಲ್ಲೊ ನದಿ ಆಚೆಯ ಜುಯ್ಯಗುಡುವ ಕಾಡಿನೊಳಗೆ ಒಬ್ಬೊಬ್ಬರೆ ಹಾಡಿಕೊಂಡು ಕುಣಿದುಕೊಂಡು ಬೆಳೆದವರಲ್ಲ.. ಒಂದೆ ಪೆನ್ಸಿಲ್ಲು, ಅದೆ ಕಂಪಾಸು, ಟಿವಿ ರಿಮೋಟು ಆಶಾ ಚಾಕ್ಲೆಟು, ಪಾಪಡಿ, ಇಂತವಕ್ಕೆಲ್ಲ ಜುಟ್ಹಿಡಿದು ಕಿತ್ತಾಡಿಕೊಂಡು ಕಡೆಗೆ ಅಮ್ಮನಿಂದಲೊ ಸೋದರತ್ತೆಯಿಂದಲೊ ಬಾಸುಂಡೆ ಬರುವಂತೆ ಬಡಿಸಿಕೊಂಡು ಬೆಳೆದವರು. ಬೆಳೆಬೆಳೆಯುತ್ತಲೆ ಬದುಕಿನ ಸಂಬಂಧದ ಕೊಂಡಿಗಳಿಗೆ ಜೋತು ಬಿದ್ದುಕೊಂಡು ಇರುವುದರಲ್ಲೆ ಹಂಚಿಊಣ್ಣುವುದ ಹತ್ತನೇತ್ತ ಬರುವುದರೊಳಗೆ‌ ಕಲಿತು ಇವತ್ತಿನ ಈ ಹೊತ್ತಿಗೆ ಮರೆತು ಕುಳಿತವರು. ‌‌ ಒಂದೊಂದು ಅಕ್ಷರ ಬರೆಯುವಾಗಲೂ‌ ಸಾವಿರಾರು ರೂಪಾಯಿಯ ಚೆಕ್ಕು,ಡ್ರಾಫ್ಟು, ನೆಫ್ಟು ಬರೆಯುವಾಗಲೂ ಆ ಅಕ್ಷರಗಳ ಹಿಂದೆ ಅವಿತು ಕುಳಿತ ಮೇಷ್ಟ್ರು ಗುರು ಶಿಕ್ಷ-ಕರು ಕಲಿಸಿದ ತತ್ವ ಆದರ್ಶಗಳನ್ನ ಅಲ್ಲೆ ಶಾಲೆಯ ಕಾಂಪೊಂಡಿಗೆ ಆನಿಸಿಬಂದವರು ನಾವು. ಅಂಕಿ ಅಕ್ಷರಗಳನ್ನಷ್ಟೆ ಬದುಕಿನುದ್ದಕ್ಕೂ ತಂದವರು ನಾವು. ಅಕ್ಷರ ತಿಡುವಾಗ ತಿಂದ ಏಟಿನ ರುಚಿಯ ಮರೆತು ನಮ್ಮ ಚೆಂದದ ಬದುಕಿಗಾಗಿ ಶ್ರಮಿಸಿದ ಎಲ್ಲಾ ಸಂಬಂಧಗಳನ್ನು ಎತ್ತಿ ಗಾಳಿಗೆ ತೂರಿ ಹಾಯಾಗಿ ಕುಳಿತವರು ನಾವು. ಆದರೂ ಯಾರಾದರು ಸಿಕ್ಕು, ಅಥವಾ ಫೊನಾಯಿಸಿ ಹೇಗಿದ್ದಿ? ಹೇಗಿದೆ ಬದುಕು ಎಲ್ಲ ಅರಾಮಾ..? ಎಂಬ ಶಬ್ಧಗಳನ್ನ ಕೇಳಿದೊಡನೆ ಮೈಮೇಲೆ ಹಲ್ಲಿ -ಚೋಳು-ಜಿರಳೆ ಬಿದ್ದವರಂತೆ ಬೆದರಿ.. “ಅಯ್ಯೋ ನಿನ್ನಷ್ಟು ಚೆನ್ನಾಗಿಲ್ಲ ಬಿಡಪ್ಪ ಎನೋ ಸಣ್ಣ ಸ್ಯಾಲರಿಲಿ ಬದುಕಿನ ಬಂಡಿ ಏಳಿತಿದಿನಿ, ನಿನ್ನ ತರ ಸೆಂಟ್ರಲ್ ಗವರ್ನಮೆಂಟ್ ಸ್ಯಾಲರಿ ಅಲ್ಲ, ನಿನ್ನ ತರ ಸಾಫ್ಟವೇರ್ ಎಂಜಿನೀರ್ ಅಲ್ಲ, ನಿನ್ಮ‌ ತರ ದೊಡ್ಡ ಜಮೀನ್ದಾರ ಅಲ್ಲ, ನಿನ್ನ ತರ ಬಿಸನಸ್ಮನ್ ಅಲ್ಲ ನಿನ್ನ ತರ ಯುಜಿಸಿ ಸ್ಕೇಲ್ ಇಲ್ಲ, ನಿನ್ನ ತರ ವರುಷಕ್ಕೇರಡು ವಿದೇಶ ಪ್ರಯಾಣಗಳಿಲ್ಲ.. ಹೀಗೆ ಇಲ್ಲದರ ಅಲ್ಲದರ ಪಟ್ಟಿಗಳೂ ಬೆಳೆಯುತ್ತಲೆ ಹೋಗುತ್ತವೆಯೆ ಹೊರತು ಎಲ್ಲಿದ್ದೆ ಎಲ್ಲಿಗೆ ಬಂದು ತಲುಪಿದೆ ಬದುಕಿನ ಆರಂಭದಲ್ಲಿ ಎಷ್ಟು ಬಂಧನಗಳಿದ್ದವು ಈಗ ಎಷ್ಟೆಲ್ಲ ಗೆಳೆಯ, ಸಹೋದ್ಯೋಗಿ ನೆರೆ ಹೊರೆ ಬೆಳೆದುಕೊಂಡಿದೆ ಎಂಬುದರ ಲೆಕ್ಕಕ್ಕೆ ಅಪ್ಪಿತಪ್ಪಿಯು ಹೋಗುವುದಿಲ್ಲ. ‌‌‌‌ ಒಂದೊಮ್ಮೆ ನಮ್ಮದೆ ಬದುಕಿನ ಇತಿಹಾಸದ ಪುಟಗಳನ್ನ ಮಗುಚಿಹಾಕಿದಾಗ ಸಿಗುವ ಸತ್ಯ ಈ ದಿನಕ್ಕಾಗಿ,‌ಈ ತಿಂಗಳು ಸಿಗುತ್ತಿರುವ ಆದಾಯಕ್ಕಾಗಿ, ಈ ದಿನ ಕಟ್ಟಿಕೊಂಡಿರುವ ಪುಟ್ಟ ಗೂಡಿಗಾಗಿ ಅದೆಷ್ಟು ವರ್ಷ ನಿದ್ದೆಗೆಟ್ಟು ಕನಸುಕಂಡಿದ್ದೇವೆ..!? ಕನಸು ಕೈಗೂಡಿದ ದಿನ ಇಂತದೊಂದು ಪುಟ್ಟ ಕನಸು ನನ್ನದಾಗಿತ್ತು ಎಂಬುದನ್ನ ಮರೆತು. ಯಾರದೋ ಬದುಕಿನ ಸಾಧ್ಯತೆಗಳನ್ನ ನೋಡಿ ನಮ್ಮದೇನು ಅಲ್ಲ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತೇವೆ. ಜೊತೆಗಿರುವ ಸಂಬಂಧಗಳಲ್ಲಿ ಹೊಂದಾಣಿಕೆ ಇಲ್ಲ ಅಥವಾ ಬೇಡವೊ..!? ಸಿಕ್ಕ ಅವಕಾಶಗಳಿಗಾಗಿ ಸಂತೃಪ್ತಿ ಇಲ್ಲ, ಇಡೇರಿದ ಕನಸುಗಳ ಕುರಿತು ನಿರಾಳತೆಯು ಇಲ್ಲ. ಮುಟ್ಟಿದ ಗುರಿಯ ಬಗ್ಗೆ ಹೆಮ್ಮೆ ಇಲ್ಲ. ಅರ್ಧ ಇಂಚು ಮುಂದಿರುವವನ ಕುರಿತು ಹೊಟ್ಟೆಕಿಚ್ಚಿನ ಹೊರತಾಗಿ ಮತ್ತೇನು ಸಾಧ್ಯವಿಲ್ಲದ ಮನಃಸ್ಥಿತಿಗೆ ಬಂದು ತಲುಪಿದ್ದೇವೆ. ‌‌‌ ‌‌‌‌ ಇದು ರೋಗಗ್ರಸ್ತ ಮನಃಸ್ಥಿತಿಯ ಲಕ್ಷಣವೆಂದೆನಿಸಿದರೆ ಇಂದೆ ಈ ಕೂಡಲೆ ಕಳೆದು ಹೋದ ಸಂಬಂಧಗಳ ಕೊಂಡಿ ಹುಡುಕಿ ಹೋಗಿ, ಉಳಿದು ಹೋದ ನಾಲ್ಕು ಮಾತು, ಎರಡು ನಗು, ಒಂದುರೊಟ್ಟಿ, ಒಟ್ಟಿಗೆ ಅರ್ದರ್ಧ ಕಪ್ ಚಹಾ ಇವಿಷ್ಟನ್ನು ಗಳಿಸಿ ಬಿಡಿ.. ನೆಮ್ಮದಿಯ ಬದುಕು ನಮ್ಮದಾಗಲೂ ಇನ್ನೇನು ಬೇಕು..

ಲಹರಿ Read Post »

ಅಂಕಣ ಸಂಗಾತಿ

ಹೊತ್ತಾರೆ

ಅಮ್ಮನೂರಿನ ನೆನಪುಗಳು ಅಮೇರಿಕಾದಿಂದ ಅಶ್ವಥ್ ಬರೆಯುತ್ತಾರೆ ಅಶ್ವಥ್ ರಂಗ ತಿಮ್ಮರಿಗೆ ನಿಯಂತ್ರಣದ ಅಥವಾ ಮೇಲ್ವಿಚಾರಣೆಯ ಅವಶ್ಯಕತೆಯೂ ಇರಲಿಲ್ಲ. ಗುಡ್ಡದಂತಿದ್ದ ನಮ್ಮ ಊರಿನಲ್ಲಿ ನೀರಿನ ವ್ಯವಸ್ಥೆಗೆ ಇದ್ದದ್ದು ಎರಡು ಕೈಪಂಪು (ಬೋರ್ ವೆಲ್) ಮತ್ತೊಂದು ಸೇದುವಬಾವಿ.  ನಮ್ಮ ಮನೆ ಗುಡ್ಡದ ತುದಿಯಲ್ಲಿದ್ದ ಮತ್ತು ಊರಿನ ಹಿಂಭಾಗದಲ್ಲಿದ್ದ ಕಡೇ ಮನೆ.  ಬಾವಿ ಮತ್ತು ಬೋರ್ ವೆಲ್ ಗಳು ಊರಿನ ಮುಂದಿನ ಭಾಗದಲ್ಲಿದ್ದವು. ನೀರು ಹೊರುವುದು ಒಂದು ಫಜೀತಿ. ಹಾಗಾಗಿ  ಗಾಡಿಯ ಮೇಲೆ ಬ್ಯಾರೆಲ್ ಇರಿಸಿ ನೀರು ತರುವುದು ನಮ್ಮ ಮನೆಯ ರೂಢಿ. ತಿಮ್ಮ ರಂಗರ ಬಗ್ಗೆ ಮನೆಯಲ್ಲಿ ದೊಡ್ಡವರಿಗೆ ಇದ್ದ ನಂಬಿಕೆಯೆಷ್ಟೆಂದರೆ, ನೀರು ತರಲು ಗಾಡಿ ಕಟ್ಟಬೇಕೆಂದರೆ, ಮೂಕಿ ಎತ್ತಿ ರಂಗ ತಿಮ್ಮರ ಕೊರಳಿಗೆ ನೊಗ ಏರಿಸುವವರೆಗೆ ಮಾತ್ರ ದೊಡ್ಡವರು ಬೇಕಾಗಿತ್ತು. ಎಷ್ಟೋ ಬಾರಿ ನಾನು ನನ್ನ ಜೊತೆಯ ಗೆಳೆಯರೇ ಗಾಡಿ ಏರಿ ನಾವೇ ನೀರು ತರುತ್ತೇವೆಂದು ಮನೆಯವರನ್ನು ಪೀಡಿಸುತ್ತಿದ್ದೆವು. ಗಾಡಿ ಮೇಲೆ ದೊಡ್ಡವರಿಲ್ಲದೇ ನಾನೇ ಗಾಡಿ ಹೊಡೆಯುವುದು ಒಂದು ಹೆಮ್ಮೆ. ಆಗಿನ ಮನಸ್ಥಿತಿಗೆ ಅದೊಂಥರಾ ಸೂಪರ್ ಬೈಕ್ ರೈಡ್ ಅಥವಾ ಫೆರ್ರಾರಿ ಓಡಿಸಿದಷ್ಟು ಖುಷಿ. ರಂಗ ತಿಮ್ಮರ ಮೇಲಿನ ನಂಬುಗೆಯಿಂದ ಮನೆಯವರು ಅದಕ್ಕೆ ಅಡ್ಡಿಮಾಡುತ್ತಲೂ ಇರಲಿಲ್ಲ. ಗಾಡಿಯ ಮೇಲೆ ಯಾರಿಲ್ಲದಿದ್ದರೂ, ಹೋಗಬೇಕಾದ ಜಾಗ ಕಿವಿಗೆ ಬೀಳುವಂತೆ ಹೇಳಿದರೆ ಸಾಕಾಗಿತ್ತು ರಂಗ ತಿಮ್ಮರಿಗೆ.  ಅದರಲ್ಲೂ ಊರಿನ ಒಳಗೆ, ಊರು ಸುತ್ತಮುತ್ತ ಅಂದರೆ, ಈ ಜೋಡಿಗೆ ನಡುಮನೆಯಿಂದ ಅಂಗಳಕ್ಕೆ ಬಂದಷ್ಟೇ ಸಲೀಸು. ಆದರೆ ಯಾವಾಗಲೂ ಒಂದು ಪರ್ಮನೆಂಟ್ ವಾರ್ನಿಂಗ್ ಇರುತ್ತಿತ್ತು. ಕಲ್ಹಳ್ಳಿ ಎತ್ತನ್ನ ಕೆಣಕೋ ಹಾಗಿಲ್ಲ,  ಅಂದರೆ  ತಿಮ್ಮನನ್ನು ಮುಟ್ಟುವ ಹಾಗೂ ಇಲ್ಲ. ಕಟ್ಟೆಅರಸಮ್ಮನ ಗುಡಿ ಯಾವಾಗಲೋ ಅಪರೂಪಕ್ಕೆ ಹೋಗುವಂತಹ ಜಾಗ. ಆವತ್ತು ಹೊರಟಿದ್ದವರಲ್ಲಿ ತಾತನಿಗಷ್ಟೇ ಗೊತ್ತಿದ್ದು. ತಾತ ಗಾಡಿ ಮುಂದೆ ಕುಳಿತು ಹುಂ ನಡಿರಿ ಎಂದಿದ್ದೇ. ರಂಗ ತಿಮ್ಮರ ಕೊರಳಿನ ಗೆಜ್ಜೆ ಮತ್ತು ಗೊರಸಿಗೆ ಕಟ್ಟಿದ ಹಲ್ಲೆಯ ಟುಕ್ಕು ಬುಕ್ಕು ಸದ್ದು ಶುರುವಾಯ್ತು. ಮನೆಯಿಂದ ಎಡಕ್ಕೆ ತಿರುಗುವಂತೆ ತಾತ ಸೂಚಿಸಿದಂತೆ ರಂಗ ತಿಮ್ಮರ ಜೋಡಿ ತೋಟದ ಹಾದಿ ಹಿಡಿಯಿತು. ಆ ದಾರಿಯು ತೋಟದ ನಡುವೆ ಹಾದು ದೇವಮ್ಮನ ಗುಡಿ ದಾಟಿ ಪಕ್ಕದೂರಿನ ಅಡ್ಡರಸ್ತೆಯ ಮೂಲಕ ಬೋರ್ಡ್ ಗಲ್ಲಿನ ಹತ್ತಿರ ಬಲಕ್ಕೆ ತಿರುಗಿ ರಾಜ್ಯ ಹೆದ್ದಾರಿಯಲ್ಲಿ ಮುಂದೆ ಸಾಗಿ ಡ್ಯಾಮ್ ಮುಂದಿರುವ ಸೇತುವೆಯ ಮೂಲಕ ಹೊಳೆ ದಾಟಿ ಅದರಾಚಿನ ತಾಲ್ಲೂಕಿನಲ್ಲಿರುವ ಗುಡಿ ತಲುಪಬೇಕಾಗಿತ್ತು.  ಮನೆಯಿಂದ ಹೊರಟಾಗ ತಾತ ಕೊಟ್ಟಿದ್ದು ಒಂದೇ ಸೂಚನೆ. ರಾತ್ರಿ ಹೊತ್ತಾಗಿದ್ದರಿಂದ ರಂಗ ತಿಮ್ಮರು ಬೋರ್ಡ್ ಗಲ್ಲಿನ ಬಳಿಯಿರುವ ಭತ್ತದ ಗಿರಣಿ ಇರಲಾರದು ಎಂದು ಗೊತ್ತುಮಾಡಿಕೊಂಡು ತಾವೇ ಬಲಕ್ಕೆ ತಿರುಗಿ ಮುಂದೆ ಸಾಗತೊಡಗಿದವು.  ಅಪರೂಪಕ್ಕೆ ಬಸ್ಸು, ಲಾರಿಗಳು ಹಾದು ಹೋಗುತ್ತಿದ್ದವು.  ತಾತನಿಗೆ ಮನೆಯಿಂದ ಹೊರಟು ತೋಟ ದಾಟುವಷ್ಟರಲ್ಲಿ ನಿದ್ರೆ ಹತ್ತಿತ್ತು. ರಂಗ ತಿಮ್ಮರು ಹತ್ತು ಕಿಲೋಮೀಟರ್ ನಲ್ಲಿ  ಹೊಳೆ ದಡದ ಊರಿನಲ್ಲಿ ಇದ್ದ ನಮ್ಮ ನೆಂಟರ ಮನೆಯ ಅಡ್ಡದಾರಿಯಲ್ಲಿ ಎಡಕ್ಕೆ ತಿರುಗಿದವು. ಮುತ್ತಜ್ಜಿಗೆ  ಹೆದ್ದಾರಿಯ ವಾಹನಗಳ ತೀಕ್ಷ್ಣ ಬೆಳಕಿನಿಂದಾಗಿ  ನಿದ್ರೆ ಹತ್ತಿರಲಿಲ್ಲ… ನಾನು ರಂಗ ತಿಮ್ಮರ ಕೊರಳಿನ ಗೆಜ್ಜೆಯನ್ನೇ ಆಲಿಸುತ್ತಾ ಇನ್ನೇನು ತೂಕಡಿಕೆಯ ಹೊಸ್ತಿಲಲ್ಲಿದ್ದೆ.  “ಏಯ್ ತಮ್ಮಯ್ಯ ಎಡಕ್ಕೆ ತಿರುಗ್ತಾವೆ ಎತ್ತು ನೋಡೋ. ಆಗಲೇ ನಿದ್ದೆ ಇವ್ನಿಗೆ” ಅಂದರು ಮುತ್ತಜ್ಜಿ.   ತಾತ ತಡಿಕೆಗೆ ಒರಗಿಕೊಂಡಿರುವುದು ಒಂಚೂರೂ ಅಲುಗದಂತೆ  ಹಾಗೆಯೇ ಹಗ್ಗದಲ್ಲೇ ಸೂಚಿಸಿ ಮತ್ತೆ ರಾಜ್ಯ ಹೆದ್ದಾರಿಯ ಕಡೆ ದಾರಿ ಬದಲಿಸಿದರು.  ಹೀಗೆ, ರಂಗ ತಿಮ್ಮರು ತಮಗೆ ನೆನಪಿಲ್ಲದ ಜಾಗಕ್ಕೆ ಲಾಟೀನಿನ ಬೆಳಕಿನಲ್ಲಿ ಗಾಡಿ ಎಳೆಯುತ್ತಾ ಕವಲುದಾರಿಯಲ್ಲಿ ಎಡಕ್ಕೋ ಬಲಕ್ಕೋ ಅನ್ನುವ ಅನುಮಾನದಿಂದ ತಾತನ ಸೂಚನೆ ಕಾಯುತ್ತಾ ಒಂದೆರಡು ಕಡೆ ನಿಂತು, ಸಾಗಿ, ಬೆಳಗಿನ ಜಾವಕ್ಕೆ ಗುಡಿ ತಲುಪಿದೆವು. ತಾತನೂ  ಸೇರಿ ಗಾಡಿಯಲ್ಲಿದ್ದ ಎಲ್ಲರೂ ಮೂರ್ನಾಲ್ಕು ಗಂಟೆ ನಿದ್ರಿಸಿದ್ದೆವು.  ಗುಡಿಗೆ ಬಂದ ನಂತರ ಮುತ್ತಜ್ಜಿಯ ಹರಕೆಯನ್ನು ಸಾಂಗವಾಗಿ ಮುಗಿಸುವವರೆಗೂ, ಗಾಡಿಯ ಹಿಂಬದಿಯಲ್ಲಿದ್ದ ಹುಲ್ಲು ತಿನ್ನುತ್ತಾ  ಸ್ವಲ್ಪ ಹೊತ್ತು ನಿಂತು, ನಂತರ ಮಲಗಿ ದಣಿವಾರಿಸಿಕೊಂಡ ರಂಗತಿಮ್ಮರು ಮಧ್ಯಾಹ್ನದ ಹೊತ್ತಿಗೆ ಮನೆ ಕಡೆ ಹೊರಡಲು ಸಿದ್ಧವಾಗಿದ್ದವು. ವಾಪಸ್ಸು ಬರುವಾಗ “ತಾತ, ನಾನ್ ಗಾಡಿ ಹೊಡಿತಿನಿ” ಅಂದಿದ್ದಕ್ಕೆ, ಸರಿ ಅಂತ್ಹೇಳಿ ಅಡ್ಡತಡಿಕೆ ಮೂಕಿಯ ಮಧ್ಯೆ  ನನ್ನ ಕಾಲಿಳಿಸಿ, ನನ್ನ ಹಿಂದೆ ತಾತ ಕೂತರು. “ಮುಟ್ಟೋದು ಗದರೋದು ಮಾಡಬೇಡ, ದಾರಿ ಗೊತ್ತೈತೆ ಅವಕ್ಕೆ” ಅಂದು ತಾತ ಮುತ್ತಜ್ಜಿಯ ಮತ್ತು ಮನೆಯವರ ಜೊತೆ ಮಾತಿಗೆ ಕೂತರು. ಕತ್ತಲಾಗುವ ಹೊತ್ತಿಗೆ ಪಿಕ್ನಿಕ್ ಮುಗಿಸಿ ಮನೆ ತಲುಪಿದ್ದೆವು. ರಂಗ ತಿಮ್ಮ ಎಳೆಯುವ ಗಾಡಿಯಲ್ಲಿ ಸಾರಥಿ ಯಾರೇ ಆಗಿದ್ದರೂ ಅದು ನೆಪಕ್ಕೆ ಮಾತ್ರ.  ತೀರಾ ಇಳಿಜಾರು… ಹೊಲಗದ್ದೆಯ ಅಂಕುಡೊಂಕಾದ ದಾರಿಗಳು, ಗಾಡಿಜಾಡು ಇಲ್ಲದ ಹೊಲದ ಬದುಗಳಲ್ಲಿ ಗಾಡಿ ಹೊಡೆಯಬೇಕಾದಾಗ ಮಾತ್ರ  ಗಾಡಿಯ ಸುರಕ್ಷತೆಗಾಗಿ ಅನುಭವ ಇರುವವರ ಅಗತ್ಯವಿರುತ್ತಿತ್ತು. ಒಂದು ಗಾಡಿಗೆ ಗರಿಷ್ಟಮಟ್ಟಕ್ಕೆ ತುಂಬಬಹುದಾದ ಹೊರೆಯನ್ನು ನಿರಾಯಾಸವಾಗಿ ಎಳೆಯುತ್ತಿದ್ದ ರಂಗ ತಿಮ್ಮರಿಗೆ ತುಂಬಾ ಭಾರ ಅನಿಸಬಹುದಾದ ಹೊರೆ ಹೊರಿಸಲು ಮುಂದಾದರೆ, ಗಾಡಿ ಮುರಿದುಬೀಳುತ್ತಿತ್ತೇ ಹೊರತು, ಅವುಗಳಿಗೇನೂ ಕಷ್ಟವಾಗುತ್ತಿರಲಿಲ್ಲ. ಹೊಲಗದ್ದೆ ಉಳುಮೆಯಿಂದ ಹಿಡಿದು, ಯಾವುದೇ ಕೃಷಿ ಕೆಲಸವೂ ರಂಗ ತಿಮ್ಮರಷ್ಟು ಬೇಗನೆ ಅಕ್ಕ ಪಕ್ಕದ ಮನೆಯವರ ಎತ್ತುಗಳಿಂದ ಸಾಧ್ಯವಾಗುತ್ತಿರಲಿಲ್ಲ. ಹೊತ್ತು ಇಳಿಯುತ್ತಿದೆ ಬೇಗ ಕೆಲಸ ಮಾಡಬೇಕು ಅಂದರೆ ಅತಿ ಬಿರುಸಾಗಿಯೂ, ಸೂಕ್ಷ್ಮವಾದ ಕೆಲಸಗಳಿದ್ದರೆ ಅತಿ ಜಾಗರೂಕವಾಗಿಯೂ ನಡೆದಾಡುವ ಕೌಶಲ್ಯ ರಂಗ ತಿಮ್ಮರಿಬ್ಬರಿಗೂ ಮೈಗೂಡಿತ್ತು. ಜೊತೆಗೆ ಎಲ್ಲ ಎತ್ತುಗಳಂತೆ ಎಡಗೋಲು ಅಥವಾ ಬಲಗೋಲು ಎಂಬ ಶಿಷ್ಟಾಚಾರವೇನೂ ಇರಲಿಲ್ಲ.  ರೂಢಿ ಎನ್ನುವಂತೆ  ರಂಗ ಬಲಕ್ಕಿರುತ್ತಿದ್ದ ತಿಮ್ಮ  ಎಡಕ್ಕಿರುತ್ತಿದ್ದ. ಆದರೆ ಅವರೆಂದೂ ಬಲಗೋಲು, ಎಡಗೋಲಿಗೆ ಬದ್ಧರಾಗಿರಲಿಲ್ಲ. ಅವರ ಜಾಗ ಅದಲು ಬದಲಾದರೂ ಅವರ ಕೌಶಲ್ಯತೆ ಮತ್ತು ಸಾಮರ್ಥ್ಯ ಕಿಂಚಿತ್ತೂ ಬದಲಾಗುತ್ತಿರಲಿಲ್ಲ. ಕೆಲವೊಮ್ಮೆ  ಅಕ್ಕಪಕ್ಕದ ಮನೆಯವರು ಗದ್ದೆನಾಟಿ ಮಾಡುವ ಸಮಯದಲ್ಲಿ ಮಂಡಿಯುದ್ದ ಹೂತುಕೊಳ್ಳುವ ಗದ್ದೆಗಳಿಗೆ ಸಾಮಾನ್ಯ ಎತ್ತುಗಳಿಂದ ಉಳಲಾಗದಿದ್ದಾಗ, ಮಳೆ ಗಾಳಿಗೆ ಮರ ಬಿದ್ದಾಗ ಎಳೆದುಹಾಕಲು, ಯಾವುದಾದರೂ ಬಂಡೆ ಸರಿಸಬೇಕು ಅಂದಾಗ, ಇಂಥಹ ಎಷ್ಟೋಸಂದರ್ಭಗಳಲ್ಲಿ  ಒಂದ್ಹೊತ್ತು ಎತ್ತು ಕೊಡಿ ಎಂದು ರಂಗ ತಿಮ್ಮನನ್ನು ಎರವಲು ಕೇಳುತ್ತಿದ್ದರು. ಸರಿ ಹಿಡ್ಕೊಂಡ್ ಹೋಗಿ ಅನ್ನೋ ಹಾಗಿಲ್ಲ.  ರಂಗನದ್ದೇನೋ ಒಂದು ಮಟ್ಟಿಗೆ ಸರಿ. ತಿಮ್ಮನೆಂದರೆ ನಮ್ಮ ಮನೆಯ ವಿಐಪಿ.  ಮನೆಯವರಲ್ಲದೇ ಬೇರೆ ಯಾರಾದರೂ ಬಂದರೆಂದರೆ ಗದ್ದೆ ಉಳುಮೆಯಿರಲಿ, ಅವನನ್ನು ಗದ್ದೆಯ ತನಕ ಹಿಡಿದುಕೊಳ್ಳೋ ಧೈರ್ಯವನ್ನೂ ಮಾಡುತ್ತಿರಲಿಲ್ಲ. ತಾತನ ಪರಿಚಯದವರಾಗಿದ್ದರೆ ಅಥವಾ ಮನೆಯವರೊಬ್ಬರು ಜೊತೆಯಲ್ಲಿದ್ದರೆ ಪರವಾಗಿರಲಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಮುನ್ನೆಚ್ಚರಿಕೆಯಂತೆ ತಾತನೇ ಖುದ್ದಾಗಿ ಹೋಗಿ, ನೊಗ ಹೂಡಿ ಬರುವುದು, ಕೆಲಸ ಮುಗಿದ ನಂತರ ತಾನೇ ಹಿಡಿದು ಮನೆಗೆ ತರುವುದು ಮಾಡುತ್ತಿದ್ದರು. ತಿಮ್ಮನ ಈ ವಿಐಪಿ ಗುಣ, ಯಾರು ಯಾವಾಗ ಬೇಕಾದರೂ ಇವುಗಳನ್ನು ಎರವಲು ಪಡೆಯಬಹುದು ಎನ್ನುವುದಕ್ಕೆ ಕಡಿವಾಣ ಹಾಕಿದಂತಿತ್ತು. ಆಲೆಮನೆಯದ್ದೇ ಒಂದು ವಿಶಿಷ್ಟತೆ. ಆಲೆಮನೆಗೆ ಹೊಂದಿಕೊಂಡ ಕತೆಗಳೆಲ್ಲ ರೋಚಕವಾಗಿರುತ್ತಿದ್ದವು. ಕಬ್ಬು ಕಡಿಯಲು ಆರೇಳು ಆಳಿದ್ದರೂ, ದಿನವಿಡೀ ಗಾಣ ತಿರುಗಬೇಕಾಗಿದ್ದರೂ ಯಾವುದೇ ಅಡ್ಡಿಯಿಲ್ಲದೇ ಗಾಣ ತಿರುಗಿಸುತ್ತಾ, ಒಂದು ಆಲೆಮನೆಯ ಜವಾಬ್ದಾರಿಯನ್ನು ಸಲೀಸಾಗಿ ನಿಭಾಯಿಸುವಂತಹವರು ಈ ರಂಗ ತಿಮ್ಮರು. ಕೆಲವೊಮ್ಮೆ ಗಾಣದಲ್ಲಿ ಅರೆಯಲು ಕಬ್ಬು ಇಲ್ಲದೇ, ಆಳುಗಳಿಗೆ ಅವಸರ ಮಾಡಿ ಜ್ವರ ಬರಿಸಿದ್ದಂತ ಉದಾಹರಣೆಗಳಿದ್ದವಂತೆ. ಆದರೆ ಆಲೆಮನೆ ಕತೆಗಳೆಲ್ಲ ನಾನು ಕೇಳಿದ್ದಷ್ಟೇ… ಎರಡು ವರ್ಷ  ಕೊಪ್ಪರಿಕೆ ಕಟ್ಟಿ ಆಲೆಮನೆ ಹೂಡಿದ್ದ ಸ್ವಲ್ಪವೇ ನೆನಪಿನ ಹೊರತಾಗಿ, ನನ್ನ ಬುದ್ಧಿ ಬೆಳೆಯುವ ಹೊತ್ತಿಗೆ ಆಲೆಮನೆ ಹೂಡುವ ಅಭ್ಯಾಸ ನಿಂತು, ಗಾಣ, ಕೊಪ್ಪರಿಕೆ, ಅಚ್ಚಿನಮಣೆಗಳೆಲ್ಲ ಬರೀ ಬಾಡಿಗೆಗೆ ಕೊಡುವಷ್ಟರಮಟ್ಟಿಗೆ ಬಂದು ನಿಂತಿತ್ತು. ರಂಗ ತಿಮ್ಮರಿಗೆ ಪೇಟೆಯ ಸಂತೆಗೆ ಹೋಗುವುದೊಂದು ನಿಯಮಿತವಾಗಿದ್ದ ಕೆಲಸ.  ಮನೆಯಲ್ಲಿದ್ದ ಭತ್ತ, ರಾಗಿ, ಬೆಲ್ಲ, ಎಳನೀರು, ತೆಂಗಿನ ಕಾಯಿ, ಅಡಿಕೆ ಕೊಯ್ಲಿನ ಸಮಯದಲ್ಲಿ ಕೊಯ್ಲುಮಾಡಿ ಸುಲಿದು ಬೇಯಿಸಿ ಒಣಗಿಸಿಟ್ಟಿದ್ದ ಅಡಿಕೆ, ಒಣಮೆಣಸಿನಕಾಯಿ ಇವುಗಳನ್ನೆಲ್ಲ ಮನೆಯಿಂದ ಸಂತೆಗೆ ಸಾಗಿಸುವುದು ಮತ್ತೆ ಮನೆಯ ನಿತ್ಯಬಳಕೆಯ ವಸ್ತುಗಳನ್ನು ಪೇಟೆಯ ದಿನಸಿ ಅಂಗಡಿಯಿಂದ ತುಂಬಿಸಿಕೊಂಡು ಬರುವುದು, ತಿಂಗಳಿನಲ್ಲಿ ಎರಡು ಮಂಗಳವಾರಗಳು ಖಾಯಂ ಆಗಿರುತ್ತಿತ್ತು. ಅಷ್ಟೇ ಅಲ್ಲದೇ ಹಬ್ಬದ ದಿನಗಳ ಹಿಂದಿನ ವಾರ ಹೆಚ್ಚುವರಿ ಸಂತೆಯೂ ಇರುತ್ತಿತ್ತು.  ನಮ್ಮ ಮನೆಯ ಸರಕು ಸಾಗಿಸುವ ಕೆಲಸವಿಲ್ಲದಿದ್ದರೂ, ಊರಿನ ಬೇರೆ ಮನೆಯವರ  ಮಾರಾಟದ ಸರಕುಗಳನ್ನು ಸಾಗಿಸುವುದು ಮತ್ತೆ ಪೇಟೆಯಿಂದ ಅವರು ಖರೀದಿಸುವ ದೊಡ್ಡ ಗಾತ್ರದ ವಸ್ತುಗಳನ್ನು ಮನೆಗೆ ಸಾಗಿಸುವ ಸಲುವಾಗಿ ಪ್ರತಿ ಮಂಗಳವಾರವೂ ಗಾಡಿ ಹೂಡುತ್ತಿದ್ದರು.  ಪೇಟೆಯ ಪ್ರಯಾಣ ರಂಗ ತಿಮ್ಮರಿಗೆ ಮಕ್ಕಳು ಪ್ರತಿದಿನ ಶಾಲೆಗೆ ಹೋಗುತ್ತಿದ್ದಷ್ಟೇ ಸಾಮಾನ್ಯವಾಗಿತ್ತು. ಬಹುಶಃ ಗಾಡಿಗೆ ದವಸವನ್ನೆಲ್ಲ ತುಂಬಿ ಬೆಳಿಗ್ಗೆ ಬಸ್ಸಿನಲ್ಲಿ ಹೋಗಿದ್ದರೂ ಮಂಡಿ ಎದುರು  ಗಾಡಿ ನಿಂತಿರುತ್ತಿತ್ತು ಎಂದು ಅನುಮಾನವಿಲ್ಲದೇ ಹೇಳಬಹುದು. ಆದರೆ ಕಳ್ಳರು ದವಸವನ್ನು ಲಪಟಾಯಿಸಿಬಿಡಬಹುದು ಎಂದೋ ಏನೋ, ತಾತನಾಗಲೀ ಅಥವಾ ಮಾವಂದಿರಲ್ಲಿ ಒಬ್ಬರಾಗಲೀ ಊರಿನ ಬೇರೊಬ್ಬರ ಜೊತೆಯಲ್ಲಿ ಗಾಡಿ ಏರುತ್ತಿದ್ದರು.  ಸಂತೆಗೆ ಗಾಡಿ ಹೂಡುವ ಪ್ರತಿ ದಿನವೂ  ನಾನು ಗಾಡಿಯಲ್ಲಿ ಸಂತೆಗೆ ಹೋಗಬೇಕು ಅಂತ ಮುತ್ತಜ್ಜಿಯಿಂದ ಹಿಡಿದು ಮನೆಯ ಎಲ್ಲರನ್ನೂ ಗೋಳು ಹೊಯ್ದುಕೊಳ್ಳುತ್ತಿದ್ದೆ. ಆದರೆ ನಾನು ಅತ್ತು ಸುಸ್ತಾಗಿ ಮಲಗೋದಷ್ಟೇ ಆಗ್ತಾ ಇದ್ದಿದ್ದು. ಬೆಳಗ್ಗೆ  ನಾನು ಏಳುವಷ್ಟರಲ್ಲಿ ಗಾಡಿ ಸಂತೆ ಸೇರಿರುತ್ತಿತ್ತು. ಒಂದು ದಿನವೂ  ರಂಗ ತಿಮ್ಮರ ಜೊತೆ ಸಂತೆ ಪ್ರಯಾಣ ಮಾಡಲಾಗಲಿಲ್ಲ.  ಜೊತೆಗೆ ಅದು ಮಂಗಳವಾರದ ಸಂತೆ… ಶಾಲೆಗೆ ಚಕ್ಕರ್ ಹೊಡಿಯಬೇಕಿತ್ತು.  ಹಾಗಾಗಿ ರಂಗ ತಿಮ್ಮರ ಪೇಟೆ ಬೀದಿಯ ಸಲೀಸು ಪ್ರಯಾಣ ನಾನು ಬೇರೆಯವರಿಂದ ಕೇಳಿರುವಂತಹದ್ದು.

ಹೊತ್ತಾರೆ Read Post »

ಕಥಾಗುಚ್ಛ

ಉಯ್ಯಾಲೆ

ಟಿ.ಎಸ್.ಶ್ರವಣಕುಮಾರಿ ಉಯ್ಯಾಲೆ ಉಯ್ಯಾಲೆ ಈಗಾರು ತಿಂಗಳಿನಿಂದಲೂ ಸೀತಕ್ಕನಿಗೆ ಅಷ್ಟು ಅರಾಮಿಲ್ಲ. ದಿನಕ್ಕೊಂದೊಂದು ತೊಂದರೆ. ಡಾಕ್ಟರಿಗೆ ತೋರಿಸಿಯೂ ಏನೂ ಪ್ರಯೋಜನವಾಗಿಲ್ಲ. ಅವರ ಪ್ರಕಾರ ವಯಸ್ಸಾಗಿರುವುದನ್ನು ಬಿಟ್ಟರೆ ಬೇರೇನೂ ಇಲ್ಲ. ಆದರೆ ಸೀತಕ್ಕನಿಗೆ ಮಾತ್ರಾ ದಿನದಿಂದ ದಿನಕ್ಕೆ ನಿತ್ರಾಣ. ಐವತ್ತು ಜನ ಬಂದರೂ ಹೆದರದೆ ಅಡುಗೆ ಮಾಡುತ್ತಿದ್ದವಳಿಗೆ ಈಗ ಐದು ಜನಕ್ಕೂ ಮಾಡಲೂ ಸಾದ್ಯವಾಗದಂತಾಗಿದೆ. ಈಗೊಂದು ತಿಂಗಳಿನಿಂದಂತೂ ಪೂರಾ ಹಾಸಿಗೆ ಹಿಡಿದು ಬಿಟ್ಟಿದ್ದಾಳೆ. ಶಾಮಿ, ಸರಳನೂ ತಮ್ಮ ಕೈಲಾದ್ದೆಲ್ಲಾ ಮಾಡುತ್ತಿದ್ದಾರೆ. ಸೀತಕ್ಕನಿಗೋ, ಹುಶಾರು ತಪ್ಪಿದಾಗಿನಿಂದಾಗಲೂ ಮಕ್ಕಳಿಗಾಗಿ ಹಂಬಲಿಸುವಂತಾಗಿದೆ. ಅವರೇನು ಹತ್ತಿರ ವಿದ್ದಾರೆಯೆ? ಶಾಲಿನಿಯಿರುವುದು ಡೆಲ್ಲಿಯಲ್ಲಾದರೆ, ರಾಜು ಇರುವುದು ಕಲ್ಕತ್ತೆಯಲ್ಲಿ. ಇರುವುದರಲ್ಲಿ ವಿಮಲ ಹತ್ತಿರದ ಬೆಂಗಳೂರಿನಲ್ಲಿದ್ದಾಳೆ. ಈ ನಡುವೆ ಒಬ್ಬಳೇ ತಿಂಗಳಿಗೋ, ಹದಿನೈದು ದಿನಕ್ಕೋ ಒಂದು ಸಲ ಬಂದು ಹೋಗುತ್ತಾಳೆ. ಎಲ್ಲ ಮೊಮ್ಮಕ್ಕಳಿಗೂ ಶಾಲೆ, ಕಾಲೇಜು. ಈಗಿನ ಕಾಲಕ್ಕೆ ರಜ ಹಾಕಿಸಿ ಕರೆದುಕೊಂಡು ಬರಲು ಸಾಧ್ಯವೇ?! ಮೊಮ್ಮಕ್ಕಳ ಮುಖಗಳಂತೂ ಮರೆತೇ ಹೋದಂತಾಗಿದೆ. ಬಾಣಂತನ ಮುಗಿಸಿಕೊಂಡು ಹೋದ ಮೇಲೆ ಎರಡೋ ಮೂರೋ ಸಲ ಬಂದಿದ್ದರೆ ಹೆಚ್ಹೆಚ್ಚು. ಸಧ್ಯ! ಎಲ್ಲೋ ಸುಖವಾಗಿದ್ದಾರಲ್ಲ; ನಾನೂ ಹೆಚ್ಚಾಗಿ ಬಯಸಬಾರದು ಎಂದು ಸಮಾಧಾನ ತಂದುಕೊAಡಿದ್ದಳು ಸೀತಕ್ಕ. ಆದರೂ ದೇಹ ನಿತ್ರಾಣವಾದಾಗ ತನ್ನವರನ್ನು ಬಯಸುವುದು ತಪ್ಪೆ?! ಯಾರು ಯಾರೋ ನೆಂಟರು, ಪರಿಚಿತರು, ಸ್ನೇಹಿತರು ಈ ಒಂದು ತಿಂಗಳಲ್ಲಿ ಬಂದು ನೋಡಿಕೊಂಡು ಹೋಗಿದ್ದಾರೆ. ರಾಜು, ಶಾಲಿನಿ ಮಾತ್ರ ಕಂಡಿಲ್ಲ. ಈಗೆರಡು ದಿನಗಳಿಂದಂತೂ ಪೂರಾ ಹಾಸಿಗೆಗೇ ಅಂಟಿಕೊಂಡಿದ್ದಾಳೆ. ಕಣ್ಣು ಬಿಡಲೂ ಸುಸ್ತಾಗುತ್ತಿದೆ. ಮಾತಾಡಲೂ ಸಾಧ್ಯವಾಗುತ್ತಿಲ್ಲ. ಉಸಿರಾಡುವುದನ್ನು ಬಿಟ್ಟರೆ ಅವಳು ಜೀವಂತವಾಗಿರುವುದು ಗೊತ್ತೇ ಆಗುತ್ತಿಲ್ಲ. ಮನಸ್ಸು ಸ್ವಲ್ಪ ಹೊತ್ತು ಎಚ್ಚರವಾಗಿರುತ್ತೆ, ಕೆಲವುಸಲ ಒಂದಕ್ಕೊಂದಕ್ಕೆ ಎಳೆ ತಪ್ಪುತ್ತಿರುತ್ತದೆ, ಮತ್ತೆ ಸ್ವಲ್ಪ ಹೊತ್ತು ಏನೋ ಮಂಪರು.. ಅರೆಜ್ಞಾನದ ಸ್ಥಿತಿ… ಎಲ್ಲೋ ಶಾಲಿನಿಯ ದನಿ ಕೇಳಿದಂತಾಯಿತು ಸೀತಕ್ಕನಿಗೆ… ಹೌದೋ ಅಲ್ಲವೋ… ಹೌದು ಅವಳದ್ದೇ ದನಿ… ಅವಳೇ… ಈಗ ಬಂದಳೇನೋ ಊರಿನಿಂದ.. ಜೊತೆಗೆ ಗೋಪಾಲನೂ ಬಂದಿದ್ದಾನೇನೋ.. ಮಕ್ಕಳು? ಏನವರ ಹೆಸರು?? ಇಲ್ಲ.. ನೆನಪಾಗುತ್ತಿಲ್ಲ… ಮೆದುಳಲ್ಲೆಲ್ಲಾ ಬರೀ ಕತ್ತಲೆ… ಏನೂ ನೆನಪಾಗುತ್ತಿಲ್ಲ… ಇವಳಿಗೆ ಎರಡೂ ಗಂಡು ಮಕ್ಕಳೇನಾ? ಅಥವಾ ಎರಡೂ ಹೆಣ್ಣೇನಾ.. ಅಥವಾ ಒಂದು ಗಂಡು ಒಂದು ಹೆಣ್ಣಾ… ಅಥವಾ ಒಂದೇ ಮಗುವಾ.. ಏಕೋ ತಲೆಯೆಲ್ಲಾ ಖಾಲಿಯಾದಂತೆನಿಸಿತು.. ಕಣ್ಣು ಬಿಡಬೇಕೆಂದುಕೊಂಡರೂ ಬಿಡಲಾಗುತ್ತಿಲ್ಲ… ಅಷ್ಟೇ ಶಾಮಿ ಎಲ್ಲೋ ಕರೆಸಿಕೊಂಡಿರಬೇಕು.. ಇವತ್ತೋ.., ನಾಳೆಯೋ.. ಒಂದು ಸಲ ನೋಡಲು ಬಂದುಬಿಡೂಂತ… ಎಲ್ಲೋ ಅವಳ ದನಿ ಕೇಳುತ್ತಿದೆ ಆದರೆ ಯಾವ ಮಾತೂ ಅರ್ಥವಾಗುತ್ತಿಲ್ಲ.. ಹಾಗಾದರೆ ಅವಳು ಈ ಕೋಣೆಯಲ್ಲಿ ಮಾತಾಡುತ್ತಿಲ್ಲ; ಇನ್ನೂ ಹೊರಗೇ ಎಲ್ಲೋ ಇದ್ದಾಳೆ. ಇದರ ಮಧ್ಯೆ ಈ ಜೋಕಾಲಿಯ ಜೀಕ್ ಜೀಕ್ ಸದ್ದು ಬೇರೆ.. ಬೆಳಗಾಗೆದ್ದು ಯಾರು ಆಡುತ್ತಿದ್ದಾರೆ……? ಯಾರಿರಬಹುದು……?? ಬಾಗಿಲ ಹತ್ತಿರ ಶಾಮಿ ಮಾತಾಡಿದಂತಾಯಿತು.. ಓ ಚೇತನಾ ಇವತ್ತು ರಜವೇನೋ, ಬೆಳಗ್ಗೇನೇ ಆಡಕ್ಕೆ ಬಂದು ಬಿಟ್ಟಿದೀಯ.. ಅಪ್ಪ ಅಮ್ಮ ಆಫೀಸಿಗೆ ಹೋಗಿದ್ದಾರ? ಕಾಲು ಬೇರೆ ನೆಲಕ್ಕೆ ಸಿಗಲ್ಲ ನಿಂಗೆ ಮೀಟಿಕೊಳ್ಳಕ್ಕೆ, ಸರಿ ಕೂತ್ಕೊ ತೂಗಿ ಕೊಡ್ತೀನಿ’. ನಾಲ್ಕಾರು ಬಾರಿ ತೂಗಿದ ಸದ್ದು. ಅಷ್ಟರಲ್ಲಿ ಶಾಲಿನಿಯ ಮಾತು ಕೇಳಿತು – “ಯಾರೋ ಇವನು?” “ಅದೇ ಔಟ್ ಹೌಸಿನಲ್ಲದ್ದಾರಲ್ಲ ಅವರ ಮಗ. ಒಂದೇ ಮಗು, ಇವತ್ತು ಇವನಿಗೆ ರಜ, ಇವನ ಅಪ್ಪ ಅಮ್ಮನಿಗೆ ಆಫೀಸು. ಹೊತ್ತು ಹೋಗಲ್ಲ. ಉಯ್ಯಾಲೆ ಆಡಕ್ಕೆ ಅಂತ ಬರ್ತಿರ್ತಾನೆ’ ಶಾಮಿ ಹೇಳಿದನೇನೋ… ಎಲ್ಲೋ ಗುಹೆಯಲ್ಲಿ ಮಾತಾಡಿದ ಹಾಗೆ ಕೇಳುತ್ತಿದೆ… “ಸರಿ ಅಮ್ಮನ್ನ ನೋಡೋಣ ಹೇಗಿದಾಳೋ” ಕೋಣೆಯೊಳಗೆ ಬಂದಳು ಶಾಲಿನಿ. ಇಲ್ಲೇ ಮಂಚದ ಪಕ್ಕದಲ್ಲೇ ನಿಂತ ಹಾಗಿದೆ.. ಆದರೆ ಕಣ್ಣು ಮಾತ್ರ ಬಿಡಲಾಗುತ್ತಿಲ್ಲ “ಅಮ್ಮಾ..” ಶಾಲಿನಿ ಕರೆದಳೇನೋ.ಏನೇನೋ ಮಾತಾಡಬೇಕು… ಹೇಗಿದೀಯ ಅಂತ ಕೇಳಬೇಕು… ಮಕ್ಕಳು ಬರಲಿಲ್ವಾಂತ ಕೇಳಬೇಕು… ಅವಳ ಅತ್ತೆ, ಮಾವ ಚೆನ್ನಾಗಿದ್ದಾರಾಂತ ಕೇಳಬೇಕು… ಅಂದ ಹಾಗೆ ಅವರ ಅತ್ತೆ, ಮಾವ ಇದಾರೋ ಇಲ್ಲಾ …’ ಇಲ್ಲ… ನೆನಪಾಗುತ್ತಿಲ್ಲ… ಬಾಯಿ ಹೊರಳುತ್ತಲೇ ಇಲ್ಲ… ಸ್ವಲ್ಪ ತುಟಿಯಲುಗಿತೇನೋ ಅಷ್ಟೆ.. “ಕೇಳಿಸುತ್ತೋ ಇಲ್ಲವೋ” ಗೋಪಾಲನ ದನಿ. “ಏನೋ ಗೊತ್ತಾಗುತ್ತಿಲ್ಲ; ಎರಡು ದಿನದಿಂದ ಹೀಗೆ… ಹತ್ತಿರ ನಿಂತು ಜೋರಾಗಿ ಸ್ವಲ್ಪ ಹೊತ್ತು ಮಾತಾಡಿದರೆ ತುಟಿ ಸ್ವಲ್ಪ ಅಲಗತ್ತೆ; ಕೇಳಿಸಿದೆಯೇನೋ ಅಂತ ಅನ್ಕೋತೀವಿ” ಶಾಮಿಯೇನೋ ಹೇಳಿದ್ದು… ಅಳುತ್ತಿರುವ ಸದ್ದು.. ಶಾಲಿನಿಯೇನೋ.. ಮಗಳಲ್ಲವೇ.. “ಏನೋ ಅಮ್ಮಾಂತ ಬಂದರೆ ಎರಡು ಮಾತಾಡಕ್ಕೂ ಇಲ್ವೇನೋ” “ಸಮಾಧಾನ ಮಾಡ್ಕೊಳೇ. ಏನು ಮಾಡಕ್ಕಾಗತ್ತೆ. ಇಷ್ಟು ವರ್ಷ ನಮ್ಮ ಜೊತೆ ಚೆನ್ನಾಗಿದ್ರಲ್ಲ ಅದೇ ಪುಣ್ಯ ಅಂತ ಅನ್ಕೋಬೇಕು.. ಅಲ್ವೇ ಗೋಪಾಲ್” ಶಾಮಿ ಅಂದ. “ಅಷ್ಟಲ್ಲದೇ, ಏನೋ ಈಗ್ಲೇ ಬರಕ್ಕಾಯ್ತಲ್ಲ ಅಂತ ಸಮಾಧಾನ ಮಾಡ್ಕೋಬೇಕು ಅಷ್ಟೆ” ಅಳಿಯನ ಮಾತೇನೋ. ಮೂಗಿನ ಸೊರಬರ ಇನ್ನೂ ಕೇಳುತ್ತಾ ಇತ್ತು. “ಅಳಬೇಡ್ವೇ ಬಿದ್ದು ಹೋಗೋ ಮರಕ್ಕೆ ಯಾಕೆ ಇಷ್ಟು ಹಂಬಲಿಸ್ತೀಯ” ಮಗಳ ಬೆನ್ನು ನೇವರಿಸಿ ಹೇಳಬೇಕು ಸೀತಕ್ಕನಿಗೆ.. ಕೈ ಬಿದ್ದು ಹೋಗಿದೆಯಲ್ಲ… “ರಾತ್ರಿಯೆಲ್ಲಾ ಪ್ರಯಾಣ ಮಾಡಿ ಬಂದಿದೀರಿ; ಬನ್ನಿ ಸ್ವಲ್ಪ ತಿಂಡಿ ತಿಂದು ಸುಧಾರಿಸಿಕೊಳ್ತೀರಂತೆ” ಸರಳನ ದನಿ. ಶಾಮಿಯೂ ಜೊತೆಗೂಡಿದ “ಹೌದ್ಹೌದು, ಬನ್ನಿ ಮೊದಲು ತಿಂಡಿ ತಿಂದು ಬಿಡಿ; ಯಾವ ಗಳಿಗೇನೋ, ರಶ್ಮಿ, ರಾಜೀವಂಗೆ ಕೊಟ್ಯಾ” ಶಾಮಿ ಹೊರನಡೆದ. ಹ್ಞಾಂ ಇವಳ ಮಕ್ಕಳು ರಶ್ಮಿ, ರಾಜೀವ.. ರಶ್ಮಿ ದೊಡ್ಡೋಳೋ, ರಾಜೀವಾನೋ.. ರಶ್ಮೀನೇ ಇರಬೇಕು… ಇಲ್ಲವೇನೋ… ರಾಜೀವನೇ ಇರಬೇಕು… ಯಾಕೋ ಮತ್ತೆ ಕಲಸು ಮೇಲೋಗರವಾಯಿತು.. ಸರಿ ಯಾರೋ ಒಬ್ಬರು.. ವಿಮಲನಿಗೆ ಎರಡೂ ಗಂಡು ಮಕ್ಕಳೇನಾ… ಇರಬೇಕು.. ಏನವರ ಹೆಸರು… “ಓ ಯಾರೂ ತೂಗೋವ್ರಿಲ್ವೇನೋ ಕೂತ್ಕೋ ತೂಕ್ಕೊಡ್ತೀನಿ” ಶಾಲಿನಿ ಹೇಳಿದ್ದು ಕೇಳಿತುಜೀಕ್ ಜೀಕ್… ಸದ್ದು “ತಿಂಡಿ ತೊಗೊಳ್ಳಿ ಬನ್ನಿ” ಮತ್ತೆ ಸರಳ ಕೂಗಿದಳು “ಬಂದೇ” ಶಾಲಿನಿ ಹೊರಟಳೇನೋ ಎರಡು ನಿಮಿಷ ಉಯ್ಯಾಲೆ ತೂಗಿಕೊಂಡು ನಿಂತೇ ಹೋಯಿತೇನೋ.. ಮತ್ತೆ ಮಂಪರು…. “ಓ ಹೋ ಹೋ ರಾಜಣ್ಣಾ ಬಾ ಬಾ, ಟ್ರೇನಿಗೆ ಬಂದ್ಯಾ, ಸದ್ಯ ದೀಪೂನೂ ಕರಕೊಂಡು ಬಂದ್ಯಲ್ಲ. ಒಳ್ಳೇದಾಯ್ತು. ಏನಮ್ಮಾ ದೀಪೂ ಅಜ್ಜಿ ಮನೇಗೆ ಬಂದು ಎಷ್ಟು ವರ್ಷ ಆಗಿತ್ತು ಅಂತೂ ಬಂದ್ಯಲ್ಲಾ… ಅತ್ಗೇ ಬನ್ನಿ ಕೈಕಾಲು ತೊಳೀರಿ. ಲೋ ಪ್ರಕಾಶ ದೊಡ್ಡಪ್ಪನ ಸೂಟ್ಕೇಸು ತೊಗೊಂಡು ಹೋಗಿ ಒಳಗಿಡು” ಶಾಮಿ ಒಂದೇ ಸಮ ಹೇಳ್ತಾನೇ ಇದ್ದ. “ಓ ಶಾಲಿನೀನು ಬಂದು ಬಿಟ್ಟಿದಾಳೆ…! ಯಾವಾಗ ಬಂದೆ” ಕಮಲನ ದನಿಯೇನೋ. “ಬೆಳಗ್ಗೆ ಬಂದ್ವಿ. ಹ್ಞೂ ಮಕ್ಕಳೂ ಬಂದಿದಾರೆ; ಅವಸರದಲ್ಲಿ ಹೊರಟಿದ್ದಲ್ಲಾ… ಕೂರಕ್ಕೇ ಸರಿಯಾಗಿ ಜಾಗ ಇರಲಿಲ್ಲ; ಇನ್ನ ಮಲಗೋದೆಲ್ಲಿ ಬಂತು ಅವಕ್ಕೆ ನಿದ್ರೆ ಕೆಟ್ಟು ರೂಡಿಯಿಲ್ಲ. ತಿಂಡಿ ತಿಂದು ಮಲಗಿದಾರೆ” ಶಾಲಿನಿ ಹೇಳುತ್ತಿದ್ದಳು “ಇನ್ನೇನು ವಿಮಲಾನೂ ಬರ‍್ತಾಳೇಂತ ಕಾಣತ್ತೆ. ಬೆಳಗ್ಗೆದ್ದು ಹೊರಟಿದಾರೆ ಅವರೆಲ್ಲಾ” ಶಾಮನ ದನಿಯಿರಬೇಕು… “ನೀನ್ಯಾರೋ ಮರಿ” ಕಮಲ ಕೇಳುತ್ತಿದ್ದಾಳೇನೋ. “ಉಯ್ಯಾಲೆ ಆಡ್ಬೇಕಾ. ಕೂತ್ಕೋ” ಮತ್ತೆ ಉಯ್ಯಾಲೆ ಜೀಕುವ ಸದ್ದು… ಕಿವಿಯಲ್ಲಿ ಗುಯ್ಯೆನ್ನುವ ಸದ್ದು… ಯಾರೋ ಪಕ್ಕದಲ್ಲಿ ಬಂದು ನಿಂತ ಹಾಗಿದೆ… ಸರಳಾನೇ ಇರಬೇಕು.. ಬಾಯಿಯ ಹತ್ತಿರ ತಣ್ಣಗಾಗುತ್ತಿದೆ. ಜ್ಯೂಸು ಕುಡಿಸುತ್ತಿದ್ದಾಳೇನೋ. ಮೆತ್ತಗೆ ಬಾಯಿ ಬಿಡಿಸುತ್ತಿದ್ದಾಳೇನೋ.. “ಇಷ್ಟೇನಾ ಆಹಾರ..” ವಿಮಲನೇ…? ಇರಬೇಕು. ಓ ಅವಳೂ ಬಂದಳೇನೋ.. “ಇಷ್ಟು ಹೋಗೋದೇ ಕಷ್ಟ ಆಗಿ ಬಿಟ್ಟಿದೆ ಎರಡು ದಿನದಿಂದ.. ತುಂಬಾ ಪ್ರಯತ್ನ ಪಟ್ಟರೆ ಎರಡು ಮೂರು ಚಮಚ ಅಷ್ಟೆ” ಸರಳ ಅಂದಳು. “ಸ್ವಲ್ಪ ತಿಳಿ ಗಂಜಿ ಕುಡಿಸಿದ್ರೆ” ಯಾರದೋ ಸಲಹೆಯೇನೋ. “ಎರಡು ದಿನದಿಂದ ಅದೂ ಹೋಗ್ತಾ ಇಲ್ಲ” “ಎಳನೀರಾದ್ರೆ” ಯಾರಿದು… “ತರಿಸಿ ನೋಡೋಣವಾ” ಇನ್ಯಾರದೋ ದನಿ. ಯಾರ ದನಿಯೂ ಗುರ್ತು ಸಿಗುತ್ತಿಲ್ಲ. ಅಂತೂ ಎಲ್ಲರೂ ಇಲ್ಲೇ ಸೇರಿಕೊಂಡಿರಬೇಕು. ಹಾಲಿನಲ್ಲಿ `ಜೀಕ್ ಜೀಕ್’ ಉಯ್ಯಾಲೆಯ ಶಬ್ದ. ಜೊತೆಯಲ್ಲೇ ನಾಲ್ಕೈದು ಮಕ್ಕಳು ಸೇರಿರುವ ಹಾಗಿದೆ. ಮೊಮ್ಮಕ್ಕಳೆಲ್ಲಾ ಸೇರಿದ್ದಾರೇನೋ. ಅವರ‍್ಯಾರೂ ಒಳಗೆ ಬಂದ ಹಾಗಿಲ್ಲ. ಅವರಿಗೆ ಅಜ್ಜಿಯ ಹಂಬಲ ಅಷ್ಟೊಂದಿಲ್ಲ. ಯಾರದೋ ಮಾತು… “ಇವನು ಪುಟ್ಟ ಹುಡುಗ ಅಲ್ವಾ; ನಾವೆಲ್ಲಾ ಒಬ್ಬರಾದ ಮೇಲೆ ಒಬ್ಬರು ಇವನನ್ನ ತೂಗೋಣ” “ಏ ಗಲಾಟೆ ಮಾಡಬೇಡ್ರೋ” ಯಾರದೋ ದೊಡ್ಡವರ ದನಿ.. ಗುರುತು ಸಿಗುತ್ತಿಲ್ಲ.. “ಓ ಆಡ್ಕೊಳ್ಳಿ ಬಿಡು ಅವುತಾನೇ ಏನು ಮಾಡ್ಬೇಕು. ಅಮ್ಮನಿಗಂತೂ ಈ ಕಡೆ ಜ್ಞಾನವೇ ಇಲ್ಲ” “ಅದೂ ಸರೀನ್ನು” ಯಾರು ಯಾರು ಮಾತಾಡ್ತಿದಾರೋ ಒಂದೂ ಗೊತ್ತಾಗುತ್ತಾ ಇಲ್ಲ… ಮತ್ತೆ ಕಿವಿಯಲ್ಲಿ ಗುಯ್ ಗುಡುತ್ತಿದೆ… ದ್ವನಿಯೆಲ್ಲಾ ಅಸ್ಪಷ್ಟ…. ಏನೂ ಕೇಳುತ್ತಿಲ್ಲ…… ಯಾರೋ ಕೈ ಮುಟ್ಟಿದ ಹಾಗೆ…ಡಾಕ್ಟರೇನೋ… “ಹೇಗಿದಾರೆ…” ಡಾಕ್ಟರೇನು ಹೇಳಿದರೋ.. ಬರೀ ಸನ್ನೆಯಲ್ಲಿ ಹೇಳಿರಬೇಕೇನೋ.. ಎದೆಯ ಮೇಲೆ…. ಸ್ಟೆತಾಸ್ಕೋಪಿರಬೇಕು.. ಕಣ್ಣು ಬಿಡಿಸುತ್ತಿದ್ದಾರೆ. ರೆಪ್ಪೆ ಬಿಟ್ಟುಕೊಂಡಿತೇನೋ ಆದರೆ ಏನೂ ಕಾಣುತ್ತಿಲ್ಲವಲ್ಲ.. “ಅಷ್ಟೇ.. ಕಾಯಬೇಕು.. ಎಮರ್ಜನ್ಸಿ ಇದ್ದರೆ ಫೋನು ಮಾಡಿ.. ಸಂಜೆಯ ತನಕ ಮನೆಯಲ್ಲೇ ರ‍್ತೇನೆ.” “ಸರಿ ಡಾಕ್ಟ್ರೇ’ ಯಾರ ದನಿ…. ರಾಜನದೇ?! ಎಲ್ಲೋ ಮಾತಾಡಿದ ಹಾಗೆ ಕೇಳುತ್ತಿದೆ. “ಇನ್ನೂ ಯಾರಾದ್ರೂ ಬರೋವ್ರು ಇದಾರಾ. ಅವರ ಅಕ್ಕ, ತಂಗಿ, ಅಣ್ಣ, ತಮ್ಮ… ಯಾರಾದ್ರೂ…” ಕೇಳಿದ್ದು ಡಾಕ್ಟರೇ? “ಅವರಕ್ಕಾನೂ ಹಾಸಿಗೆ ಹಿಡಿದಿದಾರೆ ಬರೋ ಸ್ಥಿತಿಯಲ್ಲಿ ಇಲ್ಲ. ಅವರ ತಮ್ಮ ಹೋಗಿ ಎರಡು ವರ್ಷವಾಯ್ತು. ನಾವು ಮಕ್ಕಳೆಲ್ಲಾ ಇದೀವಿ” ಶಾಮನೇ ಮಾತಾಡಿದ್ದು?! ಯಾರೋ ಗೊತ್ತಾಗುತ್ತಿಲ್ಲವಲ್ಲ.,, ಸರಸೀನೂ ಹಾಸಿಗೆ ಹಿಡಿದಿದಾಳ್ಯೇ? ನಂಗಿಂತ ಎರಡು ವರ್ಷಕ್ಕೆ ದೊಡ್ಡೋಳೇನೋ. ಅವಳಿಗೇನಾಗಿದ್ಯೋ… ನಂಗೇನಾಗಿದೆ?….. ಹೋಗೋ ಕಾಲ ಬಂದಿದೆ ಅಷ್ಟೆ… ಶಂಕರ ನನಗಿಂತಾ ಐದು ವರ್ಷಕ್ಕೆ ಚಿಕ್ಕೋನು. ಹೋಗಿ ಆಗ್ಲೇ ಎರಡು ವರ್ಷವಾಯ್ತೇನೋ… ಎಷ್ಟು ವರ್ಷವಾಯ್ತೋ… ಹಾಲಲ್ಲಿನ್ನೂ ಮಕ್ಕಳು ಆಡುತ್ತಲೇ ಇದ್ದಾರೆ ಅಂತ ಕಾಣುತ್ತೆ. ಗಲಾಟೆ ಕೇಳುತ್ತಿದೆ…. “ಎಲ್ರೂ ಊಟ ಮಾಡಿ ಬಿಡೋಣ.. ಏನಾದ್ರೂ ಹೆಚ್ಚು ಕಮ್ಮಿಯಾದ್ರೆ…” ರಾಜನೇನೋ.. ಅವನು ಮುಂಚಿಂದಲೂ ಹಾಗೇ… ಹಸಿವು ತಡೆಯಲ್ಲ. “ಹೆಚ್ಚು ಕಮ್ಮಿಯಾದ್ರೆ ಎಲ್ಲಾ ಮುಗಿಯೋ ತಂಕ ಅವನು ಊಟ ಮಾಡೋ ಹಾಗಿಲ್ಲವಲ್ಲ…” ಯಾರು ಹೇಳಿದ್ದೋ…? ಎಲ್ಲ ನಿಶ್ಯಬ್ದ… `ಜೀಕ್ ಜೀಕ್’ ಮಾತ್ರಾ ಕೇಳುತ್ತಿದೆ. ಆ ಹುಡುಗ ಮಾತ್ರಾ ಇನ್ನೂ ಆಡುತ್ತಾ ಇದ್ದಾನೇನೋ.. ಯಾರು ತೂಗುತ್ತಿದ್ದಾರೋ… “ಚೇತನಾ ಊಟ ಮಾಡಿದ್ಯೇನಪ್ಪ” ಯಾರೋ ಕೇಳ್ತಾ ಇದಾರೆ “ಇರಲಿ ಉಯ್ಯಾಲೆ ಮೇಲೆ ಕೂತ್ಕೊಂಡೇ ಇದನ್ನ ತಿನ್ನು” ಏನು ಕೊಟ್ಟರೋ… ಅಂತೂ ಉಯ್ಯಾಲೆಯ ಸದ್ದಂತೂ ನಿಂತಿಲ್ಲ…. “ಶಾಮಾ ಇಲ್ಲಿ ಬಾ” “ಏನು ರಾಜಣ್ಣ” ಇಲ್ಲೇ ಎಲ್ಲೋ ಪಕ್ಕದಲ್ಲೇ ಕೂತಿದ್ದಾರೆ. “ಒಂದಷ್ಟು ದುಡ್ಡು ಮನೇಲಿಟ್ಟಿದಿ ತಾನೆ?” “ಒಂದೈದು ಸಾವ್ರ ಇದೆ. ಬೇಕೂಂದ್ರೆ ಎಟಿಎಂ ನಿಂದ ತರಬೋದಲ್ಲ…” “ಹಾಗಾದ್ರೆ ಸರಿ. ಹೇಗಾದ್ರೂ ಆಗ್ಲಿ. ನಾಳೆಯಿಂದ ಒಬ್ಬ ಅಡುಗೆಯವ್ರಿಗೆ ಹೇಳ್ಬಿಡು. ಮನೆ ತುಂಬಾ ಜನ ಇದಾರೆ”. “ಇವತ್ತೇ ಬರಬೇಕಿತ್ತು. ಅವರ ಮನೇಲಿ ಏನೋ ಹೆಚ್ಚು ಗಟ್ಲೆಯಂತೆ. ನಾಳೆಯಿಂದ ಬರ‍್ತಾರೆ”. “ಆಮೇಲೆ ಇನ್ನೊಂದು ವಿಷಯ. ರಾಮಾಜೋಯಿಸರು ಊರಲ್ಲೇ ಇದ್ದಾರೆ ತಾನೆ. ಆಮೇಲೆ ಆ ಹೊತ್ತಲ್ಲಿ ಎಡವಟ್ಟಾದೀತು”. “ಬೆಳಗ್ಗೆ ಪ್ರಕಾಶನ್ನ ಕಳಿಸಿದ್ದೆ ಅವರ ಮನೆ ಹತ್ರ. ಊರಲ್ಲಿಲ್ಲ, ಮಧ್ಯಾನ್ಹದ ಮೇಲೆ ಬರ‍್ತಾರೆ’ ಅಂದರಂತೆ. ಹೇಗೂ ಇರ‍್ಲಿ ಅಂತ ತಿಪ್ಪಾ ಶಾಸ್ತ್ರಿಗಳ ಮನೆಗೂ ಕಳಿಸಿದ್ದೆ. ಅವರಂತೂ ಇದಾರೆ.” “ನೋಡು ಇವನ್ನೆಲ್ಲಾ ಮೊದಲೇ ವ್ಯವಸ್ಥೆ ಮಾಡಿಕೊಂಡುಬಿಡಬೇಕು. ಆಮೇಲೆ ಒದ್ದಾಡೋ ಹಾಗಾಗ್ಬಾರ‍್ದು ಅಷ್ಟೆ”. ಎಷ್ಟು ಸ್ಪಷ್ಟವಾಗಿ ಕೇಳುತ್ತಿದೆ… “ಮತ್ತೆ ಆಮೇಲೆ ಇನ್ನೊಂದು ವಿಷಯ…..” ಇಲ್ಲಾ… ಇನ್ನೇನೂ ಸರಿಯಾಗಿ ಕೇಳಿಸುತ್ತಿಲ್ಲ… ಪಕ್ಕದಲ್ಲೇ ಇದಾರೋ ಇಲ್ಲ ಎದ್ದು ಹೋದರೋ….. ಇರಬಹುದೇನೋ… ಅಸ್ಪಷ್ಟವಾಗಿ ಏನೇನೋ

ಉಯ್ಯಾಲೆ Read Post »

ಕಾವ್ಯಯಾನ

ನೇಣಿಗೇರಿದ ನೈತಿಕ ಮೌಲ್ಯ.

ದೀಪಾಜಿ ನಾನು ಕೂಗುತ್ತಲೆ‌ ಇದ್ದೆ ಯಾರಾದರೂ ಬಂದು ಉಳಿಸಿಯಾರೆಂದು ಓಡುತ್ತಲೆ ಇದ್ದೆ ಯಾರಾದರೂ ಹಿಡಿದು ನಿಲ್ಲಿಸಿ ಆಸ್ಪತ್ರೆಯ ಬೆಡ್ಡಿನವರೆಗೆ ತಂದು ಬಿಟ್ಟಾರೆಂದು. ಬದುಕುವ ಆಸೆಗಲ್ಲ ಜೀವದ ಹಂಗಿಗೂ ಅಲ್ಲ ನೋವಿನ ನರಳಿಕೆಗಂತೂ ಅಲ್ಲವೇ ಅಲ್ಲ ಅದೆಲ್ಲವ ಅಂದೆ ಕೈಬಿಟ್ಟಿದ್ದೆ ಅತ್ಯಾಚಾರಕೆ ಸಿಲುಕಿ ಪೋಲೀಸ್ ಠಾಣೆ ನ್ಯಾಯಾಲಯ ಮಾಧ್ಯಮಗಳ ಮುಂದೆ ಬಂದ ದಿನವೆ ನಾನು ಸತ್ತು ಹೋಗಿದ್ದೆ ಇಲ್ಲಿ ಉಳಿದದ್ದು ವರ್ಷಾನುಗಟ್ಟಲೆ‌ ಚಪ್ಪಲಿ ಸವೆಯುವಂತೆ ತಿರುಗುತ್ತಿದ್ದದ್ದು ಕೇವಲ ಅಳಿದುಳಿದ ನಂಬಿಕೆ ಎಂಬ ಭರವಸೆಯ ಮೇಲೆ ತಪ್ಪಿದಸ್ತರ ಪೊಗರು ಕಳಚಿ ನೇಣಿಗೆ ಏರುವ ಕ್ಷಣದ ನಿರೀಕ್ಷೆಯಲಿ ಆದರಿಲ್ಲಿ ನೇಣುಗಂಬಕ್ಕೆರಿದ್ದು ಮಾತ್ರ ನೈತಿಕ ಮೌಲ್ಯ.. ಈಗಲೂ ಸುಟ್ಟು ಬೂದಿಯಾದದ್ದು ನಾನಲ್ಲ ನನ್ನ ದೇಹವೂ ಅಲ್ಲ ಈ ವ್ಯವಸ್ಥೆಯ ಮೇಲಿದ್ದ ನಂಬಿಕೆ ಅದೀಗ ನಡುರಸ್ತೆಯಲ್ಲಿ ಉರಿದು ಬೂದಿಯಾಯ್ತು ಸುಟ್ಟು ಕಮರಿದ ವಾಸನೆ ಇಡೀ ಜಗವನೆ ಆವರಿಸಿತು ಸಂತ್ರಸ್ತರ ಕೂಗು ಇಲ್ಲಾರ ಕಿವಿಗೂ ಕೇಳಿಸಲಿಲ್ಲ ವಾಸನೆ ಹಿಡಿದ ಮೂಗುಗಳು ಕೈವಸ್ತ್ರದ ಒಳಗೆ ಬಂಧಿಯಾಗಿ ದಾಟಿ ಹೋದವು ನನ್ನಂತೆ ನಲುಗಿ ಮತ್ತೆ ಕಟಕಟೆಯಲಿ ನಿಲ್ಲಲು ಹೊರಟ ಹೆಂಗಸರ ಗುಂಪು ಸುಟ್ಟ ಚರ್ಮದ ವಾಸನೆಗೆ ಹೆದರಿ ನ್ಯಾಯದ ನಿರೀಕ್ಷೆ ಬಿಟ್ಟು ಮೂಲೆ ಸೇರಿದರು..

ನೇಣಿಗೇರಿದ ನೈತಿಕ ಮೌಲ್ಯ. Read Post »

ಕವಿತೆ ಕಾರ್ನರ್

ಮತ್ತೆಂದೂ ಬರೆಯಲಾರೆ

ನಾನಿನ್ನು ಕಾಯಲಾರೆಮುರಿದ ಮೌನದೊಳಗೆ ತೇಲಿಬರುವನಿನ್ನ ಮಾತಿನೊಂದು ಹೆಣಕ್ಕಾಗಿನಾನಿನ್ನು ಕಾಯಲಾರೆಕುಸಿದುಬಿದ್ದ ನಂಬಿಕೆಯೊಂದುಮತ್ತೊಮ್ಮೆ ಚಿಗುರುವ ಚಣಕ್ಕಾಗಿನಾನಿನ್ನು ಕಾಯಲಾರೆ ಎಂದೂ ಅರಳಲಾರೆನೆಂದು ಮುನಿಸಿಕೊಂಡಹೂವು ಬಿರಿಯುವಾ ಕ್ಷಣಕ್ಕಾಗಿನಾನಿನ್ನು ಕಾಯಲಾರೆಸ್ವರ್ಗದ ನಿರೀಕ್ಷೆಯಲಿನಿತ್ಯ ನರಕದ ಬಾಗಿಲು ಕಾಯುವಯಾತನಾದಾಯಕ ಬದುಕಿನಂಗಳದಲ್ಲಿನಾನಿನ್ನು ಕಾಯಲಾರೆಹೊರದಾರಿಗಳೇ ಇರದೀ ನರಕದೆಡೆಗೆನಡೆದು ಬರುವೆಂಬ ನಂಬಿಕೆಯಲ್ಲಿ ನಾನಿನ್ನು ಬರೆಯಲಾರೆಬರೆದದ್ದೆಲ್ಲ ವ್ಯರ್ಥಪ್ರಲಾಪವಾಗಿಲೋಕನಿಂದಿತನಾದವನ ಕಂಡುನಗುವ ಜನರ ಬಾಯಿಗೆ ಅನ್ನವಾಗಿನರಳುವ ಕುನ್ನಿಯಾಗಿ! ಕಾಯಲಾರೆಬೇಡಲಾರೆಮರುಗಲಾರೆಮತ್ತೆಂದೂಬರೆಯಲಾರೆ.

ಮತ್ತೆಂದೂ ಬರೆಯಲಾರೆ Read Post »

ಇತರೆ

ರಾಜಕಾರಣ

ಪಕ್ಷ ರಾಜಕಾರಣಕ್ಕೊಂದು ಪರ್ಯಾಯ ಗಣೇಶ ಭಟ್, ಶಿರಸಿ ಕೊಳೆತು ನಾರುತ್ತಿರುವ ಪಕ್ಷ ರಾಜಕಾರಣಕ್ಕೊಂದು ಪರ್ಯಾಯ…… ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚು ಪಕ್ಷಗಳಿದ್ದಾಗ, ಆಡಳಿತ ಪಕ್ಷದ ತಪ್ಪು, ಒಪ್ಪುಗಳನ್ನು ವಿರೋಧ ಪಕ್ಷಗಳು ವಿಶ್ಲೇಷಿಸುತ್ತವೆಂದು ಭಾವಿಸಲಾಗಿತ್ತು. ಜನಹಿತವೇ ಆಡಳಿತದ ಉದ್ದೇಶವಾಗಿದ್ದರೂ ಅದನ್ನು ಸಕಾರಗೊಳಿಸುವುದಕ್ಕಾಗಿ ಪ್ರತಿಯೊಂದು ಪಕ್ಷಕ್ಕೂ ತನ್ನದೇ ಆದ ಸಿದ್ದಾಂತ, ಪ್ರಣಾಳಿಕೆ, ಕಾರ್ಯವಿಧಾನವಿರುತ್ತದೆಂಬ ಭಾವನೆಯಿಂದ ಪಕ್ಷ ಆಧಾರಿತ ಚುನಾವಣೆ, ಸರ್ಕಾರ ರಚನೆಗಳಿಗೆ ನಮ್ಮ ಸಂವಿಧಾನ ಅವಕಾಶ ಕಲ್ಪಿಸಿದೆ. ಪಾಶ್ಚಾತ್ಯ ಪ್ರಜಾಪ್ರಭತ್ವ ದೇಶಗಳಲ್ಲಿರುವಂತೆ ನಮ್ಮಲ್ಲಿಯೂ ಸೀಮಿತ ಸಂಖ್ಯೆಯ ರಾಜಕೀಯ ಪಕ್ಷಗಳು ನಮ್ಮ ಸಂವಿಧಾಬನ ಕರ್ತರು ಊಹಿಸಿರಬಹುದು. ಈಗ 2 ಸಾವಿರಕ್ಕೂ ಹೆಚ್ಚು ಸಂಖ್ಯೆಯ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದಲ್ಲಿ ನೋಂದಾಯಿತವಾಗಿವೆ. ಇನ್ನೂ ಹೊಸ ಹೊಸ ಪಕ್ಷಗಳು ಹುಟ್ಟಿಕೊಳ್ಳುತ್ತಲೇ ಇವೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ರಾಜಕೀಯ ಪಕ್ಷಗಳ ಅಸ್ತಿತ್ವಕ್ಕೆ ಬರಬಹುದೆಂಬ ಕಲ್ಪನೆ ಪ್ರಾಯಶಃ ಸಂವಿಧಾನ ಕರ್ತೃರಿಗೆ ಇಲ್ಲದಿರಬಹುದು. ಸಾವಿರಾರು ರಾಜಕೀಯ ಪಕ್ಷಗಳ ಸಿದ್ಧಾಂತದಲ್ಲಿ ಮೂಲಭೂತ ವ್ಯತ್ಯಾಸವೇ ಇಲ್ಲ. ಇವುಗಳೆಲ್ಲವೂ ಬಂಡವಾಳವಾದದ ಚಿಂತನೆಯ ಚೌಕಟ್ಟಿನೊಳಗೇ ಸೀಮಿತವಾಗಿವೆ. ಭಾರತದ ಹತ್ತಾರು ಕಮ್ಯುನಿಸ್ಟ್ – ಪಕ್ಷಗಳು ಹೆಸರಿಗೆ ಮಾತ್ರ ಕಮ್ಯುನಿಸ್ಟ್ ಬೋರ್ಡ್ ಹಾಕಿಕೊಂಡಿವೆಯೇ ಹೊರತು ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಅಂಟಿಕೊಂಡಿಲ್ಲ. ಕಮ್ಯುನಿಸ್ಟ್ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿಲ್ಲ. ಪಕ್ಷದ ಸರ್ವಾಧಿಕಾರಿ ಆಡಳಿತವೇ ಅವರ ಗುರಿ.ಇಡೀ ಅರ್ಥವ್ಯವಸ್ಥೆ ಸರ್ಕಾರದ ನಿಯಂತ್ರಣದಲ್ಲೇ ಇರಬೇಕೆಂಂಬ ಕಮ್ಯುನಿಸಂನ ವಾದವನ್ನು ಈ ಪಕ್ಷಗಳು ಹೇಳುವುದೂ ಇಲ್ಲ. ಅಂದ ಮೇಲೆ ಇಷ್ಟೊಂದು ಪಕ್ಷಗಳು ಯಾಕಿವೆ? ನಮ್ಮ ದೇಶದ ರಾಜಕೀಯ ಪಕ್ಷಗಳು ದೊಡ್ಡ ಅಥವಾ ಸಣ್ಣ ಪ್ರಮಾಣದ ಸ್ವಹಿತಾಸಕ್ತಿಯ ಗುಂಪುಗಳು. ಯಾವುದೋ ಒಂದು ಪಕ್ಷದಲ್ಲಿರುವ ವ್ಯಕ್ತಿಗೆ ಅಪೇಕ್ಷಿತ ಸ್ಥಾನಮಾನ ಸಿಗಲಿಲ್ಲವೆಂದರೆ ಬೇರೊಂದು ಪಕ್ಷದವರು ಆವ್ಹಾನಿಸಲಿಲ್ಲವೆಂದರೆ, ಕೈಯ್ಯಲ್ಲಿ ಸಾಕಷ್ಟು ಹಣವಿದ್ದರೆ, ಜಾತಿ, ಮತಗಳ ಬೆಂಬಲದ ಭರವಸೆ ಇದ್ದರೆ, ಕೂಡಲೇ ಹೊಸ ಪಕ್ಷವನ್ನು ಹುಟ್ಟುಹಾಕುತ್ತಾರೆ. ಇಂತಹ ಸಂದರ್ಭಗಳಲ್ಲಿ ಸಿದ್ದಾಂತವೆನ್ನುವುದು ಬರೀ ಬೂಟಾಟಿಕೆ ಮಾತ್ರ. ಪ್ರಾದೇಶಿಕ ಅಥವಾ ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಮಡ್ ಸಂಸ್ಕೃತಿ ಗಟ್ಟಿಯಾಗಿ ಬೇರೂರಿದೆ. ಪ್ರತಿಯೊಂದು ಚಿಕ್ಕ ಪುಟ್ಟ ವಿಷಯಗಳಿಗೂ ಹೈಕಮಾಂಡ್ ಒಪ್ಪಿಗೆ ಪಡೆಯುವ ಪರಿಸ್ಥಿತಿಯಿಂದಾಗಿ ಸ್ಥಳೀಯ ಜನಪ್ರತಿನಿಧಿಯು ಯಾವುದೇ ಸ್ವಾತಂತ್ರ್ಯವಿಲ್ಲದ ಪಕ್ಷದ ಹೈಕಮಾಂಡ್ ಗುಲಾಮನಂತೆ ವರ್ತಿಸುವ ಸ್ಥಿತಿ ಇದೆ. ಕುಟುಂಬ ನಿಷ್ಠೆ, ಜಾತಿ, ಮತ, ಪಂಥಗಳ ಆಧಾರದ ಮೇಲೆ ಜನಸಾಮಾನ್ಯರನ್ನು ದಿಕ್ಕು ತಪ್ಪಿಸುವ ಚಿಂತನೆಗಳನ್ನೇ ಸಿದ್ಧಾಂತವೆಂದು ಬಿಂಬಿಸುವ ಪ್ರಯತ್ನವನ್ನು ಹಲವು ರಾಜಕೀಯ ಪಕ್ಷಗಳು ಮಾಡುತ್ತಿವೆ. ಹೇಗಾದರೂ ಮಾಡಿ ಅಧಿಕಾರದ ಗದ್ದುಗೆ ಹಿಡಿಯಬೇಕೆಂಬುದೇ ರಾಜಕಾರಣಿಗಳ ಗುರಿ. ಅಧಿಕಾರದ ಲಾಲಸೆಗಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರನ್ನೂ ನಿಯಂತ್ರಿಸುವ ಉದ್ದೇಶದಿಂದ ರೂಪುಗೊಂಡ ಪಕ್ಷಾಂತರ ನಿಷೇಧ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಹೊಸ ಹೊಸ ವಿಧಾನಗಳನ್ನು ಹುಟ್ಟಿ ಹಾಕಲಾಗುತ್ತಿದೆ. ಒಂದು ಪಕ್ಷದಿಂದ ಆಯ್ಕೆಯಾದವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಇನ್ನೊಂದು ಪಕ್ಷ ಸೇರಿ ಪುನಃ ಚುನಾವಣೆಗೆ ಸ್ಪರ್ಧಿಸುವದು ಇತ್ತೀಚಿನ ವರ್ಷಗಳಲ್ಲಿ ಮಾಮೂಲಾಗಿದೆ. ಅಧಿಕಾರ ಮತ್ತು ಅದರೊಂದಿಗೆ ಬರುವ ಹಣದ ಹರಿವು ರಾಜಕಾರಣಿಗಳ ನೈತಿಕತೆ ಮತ್ತು ಮನಸ್ಸಾಕ್ಷಿಯನ್ನು ಪಾತಾಳಕ್ಕೆ ತಳ್ಳಿ ಬಿಟ್ಟಿದೆ. ಅಧಿಕಾರಕ್ಕಾಗಿ ಮಹಾರಾಷ್ಟ್ರದಲ್ಲಿ ಹಾಗೂ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಅಸಹ್ಯ ಹುಟ್ಟಿಸುತ್ತಿವೆ. ದುರ್ಜನರು ನಡೆಸುವ ದುರಾಚಾರಕ್ಕಿಂತ ಸಜ್ಜನರ ನಿಷ್ಕ್ರಿಯತೆಯೇ ಹೆಚ್ಚು ಅಪಾಯಕಾರಿ ಎಂಬ ಗಾದೆ ನಿಜವಾಗ ತೊಡಗಿದೆ. ಎಲ್ಲಿಯವರೆಗೆ ಮತದಾರರು ಹಣ, ಹೆಂಡ, ಜಾತಿ, ಮತ, ಪಂಥ, ಕೋಮುಭಾವನೆ , ಭಾವನಾತ್ಮಕ ವಿಷಯಗಳಿಗೆ ಮರುಳಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೋ ಅಲ್ಲಿಯವರೆಗೆ ರಾಜಕಾರಣಿಗಳ ಸಮಾಜ ಸೇವೆಯ ಸೋಗಿನ ಕಳ್ಳಾಟ ನಡೆಯುತ್ತಲೇ ಇರುತ್ತದೆ. ರಾಜಕೀಯ ಪಕ್ಷಗಳೆಂದರೆ ಅಧಿಕಾರಕ್ಕಾಗಿ ಹಪಹಪಿಸುವ ಸಮಾನ ಮನಸ್ಕರ ಗುಂಪು ಎನ್ನುವಂತಾಗಿದೆ. ಮತ ಖರೀದಿಗಾಗಿ ಚುನಾವಣೆಗಳಲ್ಲೂ ಹಣ ಚೆಲ್ಲುವುದು, ಗೆದ್ದ ನಂತರ ಖರ್ಚು ಮಾಡಿದ್ದರ ಜೊತೆಗೆ ಭವಿಷ್ಯದ ಚುನಾವಣೆ ಖರ್ಚಿಗಾಗಿ ಕೂಡಿ ಹಾಕುವುದಕ್ಕಾಗಿ ಭ್ರಷ್ಟಾಚಾರ ನಡೆಸುವ ವಿಷ ವರ್ತುಲದಲ್ಲಿ ಇಂದಿನ ರಾಜಕೀಯ ವ್ಯವಸ್ಥೆ ಬಳಲುತ್ತಿದೆ. ಈ ವಿಷ ವರ್ತುಲವನ್ನು ತುಂಡರಿಸಬೇಕೆಂದರೆ, ವಯಸ್ಸು ಆಧಾರಿತ ಸಾರ್ವತ್ರಿಕ ಮತದಾನದ ಹಕ್ಕನ್ನು ಬದಲಿಸಬೇಕು. ಆಡಳಿತ ನಡೆಸುವ ಅಧಿಕಾರ ಉಳ್ಳವರನ್ನು ಆಯ್ಕೆ ಮಾಡುವ ವ್ಯಕ್ತಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ವಿಷಯಗಳ ಕನಿಷ್ಟ ಮಟ್ಟದ ಜ್ಞಾನ ಇರಬೇಕಾದುದು ಅಗತ್ಯ. ಒಬ್ಬ ಪಂಚಾಯತ ಸದಸ್ಯನಿಂದ ಏನನ್ನು ನಿರೀಕ್ಷೆ ಮಾಡಬೇಕು, ಒಬ್ಬ ಜಿಲ್ಲಾ ಪಂಚಾಯತ್ ಸದಸ್ಯನ ಕರ್ತವ್ಯಗಳೇನು? ವಿಧಾನಸಭಾ ಸದಸ್ಯ , ಸಂಸದರ ಹೊಣೆಗಾರಿಕೆಯೇನು ಎಂಬ ಜ್ಞಾನ ಮತದಾರರ ಅರಿವಿನಲ್ಲಿ ಇರಬೇಕು. ಅರ್ಥವ್ಯವಸ್ಥೆಯ ಕುರಿತಾದ ಮೂಲಭೂತ ಜ್ಞಾನ, ರಾಜಕೀಯ ಪಕ್ಷಗಳ ಪ್ರಣಾಳಿಕೆಯನ್ನು ಅರ್ಥಮಾಡಿಕೊಳ್ಳುವ ಜಾಣ್ಮೆ ಇಲ್ಲದ ಮತದಾರರು ಮಾಡುವ ಆಯ್ಕೆ ಆಧಾರ ರಹಿತವಾಗುತ್ತದೆ. ಸ್ವಾರ್ಥಿಗಳು, ಅಯೋಗ್ಯರೇ ಆಯ್ಕೆಯಾಗಿಬಿಡುತ್ತಾರೆ. ಆದ್ದರಿಂದಲೇ ಸಾರ್ವತಿಕ ಮತದಾನದ ಹಕ್ಕನ್ನು ನೀಡುವ ಬದಲಿಗೆ ಪರೀಕ್ಷೆ ನಡೆಸಿದ ನಂತರವೇ ಉತ್ತೀರ್ಣರಾದವರನ್ನೂ ಮತದಾರರ ಯಾದಿಗೆ ಸೇರ್ಪಡೆ ಮಾಡುವಂತಾಗಬೇಕು. ಇದಕ್ಕಾಗಿ ಚುನಾವಣಾ ಆಯೋಗದಂತಹ ಸ್ವಾಯತ್ತ ಸಂಸ್ಥೆಗೆ ಮತದಾರರ ಸಮುದಾಯ ಸ್ಥಾಪಿಸುವ ಹೊಣೆಗಾರಿಕೆ ನೀಡಬೇಕು. ಸಾಮಾಜಿಕ , ಆರ್ಥಿಕ, ರಾಜಕೀಯ ವಿಷಯಗಳ ಕುರಿತು ಪ್ರಾಥಮಿಕ ಜ್ಞಾನವನ್ನು ಪಸರಿಸುವ , ಆಸಕ್ತರಿಗೆ ಶಿಕ್ಷಣ ನೀಡುವ, ಪರೀಕ್ಷೆಗಳನ್ನು ನಡೆಸುವ ಹೊಣೆಗಾರಿಕೆ ಚುನಾವಣಾ ಆಯೋಗಕ್ಕೆ ನಡೆಸುವ ಹೊಣೆಗಾರಿಕೆ ಚುನಾವಣಾ ಆಯೋಗಕ್ಕೆ ಇರಬೇಕು. ಅವರು ಕಾಲಕಾಲಕ್ಕೆ ನಡೆಸುವ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣರಾದ ವ್ಯಕ್ತಿಗಳನ್ನು ಅರ್ಹ ಮತದಾರರೆಂದು ಪೋಷಿಸಬೇಕು. ವಯಸ್ಕರಿಗೆ ಶಿಕ್ಷಣ ನೀಡುವ, ಮತದಾರರಾಗುವ ಅವಕಾಶ ನೀಡುವ ಪರೀಕ್ಷೆಗಳನ್ನು ನಡೆಸುವ ಕಾರ್ಯ ನಿರಂತರವಾಗಿ ನಡೆಯುತ್ತಿರಬೇಕು. ಒಬ್ಬ ವ್ಯಕ್ತಿ ಎಷ್ಟು ಬಾರಿ ಬೇಕಾದರೂ ಈ ಪ್ರವೇಶ ಪರೀಕ್ಷೆ ಬರೆಯುವ ಅವಕಾಶ ಇರಬೇಕು.

ರಾಜಕಾರಣ Read Post »

ಇತರೆ

ಪಯಣ

ಸಂಜಯ ಮಹಾಜನ್ ಅಳಿದು ಹೋಗುವ ಮಾನವ ನಿರ್ಮಿತ ಕಟ್ಟಡಗಳ ಮಧ್ಯ ಅಳಿಯದೆ ಮುಂದೆ ಸಾಗಿದೆ ಹಸಿರೆಲೆಗಳ ಪಯಣ ಸದ್ದಿಲ್ಲದೆ ಮಾಸಿ ಹೋಗುವ ದೇಹಕ್ಕೆ ಚೈತನ್ಯ ತುಂಬುವ ಹೃದಯಾಂತರಾಳದ ನೆನಪುಗಳ ಪಯಣ ಪಚ್ಚೆಯಾಗಸದಿ ಸುರಿವ ಮಳೆಹನಿ ಕಪ್ಪು ಹಂಚಿನ ಹಸಿರ ಹಾಸಿನ ಮಧ್ಯ ಮಳೆಹನಿಗಳ ಪಯಣ ಮೊಳಕೆಯೊಂದು ಬೇರೂರಿ ಆಗಸಕ್ಕೆ ಕೈಚಾಚಲು ಗಟ್ಟಿ ಕಾಂಕ್ರೀಟು ಮೇಲೆ ನಡೆಸಿದೆ ಸೆನಸಾಟದ ಪಯಣ ಭೂವಿಯಲ್ಲಿ ಹೆಜ್ಜೆಯುರಿದ ಕಬ್ಬಿಣದ ಸರಳುಗಳು ಬಿಡುಗಡೆಗೆ ನಡೆಸಿವೇ ಕನಸುಗಳ ಪಯಣ ಈ ಪಯಣಗಳ ಮಧ್ಯ ಚಂಚಲ ನನ್ನ ಮನಸೊಂದು ಬಯಸಿದೆ ಎರಡು ಹೆಜ್ಜೆಯ ಪಯಣ.

ಪಯಣ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಆತ್ಮಸಾಕ್ಷಿ ನನ್ನ ಮುಂದೆ ನಡೆಎಂದು ನಾನು ಕೇಳುವುದಿಲ್ಲ ನನ್ನ ಹಿಂದೆ ಬಾಎಂದು ನಾನು ಹೇಳುವುದಿಲ್ಲ ನನ್ನ ಎಡಕ್ಕೆ ಇಲ್ಲಾ ಬಲಕ್ಕೆಬಾಎಂದು ನಾನು ಭೇಡುವುದಿಲ್ಲ! ನಾ ನಕ್ಕಾಗನನ್ನೊಡನೆ ನಗು ನಾ ಅತ್ತಾಗನನ್ನೊಡನೆ ಅಳು ನಾ ನಡೆವಾಗ ನನ್ನ ನೆರಳಾಗಿರುನಾ ನುಡಿವಾಗ ನನ್ನ ಕೊರಳಾಗಿರುಎಂದೂ ಕೇಳುವುದಿಲ್ಲ! ಹೇಗೆ ನಾನುನಡೆಯುತ್ತೇನೆಯೊನನ್ನ ಆತ್ಮಸಾಕ್ಷಿಯ ಹಾಗೆ! ನೀನೂ ನಡೆನಿನ್ನ ಆತ್ಮಸಾಕ್ಷಿಯ ಹಾಗೆಅಂತಲಾದರೂನಾನು ಯಾಕೆ ಹೇಳಲಿ?

ಕವಿತೆ ಕಾರ್ನರ್ Read Post »

ಇತರೆ

ಅನಿಸಿಕೆ

ಹೆಣ್ಣಿನ ಮೇಲಿನ ನಿರಂತರ ಅತ್ಯಾಚಾರ ಐಶ್ವರ್ಯ ತನ್ನ ಮೂರು ವರ್ಷದ ಹೆಣ್ಣು ಮಗುಗೆ ಮನೆಯಿಂದಾಚೆ ಕಳಿಸ್ಬೆಕಾದ್ರೆ ಒಬ್ಬ ತಾಯಿ ಹಾಕಿದ್ದ ಕಾಲ್ ಗೆಜ್ಜೆ, ಕೈಬಳೆ, ಹೂವೆಲ್ಲ ತೆಗೆದು ಗಂಡ್ಮಕ್ಕಳ ತರ ತಲೆಗೆ ಎಣ್ಣೆ ಹಾಕಿ ಕ್ರಾಪ್ ಬಾಚಿ ಹುಡ್ಗುರ ಬಟ್ಟೆ ಹಾಕಿದ್ದು ನೋಡಿ ನಾನ್ ಅನ್ಕೊಂಡೆ ಅವರಿಗೆ ಪಾಪ ಗಂಡ್ಮಗು ಅಂದ್ರೆ ಇಷ್ಟ ಅನ್ಸತ್ತೆ ಅವರಿಗೆ ಗಂಡು ಮಗು ಇಲ್ಲ ಅನ್ಕೊಳ್ತಿದ್ದ ಹಂಗೆನೆ ಮನೆಯಿಂದ ಆಚೆ ಅಳುತ್ತ ಅವರ ಮಗ ಬಂದು ನನ್ ಬಟ್ಟೆ ಯಾಕೆ ಅವಳಿಗೆ ಹಾಕಿದೆ ಅಂಥ ಹಠ ಮಾಡೋದು ನೊಡಿ ಕೂತುಹಲ ಸ್ವಲ್ಪ ಜಾಸ್ತಿನೆ ಆಯ್ತು. ಆದ್ರೆ ಆ ತಾಯಿ ಹೇಳಿದ್ದು ಕೇಳಿ ಒಂದು ಕ್ಷಣ ಮೈ, ಮನಸೆಲ್ಲ ನಿಸ್ತೇಜವಾಗಿ ಹೋಯ್ತು. ಹೆಣ್ಣು ಅಂತ ಹೆಮ್ಮೆ ಪಡೋಕು ಆಗ್ದೆ ಇರುವಷ್ಟು ಹೀನಾಯ ಪರಿಸ್ಥಿತಿಲಿ ಬದುಕ್ತಿದಿವಾ ಅನ್ನಸ್ತು. ಮಗನ್ನ ಸಮಾಧಾನ ಮಾಡ್ತ ಆ ತಾಯಿ ಹೇಳಿದ್ದು ಒಂದೇ ಮಾತು ನಂಗೂ ಅವಳಿಗೆ ಹೆಣ್ಣಿನ ಬಟ್ಟೆ ಹಾಕಿ ಗೆಜ್ಜೆ ಬಳೆ ಹಾಕಿ ನೋಡೋಕೆ ಇಷ್ಟ ಆದ್ರೆ ಅವಳು ಅದೆಲ್ಲ ಹಾಕಿದ್ನ ನೋಡಿ ಅವಳು ಹೆಣ್ಣು ಅಂತ ಗೊತ್ತಾದ್ರೆ ಚಿಕ್ಕ ಮಗು ಅಂತಾನೂ ನೋಡ್ದೆ ಎಲ್ಲಿ ನಾಯಿಗಳ ತರ ಅವಳನ್ನ ಕಿತ್ತಾಡ್ಕೊಂಡು ಹಂಚ್ಕೊಳ್ತಾರೊ ಅನ್ನೊ ಭಯ ಅಂದ್ರು. ಹುಟ್ಟಿಂದ ಹೂಳೊವರೆಗು ಹೆಣ್ಣು ಹುಣ್ಣಾಗದೆ ಬದುಕೋದೆ ಜೀವಮಾನದ ದೊಡ್ಡ ಸಾಧನೆ ಅನ್ನಸ್ತಿದೆ ಇತ್ತಿಚೆಗೆ…. ಇವತ್ತು ಪ್ರಿಯಾಂಕ, ಅವತ್ತು ನಿರ್ಭಯ, ಮೊನ್ನೆ ಮಧು, ಮತ್ತೆ ನಾಳೆ..? ನಮ್ಮಗಳಲ್ಲೆ ಇನ್ಯಾರದ್ದೊ ಮನೆಯ ಹೆಣ್ಣು.ಇದೇ ತರ ಚಿಕ್ಕ ಮಕ್ಕಳು, ಮುದುಕಿಯರು, ಮಾನಸಿಕ ಅಸ್ವಸ್ಥರು ಅನ್ನೊದನ್ನು ನೋಡದೆ ಸಿಕ್ಕ ಸಿಕ್ಕ ಹೆಣ್ಣು ಮಕ್ಕಳ ಮೇಲೆ ನಿಮ್ಮ ಕಾಮ ತೃಷೆನ ತೀರಿಸ್ಕೊಳ್ತ ಹೋದ್ರೆ ನಾಳೆ ರೋಡಲ್ಲಿ ಅಡ್ಡಾಡೊ ಹೆಣ್ಣು ನಾಯಿನೂ ನಿಮ್ಮಗಳ ಹತ್ರ ಸುಳಿಯಲ್ಲ. ದೇವರಿಗೆಲ್ಲ ಹರಕೆ ಹೊತ್ತು, ಮಕ್ಕಳನ್ನ ಪಡೆದು ಅವರನ್ನ ಮುದ್ದಾಗಿ ಸಾಕಿ ಇನ್ಯಾವನ್ದೊ ತೀಟೆಗೆ ಬಲಿ ಕೊಡುವ ಬದಲು, ಇದೆಲ್ಲ ನೋಡ್ತಿದ್ರೆ ಮೊದಲಿದ್ದ ಭ್ರೂಣ ಲಿಂಗ ಪತ್ತೆ ಆವಿಷ್ಕಾರವೇ ಚೆಂದವಿತ್ತು ಮೊದಲೆ ಹೆಣ್ಣು ಅಂತ ತಿಳ್ಕೊಂಡು ಹುಟ್ಟಿಗೆ ಕಾರಣರಾದವರ ಕೈಕಲ್ಲಿ ಸಾಯೋದೆ ನೆಮ್ಮದಿ. ಮೊದಲೆಲ್ಲ ಮನೆ ತುಂಬಾ ಮಕ್ಳಿರ್ತಿದ್ರು, ಬರ್ತಾ ಬರ್ತಾ ಭ್ರೂಣ ಲಿಂಗ ಪತ್ತೆ ನಿಷೇಧದಿಂದ ಗಂಡೊ ಹೆಣ್ಣೊ ಮನೆಗೊಂದು ಅನ್ನೊ ಹಾಗಾಯ್ತು ಆದ್ರೆ ಇವಾಗಿರೊ ಕಾಲಮಾನ ನೋಡಿದ್ರೆ ಹೆಣ್ಣು ಬಂಜೆಯಾಗೇ ಉಳಿದ್ರು ಪರವಾಗಿಲ್ಲ ಮತ್ತೊಂದು ಹೆಣ್ಣು ಹುಟ್ಟೊದೆ ಬೇಡ ಅನ್ಸ್ತಿದೆ….. ಹೆಣ್ಣಿನ ಉಬ್ಬು ತಗ್ಗಾದ ಮಾಂಸದ ಮುದ್ದೆಯ ದೇಹವಿರೋದೆ ನಿಮ್ಗಳಿಗೆ ಜನ್ಮ ಕೋಡೊಕೆ ಹಾಲಿಣಿಸಿ ಬೆಳೆಸೋಕೆ ಆದ್ರೆ ನೀವುಗಳು ಹೆಣ್ಣಿನ ಅದೇ ಎರಡು ಅಂಗಗಳಿಗೆ ಆಸೆ ಪಟ್ಟು ಅತ್ಯಾಚಾರ ಕೊಲೆ ಮಾಡ್ತಿರ, ಅಲ್ಲ ನಂಗೆ ಒಂದು ವಿಷಯ ಅರ್ಥ ಆಗ್ತಿಲ್ಲ ಕಂಡವರ ಮನೆ ಹೆಣ್ಮಕ್ಕಳ ಎದೆ ಸೀಳು ಕಂಡು ಕಣ್ಮುಚ್ಚದೆನೆ ಎದೆ ಕಡೆ ನೋಡೋವಾಗ ನಿಮ್ಗೆ ಹಾಲುಣಿಸಿ ಬೆಳೆಸಿದ ನಿಮ್ಮ ಅಮ್ಮ ನೆನಪಾಗಲ್ವ? ಬೀದಿಲಿ ಹೋಗೊ ಹೆಣ್ಣನ್ನ ಬೆತ್ತಲೆ ಮಾಡಿ ಹಿಗ್ಗಿ ಹಿಂಸಿಸುವಾಗ ಅವಳ ಅಣ್ಣ ಅನ್ನೊ ಕೂಗು ನಿಮ್ಗೆ ಕೇಳ್ಸಲ್ವ? … ಅಥವಾ ಅವಳಲ್ಲಿ ನಿಮ್ಮ ಅಕ್ಕ ತಂಗಿಯರು ಕಾಣಲ್ವ?..ದೇಹದ ಬಿಡಿ ಭಾಗಗಳ ಕಲಿಯೊ ವಯಸ್ಸಿನ ಮಕ್ಕಳ ಮೈ ಮೇಲೆಲ್ಲಾ ಮೃಗಗಳ ತರ ಬೀಳ್ತಿರಲ್ವ ಇದೇನ ನಿಮ್ಮ ಗಂಡಸ್ತನ?….ಥೂ… ಇಂಥವರನ್ನೆಲ್ಲ ಮೃಗಗಳಿಗೆ ಹೋಲ್ಸಿದ್ರೆ ಪಾಪ ಅವಕ್ಕೂ ಅವಮಾನ ಆಗಬಹುದು. ಮಕ್ಕಳಿಂದ ಹಿಡಿದು ಮುದುಕಿಯರ ಮೇಲೆಲ್ಲಾ ಗಂಡಸ್ತನ ತೊರ್ಸೊ ಗಂಡ್ಸು ಸಮಾಜದಲ್ಲಿ ಗಂಡ್ಸು ಅಂತ ಅನ್ಸ್ಕೊಳೋದು ನಾಮಾಕಾವಸ್ಥೆಗಷ್ಟೆ…. ಯಾರದ್ದೊ ಮನೆಯ ಹೆಣ್ಮಕ್ಳಿಗೆ ಹಿಂಗಾಗಿ, ಬೆಂಕಿಲಿ ಸುಟ್ಟು, ಕರಕಲಾದರೂ ಕೊನೆಗೆ ನಾವ್ ಮಾತ್ರ ಸುಡೋದು ಸತ್ತ ಆ ಜೀವಾನ ಜೊತೆಗೊಂದು ಕ್ಯಾಂಡಲ್ ನ.‌ ಕ್ಯಾಂಡಲ್ ಸುಟ್ಟು ಶಾಂತಿ ಕೋರುವ ಬದಲು ಸುಟ್ಟವನನ್ನೆ ಸುಟ್ಟರೆ ಬದಲಾಗಬಹುದೆನೊ ಮುಂದೆ ಕಾಲ. ಅತ್ಯಾಚಾರಕ್ಕೊಳಗಾದ ಹೆಣ್ಣು ನ್ಯಾಯ ಕೇಳಿದ್ರೆ ನ್ಯಾಯ ಕೊಡೊ ಕಾನೂನುಗಳೇ ಮತ್ತೆ ಮತ್ತೆ ಪ್ರಶ್ನೆ ಮಾಡಿ ಮತ್ತಷ್ಟು ಮಾನಸಿಕವಾಗಿ ಅತ್ಯಾಚಾರ ಮಾಡ್ತವೆ. ಆದ ಬಸಿರಿಗೊಂದಿಷ್ಟು ಸಾಂತ್ವಾನ ನೀಡಿ ಕೈ ತೊಳ್ಕೊತಾವೆ. ಇನ್ನು ಸ್ವಲ್ಪ ಮುಂದುವರೆದ್ರೆ ನಾಲ್ಕೈದು ವರ್ಷ ಜೈಲು ಒಂದಿಷ್ಟು ದುಡ್ಡು ಅಂತ ಹಾಕ್ತಾರೆ. ಮತ್ತೈದು ವರ್ಷದಲ್ಲಿ ಅಂಥದ್ದೆ ಕೃತ್ಯಗಳು ನಡಿತಾನೇ ಇರತ್ತೆ. ಈಗಲಾದರೂ ಕಾನೂನುಗಳು ಬದಲಾಗದಿದ್ದರೆ ಮುಂದೊಂದು ದಿನ ಜನರ ಮನಸ್ಸಲ್ಲಿ ರಾಷ್ಟ ಧ್ವಜ ಕೇವಲ ಒಂದು ಬಟ್ಟೆಯಾಗಿ, ಕೋರ್ಟಗಳು ಕಟ್ಟಡಗಳಾಗಿ, ಸಂವಿಧಾನಗಳು ಬರೀ ಪುಸ್ತಕಗಳಾಗಿ ಉಳ್ಕೊಳೊದ್ರಲ್ಲಿ ಸಂಶಯವೇ ಇಲ್ಲ…… ಅರಬ್ ನಂತಹ ದೇಶಗಳಲ್ಲಿ ಅತ್ಯಾಚಾರವಿರಲಿ ಪರ ಪುರುಷನ ಹೆಂಡತಿಯನ್ನು ಕೂಡ ಕಣ್ಣೆತ್ತಿ ನೋಡುವಂತಿಲ್ಲ. ಅದ್ಯಾವುದೊ ಹಮ್ಮುರಬಿ ರಾಜ ಅಂತೆ ಅವರ ನ್ಯಾಯವೇ ಸರಿ ಇತ್ತು. ಕಳ್ಳತನ ಮಾಡಿದ್ರೆ ಕೈ, ನೋಡಿದ್ರೆ ಕಣ್ಣು ಕಿಳೋದು, ಕೈಯಿಗೆ ಕೈಯಿ ಅನ್ನುವಂತೆ. ಜೀವಕ್ಕೆ ಜೀವ ಕೊಟ್ಟಾಗಲೇ ಜೀವದ ಬೆಲೆ ತಿಳಿಯೋದು. ಹೆಲ್ಮೆಟ್ ಹಾಕಿಲ್ಲ ಅಂದ್ರೆ ಗಲ್ಲಿಗಳಲ್ಲಿ ನಿಂತು ಪೈನ್ ಹಾಕೊ ಸರ್ಕಾರ, ಅತ್ಯಾಚಾರ ಮಾಡಿದವರನ್ನ ನಡು ರೋಡಲ್ಲಿ ನಿಲ್ಸಿ ಗಲ್ಲಿಗೇರಿಸಿದ್ರೆ ಇಂಥ ಕೃತ್ಯಗಳು ಕಡಿಮೆಯಾಗಬಹುದು. ಅದ್ರೆ ಇಂಥ ಕಾನೂನುಗಳು ಬರೋದಿಕ್ಕೆ ಮತ್ತೆ ಹಮ್ಮುರಬಿಯಂತ ರಾಜನೇ ಹುಟ್ಟಿ ಬರಬೇಕೆನೋ?…. ಹೆಣ್ಣೆಂದರೆ ನಿಮ್ಮ ಕಾಮ ತೃಷೆ ತೀರಿಸುವ ಮಷೀನಲ್ಲ, ನಿಮ್ಗೆ ಜನ್ಮ ನೀಡೋ ತಾಯಿ, ನಿಮಗಾಗಿಯೇ ಜನ್ಮ ಪಡೆದ ಹೆಂಡತಿ, ನಿಮ್ಮಿಂದ ಜನ್ಮ ಪಡೆದ ಮಗಳು, ನಿಮ್ಮೊಟ್ಟಿಗೆ ಜನ್ಮ ಪಡೆದ ಅಕ್ಕ ತಂಗಿ, ಅವಳನ್ನು ಬದುಕಲು ಬಿಡಿ ನಿಮ್ಮೊಳಗೊಬ್ಬಳಾಗಿ ಅವಳೊಂದು ಹೆಣ್ಣಾಗಿ. ಮೊದಲೇ ಹೆಣ್ಮಕ್ಕಳ ಸಂಖ್ಯೆ ಕಡಿಮೆ ಆಗ್ತಿದೆ, ಅದ್ರಲ್ಲಿ ನೀವು ಇರೊ ಬರೊ ಹೆಣ್ಮಕ್ಕಳನ್ನ ಹೀಗೆ ಮಾಡ್ತಿದ್ರೆ, ನೀವು ಈಗೆಲ್ಲ ತಮಾಷೆಗೆ ಸಿಂಗಲ್ ಸಿಂಗಲ್ ಅಂತ ಹೆಳ್ಕೊಂಡು ಅಡ್ಡಾಡೋದು ನಿಜವಾಗೋ ಕಾಲ ತುಂಬಾ ದೂರ ಉಳಿದಿಲ್ಲ……ಒಂಟಿ ಹೆಣ್ಣು ಯಾವತ್ತು ನಿಮ್ಮ ಅವಕಾಶಕ್ಕೆ ಸಿಕ್ಕ ಹಣ್ಣಲ್ಲ ನಿಮ್ಮ ಜವಾಬ್ದಾರಿಯ ಅಕ್ಕ ತಂಗಿಯರು ನಿಮ್ಮ ಮನೆಯ ಹೆಣ್ಣು ಮಕ್ಕಳಂತೆಯೇ ಅವರು….

ಅನಿಸಿಕೆ Read Post »

You cannot copy content of this page

Scroll to Top