ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಸಖಿ ಸತ್ಯಮಂಗಲ ಮಹಾದೇವ ಈ ಬೆಳಗಿನ ಏಕಾಂತ ಅದೇಕೊ ಮುದ ನೀಡಲಿಲ್ಲ ಸಖಿ ನಟ್ಟನಡುರಾತ್ರಿಯ ಕಡುಕತ್ತಲಲ್ಲಿ ನಿನ್ನ ಮೊಗವೊಂದೆ ಸಾಕು ಬೆಳದಿಂಗಳಂತೆ ಯಮುನಾ ತೀರದಲಲೆಯುತ ಒಂಟಿ ನಡಿಗೆಯ ಪ್ರಯಾಣ ಅದೆಷ್ಟು ನೀರಸ ಸಖಿ ಮಧುರ ಮಂಜುಳ ನಾದವೂ ಸಪ್ಪೆ ತೆರೆಯೇರಿ ಬೀಸುವ ತಂಗಾಳಿಯೂ ರುಚಿಯಿಲ್ಲ ಮೈಗೆ ನಿನ್ನ ಹೆಸರೊಂದೇ ಸಾಕು ಅದೆಷ್ಟೋ ದೂರದ ನಿನ್ನ ಸನಿಹದಂತಿರಿಸುವುದು ಪದವನರಿತ ಮನಸ್ಸಿಗೆ ಪರಿಚಯ ಬೇಕೆ ಬಣ್ಣವಾಗುವ ಕನಸುಗಳಿಗೆ ರೆಕ್ಕೆಗಳ ಬಿಡಿಸಿ ಹಾರುವುದ ಕಲಿಸಬೇಕೆ ಸಖಿ ನಿನ್ನ ಉಸಿರ ಜಾಡು ಕಣ್ಣಳತೆಯಲಿ ಹಾದು ಹೋಗುವಾಗ ನನ್ನ ಆವರಿಸಿದ ಆ ಮಹಾನಂದವನು ಬಣ್ಣಿಸಲು ಅಕ್ಷರಗಳು ಸೋಲುತ್ತಿವೆ ಏಕಾಂತದ ಆ ಮೌನಕೆ ಹೊಸಚೈತ್ರಗಳಾ ಆಮೋದಕೆ ಕಾಲ್ಬೆರಳು ಗೀಚುವ ಲಜ್ಜೆಯ ಯಾತ್ರೆಗೆ ಆ ನಗುವು ಭಾಷ್ಯ ಬರೆಯಿತು ಮುತ್ತಿಡಲು ಹೊರಟ ವಸಂತ ನಾನು ಅವನನ್ನು ಮೀರಿಸಿ ಹೊರಟೆ… ಒಳಗೊಳ್ಳುವ ಸಂವಿಧಾನಕ್ಕೆ ದುಃಖ ನೀರದಾರಿ ಅರ್ಥವಿರದ ಈ ಆಸೆಗಳ ಭ್ರೂಣಕ್ಕೆ ನೀನು ತಂದೆ ನಾನು ತಾಯಿ.

ಕಾವ್ಯಯಾನ Read Post »

ಇತರೆ

ಮಕ್ಕಳು ಮತ್ತು ಸಾಹಿತ್ಯ

ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವುದು. ಎನ್.ಶೈಲಜಾ ಹಾಸನ ಅಮ್ಮ ತನ್ನ ಮಗುವನ್ನು ಮಲಗಿಸುವಾಗ ತೊಟ್ಟಿಲು ತೂಗುತ್ತಾ ಹಾಡು ಹೇಳಿ ಮಗುವನ್ನು ಮಲಗಿಸಲು ಅನುವಾಗುತ್ತಾಳೆ. ” ಅತ್ತಿತ್ತ ನೋಡಿದಿರು, ಅತ್ತು ಹೊರಳಾಡದಿರು, ಕದ್ದು ಬರುವದು ನಿದ್ದೆ, ಮಲಗು ಮಗುವೇ, ಜೋ ಜೋಜೋ ” ಅಂತ ಲಾಲಿ ಹಾಡು ಹೇಳಿ ಮಲಗಿಸುತ್ತಾಳೆ. ಸಾಮಾನ್ಯವಾಗಿ ಎಲ್ಲಾ ಮಕ್ಕಳೂ ಅಮ್ಮನ ಲಾಲಿ ಹಾಡು ಕೇಳುತ್ತಲೇ ಬೆಳೆದಿರುತ್ತಾರೆ. ಅಮ್ಮನ ಲಾಲಿ ಹಾಡು ಕೇಳುತ್ತಾ ಕೇಳುತ್ತಾ ಹಾಡು, ಕವಿತೆ ಬಗ್ಗೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಆಸಕ್ತಿ ಬೆಳೆದು ಬಂದಿರುತ್ತದೆ. ನಂತರ ಶಾಲೆಗೆ ಹೋದ ಮೇಲೆ ಮಕ್ಕಳು ಪಠ್ಯ ಪುಸ್ತಕದಲ್ಲಿರುವ ಪದ್ಯಗಳನ್ನು ಕಲಿತು ಹಾಡುತ್ತಾ ಕವಿತೆಗಳ ಬಗ್ಗೆ ತಿಳಿದುಕೊಂಡಿರುತ್ತಾರೆ. ಆ ಪದ್ಯಗಳ ಮೂಲಕ,ಕಥೆಗಳ ಮೂಲಕ ಮಕ್ಕಳಿಗೆ ಸಾಹಿತ್ಯದ ಸವಿ ಹತ್ತಿರುತ್ತದೆ. ಪುಟ್ಟ ಪುಟ್ಟ ಹಾಡು,ಕವಿತೆ ಹೇಳಿ ಕೊಡುವುದರ ಈ ಮೂಲಕವೂ ಮಕ್ಕಳಿಗೆ ಸಾಹಿತ್ಯದ ಪರಿಚಯವನ್ನು ,ಆಸಕ್ತಿಯನ್ನು ಪ್ರತ್ಯಕ್ಷವಾಗಿ ಮೂಡಿಸಬಹುದು.ಮಕ್ಕಳು ತಾವೇ ಪುಟ್ಟ ಪುಟ್ಟ ಪದ್ಯಗಳನ್ನು ಬರೆಯಲು ,ಅದನ್ನು ಹಾಡಲು ಪ್ರೇರೇಪಿಸುವ ಮೂಲಕ ಸಾಹಿತ್ಯಾಸಕ್ತಿ ಮೂಡಿಸಿದರೆ ಕವಿತೆ ಬರೆಯಲು ಬುನಾದಿ ಹಾಕಿದಂತಾಗುತ್ತದೆ.ಶಾಲೆಯಲ್ಲಿ ಕಲಿತ “ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ ಸರಿಗಮ ಪದನಿಸ ಊದಿದನು” ಈ ಕವಿತೆ ಮಕ್ಕಳಿಗೆ ಇಷ್ಟವಾಗುವ ತುತ್ತೂರಿ ಬಗ್ಗೆ ಇರುವ ಮನಸೆಳೆಯುವ ಪದ್ಯವಾಗಿದ್ದು, ಹಾಡಿನ ಪರಿಚಯ ಮಾಡಿಸಿ ಕೊಡುತ್ತದೆ. ಮಕ್ಕಳ ಅಚ್ಚುಮೆಚ್ಚಿನ ಮುದ್ದಿನ ಪ್ರಾಣಿಯಾದ ನಾಯಿಮರಿ ಬಗ್ಗೆ ಇರುವ ಪದ್ಯ ಯಾರಿಗೆ ಗೊತ್ತಿಲ್ಲ. “ನಾಯಿಮರಿ ನಾಯಿಮರಿ ತಿಂಡಿ ಬೇಕೆ ತಿಂಡಿ ಬೇಕು ತೀರ್ಥ ಬೇಕು ಎಲ್ಲಾ ಬೇಕು ನಾಯಿಮರಿ ನಿನಗೆ ತಿಂಡಿ ಏಕೆ ಬೇಕು ತಿಂಡಿ ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು” ಈ ಪದ್ಯವಂತೂ ಎಲ್ಲಾ ಮಕ್ಕಳಿಗೂ ತುಂಬಾ ಇಷ್ಟವಾಗಿರುವ ಪದ್ಯ. ಬೆಕ್ಕಿನ ಬಗ್ಗೆ ಇರುವ ಈ ಪದ್ಯ ಹೇಳಿಯೇ,ಕೇಳಿಯೇ ಮಕ್ಕಳೆಲ್ಲ ಬೆಳೆದವರು. “ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ಎಲ್ಲಿಗೆ ಹೋಗಿದ್ದೆ ಕರೆದರೂ ಇಲ್ಲ ಹಾಲು ಬೆಲ್ಲ ಕಾಯಿಸಿ ಇಟ್ಟಿದ್ದೆ” ಮಕ್ಕಳು ಮುದ್ದು ಮಾಡುವ ಪ್ರಾಣಿಗಳು ಇವು.ಮೇಲಿನ ಪದ್ಯಗಳ ಕಲಿತಿರುವ,ಅದನ್ನು ಹಾಡುವ ಮಕ್ಕಳಿಗೆ ಕವಿತೆ ಬರೆಯಲು ಇವು ಪ್ರೇರಣೆ ನೀಡುವಂತೆ ಮಾಡಿದರೆ ಮಕ್ಕಳಿಂದ ಸಾಹಿತ್ಯ ರಚನೆ ಸಾಧ್ಯವಾಗಬಹುದು.ಮೊದಲು ಕವಿತೆಗಳನ್ನು ಕೇಳಿಸಿಕೊಳ್ಳಲು ಅನುವಾಗ ಬೇಕು.ನಂತರ ಪುಟ್ಟ ಪುಟ್ಟ ಕವನವಿರುವ ಪುಸ್ತಕಗಳನ್ನು ಓದಲು ಪ್ರಯತ್ನ ನಡೆಸ ಬೇಕು.ಓದುತ್ತಾ ಓದುತ್ತಾ ಹಾಡಿಕೊಳ್ಳುತ್ತಾ ಹೋದರೆ ಕಾವ್ಯದ ರುಚಿ ಹತ್ತುತ್ತದೆ. ಆಗ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಬಹುದು. ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳೆವಣಿಗೆಯನ್ನು ಗಮನದಲ್ಲಿಟ್ಟುಕೊಂಡು ರಚಿತವಾದ ಸಾಹಿತ್ಯವನ್ನು ಮಕ್ಕಳ ಸಾಹಿತ್ಯವೆನ್ನಬಹುದು. ಮಕ್ಕಳ ಸಾಹಿತ್ಯ ಕಿವಿಯ ಮೂಲಕ ಗ್ರಹಿಸುವ ಲಾಲಿ ಹಾಡುಗಳಿಂದಲೇ ಮೊದಲಿಟ್ಟಿರಬಹುದು. ಅನಂತರ ಕಥೆಗಳಿಂದ ಬೆಳೆದಿರಬಹುದು. ಹಾಡುವ ಹಾಗೂ ಕಥೆ ಹೇಳುವವರ ಹಾವ ಭಾವಗಳನ್ನು ನೋಡಿಯೂ ಮಗು ಗ್ರಹಿಸಿರಬಹುದು. ಈ ಕಾರಣದಿಂದ ಮಾನವನ ಸಾಹಿತ್ಯದ ಬುನಾದಿ ಇದಾಗಿದೆ ಎಂದರೆ ತಪ್ಪಾಗಲಾರದು. ಇದರ ಮೂಲ ಜಾನಪದವಾಗಿರಬಹುದು. ಜಗತ್ತಿನಲ್ಲಿ ಇದು ಹೇಗೇ ಪ್ರಾರಂಭವಾಗಿರಲಿ ಮಕ್ಕಳಿಗೆ ಅತ್ಯಗತ್ಯವಾದುದು, ಉಪಯುಕ್ತವಾದುದು ಎನ್ನುವುದಕ್ಕೆ ಎರಡನೆಯ ಮಾತಿಲ್ಲ. ಹಿರಿಯರೂ ಇದನ್ನು ಸವಿಯಬಹುದು ಎನ್ನುವುದು ಇದರ ಒಂದು ವಿಶೇಷ ಲಕ್ಷಣ. ಮಕ್ಕಳು ಕವಿತೆ ರಚನೆ ಮಾಡಲು ಅನುಕೂಲವಾದ ವಾತಾವರಣ ಕಲ್ಪಿಸಿದರೆ ಮಕ್ಕಳಿಂದ ಕವಿತೆ ಸೃಷ್ಟಿ ಸಾಧ್ಯವಾಗುತ್ತದೆ. ತಮ್ಮ ಸುತ್ತಲಿನ ವಸ್ತುಗಳ ಮೇಲೆ ಸರಳ ಪದಗಳನ್ನು ಬಳಸಿ ಪುಟ್ಟ ಪುಟ್ಟ ಕವಿತೆಗಳನ್ನು ಬರೆಯಲು ಪ್ರಯತ್ನಿಸಬೇಕು.ಚಿಟ್ಟೆ, ಶಾಲೆ,ಮರ,ಅಪ್ಪ ,ಅಮ್ಮ ,ತಮ್ಮ , ತಂಗಿ ,ಗೊಂಬೆ, ನಾಯಿ,ಬೆಕ್ಕು,ಗಿಣಿ ,ಹಸು,ಕರು ಹೀಗೆ ತಮಗೆ ಪ್ರಿಯವಾದ,ತನಗೆ ಗೊತ್ತಿರುವ ,ತಿಳಿದಿರುವ ವಸ್ತುಗಳ ಮೇಲೆ ,ಪ್ರಾಸ ಹಾಕಿ ಆಕರ್ಷಣೆಯವಾಗಿ ಬರೆಯುವ ಪ್ರಯತ್ನ ನಡೆಸಿದರೆ ಮಕ್ಕಳಿಗೆ ಆಸಕ್ತಿ ಹುಟ್ಟುತ್ತಾ ಹೋಗುತ್ತದೆ. ಸಾಹಿತ್ಯವು ಮಕ್ಕಳಿಗೆ ನಲಿವು, ತಿಳಿವು ಎರಡನ್ನೂ ಕೊಡಬೇಕು. ಸಂಸ್ಕೃತಿ, ಶಿಕ್ಷಣ, ಕುಟುಂಬ, ಪರಿಸರ ಈ ನಾಲ್ಕರ ಪ್ರಭಾವವ ಅದರಲ್ಲಿ ಬರಬೇಕು. ಮಕ್ಕಳ ಮಾನಸಿಕ, ಬೌದ್ಧಿಕ, ಸಾಮಾಜಿಕ ಮತ್ತು ಭಾಷಿಕ ಬೆಳೆವಣಿಗೆಗೆ ಸಹಾಯಕವಾಗಬೇಕು ಮೊದಲಾದ ಅನೇಕ ಅಭಿಪ್ರಾಯಗಳು ಈ ಸಾಹಿತ್ಯ ಕುರಿತು ವ್ಯಕ್ತವಾಗಿವೆ. ಒಟ್ಟಾರೆ ಮಕ್ಕಳ ಸಾಹಿತ್ಯ ಮಕ್ಕಳಿಗೆ ಸಂತೋಷ ನೀಡಬೇಕು, ಭಾಷೆಯನ್ನು ಕಲಿಸಬೇಕು, ಆಲೋಚನಾ ಶಕ್ತಿಯನ್ನು ಬೆಳೆಸಬೇಕು, ಜೊತೆಗೆ ಬದುಕುವ ವಿವೇಕವನ್ನು ಹೊಳೆಯಿಸಬೇಕು. ಆಗ ಅದು ಸಾರ್ಥಕವಾದೀತು . ಮಕ್ಕಳು ಸಾಹಿತ್ಯ ರಚನೆ ಮಾಡುವಾಗ, ಹಿರಿಯರ,ತಂದೆ ,ತಾಯಿಯರ,ಶಿಕ್ಷಕರ, ಸಾಹಿತಿಗಳ ಮಾರ್ಗದರ್ಶನ, ಸಲಹೆ ,ಸೂಚನೆಗಳಿರುತ್ತವೆ. ಮಕ್ಕಳು ಕಥೆ, ಕವನ, ಲೇಖನಗಳು, ನಗೆ ಹನಿಗಳನ್ನು ಬರೆಯಬಹುದು. ಮಕ್ಕಳು ಕವಿಗಳ ಹಾಗೂ ಸಾಹಿತಿಗಳ ಪುಸ್ತಕಗಳನ್ನು ಓದಬೇಕು. ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮ ಮತ್ತು ಸಂವೇದನಾಶೀಲವಾಗಿದ್ದು, ಮಕ್ಕಳ ವಿಚಾರ ಮತ್ತು ಕಲ್ಪನಾ ಲೋಕದ ಸಾಹಿತ್ಯಕ್ಕೆ ಪ್ರೋತ್ಸಾಹ ಬೆಂಬಲ ನೀಡಬೇಕು . ಮಕ್ಕಳು ಬರೆದ ಕಾವ್ಯ ಸಾಹಿತ್ಯಕ್ಕೆ ಸೂಕ್ತ ಮಾರ್ಗದರ್ಶನದೊಂದಿಗೆ ಪ್ರೋತ್ಸಾಹ ನೀಡಿದಲ್ಲಿ ಬೆಳೆದ ಮನಸ್ಸುಗಳಿಂದ ಉತ್ತಮ ಸಾಹಿತ್ಯ ಹೊರಹೊಮ್ಮಲು ಸಾಧ್ಯವಿದೆ. ಮಕ್ಕಳ ಸಾಹಿತ್ಯವನ್ನು ಟೀಕಾತ್ಮಕವಾಗಿ ನೋಡುವ, ಮಕ್ಕಳ ಸಾಹಿತ್ಯವನ್ನು ವಿಮರ್ಶಾ ದಷ್ಠಿಯಿಂದ ನೋಡುವ ಬದಲು ಮಕ್ಕಳ ಸಾಹಿತ್ಯದಲ್ಲಿ ಹೊಸತನ್ನು ಕಾಣುವ ಕಾವ್ಯ ಗುಣಬೇಕು. ಅವರು ಏನೇ ಬರೆದರೂ ಉತ್ತೇಜಿಸಿ ಮತ್ತಷ್ಟು ಬರೆಯಲು ಪ್ರೇರೇಪಣೆ ನೀಡಿದ್ದಲ್ಲಿ ಅವರಿಂದ ಉತ್ತಮವಾದ ರಚನೆಯನ್ನು ನಿರೀಕ್ಷಿಸಬಹುದು. ಮಕ್ಕಳು ಪಠ್ಯಪುಸ್ತಕವಲ್ಲದೆ ಸಾಹಿತ್ಯ ಕೃತಿಗಳನ್ನು ಓದಬೇಕು.ಕೊಂಡು ಓದುವ ಹವ್ಯಾಸ ಮಕ್ಕಳಿಗೆ ಬೆಳಸಬೇಕು.ಹಬ್ಬಗಳಲ್ಲಿ, ಹುಟ್ಟು ಹಬ್ಬದ ಕಾಣಿಕೆಯಾಗಿ ಮಕ್ಕಳಿಗೆ ಪುಸ್ತಕಗಳನ್ನು ಕೊಡುವ ಸಂಸ್ಕೃತಿ ಬೆಳಸಬೇಕು.ಆಗ ಮಕ್ಕಳಿಗೆ ಓದುವ ಅಭಿರುಚಿ ಬೆಳೆಯುವುದರ ಜೊತೆಗೆ ,ಪುಸ್ತಕಗಳ ಸಂಗ್ರಹಿಸುವ ಹವ್ಯಾಸ ಕೂಡ ಮಕ್ಕಳಲ್ಲಿ ಉಂಟಾಗುತ್ತದೆ. ಕೆಲವು ಮಕ್ಕಳಿಗೆ ಪುಸ್ತಕಗಳನ್ನು ಕೊಂಡು ಕೊಳ್ಳಲು ಹಣವಿರುವುದಿಲ್ಲ. ಆಗ ಅವರು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತೆಗೆದುಕೊಂಡು ಓದಬಹುದು. ನಮಗೆ ಬೇಕಾದ ವಿಷಯಗಳನ್ನು ಗ್ರಂಥಗಳಿಂದ ಅರಿತುಕೊಳ್ಳಬಹುದು. ಗ್ರಂಥಾಲಯವು ಜ್ಞಾನಾಭಿವೃದ್ಧಿಯ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಕ್ಕಳು ಹಿರಿಯರ ಪುಸ್ತಕ ಓದಬಾರದು ಎಂಬ ನಿಯಮವೇನು ಇಲ್ಲಾ ಕೆಲವೊಮ್ಮೆ ದೊಡ್ಡವರ ಪುಸ್ತಕಗಳು ಮಕ್ಕಳಿಗೆ ಬೇಕಾಗುವ ಸಾಧ್ಯತೆಗಳಿವೆ ಹೀಗಾಗಿ ಇವು ಜ್ಞಾನ ಬಿತ್ತರಿಸುವ ವಿಸ್ತರಿಸುವ ಘಟ್ಟಗಳಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ. ಒಟ್ಟಿನಲ್ಲಿ ಮಕ್ಕಳಿಗೆ ಸಾಹಿತ್ಯ ಓದುವ ಮತ್ತು ಬರೆಯುವ ಸಾಮಾರ್ಥ,ಆಸಕ್ತಿ ,ಅಭಿರುಚಿ ಬೆಳೆಸಿ ಆ ಮೂಲಕ ಸಾಹಿತ್ಯವನ್ನು ಶ್ರೀಮಂತಗೊಳಿಸಿಲು ಪ್ರಯತ್ನ ಮಾಡಬಹುದು ಕಿರು ಪರಿಚಯ: ಎನ್.ಶೈಲಜಾ ಹಾಸನ ರಾಜ್ಯದ ಪ್ರಮುಖ ಕಾದಂಬರಿಗಾರ್ತಿಯಾಗಿದ್ದು ಇವರ ಅನೇಕ ಕಾದಂಬರಿಗಳು ಸುಧಾ,ತರಂಗ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಓದುಗರನ್ನು ಯಶಸ್ವಿಯಾಗಿ ತಲುಪಿ ಅಪಾರ ಮೆಚ್ಚುಗೆ ಪಡೆದಿವೆ.ಕಥಾ ಸಂಕಲನ,ಕಾದಂಬರಿ,ಲೇಖನಗಳ ಸಂಕಲನ,ಕವನ ಸಂಕಲನ ,ಪ್ರಬಂಧ ಸಂಕಲನ ಹೀಗೆ ಒಟ್ಟು 20 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ.ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಕೃತಿಗಳಿಗೆ ಲಭಿಸಿದೆ. ಇವರ ಸಾಹಿತ್ಯ ಸಮಾಜಮುಖಿಯಾಗಿದ್ದು, ಸಾಮಾಜಿಕ ಸಮಸ್ಯೆಗಳಾದ ವೃದ್ಯಾಪ್ಯ, ವೃದ್ಧಾಶ್ರಮ, ರೈತರ ಆತ್ಮಹತ್ಯೆ, ಅದಕ್ಕೆ ಪರಿಹಾರ,ಸಾವಯುವ ಕೃಷಿ ,ಅದರ ಮಹತ್ವ,ಶಿಕ್ಷಣದ ಜೊತೆಗೆ ವೃತ್ತಿ ಕೌಶಲ ಹದಿಹರೆಯದ ಮಕ್ಕಳ ಸಮಸ್ಯೆಗಳು,ಮಾನಸಿಕ ಅಸ್ವಸ್ಥರ ಬಗ್ಗೆ, ಹೆಣ್ಣು ಮಕ್ಕಳ ಶಿಕ್ಷಣ,ಭ್ರೂಣ ಹತ್ಯೆಯಂತಹ ಪ್ರಸ್ತುತ ವಿಚಾರದ ಬಗ್ಗೆ, ಸರಳ ವಿವಾಹ,ಹೆಣ್ಣು ಮಕ್ಕಳ ಸಬಲೀಕರಣ ಹೀಗೆ ಹಲವಾರು ಗಂಭೀರ ವಿಚಾರಗಳ ಬಗ್ಗೆ ಕಾದಂಬರಿಯ ವಸ್ತುವಾಗಿಸಿ ಬರೆದಿರುವ ಶೈಲಜಾ ಹಾಸನ ಅವರ ಸಾಹಿತ್ಯ, ಸಮಾಜವನ್ನು ಬದಲಾವಣೆ ತರುವ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ಮಕ್ಕಳು ಮತ್ತು ಸಾಹಿತ್ಯ Read Post »

ಇತರೆ

ಚರ್ಚೆ

ನಿನ್ನೆ ಸಂಪಾದಕರು ಬರೆದ ‘ಜನರನ್ನತಲುಪುವ ಮಾರ್ಗ’ ಬರಹಕ್ಕೆಕವಿಮಿತ್ರರಾದ ಡಿ.ಎಸ್.ರಾಮಸ್ವಾಮಿಯವರು ನೀಡಿರುವ ಉತ್ತರ ಇಲ್ಲಿದೆ. ಈ ಚರ್ಚೆಯಲ್ಲಿ ನೀವೂ ಪಾಲ್ಗೊಳ್ಳಬಹುದು ಡಿ.ಎಸ್.ರಾಮಸ್ವಾಮಿ ಇವತ್ತಿನ ನಿಮ್ಮ ಬರಹ ನೋಡಿದೆ. ಸಾಹಿತ್ಯ ಪತ್ರಿಕೆಗಳು ಏಕೆ ನಿಲ್ಲಲಾರದೇ ಸೋಲುತ್ತಿವೆ ಎಂದು ಹೇಳ ಹೊರಟ ಬರಹ ಕಡೆಗೆ ಹತ್ತು ರೂಪಾಯಿಗೆ ಮುದ್ರಿಸಿ ಹಂಚುವ “ಜನಪ್ರಿಯ ಸಾಹಿತ್ಯ” ಪ್ರಸರಣದ ಲಾಭದವರೆಗೆ ಬಂದು ನಿಂತಿದೆ. ಕೆಲವು ವರ್ಷಗಳ ಕಾಲ ಎಡವೂ ಅಲ್ಲದ ಬಲಕ್ಕೂ ವಾಲದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗತಿಗಳಿಗಳಿಗೆ ಮೀಸಲಾದ ಖಾಸಗೀ ಪ್ರಸಾರದ ಪತ್ರಿಕೆಯೊಂದರ ಜೊತೆ ಗುರ್ತಿಸಿಕೊಂಡು ಆ ಪತ್ರಿಕೆಯು ವಿಶೇಷವಾಗಿ ತಂದ ಅದರ ೭೫ ಮತ್ತು ೧೦೦ ನೇ ಸಂಚಿಕೆಯ ಕಾವ್ಯ ವಿಶೇಷ ಸಂಚಿಕೆಗಳಿಗೆ ನಾಡಿನ ಖ್ಯಾತನಾಮರ ಕವಿತೆಗಳನ್ನು ಹೆಕ್ಕಿ ಓರಣಗೊಳಿಸಿ ನಿಜಕ್ಕೂ ನಿಲ್ಲುವಂಥ ಸಮೃದ್ಧ ಸಂಚಿಕೆ ಮಾಡಿದೆವು. ನಾವು ಆಯ್ಕೆ ಮಾಡಿದ ಕವಿಗಳಲ್ಲಿ ಕೆಲವರು ಸಂಭಾವನೆ ಕೊಡಲ್ಲವೆ ಅಂತ ಕೇಳಿದರೆ ಹಲವು ಕಾರಣಗಳಿಂದ ಹೊರಗುಳಿದ ಕವಿಗಳ ಖಾಯಂ ಶತೃತ್ವ ನನಗೊದಗಿತು. ಕವಿತೆಯೇ ಮುಖ್ಯ ಕವಿ ಆಮೇಲೆ ಅನ್ನುವ ಕಾರಣಕ್ಕೆ ಪರಿವಿಡಿಯಲ್ಲಿ ಬರೀ ಕವಿತೆಗಳನ್ನು ಅಕಾರಾದಿ ವಿಭಾಗಿಸಿ ಕಡೆಯಲ್ಲಿ ಕವಿಯ ವಿಳಾಸ ಕೊಟ್ಟಿದ್ದೆವು. ಅದಕ್ಕೂ ಪ್ರತಿರೋಧ ಬಂತು. ಅದಕ್ಕಿಂತ ಮುಖ್ಯವಾಗಿ ಎಡದವರು ನೀವು ಬಲಕ್ಕೆ ವಾಲುತ್ತೀರ ಅಂತ ನಮ್ಮನ್ನು ಹೊರಗಿಟ್ಟರೆ ಬಲದವರದು ಬಿಡಿ ಕಾಸು ಖರ್ಚಾಗದೇ ಬಿಟ್ಟಿ ಪ್ರಚಾರ ಬಯಸುವ ಅವರಿಗೆ ನಾವು ಸಂಸ್ಕೃತಿಯ ಮೇಲಣ ದಂಗೆಕೋರರಂತೆ ಕಂಡೆವು. ಸರಿಸುಮಾರು ಮೂವತ್ತು ವರ್ಷ ಆ ಪತ್ರಿಕೆಯನ್ನು ತಮ್ಮೆಲ್ಲ ಸಮಯ ಶ್ರಮ ಮತ್ತು ದುಡಿಮೆಗಳಿಂದ ನಡೆಸುತ್ತಿದ್ದ ಆ ಸಂಪಾದಕರನ್ನು ಅಷ್ಟೂ ದಿನ ಯಾವ ಯಾವ ಕಾರಣಕ್ಕೋ ಸಂಪರ್ಕ ಇರಿಸಿಕೊಂಡಿದ್ದ ಮಹಾಮಹಿಮರೆಲ್ಲ ಆ ಪತ್ರಿಕೆ ಇತ್ತು ಅನ್ನುವುದನ್ನೇ ಮರೆತು ಬಿಟ್ಟರು. ಇನ್ನೂ ಆಸಕ್ತಿಯ ವಿಚಾರವೆಂದರೆ ಆ ಪತ್ರಿಕೆ ಕನ್ನಡದ ಹೊಸ ಬರಹಗಾರರನ್ನು ಕಾಸು ಪೀಕದೇ ಪುಸ್ತಕ ಪ್ರಕಟಿಸುವುದರ ಮೂಲಕ ಬೆಳಸಿತ್ತು ಕೂಡ. ಯಾವತ್ತೂ ಈ ಖಾಸಗೀ ಪ್ರಸಾರಕ್ಕೆ ಅಥವ ಗುಂಪಿಗೆ ನಡೆಸುವ ಮುದ್ರಣವಾಗುವ ಪತ್ರಿಕೆಗಳಿಗೆ ಜಾಹೀರಾತು ಅಥವ ಕೊಡುಗೆಯ ಬೆಂಬಲ ಬೇಕೇ ಬೇಕು. ಇಲ್ಲವಾದರೆ ನಡೆಸೋದಾದರೂ ಹೇಗೆ? ಇನ್ನು ಪೋರ್ಟಲ್ ಮೂಲಕ ಸದ್ಯ ಲಭ್ಯವಿರುವ ಕನ್ನಡದ ಪತ್ರಿಕೆಗಳಿಗೆ ಓ(ನೋ)ದುಗರಿದ್ದಾರ ಪರಿಶೀಲಿಸಿದರೆ ನಿರಾಸೆ ಗ್ಯಾರಂಟಿ. ಆ ಕುರಿತು ಮತ್ತೊಮ್ಮೆ ಬರೆಯುವೆ. ಏಕೋ ನೀವು ಸುರುವಿನಲ್ಲೇ ನಿರಾಸೆಗೊಂಡಂತಿ‍ದೆ. ಮೊದಲು ತಿಳಿಯಬೇಕಾದ ಸತ್ಯ ಎಂದರೆ ಸಾಹಿತ್ಯ ಸಂಸ್ಕೃತಿ ಸಂಗೀತ ಇವೆಲ್ಲವೂ ಯಾವತ್ತೂ ಅಲ್ಪಸಂಖ್ಯಾತರು ಬಯಸುವಂಥವು. ಆದರೆ ಧರ್ಮ ಜಾತಿ ರಾಜಕೀಯ ಮತ್ತು ಮುಖ್ಯವಾಗಿ ಮನರಂಜನೆ ಬಹುಸಂಖ್ಯಾತರ ಇಷ್ಟದ ವಲಯ. ಹಾಗಾಗಿ ಅವನ್ನು ಪ್ರಸರಿಸುವ ಪತ್ರಿಕೆ ಗುಂಪು ಅಥವ ವಾಹಿನಿ ಯಾವತ್ತೂ TRP ಯಲ್ಲಿ ಮೇಲಿರುತ್ತದೆ. ಒಂದು ಬದ್ಧತೆಗೆ ಮತ್ತು ವ್ಯವಸ್ಥೆಯ ವಿಮರ್ಶೆಗೆ ನಿಂತವರು ನಿರಂತರ ಹೊಡೆದಾಡಲೇ ಬೇಕಾದ ಅನಿವಾರ್ಯತೆ ಇರುತ್ತದೆ. ದಯವಿಟ್ಟು ಕೈ ಚಲ್ಲದೇ ಮುಂದುವರೆಯಿರಿ. ಬೇರೆ ಯಾರಿಗೂ ಅಲ್ಲದಿದ್ದರೂ ನಿಮಗೆ ಇಷ್ಟವಾದ ಬರಹಗಳನ್ನು ಕೆಲವರಿಗಾದರೂ ಮುಟ್ಟಿಸಬಹುದೆನ್ನುವ ಅವಕಾಶಕ್ಕಾದರೂ ಮುನ್ನಡೆಯಿರಿ (ನೀವೂ ಈ ಚರ್ಚೆಯ ಭಾಗವಾಗಿಬರೆಯಬಹುದು)

ಚರ್ಚೆ Read Post »

You cannot copy content of this page

Scroll to Top