ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ನನ್ನೊಳಗೆ!

ಕನಸಿನೂರಿಂದ…. -ಕನಸಿನೂರಿನವ ಮತ್ತದೆ ದ್ವಂದ್ವ! ಚಿತ್ತಭಿತ್ತಿಯಲಿ ಸ್ಥಿರವಾಗಿ ಉಳಿದ ಅ ಮೊಗವನೆಲ್ಲಿ ಕಂಡೆ, ಪಡೆಯದೆಲೆ ಕಳೆದುಕೊಂಡೆ? ನೆನಪಿಸಿಕೊ ಹೃದಯ ಕವಾಟವೆ ಕಣ್ಣೊಳಗೆ ಬಿಂಬವಾಗಿ ಎದೆಯೊಳಗೆ ಕಂಬವಾಗಿ ನರನಾಡಿಗಳಲಿ ಜೀವ ಮಿಡಿತವಾಗಿ ನಿಂತಾ ಮೊಗವ ಎಲ್ಲಿ ಕಂಡೆ ಹೇಗೆ ಕಳೆದುಕೊಂಡೆ. ಮೊದಲ ನೋಟದಲೇನು ತುಂಬಿಕೊಂಡೆ ಆ ಮುದ್ದು ಮೊಗದ ನಕ್ಷತ್ರಗಳ ಕಣ್ಣುಗಳನೊ  ಅದರೊಳಗಿನ ಬೆಳಕನ್ನೊ? ಆ ಬಿರಿಯದೆ ಬಿಗಿದ ತುಟಿಗಳ ಹಿಂದಿನ ಮೌನವನೊ? ಬಹಳ ವರುಷಗಳ ಹಿಂದೆ ಆ ಮುಖವನ್ನು ಮೊದಲ ಬಾರಿಗೆ ನೋಡಿದೆ. ಅದೇಕೊ ಆ  ಮುಖ ನನ್ನ ಸೆಳೆದುಬಿಟ್ಟಿತ್ತು.ಎಷ್ಟರ ಮಟ್ಟಿಗೆ ಹೃದಯದಲ್ಲಿ ಅಚ್ಚಳಿಯದೆ ನಿಂತು ಬಿಟ್ಟಿತೆಂದರೆ ಇವತ್ತಿನವರೆಗು ಬೇರ್ಯಾವ ಮುಖವು ಅದರ ಸ್ಥಳ  ಆಕ್ರಮಿಸಲಾಗಲಿಲ್ಲ.ಬಹುಶ:ಅದರ ನೆನಪುಗಳಲ್ಲೆ ನೂರಾರು ಪುಟಗಳ ಬರೆಯುತ್ತ ಹೋದೆ. ತೀರಾ ಮೊನ್ನೆ ಮೊನ್ನೆಯವರೆಗು  ಮತ್ತೆಂದಾದರು ಆ ಮುಖ ನೋಡುತ್ತೇನೆಂಬ ಕಲ್ಪನೆಯೂ ನನಗಿರಲಿಲ್ಲ….. ಆದರೆ ನಾವು ನಂಬಲಿ ಬಿಡಲಿ ಕಾಲ ನಮ್ಮ ಜೊತೆ  ವಿಧಿಯ ಹೆಸರಿನಲ್ಲಿ ಆಟ ಆಡುತ್ತದೆ. ಅಂತಹದೊಂದು ಆಟದ ಭಾಗವಾಗಿ ಮತ್ತೆ ನಾನಾ ಮುಖವನ್ನು ನೋಡಿದೆ. ಮತ್ತೆ ಮತ್ತೆ ಆ ಮುಖ ನೋಡುವಾಗ ಮನಸು ಮಿತಿಗಳನ್ನು ಮೀರುವ ವ್ಯರ್ಥ ಪ್ರಯತ್ನ ಮಾಡುತ್ತಿದೆ.. ಆ ಮುಖವನ್ನು ಬೊಗಸೆಯೊಳಗೆ ಹಿಡಿದುಕೊಂಡು ನುಡಿಯಬೇಕು-ಎಲ್ಲಿದ್ದೆಇಲ್ಲಿಯವರೆಗು?ಮತ್ತೆಕೆ ಬಂದೆ ನನ್ನೆದುರಿಗೆ ಅಂತ ಕೇಳಬೇಕೆನಿಸುತ್ತೆ.ಆ ದೈರ್ಯ ಸಾಲುತ್ತಿಲ್ಲ…ಸಾದ್ಯವಾದಷ್ಟು ಆ ಮೊಗದಿಂದ ದೂರ ಸರಿದು ಹೋಗಬೇಕೆನಿಸಿದಾಗೆಲ್ಲ  ಸಾವು ನೆನಪಾಗುತ್ತದೆ.ಅದಿಲ್ಲದೆಯೂ ಇಷ್ಟು ವರ್ಷಗಳಕಾಲ ಬದುಕಿದ್ದು ವ್ಯರ್ಥವೆನಿಸಿ ಆ ಮುಖವ ಮರೆಯಬೇಕೆಂದು ಶಪಥಗೈದು  ಹಗಲು ಮುಗಿಸುತ್ತೇನೆ. ಮತ್ತೆ ಬಂದ ಇರುಳಿನ ಸ್ವಪ್ನದೊಳಗಾ  ಮುಖ ಬಂದು ಕೇಳುತ್ತದೆ….ಇಷ್ಟು ವರ್ಷ ನನಗಾಗಿ ಕನಸಿದ್ದು ಸುಳ್ಳೇ? ಹೇಳು ಮತ್ತೇಕೆ ಮರೆಯಲೆತ್ನಿಸುವ ನಾಟಕ? ಉತ್ತರಿಸಲಾಗದೆ ತಡವರಿಸುತ್ತೇನೆ….. ಕರಗಿದ ಕತ್ತಲಿಗೆ ಕುಡಿಯೊಡೆದು ಬಂದ ಬೆಳಗು ಮತ್ತದೆ ಮುಖವನ್ನು ಎದುರು ನಿಲ್ಲಿಸುತ್ತದೆ. ಇದನ್ನು ಬದುಕಿನಕಡೆಯ ದಿನವೆಂದೊ-ಕಡೆಯ ಕ್ಷಣವೆಂದೊ ಅಂದುಕೊಂಡು ಹೇಳಿ ಬಿಡು ಮುಖಕ್ಕೆ ಮುಖ ಕೊಟ್ಟು ಅದರ ಕಣ್ಣುಗಳಲ್ಲಿ ನಿನ್ನಕಣ್ಣ ನೆಟ್ಟುಪ್ರೀತಿಸುತ್ತೇನೆಂದು! ಮತ್ತದೆ ದ್ವಂದ್ವ! ===============================

ನನ್ನೊಳಗೆ! Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ದೀಪಾಜಿ ಮನದಬಾಗಿಲ ಕದಲಿಸಿದರೆ ಏನರ್ಥ ಸಾಕಿ, ಒಳನುಸುಳುವ ಇಚ್ಛೆ ಇಲ್ಲದವರು ಬಯಲ ದಾಟಿ ಬರಬಾರದಿತ್ತು.. ಅಂಗಾತ ಮಲಗಿದ ರಸ್ತೆ ದಾಟಿ ಬಾಗಿಲ ವರೆಗೂ ಬಂದು ಕದತಟ್ಟದೆ ಹಿಂತಿರುಗುತ್ತೇನೆಂದರೆ ಏನರ್ಥ ಸಾಕಿ.. ಮೊಗ ನೋಡಿ ಮಾತನಾಡಲಾಗದವರು ಕಾರ್ಮೋಡದ ಮಧ್ಯದ ಕೊಲ್ಮಿಂಚಿನಂತ ಮಾತು ಆರಂಭಿಸಲು ಬರಬಾರದಿತ್ತು..ಬಿದಿಗೆ ಚಂದಿರನಂತೆ ಬಂದು ನಿಂತು ಕಾಯ್ದು,ಕದ ತೆರೆಯುವಾಗ ಬೆನ್ನುಮಾಡಿ ಹೊರಟರೆ ಏನರ್ಥ ಸಾಕಿ.. ಬೆರಳಿಗೆ ಬೆರಳ ಕಸಿಮಾಡಿದಾಗ ಹುಸಿ ಮುನಿಸಮಾಡಿ ಕೊಸರಾಡಲು ಬರಬಾರದಿತ್ತು.. ಮರುಳ ಮಾಡಿ ಕರುಳ ಹಿಂಡಿ,ಮಂಡಿ ಹಚ್ಚಿ ಕುಳಿತು ಬೆರಳ‌ ತಾಗಿಸಿ ನಕ್ಕರೆ ಏನರ್ಥ ಸಾಕಿ.. ಪ್ರೇಮರಾಗ ನುಡಿಸಲಾಗದವರು ಕನಸೊಳಗೂ ಲಗ್ಗೆ ಇಟ್ಟು ಒಳನುಗ್ಗಲು ಬರಬಾರದಿತ್ತು.. ಕಣ್ಣಕಪ್ಪು ತೀಡುವ ನೆಪ ತೋರಿ ದೃಷ್ಟಿಗೆ ದೃಷ್ಟಿ ಸೇರಿಸಿ ಮನದ ವೇದನೆ ಕಲಕಿದರೆ ಏನರ್ಥ ಸಾಕಿ.. ಕತ್ತಲೆಯ ಮೋಹಿದುವವರು ದೀಪದ ಬೆಳಕ ಹುಡುಕಲು ಬರಬಾರದಿತ್ತು‌.ಎದೆಯ ತುಂಬ ಅನುರಾಗದ ಅಲೆಗಳ ತುಂಬಿಕೊಂಡು ವಿರಹದುರಿಯಲಿ ಬೆಂದರೆ ಏನರ್ಥ ಸಾಕಿ.. =================================================

ಕಾವ್ಯಯಾನ Read Post »

ಅಂಕಣ ಸಂಗಾತಿ

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

 (ಶಿವಮೊಗ್ಗ ಜಿಲ್ಲೆ ಹಲವಾರು ಚಳವಳಿಗಳ ಉಗಮಸ್ಥಾನವಾಗಿದೆ. ಇವತ್ತಿಗೂ ಶಿವಮೊಗ್ಗ ಜಿಲ್ಲೆಯ ಜನರ ಮನಸ್ಸುಗಳು ಪ್ರಗತಿಪರವಾಗಿಯೇ ಆಲೋಚಿಸುತ್ತಿವೆ. ಈ ಪ್ರಗತಿಪರ ಮನಸ್ಸುಗಳ ಮೂಲ ಬೇರು ಜಿಲ್ಲೆಯಲ್ಲಿ ಹುಟ್ಟಿದ ಚಳವಳಿಗಳಲ್ಲಿ ಅಡಗಿದೆ. ಈ ಕುರಿತು “ ಶಿವಮೊಗ್ಗ ಜಿಲ್ಲೆಯ ಚಳವಳಿಗಳು” ಎಂಬ ಹೆಸರಿನಲ್ಲಿ ಡಾ.ಸಣ್ಣರಾಮರವರು ಸವಿಸ್ತಾರವಾಗಿ ಪತ್ರಿಕೆಗೆ ಬರೆಯಲಿದ್ದಾರೆ.) ಡಾ.ಸಣ್ಣರಾಮ ಭಾಗ-ಒಂದು.     ಮನುಷ್ಯ ವಿಕಾಸದ ಹಂತದಿಂದಲೇ ಒಬ್ಬ ಮತ್ತೊಬ್ಬನಂತಿಲ್ಲ, ಆಲೋಚನ ರೀತಿ, ಗ್ರಹಿಕೆ, ಪ್ರತಿಕ್ರಿಯೆ, ದೈಹಿಕ ಸ್ವರೂಪ, ಬಣ್ಣ ಹೀಗೆ ಎಲ್ಲಾ ಬಗೆಯಲ್ಲಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನತೆ ಇರುತ್ತದೆ. ಒಂದೇ ತಂದೆ-ತಾಯಿಯ ಮಕ್ಕಳು ಸಹ ಒಬ್ಬ ಮತ್ತೊಬ್ಬನಂತಿರುವುದಿಲ್ಲ. ಭಿನ್ನತೆಯೇ ಮನುಷ್ಯನ ವೈಶಿಷ್ಟವೂ ಹೌದು. ಮನುಷ್ಯನ ಭಿನ್ನ ಆಲೋಚನಾ ಕ್ರಮಗಳೇ ಭಿನ್ನ ಅಭಿಪ್ರಾಯ, ಭಿನ್ನ ಸಿದ್ದಾಂತಗಳ ಉಗಮಕ್ಕೆ ಕಾರಣ. ಒಂದು ಅಂದಾಜಿನ ಪ್ರಕಾರ ಜಗತ್ತಿನಲ್ಲಿ ದಿನ ಒಂದಕ್ಕೆ ೬೦೦ ಸಿದ್ದಾಂತ ಹುಟ್ಟುತ್ತವೆ ಮತ್ತು ಸಾಯುತ್ತಿವೆಯಂತೆ. ಭಿನ್ನತೆಯೇ ವ್ಯಕ್ತಿ ವ್ಯಕ್ತಿಯ ನಡುವೆ ಪೈಪೋಟಿ ಘರ್ಷಣೆಗಳು ಏರ್ಪಡಲು ಕಾರಣವಾಗಿದೆ. ಮನುಷ್ಯನಲ್ಲಿರುವ ಭಿನ್ನ ಆಲೋಚನಾ ಕ್ರಮಗಳೇ ಜಗತ್ತಿನಾದ್ಯಂತ ಚಳವಳಿಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.     ಮನುಷ್ಯ ಗುಹ ವಾಸಿಯಿಂದ ಗ್ರಾಮ ವಾಸಿ, ನಗರ ವಾಸಿಯಾಗುತ್ತಾ ಬಂದಂತೆ ಆತನ ಸಾಮಾಜಿಕ ರೂಪುರೇಷಗಳು ಬದಲಾಗುತ್ತಾ ಬಂದಿವೆ. ಜಗತ್ತಿನ ಯಾವ ಸಮಾಜವು ಒಂದು ಮತ್ತೊಂದರಂತಿಲ್ಲ. ಸಾಮಾಜಿಕ ರಚನಾ ವಿನ್ಯಾಸವೂ ಭಿನ್ನವೇ ಆಗಿರುತ್ತದೆ. ಅಂತೆಯೇ ಸಾಮಾಜಿಕ ವ್ಯವಸ್ಥೆಯೂ ಸಹ ಭಿನ್ನವೇ ಆಗಿರುತ್ತದೆ. ಯಾವುದೇ ಸಮಾಜ ರೂಪಿತ ವ್ಯವಸ್ಥೆಯನ್ನು  ಆ ಸಮಾಜದ ಸಮಸ್ತ ಜನರು ಒಪ್ಪಿಕೊಂಡಿರುತ್ತಾರೆಂದು ಹೇಳಲಾಗುವುದಿಲ್ಲ. ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ವ್ಯವಸ್ಥೆಯ ರೂಢಿಗತ ವಿಚಾರಧಾರೆಯನ್ನು ಒಪ್ಪದ ಜನರು ಒಟ್ಟಾಗಿ ಪ್ರಶ್ನಿಸಲು ಪ್ರಾರಂಭಿಸಿದಾಗ ಚಳವಳಿ ಸ್ಪೋಟಗೊಳ್ಳುತ್ತದೆ.    ಚಳವಳಿ ಎಂದರೇನು? ಎಂಬುದನ್ನು ವ್ಯಾಖ್ಯಾನಿಸುವುದು, ನಿರ್ಧಿಷ್ಟವಾಗಿ ಹೇಳುವುದು ಸುಲಭವಲ್ಲ, ಏಕೆಂದರೆ ಚಳವಳಿ ಎಂಬುದು ತುಂಬಾ ಸಂಕೀರ್ಣವಾದ ಅಷ್ಟೇ ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಪ್ರಕ್ರಿಯೆ. ‘ಸಾಮಾಜಿಕ ವ್ಯವಸ್ಥೆಯ ವೈರುಧ್ಯಗಳ ಘರ್ಷಣೆಯನ್ನು ವ್ಯವಸ್ಥೆಯ ಸಮಗ್ರ ಬದಲಾವಣೆಗಾಗಿ ಬಳಸಲು ನಡೆಸುವ ನಿರಂತರ ರಾಜಕೀಯ ಪ್ರಕ್ರಿಯೆಯೇ ಚಳವಳಿ’ (ಕನ್ನಡ ಸಾಹಿತ್ಯ ಮತ್ತು ಜನಪರ ಚಳವಳಿ; ಸಂ;ರಂಗರಾಜ ವನದುರ್ಗ, ಲೇಖನ; ಬಿ.ಎಂ.ಪುಟ್ಟಯ್ಯ ಪು-೫) ಎಂದಿದ್ದಾರೆ. ಚಳವಳಿಯನ್ನು ಕುರಿತು ಆಧಾರ ಸಹಿತ ಚರ್ಚಿಸುವ ಲೇಖಕರು ಸರಿಯಾಗಿಯೇ ವ್ಯಾಖ್ಯಾನಿಸಿದ್ದಾರೆ. ಈ ವ್ಯಾಖ್ಯಾನವನ್ನು ವಿಸ್ತರಿಸಿ ಹೇಳುವುದಾದರೆ ಚಳವಳಿ ಎಂದರೆ ‘ವ್ಯವಸ್ಥೆಯೊಂದು ಸಾಮಾಜಿಕ, ರಾಜಕೀಯ, ಆರ್ಥಿಕ ವಿಚಾರಗಳನ್ನು ಆಚರಣೆಗೆ ತಂದಾಗ ಅವು ಬಹು ಸಮುದಾಯಗಳ ಹಿತಕ್ಕೆ ದಕ್ಕೆಯನ್ನುಂಟು ಮಾಡುವಂತಿದ್ದರೆ ಆ ಸಮುದಾಯಗಳ ಆಂತರ್ಯದಲ್ಲಿ ನಿರಂತರವಾಗಿ ಗುಪ್ತಗಾಮಿನಿಯಂತೆ ಪ್ರವಹಿಸುತ್ತಿರುವ ಶಕ್ತಿಯು ಒಮ್ಮೆಲೆ ಜ್ವಾಲಾಮುಖಿಯಂತೆ ಸ್ಪೋಟಗೊಂಡು ನಿರ್ದಿಷ್ಟ ಗುರಿಯತ್ತ ಚಲಿಸುವ ಪ್ರಕ್ರಿಯೆ’ ಎಂದು ಹೇಳಬಹುದು. ಚಳವಳಿಯಲ್ಲಿ ಬಹುಸಮುದಾಯಗಳು ಒಗ್ಗೂಡುವಿಕೆ ಮತ್ತು ಅವುಗಳ ಆಂತರ್ಯದಲ್ಲಿ ಮಡುಗಟ್ಟಿದ ಪ್ರಶ್ನಿಸುವ ನಿರಂತರ ಚಲನೆಯು ಮುಖ್ಯವಾಗುತ್ತದೆ. ಆದ್ದರಿಂದಲೇ ಚಳವಳಿ ಅಪಾರವಾದ ಶಕ್ತಿಯ ಸಂಚಯವೂ ಆಗಿರುತ್ತದೆ     ಚಳವವಳಿ ಸಮುದಾಯಗಳ ಆಂತರ್ಯದಲ್ಲಿ ನಿರಂತರ ಚಲನಶೀಲೆಯಾಗಿರುವುದರಿಂದ ಇಂದು ಹುಟ್ಟಿ ನಾಳೆ ಅಂತ್ಯಗೊಳ್ಳುವ ಕ್ರಿಯೆಯಲ್ಲ. ಭಾರತೀಯ ಸಮಾಜವನ್ನೇ ಅನುಲಕ್ಷಿಸಿ ಹೇಳುವುದಾದರೆ ಭಾರತದಲ್ಲಿ ಆದಿಮ ಕಾಲದಲ್ಲಿ ರೂಪಿತಗೊಂಡಿರುವ ವಿಚಾರಧಾರೆಯನ್ನೇ ಒಪ್ಪುವ ಸಮುದಾಯಗಳು ಒಂದೆಡೆ ಇದ್ದರೆ ಅವುಗಳನ್ನು ಪ್ರಶ್ನಿಸುವ ಮನಸ್ಸುಗಳಿಗೂ ಅಷ್ಟೇ ಪ್ರಾಚೀನತೆ ಇದೆ. ಸನಾತನ ವಾದವನ್ನು ಪ್ರಶ್ನಿಸುತ್ತಿದ್ದ ಪಂಥವನ್ನು ಪ್ರಕೃತಿವಾದಿಗಳಿಗೂ ಅಷ್ಟೇ ಪ್ರಾಚೀನತೆ ಇದೆ. ಮುಂದೆ ಚಾರ್ವಾಕ ಪಂಥವೆಂದು ಪ್ರಸಿದ್ದವಾಗಿತ್ತು. ಸನಾತನ ವಾದವನ್ನು ಧಿಕ್ಕರಿಸುವ ಮನಸ್ಸುಗಳೇ ಚಳವಳಿಗಳಿಗೆ ಮೂಲ ಪ್ರೇರಣೆ. ಮನುಷ್ಯ ಆಂತರ್ಯದಲ್ಲಿ ಅಂತರ್ಗತವಾಗಿರುವ ಪ್ರಶ್ನಿಸುವ ಗುಣ ಎಲ್ಲಿವರೆಗೂ ಇರುತ್ತದೆಯೋ ಅಲ್ಲಿಯವರೆಗೆ ಚಳವಳಿಯು ನಿರಂತರವಾಗಿರುತ್ತದೆ. ಆ ಗುಣ ಮಾನವನ ಉಗಮದಷ್ಟೆ ಪ್ರಾಚೀನ. ಆದ್ದರಿಂದಲೇ ಚಳವಳಿಗೆ ಆದಿ-ಅಂತ್ಯಗಳಿಲ್ಲ ಎಂದು ಹೇಳಲಾಗಿದೆ.     ಯಾವುದೇ ಚಳವಳಿ ಎಲ್ಲಾ ಕಾಲದಲ್ಲಿ ಏಕ ಪ್ರಕಾರವಾಗಿರುವುದಿಲ್ಲ. ಹಾಗೆಯೇ ಇರಲು ಸಾಧ್ಯವೂ ಇಲ್ಲ. ಚಳವಳಿ ಒಂದು ರೀತಿಯಲ್ಲಿ ಜ್ವಾಲಾಮುಖಿಯಂತೆ, ಜ್ವಾಲಾಮುಖಿ ಭೂಮಿಯ ಒಳಗೆ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದು, ಒಮ್ಮಿಂದೊಮ್ಮೆಲೆ ಸ್ಪೊÃಟಗೊಂಡು ಆಕಾಶಕ್ಕೆ ಲಾವಾರಸವನ್ನು ಚಿಮ್ಮಿ ತನ್ನ ತೆಕ್ಕೆಗೆ ಸಿಕ್ಕಿದಷ್ಟನ್ನು ನುಂಗಿ ನೊಣೆಯುವಂತೆ ಚಳವಳಿ ಸಮುದಾಯದ ಒಳಗೆ ಗುಪ್ತಗಾಮಿನಿಯಾಗಿದ್ದು ತಮ್ಮ ಮೇಲಿನ ದೌರ್ಜನ್ಯಗಳು ಉಗ್ರ ರೂಪ ತಳೆದಾಗ ಉಗ್ರ ರೂಪವನ್ನು ತಾಳುತ್ತದೆ. ಗುರಿ ಮುಟ್ಟಿದ ಮೇಲೆ ಮತ್ತೆ ತಟಸ್ಥವಾಗುತ್ತದೆ. ಚಳವಳಿಯ ಆದಿ ರೂಪ ಗ್ರಹಿಕೆ ಹೇಗೆ ಸಿಗುವುದಿಲ್ಲವೋ ಹಾಗೆಯೇ ಅದು ಸ್ಪೊÃಟಗೊಂಡಾಗ ತಳೆಯ ರೂಪಗಳನ್ನು ಹೇಳಲಾಗುವುದಿಲ್ಲ. ಸ್ವಾತಂತ್ರö್ಯ ಚಳವಳಿ, ದಲಿತ ಚಳವಳಿ, ಭಾಷಾ ಚಳವಳಿ, ರೈತ ಚಳವಳಿ ಈ ಎಲ್ಲಾ ಚಳವಳಿಗಳ ಹಿನ್ನಲೆಯು ಹಾಗೆಯೇ. movement ಇಂಗ್ಲಿಷಿನ ಪದ. ಇದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಚಳವಳಿ ಪದವನ್ನು ಬಳಸುತ್ತೇವೆ.. movement ಎಂದರೆ ಇಂಗ್ಲಿಷಿನಲ್ಲಿ an act the process of moving, a group of people who share same aims or ideas a trend or development ಇತ್ಯಾದಿ ಅರ್ಥಗಳಿವೆ. ಕನ್ನಡದಲ್ಲಿ movement ಪದಕ್ಕೆ ಚಲನೆ ಅಲುಗಾಟ ಚಲಿಸುವುದು, ಸ್ಥಳದಿಂದ ಸ್ಥಳಕೆ ಹೋಗುವುದು, ಮುಂದುವರಿಕೆ, ಸಾಗುವುದು ಇತ್ಯಾದಿ ಅರ್ಥಗಳಿವೆ. ‘ಚಳವಳಿ’ ಪದಕ್ಕೆ ಕನ್ನಡದಲ್ಲಿ ಆಂದೋಲನ ವಿಶೇಷ ಉ್ದೇಶಕ್ಕಾಗಿ ಒಟ್ಟುಗೂಡಿದ ಜನಗಳ ತಂಡ, ಆ ತಂಡ ಕೈಗೊಳ್ಳುವ ಕಾರ್ಯಗಳು ಹಾಗೂ ಚಟುವಟಿಕೆಗಳು ಇತ್ಯಾದಿ ಅರ್ಥಗಳಿವೆ. ಕನ್ನಡದ ಚಳುವಳಿ ಪದವು ಇಂಗೀಷ್ನ movement ಪದ ಅರ್ಥವ್ಯಾಪ್ತಿಯನ್ನು ಹೊಂದಿರುವುದರಿಂದ ಚಳವಳಿ ಪದದ ಬಳಕೆ ಸೂಕ್ತವಾಗಿದೆ. ಇಷ್ಟು ವ್ಯಾಪಕ ಅರ್ಥವ್ಯಾಪ್ತಿಯನು ಹೊಂದಿರುವ ಚಳವಳಿ ಪದವನು ಇಂದು ನಮ್ಮ ನಡುವೆ ತುಂಬಾ ಸಂಕೂಚಿತವಾಗಿ ಬಳಕೆ ಮಾಡಲಾಗುತ್ತಿದೆ. ಯಾವ ಗೊತ್ತು ಗುರಿ ಇಲ್ಲದೆ ಯಾರದೊ ಹಿತಕಾಗಿ ನಡೆಯುವ ಪತಿಭಟನೆ, ಹೋರಾಟ, ಸಂಘರ್ಷ, ಆಕ್ರೊÃಶ, ಜಗಳ ಇವೆಲ್ಲವನ್ನು ಚಳವಳಿ ಎಂದು ಕರೆಯುವುದು ಸಾಮಾನ್ಯವಾಗಿದೆ. ಈ ಪದಗಳ ಅರ್ಥ ವ್ಯಾಪ್ತಿ ಕಡಿಮೆ. ಇಲ್ಲಿ ಸಾರ್ವಜನಿಕರ ಹಿತಾಶಕ್ತಿ ಇರುವುದಿಲ್ಲ. ನಿರ್ದಿಷ್ಟ ಗೊತ್ತು ಗುರಿ ಇರುವುದಿಲ್ಲ. ಯಾರೋ ಒಬ್ಬ ವ್ಯಕ್ತಿಯ ಪರೋಕ್ಷ ಅಥವಾ ಪ್ರತ್ಯಕ್ಷ ಸ್ವಾರ್ಥತೆ ಮುಖವಾಗಿರುತ್ತದೆ. ಕ್ಷÄಲ್ಲಕÀ ವಿಚಾರವನ್ನಿಟ್ಟುಕೊಂಡು ನಡೆಯುವ ಹೋರಾಟ, ಪ್ರತಿಭಟನೆಗಳು ಚಳವಳಿ ಹೇಗಾದೀತು. ಚಳುವಳಿ ಸ್ಪೊÃಟಗೊಂಡು ವಿಶ್ವವ್ಯಾಪಿಯಾಗಬಹುದು, ರಾಷ್ಟç-ರಾಜ್ಯ ಅಥವಾ ಜಿಲ್ಲೆಯ ವ್ಯಾಪ್ತಿಗೆ ಸೀಮಿತವಾಗಿರಬಹುದು. ಅದೇನೇ ಇದ್ದರು ಅವುಗಳ ಅಧ್ಯಯನ ನಡೆಯುವುದು ಸೂಕ್ತವಾದುದು. ಏಕೆಂದರೆ ಕಳೆದ ತಲೆಮಾರುಗಳ ವಿದ್ಯಮಾನಗಳು ಮುಂದಿನ ತಲೆಮಾರಿಗೆ ತಲುಪುವ ಅಗತ್ಯವಿರುತ್ತದೆ. ಆದರೆ ಚಳವಳಿಗಳ ಅಧ್ಯಯನ ಮಾಡುವುದು ತುಂಬಾ ಕಷ್ಟ. ಚಳವಳಿಯ ನಡೆ ತುಂಬಾ ಸಂಕೀರ್ಣವಾಗಿರುತ್ತದೆ. ಎಲ್ಲೆಲ್ಲಿ ಯಾರ ಯಾರ ನೇತೃತ್ವದಲ್ಲಿ ಚಳವಳಿ ನಡೆಯಿತು, ಆದರ ರೂಪ ರೇಷೆಗಳೇನು ಎಂಬುವುದನು ಕ್ಷೆÃತ್ರಕಾರ್ಯದ ಮೂಲಕವೇ ಸಂಗ್ರಹಿಸಿ ದಾಖಲಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಚಳವಳಿಗಳ ತವರೂರಾದ ಶಿವಮೊಗ್ಗ ಜಿಲೆಯನ್ನು ಕೇಂದ್ರಿಕರಿಸಿಕೊಂಡು ಇಲ್ಲಿ ಜನತಳೆದ ಚಳವಳಿಗಳನ್ನು ಕುರಿತ ಕೃತಿ ರಚನೆ ಮಾಡುತ್ತಿದೇನೆ. ಈ ಕೃತಿ ಕಾಲಿಕವಾಗಿದ್ದರಿಂದ ಇದರ ವ್ಯಾಪ್ತಿಯೂ ಸೀಮಿತವಾಗಿದೆ. (ಮುಂದುವರೆಯುತ್ತದೆ)    ============== ಪರಿಚಯ: ಡಾ.ಸಣ್ಣರಾಮ ಅವರು ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಪ್ರಾದ್ಯಾಪಕರು.ಇದೀಗ ಶಿವಮೊಗ್ಗೆಯ್ಲಿ ನೆಲೆಸಿದ್ದಾರೆ

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು Read Post »

You cannot copy content of this page

Scroll to Top