ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಲಹರಿ

ಮಳೆಯಲ್ಲಿ ನೆನೆದ ನೆನಪು ಪ್ರಮೀಳಾ ಎಸ್.ಪಿ. ” ಮಳೆ”… ಈ ಪದಕ್ಕೂ ಅದು ಸುರಿಯುವಾಗ ಕೊಡುವ ಅನುಭವಕ್ಕೂ ,ಪ್ರಕೃತಿಯಲ್ಲಿ ,ಉಂಟಾಗುವ ಬದಲಾವಣೆಗೂ ನಮ್ಮ ಬದುಕಿನಲ್ಲಿ ತರುವ ಸ್ಥಿತ್ಯಂತರಕ್ಕೂ ಹೇಳಲಾಗದ ಅವಿನಾಭಾವ ಸಂಬಂಧವಿದೆ.ಮಳೆ ಬರುತ್ತಿದೆ ಎಂದರೆ ಒಬ್ಬೊಬ್ಬರ ಯೋಚನಾ- ಲಹರಿ ಒಂದೊಂದು ರೀತಿ ಹರಿಯುತ್ತದೆ.ಹಿಂದೆಲ್ಲಾ ಹಳ್ಳಿಗಳಲ್ಲಿ ಮಳೆಗಾಲದ ಆರಂಭವಾಗುವ ಮುಂಚೆ ದನಕರುಗಳಿಗೆ ಹುಲ್ಲು ಸೊಪ್ಪು ಹೊಂದಿಸಿಕೊಂಡು;ಮನೆಗೆ ಸೌದೆ,ಬೆರಣಿ ಹಿತ್ತಲಿನಲ್ಲಿ ನೆನೆಯದ ಹಾಗೆ ಇಟ್ಟುಕೊಂಡು, ಹಪ್ಪಳ ಉಪ್ಪಿನಕಾಯಿ,ಹಿಟ್ಟು ಬೇಳೆ ಬೆಲ್ಲ ಕೂಡಿಟ್ಟುಕೊಂಡು,ಹೊಲಕ್ಕೆ ಗೊಬ್ಬರ ಚೆಲ್ಲಿ ,ಉಕ್ಕೆ ಪಾಕವಾಗಿಸಿ ಮಳೆಗಾಗಿ ಕಾಯುತ್ತಿದ್ದರು ನಮ್ಮ ರೈತಾಪಿ ಜನಗಳು.ಈಗಿನ ಕಾಲದ ಚಿಂತನಾ ರೀತಿಯೇ ಬೇರೆ.ಮಕ್ಕಳಿಗಂತೂ ಮಳೆ ಬಂತೆಂದರೆ ದೋಣಿ ತೇಲಿ ಬಿಡುವ,ಮರಳಲ್ಲಿ ಮನೆಕಟ್ಟುವ ಆಸೆ.ಪ್ರೇಮಿಗಳಿಗ ಪಾಲಿಗೆ ಅದು ಯಾವ ಮಳೆಯಾದರು ಮುಂಗಾರು ಮಳೆಯೇ!!.ಮಳೆಯಲಿ ಜೊತೆಯಲಿ ಹಾಡುವ ಆಸೆ.ತೊಪ್ಪೆಯಾಗುತ್ತಾ ನಾಲ್ಕು ಹೆಜ್ಜೆ ಹಾಕುವಾಸೆ.ಮೈ ಮರೆತು ಜಗ ಮರೆತು ಮಳೆಯೊಳಗೆ ಒಂದಾಗುವಾಸೆ. ಹನಿ ಮಳೆಯೋ,ಜಡಿ ಮಳೆಯೋ,ಸುರಿ ಮಳೆಯೋ,ಧಾರಾಕಾರ ಮಳೆಯೋ,ಮುಸಲಧಾರೆಯೋ,ಪ್ರೀತಿಯ ಮಧುರ ಕ್ಷಣಗಳನ್ನು ಮತ್ತೆಮತ್ತೆ ಮನ ಮಿಡಿಸುತ್ತದೆ.ಕೆಲಸಕ್ಕೆ ಹೋಗುವ ಹೆಂಗಸರಿಗೆ ಹೊಸ ಛತ್ರಿ,ಜರ್ಕಿನ್ ಕೊಳ್ಳೋ ಯೋಚನೆ.ಅಮ್ಮಂದಿರಿಗೆ ಎಲ್ಲ ರೀತಿಯ ಹಿಟ್ಟು ,ಮೆಣಸಿನ ಪುಡಿ, ಸಂಬಾರ ಪುಡಿ ಡಬ್ಬಿಗೆ ಕೆಡದಂತೆ ತುಂಬೋ ತವಕ.ರೈತರಿಗೆ ಬಿತ್ತನೆ ಬೀಜ ಗೊಬ್ಬರಕ್ಕೆ ಕಾಸು ಹೊಂದಿಸೋ ಚಿಂತೆ.ರೈತ ಮಹಿಳೆಯರಿಗೆ ಯಾವ ಸಂಘದಲ್ಲಿ ಎಷ್ಟು ಸಾಲ ತೆಗೆದುಕೊಡಬಹುದು ಅನ್ನೋ ಯೋಚನೆ,ಗದ್ದೆ ಬಯಲಿನವರಿಗೆ ಈ ಭಾರಿ ಎರೆಡು ಬೆಳೆ ತೆಗೆಯುವ ಆಸೆ, ಸರ್ಕಾರಕ್ಕೆ ಜೋರು ಮಳೆ ಬಂದು ಕಾವೇರಿ ವಿವಾದ ಬಗೆಹರಿಯಲಿ ಅನ್ನೋ ಚಿಂತೆ. ಮುದುಕರಿಗೆ ಈ ಭಾರಿ ಪಿಂಚಣಿ ಹಣದಲ್ಲಿ ಉದ್ದ ಕೊಡೆ ,ಮಳೆಗಾಲದ ಬೂಟು ತರಿಸಿಕೊಳ್ಳೋ ಆಸೆ.ನಂಗೆ ಮಳೆ ಬರಲಿ, ಆದರೆ ರಸ್ತೆ ಬೇಗ ಒಣಗಲಿ ಗಾಡಿ ಓಡಿಸಲು ಸುಲಭವಾಗಲಿ,ಶಾಲೆಗೆ ಯಾವುದೆ ತೊಂದರೆ ಇಲ್ಲದೆ ಸೇರುವಂತಾಗಲಿ ಅನ್ನೋ ಭಾವನೆ,ಶಾಲಾ ಮಕ್ಕಳಿಗೆ ಮಳೆಗಾಲದ ರಜೆ ಸಿಗಬಹುದು…ಎಂಬ ನಂಬಿಕೆ. ಹೀಗೆ ಮಳೆಯೊಂದಿಗೆ ಭಾವನೆಗಳ ಬೆಸುಗೆ… ನೆನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನಮ್ಮ ಮನೆ ಕೆಲಸಕ್ಕೆ ಬಂದ ಸರೋಜಮ್ಮಬಹಳ ಸಪ್ಪಗಿದ್ದರು.ಕಾರಣ ಕೇಳದ ನಾನು ಕೆಲಸಕ್ಕೆ ಹೊರಡುವ ಆತುರದಲ್ಲಿದ್ದೆ. ಅವರೇ ನಿಂತು ಮಾತು ಶುರುಮಾಡಿದರು…”ಅಮ್ಮಾ ರಾತ್ರಿಯ ಮಳೆಗೆ ಮನೆಯಲ್ಲಿ ನೀರು ತುಂಬಿ ಹಾಸಿಗೆ ನೆನೆದು ಹೋಯಿತು.ಸೊಸೈಟಿ ಇಂದ ತಂದ ಅಕ್ಕಿ ಪೂರ್ತಿ ನೀರೊಳಗೆ ಮುಳುಗಿತು.ಇನ್ನೊಮ್ಮೆ ಅಕ್ಕಿ ಕೊಡೋವರೆಗೆ ಏನು ಮಾಡೋದು ?ಅದು ಅನ್ನ ಮಾಡಲು ಬರಲ್ಲ ..ತಿಂಡಿಗೆ ಆಗುತ್ತೆ,ಎಂದರು.ಗಂಡನಿಲ್ಲದ ಅವರು ವಿಧವೆ ಮಗಳನ್ನು ಮತ್ತು ಮೊಮ್ಮೊಗುವನ್ನು ಸಾಕಿಕೊಂಡು ಬದುಕು ನಡೆಸುತ್ತಿರುವುದು ನನಗೆ ಗೊತ್ತಿದ್ದ ವಿಷಯವಾಗಿತ್ತು.ಬಾಡಿಗೆ ಮನೆ ,ಕೂಲಿ ಕೆಲಸ, ಮದುವೆಯಾದರು ಮಗುವಿನೊಂದಿಗೆ ಮನೆಗೆ ಬಂದ ಮಗಳು.ಬಿ ಪಿ ಎಲ್ ಕಾರ್ಡಿನ ಅಕ್ಕಿ.ನನ್ನ ಯೋಚನೆ ಮುಂದುವರೆಯಿತೇ ಹೊರತೂ ಅವರಿಗೆ ಸಮಾಧಾನ ಹೇಳದೆ ಚಪಾತಿ ಲಟ್ಟಿಸಲು ಮುಂದಾದೆ. ನನ್ನನ್ನು ಸರೋಜಮ್ಮನ ಸ್ಥಾನದಲ್ಲಿ ಕಲ್ಪಿಸಿಕೊಂಡೆ. ಕಣ್ಣುಗಳು ಒದ್ದೆಯಾದವು.ಕವಿಗಳ ಕಲ್ಪನೆಯ ಮಳೆಗೂ ,ಕೊಡಗಿನಲ್ಲಿ ಧಾರಾಕಾರ ಸುರಿದು ಮನೆ ಮನ ಬಯಲು ಬೆಟ್ಟಗಳನ್ನೆಲ್ಲ ಕೊಚ್ಚಿ ಹಾವಳಿ ತಂದ ಮಳೆಗೂ,ಉತ್ತರ ಕರ್ನಾಟಕದಲ್ಲಿ ಅಬ್ಬರಿಸಿ ಹಾಳುಗೆಡವಿದ ಮಳೆಗೂ, ಸರೋಜಮ್ಮನ ಮನೆಯ ಹಾಸಿಗೆ ಅಕ್ಕಿ ನೆನೆಸಿ ಉಣ್ಣಲು ಉಡಲು ಮಲಗಲು ಇಲ್ಲದಂತೆ ಬದುಕನ್ನು ಚೆಲ್ಲಾಪಿಲ್ಲಿಯಾಗಿಸಿದ ಮಳೆಗೂ…ಯಾವ ಭಾವ ಬೆಸೆಯಬಹುದೆಂದು ತಿಳಿಯದೆ ಶೂನ್ಯಮನಸ್ಕಳಾಗಿ ಕೊರಗುತ್ತಾ ಕುಳಿತೆ. ಮತ್ತೆ ಮತ್ತೆ ಹುಚ್ಚು ಮಳೆ ಹೊಯ್ದು ಬದುಕು ಮೂರಾಬಟ್ಟೆಯಾಗದಿರಲಿ.ಬಡಜನರ ಬದುಕು ಕೊಚ್ಚಿ ಹೋಗದಿರಲಿ ದೇವರೆ ಎಂದು ಮೊರೆಯಿಟ್ಟೆ . ಇಲ್ಲಿಗೆ ಇಪ್ಪತ್ತೆರಡು ವರ್ಷಗಳ ಹಿಂದೆ ನನ್ನ ಗೆಳತಿಯರು ಒಂದಿಬ್ಬರು ಪ್ರೀತಿಯ ಮಳೆಯಲ್ಲಿ ತೊಪ್ಪೆಯಾದರಲ್ಲ.ಅಪ್ಪ ಅಮ್ಮನ ವಿರೋಧವಿದ್ದರೂ ತಾವು ಒಪ್ಪಿದವನೊಡನೆ ಹೆಜ್ಜೆ ಹಾಕಿದರಲ್ಲ.ಸುತ್ತಲಿನ ಸಮಾಜಕ್ಕೆ ಸೊಪ್ಪುಹಾಕದೆ,ತಪ್ಪನ್ನೇ ತಬ್ಬಿ ನಡೆದರಲ್ಲ.ಆಗಿನ್ನೂ ಈ “ಮುಂಗಾರು ಮಳೆ” ಯ ಪ್ರಭಾವ ಇಷ್ಟು ದಟ್ಟವಾಗಿ ಇರಲಿಲ್ಲ.” ಚಳಿ ಚಳಿ ತಾಳೆನು” ಹಾಡಿಗೆ ನಮ್ಮಂಥ ಸಾವಿರಾರು ಯುವಜನರು ಮಾರುಹೋಗಿದ್ದ ಕಾಲವದು.ಪ್ರೀತಿಯ ಬಲೆಯಲ್ಲಿ ಬಿದ್ದರೂ ಬಲಿಷ್ಠ ಪರಿಸರವನ್ನು ಎದುರಿಸಲಾಗದೆ ಎದೆಯೊಳಗೆ ಮುಚ್ಚಿಟ್ಟು ,ದಿಂಬಿನಲ್ಲಿ ಮುಖವಿಟ್ಟು ಕೋಣೆಯೊಳಗೆ ಬಿಕ್ಕಳಿಸುತ್ತಿದ್ದ ದಿನಗಳು ನೆನಪಾಗ ಹತ್ತಿವೆ.ಬಿಟ್ಟೂ ಬಿಡದಂತೆ ಟಪಟಪನೆ ಸುರಿವ ಮಳೆ ಹನಿಗಳ ನಿನಾದ ನೆನಪ ಸಾಲುಗಳಿಗೆ ಶ್ರುತಿ ಹಿಡಿದಿದೆ.ಮಾಗಿದ ಮನವನ್ನು ನೆಲದಂತೆ ಮೆದುವಾಗಿಸಿದೆ.ಹೊರಗೆ ಕಾಲಿಟ್ಟರೆ ಜಿಡಿಮಳೆ ಬೇಸರ ತರುತ್ತದೆ.ಹಳೆಯ ಪ್ರೇಮದ ಬೆಸುಗೆ ನೆನೆಯದಂತೆ ಮುಸುಕೆಳೆದಿದೆ.ಹೆದರಿ ಒಳಗೆ ಕೂರುವಂತಿಲ್ಲ.ಬದುಕನ್ನು ಕಟ್ಟಿಕೊಳ್ಳಬೇಕು.ರಾಶಿ ರಾಶಿ ಕೆಲಸಗಳು ಕಾಯುತ್ತಿವೆ.ಹೌದು ನನ್ನವರಿಗೀಗ ಧುಮ್ಮಿಕ್ಕುವ ಧಳಧಳನೆ ಸುರಿವ ಆರ್ಭಟ ಕಡಿಮೆಯಾಗಿದೆ.ಉತ್ತರೆ ಮಳೆಯಂತೆ ತತ್ತರಿಸುತ್ತಿದ್ದ ರೀತಿ ಸೌಮ್ಯವಾಗಿದೆ.ಮಕ್ಕಳಾದ ಮೇಲಂತೂ ಪ್ರೀತಿಯಲ್ಲಿ ಏನೋ ಕೊರತೆ ಕಾಡತೊಡಗಿದೆ.ಒರತೆ ಹಂಚಿಕೆಯಾಗಿದೆ.ಎಲ್ಲರಿಗೂ ಹೀಗೇನಾ?.ಸೊಲ್ಲು ಸೊಲ್ಲಿಗೂ ನನ್ನ ಹೆಸರನ್ನೇ ಜಪಿಸುತ್ತಾ ಸುತ್ತಲೇ ಸುಳಿಯುತ್ತಿದ್ದ ನಲ್ಲನಿಗೇನಾಗಿದೇ ?.ಒಲ್ಲೆನೆಂದರೂ ಬಿಡದೆ ಮೊಲ್ಲೆ ಮೊಗ್ಗುಗಳ ರಾಶಿ ಪೇರಿಸುತ್ತಿದ್ದ ಇನಿಯನೆಲ್ಲಿ ಕಳೆದು ಹೋದ?!.ಛೇ ಈ ಪ್ರೀತಿಯೊಂದು ಹುಚ್ಚು.ಬದುಕಿನ ವಸಂತಗಳು ಮುಗಿದು ಹೇಮಂತ ಬಂದರೂ ಮಳೆ ಮಾತ್ರ ನಿಲ್ಲುತಿಲ್ಲ .ಸವಿಜೇನಿನ ಇನಿದನಿಯಲಿ ಕೂಗುತಿದ್ದ ಕೋಗಿಲೆ ಗಾನ ನಿಲ್ಲಿಸಿಬಿಟ್ಟಿತೆ ?ಮಳೆ ತಂದ ಶೀತಲ ಮಾರುತಗಳಿಗೆ ಗಂಟಲು ಬಿಗಿಯಿತೆ?.ನೆನೆದ ಪುಕ್ಕಗಳಲಿ ಚಳಿ ಧಾಳಿಯಿಟ್ಟಿತೆ?. ಹೌದು ನಾವು ಈಗ ಮೊದಲಿನಂತಿಲ್ಲ.ಎಷ್ಟೊಂದು ಸುಧೀರ್ಘಕಾಲ ಸುಳಿವು ನೀಡದೇ ಸರಿದೇ ಹೋಯಿತಲ್ಲ.ವೈಶಾಖನಾಗಲೇ ಅಡಿಯಿಟ್ಟಿದ್ದಾನೆ.ಗಿಡಮರಗಳು ಬೋಳಾಗಿವೆ.ಬಿಸಿಯುಸಿರು ಬುಸುಗುಡುತ್ತಿದೆ.ಮತ್ತೆ ಮಳೆ ಬೇಕೆನಿಸುತ್ತಿದೆ…

ಲಹರಿ Read Post »

ಕಾವ್ಯಯಾನ

ಕಾವ್ಯಯಾನ

ಜಾಗವೊಂದು ಬೇಕಾಗಿದೆ! ಪ್ರಮೀಳಾ ಎಸ್.ಪಿ. ಬೇಕಿದೆ ನನಗೊಂದು ಜಾಗ ಮನೆ ಮಂದಿರ ಕಟ್ಟಲಲ್ಲ! ಮಸೀದಿ ಚರ್ಚು ಕಟ್ಟಿ ವಿವಾದ ಹುಟ್ಟು ಹಾಕಲಲ್ಲ! ಬ್ಯಾಂಕು ಬಂಕು ಮಾಲ್ ಹಾಲ್ ನಿರ್ಮಿಸಲಲ್ಲ! ಒಂದಿಷ್ಟು ಕುಳಿತು ಅಳಲು ಏಕಾಂತ ಸಿಗುವ ಜಾಗ! ಮನೆಯಲ್ಲಿ ಮಕ್ಕಳು ನೋಡಿಯಾರು ಬೀದಿಯಲಿ ಜನ ನಕ್ಕಾರು! ಗುಡಿಯ ಪೂಜಾರಿದುರುಗುಟ್ಟಿಯಾನುಕಚೇರಿಯಲ್ಲಿ ನಗೆಗೆಆಹಾರವಾದೇನು! ಅದಕೆಯಾರೂ ನೋಡದ, ಯಾರಿಗೂಕಾಣದ ಏಕಾಂತದ ಜಾಗವೊಂದು ಬೇಕಿದೆಕಣ್ಣೀರ ಕಟ್ಟೆ ಒಡೆಯಲು.

ಕಾವ್ಯಯಾನ Read Post »

ಇತರೆ

ರಾಜ್ಯೋತ್ಸವದ ನೆಪದಲ್ಲೆರಡು ಮಾತು.

ಬಲಾಢ್ಯವಾಗಬೇಕಿರುವ ಕನ್ನಡಭಾಷಿಕ ಸಮುದಾಯ! ನಿಮ್ಮೆಲ್ಲರಿಗು  ಕನ್ನಡ ರಾಜ್ಯೋತ್ಷವದ ಶುಭಾಶಯಗಳು…ಈ ಸಂದರ್ಭದಲ್ಲಿ ನಿಮ್ಮೊಂದಿಗೆಕೆಲ ವಿಷಯಗಳನ್ನು ಹಂಚಿಕೊಳ್ಳಬೇಕಿದೆ. ನಿಜವಾದ ಅರ್ಥದಲ್ಲಿ ಇವತ್ತು ಕನ್ನಡ ಚಳುವಳಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಂತೆ ಕಾಣುತ್ತಿವೆ. ಇಂತಹ ಚಳುವಳಿಗಳ ಆತ್ಮವಾಗಿರಬೇಕಾಗಿದ್ದ ಅಕ್ಷರಸ್ಥ ಮದ್ಯಮವರ್ಗ ಸ್ವತ:  ಜಡಗೊಂಡಿರುವ ಈ ಸನ್ನಿವೇಶದಲ್ಲಿ ನಮ್ಮ ಕನ್ನಡ ಚಳುವಳಿ ಸಹ ನಿಸ್ತೆÃಜಗೊಂಡಂತೆ ನಮಗೆ ಬಾಸವಾಗುತ್ತಿದ್ದರೆ ಅಚ್ಚರಿಯೇನಲ್ಲ.ಇಂತಹ ನಿರಾಶಾದಾಯಕ  ಸನ್ನಿವೇಶದಲ್ಲಿಯೂ ಕನ್ನಡ ಚಳುವಳಿಯ ಕುರಿತು ಒಂದಿಷ್ಟು ಆಶಾಬಾವನೆ ಒಡಮೂಡಿದ್ದು ಇತ್ತೀಚೆಗೆ ನಡೆದ ಕಳಸಾಬಂಡೂರಿ ಮತ್ತು ಕಾವೇರಿ ನದಿ ನೀರಿನ ಹಂಚಿಕೆಯ ವಿವಾದಗಳ ಬಗ್ಗೆ ನಡೆದ ಹೋರಾಟದ ಕ್ಷಣದಲ್ಲಿ ಮಾತ್ರ.   ಹಾಗೆ ನೋಡಿದರೆ ನಾವು ಕನ್ನಡ ಚಳುವಳಿಯ ಒಟ್ಟು ಅರ್ಥವನ್ನೆ ಸಂಕುಚಿತಗೊಳಿಸಿ ನೋಡುವ ವಿಷಯದಲ್ಲಿಯೇ ಎಡವಿದ್ದೇವೆ. ಯಾಕೆಂದರೆ ಕನ್ನಡ ಚಳುವಳಿ ಎಂದರೆ ಅದು ಕೇವಲ  ಕನ್ನಡ ಭಾಷೆಗೆ ಸೀಮಿತವಲ್ಲ. ಬದಲಿಗೆ ಕರ್ನಾಟಕದ ನೆಲ, ಜಲ, ಭಾಷೆ, ನೈಸರ್ಗಿಕ ಸಂಪನ್ಮೂಲಗಳೂ ಸೇರಿದಂತೆ ಒಟ್ಟು ಕನ್ನಡ ನಾಡಿನ ಚಳುವಳಿಯೇ ನಿಜವಾದ ಕನ್ನಡ ಚಳುವಳಿ! ಆದರೆ ಇದುವರೆಗು ನಡೆದ ಕನ್ನಡ ಚಳುವಳಿಗಳು  ಕೇವಲ ಭಾಷಿಕ ಚಳುವಳಿಗಳಾಗಿ: ಆಡಳಿತ ಭಾಷೆ ಕನ್ನಡವಾಗಬೇಕು, ಕನ್ನಡ ಮಾದ್ಯಮದಲ್ಲಿ ಶಿಕ್ಷಣ ನೀಡಬೇಕು, ನಾಮಪಲಕಗಳು ಕನ್ನಡದಲ್ಲಿ ಇರಬೇಕೆಂಬ ಬೇಡಿಕೆಗಳಿಗೆ ಮಾತ್ರ ಸೀಮಿತವಾಗಿ ನಡೆಯುತ್ತ ಬಂದಿವೆ. ಇಂತಹ  ಏಕಮುಖ ಚಳುವಳಿಯ ಅಪಾಯವೆಂದರೆ ಕನ್ನಡ ಚಳುವಳಿ ಏಕಾಕಿಯಾಗಿ ಉಳಿದುಬಿಡುವುದು ಮತ್ತು ಕನ್ನಡದ ನೆಲ,ಜಲ,ಸಂಪನ್ಮೂಲಗಳ ವಿಷಯ ತನಗೆ ಸಂಬಂದಿಸಿದ್ದಲ್ಲವೆಂಬ ಅಭಿಪ್ರಾಯ ಬೆಳೆಸಿಕೊಂಡು ಬಿಡುವುದಾಗಿದೆ. ಹೀಗಾದಾಗ ಇಡಿ ಕನ್ನಡ ಚಳುವಳಿ ಕೇವಲ ಭಾಷಾ ದುರಭಿಮಾನದ ಸಂಕೇತವಾಗಿ ಮಾತ್ರ ಉಳಿದು ಬಿಡುವ ಅಪಾಯವಿದೆ.    ಅದರಲ್ಲು ಇವತ್ತಿನ ಜಾಗತೀಕರಣ ನಮ್ಮ ಸ್ಥಳೀಯ ಸಂಪನ್ಮೂಲಗಳನ್ನು ರಾಕ್ಷಸ ರೀತಿಯಲ್ಲಿ ನುಂಗುತ್ತ, ನಮ್ಮೊಳಗೆ ಕೊಳ್ಳುಬಾಕತನವನ್ನು ಸೃಷ್ಠಿಸಿ, ನಮ್ಮ ಪ್ರಾದೇಶಿಕ ಭಾಷೆ, ಸಂಸ್ಕೃತಿ, ಜನಪದ ಪರಂಪರೆಗಳನ್ನೆಲ್ಲ ನಾಶ ಮಾಡುತ್ತ ಹೋಗುತ್ತಿರುವ ಈ ದಿನಗಳಲ್ಲಿ ಕನ್ನಡ ಚಳುವಳಿ ತನ್ನ ಮಿತಿಯನ್ನು ಮೀರಿ ಬೆಳೆಯಬೇಕಿದೆ.ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖಾಸಗಿ ಬಂಡವಾಳಶಾಹಿ ಶಕ್ತಿಗಳು ದೈತ್ಯಾಕಾರವಾಗಿ ಬೆಳೆಯುತ್ತ ನಮ್ಮ ಬಹುಮುಖಿ ಸಂಸ್ಕೃತಿಯನ್ನು ಏಕರೂಪಿ ಸಂಸ್ಕೃತಿಯಾಗಿ ಬದಲಾಯಿಸಹೊರಟಿರುವ ಸಂಕೀರ್ಣಸನ್ನಿವೇಶದಲ್ಲಿ,(ಇದೀಗ ನಮ್ಮಾಳುವವರು ಸಹ ಏಕರಾಷ್ಟ,ಏಕಧರ್ಮ, ಏಕಭಾಷೆಯ ಹೆಸರಲ್ಲಿ ಸ್ಥಳೀಯವಾದುದನ್ನೆಲ್ಲ ಹೊಸಕಿ ಹಾಕಲು ಹೊರಟಂತಿದೆ) ಕನ್ನಡ ಚಳುವಳಿ ಎನ್ನುವುದು ಏಕಾಂಗಿಯಾಗಿ ನಿಲ್ಲದೆ  ಉಳಿದೆಲ್ಲ  ಚಳುವಳಿಗಳ ಜೊತೆ ಬೆರೆತು ಹೋರಾಡಿದರೆ ಮಾತ್ರ  ಕನ್ನಡ ಚಳುವಳಿ  ಕನ್ನಡ ಭಾಷಿಕ ಸಮುದಾಯದ ಚಳುವಳಿಯಾಗಿ ಗುರುತಿಸಿ ಕೊಳ್ಳಬಹುದು. ಅದು ನಮ್ಮ ನೆಲಜಲಗಳನ್ನು ಸಂರಕ್ಷಿಸಿಕೊಳ್ಳುವ ವಿಚಾರವಿರಲಿ, ರೈತರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದಿರಲಿ, ದಲಿತ ಮತ್ತಿತರ ಹಿಂದುಳಿದ ಜಾತಿಗಳ ಹಕ್ಕುಗಳನ್ನು ಕಾಪಾಡುವುದಿರಲಿ, ಶಿಕ್ಷಣದಲ್ಲಿ ಕನ್ನಡವೇ ಪ್ರದಾನ ಭಾಷೆಯಾಗುವ ವಿಚಾರವಿರಲಿ, ಕನ್ನಡಿಗರಿಗೆ ಉದ್ಯೊಗದಲ್ಲಿ ಆದ್ಯತೆ ನೀಡುವ ವಿಚಾರವೇ ಆಗಿರಲಿ,  ಇವೆಲ್ಲವೂ ಕನ್ನಡದ ಚಳುವಳಿ ಎಂಬ ಬಾವನೆ ಮೂಡಿದಾಗ ಮಾತ್ರ ಅಂತಹ ಚಳುವಳಿಗೆ ನಿಜವಾದ ಬಲ ಬರುತ್ತದೆ. ಕರ್ನಾಟಕದ ಮಟ್ಟಿಗೆ ಕನ್ನಡವೆಂದರೆ ಕೇವಲ ಭಾಷೆ ಮಾತ್ರವಲ್ಲ ಎಂಬುದನ್ನು ನಾವುಗಳು ಅರ್ಥಮಾಡಿಕೊಳ್ಳಬೇಕಿದೆ.     ಕರ್ನಾಟಕದ ಎಲ್ಲ ಸಮಸ್ಯೆಗಳು ಕನ್ನಡದ ಸಮಸ್ಯೆಗಳೇ ಎಂಬ ಆರೋಗ್ಯಕಾರಿ ಮನೋಬಾವ ರೂಪುಗೊಂಡಾಗ ಮಾತ್ರ ನಾವು ಒಳಗಿನ ಮತ್ತು ಹೊರಗಿನ ಅನ್ಯ ಸಂಸ್ಕೃತಿಗಳ ಎದುರು ಹೋರಾಡಬಲ್ಲಂತಹ ಕಸುವು ಪಡೆಯಬಹುದಾಗಿದೆ. ಇಂತಹದೊಂದು  ಚಳುವಳಿಯನ್ನು ರೂಪಿಸಲು ನಮಗೆ ಸಾದ್ಯವಾದಾಗ ಮಾತ್ರ ಕರ್ನಾಟಕ ತನ್ನ ಹಕ್ಕುಗಳಿಗಾಗಿ ಇನ್ನೊಬ್ಬರ ಮುಂದೆ ಕೈಚಾಚಿ ನಿಲ್ಲಬೇಕಾದ ಪರಿಸ್ಥಿತಿ ಬರುವುದಿಲ್ಲ. ಇಂತಹ ಕನ್ನಡ ಚಳುವಳಿಯಿಂದ ಮಾತ್ರ ಕನ್ನಡ ಭಾಷಿಕ ಸಮುದಾಯ ಸಶಕ್ತವಾಗಬಹುದು. ಕನ್ನಡ ಭಾಷಿಕ ಸಮುದಾಯ ಸಶಕ್ತವಾಗುವುದು ಎಂದರೆ ನಾವು ರಾಜಕೀಯವಾಗಿ ಬಲಿಷ್ಠವಾಗುವುದು ಎಂದರ್ಥ!      ಹೌದು ಇವತ್ತು ಎರಡು ಕಡೆಯಿಂದ ನಾವು ದುರ್ಬಲರಾಗುತ್ತ ಹೋಗುತ್ತಿದ್ದೇವೆ. ಮೊದಲನೆಯದಾಗಿ ಕಳೆದ ಏಳು ದಶಕಗಳಿಂದ ಸರದಿಯಂತೆ ನಮ್ಮನ್ನು ಆಳುತ್ತ ಬರುತ್ತಿರುವ ರಾಷ್ಟ್ರೀಯ ಪಕ್ಷಗಳು ಭಾಷೆ,ನೆಲ,ಜಲಗಳ ವಿಷಯಗಳಲ್ಲಿ ನಮ್ಮ ಹಿತಾಸಕ್ತಿಯನ್ನು ಕಡೆಗಣಿಸುತ್ತ ರಾಜಕೀಯವಾಗಿ ಬಲಿಷ್ಠವಾಗಿರುವ ಇತರೇ ರಾಜ್ಯಗಳ ಹಿತಾಸಕ್ತಿಯನ್ನು ಕಾಯುತ್ತ ಬರುತ್ತಿವೆ. ಇನ್ನು ಎರಡನೆಯದಾಗಿ,ತೊಂಭತ್ತರ ದಶಕದ ನಂತರ ನಾವು ಒಪ್ಪಿಕೊಂಡ ಮುಕ್ತ ಆರ್ಥಿಕ ನೀತಿ ವಿಶ್ವದ ಎಲ್ಲ ಬಗೆಯ ಬಂಡವಾಳಶಾಹಿ ಕಂಪನಿಗಳನ್ನು ತಂದು ನಮ್ಮ ನೆಲದಲ್ಲಿ ಬೀಡುಬಿಡಿಸಿದೆ. ಆ ಬಂಡವಾಳಶಾಹಿ ಶಕ್ತಿಗಳಿಗೆ ಪ್ರಾದೇಶಿಕ ಭಾಷೆ ಸಂಸ್ಕೃತಿಯನ್ನು ಕಾಪಾಡಬೇಕೆನ್ನುವ ಯಾವ ಜರೂರತ್ತೂ ಇರುವುದಿಲ್ಲ. ಜೊತೆಗೆ  ಯಾವ ಹಿಂಜರಿಕೆಯೂ ಇಲ್ಲದೆ  ನಮ್ಮ ನೆಲ-ಜಲವನ್ನು ಅವ್ಯಾಹತವಾಗಿ ಬಳಸಿಕೊಳ್ಳುತ್ತ ಹೋಗುತ್ತವೆ. ಇನ್ನು ಶಿಕ್ಷಣ ಮಾಧ್ಯಮದಲ್ಲಿ ಮಾತೃಭಾಷೆ, ಸ್ಥಳೀಯರಿಗೆ ಉದ್ಯೋಗವೆಂಬುದೆಲ್ಲ ಅವುಗಳ ಪದಕೋಶದಲ್ಲಿ ಇರದ ಶಬ್ದಗಳು. ಹೀಗೆ ಎರಡೂ ಕಡೆಯಿಂದಲೂ ನಾವು ಶೋಷಿತರಾಗುತ್ತ ಹೋಗುತ್ತೇವೆ.   ಇದನ್ನು ತಪ್ಪಿಸಲು ಮತ್ತು  ನಮ್ಮ ನೆಲಜಲಭಾಷೆ ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ನಮಗಿರುವ ಏಕೈಕ ಮಾರ್ಗ. ಕನ್ನಡ ಚಳುವಳಿ ಮತ್ತು  ತನ್ಮೂಲಕ ಕನ್ನಡಭಾಷಿಕ ಸಮುದಾಯವನ್ನು ರಾಜಕೀಯವಾಗಿ ಬಲಿಷ್ಠವಾಗಿಸುತ್ತ ಹೋಗುವುದು.ನಮ್ಮದೇ ಬಲಾಢ್ಯ ಪ್ರಭುತ್ವ ಮಾತ್ರ ನಮ್ಮದನ್ನೆಲ್ಲ ಕಾಪಾಡಬಹುದಾಗಿದೆ. ಕನ್ನಡವನ್ನು ಒಂದು ಪ್ರಬಲ ರಾಜಕೀಯಶಕ್ತಿಯಾಗಿ ಪರಿವರ್ತಿಸಲು ಇರುವ ಏಕೈಕ ಮಾರ್ಗವೆಂದರೆ ನಮ್ಮ ಕನ್ನಡಚಳುವಳಿಯನ್ನು ಬಲಗೊಳಿಸುತ್ತ ಹೋಗುವುದು. ಈಗಿರುವ ಹಲವು ಚಳುವಳಿಗಳ( ರೈತ, ದಲಿತ, ಕಾರ್ಮಿಕ, ಇತ್ಯಾದಿ)ನ್ನು ಕನ್ನಡದ ಹೆಸರಲ್ಲಿ ಒಟ್ಟಿಗೆ ಕರೆದೊಯ್ಯಬೇಕಾದ ಅನಿವಾರ್ಯತೆ ನಮಗಿದೆ.    ಇನ್ನು ಕನ್ನಡ ಭಾಷಿಕ ಸಮುದಾಯವೊಂದು ಬಲಾಢ್ಯ ರಾಜಕೀಯ ಶಕ್ತಿಯಾಗಲು ಈ ಚಳುವಳಿಗಳ ಒಳಗಿಂದಲೇ ಒಡಮೂಡಿಬರುವ ಒಂದು ಪ್ರಾದೇಶಿಕ ರಾಜಕೀಯ ಪಕ್ಷವೊಂದರ ಅಗತ್ಯವಿದೆ. ಇದು ನಂತರದಲ್ಲಿ ಯೋಚಿಸಬೇಕಾದ ವಿಚಾರವಾಗಿದೆ. ಸದ್ಯಕ್ಕೆ ಕನ್ನಡ ಭಾಷಿಕ ಸಮುದಾಯವನ್ನು ರಾಜಕೀಯವಾಗಿ ಬಲಾಢ್ಯಗೊಳಿಸುವವತ್ತ  ಮಾತ್ರ ನೋಡಬೇಕಾಗಿದೆ. ಈ ದಿಸೆಯಲ್ಲಿ  ನಮ್ಮ ಎಲ್ಲ ಚಳುವಳಿಗಳೂ ಕನ್ನಡ ಚಳುವಳಿಯ ವಿಶಾಲವೇದಿಕೆಯ ಅಡಿಯಲ್ಲಿ ಬರಬೇಕಿದೆ( ಇದು ಕಷ್ಟದ ಕೆಲಸವೆಂದು ಕನ್ನಡಿಗರಿಗೆ ಅನಿಸಿದರೆ ಅದು ನಮ್ಮ ದುರಂತವಷ್ಟೆ!) ================================================

ರಾಜ್ಯೋತ್ಸವದ ನೆಪದಲ್ಲೆರಡು ಮಾತು. Read Post »

You cannot copy content of this page

Scroll to Top