ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ
ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ
ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ Read Post »
ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ
ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ Read Post »
ವಿಶೇಷ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ “ಸಾವನ್ನು ಸ್ವೀಕರಿಸುವ ವಿವಿಧ ಹಂತಗಳು.” ಘಟನೆ ಒಂದು…ಅಪಘಾತದಲ್ಲಿ ತನ್ನ ಒಬ್ಬನೇ ಮಗ ನನ್ನು ಕಳೆದುಕೊಂಡ ಆ ಹೆಣ್ಣುಮಗಳು ಮಗನ ಸಾವಿನ ಸುದ್ದಿಯನ್ನು ನಂಬಲು ಸಾಧ್ಯವಾಗದೆ ಮಾನಸಿಕ ಆಘಾತಕ್ಕೆ ಒಳಗಾದಳು.ಘಟನೆ ಎರಡು.. ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿದ್ದ ಆ ವ್ಯಕ್ತಿ ಬಹಳ ದಿನಗಳ ಕಾಲ ಹಾಸಿಗೆ ಹಿಡಿದು ಮಲಗಿದ್ದ… ಆತನ ಸಾವಿನ ಸಮಯದಲ್ಲಿ ಆತನ ಹೆಂಡತಿ ಮಕ್ಕಳು ಅತ್ಯಂತ ಸಂಯಮದಿಂದ ವರ್ತಿಸಿದರು.ಕಾರಣ ಇದು ಹೀಗೆ ಆಗುತ್ತದೆ ಎಂಬ ವಾಸ್ತವದ ಅರಿವು ಅವರಿಗೆ ಇತ್ತು.ಘಟನೆ ಮೂರು… ದೂರದ ಶಹರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಮ್ಮ ಮಗ/ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಅದನ್ನು ನಂಬಲಾಗದೆ ಒದ್ದಾಡುವ, ಅತ್ತು ಕರೆಯುವ ಜನರನ್ನು ನಾವು ನೋಡುತ್ತೇವೆ.ಘಟನೆ ನಾಲ್ಕು…ತುಂಬು ಬದುಕನ್ನು ನಡೆಸಿದ ವ್ಯಕ್ತಿಯ ಸಾವಿನ ಸಮಯದಲ್ಲಿ ಅದನ್ನು ಒಂದು ಸರಳ ಘಟನೆ ಎಂಬಂತೆ ಅವರನ್ನು ಗೌರವ ಪೂರ್ವಕವಾಗಿ ಬೀಳ್ಕೊಡುವ, ಅವರ ಬದುಕನ್ನು ಸಂಭ್ರಮಿಸುವ ಮೂಲಕ ಅವರ ಸಾವನ್ನು ಸಹಜವಾಗಿ ಸ್ವೀಕರಿಸುವುದನ್ನು ಕೂಡ ನಾವು ಕಾಣುತ್ತೇವೆ.ಮತ್ತೊಂದು ಘಟನೆಯಲ್ಲಿ ಖ್ಯಾತ ಚಲನಚಿತ್ರ ನಟರೊಬ್ಬರು ತೀರಿಕೊಂಡಾಗ ಅವರ ಪತ್ನಿ ಅತ್ಯಂತ ಸ್ಥಿತಪ್ರಜ್ಞತೆಯಿಂದ ಪತಿಯ ಪಾರ್ಥಿವ ಶರೀರದ ಹಣೆಗೆ ಮುತ್ತಿಕ್ಕಿದರು. ಮನೆಗೆ ಬಂದ ಸ್ನೇಹಿತ ವಲಯದವರೊಂದಿಗೆ ಸಹಜವಾಗಿ ಇದ್ದ ಅವರ ನಡೆ-ನುಡಿಯನ್ನು ಮಾಧ್ಯಮಗಳಲ್ಲಿ ನೋಡಿದ ಜನರು ಆಕೆಯ ಕುರಿತು ಇಲ್ಲ ಸಲ್ಲದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು… ಅಂತೆಯೇ ಆಕೆಯ ಹಿನ್ನೆಲೆಯನ್ನು ಕೆಟ್ಟದಾಗಿ ಬಿಂಬಿಸಿದರು…. ಕೆಲವೊಮ್ಮೆ ನಿರ್ಲಿಪ್ತತೆಗೆ ತೆರಬೇಕಾದ ಬೆಲೆ ಇಷ್ಟು ದುಬಾರಿಯಾಗಿರುತ್ತದೆಯೇ? ಎಂದು ಕೂಡ ಅನ್ನಿಸಬಹುದು ಅಲ್ವೇ ?ಹೌದಲ್ವೇ ಸ್ನೇಹಿತರೇ, ಮೇಲಿನ ಎಲ್ಲ ಘಟನೆಗಳಲ್ಲಿ ಸಾವು ಎಂಬ ಸಹಜ ಪ್ರಕ್ರಿಯೆಯು ಅದೆಷ್ಟು ವಿಭಿನ್ನವಾಗಿ ಎದುರಿಸಲ್ಪಡುತ್ತದೆ ಎಂಬುದನ್ನು ನೋಡಿದಾಗ ವಿಚಿತ್ರ ಎನಿಸಿದರೂ ಶಾಶ್ವತ ಸತ್ಯದ ಅರಿವು ನಮಗೆ ಮೂಡುತ್ತದೆ. ಸಾವು ಎಂಬುದು ಒಬ್ಬ ವ್ಯಕ್ತಿಯನ್ನು ಭೌತಿಕವಾಗಿ ನಮ್ಮಿಂದ ಶಾಶ್ವತವಾಗಿ ದೂರ ಮಾಡುವ ಪ್ರಕ್ರಿಯೆ… ಉಳಿಯುವುದು ಕೇವಲ ಅವರೊಂದಿಗಿನ ಒಡನಾಟ, ಸ್ನೇಹ, ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯಗಳ ನೆನಪುಗಳು ಮಾತ್ರ.ಯಾವುದೇ ವ್ಯಕ್ತಿಯಾದರೂ ತನ್ನ ಬದುಕಿನಲ್ಲಿ ಶಾಶ್ವತವಾಗಿ ಒಬ್ಬರನ್ನು ಕಳೆದುಕೊಂಡಾಗ ನೋವು, ಸಂಕಟ ಹಾಗೂ ಅಭದ್ರತೆಯಿಂದ ಬಳಲುತ್ತಾನೆಕಳೆದುಕೊಂಡ ತಕ್ಷಣ ಉಂಟಾಗುವ ದಿಗ್ಭ್ರಮೆ ಕೆಲವರಲ್ಲಿ ಇನ್ನಿಲ್ಲದ ದುಃಖವನ್ನು ಸೃಷ್ಟಿಸಿದರೆ, ಮತ್ತೆ ಕೆಲವರು ಹಲವಾರು ದಿನಗಳ ಕಾಲ ಮೌನಕ್ಕೆ ಜಾರುತ್ತಾರೆ. ಇನ್ನು ಕೆಲವರು ಒಬ್ಬಂಟಿಯಾಗಿ ಕುಳಿತು ಅವರನ್ನು ನೆನೆಯುತ್ತಾರೆ. ಮತ್ತೆ ಕೆಲವರು ತಮ್ಮ ಮಾತುಗಳಲ್ಲಿ ಅವರ ಕುರಿತು ನೆನೆಯುತ್ತಾ ಇತರರ ಮುಂದೆ ಹೇಳುತ್ತಾ ಹಗುರವಾಗುತ್ತಾರೆ.ಆದರೆ ನಿಜವಾಗಿಯೂ ಒಬ್ಬರನ್ನು ಕಳೆದುಕೊಂಡಾಗ ಆಗುವ ದುಃಖ, ನೋವು ಐದು ಹಂತಗಳಲ್ಲಿ ನಮ್ಮನ್ನು ಕಾಡುತ್ತದೆ ಎಂದರೆ ನೀವು ನಂಬಲೇಬೇಕು.ಮೊದಲ ಹಂತ ಬದುಕು ಅತ್ಯಂತ ಸರಳವಾಗಿ ನಡೆಯುತ್ತಿರುವ ಅಥವಾ ಹಾಗೆ ಭಾವಿಸಿರುವಾಗ ಕುಟುಂಬದ ಓರ್ವ ಸದಸ್ಯ ಒಮ್ಮಿಂದೊಮ್ಮೆಲೆ ತೀರಿ ಹೋದಾಗ ವ್ಯಕ್ತಿ ಆ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾನೆ. ಇದು ಮೊದಲನೆಯ ಹಂತ. ಈ ಸಮಯದಲ್ಲಿ ಆತ ನಡೆದ ಘಟನೆಯನ್ನು ನಂಬಲು ಸಿದ್ದನಾಗುವುದಿಲ್ಲ…. ಸಂಪೂರ್ಣವಾಗಿ ನಿಶ್ಚಲನಾಗುವ ವ್ಯಕ್ತಿ ಕೆಲ ಗಳಿಗೆಗಳ ಮಟ್ಟಿಗಾದರೂ ತನ್ನ ಮಾನಸಿಕ ಅರಿವನ್ನು ಕಳೆದುಕೊಳ್ಳುತ್ತಾನೆ..ವೈಜ್ಞಾನಿಕವಾಗಿ ಆ ರೀತಿ ಆಗಲು ಕಾರಣ ಅವರು ಇನುಳ ನಮ್ಮ ಜೊತೆಗೆ ಇರುವುದಿಲ್ಲ, ಅವರ ಪಾತ್ರ ನಮ್ಮ ಬದುಕಿನಲ್ಲಿ ಮುಗಿಯಿತು ಎಂಬ ಬಹುದೊಡ್ಡ ಭಾರದ ಒತ್ತಡವನ್ನು ತಡೆದುಕೊಳ್ಳಲು ಅವರ ಮೆದುಳು ಸಿದ್ಧವಿರುವುದಿಲ್ಲ, ಕಾರಣ ಅದು ವ್ಯಕ್ತಿಯ ಮಾನಸಿಕ ಭಾರವನ್ನು ಕಡಿಮೆ ಮಾಡಲು ನಿರಾಕರಣೆ ಮಾಡುವ ಮೂಲಕ ಮೆದುಳನ್ನು ರಕ್ಷಿಸುವ ರಕ್ಷಣಾತ್ಮಕ ತಂತ್ರಕ್ಕೆ ಕೈ ಹಾಕುತ್ತದೆ.ಎಷ್ಟೋ ಬಾರಿ ಉಳಿದೆಲ್ಲ ವಿಷಯಗಳಲ್ಲಿ ಸರಿಯಾಗಿ ವರ್ತಿಸುವ ಜನರು ತಮಗೆ ಅತ್ಯಂತ ಆಪ್ತರಾದವರ ಸಾವಿನ ಕುರಿತು ಮಾತನಾಡುವಾಗ ಆ ವಿಷಯ ತಮಗೆ ಸಂಬಂಧಿಸಿಯೇ ಇಲ್ಲವೇನೋ ಎಂಬಂತೆ ಬೇರೆಡೆ ನಮ್ಮ ಚಿತ್ತವನ್ನು ಸೆಳೆಯುತ್ತಾರೆ.ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ಅದು ಕೆಲವೊಮ್ಮೆ ಸಿಟ್ಟು, ಕೋಪದ ರೂಪದಲ್ಲಿ ಅನಾವರಣವಾಗುತ್ತದೆ. ಹೀಗೆ ಕಳೆದುಕೊಳ್ಳಲು ಕಾರಣವಾದ ದೇವರನ್ನು ಹಳಿಯುವ ಅವರು ಆತ ಇದ್ದಿದ್ದರೆ ಹೀಗಾಗಲು ಬಿಡುತ್ತಿರಲಿಲ್ಲವಾದ್ದರಿಂದ ದೇವರೇ ಇಲ್ಲ ಎಂದೂ,ಇದ್ದರೂ ಆತನಿಗೆ ಕಣ್ಣಿಲ್ಲ ಎಂದು ದೈವವನ್ನು ಹಳಿಯುತ್ತಾರೆ. ಮತ್ತೆ ಕೆಲವರು ತೀರಿ ಹೋದವರು ಅಪಘಾತ ಮತ್ತು ಅವಘಡ ಗಳಿಗೆ ಉಂಟಾಗಿ ತೀರಿಹೋಗಿದ್ದರೆ ಅದಕ್ಕೆ ಸಂಬಂಧಪಟ್ಟವರನ್ನು ಸಾಪಳಿಸುತ್ತಾರೆ. ಇಲ್ಲವೇ ತೀರಿ ಹೋದವರು ನೋವು ಸಂಕಟಗಳಿಗೆ ಈಡಾಗಿದ್ದರೆ ಅದಕ್ಕೆ ಕಾರಣರಾದವರನ್ನು ದೂಷಿಸುತ್ತಾರೆ. ಇಲ್ಲವೇ ತಮ್ಮ ಹಣೆಬರಹವನ್ನು ಅಳೆಯುತ್ತಾರೆ ಮತ್ತು ಕೆಲವರು ಸತ್ತುಹೋದವರನ್ನೇ ಉದ್ದೇಶಿಸಿ ನೀವು ಹೀಗೆ ಕೈ ಬಿಟ್ಟು ಹೋದರೆ ನಮ್ಮ ಗತಿ ಏನು ಎಂದು ಅತ್ತು ಕರೆದು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ. ಅವರ ಕೋಪಕ್ಕೆ ಸತ್ತ ವ್ಯಕ್ತಿ ಆತನಿಗೆ ಸಂಬಂಧಿಸಿದವರು, ಘಟನೆ, ಸನ್ನಿವೇಶಗಳು ತುತ್ತಾಗುತ್ತವೆ.ಮೂರನೆಯ ಹಂತದಲ್ಲಿ ವ್ಯಕ್ತಿಯು ಚೌಕಾಶಿ ಮಾಡಲು ಆರಂಭಿಸುತ್ತಾರೆ… ಇಲ್ಲಿ ಯಾವುದೇ ವ್ಯಾಪಾರ ವ್ಯವಹಾರದ ಚೌಕಾಶಿ ಯನ್ನು ನಾವು ಯೋಚಿಸುವುದು ಬೇಡ…. ಅಯ್ಯೋ ಇನ್ನೂ ಒಳ್ಳೆಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಬದುಕುತ್ತಿದ್ದರೋ ಏನೋ ಎಂಬಲ್ಲಿಂದ ಹಿಡಿದು ಹೇಗಾದರೂ ಮಾಡಿ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಗಳು ಇದ್ದವು, ಆ ಸಾಧ್ಯತೆಗಳನ್ನು ನಾವು ತಳ್ಳಿ ಹಾಕಿದೆವು ಎಂದು ತಮ್ಮನ್ನು ತಾವು ಹಳಿದುಕೊಳ್ಳುತ್ತಾರೆ. ಆತ್ಮಹತ್ಯೆಯಂತಹ ಸಾವುಗಳಲ್ಲಿ ಅವರು ಹಿಂದಿನ ದಿನ ತಮಗೆ ಕರೆ ಮಾಡಿದಾಗ ತಾವು ಸ್ವೀಕರಿಸದೆ ಇದ್ದ ಕಾರಣವನ್ನು ಮುಂದೊಡ್ಡಿ ತಮಗೆ ತಾವೇ ದೂಷಿಸಿಕೊಳ್ಳುತ್ತಾರೆ. ಒಂದೊಮ್ಮೆ ಹೀಗೆ ಮಾಡಿದ್ದರೆ !ಎಂಬ ಹಲವಾರು ರೇ ಗಳ ಭಾವ ಅವರನ್ನು ಕಾಡುತ್ತದೆ.ಮತ್ತೆ ಕೆಲವರು ನಾಲ್ಕನೆಯ ಹಂತವಾದ ಖಿನ್ನತೆಗೆ ಜಾರುತ್ತಾರೆ. ಖಿನ್ನತೆಯು ಅತ್ಯಂತ ಆಳವಾದ ನೋವಿನಿಂದ ಕೂಡಿದ್ದು ವಾಸ್ತವತೆಯ ಅರಿವು ಮೂಡಿಸುತ್ತದೆ ಎಂಬುದು ನಿಜವಾದರೂ ತಮ್ಮ ನೋವನ್ನು ಇತರರಿಗೆ ಹೇಳಿಕೊಳ್ಳಲು ಸಾಧ್ಯವಾಗದೆ ಮಾನಸಿಕವಾಗಿ ತೊಳಲಾಡುತ್ತಾರೆ. ನಂತರ ಸಮಯ ಸರಿದಂತೆ ನಿಧಾನವಾಗಿ ಅವರಿಲ್ಲದ ಬದುಕನ್ನು ಎದುರಿಸುವ ನಿಟ್ಟಿನಲ್ಲಿ ಹೊಸ ಬದುಕಿಗೆ ಒಗ್ಗಿಕೊಳ್ಳುತ್ತಾರೆ.ಕೊನೆಯ ಹಂತದಲ್ಲಿ ಪರಿಸ್ಥಿತಿಯನ್ನು ಅದು ಇರುವಂತೆಯೇ ಒಪ್ಪಿಕೊಳ್ಳುವುದು…. ಸಾಮಾನ್ಯವಾಗಿ ವಾಸ್ತವ ವಾದಿಗಳು, ಬದುಕಿನ ಆಳವನ್ನು ಅರಿತವರು, ಬುದ್ಧಿಜೀವಿಗಳು ತಮ್ಮವರ ಸಾವನ್ನು ಅತ್ಯಂತ ಸಹಜವಾಗಿ ಒಪ್ಪಿಕೊಳ್ಳುತ್ತಾರೆ. ನಿರ್ಲಿಪ್ತತೆಯನ್ನು ಹೊಂದಿರುತ್ತಾರೆ. ಮತ್ತೆ ಕೆಲಬಾರಿ ಅವರ ಸ್ಥಿತಪ್ರಜ್ಞತೆಯನ್ನು ಕಂಡು ಲೌಕಿಕ ಜಗತ್ತಿನ ಜನರು ಅಯ್ಯೋ ಅವರಿಗೇನು! ಹಡೆದ ತಂದೆ ತಾಯಿ ಸತ್ತರೂ ಸಂಗಾತಿಯನ್ನು ಕಳೆದುಕೊಂಡರೂ ಹನಿ ಕಣ್ಣೀರು ಹಾಕಲಿಲ್ಲ ಎಂದು ದೂಷಿಸುತ್ತಾರೆ.ಮತ್ತೆ ಕೆಲ ಬಾರಿ ಹೀಗೆ ತೀರಿಕೊಂಡವರು ದೀರ್ಘಾಯುಷ್ಯವನ್ನು ಹೊಂದಿ ಬದುಕಿನ ಎಲ್ಲಾ ಮೊದಲುಗಳನ್ನು ಕಂಡಿದ್ದರೆ ಇನ್ನೂ ಕೆಲವರು ದೀರ್ಘಕಾಲದ ಅನಾರೋಗ್ಯ, ತೊಂದರೆಗಳಿಂದ ಹಾಸಿಗೆ ಹಿಡಿದು ಮಲಗಿರುತ್ತಾರೆ ಅಲ್ಲವೇ? ಅಲ್ಲಿಯೂ ಕೂಡ ಈ ರೀತಿಯ ನಿರ್ಲಿಪ್ತತೆ ಕಾಣುತ್ತದೆ. ಏಕೆಂದರೆ ಅವರಿಗೆ ಮುಂದೆ ಏನಾಗಬಹುದು ಎಂಬ ಪರಿಕಲ್ಪನೆಯನ್ನು ಸತ್ತ ವ್ಯಕ್ತಿಯ ಜೀವಿತದ ಕೊನೆಯ ದಿನಗಳು ತೋರಿಸಿರುತ್ತವೆ.ಮಾನಸಿಕವಾಗಿ ಅತ್ಯಂತ ಪಕ್ವವಾಗಿರುವವರು ಲೌಕಿಕ ಜಂಜಡಗಳಿಂದ ದೂರವಾಗಿರುವವರು ಕೂಡ ಸಾವುಗಳನ್ನು ಅತ್ಯಂತ ಸಹಜವಾಗಿ ಸ್ವೀಕರಿಸಿ ಬದುಕಿನಲ್ಲಿ ಮುಂದೆ ಸಾಗುತ್ತಾರೆ.ನಾವೆಲ್ಲರೂ ನಮ್ಮ ಬದುಕಿನ ಹಂತದಲ್ಲಿ ಒಂದಲ್ಲ ಒಂದು ಆತ್ಮೀಯರ, ಪರಿಚಿತರ ಸಾವುಗಳನ್ನು ಎದುರಿಸಿಯೇ ಇರುತ್ತೇವೆ. ಸತ್ತವರ ಮನೆಯಿಂದ ಸ್ಮಶಾನದವರೆಗೆ ಭೌತಿಕ ಶರೀರದ ಅಂತಿಮ ಯಾತ್ರೆಗೆ ಹೋಗುವ ನಮ್ಮ ಬಾಯಲ್ಲಿ ಬರುವುದು ವೇದಾಂತದ ಮಾತುಗಳು. ಅಯ್ಯೋ ಬದುಕೇ ಇಷ್ಟು ? ಅವರವರು ಪಡೆದುಕೊಂಡು ಬಂದದ್ದು, ಹುಟ್ಟಿನ ಜೊತೆಗೆ ಸಾವನ್ನು ಕಟ್ಟಿಕೊಂಡೇ ಬಂದಿರುತ್ತೇವೆ, ಇಂದು ಅವರು ನಾಳೆ ಇನ್ನಾರೋ? ನಮ್ಮದು ಒಂದು ದಿನ ಆಪಾಳಿ ಬಂದೇ ಬರುತ್ತದೆ ಎಂದೆಲ್ಲ ಮಾತನಾಡುವ ಜನರು ಅಂತಿಮ ನಮನ ಸಲ್ಲಿಸಿ ಮನೆಗೆ ಬಂದು ತಲೆಯ ಮೇಲೆ ನೀರು ಹಾಕಿಕೊಂಡು ಹೊರಗೆ ಬರುವಷ್ಟರಲ್ಲಿ ಹೊಟ್ಟೆ ತನ್ನ ಇರವನ್ನು ತೋರಿಸುತ್ತದೆ.. ಇದೇ ಬದುಕು ಅಲ್ವೇ ಸ್ನೇಹಿತರೆ ?ಆದರೆ ನಮಗೆ ಸಾಧ್ಯವಾಗದ ಯಾವುದೋ ಒಂದು ನಿರ್ಲಿಪ್ತತೆಯನ್ನು, ಸ್ಥಿತಪ್ರಜ್ಞತೆಯನ್ನು ಇತರರು ಸಾಧಿಸಿದ್ದು ಸಾವಿನಲ್ಲೂ ಹಾಗೆ ಮುಂದುವರೆದಿದ್ದರೆ ಅವರನ್ನು ದೂಷಿಸಬೇಡಿ. ಅದು ಅವರು ಸಾವನ್ನು ಕಂಡುಕೊಂಡ ರೀತಿ.ಸಾವನ್ನು ಎದುರಿಸುವ ಈ ಹಂತಗಳನ್ನು ನೀವು ಅರಿತುಕೊಂಡಿದ್ದರೆ ಮತ್ತೊಬ್ಬರ ಭಾವನೆಗಳನ್ನು ಗುರುತಿಸಿ, ಗೌರವಿಸಿ ಸುಮ್ಮನಿರಲು ಸಹಕಾರಿಯಾಗುತ್ತದೆ.ಏನಂತೀರಾ ಸ್ನೇಹಿತರೆ ? ವೀಣಾ ಹೇಮಂತ್ ಗೌಡ ಪಾಟೀಲ್
“ಸಾವನ್ನು ಸ್ವೀಕರಿಸುವ ವಿವಿಧ ಹಂತಗಳು.” ವೀಣಾ ಹೇಮಂತ್ ಗೌಡ ಪಾಟೀಲ್ Read Post »
ವಿಶೇಷ ಸಂಗಾತಿ ಜಯಶ್ರೀ. ಜೆ. ಅಬ್ಬಿಗೇರಿ “ಇಂದು ಸಿಕ್ಕಿದ್ದು ನಾಳೆ ಸಿಗುವುದಿಲ್ಲ” ಒಂದು ಹಳ್ಳಿಯಲ್ಲಿ ಸೋಮಣ್ಣ ಎಂಬ ಒಬ್ಬ ಕೃಷಿಕನಿದ್ದನು. ಅವನು ತುಂಬಾ ದಯಾಳುವಾಗಿದ್ದರೂ, ಅತಿಯಾದ ಸೋಮಾರಿಯಾಗಿದ್ದನು. “ನಾಳೆ ಮಾಡೋಣ ಬಿಡು” ಎಂದು ಪ್ರತಿಯೊಂದು ಕೆಲಸವನ್ನೂ ಮುಂದೂಡುವುದು ಅವನ ಹವ್ಯಾಸವಾಗಿತ್ತು.ಒಂದು ದಿನ ಅವನ ಹಳ್ಳಿಗೆ ಒಬ್ಬ ಸಾಧು ಬಂದರು. ಸೋಮಣ್ಣನ ಬಡತನ ಮತ್ತು ಸೋಮಾರಿತನವನ್ನು ಕಂಡು ಅವರಿಗೆ ಮರುಕ ಉಂಟಾಯಿತು. ಸಾಧುಗಳು ಅವನಿಗೆ ಒಂದು ಕಪ್ಪಾದ ವಿಚಿತ್ರ ಕಲ್ಲನ್ನು ನೀಡಿ ಹೀಗೆ ಹೇಳಿದರು, “ಸೋಮಣ್ಣ, ಇದು ಕೇವಲ ಕಲ್ಲಲ್ಲ, ಇದೊಂದು ‘ಪರಸಮಣಿ’ ಇದನ್ನು ನೀನು ಯಾವುದೇ ಕಬ್ಬಿಣಕ್ಕೆ ಮುಟ್ಟಿಸಿದರೂ ಅದು ಚಿನ್ನವಾಗುತ್ತದೆ. ಆದರೆ ನೆನಪಿಡು, ನಾನು ನಾಳೆ ಸಂಜೆ ಸರಿಯಾಗಿ ಆರು ಗಂಟೆಗೆ ಇದನ್ನು ಮರಳಿ ಪಡೆಯಲು ಬರುತ್ತೇನೆ. ಅಷ್ಟರೊಳಗೆ ನಿನಗೆ ಎಷ್ಟು ಬೇಕೋ ಅಷ್ಟು ಚಿನ್ನ ಮಾಡಿಕೊ ಹಾಗೂ ನಿನ್ನ ಬಡತನ ನೀಗಿಸಿಕೊ” ಎಂದು ಹೇಳಿ ಹೊರಟರು.ಸೋಮಣ್ಣನಿಗೆ ಅಪಾರ ಸಂತೋಷವಾಯಿತು. ಅವನು ಯೋಚಿಸಿದನು, “ನನ್ನ ಬಳಿ ನಾಳೆ ಸಂಜೆಯವರೆಗೆ ಸಮಯವಿದೆಯಲ್ಲ! ಈಗ ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ. ನಾಳೆ ಬೆಳಿಗ್ಗೆ ಮಾರುಕಟ್ಟೆಗೆ ಹೋಗಿ ತುಂಬಾ ಕಬ್ಬಿಣ ತಂದು, ಚಿನ್ನವಾಗಿ ಬದಲಾಯಿಸುತ್ತೇನೆ.”ಮಾರನೇ ದಿನ ಬೆಳಿಗ್ಗೆ ಎದ್ದ ಸೋಮಣ್ಣ, “ಇನ್ನೂ ತುಂಬಾ ಸಮಯವಿದೆ, ಮಧ್ಯಾಹ್ನ ಹೋದರಾಯಿತು” ಎಂದುಕೊಂಡು ಆರಾಮವಾಗಿ ಊಟ ಮಾಡಿ ನಿದ್ದೆ ಹೋದನು. ಮಧ್ಯಾಹ್ನ ಮೂರು ಗಂಟೆಗೆ ಎದ್ದಾಗ ಅವನಿಗೆ ಮಾರುಕಟ್ಟೆಗೆ ಹೋಗಿ ಕಬ್ಬಿಣ ತರಬೇಕು ಎಂದು ನೆನಪಾಯಿತು. ಆದರೆ ಸೋಮಾರಿತನದಿಂದಾಗಿ, “ಸಂಜೆಯಾಗಲು ಇನ್ನು ಮೂರು ಗಂಟೆ ಇದೆಯಲ್ಲ, ನಿಧಾನವಾಗಿ ಹೋಗೋಣ” ಎಂದುಕೊಂಡು ನಿಧಾನವಾಗಿ ಹೆಜ್ಜೆ ಹಾಕಿದನು.ಅವನು ಮಾರುಕಟ್ಟೆಗೆ ತಲುಪಿ, ಕಬ್ಬಿಣವನ್ನು ಖರೀದಿಸಿ ಮನೆಗೆ ಹಿಂದಿರುಗುವಷ್ಟರಲ್ಲಿ ಸರ್ಯ ಮುಳುಗುತ್ತಿದ್ದನು. ಅವನು ಓಡೋಡುತ್ತಾ ಮನೆಗೆ ಬಂದು ಕಬ್ಬಿಣಕ್ಕೆ ಆ ಮಾಂತ್ರಿಕ ಕಲ್ಲನ್ನು ಮುಟ್ಟಿಸಲು ಹೋದನು.ಆದರೆ ಅಷ್ಟರಲ್ಲೇ ಸರಿಯಾಗಿ ಸಂಜೆ ಆರು ಗಂಟೆಯಾಗಿತ್ತು!ಸಾಧುಗಳು ಅವನ ಮನೆ ಬಾಗಿಲಿಗೆ ಬಂದು ನಿಂತಿದ್ದರು. ಅವರು ಸೋಮಣ್ಣನ ಕೈಲಿದ್ದ ಮಾಂತ್ರಿಕ ಕಲ್ಲನ್ನು ಮರಳಿ ಪಡೆದರು. ಸೋಮಣ್ಣನು ಅಳುತ್ತಾ, “ಸ್ವಾಮಿ, ನನಗೆ ಇನ್ನೊಂದು ಐದು ನಿಮಿಷ ಕೊಡಿ, ನಾನು ಕಬ್ಬಿಣವನ್ನು ಚಿನ್ನ ಮಾಡಬೇಕು” ಎಂದು ಬೇಡಿಕೊಂಡನು.ಅದಕ್ಕೆ ಸಾಧುಗಳು ಶಾಂತವಾಗಿ ಹೇಳಿದರು, “ಸೋಮಣ್ಣ, ಯಾರು ಸಮಯದ ಬೆಲೆಯನ್ನು ಅರಿಯುವುದಿಲ್ಲವೋ, ಅವರಿಗೆ ಅದೃಷ್ಟವೂ ಒಲಿಯುವುದಿಲ್ಲ. ನಿನಗೆ ಪರ್ತಿ ಒಂದು ದಿನ ಸಿಕ್ಕರೂ ನೀನು ಸಮಯವನ್ನು ವ್ರ್ಥ ಮಾಡಿದೆ. ಕಳೆದುಹೋದ ಸಮಯ ಮತ್ತು ಕಳೆದುಕೊಂಡ ಅವಕಾಶಗಳು ಮತ್ತೆ ಎಂದಿಗೂ ಮರಳಿ ಬರುವುದಿಲ್ಲ.”ಸೋಮಣ್ಣನಿಗೆ ತನ್ನ ಸೋಮಾರಿತನದ ಅರಿವಾಯಿತು, ಆದರೆ ಅಷ್ಟರಲ್ಲೇ ಸಮಯ ಮೀರಿಹೋಗಿತ್ತು.ಕಥೆಯ ನೀತಿ:ಸಮಯವು ಅತ್ಯಂತ ಅಮೂಲ್ಯವಾದದ್ದು. ಇಂದಿನ ಕೆಲಸವನ್ನು ಇಂದೇ ಮಾಡಬೇಕು. ನಾಳೆಗೆ ಮುಂದೂಡುವ ಅಭ್ಯಾಸವು ನಮ್ಮ ಯಶಸ್ಸಿನ ದಾರಿಗೆ ಅತಿ ದೊಡ್ಡ ಶತ್ರು.ಶ್ರೇಷ್ಠ ಸಾಧಕಇತಿಹಾಸದ ಶ್ರೇಷ್ಠ ಸಾಧಕರ ಜೀವನವನ್ನು ಗಮನಿಸಿದರೆ, ಅವರು ಎಂದಿಗೂ ನಾಳೆಗಾಗಿ ಕಾಯಲಿಲ್ಲ ಎಂಬ ಸತ್ಯ ನಮಗೆ ಮನವರಿಕೆಯಾಗುತ್ತದೆ. ಭಾರತದ ಹೆಮ್ಮೆಯ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯನವರು ಸಮಯ ಪಾಲನೆಗೆ ಮತ್ತು ತತ್ಕ್ಷಣದ ರ್ತವ್ಯ ಪ್ರಜ್ಞೆಗೆ ಹೆಸರಾಗಿದ್ದರು. ಒಮ್ಮೆ ಅವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಹಳಿಯ ಶಬ್ದದಲ್ಲಾದ ಸಣ್ಣ ವ್ಯತ್ಯಾಸವನ್ನು ಆ ಕ್ಷಣದಲ್ಲೇ ಗ್ರಹಿಸಿ ತಕ್ಷಣವೇ ರೈಲಿನ ಅಪಘಾತ ಸರಪಳಿಯನ್ನು ಎಳೆದರು. “ನಾಳೆ ನೋಡೋಣ” ಅಥವಾ “ಮುಂದಿನ ನಿಲ್ದಾಣದಲ್ಲಿ ಹೇಳೋಣ” ಎಂದು ಅವರು ಅಂದು ಉದಾಸೀನತೆ ತೋರಿದ್ದರೆ ನೂರಾರು ಜೀವಗಳು ಬಲಿಯಾಗುತ್ತಿದ್ದವು. ಅವರು ಇಂದಿನ ಕ್ಷಣದ ಮಹತ್ವವನ್ನು ಅರಿತು ಕರ್ಯಪ್ರವೃತ್ತರಾದ ಕಾರಣಕ್ಕೇ ದೊಡ್ಡ ದುರಂತ ತಪ್ಪಿತು. ಇದನ್ನೇ ಮಹಾತ್ಮರು “ನಾಳೆ ಮಾಡುವುದನ್ನು ಇಂದೇ ಮಾಡು, ಇಂದು ಮಾಡುವುದನ್ನು ಈ ಕ್ಷಣವೇ ಮಾಡು” ಎಂದು ಬಣ್ಣಿಸಿದ್ದಾರೆ.ಚಲನಶೀಲ ಬದುಕಿನ ಯಶಸ್ಸಿನ ಸೂತ್ರಬದುಕಿನ ಹಾದಿಯಲ್ಲಿ ಸಮಯ ಮತ್ತು ಅವಕಾಶಗಳು ನದಿಯ ನೀರಿನಂತೆ, ಅವು ಸದಾ ಹರಿಯುತ್ತಲೇ ಇರುತ್ತವೆ. “ಹೋದ ಆಯುಷ್ಯ, ಚಲಿಸಿದ ನದಿ ಮತ್ತು ಕಳೆದುಹೋದ ಸಮಯ ಎಂದಿಗೂ ಮರಳಿ ಬರುವುದಿಲ್ಲ” ಎಂಬ ಪ್ರಕೃತಿಯ ಕಠೋರ ನಿಯಮವನ್ನು ನಾವು ಅರಿತಾಗ ಮಾತ್ರ ಪ್ರಸ್ತುತ ಕ್ಷಣದ ನಿಜವಾದ ಮೌಲ್ಯ ನಮಗೆ ತಿಳಿಯುತ್ತದೆ. ಮನುಷ್ಯನ ಅತಿ ದೊಡ್ಡ ದರ್ಬಲ್ಯವೆಂದರೆ ಆಲಸ್ಯ ಮತ್ತು ಮುಂದೂಡುವಿಕೆ. ಇಂದು ಸಿಕ್ಕ ಅವಕಾಶವನ್ನು ನಾಳೆಗೆ ಮುಂದೂಡುವಾಗ ನಾವು “ಇದ್ದಾಗ ಇರದ ಮೌಲ್ಯ, ಹೋದಾಗ ತಿಳಿಯಿತು” ಎಂಬ ಗಾದೆ ಮಾತನ್ನು ಮರೆತುಬಿಡುತ್ತೇವೆ. ಇಂದಿನ ಸುಂದರ ಕ್ಷಣಗಳನ್ನು, ಸಂಬಂಧಗಳನ್ನು ಅಥವಾ ಸಿಕ್ಕ ಸುರ್ಣಾವಕಾಶಗಳನ್ನು ನರ್ಲಕ್ಷಿಸಿ ನಾಳೆಯ ಭ್ರಮೆಯಲ್ಲಿ ಬದುಕುವುದೇ ಜೀವನದ ಅತಿ ದೊಡ್ಡ ಸೋಲು.ನಮ್ಮ ವಿದ್ಯರ್ಥಿ ಜೀವನವಿರಲಿ ಅಥವಾ ವೃತ್ತಿ ಬದುಕಿರಲಿ, ನಮಗೆ ಸಿಗುವ ಸಣ್ಣ ಅವಕಾಶವನ್ನೂ ಕಡೆಗಣಿಸಬಾರದು.ನಾಳೆಯ ಭ್ರಮೆಯಲ್ಲಿಇಂದಿನ ಸುಂದರ ಕ್ಷಣಗಳನ್ನು, ಸಂಬಂಧಗಳನ್ನು ಅಥವಾ ಸಿಕ್ಕ ಸುರ್ಣಾವಕಾಶಗಳನ್ನು ನರ್ಲಕ್ಷಿಸಿ ನಾಳೆಯ ಭ್ರಮೆಯಲ್ಲಿ ಬದುಕುವುದೇ ಜೀವನದ ಅತಿ ದೊಡ್ಡ ಸೋಲು.ನಮ್ಮ ಕಣ್ಣೆದುರಿನ ನಿತ್ಯ ಸತ್ಯಗಳು:💡 ಬೆಳಕಿನ ಬೆಲೆ: ಹಗಲಿಡೀ ಸರ್ಯನ ಬೆಳಕಿದ್ದಾಗ ಅದರ ಬೆಲೆ ನಮಗೆ ತಿಳಿಯುವುದಿಲ್ಲ, ಆದರೆ ರಾತ್ರಿಯ ಕತ್ತಲಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಹೋದಾಗ ಮಾತ್ರ ಒಂದೇ ಒಂದು ಸಣ್ಣ ಮೇಣದಬತ್ತಿಯ ಬೆಳಕು ಎಷ್ಟು ಅಮೂಲ್ಯ ಎಂಬುದು ಮನವರಿಕೆಯಾಗುತ್ತದೆ. ನೀರಿನ ಮೌಲ್ಯ: ನಲ್ಲಿಯಲ್ಲಿ ನೀರು ಬರುತ್ತಿರುವಾಗ ಬೇಕಾಬಿಟ್ಟಿ ಪೋಲು ಮಾಡುವ ನಾವು, ಬೇಸಿಗೆಯಲ್ಲಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಬಂದಾಗ ಮಾತ್ರ ನೀರಿನ ನಿಜವಾದ ಯೋಗ್ಯತೆಯನ್ನು ಅರಿಯುತ್ತೇವೆ.ಅಮ್ಮನ ಕೈರುಚಿಪ್ರತಿದಿನ ಅಮ್ಮ ಪ್ರೀತಿಯಿಂದ ಮಾಡುವ ಅಡುಗೆಯಲ್ಲಿ ನಾವು ನೂರು ತಪ್ಪುಗಳನ್ನು ಹುಡುಕುತ್ತೇವೆ, ಆದರೆ ಮನೆಯಿಂದ ದೂರದ ಊರಿಗೆ ಹೋಗಿ ಹೋಟೆಲ್ ಊಟ ತಿಂದಾಗ ಮಾತ್ರ ಅಮ್ಮನ ಕೈರುಚಿಯ ನಿಜವಾದ ಮೌಲ್ಯ ನೆನಪಾಗಿ ಕಣ್ಣೀರು ಬರುತ್ತದೆ. ಸಂಬಂಧಗಳು, ಆರೋಗ್ಯ ಮತ್ತು ಸಮಯ ನಮ್ಮ ಕೈಯಲ್ಲಿದ್ದಾಗಲೇ ಅವುಗಳನ್ನು ಗೌರವಿಸಬೇಕುಸಣ್ಣ ಅವಕಾಶಚಲನಚಿತ್ರ ರಂಗದ ಮಹಾನಾಯಕ ಅಮಿತಾಭ್ ಬಚ್ಚನ್ ಅವರು ೯೦ರ ದಶಕದಲ್ಲಿ ತಮ್ಮದೇ ಕಂಪನಿಯ ನಷ್ಟದಿಂದಾಗಿ ಸಂಪರ್ಣ ದಿವಾಳಿಯಾಗಿದ್ದರು. ಆ ಕಠಿಣ ಸಮಯದಲ್ಲಿ ಅವರಿಗೆ ದೂರರ್ಶನದ ‘ಕೌನ್ ಬನೇಗಾ ಕರೋಡ್ ಪತಿ’ ಕರ್ಯಕ್ರಮದ ಆಫರ್ ಬಂದಾಗ, ಅದನ್ನು ಸಣ್ಣ ಅವಕಾಶವೆಂದು ಅವರು ತಳ್ಳಿಹಾಕಲಿಲ್ಲ. ಅಂದು ಸಿಕ್ಕ ಆ ಒಂದು ಅವಕಾಶವನ್ನು ಅತ್ಯಂತ ಶ್ರದ್ಧೆಯಿಂದ ಬಳಸಿಕೊಂಡಿದ್ದರಿಂದಲೇ ಅವರು ಮತ್ತೆ ಯಶಸ್ಸಿನ ಶಿಖರಕ್ಕೇರಲು ಸಾಧ್ಯವಾಯಿತು. ಅವರು ಅಂದು ಇಂದಿನ ಅವಕಾಶವನ್ನು ಕಳೆದುಕೊಂಡಿದ್ದರೆ ನಾಳೆಯ ವೈಭವ ಸಿಗುತ್ತಿರಲಿಲ್ಲ.ಹೆಚ್ಚಿನ ಸಮಯನಮ್ಮ ಹಿರಿಯರು “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂದು ಸುಮ್ಮನೆ ಹೇಳಿಲ್ಲ; ಸಿಕ್ಕ ಅವಕಾಶವನ್ನು ಆರಂಭದಲ್ಲೇ ಬಳಸಿಕೊಳ್ಳುವ ಜಾಣ್ಮೆ ನಮ್ಮದಾಗಬೇಕು.ಅದೇ ರೀತಿ, ಬಡತನ ಮತ್ತು ಕಡು ನಿರಾಶೆಯಲ್ಲಿದ್ದ ಲೇಖಕಿ ಜೆ.ಕೆ. ರೌಲಿಂಗ್ ಅವರು ತಮಗೆ ಕಲ್ಪನೆಗಳು ಮೂಡಿದ ತಕ್ಷಣ ಸಿಕ್ಕ ಹರಿದ ಕಾಗದದ ಚೂರುಗಳ ಮೇಲೆಯೇ ಹ್ಯಾರಿ ಪಾಟರ್ ಕಥೆಯನ್ನು ಬರೆಯಲು ಶುರು ಮಾಡಿದರು. ಒಂದು ವೇಳೆ ಅವರು ಮನಸ್ಸಿನ ಸ್ಥಿತಿ ಸರಿಯಿಲ್ಲ ಎಂದು ಇಂದಿನ ಬರವಣಿಗೆಯನ್ನು ನಾಳೆಗೆ ಮುಂದೂಡಿದ್ದರೆ, ಜಗತ್ತಿನ ಅತ್ಯಂತ ಯಶಸ್ವಿ ಸಾಹಿತ್ಯ ಸರಣಿ ಎಂದಿಗೂ ಸೃಷ್ಟಿಯಾಗುತ್ತಿರಲಿಲ್ಲ. ಬದುಕಿನಲ್ಲಿ “ಸಮಯವು ಹಣಕ್ಕಿಂತ ಹೆಚ್ಚು ಅಮೂಲ್ಯವಾದುದು; ನೀವು ಹೆಚ್ಚು ಹಣವನ್ನು ಗಳಿಸಬಹುದು, ಆದರೆ ಹೆಚ್ಚಿನ ಸಮಯವನ್ನು ಗಳಿಸಲು ಸಾಧ್ಯವಿಲ್ಲ” ಎಂಬ ಸತ್ಯಕ್ಕೆ ರೌಲಿಂಗ್ ಅವರ ಜೀವನವೇ ಸಾಕ್ಷಿ.ಕೊನೆಯದಾಗಿ ಹೇಳಬೇಕೆಂದರೆ,“ಇಂದು” ಎಂಬುದು ಪ್ರಕೃತಿ ನಮಗೆ ನೀಡಿರುವ ಅಮೂಲ್ಯವಾದ ಉಡುಗೊರೆ. “ದೂರವಿರುವ ಬೆಟ್ಟ ಕಣ್ಣಿಗೆ ನುಣುಪಾಗಿ ಕಾಣುವುದು ಸಹಜ, ಆದರೆ ಬಾಯಾರಿಕೆ ಇಂಗಿಸುವುದು ನಮ್ಮ ಕಾಲ ಬುಡದಲ್ಲಿ ಹರಿಯುವ ಸಣ್ಣ ತೊರೆ ಮಾತ್ರ” ಎಂಬಂತೆ, ನಾಳೆಯ ಸುಳ್ಳು ಭರವಸೆಗಳಿಗಾಗಿ ಇಂದಿನ ವಾಸ್ತವವನ್ನು ಕಳೆದುಕೊಳ್ಳಬಾರದು. ಸಂಬಂಧಗಳು, ಆರೋಗ್ಯ ಮತ್ತು ಸಮಯ ನಮ್ಮ ಕೈಯಲ್ಲಿದ್ದಾಗಲೇ ಅವುಗಳನ್ನು ಗೌರವಿಸಬೇಕು. ಇಂದು ಸಿಕ್ಕ ಅವಕಾಶವನ್ನು ಇಂದೇ ಸದುಪಯೋಗಪಡಿಸಿಕೊಂಡು, ನಾಳೆಯ ಪಶ್ಚಾತ್ತಾಪದಿಂದ ಮುಕ್ತಿ ಪಡೆದು ಯಶಸ್ಸಿನತ್ತ ಹೆಜ್ಜೆ ಇಡುವುದೇ ನಿಜವಾದ ಬುದ್ಧಿವಂತಿಕೆ. ಜಯಶ್ರೀ. ಜೆ. ಅಬ್ಬಿಗೇರಿ
“ಇಂದು ಸಿಕ್ಕಿದ್ದು ನಾಳೆ ಸಿಗುವುದಿಲ್ಲ” ವಿಶೇಷ ಲೇಖನ ಜಯಶ್ರೀ. ಜೆ. ಅಬ್ಬಿಗೇರಿ Read Post »
ಜೀವನ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ ಬೆಳಗುವ ಬಾಳಿಗೆ ಕರಗುವ ಮನಸ್ಸು ಪ್ರತಿದಿನದ ಓಟದಲ್ಲಿ ನಮ್ಮಲ್ಲಿ ಬಹುತೇಕರು ಇತರರ ಭಾವನೆಗಳನ್ನು ಕಷ್ಟಗಳನ್ನು ತಿಳಿಯುವ ಗೋಜಿಗೆ ಹೋಗುವುದೇ ಇಲ್ಲ. ಏಕೆಂದರೆ ಎಲ್ಲರಿಗೂ ತಮ್ಮತಮ್ಮ ಹಿತಾಸಕ್ತಿ ಮಾತ್ರ ಮುಖ್ಯ. ದಾವಂತದ ಈ ದಿನಗಳಲ್ಲಿ ಎಲ್ಲದಕ್ಕೂ ಅವಸರ ಬೇರೆ. ಹೀಗಾಗಿ ಬೇರೆಯವರಿಗೆ ಮಿಡಿಯುವುದನ್ನು ಮರೆಯುತ್ತಿದ್ದೇವೆ. ಈಗಿನ ಸಮಯದಲ್ಲಿ ಸಂಬoಧಗಳು ಹಳಸಿ ಹೋಗುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು: ನಮ್ಮಲ್ಲಿ ದಯೆ ಅಥವಾ ಕರುಣೆಯ ಕೊರತೆ ಎದ್ದು ಕಾಣುತ್ತಿರುವುದು. ಇದರೊಂದಿಗೆ ಇನ್ನೊಂದು ವಿಷಯವೆಂದರೆ ನಾವು ಬಾಹ್ಯ ಸೌಂದರ್ಯಕ್ಕೆ ಜೋತು ಬಿದ್ದಿದ್ದೇವೆ. ಬ್ರಾಂಡೆಡ್ ಉಡುಪುಗಳು ಉನ್ನತ ಪದವಿಗಳು ನಮ್ಮನ್ನು ಗುರುತಿಸುವಂತೆ ಮಾಡಬಹುದು ಆದರೆ ನಮ್ಮನ್ನು ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಸುವುದು ನಮ್ಮಲ್ಲಿರುವ ದಯಾಗುಣ ಒಂದೇ. ಬೆಳಗುವ ಬಾಳಿಗೆ ದಯೆಯನ್ನು ಬೆಳೆಸಿಕೊಳ್ಳುವುದು ಇಂದಿನ ತುರ್ತಾಗಿದೆ. ದಯೆ ಎಂದರೇನು? ದಯೆ ಎನ್ನುವುದು ಕೇವಲ ಯಾರಿಗಾದರೂ ಹಣ ಇಲ್ಲವೇ ವಸ್ತುಗಳನ್ನು ದಾನ ಮಾಡುವುದು ಎಂದು ಸಾಮಾನ್ಯವಾಗಿ ವ್ಯಾಖ್ಯಾನಿಸಲಾಗುತ್ತದೆ. ಆದರೆ, ನಿಜವಾದ ದಯೆಯು ಮುಂದಿನವರ ಕಷ್ಟವನ್ನು ತನ್ನದೇ ಕಷ್ಟ ಎಂದು ಭಾವಿಸುವುದಾಗಿದೆ. ನಮ್ಮ ಸಹಜೀವಿಗಳಿಗೆ ಅಂದರೆ ಪ್ರಾಣಿ ಪಕ್ಷಿಗಳಿಗೆ ಪ್ರೀತಿ ತೋರುವುದು. ಬೇರೆಯವರ ನೋವಿಗೆ ಸ್ಪಂದಿಸುವುದು ಮತ್ತು ಮುಂದಿನವರು ಹೇಳುವ ಮುನ್ನವೇ ಸ್ವಯಂಪ್ರೇರಿತವಾಗಿ ಒಳ್ಳೆಯದನ್ನು ಮಾಡುವುದೇ ದಯೆ ಆಗಿದೆ. ‘ದಯೆಯ ಯಾವುದೇ ಕೆಲಸವು ಎಷ್ಟೇ ಚಿಕ್ಕದಾಗಿದ್ದರೂ, ಅದು ಎಂದಿಗೂ ವ್ಯರ್ಥವಾಗುವುದಿಲ್ಲ.’ ಅಷ್ಟಕ್ಕೂ ದಯಾಗುಣದಲ್ಲಿ ನಿಸ್ವಾರ್ಥ ಭಾವ ಇರುತ್ತದೆ. ಅಂದರೆ ಇಲ್ಲಿ ಪ್ರತಿಯಾಗಿ ಏನನ್ನೂ ಅಪೇಕ್ಷಿಸದೇ ಒಳ್ಳೆಯದನ್ನು ಮಾಡುವುದು ಒಳಗೊಂಡಿದೆ. ಮನಷ್ಯನನ್ನು ಮನುಷ್ಯನನ್ನಾಗಿಸುವ ದಿವ್ಯ ಶಕ್ತಿಯೂ ಇದಕ್ಕಿದೆ. ಅಷ್ಟೇ ಅಲ್ಲ ಅದು ಸಮಾಜವನ್ನು ಒಂದುಗೂಡಿಸುವ ಅತ್ಯದ್ಭುತ ಶಕ್ತಿಯೂ ಆಗಿದೆ.ನಮ್ಮ ಕಷ್ಟ ಕಾಲದಲ್ಲಿ ದಯಾಳುಗಳು ಸ್ಪಂದಿಸಿದಾಗ ನಮಗೂ ಅವರ ಹಾಗೆ ಬೇರೆಯವರ ನೋವಿಗೆ ಮಿಡಿಯಬೇಕೆಂದು ಅನ್ನಿಸದೇ ಇರದು. ಆದರೆ ದಯೆಯನ್ನು ಹೇಗೆ ಬೆಳೆಸಿಕೊಳ್ಳುವುದೆಂದು ತಿಳಿಯುವುದೇ ಇಲ್ಲ. ನಿತ್ಯ ಬದುಕಿನಲ್ಲಿ ಕೆಲ ಬದಲಾವಣೆಗಳನ್ನು ತಂದುಕೊಳ್ಳುವ ಮೂಲಕ ನೀವೂ ದಯಾಳುಗಳಾಗಬಹುದು. ಬದುಕಿನ ಮೌಲ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅದಕ್ಕೆ ಇಲ್ಲಿವೆ ಕೆಲವು ಸರಳ ತಂತ್ರಗಳು. ಸಹಾನುಭೂತಿ ನಮಗೆ ಗೊತ್ತಿಲ್ಲದಂತೆ ಬೇರೆಯವರನ್ನು ಟೀಕಿಸದಿದ್ದರೆ ನಿಂದಿಸದಿದ್ದರೆ ಉಂಡ ಅನ್ನ ಕರಗುವುದೇ ಇಲ್ಲವೆಂಬ ಕೆಟ್ಟ ಸ್ವಭಾವವನ್ನು ಅಂಟಿಸಿಕೊoಡಿರುತ್ತೇವೆ. ಇದು ಸಾಲದೆಂಬoತೆ ಕೋಪದಿಂದ ಪರಿಸ್ಥಿತಿಯನ್ನು ನಮಗೆ ಪೂರಕವಾಗುವಂತೆ ಮಾಡಿಕೊಳ್ಳಲು ನೋಡುವುದು. ಹಾಗೆ ಟೀಕಿಸುವ ಸ್ವಭಾವ ಬೇರೆಯವರಿಗೆ ಅದೆಷ್ಟು ನೋವನ್ನು ಉಂಟು ಮಾಡುತ್ತದೆಂಬುದು ನಮಗೆ ಗೊತ್ತಾಗುವುದೇ ಇಲ್ಲ. ದಯಾಳುಗಳಾಗಬೇಕೆಂದರೆ, ಯಾರನ್ನಾದರೂ ಟೀಕಿಸುವ ಮುನ್ನ ಅವರ ಪರಿಸ್ಥಿತಿಯಲ್ಲಿ ನಾನು ಇದ್ದಿದ್ದರೆ ಎಂದು ಯೋಚಿಸಬೇಕು. ಬೇರೆಯವರ ಪರಿಸ್ಥಿತಿಯನ್ನು ಅವರ ಸ್ಥಾನದಲ್ಲಿ ನಿಂತು ನೋಡುವುದೇ ಸಹಾನುಭೂತಿ. ಈ ರೀತಿಯ ಸಹಾನುಭೂತಿ ದಯೆಯನ್ನು ಹೆಚ್ಚಿಸುತ್ತದೆ. ದ್ವೇಷದ ಬದಲು ಪ್ರೀತಿಯಿಂದ ಪರಿಸ್ಥಿತಿಯನ್ನು ನಿಭಾಯಿಸಲು ಇದು ಕಲಿಸುತ್ತದೆ. ದಲೈ ಲಾಮಾ ಉಲ್ಲೇಖದಂತೆ ‘ಸಾಧ್ಯವಾದಾಗಲೆಲ್ಲ ದಯೆ ಉಳ್ಳವರಾಗಿರಿ ಮತ್ತು ದಯೆ ತೋರಿಸುವುದು ಯಾವಾಗಲು ಸಾಧ್ಯವಿರುತ್ತದೆ.’ ಆಲಿಸಿ ಇತ್ತೀಚಿಗೆ ನಾವೆಲ್ಲ ಬೇರೆಯವರ ಮಾತುಗಳನ್ನು ಸರಿಯಾಗಿ ಕೇಳಿಸಿಕೊಳ್ಳುವುದನ್ನು ಬಿಟ್ಟು ಬಿಟ್ಟಿದ್ದೇವೆ. ಎದುರಿಗಿನವರು ಏನೋ ಹೇಳುತ್ತಿದ್ದರೆ ನಾವು ಮೊಬೈಲ್ನಲ್ಲಿ ಬ್ಯುಸಿ ಇರುತ್ತೇವೆ. ಇಲ್ಲವೇ ಏನೂ ಸಂಬoಧವಿಲ್ಲದoತೆ ಕುಳಿತು ಬಿಡುತ್ತೇವೆ. ಉತ್ತಮ ಸಂವಹನವೆoದರೆ ಕೇವಲ ಮಾತನಾಡುವುದಲ್ಲ, ಎದುರಿಗಿನವರ ಮಾತನ್ನು ತಾಳ್ಮೆಯಿಂದ ಕೇಳುವುದು. ಬೇರೆಯವರು ತಮ್ಮ ನೋವನ್ನು ಹೇಳಿಕೊಳ್ಳುತ್ತಿರುವಾಗ ಅವರ ಮಾತನ್ನು ಮಧ್ಯದಲ್ಲೇ ಕತ್ತರಿಸದೇ ಪೂರ್ಣವಾಗಿ ಕೇಳಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ನಾನು ಹೇಳಿದ್ದನ್ನು ಎಲ್ಲರೂ ಕೇಳಿಸಿಕೊಳ್ಳಬೇಕು. ಆದರೆ ಬೇರೆಯವರು ಹೇಳಿದ್ದನ್ನು ಕೇಳಿಸಿಕೊಳ್ಳುವ ವ್ಯವಧಾನವಿಲ್ಲ ಎಂದರೆ ಸ್ವಾರ್ಥವಾಗಿ ಬಿಡುತ್ತದೆ. ಆದ್ದರಿಂದ ಇತರರನ್ನು ಸಾವಧಾನದಿಂದ ಆಲಿಸುವುದನ್ನು ಬೆಳೆಸಿಕೊಳ್ಳಬೇಕು.ಸಕಾರಾತ್ಮಕತೆಸಾಮಾಜಿಕ ಜಾಲತಾಣದಲ್ಲಿ ಯಾರನ್ನೋ ಟ್ರೋಲ್ ಮಾಡುವುದು ಕೀಳುಮಟ್ಟದ ಕಾಮೆಂಟ್ ಮಾಡುವುದು ಹೆಚ್ಚಾಗಿದೆ. ಇದರ ಬದಲು ಸಕಾರಾತ್ಮಕ ಕಾಮೆಂಟ್ಗಳನ್ನು ಹಾಕುವ ಮೂಲಕ ಡಿಜಿಟಲ್ ಲೋಕದಲ್ಲಿ ದಯಾಗುಣವನ್ನು ಮೆರೆಯಬಹುದು. ಮಾಯಾ ಎಂಜಿಲೋ ಅವರ ಉಲ್ಲೇಖವು ಇಲ್ಲಿ ಸೂಕ್ತವೆನಿಸುತ್ತದೆ. ‘ಜನರು ನೀವು ಹೇಳಿದ್ದನ್ನು ಮರೆಯಬಹುದು, ನೀವು ಮಾಡಿದ್ದನ್ನು ಮರೆಯಬಹುದು, ಆದರೆ ನೀವು ಅವರಿಗೆ ಹೇಗೆ ಅನಿಸುವಂತೆ ಮಾಡಿದ್ದೀರಿ ಎಂಬುದನ್ನು ಅವರು ಎಂದಿಗೂ ಮರೆಯುವುದಿಲ್ಲ. ಎಂದು ನಾನು ಕಲಿತಿದ್ದೇನೆ.’ ಪ್ರಕೃತಿ ಪ್ರಕೃತಿ ಸುಂದರ ಬದುಕಿಗೆ ಬೇಕಾಗಿದ್ದನ್ನೆಲ್ಲ ನಮಗೆ ನೀಡಿದೆ. ಹೀಗಾಗಿ ನಾವೂ ಸಹ ಪ್ರಕೃತಿಯ ಮೇಲೆ ಕರುಣೆ ತೋರಬೇಕು. ಅನಗತ್ಯವನ್ನು ಗಿಡ-ಮರಗಳನ್ನು ಕತ್ತರಿಸದಿರುವುದು. ಹಸಿದ ಮೂಕ ಪ್ರಾಣಿಗಳಿಗೆ ಆಹಾರ ನೀಡುವುದು. ಹಸಿದವರಿಗೆ ಅನ್ನ ನೀಡುವುದು, ಕಷ್ಟದಲ್ಲಿರುವವರಿಗೆ ಧೈರ್ಯ ತುಂಬುವುದು. ಹಿರಿಯರನ್ನು ಗೌರವಿಸುವುದು. ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿಡುವುದನ್ನು ಮರೆಯಬಾರದು. ಕ್ಷಮಾ ಗುಣ ಮಾರ್ಕ್ ಟ್ವೆನ್ ಹೇಳಿದ ಉಲ್ಲೇಖವು ಅತ್ಯದ್ಭುತವಾಗಿದೆ.’ ದಯೆ ಎನ್ನುವುದು ಕಿವುಡರು ಕೇಳಬಲ್ಲ, ಕುರುಡರು ನೋಡಬಲ್ಲ ಒಂದು ಅದ್ಭುತ ಭಾಷೆ.’ ಬೇರೆಯವರು ಮಾಡಿದ ತಪ್ಪುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಸಾಧಿಸುವುದಾಗಲಿ, ಇಲ್ಲವೇ ಕೊರಗುವುದರಿಂದ ಏನೂ ಪ್ರಯೋಜನವಿಲ್ಲ. ಸಾದ್ಯವಾದಷ್ಟು ಬೇಗನೆ ಮರೆತು ಕ್ಷಮಿಸಬೇಕು. ಬೇರೆಯವರ ತಪ್ಪುಗಳನ್ನು ಸಾರ್ವಜನಿಕವಾಗಿ ನಿಂದಿಸದೆ ಖಾಸಗಿಯಾಗಿ ಮೃದುವಾಗಿ ತಿದ್ದಿ ಹೇಳಬೇಕು. ಅಂತೆಯೆ ನಿಮ್ಮ ಮೇಲೆ ನಿಮಗೆ ಪ್ರೀತಿ ದಯೆ ಇರುವುದು ಮುಖ್ಯವಾಗುತ್ತದೆ. ಎಂದೋ ಮಾಡಿದ ತಪ್ಪಿಗೆ ಇವತ್ತಿಗೂ ಕೂಡ ನಮ್ಮನ್ನು ನಾವು ದೂಷಿಸಿಕೊಳ್ಳುವುದು ಸರಿಯಲ್ಲ. ಭೂತಕಾಲದ ತಪ್ಪುಗಳಿಗಾಗಿ ದೂಷಿಸಿಕೊಳ್ಳುತ್ತಿದ್ದರೆ ಮನಸ್ಸು ಕಲುಷಿತಗೊಳ್ಳುತ್ತದೆ. ಆದ್ದರಿಂದ ಕ್ಷಮಾ ಗುಣವನ್ನು ಅಳವಡಿಸಿಕೊಳ್ಳಬೇಕು. ಅದು ಶಾಂತಿಯನ್ನು ನೀಡುತ್ತದೆ.ಭಾವನಾತ್ಮಕತೆಎದುರಿಗಿದ್ದವರು ತಪ್ಪು ಮಾಡಿದಾಗ ಅವರನ್ನು ಬೈಯುವ ಬದಲು ಅವರಿಗೆ ಸಮಾಧಾನದಿಂದ ಮಾತನಾಡಿಸಿ ಏನಾದರೂ ತೊಂದರೆ ಇರಬಹುದೇ ಎಂದು ಯೋಚಿಸಬೇಕು. ಅವರ ಭಾವನೆಗಳನ್ನು ಅರ್ಥೈಸಿಕೊಳ್ಳಲು ಮುಂದಾಗಬೇಕು. ನಿಮ್ಮ ಮಾತು ನಿಮ್ಮ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಆದ್ದರಿಂದ ಮಾತು ಮೃದುವಾದಷ್ಟು ಒಳಿತು. ‘ನುಡಿದರೆ ಮುತ್ತಿನ ಹಾರದಂತಿರಬೇಕು. ಎಂಬ ನುಡಿಯಂತೆ ನಮ್ಮ ಮಾತುಗಳು ಇತರರನ್ನು ಪ್ರೋತಾಹಿಸುವಂತಿರಬೇಕು. ಮಾತು ಮುಂದಿನವರಿಗೆ ಚೂರಿ ಇರಿಯುವಂತಿದ್ದರೆ ಅವರು ಎಂದೂ ನಿಮ್ಮನ್ನು ಕ್ಷಮಿಸುವುದಿಲ್ಲ. ನಿಮ್ಮ ಮಾತು ಮುಂದಿನವರಿಗೆ ನೋವುಂಟು ಮಾಡದಿದ್ದರೆ ನಿಮ್ಮ ವ್ಯಕ್ತಿತ್ವವನ್ನು ಎಲ್ಲರೂ ಗೌರವಿಸುತ್ತಾರೆ. ಗೌತಮಬುದ್ಧ ಹೇಳಿದಂತೆ ‘ಕೋಪವನ್ನು ಪ್ರೀತಿಯಿಂದ ಗೆಲ್ಲಿ, ಕೆಡುಕನ್ನು ಒಳಿತಿನಿಂದ ಗೆಲ್ಲಿ, ಜಿಪುಣತನವನ್ನು ದಾನದಿಂದ ಗೆಲ್ಲಿ, ಸುಳ್ಳನ್ನು ಸತ್ಯದಿಂದ ಗೆಲ್ಲಿ.’ ಬದುಕಲು ಬಿಡೋಣ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಮನುಷ್ಯನಲ್ಲಿ ದಯೆ ಇಲ್ಲದಿದ್ದರೆ ಆತ ಜೀವಂತ ಶವಕ್ಕೆ ಸಮಾನ. ಅಂಥ ಸಮಾಜಕ್ಕೆ ಬೆಲೆಯೂ ಇರುವುದಿಲ್ಲ. ಮಹಾತ್ಮಾ ಗಾಂಧೀಜಿ ಹೇಳಿದಂತೆ ‘ಎಲ್ಲಿ ದಯೆ ಮತ್ತು ಪ್ರೀತಿ ಇರುತ್ತದೆಯೋ, ಅಲ್ಲಿ ದೇವರು ಇರುತ್ತಾನೆ.’ ದಯೆ ಹಣಕ್ಕಿಂತಲೂ ಮುಖ್ಯ ಹೀಗಾಗಿ ದಯೆ ತೋರಲು ಶ್ರೀಮಂತ ಇರಬೇಕೆಂದೇನೂ ಇಲ್ಲ. ಒಳ್ಳೆಯ ಮನಸ್ಸಿದ್ದರೆ ಸಾಕು. ಅಗತ್ಯವಿದ್ದವರಿಗೆ ಸಣ್ಣ ಪುಟ್ಟ ಸಹಾಯದಿಂದಲೂ ದಯೆ ತೋರಬಹುದು. ದಾರಿ ತಪ್ಪಿದವರಿಗೆ ದಾರಿ ತೋರಿಸಬಹುದು. ಪ್ರಕೃತಿ ಮೇಲೆ ಪವಿತ್ರ ಭಾವ ಹೊಂದಬೇಕು. ಪರರ ಕಷ್ಟಗಳನ್ನು ಕಂಡು ಕರಗುವ ಮತ್ತು ಫಲಾಪೇಕ್ಷೆಯಿಲ್ಲದೇ ಸಹಾಯ ಮಾಡಲು ಮುಂದಾಗುವ ಮನಸ್ಸನ್ನು ಬೆಳಸಿಕೊಳ್ಳಬೇಕು. ‘ಬದುಕೋಣ ಬದುಕಲು ಬಿಡೋಣ.’ ಎಂಬ ತತ್ವವನ್ನು ಪಾಲಿಸಿದರೆ ಜೀವನ ನಂದನವನವಾಗುವುದು ಜಯಶ್ರೀ.ಜೆ. ಅಬ್ಬಿಗೇರಿ
“ಬೆಳಗುವ ಬಾಳಿಗೆ ಕರಗುವ ಮನಸ್ಸು” ಜಯಶ್ರಿ ಜೆ ಅಬ್ಬಿಗೇರಿ Read Post »
ವಿಶೇಷ ಸಂಗಾತಿ ಡಾ.ಯಲ್ಲಮ್ಮ ಕೆ. “ಮಾತೃ ವಿಯೋಗ: ನರಲೋಕದಿಂದ ದೇವಲೋಕ ಸೇರಿದಳು ಶಿವಮ್ಮ” ಇನ್ನೂ ಗಟ್ಟಿ ಇದ್ಲು ಏನಿಲ್ಲಾಂದ್ರೂ ಎಂಟ್ಹತ್ತು ವರುಷ ಬಾಳು ಸವೆಸಬಹುದಿತ್ತು, ಮೊಮ್ಮಕ್ಕಳ ಮದುವೆ ಮಾಡಿ ಮರಿಮೊಮ್ಮಕ್ಕಳನ್ನು ಎತ್ತಿ ಆಡಿಸುವ ಕನಸು ಹೊತ್ತಿದ್ದ ಶಿವಮ್ಮ; ಎದ್ದು ಓಡಾಡುವ ತ್ರಾಣ ಇಲ್ಲದಿದ್ದರೂ ಹಣ್ಣ ಹಣ್ಣ ಮುದೇಕಿಯೇನೂ ಆಗಿರಲಿಲ್ಲ, ದೇವರು ತನ್ಮೇಲೆ ಯಾಕೆ ಹಾಕೋತ್ತಾನೆ? ಏನಾದರೂ ಒಂದು ಕುಂಟುನೆಪ ಹೇಳಿ ತನ್ನೆಡೆಗೆ ಕರಕೋತ್ತಾನೆ ಅಷ್ಟೇ ಎಂದು ಅಮ್ಮನ ವಾರಿಗೆಯವ್ರು ಕಣ್ಣೀರು ಹಾಕ್ತಾ ಪಾರ್ಥಿವ ಶರೀರದ ಮುಂದೆ ಕೂತು ಕಣ್ಣೀರ ಮಳೆಗಾರೆಯುತ್ತಿದ್ದರು! ಕಳೆದ ಐದಾರು ವರುಷಗಳ ಹಿಂದೆ ಕಣ್ ಆಪರೇಷನ್ ಮಾಡಿಸಬೇಕು ಅಂತ ಮನೆ ಮಂದಿಯೆಲ್ಲ ಯೋಚಿಸಿದಾಗ ಡಾಕ್ಟರ್ ಸಾರಾಸಗಟಾಗಿ ನಿರಾಕರಿಸಿದ್ದ ಆಪರೇಷನ್ ಮಾಡಿದರೂ ಕಣ್ ಬರೋ ಚಾನ್ಸಸ್ ಬಾಳ ಕಮ್ಮಿ ಅಂತ್ಹೇಳಿ, ಆಗಲೇ ಆ ವಿಚಾರಕ್ಕೆ ಎಳ್ಳು-ನೀರು ಬಿಟ್ಟಾಗಿತ್ತು. ಕಣ್ಣು ಪುಟ್ಟ ಪೂರಾ ಕಾಣತ್ತಿದ್ದಿಲ್ಲ ಅಂತೇನಿಲ್ಲ ಮಸಗು ಮಸಗು ಆಗಿ ಕಾಣತ್ತಿದ್ದವು ಅಂತಿದ್ಲು. ಅದ್ಯಾವ ವಿಷಗಳಿಯೋ ನಾನರಿಯೆ? ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ ತಪಾಸಣಾ ಶಿಬಿರಕ್ಕೆ ಅದ್ಯಾರೋ ಮಾತು ಕೇಳಿ, ಮತ್ಯಾರನ್ನೋ ಕರಕೊಂಡು ಹೋಗಿ ಬಂದ್ಮೇಲಿಂದ ಒಂದೇ ಹಠ! ಕಣ್ ಬರುತ್ತೆ ಅಂತ ಡಾಕ್ಟರ್ ಹೇಳಿದ್ದಾರೆ, ನನಗೆ ಕಣ್ ಆಪರೇಷನ್ ಮಾಡಿಸಿ ಎಂದು; ಅದೂ ಇದೂ ಅಂತ್ಹೇಳಿ ಒಂದು ಮೂರೂ ತಿಂಗಳು ಮುಂದಕ್ಕೆ ತಳ್ಳಿಕೊಂಡು ಹೊಂಟಿದ್ವೀ.., ಅವರಿವರು ಏನಂತಾರೆ? *ಮನೆಯಲ್ಲಿ ದುಡಿದು ತಿನ್ನುವ ಮಕ್ಕಳ್ನಾ ಬಿಡು, ಮಗಳು ನೌಕರಿ ಮಾಡ್ತಾಳ, ಮೊಮ್ಮಗಳು ನೌಕರಿ ಮಾಡ್ತಾಳೆ ಅಷ್ಟೇ ಅಲ್ಲದೇ ಮೊಮ್ಮಗಳ ಗಂಡನೂ ನೌಕರಿ ಮಾಡ್ತಾನೆ ಕಣ್ ಆಪರೇಶನ್ ಮಾಡಿಸೋಕೆ ಏನು? ದುಡ್ಡಿನ ಮಕ ನೋಡ್ತಾರೆ* ಅನ್ನೋ ತಿರಸ್ಕಾರದ ಮಾತುಗಳನ್ನು ಕೇಳಿದ ಮೇಲೂ ಸುಮ್ನೆ ಇರೋದು ಹೇಗೆ ಹೇಳಿ? *ಜೀವ ಮತ್ತು ಜೀವನ ಕೊಟ್ಟ ಅಮ್ಮನಿಗೆ ಕಣ್ ಬಂದ್ರೆ ಎಲ್ಲರಿಗೂ ಖುಷಿ ತಾನೇ* , ಅಮ್ಮನ ಆಸೆ ಮತ್ತು ಹಠಕ್ಕೆ ಸೋತು ಆಪರೇಷನ್ ಸಜ್ಜಾಗೆ, ಪೇಟೆಯ ಮೈಲಾರ ಆಸ್ಪತ್ರೆಗೆ ಹೋಗಿ ಇಡೀ ದಿನ ಕಾದು ತಪಾಸಣೆ ಮುಗಿದಮೇಲೆ ಫಿಟ್ ಇದ್ದಾರೆ, ಬಿ.ಪಿ ನಾರ್ಮಲ್ ಇದೆ, ಆಪರೇಷನ್ ಮಾಡಿ ಲೆನ್ಸ್ ಹಾಕಿದ್ರಾಯ್ತು.., *ನಾಳೆ ಬನ್ನಿ ಎಂದು ಡಾಕ್ಟರ್ ಹೇಳಿ ಕಳಿಸಿದ್ಮೇಲೆ ಲವಲವಿಕೆಯಿಂದ ಇದ್ದ ಅಮ್ಮನ ಮುಖದಲ್ಲಿ ಹೊಸ ಕಳೆ ಬಂದಂತಿತ್ತು!* ಮಾರನೇ ದಿನ ದುಡ್ಡು ಹೊಂದಿಸಿ ಕೊಟ್ಟು ನಾನು ಕೆಲಸಕ್ಕೆ ಹೋದೆ, ಮಗನನ್ನು ಕರೆದುಕೊಂಡು ಹೋಗಿ ಅಡ್ಮಿಟ್ ಆದ್ರು, ಹನ್ನೆರೆಡುಗಂಟೆ ಹೊತ್ತಿಗಾಗಲೇ ಆಪರೇಷನ್ ಮುಗಿತು, ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ ಅಂತ ಅಣ್ಣ ಕಾಲ್ ಮಾಡಿ ಹೇಳಿದ್ದ, ಸಾಯಂಕಾಲ ಆರರೊಳಗೆ ಮೂರು- ನಾಲ್ಕು ಬಾರಿ ಕಾಲ್ ಮಾಡಿ ಅಮ್ಮನ ಆರೋಗ್ಯದ ಬಗ್ಗೆ ವಿಚಾರಿಸಿದ್ದೆ, ಕೆಲಸ ಮುಗಿಸಿಕೊಂಡು ಬಂದು ಅಮ್ಮನನ್ನು ಕಂಡು ಮಾತನಾಡಿಸಿ ಇಡ್ಲಿ-ಸಾಂಬಾರ್ ತಿನಿಸಿ, ಚಹಾ ಕುಡಿಸಿದೆ, *ಮಸಗು ಕಣ್ಣಿಗ್ಹಾಕಿದ ಲೆನ್ಸ್ ನೊಂದಿಗೆ ಜಗತ್ತನ್ನು ಹೊಸ ದೃಷ್ಟಿಕೋನದಿಂದ ನೋಡುವ ಹೆಬ್ಬಯಕೆ ಅಮ್ಮನ ಮೊಗದಿ ಎದ್ದು ಕಾಣುತ್ತಿತ್ತು!* ಅದೇ ಭರವಸೆಯಲ್ಲಿ ಮನೆಗೆ ಬಂದೆ, ಅಮ್ಮನಿಗೆ ತಾನು ಕಣ್ಣಾದ ಬಗೆಗೆ ನೆನೆದು ನೆಮ್ಮದಿಯ ನಿದ್ದೆಗೈದೆ. ಮರುದಿನ ಪರೀಕ್ಷಾ ಕಾರ್ಯ ನಿಮಿತ್ತ ಅಮ್ಮನನ್ನು ಕಾಣದೇ ಕಾಲೇಜಿಗೆ ಹೋದೆ.., ಸಾಂಕಾಲದೊತ್ತಿಗೆ ರಾಘಣ್ಣ ಅಮ್ಮನ ಕಣ್ಪಟ್ಟಿ ತೆಗೆಸಿ, ಕರಿಕನ್ನಡಕ ಹಾಕಿಸಿ ಡಿಸ್ಚಾರ್ಜ್ ಮಾಡಿಸಿಕೊಂಡು ಬಂದಿದ್ದ, ಮನೆ ತುಂಬೆಲ್ಲಾ ಹೂನಗೆ ಚೆಲ್ಲಿತ್ತು. *ಕಪ್ಪು ಕನ್ನಡಕ ಅಮ್ಮನಿಗೆ ಚಂದವಾಗಿ ಒಪ್ಪಿತ್ತು,* ರಾತ್ರಿ ಗಂಜಿ ಕುಡಿದು, ಗುಳುಗಿ ನುಂಗಿ ಅಮ್ಮ ಮಲಗಿದ್ದಳು. ನಿತ್ಯದ ದಿನಚರಿಯಂತೆ ನಾನೆದ್ದು ರೆಡಿಯಾಗಿ ಕಾಲೇಜಿಗೆ ಹೊರಟು ನಿಂತಿದ್ದೆ, ಇನ್ನೂ ಹಾಸಿಗೆಯಲ್ಲಿ ಮಗ್ಗಲು ಹೊರಳಿಸಿದ್ದ ಅಮ್ಮನನ್ನ ಕಂಡು ಯಾಕೆ ಅಮ್ಮ ಸಪ್ಗಿದ್ದೀಯಾ? ನಿದ್ದೆ ಆಗಿಲ್ವಾ? ಎಂದಿದ್ದಕ್ಕೆ; ಕಣ್ಣು ಸ್ವಲ್ಪ ನೋವಾಗಿದೆ, ಎರಡು ಮೂರು ಬಾರಿ ಭೇದಿ ಆಯ್ತು, ಎದ್ದು ಹೋಗಿ ಬಂದು, ಹೋಗಿ ಬಂದು ಕೈ-ಕಾಲು ಸೋತಂಗಾಗಿದೆ ಅಂದ್ಲು, ಮಗನಿಗೆ ಮೆಡಿಕಲ್ ಶಾಪ್ ನಿಂದ ಒಂದೆರಡು ಭೇದಿ ಗುಳಿಗೆ ತಂದು ಕೊಡು ಅಮ್ಮ ನುಂಗ್ತಾಳೆ, ಆರಾಮ್ ಅನಿಸಿಲ್ಲ ಅಂದ್ರೆ ಸಂಜೆ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಅಂತ ಹೇಳಿ ನಾನು ಕಾಲೇಜಿಗೆ ಹೊರಟೆ, ನಾನಿನ್ನೂ ಕಾಲೇಜ್ ಮುಟ್ಟಿದ್ದಿಲ್ಲ.., ನಂತರದ ಬೆಳವಣಿಗೆ ಆಘಾತವನ್ನುಂಟು ಮಾಡಿತ್ತು. ಅಮ್ಮನಿಗೆ ಮತ್ತೆರಡು ಬಾರಿ ಭೇದಿ ಆಯ್ತಂತೆ, ಸುಸ್ತು, ಡಾಕ್ಟರನ್ನು ಕರೆಸಿ ಸೂಜಿ ಹಾಕ್ಸರಿ ಅಂತ ಕೇಳಿದ್ದಾಳೆ, ಮನೆಯಲ್ಲಿ ಅತ್ತಿಗೆ, ರಶ್ಮಿ, ದೀಪಾ, ಶಶಿ, ಮೊಮ್ಮಕ್ಕಳು ಮರಿ ಮೊಮ್ಮಕ್ಕಳಿದ್ದರು, ಅಪ್ಪ, ಅಣ್ಣ ಎಲ್ಲರೂ ಗದ್ದೆ ಕೆಲಸಕ್ಕೆ ಹೋಗಿದ್ದರು. ದೈವಿಕ್ [ಮರಿ ಮೊಮ್ಮಗ] ಎದ್ದು ಕೂಡಲೇ ಮನೆಯ ಮುಂದಿನ ಮೆಟ್ಟಿಲ ಮೇಲೆ ಆತನನ್ನು ತೊಡೆಯಮೇಲೆ ಕೂಡಿಸಿಕೊಂಡು ಮುದ್ದು ಮಾಡುತ್ತಾ.., ದಾರಿಗುಂಟ ಹೋಗಿ ಬರೋರನ್ನು ಎದ್ರಾ, ಉಂಡ್ರಾ- ತಿಂದ್ರಾ ಎಂದು ಲೋಕಾಭಿರಾಮವಾಗಿ ಮಾತನಾಡಿಸುತ್ತಾ, ಆಗ್ತಾನೇ ಗೂಡಿನಿಂದ ಹೊರಬಿದ್ದ ಕೋಳಿ-ಮರಿಗಳಿಗೆ ಕಾಳು ಹಾಕುತ್ತಾ ಆಡಿಸುತ್ತಾ ಕೂಡುವುದು ಅಮ್ಮನದು ನಿತ್ಯದ ದಿನಚರಿ. ಎಂದಿನಂತೆ ಇಂದು ಮೊಮ್ಮಗ ಬಂದು ಅವ್ವ ಅವ್ವ ಎಂದು ಕರೆದಾಗ ದೈವಿಕ್ ಇವತ್ತು ನನ್ನ ಕರಿಬೇಡಪ್ಪಾ.., ನನ ಹತ್ತಿರ ಬರಬೇಡಪ್ಪಾ.., ಹೋಗು ಎಂದು ತನ್ನೊಳಗಿನ ಚಡಪಡಿಕೆ, ದುಃಖದಿಂದ ಗದರಿಸಿದಳೋ ಏನೋ? ಅವನು ಅಳುತ್ತಾ ಬಂದವನು ಮತ್ತೆ ಅವ್ವ ಎನ್ನಲಿಲ್ಲ. ಪಕ್ಕದ ಮನೆಯವರು ಎದುರಿನ ಮನೆಯ ಕುಮಾರಸ್ವಾಮಿ ಅಣ್ಣ, ಆತನ ಮಗ ಕಾರ್ತಿಕ್ ಓಡಿ ಬಂದಿದ್ದಾರೆ, ಲೋಕಲ್ [ಆರ್.ಎಮ್.ಪಿ] ಡಾಕ್ಟರ್ ನ ಕರೆಸಿ ಒಂದು ಇಂಜೆಕ್ಷನ್ ಮಾಡಿಸಿದ್ದಾರೆ, ಅಮ್ಮ ಸುಸ್ತಾಗಿ ಮಲಗ್ಬಿಟ್ಟಿದ್ದಾಳೆ, *ಮೈ-ಕೈ ಎಲ್ಲಾ ತಣ್ಣಗಾಗಿದ್ದನ್ನು ಕಂಡು ಅತ್ತಿಗೆ ಒಲಿಬೂದಿ ತಂದು ಕೈಕಾಲಿಗೆ ತಿಕ್ಕಿದ್ದಾಳೆ,* ತಡಮಾಡದೆ.., ಕೂಡಲೇ ಆಟೋ ಬಾಡಿಗೆ ಮಾಡಿಕೊಂಡು ಆಸ್ಪತ್ರೆಗೆ ಹೋಗಿದ್ದಾರೆ, *ಆಸ್ಪತ್ರೆಯ ಆವರಣದಲ್ಲಿ ಡಾಕ್ಟರ್ ಓಡಿ ಬಂದು ಚೆಕ್ ಮಾಡಿ ಅಮ್ಮ ಇನ್ನಿಲ್ಲ* ಎಂದು ದೃಢೀಕರಿಸಿದ್ದಾರೆ. ಸುದ್ದಿ ತಿಳಿಯುತ್ತಲೇ ಕಾಲೇಜಿಂದ ಹೊರಬಿದ್ದೆ ಮನೆಗೆ ಬಂದು ಸೇರುವಷ್ಟರಲ್ಲಿ ಒಂದು ಗಂಟೆ ಆಗಿತ್ತು, ಮನೆಯ ಮುಂದೆ ಪೆಂಡಾಲ್ ಹಾಕಿ, ಚಪ್ಪರದಡಿಯಲ್ಲಿ ಮಂಚದ ಮೇಲೆ ಹೊಸ ಸೀರೆ ತೊಟ್ಟು ಮಂದಹಾಸದಿ ಮಲಗಿದ್ದ ಅಮ್ಮನ ಮುಖದಲ್ಲಿ ಚೆಲುವಿತ್ತು! ಅಮ್ಮನ ಬಳಗ ಅಪ್ಪನ ಬಳಗ, ಬಂಧು-ಬಳಗ ಆಗಲೇ ನೆರದಿತ್ತು, ಅವರುಗಳು ತಂದ ಹೂಮಾಲೆಗಳು ರಾಶಿ ರಾಶಿ ಅಮ್ಮನ ಮೇಲೆ ಬಿದ್ದಿತ್ತು, ಅಮ್ಮನ ಜಾತ್ರೆಗೆ ತೇರು ಸಿದ್ದಗೊಂಡಿತ್ತು.., ಮಂತ್ರ ಘೋಷ, ಸನಾಯಿ ನಾಧಾ ಮೊಳಗುತ್ತಲೇ ಅಮ್ಮನ ತೇರು ಮುಂದೆ ಮುಂದೆ ಸಾಗಿದರೆ ನಾವು ಅವರತ್ತ ಭಾರವಾದ ಹೆಜ್ಜೆಗಳನ್ನ ಹಾಕುತ್ತಾ ಹಿಂದೆ ಹಿಂದೆ ಸಾಗಿದೆವು ಮಸಣದ ಕಡೆಗೆ.., *ಅಮ್ಮನ ಸಿದಿಗೆ ಹೊತ್ತವರು ಹೆಗಲು ಬದಲಿಸುತ್ತಾ.., ಅಮ್ಮನಿಗೆ ನೋವಾಗದಿರಲೆಂದು ನಿಧಾನ ಹೆಜ್ಜೆ ಹಾಕುತ್ತಾ ಸಾಗಿ* ಕುಣಿಯ ತಲುಪಿ ಅಲ್ಲಿ ಅಮ್ಮನಿಗೆ ಕಡೆಯದಾಗಿ ಬಾಯಿಗೆ ನೀರು ಬಿಟ್ಟು, ಅಂತಿಮ ಪೂಜೆ-ಪುನಸ್ಕಾರ ಮಾಡಿ ಕೈ ಮುಗಿದು ನಿಂತೆವು.., *”ಆಡಿ ಬಾ ನನ ಕಂದ ಅಂಗಾಲ ತೊಳದೇನ ತೆಂಗಿನ ಕಾಯಿ ತಿಳಿನೀರು, ತೆಂಗಿನ ಕಾಯಿ ತಿಳಿನೀರ ತಕ್ಕೊಂಡು ಕಂದಮ್ನ ಪಾದದ ಧೂಳ ತೊಳದೇನ”* ಎಂಬ ಅಮ್ಮನ ಜೋಗುಳ ಕೇಳಿ ಮಲಗಿದ *ಮಕ್ಕಳೆಲ್ಲರೂ ಸೇರಿ ಅಮ್ಮನನ್ನು ಗುಂಡಿಯಲಿಟ್ಟು ಮಣ್ಣುಗೂಡಿಸಿ ಬರುವಾಗ ಕರುಳು ಕಿತ್ತು ಬಾಯ್ಗೆ ಬಂದಂತಾಯ್ತು,* ಅಮ್ಮ ಪಾಪ ಅದೆಷ್ಟು ನೊಂದುಕೊಂಡಳೋ..? ಒಬ್ಬಂಟಿಯಾಗಿ ಹೋದಳು, ಕುಣಿ ಮುಂದೆ ನಿಂತುಕೊಂಡು ಮಾದಿಗರ ಚಂದಪ್ಪ.., ಮಸಣದಿ ನೆರೆದ ಜನಸ್ತೋಮದೆದಿರು ಸಲಿಕೆಗೆ ಒಂದು ನಾಣ್ಯದಿಂದ ಗಂಟೆಯಂತೆ ಭಾರಿಸುತ್ತ – *ನರಲೋಕ ಸಾಕಾಗಿ ದೇವಲೋಕಕ್ಕೆ ಹೋದಳು ಶಿವಮ್ಮ..,* *ನರಲೋಕ ಸಾಕಾಗಿ ದೇವಲೋಕಕ್ಕೆ ಹೋದಳು ಶಿವಮ್ಮ..,* *ನರಲೋಕ ಸಾಕಾಗಿ ದೇವಲೋಕಕ್ಕೆ ಹೋದಳು ಶಿವಮ್ಮ..,* ಎಂದು ಮೂರೂ ಬಾರಿ ಸಾರಿದ ಮೇಲೆ; ಅಮ್ಮನ ಅಗಲಿಕೆಯು ಕಣ್ಣು ಕಳೆದುಕೊಂಡ ಕುರುಡರಾದಂತಹ ಅನುಭವ, ಅಕ್ಷರಶಃ ನನ್ನನ್ನು ಅನಾಥಳನ್ನಾಗಿಸಿ ಹೊರಟೆ ಬಿಟ್ಟಳು ಬಾರದ ಲೋಕಕ್ಕೆ, *ಸಗ್ಗದ ಸಿರಿ-ಸೀಮೆಯ, ಸೊಬಗ ಸವಿಯಲು ತನ್ನೆರೆಡು ಕಣ್ಗಳು ಸಾಲದೆಂದು ಲೆನ್ಸ್ ಹಾಕಿಸಿಕೊಂಡು ಹೋದ ಅಮ್ಮ ಮತ್ತೆ ಎಂದಿಗೂ ಬಾರಳು, ಆದರೆ ಅಲ್ಲಿ ಕಂಡುಂಡ ಅನುಭವಗಳನ್ನು ಅಮ್ಮ ಚಿತ್ತದಿ ದಾಖಲಿಸಿಕೊಂಡು ಮರೆಯದೆ ನನಗೆ ಟಪಾಲು ಬರೆದು ಕಳುಹಿಸಬಹುದು* ಎಂದು ಆಸೆಗಣ್ಣಲಿ ಅಂಚೆಯಣ್ಣನ ದಾರಿ ಕಾಯುತ್ತಿರುವೆ. ನನ್ನ ತಂಗಿ, ಮಗ, ಮಗಳು ಆಡ್ಯಾಡಿಕೊಂಡು ಅತ್ತು ಹಗುರಾದರು, ನೆರೆದವರು ಏನೆಂದುಕೊಂಡರೋ ಏನೋ? ನನ್ನ ಬಗ್ಗೆ ನನಗೆ ಅಳಲು ಬಾರದು, ಕಣ್ಣೀರು ತನ್ತಾನೇ ಸುಮ್ಮನೆ ತಣ್ಣಗೆ ಸುರಿವ ಜಿಟಿ ಜಿಟಿ ಮಳೆಯಂತೆ ಜಿನುಗುಟ್ಟುತ್ತಿತ್ತಿ.., *ಅವ್ಯಕ್ತ ಭಾವನೆಗಳನ್ನು ಹತ್ತಿಕ್ಕಲಾಗದೆ.., ಬರೆದು ಹಗುರ ಆಗೋಣವೆಂದುಕೊಂಡು.., ಒಂದೇ ಉಸಿರಿನಲ್ಲಿ ಬರೆದೆ..,* ನನ್ನ ಬರಹವನ್ನು ಮತ್ತೆ ಮತ್ತೆ ನಾನೇ ಮನಸಿನಲ್ಲಿ ಓದಿಕೊಂಡಂತೆಲ್ಲ; ನನ್ನ ಮನಸಿನ ನೋವೇ ಅಕ್ಷರ ರೂಪು ಪಡೆದಿವೆಅನ್ನುವಷ್ಟರ ಮಟ್ಟಿಗೆ ಮೂಡಿಬಂದಿದೆ ಎನಿಸಿ *ಅಳು ಜುಳು-ಜುಳು ದಳಿ-ದಳಿ ಹರಿಯುತ್ತಿತ್ತು.* *ಅಮ್ಮ ಕನಸಿನಲ್ಲಿ ಬರಬಹುದೂ, ತನ್ನ ಸಾವಿಗೂ ಮುನ್ನ ಅನುಭವಿಸಿದ ಚಡಪಡಿಕೆಯನ್ನು ನನ್ನೊಂದಿಗೆ ಹಂಚಿಕೊಳ್ಳಬಹುದು ಎನ್ನುವ ನಿರೀಕ್ಷೆಯಲ್ಲಿ ಮಲಗಿದ್ದೇ,* ಅಮ್ಮ ತನ್ನ ಏನೊಂದೂ ಕಷ್ಟ ಹೇಳಿಕೊಳ್ಳದೆ ಪಕ್ಕದಿ ಕೂತು ತಲೆ ನೇವರಿಸುತ್ತಾ ಜೋಗುಳ ಹಾಡುತ್ತಿದ್ದಳು ನಾನು ಹಸುಗಂದಮ್ಮನಂತೆ ನಿದ್ದೆಗೆ ಜಾರಿದೆ. ಡಾ. ಯಲ್ಲಮ್ಮ ಕೆ
“ಮಾತೃ ವಿಯೋಗ: ನರಲೋಕದಿಂದ ದೇವಲೋಕ ಸೇರಿದಳು ಶಿವಮ್ಮ” ಡಾ.ಯಲ್ಲಮ್ಮ ಕೆ. Read Post »
ಸಂಬಂಧಗಳ ಸಂಗಾತಿ ಕೆ.ಎಂ. ಕಾವ್ಯ ಪ್ರಸಾದ್ “ನಂಬಿಕೆ ಒಡೆದಾಗ ಸಂಬಂಧಗಳು ಬದುಕುತ್ತವೆಯೇ?” ಸಂಬಂಧಗಳನ್ನು ಕಟ್ಟುವುದು ಪ್ರೀತಿಯಿಂದ, ಆದರೆ ಅವನ್ನು ಉಳಿಸುವುದು ನಂಬಿಕೆಯಿಂದ. ಪ್ರೀತಿ ಎಷ್ಟೇ ಆಳವಾಗಿದ್ದರೂ, ಒಂದು ಕ್ಷಣದ ಅನುಮಾನ ಅದರ ಬೇರುಗಳನ್ನು ಅಲ್ಲಾಡಿಸಬಲ್ಲದು. ಕೆಲವೊಮ್ಮೆ ತಪ್ಪು ನಡೆದಿರಲೂಬಹುದು, ಕೆಲವೊಮ್ಮೆ ತಪ್ಪೇ ಇರದೇ ಇರಬಹುದು. ಆದರೆ ಒಮ್ಮೆ ಮನಸ್ಸಿನಲ್ಲಿ ಅನುಮಾನದ ಬೀಜ ಬಿದ್ದರೆ, ಅದು ನಿಧಾನವಾಗಿ ಸಂಬಂಧದ ಪ್ರತಿಯೊಂದು ಕೊಂಬೆಯನ್ನೂ ಒಣಗಿಸಲು ಆರಂಭಿಸುತ್ತದೆ. ಜೀವಂತವಾಗಿರುವ ಮನುಷ್ಯನನ್ನು ಸತ್ತವನಂತೆ ಮಾಡುವ ಶಕ್ತಿ ಕತ್ತಿಗೆ ಇಲ್ಲ; ಅನುಮಾನಕ್ಕೆ ಇದೆ. ದೇಹ ಉಸಿರಾಡುತ್ತಿರಬಹುದು, ಆದರೆ ಮನಸ್ಸು ಪ್ರತಿದಿನ ಸಾಯುತ್ತಿರುತ್ತದೆ. ಒಮ್ಮೆ ಕಳೆದುಹೋದ ನಂಬಿಕೆಯನ್ನು ಮರಳಿ ಕಟ್ಟುವುದು ಮನೆ ಕಟ್ಟುವುದಕ್ಕಿಂತ ಕಷ್ಟ. ಒಡೆದ ಗಾಜನ್ನು ಅಂಟಿಸಬಹುದು, ಆದರೆ ಅದರ ಬಿರುಕು ಎಂದಿಗೂ ಕಾಣದಂತೆ ಮಾಡಲಾಗುವುದಿಲ್ಲ. ಅದೇ ರೀತಿ ಒಡೆದ ವಿಶ್ವಾಸ ಮತ್ತೆ ಹುಟ್ಟಿದರೂ, ಅದರ ಗಾಯದ ಗುರುತು ಮನಸ್ಸಿನಲ್ಲಿ ಉಳಿಯುತ್ತದೆ. ಪ್ರತಿಯೊಬ್ಬ ಮನುಷ್ಯನೂ ತಪ್ಪು ಮಾಡಬಹುದು. ತಪ್ಪು ಮಾಡದವರು ಯಾರೂ ಇಲ್ಲ. ಆದರೆ ಒಮ್ಮೆ ನಡೆದ ತಪ್ಪನ್ನು ಜೀವಮಾನವಿಡೀ ಹಿಡಿದುಕೊಂಡು ಪ್ರತಿದಿನ ಅವಮಾನಿಸುವುದು, ಮಾತಿನ ಮೂಲಕ ಕಿರುಕುಳ ಕೊಡುವುದು, ಕುಟುಂಬದವರನ್ನೂ ಕೀಳಾಗಿ ಕಾಣುವುದು ನ್ಯಾಯವಲ್ಲ. ಕ್ಷಮೆ ಎನ್ನುವುದು ತಪ್ಪನ್ನು ಮರೆತಂತೆ ಅಲ್ಲ; ಮತ್ತೊಬ್ಬರ ಮಾನವೀಯತೆಯನ್ನು ಗೌರವಿಸಿದಂತೆ. ಮಾತುಗಳಿಗೆ ಗಾಯಗೊಳಿಸುವ ಶಕ್ತಿ ಇದೆ. ಕತ್ತಿಯಿಂದ ಆದ ಗಾಯಕ್ಕೆ ಔಷಧ ಸಿಗುತ್ತದೆ. ಆದರೆ ಮಾತಿನಿಂದ ಆದ ಗಾಯಕ್ಕೆ ಔಷಧವೇ ಇರುವುದಿಲ್ಲ. ಕೆಲವರು ಒಂದು ದಿನ ಅತ್ತು ಮರೆತುಬಿಡುತ್ತಾರೆ. ಆದರೆ ಇನ್ನೂ ಕೆಲವರು ಪ್ರತಿದಿನ ನಗುವ ಮುಖವಾಡ ಧರಿಸಿ ಬದುಕುತ್ತಾರೆ. ಹೊರಗೆ ನಗುವರು, ಒಳಗೆ ಮಾತ್ರ ಸಾವಿರ ಬಾರಿ ಮುರಿಯುತ್ತಾರೆ. ಆ ನಗುವಿನ ಹಿಂದೆ ಎಷ್ಟು ಕಣ್ಣೀರು, ಎಷ್ಟು ಮೌನ, ಎಷ್ಟು ನೋವು ಅಡಗಿದೆ ಎಂಬುದು ಯಾರಿಗೂ ಕಾಣುವುದಿಲ್ಲ. ಸಂಸಾರವೆಂದರೆ ಇಬ್ಬರು ಮನುಷ್ಯರ ಒಪ್ಪಂದವಲ್ಲ; ಅದು ಎರಡು ಹೃದಯಗಳ ಜವಾಬ್ದಾರಿ. ಅಲ್ಲಿ ಗಂಡನಿಗೂ ಗೌರವ ಬೇಕು, ಹೆಂಡತಿಗೂ ಗೌರವ ಬೇಕು. ಇಬ್ಬರಿಗೂ ತಮ್ಮ ಭಾವನೆ ಹೇಳುವ ಹಕ್ಕು ಇದೆ. ಇಬ್ಬರಿಗೂ ಸ್ವಾತಂತ್ರ್ಯ ಇದೆ. ಯಾರನ್ನೂ ಸದಾ ಅನುಮಾನದಿಂದ ನೋಡುತ್ತಾ, ಅವರ ವ್ಯಕ್ತಿತ್ವವನ್ನು ಕುಗ್ಗಿಸುತ್ತಾ ಬದುಕಿಸುವುದು ಸಂಬಂಧವಲ್ಲ; ಅದು ಮನಸ್ಸಿನ ಬಂಧನ. ಒಮ್ಮೆ ಕಳೆದುಕೊಂಡ ನಂಬಿಕೆ ಮರಳಿ ಬರಬಹುದು. ಆದರೆ ಅದಕ್ಕೆ ಸಮಯ, ಪ್ರಾಮಾಣಿಕತೆ, ಪರಸ್ಪರ ಗೌರವ ಮತ್ತು ನಿಜವಾದ ಬದಲಾವಣೆ ಬೇಕು. ಪ್ರತಿದಿನ ಹಳೆಯ ಗಾಯವನ್ನು ಕೆದಕುತ್ತಾ ಹೋದರೆ ಅದು ಎಂದಿಗೂ ಮಾಯವಾಗುವುದಿಲ್ಲ. ಗಾಯ ಗುಣವಾಗಬೇಕಾದರೆ ಅದನ್ನು ಮರುಮರು ಹರಿಯಬಿಡಬಾರದು. ಮಕ್ಕಳು ಮನೆಯ ಗೋಡೆಗಳನ್ನು ಮಾತ್ರ ನೋಡುವುದಿಲ್ಲ; ತಂದೆ-ತಾಯಿಯ ಮಾತುಗಳನ್ನು, ವರ್ತನೆಯನ್ನು, ಪರಸ್ಪರ ಗೌರವವನ್ನು ನೋಡಿ ಬದುಕು ಕಲಿಯುತ್ತಾರೆ. ಪ್ರೀತಿಗಿಂತ ಹೆಚ್ಚು ಅವರಿಗೆ ಬೇಕಾಗಿರುವುದು ಸುರಕ್ಷಿತವಾದ ವಾತಾವರಣ. ಪ್ರತಿದಿನ ಜಗಳ, ಅನುಮಾನ, ಅವಮಾನ ಇರುವ ಮನೆಯಲ್ಲಿ ಬೆಳೆದ ಮನಸ್ಸು ನಿಧಾನವಾಗಿ ತನ್ನ ನಗುವನ್ನೇ ಕಳೆದುಕೊಳ್ಳುತ್ತದೆ. ಕೆಲವು ನೋವುಗಳು ಕಾಲದೊಂದಿಗೆ ಮಾಸುತ್ತವೆ. ಆದರೆ ಕೆಲವು ನೋವುಗಳು ಪ್ರತಿದಿನ ಜೀವಂತವಾಗಿಯೇ ಉಳಿಯುತ್ತವೆ. ಅವು ಕಣ್ಣಿಗೆ ಕಾಣುವುದಿಲ್ಲ, ಆದರೆ ಹೃದಯವನ್ನು ನಿಧಾನವಾಗಿ ಕರಗಿಸುತ್ತವೆ. ಅದಕ್ಕಾಗಿಯೇ ಸಂಬಂಧದಲ್ಲಿ ಗೆಲ್ಲುವುದು ಮುಖ್ಯವಲ್ಲ; ಒಬ್ಬರ ಮನಸ್ಸನ್ನು ಮತ್ತೊಬ್ಬರು ಕಾಪಾಡುವುದು ಮುಖ್ಯ. ಒಳ್ಳೆಯ ವ್ಯಕ್ತಿ ಎಂದರೆ ಎಂದಿಗೂ ತಪ್ಪು ಮಾಡದವನು ಅಲ್ಲ. ತನ್ನ ತಪ್ಪನ್ನು ಅರಿತು ತಿದ್ದಿಕೊಳ್ಳುವವನು, ಎದುರಾಳಿಯ ಮನಸ್ಸನ್ನು ಅರ್ಥಮಾಡಿಕೊಳ್ಳುವವನು, ಕ್ಷಮೆ ಕೇಳಬೇಕಾದಲ್ಲಿ ಕೇಳುವವನು, ಕ್ಷಮಿಸಬೇಕಾದಲ್ಲಿ ಕ್ಷಮಿಸುವವನು. ಜೀವನದ ಕೊನೆಯಲ್ಲಿ ಜನರು ನೆನಪಿಡುವುದು ಯಾರು ಗೆದ್ದರು ಎಂಬುದಲ್ಲ. ಯಾರು ಪ್ರೀತಿಸಿದರು, ಯಾರು ಕಾಪಾಡಿದರು, ಯಾರು ಕಣ್ಣೀರನ್ನು ಒರೆಸಿದರು ಎಂಬುದನ್ನು. ನಂಬಿಕೆ ಇದ್ದರೆ ಸಂಬಂಧಗಳು ಅರಳುತ್ತವೆ.ಗೌರವ ಇದ್ದರೆ ಸಂಸಾರ ಉಳಿಯುತ್ತದೆ.ಕ್ಷಮೆ ಇದ್ದರೆ ಗಾಯಗಳು ಗುಣವಾಗುತ್ತವೆ.ಪ್ರೀತಿ ಇದ್ದರೆ ಜೀವನ ಸುಂದರವಾಗುತ್ತದೆ.*ಯಾಕೆಂದರೆ ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಭಾವನೆಗಳಿವೆ, ತನ್ನ ಕನಸುಗಳಿವೆ, ತನ್ನ ಗೌರವವಿದೆ, ತನ್ನ ಹಕ್ಕು ಮತ್ತು ಸ್ವಾತಂತ್ರ್ಯವಿದೆ. ಆ ಗೌರವವನ್ನು ಕಾಪಾಡಿದಾಗ ಮಾತ್ರ ಯಾವುದೇ ಸಂಬಂಧ ನಿಜವಾದ “ಸರಿಯಾದ ವ್ಯಕ್ತಿ”ಯ ಸಂಬಂಧವಾಗುತ್ತದೆ.* ಕೆ.ಎಂ. ಕಾವ್ಯ ಪ್ರಸಾದ್
“ನಂಬಿಕೆ ಒಡೆದಾಗ ಸಂಬಂಧಗಳು ಬದುಕುತ್ತವೆಯೇ?” ಕೆ.ಎಂ. ಕಾವ್ಯ ಪ್ರಸಾದ್ Read Post »
ವಿಶೇಷ ಸಂಗಾತಿ ಕೆ.ಎಂ. ಕಾವ್ಯ ಪ್ರಸಾದ್ “ನೋವಿನ ನೆರಳಿನಿಂದ ಬೆಳಕಿನ ಬದುಕಿನ ಕಡೆಗೆ” *”ವಿಧಿಯೇ ನಿನಷ್ಟು ಕ್ರೂರಿ, ಮುಂದೆ ಕನಸುಗಳನ್ನು ತೋರಿಸಿ ಹಿಂದೆ ಇರಿಯುವೆ ಚೂರಿ”* ಎಂಬ ಮಾತು ಕೇಳಿದಾಗ, ಅದು ಕೇವಲ ಒಂದು ಸಾಲು ಎಂದು ಅನಿಸುವುದಿಲ್ಲ. ಜೀವನದಲ್ಲಿ ಅನಿರೀಕ್ಷಿತವಾಗಿ ಕಳೆದುಕೊಂಡವರ ಹೃದಯದ ಮೌನದ ಕಿರುಚಾಟದಂತೆ ಭಾಸವಾಗುತ್ತದೆ. ಆದರೆ ಜೀವನದ ಸತ್ಯ ಇನ್ನೂ ಆಳವಾಗಿದೆ. ವಿಧಿ ಕೆಲವೊಮ್ಮೆ ನಮ್ಮ ಕನಸುಗಳನ್ನು ಮುರಿಯಬಹುದು; ಆದರೆ ನಮ್ಮೊಳಗಿನ ಧೈರ್ಯವನ್ನು ಮುರಿಯಲು ಸಾಧ್ಯವಿಲ್ಲ. ಒಂದು ರೈತನನ್ನು ಕಲ್ಪಿಸಿಕೊಳ್ಳಿ. ಅವನು ಸಾಲ ಮಾಡಿ ಉತ್ತಮ ಬೀಜ ಖರೀದಿಸುತ್ತಾನೆ. ಹೊಲ ಉಳುಮೆ ಮಾಡುತ್ತಾನೆ. ಮಳೆಯ ನಿರೀಕ್ಷೆಯಲ್ಲಿ ಪ್ರತಿದಿನ ಆಕಾಶದತ್ತ ನೋಡುತ್ತಾನೆ. ಆದರೆ ಒಂದು ವರ್ಷ ಬರಗಾಲ ಬರುತ್ತದೆ. ಬೆಳೆ ಹಾಳಾಗುತ್ತದೆ. ಆ ದಿನ ಅವನ ಕನಸುಗಳೂ ಒಣಗಿದಂತೆ ಕಾಣುತ್ತದೆ. ಆದರೂ ಮುಂದಿನ ವರ್ಷ ಮತ್ತೆ ಅದೇ ಹೊಲಕ್ಕೆ ಬೀಜ ಬಿತ್ತುತ್ತಾನೆ. ಏಕೆ? ಏಕೆಂದರೆ ಆಶೆಯನ್ನು ಕಳೆದುಕೊಂಡ ರೈತ ಎಂದಿಗೂ ಬೆಳೆಯನ್ನು ಕಾಣಲಾರನು. ಇದೇ ಬದುಕಿನ ಮೊದಲ ಪಾಠ. ಒಬ್ಬ ವಿದ್ಯಾರ್ಥಿ ವರ್ಷಪೂರ್ತಿ ಶ್ರಮಿಸಿ ಪರೀಕ್ಷೆ ಬರೆಯುತ್ತಾನೆ. ಆದರೆ ನಿರೀಕ್ಷಿಸಿದ ಫಲಿತಾಂಶ ಬರುವುದಿಲ್ಲ. ಕೆಲವರು ಅಲ್ಲಿ ನಿಲ್ಲುತ್ತಾರೆ. ಆದರೆ ಇನ್ನೂ ಕೆಲವರು ತಮ್ಮ ತಪ್ಪುಗಳನ್ನು ಅರಿತು ಮತ್ತೊಮ್ಮೆ ಪ್ರಯತ್ನಿಸುತ್ತಾರೆ. ಎರಡನೇ ಪ್ರಯತ್ನದಲ್ಲೇ ಯಶಸ್ಸನ್ನು ಗಳಿಸುತ್ತಾರೆ. ಸೋಲೇ ಅವರ ಅಂತ್ಯವಾಗಿದ್ದರೆ, ಆ ಯಶಸ್ಸು ಹುಟ್ಟುತ್ತಿರಲಿಲ್ಲ. ಒಂದು ಮಣ್ಣಿನ ಕುಂಭವನ್ನು ನೋಡಿ. ಅದು ಸುಂದರವಾಗುವುದಕ್ಕೆ ಮೊದಲು ಕುಂಬಾರನ ಕೈಯಲ್ಲಿ ಅನೇಕ ಬಾರಿ ತಿರುಗುತ್ತದೆ. ನಂತರ ಬೆಂಕಿಯ ಉರಿಯನ್ನು ಸಹಿಸುತ್ತದೆ. ಆ ಕಷ್ಟದ ನಂತರವೇ ಅದು ಎಲ್ಲರ ಮನೆಗೆ ಅಲಂಕಾರವಾಗುತ್ತದೆ. ಕಷ್ಟವನ್ನು ಸಹಿಸದ ಮಣ್ಣು ಎಂದಿಗೂ ಕುಂಭವಾಗುವುದಿಲ್ಲ. ಒಂದು ಮರವನ್ನು ಕಡಿಯಬಹುದು. ಅದರ ಕೊಂಬೆಗಳು ಮುರಿಯಬಹುದು. ಎಲೆಗಳು ಉದುರಬಹುದು. ಆದರೆ ಬೇರು ಜೀವಂತವಾಗಿದ್ದರೆ ಮತ್ತೆ ಚಿಗುರುತ್ತದೆ. ಹಾಗೆಯೇ ಮನುಷ್ಯನ ಮನಸ್ಸಿನಲ್ಲಿರುವ ಭರವಸೆ ಜೀವಂತವಾಗಿದ್ದರೆ, ಜೀವನ ಮತ್ತೆ ಅರಳುತ್ತದೆ. ಇಂದಿನ ಸಮಾಜದಲ್ಲಿ ನಾವು ಒಂದು ಅಪಾಯಕಾರಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಜನರು ಮೊಬೈಲ್ನಲ್ಲಿ ಸಾವಿರಾರು ಸ್ನೇಹಿತರನ್ನು ಹೊಂದಿದ್ದಾರೆ; ಆದರೆ ಮನಸ್ಸು ಬಿಚ್ಚಿ ಮಾತನಾಡಲು ಒಬ್ಬ ಸ್ನೇಹಿತನೂ ಇಲ್ಲ. ದೊಡ್ಡ ಮನೆಗಳಿವೆ; ಆದರೆ ಮನೆಯಲ್ಲಿ ಮಾತುಗಳಿಲ್ಲ. ಹಣವಿದೆ; ಆದರೆ ನೆಮ್ಮದಿ ಇಲ್ಲ. ಶಿಕ್ಷಣವಿದೆ; ಆದರೆ ಮಾನವೀಯತೆ ಕಡಿಮೆಯಾಗುತ್ತಿದೆ. ಒಮ್ಮೆ ಒಂದು ವೃದ್ಧ ದಂಪತಿ ಆಸ್ಪತ್ರೆಯಲ್ಲಿ ಕುಳಿತಿದ್ದರು. ವೈದ್ಯರು ಔಷಧಿ ಕೊಟ್ಟರು. ಆದರೆ ಅವರನ್ನು ಹೆಚ್ಚು ಸಮಾಧಾನಪಡಿಸಿದ್ದು ಪಕ್ಕದಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿಯ ಒಂದು ಮಾತು—”ಚಿಂತಿಸಬೇಡಿ, ಎಲ್ಲವೂ ಒಳ್ಳೆಯದಾಗುತ್ತದೆ.” ಆ ಮಾತು ಔಷಧಿಗಿಂತ ಹೆಚ್ಚು ಧೈರ್ಯ ನೀಡಿತು. ಇದರಿಂದ ತಿಳಿಯುವುದು, ಕೆಲವೊಮ್ಮೆ ಮಾತುಗಳೇ ಔಷಧಿಯಾಗುತ್ತವೆ. ನಾವು ಮಕ್ಕಳಿಗೆ ಉತ್ತಮ ಶಾಲೆ ಕೊಡುತ್ತೇವೆ. ಆದರೆ ಮತ್ತೊಬ್ಬರ ನೋವನ್ನು ಅರ್ಥಮಾಡಿಕೊಳ್ಳುವ ಹೃದಯವನ್ನು ಕಲಿಸುತ್ತೇವೆಯೇ? ಸ್ಪರ್ಧೆಯಲ್ಲಿ ಗೆಲ್ಲಲು ಹೇಳುತ್ತೇವೆ. ಆದರೆ ಸೋತವರನ್ನು ಎಬ್ಬಿಸಲು ಹೇಳುತ್ತೇವೆಯೇ? ಈ ಪ್ರಶ್ನೆಗಳು ಪ್ರತಿಯೊಬ್ಬ ಪೋಷಕ, ಶಿಕ್ಷಕ ಮತ್ತು ಸಮಾಜದ ಮುಂದೆ ನಿಲ್ಲಬೇಕು. ಒಂದು ದೀಪವನ್ನು ಗಮನಿಸಿ. ಅದು ತನ್ನನ್ನು ತಾನೇ ಸುಟ್ಟುಕೊಂಡು ಇತರರಿಗೆ ಬೆಳಕು ನೀಡುತ್ತದೆ. ಒಂದು ನದಿಯನ್ನು ನೋಡಿ. ಅದು ತನ್ನ ನೀರನ್ನು ತಾನೇ ಕುಡಿಯುವುದಿಲ್ಲ; ಬೇರೆಯವರ ದಾಹ ನೀಗಿಸುತ್ತದೆ. ಒಂದು ಮರ ತನ್ನ ಹಣ್ಣುಗಳನ್ನು ತಾನೇ ತಿನ್ನುವುದಿಲ್ಲ; ಇತರರಿಗೆ ನೀಡುತ್ತದೆ. ಪ್ರಕೃತಿಯ ಪ್ರತಿಯೊಂದು ಅಂಶವೂ ತ್ಯಾಗವನ್ನು ಕಲಿಸುತ್ತದೆ. ಮನುಷ್ಯ ಮಾತ್ರ ಸ್ವಾರ್ಥವನ್ನು ಕಲಿಯಬಾರದು. ಇತಿಹಾಸದಲ್ಲಿ ಮಹಾನ್ ವ್ಯಕ್ತಿಗಳು ಸುಖದಲ್ಲಿ ಬೆಳೆದವರಲ್ಲ. ಅನೇಕ ಕಷ್ಟಗಳನ್ನು ಎದುರಿಸಿ ಸಮಾಜಕ್ಕೆ ದಾರಿದೀಪರಾದವರು. ಆದ್ದರಿಂದ ಕಷ್ಟ ಬಂದಾಗ “ಏಕೆ ನನಗೆ?” ಎಂದು ಕೇಳುವುದಕ್ಕಿಂತ, “ಇದರಿಂದ ನಾನು ಏನು ಕಲಿಯಬಹುದು?” ಎಂದು ಕೇಳುವುದು ಬದುಕನ್ನು ಬದಲಾಯಿಸುತ್ತದೆ. *ಕೊನೆಯಲ್ಲಿ ಒಂದು ಸತ್ಯ—* ವಿಧಿ ನಿಮ್ಮ ದಾರಿಯನ್ನು ತಿರುಗಿಸಬಹುದು.ಸಮಯ ನಿಮ್ಮನ್ನು ಪರೀಕ್ಷಿಸಬಹುದು.ಜನರು ನಿಮ್ಮನ್ನು ಅರ್ಥಮಾಡಿಕೊಳ್ಳದೆ ಇರಬಹುದು. *ಆದರೆ ನಿಮ್ಮ ಧೈರ್ಯ, ನಿಮ್ಮ ಪ್ರಾಮಾಣಿಕತೆ ಮತ್ತು ನಿಮ್ಮ ಮಾನವೀಯತೆ ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ.* *ಮನುಷ್ಯನ ಜೀವನದ ನಿಜವಾದ ಯಶಸ್ಸು ಅವನು ಎಷ್ಟು ಸಂಪಾದಿಸಿದನೆಂಬುದಲ್ಲ; ಎಷ್ಟು ಹೃದಯಗಳಿಗೆ ಧೈರ್ಯ ತುಂಬಿದನೆಂಬುದರಲ್ಲಿ ಇದೆ.* ಕೆ.ಎಂ. ಕಾವ್ಯ ಪ್ರಸಾದ್
“ನೋವಿನ ನೆರಳಿನಿಂದ ಬೆಳಕಿನ ಬದುಕಿನ ಕಡೆಗೆ”ವಿಶೇಷ ಲೇಖನ-ಕೆ.ಎಂ. ಕಾವ್ಯ ಪ್ರಸಾದ್ Read Post »
ಸಮಾಜ ಸಂಗಾತಿ ಪ್ರೊ.ರಾಜೇಶ್ವರಿ ಶೀಲವಂತ ಪುಣೆ “ಭಾರತೀಯ ಮಕ್ಕಳ ಇಂದಿನ ನಡವಳಿಕೆ” ಅಂದಿನ ಭಾರತೀಯ ಮಕ್ಕಳಲ್ಲಿ ಸಂಪ್ರದಾಯ ಮತ್ತು ಸಂಸ್ಕಾರ ಗುಣಗಳು ತುಂಬಿ ತುಳುಕುತ್ತಿದ್ದವು .ಅವರಲ್ಲಿ ತಂದೆ, ತಾಯಿ, ಗುರು ಹಿರಿಯರ ಬಗ್ಗೆ ಆದರದ ಭಾವವಿತ್ತು. ಮನೆಯಲ್ಲಿ ಮಕ್ಕಳು ಎಲ್ಲರೊಂದಿಗೆ ಪ್ರೀತಿ ಸೌಹಾರ್ದತೆಯ ವಾತಾವರಣದೊಂದಿಗೆ ಸಂಭ್ರಮಿಸುತ್ತಿದ್ದರು.ನಿಕಟ ಕುಟುಂಬದ ಬಾಂಧವ್ಯದಿಂದಾಗಿ, ಮಕ್ಕಳು ಹಂಚಿಕೊಳ್ಳುವಿಕೆ ಮತ್ತು ಸಾಮಾಜಿಕ ಹೊಂದಾಣಿಕೆಯನ್ನು ಲೀಲಾಜಾಲವಾಗಿಕಲಿಯುತ್ತಿದ್ದರು.ಹೆಣ್ಣು ಮಗು ಅಭ್ಯಾಸದ ಜೊತೆ ಮನೆಗೆಲಸ ಕಲಿತರೆ ಗಂಡು ಮಗುಹೊರಗಿನ ವ್ಯವಹಾರ ಜ್ಞಾನ ಬೆಳೆಸಿಕೊಕೊಳ್ಳುತ್ತಿತ್ತು.ಹೀಗಾಗಿ ಮದುವೆಯ ನಂತರವೂ ಅವರಿಗೆ ಮನೆಯ ಜವಾಬ್ದಾರಿ ಹೊಂದಾಣಿಕೆಯಲ್ಲಿ ಚಾತುರ್ಯವಿತ್ತು. ಆಗ ಹೆಣ್ಣು ಮಗಳು ಮದುವೆ ನಂತರ ಅತ್ತೆ ಮನೆಯಲ್ಲಿ ತನ್ನ ಉದ್ಯೋಗದ ಜೊತೆಗೆ ಸಂಸಾರಿಕ ಜೀವನವನ್ನು ಸಾಮರಸ್ಯದಿಂದ ನಿಭಾಯಿಸುತ್ತಿದ್ದಳು.ಅಂದಿನ ಪೀಳಿಗೆಯಲ್ಲಿ ಪಾಲಕರು ತಮ್ಮ ಮಕ್ಕಳ ಶಿಕ್ಷಣದ ಜೊತೆಗೆ ಅವರ ಭಾವನಾತ್ಮಕ ಬೆಳವಣಿಗೆ ಹಾಗೂ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆಗೂ ಗಮನಹರಿಸುತ್ತಿದ್ದರು. ಅಂದು ಅಜ್ಜ, ಅಜ್ಜಿ ಮಕ್ಕಳಿಗೆ ಕುಟುಂಬದ ಮೌಲ್ಯಗಳನ್ನ ಮತ್ತು ಸಂಸ್ಕೃತಿಯನ್ನ ಹೇಗೆ ಕಾಪಾಡಬೇಕೆಂದು ತಿಳಿಸುತ್ತಿದ್ದರು. ಹೀಗಾಗಿ ಭಾರತದಲ್ಲಿ ಮಕ್ಕಳು ತಮ್ಮ ಹಿರಿಯರು, ಪೋಷಕರು ಮತ್ತು ಶಿಕ್ಷಕರಿಗೆ ಗೌರವ ನೀಡುತ್ತಿದ್ದರು. ಜಂಟಿ ಕುಟುಂಬದ ವ್ಯವಸ್ಥೆ ಅಥವಾ ನಿಕಟ ಕುಟುಂಬದ ಬಾಂಧವ್ಯದಿಂದಾಗಿ, ಆಗಿನ ಮಕ್ಕಳು ಹಂಚಿಕೊಳ್ಳುವಿಕೆ ಮತ್ತು ಸಾಮಾಜಿಕ ಹೊಂದಾಣಿಕೆಗಳನ್ನು ಬೆಳೆಯುತ್ತಲೇ ಕಲಿಯುತ್ತಿದ್ದರು .ಆದರೆ ಈಗ ಆಧುನಿಕತೆಯ ಹೆಸರಿನಲ್ಲಿ ತಂತ್ರಜ್ಞಾನದ ಬಳಕೆ ಅತಿಯಾಗಿದೆ .ಭಾರತೀಯ ಮಕ್ಕಳ ಆಧುನಿಕ ತಂತ್ರಜ್ಞಾನದ ಬಳಕೆ ಅವರ ನಡವಳಿಕೆಯಲ್ಲಿಯ ಮುಖ್ಯ ಅಂಶಗಳಾದ ಕುಟುಂಬದ ಮೌಲ್ಯಗಳು ,ಸಂಸ್ಕೃತಿ, ಹಿರಿಯರು, ಪೋಷಕರು ಮತ್ತು ಶಿಕ್ಷಕರು ಇವುಗಳ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ವಿಭಕ್ತ ಕುಟುಂಬದ ವ್ಯವಸ್ಥೆ ಅಥವಾ ನಿಕಟ ಕುಟುಂಬದ ಬಾಂಧವ್ಯದ ಅಭಾವದಿಂದಾಗಿ, ಮಕ್ಕಳು ಹಂಚಿಕೊಳ್ಳುವಿಕೆ, ಹೊಂದಾಣಿಕೆಗಳಂತಹ ಜೀವನಮೌಲ್ಯಗಳನ್ನ ಕಳೆದುಕೊಳ್ಳುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳು ಆಟಿಕೆಗಳಿಗಿಂತ ಸ್ಮಾರ್ಟ್ಫೋನ್, ವಿಡಿಯೋ ಗೇಮ್ಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ.ಹಠಮಾರಿ ಸ್ವಭಾವ ಹೆಚ್ಚುತ್ತಿದೆ.ತಾವು ಕೇಳಿದ್ದು ಸಿಗದಿದ್ದರೆ ಬೇಗನೆ ಸಿಟ್ಟು ಮಾಡಿಕೊಳ್ಳುವುದು, ಹಠ ಹಿಡಿಯುವುದು ಇಂದಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.ಏಕಾಗ್ರತೆಯ ಕೊರತೆ ಕಾಣಿಸಿಕೊಳ್ಳುತ್ತಿದೆ.ಒಂದೇ ವಿಷಯದ ಮೇಲೆ ಹೆಚ್ಚು ಹೊತ್ತು ಗಮನ ಹರಿಸಲು ಕಷ್ಟಪಡುವುದು ಮತ್ತು ಬೇಗನೆ ಬೇಸರಗೊಳ್ಳುವುದು ಹೆಚ್ಚಾಗಿದೆ.ಸಾಮಾಜಿಕ ಹೊಂದಾಣಿಕೆಯ ಕೌಶಲ್ಯಗಳ ಕೊರತೆಯಿಂದ ಮಕ್ಕಳು ಹೊರಗಡೆ ಆಟವಾಡುವುದನ್ನ ಮರೆತು ಮನೆಯಲ್ಲೇ ಕುಳಿತುಕೊಳ್ಳಲು ಇಷ್ಟಪಡುತ್ತಾರೆ. ಇತರರೊಂದಿಗೆ ಬೆರೆಯುವದೂ ದಿನೇ ದಿನೇ ಕಡಿಮೆಯಾಗುತ್ತಿದೆ.ಪೋಷಕರು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುವುದು, ಸ್ನೇಹಿತರಂತೆ ವರ್ತಿಸುವುದು ,ಅವರ ಮಾನಸಿಕ ಸಮಸ್ಯೆಗಳನ್ನು ದೂರ ಮಾಡಬಹುದು.ಅತಿಯಾದ ಟಿವಿ ಅಥವಾ ಮೊಬೈಲ್ ಬಳಕೆಗೆ ಕಡಿವಾಣ ಹಾಕಲು ದೈಹಿಕ ಚಟುವಟಿಕೆಗಳು, ಸೃಜನಶೀಲ ಚಟುವಟಿಕೆಗಳು,ಯೋಗ, ಧ್ಯಾನ ಮುಂತಾದವುಗಳಲ್ಲಿ ಅವರನ್ನು ತೊಡಗಿಸಬೇಕು. ಅದೇ ರೀತಿ ಮಕ್ಕಳಲ್ಲಿ ಮದುವೆ ಮಕ್ಕಳ ಪ್ರಾಮುಖ್ಯತೆ ಕೂಡ ಕಡಿಮೆಯಾಗುತ್ತಿದೆ. ಜಾಸ್ತಿ ಸಂಪಾದನೆಯ ಅಹಂ ಹೆಚ್ಚಾಗಿ ಗಂಡನ ಜೊತೆ ಕೂಡ ಹೊಂದಾಣಿಕೆ ಕಳೆದುಕೊಂಡು ವಿಚ್ಛೇದನಕ್ಕೆ ಮೊರೆ ಹೋಗುತ್ತಿರುವುದು ಬಹು ದೊಡ್ಡ ವಿಷಾದನೀಯ ಸಂಗತಿ ಕೂಡ.ಹೇಳಿ ಆಧುನಿಕತೆ ವರವೋ ಶಾಪವೋ!! ಪ್ರೊ. ರಾಜೇಶ್ವರಿ ಶೀಲವಂತ ಪುಣೆ
“ಭಾರತೀಯ ಮಕ್ಕಳ ಇಂದಿನ ನಡವಳಿಕೆ”ಪ್ರೊ.ರಾಜೇಶ್ವರಿ ಶೀಲವಂತ ಪುಣೆ Read Post »
ಜೀವನ ಸಂಗಾತಿ ಪೂರ್ಣಿಮಾ ಮಹೇಶ ಮುತ್ನಾಳ ಅಳ್ನಾವರ “ಸಂಸಾರದ ತಾಪಕ್ಕೆ ಸ್ನೇಹದ ಸಂಜೀವಿನಿ” ಸಾಂಸಾರಿಕ ತಾಪತ್ರಯಗಳ ಬಿರುಗಾಳಿಗೆ ಸಿಲುಕಿದಾಗ, ಒಂಟಿತನ ಕಾಡುವುದು ಸಹಜ. ಅಂತಹ ಕಠಿಣ ಸಮಯದಲ್ಲಿ ಆತ್ಮೀಯ ಸ್ನೇಹಿತರು ಚಾಚುವ ಸಹಾಯದ ಹಸ್ತ ಮತ್ತು ಅವರು ತೋರುವ ಆತ್ಮೀಯತೆ ಒಬ್ಬ ವ್ಯಕ್ತಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಆದರೆ, ಒಬ್ಬ ಜವಾಬ್ದಾರಿಯುತ ವ್ಯಕ್ತಿ ಆ ಆತ್ಮೀಯತೆಯನ್ನು ಅಹಂಕಾರವಿಲ್ಲದೆ, ಹಾಗೆಯೇ ಅತಿಯಾದ ದೈನ್ಯತೆಯೂ ಇಲ್ಲದೆ ಹೇಗೆ ಗೌರವದಿಂದ ಸ್ವೀಕರಿಸಬೇಕು ಎಂಬುದನ್ನು ಕೆಲವೊಂದಿಷ್ಟು ವಾಕ್ಯಗಳಿಂದ ಅರ್ಥೈಸಿಕೊಳ್ಳಬಹುದು:,,” ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು” …ಕಷ್ಟಗಳು ಬಂದಾಗ “ನನಗೇ ಯಾಕೆ ಹೀಗಾಯಿತು?” ಎಂದು ಅಳುತ್ತಾ ಕೂರುವುದು ಜವಾಬ್ದಾರಿಯುತ ವ್ಯಕ್ತಿಯ ಲಕ್ಷಣವಲ್ಲ ಎಂದು ಹಿರಿಯರು ಹೇಳುತ್ತಾರೆ ಹಗಲು-ರಾತ್ರಿಗಳು ಹೇಗೆ ಚಕ್ರಾಕಾರವಾಗಿ ಬರುತ್ತವೆಯೋ, ಕಷ್ಟ-ಸುಖಗಳೂ ಹಾಗೆಯೇ ಬರುತ್ತವೆ ಎಂಬುದನ್ನು ಅರಿಯಬೇಕು. ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್ |ಚಕ್ರವತ್ ಪರಿವರ್ತಂತೇ ದುಃಖಾನಿ ಚ ಸುಖಾನಿ ಚ || ಈ ಶ್ಲೋಕವು ….ಸುಖದ ನಂತರ ದುಃಖ, ದುಃಖದ ನಂತರ ಸುಖ ಬರುವುದು ಪ್ರಕೃತಿಯ ನಿಯಮ. ಗಾಡಿಯ ಚಕ್ರವು ತಿರುಗುವಂತೆ ಸುಖ ಮತ್ತು ದುಃಖಗಳು ಜೀವನದಲ್ಲಿ ಸದಾ ಬದಲಾಗುತ್ತಾ ಇರುತ್ತವೆ. ಎಂಬುದನ್ನು ತಿಳಿಸುತ್ತದೆ.ಆದ್ದರಿಂದ ಕಷ್ಟ ಬಂದಾಗ ಇದು ಶಾಶ್ವತವಲ್ಲ, ಇದೂ ಕೂಡ ಕಳೆದುಹೋಗುತ್ತದೆ ಎಂಬ ದೃಢ ನಂಬಿಕೆ ಇರಬೇಕು. ಈ ಅರಿವು ವ್ಯಕ್ತಿಗೆ ತಾಪತ್ರಯಗಳ ನಡುವೆಯೂ ಶಾಂತವಾಗಿರಲು ನೆರವಾಗುತ್ತದೆ.*. “ಫಲದ ನಿರೀಕ್ಷೆಯಿಲ್ಲದೆ ಕರ್ತವ್ಯ ಮಾಡಬೇಕು “ಸಾಂಸಾರಿಕ ಸಮಸ್ಯೆಗಳು ಎದುರಾದಾಗ ಅನೇಕರು “ನಾನು ಇಷ್ಟೆಲ್ಲಾ ಕಷ್ಟಪಟ್ಟರೂ ಏನೂ ಪ್ರಯೋಜನವಾಗುತ್ತಿಲ್ಲ” ಎಂದು ನಿರಾಶರಾಗುತ್ತಾರೆ. ಆದರೆ, ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ನೀಡಿದ ಸಂದೇಶವೇ ಇದಕ್ಕೆ ಪರಮ ಔಷಧ.ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |ಮಾ ಕರ್ಮಫಲಹೇತುರ್ಭೂಮಾ ತೇ ಸಂಗೋಸ್ತ್ವಕರ್ಮಣಿ ||ಇದು ತಿಳಿಸುವ ವಿಷಯ ಏನಂದರೆ.. ನಿನಗೆ ಕರ್ತವ್ಯವನ್ನು ಮಾಡಲು ಮಾತ್ರ ಅಧಿಕಾರವಿದೆ, ಅದರ ಫಲದ ಮೇಲಲ್ಲ. ಕರ್ಮಫಲಕ್ಕೆ ನೀನು ಕಾರಣನಾಗಬೇಡ, ಹಾಗೆಯೇ ಕರ್ಮವನ್ನು ಮಾಡದೆ ಕೂರಬೇಡ ಎಂದು.ಜವಾಬ್ದಾರಿಯುತ ವ್ಯಕ್ತಿಯಾದವನು ಪರಿಸ್ಥಿತಿ ಎಷ್ಟೇ ಹದಗೆಟ್ಟಿದ್ದರೂ ತನ್ನ ಪಾಲಿನ ಕರ್ತವ್ಯಗಳನ್ನು (ಕುಟುಂಬವನ್ನು ಸಾಕುವುದು, ದುಡಿಯುವುದು) ಪ್ರಾಮಾಣಿಕವಾಗಿ ಮಾಡುತ್ತಾ ಹೋಗಬೇಕು. ಚಿಂತೆ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಕರ್ಮ ಮಾಡುವುದರಿಂದ ಮಾತ್ರ ದಾರಿ ಸಿಗುತ್ತದೆ.*. “ಧೈರ್ಯವೇ ಪರಮ ಆಸ್ತಿ”ಎಲ್ಲವೂ ಕೈಬಿಟ್ಟು ಹೋದಾಗಲೂ ಒಬ್ಬ ವ್ಯಕ್ತಿಯನ್ನು ಕೈಹಿಡಿದು ನಡೆಸುವ ಏಕೈಕ ಶಕ್ತಿ ಎಂದರೆ ಆತನ ಒಳಗಿನ ಧೈರ್ಯ ಮತ್ತು ಆತ್ಮವಿಶ್ವಾಸ. ಆಪತ್ತು ಬಂದಾಗ ಧೈರ್ಯ ತಳೆಯುವುದು, ಐಶ್ವರ್ಯ ಬಂದಾಗ ಕ್ಷಮಾ ಗುಣವನ್ನು ಹೊಂದುವುದು, ಸಾಂಸಾರಿಕ ಆಪತ್ತುಗಳು ಬಂದಾಗ ಧೈರ್ಯವಾಗಿ ನಿಲ್ಲುವುದೇ ಒಬ್ಬ ನಿಜವಾದ ಗೃಹಸ್ಥನ ಲಕ್ಷಣ. ಧೈರ್ಯಗೆಟ್ಟರೆ ಬುದ್ಧಿ ಕೆಲಸ ಮಾಡುವುದಿಲ್ಲ. ನಿಶ್ಚಲ ಮನಸ್ಸಿನಿಂದ ಯೋಚಿಸಿದರೆ ಕಠಿಣ ಸಮಸ್ಯೆಗೆ ಸುಲಭ ಪರಿಹಾರ ಸಿಗುತ್ತದೆ.*. ಸಂಕಷ್ಟದ ಸಮಯದಲ್ಲಿ ತಾಳ್ಮೆಯ ಮಹತ್ವಕಷ್ಟದ ಸಮಯದಲ್ಲಿ ಕೋಪ, ಉದ್ವೇಗ ಅಥವಾ ಆತುರದ ನಿರ್ಧಾರಗಳು ಸಾಂಸಾರಿಕ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚು ಮಾಡುತ್ತವೆ. ಅಲ್ಲಿ ತಾಳ್ಮೆ ಅತ್ಯಂತ ಅಗತ್ಯ.ಧೃತಿಃ ಕ್ಷಮಾ ದಮೋಸ್ತೇಯಂ ಶೌಚಮಿಂದ್ರಿಯನಿಗ್ರಹಃ |ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮಲಕ್ಷಣಮ್ ||ಅಂದರೆ …ಧೈರ್ಯ (ತಾಳ್ಮೆ), ಕ್ಷಮೆ, ಮನಸ್ಸಿನ ನಿಗ್ರಹ, ಕದಿಯದಿರುವುದು, ಬಾಹ್ಯ-ಅಭ್ಯಂತರದ ಶುದ್ಧಿ, ಇಂದ್ರಿಯ ನಿಗ್ರಹ, ಬುದ್ಧಿವಂತಿಕೆ, ಜ್ಞಾನ, ಸತ್ಯ ಮತ್ತು ಕೋಪ ಮಾಡದಿರುವುದು – ಇವು ಧರ್ಮದ ಹತ್ತು ಲಕ್ಷಣಗಳು.ಇವುಗಳನ್ನು ಅರಿತು,ಸಾಂಸಾರಿಕ ತಾಪತ್ರಯಗಳಿದ್ದಾಗ ಮನೆಯವರ ಮೇಲೆ ಕೋಪಗೊಳ್ಳದೆ, ಪರಿಸ್ಥಿತಿಯನ್ನು ಹತೋಟಿಗೆ ತರಲು ಇಂದ್ರಿಯ ನಿಗ್ರಹ ಮತ್ತು ಬುದ್ಧಿವಂತಿಕೆಯನ್ನು ಬಳಸಬೇಕು. ಕೋಪವಿಲ್ಲದ ಜಾಗದಲ್ಲಿ ನೆಮ್ಮದಿ ಇರುತ್ತದೆ. ನಿಜವಾದ ಸ್ನೇಹಿತ(ತೆಯ)ನ ಪ್ರೀತಿ ಮತ್ತು ಆತ್ಮೀಯತೆಯ ಸ್ವೀಕಾರ”ಕಷ್ಟಕಾಲದಲ್ಲಿ ನಮ್ಮ ಜೊತೆ ನಿಲ್ಲುವವನೇ ನಿಜವಾದ ಮಿತ್ರ. ಇಂತಹ ಸಂದರ್ಭದಲ್ಲಿ ಸ್ನೇಹಿತರು ತೋರುವ ಪ್ರೀತಿಯನ್ನು “ನನ್ನ ಪರಿಸ್ಥಿತಿ ಹೀಗಾಗಿಬಿಟ್ಟಿತಲ್ಲ” ಎಂದು ಕೀಳರಿಮೆಯಿಂದ ನೋಡದೆ, ಅದನ್ನೊಂದು ದಿವ್ಯ ರಕ್ಷೆಯಾಗಿ ಸ್ವೀಕರಿಸಬೇಕು.ಪಾಪಾನ್ನಿವಾರಯತಿ ಯೋಜಯತೇ ಹಿತಾಯ |ಗುಹ್ಯಂ ಚ ಗೂಹತಿ ಗುಣಾನ್ ಪ್ರಕಟೀಕರೋತಿ ||ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ |ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತ: ||ತಪ್ಪು ದಾರಿಗೆ ಹೋಗದಂತೆ ತಡೆಯುವವನು, ಹಿತವನ್ನು ಬಯಸುವವನು, ರಹಸ್ಯಗಳನ್ನು ಕಾಪಾಡುವವನು, ಗೆಳೆಯನ ಒಳ್ಳೆಯ ಗುಣಗಳನ್ನು ಸಮಾಜದ ಮುಂದೆ ಕೊಂಡಾಡುವವನು, ಆಪತ್ತು ಬಂದಾಗ ಕೈಬಿಡದೆ ಸಮಯಕ್ಕೆ ಸರಿಯಾಗಿ ನೆರವಾಗುವವನು – ಇವನೇ ಸನ್ಮಿತ್ರ (ಆತ್ಮೀಯ ಸ್ನೇಹಿತ/ತೆ) ಎಂದು ಸಜ್ಜನರು ಹೇಳುತ್ತಾರೆ.ಸ್ವೀಕರಿಸುವ ಮಾರ್ಗ: ಸಾಂಸಾರಿಕ ಕಷ್ಟಗಳಲ್ಲಿದ್ದಾಗ ಸನ್ಮಿತ್ರನು ತೋರುವ ಆತ್ಮೀಯತೆ ಮತ್ತು ಕೊಡುವ ಸಲಹೆಗಳನ್ನು ಗೌರವದಿಂದ ಸ್ವೀಕರಿಸಬೇಕು. “ನನ್ನ ಕಷ್ಟವನ್ನು ಹಂಚಿಕೊಳ್ಳಲು ಒಬ್ಬನಿದ್ದಾನೆ” ಎಂಬ ಧೈರ್ಯವೇ ಅರ್ಧದಷ್ಟು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಸ್ನೇಹಿತರ ಮುಂದೆ ಅಹಂಕಾರವನ್ನು ಬದಿಗಿಟ್ಟು ಮನಸ್ಸು ಬಿಚ್ಚಿ ಮಾತನಾಡುವುದು ಬುದ್ಧಿವಂತಿಕೆ. “ಕೃತಜ್ಞತಾ ಭಾವ ಮತ್ತು ಸಂಬಂಧದ ಪಾವಿತ್ರ್ಯತೆ”ಸ್ನೇಹಿತರು ನೀಡುವ ಆರ್ಥಿಕ ಅಥವಾ ಮಾನಸಿಕ ಬೆಂಬಲವನ್ನು ಕೇವಲ ಸಹಾಯ ಎಂದು ತಿಳಿಯದೆ, ಅವರ ಪ್ರೀತಿಯ ಸಂಕೇತವೆಂದು ಭಾವಿಸಿ ಕೃತಜ್ಞತೆಯಿಂದ ಸ್ವೀಕರಿಸಬೇಕು.ಪ್ರಿಯಂಪ್ರೌಢಂ ಚ ವಚನಂ ಸ್ನೇಹಸೌಹಾರ್ದಲಕ್ಷಣಮ್ |ಸಂಗ್ರಹಶ್ಚ ಯಥಾಶಕ್ತ್ಯಾ ಕೃತಜ್ಞತ್ವಮಲೋಲುಪತಾ || ಮಧುರವಾದ ಮತ್ತು ಪ್ರೌಢವಾದ ಮಾತುಗಳು ಸ್ನೇಹ ಮತ್ತು ಸೌಹಾರ್ದತೆಯ ಲಕ್ಷಣಗಳಾಗಿವೆ. ಕಷ್ಟದಲ್ಲಿದ್ದಾಗ ಶಕ್ತ್ಯಾನುಸಾರ ಸಹಾಯ ಮಾಡುವುದು, ಅದನ್ನು ಕೃತಜ್ಞತೆಯಿಂದ ಸ್ವೀಕರಿಸುವುದು ಮತ್ತು ದುರಾಶೆ ಇಲ್ಲದಿರುವುದು ಉದಾತ್ತ ಸಂಬಂಧದ ಸಂಕೇತ. ಸ್ನೇಹಿತರು ತೋರುವ ಆತ್ಮೀಯತೆಯನ್ನು ಸ್ವೀಕರಿಸುವಾಗ ಮನಸ್ಸಿನಲ್ಲಿ ಸದಾ ಕೃತಜ್ಞತೆ (Gratitude) ಇರಬೇಕು. ಇಂದು ಅವರು ನಮ್ಮನ್ನು ಸಂಕಷ್ಟದಿಂದ ಪಾರು ಮಾಡಲು ಬಂದಿದ್ದಾರೆ ಎಂದರೆ, ಅದು ಅವರ ದೊಡ್ಡ ಗುಣ. ಆ ಸ್ನೇಹದ ಹಸ್ತವನ್ನು ನಮ್ರತೆಯಿಂದ ಹಿಡಿದು, “ಮುಂದೊಂದು ದಿನ ನಾನು ಚೇತರಿಸಿಕೊಂಡಾಗ ಈ ಸ್ನೇಹಕ್ಕೆ ಖಂಡಿತಾ ದ್ರೋಹ ಬಗೆಯುವುದಿಲ್ಲ, ನಾನೂ ಅವರ ಕಷ್ಟಕ್ಕೆ ನಿಲ್ಲುತ್ತೇನೆ” ಎಂಬ ಸಂಕಲ್ಪದೊಂದಿಗೆ ಮುನ್ನಡೆಯಬೇಕು.ಸಂಕ್ಷಿಪ್ತವಾಗಿ ಹೇಳುವುದಾದರೆ: ಸಂಸಾರದ ಕಷ್ಟಗಳು ಸುಡುತ್ತಿರುವಾಗ, ಆತ್ಮೀಯ ಸ್ನೇಹಿತರ ಸೌಹಾರ್ದತೆ ಎಂಬುದು ತಂಪಾದ ನೆರಳಿನಂತೆ. ಜವಾಬ್ದಾರಿಯುತ ವ್ಯಕ್ತಿಯಾದವನು ಆ ನೆರಳನ್ನು ಸಂಕೋಚವಿಲ್ಲದೆ ಸ್ವೀಕರಿಸಿ, ಮಾನಸಿಕ ಶಕ್ತಿಯನ್ನು ಮರಳಿ ಪಡೆದು, ಮತ್ತೆ ಸಂಸಾರದ ಹಾದಿಯಲ್ಲಿ ಧೈರ್ಯವಾಗಿ ಹೆಜ್ಜೆ ಇಡಬೇಕು.ಒಟ್ಟಿನಲ್ಲಿ ಹೇಳಬೇಕೆಂದರೆ…ಸಾಂಸಾರಿಕ ಜೀವನ ಎಂಬುದು ಒಂದು ಸಮುದ್ರವಿದ್ದಂತೆ. ಅದರಲ್ಲಿ ಅಲೆಗಳು ಏಳುವುದು ಸಹಜ. ಜವಾಬ್ದಾರಿಯುತ ವ್ಯಕ್ತಿಯಾದವನು ಅಲೆಗಳನ್ನು ನೋಡಿ ಹೆದರಿ ದೋಣಿಯನ್ನು ಮುಳುಗಿಸುವುದಿಲ್ಲ; ಬದಲಿಗೆ ದೋಣಿಯ ಚುಕ್ಕಾಣಿಯನ್ನು ಗಟ್ಟಿಯಾಗಿ ಹಿಡಿದು ತೀರದ ಕಡೆಗೆ ಮುನ್ನಡೆಸುತ್ತಾನೆ.ಕಷ್ಟಗಳು ನಮ್ಮನ್ನು ಕುಗ್ಗಿಸಲು ಬರುವುದಿಲ್ಲ, ಬದಲಿಗೆ ನಮ್ಮೊಳಗಿನ ನೈಜ ಶಕ್ತಿಯನ್ನು ನಮಗೆ ನೆನಪಿಸಲು ಬರುತ್ತವೆ. ಧರ್ಮ, ಧೈರ್ಯ, ಕರ್ತವ್ಯ ಪ್ರಜ್ಞೆ ಮತ್ತು ಪರಿಶ್ರಮ ಎಂಬ ನಾಲ್ಕು ಚಕ್ರಗಳ ಸಹಾಯದಿಂದ ಸಾಂಸಾರಿಕ ತಾಪತ್ರಯಗಳ ಕಠಿಣ ಹಾದಿಯನ್ನೂ ಸುಲಭವಾಗಿ ದಾಟಬಹುದು ಎಂಬುದೇ ಜ್ಞಾನಿಗಳ ಸಂದೇಶ. ಪೂರ್ಣಿಮಾ ಮಹೇಶ ಮುತ್ನಾಳ ಅಳ್ನಾವರ
“ಸಂಸಾರದ ತಾಪಕ್ಕೆ ಸ್ನೇಹದ ಸಂಜೀವಿನಿ”ಲೇಖನ ಪೂರ್ಣಿಮಾ ಮಹೇಶ ಮುತ್ನಾಳ ಅಳ್ನಾವರ Read Post »
ಜೀವನ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ ಇರದುದರ ಬಗೆಗೆ ಧೇನಿಸುವ ಬದಲು?! ಪ್ರತಿಕ್ಷಣ ಬೇರೆಯವರಿಗೆ ನಿಮ್ಮನ್ನು ನೀವು ಹೋಲಿಸಿಕೊಂಡು ಅಯ್ಯೋ! ನಾನು ಅವನ/ಅವಳoತಿಲ್ಲ. ನನ್ನ ಬಳಿ ಅವನ/ಳ ಹಾಗೆ ಉತ್ತಮ ಜಾತಿ ಮತ ಭಾಷೆ ಇಲ್ಲ. ಅವನು ನೀಳವಾಗಿ ಸುಂದರವಾಗಿದ್ದಾನೆ ನಾನು ಕುರೂಪಿಯಾಗಿದ್ದೇನೆ. ಕುಬ್ಜವಾಗಿದ್ದೇನೆ. ಅವಳು ಬಿಳುಪು ಸುರೂಪಿ ನಾನು ಕಪ್ಪು ಕುರೂಪಿ ಎಂದು ಸದಾ ನಿಮ್ಮಲ್ಲಿರುವುದನ್ನು ಬಿಟ್ಟು ಇಲ್ಲದುದರ ಬಗೆಗೆ ಚಿಂತಿಸುತ್ತ ಕುಳಿತರೆಫಲವಿಲ್ಲ. ನಿಮ್ಮ ಹಾಗೆ ಈ ಜಗದಲಿ ಯಾರೂ ಇಲ್ಲ. ನೀವು ಒಬ್ಬ ವಿಶಿಷ್ಟ ವ್ಯಕ್ತಿ. ಎನ್ನುವುದನ್ನು ಮರೆಯದಿರಿ. ನಿಮ್ಮಲ್ಲಿರುವುದನ್ನು ನೀವು ಸದಾ ಅಭಿನಂದಿಸಿಕೊಳ್ಳಬೇಕು. ನೆರೆಮನೆಯರ ಹತ್ತಿರವಿರುವುದು ಬಂಗಾರದ ಸೂಜಿಯೆಂದು ಅದನ್ನು ಕಣ್ಣಲ್ಲಿ ಚುಚ್ಚಿಕೊಳ್ಳಲು ಸಾಧ್ಯವೇ? ಹಾಗೆಯೇ ಕಾಲಲ್ಲಿ ಮುಳ್ಳು ಚುಚ್ಚಿಕೊಂಡರೆ ಕೆಳಗೆ ಬಿದ್ದು ಮುಳ್ಳು ಕಣ್ಣಲ್ಲಿ ಚುಚ್ಚಿಕೊಳ್ಳದಿರುವುದಕ್ಕೆ ಸಂತಸ ಪಡಬೇಕು. ಹಿಂದಿ ಚಿತ್ರ ರಂಗದಲ್ಲಿ ಬಿಗ್ ಬಿ ಎಂದು ಕರೆಸಿಕೊಂಡು ತಮ್ಮ ಇಳಿ ವಯಸ್ಸಿನಲ್ಲೂ ಇಂದಿನ ಯುವ ಪೀಳಿಗೆಯಲ್ಲಿ ಸಂಚಲನ ಮೂಡಿಸಿದ ಇಂಡಿಯನ್ ಐಕಾನ್ ಆಗಿರುವ ಅಮಿತಾಬ್, ನಂಬರ್ ಒನ್ ಆಗಿ ಮೆರೆಯುವ ಮುನ್ನ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೊಸಬರೊಂದಿಗೆ ತನ್ನನ್ನು ಹೋಲಿಸಿಕೊಂಡು ಟೀಕಿಸಿಕೊಂಡು ಹಿಂದುಳಿಯಲಿಲ್ಲ. ರಾಜಕೀಯ ತನಗೆ ಸರಿ ಹೊಂದದಿದ್ದಾಗ ಅದರ ಬಗ್ಗೆ ಧೇನಿಸುತ್ತ ಕುಳಿತುಕೊಳ್ಳದೇ, ಕಿರುತೆರೆಯಲ್ಲಿ ಕೌನ್ ಬನೆಗಾ ಕರೋಡ್ ಪತಿ ಎನ್ನುವ ಶೋ ನಡೆಸಲು ಬಂದ ಅವಕಾಶ ಕಡೆಗಣಿಸದೇ ಕನ್ನಡಿಯ ಮುಂದೆ ಮನೆ ಮಂದಿಯ ಮುಂದೆ ವಿಮರ್ಶಕರ ಮುಂದೆ ತಿಂಗಳಾನುಗಟ್ಟಲೇ ತಾಲೀಮು ನಡೆಸಿ ತನ್ನಲ್ಲಿರುವದನ್ನು ಮತ್ತಷ್ಟು ಪೋಷಿಸಿ ಬೆಳೆಸಿ ಬೆಳಕಿಗೆ ಚೆಲ್ಲಿದರು. ಆ ಯಶಸ್ಸು ಮತ್ತೆ ಅವರನ್ನು ಚಲನಚಿತ್ರ ರಂಗ ಕೈ ಬೀಸಿ ಕರೆಯುವಂತೆ ಮಾಡಿತು. ನಿಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿ ವಿಜಯಶಾಲಿಗಳನ್ನು ಕಂಡು ಅವರೆಷ್ಟು ಬುದ್ಧಿವಂತರು ಅವರಿಗೆ ಕೊಟ್ಟಷ್ಟು ಬುದ್ಧಿವಂತಿಕೆಯನ್ನು ದೇವರು ನಮಗೆ ಕೊಟ್ಟಿಲ್ಲ. ಎಂದು ಕರಬುವುದು ಸರಿಯಲ್ಲ. ಬುದ್ಧಿವಂತಿಕೆಯೆನ್ನುವುದು ಯಾರೊಬ್ಬರ ಸ್ವತ್ತು ಅಲ್ಲ. ಹಣ ಕೊಟ್ಟರೆ ದೊರೆಯುವಂಥ ವಸ್ತುವೂ ಅಲ್ಲ! ಛಲದಿಂದ ಕೂಡಿದ ಪ್ರಯತ್ನವುಳ್ಳವರು ಅದನ್ನು ಪಡೆಯಬಲ್ಲರು. ಸಾಧಕರನ್ನು ನೋಡಿ ಅವರೆಷ್ಟು ಅದೃಷ್ಟವಂತರು ಎನ್ನುವುದು ಸುಲಭ. ಆದರೆ ಅವರು ಹಗಲು ರಾತ್ರಿ ಕಷ್ಟ ಪಟ್ಟು ಶ್ರಮ ವಹಿಸಿ ಅದೃಷ್ಟ ಗಳಿಸಿದರು ಎಂಬುದನ್ನು ತಿಳಿಯಬೇಕು. ಪ್ರಖ್ಯಾತ ಕ್ರಿಡಾಪಟುವೊಬ್ಬ ಹೇಳುತ್ತಾನೆ. ನಾನು ಎಷ್ಟು ಹೆಚ್ಚು ಪ್ರಾö್ಯಕ್ಟೀಸ್ ಮಾಡುತ್ತೇನೋ ಅಷ್ಟೇ ಹೆಚ್ಚು ನನಗೆ ಅದೃಷ್ಟ ಉಂಟಾಗುತ್ತದೆ ಎಂದು. ಹೀಗೆ ಮತ್ತೊಬ್ಬರಲ್ಲಿಯ ಶಕ್ತಿಗಳನ್ನು ನೋಡಿ ನಮ್ಮಲ್ಲಿಲ್ಲ ಎಂದು ಕೊರಗುತ್ತ ತಲೆಗೆ ಕೈ ಹಚ್ಚಿ ಕುಳಿತುಕೊಳ್ಳುವ ಬಹು ಪಾಲಿನ ಜನರು ತಮ್ಮಲ್ಲಿನ ಶಕ್ತಿಗಳನ್ನು ಗುರುತಿಸುವುದಿಲ್ಲ. ಎದುರು ವ್ಯಕ್ತಿಗಳಲ್ಲಿ ಇಲ್ಲದ ಶಕ್ತಿಗಳನ್ನು ಇರುವುದಾಗಿ ಭ್ರಮಿಸುತ್ತಾರೆ. ಪ್ರತಿ ವ್ಯಕ್ತಿಯಲ್ಲಿ ನಿಗೂಢ ಶಕ್ತಿಗಳು ಇರುತ್ತವೆ. ಅವುಗಳನ್ನು ಗುರುತಿಸಿ ಹೊರತೆಗೆದು ದಿನನಿತ್ಯ ಸಾಣೆ ಹಿಡಿಯಬೇಕು. ಮತ್ತೊಬ್ಬರ ಒತ್ತಾಯಕ್ಕೆ ಅಥವಾ ಯಾರೋ ಏನೋ ಮಾಡುತ್ತಿದ್ದಾರೆಂದು ಅದರಲ್ಲಿ ನೀವು ತೊಡಗಿಕೊಳ್ಳಲು ಅಶಕ್ತರೆಂದು ಕೊರಗಿದಿರಿ. ನಿಮ್ಮ ಆಸಕ್ತಿ ಅಭಿರುಚಿಗಳನ್ನು ಅರಿತು ಮುನ್ನಡೆಯಿರಿ. ನಿಮಗೆ ತಿಳಿದ ರಂಗದಲ್ಲಿ ನಿಷ್ಣಾತರಾಗಿ ಅದ್ಭುತಗಳನ್ನು ಸೃಷ್ಟಿಸುವ ಅತ್ಯುದ್ಭುತ ಶಕ್ತಿ ನಿಮ್ಮಲ್ಲಿ ಹುದುಗಿದೆ. ಎಂಬುದನ್ನು ನೆನಪಿನಲ್ಲಿಟ್ಟು ಮುನ್ನುಗ್ಗಿ. ನಿಮ್ಮಲ್ಲಿರುವ ದೌರ್ಬಲ್ಯಗಳನ್ನು ಶಕ್ತಿಯಾಗಿ ಪರಿವರ್ತಿಸಿ. ಬಹಳಷ್ಟು ಜನರು ತಮ್ಮಲ್ಲಿನ ದೌರ್ಬಲ್ಯಗಳನ್ನು ಮೇಲಿಂದ ಮೇಲೆ ಸಹಜವಾಗಿ ಹೇಳಿಕೊಳ್ಳುತಿರುತ್ತಾರೆ. ಆದರೆ ಅದರಲ್ಲಿ ಬಹುಪಾಲು ಊಹಿಸಿಕೊಂಡಿರುವುದೇ. ಇಲ್ಲಿ ದೌರ್ಬಲ್ಯಗಳೆಂದರೆ ಕೀಳರಿಮೆ, ಶೀಘ್ರ ನಿರ್ಧಾರ ತೆಗೆದುಕೊಳ್ಳದಿರುವುದು ವಿಫಲತೆಯ ಬಗ್ಗೆ ಆತಂಕ ಗಾಬರಿ ದಾಕ್ಷಿಣ್ಯಗಳೇ ಆಗಿವೆ. ಸಿ ಎನ್ ಎನ್ ಟೆಲಿವಿಸನ್ ಮುಖ್ಯಸ್ಥ ಟೆಡ್ ಟರ್ನರ್ ಆತ್ಮಹತ್ಯೆ ಮಾಡಿಕೊಂಡಾಗ ಜೂನಿಯರ್ ಟರ್ನರ್ ಆತ್ಮವಿಶ್ವಾಸದಿಂದ ಉನ್ನತ ಸ್ಥಾನಕ್ಕೇರಿ,೨೪ ಗಂಟೆಗಳ ವಾರ್ತೆಗಳನ್ನು ಪ್ರಸಾರ ಮಾಡುತ್ತೇನೆ ಎಂದು ಅದನ್ನು ಸಾಧಿಸಿ ತೋರಿಸಿದರು. ಒಂದು ಸಭೆಯಲ್ಲಿ ಟರ್ನರ್ ಮಾತನಾಡುತ್ತ ಬಡಕುಟುಂಬದಲ್ಲಿ ಹುಟ್ಟುವುದು ನಿರಂತರ ಸಮಸ್ಯೆಗಳನ್ನು ಎದುರಿಸುವುದು ಎದುರೇಟುಗಳು ಬೀಳುವುದು ನನ್ನ ಅದೃಷ್ಟ. ನನ್ನ ತಂದೆ ಉಳ್ಳವನಾಗಿದ್ದು. ನನ್ನನ್ನು ಚೆನ್ನಾಗಿ ಓದಿಸಿದ್ದರೆ ನಾನು ಇಂದು ಈ ಸ್ಥಿತಿಗೆ ಖಂಡಿತ ಬರುತ್ತಿರಲಿಲ್ಲ. ಎಂದಿದ್ದ. ಟರ್ನರ್ ಹೇಳಿಕೆಯನ್ನು ಇಲ್ಲಿ ಉಲ್ಲೇಖಿಸುತ್ತಿರುವುದರ ನನ್ನ ಉದ್ದೇಶವೆಲ್ಲ- ನಿಮ್ಮ ದೌರ್ಬಲ್ಯಗಳನ್ನು ತಿಳಿದು ನೀವೇ ಸ್ವಯಂ ನಿರ್ದಾರ ತೆಗೆದುಕೊಳ್ಳಿ. ಇದು ಸ್ವಯಂ ಪ್ರೇರಣೆಯಿಂದ ಮಾತ್ರ ಸಾಧ್ಯ. ಮುನ್ನಡೆಯ ಚಿನ್ಹೆಗಳಿಗಾಗಿ ಗಮನಿಸಿ. ಅವು ಎಷ್ಟೇ ಚಿಕ್ಕದಾದರೂ ಸರಿ. ಬೇರೆಯವರು ನಿಮ್ಮ ಬಗ್ಗೆ ಅದೇನು ಯೋಚಿಸುತ್ತಾರೆ ಎಂಬ ಚಿಂತೆಯೇ ಕೀಳರಿಮೆ. ಆಶ್ಚರ್ಯವೆಂದರೆ ಇಂಥ ಆಲೋಚನೆಗಳಿಗೆ ಬೇರೆಯವರ ಬಳಿ ಸಮಯವೇ ಇರುವುದಿಲ್ಲ. ಮನುಷ್ಯ ದುರ್ಬಲ ಆಲೋಚನೆಗಳನ್ನು ಪರಿತ್ಯಜಿಸಿದರೆ ಆತನ ದೃಢವಾದ ನಿಶ್ಚಯಗಳಿಗೆ ಸಹಾಯಕವಾಗಲು ಎಲ್ಲ ಕಡೆಯಿಂದ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಜಾತಿ ಮತ ಬಣ್ಣ ಭಾಷೆ ವಿತಂಡವಾದಗಳ ಹುಚ್ಚನ್ನು ಬೆಂಬಲಿಸುವವರೊoದಿಗೆ ನಿಮಗೆ ಸಂಬoಧಿಸಿದ್ದನ್ನಷ್ಟೇ ಕೇಳಿ ಉಳಿದವುಗಳನ್ನೆಲ್ಲ ಹೊರ ತೂರಿಬಿಡಿ. ಎಲ್ಲರೊಂದಿಗೆ ನಗು ನಗುತ್ತ ಸ್ನೇಹ ಮಾಡಿ.ಅಂತರoಗದ ಮಾತನ್ನು ಕೇಳುತ್ತಿರಿ ಮಾಡಬಾರದ ಕೆಲಸಗಳನ್ನು ಮಾಡಲು ಹೋದಾಗ ನಿಮ್ಮ ಅಂತರoಗ ಬೇಡವೆಂದು ಎಚ್ಚರಿಸುತ್ತದೆ ಅದನ್ನು ಪರಿಗಣಿಸಿ ಮುಂದುವರೆಯಿರಿ. ನಿಮ್ಮಲ್ಲಿರುವ ಬಲಹೀನತೆಗಳನ್ನು ನಿಯಂತ್ರಿಸುವುದಕ್ಕೆ ನೀವು ಪ್ರಾಮಾಣಿಕವಾಗಿ ಪ್ರಯತ್ನಿಸಿ. ಸ್ವಯಂ ಗೌರವ ಬೇಕನ್ ಹೇಳುವ ಪ್ರಕಾರ ಆತ್ಮಸಮ್ಮಾನವು ದುರ್ಗಣಗಳನ್ನು ವಶದೊಳಗಿಟ್ಟುಕೊಳ್ಳುವ ಮೊದಲನೆಯ ಕಡಿವಾಣವಾಗಿದೆ. ಮರ್ಯಾದೆ ಇಲ್ಲದ ಮನುಷ್ಯನು ರೆಕ್ಕೆಗಳಿಲ್ಲದ ಹಕ್ಕಿಯಂತೆಯೂ ಒಳ್ಳೆಯ ಬಣ್ಣವಾಗಲಿ ಸುಗಂಧವಾಗಲಿ ಇಲ್ಲದ ಪುಷ್ಪದಂತೆಯೂ ಆಗುವದುದರಿಂದ ಜನಗಳ ನಡುವೆ ಸರಿಯಾಗಿ ಬಾಳಲಾರನು. ಎಂಬುದು ಜಿ ಕೃಷ್ಣಮೂರ್ತಿಯವರ ಮಾತು. ಬುದ್ಧಿವಂತರೆನಿಸಿಕೊoಡವರೂ ಖುದ್ದಾಗಿ ಏನನ್ನಾದರೂ ಕೈಗೆತ್ತಿಕೊಳ್ಳಬೇಕೆಂದರೆ ಹೆದುರುತ್ತಾರೆ. ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಭಯಗೊಳ್ಳುತ್ತಾರೆ. ಅದಕ್ಕೆ ಕಾರಣ ಅವರು ಬೆಳೆದು ಬಂದ ಪರಿಸರವಾಗಿರಬಹುದು. ಆದರೆ ಈಗ ಅದು ನಿಷ್ಪಯೋಜಕ. ಆತ್ಮ ಗೌರವವನ್ನು ಹೆಚ್ಚಿಸಿಕೊಳ್ಲಲು ನಿಮ್ಮನ್ನು ನೀವು ಸ್ವೀಕರಿಸಿ. ನಿಮ್ಮೊಂದಿಗೆ ಪ್ರಾಮಾಣಿಕವಾಗಿರಿ. ನಿಮ್ಮ ಭಾವನೆಗಳಲ್ಲಿ ನಂಬಿಕೆಯಿಟ್ಟು ಗೌರವಿಸಿ. ದೌರ್ಬಲ್ಯಗಳನ್ನು ಇತರರೊಂದಿಗೆ ಹೋಲಿಸಬೇಡಿ. ನಿಮಗಿಂತ ಮೇಲೇರಿದವರನ್ನು ಕಂಡು ಅಸೂಯೆ ಪಡಬೇಡಿ. ಅವರಿಂದ ಸ್ಪೂರ್ತಿ ಪಡೆಯುವ ಗುಣ ಬೆಳೆಸಿಕೊಳ್ಳಿ. ಸ್ವ ಗೌರವವು ಯಶಸ್ಸನ್ನು ತಂದು ಕೊಡದಿರಬಹುದು ಆದರೆ ಸೋಲಿನ ಸನ್ನಿವೇಶವನ್ನು ಧೈರ್ಯದಿಂದ ಸ್ವೀಕರಿಸುವ ಮನೋಭಾವವನ್ನು ಖಂಡಿತವಾಗಿಯೂ ತಂದು ಕೊಡಬಲ್ಲುದು. ಪ್ರತಿಯೊಂದನ್ನು ಮಾಡಲು ಶಕ್ತಿಯಿದ್ದರೂ ಪರಾವಲಂಬಿಗಳಾಗಬೇಡಿ. ಕಾರಂತರು ಹೇಳಿದಂತೆ ವಿಶ್ವಾಸವಿದ್ದರೆ ಪ್ರೀತಿ, ಪ್ರೀತಿಯಿದ್ದರೆ ಗೌರವ. ಪ್ರಾರ್ಥಿಸಿ ಪ್ರಾರ್ಥನೆಯಲ್ಲಿನ ಅತ್ಯದ್ಭುತ ಶಕ್ತಿ ಅನುಭವಿಸಿದವನಿಗೇ ಗೊತ್ತು ಅಂತೆಯೇ ಪ್ರಾರ್ಥನೆಯ ಶಕ್ತಿ ಅರಿತ ಹಿರಿಯರು. ಪ್ರಾರ್ಥನೆಯಲ್ಲಿ ಅಗಾಧವಾದ ನಂಬಿಕೆಯಿಟ್ಟ ಗಾಂಧೀಜಿಯವರೇ ಹೇಳಿದಂತೆ ಪ್ರಾರ್ಥನೆ ಬರೀ ನಾಲಿಗೆ ನುಡಿಯಲ್ಲ ಅಂತಃಕರಣದ ಮಹಾರೂಪ. ಪ್ರಾರ್ಥಿಸಿ ನಿಮ್ಮ ಕೀಳರಿಮೆಯ ದಾಕ್ಷಿಣ್ಯದ ವೈಫಲ್ಯತೆಯ ಮನೋಕ್ಲೇಷವನ್ನು ಮಾಯವಾಗಿಸಿ.ಮೆರುಗಿನಿಂದ ಕೂಡಿದ ಅಪ್ಪಟ ಬಂಗಾರದ ಆಭರಣವನ್ನು ಕೂಡ ಉಪಯೋಗಿಸದೇ ಹೋದರೆ ಅದರ ಹೊಳಪು ಕಡಿಮೆಯಾಗುತ್ತದೆ.ಅಗತ್ಯವೆನಿಸಿದಾಗ ಮೆರುಗು ಹಾಕಿಸಬೇಕಾಗುತ್ತದೆ. ಹಾಗೆಯೇ ನಮ್ಮಲ್ಲಿರುವ ಬಂಗಾರದ ಮೆರುಗಿನಂಥ ಶಕ್ತಿಗಳನ್ನು ನಾವು ಗುರುತಿಸಿ ಉಪಯೋಗಿಸದೇ ಹೋದರೆ ಬೆಲೆ ಕಳೆದುಕೊಂಡ ನಾಣ್ಯದಂತಾಗುತ್ತೇವೆ. ಪ್ರತಿಯೊಬ್ಬರಿಗೂ ತನ್ನ ಅಭಿಪ್ರಾಯಗಳ ಬಗ್ಗೆ ಹಕ್ಕಿದೆ. ಆದರೆ ಯಾರಿಗೂ ತನ್ನ ಶಕ್ತಿಗಳ ಬಗೆಗೆ ತಪ್ಪಾಗಿರಲು ಹಕ್ಕಿಲ್ಲ. ಹೀಗಾಗಿ ಇರದುದರ ಬಗೆಗೆ ಧೇನಿಸುವ ಬದಲು ಇರುವುದನು ಪೋಷಿಸಿ ಬೆಳೆಸಿ.ಟಾಗೋರ್ ಹೇಳಿದಂತೆ ಒಮ್ಮೆ ನಿರಾಶೆಯಾದರೆ ಜೀವನ ಸೌಖ್ಯಕ್ಕೆ ತಿಲಾಂಜಲಿ ಕೊಡಬೇಡಿ. ಮೇಣದ ತಲೆಯವರು ಬಿಸಿಲಲ್ಲಿ ಅಲೆಯಬಾರದು ಎಂಬ ಆಂಗ್ಲ ಗಾದೆಯoತಾಗದೇ ಉತ್ತಮವಾದುದನ್ನು ನಿರೀಕ್ಷಿಸಿ, ನಿಮ್ಮ ಪರಿಶ್ರಮದ ಮುಖಾಂತರ ಭಾವನೆಗೆ ತಕ್ಕಂತೆ ಫಲ ಪಡೆಯಿರಿ. ಜಯಶ್ರೀ.ಜೆ. ಅಬ್ಬಿಗೇರಿ
ಇರದುದರ ಬಗೆಗೆ ಧೇನಿಸುವ ಬದಲು?!ವಿಶೇಷ ಲೇಖನ ಜಯಶ್ರೀ.ಜೆ. ಅಬ್ಬಿಗೇರಿ Read Post »
You cannot copy content of this page