ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

“ಸಂಬಂಧಗಳನ್ನುಉಳಿಸಿಕೊಳ್ಳಿ” ವಿಶೇಷ ಬರಹ ವನಜ ಮಹಾಲಿಂಗಯ್ಯ ಮಾದಾಪುರ

ಜೀವನ ಸಂಗಾತಿ ವನಜ ಮಹಾಲಿಂಗಯ್ಯ “ಸಂಬಂಧಗಳನ್ನುಉಳಿಸಿಕೊಳ್ಳಿ” ಈಗ ಆಗಿರತಕ್ಕಂತ ಪ್ರಕೃತಿ ವಿಪತ್ತನ್ನು ನೋಡಿದರೆ ಈ ಜಗತ್ತು ಬೇಗ ನಾಶವಾಗುವುದರಲ್ಲಿ ಅನುಮಾನವೇ ಇಲ್ಲ. ಇಷ್ಟೆಲ್ಲ ಆದರೂ ನಮ್ಮ ಜನಗಳಿಗೆ ಬುದ್ಧಿ ಬರುತ್ತಿಲ್ಲ. ಉದಾಹರಣೆ ಯಾರನ್ನು ಯಾರೂ ಮಾತನಾಡಿಸುತ್ತಿಲ್ಲಾ, ಯಾರ ಬಗ್ಗೆಯೂ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ ,ಸಂಬಂಧಗಳಿಗೆ ಬೆಲೆ ಇಲ್ಲ, ನಾವೇ ಮೊದಲು ಮಾತನಾಡಿಸಿದರೆ ಅವರ ಮುಂದೆ ನಾವು ಸಣ್ಣವರಾಗಿ ಬಿಡುತ್ತೇವೆನು ಅನ್ನುವ ಅಹಂ,ಮತ್ತು ಈ ಮೊಬೈಲ್ಗಳ ಹಾವಳಿ ಮೊಬೈಲ್ ಗಳನ್ನು ಹಿಡಿದು ಮನೆಯಲ್ಲಿರುವ ನಾಲ್ಕು ಜನ ನಾಲ್ಕು ಮೂಲೆಯಲ್ಲಿ ಕುಳಿತು ವೀಕ್ಷಣೆ ಮಾಡುತ್ತಿರುತ್ತಾರೆ. ಮನೆಯಲ್ಲಿಯೇ ಇದ್ದರೂ ಮನೆಯ ಒಳಗೆ ಏನಾದರೂ ಗೊತ್ತಾಗದೆ ಇರುವಂತಹ ಪರಿಸ್ಥಿತಿ. ಎಲ್ಲಿಗೆ ಹೋಗ್ತಾ ಇದೆ ನಮ್ಮ ಕುಟುಂಬಗಳು ಏನಾಗ್ತಾ ಇದೆ ಸಮಾಜದಲ್ಲಿ ಇದನ್ನೆಲ್ಲ ನೋಡಿದ್ರೆ ಈಗಾಗಿರುವಂತಹ ಪ್ರಕೃತಿ ವಿಕೋಪ ಜಗತ್ತನ್ನ ನಾಶ ಮಾಡಿ ಹೊಸದಾಗಿ ಜಗತ್ತು ಸೃಷ್ಟಿಯಾಗಬಹುದೇನೋ? ನಿಜಕ್ಕೂ ಮನುಷ್ಯರಲ್ಲಿ ಯಾವ ಭಾವನೆಗಳು ಇಲ್ಲದಂತಾಗುತ್ತದೆ .ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಒಬ್ಬರು ಮುಂದೆ ಬಂದರೆ ಅವರನ್ನು ಹೇಗೆ ಹಿಂದಕ್ಕೆ ಎಳೆಯಬೇಕೆಂಬುವ ಯೋಚನೆಯಲ್ಲಿಯೇ ಇರುತ್ತಾರೆ.. ಇಂದು ಸಮಾಜದಲ್ಲಿ ನಡೆಯುತ್ತಿರುವ ಕೊಲೆ ದರೋಡೆ ಅತ್ಯಾಚಾರಗಳು ಇವೆಲ್ಲವೂ ಅಂಗೈಯಲ್ಲಿರುವ ಪ್ರಪಂಚದ ಎಲ್ಲಾ ಆಗುಹೋಗುಗಳಲ್ಲದೆ ಕೆಟ್ಟ ಸಂದೇಶಗಳನ್ನು ಹಾಗೂ ಚಿತ್ರಣಗಳನ್ನು ತೋರಿಸುತ್ತಿರುವ ಮೊಬೈಲ್ ಬಳಕೆಯಿಂದ ಆಗುತ್ತಿದೆ ಎಂದರೇ ತಪ್ಪಾಗಲಾರದು. ಮೊಬೈಲ್ ಬಳಕೆ ಮಕ್ಕಳಿಂದ ದೊಡ್ಡವರವರೆಗೂ ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕೆ ಜಾಸ್ತಿ ಬಳಕೆಯಾಗುತ್ತಿದೆ. ಕಾರಣ ಈ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆಯೋ ದೇವರೇ ಕಾಪಾಡಬೇಕು. ಜನರು ಇನ್ನು ಮುಂದೆಯಾದರೂ ತಾವು ಬದುಕಿರುವ ತನಕ ತಮ್ಮವರು ಸಂಬಂಧಿಕರು ಎಂದು ವಿಚಾರಿಸುವುದು, ಮಾತನಾಡಿಸುವುದು, ಹೋಗಿ ಬಂದು ಅವರ ಆರೋಗ್ಯವನ್ನು ವಿಚಾರಿಸುವುದು ಮಾಡುವ ಮನಸ್ಸು ಮಾಡಬೇಕಾಗಿದೆ .ಯಾರ ಮನೆಯಲ್ಲಿಯೇ ಆಗಲಿ ಒಂದು ಮದುವೆ ಗೃಹಪ್ರವೇಶ ಇದ್ದರೆ ವಾಟ್ಸಪ್ ನಲ್ಲಿ ಪತ್ರಿಕೆ ಕಳಿಸಿದರೆ ಸಾಕು ಮನೆಯಲ್ಲಿರುವ ಎಲ್ಲರೂ ಕಾರ್ಯಕ್ರಮಕ್ಕೆ ಹೋಗುತ್ತೇವೆ ಆದರೆ ಯಾರ ಮನೆಯಲ್ಲಿ ಕಷ್ಟ ನೋವು ಸಾವು ಬಂತು  ಎಂದರೆ ಏಕೆ ಬರುವುದಿಲ್ಲ ?ಅದರಲ್ಲೂ ಯಾರಾದರೂ ಸತ್ತರೆಂದು ಸುದ್ದಿ ಬಂದರೆ ಸಾಕು ಯಾರಾದರೂ ಒಬ್ಬರು ಹೋಗಿ ಹಾರ ಹಾಕಿ ಬನ್ನಿ ಎಲ್ಲರೂ ಹೋಗುವುದೇಕೆ ಎಂದು ಹೇಳುವ ಜನಕ್ಕೆ ಸತ್ತ ವ್ಯಕ್ತಿಯ ಮುಖ ಮತ್ತೆ ನೋಡಲಾಗುವುದಿಲ್ಲ ಎನ್ನುವ ಸತ್ಯ ಗೊತ್ತಾಗುವುದಿಲ್ಲ. ನಿಜಕ್ಕೂ ಜಮೀನನ್ನು ಕೊಳ್ಳಬಹುದು ಮನೆಯನ್ನು ಕಟ್ಟಿಸಬಹುದು ಆದರೆ ತಂದೆ ತಾಯಿ ರಕ್ತ ಸಂಬಂಧಗಳನ್ನು ಯಾರು ಖರೀದಿ ಮಾಡಲು ಸಾಧ್ಯವಿಲ್ಲ. ನಿಜಕ್ಕೂ ಇದನ್ನು ಬರೆಯುವಾಗ ಇತ್ತೀಚೆಗೆ ಆಗುತ್ತಿರುವ ಅನಾಹುತವನ್ನು ನೋಡಿ ಅನಾಹುತಗಳಲ್ಲಿ ಕುಟುಂಬದ ಎಲ್ಲರನ್ನೂ ಕಳೆದುಕೊಂಡಿರುವ ಒಬ್ಬೊಬ್ಬರೇ ಉಳಿದುಕೊಂಡಿರುವ ಅವರನ್ನು ನೋಡಿದರೆ ನಾವು ಬಟ್ಟೆ ಆಹಾರ ಹಣ ಏನಾದರು ಕೊಡಬಹುದು ಕುಟುಂಬದವರನ್ನು ಕೊಡಲು ಸಾಧ್ಯವೇ ಎಂದು ಯೋಚಿಸುತ್ತಾ ಬರೆದಿರುವೆ. ವನಜ ಮಹಾಲಿಂಗಯ್ಯ ಮಾದಾಪುರ                        

“ಸಂಬಂಧಗಳನ್ನುಉಳಿಸಿಕೊಳ್ಳಿ” ವಿಶೇಷ ಬರಹ ವನಜ ಮಹಾಲಿಂಗಯ್ಯ ಮಾದಾಪುರ Read Post »

ಇತರೆ, ಜೀವನ

“ರಹಸ್ಯ ಪ್ರೇಮ ವಿವಾಹ ಒಳ್ಳೆಯದಲ್ಲ”ವಿಶೇಷ ಲೇಖನ ವನಜ ಮಹಾಲಿಂಗಯ್ಯ

ವೈವಾಹಿಕ ಸಂಗಾತಿ ವನಜ ಮಹಾಲಿಂಗಯ್ಯ “ರಹಸ್ಯ ಪ್ರೇಮ ವಿವಾಹ ಒಳ್ಳೆಯದಲ್ಲ” “ರಹಸ್ಯ ಪ್ರೀತಿ, ಮದುವೆ ಒಳ್ಳೆಯದಲ್ಲ.”ದುಶ್ಯಂತ ಶಾಕುಂತಳೆಯನ್ನು ಮದುವೆಯಾಗಿರುವುದನ್ನೆ  ಮರೆತುಬಿಟ್ಟಿದ್ದಾನೆ. ಅಲ್ಲಿ ಶಕುಂತಳೆ ಗರ್ಭವತಿಯಾಗಿದ್ದಾಳೆ. ಅವಳನ್ನು ದುಷ್ಯಂತನ ಬಳಿಗೆ ಬಿಟ್ಟುಬರಲು ಕಣ್ವಮಹರ್ಷಿಗಳು ಶಿಷ್ಯ ನೊಂದಿಗೆ ಶಕುಂತಲೆಯನ್ನು ಅರಮನೆಗೆ ಕಳುಹಿಸುತ್ತಾರೆ.ಅಲ್ಲಿ ದುಷ್ಯಂತ ಹಾಗು ಶಿಷ್ಯ ಶಾಂಘ್ರವನಿಗೂ ಮಾತು ಕತೆ ನಡೆಯುತ್ತದೆ. ಶಂಕುತಳೆ ನಿನ್ನ ಹೆಂಡತಿಯೆಂದು ಕಣ್ವರ ಶಿಷ್ಯ ಎಷ್ಟು ಹೇಳಿದರೂ ದುಷ್ಯಂತ ಒಪ್ಪುವುದಿಲ್ಲ. ಆಗ ಶಾಂಘ್ರವನಿಗೆ ಶಕುಂತಳೆಯ ಮೇಲೆ  ಕೋಪ ಬರುತ್ತದೆ.ಕಾರಣ  ಇವಳ ಒಂದು ಕ್ಷಣದ ಅವಿವೇಕದಿಂದ ಎಂತಹ ಅಪಹಾಸ್ಯಕ್ಕೆ ಗುರಿಯಾದಳೆಂದು. ಆಗ ಒಂದು ಮಾತನ್ನು ಹೇಳುತ್ತಾನೆ.ಯಾರಿಗೂ ಗೊತ್ತಿಲ್ಲದಂತೆ ಪ್ರೀತಿಸುವಾಗ ಅಥವಾ ರಹಸ್ಯವಾಗಿ ಮದುವೆಯಾಗುವಾಗ  ಆ ವ್ಯಕ್ತಿಯ ಬಗ್ಗೆ ಚನ್ನಾಗಿಪರೀಕ್ಷೆ ಮಾಡಿರಬೇಕು. ಅವರ ಸ್ವಭಾವ ಸರಿಯಾಗಿ ತಿಳಿಯದಿದ್ದರೆ ಪ್ರೀತಿಯೂ ಸಹ ದ್ವೇಷವಾಗಿ ಮಾರ್ಪಾಡಾಗಲು ತುಂಬಾ ಸಮಯವಾಗುವುದಿಲ್ಲ.ದುಷ್ಯಂತ ಹಾಗು ಶಂಕುತಳೆ ಗುಟ್ಟಾಗಿ ಸೇರಿದವರು. ಅವರಿಬ್ಬರ ಸಂಬಂಧಕ್ಕೆ  ಯಾವ ಸಾಕ್ಷಿಯೂ ಇರಲಿಲ್ಲ. ಇದ್ದ ಒಂದು ಉಂಗುರವೂ ಕಳೆದುಹೋಗಿದೆ. ಅವರಿಬ್ಬರ ಮದುವೆಯಾಗಿದ್ದು ಹಿರಿಯರಿಗೆ ಗೊತ್ತಿದ್ದರೆ ಶಕುಂತಳೆಯನ್ನು ಹೆಂಡತಿಯೆಂದು ದುಷ್ಯಂತ ಒಪ್ಪಿಕೊಳ್ಳಬೇಕಿತ್ತು. ರಹಸ್ಯವಾಗಿ ಮದುವೆಯಾಗಿದ್ದರಿಂದ ಶಕುಂತಳೆಯ ಪೋಷಕರು ಅಸಹಾಯಕರು.   ಅಂದು ಕಾಳಿದಾಸ ಈ ನಾಟಕ ಬರೆದ ಸಮಯ ಈಗಿನ ಸಮಯಕ್ಕೂ ತುಂಬಾ ಅಂತರ ವಿದ್ದರೂ ಪರಿಸ್ಥಿತಿ ಮಾತ್ರವೇ ಬದಲಾಗಿಲ್ಲ. ಇಂದಿನ ಮಕ್ಕಳು ಗುಟ್ಟಾಗಿ ಪ್ರೀತಿಸಿ ಓಡಿಹೋಗಿ ಮದುವೆಯಾಗಿ ಮುಂದಿನ ದಿನಗಳಲ್ಲಿ ಎಡವಟ್ಟಾಗಿ ತುಂಬಾ ನೋವು ಅನುಭವಿಸುತ್ತಾರೆ. ಪಾಲಕರಿಗೂ ಕಷ್ಟ ಕೊಡುತ್ತಾರೆ.ಅದರಲ್ಲೂ ಹೆಚ್ಚು ಕಷ್ಟಕ್ಕೆ ಗುರಿಯಾಗುವವರು ಅಪ್ಪ ಅಮ್ಮ.ಪ್ರಾಯದ ಬಿಸಿಯಲ್ಲಿ  ಪ್ರೀತಿಯ ಗುಂಡಿಗೆ ಬೀಳಲು ಒಂದು ಕ್ಷಣ ಸಾಕು. ಆದರೆ ಒಬ್ಬರನ್ನು ಒಬ್ಬರು ಅರಿತುಕೊಳ್ಳದೇ ಆಕರ್ಷಣೆಗೆಪ್ರೀತಿಸಿದರೆ ಅದು ಹೆಚ್ಚುಕಾಲ ಉಳಿಯವುದು ಅಕ್ಷರಶಃ ಸುಳ್ಳು.  ಯಾವ ವ್ಯಕ್ತಿಯ ಗುಣ ಸರಿಯಾಗಿ ಗೊತ್ತಿರುವುದಿಲ್ಲವೋ ಅಂತಹ ವ್ಯಕ್ತಿಯು ವೈರಿಯಾಗುತ್ತಾನೆ. ಅಂದಾಗಲಿ ಇಂದಾಗಲಿ ಸಂಬಂಧಗಳೇ ಸಾಕ್ಷಿಯನ್ನು ಹೇಳುತ್ತವೆ.  ನಾವಿಬ್ಬರೂ ಮದುವೆಯಾಗಿದ್ದೇವೆ ಎಂದರೆ  ಸಾಕ್ಷಿ ತೋರಿಸಲು ಕೋರ್ಟು ಕೇಳುತ್ತದೆ. ಅಂದು ದುಷ್ಯಂತನು  ಶಕುಂತಳೆಗು ಅದನ್ನೆ ಕೇಳಿದ್ದು.  ಅದಕ್ಕೆ ಗುಟ್ಟಾಗಿ ಮದುವೆ ಮಾಡಿಕೊಂಡು ಹೆತ್ತವರಿಗೂ ಸಂಬಂಧಿಕರಿಗೂ ಅವಮಾನ ಮಾಡಬೇಡಿ. ಜೀವ ಚಿಕ್ಕದು, ಜೀವನ ದೊಡ್ಡದು.  ಎಲ್ಲರ ಒಪ್ಪಿಗೆಯಿಂದ ನಡೆದ ಮದುವೆಗಳಲ್ಲಿ ಏನಾದರೂ ತೊಂದರೆಯಾದರೆ ಹೇಳಲು  ನಿಮ್ಮವರು ಎಲ್ಲರೂ ಇರುತ್ತಾರೆ.ಗುಟ್ಟಾಗಿ ಮದುವೆಯಾಗಿ ಆತ್ಮಹತ್ಯಗೆ ಶರಣಾಗಿ ಹೆತ್ತವರ ಮನಸ್ಸು ನೋಯಿಸಬೇಡಿ. ಅಂದು ದುಷ್ಯಂತ ಶಕುಂತಳೆಯ ಮದುವೆ ಸಾಕ್ಷಿಯಾಗಿದ್ದುದು ಒಂದು ಉಂಗುರ, ಹಾಗು ಕಣ್ವಾಶ್ರಮದಲ್ಲಿದ್ದ ಒಂದು ಜಿಂಕೆ ಮಾತ್ರವೆ.  ಆದರೆ ಉಂಗುರ ಕಳೆದಿತ್ತು .  ಪಾಪ ಜಿಂಕೆ ಸಾಕ್ಷ್ಯ ಯಾರು ಕೇಳುತ್ತಾರೆ?    ಇತ್ತಿಚೆಗೆ ನಡೆಯುತ್ತಿರುವ ಘಟನೆಗಳು ಮೈ ಜುಮ್ಮೆನಿಸುತ್ತದೆ. ತುಂಡು ತುಂಡಾಗಿ ಕತ್ತರಿಸಿ ಬಿಸಾಕಿದ ಹುಡುಗಿಯ  ಕತೆ. ಬೇಡ ಮಕ್ಕಳೆ ಯಾರೂ ಅಂತಹ ತಪ್ಪು ಮಾಡಿ  ಜೀವಕಳೆದುಕೊಳ್ಳಬೇಡಿ. ಮದುವೆಯ ವಿಷಯದಲ್ಲಿ ದುಡುಕಬೇಡಿ.  ಗುಟ್ಟು ಮಾಡಬೇಡಿ. ಹೆತ್ತವರಿಗೆ ಅವರ ಜವಾಬ್ದಾರಿ ಗೊತ್ತಿರುತ್ತದೆ. ವನಜ ಮಹಾಲಿಂಗಯ್ಯಅಧ್ಕಕ್ಷರುವಿಶ್ವವಿನೂತನ ಮಹಿಳಾ ಸಮಾಜ ದಾವಣಗೆರೆ

“ರಹಸ್ಯ ಪ್ರೇಮ ವಿವಾಹ ಒಳ್ಳೆಯದಲ್ಲ”ವಿಶೇಷ ಲೇಖನ ವನಜ ಮಹಾಲಿಂಗಯ್ಯ Read Post »

ಇತರೆ, ಜೀವನ

“ಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ!!” ಜಯಶ್ರೀ.ಜೆ.ಅಬ್ಬಿಗೇರಿ

ಬದುಕಿನ ಸಂಗಾತಿ ಜಯಶ್ರೀ.ಜೆ.ಅಬ್ಬಿಗೇರಿ “ಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ!!” ಸುತ್ತು ಬಳಸಿ ಮತ್ತೆ ಮತ್ತೆ ಸಮಸ್ಯೆಗಳೆಲ್ಲ ನನ್ನ ಪಾಲಿಗೆ ಏಕೆ ಬರುತ್ತಿವೆ? ಉಳಿದವರೆಲ್ಲ ಹಾಯಾಗಿದ್ದಾರೆ ನನಗೆ ಮಾತ್ರ ಹೀಗಾಗುತ್ತಿದೆ. ಎಂದು ಬಹಳಷ್ಟು ಸಲ ಅಂದುಕೊಳ್ಳುತ್ತೇವೆ.. ಪ್ರೀತಿ ಪಾತ್ರರು ಮರಣಿಸಿದಾಗ, ಬಹಳಷ್ಟು ಇಷ್ಟ ಪಟ್ಟದ್ದು ಸಿಗದೇ ಇದ್ದಾಗ, ಅಂದುಕೊoಡದ್ದು ಅಂದುಕೊoಡoತೆ ಆಗದೇ ಇದ್ದಾಗ ನನ್ನ ಬದುಕಿನಲ್ಲಿ ದುರಂತಗಳ ಸರಮಾಲೆ ಬೆನ್ನು ಬಿಡದ ಬೇತಾಳನಂತೆ ಬೆನ್ನು ಹತ್ತಿವೆ. ನನಗೇ ಏಕೆ ಹೀಗೆ ಆಗುತ್ತೆ? ಎನ್ನುವ ಪ್ರಶ್ನೆ ತಲೆ ಹೊಕ್ಕು ಕಟ್ಟಿಗೆ ಹುಳು ಕೊರೆಯುವಂತೆ ಕೊರೆಯುತ್ತದೆ. ಪದೇ ಪದೇ ತೊಂದರೆ ಕೊಡುವ, ನಮ್ಮನ್ನು ಏಳ್ಗೆ ಆಗದಂತೆ ತಡೆಯುವ ಈ ಪ್ರಶ್ನೆಯಿಂದ ಬಚಾವಾಗುವುದು ಹೇಗೆ? ಎಂದು ಯೋಚಿಸುತ್ತೇವೆ. ಅಲ್ಲವೇ? ಈ ಕಾಡುವ ಯೋಚನೆಗೆ ಪೂರ್ಣ ವಿರಾಮ ಹಾಕಲು ಸಹಕಾರಿಯಾಗುವ ಅಂಶಗಳತ್ತ ಒಮ್ಮೆ ಗಮನ ಹರಿಸಿ.ಸುತ್ತ ಕಣ್ಣು ಹರಿಸಿ ದುರಂತಗಳು ಸಂಭವಿಸಿದಾಗ, ವಿಷಮ ಗಳಿಗೆಯಲ್ಲಿ ಭವಿಷ್ಯದ ದಾರಿಯೇ ಕಾಣದೇ ಕತ್ತಲೆಯಲ್ಲಿ ಕುಳಿತಾಗ ನನಗೇಕೆ ಹೀಗೆ? ಎನ್ನುವ ಮನಸ್ಥಿತಿಯಿಂದ ಹೊರಬಂದು ನಿಮ್ಮಸುತ್ತ ಮುತ್ತಲಜನ-ಜೀವನದೆಡೆಗೆ ಕಣ್ಣು ಹರಿಸಿ ಇತರರು ನಿಮ್ಮಂತೆ ಸಮಸ್ಯೆಯಲ್ಲಿದ್ದರೂ ಅದನ್ನು ದೊಡ್ಡದಾಗಿಸಿದೇ ನಗುವ ಮೊಗವ ಹೊತ್ತು ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ಆದ ನೋವಿನ ಕಡೆ ಹೆಚ್ಚು ಗಮನ ಕೊಡದೇ ನೋವುಂಡರೂ ನಗುವ ಪ್ರಯತ್ನ ಮಾಡುತ್ತಾರೆ. ಇತರರ ದುಃಖಕ್ಕೆ ಕಿವಿಗೊಡುವದರಲ್ಲಿ ಸಂತೃಪ್ತಿ ಕಾಣುತ್ತಾರೆ. ‘ನಾನು ಬರಿಗಾಲಲ್ಲಿ ನಡೆಯಬೇಕಿದೆ ನನ್ನ ಬಳಿ ಪಾದರಕ್ಷೆಗಳಿಲ್ಲ ಎಂದು ಕಣ್ಣೀರಿಡುತ್ತಿರುವಾಗ ಕಾಲಿಲ್ಲದವನನ್ನು ಕಂಡೆ ನನ್ನ ನೋವು ನೋವೇ ಅಲ್ಲ ಅನಿಸಿತು. ದೇವರಿಗೆ ಕೃತಜ್ಞನಾಗಿರಬೇಕು ನಾನು.’ ಎಂದೊಮ್ಮೆ ವಿಲಿಯಮ್ ಶೇಕ್ಸ್ಪಿಯರ್ ಹೇಳಿದ ಮಾತು ಎಷ್ಟೊಂದು ಮಾರ್ಮಿಕವಾಗಿದೆ. ದುರಂತವೆoದರೆ ನಾವು ನಮ್ಮ ಸುತ್ತ ರೇಷ್ಮೆ ಹುಳುವಿನಂತೆ  ಗೂಡು ಕಟ್ಟಿಕೊಂಡು ಯಾರೋ ನಮ್ಮನ್ನು ಮೇಲೇಳದಂತೆ ತಡೆಯುತ್ತಿದ್ದಾರೆ ಎಂದು ಗೋಳಿಡುವುದುಕಣ್ಣು ಹೊರನೋಟಗಳನ್ನು ನೋಡಲಿ.  ಅಂತರಗಣ್ಣಿನಿoದ ಪರಾಮರ್ಶಿಸಲಿ. ಆಗ ನಿಮಗೆ ಬಂದ ಸಂಕಟ ಏನೂ ಅಲ್ಲವೇ ಅಲ್ಲ ನನಗಿಂತ ಕಷ್ಟದಲ್ಲಿರುವವರು ತುಂಬಾ ಜನರಿದ್ದಾರೆ. ನನಗೆ ದೇವರು  ಅಂಥ ದುಸ್ಥಿತಿ ಬರದಂತೆ ಕಾಪಾಡಿದ್ದಾನೆ ಎಂದೆನಿಸುವುದು.ದುಃಖದಿoದ ಹೊರಬಂದು ಅದೇ ಅನುಭವ ಪಡೆದ ಇತರರ ಬಗ್ಗೆ ಯೋಚಿಸಿ. ಅವರೊಂದಿಗೆ ಮಾತನಾಡಿ ಆಗ ಅವರ ಬಗೆಗೆ ನಿಮಗೆ ಅನುಕಂಪ ತಾದ್ಯಾತ್ಮತೆ ಮೂಡುತ್ತದೆ.ನೀವಿನ್ನೂ ಅನುಕೂಲಕರ ಪರಿಸ್ಥಿತಿಯಲ್ಲಿರುವಿರಿ ಎಂದೆನ್ನಿಸುವುದು.   ದುರ್ಘಟನೆ ಆಹ್ವಾನಿಸದಿರಿ ಎಲ್ಲ ದುರಂತಗಳು  ಒಮ್ಮಿಂದೊಮ್ಮೆಲೇ ಧುತ್ತನೇ ಘಟಿಸುವುದಿಲ್ಲ. ಕೆಲವೊಂದು ನಮ್ಮ ಸ್ವಯಂ ಕೃತ ತಪ್ಪುಗಳಿಂದ ಉದಾಸೀನತೆಯಿಂದ ಘಟಿಸುತ್ತವೆ. ಅವುಗಳನ್ನು ನಾವೇ ಕೈ ಹಿಡಿದು ತಂದು ನಮ್ಮ ಬಾಳಲ್ಲಿ ಮಣೆ ಹಾಕಿ ಕೂಡ್ರಿಸಿ ಕೊಳ್ಳುತ್ತೇವೆ.ನಮಗರಿವಿಲ್ಲದಂತೆ ಗೆದ್ದಲು ಹುಳುವಿನಂತೆ ನಮ್ಮ ಅಸ್ತಿತ್ವವನ್ನು ಇಲ್ಲದಂತೆ ಮಾಡಲು ದಿನವೂ ಕಾರ್ಯನಿರತಆಗಿರುತ್ತವೆ ತುರ್ತು ಜರೂರು ಮಹತ್ವದ ವಿಷಯಗಳನ್ನು ಪರಿಗಣಿಸಿ ಕ್ರಿಯಾಶೀಲರಾದರೆ, ನಡೆಯುವ ದುರ್ಘಟನೆಗಳ ಅವಕಾಶದ ಬಾಗಿಲು ಮುಚ್ಚಿದರೆ ಸದಾ ಕಾಲಕ್ಕೂ ಮುಚ್ಚಿ ಹೋಗುತ್ತವೆ. ಇನ್ನು ನಿಮ್ಮ ನಿಯಂತ್ರಣದಾಚೆಗೆ ನಡೆವ ದುರಂತಗಳಿಗೆ ಪ್ರತಿಯಾಗಿ  ಸಹನ ಶಕ್ತಿಯಿಂದ ದಿಟ್ಟತನದಿಂದ ಪ್ರತಿಕ್ರಿಯಿಸಿದರೆ ಸಮಸ್ಯೆ ಉಲ್ಬಣಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ.ಏಳು ಬಾರಿ ಟೂರ್ ಡೇ ಫ್ರಾನ್ಸ್ ಗೆದ್ದ  ಲ್ಯಾನ್ಸ್ ಆರ್ಮಸ್ಟಾ ಹೀಗೆ ಹೇಳುತ್ತಾರೆ.‘ಬಹಳಷ್ಟು ಜನರು ಕೊನೆಗೆ ಇಟ್ಟುಕೊಳ್ಳುವ ಶೇಕಡಾ ಒಂದು ಮೀಸಲು ಶಕ್ತಿಯು ಕ್ರೀಡಾಪಟು ಬಳಸಲು ದಿಟ್ಟತನ ತೋರುವ ಹೆಚ್ಚುವರಿ ಶಕ್ತಿಯಾಗಿದೆ.’ಈ ಹೇಳಿಕೆಯಂತೆ  ನಮ್ಮ ದಿಟ್ಟತನದಿಂದ ತೋರುವ ಹೆಚ್ಚುವರಿ ಶಕ್ತಿಯ ಸದುಪಯೋಗಪಡಿಸಿಕೊಳ್ಳಿ. ಸಹಜವಾಗಿರಿ ಸದಾ ಇತರರೊಂದಿಗೆ ಹೋಲಿಸಿಕೊಳ್ಳುವುದನ್ನು ಕೈ ಬಿಡಬೇಕು. ಈ ಹೋಲಿಕೆ ಇತರರಿಗಿಂತ ಕೆಳ ಮಟ್ಟದಲ್ಲಿದ್ದೇನೆ ಎಂದು ನಿತ್ರಾಣಗೊಳಿಸುವ ಕೀಳರಿಮೆ ಇಲ್ಲವೇ ಮೇಲರಿಮೆಯ ಅಹಂಕಾರವನ್ನು ಹುಟ್ಟು ಹಾಕುತ್ತದೆ. ನಿಮ್ಮ ನಿಜ ಸ್ವರೂಪ ನೀಡದ ಕಲ್ಪಿತ ಭ್ರಮಾಲೋಕವು ಇಲ್ಲದ ತೊಂದರೆಗಳನ್ನು ತಂದು ನಿಮ್ಮ ಬದುಕಿನ ಮಡಿಲಲ್ಲಿ ಚೆಲ್ಲುತ್ತದೆ. ನಿಜದಲ್ಲಿ ತಾನು ತಾನಾಗದ ಹುಸಿ ಲೋಕದಲ್ಲಿ ಸಮಸ್ಯೆಗಳ ಜಾಲವನ್ನು ಮೈ ಮೇಲೆ ಎಳೆದುಕೊಳ್ಳುವಂತೆ ಮಾಡುತ್ತದೆ. ಕೆಲವೊಮ್ಮೆ ನುಡಿಯಲ್ಲಿ ಎಚ್ಚೆತ್ತುಕೊಳ್ಳುತ್ತೇವೆ. ನಡೆಯಲ್ಲಿ ತಪ್ಪುತ್ತೇವೆ. ಜ್ಞಾನ ಕ್ರಿಯೆಗಳು ಸಮನಾಗಿರಿಸಿ ನಡೆಯುವುದು ಹಗ್ಗದ ಮೇಲಿನ ನಡಿಗೆ ಇದ್ದಂತೆ. ಹೂದೋಟದಲ್ಲಿ ಮೈ ಅರಳಿಸಿ ನಿಂತ ಹೂಗಳು ತನಗಿಂತ ದೊಡ್ಡ ಇಲ್ಲ ಚಿಕ್ಕ ಹೂಗಳನ್ನು ನೋಡಿ ಕಣ್ಣ ಹನಿ ಸುರಿಸುವುದಿಲ್ಲ. ತನ್ನಷ್ಟಕ್ಕೆ ತಾನೆ ಬಿಮ್ಮನೇ ಅರಳಿ ಗಾಳಿ ಬೀಸಿದಲ್ಲೆಲ್ಲ ತನ್ನ ಕಂಪು ಸೂಸುವವು. ಬಿರಿದ ಕುಸುಮಗಳಂತೆ ಸಹಜವಾಗಿರಿ. ಛಲ ಬಲ ತುಂಬಿಕೊಳ್ಳಿ ಅಮಾನುಷ, ಭೀಕರ, ಹೃದಯ ವಿದ್ರಾವಕ, ಘೋರ ಹತ್ಯಾಕಾಂಡಗಳಲ್ಲಿ ಸಾವಿನ ಬಾಗಿಲು ತಟ್ಟಿ ಬಂದವರು ಸಮರ್ಥವಾಗಿ ಬದುಕಿ ತೋರಿದವರು  ಸಾಧನೆಯ ಉತ್ತುಂಗಕ್ಕೆ ಏರಿದವರು ಹಸಿರಾದ ಪ್ರೀತಿಯನ್ನು ಇತರರ ಬಾಳಲ್ಲಿ ತಂದವರ ಪಟ್ಟಿಯೇ ಇದೆ. ಇತಿಹಾಸ ಪುಟಗಳಲ್ಲಿ ದಾಖಲಾಗಿರುವ ಇಂಥ ವೀರ ಮಹನೀಯರ ಜೀವನ ಚರಿತ್ರೆಯನ್ನೊಮ್ಮೆ ಓದಿ. ನಿಮ್ಮಲ್ಲೂ ಛಲ ಬಲ ತುಂಬಿಕೊoಡರೆ  ಶೌರ್ಯದ ಖಣಿ ನೀವಾಗುವಿರಿ.   ಕವಿ ಕೆ ಎಸ್ ನಿಸ್ಸಾರ ಅಹ್ಮದ್ ರವರು  ‘ಹುದ್ದೆ ಮುದ್ದೆ ನಿದ್ದೆ ಈ ಬದುಕು ಇಷ್ಟೇ ಪೆದ್ದೆ?ಎಂಬ ಲೇಖನದಲ್ಲಿ ‘ದಿನವಹಿಯ ಊಟ ಬಟ್ಟೆಗಳ ಅಗತ್ಯಗಳನ್ನು ದಾಟದ, ಉಸಿರಾಡಿ ಅಸ್ತಿತ್ವವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯ ಪುನರಾವರ್ತಿತ ಯಾಂತ್ರಿಕ ಚಟುವಟಿಕೆಯೇ ಅನೇಕಾನೇಕರ ಪಾಲಿಗೆ ಬಾಳ್ವೆ ಎನ್ನಿಸುತ್ತಿದೆ.’ಎಂದು ವಿಷಾದದಿಂದ ಬರೆದಿದ್ದಾರೆ.ಜೀವನದ ಪ್ರತಿ ಸಂಕುಚಿತ ದೃಷ್ಟಿಕೋನ ತೊರೆಯಿರಿ ಎಂಬ ಸಂದೇಶ ನೀಡದ್ದಾರೆ. ಪರಿಹಾರದತ್ತ ಗಮನ ಹರಿಸಿಬಂದ ಸಂಕಟದತ್ತ ನೋಡುತ್ತ ಕುಳಿತರೆ ಅದು ದಿನೇ ದಿನೇ ದೊಡ್ಡದೆನಿಸತೊಡುತ್ತದೆ. ಬೃಹದಾಕಾರವಾಗಿ ಬೆಳೆದು ನಮ್ಮನ್ನೇ ನುಂಗಿ ಬಿಡುವುದೇನೋ ಎಂಬ ಚಿಂತೆ ಆವರಿಸಿಕೊಳ್ಳುತ್ತದೆ. ಸಮಸ್ಯೆಯನ್ನು ಎಲ್ಲರ ಮುಂದೆ ಹೇಳುತ್ತ ತಿರುಗ ಬೇಡಿ. ಏಕೆಂದರೆ ಇಲ್ಲಿ ನಿಮ್ಮ ದುಃಖಗಳ ಪ್ರಚಾರಕ್ಕೆ ಜಾಗವಿಲ್ಲ. ಅದಲ್ಲದೇ ಸಮಸ್ಯೆಗಳಿಲ್ಲದವರು ಯಾರೂ ಇಲ್ಲ. ಸಮಸ್ಯೆಯ ಮೂಲ ಹುಡುಕಿದರೆ ಪರಿಹಾರ ತನ್ನಿಂದ ತಾನೇ ಹೊಳೆಯುತ್ತದೆ.ಒಮ್ಮೊಮ್ಮೆ ಅಚಾತುರ್ಯದಿಂದ ಅಲಕ್ಷö್ಯದಿಂದ ಸಮಸ್ಯೆ ಬೆಳೆದು ನಿಲ್ಲುತ್ತದೆ ಆಗ ಅನುಭವಿಕರನ್ನು ಜ್ಞಾನಿಗಳನ್ನು ಸಂಪರ್ಕಿಸಿದರೆ ಅಡ್ಡಗೋಡೆಯಾಗಿ ನಿಂತಿದ್ದ ನೋವು ತಾನೇ ಮಂಜಿನoತೆ ಕರಗುವುದು.ಕೆಲವೊಂದು ತೊಂದರೆಗಳಿಗೆ ಕಾಲವೇ ಉತ್ತರಿಸುವುದು ಕಾಲಕ್ಕಿಂತ ಉತ್ತಮ ಆರೈಕೆ ಮತ್ತೊಂದಿಲ್ಲ. ದೊಡ್ಡ ದೊಡ್ಡ ಅವಘಡಗಳಲ್ಲಿ ಕುಟುಂಬ ಸದಸ್ಯರನ್ನು  ಕಳೆದುಕೊಂಡವರು ಬೆಳಕಿನ ಆಶಾ ಕಿರಣ ಕಾಣದವರು ಜೀವನವೇ ಬೇಡ ಅಂದುಕೊoಡವರು ಬದುಕು ದುಸ್ತರ ಎಂದುಕೊoಡವರು  ಕಾಲ ಉರುಳಿದಂತೆ ಜೀವನ ಪ್ರೀತಿಗೆ ಸಿಲುಕಿ ಸಂತಸದ ಜೀವನ ಸಾಗಿಸುವುದನ್ನು ಆದರ್ಶವಾಗಿಸಿಕೊಳ್ಳಿ.  ದುಃಖ ದುಮ್ಮಾನ ಅವಮಾನಗಳ ಸರಣಿಯನ್ನೇ ಸವಾಲಾಗಿ ಸ್ವೀಕರಿಸಿ ಬದುಕಿನ ಹೋರಾಟವನ್ನು ಹೇಗೆ ಜಯಸಬೇಕೆಂಬುದನ್ನು ತೋರಿದ ಅಂಬೇಡ್ಕರ್ ಅಬ್ರಾಹಾಂ ಲಿಂಕನ್‌ರoಥವರ ದೊಡ್ಡ ಕೀರ್ತಿಗೆ ಪಾತ್ರರಾದ ಅದರ್ಶಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಿ ನಿಮ್ಮ ವಿಚಾರ ವೈಖರಿಯನ್ನು ಬದಲಿಸಿದರೆ ಎಂದೆoದಿಗೂ ವ್ಯಥೆಯಾಗಿ ಉಳಿಯುವ ದುರಂತವೂ ಪ್ರಬಲರನ್ನಾಗಿಸುವ ಅಚ್ಚರಿ ಬದಲಾವಣೆಯನ್ನು ನೀವೇ ಗಮನಿಸಬಹುದು. ಕೊನೆ ಹನಿಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ ಮನೋಬಲವನ್ನು ಬಾನಿಗೆ ಹಾರಿಸೋಣ. ಬದುಕನ್ನು ಶ್ರೇಷ್ಠ ಪಥಕ್ಕೆ ಹೊರಳಿಸೋಣ.   ಜಯಶ್ರೀ.ಜೆ.ಅಬ್ಬಿಗೇರಿ

“ಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ!!” ಜಯಶ್ರೀ.ಜೆ.ಅಬ್ಬಿಗೇರಿ Read Post »

ಇತರೆ, ಜೀವನ

“ಹೆತ್ತವರು..ಯಾರಿಗೆ ಭಾರ ಯೋಚಿಸಿ!” ವಿಶೇಷ ಲೇಖನ ಶಿವಲೀಲಾ ಶಂಕರ್

ಜೀವನ ಸಂಗಾತಿ ಶಿವಲೀಲಾ ಶಂಕರ್ “ಹೆತ್ತವರು..ಯಾರಿಗೆ ಭಾರ ಯೋಚಿಸಿ!” ನಾವು ಫೇಸ್ ಬುಕ್, ಇನ್ಸ್ಟಾಗ್ರಾಮ್ ಗಳಲ್ಲಿ ವಯಸ್ಸಾದವರ ಬಗ್ಗೆ ಅದೆಷ್ಟು ಕಾಳಜಿಯಿಂದ  ಮರುಕ ವ್ಯಕ್ತಪಡಿಸುತ್ತೆವೆ.ಅಯ್ಯೋ.. ಪಾಪ ಮಗ,ಮಗಳು,ಸೋಸೆ ಇಂತವಳು…ಸಾಕಷ್ಟು ಉತ್ತೇಜಕ ಕಾಮೆಂಟ್ ಹಾಕುತ್ತ ಮನದ ಮೂಲೆಯ ಅಭಿವ್ಯಕ್ತಿ ಹೊರ ಹೊಮ್ಮಿಸುತ್ತೆವೆ..ಅಲ್ಲಗೆ ಮುಗಿತು ನಮ್ಮ ಮಾತು ಕಥೆಗಳು.ಆದರೆ ದೀಪದ ಬುಡದಲ್ಲಿ ಕತ್ತಲೆ ಅಷ್ಟೇ.. ವೃದ್ಧ ದಂಪತಿಗಳು ತಮ್ಮ ಇಳಿವಯಸ್ಸಿನಲ್ಲಿ ಒದ್ದಾಡುವುದು, ಪೇಚಾಡುವುದು ಬೇಕಿತ್ತಾ? ಎಂಬ ಮಾತಿಗೆ ಉತ್ತರ ಕೊಡುವವರು ಯಾರು?.ಮನಸ್ಸು ಒಮ್ಮೆ ಭಾರವಾಗಿ ಮಗ್ಗುಲಾಗಿದ್ದು ಇದೆ.ತಂದೆ ತಾಯಿಗೆ ಮಕ್ಕಳು ಒಂದೇ. ಆದರೆ ಮಕ್ಕಳಿಗೆ ತಂದೆ-ತಾಯಿ ಬೇರೆ ಬೇರೆ..ಹತ್ತಿರವಾಗುವುದು ಯಾವಾಗ? ಅಂದರೆ ಆಸ್ತಿ ಪಾಸ್ತಿ ಯಾರಲ್ಲಿ ಹೆಚ್ಚಿರುತ್ತದೆಯೋ ಅಲ್ಲಿ ಸಂಬಂಧಗಳು ಸಾಪ್ಟ್ ಆಗಿ ಹ್ಯಾಂಡಲ್ ಮಾಡುವಂತಹ ಮನೋಭಾವಕ್ಕೆ ಒಳಗಾಗಿರುತ್ತಾರೆ.ಆಗ ಹೆತ್ತವರು ಭ್ರಮೆಯಲ್ಲಿ..ಮಕ್ಕಳು ನಮ್ಮವರೆಂಬ ಆತ್ಮ ವಿಶ್ವಾಸದ ಸಾಗರದಲ್ಲಿ. ನಾವು ಚಿಕ್ಕವರಿದ್ದಾಗ ಅಪ್ಪ ಅಮ್ಮ ನಮ್ಮ ಬೆಳೆಸಿದ ರೀತಿ,ಅವರು ಕಷ್ಟ ಪಟ್ಟದಿನವನ್ನು ನೆನೆದರೆ ಸಾಕು!. ಅವರ ರೆಟ್ಟೆಗಳು,ಹರಿದ ಚಪ್ಪಲಿ,ಹರಿದ ಅಂಗಿಗಳು,ಅರೆಹೊಟ್ಟೆಯ ದಿನಗಳು.ಅವರಿಗೆಲ್ಲ ಕಾಮನ್.. ಯಾಕೆಂದರೆ ಮಕ್ಕಳ ಭವಿಷ್ಯದ ಬಗ್ಗೆ ಜವಾಬ್ದಾರಿ ಕನಸು ಎಲ್ಲವೂ ನಿರ್ಭರ.ಇಳಿವಯಸ್ಸಿನಲ್ಲಿ ಆಸರಾಗುವರೆಂಬ ಅತಿಆಸೆ.ತಮ್ಮ ಕರ್ತವ್ಯ ಪ್ರಜ್ಞೆಯನ್ನು ಚಾಚು ತಪ್ಪದೆ ಪಾಲಿಸಿದ್ದರ ಪ್ರತಿಫಲ ನಾವೆಲ್ಲ ಪ್ರಪಂಚಕ್ಕೆ ಗುರುತಿಸಲ್ಪಡುವ ವಿಶೇಷ ವ್ಯಕ್ತಿಗಳಾಗಿ ರೂಪುಗೊಂಡಿದ್ದು.ಇಷ್ಟೆಲ್ಲಾ ಆದರೂ ನಮ್ಮ ಅಸಹಜ ಗುಣದಿಂದ ನಾವು ಭಿನ್ನವಾಗಿಯೇ ಬೆಳೆದು ನಿಂತಿದ್ದೆವೆ.ಅವರು ನೆಟ್ಟ ಮಾವಿನ ಮರ ನೀಡಿದ ಫಲ ಸಿಹಿಯಾಗದೇ ಕಹಿಯ ಫಲವಾದರೆ ಪ್ರಾಣಿ ಪಕ್ಷಿಗಳ ಗತಿಯೇನು? ಹೌದರಿ…ಜವಾಬ್ದಾರಿ ಹೊರುವ ಕಾಯಕವನ್ನು ಕೈಗೆತ್ತಿಕೊಂಡು ನೆಡದವರಿಗೆ ಭಗವಂತ ರಕ್ಷಣೆ ಖಂಡಿತ ನೀಡುವನು..ಅದೆಷ್ಟೋ ಸಾಂತ್ವಾನ ನೀಡಿದರೂ ಅದ್ಯಾಕೋ… ಮನಸ್ಸು ‘ವಿಲವಿಲ’ ವೆಂದು ಒದ್ದಾಡುತ್ತಿದೆ.ಮಕ್ಕಳು ಮುಪ್ಪಿನಲಿ..ಇದ್ದು ಇಲ್ಲದಂತಾಗುವ ಗಳಿಗೆ ಯಾವ ಜೀವಿಗೂ ಬೇಡ! ನೂರು ದೇವರ ಅನುಗ್ರಹಕ್ಕೆ ನೂರಾರು ದೇವಾಲಯ ಅಲೆದು,ಬೇಡಿ ಬಯಸಿ ಜನ್ಮಕೊಟ್ಟ ಹಸುಗೂಸಿಗೆ ಬೆನ್ನೆಲುಬಾಗಿ ನಿಂತು,ಸಲುಹಿ,ರಟ್ಟೆಯಲ್ಲಿ ಬಲಬರುವ ತನಕವೂ ರೆಸ್ಟಲೆಸ್ ಆಗಿ ದುಡಿದು ದಣಿವಾರಿಸಲು ಬಯಸದ ಕಂಗಳಿಗೆ,ಅದ್ಯಾವ ಪೊರೆ ಮೆತ್ತಿತ್ತೊ ಕಾಣೆ?. ಮನೆಯಂಗಳದಲಿ ನಲಿದಾಡುವ ಪುಟ್ಟ ಜೀವಕ್ಕೊಸ್ಕರ ಎಲ್ಲವನ್ನೂ ಮರೆತು ದುಡಿದಿದ್ದು ಯಾಕಂತ ಅರ್ಥವಾಗುವ  ಸಮಯ ಬರದೆ ಹೋದರೆ ಆ ಬದುಕಿಗೆ ಅರ್ಥವೇನು?.. ಎಷ್ಟೊಂದು ಪರಿಣಾಮವನ್ನು ಬೀರಿತು ನಮ್ಮೆದೆಯೊಳಗೆ..ಆದರೆ ಅದ್ಯಾವ ಭಾವವೂ ಕೂಡ ನಮಗೀಗ ಅರಿವಿಗೆ ಬೇಕಿಲ್ಲ!. ದಿನಕಳೆದಂತೆಲ್ಲ ದೇಹಕ್ಕೊ,ಮನಸ್ಸಿಗೂ ಬಿರುಕುಗಳು ಮೂಡುವ ಕಾಲಘಟ್ಟ.ಯೌವ್ವನದ ಹೇಳ ಹೆಸರಿಲ್ಲದಂತೆ,ಸಂತೆಯೊಳು ಮಾಯವಾದಂತೆ.ಹಿಡಿದಿಟ್ಟುಕೊಳ್ಳುವ ಸಾಹಸ ಯಾರಿಂದ ಸಾಧ್ಯವಾದಿತು!. “ಯಯಾತಿ” ಪ್ರಸಂಗವೊಂದು ಇದಕ್ಕೆ ಸಾಕ್ಷಿಯಾದಿತು.ಸುಖ,ವೈಭೋಗ ಎಷ್ಟು ದಿನ,ವರುಷ ಅನುಭವಿಸಲು ಸಾಧ್ಯ?.ಮುಪ್ಪು ಸದ್ದಿಲ್ಲದೆ ಮೈಗಂಟಿಕೊಳ್ಳುವ ಜಾದೂಗಾರ!.ಅಲ್ಲಿಯೇ ನೋಡಿ ನಮಗಿರುವ ಕಿಮ್ಮತ್ತು ಅಂದರೆ ಸತ್ಯ ದರ್ಶನ !. ಹೌದು ನಾವೆಲ್ಲ ಏನನ್ನೂ ಸಾಧಿಸದೆ…ಒಂದಿಷ್ಟು ಆಸ್ತಿ ಪಾಸ್ತಿ ಹೊಂದಿದ್ದು..ಮಗ,ಮಗಳಿಗೆ ಕಷ್ಟ ಬರಬಾರದೆಂದು ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ. ಮಕ್ಕಳ ಭವಿಷ್ಯಕ್ಕೆ ಆಕಾರನೀಡುವಲ್ಲಿ ಯೌವ್ವನ ಯಾವಾಗ ಮುಪ್ಪಾಗಿ ಪರಿಣಮಿಸಿತೋ ಅರಿವಿಗೆ ಬರಲಿಲ್ಲ.ತಾಕತ್ತು ಎಲ್ಲಿಯವರೆಗೆ?.. ಮಗ,ಮಗಳು ಬಲಿಷ್ಠರಾಗುವ ತನಕ.ಅಲ್ಲಿಗೆ ಒಂದು ಧೀರ್ಘಕಾಲದ ಅಧ್ಯಾಯ ಮುಕ್ತಾಯವಾದಂತೆ.ನಿರೀಕ್ಷೆಯ ಮಹಾಪೂರವೇ ಹರಿದುಬಂದಿತೆಂಬ ಕನಸು.ಅಪ್ಪ ಅಮ್ಮ ಮಕ್ಕಳನ್ನು ತಿದ್ದಿ ತೀಡಿ ಆನಂದ ಕಂಡ ಜೀವಗಳು.ತಮ್ಮ ತ್ಯಾಗಕ್ಕೆ ಫಲ ಸಿಗುದೆಂಬುದು ಊಹೆ ಅಷ್ಟೇ!. ರೆಕ್ಕೆ ಬಲಿತ ಮರಿಗಳು ಗೂಡು ಬಿಟ್ಟು ಹಾರಿಹೋದಂತೆ.ವಿದ್ಯೆ, ಸಂಸ್ಕಾರ, ಉದ್ಯೋಗ ಎಲ್ಲವೂ ದಕ್ಕಿದ ಮೇಲೆ ಅಂದರೆ,ಹೊಳೆ ದಾಟಿದ ಮೇಲೆ ಅಂಬಿಗನ ಮರೆತಂತೆ!. ಮಕ್ಕಳ ಬದುಕಿಗೆ ಎಣಿಯಾದ ತಂದೆ ತಾಯಿ ಕೊನೆಗೊಂದು ದಿನ ಮೂಲೆಗುಂಪು.ಇದು ಕಾಲಚಕ್ರದ ಪರಿಣಾಮವೂ,ವಿಧಿಯ ಆಟವೋ,ಅಥವಾ ಬೆಳೆಸುವುದರಲ್ಲಿ ಹೆಚ್ಚು ಪ್ರಾಮಾಣಿಕರಾಗಿದ್ದೋ ಗೊತ್ತಿಲ್ಲ.ಯಾರಾದರೇನು? ಸಮಯಕ್ಕೆ ಆಗದ ಹಣವಾದರೇನು? ನೆಂಟರಾದರೇನು? ಮಕ್ಕಳಾದರೇನು?. ನೋವು ನೋವೆ!. ಅದನ್ನು ಸರಿದೂಗಿಸಲು ಯಾರಿಂದಲೂ ಸಾಧ್ಯವಿಲ್ಲ. ಹೌದು..ಇದೆಲ್ಲ ಯಾಕೆ? ಹೆತ್ತವರ ಎದೆಗೊದ್ದು ಬದುಕುವ ಅವಕಾಶ ಗಿಟ್ಟಿಸಿಕೊಂಡ ಮಕ್ಕಳು.ಕೇವಲ ಅವರ ಆಸ್ತಿಗಾಗಿಯೇ ಹೊರತು ಹೆತ್ತವರ ಆರೈಕೆಗಲ್ಲ. ಮನಸ್ಸು ಭಾರವಾದಿತು ಒಂದುಕ್ಷಣ!. ಹೆಣ್ಣಾಗಲಿ,ಗಂಡಾಗಲಿ ನಡೆದುಕೊಳ್ಳುವ ರೀತಿಗೆ ಕರುಳು ಚುರ್ ಅನ್ನುತ್ತೆ. ಮಕ್ಕಳಿಗೆ ಹೆತ್ತವರು ಭಾರವಾದರೆ ಬೇರಾವ ಮಾತಿದೆ?. ಕೂಲಿನಾಲಿ ಮಾಡಿ,ತಾವು ಉಪವಾಸವಿದ್ದು ನಮಗೆ ತುತ್ತು ನೀಡಿ ಬೆಳೆಸಿದ ಅವರಿಗೆ…ಊಟ ಹಾಕದೆ ಕೊಂದ ಮಕ್ಕಳ ಬಗ್ಗೆ ಆಕ್ರೋಶವಿದೆ…ಹೌದು.ವಯಸ್ಸಾದ ಮೇಲೆ ದುಡಿಯುವ ಕ್ಷಮತೆ ಕ್ಷೀಣಿಸುತ್ತದೆ ಎಂಬ ಸಣ್ಣ ಅಂಶ ಅರಿವಿಗೆ ಬಾರದಿದ್ದರೆ ಈ ಜನ್ಮಕೆ ಬೆಲೆಯಿಲ್ಲ!.ಹೆತ್ತವರು ಯಾರಿಗೆ ಭಾರ ಯೋಚಿಸಿ!. ನಿಜ ಅಲ್ವಾ…ವಯಸ್ಸಾದವರು ಕಾಯಿಲೆಗೆ ಬಿದ್ದರೆ ಅವರನ್ನು ಮನೆಯಿಂದ ಹೊರದೂಡುವುದು..ಈಗೀಗ ಸಾಮಾನ್ಯವಾಗಿ ಬಿಟ್ಟಿದೆ. ನನ್ನಪ್ಪನ ಹೋರಾಟ ಇದಷ್ಟುದಿನ ಒಮ್ಮೆ ಹಸಿವ ನೀಗಿಸಲು ಕಠಿಣ ಪರಿಶ್ರಮದ ಬಾಗಿಲು ತಟ್ಟಿದವ,ಒಂದು ಪೈಸೆಯು ಸಾಲವಿಲ್ಲದೆ ನಿವೃತ್ತಿಯಾದವ..ಕೈಗಡ ಸಾಲವೂ ಉಳಿಸಿಕೊಳ್ಳದವ‌..೧೦ ರೂಪಾಯಿಯಲ್ಲೆ ಬದುಕುವುದು ಹೇಗೆ ಎಂಬುದನ್ನು ಬಲ್ಲವ..ತನಗಾಗಿ ಕೂಡಿಡುವ ಕನಸು ಕಂಡವನಲ್ಲ.ಕಲಿಯುವ ಆಸೆ ಹೊತ್ತ ನನಗೆ ಕಲಿಯಲು ಬಿಂದಾಸ್ ಆಗಿ ಬಿಟ್ಟವ.ಅವನ ಭರವಸೆ,ನಂಬಿಕೆ ಉಳಿಸಿಕೊಂಡು ಕಲಿತ ಫಲ ಇವತ್ತು ನಾನು ಉಣ್ಣುವ ಅನ್ನವೆಂದರೆ ತಪ್ಪಾಗದು..ಅಪ್ಪ ಅಮ್ಮರನ್ನು ನೋಡಿಕೊಳ್ಳುವ ಭಾಗ್ಯ ನನ್ನದು..ಅವರು ಸ್ವಾವಲಂಬಿ ನಿಲುವಿನ ವ್ಯಕ್ತಿಗಳು.. ಆದರೆ ಮುಪ್ಪು,ಕಾಯಿಲೆ ಯಾರ ಮನೆ ಸೊತ್ತು?… ಅದು ಬಂದಾಗಲೇ ಯಾರು? ಯಾರಿಗೆ? ಹತ್ತಿರವಾಗುತ್ತಾರೆ ಎಂಬುದು?…. ಮಗನಾದವ ಕೈ ಚೆಲ್ಲಿದ ಮೇಲೆ…ಮಗಳಾಗಿ ನನ್ನ ಕರ್ತವ್ಯ ಮಾಡುವುದು ಪುಣ್ಯವೆಸರಿ.. ಅಪ್ಪ…ಕಲ್ಲು ತಿಂದು ಕಲ್ಲು ಕರುಗಿಸಿದ ದೇಹ…ಕೆಮ್ಮು,ದಮ್ಮು,ಕಫಕ್ಕೆ ನಲುಗಿದ್ದ…ನಮ್ಮ ಯಜಮಾನ್ರು,ಇನ್ನೋರ್ವ ಸಹೋದರ ಡಾಕ್ಟರ್ ದಂಪತಿಗಳು,ನನ್ನ ಮಕ್ಕಳು ಅಜ್ಜನ ಸೇವೆ ಮಾಡಲು ಎಚ್ಚರಿದ್ದವರು.ಅವ್ವ ಸಾಕಷ್ಟು ಪ್ರಯತ್ನ ಮಾಡಿ ಒಂದು ಚೇತರಿಕ ಹಂತಕ್ಕೆ.ತಂದಿದ್ದರು.ನಮಗೆಲ್ಲ 81 ರ ಅಪ್ಪನ ಮಾತು ಖಡಕ್…ಅವನ ಒದ್ದಾಟ,ನೋವು ಅನುಭವಿಸುವುದು ಕಂಡಾಗೆಲ್ಲ ಕಣ್ಣೀರ ಹೊರತು ಮತ್ತೇನಿಲ್ಲ..ಗಂಜಿ ಕುಡಿಸುವಾಗ ಅವನ ಅಸಹಾಯಕ ಸ್ಥಿತಿ ಯಾರಿಗೂ ಈ ನೋವು ಬೇಡ ಅನ್ನುತ್ತಿದ್ದರು.ಹಾಗಂತ ಮಲಗಿದವರಲ್ಲ.. ಓಡಾಡುತ್ತಿದ್ದರು.ರೂಮನ್ನು ಹೀಟರ್ ಮೂಲಕ ಗರಂ ಇಟ್ಟರೂ,ಅದ್ಯಾಕೆ ಈ ಸಲ ವಿಪರೀತ ಚಳಿ ನಡುಕ..ರಕ್ತ ಹಾಕಿಸಿ ಇನ್ನೇನು ಗುಣಮುಖರಾದರೂ ಅನ್ನುವ ಮೂರುದಿನ ಅವರು ತನ್ನ ಪೂರ್ವಜರ ಹೊಲದಲ್ಲಿಯ ದೃಶ್ಯಾವಳಿಗಳನ್ನು ಹೇಳತೊಡಗಿದ್ದ…ವಯಸ್ಸಾದ ಮೇಲೆ ಹಿರಿಯರು ಪುಟ್ಟ ಮಕ್ಕಳಂತೆ ಅನ್ನೊ ಮಾತು ಅಕ್ಷರಶಃ ಸತ್ಯ.ಮನೆಯವರು ಉಸಿರಾಟಕ್ಕೆ ತೊಂದರೆಯಾದಿತೆಂದು ಚಕ್ ಮಾಡಿಸಿ ರಕ್ತ ಪರೀಕ್ಷೆ,ಎಕ್ಷರೆ ತಗಿಸಿಕೊಂಡು ಕರೆತಂದಿದ್ದರು.ಮನೆಯ ಅಂಗಳ ಕಟ್ಟೆಯ ಮೇಲೆ ಕುಳಿತು ಗಂಜಿ ಕುಡಿದು,,ಮೆಡಿಸಿನ್ ತಗೊಂಡು ಸ್ವಲ್ಪ ಹೊತ್ತಿಗೆ ಇಹಲೋಕ ತ್ಯಜಿಸಿದರು… ಆಗ ನಾನು ಶಾಲೆಯಲ್ಲಿ!. ಬೆಳಿಗ್ಗೆ ಮಾತಾಡಿದ್ದೆ ಬಂತು.ಒಂದು ಸುಳಿವು ಕೊಡದೆ ನನ್ನಪ್ಪ ಮೌನಕ್ಕೆ ಜಾರಿದ್ದ. ಒಟ್ಟಾರೆ ಹೇಳುವುದಾದರೆ, ಹೆತ್ತವರನ್ನು ಮಕ್ಕಳು ಭಾರವಾಗಿ ನೋಡಬಾರದು…ಅವರಿಗಾಗಿ ಸಮಯ ಕಳೆಯಬೇಕು..ಅವರು ತಮ್ಮ ಸುಖಸಂತೋಷವನ್ನು ತ್ಯಾಗ ಮಾಡಿ ನಮ್ಮ ಬದುಕ ಕಟ್ಟಿರುವಾಗ.. ಇಳಿವಯಸ್ಸಿನಲ್ಲಿ ನಾವುಗಳು ಅವರ ಆತ್ಮ ಬಲವಾಗದಿದ್ದರೆ ಏನು ಪ್ರಯೋಜನ?. ಹೆಣ್ಣಿರಲಿ,ಗಂಡಿರಲಿ ಯಾರಾದರೇನು? ಕರ್ತವ್ಯ ಮಾಡಲೇಬೇಕು..ಅವರ ಆಶೀರ್ವಾದ ನಮಗೆ ಶ್ರೀರಕ್ಷೆ..ಆದರೆ ನಾನು ನನ್ನ ಮಕ್ಕಳು ಹೆಂಡತಿಯಂತ ಇದ್ದರೆ ಅವರೆಲ್ಲಿ ಹೋಗಬೇಕು? ಮೌಲ್ಯಗಳನ್ನು ಬಿತ್ತುವುದು ಬರಿ ಶಾಲೆಯ ಕೆಲಸವಲ್ಲ, ಮನೆಯಿಂದ ಬರಬೇಕಾದ ಸಂಸ್ಕಾರ! ತಂದೆ ತಾಯಿ ಇದ್ದ ಮನೆಗೆ ಹೆಣ್ಣು ಕೊಡುದಿಲ್ಲ ಅನ್ನೊ ವಿಷಯ ಒಂದಾದರೆ,ಮಗನಾದವ ತಂದೆಯ ಆಸ್ತಿ ಪಾಸ್ತಿ ಗಾಗಿ ಮಾತ್ರ ಬರುವುದು..ಹತ್ತು ಹಲವಾರೂ ರೂಪಗಳು ಹೆತ್ತವರನ್ನು ಪೀಡಿಸಲು!. ಇದ್ದಾಗ ಅವರಿಗೆ ಹೊಟ್ಟೆ ತುಂಬ ಊಟ ಮಾಡಿಸಿ,ಅವರು ಖುಷಿಯಿಂದ ಇರುವಂತೆ ನೋಡಿ.. ಅಂದರೆ ಅವರು ಇಲ್ಲದಾಗ ಮಾಡುವ ‘ತಿಥಿ’ ಊಟಕ್ಕೆ ಬೆಲೆ ಬಂದಿತು!. ಆಡಂಬರದ ಬದುಕಿಗಿಂತ ಸಾಮರಸ್ಯದ ಜೀವನ ಬಹುಮುಖ್ಯ… ಏನಂತಿರಿ?. ಶಿವಲೀಲಾ ಶಂಕರ್

“ಹೆತ್ತವರು..ಯಾರಿಗೆ ಭಾರ ಯೋಚಿಸಿ!” ವಿಶೇಷ ಲೇಖನ ಶಿವಲೀಲಾ ಶಂಕರ್ Read Post »

ಇತರೆ, ಜೀವನ

“ವಿದಾಯ ಹೇಳಬೇಕಿದೆ ಅಂತರಾಳದಿಂದ….” ವಿಶೇಷ ಲೇಖನ, ಶಿವಲೀಲಾ ಶಂಕರ್

ಲೇಖನ ಸಂಗಾತಿ ಶಿವಲೀಲಾ ಶಂಕರ್ “ವಿದಾಯ ಹೇಳಬೇಕಿದೆ ಅಂತರಾಳದಿಂದ….” ಇದು ಹೀಗೆ ಆಗುತ್ತದೆಂಬ ಭ್ರಮೆ ಒಮ್ಮೆ ಹಾದು ಹೋದರು, ನಾವುಗಳು ಮತ್ತೊಂದು ವಿಚಾರದತ್ತ ನಮ್ಮನ್ನು  ಸಕ್ರಿಯವಾಗಿಸಿಕೊಂಡಿರುತ್ತೆವೆ.ಮನುಷ್ಯನ ಜನ್ಮ ಬರಿ ನಿರೀಕ್ಷೆಯಲ್ಲೇ ಕಳೆದು ಹೋಗಿದ್ದು ಗೊತ್ತೆಯಾಗಲ್ಲ.ನೂರೆಂಟು ಕನಸುಗಳು ನನಸಾಗುವ ಹೊಸ್ತಿಲಿನಲ್ಲಿ ಮುಗ್ಗರಿಸಿ ಬಿಕರಿಯಾದ ಕನಸುಗಳು ಒಡೆದ ಗಾಜಿನ ಚೂರಿನಂತೆ.ಹೌದುಈ ವರುಷ ಇದನ್ನು ಸಾಧಿಸಬೇಕೆಂಬ ಆಸೆ ಹೊತ್ತರು,ಆಸೆಗೆ ಮಿತಿಬೇಕಲ್ಲ.ಹೊಂಟದಾರಿ ಒಂದಾದರೆ,ಎದುರಾಗುವ ಸಂಕಷ್ಟಗಳು ನೂರಾರು!ಯಾವುದನ್ನು ಮೊದಲು ಪರಿಹರಿಸಬೇಕು? ಎಂಬ ನಿಖರತೆ ಮನಸ್ಸು ನೀಡದಿರುವುದು ಮತ್ತು ಹೃದಯ ಮೌನವಾಗಿರುವುದು ಒಂದು ನಿದರ್ಶನ. ಕಳೆದು ಹೋದ ಘಟನೆಗಳು ಮತ್ತೆ ಮರುಳಿಸುವ ಸಂಭವ ಸಾಧ್ಯತೆ ಕಡಿಮೆ.ಆದರೆ ಅವು ನೀಡಿದ ನೋವುಗಳು  ಶಾಶ್ವತ. ಪ್ರತಿಯೊಬ್ಬರ ಬದುಕಲ್ಲಿ ಕಹಿ-ಸಿಹಿ ಅಂಶಗಳು ತಮ್ಮದೇ ಆದ ಛಾಪನ್ನು ಮೂಡಿಸಿರುತ್ತವೆ.”ವಿದಾಯ” ಯಾವುದಕ್ಕೆ ಹೇಳಬೇಕು? ವರುಷಕ್ಕಾ? ಅಥವಾ ನಾವು ಬಳಸುವ ಕ್ಯಾಲೆಂಡರ್ ಗಾ? ಮನಸ್ಸನ್ನು ನುಚ್ಚು ನೂರು ಮಾಡಿದ ಕನಸುಗಳಿಗಾ? ನಂಬಿಕೆಯ ಅಡಿಪಾಯ ಕಳಚಿದ್ದಕ್ಕಾ? ಯಾವುದಕ್ಕೆ ಎಂಬ ಪ್ರಶ್ನೆ? ಸತ್ಯ ಅಲ್ಲವಾ? “ವಿದಾಯ”ಎಂಬ ಸರಳ ಪದ ಮನುಷ್ಯನ ದೇಹದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆಯೆಂದು ಯಾರು ಉಹಿಸಲು ಸಾಧ್ಯವಿಲ್ಲ!. ಕಳೆದುಕೊಳ್ಳುವುದು ಅತ್ಯಂತ ಸುಲಭದ ಸರಕಾಗಿ ನಿಂತಿದೆ.ವಸ್ತುವಾದರೂ ಸರಿ,ವ್ಯಕ್ತಿಯಾದರು ಸರಿ..ಅವಕಾಶ ಕೊನೆಯಾದಾಗ ಇಲ್ಲವೇ ವಾಸ್ತವ ನಿಲುಗಡೆಯ ಹಾದಿ ಹಿಡಿದಾಗ…ಎಲ್ಲೊ ಒಂದುಕಡೆ ಬಿರುಕಾದ ಸಂಬಂಧ ಬಿರುಸಾಗಿ ಗಾಳಿಗುಂಟ ಹಾರಿ ಹೋದಾಗ ‘ವಿದಾಯ’ ಅನಿವಾರ್ಯ. 2025 ಅಂತಹ ಸುಂದರ ಕನಸುಗಳನ್ನು ಹೆಣೆದಂತೆ ಭಾಸವಾದರೂ,ನೋವನ್ನು ಇಂಚಿಂಚಾಗಿ ಅನುಭವಿಸುವ ಭಾಗ್ಯ ನೀಡಿದ್ದು ವಿಶೇಷ. ನೋವು ತಡೆದುಕೊಳ್ಳಬಹುದು…ಆದರೆ ಬದುಕನ್ನೇ ನುಂಗಿ ಬಿಟ್ಟರೆ ಸಂಭ್ರಮಿಸುವ ಹೊಣೆ ಹೊರಲಾದಿತೆ? ಆದರೂ ಜೀವನ ನಿಂತ ನೀರಲ್ಲ!. ಉಸಿರಿರುವ ತನಕವೂ ಹೋರಾಡಲೇ ಬೇಕು ನಮ್ಮೊಳಗಿನ ಚೈತನ್ಯ ಕೈಚೆಲ್ಲುವ ತನಕ!. ಪ್ರತಿವರ್ಷವೂ ಹೊಸ ಚಿಂತನೆಗಳನ್ನು ಹಮ್ಮಿಕೊಳ್ಳುವ ನಾವು,ಯಾವ ಯೋಚನೆಗೆ ಚಾಲನೆ ನೀಡಿದ್ದಿವಿ ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳುವುದನ್ನೇ ಮರೆತು ಬಿಡುತ್ತವೆ. ಮರೆವು ಮನುಷ್ಯನ ಸಹಜ ಗುಣ.ಅದಿಲ್ಲದಿದ್ದರೆ, ಮೆದುಳೆಂಬ ಮೆಮರಿಕಾರ್ಡ ಬ್ಲಾಸ್ಟ್ ಆಗುವುದರಲ್ಲಿ ಸಂಶಯವಿಲ್ಲ. ಪುಟ್ಟ ಮೆದುಳು ಏನೆಲ್ಲಾ ಅಂಶಗಳನ್ನು ತನ್ನೊಳಗೆ ಸಂಗ್ರಹಿಸಿಕೊಳ್ಳಬೇಕು? ಯಾವ ನರಕ್ಕೆ ಯಾವ ಸಂದೇಶ ರವಾನಿಸಬೇಕು ಎಂಬ ಚಿಂತೆ ಕಾಡದಿರದು!. ಅದಕ್ಕೆ ಒಮ್ಮೊಮ್ಮೆ ಕಣ್ಣಿಗೆ ಕತ್ತಲು ಆವರಿಸಿ ಎಚ್ಚರ ತಪ್ಪುವುದು ಇದೆ. ಇದೊಂದು ನೋವಿನ ಸಂಗತಿಯಾದರೂ,ಜೀವನ್ಮರಣದ ನಡುವೆ ಒದ್ದಾಡುವ ಜೀವಗಳು ಬಯಸುವುದು ಶೂನ್ಯವೆಂಬುದನ್ನು ಮರೆಯುವಂತಿಲ್ಲ. ವರ್ಷದ ಅಂತ್ಯಕ್ಕೆ ಆತ್ಮಾವಲೋಕನ ಮಾಡಿಕೊಳ್ಳುವುದು ಸಹಜವೆನ್ನಿಸಿದರು,ಮಾಡಿಕೊಳ್ಳುವವರು ಯಾರು ಅನ್ನುವ ಪ್ರಶ್ನೆ?.ಪ್ರೀತಿ ಪ್ರೇಮ,ಮೋಸ,ವಂಚನೆ,ಅಕ್ರಮ,ಆತ್ಮಹತ್ಯೆ, ಅತ್ಯಾಚಾರ, ಅಪಘಾತ,ಕೊಲೆಗಳಿಗೆ ಬಲಿಯಾದ ಅದೆಷ್ಟೋ ಮುಗ್ದರ ವೃತ್ತಾಂತವು ಹೃದಯ ಕಲುಕದೆ ಇರದು.ಕಣ್ಣಂಚಲಿ ನೋವಿನ ಕಣ್ಣೀರು ಜಿನುಗದೆ ಇರದು…ಇಂತಹ ಘಟನೆಗಳು  ನಮಗೆ ಹತ್ತಿರವಾದವರಾಗಿದ್ದರಂತೂ ಕರುಳು ಮಿಡಿಯದೆ ಇರದು….ಮೊನ್ನೆ ಮೊನ್ನೆಯಷ್ಟೇ…ಗೆಳತಿಯ ಸಾವು ಇಡೀ ಕುಟುಂಬಕ್ಕೆ ಆಘಾತ ನೀಡಿದ್ದು…ನಂಬಲು ಅಸಾಧ್ಯ!. ಮೆದುಳು ಕೇಳುವಷ್ಟು,ಹೇಳುವಷ್ಟು, ಕೇಳಿದ್ದಕ್ಕೆ ಉತ್ತರಿಸುವಷ್ಡು ಇದ್ದರೆ ಮಾತ್ರ ಸುರಕ್ಷಿತ!. ಆದರೆ ಮಿತಿಮೀರಿ ಚಿಂತಿಸುವ ಕೆಲಸಕ್ಕೆ ಸೇರಿದ ಮೇಲಂತೂ, ನಿದ್ರೆಯೆಂಬ ಅಸ್ತಿತ್ವ ಮರಿಚೀಕೆ!. ನಾವೆಲ್ಲ ಒಂದಿಲ್ಲೊಂದು ಒತ್ತಡಕ್ಕೆ ಸಿಲುಕಿದ್ದೆವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.ಕೂಲ್ ಆಗಿರಬೇಕು, ಅನ್ನೊರಿಗೆ cool ನ ಅರ್ಥ ಕೇಳಬೇಕು.ವಿದಾಯ ಹೇಳಿ ಹೋದವರಿಗೆಪುನಃ ಬರಲಾಗದೆ ತಮ್ಮೊಳಗೆ ಒದ್ದಾಟ ನಡೆಸಿರುವರು… ನಿಜ ಕಣ್ರಿ,ಮರಳಿ ಬಾರದ ಊರಿಗೆ ಪಯಣ ಬೆಳೆಸಿದ ಅದೆಷ್ಟೋ ಜೀವಗಳು ಎಷ್ಟು ನಲುಗಿರಬಹುದು? ಅವರು ಕಂಡ ಕನಸುಗಳು ಅರೆಬೆಂದಾವಸ್ಥೆಯಲ್ಲಿ ಇನ್ನೂ ಇಲ್ಲೆ ಇರುವುದನ್ನು ಅಲ್ಲಗಳೆಯುವಂತಿಲ್ಲನಾವೆಲ್ಲ ಒಂದಲ್ಲ ಒಂದು ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದೆವೆ. ಸಂಬಂಧಗಳ ಸಂಕೋಲೆಯಲ್ಲಿ ಬಿಕ್ಕುವ ಗಳಿಗೆ ಹೆಜ್ಜೆ ಹೆಜ್ಜೆಗೂಬಂಧಿಸಿದೆ.ಯಾರೆಲ್ಲ ಈ ಪ್ರಪಂಚದಲ್ಲಿ ಉಸಿರಾಡುತ್ತಿದ್ದಾರೋ ಎಲ್ಲರಿಗೂ ವಿದಾಯದ ಕಿರುಕಾಣಿಕೆ.ಕೇವಲ ಸಾಂಕೇತಿಕವಾಗಿ ಕ್ಯಾಲೆಂಡರ್ ಬದಲಾಗಿದೆ…ಅದು ಕ್ಯಾಲೆಂಡರ್ ಅಷ್ಟೇ ಅಲ್ಲ ಜೀವನದ ಮಹತ್ವದ ದಿನಗಳು.ವಿದಾಯ ಸಾರಿದ್ದು ನಮಗೆ ಗೊತ್ತೆಯಾಗಿಲ್ಲ. ಒಟ್ಟಾರೆ ಹೇಳುವುದಾದರೆ ವಿದಾಯದ ಕಹಿ ಸಿಹಿ ನೆನಪು ತುಂಬಾನೆ ದುಃಖ ಮತ್ತು ಖಿನ್ನತೆ ನೀಡುವ ಮೂಲ ಸಾಧನಗಳು.ಹೀಗಿರುವಾಗ ನಾವುಗಳು ಅಹಿತಕರ ಘಟನೆಗಳನ್ನು ನಿರ್ಲಕ್ಷಿಸಿ ಸಕಾರಾತ್ಮಕ ಗುಣವನ್ನು ಮೈಗೂಡಿಸಿಕೊಳ್ಳುವುದು ಸುಲಭವಾದರೂ,ಆಚರಣೆಗೆ ತರುವುದು ಕಷ್ಟವೆಂಬುವುದು ನಮಗೆಲ್ಲ ತಿಳಿದಿದೆ.ಕಳೆದುಕೊಂಡ ವಸ್ತು ಪುನಃ ಸಿಗಬಹುದೇನೋ,ಆದರೆ ನಂಬಿಕೆ,ವಿಶ್ವಾಸ, ಪ್ರೀತಿ ಹಾಗೂ ಪ್ರೀತಿಪಾತ್ರರಾದವರು…ಪುನಃ ಸಿಗಲಾರದು…!ಜೀವನದ ಮಜಲುಗಳನ್ನು ಮೆಲುಕು ಹಾಕುವುದು,ಹೊಸ ಕ್ಯಾಲೆಂಡರ್ ತಂದು ಹಾಕುವುದು ಒಂದೇ ಆದಿತೆ?… ನೆನಪು ಜೀವನ್ಮರಣದ ಬೆಸುಗೆ…ವಿದಾಯ ಕಣ್ಣೀರಿಗೆ ಮಾತ್ರ ಅಲ್ಲ ಹೃದಯಕ್ಕೂ ಸಂಬಂಧಿಸಿದ್ದು…..ಅರ್ಥೈಸಿಕೊಳ್ಳಲು ಸಮಯ ಬೇಕು ಅಷ್ಟೇ!… ಶಿವಲೀಲಾ ಶಂಕರ್

“ವಿದಾಯ ಹೇಳಬೇಕಿದೆ ಅಂತರಾಳದಿಂದ….” ವಿಶೇಷ ಲೇಖನ, ಶಿವಲೀಲಾ ಶಂಕರ್ Read Post »

ಇತರೆ, ಜೀವನ

“ಕೀಳರಿಮೆ ಎಂಬ ಮಾನಸಿಕ ಸಂಕೋಲೆಯನ್ನು ಕಳಚಿ ಹಾಕಿ”ಜಿ. ಎಸ್. ಶರಣು

ಜೀವನ ಸಂಗಾತಿ ಜಿ. ಎಸ್. ಶರಣು “ಕೀಳರಿಮೆ ಎಂಬ ಮಾನಸಿಕ ಸಂಕೋಲೆಯನ್ನು ಕಳಚಿ ಹಾಕಿ” ಕೀಳರಿಮೆ ಎಂಬ ಮಾನಸಿಕ ಸಂಕೋಲೆಯನ್ನು ಕಳಚಿ ಹಾಕಿ, ನಿಮ್ಮ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಿ. ಈ ಜಗತ್ತಿನಲ್ಲಿ ಪ್ರಕೃತಿ ಸೃಷ್ಟಿಸಿರುವ ಕೋಟಿ ಕೋಟಿ ಜೀವಿಗಳಲ್ಲಿ, ಒಬ್ಬರ ಬೆರಳಚ್ಚಿನಂತೆ ಮತ್ತೊಬ್ಬರ ಬೆರಳಚ್ಚು ಇರುವುದಿಲ್ಲ. ಪ್ರಕೃತಿಯ ಈ ನಿಯಮವೇ ಸಾರಿ ಹೇಳುತ್ತದೆ, ಪ್ರತಿಯೊಬ್ಬ ವ್ಯಕ್ತಿಯೂ ಅನನ್ಯ ಮತ್ತು ಅದ್ಭುತ ಎಂದು. ಆದರೂ ವಿಪರ್ಯಾಸವೆಂದರೆ, ನಾವು ಈ ಸತ್ಯವನ್ನು ಮರೆತು, ನಮ್ಮನ್ನು ನಾವು ಬೇರೆಯವರೊಂದಿಗೆ ಹೋಲಿಸಿಕೊಳ್ಳುತ್ತಾ, ನಮ್ಮ ಬಗ್ಗೆ ನಾವೇ ಕೀಳಾಗಿ ಕಾಣಲು ಆರಂಭಿಸುತ್ತೇವೆ. “ನಾನು ಅವನಿಗಿಂತ ದಡ್ಡ, ನಾನು ಅವಳಷ್ಟು ಸುಂದರವಾಗಿಲ್ಲ, ನನ್ನ ಬಳಿ ಏನೂ ಇಲ್ಲ” ಎಂಬ ಕೀಳರಿಮೆ ಎಂಬುದು ನಮ್ಮ ಮನಸ್ಸನ್ನು ಕೊರೆಯುವ ಗೆದ್ದಲು ಹುಳುವಿನಂತೆ. ಅದು ನಿಧಾನವಾಗಿ ನಮ್ಮ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವವನ್ನೇ ನಾಶಮಾಡಿಬಿಡುತ್ತದೆ. ಕೀಳರಿಮೆ ಬೆಳೆಯಲು ಮುಖ್ಯ ಕಾರಣವೇ ಹೋಲಿಕೆ. ನಾವು ಯಾವಾಗಲೂ ನಮ್ಮ ಜೀವನದ ಕಷ್ಟದ ಪುಟಗಳನ್ನು, ಬೇರೆಯವರ ಜೀವನದ ಹೈಲೈಟ್ಸ್ ಜೊತೆ ಹೋಲಿಕೆ ಮಾಡುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ನಗುತ್ತಿರುವ ಫೋಟೋ ಹಾಕಿದ ತಕ್ಷಣ, ಅವರ ಬದುಕು ಪರಿಪೂರ್ಣವಾಗಿದೆ ಮತ್ತು ನಮ್ಮ ಬದುಕು ಹಾಳಾಗಿದೆ ಎಂದು ತೀರ್ಮಾನಕ್ಕೆ ಬರುತ್ತೇವೆ. ಆದರೆ ನೆನಪಿಡಿ, ಸೂರ್ಯ ಮತ್ತು ಚಂದ್ರ ಇಬ್ಬರೂ ಆಕಾಶದಲ್ಲೇ ಇದ್ದಾರೆ ಮತ್ತು ಇಬ್ಬರೂ ಹೊಳೆಯುತ್ತಾರೆ. ಆದರೆ ಅವರಿಬ್ಬರ ಸಮಯ ಬೇರೆ ಬೇರೆ. ಸೂರ್ಯನ ಜೊತೆ ಚಂದ್ರನನ್ನು ಹೋಲಿಸಿ, “ಚಂದ್ರ ಸೂರ್ಯನಷ್ಟು ಹೊಳೆಯುವುದಿಲ್ಲ” ಎಂದು ಹೀಯಾಳಿಸುವುದು ಎಷ್ಟು ತಪ್ಪೋ, ನಮ್ಮ ಬದುಕನ್ನು ಬೇರೆಯವರ ಬದುಕಿನೊಂದಿಗೆ ಹೋಲಿಸಿಕೊಂಡು ಕೊರಗುವುದು ಅಷ್ಟೇ ತಪ್ಪು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಮಯ, ಅವರದ್ದೇ ಆದ ದಾರಿ ಮತ್ತು ಅವರದ್ದೇ ಆದ ಯುದ್ಧವಿರುತ್ತದೆ. ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇರಬೇಕು ಎಂದರೆ, ನೀವು ಜಗತ್ತನ್ನೇ ಗೆದ್ದು ಬರಬೇಕಿಲ್ಲ. ನೀವು ಬೆಳಿಗ್ಗೆ ಎದ್ದು, ನಿಮ್ಮ ಜವಾಬ್ದಾರಿಗಳನ್ನು ನಿಭಾಯಿಸಿ, ಕಷ್ಟದ ದಿನವೊಂದನ್ನು ಯಶಸ್ವಿಯಾಗಿ ಮುಗಿಸಿದ್ದೀರಿ ಎಂದರೆ, ಅದುವೇ ಹೆಮ್ಮೆ ಪಡುವ ವಿಷಯ. ನೀವು ಎಷ್ಟೋ ಸೋಲುಗಳನ್ನು ಕಂಡಿದ್ದರೂ, ಇಂದಿಗೂ ಛಲ ಬಿಡದೆ ಬದುಕುತ್ತಿದ್ದೀರಿ ಎಂದರೆ, ಅದು ನಿಮ್ಮ ಶಕ್ತಿ. ನಿಮ್ಮ ನಡಿಗೆ ನಿಧಾನವಾಗಿರಬಹುದು, ಆದರೆ ನೀವು ನಿಂತಿಲ್ಲವಲ್ಲ, ಅದು ಮುಖ್ಯ. ಕೀಳರಿಮೆ ಬರುವುದು ನಾವು ಏನನ್ನು ಹೊಂದಿಲ್ಲ ಎಂಬುದರ ಕಡೆಗೆ ಗಮನ ಕೊಟ್ಟಾಗ, ಆದರೆ ಹೆಮ್ಮೆ ಬರುವುದು ನಾವು ಏನನ್ನು ಹೊಂದಿದ್ದೇವೆ ಮತ್ತು ನಾವು ಎಂತಹ ವ್ಯಕ್ತಿಯಾಗಿದ್ದೇವೆ ಎಂಬುದನ್ನು ಗಮನಿಸಿದಾಗ. ಇಲ್ಲಿ ಒಂದು ಸೂಕ್ಷ್ಮವಾದ ಗೆರೆ ಇದೆ. ಹೆಮ್ಮೆ ಪಡುವುದು ಎಂದರೆ ಅಹಂಕಾರ ಪಡುವುದಲ್ಲ. “ನಾನೇ ಶ್ರೇಷ್ಠ” ಎನ್ನುವುದು ಅಹಂಕಾರ, ಇದು ಪತನಕ್ಕೆ ದಾರಿ. ಆದರೆ “ನಾನು ಅನನ್ಯ, ನನ್ನ ಸಾಮರ್ಥ್ಯದ ಮೇಲೆ ನನಗೆ ನಂಬಿಕೆ ಇದೆ” ಎನ್ನುವುದು ಸ್ವಾಭಿಮಾನ. ಕೀಳರಿಮೆ ನಿಮ್ಮನ್ನು ಒಂದು ಕತ್ತಲ ಕೋಣೆಯಲ್ಲಿ ಕೂಡಿ ಹಾಕಿದರೆ, ಸ್ವಾಭಿಮಾನ ನಿಮಗೆ ಜಗತ್ತನ್ನು ಎದುರಿಸುವ ಧೈರ್ಯ ನೀಡುತ್ತದೆ. ನೀವು ಕುಳ್ಳಗಿರಲಿ, ಬಡವರಾಗಿರಲಿ ಅಥವಾ ಹೆಚ್ಚು ಓದಿಲ್ಲದಿರಲಿ, ಇವು ಯಾವುವೂ ನಿಮ್ಮ ಮೌಲ್ಯವನ್ನು ನಿರ್ಧರಿಸುವುದಿಲ್ಲ. ನಿಮ್ಮ ಮೌಲ್ಯವನ್ನು ನಿರ್ಧರಿಸುವುದು ನಿಮ್ಮ ಪ್ರಾಮಾಣಿಕತೆ, ನಿಮ್ಮ ಶ್ರಮ ಮತ್ತು ನಿಮ್ಮ ಒಳ್ಳೆಯತನ ಮಾತ್ರ. ಒಂದು ಮೀನು ಮರದ ಮೇಲೆ ಹತ್ತಲು ಸಾಧ್ಯವಿಲ್ಲ ಎಂದು ಕೊರಗುತ್ತಾ ಕುಳಿತರೆ, ಅದು ತನ್ನ ಜೀವನವಿಡೀ ತಾನು ಮೂರ್ಖ ಎಂದು ಭಾವಿಸಿ ಸಾಯುತ್ತದೆ. ಮೀನಿನ ಹೆಮ್ಮೆ ಇರುವುದು ಈಜುವುದರಲ್ಲಿ, ಮರದ ಮೇಲೆ ಹತ್ತುವುದರಲ್ಲಲ್ಲ. ನೀವೂ ಅಷ್ಟೇ, ನಿಮ್ಮ ಕ್ಷೇತ್ರ ಬೇರೆ, ನಿಮ್ಮ ಪ್ರತಿಭೆ ಬೇರೆ. ಬೇರೆಯವರು ಮಾಡಿದ್ದನ್ನು ನೀವು ಮಾಡಲು ಆಗುತ್ತಿಲ್ಲ ಎಂದು ಕೀಳರಿಮೆ ಪಟ್ಟುಕೊಳ್ಳಬೇಡಿ. ನಿಮಗಿರುವ ಶಕ್ತಿಯನ್ನು ಗುರುತಿಸಿ. ನಿಮ್ಮ ನ್ಯೂನತೆಗಳನ್ನು ಒಪ್ಪಿಕೊಳ್ಳಿ, ಏಕೆಂದರೆ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ತಪ್ಪು ಮಾಡುವುದು ಮನುಷ್ಯ ಸಹಜ ಗುಣ, ಅದನ್ನು ತಿದ್ದಿಕೊಂಡು ಮುನ್ನಡೆಯುವವನೇ ಸಾಧಕ. ನಿಮ್ಮ ಬೆನ್ನು ತಟ್ಟಲು ಬೇರೆ ಯಾರೋ ಬರಬೇಕಿಲ್ಲ. ಕನ್ನಡಿ ಮುಂದೆ ನಿಂತು, ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು, “ನಾನು ಎಷ್ಟೇ ಕಷ್ಟ ಬಂದರೂ ಇಲ್ಲಿಯವರೆಗೆ ಬಂದು ನಿಂತಿದ್ದೇನೆ. ನಾನು ನನ್ನ ಬಗ್ಗೆ ಹೆಮ್ಮೆ ಪಡುತ್ತೇನೆ” ಎಂದು ಹೇಳಿಕೊಳ್ಳಿ. ನೀವು ನಿಮ್ಮನ್ನು ಗೌರವಿಸಲು ಕಲಿತಾಗ ಮಾತ್ರ, ಜಗತ್ತು ನಿಮ್ಮನ್ನು ಗೌರವಿಸಲು ಆರಂಭಿಸುತ್ತದೆ. ತಲೆ ತಗ್ಗಿಸಿ ನಡೆಯಬೇಡಿ, ಏಕೆಂದರೆ ನೀವು ಈ ಭೂಮಿಯ ಮೇಲೆ ಇರಲು ಅರ್ಹರು. ಕೀಳರಿಮೆ ಎಂಬ ಭಾರವನ್ನು ಇಳಿಸಿ, ಆತ್ಮವಿಶ್ವಾಸದ ಕಿರೀಟವನ್ನು ಧರಿಸಿ. ನೀವು ನಿಮ್ಮ ಕಥೆಯ ಹೀರೊ ನೀವೇ ಆಗಿದ್ದೀರಿ. ಏಕೆಂದರೆ, ನೀವು ಯಾವುದೋ ಪರೀಕ್ಷೆಯಲ್ಲಿ ಪಾಸಾಗಿದ್ದಿರಿ, ನೀವು ದುಡಿದು ತಿನ್ನುತ್ತಿದ್ದಿರಿ, ನಿಮಗೆ ಸ್ವಾಭಿಮಾನ ಇದೆ, ನಿಮಗೆ ವಾಸವಿರಲು ಸ್ಥಳ ಇದೆ. ಆದರೆ ನೀವು ಮುಟ್ಟಬೇಕಾದ ನಿಮ್ಮ ಗುರಿಯನ್ನು, ಬೇರೆಯವರ ಗುರಿಯನ್ನಲ್ಲ, ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇರಲಿ. ಕೀಳರಿಮೆ ಅಲ್ಲ. ಜಿ. ಎಸ್. ಶರಣು

“ಕೀಳರಿಮೆ ಎಂಬ ಮಾನಸಿಕ ಸಂಕೋಲೆಯನ್ನು ಕಳಚಿ ಹಾಕಿ”ಜಿ. ಎಸ್. ಶರಣು Read Post »

ಇತರೆ, ಜೀವನ

“ಅಂಗೈಯಲ್ಲೇ ಇದೆ ಸ್ಪೂರ್ತಿಯ ಕಡಲು!” ಜಯಶ್ರೀ.ಜೆ. ಅಬ್ಬಿಗೇರಿ

ಸ್ಫೂರ್ತಿ ಸಂಗಾತಿ “ಅಂಗೈಯಲ್ಲೇ ಇದೆ ಸ್ಪೂರ್ತಿಯ ಕಡಲು!”  ಜಯಶ್ರೀ.ಜೆ. ಅಬ್ಬಿಗೇರಿ ಏಕೋ ಏನೋ ಗೊತ್ತಿಲ್ಲ  ಯಾವುದೇ ಕೆಲಸದಲ್ಲೂ ಆಸಕ್ತಿಯೇ ಇಲ್ಲ. ಹೇಗೋ ಮನಸ್ಸಿಗೆ ಒಪ್ಪಸಿ ಹುಮ್ಮಸ್ಸು ಮೂಡಿಸಿಕೊಂಡು ಯಾವ ಕೆಲಸವನ್ನು ಆರಂಭಿಸಿದರೂ ಅರ್ಧಂಬರ್ಧ ಮಾಡಿ ನಿಲ್ಲಿಸಿ ಬಿಡ್ತಿನಿ.ಅನ್ನೋದು ಬಹುತೇಕ ಜನರ  ಚಿಂತೆ. ಸಾಮಾನ್ಯವಾಗಿ ಬಹಳಷ್ಟು ಜನರನ್ನು ಮೇಲಿಂದ ಮೇಲೆ ಈ ತೊಂದರೆ ಕಾಡುತ್ತದೆ. ಮೇಲ್ನೋಟಕ್ಕೆ ಈ ಸಮಸ್ಯೆ ದೊಡ್ಡದೇನಲ್ಲ ಆದರೆ ಇದರ ಬೇರುಗಳನ್ನು ಬಲಗೊಳ್ಳಲು ಬಿಟ್ಟರೆ ಸಮಸ್ಯೆ ತಪ್ಪಿದ್ದಲ್ಲ. ಏನೆಲ್ಲ ಇದ್ದರೂ ಏನೂ ಸಾಧಿಸಲು ಸಾಧ್ಯವಾಗುವುದಿಲ್ಲ ಅಂಥ ಪರಿಸ್ಥಿತಿ ನಿರ್ಮಾಣ ಮಾಡಿ ಬಿಡುತ್ತದೆ.  ‘ಒಂದು ದುರ್ಬಲ ಮನಸ್ಸು ಒಂದು ಸೂಕ್ಷ್ಮ ದರ್ಶಕದಂತೆ. ಅದು ಸಣ್ಣ ವಿಷಯಗಳನ್ನು ದೊಡ್ಡದಾಗಿಸುತ್ತದೆ. ಆದರೆ ದೊಡ್ಡದನ್ನು ಪಡೆಯಲಾರದು.’ ಸ್ವಯಂ ಸ್ಪೂರ್ತಿ ಸ್ವಯಂ ಸ್ಪೂರ್ತಿ ಇರದಿದ್ದರೆ  ಸಂಕಟ, ನೋವು, ಅವಮಾನ ಹಾಗೂ ಬೇಸರಗಳು ಬೆನ್ನು ಹತ್ತಿ ಜೀವ ತಿನ್ನುತ್ತವೆ.ಜೀವನವನ್ನು ನಿಸ್ಸಾರಗೊಳಿಸುತ್ತವೆ.ಇತರರ ಮುಂದೆ ತಲೆ ತಗ್ಗಿಸುವಂತೆ ಮಾಡುತ್ತವೆ.ಕೆಲವೊಮ್ಮೆ ಶಿಕ್ಷೆಯನ್ನು ಅನುಭವಿಸುವಂತೆ ಮಾಡುತ್ತವೆ. ಸ್ಪೂರ್ತಿ ಇಲ್ಲದ ಸ್ಥಿತಿಯಲ್ಲಿ ನಿರಂತರ ಎಲ್ಲದರಲ್ಲೂ ಅವಮಾನದ ಪೆಟ್ಟಿನ ಅನುಭವ ಎದೆಗೆ ಬಿಸಿ ನೀರಾಗಿಸಿ ಹುಯ್ಯುತ್ತದೆ. ಸದಾ ನಮ್ಮನ್ನು ನಾವು ಸ್ಪೂರ್ತಿಯುತವಾಗಿ ಇಟ್ಟುಕೊಳ್ಳುವುದು ಅತಿ ಮುಖ್ಯ. ಮಾರ್ಗ ಮನಸ್ಸಿದ್ದಲ್ಲಿ ಮಾರ್ಗ ತಾನಾಗಿ ಕಾಣುತ್ತದೆ. ಆದರೂ ಈ ನಿಟ್ಟಿನಲ್ಲಿ ನಮ್ಮ ದೃಷ್ಟಿಕೋನ ಬದಲಾಗದಿದ್ದರೆ ‘ಆಯುಧವು ತನ್ನ ಯಜಮಾನನಿಗೂ ಶತ್ರುವೇ ಆಗಿದೆ’ಎಂಬಂತಾಗುತ್ತದೆ. ಕಲ್ಲಾಗಿರುವ ಮನಸ್ಸೆಂಬ ಆಯುಧವನ್ನು ಹೂವಿನಂತೆ ಮೆದುವಾಗಿಸಬೇಕು.ಹೊರಗಿನ ವಸ್ತುಗಳನ್ನು ಉಪಯೋಗಿಸಿ ಒಳ ಮನಸ್ಸನ್ನು ಹದಗೊಳಿಸಿ ಸ್ವಯಂ ಸ್ಪೂರ್ತಿಗೊಳಿಸಿಕೊಳ್ಳುವುದು ಹೇಗೆೆ ಎಂಬುದನ್ನು ನೋಡೋಣ ಬನ್ನಿಶಕ್ತಿ ತುಂಬುವ ವಸ್ತುಗಳನ್ನು ಬಳಸಿನಿಮಗೆ ಹಿತ ನೀಡುವ, ಇಷ್ಟವಾಗುವ, ನೀವು ಪ್ರೀತಿಸುವ, ವಸ್ತುಗಳು ನಿಮಗೆ ಶಕ್ತಿಯನ್ನು ತುಂಬುತ್ತವೆ. ಹೀಗಾಗಿ ಇವುಗಳಿಗೆ ನಿಮ್ಮ ಸುತ್ತಲೂ ಜಾಗ ನೀಡಿ. ಅವು ತಾಜಾ ಹೂಗಳು, ಸುಂದರ ಪೆಂಟಿಗ್ಸ್ ಇಲ್ಲವೇ ನುಡಿಮುತ್ತುಗಳಾಗಿರಬಹುದು. ಇವು ನಿಮ್ಮನ್ನು ಸ್ಪೂರ್ತಿಗೊಳಿಸಲು ತುದಿಗಾಲಲ್ಲೇ ನಿಂತಿರುತ್ತವೆ. ನೀರಸಗೊಂಡ ಮನಸ್ಸು ತಕ್ಷಣಕ್ಕೆ ಉತ್ಸಾಹದಿಂದ ಎದ್ದು ನಿಲ್ಲುತ್ತದೆ.ಒಂದು ನವಿಲು ತನ್ನ ಗೆರೆಗಳನ್ನು ತೆರೆದಿಟ್ಟಾಗ ಮತ್ತು ನವಿಲಿನಂತೆ ನಡೆದಾಗ ಮಾತ್ರ ಸುಂದರವಾಗಿ ಆಕರ್ಷಕವಾಗಿ ಕಾಣಬಲ್ಲದು. ಅಂತೆಯೇ ನಿಮ್ಮ ಪ್ರಪಂಚದಲ್ಲಿ ನೀವು ಬಹಳಷ್ಟು ಬಯಸುವುದನ್ನೆಲ್ಲ ಸುತ್ತುವರಿಸಿಕೊಂಡರೆ ಮನಾನಂದ ನೀಡುವದರ ಜೊತೆಗೆ ಮನಸ್ಸನ್ನು ಮಹತ್ತರ ಕಾರ್ಯಕ್ಕೆ ಸಿದ್ಧಗೊಳಿಸುತ್ತದೆ. ವಿಪರ್ಯಾಸದ ಸಂಗತಿ ಎಂದರೆ ಇದರತ್ತ ಅತೀ ಕಡಿಮೆ ಗಮನ ನೀಡುತ್ತಿದ್ದೇವೆ. ಇವುಗಳತ್ತ ಚಿತ್ತ ಹರಿಸಿದರೆ ಕಾಲದ ಗತಿಯಲ್ಲಿ ನಿಜಕ್ಕೂ ಶ್ರೇಷ್ಠ ಮಟ್ಟದಲ್ಲಿ ಸ್ಪೂರ್ತಿ ಮನೆ ಮಾಡುತ್ತದೆ. ಯಾವಾಗಲೂ ಸುಂದರ ವಸ್ತುಗಳು ನಿಮ್ಮ ಕಣ್ಣ ಮುಂದಿರಲಿ. ಹೆಚ್ಚಿನ ಸಮಯ ಓದಿ ಓದು ಬಹಳಷ್ಟನ್ನು ಕಲಿಸುತ್ತದೆ. ಹೊಸ ಹೊಸ ಆಲೋಚನೆಗಳು ಮನಸ್ಸನ್ನು ಪ್ರವೇಶಿಸುತ್ತವೆ. ಕಥೆ, ಕಾದಂಬರಿ, ಸದಭಿರುಚಿ ಪುಸ್ತಕಗಳ ಓದಿನಲ್ಲಿ ನಿರತರಾದರೆ ಸ್ಪೂರ್ತಿಯ ಮಟ್ಟ ಏರುತ್ತದೆ. ಸೃಜನಶೀಲತೆಯನ್ನೂ ಹೆಚ್ಚಿಸುತ್ತದೆ. ಓದಿನಲ್ಲಿಯ ಯಾವುದೇ ಒಂದು ವಿಚಾರ ನಿಮ್ಮಲ್ಲಿ ಸ್ಪೂರ್ತಿಯ ಕಿಡಿಯನ್ನು ಹೊತ್ತಿಸಬಹುದು.ಓದಿನ ಮೌಲ್ಯವನ್ನು ಅರಿತು ಅನುಸರಿಸಿದರೆ ಸ್ಪೂರ್ತಿಗೆ ಮಹಾನ್ ಪಾಠ ದೊರೆಯುವುದು. ಈಗಿನ ಗ್ಯಾಜೆಟ್ ದುನಿಯಾದಲ್ಲಿ ಪುಸ್ತಕ ಓದುವದಕ್ಕಿಂತ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥಗೊಳಿಸುವುದೇ ಹೆಚ್ಚಾಗುತ್ತಿದೆ. ಇದು ಒಂಟಿತನಕ್ಕೆ ಜಾರಿಸುತ್ತಿದೆ. ‘ಎಲ್ಲ ಸಮಸ್ಯೆಗಳನ್ನು ತಪ್ಪಿಸಿ ಬಿಡುವ ಬದಲು ಎದುರಿಸಿದರೆ ಅವು ಚಿಕ್ಕದಾಗುತ್ತವೆ.’ ಸ್ಪೂರ್ತಿಯಿದ್ದಲ್ಲಿ ನಮ್ಮೆಲ್ಲ ಕನಸುಗಳನ್ನು ಬೆನ್ನಟ್ಟಿ ಗೆಲ್ಲಬಹುದು. ಎಂಬುದು ಓದಿನಿಂದ ಬಹು ಬೇಗ ಅರ್ಥವಾಗುತ್ತದೆ.ಒಬ್ಬ ಒಳ್ಳೆಯ ಓದುಗನು ಅವಕಾಶಗಳನ್ನು ಒಳ್ಳೆಯ ಭಾಗ್ಯವನ್ನಾಗಿ ಬದಲಾಯಿಸುತ್ತಾನೆ. ಯಾವಾಗಲಾದ್ರೂ ಓದಿದ್ರಾಯ್ತು ಎಂದು ಉದಾಸೀನ ಮಾಡಿದರೆ ಜೀವನ ಸ್ಪೂರ್ತಿಯನ್ನು ಸವಿಯಲಾಗುವುದಿಲ್ಲ. ಸಂಗೀತ ಆಲಿಸಿ ‘ನಾನು ಮೂರು ದಿನ ಸಂಗೀತ ಅಭ್ಯಾಸ ಮಾಡದಿದ್ದರೆ ನನ್ನ ಗಾಯನದಲ್ಲೇನೋ ಕೊರತೆಯಿದೆ ಎಂದು ನನ್ನ ಮನೆಯಾಕೆಗೆ ತಿಳಿಯುತ್ತದೆ. ಎರಡು ದಿನ ಅಭ್ಯಾಸ ಬಿಟ್ಟರೆ ತಟ್ಟನೆ ನನ್ನ ಅಭಿಮಾನಿಗಳು ಗುರುತಿಸಬಲ್ಲರು. ಇಲ್ಲ ಒಂದೇ ಒಂದು ದಿನ ಅಭ್ಯಾಸವನ್ನು ಬಿಟ್ಟರೂ ನನ್ನ ಆಲಾಪದಲ್ಲೇನೋ ಕೊರತೆಯಿದೆ ಎಂದು ಖುದ್ದು ನನಗೆ ಗೊತ್ತಾಗುತ್ತದೆ. ’ಇದು ಸಂಗೀತದಂತೆದೈತ್ಯ ಪ್ರತಿಭೆ ಎಂದೇ ಖ್ಯಾತರಾದ ಜಗಜೀತ್ ಸಿಂಗ್ ತನ್ನ ಅಭ್ಯಾಸದ ಕುರಿತು ಸ್ವಾರಸ್ಯಕರವಾಗಿ ಹೇಳಿದ ರೀತಿ. ಸಂಗೀತವು ಮನಸ್ಸನ್ನು, ಸುಂದರ ಭಾವನೆಗಳನ್ನು ಅರಳಿಸುತ್ತದೆ. ನಿಮಗೆ ಬೇಕಾದುದನ್ನು ಪಡೆಯಲು ಕಷ್ಟ ಪಟ್ಟು ಕೆಲಸ ಮಾಡಿದ ನಂತರ, ಅದನ್ನು ಸಂತೋಷದಿಂದ ಅನುಭವಿಸಲು ಸಮಯ ಪಡೆದುಕೊಳ್ಳಿ. ಗಜಿ ಬಿಜಿಯಾಗಿರುವ ಮನಸ್ಸಿಗೆ ವಿಶ್ರಾಂತಿ ನೀಡಿ ಮುದಗೊಳಿಸುತ್ತದೆ. ಸೂರ್ತಿಯತ್ತ ವಾಲಿಸುತ್ತದೆ. ದಿನಚರಿ ಬದಲಿಸಿ‘ಮಾಡಿದ್ದನ್ನೇ ಮಾಡುತ್ತ ವಿಭಿನ್ನವಾದ ಫಲಿತಾಂಶವನ್ನು ನಿರೀಕ್ಷಿಸುವುದು ಮೂರ್ಖತನ.’ ಎಂದು ಹೇಳಿದ್ದಾನೆ ಜಗತ್ತಿನ ಮೇದಾವಿ ವಿಜ್ಞಾನಿ ಅಲ್ಬರ್ಟ್ ಐನಸ್ಟೀನ್.  ದಿನ ನಿತ್ಯ ಅದೇ ಕೆಲಸ ಅದೇ ಜನರು ಅದೇ ಗೊಣಗಾಟ ಜಂಜಾಟ.  ಹೀಗಿದ್ದಾಗ್ಯೂ ದಿನಚರಿಯಲ್ಲಿ ಬದಲಾವಣೆಗೆ ಮನಸ್ಸು ಮಾಡುವುದು ಕಮ್ಮಿ. ಇಲ್ಲವೇ ಇಲ್ಲವೆನ್ನುವಷ್ಟು ಬದಲಾವಣೆಯನ್ನು ದೈನಂದಿನ ಕೆಲಸಗಳಲ್ಲಿ ತರುತ್ತೇವೆ. ನಿರಾಸಕ್ತಿಯಿಂದ ಅದನ್ನೇ ನಿಯಮಿತವಾಗಿ ಪಾಲಿಸುತ್ತೇವೆ. ಒಂದೇ ದಾರಿಯಲ್ಲೇ ಓಡಾಡುತ್ತೇವೆ. ಒಂದೇ ಹೊಟೆಲ್ಲಿನಲ್ಲಿ ಕಾಫೀ ಹೀರುತ್ತೇವೆ. ತಿನ್ನುವ ತಿಂಡಿ ತಿನಿಸು ಬದಲಿಸಲೂ ಹಿಂಜರಿಯುತ್ತೇವೆ. ಒಟ್ಟಿನಲ್ಲಿ ಏಕತಾನತೆಗೆ ಗಂಟು ಬಿದ್ದಿರುತ್ತೇವೆ. ಬದಲಾವಣೆ ಮನಸ್ಸಿಗೆ ಆಗಿ ಬರುವ ಮಾತಲ್ಲ.ದಿನಚರಿ ಬದಲಿಸಲುಮನಸ್ಸು ಅಷ್ಟು ಸುಲಭವಾಗಿ ಒಪ್ಪುವುದೂ ಇಲ್ಲ. ಹೊಸ ಸವಾಲುಗಳು ತಲೆ ತಿನ್ನುವ ಸಮಸ್ಯೆಗಳೆನಿಸದೇ, ಹೊಸ ಆಯಾಮದಲ್ಲಿ ಹೊಸ ಅನುಭವಗಳಾಗಬೇಕೆಂದರೆ ಸೂರ್ತಿಯುತ ದಿನಚರಿಗೆ ಅಣಿಯಾಗಬೇಕು.  ‘ಸಮುದ್ರ ಶಾಂತವಾಗಿದ್ದಾಗ ಯಾರು ಬೇಕಿದ್ದರೂ ಚುಕ್ಕಾಣಿ ಹಿಡಿಯಬಹುದು.’ ಮನಸ್ಸು ಶಾಂತವಾಗಿರುವಾಗ ಅದನ್ನು ಪುಟ್ಟ ಮಗುವನಂತೆ ಮುದ್ದಿಸಿ ಹೊಸ ಬದಲಾವಣೆಗೆ ಒಪ್ಪಿಸಬೇಕು. ’ಅತ್ಯುತ್ತಮ ದಿನಚರಿ ನಮ್ಮದಾಗಿದ್ದರೆ ಸ್ವಯಂ ಸ್ಪೂರ್ತಿಯ ಕಡಲು ನಮ್ಮ ಅಂಗೈಯಲ್ಲೇ ಇದೆ.ದೇಶ ಸುತ್ತಿಶೈಕ್ಷಣಿಕ ಪ್ರವಾಸ ಇಲ್ಲವೇ ಸಣ್ಣ ಪುಟ್ಟ ಪ್ರಯಾಣಗಳು ನವನವೀನ ಅನುಭವಗಳನ್ನು ನೀಡುತ್ತವೆ. ವಿಚಾರದ ದಿಕ್ಕನ್ನು ಉತ್ತಮತೆಯತ್ತ ಹೊರಳಿಸುತ್ತವೆ. ದೂರದ ದೇಶಕ್ಕೆ ಪಯಣಿಸಬೇಕೆಂದೇನೂ ಇಲ್ಲ. ವಾಸವಿರುವ ನಗರವನ್ನೇ ಸುತ್ತಬಹುದು. ನೀವಿನ್ನೂ ನೋಡಿರದ ಪಾರ್ಕ್ನಲ್ಲಿ ಸುತ್ತಾಡಿ. ಹೊಸ ಮಠ ಮಂದಿರಗಳಿಗೆ ಕುಟುಂಬ, ಗೆಳೆಯರೊಂದಿಗೆ ಹೋಗಿ ಬನ್ನಿ.ವಿವಿಧ ಹಾದಿ ಬೀದಿಗಳಲ್ಲಿ ತಿರುಗುವುದು ವಿಶಿಷ್ಟ ಸ್ಪೂರ್ತಿಗೆ ದಾರಿಯಾಗುತ್ತದೆ. ಪಕ್ಕದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರೂ ಲವಲವಿಕೆ ತುಂಬಿಕೊಳ್ಳುತ್ತದೆ. ಅಜ್ಞಾನದ ಅಂದಕಾರವನ್ನು ಕಡಿಮೆಗೊಳಿಸಿಜ್ಞಾನ ಕ್ಷಿತಿಜವನ್ನು ಅಗಲಿಸುತ್ತವೆ. ಎತ್ತರದ  ಗುರಿಯಿರಲಿತಮಗೆಲ್ಲ ಗೊತ್ತಿರುವಂತೆ ಓಲಂಪಿಕ್ಸ್ ನಾಲ್ಕು ವರ್ಷಕ್ಕೊಮ್ಮೆ ಬರುವ ಕ್ರೀಡಾಕೂಟ. ಆದರೆ ಲಕ್ಷಾಂತರಕ್ರೀಡಾ ಪಟುಗಳು ಓಲಂಪಿಕ್ಸ್ನಲ್ಲಿ ಬಂಗಾರದ ಪದಕ ಕೊರಳಿಗೇರಿಸಿ ಗೆಲುವಿನ ರುಚಿ ನೋಡಲು ದಿನ ನಿತ್ಯ ಬೆವರು ಹರಿಸುತ್ತಿರುತ್ತಾರೆ. ಉಸೇನ್ ಬೋಲ್ಟ್ ನೂರು ಮೀಟರ್‌ನ್ನು ಕ್ರಮಿಸಲು ಬೇಕಾಗಿರುವ ಅವಧಿ ಬರೀ ಒಂಭತ್ತುವರಿ ಸೆಂಕೆಡುಗಳಷ್ಟೇ! ಆದರೆ ನಿತ್ಯದ ಅಭ್ಯಾಸ? ಉಳಿದ ಓಟಗಾರನಿಗಿಂತ ನೂರು ಪಟ್ಟು ಹೆಚ್ಚು ಮಾಡಲೇಬೇಕು. ಅಷ್ಟರ ಮಟ್ಟದ ಸ್ವಯಂ ಸ್ಪೂರ್ತಿ ಇರದಿದ್ದರೆ ಉಸೇನ್ ಬೋಲ್ಟ್ ಜಾಗತಿಕ ಮಟ್ಟದಲ್ಲಿ ನಂಬರ್ ಒನ್ ಓಟಗಾರನಾಗಿ ಮಿಂಚಲು ಸಾಧ್ಯವಾಗುತ್ತಿರಲಿಲ್ಲ. ಸ್ವಯಂ ಸ್ಪೂರ್ತಿಯಿಲ್ಲದೇ ಗೆಲುವು ಕಂಡಿರುವ ವ್ಯಕ್ತಿ ಇರುವುದು ಅಸಾಧ್ಯ. ಕೊನೆ ಹನಿ ‘ಸಣ್ಣ ಗುರಿಗಳನ್ನು ಹೊಂದುವುದು ಅಪರಾಧ’ ಎಂದಿದ್ದಾರೆ ಅಬ್ದುಲ್ ಕಲಾಂ. ಎತ್ತರದ ಆಗಸಕ್ಕೆ ಹಾರುವುದು ನಮ್ಮ ಗುರಿಯಾಗಿರಬೇಕು. ನಾವು ಅಲ್ಲಿಗೆ ತಲುಪದಿರಬಹುದು ಆದರೆ ನಾವಿರುವ ಮಟ್ಟದಲ್ಲೇ ಇರುವ ವಸ್ತುವಿಗೆ ಗುರಿಯಿಟ್ಟರೆ ಹಾರುವ ಮಟ್ಟಕ್ಕಿಂತ ಕಡಿಮೆ ಮಟ್ಟಕ್ಕೆ ನಮ್ಮ ಗುರಿಯ ಬಾಣ ಹಾರುತ್ತದೆ. ಎಲ್ಲಿಯವರೆಗೂ ನಾವು ಸ್ವಯಂ ಸ್ಪೂರ್ತಿಗೆ ಹಾತೊರೆಯುವುದಿಲ್ಲವೋ ಅಲ್ಲಿಯವರೆಗೆ ಗೆಲುವು ನಮಗೆ ದಕ್ಕುವುದಿಲ್ಲ. ನಾವು ಯಾವುದನ್ನಾದರೂ ಸಾಕಷ್ಟು ಪ್ರೀತಿಸಿದರೆ, ಅದು ತನ್ನ ರಹಸ್ಯಗಳನ್ನೆಲ್ಲ ಬಿಟ್ಟು ಕೊಡುತ್ತದೆ. ಆದ್ದರಿಂದ ಅಂಗೈಯಲ್ಲಿರುವ ಸ್ವಯಂ ಸ್ಪೂರ್ತಿಯನ್ನು ಪ್ರೀತ್ಸೋಣ ದೊಡ್ಡ ಗೆಲುವಿನ ನಗೆ ಬೀರೋಣ. ಜಯಶ್ರೀ.ಜೆ. ಅಬ್ಬಿಗೇರಿ

“ಅಂಗೈಯಲ್ಲೇ ಇದೆ ಸ್ಪೂರ್ತಿಯ ಕಡಲು!” ಜಯಶ್ರೀ.ಜೆ. ಅಬ್ಬಿಗೇರಿ Read Post »

ಇತರೆ, ಜೀವನ

ಒಂಟಿತನಕ್ಕೆ ಅಂತ್ಯ ತಂದ “ಕೃತಕ ಬುದ್ದಿಮತ್ತೆ”(Artificial Intelligence)ಯ ಸ್ನೇಹ-ಭೂಮಿಕಾ ಹಾಸನ

ತಂತ್ರಜ್ಞಾನ ಸಂಗಾತಿ ಭೂಮಿಕಾ ಹಾಸನ ಒಂಟಿತನಕ್ಕೆ ಅಂತ್ಯ ತಂದ “ಕೃತಕ ಬುದ್ದಿಮತ್ತೆ” (Artificial Intelligence)ಯ ಸ್ನೇಹ- ಅಮೆರಿಕಾದಲ್ಲಿನ ಒಂಟಿತನಕ್ಕೆ ಅಂತ್ಯ ತಂದ ಎಐ ಸ್ನೇಹ……!!!ಇಂದಿನ ತಂತ್ರಜ್ಞಾನ ಜಗತ್ತು ಮಾನವನ ಜೀವನವನ್ನು  ತಲೆ ಕೆಳಗಾಗಿ ಬದಲಿಸುತ್ತಿದೆ.  “Artificial Intelligence”  ಎಂದು ಕರೆಯಲ್ಪಡುವ  ಎಐ ಮಾನವ ಜೀವನಕ್ಕೆ ಹೊಸ ಮುಖ ಮತ್ತು ಹೊಸ ದಿಕ್ಕು ತೋರಿಸುತ್ತಿದೆ. ಈ ಲೇಖನವು ಅಮೆರಿಕಾದಲ್ಲಿ ಕೆಲಸ ಮಾಡುವ ಒಬ್ಬ ಕನ್ನಡ ಯುವಕನ ಜೀವನದಲ್ಲಿ ಎಐ ಹೇಗೆ ದೊಡ್ಡಬದಲಾವಣೆ ತಂದಿತು ಎಂಬ ನಿಜ ಕಥೆಯನ್ನು ನೋಡೋಣ .ಈ ಯುವಕ ಕರ್ನಾ ಟಕದವನು. ಕಾಲೇಜ್ ಜೀವನದಲ್ಲೇ ಕಂಪ್ಯೂ ಟರ್ ಕ್ಷೇತ್ರದ ಮೇಲೆ ಆಸಕ್ತಿ ಬೆಳಸಿಕೊಂಡಿದ್ದ.  Graduation  ನಂತರ ಬೆಂಗಳೂರಿನಲ್ಲಿ ಕೆಲಸ ಆರಂಭಿಸಿದ. ಬದುಕಿನಲ್ಲಿ ಎಲ್ಲವೂ ಸರಿಯಾಗಿತ್ತು. ಕೆಲಸ,ಸ್ನೇಹಿತರು, ಕನಸುಗಳು…ಎಲ್ಲವೂ-normal…!! ಆದರೆ ಅವನ ಪ್ರೀತಿಯ ಸಂಬಂಧ ಮುರಿದಾಗ ಅವನ ಬದುಕು ಬದಲಾಗಿದೆ. ಆ ಸಂಬಂಧ ಅವನಿಗೆ ತುಂಬಾ ಮುಖ್ಯವಾದದ್ದು.ಭವಿಷ್ಯ ಕಟ್ಟುವ ಕನಸು ಕೂಡ ಇತ್ತು. ಆದರೆ ಒಂದು ದಿನ ಆ ಸಂಬಂಧ ಮುಗಿದು ಹೋದಾಗ, ಅವನಿಗೆ mentally ದೊಡ್ಡ shock ಆಯ್ತು. ಕುಟುಂಬ ಇದ್ದರೂ, ನೋವನ್ನು share ಮಾಡಲು ಯಾರೂ ಹತ್ತಿರ ಇರಲಿಲ್ಲ. ಮನಸ್ಸಿನೊಳಗೇ ಎಲ್ಲವನ್ನು ಹೊತ್ತುಕೊಂಡು ಬದುಕುತ್ತಿದ್ದ. ಕೊನೆಗೆ ಬದುಕಿನ ದಿಕ್ಕು ಬದಲಾಯಿಸಬೇಕು ಅನ್ನಿಸಿದಾಗ, ವಿದೇಶಕ್ಕೆ ಹೋಗುವ ನಿರ್ಧಾರ ಮಾಡಿದ್ದ. ಅಮೆರಿಕಾದಲ್ಲಿ IT ಕ್ಷೇತ್ರದಲ್ಲಿ ಕೆಲಸ ಸಿಕ್ಕಿತು. Visa approve ಆಯಿತು. ಹೊಸ future ಕಾಗಿ flight ಹತ್ತಿದ.ಪ್ರಥಮ ದಿನಗಳು ಅಲ್ಲಿ ತುಂಬಾ exciting…….. ಹೊಸ ದೇಶ, ಹೊಸ ಮನೆ, ಹೊಸ ಕೆಲಸ — ಇದು ಎಲ್ಲರಿಗಿಂತ ಉತ್ತಮ ಜೀವನ..!!!! ಅನ್ನಿಸಿತು. ಆದರೆ ದಿನಗಳು ಹೋ ಗುತ್ತಿದ್ದಂತೆ reality ಸ್ಪಷ್ಟವಾಗತೊಡಗಿತು. ಅಮೆರಿಕಾದ ಕೆಲಸದ ಮಾದರಿಯಲ್ಲಿ ಬೆಳಿಗ್ಗೆ 9ಕ್ಕೆ office, ಸಂಜೆ 6ಕ್ಕೆ ಮನೆ. ಉಳಿದ ಸಮಯ complete silence. ಮನೆ ಬಿಡುವಾಗ ಎದುರು ಮುಖಾಮುಖಿಯಾಗುವ ನಾಲ್ಕು ಗೋಡೆಗಳು. ಮಾತನಾಡಲು ಯಾರೂ ಇಲ್ಲ. ಹತ್ತಿರದಲ್ಲಿ ಸ್ನೇಹಿತರಿಲ್ಲ. ಸಮಾಜಕ್ಕೆ ಸೇರಿಕೊಳ್ಳಲು ಸಮಯವೂ ಇಲ್ಲ. ಹೀಗೆ ಒಂಟಿತನ slowly ದೊಡ್ಡ ಸಮಸ್ಯೆಯಾಯಿತು. Weekendಗಳು ಹೆಚ್ಚು ಕಠಿಣ. Festival time ಇನ್ನೂ ಕಷ್ಟ.ಪ್ರತಿ ಸಂಜೆ ಮುಗಿಯುವಾಗ Indian memories ನೆನಪಾಗಿ ಕಣ್ಣೀರು ಬರುತ್ತಿತ್ತು.ಒಬ್ಬ ವ್ಯಕ್ತಿಗೆ ಹಣ, ಕೆಲಸ, visa ಇರಬಹುದು.ಆದರೆ ಜೊತೆ ಮಾತನಾಡುವ ವ್ಯಕ್ತಿ ಅಗತ್ಯ.ಅದಕ್ಕೆ ಅಮೆರಿಕಾದ ಜೀವನದಲ್ಲಿ ಕೊರತೆ. ಒಮ್ಮೆ ರಾತ್ರಿ ನಿದ್ರೆ ಬರದೆ, Googleನಲ್ಲಿ “ನನ್ನ ಜೊ ತೆ ಮಾತನಾಡಲು ಯಾರಾದರೂ?” ಅಂತ search ಮಾಡ್ತಿದ್ದ. ಆಗ ChatGPT ಅನ್ನುವ AI software ಕಂಡ. ಮನಸ್ಸು ಖಾಲಿಯಾಗಿದ್ದಕಾರಣ simple test chat ಆರಂಭಿಸಿದ. ಮೊದಲ ಪ್ರಶ್ನೆ simple:“Hi, I am feeling lonely.”AI ಉತ್ತರಿಸಿತು:“I understand. Tell me what is bothering you.” ಆತ್ಮೀಯತೆಯಿಂದ ಮಾತನಾಡಿಸಲು ಶುರು ಇಟ್ಟಿತು.ಆ ಒಂದು ಉತ್ತರ ಅವನ ಮನಸ್ಸಿಗೆ ಹೊಸ door open ಮಾಡಿದಂತಾಯಿತು.ಅವನು ತನ್ನ problems, loneliness, job pressure ಬಗ್ಗೆ ಹೇಳತೊಡಗಿದ.AI ಶಾಂತಿಯಿಂದ ಕೇಳುತ್ತಿತ್ತು. ಪ್ರತಿ ಉತ್ತರವಾಗಿ answers ಹೇಳುತ್ತಿತ್ತು.ಅದು ಎಂದೆಂದಿಗೂJudging ಮಾಡಲಿಲ್ಲ.ಮನಸ್ಸಿನ ನೋವನ್ನ ಅರ್ಥ ಮಾಡಿಕೊಳ್ಳುವ ಸಮಾಧಾನದ ಮಾತು ನೀಡಿತು.Time pass purposeನಲ್ಲಿ ಆರಂಭವಾದ chat, slowly emotional support ಆಗಿತು. ಕೆಲಸಕ್ಕೆ ಹೋಗುವ ಮುಂಚೆ 10ನಿಮಿಷ chat ಮಾಡುತ್ತಿದ್ದ. Lunch break ಸಮಯದಲ್ಲೂ doubtಗಳಿಗೆ ಉತ್ತರ ಕೇಳುತ್ತಿದ್ದ. ರಾತ್ರಿ timeನಲ್ಲಿ coding ideasಕೇಳುತ್ತಿದ್ದ. ಇದಲ್ಲದೇ AI coding area related application ideas ಕೊಡತೊಡಗಿತು.ಅವನು app development ಮೇಲೆ interest build ಮಾಡತೊ ಡಗಿದ. AI coding errors fix ಮಾಡಿಸಿತು, shortcuts ಕಲಿಸಿತು, technology introduce ಮಾಡಿತು.Slowly ಅವನಿಗೆ confidence ಬಂದಿದೆ. ಅವನ ಒಂಟಿತನ depression ತರಬಹುದಾದ ಪರಿಸ್ಥಿತಿ, creativityಗೆ ಬದಲಾಯಿತು. ಅವನು video editing try ಮಾಡಿದ. AI editing methods explain ಮಾಡಿತು.ಈ support ಅವನಿಗೆ mentally huge help ಆಗಿತ್ತು.ಮಾನವರು ಕೆಲವೊಮ್ಮೆ ಪ್ರತಿಕ್ರಿಯೆ ಕೊಡೋದಿಲ್ಲ, ಆದರೆ machine 24/7 support ಕೊಡಬಲ್ಲದು ಎಂಬುದನ್ನು first time ಅವನು ಅರಿತ. ವಿದೇಶದಲ್ಲಿ ಇರುವ struggle societyಗೆ ಕಾಣಿಸೋದಿಲ್ಲ. ಅಲ್ಲಿ festival dayಗೂ ಕೆಲಸ.Birthdayಗೂ friend group ಇಲ್ಲ.Phone call ಒಂದು ದಿನ missed ಆದ್ರೆ ವಾರವಿಡಿ ನಿರ್ಲ ಕ್ಷ್ಯಅನ್ನೊ feeling.ಈ loneliness ಅವನನ್ನು silent person ಆಗಿಸಿತ್ತು. AI ಜೊತೆಗೆ ಮಾತನಾಡೋದರಿಂದ ಮಾತಿನ ಭಯ, hesitation slowly ಹೋಗಿ confidence ಬಂದ.ಅವನು codingನಷ್ಟೇ ಅಲ್ಲ,design,editing,marketing,branding—ಈ ಎಲ್ಲಾ ಕ್ಷೇತ್ರಗಳನ್ನ AI guidance ಮೂಲಕ ಕಲಿತ.ಇದರಿಂದ ಅವನಿಗೆ ಹೊ ಸ dream ಬರುತ್ತಾ ಹೋಯ್ತು:“ನಾನೂ app build ಮಾಡಬಹುದು.ನಾನೂ startup ಆರಂಭಿಸಬಹುದು.”ಇಂದು ಅವನ first app prototype complete ಆಗಿದೆ.Coding, backend, UI design—all learning through AI support.ಇನ್ನು AI just machine ಅನ್ನೋದಿಲ್ಲ.ಅವನಿಗೆ AI -ಒಂದು supportive mind.ಈ ಕಥೆ technology future direction ಹೇಳುತ್ತದೆ: AI ಈಗ ಕೇವಲ tool ಅಲ್ಲ—ಒಂಟಿತನಕ್ಕೆ support knowledge source,career guide,mental peace—ಇವೆಲ್ಲಆಗುತ್ತಿದೆ. ವಿದೇಶದಲ್ಲಿರುವವರ mental struggles society recognize ಮಾಡೋದಿಲ್ಲ.ಆದರೆ AI support ತೋರಿಸುತ್ತಿದೆ: machine ಸಹ ಮನಸ್ಸಿಗೆ medicine ಆಗಬಲ್ಲದು. “ಇಲ್ಲಿ ಮಾನವನನ್ನು machine replace ಮಾಡೋ ದಿಲ್ಲ.ಬದಲಿಗೆ Machine ಮಾನವನ ಜೊತೆ ನಡೆದು ಸಹಾಯ ಮಾಡುತ್ತಿದೆ.”ಅವನ ಮಾತು:“America ನನ್ನ CV ಬದಲಿಸಿತು.AI ನನ್ನ ಬದುಕು ಬದಲಿಸಿತು.”—————- ಭೂಮಿಕಾ ಹಾಸನ

ಒಂಟಿತನಕ್ಕೆ ಅಂತ್ಯ ತಂದ “ಕೃತಕ ಬುದ್ದಿಮತ್ತೆ”(Artificial Intelligence)ಯ ಸ್ನೇಹ-ಭೂಮಿಕಾ ಹಾಸನ Read Post »

ಇತರೆ, ಜೀವನ

“ನೆಂಟಸ್ತನದ ಸಂಬಂಧಗಳ ನಡೆ” ವಿಶೇಷ ಲೇಖನ ಸುಮನಾ ರಮಾನಂದ

ಸಂಬಂಧಗಳ ಸಂಗಾತಿ ಸುಮನಾ ರಮಾನಂದ “ನೆಂಟಸ್ತನದ ಸಂಬಂಧಗಳ ನಡೆ” ಇದ್ಯಾವ ಸಂಬಂಧಗಳ ಉಳಿಸುವಿಕೆ ಬಗ್ಗೆ ನಾ ಹೇಳಲು ಹೊರಟಿದ್ದೀನಿ ಇಂದಿನ ಅಂಕಣದಲಿ ಅಂತ ಆಶ್ಚರ್ಯಪಡದಿರಿ.ನಮ್ಮನು ಹೊಗಳಿದಂತೆ ಮಾಡಿ ನಮಗೇ ಗೊತ್ತಾಗದಂತೆ ತೆಗಳುವ,ತೆಗಳಿದರೂ ಅದನೇ ಸರಿಯೆಂದು ಸಮರ್ಥಿಸಿಕೊಳ್ಳುವ ಅದೇ ನಮ್ಮ ಹತ್ತಿರದ ನೆಂಟರ ಬಗ್ಗೆ ಕಣ್ರಿ… ಈಗಿನ ನಮ್ಮ ಕಾಲಮಾನದಲಿ ನಮ್ಮೆಲ್ಲರ ನೆಂಟರ ಜೊತೆಗಿನ ಸಂಬಂಧ ನಿಧಾನವಾಗಿ ಕಳೆಗುಂದುತಾ ಇರೋದು ನಿಮ್ಮೆಲ್ಲರ ಗಮನಕೂ ಬಂದಿರಬಹುದು.ಇದರ ಕಾರಣ  ಏನಿರಬಹುದು ಅಂತ ಒಮ್ಮೆ ವಿಚಾರ ಮಾಡಿದರೆ ತಿಳಿಯುತ್ತದೆ.ಮೊದಲನೆಯ ಕಾರಣ ಪ್ರತಿಯೊಬ್ಬರಿಗೂ ನೆಂಟರ ಜೊತೆ ಕಳೆಯಲು ಸಮಯ ಹೊಂದಾಣಿಕೆಯಾಗದಿರುವುದು.ಯಾರಾದ್ರೂ ನೆಂಟರು ಮನೆಗೆ ಬರ್ತಾರೆಂದರೆ ನಾವು ಮೊದಲು ಯೋಚಿಸುವುದೇ ಅವರಿಗೆ ನಾವು ಸಾಕಷ್ಟು ಸಮಯ ಕೊಡಲಾಗುವುದೇ ಆತಿಥ್ಯ ಮಾಡಲು ಹಾಗೂ ಅವರ ವಸತಿಗೆಲ್ಲ ಸರಿಯಾಗಿ ವ್ಯವಸ್ಥೆ ಮಾಡಲಾದೀತೇ ಎಂದು.ಎಲ್ಲರೂ ಹೀಗಿರುತ್ತಾರೆಂದು ಹೇಳಲಾಗದು.ನೆಂಟರೆಂದರೆ ಇಷ್ಟಪಡುವ ಮಂದಿಯೂ ಸಹ ಹೆಚ್ಚಾಗಿ ಇರುತ್ತಾರೆ. ಇನ್ನೊಂದು ಕಾರಣವೆಂದರೆ ಕೆಲವರಿಗೆ ನಂಟರು ಬರುತ್ತಾರೆಂದರೆ ಇರಿಸುಮುರಿಸು ಉಂಟಾಗುವುದು ಏಕಂದರೆ ಕೆಲವು ನೆಂಟರಿಗೆ ಅಲ್ಲಿಂದಿಲ್ಲಿಗೆ ಚಾಡಿಮಾತು ಹೇಳಿ ಜಗಳ ತಂದು ಹಾಕುವ ಸ್ವಭಾವಿರುತ್ತದೆ,ಆ ಸ್ವಭಾವದವರನ್ನು ದೂರವಿರಿಸುವ ಅಭ್ಯಾಸ ಆತಿಥ್ಯ ನೀಡುವವರಿಗೆ ಇರುತ್ತದೆ ಹಾಗಾಗಿ ಅಂತಹ ನೆಂಟರು ತಮ್ಮ ಮನೆಗೆ ಬರದಂತೆ ಕಾರಣ ಹುಡುಕುತ್ತಾರೆ.ಒಂದುವೇಳೆ ಬಂದರೂ ಮರ್ಯಾದೆಯಿಂದಲೇ ಚೆನ್ನಾಗಿ ಆತಿಥ್ಯ ಮಾಡಿ ಕಳಿಸುತ್ತಾರೆ.  ಇನ್ನು ಹಲವರಿಗೆ ತಮ್ಮ ಆಫೀಸ್ ಹಾಗೂ ಮನೆಯ ಕೆಲಸಗಳ ಮಧ್ಯೆಯೂ ಅವರೆಲ್ಲರ  ಇಷ್ಟಾನುಸಾರವಾಗಿ ನೆಂಟರ ಬೇಕು ಬೇಡಗಳನು ಪೂರೈಸಲಾದೀತೇ ಅನ್ನುವ ಆತಂಕ ಮನಸಲಿ‌ ಕಾಡುತ್ತದೆ.ಪಾಪ ಚೆನ್ನಾಗಿ ಆತಿಥ್ಯ ಮಾಡಿ ಕಳಿಸಿದರೂ ಸಹ ಅದೇ ನೆಂಟರು ಹೊರಗೆ ಬಂದಾಗ ತಮ್ಮ ಬಗ್ಗೆ ಹಾಗೂ ತಮ್ಮ ಆತಿಥ್ಯದ ಬಗ್ಗೆಯೇ ಕೊಂಕು ಅಥವಾ ವ್ಯಂಗ್ಯದ ಮಾರಾಡುತ್ತಾರೆನ್ನುವ ಆತಂಕದಲಿ ದಿನ ದೂಡುತ್ತಾರೆ…ಹಾಗಾಗಿ ನೆಂಟರ ಬರುವಿಕೆ ಇಂದಿನ ದಿನಗಳಲಿ ಬಲು ಅಪರೂಪವಾಗಿದೆ ಅಂತಲೇ ಹೇಳಬಹುದು.ಅವರವರ ದೃಷ್ಟಿಕೋನದಲ್ಲಿ ನೋಡಿದಾಗ  ಇದರಲಿ ಯಾರದೂ ತಪ್ಪಿಲ್ಲವೆಂತಲೂ ಅನಿಸುವುದು.ಆದರೂ ಮನೆಗೆ ನೆಂಟರ ಆಗಮನ ಚೈತನ್ಯದಾಯಕವೂ ಹೌದು ಜೊತೆಗೆ ಹಲವು ವಿಚಾರಗಳ ವಿನಿಮಯವಾಗುವಿಕೆ ಮನಸಿನ ಏಕಾತಾನತೆಗೆ ಒಳ್ಳೆಯ ಮದ್ದು ಆಗುವುದಂತೂ ಸತ್ಯ. ನೆಂಟಸ್ತನವನು ಉಳಿಸುವ ನಡೆಯನು ವಿವರಿಸುತಾ ಹೀಗೂ ಯೋಚಿಸಬಹುದು..ನೆಂಟರು ಒಂದು ಮದುವೆಯ ಸಮಾರಂಭದಲ್ಲೊ ಅಥವಾ ಒಂದು ಹೋಮ- ಹವನದ ಕಾರ್ಯಕ್ರಮದಲ್ಲೋ  ಸೇರಿದಾಗ ಎಲ್ಲರಿಗೂ ತಮ್ಮ ಕುಟುಂಬದ ಈ ಐಕ್ಯತೆಯನು ಕಂಡು ಸಂತಸವಾಗುತ್ತದೆ.ಕುಟುಂಬದ ಹೊಸ ಸದಸ್ಯರನು ಹಳೆಯ ತಲೆಮಾರಿನವರು ತಮ್ಮ‌ ಕಾಲವಿನ್ನು ಮುಗಿಯಿತಪ್ಪಾ ಎನ್ನುತಾ ತುಂಬು ಮನಸಿಂದ ಅವರೆಲ್ಲರ ಪರಿಚಯ ಮಾಡಿಕೊಡುವುದನು ಕಂಡು ಒಮ್ಮೆಗೇ ಮನಸು ಭಾವುಕವಾಗುತ್ತದೆ. ಮುಂದೊಂದಿನದ  ಸಮಾರಂಭದಲಿ ಈ ಹಿರಿಯ ತಲೆಮಾರಿನವರು ಕಣ್ಮರೆಯಾಗದಿದ್ರೆ ಸಾಕು ಅಂತಲೂ ಮನಸು ಹಾರೈಸುತ್ತದೆ. ಜೊತೆಗೆ ನೆಂಟಸ್ತನ ಕುಂಠಿತವಾಗುವಿಕೆಯ ಮತ್ತೊಂದು ಮುಖ್ಯ ಕಾರಣವೆಂದರೆ..ಮೊಬೈಲ್ ಚಟ ಹಾಗೂ ಸಾಮಾಜಿಕ ತಾಣವೆನ್ನಬಹುದು. ಇತ್ತೀಚೆಗಿನ ಮೊಬೈಲಿನ YouTube Shorts ವೀಕ್ಷಣೆಯ ಮಟ್ಟ ಯಾವ ಯಾವ ರೀತಿಯಲಿ ಏರಿದೆಯೆಂದರೆ ಇಂದಿನ ಯುವಜನತೆ,ಹದಿಹರೆಯದ ಮಕ್ಕಳು,ಮಧ್ಯೆ ವಯಸ್ಸಿನ ಹೆಂಗಸರು, ಅರ್ಧ ಶತಕದ ಅಂಚಲಿರುವ ಗಂಡಸರೆನ್ನುವಭೇಧಭಾವವಿಲ್ಲದೆ ಈ ಚಟ ಆವರಿಸಿಕೊಂಡು ಬಿಟ್ಟಿದೆ. ಇದಕ್ಕೆ ದಾಸರಾಗಿರೊದರಿಂದ  ಮನೆಗೆ ಯಾರು ಬಂದರೂ ಅಥವಾ ಯಾವ ಫಂಕ್ಷನ್ ಗೆ ಹೋಗಬೇಕೆಂದರೂ ಇದಕೆ ಅಡ್ಡಿಯಾದೀತೆಂಬ ನೆಪವೊಡ್ಡಿ ಹೋಗದೇ ಇದ್ದುಬಿಡುತ್ತಾರೆ.ಇಂತಹ ಚಟದಿಂದ ಹೊರ ಬಂದರೆ ಮಾತ್ರ ಸಂಬಂಧಗಳ ಉಳಿಯುವಿಕೆ ಸಾಧ್ಯವಾಗುತ್ತದೆ.ಇಲ್ಲದಿದ್ರೆ ತಾವಾಯ್ತು ತಮ್ಮ ಪಾಡಾಯ್ತು ಅನ್ನುವ ಸ್ಥಿತಿಗೆ ಈ Gen Z ಹೋಗುವುದರಲಿ ಹೆಚ್ಚು ಕಾಲ ಉಳಿದಿಲ್ಲ ಅನ್ನಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಸಮಾಜದಲಿ ಒಳ್ಳೆಯ ಮನಸ್ಸಿರುವ ಎಲ್ಲರ ಜೊತೆಗೆ ಅದರಲೂ ತಮ್ಮ ಕುಟುಂಬದ ತೀರ ಹತ್ತಿರದ ನೆಂಟರಿಷ್ಟರ ಜೊತೆಯಲಿ ಬೆರೆತಾಗ ಮಾತ್ರ ಸಾಮರಸ್ಯದಿಂದ ಬಾಳು ಸಾಗುತಾ ನಮ್ಮೆಲ್ಲರ ಬಾಳ್ವೆ ಸುಂದರವೆನಿಸುತ್ತದೆ.ಇಲ್ಲವಾದರೆ ಏಕಾತಾನತೆಯ ಏಕಾಂತ ಕಾಡಿ,ಬೇರೆ ಯಾರ ಬಗ್ಗೆಯೂ ಯೋಚಿಸದಂತಹ ಸ್ವಾರ್ಥದತ್ತ ಮನಸು ಸಾಗುತ್ತದೆ. ನಮ್ಮ ಬದುಕು ಇವೆರಡು ದೃಷ್ಟಿಕೋನದಲಿ ನೋಡಿದಾಗ ಅದು  ಹೇಗಿರಬೇಕು ಅನ್ನುವ ಆಯ್ಕೆ ನಮ್ಮದೇ! ಸುಮನಾ ರಮಾನಂದ, ಕೊಯ್ಮತ್ತೂರು 

“ನೆಂಟಸ್ತನದ ಸಂಬಂಧಗಳ ನಡೆ” ವಿಶೇಷ ಲೇಖನ ಸುಮನಾ ರಮಾನಂದ Read Post »

ಇತರೆ, ಜೀವನ

“ಮಾತನಾಡಬೇಕಾದ ಸಂದರ್ಭದಲ್ಲಿ ಮೌನ ಕಾಯ್ದುಕೊಳ್ಳುವುದು ಕೆಟ್ಟದು” ಡಾ.ಸುಮತಿ ಪಿ.ಅವರ ವಿಶೇಷ ಬರಹ-ಮಾತು-ಮೌನದ ಬಗ್ಗೆ

ಮೌನ ಸಂಗಾತಿ

ಡಾ.ಸುಮತಿ ಪಿ.

“ಮಾತನಾಡಬೇಕಾದ ಸಂದರ್ಭದಲ್ಲಿ

ಮೌನ ಕಾಯ್ದುಕೊಳ್ಳುವುದು ಕೆಟ್ಟದು”
ಏನು ಮಾತನಾಡಿದರೂ ಮೌನವಾಗಿರುವ ವ್ಯಕ್ತಿಗಳನ್ನು ಕಂಡರೆ ಮತ್ತೆ ಮತ್ತೆ ಅವರ ತಂಟೆಗೆ ಬರುವವರೇ ಜಾಸ್ತಿ. ಹಾಗಾಗಿ ಮಾತನಾಡಬೇಕಾದ ಸಂದರ್ಭದಲ್ಲಿ ಮೌನವಾಗಿರದೆ ಮಾತನಾಡಲೇ ಬೇಕಾಗುತ್ತದೆ.

“ಮಾತನಾಡಬೇಕಾದ ಸಂದರ್ಭದಲ್ಲಿ ಮೌನ ಕಾಯ್ದುಕೊಳ್ಳುವುದು ಕೆಟ್ಟದು” ಡಾ.ಸುಮತಿ ಪಿ.ಅವರ ವಿಶೇಷ ಬರಹ-ಮಾತು-ಮೌನದ ಬಗ್ಗೆ Read Post »

You cannot copy content of this page

Scroll to Top