ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ವಾರದ ಕತೆ

ಅವಳ ಬದುಕಿನ ಪುಟಗಳಲ್ಲೊಂದು ಇಣುಕು…

ವಾರದ ಕಥೆ ಅವಳ ಬದುಕಿನ ಪುಟಗಳಲ್ಲೊಂದು ಇಣುಕು… ಟಿ.ಎಸ್.ಶ್ರವಣಕುಮಾರಿ ಆರನೆಯ ನಂಬರಿನ ಡಬಲ್‌ ಡೆಕರ್‌ ಬಸ್‌ ಹೊರಡುತ್ತಿದ್ದುದು ಜಯನಗರ ನಾಲ್ಕನೇ ಬ್ಲಾಕಿನ ಬಸ್‌ ಸ್ಟಾಪಿನಿಂದ. 9.30ಕ್ಕೆ ನಿಲ್ದಾಣಕ್ಕೆ ಬರುವ ಬಸ್ಸು 9.40ಕ್ಕೆ ಸರಿಯಾಗಿ ಅಲ್ಲಿಂದ ಹೊರಟು ಶಿವಾಜಿನಗರಕ್ಕೆ ಹೋಗುತ್ತಿದ್ದ ಆ ಬಸ್ಸಿಗೆ ವೀಣಾ ದಿನನಿತ್ಯದ ಪಯಣಿಗಳು. ಸ್ಟ್ಯಾಂಡಿಗ್‌ ಸೀಟಿನ ಕಚಿಪಿಚಿ ಇರುವುದಿಲ್ಲವಾದ್ದರಿಂದ ಅವಳಿಗೆ ಮಹಡಿಯೇ ಹಿತವೆನ್ನಿಸುತ್ತಿತ್ತು. ಬಸ್‌ ಹತ್ತಿದ ತಕ್ಷಣ ಮಹಡಿಯನ್ನೇರಿ ಮುಂದಿನಿಂದ ಎಡಭಾಗದ ಮೂರನೆಯ ಸೀಟಿನ ಕಿಟಕಿಯ ಬಳಿ ಖಾಯಮ್ಮಾಗಿ ಕುಳಿತು ಟಿಕೇಟು ಪಡೆದುಕೊಂಡ ತಕ್ಷಣವೇ, ತನ್ನ ಬ್ಯಾಗಿನಲ್ಲಿದ್ದ ಯಾವುದಾದರೊಂದು ಪುಸ್ತಕವನ್ನು ತೆರೆದು ಕುಳಿತರೆ ಮುಂದಿನ ಅರ್ಧ ಗಂಟೆ ಅದರಲ್ಲೇ ಮುಳುಗಿರುತ್ತಿದ್ದಳು. ಮತ್ತೆ ಇಹಕ್ಕೆ ಮರಳುತ್ತಿದ್ದುದು ಕ್ಯಾಶ್‌ ಫಾರ್ಮಸಿ ಸ್ಟಾಪಿಗೆ ಬಂದಾಗಲೇ. ಅವಳು ಉದ್ಯೋಗ ಮಾಡುತ್ತಿದ್ದದ್ದು ಸ್ಟೇಟ್‌ ಬ್ಯಾಂಕಿನಲ್ಲಿ. ಹಾಗಾಗಿ ಅಲ್ಲೆದ್ದು ಮಹಡಿಯಿಳಿದು ಮುಂದಿನ ಸ್ಟಾಪಿನಲ್ಲಿಳಿಯಲು ಅನುವಾಗುತ್ತಿದ್ದಳು. ಇಷ್ಟೆಲ್ಲಾ ವಿವರ ಏಕೆ ಹೇಳುತ್ತಿದ್ದೀನೆಂದರೆ ಅವಳಷ್ಟೇ ಖರಾರುವಾಕ್ಕಾಗಿ ಮಹಡಿಯಲ್ಲಿ ಮುಂದಿನಿಂದ ಬಲಬಾಗದ ಮೊದಲನೆಯ ಸೀಟಿನಲ್ಲಿ ಕಿಟಕಿಯ ಪಕ್ಕವನ್ನು ಕಾಯ್ದಿರಿಸಿಕೊಂಡು ಸುಮಾರು ಇಪ್ಪತ್ತೇಳು, ಇಪ್ಪತ್ತೆಂಟು ವರ್ಷದ ಒಬ್ಬಾಕೆ ಕುಳಿತಿರುತ್ತಿದ್ದಳು. ಉದ್ಯೋಗಸ್ಥೆಯಾದರೂ ನಾಗರೀಕತೆ ಅವಳನ್ನು ತಬ್ಬಿದಂತೆ ಕಾಣುತ್ತಿರಲಿಲ್ಲ. ಹಳೆಯ ಕಾಲದವರಂತೆ ಅಂಚು ಸೆರಗಿನ ಸೀರೆಯನ್ನುಟ್ಟು, ಮೈತುಂಬಾ ಸೆರಗನ್ನು ಹೊದ್ದು, ಹಣೆಗೆ ಪುಡಿ ಕುಂಕುಮ, ಅರಿಶಿನ ಬಳಿದ ಕೆನ್ನೆ, ಮುಡಿಯಲ್ಲಿರುತ್ತಿದ್ದ ಹೂವು, ಗಂಭೀರ ವದನದಿಂದ ಅವಳು ತನ್ನ ವಯಸ್ಸಿಗಿಂತ ಹಿರಿಯಳಂತೆ ಕಾಣುತ್ತಿದ್ದಳು. ಯಾರು ಮಹಡಿ ಹತ್ತಿದ ಸದ್ದಾದರೂ ತಿರುಗಿ ನೋಡುತ್ತಿದ್ದ ಅವಳ ಕಣ್ಣುಗಳನ್ನು ವೀಣಾ ದಿನವೂ ಸಂಧಿಸುತ್ತಿದ್ದರೂ, ಅವಳಿಂದ ಸ್ನೇಹ ಸೂಸುವ ಪ್ರತಿನಗೆಯಿರುತ್ತಿರಲಿಲ್ಲ. ಅವಳು ಕಾಯುತ್ತಿದ್ದದ್ದು ಅವನೊಬ್ಬನಿಗಾಗಿ… ಅವನಿಗಾಗಿ ಮಾತ್ರಾ… ಅವನು ಗಂಡನೆಂದು ಅನ್ನಿಸುತ್ತಿರಲಿಲ್ಲ. ಗಂಡನಾಗಿದ್ದರೆ ಒಟ್ಟಿಗೇ ಬರುತ್ತಿದ್ದರಲ್ಲ! ಅವನು ಬರುವವರೆಗೂ ಘಳಿಗೆಘಳಿಗೆಗೂ ತಿರುತಿರುಗಿ ನೋಡುತ್ತಾ, ಅವನನ್ನು ಕಂಡ ತಕ್ಷಣ ಅವಳ ದುಂಡನೆಯ ಮುಖ ಹಿಗ್ಗಿನಿಂದ ಉಬ್ಬಿ, ಅರಿಶಿನ ಬೆರೆತ ಕೆನ್ನೆಗೆ ಒಂದಿಷ್ಟು ಕುಂಕುಮವೂ ಸವರಿದಂತೆ ಕೆಂಪಾಗಿ, ಪಕ್ಕಕ್ಕೆ ಸರಿದು ತನ್ನ ಜಾಗವನ್ನು ಅವನಿಗೆ ಬಿಟ್ಟುಕೊಟ್ಟು ಕಿಟಕಿಯ ಪಕ್ಕಕ್ಕೆ ಸರಿಯುತ್ತಿದ್ದಳು. ತಕ್ಷಣವೇ ಅವರಿಬ್ಬರದೂ ಅದೇನು ನಗು, ಹರಟೆ… ಅವಳನ್ನು ನೋಡಿದರೆ ಅವಳಿಷ್ಟು ನಗಬಹುದೆಂದಾಗಲೀ, ಮಾತನಾಡಬಹುದೆಂದಾಗಲೀ ಅನ್ನಿಸುತ್ತಲೇ ಇರಲಿಲ್ಲ. ವೀಣಾ ಇಳಿಯುವವರೆಗೂ ಅವರಿಬ್ಬರೂ ಹೆಚ್ಚುಕಡಿಮೆ ಅದೇ ಲೋಕದಲ್ಲೇ ಇರುತ್ತಿದ್ದರು. ಪ್ರಾಯಶಃ ಇಬ್ಬರದೂ ಶಿವಾಜಿನಗರದ ಬಸ್‌ ನಿಲ್ದಾಣವಿರಬೇಕೇನೋ… ಅಥವಾ ಎಂ.ಜಿ.ರೋಡ್‌ ಸ್ಟಾಪೋ… ವೀಣಾ ವಾಪಸ್ಸಾಗುವಾಗಲೂ ಒಂದೊಂದು ದಿನ ತುಂಬಿದ ಬಸ್ಸಿನಲ್ಲಿ ಸಿಗುತ್ತಿದ್ದ ಅವಳು ಒಂದು ದಿನವೂ ಸಹಪ್ರಯಾಣಿಕರಲ್ಲಿ ವಿನಿಮಯವಾಗಬಹುದಿದ್ದ ಒಂದು ಪರಿಚಿತ ನಗೆಯನ್ನೂ ಬೀರದೆ, ತನ್ನ ಲೋಕದಲ್ಲೇ ಮುಳುಗಿದಂತೆ ಕುಳಿತಿದ್ದು ನಾಲ್ಕನೇ ಬ್ಲಾಕಿನ ಸ್ಟಾಪಿನಲ್ಲಿ ಇಳಿದು ಯಾರನ್ನೂ ನೋಡದೆ ತನ್ನ ಪಾಡಿಗೆ ತಲೆತಗ್ಗಿಸಿಕೊಂಡು ನಡೆದುಬಿಡುತ್ತಿದ್ದಳು. ಇಷ್ಟು ವಿರಾಗಿಯಂತಿರುವ ಇವಳು ಯಾರನ್ನಾದರೂ (ಅವನನ್ನು?) ಅಥವಾ ಇವಳನ್ನು ಯಾರಾದರೂ ಪ್ರೀತಿಸಲು ಸಾಧ್ಯವೇ?! ಹಾಗಾದರೆ ಪ್ರೀತಿಯಲ್ಲಿರುವ ಆಕರ್ಷಣೆ ಇನ್ನೆಂತಹುದು ಎಂದು ಎಷ್ಟೋ ವೇಳೆ ವೀಣಾಳಿಗೆ ಅಚ್ಚರಿಯಾಗುತ್ತಿತ್ತು. ಏಕೆಂದರೆ ವೀಣಾ ಪ್ರೀತಿಸಿದ್ದು ಮದುವೆಯಾದ ಮೇಲೆ ಗಂಡನನ್ನು. ಇಂತಹ ಪ್ರೀತಿ, ಪ್ರೇಮ ಅನುಭವಕ್ಕೆ ಬರುವ ಮೊದಲೇ ಮದುವೆಯಾಗಿತ್ತು ಹಾಗೆಯೇ ಅವಳ ಈ ನಡತೆ ಅವಳಿಗೊಂದು ನಮೂನೆಯ ಕುತೂಹಲವನ್ನು ಹುಟ್ಟಿಸುತ್ತಿತ್ತು. ಒಂದಷ್ಟು ದಿನಗಳ ನಂತರ ವೀಣಾಗೆ ಅದೇ ಬಸ್ಸಿನಲ್ಲಿ ಹೊಸತಾಗಿ ತನ್ನದೇ ಕಾಂಪೌಡಿನ ಬ್ರ್ಯಾಂಚ್‌ ಆಫೀಸಿಗೆ ವರ್ಗವಾಗಿ ಬಂದ ಮೀರಾಳ ಪರಿಚಯವಾಗಿ ಅಂದಿನಿಂದ ಇಬ್ಬರೂ ಆ ಮೂರನೆಯ ಸೀಟಿನ ಖಾಯಂ ಪ್ರವಾಸಿಗರಾದರು. ಮುಂದಿನ ಸೀಟಿನವಳು ಗೆಳೆಯನಿಗಾಗಿ ಜಾಗ ಕಾದಿರಿಸುತ್ತಿದ್ದಂತೆ ಇವಳೂ ಪಕ್ಕದ ಜಾಗವನ್ನು ಕಾದಿರಿಸಲಾರಂಭಿಸಿದಳು. ಮೀರಾ ಒಳ್ಳೆಯ ಮಾತುಗಾರಳು, ಜೀವನೋತ್ಸಾಹದಿಂದ ಪುಟಿಯುತ್ತಿದ್ದ ಚುರುಕುಗಣ್ಣಿನ ಹುಡುಗಿ. ಒಂದೇ ಕಾಂಪೌಡಿನಲ್ಲಿ ಕೆಲಸ ಮಾಡುತ್ತಿದ್ದರೆಂದ ಮೇಲೆ ಮಾತಿನ ಸರಕಿಗೇನು ಕಡಿಮೆ? ಅವಳಿಗಿನ್ನೂ ಮದುವೆಯಾಗಿರಲಿಲ್ಲ. ಹೀಗಾಗಿ ತನ್ನ ಶಾಖೆಯಲ್ಲಿ ನಡೆಯುತ್ತಿದ್ದ ಹಲವಾರು ಲವ್‌ ಪ್ರಕರಣಗಳ ಬಗ್ಗೆ ಅವಳಿಗೆ ಏನೋ ಆಕರ್ಷಣೆ. ಅವರ ಚಲನವಲನಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದು ತುಂಬು ಉತ್ಸಾಹದಿಂದ ದಿನಕ್ಕೊಂದು ಕತೆಯನ್ನು ಸ್ವಾರಸ್ಯಕರವಾಗಿ ಹೇಳುತ್ತಿದ್ದಳು. ʻಮದುವೆಯಾದʼ ʻಆಗದಿರುವʼ ಫರಕು ಅವರಿಬ್ಬರ ನಡುವೆ ಹೊರಟುಹೋಗಿ ಅರ್ಧ ಗಂಟೆಯ ಪ್ರಯಾಣವನ್ನು ಇಬ್ಬರೂ ಖುಷಿಯಿಂದ ಕಳೆಯುತ್ತಿದ್ದರು. ಸಂಜೆ ವಾಪಸ್ಸು ಬರುವ ವೇಳೆ ದಿನವೂ ಹೊಂದಾಣಿಕೆಯಾಗದೆ ಮೀರಾ ಒಮ್ಮೊಮ್ಮೆ ಮಾತ್ರಾ ಸಿಗುತ್ತಿದ್ದಳು. ಆದರೆ ಸಂಜೆಯ ಬಸ್ಸಿನಲ್ಲಿ ನಿಲ್ಲಲು ಜಾಗ ಸಿಕ್ಕುವುದೇ ಕಷ್ಟವಾಗಿದ್ದಾಗ ಮಾತಿಗೆ ಜಾಗವೆಲ್ಲಿ? ಅದೇನಿದ್ದರೂ ಬೆಳಗಿನ ಸರಕು! ಒಂದು ದಿನ ಇದ್ದಕ್ಕಿದ್ದ ಹಾಗೆ ಮೀರಾ ವೀಣಾಳ ಗಮನವನ್ನು ಮುಂದಿನ ಸೀಟಿನ ಜೋಡಿಯೆಡೆ ಸೆಳೆದು “ಅವರಿಬ್ಬರನ್ನು ನೋಡಿದ್ರೆ ಆಶ್ಚರ್ಯ ಆಗತ್ತಲ್ವಾ?” ಅಂದಳು “ಬಿತ್ತಾ ನಿನ್ನ ಕಣ್ಣು ಅವರ ಮೇಲೂ?” ಎಂದಳು ವೀಣಾ ನಗುತ್ತಾ. “ನನಗೊಬ್ಬಳಿಗೇ ಏನು, ಈ ಮಹಡಿಗೆ ದಿನವೂ ಹತ್ತಿ ಬರೋ ಎಲ್ಲರ ಕಣ್ಣೂ ಅವರ ಮೇಲೇ ಇರತ್ತೆ. ಇಂಟರೆಸ್ಟಿಂಗ್‌ ವಿಷ್ಯ ಏನೂಂದ್ರೆ ಬ್ಯಾಂಕಲ್ಲಿ ಅವರವರ ಪಾರ್ಟ್ನರ್‌ಗಳನ್ನ ಖುಷಿ ಪಡ್ಸೋಕೆ ದಿನಕ್ಕೊಂದು ಥರಾ ವೇಷ, ಮೇಕಪ್ಪು ಮಾಡ್ಕೊಂಡು ಬಂದು ಒಬ್ಬರ ಮುಂದೊಬ್ಬರು ಸುಳಿದಾಡಿ, ಕಣ್ಣಲ್ಲೇ ಮುದ್ದಾಡೋದಾದ್ಮೇಲೆ ಅವರ ದಿನ ಶುರುವಾಗತ್ತೆ. ಆದ್ರೆ ಇವಳನ್ನ ನೋಡಿದ್ರೆ ಗೌರಮ್ಮನ ತರಹ ಅವರಮ್ಮಂದೋ, ಅಜ್ಜೀದೋ ಸೀರೆ ಉಟ್ಕೊಂಡು ಉರುಳು ಹಾಕ್ಕೊಳೋ ಹಾಗೆ ಸೆರಗು ಹೊದ್ಗೊಂಡು, ಎಣ್ಣೆ ಮೆತ್ಕೊಂಡು ಬಿಗಿಯಾಗಿ ಜಡೆ ಹಾಕ್ಕೊಂಡು, ಬುಡ್ಡಮ್ಮನ ತರಹ ಮಲ್ಲಿಗೆ ಬಿಡು, ಶಾವಂತಿಗೆ, ಡೇರಾ ಬೇಕಾದ್ರೂ ಮುಡ್ಕೊಂಡು ನಮ್ಮೂರಲ್ಲಿ ಶುಕ್ರವಾರದ ಮುತ್ತೈದೇರು ಅಂತ ಪ್ರತಿ ಮಂಗಳವಾರ, ಶುಕ್ರವಾರ ಸಾಯಂಕಾಲ ದೀಪ ಹಚ್ಚೋ ಹೊತ್ಗೆ ಮನೆಮನೆಗೆ ಬುಟ್ಟಿ ಎತ್ಕೊಂಡು ಕೆಲವು ಹೆಂಗಸ್ರು ಬರೋವ್ರು… ಒಂಥರಾ ಮರ‍್ಯಾದೆಯಿಂದ ಅಕ್ಕಿ ಬೇಡೋ ರೀತಿ ಅದು, ಅವರ ಜ್ಞಾಪಕ ಬರತ್ತೆ ನೋಡು. ಅವ್ನು ಪರ‍್ವಾಗಿಲ್ಲ ತಕ್ಕಮಟ್ಟಿಗೆ ಬರ‍್ತಾನೆ. ಆದ್ರೆ ಈ ಲವ್‌ ಹೇಗೇಂತ” ಅಂದಳು. “ಹೌದು ಅವಳಿರೋ ರೀತಿಗೂ, ಈ ಲವ್ವಿನ ರೀತಿಗೂ ಯಾಕೋ ಹೊಂದಾಣಿಕೆಯಾಗಲ್ಲ ಅಂತ ನಂಗೂ ಅನ್ಸತ್ತೆ” ವೀಣಾನೂ ಒಪ್ಪಿಕೊಂಡಳು. “ಅವಳು ಅಲ್ಲಿ ಓರಿಯೆಂಟಲ್‌ ಬಿಲ್ಡಿಂಗ್‌ ಪಕ್ಕದ ಕ್ರಾಸಲ್ಲಿ ಒಂದು ಸಣ್ಣ ಸ್ಕೂಲಿದೆ ನೋಡು, ಅಲ್ಲಿ ಟೀಚರ್‌ ಅನ್ಸತ್ತೆ, ಮೊನ್ನೆ ಕೆ. ಸಿ. ದಾಸ್‌ಗೆ ಹೋಗಿದ್ದಾಗ ಅವ್ಳನ್ನ ಆ ಸ್ಕೂಲಿನ ಕಾಂಪೌಂಡಲ್ಲಿ ಮಕ್ಕಳ ಜೊತೆ ನೋಡ್ದೆ. ಅವ್ನು ಎಲ್.ಐ.ಸಿ. ಆಫೀಸಲ್ಲಿದಾನೆ. ಹೋದ್ವಾರ ನಮ್ಮ ರಂಜನಿ ಮೇಡಂ ಅಲ್ಲಿ ಏನೋ ಕೆಲ್ಸ ಇದೆ, ಸ್ವಲ್ಪ ಜೊತೆಗೆ ಬಾ ಅಂತ ಕರ‍್ಕೊಂಡು ಹೋಗಿದ್ರು. ಡಿಸ್ಪ್ಯಾಚ್‌ ಸೆಕ್ಷನ್‌ನಲ್ಲಿ ಇದಾನೆ. ಮೇಡಂ ಅವ್ರಿಗೆ ಬೇಕಾಗಿದ್ದ ಲೆಟರ‍್ನ ಅವನತ್ರಾನೆ ಎಂಟರ್‌ ಮಾಡಿಸ್ಕೊಂಡು ತಂದ್ರು” ಎಂದು ಅವರಿಬ್ಬರ ಉದ್ಯೋಗ ಚರಿತ್ರೆಯನ್ನೂ ಒಂದು ದಿನ ಬಿಚ್ಚಿಟ್ಟಳು ಮೀರಾ. ಮಧ್ಯಾಹ್ನದ ಲಂಚ್‌ ಅವರ್‌ನಲ್ಲಿ ಆಗೀಗ ಏನೋ ಕೆಲಸದ ಮೇಲೆ ಚರ್ಚ್‌ ಸ್ಟ್ರೀಟಿನ ಕಡೆಗೆ ಹೋದಾಗ ಅವರಿಬ್ಬರೂ ಪೆಟ್ರೋಲ್‌ ಬಂಕಿನ ಪಕ್ಕದಲ್ಲಿರುವ ಕುಲ್ಫಿ ಕಾರ್ನರಿನಲ್ಲಿ ಕುಲ್ಫಿಯನ್ನು ಮೆಲ್ಲುತ್ತಿರುವುದನ್ನೋ, ಮೂಲೆಯ ಗಣೇಶ ಭವನದಲ್ಲಿ ಮಸಾಲೆದೋಸೆಯನ್ನು ತಿನ್ನುತ್ತಿರುವುದನ್ನೋ, ಈ ಮೂಲೆಯಲ್ಲಿ ಎಳೆನೀರು ಹೀರುವುದನ್ನೋ, ಬಾಳೆಹಣ್ಣನ್ನು ಗುಳುಂ ಮಾಡುತ್ತಿರುವುದನ್ನೋ ಇಬ್ಬರೂ ಯಾವಾಗಲಾದರೂ ನೋಡಿದ್ದನ್ನು, ಮರೆಯದೆ ಮರುದಿನ ಬೆಳಗ್ಗೆ ಅದನ್ನು ಹಂಚಿಕೊಂಡಿದ್ದರು. ಪ್ರಾಯಶಃ ಮೊದಲ ಸೀಟಿನಲ್ಲೇ ಕುಳಿತಿರುತ್ತಿದ್ದುದರಿಂದ ಇರಬಹುದು, ಬೇರೆಯವರು ತಮ್ಮನ್ನು ಹೀಗೆ ಗಮನಿಸುತ್ತಿರುತ್ತಾರೆ ಅನ್ನುವುದು ಅವರ ಗಮನಕ್ಕೆ ಬಂದಿರಲಿಲ್ಲವೇನೋ… ಪ್ರೀತಿಯಲ್ಲಿ ಮುಳುಗಿರುವವರಿಗೆ ಜಗತ್ತಿನ ಬಗ್ಗೆ ಗಮನವೇಕೆ?! ಪ್ರಿಯ ಓದುಗ, ಇದು ಹೀಗೇ ನಡೆದಿದ್ದರೆ ನಾನು ಈ ಕತೆ ಹೇಳುವ ಅಗತ್ಯವೇ ಇರಲಿಲ್ಲವೇನೋ. ಹೀಗೆ ಏನೋ ಒಂದು ರೀತಿ ವಿಚಿತ್ರವಾಗಿ ನಮಗೆ ಅನ್ನಿಸುತ್ತಿದ್ದರೂ, ಅವರಿಬ್ಬರೂ ಮದುವೆಯಾಗಿ ಸುಖವಾಗಿ ಬಾಳನ್ನು ನಡೆಸಿದರು ಎಂದು ಕತೆ ಮುಗಿಯುತ್ತಿತ್ತಷ್ಟೇ. ಹೀಗೇ ಎಷ್ಟೋ ತಿಂಗಳುಗಳು ಕಳೆದ ಮೇಲೆ ಒಂದಷ್ಟು ದಿನ ಅವರಿಬ್ಬರೂ ಕಾಣಲೇ ಇಲ್ಲ. ದಸರಾ ರಜೆಯಿಂದ ಸ್ಕೂಲಿಲ್ಲವೇನೋ, ಹಾಗೇ ಕಂಡಿಲ್ಲ ಎಂದು ಇಬ್ಬರೂ ಗೆಳತಿಯರೂ ಅಂದುಕೊಂಡರು. ಆದರೆ ಹಬ್ಬ ಮುಗಿದು ವಾರವಾದರೂ ಪತ್ತೆಯಿಲ್ಲ. ʻಏನಾಯಿತು ಈ ಪ್ರೇಮ ಪಕ್ಷಿಗಳಿಗೆ?ʼ ಎಂದು ಇಬ್ಬರೂ ಅಂದುಕೊಳ್ಳುತ್ತಿರುವಾಗಲೇ ಒಂದು ಬೆಳಗ್ಗೆ ಆಕೆ ಮೊದಲ ಸೀಟಿನಲ್ಲಿ ಕಾಣಿಸಿಕೊಂಡಳು. ತಕ್ಷಣ ಮೀರಾ “ಆಹಾ…  ಲವ್‌ ಬರ್ಡ್ಸ್‌ ಆರ್‌ ಬ್ಯಾಕ್‌ ಅಗೇನ್” ಎಂದು ಖುಷಿಪಟ್ಟಳು. ಆದರೆ ಆಕೆ ಯಾಕೋ ತಿರುತಿರುಗಿ ನೋಡುತ್ತಾ ಅವನನ್ನು ಕಾಯುತ್ತಿರಲಿಲ್ಲ. ಬಸ್‌ ಹೊರಟರೂ ಅವನ ಪತ್ತೆಯಿಲ್ಲ. “ಏನಿದು, ಯಾಕೆ ಬಂದಿಲ್ಲ?” ಎಂದ ಮೀರಾನಿಗೆ “ಅವನಿಗೇನಾದ್ರೂ ಹುಷಾರಿಲ್ಲವೇನೋ. ಅವಳೂ ಸಪ್ಪಗಿದ್ದ ಹಾಗಿದೆ. ಒಂದೆರಡು ಸಲ ಕಣ್ಣೊರೆಸಿಕೊಂಡಳು ಕೂಡಾ, ಕಿಟಕಿಯತ್ತಲೇ ನೋಡುತ್ತಿದ್ದಾಳೆ ನೋಡು” ಅಂದಳು ವೀಣಾ. “ಹಾಗಂತೀಯಾ, ಪಾಪ ಲವ್‌ ಬ್ರೇಕಾಗಿಲ್ದಿದ್ರೆ ಸಾಕು. ಅವ್ನು ಬೇಗ ಹುಷಾರಾಗಿ ಬರಲಿ” ಎಂದಳು ಮೀರಾ. ಒಪ್ಪಿ ತಲೆಯಾಡಿಸಿದಳು ವೀಣಾ. ಒಂದು ವಾರವಾಯಿತೇನೋ… ಇದೇ ಕತೆ ಮುಂದುವರೆಯಿತು. ಗೆಳತಿಯರಿಬ್ಬರೂ ಪಾಪ ಅವನು ಬೇಗ ಬರಲಿ, ಇವಳ ದುಃಖ ನೋಡಕ್ಕಾಗಲ್ಲ ಎಂದು ದಿನದಿನವೂ ಹಾರೈಸಿದರು. ಅದೊಂದು ದಿನ ಇನ್ನೇನು ಬಸ್ಸು ಹೊರಡುವ ಹೊತ್ತಿಗೆ “ಇಲ್ಲಿ ಸೀಟಿದೆ ಬಾ” ಎನ್ನುತ್ತಾ ಮೆಟ್ಟಿಲನ್ನು ಹತ್ತಿದ ಗಂಡಸಿನ ದನಿ ಕೇಳಿತು. ಪರಿಚಿತವೆನಿಸಿದ ದನಿ ಕೇಳಿದ ತಕ್ಷಣ ಇಬ್ಬರೂ ತಿರುಗಿದರು. ಅದೇ ಅವನೇ! ಮದುವೆಯಾಗಿರಬೇಕು… ಯಾರೋ ತರುಣಿಯ ಕೈಹಿಡಿದುಕೊಂಡು ಹತ್ತಿಬಂದು ಎರಡು ಸೀಟಿನ ಹಿಂದೆ ಖಾಲಿಯಿದ್ದ ಸೀಟಿನಲ್ಲಿ ಕುಳಿತ. ಅವನ ಕತ್ತಿನಲ್ಲಿ ಮಿಂಚುತ್ತಿದ್ದ ಹೊಸ ಚೈನು, ಬೆರಳಲ್ಲಿದ್ದ ಹೊಸ ಚಿನ್ನದುಂಗುರ, ಅವಳ ಕತ್ತಿನಲ್ಲಿದ್ದ ಮಾಂಗಲ್ಯದ ಸರ, ಅಂತೆಯೇ ಬೆಳಗುತ್ತಿದ್ದ ಅವಳ ಮುಖ ಅವನ ಹೊಸ ಕತೆಯನ್ನು ತಾನೇ ಹೇಳಿತು. ಅವರ ಸಲ್ಲಾಪ ಆರಂಭವಾಯಿತು. ವೀಣನಿಗೆ ಕೋಪವುಕ್ಕಿ “ಹೀಗ್ಮಾಡೋಕೆ ಹೇಗ್‌ಮನಸ್ಬರತ್ತೆ? ಆ ಮುಠ್ಠಾಳಂಗೆ ಮುಂದಿನ ಸೀಟಿನಲ್ಲಿ ಅವ್ಳು ಕೂತಿದಾಳೇಂತಾನೂ ಅನ್ನಿಸ್ತಿಲ್ವಲ್ಲ” ಎಂದಳು ಮೆಲುದನಿಯಲ್ಲಿ. “ಪಾಪಿ, ಕಟುಕ ಅವ್ನು” ಮೀರಾನೂ ಜೊತೆಗೂಡಿದಳು. ಯಾವುದೇ ರೀತಿಯಲ್ಲಿ ಅವರಿಬ್ಬರ ಕತೆಯಲ್ಲಿ ಇವರಿಬ್ಬರ ಪಾತ್ರವಿರದಿದ್ದರೂ, ಇಬ್ಬರ ಮನಸ್ಸೂ ವ್ಯಗ್ರವಾಗಿತ್ತು. ಕೆಲವು ದಿನಗಳ ನಂತರ ಆ ಹೆಂಗಸು ಬರುವುದನ್ನೇ ಬಿಟ್ಟಳು… ಇವನು ತನ್ನ ಹೊಸ ಹೆಂಡತಿಯೊಡನೆ ಯಾವಾಗಲಾದರೂ ಬಸ್ಸಿನಲ್ಲಿ ಕಂಡು ಮೀರಾ, ವೀಣಾರಿಗೆ ಅವಳನ್ನು ನೆನಪಿಸುತ್ತಿದ್ದ ಅಷ್ಟೇ. ಇಲ್ಲವಾದರೆ ಇಬ್ಬರಿಗೂ ʻಅವಳʼ ನೆನಪು ಮಾಸಿದೆ. * ಹೀಗೇ ಒಂದೆರಡು ವರ್ಷಗಳೇ ಕಳೆದಿತ್ತೇನೋ. ಮೀರಾಗೂ ಮದುವೆಯಾಗಿ ಅವಳು ಕೃಷ್ಣರಾಜಪುರಕ್ಕೆ ವರ್ಗ ತೆಗೆದುಕೊಂಡಿದ್ದಾಳೆ. ವೀಣಾಗೆ ಫೋನಿನಲ್ಲಿ ಮಾತ್ರಾ ಆಗೀಗ ಸಿಗುತ್ತಾಳೆ. ವೀಣನಿಗೂ ಮಗುವಾಗಿ ಅವಳು ಮೊದಲಿನಂತೆ ಅದೇ ಬಸ್ಸನ್ನು ಹಿಡಿಯುವುದಿಲ್ಲ. ಸಿಕ್ಕಿದ ಬಸ್‌ ಹಿಡಿದು ಮಗುವನ್ನು ಬೇಬಿ ಸಿಟಿಂಗಿಗೆ ಬಿಟ್ಟು ಅಲ್ಲಿಂದ ಇನ್ನೊಂದು ಬಸ್ಸನ್ನು ಹಿಡಿದು ಆಫೀಸು ತಲಪುತ್ತಾಳೆ. ಇದೇ ದಿನಚರಿಯಲ್ಲಿ ಒಂದು ದಿನ ಅವಳ ಮದುವೆಯ ನಾಲ್ಕನೆಯ ವಾರ್ಷಿಕೋತ್ಸವ ಬಂದು, ಮಗುವಿರುವುದರಿಂದ ದೂರವೆಲ್ಲೂ ಹೋಗದೆ ಘಾಟಿ ಸುಬ್ರಹ್ಮಣ್ಯಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಬಂದರಾಯಿತೆಂದು ಗಂಡ ಹೆಂಡಿರಿಬ್ಬರೂ ಹೋದರು. ಅಂದು ಒಳ್ಳೆಯ ಮದುವೆ ಮುಹೂರ್ತವೇನೋ ದೇವಸ್ಥಾನದಲ್ಲಿ ಮೂರ‍್ನಾಲ್ಕು ಮದುವೆಗಳು ನಡೆಯುತ್ತಿದ್ದು ದೇವಸ್ಥಾನ ಗಿಜಿಗಿಜಿಯೆನ್ನುತ್ತಿತ್ತು. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಹೇಗೋ ದರ್ಶನ ಮುಗಿಸಿಕೊಂಡು ಬಂದು ಮೆಟ್ಟಿಲಿನ ಮೇಲೆ ಸುಧಾರಿಸಿಕೊಳ್ಳಲು ಕುಳಿತರು. ಮದುವೆಯಾದ ಜೋಡಿಗಳು ದೇವಸ್ಥಾನ ಪ್ರದಕ್ಷಿಣೆ ಹಾಕುತ್ತಾ ದೇವರ ದರ್ಶನಕ್ಕೆ ಸಾಗುತ್ತಿದ್ದರು. ಅದರಲ್ಲೊಂದು ಜೋಡಿಯನ್ನು ನೋಡಿದ ತಕ್ಷಣ ವೀಣಾ “ಅರೇ ಅವಳು…” ಎಂದಳು ಜೋರಾಗಿ. “ಅವಳು ಅಂದ್ರೆ ಯಾರು? ನಿಂಗೊತ್ತಾ?” ಗಂಡ ಮಹೇಶ ಕೇಳಿದ. ಉತ್ತರಿಸದೆ ಆ ಜೋಡಿಯನ್ನು ನೋಡುತ್ತಿದ್ದ ವೀಣಾಳ ಕಣ್ಣುಗಳು ತಂತಾನೇ ತುಂಬಿಕೊಂಡವು. ವರ ಖಂಡಿತವಾಗಿ ಐವತ್ತು ವರ್ಷ ದಾಟಿದವನು. ಪೇಟದ ಅಂಚಿನಿಂದ

ಅವಳ ಬದುಕಿನ ಪುಟಗಳಲ್ಲೊಂದು ಇಣುಕು… Read Post »

ಇತರೆ, ಗಜಲ್ ವಿಶೇಷ

ಗಜಲ್ ತೇಜಾವತಿ ಹೆಚ್.ಡಿ. ಅನುಭವಿಸುವಿಯಾದರೆ ನನ್ನೆಲ್ಲಾ ನೋವುಗಳೂ ನಿನ್ನರಸಿ ಬಳಿಬರುವವು ಸಖದೂಷಿಸುವಿಯಾದರೆ ನನ್ನೊಲವಿನ ಕ್ಷಣಗಳೂ ನಿನ್ನನ್ನು ತೊರೆದೋಡುವವವು ಸಖ ರಕ್ಷಿಸುವಿಯಾದರೆ ನಿನ್ನ ತೋಳ್ತೆಕ್ಕೆಯಲಿ ಅಲುಗಾಡದೆ ಸ್ತಬ್ಧವಾಗಿರುವೆನುಭಕ್ಷಿಸುವಿಯಾದರೆ ನನ್ನಿರುವಿಕೆಯ ಸುಳಿವುಗಳೂ ಹಿಂಬಾಲಿಸದಿರುವವು ಸಖ ಪೂಜಿಸುವೆಯಾದರೆ ಪಯಣದುದ್ದಕ್ಕೂ ನಿನ್ನಡಿಗಳಿಗೆ ಮೆಟ್ಟಿಲಾಗಿ ನಿಲ್ಲುವೆನುಧಿಕ್ಕರಿಸುವಿಯಾದರೆ ನನ್ನಡಿಯ ಧೂಳು ಕಣಗಳೂ ಸೋಕದಿರುವವು ಸಖ ಗೌರವಿಸುವಿಯಾದರೆ ಮನದ ಮೂಲೆಯಾದರೂ ಸಾಕು ಅಸ್ತಿತ್ವಕ್ಕೆಅವಮಾನಿಸುವಿಯಾದರೆ ನೆನಪುಗಳು ಹೃದಯದಿಂದಲೇ ಬೇರುಸಹಿತ ಕಿತ್ತೊಗೆಯುವವು ಸಖ ಪ್ರೇಮಿಸುವಿಯಾದರೆ ನೂರು ದಿನದ ಬದುಕು ಮೂರೇ ಕ್ಷಣವಾದರೂ ತೃಪ್ತಿ ‘ತೇಜ’ದ್ವೇಷಿಸುವಿಯಾದರೆ ಸಹಸ್ರ ವರ್ಷಗಳೂ ಕೂಡ ಸಂಕೋಲೆಯ ತೊಡಿಸುವವು ಸಖ ನಯವಾದ ಹಂಗಿನ ಮಾತು ಕಿವಿಯ ಪೊಟರೆಯ ಹರಿಯುತಿದೆ ಸಾಕಿದ್ವೇಷಭರಿತ ನೋಟದ ಈಟಿ ಹೃದಯದ ಗೂಡನು ಇರಿಯುತಿದೆ ಸಾಕಿ ನಾಲಿಗೆ ತುದಿಯಲ್ಲಿನ ವ್ಯಂಗ್ಯ ನುಡಿಗಳು ಬೆಂಕಿಯ ಕಿಡಿಗಳಾಗಿವೆ ಈಗತಣ್ಣನೆಯ ಹಿಮವು ತನ್ನ ಗುಣವ ತೊರೆದು ಬಿಸಿಯೇರುತಿದೆ ಸಾಕಿ ಮಮಕಾರದ ಮಾಯೆ ಸರಿತಪ್ಪುಗಳ ದಾರಿಯನ್ನೇ ಕತ್ತಲಾಗಿಸಿದೆದೀಪ ತಾನುರಿದು ಬೆಳಕನೂಡುತ್ತಾ ಛಾಯೆಯಲಿ ಮರೆಯಾಗುತಿದೆ ಸಾಕಿ ಸಂಬಂಧದ ಬೇರುಗಳ ನಂಬಿಕೆಗಳು ಮಣ್ಣು ಪಾಲಾಗಿವೆ ಇಂದುಸಮಯಸಾಧಕತನ ಚಳಿಗೆ ತನ್ನ ಮೈ ಕಾಯಿಸುತಿದೆ ಸಾಕಿ ತುಟಿಯಂಚಿನ ಅಣುಕು ನಗೆ ಮುಖವಾಡದ ರಹಸ್ಯವನ್ನು ತೆರೆದಿಡುತ್ತಿದೆ ಇಲ್ಲಿಉಸಿರಾಡುತ್ತಿರುವ ದುರ್ಗಂಧ ಮನಸ್ಸಿನ ಕೋಣೆಯನ್ನು ಮಲಿನಗೊಳಿಸುತಿದೆ ಸಾಕಿ ತುಂಬಿರುವ ಸಿರಿಸಂಪತ್ತಿನಲ್ಲೂ ಏಕಾಂಗಿಭಾವ ಇಣುಕಿ ನೋಡುತ್ತಿದೆ ‘ತೇಜ’ಹತ್ತಲು ನೆರವಾದ ಏಣಿ ಗೆದ್ದಲಿಡಿದು ಭೂಮಿಯೊಳಗೆ ಲೀನವಾಗುತಿದೆ ಸಾಕಿ ****************************************

Read Post »

ಇತರೆ, ಗಜಲ್ ವಿಶೇಷ

ಗಜಲ್ ಪ್ರತಿಮಾ ಕೋಮಾರ ವೈಷಮ್ಯದ ಮನಸುಗಳ ಪ್ರೀತಿಯ ಮಾತಿನಿಂದ ಸೆಳೆಯಬೇಕು ನಾವುಒಡೆದ ಕನಸುಗಳ ಬೆಳಕಿನ ದೀಪವಿಟ್ಟು ಹೊಸೆಯಬೇಕು ನಾವು ತಾಳ್ಮೆಯಿಲ್ಲದ ಬದುಕು ಸರಿಯ ದಡ ಸೇರುವುದೇ?ವೃಕ್ಷದ ಫಲ ಹಣ್ಣಾಗಿ ಮಾಗುವವರೆಗೆ ಕಾಯಬೇಕು ನಾವು ಸುಖ ದುಃಖಗಳು ಎಲ್ಲರ ಜೀವನದ ಇಬ್ಬದಿಗಳುನೋವ ಕಂಗಳ ಸಾಂತ್ವನದ ಹಾಡಿನಿಂದ ನಗಿಸಬೇಕು ನಾವು ಸಾಧನೆಯ ಹಾದಿಯಲಿ ಮಲ್ಲಿಗೆಯ ಹಾಸಿರದು ಎಂದಿಗೂಎಡರು ತೊಡರುಗಳನ್ನು ಹಠದಿಂದ ಮೀರಿ ಜಯಿಸಬೇಕು ನಾವು ಹುಟ್ಟಿದ ಎಲ್ಲಾ ಜೀವಿಗಳು ಬಾಳ ಸವೆಸಿ ಹೋಗುವುವುಬಾಡಿದ “ಪ್ರತಿ “ಬದುಕ ಮಾಣಿಕ್ಯವಾಗಿಸಲು ಪ್ರಯತ್ನಿಸಬೇಕು ನಾವು ಶೂನ್ಯ ಹೃದಯವ ಹದವಾಗಿ ಪ್ರೀತಿಯೆರೆದು ತುಂಬಿಸುವವ ನೀನುಪಕ್ಕಕ್ಕಿಟ್ಟ ಕನಸುಗಳ ಹೊಸದಾಗಿ ಹೊಸೆದು ಬಿತ್ತುವವ ನೀನು ಧರೆಗೆ ಬಿದ್ದ ಬೀಜ ಮೊಳೆಯಲು ತೇವ ಬೇಕಲ್ಲವೇ?ಕೊನರಿದ ಆಸೆಗಳಿಗೆ ಉದಕವೆರದು ಚಿಗುರಿಸುವವ ನೀನು ಕಾವು ಹೆಚ್ಚಾದಂತೆ ಚಿಮ್ಮುವ ಚಿಲುಮೆಯು ಕೂಡಾ ಬತ್ತುವುದುಬದುಕ ಬಡಿದಾಟದಲ್ಲಿ ಭರವಸೆಯೆರೆದು ಬೇರಿಳಿಸುವವ ನೀನು ನಂಬಿಕೆಯೇ ನಾಶವಾದರೆ ನಡೆಗೆಲ್ಲಿಹುದು ಗತ್ತುಪ್ರತಿ ಹೆಜ್ಜೆಗೂ   ಧೈಯ೯ ತುಂಬಿ ನೇಹವೆರದು ನಡೆಸುವವನು ನೀನು ಹೃದಯಗಿಡಕಿ ತೆರೆದಿದ್ದರೆ ತಾನೇ ಗಾಳಿ,ಬೆಳಕು,ಗಂಧಮುಚ್ಚಿದ ಕವಾಟವ ಹಗುರಾಗಿ ಸರಿಸಿ ಚೈತನ್ಯವೆರೆದು ಬದುಕಿಸುವವ ನೀನು ***********************************

Read Post »

ಇತರೆ, ಗಜಲ್ ವಿಶೇಷ

ಗಜಲ್ ಸ್ಮಿತಾ ಭಟ್ ಎದೆಯ ಮಾತುಗಳು ಮೊರೆಯುತ್ತಿದೆ ನನಗೂ ನಿನಗೂ/ಅಂತರಂಗದ ಆಹ್ವಾನ ಹಿತನೀಡುತ್ತಿದೆ ನನಗೂ ನಿನಗೂ/ ಕಣ್ಣ ಗೊಳದಲಿ ನೂರಾರು ಕನಸುಗಳ ಚಲನವಲನನಭವ ತೋರಿಸಿ ಹಗುರಾಗಬೇಕಿದೆ ನನಗೂ ನಿನಗೂ/ ಆತುಕೊಂಡೇ ಬದುಕುವ ಹಂಬಲ ಕೆರಳುತ್ತದೆ ಕೆಲವೊಮ್ಮೆಸಾಕೆಂದು ಸರಿಸದೆ ಒಳಗೊಳ್ಳುವುದಿದೆ ನನಗೂ ನಿನಗೂ/ ಮೋಹದ ಸೆಳೆತಕೆ ಮನಸೋತ ವಾಂಛೆಯಲ್ಲವಿದು ಗೆಳೆಯಾಈಗಷ್ಟೇ ಹನಿಯಾಗಿದ್ದೇನೆ ಕಡಲಾಗುವುದಿದೆ ನನಗೂ ನಿನಗೂ/ ಪಯಣದ ತಿರುವುಗಳಿಗೆ ಹೆಸರಲಿಗೆಯ ಹಂಗೇಕೆ ದೊರೆಯೇಮರೆಯದೇ ಸರಿ ದಾರಿಯಲಿ ಕೂಡುವುದಿದೆ ನನಗೂ ನಿನಗೂ/ ಮೌನವಾಗಿದ್ದೇ ಮುನ್ನುಡಿ ಬರೆದಾಗಿದೆ ಬದುಕಿಗೆ ಓದಿ ಬಿಡುಇಲ್ಲಬಿಡು ಮಾತಾಗಿ ಮನಕದಡುವ ಇರಾದೆ ನನಗೂ ನಿನಗೂ/ ನಿಶ್ಚಿತವಾಗಿದೆ ಕಾಯಲೇಬೇಕೆಂಬ ತಪನೆ “ಮಾದವಾ”ಕೊಸರದಿರು ಜನ್ಮ ಜನ್ಮದ ಬೆಸುಗೆಯಿದೆ ನನಗೂ ನಿನಗೂ/ ನಿನ್ನ ಅಸಹನೆಯ ಒಂದು ತುಣುಕು ಸಾಕು ಬದುಕು ಸಾಕೆನಿಸಲು/ನಿನ್ನ ಒಲವಿನ ಒಂದು ಬಿಂದು ಸಾಕು ಕನಸು ತುಂಬಿಕೊಳ್ಳಲು/ ಪ್ರತಿ ಚಣವೂ ನಗುವೇ ಸ್ಪುರಿಸಬೇಕೆಂಬುದು ಅತಿಯಾಯಿತೇನುನಿನ್ನ ಇರುವಿಕೆಯ ಒಂದು ಛಾಯೆ ಸಾಕು ನಡೆದು ಸಾಗಲು/ ಮನವೇಕೆ ಸದಾ ತಹತಹಿಸುತ್ತದೆ ನಿನ್ನ ಅನುಪಸ್ಥಿತಿಯಲ್ಲಿಕಳೆದು ಹೋಗುವ ಒಂದು ಮಾತು ಸಾಕು ಮನಸು ಒಡೆಯಲು/ ಮುಗಿಲಿಗೆ ಹಗ್ಗ ಕಟ್ಟಿ ಜೀಕುವ ಹುಚ್ಚು ಸಾಹಸವೇಕೆ ಬೇಕುಭರವಸೆಯಲಿ ಚಾಚಿದ ಮರದ ಒಂದು ರೆಂಬೆ ಸಾಕು ಗೂಡು ಕಟ್ಟಲು/ ಅಂತರಂಗದ ಗಾಯಕ್ಕೆ ಒಲವ ಸವರುತ್ತಿರು “ಮಾಧವ”ನಿನ್ನದೊಂದು ಕುಡಿನೋಟ ಸಾಕು ಮೌನ ಮುರಿಯಲು/ *********************************

Read Post »

ಇತರೆ, ಗಜಲ್ ವಿಶೇಷ

ಗಜಲ್ ಪ್ರಭಾವತಿ ಎಸ್ ದೇಸಾಯಿ ವಿರಹದುರಿಗೆ ಜೀವವು ಪತಂಗದಂತೆ ಸುಟ್ಟು ಶವವಾಗಲಿ ರಾತ್ರಿಕಂಡ ಕನಸ ಹೂ ದಳಗಳು ಉದುರಿ ಉಸಿರು ಸಮಾಧಿಯಾಗಲಿ ರಾತ್ರಿ ಎದೆಭಾರವಾಗಿದೆ ನೆನಪಿನ ಗಂಟು ಹೊತ್ತು ಬಂಡಿ ಸಾಗಲಿ ರಾತ್ರಿಬದುಕು ಹಗುರಾಗಲು ಬೆಂದು ಉರಿವ ದೇಹಕೆ ತಂಬೆಳಕಾಗಲಿ ರಾತ್ರಿ ದಣಿದ ಕಣ್ಣ ರೆಪ್ಪೆಗಳು ನಿಂತು ನಿದ್ದೆಗೆ ಬೇಲಿಯಾಗಲಿ ರಾತ್ರಿಮಧುರ ಗಳಿಗೆಗಳ ಕಾಯುವ ಹೃದಯಗಳು ಒಲಿದು ಒಂದಾಗಲಿ ರಾತ್ರಿ ಮನದಾಳದಲ್ಲಿ ಎದ್ದ ಪ್ರಶ್ನೆಗಳಿಗೆ ಉತ್ತರವಾಗಲಿ ರಾತ್ರಿನೊಂದ ಜೀವಿಗಳಿಗೆ ಜಗದ ಎಲ್ಲ ಸುಖವು ಅನುಭವವಾಗಲಿ ರಾತ್ರಿ ಅಗಲಿಕೆ ನೋವು ಹೊದ್ದ ಮೌನ ಸರಿಯಲು ತಂಗಾಳಿಯಾಗಲಿ ರಾತ್ರಿಅಲೆವ ಜೋಗಿಗೆ ಚಂದಿರ”ಪ್ರಭೆ”ಮುಗಿಲ ಪಲ್ಲಂಗವಾಗಲಿ ರಾತ್ರಿ ಉಸಿರು ಉಸಿರಲಿ ಬೆರೆಸಿ ನಾದ ಹೊರಡಿಸಿದವನೆ ಎಲ್ಲಿ ಮರೆಯಾದೆಒಲಿದ ಹೃದಯ ವೀಣೆ ಮೀಟಿ ಭಾವತುಂಬಿದವನೆ ಎಲ್ಲಿ ಮರೆಯಾದೆ ಯಮುನೆಯ ಅಲೆಗಳು ಎದೆ ಉಸಿರಾಟ ಏರಿಳಿತ ಎಣಿಸುತಿವೆ ನೋಡುವಿರಹ ತಾಪದಲಿ ಮನ ಕಮಲ ಬಾಡಿಸಿದವನೆ ಎಲ್ಲಿ ಮರೆಯಾದೆ ಯುಗ ಯುಗಗಳಿಂದ ರಾಧೆ ಯಂತೆ ಆರಾಧಿಸುತಿರುವೆ ನಿನ್ನನ್ನುಜನುಮ ಜನುಮದ ಪ್ರೀತಿ ಬೆಸುಗೆ ಕಳಚಿದವನೆ ಎಲ್ಲಿ ಮರೆಯಾದೆ ಅನುರಾಗದ ಎಳೆ ಎಳೆಯಿಂದ ಹೆಣೆದ ಒಲವಿನ ಶಾಲು ಹೊದ್ದಿರುವೆಪ್ರೇಮಿಗಳನು ಜನ ದೂರುವಂತೆ ಮಾಡಿದವನೆ ಎಲ್ಲಿ ಮರೆಯಾದೆ ಪ್ರೇಮದ ಹಣತೆ ಬತ್ತಿ ಕ್ಷೀಣಿಸದಂತೆ ಕಾಯಬೇಕು ಬಾಳಿನಲಿಒಲವ ತೈಲ ಹಾಕದೆ “ಪ್ರಭೆ” ನಂದಿಸಿದವನೆ ಎಲ್ಲಿ ಮರೆಯಾದೆ **************************

Read Post »

ಇತರೆ, ಗಜಲ್ ವಿಶೇಷ

ಗಜಲ್ ಮದುಶಾಲೆಯ ಹೊಸ್ತಿಲಲ್ಲಿ…

ವಿಶೇಷ ಲೇಖನ ಗಜಲ್ ಮದುಶಾಲೆಯ ಹೊಸ್ತಿಲಲ್ಲಿ… ಡಾ. ಮಲ್ಲಿನಾಥ ಎಸ್. ತಳವಾರ        ಪ್ರೀತಿಯೇ ಈ ಜಗದ ಸುಂದರ ಬುನಾದಿ. ಎಲ್ಲ ಚಟುವಟಿಕೆಗಳಿಗೆ ಹೃದಯ ಬಡಿತದ ಪಿಸುಮಾತೆ ಕಾರಣ. ಸ್ಪರ್ಶಕ್ಕೂ ಎಟುಕದ ಅನುಭವಗಳೆಲ್ಲವನ್ನು ಕಟ್ಟಿಕೊಡುವುದೆ ಸಾಹಿತ್ಯ. ಆ ಸಾಹಿತ್ಯದ ಸಸಿಗೆ ನಮ್ಮ ಭಾವನೆಗಳೆ ವರ್ಷಧಾರೆ..!! ಭಾವಗಳ ಸಂಗಮವೇ ಆ ಅಕ್ಷರ ಅಕ್ಷಯ ಪಾತ್ರೆ. ಸುಂದರ ಸಮಾಜದ ಪ್ರತಿಬಿಂಬವನ್ನು ಪ್ರತಿನಿಧಿಸುವ ದರ್ಪಣವೇ‌ ಈ ಅಕ್ಷರ ಲೋಕ..!! ಇದೊಂದು ಭಾವನೆಗಳ ಕಲ್ಪನಾತ್ಮಕ ಪರಪಂಚ. ಇದು ಕ್ರಿಯಾಶೀಲತೆ, ಭಾಷೆ, ವರ್ಣಗಳು ಮತ್ತು ಛಂದಸ್ಸಿನ ಸುಂದರ ಆಪ್ತವಾದ ಹೊದಿಕೆಯನ್ನು ಹೊಂದಿರುತ್ತದೆ. ಇದು ಸಮಾಜದ ಹಿತವನ್ನು ಕಾಪಾಡುವ ಪರಂ ಜ್ಯೋತಿ. ಈ ಹೊಂಗಿರಣದಿಂದ ಯಾವ ವಿಷಯವೂ ಹೊರತಾಗಿ ಉಳಿದಿಲ್ಲ, ಉಳಿಯಲು ಸಾಧ್ಯವೂ ಇಲ್ಲ. ಅನನ್ಯ ಪಂಚೇಂದ್ರಿಯಗಳ ಅನುಪಮ ಅನುಭವವನ್ನು ಉಣಬಡಿಸುವ ಭಾಷೆಯ ಸಾಂಗತ್ಯದಲ್ಲಿ ಹೆಜ್ಜೆ ಹಾಕುವ ಸಾಹಿತ್ಯಕ್ಕೆ ಯಾವುದೆ ನಿರ್ದಿಷ್ಟವಾದ ಭಾಷೆಯ, ಗಡಿಯ ಸೀಮೆಯಿಲ್ಲ. ನಮ್ಮ ಕನ್ನಡದ ಅರ್ವಾಚೀನ ಸಾಹಿತ್ಯದ ಉದ್ಯಾನದಲ್ಲೊಮ್ಮೆ ವಿಹರಿಸಿದಾಗ ಸಂಸ್ಕೃತ ಭಾಷೆಯ, ಸಂಸ್ಕೃತ ಸಾಹಿತ್ಯದ ದಟ್ಟ ಪ್ರಭಾವ ಅಂದು ಇರುವುದನ್ನು ಗಮನಿಸಬಹುದು. ಮುಂದೆ ೧೨ನೇ ಶತಮಾನದಲ್ಲಿ ಶಿವಶರಣರ ಕಾಲಘಟ್ಟದಲ್ಲಿ ಪಾದರಸದಂತಹ ಸಾಹಿತ್ಯ ರೂಪ ‘ವಚನ’ ವು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಸಾರಸ್ವತ ಲೋಕದಲ್ಲಿ ಸಂಚಲನವನ್ನು ಸೃಷ್ಟಿಸಿತು..ತಿರುವಿನ ಆ ಕಾಲ ಗರ್ಭದಲ್ಲಿ ನವ್ಯ, ಆಧುನಿಕ ಕನ್ನಡಕ್ಕೆ ಪಾಶ್ಚಿಮಾತ್ಯ ಸಾಹಿತ್ಯವೇ ನಂದಾದೀಪವಾಯಿತು. ಈ ನೆಲೆಯಲ್ಲಿ ಚಿಂತನೆ ಮಾಡಿದಾಗ ಸಾಹಿತ್ಯವು ನಿರಂತರವಾಗಿ ಚಲಿಸುತ್ತಿರುತ್ತದೆ ಎಂದೆನಿಸದೆ ಇರದು.         ಈ ಹಿನ್ನೆಲೆಯಲ್ಲಿ ‘ಗಜಲ್’ ಕಾವ್ಯ ಪ್ರಕಾರವು ಮನವನ್ನು ಮೆದುವಾಗಿ ಸ್ಪರ್ಶಿಸುತ್ತದೆ. ಈ ಕಾರಣಕ್ಕಾಗಿಯೇ ಗಜಲ್ ನ ಅರ್ಥ, ಹುಟ್ಟು, ಛಂದೋಲಕ್ಷಣಗಳು, ವೈವಿಧ್ಯತೆಗಳು ಹಾಗೂ ಅದರ ಪ್ರಕಾರಗಳ ಕುರಿತು ಅರಿಯುವುದು ತುಂಬಾ ಮುಖ್ಯ. ಈ ಗಜಲ್ ಶಬ್ಧದ ಇತಿಹಾಸವು ನಮ್ಮನ್ನು ದಕ್ಷಿಣ ಏಷ್ಯಾದ ಅರಬ್ ನ ಸುಂದರ ಮರಭೂಮಿಯತ್ತ ಕರೆದೊಯ್ಯುತ್ತದೆ. ‘ಗಜಲ್’ ಪದ ಮೂಡಿ ಬಂದದ್ದು ಅರೆಬಿಕ್ ಭಾಷೆಯಿಂದ. ಈ ಪದದ ನಿಷ್ಪತ್ತಿ ಕುರಿತು ಹೀಗೆ ಹೇಳಲಾಗಿದೆ. ಗಜಲುನ್, ಗಜಾಲ್, ಗಿಜಾಲ್ ಪದಗಳಿಂದ ಬಂದಿರಬಹುದು ಎನ್ನಲಾಗುತ್ತಿದೆ. ‘ಗಜಲುನ್’ ಎಂದರೆ ಮೋಹಕ ಸನ್ನೆಗಳಿಂದ ಹೆಂಗಸರೊಡನೆ ಮಾತನಾಡುವುದು ಎಂದು. ‘ಗಜಾಲ್’ ಎಂದರೆ ಹೆಣ್ಣಿಗೆ ಹೋಲಿಸಿ ಇಡುವ ಹೆಸರು ಅಥವಾ ಜಿಂಕೆ ಕಣ್ಣಿನ ಆಕರ್ಷಕ ತೀಕ್ಷ್ಣ ಬುದ್ಧಿಯ ಹೆಣ್ಣು. ‘ಗಿಜಾಲ್’ ಎಂದರೆ ಜಿಂಕೆ. ಈ ಹಿನ್ನೆಲೆಯಲ್ಲಿ “ಜಿಂಕೆ ಅನುಭವಿಸುವ ಆರ್ತನಾದ ಬೇಟೆಗಾರನಿಂದ ತಪ್ಪಿಸಿಕೊಂಡು ಸ್ವತಂತ್ರವಾಗುವ ನೋವೆ” ಗಜಲ್ ನ ಮೂಲ ಎಂಬ ೭ನೆ ಶತಮಾನದ ಗಜಲ್ ತಜ್ಞ ಶಮ್ಸ್ ಕೈಸ್ ರಾಜಿ ಯವರ ಹೇಳಿಕೆಯನ್ನು ಸ್ಮರಿಸಬಹುದು. ಇದರೊಂದಿಗೆ ಡಾ. ಅಬ್ದುರಶೀದ್ ಎ. ಶೇಖ್ ರವರು ತಮ್ಮ ಗಜಲ್ ಸೌಂದರ್ಯ ಮೀಮಾಂಸೆ ಯಲ್ಲಿ ದಾಖಲಿಸಿರುವುದನ್ನು ಇಲ್ಲಿ ಗಮನಿಸುವುದು ಸೂಕ್ತ. ಗಜಲ್ ಎನ್ನುವುದು ಮುಗಾಜೆಲಾತ, ತಗಜ್ಜುಲ್ ಪದಗಳಿಂದ ಬಂದಿದೆ ಎಂದು ಹೇಳಿದ್ದಾರೆ. ಈ ಪದಪುಂಜಗಳ ಅರ್ಥ ಪ್ರೇಮಿಗಳ ಮಾತುಕತೆ, ಸರಸ-ಸಲ್ಲಾಪ, ಹೆಂಗಸರ ಕುರಿತು ಮಾತು…. ಎಂದೆಲ್ಲಾ ಅರ್ಥೈಸಲಾಗುತ್ತಿದೆ. ಕ್ರೌಂಚ ಹಕ್ಕಿಗಳ ವಿಹ್ವಲತೆ, ದೀನ ನೋವು, ಆರ್ತನಾದವು ಮಹಾಕಾವ್ಯ ‘ರಾಮಾಯಣ’ ದ ಉದಯಕ್ಕೆ ಕಾರಣವಾಗಿರುವುದನ್ನು ಇಲ್ಲಿ ಮೆಲುಕು ಹಾಕಬಹುದು. ಈ ಅರ್ಥದಲ್ಲಿ ಕರುಣಾರಸ ತುಂಬಿದ ಮಧುಬಟ್ಟಲೆ ಈ ಬರಹದ ಸ್ಥಾಯೀ ರೂಪ. ಇದು ಸಾಹಿತ್ಯ ರೂಪವಾಗಿ ಬೆಳೆದು ಬಂದದ್ದು ಮಾತ್ರ ಇರಾನಿನ ಪರ್ಷಿಯನ್ ಭಾಷೆಯಲ್ಲಿ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಅರಬರು ಇರಾನ್ ದೇಶವನ್ನು ಹಲವು ವರ್ಷಗಳ ಕಾಲ ಆಳಿದರು. ಇದರಿಂದ ಸಹಜವಾಗಿಯೇ ಅರಬರ ಭಾಷೆ, ಕಾವ್ಯಗಳ ಪ್ರಭಾವ ಇರಾನರ ಮೇಲೆ ಆಯಿತು. ಪರ್ಷಿಯನ್ ಭಾಷೆಯ ಪ್ರಕಾರ ‘ಗಜಲ್’ ಎಂದರೆ ಭಾವಗೀತೆ, ಪ್ರೇಮಗೀತೆ, ಹಾಡು, ಪ್ರಗಾಥ ಎಂದಾಗುತ್ತದೆ. ನಂತರ ಮೂಲವಾಗಿ ಸುಂದರವಾಗಿ ಇರುವ ಉರ್ದುವಿನಲ್ಲಿ ಹಾಲು-ಜೇನಿನ ಸಂಗಮದಂತೆ ತನ್ನ ಪಾರುಪತ್ಯವನ್ನು ಸ್ಥಾಪಿಸಿರುವುದು ಇವಾಗ ಇತಿಹಾಸ..!!      ಇಂತಹ ಗಜಲ್ ನ ವಿಕಾಸ ತುಂಬಾನೆ ಕುತೂಹಲಕಾರಿಯಾಗಿದೆ.  ಅರಬ್ ನ ೬ ನೇ ಶತಮಾನದ ಅರಬ್ಬಿ ಪದ್ಯ “ಕಸೀದ” ದಿಂದ ಇದು ಹುಟ್ಟಿರಬಹುದು ಎಂದು ಕೆಲವರು ಹೇಳಿದರೆ, ಪಾಕಿಸ್ತಾನದ ಕವಿ, ವಿಮರ್ಶಕ ವಜೀರ್ ಆಗಾ ಅವರು ಫಾರಸಿ ಭಾಷೆಯ ಜಾನಪದ ಕಾವ್ಯ “ಚಾಮ” ದಿಂದ ಹುಟ್ಟಿದೆ ಎಂದು ಹೇಳುತ್ತಾರೆ. ‘ಕಸೀದ’ ವ್ಯಕ್ತಿ ಪ್ರಶಂಸೆ, ದಾರ್ಶನಿಕತೆ, ಜನರನ್ನು ಉತ್ಸಾಹಗೊಳಿಸುವ ವಿಷಯಗಳಿಂದ ಕೂಡಿದ ಒಂದು ಧೀರ್ಘ ಖಂಡ ಕಾವ್ಯ. ಇಲ್ಲಿ ರಾಜನ ಹೊಗಳಿಕೆ ಮತ್ತು ರಾಜನ ಮನೋಭಿಲಾಸೆಯೆ ಮುಖ್ಯವಾಗುತಿತ್ತು. ಈ ಹಿನ್ನೆಲೆಯಲ್ಲಿ ಗಮನಿಸುವುದಾದರೆ ಶಬಾಬ್, ಶರಾಬ್ ಮತ್ತು ಕಬಾಬ್ ಕಸೀದದ ಸ್ಥಾಯಿ ಭಾವ ಆಗಿದ್ದವು ಎನ್ನುವುದರ ಜೊತೆಗೆ ಅರಸೊತ್ತಿಗೆಯ ಸಂಕೇತವಾಗಿದ್ದವು ಎಂಬುದು ಅಂದಿನ ಕಾಲಚಕ್ರವನ್ನು ಪ್ರತಿನಿಧಿಸುತ್ತದೆ.  ಜೊತೆ ಜೊತೆಗೆ ಇವು ವಿಲಾಸಿ ಜೀವನವನ್ನು ಬಿಂಬಿಸುತ್ತವೆ. ಈ ಕಾರಣಕ್ಕಾಗಿಯೇ ಅಂದಿನ ಕವಿಗಳು ತಮಗೆ ಇಷ್ಟವಿಲ್ಲದಿದ್ದರೂ ರಾಜ- ಮಹಾರಾಜರನ್ನು ಹೊಗಳುತ್ತಿದ್ದರು. ಕೆಲವರಂತೂ ತಮ್ಮ ಉಪಜೀವನಕ್ಕಾಗಿಯೂ ಬರೆಯುತ್ತಿದ್ದರು..!! ಕಸೀದದ ಪೀಠಿಕಾ ದ್ವಿಪದಿ ಎಂದರೆ ‘ತಷಬೀಬ್’ ಪ್ರೀತಿ, ಪ್ರೇಮ ಭಾವಾಭಿವ್ಯಕ್ತಿಯನ್ನು ಒಳಗೊಂಡಿರುತ್ತದೆ. ಪೀಠಿಕೆಯ ದ್ವಿಪದಿ/ ಷೇರ್ ಗಳನ್ನು ಎತ್ತಿ ಬೇರೆ ಮಾಡಿ ಅವುಗಳಿಗೆ ಗಜಲ್ ಎಂದು ಕರೆಯಲಾಯಿತು. ಇದರೊಂದಿಗೆ ಇರಾನ್ ದೇಶದ ಹಳ್ಳಿಗಳಲ್ಲಿ ಹೆಂಗಸರು ರಚಿಸಿ ಹಾಡುತ್ತಿದ್ದ ‘ಚಾಮ’ ಎಂಬ ಜಾನಪದ ಕಾವ್ಯ ಪ್ರಕಾರ ದಿಂದ ಗಜಲ್ ಹುಟ್ಟಿದೆಯೆಂದೂ ಹೇಳಲಾಗುತ್ತಿದೆ. ಇರಾನ್ ದೇಶವು ಅತಿಥಿಗಳ ಸತ್ಕಾರಕ್ಕೆ ತುಂಬಾ ಹೆಸರುವಾಸಿ. ತಮ್ಮ ಮನೆಗೆ ಬಂದ ಅತಿಥಿಗಳ ಮನೋರಂಜನೆಗಾಗಿ ಹಾಡು ಕಟ್ಟಿ ಹಾಡುತ್ತಿದ್ದರು. ಆ ನೆಲೆಯಲ್ಲಿ ಚಾಮ ಕಾವ್ಯವೂ ಹೌದು, ಸಂಗೀತವೂ ಹೌದು. ಇರಾನ್ ದೇಶದ ಹಳ್ಳಿಗಳಲ್ಲಿ ಅದು ಬಹಳ ಜನಪ್ರಿಯವಾಗಿತ್ತು,  ಅತ್ಯಂತ ಮನೋಹರವಾಗಿತ್ತು. ಈ ಸೆಲೆಯಲ್ಲಿ “ಗಜಲ್ ಸ್ವಭಾವತಃ ಗೀತದ ಬುನಾದಿಯ ಮೇಲೆ ನಿಂತಿರುವುದರಿಂದ ಗಜಲ್ ಅನ್ನು ಅರಬ್ಬಿ ತಷಬೀಬ್ (ಕಸೀದ್ ದ ಪೀಠಿಕೆ) ದಿಂದ ಹುಟ್ಟಿತು ಎನ್ನುವುದಕ್ಕೆ ಬದಲಾಗಿ ಅದನ್ನು ಇರಾನದ ಚಾಮ ಕಾವ್ಯಕ್ಕೆ ಸಂಬಂಧ ಪಟ್ಟುದೆಂದು ಹೇಳುವುದು ಸೂಕ್ತ” ಎಂಬ ಪಾಕಿಸ್ತಾನದ ಕವಿ, ವಿಮರ್ಶಕ ಡಾ. ವಜೀರ್ ಆಗಾರವರ ಹೇಳೀಕೆ ಮುಖ್ಯವೆನಿಸುತ್ತದೆ. ‌        ಈ ಗಜಲ್ ಎನ್ನುವುದು ಮುಂಜಾವಿನ, ನಸುಕಿನ ಸಮಯದ ಸವಿ ನಿದ್ದೆ, ಕಂದಮ್ಮಗಳ ನೆಚ್ಚಿನ ಚಂದಮಾಮ, ತಾಯಿಯ ವಾತ್ಸಲ್ಯಮಯ ಲಾಲಿ ಹಾಡು ಹಾಗೂ ಅಬಲೆಯರ ಆಕ್ರಂದನವನ್ನೂ ಸಶಕ್ತವಾಗಿ ಅಭಿವ್ಯಕ್ತಿಸುತ್ತದೆ. ಇದೊಂದು ಪ್ರೀತಿಸುವ ಜೀವಿಗಳ ಭಾವಪರವಶತೆಯ ಸುಂದರ ಸಂಭ್ರಮ. ಇದು ನಿರಂತರವಾದ ಮತ್ತು ಆಳವಾದ ಅನುಭೂತಿಯನ್ನು ಸಹ ನೀಡುತ್ತದೆ. ಅಂತೆಯೇ “Ghazal is all about desire, Journey to love and light” ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿಯೇ ಗಜಲ್ ಇಂದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕಾವ್ಯಗಳ ರಾಣಿ ಎಂಬ ನವಿಲು ಗರಿಯನ್ನು ಹೊತ್ತು ನಿಂತಿದೆ. ****************************************

ಗಜಲ್ ಮದುಶಾಲೆಯ ಹೊಸ್ತಿಲಲ್ಲಿ… Read Post »

ಇತರೆ, ಜೀವನ

ಬದುಕು ಎಷ್ಟೊಂದು ಸುಂದರ

ಲೇಖನ ಚಿಕ್ಕ ಪುಟ್ಟ ಸಂಗತಿಗಳಲ್ಲೇ ಸಂತೃಪ್ತಿ ಕಾಣುತ್ತಿರಿ ಆಗ ಬದುಕು ಎಷ್ಟೊಂದು ಸುಂದರ. ಪಲ್ಲವಿ ಪ್ರಸನ್ನ ಬೆಳಗಾಗಲೆoದೆ ಕತ್ತಲು ,ಗೆಲ್ಲಲೆoದೆ ಸೋಲು,ನಗುವಿನ ಜೊತೆ ದುಃಖ ಇದ್ದೇ ಇರುತ್ತದೆ ,ಅದರೂ ಚಿಕ್ಕ ಪುಟ್ಟ ಸಂಗತಿಗಳಲ್ಲೇ ನಾವು ಆನಂದ ಅನುಭವಿಸುತ್ತೇವಲ್ಲ ಅದು ನಮಗೆ ಅಪ್ಪಟ ಆರೋಗ್ಯ ,ಉಲ್ಲಾಸಿತರಾಗಿಡಲು ಸಹಾಯಮಾಡುತ್ತದೆ. ತಲೆ ಬಾಚಿಕೊಳ್ಳುವಾಗ ಉದುರಿದ ಕೂದಲ ಬಗ್ಗೆ  ಕೊರಗದೇ ಇದ್ದ ಕೂದಲನ್ನು ನೇವರಿಸುತ್ತ ಅದರ ಆರೈಕೆಯಲಿ ಮಗ್ನವಾಗಿ ಖುಷಿ ಅನುಭವಿಸಬೇಕು. ಒಂದು ಒಳ್ಳೆ ಪುಸ್ತಕವನ್ನು ಓದುವಾಗ ಅದರ ಇಂಚಿಂಚೂ ,ಪ್ರತೀ ಸಾಲನ್ನೂ ಸವಿಯುತ್ತ ಅದರಲ್ಲಿ ನಿಮ್ಮ ಪರಕಾಯ ಪ್ರವೇಶವಾಗುವಂತೆ ಓದಿದರೆ ಆ ಓದಿನಲ್ಲೂ ಒಂಥರಾ ನಿರಾಳ.ಆಕಳು ಕರೆಯುವಾಗಲೂ ಸಹ ಹಾಡುಹೇಳಿಕೊಳ್ಳುತ್ತಾ ಅದರ ಮೈ ದಡವಿ ,ಅದ್ಭುತ ಅನುಭವ ನಿಮಗಾಗುತ್ತದೆ. ಮಗು ನೀವೊಬ್ಬರೆ ಇರುವಾಗ ಅಪ್ಪಿಕೊಂಡು ಮುದ್ದು ಮಾಡುವುದ ಅನುಭವಿಸಿ ನೋಡಿ ಅದು ಬಿಟ್ಟು ನನಗೆ ಕೆಲಸ ಇದೆ ಹೋಗೋ ಆಚೆ ಎಂದು ದೂರ ತಳ್ಳಿದರೆ ಪಾಪ ಮಗುವಿಗೂ ಬೇಸರ ನಿಮಗೂ ಕಳವಳ.ನನ್ನ ಮಗನಿಗೆ ನಾನು ಅವನು ಮಲಗಿ ನಿದ್ರಿಸುವಾಗ ಸಣ್ಣದಾಗಿ ಮುತ್ತು ಕೊಡಬೇಕೆನಿಸುತ್ತದೆ ,ನನ್ನ ಯಜಮಾನರು ಮಲಗಿರುವವನ ಏಕೆ ಮುದ್ದೀಸ್ತೀಯಾ ಅಂತ ಬಯ್ದರೂ ಮೆಲ್ಲಗೆ ಎಚ್ಚರ ಆಗದಂತೆ ಪಪ್ಪಿ ಕೊಡುತ್ತೇನೆ .ಇದರಲ್ಲೇ ಏನೋ ಒಂಥರಾ ಹಿತ .ನೀವೂ ಅನುಭವಿಸಿ ನೋಡಿ. ಹಾಗೆಯೇ  ತರಕಾರಿ ಗಿಡಕ್ಕೆ ನೀರುಣಿಸುವುದು, ಹೂವಿನ ಗಿಡದ ಆರೈಕೆಯಲ್ಲಿ ಹೂವು ನಳ ನಳಿಸುವಂತಾದರೆ ಅದರ ಸೌಂಧರ್ಯವನ್ನು ಆಸ್ವಾಧಿಸುತ್ತ ,ನಮಗೆ ಎಷ್ಟು ಸಮಯವಿದ್ದರೂ ಅದು ಕಡಿಮೆಯೇ, ಹಾಗೆಯೇ ಏನಾದರೂ ಬರೆಯುವ ಹವ್ಯಾಸವಿದ್ದರೆ ಒಂಟಿಯಾಗಿ ಕುಳಿತು ಅನುಭವಿಸಿ ಬರೆದಾಗ ನಾಲ್ಕು ಜನರು ಚೆಂದ ಬರಿದ್ಯೆ ಎನ್ನುವ ಮಾತು ನಮ್ಮಲ್ಲಿ ಸಾರ್ಥಕ್ಯ ಭಾವನೆ ,ಸ್ಫೂರ್ತಿ ಮೂಡಿಸುತ್ತದೆ .ಇಷ್ಟೆಲ್ಲದರ ಮಧ್ಯೆ ನಮಗೆ ಬೇರೆಯವರ ಸುದ್ಧಿ ಹೇಳಲು ,ಕೇಳಲು ಸಮಯವೂ ಇರುವುದಿಲ್ಲ,ಇದ್ದರೂ ಇದು ಕಾಲ ಹರಣದ ಜೊತೆ ನಮ್ಮ ನೋವಿಗೆ ಕಾರಣ. ಯಾರೇನೆಂದರೂ ಒಂಟಿಯಾಗಿ ನಮ್ಮ ಚಟುವಟಿಕೆಯಲ್ಲಿ ತೊಡಗುವುದೇ ಉತ್ತಮ. ಮೌನಕ್ಕಿಂತ ಸುಂದರ ಮಾತಿಲ್ಲ.ಕಾಡಿ ಬೇಡಿ ಪಡೆಯುವ ಮಿತ್ರರಿಗಿಂತ ,ನೆರೆ ಹೊರೆ ಯವರಿಗಿಂತ ನಿಸರ್ಗ ತುಂಬಾ ನಿಸ್ವಾರ್ಥಿ ,ಅದು ನಮಗೆ ಏನೆಲ್ಲ ಕೊಟ್ಟಿತು ,ಏನೂ ಬಯಸುವುದಿಲ್ಲ ,ನಿಮ್ಮದೇ ತೋಟ ಇದ್ದರೆ ಒಂದು ಸುತ್ತು ತಿರುಗಿ ಹಸಿರನ್ನು ಆಸ್ವಾದಿಸಿ . ಇನ್ನೂ ಅಡಿಗೆ ಕೂಡಾ ಪ್ರೀತಿಯಿಂದ ಮಾಡಿ ಬಡಿಸಿ ,ಅದರಲ್ಲಿ ಮನೆಯ ಜನಗಳ ತೃಪ್ತಿ ಗಮನಿಸಿ ಇದರಿಂದ ನೀವು ಊಟ ಮಾಡದಿದ್ದರೂ ನಿಮ್ಮ ಹೊಟ್ಟೆ ತುಂಬುತ್ತದೆ. ಸದಾ ಒಂದಲ್ಲಾ ಒಂದು ಕೆಲಸದಲ್ಲಿದ್ದರೆ ಯಾವ ಚಿಂತೆ ನೋವು ನಮಗೆ ಬಾಧಿಸುವುದಿಲ್ಲ.ಇದು ನಾನು ಕಂಡು ಕೊಂಡ ಸತ್ಯ. ಇದೇ ಅನಿವಾರ್ಯ,ಇದೇ ಸತ್ಯ,ಇದೇ ಜೀವನ ಎಂದು ನಮ್ಮ ಮನಸ್ಸಿಗೆ ನಾವೇ ಸಾಂತ್ವನಿಸುತ್ತ ಅಳುಕನ್ನು ದೂರ ಮಾಡುತ್ತಾ ಅಲ್ಲೊಂದು ಶಾಂತಿ,ಪ್ರೀತಿ ,ಸಹನೆಯ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು.ಆವಾಗ ನಿಮ್ಮ ಜೀವನ ಸದಾ  ಸುಂದರವಾಗಿರುತ್ತದೆ. *************************************

ಬದುಕು ಎಷ್ಟೊಂದು ಸುಂದರ Read Post »

ಇತರೆ, ಪ್ರಬಂಧ

ಬೀದಿಯ ಪ್ರಪಂಚ….

ಲಲಿತ ಪ್ರಬಂಧ ಬೀದಿಯ ಪ್ರಪಂಚ…. ಟಿ.ಎಸ್.ಶ್ರವಣಕುಮಾರಿ ಹಾದಿ ಬೀದಿಗಳಿಗೆ ತನ್ನದೇ ಒಂದು ಆಕರ್ಷಣೆಯಿದೆ. ಅದರದ್ದೇ ಒಂದು ಪ್ರಪಂಚ. ಎಂಥ ಅಳುತ್ತಿರುವ ಪುಟ್ಟ ಮಕ್ಕಳನ್ನೂ ಎತ್ತಿಕೊಂಡು ಬೀದಿಗೆ ಕರೆದುಕೊಂಡು ಬಂದರೆ ಕೆಲವೇ ಕ್ಷಣಗಳಲ್ಲಿ ಅವುಗಳ ಅಳು ಮಾಯ. ಅವುಗಳಿಗೆ ತೋರಿಸುವುದಕ್ಕೆ ಇಡಿಯ ಪ್ರಪಂಚವೇ ಅಲ್ಲಿದೆ. “ಪುಟ್ಟೂ ಅಲ್ನೋಡು ಕಾರು.. ಬಂತು ಬಂತು ಬಂತು…. ಈಗ ಸ್ಕೂಟರ್ ನೋಡೋಣ.. ಮಾಮಾ ಬಂದ್ಮೇಲೆ ಸ್ಕೂಟರ್‌ನಲ್ಲಿ ರೌಂಡ್ ಹೋಗ್ತೀಯಾ…  ಇದೇನಿದು..? ಸ್ಕೂಲು ವ್ಯಾನು.. ಮುಂದಿನ್ವರ್ಷದಿಂದ ನೀನೂ ಸ್ಕೂಲಿಗೆ ಹೋಗ್ತೀಯಾ ಅಣ್ಣಾ ತರ…. ಇಲ್ನೋಡು ಮರ.. ಅಬ್ಭಾ! ಎಷ್ಟೊಂದು ಹೂವು ನೋಡು… ಅಲ್ನೋಡು ಕಾಕಿ `ಕಾವ್ ಕಾವ್’ ಅದರ ಬಳಗಾನೆಲ್ಲಾ ಕರೀತಿದೆ. ಹೌದಾ.. ಹಾರಿಹೋಯ್ತಾ ಅದು. ಅಲ್ಲೇ ನೋಡ್ತಾ ಇರು ಈಗ ಗಿಣಿಮರಿ ಬರತ್ತೆ ಅಲ್ಲಿ… ನೋಡ್ದ್ಯಾ ನೋಡ್ದ್ಯಾ ಎಷ್ಟು ಚೆನ್ನಾಗಿದೆ ನೋಡು.. ಈಗ ನೋಡು ಅದರ ಫ್ರೆಂಡೂ ಬಂತು.. ಏನೋ ಮಾತಾಡ್ಕೊಂಡು ಒಟ್ಗೆ ಹಾರೋದ್ವು. ಇಲ್ನೋಡಿಲ್ನೋಡು ಪಕ್ಕದ್ಮನೆ ಮೀನಾ ಅಜ್ಜಿ ಒಣಗಿ ಹಾಕಿರೋ ಬೇಳೇನ ಎಷ್ಟೊಂದು ಗುಬ್ಬಿಗಳು ತಿಂತಾ ಇವೆ.” ಅಷ್ಟರಲ್ಲಿ ಎದುರಂಗಡಿಯ ಬದರಿ ಮಾಮ ಪುಟ್ಟೂನ ಕರೀತಾನೆ “ಬರ್ತೀಯಾ ನಮ್ಮಂಗಡೀಗೆ ಬಿಸ್ಕತ್ತು, ಚಾಕಲೇಟು ಎಲ್ಲಾ ಕೊಡ್ತೀನಿ.” “ಆಮೇಲ್ಬರ್ತೀನಿ” ಅನ್ನೂ ಮಾಮಂಗೆ… ಅಲ್ನೋಡು ತರಕಾರಿ ಗಾಡಿ ಬರ್ತಾ ಇದೆ. ಅಜ್ಜೀನ ಕೇಳ್ಕೊಂಡು ಬರೋಣ್ವಾ ಏನು ತರಕಾರಿ ಬೇಕೂಂತ” ….. ಹೀಗೆ ಮಾತಾಡಿಸ್ತಾ ಇದ್ರೆ ಟೈಂಪಾಸಾಗದೆ ಅಳ್ತಾ ಇದ್ದ ಮಗು ಬೇರೆ ಪ್ರಪಂಚಕ್ಕೇ ಹೋಗ್ಬುಡತ್ತಲ್ವಾ… ಮಗೂನೆ ಯಾಕೆ?!.. ನಮಗೂ ಮನೆಯ ಏಕತಾನತೆ ಬೇಸರ ಬಂದರೆ ಒಂದು ಸ್ವಲ್ಪ ಹೊತ್ತು ಮನೆಯ ಮುಂದೋ ಅಥವಾ ಬಾಲ್ಕನಿಯ ಕಿಟಕಿಯೆದುರೋ ಕೂತು ಹಾಗೇ ಬೀದಿಯ ಕಡೆ ನೋಡುತ್ತಿದ್ದರೆ ಎಷ್ಟು ವೈವಿಧ್ಯಮಯ ಪ್ರಪಂಚದಲ್ಲಿ ನಾವೂ ಕಳೆದುಹೋಗುತ್ತೇವೆ…. ಏಳುವಾಗಲೇ `ಸೊಪ್ಪೋ ಸೊಪ್ಪು’ ಎಂದು ಕೂಗಿಕೊಂಡು ಬರುವ ಮುದುಕನ ಕರೆಯಿಂದಲೇ ನನಗೆ ದಿನವೂ ಬೆಳಗಾಗುವುದು. ಬೆಳಗಿನ ಐದು ಗಂಟೆಗೆ ಮುಲ್ಲಾ `ಏಳಿ ಬೆಳಗಾಯಿತು’ ಎಂದು ಕರೆದಾಗ ಎಚ್ಚರಾದರೂ `ಸ್ವಲ್ಪ ಹೊತ್ತು ಬಿಟ್ಟು ಏಳೋಣ’ ಎಂದು ಮುದುರಿಕೊಂಡವಳನ್ನು ಆರೂವರೆಯಾಯಿತು ಇನ್ನಾದರೂ ಏಳು ಎಂದು ಎಬ್ಬಿಸುವುದು ಸೊಪ್ಪಿನವನ ಕರೆಯೇ. ಎದ್ದ ಐದು ಹತ್ತು ನಿಮಿಷಗಳಲ್ಲಿಯೇ `ಹಾಲು’ ಎಂದು ಕೂಗುತ್ತಾ ಹಾಲಿನ ಪ್ಯಾಕೆಟ್ಟನ್ನು ತಂದಿಡುವ ಬದರಿ. `ಹೂವು’ ಎಂದು ಹೂವಿನ ಸರವನ್ನು ಬಾಗಿಲಿಗೆ ಸಿಕ್ಕಿಸಿ ಹೋಗುವ ಹೂವಮ್ಮ. ಕಾಫಿಯ ಲೋಟ ಹಿಡಿದು ಬರುವ ವೇಳೆಗೆ ದಿನ ಪತ್ರಿಕೆ ಎಸೆದು ಹೋಗುವ ಹುಡುಗ…. ಎಲ್ಲರೂ ಹೊರಗಿನ ಜಗತ್ತಿನ ಸಂಪರ್ಕವಾಹಕರು. ಹೂವಿನ ಗಾಡಿಯ ಹಿಂದೆಯೇ ತೆಂಗಿನ ಕಾಯಿ ಮಾರುವವನು ಬರುತ್ತಾನೆ. ಎಂಟು ಗಂಟೆಗೆ ತರಕಾರಿ ಗಾಡಿಯವರ ಸಾಲು ಶುರುವಾಗುತ್ತದೆ. ಕೆಲವು ಗಾಡಿಗಳು ಒಂದೊಂದೇ ತರಕಾರಿಯದು, ಟೊಮೇಟೋ, ಈರುಳ್ಳಿ, ಅವರೆ ಕಾಯಿ’ ಇಂತವು. ಇನ್ನು ಕೆಲವು ಡಿಪಾರ್ಟ್-ಮೆಂಟಲ್ ಸ್ಟೋರಿನ ಹಾಗೆ ಶುಂಟಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪಿನಿಂದ ಶುರುವಾಗಿ ಎಲ್ಲ ಬಗೆಯ ತರಕಾರಿಗಳನ್ನೂ ಕಣ್ಣಿಗಂದವಾಗುವ ಹಾಗೆ ಜೋಡಿಸಿಕೊಂಡು ಬಂದ ತರಕಾರಿ ಗಾಡಿಗಳು. ಮನೆಯೊಳಗೇ ಇದ್ದರೂ, ಅವರ ಧ್ವನಿಯ ಮೇಲೆ ಇಂತದೇ ಗಾಡಿ ಬಂದಿದೆಯೆಂದು ಅಂದಾಜಾಗುವಷ್ಟರ ಮಟ್ಟಿಗೆ ಅವರ ಧ್ವನಿ ಮೆದುಳಿನೊಳಗೆ ಮುದ್ರಿತವಾಗಿರುತ್ತದೆ. ಹೀಗೇ ದಿನಾ ಬೆಳಗ್ಗೆ ಏಳೂವರೆಗೆ `ರೋಜಾ ಹೂವು ಶ್ಯಾವಂತ್ಗೆ ಹೂವೂ..’ ಅಂತ ಗೊಗ್ಗರು ದನಿಯಲ್ಲಿ ಕೂಗಿಕೊಂಡು ಬರುತ್ತಿದ್ದ ಮುದುಕನ ಧ್ವನಿ ಮೂರ್ನಾಲ್ಕು ದಿನ ಕೇಳದೇ ಏನೋ ಕೊರೆಯಾದಂತೆನಿಸುತ್ತಿತ್ತು. ನಂತರ ಅವನು ಮುಂದಿನ ಬೀದಿಯಲ್ಲಿ ಗಾಡಿ ತಳ್ಳಿಕೊಂಡು ಹೋಗುವಾಗ ಸೇವಾಕ್ಷೇತ್ರ ಆಸ್ಪತ್ರೆಯ ಬಳಿ ಹೃದಯಾಘಾತವಾಗಿ ದಾರಿಯಲ್ಲೇ ಸತ್ತಿದ್ದ ಸುದ್ದಿ ಕೇಳಿದಾಗ ಬಂದುಗಳೊಬ್ಬರನ್ನು ಕಳೆದುಕೊಂಡ ಭಾವ ಬಹಳದಿನಗಳು ಆ ಹೊತ್ತಿಗೆ ಕಾಡುತ್ತಿತ್ತು. ಹನ್ನೊಂದು ಗಂಟೆಯ ವೇಳೆಗೆ ಬರುವ ಎಳನೀರು ಮಾರುವವನು, ಹಣ್ಣಿನ ಬುಟ್ಟಿ ಹೊತ್ತು ಬರುವವನು “ಪಕ್ಕದವ್ರಿಗೆ ಹೇಳ್ಬೇಡಿ. ನಿಮಗಂದ್ರೆ ಎರಡು ರೂಪಾಯಿ ಕಮ್ಮಿಗೇ ಕೊಡ್ತಿದೀನಿ” ಎಂದು ಎಲ್ಲರ ಮನೆಯಲ್ಲೂ ಹಾಗೆ ಹೇಳಿಯೇ ವ್ಯಾಪಾರ ಮಾಡಿದ್ದರೂ, ಅವನು ಹೇಳಿದ್ದು ನಮಗಷ್ಟೇ ನಿಜವೆಂದು ಆ ಕ್ಷಣಕ್ಕಾದರೂ ನಂಬುವಂತಾಗುತ್ತದೆ. ಮಧ್ಯಾನ್ಹದ ವೇಳೆ ಬರುವ ಪೈನಾಪಲ್, ಸೌತೆಕಾಯಿ, ಇಂತವನ್ನು ಹೆಚ್ಚಿಕೊಡುವ ಗಾಡಿಗಳು, ಅಲಂಕಾರಿಕ ಸಸ್ಯಗಳು ಮತ್ತು ಹೂಕುಂಡಗಳನ್ನಿಟ್ಟುಕೊಂಡು ಬರುವ ಕೈಗಾಡಿಗಳು, ಸಾಯಂಕಾಲ ನಾಲ್ಕು ಗಂಟೆಯಿಂದ ಶುರುವಾಗುವ ಮಲ್ಲಿಗೆ ಮೊಗ್ಗು, ಕಳ್ಳೇ ಪುರಿ, ಚುರುಮುರಿ-ಪಾನೀಪೂರಿ ಗಾಡಿ, ಠಣಾ ಠಣಾ ಎಂದು ಸದ್ದು ಮಾಡುತ್ತಾ ಕಡಲೇಕಾಯನ್ನು ಹುರಿಯುವವನ ಗಾಡಿ ಎಲ್ಲರೂ ರಂಗಸ್ಥಳದ ಮೇಲಿನ ತಮ್ಮ ಪಾತ್ರವನ್ನು ಚೊಕ್ಕವಾಗಿ ನಿರ್ವಹಿಸುವವರಂತೆ ಆಯಾಕಾಲಕ್ಕೆ ಬಂದು ಹೋಗುತ್ತಿರುತ್ತಾರೆ. ಇವರೆಲ್ಲಾ ನಿಯತಕಾಲಿಕರಂತಿದ್ದರೆ ಸೋಫಾ ರಿಪೇರಿ, ಛತ್ರಿ, ಪಾದರಕ್ಷೆ ರಿಪೇರಿಯವರು, ಚಾಕು, ಈಳಿಗೆಗಳನ್ನು ಚೂಪು ಮಾಡುವವರು, ಚಾಪೆ, ನೆಲವಾಸು, ಮತ್ತು ಕಾರ್ಪೆಟ್ಟುಗಳನ್ನು ಮಾರುವವರು, ಪ್ಲಾಸ್ಟಿಕ್, ಅಲ್ಯುಮಿನಿಯಂ, ಮತ್ತು ಸ್ಟೀಲ್ ಪಾತ್ರೆ ಮಾರಾಟಗಾರರು, ಕಡೆಗೆ ರಂಗೋಲಿ, ಪೊರಕೆ, ಮಕ್ಕಳ ಬಟ್ಟೆಗಳು, ಆಟಿಕೆಗಳು, ಪೆಟ್ಟಿಕೋಟು ಇತ್ಯಾದಿಗಳನ್ನು ಮಾರುವವರು ಅತಿಥಿ ನಟರಂತೆ ಆಗೀಗ ಬಂದು ತಮ್ಮ ದರ್ಶನ ಭಾಗ್ಯವನ್ನು ಇತ್ತು ಹೋಗುತ್ತಿರುತ್ತಾರೆ. ಇದಷ್ಟೇ ಬೀದಿ ಪ್ರಪಂಚವೇ? ಖಂಡಿತಾ ಅಲ್ಲ. ಈಗ ಅಂಚೆಯಣ್ಣ ಇಲ್ಲ ಬಿಡಿ; ಅವನಾದರೆ ಒಂದು ನಿಗದಿತ ಸಮಯದಲ್ಲಾದರೂ ಬರುತ್ತಿದ್ದ. ಈಗ ಅವನ ಬದಲಿಗೆ ಕೊರಿಯರ್ ಹುಡುಗರು ಹೊತ್ತು ಗೊತ್ತಿಲ್ಲದೆ ಬಾಗಿಲು ತಟ್ಟುತ್ತಾರೆ. ಮೊದಲಿಗೆ ದಿನವೂ ಬರುತ್ತಿದ್ದ ಅಂಚೆಯಣ್ಣ ಮನೆಯವರೆಲ್ಲರಿಗೆ ಪರಿಚಿತನಾಗಿರುತ್ತಿದ್ದ. ಎಷ್ಟೋ ಹಳ್ಳಿಗಳಲ್ಲಿ, ಸಣ್ಣ ಪುಟ್ಟ ಊರುಗಳಲ್ಲಿ ಸಂದೇಶವಾಹಕನಾಗಿಯೂ ಇರುತ್ತಿದ್ದ. ಓದು ಬಾರದವರಿಗೆ ಪತ್ರದಲ್ಲಿದ್ದುದನ್ನು ಓದಿ ಹೇಳುತ್ತಿದ್ದ. ಬಿಸಿಲು ಹೊತ್ತಿನಲ್ಲಿ ಬಂದವನಿಗೆ ಒಂದು ಲೋಟ ಪಾನಕವೋ, ಮಜ್ಜಿಗೆಯೋ ಕೊಡುವ ಪರಿಪಾಠವೂ ಕೆಲವು ಮನೆಗಳಲ್ಲಿರುತ್ತಿತ್ತು. ಬಂಧುವಲ್ಲದಿದ್ದರೂ ಆತ ಮಿತ್ರರ ಗುಂಪಿನಲ್ಲಿ ಸೇರಿ ಹೋಗುತ್ತಿದ್ದ. ಈಗಲಾದರೋ ದಿನಕ್ಕೊಬ್ಬ ಕೊರಿಯರ್ ಹುಡುಗರು. ಯಾರು ನಿಜವಾದವರೋ, ಯಾರು ಮೋಸಗಾರರೋ ಒಂದೂ ಅರಿವಾಗದೆ ಅವರನ್ನು ಬಾಗಿಲ ಹೊರಗೇ ನಿಲ್ಲಿಸಿ ಗ್ರಿಲ್ ಬಾಗಿಲಿನ ಕಿಂಡಿಯಿಂದಲೇ ಮಾತಾಡಿಸಿ ಲಕೋಟೆಯಾದರೆ ಅಲ್ಲಿಂದಲೇ ತೆಗೆದುಕೊಂಡು, ಪಾರ್ಸೆಲ್ ಆದರೆ, ಅದರ ಹಿಂದು ಮುಂದನ್ನೆಲ್ಲಾ ವಿಚಾರಿಸಿಕೊಂಡು ನಂತರ ಬಾಗಿಲನ್ನು ಸ್ವಲ್ಪವೇ ತೆರೆದು ಡಬ್ಬಿಯನ್ನು ತೆಗೆದುಕೊಂಡ ತಕ್ಷಣ ಮತ್ತೆ ಬಾಗಿಲು ಮುಚ್ಚುವುದು ಸಹಜವೇ ಆಗಿದೆ. ಇನ್ನು ಮನೆ ಬಾಗಿಲು ತಟ್ಟುವ ಮಾರಾಟಗಾರರದಂತೂ ಇನ್ನೊಂದು ಉಪಟಳ. ಪುಸ್ತಕ, ದಿನೋಪಯೋಗಿ ವಸ್ತುಗಳಿಂದ ಹಿಡಿದು ಮಕ್ಕಳ ಡೈಪರ್ ವರೆಗೆ ಎಲ್ಲವನ್ನೂ ಮನೆಬಾಗಿಲಿಗೆ ತರುತ್ತಾರೆ. ನಕಲಿಯೆಷ್ಟೋ, ಅಸಲಿಯೆಷ್ಟೋ ದೇವನೇ ಬಲ್ಲ! ಬೀದಿಯ ಮೇಲೆ ಬರುವ ಮೆರವಣಿಗೆ, ದೇವರ ಉತ್ಸವಗಳೆಂದರೆ ಮಕ್ಕಳಾದಿಯಾಗಿ ದೊಡ್ಡವರವರೆಗೂ ಎಲ್ಲರಿಗೂ ಆಕರ್ಷಣೆ. ಅಂತಹ ಸದ್ದು ಕಿವಿಗೆ ಬಿದ್ದಿತೆಂದರೆ ಸಾಕು… ಮನೆಯಲ್ಲಿರುವವರೆಲ್ಲರೂ ಬೀದಿಯ ಕಡೆಗೇ… ನಾನು ಎಳೆಯದರಲ್ಲಿ ನೋಡುತ್ತಿದ್ದ ಮಾರ್ಗಶಿರ ಮಾಸದ ಬೆಳಗಿನ ಝಾವದಲ್ಲಿ ತಾಳ ತಟ್ಟಿಕೊಂಡು ತನ್ನದೇ ಒಂದು ಅಲೌಕಿಕ ಛಾಪನ್ನು ನಿರ್ಮಿಸಿಕೊಂಡು ಬರುತ್ತಿದ್ದ ದತ್ತ ಜಯಂತಿಯ ಭಜನೆ, ರಥಸಪ್ತಮಿಯಲ್ಲಿ ಸುಶ್ರಾವ್ಯ ವಾಲಗದೊಂದಿಗೆ ಬರುತ್ತಿದ್ದ ತೇರು, ಆಡಿ ಕೃತ್ತಿಕೆಯ ದಿನದಂದು ಗುಡ್ಡೇಕಲ್ಲಿನ ಸುಬ್ರಹ್ಮಣ್ಯೇಶ್ವರನ ದೇವಸ್ಥಾನಕ್ಕೆ `ಹರೋಹರ’ ಎಂದು ಕೂಗುತ್ತಾ ಬೇವಿನ ಮತ್ತು ಅರಿಶಿನ ಬಣ್ಣದ ಉಡುಗೆಯುಟ್ಟು ಕಾವಡಿ ಎತ್ತಿಕೊಂಡು ಹೋಗುತ್ತಿದ್ದ, ಕೆಲವರು ಭೀಕರವಾಗಿ ಕೆನ್ನೆಯನ್ನೂ, ನಾಲಗೆಯನ್ನೂ ಕಂಬಿಯಿಂದ ಚುಚ್ಚಿಕೊಂಡು, ಮತ್ತೆ ಕೆಲವರು ಬೆನ್ನಿಗೆ ಕೊಕ್ಕೆಯನ್ನು ಸಿಕ್ಕಿಸಿಕೊಂಡು ಎಳೆದುಕೊಂಡು ಹೋಗುತ್ತಾ ನಮ್ಮ ಮನದಲ್ಲಿ ಭಕ್ತಿಯೊಂದಿಗೆ ಭಯವನ್ನೂ ಹುಟ್ಟಿಸುತ್ತಿದ್ದ ಭಕ್ತರ ಗುಂಪು… ವಿಜಯ ದಶಮಿಯ ದಿನ ಊರಿನ ಎಲ್ಲ ದೇವರೂ ಬನ್ನಿ ಕಡಿಯುತ್ತಿದ್ದ ನೆಹರೂ ಮೈದಾನಕ್ಕೆ ಮೆರವಣಿಗೆ ಹೋಗುತ್ತಿದ್ದ ದೃಶ್ಯ…  ಎಲ್ಲವೂ ನನ್ನ ನೆನಪಿನ ಕೋಶದಲ್ಲಿ ಭದ್ರವಾಗಿ ಬೇರುಬಿಟ್ಟು ಕುಳಿತುಬಿಟ್ಟಿವೆ. ಹೀಗೇ ಒಂದು ಆಡಿ ಕೃತ್ತಿಕೆಯ ದಿನ ನಾವೆಲ್ಲರೂ ಕಾವಡಿಯ ಮೆರವಣಿಗೆಯನ್ನು ನೋಡಲು ಬೀದಿಗೆ ಬಂದು ನಿಂತಿದ್ದೆವು. ನಮ್ಮ ಮನೆಯ ಕೆಲಸದಾಕೆ ಮುನಿಯಮ್ಮನೂ ನಮ್ಮ ಜೊತೆಗೇ ನಿಂತಿದ್ದವಳಿಗೆ ಅದೇನಾಯಿತೋ ಇದ್ದಕ್ಕಿದ್ದಂತೆ ಅರೆಗಣ್ಣಿನಲ್ಲಿ ಎರಡೂ ಕೈಗಳನ್ನು ತಲೆಯಮೇಲೆ ಜೋಡಿಸಿ ಮುಗಿದುಕೊಂಡು ಮೆರವಣಿಗೆಯ ಹಿಂದೆಯೇ ಓಡಿಹೋದಳು. ನಾವೆಲ್ಲರೂ `ಮುನಿಯಮ್ಮಾ ಮುನಿಯಮ್ಮಾ’ ಎಂದು ಜೋರಾಗಿ ಕರೆಯುತ್ತಲೇ ಇದ್ದೇವೆ; ಅವಳಿಗೆ ಕೇಳಿಸಿದ್ದರೆ ತಾನೆ! ಸ್ವಲ್ಪ ಹೊತ್ತು ಕಾದು ನಿಂತಿದ್ದು ನಾವೆಲ್ಲಾ ಮನೆಯೊಳಗೆ ಬಂದವು. ಅದೆಷ್ಟು ದೂರ ಹೋಗಿದ್ದಳೋ… ಒಂದು ಗಂಟೆಯ ನಂತರ ಅವಳೂ ವಾಪಸ್ಸು ಬಂದಳು. ಬಹಳ ಆಯಾಸಗೊಂಡಿದ್ದಳು. ಅಮ್ಮನಿಗೆ ಅವಳು ಸಾಕ್ಷಾತ್ ಸುಬ್ರಹ್ಮಣ್ಯೇಶ್ವರನೇ ಅನ್ನಿಸಿಬಿಟ್ಟಿತೋ ಏನೋ..  ಅವಳನ್ನು ಕೂರಿಸಿ ಒಂದು ಲೋಟ ತಣ್ಣಗೆ ಪಾನಕ ಮಾಡಿಕೊಟ್ಟು “ಸುಸ್ತಾಗಿದ್ದರೆ ಮನೆಗೆ ಹೋಗಿ ಮಲಗಿಕೋ. ನಾಳೆ ಬಂದು ಬಟ್ಟೆ ಒಗೆಯುವೆಯಂತೆ” ಎಂದರು. ಸ್ವಲ್ಪ ಹೊತ್ತು ಕೂತಿದ್ದವಳು ಮುನಿಯಮ್ಮನಾಗೇ `ಈಗ ಸರಿಹೋಯ್ತು’ ಎನ್ನುತ್ತಾ ತನ್ನ ಕೆಲಸಕ್ಕೆ ಎದ್ದಳು. ನಮಗೆಲ್ಲಾ ಭಕ್ತಿಯ ಈ ಮುಖದ ದರ್ಶನವಾಗಿತ್ತು! ಈಗ ಬೆಂಗಳೂರಿನಲ್ಲಿ ನಾವಿರುವ ರಸ್ತೆಯ ಒಂದು ಅಡ್ಡರಸ್ತೆಯಲ್ಲಿ ಗಂಗಮ್ಮನ ಗುಡಿಯಿದೆ. ಅದರ ಮುಂದಿನ ರಸ್ತೆಯಲ್ಲಿ ಮಸೀದಿಯಿದೆ. ಅಣ್ಣಮ್ಮ ದೇವಿಯ ಭಕ್ತಮಂಡಳಿ ನಮ್ಮ ಮನೆಯ ಪಕ್ಕಕ್ಕೇ ಇದೆ. ಮನೆಯ ಹಿಂಬಾಗದಲ್ಲಿ ವೆಂಕಟರಮಣನ ದೇವಸ್ಥಾನವಿದೆ. ಹಾಗಾಗಿ ಆಗಾಗ ಎಷ್ಟೆಲ್ಲಾ ಮೆರವಣಿಗೆಗಳನ್ನು ನೋಡುವ ಭಾಗ್ಯ ನಮ್ಮದಾಗಿದೆ. ಗಂಗಮ್ಮನ ಹೂವಿನ ಕರಗ, ರಥೋತ್ಸವ, ವೆಂಕಟರಮಣನ ಕಡೆಯ ಶ್ರಾವಣ ಶನಿವಾರದ ಉತ್ಸವ, ಮುಸ್ಲಿಮರ ಹಬ್ಬಗಳ ಹಲವು ಬಗೆಯ ಉತ್ಸವಗಳು, ಮೆರವಣಿಗೆಗಳು, ವರ್ಷಕ್ಕೊಮ್ಮೆ ಚೈತ್ರಮಾಸದಲ್ಲೋ, ವೈಶಾಖ ಮಾಸದಲ್ಲೋ ನಮ್ಮ ಮನೆಯ ಪಕ್ಕದಲ್ಲೇ ಮೂರು ದಿನ ಠಿಕಾಣಿ ಹಾಕುವ ಅಣ್ಣಮ್ಮ.. ಶುಕ್ರವಾರ ಆಕೆ ಬರುವುದು. ಅದಕ್ಕೆ ಪೂರ್ವಭಾವಿಯಾಗಿ ಆ ಸೋಮವಾರದಿಂದಲೇ ಇಡೀ ಬೀದಿ ಅಲಂಕರಿಸಿಕೊಂಡು ನಿಂತಿರುತ್ತದೆ. ಬೀದಿಯ ಮುಂಬಾಗದಲ್ಲಿ ವಿದ್ಯುದ್ದೀಪಗಳಲ್ಲಿ ಅಣ್ಣಮ್ಮನ ದೊಡ್ಡ ಚಿತ್ರ, ಬೀದಿಯುದ್ದಕ್ಕೂ ತೋರಣದಂತೆ ಬಣ್ಣ ಬಣ್ಣದ ವಿದ್ಯದ್ದೀಪಗಳು, ಮಾವು ಬೇವಿನ ತೋರಣಗಳು, ಬಾಳೆಯ ಕಂಬದ ಅಲಂಕರಣ, ಇನ್ನು ದೇವಿಯನ್ನು ಕೂರಿಸುವ ವೇದಿಕೆಯಂತೂ ಗುರುವಾರದಿಂದಲೇ ವೈಭವವಾಗಿ ಸಿದ್ಧವಾಗಿರುತ್ತದೆ. ಅಣ್ಣಮ್ಮ ಬೀದಿಯ ಕೊನೆಯಲ್ಲಿರುವಾಗಲೇ ಅವಳನ್ನು ಎದುರುಗೊಳ್ಳಲು ನಮ್ಮ ಪಕ್ಕದ ಅಡ್ಡರಸ್ತೆಯಲ್ಲಿರುವ ಗಂಗಮ್ಮದೇವಿಯ ಉತ್ಸವಮೂರ್ತಿ ಗೆಳತಿಯನ್ನು ಕರೆದುಕೊಂಡು ಬರಲು ಹೊರಡುತ್ತದೆ. ಇಬ್ಬರೂ ಒಟ್ಟಿಗೆ ಅಲ್ಲಿಂದ ಬರುತ್ತಾರೆ. ದೇವಿಯರ ಮುಂದೆ ಪೂರ್ಣಕುಂಭ ಹೊತ್ತ ಸಿಂಗಾರಗೊಂಡ ಮಹಿಳೆಯರು, ಬಾಜಾ ಬಜಂತ್ರಿ, ಆರತಿಗಳು, ಕಿವಿ ಗಡಚಿಕ್ಕುವ ಅಣ್ಣಮ್ಮನ ಭಕ್ತಿಯ ಹಾಡುಗಳು.. ಅದೇನು ಸಂಭ್ರಮ… ಮೂರುದಿನಗಳೂ ಮನೆಯ ಮುಂದೆ ಹಬ್ಬವಿದ್ದಂತೆ. ಮಾರನೆಯ ದಿನ ಅಣ್ಣಮ್ಮ ದೇವಿ ಇಲ್ಲಿನ ಆಸುಪಾಸಿನ ಬೀದಿಯಲ್ಲಿರುವ ಅರವತ್ತು ಎಪ್ಪತ್ತು ಮನೆಗಳಿಗೆ ವರ್ಷಕ್ಕೊಮ್ಮೆ ಬರುವ ಮಗಳಂತೆ ಹೋಗಿ ಪೂಜೆ ಮಾಡಿಸಿಕೊಂಡು ಉಡಿತುಂಬಿಸಿಕೊಂಡು ಬರುತ್ತಾಳೆ. ಅಂದು ಸಂಜೆ ದೇವಿಯ ಎದುರಿಗೆ ಮೂರು ಬೀದಿ ಕೂಡುವಲ್ಲಿ ಒಂದು ಸ್ಟೇಜನ್ನು ಹಾಕಿ ನಾಟಕವೋ, ಆರ್ಕೆಸ್ಟ್ರಾನೋ ಏನಾದರೊಂದು ನಡೆಯುತ್ತಿರುತ್ತದೆ. ನಮ್ಮ ಮನೆಯ ಕಾರ್ ಗ್ಯಾರೇಜೇ ಅವರಿಗೆ ಗ್ರೀನ್ ರೂಮು. ಪಕ್ಕದ ಬೀದಿಗಳಲ್ಲಿರುವ ಮುಸಲ್ಮಾನ್ ಬಂಧುಗಳೂ ಹೆಂಗಸರು, ಮಕ್ಕಳಾದಿಯಾಗಿ ಇದರಲ್ಲಿ ಮತ್ತು ಮಾರನೆಯ ದಿನ ನಡೆಯುವ ರಾಗಿ ಅಂಬಲಿ ಮತ್ತು ಅನ್ನ ಸಂತರ್ಪಣೆಗಳಲ್ಲಿ ಪಾಲುಗೊಳ್ಳುತ್ತಾರೆ. ಎಲ್ಲರನ್ನೂ ಒಂದುಗೂಡಿಸಿ ಸಂತೋಷ ಪಡಿಸುತ್ತಾ ಪರಸ್ಪರ ಬಾಂಧವ್ಯ ವೃದ್ಧಿಸುವುದರಲ್ಲಿ ಬೀದಿಯ ಪಾತ್ರವೇನು ಕಮ್ಮಿಯೇ?! ಬೀದಿ ಜಗಳಗಳ ಮಹಾತ್ಮೆ ಅತ್ಯಂತ ಪುರಾತನವಾದದ್ದು. ಬೀದಿ ಬದಿಯಲ್ಲಿ ನೀರಿಗಾಗಿ ಕಾದಾಡುವುದು; ಅಕ್ಕಪಕ್ಕದವರ ಜಗಳ ಬೀದಿಗೆ ಬರುವುದು ಇವೆಲ್ಲಾ ಬಹಳ ಸಹಜವಾದ ಕ್ರಿಯೆಗಳು. ಇಬ್ಬರೂ ಅಮ್ಮ, ಅಪ್ಪ, ಅಜ್ಜಿ, ತಾತ ಎಲ್ಲರ ಜಾಯಮಾನವನ್ನೂ ನೀವಾಳಿಸುತ್ತಾ ಕೂಗಾಡುತ್ತಿದ್ದರೆ, ಅಲ್ಲಿಯವರೆಗೆ ಗೆಳೆಯರಾಗಿದ್ದ ಅವರಿಬ್ಬರ ಮನೆಯ ನಾಯಿಗಳೂ ತಮ್ಮ ಮಾಲೀಕರನ್ನು ಅನುಕರಿಸಿ `ಭೌ…ವೌ…’ ಎಂದು ಹಿಮ್ಮೇಳ ನೀಡುತ್ತಿದ್ದರೆ ಒಂದಷ್ಟು ಕಾಲ ಜನರೆಲ್ಲಾ ಮನರಂಜನೆಯನ್ನು ತೆಗೆದುಕೊಂಡು ನಂತರ ಯಾರೋ ಒಬ್ಬರು ಹಿರಿಯರು ಇಬ್ಬರ ಮಧ್ಯ ನಿಂತು ಇಬ್ಬರಿಗೂ ಸಮಾಧಾನ

ಬೀದಿಯ ಪ್ರಪಂಚ…. Read Post »

ಇತರೆ, ವರ್ತಮಾನ

ಸಮಾಜ ಕಟ್ಟುವಲ್ಲಿ ಸಾಹಿತ್ಯದ ಪಾತ್ರ

ಲೇಖನ ಸಮಾಜ ಕಟ್ಟುವಲ್ಲಿ ಸಾಹಿತ್ಯದ ಪಾತ್ರ ಶಿವರಾಜ್ ಮೋತಿ ಸಮಾಜವೆಂದರೆ ಜನ,ಗುಂಪು ಎಂದರ್ಥವಾಗುತ್ತದೆ. ವಿಧವಿಧವಾದ ಜನ,ಅನೇಕ ಗುಂಪುಗಳು ಇರುತ್ತವೆ. ಆದರೆ ಇಂದಿನ ಸಮಾಜ ಮೂಲಭೂತವಾದಿ,ಡೊಂಗಿ ರಾಜಕಾರಣಿಗಳ ಕೈಗೆ ಸಿಕ್ಕು ವಿಲ-ವಿಲವಾಗಿ ಬಿದ್ದು ನರಳಾಡುತ್ತಿದೆ. ಸಮಾಜದಲ್ಲಿದ್ದ ನೂನ್ಯತೆಗಳನ್ನು ಸರಿಪಡಿಸಲು,ಸಮ ಸಮಾಜದ ಕನಸನ್ನು ಕಟ್ಟಲು ಹಲವಾರು ಮಾರ್ಗಗಳಿವೆ. ಅದರಲ್ಲೂ ವಿಶೇಷವಾಗಿ ಸಾಹಿತ್ಯವೂ ಒಂದು.ಸಾಹಿತ್ಯದಲ್ಲಿ ಹಲವಾರು ಪ್ರಕಾರಗಳು ಜನಪದ, ಜಾನಪದ,ಪುರಾಣ,ನಾಟಕ,ಕಲೆ, ಸಂಗೀತ ಮುಂತಾದವೆಲ್ಲವೂ ಒಂದಕ್ಕೊಂದು ಸಂಬಂಧವಿದ್ದೆ ಇದೆ. ಸಾಹಿತ್ಯದ ಮೂಲಕ ಸಮಾಜವನ್ನು ಕಟ್ಟಲು ಅನೇಕ ಮಹನೀಯರು,ಶ್ರಮಿಸಿದ್ದಾರೆ,ಶ್ರಮಿಸುತ್ತಿದ್ದಾರೆ ಕೂಡ ಹೌದು.ಸಾಹಿತ್ಯವು ಒಡೆದ ಮನಸ್ಸುಗಳನ್ನು ಕೂಡಿಸಬೇಕೇ ವಿನಹ ಛಿದ್ರ-ಛಿದ್ರ ಮಾಡಬಾರದು. ಜಾತಿ ಅಸ್ಪೃಶ್ಯತೆಯ ತೆಕ್ಕೆಗೆ ಸಿಲುಕಿ ನರಳಾಡಿದ ಜನಕ್ಕೆ,ಧ್ವನಿಯಿಲ್ಲದ ಸಮುದಾಯಕ್ಕೆ ಧ್ವನಿಯಾಗಲು,ತಬ್ಬಲಿಗಳ ಪರ, ಅಲೆಮಾರಿ, ಆದಿವಾಸಿ,ಬುಡಕಟ್ಟು ಜನರಿಗಾಗಿ ಹೋರಾಡಲು, ಶೋಷಣೆಗೆ ಒಳಪಟ್ಟವರನ್ನು ಕಿಚ್ಚೆಬ್ಬಿಸಿ,ಅವರಿಗಾಗುವ ಅನ್ಯಾಯದ ವಿರುದ್ಧ ಸಿಡಿದೇಳಲು ಎಬ್ಬಿಸಿ,ಅವರ ಜೊತೆಗೂಡಲು ಸಾಹಿತ್ಯದ ಮೂಲಕ ಸಾಧ್ಯ.ಇಂತಹ ಕೆಲಸ ಮಾಡುತ್ತಿರುವ ದೊಡ್ಡ ದೊಡ್ಡ ಕೆಲವೇ ಸಾಹಿತಿಗಳನ್ನೂ ಹಾಗೂ ಪ್ರಚಾರ ಪಡೆಯದೇ ಮಾಡುತ್ತಿರುವ ಸಣ್ಣ-ಸಣ್ಣ ಸಾಹಿತಿಗಳನ್ನನ್ನೂ, ಹೋರಾಟಗಾರರನ್ನು ನಾವು ಇಂದು ನೋಡಬಹುದು.. ಇನ್ನೂ ಕೆಲ ಸಾಹಿತಿಗಳಿದ್ದಾರೆ,ಹೆಣ್ಣು ಸಬಲೆಯಲ್ಲ, ಅಬಲೆಯೆನ್ನುವ ಹೆಣ್ಣನ್ನು ಶೋಷಿಸುವ ಕೀಳು ಮನಸ್ಥಿತಿಗಳು,ಶೋಷಿತರನ್ನು ಶೋಷಿತರನ್ನಾಗೆ ನೋಡಬಯಸುವ,ಜಾತಿಧರ್ಮಗಳ ನಡುವೆ ಜಗಳ ಹಚ್ಚುವ ಸಾಹಿತ್ಯ ಸೃಷ್ಟಿ ಮಾಡುವುದು, ಅನ್ಯಧರ್ಮೀಯರನ್ನು ಅನುಮಾನಸ್ಥವಾಗಿ ನೋಡುವ, ಇಲ್ಲ-ಸಲ್ಲದ ಇತಿಹಾಸ ಸೃಷ್ಟಿ ಮಾಡುವುದು, ಅದು ನಿಜವಾದರೂ ಇಂದಿನ ಪರಿಸ್ಥಿತಿಗೆ ಒಗ್ಗೂಡಿಸಿಕೊಂಡು ಬದಲಾವಣೆಯನ್ನು ತರಬಯಸದೇ, ಕೋಮುಸೌಹಾರ್ದತೆಯನ್ನು ಕಾಪಾಡಿಕೊಳ್ಳದೆ ಶಾಂತಿಗೆಡುವ ಕೆಲಸವೂ ನಡೆದಿದೆ.ಅದೂ ನಿಲ್ಲಲ್ಲಿ.. ಇಂದಿನ ಉದಯೋನ್ಮುಖ ಸಾಹಿತಿಗಳು,ಕವಿಗಳು ಅವನು,ಅವಳು ಎನ್ನದೇ ಅರ್ಥಾತ್ ಪ್ರೀತಿ-ಪ್ರೇಮದ ಬಗ್ಗೆ ಬರೆಯುವುದು ಅದರಲ್ಲೂ ಭಗ್ನಪ್ರೇಮಿಯಂತೆ ಕಲ್ಪಿಸಿ ಬರೆಯುವುದು ನೋಡಿದರೆ,ಇವರಿಗೆ ಅನ್ಯ ವಿಷಯಗಳೇ ಇಲ್ಲವೇ ಎನ್ನಿಸದೇ ಇರದು.ಆದರೂ ಇವರು ಅನ್ಯವಿಷಯಗಳು ನನಗ್ಯಾಕೆ,ನಾನು ಬರೆದರೆ ಏನಾದರೂ ಬದಲಾದಿತೇ ಎಂದು ಕೀಳು ಮನಸ್ಥಿತಿಯಿಂದಲೇ ಇದಾರೆ ವಿನಹ ದೊಡ್ಡತನದಿಂದಲ್ಲ. ಸಮಾಜದಲ್ಲಿ ಅನ್ಯಾಯವಾಗುತ್ತಿದ್ದರೂ ದೈಹಿಕವಾಗಿ ಎದುರಿಸದೇ ಆಗದಿರಬಹುದು,ಕಣ್ಣುಮುಂದೆ ಅನ್ಯಾಯ ನಡೆಯದೇ, ನಡೆದೂ ಇರಬಹುದು, ದೂರದೆಲ್ಲೋ ಅನ್ಯಾಯ ನಡೆದಿರಬಹುದು ನಮಗ್ಯಾಕೆನ್ನದೇ ಅದನ್ನು ಪ್ರತ್ಯಕ್ಷವಾಗಿ ವಿರೋಧಿಸದಾಗದಿದ್ರೂ ಸಾಹಿತ್ಯದ ಮೂಲಕ ವಿರೋಧಿಸುವುದು, ಪ್ರತಿರೋಧಿಸಬೇಕೇ ವಿನಹ ಮಂಕಾಗಿ ಕುರುಡಾಗುವುದಲ್ಲ,ಅನ್ಯಾಯವನ್ನು ವಿರೋಧಿಸುವ ಕೆಲಸವಾಗಬೇಕಿದೆ. ಪರಿಸರದ ಹಾನಿಯನ್ನು ತಡೆಗಟ್ಟಲು, ಪರಿಸರಾತ್ಮಕ, ಪ್ರಾಣಿ-ಪಕ್ಷಿಗಳ ರಕ್ಷಣೆ,ಅತ್ಯಾಚಾರದ ವಿರುದ್ಧ, ಜೀವವಿರೋಧಿ, ಮಹಿಳಾ ವಿರೋಧಿ,ಮಾನವ ವಿರೋಧಿ ಮುಂತಾದವುಗಳ ಕೆಲಸ ಸಾಹಿತಿಗಳಿಂದ ತಡೆಗಟ್ಟಲು ಆಗುತ್ತಿಲ್ಲ.ನಮ್ಮ ದೇಶ ಮಹಾನ್ ಧೀಮಂತ ಪುರುಷ-ಮಹಿಳೆ ಸಾಧಕ ಮಹಾತ್ಮರನ್ನು ನೀಡಿದೆ.ಅವರು ಸಮಾಜ ಕಟ್ಟಿದ ಪರಿಯನ್ನು ನಾವು ಅಳವಡಿಸಿಕೊಂಡು ಸಾಗಬೇಕಾಗಿದೆ.ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜವನ್ನು ಕಟ್ಟಲು ಸಾಹಿತ್ಯದ ಮೂಲಕ ಕೆಲಸಗಳು ಆಗುತ್ತಿಲ್ಲ,ಆಗಬೇಕಾಗಿದೆ. ಸರ್ಕಾರದ ನಡೆನುಡಿಗಳು,ಕಾಯ್ದೆಗಳು ಎಲ್ಲ ಕಾಲಕ್ಕೂ ಪ್ರಜಾಸತ್ತಾತ್ಮಕವಾಗಿ,ಪ್ರಜೆಗಳ ಹಿತರಕ್ಷಣೆಗಾಗಿಯೇ ಇರುತ್ತವೆ ಎಂದು ಹೇಳಲಾಗದು,ಕೆಲವೊಮ್ಮೆ ಸರಕಾರಗಳು ಗೊತ್ತಿದ್ದೂ,ಗೊತ್ತಿಲ್ಲದೆಯೂ ಪ್ರಜೆಗಳ ವಿರೋಧಿ ಕಾಯ್ದೆಯೂ ತರಬಹುದು.ಅವಾಗ ಸಾಹಿತಿಗಳಾದವರು ಖಡಾಖಂಡಿತವಾಗಿ ವಿರೋಧಿಸಬೇಕು. ರಾಜಕೀಯದ ಬಗ್ಗೆ ಬೇಡವೆಂದು ತಮ್ಮ ಅಭಿಪ್ರಾಯವನ್ನು ದಾಖಲಿಸದೇ ಹೋದರೆ ಎಲ್ಲ ಕಾಲಕ್ಕೂ ಬಾಯಿಮುಚ್ಚಿ ಮೂಕಪ್ರೇಕ್ಷರಾದರೆ ಅದೆಂತಹ ದೊಡ್ಡ ಬರಹಗಾರನಾದರೂ,ಅವರು ಸಾಹಿತಿಗಳಲ್ಲ,ಅವಕಾಶವಾದಿಗಳಾಗುತ್ತಾರೆ. ಮತ್ತೊಂದೆಡೆ ಓದದೇ ಬರೆಯಬಹುದು,ಆದರೂ ಓದಬೇಕು.ಸ್ವತಃ ತಾನೇ ಮತ್ತೊಬ್ಬರದನ್ನು ಓದದೇ, ನಮ್ಮ ಭವ್ಯ ಸಾಹಿತ್ಯದ ಇತಿಹಾಸವನ್ನೋದದೇ, ಹಿಂದಿನಿಂದ ನಡೆದುಕೊಂಡು ಬಂದ ಸಮಾಜದ ಬಗ್ಗೆ ಅವಲೋಕಿಸದೆ ನನ್ನದೇ ಓದಲಿ ಅಂತ ಅನ್ನಿಸಿದ್ದನ್ನು ಗೀಚುವವರನ್ನು ಹಾಗೂ ಖುಷಿಗಾಗಿ, ಆತ್ಮಸಂತೋಷಕ್ಕಾಗಿ ಬರೆಯುತ್ತೇನೆಂದರೆ ಅಭ್ಯಂತರವಿಲ್ಲ ಆದರೆ ಅದು ಸಾಹಿತ್ಯವಾಗಲಾರದು. ಅಂತ ಬರಹಗಳಿದ್ದರೆ ನಿಮಗೂ ನಿಮ್ಮ ಬರಹಕ್ಕೂ ನೆಲೆಯಿಲ್ಲದಾಗುತ್ತದೆ.. ಒಟ್ಟಾರೆಯಾಗಿ ಏನೇ ಆಗಲಿ,ಸಾಹಿತ್ಯದ ಮೂಲಕ ಸಮಾಜವನ್ನು ಕಟ್ಟುವ ಕೆಲಸಗಳು ಆಗಲಿ, ಸಾಹಿತ್ಯವನ್ನು ಉದ್ಯೋಗ ಮಾಡಿಕೊಂಡವರಿದ್ದಾರೆ, ಜೀವನಕ್ಕಾಗಿ ಸಾಹಿತ್ಯವನ್ನು ನೆಚ್ಚಿಕೊಂಡವರಿದ್ದಾರೆ. ಉದಯೋನ್ಮುಖರಾದ ನಾವುಗಳು ಸಮಾಜದ ಸಮಸ್ಯೆ,ರೋಧನೆಗಳಿಗೆ ಸ್ಪಂದಿಸಿ ಬರಹ, ಹೋರಾಟ, ಚಳುವಳಿಗಳ ಮೂಲಕ ಇನ್ನಾದರೂ ನಮ್ಮ ಲೇಖನಿಯ ವರಸೆ ಬದಲಿಸಿಕೊಂಡು ಸಾಧ್ಯವಾದಷ್ಟು ಜೀವವಿರೋಧಿಗೆ ಪ್ರತಿಧ್ವನಿಗಳಾಗೋಣ..!!! ******************************************************

ಸಮಾಜ ಕಟ್ಟುವಲ್ಲಿ ಸಾಹಿತ್ಯದ ಪಾತ್ರ Read Post »

ಮಕ್ಕಳ ವಿಭಾಗ

ಹೋಳಿ ಹಬ್ಬದಲ್ಲಿ ಹಕ್ಕಿಪುಕ್ಕ!

ಅನುಭವ ಕಥನ  ಹೋಳಿ ಹಬ್ಬದಲ್ಲಿ ಹಕ್ಕಿಪುಕ್ಕ! ವಿಜಯಶ್ರೀ ಹಾಲಾಡಿ ಹೋಳಿಹಬ್ಬ ಬರುವುದು ಬೇಸಗೆಯ ವಸಂತಮಾಸದಲ್ಲಿ… ಅಂದರೆ ಮಾವು, ಗೇರು ಮತ್ತು ಕಾಡಿನ ಬಹುತೇಕ ಮರಗಳು ಚಿಗುರು, ಹೂ ಬಿಡುವಕಾಲದಲ್ಲಿ. ವಿಜಿಯ ಮನೆ ಹತ್ತಿರದ ಕಾಡುಗಳಲ್ಲಿ ಕೆಲವು ಮಾವಿನಮರಗಳಿದ್ದವಲ್ಲ, ಅವು ಚಿಗುರು ಬಿಡುವುದನ್ನು ನೋಡಬೇಕು! ಇಡಿ ಮರವೇ ಹೊಳೆಯುವ ಕೆಂಪು ಬಣ್ಣವಾಗಿಬಿಡುತ್ತಿತ್ತು. ಇದೇ ಸಂದರ್ಭದಲ್ಲಿ ಹೋಳಿಹಬ್ಬವೂ ತನ್ನ ಬಣ್ಣ ಸೇರಿಸಿ ಕೆಂಪು, ಹಳದಿ, ಹಸಿರು, ಕಿತ್ತಳೆ ವರ್ಣಗಳಲ್ಲಿ ಅವರ ಊರು ಹೊಳೆಯುತ್ತಿತ್ತು. ಅಲ್ಲಿ ಕುಡುಬಿ ಜನಾಂಗದವರ ಮನೆಗಳು ಸಾಕಷ್ಟಿದ್ದವು. ಅವರ ಕುಂದಾಪುರ ತಾಲ್ಲೂಕಿನಲ್ಲಿ ಕುಡುಬಿಯರು ಬಹುಸಂಖ್ಯೆಯಲ್ಲಿದ್ದಾರೆ. ವಿಜಿಯ ಬಾಲ್ಯಕಾಲದಲ್ಲಿ ಕುಡುಬಿಯರ ದಿನನಿತ್ಯದ ವೇಷಭೂಷಣಕೂಡಾ ವಿಶಿಷ್ಟವಾಗಿತ್ತು. ಹೆಂಗಸರು ಸೀರೆ ಉಡುವ ರೀತಿಯೇ ಬೇರೆ. ‘ಗೇಂಟಿ’ ಹಾಕಿ ಸೀರೆಯುಟ್ಟು ಕೊರಳಿಗೆ ಹತ್ತಾರು ಮಣಿಸರಗಳನ್ನು ಹಾಕಿಕೊಳ್ಳುತ್ತಿದ್ದರು. ತಲೆತುಂಬ ಅಬ್ಬಲಿಗೆ ಹೂ ಮುಡಿದು ಮೂಗಿಗೆ ದೊಡ್ಡ ಹರಳಿನ ಮೂಗುತಿ, ಕಿವಿಗೆ ಬೆಂಡೋಲೆ, ಬುಗುಡಿ, ಕೈತುಂಬ ಗಾಜಿನ ಬಳೆಗಳನ್ನಿಟ್ಟು ಖುಷಿ ಖುಷಿಯಾಗಿ ಅವರು ನಡೆದುಬರುವುದೇ ಒಂದು ಜಾಪು! ಕುಡುಬಿಯರು ಪ್ರತಿವರ್ಷ ಆಚರಿಸುತ್ತಿದ್ದ ಹೋಳಿಹಬ್ಬವಂತೂ ವಿಶೇಷ. ವಿಜಿ ಮತ್ತು ಗೆಳತಿಯರು ಆ ಸಮಯದ ಹೋಳಿ ಕುಣಿತವನ್ನು ನೋಡಲು ಕಾತರದಿಂದ ಕಾಯುತ್ತಿದ್ದರು. ಸರಿಸುಮಾರು ಹತ್ತು-ಹದಿನೈದು ದಿನದ ಹಬ್ಬವಿದು. ಅಮಾವಾಸ್ಯೆಯ ನಂತರ ಶುರುವಾಗಿ ಹುಣ್ಣಿಮೆಯವರೆಗೆ ಇರುವ ಹಬ್ಬ. ಕುಡುಬಿಯರು ತಮ್ಮಲ್ಲೇ ನಾಲ್ಕೈದು ಮೇಳಗಳನ್ನು ಮಾಡಿಕೊಳ್ಳುತ್ತಿದ್ದರು. ಮನೆಮನೆಗೆ ಹೋಗಿ ನೃತ್ಯ, ಕೋಲಾಟವನ್ನು ಈ ಸಂದರ್ಭದಲ್ಲಿ ಮಾಡುತ್ತಿದ್ದರು. ಗಂಡಸರು ಮತ್ತು ಚಿಕ್ಕ ಗಂಡುಮಕ್ಕಳು ಬಣ್ಣಬಣ್ಣದ ಉಡುಪು ಧರಿಸಿ ಮಣಿಸರಗಳಿಂದ ತಲೆಗೆ ಮುಂಡಾಸು, ಹೂಗಳು, ಹಕ್ಕಿ ಗರಿಗಳಿಂದ ಅಲಂಕರಿಸಿ ಕೊಂಡಿರುತ್ತಿದ್ದರು. ಭುಜಕ್ಕೆ ಗುಮ್ಟಿ(ಗುಮ್ಮಟೆ) ಎಂಬ ವಾದ್ಯವನ್ನು ಹಾಕಿಕೊಂಡು, ಕಾಲುಗಳಲ್ಲಿ ದೊಡ್ಡ ದೊಡ್ಡ ಗೆಜ್ಜೆ ಧರಿಸಿ ಉದ್ದಾನುದ್ದಕ್ಕೆ ಅವರು ನಡೆದು ಬರುವಾಗ ಇಡೀ ಗದ್ದೆ ಬಯಲೇ ಸಂಗೀತ, ಬಣ್ಣಗಳಲ್ಲಿ ಮುಳುಗಿದಂತೆ ಭಾಸವಾಗುತ್ತಿತ್ತು. ವಿಜಿಗೆ ಆಶ್ರ‍್ಯವಾಗುತ್ತಿದ್ದ ವಿಷಯವೆಂದರೆ ಬೇರೆ ದಿನಗಳಲ್ಲಿ ಗದ್ದೆ, ಹೊಲಗಳಲ್ಲಿ ತುಂಡು ಬಟ್ಟೆಯುಟ್ಟು ದುಡಿಯುತ್ತಿದ್ದ ಆ ಪರಿಚಿತ ಜನರೆಲ್ಲ ಆವತ್ತು ಗುರ್ತವೇ ಸಿಗದಂತೆ ಕಾಣುತ್ತಿದ್ದುದು! ಅಬ್ಬ, ಆ ಹೊಸ ವೇಷದಲ್ಲಿ ಅವರೆಲ್ಲ ‘ಅವರೇಅಲ್ಲ’ ಎಂಬಷ್ಟು ಚಂದ ಕಾಣುತ್ತಿದ್ದರು. ಕೆಲವು ಸಲ ರಾತ್ರಿ ಹೊತ್ತುಕುಣಿಯಲು ಬಂದರಂತೂ ಲಾಟೀನು ಬೆಳಕಲ್ಲಿ ಅವರ ಕುಡುಬಿ ಭಾಷೆಯ ಹಾಡು ಮತ್ತು ನೃತ್ಯ ನಕ್ಷತ್ರಲೋಕಕ್ಕೆ ಕರೆದೊಯ್ಯುತ್ತಿತ್ತು! ಅವರು ತಲೆಗೆ ಸಿಂಗರಿಸಿದ್ದ ಸುರಗಿ ಹೂಗಳ ಮಾಲೆ ಪರಿಮಳಿಸುತ್ತಿದ್ದವು. ಗುಮ್ಮಟೆ ಬಡಿಬಡಿದು ಕುಣಿಯುವಾಗ, ಕೋಲಾಟ ಆಡುವಾಗ ಅವರೆಲ್ಲ ಎಷ್ಟು ಚುರುಕು! ಆ ವೇಷದಲ್ಲಿದ್ದಾಗಲೂ ಗಿಡ್ಡ, ಹೆರಿಯ, ಬಾಗ್ಡು, ಬುತ್ಯ ಮುಂತಾದವರು “ಪುಟ್ಟಮ್ಮ ಎಂತಾ ಮಾಡ್ತೆ?” ಎಂದು ಮಾತಾಡಿಸಿದಾಗ ಪುಟ್ಟ ವಿಜಿಗೆ ಏನೋ ಭಯಮಿಶ್ರಿತ ಸಂತೋಷ! ತನ್ನದೇ ವಯಸ್ಸಿನ ಕೆಲವು ಮಕ್ಕಳೂ ವೇಷ ಹಾಕಿಕೊಂಡು ಬಂದದ್ದನ್ನು ನಿಬ್ಬೆರಗಾಗಿ ನೋಡುತ್ತಿದ್ದಳು. ಅವರ ಊರಲ್ಲಿ ನೆಲೆಸಿದ್ದ ಕೆಲ ಮರಾಠರೂ ಹೋಳಿ ಕುಣಿತವನ್ನು ಮಾಡುತ್ತಿದ್ದರು. ಇವರ ಉಡುಪಿನಲ್ಲಿ ಬಣ್ಣಗಳು ತುಸು ಕಡಿಮೆ. ಆದರೆ ಇವರ ಕೋಲಾಟ ಮಾತ್ರ ಅದ್ಭುತ. ಮರಾಠಿ ಭಾಷೆಯ ಹಾಡುಗಳಂತೂ ಬೇರೆಯೇ ತರಹ. ಮತ್ತೊಂದು ವಿಶೇಷವೆಂದರೆ ಇವರ ಮೇಳದಲ್ಲಿ ಒಬ್ಬ ‘ಅಜ್ಜ’ ಇರುತ್ತಾನೆ! ಅಂದರೆ; ಒಬ್ಬ ಹುಡುಗನಿಗೆ ದೊಡ್ಡದಾದ ಬಿಳಿಗಡ್ಡ, ಕಣ್ಣಿಗೆ ಕಪ್ಪುಕನ್ನಡಕ, ಕೈಗೆ ಕೋಲು, ಗಂಟೆ ಕೊಟ್ಟು ವಿಶೇಷವಾಗಿ ‘ಹೋಳಿ ಅಜ್ಜನ ವೇಷ’ ಹಾಕಿಸುತ್ತಾರೆ. ಯಾಕೆಂದು ಇವತ್ತಿಗೂ ಗೊತ್ತಿಲ್ಲ; ಆ ಅಜ್ಜನನ್ನು ಕಂಡರೆ ವಿಜಿಗೆ ವಿಪರೀತ ಭಯವಾಗುತ್ತಿತ್ತು. ಕೊನೆಯಲ್ಲಿ ಅಕ್ಕಿ, ಕಾಯಿ, ದುಡ್ಡಿನ ಸಂಭಾವನೆಯನ್ನು ಆ ‘ಅಜ್ಜ’ನ ಕೈಯ್ಯಲ್ಲೇ ಕೊಡುವುದಾಗಿತ್ತು. ಆ ಅಜ್ಜನೋ ಕೀಟಲೆ ಮಾಡಿ, ಕುಮ್ಬೆಟ್ ಹಾರಿ ಎಲ್ಲರನ್ನೂ ನಗಿಸುತ್ತಿದ್ದ. ಹಾಗೇ ಮಕ್ಕಳನ್ನು ಹೆದರಿಸುತ್ತಲೂ ಇದ್ದ. ಅಜ್ಜ ಸಂಭಾವನೆ ಪಡೆಯುವುದು ಕುಣಿತದ ಕೊನೆಯ ಹಂತ. ಆಮೇಲೆ ಬಾಯಾರಿಕೆ ಕುಡಿದು ಸ್ವಲ್ಪ ದಣಿವಾರಿಸಿಕೊಂಡು ಮತ್ತೊಂದು ಮನೆಗೆ ಮೇಳ ಹೊರಟುಬಿಡುತ್ತಿತ್ತು. ವಿಜಿಯ ಊರಿನಲ್ಲಿ ಅವತ್ತೆಲ್ಲ ಹೋಳಿಹುಣ್ಣಿಮೆಯ ಆಸುಪಾಸಿನ ಆ ಕೆಲವು ದಿನಗಳು ಕಳೆದದ್ದೇ ತಿಳಿಯುತ್ತಿರಲಿಲ್ಲ. ಬಂದು ಹೋಗುವ ಹೋಳಿಮೇಳಗಳ ಕುಣಿತ ನೋಡುವುದರಲ್ಲಿ ಹೊರ ಪ್ರಪಂಚವೇ ಮರೆತುಹೋಗುತ್ತಿತ್ತು. ಆ ಸಮಯದಲ್ಲಿ ಶಾಲೆಯಲ್ಲಿ ಬೇಸಿಗೆ ರಜೆಕೊಡುವ ದಿನಗಳು ಹತ್ತಿರವಾಗುತ್ತಿತ್ತು. ಪರೀಕ್ಷೆಗಳು ಮುಗಿದಿರುತ್ತಿದ್ದವು. ಶಾಲೆಯಲ್ಲೂ ಈ ಹೋಳಿಹಬ್ಬದ ಕುರಿತು ಮಕ್ಕಳು ಚರ್ಚಿಸುತ್ತಿದ್ದರು. ಹಾಗೇ ಮನೆಯ ಸುತ್ತಮುತ್ತ ಗೆಳತಿಯರು ಸೇರಿದರೂ ಅದೇ ಮಾತು. ಹೋಳಿ ಮೇಳ ಬಂದಾಗ ಅವರ ಬೀಚುಬೆಕ್ಕು ಹೆದರಿ ಎಲ್ಲೋ ಅಟ್ಟದ ಸಂದಿಯಲ್ಲಿ ಅಡಗಿ ಕೂರುತ್ತಿದ್ದುದನ್ನು ಆಡಿಕೊಂಡು ನಗುತ್ತಿದ್ದರು. ವಿಜಿ, ನೀಲಿಮಾ, ಮಾಣಿಕ್ಯಳಿಗೆ ವಿಚಿತ್ರ ಕಾಣುತ್ತಿದ್ದುದು ಹೋಳಿ ಜನರು ತಲೆಗೆ ಸಿಕ್ಕಿಸಿಕೊಳ್ಳುತ್ತಿದ್ದ ಹಕ್ಕಿ ಗರಿಗಳು! ಮನೆಯ ಹತ್ತಿರದ ತೋಟದಲ್ಲಿ, ಕಾಡಿನಲ್ಲಿ ಹಾರಾಡುವ ‘ಬಾಲದ ಹಕ್ಕಿ’ಯಿಂದ ಆ ಉದ್ದನೆ ಗರಿಗಳನ್ನು ಕದಿಯುತ್ತಿದ್ದರು ಎಂದು ಅವರಿಗೆ ಗೊತ್ತು. ಕೊಂಬೆಗಳಿಗೆ ಮೇಣ ಹಚ್ಚಿಟ್ಟು, ಹಕ್ಕಿ ಬಂದು ಕುಳಿತಾಗ ಉದ್ದ ಗರಿಗಳನ್ನು ಕಿತ್ತುಕೊಂಡು ಮತ್ತೆ ಕಾಡಿಗೆ ಬಿಡುತ್ತಾರಂತೆ. “ಪಾಪದ್ದು ಆ ಬಾಲದ ಹಕ್ಕಿ, ಅದಕ್ಕೆ ಎಷ್ಟು ಹೆದರಿಕೆಯಾಗುತ್ತದೋ, ಏನೋ” ಎಂದು ಮಾತಾಡಿಕೊಳ್ಳುತ್ತಿದ್ದರು. `ಅಂತಹ ಹಕ್ಕಿಗಳು ಪುನಃ ಕಾಡಿಗೆ ಹೋದಾಗ ಉಳಿದ ಹಕ್ಕಿಗಳು ಅವನ್ನು ಸೇರಿಸಿಕೊಳ್ಳುತ್ತಾವಾ?’ ಮುಂತಾಗಿ ಯೋಚಿಸುತ್ತಿದ್ದರು. ಏಕೆಂದರೆ ಒಮ್ಮೆ ಮನುಷ್ಯರು ಮುಟ್ಟಿದರೆ ಅಂತಹ ಹಕ್ಕಿ, ಅಳಿಲು ಮುಂತಾದ ಪ್ರಾಣಿ ಪಕ್ಷಿಗಳನ್ನು ಪುನಹ ಅವುಗಳ ಗೂಡಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಅವರು ಪುಸ್ತಕದಲ್ಲಿ ಓದಿ ತಿಳಿದುಕೊಂಡಿದ್ದರು.  “ಕಾಡಿಗೆ ಬಿಟ್ಟ ಹಕ್ಕಿಗೆ ಪುನಃ ಬಾಲ ಬೆಳೆಯುತ್ತದಾ?” ವಿಜಿ ಕೇಳುತ್ತಿದ್ದಳು. “ಹೂಂ, ಮತ್ತೆ ಬಾಲ ಬಂದಾಗ, ಮುಂದಿನ ವರ್ಷದ ಹಬ್ಬಕ್ಕೆ ಕಿತ್ತುಕೊಳ್ಳುತ್ತಾರೆ” ಎಂದು ನೀಲಿಮಾ ಹೇಳುತ್ತಿದ್ದಳು. “ಹಾಗಾದರೆ ಈ ಬಾಲದ ಹಕ್ಕಿಗೆ ಬಾಲವೇ ಇರಬಾರದಿತ್ತು, ಪಾಪ” ಎಂದುಕೊಳ್ಳುತ್ತಿದ್ದಳು ವಿಜಿ. ಮನರಂಜನೆಗಳೇ ಕಮ್ಮಿಯಿದ್ದ ವಿಜಿಯ ಊರಿನಲ್ಲಿ ಹೋಳಿಹಬ್ಬ ಒಂದು ದೊಡ್ಡ ಕುತೂಹಲಕಾರಿ ವಿಷಯವಾಗಿತ್ತು; ಹೌದು ವರ್ಷಕ್ಕೊಮ್ಮೆಅದು ಮರಳುತ್ತಿತ್ತು! ******************************************************

ಹೋಳಿ ಹಬ್ಬದಲ್ಲಿ ಹಕ್ಕಿಪುಕ್ಕ! Read Post »

You cannot copy content of this page

Scroll to Top