ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಹಿರಿಯ ರಂಗಕರ್ಮಿ ಎಚ್.ಜಿ.ಸೋಮಶೇಖರ ಅಗಲಿಕೆ..!

ಹಿರಿಯ ಕಲಾವಿದ ದತ್ತಣ್ಣನವರ ಅಣ್ಣ ಹಿರಿಯ ರಂಗಕರ್ಮಿ ಎಚ್.ಜಿ.ಸೋಮಶೇಖರ ಅಗಲಿಕೆ..! ಹಿರಿಯ ಕಲಾವಿದ ದತ್ತಣ್ಣ ಅವರ ಅಣ್ಣ 86 ವರ್ಷದ ಹೆಚ್.ಜಿ.ಸೋಮಶೇಖರ ರಾವ್ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸೋಮಣ್ಣ ಇಂದು ಕೊನೆಯುಸಿರೆಳೆದಿದ್ದಾರೆ. ಬ್ಯಾಂಕ್ ಅಧಿಕಾರಿಯಾಗಿದ್ದ ಸೋಮಣ್ಣನವರಿಗೆ ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದವರು. ಇವರು ಅನೇಕ ಪಾಶ್ಚಿಮಾತ್ಯ ಮತ್ತು ಭಾರತೀಯ ನಾಟಕ ಕರ್ತುಗಳ ಕೃತಿಗಳನ್ನು ರಂಗಭೂಮಿಯ ಮೇಲೆ ಜೀವಂತಗೊಳಿಸಿದ್ದವರು. ಇವರು ಚಿತ್ರರಂಗವನ್ನು ಪ್ರವೇಶಿಸಿದ್ದು 1981ರಲ್ಲಿ. ಅದು ಟಿ.ಎಸ್.ರಂಗಾರವರ ನಿರ್ದೇಶನದ ‘ಸಾವಿತ್ರಿ’ ಮೂಲಕ. ಖ್ಯಾತ ನಟ ಅನಿಲ್ ಠಕ್ಕರ್ರವರ ಪ್ರತಿದ್ವಂದಿಯಾಗಿ ಇವರು ನೀಡಿದ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ನಂತರ ಸೋಮಣ್ಣ ಅನೇಕ ಚಿತ್ರಗಳಲ್ಲಿ ಭಾವಪ್ರಧಾನ ಮತ್ತು ಹಾಸ್ಯ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದವರು. ರವೀ ನಿರ್ದೇಶನದ ‘ಮಿಥಿಲೆಯ ಸೀತೆಯರು’ ಇವರ ಅಭಿನಯ ಸಾಮರ್ಥ್ಯವನ್ನು ಸರಿಯಾಗಿ ಗುರುತಿಸುವಂತೆ ಮಾಡಿತು. ರವೀಯವರೇ ನಿರ್ದೇಶಿಸಿದ ಇನ್ನೊಂದು ಚಿತ್ರ ‘ಹರಕೆಯ ಕುರಿ’ಯಲ್ಲಿ ಸೋಮಶೇಖರ ರಾವ್ ನೀಡಿದ ಸೊಗಸಾದ ಅಭಿನಯಕ್ಕಾಗಿ 1992 -93ನೇ ಸಾಲಿನ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತ್ತು. ಕೆನರಾ ಬ್ಯಾಂಕ್​ನಲ್ಲಿ ಉನ್ನತ ಅಧಿಕಾರಿಯಾಗಿದ್ದು ನಿವೃತ್ತಿ ಹೊಂದಿದ ರಾಯರಿಗೆ ಕನ್ನಡ ರಂಗಭೂಮಿಗೆ ತಮ್ಮ ಸೇವೆಯನ್ನು ಸಲ್ಲಿಸುವುದೇ ನಿಜವಾದ ಕಾಯಕವಾಯಿತು. ಸೋಮಶೇಖರ ರಾಯರ ಬದುಕಿನ ಅನುಭವ ಕಥನವು ಪ್ರಕಟವಾಗಿದೆ. ಕಿರುತೆರೆ, ಚಲನಚಿತ್ರಗಳಿಗಿಂತ ಮಿಗಿಲಾಗಿ ರಂಗ ಕೈಂಕರ್ಯವನ್ನು ಪ್ರೀತಿಸಿದ ರಾಯರು ತಮ್ಮ 86 ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಅವರು ನಮ್ಮನ್ನು ಅಗಲಿದ್ದಾರೆ..! ************************************ ಕೆ.ಶಿವುಲಕ್ಕಣ್ಣವರ

ಹಿರಿಯ ರಂಗಕರ್ಮಿ ಎಚ್.ಜಿ.ಸೋಮಶೇಖರ ಅಗಲಿಕೆ..! Read Post »

ಇತರೆ

ಕಾದಂಬರಿ ಕುರಿತು ಮಲೆಗಳಲ್ಲಿ ಮದುಮಗಳು ಕುವೆಂಪು ಕಾವ್ಯ ಎಸ್. ಕಾಡಿದ , ಅರಿವು ವಿಸ್ತಿರಿಸಿದ, ಬದುಕಿನ ಚೆಲುವು ತಿಳಿಸಿದ ಕುವೆಂಪು ನನ್ನನ್ನು ದೀರ್ಘವಾಗಿ ಓದಿಸಿದ ಪ್ರೀತಿಯ ಕಾದಂಬರಿ‌ ಎಂದರೆ ‌;  ಕುವೆಂಪುರವರ “ಮಲೆಗಳಲ್ಲಿ ಮದುಮಗಳು ” ಕಾದಂಬರಿ. 712 ಪುಟಗಳಿರುವ ಈ ಬೃಹತ್ ಕಾದಂಬರಿಯಲ್ಲಿ ಪಾತ್ರವರ್ಗ, ಸ್ಥಳಗಳು, ಜಾತಿ, ಪಂಗಡಗಳ ವಿವರಣೆಗಳ ಸುತ್ತ ಹೆಣೆದುಕೊಳ್ಳುತ್ತಾ ಅಂದಿನ ಮೇಲುಜಾತಿ, ಕೀಳುಜಾತಿಯ ವಿಡಂಬನೆ, ಕೂಲಿ ಆಳುಗಳನ್ನು ನಡೆಸುಕೊಳ್ಳುತ್ತಿ ದ್ದ ಹೀನಾಯ ಸ್ಥಿತಿ, ಬ್ರಾಹ್ಮಣ ವರ್ಗದವರೇ ಶ್ರೇಷ್ಠರೆಂದು, ಉಳಿದ ವರ್ಗದವರನ್ನು ಹೀನಾಯವಾಗಿ ಕಾಣುತ್ತಾ ಅವರ ಮೂಢಾಚಾರಗಳನ್ನು ಜೀವನೋಪಾಯ ಸಂಪಾದನೆಗೆ ಬಂಡವಾಳ ವಾಗಿಸಿದ್ದ ಬ್ರಾಹ್ಮಣರ ಮನೋಧರ್ಮ, ಪುರುಷ ಪ್ರಾಧಾನ್ಯತೆಯ ಸಮಾಜ, ಮಹಿಳೆಯ ಅಸಮಾನತೆ, ಮೂಢನಂಬಿಕೆ, ಬಡತನ, ಕ್ರೈಸ್ತಧರ್ಮದ ಪ್ರಚಾರದ ವಿವಿಧ ರೀತಿಗಳು, ಮಲೆನಾಡಿನ ವರ್ಣನೆ, ಸಹ್ಯಾದ್ರಿಯ ಬೆಟ್ಟಗಳ ವರ್ಣನೆ, ದಟ್ಟ ಕಾಡಿನ ರಮಣೀಯತೆಯ ಭವ್ಯವಾದ ಕಣ್ಣುಕಟ್ಟುವ ವರ್ಣನೆ, ಕಾಡಿನ ಭೀಕರತೆ, ಕೃಷಿ, ತೋಟಗಾರಿಕೆ, ಅಂದಿನ ಆಚಾರ -ವಿಚಾರ, ಹಳ್ಳಿಯ ಸೊಗಡು, ನುರಿತ ಗ್ರಾಮ್ಯ ಭಾಷೆಯ ಸುತ್ತ ಒಂದರೊಳಗೊಂದು ಹೆಣೆದುಕೊಳ್ಳುತ್ತಾ ಸಾಗುತ್ತದೆ. ಕಾದಂಬರಿಯಲ್ಲಿನ ಊರುಗಳಾದ ಸಿಂಬಾವಿ, ಲಕ್ಕುಂದ, ಮೇಗರವಳ್ಳಿ, ಬೆಟ್ಟಳ್ಳಿ, ಕೋಣೂರು, ತೀರ್ಥಹಳ್ಳಿ, ಕಾಗಿನಹಳ್ಳಿ ಹೂವಳ್ಳಿ, ಕಾನೂರು… ಇತ್ಯಾದಿ ಹಾಗೂ ಪ್ರಸ್ತಾಪವಾಗಿರುವ ವ್ಯಕ್ತಿಗಳಾದ ಭರಮೈಹೆಗ್ಗಡೆ, ಜಗ್ಗಮ್ಮ, ಸುಬ್ಬಣ್ಣಹೆಗ್ಗಡೆ, ಮುಕುಂದಯ್ಯ, ಚಿನ್ನಮ್ಮ, ನಾಗತ್ತೆ, ನಾಗಕ್ಕ, ವೆಂಕಟಣ್ಣ ಗೌಡ್ರು, ಲಕ್ಕಮ್ಮ, ತಿಮ್ಮಪ್ಪಹೆಗ್ಗಡೆ, ಮಂಜಮ್ಮ, ಶಂಕರಹೆಗ್ಗಡೆ, ರಂಗಮ್ಮ(ಹುಚ್ಚು ಹೆಗ್ಗಡತ್ತಿ ), ಸೀತಮ್ಮ, ಕಲ್ಲಯ್ಯಗೌಡ್ರು,   ದೇವಯ್ಯಗೌಡರು, ದೇವಮ್ಮ, ರಂಗಪ್ಪಗೌಡರು, ದೊಡ್ಡಣ್ಣಹೆಗ್ಗಡೆ, ಧರ್ಮು, ಕಾಡು, ತಿಮ್ಮು, ರಾಮು, ಗುತ್ತಿ, ತಿಮ್ಮಿ, ಐತ, ಪಿಂಚಲೂ, ಬಚ್ಚ, ಕರಿಸಿದ್ದ, ಸಣ್ಣತಿಮ್ಮ,ಚಿಂಕ್ರ, ದೇಯಿ, ಅಕ್ಕಣ್ಣಿ..ಇತ್ಯಾದಿ ಪಾತ್ರಗಳೊಂದಿಗೆ ಕಾದಂಬರಿ ಬೇರೆಯದೇ ಅದ್ಭುತ ಲೋಕಕ್ಕೆ ಕರೆದೊಯ್ಯುತ್ತದೆ. ನನ್ನನ್ನು ಅತಿಯಾಗಿ ಕಾಡಿದ ಪಾತ್ರಗಳೆಂದರೆ ಒಡಯರಿಗೆ ನಿಷ್ಠ ಆಳುಗಳಾದ (ಸ್ವಾಮಿ ನಿಷ್ಠರು )ಗುತ್ತಿ, ಐತ, ಚೊಚ್ಚಲ ಬಸಿರು ಹೊತ್ತಿದ್ದರು, ಮುಕುಂದಯ್ಯ -ಚಿನ್ನಮ್ಮರನ್ನು ಒಂದಾಗಿಸುವುದಕ್ಕಾಗಿ ಸರ್ವಸ್ವವನ್ನು ಲೆಕ್ಕಿಸದೆ ಶ್ರಮವಹಿಸುವ ಪಿಂಚಲು. ಚಿನ್ನಮ್ಮಳಿಗೋಸ್ಕರ ಸೀರುಡಿಕೆಯಾದ ತಾಯಿ ಸ್ವರೂಪಿ ನಾಗಕ್ಕ.  ಚಿಂಕ್ರ ಮತ್ತು ದೇಯಿಯ ಮಕ್ಕಳನ್ನು   ತನ್ನ  ಮಕ್ಕಳಾಗಿ ಪ್ರೀತಿ ತೋರುವ ಅಕ್ಕಣ್ಣಿ. ಸ್ವಾಮಿಭಕ್ತ ಹುಲಿಯ (ಗುತ್ತಿಯ ನಾಯಿ )ತನ್ನ ಒಡೆಯನಿಗಾಗಿ ಭೋರ್ಗರೆದು ಹರಿಯುತ್ತಿರುವ ತುಂಗೆಯನ್ನು ಲೆಕ್ಕಿಸದೆ ನದಿಗೆ ಹಾರಿ ಪ್ರವಾಹದ ವಿರುದ್ಧ ಈಜಿದ ಗುತ್ತಿಯ ಪ್ರೀತಿಯ ಕುನ್ನಿ. ಮುಕುಂದಯ್ಯ -ಚಿನ್ನಮ್ಮರ ಪ್ರೀತಿ, ಪ್ರಲಾಪ, ಅಕ್ಕರೆಯ ನಡವಳಿಕೆ. ವೇಷ -ಭೂಷಣ, ಆಚಾರ -ವಿಚಾರಗಳಲ್ಲಿ ಕ್ರೈಸ್ತಧರ್ಮದ ಅನುಸರಿಸುತ್ತಿದ್ದ ದೇವಯ್ಯಗೌಡರು. ದೊಡ್ಡ ವಿದ್ವಾಂಸರಾಗಿ, ಪವಾಡಪುರುಷರಾಗಿ, ಸಂನ್ಯಾಸಿಯಾಗಿ ಗೋಚರವಾದ ಗಡ್ಡದಯ್ಯ. ಗಡ್ಡದಯ್ಯ ಹೇಳಿದ ಸ್ವಾಮಿ ವಿವೇಕಾನಂದರು ಭರತಖಂಡವನ್ನು ಸಂಚರಿಸಿ, ಭೋದಿಸಿ ಹೊಸದೊಂದು ಯುಗಶಕ್ತಿಯನ್ನು ಉದ್ಬೋದನಗೊಳಿಸುವ ವಿಚಾರ. ಸಾಬರುಗಳ ಮೋಸ -ವಂಚನೆಯ ವ್ಯಾಪಾರ, ಕೊಲೆ -ಸುಲಿಗೆ, ಹೊಡೆತಗಳು. ಕೆಲವೊಂದು ಪಾತ್ರಗಳ ವರ್ತನೆ  ನಮ್ಮನ್ನು ಕಲ್ಪನೆಗೂ ಮೀರಿ ಯೋಚನಾಲೋಕಕ್ಕೆ ತಳ್ಳಿ ಮತ್ತೆ ವಾಸ್ತವಕ್ಕೆ ಕರೆತರುತ್ತವೆ. ಈ ಕಾದಂಬರಿಯನ್ನು ಓದುತ್ತಾ ಅದರೊಳಗಿನ ಒಂದು ಪಾತ್ರವಾಗಿ, ಅಲ್ಲಿದ್ದ ಪಾತ್ರಗಳೆಲ್ಲ ನನ್ನ ಸುತ್ತಮುತ್ತಲಿನವರಂತೆ ವಿಜೃಂಭಿಸಿ ಖುಷಿ ದೊರೆತು,ಅನರ್ಘ್ಯ ಅನುಭವ ಮೈ ಹೊಕ್ಕಿತು. ಕುವೆಂಪುರವರ ಕಲ್ಪನೆಯಲ್ಲಿ ಮೂಡಿಬಂದಿರುವ ಪ್ರತಿಯೊಂದು ಪಾತ್ರಗಳು ಅನನ್ಯ ಹಾಗೂ ಅದಮ್ಯವಾಗಿವೆ. ಕುವೆಂಪುರವರ ವಿಸ್ತೃತ ಕಲ್ಪನೆಗೆ ಪ್ರತಿಯೊಂದು ಪಾತ್ರಗಳು ಶರಣಾಗಿವೆ. ಇಂತಹ ಬೃಹತ್ ಕಾದಂಬರಿಯಲ್ಲಿಯ ಅದ್ಭುತವಾದ ಸಾಹಿತ್ಯವನ್ನು ಸವಿಯುವಂತೆ ಮಾಡಿದ  ಆತ್ಮಕ್ಕೆ ನಾ ಸದಾ ಚಿರಋಣಿ. ************************************************************ . . ಕಾವ್ಯ ಎಸ್

Read Post »

ಇತರೆ

ಪಾಕ ಕ್ರಾಂತಿ

ಕಾದಂಬರಿ ಕುರಿತು ಪಾಕ ಕ್ರಾಂತಿ ಪೂರ್ಣಚಂದ್ರ ತೇಜಸ್ವಿ ದಿವಂಗತ ಶ್ರೀ ಪೂರ್ಣಚಂದ್ರ ತೇಜಸ್ವಿಯವರ ನೀಳ್ಗತೆ *ಪಾಕ್ ಕ್ರಾಂತಿ* ಓದಲು ಸುರುವು ಮಾಡುವದಕ್ಕೂ ಮೊದಲು ನನಗೆ ಅನ್ನಿಸಿದ್ದು ಕ್ರಾಂತಿಯ ಬಗೆಗೆ ಬರೆದಿರುವ ಲೇಖನವಿರಬಹುದು, ಬಹುಶಃ ಪಾಕಿಸ್ತಾನದ ಯಾವುದೋ ಕ್ರಾಂತಿಯದು ಎಂದು. ಆದರೆ ಒಂದೆರಡು ವಾಕ್ಯ ಓದಿದಾಗ ಇದು ಪಾಕ್ ಕ್ರಾಂತಿಯಲ್ಲ ಪಾಕ ಕ್ರಾಂತಿ ಅಂದರೆ ಪಾಕಶಾಸ್ತ್ರದ, ಅಡುಗೆಯಲ್ಲಿ ಮಾಡಿದ ಕ್ರಾಂತಿಯ ಬರಹ ಅಂತ. ನಾಲ್ಕೇ ಜನ ಕಥೆಯಲ್ಲಿ ಬರುತ್ತಾರೆ, ಅದರಲ್ಲಿ ಹೆಂಡತಿ ತವರಿಗೆ ಹೋದಾಗ ಅಡುಗೆಯಲ್ಲಿ ಕ್ರಾಂತಿ ಮಾಡಲು ಹೊರಟ ಮಹಾಶಯರದು ಮುಖ್ಯ ಪಾತ್ರ. ಅರವತ್ನಾಲ್ಕು ಕಲೆಗಳಲ್ಲಿ ಪಾಕಶಾಸ್ತ್ರ ಕೂಡ ಒಂದು ಕಲೆ. ಹೆಣ್ಣುಮಕ್ಕಳು ಅಡುಗೆ ಮನೆಯಲ್ಲಿ ಏನೋ ಮಾಡಿಕೊಂಡಿರುತ್ತಾರೆ ಅಂತ ಉದಾಸೀನ ತಳೆಯುವ ವಿದ್ಯೆ ಇದಲ್ಲವೆಂದು ಈ ಲೇಖನ ಓದಿದ ಮೇಲೆ ಗೊತ್ತಾಗುತ್ತದೆ. ಪುರಾಣದಲ್ಲಿ ಬರುವ ನಳ ಮಹಾರಾಜ, ಭೀಮಸೇನ ಅಡುಗೆಯಲ್ಲಿ ಪ್ರವೀಣರಾಗಿದ್ದರು. ಈ ವಿದ್ಯೆ ಗಂಡಸರಿಗೆ ಒಲಿಯುವದಿಲ್ಲ ಅಂತೆನೂ ಇಲ್ಲ. ಪಾಕಶಾಸ್ತ್ರದಲ್ಲಿ ಏನೂ ಗೊತ್ತಿಲ್ಲದವನ ಹೆಂಡತಿ ಊರಿಗೆ ಹೋದಳು. ಹೋಗುವಾಗ ಎಲ್ಲ ತಿಳಿಸಿಕೊಟ್ಟು. ಹೆಂಡತಿ ಇಲ್ಲದಿದ್ದರೆ ಗಂಡಸು ಉಪವಾಸ ಸಾಯ್ತಾನೇನು ಅನ್ನುವ ಮನೋಭಾವದ ವ್ಯಕ್ತಿ ಅಡುಗೆ ಮಾಡುವಾಗ ಪಡಬಾರದ ಕಷ್ಟ ಎದುರಿಸುವದು ಒಳ್ಳೆಯ ಹಾಸ್ಯಮಯವಾಗಿದೆ. ‘ಹೀಗೆಯೇ ಮಾಡಬೇಕು ಅನ್ನುವ ಕಾಯ್ದೆ ಯಾತಕ್ಕೆ?’ ಈ ಸಂಪ್ರದಾಯ ನಿಷ್ಠಯೇ ನಮ್ಮ ದೇಶ ಮುಂದುವರೆಯದಿರುವುದಕ್ಕೆ ಮುಖ್ಯ ಕಾರಣ ಅನ್ನಿಸಿ ಹೊಸ ಕ್ರಾಂತಿಕಾರಕ ಆಲೋಚನೆಗಳನ್ನು ಅನುಷ್ಠಾನಕ್ಕೆ ತರಲು ಹೊರಟಿದ್ದಾರೆ ನಾಯಕ. ಮೊದಲ ಪ್ರಯತ್ನದಲ್ಲಿಯೇ ಮುಗ್ಗರಿಸುತ್ತಾರೆ. ಹಾಲು ಕಾಯಿಸುವುದು ಎಷ್ಷು ಸರಳ ಮತ್ತು ಸಣ್ಣ ಕೆಲಸ! ಅಂದುಕೊಂಡರೆ….. ಅದು ಉಕ್ಕಿ, ಎಲೆಕ್ಟ್ರಿಕಲ್ ಒಲೆ ಮೇಲೆ ಚೆಲ್ಲಿ, ಒಲೆ ಮತ್ತು ಪಾತ್ರೆ ಸುಟ್ಟು ಕರಕಲಾದಾಗ ಹಾಲು ಒಂದು ಅಪಾಯಕಾರಿ ವಸ್ತು ಅಂತ ನಿರ್ಧರಿಸಲಾಯಿತು. ‘ಹಾಲು ಹೆಂಗಸರನ್ನು ಒಲೆಯ ಬುಡಕ್ಕೆ ಬಂಧಿಸಿರುವ ಮೊದಲ ಸಂಕೋಲೆ’ ಇದರಲ್ಲಿ ಬದಲಾವಣೆ ತರುವ ಕ್ರಾಂತಿಯ ವಿಚಾರ ಇವರದು. ಇನ್ನು ಒಲೆ ರಿಪೇರಿಯಾಗದಿದ್ದರೆ ಶಾರ್ಟಸರ್ಕಿಟ್ ನಿಂದ ಹೆಂಡತಿಗೆ ಬೆಂಕಿ ತಗುಲಿದರೆ  ವಧುದಹನದ ಕೇಸಾಗುವುದು ಖಂಡಿತ ಅನ್ನಿಸಿ ಅದರ ಸ್ವಚ್ಚತೆ ಮತ್ತು ರಿಪೇರಿಯಾಗುತ್ತದೆ. ಒಂದು ಹಾಲು ಕಾಯಿಸಲು ಇಷ್ಟಾದರೆ ಅಡುಗೆ ಮಾಡುವುದು ಹೇಗಿರಬೇಡ? ಪ್ರೆಷರ್ ಕುಕರ್ ಗ್ಯಾಸ್ಕೆಟ್ ಮತ್ತು ಸೇಫ್ಟಿವಾಲ್ವ್ ಮಾರುವ ಹುಡುಗಿಗೆ ಕೂಡ ಗೊತ್ತಾಗಿ ಹೋಯಿತು, ಮನೆಯ ಯಜಮಾನಿ ಮನೆಯಲ್ಲಿ ಇಲ್ಲ ಅನ್ನುವುದು. ರಬ್ಬರ್ ಸುಟ್ಟ ವಾಸನೆ ಅನ್ನಕ್ಕೆ ಬಂದು, ಸಾಕಿದ ನಾಯಿ ಆ ಅನ್ನವನ್ನು ತಿನ್ನುವುದು ಬಿಡಿ ಮೂಸಿ ನೋಡಲಿಲ್ಲ. ನಾಯಿಗೆ ಊಟ ಮಾಡಿಸಲೋಸುಗ ಒಣ ಮೀನು ತಂದು ಹುರಿದು ಕೊಟ್ಟರು. ಮೀನಿನ ವಾಸನೆಗೆ ಮನೆಯಲ್ಲ ಇರುವೆಗಳು. ನಾಯಿ ಅನ್ನ ತಿಂತೋ ಇಲ್ಲವೋ ಆದರೆ ಕರೆಂಟ ಇಲ್ಲದಾಗ ಕತ್ತಲಲ್ಲಿ ಸಾರಿನಲ್ಲಿ ಬಿದ್ದ ಇರುವೆಯ ಭಕ್ಷಣೆಯೂ ಇವರಿಂದ ಆಯಿತು. ಇನ್ನು ಇರುವೆ ಕೊಲ್ಲಲು ಸೀಮೆ ಎಣ್ಣೆ ಬೇಕು. ಅದನ್ನು ಕೊಳ್ಳಲು ರೇಶನ್ ಕಾರ್ಡ ಇಲ್ಲ. ಒಟ್ಟಿನಲ್ಲಿ *ಸನ್ಯಾಸಿಯ ಸಂಸಾರ* ಬೆಳಿತಾ ಹೋಯಿತು. ಇದೇನು ಮಹಾವಿದ್ಯೆ ಅನ್ನಿಸಿದ್ದು ಈಗ ಕುತ್ತಿಗೆಗೆ ಬಂತು. ಕೊನೆಗೆ ಡಿಸೇಲ್ ತಂದು ಇರುವೆ ಕೊಲ್ಲುವ ನಿರ್ಧಾರ. ಸೀಮೆ ಎಣ್ಣೆಗಾಗಿ ಹೊರಗೆ ಹೋದಾಗ ಸ್ನೇಹಿನೊಬ್ಬ ಸಿಕ್ಕು ಮತ್ತೋರ್ವನನ್ನು ಪರಿಚಯಿಸುತ್ತಾನೆ. ಆಗುಂತಕ ತನ್ನ ಕೂಸಿಗೆ ಹೆಸರು ಸೂಚಿಸು ಅಂತ ಗಂಟುಬೀಳುತ್ತಾನೆ. ಈ ಭಾಗ ಮುಖ್ಯ ಕಥೆಗೆ ಎಳ್ಳಷ್ಟೂ ಹೊಂದಿಕೆಯಾಗದು. ಅದೇ ಗೆಳೆಯನ ಸಲಹೆಯ ಮೇರೆಗೆ ಒಂದೇ ಸಲಕ್ಕೆ ಎಲ್ಲ ಅಡಿಗೆ ಕುಕರ್ ನಲ್ಲಿ ಮಾಡಬಹುದೆಂದು ಪ್ರಯೋಗಕ್ಕೆ ಅಣಿಯಾಗುತ್ತಾನೆ. ಅಡುಗೆ ಮಾಡುವುದು ಒಂದು ಕಲೆ ಅನ್ನುವ ಹೀರೋಗೆ ಗಣಿತದ ಲೆಕ್ಕಾಚಾರ ತಪ್ಪಿಹೋಯಿತು. ಅದೇ ವೇಳೆಗೆ ಒಬ್ಬ ಉಗ್ರನನ್ನು ಹುಡುಕುತ್ತಾ ಮನೆಯ ಮುಂದೆ ಪೋಲೀಸ್ ಅಧಿಕಾರಿ ಹಾಜರ್. ಕುಕರ್ ಸಿಡಿದ ಶಬ್ದ, ಬಾಂಬ್ ಇಲ್ಲವೆ ಗುಂಡು ಅಂತ ಭಾವಿಸಿ ಪೋಲಿಸ್ ಮನೆಯೊಳಗೆ ಬಂದು ರೆಡ್ ಆಕ್ಸೈಡ್‌ ನೆಲದ ಮೇಲೆ ಜಾರಿ ಬಿದ್ದ. ಪ್ಯಾಂಟಿಗೆ ಹತ್ತಿದ ಕೆಂಪು ಬಣ್ಣ ಬ್ಲೀಡಿಂಗ್ ಆಗಿ ತೋರಿತು. ಪೋಲಿಸರನ್ನು ಹೊರಗೆ ಹಾಕಲು ಹರಸಾಹಸ ಮಾಡಬೇಕಾಯಿತು. ಇದನ್ನೆಲ್ಲಾ ಓದುತ್ತಿರುವಾಗ ನಗು ನಿಯಂತ್ರಿಸಲು ಆಗುವುದಿಲ್ಲ. ಅಡುಗೆ ಮಾಡುವುದು ಕಲೆ ಅಂತ ಒಬ್ಬ ಪುರುಷನ ಅಭಿಪ್ರಾಯವಿದ್ದರೆ ಅದು ಕರ್ತವ್ಯ, ಅಗತ್ಯತೆ ಅನ್ನುವಳು ಹೆಣ್ಣು. ಬೆಳೆಯುತ್ತಿರುವ ವಿಜ್ಞಾನ ಯುಗದಲ್ಲಿ ಅದು ವಿಜ್ಞಾನವಾಗಿ ಮಾರ್ಪಡುತ್ತಿದೆ. ಏನೇ ಆಗಲಿ ಅಡುಗೆ ಸಾಮಾನ್ಯ ವಿಜ್ಞಾನ, ಎಲ್ಲರಿಗೂ ತಿಳಿದಿರಬೇಕಾದುದು. ಪೇಟೆಯಲ್ಲಿ ತಿನಿಸುಗಳ ಮೇಲೆ ಪ್ರಯೋಗಿಸಿದ ಅದ್ಭುತ ಕಲೆಯನ್ನು ನೋಡಿಯೇ ಕೊಳ್ಳುವವರು ಜಾಸ್ತಿ. ಕಲೆ ಬಾಹ್ಯ ಸೌಂದರ್ಯ, ವಿಜ್ಞಾನ ಆಂತರ್ಯದ ರುಚಿ ಅಂತ ಹೊರಗಿನ ತಿನಿಸುಗಳನ್ನು ಸವಿದವರಿಗೆ ಗೊತ್ತು. ಅದಕ್ಕಾಗಿ ಪಾಕಕ್ರಾಂತಿಗೆ ಜಯವಾಗಲಿ. ಏನೇ ಆಗಲಿ ಪೂರ್ಣಚಂದ್ರ ತೇಜಸ್ವಿಯಂತ ಒಬ್ಬ ಗಂಭೀರ ವಿಜ್ಞಾನಿ ಇಂತಹ ಹಾಸ್ಯಮಯ ಕಥೆ ಬರೆಯುತ್ತಾರೆ ಅನ್ನುವದನ್ನು ನಂಬುವುದು ಕಷ್ಟ. ******************************** ವಿನುತಾ ಹಂಚಿನಮನಿ

ಪಾಕ ಕ್ರಾಂತಿ Read Post »

ಇತರೆ

‘ಶಾಂತಿ ಮಾನವ’ ಶಾಸ್ತ್ರಿ

ಲೇಖನ ‘ಶಾಂತಿ ಮಾನವ’ ಶಾಸ್ತ್ರಿ ಚವೀಶ್ ಜೈನ್ ಚಪ್ಪರಿಕೆ ಭಾರತ ಎಂಬ ಈ ದೇಶ ಸಾವಿರಾರು ಮಹಾಪುರುಷರನ್ನು ಕಂಡಿದೆ. ಅಂತಹ ಮಹಾನ್ ನಾಯಕರನ್ನೂ ಒಪ್ಪಿಕೊಳ್ಳುವ ಮತ್ತು ತಿರಸ್ಕರಿಸುವ ಎರಡೂ ವರ್ಗಗಳು ಸಾಮಾನ್ಯವಾಗಿ ಸಮಾಜದಲ್ಲಿ ಇರುತ್ತವೆ. ಆದರೆ ಕೆಲವು ವ್ಯಕ್ತಿಗಳಿದ್ದಾರೆ, ಅವರನ್ನು ಎಲ್ಲಾ ವರ್ಗದವರು, ಎಲ್ಲಾ ಜಾತಿ – ಮತದವರು, ಬಲಪಂಥೀಯರು, ಎಡಪಂಥೀಯರು, ಎಲ್ಲಾ ಪಕ್ಷಗಳು ಒಟ್ಟಾರೆ ಸಮಸ್ತ ದೇಶ ಒಪ್ಪಿಕೊಳ್ಳುತ್ತದೆ ಮತ್ತು ಗೌರವಿಸುತ್ತೆ. ಅಂತಹ ಮಹಾತ್ಮರಲ್ಲಿ ಅಗ್ರಪಂಕ್ತಿಯಲ್ಲಿ ನಿಂತುಕೊಳ್ಳುವವರು, ಈ ದೇಶದ ಶಾಂತಿ ಮಾನವ ಲಾಲ್ ಬಹದ್ದೂರ್ ಶಾಸ್ತ್ರಿ. ಅಂತಹ ನಾಯಕರು ಇತಿಹಾಸದ ಎಲ್ಲಾ ಪುಟಗಳಲ್ಲಿ ಆವರಿಸಿಕೊಂಡಿರುವಾಗ, ವಿಪರ್ಯಾಸ ಎಂಬಂತೆ ಶಾಸ್ತ್ರೀಜೀ ಮಾತ್ರ ಇತಿಹಾಸ ಪುಟದಲ್ಲಿ ಮರೆಯಾಗಿದ್ದಾರೆ.  ಯಾವ ಇತಿಹಾಸದಲ್ಲೂ ಇಂತಹ ಮೇರು ನಾಯಕನನ್ನು ಅಷ್ಟಾಗಿ ಓದುವುದಿಲ್ಲ.      ಆದ್ದರಿಂದ ಈ ಸಂದರ್ಭದಲ್ಲಿ ಶಾಸ್ತ್ರೀಜೀಯವರ ಕುರಿತು ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ. ಇವರು ಹುಟ್ಟಿದ್ದು ಅಕ್ಟೋಬರ್ 2, 1904 ರಂದು ಉತ್ತರ ಪ್ರದೇಶದ ಮೊಘಲ್ ಸರಾಯಿಯಲ್ಲಿ. ಅಂದರೆ ರಾಷ್ಟಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದೆ ಇವರ ಜನ್ಮದಿನ. ಆದರೆ ಸಹಜವಾಗಿ ಅಕ್ಟೋಬರ್ 2 ಅಂದಾಕ್ಷಣ ಗಾಂಧೀಜಿ ಮತ್ತು ಗಾಂಧಿ ಜಯಂತಿ ಮಾತ್ರ ನೆನಪಾಗುತ್ತದೆ ವಿನಃ ಶಾಸ್ತ್ರೀಜೀ ನೆನಪಾಗುವುದಿಲ್ಲ. ಹಾಗಂತ ಗಾಂಧಿ ಜಯಂತಿಯ ನೆಪದಲ್ಲಿ ಶಾಸ್ತ್ರೀಯನ್ನು ಮರೆಯುತ್ತೇವೆ ಅಥವಾ ಗಾಂಧಿ ಹೆಸರಲ್ಲಿ ಶಾಸ್ತ್ರಿ ಮರೆಯಾಗಿದ್ದಾರೆ ಎಂದು ಅರ್ಥವಲ್ಲ. ಬಹುಶಃ ಬೇರೆ ಯಾವುದಾದರೂ ದಿನ ಶಾಸ್ತ್ರೀ ಹುಟ್ಟಿದ್ದರೆ ಅವರ ಜನ್ಮಜಯಂತಿಯೇ ಇರುತ್ತಿರಲಿಲ್ಲವೆನೋ!  ಆದರೆ ಈ ದಿನ ಜನಿಸಿದ್ದಕ್ಕೆ ಗಾಂಧಿ ಜೊತೆಗೆ ಇವರ ಭಾವಚಿತ್ರ ಇಟ್ಟು ಗೌರವ ಸಲ್ಲಿಸುತ್ತೇವೆ. ಇವರು ಒಂದು ಸಾಮಾನ್ಯ ಬಡ ಕುಟುಂಬದಿಂದ ಬಂದಂತವರು. ಇವರ ತಂದೆ ಶಿಕ್ಷಕರಾಗಿದ್ದರು, ಆದರೆ ಶಾಸ್ತ್ರಿ ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ನಂತರ ಚಿಕ್ಕಪ್ಪನ ಮನೆಯಿಂದ ಶಾಲೆಗೆ ಹೋಗುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರಪ್ರೇಮ ಮೈಗೂಡಿಸಿಕೊಂಡಿದ್ದ ಇವರು 16ನೇ ವಯಸ್ಸಿಗೆ ಶಿಕ್ಷಣ ನಿಲ್ಲಿಸಿ ಗಾಂಧೀಜಿಯವರ ಅಸಹಕಾರ ಚಳವಳಿಯಲ್ಲಿ ಭಾಗಿಯಾದರು. ನಂತರ ರಾಷ್ಟ್ರೀಯ ಹೋರಾಟಗಳಲ್ಲಿ ತಮ್ಮನ್ನು ತಾವು  ಸಕ್ರೀಯವಾಗಿ ತೊಡಗಿಸಿಕೊಂಡು, ಹಲವಾರು ಬಾರಿ ಸೆರೆವಾಸ ಅನುಭವಿಸಿದರು.   ಸ್ವಾತಂತ್ರ್ಯ ನಂತರ ಉತ್ತರ ಪ್ರದೇಶ ಸರ್ಕಾರದಲ್ಲಿ ಪೋಲೀಸ್ ಖಾತೆಯನ್ನು ವಹಿಸಿಕೊಂಡರು. 1951ರಲ್ಲಿ  ಲೋಕಸಭೆಗೆ ಆಯ್ಕೆಯಾಗಿ ರೈಲ್ವೆ ಖಾತೆಯನ್ನು ವಹಿಸಿಕೊಂಡರು. ಆದರೆ ಅವರ ಅವಧಿಯಲ್ಲಿ ಆದ ಒಂದು ರೈಲು ಅಪಘಾತಕ್ಕೆ ವೈಯಕ್ತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿದರು. ಹತ್ತಾರು ಹಗರಣ, ಭ್ರಷ್ಟಾಚಾರ ಪ್ರಕರಣಗಳಿದ್ದರು ಅಧಿಕಾರದಲ್ಲೇ ಮುಂದುವರೆಯುವ ಇವತ್ತಿನ ಅನೇಕ ರಾಜಕಾರಣಿಗಳು ಮತ್ತು ಅಧಿಕಾರಿಗಳು ಶಾಸ್ತ್ರೀಜೀಯವರ ವ್ಯಕ್ತಿತ್ವ ಅರಿಯಬೇಕು. ನಂತರ ಮತ್ತೆ ಕ್ಯಾಬಿನೆಟ್ ಪ್ರವೇಶಿಸಿದ ಇವರು ಸಾರಿಗೆ ಮಂತ್ರಿಯಾಗಿ, ನಂತರ 1961ರಲ್ಲಿ ಗೃಹ ಸಚಿವರಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ.    ನೆಹರು ನಿಧನದ ನಂತರ 1964 ಜೂನ್ 9 ರಂದು ಭಾರತದ 2ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಪ್ರಧಾನಿಯಾಗಿ 17 ತಿಂಗಳ ಅವಧಿಯಲ್ಲಿ ಅವರು ದೇಶಕ್ಕೆ ಮಾಡಿದ ಸೇವೆ ಅಪೂರ್ವವಾದುದು. ಅವರು ಪ್ರಧಾನಿಯಾದಾಗಲು ಕೂಡ ಅವರ ಬಳಿ ಸ್ವಂತ ಕಾರಿರಲಿಲ್ಲ. ನಂತರ ಮನೆಯವರ ಒತ್ತಾಯದ ಮೇರೆಗೆ 12,000 ರೂಪಾಯಿಗಳ ಫಿಯಟ್ ಕಾರೊಂದನ್ನು ಖರೀದಿಸಿದರು. ಆಗ ಅವರ ಬಳಿ ಅಷ್ಟು ಹಣವಿಲ್ಲದ ಕಾರಣ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ 5,000 ರೂಪಾಯಿಗಳ ಸಾಲವನ್ನು ಪಡೆದುಕೊಂಡರು. ಶಾಸ್ತ್ರೀ ಸಾವಿನ ನಂತರ ಬ್ಯಾಂಕ್ ಅವರ ಸಾಲವನ್ನು ಮನ್ನಾ ಮಾಡಿತು. ಆದರೆ ಅವರ ಪತ್ನಿ ಲಲಿತಾ ಶಾಸ್ತ್ರಿ ಸಾಲವನ್ನು ಮರುಪಾವತಿಸಿದರು. ಇದು ಈ ದೇಶ ಮತ್ತು ಶಾಸ್ತ್ರೀ ಕುಟುಂಬದ ಪ್ರಾಮಾಣಿಕತೆಗೆ ಹಿಡಿದ ಕೈಗನ್ನಡಿ.    ನಿಜವಾಗಿಯೂ ಸ್ವಾಭಿಮಾನ ಎಂಬ ಪದಕ್ಕೆ ಅರ್ಥವೇ ಶಾಸ್ತ್ರೀಜೀ. ಸವಾಲುಗಳಿಂದ ಕೂಡಿದ್ದ ಅಂತಹ ಕಠಿಣ ಸಂದರ್ಭದಲ್ಲೂ ದೇಶದ ಗೌರವ ಉಳಿಸಿದ್ದರು. ಸ್ವಾವಲಂಬಿ ರಾಷ್ಟವನ್ನು ಕಟ್ಟುವ ಉದ್ದೇಶ ಅವರದ್ದು. ಇವತ್ತು ನಾವು ‘ಆತ್ಮ ನಿರ್ಭರ ಭಾರತ’ ಎಂದು ಹೇಳುತ್ತಿದ್ದೇವಲ್ಲ, ಈ ಚಿಂತನೆಯನ್ನು ಶಾಸ್ತ್ರೀಜೀ ಆವತ್ತೇ ಮಾಡಿದ್ದರು. ಕೈಗಾರಿಕೆ, ಕೃಷಿ, ಸೈನ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು. ‘ಕ್ಷೀರ ಕ್ರಾಂತಿ’  ಹೆಸರಿನಲ್ಲಿ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಲಿನ ಉತ್ಪಾದನೆಗೆ ಕಾರಣರಾದರು.        ಶಾಸ್ತ್ರೀ ಜೀವನದುದ್ದಕ್ಕೂ ಸರಳತೆ ಎಂಬ ಅಂಶವನ್ನು ಎಲ್ಲೂ ಮರೆಯಲಿಲ್ಲ. ಯಾವತ್ತೂ VVIP ಎಂಬ ಕಾರ್ಡನ್ನು  ತೋರಿಸಲಿಲ್ಲ. ಮಗನನ್ನು ಕಾಲೇಜಿಗೆ ಸೇರಿಸುವಾಗ  ಎಲ್ಲರಂತೆ ತಾವು ಸಹ  ಸರತಿ ಸಾಲಿನಲ್ಲಿ ನಿಂತಿರುತ್ತಿದ್ದರು. ದೇಶದ ಸಾಮಾನ್ಯ ಜನರೊಂದಿಗೆ ಅತಿಸಾಮಾನ್ಯರಾಗಿ ಶಾಸ್ತ್ರೀ ಬದುಕುತ್ತಿದ್ದರು.     ಶಾಸ್ತ್ರೀಜೀ ಪ್ರಧಾನಿಯಾದಾಗ ದೇಶದಲ್ಲಿ ನೂರಾರು ಸಮಸ್ಯೆಗಳಿದ್ದವು. ಅದನ್ನು ಅತ್ಯಂತ ಸಮರ್ಥವಾಗಿ ಎದುರಿಸಿದರು. ಒಂದೆಡೆ ಬಡತನ ಮತ್ತೊಂದೆಡೆ ಪಾಕಿಸ್ತಾನದ ಉಪಟಳ. ಪಾಕಿಸ್ತಾನ ಮತ್ತೆ 1965ರಲ್ಲಿ ಭಾರತದ ಮೇಲೆ ಯುದ್ಧ ಸಾರಿತು. ಕಠಿಣ ಪರಿಸ್ಥಿತಿಯಲ್ಲಿ ದೇಶದ ಸೈನಿಕರ ಜೊತೆ ನಿಂತ ಶಾಸ್ತ್ರೀ “ಜೈ ಜವಾನ್, ಜೈ ಕಿಸಾನ್” ಘೋಷಣೆ ಮೊಳಗಿಸಿದರು.  ಇದು ಭಾರತೀಯ ಸೈನಿಕರಲ್ಲಿ ಹೊಸ ಉತ್ಸಾಹ ತುಂಬಿತು. ಪಾಕಿಸ್ತಾನದ ದಾಳಿಗೆ ಪ್ರತಿದಾಳಿ ಮಾಡಲು ಭಾರತೀಯ ಸೈನ್ಯಕ್ಕೆ ಎಲ್ಲಾ ರೀತಿಯ ಸ್ವಾತಂತ್ರ್ಯ ಕೊಟ್ಟರು. ಆವಾಗಲೇ ಈ ದೇಶಕ್ಕೆ ಮತ್ತು ಹೊರ ಜಗತ್ತಿಗೆ ಶಾಂತಿ ಮಾನವನ ದಿಟ್ಟತನದ ಅರಿವಾಗಿದ್ದು. ಶಾಂತಿಗೆ ಭಂಗವಾದಾಗ ಶಾಸ್ತ್ರಿ ಸುಮ್ಮನೆ ಕೂರಲಿಲ್ಲ. ಬಹುಶಃ ಶಾಸ್ತ್ರಿ, ‘ಅಹಿಂಸೆ’ ಎಂಬ ಪದದ ಸ್ಪಷ್ಟವಾದ ಅರ್ಥವನ್ನು ಅರಿತಿದ್ದರು. ಅಹಿಂಸೆ ಎಂದರೆ ‘ಹಿಂಸಾ ನ ಕರೋ, ಹಿಂಸಾ ನ ಸಹೋ’ ಅಂದರೆ ಹಿಂಸೆಯನ್ನು ಮಾಡಬಾರದು ಮತ್ತು ಹಿಂಸೆಯನ್ನು ಸಹಿಸಿಕೊಳ್ಳಬಾರದು ಎಂದು. ಭಾರತದ ಈ ಅಹಿಂಸಾ ಸಿದ್ಧಾಂತವನ್ನು ಜಗತ್ತಿಗೆ ತೋರಿಸಿದರು. ಪರಿಣಾಮ ಭಾರತೀಯ ಸೈನ್ಯ ಲಾಹೋರ್ ವರೆಗೂ ನುಗ್ಗಿ ಪಾಕಿಸ್ತಾನಕ್ಕೆ ಉತ್ತರ ನೀಡಿತ್ತು. ಆದರೆ ನಾವು ಈ ಯುದ್ಧದ ಗೆಲುವನ್ನು ಮರೆತೇಬಿಟ್ಟಿದ್ದೇವೆ.     ಯುದ್ಧದ ಮಧ್ಯೆ ಅಮೇರಿಕಾ ಭಾರತಕ್ಕೆ ಯುದ್ಧವನ್ನು ನಿಲ್ಲಿಸುವಂತೆ ಒತ್ತಾಯ ಮಾಡಿತು. ಯುದ್ಧ ಮುಂದುವರೆಸಿದರೆ, ಭಾರತಕ್ಕೆ ಗೋಧಿಯ ರಫ್ತನ್ನು ನಿಲ್ಲಿಸುವುದಾಗಿ ಹೇಳಿತು. ಅದರೆ ಶಾಸ್ತ್ರೀ ಅಮೇರಿಕಾದ ಬೆದರಿಕೆಗೆ ಬಗ್ಗಲಿಲ್ಲ. ನಿಮ್ಮ ದೇಶ ಕಳಿಸುವ ಗೋಧಿಯನ್ನು ನಮ್ಮ ದೇಶದಲ್ಲಿ ಪ್ರಾಣಿಗಳು ಮೂಸಿ ನೋಡುವುದಿಲ್ಲ ಎಂದು ಉತ್ತರಿಸಿದರು. ಶಾಸ್ತ್ರಿ  ದೇಶಕ್ಕೋಸ್ಕರ ಪ್ರತಿನಿತ್ಯ ತಮ್ಮ ರಾತ್ರಿ ಊಟವನ್ನು ತ್ಯಜಿಸಿದರು. ನಂತರ ದೇಶದ ಜನರಲ್ಲಿ ಪ್ರತಿ ಸೋಮವಾರ ರಾತ್ರಿಯ ಊಟವನ್ನು ತ್ಯಜಿಸುವಂತೆ ಮನವಿ ಮಾಡಿಕೊಂಡರು. ಇದು ‘ಸೋಮವಾರದ ಉಪವಾಸ’ ಎಂದು ಪ್ರಸಿದ್ಧವಾಯಿತು. ದೇಶದ ಜನ ಶಾಸ್ತ್ರೀ ಮಾತಿಗೆ ಸಹಕರಿಸಿದರು.   ಭಾರತೀಯ ಸೈನ್ಯ ಲಾಹೋರ್ ಗೆ ನುಗ್ಗುತ್ತಿದ್ದಂತೆ ರಷ್ಯಾದ ನೇತ್ರತ್ವದಲ್ಲಿ, ತಾಷ್ಕೆಂಟ್ ನಲ್ಲಿ ಒಪ್ಪಂದ ಏರ್ಪಡಿಸಲಾಯಿತು. ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಪಾಕ್ ಪ್ರಧಾನಿ ಅಯ್ಯುಬ್ ಖಾನ್ ಒಪ್ಪಂದಕ್ಕೆ ಸಹಿ ಹಾಕಿದರು. ಮೊದಲೇ ತಯಾರಾಗಿದ್ದ ಒಡಂಬಡಿಕೆಗಳನ್ನು ನೋಡಿ ಶಾಸ್ತ್ರೀಜೀ ಸಹಿ ಹಾಕಲು ನಿರಾಕರಿಸಿದರೂ ಕೂಡ, ನಂತರ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಭಾರತೀಯ ಸೈನ್ಯ ಪ್ರಾಣ ಪಣಕ್ಕಿಟ್ಟು ಹೋರಾಡಿ ಗೆದ್ದ ಭಾಗವನ್ನೇ ಬಿಟ್ಟುಕೊಡಬೇಕಾಗಿ ಬಂತು. ಭಾರತೀಯ ಸೈನ್ಯ ಯುದ್ಧವನ್ನು ಗೆದ್ದರೂ ಕೂಡ, ಗೆಲುವನ್ನು ಉಳಿಸಿಕೊಳ್ಳಲಾಗಲಿಲ್ಲ. ಅದೇ ರಾತ್ರಿ, 11 ಜನವರಿ 1966 ರಂದು  ತಾಷ್ಕೆಂಟ್ ನಲ್ಲೇ ಲಾಲ್ ಬಹಾದ್ದೂರ್ ಶಾಸ್ತ್ರಿ ಅಸ್ತಂಗತರಾದರು. ಸರ್ಕಾರಿ ಮೂಲಗಳು ಶಾಸ್ತ್ರಿ ಹೃದಯಾಘಾತದಿಂದ ನಿಧನರಾದರು ಎಂದು ಹೇಳಿದವು. ಆದರೆ ದೇಶದ ಜನ ಮತ್ತು ಶಾಸ್ತ್ರಿ ಕುಟುಂಬ ಅದನ್ನು ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ನೇತಾಜಿಯಂತೆ ಶಾಸ್ತ್ರೀಜೀಯವರ ಸಾವು ನಿಗೂಢವಾಯಿತು. ಸರ್ಕಾರ ಈ ಕುರಿತಂತೆ ಸರಿಯಾದ ತನಿಖೆ ನಡೆಸಲೇ ಇಲ್ಲ. ಖ್ಯಾತ ಲೇಖಕ ಅನೂಜ್ ಧರ್ ‘YOUR PRIME MINISTER IS DEAD’  ಎಂಬ ತಮ್ಮ ಪುಸ್ತಕದಲ್ಲಿ ಶಾಸ್ತ್ರೀ ಸಾವಿನ ಸಂಶಯಗಳ ಕುರಿತಂತೆ ಅದ್ಭುತವಾಗಿ ವಿಶ್ಲೇಷಣೆ ಮಾಡಿದ್ದಾರೆ. ಒಟ್ಟಾರೆ ದೇಶ ಸತ್ಯವನ್ನು ಅರಿಯಬೇಕಿದೆ. ಶಾಸ್ತ್ರೀಜೀ ಅಂತ್ಯಕ್ಕೆ ನ್ಯಾಯ ಸಿಗಬೇಕಿದೆ. ಆದರೆ ಲಾಲ್ ಬಹದ್ದೂರ್ ಶಾಸ್ತ್ರೀಜೀಯವರ 17 ತಿಂಗಳ ಅಧಿಕಾರ, ಅವರ ವ್ಯಕ್ತಿತ್ವ, ಈ ದೇಶ ಎಂದಿಗೂ ಸ್ಮರಿಸಿಕೊಳ್ಳುವಂತದ್ದು. ************************************

‘ಶಾಂತಿ ಮಾನವ’ ಶಾಸ್ತ್ರಿ Read Post »

ಮಕ್ಕಳ ವಿಭಾಗ

ಕನ್ನಡ ಕಂದ

ಮಕ್ಕಳ ಪದ್ಯ ಕನ್ನಡ ಕಂದ ಮಲಿಕಜಾನ ಶೇಖ . ಕನ್ನಡ ನಾಡಿನ ಕಂದನು ನಾನುಕನ್ನಡವನ್ನೆ ಬೆಳಗುವೇನು..ಅ,ಆ,ಇ,ಈ ಎನ್ನುತ್ತಾ ನಾನುಕನ್ನಡವನ್ನೆ ಕಲಿಯುವೇನು. ಸಹ್ಯಾದ್ರಿಯ ಗಿರಿಕಂದರಗಳಕಾವೇರಿ ಕೃಷ್ಣೆ ತುಂಗೆ ತೀರದಲಿಶ್ರೀಗಂಧ ವನ್ಯಸಿರಿ ನಾಡಿನಲಿಸೌಗಂಧ ತುಂಬಿದ ಮಣ್ಣಿನಲಿಎಂದಿಗೂ ನಾನು ಮೆರೆಯುವೇನು.. ಹರಿಹರ ಕೃಷ್ಣರು ಕಟ್ಟಿದಚಾಲೂಕ್ಯ ಕದಂಬರು ಆಳಿದಚೆನ್ನಮ್ಮಾ ಓಬವ್ವಾ ಹೋರಾಡಿದವೀರರು ಧೀರರು ಮೆರೆದಿಹಶೌರ್ಯದ ಇತಿಹಾಸ ಕೇಳುವೇನು.. ಶರಣರು ದಾಸರು ಬದುಕಿದಸೂಫಿ ಸಂತರು ಬೆಳಗಿದಸತ್ಯ ಶಾಂತಿ ನಿತ್ಯ ನೀತಿಐಕ್ಯ ಮಂತ್ರ ಸಾರಿದಪಾವನ ನೆಲಕ್ಕೆ ನಮಿಸುವೇನು. ರನ್ನ ಪಂಪರ ಅಪಾರ ಪಾಂಡಿತ್ಯಕುವೆಂಪು ಬೇಂದ್ರೆಯ ಅಗಾಧ ಜ್ಞಾನದಿಜೆ.ಪಿ ಬಿಚಿ ಗಿರೀಶ ಕಂಬಾರರಭವ್ಯದ ಅಕ್ಷರ ಪಾಠವನುಕೇಳುತ ಓದುತ ನಲಿಯುವೇನು. ಎಲ್ಲೆ ಇರಲಿ ಹೇಗೆ ಇರಲಿಯಾರೆ ಇರಲಿ ಏನೇ ಬರಲಿಕನ್ನಡ ಬಾವುಟ ಹಾರಿಸುವೆಕನ್ನಡ ಡಿಂಡಿಂ ಬಾರಿಸುತಾಕನ್ನಡ ತೇರನು ಎಳೆಯು **************************

ಕನ್ನಡ ಕಂದ Read Post »

ಇತರೆ

ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – ೨೦೨೦

ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – ೨೦೨೦ ಬಿದಲೋಟಿ ರಂಗನಾಥ್ ಮತ್ತು ಡಾ. ಶೋಭಾ ನಾಯಕ್ ಗೆ ೨೦೨೦ ರ ಸಾಲಿನ ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ರಾಜ್ಯಮಟ್ಟದಲ್ಲಿ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿತ್ತು. ಈ ಸಲ ಒಟ್ಟು ೫೬ ಹಸ್ತಪ್ರತಿಗಳು ಬಂದಿದ್ದವು. ಕೊನೆಯ ಹಂತದಲ್ಲಿ ಅಂಕಗಳು ಸಮ ಬಂದ ಕಾರಣ ಇಬ್ಬರು ಕವಿಗಳ ಹಸ್ತಪ್ರತಿಗಳನ್ನು ಆಯ್ಕೆ ಮಾಡಲಾಗಿದೆ. ಉತ್ತರ ಕನ್ನಡ ಮೂಲದ ಶೋಭಾ ನಾಯಕ್ ರ ‘ಶಯ್ಯಾಗೃಹದ ಸುದ್ದಿಗಳು’ ಮತ್ತು ತುಮಕೂರು ಜಿಲ್ಲೆಯ ಮಧುಗಿರಿಯ ಬಿದಲೋಟಿ ರಂಗನಾಥರ ‘ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ’ ಹಸ್ತಪ್ರತಿಗಳು ಈ ಸಲದ ಕಾವ್ಯಪ್ರಶಸ್ತಿಗೆ ಆಯ್ಕೆಯಾಗಿವೆ. ಹಿರಿಯ ಕವಿಗಳಾದ ಸತೀಶ ಕುಲಕರ್ಣಿ ಮತ್ತು ಈಶ್ವರ್ ಹತ್ತಿ ತೀರ್ಪುಗಾರ ರಾಗಿದ್ದರು ವಿಜೇತ ಕವಿಗಳಿಬ್ಬರಿಗೂ ಪ್ರತ್ಯೇಕವಾಗಿ ೫,೦೦೦ ರೂ. ನಗದು ಬಹುಮಾನ ಮತ್ತು ಫಲಕಗಳನ್ನು ಡಿಸೆಂಬರ್ ತಿಂಗಳು ಕೊಪ್ಪಳದಲ್ಲಿ ನಡೆಯುವ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ವಿತರಿಸಲಾಗುವುದೆಂದುಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಮತ್ತು ತಳಮಳ ಪ್ರಕಾಶನದ ಪರವಾಗಿ ಮಹೇಶ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. **************************

ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – ೨೦೨೦ Read Post »

ಇತರೆ

ಕನ್ನಡ, ಕನ್ನಡವೇ ಆಗಿರಲಿ

ಗೌರಿ.ಚಂದ್ರಕೇಸರಿ. ಭಾಷೆಯ ಮೇಲೆ ಗಾಢವಾದ ಪ್ರಭಾವ ಬೀರುವ ಸಂಸ್ಕøತಿಯು ಭಾಷೆಯ ಹರಿವನ್ನು ಬದಲಾಯಿಸುತ್ತ ಹೋಗುತ್ತದೆ. ಕೊರಕಲಿನಗುಂಟ ನೀರು ಹರಿಯುವಂತೆ ಸಮಯ ಸಂದರ್ಭಕ್ಕೆ ತಕ್ಕಂತೆ ಹೊಸತನವನ್ನು ಪಡೆಯುತ್ತಲೇ ಹೋಗುತ್ತದೆ. 2500 ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ನಮ್ಮದು. ಬದಲಾವಣೆ ಆರೋಗ್ಯಕರವಾದದ್ದೇ. ಆದರೆ ಪರಕೀಯ ಶಬ್ದಗಳು ಕನ್ನಡದೊಡನೆ ಮಿಳಿತಗೊಂಡು ಹಾಡಿನ ರೂಪದಲ್ಲಿ ಕಿವಿಗೆ ಬೀಳುತ್ತಿದ್ದರೆ ಕೇಳಲು ಅಸಹನೀಯವೆನಿಸುತ್ತದೆ.      ತಳಹದಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಓದುವ ಇಂದಿನ ಮಕ್ಕಳು ಕನ್ನಡದ ಮೇಲೆ ಪ್ರಭುತ್ವವನ್ನು ಸಾಧಿಸಲು ಹೇಗೆ ಸಾಧ್ಯ? ಸರಳಗನ್ನಡದ ಎಷ್ಟೋ ಶಬ್ದಗಳ ಅರ್ಥವೇ ಗೊತ್ತಿಲ್ಲದ ಇಂದಿನ ಯುವಜನಾಂಗ ಕನ್ನಡ ಸಾಹಿತ್ಯವನ್ನು ಎಷ್ಟರ ಮಟ್ಟಿಗೆ ಅರ್ಥೈಸಿಕೊಳ್ಳಲು ಸಾಧ್ಯ? ಮನೋರಂಜನೆ ನೀಡುವಲ್ಲಿ ಅಗ್ರ ಸ್ಥಾನವನ್ನು ಹೊಂದಿರುವ ಸಿನಿಮಾ, ದೂರದರ್ಶನಗಳು ಇಂದಿನ ಯುವಜನಾಂಗದ ಆಶಯಕ್ಕೆ ಬದ್ಧರಾಗಿಬೇಕಾದ ಅನಿವಾರ್ಯತೆ ಬಂದೊದಗಿದೆ. ಅರ್ಥವಿಲ್ಲದ ಶಬ್ದಗಳು ಸಿನಿಮಾ ಸಾಹಿತ್ಯದಲ್ಲಿ ಜಾಗ ಪಡೆದು ಕನ್ನಡವೊಂದು ಕಲಬೆರಕೆ ಭಾಷೆಯಾಗಿ ಬೆಳೆಯುತ್ತಿದೆ. ವಿಪರ್ಯಾಸವೆಂದರೆ ಇಂತಹ ಹಾಡುಗಳೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತವೆ. ಬುದ್ಧಿಜೀವಿಗಳಾದ ಸಾಹಿತಿಗಳು, ಕವಿಗಳೂ ಇದಕ್ಕೆ ಒಗ್ಗಿ ಹೋಗಿದ್ದಾರೆ.      ಕನ್ನಡಕ್ಕೊಂದು ಹೊಸ ಕಾಯಕಲ್ಪ ಕೊಡುವ ಪ್ರಯತ್ನ ಎಂಬ ಯುವ ಜನಾಂಗದ ಅಂಬೋಣವನ್ನು ಹಿಂದಿನ ತಲೆಮಾರಿನವರು ಒಪ್ಪುವುದಾದರೂ ಹೇಗೆ? ಕನ್ನಡಕ್ಕೊಂದು ತನ್ನದೇ ಆದಂತಹ ಸೊಗಡಿದೆ. ಇಂಪು,ಕಂಪಿದೆ. ಕನ್ನಡದ ಗಂಧ ಗಾಳಿ ಇಲ್ಲದವರು ತಿಣುಕಾಡಿ ಬರೆಯುವ ಹಾಡುಗಳೇ ಇಂದು ಚಿತ್ರರಂಗದಲ್ಲಿ ಕೇಳಿಬರುತ್ತಿವೆ. ನಮ್ಮ ಅಕ್ಕ-ಪಕ್ಕದ ಮೂರ್ನಾಲ್ಕು ಭಾಷೆಯ ಶಬ್ದಗಳನ್ನು ಕಡ ಪಡೆದು ಒಂದು ಕವನವನ್ನು ಗೀಚಿ ಅದಕ್ಕೊಂದು ಕಿವಿಗಡಚಿಕ್ಕುವ ಸಂಗೀತವನ್ನು ಅಳವಡಿಸಿಬಿಟ್ಟರೆ, ಬೆಳಗಾಗುವುದರಲ್ಲಿ ಅದು ಚಿಕ್ಕ ಮಕ್ಕಳಾದಿಯಾಗಿ ಎಲ್ಲರ ಬಾಯಲ್ಲೂ ಕೇಳಿಬರುತ್ತದೆ.      ಹೊಸತನವನ್ನು ತರುವ ಹೆಸರಿನಲ್ಲಿ ಕನ್ನಡವನ್ನು ಕಂಗ್ಲೀಷ್ ಮಾಡುವುದಾಗಲಿ ಇಲ್ಲ, ಬೀದಿಯಲ್ಲಾಡುವ ಟಪೋರಿ ಭಾಷೆಯನ್ನು ಎತ್ತಿಕೊಂಡು ಕನ್ನಡಕ್ಕೆ ಸುರಿಯುವುದನ್ನು ಮಾಡಿದರೆ ಅದೊಂದು ಬರಹವಾಗಲಿ ಅಥವಾ ಹಾಡಾಗಲಿ ಆಗಲಾರದು. ಕನ್ನಡವನ್ನು ಕನ್ನಡ ಭಾಷೆಯನ್ನಾಗಿಯೇ ಉಳಿಸುವದು ಇಂದಿನ ಪೀಳಿಗೆಯ ಜವಾಬ್ದಾರಿಯಾಗಿದೆ. ಅನೇಕ ಪ್ರಕಾರಗಳಲ್ಲಿರುವ ಕನ್ನಡದ ಕೃತಿಗಳನ್ನು ಓದಿದಾಗ ಕನ್ನಡದ ಶ್ರೀಮಂತಿಕೆಯ ಅರಿವಾಗುತ್ತದೆ, ನಮ್ಮ ಶಬ್ದ ಸಂಗ್ರಹ ಬೆಳೆಯುತ್ತದೆ. ಹೊರಹೊಮ್ಮುವ ಭಾವನೆಗಳು ಕನ್ನಡಮಯವಾಗಿರುತ್ತವೆ ಆಗ ಮಾತ್ರ ಕನ್ನಡ ಭಾಷೆ ಕನ್ನಡವಾಗಿರಲು ಸಾಧ್ಯ. *******                                                                                    .                         .

ಕನ್ನಡ, ಕನ್ನಡವೇ ಆಗಿರಲಿ Read Post »

ಇತರೆ, ಜೀವನ

ಭೂತಾಯಿಗೆ ನಮನ

ಲೇಖನ ಭೂತಾಯಿಗೆ ನಮನ ರಾಘವೇಂದ್ರ ಈ ಹೊರಬೈಲು ಇವತ್ತು ರಾತ್ರಿಯೆಲ್ಲಾ ಎಚ್ರಾಗಿರ್ಬೇಕು, ಮಲಗ್ಬಿಟ್ಟಿಯೋ. ರಾತ್ರಿಯೆಲ್ಲ ಹಬ್ಬ ಮಾಡ್ಬೇಕು, ಹಬ್ಬದಾಗೆ ಎಚ್ರಾಗಿರ್ದೆ  ಹಂಗೆ ಮಲ್ಗಿದ್ರೆ ದೇವ್ರು ಶಾಪ ಕೊಡ್ತಾನೆ ಕಣೋ” ನಾನು ಚಿಕ್ಕ ಹುಡುಗನಾಗಿದ್ದಾಗ ನಮ್ಮಮ್ಮನಾಡಿದ ಮಾತುಗಳು ಎಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಕುಳಿತಿವೆ. “ಇದ್ಯಾವ ಹಬ್ಬನಪ್ಪ, ರಾತ್ರಿಯೆಲ್ಲ ಎಚ್ರಾಗಿರ್ಬೇಕಂತೆ” ಎಂದು ಗೊಣಗುಟ್ಟುತ್ತಾ ತೂಕಡಿಸುತ್ತಾ, ಅಮ್ಮನೋ ಅಪ್ಪನೋ ಹೇಳ್ತಾಯಿದ್ದ ಸಣ್ಣಪುಟ್ಟ ಕೆಲಸಗಳನ್ನು ಒಲ್ಲದ ಮನಸ್ಸಿನಿಂದ ನಿದ್ರೆಗಣ್ಣಿನಲ್ಲೇ ಮಾಡುತ್ತಾ, ಕೆಲವೊಮ್ಮೆ ಹೆಚ್ಚು ಕಡಿಮೆಯಾಗಿ, ಬೈಸಿಕೊಳ್ಳುತ್ತಾ ರಾತ್ರಿ ಕಳೆಯುತ್ತಿದ್ದ ಆ ದಿನಗಳನ್ನು ಮತ್ತು ಮಾರನೆ ದಿನ ಬೆಳ್ಳಂಬೆಳಗ್ಗೆ ಹೊಲದಲ್ಲಿ “ಅಚ್ಚಂಬ್ಲಿ ಅಳಿಯಂಬ್ಲಿ ಮುಚ್ಕಂಡ್ ತಿನ್ನೆ ಭೂಮ್ತಾಯಿ” ಎಂದು ಬೆಳೆಗಳಿಂದ ತುಂಬಿದ ಹೊಲದಲ್ಲಿ ಏನನ್ನೋ ಬೀರುತ್ತಾ, ಕೂಗುತ್ತಾ ಸಾಗುತ್ತಿದ್ದ ಅಪ್ಪನ ಧ್ವನಿಯನ್ನು ಮರೆಯಲು ಸಾಧ್ಯವೇ? ಸಾಂಸ್ಕೃತಿಕವಾಗಿ ಭಾರತವು ವಿಶ್ವದಲ್ಲೇ ಅತೀ ಶ್ರೀಮಂತ ರಾಷ್ಟ್ರ. ಹಬ್ಬ- ಹರಿದಿನಗಳ ವಿಷಯಕ್ಕೆ ಬಂದಿದ್ದೇ ಆದರೆ ನಮ್ಮಷ್ಟು ವಿವಿಧತೆ ಮತ್ತು ವಿಶೇಷತೆಯನ್ನು ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಒಂದೊಂದು ಹಬ್ಬವೂ ಅದರದೇ ವಿಶೇಷತೆ ಮತ್ತು ಪ್ರಾಮುಖ್ಯತೆಯಿಂದಾಗಿ ಗಮನ ಸೆಳೆಯುತ್ತದೆ. ಒಂದು ಕಾಲದಲ್ಲಿ ಭಾರತ ದೇಶದ ಹಬ್ಬಗಳೆಂದರೆ ಅವು ಭಕ್ತಿ, ಸಂಸ್ಕೃತಿ, ಬೆರೆಯುವಿಕೆ, ಸಂತೋಷಗಳ ಸಮ್ಮಿಲನವಾಗಿತ್ತು. ನಮ್ಮ ತಾತ ಮುತ್ತಾತಂದಿರೆಲ್ಲರೂ ಹಬ್ಬಗಳನ್ನು ಒಂದು ಭಯಕ್ಕಾಗಿ, ಭಕ್ತಿಗಾಗಿ, ಎಲ್ಲರ ಒಳಿತಿಗಾಗಿ ಗಾಂಭೀರ್ಯದಿಂದ ಆಚರಿಸುತ್ತಿದ್ದರು. ಆದರೆ ಇಂದು ಎಲ್ಲಾ ಬುಡ ಮೇಲಾಗಿದೆ. ಉದಾಹರಣೆಗೆ ಹೇಳಬೇಕೆಂದರೆ, ಗಣೇಶನ ಹಬ್ಬ, ದೀಪಾವಳಿ, ಹೋಳಿ ಮುಂತಾದವು ತಮ್ಮ ಮೂಲ ಅರ್ಥ ಕಳೆದುಕೊಂಡು ಅನರ್ಥದತ್ತ ಸಾಗುತ್ತಿವೆ. ಭಯ-ಭಕ್ತಿಯಿಂದ, ನಿರ್ಮಲ ಮನಸ್ಸಿನಿಂದ ಆಚರಿಸುತ್ತಿದ್ದ ಗಣೇಶನ ಹಬ್ಬ ಇಂದು ಹೊಡೆದಾಟ, ಕಿತ್ತಾಟದ ಹಬ್ಬವಾಗಿದೆ. ಯಾರೂ ತಪ್ಪಾಗಿ ಭಾವಿಸದೇ ಸೂಕ್ಷ್ಮವಾಗಿ ಗಮನಿಸಿದ್ದೇ ಆದರೆ, ಹಲವೆಡೆ ಗಣೇಶನ ಹಬ್ಬದಲ್ಲಿ ಗಣೇಶನೇ ಕಾಣೆಯಾಗಿ, ಅಶ್ಲೀಲ ಆರ್ಕೆಸ್ಟ್ರಾ, ಕುಡಿತ, ಕುಣಿತ, ಐಟಂ ಸಾಂಗುಗಳದ್ದೇ ಮೆರವಣಿಗೆ ನಡೆಯುತ್ತಿದೆ. ರಾಷ್ಟ್ರ ಕವಿ ಕುವೆಂಪುರವರ “ಕಟ್ಟಕಡೆಯಲಿ ದೇವರ ಗುಡಿಯಲಿ ಪೂಜಾರಿಯೇ ದಿಟದ ನಿವಾಸಿ ದೇವರೇ ಪರದೇಸಿ” ಎಂಬ ಮಾತಿನಂತೆ “ಕಟ್ಟಕಡೆಯಲಿ ಗಣೇಶನ ಹಬ್ಬದಲಿ ಆರ್ಕೆಸ್ಟ್ರಾ ಐಟಂ ಸಾಂಗುಗಳು, ಕುಡುಕರ ಹುಚ್ಚು ಕುಣಿತವೇ ದಿಟದ ನಿವಾಸಿ, ಗಣೇಶನೇ ಪರದೇಸಿ” ಅಲ್ವಾ? ದೀಪಗಳಿಂದ ಅಲಂಕೃತವಾಗಿ ಮನಸ್ಸಿನ ದುಃಖ ಕಳೆದು ಎಲ್ಲರ ಬಾಳಿಗೂ ಹರಷದ ಬೆಳಕನ್ನು ನೀಡುವಂತ ಹಬ್ಬವಾಗಲಿ ಎಂದು ಆಚರಿಸುತ್ತಿದ್ದ ‘ದೀಪಾವಳಿ ಹಬ್ಬ’ ಇಂದು ತನ್ನ ಅರ್ಥವನ್ನೇ ಕಳೆದುಕೊಂಡು ಪಟಾಕಿ ಮುಂತಾದ ಇಡೀ ಜೀವಸಂಕುಲಕ್ಕೇ ಕಂಟಕಪ್ರಾಯವಾದ ಸಿಡಿಮದ್ದುಗಳ ಸುಡುವಿಕೆಯ ಆಡಂಬರದಲ್ಲಿ ಮುಳುಗಿಹೋಗಿದೆ. ಹೆಚ್ಚು ಸಿಡಿಮದ್ದು ಸುಟ್ಟವನದೇ ಅದ್ದೂರಿ ದೀಪಾವಳಿ ಆಚರಣೆ ಎಂಬಂತಾಗಿರುವುದು ಶೋಚನೀಯ. ಇಂಥ ಆಡಂಬರದ, ಅಂತಸ್ತಿನ ಪ್ರತೀಕದಂತಿರುವ ಹಬ್ಬಗಳೆಂದರೆ ಮೊದಲಿನಿಂದಲೂ ನನಗೆ ಅದೇನೋ ಅಸಡ್ಡೆ. ಆದರೆ ಇಂತಹ ಹಬ್ಬಗಳ ನಡುವೆಯೇ ಅಂದು ನನ್ನ ನಿದ್ರೆಗೆಡಿಸಿ, ಅಮ್ಮ- ಅಪ್ಪನ ಬೈಗುಳಕ್ಕೆ ಎಡೆಮಾಡಿದ್ದ ಹಬ್ಬ, ಸದ್ದು-ಗದ್ದಲವಿಲ್ಲದೆ, ಇಡೀ ಜೀವಸಂಕುಲದ ತಾಯಿ, ನಿಜ ದೇವತೆ ಭೂಮಿತಾಯಿಯನ್ನು ಪೂಜಿಸುವ ‘ಭೂಮಿ ಹುಣ್ಣಿಮೆ’ ಇಂದಿಗೂ ಅರ್ಥವತ್ತಾಗಿ ನಡೆಯುತ್ತಿರುವ ಹಬ್ಬ. ನಗರ ಪ್ರದೇಶದ ಅದೆಷ್ಟೋ ಜನರಿಗೆ ಅರಿವೂ ಇರದ, ಹಳ್ಳಿಗಾಡಿನ ರೈತಾಪಿ ವರ್ಗದವರು ಆಚರಿಸಿಕೊಂಡು ಬರುತ್ತಿರುವ ಪಕ್ಕಾ ಗ್ರಾಮೀಣ ಹಬ್ಬ. ಗಣೇಶನ ಹಬ್ಬವಾದ ಹೆಚ್ಚು ಕಡಿಮೆ ಒಂದು ತಿಂಗಳ ಅಂತರದಲ್ಲಿ ಬರುವ ಹುಣ್ಣಿಮೆಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಭೂಮಿ ಹುಣ್ಣಿಮೆಯನ್ನು ‘ಸೀಗೆ ಹುಣ್ಣಿಮೆ’ ಎಂದೂ ಕರೆಯಲಾಗುತ್ತದೆ. ಭತ್ತ, ಜೋಳ, ಅಡಿಕೆ ಮುಂತಾದ ಬೆಳೆ ತೆನೆಬಿಡುವ ಸಮಯವಿದು. ಅಂದರೆ ಬೆಳೆಗಳು ಗರ್ಭ ಧರಿಸುವ ಕಾಲ. ಅಂದರೆ ಭೂತಾಯಿಯು ಗರ್ಭವತಿಯಾಗುವ ಸುಂದರ ಗಳಿಗೆ. ಬೆಳೆಗಳನ್ನೇ ಗರ್ಭ ಧರಿಸಿದ ಭೂತಾಯಿಯೆಂಬ ಭಕ್ತಿಯಿಂದ ಪೂಜಿಸುವ ನಮ್ಮ ಹಳ್ಳಿಗರು ಭತ್ತದ ಸಸಿಗೋ ಅಥವಾ ಅಡಕೆ ಗಿಡಕ್ಕೋ ಅಥವಾ ಜೋಳದ ಗಿಡಕ್ಕೋ ಅಥವಾ ನಾವು ಬೆಳೆದ ಯಾವುದೋ ಬೆಳೆಗೋ ಸೀರೆ ಉಡಿಸಿ, ಹೂವಿನ ಹಾರ ಹಾಕಿ, ತಾಳಿಯನ್ನು ಕಟ್ಟಿ ಹೆಣ್ಣಿನಂತೆ ಸಿಂಗಾರ ಮಾಡಿ, ಹೊಲಗಳಲ್ಲಿ, ಊರುಗಳಲ್ಲಿ ಸಿಗುವ ನಾನಾ ತರದ ಸೊಪ್ಪು, ತರಕಾರಿ, ಗೆಡ್ಡೆ-ಗೆಣಸುಗಳನ್ನು ಹಿಂದಿನ ದಿನವೇ ತಂದು (ಸೊಪ್ಪು ಹೆರಕುವ ಶಾಸ್ತ್ರ ಎಂಬುದು ಅದರ ಹೆಸರು), ಇಡೀ ರಾತ್ರಿ, ಮನೆಮಂದಿಯೆಲ್ಲಾ ಎಚ್ಚರವಿದ್ದು, ಒಂದು ರೀತಿಯ ಜಾಗರಣೆಯನ್ನೇ ಆಚರಿಸಿ, ಬಗೆಬಗೆಯ ಅಡುಗೆ ಮಾಡಿ, ವಿಶೇಷವಾದ ಖಾದ್ಯ ತಯಾರಿಸಿ, ಸೂರ್ಯ ಉದಯಿಸುವ ಮುನ್ನವೇ ಮಾಡಿದ ಖಾದ್ಯ, ಪೂಜಾ ಪರಿಕರಗಳನ್ನು ತೆಗೆದುಕೊಂಡು, ಹೊಲಕ್ಕೆ ತೆರಳಿ, ಸಿಂಗರಿಸಿದ ಸಸಿಗೆ ನಾನಾತರಹದ ಖಾದ್ಯಗಳನ್ನು ಎಡೆಯಿಟ್ಟು, ಪೂಜಿಸಿ, ನಂತರ ಹೊಲದಲ್ಲಿರುವ ಬೆಳೆಗಳ ಮೇಲೆ ‘ಅಚ್ಚಂಬಲಿ’ (ಬೆಳೆಗಳ ಮೇಲೆ ಬೀರಲು ತಯಾರಿಸುವ ವಿಶೇಷ ಖಾದ್ಯ) ಬೀರುವುದರ ಮೂಲಕ ‘ಬಯಕೆ ಶಾಸ್ತ್ರವನ್ನು’ ಮಾಡುತ್ತಾರೆ. ಆಮೇಲೆ ಮನೆಮಂದಿಯೆಲ್ಲ ಹೊಲದಲ್ಲಿಯೇ ಊಟಮಾಡಿಕೊಂಡು ವಾಪಾಸಾಗುವ, ಭೂತಾಯಿಯನ್ನು ಭಕ್ತಿಪೂರ್ವಕವಾಗಿ ಪೂಜಿಸುವ ಮನಮುಟ್ಟುವ ಹಬ್ಬ . ಹೀಗೆ ಆಚರಿಸುವ ಈ ವಿಶೇಷವಾದ ಹಬ್ಬ ಮನೆ-ಮನೆಯ ಹಬ್ಬವಾಗುವುದರ ಬದಲು ಎಲ್ಲೋ ಒಂದಿಷ್ಟು ಗ್ರಾಮಗಳಿಗೆ ಸೀಮಿತವಾಗಿರುವುದು ದುರಂತ. ಬರುಬರುತ್ತಾ ಜನರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಾ, ಕೃಷಿ ಜಮೀನು ಕೂಡಾ ದೊಡ್ಡ ದೊಡ್ಡ ಕಟ್ಟಡಗಳಿಗೆ ಜಾಗ ಬಿಟ್ಟುಕೊಟ್ಟು, ತಮ್ಮ ವಿಸ್ತಾರವಾದ ಹರವನ್ನು ಕಳೆದುಕೊಂಡಿವೆ. ಹಿಂದಿನ ದಿನಗಳ ನಿಷ್ಠೆ ಇಂದು ಈ ಹಬ್ಬದಲ್ಲೂ ಕಡಿಮೆಯಾಗುತ್ತಿರುವುದು ಸತ್ಯ. ಆದರೆ ಇಂತಹ ವಿಶೇಷ ಮತ್ತು ಭೂತಾಯಿಯನ್ನು ಪೂಜಿಸುವ ಹಬ್ಬವು ಸರ್ವರ ಹಬ್ಬವಾಗಲಿ. ಅದರ ಜೊತೆಗೆ ಅರ್ಥ ಕಳೆದುಕೊಂಡು ಎತ್ತೆತ್ತಲೋ ಸಾಗುತ್ತಿರುವ ಉಳಿದ ಹಬ್ಬಗಳೂ ಅರ್ಥಪೂರ್ಣವಾಗಿ ಭಕ್ತಿಯ, ಸ್ನೇಹದ, ಸಂಬಂಧದ, ಬೆರೆಯುವಿಕೆಯ ಧ್ಯೋತಕವಾಗಲಿ, ಅದರ ಮೂಲಕ ವೈವಿಧ್ಯಮಯ ಸಂಸ್ಕ್ರತಿಯ ನಮ್ಮ ದೇಶ ಸಾಂಸ್ಕೃತಿಕವಾಗಿ ಎಲ್ಲೆಲ್ಲೂ ರಾರಾಜಿಸಲಿ ಎಂಬುದೊಂದೇ ಆಶಯ. ************************************

ಭೂತಾಯಿಗೆ ನಮನ Read Post »

ಇತರೆ

ಉಪಯೋಗಿಸೋಣ, ಉಳಿಯೋಣ

ಲೇಖನ ಉಪಯೋಗಿಸೋಣ, ಉಳಿಯೋಣ ಶಾಂತಿವಾಸು ನಮ್ಮ ದೇಶದ ಪ್ರತಿ ರಾಜ್ಯವೂ ಅದರದೇ ಆದ ವೈಶಿಷ್ಟ್ಯ ಹಾಗೂ ಹಲವಾರು ಪದ್ಧತಿಯ ಆಚರಣೆಗಳು ಇರುವಂತೆ ನಮ್ಮ ಕರ್ನಾಟಕದ ನೆಲದ ಮೇಲಿನ ಪ್ರತಿಯೊಂದು ಪಂಗಡಗಳಿಗೆ, ಜಾತಿಗಳಿಗೆ, ಪ್ರಾಣಿಗಳು, ಜಾನುವಾರುಗಳಿಗೆ, ವಸ್ತುಗಳಿಗೆ ಹೀಗೆ ಎಲ್ಲಕ್ಕೂ ಪ್ರತ್ಯೇಕ ಹಬ್ಬಗಳಿವೆ. ಬೇರೆ ಬೇರೆ ಪ್ರದೇಶಗಳು ಹಾಗೂ ರಾಜ್ಯಗಳಿಂದ ಜೀವನವನ್ನರಸಿ ಬಂದು ನೆಲೆ ಕಂಡುಕೊಂಡ ಲಕ್ಷಾಂತರ ಜನರ ನೆಮ್ಮದಿಯ ನಮ್ಮ ಕರುನಾಡು, ಬಂದವರು ನಮ್ಮವರೇ ಎನ್ನುವ ಔದಾರ್ಯ ಮೆರೆದು, “ಬದುಕು, ಬದುಕಲು ಬಿಡು” ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ವಿಭಿನ್ನ ಸಂಪ್ರದಾಯವನ್ನಪ್ಪಿದ ಹೃದಯವಂತರ ನೆಲೆಬೀಡು. ಎರಡು ಸಾವಿರ ವರ್ಷಗಳಷ್ಟು ಹಳೆಯ ಭಾಷೆ ಹಾಗೂ ಸಂಸ್ಕೃತಿಯ ಬುನಾದಿ ಹೊಂದಿದ ನಮ್ಮ ಕನ್ನಡ ಭಾಷೆಯು ಸಾಮಾನ್ಯವಾಗಿ ಅಲುಗಾಡಿಸಲಾರದಷ್ಟು ಭದ್ರವಾಗಿದೆ ಎನ್ನುವುದು ಅತಿಶಯೋಕ್ತಿ ಎನಿಸುವುದಿಲ್ಲ. 65ನೇ ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ನಾವು ನಮ್ಮ ಕರ್ನಾಟಕವು ಕಂಡ ಮೊದಲುಗಳ ಕಡೆ ಗಮನ ಹರಿಸದಿದ್ದರೆ ಅದು ಕನ್ನಡವನ್ನೇ ಕಡೆಗಣಿಸಿದಂತೆ ಎಂದು ನನ್ನ ಭಾವನೆ. ಏಕೆಂದರೆ ಶತಶತಮಾನಗಳಿಂದ ಒಂದೊಂದೇ ಹೆಜ್ಜೆಯಿಟ್ಟು ಲೋಕವೇ ಕರ್ನಾಟಕದತ್ತ ಹೆಮ್ಮೆಯಿಂದ ತಿರುಗಿ ನೋಡುವಂತೆ ಮಾಡಿರುವುದರಲ್ಲಿ ಹಾಗೂ ಕರ್ನಾಟಕಕ್ಕೆ ಒಂದು ಪ್ರತ್ಯೇಕ ಸ್ಥಾನವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂಥ ಮೊದಲುಗಳೊಂದಿಗೆ ಕರ್ನಾಟಕ ಕನ್ನಡ ಭಾಷಾ ಸಾಹಿತ್ಯವನ್ನು ಉತ್ತುಂಗಕ್ಕೇರಿಸಿದ ಮಹನೀಯರ ಹಾಗೂ ಅವರ ಗ್ರಂಥಗಳ ಹೆಸರು, ಸಾಧನೆಗಳ ದೊಡ್ಡ ಪಟ್ಟಿಯೇ ಇದೆ.   1. ಕನ್ನಡದ ಮೊದಲ ದೊರೆ -ಮಯೂರವರ್ಮ 2. ಕನ್ನಡದ ಮೊದಲ ಕವಿ -ಪಂಪ 3. ಕನ್ನಡದ ಮೊದಲ ಶಾಸನ – ಹಲ್ಮಿಡಿ ಶಾಸನ 4. ಕನ್ನಡದ ತ್ರಿಪದಿ ಛಂದಸ್ಸಿನ ಮೊದಲ ಬಳಕೆ – ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ 5. ಕನ್ನಡದ ಮೊದಲ ಲಕ್ಷಣ ಗ್ರಂಥ – ಕವಿರಾಜಮಾರ್ಗ 6. ಕನ್ನಡದ ಮೊದಲ ನಾಟಕ – ಮಿತ್ರವಿಂದ ಗೋವಿಂದ 7. ಕನ್ನಡದ ಮೊದಲ ಮಹಮ್ಮದೀಯ ಕವಿ – ಶಿಶು ಸಂತ ಶಿಶುನಾಳ ಶರೀಫ 8. ಕನ್ನಡದ ಮೊದಲ ಕವಿಯತ್ರಿ – ಅಕ್ಕಮಹಾದೇವಿ 9. ಕನ್ನಡದ ಮೊದಲ ಸ್ವತಂತ್ರ  ಸಾಮಾಜಿಕ ಕಾದಂಬರಿ – ಇಂದಿರಾಬಾಯಿ 10. ಕನ್ನಡದ ಮೊದಲ ಪತ್ತೇದಾರಿ ಕಾದಂಬರಿ – ಚೋರಗ್ರಹಣ ತಂತ್ರ 11.ಕನ್ನಡದ ಮೊದಲ ಛಂದೋಗ್ರಂಥ – ಛಂದೋಂಬುದಿ (ನಾಗವರ್ಮ) 12. ಕನ್ನಡದ ಮೊದಲ ಸಾಮಾಜಿಕ ನಾಟಕ – ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ 13. ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ – ಜಾತಕ ತಿಲಕ 14. ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ – ವ್ಯವಹಾರ ಗಣಿತ 15. ಕನ್ನಡದ ಮೊದಲ ಕಾವ್ಯ- ಆದಿಪುರಾಣ 16. ಕನ್ನಡದ ಮೊದಲ ಕಾವ್ಯ – ವಡ್ಡಾರಾಧನೆ 17. ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ – ಗ್ರಾಮರ್ ಆಫ್ ದಿ ಕನ್ನಡ ಲ್ಯಾಂಗ್ವೇಜ್ 18. ಕನ್ನಡದ ಮೊದಲ ಪತ್ರಿಕೆ – ಮಂಗಳೂರ ಸಮಾಚಾರ 19. ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು – ಚಂದ್ರರಾಜ 20. ಕನ್ನಡದಲ್ಲಿ ಮೊದಲು ಕಥೆ ಬರೆದವರು – ಪಂಜೆ ಮಂಗೇಶರಾಯರು 21. ಕನ್ನಡದ ಮೊದಲ ಪ್ರೇಮ ಗೀತೆಗಳ ಸಂಕಲನ – ಒಲುಮೆ 22. ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು – ಎಚ್. ವಿ. ನಂಜುಂಡಯ್ಯ 23. ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ – ಆರ್. ನರಸಿಂಹಾಚಾರ್ 24. ಕನ್ನಡದ ಮೊದಲ ವಚನಕಾರರು –  ದೇವರ ದಾಸಿಮಯ್ಯ 25. ಹೊಸಗನ್ನಡದ ಮೊದಲ ಮಹಾಕಾವ್ಯ – ಶ್ರೀ ರಾಮಾಯಣ ದರ್ಶನಂ 26. ಪಂಪ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಕುವೆಂಪು 27. ಕನ್ನಡದ ಮೊದಲ ಕನ್ನಡ ಇಂಗ್ಲಿಷ್ ನಿಘಂಟು ರಚಿಸಿದವರು – ಆರ್. ಎಫ್. ಕಿಟೆಲ್ 28. ಕರ್ನಾಟಕದ ಮೊಟ್ಟ ಮೊದಲ ಸಂಕಲನ ಗ್ರಂಥ – ಸೂಕ್ತಿ ಸುಧಾರ್ಣವ 29.  ಮೊದಲ ಅಖಿಲ ಭಾರತ ಸಾಹಿತ್ಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ – ಬೆಂಗಳೂರು (1915) 30. ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ – ಕುವೆಂಪು 31. ಕನ್ನಡದ ಮೊದಲ ವಿಶ್ವಕೋಶ – ವಿವೇಕ ಚಿಂತಾಮಣಿ 32. ಕನ್ನಡದ ಮೊದಲ ವೈದ್ಯ ಗ್ರಂಥ – ಗೋವೈದ್ಯ 33. ಕನ್ನಡದ ಮೊದಲ ಪ್ರಾಧ್ಯಾಪಕರು – ಟಿ.ಎಸ್ .ವೆಂಕಣ್ಣಯ್ಯ 34. ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ – ಮಂದಾನಿಲ ರಗಳೆ 35. ಕನ್ನಡದ ಮೊದಲ ಹಾಸ್ಯ ಪತ್ರಿಕೆ – ವಿಕಟ ಪ್ರತಾಪ 36. ಕನ್ನಡದ ಮೊದಲ ವೀರಗಲ್ಲು ಶಾಸನ – ತಮ್ಮಟಗಲ್ಲು ಶಾಸನ 37. ಕನ್ನಡದ ಮೊದಲ ಹಾಸ್ಯ ಲೇಖಕಿ –  ಟಿ .ಸುನಂದಮ್ಮ ಜ್ಞಾನಪೀಠ ಪ್ರಶಸ್ತಿ ಪಡೆದು, ಕನ್ನಡದ ಹೆಸರನ್ನು ಉತ್ತುಂಗಕ್ಕೇರಿಸಿದ  ಮಹನೀಯರು 1. ಕುವೆಂಪು, 2. ದ.ರಾ. ಬೇಂದ್ರೆ 3. ಶಿವರಾಮ ಕಾರಂತರು 4.ಮಾಸ್ತಿ ವೆಂಕಟೇಶ ಅಯ್ಯಂಗಾರ್ 5.ವಿ.ಕೃ. ಗೋಕಾಕರು 6. ಯು. ಆರ್. ಅನಂತಮೂರ್ತಿ 7. ಗಿರೀಶ್ ಕಾರ್ನಾಡರು 8. ಚಂದ್ರಶೇಖರ ಕಂಬಾರರು        ಇಷ್ಟು ಭವ್ಯತೆಯನ್ನು ಹೊಂದಿರುವ ನಮ್ಮ ಕರ್ನಾಟಕವು 1956 ರ ನವಂಬರ್ ಒಂದರಂದು ಮೈಸೂರು ರಾಜ್ಯ ಹೆಸರಿನಲ್ಲಿ ಮೊದಲಿಗೆ ನಿರ್ಮಾಣವಾಯಿತು. ರಾಜ್ಯಗಳ ಪುನರ್ ವಿಂಗಡಣೆ ಕಾಯಿದೆಯ ಮೇರೆಗೆ ಜನ್ಮತಾಳಿದ ನವ ರಾಜ್ಯವು ಕೇವಲ ಕರ್ನಾಟಕ ಕನ್ನಡ ಭಾಷಾ ಪ್ರದೇಶಗಳ ಒಂದುಗೂಡಿಕೆಯಾಗಿ ಮಾತ್ರ ಇರಲಿಲ್ಲ. ಬದಲಿಗೆ ಸುಮಾರು 2000 ವರ್ಷಗಳ ಉಜ್ವಲ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯುಳ್ಳ ಕರ್ನಾಟಕ ನೆಲದಲ್ಲಿ ಜನ್ಮ ತಾಳಿದ ಕೋಟ್ಯಾಂತರ ಕನ್ನಡ ಜನತೆಯ ಹೃದಯವನ್ನು ಒಗ್ಗೂಡಿಸಿದ ದಿನವಿದು.        ಮೈಸೂರು  ರಾಜ್ಯವನ್ನೇ ಕರ್ನಾಟಕವೆಂದು ಕರೆಯಬೇಕೆಂಬ ಚರ್ಚೆಯು 1972 ರಲ್ಲಿ ಆರಂಭವಾದ ಇತಿಹಾಸವನ್ನು ಕೆದಕಿದರೆ, ಕರ್ನಾಟಕವೆಂಬ ಹೆಸರು ಮಹಾಭಾರತದಲ್ಲಿ ಉಲ್ಲೇಖವಿರುವ ದಾಖಲೆಯಿದೆ. ಅಂತೆಯೇ ಕ್ರಿ.ಶ. 450 ರಲ್ಲಿ ದಕ್ಷಿಣದಲ್ಲಿ ಆಳಿದ ಗಂಗ ಅರಸರ ಸಾಮ್ರಾಜ್ಯವು ಕರ್ನಾಟಕವೆಂದೇ ಹೆಸರಾಗಿದ್ದರೆ, ವಿಜಯನಗರ ಅರಸರು ಕರ್ನಾಟ ದೊರೆಗಳೆಂದು ಕರೆಯಲ್ಪಟ್ಟಿದ್ದಾರೆ. ಕನ್ನಾಡು, ಕರ್ನಾಟ ಎಂದು ಕೊನೆಗೆ “ಕರ್ನಾಟಕ”ವೆಂದು ಕರೆಯುವುದು ರೂಢಿಗೆ ಬಂದಿದೆ. ಕರ್ನಾಟಕತ್ವವೆಂದರೆ ಕೇವಲ ದೇಶಾಭಿಮಾನವೋ, ಭಾಷಾಭಿಮಾನವೋ ಅಥವಾ ಇತಿಹಾಸ ಅಭಿಮಾನವೋ ಅಲ್ಲದೆ ಮೂರು ಅಡಗಿರುವ ರಾಷ್ಟ್ರೀಯತೆಯನ್ನು ಒಪ್ಪಿ ಅಪ್ಪಿರುವ ತತ್ವವಾಗಿದೆ. 19 ಜಿಲ್ಲೆಗಳಾಗಿ ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಏಕೀಕರಣಗೊಳಿಸುವ ನಿಟ್ಟಿನಲ್ಲಿ 1905 ರಿಂದ 1920 ರ ಅವಧಿಯಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾಲಿಟ್ಟ ಕಾರ್ಯಕರ್ತರನ್ನು ಕನ್ನಡ ರಾಜ್ಯೋತ್ಸವ ಸಂಭ್ರಮಿಸುವ ಈ ಸಮಯದಲ್ಲಿ ನೆನೆಯುವುದು ಸರ್ವಸಮ್ಮತವಾಗಿದೆ. ಕರ್ನಾಟಕ ಏಕೀಕರಣಕ್ಕಾಗಿ ದನಿಯೆತ್ತಿದವರಲ್ಲಿ ಬೆನಗಲ್ ರಾಮರಾಯರು, ಆಲೂರು ವೆಂಕಟರಾಯರು, ಕಡಪ ರಾಘವೇಂದ್ರ ರಾವ್, ಮುದವೀಡು ಕೃಷ್ಣ ರಾವ್, ಗಂಗಾಧರ್ ರಾವ್ ದೇಶಪಾಂಡೆ, ಕೆ.ಸಿ. ರೆಡ್ಡಿ, ಕೆಂಗಲ್ ಹನುಮಂತರಾರು, ನಿಜಲಿಂಗಪ್ಪನವರು ಪ್ರಮುಖರೆನಿಸಿಕೊಂಡಿದ್ದಾರೆ. ಆಗ ನಮ್ಮ ಕರ್ನಾಟಕದ ಹಲವಾರು ಭಾಗಗಳು ಹೈದರಾಬಾದ್, ಮುಂಬೈ, ಮದ್ರಾಸು, ಡೆಲ್ಲಿ ಹಾಗೂ ಹಳೆ ಮೈಸೂರು ರಾಜ್ಯಗಳಿಗೆ ಸೇರಿಕೊಂಡಿದ್ದರೆ, ನೀಲಗಿರಿ, ಕೃಷ್ಣಗಿರಿ, ಅನಂತಪುರದ ಮಡಕಸಿರಾ ತಾಲ್ಲೂಕು, ಮಧೋಳ, ಸೊಂಡೂರು, ರಾಮದುರ್ಗ, ಜಮಖಂಡಿ, ಕೊಲ್ಲಾಪುರ ಇವೇ ಮೊದಲಾದ ಭಾಗಗಳು ಕರ್ನಾಟಕಕ್ಕೆ ಸೇರಿದ್ದವು. 1905 ರಲ್ಲಿ ಧಾರವಾಡದಲ್ಲಿ ನಡೆದ ಗ್ರಂಥಕರ್ತರ ಸಮ್ಮೇಳನದಲ್ಲಿ ಬೆನಗಲ್ ರಾಮರಾಯರು ಕರ್ನಾಟಕದ ಏಕೀಕರಣದ ಬಗ್ಗೆ ಭಾಷಣ ಮಾಡಿ ಮಾತನಾಡಿದ್ದು ಕರ್ನಾಟಕವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಇಟ್ಟ ಮೊದಲ ಹೆಜ್ಜೆ ಎಂದು ಹೇಳಲಾಗಿದೆ. 1905 ರಲ್ಲಿ ಲಾರ್ಡ್ ಕರ್ಜನ್ ಬಂಗಾಳವನ್ನು ವಿಭಜಿಸಲು ಯತ್ನಿಸಿದಾಗ ಬಂಗಾಳಿಯರು ಪ್ರತಿಭಟಿಸಿದ್ದನ್ನು ಸ್ಪೂರ್ತಿಯಾಗಿಸಿಕೊಂಡ ಆಲೂರು ವೆಂಕಟರಾಯರು ಕರ್ನಾಟಕದ ಏಕೀಕರಣದ ಮೊದಲನೇ ದನಿಯೆತ್ತಿದರು. ಏಕೀಕರಣದ ಅವಶ್ಯಕತೆಯನ್ನು ಮನದಟ್ಟು ಮಾಡುವ ನಿಟ್ಟಿನಲ್ಲಿ 1920 ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಸುಮಾರು 800 ಕಾಂಗ್ರೆಸ್ ಪ್ರತಿನಿಧಿಗಳು ಕರ್ನಾಟಕದಿಂದ ತೆರಳಿದ್ದು ದಿನದಿಂದ ದಿನಕ್ಕೆ ಏಕೀಕರಣದ ಹೋರಾಟ ಹೆಚ್ಚಾಗುತ್ತಿದ್ದುದಕ್ಕೆ ಸಾಕ್ಷಿಯಾಗಿದೆ. 1924 ರಲ್ಲಿ ಬೆಳಗಾವಿಯಲ್ಲಿ ನಡೆದ, ಗಾಂಧೀಜಿಯವರು ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಸಮ್ಮೇಳನದಲ್ಲಿಯೂ ಸಹ ಕರ್ನಾಟಕ ಏಕೀಕರಣ ಸಮ್ಮೇಳನವು ನಡೆಯಿತು. ಕರ್ನಾಟಕವನ್ನು ಏಕೀಕರಣಗೊಳಿಸುವ ನಿಟ್ಟಿನಲ್ಲಿ 1926ರಿಂದ 46 ರವರೆಗೂ ಸತತವಾಗಿ ಹಲವಾರು ಸಮ್ಮೇಳನಗಳು ನಡೆಯುತ್ತಲೇ ಇದ್ದವು. ಕರ್ನಾಟಕದ ಏಕೀಕರಣದ ಅವಶ್ಯಕತೆಯನ್ನು ಅರಿತ ಅಂದಿನ ಕಾಂಗ್ರೆಸ್ ಪಕ್ಷವು ಹೋರಾಟಕ್ಕೆ ಬೆಂಬಲ ನೀಡಿತು. ಅದನ್ನು ಮೈಸೂರ್ ಕಾಂಗ್ರೆಸ್ ಸಹ ಪುರಸ್ಕರಿಸಿತು. 1946 ರಲ್ಲಿ ಕರ್ನಾಟಕ ಮಹಾಸಭೆಯು ಏಕೀಕರಣದ ಮಂತ್ರವನ್ನು ಪುನರುಚ್ಚರಿಸಿತು. 1953 ರಲ್ಲಿ ಭಾಷಾವಾರು ರಾಜ್ಯವಾಗಿ ಆಂಧ್ರವು ಪ್ರಥಮ ಬಾರಿಗೆ ರೂಪುಗೊಂಡರೆ, ಅದೇ ವರ್ಷ ಹೈದರಾಬಾದಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕೆಂಗಲ್ ಹನುಮಂತರಾಯರು ಒತ್ತಾಯಪೂರ್ವಕವಾಗಿ ಏಕೀಕರಣದ ಭಾಷಣ ಮಾಡಿದರು. ಅಂದಿನ ಕೆ.ಪಿ.ಸಿ.ಸಿ ಅಧ್ಯಕ್ಷರಾದ ನಿಜಲಿಂಗಪ್ಪನವರು ಕೂಡ ಅದೇ ಮಂತ್ರವನ್ನು ಜಪಿಸುವುದರೊಂದಿಗೆ ಅಹೋರಾತ್ರಿ ಶ್ರಮಿಸಿದರು. ಅನೇಕ ಭಾಷಣಗಳು, ಮನವೊಲಿಕೆಗಳು ಫಲಕೊಡದಿದ್ದಾಗ 1953 ರಲ್ಲಿ ದಾವಣಗೆರೆಯಲ್ಲಿ ಸತ್ಯಾಗ್ರಹವು ಸಹ ನಡೆಯಿತು. ಹಂತಹಂತವಾಗಿ ಒಗ್ಗಟ್ಟನ್ನು  ಸಾರುತ್ತ ಏಕೀಕರಣದ ಅಗತ್ಯವನ್ನು ಮನದಟ್ಟು ಮಾಡುವಲ್ಲಿ ವರ್ಷಗಟ್ಟಲೆ ಹೋರಾಡಿದ ಫಲವಾಗಿ 1956 ರ ನವೆಂಬರ್ ಒಂದರಂದು ಏಕೀಕೃತ ರಾಜ್ಯ, ಅದು ನಮ್ಮ ಕರ್ನಾಟಕ ರಾಜ್ಯದ ಉದಯವಾಯಿತು. ಕರ್ನಾಟಕ ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು. ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ “ಮೈಸೂರು” ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತತ್ವ ಮಾನ್ಯತೆಗಾಗಿ ರಾಜ್ಯದ ಹೆಸರು 1972ರಲ್ಲಿ “ಕರ್ನಾಟಕ” ಎಂದು ಬದಲಾಯಿತು. ಈ ಸಂದರ್ಭದಲ್ಲಿ ದೇವರಾಜ್ ಅರಸುರವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಮುಂದಿನ ಪೀಳಿಗೆಯಾಗಿ ನಡೆಸಿದ ಹೋರಾಟದಲ್ಲಿ ಶಿವರಾಮ ಕಾರಂತರು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್. ಕೃಷ್ಣರಾವ್ ಮತ್ತು ಬಿ. ಎಂ. ಶ್ರೀಕಂಠಯ್ಯನವರ ಹೆಸರುಗಳಿವೆ. ಕೆಲವು ಕಾರಣಗಳಿಂದ ಕಾಸರಗೋಡು, ತಾಳವಾಡಿ, ಮಡಕಶಿರಾ, ಅಕ್ಕಲಕೋಟೆ, ಸೊಲ್ಲಾಪುರ, ಹೊಸೂರು ಇವೆಲ್ಲವೂ ಏಕೀಕೃತ ಕರ್ನಾಟಕದಿಂದ ಹೊರಗುಳಿದರೆ, 1565 ರಲ್ಲಿ ಒಡೆದು ಹೋಗಿದ್ದ ವಿಜಯನಗರ ಸಾಮ್ರಾಜ್ಯವು ಕರ್ನಾಟಕದ ನಕ್ಷೆಯಲ್ಲಿ ಸ್ಥಾನ ಪಡೆಯಿತು. ಕರ್ನಾಟಕದ ಗಡಿರೇಖೆಗಳು ಕಾರಣಾಂತರದಿಂದ ಕೆಲವು ಬಾರಿ ಹಿಗ್ಗಿ, ಕೆಲವು ಬಾರಿ ಕುಗ್ಗಿ ಹಲವು ಕಾರಣಗಳಿಂದ ನೆರೆ ರಾಜ್ಯಗಳಲ್ಲಿ ಹಂಚಿಹೋಗಿದ್ದ ಪ್ರದೇಶಗಳನ್ನು ಭೌಗೋಳಿಕವಾಗಿ ಹಾಗೂ ಮಾನಸಿಕವಾಗಿ ಬೆಸೆಯಲು ಯತ್ನಿಸಿದ ಅನೇಕ ಮಹನೀಯರು ಅಡ್ಡಬಂದ ಅನೇಕ ಎಡರು ತೊಡರುಗಳನ್ನು ಲೆಕ್ಕಿಸದೆ, ಕರ್ನಾಟಕದ ಏಕೀಕರಣಕ್ಕಾಗಿ ಚಳುವಳಿಗಳನ್ನು ನಡೆಸಿ ಅಖಂಡ ಕರ್ನಾಟಕವನ್ನು ನಮಗೆ ಉಡುಗೊರೆಯಾಗಿ ನೀಡಿದ ಈ ದಿನವೇ ನಮ್ಮ “ಕರ್ನಾಟಕ ರಾಜ್ಯೋತ್ಸವ” ಅಥವಾ “ಕನ್ನಡ ರಾಜ್ಯೋತ್ಸವ”. ಭಾಷಾ ನೀತಿಯಲ್ಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ಹಾಗೂ ತ್ರಿಭಾಷಾ ಸೂತ್ರದಡಿಯಲ್ಲಿ ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಮುಖ್ಯ ಭಾಷೆಯಾಗಿ ಪರಿಗಣಿಸಬೇಕೆಂಬ ವಿ.ಕೃ. ಗೋಕಾಕರು ರಚಿಸಿದ ವರದಿಯ ಬೇಡಿಕೆಯನ್ನು ಮುಂದಿಟ್ಟು ನಡೆದ “ಗೋಕಾಕ್ ಚಳುವಳಿಯಲ್ಲಿ” ಕನ್ನಡದ ಮೇರು ನಟ ಡಾಕ್ಟರ್ ರಾಜಕುಮಾರರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಹೀಗೆ ಕನ್ನಡವನ್ನು ಉಸಿರಾಡಿ, ಕನ್ನಡವೆಂಬ ಹೆಮ್ಮೆಯ ಕಿರೀಟವನ್ನು ನಮಗೆ ಬಿಟ್ಟು ಹೋದ ಮಹನೀಯರನ್ನು ನೆನೆಯುವುದು “ಕನ್ನಡ ರಾಜ್ಯದ ನಿಜವಾದ ಉತ್ಸವ” ಎನ್ನುವುದು ನನ್ನ ಅನಿಸಿಕೆ. ಈ ಮೇಲೆ ಹೆಸರಿಸಿರುವ, ಹೋರಾಡಿರುವ ಎಲ್ಲ ಮಹನೀಯರೂ ಕನ್ನಡವನ್ನು ಉಪಯೋಗಿಸಿದ್ದರಿಂದಲೇ ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಮಾನಸಿಕವಾಗಿ ಉಳಿದುಕೊಂಡಿದ್ದಾರೆ. ಭೂಮಿಯ ಮೇಲಿನ ಪ್ರತಿಯೊಂದಕ್ಕೂ ನಾಶವಿದೆ ಆದರೆ ಭಾಷೆಗಿಲ್ಲ. ಈ ನಿಟ್ಟಿನಲ್ಲಿ ಕನ್ನಡವನ್ನು ಆಸ್ವಾದಿಸಿ, ಅನುಭವಿಸಿ, ಭಾವನೆಗಳನ್ನು ಕನ್ನಡದಲ್ಲಿಯೇ ಪ್ರಕಟಿಸಿದ

ಉಪಯೋಗಿಸೋಣ, ಉಳಿಯೋಣ Read Post »

ಇತರೆ

ಅವಲಕ್ಕಿ ಪವಲಕ್ಕಿ

ಮಕ್ಕಳ ಕಥೆ ಅವಲಕ್ಕಿ ಪವಲಕ್ಕಿ ಗಿರೀಶ ಜಕಾಪುರೆ –                       ಅವಲಕ್ಕಿ ಪವಲಕ್ಕಿ             ಕಾಂಚಣ, ಮಿಣಮಿಣ             ಡಾಮ್ ಡೂಮ್ ಟಸ್ ಪುಸ್ಸ             ಕೋಯ್ ಕೊಟಾರ್             ಅವಲಕ್ಕಿ ಪವಲಕ್ಕಿ             ‘ಸಿರಿ ಟೀಚರ್ ಬಹಳ ಚೆಂದ ಹಾಡು ಹೇಳ್ತಾರೆ’ ಎಂದ ಚಿಂಟೂ ರಮಿಯತ್ತ ನೋಡುತ್ತ.             ‘ಅಷ್ಟೇ ಅಲ್ಲ ಮಾರಾಯಾ, ಎಷ್ಟು ಚೆಂದ ಡಾನ್ಸ್ ಹೇಳಿಕೊಡ್ತಾರೆ, ನೋಡು’ ಎಂದ ರಮಿ. ವಿಷಯ ಉತ್ಸಾಹದ್ದಾಗಿದ್ದರೂ ಅವನ ದನಿ ಏಕೋ ಸಪ್ಪಗಿತ್ತು.             ಚಿಂಟೂಗೆ ಅವಲಕ್ಕಿ ಅಂದರೆ ತುಂಬ ಇಷ್ಟ. ಬೇರೆ ಯಾವ ತಿಂಡಿಯೂ ಅವನಿಗೆ ಸೇರಲ್ಲ, ಅವಲಕ್ಕಿ ಇದ್ದರೆ ಅವನು ಬೇರೇನೂ ಬೇಡಲ್ಲ. ಈಗ ಸಿರಿ ಮೇಡಂ ಅವಲಕ್ಕಿ ಹಾಡು ಹೇಳಿಸಿದ್ದೂ ಅವನಿಗೆ ಇನ್ನಷ್ಟು ಖುಷಿ ಕೊಟ್ಟಿತ್ತು.             ಮೂರನೇ ಕ್ಲಾಸಿನ ಮಕ್ಕಳಿಗೆ ಅವರ ಕ್ಲಾಸ್‌ಟೀಚರ್ ಶ್ರೀದೇವಿ ಮೇಡಂ ಅವರು ವಾರ್ಷಿಕ ಸ್ನೇಹಸಮ್ಮೇಳನಕ್ಕಾಗಿ ಅವಲಕ್ಕಿ ಪವಲಕ್ಕಿ ಹಾಡಿನ ಪ್ರದರ್ಶನಕ್ಕೆಂದು ಮಕ್ಕಳಿಂದ ಅಂತಿಮ ರಿಹರ್ಸಲ್ ಮಾಡಿಸಿಕೊಳ್ಳುತ್ತಿದ್ದರು. ಊಟದ ಬಿಡುವಿತ್ತು. ಮಕ್ಕಳು ತಮ್ಮ ತಮ್ಮ ಟಿಫನ್ ಬಾಕ್ಸ್ ತೆರೆದು ತಿಂಡಿ ತಿನ್ನುತ್ತ ಮಾತಾಡುತ್ತಿದ್ದರು. ಚಿಂಟೂನ ಅಮ್ಮ ಅವನ ಫೆವ್ಹರಿಟ್ ಅವಲಕ್ಕಿ ಕೊಟ್ಟಿದ್ದರು. ರಮಿ ಮಾತ್ರ ಶಾಲೆಯ ಬಿಸಿಯೂಟದ ಅನ್ನ ತಿನ್ನುತ್ತಿದ್ದ. ಚಿಂಟೂ ಅವನಿಗೂ ಸ್ವಲ್ಪ ಅವಲಕ್ಕಿ ಕೊಟ್ಟು, ಅವನಿಂದ ತಾನೂ ಸ್ವಲ್ಪ ಅನ್ನ ಪಡೆದಿದ್ದ.             ‘ಯಾಕೋ ರಮಿ, ಸಪ್ಪಗಿದ್ದೀಯಾ?’ ಚಿಂಟೂ ಕೇಳಿದ.             ‘ನಾಳೆಯೇ ಗ್ಯಾದರಿಂಗ್ ಅಲ್ವಾ?’             ‘ಹೌದು, ಅದಕ್ಕೇನಾಯ್ತು?’             ‘ಸಿರಿ ಮೇಡಂ, ಗ್ಯಾದರಿಂಗ್ ಫೀಸ್ ಕೊಡಲು ಹೇಳಿದ್ರು. ನನ್ನಪ್ಪ ಇನ್ನೂ ಫೀಸ್ ಕಟ್ಟಿಲ್ಲ. ಫೀಸ್ ಕಟ್ಟದಿದ್ದರೆ ಗ್ಯಾದರಿಂಗ್‌ನಲ್ಲಿ ಭಾಗವಹಿಸಲು ಅವಕಾಶ ಇಲ್ಲ ಅಂತ ಹೇಳಿದ್ದಾರೆ’ ಎಂದ. ಮುಖ ಇನ್ನಷ್ಟು ಚಿಕ್ಕದಾಗಿತ್ತು.             ‘ಹೌದಲ್ವ? ಮತ್ತೆ, ಈಗ ಏನು ಮಾಡೋದು?’ ಚಿಂಟೂ ಕೇಳಿದ.             ‘ಅದೇ ತಿಳೀತಿಲ್ಲ, ಇವತ್ತು ಹೋಗಿ ಅಪ್ಪನಿಗೆ ಮತ್ತೆ ಫೀಸ್ ಕಟ್ಟಲು ಹೇಳುವೆ’ ಎಂದ. ಆಶಾಕಿರಣ ಮೂಡಿತು.             ಅವರು ತಿಂಡಿ ಮುಗಿಸಿ ಕೈತೊಳೆಯುವ ಹೊತ್ತಿಗೆ ಬೆಲ್ ಆಯ್ತು.             ಕ್ಲಾಸ್‌ನಲ್ಲಿ ಸಿರಿ ಟೀಚರ್ ‘ನೋಡಿ ಮಕ್ಕಳೆ, ನಾಳೆ ಎಲ್ಲರೂ ಸಾಯಂಕಾಲ ಗ್ಯಾದರಿಂಗ್ ಸಿದ್ಧತೆಯೊಂದಿಗೆ ಬರಬೇಕು, ನಿಮ್ಮ ತಂದೆ-ತಾಯಿ, ಅಕ್ಕ, ಅಣ್ಣ, ತಮ್ಮ, ತಂಗಿ ಎಲ್ಲರನ್ನೂ ಕರೆತರಬೇಕು. ನೀವು ಹಾಡೋದು, ಡಾನ್ಸ್ ಮಾಡೋದು ಅವರು ನೋಡಬೇಕು ತಾನೆ? ಸಂಜೆಯ ಟಿಫನ್ ತರೋದು ಮರೀಬಾರದು’ ಎಂದು ಸೂಚಿಸಿದರು.             ಮಕ್ಕಳೆಲ್ಲ ‘ಹೋ.. ಎಸ್ ಟೀಚರ್..’ ಎಂದರು ಹಿಗ್ಗಿನಿಂದ. ರಮಿಯ ದನಿ ಮಾತ್ರ ಕೇಳಿಸಲಿಲ್ಲ.             ಟೀಚರ್ ಮುಂದುವರಿದು ‘ಫೀಸ್ ಕೊಟ್ಟವರಿಗೆಲ್ಲ ಡಾನ್ಸ್ ಯುನಿಫಾರಂ ಕೊಡುತ್ತೇವೆ. ನಿಮ್ಮ ಕ್ಲಾಸ್‌ನಲ್ಲೇ ನೀವು ರೆಡಿ ಆಗಬೇಕು, ಹಾಂ, ಇನ್ನೊಂದು ಮಾತು ಫೀಸ್ ಕೊಡದಿರೋರಿಗೆ ಚಾನ್ಸ್ ಇಲ್ಲ, ತಿಳೀತಾ?’ ಎಂದರು.             ಮತ್ತೆ ಮಕ್ಕಳು ಕೇಕೇ ಹಾಕಿದರು. ರಮಿಯ ಕಣ್ಣು ತುಂಬಿ ಬಂದಿದ್ದವು.             ಶಾಲೆ ಬಿಟ್ಟು ಮರಳಿದ ಕೂಡಲೇ ಚಿಂಟೂ ತಾಯಿಯ ಬಳಿಗೆ ಹೋಗಿ ‘ಅಮ್ಮ, ಇವತ್ತು ನೀನು ಕೊಟ್ಟಿದ್ದ ಅವಲಕ್ಕಿ ತುಂಬಾ ಸಕತ್ತಾಗಿತ್ತು. ಚೂರೂ ಬಿಡದೇ ತಿಂದುಬಿಟ್ಟೆ, ಅಷ್ಟೇ ಅಲ್ಲ ರಮಿಗೂ ಸ್ವಲ್ಪ ಕೊಟ್ಟೆ. ನನ್ನಂತೆ ಅವನಿಗೂ ಅವಲಕ್ಕಿ ತುಂಬಾ ಇಷ್ಟ’ ಎಂದ.              ರಮಿ ವಿಷಯ ಬಂದ ಕೂಡಲೇ ಅವನ ದನಿಯಲ್ಲಿನ ಉತ್ಸಾಹ ಕಡಿಮೆಯಾಗಿತ್ತು, ಅವನ ಕಣ್ಣಲ್ಲಿನ ನೀರು ನೆನಪಾಗಿ ಪಾಪ ಅನಿಸಿತು.             ‘ಹೌದಾ, ಗುಡ್, ಜಾಣ ನೀನು. ದಿನಾಲೂ ಟಿಫನ್ ಬಾಕ್ಸ್ ಖಾಲಿ ಮಾಡಬೇಕು, ಚೆನ್ನಾಗಿ ತಿಂಡಿ ತಿನ್ನಬೇಕು, ಆಗ ನೀನು ಸ್ಟ್ರಾಂಗ್ ಆಗೋದು’ ಎಂದಳು ಅಮ್ಮ.             ಚಿಂಟೂ ‘ಹಾಗಿದ್ದರೆ ನೀನು ದಿನಾಲೂ ನನಗೆ ಅವಲಕ್ಕಿ ಕೊಡು. ಒಂದಲ್ಲ ಎರಡು ಬಾಕ್ಸ್ ಕೊಡು, ಎಲ್ಲ ಖಾಲಿ ಮಾಡುವೆ’ ಎಂದ.             ‘ಹಾಗಲ್ಲ ಮರಿ, ಇಷ್ಟ ಎಂದು ಒಂದೇ ಪದಾರ್ಥ ಹೆಚ್ಚು ತಿನ್ನಬಾರದು, ಹೊಟ್ಟೆ ಕೆಟ್ಟುಹೋಗುತ್ತದೆ, ಹೊಟ್ಟೆ ನೋವು ಪ್ರಾರಂಭ ಆದರೆ ನಿನಗೆ ಓದ್ಲಿಕ್ಕೂ ಆಗಲ್ಲ, ಬರೀಲಿಕ್ಕೂ ಆಗಲ್ಲ, ಡಾನ್ಸ್ ಮಾಡ್ಲಿಕ್ಕೂ ಆಗಲ್ಲ..’ ಎಂದರು.             ‘ಇಲ್ಲಮ್ಮ, ಏನೂ ಆಗಲ್ಲ, ನೀನು ಸುಮ್ಮನೆ ಹೇಳ್ತಿಯಾ. ನಾಳೆ ನೋಡು ನಾನು ಹೊಸ ಬಟ್ಟೆ ತೊಡ್ಕೊಂಡು ಹೇಗೆ ಡಾನ್ಸ್ ಮಾಡ್ತೀನಿ ಅಂತ. ಆದರೆ, ಪಾಪ ರಮಿ’             ‘ಏನಾಯ್ತು ಅವನಿಗೆ?’             ‘ಅಮ್ಮ, ಅವರು ಬಹಳ ಬಡವರು. ಅವನಪ್ಪ ಇನ್ನೂ ಗ್ಯಾದರಿಂಗ್ ಫೀಸ್ ಕಟ್ಟಿಲ್ಲ. ಸಿರಿ ಟೀಚರ್ ಫೀಸ್ ಕಟ್ಟಿಲ್ಲ ಅಂದ್ರೆ ಡಾನ್ಸಿಗೆ ಚಾನ್ಸ್ ಇಲ್ಲ ಅಂದ್ರು. ಗೊತ್ತಾ ಅಮ್ಮ, ಅವನಿಗೂ ನನ್ನಂತೆ ಅಲವಕ್ಕಿ ಅಂದರೆ ತುಂಬ ಇಷ್ಟ. ಆದರೆ ಅವನಮ್ಮ ಅವನಿಗೆ ಟಿಫನ್ ಬಾಕ್ಸ್ ಕೊಡಲ್ಲ. ಅವ ಶಾಲೆಯಲ್ಲಿ ಬಿಸಿಯೂಟ ತಿಂತಾನೆ..’ ಎಂದ ಉದಾಸೀನತೆಯಿಂದ.             ‘ಹೌದಾ? ಪಾಪ. ಇರಲಿ, ಈಗ ನೀನು ಓದ್ತಾ ಕೂತ್ಕೋ, ನಾನು ಅಡುಗೆ ಮಾಡಬೇಕು’ ಎನ್ನುತ್ತ ಅಮ್ಮ ಒಳಕ್ಕೆ ಹೋದರು. ಅವರ ಹಿಂದೆಯೇ ಚಿಂಟೂ ‘ಅಮ್ಮ, ಪ್ಲೀಸ್ ಅವಲಕ್ಕಿ ಮಾಡು’ ಎಂದ. ಅವನ ದ್ವನಿಯೂ ಅಡುಗೆ ಮನೆ ಸೇರಿತು. ‘ಇಲ್ಲ, ಪಾಪು, ಅವಲಕ್ಕಿ ಬೇಡ, ಪಪ್ಪಾ ಬಂದ್ಮೇಲೆ ಊಟ ಮಾಡುವಿಯಂತೆ’ ಎಂದಳು ಅಮ್ಮ ಒಳಗಿನಿಂದ.             ಚಿಂಟೂನ ತಂದೆ ಬಂದ ಮೇಲೆ ಊಟ ಮಾಡುವಾಗ ಆತ ‘ಪಪ್ಪಾ, ನಾಳೆ ಗ್ಯಾದರಿಂಗ್ ಇದೆ. ನೀವು ಬರಬೇಕೆಂದು ಸಿರಿ ಟೀಚರ್ ಹೇಳಿದ್ದಾರೆ’ ಎಂದ. ‘ಓಹ್, ಹೌದಾ, ನಾಳೆ ಡಾನ್ಸ್ ಮಾಡ್ತಿಯಾ? ಯಾವ ಹಾಡಿಗೆ?’ ಎಂದು ತಂದೆ ಕೇಳಿದರು. ಚಿಂಟೂ ಅವನ ಫೆವ್ಹರಿಟ್ ‘ಅವಲಕ್ಕಿ ಪವಲಕ್ಕಿ..’ ಹಾಡು ಶುರು ಮಾಡಿದ. ಹಾಡುತ್ತ ‘ಪಪ್ಪಾ, ರಮಿ ನನಗಿಂತ ಚೆಂದ ಡಾನ್ಸ್ ಮಾಡ್ತಾನೆ, ಬಹಳ ಚೆಂದ ಹಾಡ್ತಾನೆ. ಆದರೆ ಪಾಪ..’ ಎಂದ.  ಅಷ್ಟರಲ್ಲಿ ಅವನಮ್ಮ ‘ಈಗ ಹಾಡಿದ್ದು ಸಾಕು, ಊಟ ಮಾಡು’ ಎಂದು ಗದರಿಸಿದರು. ಚಿಂಟೂ ‘ಅಮ್ಮ, ಮರೆತೇ ಹೋಗಿತ್ತು ನೋಡು, ನಾಳೆ ಸಾಯಂಕಾಲದ ತಿಂಡಿಗೆ ಟಿಫನ್ ತರಬೇಕು ಅಂತ ಟೀಚರ್ ಹೇಳಿದಾರೆ, ಅವಲಕ್ಕಿ ಮಾಡು..’ ಎಂದ. ‘ಮತ್ತೆ ಶುರು ಮಾಡಿದಿಯಾ, ಒಂದು ಕೊಡ್ತೀನಿ ನೋಡು ಈಗ’ ಎಂದು ಅಮ್ಮ ಸ್ವಲ್ಪ ಸಿಟ್ಟಾದರು. ಚಿಂಟೂ ಸುಮ್ಮನೆ ಊಟ ಮಾಡಿ ಎದ್ದ. ಮಲಗಿದರೆ ನಿದ್ರೆ ಬರುತ್ತಿಲ್ಲ. ಪದೇ ಪದೇ ಸಿರಿ ಟೀಚರ್ ಮಾತು ನೆನಪಾಗ್ತಿವೆ, ಮತ್ತೆ ಮತ್ತೆ ರಮಿಯ ಕಣ್ಣೀರೂ ಕೂಡ ಕಣ್ಮುಂದೆ ಬರುತ್ತಿವೆ. ಪಾಪ, ರಮಿ..! ನಾಳೆ ಅವನು ಡಾನ್ಸ್ ಮಾಡುವಂತಿಲ್ಲ, ಅವನಿಗೆ ಹೊಸ ಯುನಿಫಾರಂ ಇಲ್ಲ..! ಮರುದಿನ, ಚಿಂಟೂ ತನ್ನ ತಂದೆ ತಾಯಿಯೊಂದಿಗೆ ಗ್ಯಾದರಿಂಗ್ ಶುರುವಾಗುವದಕ್ಕೂ ಅರ್ಧ ಗಂಟೆ ಮೊದಲು ಶಾಲೆ ತಲುಪಿದ. ಭರ್ಜರಿ ವೇದಿಕೆ ಸಿದ್ಧವಾಗಿತ್ತು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಕ್ಕಳು ಡ್ರೆಸ್ ಮಾಡಿಕೊಂಡು ಸಿದ್ಧರಾಗುತ್ತಿದ್ದರು. ಇವರು ಬಂದಿದ್ದನ್ನು ಗಮನಿಸಿದ ಸಿರಿ ಟೀಚರ್ ಬಳಿಬಂದು ‘ಬೇಗ ಬಾ ಚಿಂಟೂ, ನೀನು ರೆಡಿಯಾಗಬೇಕು. ಪ್ಯಾರೆಂಟ್ಸ್ ನೀವು ಹೋಗಿ ಹಾಲ್‌ನಲ್ಲಿ ಕುಳಿತುಕೊಳ್ಳಿ’ ಎಂದು ಅವರು ಚಿಂಟೂನನ್ನು ಕರೆದುಕೊಂಡು ಹೋದರು. ಅಪ್ಪ-ಅಮ್ಮಳತ್ತ ಕೈಬೀಸಿ ಚಿಂಟೂ ಡ್ರೆಸಿಂಗ್ ರೂಂನೊಳಗೆ ಹೋದ. ಅವನ ಕಣ್ಣುಗಳು ರಮಿಯನ್ನು ಹುಡುಕುತ್ತಿದ್ದವು. ಎಲ್ಲರೂ ಬಂದಿದ್ದರು. ಆದರೆ ರಮಿ ಮಾತ್ರ ಕಾಣಲಿಲ್ಲ. ಚಿಂಟೂ ಅಲ್ಲಿಂದ ಹೊರಬಂದು ಶಾಲೆಯ ಆವರಣದಲ್ಲೆಲ್ಲ ಹುಡುಕಿದ. ರಮಿ ಎಲ್ಲೂ ಇರಲಿಲ್ಲ. ಮರಳಿ ಡ್ರೆಸಿಂಗ್ ರೂಂಗೆ ಹೊರಟ. ವಾಟರ್ ಟ್ಯಾಂಕ್ ಹಿಂಬದಿಯಲ್ಲಿ ಯಾರೋ ಬ್ಯಾಗ್‌ಗೆ ತಲೆಯಿಟ್ಟು ಕುಳಿತಂತೆ ಅನಿಸಿತು. ಹೋಗಿ ನೋಡಿದ. ‘ಅರೆ, ರಮಿ, ಇಲ್ಯಾಕೆ ಕುಳಿತಿರುವೆ? ಬಾ ಒಳಗೆ’ ‘ಬೇಡ ಚಿಂಟೂ, ನನಗೆ ಹೊಟ್ಟೆ ನೋಯ್ತಿದೆ’ ‘ಸುಮ್ಮನೆ ಏನೇನೋ ಹೇಳಬೇಡ, ನಡೀ’ ‘ಇಲ್ಲ, ನಿಜಕ್ಕೂ ಹೊಟ್ಟೆ…’ ಎಂದ. ಅವನ ಕಣ್ಣು ತುಂಬಿದ್ದವು. ಚಿಂಟೂ ಅವನ ಕೈಹಿಡಿದುಕೊಂಡು ಒತ್ತಾಯದಿಂದ ಡ್ರೆಸಿಂಗ್ ರೂಂನೊಳಗೆ ಕರೆದುಕೊಂಡು ಹೋದ. ಎದುರಿಗೆ ಸಿರಿ ಟೀಚರ್ ನಿಂತಿದ್ದರು. ರಮಿಯ ಕಣ್ಣುಗಳು ನೆಲವನ್ನೇ ನೋಡುತ್ತಿದ್ದವು. ಚಿಂಟೂ ‘ಟೀಚರ್, ಟೀಚರ್, ನನಗೆ ಹೊಟ್ಟೆ ನೋವಾಗ್ತಿದೆ. ಬಹಳಷ್ಟು ಅವಲಕ್ಕಿ ತಿಂದಿದ್ದೆ. ಈ ನೋವಲ್ಲಿ ನನಗೆ ಡಾನ್ಸ್ ಮಾಡೋಕೆ ಆಗಲ್ಲ. ನೀವು ನನ್ನ ಯುನಿಫಾರಂ ರಮಿಗೆ ಕೊಡಿ. ಅವನು ಡಾನ್ಸ್ ಮಾಡಲಿ. ನಾನು ಮುಂದೆ ಕೂತು ನೋಡ್ತೆನೆ’ ಎಂದ. ಟೀಚರ್‌ಗೆ ಏನೋ ವಿಷಯ ಇದೆ ಎಂಬುದು ಅರ್ಥ ಆಯ್ತು. ‘ಏನಾಯ್ತು ಚಿಂಟೂ, ನಿಜಕ್ಕೂ ಹೊಟ್ಟೆ ನೋವಾ?’ ಎಂದು ಕೇಳಿದರು. ರಮಿಯ ಕಣ್ಣಲ್ಲೂ, ಚಿಂಟೂನ ಕಣ್ಣಲ್ಲೂ ನೀರೂರಿದ್ದವು. ‘ಇಲ್ನೋಡು, ರಮಿಯ ತಂದೆ ಫೀಸ್ ಕೊಡದಿದ್ದರೂ ಪರವಾಗಿಲ್ಲ. ಅವನಿಗಾಗಿಯೂ ನಾನು ಯುನಿಫಾರಂ ತಂದಿದ್ದೇನೆ. ಅವನೂ ತೊಟ್ಟುಕೊಂಡು ರೆಡಿಯಾಗಲಿ, ನೀನು ರೆಡಿಯಾಗು. ಬನ್ನಿ ಬೇಗ, ಬೇಗ’ ಎನ್ನುತ್ತ ಇಬ್ಬರನ್ನೂ ಸೆಳೆದು ಅಪ್ಪಿಕೊಂಡರು. ಮೂವರ ಕಣ್ಣು ತುಂಬಿದ್ದರೂ ತುಟಿಗಳಲ್ಲಿ ನಗು ಅರಳಿತ್ತು.   ವೇದಿಕೆ ಕಾರ್ಯಕ್ರಮ ಪ್ರಾರಂಭವಾಯ್ತು. ಒಂದೊAದಾಗಿ ಪ್ರದರ್ಶನ ಜರುಗಿದವು. ಮೂರನೇ ಕ್ಲಾಸಿನ ಸರದಿ ಬಂತು. ಮಕ್ಕಳೆಲ್ಲ ವೇದಿಕೆಗೆ ಬಂದರು. ಹಾಡಿನ ಯುನಿಫಾರಂನಲ್ಲಿ ಮಕ್ಕಳು ತುಂಬ ಮುದ್ದಾಗಿ ಕಾಣುತ್ತಿದ್ದರು. ಹಾಡು ಶುರುವಾಯ್ತು. ಅವಲಕ್ಕಿ ಪಲವಲಕ್ಕಿ             ಕಾಂಚಣ, ಮಿಣಮಿಣ             ಡಾಮ್ ಡೂಮ್ ಟಸ್ ಪುಸ್             ಕೋಯ್ ಕೊಟಾರ್             ಅವಲಕ್ಕಿ ಪವಲಕ್ಕಿ ಮಕ್ಕಳು ಬಲು ಉತ್ಸಾಹದಿಂದ ಕುಣಿದರು. ರಮಿ ಎಲ್ಲರಿಗಿಂತ ಚೆಂದ ಕುಣಿದ. ಅವನಿಗಿಂತ ಚೆಂದ ಎನ್ನುವಂತೆ ಚಿಂಟೂ ಕುಣಿದ. ಅವರ ಹರ್ಷಕ್ಕೆ ಪಾರವೇ ಇರಲಿಲ್ಲ. ಮಕ್ಕಳ ಕುಣಿತ ಕಂಡು ಸಿರಿ ಟೀಚರ್‌ಗೂ ಆನಂದ. ಹಾಡು ಮುಗಿದ ಕೂಡಲೇ ಎಲ್ಲರೂ ವೇದಿಕೆಯಿಂದ ನಿರ್ಗಮಿಸಿದರು. ರಮಿ ಬಹಳ ಹಿಗ್ಗಿನಲ್ಲಿದ್ದ. ಅಷ್ಟರಲ್ಲಿ ಅವನಿಗೆ ತಾನು ಮನೆಯಿಂದ ಬರುವಾಗ ಅಮ್ಮ ಕೊಟ್ಟಿದ್ದ ಟಿಫನ್ ಬಾಕ್ಸ್ ನೆನಪಾಯ್ತು. ‘ಏಯ್ ಚಿಂಟೂ, ಬಾ ಇಲ್ಲಿ. ಇವತ್ತು ನನ್ನಮ್ಮ ಟಿಫನ್ ಕಟ್ಟಿದ್ದಾಳೆ, ಬಾ ತಿನ್ನೋಣ’ ಎನ್ನುತ್ತ ಕೂಗಿದ. ಕೂಡಲೇ ಚಿಂಟೂ ಅವನ ಬಳಿ ಬಂದ. ಟಿಫನ್ ತೆರೆದು ನೋಡಿದರೆ ಅದರಲ್ಲಿಯೂ ‘ಅವಲಕ್ಕಿ..’..ಓಹ್…!! ಮತ್ತೆ ಶುರುವಾಯ್ತು… ಅವಲಕ್ಕಿ, ಪವಲಕ್ಕಿ             ಕಾಂಚಣ, ಮಿಣಮಿಣ             ಡಾಮ್ ಡೂಮ್ ಟಸ್ ಪುಸ್

ಅವಲಕ್ಕಿ ಪವಲಕ್ಕಿ Read Post »

You cannot copy content of this page

Scroll to Top