ಲಹರಿ ಅಕ್ಕ , ನೀನು ಯಾರಿಗೆ ಮಗಳಾಗಿದ್ದೆ ? ವೀಣಾ ದೇವರಾಜ್ ಮಗಳೇ ನೀನು ಯಾರಿಗೆ ಮಗಳಾಗಿದ್ದೆ. ಮಗಳ ಪ್ರೀತಿ ನಿನಗೆ ಗೊತ್ತೇ. ಅದನ್ನು ಎಂದಾದರೂ ಅನುಭವಿಸಿದ್ದೀಯಾ. ಹೇಗಿರಬಹುದೆಂದು ಯೋಚಿಸಿದ್ದೀಯ ಅಥವಾ ಬಯಸಿದ್ದೆಯ? ಒಮ್ಮೆ ಯೋಚಿಸಿ ನೋಡೋಣ… ಹಾಂ,ಸಿನೆಮಾದಲ್ಲಿ,, ಪುಟಾಣಿ ಪಾಪು , ಅದೇನು ಚೆಂದ,ಅಪ್ಪ ಅಮ್ಮನ ಮುದ್ದು ಮಗು ತಮ್ಮಿಷ್ಟದಂತೆ ಅದನ್ನು ಸಿಂಗರಿಸಿದ್ದಾರೆ ನೋಡಿದವರೆಲ್ಲಿ ಕಣ್ಣುಬಿಟ್ಟು ದೃಷ್ಟಿ ತಾಗುವುದೋ ಎಂದು ದೃಷ್ಟಿಬೊಟ್ಟನ್ನೂ ಇಟ್ಟಿದ್ದಾರೆ. ಒಂದು ನಿಮಿಷವೂ ಒಂಟಿಯಾಗಿ ಬಿಟ್ಟಿಲ್ಲ. ಇನ್ನೇನು ಶಾಲೆಗೆ ಸೇರಿಸುವ ವಯಸ್ಸು ಬಂತು, ಪೋಷಕರು ಗಟ್ಟಿ ಧೈರ್ಯಮಾಡಿ ಶಾಲೆಗೆ ಕಳಿಸುತ್ತಾರೆ. ಅವಳ ಒಂದೊಂದೇ ಹೊಸಹೊಸ ಕಲಿಕೆಗಳನ್ನು ನೋಡಿ ಬೀಗುತ್ತಾರೆ. ಅಪ್ಪ, ಇವಳು ಎಲ್ಲಾ ನನ್ನಂತೆ ಅಂತಾನೆ , ಅಮ್ಮ ಇಲ್ಲ ಅವ್ಳು ನನ್ನಂತೆ ಅನ್ನುತ್ತಾಳೆ. ಮನೆಗೆ ಬಂಡ ಕೂಡಲೇ ಅಪ್ಪ, ಅಮ್ಮ ತುತ್ತು ಮಾಡಿ ಉಣಿಸುತ್ತಾರೆ ಆಟವಾಡಿಸುತ್ತಾರೆ , ಅವಳಾಡುವ ಆಟದಲ್ಲಿ ತಾವೂ ಭಾಗಿಯಾಗಿ ಖುಷಿಪಡುತ್ತಾರೆ. ಅವಳು ಆಟವಾಡುತಿದ್ದರೆ, ಮನೆ ಪಾಠ ಮಾಡುತಿದ್ದರೆ, ಬರೆಯುತ್ತಿದ್ದರೆ ಅವಳಿಗೆ ತೊಂದರೆಯಾಗಬಾರದೆಂದು ತಾವೇ ಉಣಿಸುತ್ತಾರೆ. ನಸುಕಿನಲ್ಲೇ ಎದ್ದು ಮಗಳಿಗಿಷ್ಟವಾದ ತಿಂಡಿ ತಿನಿಸುಗಳನ್ನು ಅಮ್ಮ ಮಾಡಿದರೆ , ಅಪ್ಪ ಬೇಗಬೇಗನೆ ತನ್ನೆಲ್ಲ ಕೆಲಸಗಳನ್ನು ಮುಗಿಸಿ ಶಾಲೆಗೆ ತಾನೇ ಹೋಗಿ ಬಿಟ್ಟುಬರುತ್ತಾನೆ. ಮಗಳಿಗಾಗಿ ತಮ್ಮೆಲ್ಲವನ್ನೂ ವ್ಯಯಿಸುತ್ತಾರೆ. ಅವ್ಳು ಕೇಳಿದ್ದನ್ನೆಲ್ಲ ತಂದು ಕೊಡುತ್ತಾರೆ , ಪ್ರೀತಿಯ ಸುರಿಮಳೆಗರೆಯುತ್ತಾರೆ. ನೋಡಲು ಎಷ್ಟು ಚೆಂದ. ಮಗಳು ಮದುವೆಗೆ ಬಂದಾಗ ವಿಜೃಂಭಣೆಯಿಂದ ಮದುವೆ ಮಾಡುತ್ತಾರೆ ಕರುಳಕುಡಿಯನ್ನು ಬೇರೆಯವರ ಮನೆಗೆ ಕಳಿಸುವಾಗ ಅವಳ ಅತ್ತೆ ಮಾವ ಗಂಡನನ್ನು ತನ್ನ ಕೂಸನ್ನು ಚೆನ್ನಾಗಿ ನೋಡಿಕೊಳ್ಳಿರೆಂದು ಬೇಡಿಕೊಳ್ಳುತ್ತಾರೆ , ಬಿಕ್ಕಿಬಿಕ್ಕಿ ಅಳುತ್ತಾರೆ. ಅಂದಿಗೆ ಆ ಮನೆಯ ಋಣ ಮುಗಿಯಿತೇ ಗೊತ್ತಿಲ್ಲ. ಎಂದೋ ಒಮ್ಮೆ ತವರಿಗೆ ಬರುವ ಮಗಳು ಅತಿಥಿಯಾಗಿಬಿಟ್ಟಿರುತ್ತಾಳೆ. ಮೊದಲಿನಂತೆ ಸಲೀಸಾಗಿ ಏನೊಂದನ್ನೂ ಮಾಡಲು ಹಿಂಜರಿಯುತ್ತಾಳೆ, ಅದು ತಾ ಹುಟ್ಟಿ ಬೆಳೆದ ಮನೆ, ಅಪ್ಪಅಮ್ಮನ ಕೈ ತುತ್ತು ತಿಂದು ಬೆಳೆದ ಮನೆ ಎನ್ನುವುದನ್ನು ಮೆಲುಕುಹಾಕಿಕೊಂಡು ಸಂಕಟಪಡುತ್ತಾಳೆ. ತನ್ನ ಗೆಳತಿಯರ ಮನೆಗೆ ಹೋದರೆ ಅಲ್ಲಿ ಅವರೂ ಇಲ್ಲ ಎಲ್ಲ ತಮ್ಮ ಗಂಡನ ಮನೆಯಲ್ಲಿದ್ದಾರೆ. ಎಲ್ಲಾ ಹೆಣ್ಣು ಮಕ್ಕಳದೂ ಹೀಗೆಯೇ ಮನಸ್ಥಿತಿಯೇ ಎಂದು ಕೊರಗುತ್ತಾಳೆ. ಅಪ್ಪಅಮ್ಮನ ಹೇಳಿಕೊಳ್ಳಲಾರದೆ ಮನಸ್ಸಿನಲ್ಲೇ ಕೊರಗುತ್ತಾಳೆ. ಅಮ್ಮ ಮಾತುಮಾತಿಗೂ ಅತ್ತಿಗೆಯ ಹೆಸರನ್ನೇ ಕರೆಯುತ್ತಾರೆ ,ಅಪ್ಪ ನಾನು ಬಂದ್ದಿದ್ದೇನೆಂದು ಮನೆಗೆ ಬೇಗನೆ ಬರುವುದು ಹೋಗಲಿ, ಬಂದವರೇ ತನ್ನ ಗೆಳೆಯರನ್ನು ನೋಡಲು ಹೋಗುತ್ತಾರೆ. ಅಣ್ಣನೂ ಮೊದಲಿನಂತೆ ಚೇಷ್ಟೆಯ ಮಾತುಗಳಿಲ್ಲ ,ಕೆಣಕುವುದೂ ಇಲ್ಲ.ಅಮ್ಮನ ಬಳಿ ಏನಾದರು ಏಕಾಂತದಲ್ಲಿ ಹೇಳಿಕೊಳ್ಳಬೇಕೆಂದರೆ ಯಾವಾಗಲೂ ಅತ್ತಿಗೆಯೋ ಅಣ್ಣನೋ ಇರುತ್ತಾರೆ. ಯಾಕೆ ಹೀಗಾಯಿತು, ತವರಿನ ಪ್ರೀತಿ ಕಡಿಮೆಯಾಯಿತೇ, ತನ್ನ ಮೇಲಿನ ಹೆತ್ತವರ ಜವಾಬ್ದಾರಿ ಮುಗಿಯಿತೇ? ಈಗ ಅಪ್ಪಅಮ್ಮನಿಗೆ ನಾನು ಮಗಳಲ್ಲವೇ ಏಕೆ ಹೀಗೆ? ತನ್ನಿಂದಾದ ತಪ್ಪೇನು, ಇದನ್ನು ಹೇಗೆ ಸರಿ ಮಾಡುವುದು, ತಾನೇನು ಮಾಡಿದರೆ ತನ್ನ ತವರು ಮೊದಲಿನಂತಾಗುತ್ತದೆ , ದೇವರೇ ಏನು ಮಾಡಲಿ. ಇನ್ನು ಅಲ್ಲಿರುವುದು ಬೇಡವೆನಿಸಿ ತನ್ನಿನಿಯನ ಆಸರೆ ಬಯಸಿ ಹೊರಡುತ್ತಾಳೆ. ತನ್ನಿನಿಯನ ತೋಳ್ತೆಕ್ಕೆಯಲ್ಲೇ ಅಪ್ಪಅಮ್ಮನ,ಅಣ್ಣನ ಪ್ರೀತಿ,ವಾತ್ಸಲ್ಯವನ್ನೂ , ತನ್ನ ಸಖಿಯರ ಸಂಗವನ್ನೂ ಕಾಣುತ್ತಾಳೆ. ಜಗವನ್ನೇ ಮರೆಯುತ್ತಾಳೆ. ಅವನೇ ತನ್ನ ಜಗತ್ತು, ಅವನಿಲ್ಲದೆ ತಾನಿಲ್ಲ. ಅವನುಸಿರೇ ತನ್ನುಸಿರು ಎಂದುಕೊಳ್ಳುತ್ತಾಳೆ. ಆದರೆ ಆ ಒಂದು ಕರಾಳ ದಿನ ವಿಧಿಯ ದೃಷ್ಟಿತಾಗಿ ,ಅವಳ ಉಸಿರೇ ಅವಳ ಜೊತೆಗಿಲ್ಲ , ಅವಳ ಜಗತ್ತೇ ಇಲ್ಲವಾದಾಗ ,,,,,,,, ಎಲೆ, ಹಾರುವ ಹಕ್ಕಿಗಳೇ ನೀವು “ನನ್ನುಸಿರ”ನ್ನು ಕಂಡಿರಾ? ಎಲೆ ಸಂಪಿಗೆಮರವೇ, ಎಲೆ ಹೊಂಗೆ ಮರವೇ ನೀವು ಬೀಸುವ ತಂಗಾಳಿಯಲ್ಲಿ ದೇವನ ಬಿಸಿಯುಸಿರಿನ ಅನುಭವವಾಯಿತೇ? ಎಲೈ ಭೂಮಿ ತಾಯಿಯೇ ನೀನೆ ಬ್ರಹ್ಮಾಂಡವೆನ್ನುತ್ತಾರೆ. ನಿನ್ನ ಮಡಿಲಲ್ಲೇನಾದರೂ ಬಚ್ಚಿಟ್ಟುಕೊಂಡು ನನ್ನೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವನೋ ಒಮ್ಮೆ ನೋಡುವಿಯ ತಾಯೆ? ತಾನಿಲ್ಲದ ಜಗತ್ತು ಅವಳಿಗೆ ದುಸ್ತರವೆಂದು ತಿಳಿದೂ ದೇವನೇಕೆ ನನ್ನ ಕಣ್ಣಿಗೆ ಕಾಣುತಿಲ್ಲ. ಅವಳೆಲ್ಲಿಗೆ ಹೋಗುವುದು,ಯಾರ ಬಳಿಗೆ ತನ್ನ ನೋವನಿವೇದಿಸಿಕೊಳ್ಳುವುದು,,,,,?,,,,,? ನೀವೂ ಹೇಳಲಾರಿರೆ,,,,,,,,,?,,,,, ಅವಳು ಯಾರ ಮಗಳು? ,,,,,,,,,,? “ಇಂದು ನಾನು ಒಂಟಿ ! ನೀನು ಅದ್ಹೇಗೆ ಬಿಟ್ಟು ಹೋದೆ ಎಂದಿಗೂ ಒಬ್ಬಳನ್ನು ಬಿಡಲಾರದ ನಿನಗೆ ಹೇಗೆ ಮನಸ್ಸು ಬಂತೋ ನಾ ಕಾಣೆ ,ನಾನೀಗ ಇನ್ನೊಬ್ಬರಿಗೆ ಭಾರವಾದೆ. ನಾನೊಂದು ಚೆಂಡಿನಂತಾದೆ. ನಾನು ನಿನ್ನದೇ ವಸ್ತುವೆಂದು ನನ್ನ ಪೋಷಕರು ನಿನ್ನ ಸುಪರ್ದಿಗೆ ವಹಿಸಿದ್ದರು. ನಿನಗೂ ನಾನು ಬೇಡವಾಗಿಬಿಟ್ಟೆ. ಈಗ ಚೆಂಡು ಯಾರ ಬಳಿ ಇದೆಯೋ ಗೊತ್ತಿಲ್ಲ. ನನಗೊಂದು ಸ್ಥಿರವಾದ ಜಾಗವಿಲ್ಲವೇ ದೇವರೇ? ಎಲ್ಲೆಲ್ಲಿಗೆ ಅಂತ ಓಡಾಡಬೇಕು ತಿಳಿಯುತ್ತಿಲ್ಲ ಈ ಯಕ್ಷ ಪ್ರಶ್ನೆಗೆ ಉತ್ತರವಿಲ್ಲವೇ? *************************