ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ರಂಗ ರಂಗೋಲಿ

ರಂಗದ ಮೇಲಿನ ಕೆಮಿಸ್ಟ್ರಿಗೆ, ರಂಗದ ಕೆಳಗಿನ ಕಲಾವಿದರ ಅನ್ಯೋನ್ಯತೆ, ಕಾಳಜಿ, , ಹಾಸ್ಯ ಲಾಸ್ಯಗಳು ಅತ್ಯಂತ ಅಗತ್ಯ ಜೀವತಂತುಗಳು ಎಂಬುದನ್ನು ನಾನು ನಿಧಾನವಾಗಿ, ಪಾರಿವಾಳ ಒಂದೊಂದೇ ಕಾಳುಗಳನ್ನು ಹೆಕ್ಕಿ ನುಂಗುವಂತೆ, ಕಲಿಯುತ್ತಲೇ ಇದ್ದೆ.

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಹೊರಡುವ ಘಳಿಗೆ ತನ್ನ ಹೆಂಡತಿ ತನ್ನನ್ನು ಹಿಂದೆ ಕರೆಯುವಳೆಂದು ಆಸೆಯಿಂದ ದಿಟ್ಟಿಸುತ್ತಾನೆ. ಆದರೆ ಆಕೆಗೆ ಅದರ ಗಮನವೇ ಇರುವುದಿಲ್ಲ. ಅವನು ನಿರಾಸೆ,ನೋವಿನಲ್ಲಿ ಹೊರಡುತ್ತಾನೆ. ಈ ದೃಶ್ಯದ ಮುಕ್ತಾಯದಲ್ಲಿ ಸಭಾಂಗಣ ನಿಂತು ಕಲಾವಿದನ ಅಭಿನಯಕ್ಕೆ ಚಪ್ಫಾಳೆ ಮಳೆ ಸುರಿಸಿತ್ತು.

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ “ಆಕಾಶವಾಣಿಯ ಅವಕಾಶದಾಕಾಶ” “ಬರೆದ ಕಥೆ ಹಾಗೇ ಬಿಡುವಂತಿಲ್ಲ. ವಿಳಾಸ ಕೊಡುತ್ತೇನೆ. ಆಕಾಶವಾಣಿಗೆ ಕಳುಹಿಸು. ನೋಡೋಣ! ನೀನು ಎಂತಹ  ಕಥೆಗಾರ್ತಿ”.ನಾನು ಬರೆದ ಕಥೆಯೊಂದು ಸರ್ ಗೆ ಸಿಕ್ಕಿ ಗಂಡ- ಹೆಂಡತಿ ಅದನ್ನು ಓದಿ ಮುಂದಿನ ಬಾರಿ ಅವರ ಮನೆಗೆ ಹೋದಾಗ ಇಬ್ಬರೂ ಸೇರಿ ವಿಚಾರಣೆಗೆ ಕಟಕಟೆಯಲ್ಲಿ ನಿಲ್ಲಿಸಿದ್ದರು. ತಲೆತಗ್ಗಿಸಿದವಳ ಪರ ಲಾಯರ್ ಆಗಿ ಅವರ ಶ್ರೀಮತಿ ನಿಂತಿದ್ದರು. ಕೊನೆಗೂ ತೀರ್ಪು ಹೊರಬಿದ್ದಿತ್ತು.  ಚಿಕ್ಕನಡುಕ,ಸಂಭ್ರಮ ಜೊತೆಯಾಗಿತ್ತು. ಆದರೆ ಸರ್ ಗೆ ಆಕಾಶವಾಣಿಯಲ್ಲಿ ಪರಿಚಯವಿದೆ. ಅವರು ಒಂದು ಮಾತು ಸಂಬಂಧಪಟ್ಟವರಿಗೆ ಹೇಳಬಾರದೇ ಎಂಬ ತಳಮಳಕ್ಕೆ ಉತ್ತರ ಎಂಬಂತೆ ನುಡಿದಿದ್ದರು. ” ನಾನು ವಿಳಾಸವಷ್ಟೆ ಕೊಡುವುದು. ನಿನ್ನ ಅರ್ಹತೆಯ ಆಧಾರದಲ್ಲೇ ನಿನ್ನ ದಾರಿ ಸ್ಪಷ್ಟವಾಗಬೇಕು.”  ಕಥೆ ಆಯ್ಕೆಯಾಗಿತ್ತು. ಅದುವರೆಗೂ ಉಡುಪಿಯ ನಾನು ಮಂಗಳೂರನ್ನು ನೋಡಿಯೇ ಇರಲಿಲ್ಲ. ಅಕಾಶವಾಣಿ ಹೊಸ ಊರು ಹೊಸ ಪುಳಕ,ಸಂಭ್ರಮಗಳನ್ನು ಹೊಸ ಹೆದರಿಕೆಯೊಂದಿಗೆ ಪರಿಚಯಿಸಿತ್ತು. ಮಣಿಯಕ್ಕ ಆಕಾಶವಾಣಿಗೆ ಹೋಗುವ ಹಿಂದಿನ ದಿನ ಬಾಯಿಗೆ ಸಕ್ಕರೆ ಹಾಕಿ ” ಇನ್ನೂ ಹೆಚ್ಚು ಬರೆಯಬೇಕು. ಹೆಸರು ಬರಬೇಕು” ಎಂದು ಆಶೀರ್ವದಿಸಿ,ಹಾರೈಸಿ ಕಳುಹಿಸಿದ್ದರು. ಯಾರು, ಈ ಸರ್ ಮತ್ತು ಮಣಿಯಕ್ಕ! ಕೇಳಿ. ಉಡುಪಿಯ ಎಂ.ಜಿ.ಎಂ.ಕಾಲೇಜಿನ ಎತ್ತರದ ಕಾಂಪೌಂಡ್ ಗೋಡೆಯ ಕೊನೆ ನೊನೆಯಲ್ಲಿ ನಿಂತ ಗೇಟು ದಾಟಿ ಹೊರಗೆ ಬಂದರೆ ರಸ್ತೆಯುದ್ದಕ್ಕೆ ಎರಡೂ ಬದಿ ಬೇರುಬಿಟ್ಟು ಕೂತ ಒಂದೇ ಬಗೆಯ ಸಾಲು ಮನೆಗಳು.  ಪದವಿ ತರಗತಿಯಲ್ಲಿರುವಾಗ ಗೆಳತಿಯರ ಜೊತೆ ಹರಟೆ ಹೊಡೆಯುತ್ತ ಅಲ್ಲಿ ಕಳ್ಳರಂತೆ ಅಲೆದು” ಇದು ಯಾರದ್ದು? ಅದು? ಈ ಕಡೇದು?. ಇಲ್ಲಿ ನೋಡು!. ಓ ಆಚೆ ಕೂಡ ಮನೆಗಳು!” ಎಂದು ಪರಸ್ಪರ ಪ್ರಶ್ನೆ ಉತ್ತರ ತಡಕಾಡಿ ಯಾವ ಸರ್ ಗೆ ಯಾವ‌ ಮನೆ ಎಂದು ಗುರುತಿಸಿ ಖುಷಿ ಪಟ್ಟದ್ದೆವು. ಸಾಹಿತ್ಯದ ವಿದ್ಯಾರ್ಥಿಗಳಿಗೆ, ಉಳಿದ ವಿದ್ಯಾರ್ಥಿಗಳಿಗಿಂತ ಉಪನ್ಯಾಸಕರ ಬಳಿ ತುಸು ಹೆಚ್ಚೇ ಸಲುಗೆ. ಮಾತಿಗೆ ಸಾವಿರ ವಿಷಯ.  ಕವಿತೆ, ಕಥೆ, ಕಾದಂಬರಿ, ಹರಟೆ, ಪಾಠ ಎಲ್ಲವೂ ಬೇವು ಬೆಲ್ಲ ಪಾನಕ.  ಪಾಠ ಎಂದೂ ಬರಡೆನಿಸದು.  ಬೇರೆ ವಿಷಯಗಳ ತರಗತಿಯಾಗುವಾಗಲೂ ಕನ್ನಡ ಉಪನ್ಯಾಸಕರು ನಡೆದು ಹೋದರೆ ಸಣ್ಣನೆಯ ಖುಷಿಯೇ  ಸರಿದುಹೋದಂತೆ. ಆಗಲೇ ಆ ಏಳು ನಂಬರ್ ನ ಕ್ವಾರ್ಟರ್ಸ್ ಕಂಡದ್ದು. ಅದರ ಬಾಗಿಲಲ್ಲಿ  ‘ ಹೊಸ್ಕೆರೆ ಎಸ್. ಶಿವಸ್ವಾಮಿ’ ಎಂಬ ನಾಮ ಫಲಕ. ಕಂಚಿನ ಕಂಠದ ಪಾಠ. ಚಂದ್ರಮತಿಯ ವಿಲಾಪ, ಹರಿಶ್ಚಂದ್ರ ಕಾವ್ಯವನ್ನು ಮನಸ್ಸಿನಲ್ಲಿ ನೆಟ್ಟವರು. ಪರೀಕ್ಷೆ ಗೆಂದೇ ಓದುವ ಅಗತ್ಯವೇ ಕಂಡಿರಲಿಲ್ಲ. ಕ್ಲಾಸಿನಲ್ಲಿ ಪಾಠ ಕೇಳಿದರಾಯಿತು. ಪರೀಕ್ಷೆ ಹಾಲ್ ನಲ್ಲಿ ಅದನ್ನೇ ನೆನಪಿಸಿದರೆ ಮನಸ್ಸಿನಲ್ಲಿ ಅಚ್ಚಾದ ಅವರ ಧ್ವನಿ  ಚಿತ್ರಕಗಳು  ಪೇಪರಿನ ಮಡಿಲಿನಲ್ಲಿ ಒಂದೊಂದೇ ಪಾತ್ರಗಳಾಗಿ ಮಾತು, ಭಾವ, ಜೀವ ಪಡೆಯುತ್ತಿದ್ದವು.   ರಂಗವು ಮನದ ಭಿತ್ತಿಯೊಳಗೆ ಹುಟ್ಟಿ ಪರೀಕ್ಷೆಯಲ್ಲಿಯೂ ನಾಟಕ ನಡೆಯುತ್ತಲೇ ಇತ್ತು. ನಾನು ಅದರ ವಿವರ ಬಿಳಿ ಪೇಪರಿನಲ್ಲಿ ದಾಖಲಿಸುತ್ತಿದ್ದೆ. ಪರೀಕ್ಷಾ ಕೊಠಡಿಯಿಂದ ಹೊರಬಂದರೂ ಅದೇ ನಶೆ, ಗುಂಗು. ಆ ಪಾತ್ರಗಳು ನನ್ನ ಹಿಂಬಾಲಿಸುತ್ತಿದ್ದವು. ಅಂತಹ ಮನೋಹರ ಶೈಲಿಯ ಪಾಠ ಅವರದ್ದು. ಕನ್ನಡದಲ್ಲಿ ಸ್ನಾತಕೋತ್ತರ ಓದು ಬೇಕೆನ್ನುವ ಆಸೆಗೆ ಮತ್ತಷ್ಟು ಬಲ ತುಂಬಿದ್ದು ಆಗಲೇ.  ಪದವಿ ಮುಗಿದು ಎಂ.ಎ ಓದಿಗೆ ಹೆಸರು ನೋಂದಾಯಿಸಿ ಆಗಿತ್ತು. ಮನೆಯಲ್ಲಿ ಕೂತು ಓದು. ಜೊತಗೆ ಉದ್ಯೋಗ. ಹಳೆಗನ್ನಡ, ಕೆಲವು ಪಠ್ಯ  ಅರ್ಥವಾಗದೇ ಹೋದಾಗ ಸರ್ ಮನೆಗೆ ಹೋಗಿ ಬಹು ಅಂಜಿಕೆಯಲ್ಲಿ ಬಾಗಿಲು ತಟ್ಟಿದ್ದೆ. ಕೆಂಪು ಸೀರೆ ಉಟ್ಟ,ಅಚ್ಚ ಬಿಳಿಬಣ್ಣದ, ಉದ್ದಮೂಗಿನ, ಹೊಳಪು ಕಣ್ಣಿನ ವಯಸ್ಸಾದವರು ಕಂಡಿದ್ದರು. ಏನು? ಎಂದಾಗ ಏನೂ ಹೇಳಲು ತೋಚದೆ ಖಾಲಿಯಾಗಿ ಬೆಪ್ಪಳಂತೆ ನಿಂತಿದ್ದೆ.  ಅವರ ಹಿಂದೆ ತೆಳ್ಳಗಿನ ಉದ್ದ ದೇಹದ ಮಹಿಳೆ. ಬೈತಲೆ ತೆಗೆದು ಕಟ್ಟಿದ ಸೂಡಿ. ಹಣೆಯಲ್ಲಿ ಹದಗಾತ್ರದ ಹೊಳೆಯುವ ಕೆಂಪು ಚಂದಿರ. ಸೌಮ್ಯ ಮುಖ. ಹಿರಿಯಕ್ಕನಂತೆ ” ಬನ್ನಿ ಒಳಗೆ” ಎಂದು ಕೂರಿಸಿ”ಮೇಷ್ಟ್ರನ್ನು ಮಾತನಾಡಿಸಬೇಕಿತ್ತೇ”ಎಂದು ಮೃದು ವಾಗಿ ಕೇಳಿದ್ದರು. ತಲೆಯಲುಗಿಸಿದ್ದೆ. ಹೊಸದೊಂದು ನವಿರು ಬಾಂಧವ್ಯ ಮನಸ್ಸಿಗೆ ಕಟ್ಟಿ ಅವರು ಒಳನಡೆದರು. ಅದು ಗುರುಗಳ ಅಮ್ಮ ಹಾಗೂ ಹೆಂಡತಿ. ನನಗೆ ಅರ್ಥವಾಗದ ಪಾಠಗಳನ್ನು ಸರ್ ಹೇಳಿ ಕೊಟ್ಟರು. ಗುರುಪತ್ನಿ ನಾಗಮಣಿ ಅಮ್ಮ ಅವರು ತಿಂಡಿ, ಕಾಫಿ, ಊಟ, ಪ್ರೀತಿ, ಭಾವ, ಕಾಳಜಿ, ಹಾರೈಕೆ ತುತ್ತು ಉಣಿಸುತ್ತಾ ಹೋದರು. ನಾನು ಆ ಮನೆಯಲ್ಲಿ ಬದುಕಿನಲ್ಲಿ ಎಂದೂ ಸಿಗಲಿಲ್ಲವೆಂದುಕೊಂಡ ವಾತ್ಸಲ್ಯ ಉಂಡು ಚಿಗುರುತ್ತ ಚಿಗುರುತ್ತ ನಡೆದೆ. ನಾನು ಹೋಗುವಾಗೆಲ್ಲ ಸರ್ ತಮ್ಮ ಕುರ್ಚಿಗೆ ಅಂಟಿ ಮೇಜಿನ ಮೇಲೆ ಪೇಪರ್ ಹರವಿ ಬರೆಯುತ್ತಿದ್ದರು. ಕವನ, ಕಥೆ..ಇನ್ನೂ ಏನೋ..ತಮ್ಮ ಇಷ್ಟದ ಭಾವ ತಮಗಿಷ್ಟ ಆಗುವ ಪರಿಯಲ್ಲಿ ಅಕ್ಷರವಾಗಿಸುತ್ತಿದ್ದರು‌ ನಾನು ಸದ್ದಾಗದಂತೆ ಒಳ ನಡೆದು ಅಡುಗೆ ಮನೆಯ ಒಡತಿಯ ಅಕ್ಕರೆಗೆ ಮಗುವಾಗುತ್ತಿದ್ದೆ. ಅಕ್ಷರ ಮತ್ತು ಅಕ್ಕರೆ ಆ ಮನೆಯ ಅವಳಿ ಮಕ್ಕಳು!. ಅವರ ಮನದ ಭಾವತರಂಗಗಳ ನಾದಕ್ಕೆ ನಾನು ಕಿವಿ.  ಆಗ ಸರ್ ಆಕಾಶವಾಣಿಗೆ ಚಿಂತನ ಬರೆದು ಕಳುಹಿಸುತ್ತಿದ್ದರು. ” ಕೇಳು” ಎನ್ನುತ್ತಿದ್ದರು. ನಿಧಾನವಾಗಿ ಗುರುಪತ್ನಿಯ ಚಿಂತನಗಳು ಬರತೊಡಗಿದವು. ಅವರ ಮನದ ಚಿಂತನಗಳು ಶ್ರವಣಕೇಂದ್ರವಾಗಿ ಅಚ್ಚರಿ, ಸೋಜಿಗವಾಗುತ್ತಿತ್ತು. ಹೊಸದೊಂದು ಸೆಳೆತ.  ರೇಡಿಯೋ ಕಥೆ,ಕವನ,ನಾಟಕ. ಎಲ್ಲಿಯೋ ಆಡಿದ ಮಾತು. ಧ್ವನಿತರಂಗಗಳು ಮನೆಯ ಒಳ ಬಂದು ಪಟ್ಟಾಂಗವಾಡುವುದು. ಆಗಲೇ ನಾನು ಬರೆದ ಕಥೆಯನ್ನು ಅವರಿಬ್ಬರೂ ಓದಿ, ಆಕಾಶವಾಣಿಗೆ ಕಳುಹಿಸಿದ್ದು. ಕಥೆ ಓದುವುದು ಹೊಸ ಅನುಭವ.” ಆರಾಮವಾಗಿ ಓದು. ಭಾವ ತುಂಬಿ ಓದು.  ಅವಸರಿಸಬೇಡ” ನಾಗಮಣಿ ಅಮ್ಮನ ಸಕ್ಕರೆ ಜೊತೆಗಿನ ಅಕ್ಕರೆ ವಾಣಿ ಒಳಗೊಳಗೇ ಮತ್ತೆ ಮತ್ತೆ ಧ್ವನಿಸುತ್ತಿತ್ತು. ಮೊದಲ ಓದು ತಿಳಿಸಿಕೊಟ್ಟವರು ಆಗ ಆಕಾಶವಾಣಿಯಲ್ಲಿ ಯುವವಾಣಿಯ ಜವಾಬ್ದಾರಿ ನಿರ್ವಹಿಸುತ್ತಿದ್ದ ಶರಭೇಂದ್ರಸ್ವಾಮಿಯವರು. ಕಣ್ಣ ಮುಂದೆ ಮನಸ್ಸಿನಲ್ಲಿ ಗೆಜ್ಜೆಕಟ್ಟಿ ಕೂತಿದ್ದ ಪಾತ್ರಗಳು ಅಕ್ಷರಗಳಾಗಿ, ಮಾತಾಗಿ, ಧ್ವನಿಯಾಗಿ ಹೊರಟಿದ್ದವು. ಮುಂದೆ ಬದುಕಿನಲ್ಲಿ ಕಂಡ ಕಥೆ ಕಥೆಗಳು ಅಕ್ಷರಗಳಾದವು. ಗುರುಪತ್ನಿಯ ಶಿಫಾರಸ್ಸು.” ಎಷ್ಟು ಚೆಂದ ಬರ್ದಿದೀಯೇ ಹುಡುಗೀ..”” ನಿನ್ನ ಕಥೆ ನನಗಿಷ್ಟ” ಎನ್ನುತ್ತಾ ನಾಗಮಣಿ ಅಮ್ಮ, ತನ್ನ ಮಡಿಲಲ್ಲಿ ಕೂರಿಸಿ, ಒಪ್ಪ ಮಾಡಿ ಒಬ್ಬ ಕಥೆಗಾರ್ತಿಯನ್ನು ಕಟ್ಟುತ್ತಲೇ ನಡೆದರು. ” ಏನು,ಯಾವ ಕಥೆ? ಬರೆದಿರುವೆಯಾ, ತಾ ಇಲ್ಲಿ. ಕೊಡು.”  ” ವ್ಹಾ, ಮಣಿ ಕಂಡೆಯಾ, ಎಂತಹ ಹೋಲಿಕೆ, ಏನು ಚೆಂದ” ಎನ್ನುತ್ತಾ ಸರ್ ಅವರು,  ನನ್ನೊಳಗೆ ಇದ್ದ, ಇದ್ದೂ  ಇಲ್ಲದಂತಿದ್ದ ಕಥೆಗಾರ್ತಿಯನ್ನು ಬೆಳೆಸಿದರು. ಆಕಾಶವಾಣಿಯೆಂಬ ಅದ್ಬುತ ನನಗೆ ಹೊಸ ಲೋಕದ ದೊರೆತನವನ್ನೇ ಕಾಣಿಕೆ ನೀಡಿದಂತೆ ಶ್ರೀಮಂತಗೊಳಿಸಿತು.  ಜೊತೆಜೊತೆಗೆ ಗುರುದಂಪತಿಗಳ ವಾತ್ಸಲ್ಯ. ಮೊಗೆಮೊಗೆದು ಕೊಟ್ಟ ಪ್ರೀತಿಗೆ ಎಣೆಯುಂಟೇ? ಯಾವ ಹಬ್ಬವಾಗಲಿ ಕರೆ ಬರುತ್ತಿತ್ತು. ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ ಮಾಡಿದ ಸಿಹಿತಿಂಡಿ ಮುಚ್ಚಟೆಯಾಗಿ ತೆಗೆದಿರಿಸಿ ಅವರ ಮನೆಗೆ ನಾನು ಹೋದಾಗ ಕೊಡುತ್ತಿದ್ದರು. ತಾನು ಹೆತ್ತ ಕಂದ ಇವಳು ಎಂಬಂತೆ. ಮನಸ್ಸಿನ ಮಾತು ಹಂಚಿಕೊಳ್ಳುತ್ತಿದ್ದರು. ” ನಿನಗಿಂತ ಆತ್ಮೀಯಳು ಯಾರು ಹೇಳು?” “ಹೇ ಹುಡುಗಿ ,ನನ್ನ ಮಾತು ಸರ್ ಬಳಿ ಹೇಳಬೇಡ.”  “ಎಲ್ಲಿದ್ದಿಯೇ,ಮನೆಗೆ ಬಾ. ಅದೆಷ್ಟು ಮಾತಿದೆ.”  “ನನ್ನ ಬಗ್ಗೆ ಒಂದು ಕಥೆ ಬರಿ ನೋಡುವಾ”  “ಸಂಕ್ರಾಂತಿಯ ಎಳ್ಳು ಬೆಲ್ಲ ಬೇಡ್ವಾ”  ” ನಿನ್ನ ಕಥೆ ನೋಡು ತುಷಾರದಲ್ಲಿ ಬಂದಿದೆ. ಬೇಗ ಬಾ. ಸ್ವೀಟ್ ಹಿಡಕೊಂಡು ಬಾ.” ” ಹೇ,ನಾನೇ‌ ಮಾಡಿದ್ದೇನೆ. ಬಾ ಈಗ”. ಹೀಗೆ ಸದಾ ತೊಟ್ಟಿಕ್ಕುತ್ತಿದ್ದ  ಎಂದೂ ಬತ್ತದ ಮಮತೆಯ ಮಾತುಗಳು.ತಾನೇ ನಾನಾದಂತೆ ನಾನೇ ಆಗಿ ಉಳಿದ ತಾಯಿ. ಈ ಬಂಧ ಹಾಗೇ ಉಳಿದಿದೆ. ಊರು ಬದಲಾದರೇನು? ಮನದ ಭಾವ ಬದಲಾದೀತೇ?”ನಿನ್ನಿಂದ ಸಾಧ್ಯ, ಮಾಡು!. ಮಾಡು!!” ಅನ್ನುತ್ತ ಅಂಜುಬುರುಕಿ ಹೆಣ್ಣನ್ನು ಕಲೆಯ ಮಹಲೊಳಗೆ ಕಿರುಬೆರಳು ಹಿಡಿದು ನಡೆಸಿದವರು.ರಂಗದ ಮೆಟ್ಟಲು ಹತ್ತಲು ಇಂತಹ ದೇವತೆಗಳೂ ಬೇಕಾಗುತ್ತಾರೆ ಎನ್ನುವ ತಿಳಿವು ಮೂಡಿಸಿದವರು.ತಾನು ಕಥೆ ಬರೆದಾಗ ಓದಿ ನೋಡು. ನೀನು ಹೇಳಿದರೆ ನನಗೊಂದು ನೆಮ್ಮದಿ ಎನ್ನುತ್ತ ಆತ್ಮವಿಶ್ವಾಸ ಗಂಟು ನನ್ನಲ್ಲಿ ಜೋಪಾನವಾಗಿಸಿದರು. ಆಕಾಶವಾಣಿಯಲ್ಲಿ ಕಥೆಗಳ ಓದು,ಕಥೆಯ ರಚನೆಗೆ ಮೂಲ ಶಕ್ತಿಯಾದಂತೆ ಮುಂದೆ ರೇಡಿಯೋ ನಾಟಕದ ಹುಚ್ಚು ಆಸೆ ತುಂಬಿತು. ಮುದ್ದು ಮೂಡುವೆಳ್ಳೆಯಂತವರ ನಿರ್ದೇಶನದಲ್ಲಿ ಆಕಾಶವಾಣಿ ಕಲಾವಿದಳಾದೆ.  ರೇಡಿಯೋ ನಾಟಕಗಳಲ್ಲಿ ಅವಕಾಶ ದೊರಕಿದಾಗ ಹೊಸಹೊಸ ನಾಟಕಗಳ ಓದು, ಕಲ್ಪನೆ. ಜೊತೆಗೆ ಶರಭೇಂದ್ರ ಸ್ವಾಮಿಯಂತ ನುರಿತ ನಿರ್ದೇಶಕರು, ಸ್ವರಭಾರ, ಧ್ವನಿಪೆಟ್ಟಿಗೆ, ಭಾವದ ಏರಿಳಿತ ಹೇಳಿ  ಕಲೆಯ ವ್ಯಾಮೋಹ ಅಮಲು ನನ್ನೊಳಗೆ ಹರಿದುಬರಲು ಪ್ರೇರಕ ಶಕ್ತಿಯಾದರು. ಅದು ಪೂರ್ತಿ ಹೊಸ ನಶೆ. ರಂಗದ ಪ್ರವೇಶಕ್ಕೆ ನಿಜವಾದ ಪ್ರವೇಶಿಕೆ. ಆಕಾಶವಾಣಿಯ ಅವಕಾಶದಾಕಾಶ ತೆರೆದ ಗುರುಗಳು ಈ ವರ್ಷ, ಸೂಚನೆ ನೀಡದೆ ನಡೆದಿದ್ದಾರೆ. ನನ್ನ ಬದುಕಿನ  ಗುಡಿಯಲ್ಲಿ ಮಾತ್ರ ಇವರು ಸದಾ ಪ್ರತಿಷ್ಠೆಗೊಂಡು, ಬೆಳಗ್ಗಿನ ಮೊದಲ ಪೂಜೆ ಇವರಿಗೇ ಅನ್ನುವಷ್ಟು ಪ್ರಾತಃಸ್ಮರಣೀಯರು. **************************** ಪೂರ್ಣಿಮಾ ಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 30 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ಹೊಸ್ತಿಲಾಚೆಗಿನ ರಂಗಜೀವಿ ಬದುಕ ರಂಗವನ್ನು ಆತ್ಮ ತೊರೆದಿತ್ತು. ಮನೆಯ ಉದ್ದದ ಚಾವಡಿಯಲ್ಲಿ ಅತ್ತೆಯ ಶರೀರ  ಮಲಗಿತ್ತು. ತಲೆಯ ಬದಿಯಲ್ಲಿ ತೆಂಗಿನ ಕಾಯಿಯ ಒಂದು ಭಾಗದೊಳಗೆ ದೀಪ ಮೌನವಾಗಿ ಉರಿಯುತ್ತಿತ್ತು. ರಾಶಿ ಮೌನಗಳನ್ನು ದರದರನೆ ಎಳೆತಂದು ಕಟ್ಟಿ ಹಾಕಿದ ರಾಕ್ಷಸ ಮೌನ ಘೀಳಿಡುತ್ತಿತ್ತು. ಎದೆ ಒತ್ತುವ, ಕುತ್ತಿಗೆ ಒತ್ತುವ ನಿರ್ವಾತಕ್ಕೆ ಅಂಜಿ ಮುಂಬಾಗಿಲಿಗೆ ಬಂದೆ. ಶರೀರವನ್ನು ಉದ್ದಕ್ಕೆ ನೆಲಕಂಟಿಸಿ ಮುಖವನ್ನು ಅಡ್ಡಕ್ಕೆ ಬಾಗಿಸಿ ‘ಪೀಕು’ ಮಲಗಿದ್ದಾಳೆ. ನಾನು ಅಲ್ಲಿರುವುದು ತಿಳಿದಿಲ್ಲವೇ? ಯಾವಾಗಲೂ ನಡಿಗೆಯ ಪದತರಂಗವನ್ನು ಗಬಕ್ಕೆಂದು ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ಹುಡುಕಾಟ ನಡೆಸುವವಳು ತಾನೇ ವ್ರತ ಹಿಡಿದಂತೆ ಒರಗಿದ್ದಾಳೆ. ನನ್ನ ಕಂಠದಿಂದ ಸ್ವರ ಹೊರಡುತ್ತಿಲ್ಲ. ಎಂದಿನ ಲಾಲಿತ್ಯದಲ್ಲಿ ” ಪೀಕು   ಪೀಕೂ.. ಪೀ….ಕೂ” ಎನ್ನುವ ಭಾವ, ಶಬ್ದ, ಸ್ವರ ಒಣಗಿ ಹೋಗಿದೆ. ಮತ್ತೆ ಒಳನಡೆದೆ.  ಮನೆಯ ಹಿರಿಯ ಜೀವ ಮನೆ ತೊರೆದು  ನಡೆದಿದ್ದರು. ಕಾಲದ ಹೆಜ್ಜೆಗೆ ಸ್ಪಂದಿಸಿ, ಮೌನ ಒಡೆದು ಮಾತು ತೇಕಿ ತೆವಳಿ ನಡೆ ಆರಂಭಿಸಿತ್ತು.ಆದರೆ ಪೀಕು ಮಾತ್ರ ಚಾವಡಿಯ ಮೆಟ್ಟಲಿನ ಕೆಳಗೆ ಕೂತು ಪೇಲವ ದೃಷ್ಟಿಯಿಂದ ಒಳಗೆ ದಿಟ್ಟಿಸುತ್ತ ಮತ್ತೆ ನೆಲಕ್ಕೊರಗುತ್ತಿದ್ದಾಳೆ. ನಾಲ್ಕು ದಿನವಾಯಿತು. ಒಂದಗುಳು ಅನ್ನ,ನೀರು ಮುಟ್ಟಿಲ್ಲ. ಅಕ್ಕನ ಸಾವಿಗೆ ದಿಗಿಲಾಗಿ ಓಡಿ ಬಂದ ಮಾತಿಲ್ಲದ, ಶ್ರವಣಾತೀತ ದೇವತೆ, ತಾರಕ್ಕನೂ ಇದೀಗ ಹೌದೋ ಅಲ್ಲವೋ ಎಂಬಂತೆ ಕಣ್ಣಲ್ಲಿ ತೆಳು‌ವಾಗಿ ನೀರು ತುಂಬಿ ಪೀಕುವಿನ ಬಳಿ ಹೋಗಿ “ವ್ಯಾವ್ಯಾ. ವ್ಯಾ…ವ್ಯಾ ” ಎಂದು ಕೈ,ಕಣ್ಣು ಬಾಯ ಸನ್ನೆಯಲ್ಲಿ ಆಡುತ್ತಿದ್ದಾರೆ. ಯಾವತ್ತೂ ಸ್ಪಂದಿಸುವ ಪೀಕು ಅದೂವುದೂ ನನಗಲ್ಲ ಎಂಬಂತಿದ್ದಾಳೆ.  ನಾನೂ ಹಲವಾರು ಬಾರಿ ಮೈ ಸವರಿ ಮಾತನಾಡಿಸಿಯಾಗಿದೆ.  ರೂಮಿನಲ್ಲಿ ನಿಶ್ಚಲವಾಗಿ ಕೂತ ನನ್ನನ್ನು,  ಸರ್ರೆಂದು ಬಂದ ತಾರಕ್ಕ ಕಣ್ಣು ಉರುಟುರುಟು ತಿರುಗಿಸಿ ನೋಟದಲ್ಲಿಯೇ ಗದರಿಸ ತೊಡಗಿದರು. ನಾನು ಪೀಕು ಬಳಿ ಬಂದೆ. ಆ ಕಪ್ಪು ತುಪ್ಪಳದ ಮೈ ಎತ್ತಿ ಮಡಿಲಲ್ಲಿ ತುಂಬಿ ನೇವರಿಸ ತೊಡಗಿದೆ. ಅನತಿ ದೂರದ ದಂಡೆಯಲ್ಲಿ ಕೂತ ” ಚಿನ್ನು”   ಫಟ್ಟೆಂದು ಹಾರಿ ನನ್ನ ಬಳಿ ಬಂದಳು.  ಅದಕ್ಕೂ ಪೀಕು ಸ್ಪಂದಿಸಲಿಲ್ಲ.  ಹಾಗೆ  ಅಂಗಳದಲ್ಲಿ ನಾನು, ‘ಪೀಕು’ ಮತ್ತು ‘ಚಿನ್ನು’ ನಡುವೆ ಶಬ್ದದ ಹೊಸ್ತಿಲಿನ ಆಚೆಗಿನ ಸಾವಿರದ ಮಾತುಗಳು ವಿನಿಮಯಗೊಳ್ಳುತ್ತಿದ್ದವು. ಹೊತ್ತು‌ ದಣಿ ದಣಿದು ಕಂತುತ್ತಿತ್ತು. ಮೆಲ್ಲಗೆ ಎದ್ದ ಪೀಕು ದಯನೀಯವಾದ ನೋಟ ಹರಿಸಿ ಪಕ್ಕದ ಪಾತ್ರೆಯಲ್ಲಿದ್ದ ನೀರನ್ನು, ತನ್ನ ನೀಳ ನಾಲಿಗೆ ಹೊರ ಚಾಚಿ, ಮೆಲ್ಲಗೆ ಕುಡಿಯತೊಡಗಿದಳು. ಚಿನ್ನು ನೆಗೆಯುತ್ತ‌ ಮನೆಯೊಳಗೆ ಓಡಿದಳು. ಈ ಹಳ್ಳಿಮನೆಯಲ್ಲಿ ಆಟವಾಡಿ  ನನಗೆ ರಸಾನುಭವ ಉಣಬಡಿಸಿದ ಚಿನ್ನು ಹಾಗೂ ಪೀಕು ಎಂಬ ಎರಡು ಪಾತ್ರಗಳನ್ನು ಪರಿಚಯಿಸಲೇ ಬೇಕು.ಕೃಷ್ಣೇಗೌಡರ ಆನೆ, ನಾಯಿ ಕಥೆಯಂತಹ ನಾಟಕ ಕಟ್ಟೋಣದಲ್ಲಿ ಚಿನ್ನು ಪೀಕುರಂತವರ ಪ್ರತ್ಯಕ್ಷ, ಪರೋಕ್ಷ ಪಾತ್ರಾಭಿನಯ ಸಾಮಾನ್ಯವೇ? ಹಸಿರುತೋಟದ ನಡುವೆ, ಆಗಸ ಮತ್ತು ಅಂಗಳದ ನಡುವೆ ಹೆಂಚಿನ ಮಾಡು. ಅಂಗಳರಂಗದ ಇಂಚಿಂಚೂ ಬಳಸಿಕೊಂಡು ಹೊಸ್ತಿಲಿನಾಚೆಗೆ ಮತ್ತು ಈಚೆಗೆ ಜೀವಾಭಿನಯ. ಪೀಕು ಎಂಬ ನಾಯಿ, ಅದಾಗಲೇ ಆ ಮನೆಗೆ, ಪರಿಸರಕ್ಕೆ ಹಳಬಳಾಗಿದ್ದಳು. ನಂತರ ಪ್ರವೇಶ ಪಡೆದ  ಬಿಳೀದೇಹದ ಬೆಕ್ಕು-ಪುಟಾಣಿ ಚಿನ್ನು.ಚಿನ್ನು ವಿಪರೀತ ಕೀಟಲೆ. ನಮ್ಮ ಬೆರಳುಗಳೊಂದಿಗೆ, ಮಲಗಿದಾಗ ತಲೆಗೂದಲಿನೊಂದಿಗೆ ಆಟವಾಡಿ ತರಲೆ ಮಾಡುವ ತುಂಟಿ.   ಪೀಕು ಹಾಗೂ ಚಿನ್ನು ಇವರ ನಡುವಿನ ಕೋಪ, ಮುನಿಸು, ಕೀಟಲೆಗಳನ್ನೊಳಗೊಂಡ ಆಟದಂತಹ ಜಗಳ ನಡೆಯುತ್ತಲೇ ಇತ್ತು. ಇದು ಮನರಂಜನೆ. ಆದರೆ ತುಸು ಭಯ ಹುಟ್ಟಿಸುತ್ತಿತ್ತು. ಅದೊಂದು ಘಟನೆಯಂತೂ ಅಚ್ಚರಿ, ಭಯ, ದುಃಖ ಎಲ್ಲವನ್ನೂ ಜೊತೆಜೊತೆಯಾಗಿಸಿತ್ತು.ಚಿನ್ನುಗೆ ಮನೆಯ ಒಳಗಿನ ಅಧಿಪತ್ಯವಾದರೆ ಪೀಕುವಿನ ಸಾಮ್ರಾಜ್ಯ ಹೊರಗಡೆ. ಎರಡೂ ಸಾಮ್ರಾಜ್ಯಗಳ ನಡುವೆ ಮನೆಯ ಹೊಸ್ತಿಲು.  ಪುಟ್ಟ ದೇಹದ ಬಿಳಿ ಬಣ್ಣದ ಚಿನ್ನು ಎಲ್ಲರ ಮುದ್ದು. ಮನೆ ಮಂದಿ ಹಾಲ್ ನಲ್ಲಿ ಕುರ್ಚಿ, ಸೋಫಾಗಳಲ್ಲಿ ಕೂತರೆ ಅಡುಗೆ ಮನೆಯಲ್ಲಿ ತೂಕಡಿಸುತ್ತಿದ್ದವಳು ಮೊಲದಂತೆ ನೆಗೆಯುತ್ತ ಓಡಿಬರುತ್ತಿದ್ದಳು. ಕಾಲಿಗೆ ಮುಖ ಉಜ್ಜಿ ಸಣ್ಣನೆಯ ಸ್ವರದಲಿ ಮಿಯ್ಯಾಂವ್ ಎಂದು ಆಲಾಪಿಸಿ ಎಂದು ತನ್ನ ಮುಖ ಎತ್ತಿ ನಮ್ಮ ಮುಖವನ್ನೇ ನೋಡಿ ಕಣ್ಣು ಮಿಟುಕಿಸುತ್ತ ಒಂದೇ ನೆಗೆತಕ್ಕೆ ಸೋಫಾ ಏರುತ್ತಿದ್ದಳು. ನೇರವಾಗಿ ಮಡಿಲ ಬಿಸಿಗೆ ತವಕಿಸಿ ತನ್ನ ಹಕ್ಕು ಎಂಬಂತೆ ಕೂತು ಬಿಡುತ್ತಿದ್ದಳು. ಹೊಸಿಲ ಹೊರಗಿನ ಪೀಕುವಿಗೆ ಆಗಲೇ ತಳಮಳ. ಕಾಲಿನಿಂದ ನೆಲ ಕೆರೆಯುತ್ತ,ಬೊಗಳುತ್ತ, ಅಳುತ್ತ ತನ್ನ ಪ್ರತಿಭಟನೆ, ಅಸಹನೆ ತೋರ್ಪಡಿಸುತ್ತಿತ್ತು. ಹೊಸತಾಗಿ ಬಂದ ಈ ಲಾವಣ್ಯವತಿ, ತನಗಾಗಿ ಮುಡಿಪಾಗಿದ್ದ ಅಷ್ಟೂ ಪ್ರೀತಿಯನ್ನೂ ಕಸಿದುಕೊಂಡರೆ!.  ಚಿನ್ನುವಿಗೆ ಇದೊಂದು ಆಟದಂತೆ. ಕೂತವರ ಮಡಿಲಿನಿಂದ ಜಾರಿದರೂ  ಹೋಗುವುದು ನೇರ ಹೊಸಿಲಿನ ಬಳಿ. ಹೊಸಿಲ ಮೇಲೆ, ಅಥವಾ ಹೊಸಿಲಿನಿಂದ ಹೊರಗೆ ತಪಸ್ವಿಯಂತೆ ಕೂತು ಪೀಕುವನ್ನೇ ನೋಡುವುದು. ಅವಳಿಗೆ ಅದುವರೆಗಿನ ಸಿಟ್ಟು ಮತ್ತಷ್ಟು ಹೆಚ್ಚಿ ತನ್ನನ್ನು ಕಟ್ಟಿ ಹಾಕಿದ ಸರಪಳಿ ಕತ್ತರಿಸಿ ಹಾಕಿ ಇವಳ ಹಿಡಿದು ಬಿಡುವೆ ಎನ್ನುವಂತೆ ಸರಪಳಿ ಎಳೆಯುತ್ತಾಳೆ ಈ ಸರಪಳಿಯ ಅಳತೆ ಚಿನ್ನುವಿಗೆ ಸರಿಯಾಗಿ ಗೊತ್ತಿದೆ. ಅವಳು ಅಳತೆ ಪಟ್ಟಿ ಹಿಡಿದು ದೂರ ಅಳೆದು, ಕರಾರುವಾಕ್ಕಾಗಿ , ಪೀಕುವಿನ ಕಾಲು,ಮುಖ ತಾಗಿತು ಅನ್ನುವಷ್ಟು ಹತ್ತಿರ ಆದರೂ ತಾಗದಂತೆ ಕೂತು ಬಿಡುತ್ತಿದ್ದಳು. ಕೆಲವೊಮ್ಮೆ ಬೊಗಳಿ ತನ್ನನ್ನು ಕಟ್ಟಿದ ಸರಪಳಿ ಎಳೆದು ಎಳೆದು ಸುಸ್ತಾಗಿ ಪಚಪಚ ಎಂದು ನೀರು ಕುಡಿಯುತ್ತಿದ್ದಳು. ಅವಳನ್ನು ಸಾಕಷ್ಟು ಗೋಳುಹೊಯ್ಸಿದ ನಂತರವೇ ಈ ಪುಟಾಣಿ ಚಿನ್ನು ಹೊಸಿಲು ಬಿಟ್ಟು ಹೊರಡುತ್ತಿದ್ದದ್ದು. ಇದು ಯಾವುದೋ ಒಂದು ದಿನದ ಲಕಥೆಯಲ್ಲ. ಇದು ಎಂದೂ ಮುಗಿಯದ ಧಾರವಾಹಿ. ಎಷ್ಟು ಎತ್ತಿ ತಂದರೂ ಚಿನ್ನು ಕುಳಿತು ಕೊಳ್ಳುವುದು ಅಲ್ಲೇ. ಕೆಲವೊಮ್ಮೆ ನಿಧಾನವಾಗಿ ತನ್ನ  ಎದುರಿನ ಕಾಲು ಮುಂದೆ ತಂದು ಮಲಗಿದ್ದ ಪೀಕುವನ್ನು ಮುಟ್ಟಿ ಎಚ್ಚರಿಸಿ ಥಟ್ಟೆಂದು ಓಡಿ ಒಂದು ತನ್ನ ಜಾಗದಲ್ಲಿ ಕೂತು ನುರಿತ ಆಟಗಾರಳಂತೆ ಕದನ ಆರಂಭಿಸುವುದೂ ಇದೆ. ಅದೊಂದು ದಿನ ಮನೆಯೊಳಗೆ ಮನೆಮಂದಿ ಹರಟೆಯಲ್ಲಿದ್ದಾಗ ಥಟ್ಟೆಂದು ಪೀಕು ಮನೆಯೊಳಗೇ ಬಂದು ಬಿಟ್ಟಳು ಹಾಗೆಲ್ಲ ಅತಿಕ್ರಮ ಪ್ರವೇಶ ಮಾಡುವ ಹೆಣ್ಣಲ್ಲ ಅದು. ಹೀಗೆ ಏಕಾಏಕಿ ಬಂದು ನಮ್ಮ ಮುಖವನ್ನು ಆತಂಕದಲ್ಲಿ ನೋಡಿದಂತೆ ನೋಡಿ ಹೊರಗೋಡಿದಳು. ಹಿಂತಿರುಗಿ ನೋಡಿ ನಾವು ಅವಳನ್ನು ಹಿಂಬಾಲಿಸುತ್ತಿಲ್ಲವೆಂದು ಮತ್ತೆ ಓಡಿ ಒಳಬಂದು ಬಾಲವನ್ನು ನನ್ನ ಮೈಗೆ ಸವರಿ, ಮುಖನೋಡುತ್ತ ತನ್ನ ಭಾಷೆಯಲ್ಲೇ “ಹ್ಹುಂ  ಹ್ಹೂಂ… ಬೌ…..”ಎನ್ನುತ್ತ ಹೊರಗೋಡುತ್ತ ಚಡಪಡಿಸುತ್ತಿದ್ದಳು. ಇದನ್ನು ನೋಡಿದ ಅತ್ತೆ ಮಗನಿಗೆ” ಏನೋ ಆಗಿದೆ. ಅವಳ ಹಿಂದೆ ಹೋಗು. ಹಾವು ಗೀವು ಬಂದಿರಬೇಕು. ಎಲ್ಲಿ ಬಡಿದು ಹಾಕಿ ತೋರಿಸಲು ಬಂದಿದ್ದಾಳೋ..”ಎಂದು ಮಣಮಣಿಸುತ್ತಿದ್ದರು. ನಾನೂ,ನನ್ನವರೂ ಓಡಿದೆವು. ಪೀಕು ನಮ್ಮನ್ನು ಬಟ್ಟೆ ಒಗೆಯವ ಬಾವಿ ಕಟ್ಟೆಯ ಹತ್ತಿರ ಕರೆದೊಯ್ದಳು.  ಹಳ್ಳಿಯ ಮನೆಯಲ್ಲಿ ಪಾತ್ರೆ, ಬಟ್ಟೆ ಎಲ್ಲವನ್ನೂ ತೊಳೆಯಲು ಮನೆಯ ಹೊರಗಡೆ, ಅನತಿ ದೂರದ ಬಾವಿಕಟ್ಟೆಯ ಸಮೀಪವೇ ವ್ಯವಸ್ಥೆಯಾಗಿತ್ತು. ಅಲ್ಲಿಂದ ತೊಳೆದ ನೀರು ಹರಿದು ತೆಂಗಿನ ಮರದ ಬುಡಕ್ಕೆ ಹೋಗುತ್ತಿತ್ತು. ಸತತ ನೀರು ಹೋಗಿ ಅಲ್ಲಿ ಆಳ ಗುಂಡಿಯಂತೆ ಆಗಿತ್ತು. ಕಪ್ಪನೆ ಕೆಸರು ಮಣ್ಣು ತುಂಬಿಕೊಂಡಿದೆ. ಪೀಕು ಅದರ ಸಮೀಪ ಕರೆದೊಯ್ದು ನಮ್ಮ ಮುಖವನ್ನೂ, ಆ ಹೊಂಡವನ್ನೂ ನೋಡಿ ಆಕಾಶಕ್ಕೆ ಮುಖ ಎತ್ತರಿಸಿ ದೀರ್ಘ ಆಲಾಪ ತೆಗೆಯತೊಡಗಿದಳು.ನನ್ನವರು ಕೂತು ನೀರು, ಮಣ್ಣು, ಕೆಸರು ತುಂಬಿದ ಆ ಜಾಗವನ್ನೇ ತದೇಕ ದೃಷ್ಟಿಯಿಂದ ನೋಡುತ್ತಿದ್ದಾಗ ಕಪ್ಪು ತುಸು ಅಲುಗಿದಂತೆ ಕಾಣಿಸಿತು.  ಕೂಡಲೇ ತಮ್ಮ ಕೈಯನ್ನು ಕೆಸರಿನೊಳಗೆ ಹಾಕಿ ಕಪ್ಪು ಕೆಸರಿನ ಮುದ್ದೆ ಹೊರತೆಗೆದರು. ನೀರು ಸುರಿದರು. ನಾನು ವಿಸ್ಮಯ ನೇತ್ರ ಳಾಗಿ ನೋಡುತ್ತಿದ್ದೇನೆ. ಚಿನ್ನುವಿನ ಪುಟ್ಟ..ನಿಶ್ಚಲವಾದ ದೇಹ. ಅಳು ಒತ್ತರಿಸಿ ಬಂತು” ಅಯ್ಯೋ ನಮ್ಮ ಚಿನ್ನು ಏನಾಯಿತು. ಸತ್ತು ಹೋಯಿತೇ ” ಪೀಕು ಅಪರಾಧಿಯಂತೆ ದೂರಹೋಗಿ ನಿಂತು ನನ್ನ ನೋಡುತ್ತಿದ್ದಾಳೆ.  ” ಇಲ್ಲ ಜೀವ ಇದೆ” ನನ್ನವರ ಮಾತಿನಿಂದು ತುಸು ಗೆಲುವಾಗಿ ಕೈಯಲ್ಲಿ ಸತ್ತಂತಿರುವ ಆ ಜೀವ ಹಿಡಿದು ಒಳಗೋಡಿ ಬಂದೆ. ಬೆಚ್ಚನೆಯ ಟವಲಿನಿಂದ ಮೈ ಒರೆಸಿ ದೇಹ ಬೆಚ್ಚಗಾಗಿಸಲು ಪ್ರಯತ್ನಿಸಿದೆ. ಹಾಗೇ ಬಿದ್ದಿತ್ತು. ಸ್ವಲ್ಪ ಹೊತ್ತು ಬಿಟ್ಟು ಕಣ್ಣು ನಿಧಾನವಾಗಿ ತೆರೆದು ನೋಡಿ ಹಾಗೇ ಮಲಗಿತು.ನಾವು ಒಳ ಹೊರಗೆ ಹೋಗುವಾಗೆಲ್ಲ ಎಂದಿನ ಗತ್ತು ತೋರದೆ ಪೀಕು ಅಪರಾಧಿಯಂತೆ ಕಳ್ಳ ನೋಟ ಬೀರುತ್ತಿದ್ದಳು ಆ ದಿನವೆಲ್ಲ ಚಿನ್ನುವನ್ನು ಗಮನಿಸುವುದೇ ಕೆಲಸ. ಸಂಜೆಯ ಸಮಯ ತೇಲಿದಂತೆ ಎದ್ದು ಹಾಲು ಕುಡಿದಳು. ಮರುದಿನ ಚಿನ್ನು ಸುಸ್ತಾದಂತೆ ಕಂಡರೂ ಆರೋಗ್ಯ ವಾದಳು. ನಂತರ ಒಂದಷ್ಟು ಕಾಲ ಚಿನ್ನು ಹೊಸಿಲ ಮೇಲೆ ಕೂತು ಅಣಕಿಸುವ, ಪೀಕುವನ್ನು ಛೇಡಿಸುವ ಆಟ ಸ್ಥಗಿತಗೊಳಿಸಿದಳು.  ಹೊರಹೋಗಬೇಕಾದರೂ ಪೀಕುವಿನ ಸಮೀಪದಿಂದ ಓಡಿಕೊಂಡು ಗಡಿ ದಾಟುತ್ತಿದ್ದಳು. ಪೀಕೂ ಮೊದಲಿನಂತೆ ಕಾಲುಕೆರೆದು ಆರ್ಭಟಿಸುತ್ತಿರಲಿಲ್ಲ. ಮೌನವಾಗಿ ಕೂತು ಓಡುವ ಚಿನ್ನುವನ್ನು ಗಮನಿಸುತ್ತಿದ್ದಳು. ಇದಾಗಿ ಹಲವು ದಿನಗಳ ನಂತರ ಮತ್ತೆ ಚಿನ್ನುವಿಗೆ ತುಂಟತನದ ಆಸೆ ಹೆಚ್ಚಿ, ಕಟ್ಟಿ ಹಾಕಿದ ಪೀಕುವಿನ ಬಳಿ ಅಂತರ ಇಟ್ಟು ಕೂರುತ್ತಿದ್ದಳು. ಆದರೆ ಇದು ಮೊದಲಿನಷ್ಟು ಉಮೇದು ಹೊಂದಿರಲಿಲ್ಲ. ಕೆಲ ನಿಮಿಷಕ್ಕೆ ಈ ಆಟ ಮುಗಿದು ಬಿಡುತ್ತಿತ್ತು. ಅಂತಹ ಪೀಕು ಮನೆಯೊಡತಿಯ ಅಗಲಿಕೆಗೆ ಮೌನವಾದಳು. ಅವಳ ಮೌನಕ್ಕೆ ಚಿನ್ನು ಶ್ರುತಿ ಹಿಡಿದಳು. ಪೀಕು ನಿಧಾನವಾಗಿ ಸಹಜಸ್ಥಿತಿಯತ್ತ ಬರುತ್ತಿದ್ದಂತೆ ಚಿನ್ನೂ ಗೆಲುವಾದಳು. ರಂಗದಲ್ಲಿ ಭಾವನೆಗಳ ಜೊತೆಯಲ್ಲಿ ಕಲಾವಿದರು ಆಟ ಆಡುತ್ತೇವೆ. ಜಗತ್ತಿನ ಶ್ರೇಷ್ಠ ಜೀವಿ ಮಾನವ. ನಮಗೆ ನೋವು ನಲಿವು ಎರಡನ್ನೂ ತೀವ್ರವಾಗಿ ಅನುಭವಿಸುವ ಶಕ್ತಿ ಇದೆ. ಅದನ್ನೇ ರಂಗದಲ್ಲಿ ಅಭಿನಯಿಸಿ ತೋರುತ್ತೇವೆ. ಆದರೆ ಇಂತಹ ಅದೆಷ್ಟೋ ಘಟನೆಗಳು,ಪ್ರಾಣಿ ಪ್ರಪಂಚದ ವರ್ತನೆಗಳು, ನಮ್ಮ ತಿಳುವಳಿಕೆ ಎಷ್ಟು ಅಪೂರ್ಣ ಎಂದು ನೆನಪಿಸುತ್ತದೆ. ಪ್ರಾಣಿಗಳೂ ಅದೆಷ್ಟು ಆಳವಾಗಿ ನೋವು ನಲಿವು ಕ್ರೋಧ, ಮುನಿಸುಗಳನ್ನು ತೋರಬಲ್ಲವು.  ಅವುಗಳ ರಂಗಸ್ಥಳ ಬಹಳ ದೊಡ್ಡದು. ನೈಜವಾದುದು. ಸಹಜವಾದುದು. ಆ ಪರಿಕರಗಳಲ್ಲಿ ಯಾವುದೇ ಮುಖವಾಡಗಳಿಲ್ಲ. ಕೆಲವೊಮ್ಮೆ ಈ ಅಭಿನಯದ ಆಟ ಅವುಗಳಿಗೆ ಪ್ರಾಣಾಪಾಯಕಾರಿಯೂ ಹೌದು. *********************************** ಪೂರ್ಣಿಮಾ ಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 30 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ರಂಗ ರಂಗೋಲಿ
ಹೊರಗಡೆ ಕಪ್ಪು ಇರುಳು. ತೆಂಗಿನಪಾತಿ ಕಪ್ಪಾಗಿ ಅದರ ಹಿಂಬದಿ ಚಿತ್ತಾರಗೊಂಡು ಅರಳಿದ ಚಂದಿರನನ್ನು ಆ ಮರದ ಕಿಟಕಿಯ ಸರಳುಗಳ ನಡುವಿನಿಂದ ನೋಡುತ್ತಲೇ ಇದ್ದೆ. ಮಲಗಿದ ಭಂಗಿ ಸಡಿಲಿಸಿ ಅದೇ ಹಳೆಯ ದೊಡ್ಡ ಮಂಚದ ಮೇಲೆ ಕೂತು ಕಣ್ಣಬೊಗಸೆಗೆ ದಕ್ಕುವಷ್ಟು ದೂರ ದೃಷ್ಟಿ ನೆಟ್ಟರೆ, ಎದೆಗಿಳಿಯುತ್ತಿದ್ದ ಚಂದ್ರಿಕೆಯ ಒಡಲ ರಾಗ ತುಂಡಾಗಿ ಬಿಡುವ ಅಂಜಿಕೆ

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಪೂರ್ಣಿಮಾ ಸುರೇಶ್
ಈಗ ಅನಿಸುತ್ತದೆ. ನವರಸಗಳನ್ನು ರಂಗದಲ್ಲಿ ಅನುಭವಿಸಿ ಎದುರಿನಲ್ಲಿ ಕೂತು ನೋಡುವ ಮನಸ್ಸುಗಳಿಗೆ ವರ್ಗಾಯಿಸಬೇಕಾದರೆ, ಮೊದಲು ಅದಕ್ಕಿಂತ ಹಿರಿದಾದ ರಂದಲ್ಲಿ ನಾವೂ ಪಾತ್ರವಾಗುವ ಅದ್ಬುತಕ್ಕೆ ತೆರೆದುಕೊಳ್ಳುತ್ತ, ಭಾವಗಳನ್ನು ಆರ್ತಿಯಿಂದ ಹೃದಯದೊಳಗೆ ಭರಿಸಬೇಕು. ಆಗ ರಂಗಭೂಮಿಯಲ್ಲಿ ಭಾವನೆಗಳ ಜೊತೆಗಿನ ಆಟ ಸುಲಲಿತವಾದೀತು.

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ವಿಕ್ರಮಶಿಲಾ” ಮೂರು ಮಹಡಿಯ ಕಟ್ಟಡದ ಮೆಟ್ಟಲುಗಳನ್ನು ಏರುತ್ತಿದ್ದೆ‌. ಹಂಚಿನ ಮಾಡಿನ ಶಾಲೆಯ ಆಂಗಳದಿಂದ ಮಂಗಳನ ನೆಲದತ್ತ ಹಾರಿ ಹೊರಟ ಉಪಗ್ರಹದ ಏಕಾಂಗೀ ಹೆಜ್ಜೆಗಳವು.

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ಮುಗಿಲ ಪ್ರೇಮದಿ ಕಳೆಗಟ್ಟಿತು ಇಳೆ ನನ್ನ ಅರಳಿದ ಬೊಗಸೆಯೊಳಗೆ ಅವಳು ಸುರಿದ ಹಣದಲ್ಲಿ  ಮಡಚಿದ ಹತ್ತು, ಐದು, ಎರಡು, ಒಂದರ ‌ನೋಟುಗಳು. ಅಘ್ರಾಣಿಸಿದರೆ ಅವಳ ಬೆವರು ಹಾಗೂ ಹಸುಗಳ ಉಸಿರನ ಪರಿಮಳ ಬೆರೆತುಬಂದಂತೆ. ಆ ದಿನ ಬೆಳಗ್ಗೆ ನನ್ನಜ್ಜಿ ನನ್ನನ್ನು ಹತ್ತಿರ ಕರೆದು ಕೂರಿಸಿಕೊಂಡಳು “ಬಾಳೀ, ನಿನ್ನ ಶಾಲೆಯಲ್ಲಿ ಇವತ್ತು ಗಮ್ಮತ್ತು ಅಲ್ವಾ. ನೀನು ಕಲಾವಿದೆ. ತಗೋ 100 ರೂಪಾಯಿ. ಇವತ್ತು ಹೊಸ ದಿರಿಸು ತಗೋ. ನಿನ್ನಿಷ್ಟದ್ದು. ಅದನ್ನು ಹಾಕಿಕೊಂಡು ಹೋಗು. ನೋಡು,ನಿನ್ನ ಖುಷಿ  ಮತ್ತಷ್ಟು ಜಾಸ್ತಿಯಾಗಲಿ.” ಆಗೆಲ್ಲ ಹೊಸ ವಸ್ತ್ರ ಬರುವುದು ವರ್ಷಕ್ಕೊಮ್ಮೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ. ಈಗ ಸಿಕ್ಕಿದ್ದು ಬೋನಸ್. ಅದು ನನ್ನಜ್ಜಿ ಹಾಲು ಮಾರಿ ಬಂದ ಹಣದಲ್ಲಿ ಉಳಿತಾಯ ಮಾಡಿದ ಕಾಸು. ಅವಳ ಕಣ್ಣಲ್ಲಿ ನನಗಾಗಿ ಬೆಳಗುವ ದೀಪಾವಳಿ. ಅಮ್ರಪಾಲಿ ನಾಟಕದ ಗುಂಗಿನಲ್ಲಿ ನನ್ನ ಶಾಲಾ ದಿನಗಳು ಚಿಗುರುತ್ತಲೇ ಇದ್ದವು. ಶಾಲೆಯ ಪಕ್ಕದಲ್ಲಿ ಕೆರೆ- ದಡ ಆಟಕ್ಕೆ ಮಕ್ಕಳು ಕೈಕೈ ಬೆಸೆದು ನಿಂತಂತೆ ,ರೈಲಿನ ಬೋಗಿಗಳ ಕೊಂಡಿ ಹೆಣೆದಂತೆ ಒಂದೇ ಬಣ್ಣ ಬಳಿದುಕೊಂಡ ಉದ್ದನೆಯ ಸಾಲು ಸಾಕು ಮನೆಗಳು. ಕೊಂಡಿ ಸಿಕ್ಕಿಸಿದಂತೆ ನಡುನಡುವೆ ಹದಿಹರೆಯದ ಪೇರಳೆ ಗಿಡಗಳು. ಒಂದೊಂದು ಮನೆಯ ಕಿಟಕಿ, ಬಾಗಿಲಿಗೆ ಮನಸ್ಸು ಆನಿಸಿದರೆ‌ ಮೆಲ್ಲಮೆಲ್ಲನೆ ಒಂದೊಂದು ಬಗೆಯ, ರುಚಿಯ ಕಥೆಗಳು ಆಕಳಿಕೆ ಮುರಿದು ತೆರೆದುಕೊಳ್ಳುತ್ತವೆ. ಅಲ್ಲಿ ರಂಗಿನೊಡನೆ ಸ್ಪರ್ಧಿಸುವ ಹೂವುಗಳು,  ಹೂಗಳನ್ನು ನೇವರಿಸುವ ಹುಡುಗಿಯರು. ಸಂಜೆಯ ಹೊತ್ತು ಮನೆಗಳ ಹಿಂದೆ ಇರುವ ಖಾಲಿ ಜಾಗದಲ್ಲಿ  ಹುಡುಗರು, ಗಂಡಸರು ವಾಲಿಬಾಲ್ ಆಟ ಆಡಿದರೆ ಹುಡುಗಿಯರು ಸೇರಿಕೊಂಡು ಕಾಲೇಜಿನಲ್ಲಿ ನಡೆದ ಪ್ರಸಂಗಗಳು, ಹುಡುಗರ ಕೀಟಲೆ, ತಮ್ಮ ಪ್ರತಿಕ್ರಿಯೆ, ಹೀಗೆ ರಾಶಿ ಮಾತುಗಳನ್ನು ಪೇರಿಸಿ ಕೆನ್ನೆ ಕೆಂಪಾಗಿಸಿ ಮನಸ್ಸಿಗೆ ಯಾವು ಯಾವುದೋ ಹೊಸ ಹೊಸ ಕುಡಿಮೀಸೆಯ ಮುಖಗಳನ್ನು ತೂಗು ಹಾಕುತ್ತಿದ್ದರು. ಒಂದು ವಾರ ಬಿಟ್ಟು ನೋಡಿದರೆ ಆ ಮಾತಿನ ಒಂದಿಷ್ಟೂ ಗುರುತು ಸಿಗದಂತೆ ನವನವೀನ ಪ್ರಸಂಗಗಳು, ಜುಳುಜುಳು ನಗೆ, ಗಲಗಲ ಮಾತು ಹರಿಯುತ್ತಿತ್ತು.  ಅದೆಷ್ಟು ಹುಡುಗಿಯರು ಮಂಜುಳ, ಕವಿತಾ, ಮೀನಾ,ಸರೋಜ,ಮಲ್ಲಮ್ಮ ಎಲ್ಲರೂ ಆ ಸರಕಾರಿ ವಸತಿಗೃಹಗಳ ಜೀವ ಕುಸುಮಗಳು. ಅವರ ಅಣ್ಣ, ಅಪ್ಪ, ಚಿಕ್ಕಪ್ಪ, ಮಾವ ಹೀಗೆ ಮನೆಯ ಸದಸ್ಯರೊಬ್ಬರು ಸರಕಾರಿ ಹುದ್ದೆಯಲ್ಲಿದ್ದ ಕಾರಣ ಆ ಸರಪಳಿ ಸಿಕ್ಕಿಸಿ ನಿಂತ ಮನೆಗಳಲ್ಲಿ ಇವರಿದ್ದಾರೆ.  ನಮ್ಮೂರು ಅವರಿಗೆ ಸಾಕುತಾಯಿ.  ಅಲ್ಲೇ ಆ ದೊಡ್ಡ ಬೇಲಿಯ ಗಡಿ ದಾಟಿ‌ರಸ್ತೆಗೆ ಬಂದು ನಿಂತರೆ ಆಗಷ್ಟೆ ಸಣ್ಣ ಹಾಡಿಯಂತಿದ್ದ ಜಾಗ ಸಮತಟ್ಟಾಗಿ ಗೆರೆಮೂಡಿಸಿ ಮೂರು ಮನೆಗಳು ತಲೆಎತ್ತಿ ಕೂತಿದೆ. ಅದರಲ್ಲೊಂದು‌ ನಮ್ಮ‌ಮನೆ. ಹತ್ತರ ಪಬ್ಲಿಕ್ ಪರೀಕ್ಷೆಯ ಗೇಟು ದಾಟಿ ಬಾಲ್ಯದ ಭಾವಗಳನ್ನು ಕಳಚಿ ಪೀಚಲು ಕನಸಿನ ಜೋಳಿಗೆ ಬಗಲಲ್ಲಿಟ್ಟು ಕಿರಿಯ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಕಣ್ಣಿಗೆ ಕಾಣುವ ಬಣ್ಣಗಳಿಗೆ ನೂರೆಂಟು ತಡೆಗೋಡೆಗಳು. ಆದರೂ ಮೂಲೆ ಮೂಲೆಯ ಕಚಗುಳಿ ಮುಚ್ಚಟೆಯಾಗಿ ಎದೆಗಾನಿಸಿ ಸುಳ್ಳುಪೊಳ್ಳು ನಗೆಯಿಂದ ರಂಗೋಲಿ ಅರಳುತ್ತಿತ್ತು. ಚುಕ್ಕಿಚುಕ್ಕಿಗಳ ಸೇರ್ಪಡೆಯಿಂದ ವಿಸ್ತರಿಸುತ್ತಿತ್ತು. ಈ ಚುಕ್ಕಿಗಳದ್ದೇ ರಾಜ್ಯ ಅಲ್ಲಿ. ಆ ಸಮವಸ್ತ್ರತೊಟ್ಟ ಮನೆಗಳ ಸಾಲಿನಲ್ಲಿತ್ತು. ಅಲ್ಲಿಗೆ ಸಂಜೆಯ ಸಮಯ ಮೆಲ್ಲಡಿಯಿಡುತ್ತ ಹೋಗುವುದು. ಸುಮ್ಮಸುಮ್ಮನೆ ಹೋಗುತ್ತಿರಲಿಲ್ಲ. ಹಾಗೆ ಹೋಗುವುದಕ್ಕೂ ಬಲವಾದ ಕಾರಣ ವೂ ಇತ್ತು. ಆ ಸಮಯ ನನ್ನಜ್ಜ ಅಜ್ಜಿ ಒಂದಷ್ಟು ದನಗಳನ್ನು ಸಾಕುತ್ತಿದ್ದರು. ಆ ದನಗಳು ನಮ್ಮ‌ಮನೆಯ ಆರ್ಥಿಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದವು. ಸಂಜೆ ಕಾಲೇಜಿನಿಂದ ಬಂದ‌ ನನಗೆ ಈ ಬೇಲಿಯೊಳಗಿನ ಮನೆಮನೆಗಳಿಗೆ ಹಾಲು ಸರಬರಾಜು ಮಾಡುವ ಕೆಲಸ.  ಇದು ಎರಡು ಮೂರು ಟ್ರಿಪ್ ಆಗುವುದೂ ಇದೆ. ಎರಡೂ ಕೈಗಳಲ್ಲಿ ಹಾಲು ತುಂಬಿದ ತಂಬಿಗೆಯ ಬಾಯಿಗೆ ನನ್ನ ಬೆರಳುಗಳ ಮುಚ್ಚಳ ಸೇರಿಸಿ ಹೋಗುತ್ತಿದ್ದೆ. ಮನೆ ಮನೆಯ ಬಾಗಿಲಲ್ಲಿ ನಿಂತು ” ಹಾಲೂ..” ಎಂದು ಮನೆಯವರನ್ನು ಕೂಗುವುದು. ಅಮ್ಮನಂತವರು,ಅಕ್ಕನಂತವರು ಮಾತ್ರವಲ್ಲ ಅಪರೂಪಕ್ಕೆ ಹುಲಿಕಣ್ಣಿನ ಗಂಡುಗಳೂ ಆ ಮನೆಯ ಗುಹೆಗಳಲ್ಲಿ ಕಂಡಿದ್ದೂ ಇದೆ. ಇಲ್ಲಿಯೇ ಬಿಳೀ ಬಣ್ಣದ ದಪ್ಪ ದೇಹದ ನಳಿನಿ ಆಂಟಿ ನನಗೆ ಬದುಕಿನ ಮೊದಲ ವ್ಯಾನಿಟಿ ಬ್ಯಾಗ್ ಕೊಟ್ಟು ನಕ್ಕಿದ್ದರು. ಎಂತಹ ಖುಷಿಯದು. ಗಾಢ ನೀಲಿ ಬಣ್ಣದ ಜಂಭದ ಚೀಲ. ಅದುವರೆಗೆ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಅದನ್ನು ಎದೆಗಾನಿಸಿಕೊಂಡು ಹೋಗುತ್ತಿದ್ದೆ. ಈಗ ಪುಸ್ತಕಗಳಿಗೂ ವಿಶ್ರಾಂತಿಗೆ, ಪಯಣಕ್ಕೊಂದು ಗೂಡು. ಚಲಿಸುವ ಮನೆ ಸಿಕ್ಕಿತು.  ಈ ಬಾಗಿಲು ತಟ್ಟುವ ಕಾಯಕ  ಮುಗಿಸಿದ ನಂತರ ಸ್ವಲ್ಪ ಹೊತ್ತು ಹೆಣ್ಮಕ್ಕಳ ಮೀಟಿಂಗ್. ನನಗಿಂತ ಒಂದು, ಎರಡು ವರ್ಷ ಕಿರಿಯರು, ಹಿರಿಯರು ಪಾಲ್ಗೊಳ್ಳುವ ಸಭೆಯದು. ಪ್ರತಿಯೊಂದು ಕುಸುಮ ಕುಸುಮಿಸುವ ಪರಿ ಭಿನ್ನ. ಇಳೆ ಒರತೆ ತುಂಬಿಕೊಳ್ಳುವ ಕಾಲ. ನಮ್ಮ ಶಾಲೆ ಕಾಲೇಜುಗಳೂ ಬೇರೆಬೇರೆ. ನಾವು ಈ ಹುಡುಗರು ವಾಲಿಬಾಲ್ ಆಡುವ ಜಾಗದ ಒಂದು ಮೂಲೆಯಿಂದ ಆಚೀಚೆ ಹೋಗುವ ಪ್ರಸಂಗಗಳೂ ಇದ್ದವು. ಆಗೆಲ್ಲ ಅವ್ಯಕ್ತ ಕಂಪನಕ್ಕೆ ಕಳೆಗಟ್ಟುವ ಎಳೆ ಮನಗಳು ನಮ್ಮವು. ತಲೆಎತ್ತಿ ಅಲ್ಲಿರುವ ಗಂಡುಹುಡುಗರಿಗೆ ದೃಷ್ಟಿ ಕೂಡಿಸುವ ದಾರ್ಷ್ಟ್ಯವು  ಆ ನಾಜೂಕು ಹುಡುಗಿಯರಿಗೆ ಇರಲಿಲ್ಲ. ಆ ಹುಡುಗರೂ ಜೋರಾಗಿ ದೂರು ಕೊಡುವ ಮಟ್ಟದ ಕೀಟಲೆ ಮಾಡಿದ್ದೂ ಇಲ್ಲ.  ಈ ನಮ್ಮಹುಡುಗಿಯರ ಬೈಠಕ್ ನಲ್ಲಿ ಒಂದು ವಿಶೇಷತೆಯಿತ್ತು. ನಮ್ಮ ಜೊತೆ ಬಿಂದು ಎಂಬ ಒಬ್ಬ ಹುಡುಗನಿದ್ದ.  ರಂಗಕ್ಕೆ ಎಳೆದೊಯ್ದರೆ ಕೃಷ್ಣನ ಪಾತ್ರಕ್ಕೆ ಹೊಂದುವಂತಹ ಮುಖ. ನಸುಗಪ್ಪು ಬಣ್ಣ. ನಗುತುಂಬಿದ ಕಣ್ಣುಗಳು.  ನಮ್ಮೆಲ್ಲರಿಗೂ ಆತ್ಮೀಯ ಸ್ನೇಹಿತ. ನಮ್ಮ ಹೆಚ್ಚಿನ ಮಾತುಗಳಿಗೆ ನಮ್ಮ ಭಾವ ತುಡಿತಗಳೊಂದಿಗೆ ಒಂದಾಗುವ, ಸಲಹೆ ನೀಡುವ ಗೆಳೆಯ. ಬಲು ಚಿಕ್ಕವನಿರುವಾಗ ಪೋಲಿಯೊದಿಂದ ಒಂದು ಕಾಲು ತುಸು ಎಳೆದಂತೆ ನಡೆದಾಡುತ್ತಿದ್ದ. ಹುಡುಗರ ಆಟಕ್ಕೆ ಅವನು ನಿಷೇದಿಸಲ್ಪಟ್ಟಿದ್ದ.   ಆ ಸಮಯದಲ್ಲಿ ನಾನು ಗುಂಪಿನ ಒಳ್ಳೆಯ ಕೇಳುಗಳು. ಜೊತೆಗೆ ಉಳಿದವರಿಗಿಂತ ಚೂರು ಕಮ್ಮಿ ಕಥೆಗಳು ನನ್ನಲ್ಲಿ ಶೇಖರಿಸಲ್ಪಟ್ಡಿದ್ದವು. ಅಲ್ಲದೆ ಕಥೆಯ ಅಂಚಿಗೆ ಬಂದು ಕೂರುವ ಭಾವಗಳೂ ಎದೆಕಡಲಿನಿಂದ ನೆಗೆದು ಹೊರಬರಲು ಹವಣಿಸಿದರೂ ತುಟಿಗಳಿಗೆ ಅದೃಶ್ಯ ಹೊಲಿಗೆ ಹಾಕಿದಂತಾಗಿ ಮೌನದ ನಾದಕ್ಕೆ ಮನ ಜೋಡಿಸಿಕೊಂಡಿದ್ದೆ. ಭಾವನ ತಮ್ಮನೊಂದಿಗಿನ ಒಲವಿನ ಮಾತು, ಕದ್ದು ಕೊಟ್ಟ ಮುತ್ತು, ಸಿಹಿ ಮಾತನಾಡಿ ಬೇರೆ ಹೆಣ್ಣಿನ ಚಿತ್ರ ತೋರಿಸಿದ ಅತ್ತಿಗೆಯ ತಮ್ಮ,  ಕಾಲೇಜಿಗೆ ಬಂದ ವಿದೇಶಿ ವಿದ್ಯಾರ್ಥಿ ಅವನೊಂದಿಗೆ ಬದಲಾಯಿಸಿಕೊಂಡ ಪುಸ್ತಕ, ಚಾಕಲೇಟು, ಬಸ್ ನಿಲ್ದಾಣದವರೆಗಿನ ಜೊತೆ ಹೆಜ್ಜೆಗಳು ಹೀಗೇ  ಏನೇನೋ ಹಂಚಿಕೆಗಳು ಮಾತಿಗೆ ಕಂಪು ಬೆರೆಸುತ್ತಿದ್ದವು.  ಮೊದಲ ವರ್ಷದ ಪಿ.ಯು.ಸಿ ಇರುವಾಗ ಮತ್ತೆ ಬಂದಿತು ವಾರ್ಷಿಕೋತ್ಸವ. ಸಂಭ್ರಮವೋ ಸಂಭ್ರಮ. ನಾನೀಗ ಹಿರಿಯ ವಿದ್ಯಾರ್ಥಿನಿಯರ ಪಟ್ಡಿಯಲ್ಲಿದ್ದೆ.  “ಸ್ಕೂಲ್ ಡೇ” ಅಂದರೆ ನಾಟಕವಿದೆ. ನಾಟಕ ಇದ್ದ ಮೇಲೆ ನಾನೂ ಇರಲೇಬೇಕು. ಮನಸ್ಸು ತಕತಕ ಕುಣಿಯುತ್ತಿತ್ತು.  “ಬೌಮಾಸುರ” ಎಂಬ ನಾಟಕ. ಬೌಮಾಸುರ ದ್ವಿತೀಯ ಪಿ.ಯು. ವಿದ್ಯಾರ್ಥಿನಿ. ಎತ್ತರಕ್ಕಿದ್ದಳು. ಅವಳ ಸ್ವರವೇ ತುಸು ಗಡಸು. ನನಗೆ ಪ್ರಥ್ವೀದೇವಿ ಪಾತ್ರ. ಸೌಮ್ಯ ಪಾತ್ರ, ಪುಟ್ಟ ದೇಹದ ನಾನು ಭೂತಾಯಿ. ಬೌಮಾಸುರನ ಮಾತೆ.  ರಿಹರ್ಸಲ್ ಗಳು ಆರಂಭವಾದವು. ಮೇಘರಾಜನಿಗೆ ಪ್ರಥ್ವೀದೇವಿಯಲ್ಲಿ ಪ್ರೀತಿ ಅಂಕುರಿಸಿ ಜಲಲ ಝಲಲ ಜಲಧಾರೆ. ನೆಲ.ಮುಗಿಲಿನ ಸಂಗಮಕೆ ಜನಿಸಿದ ಅಸುರ ಭೌಮಾಸುರ. ಆಗೆಲ್ಲ ಕಾಲೇಜಿನ ಕಾರಿಡಾರ್ ನಲ್ಲಿ ನಾನು ನಡೆಯುತ್ತಿದ್ದರೆ ನನ್ನ ನಡೆಯ ಶೈಲಿಯೇ ಬದಲಾದಂತೆ ಮನಸ್ಸಿಗೆ ಅನಿಸುತ್ತಿತ್ತು. ನಾನು ಬೇ..ರೆಯೇ, ಇವರೆಲ್ಲರಿಗಿಂತ ಭಿನ್ನ, ನಾನು ಪ್ರಥ್ವೀದೇವಿ. ಕನಸಿನಲ್ಲೇ ನನ್ನ ಇರುವಿಕೆ. ಊಟ, ತಿಂಡಿ, ಓದು ಎಲ್ಲವೂ. ಒಂದು ಸುಂದರ ರಾಗ, ಪಾತ್ರಾನುರಾಗ ನನ್ನ ಜೀವವನ್ನು ತೊನೆದಾಡಿಸುತ್ತಿತ್ತು. ವಾರ್ಷಿಕೋತ್ಸವದ ದಿನ ನಮಗೆ‌ ಸಂಜೆ ಆರುಗಂಟೆಗೆ ಬರುವಂತೆ ಸೂಚನೆ ನೀಡಲಾಗಿತ್ತು.  ಹಗಲಲ್ಲೂ ಸಣ್ಣ ಹೆದರಿಕೆಯ ಜೊತೆ ಬೆಸೆದುಕೊಂಡ ದೊಡ್ಡ ಸಂತಸದಲ್ಲಿ ಆಡುತ್ತಿದ್ದೆ. ಮನೆಯಲ್ಲಿ ಯಾರಾದರೂ ಕುಡಿಯಲು ನೀರು ತರಲು ಹೇಳಿದರೂ ಹೋದವಳು ಅಲ್ಲಲ್ಲೇ ಸ್ತಬ್ದಳಾಗಿ ಮನಸ್ಸಿನಲ್ಲಿ ಪ್ರಥ್ವಿದೇವಿಯ ಮಾತುಗಳೇ ಕುಣಿದು, ಮುಖ, ಕಣ್ಣಿನಲ್ಲಿ ಅದರ ಪ್ರತಿಫಲನ. ಮನೆಯವರು ಹತ್ತಿರ ಬಂದು ಎಚ್ಚರಿಸಬೇಕು.  ಈ ಸಂದರ್ಭದಲ್ಲಿಯೇ, ನನ್ನ ಉಡುಪಿಗಾಗಿ, ಅಜ್ಜಿ ಮಡಿಲು ಬಸಿದು ಕೊಟ್ಟದ್ದು ನೂರು ರುಪಾಯಿ. ಅದುವರೆಗೂ ನಾನು ಅಂಗಡಿಗೆ ಹೋಗಿ ಡ್ರೆಸ್ ತಗೊಂಡವಳಲ್ಲ. ಏನಿದ್ದರೂ ಮನೆಯಲ್ಲಿ ತಂದದ್ದು, ಇಲ್ಲವಾದರೆ ಬಾಬಣ್ಣನ ಅಂಗಡಿಯಲ್ಲಿ ಮಾವನವರ ಹಳೆಯ ಪ್ಯಾಂಟ್ ಕೊಟ್ಟು ಅದರಲ್ಲಿ ಸ್ಕರ್ಟ್ ಅವರ ಷರ್ಟ್ ನಲ್ಲಿ ಬ್ಲೌಸ್ ಹೊಲಿಸುವುದು ವಾಡಿಕೆ.  ” ಅಮ್ಮಾ ಯಾರು ತಂದು ಕೊಡ್ತಾರೆ..”ಅಂತ ನಾನಂದರೆ,”ನೀನೇ ಪ್ರಭಾವತಿ ಒಟ್ಟಿಗೆ ಹೋಗಿ ತಾ”ಎಂದಳು. ನಮ್ಮ ಮನೆಯ ಹಿಂದೆ ಗೆಳತಿ ಪ್ರಭಾ ಮನೆ. ಓಡಿದೆ. ಅವಳು ಅವಳಮ್ಮನ ಹತ್ತಿರ ಒಪ್ಪಿಗೆ ಪಡೆದು ಇಬ್ಬರೂ ಸೇರಿ ರೆಡೆಮೇಡ್ ಬಟ್ಟೆ ಅಂಗಡಿಗೆ ಹೋದೆವು. ರಾಶಿ ಹಾಕಿದ ಡ್ರೆಸ್ಸಗಳ ನಡುವೆ ಆರಿಸುವುದು ಹೇಗೆ? ಆಗೆಲ್ಲ ಟ್ರಾಯಲ್ ರೂಮ್ ಗೆ ಹೋಗಿ ದಿರಿಸಿನ ಅಳತೆ ಸರಿಯಾಗಿದೆಯೇ ಎಂದು ಪರೀಕ್ಷೆ ಮಾಡಿ ಕೊಳ್ಳಲು ಸಾಧ್ಯ ಎಂಬುದು ನಮ್ಮ ಅರಿವಿನ ಸರಹದ್ದಿಗಿಂತಲೂ ಬಹಳ ದೂರದ ಮಾತು.  ಒಟ್ಟಾರೆ ಗೊಂದಲ. ಕೊನೆಗೂ ಕಡುಕೆಂಪು ಬಣ್ಣದ ಚೂಡೀದಾರ ಆರಿಸಿ  ಬಹಳ ಸಂಭ್ರಮದಿಂದ ಮನೆಗೆ ಬಂದೆವು. ಮನೆಗೆ ಬಂದು ಹಾಕಿದರೆ ನಾನು, ಪ್ರಭಾವತಿ ಇಬ್ಬರೂ ಅದರ ಬಸಿರಲ್ಲಿ ಆಶ್ರಯ ಪಡೆಯಬಹುದು. ಅಷ್ಟು ಅಗಲದ ಕುರ್ತಾ, ಕೆಳಗೆ ದೊಗಳೆ ಪ್ಯಾಂಟ್. ಬೆರ್ಚಪ್ಪನಿಗೆ ಅಂಗಿ ತೊಡಿಸಿದಂತೆ ಕಾಣುತ್ತಿದ್ದೆ. ಆದರೇನು ಮಾಡುವುದು ಸಂಜೆಯಾಗಿದೆ. ಒಳಲೋಕದಲ್ಲಿ ಪ್ರಥ್ವೀದೇವಿಯ ಗಲಾಟೆ ನಡೆಯುತ್ತಲೇ ಇದೆ. ಗೆಳತಿಯರಿಗೆಲ್ಲ ಬರಲು ಒತ್ತಾಯಿಸಿ ಆಗಿದೆ. “ಬಿಂದು” ನನ್ನ ಜೊತೆಗೆ ನನ್ನ ನಾಟಕದ ಕೆಲವುಸಾಮಾಗ್ರಿಗಳ ಚೀಲ ಹಿಡಿದು ತಯಾರಾದ. ಅವನಿಗೆ ನನಗಿಂತ ಹೆಚ್ಚಿನ ಉತ್ಸಾಹ, ತಳಮಳ.  ಗಳಿಗೆ ಗಳಿಗೆಗೆ ನೆನಪಿಸುತ್ತಿದ್ದ. ಚೆಂದ ಮಾಡು ಮಾರಾಯ್ತೀ, ಚೆಂದ ಮಾಡು. ಎಲ್ಲರಿಗಿಂತ ನಿನ್ನ ಆಕ್ಟ್‌ ಚೆಂದ ಆಗಬೇಕು. ಅಜ್ಜಿಯ ಕಾಲಿಗೆ ವಂದಿಸಿ ನಾವು ಹೊರಟೆವು. ಮಂದ ಕತ್ತಲು ಇಳಿಯುತ್ತಿತ್ತು. ಹೊಸ ಚೂಡೀದಾರದ ಪರಿಮಳ ಹೊಸತನದ ನಶೆ ಬೀರುತ್ತಿತ್ತು. “ತಡವಾಯಿತು.. ಬೇಗ ಬಿಂದೂ”ಎಂದು ವೇಗದ ಹೆಜ್ಜೆ ಹಾಕುತ್ತಿದ್ದೆ.  ಮುಖ್ಯರಸ್ತೆಗೆ ಇನ್ನೇನು ತಲುಪಿದೆವು ಅನ್ನುವಾಗ ” ಫಟ್” ಎಂದಿತು. ನಾನು ಥಟ್ಟನೆ ನಿಂತೆ. ಪಾದಗಳು ಒಂದಕ್ಕೊಂದು ಜೋಡಿಸಿದಂತೆ ಇಟ್ಟಿದ್ದೆ. ದೀನಳಾಗಿ ಸ್ನೇಹಿತನ ಮುಖ ನೋಡಿದೆ. ಅವನಿಗೇನೂ ಅರ್ಥವಾಗ ” ಎಂತಾಯ್ತು, ಹೋಗುವ ಮಾರಾಯ್ತಿ” ಎನ್ನುತ್ತಾನೆ. ಎಲ್ಲಿಗೆ ಹೋಗುವುದು. ಹೆಜ್ಜೆ ಮುಂದಿಡುವುದು ಸಾಧ್ಯವೇ ಇಲ್ಲ. ಚೂಡಿದಾರದ ಪ್ಯಾಂಟಿನ ಲಾಡಿ ಒಳಗೇ ತುಂಡಾಗಿ ಬಿಟ್ಟಿದೆ. ಹಾಗೇ ನಿಲ್ಲುವ ಹಾಗಿಲ್ಲ. ಮುಂದೆ ಹೋಗುವ ಹಾಗೂ ಇಲ್ಲ.ಪ್ಯಾಂಟ್ ಕೆಳಗೆ ಬೀಳುವ ಹೆದರಿಕೆ. ವಿಪರೀತ ಭಯದಲ್ಲಿ ಕಣ್ಣು ತುಂಬಿತ್ತು.  ” ಬಿಂದೂ..” ಏನು ಹೇಳುವುದು..ಸರಿಯಾಗಿ ಹೇಳಲೂ ಆಗದೇ “ಪ್ಯಾಂಟ್ ತುಂಡಾಯಿತು”  “ಬೇಗ ಬೇಗ ನಡೀ ಕಾಲೇಜಿಗೆ ಎಂದ. ನನ್ನ ಸಂಕಟ ಹೆಚ್ಚುತ್ತಿತ್ತು. ಹೊಟ್ಟೆ ನೋವಿನಿಂದ ನರಳುವವರ ಹಾಗೆ ಪ್ಯಾಂಟ್ ಬೀಳದಂತೆ ಹೊಟ್ಟೆ ಹಿಡಿದುಕೊಂಡೆ. ಆದರೆ ನಡೆಯುವುದು ಕಷ್ಟ. ಊರೆಲ್ಲ ನನ್ನನ್ನೇ ನೋಡುವುದು ಎಂಬ ಭಾವದಿಂದ ನಾಚಿಕೆ,ಅವಮಾನದ ಸಂಕಟದಿಂದ ಬಿಕ್ಕಳಿಸತೊಡಗಿದೆ. “ಎಂತಾಯ್ತ..ಎಂತಾಯ್ತಾ” ಕೇಳುತ್ತಿದ್ “ನಡೆಯಲು ಆಗುವುದಿಲ್ಲ” ಎಂದೆ. ಸುತ್ತ ನೋಡಿದ. ಅಲ್ಲಿ ಮೂಲೆಯಲ್ಲಿ ಪಾಳು ಬಿದ್ದ ಚಿಕ್ಕ ಅಂಗಡಿಯಂತಹ ಮನೆಯಿತ್ತು. ಆದರೆ ಅದು ಮುಖ್ಯರಸ್ತೆಯ ಬಳಿಯಲ್ಲೇ.” ಬಾರಾ..ಅಲ್ಲಿ ನಾನು ಅಡ್ಡ ನಿಲ್ತೇನೆ. ನೀನು ಏನಾದರೂ ಸರಿ ಮಾಡು”. ಎಂದ. ಅರೆ ಜಾರಿದ ಡ್ರೆಸ್ ಕುರ್ತಾದ ಮೇಲಿನಿಂದ ಮುಷ್ಠಿಯಲ್ಲಿ ಹಿಡಿದಂತೆ ಹಿಡಿದು

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ವಸಂತ ಬಂದ! ರಂಗಕ್ಕೆ ರಂಗು ತಂದ!! ವೈಶಾಲಿ ನಗರದ ಬೀದಿ. ವೈಭವದ ಅರಮನೆ. ಅದು ರಾಜನ ಅರಮನೆಯಲ್ಲ. ನಗರದ ಮುಖ್ಯ ನೃತ್ಯಗಾರ್ತಿ,ರಾಜನರ್ತಕಿ ಆಮ್ರಪಾಲಿಯ ಮನೆ. ಆಮ್ರಪಾಲಿ ಚಿಗುರು ಮಾವಿನ ತಳಿರಂತಹವಳು. ಅವಳ ಸೌಂದರ್ಯದ ಕಥನ ಕೇಳಿ ನೆರೆ ಹೊರೆಯ ರಾಜರೂ, ರಾಜಕುಮಾರರೂ ಬಂದಿದ್ದಾರೆ. ಅವಳ ಪ್ರೇಮ ಭಿಕ್ಷೆಗಾಗಿ ಹೊರಬಾಗಿಲಲ್ಲಿ ಸರದಿಯಲ್ಲಿ ಕಾಯುತ್ತಿದ್ದಾರೆ. ಆಕೆ ಒಳಗಡೆ ಇದ್ದಾಳೆ, ಪ್ರಣಯದ ತುರೀಯದ ಅಮಲಲ್ಲಿ. ಆದರೂ ಅದೇನೋ ಬೇಸರ. ಅವಳನ್ನು ಆವರಿಸಿದೆ. ಎಲ್ಲವೂ ಇದ್ದರೂ ಏನೋ ಕೊರತೆ. ತಳಮಳ.  ಬಿಂದುಸಾರನಂತಹ ಮಗಧ ಚಕ್ರವರ್ತಿ ಮಾರುವೇಷದಲ್ಲಿ ಬಂದು ಅವಳ ಪಾದದ ಬಳಿ ಪ್ರೇಮ ಭಿಕ್ಷೆ ಬೇಡುತ್ತಾನೆ. ಆಮ್ರಪಾಲಿ ಪ್ರಣಯ ವೈಭವದಲ್ಲಿರುವಾಗಲೇ ಸಖಿ ಅರಹುತ್ತಾಳೆ. ನಗರಕ್ಕೆ ಗೌತಮ ಬಂದಿದ್ದಾರೆ. ಆಮ್ರಪಾಲಿಯ ಜೀವ, ಜೀವನ ಪಲ್ಲಟಗೊಳ್ಳತ್ತದೆ. ಗೌತಮ ಆಮ್ರಪಾಲಿಯ ಮನೆಗೆ ಬರುತ್ತಾನೆ. ಎಂತಹ ಅದ್ಬುತ ಕಥೆ. ಆಮ್ರಪಾಲಿ..ಗೌತಮ ಬುದ್ದ. ನಾನೂ ಕಥೆಯ ಮೋಹಕ್ಕೊಳಗಾಗಿದ್ದೆ.‌ ಆಮ್ರಪಾಲಿಯ ಕಾಲಕ್ಕೆ ಸಂದುಹೋಗಿದ್ದೆ. ನನಗೆ ಅದರಲ್ಲಿ ರಾಜಕುಮಾರನ ಪಾತ್ರ. ಆಮ್ರಪಾಲಿಯನ್ನು ಕಾಣ ಬೇಕೆಂಬ ತುಡಿತ. ಆಕೆಯ ಎದುರು ಮಣಕಾಲೂರಿ ಬೇಡಿಕೆ. ಅಷ್ಟೆ..ಅಷ್ಟೇ ನನ್ನ ಪಾತ್ರ.  ಆಮ್ರಪಾಲಿ, ” ನೀನಿನ್ನೂ ಚಿಕ್ಕ ಬಾಲಕ. ನಿನ್ನ ರಾಜ್ಯಕ್ಕೆ ಹಿಂತಿರುಗು” ಎನ್ನುತ್ತಾಳೆ. ನನಗೆ ನಿಜಕ್ಕೂ ಹಿಂತಿರುಗಲಾಗುತ್ತಿರಲಿಲ್ಲ. ಇನ್ನು ಎರಡು ಮಾತುಗಳಿದ್ದರೆ!. ಆಮ್ರಪಾಲಿಯ ಎದುರು ಇನ್ನೇನಾದರೂ ಹೇಳುವಂತಿದ್ದರೆ..ಆಸೆ. ಅದು ತುಡಿತ. ಮೋಹದಸೆಳೆತ..ಏನಂದರೂ ಒಪ್ಪುವ ಭಾವ ತೀವ್ರತೆ.  ನಾಟಕದ ತರಬೇತಿ ನಡೆಯುವಾಗಲೂ ನಾನು ಆಮೃಪಾಲಿಯ ಹಿಂದೆ,ಬಿಟ್ಟ ಕಣ್ಣು ಬಿಟ್ಡಂತೆ ನೋಡುತ್ತಿದ್ದೆ. ನಾಟಕದ ದಿನ ಎಂತಹ ರೋಮಾಂಚನಗಳು. ನನಗೆ ರಾಜಕುಮಾರನ ದಿರಿಸುಗಳು. ಸಿಕ್ಕಿಸಿದ್ದ ಖಡ್ಗ,ಕಿರೀಟ..ಸಂತಸದ ಹೊಳೆಯೊಂದು ಒಳಗಡೆ ಕುಪ್ಪಳಿಸುತ್ತ ಹರಿಯುತ್ತಿತ್ತು. ಆಮ್ರಪಾಲಿ ಎಂತಹ ಸೌಂದರ್ಯ. ಅದೆಷ್ಟು ಆಭರಣಗಳು, ಚೆಂದದ ಸೀರೆ. ನಾಟಕ ಮುಗಿದರೂ ಅದೇ ಗುಂಗು. ಆಮ್ರಪಾಲಿ..ಆಮ್ರಪಾಲಿ ನಾನು ರಾಜಕುಮಾರನ ಪಾತ್ರವೇ ಆಗಿದ್ದೆ. ತಳ್ಳಿಸಿಕೊಂಡು ಹೊರದಬ್ಬಲ್ಪಟ್ಟ ರಾಜಕುಮಾರ. ಕನಸಿನ ಹೂ ನಸು ಬಿರಿದು ಕಂಪು ಸೂಸಲು ಆರಂಭಿಸಿತ್ತು. ಈ ನಾಟಕದ ಪಾತ್ರ ನನಗೆ ಸಿಕ್ಕಿದ್ದರ ಹಿಂದೆ ಬಣ್ಣ ಕಲಸುವ ಕುಂಚದಂತಹಾ ಮನಸ್ಸಿತ್ತು. ಏಳನೇ ತರಗತಿಯ ಶಾಲೆಯ ಅಂಗಳದಿಂದ ಹಿರಿಯಡಕ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಎತ್ತರದ ಕಟ್ಟಡ ಸಮುಚ್ಛಯದೊಳಗೆ ಹೆಜ್ಜೆಯಿಟ್ಟ ಗುಬ್ಬಿ ಮರಿಯ ಪುಕ್ಕ ಬೆಳೆದಿತ್ತು. ಎಂಟನೆಯ ತರಗತಿಯಿಂದ ಪಿಯೂಸಿ ವರೆಗೆ. ವಾರ್ಷಿಕೋತ್ಸವಕ್ಕೆ ಒಂದು ನಾಟಕ. ಉಳಿದಂತೆ ನೃತ್ಯಗಳು. ನನಗೆ ಈ ನೃತ್ಯವೆಂಬುದು ಬಲು ಕಠಿಣ. ಸಂಜೆ ಮನೆಗೆ ಹೋದ ಬಳಿಕ ಮನೆಯ ಹತ್ತಿರದ ಗೆಳತಿಯರಿಗೆ,ತಂಗಿಗೆ ಮನೆಯ ಹಿಂದಿನ ಹಾಡಿಯ ಮರದ ಬುಡದಲ್ಲಿ ನನಗೆ ಕಂಠಪಾಠ ಆಗಿದ್ದ ಅದೆಷ್ಟೋ ಭಕ್ತಿಗೀತೆಗಳಿಗೆ ನೃತ್ಯಸಂಯೋಜನೆ ಮಾಡಿ ನಿರ್ದೇಶಕಿಯಾಗಿದ್ದೆ. ಅದು ಬಲು ಗುಟ್ಡಿನ ತಾಲೀಮು. ನಾನು ತಂಡದಲ್ಲಿ ಸೇರಿಕೊಂಡು ಕುಣಿಯುವುದು.. ಅಬ್ಬಬ್ಬಾ..ಎಂತ ಕಷ್ಟ. ಅದಕ್ಕೆ ಅದನ್ನು ಬಿಟ್ಟು ನನ್ನ ಪರಮ ಪ್ರೀತಿಯ ನಾಟಕದತ್ತ ಹೊಂಚು ಹಾಕಿದ್ದೆ. ಆದರೆ ಅದು ದೊಡ್ಡ ಹುಡುಗಿಯರಿಗೆ ಮೀಸಲಾಗಿತ್ತು. ಪಿಯುಸಿ ಓದುವ ಚೆಂದದ ಸವಿತಾ ಅನ್ನುವವರು ನಾಟಕದ ನಾಯಕಿಯಾಗಿ ಆಯ್ಕೆಯೂ ಆಗಿಯಾಗಿತ್ತು. ನಾಟಕದ ಉಸ್ತುವಾರಿ ತೆಗೆದುಕೊಂಡ ಉಪನ್ಯಾಸಕರ ಬಳಿ ಹೋಗೆ ದೀನಳಾಗಿ ನಿಲ್ಲುತ್ತಿದ್ದೆ. ಹೇಳಲು, ಕೇಳಲು ಸಂಕೋಚ.  ಕೊನೆಗೂ ಅವರ ಕೃಪೆ ದೊರಕಿ ಪಿ.ಯು.ಸಿಯವರೇ ತುಂಬಿದ್ದ ನಾಟಕದಲ್ಲಿ ಎಂಟನೆಯ ತರಗತಿಯ ನಾನು ಸೇರ್ಪಡೆಯಾಗಿದ್ದೆ. ಹಾಗೆ ಹದಿಹರೆಯದ ರಾಜಕುಮಾರನ ಪಾತ್ರದ ಕಣ್ಣೊಳಗೆ ಅಮ್ರಪಾಲಿ ರಂಗು ಚೆಲ್ಲಿದ್ದಳು. ಎಂಟನೇ ಕ್ಲಾಸ್ ಎಂದರೆ!. ಅದು ಅಂದ, ಅದು ಚಂದ, ಅದು ಶೃಂಗಾರದತ್ತ ಕಣ್ಣು ತೆರೆಯುವ ಕದ. ಆಟವೆಂಬ ಆಟದಲ್ಲಿ ಮುಳುಗಿದ್ದ ನಮಗೆ ವಿಸ್ಮಯಗಳ ಲೋಕ ತೆರೆದಂತೆ. ಹೊಸತನ್ನು ಹುಡುಕುವ, ಮುಚ್ಚಿದ ಬಾಗಿಲಿನಾಚೆಯೇನಿದೆ ಎಂಬ ಅನ್ವೇಷಕ ಕುತೂಹಲದ, ಗೋಡೆಯಾಚೆಗಿನ ಶಬ್ಧ ಸ್ಪರ್ಶಗಳ, ಹಗಲು ಕನಸುಗಳ ತುಂಬಿದಂಗಳ. ವಿಶಾಲವಾದ‌ ಮೈದಾನ. ಅದಕ್ಕೆ ಬೇಲಿ ಹಾಕಿದಂತೆ ಎರಡು ಬದಿ ಕಟ್ಟಡ ಒಂದು ಬದಿಯಲ್ಲಿ ಸಾಲು ಮರಗಳು. ಮಗದೊಂದು ಬದಿ ರಾಜದ್ವಾರ ತೆರೆದಂತೆ ಇರುವ ಕೆಂಪು ಮಣ್ಣಿನ ರಂಗಸ್ಥಳವದು. ಇಲ್ಲೇ ಎಷ್ಟು ಆಟಗಳು, ಪರೀಕ್ಷೆಗೆ ಕ್ಲಾಸಿಗೆ ಹೋಗುವ ಮುನ್ನ ಕೊನೆಯ ಜೀವದಾನದ ಗುಟುಕಿನಂತೆ ಸಿಗುವ ಓದು, ಸ್ನೇಹಿತರೊಂದಿಗೆ ಹಂಚಿ ತಿಂದ ಜಂಬೂ ನೇರಳೆ ಹಣ್ಣು, ಕಾಗೆ ಎಂಜಲು ಮಾಡಿ ಜೊತೆಗೆ ಮೆಲ್ಲಿದ ಮಾವಿನ ಮಿಡಿ, ಹುಣಿಸೆ ಹಣ್ಣು, ಪೇರಳೆ. ಆ ಎಲ್ಲ ನೆನಪುಗಳಿಗೆ ಈ ಮಣ್ಣಿನ ರುಚಿಯೂ ಇದೆ, ಜತೆಗೆ ವಾಸನೆಯೂ . ಮೈದಾನದ ಪಶ್ಚಿಮಕ್ಕೆ‌ ಮುಖ್ಯರಸ್ತೆ. ರಸ್ತೆಯ ಆ ಬದಿ ಸರಕಾರಿ ಆಸ್ಪತ್ರೆ. ಖಾಸಗಿ ಡಾಕ್ಟರ್ ಗಳು ಇದ್ದರೂ ಆಗೆಲ್ಲ ಊರಿನವರ ಮೊದಲ ಆಯ್ಕೆ ಸರಕಾರಿ ಆಸ್ಪತ್ರೆಯಾಗಿತ್ತು.  ಮೆಟ್ಟಲು ಹತ್ತಿ ಒಳಗೆ ಹೆಜ್ಜೆ ಇಟ್ಟರೆ ಕೋಳಿ ಗೂಡಿನೊಳಗೆ ಕೂತಂತೆ ಚೀಟಿ ಬರೆಯುವ, ಮದ್ದು ಕೊಡುವ, ಡಾಕ್ಟರ್ ಬಳಿ ಕಳುಹಿಸುವ  ಕಂಪೌಂಡರ್ ನ ಕತ್ತೆತ್ತಿ ಚಾಚಿದ ಮುಖ ಕಾಣಿಸುತ್ತದೆ. ಪ್ರಾಥಮಿಕ ವಿಚಾರಣೆ ನಡೆಯುವುದು ಅವರ ಬಳಿ. ಅಲ್ಲಿಂದ ಎಡಕ್ಕೆ ತಿರುಗಿದರೆ ಬಾಗಿಲಿಗೆ ನೇತು ಬಿದ್ದ ನೀಲಿ ಪರದೆಯ ಸಂದಿನಲ್ಲಿ ಡಾಕ್ಟರ್ ರೂಮಿನ ಮೇಜು, ಸ್ಕೆತಸ್ಕೋಪ್ ನ  ಉದ್ದದ ಬಾಕ್ಸ್ ಕಾಣಿಸುತ್ತದೆ.  ದಾಟಿ ಹೋದರೆ ಪರೀಕ್ಷಾಕೊಠಡಿ,  ನಂತರ ಲೇಡಿ ಡಾಕ್ಟರ್ ರೂಮ್.  ಹಿಂದೆ ಬಂದು ಕಾಂಪೌಂಡರ್ ಗೂಡಿನಿಂದ ಮುಂದೆ ನೇರಕ್ಕೆ ಹೋದರೆ ಒಂದು, ಎರಡು, ಮೂ..ರು ಕೊಠಡಿ. ಅದು ಅಲ್ಲಿ ದಾಖಲಾದ ರೋಗಿಗಳಿಗೆ. ನಮ್ಮದು ಬಾಲ್ಯ, ಹರೆಯ ಎರಡೂ ಅಲ್ಲದ, ಎಲ್ಲೂ ಒಪ್ಪದ, ಅಲ್ಲೂ ಇಲ್ಲೂ ಸಲ್ಲುವ ಬದುಕಿನ ಸಂಕ್ರಮಣದ ಕಾಲ.  ತರಗತಿಯ ನಡುವಿನ ಬಿಡುವಿನಲ್ಲಿ ನಾವು ಆಸ್ಪತ್ರೆಗೆ ಹೋಗುವುದು. ಅಲ್ಲಿ ಮಲಗಿರುವ ರೋಗಿಗಳನ್ನು ಇಣುಕುವುದು, ಲೊಚಗುಟ್ಟುವುದು, ಕೆಲವೊಮ್ಮೆ ಡಾಕ್ಟ್ರ್, ದಾದಿಯರ ಕಣ್ಣು ತಪ್ಪಿಸಿ ಒಳನುಗ್ಗಿ ಎಲ್ಲದರ ತಪಾಸಣೆ ನಡೆಸಿ ರೋಗಿಯ ರೋಗದ ವಿವರ ಪಡೆದು ಶಾಲೆಗೆ ಓಡುವುದು. ಆ ಕುಟುಂಬದ ಎಲ್ಲರೂ ನಮಗೆ ಪರಿಚಯ. ಆಗ ಗುಂಡುಗುಂಡಗಿದ್ದ ಒಬ್ಬ ಡಾಕ್ಟರ್ ವರ್ಗಾವಣೆ ಗೊಂಡು ಬಂದಿದ್ದರು. ನಮಗೆ ಅವರ ಪರಿಚಯ ಮಾಡಿಸಿಕೊಳ್ಳುವ, ಆತ್ಮೀಯತೆ ಬೆಳೆಸಿಕೊಳ್ಳುವ ಆತುರ. ಜೊತೆಗೆ ಡಾಕ್ಟರ್ ಜೋರಾ, ಪಾಪ ಇದ್ದರಾ..ಚರ್ಚೆ. ಅದಕ್ಕಾಗಿ ನನ್ನನ್ನೂ ಸೇರಿದಂತೆ ಕೆಲವು ಗೆಳತಿಯರಿಗೆ ಅನಾರೋಗ್ಯ ಕಾಡಿತು. ನನಗೆ ಕಿವಿನೋವು, ಒಬ್ಬ ಗೆಳತಿಗೆ ಹೊಟ್ಟೆನೋವು, ತಲೆನೋವು.ಹೀಗೆ ಹಲವು ಬಗೆಯ ಕಾಯಿಲೆಗಳಿಗೆ ತುತ್ತಾಗಿ ನಮ್ಮ ತಂಡವೇ ಆಸ್ಪತ್ರೆಗೆ ಧಾವಿಸಿತು ಅಲ್ಲಿ ಹೊಸ ಡಾಕ್ಟರ್ ಬಳಿ ಹೋಗುವುದು‌‌ ಒಬ್ಬರನ್ನು ಡಾಕ್ಟರ್ ಪರೀಕ್ಷೆ ಮಾಡುತ್ತಿದ್ದರೆ ಉಳಿದ ಬಾಲೆಯರು ಹೊಸ ಬೆಳಕಿನಲ್ಲಿ ಡಾಕ್ಟರ್ ನ್ನು ನೋಡುವುದು, ಮುಸಿಮುಸಿ ನಗುವುದು. ಅಲ್ಲಿ ಹಲವು ದಾದಿಯರು ಇದ್ದರು. ಬಾನುಮತಿ,ಶಶಿರೇಖಾ,ಸುಮನ ಚಂದ್ರಿಕಾ..ಹೂತೋಟದ ಪರಿಮಳ ಸೂಸುವ ಸೇವಂತಿಗೆ,ಇರುವಂತಿಗೆ,ಗುಲಾಬಿ,ಸಂಪಿಗೆ ಹೂಗಳ ಹಾಗಿದ್ದ ದಾದಿಯರು. ಬಾನುಮತಿ ತುಂಬ ಸುಂದರವಾಗಿದ್ದರು. ಎತ್ತರ ಹಿಮ್ಮಡಿಯ ಚಪ್ಪಲ್, ಸ್ವಚ್ಛ ಬಿಳಿಬಣ್ಣ, ಸುತ್ತಿ ಮೇಲೆ ಕಟ್ಟಿದ ತಲೆಗೂದಲು,ಸುಂದರ ಮೈಕಟ್ಟು. ಬಿನ್ನಾಣದ ನಡುಗೆ. ಅವರು ಹತ್ತಿ, ಕತ್ತರಿ, ಮದ್ದು ಇಟ್ಟ ಟ್ರೇ ಹಿಡಿದು ಆಸ್ಪತ್ರೆಯ ಕಾರಿಡಾರಿನಲ್ಲಿ ನಡೆದಾಡುತ್ತಿದ್ದರೆ ನಾವು ಅಚ್ಚರಿ, ಕುತೂಹಲ, ತುಂಟತನದಿಂದ ಹಿಂಬಾಲಿಸುತ್ತಿದ್ದೆವು. ಅವರು ಡಾಕ್ಟರ್ ಬಳಿ ಕಣ್ಣು, ಬಾಯಿ, ಕೈ ಚಲನೆಗಳೊಂದಿಗೆ ಮಾತನಾಡುತ್ತಿದ್ದರೆ ನಮಗೋ ತಮಾಷೆ, ಕೀಟಲೆ, ಸಣ್ಣ ಹೊಟ್ಟೆಕಿಚ್ಚು!. ತರಗತಿಗೆ ಬಂದರೆ ನಮ್ಮ ಟೀಚರ್ ಗೆ ತಮಾಷೆ ಮಾಡುವ, ಸಲುಗೆ ಬೆಳೆಸುವ ಆಸಕ್ತಿ. ಹುಚ್ಚುಕೋಡಿ ಮನಸ್ಸು. ಆಗ ನಮ್ಮ ಮನೆಯ ಹಿಂದೆ ಬಾಡಿಗೆಗೆ ಒಬ್ಬ ಟೀಚರ್ ಬಂದಿದ್ದರು. ಅವಿವಾಹಿತೆ. ನಾನು ಬೆಳಗ್ಗೆ, ಮಧ್ಯಾಹ್ನ ಸಂಜೆ ಅವರ ಪುಟ್ಟ ಮನೆಯ ಸುತ್ತ ‌ಪ್ರದಕ್ಷಿಣೆ ಹಾಕುವುದಿತ್ತು. ಹಲವಷ್ಟು ಸಲ ಶಾಲೆಗೂ ಅವರ ಜೊತೆಯೇ ಹೋಗುವುದು. ಅವರು ಆಗ ಕೆಲವು ರುಚಿಕರ ವಿಷಯ ತಿಳಿಸುತಿದ್ದರು. ಪಿಯುಸಿ ಹುಡುಗನೊಬ್ಬ ಅವರನ್ನು ಹಿಂಬಾಲಿಸಿದ್ದು, ಕಣ್ಣಲ್ಲಿ ಸನ್ನೆ ಮಾಡಿದ್ದು. ಮನೆಯವರೆಗೂ ಬಂದಿದ್ದು, ಇತ್ಯಾದಿ!. ನಾನು ಬೆಳಗ್ಗೆ ನನ್ನ ಡ್ರೆಸ್ ಸಿಕ್ಕಿಸಿ ಅವರ ರೂಮಿಗೆ ಓಡುವುದು. ಹೆಚ್ಚಾಗಿ ಅವರಿನ್ನೂ ತಯಾರಾಗಿರುವುದಿಲ್ಲ. ಅವರು ಸೀರೆ ಉಟ್ಟು ಸಿಂಗರಿಸುವ ಚೆಂದ ವನ್ನು ನನ್ನ ಬೆರಗುಗಣ್ಣು ಗಮನಿಸುತ್ತಿತ್ತು. ಅವರು ಹಚ್ಚುವ ಕ್ರೀಂ, ಹಣೆಗೆ ಇಡುವ ಬಣ್ಣಬಣ್ಣದ ತಿಲಕ, ಲಿಪ್ ಸ್ಟಿಕ್, ಸೀರೆಯ ಒನಪು, ನೆರಿಗೆ, ನೆರಿಗೆಯ ಬಿನ್ನಾಣ. ಅಲ್ಲಿ ಅಚ್ಚರಿಯನ್ನೂ ಮೀರಿದ ಕುತೂಹಲ. ನಮ್ಮದು ಆಗ ಬಾಲ್ಯಕ್ಕೆ ಟಾಟಾ ಹೇಳಿ ಮುಗಿದಿತ್ತು. ಹರೆಯವಿನ್ನೂ ಪೂರ್ತಿ ಒಳಗೆ ಬಂದಿರಲಿಲ್ಲ. ಎಂತದೋ ಹೊಸತನ. ಮುಸ್ಸಂಜೆ ಯ ಬೇಸರದಂತೆ, ಮರುಳುತನ ಸುರಿದಂತೆ ಕಾಡುವ, ಆವರಿಸಿದ ಕಾಲ. ಅಮ್ಮನ ಸೀರೆಯ ಸೆರಗನ್ನು ಡ್ರೆಸ್ಸಿನ ಮೇಲೆ ಹಾಕಿಕೊಂಡು ಕನ್ನಡಿಯ ಎದುರು ಬಿಂಬವನ್ನೇ  ಮೋಹಿಸುವ ಮರುಳುತನ. ಶಾಲೆಯಲ್ಲಿ ಟೀಚರುಗಳಿಗೆ ಅಡ್ಡ ಹೆಸರುಗಳು. ಮಾತ್ರವಲ್ಲ ವಿದ್ಯಾರ್ಥಿಗಳಿಗೂ ನವನವೀನ ನಾಮಕರಣದ ಸಂಭ್ರಮ. ಕಾಲೇಜಿನ ಉಪವನದಲ್ಲಿ ಮೊಗ್ಗುಗಳು ಮೆಲ್ಲನೆ ದಳಗಳನು ಬಿಡಿಸಿ ಬಿರಿಯುವ ಪ್ರಕೃತಿಯ ಜಾದು. ಎಂತದೋ ಸಂಕೋಚ, ಲಜ್ಜೆ, ಅಪರಿಚಿತ ಭಾವಗಳು ತೆವಳಿಕೊಂಡು ಕಾಯವನ್ನು ಆವರಿಸಿ ಕಣ್ಣಿನೊಳಗಿಳಿದು ಹುತ್ತಗಟ್ಟುತ್ತಿದ್ದವು. ಚಂದಮಾಮ,ಬೊಂಬೆಮನೆಗಿಂತ ಸಾಯಿಸುತೆ,ತ್ರಿವೇಣಿ,ಸಿ.ಎನ್. ಮುಕ್ತಾ ,ಈಚನೂರು ಜಯಲಕ್ಷ್ಮಿ, ಎಂ.ಕೆ.ಇಂದಿರಾ ಮುಂತಾದವರ ಕಾದಂಬರಿಗಳ ಮೇಲೆ ಅಕ್ಕರೆ ಹೆಚ್ಚಿತ್ತು. ಅದನ್ನು ಓದಿ ನಾವೇ ಕಥಾನಾಯಕಿಯರಾಗಿ ಪುಳಕಗೊಳ್ಳುತ್ತಿದ್ದೆವು, ಕಣ್ಣೀರು ತುಂಬಿ ಕೊಳ್ಳುತ್ತಿದ್ದೆವು. ಹಾದಿಯಲ್ಲಿ ನಡೆಯುವಾಗಲೂ ಒಬ್ಬೊಬ್ಬರೇ ಮುಸಿಮುಸಿ ನಕ್ಕು ವಸಂತನಿಗೆ ತೆರೆಯುತ್ತಾ ಕೆನ್ನೆಗೆಂಪುಗಟ್ಟುತ್ತಿತ್ತು.  ಚಿಗುರು ಮಾವಿನೆಲೆಗಳು ಗೊಂಚಲ ಗೊಂಚಲಾಗಿ ಮರಮರಗಳಲ್ಲಿ ನಮ್ಮ ನೋಡಿ ನಗುತ್ತಿದ್ದವು. ************************************************* ಪೂರ್ಣಿಮಾ ಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ

Read Post »

You cannot copy content of this page

Scroll to Top