ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-12 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ *೧೯೪೪-೪೫*ರ ಸಮಯ….. ಸೋಲ್ಲಾಪುರದಲ್ಲಿ ಕಾಲರಾ ರೋಗ ಭೀಕರವಾಗಿ ಹರಡಲಾರಂಭಿಸಿತು…ಜನರು ಭಯದಿಂದ ನಡುಗುತ್ತಿದ್ದರು. ಮನೆಮನೆಯಲೂ ಅಳಲು, ಆತಂಕ, ನಿರಾಶೆಯ ಕತ್ತಲೆ ಆವರಿಸಿತ್ತು.ಜಯದೇವಿ ತಾಯಿಯವರು ಮತ್ತು ಅವರ ತಾಯಿ ಸಂಗವ್ವ ಬಾಯಿಯವರು ಇನ್ನುಳಿದ ಮಹಿಳೆಯರನ್ನು ಕರೆದುಕೊಂಡು ರೋಗ ಪೀಡಿತರಿಗೆ ಸಹಾಯ ಹಸ್ತ ಚಾಚಲಾರಂಭೀಸಿದರು. ಅವರ ಸಹಾಯಕ್ಕಾಗಿ ಅಕ್ಕನ ಬಳಗದ ಹೆಣ್ಣು ಮಕ್ಕಳನ್ನೆಲ್ಲ ಕರೆದುಕೊಂಡು ಹೋಗುತ್ತಿದ್ದರು. ಅಂಥ ಸಮಯದಲ್ಲಿ ಜಯದೇವಿತಾಯಿಯವರು ಮಾಡಿದ ಸೇವೆ ಕೇವಲ ಸಹಾಯವಲ್ಲ… ಅದು ಮಾನವೀಯತೆಯ ಜೀವಂತ ರೂಪ.ರೋಗಿಗಳ ಬಳಿ ಹೋಗುವುದಕ್ಕೂ ಜನ ಹೆದರುತ್ತಿದ್ದಾಗ…ಜಯದೇವಿ ತಾಯಿಯವರು…. ಅವರ ಮನೆಗಳಿಗೆ ಹೋಗಿ ಧೈರ್ಯ ತುಂಬಿದವರು.ಅವರು ತಮ್ಮ ಕೈಯಿಂದಲೇ ಔಷಧಿ ಕೊಡುತ್ತಿದ್ದರು, ಪೌಷ್ಟಿಕ ಆಹಾರ  ರೋಗಿಗಳಿಗೆ ಒದಗಿಸುತಿದ್ದರು.ಕಾಲರಾ ಹರಡುವುದನ್ನು ತಡೆಯಲು ಸ್ವಚ್ಛತೆಯ ಮಹತ್ವವನ್ನು ಜನರಿಗೆ ತಿಳಿಸುತ್ತಿದ್ದರು.ನೀರನ್ನು ಕುದಿಸಿ ಕುಡಿಯಬೇಕು, ಪರಿಸರ ಸ್ವಚ್ಛವಾಗಿರಬೇಕು ಎಂದೆಲ್ಲಿ ತಿಳಿಸಿ ಹೇಳುತಿದ್ದರು. ಈ ರೋಗದಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳನ್ನು ಅವರು ಒಬ್ಬ ತಾಯಿಯಾಗಿ ಅಪ್ಪಿಕೊಂಡರು. ರೋಗದ ಬಗ್ಗೆ ಭಯಾನಕವಾದ ಆತಂಕವು ಎಲ್ಲರಲ್ಲಿ ನೆಲ ಮಾಡಿತು.ಆ ಕರಾಳಭಯ ನೀಗಿಸಿ ಧೈರ್ಯ ಹೇಳಿದವರು.ಅನಾಥ ಮಕ್ಕಳಿಗೆ ಇರಲು ವ್ಯವಸ್ಥೆ ಮಾಡಿ ಬಟ್ಟೆ ಪುಸ್ತಕವನ್ನು ಕೊಟ್ಟು ಶಾಲೆ ಕಲಿಸಿದರು. ರೋಗ ಪೀಡೆತರಿಗಾಗಿ ,ಬಡ ಮಕ್ಕಳಿಗಾಗಿ, ಅನಾಥರಿಗಾಗಿ ಸಿದ್ದರಾಮನ ದೇವಸ್ಥಾನಕ್ಕೆ ಹೋಗಿ ಬೇಡಿಕೊಂಡು ಬರುತ್ತಿದ್ದರು. *ಬಡ ಮಕ್ಕಳಿಗೆ ಹಾಲು,ಉಡಲು ತಾಯಿಗೆ ಸೀರೆ, ಒಡಲ ತುಂಬ ಅನ್ನ ನೀಡುತ್ತ, ರೋಗಗಳಓಡಿಸಲು ಕರುಣಿಸ ಬೇಕಯ್ಯ ಸಿದ್ದೇಶ!!*ಎಂದು ಹಾಡಿ ಕಳಕಳಿಯಿಂದ ಪ್ರಾರ್ಥನೆ ಮಾಡಿದವರು..“ನಾವು ಒಟ್ಟಿಗೆ ಇದನ್ನು ಎದುರಿಸೋಣ” ಎಂದು ಜನರಿಗೆ ಮನೋಬಲ ತುಂಬುತ್ತಿದ್ದರು.ಆ ದಿನಗಳಲ್ಲಿ… ತಮ್ಮ ವೈಯುಕ್ತಿಕ ಜೀವದ ಹಂಗು ಹರಿದು… ಇತರರ ಜೀವ ಉಳಿಸಲು ಓಡಾಡುತ್ತಿದ್ದರು.ರಾತ್ರಿ-ಹಗಲು ಎನ್ನದೆ…ಅವರ ಕಣ್ಣುಗಳಲ್ಲಿ ನಿದ್ರೆ ಮರೆತರು…ಹೃದಯದಲ್ಲಿ ಒಂದೇ ಉದ್ದೇಶವಿತ್ತು.“ಯಾರೂ ಸಹಾಯವಿಲ್ಲದೆ ನಿಸ್ಸಾಯಕರು ನಿರ್ಗತಿಕರಾಗಿ ರೋಗಿಗಳುಸಾಯಬಾರದೆಂದು …!!! ಸೋಲಾಪುರದ ಜನರು ನಂತರ ಹೇಳುತ್ತಿದ್ದರು…“ಆ ಕಾಲರಾ ಕಾಲದಲ್ಲಿ… ದೇವರು ನಮ್ಮನ್ನು ಕಾಪಾಡಲು ಜಯದೇವಿಯವರನ್ನು ತಾಯಿ ರೂಪದಲ್ಲಿ…ಕಳುಹಿಸಿದನೆಂದು…ಅವರ ಸೇವೆ ಕೇವಲ ರೋಗವನ್ನು ಎದುರಿಸುವುದು ಅಷ್ಟೇ ಅಲ್ಲ..ಅದರ ಜೊತೆಗೆ ಉದ್ಭವಿಸುತ್ತಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸಿದರು.!! ಆದರೂ ಅದೆಷ್ಟೋ ಜನರ ಜೀವವನ್ನು ಉಳಿಸಲು ಆಗಲಿಲ್ಲ. ಅನ್ನುವ ಕಳವಳ ಅವರಲ್ಲಿ ಇತ್ತು.ಮನೆಯಲ್ಲಿ ಪತಿಯ  ಆರೋಗ್ಯ ಕೂಡ ಸರಿ ಇರಲಿಲ್ಲ ಆದರೂ ಅಂಥ ನೋವಿನಲ್ಲಿಯೂ ಇನ್ನೊಬ್ಬರ ಕಣ್ಣೀರನ್ನು ಒರಿಸಲು ತಾಯಿಯವರು ಸದಾ ಬದ್ಧರಾಗಿರುತ್ತಿದ್ದರು. ಇದು ಒಂದು ಮಾನವೀಯ ಐತಿಹಾಸಿಕ ಪುಟದಲ್ಲಿ ಮರೆಯಲಾಗದ ಘಟನೆ. *೧೯೪೬ ರ *ಸಮಯದಲ್ಲಿ  ಕಾಂಗ್ರೆಸ್ಸಿಗರು ಕರ್ನಾಟಕ ಪರಿಷತ್ತು, ಮಹಾರಾಷ್ಟ್ರ ಪರಿಷತ್ತು ಮತ್ತು ಆಂಧ್ರ ಸಭೆಗಳು ಸೇರಿ ಸ್ಥಳೀಯವಾಗಿ ಪ್ರಬಲವಾಗಿ ರಾಜಕಿಯೇತರ ಸಂಘಟನೆಗಳಾಗಿ ಬೆಳೆದು ನಿಂತಿದ್ದವು.ಗಾಂಧಿ ತತ್ವ ಆದರ್ಶಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರಾಂತೀಯ ಸರ್ಕಾರಗಳು ರಚನೆಗೊಂಡಿತು.  ಇದನ್ನೆಲ್ಲಾ ಗಮನಿಸುತ್ತಿದ್ದ ಆಗಿನ ನಿರಂಕುಶ ರಾಜನಾದ ನಿಜಾಮನಲ್ಲಿ ಭಯವ ಹುಟ್ಟಿಸಿದ್ದವು.ಕಾಂಗ್ರೆಸ್ ಚಳುವಳಿಗಳು ಹೈದರಾಬಾದ್ ಪ್ರಾಂತದ ಮೇಲೆ ಹೆಚ್ಚು ಪರಿಣಾಮ ಬೀರಲಾರಂಭಿಸಿದ್ದು ನಿಜಾಮನಿಗೆ ಸಹನೆ ಆಗಲಿಲ್ಲ.  ಹೈದರಾಬಾದ್ ನಿಜಾಮ ಸರ್ಕಾರವು ಕಾಂಗ್ರೆಸ್ ಚಟುವಟಿಕೆಗಳನ್ನು ವಿರೋಧಿಸುತ್ತಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಹೈದರಾಬಾದ್ ಪ್ರಾಂಥದಲ್ಲಿ ತನ್ನದೇ ಆದ ಅಸ್ತಿತ್ವವನ್ನು ಕಂಡುಕೊಂಡಿತ್ತು. ಅಲ್ಲಿ ಹೈದರಾಬಾದ್ ಸ್ಟೇಟ್ ಕಾಂಗ್ರೆಸ್ ಆರಂಭವಾಗಿತ್ತು ಇದಕ್ಕೆ ಸ್ವಾಮಿ *ರಮಾನಂದ ತೀರ್ಥರು* ಅಧ್ಯಕ್ಷರಾಗಿದ್ದರು.  ಬ್ರಿಟಿಷರ ಪರವಾಗಿದ್ದ ನಿಜಾಮನು ತನ್ನ ಜನತೆ ಕಾಂಗ್ರೆಸ್ ಜೊತೆಗೆ ಬಲವಾದ ಯಾವ ರೀತಿಯ ವ್ಯವಹಾರಗಳನ್ನಾಗಲಿ ಅಥವಾ ಸಂಬಂಧವನ್ನಾಗಿ ಇಟ್ಟುಕೊಳ್ಳಬಾರದೆಂದು ಅದಕ್ಕೆ ಬದಲಾಗಿ *ಇಂಡಿಯನ್ ಪೆಟ್ರಿಯಾಟಿಕ್ ಅಸೋಶಿಯೇಶನ್* ಜೊತೆ ಸಹಕರಿಸಬೇಕೆಂದು ತಿಳಿಸಿದಾ. ಅದರಂತೆ ನಿಜಾಮನು  ತನ್ನ ಪ್ರಾಂತ್ಯದಲ್ಲಿ ತಿಲಕರು ಜಾರಿಗೆ ತಂದಿದ್ದ ಗಣೇಶ ಶಿವಾಜಿ ಉತ್ಸವವನ್ನು ನಿಶೇಸಿದ್ದ…ಯಾವುದೇ ಚಟುವಟಿಕೆಗಳು ನಡೆಯಬಾರದೆಂದು ಕಟ್ಟಪ್ಪಣೆ ಮಾಡಿದ್ದ….. ನಿಜಾಮನ ನಿರಂಕುಶ ಪ್ರಭುತ್ವದ ವಿರುದ್ಧ ಮಾತನಾಡುವದು, ಹೋರಾಡುವುದು ಅವಶ್ಯಕವಾಗಿತ್ತು…ಜಯದೇವಿ ತಾಯಿಯವರು ಕಾಂಗ್ರೆಸ್ ಸದಸ್ಯರಾಗಿದ್ದರು.ತಮ್ಮ ವಿಚಾರಗಳನ್ನು ಮುಕ್ತವಾಗಿ ಯಾರ ಭಯವಿಲ್ಲದೆ ಪ್ರಸ್ತಾಪಿಸುತ್ತಿದ್ದರು. ಆಗಿನ ಕಾಲದಲ್ಲಿ ಮಹಿಳೆಯರು ತಮ್ಮ ಧ್ವನಿಯನ್ನು ಎತ್ತುವುದು ಅಷ್ಟು ಸುಲಭದ ವಿಷಯವಾಗಿರಲಿಲ್ಲ. ಆದರೆ ಜಯದೇವಿ ತಾಯಿಯವರು  ಅನ್ಯಾಯವನ್ನು ಸಹಿಸುವ ಮೌನವನ್ನು ಒಪ್ಪಿಕೊಂಡವರಲ್ಲ, ಸತ್ಯವನ್ನು ನಿಂತು ಹೇಳುವ ಶಕ್ತಿಯುಳ್ಳವರಾಗಿದ್ದರು.ಕಾಂಗ್ರೆಸಿನ ಸದಸ್ಯೆಯಾಗಿದ್ದ .. ಹೆಸರಿಗಾಗಿ ಅಲ್ಲ ಮನಸ್ಸಿನ ಆಳದಿಂದ ನಂಬಿದ ಮೌಲ್ಯಗಳಿಗಾಗಿ ಆ ಸಂಘಟನೆಯೊಂದಿಗಿದ್ದರು.ದೇಶದ ಸ್ವಾತಂತ್ರ್ಯ, ಸಮಾನತೆ, ಹಾಗೂ ಸಾಮಾಜಿಕ ನ್ಯಾಯ ಎಂಬ ತತ್ವಗಳು ಅವರ ಹೃದಯದಲ್ಲಿ ಬೆಳೆದ ಮರದಂತೆ ಬೇರೂರಿದ್ದವು.ಯಾರೇ ಎದುರು ಬಂದರೂ, ಯಾವ ಪರಿಸ್ಥಿತಿ ಬಂದರೂ, ತಮ್ಮ ಮಾತು ಹೇಳಲು ಅವರು ಹೆದರಲಿಲ್ಲ. ಅವರ ಧ್ವನಿಯಲ್ಲಿ ತಾಳ್ಮೆ ಇತ್ತಾದರು  ಹೆಚ್ಚು ದೃಢತೆ ಇತ್ತು…..“ಸತ್ಯದ ಮಾರ್ಗದಲ್ಲಿ ನಡೆಯುವವನಿಗೆ ಭಯವೇ ಇಲ್ಲ” ಎಂಬ ನಂಬಿಕೆ ಅವರ ಜೀವನದ ದೀವಿಗೆಯಾಗಿತ್ತು.ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ನೋಡಿ ಕಣ್ಣೀರಿಟ್ಟು ಕುಳಿತುಕೊಳ್ಳುವವರಲ್ಲ ಅವರು. ಅದರ ವಿರುದ್ಧ ನಿಲ್ಲುವ ಧೈರ್ಯ ಅವರ ರಕ್ತದಲ್ಲೇ ಹರಿಯುತ್ತಿತ್ತು. ತಮ್ಮ ನಂಬಿಕೆಗಳಿಗಾಗಿ ಹೋರಾಡುವುದು ಅವರಿಗೊಂದು ಕರ್ತವ್ಯವಾಗಿತ್ತು…ಅವರ ಮನಸ್ಸು ಒಂದು ಹೋರಾಟದ ಮೈದಾನವಾಗಿತ್ತು .  ಯಾವ ಸಂಕಷ್ಟ ಬಂದರೂ, “ನಾನು ನನ್ನ-ಸತ್ಯ ನನ್ನ ಜೊತೆ ಇದೆ” ಎಂಬ ಆತ್ಮವಿಶ್ವಾಸದಿಂದ ಮುಂದೆ ಸಾಗುತ್ತಿದ್ದವರು ಜಯದೇವಿ ತಾಯಿಯವರು.ಅವರ ಜೀವನವೇ ಒಂದು ಸಂದೇಶ: “ದಿಟ್ಟತನದಿ ಮಾತನಾಡಿ, ನಂಬಿಕೆಯೊಂದಿಗೆ ಹೋರಾಡಿ, ಸತ್ಯದೊಂದಿಗೆ ಸ್ಥಿರವಾಗಿ ನಿಲ್ಲಿರಿ ಅನ್ನುವ ಕರೆ ಕೊಡುತ್ತಿದ್ದರು.ಇಂತಹ ದೈರ್ಯ ಮತ್ತು ದೃಢ ನಂಬಿಕೆ ಅವರ ವ್ಯಕ್ತಿತ್ವವನ್ನು ಅಸಾಧಾರಣವಾಗಿಸಿದೆ.  ಈ ಕಾರಣಕ್ಕಾಗಿ 1946ರಲ್ಲಿ ಜಹೀರಾಬಾದಿನ   ಕಾಂಗ್ರೆಸ್ ಪ್ರಾಂತೀಯ ಪರಿಷತ್ತಿನ ಮೂರನೆ ಅಧೀವೇಶನಕ್ಕೆ ಜಯದೇವಿ ತಾಯಿಯವರನ್ನು ಆಹ್ವಾನಿಸಿದ್ದರು. ಅಧಿವೇಶನದ ದ್ವಾರಕ್ಕೆ” ಜಯದೇವಿ ತಾಯಿ ದ್ವಾರ “ಅಂತ ಹೆಸರಿಡಲಾಯಿತು. ಜಯದೇವಿ ತಾಯಿಯವರು ಆ ಸಮಾರಂಭಕ್ಕೆ ಬರುತ್ತಿರುವರು ಎನ್ನುವದ ಕೇಳಿದ ನಿಜಾಮನು ಕೋಪದಿಂದ ಜಯದೇವಿತಾಯಿಯವರು ತನ್ನ ಭೂಮಿಯಲ್ಲಿ ಬರೆದಿದ್ದಂತೆ ಫರ್ಮಾನ್  ಹೊರಡಿಸಿದ್ದ.ಅವರು ಬರಬಾರದು” ಎಂಬುದೇ ಆ ಆದೇಶದ ಅರ್ಥ. ನಿಜಾಮನ ಆದೇಶ“ಪರ್ಮಾನ್”—ಎಂದರೆ ಸಾಮಾನ್ಯರಿಗೆ ಅದು ಒಂದು ಗಡಿ, ಒಂದು ಭೀತಿ, ಒಂದು ತಡೆಯ ಗೋಡೆ. ಆ ಮಣ್ಣಿನಲ್ಲಿ ಕಾಲಿಡುವುದು ಎಂದರೆ ಆ ಆದೇಶವನ್ನು ಮೀರಿ ನಿಲ್ಲುವವರಿಗೆ ಎಂಟೆದೆಯ ಧೈರ್ಯ ಬೇಕಾಗಿತ್ತು.ಆದರೆ ಜಯದೇವಿ ತಾಯಿಯವರಿಗೆ ಭಯ ಎನ್ನುವುದು ಅಡ್ಡಿಯಾಗಲಿಲ್ಲ… ಅದು ಅವರ ಹೆಜ್ಜೆಗಳ ಕೆಳಗೆ ಬಿದ್ದ ನೆರಳಷ್ಟೇ….. ಸರಳವಾಗಿ ಆ ಭೂವಿಯಲ್ಲಿ ಕಾಲಿಟ್ಟರು.ಸತ್ಯದ ದಾರಿಯಲ್ಲಿ ನಡೆಯುವವರನ್ನು ಯಾರ ಆದೇಶ ತಡೆಯಬಲ್ಲದು?ಅಂದು… ಆ ಬೆಳಗಿನ ಹೊತ್ತಿನಲ್ಲಿ, ಹೈದರಾಬಾದಿನ ಜೈರಾಬಾದಿನ ಮಣ್ಣಿನ ಮೇಲೆ ಮೊದಲ ಹೆಜ್ಜೆಯನ್ನು ಇಡುವಾಗ, ಜಯದೇವಿ ತಾಯಿಯವರ ಕಾಲುಗಳು ನಡುಗಲಿಲ್ಲ ಇನ್ನಷ್ಟು ದೃಢತೆ ಇತ್ತು, ಧೈರ್ಯ ಇತ್ತು, ನಂಬಿಕೆಯ ಶಕ್ತಿ ಇತ್ತು.ಅವರ ಹೆಜ್ಜೆಗಳು ನಿಧಾನವಾಗಿರಲಿಲ್ಲ… ಪ್ರತಿ ಹೆಜ್ಜೆಯೂ ಒಂದು ಘೋಷಣೆಯಂತಿತ್ತು. “ನ್ಯಾಯಕ್ಕಾಗಿ ನಾನು ಬಂದಿದ್ದೇನೆ” ಎಂದು. ಅಲ್ಲಿ ನೆರೆದಂಥ ಜನರ ಕಣ್ಣುಗಳಲ್ಲಿ ಆಶ್ಚರ್ಯ, ಭಯ, ಮತ್ತು ಗೌರವ ಮಿಶ್ರವಾಗಿತ್ತು. ಆದರೆ ತಾಯಿಯವರ ಮುಖದಲ್ಲಿ ಮಾತ್ರ ಶಾಂತಿ ಹೊಳೆಯುತ್ತಿತ್ತು ಒಂದು ಸಣ್ಣ ನಗು, ಆದರೆ ಅದರಲ್ಲಿ ಅನೇಕ ಹೋರಾಟಗಳ ಶಕ್ತಿ ಅಡಗಿತ್ತು.ಪರ್ಮಾನ್ ಎಂಬುದು ಕಾಗದದ ಮೇಲೆ ಬರೆದ ಅಕ್ಷರ ಮಾತ್ರ… ಆದರೆ ಅವರ ನಂಬಿಕೆ ಕಲ್ಲಿನಂತೆ ಗಟ್ಟಿತನ ಹೊಂದಿತ್ತು.ಆ ಕ್ಷಣದಲ್ಲಿ, ಜ್ಯೆರಾಬಾದ್‌ನ ಮಣ್ಣು ಕೂಡ ಅವರ ಹೆಜ್ಜೆಗಳಿಗೆ ಹೆಮ್ಮೆಪಟ್ಟಂತೆ ಕಾಣಿಸಿತು… ಯಾಕೆಂದರೆ ಅದು ಸಾಮಾನ್ಯ ಹೆಜ್ಜೆಯಲ್ಲ, ಒಬ್ಬ ಧೈರ್ಯಶಾಲಿ ಮಹಿಳೆಯು ಇಟ್ಟ ಹೆಜ್ಜೆಯಾಗಿತ್ತು. *ಆ ಸನ್ನಿವೇಶವೇ ಒಂದು ಇತಿಹಾಸ* ಒಬ್ಬ ಮಹಿಳೆ, ಒಂದು ಆದೇಶವನ್ನು ಅಲ್ಲ, ಒಂದು ಅನ್ಯಾಯವನ್ನು ಮೀರಿ ನಿಂತ ಕ್ಷಣ…..ಜಯದೇವಿ ತಾಯಿಯವರು ಆ ದಿನ ಹೈದರಾಬಾದ್‌ಗೆ ಬಂದಿದ್ದು ಭಾರತ ಮಾತೆಯ ವೀರ ಮಹಿಳೆಯ ಧೈರ್ಯ ಸಾಹಸದ ಪತಾಕೆ ಹಾರಿಸಿದ್ದರು. ಸಬಲೆಯರ ವ್ಯಕ್ತಿತ್ವಕ್ಕೆ ಹೊಸ ಅರ್ಥ ಕೊಟ್ಟರು. ಜಯದೇವಿ ತಾಯಿಯವರು ಜೇಹರಾಬಾದ್ ನಿಜಾಮನ “ಪರ್ಮನ್” (ಅಂದರೆ ನಿರ್ಬಂಧ ಆದೇಶ) ವನ್ನು ಲೆಕ್ಕಿಸದೇ ಹೈದರಾಬಾದ್‌ನ ಮಣ್ಣಿನಲ್ಲಿ ಕಾಲಿಟ್ಟ ಘಟನೆ ಧೀಮಂತ ಮಹಿಳೆಯ ಮನೋಬಲವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆ ಕಾಲದಲ್ಲಿ ನಿಜಾಮನ ಆಡಳಿತದಲ್ಲಿ ಇಂತಹ ನಿರ್ಬಂಧವನ್ನು ಉಲ್ಲಂಘಿಸುವುದು ಅತಿ ದೊಡ್ಡ ಅಪಾಯದ ಮುನ್ಸೂಚನೆಯಾಗಿತ್ತು  ನಿಜಾಮನು ಯಾವ ಕಾಲಕ್ಕಾದರೂ ಬಂಧನ, ಶಿಕ್ಷೆ, ಅಥವಾ ಜೀವ ಹಾನಿಯೂ ಎಡೆ ಮಾಡಬಹುದಾಗಿತ್ತು. ಯಾವುದನ್ನು ಲೆಕ್ಕಿಸದೆ ಅವರು ಮುಂದುವರಿದದ್ದು ಅವರ ಧೀರೋದ್ಯಾಥ್ಯ ವ್ಯಕ್ತಿತ್ವದ ಮೆರಗಿನ ಮಹತ್ವವನ್ನು ತೋರಿಸುತ್ತದೆ.ಜಯದೇವಿ ತಾಯಿಯವರ  ಅಚಲ ಧೈರ್ಯದಲಿನಿಜಾಮನ ಭಯದ ನೆರಳು ಕೂಡ ಅವರನ್ನು ತಟ್ಟಲಿಲ್ಲ. ಸತ್ಯ ಮತ್ತು ನ್ಯಾಯಕ್ಕಾಗಿ ಅವರು ಯಾವ ಅಪಾಯವನ್ನೂ ಎದುರಿಸಲು ಸಿದ್ಧರಾಗಿದ್ದರು.  *ಅವರಲ್ಲಿದ್ದ ರಾಷ್ಟ್ರಪ್ರೇಮ,ಹೃದಯದಲ್ಲಿ  ದೇಶದ ಮೇಲೆದ್ದ ಅಪಾರ ಪ್ರೀತಿ,. ದೇಶದ ಸ್ವಾತಂತ್ರ್ಯ ಮತ್ತು ಜನರ ಹಕ್ಕುಗಳಿಗಾಗಿ ತಮ್ಮ ವೈಯಕ್ತಿಕ ಭದ್ರತೆಯನ್ನೇ ತ್ಯಜಿಸಿದರು.* ಒಮ್ಮೆ ತೀರ್ಮಾನ ಮಾಡಿದ ಮೇಲೆ ಹಿಂದಿರುಗುವ ಸ್ವಭಾವ ಅವರದಾಗಿರಲಿಲ್ಲ… ನಿರ್ಧಾರಾತ್ಮಕತೆ ಎಂಥದ್ದು ಅಂದರೆ ನಿಜಾಮನ ಆದೇಶವೂ ಅವರ ನಿರ್ಧಾರವನ್ನು ತಡೆಯಲಿಲ್ಲ….!!ರಜಾಕಾರರ ನಿರಂತರ ಶೋಷಣೆಯಿಂದ ಜನರನ್ನು ಮುಕ್ತಗೊಳಿಸಲು ಅಲ್ಲಿಯ ಸಮಸ್ಯೆ ಮತ್ತು ಪರಿಹಾರವನ್ನು ಕುರಿತು ಚರ್ಚಿಸುವ ಸಮಾವೇಶ ಅದಾಗಿತ್ತು .ಅಲ್ಲಿ ಹತ್ತರಿಂದ ಹನ್ನೆರಡು ಸಾವಿರ ಜನ ಪಾಲ್ಗೊಂಡಿದ್ದರು. ಜಯದೇವಿ ತಾಯಿಯವರು. ಸಭಾಮಂಟಪವನ್ನು ಪ್ರವೇಶಿಸಿ ಭಾಷಣ ಮಾಡಿದರು….ಅವರ ವ್ಯಕ್ತಿತ್ವ ಎಂಥ ಮೆರಗುಗೊಳಿಸುವಂಥದ್ದು ಅಂದರೆ ಅವರನ್ನು ನೋಡುತ್ತಿದ್ದಂತೆ ಜನರೆಲ್ಲರೂ ಮಂತ್ರ ಮುಗ್ಧರಾಗುತ್ತಿದ್ದರು.ಕಣ್ಣು ಕಿವಿಗಳು‌ ಅರಳಿಸಿ ಎಚ್ಚೆತ್ತು ತದೇಕಚಿತದಿಂದ ಭಾಷಣ ಕೇಳಲು ಅಣಿಯಾಗುತ್ತಿದ್ದರು. ಜಯದೇವಿ ತಾಯಿಯವರು ಭಾಷಣವನ್ನು ಕೇಳಿದವರು ಹೇಳುತ್ತಿದ್ದರು…. ತಾಯಿಯವರ ಭಾಷಣಕ್ಕೆ ಎದ್ದು ನಿಂತರೆ   ಸಭಾಂಗಣದಲ್ಲಿ ಅದೆಂಥ ಶಾಂತಿ ನೆಲೆಗೊಳ್ಳುತ್ತಿತು ಅಂದರೆ ಜನಜಂಗುಳಿಯ ಮಧ್ಯದಲ್ಲಿ ಒಂದು ಸೂಜಿ ಕೂಡ ಬಿದ್ದರೂ ಅದರ ಸಪ್ಪಳ ಕೇಳಬಹುದಾಗಿತ್ತು. ಅನ್ನುವ ಮಟ್ಟಿಗೆ ಜನರು ಮೈ ಮನ ಮರೆತು ಕುಳಿತುಕೊಳ್ಳುತ್ತಿದ್ದರು ಅಂತ ಹೇಳುತಿದ್ದರು. ನಿಜಾಮನ ನಿರಂಕುಶ ಆಡಳಿತದ ವಿರುದ್ಧ ಜ್ವಾಲಾಮುಖಿಯಂತೆ ಉಕ್ಕಿ ಬಂದ ಜಯದೇವಿ ತಾಯಿಯವರ ಧ್ವನಿ ಕೇವಲ ವಿರೋಧದ ಧ್ವನಿ ಮಾತ್ರವಲ್ಲ ಅದು ಸ್ವಾತಂತ್ರ್ಯದ ಕಿರುಚಾಟ, ನ್ಯಾಯದ ಹೋರಾಟ, ದೇಶಭಕ್ತಿಯ ಮಹಾ ಘೋಷವಾಗಿತ್ತು.ದೇಶಭಕ್ತಿಯ ಘೋಷಣೆದಂತೆ ಜಯದೇವಿ ತಾಯಿಯವರ ಭಾಷಣ…ಮೊಟ್ಟ ಮೊದಲಿಗೆ ಶಿವಯೋಗಿ ಸಿದ್ದರಾಮನನ್ನು ನೆನೆಯುವುದು,“ಯೋಗಿ ಬಂದಿದಾರೇನ…..ಯೋಗದ ಕೀಲ ತಿಳಿಸುವರೇನ ಯೋಗಿ ಬಂದಿದಾರೇನ….!!ರಾಗಭೋಗದ ಆಚೆ ಒಯ್ಯುವರೇನಾ…ಯೋಗಿ ಬಂದಿದಾರೇನ …!!”“ನನ್ನ ಪ್ರಿಯ ಸಹೋದರ ಸಹೋದರಿಯರೇ…ನಾನು ವೀರ ಗಣಾಚಾರಿ ಶ್ರೀ ಯೋಗಿ ಸಿದ್ದರಾಮನ ಭೂಮಿಯ ಅಲ್ಲಿ ಹುಟ್ಟಿದವಳು ಸಿದ್ದರಾಮನ ಕರುವೆಯ ಕೂಸಾಗಿ ನಿಮ್ಮೊಂದಿಗೆ ಜೊತೆಯಾಗಲು ಬಂದಿದ್ದೇನೆ ಈ ಭಾರತದ ಮಣ್ಣಿನಲ್ಲಿ ಹುಟ್ಟಿದ ನಾವು, ಈ ಮಣ್ಣೇ ನಮ್ಮ ತಂದೆ ತಾಯಿಯೆಂದು ಬದುಕುತ್ತಿರುವ ನಾವು, ಯಾವ ಕಾರಣಕ್ಕೂ ದಾಸ್ಯವನ್ನು ಒಪ್ಪಿಕೊಳ್ಳಲಾರೆವು!ನಿಜಾಮನ ನಿರಂಕುಶ ಪ್ರಭುತ್ವದ ಉಚ್ಛಾಟನೆ ಆಗಲೇಬೇಕು!ಇದು ಕೇವಲ ನಮ್ಮ ಬೇಡಿಕೆ ಅಲ್ಲ….ಇದು ನಮ್ಮ ಹಕ್ಕು!ಬಹು ಸಂಖ್ಯಾತರಾದ ಹಿಂದೂ ಪ್ರಜೆಗಳು ಜಾತ್ಯಾಂಧತೆಯ ಜುಗ್ಗಿನಲ್ಲಿ ಬದುಕುವುದನ್ನು ಇನ್ನೂ ಸಹಿಸಲಾರರು.ಧರ್ಮದ ಹೆಸರಿನಲ್ಲಿ ದಬ್ಬಾಳಿಕೆ, ಅಧಿಕಾರದ ಹೆಸರಿನಲ್ಲಿ ಅನ್ಯಾಯ….ಇವು ನಮ್ಮ ಭೂಮಿಯಲ್ಲಿ ಮುಂದುವರಿಯಲಾರವು!ನಾವು ಶಾಂತಿಯ ಪ್ರಜೆಯಾದರೂ, ನಮ್ಮ ಸಹನೆಯನ್ನು ದುರ್ಬಲತೆ ಎಂದು ಯಾರೂ ಭಾವಿಸಬಾರದು.ನಮ್ಮ ಸಹನೆಗೆ ಒಂದು ಮಿತಿ ಇದೆ… ಆ ಮಿತಿಯನ್ನು ದಾಟಿದಾಗ, ನಮ್ಮ ಪ್ರತಿಯೊಂದು ಉಸಿರು ಕ್ರಾಂತಿಯ ಕಿಡಿಯಾಗುತ್ತದೆ!ಈ ಮಣ್ಣಿನಲ್ಲಿ ಸ್ವಾತಂತ್ರ್ಯವೇ ನಮ್ಮ ಉಸಿರು, ಸಮಾನತೆಯೇ ನಮ್ಮ ಹಕ್ಕು!ನಾವು ಯಾರಿಗೂ ದಾಸರಲ್ಲ… ನಾವು ಈ ದೇಶದ ಯಜಮಾನರು!ನಾವು ಒಂದಾಗಿ ನಿಂತರೆ, ಯಾವ ಶಕ್ತಿ ನಮ್ಮನ್ನು ತಡೆಯಲು ಸಾಧ್ಯವಿಲ್ಲ!ನಮ್ಮ ಏಕತೆಯೇ ನಮ್ಮ ಬಲ, ನಮ್ಮ ಧೈರ್ಯವೇ ನಮ್ಮ ಶಕ್ತಿ!ಇಂದು ನಾನು ನಿಮ್ಮ ಮುಂದೆ ಒಂದು ಮಾತು ಮಾತ್ರ ಹೇಳುತ್ತೇನೆ……!!!!ಭಯವನ್ನು

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-11 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಸವಿತಾ ದೇಶಮುಖ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆಗಣನೀಯಕೊಡುಗೆ ನೀಡಿದ ಹಿರಿಯ ಚೇತನ ಜಯದೇವಿ ತಾಯಿಯವರ ಜೀವನ ತ್ಯಾಗದ ಮತ್ತೊಂದು ಹೆಸರು.ಸಮಾಜ ಸೇವೆಯ ಪಥದಲ್ಲಿ ನಡೆದುಹೋಗುತ್ತಿದ್ದ ಅವರ ಹೆಜ್ಜೆಗಳು ಎಷ್ಟು ದೃಢವಾಗಿದ್ದವೋ, ಅಷ್ಟೇ ಮನೆಯ ಹೊಣೆಗಾರಿಕೆಯನ್ನು ಹೊತ್ತಿದ್ದ  ಹೃದಯ ಅಷ್ಟೇ ಮೃದುವಾಗಿತ್ತು. ೧೯೪೨ರ ವೇಳೆ ಅಷ್ಟರಲ್ಲಿ ತಾಯಿಯವರು ಇನ್ನೂ ಮೂರು ಮಕ್ಕಳಿಗೆ ಜನ್ಮ ನೀಡಿದರು…ಇಗ ತಾಯಿಯವರಿಗೆ‌‌ ಐದು ಜನ ಮಕ್ಕಳಾದರು… ಅತ್ಯಂತ ಸದೃಢ ಸದ್ೃಪಿ ಎರಡು ಗಂಡು ಮಕ್ಕಳು ಪ್ರಭುರಾಜ ಹಾಗು ಬಸವರಾಜ ಜನಿಸಿದರು. ನಂತರ ಒಂದು ಸುಂದರ  ಹೆಣ್ಣು ಮಗು ಲಲ್ಲೇಶ್ವರಿ(ನನ್ನ ತಾಯಿ )ಜನ್ಮ ಕೊಟ್ಟರು. ಒಂದೆಡೆ ಸಮಾಜದ ನೋವುಗಳನ್ನು ಕೇಳಿ ಪರಿಹರಿಸಲು ಓಡಾಡುತ್ತಿದ್ದ ತಾಯಿಯವರು, ಮತ್ತೊಂದೆಡೆ ತಮ್ಮ ಪುಟ್ಟ ಮಕ್ಕಳ ಅಳುವಿನಲ್ಲೂ, -ನಗುಮುಖದಲ್ಲೂ ಜೀವನದ ಅರ್ಥವನ್ನು ಕಂಡುಕೊಳ್ಳುತ್ತಿದ್ದರು.ಹಗಲು ಜನರ ನಡುವೆ ತಿರುಗಿ, ರಾತ್ರಿ ಮಕ್ಕಳೊಡನೆ ಸಮಯ ತೆಗೆಯುತ್ತಿದ್ದರು.ಅವರಿಗೆ ವಿಶ್ರಾಂತಿ ಅನ್ನುವುದು ಇರಲಿಲ್ಲ. ಸಮಾಜ ಸೇವೆಎಂಥ ಪವಿತ್ರ ದಾರಿ ಒಂದೆಡೆ ಇದ್ದರೆ, ತಾಯಿಯ ಹೃದಯದ ಕರ್ತವ್ಯ ಮತ್ತೊಂದೆಡೆ ಇತ್ತು. ಆದರೆ ಜಯದೇವಿ ತಾಯಿಯವರು ಯಾವತ್ತೂ ದಣಿಯಲಿಲ್ಲ. ಸಮಾಜದ ಸೇವೆಯ ಜೊತೆಗೆ ಕುಟುಂಬದ ಪ್ರೀತಿಯನ್ನೂ ಸಮಾನವಾಗಿ ಪಾಲಿಸಿಕೊಂಡು ಹೋಗುತ್ತಿದ್ದ ಅವರ ಜೀವನ ನಿಜಕ್ಕೂ ಆದರ್ಶಮಯವಾಗಿತ್ತು.ಒಂದೇ ಸಮಯದಲ್ಲಿ ಸಮಾಜಕ್ಕೆ ದೀಪವಾಗಿಯೂ, ತಮ್ಮ ಮಕ್ಕಳಿಗೆ ಮಮತೆಯ ನೆರಳಾಗಿಯೂ ಬದುಕಿದ ಜಯದೇವಿ ತಾಯಿಯವರ ಜೀವನಗಾಥೆ ತಾಯಿತನದ ಮಹತ್ವವನ್ನು ಹೇಳುವ ಅಮರ ಕಥೆಯಾಗಿದೆ. ಯಾಕೆಂದರೆ ಅವರ ಗಂಡ ಚನ್ನ ಮಲ್ಲಪ್ಪನವರ ಆರೋಗ್ಯವು ಆಗಲೇ ಹದಗೆಡಲಾರಂಭಿಸಿತ್ತು.ಮಧ್ಯ ಮಧ್ಯದಲ್ಲಿ ತಾಯಿಯವರ ಆರೋಗ್ಯವು ಕೈಕೊಡುತ್ತಿತ್ತು.ಗಂಡನ ಸೇವೆ, ಮಕ್ಕಳ ಪೋಷಣೆ,ಸಮಾಜ ಪರ ಕೆಲಸಗಳು, ಸಾಹಿತ್ಯದ ಸೇವೆ, ಸಿದ್ದರಾಮನ ಆರಾಧನೆಯು ಸತತವಾಗಿ ನಡೆದಿರುತ್ತಿತ್ತು. ಎಲ್ಲ ಮನೆಗಳಲ್ಲಿ ಕಂಡುಬರುವಂತೆ, ಜಯದೇವಿ ತಾಯಿಯವರ ಮನೆಯಲ್ಲಿಯೂ  ಅಣ್ಣತಮ್ಮಂದಿರ ಮನಸ್ತಾಪಗಳು ಬೆಳೆಯುತ್ತಾ ನಡೆದವು.ಸಣ್ಣಸಣ್ಣ ಮಾತುಗಳಿಂದ ಆರಂಭವಾದ ಭಿನ್ನಾಭಿಪ್ರಾಯಗಳು. ಅಣ್ಣ ತಮ್ಮಂದಿರು ಬೇರೆಯಾಗುವ ಸಂದರ್ಭ ಬಂದಿತು. ಪಾಲು ಮಾಡಲಾಗಿ ಲಿಗಾಡೆಯವರ ದೊಡ್ಡವಾಡಿಯು ಸಣ್ಣ ತಮ್ಮನ ಪಾಲಿಗೆ ಬಂದಿತ್ತು. ಮನೆಯ ಶಾಂತಿ ನಿಧಾನವಾಗಿ ಕರಗುತ್ತ ಹೋಗಿತು. ಒಂದು ದಿನ ಆ ಮನೆಯ ಮೌನವೇ ಹೃದಯವನ್ನು ಕಲುಕುವಂತಾಯಿತು…….ಅತ್ತೆ ಪ್ರಯಾಗಬಾಯಿಯು ಯಾವುದೋ ಕೆಲಸಕ್ಕೆ ಬೇರೆ ಊರಿಗೆ ಹೋಗಿದ್ದರು. ಹಾಗೆ ಗಂಡ ವೈದ್ಯರಿಗೆ ತೋರಿಸಿಕೊಂಡು ಬರಲು ಕೋಲ್ಕತ್ತಾಗೆ ಹೋಗಿದ್ದರು,ಜಯದೇವಿ ತಾಯಿಯವರ ಪುಟ್ಟ ಮಗು ಜ್ವರದಿಂದ ಕಂಗೆಟ್ಟು ಮಲಗಿತ್ತು. ತಾಯಿಯ ಕಣ್ಣುಗಳಲ್ಲಿ ಆತಂಕ, ಹೃದಯದಲ್ಲಿ ಕಳವಳ. ಮಗು ಜ್ವರದಲ್ಲಿ ಮೈ ಸುಡುತ್ತಿತ್ತು……ಆದರೆ ಆ ಮನೆಯಲ್ಲಿದ್ದ ಕೆಲವು ಹೃದಯಗಳು ಆ ನೋವನ್ನು ಅರ್ಥಮಾಡಿಕೊಳ್ಳಲಿಲ್ಲ. ಜ್ವರದಿಂದ ನರಳುತ್ತಿದ್ದ ಆ ಮಗುವಿನ ಕಡೆಗೆ ನಿರ್ಲಕ್ಷ್ಯದ ಕಣ್ಣುಗಳು ತಿರುಗಿದವೇ…….. ಹೊರತು ಮಗುವಿಗೇನು ಆಗಿದೆ ಅಂತ ಕೇಳದೇ  ಹೊರಗಡೆ ಹೊರಟು ಹೋದರು. ತಾಯಿಯವರಿಗೆ ಏನು ಮಾಡಬೇಕು ಅನ್ನುವುದು ತಿಳಿಯಲಿಲ್ಲ…. ಹೀಗಾಗಿ ಮನೆಯಲ್ಲಿ  ಯಾವುದಾದರೂ ಔಷದವನ್ನು ತರಬೇಕು ಎಂದು ಮೇಲೆಗಡೆ ಕೋಣೆಗೆ ಹೋದಾಗ ಆ ಕೋಣೆಗಳಿಗೆಲ್ಲ ಬೀಗ ಹಾಕಿದ್ದು ನೋಡಿ ಎದೆ  ಝಲ್ಲೆಂದಿತ್ತು…….!!?? ತಾಯಿಗೆ ಆ ಕ್ಷಣ ಸ್ಪಷ್ಟವಾಯಿತು — ಇಲ್ಲಿ ಉಳಿದರೆ ತನ್ನ ಮಕ್ಕಳಿಗೆ ಬೇಕಾದ ಮಮತೆ ಮತ್ತು ಆರೈಕೆ ಸಿಗುವುದಿಲ್ಲ ಎಂಬ ಸತ್ಯತಿಳಿದು ಕಣ್ಣೀರು ತಡೆದುಕೊಂಡು, ತನ್ನ ಮಕ್ಕಳನ್ನು ಮುದ್ದಾಗಿ ತಬ್ಬಿಕೊಂಡರು, ಹೊಸ ನಿರ್ಧಾರವನ್ನು ತೆಗೆದುಕೊಂಡರು.  ತನ್ನ ಮಕ್ಕಳಿಗಾಗಿ ಒಂದು ಬೇರೆ ಮನೆ ಕಟ್ಟಬೇಕೆಂಬ ಮನಸ್ಸು ಮಾಡಿದರು. ಆ ನಿರ್ಧಾರದಲ್ಲಿ ನೋವು ಇತ್ತು…ಕುಟುಂಬದವರೆಲ್ಲರೂ ಒಂದಾಗಿ ಒಂದು ಕಡೆ ಸಂತೋಷದಿಂದ ನಗುನಗುತ ನಲುವಿನಲಿ ನಲಿಯುತ ಬಾಳಬೇಕೆಂಬುವ ಆಶೆಯಗಳ ವಿಚ್ಛೇದನೆಯ ವೇದನೆ ಅದಾಗಿತ್ತು…….!!! ಹೀಗಾಗಿ ಜಯದೇವಿ ತಾಯಿಯವರು ತಮ್ಮ ನೋವನ್ನು ಮನದಾಳದಲ್ಲಿ ಮರೆಮಾಡಿಕೊಂಡು, ಮಕ್ಕಳ ಭವಿಷ್ಯಕ್ಕಾಗಿ ಹೊಸ ಜೀವನದ ದಾರಿಯನ್ನು ಆರಿಸಿಕೊಂಡರು.ಜ್ವರದಲ್ಲಿದ್ದ ಮಗುವನ್ನು ಎತ್ತಿಕೊಂಡು ತವರು ಮನೆ ಕಡೆ ಹೆಜ್ಜೆ ಹಾಕಿದರು.ಆ ದಿನದಿಂದ ಅವರ ಜೀವನದಲ್ಲಿ ಮತ್ತೊಂದು ಹೊಸ ಹೋರಾಟ ಪ್ರಾರಂಭವಾಯಿತು… ಆದರೆ ಆ ಹೋರಾಟದ ಹಿಂದಿದ್ದ ಶಕ್ತಿ — ತಾಯಿತನದಾಗಿತ್ತು. ತವರು ಮನೆಯಲ್ಲಿ ತಂದೆ ತಾಯಿ ಅತ್ಯಂತ ಆತ್ಮೀಯತೆಯಿಂದ ಬರಮಾಡಿಕೊಂಡು. ಅವರನ್ನು ಸಂತೈಸಿ ಅಳಿಯ ಬಂದ ಮೇಲೆ ಬೇರೆ ಮನೆಗೆ ಹೋಗಲು  ಬಿಡದೆ ತಮ್ಮ ಮನೆಯಲ್ಲಿಯೇ ಕೆಳಗಡೆ ಇರಲು ಅನು ಮಾಡಿಕೊಟ್ಟರು. ಅವರ ಮನೆಯ ಎದುರುಗಡೆ ವಾರದ ಮಲ್ಲಪ್ಪನವರ ಮನೆಯಿತ್ತು. ಅವರ ವಾಡೆಯ ಎದುರುಗಡೆ ಜಗ ಖಾಲಿ ಇತ್ತು. ಆ ಜಗವನ್ನು ಖರೀದಿ ಮಾಡಿ ಅಲ್ಲಿಯೇ ಮನೆ ಕಟ್ಟಲು ಪ್ರಾರಂಭಿಸಿದರು.ಆ ಮನೆಗೆ ಅತ್ಯಂತ ಪ್ರೀತಿಯಿಂದ *ಜಯನೀಕೆತನ* ಅಂತ ತಾಯಿಯವರ ಹೆಸರಲ್ಲಿ ಗಂಡ ಚೆನ್ನಮಲ್ಲಪ್ಪನವರು ಮನೆ ಕಟ್ಟಿಸಿದರು. ಇಪ್ಪತ್ತೆರಡು ಕೋಣೆಗಳನ್ನು ಹೊಂದಿರುವ ಭವ್ಯವಾದ ಮನೆ…. ಅರಮನೆಯಂತೆ ವಿಶಾಲವಾಗಿ ಕಟ್ಟಿದರು. ದೂರದಿಂದ  ನೋಡಿದವರಿಗೆ ಅದು ಸಾಮಾನ್ಯ ಮನೆ ಅಲ್ಲ, ಒಂದು ದೊಡ್ಡ ಸಂಸ್ಕೃತಿಯ ಸಂಕೇತದಂತೆ ಕಾಣುತ್ತಿತ್ತು.ಮನೆಯ ಒಳಗೆ ಕಾಲಿಟ್ಟ ತಕ್ಷಣ ದೊಡ್ಡ ವಿಶಾಲವಾದ ಶಿವಯೋಗಿ ಸಿದ್ದರಾಮನ ಭಾವಚಿತ್ರದ ದರ್ಶನ ಮಾಡಿ ಒಳಗೆ ಹೋಗಬೇಕಾಗುತಿತ್ತು….._ಸಿದ್ದರಾಮನ ಭಾವ ಚಿತ್ರ ಒಳಗೆ ಹೋದರೆ ವಿಶಾಲವಾದ ಅಂಗಳ ಕಣ್ಣಿಗೆ ಬೀಳುತ್ತಿತ್ತು . ಮನೆಯಲ್ಲಿ ಚೆನ್ನಾಗಿ ಬೆಳಕು ಗಾಳಿ ಆಡಲೆಂದು ಮಧ್ಯದಲ್ಲಿ ತೆರೆದ ಅಂಗಳವಿತ್ತು.ಮನೆಯ ವಿವಿಧ ದಿಕ್ಕುಗಳಿಗೆ ಕೊಣೆಗಳು. ಪ್ರತಿಯೊಂದು ಕೋಣೆಯೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿತ್ತು—ಕೆಲವು ವಿಶ್ರಾಂತಿಗಾಗಿ, ಕೆಲವು ಅತಿಥಿಗಳಿಗಾಗಿ, ಇನ್ನೊಂದು ದೇವರ ಮನೆಗಾಗಿ ಮೀಸಲಿದ್ದರೆ ಒಂದು ದೊಡ್ಡ ಅಡಿಗೆಯ ಮನೆ  ಇನ್ನೊಂದು ಚಿಕ್ಕ ಅಡಿಗೆ ಮನೆ ಇತ್ತು .ಇನ್ನೊಂದು ಕಾಳುಗಳ ಸಂಗ್ರಹಣೆ ಮಾಡುವ ಕೋಣೆ, ಊಟದ ಮನೆ ಇನ್ನೊಂದು ಮನೆಯ ವಸ್ತ ಒಡವೆಗಳನ್ನು  ಕಾಗದ ಪತ್ರಗಳನ್ನು ಬಂಗಾರ ಬೆಳ್ಳಿಯ ಸಾಮಗ್ರಿಗಳನ್ನು ಇಡುವ ಟ್ರೆಝರಿ ಕೋಣೆ ಬೇರೆಯಾಗಿತ್ತು.  ಒಂದು ವಿಶಾಲವಾದ ಕೋಣೆ ಬಡ್ಡಿ ವ್ಯವಹಾರದಲ್ಲಿ ಅಡವಿ ಇಟ್ಟುಕೊಂಡ ಸಾಮಗ್ರಿಗಳದ್ದು.(ಈ ಕೋಣೆ ತಾಯಿಯವರಿಗೆ ಇಷ್ಟವಾಗುತ್ತಿರಲಿಲ್ಲ ಏಕೆಂದರೆ ಜನರು ಅನಿವಾರ್ಯತೆಯಲ್ಲಿ ತಂದಿಡುವ ಸಾಮಗ್ರಿಗಳನ್ನು ನೋಡಿದರೆ ಅವರಿಗೆ ಬಹಳ ಕಳಗಳಾಗುತ್ತಿತ್ತು) ಹಾಗೇ ನೆಲಮನೆಯಲ್ಲಿ ಸುಮಾರು  14 ಮುನಿಮರು(ಕಾರಭಾರಿಗಳು )ಕುಳಿತುಕೊಂಡು ಇಡೀ ಆಸ್ತಿಯ ವಹಿವಾಟದ ಲೆಕ್ಕಾಚಾರವನ್ನು ಇಡಲು ಬರುತ್ತಿದ್ದರು .ಅವರಿಗಾಗಿ ಕೆಳಮನೆಯಲ್ಲಿ ಒಂದು ದೊಡ್ಡ ಮನೆ ಕಟ್ಟಲಾಗಿತ್ತು. ಅದರ ಮೇಲ್ಗಡೆ ಇನ್ನೊಂದು ರೂಮು ಹೊರಗಡೆಯಿಂದ ಬಂದು ಹೋಗುವರಿಗಾಗಿ ಆಫೀಸ್ ರೂಮ್ ಅನ್ನು ಮಾಡಲಾಗಿತ್ತು.ಮೊದಲನೇ ಅಂತಸ್ತಿನ ಕೋಣೆಗಳೆಲ್ಲ ಮಕ್ಕಳು- ಸೊಸೆಯಂದಿರಗಾಗಿ ತಮಗಾಗಿ ಮೀಸಲಿದ್ದವು .ಅಲ್ಲಿ ಒಂದು ದೊಡ್ಡ ಹಾಲ್ ಕಟ್ಟಲಾಗಿತ್ತು. ಕೆಳಗಡೆ ಒಂದು ಕೂಡಾ ದೊಡ್ಡ ಹಾಲ್   ಇತ್ತು……ಮನೆಗೆ ಬಂದು ಹೋಗುವ ಅತಿಥಿಗಳಾಗಿ … ಸಂಪತ್ ಭರಿತವಾದ ಮನೆ……..!! ಜಯದೇವ ತಾಯಿಯವರ ವಾಡೆ ಮೊದಲನೇ ಅಂತಸ್ತಿಗೆ ಹೋದರೆ ಎದುರುಗಡೆ ಜಯದೇವಿ ತಾಯಿಯವರ ಕೋಣೆ, ಎಡ ಭಾಗಕ್ಕೆ ಚಿಕ್ಕದೊಂದು ಹೂವೂ ತೋಟವನ್ನು ನಿರ್ಮಿಸಿಕೊಂಡಿದ್ದರು. ಅದಕ್ಕಾಗಿ  ಗಾಳಿ ಬೆಳಕು ಆಡಲೆಂದು ಮೇಲೆ ಸ್ಥಳ ಬಿಟ್ಟಿದ್ದರು. ಸುಂದರ ಚಿಕ್ಕ ತೋಟದಲಿ‌ ಹಸಿರು ಗಿಡಗಳು, ಬಣ್ಣ ಬಣ್ಣದ ಹೂಗಳು ಅವುಗಳಲ್ಲಿ ಮುಖ್ಯವಾಗಿ ಟ್ಯೂಬ್ ರೊಜ ಅಂದರೆ ನಿಶಿಗಂಧ ಹೂಗಳು ಬಹಳ ಪ್ರಿಯವಾದ ಹೂಗಳು ತಾಯಿಯವರಿಗೆ … ಇನ್ನೂ ‘ರಾತ‌ರಾಣಿ’ಹೂವುಗಳು ‘..ರಾತ್ರಿ ಸುಗಂಧ ಸುಸೂವ ಗಿಡಗಳಿದ್ದವು. ರಾತ್ರಿ ಪರಿಮಳವು  ಗಾಳಿಯಲ್ಲಿ ಹರಡಿ  ಮನೆಯ ವಾತಾವರಣವನ್ನು ಇನ್ನಷ್ಟು ಮನಮೋಹರ ವಾಗಿಸುತ್ತಿತ್ತು. ‘ಜಯನಿಕೇತನವು’  ಕೇವಲ ಸುಂದರ ಕಟ್ಟಡ ಮಾತ್ರವಲ್ಲ;ಅದು ವೈಭವ, ಸಂಸ್ಕೃತಿ ಮತ್ತು ಆತಿಥ್ಯವನ್ನು ಹೊತ್ತು ನಿಂತಿರುವ ಒಂದು ಜೀವಂತ ಅರಮನೆ ಎಂಬ ಭಾವನೆಯನ್ನು ಮೂಡಿಸುತ್ತಿತ್ತು.*ಜಯನಿಕೇತನ್*ಒಂದು ನಂದನ ವನದಂತೆ ರಾರಾಜಿಸಲಾರಂಭಿಸಿತ್ತು. ಜಯದೇವಿ ತಾಯಿಯವರು ಬಳಸುತ್ತಿದ್ದ ಕನ್ನ ಹಿರಿಯ ಮಗಳು ಮತ್ತು ತಂಗಿಯಂದಿರೇಲ್ಲ ಸೇರಿ ಶಾಲೆಗೆ ಹೋಗಿ ಬರುತ್ತಿದ್ದರು. ಹಿರಿಯ ಮಗಳು ಶಶಿಕಲಾ ತುಂಬಾ ಸುಂದರ ಹಾಗೂ ಜಾಣ ತಾಯಿಯಂತೆ ನಿರ್ಗಳವಾಗಿ ಹಾಡುವ ಹಾಗೂ ಭಾಷಣ ಮಾಡುತ್ತಿದ್ದರು. ಜಯದೇವಿ ತಾಯಿಯವರು ಬಾಲ ಸಿದ್ದರಾಮ ಅಕ್ಕಮಹಾದೇವಿ ಮುಂತಾದ ಶರಣರ ನಾಟಕಗಳನ್ನು ತಾವೇ ಬರೆದು ಮಕ್ಕಳ ಕೈಯಲ್ಲಿ ನಾಡಹಬ್ಬದಲ್ಲಿ ನಟನೆ ಮಾಡಿಸುತ್ತಿದ್ದರು ಮುಖ್ಯ ಪಾತ್ರದಲ್ಲಿ ಮಗಳು ಶಶಿಕಲಾ ಭಾಗವಹಿಸುತಿದ್ದರು. ಸಿದ್ದರಾಮನು ಮಲ್ಲಯ್ಯ ನೀನು ಎಲ್ಲಿ ಅಡಗಿದಿಯಾ ಎಂದು ಪರಿಪರಿಯಾಗಿ ಹಂಬಲಿಸಿ….ನಟನೆ ಮಾಡುತ್ತಿದ್ದ ದೃಶ್ಯವನ್ನು ನೋಡಿ ಧಾರಾಕಾರವಾಗಿ ತಾಯಿಯವರ ಕಣ್ಣೀರು ಹರಿಯಲಾರಂಭಿಸುತ್ತಿತ್ತು. ಭಾವುಕರಾಗುತ್ತಿದ್ದರು. ಅಕ್ಕನ ಪಾತ್ರದಲ್ಲಿ ಮಗಳು……. “ಅಳಿಸಂಕುಲವೇ ಮಾಮರವೇ ನೀವು ಕಣ್ಣಂಡಿರಾ ಎನ್ನ ಚೆನ್ನಮಲ್ಲಿಕಾರ್ಜುನನ್ನು ನೀವು ಕಂಡಿರಾ” ಅಂತ ಅತ್ಯಂತ ಭಾವಕಳಾಗಿ ಮಗಳು ನಟಿಸುತ್ತಿರುವದ ನೋಡಿ ಶರಣೆ ಅಕ್ಕನನ್ನು ನೆನೆದು ಹನಿಗಣ್ಣ ಆಗುತ್ತಿದ್ದರು.ಮಗಳನ್ನು ಅತ್ಯಂತ ಅಭಿಮಾನದಿಂದ ಎದೆಗಪ್ಪಿ ಕೊಳ್ಳುತ್ತಿದ್ದರು.ತಮ್ಮ ಸಂಸ್ಕಾಗಳ ಗೂಡಿನಲಿ ಮಕ್ಕಳಿಗೆ ಬೆಳಿಸಲಾರಂಭೀಸಿದರು. ಜಯದೇವಿ ತಾಯಿಯವರು ತಮ್ಮ ಬದುಕಿನ ಅನುಭವಗಳಿಂದ ಒಂದು ಮಹತ್ವದ ಸತ್ಯವನ್ನು ಅರಿತುಕೊಂಡಿದ್ದರು – ಸಮಾಜದ ಬದಲಾವಣೆ ಮನೆಯೊಳಗೇ ಆರಂಭವಾಗಬೇಕು ಎಂದು. ಅದಕ್ಕಾಗಿಯೇ ಅವರು ತಮ್ಮ ಮಕ್ಕಳನ್ನು ಶರಣ ಸಂಸ್ಕೃತಿಯ ಮೌಲ್ಯಗಳಲ್ಲಿ ಬೆಳೆಸಲು ಆರಂಭಿಸಿದರು. ಮನೆಯೊಳಗೆ ಒಮ್ಮೆ ಇದ್ದ ಮೂಢನಂಬಿಕೆಗಳು, ಅನಾವಶ್ಯಕ ಆಚರಣೆಗಳು ನಿಧಾನವಾಗಿ ಕಣ್ಮರೆಯಾಗಲು ಆರಂಭಿಸಿದವು. ಜಯದೇವಿ ತಾಯಿಯವರು ಯಾವ  ಮಡಿ ಮೈಲಿಗೆಯನ್ನು ಒಪ್ಪುತ್ತಿರಲಿಲ್ಲ…. ಜಾತಿ ಧರ್ಮ ನೀಚ ಸಂಕೋಲನದಿಂದ ಹೊರಗಿದ್ದರು.“ಮನುಷ್ಯನಿಗೆ ಮಾನವೀಯತೆಯೇ ದೊಡ್ಡ ಧರ್ಮ” ಎಂದು ತಾಯಿ ಮಕ್ಕಳಿಗೆ ಹೇಳುತ್ತಿದ್ದರು. ಹೆಣ್ಣು ಗಂಡೆಂದು  ದೇವರು ಭೇಧ ತೋರಲಾರ ಎನ್ನುತ್ತಿದ್ದರು. ಮುಟ್ಟಾದರೆ ಹೆಣ್ಣನ್ನು ಕೀಳಾಗಿ ನೋಡುವುದು ಖಂಡಿಸುತ್ತಿದ್ದರು ಏಕೆಂದರೆ ತಾಯಿ ಜಗದಂಬೆಯು ಕೂಡ ಹೆಣ್ಣಲ್ಲವೇ ಅಂತ ಕೇಳುತ್ತಿದ್ದರು. ಅದಕ್ಕೆ ದೇವರನ್ನು ಆ ಸಮಯದಲ್ಲಿ  ಯಾಕೆ ಮುಟ್ಟಬಾರದು  ಅನ್ನುವ ಪ್ರಶ್ನೆ ಅವರದಾಗಿತ್ತು…!!??? ಅವರ ಮಾತುಗಳಲ್ಲಿ ಕೇವಲ ಉಪದೇಶವಿರಲಿಲ್ಲ; ಬದುಕಿನಲ್ಲಿ ಅವರು ಅದನ್ನು ಅನುಸರಿಸುತ್ತಿದ್ದರು. ಮಕ್ಕಳು ಏನನ್ನಾದರೂ ಪ್ರಶ್ನಿಸಿದಾಗ,“ಹೀಗೆ ಮಾಡಬೇಕು ಎಂದು ಹೇಳಿತಿದ್ದರು  ಅದರ ಒಳ ಅಡಕವಾದ ಅರ್ಥ ಏನು ಎಂದು ತಿಳಿದುಕೊಳ್ಳಿ  ಮೊದಲು ಎಂದು ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಅವರ ಮನೆ ನಿಧಾನವಾಗಿ ಜ್ಞಾನ, ಸಮಾನತೆ ಮತ್ತು ಪ್ರೀತಿ ತುಂಬಿದ ಶರಣ ಸಂಸ್ಕೃತಿಯ ಮನೆ ಆಗಿ ರೂಪುಗೊಂಡಿತು.ಅತ್ಯಂತ ಸಾಂಪ್ರದಾಯಸ್ತ ಮನೆಯಾದ ಲಿಗಾಡೆ ಮನೆತನದವರು ವೈಚಾರಿಕತೆಯ ಶರಣ ಆಚರಣೆ ಅತ್ತ ತಿರುಗಲಾರಂಭಿಸಿದರು. *ಮೂಢನಂಬಿಕೆಗಳು ಮನುಷ್ಯನ ಮನಸ್ಸನ್ನು ಬಂಧಿಸುತ್ತವೆ… ಶರಣರ ಮಾರ್ಗ ಮನುಷ್ಯನ ಮನಸ್ಸನ್ನು ಮುಕ್ತಗೊಳಿಸುತ್ತದೆ.”* ಆ ಮಾತುಗಳು ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬೇರುರರಾಲಂಭೀಸಿದವು.ಅವರು ಕೇವಲ  ಮಕ್ಕಳಿಗೆ ತಾಯಿಯಾಗಿರಲಿಲ್ಲ ಮಾನವೀಯತೆಯ ಮೌಲ್ಯಗಳನ್ನು ಅಳವಡಿಸಿಕೊಂಡ ಶರಣ ಸಂಸ್ಕೃತಿಯ ವಾರಸುದಾರರು ಆಗಿ ಬೆಳೆಯಲು ಆರಂಭಿಸಿದರು.ಹೀಗೆ, ಜಯದೇವಿ ತಾಯಿಯ ಮನೆಅದು ಸಮಾನತೆ, ಜ್ಞಾನ ಮತ್ತು ಮಾನವೀಯತೆಯನ್ನು ಬೆಳೆಸುವ ಒಂದು ಚಿಕ್ಕ ಸಮಾಜ ಆಗಿತ್ತು. ಇದಕ್ಕೆ ಉದಾಹರಣೆ ಎಂದರೆ ಜಯದೇವಿತಾಯಿಯವರ ಐದು ಅತ್ತೆಯಂದಿರು ಸಾಂಪ್ರದಾಯಸ್ಥರು …..ಪಡಸಾಲೆಯಲ್ಲಿ ನಿಂತು ಮಾತನಾಡಿದರೆ ,ಅಂಗಳದಲ್ಲಿ ನಿಂತು ಕುಂಕುಮವನ್ನು ಇಟ್ಟಿರೆ ಸಾವಿರ ಸಲ ಬೈದ  ಅತ್ತೆಯಂದರು ….ಮುಂದೆ ತಾಯಿಯವರನ್ನು ಸಭೆ ಸಮಾರಂಭಗಳಿಗೆ ಅತ್ಯಂತ ಆನಂದಭರಿತರಾಗಿ ಕಳುಹಿಸಿ ಕೊಡಲಾರಂಭಿಸಿದರು .ಗಂಡನ ಅನಾರೋಗ್ಯದಲ್ಲಿ ತಾಯಿಯವರಿಗೆ  ಸಮಾರಂಭಗಳಿಗೆ ಹೋಗಲು ಮನಸ್ಸಿಇಲ್ಲದಿದ್ದರು …. ಗಂಡ ತಮ್ಮ ಕಾರುಗಳನ್ನು ಕೊಟ್ಟು ಬೇರೆ ಊರುಗಳಿಗೆ ಹೋಗಿ ಭಾಷಣ ಮಾಡಿ ಬರಲು ಒತ್ತಾಯಿಸುತ್ತಿದ್ದರು. ” ಇಲ್ಲಿ ನನ್ನ ನೋಡಿಕೊಳ್ಳಲು ಅನೇಕ ಜನರಿದ್ದಾರೆ…… ಅಲ್ಲಿ ನೀನು ಇಡೀ ಸಮಾಜಕ್ಕೆ ಬೇಕಾಗಿದ್ದೀಯಾ ನೀನು ಹೋಗು “ಅನ್ನುವಷ್ಟರ ಮಟ್ಟಿಗೆ ಅವರು ವೈಶಾಲ್ಯ ಮನೋಭಾವನೆಯನ್ನು ಹೊಂದಿದ್ದರು. ಚೆನ್ನ ಮಲ್ಲಪ್ಪನವರು ಕಾಯಿಲೆಯಲ್ಲಿ ಬಳಲಾರಂಭಿಸಿದ ವೇದನೆಯ ದಿನಗಳು ಅವು….  ವೈದ್ಯರಿಗೆ ತೋರಿಸಲು ದೊಡ್ಡ ದೊಡ್ಡ ಊರುಗಳಿಗೆ ಕಲ್ಕತ್ತಾ ಬೊಂಬೆ  ಊರುಗಳಿಗೆ ಹೋಗುವಾಗ ಇಡೀ ರೈಲ್ವೆ ಒಂದು ಬಂಡಿಯಲ್ಲಿ ಅವರಿಗಾಗಿ ಮೀಸಲಾಗಿಡಲಾಗುತ್ತಿತ್ತು. ಹಾಗೇ ಊರುಗಳಿಗೆ ಹೋದಲ್ಲೆಲ್ಲ ಹೆಂಡತಿಗೆ‌ ಅಪ್ಪಟ ರೇಷ್ಮೆ ಸೀರೆ ಹಾಗೂ ವಜ್ರಗಳ ‌ಆಭರಣಗಳನ್ನು ತಂದು

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-10 ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯಕೊಡುಗೆ ನೀಡಿದ ಮಹಾಚೇತನ ಸವಿತಾ ದೇಶಮುಖ ಭಾಗ- 10ಜಯದೇವಿ ತಾಯಿಯವರ ಜೀವನ ವೃತ್ತಾಂತ ಜಯದೇವಿತಾಯಿಯವರು *೧೯೩೪ರಲ್ಲಿ ವೀರಶೈವ ಸಾಹಿತ್ಯ ಸಭೆಯ ಅಧ್ಯಕ್ಷರಾಗಿ …….ಸ್ತ್ರೀ ಜಾಗೃತಿ ,ಮಹಿಳೆಯರ ಪ್ರಗತಿಯ ಕುರಿತು ಮಾತನಾಡುತ್ತ …….“ಮಹಿಳೆಯರು ಮನೆ ಕೆಲಸದಲ್ಲಿ ಜೇಡರ ಹುಳುವಿನಂತೆ ಬಂಧಿಸಿಕೊಂಡಿದ್ದಾಳೆ….ಓದು ಬರಹಗಳಿಗೆ ಸಮಯ ಉಳಿಸಿಕೊಳ್ಳದೆ ದುಡಿಯುತ್ತಿರುತಾಳೆ ….,ಅವಳಿಗೆ ದುಡಿಮೆ ಆರ್ಥಿಕ ಆದಾಯವಿಲ್ಲದ ಕಾರಣ ಅವಳು ಪರಾವಲಂಬನೆ ಆಗಿ ಬದುಕುತ್ತಿದ್ದಾಳೆ ಕೀಳರಮಿಯ ಭಾವನೆಯಲ್ಲಿ ಬಳಲುತ್ತಿದ್ದಾಳೆ…..!!!! ಇಂಥ ಅವಹೇಳನಕರ ಭಾವನೆಗಳು ಅಜ್ಞಾನದಿಂದ ಉಂಟಾದದ್ದು…. ಈ ತಾರತಮ್ಯದ ಅಜ್ಞಾನವನ್ನು ಅತ್ಯಅಮೂಲ್ಯವಾದಂಥ ವಚನ ಸಾಹಿತ್ಯದ ಅಭ್ಯಾಸದಿಂದ ವಚನಗಳ ಸತತ ಮನನ ಗೊಳಿಸಿಕೊಳ್ಳುವುದರಿಂದ ದಾಸ್ಯತ್ವಭಾವನೆಗಳಿಂದ ದೂರಗೊಳ್ಳಬಹುದಾಗಿದೆ… !!! ಮಹಿಳೆಯರು ಶಿಕ್ಷಣ ಪಡೆದು ಸಾಹಿತ್ಯ ಬರವಣಿಗೆಯಲ್ಲಿ ತೊಡಗಿಕೊಂಡು ಸ್ವಾವಲಂಬನ ಬದುಕು ಸಾಗಿಸುವ ಮೂಲಕ ದಾಶ್ಯತ್ವದ ನೆಲೆಗಳ ಮಧ್ಯದಲ್ಲಿ ತನ್ನದೇ ಆದ ಬದುಕನ್ನು ಸ್ಥಾಪಿಸಬೇಕು . ಮಹಿಳೆಯರಲ್ಲಿ ಜಾಗೃತಿ ಉಂಟು ಮಾಡುವುದೇ ನಮ್ಮ ಸಭೆಗಳ ಉದ್ದೇಶವಾಗಿರಬೇಕು ಅಂತ ಹೇಳಿದರು .ಮಹಿಳೆಯರು ತಮ್ಮ ಗೌರವವನ್ನು …. ಕೇವಲ ಆಚರಣೆಗಳಿಗೆ ಸೀಮಿತ ಗೊಳಿಸಿಕೊಳ್ಳಬಾರದು ಸದಾ ತಮ್ಮ ಅಭಿವೃದ್ಧಿಗಾಗಿ ಕೆಲಸ ಮಾಡಬೇಕೆಂದು” ಜಯದೇವಿ ತಾಯಿಯವರು ಬಯಸುತ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಂದಿನ ಸಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳು ಪುರುಷ ಸಮಾಜದ ಸಮವಾಗಿ ಸಭೆ ಸಮಾರಂಭಗಳನ್ನು ಪಾಲ್ಗೊಳ್ಳುವುದೇ ವಿರಳವಾಗಿತ್ತು .ಹೆಣ್ಣು ಮಕ್ಕಳು ಶಿಕ್ಷಣ ಕಲಿತರೆ ಮನೆ ಕೆಲಸ ಮಾಡುವುದಿಲ್ಲ ಎಂದು ಅವಳನ್ನು ಹಿಂದಿಟ್ಟಿದ್ದರು. ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳನ್ನು ಸಾಮಾಜಿಕ ರಂಗದಿಂದ ಹಿಂದೆಸರಿಸುವ ಎಲ್ಲ ಗೊಡ್ಡು ಆಚರಣೆಗಳನ್ನು ಮೌಢ್ಯತೆಗಳನ್ನು ಹೇರಿ ಮಹಿಳೆಯರು ಭಯ ಬೀಳುವಂತೆ ಮಾಡುತ್ತಿದ್ದ ಕಾಲ ಅದಾಗಿತ್ತು.. ಶೈಕ್ಷಣಿಕವಾಗಿ ಎಷ್ಟೇ ಸಮಾನತೆಯನ್ನು ಒದಗಿಸಿತ್ತೇವೆ ಅಂತ ಬ್ರಿಟಿಷರು ಹೇಳುತ್ತಿದ್ದರು ಆಗಿನ ಕಾಲದಲ್ಲಿ ಹೆಣ್ಣು ಮಗಳು ನಾಲ್ಕು ಗೋಡೆಯ ಮಧ್ಯೆ ಅವಳ ಜೀವನವನ್ನು ನಡೆಸಬೇಕು ಕುಟುಂಬವನ್ನು ನಿಭಾಯಿಸಿಕೊಂಡು ಮಕ್ಕಳನ್ನು ಹೆತ್ತು ಬೆಳೆಸಬೇಕು ಅನ್ನುವ ಕಾಲ ಅದಾಗಿತ್ತು…. ಅಂತಹದರಲ್ಲಿ ತಾಯಿಯವರು ಹೆಣ್ಣು ಮಕ್ಕಳು ಜೇಡರ ಹುಳದಂತೆ ಬಲೆಯಲ್ಲಿ ಸಿಕ್ಕಿ ಬಿಳದೆ ಅದನ್ನು ಬಿಡಿಸಿ ಹೊರಗೆ ಬರಬೇಕು ಸಾಹಿತ್ಯವನ್ನು ಓದಬೇಕು.ಬರವಣಿಗೆ ಮಾಡಬೇಕು ತನ್ನ ಸರ್ವತೋ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಬೇಕು ,ತನ್ನದೇ ಆದ ಜೀವನವನ್ನು ನಿರ್ಮಿಸಬೇಕು ಅನ್ನುವ ದೀರೋದ್ಯಾತ ಕರೆಯನ್ನು ಜಯದೇವಿತಾಯಿಯವರು ಹೆಣ್ಣು ಮಕ್ಕಳಿಗೆ ಕೊಡುತ್ತಿದ್ದರು.‌…ಆಗಿನ ದಿನಗಳಲ್ಲಿ,!!! ಅವರು ತಮ್ಮ ಭಾಷಣಗಳಲ್ಲಿ ಹೆಣ್ಣು ಮಕ್ಕಳ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸುವದಷ್ಟೇ ಅಲ್ಲದೆಸ್ವಂತ ಸೊಲ್ಲಾಪುರದಲ್ಲಿ ವೃದ್ಧಾಶ್ರಮ ಅನಾಥ ಆಶ್ರಮಗಳನ್ನು ಕೇವಲ ಹೆಣ್ಣು ಮಕ್ಕಳಿಗಾಗಿ ತೆರೆದರು. ಅವರಿಗೆ ಪೂಜೆ ಭಜನೆ ಅನೇಕ ಸಮಾಜಪರ ಚಟುವಟಿಗಳಿಗಾಗಿ ಅನುಕೂಲಗಳನ್ನು ಮಾಡಿಕೊಟ್ಟರು. ವೃದ್ಧರು… ಅನಾಥ ಹೆಣ್ಣು ಮಕ್ಕಳ ಮನಸ್ಸಿನ ನೆಮ್ಮದಿಗಾಗಿ ವಚನ ಸ್ಪರ್ಧೆಗಳನ್ನು ಅನೇಕ ವಿವಿಧ ರೀತಿಯ ಚಟುವಟಿಕೆಗಳನ್ನು ಏರ್ಪಡಿಸುತಿದ್ದರು. ೧೯೩೫ರಲ್ಲಿ ಶಿಕ್ಷಣಕ್ಕಾಗಿ ಹರಡೇಕರ್ ಮಂಜಪ್ಪನವರು ” ಅಕ್ಕಮಹಾದೇವಿ ಜಯಂತಿ* ಬಸವ ಜಯಂತಿ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾರಾರಂಭಿಸಿದರು ಅಕ್ಕನ ಬೆಳಗನ್ನು ಅಲ್ಲಲ್ಲಿ ಸ್ಥಾಪಿಸಿದ್ದರು. ಮಹಿಳೆಯರ ಪ್ರಚಲಿತ ವಿದ್ಯಮಾನಗಳನ್ನು ಅರಿತುಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲಿ ಅನ್ನುವ ಉದ್ದೇಶಕ್ಕಾಗಿ ಹರಡೇಕರ್ ಮಂಜಪ್ಪನವರ ಕನ್ನಡ ಪತ್ರಿಕೆಯನ್ನು ವೀರಶೈವ ಮಹಿಳಾ ಜ್ಞಾನ ಮಂದಿರಕ್ಕೆ ತರಿಸುತ್ತಿದ್ದರು. ಹೀಗಾಗಿ ತಾಯಿಯವರು ಕನ್ನಡಕ್ಕೆ ಚಿರಪಚಿತರಾಗಿದ್ದರು . ಹಾಗೆ ಹರಡೆಕರ ಮಂಜಪ್ಪನವರೊಂದಿಗೆ ಸ್ವಾತಂತ್ರದ ಹೋರಾಟ ಸ್ತ್ರೀ ವಿಮೋಚನೆಯ ಬಗ್ಗೆ ಅನೇಕ ಸಲ ಭೇಟಿ ಮಾಡಿದ್ದರು. ಜಯದೇವಿ ತಾಯಿಯವರು ಸ್ವಾತಂತ್ರ ಹೋರಾಟ ಹಾಗೂ ಹೆಣ್ಣು ಮಕ್ಕಳ ಸ್ವಾತಂತ್ರ್ಯಕ್ಕಾಗಿ ಆಯೋಜಿಸಲಾಗುವ ಎಲ್ಲ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು .*೨೪-೪-೧೯೩೯ *ರಂದು ವೀರಶೈವ ಮಹಾಸಭೆಯ ಮಹಿಳಾ ಪರಿಷತ್ತಿನ ಅಧ್ಯಕ್ಷ ಯಾದರು. ಸಭೆಯಲ್ಲಿ ಮಾತನಾಡುತ್ತಾ…*ಎಲ್ಲ ಸ್ತ್ರೀ ಪುರುಷರು ಸಮಾನರು…… ಸ್ತ್ರೀಯು ಪತಿಯ ಅರ್ಧಾಂಗಿಣಿಯಾಗಿ ಮನೆ ಕೆಲಸವನ್ನೆಲ್ಲ ಮಾಡುವಂತೆ ಪತಿಯು ಸಹ ಅವಳಷ್ಟೇ ಜವಾಬ್ದಾರಿ ಹೊಂದಿರುತ್ತಾರೆ ಇಬ್ಬರು ಸರಿ ಹಂಚಿಕೊಂಡು ಕುಟುಂಬವನ್ನು ನಡೆಸಿಕೊಂಡು ಹೋದರೆ ಸ್ವರ್ಗವನ್ನೇ ಧರೆಗೆ ಇಳಿಸಬಹುದು.. ನಮ್ಮಹಿಂದಿನ ಸಂಸ್ಕೃತಿಯನ್ನು ಮರೆಯದೇ ಸಮಾನತೆ ಯೊಂದಿಗೆ ನಡೆಯಬೇಕು‌. ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರಿಗೆ ಶಿಕ್ಷಣದ ಅನುಕೂಲ ಸಾಕಷ್ಟು ಒದಗಿ ಬಂದಿದೆ ಅದನ್ನು ಸದುಪಯೋಗ ಪಡಿಸಿಕೊಂಡು ಶಿಕ್ಷಣ ಪಡೆದುಕೊಳ್ಳಬೇಕು ಎಂದು ಸಾರಿದರು. *೧೯೪೦ರಲ್ಲಿ * ಜಯದೇವಿ ತಾಯಿಯವರು ಸ್ವಂತ ಜಗವನ್ನು ಖರೀದಿಸಿ* ಜಯದೇವಿ ಕನ್ಯಾ ಶಾಲೆ*ಅಥವಾ *ಕನ್ನಡ ಕನ್ಯಾ ಶಾಲೆ *ಎಂದು ಆ ಶಾಲೆಗೆ ಮರು ನಾಮಕರಣ ಮಾಡಿದರು .ಮುಂದೆ ಮರಾಠಿ ಅಭಿಮಾನಿಗಳು ಕೆಲವರು ಈ ಶಾಲೆಯಲ್ಲಿ ಮರಾಠಿ ಕಲಿಸಲು ಇಚ್ಚಿಸಿದರು. ಕನ್ನಡ ಶಾಲೆ ತೆಗೆದು ಮರಾಠಿ ಆರಂಭಿಸುವುದಾದರೆ ನನ್ನ ಹೆಸರನ್ನು ತೆಗೆದು ಸಿದ್ದರಾಮನ ಹೆಸರು ಶಾಲೆಗೆ ಬರಲಿ ಎಂದು ಹೇಳುವ ಮೂಲಕ ಕನ್ನಡತನವನ್ನು ಎತ್ತಿ ಹಿಡಿಯುತ್ತಾರೆ. ಅಂತಯೇ ಅವರು ಕನ್ನಡದ ಮಾತೆ ಅಂತ ಕರೆಯಲಾಯಿತು. *೧೯೪೦ ರಲ್ಲಿ *ಆಂಧ್ರದ ಸದಾಶಿವಪೇಠದಲ್ಲಿ ಜರುಗಿದ ಬಸವ ಜಯಂತಿ ಕಾರ್ಯಕ್ರಮಕ್ಕೆ ಹೋಗಿ ಬಸವ ಶರಣರು ಶರಣೀಯರಲ್ಲಿ ಇದ್ದ ಸಮಾನತೆಯ ಬಗ್ಗೆ ಭಾಷಣ ಮಾಡಿದರು . *೧೯೪೧ರಲ್ಲಿ *ಉದುಗೀರದಲ್ಲಿ ನಡೆದ ಅಕ್ಕನ ಹುಣ್ಣಿಮೆಯ ಕಾರ್ಯಕ್ರಮಕ್ಕೆ ಹೋಗಿ ಮೂರು ದಿನ ಅಲ್ಲಿಯೇ ಉಳಿದು ಅಧ್ಯಕ್ಷತೆ ವಹಿಸಿ ಸ್ತ್ರೀ ಜಾಗೃತಿ, ಕಾರ್ಯಕ್ರಮ ಹಮ್ಮಿಕೊಂಡರು .ಅದೇ ಸಮಯದಲ್ಲಿ *ಪ್ರಭುರಾವ್ ಕಂಬಳಿ ಬಾಬಾ *ಅವರ ಪರಿಚಯ ಆಯಿತು. ಶರಣ ಸಂಸ್ಕೃತಿ ಮತ್ತು ಸಮಾಜಪರ ಕಾರ್ಯಗಳಲ್ಲಿ ಸಹಕಾರ ನೀಡುವವರಾಗಿದ್ದರು ಕಂಬಳಿಬಾಬಾರು. ೧೯೪೧ ರಲ್ಲಿ ಹೈದ್ರಾಬಾದಿನಲ್ಲಿ ನಡೆದ ನಾಲ್ಕನೇ *ವೀರಶೈವ ಮಹಾಸಭೆಯ ಪ್ರಾಂತೀಯ ಸಮ್ಮೇಳನದ *ಅಧ್ಯಕ್ಷತೆಯ ಸ್ಥಾನವನ್ನು ವಹಿಸಿದ್ದರು. *ಹೆಣ್ಣು ಬಾಲ್ಯದಲ್ಲಿ ತಂದೆಯ ಆಶ್ರಯದಲ್ಲಿ ಯೌವನದಲ್ಲಿ ಗಂಡನ ಆಶ್ರಯದಲ್ಲಿ ವಯಸ್ಸಾದ ನಂತರ ಮಗನ ಆಶ್ರಯದಲ್ಲಿ ಕಳೆಯುತ್ತಾಳೆ. ತಂದೆ ಇಲ್ಲದವರ ,ಮದುವೆಯಾದರು ಮಕ್ಕಳಿಲ್ಲದ ಮಹಿಳೆಯರ ಸಮಸ್ಯೆಗೆ ಪರಿಹಾರವೇನು??!ಹೆಣ್ಣಿಗೆ ಸೌರಕ್ಷಣೆ ಕೊಡುವುದು ಸಮಾಜದ ಹೊಣೆಯಲ್ಲವೇ….??!!!ವೃದ್ಧೆಯಾಗಿ ಅನಾಥರಾದವರಿಗೂ ಸಂರಕ್ಷಣೆ ಕೊಡುವುದು ಸಮಾಜದ ಹೊಣೆಅಲ್ಲವೇ??!! ಅನಾಥ ವಿಧವೆ ಅಸಹಾಯಕರ ಬದುಕಿಗೆ ಒಂದು ನೆಲೆಯನ್ನು ಒದಗಿಸಲು ಯಾವ ವ್ಯವಸ್ಥೆಯನ್ನು ಮಾಡಲಿದ್ದೀರಿ” ಎಂದು ಸಮಾಜವನ್ನು ಪ್ರಶ್ನಿಸಿದರು. ೧೯೪೫ ಜಾಗತಿಕ ಮಹಿಳಾ ವರ್ಷವನ್ನು ಸಾರಿತ್ತು.೧೨-೯-೧೯೪೫ರಂದು*ವಿಜಯಪುರದಲ್ಲಿ *ನಡೆದ ಮಹಿಳಾ ಪರಿಷತ್ತಿನ ಉದ್ಘಾಟನೆಯ ಭಾಷಣಕಾರ್ತಿಯಾಗಿ ಬಂದರು. ಹೆಣ್ಣುಮಕ್ಕಳು ಸ್ವಾಭಾವಿಕವಾಗಿ ಭಾವುಕರು ಭಾವನೆಯೇ ಜೀವನವೆಂದು ನಂಬಿಕೊಂಡವರು ಅವರು ಜೀವನದ ವಿವಿಧ ಸನ್ನಿವೇಶಗಳಲ್ಲಿ ಹೊಂದಾಣಿಕೆ ಮನೋಭಾವವುಳ್ಳವರು ತಮಗೆ ಒದಗಿ ಬರುವ ಕಷ್ಟದ ಅನುಭವಗಳನ್ನು ಅಭಿವ್ಯಕ್ತಗೊಳಿಸಲು ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕು ಎಂದು ಹೇಳುತ್ತಾ …..ಸಮಾಜದ ಮಹಿಳೆಯರ ಅಸಹಾಯಕತೆ ಸ್ಥಾನಮಾನ ಹಾಗೂ ಆಕೆಯ ಭದ್ರತೆಯ ಕುರಿತು ಜನರನ್ನು ಎಚ್ಚರಿಸಿದ್ದರು. ಆಗ ಧಾರವಾಡದಲ್ಲಿ ಕರ್ನಾಟಕ ಸಂಘದ ಆಚರಣೆ ಹಮ್ಮಿಕೊಂಡಾಗ…. ಮುಖ್ಯ ಅತಿಥಿಯಾಗಿ ಜಯದೇವಿ ತಾಯಿಯವರು ಪಾಲ್ಗೊಂಡಿದ್ದರು . “ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಗೌರವದಿಂದ ಕಾಣುವುದರ ಜೊತೆಗೆ ಶೋಷಣೆ ಮಾಡುತ್ತಾ ಬಂದಿರುವುದು ವಾಸ್ತವ್ಯ ಸಂಗತಿ. ಸದಾ ಕಾಲ ಮಹಿಳೆಯರನ್ನು ಹೀನವಾಗಿ ಕಂಡು ಶೋಷಣೆಯ ಬಲಿಪಶು ಮಾಡುತ್ತಾರೆ .ಇಂಥ ಸಂಸ್ಕೃತಿಯ ನೆಲೆಯಲ್ಲಿ ಬೆಳೆದು ಬಂದ ಭಾರತೀಯ ಕುಟುಂಬಗಳು ಸಾಕಷ್ಟಿವೆ .ಬ್ರಿಟಿಷರ ಶಿಕ್ಷಣ ಪ್ರಭಾವದ ಹಿನ್ನೆಲೆಯಲ್ಲಿ ವಿದ್ಯಾವಂತ ಹಾಗೂ ಶ್ರೀಮಂತ ವರ್ಗದ ಕುಟುಂಬದ ಸ್ತ್ರೀ ಪುರುಷರು ಶಿಕ್ಷಣವನ್ನು ಪಡೆದುಕೊಂಡು ಆಧುನಿಕ ಸಮಾಜದ ನಿರ್ಮಾಣಕ್ಕೆ ಕಾರಣರಾದವರು.ಉನ್ನತ ಶಿಕ್ಷಣ ಪಡೆದ ಮಹಿಳೆಯರು ಹಲವು ಭಾಷೆಗಳನ್ನು ಬಲ್ಲವರಾಗಿರುತ್ತಾರೆ. ಅವರು ನಮ್ಮನಾಡಿನ ಉತ್ತಮವಾದ ಸಾಹಿತ್ಯವನ್ನು ಅನ್ಯ ಭಾಷಿಗರಿಗೆ ತಿಳಿಸಬೇಕು‌. ಸ್ತ್ರೀಯರು ಪುರುಷರಂತೆ ಲೌಕಿಕ ಅಲೌಕಿಕ ಎರಡನ್ನು ಸಾಧಿಸಲು ಸಾಧ್ಯ. ಮಾನವ ಕುಲದ ಮುನ್ನಡೆಗೆ ಕಾರಣರಾಗಲು ಸಾಧ್ಯವೆನ್ನುತಿದ್ದರು. ಅದೇ ರೀತಿ ಪ್ರತಿಯೊಂದು ಹೆಣ್ಣು ಮಗಳು ಮುಂದೆ ಬಂದು ಸಮಾಜಕ್ಕಾಗಿ ಕೊಡುಗೆಯನ್ನು ಕೊಡಬೇಕು ಎಂದು ಕೇಳಿಕೊಂಡರು. ಜಯದೇವಿ ತಾಯಿಯವರು* ಪಂಡರಪುರದ ವಿಶ್ವ ಹಿಂದೂ ಪರಿಷತ್ತಿನಲ್ಲಿ *ಭಾಗವಹಿಸಿದಾಗ ಒಬ್ಬ ಭಾಷಣಗಾರರು “ಘೋರ ಕುಂಬಾರ್ ಗಡಗಿ ಕೊಡಲಿ…. ತುಕಾರಾಂ ಕಾಳು ಕೊಡಲಿ…..” ಎಂದು ಹೇಳುತ್ತಾ ಎಲ್ಲ ಸಂತರನ್ನು ಅವರವರ ಗುಣ ಕಾಯದಿಂದ ನೆನೆಯುತ್ತ ಕೇವಲ ಶ್ರೇಷ್ಠ ಪುರುಷ ಸಂತರದಷ್ಟೇ ನೆನೆದರು. ಆಗ ಜಯದೇವಿ ತಾಯಿಯವರು ತಮ್ಮ ಭಾಷಣದಲ್ಲಿ “ಸಕ್ಕೂಬಾಯಿಯನ್ನು ಕರೆಯಿರಿ ಕಾಳು ಬೀಸಿ ಕೊಡಲಿ….. ರುಕುಮಾಬಾಯಿಯನ್ನು ಕರೆಯಿರಿ ಟೊಂಕದ ಮೇಲೆ ಕೈ ಇಟ್ಟುಕೊಂಡು ಉಪಚಾರಗಳನ್ನು ನೋಡಿಕೊಳ್ಳಲಿ ……ಇಂಥ ಸಂತಿನಿಯರನ್ನು ನೀವು ಮರೆಯೋದೇಕೆ…??!!! ಎಂದು ಪ್ರಶ್ನಿಸಿದರು .ಮಹಿಳೆಯರ ಸಾಧನೆಯನ್ನು ಸ್ಮರಿಸುತ್ತ ಸಮಾಜದ ವ್ಯವಸ್ಥೆಯನ್ನು ತಾವಿದ್ದ ಸ್ಥಳದಲ್ಲಿ ಟೀಕಿಸುತ್ತಿದ್ದರು. ‌ಸಂತಿಣೀಯರ ಸಾಧನೆಯನ್ನು ಗೌಣ್ಯ ಮಾಡಿ ಅವಳನ್ನು ಮನೆ ಕೆಲಸಕ್ಕೆ ಸೀಮಿತಗೊಳಿಸುತ್ತಿದ್ದ ವ್ಯವಸ್ಥೆಯನ್ನು ಸಹಿಸುತ್ತಿರಲಿಲ್ಲ …….!! ಹರಸೀದೆ ನಿನದಾಟಿ ನಿನ್ಹಾಡಿ ತಾಯವ್ವಬರದೇನ ಮನತುಂಬಿ ಪಾಡಿ ನಮವ್ವಬರದೇನ ಮನೆ ತುಂಬಿ ನಿನ್ಹೆಸರಲೆಕರೆದೇನ ತಾಯಿ ಪದವೆಂದು…. ಎಂದು ಹಾಡುತ್ತಾ ತಾಯಿಯಂದಿರಿಗಾಗಿ ಪದಗಳನು ಬರೆದ ತಾಯಿಯ ಪದಗಳ ಎಂಬ ಕವನ ಸಂಕಲನವು ಪ್ರಚಲಿತವಾಯಿತು . ಹೆಣ್ಣು ಮಕ್ಕಳು ಹುಟ್ಟಿದರೆ ಮನೆಯಲ್ಲಿ ನಡುಗಂಬಗಳು ಸಹ ನಡುಗುತ್ತವೆ ……ಅದೇ ಗಂಡು ಮಕ್ಕಳು ಹುಟ್ಟಿದಾಗ ಗಜಭೀಮ ಹುಟ್ಟಿದನೆಂದು ಬಾಗಿಲಿನ ಚಿಲಕ ಬೋಧಿಗಳೆಲ್ಲ ನಗುತ್ತವೆ……. ಅನ್ನುವುದನ್ನು ತಾಯಿಯವರು ಖಡಾ ಖಂಡಿತವಾಗಿ ವಿರೋಧಿಸುತ್ತಿದ್ದರು. ಹೆಣ್ಣು ಮಕ್ಕಳು ಹುಟ್ಟಿದಾಗ ತಾಯಿ ಅಳಬಾರದು ನೊಂದುಕೊಳ್ಳಬಾರದು ಹೆಣ್ಣು ಜಗದ ಕಣ್ಣು ಎಂದು ತಮ್ಮ ಪದದಲ್ಲಿ ಹೇಳುತ್ತಾರೆ ‌. ಹೆಣ್ಣು ಹುಟ್ಟಿತೆಂದು| ಕಣ್ಣೀರ ಕರಿಬ್ಯಾಡ ಸಣ್ಣಗಾಗಬ್ಯಾಡ ಮನದಾಗ -ತಾಯವ್ವ ಹೆಣ್ಣಿನ ಜಗದ ಕಣ್ಣ!! ಅವರು ಹೋದ ಪ್ರತಿಯೊಂದು ಸಭೆಗಳಲ್ಲಿ“ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ ನೋಡ” ಎಂದು ಶಿವಯೋಗಿ ಸಿದ್ದರಾಮೇಶ್ವರರು ಹೇಳುವ ಮಾತು ಹೇಳಲು ಎಂದು ಮರೆಯುತ್ತಿರಲಿಲ್ಲ. ಶರಣ ಶ್ರೇಷ್ಠರಾದ ಸೊಲ್ಲಾಪುರದ ಶ್ರೀ ಸಿದ್ಧರಾಮರು ನುಡಿದ ಈ ವಚನದಲ್ಲಿ ಎರಡು ಮಾತುಗಳು ಎದ್ದು ಕಾಣುತ್ತವೆ ಹೆಣ್ಣಿನಲ್ಲಿದ್ದ ದೈವತ್ವವನ್ನು ಶರಣರು ಸ್ಪಷ್ಟಪಡಿಸಿದ್ದಾರೆ .ಅವಳ ಸತ್ಯ ಸೇವೆ ಪ್ರೇಮ ತ್ಯಾಗ ಅಹಿಂಸೆಗಳ ಸ್ವರೂಪ ಎಂದು ಸತ್ವ ಸಾಮರ್ಥ್ಯಗಳಿಂದಲೂ ಕ್ರಿಯಾಚಾರದಿಂದ ಕನ್ನಡ ನಾಡಿನಲ್ಲಿ ಪ್ರಸ್ತಾಪಿಸಿದ್ದಾಳೆ ಎಂದು ಈ ಪರಂಪರೆಯು ಜಾಗೃತಗೊಳ್ಳಬೇಕು. ಈ ತೇಜೋಮಯ ಬಲ ಮೈಮನದಲ್ಲೂ ಬೇರೂರಬೇಕು .ಈ ನಮ್ಮ ಶರಣ ಸಂಸ್ಕೃತಿಯು ಎಲ್ಲಡೆಯು ಹರಡಬೇಕೆಂದು ಪ್ರತಿಪಾದಿಸಿದರು. ಹೆಣ್ಣಿನ ಕಳವಳ ಕೇಳಿ ತಾ ಕರಗ್ಯಾನಅಣ್ಣ ಮಾಡ್ಯಾನ ಪಾವನ -ಹೆಣ್ಣಿನಪುಣ್ಯ ಕಟಕೊಂಡ ಬಸವಣ್ಣ !! ಹೆಣ್ಣು ಜೀವಕ ಅಕ್ಕ ಹೊಸಗಣ್ಣ ನೀ ಕೊಟ್ಟಿಎಣ್ಣ್ಯಾಗಿ ಬತ್ತಿಯಾಗಿ ದೀಪಾಗಿ -ದೀಪ್ತಿಯಾಗಿಅಣಿ ಮಾಡಿ ಕೊಟ್ಟೀನಿ ಕಿರು ನುಡಿ!! ಅಂತ ಹೀಗೆ ಅನೇಕ ಪದಗಳನ್ನು ಹೆಣ್ಣಿನ ಬಗ್ಗೆ ಬರೆದರು. ತಾಯಿಯವರು ಈಗಾಗಲೇ ತಮ್ಮ ನಿರ್ಗಳ ವಾಕ್ ವೈಖರಿಯಿಂದ ಮತ್ತು ನಿಷ್ಕಲ್ಮಶ ವ್ಯಕ್ತಿತ್ವದಿಂದ ನಾಡಿನ ಜನಮನದ ಮನೆಮಾತಾದರು. ಅದೇ ರೀತಿ ಸೊಲ್ಲಾಪುರದಲಿ ವಚನ ಸಾಹಿತ್ಯ ಹಾಗೂ ಗಾಂಧಿ ಪ್ರಭಾವದಿಂದ ಸುಶಿಕ್ಷಿತ ಶ್ರೀಮಂತ ಕುಟುಂಬದಲ್ಲಿ ಬೆಳೆದು ಬಂದ ಜಯದೇವಿ ತಾಯಿಯವರು ದಲಿತ ಅಭಿವೃದ್ಧಿ ಮಹಿಳಾ ಸ್ವಾತಂತ್ರ ಸಮಾನತೆ ಸಾಕ್ಷರತೆಗಾಗಿ ಶ್ರಮಿಸಿದರು . ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ- ಒಂಭತ್ತು ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಭಾಗ- ಒಂಬತ್ತುಜಯದೇವಿ ತಾಯಿಯ ಜೀವನ ವೃತ್ತಾಂತ   ಜಯದೇವಿ ತಾಯಿಯವರ ಒಂದು ಅಪೂರ್ಣ ಕನಸು ……ನನಸಾಗಿತ್ತು…!!ಕಷ್ಟ ಕಾರ್ಪಣ್ಯಗಳನ್ನು ಮೌನವಾಗಿ ಸಹಿಸುತಮನದಾಳದ ಕಿಚ್ಚಿನಲಿ ಮಂಥನಗೊಂಡು ಉಲ್ಬಣಗೋಳ್ಳುತ್ತಿದ್ದ ಭಾವನೆಗಳನ್ನು ಮೊದಲ ಬಾರಿಗೆ ಕನ್ನಡ ಭಾಷೆಲ್ಲಿ ಬರೆದಾಗ ಆದ ಆನಂದ ಹೇಳತಿರದಾಗಿತ್ತು…..,!!.  ಕನ್ನಡ ನುಡಿಗಳು ಅವರಿಗೊಂದು ಹೊಸ ಲೋಕದ ಬಾಗಿಲು ತೆರೆದವು. ವರ್ಷಗಳ ಕಾಲ ಮನದೊಳಗೆ ಸಂಗ್ರಹವಾಗಿದ್ದ ನಿಶ್ಶಬ್ದ ನೋವುಗಳು,  ಪ್ರಾರ್ಥನೆಗಳು,ಮಾತನಾಡಲಾಗದ ಮಾತುಗಳು  ಪದಗಳಾಗಿ ಹರಿಯಲಾರಂಭೀಸಿದವು….!! ಅವರು ಕನ್ನಡವನ್ನು ಅಪ್ಪಿಕೊಂಡದ್ದು ಕೇವಲ ಕಲಿಕೆಯ ಕಥೆಯಲ್ಲ,ಇದು ಸಾಹಿತ್ಯ ಲೋಕದ ವಿಜಯಗಾಥೆ! ಹೊಸ ಬೆಳಗಿನ ಉದಯ ಗಾಥೆ..!!  ಕನ್ನಡ ಭಾಷೆಯನು ಗಾಢವಾಗಿ ಪ್ರೀತಿಸುತ್ತ….ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಮಹಿಳಾ ಅಧ್ಯಕ್ಷರಾಗಿ ನಡೆದರು ಕರ್ನಾಟಕ ವಿಶ್ವವಿದ್ಯಾಲಯವೇ ಅವರ ಬಳಿ ಬಂದು ಡಾಕ್ಟರೇಟ್ ಪದವಿಯನ್ನು ಕೊಡಮಾಡಿತು. ಸರ್ವಜ್ಞ ನಂತರ ಪ್ರಥಮ ಬಾರಿಗೆ ತ್ರಿಪದಿಯಲ್ಲಿ ಪುರಾಣವನ್ನು ನಿರ್ಮಿಸಿದರು… ಕನ್ನಡ ಸರಸ್ವತ ಲೋಕದ ಅನಘ್ನ ರತ್ನರಾಗಿ ಖ್ಯಾತಿ ಪಡೆದುಕೊಂಡವರು. ಕನ್ನಡ ಭಾಷೆಯನ್ನು ಕಲಿತ ಜಯದೇವಿ ತಾಯಿಯವರು ಅತ್ಯಂತ ವೇದಾವಿ ಭಾಷಣಕಾರ್ತಿಯಾಗಿ ಹೊರಹೊಮ್ಮಿದರು. ನಾಡಿನ ಮೂಲೆ ಮೂಲೆಗಳಿಂದ ಸುತ್ತಮುತ್ತಲು ಹಳ್ಳಿಗಳಿಂದ ಅವರಿಗೆ ಅವ್ಹಾನ ಬರಲು ಆರಂಭಿಸಿತು . ತಮ್ಮ ಮಾತುಗಳಿಂದ ಜನರ ಮನವನ್ನು ಪರಿವರ್ತಿಸಲಾರಂಭಿಸಿದರು. ಜೊತೆ ಜೊತೆಗೆಪತಿ ಮತ್ತು ಅತ್ತೆ ಸಂತಸದಿಂದ ಸಹಕರಿಸಲಾರಂಭಿಸಿದರು.  ಸರಸ್ವತಿ ಮಂದಿರ ಸ್ಥಾಪನೆಯೊಂದಿಗೆ ಸ್ತ್ರೀಯರಿಗೆ ಶಿಕ್ಷಣ ಕೊಡಲು ಸೊಲ್ಲಾಪುರದಲ್ಲಿ ಪ್ರಾರಂಭಿಸಿದ್ದು.. ಅದು ಮಂದಗತಿಯಲ್ಲಿ ನಡೆದಿತ್ತು….ಆದರೆ ಜಯದೇವಿ ತಾಯಿಯವರು ಅಧ್ಯಕ್ಷತೆಯನ್ನು ವಹಿಸಿದ ಮೇಲೆ ಮೊದಲು ಸ್ತ್ರೀ ಶಿಕ್ಷಣದ ಅವಶ್ಯಕತೆಯನ್ನು ಹೆಚ್ಚು ಒತ್ತು  ಕೊಡಲಾರಂಭಿಸಿದರು. ಅವರ ದೃಷ್ಟಿಯಲ್ಲಿ ಶಿಕ್ಷಣವೆಂದರೆ *ಒಂದೆರಡು ಭಾಷೆಗಳನ್ನು ಮಾತನಾಡಲು ಕಲಿಯುವುದು ಮಾತ್ರವಲ್ಲ ನಿತ್ಯ ಜೀವನದಲ್ಲಿ ಉಪಯೋಗವಾಗುವಂತಹ ಗೃಹ ಜ್ಞಾನ..ಸಾಯನ್ಯಕಲಿಕಯೊಂದಿಗೆ …,ಉಚ್ಚ ಶಿಕ್ಷಣವು ಮಹಿಳೆಗೆ ಸಿಗಬೇಕು. ಇಂಗ್ಲೀಷರು ತಮ್ಮ ಅನುಕುಲಕ್ಕೆ ಹಾಕಿದ ಗಿಳಿ ಪಾಠದ ಪದ್ಧತಿಯ ಶಾಲೆ ಬದಲಾಗಬೇಕು. ಸುಸಂಸ್ಕೃತ ಜೀವನ ನಡೆಸುವಂತಹ  ಶಿಕ್ಷಣ ಸಿಗಬೇಕು. ಜೀವನದ ಎಲ್ಲಾ ಹಂತಗಳ ಅಧ಼ಃಪತನಕ್ಕೆ ಕಾರಣವಾದ ಅಜ್ಞಾನವನ್ನು ಹೊಡೆದು ಓಡಿಸಲು …..ಸಾಕ್ಷರತೆಯ ಅಸ್ತ್ರದಿಂದಲೇ  ಸಾಧ್ಯ. ಹಸಿರು ಕ್ರಾಂತಿ ಹೊಟ್ಟೆಯ ಹಸಿವನ್ನು ಹಿಂಗಿಸಿದರೆ ಅಕ್ಷರದ ಕ್ರಾಂತಿಯು ಬುದ್ಧಿ ಹಸಿವನ್ನು ಅಡಗಿಸುವದೆಂದು*ಅಭಿಪ್ರಾಯ ಪಡುತ್ತಿದ್ದರು. 1930ರ ಸಮಯದಲ್ಲಿ ಸೊಲ್ಲಾಪುರದ ಕೋರ್ಟ್ ಮಾರ್ಷಲ್ ನಡೆದಿತ್ತು… ಹಲವಾರು ಜನರು ಬ್ರಿಟಿಷರ ಗುಂಡಿಗೆ ಬಲಿಯಾಗಿದ್ದರು. ಇದರಲ್ಲಿ ಮಹಿಳೆಯರು ಸೇರಿದ್ದರು. ಎಲ್ಲಿ ನೋಡಿದರಲ್ಲಿ ಅಸಹಕಾರ ಚಳುವಳಿಗೆ ಸಂಬಂಧಿಸಿದ ಗಲಭೆ ನಡೆದಿದ್ದವು ‌. ಇಬ್ಬರು ಪೊಲೀಸರು ಹತರಾಗಿದ್ದರೆಂದರೆ ಕೇಳಬೇಕೆ.,… ಬ್ರಿಟಿಷರ ಕ್ರೌರ್ಯವೂ  ಹೇಳತೀರದಾಗಿತ್ತು . ಧನಶೆಟ್ಟಿ ಹಾಗೂ ಇನ್ನು ಮೂರು ಜನರ ಮೇಲೆ ಮೊಕದಮೆ ಹುಡಿ ಗಲ್ಲಿಗೆರಿಸಲಾಗಿತ್ತು.ಈ ಶಿಕ್ಷೆಯನ್ನು ವಿರೋಧಿಸಿ ಪುಣೆ ಮುಂಬೈ, ಕನ್ನಡ ನಾಡಿನಲ್ಲಿಯೂ ಪ್ರತಿಭಟನೆಗಳು, ಉಪವಾಸ ಸತ್ಯಾಗ್ರಹಗಳು ನಡೆದಿದ್ದವು. ಈ ಹೋರಾಟಗಳಲ್ಲಿ ಜಯದೇವಿ ತಾಯಿಯವರ ತಾಯಿ ಸಂಗವ್ವನ ಜೊತೆ  ತಾಯಿಯವರು ಬೆಂಬಲಿಸಿ ಉಗ್ರವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 1932 ರಲ್ಲಿ ಬ್ರಿಟಿಷ್ ಸೈನಿಕರು ರಾಷ್ಟ್ರಧ್ವಜವನ್ನು ಅಪಮಾನಿಸಿದ್ದರಿಂದ ದ್ವಜ ಸತ್ಯಾಗ್ರಹ ನಡೆದು ಅಲ್ಲಿ ದೇಶದ ವಿವಿಧ ಪ್ರಾಂತಗಳ ಜನರು ಸೇರಿದ್ದರು ಅಲ್ಲಿ ನಡೆದ ಗಲಿಬಿಯಲ್ಲಿ ನೂರಾರು ಜನ ಕನ್ನಡಿಗರು ಬಂದಿತ್ತರಾಗಿದ್ದರು.  ಈ ಸಂಘಟನೆಯು ಆರಂಭದಲ್ಲಿ ಹೆಚ್ಚಾಗಿ ಪುರುಷರೇ ಪಾಲ್ಗೊಳ್ಳುತ್ತಿದ್ದು ರಾಷ್ಟ್ರದ ಹಿತಕ್ಕಾಗಿ ಹೋರಾಡುವ ಮಹಿಳೆಯರಿಗೆ ಒಂದು ನಿರ್ದಿಷ್ಟವಾದ ಸಂಘಟನೆ ಇರ್ಲಿಲ್ಲ ನಂತರ ಮಹಿಳೆಯರನ್ನು ಸಂಘಟನೆಯಲ್ಲಿ ಸೇರಿಸಿಕೊಳ್ಳಲು ಜಯದೇವಿತಾಯಿ ಹಾಗೂ ಇನ್ನಿತರರು ರಾಷ್ಟ್ರೀಯ ಚಳುವಳಿ ತರಬೇತಿ ನೀಡುವ ಗುರಿಯನ್ನು ವಿಸ್ತರಿಸಿದರು . 1934ರಲ್ಲಿ ವೀರಶೈವ ಸಾಹಿತ್ಯ ಸಭೆಯ ಅಧ್ಯಕ್ಷಣೆಯಾಗಿ ಹೋದರು. 1939 ರಲ್ಲಿ ಜಯದೇವಿ ತಾಯಿಯವರು ವೀರಶೈವ ಮಹಾಸಭೆಯ ಮಹಿಳಾ ಪರಿಷತ್ತಿನ ಅಧ್ಯಕ್ಷರಾದರು 1938 ರಲ್ಲಿ ಜಯದೇವಿ ತಾಯಿಯವರು ಸೊಲ್ಲಾಪುರ .ಹುಬ್ಬಳ್ಳಿ ಧಾರವಾಡಗಳಲ್ಲಿ ಅಕ್ಕನ ಬಳಗವನ್ನು ಸ್ಥಾಪಿಸಿದರು ಆ ಮೂಲಕ ಶರಣರ  ವಿಚಾರಧಾರೆಯನ್ನು ಜನಮನಕ್ಕೆ ಮುಟ್ಟಿಸುವ ಕೆಲಸ ಪ್ರಾರಂಭಿಸಿದರು. ಶರಣರ ಸಾಹಿತ್ಯಕ್ಕೆ ತಮ್ಮನ್ನು ತಾವು  ಅರ್ಪಿಸಿಕೊಳ್ಳುತ್ತಾ ಸಮಾಜದವರೊಂದಿಗೆ ಅದನ್ನು ತಿಳಿಹೇಳುತ್ತ ಅನುಭವ ಪಥದಲ್ಲಿ ಸಾಗಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯರ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಅವರಿಗೆ ರಾಷ್ಟ್ರದ ಆಗು-ಹೋಗುಗಳ ಅರಿವು ಮೂಡಿಸಿ  ರಾಷ್ಟ್ರೀಯತೆಯನ್ನು ಉತ್ತೇಜಿಸಲು ಅನೇಕ ಸಂಘ ಸಂಸ್ಥೆಗಳು ಹುಟ್ಟಿಕೊಂಡವು. ಜಯದೇವಿಯವರು ಮಹಿಳೆಯರ ಹೋರಾಟಕ್ಕೆ ಬೆಂಬಲಿಸಲು 1947ರಲ್ಲಿ ತಮ್ಮ ಮನೆಯಾದ ಜಯನಿಕೀತನದಲ್ಲಿ ಸೇವಾ ದಳದ ಪ್ರೌಢ ಶಾಖೆಯನ್ನು ಆರಂಭಿಸಿದರು.  ಎರಡನೆ ಮಹಾ ಯುಧ್ಧದ ಸಂದರ್ಭದಲ್ಲಿ ಬ್ರಿಟಿಷರಿಗೆ ಸೈನಿಕರ ಅವಶ್ಯಕತೆ ಎದುರಾದಾಗ ದೇಶದಾದ್ಯಂತ ಬೆಟಾಲಿಯನ್ ಕಟ್ಟಲು ಜನರನ್ನು ಮತ್ತು ಪ್ರಮುಖರನ್ನು ಪ್ರೋತ್ಸಾಹಿಸುತ್ತಿದ್ದರು. ಇದರ ಪರಿಣಾಮವಾಗಿ ವಾರದ ಮಲ್ಲಪ್ಪನವರಿಗೆ ರಾವ್ ಬಹದ್ದೂರ್ ಪದವಿ ಕೊಟ್ಟರೆ….ಮಡಿಕೆ ಚನ್ನಬಸಪ್ಪನವರಿಗೆ ಮ್ಯಾಜಿಸ್ಟ್ರೇಟ್ ಪದವಿಯನ್ನು ಕೊಟ್ಟರು. ಸೊಲ್ಲಾಪುರದಲ್ಲಿ ಲಿಂಗಾಯತರು ಹೆಚ್ಚು ಇರುವುದರಿಂದ ಲಿಂಗಾಯತ ಬೆಟಾಲಿಯನ್ ಕಟ್ಟಲು ಪ್ರೇರೇಪಿಸಿದರು ಬ್ರಿಟಿಷರು .ಅಲ್ಲಿಯ ಸ್ಥಳೀಯ ಮುಖಂಡರಾದ ವಾರದ, ಮಡಕಿ ಲಿಗಾಡೆ,ತಂಬಾಕಿ ಮನೆತನಗಳ ಮೇಲೆ ಒತ್ತಾಯ ಬೀರಲು ಪ್ರಯತ್ನಿಸಿದರು.  ಅದೇ ರೀತಿಯಾಗಿ ಲಿಗಾಡೆ ಅವರ ಆಸ್ತಿಯ ಮೇಲೆ ಋಣ ಭಾರ ಹೇರಿದ್ದೇವೆಂದು ಇದಕ್ಕಾಗಿ ಜಯದೇವಿ ತಾಯಿಯವರು ತಮ್ಮ ಕೆಲಸಕ್ಕೆ ಸಹಕರಿಸಬೇಕೆಂದು ಕೇಳಿಕೊಂಡರು.ಅಂದಿನ ದಿನಗಳಲ್ಲಿ ಪ್ರಭಾವಿ ಭಾಷಣ ಕಾರ್ತಿ ,ಪ್ರಸಿದ್ಧ‌ಸಮಾಜ ಸೇವೆವಕಿಯಾದ ತಾಯಿಯವರು ಲಿಂಗಾಯತರನ್ನು ಇಂಗ್ಲಿಷ್ ಸೇನಾ ಪಡೆಗೆ ಸೇರಿಸಲು ಹುರಿದುಂಬಿಸುವಂತೆ ಭಾಷಣ ಮಾಡಲು ಕೇಳಿಕೊಂಡರು…… ಬ್ರಿಟಿಷ್ ಸರ್ಕಾರವು ಪತಿ ಚೆನ್ನಮಲ್ಲಪ್ಪ ಲಿಗಾಡೆ ಅವರಿಗೆ ವ್ಯಾಪಾರದ ಋಣಭಾರ ಕಡಿಮೆ ಮಾಡುವುದಾಗಿ  ಆಮಿಷೆ ಒಡ್ಡಿತು….  ಪತ್ನಿ ಜಯದೇವಿ ತಾಯಿಯವರು ಲಿಂಗಾಯೆತರನ್ನು ಬ್ರಿಟಿಷ್ ಸೈನ್ಯಕ್ಕೆ ಸೇರುವಂತೆ ಪ್ರಯತ್ನಿಸುವಂತೆ ಕೇಳಿಕೊಂಡರು….. ಕೊನೆಗೆ ಲಿಂಗಾಯೆತರನ್ನು ಸಂಘಟಿಸಲೇಬೇಕೆನ್ನುವ   ಆದೇಶವಿತ್ತರು ..!!!!  ಚನ್ನಮಲ್ಲಪ್ಪನವರಿಗೆ ಚೆನ್ನಾಗಿ ಗೊತ್ತಿತ್ತು ….. ಬಲಾಡ್ಯ ಬ್ರಿಟಿಷರ ವಿರುದ್ಧ ಹಾಕಿಕೊಳ್ಳುವುದರಲ್ಲಿ ಅರ್ಥವಿಲ್ಲ … ದೇಶಪ್ರೇಮವೆನೋ ನಿಜ…..ದೇಶ ಸ್ವಾಭಿಮಾನ ,ದೇಶಮಾತೆಗಾಗಿ ಬಲಿದಾನ-ತ್ಯಾಗ ಇವೆಲ್ಲ ದುಷ್ಟ ಬ್ರಿಟಿಷರ ಎದುರು ನಿರರ್ಥಕ … ಬ್ರಿಟಿಷರ ಬಲದ ಎದುರು ನಾವು ತೃಣ ಸಮಾನರು  ವಿವೇಕತನವೆಂದರೆ ನಮ್ಮ ವ್ಯಾಪಾರವನ್ನು ನಮ್ಮ ಮನೆತನವನ್ನು ಉಳಿಸಿಕೊಳ್ಳುವುದರಲ್ಲಿ ಜಾಣತನವಿರುವದು ಇಲ್ಲದ್ದಿದರೆ ಹೇಳು ಹೆಸರಿಲ್ಲದಂತೆ ನಾಶವಾಗಿ ಹೋಗುವುದು ಖಚಿತ ಅನ್ನೋದು ದೃಢವಾಗಿ ನಂಬಿದವರು….ಹೀಗಾಗಿ  ವೈಯಕ್ತಿಕ ಹಿತಾಸಕ್ತಿಯುತರಾಗಿದ್ದರು, ತನ್ನ ವ್ಯಾಪಾರದತ್ತ ಹೆಚ್ಚು ಗಮನವನ್ನು ಕೊಡುತ್ತಿದ್ದರು. ಹಾಗೆ ಜಯದೇವಿತಾಯಿಯವರಿಗೆ ಸೈನ್ಯ ಕಟ್ಟುವುದಕ್ಕಾಗಿ ಕೇಳಿಕೊಂಡಿದ್ದರು ಕೂಡಾ ಪತಿ ಚೆನ್ನಲ್ಲಪ್ಪನವರು. ಬ್ರಿಟಿಷರು ಜಯದೇವಿ ತಾಯಿಯವರಿಗೆ ಕೇಸರಿ-ಇ- ಹಿಂದ್ ಪದವಿಯನ್ನು ಕೊಡುವುದಾಗಿ ಮುಂದೆ ಬಂದರು. ಇದ್ಯಾವದಕ್ಕೂ ಅವರು ವಿಚಲಿತರಾಗಲಿಲ್ಲ. ಅದಕ್ಕಾಗಿ ದೊಡ್ಡ ಮೊತ್ತದ *ವಾರ್ ಫಂಡ*ನ್ನು ಕಟ್ಟಬೇಕಾಯಿತು. ಮನೆಯವರ ಯಾವ ಒತ್ತಡಕ್ಕೂ ಮಣಿಯದ  ತಾಯಿಯವರು ರಾಷ್ಟ್ರೀಯ ಪ್ರೇಮ ಅಚಲವಾಗಿತು.. ಬ್ರಿಟಿಷರ  ಆಮಿಷದ ಪ್ರಸ್ತಾವನೆ, ಹೊರಗೆ ನೋಡಲು ಗೌರವದ ಹೊದಿಕೆ ಹೊದ್ದಿದ್ದರೂ, ಒಳಗೆ ದೇಶದ ಏಕತೆಯನ್ನು ಕುಗ್ಗಿಸುವ ಕುಯುಕ್ತಿಯೇ ಆಗಿತ್ತು…!!ಆ ಕ್ಷಣದಲ್ಲಿ ಜಯದೇವಿ ತಾಯಿಯವರು ಮೌನವಾಗಿರಲಿಲ್ಲ.ಅವರಲ್ಲಿ ಹೊತ್ತಿ ಉರಿದದ್ದು   ರಾಷ್ಟ್ರಪ್ರೇಮದ ಜ್ವಾಲೆ.“ಕೇಸರಿ-ಇ -ಹಿಂದ್” ಎಂಬ ಹೆಸರಿನಲ್ಲಿ ಅವರ ಗುಲಾಮರನ್ನಾಗಿ ಮಾಡಿಕೊಳ್ಳುವ ಹುನ್ನಾರ ಕುತಂತ್ರ ಅರಿತವರಾಗಿದ್ದರು. ದೇಶದ ಧ್ವಜಕ್ಕೆ ತೋರುವ ಆದರವು‌  ತ್ಯಾಗದ ಸಂಕೇತ, ಧೈರ್ಯದ ಪ್ರತೀಕ, ತಾಯ್ನಾಡಿನ ಗೌರವ.ಬ್ರಿಟಿಷರು ಅಧಿಕಾರದ ಸಿಂಹಾಸನವನ್ನು ತೋರಿಸಿದರು,ಸ್ಥಾನಮಾನಗಳ ಸಿಹಿ ಮಾತುಗಳನ್ನು ಹೇಳಿದರೂ ತಾಯಿಯ ಹೃದಯಕ್ಕೆ ಕೇಳಿಸಿಕೊಂಡದ್ದು ಒಂದೇ ಶಬ್ದ —“ಭಾರತಮಾತೆಯ ಹಿತಾಸಕ್ತಿ….“ನನ್ನ ದೇಶದ ಏಕತೆಯನ್ನು ಮಸುಕುಗೊಳಿಸುವ ಯಾವ ಒಪ್ಪಂದಕ್ಕೂ ನಾನು ಸಮ್ಮತಿಸುವುದಿಲ್ಲ,”ಎಂದು ಅವರು ಅಟಲ ಧೈರ್ಯದಿಂದ ಹೇಳಿದರು. ಆ ನಿರಾಕರಣೆ ಸಾಮಾನ್ಯ ಪದವಿರೋಧವಲ್ಲ —ಅದು ಮಣ್ಣಿನ ಮಗಳು ತನ್ನ ತಾಯ್ನಾಡಿಗೆ ಕೊಟ್ಟ ಶಪಥ.ಆ ದಿನ ಅವರು ಆಮಿಷವನ್ನು ತಳ್ಳಿಹಾಕಿದಾಗ,ದೇಶಪ್ರೇಮಿಗಳು ಸಾಕ್ಷಿಯಾಗಿ ನಿಂದರು. ಅವರ ಎತ್ತಿದ ಧ್ವನಿಯಲ್ಲಿ ರಾಷ್ಟ್ರಪ್ರೇಮವು ಘೋಷವಾಗಿ ಪ್ರತಿಧ್ವನಿಸಿತು.ಅವರು ತೋರಿಸಿದ ಧೈರ್ಯ  —ನಿಜವಾದ ದೇಶಭಕ್ತಿ ….ಹೃದಯದ ಆಳದಿಂದ ಹೊರಹೊಮ್ಮುವ ನಿಷ್ಠೆ; ಧೇಶಮಾತೆಗೆ ತೋರಿದ ಗೌರವ. . *ಬ್ರಿಟಿಷರ ಇಂಥ ಆಸೆ ಆಮಿಷಕ್ಕೆ ಒಳಗಾಗದೆ ಜಾತಿಯ ಹೆಸರಿನಲ್ಲಿ ಸೇನೆ ಕಟ್ಟುವುದು ದೇಶದ ಅಹಿತಕ್ಕೆ ಕಾರಣವಾಗುವುದೆಂದು…ಯಾವುದೇ ಭೀತಿಗೂ ತಲೆಬಾಗಲಿಲ್ಲ. ಬ್ರಿಟಿಷರ ಪ್ರತ್ತಸ್ಸಾವನೆಯನ್ನು ಖಡಾಖಂಡಿತವಾಗಿ ನಿರಾಕರಿಸಿದರು . *ನಡೆಯಣ್ಣ ಇಡು ಹೆಜ್ಜೆ ಮುಂದೆ ದೃಢತನದಿಂದೆ!! ಕದಳಿಯ ಬನಹೊಕ್ಕು ಚಣ ಮಜಗಜದ ತಾಣಎದುರಿಗೆ ಬರುವದು ಕಾಡಕೋಣ ತೆಗೆಯಲು ಪ್ರಾಣ ಕದಡಿಯ ಎಂಟು ದಿಕ್ಕು ಎಂಟಾನೇಗಳ ಸೊಕ್ಕು ಕಾನನದೊಳಗೆ ಪಕ್ಕು ಮುರಿಯಬೇಕಾದರೆ ಸೊಕ್ಕುಹೀಗೆ ಬ್ರಿಟಿಷರ ಸೊಕ್ಕನ್ನು ಮುರಿಯಬೇಕು ಅನ್ನುವ ಕರೆಯನ್ನು ಸಾರ್ವಜನಿಕರಿಗೆ ಕೊಡುತ್ತಿದ್ದರು *ನಡೆದಾರಿಗೆ ಅಡ್ಡ ಬಂದಿತಣ್ಣ ಹೆಡೆ ತೆಗೆದಾಚಣ ಬಿಡುವದು ತನ್ನು ಕೆಂಪುಗಣ್ಣ ಅದುವೆ ನಾಗಣ್ಣ ನಂಜೀನ ಅಂಜಿಕೆ ಹೊಲ್ಲ ಕೆಂಜೆಡೆಯವನ ಚಲ್ವ ಸಂಜೀವನಿ ಮದ್ದು ಬಲ್ಲ ಹಿಂಜರಿಯುವುದೇಕೆ ಇನ್ನು ಹಸಿದು ಹುಲಿ ಬರುವ ದಲ್ಲಿ ತಾಯಿ, ಪಸರಿಸಿ ಬಾಯಿ ವಸುಧೆ ನಡುಗುವ ಗುಡುಗಿನ ಛಾಯೆ ಅದುವೆ ಮಹಾಮಾಯಿ ಜಯ ಸಿದ್ದರಾಮನ ಸಿದ್ದಿ ಮಂತ್ರದ ಧ್ಯಾನ ಶುದ್ಧ ಮನದಿಂದಲೇ ಸಾಧನ ಇದ್ದುಗೆದೆ ಕದಳಿಯ ಬನ* ಹಸಿದು ಬರುವ ಬ್ರಿಟಿಷರನ್ನು ಬಗ್ಗು ಬಡಿಯಲೆಂದೆ ಅಂಜದೇ ಅಳುಕದೇ ಕೆಂಜಡಿಯವನ ಸಂಜೀವಿನಿ ಮದಿನ ಮೇಲೆ ನಂಬಿಕೆ ಇಟ್ಟು ಮುಂದೆ ನಡೆ ಅಂತ ಜನರಿಗೆ ಕರೆ ಕೊಡುತ್ತಿದ್ದರು.   ಭಾರತೀಯ ಸ್ವಾತಂತ್ರ ಹೋರಾಟ ಹಾಗೂ ಇನ್ನಿತರ ಚಳುವಳಿಗಳಲ್ಲಿ ಪುರುಷರೇ ಮುಖ್ಯ ಎದುರಿಸುತ್ತ ಬಂದಿದ್ದರು .ಅವರಿಗೆ ಭೌತಿಕವಾಗಿ ಮಹಿಳೆಯರ ಬೆಂಬಲವೂ ಇದ್ದಿತು. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಮಹಿಳೆಯರು ಅದಾಗಲೇ ಸಾಮಾಜಿಕ ಸುಧಾರಣೆ ಸ್ವಾತಂತ್ರ ಹೋರಾಟ ಶೈಕ್ಷಣಿಕ ಬೆಳವಣಿಗೆ ಹಾಗೂ ಮಹಿಳಾ ದಿನಾಚರಣೆ ಅಂತ ಕ್ಷೇತ್ರಗಳಲ್ಲಿ ಮುಖ್ಯ ವಾಹಿನಿಯಲ್ಲಿ ಬಂದಿದ್ದರು. ಇದರೊಂದಿಗೆ ಗ್ರಾಮೀಣ ಭಾಗದ ಮಹಿಳೆಯರು ಸಹ ತಮ್ಮ ಮನೆಯ ಪುರುಷರಿಗೆ  ರಾಷ್ಟ್ರೀಯ ಹೋರಾಟದಲ್ಲಿ ಪಾಲ್ಗೊಳ್ಳಲು ನೈತಿಕ ಹಾಗೂ ಭೌತಿಕ ಬೆಂಬಲವನ್ನು ನೀಡುತ್ತಿದ್ದರು.  ತಮ್ಮ ಮನೆಯವರ ಬೆಂಬಲದಿಂದ ರಾಷ್ಟ್ರೀಯ ಹೋರಾಟದಲ್ಲಿ ನೇರವಾಗಿ ಪಾಲ್ಗೊಂಡಿದ್ದರು .ಸ್ವಾತಂತ್ರ ಹೋರಾಟದಲ್ಲಿ ಎಲ್ಲ ವರ್ಗದ ಜನರು ಪಾಲ್ಗೊಳ್ಳಬೇಕೆಂಬುದೇ ಬಹು ಮುಖ್ಯ ಉದ್ದೇಶ ವಾಗಿತ್ತು..ಪುರುಷರು ಸೆರೆವಾಸವನ್ನು ಅನುಭವಿಸಿದಾಗ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವ ಹೊಣೆ ಮಹಿಳೆಯರ ಮೇಲಿತ್ತು .ಸತ್ಯಾಗ್ರಹ ರಚನಾತ್ಮಕ ಕಾರ್ಯಕ್ರಮಗಳು…ಚಳುವಳಿಯ ರೂಪರೇಷೆಗಳು ಮಹಿಳೆಯರ ಮನೋಬಲಕ್ಕೆ ಸೂಕ್ತವಾಗಿದ್ದು ಎಂದು ಅವರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಸಭೆಗಳನ್ನು ಕರೆಯಲು ಹೇಳುತ್ತಿದ್ದರು .ಅಂತಹ ಸಮಿತಿಗಳಲಿ ಜಯದೇವಿ ತಾಯಿಯವರು ಮುಂಚೂಣಿಯಲ್ಲಿ ಇರುತ್ತಿದ್ದರು ಈ ಚಳುವಳಿಯ ಸಂದರ್ಭದಲ್ಲಿ ಮಹಿಳೆಯರು ಗೋಖಲೆ ,ಮಾರ್ಗರೇಟ್ ಕಸಿನ್ಸ ಹಾಗೂ ಅನಿಬೆಸೆಂಟರ ಪ್ರಭಾವಕ್ಕೆ ಒಳಗಾಗಿದ್ದನ್ನು ನಾವು ಗಮನಿಸಬಹುದಾಗಿದೆ.ಬಹು ವರ್ಷಗಳಿಂದ ಮಹಿಳೆಯರು ತಮ್ಮ ಆರಂಭದ ಹೋರಾಟವನ್ನು ರಚನಾತ್ಮಕ ಕಾರ್ಯಗಳಿಗೆ ಸೀಮಿತಗೊಳಿಸಿಕೊಂಡಿದ್ದರು ನಂತರ ತಮ್ಮ ಕಾರ್ಯ ವ್ಯಾಪ್ತಿಯನ್ನು ಉಪ್ಪಿನ ಸತ್ಯಾಗ್ರಹ ಸ್ವದೇಶಿ ಚಳುವಳಿ ಮಧ್ಯಪಾನ ನಿಷೇಧ ದಂತ ಚಟುವಟಿಕೆ ವಿಸ್ತರಿಸಿದರು. ಕಾನೂನು ಭಂಗ ಚಳುವಳಿಯಲ್ಲಿ ಮಹಿಳೆಯರು ಪಾಲ್ಗೊಳ್ಳದ ಕುರಿತು ರಾಷ್ಟ್ರೀಯ ನಾಯಕ ಯೋಚಿಸುವಂತಾಯಿತು.  ಕರ್ನಾಟಕದಲ್ಲಿ  ರಾಷ್ಟ್ರೀಯ ಚಳುವಳಿಯಲ್ಲಿ ಪಾಲ್ಗೊಂಡ ಪ್ರಮುಖ ಮಹಿಳೆಯರಲ್ಲಿ ಜಯದೇವಿತಾಯಿ ಲಿಗಾಡೆಯವರು ಒಬ್ಬರು ಇವರೊಂದಿಗೆ ಹಲವು ಮಹಿಳೆಯರು ಪಾಲ್ಗೊಂಡಿದ್ದರು…… ಮುಖ್ಯವಾಗಿ ಕಮಲಾದೇವಿ ಚಟ್ಟೋಪಾಧ್ಯಾಯ, ಉಮಾಬಾಯಿ ಕುಂದಾಪುರ, ಕೃಷ್ಣ ಬಾಯಿ ಪಣಜಿ ಕರ್, ಅವರಂಥ ಮಹಿಳೆಯರು ತಮ್ಮ ಚಟುವಟಿಕೆಗಳನ್ನು ಪ್ರೆಸಿಡೆನ್ಸಿಯಾಚೆ ವ್ಯಾಪಕಗೊಳಿಸಿದರು. ಇದರಿಂದಾಗಿ ಕರ್ನಾಟಕದ ಪ್ರತಿ ಭಾಗಗಳಿಂದಲೂ ಮಹಿಳೆಯರು ಚಳುವಳಿಯಲ್ಲಿ ಭಾಗವಹಿಸಹತ್ತಿದರು ಬಳ್ಳಾರಿ ಸಿದ್ದಮ್ಮ, ನಾಗಮ್ಮ ಪಾಟೀಲ, ಸುಬ್ಬಮ್ಮಾ ಜೋಯಿಸ್, ಟಿ. ಸುನಂದಮ್ಮ, ಯಶೋದಮ್ಮ ದಾಸಪ್ಪ, ನಾಗರತ್ನಮ್ಮ ಹಿರೇಮಠ, ಪದ್ಮಾವತಿ ಬಿದರಿ, ಜಯದೇವಿತಾಯಿ ಲಿಗಾಡಿ ಶಕುಂತಲಾ ಕುರ್ತುಕೋಟಿ, ಚೆನ್ನಮ್ಮ ಹಳ್ಳಿಕೇರಿ ಇನ್ನೂ ಅನೇಕ ಮಹಿಳೆಯರು ರಾಜಕೀಯ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಕಂತು-ಎಂಟು ಸವಿತಾ ದೇಶಮುಖ ಅವರಿಂದ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದಮಹಾನ್‌ ಚೇತನ ಲೇ-ಸವಿತಾ ದೇಶಮುಖಜಯದೇವಿತಾಯಿಲಿಗಾಡೆಯವರ ಮೊಮ್ಮಗಳು ೧೯೩೨ರ ಸಮಯ….. ಜಯದೇವಿ ತಾಯಿಯವರು ತಮ್ಮ 20ನೆಯ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದ್ದರು…… ಮೂರು ಮಕ್ಕಳ ತಾಯಿಯಾಗಿ ಜೀವನದ ಕೆಲವು ಹಂತಗಳಲ್ಲಿ ತೇರ್ಗಡೆಯಾದ ನಂತರ…ಮನೆ, ಮಕ್ಕಳು, ಜವಾಬ್ದಾರಿಗಳ ಮಧ್ಯೆ … ಬಿಡುವಿನ ಸಮಯ ಸಿಕ್ಕಾಗಲೆಲ್ಲ ಜಯದೇವಿತಾಯಿಯ ಹೃದಯದಲ್ಲಿ ಒಂದು ಹೊಸ ಆಸೆ ಮೊಳಕೆಯೊಡೆದು ಅದು ಫಲ ಕೊಡುವ ಕಾಲ ಬಂದಿತ್ತು …ಮರಾಠಿ ಭಾಷೆ ಬರೆಯಲು ಓದಲು ಕಲಿತವರಾಗಿದ್ದರು .ಮನೆಯಲ್ಲಿ ಮಾತ್ರ ಕನ್ನಡದಲ್ಲಿ ಮಾತನಾಡಿದವರು,ಹಾಡುವರು.. ಮನೆಯ ಕೆಲಸ ಆಳುಗಳ ವಹಿವಾಟುವೂ ಕನ್ನಡದಲ್ಲಿ ನಡೆದಿರುತ್ತಿತ್ತು.ಮಕ್ಕಳೊಂದಿಗೂ ಕನ್ನಡ ಭಾಷೆಯಲಿ ಮಾತನಾಡುತಿದ್ದರು…….  ಆದರೆ ಮನದೊಳಗೊಂದು ಅತಿ ದೊಡ್ಡ ಕೊರಗು —“ಕನ್ನಡ ಭಾಷೆ ಓದಲು ಬರೆಯಲು ಬರದ ಕೊರಗು ….??!! ಆ ಸಮಯದಲ್ಲಿ ಪ್ರತಿದಿನ “ವಾರದ” ಪಾಠಶಾಲೆಯಿಂದ ಇಬ್ಬರು ಜಂಗಮರು ಪ್ರಸಾದಕ್ಕೆ ಎಂದು ಮನೆಗೆ ಬರುತ್ತಿದ್ದರು.   ಜಂಗಮ ವಿದ್ಯಾರ್ಥಿಳಿಗೆ ತಮಗೆ ಕನ್ನಡ ಭಾಷೆಯ ಜ್ಞಾನವನ್ನು ಕೊಡಬೇಕು ಎಂದು ಕೇಳಿದಾಗ ಅವರು ಸಂತಸದಿಂದ ಒಪ್ಪಿಕೊಂಡರು . *ಕೇವಲ ಎಂಟು ದಿನಗಳಲ್ಲಿ ಕನ್ನಡದ ಅಕ್ಷರ ಮಾಲೆಗಳನ್ನು ಅವರು ಕಲಿತರು ಮೂರು ಮಕ್ಕಳು ಆದ ನಂತರ…!!!* “ಜಂಗಮರು ಹಾಕಿ ಕೊಡುತ್ತಿದ್ದ  ಅಕ್ಷರವನ್ನು ಬಹಳ ಸರಾಗವಾಗಿ, ಸರಳ- ಸಹಜವಾಗಿ ಕನ್ನಡವನ್ನು ನಾನು ಕಲಿತೆ ಅದು ನನ್ನ ತಾಯಿ ಭಾಷೆಯ ಮರ್ಮ…. ಬಲು ಬೇಗ   ಒತ್ತಕ್ಷರಗಳನ್ನು ವರ್ಣಮಾಲೆಗಳನ್ನು ಬರೆಯಲು ಪ್ರಾರಂಭಿಸಿದೆ” ಅಂತ ಹೇಳ್ತಿದ್ದರು.   ಕಲಿತ ಕನ್ನಡ ಭಾಷೆಯನ್ನು ಅದೆಷ್ಟು ಸಂಭ್ರಮಿಸಿದರು ಅಂದರೆ ಕೈಗೆ ಸಿಕ್ಕ ಎಲ್ಲ ವಚನಗಳ ಪುಸ್ತಕಗಳನ್ನು ತೆಗೆದುಕೊಂಡು ಓದಲು ಶುರು ಮಾಡಿದರು ಅವುಗಳನ್ನು ಚೆನ್ನಾಗಿ ಓದುತ್ತಿದ್ದೇನಾ ಇಲ್ಲವಾ  ಅನ್ನೋದನ್ನ ತಿಳಿದುಕೊಳ್ಳಲು ಬಹಳ ಸಮಯವೇನು ಬೇಕಾಗಲಿಲ್ಲ ಅಂತ ಹೇಳುವರು… ಮೊದಲ ದಿನ ಕನ್ನಡದ “ಅ” ಅಕ್ಷರವನ್ನು ಬರೆಯುವಾಗ ಅವರ ಕೈ ಕಂಪಿಸಿತು…ವಯಸ್ಸು ಅಡ್ಡಬಂತು…ಮಕ್ಕಳು ನಗಬಹುದು ಅತ್ತೆ ಗಂಡ ಮುನಿಸಿಕೊಳ್ಳಬಹುದು ಎನ್ನುವ ಭಯವೂ ಬಂದಿತು…ಆದರೆ ಹೃದಯದ ಉತ್ಸಾಹ ಆ ಭಯಕ್ಕಿಂತ ದೊಡ್ಡದಾಗಿತ್ತು.“ಸಿದ್ದರಾಮ” ಎಂಬ ಪದವನ್ನು ಕನ್ನಡದಲ್ಲಿ ಓದಿದಾಗಅವರು ಕಣ್ಣೀರಿಟ್ಟರು…ಅದು ಕೇವಲ ಪದವಲ್ಲ,ಅದು ಅವರ “ಗುರುವಿನ ನಾಮ”…. “ಭಕ್ತಿಯ ರೂಪ ಒಡಮೂಡಿ ಕನ್ನಡ ಭಾಷೆಯಲ್ಲಿ ನೋಡಿ ಸಂತೋಷವಾಯಿತು…..ಆ ದಿನ ಅವರು ಮತ್ತೆ ಒಂದು ಬಾಲಕಿ ಆಗಿದ್ದರು —ಹೊಸ ಅಕ್ಷರಗಳ ಮುಂದೆ ಕುತೂಹಲದಿಂದಪ್ರತಿ ಪದವು ಮುತ್ತಿನಂತೆ ಸಂಗ್ರಹಿಸುತ್ತಿದ್ದರು.ಕನ್ನಡದಲ್ಲಿ ಮೊದಲ ಅಕ್ಷರ ಮಾಲೆಗಳ ನೋಡಿ ಕ್ಷಣಅವರ ಮುಖದಲ್ಲಿ ಮೂಡಿದ ಆ ನಗುಮಕ್ಕಳು ಹುಟ್ಟಿದಾಗ ಕಂಡ ನಗುವಿನಷ್ಟೇ ಪವಿತ್ರವಾಗಿತ್ತು.ಅದು ಕೇವಲ ಭಾಷೆ ಕಲಿತ ಸಂತಸವಲ್ಲ…ಅದು ತನ್ನ ಆತ್ಮವನ್ನು ಶರಣ ಸಂಸ್ಕೃತಿಗೆ- ಜೋಡಿಸಿದ ಸಂತಸ,ವಚನಗಳ ಹೆದ್ದಾರಿ,ತನ್ನ ಅನುಭಾವದ ಬಾಗಿಲು ತೆರೆದ ಸಂತಸ,…..ತಾನು ತಾಯಿಯಾಗಿದ್ದರೂ ತಾನೂ ಇನ್ನೂ ಕಲಿಯಬಲ್ಲೆ ಎಂಬ ಆತ್ಮವಿಶ್ವಾಸದ ಜಯಘೋಷ ಸಾರಿತ್ತು. ….ಅದೇಷ್ಟೋತ್ತು ಕಂಬನಿ ಸುರಿದವು ಅಂತ  ಅಭಿಮಾನದಿಂದ ಹೇಳುತಿದ್ದರು.ಕಣ್ಣೀರಿನಲ್ಲಿ ಹೆಮ್ಮೆ  ಇತ್ತು. ಮರಾಠಿಯ ಮಗಳಾಗಿ,,ಕನ್ನಡದ ಸೊಸೆಯಾಗಿ….,ಎರಡು ಭಾಷೆಗಳ ಸೇತುವೆಯಾದರು ಮುಂದೆ  ….ಕನ್ನಡಿಗರ ತಾಯಾಗಿ ನಿಂದರು ಅಂತೇನು ಹೇಳಬೇಕಾಗಿ ಆಗಿಲ್ಲವೇ..!! ಎಲ್ಲ‌ ಬಲ್ಲವಳೆಂಬ /ಇಲ್ಲವದು ಭ್ರಮೆಯೆನಗೆಬಲ್ಲವರ ಪಾದಹಿಡಿಯುವೆ -ಬಲ್ಲಿದರುಕಲಿಸಿರಿ ಮತ್ತು ನುಡಿಸಿರಿ!! ಅಂತ ಹೇಳತಾಬಲ್ಲವರಿಂದ‌ ಕಲಿಯುತ ಮುಂದೆ ನಡೆದರು. 16-09-1895 ರಲ್ಲಿ ಸೊಲ್ಲಾಪುರದ ಮಹಾದಾನಿಯಾದ ರಾವ್ ಬಹದ್ದೂರ್ ಮಲ್ಲಪ್ಪ ವಾರದರು “ಸರಸ್ವತಿ ಸದನ “.ಎಂಬ ಶೈಕ್ಷಣಿಕ ಸಂಸ್ಕೃತಿಕ ಸಂಸ್ಥೆ ಸ್ಥಾಪನೆ ಮಾಡಿದ್ದರು . ಸರಸ್ವತಿ ಸದನ ಇಲ್ಲಿ ಮಹಿಳೆಯರಲ್ಲಿ ಸ್ವಾವಲಂಬಿ ಜೀವನದ ಅರಿವು, ಶಿಕ್ಷಣದ ಮಹತ್ವ,ಆರೋಗ್ಯದ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳ ಅನುಷ್ಠಾನ ಮಾಡಲಾಗುತ್ತಿತ್ತು.  ೧೯೧೦ ರಲ್ಲಿ ಸರಸ್ವತಿ ಸದನ ಮೂರು ವಿಭಾಗದಲ್ಲಿ ತನ್ನ ಕೆಲಸ ಹಮ್ಮಿಕೊಂಡಿತ್ತು. ಕನ್ನಡ ಮಾತನಾಡುವವರಿಗಾಗಿ ವಾರದ ಮಲ್ಲಪ್ಪನವರ ಮನೆಯಲ್ಲಿ “ವೀರಶೈವ ಮಹಿಳಾ  ಜ್ಞಾನ” ಮಂದಿರ ಕಟ್ಟಲಾಗಿತ್ತು.  ಇನ್ನು ಮರಾಠಿ ಮಾತನಾಡುವವರಿಗಾಗಿ ಶ್ರೀ ಶಂಕರ ರಾವ ದೇವಾಂಕರ್ ಅವರ ಮನೆಯಲ್ಲಿ “ಸರಸ್ವತಿ ಮಂದಿರ “ಕಟ್ಟಲಾಗಿತ್ತು . ಗುಜರಾತಿ ಭಾಷಿಕರಿಗಾಗಿ ಹಿರಾಚಂದ್ರ ನೇಮಿಚಂದ್ರ ಮನೆಯಲ್ಲಿ ಶ್ರಾವೀಕಾಶ್ರಮ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದರು.ಮಹಿಳೆಯರ ಒಳತಿಗಾಗಿ ಪ್ರತಿ  ವಾರಕ್ಕೊಮ್ಮೆ ಸಭೆ ಸೇರಿ.. ಮೊದಮೊದಲಿಗೆ ಅರಿಶಿಣ ಕುಂಕುಮ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಂಡರು.ಎಡಬಿಡದೆ ಚಟುವಟಿಕೆಗಳು ನಡೆಯುತ್ತಿದ್ದವು. ಅಲ್ಲಿ ಪ್ರಾರ್ಥನೆ, ಕೀರ್ತನೆ ,ಪುರಾಣ ಪ್ರವಚನ ಸಂಪ್ರದಾಯ ಮಡಿ-ಮೈಲಿಗೆ ಅಂಥ ಮೂಢ ನಂಬಿಕೆಗಳಿಂದ ಮುಕ್ತರಾಗಿ ..ಧಾರ್ಮಿಕ ಸರಿಯಾದ ತಿಳುವಳಿಕೆ ಕೊಡುವುದು…ಅವರ ಕಾಳಜಿ‌ ಅವರೇ ವಹಿಸುವುದನ್ನು ಕಲಿಸುತ್ತಿದ್ದರು.  ಸ್ವಾವಲಂಬನೆಯ ಜೀವನ ನಡೆಸುವುದು ಬಗ್ಗೆ ತಿಳುವಳಿಕೆಯನ್ನು ಹೇಳಿಕೊಡಲಾಗುತ್ತಿತ್ತು .ವಾರದ ಮಲ್ಲಪ್ಪನವರ ಪತ್ನಿಯರಾದ ಗೌರವ್ವಬಾಯಿ ಮತ್ತು ಬಸವ್ವಬಾಯಿ ಹಾಗೂ ಅವರ ಮಗಳು ಸಂಗವ್ವನವರು ಮೇಲ್ವಿಚಾರಣೆ ವಹಿಸಿಕೊಂಡಿದ್ದರು.  ತಾಯಿಯೊಂದಿಗೆ ಜಯದೇವಿ ತಾಯಿಯವರು ಸರಸ್ವತಿ ಸದನದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು.  ಮುಂದೆ 1932 ರಲ್ಲಿ ಮಹಿಳಾ ಜ್ಞಾನ ಮಂದಿರದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು ಏಕೆಂದರೆ ಪತಿ ಚೆನ್ನಮಲ್ಲಪ್ಪ ಲಿಗಾಡೆ ಅವರು ತಾಯಿಯವರ ಹೆಸರ ಮೇಲೆ ಜಗವನ್ನು ಖರೀದಿಸಿ ತಾಯಿಯವರ ಹೆಸರಿನಲ್ಲಿಯೇ ಕನ್ಯಾ ಶಾಲೆಯನ್ನು ಪ್ರಾರಂಭಿಸಿದರು. ಈ ಶಾಲೆಯು ಸೊಲ್ಲಾಪುರದಲ್ಲಿ 25 ವರ್ಷಗಳ ಕಾಲ ತಾಯಿಯವರ ಹೆಸರಿನಲ್ಲಿಯೇ ನಡೆದಿತ್ತು.  ತಾಯಿಯವರು ಈ ಶಾಲೆ ಗೆ ಸಿದ್ದರಾಮನ ಹೆಸರನ್ನೇ ಇಡಬೇಕೆಂದು ಒತ್ತಾಯಿಸಿದರು. “ಸಿದ್ದೇಶ್ವರ” ಶಾಲೆಯಾಗಿ ಪರಿವರ್ತನೆಗೊಂಡಿತು. ಈ ಶಾಲೆಯಲ್ಲಿ ಅವಿಶ್ರಾಂತವಾಗಿ ಓದುವುದನ್ನು ಕನ್ನಡದಲ್ಲಿ ಬರೆಯುವುದನ್ನು ರೂಢಿಸಿಕೊಂಡರು. ಸಿದ್ದೇಶ್ವರ ಕನ್ಯಾ ಪಾಠಶಾಲೆ ಸಿದ್ದೇಶ್ವರ ಕನ್ಯಾ ಪಾಠಶಾಲೆ ಜಯದೇವಿತಾಯಿಯವರ ಕಾರ್ಯ ಮಾಡುವ ಮುಖ್ಯವಾದ ಕಾರ್ಯ ಕ್ಷೇತ್ರಗಳು ಅಂದರೆ …ವಾರದ ಸಂಸ್ಕೃತ ಪಾಠಶಾಲೆ ,ಮಹಿಳಾ ಜ್ಞಾನ ಮಂದಿರ, ಸರಸ್ವತಿ ಸದನ ಹಾಗೂ ಸಿದ್ದೇಶ್ವರ ಕನ್ಯಾ ಶಾಲೆ, ಬಾಲ ಶ್ರಾವಿಕಾಶ್ರಮ ಮಂದಿರ  ಈ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರವಾಗಿ ದುಡಿದರು .ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಮಹಿಳೆಯರಲ್ಲಿ ಶಿಕ್ಷಣದ ಅರಿವು ,ರಾಷ್ಟ್ರೀಯ ಚಿಂತನೆ ,ನಾಡ ನುಡಿ ಪ್ರಜ್ಞೆ ಸಮಾಜದ ಚಟುವಟಿಕೆಯ ಮೂಲಕ ಸ್ವಾವಲಂಬನೆಯ ಬದುಕು, ದೇಶಿಯ ಚಿಂತನೆಗಳನ್ನು ಬೆಳೆಸುತ್ತಿದ್ದರು.  ಈ ಕಾಲಕ್ಕೆ ಗಾಂಧೀಜಿಯವರು ಭಾರತಾರದಾದ್ಯಂತ ಸ್ವಾತಂತ್ರ್ಯದ ಹೋರಾಟದಲ್ಲಿ ಜನರನ್ನು ಒಂದು ಗುಡಿಸುತ್ತಿದ್ದರು ಅವರ ಅಹಿಂಸಾವಾದ ,ಸ್ವದೇಶಿ ಚಿಂತನೆಯ  ಚಟುವಟಿಕೆಗಳಲ್ಲಿ ಜಯದೇವಿ ತಾಯಿಯವರು ಸಕ್ರಿಯವಾಗಿ ಭಾಗಿಯಾಗುತ್ತಿದ್ದರು. ಗಾಂಧೀಜಿ ಚಿಂತನೆಗಳು ಜಯದೇವಿಯವರಿಗೆ ತುಂಬಾ ಆಕರ್ಷಣೆ ಮಾಡಿದ್ದವು . ಇದೇ ಕಾಲಕ್ಕೆ ತಿಲಕರು ಸ್ವದೇಶಿ ಚಳುವಳಿಯ ನಾಲ್ಕು ಅಂಕಗಳಾದ ಸ್ವರಾಜ್ಯ ,ರಾಷ್ಟ್ರೀಯ ಶಿಕ್ಷಣ, ಸ್ವದೇಶಿ ಚಳುವಳಿ ,ವಿದೇಶಿ ಬಹಿಷ್ಕಾರ …..ಮೌಲ್ಯಗಳ ಪ್ರಚಾರಕ್ಕಾಗಿ ಮುಂಬೈ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಿದ್ದರುಆ ಕಾಲದಲ್ಲಿ ತಿಲಕರು ವಾರದವರ ಮನೆತನದಲ್ಲಿ ಗಣೇಶೋತ್ಸವವನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಿರುವುದನ್ನು ನೋಡಿ ತಿಲಕರು ಸಾಮೂಹಿಕವಾಗಿ ಈ ರೀತಿಯಲ್ಲಿ ಗಣೇಶನನ್ನು ಪೂಜಿಸಿದರೆ ಸ್ವಾತಂತ್ರ ಹೋರಾಟದಲಿ ಎಲ್ಲ ಮತೀಯರು ಎಲ್ಲ ಜಾತಿಯವರು ಒಂದು ಸೇರಿ ಭಾರತೀಯರು ಒಂದಾಗಿ ಬ್ರಿಟಿಷರ ವಿರುದ್ಧ ಹೋರಾಡಬಹುದು ಎನ್ನುವ ವೈಚಾರಿಕತೆಯನ್ನು ಪಡೆದುಕೊಳ್ಳುತ್ತಾರೆ. ಭಾರತದಾದ್ಯಂತ ಗಣೇಶ ಉತ್ಸವವನ್ನು ಪ್ರಾರಂಭಿಸುವುದನ್ನು ಶುರು ಮಾಡಿದರು. ತಿರಕರು ವಾರದ ಮಲ್ಲಪ್ಪನವರಿಗೆ ಧನ್ಯವಾದ ಹೇಳಿರುವ ಆಕರ‌ ಲಭ್ಯವಾಗಿವೆ. ಅಂತೆಯೇ  ಜಯದೇವಿ ತಾಯಿಯವರು ಕೂಡ ಗಣೇಶನ ಪೂಜೆಯನ್ನು ಅತಿ ಸಂಭ್ರಮದಿಂದ ಅನುಸರಿಸುತ್ತಿದ್ದರು ಹಾಗೆ ಗಾಂಧೀಜಿಯವರ  ಆಚಾರ ವಿಚಾರಗಳನ್ನು ಕಾರ್ಯರೂಪದಲ್ಲಿ ತರುತ್ತಿದ್ದರು .ಅವರಲ್ಲಿಯ ರಾಷ್ಟ್ರ ಪ್ರೇಮವು ಉತ್ಕಟವಾಗಿತ್ತು.  ರಾಷ್ಟ್ರೀಯ ಚಟುವಟಿಕೆ ಹಾಗೆ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು .   ಕರ್ನಾಟಕದಲ್ಲಿ ಸುಮಾರು 48 ರಾಷ್ಟ್ರೀಯ ಶಾಲೆಗಳದ್ದವು. ಜಯದೇವಿ ತಾಯಿಯವರು ರಾಷ್ಟ್ರೀಯ ಶಾಲೆಗಳನ್ನು ಪ್ರೋತ್ಸಾಹಿಸುತ್ತಿದ್ದರು…  ಸೊಲ್ಲಾಪುರದಲ್ಲಿ ಬಾಲ “ವಿದ್ಯಾ ಮಂದಿರ, ಶ್ರಾವಿಕಾಶ್ರಮ ಶಾಲೆ ,ಹುಬ್ಬಳ್ಳಿಯಲ್ಲಿ ‘ಭಾರತೀಯ ಹೈಸ್ಕೂಲ್,” ಧಾರವಾಡದಲ್ಲಿ “ಜಯದೇವಿತಾಯಿ ಲಿಗಾಡೆ” ಹೈಸ್ಕೂಲ್ ಶಾಲೆಗಳನ್ನು ಆರಂಭಿಸಿದ್ದರು. ಅಲ್ಲಿ ರಾಷ್ಟ್ರೀಯ ವಿಚಾರಗಳ ಕುರಿತು ಚರ್ಚೆಗಳು ನಡೆಯುತ್ತಿದ್ದವು. *ಸರಸ್ವತಿ ವಿದ್ಯಾ ಮಂದಿರ*  ತಾಯಿ ಸಂಗವ್ವ ಮಡಿಕೆ ,ಭಾಗೀರಥಿಬಾಯ್, ಪಂಚವ್ವಬಾಯಿ ಅವರು ಅಸಹಕಾರ ಚಳುವಳಿಯಲ್ಲಿ ಧುಮುಕಿದ್ದರೂ ಅದೇ ರೀತಿಯಾಗಿ ತಾಯಿಯವರು ಗಂಡನ ಮನೆಯಲ್ಲಿ ಇದ್ದುಕೊಂಡು ಗಾಂಧೀಜಿಯವರು ಕರೆ ಕೊಡುತ್ತಿದ್ದ ಎಲ್ಲ ರಾಷ್ಟ್ರೀಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ಕನ್ನಡವನ್ನು ಕಲಿಯುತ್ತಲೇ ಮುಂದೆ ಕನ್ನಡದ ವೇಧಾವಿ ಭಾಷಣಕಾರ್ತಿಯಾಗಿ ಪರಿವರ್ತಿಸಿದರು.ಮೊಟ್ಟ ಮೊದಲ ಬಾರಿ ಜಯದೇವಿ ತಾಯಿಯವರು ಭಾಷಣವನ್ನು ಮಾಡಿದ ನೆನಪನ್ನು ಮಾಡಿಕೊಳ್ಳುತ್ತಿದ್ದರು…… *ಮೊಟ್ಟ ಮೊದಲ ಬಾರಿ ಭಾಷಣ ಮಾಡಿದ ವಾರದ ವಾಡೆ* ಮೊದಲಸಲ ಬಾಷಣ ಮಾಡಿದ ವಾಡೆ ಮನೆಯ ಎದುರುಗಡೆ ಸ್ಥಿತವಾದ ವಾರದವರ ಮನೆಯಲ್ಲಿ ತಿಂಗಳಿಗೊಮ್ಮೆ  ಅಕ್ಕಮಹಾದೇವಿಯ  ಪುರಾಣ ಪಠಣ ಮಾಡಿದ ಗುರುಗಳು ಜಯದೇವಿ ತಾಯಿಯವರನ್ನು ಕರೆದು “ನಾಳೆ ನೀನೇ ಭಾಷಣವನ್ನು ಮಾಡಿ ಪುರಾಣದ ಸಮಾಪ್ತಿಯನ್ನು ಮಾಡಬೇಕು “ಎಂದು ಕೇಳಿಕೊಂಡರು…  ಜಯದೇವಿ ತಾಯಿಯವರಿಗೆ  ಕೈ ಕಾಲು ಕಂಪಿಸಿದವು ಹೊಟ್ಟೆಯಲ್ಲಿ ಚಿಟ್ಟೆ ಓಡಾಡಿದಂಗ ಆಯಿತುಅಂತ ಹೇಳುತ್ತಿದ್ದರು. ಮೊಟ್ಟ ಮೊದಲ ಬಾರಿಗೆ ಭಾಷಣ ಮಾಡುವುದು ಸಾಮಾನ್ಯ ಕೆಲಸವಾಗಿರಲಿಲ್ಲ ಏಕೆಂದರೆ ಕೇವಲ ತಾಯಿ ಭಾಷಣ ಮಾಡುವುದನ್ನು ಕೇಳುತ್ತಿದ್ದರು… ಆದರೆ ಭಾಷಣ ಮಾಡಿದವರಾಗಿರಲಿಲ್ಲ.. ತಂದೆಯ ಹತ್ತಿರ ಹೋಗಿ ಏನನ್ನು ಮಾತನಾಡಬೇಕು ಅನ್ನೋದನ್ನ ಸುಮಾರು 9 -10 ಪುಟಗಳಷ್ಟು ಭಾಷಣವನ್ನು ಬರೆದುಕೊಂಡು ಬಂದು…. ಪುಟಗಳಲ್ಲಿನ ಒಂದು ಅಕ್ಷರವನ್ನು ಕೂಡ ಬಿಡದಂತೆ ಮರು ದಿವಸವೇ  ಭಾಷಣ ಮಾಡಿದರು.ಆ ಭಾಷಣವು ಎಲ್ಲರ ಮೇಲೆ ಅತ್ಯಂತ ಪ್ರಭಾವ ಬೀರಿದ್ದು ಹಾಗೂ ಪೂರ್ತಿಯಾಗಿ ಎಲ್ಲರ ಮನ ಗೆದ್ದಿದ್ದರು.ತಾಯಿಯವರು ಮಾಡುತ್ತಿದ್ದ ಭಾಷಣವನ್ನು ಕೇಳಿದ ತಂದೆ ಕಣ್ಣುನೀರು ಉರಿದವು… ತಾಯಿ  ಮಗಳನ್ನು ತಬ್ಬಿಕೊಂಡಿದ್ದರು .ಹಾಗೆ ಗೌರವ್ವಬಾಯಿಯು   ಬೆರಳುಗಳಿಂದ ನಿವಾಳಿಸಿ ಲಟ್ಟಿ ಮುರದಿದ್ದರು.ಇನ್ನೂ ಸಮಾಜದ ಸ್ತ್ರೀಯರೆಲ್ಲರೂ …ಬಂದಂತಹ ಎಲ್ಲ ಅತಿಥಿಗಳು ಅತ್ಯಂತ ಹೆಮ್ಮೆಯಿಂದ ನೋಡುತ್ತಿರುವ ದೃಶ್ಯ ಮನಸ್ಸಿಗೆ ಬಹಳ ಪ್ರಫುಲ್ಲತೆ ತಂದಿದ್ದು ….. ಮನದಲ್ಲಿ ಸಾವಿರ ಬಾರಿ ಸಿದ್ದರಾಮಯ್ಯನವರು ನೆನೆಸಿ ಧನ್ಯವಾದಗಳು ಹೇಳಿದ್ದರು.ಹಾಗೆ ಅತ್ತೆಯು ಭಾಷಣಗಾರತೀಯ ಮಗಳು ಅಂತ  ಅಣುಕಿಸುತ್ತಿರುವ ಮಾತುಗಳು ಕೂಡ  ನೆನಪಿಗೆ ಬಾರದೇ ಇರಲಿಲ್ಲ ಅಂತ ಹೇಳಿದರು.  ಮುಂದೆ ಪ್ರಯಾಗಬಾಯಿ ಅತ್ತೆಯು ಕೂಡ ತಾಯಿಯವರು ಮಾಡುವ ಭಾಷಣದ ಅಭಿಮಾನಿಗಳಾದರು.ಗಂಡ ಚೆನ್ನಮಲ್ಲಪ್ಪನವರು ತುಂಬಾ ಅಭಿಮಾನ ಪಡುವಂತ ಆಯ್ತು. *ಶರಣರ ಕರುಣೆಯು ಕಾಸರಕವಲೊಡೆದು ಹರೆದು ಹಾಯದಿತ್ತಎನ ಮೇಲೆ ಸಿದ್ದನ ವರವಾಗಿತ್ತು ..*… ಮುಂದೆ ಅವರ ಜನಜಾಗೃತಿಯ ಕಾರ್ಯ-ಭಾಷಣ ಗಾರ್ತಿಯ ಪಯಣ ಸಾಗುತ್ತಲೇ ನಡೆಯಿತು. ಅಲ್ಲಲ್ಲಿ ಎಲ್ಲ ಸಮಾಜದಲ್ಲಿ ಭಾಷಣಗಳನ್ನು ಮಾಡುತ್ತಿದ್ದರು.  ಸುತ್ತಲಿನ ಹಳ್ಳಿಗಳಿಂದ ಊರುಗಳಿಂದ ಭಾಷಣ ಮಾಡುವುದಕ್ಕಾಗಿ ಆಮಂತ್ರಣ ಬರಲಾರಂಸಿದವು .ಅನೇಕ ಶರಣ ಅನುಭಾವಿಗಳ ಒಡನಾಟ ಬೆಳೆಯ ಲಾರಂಭಿಸಿತು. ಕನ್ನಡ ಮೇರು ಸಾಹಿತ್ಯದ ಅಧ್ಯಯನ, ಶರಣ ಸಂಸ್ಕೃತಿಯ ಪರಂಪರೆಯ ಆಚರಣೆಮಾಡುತ್ತಾ ನಾಡಿನ ಮೂಲೆ ಮೂಲೆಗಳಲ್ಲಿ ಹೋಗಿ ಭಾಷಣವನ್ನು ಕೊಡುವುದು ಸಮಾಜದ ಸೇವೆಯನ್ನು ಮಾಡುವುದು ರಾಜ್ಯದ ರಾಷ್ಟ್ರದ ಅನೇಕ ಸಂತರು ಮಹಾತ್ಮರು, ಶಿವಯೋಗಿಗಳು, ಮಹಾನುಭಾವರೊಂದಿಗೆ ಜೊತೆ ಗೂಡಿ ಅನೇಕ ಕಾರ್ಯಗಳನ್ನು ಹಮ್ಮಿಕೊಳ್ಳಲಾರಂಬಿಸಿದರು. ಜಯದೇವಿ ತಾಯಿ ಅವರ ಸರ್ವತೋಮುಖ ಸಮಾಜದ ಕಾರ್ಯಗಳಿಗೆ ಹೇಗೆ ಮುಂದುವರೆದವು ಅನ್ನುವದ ಮುಂದಿನ ವಾರ ನೋಡೋಣ ಬನ್ನಿ….. ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಕಂತು-ಏಳು ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಸವಿತಾ ದೇಶಮುಖ ತಾಳಲಾರೆ ಯಾತನೆ/ಕೇಳೋಕೂಗು ನೀಲಕಂದರನೆ !! ಪಲ್ಲವಿ!!ಚಂದಿರನ ತಂಗಾಳಿ ನೊಂದ ಮನಕೆ ಬೀರಿ ಕಂದಳನು ಕಾಪಾಡ ಬಾರೋ!!ಬಾಳಿನ ತುಂಬೆಲ್ಲ ತಾಳಬಾರದು ಗೋಳುಹೇಳಲು ಬರೋದು ಎನಗಯ್ಯ !! ಅಂತ ಪಾಡುತ……ಚಂದಿರನ ಬೆಳದಿಂಗಳದ ಕೆಳಗೆ ಕುಳಿತು… ತೊರೆದು ಹೋದ ಚೊಚ್ಚಲ ಮಗುವನ್ನು ನೆಯುತ ಜಯದೇವಿ ತಾಯಿಯವರು ಖಾಲಿ ಹೃದಯ ಹೊತ್ತು, ಕಣ್ಣೀರು ಧಾರೆಯಲಿ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಬಹಳ ಹೊತ್ತು ಅತ್ತರು. ಆದರೆ ಜೀವನ ಯಾರಿಗೂ ಹೆಚ್ಚು ಕಾಲ ವಿರಾಮ ಕೊಡುವುದಿಲ್ಲವಲ್ಲಾ….!!! ಮತ್ತೆ ಗಂಡನ ಮನೆಗೆ ಹೊರಡಬೇಕು…..!!!ಗಂಡನ ಮನೆಗೆ ಹೋಗುವ ದಿನವೂ ಬಂತು…ತವರ ಬಾಗಿಲು ದಾಟಲು ಕಾಲುಗಳು ಮುಂದೆ ಸಾಗಲಿಲ್ಲ.ಪ್ರತಿ ಹೆಜ್ಜೆಯೂ ಒಂದು ನೆನಪನ್ನು ತುಳಿಯುವಂತೆ……ತವರಿನ ಗೋಡೆಗಳೆಲ್ಲಆ ಮಗು ನಗುವಿನ ಧ್ವನಿ ತುಂಬಿತ್ತು… ಕಳವಳ ಗೊಂಡ ಮನ…. ಕರಳು ಹಿಚುಕುವ ಸನ್ನಿವೇಶ… ಗಂಡನ ಮನೆಗೆ ಹೋಗುವ ದಾರಿಯಲ್ಲಿಮೌನವಾಗಿ ದೇವರನ್ನು ಕೇಳಿದಳು — ಕಳವಳಗೊಳ್ಳುತ್ತಾ ಬಳಲುತ್ತ ಬೇಡುವೆತಿಡಿಗೇಡಿಗೆ ಹೇಳೊ ಮನಶಾಂತಿಯ !! ನೊಂದ ಜೀವ ಬೆಂದ ಮನ ಸಂದುಸಂದಿನನೋವ ಅಂದಿಂದ ಮೈ ಮನಕೆಂದೇ !! ಹಂಣ್ಣಾದ ಈ ಮನಕೆ ಸಣ್ಣ ಮಾಡುವುದಕ್ಕೆ?!ಕಣ್ಣು ತೆರೆದು ಕರುಣಿಸಯ್ಯ ರೋಮರೋಮಂಗಳಿಗೆ ಸ್ವಾಮಿ ನಿನ್ನಯ ಒಲವು ಅಮರ ಧಾರೆಯ ಎರೆಯಯ್ಯಾ!! ಭವ ದೂರ ಭವನಾಶ ‘ಜಯ ಸಿದ್ದರಾಮೇಶನೆ’ ದಯದೋರೊ ಎನ್ನ ಭಯ ದೂರ ಸರಿಸೋ !! ಜಯದೇವಿ ತಾಯಿಯವರ ತಮ್ಮ ಶಿವಶಂಕರ್ ಮಡಕಿ ,ತಂಗಿಶ್ರೀದೇವಿ ಗಾಡವೆ, ,ಮಗಳು ಶಶಿಕಲಾ ಮಡಕಿ, ತಂಗಿ ಸುಮತಿ ಅಸ್ಟುರೆ ಗಂಡನ ಮನೆ ಅವರನ್ನು ಕಾಯುತ್ತಿತ್ತು…..ಆದರೆ ಕಣ್ಣುಗಳಲ್ಲಿ ಜೀವಂತವಾಗಿದ್ದಒಂದು ಚಿಕ್ಕ ಮುಖ…ಒಂದು ಅಪೂರ್ಣ ನಗುವಿನ ನೆನಹು ಮನದಲಿ ತುಂಬಿತ್ತು ………. ಅಲ್ಲಿ ಇನ್ನೂ ಏನ ಗ್ರಹಚಾರವಿದೆಯೋ..ಅತ್ತೆಯ ನೆನಪಾಗಿ ಕೈ ಕಾಲುಗಳು ನಡುಗಲಾರಂಭಿಸಿದವು. ‌‌ ಖಾಲಿ ಕೈಯಲ್ಲಿ ಹೇಗೆ ಹೋಗುವದು ಬರಿದಾದ ಒಡಲನ್ನು ತೆಗೆದುಕೊಂಡು…????ಹೆದರುತ್ತ ಹೆದರುತ್ತಲೇ ಗಂಡನ ಮನೆಯಲ್ಲಿ ಕಾಲಿಟ್ಟ ತಕ್ಷಣ ಅತ್ತೆ ಪ್ರಯಾಗಬಾಯಿ ಎದುರಾದರು …… ಎದುರಾದ ಅತ್ತೆ ಮುಖ ಕಳೆಗುಂದಿತು ಕರುಣಾ ಮಯಿಯಾಗಿ ಕಂಡರು……. ಮಡಿಲಲ್ಲಿ ಮಗು ಇಲ್ಲದ ಸೊಸೆಯ ಕಣ್ಣುಗಳೇ ಸಾವಿರ ಮಾತುಗಳ ಹೇಳುವದ ಕಂಡು……. ಬಾಗಿಲ ಬಳಿ ನಿಂತಿದ್ದ ಸೊಸೆಯನ್ನು ನೋಡಿಅತ್ತೆಯ ಹೃದಯ ಕಗ್ಗತ್ತಲಾಯಿತು…..ಸೊಸೆ ಒಂದು ಹೆಜ್ಜೆ ಒಳಗೆ ಇಟ್ಟಳು…….ಸೊಸೆಯ ಕಾಲನಡಿಗೆಯ ನಡುಗು.ಹೃದಯದಲ್ಲಿ ಹೊತ್ತಿ ಉರಿಯುವ ಶೋಕ……ಕಣ್ಣುಗಳಲ್ಲಿ ಅಳಲು ,ಒಣಗಿದ ಕಣ್ಣೀರು, ನೋವಿನ ನಿರಾಶೆ, ಜೀವ ಒಡೆದುಹೋದ ವ್ಯಥೆ ಹೇಳಿದವು… ಅತ್ತೆ ಮುಂದೆ ಬಂದು “ಇರ್ಲಿ ನಿನ್ನ ಮಗನ ಶಿವ ಕರ್ಸ್ಕೊಂಡಾನ ಇಂತಹ ಹತ್ತು ಮಕ್ಕಳನ್ನು ಮತ್ತೇ ಹೆರುವಂತಿ ಬಾ ಒಳಕ್ಕೆ ಬಾ “ಅಂದರಂತೆ ಕಣ್ಣಲ್ಲಿ ನೀರುತುಂಬಿಕೊಕಡಿದ್ದವು.. ಒಂದು ಕ್ಷಣದಲ್ಲಿ ‘ಅತ್ತೆ’ … ‘ತಾಯಿ’ ಆಗಿಬಿಟ್ಟಳು.ಸೊಸೆಯ ಖಾಲಿ ಕೈಗಳನ್ನು ಮಮತೆಯಿಂದ ಗಟ್ಟಿಯಾಗಿ ಹಿಡಿದರು.ಇದು ಮೊಟ್ಟಮೊದಲ ಬಾರಿ —ಪ್ರೀತಿಯಿಂದ ಸೊಸೆ ಎದೆಗೆ ತಲೆ ಒರಗಿಸಿಮುರಿದು ಬಿದ್ದಳು.ಇಬ್ಬರ ನೋವು ಒಂದಾಗಿ ಹರಿದ ಕ್ಷಣಗಳಿಗೆಆ ಮನೆಯ ಗೋಡೆಗಳು ಸಾಕ್ಷಿಯಾಗಿದ್ದವು —ಕಾಡುತ್ತಿದ್ದ ಅತ್ತೆ ಇವತ್ತು ಕರಗಿಬಿಟ್ಟಳು.ಸೊಸೆ ಮಾತಾಡಲಿಲ್ಲ. ಮೌನವಾಗಿ ಒಳ ನಡೆದರು. ಆ ದಿನದಿಂದ ಆ ಮನೆಯ ವಾತಾವರಣ ಬದಲಾಗಿತು.ಅತ್ತೇಯ ಕಾಡುವ ಮಾತುಗಳು ಇಲ್ಲವಾಗಿದ್ದವು….. ಕಾಲ ಕೆಲವೊಮ್ಮೆ ಶಿಕ್ಷಕ ಆಗುತ್ತೆ ಅಲ್ಲವೇ….!!! ಒಂದು ಮರಣ ಎರಡು ಹೃದಯಗಳನ್ನು ಹತ್ತಿರ ಮಾಡಿತು.ಅದಕ್ಕೆ ಜಯದೇವಿತಾಯಿಯವರು ಹೇಳ್ತಾರೆ “ಕಾಡುವವರು ಇರಬೇಕ/ ಕಡಿತನಕ ಜನುಮಕ್ಕ ನೋಡುವರ ಇರಬೇಕು ವರೆಗೆ ಹಚ್ಚಿ-ಈ ಮನೆಕ ನೀಡುವರು ಇರಬೇಕ ನಿಜದರಿವ!! ಕಾಡುವರು ನನಗ /ಕಡೆತನಕ ಇರಲವ್ವಕೇಡ ಬಯಸಿನು ನಾ ಅವರಿಗ-ಕಡೆತನಹಾಡಿ ಹರಿಸುತ ಸುಖಿಸುವೆ!! ಏಕೆಂದರೆ ಒಂದೊಂದು ಕಠಿಣ ಪರೀಕ್ಷೆಗಳು ಅವರನ್ನು ದೇವರ ಸಮೀಪ ಕರೆದು ಒಯ್ಯಯುತಿವೆ. ಅನ್ನುವುದು ಖಚಿತಗೊಳ್ಳಲಾರಂಭಿಸಿತ್ತು..ಅತ್ತೆಯ ಕಾಟಾಚಾರವು ಕೂಡಾ ಜೀವನದಲ್ಲಿ ಅನೇಕ ಪಾಠಗಳನ್ನು ಕಲಿಸಿದ್ದವು ಅವರಿಗೆ ಸಕಾರಾತ್ಮಕ ಬದುಕನ್ನು ಬದುಕುವ ಪಾಠ ಕಲಿಸಿತ್ತು ಅಂತ ಹೇಳುತ್ತಿದ್ದರು. “ನೋವಿನ ಪೆಟ್ಟು ಬಿದ್ದಂತೇಲ್ಲ ಸಿದ್ದರಾಮನ ಸಾಮಿಪ್ಯಕೆ ಸಮಿಸತಾ ಹೋದೆ…. ಹಾಗೆ ಕನ್ನಡ ತಾಯಿಯನ್ನು ನಾನು ಅಪ್ಪಿಕೊಳ್ತಾ ಹೋದೆ ‌…….ಮನದಲ್ಲಿ ಉಲ್ಬಣಿಸುತ್ತಿದ್ದ ವೇದನೆಗಳು… ಕಾವ್ಯದ ರೂಪದಲ್ಲಿ ಮನದ ಮೂಲೆಯಲ್ಲಿ ಹರಿದು ಬರುತ್ತಿತ್ತು ಕಷ್ಟಗಳನೆಲ್ಲ ನನ್ನ ತಾಯಿ ಭಾಷೆ ಕನ್ನಡಭಾಷೆಯಲ್ಲಿ ತೋಡಿಕೊಳ್ಳುತ್ತಿದ್ದೆ …. ಆದರೆ ಅವುಗಳನ್ನು ಶಬ್ದಾಂಕನ ಗೊಳ್ಳಿಸಲಿಕ್ಕೆ ಬೇಕಾಗುವ ಕನ್ನಡ ಶಬ್ದಗಳು ಬರೆಯುವ ಜ್ಞಾನ ಇನ್ನೂ ನನಗೆ ಇರಲಿಲ್ಲ ಏಕೆಂದರೆ ನಾಲ್ಕನೇ ಇಯತ್ತೆ ಮರಾಠಿ ಕಲಿತವಳು…ಕನ್ನಡ ಭಾಷೆಯನ್ನು ಬರೆಯಲು ನಾನು ಕಲಿತಿರಲಿಲ್ಲ .”ಅಂತ ಹೇಳ್ತಾ ಇದ್ದರು. ಜಯದೇವಿ ತಾಯಿಯವರ ಮೈದುನ ಜಗದೇವಪ್ಪನವರು ಗಂಡ ಚೆನ್ನಮಲ್ಲಪ್ಪನಂತೆ ವ್ಯಾಪಾರದಲ್ಲಿ ಜಾಣರೇನು ಆಗಿರಲಿಲ್ಲ…….!! ಕೆಟ್ಟ ಸಂಗತಿಯ ಗೆಳೆಯರಿಂದ ಅವರು ದಾರಿ ತಪ್ಪುತ್ತಿರುವುದನ್ನು ನೋಡಿದ ಪ್ರಯಾಗಬಾಯಿಯು ಒಬ್ಬ ಸುಂದರ ಮರಾಠವಾಡಾದ ಹೆಣ್ಣನ್ನು ನೋಡಿ ಮದುವೆ ಮಾಡಿದರು.ಆದರೆ ಮದುವೆಯಾಗಿ ಬಂದ ಓರಗಿತ್ತಿಯು ತಾಯಿಯವರ ತದ್ವಿರುದ್ಧ ಅವಳು ತುಂಬಾ ಚಂಚಲೆ, ಚಟಪಟ ಅಂತ ಮಾತನಾಡುವ ಎದುರುತ್ತರ ನೀಡುವ ಸೊಸೆ ….ಅತ್ತಿಯಂದಿರು ಹೇಳಿದ ಮಾತುಗಳನ್ನು ಕೇಳುತ್ತಿರಲಿಲ್ಲ… ಹೀಗಾಗಿ ಮದುವೆಯಾದ ಹೊಸತರಲ್ಲಿ ಪ್ರಯಾಗಬಾಯಿ ಸಣ್ಣ ಸೊಸೆಗೆ ಯಾವುದಾದರೂ ಸಣ್ಣ ಕೆಲಸ ಹೇಳಿದರು ಓರಗಿತ್ತಿಯು ಮಾಡುತ್ತಿರಲಿಲ್ಲ.ಅವಳು ರಾತ್ರಿ ಸಮಯ ಒಂಬತ್ತು ಗಂಟೆ ಆಗುತ್ತಿದ್ದಂತೆ ತನ್ನ ಗಂಡನ ಕೋಣೆಗೆ ಹೋಗಿಬಿಡುತ್ತಿದ್ದಳು . ಸಿರಿಮಂತ ಮನೆಯ ಸೊಸೆ ಅಲ್ಲವೇ ಬೆಳಗ್ಗಿನ ವಿಹಾರಕೆ ಅಂತ ಇಬ್ಬರೂ ಗಂಡ ಹೆಂಡದಿರು ಹೊರಟು ಹೋಗುತ್ತಿದ್ದರು.ಅತ್ತಿಯಂದಿರ ಹೇಳುವ ಕೆಲಸಗಳನ್ನು ಎಷ್ಟು ಕೇಳಬೇಕು ಅಷ್ಟೇ ಕೇಳುವಳು…ತಾನಾಯಿತು ತನ್ನ ಗಂಡನಾಯಿತು ಅಷ್ಟೇ ಅವಳ ಪ್ರಪಂಚವಾಗಿತ್ತು. ಜಯದೇವಿ ತಾಯಿಯವರಂತೆ ಸುಶೀಲ ಸದ್ಗುಣ ಸಾಧ್ವಿ ಸೊಸೆ ಆಗಿರಲಿಲ್ಲ ಹೀಗಾಗಿ ಸಹಜವಾಗಿ ಪ್ರಯಾಗಬಾಯಿಗೆ ಜಯದೇವಿ ತಾಯಿಯವರ ಮೇಲೆ ನಂಬಿಕೆ ಪ್ರೀತಿ ಮಮತೆ ಹುಟ್ಟಲಾರಂಭಿಸಿತು. ಅತ್ತೆಯಂದಿರ ನೆಚ್ಚಿನ ಸೊಸೆಯಾದರು . ಜಯದೇವಿ ತಾಯಿಯವರ ಗಂಡನ ತಮ್ಮನ ಮದುವೆಯಾದ ನಂತರ ತಾಯಿಯವರು ಎರಡನೆಯ ಹೆರಿಗೆ ಹೋದರು ಈ ಸಲ ಮೊದಲ ಹೇರಿಗೆ ಅಂತ ಉತ್ಸಾಹ ಸಂತಸ ಯಾವುದು ಇರಲಿಲ್ಲ ಯಾವ ಸಂಭ್ರಮ ಇರಲಿಲ್ಲ ಸಹಜವಾಗಿ ಹೊರಟು ನಿಂತರು. ಈ ಸಲದ ಹೇರಿಗೆಯು ಸುರಕ್ಷಿತವಾಗಿ ಸುಗಮವಾಗಿ ಸಾಗಿತು. ಅತ್ಯಂತ ಸುಂದರ ಹೆಣ್ಣು ಮಗುವಿಗೆ ಜನ್ಮವನ್ನು ಕೊಟ್ಟರು ಚಂದಿರನಂತೆ ಸುಂದರವಾಗಿದ್ದ ಮಗುವಿಗೆ ‘ಶಶಿಕಲಾ ‘ಎಂದು ನಾಮಕರಣ ಮಾಡಿ ಸಂತೈಸಿದರು .ಇಷ್ಟರಲ್ಲಿ ಬ್ರಿಟಿಷರ ಸೊತ್ತಾಗಿದ್ದ ಲಿಗಾಡೆ ಮನೆತನದ ಆಸ್ತಿಯನ್ನೆಲ್ಲ ಚೆನ್ನಮಲ್ಲಪ್ಪನವರಿಗೆ ಬ್ರಿಟಿಷರು ಆದರದಿಂದ ಒಪ್ಪಿಸಿದ್ದರು.ನಂತರ ಅವರು ಮೂರನೇ ಹೇರಿಗೆ ಹೋರಟರು ಹೀಗೆ ಮೇಲಿಂದ ಮೇಲೆ ತವರು ಮನೆಗೆ ಹೋಗುವುದು ಗಂಡನಿಗೆ ಬೇಸರ ತರುತ್ತಿದ್ದರು ಹೇರಿಗೆಯೂ ಮನೆಯಲ್ಲಿ ಆಗಲಿ ಅಂತ ಹೇಳುವ ಧೈರ್ಯ ಅವರಿಗೆ ಇರಲಿಲ್ಲ. ಅನಿವಾರ್ಯ ಹೋಗಲೇ ಬೇಕಾಲ್ಲ…ಮೂರನೆಯ ಹೇರಿಗೆ ಸುಂದರ ಗಂಡು ಮಗವನ್ನು ಹೆತ್ತರು. ಅವನಿಗೆ ‘ಶ್ರೀಕಂಠ ‘ಅಂತ ಹೆಸರಿಡಲಾಯಿತು. ಅತ್ಯಂತ ಅದ್ದೂರಿಯಾಗಿ ಸಂಭ್ರಮವನ್ನು ಆಚರಿಸಿದರು.ಗಂಡು ಮಗ ಅಂದರೆ ಕೇಳಬೇಕು ಆಗಿನ ಕಾಲದಲ್ಲಿ ಗಂಡು ಮಗ ಹುಟ್ಟಿದರೆ ಸ್ವರ್ಗದ ಬಾಗಿಲ ತೆರೆದಂತೆಆದರೆ ಜಯದೇವಿ ತಾಯಿಯವರು ಹೆಣ್ಣು ಗಂಡು ಎರಡನ್ನು ಸಮಾನತೆಯಲ್ಲಿ ನೋಡುವ ದೃಷ್ಟಿಕೋನವನ್ನು ಚಿಕ್ಕವರಿರುವಾಗಲೇ ಅವರು ಹೊಂದಿದವರಾಗಿದ್ದರು. ಅದಕ್ಕೆ ತಾಯಿಯವರು ಒಂದು ಕಡೆ ಬರೆಯುತ್ತಾರೆ ಹೆಣ್ಣು ಹುಟ್ಟೇದಂತ | ಕಣ್ಣೀರ ಕರಿಬ್ಯಾಡ ಸಣ್ಣಾಗಬ್ಯಾಡ ಮನದಾಗ -ತಾಯವ್ವಹೆಣ್ಣಿನ ಜಗದ ಕಣ್ಣೇನ || ಕಾನೂನು ಬದ್ಧವಾಗಿ ಹೆಣ್ಣು ಗಂಡು ಇಬ್ಬರೂ ಸಮಾನತೆ ಪಡೆಯುವಂತಹ ಕಾಲದಲ್ಲಿ ಜಯದೇವಿ ತಾಯಿಯವರು ಹುಟ್ಟಿದ್ದರೂ ಸಂಪ್ರದಾಯದಾಯಸ್ಥ ಕುಟುಂಬಕ್ಕೆ ಪುಷ್ಟಿ ಕೊಟ್ಟವರು.ಯಾವ ಕಾಲದಲ್ಲೂ ಹೆಣ್ಣು ಹುಟ್ಟಿ ಎರಡು ಮನೆಯಲ್ಲಿ ದೀಪ ಬೆಳಗುವಳಾಗಬೇಕು. ಕುಟುಂಬದ ಹೃದಯವಾಗಿ ನಿಲ್ಲಬೇಕು ನಿಜ . ಸೊಸೆಯಾಗಿ ಬಂದವಳು ಮೊದಲು ಸಹನೆ ಸೈಯ್ಯಮ ವಿನಯತೆ ಅವಳಿಗೆ ಆಭರಣ …ಹಿರಿಯರಿಗೆ ಆದರ ತೋರುತ್ತ ಕುಟುಂಬವ ನಿರ್ವಹಿಸುವುದೇ ಅವಳ ಧರ್ಮ. ಸಂಪ್ರದಾಯದ ಬಳುವಳಿಯನ್ನೇ ಬಳವಿಗೆ ಮಾಡಿದ್ದಾರೆ. ಕುಟುಂಬ ಜೀವನದ ಅನೇಕ ಏರಿಳಿತದ ಬಗ್ಗೆ ಹೇಳ್ತಾ ಹೋಗ್ತಾರೆ … ಗರತಿಯ ಬಗ್ಗೆ ಹೀಗೆ ಹೇಳ್ತಾರೆ “ದಯ ಬೇಕ ನುಡಿಯಲಿ |ಭಯ ಬೇಕ ನಡೆಯಲ್ಲಿ ದಯ ಬೇಕ ಸಕಲ ಜೀವನದಲ್ಲಿ -ತಾಯವ್ವಲಯ ಬೇಕು ಶಿವನ ನೆನಹುನಲಿ|| ಸೊಸೆಯಾದವಳು ಮೊದಲು ಮನೆ ಕೆಲಸ ಮಾಡಿ ಮನೆಯ ಮಂದಿಯ ಮನವನ್ನೇಲ್ಲ ಗೆಲ್ಲಬೇಕು ಗಂಡನ ಮನ ಗೆಲ್ಲಬೇಕು…. ವಿನಯಶೀಲರಾಗಿರಬೇಕು… ಎಲ್ಲರ ಬೇಕು ಬೇಡುಗಳನ್ನು ನೋಡುವಂಥವಳು ಆಗಿರಬೇಕು. ಮಾತಿಗೆ ಮಾತು ಬೆಳೆಸದಂಥವಳಿರಬಾರದು ಹೆಚ್ಚು ಅಗೆದರೆ ತಗ್ಗು ಬೀಳುವುದು ಹೆಚ್ಚು…. ಎಂಬಂತೆ ಮಾತಿನ ಗತಿ ಹೇಗಿರಬೇಕೆಂದರೆ ಮನಗಳನ್ನು ತಿಳಿಯಾಗಿಸಬೇಕು ಅನ್ನುತ್ತಿದ್ದರು ….ಮನೆಯ ಕಂಬವಾಗಿರಬೇಕು ಸೊಸೆ ಆದವಳು. ಸಿಟ್ಟಲಿ ಗಂಡ-ಅತ್ತೆಗ ಎದುರು ಉತ್ತರ ನುಡಿದರೆಮನೆಯವರ ಮನ ಸುಡು ಸುಡು ಸುಟ್ಟುಮರಳಿ ಸೊಸೆಯ ಕಡೆಗೆ ಚಟ್ಟಂತಹ ಸಿಡಿಯುವದಬಿರುಗಾಳಿ ಬೀಸಿದಂಗ ತೂರಿ ಬಂದ ಮಾತುಗಗನಕ್ಕಹಾರಿ ಒಯ್ದು ನೆಲಕ್ಕೆ ದೊಪ್ಪೆಂದ ಒಗೆವದ.. ಅಂತ ಹೇಳುವ ಮಾರ್ಮಿಕವಾದ ಉದಾರಣೆಯನ್ನು ಹೇಳುತ್ತಿದ್ದರು .ಹೆಣ್ಣಾದವಳು ನಗುನಗುತ ಮಾತಾಡಬೇಕುಹಗೆ ಎದುರಾದರೂ ಹೊಗೆ ನುಡಿ ಸಲ್ಲಕಾಣಲಾರದ ಕಣ್ಣು ಕಂಡ್ನಗ ಕಂಡಹಂಗ ಆಡಿ ಬಾಣಧಾಂಗ ಮಾತು ಮರಳಿ ಬಡೆಯದ ಮುನ್ನ ಜೋಕೆಯಿಂದಿದ್ದುತಾನು ಸುಟ್ಟುಕೊಂಡು ಇತರರ ಮನ ತಂಪಾಗಿರಬೇಕು….. ತುಪ್ಪ ಸಕ್ಕರೆ ಉಪ್ಪ-ಖಾರ ಉಣಿಸಿ ಒಪ್ಪುಳ್ಳ ಮಾತು ಕಲಿಸಿದರೆ ನಾಲಿಗೆ ಹಾಲಿನ ಹೆಪ್ಪುಗೆಡಿಸಿತ್ತು ಆಗಸಿರಿ ಇದ್ದು ಸುತರಿದ್ದು ಸುಖವಿಲ್ಲ ಹಿತವಿಲ್ಲದಿದ್ದರೆ ಫಲವೇನು….. ಎನ್ನುತ್ತಾರೆ ಕಡಿಮೆ ಎಂದರೆ ಮೂರು ತಲೆಮಾರಿನವರು ಜನರು ಕೂಡಿ ಇರುವ ಪದ್ಧತಿಯೇ ನಮ್ಮ ಸಂಸ್ಕೃತಿ ನಮ್ಮ ದೇಶದ ಪರಂಪರೆಯ ಬಳುವಳಿಯನ್ನು ನಾವು ಮೀರಬಾರದು ಅನ್ನುವುದು ಜಯದೇವಿ ತಾಯಿಯವರ ವಾದವಾಗಿತ್ತು. ಐದು ಜನ ಅತೇರ ಕೈಯಲ್ಲಿ ನಡೆದು ನಾಲ್ಕು ಜನ ಸೊಸೆಯೊಂದನ್ನು ನಡೆಸಿಕೊಂಡ ಗೊತ್ತು 23 ಮೊಮ್ಮಕ್ಕಳು ಮರಿ ಮೊಮ್ಮಕ್ಕಳನ್ನು ಕಂಡತುಂಬಾ ಜೀವನದ ಅನುಭವದ ವಿಚಾರ. ಹರೆಯದ ಹೆಣ್ಣು ನೂರಾರು ಆಸೆ ಹೊತ್ತು ಅತ್ತೆಯ ಮನೆಗೆ ಬಂದಾಗ ತನ್ನ ಸುಖಕ್ಕಿಂತ ಮನೆಯಲ್ಲಿಯೇ ಹಿತ ರಕ್ಷಿಸುವುದೇ ಮೇಲು ತನ್ನ ಮನ ನೊಂದರು ಉಳಿದವರ ಮನನೊಯದಂತೆ ನೋಡಿಕೊಳ್ಳಬೇಕು ಅನ್ನುತ್ತಿದ್ದ . ಅವಿಭಕ್ತ ಕುಟುಂಬದಲ್ಲಿ ಬೆಳೆದ ತಾಯಿಯವರು ಸ್ವಾಭಿಮಾನದಿಂದಲೇ ಈ ಮಾತುಗಳ ಹೇಳಿದ್ದಾರೆ ನಮ್ಮ ಸಂಸ್ಕೃತಿಯಿಂದ ದೂರ ಸರಿಯದೇ ವ್ಯಕ್ತಿ ವಿಕಸನವನ್ನು ಮಾಡಿಕೊಳ್ಳಬಹುದು….. ಬೆಳೆಯಬಹುದು ಅನ್ನುವುದು ತೋರಿಸಿಕೊಟ್ಟ ಸಾಕ್ಷಾತ್ ನಿದರ್ಶನ ಅವರ ಜೀವನ. ಹಾಗೆ ಹೆಣ್ಣಾಗಿ ಸತ್ಯಕ್ಕಾಗಿ ಹೋರಾಡಬೇಕು, ಕೆಟ್ಟದ್ದನ್ನು ಪ್ರತಿಭಟಿಸಬೇಕು ,ಗಂಡನಿಗೆ ಸರಿ ಸಮಾನವಾಗಿ ನಿಲ್ಲಬೇಕು ಜೀವನದಲ್ಲಿ ಸಾಧನೆ ಮುಖ್ಯ ಗುರಿ ಆಗಿರಬೇಕು ಜ್ಞಾನಧ ಎತ್ತರಕ್ಕೆ ಇರಬೇಕು ಅನ್ನೋ ಧೋರಣೆಯನ್ನು ಕೂಡ ಹೊಂದಿದ್ದರು. ಮೊದಲು ಹೆಣ್ಣಾದವಳು ಸೋತು ಸೋತು ಗೆಲ್ಲಬೇಕು ಅನ್ನುವ ತಮ್ಮ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ವೈಶಿಷ್ಟ ಪೂರ್ಣವಾದ ವ್ಯಕ್ತಿ ವಿಶೇಷತೆ ತೋರುತ್ತದೆ. ವ್ಯಾಪಾರದಲ್ಲಿ ನೈಪುಣ್ಯತೆ ಹೊಂದಿರುವ ತಂದೆ ಚನ್ನಬಸಪ್ಪನವರ ಜೊತೆ ಕೂಡಿ ವ್ಯಾಪಾರವನ್ನು ಮಾಡುತ್ತಿದ್ದರು…ಗಂಡ ಚೆನ್ನಮಲ್ಲಪ್ಪನವರು. ಹಾಗೆ ಜಯದೇವಿ ತಾಯಿಯವರ ಅಕ್ಕ ತಂಗಿಯರು ಅಣ್ಣ ತಮ್ಮಂದಿರನ್ನು ಆದರದಿಂದ ನೋಡಿಕೊಳ್ಳುತ್ತಿದ್ದರು.ಜಯದೇವಿ ತಾಯಿಯವರ ತಂಗಿಯಂದಿರು ಮಕ್ಕಳ ವಯಸ್ಸಿನವರಷ್ಟೇ ಇದ್ದರು .ಆಗಿನ ಕಾಲದಲ್ಲಿ ತಾಯಿ ಮಗಳ ಹೆರಿಗೆ ಜೊತೆ ಜೊತೆಗೆ ಆಗುವುದು ಸಹಜವಾಗಿತ್ತು…..ಹೀಗಾಗಿ ಜಯದೇವಿ ತಾಯಿಯವರ ತಂಗಿಯಂದಿರು ಹಾಗೂ ಮಕ್ಕಳು ಎಲ್ಲರೂ ಸೇರಿ ಶಾಲೆಗೆ ಹೋಗುತ್ತಿದ್ದರು. ಈ ಸಮಯದಲ್ಲಿ ತಾಯಿಯವರಿಗೆ ವಚನವನ್ನು ಓದುವ ಮಹದಾಸೆ ಹೆಚ್ಚಾಗಿ ತೊಡಗಿತ್ತು.ಶರಣರ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದರು. ಆಳವಾದ ಅಮೂಲ್ಯವಾದ ವಚನ ಸಾಹಿತ್ಯವನ್ನು ಅಭ್ಯೆಸಿಸಬೇಕು ತನ್ನಲ್ಲಿ …ಹುಟ್ಟುವ ಭಾವನೆಗಳನ್ನು ತಾಯಿ ಭಾಷೆಯಲ್ಲಿ ವ್ಯಕ್ತಪಡಿಸಬೇಕು ಅನ್ನುವ ತಳಮಳ ಅವರಲ್ಲಿ ಉಲ್ಬಣಗೊಳ್ಳಲಾರಂಭಿಸಿತು ….ಕನ್ನಡ

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಕಂತು-ಆರು ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಸವಿತಾ ದೇಶಮುಖ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ “ಮಾತಾಡೋ ಮಾತಾಡೋ ಆತುಮದ ಲಿಂಗವೇ!! ಮುನಿಸುವುದೇತಕ್ಕೆ ಅನಿಮಿತ್ಯವಾಗಿ ನೀಎನ್ನಯ್ಯ ಮಾತಾಡು, ಚನ್ನೀಗ ಚರಲಿಂಗವೆ!! ನಂಬಿದೆ ನಂಬಿರುವೆ ಸಾಂಬ ನಿನ್ನಯ ಪಾದಕಂಬನಿ ಸುರಿಯುವವೊ ಶಂಭೋ ನೀ ಮಾತನಾಡೊ ಅಂಗೈಯದೊಳು ಬಂದು ಲಿಂಗರೂಪವ ತಾಳಿ  ಕಂಗೊಳಿಸುವ ಶಿವನೆ ಮಂಗಳಮಯ ಲಿಂಗವೇ!! (“ತಾರಕ ತಂಬೂರಿ” ಕವನ ಸಂಕಲನ) ನಂಬಿರುವೆ ನಿನ್ನನ್ನೇ ಅಂತ ಅಂಗೈಯಲ್ಲಿ ಲಿಂಗವನ್ನು ಹಿಡಿದ……  ಎಳೆ ವಯಸ್ಸಿನ ಜಯದೇವಿ ತಾಯಿಯವರು ಸಂಸಾರದ ಕಷ್ಟಗಳ ಹೊರೆಹೊರಲಾಗದೆ  ನೊಂದು ಆ ಲಿಂಗನನ್ನೆ ಬೇಡಿಕೊಳ್ಳುತ್ತಿದ್ದರು……. ನೋವಿನ ನೆರಳಲ್ಲಿ ದಿನಗಳನ್ನು ಎಣಿಸುತ್ತಿದ್ದ ಸೊಸೆಗೆ, ಅತ್ತೆಯ ಕಠೋರ ಮಾತುಗಳು ಮತ್ತು ದೌರ್ಜನ್ಯದ ನಡೆ ಬಲು ಹಿಂಸಿಸುತಿತ್ತು. ಪ್ರತಿದಿನವೂ ಅವರ ಮನಸ್ಸಿನಲ್ಲಿ ಬದುಕಿನ ಹೋರಾಟ—ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ.ಕಣ್ಣೀರನ್ನು ಒಳಗೇ ಹತ್ತಿಕ್ಕಿ, ಮನೆಯ ಗೋಡೆಗಳ ನಡುವೆ ತನ್ನ ನೋವನ್ನು ಹೂತು ಬದುಕುತ್ತಿದ್ದ ಜಯದೇವಿ ತಾಯಿಯವರು ಬಸವಣ್ಣನ ವಚನವನ್ನು ಯಾವಾಗಲೂ ಹೇಳುತ್ತಿದ್ದರಂತೆ, ತಂದೆ ನೀನು ತಾಯಿ ನೀನು ಬಂದು ನೀನು ಬಳಗ ನೀನು”, …….. ನನ್ನ ಸುಖ ದುಃಖವು ನಿನ್ನದೇ…. ಅನ್ನುವ ಅರ್ಪಣೆಯ ಭಾವ ಬೆರುರಲಾರಂಭಿಸಿತ್ತು. ಲಿಗಾಡೆಯವರ ಮನೆ ಜಯನಿಕೀತನ ತಾಯಿ ಸಂಗಪ್ಪನವರು ಹೇಳುವಂತೆ “ಸಹನೆಯಿಂದ ಇರು ಸಿದ್ದರಾಮ ಕಾಯುತ್ತಾನೆ ಅಂತ ಹೇಳುವ ಮಾತು ನೆನಪಿಟ್ಟುಕೊಂಡು ಜೀವನದ ದೋಣಿ ಸಾಗಿಸುತಿದಂತೆ…..sss  ಜೀವನದಲ್ಲಿ ಸಂತಸದ ಅಲೆಗಳು ಅಪ್ಪಳಿಸಿದವು….ನೋವಿನ ಮೌನದ ಮಧ್ಯೆ ಒಂದು ದಿನ, ಅವರೊಳಗೆ ನಿಶ್ಶಬ್ದವಾಗಿ ಹೊಳೆಯುವ ಬೆಳಕು ಹುಟ್ಟಿತು…ತಾನು ಬಸೂರಿಯಾದ ಸುದ್ದಿ  ಹೃದಯಕ್ಕೆ ತಂಪು‌ ನೀಡಿತು…..!!!! ನೋವಿನ ಭಾರ ಕ್ಷಣ ಕಾಲದಲ್ಲಿ ಮಾಯವಾಗಿ ಹೋಯಿತೆನೊ ಅನ್ನಿಸಿತ್ತು.ಅವರಿಗೆ ಮೊದಲ ಬಾರಿಗೆ ತನ್ನದೇ ಆದ ಒಂದು ಆಂಶವು ಲೋಕಕ್ಕೆ ಬರುವದು… ತನಗಾಗಿಇನ್ನೊಂದು ಲೋಕವಿದೆ ಎನ್ನುವ ಭರವಸೆ ನೀಡತು, ಅವರು ಹೊಟ್ಟೆಗೆ ಕೈಯಿಟ್ಟು ಮೃದುವಾಗಿ ನಗುತ್ತಿದ್ದರು. ಆ ನಗು ಯಾರಿಗೂ ಕಾಣದಿದ್ದರೂ,  ಅದು ಉತ್ಸವದ ಕ್ಷಣಗಳಾಗಿದ್ದವು.ಮಗುವಿನ ಸಣ್ಣ ಚಲನೆ-ಒಲನೆಯು….., ಅವರಿಗೆ ಮಾತಾಡುವ ಧೈರ್ಯ ಕಲಿಸಿತು— ಪ್ರತಿಯೊಂದು ಉಸಿರಾಟವೂ ಹೊಸ ಅರ್ಥ ಪಡೆದಿತು; ಪ್ರತಿಯೊಂದು ಕ್ಷಣವು ನಿರೀಕ್ಷೆಯ ಬೆಳಕಾಗಿ ಮೂಡಿತು.ನೋವಿನ ನಡುವೆ ಹುಟ್ಟಿದ ಆ ಆನಂದ ಕ್ಷಣಗಳು, ಅವರ ಬದುಕಿಗೆ ಅರ್ಥ ನೀಡಿದವು.ದೌರ್ಜನ್ಯದಿಂದ ಕಲುಷಿತವಾದ ಮನಸ್ಸಿನಲ್ಲಿ, ತಾಯ್ತನದ ಸ್ಪರ್ಶವು  ಔಷಧಿಯಂತೆ ಕೆಲಸಮಾಡಿತು. ಆ ಮಗು ಅವರಿಗೆ ಶಕ್ತಿಯಾಯಿತು, ಭರವಸೆಯಾಯಿತು…!!! ಇನ್ನೇನು…. ನಿನ್ನೆವರೆಗೆ ಕಣ್ಣಲ್ಲಿ ಕಿಡಿ ತುಂಬಿಕೊಂಡು ಮಾತಾಡುತ್ತಿದ್ದ… .. “ನಿನಗೆ ಮಕ್ಕಳಾಗ ಯಾವ ಲಕ್ಷಣಗಳು ಕಾಣುವುದಿಲ್ಲ ನಾನು ಬೇರೆ ಮದುವೆ ಮಾಡ್ತೀನಿ ನನ್ನ ಮಗನಿಗೆ” ಅಂತ ಹೆದರಿಸುತ್ತಿದ್ದ …ಅತ್ತೆಯ ಹೃದಯದಲ್ಲಿ, ಒಮ್ಮಿಂದೊಮ್ಮೆಲೆ ಅನಿರೀಕ್ಷಿತವಾಗಿ ಸೊಸೆಯ ಬಸುರಿತನದ ಸಂತಸವು ಮೃದುತ್ವ ಮೂಡಿಸಿತು.  ಸೊಸೆಯೊಳಗೆ ಜೀವ ಮೂಡಿದೆ ಎಂಬ ಸತ್ಯ ತಿಳಿದ ಕ್ಷಣ, ಆಕೆಯ ಕಠೋರತೆ  ಕ್ಷಣಾರ್ಧದಲ್ಲಿ ಕರಗಿ ಹೋಗಿತ್ತು.ಕಾಡುತ್ತಿದ್ದ ಅಸಮಾಧಾನ ಮನಸ್ಸು, ತಾನೇ ಅರಿಯದಂತೆ ಮಗು ಬರುವ‌ ನೆನಪುಗಳಲಿ ತೆಲಾಡಲಾರಂಭಿಸಿತು.ಸೊಸೆಯ ಹೊಟ್ಟೆಯ ಮೇಲೆ  ಕೈ ಇಟ್ಟು ಇಟ್ಟು ನೋಡುವರಂತೆ ಅತ್ತೆ“ಇವಳೊಳಗೆ ನನ್ನ ಮನೆಯ ಭವಿಷ್ಯ ಉಸಿರಾಡುತ್ತಿದೆ” ಎಂಬ ಭಾವನೆಯು ಎದೆಗಿಳಿದು ಪ್ರೀತಿ ಉಕ್ಕಿ ಹರಿಯುತ್ತಿರೆ……ಬಿರುಸಾದ ಮಾತುಗಳ ಮೃದು ಎಚ್ಚರಿಕೆಯ ಮಾತು ಗಳಾದವು……!!!ಅತ್ತೆಗೆ..ಸೊಸೆಗೆ ಕಣ್ಣು ತಪ್ಪಿಸಿ ನೋಡಿದರೂ, ಆ ನೋಟದಲ್ಲಿ  ಕಾಳಜಿ ಇತ್ತು. ಬಸೂರಿಯಾಗಿರುವ ಸೊಸೆಯಲ್ಲಿ  ತಾನು ಹಗಲಿರಳು ಕಾಣಿಸುತ್ತಿರುವ ಕನಸಿನ ಪ್ರತಿಬಿಂಬ ಕಂಡಂತೆ ಆಯಿತು.ತಾನೇ ತಾಯಿ ಆದಷ್ಟು ಸಂತಸ ತಂದಿತ್ತು. ಕಠೋರತೆಯ ಹಿಂದೆ ಹೂತುಹೋದ ತಾಯಿಯ ಹೃದಯ, ಆ ಕ್ಷಣಗಳಲ್ಲಿ ನಿಧಾನವಾಗಿ ಹೊರಸುಸಲಾರಂಭಿಸಿತು.ನಿನ್ನೆವರೆಗೆ ನೋವಿನ ಮೂಲವಾಗಿದ್ದ ಅತ್ತೆಯೇ, ಆ ದಿನದಿಂದ ಸೊಸೆಗೆ  ಧೈರ್ಯವಾಗಿ ನಿಂತಳು. ಬಸೂರಿಯಾದ ಆ ಸತ್ಯ, ಇಬ್ಬರ ನಡುವಿನ ಗೋಡೆಯನ್ನು ಕರಗಿಸಿ, ಪ್ರೀತಿಗೆ ದಾರಿ ಮಾಡಿಕೊಟ್ಟಿತು…..!!!! ಜಯದೇವಿ ತಾಯಿಯವರು ವಾಸವಾದ ಕೋಣೆ  ಮಕ್ಕಳಿಗಾಗಿ ಪ್ರಯಾಗಬಾಯಿಯು ಕಂಡ ಕಂಡ ದೇವರಿಗೆ ಹರಕೆಯನ್ನು ಹೊತ್ತು ನೂರಾರು ದೇವರಗಳನ್ನು ಜಗಲಿಯ ಮೇಲೆ ಇಟ್ಟು ಪೂಜೆ ಮಾಡುತ್ತಿದ್ದರು. ತಿಳಿದು ತಿಳಿಯದೇ ಅನೇಕ ತರದ ಪೂಜೆಗಳಲ್ಲಿ ನಿರತರಾಗುತ್ತಿದ್ದರು. ಇಂದು ಅವರ ಕನಸು ನನಸಾಗಲಿರುವದೆಂದು ಅವರ ಸಂತಸಕ್ಕೆ ಮೇರೆ ಇರಲಿಲ್ಲ.ತಾಯಿ ಸಂಗವ್ವನವರು ಸಂತಸದಿಂದ ಮಗಳ ಬಯಕೆಯ ತರಹದ ಅಡಿಗೆ ಮಾಡಿ ಉಣಿಸಲಾರಂಭಿಸಿದರು. ಸರ್ವಸಾಮಾನ್ಯವಾಗಿ ಮಹಾರಾಷ್ಟ್ರದಲ್ಲಿ (ಚೊರ್ ಚೋಳಿ) ಕಳ್ಳ ಕುಬಸ ಮಾಡಿ….. ಮುಂದೆ ದೊಡ್ಡ ಕುಬಸದ ಕಾರ್ಯವನ್ನು ಮಾಡುವಂತೆ ಐದನೇ ತಿಂಗಳಿಗೆ ಸಿಮಂತದ ದೊಡ್ಡ ಕಾರ್ಯಕ್ರಮವನ್ನು ಮಾಡಿ ಎಲ್ಲ ಅತ್ತೆಯಂದಿರಿಗೆ ಭರ್ಜರಿಯಾದ ಪಿತಾಂಬರಾದ ಸೀರೆಯನ್ನು ಉಡಿಸಿ ಅವರನ್ನೆಲ್ಲ ಆನಂದ ಪಡಿಸಿದರು. ಮೊದಲ ಸಲ ಗರ್ಭಿಣಿ ಆದವರಿಗೆ ಅನೇಕ ತರದ ಸೀಮಂತದ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತದೆ. ಬೆಳದಿಂಗಳ ಕುಬಸು ,ಸೂರ್ಯೋದಯ ಕುಬಸು (ಜೋಪಾಳ) ಉಯ್ಯಾಲೆ ಕುಬಸ ,ನಾವೆಯ ಕುಬಸ, ಸಮುದ್ರ ತೀರದ ಕುಬುಸ , ಒಳಕುಬಸ ಹೊರ ಕುಬಸ,ದೇವರೆದುರಿನ ಕುಬಸ, ಸಣ್ಣ ಕುಬಸ ,ದೊಡ್ಡ ಕುಬಸ…. ಹೀಗೆ ಅನೇಕ ತರದ ಕುಬಸುಗಳನ್ನು ಮಾಡಲಾಗುವದು ಅವುಗಳನ್ನೆಲ್ಲವನ್ನು ಆಚರಿಸಲಾಯಿತು. ಇಲ್ಲಿ ಬೆಳದಿಂಗಳ ಕುಬಸ ಅಂದರೆ ಚಂದ್ರನ ದಿವ್ಯ ಬೆಳಕಿನಲ್ಲಿ ಆ ಬೆಳಕಿನ ಬಣ್ಣದ ಸೀರೆಯನ್ನು ಉಡಿಸಿ ಹೂವು ಮೂಡಿಸಿ ಆ ಬಿಳಿ  ಬಣ್ಣದ ಸಿಹಿ ಊಟವನ್ನು ತಯಾರಾಸಿ ಉಣಬಡಿಸುವರು. ಇನ್ನು ಸೂರ್ಯೋದಯದ ಕುಬುಸ ಅಂದರೆ ಸೂರ್ಯನ ಬಣ್ಣದ ಸೀರೆ ಉಡಿಸಿ ಅದೇ ಬಣ್ಣದ ಹೂಗಳನ್ನು ಮೂಡಿಸಿ ಸೂರ್ಯನ ಕಿರಣಗಳ ಮಧ್ಯ ಕೂಡಿಸಿ,ಹೊಂಬಣ್ಣದ   ಮೃಷ್ಟಾನ್ನ ಅಡುಗೆ ಮಾಡಿ ಉಣ ಬಡಿಸುವರು. “ಉಯ್ಯಾಲೆಯ ಕುಬುಸು”ಅಂದರೆ ಉಯ್ಯಾಲೆಗೆ ಹೂವುಗಳಿಂದ  ಅಲಂಕರಿಸಿ ಬಣ್ಣ ಬಣ್ಣದ ಬಟ್ಟೆ ವಸ್ತ್ರಗಳನ್ನು ಉಡುಗೆ ತೊಡಿಸಿ ತರ ತರಹದ ಅಡುಗೆ ಉಣಬಡಿಸುವರು .ಇನ್ನು “ನಾವೆಯ ಕುಬಸು”ಎಂದರೆ ದೋಣಿಯಲಿ ಕುಡಿಸಿ ನೇರವೆರಿಸುವರು. ಶಿವಯೋಗಿ ಸಿದ್ದರಾಮೇಶ್ವರರು ಕಟ್ಟಿದ ಕೆರೆಯಲ್ಲಿ ದೋಣಿಗಳಲಿ ಕುಬುಸ ಹೂಡಲಾಯಿತು.ಶಿವಯೋಗಿ ಸಿದ್ದರಾಮೇಶ್ವರನ ದರ್ಶನಕ್ಕೆ ಬಂದ ಯಾತ್ರಿಕರು ಧೋಣಿಗಳಲ್ಲಿ‌ ವಿಹರಿಸ ಬಹುದಾಗಿದೆ. ಈಗಲೂ ಭಕ್ತಾದಿಗಳು ದೋಣಿಯಲ್ಲಿ ಕುಳಿತು ಆನಂದಿಸುವ ವ್ಯವಸ್ಥೆ ಇದೆ.ಜಯದೇವಿ ತಾಯಿಯವರಿಗಾಗಿಯೇ ಒಂದು ದೊಡ್ಡ ದೋಣಿಯನ್ನು ಅಲಂಕರಿಸಿ ಕೆರೆಯ ಮಧ್ಯದಲ್ಲಿ ಸಿಮಂತದ ಆಚರಣೆ  ಮಾಡಲಾಯಿತು.ದೇವರೆದುರಿನ ಕುಬಸು ಅಂದರೆ ವಿಶೇಷವಾಗಿ ಸಿದ್ದರಾಮನ ಗರ್ಭಗುಡಿಯ ಎದುರು ಕೂಡಿಸಿ ಅವನೆದುರಿಗೆ ಕುಬಸನ್ನು ಮಾಡಿ ಆನಂದಿಸಿದರು. ಅಲ್ಲಿ ಹತ್ತಿರದಲ್ಲಿರುವ ರೇವಣಸಿದ್ದೇಶ್ವರ ದೇವಾಲಯದಲ್ಲಿ ಕುಬಸಿನ ಕಾರ್ಯ ಹಮ್ಮಿಕೊಳ್ಳಲಾಗಿತ್ತು.ಅನೇಕಾಅನೇಕ ತರದ ಕುಬುಸಗಳನ್ನು ಮಾಡಿ ಕಣ್ಮನ ತುಂಬಿಕೊಂಡರು ಅತ್ತೆಯ ಮನೆಯವರು ಹಾಗೂ ತವರಿನವರು.ಇನ್ನೂ ಬಂಧು-ಬಳಗದವರು ಅಂದರೆ ದಿನಕ್ಕೆ ಮೂರು ನಾಲ್ಕು ಮನೆಯವರಿಂದ ಆಮಂತ್ರಣ ಬರುವುದು ಅಲ್ಲಿ ಎಲ್ಲಾ ಕಡೆಗೂ ಹೋಗಿ ಅವರ ಆದರ ಆಥಿತ್ಯವನ್ನು ಸ್ವೀಕರಿಸಿ ಊಟ ಮಾಡಲೇ ಬೇಕಿತ್ತು. ಆದರೆ ಜಯದೇವಿ ತಾಯಿಯವರು ಅತ್ಯಂತ ನಾಜಕಿನ ಆರೋಗ್ಯದ ಸ್ಥಿತಿ ಇದ್ದಿದ್ದ ಕಾರಣ ಹೆಚ್ಚು ಉಣ್ಣಲಾಗುತ್ತಿರಲಿಲ್ಲ.ಆದರೂ ಬಳಗದವರ ಪ್ರೀತಿಯ  ಒತ್ತಾಯಕ್ಕೆ ಮಣಿದು ಸ್ವಲ್ಪ ಹೆಚ್ಚಿಗೆ ಊಟ ಮಾಡಬೇಕಾಗುತ್ತಿತ್ತು.   ಹೀಗಾಗಿ ಬಹಳಷ್ಟು ಸೋತು ಸೋತು ಬರುತ್ತಿದ್ದರು. ಅಂತ ತಾಯಿಯವರು ಹೇಳುತ್ತಿದ್ದರು. ಅದು  ಮುಂದೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು ಅಂತ ಹೇಳುತ್ತಿದರು.“ಯಾರ ಒತ್ತಾಯಕ್ಕು ನಾವು ಊಟವನ್ನು ಹೆಚ್ಚಿಗೆ ಮಾಡಬಾರದು ನಮ್ಮ ದೇಹಕ್ಕೆ ಎಷ್ಟು ಬೇಕು ಅಷ್ಟನ್ನೇ ನಾವು ಸ್ವೀಕರಿಸಬೇಕು” ಮುಂದೆ ದೀರ್ಘಕಾಲದ ದುಷ್ಪರಿಣಾಮಗಳು ಶರೀರದ ಮೇಲೆ ಆಗುವ ಅನ್ನುತ್ತಿದ್ದರು. ಜಯದೇವಿ ತಾಯಿಯವರು ಪತಿ ಚೆನ್ನಮಲ್ಲಪ್ಪ ಲಿಗಾಡೆಯವ ಜೊತೆ ಅದೊಂದು ದಿನ ಮಗು ಭೂಮಿಗೆ ಬರುವ ಸಮಯವು ಬಂತ್ತು .ಅತ್ಯಂತ ಸುಂದರವಾದ ಮಲ್ಲಿಕಾರ್ಜುನನ್ನೇ ಹೊಲುವ ಮಗನನ್ನು ಜನ್ಮ ಕೊಟ್ಟರು. ಸೋನ್ನಲಿಗಿಯ ಸಿದ್ದರಾಮೇಶ್ವರರು ಆರಾಧಿಸುವ ದೈವ ಸಾಕ್ಷಾತ್ ಮಲ್ಲಿಕಾರ್ಜುನನೇ ಹುಟ್ಟಿ ಬಂದನು ಎನ್ನುವ ಸಂತಸದಲ್ಲಿ ಆ ಮಗುವಿಗೆ ಮಲ್ಲಿಕಾರ್ಜುನ ಅಂತನೇ ಹೆಸರಿಸಲಾಯಿತು‌ಅತ್ತೆಯಂದಿರಗೆ ಎಲ್ಲಿಇಲ್ಲದ ಸಂತಸ … ಅದೆಷ್ಟೋ ದಿನಗಳಿಂದ ಮಕ್ಕಳಿಗಾಗಿ ಪರಿತಪಿಸುತ್ತಿರುವ ಲಿಗಾಡೆಯ ಮನೆತನದಲ್ಲಿ ಗಂಡು ಮಗ ಜನಿಸಿತು ಹೇಳತೀರದ ಆನಂದ ತುಂಬಿತುಳುತ್ತಿತ್ತು . ಆದರೆ ವಿಧಿಯ ಆಟವೇ ಬೇರೆಯಾಗಿತ್ತು…ಮಗು ಹುಟ್ಟಿದ ಸಲ್ಪ ದಿನದಲ್ಲಿ ತೀರಿಕೊಂಡಿತ್ತು. ಅದೇ ತಾನೇ ಸಂತಸ ಗೊಂಡಿರುವ ಎರಡು ಮನೆಗಳಲ್ಲಿ ಕತ್ತಲೆ ಆವರಿಸಿ ದಂತಾಗಿತ್ತು ……  ಅತಿವ ನೋವುಉಂಟು ಮಾಡಿತು-ಬರಿದಾದ ಮಡಿಲು…… ಖಾಲಿತನವಷ್ಟೇ ಉಳದಿತ್ತು.ಸುಂದರವಾದ ಗಂಡು ಮಗುವಿನ ಉಸಿರಿನ ತಾಪ ಇನ್ನೂ ತಾಯಿಯ ಎದೆಯಲ್ಲೇ ಉಳಿದಿತ್ತು. ಮುದ್ದು ಮಗುವಿನ ಅಳು…..ನಿದ್ರೆಯಲ್ಲೂ ನಗುವ-ನಗೆ….ಇಗ ಆ ನಗು-ಅಳು ಮೌನವಾಗಿವೆ. ಹಾಸಿಗೆಯ ಮೇಲೆ ಮಡಚಿಟ್ಟ ಚಿಕ್ಕ ಚಿಕ್ಕ ಬಟ್ಟೆಗಳ ನೋಡಿ ತಾಯಿಯ ಕಣ್ಣಿರು ಮಳೆಯಾಗಿ ಹರಿದವು. ಅಳು ಕೇಳಿಸದೇ ಹೃದಯವೇ ಕಿತ್ತು ತಿನ್ನುತ್ತಿತ್ತು……ಒಮ್ಮೆ ಅವನನ್ನು ಹೊತ್ತ ಕೈಗಳು ಇದೀಗ ಖಾಲಿಯಾಗಿ ಗಾಳಿಯನ್ನು ಅಪ್ಪಿಕೊಳ್ಳುತ್ತಿವೆ……ಹಾಲು ತುಂಬಿದ ಎದೆ ಮಗುವಿಲ್ಲದ ನೋವಿನಿಂದ ಕಲ್ಲಾಗಿತ್ತು……. ಮನ ಕಲ್ಲಾಗಿತ್ತು….ssssss ಮುಂದೆ ತಾಯಿಯವರು ಇದನ್ನು ಬಹಳ ಅತ್ಯಂತ ಸುಂದರವಾಗಿ ವರ್ಣಿಸುತ್ತಾರೆ…… ಅಳುತ್ತಿದ್ಯಾ ಕಂದಾ ಅಳುವೆಯಾ? ನಿನ್ನ ಹಿಂದಣ ಜನುಮದ ಕೊಳೆ ತೊಳೆಯಲೆಂದು !!ಪಲ್ಲವಿ!! ತಾಯಿಯ ಗರ್ಭದಲ್ಲಿ ಕೈಕಾಲುಗಳ  ಕಟ್ಟಿಬಾವಿಯೊಳು ಈಸಲು ಇಳಿಸಿದರೆಂದು!! ಮುಸುಕಿನೊಳಗೆ ಕಟ್ಟಿ ಬಿಸಿ ಎಡಬಲದಲ್ಲಿ ಉಸಿರಿಸಲು ನಿನಗೆ  ಬರಲಿಲ್ಲವೆಂದು !! ಬರಿ ಕಾಯದಿಂದಲಿ ಧರೆಮೇಲೆ ಬೀಳುತಮುಟ್ಟು ಹೇಸಿಕೆಯಲಿ ಹೊರಳಾಡಿದೆನೆಂದು!!ಹಿಂದಣ ಜನುಮದ ತಾಯಿ ತಂದೆಗಳಿಲ್ಲಬಂದು ಬಳಗ ಎನಗೆ ಇಂದಿಲ್ಲವೆಂದು !! ಮೊಲೆ ಹಾಲು ಉಣಿಸುತ ಬಲು ಪ್ರೀತಿಯಲಿತಾಯಿ ಜಾಲದೊಳಗೆ ನಿನಗೆ ಕೊಳ್ಳುವಳೆಂದು!! ಹಿಂದಣ ಸುಖ ದುಃಖ ಇಂದು-ನೆನ್ನೆ ನೆನೆದುಬಿಕ್ಕಿಬಿಕ್ಕಿ ಅಳುವಿ ಏನು ತಿಳಿಯದೆಂದು!! ಹಿಂದಣದ ಪರಿ ಮತ್ತೆ ಮುಂದೆ ಬರುವುದೆಂದು  ಬಂಧನ ಇದು ಈಗ ಬೇಸರಗೊಂಡು !! ಒಂಟಿಗನಾಗಿ ಬಂದು ಹೊಂಟು ಹೋಗುವದೇ  ನೆಂಟರು ಎನಗಿಲ್ಲ ಯಾರಿಲ್ಲವೆಂದು,ಹೋದೆಯಾ!!ಅಳುತ್ತಿದ್ಯಾ ಕಂದಾ ಅಳುವೆಯಾ?  ನಿನ್ನ ಹಿಂದಣ ಜನುಮದ ಕೊಳೆ ತೊಳೆಯಲೆಂದು !!ಪಲ್ಲವಿ (ತಾರಕ ತಂಬೂರಿ-ಕವನ ಸಂಕಲನ)ಈ ಕವನದಿ ಅಡಕವಾದ ಸಾರಾಂಶ ಅತ್ಯಂತ ಗಂಭೀರವಾದ-ತಾತ್ವಿಕ ಹಾಗೂ ಕರುಣಾಜನಕವಾದ ಭಾವವನ್ನು ಹೊತ್ತುಕೊಂಡಿದೆ.ಈ ಕವನವು ಮಗು ಅಳುವಿಕೆಗೆ ಕಾರಣವಾಗಿರುವ ಅಜ್ಞಾತ -ನೋವಿನ ಹಿಂದೆ ಇರುವ ಹಿಂದಿನ ಜನ್ಮದ ಪಾಪ–ಪುಣ್ಯ, ಸುಖ–ದುಃಖ ಮತ್ತು ಜೀವನದ ಅನಿವಾರ್ಯ ಬಂಧನಗಳನ್ನು ಪ್ರಶ್ನಿಸುವ ತಾಯಿಯ ಅಂತರಾಳದ ಮಾತುಗಳಾಗಿ ರೂಪಗೊಂಡಿವೆ.ತಾಯಿ ಮಗುವಿನ ಅಳುವನ್ನು ಕೇವಲ ಹಸಿವು ಅಥವಾ ಅಸೌಖ್ಯವೆಂದು ನೋಡದೆ, “ನಿನ್ನ ಹಿಂದಿನ ಜನ್ಮದ ನೋವುಗಳು ಈಗ ಅಳುವಾಗಿ ಹೊರಹೊಮ್ಮುತ್ತಿವೆಯೇ?” ಎಂದು ಭಾವಿಸುತ್ತ ಗರ್ಭದಲ್ಲೇ ಅನುಭವಿಸುವ ಬಂಧನ,ಜನನದ ವೇಳೆ ಉಸಿರಾಟದ ಸಂಕಟ,ಬಟ್ಟೆಯಿಲ್ಲದ ದೇಹದೊಂದಿಗೆ ಈ ಲೋಕಕ್ಕೆ ಬೀಳುವ ಅಸಹಾಯಕತೆ,ಹೋದ ಜನುಮದಲ್ಲಿ ಇದ್ದ ತಾಯಿ–ತಂದೆ ಬಂಧು–ಬಳಗವಿಲ್ಲದ ಏಕಾಂತತೆ.. ಹಿಂದಣ ಜನುಮದ ಜೀವನ,ಮೊಲೆಹಾಲು, ತಾಯಿಯ ಪ್ರೀತಿ ಸಿಗುವುದೇ ಎಂಬ ಅನಿಶ್ಚಿತತೆ….. ಇವೆಲ್ಲವನ್ನು ಹಿಂದಿನ ಜನ್ಮದ ಕರ್ಮಫಲಗಳ ಪರಿಣಾಮವಾಗಿ “ಮನುಷ್ಯ ಒಂಟಿಯಾಗಿ ಬಂದು,ಒಂಟಿಯಾಗಿಯೇ ಹೋಗುವವನು”—ಎಂಬ ಜೀವನದ ಸತ್ಯವನ್ನು ತಿಳಿಸಲಾಗಿದೆ. ಬಂಧುಗಳು, ಸಂಬಂಧಗಳು ಎಲ್ಲವೂ ಕ್ಷಣಿಕವೆಂಬ ತತ್ವವನ್ನೂ ಈ ಕವನ ಒತ್ತಿಹೇಳುತ್ತದೆ. ಅಂತಿಮವಾಗಿ ಮಾನವ ಜೀವನವು ಕರ್ಮಬಂಧನದಿಂದ ನಿಯಂತ್ರಿತ, ನೋವು ಸಹಜ, ಅಳುವು ಅಜ್ಞಾನದಿಂದ ಹೊರಡುವ ಪ್ರತಿಕ್ರಿಯೆ ಎಂಬ ತಾತ್ವಿಕ ಸಂದೇಶವನ್ನು ಸಾರುತ್ತದೆ. ಒಟ್ಟಿನಲ್ಲಿ ಮಗುವಿನ ಅಳುವಿನ ಮೂಲಕ ಮಾನವ ಜನ್ಮದ ನೋವು, ಕರ್ಮಸಿದ್ಧಾಂತ ಮತ್ತು ಬದುಕಿನ ಏಕಾಂತ ಸತ್ಯವನ್ನು ಪ್ರಶ್ನಿಸುವ ತಾತ್ವಿಕತೆ ಭರಿತವಾದ ಆಧ್ಯಾತ್ಮಿಕ ಮೆರಗು ಈ ಕವನಕ್ಕಿದೆ. ಹೀಗೆ ಗಾಢವಾದ ನೋವನ್ನು ಹೊತ್ತ ತಾಯಿ, ಕೈಯಲ್ಲಿ ಆಡುವ ಚೊಚ್ಚಲ ಮಗನನ್ನು ಕಳೆದುಕೊಂಡು ಬರಿ ಕೈಯಿಂದ ತವರು ಮನೆಯಿಂದ ಗಂಡನ ಮನೆಗೆ ಹೋಗುವ ಹೃದಯಾಂತಕ ಸನ್ನಿವೇಶ ಮುಂದಿನವಾರ ನೋಡೋಣ……….( ಮುಂದುವರೆಯುವುದು) ಸವಿತಾ ದೇಶಮುಖ ಡಾ. ಜಯದೇವಿತಾಯಿ ಲಿಗಾಡೆಯವರ ಮೊಮ್ಮಗಳು, ತಂದೆ-ಡಾ. ಶಂಕರಣ್ಣ ಮೂಗಿ (ಸೋವಿಯತ್ ಲ್ಯಾಂಡ್

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಕಂತು-ಐದು ಸವಿತಾ ದೇಶಮುಖ ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾಚೇತನ ಜಯದೇವಿ ತಾಯಿಯವರ ಜೀವನ ವೃತ್ತಾಂತಭಾಗ- 5  ಸೊಲ್ಲಾಪುರದ ಲಿಗಾಡೆಯವರ ಮನೆತನದ ನಿಷ್ಠಾವಂತ ವಕೀಲರಾದ ‘ರಾಮಭಾವು ರಾಜವಾಡೆ’ ಅವರು ಬ್ರಿಟಿಷರ ವಿರುದ್ಧ ಕುತಂತ್ರ ಎಸಗಿದ್ದಕ್ಕಾಗಿ ಬಂಧಿಸಲಾಗಿತ್ತು. ಜಯದೇವಿ ತಾಯಿಯವರ ಅತ್ತೆ ಪ್ರಯಾಗಬಾಯಿ ರಾಜವಾಡೆಯವರ ಬಿಡುಗಡೆಯ ನಂತರ ಅತ್ಯಂತ ಆದರದಿಂದ ಬರಮಾಡಿಕೊಂಡು ಆದರಿಸಿ  ಬ್ರಿಟಿಷರ ಭಿಡೆ ಹಿಡಿಯದೆ  ಮತ್ತೆ ಆಸ್ತಿಯ ಕಾರಭಾರವನ್ನು ನಿರ್ವಹಿಸಿಕೊಂಡು ಹೋಗಲು ಅಣಿ ಮಾಡಿದರು.” ಪ್ರಯಾಗಬಾಯಿಯ ಕಠೋರ ಧ್ವನಿ …ಬಿರುಸು ನಡತೆ ಇದ್ದರೂ ನಿಜವಾದ ದೇಶಪ್ರೇಮ ರಾಷ್ಟ್ರ ನಿಷ್ಠೆಯನ್ನು ತೋರಿದರು .ತಾಯಿ ಸಂಗವ್ವ ಗಾಂಧಿ ವಾದವನು ಪ್ರಚಾರ ಮಾಡಿದರೆ ಅತ್ತೆ ಪ್ರಯಾಗಬಾಯಿಯೂ ಅದನ್ನು ನಡೆದು ತೋರಿಸಿದ್ದರು. ದೇಶಮಾತೆಗೆ ಅನೌಪಚಾರಿಕವಾಗಿ ಸಹಾಯ ಹಸ್ತ ನೀಡಿದ್ದರು” ಎನ್ನುತ್ತಿದ್ದರು ಜಯದೇವಿ ತಾಯಿಯವರು. ಅತ್ತೆ ಪ್ರಯಾಗಬಾಯಿ ಜಯದೇವಿಯ ತಾಯಿಯ ಮೇಲೆ ಸಿಡಿಮಿಡಿಕೊಳ್ಳಲು ಎರಡು ಕಾರಣಗಳಿದ್ದವು…. ಮದುವೆಯ ಸಮಯದಲ್ಲಿ ತವರಿನವರು(ಮಡಿಕಿ) ಮದುವೆಯ ದಿಬ್ಬಣವೆನೋ ಜನ ನೋಡುವಂತೆ ಏರಿಸಿದ್ದರು….. ಆದರೆ ಪ್ರಯಾಗಬಾಯಿಯವರಿಗೆ ಕೊಡುವ ಉಡುಗೊರೆಯ ಸೀರೆ ಅವರ ವರ್ಚಸ್ಸಿಗೆ ಹೊಂದುವಂತಿರಲಿಲ್ಲವೆಂದು ನಂಬಿದ ಅತ್ತೆ ….ಸೀರೆ ನೋಡುತ್ತಿದ್ದಂತೆ ಸಿಡಿಮಿಡಿಗೊಂಡು ಅಲ್ಲಿಂದ ಎದ್ದು ಹೋಗಿದ್ದರಂತೆ .ಇದು ಅದೆಂಥ ದೊಡ್ಡ ವಿಷಯವಾಗಿತ್ತು ಅಂದರೆ  ತಾಯಿಯವರ ಜೀವನದ ಅತಿ ದೊಡ್ಡ ಘಾತಕದ ಘಟನೆಯಾಗಿತ್ತು ಅನ್ನುತ್ತಿದ್ದರು ತಾಯಿಯವರಿಗೆ ….ಸಮಯ ಸಿಕ್ಕಾಗಲೆಲ್ಲ ಆ ಮಾತನ್ನು ಆಡಿ ಆಡಿ ಮನಸ್ಸು ನೋಯಿಸುತ್ತಿದ್ದರಂತೆ. ಮುಂದೆ ಅವರು ಅದೆಷ್ಟೋ ಸೀರೆಗಳನ್ನು ತಂದು ಅವರೆದುರಿಗೆ ಹಾಕಿದರೂ ಆ ದಿನದ ಅವರು ಮರೆಯಲಿಲ್ಲ. ಇನ್ನೊಂದು ಕಾರಣವೆಂದರೆ ತಾಯಿಯವರು ಅತ್ಯಂತ ಬಳಕುವ ಅಂದರೆ ತೆಳ್ಳನೆ ದೇಹವನ್ನು ಹೊಂದಿದವರು ಊಟ ಮಾಡುವುದು ಕೇವಲ ಅರ್ಧ ರೊಟ್ಟಿ ಅಥವಾ ಚಪಾತಿ ಅಷ್ಟೇ… ಗಟ್ಟಿ ಮುಟ್ಟಾದ ಸೊಸೆ …ಆಸ್ತಿಯ ಕಾರಭಾರ ಹೊತ್ತುಕೊಳ್ಳುವ ಸೊಸೆ ಬೇಕಾಗಿತ್ತು.  ಸೊಸೆಯನ್ನು  ಹುಡುಕಾಡಿ   ಪರಿಶೀಲಿಸಿ ಮದುವೆ ಮಾಡಿದ್ದರೇನೋ ನಿಜ ಆದರೆ ಜಯದೇವಿ ತಾಯಿಯು ಮನೆಗೆ ಬಂದ ಮೇಲೆ ಗೊತ್ತಾದದ್ದು ಇವರು ಅತ್ಯಂತ ಸರಳ-ಸಾಧು- ಲಿಂಗನಿಷ್ಠರು. ದೇವರಲ್ಲಿಯೇ ಮೈಮರೆಯುವಳು ಅನ್ನುವುದು ತಿಳಿದಾದ ಮೇಲೆ ಅವರಿಗೆ ಹೊಟ್ಟೆ ಬೇನೆ ಶುರುವಾಗಿತ್ತು.ಇಂಥ ನಾಜೂಕಾಗಿರುವಳು ಎಲ್ಲವನ್ನು‌ ನಿಭಾಯಿಸುವುದು ಹೇಗೆ ಅನ್ನುವ ಸಮಸ್ಯೆ ಕಾಡುತಿತ್ತು.  ತಾಯಿಯವರು ಕೆಲಸ ಮಾಡುವಾಗ ಮಧ್ಯದಲ್ಲಿ ಬಂದು ಅವರ ಎರಡು ಕೈಗಳನ್ನು ಗಟ್ಟಿಯಾಗಿ ಹಿಡಿದು ನೋಡಿ ಮತ್ತೆ ದೂರಸರಿಸುವರಂತೆ ..,..”ನೋಡು ಏನು ತಿನ್ನೋದಿಲ್ಲ ಹೀಗೆ ಸ್ವರ್ಗಿ  ಸ್ವರ್ಗಿ ಸಣ್ಣಗಿದ್ದಿ ಎಲ್ಲಾ ಆಸ್ತಿಯನ್ನು ಹೇಗೆ ನೋಡಿಕೊಳ್ತಿ …. ನಮಗೆ ಮೊಮ್ಮಕ್ಕಳನ್ನು ಹೇಗೆ ಹೆತ್ತು ಕೊಡ್ತೀಯಾ…”!! ಅನ್ನುವ ಚಿಂತೆ ಅವರನ್ನು ಕಾಡುತ್ತಿತ್ತಂತೆ. ಪ್ರಯಾಗಬಾಯಿಯೂ ಪ್ರತಿ ಸೋಮವಾರ ಸಿದ್ದರಾಮನ ದೇವಸ್ಥಾನಕ್ಕೆ ಗಾಡಿಯಲ್ಲಿ ಹೋಗುತ್ತಿದ್ದರು . ದೇವಸ್ಥಾನಕ್ಕೆ ಹೋಗಬೇಕಾದರೂ ಜರ್ತಾರಿಯ ಸೀರೆ ಉಟ್ಟು ವಜ್ರ ವೈಢೂರ್ಯ ತೊಟ್ಟು ಹೊರಡುವರು ..ಜಯದೇವಿ ತಾಯಿಯವರು ಅವರ ಜೊತೆ ಬರಲು ಹಠ ಮಾಡಿದಾಗ ಅವರಿಗೆ ಹಾಗೆ ಉಟ್ಟ ಸೀರಿ ಕರಿಮಣಿಯ ತಾಳಿ ಹಾಕಿಕೊಂಡೇ  ಕರೆದುಕೊಂಡು ಹೋಗುತ್ತಿದ್ದರು.ಮದುವೆ ಸಮಾರಂಭಗಳಲ್ಲೂ ಅಷ್ಟೇ ತಾಯಿಯವರಿಗೆ ಮದುವೆ ಸಮಾರಂಭಗಳು ಬಂದರೆ   ಕಳವಳ ಉಂಟಾಗುವುದು….. ಬಂಗಾರ ಇಲ್ಲದೆ ಹೋಗುವದು ಹೇಗೆ  ಮನೆತನ ಮರ್ಯಾದಿಯ ಪ್ರಶ್ನೆಯಾಗಿತ್ತು ……ಹೀಗಾಗಿ ಓಡಿಹೋಗಿ ಹತ್ತಿರದಲ್ಲಿ ಇದ್ದ ತವರು ಮನೆಯಲ್ಲಿ ಹೊಸದಾಗಿ ಬಂದ ಅತ್ತಿಗೆಯರಿಂದ,ತಾಯಿಂದ ವಸ್ತಒಡವೆಗಳನ್ನು ಪಡೆದು ತೊಟ್ಟು ಹೋಗುವರು. ಮತ್ತೆ ತಿರುಗಿ ಬರುವಾಗ ಅವುಗಳನ್ನೆಲ್ಲ ಅಲ್ಲೇ ತವರು ಮನೆಯಲ್ಲಿ ಕಳಚಿಟ್ಟು ಮನೆಗೆ ಬರುವರು .  ಪ್ರಯಾಗಬಾಯಿ ಎರಡು ಹೊತ್ತು ಲಿಂಗದ ಪೂಜೆ ಮಾಡುವರು ರಾತ್ರಿಯ ಪೂಜೆ ಮುಗಿಸಿ ಅವರಿಗೆ ಊಟ ಕೊಟ್ಟು ಆಳು ಕಾಳುಗಳಿಗೆ ಊಟ ಕೊಟ್ಟು ಎಲ್ಲ ತೆಗೆದಿಟ್ಟು ಅಡುಗೆಯ ಮನೆಯ ಕೆಲಸವನ್ನೆಲ್ಲಾ ಮುಗಿಸಿ ಮೇಲೆ ಮಲಗುವ ಕೋಣೆಯತ್ತ ಹೆಜ್ಜೆ ಹಾಕಿದಾಗ ಮನೆಯಲ್ಲಿ ಎಲ್ಲರೂ ನಿದ್ರೆಯಲ್ಲಿ ಜಾರಿರುತಿದ್ದರು. ರಾತ್ರಿ ನಿರಾಳ ಮೌನ ಆವರಿಸಿತ್ತು…. ಗಡಿಯಾರ ಟಿಕ್ ಟಿಕ್ ಮಾತ್ರ ಅವರ ಉಸಿರಿಗೆ ತಾಳ ಹಾಕುತ್ತಿತ್ತು…. ನಿಧಾನವಾಗಿ ಹೆದರುತ್ತಲೇ ಗಡಿಯಾರದತ  ನೋಡಿದರು ರಾತ್ರಿ ಒಂದು ಗಂಟೆ ಮೇಲೆ ಆಗಿದೆ…. ಕೋಣೆಯಲಿ ಕಾಲಿಡುವ ಮೊದಲೇ ತೀರ್ಪು ಬಂದುಬಿಟ್ಟಿತು ……..”ಗಂಡನ ಮೇಲೆ ಭಯ ಭಕ್ತಿ ಇಲ್ಲ ಅದಕ್ಕೆ ಇಷ್ಟು ತಡ ಮಾಡುವೆ ಅಲ್ಲೇ ಮೂಲೆಯಲ್ಲಿ ಸ್ಟ್ಯಾಂಡ್ಪ್ಪ(standup)ಅಂದು ಗಂಡನ  ಧ್ವನಿ ಕೇಳಿದ ತಕ್ಷಣ ಹೆದರಿ ಅಲ್ಲಿ ಗೋಡೆಗೆ ಬೆನ್ನೂರು ನಿಂತು ಬಿಡುವರು ತನ್ನ ತಪ್ಪಾದರೂ ಏನು ಅಂತ ತಿಳಿಯದೆ ಗಂಡನ ಆಜ್ಞೆ ಅಲ್ಲವೇ ಪಾಲಿಸಲೇಬೇಕು….!! ಆದರೆ ಮಧ್ಯರಾತ್ರಿಯಲಿ  ಹಾಗೆ ಕೋಣೆ ಮೂಲೆಯಲ್ಲಿ ನಿಂತು ನಿದ್ದೆ ಹೋಗಿ ಭೂತಾಯಿಯ ಮಡಿಲಲ್ಲಿ ಶರಣಾಗಿ ಮಲಗಿದ್ದು ಗೊತ್ತಾಗುತ್ತಿರಲಿಲ್ಲ….. ನಸುಕಿನಲ್ಲಿ ಗಡಬಡಿಸಿ ಎದ್ದರೆ ತಾವು ನೆರೆದ ಮೇಲೆ ಮಲಗಿದ್ದು ಅರಿವಾಗುತ್ತಿತ್ತು ಮೈ ಕೈಯಲ್ಲ ಇನ್ನಷ್ಟು ನೋವಾದರೂ ಕೆಳಗೆ ಇಳಿದು ಓಡಿ ಬಂದರೆ ಅಲ್ಲಿ ಅತ್ತೆಯ ಬೈಗಳ ಸುರಿಮಳೆ ಪ್ರಾರಂಭ ……!!!ಗಂಡ ಮಾತ್ರ ಏನು ನಡೆಯಲೇ ಇಲ್ಲ ಅನ್ನುವಂತೆ ಎದ್ದು ಕೆಳಗೆ ಬರುವರು ಅವರಿಗೆ ಯಾವ ವ್ಯವಹಾರಿಕ ಜ್ಞಾನ ಇಲ್ಲ ತನಗೆ ತಿಳಿದಷ್ಟು ನಡೆದುಕೊಳ್ಳುವರು ಏಕೆಂದರೆ ಐದು ಅತ್ತಿಯಂದಿರ ಅಚ್ಚುಮೆಚ್ಚಿನ ಮಗ ಬೇರೆ… ಮದುವೆಯಾದ ಹೊಸತರಲ್ಲಿ ಜಯದೇವಿ ತಾಯಿಯವರಿಗೆ ತಾನು ಎಲ್ಲಿ ಬದುಕಿ ಬಾಳುತ್ತಿದ್ದೇನೆ  ಅನ್ನುವ  ಜ್ಞಾನವೇ ಇಲ್ಲವಾಗಿತ್ತು ಅಂತ ತಾಯಿಯವರು ಹೇಳುತ್ತಿದ್ದರು . “ಗಂಡನ ಮನೆಯ ಎಲ್ಲ ಸದಸ್ಯರ ಮನಸ್ಸು ಗೆಲ್ಲ ಬೇಕಾಗಿತ್ತು. ಸಿದ್ದರಾಮನಲ್ಲಿ ಸೈ ಎನ್ನಿಸಿಕೊಳ್ಳಬೇಕಾಗಿತ್ತು. ಬಂದ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಹಾಗೆ ನುಂಗುತ್ತ ನಡೆದಿದೆ” ಅನ್ನುತ್ತಿದ್ದರು. ತಮ್ಮ ದುಃಖವನ್ನೆಲ್ಲ ಅಂಗೈಯಲ್ಲಿ ಇಟ್ಟುಕೊಂಡ ಲಿಂಗನಿಗೆ ಹೇಳುತ್ತಾ ಸಿದ್ದರಾಮನನ್ನು ಮಾತನಾಡಿಸುತ ದುಃಖವನ್ನು ಮರೆಯುವರು…. ಧಾರಾಕಾರವಾಗಿ ಕಣ್ಣೀರು ಸುರಿಸುವರು… *ನಿನ್ನ  ಭಜಿಸಲೆಂದು ಉಲಿಯುವೆ ಜಯಗೀತ ಒಂದೊಂದು, ನನ್ನ ಜೀಯಾನಿನ್ನ ಬರುವಿಕೆಯ ಬಯಕೆ-ನೆನೆ ನೆನೆದು ಅಳಹೋಗಿಹಾಡು ಬಿಡುವೆ !!*(ಜಯಗೀತ ಕವನ ಸಂಕಲ) ಒಂದು ಕಡೆ ಬರುತ್ತಾರೆ ತಾಳ್ಮೆನು ಯಾತನೆಯ/ ಬಾಳುವೆನು ನಿನಗಾಗಿಕಾಳ ಬಂದರು ಹೆದರೇನು -ಸಿದ್ದರಾಮದಾಳಿ ತಂದರು ಮತ್ತೆ ನಿನ್ನನೇ ನೆನೆಯುವೆ!! “ಎಲ್ಲವೂ ನಿನ್ನ ಪಾದಕ್ಕೆ ಅರ್ಪಣೆ… ಎನ್ನ ಮಾನ ಅಪಮಾನ ನಿನ್ನದಯ್ಯಾ ಎನ್ನುತ್ತಿದ್ದೆಕಷ್ಟಗಳು ಹೆಚ್ಚಿದಂತೆ ಸಿದ್ದರಾಮನ ಮೇಲಿನ ಭಕ್ತಿ ಇನ್ನು  ಗಟ್ಟಿಕೊಳ್ಳಲಾರಂಬಿಸಿತ್ತು.  ಸುಖದ ಸಂಪತ್ತಿನಲ್ಲಿ ನಾನು ಸುಖವಾಗಿ ಒಂದು ವೇಳೆ ಬದುಕಿದ್ದರೆ …. ಸಿದ್ದರಾಮನನ್ನು ನೆನೆಯುತ್ತಿರಲಿಲ್ಲವೇನು…??!…ಸಿದ್ದರಾಮ ಪರೀಕ್ಷಿಸುತ್ತಿರುವ ನಾನು ಆ ಪರೀಕ್ಷೆಯಲ್ಲಿ ಪಾಸ್ ಆಗಲೇಬೇಕು ಎನ್ನುವ ಛಲವನ್ನು ಹೊತ್ತ ಸೊಸೆಯಾಗಿದ್ದೆ ” ‌….ಅಂತ ಅನೇಕ ಸಲ ಹೇಳುತ್ತಿದ್ದರು. ತಾಯಿಯ ತವರಿನಲ್ಲಿ  ಹೆಣ್ಣು ಮಕ್ಕಳಿಗೆ ಸಮಾನತೆ ಹೇಳಿಕೊಟ್ಟಿದ್ದರು. ಪುರುಷ ಪ್ರಧಾನವಾದ ನಮ್ಮ ದೇಶದಲ್ಲಿ ಗಂಡನಿಗೆ ಹೊಂದುಕೊಳ್ಳಬೇಕಾದರೆ ಸಹನೆ ಇರಬೇಕು ಆಗ ಮುಂದೆ ಎಲ್ಲವನ್ನು ಗೆಲ್ಲಬಹುದು ಅನ್ನುವುದನ್ನು ತಾಯಿ ಸಂಗವ್ವ ಜಯದೇವಿ ತಾಯಿಯವರಿಗೆ ಕಲಸಿದ ಪಾಠ .ನೆನೆಯುತಿದರು.. ಬಾಲ್ಯ ವಿವಾಹ ಒಂದು ಮದುವೆ ಅಲ್ಲ ಅದು ಬಾಲ್ಯದ  ಅಂತ್ಯ. ಬೊಂಬೆಯ ಜೊತೆ ಆಟವಾಡುವ ಕೈಗಳಿಗೆ ಅಡುಗೆಯ ಪಾತ್ರೆಯ ಹೊರೆ ತಾಳೆದಾಗಿತ್ತು. ಪಾಠ ಪುಸ್ತಕ ಓದಬೇಕಾದ ಕಣ್ಣುಗಳಿಗೆ ಆಶ್ರುಗಳ ಅಭ್ಯಾಸ ಆಗಿಹೋಗಿತ್ತು. ಹೆಣ್ಣು ಮಗು ಹೆಂಡತಿಯಾಗುವ ಮುನ್ನ ಮಗುವಾಗಿ ಬದುಕುವ ಹಕ್ಕು ಕಸಿದುಕೊಂಡರೆ ಅದು ಒಂದು ಅಪರಾಧವೇ ಸರಿ ಅನ್ನುತ್ತಿದ್ದರು .ಅವಳಿಗೆ ಗಂಡನ ಮನೆ ಸಿಗುವುದು ಅನ್ನುವ ಸಂತಸವೇನು ಇರಬಹುದು ಆದರೆ ಮಗುವಿನ ಅತ್ಯ ಅಮೂಲ್ಯವಾದ ಬಾಲ್ಯದ ಬದುಕು ಸಿಹಿ ನೆನಪಿನ ಲೋಕವೂ ಕಳೆದು ಹೋಗುವುದು. ಬೆಳೆಯದ ದೇಹ- ಮನಸ್ಸಿಗೆ ತಾಳದ‌ ಹಿಂಸೆ ಕೊಟ್ಟಂತಾಗುವುದು .ಅವಳು ನಿಭಾಯಿಸಲಾರದಂತ ಜವಾಬ್ದಾರಿ  ಮಗುವಿನ ಮೇಲೆ ಒಡ್ದುವದು ಅಕ್ಷಮ್ಯ ಅಪಕೃತವಾಗುವುದು ಎನ್ನುತ್ತಿದ್ದರು.  ಒಂದು ಹೆಣ್ಣು ಮಗು ಬಾಲ್ಯದಲ್ಲಿ ವಿವಾಹ ಮಾಡಿಕೊಂಡು ಜೀವನದಲ್ಲಿ ಸೋತು ಹೋದರೆ ಸೋಲು ಅವಳೊಬ್ಬಳದೇ ಅಲ್ಲ…. ಅದು ಒಂದು ತಲೆಮಾರಿನ ಸೋಲು ,!! “ಮಗು ಕುತ್ತಿಗೆಗೆ ತಾಳಿಯಲ್ಲ – ಅವಳಿಗೆ ಭವಿಷ್ಯ ಕೊಡಿ” ಅನ್ನುತ್ತಿದ್ದರು . “ಸಿರಿತನದ ಕುವರಿ ! ಸಿರಿವಂತರ ಸತಿಯಾದೆಸಿರಿತನದ ಶ್ರಂಗಾರವೆಲ್ಲವನು- ಭೋಗಿಸಿದೆಸಿರಿತನ ದೊರೆತನ ಹಿರಿತನ ಎನ್ನವಾರಿಸದೆಶ್ರೀ ಲೋಲನ ದರ್ಶನವೆಂದು ಕಾಯುತಿರುವೆ…!!” “ಸಿರಿತನದ ತಳಕಿನಲ್ಲಿ ನಾನು ಮುಳುಗದಿರಲಿ ಅಂತಾನೆ  ಕಷ್ಟಗಳ ಕೊಡಿ  ಹರಿಸಿದ  ಸಿದ್ದರಾಮ…..ಸುಖದ ಸುಪ್ಪತ್ತಿನಲ್ಲಿ ಮುಳುಗದಿರಲಿಅಂತ ಏನೋ ಸಿದ್ದರಾಮನ ಪರೀಕ್ಷೆಯಲಿ….. ಗೆಲ್ಲಲೆಂದೆ ನಾನು ಕಷ್ಟಗಳನ್ನು ಸಂಭ್ರಮಿಸಲಾರಂಭಿಸಿದೆ. ಅನ್ನುತ್ತಾರೆ .  ಸಿದ್ದರಾಮನಲ್ಲಿ ಒಂದಾಗಲು ಶುರುವಿಟ್ಟೆ  ಲೋಕಕಲ್ಯಾಣದ ಕೆಲಸದತ್ತ ಹೊರಳಿದೆ” ಎನ್ನುವ ಮಾತು ಸುಳ್ಳಲ್ಲ . ಹಳೆಯ ಸಂಪ್ರದಾಯದ ಅತ್ತೆ ಮನೆಯ ವಾತಾವರಣ ಬೆಳೆದ ಮನೆಯ ವಾತಾವರಣಕ್ಕೂ ಅಜಗಜಾಂತರ ಅಂತರವಿತ್ತು .ಅತ್ತೆಯ ಬೈಗಳ ಪ್ರತಿ ಮಾತಿನಲ್ಲಿಯೂ ಒಳ್ಳೆಯದನ್ನು ಹುಡುಕಲು ಆರಂಭಿಸಿದರು.  ಒಂದು ಸಲ ಪಡಸಾಲಿಯಲಿ ದೊಡ್ಡ ಕನ್ನಡಿಯ ನೋಡುತ  ಜಯದೇವಿ ತಾಯಿಯವರು ಕುಂಕುಮ ಇಟ್ಟುಕೊಳ್ಳುವುದು ನೋಡಿದ ಪ್ರಯಾಗಬಾಯಿ ಜೋರಾಗಿ ಕಿರುಚಾಡಿಲಾರಂಭಿಸಿದರು .“ನಿನಗೆ ಸಂಸ್ಕಾರ ಅನ್ನೋದೇ ಇಲ್ಲ ಯಾರಾದರೂ ಅಂಗಳದಲ್ಲಿ ನಿಂತು ಕುಂಕುಮ ಇಡುವರೇ ನೀನು ಹೇಳಿ ಕೇಳಿ ಭಾಷಣ ಮಾಡುವಾಕೆಯ ಮಗಳು” ಎಂದು ಕೂಗಾಡಿದರಂತೆ.ಅವರು ಯಾಕೆ ಗದರಿಸಿದರಂತೆ ತಿಳಿಯಲಿಲ್ಲ  ಕುಂಕುಮವನ್ನು ಅಂಗಳದಲ್ಲಿ ಹಚ್ಚಿಕೊಳ್ಳಬಾರದು ಅನ್ನುವ ಪದ್ಧತಿ ಇರಬೇಕೆನೊ ಅದಕ್ಕೆ ಅತ್ತೆ ಬೈದಿರಬೇಕು ಅಂದುಕೊಂಡರಂತೆ.ಆದರೆ ನನ್ನ ತಾಯಿಗೆ ಏಕೆ ಬೈದರು ಭಾಷಣ ಮಾಡುವುದು ತಪ್ಪೇ ಅಂತೆಲ್ಲ ಲೆಕ್ಕ ಹಾಕಿದರು.ಆದರೂ ಎದೆ ನಡುಗುತಿತ್ತು, ಕೈಕಾಲುಗಳು ಶಕ್ತಿ ಕುಂದುತಿದೆ ಅನ್ನಿಸಿಲಾರಿಂಭಿಸಿತ್ತು. ಆ ದೃಶ್ಯವನ್ನು ನೋಡಿದ ಪ್ರಯಾಗಬಾಯಿಯುಸಮೀಪ ಬಂದು …”ನೋಡು ಮನೆಯಲ್ಲಿ ಹಾಲ ತುಪ್ಪದ ಹೊಳೆ ಹರಿತಾ ಇದೆ ಚೆನ್ನಾಗಿ ಉಂಡು-ತಿಂದು ಇರಬೇಕು ಅಂತ ಹೇಳಿದ್ದು ಕೇಳಿ ಜೀವ ಬಂದಂತಾಯಿತು. ಮುಂದೆ ಕೆಲವು ದಿನಗಳು ಕಳೆದ ನಂತರ ಸೊಸೆಯ ಮೇಲೆ ಪ್ರೀತಿ ಹೆಚ್ಚ ಆರಂಭಿಸಿತು ಸೊಸೆಯ ತಾಳ್ಮೆ ಗಂಭೀರ ನಡೆನುಡಿಯನ್ನು ಪ್ರಯಾಗಬಾಯಿ ಗಮನಿಸುತ್ತಿದ್ದಂತೆ ಮನ ಕರಗಲಾರಂಭಿಸಿತ್ತು. ಆಗಾಗ ತಾಯಿಯವರನ್ನು ದಿಟ್ಟಿಸಿ ನೋಡುತ್ತಿದ್ದರಂತೆ ಅದೇಕೋ ಸೊಸೆ ಇನ್ನೂ ಸಣ್ಣ ಆಗಿ ಹೋಗುತ್ತಿರುವಂತೆ ಕಂಡು ಅಡುಗೆಯ ಬಸವ್ವಳನ್ನು ಕರೆದು ಇವಳಿಗೆ “ಇನ್ನು ಮೇಲಿಂದ ನನಗಾಗಿ ಮಾಡುವ ತುಪ್ಪದ ಅಡಿಗೆ ಇವಳಿಗೂ ಉಣ್ಣಿಸಬೇಕು” ಅಂತ ಆಜ್ಞೆ ಮಾಡಿದರಂತೆ .ಅದೇ ರೀತಿ ಕೆಲಸದವಳು ಬಂದು ತಾಯಿಯವರಿಗೆ “ನೋಡಿರಿ ಬಾಯಾರ……ನೀವು ಹೀಗೆ ಕಿವುಚಿ ಅದ್ದಾ-ಗಿದ್ದಾ ಊಟ ಮಾಡಿದರೆ ನಡೆಯುವುದಿಲ್ಲ ಚೆನ್ನಾಗಿ ಊಟ ಮಾಡಬೇಕು ಗಂಡು ಮಕ್ಕಳ ಹೆತ್ತು ಕೊಡಬೇಕು “ಅಂತ  ಕೆಲಸದವಳು ಪ್ರೀತಿಯಿಂದ ಆಜ್ಞೆ ಮಾಡಿದಳಂತೆ. ಸಾಧು-ಸಂತರು ನೀರು ಕುಡಿದು ,ಇಲ್ಲ ತುಣುಕು ಅನ್ನ ಉಂಡು ಬದುಕುವಂತೆ ಜಯದೇವಿ ತಾಯಿಯವರು ಹುಟ್ಟುತ್ತಲೇ ಯೋಗಿಣಿ ಯಾಗಿದ್ದರು  ಅವರು ಕೊನೆಯವರೆಗೂ ಅವರ ಊಟ ಅಷ್ಟೇ. ಅವರು ಊಟತಿಂಡಿಗಾಗಿ  ಸಂಸಾರದ ಭೋಗಕ್ಕಾಗಿ ಹುಟ್ಟಿದವರಲ್ಲ  ಬಸವಣ್ಣನ ತತ್ವದಂತೆ ಕಾಯಕವ ಮಾಡುತ್ತಾ ಸಂಸಾರ ಗೆದ್ದು   ಮಹಾನ ಶರಣೆಯಾದವರು. ಎಲ್ಲ  ಐದು ಜನ ಓರಗಿತ್ತಿಯರನ್ನು, ಮನೆಯ ಆಸ್ತಿ , ಹೊಲಗದ್ದೆ ,ಬಡ್ಡಿಯ ವಹಿವಾಟ ಎಲ್ಲವನ್ನು ಒಬ್ಬಳೇ ನಿಭಾಯಿಸುತ್ತ………ಇದ್ದ ಆಸ್ತಿಯನ್ನು ವೃದ್ಧಿಸಿ ಮುಂದೆ ಲಿಗಾಡಿ ಮನೆತನದ ವಿಜಯ ಪತಾಕೆಯನ್ನು ಹಾರಿಸಿ, ಕನ್ನಡ ನಾಡ ನುಡಿಗಾಗಿ ದುಡಿದ, ಸಿದ್ದರಾಮನ ಶ್ರೇಷ್ಠ ಭಕ್ತಳಾಗಿ,…  ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಮಹಾನ ಕೊಡುಗೆ ನೀಡಲಿರುವರು  ಅನ್ನುವದ  ಅರಯದಾಗಿದ್ದರು…. ಅತ್ತೆ ಪ್ರಯಾಗಬಾಯಿ….ಅಲ್ಲವೇ…..! (ಮುಂದುವರೆಯುವುದು) ಸವಿತಾ ದೇಶಮುಖ ಡಾ. ಜಯದೇವಿತಾಯಿ ಲಿಗಾಡೆಯವರ ಮೊಮ್ಮಗಳು, ತಂದೆ-ಡಾ. ಶಂಕರಣ್ಣ ಮೂಗಿ (ಸೋವಿಯತ್ ಲ್ಯಾಂಡ್ ನೆಹರು ಅವಾರ್ಡ್ ವಿಜೇತರು). ಸುಪ್ರೀಂ ಕೋರ್ಟಿನ ನ್ಯಾಯವಾದಿಗಳುತಾಯಿ -ಲಲ್ಲೇಶ್ವರಿತಾಯಿ ಮೂಗಿ(30 ಶಿವಶರಣೆಯರ ಮೊದಲು ಪರಿಚಯಿಸಿದ ಲೇಖಕಿ)ವೃತ್ತಿ:ವಿಜಯಪುರದ ಆಲ್ ಇಂಡಿಯಾ

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾಚೇತನ
ಜಯದೇವಿ ತಾಯಿ ಲಿಗಾಡೆ ಅವರ ಜೀವನಗಾಥೆ
ಸವಿತಾ ದೇಶಮುಖ

Read Post »

You cannot copy content of this page

Scroll to Top