ಅಂಕಣ ಸಂಗಾತಿ ಶರಂದ್ರ ತಳ್ಳಿ ಕುಪ್ಪಿಗುಡ್ಡ ಗಾದೆಗಳ ಗಣಿ ಗುಬ್ಬಿ ಮ್ಯಾಲೆ ಬ್ರಹ್ಮಾಸ್ತ್ರವೆ, ತಬ್ಬಲಿ ಮ್ಯಾಲೆ ಹಾರಾಟವೆ? *ಗುಬ್ಬಿ ಮ್ಯಾಲೆ ಬ್ರಹ್ಮಾಸ್ತ್ರವೆ, ತಬ್ಬಲಿ ಮ್ಯಾಲೆ ಹಾರಾಟವೆ?* — ಈ ಮೇಲಿನ ಮಾತು ಸಮಾಜದಲ್ಲಿ ಕಾಣಸಿಗುವ ಅಸಮಾನತೆ, ಶಕ್ತಿ ಪ್ರದರ್ಶನ ಮತ್ತು ದುರ್ಬಲರ ಮೇಲಿನ ದೌರ್ಜನ್ಯವನ್ನು ಅತ್ಯಂತ ಮಾರ್ಮಿಕವಾಗಿ ಖಂಡಿಸುತ್ತದೆ. ತೀರಾ ಕಡುಬಡವರು ಅಥವಾ ಕಾರ್ಮಿಕರಿಗೆ ನಿಜಕ್ಕೂ ವಾಕ್ ಸ್ವಾತಂತ್ರ್ಯವಿಲ್ಲ.ಅವರ ಮನಸ್ಸಿನಲ್ಲಿರುವ ಮಾತುಗಳನ್ನು ಯಥಾವತ್ತಾಗಿ ಹೇಳಬಯಸಿದ್ದನ್ನು ಹೇಳಲಾಗುವುದಿಲ್ಲ.ನಮ್ಮೆದುರಿಗಿರುವ ಬಾಸ್,ಧಣಿ,ಅಧಿಕಾರಿಗಳು ಇರುವ ಕಡೆಗೆ ನೋಡಿ ಅಂಜಿಕೆ,ಅಳುಕುವಿನಿಂದ ನಮ್ಮ ಅಗತ್ಯಕ್ಕೆ ತಕ್ಕಂತೆ,ಅನುಗುಣವಾಗಿ, ಪರಿಸ್ಥಿತಿಗೆ ತಲೆಬಾಗಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಮೃದುವಾದ ಭಾವನೆಯಿಂದ ಸಂಕೋಚದಿಂದಲೆ ಮಾತಾಡುತ್ತೇವೆ.ಅಧಿಕಾರ ಪಡೆದವರು ಕೆಳವರ್ಗದವರನ್ನು ನಿಂದಿಸಬೇಕಾದರೆ ಪ್ರಾಣಿಗಳಿಗೆ ಹೋಲಿಸಿ ಬಯ್ಯುತ್ತಿರುತ್ತಾರೆ.ಯಾವ ವಿಷಯದಲ್ಲಿಯೂ ತಳಮಟ್ಟದ ಕೆಲಸಗಾರರಿಗೆ ಇತಿಮಿತಿ ಇಲ್ಲ.ಹೌದು! ಕೆಳಮಟ್ಟದ ಕಾರ್ಮಿಕರಿಗೆ ಇರುವ ವಿಚಾರ ಶಕ್ತಿ, ಆಳುವ ವರ್ಗದವರಿಗೆ, ಅಧಿಕಾರಿಗಳಿಗೆ ಇರುವುದಿಲ್ಲ.ಪ್ರಾಣಿಗಳಿಗಿಂತಲೂ ದುಡಿಯುವ ಮನಸ್ಸುಗಳ ಜೀವನ ಉನ್ನತವಾಗಿದೆಯೆ?ಏನೋ! ಅದೆಷ್ಟೋ ಸಂದರ್ಭಗಳಲ್ಲಿ ಪ್ರಾಣಿಗಳು ದುಡಿಯುವ ವರ್ಗದವರನ್ನು ನೋಡಿ ತಲೆ ಬಾಗಿಸುತ್ತವೆಯೋ ಏನೋ?ಕತ್ತಲು ಬೆಳಕಿಗೆ ಜನ್ಮ ನೀಡುತ್ತದೆ.ದುಡಿಯುವವರು ಯಾವತ್ತಿದ್ದರೂ ಕತ್ತಲು.ಅವರು ಮಾಡುವ ಕೆಲಸಗಳು ಮಾತ್ರ ಬೆಳಕು.ಮೈ ಮುರಿದು ದುಡಿಯುವ ಎಲ್ಲಾ ಜನಾಂಗದವರಿಗೆ ಅಲ್ಪ ಸ್ವಲ್ಪ ಜ್ಞಾನವಿರುತ್ತದೆ.ಬುದ್ಧಿವಂತಿಕೆಯೂ ಇರುತ್ತದೆ.ಕೆಲಸ ಕಾರ್ಯಗಳು ಯಾವುದೇ ಇರಲಿ.ಕೆಲವು ಪರಸ್ಥಿತಿಗಳ ಕಾರಣದಿಂದ ಒಂದೊಂದು ಸಲ ಕಾರ್ಮಿಕರು ಬ್ಯಾಲೆನ್ಸ್ ಕಳೆದುಕೊಳ್ಳಬಹುದು.ತಪ್ಪೂ ಸಹ ಮಾಡಬಹುದು.ಆದರೆ ಆದೇಶದ ಆವೇಶದಲ್ಲಿ ಅಧಿಕಾರಿಗಳು ಆಡಿದ ಮಾತುಗಳನ್ನು ಹಿಂತೆಗೆದುಕೊಳ್ಳಲಾಗುವುದಿಲ್ಲ ಈ ಮೇಲಿನ ಮಾತು ಸಾಧಾರಣವಲ್ಲ. ಗುಬ್ಬಚ್ಚಿ ಅತ್ಯಂತ ಸಣ್ಣ ಹಾಗೂ ನಿರಪರಾಧಿ ಹಕ್ಕಿ. ಅದನ್ನು ಕೊಲ್ಲಲು ಅಥವಾ ಹೆದರಿಸಲು ಬ್ರಹ್ಮಾಸ್ತ್ರದಂತಹ ಅತ್ಯಂತ ಶಕ್ತಿಶಾಲಿ ಹಾಗೂ ವಿನಾಶಕಾರಿ ಅಸ್ತ್ರವನ್ನು ಬಳಸುವ ಅವಶ್ಯಕತೆ ಇಲ್ಲ. ಸಣ್ಣ ಕಲ್ಲಿನಿಂದಲೇ ಅದನ್ನು ಓಡಿಸಬಹುದು. ಆದರೂ ಅದರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವುದು ಮೂರ್ಖತನ ಮತ್ತು ಅತಿಯಾದ ಅಹಂಕಾರದ ಸಂಕೇತ. ತಬ್ಬಲಿ ಎಂದರೆ ಯಾರು? ಏನೂ ಇಲ್ಲದ ಅಸಹಾಯಕ ಅಥವಾ ಬಡವ ,ನಿರ್ಗತಿಕ,ಅನಾಥ ಮಗು ಎನ್ನಬಹುದು. ಶಕ್ತಿಹೀನ, ರಕ್ಷಣೆಯಿಲ್ಲದ ಜೀವದ ಮುಂದೆ ತಮ್ಮ ಶಕ್ತಿ, ಅಧಿಕಾರ ಅಥವಾ ಶೌರ್ಯವನ್ನು ಪ್ರದರ್ಶಿಸುವುದು ಹೇಡಿತನವಾಗಿದೆ.ಅತಿಯಾದ ಶಕ್ತಿ ಪ್ರದರ್ಶನ ಮಾಡುವುದು ವ್ಯರ್ಥ. ತಮಗಿಂತ ತೀರಾ ಸಣ್ಣವರಾದ, ಅಸಹಾಯಕರಾದ ಜನರ ಮೇಲೆ ತಮ್ಮ ಇಡೀ ಅಧಿಕಾರ ಅಥವಾ ಬಲವನ್ನು ಬಳಸಿ ಜಿಗುಟುತನ ತೋರುವ ಜನರನ್ನು ಈ ಮೇಲಿನ ಮಾತು ಎಚ್ಚರಿಸುತ್ತದೆ. “ಇಷ್ಟೊಂದು ಸಣ್ಣ ವಿಷಯಕ್ಕೆ.,ಸಣ್ಣ ವ್ಯಕ್ತಿಗೆ., ಇಷ್ಟೊಂದು ದೊಡ್ಡ ರಾದ್ಧಾಂತ ಬೇಕೇ? ಎಂದು ಕೇಳಲು ಈ ಮಾತನ್ನು ಬಳಸಲಾಗುತ್ತದೆ.ನ್ಯಾಯ ಮತ್ತು ಮಾನವೀಯತೆಯ ಕೊರತೆಯಲ್ಲಿ ಕರಗುತ್ತದೆ .ಯಾಕೆಂದರೆ ಬಲಿಷ್ಠರು ಯಾವಾಗಲೂ ತಮ್ಮ ಸಮಾನರಾದವರ ಜೊತೆ ಹೋರಾಡಬೇಕೇ ಹೊರತು, ಧ್ವನಿಯಿಲ್ಲದ ಅಸಹಾಯಕರ ಮೇಲಲ್ಲ. ದುರ್ಬಲರನ್ನು ಮತ್ತಷ್ಟು ತುಳಿಯುವುದು ಶೌರ್ಯವಲ್ಲ, ಅದು ಕ್ರೌರ್ಯ ಎಂಬುದನ್ನು ಈ ಮಾತು ನೆನಪಿಸುತ್ತದೆ.ಪ್ರಸ್ತುತ ಸಂದರ್ಭಕ್ಕೆ ಅನ್ವಯವಾಗುವ ಗಾದೆ ಮಾತುಗಳುಇಂದಿನ ಸಮಾಜದಲ್ಲೂ ನೂರಕ್ಕೆ ನೂರು ನಿಜವಾಗುವುದು.ಕಛೇರಿಗಳಲ್ಲಿ ಮೇಲಧಿಕಾರಿಗಳು ಸಣ್ಣ ತಪ್ಪುಗಳಿಗಾಗಿ ಕೆಳಹಂತದ ನೌಕರರನ್ನು ಅತಿಯಾಗಿ ಶಿಕ್ಷಿಸಿದಾಗ,ರಾಜಕೀಯದಲ್ಲಿ ಸಾಮಾನ್ಯ ಜನರ ಮೇಲೆ ಕಾನೂನಿನ ಅಸ್ತ್ರಗಳನ್ನು ಅತಿಯಾಗಿ ಪ್ರಯೋಗಿಸಿದಾಗ,ಶ್ರೀಮಂತರು ಬಡವರನ್ನು ಹೆದರಿಸಿದಾಗ ಈ ಮಾತನ್ನು ಬಳಸಲಾಗುತ್ತದೆ.ಸಣ್ಣ ಮತ್ತು ಅಸಹಾಯಕ ಜೀವಿಗಳ ವಿರುದ್ಧ ಬಲಪ್ರದರ್ಶನ ಮಾಡುವುದು ವೀರನ ಲಕ್ಷಣವಲ್ಲ. ಶಕ್ತಿಯುಳ್ಳವರು ದುರ್ಬಲರನ್ನು ರಕ್ಷಿಸಬೇಕೇ ಹೊರತು, ಅವರ ಮೇಲೆ ಸವಾರಿ ಮಾಡಬಾರದು. *ಗುಬ್ಬಿ ಮ್ಯಾಲೆ ಬ್ರಹ್ಮಾಸ್ತ್ರವೆ, ತಬ್ಬಲಿ ಮ್ಯಾಲೆ ಹಾರಾಟವೆ?* ಎಂಬುದು ಕೇವಲ ಒಂದು ಮಾತಲ್ಲ, ಹೋಲಿಕೆಯಲ್ಲ; ಇದು ಮನುಷ್ಯನ ಅಹಂಕಾರ, ಅಧಿಕಾರದ ದುರ್ಬಳಕೆ ಮತ್ತು ಸಮಾಜದ ರಚನಾತ್ಮಕ ದೌರ್ಬಲ್ಯವನ್ನು ಅಗೆದು ತೋರಿಸುವ ಒಂದು ದಾರ್ಶನಿಕ ಸೂತ್ರವಾಗಿದೆ.ಶಕ್ತಿಯ ದುರಹಂಕಾರ ಮತ್ತು ವಿವೇಚನಾ ಶೂನ್ಯತೆಯಬ್ರಹ್ಮಾಸ್ತ್ರ ಎಂಬುದು ಇಡೀ ಜಗತ್ತನ್ನೇ ನಾಶಮಾಡಬಲ್ಲ ಅತ್ಯುನ್ನತ ದಿವ್ಯಾಸ್ತ್ರ. ಅದನ್ನು ಬಳಸಲು ತಪಸ್ಸು, ಅರ್ಹತೆ ಮತ್ತು ಅತ್ಯಂತ ಕಠಿಣವಾದ ಸಂದರ್ಭವಿರಬೇಕು. ಆದರೆ, ಎದುರಿಗಿರುವ ಶತ್ರು ಯಾರು? ಒಂದು ಪುಟ್ಟ ಗುಬ್ಬಚ್ಚಿ!ಇಲ್ಲಿ ‘ಗುಬ್ಬಿ’ ಮತ್ತು ‘ಬ್ರಹ್ಮಾಸ್ತ್ರ’ ಪರಸ್ಪರ ತದ್ವಿರುದ್ಧ ಧ್ರುವಗಳು. ಮನುಷ್ಯನಿಗೆ ಅತಿಯಾದ ಅಧಿಕಾರ ಅಥವಾ ಸಂಪತ್ತು ಸಿಕ್ಕಾಗ ಅವನಿಗೆ ವಿವೇಚನೆ ತಪ್ಪುತ್ತದೆ ಎಂಬುದನ್ನು ಇದು ತೋರಿಸುತ್ತದೆ.ಸಣ್ಣ ಸಮಸ್ಯೆಯನ್ನು ಪ್ರೀತಿ ಅಥವಾ ಸಮಾಧಾನದಿಂದ ಬಗೆಹರಿಸುವ ಬದಲು, ಅಹಂಕಾರದಿಂದ ದೊಡ್ಡ ರಾದ್ಧಾಂತ ಮಾಡಿಕೊಳ್ಳುವ ಮಾನಸಿಕತೆಯನ್ನು ಇದು ಎತ್ತಿ ತೋರಿಸುತ್ತದೆ. ನಿಜವಾದ ವೀರ ಅಥವಾ ಶಕ್ತಿವಂತ ತನ್ನ ಶಕ್ತಿಯನ್ನು ತನ್ನಷ್ಟೇ ಬಲಿಷ್ಠನಾದವನ ಎದುರು ಪ್ರದರ್ಶಿಸಬೇಕು. ಆದರೆ, ಸಮಾಜದಲ್ಲಿ ಅನೇಕರು ತಮಗಿಂತ ಮೇಲಿರುವವರ ಮುಂದೆ ಕೈಕಟ್ಟಿ ನಿಂತು, ತಮಗಿಂತ ಕೆಳಗಿರುವ ಅಥವಾ ಅಸಹಾಯಕರಾದ ತಬ್ಬಲಿಗಳ ಮೇಲೆ ತಮ್ಮ ಇಡೀ ಕೋಪ, ಅಧಿಕಾರವನ್ನು ಹರಿಸುತ್ತಾರೆ.ತಬ್ಬಲಿ ಮ್ಯಾಲೆ ಹಾರಾಟ ಚೀರಾಟ,ಕೂಗಾಟ,ಮಾಡುತ್ತಾ,ಶಕ್ತಿ ಇಲ್ಲದವರನ್ನು ನೋಡಿ ಆರ್ಭಟಿಸುವುದು.ಇದು ಶೌರ್ಯದ ಸಂಕೇತವಲ್ಲ, ಬದಲಿಗೆ ಇದು ಮನುಷ್ಯನ ಒಳಗಿರುವ ಹೇಡಿತನ. ಮತ್ತು ಕೀಳರಿಮೆಯನ್ನು ಮುಚ್ಚಿಕೊಳ್ಳಲು ಮಾಡುವ ಹತಾಶೆಯ ಪ್ರಯತ್ನವಾಗಿದೆ. ಸಾಮಾಜಿಕ ಮತ್ತು ರಾಜಕೀಯ ಆಯಾಮದ ಬುಡದಿಂದ ನೋಡಿದರೂ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ.ಕಾನೂನಿನ ದುರ್ಬಳಕೆಯಾಗುತ್ತದೆ. ದೊಡ್ಡ ದೊಡ್ಡ ಹಗರಣ ಮಾಡಿದವರು, ಕೋಟ್ಯಂತರ ರೂಪಾಯಿ ವಂಚಿಸಿದವರು ಕಾನೂನಿನ ಸಣ್ಣ ಸಣ್ಣ ಸರಕುಗಳನ್ನು ಬಳಸಿಕೊಂಡು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಆದರೆ, ಹೊಟ್ಟೆಪಾಡಿಗಾಗಿ ಸಣ್ಣ ತಪ್ಪು ಮಾಡಿದ ಬಡವನ ಮೇಲೆ ಇಡೀ ವ್ಯವಸ್ಥೆಯೇ ಮುಗಿಬೀಳುತ್ತದೆ. ಇದು ಬಡವನೆಂಬ ‘ಗುಬ್ಬಿ’ಯ ಮೇಲೆ ಕಾನೂನೆಂಬ ‘ಬ್ರಹ್ಮಾಸ್ತ್ರ’ ಪ್ರಯೋಗಿಸುವ ಜಗತ್ತಾಗಿದೆ.ಸಾವಿರಾರುಸಂಸ್ಥೆಗಳಲ್ಲಿ ಶೋಷಣೆಯಾಗುತ್ತವೆ. ಕಾರ್ಪೊರೇಟ್ ಜಗತ್ತಿನಲ್ಲಾಗಲಿ ಅಥವಾ ಸರ್ಕಾರಿ ಕಚೇರಿಗಳಲ್ಲಾಗಲಿ, ಮೇಲಧಿಕಾರಿಗಳು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಅಥವಾ ತಮ್ಮ ಅಹಂ ತೃಪ್ತಿಗಾಗಿ ಅತ್ಯಂತ ಕೆಳಮಟ್ಟದ ನೌಕರನನ್ನು ಬಲಿಪಶು ಮಾಡುತ್ತಾರೆ. ತಾತ್ವಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಿ ಅಧ್ಯಯನ ನಡೆಸಿದರೆ,ನಮ್ಮ ಜನಪದರು ಪ್ರಕೃತಿಯ ನಿಯಮವನ್ನು ಚೆನ್ನಾಗಿ ಅರಿತಿದ್ದರು. ಪ್ರಕೃತಿಯಲ್ಲಿ ಪ್ರತಿಯೊಂದು ಜೀವಕೂ ಬದುಕುವ ಹಕ್ಕಿದೆ.ಒಂದು ಜೀವಿಗೆ ಮತ್ತೊಂದು ಜೀವಿಯನ್ನು ನಾಶಮಾಡುವ ಶಕ್ತಿ ಇದೆ ಎಂದಮಾತ್ರಕ್ಕೆ ಅದನ್ನು ನಾಶಮಾಡುತ್ತಾ ಹೋಗುವುದು ಧರ್ಮವಲ್ಲ.”ಅಧಿಕಾರ ಮತ್ತು ಶಕ್ತಿ ಇರುವುದು ರಕ್ಷಿಸುವುದಕ್ಕಾಗಿಯೇ ಹೊರತು ಶಿಕ್ಷಿಸುವುದಕ್ಕಲ್ಲ” ಎಂಬುದು ಭಾರತೀಯ ಸಂಸ್ಕೃತಿಯ ಮೂಲ ತತ್ವವಾಗಿದೆ. ಬ್ರಹ್ಮಾಸ್ತ್ರವನ್ನು ಹೊಂದಿರುವವನಿಗೆ ಜಗತ್ತನ್ನು ರಕ್ಷಿಸುವ ಜವಾಬ್ದಾರಿಯೂ ಇರುತ್ತದೆ. ಅದನ್ನು ಬಿಟ್ಟು ಗುಬ್ಬಿಯ ಮೇಲೆ ಪ್ರಯೋಗಿಸಿದರೆ ಆ ಅಸ್ತ್ರಕ್ಕೂ ಅಪಚಾರ, ಅದನ್ನು ಬಳಸಿದವನಿಗೂ ಅಧಃಪತನ ಎಂಬುದು ಸತ್ಯ. ಜಾಗೃತಗೊಳಿಸುವ ಒಂದು ಪ್ರಶ್ನೆಯಿದೆ. ನಮಗೆ ಜೀವನದಲ್ಲಿ ಸ್ವಲ್ಪ ಅಧಿಕಾರ, ಹಣ ಅಥವಾ ಶಕ್ತಿ ಬಂದಾಗ ನಾವು ಅಹಂಕಾರದಿಂದ ಕುರುಡಾಗುತ್ತಿದ್ದೇವಾ? ನಮ್ಮ ಶಕ್ತಿಯನ್ನು ಧ್ವನಿಯಿಲ್ಲದವರನ್ನು ದಮನ ಮಾಡಲು ಬಳಸುತ್ತಿದ್ದೇವಾ? ಎಂದು ನಾವೇ ಆತ್ಮಾವಲೋಕನ ಮಾಡಿಕೊಳ್ಳಲು ಇದು ಪ್ರೇರೇಪಿಸುತ್ತದೆ. ಶಕ್ತಿವಂತನಾದವನು ‘ಸಂಹಾರಕ’ನಾಗಬಾರದು, ‘ಪಾಲಕ’ನಾಗಬೇಕು. ಎಂಬುದೇ ಈ ಗಾದೆ ಮಾತಿನ ಆಳವಾದ ಸಂದೇಶವಾಗಿದೆ. ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಅಂಕಣ ಸಂಗಾತಿ ಗಾದೆಗಳ ಗಣಿ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ನೀರಲ್ಲಿ ವಾಸ, ಮೊಸಳೆ ಜೊತೆ ದ್ವೇಷ ನಮ್ಮ ದಿನ ನಿತ್ಯದ ಬದುಕಿನಲ್ಲಿ ನಮ್ಮನ್ನು ನಾವೇ ಅರ್ಥಮಾಡಿಕೊಳ್ಳಬೇಕು.ಅಂದಾಗ ಮಾತ್ರ ಈ ಪ್ರಪಂಚದಲ್ಲಿ ಸ್ವಲ್ಪ ಮಟ್ಟಿಗೆ ಹೊಂದಾಣಿಕೆಯಿಂದ ಬದುಕಲು ಸಾಧ್ಯ.ಹಾಗೆಂದು ಕೆಟ್ಟದ್ದನ್ನು ಮಾಡುವುದು ಸರಿಯಲ್ಲ.ನಾವುಗಳು, ನಾವಾಗಿ ಜೀವಿಸಲು ಕೆಲವು ಸುಲಭ ಸುಲಲಿತ ಮಾರ್ಗಗಳಿವೆ.ಒಳ್ಳೆಯ ಮಾರ್ಗವನ್ನಾರಿಸಿಕೊಂಡು ನಮ್ಮ ದುಡಿತದಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು.ಇವತ್ತಿನ ದಿನಮಾನಗಳಲ್ಲಿ ಸರ್ಕಾರಿ ನೌಕರಿರಲಿ,ಕಂಪನಿ ಕೆಲಸಗಾರರಿರಲಿ,ಅಥವಾ ಕಾರ್ಮಿಕ ಕೆಲಸಗಾರರಿರಲಿ,ರೈತರೇ ಇರಲಿ.ರಾಜಕಾರಣಿಯಿರಲಿ,ಅಥವಾ ಇನ್ನಾರಾದರೂ ಇರಲಿ,ಬಾಳಿನ ದೋಣಿ ಸಾಗಿಸಲು ಒಂದು ದುಡಿಮೆಯಂತೂ ಬೇಕು.ತುಸು ತಡವಾದರೂ ಸರಿಯಾದ ರೀತಿಯಲ್ಲಿ ಪರಿಶ್ರಮಪಟ್ಟು ದುಡಿಮೆಯಲ್ಲಿ ತೃಪ್ತಿ ಕಾಣಬೇಕಾಗುತ್ತದೆ. ಮಾಡುವ ಕೆಲಸದಲ್ಲಿ ಸುಖ,ಆನಂದವನ್ನು ಅನುಭವಿಸಿ, ಸನ್ಮಾರ್ಗದೊಂದಿಗೆ ಕೆಲಸ ಕಾರ್ಯಗಳಲ್ಲಿ ನಿರತರಾಗಿ ನಿರಂತರವಾಗಿರಬೇಕು.ಒಮ್ಮೆಲೆ ದುಡಿದು ರಾತ್ರೋ ರಾತ್ರಿ ಶ್ರೀಮಂತರಾಗಲು ಸಾಧ್ಯವಿಲ್ಲ.ದುಡಿತದಲ್ಲಿ ನಾವೆಷ್ಟು ಆತುರಾತುರ ಮಾಡಿದರೂ ಕೋಳಿ ಕೂಗುವುದಿಲ್ಲ.ಬೆಳಕರಿಯುವುದಿಲ್ಲ.ಮಾಗಬೇಕು,ಕಾಯಬೇಕು,ಸಹನೆಯಂತೂ ತುಂಬಾನೆ ಬೇಕು.ನಾವು ಬೆಳಿಗ್ಗೆಯಿಂದ ಸಂಜೆಯವರೆಗೆ ಒಬ್ಬರ ಅಧೀನದಲ್ಲಿ ದುಡಿಯುತ್ತೇವೆಂದರೆ ಯಾವಾಗಲೂ ಯಾರಾದರೂ,ಯಾವುದೇ ಕೆಲಸದಲ್ಲಿ ಯಜಮಾನರು,ಕೆಲಸ ನೀಡಿದ ಸಂಸ್ಥೆಯವರು,ಹಿರಿಯ ಅಧಿಕಾರಿಗಳು ಬೈಯುತ್ತಾರೆ ಎಂದರೆ ಅವರಿಗೂ ಒತ್ತಡವಿರಬಹುದು? ಅವರು ಬೈದಾಡುತ್ತಾರೆ ಎಂದರೆ ನಾವೂ ಸಹ ಎದುರು ವಾದಿಸ ಬಾರದು.ಆ ಕೆಲಸದ ಬಗ್ಗೆ ಚರ್ಚೆ ಮಾಡಬೇಕಷ್ಟೆ.ಅದನ್ನು ಬಿಟ್ಟು ಏರು ದನಿಯಲ್ಲಿ ಎದುರುತ್ತರ ನೀಡಿ ಕೆಂಗಣ್ಣಿಗೆ ಗುರಿಯಾಗಬಾರದು. ಅನಾಹುತ,ಅನರ್ಥಗಳಾಗುತ್ತವೆ.ನಮ್ಮ ಸ್ವಾರ್ಥವೆ ಗೆಲ್ಲಬೇಕು ಎನ್ನುವುದು ನಮ್ಮದೇ ತಪ್ಪು.ಏಕೆಂದರೆ ನಮಗೆ ವಹಿಸಿದ ಕೆಲಸವೇ ಬಹು ಮುಖ್ಯ.ಪ್ರತಿಯೊಬ್ಬರಿಗೂ ಅವರದೆಯಾದ ವಿಚಾರ ಸರಣಿ,ಸಹಾನುಭೂತಿ,ಸಹಾಯ ಸಹಕಾರ ಇದ್ದೇ ಇರುತ್ತದೆ.ಅದಕ್ಕಾಗಿ ನಮ್ಮ ನಮ್ಮ ಕೆಲಸ ಮಾಡಲು,ಮತ್ತೊಬ್ಬರಿಂದ ಹೇಳಿಸಿಕೊಳ್ಳಬಾರದು.ಅವರು ಹೇಳುವತನಕ ಕೆಲಸ ಮಾಡದೆ ಇರೋದು ನಮ್ಮದೇ ಖಂಡಿತ ತಪ್ಪಾಗುತ್ತದೆ.ನಮ್ಮ ಕೆಲಸ ಕಾರ್ಯಗಳಲ್ಲಿ ಸಹಜತೆ,ದಕ್ಷತೆ , ಪ್ರಾಮಾಣಿಕತೆ, ಪ್ರಬುದ್ಧತೆ,ಮತ್ತು ಸ್ಪಷ್ಟತೆ ಇರಬೇಕು.ಹಾಗಿದ್ದರೆ ಮಾತ್ರ ಬಹು ದಿನಗಳವರೆಗೆ ದುಡಿಮೆಲ್ಲಿರುತ್ತೇವೆ.*ಮಾತು ಬೆಳ್ಳಿ,ಮೌನ ಬಂಗಾರ* ಎಂಬಂತೆ,ಮಾತು ಕಡಿಮೆ ಮಾಡಿ,ಹೆಚ್ಚಿನ ಮೌನದಲ್ಲಿದ್ದರೆ ಮನಸ್ಸಿಗೆ ಒಳ್ಳೆಯದು.ಮನೆಗೂ ಒಳ್ಳೆಯದು,ಸಮಾಜಕ್ಕೂ ಒಳ್ಳೆಯದು.ಆದರೆ ನಾವು ಮಾಡುವ ಕೆಲಸಕ್ಕಿಂತ ಮಾತಿಗೇ ಮೊದಲ ಸ್ಥಾನ ಕೊಟ್ಟರೆ, ಕಚೇರಿ ಎಂಬುದು ಸೋಮಾರಿತನದ ತಾಣವಾಗುವುದು.ಮಾತು ಅಧಿಕವಾದಷ್ಟು ನಮ್ಮೊಳಗೆ ಅಲ್ಪತನ ಹೊರಬರುತ್ತದೆ.ನಮ್ಮ ಕಚೇರಿಯಲ್ಲಿ ನಮ್ಮ ನಮ್ಮ ಸಿಬ್ಬಂಧಿಯವರು ಸಣ್ಣ ಸಣ್ಣ ವಿಷಯಕ್ಕೆ ಅಹಂಕಾರ ತೋರಿದರೆ ಅದಕ್ಕೆ ಹುಂಬತನ ಎನ್ನಬಹುದು.ಆದರೆ ಕಾಲು ಕೆದರಿ ವಾದಕ್ಕಿಳಿದರೆ…..? ಕೋಪದಿ ಬೈದಾಡಿ ಜೋರು ಮಾಡಿ ಕದನಕ್ಕಿಳಿದರೆ..?ಮೌನವಾಗಿರಬೇಕು. ಇಂತಹ ವಿಷಯಗಳು ಪ್ರತಿ ಸಂಸ್ಥೆಗಳಲ್ಲಿ,ಪ್ರತಿ ಕಚೇರಿಯಲ್ಲಿ ನಡೆದಿರುತ್ತವೆ.ಎಂದಿಗೂ ಬಗೆಹರಿಯುವುದಿಲ್ಲ.ಇಂತವರ ಜೊತೆ ಮಾತಿನ ಕಾಳಗ,ವಿವಾದ, ವಿಚಾರಣೆ,ಮಾಡುವುದರಲ್ಲಿ ಯಾವ ಅರ್ಥವಿಲ್ಲ. ವಿಷಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಅದೆಷ್ಟೋ ಮಾತುಗಳಿಗೆ ಮೌನವೆ ಸಮಾಧಾನವಾಗುವುದು.ಸಂದಾನವೂ ಆಗಬಲ್ಲದು.ಈ ಮೇಲಿನ ಮಾತು ಕೇವಲ ಜಲಚರಗಳ ಬಗೆಗಿನ ಮಾತಲ್ಲ; ಇದು ಮನುಷ್ಯ ಸಮಾಜ, ರಾಜಕೀಯ, ಉದ್ಯೋಗ,ಕೃಷಿ ಹಾಗೂ ದೈನಂದಿನ ಜೀವನದ ಅಸ್ತಿತ್ವದ ಹೋರಾಟವನ್ನು ಕುರಿತು ಹೇಳುವ ಅತ್ಯಂತ ಶ್ರೇಷ್ಠವಾದ ತತ್ತ್ವವಾಗಿದೆ.ಯಾವುದಾದರೂ ಒಂದು ಮಾತನ್ನು ಅರ್ಥಮಾಡಿಕೊಳ್ಳಲು ಮೊದಲು ಅದರ ಬಾಹ್ಯ ರೂಪವನ್ನು ನೋಡಬೇಕು. ಈ ಉಕ್ತಿಯು ಪ್ರಕೃತಿಯ ಸಹಜ ನಿಯಮವೊಂದನ್ನು ನಮಗೆ ಪರಿಚಯಿಸುತ್ತದೆ.ನೀರಿನಲ್ಲಿನರುವ ಜಲಚರಗಳಾದ ಮೀನು, ಕಪ್ಪೆ ,ಏಡಿ,ಅಥವಾ ಯಾವುದೇ ಸಣ್ಣ ಜಲಚರಗಳಿಗೆ ನೀರೇ ಆಸರೆ, ನೀರೇ ಜೀವನ. ನೀರನ್ನು ಬಿಟ್ಟು ಅವು ಕ್ಷಣಕಾಲವೂ ಬದುಕಲಾರವು.ಅತೀ ಬಲಶಾಲಿ ಜಲಚರಗಳಿದ್ದರೂ ಅವುಗಳೂ ಬದುಕುತ್ತಿವೆ. ನೀರಿನಲ್ಲಿ ಮೊಸಳೆಯೂ ವಾಸಿಸುತ್ತದೆ. ಮೊಸಳೆಯನ್ನು ‘ಜಲರಾಜ’ ಎನ್ನಬಹುದು. ನೀರಿನೊಳಗೆ ಮೊಸಳೆಗೆ ಸಿಗುವಷ್ಟು ದೈಹಿಕ ಶಕ್ತಿ ಮತ್ತು ಹಿಡಿತ ಬೇರೆ ಯಾವ ಪ್ರಾಣಿಗೂ ಸಿಗುವುದಿಲ್ಲ. ‘ಆನೆ ಬಿದ್ದರೂ ಕುದುರೆ ಬಿದ್ದರೂ ಮೊಸಳೆಗೆ ನೀರೇ ಬಲ’ ಎಂಬ ಇನ್ನೊಂದು ಗಾದೆಯೂ ಇದೆ. ನೀರಿನಲ್ಲೇ ಬದುಕಬೇಕಾದ ಸಣ್ಣ ಜೀವಿಯೊಂದು ಅದೇ ನೀರಿನಲ್ಲಿರುವ ಅತ್ಯಂತ ಶಕ್ತಿಶಾಲಿ ಮೊಸಳೆಯೊಂದಿಗೆ ಹಗೆತನ ಸಾಧಿಸಿದರೆ ಏನಾಗಬಹುದು? ಅದರ ಜೀವಕ್ಕೆ ಗಂಡಾಂತರ ಬರುವುದು ನಿಶ್ಚಿತ. ತನಗಿಂತ ನೂರು ಪಟ್ಟು ಬಲಶಾಲಿಯಾದ ಶತ್ರುವಿನ ಜಾಗದಲ್ಲೇ ಇದ್ದುಕೊಂಡು, ಅವನೊಂದಿಗೇ ದ್ವೇಷ ಸಾಧಿಸುವುದು ಆತ್ಮಹತ್ಯೆಗೆ ಸಮಾನ ಎಂಬುದು ಇದರ ನೇರ ಅರ್ಥ.ಈ ಮಾತಿನ ಹಿಂದೆ ಒಂದು ಶ್ರೇಷ್ಠವಾದ ಆಧ್ಯಾತ್ಮಿಕ ಚಿಂತನೆಯೂ ಅಡಗಿದೆ. ಇಲ್ಲಿ ‘ನೀರು’ ಎನ್ನುವುದನ್ನು ಈ ಜಗತ್ತು ಅಥವಾ ಸಂಸಾರಕ್ಕೆ ಹೋಲಿಸಬಹುದು. ‘ಮೊಸಳೆ’ ಎನ್ನುವುದನ್ನು ಪ್ರಕೃತಿಯ ನಿಯಮಗಳು, ಕಾಲ ಅಥವಾ ಭಗವಂತನ ಶಕ್ತಿಗೆ ಹೋಲಿಸಬಹುದು.”ನಾವು ಪ್ರಕೃತಿಯ ಮಡಿಲಲ್ಲಿ ಬದುಕುತ್ತಾ, ಪ್ರಕೃತಿಯ ನಿಯಮಗಳನ್ನೇ ಉಲ್ಲಂಘಿಸಿ ಬಾಳಲು ಸಾಧ್ಯವಿಲ್ಲ.”ಮನುಷ್ಯನು ಈ ಭೂಮಿಯ ಮೇಲೆ ಹುಟ್ಟಿದ್ದಾನೆ (ನೀರಲ್ಲಿ ವಾಸ). ಈ ಸೃಷ್ಟಿಯನ್ನು ನಿಯಂತ್ರಿಸುವ ಕೆಲವು ಅದೃಶ್ಯ ಶಕ್ತಿಗಳು, ಕರ್ಮ ಸಿದ್ಧಾಂತಗಳು ಮತ್ತು ಪ್ರಕೃತಿಯ ನಿಯಮಗಳಿವೆ (ಮೊಸಳೆ). ಮನುಷ್ಯ ತಾನೇ ಶ್ರೇಷ್ಠನೆಂದು ಅಹಂಕಾರದಿಂದ ಪ್ರಕೃತಿಯ ವಿರುದ್ಧ ತಿರುಗಿಬಿದ್ದರೆ, ಅಂತಿಮವಾಗಿ ವಿನಾಶ ಹೊಂದುವುದು ಅವನೇ. ಆದ್ದರಿಂದ, ನಾವು ಬಾಳುವ ಪರಿಸರ ಮತ್ತು ನಮ್ಮನ್ನು ಸಲಹುವ ಶಕ್ತಿಗಳೊಂದಿಗೆ ದ್ವೇಷ ಸಾಧಿಸದೆ, ಸಾಮರಸ್ಯದಿಂದ ಬದುಕಬೇಕು ಎಂಬ ಉದಾತ್ತ ಸಂದೇಶವಿದು.ಮಾನವ ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಗಾದೆ ಮಾತುಗಳು ದಿಕ್ಸೂಚಿಯಾಗಿವೆ. ಮನುಷ್ಯ ಸಂಘಜೀವಿ. ಅವನು ಸಮಾಜ ಅಥವಾ ಕುಟುಂಬವನ್ನು ಬಿಟ್ಟು ಒಂಟಿಯಾಗಿ ಬಾಳಲಾರನು.ನಾವು ಒಂದು ಹಳ್ಳಿಯಲ್ಲೋ ಅಥವಾ ನಗರದ ಗಲ್ಲಿಯಲ್ಲೋ ವಾಸಿಸುವಾಗ, ಸುತ್ತಮುತ್ತಲಿನ ಜನರೊಂದಿಗೆ ಸೌಹಾರ್ದತೆಯಿಂದ ಇರಬೇಕು. ಸಮಾಜದಲ್ಲಿ ಪ್ರಭಾವಶಾಲಿಯಾಗಿರುವ ವ್ಯಕ್ತಿಗಳೊಂದಿಗೆ,ರಾಜಕಾರಣಿಯೊಂದಿಗೆ, ಅನಗತ್ಯ ದ್ವೇಷ ಕಟ್ಟಿಕೊಂಡರೆ, ಕಷ್ಟಕಾಲದಲ್ಲಿ ನಮಗೆ ಯಾರೂ ನೆರವಾಗುವುದಿಲ್ಲ.ಒಂದು ಜಂಟಿ ಕುಟುಂಬದಲ್ಲಿ ವಾಸಿಸುವಾಗ, ಮನೆಯ ಯಜಮಾನ ಅಥವಾ ಪ್ರಮುಖ ರಾಜಕಾರಣಿ,ಅಧಿಕಾರಿ,ಅಥವಾ ಪುಡಿ ಗುಂಡಾಗಿ ರಿ ವ್ಯಕ್ತಿಯೊಂದಿಗೆ ಸದಾ ಕಲಹ ಹೂಡುತ್ತಿದ್ದರೆ ಆ ಮನೆಯಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಮನೆಯಲ್ಲೇ ವಾಸಿಸುತ್ತಾ, ಮನೆಯ ಮುಖ್ಯಸ್ಥನನ್ನೇ ದ್ವೇಷಿಸುವುದು ಸಂಸಾರದ ನೆಮ್ಮದಿಯನ್ನು ಕೆಡಿಸುತ್ತದೆ.ಆಧುನಿಕ ಜಗತ್ತಿನಲ್ಲಿ,ಈ ಮೋಬೈಲ್ ಕಾಲದಲ್ಲಿ ಒಳ್ಳೆಯ ಮಾತನ್ನು ತಿಳಿವಳಿಕೆಗಾಗಿ ಹೇಳಿದರೆ ನಗಾಡುವ ಪಟ್ಟೆ ಹುಡುಗರಿದ್ದಾರೆ.ಮೇಲಿನ ಮಾತು ಯುವ ಪೀಳಿಗೆಗೆ ಅತ್ಯಂತ ಅವಶ್ಯಕವಾದ ಪಾಠವನ್ನು ಕಲಿಸುತ್ತದೆ. ಕಛೇರಿಗಳಲ್ಲಿ ಅಥವಾ ಉದ್ಯೋಗ ಮಾಡುವ ಸ್ಥಳಗಳಲ್ಲಿ ಇದನ್ನು ನಾವು ಪ್ರತಿದಿನ ನೋಡಬಹುದು.ಮೇಲಾಧಿಕಾರಿಗಳೊಂದಿಗೆ ಸಂಬಂಧವನ್ನು ನಮ್ರತೆಯಿಂದ ಇಟ್ಟುಕೊಂಡಿರಬೇಕು.ನಾವು ಕೆಲಸ ಮಾಡುವ ಸಂಸ್ಥೆಯೇ ನಮಗೆ ಜೀವನೋಪಾಯ ಅಲ್ಲಿರುವ ನಮ್ಮ ಬಾಸ್ ಅಥವಾ ಮ್ಯಾನೇಜರ್ (ಮೊಸಳೆ) ಅಧಿಕಾರ ಹೊಂದಿರುವ ವ್ಯಕ್ತಿ.ಬುದ್ಧಿವಂತಿಕೆಯ ನಡವಳಿಕೆಯಿಂದ ತಲೆಬಾಗಿರಬೇಕಾಗುತ್ತದೆ. ಉದ್ಯೋಗದಲ್ಲಿರುವಾಗ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಆದರೆ, ಅದೇ ಸಂಸ್ಥೆಯಲ್ಲಿ ಸಂಬಳ ಪಡೆಯುತ್ತಾ, ಸಂಸ್ಥೆಯ ಮುಖ್ಯಸ್ಥರೊಂದಿಗೆ ನೇರ ಹಗೆತನ ಬೆಳೆಸಿಕೊಂಡರೆ ವೃತ್ತಿಜೀವನ ಹಾಳಾಗುತ್ತದೆ. ಇಲ್ಲಿ ಶರಣಾಗತಿ ಮುಖ್ಯವಲ್ಲ, ಬದಲಿಗೆ ‘ಸಮಯಪ್ರಜ್ಞೆ’ ಜಾಣತನ,ನಯವಿನಯತೆ, ಮತ್ತು ‘ರಾಜತಾಂತ್ರಿಕತೆ’ ಮುಖ್ಯವಾಗುತ್ತದೆ. ವ್ಯವಸ್ಥೆಯ ಒಳಗಿದ್ದುಕೊಂಡೇ ವ್ಯವಸ್ಥೆಯನ್ನು ಎದುರಿಸಬೇಕಾದರೆ ವಿವೇಕ ಇರಬೇಕೇ ಹೊರತು ಕೇವಲ ಆವೇಶವಲ್ಲ. ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಈ ಗಾದೆಯನ್ನು ಪಾಲಿಸದ ರಾಜರುಗಳು ಹೇಗೆ ನಾಶವಾದರು ಮತ್ತು ಹೇಗೆ ಪಾಲಿಸಿದರು, ಹೇಗೆ ಉಳಿದುಕೊಂಡರು ಎಂಬುದಕ್ಕೆ ಅಸಂಖ್ಯಾತ ಉದಾಹರಣೆಗಳು ಸಿಗುತ್ತವೆ. ಬಲಿಷ್ಠ ಸಾಮ್ರಾಜ್ಯಗಳ ಪಕ್ಕದಲ್ಲಿದ್ದ ಸಣ್ಣ ಪುಟ್ಟ ಸಂಸ್ಥಾನಗಳು, ಆ ಬಲಿಷ್ಠ ರಾಜರೊಂದಿಗೆ ಅನಗತ್ಯವಾಗಿ ಯುದ್ಧ ಸಾರಿದಾಗ ಧೂಳೀಪಟವಾದವು. ಆದರೆ, ಯಾರು ತಮ್ಮ ಮಿತಿಯನ್ನು ಅರಿತು, ಬಲಿಷ್ಠರೊಂದಿಗೆ ಸ್ನೇಹ ಹಸ್ತ ಚಾಚಿದರೋ ಅಥವಾ ತಂತ್ರಗಾರಿಕೆಯಿಂದ ವರ್ತಿಸಿದರೋ ಅವರು ತಮ್ಮ ಪ್ರಜೆಗಳನ್ನು ಮತ್ತು ಸಾಮ್ರಾಜ್ಯವನ್ನು ಉಳಿಸಿಕೊಂಡರು.ಅಂತರರಾಷ್ಟ್ರೀಯ ರಾಜಕೀಯದಲ್ಲಿ ಇಂದು ಜಾಗತಿಕ ಮಟ್ಟದಲ್ಲೂ ಅಷ್ಟೇ, ಒಂದು ಸಣ್ಣ ದೇಶವು ತನ್ನ ಪಕ್ಕದಲ್ಲೇ ಇರುವ ಸೂಪರ್ ಪವರ್ ದೇಶದೊಂದಿಗೆ ವೈರತ್ವ ಬೆಳೆಸಿಕೊಂಡರೆ ಆ ದೇಶದ ಆರ್ಥಿಕತೆ ಮತ್ತು ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ.*ನೀರಲ್ಲಿ ವಾಸ, ಮೊಸಳೆ ಜೊತೆ ದ್ವೇಷ* ಎಂಬ ಗಂಭೀರ ಮಾತು ನಮಗೆ ಹೇಡಿತನವನ್ನು ಕಲಿಸುವುದಿಲ್ಲ, ಬದಲಿಗೆ ಬದುಕುವ ಕಲೆಯಾದ ‘ವಿವೇಕ’ವನ್ನು ಕಲಿಸುತ್ತದೆ.ಶತ್ರು ಬಲಶಾಲಿಯಾಗಿದ್ದಾಗ ಆವೇಶದಿಂದ ಹೋರಾಡುವುದಕ್ಕಿಂತ, ನಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವವರೆಗೂ ತಾಳ್ಮೆಯಿಂದ ಇರಬೇಕು. ಬಲಹೀನನಾದವನು ಬಲಿಷ್ಠನ ಎದುರು ಜಾಣ್ಮೆಯಿಂದ ವರ್ತಿಸಬೇಕು.ನಾವು ಎಲ್ಲೇ ಇರಲಿ, ಯಾರೊಂದಿಗೇ ಇರಲಿ, ನಮ್ಮ ಸುತ್ತಮುತ್ತಲಿನ ವಾತಾವರಣ ಮತ್ತು ಅಲ್ಲಿನ ಪ್ರಭಾವಿ ಶಕ್ತಿಗಳೊಂದಿಗೆ ಅನಗತ್ಯ ಘರ್ಷಣೆಗೆ ಇಳಿಯಬಾರದು. ಬೆಂಕಿಯ ಒಟ್ಟಿಗೆ ಇದ್ದು ಸುಟ್ಟುಕೊಳ್ಳುವುದಕ್ಕಿಂತ, ಅದರ ಶಾಖವನ್ನು ಬಳಸಿಕೊಂಡು ಬದುಕುವುದನ್ನು ಕಲಿಯಬೇಕು. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಹೋಗುವವರೆ ನಿಜವಾದ ಜಾಣರು ಎಂಬುದೇ ಈ ಶ್ರೇಷ್ಠ ಗಾದೆಯ ಪರಮ ತಾತ್ಪರ್ಯ. ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಅಂಕಣ ಸಂಗಾತಿ ಗಾದೆಗಳ ಗಣಿ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ ಮನುಷ್ಯನಿಗೆ ಹೊನ್ನಿನ ರಾಶಿ ಸಿಕ್ಕರೂ ತೃಪ್ತಿಯಾಗುವುದಿಲ್ಲ.ಭವ ಬಂಧನದ ಆಸೆ-ಆಕಾಂಕ್ಷೆಗಳು ಪೆಡಂಭೂತವಾಗಿ ಕಾಡುತ್ತದೆ ಅವನಿಗೆ.ಪ್ರತಿಷ್ಠೆ,ತೋರಿಕೆಯ ಆಸೆ ನುಸುಳುತ್ತದೆ ಅವನ ಮನದೊಳಗೆ.ನೆಮ್ಮದಿಯು ತನ್ನಲ್ಲಿದ್ದರೂ ಅತೀ ನೆಮ್ಮದಿ ಪಡೆಯಲು ಅತ್ಯಂತ ಶ್ರೀಮಂತರ ಸಂಬಂಧಗಳನ್ನು ಬೆಳೆಸಲು ಮುಂದಾಗುತ್ತಾರೆ.ಅವರು ಒಳ್ಳೆಯವರೊ….ಕೆಟ್ಟವರೊ..ಮನುಷ್ಯತ್ವದಲ್ಲಿದ್ದಾರೊ….ಅಥವಾ ಅಮಾನುಷತ್ವದಲ್ಲಿ ಮುಳುಗಿದ್ದಾರೊ….ಯಾವುದೂ ಅರಿಯದೆ ಕೇವಲ ಅವರ ಸಿರಿತನದ ಮನೆತನವಿದ್ದರೆ ಸಾಕು,ಸಂಬಂಧ ಬೆಳೆಸಿಬಿಡುತ್ತಾರೆ.ಬಿಳಿಯಾಗಿ ಕಾಣುವುದೆಲ್ಲಾ ಹಾಲಲ್ಲ.ವೇಗವಾಗಿ ಓಡುವ ಮನಸ್ಸಿಗೆ ಏನೆಂದೂ ಕಾಣುವುದಿಲ್ಲ.ಈಗಿನ ಕಾಲದಲ್ಲಿ ಶ್ರೀಮಂತರ ಮನೆತನಗಳಲ್ಲಿ ನಯ ವಿನಯ ಮರೆಯಾಗಿದ್ದು ಮದ ಮತ್ಸರ,ಕೋಪ ತಾಪಗಳು ಮತ್ತು ವಿಶ್ವಾಸ ದ್ರೋಹಗಳೆ ಹಲವು ಬಗೆಯಾಗಿರುತ್ತವೆ.ನಾವುಗಳು ನಾವೇ ಆಗಿರಬೇಕು.ಯಾಕೆಂದರೆ ಜೀವನದಲ್ಲಿ ಅನೇಕ ರೀತಿಯ ಆಯ್ಕೆಗಳಿವೆ.ಅದೆಷ್ಟೋ ಆಯ್ಕೆಗಳನ್ನು ಪಡೆಯಲು ಪ್ರಯತ್ನ ಪಡುತ್ತಲೆ ಇರುತ್ತೇವೆ.ಸಣ್ಣ ಪುಟ್ಟ ಸಂತೋಷಗಳನ್ನು ಪೂರೈಸಿಕೊಳ್ಳಲು,ಸ್ವಾರ್ಥದಿಂದ ಆದರೂ ಸಾಧಿಸಿಕೊಳ್ಳುತ್ತೇವೆ.ನಾವೇ ತೋಡಿದ ತೆಗ್ಗಿನಲಿ ಒಂದಾನೊಂದು ದಿನ ಬೀಳುತ್ತೇವೆ.ಇದು ಸತ್ಯ.ಆತುರವೆಂದರೆ ಒಂದಲ್ಲ ಎರಡಲ್ಲ.,ಹತ್ತಾರು ಕೆಲಸ ಕಾರ್ಯಗಳ ಆತುರ.ತಾಳ್ಮೆ ಎಂಬುದು ಬಹು ದೂರ.ಮಾತಿನ ಆತುರ.,ದುಡುಕುವ ಆತುರ.,ಹತ್ತಾರು ವಿಷಯಗಳ ಆತುರ.,ಪ್ರತಿ ಕೆಲಸಕ್ಕೂ ಆತುರವಾದರೆ ಹಿತವೆನ್ನುವ ಪಲಿತಾಂಶದಲ್ಲಿ ಫೇಲು ಆಗಬಹುದು.ನಮ್ಮೆದುರಿಗೆ ಇರುವವರನ್ನು ಹಿಂದಿಕ್ಕಿ ಓಡಬೇಕು ಎನ್ನುವ ಆತುರ.ಈ ವಿಷಯದಲ್ಲಿ ನಾವುಗಳು ತುಸು ಯೋಚಿಸುವುದಿಲ್ಲ.ನಮಗೆ ನಮ್ಮ ಕೆಲಸವೇ ಬಹು ಮುಖ್ಯ.ಇನ್ನೊಬ್ಬರ ಕಷ್ಟ ಕಾರ್ಪಣ್ಯಗಳಿಂದ ನಮಗೆ ಆಗುವುದಾದರೂ ಏನಿದೆ? ಅನ್ನುವ ಸ್ವಭಾವವನ್ನು ನಾವುಗಳು ಹೊಂದಿರುತ್ತೇವೆ.ಇದೇ ಕಾರಣಕ್ಕೆ ಸೂಕ್ಷ್ಮವನ್ನು ಅರಿಯದೆ ಹೋಗುತ್ತೇವೆ.ಈ ಮಾತಿನ ಅರಿವು ಇಷ್ಟೆ. ಪ್ರಭಾವಿ ಅಥವಾ ಶ್ರೀಮಂತ ವ್ಯಕ್ತಿಗಳ ಜೊತೆ ನಿಕಟ ಸಂಬಂಧವಿದ್ದರೂ, ಅದರಿಂದ ನಮಗೆ ಯಾವುದೇ ಪ್ರಯೋಜನ ಸಿಗದ ಪರಿಸ್ಥಿತಿಯನ್ನು ವಿವರಿಸುತ್ತದೆ. ಅಳತೆಗೆ ಸಿಗದ ನೀರನ್ನು ಹೊಂದಿರುವ ಸಮುದ್ರದ ಜೊತೆ ನಮಗೆ ಸ್ನೇಹವಿದ್ದರೂ, ನಮಗೆ ಬೇಕಾದ ಒಂದು ಸಣ್ಣ ಹಿಡಿ ಉಪ್ಪು ಸಿಗದೇ ಹೋದರೆ ಆ ಸ್ನೇಹದಿಂದ ಏನು ತಾನೇ ಪ್ರಯೋಜನ? ಅಧಿಕಾರ ಮತ್ತು ಪ್ರಭಾವದ ನೆರಳಿನಡಿಯಲ್ಲಿನಮಗೆ ಸಮಾಜದಲ್ಲಿ ದೊಡ್ಡ ಸ್ಥಾನಮಾನ ಹೊಂದಿರುವವರು ಅಥವಾ ರಾಜಕಾರಣಿಗಳು ಪರಿಚಯವಿರಬಹುದು. ಲೋಕದ ದೃಷ್ಟಿಯಲ್ಲಿ ನಾವು ಅವರ “ಆಪ್ತರು” ಎನಿಸಿಕೊಳ್ಳಬೇಕು.ಅವರ ಜೊತೆ ನಿಕಟ ಸಂಪರ್ಕದಲ್ಲಿರಬೇಕು ಎಂದು ಸದಾ ಬಯಸುತ್ತೇವೆ. ಆದರೆ ನಮಗೆ ಒಂದು ಸಣ್ಣ ವೈಯಕ್ತಿಕ ಕೆಲಸ ಅಥವಾ ಸಹಾಯದ ಅವಶ್ಯಕತೆ ಬಂದಾಗ, ಆ ಪ್ರಭಾವಿ ವ್ಯಕ್ತಿಗಳು ನಮಗೆ ನೆರವಾಗದಿದ್ದರೆ ಅದು “ಸಮುದ್ರದ ನೆಂಟಸ್ತಿಕೆಯಂತೆಯೇ ಸರಿ.ವ್ಯರ್ಥ ಪ್ರಯತ್ನ ,ವ್ಯರ್ಥ ಹೆಮ್ಮೆಪಡುವುದು ಕ್ಷೀಣಿಸುತ್ತಿದೆ .ದೊಡ್ಡವರ ಪರಿಚಯವಿದೆ ಎಂದು ಜಗತ್ತಿಗೆ ಹೇಳಿಕೊಳ್ಳುವುದು ಸುಲಭ, ಆದರೆ ಆ ಸ್ನೇಹವು ಫಲ ನೀಡದಿದ್ದಾಗ ಅದು ಕೇವಲ ಒಂದು ಬೃಹದಾಕಾರದ ಬಲೂನಿನಂತೆ ಎಂದೆನಿಸಿ ಬಿಡುತ್ತದೆ.ನಿರೀಕ್ಷೆ ಮತ್ತು ವಾಸ್ತವವು ಸುಳ್ಳಾಗಿ ಟುಸ್ ಎನ್ನುವ ಮುಕ್ಭತ್ತಿಯಾಗಿಡುವುದು . ಸಮುದ್ರದ ಅಲೆಗಳು ದಡಕ್ಕೆ ಬಂದು,ಬಡಿದು ಹಿಂದಕ್ಕೆ ಹೋಗುವುದು ನೋಡಲು ಬಹು ಸುಂದರ, ಆದರೆ ಆ ಅಲೆಗಳು ಮನೆಯ ಬಾಯಾರಿಕೆಯನ್ನು ತಣಿಸಲಾರವು. ಶ್ರೀಮಂತಿಕೆ ಮತ್ತು ಬಡತನದ ನಡುವಿನ ವ್ಯತ್ಯಾಸವು ಬಹಳ ಆಳವೂ,ಅನಂತವೂ ಆಗಿದೆ.ಶ್ರೀಮಂತ ಕುಟುಂಬಗಳಲ್ಲಿ ಅಥವಾ ದೊಡ್ಡ ಉದ್ಯಮಿಗಳ ಅಡಿಯಲ್ಲಿ ಕೆಲಸ ಮಾಡುವ ಅನೇಕರನ್ನು ನಾವು ನೋಡುತ್ತೇವೆ. ಹೊರಗಿನ ಜನರಿಗೆ ಅವರು ಬಹಳ ಅದೃಷ್ಟವಂತರು ಎಂದು ಅನಿಸುತ್ತದೆ. ಆದರೆ ಆ ಶ್ರೀಮಂತರ ಮನೆಯಲ್ಲೇ ಕೆಲಸ ಮಾಡುವವರಿಗೆ ಸರಿಯಾದ ಸಮಯಕ್ಕೆ ಸಂಬಳವಿಲ್ಲದೆ ಅಥವಾ ಜೀವನದ ಮೂಲಭೂತ ಸೌಕರ್ಯಗಳಿಲ್ಲದೆ ಬಡತನದಲ್ಲಿ ಬೆಂದು,ಕೊನೆಗೆ ಅಂಥವರ ಮನೆಯ ಕೆಲಸವನ್ನು ಬಿಟ್ಟು ಹೋಗುವರು. ”ಕಲ್ಪವೃಕ್ಷದ ಕೆಳಗೆ ನಿಂತರೂ ಬೇಡಲು ಬಾಯಿಯಿಲ್ಲದಂತೆ,ಮೂಕನಾದಂತೆ., ಕೈಯಲ್ಲಿ ಪಾತ್ರೆಯಿಲ್ಲದಿದ್ದರೆ ಮಳೆ ನೀರು ಕುಡಿಯಲು ಸಾಧ್ಯವಿಲ್ಲ.” ಹಾಗೆಯೇ, ಶ್ರೀಮಂತಿಕೆಯ ಸನಿಹವಿದ್ದರೂ ಅದನ್ನು ಹಂಚಿಕೊಳ್ಳುವ ಗುಣ ಅಥವಾ ಅದನ್ನು ಪಡೆಯುವ ಯೋಗ ಎರಡೂ ಮುಖ್ಯವಾಗುತ್ತದೆ. ಜ್ಞಾನ ಮತ್ತು ಅನ್ವಯದ ಕೊರತೆಯಿಂದಈ ಮಾತನ್ನು ಕೇವಲ ಹಣಕ್ಕೆ ಸೀಮಿತಗೊಳಿಸದೆ, ಜ್ಞಾನಕ್ಕೂ ಅನ್ವಯಿಸಬಹುದು.ನಮ್ಮ ಮನೆಯಲ್ಲಿ ಸಾವಿರಾರು ಪುಸ್ತಕಗಳಿರಬಹುದು, ಅಥವಾ ನಮಗೆ ಮಹಾನ್ ವಿದ್ವಾಂಸರ ಪರಿಚಯವಿರಬಹುದು.ಆದರೆ ನಾವು ಆ ಜ್ಞಾನವನ್ನು ಬಳಸಿಕೊಳ್ಳದಿದ್ದರೆ ಅಥವಾ ನಮಗೆ ಜೀವನದ ಕಷ್ಟಕಾಲದಲ್ಲಿ ಆ ವಿದ್ವಾಂಸರಿಂದ ಒಂದು ತುಸುವಾದರೂ ಮಾರ್ಗದರ್ಶನ ಸಿಗದಿದ್ದರೆ, ಅದು ನಡುರಾತ್ರಿಯಲ್ಲಿ ಹಿಡಿದ ಕೈದೀವಿಗೆಯಂತೆ ಶೂನ್ಯವಾಗಿರುತ್ತದೆ. ಸಂಬಂಧಗಳಲ್ಲಿನ ಪೊಳ್ಳುತನವುಇಂದಿನ ಕಾಲದ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಸಾವಿರಾರು “ಸ್ನೇಹಿತರು” ಇರುತ್ತಾರೆ. ಇದು ಸಮುದ್ರದಷ್ಟು ದೊಡ್ಡ ಜಾಲವಾಗಿದೆ.ಆದರೆ ನಮಗೆ ಮಾನಸಿಕವಾಗಿ ನೋವಾದಾಗ ಅಥವಾ ಸಹಾಯದ ಹಸ್ತ ಬೇಕಾದಾಗ ಒಬ್ಬರೂ ಬಾರದಿದ್ದರೆ, ಈ ಸೋಷಿಯಲ್ ಮೀಡಿಯಾ ಸ್ನೇಹವು “ಸಮುದ್ರದ ನೆಂಟಸ್ತನಕ್ಕೆ” ಸಾಕ್ಷಿಯಾಗುತ್ತದೆ.ಸಮುದ್ರದ ನೀರು: ತುಂಬಾ ಇದೆ, ಆದರೆ ಕುಡಿಯಲು ಯೋಗ್ಯವಲ್ಲ.ಬಾಹ್ಯ ಸಡಗರವಿದ್ದಂತೆ.ಬರೀ ತೋರಿಕೆಗೆ ಕಡಲು.ಆ ಕಡಲಿನ ಪಕ್ಕದಲ್ಲಿ ಮನೆ ಮಾಡಿದವರಿಗೆ ಗೊತ್ತು ಸಾಧಕ ಬಾಧಕಗಳು.ಹಾಗೆನೆ ಉಳ್ಳವರ ಸಂಬಂಧಗಳಲ್ಲಿ ತೋರಿಕೆ ಜಾಸ್ತಿಯಾಗಿ ಅಂತರಂಗದ ಮಿಡಿತ ಕಡಿಮೆಯಾದಾಗ ಇಂತಹ ಗಾದೆ ಮಾತುಗಳು ಜನ್ಮತಾಳುತ್ತವೆ ಈ ಮಾತು ನಮಗೆ ಎರಡು ಬಹು ಮುಖ್ಯ ಪಾಠಗಳನ್ನು ಕಲಿಸಿಕೊಡುತ್ತದೆ.ಆತ್ಮನಿರ್ಭರತೆ ಮತ್ತು ಗುಣದ ಬೆಲೆ. ಬೇರೆಯವರ ಶ್ರೀಮಂತಿಕೆ ಅಥವಾ ಅಧಿಕಾರವನ್ನು ನೋಡಿ ನಮಗೆ ಏನೋ ಸಿಗುತ್ತದೆ ಎಂಬ ಭ್ರಮೆಯಲ್ಲಿ ಬದುಕಲು ಆಸೆಪಡುತ್ತೇವೆ. ಆ ಆಸೆಯು ಈಡೇರದಿದ್ದಾಗ ಆತ್ಮ ನಿರ್ಭರವಾಗಿ ಅವರ ಒಳ ಗುಣದ ಅರಿವು ಪ್ರತ್ಯಕ್ಷವಾದಾಗ ದೂರಾಗುತ್ತೇವೆ. ನಮಗೆ ಬೇಕಾದ ‘ಉಪ್ಪನ್ನು’ ನಾವೇ ಸಂಪಾದಿಸಿಕೊಳ್ಳಬೇಕು.ರಾಜರ ,ರಾಜಕಾರಿಣಿಗಳ,ಜಮೀನ್ದಾರರ ಅದೆಷ್ಟು ಸಂಪತ್ತು ಇದ್ದರೂ ನಮಗಾಗುವದೇನು? ಅದು ಯಾರಿಗಾದರೂ ಬಳಕೆಯಾಗುತ್ತದೆಯೇ ಎಂಬುದು ಮುಖ್ಯ. ಉಪ್ಪಿಲ್ಲದ ಊಟ ಹೇಗೆ ರುಚಿಸುವುದಿಲ್ಲವೋ, ಹಾಗೆಯೇ ಮಾನವೀಯತೆ ಇಲ್ಲದ ಮಹಾನ್ ವ್ಯಕ್ತಿಗಳ ಸ್ನೇಹವು ನಿರರ್ಥಕ.ಸಮುದ್ರದ ಹತ್ತಿರ ವಾಸಿಸಿದರೂ ಹನಿ ನೀರಿಗಾಗಿ ಪರದಾಡುವ ಸ್ಥಿತಿ ನಮಗೆ ಬಾರದಿರಲಿ. ನಾವು ಬೆಳೆಸುವ ಸ್ನೇಹವು ಕೇವಲ ಗಾತ್ರದಲ್ಲಿ “ಸಮುದ್ರದಂತೆ” ಇರದೆ, ಗುಣದಲ್ಲಿ “ಶುದ್ಧ ಜಲದಂತೆ” ಇರಲಿ. ಆಡಂಬರದ ಸಂಬಂಧಗಳಿಗಿಂತ ಕಷ್ಟಕ್ಕೆ ಬರುವ ಪುಟ್ಟ ಸಂಬಂಧವೇ ಮಿಗಿಲು. ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಇವರು (ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ) 1998 ರಿಂದ ಕೆ.ಇ.ಬಿ.ಇಲಾಖೆಯಲ್ಲಿ ಲೈನ್ ಮ್ಯಾನ್ ವೃತ್ತಿ ಪ್ರಾರಂಭ.ಪ್ರಸ್ತುತ ಗಂಗಾವತಿ ನಗರದಲ್ಲಿ ಮೀಟರ್ ರೀಡರ್ ಸೇವೆ ಸಲ್ಲಿಸುತ್ತಿದ್ದಾರೆ.ಪ್ರವೃತ್ತಿಯಲ್ಲಿ ಹವ್ಯಾಸಿ ಬರಹಗಾರರು.ಪ್ರಕಟಿತ ಪುಸ್ತಕಗಳು1)ನಾನಲ್ಲದ ನನ್ನೊಳಗೊಬ್ಬ(ಕವನ ಸಂಕಲನ)2)ನಕ್ಷತ್ರ ಗೊಂಚಲು(ಹಾಯ್ಕು ಗಳ ಸಂಕಲನ)3)ನಂಜು ನುಂಗಿದ ನಗು(ಕವನ ಸಂಕಲನ)4) ನಾಕು ತಾವಿನ ತಿರುವು(ಕವನ ಸಂಕಲನ)5)ನುಡಿದಷ್ಟೆ ನವಿರು(ವಿಮರ್ಶೆ ಕೃತಿ)ಪ್ರಶಸ್ತಿಗಳುಕವಿ ಭೂಷಣ ಪ್ರಶಸ್ತಿಅಡ್ವೈಸರ್ ಸಾಹಿತ್ಯ ಪ್ರಶಸ್ತಿ (ಮಂಡ್ಯ)ರುಕ್ಮಿಣಿ ಬಾಯಿ ಸಾಹಿತ್ಯ ಶ್ರೇಷ್ಠ ಪ್ರಶಸ್ತಿಚೆನ್ನಬಸವೇಶ್ವರ ಸಾಹಿತ್ಯ ಪ್ರಶಸ್ತಿಬೀಚಿ ಸಾಹಿತ್ಯ ಪ್ರಶಸ್ತಿರಾಜ್ಯ ಮಟ್ಟದ ಜನ್ನ ಕಾವ್ಯ ಪ್ರಶಸ್ತಿ (ಮಾಣಿಕ್ಯ ಪ್ರಕಾಶನ ಹಾಸನ)ಚೆನ್ನವೀರ ಕಣವಿ ರಾಜ್ಯ ಸಾಹಿತ್ಯ ಪ್ರಶಸ್ತಿ (ಧಾರವಾಡ)ಡಾ.ಸಿದ್ಧಲಿಂಗಯ್ಯ ರಾಜ್ಯ ಸಾಹಿತ್ಯ ಪ್ರಶಸ್ತಿ (ಬಸವನ ಬಾಗೇವಾಡಿ)ರಾಜ್ಯ ಮಟ್ಟದ ಹೊಯ್ಸಳ ಸಾಹಿತ್ಯ ಪ್ರಶಸ್ತಿ (ಹಾಸನ.ಮಾಣಿಕ್ಯ ಪ್ರಕಾಶನ)ಕವಿ ಕಾವ್ಯ ಪುರಸ್ಕಾರ (ಮಂಡ್ಯ) ರಾಜ್ಯದ ಅನೇಕ ಪ್ರತಿಷ್ಠಿತ ಸಂಘಟನೆಯಲ್ಲಿ ಕಾವ್ಯ ಕಮ್ಮಟ, ಕವಿಗೋಷ್ಠಿಯಲ್ಲಿ ಭಾಗಿಯಾಗಿದ್ದಾರೆ.ಸೇವೆಕಾವ್ಯಲೋಕ (ಗಂಗಾವತಿ )ಸಂಘಟನೆಯಲ್ಲಿ ಕಾರ್ಯದರ್ಶಿಯಾಗಿ 89 ಕವಿಗೋಷ್ಠಿಯನ್ನು ನಿರ್ವಹಣೆ ಮಾಡಿದ್ದಾರೆ.ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗಂಗಾವತಿಯಲ್ಲಿ 21ಕವಿಗೋಷ್ಠಿ ನಡೆಸಿದ್ದಾರೆ.ಸಿರಿಗನ್ನಡ ವೇದಿಕೆ ಗಂಗಾವತಿ ತಾಲುಕಾಧ್ಯಕ್ಷರಾಗಿ ಮೂರು ವರುಷ ಸೇವೆ ಮತ್ತು 15 ಕವಿಗೋಷ್ಠಿ ನಡೆಸಿದ್ದಾರೆ.ಶರಣ ಸಾಹಿತ್ಯ ಪರಿಷತ್ ಗಂಗಾವತಿ ಯಲ್ಲಿ ಕಾರ್ಯದರ್ಶಿಯಾಗಿ ಒಂದು ವರುಷ ಸೇವೆ ಮತ್ತು 30 ವಚನ ಶ್ರಾವಣ ನಿರ್ವಹಣೆ.ಸಧ್ಯದಲ್ಲಿಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಗಂಗಾವತಿಯ ತಾಲುಕು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ರಾಜ್ಯ ಮಟ್ಟದ ಕವಿ ಕಾವ್ಯ ಸಂಭ್ರಮ ಮತ್ತು ಕವಿ ಸಮ್ಮೇಳನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ.ಹಲವು ಕವಿಗೋಷ್ಠಿ ಯ ಅಧ್ಯಕ್ಷತೆ ವಹಿಸಿದ್ದಾರೆ.2019ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮುದುಗಲ್ಲನಲ್ಲಿ ಏರ್ಪಡಿಸಿದ ತಾಲುಕು ಕವಿ ಸಮ್ಮೇಳನದ ಅಧ್ಯಕ್ಷರಾಗಿ, ಅಧ್ಯಕ್ಷತೆ ನಿರ್ವಹಿಸಿದ ಹೆಮ್ಮೆ.
