ಅಂಕಣ ಸಂಗಾತಿ ಗಜಲ್ ಲೋಕ ಶೈಲಶ್ರೀಯವರ ಗಜಲ್ ಗಳಲ್ಲಿ ಪ್ರೇಮಿಗಳ ಕಲರವ… ಶೈಲಶ್ರೀಯವರ ಗಜಲ್ ಗಳಲ್ಲಿ ಪ್ರೇಮಿಗಳ ಕಲರವ… ಗಜಲ್ ಗಂಗೆ ಇಂದು ಸಂಸಾರದುದ್ದಕ್ಕೂ ಹರಿಯುತಿದ್ದಾಳೆ, ರಸಿಕರ ತನು-ಮನವನ್ನು ಸಂತೈಸುತ್ತ… ಇಂಥಹ ಗಜಲ್ ಕುರಿತು ಮಾತನಾಡುತಿದ್ದರೆ ಬೆಳದಿಂಗಳ ರಾತ್ರಿಯ ಫೀಲ್ ಆಗುತ್ತೆ…!! ಆ ಅನುಭಾವದ ಅನುಭವವನ್ನು ತಮ್ಮೊಂದಿಗೆ ಹಂಚಿಕೊಳ್ಳೋಕೆ ಖುಷಿಯೆನಿಸುತ್ತಿದೆ. ಕರುನಾಡಿನ ಪ್ರಸಿದ್ಧ ಸುಖನವರ್ ಅವರ ಪರಿಚಯದೊಂದಿಗೆ ತಮ್ಮ ಮುಂದೆ ಬರುತ್ತಿದ್ದೇನೆ. ಪ್ರೀತಿಯಿಂದ ತಾವೆಲ್ಲರೂ ಗಜಲ್ ಚಾಂದನಿಯನ್ನು ಸ್ವಾಗತಿಸುವಿರೆಂಬ ಭಾವನೆಯೊಂದಿಗೆ ನನ್ನ ಲೆಕ್ಕಣಿಕೆಗೆ ಚಾಲ್ತಿ ನೀಡುವೆ…!! “ಒಂದು ಮುಖವಿದೆ ಯಾವಾಗಲು ಕಣ್ಣುಗಳಲ್ಲಿ ನೆಲೆಸಿರುತ್ತದೆ ಒಂದು ಕಲ್ಪನೆಯಿದೆ ಅದು ಒಂಟಿಯಾಗಿರಲು ಬಿಡುವುದಿಲ್ಲ” –ಜಾವೇದ್ ನಸೀಮಿ ‘ಪ್ರೀತಿ’ ಎನ್ನುವ ಎರಡುವರೆ ಅಕ್ಷರ ಈ ಸಂಸಾರವನ್ನೆ ಆಳುತ್ತಿದೆ. ಇದನ್ನು ಅಭಿವ್ಯಕ್ತಿ ಪಡಿಸುವುದು, ಅನುಭವಿಸುವುದು ನಿಜಕ್ಕೂ ಸುಂದರವಾಗಿರುತ್ತದೆ. ಇಂಥಹ ಪ್ರೀತಿಯು ನವಿರಾದ ತುಟಿಗಳು ಮತ್ತು ಬೆರಳುಗಳಿಂದ, ಮೃದುವಾದ ದಿಂಬುಗಳಿಂದ ಹೃದಯವಂತರನ್ನು ಗಾಯಗೊಳಿಸುತ್ತದೆ. ಈ ಯೂನಿಕ್ ಪ್ರೀತಿಯನ್ನೇ ಉಸಿರಾಡುತ್ತಿರುವ ಜಗಮೆಚ್ಚಿದ ಕಾವ್ಯ ಪ್ರಕಾರವೆಂದರೆ ‘ಗಜಲ್’. ಗಜಲ್ ಎನ್ನುವುದು ದ್ವೀಪವಲ್ಲ, ಇದೊಂದು ಸೇತುವೆ. ಇದು ಕೇವಲ ಹಡಗಾಗಿರದೆ ಜೀವದ ನೌಕೆಯಾಗಿದೆ. ಈ ದಿಸೆಯಲ್ಲಿ ಗಜಲ್ ಎಂದರೆ ಈಜು ಅಲ್ಲ, ಪವಿತ್ರವಾದ ನೀರು. ನಿಜಕ್ಕೂ ಗಜಲ್ ಬರೆಯುವುದೆಂದರೆ, ಓದುವುದೆಂದರೆ ನಾವು ಜಳಕಕ್ಕೂ ಮುಂಚೆ ಬಟ್ಟೆಗಳನ್ನು ಬಿಚ್ಚಿದಂತೆ!! ನಾವು ಬಟ್ಟೆ ಒದ್ದೆಯಾಗುತ್ತವೆ ಎಂಬ ಭಯದಿಂದ ಬಟ್ಟೆ ಕಳಚುವುದಿಲ್ಲ, ಬದಲಿಗೆ ನೀರು ನಮ್ಮನ್ನು ಸ್ಪರ್ಶಿಸಲಿ ಎಂಬ ಅನನ್ಯ ಬಯಕೆಯಿಂದ. ನಾವು ಸಂಪೂರ್ಣವಾಗಿ ನೀರಿನ ಆಹ್ಲಾದತೆಯಲ್ಲಿ ಮುಳುಗಲು ಮತ್ತು ಹೊಸ ಹುಮ್ಮಸ್ಸಿನೊಂದಿಗೆ ಹೊರಹೊಮ್ಮಲು ಬಯಸುತ್ತೇವೆ. ಈ ಕಾರಣಕ್ಕಾಗಿಯೇ ಗಜಲ್ ಮೇಲಿನ ನನ್ನ ಪ್ರೀತಿ ಯಾವಾಗಲೂ ಗಿರಿ-ಶಿಖರದಂತೆ ಆಗಸದತ್ತ ಮುಖ ಮಾಡಿಯೇ ಇರುತ್ತದೆ. ಸ್ತಬ್ಧ ಮತ್ತು ನಿರಂತರ. ಗಜಲ್ ಪ್ರೀತಿಯಲ್ಲೊಂದು ಅಮಲು ಇದೆ. ಅದಕ್ಕೇ ಈ ಜಗತ್ತು ಗಜಲ್ ನ ಮಧುಶಾಲೆಯಲ್ಲಿ ಜಗದ ಜಂಜಡವನ್ನು ಮರೆತು ಮುಳುಗುತಿದೆ. ಈ ಗಜಲ್ ಪ್ರೀತಿ ಸಹೃದಯಿಗಳನ್ನು ಹೃದಯವಂತರನ್ನಾಗಿಸುತ್ತದೆ. ಕರುನಾಡಿನಲ್ಲಿ ಇಂಥಹ ಹೃದಯವಂತರಿಗೇನೂ ಕೊರತೆಯಿಲ್ಲ. ಇಂತಹ ಗಜಲ್ ಗೋ ಅವರಲ್ಲಿ ಶ್ರೀಮತಿ ಶೈಲಶ್ರೀ ಶಶಿಧರ್ ಅವರೂ ಒಬ್ಬರು. ಶ್ರೀಮತಿ ಶೈಲಶ್ರೀ ಶಶಿಧರ್ ಅವರು ಶ್ರೀ ಗೋಪಾಲ್ ರಾವ್ ಮತ್ತು ವನಜಾಕ್ಷಿ ರಾವ್ ದಂಪತಿಗಳ ಮಗಳಾಗಿ ದೊಡ್ಡ ಕೂಡು ಕುಟುಂಬದಲ್ಲಿ ಉಡುಪಿ ಜಿಲ್ಲೆಯ ಮಟ್ಟು ಗ್ರಾಮದಲ್ಲಿ ಜನಸಿದ್ದಾರೆ. ಇವರ ತಂದೆಯವರು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಹೋಟೆಲ್ ವ್ಯವಹಾರದಲ್ಲಿದ್ದು ನಂತರ ಉಡುಪಿಗೆ ಬಂದು ನೆಲೆಸಿದರು. ಇವರ ವಿದ್ಯಾಭ್ಯಾಸವು ಉಡುಪಿಯಲ್ಲಾಗಿದೆ. ಶಾಲಾ ದಿನಗಳಿಂದಲೂ ಕಾವ್ಯ, ಕತೆ, ಕಾದಂಬರಿ… ಓದುವ ಹವ್ಯಾಸವನ್ನು ಹೊಂದಿದ್ದು, ಕ್ರಮೇಣವಾಗಿ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಮುಂದೆ ಪದವಿ ವ್ಯಾಸಂಗ ಪೂರ್ಣ ಆಗುವುದರೊಳಗೆ ವಿವಾಹವಾಗಿ, ತುಂಬು ಸಂಸಾರದ ಜವಾಬ್ದಾರಿ ಹೊತ್ತರು. ಬರಹಕ್ಕೆ ವಯಸ್ಸಿನ ಹಂಗಿಲ್ಲ ಎನ್ನುವಂತೆ ತಮ್ಮ ೪೬ ನೇ ವಯಸ್ಸಿಗೆ ಕವನ ಬರೆಯಲು ಆರಂಭಿಸಿ ಇಲ್ಲಿಯವರೆಗೆ ಸುಮಾರು ೬೦೦ಕ್ಕೂ ಹೆಚ್ಚು ಕವಿತೆಗಳನ್ನು ಬರೆದಿದ್ದಾರೆ. ಮುಂದೆ ಗಜಲ್ ವ್ಯಾಟ್ಸಪ್ ಬಳಗಗಳಿಂದ ಗಜಲ್ ಸಾಹಿತ್ಯದಲ್ಲಿ ಅಭಿರುಚಿಯನ್ನು ಹೊಂದಿ ಗಜಲ್ ಕೃಷಿಯನ್ನು ಮಾಡುತ್ತಿದ್ದಾರೆ. ಅದರ ಫಲವೆಂಬಂತೆ ಅಸಂಖ್ಯಾತ ಗಜಲ್ ಗಳನ್ನು ಬರೆಯುತ್ತ ಕನ್ನಡ ಗಜಲ್ ಪರಂಪರೆಗೆ “ಶಶಿಯಂಗಳದ ಪಿಸುಮಾತು” ಎಂಬ ಪ್ರಥಮ ಸೆಹ್ ಗಜಲ್ ಸಂಕಲನ ಕೊಡುಗೆಯಾಗಿ ನೀಡಿದ್ದು ಇವರ ಹೆಗ್ಗಳಿಕೆಯಾಗಿದೆ. ಇದರೊಂದಿಗೆ “ರಾಧಾ ಮೋಹನ ಪ್ರೇಮಾನುರಾಗ” ಎಂಬ ರಾಧೆ ಮೋಹನರ ಪ್ರೇಮದ ಗಜಲ್ ಗಳು ಮದ್ದಣ್ಣ ಮನೋರಮೆ ಅವರ ಸಂಭಾಷಣೆಯನ್ನು ನೆನಪಿಸುವಂತಿವೆ. ಇವರ ಎರಡೂ ಗಜಲ್ ಸಂಕಲನಗಳು ಪ್ಯೂರ್ ಪ್ರೇಮಭರಿತವಾಗಿದ್ದು, ಗಜಲ್ ನ ಮೂಲ ಆಶಯವನ್ನು ಹೊಂದಿವೆ. ಇದಕ್ಕೆ ಇವರು ಬಳಸುವ ತಖಲ್ಲುಸನಾಮ ‘ಶಶಿ’ ಕೂಡ ಅಪ್ಯಾಯಮಾನವಾಗಿ ಹೊಂದಿಕೊಂಡಿದೆ. ಪ್ರಸ್ತುತವಾಗಿ ಶ್ರೀಯುತರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರ ಕಾವ್ಯ, ಗಜಲ್ ಹಾಗೂ ಇನ್ನಿತರ ಕಾವ್ಯ ಪ್ರಕಾರಗಳು ಅಂತರ್ಜಾಲ ಹಾಗೂ ದೈನಂದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಲವು ಗಜಲ್ ಗೋಷ್ಠಿ, ಕಾವ್ಯ ಗೋಷ್ಠಿಗಳಲ್ಲಿ ಭಾಗವಹಿಸಿರುವ ಇವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿದ್ದಾರೆ. ಈ ಕ್ರಿಯಾಶೀಲತೆಯನ್ನು ಗುರುತಿಸಿ ನಾಡಿನ ಸಂಘ-ಸಂಸ್ಥೆಗಳು ಗೌರವಿಸಿ ಸತ್ಕರಿಸಿವೆ. ಮನುಷ್ಯ ತಾನು ಎಷ್ಟೇ ಬೌದ್ಧಿಕವಾಗಿ ದಾಪುಗಾಲಿಟ್ಟರೂ ಅದಕ್ಕೆ ಮೆರುಗು ಬರುವುದೇ ಭಾವನೆಗಳ ಗೊಂಚಲಿನಿಂದ!! ಸಾರಸ್ವತ ಲೋಕದಲ್ಲಿ ಅಸಂಖ್ಯಾತ ಕಾವ್ಯ ಪ್ರಕಾರಗಳಿವೆ. ಅವುಗಳಲ್ಲಿ ಮನಸ್ಸಿನ ಆಳದಿಂದ ಉದಯಿಸುವ ಭಾವಾಂತರಂಗದ ಜೋಕಾಲಿ, ತಂಬೆಲರೆಂದರೆ ಗಜಲ್. ಇದು ಕಂಬನಿಯನ್ನು ಪ್ರೀತಿಸುತ್ತ ಬೆಚ್ಚನೆಯ ಆಲಿಂಗನದಿ ಭಾರವಾದ ಹೃದಯಗಳನ್ನು ಸಂತೈಸುತ್ತದೆ. ಈ ನೆಲೆಯಲ್ಲಿ ಗಮನಿಸಿದಾಗ ಗಜಲ್ ಇಡೀ ಮನುಕುಲದ ಸಂಬಂಧಗಳ ಛಾವಣಿಯಾಗಿದೆ. ಇಂಥಹ ಗಜಲ್ ಇಂದು ಆಲದ ಮರದಂತೆ ನಾಡಿನಾದ್ಯಂತ ಪಸರಿಸಿದೆ. ಗಜಲ್ ಗೋ ಶೈಲಶ್ರೀ ಯವರು ತಮ್ಮ ಗಜಾಲ್ ಗಳನ್ನು ಪ್ರೀತಿಯಿಂದ ಅಲಂಕರಿಸಿದ್ದಾರೆ, ಓದುಗರ ಹಾದಿಯುದ್ದಕ್ಕೂ ಪ್ರೀತಿಯ ಮದಿರೆಯನ್ನು ಹಂಚುತ್ತ ; ಪ್ರೀತಿ-ವಿರಹವನ್ನೆ ಪೂಜಿಸುತ್ತ ಬಂದಿದ್ದಾರೆ. ಇವರ ಗಜಲ್ ಗಳ ಪ್ರೀತಿಯಲ್ಲಿ ವಿರಹವಿದೆ, ಒಂಟಿತನವಿದೆ, ದಾಂಪತ್ಯದ ಅಮೃತವಿದೆ, ಸಿಹಿಯಾದ ದ್ರೋಹವಿದೆ. ಇವುಗಳೊಂದಿಗೆ ಪ್ರೀತಿಯಲ್ಲಿ ಸಾಕ್ಷಾತ್ಕಾರವೂ ಇದೆ. ಪ್ರೇಮಿಗಳ ಪಿಸುಮಾತು, ಏಕಾಂತದ ನಾದ, ಹೃದಯಗಳ ಸಮಾಗಮದಿಂದ ತುಂಬಿದ ಇವರ ಗಜಲ್ ಗಳು ಓದುಗರ ಪ್ರೇಮಮಿಡಿತವನ್ನು ಜಾಗೃತಗೊಳಿಸುತ್ತದೆ.——————— ಡಾ. ಮಲ್ಲಿನಾಥ ಎಸ್. ತಳವಾರ ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ
ಅಂಕಣ ಸಂಗಾತಿ ಗಜಲ್ ಲೋಕ ಅಭಿಜ್ಞಾರವರ ಗಜಲ್ ಗಳಲ್ಲಿ ಪದ ಲಾಲಿತ್ಯ… ಹೇಗಿದ್ದೀರಾ, ಏನು ಮಾಡ್ತಾ ಇದ್ದೀರಾ ಗಜಲ್ ಪ್ರೇಮಿಗಳೆ, ಗಜಲ್ ಗುರುವಾರಕ್ಕಾಗಿ ಕಾಯುತ್ತಿರುವಿರೊ.. ತುಂಬಾ ಸಂತೋಷವಾಗುತ್ತಿದೆ, ತಮ್ಮೆಲ್ಲರ ಗಜಲ್ ಪ್ರೀತಿಯ ಕಂಡು! ತಮಗೆಲ್ಲರಿಗೂ ಗಜಲ್ ಪಾಗಲ್ ನ ದಿಲ್ ಸೇ ಸಲಾಮ್…ತಮ್ಮೆಲ್ಲರ ಪ್ರೀತಿಗೆ ಸೋತು ಪ್ರತಿ ವಾರದಂತೆ ಈ ವಾರವೂ ಸಹ ಓರ್ವ ಗಜಲ್ ಗೋ ಒಬ್ಬರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬಂದಿರುವೆ. ಸ್ವಾಗತಿಸುವಿರಲ್ಲವೇ….!! “ನಾಲ್ಕು ದಾರಿ ಕೂಡುವಲ್ಲಿ ಕಲ್ಲಿನಿಂದ ಜಜ್ಜಿ ಮಹಿಳೆಯನ್ನು ಕೊಂದರು ಎಲ್ಲರೂ ಸೇರಿ ಅವಳೇನು ತಪ್ಪು ಮಾಡಿದ್ದಳು ಎಂದು ಯೋಚಿಸಿದರು” –ಜಿಯಾ ಜಮೀರ್ ಅಳುವ ಕಂದನನ್ನು ಸಂತೈಸುವ ಜೋಗುಳ ಹಾಡುಗಳೊಂದಿಗೆ ಸಾಹಿತ್ಯ, ಸಂಗೀತ ಮತ್ತು ಕಲೆ ರೂಪುಗೊಂಡಿವೆ. ಪದಗಳಲ್ಲಿ ಹೇಳಲಾಗದ ಮತ್ತು ಮೌನವಾಗಿರಲು ಅಸಾಧ್ಯವಾದಾಗ ಸಂಗೀತವು ಉದಯಿಸುತ್ತದೆ. ಇದರ ಪ್ಯಾರಲಲ್ ಆಗಿ ಅಕ್ಷರದ ಅಕ್ಕರೆಯ ತೊಟ್ಟಿಲು ನುಲಿಯುತ್ತಿರುತ್ತದೆ. ಈ ನಿಟ್ಟಿನಲ್ಲಿ ಸಾಹಿತ್ಯ ಎನ್ನುವುದು ಹಲವು ಆಯಾಮಗಳಿಂದ, ವೈವಿಧ್ಯಮಯ ಸಂವೇದನೆಗಳಿಂದ, ಸಮಾಜಮುಖಿ ಚಿಂತನೆಗಳಿಂದ ರೂಪುಗೊಳ್ಳುತ್ತದೆ. ಇದೊಂದು ಭಾಷೆಯ ಉತ್ಪಾದನೆಯ ಪುನರ್ ಸೃಷ್ಟಿ. ಈ ದಿಸೆಯಲ್ಲಿ “Without literature, life is hell” ಎಂಬ ಚಾರ್ಲ್ಸ್ ಬುಕೋವಸ್ಕಿ ಯವರ ಮಾತು ಸಾಹಿತ್ಯದ ಮಹತ್ವವನ್ನು ಸಾರುತ್ತದೆ. ಇದು ಕೇವಲ ಮನೋರಂಜನೆಯ, ಸಮಯ ಕಳೆಯುವ ಸಾಧನವಲ್ಲ. ಇದು ನಮ್ಮನ್ನು ನಮ್ಮ ಪೂರ್ವಜರೊಂದಿಗೆ ಮುಖಾಮುಖಿಯಾಗುವಂತೆ ಮಾಡುತ್ತದೆ. ಜೊತೆಗೆ ಹಳೆಯ ಮತ್ತು ಹೊಸ ತಲೆಮಾರಿನ ಕೊಂಡಿಯಾಗಿ ಸಮಾಜದಲ್ಲಿ ಪಾರಿವಾಳವನ್ನು ಹಾರಿಸುತ್ತದೆ. ಈ ನೆಲೆಯಲ್ಲಿ “The reading of all good books is like conversation with the finest men of past centuries” ಎಂಬ ರೇನೆ ಡೆಸ್ಕಾರ್ಟ್ಸ್ ರವರ ಮಾತನ್ನು ಇಲ್ಲಿ ಅನುಲಕ್ಷಿಸಬಹುದು. ಈ ಸಾಹಿತ್ಯದ ಹೃದಯ ಭಾಗವಾದ ಕಾವ್ಯವು ಹಕ್ಕಿಯಂತೆ ಹಾರಾಡುತ್ತ ಗಡಿಗಳನ್ನು ನಿರ್ಲಕ್ಷಿಸುತ್ತ, ಬಂಡಾಯ, ಕ್ರಾಂತಿ ಮತ್ತು ಪ್ರಜ್ಞೆಯನ್ನು ಹೆಚ್ಚಿಸುವ ಜೀವಾಳವಾಗಿದೆ. ಇಂಥಹ ಕಾವ್ಯದ ಓಘ ಪರಪಂಚದ ಹೆಚ್ಚಿನ ಭಾಷೆಗಳಲ್ಲಿ ಕಾಣುತ್ತೇವೆ. ಅರಬ್ ನ ‘ಗಜಲ್’ ಎನ್ನುವ ಶಬ್ದ ಪರ್ಷಿಯನ್ ನ ಸಾಂಸ್ಕೃತಿಕ ಮಡಿಲಲ್ಲಿ ಬೆಳೆದು ಇಡೀ ಮನುಕುಲದ ನಿದ್ದೆಯನ್ನು ಕಂಗೆಡಿಸಿರುವುದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ. ಈ ನೆಲೆಯಲ್ಲಿ ‘ಗಜಲ್’ ಎಂದರೆ ನೋವಿನ ಜನ್ಹಾಜವನ್ನು ಹೊತ್ತು ಸಾಗುತ್ತಿರುವ ಹೃದಯವಂತೆ!! ಈ ಹೃದಯವಂತೆಯನ್ನು ಪ್ರೀತಿಸುತ್ತ, ಗಜಲ್ ಗೋಯಿಯಲ್ಲಿ ಸಕ್ರಿಯರಾಗಿರುವ ಅಸಂಖ್ಯಾತ ಗಜಲ್ ಅವರುಗಳಲ್ಲಿ ಶ್ರೀಮತಿ ಅಭಿಜ್ಞಾ ಪಿ.ಎಮ್ ಗೌಡ ಅವರೂ ಒಬ್ಬರು. ಶ್ರೀಮತಿ ಅಭಿಜ್ಞಾ ಪಿ ಎಮ್ ಗೌಡ ಅವರು ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಪ್ಪಟ ರೈತ ಕುಟುಂಬದ ಶ್ರೀ ರಾಮಣ್ಣ ಮತ್ತು ಶ್ರೀಮತಿ ಪುಟ್ಟಮ್ಮ ದಂಪತಿಗಳ ಮಗಳಾಗಿ ಜನಿಸಿದ್ದಾರೆ. ಇವರು ತಮ್ಮ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಹುಟ್ಟುರಾದ ನಾಗಮಂಗಲದಲ್ಲಿ ಮುಗಿಸಿ ನಂತರ ಬಿ.ಎ ಪದವಿಯನ್ನು ಮಂಡ್ಯದಲ್ಲಿ, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ತುಮಕೂರಿನಲ್ಲಿ ಬಿ ಎಡ್. ಪದವಿಯನ್ನು ಪಡೆದಿದ್ದಾರೆ. ಶ್ರೀ ಮಂಜುನಾಥ ಗೌಡ ಎಂಬುವವರೊಂದಿಗೆ ಸಪ್ತಪದಿಯನ್ನು ತುಳಿದಿರುವ ಇವರಿಗೆ ಮಾ.ಕುಶಾಲ್ ಪಿ.ಎಂ. ಗೌಡ ಎಂಬ ಮಗನಿದ್ದು ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ವಾಸಿಸುತ್ತಿದ್ದಾರೆ. ಪ್ರಸ್ತುತವಾಗಿ ಇವರು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಶಿಕ್ಷಕರಾಗಿ ಕಾರ್ಯವನ್ನು ನಿರ್ವಹಿಸುತಿದ್ದಾರೆ. ವಿದ್ಯಾರ್ಥಿ ದಿಸೆಯಿಂದಲೇ. ಪ್ರಬಂಧ, ಚರ್ಚಾಸ್ಪರ್ಧೆ, ಭಾಷಣಕಲೆಗಳಲ್ಲಿ ಮುಂದಿದ್ದ ಶ್ರೀಯುತರು ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಕ್ರಮೇಣವಾಗಿ ಕನ್ನಡ ಸಾರಸ್ವತ ಲೋಕದ ಪರಂಪರೆಯನ್ನು ಓದಿಕೊಂಡು ಇಂದು ತಮ್ಮನ್ನು ತಾವು ಬರವಣಿಗೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಛಂದಸ್ಸಿನ ಫ್ಯಾಶನ್ ಹೊಂದಿರುವ ಇವರು ತಮ್ಮ ಬರವಣಿಗೆಯುದ್ದಕ್ಕೂ ಛಂದಸ್ಸನ್ನು ದುಡಿಸಿಕೊಳ್ಳುತ್ತ ಬಂದಿದ್ದಾರೆ!! ಕಾವ್ಯದ ಹಲವು ಪ್ರಕಾರಗಳಲ್ಲಿ ಅಂದರೆ ಷಟ್ಪದಿ, ಚತುಶ್ರಯಲಯ, ಏಳೆ, ಅಕ್ಕರಿಕೆ, ರಗಳೆ, ವೃತ್ತ, ಚುಟುಕು, ಹನಿಗವನ, ಮುಕ್ತಕ, ಜಾನಪದ… ಮುಂತಾದವುಗಳಲ್ಲಿ ವೃತ್ತಾನುಪ್ರಾಸ, ಛೇಕಾನುಪ್ರಾಸ, ಚಿತ್ರಕವಿತ್ವ ಹಾಗೂ ಶ್ಲೇಷಾಲಂಕಾರವನ್ನು ಬಳಸಿಕೊಂಡು ಕವನಗಳನ್ನು ಬರೆದಿದ್ದಾರೆ, ಬರೆಯುತಿದ್ದಾರೆ. ಇವರ ಕವನಗಳು ಭಾವಪೂರಿತವಾಗಿದ್ದು ಸುಂದರ ಪದಪುಂಜಗಳಿಂದ ಕೂಡಿದ್ದು, ಸಹೃದಯ ಓದುಗರ ಮನವನ್ನು ಸೂರೆಗೊಂಡಿವೆ. ಇವುಗಳೊಂದಿಗೆ ಕಥೆ, ನ್ಯಾನೋಕಥೆ, ಹಾಸ್ಯಕಥೆ, ಪ್ರಬಂಧ, ವಿಮರ್ಶೆ, ಲೇಖನಗಳ ಜೊತೆ ಜೊತೆಗೆ ರುಬಾಯಿ, ತಂಕಾ, ಹೈಕು, ಗಜಲ್.. ಹೀಗೆ ಹತ್ತಾರು ಪ್ರಕಾರಗಳಲ್ಲಿ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ‘ಕಾನನದ ಅರಸಿ’, ‘ನೆಲಸಿರಿಯ ಮಣಿಗಳು ಶಿಶು ಸಾಹಿತ್ಯ’, ‘ಅಭಿಭಾವನ ಭಾವಗೀತೆ’, ಕೃತಿಗಳೊಂದಿಗೆ ‘ಎದೆ ತೇರಿನೊಳ್ ರಂಗೇರಿದ ಗಝಲ್’ ಎನ್ನುವ ಗಜಲ್ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸದಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ಸಕ್ರೀಯರಾಗಿರುವ ಶ್ರೀಯುತರ ಹಲವಾರು ಬರಹಗಳು ಕರುನಾಡಿನ ವಿನಯವಾಣಿ, ಜನ ಮಿಡಿತ, ಸಿಂಹಧ್ವನಿ, ಕ್ರಾಂತಿಧ್ವನಿ ಹಾಗೂ ಅಂತರ್ಜಾಲದ ಹಲವಾರು ಬ್ಲಾಗ್, ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರಿಗೆ ನಾಡಿನ ಹಲವಾರು ಪ್ರತಿಷ್ಠಿತ ಸಂಘ-ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಮಾಣಿಕ್ಯ ಪ್ರಕಾಶನ ಹಾಸನ ವತಿಯಿಂದ ಕೊಡಲ್ಪಡುವ ರಾಜ್ಯಮಟ್ಟದ ‘ಜನ್ನಕಾವ್ಯ ಪ್ರಶಸ್ತಿ’, ಕುವೆಂಪು ಜನ್ಮದಿನೋತ್ಸವ ಪ್ರಯುಕ್ತ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ‘ಶತಶೃಂಗ ಪ್ರಶಸ್ತಿ’, ೨೦೨೧ ನೇ ಸಾಲಿನ ನಾಗಮಂಗಲ ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ೨೦೨೦-೨೧ ನೇ ಸಾಲಿನ ರಾಜ್ಯ ಬರಹಗಾರರ ಬಳಗ ಹೂವಿನ ಹಡಗಲಿ ಘಟಕದ ವತಿಯಿಂದ ನೀಡಲ್ಪಡುವ ‘ಸಾಹಿತ್ಯ ಸಿಂಧು ಪ್ರಶಸ್ತಿ’… ಮುಂತಾದವುಗಳು ಶ್ರೀಮತಿ ಅಭಿಜ್ಞಾ ಪಿ.ಎಮ್.ಗೌಡ ರವರ ಸಾಹಿತ್ಯ ಸೇವೆಗೆ ಸಂದ ಪ್ರಶಸ್ತಿಗಳಾಗಿವೆ. ಗಜಲ್.. ಆಲದ ಮರದಂತೆ ವಿಶಾಲವಾಗಿ ವ್ಯಾಪಿಸಿದೆ. ಇದರ ಬೇರುಗಳು ಪ್ರೀತಿ, ಪ್ರೇಮ, ಪ್ರಣಯ ಹಾಗೂ ವಿರಹದಿಂದ ಕೂಡಿದ್ದರೂ ಇಂದು ಈ ಮರದ ಟೊಂಗೆಗಳ ಮೇಲೆಲ್ಲ ಸಾಮಾಜಿಕ ಸ್ಥಿತ್ಯಂತರ ಸಾರಿದ, ಸಾರುತ್ತಿರುವ ಹಕ್ಕಿಗಳು ಆಶ್ರಯ ಪಡೆದಿವೆ; ಪಡೆಯುತ್ತಿವೆ. ಉಪದೇಶ, ನೀತಿ, ಚಿಂತನೆ, ದೇಶಭಕ್ತಿಯ ವಿಷಯಗಳು, ರಾಜಕೀಯ ತಲ್ಲಣಗಳು, ಸಾಮಾಜಿಕ ಬೇಗುದಿ.. ಎಲ್ಲವೂ ಗಜಲ್ ಗಳಲ್ಲಿ ಪ್ರಸ್ತಾಪವಾಗುತ್ತಿವೆ. ಇದರಿಂದ ಗಜಲ್ ಗಳು ರಾಷ್ಟ್ರೀಯ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಅರುಹಲು ಸಾಧ್ಯವಾಗಿದೆ. ಇಂದಿನ ಕನ್ನಡದ ಗಜಲ್ ಗಳು ಜೀವನದ ಪ್ರತಿಯೊಂದು ಸಮಸ್ಯೆಗೆ ಮುಖಾಮುಖಿಯಾಗುತ್ತಿವೆ. ಕನ್ನಡದ ಹಲವು ಗಜಲ್ ಗೋ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಭಿನ್ನಾಭಿಪ್ರಾಯಗಳ ಮೇಲೆ ಬಹಿರಂಗವಾಗಿ ಅಶಅರ್ ಮೂಲಕ ಚರ್ಚಿಸುತ್ತಿದ್ದಾರೆ. ಭ್ರಷ್ಟ ಸಮಾಜದಿಂದ ಹೊರ ಬರಲು ಹವಣಿಸುತ್ತಿರುವ ಮನಸುಗಳು ಪ್ರೀತಿ, ಪ್ರೇಮಕ್ಕೆ ಅಷ್ಟೊಂದು ಜೋತು ಬೀಳುತ್ತಿಲ್ಲ. ಮನುಕುಲವು ಇಂದು ಮೇಲು-ಕೀಳು, ಭ್ರಷ್ಟಾಚಾರದ ಶೋಷಣೆ, ಕೋಮು ಸಂಕುಚಿತ ಮನೋಭಾವದಿಂದ ವಿಚಲಿತವಾಗಿದೆ. ಹಾಗಾಗಿ ಸಹಜವಾಗಿಯೇ ಹತಾಶೆ, ಸಿಟ್ಟು, ಅತೃಪ್ತಿ, ಬಂಡಾಯದ ಧ್ವನಿಗಳು ಇಂದಿನ ಕನ್ನಡದ ಗಜಲ್ ಗಳಲ್ಲಿ ಹೆಚ್ಚು ಕೇಳಿಬರುತ್ತಿವೆ. ಈ ಕಾರಣಕ್ಕಾಗಿಯೇ ಇಂದಿನ ಸುಖನವರ್ ಅವರ ವಾಸ್ತವದ ನೆಲೆಯಲ್ಲಿ ಗಜಲ್ ಕನ್ಯೆಗೆ ಉಡುಗೆಯನ್ನು ತೊಡಿಸುತಿದ್ದಾರೆ. ಗಜಲ್ ಗೋ ಅಭಿಜ್ಞಾ ರವರ ಗಜಲ್ ಗಳಲ್ಲಿ ಪ್ರೀತಿ, ಪ್ರೇಮದ ಮಾಧುರ್ಯಕ್ಕಿಂತಲೂ ದಿನಂಪ್ರತಿ ನಡೆಯುವ, ನಡೆಯುತ್ತಿರುವ ವಿದ್ಯಮಾನಗಳ ಪ್ರತಿಬಿಂಬ ಕಾಣಿಸುತ್ತದೆ. ಸಮಾಜಮುಖಿ ಚಿಂತಕರ ವ್ಯಕ್ತಿ ಪರಿಚಯ, ಪೌರಾಣಿಕ ವಿಷಯ, ಹಬ್ಬ-ಹರಿದಿನಗಳ ವಿಶೇಷತೆ, ಸ್ತ್ರೀ ಸಂವೇದನೆಯ ಝಲಕ್, ಮಾನವೀಯ ಸಂಬಂಧಗಳ ಪಲ್ಲಟ, ಭಾರತೀಯ ಸಾಂಸ್ಕೃತಿಕ ಪರಂಪರೆಯ ಕಾಳಜಿ, ಗ್ರಾಮೀಣ ಬದುಕಿನ ಚಿತ್ರಣ, ಮೌಲ್ಯಗಳ ಹುಡುಕಾಟ… ಎಲ್ಲವುಗಳ ಹದವಾದ ಮಿಶ್ರಣ ಗಜಲ್ ಗೋ ಅವರ ಗಜಲ್ ಗಳಲ್ಲಿ ಕಾಣುತ್ತೇವೆ. ಹಲವು ಸಂವೇದನೆಗಳಲ್ಲಿ ಸ್ತ್ರೀ ಸಂವೇದನೆ ಕಟುಕರ ಮನವನ್ನು ಕರಗಿಸುತ್ತದೆ. ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆಯನ್ನು ನೀಡಬೇಕು ಎನ್ನುವ ಕೂಗುಗಳೊಂದಿಗೆ ಪ್ಯಾರಲಲ್ ಆಗಿ ಶೋಷಣೆ, ಅವಮಾನ, ಅತ್ಯಾಚಾರಗಳು ಎಗ್ಗಿಲ್ಲದಂತೆ ನಡೆಯುತ್ತಿವೆ. ಏಕಕಾಲದಲ್ಲಿಯೆ ಮಾನವ ಹಾಗೂ ದಾನವನ ರೂಪ ತಾಳಿದ, ತಾಳುತ್ತಿರುವ ಪುರುಷನಿಂದ ಹೆಣ್ಣಿಗೆ ರಕ್ಷಣೆ ಇಲ್ಲದಂತಾಗಿದೆ ಎಂಬ ತಿರುಳನ್ನು ಈ ಕೆಳಗಿನ ಷೇರ್ ಪ್ರತಿಧ್ವನಿಸುತ್ತಿದೆ. ಹೆಣ್ಣಿನ ಜನ್ಮ ಇರುವುದೇ ನೋವು, ಸಂಕಟವನ್ನು ಸಹಿಸುತ್ತ ಕಂಬನಿಯಲ್ಲಿ ಮುಳುಗಲು ಎಂಬ ಬಾಲಿಶ ಭಾವನೆಯನ್ನು ಪುರುಷ ಪ್ರಧಾನ ಸಮಾಜ ಮಹಿಳೆಯ ಎದೆಯಲ್ಲಿ ಬಿತ್ತಿಬಿಟ್ಟಿದೆ. ಈ ಕಾರಣಕ್ಕಾಗಿಯೇ ಕಂಬನಿಯ ಉಪ್ಪಿನಲ್ಲಿ ಅಡುಗೆ ಮಾಡುವ ನಳಪಾಕರ ದಂಡಿನಿಂದ ನಮ್ಮ ಸಮಾಜ ನಲುಗಿ ಹೋಗುತ್ತಿದೆ. “ಎದೆಯ ಬೀದಿಗಳು ಪಾಳು ಬಿದ್ದಂತಿದ್ದರು ನೋಡುವವರು ಯಾರು ಇಲ್ಲ ನದಿಯಂತೆ ಹರಿದ ಕಣ್ಣೀರ ಧಾರೆಯನು ಒರೆಸುವವರು ಯಾರು ಇಲ್ಲ” ಆಧುನಿಕತೆ, ಬದಲಾವಣೆ ಎನ್ನುವ ಪದಗಳ ಅರ್ಥಗಳು ಜಾಗತಿಕ ಜಗತ್ತಿನಲ್ಲಿ ಭೋಗದ ಪರಿಭಾಷೆಯಲ್ಲಿ ಬಳಕೆಯಾಗುತ್ತಿವೆ. ಅಂತೆಯೇ ಮನುಷ್ಯನಿಗೆ ಪ್ರೀತಿ, ಪ್ರೇಮ, ಮಮತೆಗಳಿಗಿಂತಲೂ ತುಂಬಿದ ಜೇಬು, ಅಲಮಾರಿಗಳೆ ಮುಖ್ಯವಾಗುತ್ತಿವೆ. ಉಸಿರಿಗಿಂತಲೂ ಬ್ಯಾಂಕ್ ಬ್ಯಾಲೆನ್ಸ್ ಪ್ರಧಾನವಾಗುತ್ತಿದೆ. ಇಲ್ಲಿ ಗಜಲ್ ಗೋ ಅವರು ಸವೆಯುತ್ತಿರುವ ಮೌಲ್ಯಗಳನ್ನು ಕಂಡು ವಿಷಾದ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಇರುವ ಅಸಮಾನತೆಯನ್ನು ಕಂಡು ತಣ್ಣನೆಯ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಬೇವನ್ನು ಬಿತ್ತಿ ಮಾವನ್ನು ಬಯಸುತ್ತಿರುವ ಮನುಕುಲದ ಹುಚ್ಚಾಟವನ್ನು ತಮ್ಮ ಷೇರ್ ನಲ್ಲಿ ಸೆರೆ ಹಿಡಿದಿದ್ದಾರೆ. “ಮಮತೆ ಮರೆತು ಮಸಣದಲೂ ಧನಕನಕಕೆ ಕಾಡಿದೆಯಲ್ಲ ನೀನು ಸಮತೆಯ ತೊರೆದಿಹ ಬಾಳಲಿ ಸಂತಸವ ಬೇಡಿದೆಯಲ್ಲ ನೀನು” ಗಜಲ್ ಳು ಸಹೃದಯ ಓದುಗರು ಹಾಗೂ ಶ್ರೋತೃಗಳು ಓದುತ್ತಲೇ, ಕೇಳುತ್ತಲೇ ತಮ್ಮ ಹೃದಯಗಳೊಂದಿಗೆ ಸಂಮೀಕರಿಸುವಂತೆ ಇರಬೇಕು. ಸರಳ ಹಾಗೂ ಮೆದುತನದಿಂದ ಕೂಡಿದ್ದು ಮನುಕುಲದ ಹೃದಯದಲ್ಲಿ ಉಲ್ಲಾಸದ ಸಸಿಯನ್ನು ಅರಳಿಸುವಂತಿರಬೇಕು. ಇದುವೆ ಗಜಲ್ ನ ನಾಡಿಮಿಡಿತವಾಗಿದೆ. ಗಜಲ್ ಗೋ ಶ್ರೀಮತಿ ಅಭಿಜ್ಞಾ ಪಿ.ಎಮ್.ಗೌಡ ಅವರಿಂದ ಗಜಲ್ ಮಹಲ್ ಮತ್ತಷ್ಟು ಸಿರಿತನದಿಂದ ಕಂಗೊಳಿಸಲಿ ಎಂದು ಶುಭ ಹಾರೈಸುತ್ತೇನೆ. “ಸತ್ಯವನ್ನು ಅರ್ಥಮಾಡಿಕೊಳ್ಳಲು ನಮಗೆ ರಾಜಕೀಯ ಅವಕಾಶ ನೀಡುವುದೇ ಇಲ್ಲ ಕೆಲವೊಮ್ಮೆ ಮುಖಗಳ ಗುರುತು ಸಿಗುವುದಿಲ್ಲ ಕೆಲವೊಮ್ಮೆ ಕನ್ನಡಿ ಸಿಗುವುದಿಲ್ಲ” –ಅನಾಮಿಕ ಪ್ರತಿ ಗುರುವಾರದ ಗಜಲ್ ಗುಲ್ಜಾರ್ ನ ಸುತ್ತಾಟ ತಮ್ಮ ಮನಸುಗಳಿಗೆ ಮುದ ನೀಡುತ್ತಿದ್ದರೆ ನನ್ನ ಪ್ರಯತ್ನ ನಿಜಕ್ಕೂ ಸಾರ್ಥಕವಾಗುವುದು. ಗಜಲ್, ಗಜಲ್ ಗೋ ಕುರಿತು ಎಷ್ಟು ಬೇಕಾದರೂ ಬರೆಯಬಹುದು, ಮಾತಾಡಬಹುದು. ಆದರೆ ಏನು ಮಾಡುವುದು, ಸಮಯದ ಮುಂದೆ ಮಂಡಿಯೂರಲೆ ಬೇಕಲ್ಲವೇ! ಸೋ…ಇವಾಗ ನನ್ನ ಈ ಲೆಕ್ಕಣಿಕೆಗೆ ಪೂರ್ಣ ವಿರಾಮವನ್ನು ನೀಡುತ್ತ, ಮುಂದಿನ ಗುರುವಾರ ಮತ್ತೆ ಸುಖನವರ್ ಒಬ್ಬರ ಗಜಲ್ ಅಶಅರ್ ನೊಂದಿಗೆ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ….!! ಡಾ. ಮಲ್ಲಿನಾಥ ಎಸ್. ತಳವಾರ ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ
ಅಂಕಣ ಸಂಗಾತಿ ಗಜಲ್ ಲೋಕ ಗಿರಿಯಪ್ಪನವರ ಗಜಲ್ ಝರಿಯಲ್ಲಿ ಗಜಲ್ ಗುನುಗುತ್ತಿರುವ ಸಹೃದಯಿಗಳೆ, ತಮಗೆಲ್ಲರಿಗೂ ಗಜಲ್ ಪಾಗಲ್ ನ ದಿಲ್ ಸೇ ಸಲಾಮ್…ಗುರುವಾರ ಬಂತೆಂದರೆ ಸಾಕು, ತಾವುಗಳು ಗಜಲ್ ಗೋ ಒಬ್ಬರ ಪರಿಚಯದ ನಿರೀಕ್ಷೆಯಲ್ಲಿರುತ್ತೀರಿ ಎಂಬುದ ನಾ ಬಲ್ಲೆ… ತಮ್ಮೆಲ್ಲರ ಈ ಪ್ರೀತಿಗೆ, ಕನವರಿಕೆಗೆ ಹೇಗೆ ಪ್ರತಿಕ್ರಿಯಿಸಲಿ…ತಮ್ಮೆಲ್ಲರ ಪ್ರೀತಿಗೆ ಸೋತು ಪ್ರತಿ ವಾರದಂತೆ ಈ ವಾರವೂ ಸಹ ಓರ್ವ ಗಜಲ್ ಕಾರ ಒಬ್ಬರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬರುತಿದ್ದೇನೆ. ಸ್ವಾಗತಿಸುವಿರಲ್ಲವೇ….!! “ಇನ್ನೂ ಹಲವು ನೋವುಗಳಿವೆ ಪ್ರೀತಿಯನ್ನು ಹೊರತುಪಡಿಸಿ ಸುಖಗಳು ಇನ್ನೂ ಇವೆ ಮಿಲನದ ಸುಖವನ್ನು ಹೊರತುಪಡಿಸಿ“ – ಫೈಜ್ ಅಹ್ಮದ್ ಫೈಜ್ ನಮ್ಮ ಲೋಕ ನಿರಂತರವಾಗಿ ಚಲಿಸುತ್ತಲೆ ಇರುತ್ತದೆ. ನಿಂತವರಿಗೂ ಕಾಣಿಸುತ್ತದೆ, ತುಸು ಮಾತ್ರ. ನಡೆಯುತ್ತ ನೋಡುತ್ತಿರುವವರಿಗೆ ಲೋಕದೊಡನೆ ಬೆರೆಯಲು, ಅನುಸಂಧಾನಗೈಯಲು ಸಾಧ್ಯವಾಗುತ್ತದೆ. ಹಾಗೆ ಬೆರೆತಾಗ ಮಾತ್ರ ಮನುಷ್ಯ ತನ್ನನ್ನು ತಾನು ಮರೆಯಲು ಸಾಧ್ಯವಾಗಬಹುದು. ಆವಾಗ ತಾನು ಕಳೆದುಕೊಂಡದ್ದನ್ನು ಹುಡುಕಲು ಪ್ರಯತ್ನಿಸಿ ಲೌಕಿಕದಾಚೆಯ ಪರಪಂಚವನ್ನು ಎದುರುಗೊಳ್ಳುತ್ತಾನೆ. ಈ ಲೌಕಿಕ-ಅಲೌಕಿಕದ ನಡುವೆ ಇರುವ ಬಾಳು ಯಾರಿಗೂ ಅಷ್ಟು ಸರಳವಾಗಿ, ಸುಲಭವಾಗಿ ದಕ್ಕಲಾರದು. ಯಾವ ಸಂಗತಿಗಳು ನಮಗೆ ಬಿಡುಗಡೆಯ ದಾರಿಯನ್ನು ತೋರಿಸುತ್ತವೆ ಎಂದುಕೊಂಡಿರುತ್ತೇವೆಯೊ ಅವೆ ನಮಗೆ ಹಲವು ಬಾರಿ ಬಂಧಿನಕ್ಕೆ ಕಾರಣವಾಗುತ್ತವೆ! ಈ ಹಿನ್ನೆಲೆಯಲ್ಲಿ ಬದುಕು ಒಂದೇ ಬಾರಿಗೆ ಅರ್ಥವಾಗುವುದಿಲ್ಲ. ತಾಯಿಯ ಗರ್ಭದಿಂದ ಭೂಮಿಗೆ ಚುಂಬಿಸುವಾಗ ಆರಂಭವಾದ ಜೀವನವು ಮಣ್ಣಲಿ ಮಣ್ಣಾಗುವವರೆ ಸದಾ ಕಲಿಯುತ್ತಲೆ, ಕಲಿಸುತ್ತಲೆ ಇರುತ್ತದೆ. ಈ ಕಲಿಕೆಗೆ ಹಲವು ಆಯಾಮಗಳಿವೆ. ಅವುಗಳಲ್ಲಿ ಸಾಂಸ್ಕೃತಿಕ ರಾಯಭಾರತ್ವವನ್ನು ಹೊತ್ತಿರುವ ಸಾಹಿತ್ಯದ ಪಾತ್ರ ಅನಾಯಾಸವಾಗಿ ಕೈಗೆ ಎಟುಕದು. ಕಾಲಾತೀತ, ದೇಶಾತೀತವಾದ ಬರಹದ ದಾಸ್ತಾನ್ ಸಹೃದಯ ಓದುಗರ ಮನದಲ್ಲಿ ದಿನನಿತ್ಯವೂ ಪೂಜೆಗೆ ಒಳಪಡುತ್ತಿದೆ. ಪೂಜಿಸ್ಪಲ್ಪಡುತ್ತಿರುವ ಹಲವು ಸಾಹಿತ್ಯದ ಪ್ರಕಾರಗಳಲ್ಲಿ ‘ಗಜಲ್’ ಎಂಬ ದಿಲ್ ಕಾ ಆಯಿನಾ ಮುಂಚೂಣಿಯಲ್ಲಿದೆ. ಮೋಹದ ನಿರ್ವಾಣವನ್ನು ಕಡಿತಗೊಳಿಸಿ ಲೌಕಿಕ ಮತ್ತು ಅಲೌಕಿಕ ಎರಡೂ ಒಂದೇ ಎಂದು ಹೇಳುವ ‘ಗಜಲ್’ ಮನುಕುಲದ ಐಹಿಕ ಬದುಕಿನ ಘನತೆಯನ್ನು ಹೆಚ್ಚಿಸಿದೆ. ಈ ನೆಲೆಯಲ್ಲಿ ಗಮನಿಸಿದಾಗ ಜಗತ್ತಿನ ಯಾವ ಭಾಗದಲ್ಲಿ ನಿಂತು ನೋಡಿದರೂ ಗಜಲ್ ಅಲ್ಲಿಯ ಜನರ ಧ್ವನಿಯಾಗಿ ಕೇಳಿಸುತ್ತದೆ!! ಇದಕ್ಕೆ ಭಾಷೆ, ಭೌಗೋಳಿಕತೆ, ಸಂಸ್ಕೃತಿ, ತತ್ವ, ಜಾತಿ, ಧರ್ಮಗಳ ಹಂಗಿಲ್ಲ. ಎಲ್ಲ ಇದ್ದು ಏನೂ ಇಲ್ಲದಂತೆ ಬದುಕುವ, ಏನು ಇಲ್ಲದಿದ್ದರೂ ಎಲ್ಲ ಇದೆ ಎಂದು ಬಾಳಲು ಕಲಿಸುವ ಉಸ್ತಾದ್ ಎಂದರೆ ಅದು ನಮ್ಮ ಈ ಗಜಲ್. ಇದು ಮನುಷ್ಯನ ಘನತೆಯನ್ನು ಹೆಚ್ಚಿಸುತ್ತ, ಪ್ರೇಮದ ಸ್ವಾತಂತ್ರ್ಯವನ್ನು ಅನುಭಾವ ಮಾಡಿಸುತ್ತದೆ. ಇಂಥಹ ‘ಗಜಲ್’ ಗುಂಗಿನಲ್ಲಿರುವ ಅಸಂಖ್ಯಾತ ಸುಖನವರ್ ಗಳಲ್ಲಿ ಕಿರಸೂರ ಗಿರಿಯಪ್ಪ ಅವರೂ ಒಬ್ಬರು. ಕಿರಸೂರ ಗಿರಿಯಪ್ಪ ಎಂಬ ಕಾವ್ಯನಾಮದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಚಿರಪರಿಚಿತರಾಗಿರುವ ಗಿರಿಯಪ್ಪ ಆಸಂಗಿಯವು ಬಾಗಲಕೋಟದ ಕಿರಸೂರ ಗ್ರಾಮದವರು. ಎಂ.ಎ ಕನ್ನಡ ಪದವೀಧರರಾದ ಶ್ರೀಯುತರು ತಮ್ಮ ಕಾಲೇಜು ದಿನಗಳಿಂದಲೇ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಹೊಂದಿದ್ದು, ತಮ್ಮನ್ನು ತಾವು ಬರಹದಲ್ಲಿ ತೊಡಗಿಸಿಕೊಂಡಿದ್ದಾರೆ. ‘ನಾಭಿಯ ಚಿಗುರು’ (೨೦೧೫) ಎಂಬ ಕವನ ಸಂಕಲನ, ‘ಅಲೆವ ನದಿ’ (೨೦೨೦) ಎಂಬ ಗಜಲ್ ಸಂಕಲನಗಳನ್ನು ಪ್ರಕಟಿಸಿ ಓದುಗರ ಜ್ಞಾನದ ಮಡಿಲಿಗೆ ಹಾಕಿದ್ದಾರೆ. ಇವರ ಹಲವು ಕಾವ್ಯ, ಗಜಲ್ ಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸದ್ಯ ಇವರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಗುಗಲಗಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸದಾ ಕ್ರಿಯಾಶೀಲರಾಗಿರುವ ಕಿರಸೂರ ಗಿರಿಯಪ್ಪ ಅವರಿಗೆ ನಾಡಿನ ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ೨೦೧೫ರಲ್ಲಿ ಇವರ ಚೊಚ್ಚಲ ಕೃತಿಗೆ ಪುಸ್ತಕ ಪ್ರಾಧಿಕಾರ ಕರ್ನಾಟಕ ಸರಕಾರ ಪ್ರೋತ್ಸಾಹ ಧನ ಲಭಿಸಿದೆ. ಸಂಚಯ ಬೇಂದ್ರೆ ಸ್ಮೃತಿ ಕಾವ್ಯ ಪ್ರಶಸ್ತಿ (೨೦೧೪), ಸಂಕ್ರಮಣ ಕಾವ್ಯಪ್ರಶಸ್ತಿ (೨೦೧೫, ೨೦೧೮), ತುಷಾರ ಚಿತ್ರಕಾವ್ಯ ಬಹುಮಾನ (ಎರಡು ಸಲ), ಜನಮಿತ್ರ ಸಂಕ್ರಾಂತಿ-ಸಂಬ್ರಮದ ಪ್ರಥಮ ಕಾವ್ಯ ಪ್ರಶಸ್ತಿ (೨೦೧೭), ದಲಿತ ಯುವ ಕಾವ್ಯ ಪ್ರಶಸ್ತಿ (೨೦೧೮), ‘ಪ್ರಜಾಪ್ರಗತಿ ದೀಪಾವಳಿ’ ವಿಶೇಷಾಂಕ ಕಾವ್ಯಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ (೨೦೧೮)…ಮುಂತಾದವುಗಳು ಶ್ರೀಯುತರಿಗೆ ಸಂದಿವೆ. ನಮ್ಮ ಬದುಕಿನ ತಲ್ಲಣಗಳೆ ‘ಗಜಲ್’ ನ ಸ್ಥಾಯಿಭಾವ. ಅಂತಃಕರಣವೆ ಇದರ ಬೇರು. ಇಂದು ಗಜಲ್ ಒಂದು ಕಾವ್ಯ ಪ್ರಕಾರಕ್ಕೆ ಮಾತ್ರ ಸೀಮಿತವಾಗಿರದೆ ನಮ್ಮ ದಿನನಿತ್ಯದ ಮನಸ್ಥಿತಿಯಾಗಿದೆ. ಇದು ಲೌಕಿಕ-ಅಲೌಕಿಕ ಪ್ರಪಂಚಕ್ಕೆ ಅಂಟಿಕೊಳ್ಳದೆ ಎರಡರ ಛಾಯೆಯನ್ನು ಒಳಗೊಂಡಿದೆ. ಭೋಗ ಜೀವನದ ತುತ್ತ ತುದಿಯಲ್ಲಿ ನಿಂತು ಯೋಗಿಯಾಗುವ ಕಲೆ ಗಜಲ್ ಗೆ ಕರಗತವಾಗಿದೆ. ಬಹುತ್ವವೇ ಇದರ ಉಸಿರು, ವಿಶ್ವ ಪ್ರಜ್ಞೆಯೆ ಇದರ ಜೀವಾಳ. ಗಿರಿಯಪ್ಪನವರ ಗಜಲ್ ಗಳಲ್ಲಿ ಲೌಕಿಕ ಬದುಕಿನ ನಿತ್ಯ ಸಂಕಟಗಳ ಅನಾವರಣವಿದೆ. ಜನಪದರ ಯಶೋಗಾಥೆ, ಸಾಮಾಜಿಕ ತುಮುಲಗಳು, ಮೌಲ್ಯಗಳ ಹುಡುಕಾಟ, ಜಾಗತೀಕರಣದ ಕಪಿಮುಷ್ಟಿ, ಸಂಬಂಧಗಳ ಕಣ್ಣಾಮುಚ್ಚಾಲೆ, ದುಡ್ಡುಳ್ಳವರ ಲಂಪಟತನ, ಅಧಿಕಾರದ ಧೃತರಾಷ್ಟ್ರ ಮೋಹ, ಧರ್ಮಗಳ ಜಂಗಿ ಕುಸ್ತಿ, ಜಾತಿಗಳ ಕೆಸರೆರಚಾಟ…. ಇವುಗಳೊಂದಿಗೆ ಪ್ರೀತಿ, ಪ್ರೇಮ ಹಾಗೂ ವಿರಹಗಳ ಜುಗಲ್ ಬಂಧಿಯ ಹದವಾದ ಮಿಶ್ರಣದಿಂದ ಇವರ ‘ಗಜಲ್’ ಗಳು ಓದುಗರ ಎದೆಗೆ ದಸ್ತಕ್ ನೀಡುತ್ತಿವೆ. ಮನುಷ್ಯನ ಮೂಲ ಅವಶ್ಯಕತೆಗಳಲ್ಲಿ ಅನ್ನದ ಪಾತ್ರ ಮಹತ್ವದ್ದಾಗಿದೆ. ಈ ಸಂಸಾರದಲ್ಲಿ ಪ್ರತಿಕ್ಷಣ ಹಸಿವಿನ ಬೇಗೆಗೆ ಸಿಲುಕಿ ಉಸಿರಿಗೆ ವಿದಾಯ ಹೇಳುತ್ತಿರುವವರ ಸಂಖ್ಯೆ ಆಗಸದ ತಾರೆಗಳನ್ನೂ ಮೀರಿಸುವಂತಿದೆ. ಆದಾಗ್ಯೂ.. ಆದಾಗ್ಯೂ ಪ್ರೀತಿಯಿಂದ ವಂಚಿತವಾದ ಜೀವಿಗಳು ಅದೆಷ್ಟೋ…!! ಗಜಲ್ ಗೋ ಕಿರಸೂರ ಗಿರಿಯಪ್ಪ ಅವರು ಈ ಷೇರ್ ನಲ್ಲಿ ಪ್ರೀತಿಯ ಸಾರ್ವತ್ರಿಕತೆಯನ್ನು ಸಾರಿದ್ದಾರೆ. “ಪ್ರೀತಿ ಗೆಲ್ಲದ ಪದಗಳು ಎಷ್ಟು ಹಾಡಿದರೇನು! ಬೆಳಕಿನಾಚೆ ಎದೆಗೆ ನಾಟದ ಧರ್ಮಗಳ ಎಷ್ಟು ಹುಡುಕಿದರೇನು! ಕತ್ತಲಿನಾಚೆ” ನಾವಾಡುವ ಮಾತುಗಳಿಗೆ ಪ್ರೀತಿಯ ತಳಪಾಯವಿರಬೇಕು, ಕಾಳಜಿಯ ಆಲಿಂಗನವಿರಬೇಕು; ನೋವಿಗೆ ಮಿಡಿಯುವ ಹೃದಯವಿರಬೇಕು. ಇಲ್ಲದಿರೆ ಆ ಮಾತುಗಳು ಮಾತಾಗದೆ ಬರೀ ಕಿವಿ ತಮಟೆ ಹರಿಯುವ ಕರ್ಕಶ ಸದ್ದು, ಗದ್ದಲಗಳಾಗುವವು. ಇನ್ನೂ ಮೂಲಭೂತವಾಗಿ ‘ಧರ್ಮ’ ಎಂದರೆ ಬದುಕುವ ಪದ್ಧತಿ ಎಂದು. ಆದರೆ ನಮ್ಮ ಮಧ್ಯೆ ಇರುವ ಧರ್ಮಗಳು ಬಾಳಿಗೆ ಬೆಳಕಾಗುವುದಕ್ಕಿಂತ ಕತ್ತಲೆಯಾಗುತ್ತಿರೋದೆ ಹೆಚ್ಚು ಎಂದು ಗಜಲ್ ಗೋ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ‘ಗಾಯ’ಗಳು ಗುಣವಾದರೆ ಜೀವನ ಆರೋಗ್ಯಮಯ, ಹಸಿಯಾಗಿಯೆ ಉಳಿದರೆ ಬದುಕು ಪ್ರೇಮಮಯ. ಯಾವ ಪ್ರೇಮಿಯೂ ತನ್ನ ಎದೆಗಾದ ಗಾಯ ಮಾಯಲಿ ಎಂದು ಬಯಸುವುದೆ ಇಲ್ಲ. ಅದು ಹಸಿಯಿದ್ದಷ್ಟು ಪ್ರೀತಿ ಹಚ್ಚ ಹಸಿರಾಗಿರುತ್ತದೆ. ಇದನ್ನೇ ಗಿರಿಯಪ್ಪ ನವರು ತಮ್ಮ ಅಶಅರ್ ನಲ್ಲಿ ಹೃದಯಕ್ಕೆ ನಾಟುವಂತೆ ಸೆರೆ ಹಿಡಿದಿದ್ದಾರೆ. “ನನ್ನೆದೆಯಾಗ ನಿನ್ನ ಕಾಲ್ಗೆಜ್ಜೆ ಗುರುತು ವಾಸಿಯಾಗದ ಚಿತ್ರ ನನ್ನೆದೆಯಾಗ ನಿನ್ನ ಕೈಬಳೆ ಸಂಗೀತ ಅಳಿಸಲಾಗದ ಚಿತ್ರ“ ಕಾಲ್ಗೆಜ್ಜೆ, ಕೈ ಬಳೆಗಳ ಕಲರವ ಪ್ರೀತಿಸುವ ಜೀವಿಗಳ ಆಯುಷ್ಯವನ್ನು ವೃದ್ಧಿಸುತ್ತವೆ. ಇವುಗಳ ಸದ್ದು ಪ್ರೇಮಲೋಕದ ನಿನಾದವನ್ನು ಸೂಸುತ್ತದೆ. ಈ ಮೇಲಿನ ಷೇರ್ ಪ್ರೇಮಿಯೊಬ್ಬನ ಅಂತರಂಗದ ರಂಗೋಲಿಯಂತೆ ಕಂಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗಿರಿಯಪ್ಪ ನವರ ‘ಗಜಲ್’ಗಳು ಹೃದಯಕ್ಕೆ ಹತ್ತಿರವಾಗುತ್ತವೆ. ಇಂದು ಕನ್ನಡ ಸಾಹಿತ್ಯ ಲೋಕದಲ್ಲಿ ‘ಗಜಲ್’ ಸಾಹಿತ್ಯ ಪ್ರಕಾರವನ್ನು ಕೇಳದ, ಇಷ್ಟ ಪಡದ ಸಾಹಿತ್ಯ ಪ್ರೇಮಿಗಳು ಸಿಗುವುದು ದುರ್ಲಭವೇ ಸರಿ. ಇಂಥಹ ‘ಗಜಲ್’ ಗಂಗೆಯಲ್ಲಿ ಮೀಯುತ್ತಿರುವ ಗಜಲ್ ಗೋ ಕಿರಸೂರ ಗಿರಿಯಪ್ಪ ಅವರಿಂದ ‘ಗಜಲ್’ ಕ್ಷೇತ್ರ ಮತ್ತಷ್ಟು ಸಂಪತ್ಭರಿತವಾಗಲಿ ಎಂದು ಶುಭ ಕೋರುತ್ತೇನೆ. “ವಿಚಿತ್ರ ದೀಪ ನಾನು ಹಗಲು ರಾತ್ರಿ ಉರಿಯುತ್ತಿದ್ದೇನೆ ನಾನು ದಣಿದಿದ್ದೇನೆ ಗಾಳಿಗೆ ಹೇಳಿ ನನ್ನನ್ನು ನಂದಿಸಲು“ – ಬಶೀರ್ ಬದ್ರ ಗಜಲ್ ಗುಲ್ಜಾರ್ ನ ಸುತ್ತಾಟ ತಮ್ಮ ಕನಸು-ಮನಸುಗಳಿಗೆ ಮುದ ನೀಡುತ್ತಿದೆ ಎಂದುಕೊಂಡಿರುವೆ, ನಿಜವಲ್ಲವೆ… ಹೂಂ ಎಂದು ತಲೆಯಾಡಿಸುತ್ತಿರುವಿರಲ್ಲವೆ.. ತುಂಬಾ ಸಂತೋಷ. ಆದರೂ ಏನು ಮಾಡೋದು, ಕಾಲದ ಮುಂದೆ ಮಂಡಿಯೂರಲೆ ಬೇಕಲ್ಲವೇ! ನನ್ನ ಈ ಕಲಮ್ ಗೆ ಪೂರ್ಣ ವಿರಾಮವನ್ನು ನೀಡುತ್ತ, ಮುಂದಿನ ಗುರುವಾರ ಮತ್ತೆ ಶಾಯರ್ ಒಬ್ಬರ ಪರಿಚಯದೊಂದಿಗೆ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಟಾಟಾ, ಬೈ ಬೈ…ಸೀ ಯುವ್, ಟೇಕ್ ಕೇರ್…!! ಧನ್ಯವಾದಗಳು.. ರತ್ನರಾಯಮಲ್ಲ ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ
ಅಂಕಣ ಸಂಗಾತಿ ಗಜಲ್ ಲೋಕ ಭಾಗ್ಯವತಿ ಕೆಂಭಾವಿಯವರ ಒಲವಿನ ಗಜಲ್ ಬಟ್ಟಲು.. . ನನ್ನೆಲ್ಲ ಗಜಲ್ ಪ್ರೇಮಿಗಳಿಗೆ ನಮಸ್ಕಾರ… ಎಂದಿನಂತೆ ಇಂದೂ ಕೂಡ ನಾಡಿನ ಪ್ರಮುಖ ಗಜಲ್ ಗೋ ಒಬ್ಬರ ಪರಿಚಯದೊಂದಿಗೆ ತಮ್ಮ ಮುಂದೆ ಹಾಜರಾಗಿದ್ದೇನೆ. ತಾವು ಅವರ ಪರಿಚಯ, ಅಶಅರ್ ಓದಲು ಕಾತುರರಾಗಿದ್ದೀರಿ ಅಲ್ಲವೇ.. ತಮ್ಮ ಕಾತುರಕ್ಕೆ ನಾನು ಬೇಲಿಯಾಕಲಾರೆ.. ಇಗೋ ಇಲ್ಲಿದೆ ಅವರ ಪರಿಚಯ ಮತ್ತು ಅವರ ಅಶಅರ್.. ನೀವುಂಟು, ಅವರುಂಟು.. ನಾನೇಕೆ ಮಧ್ಯೆ, ಅಲ್ಲವೇ…!! “ಚಿಂತನೆಯ ಮಾಡಿದೆವು ಹಗಲಿರುಳು ಎಡೆಬಿಡದೆ ಈ ಜಗದ ಮಾಟವದು ಒಂದಿನಿತು ತಿಳಿಯದಿದೆ“ –ಮಿರ್ಜಾ ರುಸ್ವಾ ಜೀವ ಸಂಕುಲಕ್ಕೆ ಆಶ್ರಯ ನೀಡಿದ ಇಡೀ ಭೂಮಂಡಲವೆಲ್ಲ ಒಂದೇ ಕುಟುಂಬವೆ. ಆದರೆ ಮನುಷ್ಯನ ಬೌದ್ಧಿಕತೆ ಹೆಚ್ಚಿದಂತೆಲ್ಲ ಪ್ರತ್ಯೇಕತೆ ಪಸರಿಸುತ್ತ ಬಂದಿದೆ. ಅದರ ಫಲವೇ ಇಷ್ಟೊಂದು ದೇಶ, ಭಾಷೆ, ಸಂಸ್ಕೃತಿ ಹಾಗೂ ವಿಚಾರಧಾರೆಗಳ ತಾಕಲಾಟ. ಆದಾಗ್ಯೂ ಉತ್ತಮವಾದುದು ಎಲ್ಲಿಂದಲೇ ಬರಲಿ, ಅದನ್ನು ಪ್ರೀತಿಸಬೇಕು; ಸ್ವಾಗತಿಸಬೇಕು ಎಂಬುದು ಭಾರತದ ಸಂಸ್ಕೃತಿಯೂ ಹೌದು, ಕರ್ನಾಟಕದ ಸಂಸ್ಕೃತಿಯೂ ಹೌದು. ನಮ್ಮ ಭಾಷೆ, ಉಡುಗೆ-ತೊಡುಗೆ, ಆಚಾರ-ವಿಚಾರ, ನಡೆ-ನುಡಿ… ಎಲ್ಲದರ ಮೇಲೆ ಪಾಶ್ಚಾತ್ಯ ಮತ್ತು ಪೂರ್ವಾತ್ಯ ರಾಷ್ಟ್ರಗಳ ಪ್ರಭಾವವಿರುವುದನ್ನು ಅಲ್ಲಗಳೆಯಲಾಗದು. ಇದರಿಂದ ಕೆಲವೊಮ್ಮೆ ನಮ್ಮ ‘ಅಸ್ಮಿತೆ’ ಸಹ ಅಲುಗಾಡಿದುಂಟು! ಅದೇನೇ ಇರಲಿ, ಸಾಹಿತ್ಯ-ಸಂಗೀತ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಭಾಷೆ-ಗಡಿ-ಸೀಮೆಯ ಹಂಗಿರುವುದಿಲ್ಲ. ಇಡೀ ಪರಪಂಚವೇ ಇದರ ಸ್ಥಾಯಿ ಸ್ಥಳ. ಪ್ರಾಚೀನ ಪರಂಪರೆಯಿಂದ ಅರ್ವಾಚೀನ ಪರಂಪರೆಯ ಸಾರಸ್ವತ ಲೋಕವನ್ನು ಗಮನಿಸಿದರೆ ಇದರ ವಸ್ತುಸ್ಥಿತಿ ಅರಿವಾಗಬಲ್ಲದು. ನಾವು ಭುವನೇಶ್ವರಿಯ ಹೃದಯ ವೈಶಾಲ್ಯತೆ ಗುರುತಿಸುವುದಾದರೆ ವಿಶ್ವದೆಲ್ಲೆಡೆಯಿಂದ ನಮ್ಮ ನಾಡಿನಲ್ಲಿ ಇಂದು ಹತ್ತು ಹಲವಾರು ಸಾಹಿತ್ಯ ಪ್ರಕಾರಗಳು ಆಶ್ರಯ ಪಡೆದು, ಇಲ್ಲಿಯವೆ ಎನ್ನುಷ್ಟರಮಟ್ಟಿಗೆ ಕನ್ನಡಿಗರ ಎದೆಗೂಡಿನಲ್ಲಿ ನೆಲೆ ನಿಂತಿವೆ. ಅವುಗಳಲ್ಲಿ ಇಂದು ಬರಹಗಾರರ ಡೈ ಹಾರ್ಟ್ ಫೇವರೇಟ್ ಎಂದರೆ ‘ಗಜಲ್’. ಇದು ಭಾವಪ್ರಧಾನವಾಗಿದ್ದು, ಒಂದು ಸಂಸ್ಕೃತಿಯ ಕೊಡು ಕೊಳ್ಳುವಿಕೆಯ ಕಾರಣದಿಂದಾಗಿ ದೇಶಗಳ ಎಲ್ಲೆಯನ್ನು ದಾಟಿ ಬಂದಿದೆ. ಇಂಥಹ ‘ಗಜಲ್’ ಮದರಂಗಿಯನ್ನು ಪ್ರೀತಿಸುತ್ತ ಪೋಷಿಸುತ್ತಿರುವವರಲ್ಲಿ ಶ್ರೀಮತಿ ಭಾಗ್ಯವತಿ ಕೆಂಭಾವಿಯವರೂ ಒಬ್ಬರು. ಶ್ರೀಮತಿ ಭಾಗ್ಯವತಿ ಕೆಂಭಾವಿಯವರು ಶ್ರೀ ಅಮರೇಶ್ವರ ಮುದ್ಗಲ್ ಮತ್ತು ವೀರಮ್ಮ ಎಂಬ ಕಾಯಕ ಜೀವಿಗಳ ಮಗಳಾಗಿ ಜನಿಸಿದರು. ಬಾಲ್ಯದಲ್ಲೆ ತಂದೆಯನ್ನು ಕಳೆದುಕೊಂಡು ತಾಯಿಯ ಆರೈಕೆಯಲ್ಲಿ ಮುದ್ದಿನ ಮಗಳಾಗಿ ಬೆಳೆದರು. ತಮ್ಮ ಹುಟ್ಟೂರು ಯಾದಗಿರಿಯಲ್ಲಿಯೆ ಶಿಕ್ಷಣವನ್ನು ಆರಂಭಿಸಿ, ಎಂ.ಎ ಸ್ನಾತಕೋತ್ತರ, ಬಿ.ಎಡ್ ಪದವಿಯನ್ನು ಮುಗಿಸಿ ; ಪ್ರಸ್ತುತವಾಗಿ ಯಾದಗಿರ ಜಿಲ್ಲೆಯ ಸರಕಾರಿ ಪ್ರೌಢಶಾಲೆ, ಹೆಡಗಿಮದ್ರದಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ “ಬಸವೋತ್ತರ ಯುಗದ ವಚನಕಾರರ ವಚನೇತರ ಸಾಹಿತ್ಯ” ಎಂಬ ವಿಷಯ ಕುರಿತು ಸಂಶೋಧನೆಯನ್ನು ಮಾಡುತಿದ್ದಾರೆ. ತಮ್ಮ ಶಾಲಾ ದಿನಗಳಿಂದಲೇ ಸಾಹಿತ್ಯ ರಚನೆ ಕುರಿತು ಆಸಕ್ತಿ ಹೊಂದಿದ್ದ ಶ್ರೀಯುತರು ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಅಂದರೆ ಕವನ, ವಚನ, ಗಜಲ್, ಚುಟುಕು, ಗದ್ಯ ಬರಹ… ಮುಂತಾದವುಗಳಲ್ಲಿ ಕೃಷಿ ಮಾಡಿದ್ದಾರೆ, ನಿರಂತರವಾಗಿ ಮಾಡುತ್ತಿದ್ದಾರೆ. ವಿಜಯಪುರದಲ್ಲಿ ನಡೆದ ಅ.ಭಾ.ಕ.ಸಾ ಸಮ್ಮೇಳನದಲ್ಲಿ ಇವರ ಪ್ರಥಮ ಕವನ ಸಂಕಲನ – “ಸಿರಿಸೊಡರು” ಲೋಕಾರ್ಪಣೆ ಆಗಿದೆ. ಗಜಲ್ ಸೆಳೆತಕ್ಕೆ ಸಿಲುಕಿ ಕಳೆದ ೨೦೨೦ರ ಜನೆವರಿಯಲ್ಲಿ “ಒಲವಿನ ಮಧುಬಟ್ಟಲು” ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿದ್ದಾರೆ. ಇವರ ಮತ್ತೊಂದು ಗದ್ಯಕೃತಿ ಮುದ್ರಣ ಹಂತದಲ್ಲಿದೆ. ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಹತ್ತು ಹಲವು ಅಭಿನಂದನ ಗ್ರಂಥಗಳಿಗೆ ಇವರು ಮೌಲ್ಯಿಕ ಲೇಖನಗಳನ್ನೂ ಬರೆದಿದ್ದಾರೆ. ಸಾಹಿತ್ಯದ ಜೊತೆ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಯಾದಗಿರಿ ಜಿಲ್ಲೆಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಮಹಿಳಾ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಎರಡನೆ ಅವಧಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಕವನ ವಾಚನ ಮಾಡಿದ್ದಾರೆ. ಆಕಾಶವಾಣಿ ಕಲಬುರಗಿ ಕೇಂದ್ರದಲ್ಲಿ ಇವರ ಕವನ ವಾಚನ, ಲಘು ಭಾಷಣ , ಪುಸ್ತಕ ಪರಿಚಯದಂತಹ ಹಲವಾರು ಸಾಹಿತ್ಯಿಕ ಕಾರ್ಯಕ್ರಮಗಳು ಪ್ರಸಾರವಾಗಿವೆ. ಜಿಲ್ಲಾ ಹಂತದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ಸ್ಥಾನದ ಗೌರವವೂ ಇವರಿಗೆ ಸಂದಿದೆ. ತಮ್ಮ ವೃತ್ತಿಯನ್ನು ತುಂಬಾ ಪ್ರೀತಿಸುವ ಇವರು ಮಕ್ಕಳ ನೆಚ್ಚಿನ ಶಿಕ್ಷಕಿಯಾಗಿ ಪಾಲಕರ ಹಾಗೂ ಪೋಷಕರ ಹೃದಯವನ್ನು ಗೆದ್ದಿದ್ದಾರೆ. ಅದಕ್ಕೆ ಇವರ ಸಾಧನೆಯ ಕುರುಹು ಎಂದರೆ ೨೦೧೮ ರಲ್ಲಿ ಲಭಿಸಿದ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯ ಗರಿ. ಇದರೊಂದಿಗೆ ಇವರಿಗೆ ನಾಡಿನ ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರಗಳು ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಪಂ.ಪುಟ್ಟರಾಜ ಸೇವಾ ಸಮಿತಿಯ ೨೦೨೦ನೇ ವರ್ಷದ ಶ್ರೇಷ್ಠ ಕೃತಿ ರತ್ನ ಪ್ರಶಸ್ತಿ, ಕರುನಾಡ ಸೇವಾ ಸಾಧಕಿ ಪ್ರಶಸ್ತಿ… ಮುಂತಾದವುಗಳು. ಭಾವನೆಗಳನ್ನು ವ್ಯಕ್ತಪಡಿಸಲು ‘ಮಾತು’ ತುಂಬಾ ಮುಖ್ಯ. ಆದರೆ ಎಷ್ಟೋ ಸಲ ಆ ಮಾತೇ ಭಾವನೆಯನ್ನು ಕೊಲ್ಲುತ್ತದೆ. ಅಂದರೆ ಭಾವನೆ ಭಾಷೆಯ ಮೌತಾಜ್ ಅಲ್ಲ. ಮೌನವೇ ಭಾವನೆಗಳ ತವರೂರು. ಈ ಮೌನದ ಛಾಯೆಯನ್ನು ಮಾತಿನಲ್ಲಿ ಹಿಡಿದಿಡುವ ಕಾವ್ಯ ಪ್ರಕಾರವೇ ‘ಗಜಲ್’. ಭಾವ ಸಂಗಮದಲ್ಲಿ ಅರಳಿದ ಭಾವನೆಗಳ ಅಂತಃಸತ್ವವೆ ಇದರ ಉಸಿರು. ಭಾವ ಕೆನೆಗಟ್ಟಿ, ಅದು ಬಂಧುರಗೊಂಡಾಗಲೆ ಓದುಗನ, ಕೇಳುಗನ; ಸಹೃದಯಿಯ ಹೃದಯವನ್ನು ಗೆಲ್ಲುತ್ತದೆ. ಈ ನೆಲೆಯಲ್ಲಿ ಗಜಲ್ ಗೋ ಅವರು ವ್ಯಕ್ತಿಯ ವಿವಿಧ ಅನೂಹ್ಯ ಭಾವಗಳಾದ ಸ್ನೇಹ-ಪ್ರೀತಿ-ಪ್ರೇಮಗಳ ಆಂತರಿಕ ತುಡಿತ, ಪ್ರಣಯ-ವಿರಹದ ಕಾವು, ಜೀವನದ ಅಸ್ಥಿರತೆ-ಯಾಂತ್ರಿಕತೆ-ನಾಟಕೀಯತೆ, ಸಾಮಾಜಿಕ ಜೀವನದ ಬಯಕೆ, ಭಕ್ತಿಭಾವ-ದೈವಿಕತೆ-ಆಧ್ಯಾತ್ಮಿಕ ಚಿಂತನೆ, ವ್ಯಕ್ತಿ ಚಿತ್ರಣ, ಪ್ರಕೃತಿ, ಸ್ತ್ರೀ ಸಂವೇದನೆ, ವೈಚಾರಿಕ ವಿವೇಚನೆ.. ಹೀಗೆ ಮುಂತಾದ ಹತ್ತು ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಗಜಲ್ ಗಳನ್ನು ರಚಿಸಿದ್ದಾರೆ. “ಆಮಂತ್ರಣದ ಊಟಕೆ ಬಂದವರು ತುಂಬಿದ ತಟ್ಟೆಯಲಿ ಕೈ ತೊಳೆದರು ತುತ್ತು ಅನ್ನಕ್ಕೆ ಅಂಗಲಾಚಿ ಸಾಯುವರು ನಿತ್ಯವೂ ನೋಡುತಿರುವೆನು ಸಾಕಿ“ ಈ ಮೇಲಿನ ಷೇರ್ ಇಂದಿನ ಜಾಗತೀಕರಣ ಭೋಗ ಜೀವನವನ್ನು ಬಿಂಬಿಸುತ್ತ, ಆರ್ಥಿಕ ಅಸಮಾನತೆಯತ್ತ ಬೆರಳು ಮಾಡಿ ; ಅದರಿಂದುಂಟಾಗಬಹುದಾದ ದುಷ್ಪರಿಣಾಮಗಳ ಕುರಿತು ನಮ್ಮ ಗಮನವನ್ನು ಸೆಳೆಯುತ್ತದೆ. ಮದುವೆ -ಮುಂಜಿಯಂತಹ ಅನ್ನದ ಕಾರ್ಯಕ್ರಮಗಳು ಹಸಿದವರಿಗಿಂತ ಹೊಟ್ಟೆ ತುಂಬಿದವರಿಗೆನೆ ಊಟ ಬಡಿಸುತ್ತಿವೆ. ನಿರೀಕ್ಷೆಯಂತೆ ಆ ಒಡಲುಗಳು ದೇವರಿಗಿಡುವ ನೈವೇದ್ಯದಂತೆ ಕೆಲ ತುತ್ತುಗಳನ್ನು ಬಳಸಿಕೊಂಡು ಕಸವಾಗಿ ಪರಿವರ್ತಿಸುವವು! ಈ ಷೇರ್ ನ ಮಿಸ್ರಾ -ಎ-ಸಾನಿ, ಮಿಸ್ರಾ-ಎ-ಊಲಾದ ಇಂಪ್ಯಾಕ್ಟ್ ಆಗಿ ಮೆದು ಮನಸುಗಳನ್ನು ತಲ್ಲಣಿಸುತ್ತಿರುವಂತಿದೆ. ಇಲ್ಲಿ ಗಜಲ್ ಗೋ ಅವರು ಹಸಿದವರಿಗೆ ಅನ್ನ ನೀಡಬೇಕು ಎಂಬ ಸಾತ್ವಿಕ ವಿಚಾರವನ್ನು ತಮ್ಮ ಷೇರ್ ಮುಖಾಂತರ ಅರುಹಿದ್ದಾರೆ. ನಮ್ಮ ನಾಡು ಪುರಾಣ ಪುರುಷರಿಂದ, ಸಾಧು-ಸಂತ-ಪಕೀರರಿಂದ, ಮೇಧಾವಿ-ಚಿಂತಕ-ದಾರ್ಶನಿಕರಿಂದ ಕಂಗೊಳಿಸಿತ್ತು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ. ಆ ಪರಂಪರೆಯಲ್ಲಿ ತಮ್ಮ ಯುವಪೀಳಿಗೆ ಮುಂದುವರಿಯಲೆಂದು ಹಿರಿಯರು ಅವರ ಕಥೆಗಳನ್ನು ಹೇಳುತ್ತಾ ಬಂದಿದ್ದಾರೆ. ಆದರೆ ನಮಗೆ ಕಥೆ ಕೇಳುವಲ್ಲಿ ಇರುವ ಆಸಕ್ತಿ, ಅಭಿರುಚಿ, ಮನೋರಂಜನೆ ಅದರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಇಲ್ಲ. ಸತ್ಯ ಹರಿಶ್ಚಂದ್ರನ ನಾಡಿನಲ್ಲಿಂದು ಆ ಹರಿಶ್ಚಂದ್ರನ ಸವತಿಯ ಮಕ್ಕಳದೆ ಪಾರುಪತ್ಯ! ಅಂತೆಯೇ ಗಜಲ್ ಗೋ ಅವರು ತಮ್ಮ ಗಜಲ್ ಒಂದರ ಷೇರ್ ನಲ್ಲಿ ಈ ರೀತಿ ಹೇಳಿದ್ದಾರೆ. “ನಿಮಿಷಕ್ಕೊಂದು ನಾಲಿಗೆ ಹುಟ್ಟುತ್ತಿದೆ ಜಗದಲಿ ಸತ್ಯ ಹರಿಶ್ಚಂದ್ರನಾಗಲು ಹೊರಟಿದ್ದು ನನ್ನದೇ ತಪ್ಪು“ ಇಂದಿನ ಸಮಾಜದ ಚಿತ್ರಣವನ್ನು ಈ ಮೇಲಿನ ಷೇರ್ ಕಟ್ಟಿಕೊಡುತ್ತದೆ. ನಾಲಿಗೆಗಳು ಹೇಗೆ ಬಣ್ಣ ಬದಲಾಯಿಸುತ್ತ ಸಾಗುತ್ತಿವೆ ಎಂಬುದನ್ನು ಹೇಳುತ್ತ, ಬೆತ್ತಲೆ ಪರಪಂಚದಲ್ಲಿ ಬಟ್ಟೆ ತೊಟ್ಟವನೆ ಹುಚ್ಚ ಎಂಬ ವಿಷಾದದ ಛಾಯೆಯೂ ಇದರಲ್ಲಿದೆ. ಮೌಲ್ಯವರ್ಧಿತ ದಾರಿ ನಡೆಯುವ ಕಾಲುಗಳಿಗೆ ಮುಳ್ಳುಗಳ ಹಾಸಿಗೆಯನ್ನು ಹಾಸುತ್ತಿರುವುದು ನಿಜಕ್ಕೂ ಖೇದಕರ! ಕಂಬನಿಯ ಕಡಲಲ್ಲಿ ದೋಣಿ ಹಾಯಿಸುವ ಕೆಲಸವನ್ನು ‘ಗಜಲ್’ ಯಶಸ್ವಿಯಾಗಿ ಮಾಡುತ್ತ ಬಂದಿದೆ, ಬರುತ್ತಿದೆ. ಇಂಥಹ ‘ಗಜಲ್’ ಗಳು ಕದಡಿದ ಮನಸ್ಸುಗಳನ್ನು ಶಾಂತಗೊಳಿಸಬೇಕಾಗಿದೆ. ಈ ದಿಸೆಯಲ್ಲಿ ಶ್ರೀಮತಿ ಕೆಂಭಾವಿಯವರಿಂದ ಮತ್ತಷ್ಟು, ಮೊಗೆದಷ್ಟೂ ಗಜಲ್ ಸಂಕಲನಗಳು ಮೂಡಿಬರಲಿ, ಅವುಗಳು ಸಹೃದಯ ಓದುಗರ ಮನವನ್ನು ತಣಿಸಲಿ ಎಂದು ಶುಭ ಕೋರುತ್ತೇನೆ. “ನೀರಿನ ಮೇಲೆ ದ್ವೇಷವಿದ್ದರೆ ಹೇಳು ದಾಹ ಏನು ಮಾಡಬೇಕು ವರ್ತಮಾನ ಬೆತ್ತಲೆಯಾಗಿದ್ದರೆ ಇತಿಹಾಸ ಏನು ಮಾಡಬೇಕು“ –ಡಾ. ಹನುಮಂತ ನಾಯಡು ಗಜಲ್ ಉದ್ಯಾನವನದ ವಿಹಾರ ತಮ್ಮ ಮನಸ್ಸಿಗೆ ಮುದ ನೀಡುತ್ತಿದೆ ಅಲ್ಲವೇ.. ಆದರೂ ಏನೂ ಮಾಡೋದು, ಸಮಯದ ಮುಂದೆ ಮಂಡಿಯೂರಲೆ ಬೇಕಲ್ಲವೇ? ಹಾಗಾಗಿ ಇಂದು ನಾನು ನನ್ನ ಈ ಬರಹಕ್ಕೆ ಅಲ್ಪ ವಿರಾಮವನ್ನು ನೀಡುತ್ತ, ಮುಂದಿನ ಗುರುವಾರ ತಮಗೆ ಕಾಯಿಸದೆ ಬೇಗ ತಮ್ಮ ಮುಂದೆ ಹಾಜರಾಗುವೆ ಎಂದು ಪ್ರಮಾಣ ಮಾಡುತ್ತ; ಇಲ್ಲಿಂದ ನಿರ್ಗಮಿಸುತ್ತೇನೆ. ಧನ್ಯವಾದಗಳು.. ಡಾ. ಮಲ್ಲಿನಾಥ ಎಸ್. ತಳವಾರ ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ
