ರಾಮಕೃಷ್ಣ ಗುಂದಿ ಆತ್ಮಕಥೆ
ಭಾಗ – 54
ಪ್ರಚಾರ ಬಯಸದ ಪ್ರತಿಭಾ ಸಂಪನ್ನ : ನನ್ನ ತಂದೆ ಗಣಪು ಮಾಸ್ತರ
ರಾಮಕೃಷ್ಣ ಗುಂದಿ ಆತ್ಮಕಥೆ
ಭಾಗ – 54
ಪ್ರಚಾರ ಬಯಸದ ಪ್ರತಿಭಾ ಸಂಪನ್ನ : ನನ್ನ ತಂದೆ ಗಣಪು ಮಾಸ್ತರ
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—52 ಯಕ್ಷಗಾನದ ಸಿಹಿ-ಕಹಿ ನೆನಪುಗಳು ಹವ್ಯಾಸಿ ಕಲಾವಿದನಾಗಿ ನಾನು ಯಕ್ಷಗಾನ ರಂಗದಲ್ಲಿ ತೊಡಗಿಕೊಂಡ ಬಳಿಕ ಕಾಲೇಜಿನ ಆಚೆಗೂ ನನ್ನ ಜೀವನಾನುಭವಗಳು ವಿಸ್ತಾರಗೊಂಡವು. ಪ್ರೇಕ್ಷಕರ ಅಭಿಮಾನ ಒಲವುಗಳು ಒಂದು ಕಡೆ ರೋಮಾಂಚನಗೊಳಿಸಿದರೆ ಸಂಘಟಕರ ಅಪೇಕ್ಷೆಯಂತೆ ನಡೆದುಕೊಳ್ಳಲು ಸಾಧ್ಯವಾಗದ ಸಂದರ್ಭಗಳಲ್ಲಿ ಅವರ ನಿಷ್ಠುರವನ್ನು, ವಿರೋಧವನ್ನು ಎದುರಿಸಬೇಕಾದ ಅನಿವಾರ್ಯ ಸನ್ನಿವೇಶಗಳೂ ಸೃಷ್ಟಿಯಾಗುತ್ತಿದ್ದವು. ಬೇರೆ ಬೇರೆ ಕೌಟುಂಬಿಕ ಪರಿಸರದಿಂದ ಬಂದ ಕಲಾವಿದರ ಆಲೋಚನೆ, ಸ್ವಭಾವಗಳಿಗೆ ಹೊಂದಿಕೊಳ್ಳುವುದು ಹಲವು ಬಾರಿ ಕಷ್ಟವೇ ಎನಿಸಿದರೂ ಯಕ್ಷಗಾನದ ಮೇಲಿನ ಪ್ರೀತಿಯಿಂದ ಎಲ್ಲವನ್ನೂ ಸಹ್ಯವಾಗಿಸಿಕೊಳ್ಳುವ ಅವಶ್ಯಕತೆಯಿರುತ್ತಿತ್ತು. ಜೊತೆಗೆ ನಾನೊಬ್ಬ ಕಾಲೇಜು ಉಪನ್ಯಾಸಕನಾದ್ದರಿಂದ ವೃತ್ತಿ ಗೌರವವನ್ನು ಕಾಪಾಡಿಕೊಳ್ಳಲೇಬೇಕಾದ ಗುರುತರವಾದ ಜವಬ್ದಾರಿಯೂ ನನ್ನ ಮೇಲಿತ್ತು. ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ಸಂಘಟಕರು ಸಂಘಟಿಸುವ ಕಾರ್ಯಕ್ರಮದಲ್ಲಿ ನಮಗೆ ಎಲ್ಲೆಡೆಯೂ ನಿರೀಕ್ಷಿತ ಮಟ್ಟದ ವ್ಯವಸ್ಥೆ ಇರುವ ಭರವಸೆಯೇನೂ ಇರುತ್ತಿರಲಿಲ್ಲ. ಎಲ್ಲೋ ಕುಳಿತು ಬಣ್ಣ ಬಳಿದುಕೊಳ್ಳುವ, ಎಂಥಹದೋ ನೆಲದಲ್ಲಿ ನಿದ್ದೆಗಾಗಿ ಒರಗಿಕೊಳ್ಳುವ, ಮೆಚ್ಚದ ಅಡಿಗೆಯನ್ನೂ ಹೇಗೋ ಉಂಡು ಹೊಟ್ಟೆತುಂಬಿಕೊಳ್ಳುವ ಸಂದರ್ಭಗಳು ಬಂದಾಗ ನನ್ನ ಉಪನ್ಯಾಸಕನೆಂಬ ಅಹಮಿಕೆಯನ್ನು ಬದಿಗಿಟ್ಟು ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆಗಳು ನನ್ನನ್ನು ಪರಿಪೂರ್ಣ ಮತ್ತು ಸಹನಶೀಲ ಮನುಷ್ಯನನ್ನಾಗಿ ರೂಪಿಸಲು ನೆರವಾದವು ಎಂದೇ ನನಗೆ ಅನಿಸುತ್ತದೆ. ಮತ್ತು ಅದೇ ಕಾರಣದಿಂದ ಎಲ್ಲರೊಡನೊಂದಾಗುವ ಸಂಯಮದ ಜೀವನ ಪಾಠ ನೀಡಿ ಯಕ್ಷಗಾನವೇ ನನ್ನನ್ನು ತಿದ್ದಿ ಪರಿಷ್ಕರಿಸಿದೆ ಎಂದು ನಂಬಿದ್ದೇನೆ. ಕಲೆಯೊಂದರ ಪ್ರಭಾವ ಮತ್ತು ಫಲಿತಾಂಶ ಅಂತಿಮವಾಗಿ ಇದೆ ಅಲ್ಲವೇ? ಯಕ್ಷರಂಗಕ್ಕೆ ಸಂಬಂಧಿಸಿದಂತೆ ಎರಡು ಮರೆಯಲಾಗದ ಸಿಹಿ-ಕಹಿ ಘಟನೆಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕು…….. ೧೯೮೮-೯೦ ರ ಸಮಯ. ಅಂಕೋಲೆಯ ನಮ್ಮ ಹವ್ಯಾಸಿ ಯಕ್ಷಗಾನ ತಂಡವು ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ಒಂದು ಯಕ್ಷಗಾನ ಪ್ರದರ್ಶನ ನೀಡಬೇಕಿತ್ತು. ಅಂದು ತುಂಬ ಹೆಸರು ಮಾಡಿದ, ಹಲವಾರು ವೃತ್ತಿಮೇಳಗಳಲ್ಲೂ ಅತಿಥಿ ಕಲಾವಿದರಾಗಿ ಪಾತ್ರ ನಿರ್ವಹಿಸಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಪರಿಚಿತರಾದ ಅಗ್ಗರಗೋಣದ ಎಂ.ಎಂ. ನಾಯಕರು ನಮ್ಮ ತಂಡದ ನಾಯಕತ್ವ ಮತ್ತು ಪ್ರದರ್ಶನದ ಜವಾಬ್ದಾರಿ ವಹಿಸಿದ್ದರು. ಎಂ.ಎಂ.ನಾಯಕರು ವೃತ್ತಿಯಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ಶಾಲಾ ಶಿಕ್ಷಣ ತಪಾಸಣಾಧಿಕಾರಿಯಾಗಿ ಪದೋನ್ನತಿ ಹೊಂದಿದ್ದರು. ಆದರೂ ಯಕ್ಷಗಾನವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರು ಹವ್ಯಾಸಿ ಕಲಾವಿದರಾಗಿ ಮೇಲಿಂದ ಮೇಲೆ ಯಕ್ಷಗಾನ ಪ್ರದರ್ಶನ, ಸಂಘಟನೆ ಪಾತ್ರ ನಿರ್ವಹಣೆಯಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳುತ್ತಿದ್ದರು. ಅವರ ದುಷ್ಟ ಬುದ್ಧಿ, ಕಂಸ, ಜರಾಸಂಧ ಮುಂತಾದ ಪಾತ್ರಗಳು ಬಹಳಷ್ಟು ಜನಮನ್ನಣೆ ಗಳಿಸಿದ್ದವು. ಅಂದು ನಾವು ಹುಬ್ಬಳ್ಳಿಯಲ್ಲಿ ಪ್ರದರ್ಶನ ನೀಡಬೇಕಾದ ಪ್ರಸಂಗ “ಚಂದ್ರಹಾಸ ಚರಿತ್ರೆ”. ಅದರಲ್ಲಿ ಎಂ.ಎಂ. ನಾಯಕರ ದುಷ್ಟಬುದ್ಧಿ, ವಂದಿಗೆ ವಿಠೋಬ ನಾಯಕರ ಕುಳಿಂದ, ಗೋಕರ್ಣದ ಅನಂತ ಹಾವಗೋಡಿಯವರ ಮದನ, ನನ್ನದು ಚಂದ್ರಹಾಸ. ಮತ್ತಿತರ ಪಾತ್ರಗಳನ್ನು ತಂಡದ ವಿವಿಧ ಕಲಾವಿದರು ನಿರ್ವಹಿಸಬೇಕಿತ್ತು. ಸಂಜೆಯ ಆರು ಗಂಟೆಗೆ ನಮ್ಮ ಪ್ರದರ್ಶನ ಆರಂಭವಾಗಬೇಕಿದ್ದುದರಿಂದ ನಾವು ಮಧ್ಯಾಹ್ನ ಹನ್ನೊಂದು ಗಂಟೆಗೆ ಅಂಕೋಲೆಯಿಂದ ಪ್ರಯಾಣ ಆರಂಭಿಸಿದೆವು. ಒಂದು ಬಾಡಿಗೆ ಟೆಂಪೋ ಗೊತ್ತು ಮಾಡಿಕೊಂಡು ನಮ್ಮ ಯಕ್ಷಗಾನ ಪರಿಕರಗಳು ಇತ್ಯಾದಿ ಹೇರಿಕೊಂಡು ಹಿಮ್ಮೇಳ, ಮುಮ್ಮೇಳದ ಕಲಾವಿದರೆಲ್ಲ ಸೇರಿ ಟೆಂಪೋ ಭರ್ತಿಯಾಗಿತ್ತು. ಒಂದು ಒಂದುವರೆ ತಾಸಿನ ಪ್ರಯಾಣ ಮಾಡಿ ನಾವು ಅರಬೈಲ್ ಘಟ್ಟ ಹತ್ತಿಳಿದು ಯಲ್ಲಾಪುರ ನಗರ ಪ್ರವೇಶಕ್ಕೆ ಸನಿಹವಾಗಿದ್ದೆವು. ಸ್ವಲ್ಪ ದೂರದಿಂದಲೇ ನಮಗೆ ದ್ವಿಚಕ್ರವಾಹನಗಳೂ ಸೇರಿದಂತೆ ಸಾಲುಗಟ್ಟಿ ನಿಂತ ಬೇರೆ ಬೇರೆ ವಾಹನಗಳು ಗೋಚರಿಸಿದವು. ವಿಚಾರಿಸಿದಾಗ, “ಪೊಲೀಸರಿಂದ ವಾಹನ ತಪಾಸಣೆ ನಡೆಯುತ್ತಿದೆ” ಎಂಬ ವರ್ತಮಾನ ತಿಳಿಯಿತು. ನಮಗೆ ಸಮಯದ ಕಾಳಜಿ ತುಂಬ ಇದೆ. ನಾವು ಮುಂದಿನ ಎರಡು ಗಂಟೆಗಳ ಪ್ರಯಾಣ ಮಾಡಿ ಹುಬ್ಬಳ್ಳಿ ತಲುಪಬೇಕು. ಆ ಬಳಿಕ ವೇಷ ಇತ್ಯಾದಿ ಸಿದ್ಧಗೊಂಡು ಆರು ಗಂಟೆಗೆ ಪ್ರದರ್ಶನ ಆರಂಭವಾಗಬೇಕು! ತಂಡದ ನಾಯಕರಾದ ಎಂ.ಎಂ.ನಾಯಕ ಮತ್ತಿತರ ಕಲಾವಿದರು ವಾಹನದಿಂದ ಇಳಿದು ಮುಂದೆ ಹೋಗಿ ಪೊಲೀಸು ಅಧಿಕಾರಿಗಳನ್ನು ಕಂಡು ನಮ್ಮ ಪರಿಸ್ಥಿತಿಯನ್ನು ನಿವೇದಿಸಿಕೊಂಡರು. ಆದರೂ ಸರತಿಯ ಸಾಲಿನಲ್ಲೇ ಬರುವಂತೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಆದೇಶಿಸಿ ಅವರನ್ನು ಹಿಂದೆ ಕಳುಹಿಸಿದರು. ಅವರ ಪರಿಶೀಲನೆಯ ನಿಧಾನ ಗತಿಯಿಂದ ತಂಡದ ಎಲ್ಲ ಕಲಾವಿದರಿಗೂ ಚಡಪಡಿಕೆ ಆರಂಭವಾಗಿತ್ತು. ತಾಸು ಕಳೆದ ಬಳಿಕ ನಮ್ಮ ವಾಹನದ ಬಳಿ ಬಂದ ಕಾನ್‌ಸ್ಟೇಬಲ್ ಓರ್ವ ನಮ್ಮ ವಾಹನವನ್ನು ಹತ್ತಿಳಿದು, ವಾಹನಕ್ಕೆ ಒಂದು ಸುತ್ತು ಬಂದು ಪರಿಶೀಲಿಸಿದಂತೆ ಮಾಡಿ ಮರಳಿ ಹೊರಟವನು ನಮ್ಮ ವಾಹನ “ಓವರ್ ಲೋಡ್” ಆಗಿದೆಯೆಂದೇ ದೂರು ಸಲ್ಲಿಸಿದನಂತೆ. ದಂಡ ಇತ್ಯಾದಿ ವಸೂಲಿ ಪ್ರಕ್ರಿಯೆಗಳು ಮುಗಿಯದೇ ನಮ್ಮನ್ನು ಸುಲಭವಾಗಿ ಬಿಡಲು ಸಾಧ್ಯವೇ ಇಲ್ಲವೆಂದು ಪೊಲೀಸು ಅಧಿಕಾರಿ ಇನ್ನಷ್ಟು ಉಪೇಕ್ಷೆ ಮಾಡಿ ಬೇರೆ ವಾಹನ ಪರೀಕ್ಷೆಯಲ್ಲಿ ತಲ್ಲೀನರಾದರು. ಇನ್ನರ್ಧ ತಾಸು ವ್ಯರ್ಥ ಕಾಲ ಹರಣವಾಯಿತು. “ಇದು ಸುಲಭದಲ್ಲಿ ಬಗೆಹರಿಯುವ ಹಾಗೆ ಕಾಣುತ್ತಿಲ್ಲ” ಎಂದು ಕೊಳ್ಳುತ್ತ ಇದುವರೆಗೆ ವಾಹನದಿಂದ ಕೆಳಗಿಳಿಯದೇ ಕುಳಿತುಕೊಂಡಿದ್ದ ನಾನು ಮತ್ತು ಸಹ ಕಲಾವಿದರಿಬ್ಬರು ವಾಹನದಿಂದ ಇಳಿದು ರಸ್ತೆಗೆ ಬಂದೆವು. ದೂರದಲ್ಲಿ ಪೊಲೀಸು ಅಧಿಕಾರಿ ತನ್ನ ಮೋಟಾರ್ ಬೈಕನ್ನು ಅಡ್ಡವಿಟ್ಟು ಅದರ ಮೇಲೆ ಕುಳಿತುಕೊಂಡು ಕಾನ್‌ಸ್ಟೇಬಲ್‌ಗಳಿಗೆ ಸೂಚನೆ ನೀಡುತ್ತಿರುವುದು ಕಾಣಿಸುತ್ತಿತ್ತು. ನಮ್ಮ ತಂಡದ ಪರವಾಗಿ ಅಹವಾಲು ಸಲ್ಲಿಸುತ್ತಿದ್ದ ಹಿರಿಯರೂ ಅಲ್ಲಿಯೇ ನಿಂತಿದ್ದರು. “ನೋಡುವಾ ಏನು ನಡಿತೀದೆ ಅಲ್ಲಿ” ಎಂಬ ಕುತೂಹಲದಿಂದ ನಾವೂ ನಾಲ್ಕು ಹೆಜ್ಜೆ ಮುಂದೆ ನಡೆದು ಅವರನ್ನು ಸಮೀಪಿಸಿದೆವು. ಒಮ್ಮೆ ನಮ್ಮತ್ತ ನೋಡಿದ ಪೊಲೀಸು ಅಧಿಕಾರಿ ಕುತೂಹಲದಿಂದ ನಮ್ಮನ್ನು ಗಮನಿಸುತ್ತಲೇ ಚಂಗನೆ ತನ್ನ ಬೈಕ್ ಮೇಲಿಂದ ಕೆಳಗಿಳಿದು ನಿಂತವನು ನಮ್ಮತ್ತಲೇ ಧಾವಿಸಿ ಬರುತ್ತ ನೇರವಾಗಿ ನನ್ನ ಕೈಗಳನ್ನು ಹಿಡಿದುಕೊಂಡು “ಸರ್ ನೀವು?” ಎಂದು ಹಸನ್ಮುಖಿಯಾಗಿ ಉದ್ಘರಿಸಿದ! ನನ್ನನ್ನು ಸೇರಿ ನಮ್ಮ ಗುಂಪಿನ ಎಲ್ಲರಿಗೂ ಅತ್ಯಾಶ್ಚರ್ಯವಾಯಿತು. ಪೊಲೀಸು ಅಧಿಕಾರಿ ಯಾರೆಂದು ನನಗಿನ್ನೂ ಗುರುತೇ ಹತ್ತಿರಲಿಲ್ಲ! ಮೂಕ ವಿಸ್ಮಿತರಾಗಿದ್ದೆವಷ್ಟೇ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಆತನೇ ಮುಂದುವರಿದು “ಸರ್ ನಾನು ಸದಾನಂದ ನಾಯಕ…. ನಿಮ್ಮ ವಿದ್ಯಾರ್ಥಿ” ಎಂದು ಪರಿಚಯಿಸಿಕೊಂಡ ಕ್ಷಣದ ಸಂತೋಷವನ್ನು ಇಲ್ಲಿ ಶಬ್ಧಗಳಲ್ಲಿ ವರ್ಣಿಸಲು ಅಸಾಧ್ಯವೇ. ಮುಂದಿನದನ್ನು ನಾನು ವಿವರಿಸಬೇಕಿಲ್ಲ. ನಮ್ಮ ತಂಡಕ್ಕೆ ಗೌರವಪೂರ್ಣ ವಿದಾಯ ಯಲ್ಲಾಪುರ ಪೊಲೀಸ್ ಇಲಾಖೆಯಿಂದ ದೊರೆಯಿತು. ನಮ್ಮ ಯಕ್ಷ ತಂಡದ ಸದಸ್ಯರೆಲ್ಲ ನನ್ನನ್ನು ಹೃತ್ಪೂರ್ವಕ ಅಭಿನಂದಿಸಿದರು. ಸಕಾಲದಲ್ಲಿ ನಾವು ಹುಬ್ಬಳ್ಳಿ ತಲುಪಿ ಸಮಯಕ್ಕೆ ಸರಿಯಾಗಿಯೇ ಪ್ರದರ್ಶನ ನೀಡಿ ಊರಿಗೆ ಮರಳಿದ್ದೆವು. ನನಗೆ ಇಲ್ಲಿ ಬಹಳ ಮುಖ್ಯವಾಗಿ ಕಂಡದ್ದು ಸದಾನಂದ ನಾಯಕ ಎಂಬ ನನ್ನ ವಿದ್ಯಾರ್ಥಿಯ ಸೌಜನ್ಯಶೀಲತೆ. ನಾನು ಆತನಿಗೆ ಮಾಡಿದ ಪಾಠವೆಷ್ಟು? ಆತ ಬಿ.ಎಸ್.ಸಿ ಭಾಗ ಒಂದರ ಒಂದು ವರ್ಷ ಮಾತ್ರ. ಕನ್ನಡ ಓದಿದ ವಿದ್ಯಾರ್ಥಿ. ಅದರಲ್ಲೂ ವಾರದ ಮೂರು ತಾಸಿನ ಅವಧಿಯಲ್ಲಿ ನಾನು ಪಾಠ ಹೇಳಿದ್ದು ವಾರದ ಒಂದು ತಾಸು ಮಾತ್ರ. ಅಷ್ಟು ಅಲ್ಪಾವಧಿಯ ಪಾಠ ಕೇಳಿದ ಆತ ತನ್ನ ಹೃದಯದಲ್ಲಿ ಉಳಿಸಿಕೊಂಡಿದ್ದ ನನ್ನ ಕುರಿತಾದ ಗೌರವಾದರಗಳು ಬೆಲೆ ಕಟ್ಟಲಾಗದಷ್ಟು ಎಂಬುದು ನನಗೆ ಈ ಸನ್ನಿವೇಶದಲ್ಲಿ ಸ್ಪಷ್ಟವಾಯಿತು. ಶಿಕ್ಷಕ ವೃತ್ತಿಗೆ ಅಂತಿಮವಾಗಿ ಸಿಗುವ ಫಲವೆಂದರೆ ಎಲ್ಲೋ ಹೇಗೋ ಇರುವ ವಿದ್ಯಾರ್ಥಿಯೊಬ್ಬ ಅಭಿವ್ಯಕ್ತಿಸುವ ಗೌರವಾದರಗಳೇ ಅಲ್ಲವೇ? ಮುಂದಿನ ದಿನಗಳಲ್ಲಿ ಕಾರವಾರದ ಕೊಂಕಣ ಮರಾಠಾ ಸಮುದಾಯದ ಇದೇ ಸದಾನಂದ ನಾಯಕ ಎಂಬ ಪೊಲೀಸು ಅಧಿಕಾರಿ ಅಂಕೋಲೆಯ ಗೋವಿಂದರಾಯ ನಾಯಕ ಮಾಸ್ತರರ ಹಿರಿಯ ಮಗಳು (ಡಾ. ಶ್ರೀದೇವಿ ತಿನೇಕರ ಅವರ ಹಿರಿಯ ಸಹೋದರಿ) ವೀಣಾ ಎಂಬುವವರ ಕೈ ಹಿಡಿದು ಸಮೃದ್ಧ ದಾಂಪತ್ಯ ಜೀವನ ನಡೆಸಿದರು. ಇಲಾಖೆಯಲ್ಲಿ ಎಸ್.ಪಿ ಹುದ್ದೆಯವರೆಗೆ ಪದೋನ್ನತಿ ಪಡೆದು ಈಗ ನಿವೃತ್ತಿ ಹೊಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇದೇ ಕಾಲಾವಧಿಯಲ್ಲಿ ನಡೆದ ಒಂದು ನೋವಿನ ಕಥೆಯನ್ನೂ ಇಲ್ಲಿ ಪ್ರಸ್ತಾಪಿಸಬೇಕು. ನನ್ನ ಪತ್ನಿ ನಿರ್ಮಲಾ ನನ್ನ ಎರಡನೆಯ ಮಗನಿಗೆ ಜನ್ಮ ನೀಡಿ (ಅಭಿಷೇಕ) ಬಾಣಂತಿಯ ಉಪಚಾರದ ಅವಧಿ ಮುಗಿಸಿಕೊಂಡು ತೌರಿಂದ ಅಂಕೋಲೆಗೆ ಮರಳಿದ್ದಳು. ಮಕ್ಕಳು ಬಾಣಂತಿ ಮನೆಗೆ ಬಂದರೆಂದು ಅಡಿಗೆ ಇತ್ಯಾದಿ ಸಹಾಯಕ್ಕಾಗಿ ನನ್ನ ತಾಯಿ ನಮ್ಮನೆಗೆ ಬಂದು ಉಳಿದುಕೊಂಡಿದ್ದಳು. ಅದು ಯುಗಾದಿ ಹಬ್ಬದ ಮುನ್ನಾ ದಿನ. ಅಂಕೋಲೆಯ ಸಮೀಪದ ಹಾರವಾಡ ಎಂಬ ಹಳ್ಳಿಯಲ್ಲೊಂದು ಆಟ. ಹಾರವಾಡ ಗ್ರಾಮದಲ್ಲಿ ನನ್ನನ್ನು ತುಂಬಾ ಗೌರವಿಸುವ ಸಮಾಜದ ಹಿರಿಯರಾದ ಕಾನೂನು ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಥಾಕು ಹಾರವಾಡೇಕರ ಎಂಬುವರು. ಅವರ ಸಹೋದರ ಅಬಕಾರಿ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಜಿ.ಎಂ. ಹಾರವಾಡೇಕರ, ಮತ್ತವರ ಇಡಿಯ ಕುಟುಂಬ ನೆಲೆಸಿದೆ. ಅವರ ಒತ್ತಾಯದ ಮೇರೆಗೆ ಅಂದಿನ ಯಕ್ಷಗಾನ ಪ್ರಸಂಗದಲ್ಲಿ ನಾನೂ ಅತಿಥಿ ಕಲಾವಿದನಾಗಿ ಒಂದು ಪಾತ್ರವಹಿಸಲು ಒಪ್ಪಿಕೊಂಡೆ. ಅಂದು ಥಾಕು ಹಾರವಾಡೇಕರ, ಜಿ.ಎಂ.ಹಾರವಾಡೇಕರ ಸಹಿತ ಊರಿನ ಹಲವು ಸಮಾಜ ಬಂಧುಗಳೇ ಪಾತ್ರ ನಿರ್ವಹಿಸಿದ್ದರು. ನನ್ನದು ಒಂದು ರಕ್ಕಸ ಪಾತ್ರ. ಮಧ್ಯರಾತ್ರಿಯ ಬಳಿಕವೇ ರಂಗ ಪ್ರವೇಶಿಸುವ ನನ್ನ ಪಾತ್ರ ಬೆಳಕು ಹರಿಯುವವರೆಗೆ ಮುಂದುವರಿಯಬೇಕಿತ್ತು. (ಅಪರೂಪದ ಕಥಾನಕವಾದ್ದರಿಂದ ಪ್ರಸಂಗ ಮತ್ತು ಪಾತ್ರದ ಹೆಸರು ಮರೆತಿದೆ ಕ್ಷಮಿಸಿ) ಸಾಧಾರಣವೆನ್ನಿಸುವ ಮಟ್ಟಿಗಷ್ಟೇ ನನ್ನ ಪಾತ್ರ ನಿರ್ವಹಣೆ ನನಗೆ ಸಾಧ್ಯವಾಗಿತ್ತು. ಆಟ ಮುಗಿಸಿ ಹೊರಡುವುದಕ್ಕೆ ನನ್ನ ಸ್ವಂತ ವಾಹನವಿತ್ತು. ಈ ಮೊದಲಿನ ಎಜ್ಡಿ ಬೈಕ್‌ನ್ನು ಬದಲಾಯಿಸಿ ಕೆಲವೇ ತಿಂಗಳ ಹಿಂದೆ “ವೆಸ್ಪಾ ಎಲ್.ಎಂ.ಎಲ್” ಎಂಬ ಸ್ಕೂಟರ್‌ನ್ನು ಖರೀದಿಸಿದ್ದೆ. ನನ್ನ ಜೊತೆಯಲ್ಲಿಯೇ ಆಟಕ್ಕೆ ಬಂದ ನನ್ನ ಆಪ್ತ ಗೆಳೆಯ ವಸಂತ ಲಕ್ಷ್ಮೇಶ್ವರ ಮತ್ತು ನಾನು ಅಂಕೋಲೆಯತ್ತ ಹೊರಟೆವು. ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ನಮ್ಮೂರಿನಿಂದ ಆಟ ನೋಡಲು ಬಂದಿದ್ದ ನಮ್ಮ ದಾಯಾದಿ ಚಿಕ್ಕಪ್ಪ ನಾರಾಯಣ ಊರಿಗೆ ಮರಳಲು ಬಸ್ಸಿಗಾಗಿ ಕಾಯುತ್ತ ನಿಂತಿದ್ದ. ಅವನನ್ನು ಅಂಕೋಲೆಯವರೆಗೆ ಬಿಡುವ ಮನಸ್ಸಿನಿಂದ ಸ್ಕೂಟರ್ ಏರಿಸಿಕೊಂಡೆ. ಮುಂದುವರೆದು ಅವರ್ಸಾ ಎಂಬ ಊರು ದಾಟಿ ಅಂದು ರಸ್ತೆಯ ಅಂಚಿಗೆ ಇರುವ ಗೌರಿ ಕೆರೆಯ ತಿರುವಿನಲ್ಲಿ ಆಕಸ್ಮಿಕವಾಗಿ ಲಾರಿಯೊಂದು ಎದುರಿಗೆ ಬಂದಿತು. ತಪ್ಪಿಸಿಕೊಳ್ಳಲು ಟಾರ್ ರಸ್ತೆಯಿಂದ ನನ್ನ ಸ್ಕೂಟರ್‌ನ್ನು ಕೆಳಗಿಳಿಸಿದೆ. ಕಚ್ಚಾರಸ್ತೆಯಲ್ಲಿ ಸಮತೋಲನ ತಪ್ಪಿದಂತಾದಾಗ ವಾಹನದ ಮೇಲಿದ್ದ ಇಬ್ಬರೂ ಜಿಗಿದು ಬಿಟ್ಟರು. ಸ್ಕೂಟರ್ ನಿಯಂತ್ರಣ ತಪ್ಪಿ ಟಾರ್ ರಸ್ತೆಯ ಮೇಲೆ ಬಿತ್ತಲ್ಲದೆ ನನ್ನನ್ನು ಕೊಂಚ ದೂರದವರೆಗೆ ಎಳೆದುಕೊಂಡು ಹೋಗಿತ್ತು. ಅತ್ತಿತ್ತಲಿಂದ ಯಾರೋ ಬಂದು ನನ್ನನ್ನು ಹಿಡಿದೆತ್ತಿದರು. ಮಂಡಿಯ ಚಿಪ್ಪಿನಿಂದ ಕೊಂಚ ಕೆಳಗೆ ಚರ್ಮ ಹರಿದು ಹೋಗಿ ಒಂದು ಕಾಲಿನ ಎಲುಬು ಕಣ್ಣಿಗೆ ಕಾಣಿಸುತ್ತಿತ್ತು. ಅದೇ ಕಾಲಿನ ಪಾದದ ಮೇಲ್ಭಾಗದಲ್ಲಿಯೂ ಆಳವಾದ ಗಾಯವಾಗಿತ್ತು. ಟಾರು ರಸ್ತೆಗೆ ಬಿದ್ದ ಎಡಗೈ ಅರ್ಧಭಾಗದ ಚರ್ಮ ಸಂಪೂರ್ಣ ಸುಲಿದು ಕೆಂಪಾದ ಮಾಂಸಖಂಡಗಳು ಕಾಣಿಸುತ್ತಿದ್ದವು. ಮೈಮೇಲಿನ ಬಟ್ಟೆಗಳೆಲ್ಲ ಹರಿದು ಚಿಂದಿಯಾಗಿದ್ದವು.! ಹೊಸತೇ ಆಗಿದ್ದ ಸ್ಕೂಟರ್‌ನ ಮುಂಭಾಗ ನುಜ್ಜು ಗುಜ್ಜಾಗಿ ನಡೆಸಲೂ ಆಗದಂತೆ ವಿಕಾರಗೊಂಡಿತ್ತು. ಯಾರೋ ಪುಣ್ಯಾತ್ಮರು ತಮ್ಮ ವಾಹನದಲ್ಲಿ ಅಂಕೋಲೆಯ ಮಿಷನರಿ ಆಸ್ಪತ್ರೆಗೆ ನನ್ನನ್ನು ತಲುಪಿಸಿ ಉಪಕಾರ ಮಾಡಿದರು. ಡಾ. ಅಬ್ರಾಹ್ಮಂ ಬಂದು ಪರೀಕ್ಷೆ ಮಾಡಿದ ಬಳಿಕ ಕೈ ಕಾಲುಗಳ ಎಲುಬು ಮುರಿದಿಲ್ಲವಾದರೂ ಆಗಿರುವ ಆಳವಾದ ಗಾಯಗಳ ಉಪಚಾರಕ್ಕೆ ದವಾಖಾನೆಗೆ ದಾಖಲಾಗುವಂತೆ ಸಲಹೆ ನೀಡಿದರು. ಆಗಲೂ ನಾನು ನಡೆದಾಡ ಬಲ್ಲೆನಾದ್ದರಿಂದ ಆಸ್ಪತ್ರೆಗೆ ದಾಖಲಾಗಲು ಒಪ್ಪದೆ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯಲು ವೈದ್ಯರ ಒಪ್ಪಿಗೆ ಪಡೆದೆ. ಗಾಯಕ್ಕೆ
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—51 ಅಘನಾಶಿನಿಯಲ್ಲಿ ಪಾರಾದೆ, ಪುತ್ರೋದಯದ ಸಂತಸದಲ್ಲಿ ಮುಳುಗಿದೆ ಕುಮಟಾ ತಾಲೂಕಿನ ಮಿರ್ಜಾನಿನಲ್ಲಿ ಒಂದು ಆಟ. ನಾನು ‘ಗದಾಪರ್ವ’ ಪ್ರಸಂಗದಲ್ಲಿ ಕೌರವನ ಪಾತ್ರ ನಿರ್ವಹಿಸಬೇಕಿತ್ತು. ಮಿರ್ಜಾನ್‌ನಂಥ ಊರಿನಲ್ಲಿ ನನ್ನ ಮೊದಲ ಪಾತ್ರವಾದ್ದರಿಂದ ಸರಿಯಾದ ಸಿದ್ಧತೆಯೊಂದಿಗೆ ಪ್ರದರ್ಶನ ನೀಡಿ ಜನರ ಮನಗೆಲ್ಲುವ ಅನಿವಾರ್ಯತೆಯೂ ಇತ್ತು. ಥಿಯೇಟರ್ ಆಟ ಬೇರೆ. ಹಣ ಕೊಟ್ಟು ಬರುವ ಪ್ರೇಕ್ಷಕರಿಗೆ ಸಂತೋಷವಾಗುವಂತೆ ಪಾತ್ರ ನಿರ್ವಹಣೆ ಸಾಧ್ಯವಾಗದಿದ್ದರೆ ಅವರ ಟೀಕೆಗಳನ್ನು ಸಹಿಸಲೇ ಬೇಕಾಗುತ್ತದೆ. ನಾನು ಕಾಳಜಿ ಪೂರ್ವಕವಾಗಿ ಪಾತ್ರಕ್ಕೆ ಬೇಕಾದ ಸಾಧ್ಯವಾದಷ್ಟೂ ಸಿದ್ಧತೆ ಮಾಡಿಕೊಂಡಿದ್ದೆ. ಪತ್ನಿ ನಿರ್ಮಲಾ ಮೊದಲ ಹೆರಿಗೆಗಾಗಿ ತವರೂರು ಹುಬ್ಬಳ್ಳಿಗೆ ಹೋಗಿದ್ದಳು. ನಮ್ಮೂರು ಮಾಸ್ಕೇರಿಗೆ ಹೊರಟು ಅಲ್ಲಿನ ನನ್ನ ಯಕ್ಷಗಾನ ಪ್ರೇಮಿಗಳಾದ ಬಾಲ್ಯದ ಗೆಳೆಯರನ್ನು ಕೂಡಿಕೊಂಡು ಆಟಕ್ಕೆ ಹೋಗಲು ನಿರ್ಧರಿಸಿ ಊರಿಗೆ ಬಂದೆ. ಹೇಗೂ ಎರಡನೆಯ ಪ್ರಸಂಗದಲ್ಲಿ ನನ್ನ ಪಾತ್ರವಿದೆ. ಅವಸರವೇನೂ ಇಲ್ಲವೆಂದು ರಾತ್ರಿಯ ಊಟ ಮನೆಯಲ್ಲೇ ಮುಗಿಸಿ ಗೋಕರ್ಣ ಬಸ್ಸು ಹಿಡಿದು ಗೆಳೆಯರೊಂದಿಗೆ ಹೊರಟೆ. ಅದಾಗಲೇ ನುರಿತ ಭಾಗವತನೂ ಆಗಿದ್ದ ಕೃಷ್ಣ ಮಾಸ್ಕೇರಿ, ಮಾಸ್ತರಿಕೆಯೊಂದಿಗೆ ‘ಚಿನ್ನದ ಪೆಟ್ಟಿಗೆ’ಯ ಸಣ್ಣ ವ್ಯವಹಾರ ಆರಂಭಿಸಿದ್ದ ಭಾವ ಹೊನ್ನಪ್ಪ ಮಾಸ್ತರ, ನನ್ನ ಸಹೋದರ ಶಿಕ್ಷಕ ನಾಗೇಶ ಗುಂದಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಎನ್.ಬಿ.ಗಣಪತಿ, ನಿರಕ್ಷರಿ ಗೆಳೆಯ ನಾರಾಯಣ ಮತ್ತು ನಮ್ಮ ದಾಯಾದಿ ಚಿಕ್ಕಪ್ಪ ನಾರಾಯಣ ಎಂಬ ಹಿರಿಯರು ಸೇರಿ ಆಟಕ್ಕೆ ಹೊರಟೆವು. ನಾವು ಗೋಕರ್ಣದಿಂದ ತದಡಿ ಎಂಬ ಊರಿಗೆ ಇನ್ನೊಂದು ಬಸ್ಸಿನಲ್ಲಿ ಪ್ರಯಾಣಿಸಿ ಅಲ್ಲಿಂದ ಅಘನಾಶಿನಿ ನದಿಯನ್ನು ನಾವೆಯ ಮೂಲಕ ದಾಟಿ ಆಚೆ ದಂಡೆಯ ಮೇಲಿರುವ ಮಿರ್ಜಾನ ಎಂಬ ಊರು ಸೇರಬೇಕಿತ್ತು. ಆದರೆ ನಾವು ತದಡಿಗೆ ಬಂದಿಳಿಯುವಾಗ ರಾತ್ರಿ ಒಂಭತ್ತರ ಮೇಲಾಗಿತ್ತು. ಅಷ್ಟು ಹೊತ್ತಿಗೆ ಪ್ರಯಾಣಿಕರನ್ನು ಅಘನಾಶಿನಿ ನದಿ ದಾಟಿಸುವ ಮಶಿನ್ ಬೋಟ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಹೇಗಾದರೂ ನಮ್ಮನ್ನು ನದಿ ದಾಟಿಸಲು ವಿನಂತಿಸೋಣವೆಂದರೆ ಮಶಿನ್ ಬೋಟ್ ಆಚೆ ದಡವನ್ನು ಸೇರಿ ಲಂಗರು ಹಾಕಿತ್ತು. ನದಿ ಸಮುದ್ರ ಸೇರುವ ಸ್ಥಳವಾದುದರಿಂದ ನದಿಯ ವಿಸ್ತಾರವೂ ಅಧಿಕವಾಗಿತ್ತು. ನಾವು ಧ್ವನಿಗೈದು ಕರೆದರೂ ಕೇಳುವ ಸ್ಥಿತಿ ಇರಲಿಲ್ಲ. ಇನ್ನು ನಮಗಿರುವ ದಾರಿಯೆಂದರೆ ಮರಳಿ ಹೊರಟು ಸಾಣಿಕಟ್ಟಾ, ಮಾದನಗೇರಿ, ಹಿರೇಗುತ್ತಿ ಮೊದಲಾದ ಊರುಗಳನ್ನು ಸುತ್ತಿ ಮಿರ್ಜಾನ್ ಸೇರುವುದು. ಇದು ಬಹಳ ಸುತ್ತಿನ ದಾರಿ ಮಾತ್ರವಲ್ಲದೆ ನಮಗೆ ಸಕಾಲದಲ್ಲಿ ವಾಹನಗಳು ದೊರೆಯುವುದೂ ದುಸ್ತರವಾದ ಸಮಯ. ನಾವು ಯೋಚನೆಗೆ ಒಳಗಾದೆವು. ಉಳಿದವರ ಮಾತು ಅಂತಿರಲಿ ನಾನು ಆಟವನ್ನು ತಪ್ಪಿಸಿಕೊಳ್ಳುವಂತೆಯೇ ಇರಲಿಲ್ಲ. ಯಾವ ಸಬೂಬು ಹೇಳಿದರೂ ಹಣಕೊಟ್ಟು ಬಂದ ಪ್ರೇಕ್ಷಕರು ತಗಾದೆ ಮಾಡದೇ ಇರುವುದಿಲ್ಲ. ಸಂಘಟಕರಿಗೆ ಇದು ತುಂಬಾ ತೊಂದರೆಗೆ ಈಡು ಮಾಡುತ್ತದೆ. ಹಾಗಾಗಿ ನನಗೆ ಆಟಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಇದೆ. ನಾವು ದಿಕ್ಕುಗಾಣದವರಂತೆ ಯೋಚಿಸುತ್ತ ನಿಂತಿರುವಾಗ ಆಪತ್‌ದ್ಭಾಂದವನಂತೆ ನಾವಿಕನೊಬ್ಬ ನಮ್ಮ ಬಳಿಗೆ ಬಂದ. ಯುವಕನಂತೆ ಕಾಣುವ ಆತ ನಮ್ಮ ಸಮಸ್ಯೆಯನ್ನು ಕೇಳಿ ತಾನು ನದಿ ದಾಟಿಸುವ ಭರವಸೆ ನೀಡಿದ. ಕೊಡಬೇಕಾದ ಹಣಕಾಸಿನ ತೀರ್ಮಾನವಾದ ಬಳಿಕ ಸಮೀಪದಲ್ಲಿಯೇ ಬೇಲೆಯ ಮೇಲೆ ಎಳೆದು ಹಾಕಿದ ಒಂದು ಚಿಕ್ಕ ದೋಣಿಯನ್ನು ನೀರಿಗೆಳೆದು ನಮ್ಮ ಬಳಿಗೆ ತಂದು ನಿಲ್ಲಿಸಿದ. ಆಗಲೇ ನಾವು ಏಳು ಜನರಿದ್ದೆವು. ನಾವಿಕನೂ ಸೇರಿ ಎಂಟು ಜನ ಈ ದೋಣಿಯಲ್ಲಿ ಪ್ರಯಾಣಿಸುವುದು ಕಷ್ಟವೆನ್ನಿಸಿತು. ಆ ಪುಟ್ಟ ದೋಣಿಯಲ್ಲಿ ಒತ್ತಾಗಿ ಕುಳಿತು ನೋಡಿದೆವು. ನಮ್ಮ ದಾಯಾದಿ ಚಿಕ್ಕಪ್ಪ ಮತ್ತು ನಾರಾಯಣ ದೋಣಿಗೆ ಭಾರವಾಗುವುದೆಂದೇ ನಿರ್ಧರಿಸಿ ತಮ್ಮ ಆಟ ನೋಡುವ ಆಸೆಗೆ ತಿಲಾಂಜಲಿ ಇಟ್ಟು ಹಿಂದೆ ಸರಿದರು. ನಾವಿಕನೂ ಸೇರಿದಂತೆ ಆರು ಜನ ಪ್ರಯಾಣ ಹೊರಟೆವು. ಬೆಳದಿಂಗಳು ಹರಡಿ ವಿಸ್ತಾರವಾದ ನದಿಯ ಹರಹನ್ನೂ ತೆರೆಯ ಏರಿಳಿತದ ಭಯಾನಕತೆಯನ್ನು ಕಣ್ಣಿಗೆ ರಾಚುವಂತೆ ಪ್ರದರ್ಶಿಸುತಿತ್ತು. ನಾವಿಕನನ್ನು ಹೊರತುಪಡಿಸಿ ನಾವೆಲ್ಲ ಜೀವ ಕೈಯಲ್ಲಿ ಹಿಡಿದು ಕುಕ್ಕುರುಗಾಲಿನಲ್ಲಿ ಕುಳಿತುಕೊಂಡಿದ್ದೆವು….. ಪಶ್ಚಿಮಕ್ಕೆ ಹೊರಳಿ ನೋಡಿದರೆ ತೀರ ಸನಿಹದಲ್ಲೇ ಭೋರ್ಗರೆಯುವ ಕಡಲು….. ಉತ್ತರ ದಿಕ್ಕಿನಿಂದ ವಿಶಾಲವಾಗಿ ತೆರೆಯನ್ನೆಬ್ಬಿಸುತ್ತ “ಇನ್ನೇನು ಬಂದೇ ಬಿಟ್ಟಿತು ನನ್ನಿನಿಯನ ಅರಮನೆ………” ಎಂಬ ಸಂಭ್ರಮದಲ್ಲಿ ಧಾವಿಸುವ ಅಘನಾಶಿನಿಯ ಪ್ರವಾಹ………..! ನಾವೆಯು ನದಿಯ ಅರ್ಧಭಾಗವನ್ನು ಕ್ರಮಿಸಿರಬಹುದು. ನಮ್ಮ ಅರಿವಿಗೇ ಬಾರದಂತೆ ನಾವೆಯಲ್ಲಿ ನೀರು ತುಂಬುತ್ತಿರುವುದು ನಮ್ಮ ಗಮನಕ್ಕೆ ಬಂದಿತು! ನಾವೆಯ ತಳದಲ್ಲಿ ಸಣ್ಣ ಸಣ್ಣ ರಂಧ್ರಗಳಿರುವುದು ನೀರು ಉಕ್ಕಿ ಬರುವುದನ್ನು ನೋಡಿದಾಗಲೇ ನಮ್ಮ ಗಮನಕ್ಕೆ ಬಂದಿತು. ನಮ್ಮೆಲ್ಲರ ಎದೆಗೂಡಿನಲ್ಲಿ ಅಳಿದುಳಿದ ಧೈರ್ಯವೂ ಒಮ್ಮಿಂದೊಮ್ಮೆಲೇ ಸೋಸಿ ಹೋದಂತೆ ಕಳವಳಗೊಂಡೆವು. ಕ್ಷಣಕ್ಷಣಕ್ಕೂ ನಾವೆಯಲ್ಲಿ ನೀರು ತುಂಬುವುದನ್ನು ಕಂಡಾಗ ನಮ್ಮೆಲ್ಲರ ಜಂಘಾಬಲವೇ ಉಡುಗಿ ಹೋಯಿತು. ತುಂಬಾ ಗಾಬರಿಗೊಂಡಿದ್ದ ಭಾವ ಹೊನ್ನಪ್ಪ ಮಾಸ್ತರ ಮತ್ತು ಗೆಳೆಯ ಗಣಪತಿ ಅಂಜಿಕೆಯನ್ನು ತೋರಗೊಡದೆ ದೋಣೆಯಲ್ಲಿ ತುಂಬಿದ ನೀರನ್ನು ಬೊಗಸೆಯಲ್ಲಿ ಎತ್ತಿ ನದಿಗೆ ಚೆಲ್ಲುತ್ತಿದ್ದರು. ಸಹೋದರ ನಾಗೇಶ ಮಾತೇ ಬಾರದವನಂತೆ ಕುಳಿತಿದ್ದ. ಕೃಷ್ಣ ಭಾಗವತರು ಮಾತ್ರ “ಏನೂ ಆಗುವುದಿಲ್ಲ ಹೆದ್ರಬೇಡಿ” ಎಂದು ಸುಳ್ಳು ಸಾಂತ್ವನ ಹೇಳುತ್ತಿದ್ದರು. ನನಗೆ ಆಚೆ ಕುಣಿಯಬೇಕಿದ್ದ ದುರ್ಯೋಧನ, ಚೊಚ್ಚಿಲ ಹೆರಿಗೆಯ ಸಂಭ್ರಮದಲ್ಲಿ ಹುಬ್ಬಳ್ಳಿಯ ತೌರುಮನೆಯಲ್ಲಿರುವ ಪತ್ನಿ ನಿರ್ಮಲಾ, “ಕೌರವ ಜೋರಾಗ್ಲಿ ಹಾಂ……” ಎಂದು ಹರೆಸಿ ಕಳಿಸಿದ ಅವ್ವ, ಮುಗುಳ್ನಕ್ಕು ಅನುಮೋದಿಸಿದ ಅಪ್ಪ, ಮನೆಯಲ್ಲಿ ಉಳಿದ ತಮ್ಮ-ತಂಗಿಯರೆಲ್ಲ ಸಾಲು ಸಾಲಾಗಿ ನೆನಪಾಗತೊಡಗಿದರು…… ನಾವಿಕ ಮಾತ್ರ ಒಂದೂ ಮಾತನಾಡದೇ ಜೋರಾಗಿ ಹುಟ್ಟು ಹಾಕುವ ಕಾಯಕದಲ್ಲೇ ನಿರತನಾಗಿದ್ದ. “ದೋಣಿಗೆ ತೂತು ಬಿದ್ದದ್ದು ನಿನಗೆ ಗೊತ್ತಿಲ್ವಾಗಿತ್ತೇನೋ?” ಎಂದು ಯಾರೋ ಕೇಳಿದ ಪ್ರಶ್ನೆಗೆ ಉತ್ತರಿಸುವ ಸೌಜನ್ಯವನ್ನೂ ತೋರಲಿಲ್ಲ. ನದಿಯ ಅರ್ಧಕ್ಕಿಂತ ಹೆಚ್ಚು ಭಾಗ ಕ್ರಮಿಸಿದ್ದೆವು. ಮರಳಿ ಹಿಂದೆ ಸಾಗುವ ಪ್ರಶ್ನೆಯೇ ಇಲ್ಲ. ಇನ್ನೂ ಅರ್ಧದಷ್ಟು ನದಿಯನ್ನು ದಾಟಬೇಕಿದೆ. ಸುಲಭದ ಮಾತಲ್ಲ. ಸಂಕಷ್ಟಕ್ಕೆ ನಾವೆಲ್ಲ ಮುಖಾಮುಖಿಯಾಗಿರುವುದು ಸ್ಪಷ್ಟವಾಗಿತ್ತು. ಅಂಜತ್ತಲೇ ಹೊರಳಿ ನೋಡಿದೆ. ಸಮುದ್ರದ ಮೀನುಗಾರಿಕೆಗೆ ಹೊರಟು ಬಂದು ದಂಡೆಯ ಕೊಂಚ ದೂರ ಲಂಗರು ಹಾಕಿ ನಿಂತಿರುವ ಮರ‍್ನಾಲ್ಕು ಬೋಟುಗಳು ಮಸುಕು ಮಸುಕಾಗಿ ಕಾಣಿಸಿದವು. ದಂಡೆಯನ್ನಂತೂ ಸುರಕ್ಷಿತ ತಲುಪುವುದು ಅಸಾಧ್ಯ. ನಡುವೆಯೇ ನಿಂತ ಬೋಟುಗಳನ್ನಾದರೂ ಮುಟ್ಟಬಹುದೇನೋ ಎಂಬ ಯೋಚನೆ ಬಂದದ್ದೇ ನಾವಿಕನಿಗೆ ಸೂಚನೆ ನೀಡಿದೆ, ಎಲ್ಲರೂ ಬೋಟುಗಳನ್ನು ಗಮನಿಸಿದರು. ನಾವಿಕನೂ ಅತ್ತ ಹೊರಳಿಸಿ ದೋಣಿಯನ್ನು ಮುನ್ನಡೆಸತೊಡಗಿದ. ತುಂಬಿದ ನೀರನ್ನು ಮೊಗೆದು ಹಾಕುವ ಕಾಯಕವನ್ನು ಗೆಳೆಯರು ಮುಂದುವರಿಸಿದ್ದರು. ಮಸುಕು ಮಸುಕಾಗಿ ಕಾಣಿಸುತ್ತಿದ್ದ ಬೋಟುಗಳು ಸಮೀಪಿಸುತ್ತಿದ್ದಂತೆ ಸ್ಪಷ್ಟವಾಗತೊಡಗಿದವು. ತೀರ ಸನಿಹಕ್ಕೆ ಬಂದಾಗ ಲಂಗರು ಇಳಿಬಿಟ್ಟ ಹಗ್ಗವನ್ನು ಯಾರೋ ಕೈಚಾಚಿ ಹಿಡಿದುಕೊಂಡ ಕ್ಷಣದಲ್ಲಿ ಎಲ್ಲರೂ ಹೋದ ಜೀವ ಬಂದಂತೆ ಹಗುರಾದೆವು. ಕಷ್ಟಪಟ್ಟು ಹಗ್ಗದೊಡನೆ ಸರ್ಕಸ್ಸು ಮಾಡದೇ ವಿಧಿ ಇರಲಿಲ್ಲ. ನಾವೆಲ್ಲ ಬೋಟುಗಳನ್ನು ಸೇರಿದ ಬಳಿಕ ನಾವಿಕ ಆಚೆ ದಂಡೆಗೆ ಕೂಗು ಹಾಕಿ ಅಲ್ಲಿರುವ ನಾವಿಕರನ್ನು ಕರೆದ. ಯಾರೋ ಪುಣ್ಯಾತ್ಮರು ನಮ್ಮ ಸಂಕಷ್ಟವನ್ನು ತಿಳಿದು ಕನಿಕರ ತೋರಿ ಬೇರೆ ನಾವೆಯನ್ನು ತಂದು ನಮ್ಮನ್ನು ಆಚೆ ದಡಕ್ಕೆ ಮುಟ್ಟಿಸಿದರು. ನಮ್ಮನ್ನು ಕರೆದು ತಂದ ನಾವಿಕ ಮಾತ್ರ ತನ್ನ ನಾವೆಯನ್ನು ತನ್ನ ಪಾಡಿಗೆ ಬಿಟ್ಟು ನಮ್ಮೊಡನೆ ಆಟದ ಡೇರೆಯತ್ತ ಹೊರಟಾಗ ಯಾರೋ ಆತನನ್ನು ಪ್ರಶ್ನಿಸಿದರು. “ಹೌದು…….ಎಲ್ಲಿ ಕಟ್ಟ ಹಾಕಿ ಬಂದ್ಯೋ ಇಲ್ವೋ ನಿನ್ನ ದೋಣಿಯ……….. ಅದರ ತಳಕ್ಕೆ ತೂತು ಇರೋದು ಗೊತ್ತಿದ್ರೂ ನಮ್ಮ ಕರಕೊಂಬಂದ್ಯಲ್ಲ ಮಾರಾಯ….” ಎಂದು ಬೇಸರ ತೋಡಿಕೊಂಡರು. ಆತ ಅತ್ಯಂತ ನಿರ್ಭಾವುಕನಾಗಿ “ನಂಗೇನ ಗೊತ್ತಿತ್ರಾ…… ಅದು ನನ್ನ ದೋಣಿ ಅಲ್ಲ…….. ನಿಮ್ಮಂಗೇ ನಾನು ಆಟ ನೋಡುಕ ಬಂದವ…….” ಎಂದು ಉತ್ತರಿಸಿದಾಗ ನಮಗೆಲ್ಲ ಮತ್ತೊಮ್ಮೆ ನೀರಿಗೆ ಬಿದ್ದು ಮುಳುಗಿಯೇ ಹೋದಂಥ ಅನುಭವವಾಯಿತು! ನಡೆದ ಎಲ್ಲ ವಿದ್ಯಮಾನಗಳಿಂದ ಗೊಂದಲಗೊಂಡಿದ್ದ ನಾನು ಈ ಎಲ್ಲ ಅಧ್ವಾನಗಳನ್ನು ಮನಸ್ಸಿನಿಂದ ತೊಡೆದು ಹಾಕಿ ಪಾತ್ರದ ಕುರಿತು ಯೋಚಿಸತೊಡಗಿದೆ. ಸಂಪೂರ್ಣ ತನ್ಮಯನಾಗಿ ಪಾತ್ರ ನಿರ್ವಹಿಸಿದೆ. ಪ್ರದರ್ಶನ ಯಶಸ್ವಿಯಾಯಿತು. ಪ್ರೇಕ್ಷಕರ ಚಪ್ಪಾಳೆ, ಸಿಳ್ಳೆಗಳ ಪ್ರತಿಕ್ರಿಯೆಯಿಂದ ನಾನು ಯಶಸ್ವಿಯಾದೆ ಎಂಬ ಸಮಾಧಾನವಾಯಿತು. ಸಹ ಕಲಾವಿದರೂ ಮುಕ್ತ ಮನಸ್ಸಿನಿಂದ ಪ್ರಸಂಶೆಯ ಮಾತನಾಡಿದರು. ಪಾತ್ರ ಮುಗಿಸಿ ಒಳಗೆ ಬಂದಾಗಲೂ ಚೌಕಿ ಮನೆಗೆ ಬಂದ ಅನೇಕ ಸಹೃದಯರು ಮೆಚ್ಚುಗೆಯ ಮಾತನಾಡಿ ಅಭಿನಂದಿಸಿದರು. ನಾನು ಹೆಮ್ಮೆಯಿಂದ ಬೀಗಿದೆ! ಆದರೆ ಮರುಕ್ಷಣವೇ ತನ್ನ ವೇಷ ಕಳಚುತ್ತಿದ್ದ ಧರ್ಮರಾಯನ ಪಾತ್ರಧಾರಿ ನನ್ನನ್ನು ಉದ್ದೇಶಿಸಿ, “ನೀವು ಹಾಗೆಲ್ಲ ಮಾತಾಡಬಾರದ್ರಿ……….ಎದುರು ಪಾತ್ರಗಳನ್ನು ಗೌರವಿಸಿ ಮಾತನಾಡಬೇಕು……ಇದು ಒಳ್ಳೆ ಕಲಾವಿದರ ಲಕ್ಷಣವಲ್ಲ……” ಎಂದು ಕಟುವಾಗಿ ಮಾತಾಡಿದ. ಪಾತ್ರ ಯಶಸ್ವಿಯಾಯಿತೆಂದು ಉಬ್ಬಿಹೋದ ನಾನು ಗಾಳಿ ಬಿಟ್ಟ ಬಲೂನಿನಂತೆ ಒಮ್ಮೆಯೇ ಕುಸಿದು ಹೋದೆ. “ಏನು ತಪ್ಪಾಯಿತು?” ಎಂದೆ. “ನಾನು ದೇವಸ್ಥಾನಗಳಲ್ಲಿ ಪೂಜೆ ಮಾಡುವುದಕ್ಕೇ ಯೋಗ್ಯ ಎಂದು ಹಂಗಿಸಿದರಲ್ಲ? ಅದು ಸರಿಯಲ್ಲ” ಎಂದು ಉತ್ತರಿಸಿದ. ನನಗೆ ಏನು? ಏತ್ತ? ಎಂಬುದೇ ತಿಳಿಯದೇ ಗೊಂದಲಗೊಂಡೆ. ಅಷ್ಟೂ ಜನರ ಮುಂದೆ ಅವನ ನಿಷ್ಠುರವಾದ ನುಡಿಗಳು ನನ್ನನ್ನು ಸಿಗ್ಗಾಗಿಸಿದವು. ನಡೆದದ್ದು ಇಷ್ಟೆ.. ಪಾಂಡವರೈವರನ್ನೂ ಒಂದೊಂದು ಬಗೆಯಿಂದ ನಿಂದಿಸಿ ಅವರ ದೌರ್ಬಲ್ಯವನ್ನು ಎತ್ತಿ ಹೇಳುವುದು ದುರ್ಯೋಧನನ ಪಾತ್ರಕ್ಕೆ ಪೂರಕವಾದದ್ದೇ. ಹಾಗೆಯೇ ವಿರಾಟ ನಗರಿಯಲ್ಲಿ ಪೂಜಾರಿಯಾಗಿ ವೇಷ ಮರೆಸಿಕೊಂಡಿದ್ದ ಧರ್ಮರಾಯನ ಮೋಸವನ್ನು ಎತ್ತಿ ಹೇಳಿ ಸಹಜವಾಗಿ ನಾನು ಕೆಣಕಿದ್ದೆ. ಇದರಲ್ಲಿ ಪಾತ್ರಪೋಷಣೆಯಲ್ಲದೆ ನನಗೆ ಬೇರೆ ದುರುದ್ದೇಶವಿರಲಿಲ್ಲ. ಆದರೆ ಧರ್ಮರಾಯ ಪಾತ್ರಧಾರಿ ಇಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳಲು ಕಾರಣವೇನೆಂದು ಸಹಕಲಾವಿದರು ನನಗೆ ತಿಳಿಸಿ ಹೇಳಿದಾಗಲೇ ನನಗೆ ನನ್ನ ತಪ್ಪಿನ ಅರಿವಾಯಿತು……….. ಧರ್ಮರಾಯನ ಪಾತ್ರ ಮಾಡಿದವರು ಬೀರಪ್ಪ ಗುನಗ ಎಂಬುವವರು. ಅವರು ವೃತ್ತಿಯಿಂದ ಗ್ರಾಮ ದೇವತೆಯ ಪೂಜಾರಿಯಂತೆ. ನನಗೆ ಇದು ಗೊತ್ತಿರಲಿಲ್ಲ. ತನ್ನ ವೃತ್ತಿಯನ್ನೇ ಉಲ್ಲೇಖಿಸಿ ಮಾತನಾಡಿದುದ್ದಕ್ಕೆ ಆತ ಬೇಸರಗೊಂಡಿದ್ದ ಎಂಬುದು ನಂತರ ತಿಳಿಯಿತು. ನಾನು ವೇಷ ಕಳಚಿದ ಬಳಿಕ ಆತನಿಗೆ ವಾಸ್ತವವನ್ನು ವಿವರಿಸಿ ಸಾಂತ್ವನ ಹೇಳಿದೆ. ಆತ ಸಮಾಧಾನಗೊಂಡ. ಮಾತ್ರವಲ್ಲದೆ ಬೀರಪ್ಪ ಗುನಗ ಉತ್ತಮ ಪ್ರಸಾದನ ಕಲಾವಿದನೂ ಆದುದರಿಂದ ಮುಂದಿನ ದಿನಗಳಲ್ಲಿ ಹಲವು ಯಕ್ಷಗಾನ ಪ್ರದರ್ಶನಗಳಲ್ಲಿ ನನಗೆ ಮೇಕಪ್ ಮಾಡಿ ಪಾತ್ರವನ್ನು ರೂಪಿಸಿ ನೆರವಾಗಿದ್ದಾನೆ. ಆಗೆಲ್ಲ ತದಡಿಯ ಅಂದಿನ ಘಟನೆಯನ್ನು ಸ್ಮರಿಸಿಕೊಂಡು ನಾವು ನಕ್ಕು ಹಗುರಾಗುತ್ತಿದ್ದೆವು. ಹಗಲು ನಿದ್ದೆ ಮುಗಿಸಿ ನಾಳೆ ಕಾಲೇಜು ಉಪನ್ಯಾಸಕ್ಕೆ ಸಜ್ಜುಗೊಳ್ಳುವ ಅನಿವಾರ್ಯತೆಯಿಂದ ನಾನು ಊರಿಗೆ ಹೋಗದೆ ಗೆಳೆಯರಿಂದ ಬೀಳ್ಕೊಂಡು ಅಂಕೋಲೆಯ ಬಸ್ಸು ಹಿಡಿದೆ. ಮಧ್ಯಾಹ್ನದ ನಾಲ್ಕು ಗಂಟೆಯ ಹೊತ್ತಿಗೆ ನಾನು ಗಾಢ ನಿದ್ದೆಯಲ್ಲಿರುವಾಗ ಟೆಲಿಗ್ರಾಮ ಸಂದೇಶವೊಂದು ನನ್ನನ್ನು ಹುಡುಕಿ ಬಂದಿತು. ನನ್ನ ಭಾವ ಕೃಷ್ಣರಾವ್ ಸುಲಾಖೆ “ಮೇಲ್ ಚೈಲ್ಡ ಬೋಥ್ ದಿ ಮದರ್ ಎಂಡ್ ಚೈಲ್ಡ್ ಆರ್ ಸೇಫ್….” ಎಂಬ ತಂತಿ ಸಂದೇಶ ಕಳುಹಿಸಿದ್ದರು. ಅಂದು ೧೯೮೫ ರ ಏಪ್ರಿಲ್ ಇಪ್ಪತ್ನಾಲ್ಕನೇಯ ತಾರೀಖು. ನನಗೆ ಗಂಡು ಮಗು ಹುಟ್ಟಿದ ಸಂತೋಷ ತಂದ ದಿನ. ಮನೆಯಲ್ಲಿ ನಾನೊಬ್ಬನೇ ಇದ್ದುದರಿಂದ ಸಂತಸ ತಡೆಯಲಾಗದೆ ತಂತಿ ಸಂದೇಶವನ್ನು ಮುದ್ದಿಸಿ ಮತ್ತೊಮ್ಮೆ ದುರ್ಯೋಧನನ ದಿಗಿಣ ಹೊಡೆದೆ! ಅದು ದೇಶದ ನೆಚ್ಚಿನ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಹುಟ್ಟಿದ ದಿನವೇ ಆದುದರಿಂದ ನನ್ನ ಜೇಷ್ಠ ಪುತ್ರನಿಗೂ ‘ಸಚಿನ್ ಕುಮಾರ್’ ಎಂದೇ ಹೆಮ್ಮೆಯಿಂದ ನಾಮಕರಣ ಮಾಡಲಾಯಿತು. ರಾಮಕೃಷ್ಣ ಗುಂದಿ
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—50 ಯಕ್ಷರಂಗದ ಮಾನಾಪಮಾನಗಳು ೧೯೭೦-೮೦ ದಶಕವೆಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನದ ಸುಗ್ಗಿಕಾಲ. ಅಪರೂಪಕ್ಕೆ ಕಾಣಲು ಸಿಗುವ ಸಿನೇಮಾ ಹೊರತು ಪಡಿಸಿದರೆ ಹಳ್ಳಿ-ಹಳ್ಳಿಗಳಲ್ಲಿ ನಡೆಯುವ ಯಕ್ಷಗಾನ ಬಯಲಾಟ, ನಾಟಕ ಪ್ರದರ್ಶನಗಳೇ ಜನಸಾಮಾನ್ಯರಿಗೆ ಮನರಂಜನೆಯ ಪ್ರಮುಖ ಮಾದ್ಯಮಗಳಾಗಿದ್ದವು. ಎಲ್ಲ ಆಟ-ನಾಟಕಗಳಿಗೂ ಸಮೃದ್ಧವಾದ ಪ್ರೇಕ್ಷಕ ಸಮುದಾಯದ ಹಾಜರಿ ಇರುತ್ತಿತ್ತು. ಜಿಲ್ಲೆಯ ಕೆರೆಮನೆ, ಕರ್ಕಿ, ಬಚ್ಚಗಾರು ಇತ್ಯಾದಿ ವೃತ್ತಿಮೇಳಗಳ ತಿರುಗಾಟವಲ್ಲದೆ ದಕ್ಷಿಣದ ಕಡೆಯಿಂದಲೂ ಸೂರತ್ಕಲ್, ಧರ್ಮಸ್ಥಳ, ಮೂಲ್ಕಿ, ಮಂಗಳೂರು, ಕೋಟ ಮುಂತಾದ ಮೇಳಗಳು ಕನಿಷ್ಟ ವರ್ಷಕ್ಕೊಂದು ತಿರುಗಾಟವನ್ನಾದರೂ ಪೂರೈಸಿ ಜಿಲ್ಲೆಯ ಜನರ ಮನರಂಜನೆಯ ಹಸಿವು ಹಿಂಗಿಸುವಲ್ಲಿ ಸಹಕರಿಸುತ್ತಿದ್ದವು! ಆಯಾ ಊರಿನ ಕೆಲವರು ತಿರುಗಾಟದ ವೃತ್ತಿ ಮೇಳದಾಟಗಳನ್ನು ಕಂಟ್ರಾಕ್ಟು ಹಿಡಿದು ಕಾಸು ಮಾಡಿಕೊಳ್ಳುವ ಯೋಜನೆಯನ್ನೂ ಹಾಕಿಕೊಳ್ಳುತ್ತಿದ್ದರು. ಕೆಲವು ಬಾರಿ ನಿರೀಕ್ಷಿತ ಲಾಭವಾಗದೆ ನಷ್ಟ ಹೊಂದಿದ್ದರೂ ಮೇಳದಾಟಗಳನ್ನು ಗುತ್ತಿಗೆ ಹಿಡಿಯುವ ಪರಂಪರೆ ಮಾತ್ರ ಇಂದಿಗೂ ಮುಂದುವರಿದಿರುವುದು ಜಿಲ್ಲೆಯ ಜನರ ಯಕ್ಷ ಪ್ರೀತಿಯ ದ್ಯೋತಕವೇ ಆಗಿದೆ. ೧೯೮೦ ರ ಸಮಯ. ಅಂಕೋಲೆಯಲ್ಲಿ “ಅಮೃತೇಶ್ವರಿ” ಮೇಳದ ಆಟ. ಆ ದಿನಗಳಲ್ಲಿ ಅಂಕೋಲೆಯ ಸೃದಯರಿಗೆ ಅಮೃತೇಶ್ವರಿ ಮೇಳವು ಅತ್ಯಂತ ಪ್ರಿಯವಾದ ತಿರುಗಾಟದ ಮೇಳವಾಗಿತ್ತು. ಇಲ್ಲಿಯ “ಗುಂಡಬಾಳಾ ಶೆಟ್ಟಿ” ಎಂಬ ದಿನಸಿ ವ್ಯಾಪಾರಿಯೊಬ್ಬರು ಬಹುತೇಕ ಮೇಳದಾಟಗಳನ್ನು ಕರೆಸಿ ಆಟವಾಡಿಸುತ್ತಿದ್ದರು. ಯಕ್ಷಗಾನವನ್ನು ಕಲಾವಿದರನ್ನು ತುಂಬಾ ಪ್ರೀತಿಸುವ ಶೆಟ್ಟರು ಇಲ್ಲಿನ ಹವ್ಯಾಸಿ ಕಲಾವಿದರನ್ನೂ ಸಂಘಟಿಸಿ ಆಗಾಗ ಆಟ ಆಡಿಸಿ ಪ್ರೋತ್ಸಾಹಿಸುತ್ತಿದ್ದರು. ನನ್ನ ಪಾತ್ರ ನಿರ್ವಹಣೆಯ ಕುರಿತಾಗಿಯೂ ತುಂಬ ಅಭಿಮಾನ ಪಡುತ್ತಿದ್ದರು. ಅವರಿಗೆ ನನ್ನನ್ನು ವೃತ್ತಿ ಮೇಳದ ಆಟದಲ್ಲಿ ಅತಿಥಿ ಕಲಾವಿದನನ್ನಾಗಿ ಪರಿಚಯಿಸಬೇಕೆಂಬ ಬಹುದೊಡ್ಡ ಆಸೆಯಿತ್ತು. ಇದೇ ಕಾರಣದಿಂದ ಅಮೃತೇಶ್ವರಿ ಮೇಳದಲ್ಲಿ ನನ್ನ ಪಾತ್ರವೊಂದನ್ನು ನಿಶ್ಚಯಿಸಿ ಆಟದ ಸಿದ್ಧತೆ ಮಾಡಿದರು. ರಾಮಚಂದ್ರ ಹೆಗಡೆ ಚಿಟ್ಟಾಣಿ, ಗೋಡೆ ನಾರಾಯಣ ಹೆಗಡೆ ಮುಂತಾದ ಅತಿರಥ ಮಹಾರಥರು ಈ ಮೇಳದಲ್ಲಿ ಮುಖ್ಯ ಕಲಾವಿದರಾಗಿದ್ದರು. ಉಪ್ಪೂರರು ಮುಖ್ಯ ಭಾಗವತರಾಗಿದ್ದರೆ ಕಾಳಿಂಗ ನಾವುಡರು ಅದೇ ಆಗ ಭಾಗವತಿಕೆಗೆ ಆರಂಭಿಸಿ ಸಭಾಲಕ್ಷಣ ಭಾಗವನ್ನಷ್ಟೆ ಪೂರೈಸುತ್ತಿದ್ದರು. ರಾತ್ರಿಯ ಮೊದಲ ಪ್ರಸಂಗ “ಬಬ್ರುಸೇನ ವಧೆ” ಗೋಡೆಯವರ ಅರ್ಜುನ, ಯಲ್ಲಾಪುರದ ಕಡೆಯ ಹೆಗಡೆಯೋರ್ವರ ಭೀಮ, ನನ್ನದು ಕೃಷ್ಣ. ಚಿಟ್ಟ್ಟಾಣಿಯವರು ನನ್ನ ಮೇಲಿನ ಪ್ರೀತಿಯಿಂದ ನನ್ನನ್ನು ಭಾಗವತ ಉಪ್ಪೂರವರಿಗೆ ಪರಿಚಯಿಸಿದರು. ಎರಡನೆಯ ವೇಷಧಾರಿಯಾಗಿ ತಾವು ಕುಳಿತುಕೊಳ್ಳುವ ಚೌಕಿಮನೆಯ ಸ್ಥಳದಲ್ಲಿ ನನ್ನನ್ನು ಕುಳ್ಳಿರಿಸಿ ಮೇಳದ ಮೇಕಪ್ ಕಲಾವಿದರಿಂದ ನನಗೆ ಬಣ್ಣ ಮಾಡಿಸಿ ವೇಷವನ್ನು ಸಿದ್ಧಗೊಳಿಸಿ ನನಗೆ ತುಂಬ ಸಹಕಾರ ನೀಡಿದರು. ಪ್ರಚಂಡ ಜನದಟ್ಟಣೆಯ ಪ್ರದರ್ಶನವಾಯಿತು! ನಾನು ವೇಷ ಕಳಚಿದ ಬಳಿಕ ತರುಣ ಭಾಗವತರಾದ ಕಾಳಿಂಗ ನಾವುಡರನ್ನು ಪರಿಚಯಿಸಿಕೊಂಡೆ. ಸ್ನೇಹದಿಂದ ಹೊರಗೆ ತಿರುಗಾಡುತ್ತ ಆಟದ ದೆಸೆಯಿಂದ ಬಂದ ಚಹಾದಂಗಡಿಯಲ್ಲಿ ಚಹಾ ಕುಡಿದು ಯಕ್ಷಗಾನ ಕಲೆಯ ಕುರಿತು ಮಾತನಾಡಿದೆವು. ಮಾತಿನ ಮಧ್ಯೆ ನಾನು ಯಕ್ಷಗಾನ ಪ್ರಸಂಗ ರಚಿಸಿದ ಸಂಗತಿ ಕೇಳಿ ತಿಳಿದ ನಾವುಡರು ಅದನ್ನು ನೋಡುವ ಕುತೂಹಲದಿಂದ ನಮ್ಮ ಮನೆಗೆ ಬರಲು ಇಚ್ಛಿಸಿದರು. ರಾತ್ರಿಯ ಎರಡನೆಯ ಪ್ರಸಂಗ ಆರಂಭವಾದ ಹೊತ್ತಿನಲ್ಲಿ ನಾನು ನಾವುಡರನ್ನು ನನ್ನ ಬೈಕಿನಲ್ಲಿ ಕರೆದುಕೊಂಡು ಆಗ ನಾನು ವಾಸಿಸುತ್ತಿದ್ದ “ಮುಲ್ಲಾ ಬಾಡಾ” ಭಾಗದ ನನ್ನ ಮನೆಗೆ ಕರೆದೊಯ್ದೆ. ನಾನು ಬರೆದ “ವೀರ ವಾಲಿ” ಪ್ರಸಂಗದ ಹಸ್ತಪ್ರತಿಯನ್ನು ಪರಿಶೀಲಿಸಲು ಅವರಿಗೆ ನೀಡಿದೆ. ಬೆಳಕು ಹರಿಯುವವರೆಗೆ ಮಾತನಾಡಿ ನಸುಕಿನಲ್ಲಿ ಅವರನ್ನು ಮೇಳದ ವಾಹನಕ್ಕೆ ತಲುಪಿಸಲು ನಾನು ನಾವುಡರನ್ನು ಮತ್ತೆ ಆಟ ನಡೆಯುತ್ತಿದ್ದ ಜೈಹಿಂದ್ ಮೈದಾನಕ್ಕೆ ಕರೆದು ತಂದೆ. ಆಟ ಮುಗಿದು ಮೇಳವು ಮುಂದಿನ ಊರಿಗೆ ಹೊರಡುವ ಸನ್ನಾಹದಲ್ಲಿತ್ತು. ಆಗಲೇ ತೀರ ಅಪ್ರಿಯವಾದ ಒಂದು ಸಂಗತಿ ನನ್ನ ಗಮನಕ್ಕೆ ಬಂದಿತು. ನಾನು ದಲಿತನೆಂಬ ಕಾರಣದಿಂದ ಮೇಳಕ್ಕೆ ಮೈಲಿಗೆಯಾಗಿದೆ ಎಂಬ ಸಂಗತಿ ಚೌಕಿ ಮನೆಯಲ್ಲಿ ರಾತ್ರಿಯೆಲ್ಲ ಚರ್ಚೆಯಾಯಿತೆಂದೂ ಮೇಳದ ಕಂಟ್ರಾಕ್ಟು ಹಿಡಿದ ಶೆಟ್ಟರು ತಪ್ಪು ಕಾಣಿಕೆ ನೀಡಿ ಪರಿಹಾರ ಮಾಡಿಕೊಡುವಂತೆ ಮೇಳದ ವ್ಯವಸ್ಥಾಪಕರು ಗುಂಡಬಾಳಾ ಶೆಟ್ಟರನ್ನು ಒತ್ತಾಯಿಸಿ ತಪ್ಪು ಕಾಣಿಕೆ ಸ್ವೀಕರಿಸಿದರೆಂದೂ ಕೆಲವು ನನ್ನ ಪರಿಚಿತ ಜನರು ನನಗೆ ತಿಳಿಸಿದಾಗ ನನಗೆ ತುಂಬಾ ಸಂಕಟವಾಯಿತು. ನಾನು ವೃತ್ತಿ ಮೇಳದಲ್ಲಿ ಅತಿಥಿ ಕಲಾವಿದನಾಗಿ ಪಾತ್ರವಹಿಸುವುದರಿಂದಲೇ ನನಗೆ ವಿಶೇಷ ಗೌರವ ಪ್ರಾಪ್ತವಾಗುವ ನಂಬಿಕೆಯಾಗಲೀ ಹಂಬಲವಾಗಲೀ ನನಗಿರಲಿಲ್ಲ. ಜನರ ಒತ್ತಾಸೆಗೆ ಮಣಿದು ಸಹಜವಾಗಿ ಒಪ್ಪಿಕೊಂಡು ಭಾಗವಹಿಸಿದ್ದೆ. ಅದು ಇಂಥ ಅವಮಾನಕ್ಕೆ ಕಾರಣವಾದದ್ದು ನನ್ನ ಯಕ್ಷರಂಗದ ಬದುಕಿನಲ್ಲಿ ಬಹುದೊಡ್ಡ ಗಾಯವಾಗಿ ಉಳಿದು ಹೋಯಿತು! ನಂತರದ ವರ್ಷಗಳಲ್ಲಿ ಹಲವು ಭಾರಿ ಹಲವಾರು ವೃತ್ತಿ ಮೇಳಗಳಲ್ಲಿ ಅತಿಥಿ ಕಲಾವಿದನಾಗಿ ಭಾಗವಹಿಸಿದೆನಾದರೂ ಆ ಎಲ್ಲ ಕ್ಷಣಗಳ ಸಂತೋಷದ ನಡುವೆಯೂ ಅಂದಿನ ಕಹಿ ನೆನಪು ಮರೆಯಲಾಗದಂತೆ ಉಳಿದಿದೆ. ಯಕ್ಷಗಾನ ಹವ್ಯಾಸಿ ತಂಡದೊಡನೆ ಪಾತ್ರ ನಿರ್ವಹಿಸುವಾಗ ಹಲವು ವಿಧದಲ್ಲಿ ಹೊಂದಾಣಿಕೆಗೆ ನಮ್ಮನ್ನು ನಾವು ಅಣಿಗೊಳಿಸುವುದು ಅನಿವಾರ್ಯ. ಭಿನ್ನ ಅಭಿರುಚಿಯ ಆಚಾರ ವಿಚಾರಗಳ ಹಿನ್ನೆಲೆಯಿಂದ ಬಂದ ಕಲಾವಿದರುಗಳಲ್ಲಿ ಹೊಂದಾಣಿಕೆ ಕಷ್ಟವೇ ಆದರೂ ಹೊಂದಾಣಿಕೆಯಿಲ್ಲದೆ ಕಲಾತಂಡಗಳನ್ನು ಮುನ್ನಡೆಸುವುದು ಕಷ್ಟವೇ ಆಗುತ್ತದೆ. ಇದು ನಾವು ನೀಡುವ ಪ್ರದರ್ಶನದ ಮೇಲೂ ಪರಿಣಾಮ ಬೀರಬಹುದು. ಕಲಾವಿದರ ನಂಬಿಕೆ, ಅಪನಂಬಿಕೆಗಳೂ ಒಟ್ಟಾರೆಯಾಗಿ ತಂಡವನ್ನು ಪ್ರಭಾವಿಸುವ ಸಂದರ್ಭಗಳೂ ಇಲ್ಲದಿಲ್ಲ. ಶಿರ್ಶಿ ತಾಲೂಕಿನ ಮತ್ತಿಘಟ್ಟ ಎಂಬ ಕಾಡಿನಿಂದ ಆವೃತವಾದ ಹಳ್ಳಿಯಲ್ಲಿ ಒಂದು ಆಟ. ಅಂಕೋಲೆಯ ನಮ್ಮ ಕಲಾತಂಡವು ಅಲ್ಲಿಯ ಜಮೀನ್ದಾರರೊಬ್ಬರ ವಿನಂತಿಯ ಮೇರೆಗೆ ‘ಗದಾಯುದ್ಧ’ ಪ್ರಸಂಗವನ್ನು ಪ್ರದರ್ಶಿಸಬೇಕಿತ್ತು. ಸಂಜೆಯ ಹೊತ್ತಿಗೆ ಮತ್ತಿಘಟ್ಟ ತಲುಪಿದ ತಂಡದ ಸದಸ್ಯರೆಲ್ಲ ಆಟ ನಡೆಯುವ ಸ್ಥಳವನ್ನು ಸೇರಿದ ಬಳಿಕ ಕೊಂಚ ವಿಶ್ರಾಂತಿ ಪಡೆದು ಕತ್ತಲಾಗುವ ಹೊತ್ತಿಗೆ ಊಟಕ್ಕೆ ಹೊರಟೆವು. ನಮಗೆ ಆಹ್ವಾನ ನೀಡಿದ ಹೆಗಡೆಯವರ ಮನೆಯಲ್ಲಿಯೇ ನಮಗೆ ಊಟಕ್ಕೆ ವ್ಯವಸ್ಥೆಯಾಗಿತ್ತು. ಹತ್ತಾರು ಎಕರೆ ಅಡಿಕೆ ತೆಂಗುಗಳ ತೋಟದ ಒಡೆಯರಾಗಿದ್ದ ಹೆಗಡೆಯವರು ಊರಿನಲ್ಲಿಯೇ ಬಹು ಜನಪ್ರಿಯ ವ್ಯಕ್ತಿಯೆಂಬುದು ತಿಳಿಯಿತು. ಮನೆಯಲ್ಲಿ ಯಾವುದೋ ದೇವತಾಕಾರ್ಯ ನೆರವೇರಿಸಿದ ಹೆಗಡೆ ರಾತ್ರಿಯ ಜಾಗರಣೆಗಾಗಿ ಯಕ್ಷಗಾನ ಪ್ರದರ್ಶನದ ಏರ್ಪಾಡು ಮಾಡಿ ನಮ್ಮನ್ನು ಆಹ್ವಾನಿಸಿದ್ದರು. ಯಕ್ಷಗಾನ ನಡೆಯುವ ರಂಗ ವೇದಿಕೆಯಿಂದ ಕೂಗಳತೆ ದೂರದಲ್ಲಿದ್ದ ಹೆಗಡೆಯವರ ಮನೆಗೆ ಹೋಗುವಾಗ ವಿಶಾಲವಾದೊಂದು ಗದ್ದೆ ಬಯಲನ್ನು ದಾಟಬೇಕಿತ್ತು. ಕಲಾ ತಂಡದ ಸದಸ್ಯರೆಲ್ಲ ಆಟದ ಕುರಿತು ಚರ್ಚಿಸುತ್ತ ಗದ್ದೆ ಹಾಳೆಯ ಮೇಲೆ ಸಾಲಾಗಿ ಹೊರಟಾಗ ದಾರಿಯ ಮಧ್ಯೆ ಗುಂಪಿನಲ್ಲಿ ಯಾರೋ ಒಬ್ಬರು “ಹೌದು……. ಈ ಮತ್ತಿಘಟ್ಟದಲ್ಲಿ ಮದ್ದು ಹಾಕುವ ರೂಢಿ ಇದೆಯಂತಲ್ಲ?” ಎಂದು ಒಂದು ಸಂದೇಹದ ಪಟಾಕಿ ಸಿಡಿಸಿದರು. ಮತ್ತೊಬ್ಬ “ಹೌದು……….. ಹೌದು ನಾನೂ ಕೇಳಿದ್ದೇನೆ….. ಈ ಊರೇ ಅದಕ್ಕೆ ಪ್ರಸಿದ್ಧವಾಗಿದೆ………..” ಎಂದು ತನ್ನದೂ ಒಂದನ್ನು ಎಸೆದ. ನಡೆಯುತ್ತಿದ್ದ ಗುಂಪು ನಡಿಗೆಯನ್ನು ನಿಲ್ಲಿಸಿ ಚರ್ಚೆಯನ್ನೇ ಮುಂದುವರಿಸಿತು. ತಂಡದಲ್ಲಿ ಹಿರಿಯರಾದ ವಿಠೋಬ ನಾಯಕ ವಂದಿಗೆ, ಮಂಗೇಶ ಗೌಡ, ಅನಂತ ಹಾವಗೋಡಿ, ಹಾಸ್ಯಗಾರ ವೆಂಕಟ್ರಮಣ ನಾಯ್ಕ ಮುಂತಾದ ಕಲಾವಿದರೂ ಹಿಮ್ಮೇಳದವರೂ ಇದ್ದಾರೆ. ಎಲ್ಲರಿಗೂ ಒಂದು ಅವ್ಯಕ್ತ ಭಯ ಶುರುವಾಯಿತಲ್ಲದೇ ಗೊತ್ತಿದ್ದ ಕೆಲವರು “ಮದ್ದು” ಹಾಕುವುದರಿಂದ ಆಗುವ ದುಷ್ಪರಿಣಾಮದ ಕುರಿತು ದೀರ್ಘವಾದ ವಿವರಣೆಯನ್ನೇ ನೀಡಲು ಆರಂಭಿಸಿದರು. ತಾವು ಕಣ್ಣಾರೆ ಕಂಡ ಅನುಭವಗಳನ್ನೇ ಕೆಲವರು ಭಯಾನಕವಾಗಿ ಬಣ್ಣಿಸಿದ ಪರಿಣಾಮ ತಂಡದ ಎಲ್ಲರಲ್ಲಿಯೂ ಅವ್ಯಕ್ತ ಭಯವೇ ಶುರುವಾಯಿತು. ಅಂತಿಮವಾಗಿ ನಡುದಾರಿಯಿಂದಲೇ ಎಲ್ಲರೂ ಮರಳಿ ರಂಗವೇದಿಕೆಯತ್ತ ಹೊರಡಲು ಸಿದ್ಧರಾದರು. ಹೆಗಡೆಯವರು ನಮಗಾಗಿ ಸಿದ್ಧಪಡಿಸಿದ ಅಡಿಗೆ ವ್ಯರ್ಥವಾಗುವುದರೊಂದಿಗೆ ಅವರ ಮನಸ್ಸಿಗೆ ನೋವಾಗಬಹುದೆಂಬ ಕಾಳಜಿಯೂ ಇಲ್ಲದೆ ನಾವೆಲ್ಲರೂ ಮರಳಿ ಬಂದೆವು. ಸಂಘಟಕರಿಗೆ ಸಂದೇಶ ತಲುಪಿಸಿ ರಂಗವೇದಿಕೆಯ ಸನಿಹವೇ ಒಲೆ ಹೂಡಿ ಒಂದಿಷ್ಟು ಅಕ್ಕಿ ಬೇಳೆ ಇತ್ಯಾದಿ ತರಿಸಿಕೊಂಡು ಎಂಥದೋ ಒಂದು ಅಡಿಗೆ ಮಾಡಿ ಊಟದ ಶಾಸ್ತ್ರ ಮುಗಿಸಿ ನಿರಾಳರಾದೆವು. ಮರುದಿನ ಮುಂಜಾನೆ ಆಟ ಮುಗಿಸಿ ಊರಿಗೆ ಹೊರಡಬೇಕೆನ್ನುವಾಗ ನನಗೊಂದು ಒತ್ತಾಯದ ಆಮಂತ್ರಣ ಬಂದಿತು. ನಮ್ಮ ಕಾಲೇಜಿನಲ್ಲಿ ನಮ್ಮ ಸಹೋದ್ಯೋಗಿಯಾಗಿದ್ದ ಹಿಂದಿ ಭಾಷಾ ಉಪನ್ಯಾಸಕ ಭಾಸ್ಕರ ಹೆಗಡೆ ಎಂಬುವವರ ಪತ್ನಿ ಜಯಲಕ್ಷ್ಮಿ ಹೆಗಡೆ ಎಂಬುವವರ ತವರೂರು ಇದು. ಕಳೆದ ತಿಂಗಳಷ್ಟೇ ಹೆರಿಗೆಯಾಗಿ ವಿಶ್ರಾಂತಿ ಪಡೆಯುತ್ತ ಇದ್ದವರು ಪರಿಚಿತನಾದ ನನಗೆ ಮುಂಜಾನೆಯ ಉಪಹಾರಕ್ಕೆ ಬರುವಂತೆ ಆಹ್ವಾನ ನೀಡಿ ಅವರ ತಂದೆಯ ಮೂಲಕ ಸಂದೇಶ ಕಳುಹಿಸಿದ್ದರು. ನಾನು ನಿರಾಕರಿಸಲಾಗದೆ ಸನಿಹದಲ್ಲೇ ಇದ್ದ ಅವರ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿ ಅವರ ಯೋಗಕ್ಷೇಮ ವಿಚಾರಿಸಿಕೊಂಡೆ. ಜಯಲಕ್ಷ್ಮಿ ಹೆಗಡೆಯವರು ನಿನ್ನೆಯ ರಾತ್ರಿ ನಾವು ಹೆಗಡೆಯವರ ಮನೆಯ ಊಟ ನಿರಾಕರಿಸಿದ್ದಕ್ಕೆ ತುಂಬಾ ನೋವಿನಿಂದ ಮಾತನ್ನಾಡಿದರು. ಮತ್ತಿಘಟ್ಟದಲ್ಲಿ ‘ಮದ್ದು ಹಾಕುವ’ ಪದ್ಧತಿ ಬಹಳ ಹಿಂದಿನ ಕಾಲದಲ್ಲಿ ರೂಢಿಯಲ್ಲಿ ಇದ್ದುದು ನಿಜ. ಈಗ ಸಂಪೂರ್ಣವಾಗಿ ಅಂಥ ಪದ್ಧತಿ ನಿಂತು ಹೋಗಿದೆ. ಯಕ್ಷಗಾನ ಸಂಘಟಿಸಿದ ಹೆಗಡೆಯವರು ಆಟದ ಮೇಳದವರಿಗಾಗಿ ವಿಶೇಷವಾದ ಸಿಹಿ ಭೋಜನ ಸಿದ್ಧಪಡಿಸಿ ಕಾಯ್ದಿದ್ದರಂತೆ. ಕಲಾವಿದರೆಲ್ಲ ಹೀಗೆ ಸಂದೇಹಪಟ್ಟು ಊಟವನ್ನು ನಿರಾಕರಿಸಿದ್ದು ಅವರಿಗೆ ತುಂಬಾ ನೋವನ್ನು ಅವಮಾನವನ್ನುಂಟುಮಾಡಿದೆ. ಕೋಪದಿಂದ ಕಲಾವಿರಿಗಾಗಿ ಸಿದ್ಧಪಡಿಸಿದ ವಿಶೇಷ ಅಡಿಗೆಯನ್ನು ಅಡಿಕೆ ಮರದ ಬುಡಕ್ಕೆ ಚೆಲ್ಲಿಸಿದರಂತೆ………. ಇತ್ಯಾದಿ ವಿವರಿಸಿದ ಜಯಲಕ್ಷ್ಮಿಯವರು “ನಿಮ್ಮ ಕಲಾವಿದರೆಲ್ಲ ದೊಡ್ಡ ತಪ್ಪು ಮಾಡಿದರು ಸರ್….” ಎಂದು ನೊಂದು ನುಡಿದರು. ವಿದ್ಯಾವಂತರಾದ ನಾವೆಲ್ಲ ತಂಡದಲ್ಲಿದ್ದು ಇಂಥದೊಂದು ಅಪನಂಬಿಕೆಗೆ ಅವಕಾಶ ನೀಡಿ ಹಿರಿಯರ ಮನ ನೋಯಿಸಿದ್ದು ಆಕ್ಷೇಪಾರ್ಹವೇ ಎಂಬ ದಾಟಿಯಲ್ಲಿ ಜಯಲಕ್ಷ್ಮಿಯವರು ಮಾತನಾಡಿದಾಗ ನನಗೆ ಒಂದು ಬಗೆಯಲ್ಲಿ ನಮ್ಮ ಕೃತ್ಯಕ್ಕೆ ನಾವೇ ನಾಚಿಕೆ ಪಡುವಂತಾಯಿತು. ನಿರುಪಾಯನಾದ ನಾನು ನಮ್ಮ ಮೌಢ್ಯಕ್ಕೆ ವಿಷಾದ ವ್ಯಕ್ತಪಡಿಸಿ ಅಲ್ಲಿಂದ ಹೊರಟು ಬಂದೆ. ಮತ್ತೆ ನನಗೆ ಊಟಕ್ಕೆ ಆಮಂತ್ರಿಸಿದ ಹೆಗಡೆಯವರನ್ನು ಕಂಡು ಮಾತಾಡಿಸುವಷ್ಟು ನೈತಿಕ ಸ್ಥೆರ್ಯ ಇರಲಿಲ್ಲ. ರಾತ್ರಿಯ “ಗದಾಯುದ್ಧ” ಪ್ರದರ್ಶನ ಮತ್ತಿಘಟ್ಟದ ಪ್ರೇಕ್ಷಕರ ಮನಸೂರೆಗೊಂಡಿದ್ದು ಅವರ ಶ್ಲಾಘನೇಯ ಮಾತುಗಳಿಂದ ಉಲ್ಲಿಸಿತರಾಗಬೇಕಾದ ನಾವೆಲ್ಲ ನಾವೇ ಮಾಡಿದ ಪ್ರಮಾದಕ್ಕೆ ಪಶ್ಚಾತ್ತಾಪ ಪಡುತ್ತಲೇ ಊರಿಗೆ ಮರಳಿದ್ದೆವು. ರಾಮಕೃಷ್ಣ ಗುಂದಿ
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—49 ಯಕ್ಷಗಾನ-ನಾಟಕ ರಂಗಭೂಮಿಯಲ್ಲಿ. ನನ್ನ ಕಾಲೇಜು ಅಧ್ಯಾಪಕರ ವೃತ್ತಿಯೊಡನೆ ನಾನು ಪ್ರೀತಿಯಿಂದ ಎದೆಗೆ ಹಚ್ಚಿಕೊಂಡ ಯಕ್ಷಗಾನ ಮತ್ತು ನಾಟಕ ರಂಗಭೂಮಿಯ ಹವ್ಯಾಸಗಳು ನನ್ನ ವ್ಯಕ್ತಿತ್ವದ ಇನ್ನೊಂದು ಮುಖದ ಬೆಳವಣಿಗೆಗೆ ಕಾರಣವಾದವು. ಈ ನಂಟಿನಿಂದಲೇ ಕಾಲೇಜು ಕ್ಯಾಂಪಸ್ಸಿನ ಆಚೆಯೂ ನನಗೊಂದು ಜನಪ್ರಿಯ ವಲಯ ಸೃಷ್ಟಿಯಾಯಿತು. ಹಾಗೆಂದು ನಾನು ಕ್ರಮಿಸಿದ ಯಕ್ಷಗಾನ ಮತ್ತು ರಂಗಭೂಮಿಯ ದಾರಿ ಕೇವಲ ಸುಗಂಧಯುಕ್ತ ಹೂವಿನ ಹಾಸಿಗೆಯಷ್ಟೇ ಆಗಿರಲಿಲ್ಲ. ಅಲ್ಲಿ ಶ್ಲಾಘನೆಯ ಪರಿಮಳದೊಡನೆ ವಿಮರ್ಶೆಯ ಟೀಕೆ ಟಿಪ್ಪಣಿಗಳ ಕಲ್ಲು ಮುಳ್ಳುಗಳನ್ನು ತುಳಿಯುವುದೂ ಅನಿವಾರ್ಯವೇ ಆಗಿತ್ತು….! ಅಂಕೋಲೆಯ ಸುತ್ತಮುತ್ತಲಿನ ಹಲವಾರು ಹಳ್ಳಿಗಳಲ್ಲಿ ನಮ್ಮ ಆಗೇರ ಜನಾಂಗದ ನೆಲೆಗಳಿವೆ. ಎಲ್ಲ ನೆಲೆಗಳಲ್ಲಿಯೂ ಸಾಂಪ್ರದಾಯಿಕ ಭಜನೆ ಉತ್ಸವ ಪ್ರತಿ ವರುಷವೂ ನಡೆಯುತ್ತದೆ. ಸಪ್ತಾಹದ ಕಾಲಾವಧಿ ನಡೆಯುವ ಭಜನಾ ಉತ್ಸವದ ಕೊನೆಯ ರಾತ್ರಿ ಜಾಗರಣೆಗಾಗಿ ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ಏರ್ಪಡಿಸುವ ಪದ್ಧತಿ ತೀರ ಹಿಂದಿನಿಂದಲೂ ರೂಢಿಯಲ್ಲಿದೆ. ಆರಂಭದ ಕೆಲವರ್ಷಗಳಲ್ಲಿ ಆಯಾ ಊರಿನ ಯುವಕರೂ, ವೃದ್ಧರೂ ಸೇರಿ ಬಲ್ಲವರಿಂದ ಮಾರ್ಗದರ್ಶನ ಪಡೆದು ಮೇಳ ಕಟ್ಟಿಕೊಂಡು ಕಲಿತು ಆಡುವ ಕ್ರಮವಿತ್ತು. ಕಾಲಕ್ರಮೇಣ ಯಕ್ಷಗಾನ ವೃತ್ತಿ ಮೇಳಗಳ, ಹವ್ಯಾಸಿ ತಂಡಗಳ ಪ್ರಭಾವದಿಂದ ಬೇರೆ ಬೇರೆ ಕಡೆಯಿಂದ ಅತಿಥಿ ಕಲಾವಿದರನ್ನು ಕರೆಸಿ ಆಟ ಆಡಿಸುವ ಕ್ರಮ ರೂಢಿಯಾಯಿತು. ಪ್ರತಿಯೊಂದು ಊರಿನಲ್ಲೂ ಆಟ ಉತ್ತಮವಾಗಬೇಕೆಂಬ ಆಕಾಂಕ್ಷೆ ಯಿಂದ ಪರಿಣಿತ ಕಲಾವಿದರನ್ನು ಕರೆಸಿಕೊಂಡು ಪ್ರದರ್ಶನ ಏರ್ಪಡಿಸುವ ಸ್ಪರ್ಧಾ ಮನೋಭಾವವೂ ಬೆಳೆಯತೊಡಗಿತು. ತಮ್ಮ ಊರಿನ ಪ್ರದರ್ಶನವೇ ಉತ್ತಮವಾಗಬೇಕೆಂಬ ಆಕಾಂಕ್ಷೆ ಯಿಂದ ಕಲಾವಿದರು ಬೇಡಿದ ಬೆಲೆಕೊಟ್ಟು ಕರೆಸಿಕೊಳ್ಳುವ ಪದ್ಧತಿಯು ಹೆಚ್ಚತೊಡಗಿತು. ಸರಿಸುಮಾರು ಇದೇ ಕಾಲಾವಧಿಯಲ್ಲಿ ನಾನು (ಎಪ್ಪತ್ತು-ಎಂಭತ್ತರ ದಶಕದಲ್ಲಿ) ಹವ್ಯಾಸಿ ಯಕ್ಷ ಕಲಾವಿದನಾಗಿ ರಂಗ ಪ್ರವೇಶ ಮಾಡಿದೆ. ಕುಮಟಾ, ಅಂಕೋಲಾ, ಕಾರವಾರ ಇತ್ಯಾದಿ ತಾಲೂಕುಗಳ ಎಲ್ಲ ಹಳ್ಳಿಗಳಲ್ಲಿ ನಮ್ಮ ಆಗೇರ ಸಮುದಾಯದವರು ಆಟ ಆಡಿಸುವಾಗ ನನ್ನನ್ನು ತಪ್ಪದೇ ಆಹ್ವಾನಿಸುತ್ತಿದ್ದರು. ಕಥಾನಕದ ಮುಖ್ಯ ಪಾತ್ರವನ್ನೇ ನೀಡಿ ಪ್ರೋತ್ಸಾಹಿಸತೊಡಗಿದರು. ವೃತ್ತಿಯಿಂದ ಅಧ್ಯಾಪಕನಾಗಿರುವ ನನಗೆ ಯಕ್ಷಗಾನ ಪ್ರದರ್ಶನದಲ್ಲಿ ರಾತ್ರಿ ಕಳೆದರೆ ಮರುದಿನ ನಿದ್ದೆ ವಿಶ್ರಾಂತಿಗಾಗಿ ರಜೆಯ ಅವಶ್ಯಕತೆಯಿತ್ತು. ರವಿವಾರದ ರಜೆಯ ಮುನ್ನಾ ದಿನದ ಶನಿವಾರ ರಾತ್ರಿಯಲ್ಲಿ ನಾನು ಪಾತ್ರಕ್ಕೆ ಒಪ್ಪಿಕೊಳ್ಳುತ್ತಿದ್ದೆ. ನನ್ನ ಸಮಾಜ ಬಾಂಧವರು ನನ್ನ ಮೇಲಿನ ಅಭಿಮಾನದಿಂದ ರಜೆಯ ಮುನ್ನಾ ದಿನಗಳನ್ನೇ ಆಯ್ದು ತಮ್ಮೂರಿನ ಆಟ ನಿಗದಿಪಡಿಸತೊಡಗಿದರು. ಅದು ಇನ್ನಿತರ ಹವ್ಯಾಸಿ ಕಲಾವಿದರಿಗೂ ತುಂಬಾ ಅನುಕೂಲವಾಗಿ ಇದು ಒಂದು ಸಂಪ್ರದಾಯವೇ ಎಂಬಂತೆ ಇಂದಿಗೂ ಮುಂದುವರೆದಿದೆ. ಹೀಗೆ ಎರಡು ದಶಕಗಳಿಗೂ ಅಧಿಕ ಕಾಲ ನನ್ನ ಸ್ವಜಾತಿ ಬಾಂಧವರೂ, ಇತರ ಸಮಾಜದವರೂ ನನ್ನನ್ನು ತಮ್ಮೂರಿನ ಯಕ್ಷಗಾನ ಪ್ರದರ್ಶನಕ್ಕೆ ಅಭಿಮಾನದಿಂದ ಆಮಂತ್ರಿಸುತ್ತಲೇ ನಾನು ಒಬ್ಬ ಸಮರ್ಥ ಕಲಾವಿದನಾಗಿ ರೂಪುಗೊಳ್ಳುವಂತೆ ಪ್ರೇರಣೆ ನೀಡಿದರು. ಈ ನಡುವೆ ನನಗೆ ಹಲವಾರು ಹಿರಿ-ಕಿರಿಯ ಹವ್ಯಾಸಿ ಮತ್ತು ಮೇಳದ ಕಲಾವಿದರ ಒಡನಾಟದ ಅವಕಾಶ ದೊರೆಯಿತು. ಯಕ್ಷಗಾನ ವೇಷಭೂಷಣ, ಮುಖ ವರ್ಣಿಕೆಗಳ ಔಚಿತ್ಯವನ್ನು ಅರಿತುಕೊಳ್ಳಲು, ಪಾತ್ರ ಪೋಷಣೆ, ಪ್ರಸಂಗದ ನಡೆ, ನೃತ್ಯ ವಿನ್ಯಾಸಗಳ ಸೂಕ್ಷö್ಮಗಳನ್ನು ತಿಳಿದುಕೊಳ್ಳಲು ವಿಫುಲ ಅವಕಾಶ ದೊರೆಯಿತು. ಚಿಕ್ಕಂದಿನಲ್ಲಿ ನಮ್ಮ ತಂದೆ ಗಣಪು ಮಾಸ್ತರರು ಕಲಿಸಿಕೊಟ್ಟ ನೃತ್ಯ ಕ್ರಮದೊಂದಿಗೆ ನಾನು ನೋಡುತ್ತ ಕಲಿತ ನೃತ್ಯ ವಿನ್ಯಾಸಗಳನ್ನು ನನ್ನ ಪಾತ್ರ ಪೋಷಣೆಯಲ್ಲಿ ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದೆನಾದರೂ ಇತ್ತಿಚಿನ ನವನವೀನವಾದ ತಿಟ್ಟು ಮಟ್ಟುಗಳು ಪರಿಪೂರ್ಣವಾಗಿ ನನಗೆ ಅಭ್ಯಾಸವಾಗಿರಲಿಲ್ಲ. ಈ ಸನ್ನಿವೇಶದಲ್ಲಿ ನನಗೆ ಗುರುವಾಗಿ ದೊರೆತವರು ನನ್ನ ಪ್ರೀತಿಯ ಯಕ್ಷ ಗುರು ರಾಮದಾಸ ಬಂಢಾರಿ! ಕುಮಟಾ ತಾಲೂಕಿನ ಮೂರೂರು ಎಂಬ ಗ್ರಾಮದ ತರುಣ ರಾಮದಾಸ ಬಂಢಾರಿ ಉತ್ತಮ ಯಕ್ಷ ನೃತ್ಯ ಪಟುವಾಗಿದ್ದರಲ್ಲದೆ, ಅದ್ವೀತಿಯೆನ್ನಿಸುವ ಮದ್ದಳೆ ವಾದಕರಾಗಿದ್ದರು. ಅವರ ಸಹೋದರಿ ಅಂಕೋಲೆಯ ಸರಕಾರಿ ಆಸ್ಪತ್ರೆಯಲ್ಲಿ “ನರ್ಸ್” ಆಗಿ ಸೇವೆ ಸಲ್ಲಿಸುತ್ತಿದ್ದರು. ಸಹೋದರಿಯೊಡನೆ ತಾಯಿ, ಪತ್ನಿ, ಪುಟ್ಟ ಮಗು ಮತ್ತು ಅಣ್ಣನ ಮಗ ರಮೇಶ ಎಂಬ ಹತ್ತು ವರ್ಷದ ಬಾಲಕನೊಡನೆ ಇಡಿಯ ಸಂಸಾರವೂ ಕಿತ್ತೂರು ಚೆನ್ನಮ್ಮ ರಸ್ತೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿತ್ತು. ರಾಮದಾಸ ಬಂಢಾರಿ ಜೀವನದ ನಿರ್ವಹಣೆಗಾಗಿ ಯಕ್ಷಗಾನ ತರಬೇತಿ ನೀಡುವ, ಯಕ್ಷಗಾನ ಪ್ರದರ್ಶನದಲ್ಲಿ ಮದ್ದಳೆ ನುಡಿಸುವ ಕಾಯಕ ಮಾಡಿಕೊಂಡಿದ್ದ. ಅವರ ಅಣ್ಣನ ಮಗ ರಮೇಶ ಅಂದು ಅಂಕೋಲೆಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡಿದ್ದ. ಚಿಕ್ಕಪ್ಪ ಆಸಕ್ತರಿಗೆ ಯಕ್ಷಗಾನ ನೃತ್ಯ ಕಲಿಸುವಾಗ ತಾನೂ ಆಸಕ್ತಿಯಿಂದ ನೃತ್ಯಾಭ್ಯಾಸ ಮಾಡುತ್ತಿದ್ದ. ಇದೇ ರಮೇಶನೆಂಬ ಬಾಲಕ ಮುಂದೆ ಯಕ್ಷರಂಗದ ಅಪ್ರತಿಮ ಹಾಸ್ಯಕಲಾವಿದನಾಗಿ ಬೆಳೆದನಲ್ಲದೇ ಅಮೃತೇಶ್ವರಿ, ಪೆರ್ಡೂರು, ಸಾಲಿಗ್ರಾಮ ಇತ್ಯಾದಿ ವೃತ್ತಿಮೇಳಗಳಲ್ಲಿ ಮುಖ್ಯ ವಿದೂಷಕನಾಗಿ ಸೇವೆ ಸಲ್ಲಿಸಿ, ಈಗಲೂ ಯಕ್ಷರಂಗದ ಅತ್ಯಂತ ಜನಪ್ರಿಯ ಹಾಸ್ಯ ಕಲಾವಿದನಾಗಿ ವಿಜೃಂಭಿಸುತ್ತಿದ್ದಾನೆ! ರಾಮದಾಸ ಬಂಢಾರಿ ಅಂಕೋಲೆಯ ಆಸುಪಾಸಿನ ಹಳ್ಳಿಗಳಲ್ಲಿ ಯುವಕರ ತಂಡಕಟ್ಟಿ ತರಬೇತಿ ನೀಡಿ ಉತ್ತಮ ಕಲಾವಿದರನ್ನಾಗಿ ರೂಪುಗೊಳಿಸಿದ್ದಾನೆ. ನಾನು ಪಾತ್ರ ನಿರ್ವಹಿಸಿದ ಅನೇಕ ಯಕ್ಷಗಾನ ಪ್ರದರ್ಶನದಲ್ಲಿ ಹಿಮ್ಮೇಳದ ಮದ್ದಳೆ ವಾದಕನಾಗಿ ಕೆಲಸ ಮಾಡಿದ ರಾಮದಾಸ ಬಂಢಾರಿ ಕ್ರಮೇಣ ನನ್ನ ಪ್ರೀತಿಯ ಅಭಿಮಾನಿಯಾದನಲ್ಲದೇ ನಾನು ‘ಮುಲ್ಲಾಬಾಡಾ’ ಏರಿಯಾದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುವಾಗ ದಿನವೂ ಮದ್ದಳೆಯೊಂದಿಗೆ ಮನೆಗೇ ಬಂದು ಯಕ್ಷನೃತ್ಯದ ವಿನೂತನ ವಿನ್ಯಾಸಗಳನ್ನು ನನಗೆ ಹೇಳಿಕೊಟ್ಟು ನನ್ನನ್ನು ತಿದ್ದಿ ಪರಿಷ್ಕರಿಸಿದ. ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಸ್ವ ಇಚ್ಛೆಯಿಂದ ತಿಂಗಳುಗಳ ಕಾಲ ಮದ್ದಳೆಯೊಂದಿಗೆ ಮನೆಗೆ ಬಂದು ಯಕ್ಷಗಾನ ಕುಣಿತ ಕಲಿಸಿದ ರಾಮದಾಸ ಬಂಢಾರಿಯವರನ್ನು ನಾನು ಎಂದಿಗೂ ಮರೆಯಲಾಗದ, ಮರೆಯ ಬಾರದ ನನ್ನ ‘ಯಕ್ಷಗುರು’ ಎಂದೇ ನಾನು ಭಾವಿಸಿದ್ದೇನೆ. ಅಂದು ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಯಕ್ಷರಂಗದ ಉತ್ತುಂಗದಲ್ಲಿ ವಿಜೃಂಭಿಸುತ್ತಿದ್ದ ಕಾಲ. ಪ್ರತಿ ವರ್ಷದ ತಿರುಗಾಟದಲ್ಲಿಯೂ ವಿನೂತನ ನೃತ್ಯ ವಿನ್ಯಾಸವೊಂದನ್ನು ತಂದು ಜನಪ್ರಿಯಗೊಳಿಸುವುದು ಚಿಟ್ಟಾಣಿಯವರ ಕ್ರಮವೇ ಆಗಿತ್ತು….! ನನ್ನ ಗುರು ರಾಮದಾಸ ಬಂಢಾರಿ ಕೂಡ ಉತ್ತಮ ಕುಣಿತಗಾರನಾಗಿದ್ದು, ಚಿಟ್ಟಾಣಿಯವರ ಎಲ್ಲ ಬಗೆಯ ನೃತ್ಯಗಳನ್ನು ಲಯಬದ್ಧವಾಗಿ ಕುಣಿದು ತೋರಬಲ್ಲ ಸಮರ್ಥನಾಗಿದ್ದ. ಇದೇ ಕಾರಣದಿಂದ ಆತ ಚಿಟ್ಟಾಣಿಯವರಿಗೆ ಅತ್ಯಂತ ಪ್ರೀತಿ ಪಾತ್ರನೂ ಆಗಿದ್ದ. ಈ ಸ್ನೇಹದ ನಂಟು ವಿಸ್ತçತವಾಗುತ್ತಲೇ ನನಗೂ ಚಿಟ್ಟಾಣಿಯವರಿಗೂ ಸಹೋದರ ಭಾವದ ಅತ್ಯಂತ ಆಪ್ತವಾದ ಸ್ನೇಹ ಸಂಬಂಧಕ್ಕೆ ಕಾರಣವಾಯಿತೆಂಬುದು ನನ್ನ ಬದುಕಿನ ಬಹುದೊಡ್ಡ ಭಾಗ್ಯ! ಹವ್ಯಾಸಿ ಕಲಾ ತಂಡಗಳ ತಿರುಗಾಟದ ಆರಂಭದ ದಿನಗಳಲ್ಲಿ ಹಿಮ್ಮೇಳದ ಭಾಗವತರಾಗಿ ದೊರೆತ ಗಜಾನನ ಮಾಸ್ಟರ್ ಕಲ್ಲಬ್ಬೆ, ಆರ್.ಬಿ.ನಾಯ್ಕ ಅಂಕೋಲಾ, ಸಿದ್ದಾಪುರ ಸತೀಶ ಹೆಗಡೆ ದಂಟಕಲ್, ಹಿಲ್ಲೂರಿನ ಹೆಗಡೆ ಭಾಗವತರು ಮುಂತಾದವರು ನನ್ನ ಪಾತ್ರ ಘೋಷಣೆಗೆ ಬೆನ್ನೆಲುಬಾಗಿ ನಿಂತು ನನ್ನನ್ನು ರಂಗದಲ್ಲಿ ಮೆರೆಯಿಸಿದ ಪರಿಣಾಮ ನಾನು ಬಹುಜನ ಪ್ರೀತಿಯ ಕಲಾವಿದನಾಗಿ ಬೆಳೆಯಲು ಕಾರಣವಾಯಿತು. ಜೊತೆಯಲ್ಲಿ ಸಹಕಲಾವಿದರಾಗಿ ದೊರೆತ ಗೋಕರ್ಣದ ಅನಂತ ಹಾವಗೋಡಿ, ಎಕ್ಟರ್ ಜೋಷಿ, ಶಿವಾನಂದ ಬಂಢಾರಿ, ಬೀರಣ್ಣ ಮಾಸ್ತರ ಅಡಿಗೋಣ, ವಿಠೋಬ ನಾಯಕ ವಂದಿಗೆ, ವಾಸುದೇವ ಶಾನಭಾಗ ಶಿರ್ಶಿ, ಪಾಲನಕರ ಮಾಸ್ತರ ಅಂಕೋಲಾ, ನಾರಾಯಣ ಗಾಂವಕರ ಪಡುವಣಿ, ಜಿ.ಎನ್. ಹೆಗಡೆ ಶಿರ್ಶಿ, ಮಾಧವ ಪಟಗಾರ ಕುಮಟಾ, ಗೋವಿಂದ ನಾಯ್ಕ ಕುಮಟಾ, ಧಾರೇಶ್ವರ ಮಾಸ್ತರರು ಮೊದಲಾದ ಹಿರಿಯರೆಲ್ಲ ಒಂದಲ್ಲ ಒಂದು ಬಗೆಯಿಂದ ನನ್ನನ್ನು ಪ್ರಭಾವಿಸದರಲ್ಲದೆ ನನ್ನ ಕಲಾವಿದ ವ್ಯಕ್ತಿತ್ವಕ್ಕೆ ಸಾಣಿ ಹಿಡಿದು ಬೆಳಗಿಸಿದವರು. ನಿರಂತರ ನಾಲ್ಕು ದಶಕಗಳ ಕಾಲದ ನನ್ನ ಯಕ್ಷಗಾನ ರಂಗದ ಪಯಣದಲ್ಲಿ ಹಲವು ಏಳು ಬೀಳುಗಳಿವೆ. ಆದರೂ ಈ ಯಕ್ಷರಂಗದ ಸುಂದರ ಅನುಭವ ಮತ್ತು ಒಡನಾಟಗಳನ್ನು ನಾನು ಪ್ರೀತಿಯಿಂದ ನನ್ನ ಸ್ಮರಣೆಯ ಭಾಗವಾಗಿಯೇ ಉಳಿಸಿಕೊಂಡಿದ್ದೇನೆ. ನೆನಪಿಸಿ ಉಲ್ಲೇಖಿಸಲೇಬೇಕಾದ ಕೆಲವು ಅವಿಸ್ಮರಣೀಯ ಸನ್ನಿವೇಶಗಳನ್ನು ಮುಂದೆ ನಿರೂಪಿಸುವೆ….. ರಾಮಕೃಷ್ಣ ಗುಂದಿ
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—48 ಮತ್ತೆ ಮರುದನಿಗೊಂಡ ಅಸ್ಪೃಶ್ಯತೆ ನೋವುಗಳು…… ನನ್ನ ವಿವಾಹವೇನೋಸಹಜ ಪ್ರಕ್ರಿಯೆಯಂತೆ ನಿರಾತಂಕವಾಗಿ ನಡೆಯಿತು. ಹಲವರು ಶುಭಹಾರೈಕೆಗಳಿಂದ ನಮ್ಮ ನಿಲುವುಗಳನ್ನು ಬೆಂಬಲಿಸಿದರು. ಕೆಲವರು ನೇರ ನನ್ನ ಕಿವಿಗೂ ಕೇಳಿಸುವಂತೆ ಟೀಕಾಸ್ತ್ರಗಳ ಬಳುವಳಿಯನ್ನೂ ಕೊಡಮಾಡಿದರು. ಬಹುತೇಕ ನಮ್ಮ ಜಾತಿಯ ಬಂಧುಗಳಿಗೆ ನಾನು ಅಂತರ್ಜಾತಿಯ ವಿವಾಹ ಮಾಡಿಕೊಂಡದ್ದು ಸಮಂಜಸವೆನಿಸಲಿಲ್ಲ. “ಉತ್ತಮ ಶಿಕ್ಷಣ ಪಡೆದು ಒಂದು ಒಳ್ಳೆಯ ಉದ್ಯೋಗದಲ್ಲಿ ಇದ್ದವನು ಸ್ವಜಾತಿಯ ಹುಡುಗಿಯನ್ನೇ ಮದುವೆ ಮಾಡಿಕೊಂಡು ಸ್ವಜಾತಿಯ ಹುಡುಗಿಯೊಬ್ಬಳಿಗೆ ಬದುಕು ನೀಡಬಹುದಿತ್ತು. ಓದಿದ ಮತ್ತು ಉತ್ತಮ ಉದ್ಯೋಗ ಪಡೆದ ಯುವಕರೆಲ್ಲ ಹೀಗೆ ಬೇರೆ ಸಮುದಾಯದ ಹುಡುಗಿಯನ್ನು ಇಷ್ಟಪಟ್ಟು ಮದುವೆ ಮಾಡಿಕೊಂಡರೆ ನಮ್ಮ ಸಮುದಾಯದ ಯುವತಿಯರ ಭವಿಷ್ಯದ ಗತಿಯೇನು? ಇದು ಸ್ವಜಾತಿಗೆ ಮಾಡಿದ ಅನ್ಯಾಯವೇ ಅಲ್ಲವೇ?” ಇತ್ಯಾದಿ ತರ್ಕಗಳೂ ಅಲ್ಲಲ್ಲಿ ವ್ಯಕ್ತವಾದವು. ರಾಮಕೃಷ್ಣ ಗುಂದಿ ಕನ್ನಡದಖ್ಯಾತಕತೆಗಾರ. ಅವಾರಿ, ಕಡಲಬೆಳಕಿನದಾರಿಗುಂಟ, ಅತಿಕ್ರಾಂತ, ಸೀತೆದಂಡೆಹೂವೇ …ಈನಾಲ್ಕುಅವರಕಥಾಸಂಕಲನಗಳು. ಅವರಸಮಗ್ರಕಥಾಸಂಕಲನಸಹಈಚೆಗೆಪ್ರಕಟವಾಗಿದೆ.ಯಕ್ಷಗಾನಕಲಾವಿದ. ಕನ್ನಡಉಪನ್ಯಾಸಕರಾಗಿಅಂಕೋಲಾದಜೆ.ಸಿ.ಕಾಲೇಜಿನಲ್ಲಿಸೇವೆಪ್ರಾರಂಭಿಸಿ, ಕಾರವಾರದದಿವೇಕರಕಾಲೇಜಿನಲ್ಲಿಪ್ರಾಂಶುಪಾಲರಾಗಿಕರ್ತವ್ಯನಿರ್ವಹಿಸಿನಿವೃತ್ತರಾಗಿದ್ದಾರೆ. ಯಕ್ಷಗಾನಅಕಾಡೆಮಿಸದಸ್ಯರಾಗಿಸೇವೆಸಲ್ಲಿಸಿದ್ದಾರೆ. ಮಗಅಮೆರಿಕಾದಲ್ಲಿಸಾಫ್ಟ್‌ವೇರ್ಎಂಜಿನಿಯರ್. ಅಗೇರಸಮುದಾಯದಿಂದಬಂದಗುಂದಿಅವರುಅದೇಜನಾಂಗದಬಗ್ಗೆಪಿಎಚ್ಡಿಪ್ರಬಂಧಮಂಡಿಸಿ, ಡಾಕ್ಟರೇಟ್ಸಹಪಡೆದಿದ್ದಾರೆ . ದಲಿತಜನಾಂಗದಕಷ್ಟನಷ್ಟನೋವು, ಅವಮಾನ, ನಂತರಶಿಕ್ಷಣದಿಂದಸಿಕ್ಕಬೆಳಕುಬದುಕುಅವರಆತ್ಮಕಥನದಲ್ಲಿದೆ. ಮರಾಠಿದಲಿತಸಾಹಿತಿಗಳ,ಲೇಖಕರಒಳನೋಟ , ಕನ್ನಡನೆಲದದಲಿತಧ್ವನಿಯಲ್ಲೂಸಹಇದೆ. ರಾಮಕೃಷ್ಣಗುಂದಿಅವರಬದುಕನ್ನುಅವರಆತ್ಮಕಥನದಮೂಲಕವೇಕಾಣಬೇಕು. ಅಂತಹನೋವಿನಹಾಗೂಬದುಕಿನ ಚಲನೆಯಆತ್ಮಕಥನವನ್ನುಸಂಗಾತಿ ..ಓದುಗರಎದುರು, ಕನ್ನಡಿಗರಎದುರುಇಡುತ್
ರಾಮಕೃಷ್ಣ ಗುಂದಿ ಅವರ ಆತ್ಮಕಥೆ—47 ಆತ್ಮಾನುಸಂಧಾನ ನಾಲ್ಕಾರು ಬಂಧುಗಳ ನಡುವೆ ವಿವಾಹ ಬಂಧನಕ್ಕೆ….. : ಬದುಕು ಅನೇಕ ವಿಧದ ಸಂಬಂಧಗಳ ಬೆಸುಗೆ. ನಮ್ಮ ಜೀವಿತದ ಕಾಲಾವಧಿಯ ಉದ್ದಕ್ಕೂ ಈ ಸಂಬಂಧಗಳ ಬೆಸುಗೆ ವಿಸ್ತಾರಗೊಳ್ಳುತ್ತ ಸಾಗುತ್ತದೆ. ಅಂತಹ ಸಂಬಂಧಗಳಲ್ಲಿ ಪ್ರೇಮ ಸಂಬಂಧವೆಂಬುದು ಒಂದು ಅಪರೂಪದ, ವಿಶಿಷ್ಟವಾದ ಭಾವ ಬಂಧ. ಇದು ಗಂಡ-ಹೆಂಡತಿಯ ಸಾಮಾಜಿಕ ಅಂತಸ್ತುಗಳ ರೂಪದಲ್ಲಿ ಸಮಾಜದ ಮುಂದುವರಿಕೆಗೂ ನೆರವಾಗುತ್ತದೆ. ‘ಪ್ರೇಮ’ ಎಂಬುದು ಮುಂಗಡ ಬುಕಿಂಗ್ ಮಾಡುವಂತಹುದಲ್ಲ. ಅದು ಹೊತ್ತು ಗೊತ್ತಿಲ್ಲದೆ ತೀರ ಆಕಸ್ಮಿಕವಾಗಿ ಘಟಿಸುವಂತಹದು. ಅದಕ್ಕೇ ಇರಬಹುದೇನೋ “ಪ್ರೇಮ ಕುರುಡು” ಎಂಬ ಉಕ್ತಿಯೇ ಬಹುಕಾಲದಿಂದ ಜನಜನಿತವಾಗಿದೆ. ನಾನು ಉದ್ಯೋಗಕ್ಕೆ ಸೇರಿ ಆರೆಂಟು ವರ್ಷಗಳೇ ಕಳೆದಿದ್ದವು. ಉತ್ಸಾಹ ತುಂಬಿದ ತರಗತಿಯ ಪಾಠಗಳು, ಯಕ್ಷಗಾನ-ನಾಟಕ-ಸಾಹಿತ್ಯ ಸಂಬಂಧಿಯಾದ ನನ್ನ ಹವ್ಯಾಸಗಳಿಂದಾಗಿ ವರ್ಷಗಳು ಕಳೆದದ್ದೂ ಅರಿವಿಗೆ ಬಾರದಂತಹ ಉಲ್ಲಾಸದ ದಿನಗಳು ನನಗೆ ‘ಮದುವೆಯ ವಯಸ್ಸಾಗಿದೆ’ ಎಂಬುದರತ್ತ ಗಮನ ಹರಿಸಲೂ ಬಿಡಲಾರದಂತೆ ತಡೆದಿದ್ದವು. ನನ್ನ ತಮ್ಮ ನಾಗೇಶ ಗುಂದಿ ನಾನು ಕಾಲೇಜು ಉಪನ್ಯಾಸಕನಾಗಿ ಉದ್ಯೋಗಕ್ಕೆ ಸೇರಿದ ಸಂದರ್ಭದಲ್ಲಿಯೇ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸ ಆರಂಭಿಸಿದ್ದ. ಸಿದ್ದಾಪುರ ತಾಳೂಕಿನ ಕಾನಸೂರಿನ ಆಸುಪಾಸಿನ ಯಾವುದೋ ಹಳ್ಳಿಯ ಶಾಲೆಯಲ್ಲಿ ಅವನ ಶಿಕ್ಷಕ ವೃತ್ತಿಯು ಮುಂದುವರಿದಿತ್ತು. ಅದೇ ಊರಿನ ತರುಣಿಯೋರ್ವಳೊಡನೆ ಪ್ರೇಮ ಸಂಬಂಧ ಬೆಳೆದು ವಿವಾಹದ ತೀರ್ಮಾನಕ್ಕೂ ಬಂದಿದ್ದ. ಮುಖ್ಯವಾಗಿ ಹುಡುಗಿ ದೈವಜ್ಞ ಬ್ರಾಹ್ಮಣ ಸಮುದಾಯದವಳಾಗಿದ್ದು ದಲಿತ ಸಮುದಾಯದ ನನ್ನ ಸಹೋದರನಿಗೆ ಈ ವಿವಾಹ ಸಂಬಂಧವು ಸಂಘರ್ಷಕ್ಕೆ ಎಡೆಯಾಗಬಹುದೆಂಬ ಆತಂಕವೂ ಇತ್ತು. ಈ ಕಾರಣದಿಂದ ಸಹಜವಾಗಿಯೇ ಆತ ಮದುವೆಗೆ ಅವಸರ ಪಡುತ್ತಿರುವುದು ಸ್ಪಷ್ಟವಾಗಿತ್ತು. ಆದರೆ ಅವನಿಗಿಂತ ಹಿರಿಯನಾಗಿ ನಾನು ಇದ್ದುದರಿಂದ ನಮ್ಮ ತಂದೆ-ತಾಯಿಯರು ಅವನ ಮದುವೆಗೆ ಸಮ್ಮತಿಸಲು ಅನಮಾನಿಸುತ್ತಿದ್ದರು. ಸಂದರ್ಭದ ಸೂಕ್ಷ್ಮಗಳೆಲ್ಲ ನನ್ನ ಅರಿವಿಗೆ ಬಂದಾದ ಮೇಲೆ ಈ ಸಮಸ್ಯೆಗೆ ನಾನು ಪರಿಹಾರವನ್ನು ಸೂಚಿಸಲೇ ಬೇಕಾದ ಅನಿವಾರ್ಯತೆಯುಂಟಾಯಿತು. ಒಂದೋ ನಾನು ತಕ್ಷಣ ಮದುವೆಯ ನಿರ್ಧಾರಕ್ಕೆ ಬಂದು ನನ್ನ ಸಹೋದರನ ದಾರಿಯನ್ನು ಸುಗಮಗೊಳಿಸಬೇಕು. ಇಲ್ಲವೆ ನನ್ನ ಮದುವೆಗೆ ಮುನ್ನ ಸಹೋದರನ ಮದುವೆಗೆ ಮುಕ್ತ ಮನಸ್ಸಿನಿಂದ ಒಪ್ಪಿಗೆ ತಿಳಿಸಿ ತಾಯಿ-ತಂದೆಯರನ್ನೂ ಒಡಂಬಡಿಸಬೇಕು. ನನಗೆ ಎರಡನೆಯ ದಾರಿಯೇ ಸುಲಭ ಮತ್ತು ಸೂಕ್ತವೆನ್ನಿಸಿತು. ಹಾಗೆಯೇ ಮಾಡಿದೆ. ಯಾವ ಅಡ್ಡಿ-ಆತಂಕಗಳೂ ಇಲ್ಲದೆ ದೈವಜ್ಞ ಬ್ರಾಹ್ಮಣ ಸಮುದಾಯದ ಯುವತಿ ‘ಮಂಜುಳಾ’ ನನ್ನ ಸಹೋದರನ ಪತ್ನಿಯಾಗಿ ನಮ್ಮ ತಾಯಿ ತಂದೆಯರ ಹಿರಿಯ ಸೊಸೆಯಾಗಿ ನಮ್ಮ ಮನೆ ತುಂಬಿದಳು. ಅಲ್ಲಿಂದ ಮುಂದಿನ ದಿನಗಳಲ್ಲಿ ನಮ್ಮ ತಾಯಿ ತಂದೆ ಬಂಧು ಬಳಗವೆಲ್ಲ ಸೇರಿ ನನಗೂ ಮದುವೆಗಾಗಿ ಒತ್ತಾಯಿಸಲು ಆರಂಭಿಸಿದ್ದರು. ಅಂದಿನ ದಿನಗಳಲ್ಲಿ ನಮ್ಮ ಜಾತಿಯಲ್ಲಿ ಸುಶಿಕ್ಷಿತ ಹೆಣ್ಣು ಮಕ್ಕಳು ದೊರೆಯುವುದು ಕಷ್ಟವಾಗಿತ್ತು. ಅಪರೂಪದಲ್ಲಿ ಕೆಲವು ಓದಿದ, ಓದುತ್ತಿರುವ ಯುವತಿಯರು ಕಾಣಿಸುತ್ತಿದ್ದರೂ ವಿವಾಹ ಸಂಬಂಧದ ಹೊಂದಾಣಿಕೆ ಸಾಧ್ಯವಾಗುತ್ತಿರಲಿಲ್ಲ. ಹಾಗೆಂದು ನಾನು ಮದುವೆಯ ತೀರ್ಮಾನಕ್ಕೆ ಬರದೆ ನಿರಾಳವಾಗಿ ಇರುವಂತೆಯೂ ಇರಲಿಲ್ಲ. ಇಂಥ ಸಂದರ್ಭದಲ್ಲಿ ನನ್ನ ನೆರವಿಗೆ ಬಂದವರು ನನ್ನ ದಾಯಾದಿ ಸಂಬಂಧಿಯಾದ ಹೂವಾ ವಂದಿಗೆ ಎಂಬ ಸದ್ಗೃಹಸ್ಥ. ಹುಬ್ಬಳ್ಳಿಯ ಟೆಲಿಕಾಂ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಹೂವಾ ವಂದಿಗೆಯವರು ಹುಬ್ಬಳ್ಳಿಯ ಗಣೇಶ ಪೇಟೆ ಎಂಬ ಭಾಗದಲ್ಲಿ ಒಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅವರಿಗೆ ಮೂವರು ಗಂಡು ಮಕ್ಕಳು. ಹುಬ್ಬಳ್ಳಿಯಲ್ಲಿ ಬೇರೆ ಬೇರೆ ಕಡೆಗಳಲ್ಲಿ ಖಾಸಗಿ ಕೆಲಸದಲ್ಲಿದ್ದರು. ಹೂವಾ ಅವರ ಧರ್ಮಪತ್ನಿ ತುಂಬಾ ಬಂಧು ವತ್ಸಲೆಯೆನ್ನಿಸಿದ ತಾಯಿಯಾಗಿದ್ದರು. ಯಾವಾಗಲೂ ಅವರಿಗೆ ನೆಂಟರಿಷ್ಟರು ಮನೆಗೆ ಬರುತ್ತಾ ಇರಬೇಕು. ಅವರಿಗೆ ರುಚಿ ರುಚಿಯಾದ ಅಡಿಗೆ ಮಾಡಿ ಉಣ್ಣಿಸುವುದರಲ್ಲಿ ಅತ್ಯಂತ ಪ್ರೀತಿ ಮತ್ತು ಸಂತೋಷ…! ಊರಿನ ಕಡೆಯಿಂದ ಯಾರೇ ಬಂದರೂ ಅವರ ಯೋಗಕ್ಷೇಮವನ್ನು ನೋಡಿಕೊಂಡು ಆತಿಥ್ಯ ನೀಡುವುದರಲ್ಲಿ ಧನ್ಯತೆಯನ್ನು ಕಾಣುತ್ತಿದ್ದರು. ಗಣೇಶ ಪೇಟೆಯಲ್ಲಿ ಹೂವಾ ವಂದಿಗೆಯವರ ಮನೆಯ ಆಚೀಚೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂರು, ಮರಾಠರು ನೆಲೆಸಿದ್ದರು. ಎಲ್ಲರೊಂದಿಗೆ ಹೂವಾ ವಂದಿಗೆಯವರ ಪರಿವಾರ ಅತ್ಯಂತ ಆಪ್ತವಾಗಿ ಹೊಂದಿಕೊಂಡಿದ್ದರು. ಅವರಿಗೆ ತುಂಬ ಹತ್ತಿರದಲ್ಲಿ ಒಂದು ಮರಾಠಾ ಭಾವಸಾರ ಕ್ಷತ್ರಿಯ ಕುಟುಂಬ ನೆಲೆಸಿತ್ತು. ಅದು ವಿಷ್ಣುರಾವ್ ಸುಲಾಖೆ ಎಂಬ ಗ್ರಹಸ್ಥರ ಮನೆ. ಅವರಿಗೆ ಮೂವರು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿದ್ದರು. ಮೂರು ಗಂಡು ಮಕ್ಕಳು ಜವಳಿ ವ್ಯಾಪಾರ ಮತ್ತು ಟೇಲರಿಂಗ್ ಕೆಲಸ ಮಾಡುತ್ತಿದ್ದರು. ಗಣೇಶ ಪೇಟೆಯಲ್ಲಿ “ರಾಯಲ್ ಟೇಲರ್ಸ ” ಎಂಬ ಅಂಗಡಿಯನ್ನು ಇಟ್ಟುಕೊಂಡು ಬಟ್ಟೆ ಮತ್ತು ಟೇಲರಿಂಗ್ ಮಟೀರಿಯಲ್ಸ್ಗಳನ್ನು ಬಾಂಬೆಯಿಂದ ಖರೀದಿಸಿ ತಂದು ಮಾರಾಟ ಮಾಡುತ್ತಿದ್ದರು. ತಂದೆ ವಿಷ್ಣುರಾವ್ ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನು ರಾಣಿಬೆನ್ನೂರಿನ ಇಬ್ಬರು ಸೋದರ ಅಳಿಯಂದಿರಿಗೆ ಕೊಟ್ಟು ಮದುವೆ ಮಾಡಿದ್ದರು. ಈ ಕುಟುಂಬದ ಎಲ್ಲ ಸದಸ್ಯರೂ ಹೂವಾ ವಂದಿಗೆಯವರ ಕುಟುಂಬದೊಡನೆ ಅನ್ಯೋನ್ಯವಾಗಿದ್ದರು. ಹಬ್ಬ ಹುಣ್ಣಿಮೆ ಇತ್ಯಾದಿ ವಿಶೇಷ ದಿನಗಳಲ್ಲಿ ಊಟೋಪಚಾರಗಳ ವಿನಿಮಯವೂ ನಡೆಯುತ್ತಿತ್ತು. ಧಾರವಾಡದಲ್ಲಿ ನಾನು ಎಂ.ಎ ಓದಿನ ದಿನಗಳಿಂದ ಹೂವಾ ವಂದಿಗೆಯವರ ಮನೆಗೆ ಭೇಟಿ ನೀಡುವ ಸಲಿಗೆ ಬೆಳೆಸಿಕೊಂಡಿದ್ದೆ. ವಿಶೇಷವಾಗಿ ಹೂವಾ ಅಂಕಲ್ ಪತ್ನಿ ಶಿವಮ್ಮ ಚಿಕ್ಕಮ್ಮ ಸೊಗಸಾಗಿ ಮಟನ್ ಮಸಾಲೆ ಮಾಡಿ ಬಡಿಸುತ್ತಿದ್ದುದು. ನನಗೆ ಹುಚ್ಚು ಹಿಡಿಸುವಷ್ಟು ಪ್ರಿಯವಾಗಿತ್ತು. ನಾನು ಉದ್ಯೋಗಿಯಾದ ಬಳಿಕ ನಮ್ಮ ಭೇಟಿ ಅಪರೂಪವಾಗಿತ್ತಾದರೂ ಎರಡು ತಿಂಗಳಿಗೊಮ್ಮೆಯಾದರೂ ಹುಬ್ಬಳ್ಳಿಗೆ ಹೋಗಿ ಬರುತ್ತಿದ್ದೆ. ಇದೇ ಹೂವಾ ವಂದಿಗೆಯವರ ಮನೆಯಲ್ಲಿಯೇ ನೆರೆಯ ವಿಶ್ವನಾಥರಾವ್ ಸುಲಾಖೆಯವರ ಕಿರಿಯ ಮಗಳು ನಿರ್ಮಲಾ ನನಗೆ ಪರಿಚಯವಾಗಿದ್ದಳು. ನಾನು ವಿವಾಹಕಾಂಕ್ಷೆಯಾದೆನೆಂಬುದು ತಿಳಿದಾಗ ಹೂವಾ ವಂದಿಗೆ ಅವರು ನಿರ್ಮಲಾ ಕುರಿತು ಸಣ್ಣ ಸೂಚನೆ ನೀಡದರು. ನನಗೂ ಸರಿಯೆನ್ನಿಸಿ ಅಂಕಲ್ ಮನೆಗೆ ಹೋದಾಗಲೆಲ್ಲ ನಿರ್ಮಲಾಳನ್ನು ನೋಡದೆ ಮರಳಿ ಬರುತ್ತಿರಲಿಲ್ಲ. ಆದರೆ ಅದೇ ಆಗ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ತರಗತಿಗೆ ಪ್ರವೇಶ ಪಡೆದ ನಿರ್ಮಲಾಳಿಗೆ ಮದುವೆಯ ಯೋಚನೆಯೂ ಇರಲಿಲ್ಲ. ಇನ್ನು ಒಂದು ವರ್ಷದ ಓದು ಮುಗಿದರೆ ಅವಳು ತನ್ನ ಓದು ಮುಗಿಸಿ ಡಿಪ್ಲೋಮಾ ಪಾಸು ಮಾಡುವ ನಿರೀಕ್ಷೆಯಲ್ಲಿ ಕಾದೆವು. ಆದರೆ ನಮ್ಮ ನಡುವಿನ ಸಂಬಂಧದ ಸುಳಿವು ಅವಳ ಪಾಲಕರ ಗಮನಕ್ಕೆ ಬಂದರೆ ನಮ್ಮ ವಿವಾಹ ಕಷ್ಟವೇ ಎಂಬ ಆತಂಕದಲ್ಲಿ ಅವಳು ವಿವಾಹಕ್ಕೆ ಸಮ್ಮತಿಸಿದಳು. ಈ ನಡುವೆ ನಮ್ಮ ವಿವಾಹ ಸಂಬಂಧ ನಡೆಯಲು ಅವಳ ಹಿರಿಯ ಅಕ್ಕ ಲಕ್ಷ್ಮಿ ಎಂಬುವವರು ಬೆಂಬಲವಾಗಿ ನಿಂತು ಧೈರ್ಯ ತುಂಬಿದರು. ೧೯೮೪ರ ಮೇ ತಿಂಗಳ ಒಂದು ದಿನ ನಾವು ಧಾರವಾಡದ ವಿವಾಹ ನೋಂದಣಿ ಕಛೇರಿಯಲ್ಲಿ ಕೇವಲ ನಾಲ್ಕಾರು ಜನ ಬಂಧುಗಳು-ಸ್ನೇಹಿತರ ಸಮ್ಮುಖದಲ್ಲಿ ವಿವಾಹ ಬಂಧನಕ್ಕೆ ಕಾಲಿಟ್ಟೆವು. ನಮ್ಮ ತಾಯಿ ತಂದೆಯರು ನನ್ನ ನಿರ್ಧಾರಕ್ಕೆ ಯಾವುದೇ ಆಕ್ಷೇಪವೆತ್ತಲಿಲ್ಲ. ಸುಶಿಕ್ಷಿತರಾದ ನಮ್ಮ ತಂದೆಯವರು ಸಂದರ್ಭದ ಸೂಕ್ಷ್ಮ ವನ್ನು ಅರಿತು ನನ್ನನ್ನು ಬೆಂಬಲಿಸಿದರು. ತಾಯಿಯೂ ಒಪ್ಪಿಕೊಂಡು ನಿರ್ಮಲಾಳನ್ನು ಸೊಸೆಯಾಗಿ ಸ್ವೀಕರಿಸಿದಳು. ಆರಂಭದ ಕೆಲವು ದಿನಗಳವರೆಗೆ ತೀವೃ ಪ್ರತಿರೋಧ ವ್ಯಕ್ತಪಡಿಸಿದ ನಿರ್ಮಲಾಳ ತವರು ಮನೆಯ ಪರಿವಾರ ಕಾಲಕಳೆದಂತೆ ನಮ್ಮ ಸ್ಥಿತಿ-ಗತಿಗಳನ್ನು ಅರ್ಥಮಾಡಿಕೊಂಡು ನಮ್ಮ ವಿವಾಹ ಸಂಬಂಧವನ್ನು ಒಪ್ಪಿಕೊಂಡರು. ನಮ್ಮನ್ನು ಹುಬ್ಬಳ್ಳಿಗೆ ಕರೆಸಿಕೊಂಡು ತಮ್ಮ ಸಮಾಜ ಬಂಧುಗಳ ಸಮ್ಮುಖದಲ್ಲಿ ವಿವಾಹ ವಿಧಿಗಳನ್ನು ಮತ್ತೊಮ್ಮೆ ಪೂರೈಸಿ ವರೋಪಚಾರ ಇತ್ಯಾದಿಗಳಿಂದ ನಮ್ಮನ್ನು ಗೌರವಿಸಿ ಬೀಳ್ಕೊಟ್ಟರು. ಮರಾಠಿ ಮಾತ್ರ ಭಾಷೆಯ ಇಡಿಯ ಪರಿವಾರವೂ ಅಂದಿನಿಂದ ಇಂದಿನವರೆಗೂ ಗೌರವಪೂರ್ವಕವಾಗಿಯೇ ನಮ್ಮನ್ನು ಬಾಂಧವ್ಯವನ್ನು ಮುಂದುವರೆಸಿದ್ದಾರೆ. “ಬೆಟ್ಟದ ನೆಲ್ಲಿಯ ಕಾಯಿ, ಸಮುದ್ರದೊಳಗಣ ಉಪ್ಪು” ಬೆರೆತಂತೆ ವಿಭಿನ್ನ ಸಂಸ್ಕೃತಿ-ಭಾಷೆ ಇತ್ಯಾದಿ ವ್ಯತ್ಯಾಸಗಳ ನಡುವೆಯೂ ಪರಸ್ಪರರನ್ನು ಅರ್ಥಮಾಡಿಕೊಂಡು ಗ್ರಹಸ್ಥ ಜೀವನ ನಡೆಸುವ ನಮ್ಮ ಸಂಕಲ್ಪ ಸಾಮಾಜಿಕವಾಗಿಯೂ ಗೌರವಾದರಗಳೊಂದಿಗೆ ಸಾಂಸಾರಿಕ ಜೀವನವನ್ನು ಮುನ್ನಡೆಸಲು ಸಾಧ್ಯವಾದದ್ದು ನಮ್ಮ ಅದೃಷ್ಟವೆಂದೇ ನಾನು ಭಾವಿಸಿದ್ದೇನೆ…. ರಾಮಕೃಷ್ಣ ಗುಂದಿ
You cannot copy content of this page