ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಕಾಡುವ ಹಾಡು

ಈ ಬಾರಿ ರಾಜ್ಯೋತ್ಸವ ವಿಶೇಷಕ್ಕೆ ಕಾಡುವ ಹಾಡು “ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ” ಸುಜಾತ ರವೀಶ್ ಕನ್ನಡ ಭಾಷೆ ನಾಡು ಸಂಸ್ಕೃತಿಯನ್ನು ಹೊಗಳುವ ವರ್ಣಿಸುವ ಬಿಂಬಿಸುವ ಹಾಡುಗಳು ಸಾವಿರಾರು. ಆದರೂ ಚಿಕ್ಕಂದಿನಲ್ಲಿ ಆಕಾಶವಾಣಿಯಲ್ಲಿ ಕೇಳುತ್ತಿದ್ದ ಈ ಹಾಡು ಅಂದಿನಿಂದಲೂ ಮನದಲ್ಲಿ ಬೇರೂರಿದೆ. ನಿಜವಾದ ಅರ್ಥದಲ್ಲಿ ಕಾಡುವ ಹಾಡಾಗಿದೆ .ಯಾವುದು ಅಂತೀರಾ ?ಅದೇ ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ ಸಂಗಮ ಚಿತ್ರದ ಈ ಹಾಡನ್ನು ವಿವಿ ಶ್ರೀನಿವಾಸ್ ಮತ್ತು ಸಿಕೆ ರಾದವರು ಹಾಡಿದ್ದಾರೆ ಬರೆದವರು ಸಿವಿ ಶಿವಶಂಕರ್ ಮತ್ತು ಸಂಗೀತ ಕೆಪಿ ಸುಖದೇವ್ ಚಿತ್ರ ಅಷ್ಟೇನೂ ಯಶಸ್ವಿಯಾಗಲಿಲ್ಲ ಅನ್ನಿಸುತ್ತೆ ಆದರೆ ಹಾಡು ಅಬ್ಬಾ ಸೂಪರ್ ಡೂಪರ್ !!!!!! ಸಿರಿವಂತ/ತೆ ಆದರೂ ಭಿಕ್ಷುಕ/ಕಿ ಯಾದರೂ ಕನ್ನಡ ನಾಡಲ್ಲೇ ಇರುವ ಅಭೀಷ್ಟ ವ್ಯಕ್ತಪಡಿಸಿ ಅದನ್ನು ವಿವಿಧ ರೀತಿಗಳಲ್ಲಿ ವರ್ಣಿಸುತ್ತಾ ಹೋಗುತ್ತದೆ ಈ ಹಾಡು .ವೀಣೆಯ ಗೆ ಶೃಂಗೇರಿ ಶಾರದೆಯ ಕೈಯಲ್ಲಿ ನಲಿವ ವೀರ ಖಡ್ಗ ವಾಗಿ ಚಾಮುಂಡಿಯ ಕೈಯಲ್ಲಿ ಹೊಳೆವ ಅಭಿಲಾಷೆ ಶರಣರ ವಚನದ ಗಾನ ಮಾಧುರ್ಯ ಹಂಪೆಯ ಕಲ್ಲುಗಳ ಗಾಂಭೀರ್ಯ ಇಲ್ಲಿ ನೆನೆಯ ಪಟ್ಟಿಗೆ ದಾಸ ಸಾಹಿತ್ಯವೇ ಮೊದಲಾದ ಕನ್ನಡ ಸಾಹಿತ್ಯವೇ ನನ್ನ ಆಸ್ತಿ ಎನ್ನುತ್ತದೆ ಪಾತ್ರ ಮೀರುವುದಿದೆ ಕಾವೇರಿ ತುಂಗೆಯ ಮಡಿಲಲ್ಲಿ ಎಂದು ಸಾರುತ್ತದೆ ಇಡೀ ಗೀತೆಯ ಮುಕುಟ ಪ್ರಾಯವೇ ಕಡೆಯ ಸಾಲುಗಳು ಮೈ ಜುಮ್ಮೆನ್ನಿಸಿ ಪರವಶಗೊಳಿಸುವ ಕಣ್ಣಂಚಿನಲ್ಲಿ ಹನಿಯುತ್ತದೆ ಭಾವೋತ್ಕಟತೆ ದಾರಿ ಮಾಡುತ್ತದೆ ಮರುಜನ್ಮ ಪಡೆಯುವುದಾದರೆ ಕನ್ನಡದ ಮಣ್ಣಲ್ಲಿ ಮಣ್ಣಾಗುವ ಮಹದಾಸೆ ಎಂತಹ ಉದಾತ್ತ ಚಿಂತನೆ ಇದಕ್ಕಿಂತ ಮಿಗಿಲು ಇನ್ನೇನಾದರೂ ಇದೆಯೇ ಇಂದಿನ ಪೀಳಿಗೆಯ ಬಹಳ ಜನ ಈ ಹಾಡು ಕೇಳಿರುವುದಿಲ್ಲ ಹೀಗಾಗಿ ನನ್ನ ಮೆಚ್ಚಿನ ಹಾಡಿನ ಪೂರ್ಣ ಸಾಹಿತ್ಯ ಹಾಗೂ ಲಿಂಕ್ ನಿಮಗಾಗಿ . ಓದಿ ಕೇಳಿ ನಿಮ್ಮ ಅಮೂಲ್ಯ ಅಭಿಪ್ರಾಯ ವ್ಯಕ್ತಪಡಿಸುತ್ತೀರ ಅಲ್ವಾ? ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ ಸಿರಿವಂತಳಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ. ಸಂಗೀತ ಕಲೆ ಮೆಚ್ಚಿ ವೀಣೆಯ ಪಿಡಿದೊಡೆ ಶೃಂಗೇರಿ ಶಾರದೆ ಮಡಿಲಲ್ಲಿ ನಲಿದೆ ವೀರ ಖಡ್ಗವ ಝಳುಪಿಸುವ ಧೀರ ನಾನಾದರೆ ಚಾಮುಂಡಾಂಬೆಯ ಕರದಲ್ಲಿ ಹೊಳೆವೆ. ಶರಣಗೆ ವಂದಿಪ ಶರಣೆ ನಾನಾದೊಡೆ ವಚನವೆ ಬದುಕಿನ ಮಂತ್ರವೆನುವೆ. ವೀರಗೆ ವಂದಿಪ ಶೂರ ನಾನಾದೊಡೆ ಕಲ್ಲಾಗಿ ಹಂಪೆಯಲ್ಲಿ ಬಹುಕಾಲ ನಿಲ್ಲುವೆ . ದಾಸರಿಗೆ ವಂದಿಪ ಅಭಿಮಾನಿಯಾದೊಡೆ ಕನ್ನಡ ಸಾಹಿತ್ಯ ನನ್ನಾಸ್ತಿ ಎನ್ನುವೆ ಪುಣ್ಯ ನದಿಯಲ್ಲಿ ಮೀಯುವೆನಾದೊಡೇ ಕಾವೇರಿ ತುಂಗೆಯರ ಮಡಿಲಲ್ಲಿ ಮೀಯುವೆ. ಇನ್ನೊಮ್ಮೆ ಮರುಜನ್ಮ ಪಡೆಯುವೆನಾದರೆ ಕನ್ನಡದ ಮಣ್ಣಲ್ಲಿ ಮಣ್ಣಾಗಿ ನಿಲ್ಲುವೆ. https://youtu.be/ycZUf5IbNug ===========================

ಕಾಡುವ ಹಾಡು Read Post »

ಅಂಕಣ ಸಂಗಾತಿ

ಕಾಡುವ ಹಾಡು!

ಒಲವೇ ಜೀವನ ಸಾಕ್ಷಾತ್ಕಾರ ಸುಜಾತ ರವೀಶ್ ಒಲವೇ ಜೀವನ ಸಾಕ್ಷಾತ್ಕಾರ ಒಲವೇ ಮರೆಯದ ಮಮಕಾರ ಚಿತ್ರ ಸಾಕ್ಷಾತ್ಕಾರ (೧೯೭೧) ಅಭಿನಯ ರಾಜಕುಮಾರ್ ಜಮುನಾ ಪೃಥ್ವಿರಾಜ್ ಕಪೂರ್ ಸಾಹಿತ್ಯ ಕೆ ಪ್ರಭಾಕರ ಶಾಸ್ತ್ರಿ ಸಂಗೀತ ಎಂ ರಂಗರಾವ್ . ಚಿತ್ರದ ನಾಯಕ ನಾಯಕಿ ಇನ್ನೇನು ಮದುವೆಯಾಗಲಿರುವವರು. ಅವರ ಮನದ ತುಂಬಾ ಪ್ರೀತಿಯ ಕನಸು ತುಂಬಿರುತ್ತದೆ. ಕಂಡದ್ದೆಲ್ಲ ಪ್ರೇಮದ ಪ್ರತಿರೂಪ ಆಗಿರುತ್ತದೆ .ಅಂತಹ ಸಂದರ್ಭದಲ್ಲಿ ಚಿತ್ರೀಕರಣಗೊಂಡಿರುವ ಈ ಹಾಡು ಕನ್ನಡದ ಚಿತ್ರ ರಸಿಕರ ಮನಸೂರೆಗೊಂಡಿದ್ದು ಆಶ್ಚರ್ಯವಲ್ಲ. ಪ್ರೇಮಿಗಳ ಪಾಲಿನ ಅಮರ ಗೀತೆಯಾಗಿಯೂ ಬಿಟ್ಟಿದೆ . ಪ್ರಕೃತಿಯ ವಿವಿಧ ಬಗೆಗಳಲ್ಲಿ ಒಲವಿನ ಸಾಕ್ಷಾತ್ಕಾರವನ್ನು ಕಾಣುತ್ತಾರೆ ಧುಮ್ಮಿಕ್ಕಿ ಹರಿಯುವ ಜಲಪಾತ ದುಂಬಿಯ ಹಾಡಿನ ಝೇಂಕಾರ ಘಮ್ಮನೆ ಹೊಮ್ಮುವ ಹೊಸ ಹೂವಿನ ಪರಿಮಳ ಎಲ್ಲದರಲ್ಲೂ ಒಲವೇ ಒಲವು .ಆದಿ ಹಾಗೂ ಅಂತ್ಯ ಪ್ರಾಸಗಳನ್ನು ಹೊಂದಿರುವ ಮೊದಲ ಮೂರು ಸಾಲುಗಳ ಮಾಧುರ್ಯವನ್ನು ಸವಿಯಲೇಬೇಕು. ಮುಂದೆ ವಸಂತನ ಕೋಗಿಲೆಯ ಇಂಚರ ಗಾಂಧಾರ ಭಾಷೆಯಲ್ಲಿ ಹಾಡುತ್ತಿರುವ ಹಕ್ಕಿಗಳ ಕಲರವ ಮತ್ತು ಮಲೆನಾಡಿನ ನಿಸರ್ಗ ಸೌಂದರ್ಯದಲ್ಲಿ ಪ್ರೇಮವನ್ನು ಕಾಣುತ್ತಾರೆ .ಎಲ್ಲಕ್ಕಿಂತ ಪ್ರಿಯವಾದದ್ದು ಕಡೆಯ ಪ್ಯಾರ. ಆಗ ಆಕಾಶವಾಣಿಯಲ್ಲಿ ಈ ಪ್ಯಾರಾವನ್ನು ಕತ್ತರಿಸಿ ಹಾಕುತ್ತಿದ್ದರು .ಹಾಗಾಗಿ ಈ ಸಾಲುಗಳು ಅಪರೂಪವೇ . ಒಲವಿನ ಪೂಜೆಗೆ ಒಲವೇ ಮಂದಾರ ಒಲವೇ ಬದುಕಿನ ಬಂಗಾರ ಒಲವಿನ ನೆನಪೇ ಹೃದಯಕೆ ಮಧುರ ಒಲವೇ ದೈವದ ಸಾಕ್ಷಾತ್ಕಾರ . ಈ ಸಾಲುಗಳು ಗೀತೆಗೆ ದೈವೀಕತೆಯನ್ನು ಒದಗಿಸಿ ಕೊಟ್ಟಿದೆ ಎಂದರೆ ತಪ್ಪಾಗಲಾರದು .ಉತ್ತಮ ಸಾಹಿತ್ಯ ಸಂಗೀತ ಇರುವ ಯಾವುದೇ ಗೀತೆ ಕನ್ನಡ ಜನರನ್ನು ಸೆಳೆಯುತ್ತಿದೆ ಎನ್ನುವುದಕ್ಕೆ ಇದು ಒಂದು ಉದಾಹರಣೆ. ಪಿಬಿ ಶ್ರೀನಿವಾಸ್ ಹಾಗೂ ಪಿ ಸುಶೀಲಾ ಅವರ ಮಧುರ ಕಂಠದಲ್ಲಿ ಹೊಮ್ಮಿರುವ ಈ ಸುಂದರ ಗೀತೆ ಎಷ್ಟು ಕೇಳಿದರೂ ತೃಪ್ತಿಯಾಗುವುದಿಲ್ಲ .ಮುಂಚೆ ಬರೀ ರೇಡಿಯೋ ಆಕಾಶವಾಣಿಯಲ್ಲಿ ಕೇಳಿ ನಂತರ ಧ್ವನಿ ಸುರುಳಿಗಳಲ್ಲಿ ತದನಂತರ ಸಿಡಿಗಳಲ್ಲಿ ಹಾಗೂ ಈಗ ಮೊಬೈಲ್ನಲ್ಲಿ ಸೇವ್ ಆಗಿರುವ ನನ್ನ ಅಚ್ಚುಮೆಚ್ಚಿನ ಗೀತೆ ಇದು .ನಮ್ಮ ಹಳೆಯ ಚಿತ್ರಗೀತೆಗಳ ಸೊಗಡೇ ಹಾಗೆ ಚಿನ್ನದ ಮಲ್ಲಿಗೆಗೆ ಪರಿಮಳ ಬೆರೆಸಿದ ಹಾಗೆ .

ಕಾಡುವ ಹಾಡು! Read Post »

ಅಂಕಣ ಸಂಗಾತಿ

ಶಾನಿಯ ಡೆಸ್ಕಿನಿಂದ…….

ನನ್ನ ಬಾಲ್ಯದ ದೀಪಾವಳಿ ಚಂದ್ರಾವತಿ ಬಡ್ಡಡ್ಕ ನನ್ನ ಪ್ರೀತಿಯ ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭ ಆಶಯಗಳು. ತಮ್ಮೆಲ್ಲರ ಬದುಕಲ್ಲಿ ನೆಮ್ಮದಿ, ಸುಖ-ಸಂತೋಷ ಸಮೃದ್ಧಿಗಳು ದೀಪಗಳ ಆವಳಿಯಂತೆ ಬೆಳಗಲಿ.) ಒಂದು ತಿಂಗಳ ಮುಂಚಿತವಾಗಿ ಬಾಳೆ ರೆಂಬೆಗಳನ್ನು ಒಣಹಾಕುವಲ್ಲಿಂದ ಆರಂಭವಾಗುತ್ತಿತ್ತು ದೀಪಾವಳಿ ತಯ್ಯಾರಿ. ಅದಾದ ಬಳಿಕ ಕಾಡುಮೇಡು ಅಲೆದು ಎಲ್ಲಿ ಯಾವ ಹೂವು ಅರಳಿದೆ, ಹೂವಿನಂದದ ಬಳ್ಳಿ ಹೊರಳಿದೆ ಎಂಬ ಹುಡುಕಾಟ. ಇವೆಲ್ಲವನ್ನು ಮನಸ್ಸಿನಲ್ಲೇ ಗಟ್ಟಿ ಮಾಡಿಕೊಂಡು ಬಲಿಯೇಂದ್ರನನ್ನು ಹೇಗೆ ಸಿಂಗಾರಮಾಡಬೇಕು ಎಂಬ ವಾದ-ವಿವಾದ, ವಾಗ್ವಾದೊಂದಿಗೆ ಆಗಿನ ನಮ್ಮ ಬಹುದೊಡ್ಡ ಆಚರಣೆಯ ದೀಪಾವಳಿ ಹಬ್ಬಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ಕೃಷಿಕ ಕುಟುಂಬದ ನಮಗಾಗ ಹಬ್ಬ ಅಂದರೆ ಅದು ದೀಪಾವಳಿ. ಕಾಡಿನಿಂದ ಹಾಲೆಮರವನ್ನು (ಇದನ್ನು ನಾವು ಬಲಿಯೇಂದ್ರ ಮರವೆಂದೇ ಹೇಳುವುದು) ದೀಪಾವಳಿ ಅಮವಾಸ್ಯೆಯಂದು ಬೆಳಗ್ಗೆ ಅಪ್ಪ ಕಡಿದು ತರುತ್ತಿದ್ದರು. ಅಂದು ರಾತ್ರಿ ಮರವನ್ನು ಮನೆಯೆದುರು ಅಂಗಳದಲ್ಲಿ ತುಳಸಿ ಕಟ್ಟೆಯ ಪಕ್ಕ ನೆಟ್ಟು ಪ್ರತಿಷ್ಠಾಪಿಸುವಲ್ಲಿಂದ ನಮ್ಮ ಹಬ್ಬ ಶುರು. ಈ ಮರವೇ ನಮ್ಮನಮ್ಮಗಳ ಶಕ್ತ್ಯಾನುಸಾರ, ಚಾಕಚಕ್ಯತೆಗನುಗುಣವಾಗಿ ಶೃಂಗಾರಗೊಂಡು ಬಲಿಯೇಂದ್ರನಾಗಿ ನಮ್ಮ ಮನೆ-ಮನದಂಗಳದಲ್ಲಿ ಹಬ್ಬದ ಮೂರ್ನಾಲ್ಕು ದಿನ ರಾರಾಜಿಸುತ್ತಿದ್ದುದು. ಕೆಲವು ಮನೆಗಳಲ್ಲಿ ಒಂಟಿ ಮರದ ಬಲಿಯೇಂದ್ರ. ಆದರೆ ನಮ್ಮದು ಜೋಡಿಮರಗಳ ಬಲಿಯೇಂದ್ರ. ಪುಟ್ಟದಾದ ಮರ (ಕೊಂಬೆ) ಒಂದು ದನದಹಟ್ಟಿಯ ಎದುರು. ಅದೇ ಗಾತ್ರದ ಇನ್ನೊಂದು ಮರ ಗದ್ದೆಯಲ್ಲಿ. ನೆಡುವ ಮರಗಳ ಮೇಲ್ತುದಿಯಲ್ಲಿ ರೆಂಬೆ ಒಡೆದ ಕವಲುಗಳನ್ನು ಅಲ್ಲಿ ಹಣತೆ ಕುಳಿತುಕೊಳ್ಳುವಂತೆ ಚೆನ್ನಾಗಿ ಕತ್ತರಿಸಿಯೇ ತರಲಾಗುತ್ತಿತ್ತು. ಮರದಲ್ಲಿ ಹಬ್ಬದ ಎಲ್ಲ ದಿನಗಳೂ ದೀಪ ಇರಿಸುತ್ತಿದ್ದದು ರೂಢಿ. ಮನೆಗಳೆದುರು ಪ್ರತಿಷ್ಠಾಪನೆಗೊಳ್ಳುವ ಬಲಿಯೇಂದ್ರಗಳ ಸಿಂಗಾರದ ವಿಚಾರದಲ್ಲಿ ನಾವು ನೆರೆಹೊರೆಯ ಮಕ್ಕಳಲ್ಲಿ ಅಘೋಷಿತ ಸ್ಫರ್ಧೆ. ಎಲ್ಲ ಮನೆಗಳಲ್ಲೂ ಬಲಿಯೇಂದ್ರನ ಸಿಂಗಾರಕ್ಕಾಗೇ ಹೂ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದೆವು. ಮೇಲೆ ಹೇಳಿದ್ದೇನಲ್ಲಾ ಬಾಳೆಯ ರೆಂಬೆಗಳನ್ನು ಒಣಹಾಕುವ ವಿಚಾರ; ಇದ್ಯಾಕೆಂದರೆ, ಕಾಡಿನ, ಊರಿನ ಹೂವುಗಳನ್ನು ಅಂದವಾಗಿ ಪೋಣಿಸಲು ಹಗ್ಗ(ನಾರು) ತಯಾರಿಸಲು. ಹೀಗೆ ಒಣಗಿದ್ದ ರೆಂಬೆಯನ್ನು ಸಪೂರಕ್ಕೆ ಸೀಳಿ, ನೀರಿನಲ್ಲಿ ಅದ್ದಿ ದಟ್ಟವಾಗಿ ಬಣ್ಣಬಣ್ಣದ ವಿವಿಧ ಗಾತ್ರಗಳ ಹೂ ಮಾಲೆಕಟ್ಟಿ ಬಲಿಯೇಂದ್ರನಿಗೆ ಅರ್ಪಿಸುತ್ತಿದ್ದೆವು. ಅಪ್ಪನದ್ದು ಬೇರೆಯೇ ಟ್ರಿಕ್. ಬಾಳೆಯನ್ನು ಕಡಿದು ದಿಂಡಿನೊಳಗಿನ ಬಿಳಿಬಿಳಿ ಪದರಗಳನ್ನು (ನಾವಿದಕ್ಕೆ ಬಾಳೆರಂಬೆ ಅಂತೇವೆ) ತೆಗೆದು ಒಂದು ಭಾಗವನ್ನು ಹಲ್ಲುಹಲ್ಲಾಗಿ ಕತ್ತರಿಸಿ ಬಿದಿರನ್ನು ಸೀಳಿ ಮಾಡಿದ ಸಲಾಕೆಗಳ ಆಧಾರದೊಂದಿಗೆ ಎರಡೂ ಬಲಿಯೇಂದ್ರ ಮರಕ್ಕೆ ಜೋಡಿಸಿ ಕಟ್ಟಿದಾಗ ಶ್ವೇತವರ್ಣದ ಅದರ ಗೆಟಪ್ಪೇ ಗೆಟಪ್ಪು. ಇದರ ಮೇಲೆ ಬಣ್ಣಬಣ್ಣದ ವಿವಿಧ ಪುಷ್ಪಗಳ ಮಾಲೆಗಳು ಕಂಗೊಳಿಸುತ್ತಿದ್ದವು ನೋಡಿ, ಪಕ್ಕದ ಮನೆಯ ಬಲಿಯೇಂದ್ರಗಳೆಲ್ಲ ನಮ್ಮ ಬಲಿಯೇಂದ್ರನೆದುರು ಸಪ್ಪೆಸಪ್ಪೆ. ಹಂದಿಬಳ್ಳಿ ಕಾಯಿ, ಕೇನೆ ಹೂವು,  ಕೋಳಿ ಜುಟ್ಟು, ಪಿಂಗಾರ(ಹೊಂಬಾಳೆ) ಹಬ್ಬಲ್ಲಿಗೆ, ಗೋರಟೆ, ದಾಸವಾಳ, ತೇರು ಹೂವು, ಚೆಂಡು ಹೂವು (ಇವುಗಳೆಲ್ಲ ಕಾಡಿನಲ್ಲಿ ಬೆಳೆಯುವ, ಊರಲ್ಲಿ ಬೆಳೆಸುವ ಸುಂದರ ಪುಷ್ಪಗಳು. ಇವುಗಳ ವೈಜ್ಞಾನಿಕ ಹೆಸರು ಗೊತ್ತಿಲ್ಲ, ಕ್ಷಮಿಸಿ)ಎಲ್ಲದರ ಮಾಲೆಯೊಂದಿಗೆ ಬಲಿಯೇಂದ್ರ ಜಿಗಿಜಿಗಿಯೊಂದಿಗೆ ಘಮಘಮ! ಬಲಿಯೇಂದ್ರನಿಗೆ ಪ್ರಭಾವಳಿಯನ್ನೂ ಇರಿಸುತ್ತಿದ್ದೆವು. ಅದು ನಮ್ಮ ಭಾಷೆಯಲ್ಲಿ ಪರ್ಬಾಳೆ ಆಗಿತ್ತು. ಬೆತ್ತದಲ್ಲಿ ನೇಯ್ದಿರುವ ಯು ಶೇಪಿನ ಪರ್ಮನೆಂಟ್ ಪ್ರಭಾವಳಿಯದು. ಹಬ್ಬವೆಲ್ಲ ಮುಗಿದು ಬಲಿಯೇಂದ್ರನ ವಿಸರ್ಜನೆಯ ವೇಳೆಗೆ ತಲೆಯಾಗಿದ್ದ ಪ್ರಭಾವಳಿಯನ್ನು ಮಾತ್ರ ಎತ್ತಿಟ್ಟು ಜೋಪಾನ ಮಾಡುತ್ತಿದ್ದೆವು. ತಲೆಯ ಭಾಗಕ್ಕೆ ಮಾತ್ರ ಹಳದಿ ಕೇಸರಿ ಮುಂತಾದ ವಿವಿಧ ಬಣ್ಣಗಳ ಚೆಂಡು(ಗೊಂಡೆ) ಹೂವು. ಇಷ್ಟು ಜತನದಿಂದ ಸಿಂಗರಿಸಿದ ಬಲಿಯೇಂದ್ರ ಬಿಸಿಲು-ಮಳೆಗೆ ನರಳಿದರೆ ನಮ್ಮ ಕರುಳು ಚುಳ್ ಎನ್ನುವುದಿಲ್ಲವೇ? ಈ ಕಾರಣಕ್ಕೂ ಮತ್ತು ಬಲಿಯೇಂದ್ರನ ಅಂದವನ್ನು ಹೆಚ್ಚಿಸಲೂ ಅರಳಿಸಿದ ಕೊಡೆಯ ಕಡ್ಡಿಗಳ ತುತ್ತತುದಿಯಲ್ಲಿ ತಾಜಾತಾಜಾ ಕೆಂಪಡಿಕೆಯನ್ನು ನೂಲಿನಲ್ಲಿ ಸುರಿದು ಕಟ್ಟಿ ಹ್ಯಾಂಗಿಂಗ್ ಥರ ಇಳಿಬಿಡುತ್ತಿದ್ದೆವು. ಆಹಾ….. ಇಂತಿಪ್ಪ ಬಲಿಯೇಂದ್ರನ ಸೌಂದರ್ಯವನ್ನು ತುಂಬಿಕೊಳ್ಳಲು ಆಗಿನ ಪುಟ್ಟ ಕಂಗಳು ಸಾಕಾಗುತ್ತಿರಲಿಲ್ಲ. (ಈಗವಾದರೆ ಕನ್ನಡಕವೂ ಸೇರ್ಪಡೆಗೊಂಡು ಕಣ್ಣು ನಾಲ್ಕಾಗಿದೆ, ಆದರೆ ಬಲಿಯೇಂದ್ರನಿಲ್ಲ!) ಅದೊಂದು ವರ್ಷ ಹೂವಿನ ಅಭಾವ ತೋರಿತ್ತು. ಆಗ ನಮ್ಮ ದೊಡ್ಡಕ್ಕನ ಐಡಿಯಾದಂತೆ ಬಣ್ಣದ ಕಾಗದವನ್ನು ಹೂವಿನ ಮಾಲೆಯಂತೆ ನೆರಿಗೆನೆರಿಗೆಯಾಗಿ ಹೊಲಿದು ಮಾಡಿದ್ದ ಸಿಂಗಾರ ನಮ್ಮೂರಲ್ಲಿ ಸೂಪರ್ ಹಿಟ್ ಆಗಿತ್ತು. ನಮ್ಮ ಬಲಿಯೇಂದ್ರನ ಸಿಂಗಾರ ಮುಗಿಸಿ ಪಕ್ಕದ ಸಿಂಗಮಾಮನ ಮನೆ ಬಲಿಯೇಂದ್ರನ ವೀಕ್ಷಣೆಗೆ ತೆರಳುತ್ತಿದ್ದೆವು. ಅವರ ಪುತ್ರ ಬೆಂಗಳೂರಿನಲ್ಲಿ ಇಂಜಿನೀಯರ್. ಆಗ ನಮಗೆ ಬೆಂಗಳೂರೆಂದರೆ ಅದು ಭಾರೀ ದೂರದ ದೇಶ. ಅವರು ಹಬ್ಬಕ್ಕೆಂದೇ ಸ್ಪೆಷಲ್ ಆಗಿ ಬರುವಾಗ ಪಟಾಕಿ, ತಿಂಡಿ ತಿನಿಸುಗಳನ್ನು ಖಡ್ಡಾಯ ತರುತ್ತಿದ್ದರು. ಗೆಳತಿ ಕುಮ್ಮಿ (ಅವರ ತಂಗಿ, ನನ್ನ ಜೀವನದ ಪ್ರಪ್ರಥಮ ದೋಸ್ತಿ) ಬೇರೆ ಅಣ್ಣ ನೂ……..ರು ರೂಪಾಯಿ ಪಟಾಕಿ ತಂದಿದ್ದಾರೆ ಎಂದಾಗ ಆಸೆ ಚಿಗುರದಿರುತ್ತದಾ? ನಮ್ಮಮನೆಯಲ್ಲೋ, ಅಪ್ಪ ಒಂದು ಬಾರಿ ಕಣ್ಣು ಕೆಕ್ಕರಿಸಿದರೆಂದರೆ ನಮ್ಮ ಪಟಾಕಿ(ಬೇಡಿಕೆಯ) ಸದ್ದು ಅಲ್ಲೇ ಅಡಗುತ್ತಿತ್ತು. ಅದು ಹೇಗೋ ಸಿಂಗತ್ತೆಗೆ ನನ್ನ ಪಟಾಕಿ ಆಸೆ ಗೊತ್ತಾಗಿ ಅವರ ಶಿಫಾರಸ್ಸಿನ ಮೇಲೆ ನಂಗೊಂದಿಷ್ಟು ಪಟಾಕಿ, ಒಂದು ಪ್ಯಾಕ್ ನಕ್ಷತ್ರ ಕಡ್ಡಿ ಸಿಗುತ್ತಿತ್ತು. ಆದರೆ ನನ್ನ ಗಾಯತ್ರಕ್ಕಳಿಗೆ ಮಾತ್ರ ನಮ್ಮ ಅಂಗಳದಿಂದಲೂ ಪಟಾಕಿ ಸದ್ದು ಸಿಡಿಯಬೇಕೆಂಬ ಆಸೆ. (ಈಗ ಯಾರಾದರೂ ಅವಳ ಬಳಿ ಹಬ್ಬಕ್ಕೆ ಪಟಾಕಿ ತಗೊಂಡ್ರಾ ಅಂದ್ರೆ; ಇಲ್ಲ, ನಮ್ಮ ಮನೆಯಲ್ಲಿ ತಂಗಿ ಇದ್ದಾಳೆ ಅಂತಾಳೆ) ಅದಕ್ಕಾಗಿ ನಾವು ನಾಡ ಪಟಾಕಿ ತಯ್ಯಾರಿಸುತ್ತಿದ್ದೆವು. ನಾವು ಮಾತ್ರವಲ್ಲ, ನಮ್ಮ ಮನೆಯ ಉತ್ತರಕ್ಕಿದ್ದ ವೆಂಕಪ್ಪಣ್ಣನ ಮನೆ, ಎದುರಿಗಿದ್ದ ಚಿಕ್ಕಪ್ಪನ ಮನೆ, ಆಚೆಗಿದ್ದ ಮಾಲಿಂಗಣ್ಣ- ಎಲ್ಲರ ಮನೆಯಲ್ಲೂ ಇದೇ ಪಟಾಕಿ. ಚೆನ್ನಾಗಿ ಬೆಳೆದ ಹಸಿ ಬಿದಿರಿನ ಒಳಗಿನ ಗಂಟುಗಳನ್ನು ಹಾರಿಸಿ, ಎರಡೂ ಬದಿ ಬಂದ್ ಇರಿಸಿ ಮೇಲೆ ಒಂದು ಕಡೆಯಲ್ಲಿ ತೂತು ಮಾಡಿ ಅದರ ಒಳಭಾಗಕ್ಕೆ ಸೀಮೆ ಎಣ್ಣೆ ಚಿಮುಕಿಸಿ ಬೆಂಕಿ ತೋರಿಸುವ ಮೂಲಕ ಚೆನ್ನಾಗಿ ಬಿಸಿ ಮಾಡಬೇಕು. ಬಿದಿರು ಕಾದ ಬಳಿಕ ಸಣ್ಣದಾಗಿ ಮೇಲ್ಮುಖವಾಗಿ ಮಾಡಿದ ತೂತಿನಲ್ಲಿ ಚೆನ್ನಾಗಿ ಊದಿ, ಒತ್ತಡ ತುಂಬಿ ಬೆಂಕಿಯ ಜ್ವಾಲೆಯನ್ನು ಹಾಯಿಸಿದರೆ ಭಯಂಕರ ಸದ್ದು ಹೊರಡುತ್ತಿತ್ತು. (ನಿಮ್ಮ ಈಗಿನ ಮಾಲೆ ಪಟಾಕಿಗಿಂತ ಒಳ್ಳೆಯ ಶಬ್ದವೇ ಹೊರಡುತ್ತಿತ್ತು) ಪಟಾಕಿ ಸದ್ದಿನೊಂದಿಗೆ ವಿವಿಧ ಮನೆಗಳಲ್ಲಿ ಬಿದಿರನ್ನು ಊದುವ ಶಬ್ದವೂ ಅನುರಣಿಸುತ್ತಿತ್ತು. ಇದರಲ್ಲೂ ಕಾಂಪಿಟೇಶನ್. ಬಿದಿರು ಊದಿದವರ ಪುಪ್ಪುಸದ ಕಥೆ ಬಲಿಯೇಂದ್ರನಿಗೇ ಪ್ರೀತಿ. ಮರುದಿನದ ಕಿವಿನೋವು ಹಬ್ಬದ ಸಡಗರದಲ್ಲಿ ಲೆಕ್ಕಕ್ಕೇ ಇರುತ್ತಿರಲಿಲ್ಲ. ಮುಸ್ಸಂಜೆ ಕಳೆದು ಕತ್ತಲಾಗುತ್ತಿರುವಂತೆ ಬಲಿಯೇಂದ್ರ ಕೂಗುವುದು ಇನ್ನೊಂದು ಸಂಭ್ರಮ. ಅದೇನು ಕಟ್ಟುಕಟ್ಟಳೆಯ ಶಬ್ದಗಳೋ ಅಂತು ಕೊನೆಯಲ್ಲಿ ‘ಹರಿಯೇ ಸಿರಿಯೇ ಕೂ….’ ಎಂಬುದು ಮಾತ್ರ ಸರಿಯಾಗಿ ಅರ್ಥವಾಗುತ್ತಿತ್ತು. ಒಟ್ಟಿನಲ್ಲಿ ಅದರ ತಾತ್ಪರ್ಯವೆಂದರೆ, ಕೆಟ್ಟದನ್ನು ಕೊಂಡೊಯ್ದು ಸಿರಿಯನ್ನು ತಾ ಎಂಬುದು ಬಲಿಯೇಂದ್ರನೊಡನೆ ಅರಿಕೆ. ಅರಿಕೆ ಮಾಡಿಕೊಳ್ಳುವುದು ಯಜಮಾನನ ಕರ್ತವ್ಯವಾದರೆ, ಕೊನೆಯಲ್ಲಿ ಕೂ…. ಎಂಬುದು ಮಾತ್ರ ಮನೆಯವರೆಲ್ಲರ ಕೋರಸ್. ಇದರಲ್ಲೂ ಯಾವ ಮನೆಯ ಕೂ….. ಎಂಬ ಕೂಗು(ಕಿರುಚು) ಹೆಚ್ಚು ಶಕ್ತಿಶಾಲಿ ಎಂಬ ಬಹುಮಾನರಹಿತ ಸ್ಫರ್ಧೆ. ಬಲಿಯೇಂದ್ರನ ಬಳಿ ಅರಿಕೆ ಮಾಡಿದ ಬಳಿಕ ಮನೆಯವರೆಲ್ಲರೂ ಸಾಲಾಗಿ ನಿಂತು ಪ್ರತಿಷ್ಠಾಪಿತ ಬಲಿಯೇಂದ್ರನಿಗೆ ಅವಲಕ್ಕಿ ಎರಚಿ ಅಥವಾ ಚಿಮ್ಮಿ ಪ್ರಾರ್ಥಿಸುವುದು ಕ್ರಮ. ನಾನಾಗ ನಾಲ್ಕೋ ಇಲ್ಲ ಐದರ ಹರೆಯದವಳು. ಅಪ್ಪ ಎಲ್ಲರ ಕೈಗೆ ಅವಲಕ್ಕಿ ಕೊಟ್ಟಿದ್ದರು. ಆಗೀಗ ನಮ್ಮಲ್ಲಿ ಅಗತ್ಯ ತೋಟದ ಕೆಲಸವೇನಾದರೂ ಇದ್ದರೆ ಬಂದು ಸಹಕರಿಸುತ್ತಿದ್ದ, ನೆರೆಮನೆಯ ಮೇಸ್ತ್ರಿ ಚೋಮಣ್ಣ ವಿಶೇಷ ಆಹ್ವಾನಿತರಾಗಿದ್ದರು. ಅಪ್ಪ ಅವರೊಂದಿಗೆ ಕಟ್ಟುಪಾಡಿನ ಮಾತುಗಳನ್ನು ಹೇಳುತ್ತಾ ಬಲಿಯೇಂದ್ರನಿಗೆ ಅರಿಕೆ ಮಾಡುತ್ತಿದ್ದರು. ಚೋಮಣ್ಣ ‘ಆಂ, ಹೌದೌದು, ಸರಿ’ ಎಂದೆಲ್ಲ ಹೇಳುತ್ತಾ ಅಪ್ಪನಿಗೆ ಸಾಥ್ ನೀಡುತ್ತಿದ್ದರು. ನಾನು ಆ ಸಮಯವನ್ನು ವ್ಯರ್ಥ ಮಾಡುವುದೇಕೆ ಎಂಬ ಉದ್ದೇಶದಿಂದಲೋ, ಅಥವಾ ಅದನ್ನು ತಿನ್ನಲು ಕೊಟ್ಟಿದ್ದಾರೆಂದೋ, ಸದ್ದಿಲ್ಲದೆ ಕೈಯಲ್ಲಿದ್ದ ಅವಲಕ್ಕಿಯನ್ನು ಮೆದ್ದಿದ್ದೆ. (ಅದು ಮನೆಯಲ್ಲೇ ಅಮ್ಮ ಕುಟ್ಟಿ ಮಾಡುತ್ತಿದ್ದ ರುಚಿಯಾದ ಅವಲಕ್ಕಿ) ಕೊನೆಯಲ್ಲಿ ಕೂ…. ಹೇಳುವ ವೇಳೆಗೆ ಎರಚಲು ನನ್ನ ಕೈಯಲ್ಲಿ ಅವಲಕ್ಕಿ ಇಲ್ಲದೆ, ಇಂಗು(ಅವಲಕ್ಕಿ)ತಿಂದ ಮಂಗಿಯಾಗಿದ್ದೆ. ಇನ್ನೊಂದು ಘಟನೆಯನ್ನೂ ಹೇಳಲೇ ಬೇಕು. ಮೂರು ದಿವಸ ಶೃಂಗಾರ ಪೂಜೆ ಎಲ್ಲ ಆದ ಮೇಲೆ ಕೊನೆಯ ದಿವಸ ಮುಂಜಾನೆಯೇ ಬಲಿಯೇಂದ್ರನ ವಿಸರ್ಜನೆ. ಅಂದರೆ ಮನೆಯ ಮುಂದೆ ರಾರಾಜಿಸುತ್ತಿದ್ದ ಜೋಡಿಮರವನ್ನು ಶೃಂಗಾರ ಸಮೇತ ಕಿತ್ತು ಹರಿಯುವ ನೀರಿನ ಬಳಿಯಲ್ಲಿ ಇರಿಸಲಾಗುತ್ತದೆ. ನಮ್ಮ ಬಲಿಯೇಂದ್ರನನ್ನು ಕೆಳಗಿನ ತೋಟದಲ್ಲಿ ಹರಿಯುವ ತೊರೆಯ ಬದಿಯಲ್ಲಿ ಇರಿಸುವುದು ವಾಡಿಕೆ. ಮೂರು ದಿವಸಗಳ ಕಾಲ ಬಲಿಯೇಂದ್ರನೇ ಸರ್ವಸ್ವವಾಗಿದ್ದು, ಅವಿನಾಭಾವ ನಂಟು ಉಂಟಾಗಿರುತ್ತಿದ್ದ ನನಗೆ ಬಲಿಯೇಂದ್ರನನ್ನು ಅಗಲುವುದು ಬಹಳ ಕಷ್ಟಕರ ವಿಚಾರವಾಗಿತ್ತು. ಬಲಿಯೇಂದ್ರ ವಿಸರ್ಜನೆಯ ಮಾತುಕತೆ ನಡೆಯುತ್ತಿದ್ದ ವೇಳೆ, ನಾನು ಅಪ್ಪನನ್ನು ಬಲಿಯೇಂದ್ರ ವಿಸರ್ಜನೆ ಬೇಡವೇ ಬೇಡವೆಂಬ ಹಠದೊಂದಿಗೆ ವಿನಂತಿಸಿಕೊಂಡಿದ್ದೆ. ಆ ಕ್ಷಣಕ್ಕೆ ‘ಆಯ್ತು ಮಗಾ, ಈಗ ನಿದ್ದೆ ಮಾಡು’ ಎಂದು ಸಮಾಧಾನಿಸಿದ್ದರು. ಆದರೆ, ಅದೇನೋ ಸಿಕ್‌ಸ್ತ್ ಸೆನ್ಸ್ ಇರಬೇಕು. ಮರುದಿನ ನಸುಕಿನಲ್ಲಿ ಎಚ್ಚರವಾಗಿತ್ತು. (ಇಲ್ಲವಾದರೆ ನಾನು ಕುಂಭಕರ್ಣಿ) ಎದ್ದ ತಕ್ಷಣ ಆಗ ನೇರ ಬಲಿಯೇಂದ್ರನ ಬಳಿಸಾರಿಯೇ ಕಣ್ಣು ಬಿಡುತ್ತಿದ್ದದ್ದು. ಅಂದು ಎದ್ದು ನೋಡುತ್ತಿರಬೇಕಿದ್ದರೆ, ಅಪ್ಪ ಮರವನ್ನು ಕೀಳುತ್ತಿದ್ದಾರೆ. ಪುಟ್ಟ ಹೃದಯಕ್ಕೆ ಎಷ್ಟು ನೋವಾಯಿತೆಂದರೆ, ಅದನ್ನಿಲ್ಲಿ ಹೇಳಲಾಗುತ್ತಿಲ್ಲ. ಪ್ರತಿಭಟಿಸಿದೆ. ಊಹೂಂ… ಪರಿಣಾಮ ಸಾಲದಾಯಿತು. ಅಪ್ಪ ಅವರ ಪಾಡಿಗೆ ಬಲಿಯೇಂದ್ರನನ್ನು ಬೆನ್ನ ಮೇಲಿರಿಸಿ ಶೋಭಾಯಾತ್ರೆ(ಒಬ್ಬರೇ) ಹೊರಟರು. ನಾನೂ ಸದ್ದಿಲ್ಲದೆ ಕಣ್ಣಲ್ಲಿ ನೀರು ಸುರಿಸುತ್ತಾ ಅವರ ಹಿಂದೆಯೇ ನಡೆದಿದ್ದೆ. ತೊರೆಬದಿಯಲ್ಲಿ ಮರವಿಳಿಸಿ ಹಿಂತಿರುಗಿ ನೋಡುವ ವೇಳೆ ನಿಯಂತ್ರಿಸಲಾಗದ ದುಃಖ ಉಮ್ಮಳಿಸುತ್ತಾ, ಬಿಕ್ಕುತ್ತಾ ನಿಂತಿದ್ದ ನನ್ನನ್ನು ಅಪ್ಪ ಹೆಗಲ ಮೇಲೆ ಕೂರಿಸಿ ಕರೆತಂದಿದ್ದರು (ಅವರಿಗೂ ದುಃಖವಾದದ್ದು ತಿಳಿಯುತ್ತಿತ್ತು). ಈ ಕತೆ ನಮ್ಮ ಮನೆಯಲ್ಲಿ ಎವ್ವರ್ ಗ್ರೀನ್. ಪ್ರತೀ ದೀಪಾವಳಿ ವೇಳೆ ಒಬ್ಬರಿಲ್ಲವಾದರೆ ಒಬ್ಬರು ನೆಪಿಸಿಯೇ ಸಿದ್ಧ. ನನ್ನ ಮೋಡರ್ನ್ ಮಕ್ಕಳಿಗೆ(ಅಕ್ಕನ) ಅದೊಂದು ನಗೆ ಸರಕು. ಕಾಡಿಗೆ ತೆರಳಿ ಮರತರಲು ಅಪ್ಪನಿಲ್ಲ. ಅಣ್ಣನಿಗೆ ಇಂಟರೆಸ್ಟ್ ಇಲ್ಲ. ಭತ್ತದಗದ್ದೆ ಇದ್ದಲ್ಲಿ ಅಡಿಕೆ ತೋಟವಿದೆ. ಹಟ್ಟಿ ತುಂಬ ಇರುತ್ತಿದ್ದ ದನಗಳ ಸಂಖ್ಯೆ ಕಮ್ಮಿಯಾಗಿದೆ. ಇಚ್ಚೆಯಂತೆ ನಮಗೆ ಹಬ್ಬಕ್ಕೆ ತೆರಳಲಾಗುತ್ತಿಲ್ಲ. ಹಬ್ಬಬಂದಾಗೆಲ್ಲ ಆ ಸಂಭ್ರಮ, ಹರ್ಷೋತ್ಕರ್ಷದ ನೆನಪಿನ ಹೂವುಗಳು ಮನದೊಳಗೆ ಬಿರಿಯುತ್ತವೆ, ಮುದಗೊಳ್ಳುತ್ತೇನೆ. ==============================================

ಶಾನಿಯ ಡೆಸ್ಕಿನಿಂದ……. Read Post »

ಅಂಕಣ ಸಂಗಾತಿ

ಅಂಕಣ

ನೋಟ! ಕಮಲಾ ಹೆಮ್ಮಿಗೆ ಮೂರು ಬೆಟ್ಟದ ತಪ್ಪಲ ಮದ್ಯದಲ್ಲಿ ಆಡುವ ಹಿಡಿದು ಮೇಯಿಸುತ್ತಿರಲಾಗಿ ಅಡ್ಡ ಬೆಟ್ಟದಲ್ಲಿ ದೊಡ್ಡ ಹುಲಿ ಹುಟ್ಟಿ ಹಾಯಿತ್ತು ಹಸುವ ಉದ್ದಿಹ ಬೆಟ್ಟದಲ್ಲಿ ಭದ್ರ ಗಜ ಬಂದು ಎಸೆದಿತ್ತು ಎತ್ತ ಮಧ್ಯದ ಬೆಟ್ಟದಲ್ಲಿತೋಳ ಕೋದಿತ್ತು  ಕರುವಿನ ಕರುಳ ಕಿತ್ತು ಹುಲಿ,ಗಜ,ತೋಳನ ಉಡ ನುಂಗಿದ್ದ ಕಂಡೆ ಗೋಪತಿನಾಥ ವಿಶ್ವೇಶ್ವರ ಲಿಂಗವನರಿಯಲಾಗಿ……      ಹನ್ನೆರಡನೆಯ ಶತಮಾನದ ತಳಮಟ್ಟದಿಂದ ಬಂದು ಜ್ಞಾನ ಪ್ರಸಾರ ಮಾಡಿದ  ಅಂಬಿಗರ ಚೌಡಯ್ಯ,ನುಲಿಯ ಚಂದಯ್ಯ,ಹೆಂಡದ ಮಾರಯ್ಯ, ಉರಿಲಿಂಗ ಪೆದ್ದಿ,ಕದಿರ  ರೇಮವ್ವೆ, ಕಾಳವ್ವೆ ಮುಂತಾದವರ ಗುಂಪಿನಲ್ಲಿ ಎದ್ದು ಕಾಣುವ ಹೆಸರು. ಈ ವಚನಕತೃ,ತುರುಗಾಹಿ ರಾಮಣ್ಣನವರದು ಒಂದರ್ಥದಲ್ಲಿ ಶರಣಚಳುವಳಿಯ ಮೊದಲ ದಲಿತ ಚಳುವಳಿಯೇ ಆಗಿದೆ ಎಂಬ ಡಾ.ಅರವಿಂದ ಮಾಲಗತ್ತಿಯವರ ಮಾತು ಅರ್ಥಪೂರ್ಣವಾಗಿದೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಸಕಲ ಜಾತಿಯವರೂ ಇದ್ದರು. ತಂತಮ್ಮ ಕಾಯಕ ಮಾಡುತ್ತಲೇಅನುಭಾವಿಗಳೂ ಆಗಿದ್ದುದು ವಿಶೇಷ. ಈ ವಚನದತಿರುಳು: ಕುರುಬ ರಾಮಣ್ಣ  ಎಂದಿನಂತೆ ಕುರಿಮಂದೆಯಲ್ಲಿದ್ದಾನೆ. ಮೂರು ಬೆಟ್ಟದ ತಪ್ಪಲು ಅವನಿರುವ ಸ್ಥಾನ.ಹಸು,ಎತ್ತು, ಕರುಗಳೂ ಹಸಿರ ಮೇಯುತ್ತಿವೆ ಒಂದು ಗುಡ್ಡದಿಂದ ನೆಗೆದ ಹುಲಿ ಹಸುವನ್ನು ತಿಂದು ಬಿಡುತ್ತದೆ.ಇನ್ನೊಂದು ಗುಡ್ಡದಿಂದಿಳಿದು ಬಂದ ಆನೆ ಎತ್ತನ್ನು ಎತ್ತಿಬಿಸಾಕುತ್ತದೆ.ನಡುವಿನ ಬೆಟ್ಟದ ತೋಳ ಕರುವಿನ ಕರುಳು ಹಿಡಿದು ಎತ್ತಿಒಯ್ದು ಬಿಡುತ್ತದೆ. ಇಂತಹ ದಾರುಣ, ಭೀಷಣ ಚಿತ್ರಕಂಡ ಕುರಿಗಾಹಿ ತನ್ನನ್ನು ಸಂತೈಸಿಕೊಳ್ಳುತ್ತಾನೆ: ಗೋಪತಿನಾಥನ ವಿಶ್ವೇಶ್ವರಲಿಂಗ ಅರಿವುಂಟಾದಾಗ,ಹುಲಿ, ಆನೆ. ತೋಳಗಳನ್ನುಅರಿವೆಂಬ ಉಡವು ನುಂಗುತ್ತದೆ. ಮೇಲಿನ ಶಬ್ದ ಚಿತ್ರವನ್ನುಬಿಡಿಸಿದರೆ-ತನುವು ಹುಲಿ,ಮನ ಸಾಧುಹಸು,ಮದಗಜ ಅಹಂನ ಸಂಕೇತ. ಎತ್ತಿನಂತ ದುರ್ಬಲ ಪ್ರಾಣಿಯನ್ನು ಸುಖಾಸುಮ್ಮನೆ ಎತ್ತಿಎಸೆಯುತ್ತದೆ.ನಮ್ಮಲ್ಲೇ ಇರುವ ಲೋಭವು, ನಮ್ಮಲ್ಲೇ ಇರುವ ಮುಗ್ದತೆಯ ಮೇಲೆ ದಾಳಿ ಮಾಡವುದು, ತೋಳಕರುವಿನ ದೃಶ್ಯವನ್ನು ಸಂಕೇತಿಸುತ್ತದೆ.  ಜ್ಞಾನದ ಸಂಕೇತವಾದ ‘ಉಡ’ವು ಮೇಲೆ ಹೇಳಿದ ಎಲ್ಲಪ್ರಾಣಿಗಳನ್ನೂ ನಿಯಂತ್ರಿಸುತ್ತದೆ.. ಕ್ರೋಧ,ಮದ, ಲೋಭ ಈ ಮೂರೂ ಅವಗುಣಗಳ್ನು ಜ್ಞಾನಿ ಮಾಡುವುದು ಅನುಭಾವದಿಂದ ಎಂಬುದು ಸರಳವಾದ ಈ ವಚನದ ಅರ್ಥ! ಇವೆಲ್ಲ ಮನದ ಕಾಳಿಕೆಗಳು. ‘ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ’ ಎಂದುಬಸವಣ್ಣನವರು     ಆರ್ತರಾಗಿಪ್ರಾರ್ಥಿಸಿದ್ದನ್ನು ಇಲ್ಲಿ ನೆನೆಯಬಹುದು. ಮಾನವ ಮನಸ್ಸು   ‘ಅರಿಷಡ್ವರ್ಗ’ ಗಳಿಂದತುಂಬಿ ತುಳುಕುತ್ತಿರುತ್ತದೆ.(ಕಾಮ,ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ) ಅರಿವಿನ ಶಸ್ತ್ರದಿಂದ,ಅವನ್ನು ಹೆರೆದು ಹಾಕಬೇಕು.ಧ್ಯಾನದಿಂದ ಅದನ್ನು ಸಾದಿಸಬಹುದು ಎಂಬುದು ಶರಣರ  ಇಂಗಿತ. ಇವೆಲ್ಲ ಸೆರಗಿನ ಕೆಂಡದಂತೆ-ನಮ್ಮಲ್ಲಿದ್ದು ನಮ್ಮನ್ನೇ ಸುಡುವಂತಹವು.ಋಜು ಮಾರ್ಗದಲ್ಲಿ ನಡೆವುದೊಂದೆ ಇದಕ್ಕೆ ಮದ್ದು. ಪಾಪವೆಸಗಿದರೂ ಪಶ್ಚಾತ್ತಾಪದ ಬೆಂಕಿಯಿಂದ ಅದನ್ನು ಸುಡಬಹುದು.ಕುರುಬ ವೃತ್ತಿಯ ತುರುಗಾಹಿ ರಾಮಣ್ನ ಕಂಡುಕೊಂಡ ಸತ್ಯವಿದು.. ಹನ್ನೆರಡನೆಯ ಶತಮಾನ, ಕನ್ನಡದ ‘ಕ್ರಾಂತಿಯುಗ’ ವೇ ಸರಿ. ಅಲ್ಲಮಪ್ರಭು, ಬಸವೇಶ್ವರರ ದಿವ್ಯ ಮಾರ್ಗದರ್ಶನದಲ್ಲಿ ಲೌಕಿಕವನ್ನು ಬಿಡದೆ, ಅಲೌಕಿಕದೊಟ್ಟಿಗೆ ಅನುಸಂಧಾನ  ಮಾಡಿದ ಶರಣರ  ಒಳಹೊರಗಿಲ್ಲದ ಬದುಕು, ವಿಸ್ಮಯ ಹುಟ್ಟಿಸುವಂತದ್ದು! ಓರ್ವ ಕುರಿಗಾಹಿಯ ಎದೆಯಲ್ಲಿ ಅರಿವಿನಬೆಳಕು ಕಂಡು, ಅದನ್ನಾತ,ತನಗೆ ಪರಿಚಿತವಾದ, ಆವರಣವನ್ನುಬಳಸಿಕೊಂಡು, ವಚನ ಕಟ್ಟಬೆಕೆಂದರೆ ಅದಕ್ಕೆಷ್ಟು ಸಾಧನೆ ಬೇಕು! ಅವನು, ಕಾಯದ ವೃತ್ತಿಯನ್ನುತಾತ್ವಿಕನೆಲೆಯಲ್ಲಿ ನೋಡಿದ್ದಾನೆ.ಬೆಡಗಿನ ಮಾತುಗಳಲ್ಲಿ ‘ನೀತಿ’ ಯನ್ನು ಹೇಳಿದ್ದಾನೆ.ಇದನ್ನಾತ ಜಪತಪ ಮಾಡದೆ ತನ್ನ ದೈನಂದಿನ ಕಾಯಕದಿಂದಲೇ ನಿರೂಪಿಸಿ ಉತ್ತಮ ಸಂದೇಶ ನೀಡಿರುವುದು ಮಹತ್ವದ ಸಂಗತಿ. ಡಾ.ಕಮಲಾ ಹೆಮ್ಮಿಗೆ                                                                               ಲೇಖಕರ ಪರಿಚಯ: ಕಮಲಾ ಹೆಮ್ಮಿಗೆಯವರು ಆಕಾಶವಾಣಿ, ದೂರದರ್ಶನದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.ಕನ್ನಡ ಸಾಹಿತ್ಯದ ಬಹುತೇಕೆ ಎಲ್ಲ ಪ್ರಭೇದಗಳಲ್ಲಿಯೂ ಕೈಯಾಡಿಸಿರುವ ಇವರು ಜನಪದ,ಅನುವಾದ,ವಿಮರ್ಶೆ,ಕಾವ್ಯ,ಕಥೆ ಕಾದಂಬರಿಗಳನ್ನು ರಚಿಸಿದ್ದಾರೆ.ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆಅನೇಕ  ಮನ್ನಣೆಗಳಿಗೆ ಬಾಜನರಾಗಿದ್ದಾರೆ.ಸವದತ್ತಿ ಎಲ್ಲಮ್ಮ ಹಾಗು ದೇವದಾಸಿಯರ ಕುರಿತಾದ ಸಂಶೋದನೆಗೆ ಪಿ.ಹೆಚ್.ಡಿ. ಪಡೆದಿದ್ದಾರೆ.ಸದ್ಯ ಕೇರಳದ ತಿರುವನಂತಪುರದಲ್ಲಿ ನೆಲೆಸಿದ್ದಾರೆ.

ಅಂಕಣ Read Post »

ಅಂಕಣ ಸಂಗಾತಿ

ಶಾನಿಯ ಡೆಸ್ಕಿನಿಂದ…

ಚಂದ್ರಾವತಿ ಬಡ್ಡಡ್ಕ ನಾನು- ಛೇ ನೀವು ಎಲ್ಲಿ ಹೋದ್ದು? ಸಚಿನ್ ಸರೀ ಹೊಡ್ದ, ನೋಡ್ಬೇಕಿತ್ತು… ಅಮ್ಮ- ಹೊಡ್ದನಾ…. ಯಾರಿಗೆ ಹೊಡ್ದಾ? ಆಚೆ ಪಾರ್ಟಿಯವನಿಗೆ ಹೊಡ್ದದ್ದದ್ದಾ…. ಯಾಕೆ ಹೊಡ್ದದ್ದು…? ಶ್ರೀಪತಿ- ಅಲ್ಲಮ್ಮಾ ರನ್ ಬಾರಿಸಿದ. ಅಮ್ಮ- ಹ್ಞಾ.. ಹಾಗಾ…. ನಾನು ಆಚೆ ಪಾರ್ಟಿಗೆ ಹೊಡ್ಡದ್ದದ್ದಾ ಅಂತ ನೆನ್ಸಿದೆ. ನಾನು- ಹ್ಹೋ…. ವೋ….. ವಿಕೆಟ್…. ಇಲ್ಲ ಥರ್ಡ್ ಅಂಪಾಯರ್ ಅಮ್ಮ- ಏನಾಯ್ತು….ಏನಾಯ್ತು… ನಾನು- ಸ್ವಲ್ಪ ಇರಿ…. ಧರ್ಡ್ ಅಂಪಾಯರ್‌ಗೆ ಹಾಕಿದ್ದಾರೆ ಅಮ್ಮ- ಅದ್ಯಾರು? ನಾನು- ವಿವರಿಸಿ ಎಂಬಂತೆ ಇವರತ್ತ ನೋಡಿದೆ. ಶ್ರೀಪತಿ- ಥರ್ಡ್ ಅಂಪಾಯರ್ ಅಂದ್ರೇ….(ಸಾಗಿತು ವಿವರಣೆ) ನಾನು- ಅಬ್ಬಾ… ನಾಟೌಟ್! ಅಮ್ಮ- ಇಲ್ವಾ ಸದ್ಯ. ಸ್ವಾಮೀ ದೇವರೇ… (ಮಿಕ್ಕಂತೆ ದೇವರನ್ನು ನಂಬದವರು) ಶ್ರೀಪತಿ- ಆಹಾ…. ಆರ್ರ್ಹಾ…… ಫೋರ್… ಯೇ… ಇಲ್ಲಲ್ಲ ಸಿಕ್ಸ್ ಅಮ್ಮ- ಅದೆಂಥ? ನಾನು- ಫೋರ್ ಅಂದ್ರೇ…..(ಫೋರ್- ಸಿಕ್ಸ್ ಬಗ್ಗೆ ಸಣ್ಣ ಉಪನ್ಯಾಸ) ನಾನು- ವ್ಹಾವ್….. ಹ್ಯೂಜ್ ಸಿಕ್ಸ್! ಶ್ರೀಪತಿ- ಮತ್ತೊಂದು ಸಿಕ್ಸ್ (ಅಷ್ಟರಲ್ಲಿ ನಾನು ಎದ್ದು ಟಾಯ್ಲೆಟ್‌ಗೆ ಹೋದೆ) ಅಮ್ಮ- ನೀನು ಎಲ್ಲಿ ಹೋದ್ದು…? ಅಂವ ಸುಮಾರು ಬೌಂಡರಿ ಹೊಡ್ದ. ಆದ್ರೆ ಆಚೆಯ ಹಸಿರು ಡ್ರೆಸ್ ಹಾಕಿದವರು ಗೆರೆ ದಾಟಲು ಬಿಡುವುದೇ ಇಲ್ಲ…… ಶ್ರೀಪತಿ- ಅಯ್ಯೋ ಅದು ಅವರ ಆಟ ಅಮ್ಮಾ. ಇವರು ಬೌಂಡರಿ ಹೊಡೆಯದಂತೆ ತಡೆಯೋದೆ ಅವರ ಕೆಲಸ ಮತ್ತು ಚಾಕಚಕ್ಯತೆ. ಅಮ್ಮ- ಹೌದಾ….. ಹಾಗಾ.. (ಅಷ್ಟರಲ್ಲಿ ಮೈದುನನ ಅಗಮನ) ಅಮ್ಮ-  ಹೇ… ನೀನು ಯಾಕೆ ಊಟಕ್ಕೆ ಬರ್ಲಿಲ್ಲಾ….. ಆಞ… ಅದೆಂಥ ಕೈಯಲ್ಲಿ….. ಈಗ ಊಟ ಮಾಡ್ತಿಯಾ…. ರಾತ್ರಿ ಊಟಕ್ಕಿದ್ದಿಯಾ….. ಬೇಗ ಬಾ ಮನೆಗೆ…. (ಹೀಗೆ ಮೈದುನ ಹಿಂದೆ ಹೋಗಿ ಒಂದು ಹದ್ನೈದು ನಿಮಿಷ ಹೋಯ್ತು) ಶ್ರೀಪತಿ: ಹೇ…. ನೋಡ್ನೋಡ್ನೋಡು ಹೇಗೆ ಡೈವ್ ಹೊಡ್ದ. ಎಕ್ಸೆಲಂಟ್ ಕ್ಯಾಚ್……. (ಅವರಿಗೆ ಇಷ್ಟವಾಗಿದ್ದ ಹಳೆಯ ಕ್ಯಾಚ್‌ಗಳ ವಿವರಣೆ…..) ಅಮ್ಮ: ಮರಳಿ ಬಂದು ಅವರ ಜಾಗದಲ್ಲಿ ಕುಳಿತು, ಏನಾಯ್ತು, ಎಷ್ಟಾಯ್ತು…? ನಂಗೆ ಟೆನ್ಷನ್ ಆಗ್ತದೆ… ನಾನು:  ಯಾಕೆ? ಅಮ್ಮ: ಇಂಡಿಯಾ ಸೋತರೇ….? ನಾನು: ಸೋತರೆ ಏನಾಯ್ತು? ಆಟವನ್ನು ಆಟವಾಗಿ ನೋಡಿ, ಯಾರು ಚೆನ್ನಾಗಿ ಆಡ್ತಾರೋ ಅವರೇ ಗೆಲ್ತಾರೆ. ಅಮ್ಮ: ನಂಗೆ ಟೆನ್ಷನ್ ಆಗ್ತದೆ…. ಶ್ರೀಪತಿ: ಈ ಅಮ್ಮನಿಗೆ ಹೀಗೆ ಬೇಡದ ವಿಷಯಕ್ಕೆ ಟೆನ್ಷನ್ ಮಾಡೇ ಬಿಪಿ ಜಾಸ್ತಿ ಆಗೋದೂ…….. ಅಮ್ಮ: ಲಲಿತ್ಮಾಯಿಗೆ ಫೋನ್ ಮಾಡ್ತೇನೆ…. ನಾನು:  ಯಾಕೆ? ಅಮ್ಮ: ಅವಳಿಗೆ ಕ್ರಿಕೆಟ್ ಚೆನ್ನಾಗಿ ಗೊತ್ತು. ಭಾರತ ಸೋಲ್ತದ ಗೆಲ್ತದಾಂತ ಅವಳು ಹೇಳ್ತಾಳೆ. ನಾನು ಇವರು ಮುಖ-ಮುಖ ನೋಡ್ಕೊಂಡೆವು (ವರ್ಷಗಳ ಹಿಂದೆ ಕ್ರಿಕೆಟ್ ನೋಡ್ತಿದ್ದಾಗ ಬರೆದಿದ್ದೆ. ಅರ್ಧಕ್ಕೆ ಬರೆದಿದ್ದ ಇದು ಭೂ(ಕಂಪ್ಯೂಟರ್)ಗತ ವಾಗಿತ್ತು. ಮತ್ತೆ ಹೇಗೆ ಮುಂದುವರಿಸಬೇಕಿದ್ದೆ ಎಂಬುದ ನಂಗೆ ಈಗ ಮರೆತು ಹೋಗಿದೆ. ಹೇಗಿತ್ತೋ ಹಾಗೇ ಪೋಸ್ಟ್ ಮಾಡೋಣ ಅನ್ನಿಸಿತು, ಹಾಗೇ ಮಾಡುತ್ತಿದ್ದೇನೆ) ಚಂದ್ರಾವತಿ ಬಡ್ಡಡ್ಕ. ಲೇಖಕರ ಪರಿಚಯ: ಚಂದ್ರಾವತಿ ಬಡ್ಡಡ್ಕ, ಪತ್ರಿಕೆ ಗಳಲ್ಲಿ ಪೋರ್ಟಲ್ ಗಳಲ್ಲಿ ಕೆಲಸ ಮಾಡಿ ಅನುಭವ . ಸದ್ಯಕ್ಕೆ ವೃತ್ತಿಪರ ಅನುವಾದಕಿ

ಶಾನಿಯ ಡೆಸ್ಕಿನಿಂದ… Read Post »

You cannot copy content of this page

Scroll to Top