ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ದಿಕ್ಸೂಚಿ

   ಭಯದ ಬಗ್ಗೆ ಭಯ ಬೇಡ      ಇಂದಿನ ಆಧುನಿಕ ಗಡಿಬಿಡಿ ಜೀವನ ಶೈಲಿಯು ನಮ್ಮ  ಮನಸ್ಸಿನ ಮೆಲೆ ಅನೇಕ ದುಷ್ಪರಿಣಮಗಳನ್ನು ಬೀರುತ್ತಿದೆ. ಅದರಲ್ಲಿ ಭಯವು ಪ್ರಮುಖವಾಗಿದೆ. ಭಯದ ಜೊತೆಗೆ ಉತ್ಸುಕತೆ ಹೆಚ್ಚುತ್ತಿದೆ. ಇವೆರಡೂ ಮಾನವನ ಸಹಜ ಗುಣಗಳಾದರೂ ಇತ್ತೀಚಿನ ದಿನಮಾನಗಳಲ್ಲಿ ಇವು ನಮ್ಮ ನಿಕಟ ಸಂಗಾತಿಗಳಾಗಿವೆ. ಮನಸ್ಸಿನಲ್ಲಿ ಭಯ ಮೂಡಿತೆಂದರೆ ಅದರಿಂದ ಹೊರಬರುವದು ಅಷ್ಟು ಸುಲಭದ ಮಾತಲ್ಲ.        ಮಕ್ಕಳು ಯಾವ ಯಾವದೆ ವಿಷಯಕ್ಕೆ ಭಯಗೊಳ್ಳುತ್ತವೆ. ಭಯ ಕೇವಲ ಮಕ್ಕಳಿಗೆ ಅಷ್ಟೇ ಅಲ್ಲ ದೊಡ್ಡವರಿಗೂ ಕಾಡುವ ಮಾನಸಿಕ ಸಮಸ್ಯೆ. ಭಯ ಅಂದರೇನು? ಅದು ಏಕೆ ಉಂಟಾಗುತ್ತದೆ ಅದನ್ನು ಹೇಗೆ ನಿವಾರಿಸುವದು ಎಂಬ ಪ್ರಶ್ನೆಗಳು ನಮ್ಮಲ್ಲಿ  ಅದೆಷ್ಟೋ ಬಾರಿ ಸುಳಿಯುತ್ತವೆ. ಭಯ ಅಂದರೆ ಏನು ಅಂತ ಹೇಳೋಕೆ ಆಗಲ್ಲ ಆದರೆ ಅದನ್ನು ಒಂದಿಲ್ಲೊದು ಸಂದರ್ಭದಲ್ಲಿ ನಾವು ಅನುಭವಿಸುತ್ತೇವೆ. ಇದು ಮನಸ್ಸಿನ ನಕಾರಾತ್ಮಕ ಭಾವನೆ.         ಭಯ ಎಂದರೇನು?         ನಮ್ಮ ಶಕ್ತಿಗೆ ಮೀರಿದ ಅಸಾಂಭವ್ಯ ವಿಚಾರವು ನಮ್ಮ ಮನಸ್ಸಿಗೆ ಹೊಕ್ಕಿತೆಂದರೆ ಆಗ ನಮ್ಮಲ್ಲಿ ನಾವು ಏನೋ ಕಲ್ಪಿಸಿಕೊಳ್ಳುತ್ತೇವೆ. ಇಂತಹ ವಾಸ್ತವವಲ್ಲದ ಕಲ್ಪನೆಗಳಿಗೆ ಒಂದು ಸ್ಪಷ್ಟ ಚಿತ್ರಣವನ್ನು ಸೃಷ್ಟಿಸಿಕೊಂಡು ನೋಡಲು ಶುರು ಮಾಡುತ್ತೇವೆ. ಆಗ ಮನದಲ್ಲಿ ಸಾವಕಾಶವಾಗಿ ಭಯವು ಆವರಿಸಕೊಳ್ಳತೊಡುಗತ್ತದೆ. ನಾವು ಸೃಷ್ಟಿಸಿಕೊಂಡ ಕಾಲ್ಪನಿಕ ಚಿತ್ರಣವು ಕ್ರಮೇಣ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ.          ಬಹಳಷ್ಟು ಬಾರಿ ಭಯವು ನಮ್ಮ ಭ್ರಮೆಯೇ ಆಗಿರುತ್ತದೆ. ಇಲ್ಲದ್ದನ್ನು ಇದ್ದ ಹಾಗೆ ತಿಳಿದುಕೊಳ್ಳುತ್ತೇವೆ. ಇದು ಒಂದು ಭಾವನಾತ್ಮಕ ಅನುಭವ. ಮನದಲ್ಲಿ ಆತಂಕ ಭಾವ ಸೃಷ್ಟಿ ಮಾಡಿ, ಭಾವನಾತ್ಮಕ ಅಡಚಣೆಯನ್ನುಂಟು ಮಾಡುತ್ತದೆ. ಭಯದಿಂದಾಗಿ ನಮ್ಮ ಜಾಗೃತ ಮನಸ್ಸು ನೋವನ್ನು ಅನುಭವಿಸುತ್ತದೆ. ನೋವಿನಿಂದ ಹೊರಬರಲು ನಮ್ಮ ಮನಸ್ಸು ಒದ್ದಾಡುತ್ತದೆ. ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ಎಚ್ಚರಿಕೆಯ ಸಂಕೇತವಾಗಿ ವರ್ತಿಸುತ್ತದೆ. ಇಲ್ಲವಾದಲ್ಲಿ ಮಾನಸಿಕ ವ್ಯಾಧಿಯಾಗಿ ಕಾಡುತ್ತದೆ.         ಭಯ ಉಂಟಾಗೋದು ಯಾವಾಗ?    ನಾಳೆ ಏನಾಗುತ್ತದೆಯೋ ಏನೊ ಎಂಬ ಚಿಂತೆಯು ಭಯವಾಗಿ ಪರಿವರ್ತನೆಯಾಗುತ್ತದೆ. ಯಾವುದೇ ವಿಷಯದ ಬಗೆಗೆ ನಿರಾಶಾದಾಯಕವಾಗಿ ಆಲೋಚಿಸುವದು, ಸುಮ್ಮನೆ ಏನನ್ನೋ ಇಲ್ಲದ್ದನ್ನು ಊಹಿಸಿಕೊಳ್ಳುವದು,ಹಿಂದೆ ನಡೆದು ಹೋದ ಕಹಿ ಘಟನೆಗಳನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುವದು, ನಾನೆಲ್ಲಿ ಸೋತು ಹೋಗುತ್ತೇನೊ ಎಂಬ ಸೋಲಿನ ಆತಂಕ, ನನಗಾರೂ ಇಲ್ಲ ನಾನು ಏಕಾಂಗಿ ಎಂಬ ಭಾವ, ಪರರು ನನಗಿಂತ ಮುಂದೆ ಹೋಗುತ್ತಿದ್ದಾರೆ ಎಂಬ ಮತ್ಸರ ಭಾವ ನಮ್ಮಲ್ಲಿ ಭಯವನ್ನು ಹುಟ್ಟು ಹಾಕುತ್ತವೆ. ನಾವು ಅಪಾಯದಲ್ಲಿ ದ್ದಾಗ ನಮ್ಮ ಜೀವನದ ಬಗ್ಗೆ ಹೆದರಿಕೆಯಾಗುತ್ತದೆ.        ಯಾವುದಕ್ಕೆ ಭಯಗೊಳ್ಳುತ್ತೆವೆ?     ಚಿಕ್ಕ ಪುಟ್ಟ ವಿಷಯಗಳಿಗೂ ಮನಸ್ಸು ಭಯಗೊಳ್ಳುತ್ತದೆ. ಇದು ಒಂದು ತೆರನಾದ ಮಾನಸಿಕ ಸಂಘರ್ಷ. ಇದಕ್ಕೆ ಫೋಬಿಯೋ ಅಂತಲೂ ಕರೆಯುತ್ತಾರೆ. ಕೆಲವರಿಗೆ ಕಾಡುಪ್ರಾಣಿಗಳೆಂದರೆ ಭಯ. ಇನ್ನೂ ಕೆಲವರಿಗೆ ಸಾಕು ಪ್ರಾಣಿಗಳಾದ ನಾಯಿ ಬೆಕ್ಕು ಕಂಡರೂ  ಭಯ. ಮಳೆ ಗುಡುಗು ಮಿಂಚಿಗೂ ಹೆದರುತ್ತಾರೆ. ವಿಚಿತ್ರೆಮದರೆ ಕೆಲವರು ಜನರನ್ನು ಕಂಡರೆ ಕಾಡು ಪ್ರಾಣಿ ನೋಡಿದ ತರ ಭಯಗೊಳುತ್ತಾರೆ.ಆಹಾರದ ಭಯ, ಎತ್ತರ ಜಾಗದ ಭಯ, ಬಸ್ಸಿನಲ್ಲಿ , ರೈಲಿನಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುವದೆಂರೆ ಭಯ ಇನ್ನು ಕೆಲವರು ನೀರು ಕಂಡರೆ ಹೆದರುತ್ತಾರೆ. ಅಂದರೆ ಭಯ ಎಲ್ಲ ಹಂತಗಳಲ್ಲಿ ಇದ್ದೇ ಇರುತ್ತದೆ.ಒಬ್ಬೊಬ್ಬರಿಗೆ ಒಂದೊಂದನ್ನು ಕಂಡರೆ ಭಯ. ಆಫೀಸಿಗೆ ಹೋದ ಗಂಡ, ಸ್ಕೂಲಿಗೆ ಹೋದ ಮಕ್ಕಳು ಮನೆಗೆ ಸರಿಯಾದ ಸಮಯಕ್ಕೆ ಮರಳಿ ಬರದಿದ್ದರೂ ಭಯಗೊಳ್ಳುವ ಪ್ರಸಂಗಗಳಿವೆ.               ನಾವು ಧೈರ್ಯವಂತರು ಎಂದು ಎಷ್ಟೋ ಜಂಭ ಕೊಚ್ಚಿಕೊಂಡರೂ ಭಯಗೊಳ್ಳುತ್ತೇವೆ ಎಲ್ಲಕ್ಕಿಂತ ದೊಡ್ಡ ಭಯ ಎಂದರೆ ಸಾವಿನ ಭಯ. ಈ ಭಯ ನಮ್ಮ ಅಸ್ತಿತ್ವಕ್ಕೆ ಸಂಭಧಿಸಿದ್ದುಎಲ್ಲಿ ನಮ್ಮ ಪ್ರಾಣಕ್ಕೆ ಸಂಚಕಾರ ಬರುತ್ತೇನೋ ಎಂದು ಎಷ್ಟೋ ಬಾರಿ ಭಯಗೊಳ್ಳುತ್ತೇವೆ.             ಭಯದ ಲಕ್ಷಣಗಳೇನು?      ಭಯವುಂಟಾದಾಗ ಮೈಂಡ್ ಫುಲ್ ಬ್ಲ್ಯಾಂಕ್ ಆಗಿರುತ್ತೆ ಯಾವುದೇ ವಿಚಾರಗಳು ಆಲೋಚನೆಗಳು ಹೊಳೆಯೊದಿಲ್ಲ. ಮೈಯೆಲ್ಲ ಬೆವರುತ್ತೆ.ಕೈ ಕಾಲುಗಳಲ್ಲಿ ಶಕ್ತಿಯಿಲ್ಲದಂತೆ ಭಾಸವಾಗುತ್ತೆ. ಮಾತೇ ಹೊರಡೊದಿಲ್ಲ.ಹೊರಡಿದರೂ ತೊದಲುತ್ತೆ. ಭಯದ ವಿಚಾರವನ್ನು ಹೊರತುಪಡಿಸಿ ಬೇರೆ ಯಾವ ವಿಚಾರಗಳು ಮನಸ್ಸಿನಲ್ಲಿ ಸುಳಿಯಲಾರವು. ವಿಚಾರಗಳೆಲ್ಲ ಅಸ್ಥವ್ಯಸ್ಥವಾಗುವವು ಅಂದುಕೊಂಡ ಯಾವ ಕೆಲಸವನ್ನು ಮಾಡಲು ಸಾಧ್ಯವಾಗುವದಿಲ್ಲ. ಸಣ್ಣ ಪುಟ್ಟ ವಿಷಯಗಳಿಗೆ ಬೆಚ್ಚಿ ಬೀಳುವದು ಅಥವಾ ಇದಕ್ಕೆ ತದ್ವಿರುದ್ಧವಾಗಿ ಗಂಭೀರ ವಿಷಯಗಳಿಗೂ ಪ್ರತಿಕ್ರಿಯಿಸದೆ ಮೌನವಾಗಿರುವದು.ಇವೆಲ್ಲ ಭಯದ ಮುಖ್ಯ ಲಕ್ಷಣಗಳು.            ಭಯ ತಡೆಯೋಕೆ ಏನು ಉಪಾಯ       ಪ್ರತಿಯೊಂದು ಭಯದಿಂದಲೂ ನಾವು ಮುಕ್ತರಾಗಬಹುದು. ಭಯ ತಡೆಯುವ ಉಪಾಯಗಳು ಕಠಿಣವೆನಿಸಿದರೂ ಅಸಾಧ್ಯವೇನಲ್ಲ. ನಾವು ಭಯಗೊಳ್ಳುತ್ತೇವೆ ಎನ್ನುವ ಸಂಗತಿಯನ್ನು ಒಪ್ಪಿಕೊಳ್ಳುವದು.ಯಾವ ವಿಷಯದ ಬಗ್ಗೆ ಭಯವಿದೆಯೋ ಎಂಬುನ್ನು ತಿಳಿದು ಅದನ್ನು ಮುಕ್ತವಾಗಿ  ಆತ್ಮೀಯರೊಂದಿಗೆ ಚರ್ಚಿಸುವದು.ಯಾವಾಗಲೂ ಕೆಲಸದಲ್ಲಿ  ತೊಡಗಿಸಿಕೊಳ್ಳುವದು. ಮೂಢನಂಬಿಕೆ ಮತ್ತು ಅಪಶಕುನಗಳನ್ನು ನಂಬದೆ ಇರುವದು. ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳುವದು. ಪರಿಸ್ತಿತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನಿರ್ಣಯ ಕೈಗೊಳ್ಳುವದು ಅನುಮಾನಕ್ಕೆ ಆಸ್ಪದ ಕೊಡದಿರುವದು ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ನಮಗೆ ಎಚ್ಚರಿಕೆಯಂತೆ ವರ್ತಿಸುತ್ತದೆ ಎಂದು ತಿಳಿದುಕೊಳ್ಳುವದು.ಭಯ ನಿವಾರಿರಿಸುವದಕ್ಕೆ ಪ್ರಯತ್ನಿಸಿ ತಜ್ಞ ವೈಜ್ಞರನ್ನು ಭೇಟಿ ಮಾಡುವದು. ನಿಜವಾದ ಧೈರ್ಯವನ್ನು ಮನಸ್ಸಿಗೆ ತುಂಬಿಕೊಳ್ಳುವದು ಆಶಾವಾದಿಯಾಗಿರುವದು. ನಾನು ಧೈರ್ಯವಂತ ಎಂದು ನನ್ನಷ್ಟಕ್ಕೆ ನಾವೇ ಹೇಳಿಕೊಳ್ಳುವದು ಎಂದರೆ ಸೆಲ್ಪ ಹಿಪ್ನಾಟಿಸಂ ಮಾಡಿಕೊಳ್ಳುವದು.         ವಿವೇಕಾನಂದರ ವಾಣಿಯಂತೆ ‘ನಿಮ್ಮಿಂದ ನೀವೇ ಉದ್ದಾರವಾಗಬೇಕು. ಸ್ನೇಹಿತನೆ ನಿನಗೆ ಯಾರೂ ಸಹಾಯ ಮಾಡಲಾರರು. ನಿನಗೆ ನೀನೇ ದೊಡ್ಡ ಶತ್ರು ನಿನಗೆ ನೀನೇ  ದೊಡ್ಡ ಮಿತ್ರ ಹಾಗಾದರೆ ನೀನು ಆತ್ಮವನ್ನು ದೃಢವಾಗಿ ಹಿಡಿದುಕೊ ಎದ್ದು  ನಿಲ್ಲು ಅಂಜಬೇಕಾಗಿಲ್ಲ. ನೀನು ಜಗತ್ತನ್ನೇ ಅಲ್ಲಾಡಿಸಲು  ಸಮರ್ಥನಾಗುವೆ. ಶಕ್ತಿಯ ರಹಸ್ಯ ವ್ಯಕ್ತಿ ಮತ್ತು ಆತನ ಜೀವನವೇ ಹೊರತು ಮತ್ತಾವುದು ಅಲ್ಲವೆಂಬುವದನ್ನು ನೆನಪಿನಲ್ಲಿಡಿ’.          ಸ್ವಾಮಿ ವಿವೇಕಾನಂದರ ವಿವೇಕಭರಿತವಾದ ಈ ವಾಣಿಯನ್ನು  ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತ ಕೇವಲ ದೈಹಿಕ ಆರೋಗ್ಯದ ಕಡೆಗೆ ಗಮನ ಕೊಡದೆ ಮಾನಸಿಕ ಆರೋಗ್ಯದ ಬಗೆಗೆ ಗಮನವಹಿಸಿ ಆಗಾಗ ತಜ್ಞ ವೈದ್ಯರನ್ನು ಭೇಟಿಯಾಗಿ ನಮ್ಮ ವರ್ತನೆಯಲ್ಲಾದ ಬದಲಾವಣೆಯ ಕುರಿತು ಚರ್ಚಿಸಿ, ಅವರ ಸಲಹೆಗಳನ್ನು ಪಾಲಿಸಿದರೆ, ಭಯ ಮಂಗಮಾಯವಾಗುವದು ಖಚಿತ. ************************** ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

ಅಂಕಣ ಸಂಗಾತಿ, ಮುಖಾಮುಖಿ

ಕವಿತೆ ಹುಟ್ಟುವುದು ಎರಡೇ ಕಾರಣಕ್ಕೆ ನೋವು ಬಿಕ್ಕಲಿಕ್ಕೆ,ನಲಿವು ಹಂಚಲಿಕ್ಕೆ ವಿಭಾ ಪುರೋಹಿತ ಮುಖಾಮುಖಿ  ೧. ಕತೆ, ಕವಿತೆಗಳನ್ನ ಏಕೆ ಬರೆಯುತ್ತೀರಿ ?             ಕೆಲವು ಕಾಡುವ ವಿಷಯಗಳು ತನ್ನಷ್ಟಕ್ಕೆ ತಾನೇ ಬರೆಸಿಕೊಂಡುಬಿಡುತ್ತವೆ. ಮನದಲ್ಲಿ ಚಿಮ್ಮಿಬಂದ ತೀವ್ರ ಭಾವನೆಗಳ ಅಲೆಗಳನ್ನು ಅಕ್ಷರಗಳಲ್ಲಿ ಹಿಡಿದಿಡುವ ಕ್ರಿಯೆಯೇ ಕವಿತೆಗಳಾಗಿವೆ. ಹೀಗೇ  ಹರಿದುಬಂದ ಪ್ರಬಲ , ಸಂವೇದನೆಗಳ ಕಂತೆಗಳು ಪದಗಳೊಂದಿಗೆ ಬೆಸೆದು ಕವನಗಳಾಗಿವೆ ಜೀವನದ ಅದೇ ರುಟೀನ್ ಕೆಲಸಕ್ಕೆ ಹೋಗುವದು,ಅಡುಗೆ,ಮನೆ,ಮಕ್ಕಳು ಅಂತ ಇದರಲ್ಲೇ ಮುಳುಗಿರುತ್ತೇವೆ. ಈ ಯಾಂತ್ರಿಕತೆಯಿಂದ ಹೊರಬರಲು ಚೂರು ಚಿನಕುರುಳಿಯಂತೆ ಸಹಾಯವಾಗುತ್ತದೆ ನನ್ನ ಬರವಣಿಗೆ. ಮನಸ್ಸು ಗೆಲುವಾಗಿರುತ್ತದೆ,ಬದುಕು ಕಳೆಕಟ್ಟಿದಂತಾಗುತ್ತದೆ. ವರಕವಿ ಬೇಂದ್ರೆಯವರು ಹೇಳಿದಂತೆ- ರಸವೇ ಜೀವನ , ವಿರಸ ಮರಣ, ಸಮರಸವೇ ಜೀವನ ಎಂತಾದರೆ ಕವನ ರಚನೆಯ ಗೀಳು ಜೀವನದಲ್ಲಿ ನನಗೆ ರಸವನ್ನು ತುಂಬಿವೆ. ೨. ಕತೆ, ಕವಿತೆ ಹುಟ್ಟುವ ಕ್ಷಣ ಯಾವದು ?   ಹಿರಿಯರು ಹೇಳಿದಂತೆ ಕವಿತೆ ಹುಟ್ಟುವುದು ಎರಡೇ ಕಾರಣಕ್ಕೆ ನೋವು ಬಿಕ್ಕಲಿಕ್ಕೆ,ನಲಿವು ಹಂಚಲಿಕ್ಕೆ. ನನಗೂ ಸಹ ಈ ಎರಡೂ ಸಮಯದಲ್ಲಿ ಕವಿತೆಗಳು ಹುಟ್ಟುತ್ತವೆ. ಹಾಗೂ ಯಾರಾದರು ಅಸಹಾಯಕರನ್ನು ನೋಡಿದಾಗ ಅವರ ಪರಿಸ್ಥಿತಿಗೆ ಕಿವಿಯಾದಾಗ ಭಾವಲೋಕದಲ್ಲಿ ತೇಲಿ ನಾನೇ ಅವರ ಸ್ಥಿತಿಯಲ್ಲಿದ್ದೇನೆ ಎಂದು ( ಪರಕಾಯ ಪ್ರವೇಶ ಎನ್ನಬಹುದು) ಮನ ಕಂಬನಿಮಿಡಿಯುತ್ತದೆ,   ಕವಿತೆ, ಕತೆ ಹುಟ್ಟುತ್ತದೆ. ಕೆಲವು ಕವಿತೆಗಳು ಮಿಂಚಿನ ಹಾಗೆ ಬಂದು ಬರೆಸಿಕೊಳ್ಳುತ್ತವೆ. ಇನ್ನೂ ಕೆಲವು ಒಂದೆರಡು ದಿನ ಮನಸ್ಸಿನಲ್ಲಿ,ಬುದ್ಧಿಯಲ್ಲಿ ಮಂಥನ ಚಿಂತನಗೊಂಡು ಕವಿತೆಗಳ ನವನೀತ ರೂಪುಗೊಳ್ಳುತ್ತದೆ. ಎಷ್ಟೋಸಲ ಹೆಣ್ಣಿನ ಸಂವೇದನೆಗಳಿಗೆ ಪ್ರತಿವಾದಿಯಾಗಿ ನಿಲ್ಲುವ ಘಟನೆಗಳು ಎದುರಾದಾಗ ಕವಿತೆಗಳು ಸೃಷ್ಟಿಯಾಗಿದ್ದಿವೆ. ಎದೆತುಂಬ ಒಲವು ತುಳುಕುವಾಗ ,ನಿಸರ್ಗ ರಮ್ಯತೆಯನ್ನು ಕಂಡಾಗ,ಅಂತಃಕರಣ ಒಳಹರಿವನ್ನು ಅನುಭವಿಸಿದಾಗ ಅನೇಕ ರಚನೆಗಳು ಜನ್ಮತಳಿದಿವೆ. ೩. ನಿಮ್ಮ ಕತೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ?  ಸ್ವೇದನೆಯೇ ಹೆಚ್ಚಾಗಿ ಕಂಡುಬರುತ್ತದೆ. ಸಾಮಾಜಿಕ ವ್ಯವಸ್ಥೆ, ಅಸಮಾನತೆ,ಮನುಷ್ಯನ ಹಣದ ಮೋಹ ಇವೆಲ್ಲವು ವಿಷಯವಾಗುತ್ತವೆ. ಹೆಣ್ಣಿನ ಅನಾದರ,ಅಗೌರವ ನನ್ನನ್ನು ತಲ್ಲಣಗೊಳಿಸುತ್ತವೆ. ಸದಾ ಕಾಡುವ ಪಾತ್ರಗಳು ದ್ರೌಪದಿ,ಭಾನುಮತಿ,ಕುಂತಿ….. ಇತ್ಯಾದಿ. ಪ್ರಸ್ತುತವಾಗಿ ಕಾಡುವದೇನೆಂದರೆ ದೊಡ್ಡ ದೊಡ್ಡ ನಗರಗಳಲ್ಲಿ ಹೆಚ್ಚಿನ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಅಲಂಕರಿಸಿರುವ ಹೆಣ್ಣು ಗಂಡಿಗೆ ಸರಿಸಮನಾಗಿ ದುಡಿಯುತ್ತಿದ್ದಾಗಲೂ   ವಿವಿಧ ರೀತಿಯ ಸಂಕಟಗಳನ್ನು ಅನುಭವಿಸುವದು. ಮಾನಸಿಕವಾಗಿಯೂ ದೈಹಿಕವಾಗಿಯೂ ಅವಳ ಗೋಳು ಹೇಳತೀರದ್ದು. ಇದು ಒಂದು ಮುಖವಾದರೆ ಇನ್ನೊಂದು ಕಡೆ ಅನಕ್ಷರಸ್ಥರ ಗೋಳು , ಮನೆಗೆಲಸ ಮಾಡುವವರು, ಗಾರೆ ಕೆಲಸದವರು ವಿದ್ಯೆಗಳಿಸಿಲ್ಲವೆಂದು ಈ ಸಂಕಷ್ಟಗಳು ಎದುರಾಗಿವೆ ಎಂದು ಗೊಣಗುತ್ತಾ ಇರುತ್ತಾರೆ. ವ್ಯತ್ಯಾಸ     ಕಂಡುಬರುವದಿಲ್ಲ ಇಬ್ಬರೂ ನೋವಿಗೆ ಮೈ ಒಡ್ಡಿಕೊಂಡೇ ದುಡಿಯುತ್ತಾರೆ. ೪. ಕತೆ, ಕವಿತೆಗಳಲ್ಲಿ ಬಾಲ್ಯ ಹರೆಯ ಇಣುಕಿದೆಯೆ ?  ಖಂಡಿತವಾಗಿಯೂ ಇಣುಕಿದೆ. ಬಾಲ್ಯದ ಊರು,ಕಲಿತ ಶಾಲೆ, ಅಜ್ಜಅಜ್ಜಿ, ಗೆಳೆಯರು ಜೀವಮಾನವಿಡೀ ಮರೆಯಲಾರದ ನೆನಪಿನ ಜಾದೂಪೆಟ್ಟಿಗೆಗಳು : ತೆಗೆದರೆ ಒಂದೊಂದಾಗಿ ಹೊರಬಂದು ಹೃನ್ಮನಗಳನ್ನು ತಣಿಸುತ್ತವೆ. ಬಾಲ್ಯ ಎಲ್ಲರ ಜೀವನದ ಅದ್ಭುತ ಘಟ್ಟ.  ಓ…. ಆ ಸುಂದರ ನೆನಪುಗಳ ಸೆಳೆತ ಮನಸ್ಸಿನ ಶೂನ್ಯತೆ,ಖಿನ್ನತೆಯ ಭಾವಗಳಿಂದ ಬಡಿದೆಬ್ಬಿಸಿ ಸಂತಸ ತುಂಬುತ್ತವೆ. ಕ್ಯಾಮರಾ ಕಣ್ಣಲ್ಲಿ ಚಿತ್ರಗಳು ಶಾಶ್ವತವಾದಂತೆ ಈ ಸುಂದರ ನೆನಪುಗಳ ತೊರೆಗಳನ್ನು ನನ್ನ ಹೃದಯದಲ್ಲಿ ಹಾಗೂ ಆತ್ಮದಲ್ಲಿ ಸೆರೆಹಿಡಿದು  ಅವುಗಳಿಗೆ ಅಮರತ್ವವನ್ನು ನೀಡಿದ ಹಲವಾರು ಕವಿತೆಗಳಿವೆ. “ಹುಚ್ಚು ಖೋಡಿ ಈ ವಯಸು ಅದು ಹದಿನಾರರ ವಯಸು”  ಎಂದು ಹಾಡಿದ ಹಿರಿಯಕವಿಯ ಸಾಲುಗಳಂತೆ ನನ್ನ ಕವಿತೆಗಳು ಕೆಲವು ಸಾಕ್ಷಿಯಾಗಿವೆ. ೫. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ಪ್ರತಿಕ್ರಿಯೆ ಏನು ?   ಮೊದಲಿನಿಂದಲೂ ರಾಜಕೀಯ ನನಗೆ ನಿರಾಸಕ್ತಿಯ ವಿಷಯ. ರಾಜಕೀಯ ದೊಂಬರಾಟವನ್ನು ನಿರ್ಭಿಡೆಯಿಂದ ಬಯಲಿಗೆಳೆಯುವ ಅನೇಕ ಬರಹಗಳು ತಂಡೊಪತಂಡವಾಗಿ ಬರುತ್ತವೆ. ಆದರೂ ಇದು ಯಾವಾಗಲೂ ಹಗ್ಗಜಗ್ಗಾಟದ ಮೈದಾನವೇ ಸರಿ.ಲೋಕಕಲ್ಯಾಣಾರ್ಥವಾಗಿ  ಸೇವೆ ಮಾಡುವವರು ಈಗ ವಿರಳ. ದೇಶಭಕ್ತಿಯನ್ನು ಬಹಿರಂಗವಾಗಿ ಪ್ರದರ್ಶನ ಮಾಡುತ್ತಾ ಅಂತರಂಗದಲ್ಲಿ ಸ್ವಾರ್ಥವೇ ತುಂಬಿಕೊಂಡಿರುವರು ಹೆಚ್ಚಾಗಿದ್ದಾರೆ. ಅಪರೂಪಕ್ಕೆ ಒಂದಿಬ್ಬರು ನಿಜವಾದ ದೇಶಸೇವಕರಿದ್ದರೂ ಅವರ ಸುತ್ತ ಕಾಲೆಳೆಯುವ ಅಮೂರ್ತ ಕೈಗಳು ಬೇಕಾದಷ್ಟು ಇರುತ್ತವೆ. ಪಕ್ಷಾತೀತವಾದ ಅಪ್ಪಟ ಸೇವಾಮನೋಭಾವವುಳ್ಳ ನೇತಾರರು ಇಂದಿನ ಅಗತ್ಯ. ೬. ಧರ್ಮ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?  ವಿಶ್ವದ ಸಕಲ ಚರಾಚರಗಳ ಚಲನೆಗೆ ಯಾವುದೋ ಒಂದು ಶಕ್ತಿ ಕಾರಣ . ಆ ಆಮೂರ್ತ ಅವ್ಯಕ್ತ ಅನನ್ಯ ಶಕ್ತಿಯೇ ದೇವರು ಎಂದು ನನ್ನ ಭಾವನೆ.ಶಕ್ತಿ ನಿರಂತರ ಹಾಗೇ ದೇವರು ನಿರಂತರ. ವಿಗ್ರಹ ಆರಾಧನೆಯಲ್ಲಿ ನಂಬಿಕೆಯಿಲ್ಲ.ಮೌಢ್ಯ ಆಚರಣೆಗಳಿಗೆ ವಿರೋಧವಿದೆ.  ಪ್ರೇಮ,ಜ್ಞಾನ,ಧ್ಯಾನ ಇವುಗಳ ತ್ರಿವೇಣಿಸಂಗಮವೇ ಧರ್ಮ.  ಭಾರತೀಯತೆಯೇ ಶ್ರೇಷ್ಠ ಧರ್ಮ. ೭. ಪ್ರಸ್ತುತ ಸಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನೆನಿಸುತ್ತದೆ ?   ನಾವು ಹಿಂತಿರುಗಿ ನಡೆದು ಬಂದ ದಾರಿಯನ್ನು ಅವಲೋಕಿಸಿದಾಗ ನಮ್ಮ ಗಮನಕ್ಕೆ ಬರುವ ವಿಷಯವೆಂದರೆ ನಮ್ಮ ಪರಂಪರೆಯಲ್ಲಿ ಹಾಗೂ ಸಮಷ್ಟಿಪ್ರಜ್ಞೆಯಲ್ಲಿ ಅನೇಕ ಪುರಾತನ ವಿಚಾರಗಳು   ಪದ್ಧತಿಗಳು ನಡೆ-ನುಡಿಗಳು ತಾವೇ ತಾವಾಗಿ ಕಳಚಿ ಹೋಗಿವೆ. ಹಲವು ಹೊಸತತ್ವಗಳು ಅಸ್ತಿತ್ವಕ್ಕೆ ಬಂದಿವೆ. ” ಬದಲಾವಣೆ ಪ್ರಕೃತಿಯ ನಿಯಮ” ಅಲ್ಲವೆ ? ಇಂದು ವಿಜ್ಞಾನದ ಪ್ರಗತಿಯಿಂದಾಗಿ      ಜಗತ್ತೆಲ್ಲವೂ ಒಂದಾಗುತ್ತಿರುವ ಹಾಗೂ ಜಾಗತೀಕರಣದ ನೂತನ ಬಿರುಗಾಳಿ ಬೀಸುತ್ತಿರುವಾಗ ಹೊಸ ಚಿಂತನ,ಹೊಸ ಜೀವನಶೈಲಿ,ಹೊಸ ಆಲೋಚನೆಗಳು  ನಮ್ಮ ಬದುಕಿನಲ್ಲಿ ಹೊಸ ಸವಾಲುಗಳನ್ನು ಹುಟ್ಟಿಸುತ್ತವೆ. ಹೊಸತನದ ತೆರೆಗಳ ಅಬ್ಬರ !  ಜಾಗರೂಕತೆಯಿಂದ ಯಾವ ತತ್ವವನ್ನು ಸ್ವೀಕರಿಸಬೇಕು ? ಎಂಬ ಪ್ರಶ್ನೆಗೆ  ಉತ್ತರ ಹುಡುಕುವಾಗ ಮಹಾಮಾರಿ ಕೊರೋನಾ ಕಲಿಸಿದ ಪಾಠವನ್ನು ಮರೆಯುವಂತಿಲ್ಲ. ಪ್ರಜ್ಞಾಪೂರ್ವಕವಾಗಿ ಚಿಂತನ ಮಂಥನ ಮಾಡಿ ಹೊಸತತ್ವದಲ್ಲಿ ಯಾವುದು ಸತ್ವಹೀನವೋ  ಅದನ್ನು ಬದಿಗೊತ್ತಿ  ಪುಷ್ಟಿಯಿರುವ ತತ್ವಗಳನ್ನು ಮಾತ್ರ ಆಯ್ದುಕೊಳ್ಳಬೇಕಿದೆ. ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು, ಒಲವು ಹಾಗೂ ಗೌರವವಿದೆ. ೮. ಸಾಹಿತ್ಯವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಸುವಿರಿ ?   ಇದರ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಪಂಥ ರಾಜಕೀಯವಿದೆ ಎಂದು ಆಗಾಗ ಕೇಳಿಬರುತ್ತದೆ. ಸಾಹಿತ್ಯದ ಅಂತಃಸತ್ವವನ್ನರಿತು ಮತಿವಂತರಾಗಿ ವರ್ತಿಸಬೇಕಾಗಿದೆ. ೯. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತದೆ ?  ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ದೇಶದ ಚಲನೆ ಅವ್ಯಾಹತ. ಪಾರದರ್ಶಕತೆ ಮತ್ತು ದೂರದೃಷ್ಟಿ ಹೊಂದಿರುವ ಸಮರ್ಥ ಆಡಳಿತಗಾರರಾದರೆ ದೇಶ ಸುಗಮವಾಗಿ ನಡೆಯಬಲ್ಲದು.ಇಲ್ಲವಾದರೆ ದೇಶದ  ಪ್ರಜೆಗಳು ದುರ್ಗಮ ಸ್ಥಿತಿ ಅನುಭವಿಸಬೇಕಾಗುವದು. ೧೦. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ?  ಸತ್ವಯುತವಾದ , ಕಾಲಾತೀತವಾಗಿ ನಿಲ್ಲುವ ಸಾಹಿತ್ಯ ಸೃಷ್ಟಿಯಡೆಗೆ ತುಡಿತವಿದೆ.  ಎಲ್ಲ ಹಿರಿಯ ಸಾಹಿತಿಗಳ ಅಧ್ಯಯನ,ಹೊಸತಲೆಮಾರಿನ ಪ್ರಯೋಗಶೀಲತೆಯನ್ನು ಮನಸಲ್ಲಿಟ್ಟುಕೊಂಡು ನಮ್ಮತನವನ್ನು ಉಳಿಸಿಕೊಳ್ಳುತ್ತ ಮುಂದುವರಿಯಬೇಕಿದೆ. ಶೋಷಿತರಿಗೆ ದನಿಯಾಗುವ , ಸ್ತ್ರಿ ಸಂವೇದನೆ , ಸ್ತ್ರೀ ಪರ ಚಿಂತನೆಗೆ  ಮೆಟ್ಟಿಲಾಗುವ ದಾರಿಯತ್ತ ಸಾಗಬೇಕಿದೆ. ೧೧. ನೆಚ್ಚಿನ ಕನ್ನಡದ ಹಾಗೂ ಆಂಗ್ಲ ಸಾಹಿತಿಗಳಾರು ?  ಇಷ್ಟದಕವಿ ಜಿ.ಎಸ್. ಶಿವರುದ್ರಪ್ಪ  ಇನ್ನೂ ಹಲವಾರು ಸಾಹಿತಿಗಳು ಜಯಂತ ಕಾಯ್ಕಿಣಿ, ಚೆನ್ನವೀರ ಕಣವಿ  ಕವಯಿತ್ರಿಯರು ವೈದೇಹಿ,ಲಲಿತಾ ಸಿದ್ಧಬಸವಯ್ಯಾ ,ಮಾಲತಿ ಪಟ್ಟಣಶೆಟ್ಟಿ  ಆಂಗ್ಲ ಸಾಹಿತಿಗಳೆಂದರೆ ಜಾನ್ ಕೀಟ್ಸ ಮತ್ತು ಟಿ.ಎಸ್.ಎಲಿಯಟ್ ೧೨. ಇತ್ತೀಚೆಗೆ ಓದಿದ ಕೃತಿಗಳಾವುವು ?   ನಾರಾಯಣ.ಪಿ.ಭಟ್ಟ ಅವರ “ನೆನಪಿನ ಉಯ್ಯಾಲೆ”   ನಾಗರೇಖಾ ಗಾವ್ಕರ್ ಅವರ ” ಆಂಗ್ಲ ಸಾಹಿತ್ಯ ಲೋಕ” ೧೩.  ಇಷ್ಟವಾದ ಕೆಲಸ ಯಾವದು ?    ಕನ್ನಡೇತರರಿಗೆ ಕನ್ನಡ ಕಲಿಸುವದು, ರಂಗೋಲಿ ಹಾಕುವದು ಮತ್ತು ಅಡುಗೆ ಮಾಡುವದು. ೧೪.  ಇಷ್ಟವಾದ ಊರು ?    ಧಾರವಾಡ  ಎರಡು ಕಾರಣಗಳಿಂದ * ನನ್ನ ತವರುಮನೆ * ವರಕವಿ ಬೇಂದ್ರೆಯವರಂಥ ಮಹಾನ್ ಸಾಹಿತಿ ನೆಲೆಸಿದ್ದ ಊರು. ಹಾಗೂ ಕನ್ನಡ ಸಾರಸ್ವತಲೋಕಕ್ಕೆ ಧಾರವಾಡ ಹಲವಾರು ಮೇರು ಸಾಹಿತಿಗಳನ್ನ ನೀಡಿದಂತಹ ನೆಲ. ೧೫.  ಇಷ್ಟವಾಗುವ ಸಿನಿಮಾಗಳು ಯಾವವು ?     ಮಾಲ್ಗುಡಿ ಡೇಸ್, ಕವಿರತ್ನಕಾಳಿದಾಸ ಮತ್ತು ಫಸ್ರ‍್ಯಾಂಕ್ ರಾಜು ೧೬. ಮರೆಯಲಾರದ ಘಟನೆಗಳಾವವು ?    * ಧಾರವಾಡದಲ್ಲಿ ನಡೆದ ೮೪ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸುವ ಸುಯೋಗ ಓದಗಿಬಂದಿತ್ತು. ಅಪ್ಪ,ಅಮ್ಮ ಇಬ್ಬರನ್ನೂ ಕರೆದುಕೊಂಡು ಹೋದೆ.   ವಿಶಾಲವಾದ ಸಭಾಂಗಣದ ಆಸನದ ಮೇಲೆ ಕುಳಿತೆವು. ಕರ‍್ಯಕ್ರಮ ಇನ್ನೇನು ಶುರುವಾಗಬೇಕು ಕವಿಗೋಷ್ಠಿಯ ಅಧ್ಯಕ್ಷರು,ಅತಿಥಿಗಳು ಒಬ್ಬೊಬ್ಬರಾಗಿ ಆಗಮಿಸತೊಡಗಿದರು, ನಂತರ ಕವಿಗಳ ಹೆಸರುಗಳನ್ನು ವೇದಿಕೆಗೆ ಬರಬೇಕೆಂದು ಆಹ್ವಾನಿಸುತ್ತದ್ದರು,ಆಗ ವೇದಿಕೆಯ ಮೇಲೆ ನನ್ನ ಹೆಸರು ಕರೆದ ತಕ್ಷಣ ಅಪ್ಪನ ಕಣ್ಣಲ್ಲಿ ಆನಂದಬಾಷ್ಪಗಳು ದಳದಳನೇ ಇಳಿದುಬಂದವು. ಅಪ್ಪನ ಹೆಮ್ಮೆಯ ಭಾವ  ಕಂಡು  ನನ್ನ ಮತ್ತು ಅಮ್ಮನ ಕಣ್ಣುಗಳು ಆದ್ರಗೊಂಡಿದ್ದವು. ************************************************* ********************************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಲೇರಿಯೊಂಕ ಲೇರಿಯೊಂಕ ( ಕಾದಂಬರಿ)ಮೂಲ : ಹೆನ್ರಿ ಆರ್. ಓಲೆ ಕುಲೆಟ್ ಕನ್ನಡಕ್ಕೆ : ಪ್ರಶಾಂತ ಬೀಚಿಪ್ರ : ಛಂದ ಪುಸ್ತಕಪ್ರಕಟಣೆಯ.ವರ್ಷ : ೨೦೦೮ಬೆಲೆ : ರೂ.೧೦೦ಪುಟಗಳು : ೨೫೦  ಕೀನ್ಯಾದ ಹೆಸರಾಂತ ಕಾದಂಬರಿಕಾರ ಹೆನ್ರಿ ಆರ್.ಓಲೆ ಕುಲೆಟ್ ಅವರ ಈ ಕಾದಂಬರಿಯು ಲೇರಿಯೊಂಕ ಎಂಬ ಒಬ್ಬ ದನಗಾಹಿ ಹುಡುಗ ಶಾಲೆಗೆ ಹೋಗಲು ಪಡಬಾರದ ಪಾಡು ಪಟ್ಟು ಕೊನೆಗೆ ಸ್ವಂತ ಪರಿಶ್ರಮದಿಂದ ವಿದ್ಯಾವಂತನಾಗಿ ಸ್ವತಂತ್ರ ಮನೋಭಾವವನ್ನು ಬೆಳೆಸಿಕೊಳ್ಳುವುದರ ಕುರಿತಾದ ಕಥೆಯನ್ನು ಹೇಳುತ್ತದೆ.  ಮಾಸಯಿ ಜನಾಂಗಕ್ಕೆ ಸೇರಿದ ಲೇರಿಯೊಂಕ ಸರಕಾರದ ಒತ್ತಾಯಕ್ಕೊಳಗಾಗಿ ಶಾಲೆಗೆ ಸೇರುತ್ತಾನಾದರೂ ಕಾಲಕ್ರಮೇಣ ಶಾಲೆಯ ಬದುಕನ್ನು ಬಹಳವಾಗಿ ಇಷ್ಟ ಪಡುತ್ತಾನೆ. ವಾಸ್ತವದಲ್ಲಿ ಮಾಸಯಿಗಳು ಯಾರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪುವುದಿಲ್ಲ. ಲೇರಿಯೊಂಕ ಏನೇನೋ ಸಬೂಬು ಹೇಳಿ ಮನೆ ಬಿಟ್ಟು ಕಾಲ್ನಡಿಗೆಯಲ್ಲಿ ಬಹು ದೂರ ಸಾಗಿ , ಹಳ್ಳ-ತೊರೆ-ಗುಡ್ಡ-ಕಾಡುಗಳನ್ನು ದಾಟಿ, ಅನೇಕ ಅಪಾಯ-ತೊಂದರೆಗಳನ್ನು ಎದುರಿಸಿ ದೂರದ ನಗರ ಸೇರಿ ಅಲ್ಲಿ ಎಂಟು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡುತ್ತಾನೆ. ಆಗ ಅವನಿಗೆ ವಿದ್ಯಾವಂತರೆಲ್ಲ ಬಿಳಿಯರ ವಿರುದ್ಧ ನಿಂತು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿರುವುದು ಕಾಣುತ್ತದೆ.   ಕೆನ್ಯಾದವರಿಗೆ ತಮ್ಮನ್ನು ಆಳಿಕೊಳ್ಳುವ ಶಕ್ತಿಯಿದೆ, ಆದ್ದರಿಂದ ಬಿಳಿಯರು ತಮ್ಮ ಮೇಲೆ ಅಧಿಕಾರ ಚಲಾಯಿಸುವ ಅಗತ್ಯವಿಲ್ಲವೆನ್ನುವ ಭಾವನೆ ಲೇರಿಯೊಂಕನಿಗೂ ಬರುತ್ತದೆ.  ಎಲ್ಲ ವಿದ್ಯಾವಂತರಂತೆ ಕೆನ್ಯಾ ಸ್ವತಂತ್ರವಾಗಬೇಕು, ಮತ್ತು ತನ್ನ ಸಂಸ್ಕೃತಿಯ ಎಲ್ಲ ಅಂಶಗಳನ್ನು ಉಳಿಸಿಕೊಂಡು ಆ ಬಗ್ಗೆ ಅಭಿಮಾನ ಪಡಬೇಕು ಎಂಬ ಆಶಯವನ್ನು ಲೇರಿಯೊಂಕನೂ ಇಟ್ಟುಕೊಳ್ಳುತ್ತಾನೆ.  ವಿದ್ಯೆ ಪಡೆದರೆ ಕಪ್ಪು ಜನರೂ ಬಿಳಿಯರ ಸಮಾನರಾಗಬಲ್ಲರು ಎಂಬ ನಂಬಿಕೆಯನ್ನು ಹಿರಿಯ ತಲೆಮಾರಿನವರಲ್ಲೂ ಹುಟ್ಟಿಸಿ ಕಾದಂಬರಿ ಕೊನೆಗೊಳ್ಳುತ್ತದೆ. ಕಾದಂಬರಿಯುದ್ದಕ್ಕೂ ಮಾಸಯಿ ಜನಾಂಗದ ಜೀವನ ಪದ್ಧತಿ, ನಂಬಿಕೆ-ಆಚರಣೆಗಳು, ನಡೆ-ನುಡಿ-ವರ್ತನೆ, ಅವರು ಸಂಬಂಧಗಳನ್ನಿಟ್ಟುಕೊಳ್ಳುವ ಪರಿ ಮತ್ತು ಅವರ ನಾಣ್ಣುಡಿ-ಗಾದೆ ಮಾತುಗಳು ತುಂಬಿಕೊಂಡಿವೆ.  ವಸ್ತು-ವಿನ್ಯಾಸ-ರಚನೆ, ನಿರೂಪಣೆ-ಪಾತ್ರ ಚಿತ್ರಣಗಳ ದೃಷ್ಟಿಯಿಂದ  ಇದು ಅತ್ಯುತ್ತಮವಾದ ಒಂದು ಕೃತಿ. ಆಧುನಿಕೋತ್ತರ ಸಾಹಿತ್ಯದ ಒಂದು ಪ್ರಮುಖ ಲಕ್ಷಣವಾಗಿರುವ ಬದಿಗೆ ತಳ್ಳಲ್ಪಟ್ಟ ಜನಾಂಗದ ಬದುಕಿನ ಚಿತ್ರಣ ಇಲ್ಲಿರುವುದರಿಂದ ಇದರ ಅನುವಾದ ಅತ್ಯಂತ ಪ್ರಸ್ತುತ.  ಅನುವಾದಕರ ಪ್ರಯತ್ನ ಶ್ಲಾಘನೀಯ. ಆದರೆ ವಾಕ್ಯ ರಚನೆ ಮತ್ತು ಪದಪ್ರಯೋಗಗಳನ್ನು ಸಮರ್ಪಕವಾಗಿ ಮಾಡುವಲ್ಲಿ ಇನ್ನಷ್ಟು ಪರಿಶ್ರಮವಿದ್ದರೆ ಒಳ್ಳೆಯದು. ******************************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ವೃದ್ಧಾಶ್ರಮ ಅಥಶ್ರೀ ಒಮ್ಮೆ ಕನ್ನಡದ ಸುದ್ದಿಮಾಧ್ಯಮಗಳು, ಹಿರಿಯ ರಂಗನಟರೊಬ್ಬರ ಹೆಂಡತಿ ವೃದ್ಧಾಶ್ರಮದಲ್ಲಿದ್ದಾರೆ ಎನ್ನುವುದನ್ನು ದೊಡ್ಡದಾಗಿ ವರದಿ ಮಾಡಿದವು. ಕೆಲವು ವರದಿಗಳಲ್ಲಿ `ಇದೊಂದು ಶೋಚನೀಯ ಸಂಗತಿ’ ಎಂಬ ದನಿಯಿರಲಿಲ್ಲ. ಇದಕ್ಕೆ ತಕ್ಕಂತೆ ಆ ಮಹಿಳೆ ಕೂಡ `ಕುಟುಂಬದವರು ಬೀದಿಪಾಲು ಮಾಡಿದರು’ ಎಂದೂ ಹೇಳಲಿಲ್ಲ. ವೃದ್ಧಾಶ್ರಮಕ್ಕೆ ಬರಲು ಕಾರಣವಾದ ಸನ್ನಿವೇಶವನ್ನು ಯಾರಮೇಲೂ ಆರೋಪ ಮಾಡದಂತೆ ಘನತೆಯಿಂದ ವಿವರಿಸಿದರು. ಆದರೂ ವ್ಯಕ್ತಿಗಳ ಖಾಸಗಿ ಬದುಕಿನ ವಿಷಯವನ್ನು ಮಾಧ್ಯಮಗಳು ನೈತಿಕ ರಕ್ಷಕರಂತೆ ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿ ಮಾಡುವ ಚಾಳಿ ಹೆಚ್ಚುತ್ತಿದೆ. ಇಂತಹ ಸುದ್ದಿ ಪ್ರಸರಣೆಯಲ್ಲಿ ಎರಡು ಅಪಾಯಗಳಿವೆ. ಮೊದಲನೆಯದು-ಸಾಮಾನ್ಯ ಜನ ಈ ಸುದ್ದಿಯನ್ನು ಗಮನಿಸಿ, ಕುಟುಂಬದವರು ತಮ್ಮ ಹಿರಿಯರನ್ನು ಸರಿಯಾಗಿ ನೋಡಿಕೊಳ್ಳದೆ ಅನಾಥಗೊಳಿಸಿದರು ಎಂದು ನೈತಿಕ ಶೋಕಭಾವದಿಂದ ಪರಿಭಾವಿಸುವ ಅಪಾಯ. ಹೀಗೆ ಪರಿಭಾವಿಸುವ ಹೆಚ್ಚಿನ ಮಂದಿ, ತಾವು ಅಂತಹವರಲ್ಲವೆಂದು ಸ್ವಯಂ ಶಹಬಾಸುಗಿರಿ ಕೊಟ್ಟಕೊಳ್ಳುತ್ತಿರುತ್ತಾರೆ; ಸ್ವತಃ ತಂತಮ್ಮ ಮನೆಗಳಲ್ಲಿ ವೃದ್ಧರನ್ನು, ಅಂಗವಿಕಲರನ್ನು, ವಿಧವೆಯರನ್ನು ಹಾಗೂ ನೌಕರಿಯಿಲ್ಲದ ಗಂಡುಮಕ್ಕಳನ್ನು ಸಾಕುವ ಕರ್ತವ್ಯದ ಅಹಮಿನಲ್ಲಿ, ಸೂಕ್ಷ್ಮಿ ವಿಧಾನಗಳಲ್ಲಿ ಹಿಂಸೆ ಕೊಡುತ್ತಿರುವುದನ್ನು ಮರೆತುಬಿಡುತ್ತಾರೆ. ಬಹಳಷ್ಟು ಸಲ ನಾವು ಅಂಜುವುದು ನಮ್ಮ ಅಂತಃಸಾಕ್ಷಿಗಲ್ಲ, ಸಮಾಜಕ್ಕೆ. ರೋಗಿಯನ್ನೊ ಶವವನ್ನೊ ನೋಡಲು ಹೋಗುವುದು `ಇಂತಹ ಹೊತ್ತಲ್ಲೂ ಬರಲಿಲ್ಲವಲ್ಲ’ ಎಂಬ ಮಾತನ್ನು ತಪ್ಪಿಸಲು. ಸಾಮಾಜಿಕ ರೂಢಿಯ ಒತ್ತಡವೇ ಹಾಗೆ ಮಾಡಿಸುತ್ತಿರುತ್ತದೆ. ಹಾಗೆ ಕರ್ತವ್ಯಪ್ರಜ್ಞೆಯಿಂದ ಕೊಡುವ ಭೇಟಿಯಿಂದ ರೋಗಿಗೂ ಅವರನ್ನು ನೋಡಿಕೊಳ್ಳುತ್ತಿರುವ ಕುಟುಂಬಕ್ಕೂ ಕಷ್ಟವೇ ಆಗುತ್ತದೆ. ಯಾರನ್ನಾದರೂ ಮನೆಯ ಶುಭಕಾರ್ಯಗಳಿಗೆ ಕರೆಯುವಾಗಲೂ ವೈಯಕ್ತಿಕವಾಗಿ ಇಷ್ಟವಿಲ್ಲದಿದ್ದರೂ `ಕರೆಯದಿದ್ದರೆ ಜನ ಏನಂದಾರು’ ಎಂದು ಕರೆಯುವುದು; ಕರೆಸಿಕೊಂಡವರಾದರೂ `ಮನೆತನಕ ಬಂದು ಕರೆದಿದ್ದಾರೆ. ಹೋಗದಿದ್ದರೆ ತಪ್ಪಾಗುತ್ತದೆ’ ಎಂದು ಶಿಷ್ಟಾಚಾರಕ್ಕಾಗಿ ಬರುವುದು. ಇದು ಅಂತರಂಗದ ದನಿಗೆ ಕಿವುಡಾಗಿ ಮತ್ತೊಬ್ಬರಿಗಾಗಿ ಬದುಕುವ ಆಷಾಢಭೂತಿತನ; ಸಾಮಾಜಿಕ ನೈತಿಕತೆಯ ಹೆಸರಲ್ಲಿರುವ ಅನೈತಿಕತೆ. ನಮ್ಮ ಸಾಂಪ್ರದಾಯಿಕವಾದ ಈ ಮನೋಭಾವಕ್ಕೆ ಹೋಲಿಸಿದರೆ, ಹಿರಿಯರ ಮತ್ತು ಅವಲಂಬಿತರ ಬಗ್ಗೆ ವಾಸ್ತವವಾದಿಯಾಗಿ ವರ್ತಿಸುವ ಪಾಶ್ಚಿಮಾತ್ಯ ದೃಷ್ಟ್ಟಿಕೋನ ಹೆಚ್ಚು ಮಾನವೀಯ ಮತ್ತು ಹಿಪಾಕ್ರಸಿ ಇಲ್ಲದ್ದು ಅನಿಸುತ್ತದೆ. ಎರಡನೆಯದು- ಇಂತಹ ಸುದ್ದಿಗಳು ಹೊಸತಲೆಮಾರಿನವರನ್ನು ಅನವಶ್ಯವಾಗಿ ಕಟಕಟೆಯಲ್ಲಿ ನಿಲ್ಲಿಸುವ ಮತ್ತು ಹಿರೀಕರೆಲ್ಲರೂ ಅಮಾಯಕರು ಅಸಹಾಯಕರು ಎಂದು ಬಿಂಬಿಸುವ ಅಪಾಯ. ವಿದ್ಯಾಭ್ಯಾಸಕ್ಕೊ ನೌಕರಿಗೊ ನಗರಕ್ಕೆ ಹೋದ ಮಕ್ಕಳು ಹಳ್ಳಿಯಲ್ಲುಳಿದ ಸಂಪ್ರದಾಯಸ್ಥ ತಂದೆತಾಯಿಗಳನ್ನು ಅಸ್ಪøಶ್ಯರಂತೆ ನಡೆಸಿಕೊಳ್ಳುವ ಬಗ್ಗೆ ಸಮಾಜದಲ್ಲಿ ನೈತಿಕ ಟೀಕೆಗಳಿವೆ. `ಸನಾದಿ ಅಪ್ಪಣ್ಣ’ ಇಂತಹ ಲೋಕಾರೂಢಿಯ ಬುನಾದಿ ಮೇಲೆ ಹುಟ್ಟಿದ ಸಿನಿಮಾ. ಇದೇ ಆಶಯವನ್ನು ಅತಿರಂಜಿತವಾಗಿ ಚಿತ್ರಿಸುವ ಕಂಪನಿ ನಾಟಕಗಳೂ ಇವೆ. ಇವೆಲ್ಲ ಹೊಸತಲೆಮಾರಿನ `ಕೃತಘ್ಞತೆ’ `ವಿಶ್ವಾಸದ್ರೋಹ’ಗಳನ್ನು ಚಿತ್ರಿಸುತ್ತವೆ; ಆಧುನಿಕತೆಯನ್ನು ಒಂದು ಪಾಪವೆಂದು ಬಣ್ಣಿಸುತ್ತವೆ. ಆದರೆ ಈ ಸಿನಿಮಾ ಮತ್ತು ನಾಟಕಗಳು ಕಿರಿಯರ ಆಕಾಂಕ್ಷೆಯನ್ನು ಹಿರೀಕರು ನಾನಾ ಕಾರಣದಿಂದ ಹೊಸಕಿ ಹಾಕಿರುವುದನ್ನು ಮರೆತುಬಿಡುತ್ತವೆ. ಇದೇ ಹಿರೀಕರು, ಜಾತಿ ಧರ್ಮಗಳ ವಿಷಯದಲ್ಲಿ ತಮಗಿಂತ ಉದಾರವಾಗಿರುವ ಹೊಸತಲೆಮಾರಿನವರು, ಮನೆಗೆ ಆಹ್ವಾನಿಸಿದ ಗೆಳೆಯರ ಜಾತಿಕೇಳಿ ಮುಖಕ್ಕೆ ಹೊಡೆದಂತೆ ಅಪಮಾನಿಸಿರುತ್ತಾರೆ. ಅನ್ಯಜಾತಿಯಲ್ಲಿ ಮದುವೆಯಾದ ಮಕ್ಕಳ ಮುಖವನ್ನು ಸಾಯುವ ತನಕ ನೋಡಲಾರದೆ ಹಟ ಮಾಡಿರುತ್ತಾರೆ. ವರದಕ್ಷಿಣೆಗಾಗಿ ಸೊಸೆಯಂದಿರನ್ನು ಪೀಡಿಸಿರುತ್ತಾರೆ. ಯಾವುದೇ ತಲೆಮಾರಿನ ವರ್ತನೆಯನ್ನು ಸರಿತಪ್ಪುಗಳಲ್ಲಿ ಭಾವನಾತ್ಮಕವಾಗಿ ಕಪ್ಪುಬಿಳುಪಾಗಿ ನೋಡುವುದು ಸಾಧ್ಯವಿಲ್ಲ. ಪ್ರತಿ ಘಟನೆಗೂ ಅದರದ್ದೇ ಆದ ಸಂಕೀರ್ಣ ಹಿನ್ನೆಲೆ ಮತ್ತು ಆಯಾಮ ಇರುತ್ತವೆ. ಹಿರಿಯರು ಮೊಮ್ಮಕ್ಕಳ ಜತೆ ಕಾಲಕಳೆಯುತ್ತ ಬಾಳಿನ ಅಂತಿಮ ದಿನಗಳನ್ನು ಬದುಕುವುದು ಇಬ್ಬರಿಗೂ ಉಚಿತವೇ. ಅದು ಅಸಾಧ್ಯವಾಗದೆ ಹೋದಾಗ, ಅದರಲ್ಲೂ ಸಂಗಾತಿಗಳಿಲ್ಲದೆ ಹಿರಿಯ ಜೀವಗಳು ಒಂಟಿಯಾಗಿ ಬದುಕುವಾಗ, ಮನೆಯವರ ಉಪೇಕ್ಷೆಯಲ್ಲಿ ಬದುಕುವುದಕ್ಕಿಂತ, ಕಾಳಜಿಯಿಂದ ನೋಡಿಕೊಳ್ಳುವ ವೃದ್ಧಾಶ್ರಮಗಳಲ್ಲಿರುವುದು ಎಷ್ಟೊ ವಾಸಿ. ಭಾವುಕವಾದ ನೈತಿಕ ಆಕ್ರೋಶದಲ್ಲಿ ಇದು ತಪ್ಪೆಂದು ಭಾವಿಸುವ ಅನೇಕರಿಗೆ ವೃದ್ಧಾಶ್ರಮಗಳ ಹಾಗೂ ಅನಾಥಾಶ್ರಮಗಳ ನಡುವೆ ಸರಿಯಾದ ತಿಳುವಳಿಕೆ ಇದ್ದಂತಿಲ್ಲ.ವೃದ್ಧಾಶ್ರಮಗಳ ಮಾನವೀಯ ಮುಖ ನನಗೆ ಅರಿವಾಗಿದ್ದು ಪುಣೆಯ `ಅಥಶ್ರೀ’ ನೋಡಿದ ಬಳಿಕ. ಕನ್ನಡದ ಹಿರಿಯ ಗಾಯಕಿಯರಾದ ಜಯವಂತಿ ಹಿರೇಬೆಟ್ ಹಾಗೂ ವಿಜಯಾ ನಾಯಕ ಅವರ ಭೇಟಿಗೆಂದು ಪುಣೆಗೆ ಹೋಗಿದ್ದೆ. ಇವರು 40ರ ದಶಕದಲ್ಲೇ ಕನ್ನಡದಲ್ಲಿ ಹಾಡಿದವರು. ಈಗ ತೊಂಬತ್ತರ ಆಸುಪಾಸಲ್ಲಿರುವ ಇವರು, ಹಿರಿಯ ನಾಗರಿಕರಿಗಾಗಿ ಮೀಸಲಾಗಿದ್ದ `ಅಥಶ್ರೀ’ ಅರ್ಪಾಟಮೆಂಟಿನಲ್ಲಿದ್ದರು. ಪಾಶ್ ಹೋಟೆಲಿನಂತಿದ್ದ ಈ ಅಪಾರ್ಟ್‍ಮೆಂಟನ್ನು ಕಂಡು ಬೆರಳು ಕಚ್ಚಿಕೊಂಡೆ. ಅಲ್ಲಿ ವೃದ್ಧರು ತಮ್ಮ ಅವಲಂಬಿತರ ಜತೆ ಸ್ವಂತ ಮನೆಯಲ್ಲಿ ಇರಬಹುದು. ಅವರಿಗೆ ತಿರುಗಾಟಕ್ಕೆ ಬೇಕಾದ ಪಾರ್ಕು, ಆರೋಗ್ಯ ವ್ಯವಸ್ಥೆ, ಲಿಫ್ಟು ಮತ್ತು ಸೆಕ್ಯುರಿಟಿ ಸೌಲಭ್ಯಗಳಿವೆ. ಒಂದೆಂದರೆ ಇಲ್ಲಿ ಸಿರಿವಂತ ಮತ್ತು ಮಧ್ಯಮವರ್ಗದವರಿಗೆ ಮಾತ್ರ ಬದುಕಲು ಸಾಧ್ಯ. ಇವರು ಉಳ್ಳವರಾದರೂ ಏಕಾಂಗಿಗಳು. ಮಕ್ಕಳು ಒಂದೊ ತ್ಯಜಿಸಿದ್ದಾರೆ ಇಲ್ಲವೇ ನೌಕರಿಗಾಗಿ ಬೇರೆ ದೇಶಗಳಲ್ಲಿದ್ದು ಖರ್ಚುವೆಚ್ಚ ನೋಡಿಕೊಳ್ಳುತ್ತಿದ್ದಾರೆ. ಅವರು ಕಳಿಸಿದ ಹಣದಲ್ಲೊ ಅಥವಾ ತಾವೇ ಪ್ರಾಯವಿದ್ದಾಗ ಗಳಿಸಿದ ಹಣದಲ್ಲೊ ಇವರು ತಮ್ಮ ಕೊನೆಯ ವರ್ಷಗಳನ್ನು ಕಳೆಯುತ್ತಿದ್ದಾರೆ. ಹೊಸ ತಲೆಮಾರಿನ ನೌಕರಿಯ ಅವಸರ ಗಡಿಬಿಡಿ, ಏಕಾಂತಪ್ರಿಯತೆ ಹಾಗೂ ತಾತ್ಸಾರಗಳಲ್ಲಿ ಬಳಲುವ ಅನೇಕ ಜೀವಗಳು, ಈ ಪರ್ಯಾಯ ವ್ಯವಸ್ಥೆಯಲ್ಲಿ ನೆಮ್ಮದಿ ಪಡೆದುಕೊಂಡಿರಬಹುದು ಅನಿಸಿತು. ಮಕ್ಕಳನ್ನು ಓದಿಸಿ ವಿದೇಶಗಳಿಗೆ ಕಳಿಸಿ ಒಂಟಿಮನೆಯಲ್ಲಿ ಬದುಕುವ ಮುದಿ ತಂದೆತಾಯಿಗಳ ಅವಸ್ಥೆಯನ್ನು ಗಮನಿಸಬೇಕು. ಮಕ್ಕಳು ಮೊಮ್ಮಕ್ಕಳು ಬಂದಾಗ ಅವರ ಬಾಳಿಗೆ ಹೊಸ ಮಿನುಗು. ಉಳಿದಂತೆ ಖಾಲಿತನ. ಇಂತಹ ಮನೆಗಳನ್ನು ಪತ್ತೆಮಾಡಿ ವೃದ್ಧರನ್ನು ಕೊಂದು ದೋಚುತ್ತಿರುವ ಸುದ್ದಿಗಳೂ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹಿರಿಯರ ಆಶ್ರಮಗಳು ಜೀವದ ಭದ್ರತೆಯನ್ನೂ ಹೊಸ ಸಾಮಾಜಿಕ ಸಂಬಂಧಗಳನ್ನು ಕೊಡುತ್ತಿವೆ. ಆಧುನಿಕ ಮತ್ತು ನಗರದ ಜೀವನ ವ್ಯವಸ್ಥೆಯೇ ಸೃಷ್ಟಿಸಿಕೊಂಡಿರುವ ಪರ್ಯಾಯ ವ್ಯವಸ್ಥೆಯಿದು. ಮಕ್ಕಳು ಗೌರವಾನ್ವಿತವಾದ ಹೊಸ ಬದುಕನ್ನು ಕಲ್ಪಿಸಿಕೊಟ್ಟಿರುವುದರಿಂದ, ಅವರ ವೃದ್ಧಾಪ್ಯದ ದಿನಗಳು ತೀರ ನರಳಿಕೆಯಿಂದ ಕೂಡಿಲ್ಲ. ವೃದ್ಧಾಪ್ಯವನ್ನು ಮೊಮ್ಮಕ್ಕಳ ಜತೆ ಕಳೆಯುತ್ತ ತಮ್ಮ ಬಾಲ್ಯಕ್ಕೆ ಮರಳಿಹೋಗುವ ಕುಟುಂಬಗಳ ಪ್ರೀತಿ ಇಲ್ಲಿ ಸಿಗುವುದಿಲ್ಲ, ಖರೆ. ಆದರೆ ಇಲ್ಲಿಯೂ ಬೇರೆ ಮಕ್ಕಳಿದ್ದಾರೆ. ಅವರನ್ನು ಪೀತಿಯಿಂದ ನೋಡಿಕೊಳ್ಳುವ ವ್ಯವಸ್ಥೆಯಿದೆ.ವೃದ್ಧಾಶ್ರಮಗಳು ಎಂದೂ ಆದರ್ಶವಲ್ಲ. ಆದರೆ ಲೋಕಕ್ಕಂಜಿ ಹಿರಿಯರನ್ನು ಸಾಕುತ್ತ, ಮಾನಸಿಕ ಹಿಂಸೆ ಕೊಡುವ ಕುಟುಂಬಗಳ ಆತ್ಮವಂಚಕತೆಗೆ ಹೋಲಿಸಿದರೆ ಇವು ವಾಸಿ. ಅನೇಕ ದರ್ಗಾ ಮತ್ತು ಆಶ್ರಮಗಳು, ನಾನಾ ಕಾರಣದಿಂದ ಕುಟುಂಬ ತಿರಸ್ಕøತ ವೃದ್ಧರು ಬಂದು ನೆಲೆಸುವ ಮಾನವೀಯ ಸ್ಥಳಗಳಾಗಿವೆ. ತನ್ನ ಕುಟುಂಬವನ್ನು ಅಪಘಾತದಲ್ಲಿ ಕಳೆದುಕೊಂಡ ಮುದುಕಿಯೊಬ್ಬರು ಗಟ್ಟನಹಳ್ಳಿ ಅಂಜನಪ್ಪನವರ ಆಶ್ರಮದಲ್ಲಿ ನೆಮ್ಮದಿ ಕಂಡುಕೊಳ್ಳುತ್ತ ಇರುವುದನ್ನು ಕಂಡೆ. ಆದರೆ ಸಿರಿವಂತರು ಪುಣ್ಯ ಸಂಪಾದನೆಗಾಗಿ ಕಟ್ಟಿಸಿರುವ ಕೆಲವು ವೃದ್ಧಾಶ್ರಮಗಳಲ್ಲಿ ಶೋಚನೀಯ ಸ್ಥಿತಿಯಿದೆ. ವೃದ್ಧಾಶ್ರಮವೊಂದನ್ನು ಕಾಠ್ಮಂಡುವಿನಲ್ಲಿ ನೋಡಿದೆ. ವೃದ್ಧಾಶ್ರಮದ ಮಗ್ಗುಲಿಗೇ ಉರಿವ ಚಿತೆಗಳು. ಕೌಂಪೌಂಡಿನಲ್ಲಿ ಕಾಣುವಂತೆ ಚಿತೆಯ ಸೌದೆಸೀಳುವ ಕೆಲಸ ನಡೆಯುತ್ತದೆ. ಈ ದೃಶ್ಯಗಳನ್ನು ದಿನವೂ ಕಾಣವು ಜೀವಗಳು ಏನೆಂದು ಭಾವಿಸುತ್ತಿರಬಹುದು? ನಡುಗಿದೆ. ವೃದ್ಧಾಶ್ರಮ ನಡೆಸುವುದು ಪುಣ್ಯದ ಕೆಲಸ ಅಥವಾ ಸಾಮಾಜಿಕ ಸೇವೆ ಎಂದಾಗಿದ್ದರೆ, ಅಲ್ಲಿ ಸೂಕ್ಷ್ಮತೆಗಳೂ ಇರಬೇಕು. ಅದೊಂದು ದಂಧೆ ಇಲ್ಲವೇ ಧಾರ್ಮಿಕ ಕರ್ತವ್ಯವಾದರೆ, ಈ ಮಾನವೀಯ ಘನತೆ ಇರುವುದಿಲ್ಲ. ಸರ್ಕಾರಗಳು ಕೊಡುವ ವೃದ್ಧಾಪ್ಯ ವೇತನ ತುಂಬ ಉಪಯುಕ್ತವಾಗಿದೆ. ಆದರೆ ಅದಕ್ಕಾಗಿ ಹಿರಿಯ ಜೀವಗಳು ಅಂಚೆಕಛೇರಿಗಳ ಅಂಗಳದಲ್ಲಿ ಕೂತಿರುವುದನ್ನು ನೋಡುವಾಗ ಈ ಘನತೆ ಕಳೆದುಹೋಗಿದೆ ಅನಿಸುತ್ತದೆ. ವೃದ್ಧಾಶ್ರಮಗಳ ಬಗ್ಗೆ ಧೇನಿಸುತ್ತಿರುವಾಗ, ಪ್ರಾಯದವರೆಲ್ಲ ದುಡಿಯಲೆಂದು ಊರಿಗೆ ಊರೇ ವೃದ್ಧಾಶ್ರಮ ಆಗಿರುವ, ಉತ್ತರ ಕರ್ನಾಟಕದ ಹಳ್ಳಿಗಳು ನೆನಪಾಗುತ್ತವೆ. ಹಾಗೆಂದು ದುಡಿಯಲು ಹೊರಗೆ ಹೋಗಿರುವವರು ಸುಖಿಗಳಾಗಿದ್ದಾರೆ ಎಂದೇನು ಭಾವಿಸಬೇಕಿಲ್ಲ. ಮಣ್ಣುಕೆಲಸಕ್ಕೆ ಗುಳೆಹೋಗಿ ಎಲ್ಲೊ ಸ್ಲಮ್ಮುಗಳಲ್ಲಿ ಬದುಕುವ ಕೂಲಿಕಾರರು ನೆನಪಾಗುತ್ತಾರೆ. ಚಳಿಮಳೆಯಲ್ಲಿ ಟ್ರೆಂಚಿನಲ್ಲಿ ಕುಳಿತು ಯಾವಾಗಲಾದರೂ ಎರಗುವ ಸಾವನ್ನು ಎದುರಿಸುತ್ತಿರುವ ಸೈನಿಕರು, ಭಾರತಕ್ಕಿಂತ ಸುಖೀ ಬದುಕಿಗಾಗಿ ಹಂಬಲಿಸಿ ವಿದೇಶದಲ್ಲಿ ಎರಡನೇ ದರ್ಜೆಯ ಪ್ರಜೆಯಾಗಿ ಬದುಕುತ್ತಿರುವ ನೌಕರರು, ನೆನಪಾಗುತ್ತಾರೆ. ಇಲ್ಲಿ ವೃದ್ಧಾಶ್ರಮದ ತಬ್ಬಲಿತನ ಇರಲಿಕ್ಕಿಲ್ಲ. ಆದರೆ ಬದುಕು ಕಟ್ಟಿಕೊಳ್ಳುವುದಕ್ಕೆ ನಡೆಸುವ ಹೋರಾಟದ ಭಾಗವಾಗಿಯೇ ಇರುವ `ಅನಾಥತನದ’ ಅಂಶವಿರುತ್ತದೆ. *********************************************************** ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ   ಪಟ್ಟಣದ ಕವಿತೆಗೆ ಛಂದಸ್ಸಿಲ್ಲ! ಈ ಷಹರ ನಿದ್ರಿಸಲ್ಲ!.  ಏರ್ಪೋರ್ಟ್ ನಲ್ಲಿ ಇಳಿಯಲು ಅನುಮತಿ ಸಿಗುವ ವರೆಗೆ ಪೈಲಟ್ ವಿಮಾನವನ್ನು ಷಹರಕ್ಕೆ ಸುತ್ತು ಹಾಕುತ್ತಿದ್ದ. ವಿಂಡೋ ದಿಂದ ಕಣ್ಣು ಹಾಯಿಸಿದರೆ, ಕೆಳಗೆ ಅಷ್ಟೂ ಬೆಳಕು. ಉದ್ದಕ್ಕೆ ಅಡ್ಡಕ್ಕೆ ಕೆಲವು ನೇರ,ಹಲವು ವಕ್ರ ರಸ್ತೆಗಳು. ಅವುಗಳನ್ನು ಬೆಳಗುವ ರಾತ್ರಿ ದೀಪಗಳು. ಈ ಪಟ್ಟಣಕ್ಕೆ ಮಧ್ಯರಾತ್ರಿ ಎನ್ನುವುದು ಬರೇ ಒಂದು ಪದ. ಆಕಾಶದಿಂದ ನೋಡಿದರೆ, ನೆಲದೆದೆಗೆ ಮೊಳೆ ಹೊಡೆದ ಹಾಗಿರುವ ಕಟ್ಟಡಗಳು. ಅವುಗಳ ಕಿಟಿಕಿಗಳಿಂದ ತಡರಾತ್ರೆ ದಣಿದು ಹೊರ ಜಾರುವ ಮಂದ ಬೆಳಕು. ಮನೆ ಕಟ್ಟಲು ಜಾಗ ಕಡಿಮೆ ಅಂತ ಸಾಲುಮನೆಗಳು ಗೋಡೆಗಳನ್ನು ಹಂಚಿಕೊಂಡಿವೆ. ಹ್ಞಾ! ಅಲ್ಲಿದೆ ನೋಡಿ, ವಾಂಖೇಡೆ ಸ್ಟೇಡಿಯಂ. ಈ ಅಂಗಣದಲ್ಲಿ ಐದಡಿಯ ಹುಡುಗ ಸಚಿನ್ ಸಿಕ್ಸರ್ ಹೊಡೆದಾಗ ಸಾವಿರ ಚಪ್ಪಾಳೆಗಳು ಅನುರಣಿಸಿತ್ತು. ಆತ ಸೊನ್ನೆಗೆ ಔಟಾದಾಗ ಜನ ಅವಹೇಳನದಿಂದ ಕಿರುಚಿದ್ದೂ ಇಲ್ಲಿಯೇ. ವಿಮಾನ ರೆಕ್ಕೆ ತಗ್ಗಿಸಿ ಎಡಕ್ಕೆ ವಾಲಿ, ಮೂತಿ ತಿರುಗಿಸುವಾಗ, ಕೆಳಗಿನ ರೆಡ್ ಲೈಟ್ ನ ರಸ್ತೆಗಳು, ಹತ್ತಿರವಾದಂತೆ ಕಂಡಿತು. ಇಲ್ಲಿ ಕೆಂಪು ದೀಪಗಳು ಮೊಟ್ಟೆಯಿಟ್ಟು, ಕಾಯದಕಾವು ಕೊಟ್ಟು, ಮರಿಯಾಗುವಾಗ ಬೆಳಕಿನ ಹೆಣ್ಣು-ಬಣ್ಣಕ್ಕೆ ಕಣ್ಣೀರು ಬೆರೆತು ರಾಡಿ ರಾಡಿಯಾಗಿ ಹರಡುತ್ತೆ. ಹರಡಿದ ವರ್ಣ ಕೊಲಾಜ್ ಆರ್ಟ್ ಅನ್ನೋವವರೂ ಇದ್ದಾರೆ. ಚಿತ್ರ ಚಲಿಸುತ್ತಾ ಚಲನಚಿತ್ರವಾಗಿ ಬಾಕ್ಸ್ ಆಫೀಸ್ ಹಿಟ್ ಕೂಡಾ ಆಗಿದೆ. ಆಗಸದ ಕಣ್ಣಿಗೆ, ಬುಸ್ ಬುಸ್ ಅಂತ ಬುಸುಗುಟ್ಟುತ್ತಾ ಓಡುವ  ಉಗಿಬಂಡಿಗಳು ಸಹಸ್ರ ಪದಿಯಂತೆ ನಿಧಾನವಾಗಿ ತೆವಳುವಂತೆ ಕಂಡವು. ಇರುವೆ ಸಾಲಿನಂತೆ ರಸ್ತೆ ತುಂಬಾ ವಾಹನಗಳು. ಕರ್ರಗೆ ಹೊಗೆ ಕಾರ್ಖಾನೆಯ ಚಿಮಿಣಿಯಿಂದ, ರಜನೀಕಾಂತ್ ಸಿನೆಮಾದಲ್ಲಿ ಧೂಮದ ಉಂಗುರ ಬಿಟ್ಟ ಹಾಗೆ ಸುತ್ತಿ ಸುಳಿದು ವಿದ್ಯುತ್ ದೀಪಗಳ ನಡುವೆ ಕತ್ತಲನ್ನು ಕಪ್ಪಾಗಿಸಲು ಪ್ರಯತ್ನ ಮಾಡುತ್ತವೆ. ಸಹಸ್ರಾರು ವರ್ಷಗಳಿಂದ ದಡದಿಂದ ಬಿಡುಗಡೆಗೆ ಎಡೆಬಿಡದೆ ಅಲೆಯಾಗಿ ಅಪ್ಪಳಿಸಿ ಪ್ರಯತ್ನಿಸಿ ಉಪ್ಪುಪ್ಪಾದರೂ ಸೋಲೊಪ್ಪದ ಕಡಲಿನ ನೀರು, ಇಡೀ ಪೇಟೆಯ ಬೆಳಕನ್ನು ಪ್ರತಿಫಲಿಸಿ ತನ್ನೊಳಗೆ ಬಿಂಬವಾಗಿಸಿ ಬೆಚ್ಚಗಿದ್ದಂತೆ ಕಂಡಿತು. ಮುಂಬಯಿಯಲ್ಲಿ ಅತ್ಯಂತ ದೊಡ್ಡ ಸ್ಲಮ್ ಇದೆ ಅಂತಾರೆ. ಆದರೆ ಎತ್ತರದಲ್ಲಿ ಹಾರುವ ವಿಮಾನದಲ್ಲಿ ಕುಳಿತ ಕಣ್ಣುಗಳಿಗೆ ಈ ಗುಡಿಸಲುಗಳು, ನಿರ್ಲಕ್ಷಿಸುವಷ್ಟು ಚಿಕ್ಕವು. ಷಹರದ ಅಂಡರ್ ಗ್ರೌಂಡ್ ಚಟುವಟಿಕೆಗಳು ಮನಸ್ಸಿನ ಒಳಪದರದ ವ್ಯಭಿಚಾರೀ ಭಾವದ ಹಾಗೆ, ವಿಮಾನದ ನೇರ ಕಣ್ಣಿಗೆ ಕಾಣಿಸಲ್ಲ.  ಪ್ಲೀಸ್ ಟೈ ಯುವರ್ ಸೀಟ್ ಬೆಲ್ಟ್.  ವಿಮಾನ ಕೆಲವೇ ನಿಮಿಷಗಳಲ್ಲಿ ಲ್ಯಾಂಡ್ ಆಗಲಿದೆ ಅಂತ ಪೈಲಟ್ ಗೊಗ್ಗರು ಇಂಗ್ಲಿಷ್ ನಲ್ಲಿ ಕೊರೆದಾಗ ಪೇಟೆಯ ನೋಟದಿಂದ ಕಣ್ಣು ಒಳ ಸೆಳೆದು ವಿಮಾನದ ಚೌಕಟ್ಟಿನ ಒಳಗೆ ಸ್ಥಿರನಾದೆ. ಹೌದಲ್ಲಾ! ಇದೇ ಮುಂಬಯಿ ನಗರದ ಬಗ್ಗೆ ಜಿ.ಎಸ್.ಶಿವರುದ್ರಪ್ಪ ನವರು ಬರೆದ ಕವಿತೆ ನೆನಪಾಯಿತು. ಕೇಳುವಿರಾ.. **   **   **   ** ಮುಂಬೈ ಜಾತಕ ಹುಟ್ಟಿದ್ದು: ಆಸ್ಪತ್ರೆಯಲ್ಲಿ ಬೆಳೆದದ್ದು: ಬಸ್ಸು ಟ್ರಾಂ ಕಾರು ಟ್ಯಾಕ್ಸಿ ಎಲೆಕ್ಟ್ರಿಕ್ ಟ್ರೇನುಗಳಲ್ಲಿ ಕುಡಿದದ್ದು: ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿ ಹಾಲು, ಗ್ರೈಪ್ ಸಿರಪ್ ಹಾರ್ಲಿಕ್ಸ್ ಇತ್ಯಾದಿ ಕಂಡಿದ್ದು :ಬೆಳಗಿನಿಂದ ಸಂಜೆಯ ತನಕ ಲಕ್ಷ ಚಕ್ರದ ಉರುಳು ಅವಸರದ ಹೆಜ್ಜೆ ಯ ಮೇಲೆ ಸರಿವ ನೂರಾರು ಕೊರಳು ಕಲಿತದ್ದು: ಕ್ಯೂ ನಿಲ್ಲು:ಪುಟ್ಪಾತಿನಲ್ಲೇ ಸಂಚರಿಸು; ರಸ್ತೆವದಾಟುವಾಗೆಚ್ಚರಿಕೆ; ಓಡು, ಎಲ್ಲಿಯೂ ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು; ಎಲ್ಲಾದರೂ ಸರಿಯೆ, ಬೇರೂರು,ಹೀರು. ತಾಯಿ:  ಸಾವಿರ ಗಾಲಿ ಉರುಳಿ ಹೊರಳುವ ರಸ್ತೆ ಯಂಚಿನಲ್ಲೇ ಕೈಹಿಡಿದು ನಡೆಸಿದವಳು. ಇರುವ ಒಂದಿಂಚು ಕೋಣೆಯಲ್ಲೇ ಹೊರಲೋಕವನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು. ತಂದೆ: ಬೆಳಗಿನಿಂದ ಸಂಜೆಯ ತನಕ ಕಣ್ಮರೆಯಾಗಿ ರಜಾ ದಿನಗಳಲ್ಲಿ ಕಣ್ಣಿಗೆ ಕಂಡು ಕುಳಿತು ಕೆಮ್ಮುವ ಪ್ರಾಣಿ. ವಿದ್ಯೆ: ಶಾಲೆ ಕಾಲೇಜುಗಳುವಕಲಿಸಿದ್ದು; ದಾರಿ ಬದಿ ನೂರಾರು ಜಾಹೀರಾತು ತಲೆಗೆ ತುರುಕಿದ್ದು, ರೇಡಿಯೋ ಸಿಲೋನ್ ವ್ಯಾಪಾರ ವಿಭಾಗ ಶಿಫಾರಸ್ಸು ಮಾಡಿದ್ದು.  ನೀನಾಗಿ ಕಲಿತದ್ದು ಬಲು ಕಡಿಮೆ, ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆಗೆ ಕಣ್ಣಾಡಿಸುವುದೊಂದನ್ನು ಹೊರತು. ಜೀವನ:  ಈ ಲಕ್ಷ ದಾರಿಗಳ ಚದುರಂಗದಾಟದಲಿ, ನೂರು ಬೆಳಕಿನ ಕೆಳಗೆ ಯಾರದೋ ಕೈಗೊಂಬೆಯಾಗಿ ಮುಂದುವರಿಯುವುದು.  ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು; ರೈಲನ್ನೊ ಬಸ್ಸನೋ ಹಿಡಿಯುವುದು, ಸಾಯಂಕಾಲ ಸೋತು  ಸುಸ್ತಾಗಿ ರೆಪ್ಪೆಯ  ಮೇಲೆ ಹತ್ತು ಮಣ ಆಯಾಸವನ್ನು ಹೊತ್ತು ಹನ್ನೊಂದು ಘಂಟೆ ಹೊಡೆವಾಗ ಮನೆಯಲ್ಲಿ ಕಾದೂ ಕಾದೂ ತೂಕಡಿಸಿ ಮಂಕಾದ ಮಡದಿಯನು ಎಚ್ಚರಿಸುವುದು. ತಣ್ಣಗೆ ಕೊರೆವ ಕೂಳುಂಡು ಬಾಡಿಗೆ ಮನೆಯ ನೆರಳಿನ ಕೆಳಗೆ, ಮತ್ತೆ  ಸಾವಿರ ಗಾಲಿಗಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು. ***       ***       **** ಕವಿತೆಯ ಹೆಸರೇ ಮುಂಬೈಯ ಜಾತಕ. ಜಾತಕ ಎಂದರೆ ಹುಟ್ಟು, ಸಾವು ಇವಿಷ್ಟರ ನಡುವಿನ ಬದುಕಿನ ಚಿತ್ರವನ್ನು ಸೂತ್ರರೂಪದಲ್ಲಿ ಹಿಡಿದಿಟ್ಟ ಚಿತ್ರಸಮೀಕರಣ. ಕವಿತೆ ಮುಂಬಯಿ ನಗರದ ಬದುಕಿನ ಹಲವು ಘಟ್ಟಗಳನ್ನು ಒಂದೊಂದಾಗಿ ತೆರೆದಂತೆ ನಗರದ ಫಿಸಿಯಾಲಜಿ ಮತ್ತು ಸೈಕಾಲಜಿ ಎರಡರ ಪರಿಚಯವಾಗುತ್ತೆ. ಇಲ್ಲಿ ಅತ್ಯಂತ ಮುಖ್ಯ ಅಂಶವೆಂದರೆ, ಕವಿ ಪಟ್ಟಣವನ್ನು ಒಳ್ಳೆಯದು, ಕೆಟ್ಟದು ಎಂಬ ಬೈಪೋಲಾರ್ ದೃಷ್ಟಿಕೋನದಿಂದ ನೋಡುವುದೇ ಇಲ್ಲ. ಸರಿ- ತಪ್ಪುಗಳು, ಯಾವಾಗಲೂ ಮನುಷ್ಯನ ಪರಿಸ್ಥಿತಿಗೆ ಸಾಪೇಕ್ಷವಾಗಿರುವುದರಿಂದ, ಈ ಕವಿತೆಯ ಧ್ವನಿಗೆ ಸಮತೋಲನವಿದೆ. ಹುಟ್ಟಿದ್ದು: ಆಸ್ಪತ್ರೆಯಲ್ಲಿ ಯಾರು ಹುಟ್ಟಿದ್ದು!  ಹಳೆಯ ಕಾಲದಲ್ಲಿ ಹಳ್ಳಿಯಲ್ಲಿ ಮನೆಯಲ್ಲಿಯೇ ಹೆರಿಗೆಯ ವ್ಯವಸ್ಥೆ ಇತ್ತು. ಹಳ್ಳಿಯಲ್ಲಿ ಮನೆಗೆ ಬಂದು ಹೆರಿಗೆ ಮಾಡಿಸುವ ಹೆಂಗಸು, ಮಗುವಿನ ಜೀವನದುದ್ದಕ್ಕೂ, ಎರಡನೇ ಅಮ್ಮನ ಥರ ವಿಶೇಷ ಅಟ್ಯಾಚ್ಮೆಂಟ್ ಮತ್ತು ಸ್ಥಾನಮಾನ ಪಡೆಯುತ್ತಾಳೆ. ಆ ಹೆಂಗಸು, ಆಗಾಗ ತಾನು ಹೆರಿಗೆ ಮಾಡಿದ ಮಕ್ಜಳನ್ನು ನೋಡಿ ಖುಷಿ ಪಡುವುದು ಅತ್ಯಂತ ಸಾಮಾನ್ಯ. ಅದೊಂದು ಭಾವನಾತ್ಮಕ ಸಂಬಂಧ. ಆದರೆ ನಗರದಲ್ಲಿ ಆಸ್ಪತ್ರೆಯಲ್ಲಿ ಹೆರಿಗೆ. ಅದೊಂದು ವ್ಯವಸ್ಥೆ. ಒಂದು ಥರಾ ಈ ಕಡೆ ಬಾಗಿಲಿಂದ ಗರ್ಭವತಿಯರು ಒಳ ಹೋದರೆ, ಆ ಕಡೆ ಬಾಗಿಲಿಂದ ಅಮ್ಮ ಮತ್ತು ಮಗು ಹೊರಗೆ ಬರುವಂತಹ ಇಂಡಸ್ಟ್ರಿಯಲ್ ವ್ಯವಸ್ಥೆ. ಇಲ್ಲಿ ಭಾವನಾತ್ಮಕ ಸಂಬಂಧ ಇಲ್ಲ. ಆಸ್ಪತ್ರೆಗೆ ಹಣ ಕಟ್ಟಿದರೆ, ಹೆರಿಗೆ ಮಾಡಿಸಿ ಕಳಿಸುತ್ತಾರೆ. ಹಾಗೆ, ಮಗುವಿನ ಹುಟ್ಟಿನಲ್ಲಿಯೇ ನಗರಸ್ವಭಾವವಿದೆ. ಹಾಗೆ ಹುಟ್ಟಿದ ಮಕ್ಕಳು ಬೆಳೆದು ನಗರದ ಪ್ರಜೆಗಳಾಗುತ್ತಾರೆ. ಅಂದರೆ ನಗರವೇ ಆಗುತ್ತಾರೆ. ಹಾಗೆ ನೋಡಿದಾಗ ತಿಳಿಯುತ್ತೆ, ಹುಟ್ಟಿದ್ದು ಆಸ್ಪತ್ರೆಯಲ್ಲಿ, ಅನ್ನುವಾಗ, ನಗರಕ್ಕೆ ನಗರವೇ ಹುಟ್ಟಿದ್ದು ಆಸ್ಪತ್ರೆಯಲ್ಲಿ ಅಂತ. ” ಬೆಳೆದದ್ದು: ಬಸ್ಸು ಟ್ರಾಂ ಕಾರು ಟ್ಯಾಕ್ಸಿ ಎಲೆಕ್ಟ್ರಿಕ್ ಟ್ರೇನುಗಳಲ್ಲಿ “ ಬಸ್ಸು,ಟ್ರಾಂ, ಕಾರು, ಎಲೆಕ್ಟ್ರಿಕ್ ಟ್ರೈನ್ ಗಳು ಸದಾ ಚಲನಶೀಲವಾದ, ಸದಾ ಗಿಜಿಗುಟ್ಟುವ, ವ್ಯವಸ್ಥೆಯ ಸಂಕೇತ. ಮುಂಬಯಿಯಲ್ಲಿ ಅಮ್ಮಂದಿರೂ ದಿನವಿಡೀ ಕೆಲಸಕ್ಕಾಗಿ ಚಲಿಸುವಾಗ ಕಂಕುಳಲ್ಲಿ ಮಗು! ಹಳ್ಳಿಯಲ್ಲಿ ಪ್ರಾಣಿ ಪಕ್ಷಿಗಳ ಜತೆಗೆ ಬೆಳೆದರೆ, ಮುಂಬಯಿ ಯಲ್ಲಿ ಬೆಳವಣಿಗೆಯ ಸಂಗಾತಿ, ಯಂತ್ರಗಳು. ಅದರ ಪರಿಣಾಮ ಮನಸ್ಸಿನ ಮೇಲೆ ಏನು ಎಂಬುದು ಓದುಗನ ಗ್ರಹಿಕೆಗೆ ಬಿಟ್ಟದ್ದು. ” ಕುಡಿದದ್ದು: ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿ ಹಾಲು, ಗ್ರೈಪ್ ಸಿರಪ್ ಹಾರ್ಲಿಕ್ಸ್ ಇತ್ಯಾದಿ “ ಸಾಧಾರಣವಾಗಿ ಹಳ್ಳಿಯ ಮನೆಯಲ್ಲಿ ದನ, ಅದರ ಹಾಲು ಕರೆದು ಮಗುವಿಗೆ ಕುಡಿಸುತ್ತಾರೆ. ಮಗು ಬೆಳೆದು ಮಾತಾಡಲು ತೊಡಗಿದಾಗ ಆ ದನವನ್ನು ಮಗುವಿಗೆ ಗೋಮಾತೆ ಎಂದು ಪರಿಚಯಿಸುವ ಪರಿಪಾಠ. ಆ ಮಗು ಮತ್ತು ದನದ ನಡುವೆ ಒಂದು ಅನೂಹ್ಯ ಸಂಬಂಧ ಬೆಳೆಯುತ್ತೆ. ಮುಂಬಯಿಯಲ್ಲಿ ಹಾಗಲ್ಲ. ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟಲೀ ಹಾಲು!. ಮಗುವಿಗೆ ಹಾಲಿನ ಉಗಮವೇ ಒಂದು ಬಾಟಲಿಯಂತಹ ವಸ್ತುವಾದ ಹಾಗೆ. ಗೋಮಾತೆಯ ಜಾಗದಲ್ಲಿ ಬಾಟಲಿ. ಗ್ರೈಪ್ ಸಿರಪ್, ಹಾರ್ಲಿಕ್ಸು ಎಲ್ಲವೂ, ಜಾಹೀರಾತು ಜಗತ್ತಿನ ಪೇಯಗಳು. ಮಗು ಮತ್ತು ಅಮ್ಮ ಎಲ್ಲರೂ ಜಾಹೀರಾತಿನ ಮೇಲೆ ವಿಶ್ವಾಸವಿಟ್ಟು ಮಗುವಿನ ಬೆಳವಣಿಗೆಯ ಪೋಷಕಾಂಶಗಳ ನಿರ್ಧಾರ ಮಾಡುತ್ತಾರೆ. ” ಕಂಡಿದ್ದು: ಬೆಳಗಿನಿಂದ ಸಂಜೆಯ ತನಕ ಲಕ್ಷ ಚಕ್ರದ ಉರುಳು ಅವಸರದ ಹೆಜ್ಜೆಯ ಮೇಲೆ ಸರಿವ ನೂರಾರು ಕೊರಳು “ ಕಾಣುವುದು ಎಂದರೆ ದರ್ಶನ. ಬೆಳಗಿನಿಂದ ಸಂಜೆಯ ತನಕ ಎಂದರೆ, ಒಂದು ದಿನವೂ ಆಗಬಹುದು, ಹುಟ್ಟಿನಿಂದ ಸಾವಿನ ತನಕದ ಬದುಕೂ ಆಗಬಹುದು. ಲಕ್ಷ ಲಕ್ಷ ಚಕ್ರದ ಉರುಳು, ಕಾಲಚಕ್ರವೇ, ಋತುಚಕ್ರವೇ, ಬದುಕಿನ ಏರಿಳಿತವೇ, ನಗರದ ಚಲಿಸುವ ವಾಹನಗಳ ಚಕ್ರಗಳು ಉರುಳುವ ಚಲನಶೀಲತೆಯೇ, ಅಥವಾ ಕೊರಳಿಗೆ ಉರುಳಾಗುವ ಹಲವಾರು ಸಮಸ್ಯೆಗಳೇ?. ಸುಶಾಂತ್ ಸಿಂಗ್ ಹಾಕಿಕೊಂಡ ಉರುಳೇ?. ಅವಸರದ ಹೆಜ್ಜೆ ಹಾಕುವುದು, ಕಾಲುಗಳು. ಜತೆಗೇ ಸರಿಯುವುದು ಕೊರಳು. ಕೊರಳು ಎಂದರೆ ಧ್ವನಿ, ಮಾತು,ಅಭಿಪ್ರಾಯ ಸಿದ್ಧಾಂತ ಇತ್ಯಾದಿಗಳಾಗಿ ಅನ್ವಯಿಸಲು ಸಾಧ್ಯ. ನಡಿಗೆಯ ವೇಗಕ್ಕೆ ಪ್ರಾಮುಖ್ಯತೆ. ಕೊರಳಿನ ದನಿಗಲ್ಲ ಅನ್ನುವುದು ಒಂದರ್ಥವಾದರೆ, ಚಲನಶೀಲ ವ್ಯವಸ್ಥೆಗೆ ಸಾಪೇಕ್ಷವಾಗಿ ಸಿದ್ಧಾಂತ, ಅಭಿವ್ಯಕ್ತಿ, ಚಲಿಸುತ್ತೆ. ” ಕಲಿತದ್ದು: ಕ್ಯೂ ನಿಲ್ಲು:ಪುಟ್ಪಾತಿನಲ್ಲೇ ಸಂಚರಿಸು; ರಸ್ತೆವದಾಟುವಾಗೆಚ್ಚರಿಕೆ; ಓಡು, ಎಲ್ಲಿಯೂ ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು; ಎಲ್ಲಾದರೂ ಸರಿಯೆ, ಬೇರೂರು,ಹೀರು.” ಜೀವನದ ಶಾಲೆಯಲ್ಲಿ ನಡೆದ ಪ್ರತೀ ಹೆಜ್ಜೆ ಪಠ್ಯ.  ಮೇಲಿನ ಪ್ಯಾರಾದಲ್ಲಿ ಅಷ್ಟೂ ಪ್ರತಿಮೆಗಳೇ.  ಅವುಗಳನ್ನು ಓದುಗರ ಚಿಂತನೆಗೆ ಬಿಡಲೇ?. ಬೇರೂರು, ಹೀರು ಎನ್ನುವ ಕವಿಯ ಭಾವ ಚಲನಶೀಲ ಬದುಕು ಹಂಬಲಿಸುವ ಸ್ಥರತೆಯೇ?. ಬೇರೂರದಿದ್ದಲ್ಲಿ ಹೀರುವುದು ಹೇಗೆ. ಜೀವನದ ಸಾರವನ್ನು ಹೀರಲು ಚಲನಶೀಲತೆಯಷ್ಟೇ ಸ್ಥಿರಪ್ರಜ್ಞೆಯೂ ಆಳ ಚಿಂತನೆಯೂ ಅಗತ್ಯವೇ. ತಾಯಿ, ತಂದೆ, ವಿದ್ಯೆಯ ಬಗ್ಗೆ ಕವಿ ಸೂಚ್ಯವಾಗಿ ತಿಳಿಸುವ ಸಾಲುಗಳು ನಿಮ್ಮ ಸೃಜನಶೀಲ ಚಿಂತನೆಗೆ ಹಲವು ರೂಪದಲ್ಲಿ ಕಾಣ ಬಹುದು. ” ಜೀವನ:  ಈ ಲಕ್ಷ ದಾರಿಗಳ ಚದುರಂಗದಾಟದಲಿ, ನೂರು ಬೆಳಕಿನ ಕೆಳಗೆ ಯಾರದೋ ಕೈಗೊಂಬೆಯಾಗಿ ಮುಂದುವರಿಯುವುದು.  ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು; ರೈಲನ್ನೊ ಬಸ್ಸನೋ ಹಿಡಿಯುವುದು, ಸಾಯಂಕಾಲ ಸೋತು  ಸುಸ್ತಾಗಿ ರೆಪ್ಪೆಯ  ಮೇಲೆ ಹತ್ತು ಮಣ ಆಯಾಸವನ್ನು ಹೊತ್ತು ಹನ್ನೊಂದು ಘಂಟೆ ಹೊಡೆವಾಗ ಮನೆಯಲ್ಲಿ ಕಾದೂ ಕಾದೂ ತೂಕಡಿಸಿ ಮಂಕಾದ ಮಡದಿಯನು ಎಚ್ಚರಿಸುವುದು. ತಣ್ಣಗೆ ಕೊರೆವ ಕೂಳುಂಡು ಬಾಡಿಗೆ ಮನೆಯ ನೆರಳಿನ ಕೆಳಗೆ, ಮತ್ತೆ  ಸಾವಿರ ಗಾಲಿಗಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು.” ಈ ಸಾಲುಗಳಲ್ಲಿ ಪ್ರತಿಯೊಂದು ಪದವೂ ರೂಪಕ ಅಥವಾ ಪ್ರತಿಮೆ. ಬಟ್ಟೆಯಲ್ಲಿ ಮೈ ತುರುಕಿ ಓಡುವುದು! ಎಂತಹಾ ಕಲ್ಪನೆ ಅಲ್ಲವೇ. ಬಟ್ಟೆಗೆ ಹೊಂದುವಂತೆ ದೇಹವನ್ನು ಫಿಟ್ ಮಾಡುವ ಜರೂರತ್ತು. ಬಟ್ಟೆ ಎಂದರೆ ದಾರಿ ಎಂಬ ಅರ್ಥ ತಗೊಂಡರೆ, ಬದುಕಿನ ದಾರಿ ಹೇಗಿದೆಯೋ ಅದಕ್ಕೆ ಸರಿಯಾದ ದೇಹಶಿಸ್ತು ಅಗತ್ಯ. ಆಫೀಸ್ ೫೦ ಕ.ಮೀ.ದೂರದಲ್ಲಿ ಇದ್ದರೆ, ಬೆಳಗಿನ ಜಾವ ಎದ್ದು ಮೂಡುವ ಸೂರ್ಯನಿಗೆ ಬೆನ್ನು ಹಾಕಿ,  ಆಫೀಸಿನತ್ತ ರೈಲುಗಾಡಿ ಹತ್ತಿ ಚಲಿಸಬೇಕು. ನಿದ್ದೆ ಬೇಡುವ ದೇಹವನ್ನು ದಂಡಿಸಿ, ಹೊಂದಿಸಿ, ಬದುಕಿನ ಬಟ್ಟೆಗೆ ತುರುಕಬೇಕು.   ‘ಸಾಯಂಕಾಲ ರೆಪ್ಪೆಯ ಮೇಲೆ ಹತ್ತು ಮಣ ಭಾರ ಹೊತ್ತು’  ಬದುಕಿನ ಸಾಯಂಕಾಲವೇ? ಅನುಭವದ ಭಾರವೇ?. ಕಲಿತ, ನಂಬಿದ ಸಿದ್ಧಾಂತದ/ ನಂಬಿಕೆಗಳ ಭಾರವೇ. ಆ ಭಾರದಿಂದ ಮುಂದಿನ ದರ್ಶನದ ಬಾಗಿಲಾದ ರೆಪ್ಪೆ ಮುಚ್ಚುತ್ತಾ ಇದೆಯೇ?. “ಬಾಡಿಗೆ ಮನೆಯ ನೆರಳು” ಅನನ್ಯ ಅಭಿವ್ಯಕ್ತಿ.  ಇಹ ಲೋಕವೇ ಬಾಡಿಗೆ ಮನೆಯೇ?. “ಸಾವಿರ ಗಾಲಿಗಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು”

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಮೂರನೇ ಆಯಾಮ

ಅಂಕಣ ಬರಹ ಹಾಡುವ ತೊರೆಗೆ ಹಾದಿ ತೋರುವ ಕವಿತೆಗಳು ಸಂಕಲನ-ತೊರೆ ಹರಿವ ಹಾದಿಕವಿ- ವಿನಯಚಂದ್ರಬೆಲೆ-೧೨೦ಪ್ರಕಾಶನ- ವಿಶಿಷ್ಟ ಪ್ರಕಾಶನ, ಹಾಸನ   ಕವಿತೆಗಳ ಜಾಡು ಎಂತಹದ್ದು? ಅದು ಯಾವ ಹಾದಿ ಹಿಡಿದು ಹೊರಟಿರುತ್ತದೆ? ಕವಿತೆ ಅಂತರ್ಮುಖಿಯಾಗಿರಬೇಕೆ ಅಥವಾ ಬಹಿರ್ಮುಖಿಯಾಗಿರಬೇಕೆ ಎನ್ನುವ ಪ್ರಶ್ನೆ ಸದಾಕಾಲ ವಿಮರ್ಶೆಯನ್ನು ಕಾಡುತ್ತಿರುತ್ತದೆ. ಒಂದು ಕವಿತೆ ಅತ್ಯುತ್ತಮ ಅಥವಾ ಇನ್ನೊಂದು ಕವಿತೆ ಸಾಧಾರಣ ಇಲ್ಲವೆ ಈ ಕವಿತೆ ಕಳಪೆ ಎಂದು ಹೇಳುವ ಮಾನದಂಡವಾದರೂ ಯಾವುದು? ಕವಿತೆಯನ್ನು ಓದಿ ಆಸ್ವಾದಿಸಬೇಕೋ ಅಥವಾ ವಿಮಶೆಯ ನಿಕಶಕ್ಕೆ ಒಡ್ಡಿ ಒಳ್ಳೆಯ ಕವಿತೆಯೋ ಕೆಟ್ಟ ಕವಿತೆಯೋ ಎಂದು ತೀರ್ಪುಕೊಡುವಲ್ಲಿ ನಿರತರಾಗಬೇಕೋ? ಇದಾವುದರ ಹಂಗಿಲ್ಲದೇ ಓದಿ ಆಸ್ವಾದಿಸುವ ಕವನಗಳು ನಮ್ಮ ಮುಂದಿವೆ. ಕವಿ ವಿನಯಚಂದ್ರ ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಪುಸ್ತಕ ಬಿಡುಗಡೆಗೆಂದು ಕರೆದಾಗ ನನಗೆ ಹುಟ್ಟಿದ ಪ್ರಶ್ನೆಗಳು ಇವೆಲ್ಲ. ಒಂದಿಷ್ಟು ಸ್ನೇಹಿತರು ಸೇರಿ ಪುಸ್ತಕವನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿ ಸಂಭ್ರಮಿಸಿದ್ದೆವು.    ಹಾಗೆ ನೊಡಿದರೆ ವಿನಯಚಂದ್ರ ಕಾವ್ಯಲೋಕಕ್ಕೆ ಹೊಸಬರೇನಲ್ಲ. ಈಗಾಗಲೇ ಒಂದು ಕವನಸಂಕಲನ ಬಿಡುಗಡೆಯಾಗಿದೆ. ಈಗಾಗಲೇ ಅವರ ಮೌನಗೀತ ಎನ್ನುವ ಕವನ ಸಂಕಲನ ಪ್ರಕಟಗೊಂಡಿದೆ. ಸಾಹಿತ್ಯಾಸಕ್ತರಿಗೆ ಹಾಗೂ ಸಹೃದಯರಿಗೆ ಫೇಸ್‌ಬುಕ್ ಮುಂತಾದ ಕಡೆಗಳಲ್ಲಿ ತಮ್ಮ ಕವನವನ್ನು ಉಣಬಡಿಸಿದ್ದಾರೆ.  ಇವರ ಎರಡನೆ ಸಂಕಲನ ತೊರೆ ಹರಿವ ಹಾದಿ ಈಗ ನಿಮ್ಮ ಮುಂದಿದೆ. ಇಲ್ಲಿ ಉಳಿಸಿದರಲ್ಲವೇಅಲ್ಲಿ ಸಮನಾಗುವುದು? ಎನ್ನುತ್ತ ಉಳಿಕೆ ಗಳಿಕೆ ಹಾಗು ಲಯದ ಕುರಿತು ನಮ್ಮ ಗಮನ ಸೆಳೆಯುವ ಕವನದ ಇವೆರಡೇ ಸಾಲುಗಳನ್ನಿಟ್ಟು ಓದಿನೋಡಿ. ಅದೆಷ್ಟೆಲ್ಲ ಅರ್ಥ ಹೊಮ್ಮಿಸುತ್ತದೆ. ಎಲ್ಲಿ ಉಳಿಸಬೇಕು ಮತ್ತು ಎಲ್ಲಿ ಸಮನಾಗಿಸಬೇಕು ಎನ್ನುವುದನ್ನು ಜೀವನದಲ್ಲಿ ಕಲಿಯಬೇಕಾದುದು ಬಹು ಮುಖ್ಯ. ಉಳಿಸಬೇಕಾದಲ್ಲಿ ಉಳಿಸಿ, ಖರ್ಚು ಮಾಡುವಲ್ಲಿ ಮಾಡಿದರೆ ಮಾತ್ರ ಜೀವನಕ್ಕೆ ಬೆಲೆ. ಜೀವನದಲ್ಲಿ ಕೊಡಬೇಕಾದ ಪರೀತಿಯನ್ನು ಧಾರಾಳವಾಗಿ ಕೊಟ್ಟುಬಿಡಬೇಕು. ಪ್ರೀತಿಯನ್ನು ಉಳಿಸಿಕೊಂಡರೆ ಅದು ಎಲ್ಲಿಯೂ ಸಮನಾಗುವುದಿಲ್ಲ. ತಂದೆ ತಾಯಿಗೆ ಕೊಡಬೇಕಾದ ಪ್ರೀತಿ, ಸಹೋದರ ಸಹೋದರಿಯರಿಗೆ ನೀಡಬೇಕಾದ ವಾತ್ಸಲ್ಯ, ಸ್ನೇಹಿತರಿಗೆ ಕೊಡುವ ಆತ್ಮೀಯತೆ ಹಾಗೂ ಪ್ರೇಮಿಗೆ ಮತ್ತು ಜೀವನ ಸಂಗಾತಿಗೆ ನೀಡಬೇಕಾದ ಪ್ರೇಮ, ಮಕ್ಕಳಿಗೆ ನೀಡುವ ಮಮತೆ ಎಲ್ಲವೂ ಬೇರೆ ಬೇರೆಯದ್ದೇ. ಆದರೆ ನಾವು ಅದನ್ನೆಲ್ಲ ಒಂದಾಗಿಸಿ ನಮ್ಮೊಳಗೇ ಒಂದು ಗೊಂದಲವನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ. ಯಾರಿಗೆ ಯಾವುದನ್ನು ಕೊಡಬೇಕು ಎಂಬ ವಿಭ್ರಾಂತಿಯಲ್ಲಿ ಯಾರಿಗೂ ಸರಿಯಾಗಿ ನೀಡದೇ ಉಳಿಸುವ ಪ್ರಯತ್ನ ಮಾಡುತ್ತಲೇ ಎಲ್ಲ ಕಡೆಯೂ ಸೋಲುತ್ತೇವೆ. ಹಾಗಾದರೆ ಕೊಡುವುದೆಲ್ಲಿ ಸಮನಾಗುವುದೆಲ್ಲಿ? ಕೊಡುವ ಮತ್ತು ಸಮನಾಗುವ ನಮ್ಮ ಪ್ರಯತ್ನ ಹಣಕಾಸಿನ ವ್ಯವಹಾರದಲ್ಲಿ ತುಂಬ ಚೆನ್ನಾಗಿ ನಿರೂಪಿತವಾಗುತ್ತದೆ. ಎಲ್ಲೆಲ್ಲೋ ಬೇಕಾಬಿಟ್ಟಿ ಖರ್ಚು ಮಾಡುವ ಬದಲು ಅನಾವಶ್ಯಕ ಎನ್ನಿಸಿದಲ್ಲಿ ಉಳಿಸಿಕೊಂಡು ಖರ್ಚು ಮಾಡಲೇ ಬೇಕಾದಲ್ಲಿ ಧಾರಾಳವಾಗಬೇಕು. ಆದರೆ ಕವಿ ಸಂತೆಯ ದಿನ ಮುಂಜಾನೆಗೆದ್ದುಮುಂಡಾಸು ಬಿಗಿದ ರೈತನಿಗೆ ರೇಗುತ್ತೇನೆದರ ಹೆಚ್ಚಿತೆಂದು ಮುನಿಯುತ್ತೇನೆಚೌಕಾಸಿಗಿಳಿದು ಚಿಲ್ಲರೆಯ ಜೇಬಿಗಿಳಿಸುತ್ತೇನೆ ಎಂಬ ಸಾಲಿನ ಮುಂದೆ ಈ ಮೊದಲೆ ಹೇಳಿದ ಎರಡು ಸಾಲುಗಳನ್ನು ಸೇರಿಸುತ್ತಾರೆ. ಅಂದರೆ ಅದಕ್ಕೂ ಹಿಂದೆ ಅದೆಲ್ಲೋ ಸೌತೆಕಾಯಿಗೆ ಉಪ್ಪು ಹಾಕಿಕೊಟ್ಟಿದ್ದಕ್ಕೆ ಕೇಳಿದ್ದಷ್ಟು ಬೆಲೆ ತೆರುವ, ಸುಮ್ಮನೆ ಡೊಗ್ಗು ಸಲಾಮು ಹೊಡೆಯುವವನಿಗೆ ಗರಿಗರಿ ನೋಟುಗಳನ್ನು ನೀಡಿ ಹೀಗೆ ಬಡ ರೈತನ ಎದುರು ಚಿಲ್ಲರೆಗಾಗಿ ಚೌಕಾಶಿ ಮಾಡಿ ನಮ್ಮ ಸಾಮರ್ಥ್ಯವನ್ನು ತೋರಿಸಿ, ಹಣ ಉಳಿಸಿಕೊಂಡ ಆತ್ಮತೃಪ್ತಿಯಲ್ಲಿ ಮೆರೆಯುತ್ತೇವೆ. ಯಾಕೆಂದರೆ ನಮ್ಮ ರೋಷಾವೇಶಗಳನ್ನು ತೋರಿಸಬಹುದಾದದ್ದು ಕೇವಲ ಬಡ ರೈತನ ಎದುರಿಗೆ ಮಾತ್ರ. ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಬಾಗಿಲು ಕಾಯುವವನೂ ನಮ್ಮ ಕೋಪಕ್ಕೆ ಹೆದರಲಾರ. ಆದರೆ ನಾವು ಅವನಿಗೆ ಟಿಪ್ಸ್ ಕೊಟ್ಟು ಅವನನ್ನು ಸಂತೃಪ್ತಿಗೊಳಿಸುತ್ತೇವೆಯೇ ಹೊರತೂ ಅವನ ಬಳಿ ಚೌಕಾಶಿ ಮಾಡುವುದಿಲ್ಲ ಎಂಬ ನೋವು ಕವಿಗಿದೆ. ಅದು ಈ ಕವಿತೆಯಲ್ಲಿ ತುಂಬ ಸುಂದರವಾಗಿ ಬಿಂಬಿತವಾಗಿದೆ. ಬಿಟ್ಟರೆ  ಗೊಮ್ಮಟನನ್ನೂ ಕುಟ್ಟಿಜಲ್ಲಿ ಮಾಡಿ ಲೋಡು ಮಾಡಲುಕಾದಿದ್ದಾರೆ ಜನಮರಳು ಮರಳಾಗಳೂ ಕಾಯದೆಮಣ್ಣ ಸೋಸಿಯೇ ಒಡೆಯುತ್ತಿದ್ದಾರೆಗಾಂಧಾರಿ ಪಿಂಡ ಎಂತಹ ಮಾರ್ಮಿಕ ಸಾಲುಗಳು ಇವು. ನಮ್ಮ ಜನ ನಿಸರ್ಗದ ಯಾವುದನ್ನು ಇದ್ದಂತೆಯೇ ಇರಲು ಬಿಟ್ಟಿದ್ದೇವೆ ಹೇಳಿ? ಅದಂದೆಂದೋ ಬೆಟ್ಟವಾಗಿದ್ದ ಕಲ್ಲನ್ನು ಒಡೆದು ಕೆತ್ತಿ ಗೊಮ್ಮಟನನ್ನಾಗಿ ಮಾಡಿದರು. ಈಗ ನಮಗೆ ಅವಕಾಶ ಸಿಕ್ಕರೆ ಆ ಗೊಮ್ಮಟನನ್ನೂ ಒಡೆದು ಜಲ್ಲಿ ಮಾಡಿ ಮನೆ ಕಟ್ಟಲೋ, ರಸ್ತೆಗೋ ಹಾಕಿ ದಮಾಸು ಹಾಕಿ ನುಣುಪು ಮಾಡಿಬಿಡುತ್ತೇವೆ. ಯಾಕೆಂದರೆ ಮರಳಿನ ಹೆಸರಲ್ಲಿ ನದಿಯ ಒಡಲನ್ನು ಬಗೆದು ಬರಿದಾಗಿಸಿ ನದಿಯ ಪಾತ್ರವೇ ಬದಲಾಗುವಂತೆ ಮಾಡುವುದರಲ್ಲಿ ನಾವು ನಿಸ್ಸಿಮರು. ಇನ್ನು ಕಡಲ ತೀರದಲ್ಲಂತೂ ಸಮುದ್ರ ದಮಡೆಯ ಮರಳನ್ನೂ ಬಗೆದು ಹೊತ್ತೊಯ್ಯುತ್ತಿದ್ದೇವೆ. ಕೆಲವೊಮ್ಮೆ ಮರಳು ಎನ್ನುವ ಹೆಸರಿನಲ್ಲಿ ಮಣ್ಣನ್ನೂ ಹೊತ್ತೊಯ್ದು ಮಾರಾಟ ಮಾಡಿ ಹಣಗಳಿಸುತ್ತಿದ್ದೇವೆ. ಚಿನ್ನದ ಮೊಟ್ಟೆಯಿಡುವ ಕೋಳಿಯ ಗರ್ಭವನ್ನು ಉದರದಿಮದ ಹೊರತೆಗೆದು ಹೊರಗೇ ಕಟ್ಟಿ, ಹುಂಜದ ವೀರ್‍ಯ ತಾಗಿ ಮೊಟ್ಟೆಯಾದ ತಕ್ಷಣ ಕಿತ್ತುಕೊಳ್ಳುವ ಮನುಷ್ಯ ಸಮಾಜದ ನೀಚ ಹುನ್ನಾರಗಳ ಕುರಿತಾಗಿ ಕವಿಯಲ್ಲಿ ಬೇಸರವಿದೆ. ಅದಕ್ಕೂ ಹೆಚ್ಚಾಗಿ ಇಲ್ಲಿ ಕವಿ ತನ್ನನ್ನು ತಾನು ವ್ಯಂಗ್ಯವಾಡಿಕೊಳ್ಳುವುದನ್ನು ಇಲ್ಲಿ ಕಾನುತ್ತೇವೆ. ತನಗೂ ಎರಡು ಮಕ್ಕಳಿವೆ, ನಾನೂ ಇಷ್ಟೆಲ್ಲ ಮಂತ್ರ ಹೇಳಿ ಕಾರಿನಲ್ಲೇ ಓಡಾಡುತ್ತೇನೆ ಎಂಬ ಅಪರಾಧಿಭಾವವನ್ನು ತೋರಿಸುತ್ತಾರೆ.    ವಿನಯಚಂದ್ರರ ಕವಿತೆಗಳು ಇಷ್ಟವಾಗುವುದೇ ಅಲ್ಲಿರುವ ಸಾಮಾಜಿಕ ಪ್ರಜ್ಞೆಯಿಂದಾಗಿ. ಭವಿಷ್ಯ ಎನ್ನುವ ಕವಿತೆಯಲ್ಲಿ ಅವರು ಅಂತಹ ಸಾಮಾಜಿಕ ಕಳಕಳಿಯಿಂದಲೇ ನಮ್ಮನ್ನು ಅಲ್ಲಾಡಿಸಿಬಿಡುತ್ತಾರೆ. ಇರಾಕಿನಲ್ಲಿ ಗೋಲಿಯಾಡಬೇಕಾಗಿದ್ದ, ಚಿನ್ನಿ ದಾಂಡು ಆಡಬೇಕಾಗಿದ್ದ ಮಕ್ಕಳ ಕೈಯ್ಯಲ್ಲಿ ಬಂದೂಕುಗಳನ್ನು ನೀಡಿ, ಚಿಕ್ಕವರಿರುವಾಗ ನಮ್ಮ ಕುತ್ತಿಗೆಯಲ್ಲಿ ರಕ್ಷಾ ಕವಚದಂತೆ ಇರುತ್ತಿದ್ದ ತಾಯಿತದ ಜಾಗದಲ್ಲಿ ಸೈನೈಡ್ ಕಟ್ಟಿ ಆಟದ ಮೈದಾನದಲ್ಲಿ ಬಾಂಬುಗಳೊಂದಿಗೆ ಆಟವಾಡುವುದನ್ನು ಕಂಡಾಗ ಮಕ್ಕಳ ಬಾಲ್ಯವನ್ನು ಕಿತ್ತುಕೊಂಡವರ ಕುರಿತು ಆಕ್ರೋಶ ಉಕ್ಕುತ್ತದೆ. ಸೋಮಾಲಿಯಾದಲ್ಲಿ ಮೂಳೆ ಚಕ್ಕಳವಾಗಿದ್ದ ಮಕ್ಕಳ ಅಸ್ತಿಪಂಜರದಂತಹ ದೇಹ, ಹಾಲು ಕೊಡಬೇಕಾಗಿದ್ದ ಅಮ್ಮನ ಮೊಲೆಯಲ್ಲಿ ಜಿನುಗುವ ರಕ್ತ ನಮ್ಮನ್ನು ಅಧೀರಗೊಳಿಸುತ್ತದೆ. ಚೀನಾದಲ್ಲಂತೂ ಬ್ರೂಣ ಹತ್ಯೆ ಸಾಮಾನ್ಯ. ಹುಟ್ಟಲಾರದ ಮಕ್ಕಳು ಶೌಚಾಲಯದ ಗುಂಡಿಗಳಲ್ಲಿ ನರಳಿದರೆ, ಹುಟ್ಟಿದ ಮಕ್ಕಳು ಸಾಧಿಸಲೇ ಬೇಕಾದ ಒತ್ತಡಕ್ಕೆ ಸಿಲುಕಿ, ಸರಕಾರದ ಅಣತಿಯಂತೆ ಬಾಲ್ಯ ಕಳೆದುಕೊಳ್ಳುವುದನ್ನು ಕಂಡರೆ ಆಧುನಿಕ ಸಮಾಜದ ಕುರಿತಾಗಿಯೇ ಅಸಹ್ಯ ಹುಟ್ಟುತ್ತದೆ. ಚಂದ್ರ ಲೋಕಕ್ಕೆ, ಮಂಗಳ ಗ್ರಹಕ್ಕೆ ಹೋಗುವ ಆತುರದಲ್ಲಿ ನಾವು ನಮ್ಮ ಭೂಮಿಯನ್ನು ಹಾಳುಗೆಡವುದನ್ನು ಕಂಡು ಕವಿ ಮಮ್ಮಲ ಮರಗುವುದು ಈ ಕವಿತೆಯಲ್ಲಿ ಕಾಣುತ್ತದೆ.            ಅಸಹಾಯಕ ಕವಿತೆಯಲ್ಲಿ ದೇಶದ ತುಂಬ ನಡೆಯುತ್ತಿರುವ ಜಲಪ್ರವಾಹವನ್ನು ಉಲ್ಲೇಖಿಸುತ್ತಾರೆ. ಕೇರಳದಲ್ಲಿ, ಕೊಡಗಿನಲ್ಲಿ, ಶಿರಾಡಿಯಲ್ಲಿ, ಎಡಕುಮರಿಯಲ್ಲಿ ಹೀಗೆ ಸುತ್ತಮುತ್ತ ಎತ್ತ ನೋಡಿದರೂ ಜಲಪ್ರವಾಹ. ಗುಡ್ಡಗುಡ್ಡಗಳೇ ಕುಸಿದು, ನೀರು ಎಲ್ಲೆಡೆಯಿಂದ ಜನವಸತಿ ಪ್ರದೇಶದ ಮೇಲೆ ಜಾರಿ, ಮನೆಗಳೆಲ್ಲ ಕೊಚ್ಚಿಕೊಂಡು ಹೋಗುವಾಗ ಎಲ್ಲರ ಮನದಲ್ಲೂ ಅದೆಷ್ಟು ನೋವು, ಅದೆಷ್ಟು ವಿಷಾದ. ಆಗೆಲ್ಲ ಉಣ್ಣಲು, ತಿನ್ನಲು ಇಲ್ಲದವರಿಗೆ ಸಹಾಯ ಮಾಡುತ್ತೇನೆಂದು ಹೊರಟವರು ಅದೆಷ್ಟೋ ಮಂದಿ. ಕೆಲವರಂದು ಸಹಾಯ ಮಾಡುವ ನೆಪದಲ್ಲಿ ಆಹಾರ, ವಸ್ತ್ರ, ಹಣವನ್ನು ನೆಪ ಮಾತ್ರಕ್ಕೆ ನಿರಾಶ್ರಿತರಿಗೆ ನೀಡಿ, ಉಳಿದ್ದ್ದ್ನ್ನು ತಾವೇ ಹಂಚಿಕೊಂಡವರೂ ಇದ್ದರು. ಆದರೂ ಹೀಗೆ ಜನಜಾನುವಾರುಗಳ ಅಸಹಾಯಕತೆಗೆ ಹೆಚ್ಚಿನವರು ಮಾಡಿದ್ದೇನು? ಒಂದು ವಿಷಾದದ ಇಮೋಜಿ ಒತ್ತಿ, ಬೇಸರವಾಯಿತೆಂಬಂತೆ ಮೆಸೇಜು ಕುಟ್ಟಿ, ಹಣ ಕೊಡಲೇ, ಸಹಾಯಕ್ಕೆ ಹೊರಟು ಬಿಡಲೇ ಎಂದು ಯೋಚಿಸುತ್ತ ಕೊನೆಗೆ ಏನೂ ಮಾಡಲಾಗದೇ ಸುಮ್ಮನಿದ್ದವರೇ ಹೆಚ್ಚು, ಇದನ್ನು ಕವಿ ಅಜ್ಜಿಯ ಸಾವಿನೊಂದಿಗೆ ಹೋಲಿಸಿಕೊಳ್ಳುತ್ತಾರೆ. ಅಜ್ಜಿ ಸತ್ತ ಸುದ್ದಿ ಕೇಳಿ ಬೋರಾಡಿ ಅತ್ತು, ಏನೂ ಮಾಡಲಾಗದ ಅಸಹಾಯಕತೆಗೆ ಚೀರಿ, ಕಣ್ಣೀರಾಗಿ ಅಳುವಿಗೆ ನೆರೆಹೊರೆಯವರ ಸಾಂತ್ವಾನ ಕೇಳಿ, ನಂತರ ಕೆಲವೇ ದಿನಗಳಲ್ಲಿ ಅಜ್ಜಿ ಇದ್ದಳೆಂಬುದನ್ನೇ  ಮರೆತಿದ್ದೆ ಎನ್ನುತ್ತಾರೆ. ನಮ್ಮೆಲ್ಲರ ಬದುಕೂ ಇಷ್ಟೇ. ಘಟನೆ ನಡೆದಾಗ ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂದು ದೊಡ್ಡ ದೊಡ್ಡ ಮಾತುಗಳನ್ನಾಡುತ್ತೇವೆ. ಆದರೆ ಏನೂ ಮಾಡಲಾಗದೆ ಆ ಪರಿಸ್ಥಿತಿಗೆ ಹೊಂದಿಕೊಂಡು ಬಾಳುವುದನ್ನು ರೂಢಿಸಿಕೊಳ್ಳುತ್ತೇವೆ. ಹಿಂದಿನ ಎಲ್ಲ ನೋವುಗಳನ್ನು ಮರೆತು ಮತ್ತೆ ಸಲೀಸಾದ ಬದುಕಿನಲ್ಲಿ ಕರಗಿ ಹೋಗುತ್ತೇವೆ. ಜೀವವಿದಕೊಳ್ಳಿ ಎನ್ನುವ ಕವಿತೆಯು ನಮ್ಮನ್ನು ಮತ್ತೆ ಮತ್ತೆ ಚಿಂತನೆಗೆ ಹಚ್ಚುತ್ತದೆ.  ಖಂಡವಿದಕೋ, ಮಾಂಸವಿದಕೋ, ಗುಂಡಿಗೆಯ ಬಿಸಿ ರಕ್ತವಿದಕೋ ಎನ್ನುವ ಪುಣ್ಯಕೋಟಿಯ ಕಥೆಯನ್ನು ನೆನಪಿಸುವ ಶೀರ್ಷಿಕೆಯ ಈ ಕವನ ಸಾವನ್ನು ಕೊಟ್ಟು ಜೀವವನ್ನು ತೆಗೆದು ಕೊಳ್ಳಿ ಎನ್ನುವ ಮಾತನ್ನು ಮಾರ್ಮಿಕವಾಗಿ ಹೇಳುತ್ತದೆ. ಗಿಡಕ್ಕೆ ಹೂವು ಮೊಗ್ಗು ಭಾರವಾದರೆ ಆ ಜೀವ ಇದ್ದೇನು ಪ್ರಯೋಜನ? ಮಾನವೀಯತೆಯನು ಮರೆತು ಅಧಿಕಾರ ದಾಹಿಯಾಗುವ ಬದಲು ಪ್ರಾಣ ಹೋದರೆ ತಪ್ಪೇನಲ್ಲ ಎನ್ನುತ್ತಾರೆ ಕವಿ. ಕವಿತೆಯು ಪ್ರಸ್ತುತ ಪಡಿಸುವ ರೀತಿಯಿಂದಲೂ, ಅದರ ಆಶಯದಿಂದಲೂ ಗೆಲ್ಲುತ್ತದೆ. ನಮ್ಮೆಲ್ಲರ ಬದುಕು ಅದೆಷ್ಟು ಅರ್ಥಹೀನ. ನಾವೇನು ಮಾಡಬೇಕೆಂದುಕೊಂಡಿದ್ದವೋ ಅದನ್ನು ಮಾಡಲಾಗುವುದಿಲ್ಲ. ಏನನ್ನು ಸಾಧಿಸಬೇಕು ಎಂದುಕೊಂಡಿದ್ದೆವೋ ಅದನ್ನು ಸಾಧಿಸಲು ನಮ್ಮ ಸುತ್ತಲಿನ ಸಮಾಜ ಬಿಡುವುದಿಲ್ಲ. ಪ್ರಖ್ಯಾತ ಹಾಡುಗಾರನಾಗಬೇಕು, ಅದ್ಭುತ ನೃತ್ಯಪಟುವಾಗಬೇಕು, ಸೋಲಿರದ ಆಟಗಾರನಾಗಬೇಕು ಎಂದೆಲ್ಲ ಆಸೆ ಇಟ್ಟುಕೊಂಡ ಮಕ್ಕಳಿಗೆ ಅದನ್ನು ಮಾಡಲು ಪ್ರೋತ್ಸಾಹಿಸದೇ, ‘ಹೊಟ್ಟೇಗೇನು ಮಾಡ್ತಿ’ ಎಂದು ಕೇಳುತ್ತೇವೆ. ಹೊಟ್ಟೆಗೆ ಸಂಪಾದಿಸಿಕೊಳ್ಳಬೇಕಾದ ಆತುರದಲ್ಲಿ ಮಗು ತನ್ನ ಇಷ್ಟದ ಎಲ್ಲವನ್ನೂ ಮರೆಯುತ್ತದೆ. ಬದುಕು ಎಂದರೆ ಹೊಟ್ಟೆ ಬಟ್ಟೆ ಹಾಗೂ ಹಣ ಮಾತ್ರ ಎಂದು ಅರ್ಥ ಮಾಡಿಕೊಳ್ಳುತ್ತದೆ. ಆದರೆ ಹೊಟ್ಟೆ ತುಂಬಾ ಉಂಡು, ಕೈ ತುಂಬ ಹಣ ಸಂಪಾದಿಸಿ, ಐಶಾರಾಮಿ ಮನೆಯಲ್ಲಿ, ನಮ್ಮದೇ ಅದ್ಭುತವಾದ ವಾಹನದಲ್ಲಿ ಓಡಾಡುತ್ತೇವೆ. ಆದರೆ ಇವೆಲ್ಲವೂ ಬದುಕಿಗೆ ಸಂತಸ ಕೊಡಬಲ್ಲದೇ? ಅಪ್ಪನ ಮಾತಿನಂತೇ ನಡೆದೆಹೊಟ್ಟೆಗೇನೋ ಒಂದು ಮಾಡಿಕೊಂಡಿದ್ದೇನೆಬದುಕು ಮಾತ್ರ ನಿಸ್ಸಾರ, ಶೂನ್ಯಪ್ರಶ್ನೆ ಎತ್ತೋಣವೆಂದರೆಉತ್ತರಿಸಲು ಈಗ ಅಪ್ಪನಿಲ್ಲ ಎಲ್ಲವೂ ಇದ್ದು ನಿಸ್ಸಾರ ಬದುಕನ್ನು ಸಾಗಿಸುವಾಗ ನಮ್ಮನ್ನು ನಾವು ಸಾಧಿಸುವ ಖುಷಿಯಿಂದ ಹಿಮ್ಮೆಟಿಸಿದವರನ್ನು  ಕೇಳೋಣವೆಂದರೆ ಅವರು ನಮ್ಮೆದುರಿಗೆ ಇರುವುದಿಲ್ಲ. ಇಲ್ಲಿ ಹೊಟ್ಟೆಗೇನು ಮಾಡುತ್ತಿ ಎಂದು ಕೇಳುವ ಕವಿಯ ಅಪ್ಪ ಒಂದು ಹೆಸರು ಮಾತ್ರ. ನಾವೆಲ್ಲರೂ ಮಾಡುತ್ತಿರುವುದು ಅದೇ ಕೆಲಸ. ನಮ್ಮ ಬಾಲ್ಯದಲ್ಲಿ ನಮ್ಮ ಇಷ್ಟವನ್ನು ಕಿತ್ತುಕೊಂಡ ಅಪ್ಪ- ಅಮ್ಮ, ಹಿತೈಷಿಗಳು ಎನ್ನಿಸಿಕೊಂಡ ಸಂಬಂಧಿಕರು ಮಾಡಿದ ಕೆಲಸವನ್ನು ನಾವೀಗ ಮಾಡುತ್ತಿದ್ದೇವೆ. ಆಟ ಇಷ್ಟ ಎನ್ನುವ, ಚಿತ್ರ ಬಿಡಿಸುವುದರಲ್ಲಿ ಪ್ರಪಂಚವನ್ನೇ ಮರೆಯುವ, ಹಾಡುತ್ತ ಹಾಡುತ್ತ ಅದ್ಭುತ ಗಂಧರ್ವ ಲೋಕವನ್ನೇ ಸೃಷ್ಟಿಸುವ ಹತ್ತಾರು ಪ್ರತಿಭೆಗಳನ್ನು ಒಡಲಲ್ಲಿ ಇಟ್ಟುಕೊಂಡ ನಮ್ಮ ಮಕ್ಕಳಿಗೆ ಅವರಿಷ್ಟದ್ದನ್ನು ಮಾಡಲು ಬಿಡುತ್ತಿದ್ದೇವೆಯೇ? ‘ಮೊದಲು ಓದು, ಒಂದು ನೌಕರಿ ಹಿಡಿ. ನಂತರ ಬೇಕಾದ್ದು ಮಾಡಿಕೊ’ ಎಂದು ಉಪದೇಶ ಕೊಡುತ್ತಿದ್ದೇವೆ. ಇದು ಜನರೇಶನ್ ಗ್ಯಾಪ್ ಅಲ್ಲ. ಬದುಕು ಎಂದರೇನು ಎನ್ನುವುದು ಅರ್ಥವಾದ ಕಾರಣಕ್ಕೆ ಹೀಗೆ ಮಾಡುತ್ತೇವೆಯೇ? ಅಥವಾ ಬೆಳೆದಂತೆಲ್ಲ ನಮಗೆ ಹಣ ಹಾಗೂ ಒಂದು ಕಂಫರ್ಟ ಲೈಫ್ ಮಾತ್ರ ಸರಿಯಾದದ್ದು ಎನ್ನಿಸಲು ಪ್ರಾರಂಭವಾಗುತ್ತದೆಯೇ? ಅಥವಾ ಹಾಗೆ ಜೀವನವನ್ನು ಒಂದು ಹಂತಕ್ಕೆ ತಂದುಕೊಳ್ಳದೇ ಕೊನೆಗೆ ಅಸಹಾಯಕರಾಗಿ, ತಮ್ಮೆಲ್ಲ ಸಂಬಂಧಿಗಳಿಗೆ, ಆಪ್ತರಿಗೆ, ಮಿತ್ರರಿಗೆ ಹೊರೆಯಾಗಿ ನಿಂತವರನ್ನು ಕಂಡು ಇಂತಹ ಭಾವ ಮೂಡುತ್ತದೆಯೇ? ಯಾವುದು ಸರಿ? ಮಕ್ಕಳ ಇಷ್ಟದಂತೆ ಅವರ ಆಯ್ಕೆಯ ಕ್ಷೇತ್ರದಲ್ಲಿ ಬಿಡುವುದೇ ಅಥವಾ ಅವರ ಓದು ಬರೆಹಕ್ಕೆ ಆದ್ಯತೆ ನೀಡಿ, ಅವರಿಗೊಂದು ಉದ್ಯೋಗ ದೊರೆತು, ಅವರ ಬದುಕು ಒಂದು ಹಂತಕ್ಕೆ ತಲುಪುವುದೇ? ಕವಿ ಕೊನೆಯಲ್ಲಿ ಇಂತಹುದ್ದೊಂದು ಪ್ರಶ್ನೆಯನ್ನು ಹಾಗೇ ಓದುಗರಿಗೆ ಬಿಟ್ಟುಬಿಟ್ಟಿದ್ದಾರೆ.             ವಿನಯಚಂದ್ರರಿಗೆ ಆಂಗ್ಲ ಸಾಹಿತ್ಯದ ಅಪಾರವಾದ ಓದು ಬೆನ್ನಿಗಿದೆ. ಶ್ರೇಷ್ಠ ಆಂಗ್ಲ ಸಾಹಿತಿಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಆಂಗ್ಲ ಸಾಹಿತ್ಯದ ವಿದ್ಯಾರ್ಥಿಗಳಿಗೆ

ಮೂರನೇ ಆಯಾಮ Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಸೀಗಲ್ ಸೀಗಲ್ಮೂಲ : ಆಂಟನ್ ಚೆಕಾಫ್ ಕನ್ನಡಕ್ಕೆ : ಹೇಮಾ ಪಟ್ಟಣಶೆಟ್ಟಿಪ್ರ : ಅನನ್ಯ ಪ್ರಕಾಶನಪ್ರ.ವರ್ಷ :೨೦೦೭ಬೆಲೆ :ರೂ.೭೦ಪುಟಗಳು : ೧೦೮ ಎರಡು ತಲೆಮಾರುಗಳ ನಡುವಣ ಸಂಘರ್ಷವೇ ಈ ನಾಟಕದ ಮುಖ್ಯ ಕಥಾ ವಸ್ತು. ಇಬ್ಬರು ನಟಿಯರು ಮತ್ತು ಇಬ್ಬರು ಲೇಖಕರುಗಳ ನಡುವಣ ಸಂಬಂಧದ ಸ್ವರೂಪದ ಶೋಧನೆಯೇ ಇಲ್ಲಿನ ಮುಖ್ಯ ಕಾಳಜಿಯಾಗಿದೆ. ಹಿರಿಯ ನಟಿ ಅರ್ಕಾದಿನಾ ಮತ್ತು ಹಿರಿಯ ಲೇಖಕ ತ್ರಿಗೊರಿನ್ ಆಗಲೇ ಸಮಾಜದಲ್ಲಿ ತಮ್ಮ ನೆಲೆಯನ್ನು ರೂಪಿಸಿಕೊಂಡವರು. ಯುವಕ ತ್ರೆಪ್ಲೆಫ್ ಮತ್ತು ಎಳೆಯ ಯುವತಿ ನೀನಾ ಇನ್ನೂ ಅನನುಭವಿಗಳು. ಹಿರಿಯ ಜೋಡಿಗೆ ನಗರದ ಹಿನ್ನೆಲೆಯಿದ್ದರೆ ಕಿರಿಯ ಜೋಡಿಯ ಸ್ವಭಾವದಲ್ಲಿ ಗ್ರಾಮೀಣ ಸೊಗಡಿದೆ. ತ್ರೆಪ್ಲೆಫ್ ಪ್ರಸಿದ್ಧ ಲೇಖಕನಾಗಲು ಮತ್ತು ನೀನಾ ಪ್ರಸಿದ್ಧ ನಟಿಯಾಗಲು ಬಯಸುತ್ತಾರೆ. ಆದರೆ ತ್ರೆಫ್ಲೆಫ್ ನೀನಾಳನ್ನು ಪ್ರೀತಿಸಿದರೆ ನೀನಾ ತ್ರಿಗೊರಿನ್ ಬಗ್ಗೆ ಮೆಚ್ಚುಗೆಯಿಟ್ಟುಕೊಂಡಿದ್ದಾಳೆ. ತ್ರಿಗೊರಿನ್‌ಗೆ ನೀನಾ ಬೇಕು. ಆದರೆ ಅರ್ಕಾದಿನಾಗೆ ತ್ರಿಗೊರಿನ್ ಬೇಕು. ಹಾಗೆಂದು ಇದು ಸಾಮಾನ್ಯ ತ್ರಿಕೋನ ಪ್ರೇಮದ ಕಥೆಯಲ್ಲ. ಇದರ ಜತೆಗೆ ಮಾಶಾ ಮತ್ತು ಮೆದ್ವೆದೆಂಕೋ ಎಂಬ ಇನ್ನೊಂದು ಜೋಡಿಯ ಕಥೆಯೂ ಇಲ್ಲಿ ಹೆಣೆದುಕೊಳ್ಳುತ್ತದೆ. ಇಡೀ ನಾಟಕದಲ್ಲಿ ಪ್ರತಿಯೊಬ್ಬರೂ ಪ್ರೀತಿಯೆಂಬ ಮಧುರ ಸಂಬಂಧದ ಬೆನ್ನು ಹತ್ತಿದರೂ ವಾಸ್ತವದ ಬದುಕಿನಲ್ಲಿ ತಮ್ಮ ಆಸೆಗಳ ವೈಫಲ್ಯದಿಂದಾಗಿ ಹತಾಶರಾಗುತ್ತಾರೆ. ಮಾಶಾ ಮಾತ್ರ ವಾಸ್ತವವನ್ನು ಅರ್ಥ ಮಾಡಿಕೊಂಡು ಮೆದ್ವೆದೆಂಕೋನನ್ನು, ತಾನು ಆತನನ್ನು ಪ್ರೀತಿಸದೇ ಇದ್ದರೂ ಮದುವೆಯಾಗುತ್ತಾಳೆ. ಮನುಷ್ಯ ಸ್ವಭಾವ ಮತ್ತು ಮನುಷ್ಯ ಸಂಬಂಧಗಳ ವಿವಿಧ ವಾಸ್ತವಿಕ ಮುಖಗಳನ್ನು ನೈಜವಾಗಿ ಕಟ್ಟಿಕೊಡುವ ‘ಸೀಗಲ್ ‘ ನಲ್ಲಿ ಎಲ್ಲರೂ ಆ ಹಕ್ಕಿಯಂತೆ ಸ್ವಚ್ಛಂದವಾಗಿ ಹಾರಬಯಸುತ್ತಾರೆ. ಆದರೆ ಒಂದಿಲ್ಲೊಂದು ರೀತಿಯಲ್ಲಿ ಎಲ್ಲರೂ ಸೀಗಲ್ ನಂತೆ ಬೇಟೆಯಾಡಲ್ಪಡುತ್ತಾರೆ. ಹೀಗೆ ಶೀರ್ಷಿಕೆಯೇ ರೂಪಕವಾಗುವ ವಿಶಿಷ್ಟ ನಾಟಕ ‘ಸೀಗಲ್’ ಹಾಗೆಂದು ಸೀಗಲ್ ಕೇವಲ ಪ್ರೀತಿಯ ಕುರಿತಾದ ನಾಟಕವಲ್ಲ. ನಾಟಕಕ್ಕೆ ಇನ್ನೊಂದು ಆಯಾಮವಿದೆ. ಅದು ಸೃಜನಶೀಲತೆಯ ಕುರಿತಾದದ್ದು. ನಾಟಕದ ಆರಂಭದಲ್ಲಿ ಕಾಣುವ ತ್ರೆಪ್ಲೆಫ್ ರಚಿಸಿದ ನಾಟಕದ ಮೂಲಕ ಇದು ಕಾಣಿಸಿಕೊಳ್ಳುತ್ತದೆ. ಅವನು ಮಹತ್ವಾಕಾಂಕ್ಷಿ. ತನ್ನ ನಾಟಕ ಎಲ್ಲರಿಂದಲೂ ಪ್ರಶಂಸೆಗೊಳಗಾಗುತ್ತದೆ ಎಂಬ ಕನಸನ್ನು ಕಟ್ಟಿಕೊಂಡವನು. ಆದರೆ ಅವನು ಲೇವಡಿಗೊಳಗಾಗುತ್ತಾನೆ ಮತ್ತು ಹತಾಶನಾಗುತ್ತಾನೆ. ತ್ರಿಗೊರಿನ್ ಈ ಎಲ್ಲ ಹಂತಗಳನ್ನು ದಾಟಿದವನಾಗಿದ್ದಾನೆ. ಒಟ್ಟಿನಲ್ಲಿ ಸೃಷ್ಟಿಕ್ರಿಯೆಯಲ್ಲಿ ಉಂಟಾಗುವ ನೋವು, ಯಾತನೆಗಳಿಗೆ ನಾಟಕ ಸಾಕ್ಷಿಯಾಗುತ್ತದೆ. ಚೆಕಾಫ್‌ನ ಮೂಲಕೃತಿಯ ಸಾರ್ವಕಾಲಿಕ ಪ್ರಸ್ತುತತೆ ಈ ಅನುವಾದವನ್ನು ಸಾರ್ಥಕವಾಗಿಸಿದೆ. ನಾಟಕವನ್ನು ವೇದಿಕೆಯ ಮೇಲೆ ನೋಡಿ ಆನಂದಿಸುವಷ್ಟೇ ಸರಾಗವಾಗಿ ಹೇಮಾ ಪಟ್ಟಣಶೆಟ್ಟಿಯವರ ಅನುವಾದವೂ ಖುಷಿಯಿಂದ ಓದಿಸಿಕೊಂಡು ಹೋಗುವ ಸುಂದರ ಶೈಲಿಯಲ್ಲಿದೆ. ಹೆಚ್.ಎಸ್. ಉಮೇಶ್ ಅವರ ವಿದ್ವತ್ಪೂರ್ಣ ಮುನ್ನುಡಿಯಲ್ಲಿ ನಾಟಕದ ಅನುವಾದ ಹೇಗಿರಬೇಕೆಂಬುದರ ಬಗ್ಗೆ ಅನೇಕ ವಿಚಾರಗಳ ಚರ್ಚೆಯಿದೆ. ************************************************************ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ – ಹೊಸ ಬನಿ – ೯ ಅರ್ಥಕ್ಕೂ ಮೀರಿದ ಅನುಭವಗಳಲ್ಲಿ ಅರಳುವ      “ಶ್ರೀ ತಲಗೇರಿ” ಕವಿತೆಗಳು ಅರ್ಥಕ್ಕೂ ಮೀರಿದ ಅನುಭವಗಳಲ್ಲಿ ಅರಳುವ      “ಶ್ರೀ ತಲಗೇರಿ” ಕವಿತೆಗಳು. ಉತ್ತರ ಕನ್ನಡ ಜಿಲ್ಲೆ  ಕನ್ನಡ ಸಾಹಿತ್ಯ ಮತ್ತು ರಂಗಭೂಮಿಗೆ ತನ್ನದೇ ಆದ ವಿಶೇಷ ಕೊಡುಗೆಗಳನ್ನು ನೀಡುತ್ತಲೇ ಬಂದಿದೆ. ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿಯಂಥ ಅದ್ಭುತ ಪ್ರತಿಭೆಗಳನ್ನು ಮುಂಬಯಿಯ ಮಹಾಕೂಪಕ್ಕೆ ತಳ್ಳಿಯೂ ಅವರಿಂದ ಆ ಮಹಾನಗರದ ಸಕಲ ಸೂಕ್ಷ್ಮಗಳ ಪರಿಚಯ ಮಾಡಿಸುತ್ತಲೇ ತನ್ನದೇ ಆದ ಹವ್ಯಕ ಕನ್ನಡ ಮತ್ತು ಮೀನು ವಾಸನೆಯ ಸೊಗಸನ್ನು ಸೇರಿಸಿದ ಭಾಷೆಯನ್ನು ಟಂಕಿಸಿ ತನ್ಮೂಲಕ ಉತ್ತರ ಕನ್ನಡದ ಪರಿಸರದ ಮೇಲೆ ಆಧುನಿಕ ಬದುಕಿನ ಪ್ರಭಾವಗಳನ್ನು ತಲಸ್ಪರ್ಶಿಯಾಗಿಯೂ ಹೃದ್ಯವಾಗಿಯೂ ಅಭಿವ್ಯಕ್ತಿಸಿದೆ. ಅಭಿವೃದ್ಧಿಯ ಹೆಸರಲ್ಲಿ ಈ ನೆಲದ ಮೇಲಾದ ಹಲವು ದಾರುಣ ಪ್ರಯೋಗಗಳನ್ನೂ ಮತ್ತು ಆ ಎಲ್ಲ ಪ್ರಯೋಗಗಳಿಂದಾಗಿ ಅಸ್ತವ್ಯಸ್ತವಾದ ಅಲ್ಲಿನ ಜನ ಜೀವನವನ್ನೂ ಉತ್ತರ ಕನ್ನಡದ ಹಲವು ಬರಹಗಾರರು ಅದ್ಭುತವಾಗಿ ಚಿತ್ರಿಸಿದ್ದಾರೆ. ಇದೇ ಜಿಲ್ಲೆಯ ತಲಗೇರಿ ಅನ್ನುವ ಪುಟ್ಟ ಗ್ರಾಮದ  ಶ್ರೀಧರ ಭಟ್ ಹೆಸರಲ್ಲಿ ಫೇಸ್ಬುಕ್ ಖಾತೆ ಇದ್ದರೂ ಶ್ರೀ ತಲಗೇರಿ ಎನ್ನುವ ಹೆಸರಲ್ಲೇ ಅವರು ಪದ್ಯಗಳನ್ನು ಪ್ರಕಟಿಸುತ್ತಿದ್ದಾರೆ. ಪ್ರಕೃತಿಯ ಕೌತುಕ, ನಗರದ ಗದ್ದಲ,ಮನುಷ್ಯನ ಮೂಲಭೂತ ನಡವಳಿಕೆಗಳ ಮನೋಭೂಮಿಕೆಯ ತಲ್ಲಣಗಳಲ್ಲಿ ಅತೀವ ಆಸಕ್ತಿ ತೋರುವ ಇವರ ಪದ್ಯಗಳಲ್ಲಿ ವಯಸ್ಸಿಗೂ ಮೀರಿದ ಅನುಸಂಧಾನಗಳಿವೆ. ಇತ್ತೀಚೆಗಷ್ಟೇ ‘ಒಂಟಿ ಟೊಂಗೆಯ ಲಾಂದ್ರ’ ಹೆಸರಿನ ಕವನ ಸಂಕಲನ ಇ-ಪುಸ್ತಕವಾಗಿ ಬಿಡುಗಡೆಯಾಗಿದೆ. ವಾಟ್ಸ್ ಆಪಿನ ಹಲವು ಗುಂಪುಗಳಲ್ಲಿ “ಕಾವ್ಯ ಕೇಳಿ” ಗುಂಪು ಸದಾ ರಚನಾತ್ಮಕ ಕೆಲಸಗಳಲ್ಲಿ ತೊಡಗಿರುತ್ತದೆ. ಸುಬ್ರಾಯ ಚೊಕ್ಕಾಡಿ ಮತ್ತು ತಿರುಮಲೇಶರ ಹುಟ್ಟುಹಬ್ಬದ ಸಲುವಾಗಿ ಅನೇಕ ಬರಹಗಳನ್ನು ಈ ಗುಂಪು ಪ್ರಕಟಿಸಿತು. ಈ ಗುಂಪಿನ ಸಾಮಾನ್ಯ ಸದಸ್ಯನಾಗಿ ಪ್ರಕಟಿಸುವುದಕ್ಕಿಂತಲೂ ಅಲ್ಲಿನ ಬರಹಗಳನ್ನು ಓದುವುದರಲ್ಲೇ ಹಿತ ಕಂಡಿರುವ ನನಗೆ ಆ ಗುಂಪಿನಲ್ಲಿ “ಶ್ರೀ ತಲಗೇರಿ” ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತಂತೆ ಬರೆಯುವ ರೀತಿಯಿಂದ ಚಕಿತನಾಗಿದ್ದೇನೆ. ಮೂಲತಃ ಕಂಪ್ಯೂಟರ್ ಪ್ರೋಗ್ರಾಮರ್ ಆದ ಶ್ರೀಧರ ಭಟ್ ತಮ್ಮ ವಯಸ್ಸಿಗೂ ಮೀರಿದ ಅನುಸಂಧಾನಗಳನ್ನು ಕಾಣಿಸಿ ಚಕಿತಗೊಳಿಸುತ್ತಾರೆ. ಅವರ ಇತರ ಬರಹಗಳ ಬಗ್ಗೆಯೂ ಕುತೂಹಲವಿದ್ದರೂ ಈ ಅಂಕಣ ಕವಿತೆಗಳನ್ನು ಕುರಿತೇ ಇರುವುದರಿಂದಾಗಿ ಅವರ ಕೆಲವು ಕವಿತೆಗಳನ್ನು ಕುರಿತ ಈ ಟಿಪ್ಪಣಿಯನ್ನು ಅವರ ” ಕತ್ತಲು” ಕವಿತೆಯ ಸಾಲುಗಳ ಮೂಲಕ ಆರಂಭಿಸುತ್ತಿದ್ದೇನೆ; ನಾವು ಕತ್ತಲನ್ನು ಕಾಯುತ್ತೇವೆ ಕೂಡಲು ಬೇಡಲು ಯಾವುದೋ ತುತ್ತ ತುದಿ ತಲುಪಿ ದಂತೆ ನಿಟ್ಟುಸಿರು ಬಿಡಲು….. ಪದ್ಯದ ಆರಂಭ ಕೂಡ ಇದೇ ಸಾಲುಗಳಿಂದಲೇ ಆಗಿದೆ. ಅಂದರೆ ಈ ಕವಿತೆಯಲ್ಲಿ ಕವಿ ತಾನು ಕಂಡುದನ್ನು ಮತ್ತೆ ಮತ್ತೆ ಕಟೆಯುವ ಸಲುವಾಗಿ ಅದೇ ಅದೇ ಸಾಲುಗಳನ್ನು ಬಳಸುತ್ತಲೇ ತನ್ನ ಅನುಭವದ ಮೂಲಕ ಕತ್ತಲನ್ನೂ ಮತ್ತು ಕತ್ತಲಿನ ಜೊತೆಗೇ ಇರುವ ಬೆಳಕನ್ನೂ ಇಲ್ಲಿ ಎದುರು ಬದುರು ನಿಲ್ಲಿಸುತ್ತಲೇ ಒಂದು ದಟ್ಟ ಅನುಭವದ ಸತ್ಯವನ್ನು ದಾಟಿಸುತ್ತಲೇ ಈ ವರೆಗೂ ಕನ್ನಡದಲ್ಲಿ ಬಂದ “ಬೆಳಕು” ಕುರಿತ ಕವಿತೆಗಳಿಗೆ ವಿರುದ್ಧವಾಗಿದ್ದರೂ ಆದರೆ ಸಶಕ್ತವಾದ ಒಂದು ಪದ್ಯವನ್ನಾಗಿಸಿದ್ದಾರೆ. ಪೂರ್ವಾಪರಗಳನ್ನು ಕತ್ತಲು ಮತ್ತು ಬೆಳಕಿನ ವಿನ್ಯಾಸದಲ್ಲಿ ಕಂಡರಿಸಿದ ಬಗೆಯೇ ಸೊಗಸಾಗಿದೆ. ಯಾವುದೋ ತುಟ್ಟ ತುದಿ ತಲುಪುತ್ತೇವೋ ಇಲ್ಲವೋ ಆದರೆ ನಿಟ್ಟುಸಿರನ್ನಂತೂ ಬಿಡುತ್ತೇವೆ ತಾನೆ? “ಅಸ್ತಿತ್ವ” ಶೀರ್ಷಿಕೆಯ ಪದ್ಯ ಕಾಣುವುದಕ್ಕೆ ಸರಳವಾಗಿದೆ ಆದರೆ ಅದು ತನ್ನೊಳಗೇ ಇರಿಸಿಕೊಂಡಿರುವ ಪ್ರತಿಮೆ ಅಷ್ಟು ಸುಲಭಕ್ಕೆ ಎಟುಕುವುದಿಲ್ಲ. ಒಂದೆರಡು ಸಾಲುಗಳನ್ನಿಲ್ಲಿ ಕೋಟ್ ಮಾಡಿದರೆ ಪದ್ಯದ ಆಂತರ್ಯ ಸುಲಭಕ್ಕೆ ಸುಭಗಕ್ಕೆ ನಿಲುಕದ ಕಾರಣ ಇಡೀ ಪದ್ಯವನ್ನೇ ಓದುವುದು ವಿಹಿತ. ಹೀಗೆ “ಮೌನವನ್ನಾತು ಕೂರಬೇಡ” ಎಂದು ಸುರುವಾಗುವ ಪದ್ಯದ ಸರಕು ಜಯಂತ ಕಾಯ್ಕಿಣಿಯವರ ಫೇವರಿಟ್ ಸಂಗತಿ. ಜಯಂತ್ ಸಾಮಾನ್ಯ ಸಂಗತಿಗಳ ಅಸಾಮಾನ್ಯ ವಿವರಗಳನ್ನು ಕಟ್ಟಿಕೊಡುವಂತೆಯೇ ಈ ಪದ್ಯ ಇರುವುದಾದರೂ ಇಡೀ ಪದ್ಯ ಹೊರಳಿಕೊಳ್ಳುವ ವಿಹ್ವಲತೆ ಅಷ್ಟು ಸುಲಭಕ್ಕೆ ಮರೆಯಲಾರದಂಥದು. ಪ್ರಾಣವೇ ಪ್ರಾಣ ಹೀರಿ ಮತ್ತೆ ವರ್ತಮಾನಕ್ಕೆ ಮಿಲನ ಬರೀ ಸ್ಪರ್ಶವಲ್ಲ ಮರುಹುಟ್ಟು ಆ ಗಳಿಗೆ ಹೂ’ಗಳಿಗೆ’ ಪರಾಗ ಸ್ಪರ್ಶದ ಸಾಮಾನ್ಯ ಸಂಗತಿಯನ್ನು ಅನುನಯಿಸಿದ ರೀತಿ ಅದರಲ್ಲೂ “ಪ್ರಾಣವೇ ಪ್ರಾಣ ಹೀರಿ” ಎನ್ನುವ ರೀತಿ ಒಂದು ಜೇನ್ನೊಣ ಮತ್ತೊಂದು ಹೂವು, ಎರಡೂ ಜೀವಂತ ಇದ್ದರೂ ಅವುಗಳಲ್ಲಿ ಇರುವ ಪರಸ್ಪರ ಸಂಬಂಧಗಳನ್ನು “ಗಳಿಗೆ” (ಸಮಯ) ಕಾಯುತ್ತದಲ್ಲ ಅದನ್ನಿಲ್ಲಿ ಹೇಳಿದ ರೀತಿ ಇದುವರೆಗಿನ ಸಾಹಿತ್ಯ ಪಯಣದಲ್ಲೇ ಬೇರೆಯದೇ ಆಗಿದೆ. ”ಮಳೆಗಾಲಕಿನ್ನೂ ಅರ್ಧ ವಯಸ್ಸು’ ಎನ್ನುವ ಹೆಸರಿನ ಪದ್ಯ ಸುರುವಾಗುವ ಮೊದಲೇ ಮುಗಿದುಹೋಗಿದೆ. ಟಿಪ್ಪಣಿಯ ಸುರುವಿನಲ್ಲಿ ಹೇಳಿದ ಉತ್ತರ ಕನ್ನಡದ್ದೇ ಆದ ಪರಿಸರವನ್ನು ಚಂದಾಗಿ ಚಿತ್ರಿಸಿದ ಕವಿತೆ ಆ ಪ್ರತಿಮಾಲಂಕರದಲ್ಲೇ ಉಳಿದು ಅದನ್ನು ಓದುಗನಿಗೆ ದಾಟಿಸುವಷ್ಟರಲ್ಲಿ ವಿರಮಿಸಿ ಮುಂದೇ ಏನೋ ಆಗಬಹುದಾಗಿದ್ದ ಸಂಗತಿಗೆ ಬ್ರೇಕು ಹಾಕಿಸುತ್ತಲೇ ಸುನಂದಾ ಕಡಮೆ ಮತ್ತು ಜಯಂತರ ಕತೆ ಕವಿತೆಗಳನ್ನು ನೆನಪಿಸುತ್ತದೆ. “ಪ್ರಶ್ನೆ” ಎನ್ನುವ ಹೆಸರಿನ ಪದ್ಯದ ಕೊನೆ ಹೀಗಿದೆ; ಅಹಲ್ಯೆಯ ಗೌತಮರಿಗೊಪ್ಪಿಸಿದ ಹುಡುಗನೊಬ್ಬ ಧರ್ಮದ ಗಡಿಯಲ್ಲೇ ಉಳಿದು ಹೋದ ರಾಜನಾದ ಅಯೋಧ್ಯಾರಾಮ ನಾನು, ಸೀತೆಯಲ್ಲುಳಿದ ಪ್ರಶ್ನೆ ನಾನು ಆದರೆ ಪದ್ಯದ ಆರಂಭದಲ್ಲೆಲ್ಲೂ ಮಹಾಕಾವ್ಯ ರಾಮಾಯಣದ ಯಾವ ಪಾತ್ರವೂ ಬಾರದೇ ಬರಿಯ ಸಂಕೇತಗಳಲ್ಲಷ್ಟೇ ಅರಳಿಕೊಳ್ಳುತ್ತಲೇ ತಿಳುವಳಿಕೆಯ ಆಳಕ್ಕೆ ಹೊರಳಿಕೊಳ್ಳುವ ಕವಿತೆ ಈ ಕವಿಯ ಮನಸ್ಸನ್ನು ಕಾಡುತ್ತಿರುವ ಸಂಗತಿಗಳನ್ನೂ ಸಂದರ್ಭಗಳನ್ನೂ ಸಾರ್ಥಕವಾಗಿ ಸಮೀಕರಿಸಿದೆ. “ದೇವರ ವಿಳಾಸ ಹುಡುಕಿದ್ದೇನೆ” ಎನ್ನುವ ಪದ್ಯವಂತೂ ಈ ಕವಿ ಈಗಾಗಲೇ ದೇವರನ್ನು ಕುರಿತಂತೆ ಇರುವ ಎಲ್ಲ ಜಿಜ್ಞಾಸೆ ಮತ್ತು ಹೇಳಿಕೆಗಳನ್ನು ಒಳಗೊಳ್ಳುತ್ತಲೇ ನಿರಾಕರಿಸುವ ಮತ್ತು ತನ್ನದೇ ಕಾಣ್ಕೆಯನ್ನು ಕೊಡುತ್ತದೆ; ಹೌದಲ್ಲಾ, ತನ್ನಿರುವ ಚೂರು ಚೂರೇ ಬಿಟ್ಟು ಕಳೆದುಹೋದವ ಇದೇ ಜಂಗುಳಿಯ ಮಧ್ಯ.. ಇಲ್ಲೀಗ ಈ ಮರಗಳ ಕೆಳಗೆ ಕೂತವರೆಲ್ಲಾ ಮುಂದೇನಾಗುವರು ?!.. ಅಲ್ಲಿಗೆ ಈ ಕವಿ ದೇವರೆನ್ನುವುದನ್ನು ಲೌಕಿಕದ ಸಂಗತಿಗಳ ಮಧ್ಯೆ ಮತ್ತು ಸಂಬಂಧಗಳ ಸೀಮಿತಾರ್ಥದಾಚೆಯ ನಿಲುಕಲ್ಲಿ ಹುಡುಕುತ್ತಿದ್ದಾನೆ. ಮೂರ್ತಿರಾಯರು ಮತ್ತು ನರಸಿಂಹಯ್ಯನವರ ದೇವರನ್ನೂ ಇಲ್ಲಿ ಸ್ಮರಿಸಿದರೆ ಸಹೃದಯರಿಗೆ ಈ ಪದ್ಯ ಬಗೆಯಲು ಇನ್ನಷ್ಟು ಸಹಕಾರಿ. ಗುಡಿಸಲಿನ ಇತಿಹಾಸದಲಿ ರೇಖೆ ದಾಟಿದರೆ ಸೀತೆಗೆ ಅಪಹರಣದ ಭೀತಿ.. ರಾವಣ ಮಾರುವೇಷದಲ್ಲಿದ್ದಾನೆ.. “ಗೆರೆ” ಎನ್ನುವ ತಲೆಬರಹದ ಈ ಪದ್ಯದ ಕೊನೆ ವರ್ತಮಾನ ಮತ್ತು ಭೂತವನ್ನು ಒಗ್ಗೂಡಿಸಿದ ಭವಿಷ್ಯದ ವಾರ್ತೆಯಂತೆ ಅಂದುಕೊಂಡರೆ ಅದು ಒಟ್ಟೂ ಸಾಮಾಜಿಕತೆಯ ಸರಳ ಮೌಲ್ಯೀಕರಣ. ಮತ್ತು ಈ ಕವಿ ತನ್ನ ಅನುಭವ ಮತ್ತು ಓದಿನಿಂದ ಇತಿವೃತ್ತಗೊಳಿಸಿಕೊಂಡಿರುವ ವಿವೇಕದ ಮಿತಿ. ಕನ್ನಡದ ಮಹತ್ವದ ಕವಿ ತಿರುಮಲೇಶರ ಸ್ಪೂರ್ತಿ ಈ ಕವಿ ಶ್ರೀ ತಲಗೇರಿ ಅವರ ಮೇಲಿರುವುದು ಸ್ಪಷ್ಟವಾಗಿದೆ. ಮತ್ತು ಕ್ವಚಿತ್ತಾಗಿ ಅಡಿಗರನ್ನೂ ರಾಮಾನುಜರನ್ನೂ ಇವರು ಆವರ್ಭಿಸಿಕೊಂಡಿರುವುದೂ ಅವರ ಕವಿತೆಗಳು ನೀಡುವ ದರ್ಶನದಿಂದ ಗುರ್ತಿಸಬಹುದು. ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಆಂತರ್ಯದಲ್ಲಿ ಸಂಕೀರ್ಣತೆ ಇಟ್ಟುಕೊಂಡಿರುವ ಕೆ ಎಸ್ ನ ಮತ್ತು ಜಿ  ಎಸ್ ಎಸ್ ಇವರಿಗೆ ದೂರ. ಏಕೆಂದರೆ ಇನ್ನೂ ೨೬ರ ಹರಯದ ಈ ಹುಡುಗನ ಕವಿತೆಗಳಲ್ಲಿ ಹುಡುಕಿದರೂ ಆ ಪ್ರಾಯಕ್ಕೆ ಸಹಜವಾಗಿ ಬರಲೇಬೇಕಾದ ಪ್ರೇಮ ಮತ್ತು ಪ್ರೀತಿ ಹಾಗೂ ಹುಡುಗ ಹುಡುಗಿಯರ ಒಲವ ಹಾಡಿನ ಸೂಚನೆಗಳೇ ಇಲ್ಲ. ಇದು ಹೀಗಾಗಬಾರದು ಎಲ್ಲ ಕವಿಗಳೂ ವಿಶೇಷತಃ ಯುವಕರು ಬರಿಯ ಜಿಜ್ಞಾಸೆ ಮತ್ತು ಪಾರಮಾರ್ಥದ ಸುಳಿಗಳಲ್ಲಿ ಇಳಿದುಬಿಟ್ಟರೆ ಲೌಕಿಕದ ಗತಿಯೇನು? ಅರ್ಥ ಮತ್ತು ಧ್ಯಾನದೀಚೆಗಿನ ವಯೋ ಸಹಜ ದಾಂಗುಡಿಗಳನ್ನೂ ಪೋಷಿಸದ ಪ್ರಜ್ಞೆ ಲೌಕಿಕವನ್ನು ಬಿಟ್ಟುಕೊಟ್ಟರೆ ಗತಿಯೇನು? “ಬುದ್ಧ ಮೊದಲೇ ಇದ್ದ” ಎನ್ನುವ ಕವಿತೆಯ ಕಡೆಯಲ್ಲಿ ಹಾಗೆ ನೋಡಿದರೆ ಬುದ್ಧ ಮೊದಲೇ ಇದ್ದ ನಡು ರಾತ್ರಿಯಲಿ ಯಶೋಧರಾ ಸಿದ್ಧಾರ್ಥರ ತೋಳುಗಳಲಿ ಬೆಚ್ಚಗೆ ಮಲಗಿದ್ದ ರಾಹುಲನ ತುಟಿಗಳಲಿ ಬುದ್ಧ ಮೊದಲೇ ಇದ್ದ ಎನ್ನುವಲ್ಲಿ ಈ ಕವಿ ಕಂಡುಕೊಂಡ ತಿಳುವಳಿಕೆಯ ಕಾವು ಮತ್ತು ಇತಿಹಾಸವನ್ನು ಬೇರೆಯದೇ ಬೆರಗಿನಿಂದ ಕಂಡ ಸತ್ಯವಾಗಿಯೂ ಕಾಣುತ್ತದೆ. ಈ ನಡುವೆ ಅದರಲ್ಲೂ ಫೇಸ್ಬುಕ್ಕಿನ ಕವಿತೆಗಳಲ್ಲಿ ರಂಜನೆ ಮತ್ತು ನಾಟಕೀಯತೆಗಳೆ ಮಿಲಿತಗೊಂಡ ಹುಸಿಗಳೇ ಪದ್ಯಗಳೆಂದು ದಾಂಗುಣಿಯಿಡುತ್ತಿರುವ ವರ್ತಮಾನದಲ್ಲಿ ಶ್ರೀ ತಲಗೇರಿಯಂಥವರ ಪದ್ಯಗಳು ಕಾವ್ಯಾಸಕ್ತರಿಗೆ ಮತ್ತು ಬದುಕಿನ ಅರ್ಥದ ಜಿಜ್ಞಾಸುಗಳಿಗೆ ಅಲ್ಪ ಪ್ರಮಾಣದ ಸಮಾಧಾನ ಮತ್ತು ಸಾಂತ್ವನ ನೀಡುತ್ತವೆ. ಚಿಂತನೆಯೇ ಮುಖ್ಯವಾದ ಲೌಕಿಕದ ಆಕರ್ಷಕ ಸಂಗತಿಗಳಿಗೆ ಹೊರತಾದ ಈ ಬಗೆಯ ಬೌದ್ಧಿಕತೆ ಕೂಡ ಕೆಲವೇ ಜನಗಳ ಶೋಕೇಸ್ ವಸ್ತುವಾಗುತ್ತಿರುವ ಕಾಲದಲ್ಲಿ ಶ್ರೀಧರ ಭಟ್ ಅವರ ಮುಂದಿನ ಕಾವ್ಯಕೃಷಿ ಕುರಿತು ಸಹಜ ಕುತೂಹಲ ಮತ್ತು ಭರವಸೆಯನ್ನು ಹುಟ್ಟಿಸುತ್ತಿದೆ. ಶ್ರೀ ತಲಗೇರಿ ಅವರ ಆಯ್ದ ಕವಿತೆಗಳು. 1. “ಕತ್ತಲು” ನಾವು ಕತ್ತಲನ್ನು ಕಾಯುತ್ತೇವೆ ಕೂಡಲು ಬೇಡಲು ಯಾವುದೋ ತುತ್ತ ತುದಿ ತಲುಪಿ ದಂತೆ ನಿಟ್ಟುಸಿರು ಬಿಡಲು ಎಲ್ಲ ಕಳಕೊಂಡ ನಿರ್ಗತಿಕರಂತೆ ಮಲಗುತ್ತೇವೆ ಇಷ್ಟೇ ಇಷ್ಟು ಬಿರಿದ ತುಟಿಗಳ ಡೊಂಕು ಅಗಲಿಸಿ.. ಒಂದು ತಪ್ಪೇ ಇಲ್ಲಿ ಸರಿಯಾಗಬಹುದು ಸೋಲುವ ಯುದ್ಧದ ಸುತ್ತ ಗಿರಕಿ ಕಠಿಣವಾದಷ್ಟೂ ಮೆದುವಿಗೆ ಮೆದುವಾದಷ್ಟೂ ಕಠಿಣಕ್ಕೆ ಉನ್ಮಾದ; ಸೀಮೋಲ್ಲಂಘನದ ಆವೇಶ ಕರಗುತ್ತದೆ ಹೊತ್ತು ದೇಹ ಗಳ ಮಿತಿಯ ಮೀರುವ ಶೋಧದಲ್ಲಿ ಚಿಗುರು ಹುಟ್ಟುವ ಮೊದಲೇ ಜೀವ ಚಿಗುರಬೇಕಲ್ಲ ಬಿಂದುವಾಗಿ ಕತ್ತಲ ನೆರಿಗೆಗಳು ಬೆರಳಿಗೆ ತಾಕುವಾಗ ಬೆಳಕಿಗೆ ಹಿಂದಿರುಗದ ಹಠ ಹಿಡಿದು ಗುರುತಿನ ಬಟ್ಟೆ ಕಳೆದು ಕೂರುವಾಸೆ ವ್ಯಾಪಾರವೇನು ಹುಟ್ಟಿಗೆ ಸಾವು, ಸಾವಿಗೆ ಹುಟ್ಟು ಬ್ರಹ್ಮಾಂಡವೇ ಅಣುವಾಗಿ ಅಣುವೇ ಬ್ರಹ್ಮಾಂಡವಾಗಿ ಎಲ್ಲಿಯ ಏಕರೂಪ, ಎಲ್ಲಿಯ ಭೌತ ತಾಪ ಒಡೆದು ಕಡೆದು ಸಿಡಿದು ಕತ್ತಲು ಬೀಜ ಬಿತ್ತುತ್ತದೆ ನಾಳೆಯ ಸಾಕ್ಷಿಗಾಗಿ.. ನಾವು ಕತ್ತಲನ್ನು ಕಾಯುತ್ತೇವೆ ಕೂಡಲು ಬೇಡಲು ಯಾವುದೋ ತುತ್ತ ತುದಿ ತಲುಪಿ ದಂತೆ ನಿಟ್ಟುಸಿರು ಬಿಡಲು 2. ಹೀಗೆ ಮೌನವನ್ನಾತು ಕೂರಬೇಡ ಒಂದು ಜೋರು ಮಳೆ ಬರುತ್ತದೆ ಬಚ್ಚಿಟ್ಟ ಮಾತು ಮೆತ್ತಗೆ ಕರಗಿ ತೊಳೆದುಹೋದರೆ ಎಲ್ಲಿ ದೋಣಿಯ ಕೋಲು ಬೀಸಲಿ ಊರ ತುಂಬಾ ಬೀಳುವ ಮಳೆಯ ಬಾಲ ಹಿಡಿದು ಗುಡುಗಿನ ಮೀಸೆ ತಿರುವಬೇಕು ಅಂದಿದ್ದೆಯಲ್ಲಾ ಈ ಮಳೆಗೆ ತಲೆ ಬುಡ ಇಲ್ಲ ಆದರೂ ಒಂದು ಹೆಸರು ಕೊಡು ಇಟ್ಟುಕೊಳ್ಳುತ್ತೇವೆ ಒದ್ದೆಯಾಗಬಹುದು ಈ ರಾತ್ರಿ ಒಟ್ಟಿಗೇ ಕಳೆದರೆ ಗತ್ತಿನಲ್ಲಿ ಮತ್ತಿನಲ್ಲಿ ಸ್ವಂತದಲ್ಲಿ ರೋಮಗಳಿಗೆ ಆಗಾಗ “ಕ್ಲಾಸ್ ಸಾವ್ದಾನ್” ಸುಮ್ಮನೆ ಬೆತ್ತಲಾಗಬಾರದು ಹಾಗೆಲ್ಲಾ ಒಂದೇ ಕೊಡೆಯ ಕೆಳಗೆ ಕೂರಬೇಕು ಅದಕೆ ಮೋಡಗಳ ಚಿತ್ರವಿರಬೇಕು ಮತ್ತೆ ಹೇಳಬೇಕೇ ಮಳೆ ಬರಬೇಕು 3.”ಮಳೆಗಾಲಕಿನ್ನೂ ಅರ್ಧ ವಯಸ್ಸು’ ಮುಗಿದಿಲ್ಲವಿನ್ನೂ ಸಂಭಾಷಣೆ ಅರ್ಧಕ್ಕೆ ನಿಂತ ನಿವೇದನೆ ಎದೆಭಾರವೆಲ್ಲಾ ನಿನ್ನದೆಗೆ ನೂಕಿ ಜೋಕಾಲಿಯಾಡುವೆನು ಹಗುರಾಗಿ ಜೀಕಿ.. ಕಂಬಳಿಯ ಕೊಪ್ಪೆಯಲಿ ಸೇರಿಸಿಕೋ ನನ್ನ.. ಮಳೆಗಾಲಕಿನ್ನೂ ಅರ್ಧ ವಯಸ್ಸು ! ಕೊಟ್ಟಿಗೆಯ ತಡಿಯಾಚೆ ಖಾಲಿ ಕೂತಿಹ ಚಂದ್ರ ಒಂದೊಳ್ಳೆ ನೆರಿಗೆಯನು ಬಿಚ್ಚಬಾರದೇ ನಾಚಿಕೆ ಸರಿಸಿ ಇಳಿಜಾರು ಭೂಮಿಯಲಿ ಹನಿ ಜಾರಿ ಬಿದ್ದೀತು ಹತ್ತಿರವೇ ಇರಿಸಿಕೋ ನನದೊಂದು ಬೊಗಸೆಯನು ಮಳೆಗಾಲಕಿನ್ನೂ ಅರ್ಧ ವಯಸ್ಸು ! ಹಳೇ ನಿಲ್ದಾಣದಲಿ ಕೂತಿದೆ ಹರಡಿದಾ ಕೂದಲು ಪ್ರತಿನಿತ್ಯ ಹೀಗೇ ಒಂದು ಭೇಟಿ ಬರುವರೇನೋ ಎಂದು ಕಾಯುವಂತೆ ಕತ್ತೆತ್ತಿ.. ಮರಳುವುದೇನು ಆ ವಯಸ್ಸು ಊರುಬಿಟ್ಟ ಮೋಡಗಳ ಹಿಂದೆಯೇ ಹೋಯಿತಂತೆ ಮಳೆಗಾಲ.. ನೆನಪುಗಳಲಿ ಒಂದಾದರೂ ದೋಣಿಯಿದ್ದೀತು ಸಾವರಿಸಿಕೊಳಲು ಮುರಿದದ್ದೋ ಅಥವಾ ಕಟ್ಟಬೇಕಿರುವುದೋ.. ! 4. ‘ಪ್ರಶ್ನೆ’.. ! ತೊಡೆಯ ಮೇಲೆ ಪುಟ್ಟ ಬೆರಳುಗಳ

Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಒಂದು ಹೃದ್ಯ ಕಾವ್ಯ ರಂಗಮ್ಮಹೊದೇಕಲ್ ತುಮಕೂರು ಜಿಲ್ಲೆಯ ಹೊದೇಕಲ್ ಗ್ರಾಮದ ಪ್ರತಿಭೆ ರಂಗಮ್ಮ ಹೊದೇಕಲ್.ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ.ಸಾಹಿತ್ಯ,ಸಂಘಟನೆ ಆಸಕ್ತಿಯ ಕ್ಷೇತ್ರಗಳು.ಒಳದನಿ,ಜೀವಪ್ರೀತಿಯ ಹಾಡು ಕವನ ಸಂಕಲನಗಳ ನಂತರ ಇದೀಗ ‘ನೋವೂ ಒಂದು ಹೃದ್ಯ ಕಾವ್ಯ’ ಹನಿಗವಿತೆಗಳ ಸಂಕಲನ ಹಾಸನದ “ಇಷ್ಟ” ಪ್ರಕಾಶನದಿಂದ ಪ್ರಕಟವಾಗಿದೆ. ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಕವಿತೆ ಅವ್ಯಕ್ತಗಳ ಅಭಿವ್ಯಕ್ತಿ.ಆತ್ಮದ ಬೆಳಕು.ಮತ್ತು ಕವಿತೆ ಮಾತ್ರವೇ ಆತ್ಮದ ಸಂಗಾತ ಅನ್ನಿಸಿದ್ದಕ್ಕೆ! ಕವಿತೆ ಹುಟ್ಟುವ ಕ್ಷಣ ಯಾವುದು ? ಕರುಳು ಕಲಕುವ ಯಾವುದೇ ಸಂಕಟವೂ ನನ್ನೊಳಗೊಂದು ಸಾಲಾಗಿ ಹೊಳೆದು ಹೋಗುತ್ತದೆ!ದುಃಖಕ್ಕೆದಕ್ಕಿದಷ್ಟು ಕವಿತೆಗಳುಖುಷಿಗೆ ಅರಳುವುದೇ ಇಲ್ಲ! ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಮನುಷ್ಯ ಸಂಬಂಧಗಳು!ಸಂಬಂಧಗಳ ವ್ಯತ್ಯಯಗಳು.ಶಿಥಿಲಗೊಳ್ಳುತ್ತಿರುವ ಜೀವಪ್ರೀತಿ!ಸಹಜತೆಯಾಚೆಗೆ ನಾವೆಲ್ಲ ಬೆರ್ಚಪ್ಪಗಳಾಗುತ್ತಿರುವ ಆತಂಕ! ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಬಾಲ್ಯವೆಲ್ಲ ಅತ್ಯಂತದಾರಿದ್ರ್ಯದಲ್ಲೇ ಕಳೆದುಹೋಯ್ತು. ಹರೆಯ ಹರೆಯಕ್ಕೂ ಮೀರಿದ ಜವಾಬ್ದಾರಿಗಳನ್ನು ಹೆಗಲಿಗೇರಿಸಿತು.ಬಹುಶಃ ಇವೆಲ್ಲ ಎಂದಾದರೂ ಗದ್ಯ,ಪದ್ಯವಾಗುವ ನಿರೀಕ್ಷೆ ನನ್ನದೂ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ರಾಜಕಾರಣದ ಬಗ್ಗೆ ತೀರಾ ಆಸಕ್ತಿಗಳಿಲ್ಲದೇ ಹೋದರೂ ಬಿದ್ದವರ,ಸೋತವರ,ಕನಸ ಕೊಂದುಕೊಂಡವರ,ಇಲ್ಲದವರ ಬದುಕಿಗೆ ಹೊಸದೊಂದು ಬೆಳಕ ಕಾಣಿಸುವ ರಾಜಕಾರಣವೂ ಒಂದು ಕನಸೇನೋ ಅನ್ಸತ್ತೆ! ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಪ್ರೀತಿಯನ್ನ ಧರ್ಮ ಅಂತ ಭಾವಿಸುತ್ತೇನೆ! ಜೀವಪರ ನಿಲುವಿನ ಮನುಷ್ಯರೆಲ್ಲ ದೇವರ ಹಾಗೇ ಅಂದುಪ್ರತತೇನೆ !ಈಚಿನ ಈ ಪುಸ್ತಕದಲ್ಲಿ ತರತಮವಿರದೆಪರಿಮಳದ ಬೆಡಗಹರಡುವಹೂಧರ್ಮ ನನ್ನ ದಾರಿ !ಅಂತ ಬರ್ಕೊಂಡಿದ್ದೇನೆ ! ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ನಿಜವಾದ ಪ್ರತಿಭೆಗಳು ನೇಪಥ್ಯದಲ್ಲಿ ಉಳಿಯುತ್ತವನ್ನೋ ವಿಷಾದ ಇದೆ.ನೆಲದ ಸೊಗಡಿನ,ಅಪಾರ ಕನಸಿನ ಪ್ರತಿಭೆಗಳಿಗೆ ಸೂಕ್ತ ಅವಕಾಶಗಳು ಲಭ್ಯ ಆಗ್ಬೇಕು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಸಾಹಿತ್ಯದಲ್ಲಿ ರಾಜಕಾರಣ ಏನ್ಮಾಡುತ್ತೆ ಅಂತ ಅಂದ್ಕೋತಿದ್ದೆ!ಊಹೂಂ ,ರಾಜಕಾರಣ ಈ ಅಕ್ಷರ ಲೋಕವನ್ನು ಬಿಡದ್ದಕ್ಕೆ ಖೇದವಿದೆ! ಯಾವಾವ ಕಾರಣಗಳಿಗೋ ಏನೇನೆಲ್ಲ ಘಟಿಸಿಬಿಡುವುದನ್ನು ಕಂಡು ಅಕ್ಷರ ಅರಿವಾ? ಅಹಂಕಾರವಾ? ಅನ್ನೋ ಪ್ರಶ್ನೆಗಳೂ ಕಾಡುತ್ವೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಆತಂಕವಿದೆ! ಗಡಿಗಳೆಲ್ಲ ಗುಡಿಗಳಾಗಿ,ಎಲ್ಲ ಹೊಟ್ಟೆಗಳಿಗೂ ಅನ್ನ ಸಿಕ್ಕು, ಈ ನೆಲದ ಹೆಣ್ಣುಮಕ್ಕಳು ನಿರ್ಭಯವಾಗಿ ಬದುಕುವ ದಿನಗಳು ಬಂದಾವ ಅಂತ …… ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಕನಸ್ಸಂತ ಏನಿಲ್ಲ ಸರ್,ನಾನು ಬರೆದದ್ದು ಮತ್ತಾರದೋ ಭಾವಕೋಶ ಮೀಟಿ ,ಇನ್ನಾವುದೋ ಜೀವದ ನೋವ ನೀವಿ ಹೋದರೆ ಸಾಕು!‘ಕವಿತೆ ಚರಿತ್ರೆಯನ್ನ ಬದಲಾಯಿಸ್ತದೋ ಇಲ್ವೋ ಗೊತ್ತಿಲ್ಲ,ಆದರೆ ಕವಿಯನ್ನಂತೂ ಬದಲಾಯಿಸ್ತದನ್ನೋ ಮಾತಿದೆಯಲ್ಲ’ ನನ್ನ ಕವಿತೆ ನನ್ನನ್ನು ಮತ್ತೆ ಮತ್ತೆ ಮನುಷ್ಯಳಾಗಿಸಿದರೆ ಸಾಕು. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ಆಂಗ್ಲಭಾಷೆಯ ಓದು ಇಲ್ಲ.ಕನ್ನಡ ನನ್ನ ಅಮ್ಮನೂ,ಅನ್ನವೂ ಹೌದಾಗಿರುವುದರಿಂದ ಕನ್ನಡದ ಒಂದಿಷ್ಟು ಪುಸ್ತಕ ಗಳನ್ನು ಓದಿದ್ದೇನೆ.ಆರ್ದ್ರವಾಗಿ,ಚಿಂತನಾರ್ಹವಾಗಿ ಬರೆಯಬಲ್ಲ ಯಾವುದೇ ಕವಿಯ ಎರಡು ಸಾಲೂ ನನ್ನನ್ನು ತಟ್ಟುವ ಕಾರಣ ಇವರೇ ಅಂತ ಹೇಳಲಾರೆ.ಪರಂಪರೆಯ ಜೊತೆಗೆ ಇವತ್ತಿನ ಎಷ್ಟೋ ಕವಿಗಳೂ ಕೂಡ ನನಗಿಷ್ಟ. ಈಚೆಗೆ ಓದಿದ ಕೃತಿಗಳಾವವು? ಶಾಲಾ ಶಿಕ್ಷಕಿಯೂ ಆಗಿರುವ ಕಾರಣ ನಿರಾಳ ಓದಿಗೆ ಬಿಡುವಾಗದು.ಈ ದುರಿತ ಕಾಲದಲ್ಲಿ ಆತ್ಮೀಯರು ಕಳಿಸಿದ ಒಂದಷ್ಟು ಗದ್ಯ ಪದ್ಯ…ಆಗಾಗ ಬ್ರೆಕ್ಟ್,ಗಿಬ್ರಾನ್.ಹೀಗೆ ನಿಮಗೆ ಇಷ್ಟವಾದ ಕೆಲಸ ಯಾವುದು? ಟೀಚರ್ ಕೆಲ್ಸ!ಅದರ ಜೊತೆಗೆ ಕನ್ನಡವನ್ನು ಮುದ್ದಾಗಿ ಬರೆಯುವ ಪ್ರಯತ್ನ.ಹದಿನಾರು ವರ್ಷಗಳಿಂದ ಖ್ಯಾತ ಲೇಖಕಿ ಅಮ್ಮ ಡಾ.ಬಿ.ಸಿ ಶೈಲಾನಾಗರಾಜ್ ರವರ ಜೊತೆಗೆ , ಶೈನಾ ಅನ್ನುವ ಕೈ ಬರಹದ ಪತ್ರಿಕೆಯ ಕೈ ಬರಹ ನನ್ನ ಕೈಗಳದೇ!ಈ ಪತ್ರಿಕೆಯೇ ನಾಡಿಗೆ ನನ್ನನ್ನು ಪರಿಚಯಿಸಿದ್ದು.ಕವಿತೆ ಬರಿತೀನಿ ಅನ್ನೋದ್ಕಿಂತ ಕೈ ಬರಹ ಅನ್ನೊ ಮೂಲಕವೇ ಪ್ರೀತಿ ಗಳಿಸಿದ ಅದೃಷ್ಟ! ನಿಮಗೆ ಇಷ್ಟವಾದ ಸ್ಥಳ ಯಾವುದು ? ಸ್ಥಳ ನನ್ನೂರೇ ಸರ್! ಈ ಬೆಟ್ಟ,ಬಯಲು,ಏನೂ ಇರದ ದಿನಗಳಲ್ಲಿ ನಮ್ಮನ್ನು ಪೊರೆದ ಊರಿನ ‘ಮನುಷ್ಯರು’ !!ಆದರೂ ಮುರ್ಡೇಶ್ವರ ಹೆಚ್ಚು ನೆನಪಾಗುವ ಜಾಗ! ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು? ಅಬ್ಬರ ಇಲ್ಲದ,ಅತಿ ಅನ್ನಿಸದ,ನೋಡುತ್ತಲೇ ಭಾವುಕಳಾಗಿಸಿಬಿಡಬಹುದಾದ ,ಒಳಗಿಳಿಯುವ ಒಂದೇ ಸಾಲನ್ನಾದರೂ ಹಾಡಾಗಿಸಿಕೊಂಡ ಯಾವುದೇ ಸಿನೆಮಾ ಆಗ್ಬಹುದು ಸರ್. ನೀವು ಮರೆಯಲಾರದ‌ ಘಟನೆ‌ ಯಾವುದು? ಹತ್ತಿರದವರ ಸಾವು ನೋವುಗಳು.ವಿವರಿಸೋದು ಕಷ್ಟ ಸರ್. ಇನ್ನು ಕೆಲ ಹೇಳಲೇ‌ ಬೇಕಾದ ಸಂಗತಿಗಳಿದ್ದರೂ ಹೇಳಿ…. ಅಣ್ಣನಂತಹ,ಗೆಳೆಯರಂತಹ ವೀರಲಿಂಗನ ಗೌಡರ ಅಕ್ಕರೆ ದೊಡ್ಡದು.ನಿಮ್ಮ ಜತೆಗಿನ ಇಷ್ಟು ಮಾತಿಗೆ ಅವರೇ ಕಾರಣರು.ಅವರ ಮಮಕಾರಕ್ಕೆ ನಿಮ್ಮ ಸಹೃದಯತೆಗೆ ವಂದನೆಗಳು ಸರ್‌.ಉಳಿದಂತೆ ‘ ನೋವೂ ಒಂದು ಹೃದ್ಯ ಕಾವ್ಯ’ ನನ್ನ ಇತ್ತೀಚಿನ ಪುಸ್ತಕ.ನಾಲ್ಕು ಸಾಲುಗಳ ಕವಿತೆಗಳು..ಕವಿತೆಗಳಂತಹ ಚಿತ್ರಗಳೂ ….ಪುಸ್ತಕ ದ ಪ್ರತಿ ಅಕ್ಷರವೂ ಕೈ ಬರಹದ್ದೇ ಅನ್ನುವುದು ವಿಶೇಷ. -************************************ ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

ಅಂಕಣ ಸಂಗಾತಿ, ದಿಕ್ಸೂಚಿ

ಅಂಕಣ ಬರಹ ತ್ವರಿತವಾಗಿಉತ್ತಮನಿರ್ಧಾರತೆಗೆದು ಕೊಳ್ಳುವುದುಹೇಗೆ? ಹಿಂದೆ ಮಾಡಿದ ನಿರ್ಧಾರಗಳು ಇಂದು ನಾವಿರುವ ಸ್ಥಿತಿಗೆ ಕಾರಣ.ಎಂಬುದು ನಮಗೆಲ್ಲ ಗೊತ್ತಿರುವ ವಿಷಯವೇ. ಆದರೂ ಹಲವೊಮ್ಮೆ ನಾವು, ಛೇ! ನಾನು ಅಷ್ಟು ತಡವಾಗಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಈಗ ನೋಡು ಎಷ್ಟೊಂದು ನೋವು ಅನುಭವಿಸುವ ಹಾಗಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯ್ತು. ನನ್ನ ವಿಳಂಬ ನಿರ್ಧಾರದಿಂದ ಸಾಕಷ್ಟು ನಷ್ಟವಾಗುತ್ತಿದೆ ಅಂತ ತಿಳಿಯುತ್ತಿದ್ದರೂ ಅದನ್ನು ಬದಲಿಸಿಕೊಳ್ಳಲು ಆಗುತ್ತಿಲ್ಲ ಎಂದು ಹಲಬುತ್ತೇವೆ.ನಿರ್ಧಾರಗಳು ಇಡೀ ಜೀವನವನ್ನೇ ಆವರಿಸಿವೆ. ವೃತ್ತಿ ಪ್ರವೃತ್ತಿ ಆರೋಗ್ಯ ಸಂಬಂಧಗಳು ಎಲ್ಲವೂ ನಿರ್ಧಾರದಿಂದ ನಿರ್ಧರಿಸಲ್ಪಡುತ್ತವೆ. ನನ್ನ ಜೊತೆಗೆ ಇದ್ದ ಗೆಳೆಯರು ಇದೇ ವಿಷಯದಲ್ಲಿ ಮಾಡಿದ ಸೂಕ್ತ ತ್ವರಿತ ನಿರ್ಧಾರಗಳು ಅವರ ಬದುಕನ್ನು ಉನ್ನತ ಸ್ಥಿತಿಗೆ ಏರಿಸಿದವು.ನಿರ್ಧಾರವೆಂದರೆ. . . . . .?‘ಮೂಲತಃ ನಿರ್ಧಾರವೆಂದರೆ ಲಭ್ಯವಿರುವ ಆಯ್ಕೆಗಳಲ್ಲಿ ಸರಿಯೆನಿಸಿದ ಒಂದನ್ನು ಆರಿಸಿಕೊಳ್ಳುವುದು.’ ‘ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ನಮ್ಮ ಜೀವನವನ್ನು ನಿರ್ಧರಿಸುತ್ತದೆ.’ನಾವು ತೆಗೆದುಕೊಳ್ಳುವ ನಿರ್ಧಾರಗಳು ಬದುಕನ್ನು ಕಟ್ಟುತ್ತವೆ ಇಲ್ಲವೇ ಕೆಡುವುತ್ತವೆ. ನಿರ್ಧಾರಗಳಿಗೆ ಬಹಳಷ್ಟು ಸಮಯ ಕಳೆಯುತ್ತೇವೆ. ಮುಂಜಾನೆ ಎಷ್ಟು ಗಂಟೆಗೆ ಏಳೋದು? ಮಧ್ಯಾಹ್ನ ಊಟಕ್ಕೇನು? ಇಂದು ಯಾವ ಯಾವ ಕೆಲಸ ಮಾಡುವುದು? ಯಾರನ್ನು ಭೇಟಿಯಾಗುವುದು ಇಂಥ ಚಿಕ್ಕ ಚಿಕ್ಕ ವಿಷಯಗಳಲ್ಲಿಯೂ ನಿರ್ಧಾರ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದೆ. ಬಿಕ್ಕಟ್ಟಿನ ಸಮಯದಲ್ಲಿ ಇಲ್ಲವೇ ಜೀವನದ ಮಹತ್ವದ ನಿರ್ಧಾರದಲ್ಲಂತೂ ಇದರ ಪಾತ್ರ ಬದುಕನ್ನೇ ಅಲ್ಲಾಡಿಸಿ ಬಿಡುತ್ತದೆ. ತ್ವರಿತ ನಿರ್ಧಾರದಿಂದ ಸಾಕಷ್ಟು ಸಮಯ ಉಳಿಸಬಹುದು.ಕಠಿಣ ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಳ್ಳಲು ಸಮರ್ಪಕ ಗುರಿ ಹೊಂದಿರುವುದು ಮುಖ್ಯ.ಬಿಲಿಯನ್ ಡಾಲರ್ ಪ್ರಶ್ನೆನಿರ್ಧಾರಗಳೇ ಹಾಗೆ ಕೇವಲ ಕೆಲವು ಕ್ಷಣಗಳಲ್ಲಿ ಬದುಕನ್ನು ವಿಚಿತ್ರ ತಿರುವಿನಲ್ಲಿ ತಂದು ನಿಲ್ಲಿಸಿ ಬಿಡುತ್ತವೆ. ಪ್ರತಿ ಬಾರಿ ನಿರ್ಧರಿಸುವಾಗ ತುಂಬಾ ಅವಸರಿಸಿದರೂ ಕಷ್ಟ ವಿಳಂಬವಾದರೂ ಕಷ್ಟ. ಇದೊಂದು ತರಹ ಬಿಸಿ ತುಪ್ಪ ಬಾಯಲ್ಲಿ ಹಾಕಿಕೊಂಡ ಅನುಭವ ಉಗುಳಲೂ ಆಗದು. ನುಂಗಲೂ ಆಗದು. ಎನ್ನುವುದು ಹಲವರ ಅಂಬೋಣ.ಕೆಲವರ ಸಲಹೆ ಪ್ರಕಾರ ಮುಗ್ಗರಿಸಿದರಂತೂ ಅವರನ್ನು ಇನ್ನಿಲ್ಲದಂತೆ ಹಾಡಿ ಹರಸುತ್ತೇವೆ. ಸಲಹೆ ನೀಡುವವರು ಸಾರ್ವತ್ರಿಕವಾಗಿ ಯೋಚಿಸಿ ನಿರ್ಧಾರ ಪ್ರಕಟಿಸುತ್ತಾರೆ. ನಮ್ಮ ಬದುಕಿನ ಬಗ್ಗೆ ನಮಗಿಂತ ಚೆನ್ನಾಗಿ ಬೇರೆಯವರಿಗೆ ಹೆಚ್ಚು ತಿಳಿದಿರುವುದಿಲ್ಲ. ನಮಗೆ ಚೆನ್ನಾಗಿ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲವೆಂದ ಮೇಲೆ ಅನುಭವಿಗಳ ತಿಳಿದವರನ್ನು ಅವಲಂಬಿಸುವುದು ಸಾಮಾನ್ಯ. ಆದರೆ ಆ ನಿರ್ಧಾರ ಯಾವಾಗಲೂ ಒಳ್ಳೆಯ ಫಲಿತಗಳನ್ನು ಕೊಡುತ್ತದೆ ಎನ್ನುವುದು ಲಾಟರಿ ಫಲಿತಾಂಶ ಇದ್ದಂತೆ. ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಇತರರ ಮೇಲೆ ಅವಲಂಬಿಸುವುದು ಎಂದರೆ, ‘ಕುಸಿಯುತ್ತಿರುವ ಆಧಾರವನ್ನು ಗಟ್ಟಿಯಾಗಿ ಹಿಡಿದುಕೊಂಡಂತೆ.’ ಹೀಗಿದ್ದಾಗ ತ್ವರಿತ ನಿರ್ಧಾರ ತೆಗೆದುಕೊಳ್ಳುವುದು ಹೇಗೆ?ಎನ್ನುವುದು ಬಿಲಿಯನ್ ಡಾಲರ್ ಪ್ರಶ್ನೆಯಂತೆ ಕಾಡುತ್ತದೆ ಅಲ್ಲವೇ? ಹಾಗಾದರೆ ಮುಂದಕ್ಕೆ ಓದಿ.ನನ್ನ ನಿರ್ಧಾರ ನನ್ನದುಪ್ರತಿಯೊಂದರಲ್ಲೂ ಪರಿಶ್ರಮ ಪಡುವ ಮನೋಭಾವವಿದ್ದರೆ ನಾವು ಅಂದುಕೊಂಡಿದ್ದನ್ನು ಸಾಧಿಸಿ ಬಿಡುತ್ತೇವೆ ಎನ್ನುವುದು ಸುಳ್ಳು. ಧೈರ್ಯದ ತ್ವರಿತ ನಿರ್ಧಾರ ತೊಟ್ಟು ಚೈತನ್ಯದೊಂದಿಗೆ ಮುಂದುವರೆದರೆ ಮಾತ್ರ ಬದುಕಿನಲ್ಲಿ ಸುಧಾರಣೆ ತಂದುಕೊಳ್ಳಬಹುದು. ಚಾಣಕ್ಯ ನೀತಿಯಲ್ಲಿ ಹೇಳಿದಂತೆ “ಕೋಳಿಯಿಂದ ನಾಲ್ಕು ಪಾಠ ಕಲಿಯಬಹುದು. ಬೇಗ ಏಳುವುದು, ಆತ್ಮ ರಕ್ಷಣೆಗೆ ಹಾಗೂ ಯುದ್ಧಕ್ಕೆ ಸದಾ ಸನ್ನದ್ಧವಾಗಿರುವುದು.ತನ್ನ ಸುತ್ತಲಿನವರಿಗೆ ಉದಾರವಾಗಿ ಹಂಚುವುದು. ತನ್ನ ಅವಶ್ಯಕತೆಗಳಿಗೆ ತಾನೇ ಸಂಪಾದಿಸುವುದು.” ಕೋಳಿ ಹೇಗೆ ತನ್ನ ಅಗತ್ಯತೆಗೆ ತಾನೇ ಸ್ಪಂದಿಸುವುದೋ ಹಾಗೆ ನಾವೂ ನಮ್ಮ ನಿರ್ಧಾರಗಳಲ್ಲಿ ಮುಖ್ಯ ಪಾತ್ರವನ್ನು ವಹಿಸಬೇಕು.ಗ್ರೀಕ್ ನಾಣ್ಣುಡಿಯಂತೆ “ಬಲ್ಲಿದವನಿಗಿಂತ ತಿಳಿದವನು ಮೇಲು.” ಇತರರು ನಮ್ಮನ್ನು ಬಲ್ಲರು ಆದರೆ ಚೆನ್ನಾಗಿ ತಿಳಿಯಲಾರರು. ಆದ್ದರಿಂದ ನಮ್ಮ ಬಗ್ಗೆ ನಾವೇ ಅರಿತು ನಿರ್ಧರಿಸುವುದು ಮೇಲು.ಪ್ರಮಾಣ ನಿರ್ಧರಿಸಿಸುಮ್ಮನೆ ಯೋಚಿಸಿದರೆ ಪ್ರತಿ ದಿನದ ಬದುಕಿನಲ್ಲಿ ಜೀವಿಸುತ್ತಿರುವುದು ನಾವು ತೆಗೆದುಕೊಳ್ಳುವ ನಿರ್ಧಾರದ ಮೇಲೆ. ತೆಗೆದುಕೊಳ್ಳುವ ನಿರ್ಧಾರಗಳು ಬದುಕನ್ನು ಬದಲಿಸುವ ತಾಕತ್ತು ಹೊಂದಿವೆ. ಮಾಡುವ ಆಯ್ಕೆಯಲ್ಲಿ ತುಸು ತಡವಾದರೂ ಬಹಳಷ್ಟು ತೊಂದರೆ ಅನುಭವಿಸುವ ತೊಂದರೆ ತಪ್ಪಿದ್ದಲ್ಲ. ಪ್ರತಿ ಸಲ ಪ್ರತಿ ವಿಷಯದಲ್ಲೂ ವಿಳಂಬ ನಿರ್ಧಾರವನ್ನು ರೂಢಿಸಿಕೊಂಡರೆ ಮುಗಿದೇ ಹೋಯಿತು.ಬಂಗಾರದಂಥ ಅವಕಾಶಗಳು ಕೈ ತಪ್ಪಿ ಹೋಗುತ್ತವೆ. ಜೀವನ ಪರ್ಯಂತ ಅದನ್ನೇ ನೆನೆ ನೆನೆದು ಕೊರಗ ಬೇಕಾಗುತ್ತದೆ.ಅವರಿವರ ಮುಂದೆ ಅದನ್ನೇ ತೋಡಿಕೊಳ್ಳುತ್ತ ಕೂರಬೇಕಾಗುತ್ತದೆ. ಹಾಗಾದರೆ ತ್ವರಿತ ನಿರ್ಧಾರ ತೆಗೆದುಕೊಳ್ಳುವುದು ಒಂದು ಕೌಶಲ್ಯ ಅಲ್ಲವೇ? ಸರಿ, ಏನಾದರೂ ಆಗಲಿ ಅಂತ ಅವಸರದಲ್ಲಿ ಏನಾದರೂ ನಿರ್ಧಾರ ಕೈಗೊಂಡರೆ ಅದನ್ನೂ ಅನುಭವಿಸಲೇಬೇಕು. ನಿರ್ಧಾರಗಳನ್ನು ಸಣ್ಣ ಮಧ್ಯ ಮತ್ತು ದೊಡ್ಡ ಎನ್ನುವ ವರ್ಗಕ್ಕೆ ಸೇರಿಸಬೇಕು.ಇದು ನಿರ್ಧಾರದ ಪ್ರಾಮುಖ್ಯತೆಯನ್ನು ಬೇರ್ಪಡಿಸುವುದು. ಸೂಕ್ತ ಸಮಯ ಹಾಗೂ ಶ್ರಮವನ್ನು ಹಾಕಲು ಅನುವು ಮಾಡಿಕೊಡುವುದು.ಇರಲಿ ಸಮಯ ಮಿತಿಸ್ವಯಂ ಸಮಯ ಮಿತಿಯು ನಿರ್ಧಾರವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುವುದು.ಯಾವುದೇ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದರೆ ಟೈಮರ್‍ನ್ನು ಹೊಂದಿಸಿ ಮತ್ತು ನಿರ್ಧಾರದ ಪ್ರಕ್ರಿಯೆ ಪ್ರಾರಂಭಿಸಿ. 10,10,10 ವಿಧಾನ ಬಳಸಿ ಅಂದರೆ ತೆಗೆದುಕೊಂಡ ನಿರ್ಧಾರ 10 ನಿಮಿಷ, 10 ತಿಂಗಳು 10 ವರ್ಷಗಳ ನಂತರ ಖುಷಿ ನೀಡುವುದು ಎನ್ನುವುದನ್ನು ತಿಳಿದುಕೊಂಡರೆ ಸಾಕು. ತ್ವರಿತ ಉತ್ತಮ ನಿರ್ಧಾರ ಸಾಧ್ಯ. ನಿರ್ಣಯ ತೆಗೆದುಕೊಳ್ಳಬೇಕಾದ ಸಮಸ್ಯೆಯನ್ನು ಬರೆದು ಸಂಭವನೀಯ ನಿರ್ಣಯಗಳನ್ನು ಲಾಭದಾಯಕ ಅಂಶಗಳನ್ನು ವಿಶ್ಲೇಷಿಸುವುದು ಅತ್ಯಂತ ಉತ್ತಮ ವಿಧಾನ. ನಿರ್ಣಯದ ತುದಿಯನ್ನು ಸರಳವಾಗಿ ತಲುಪಲು ಸಹಾಯ ಮಾಡುತ್ತದೆ. ‘ಸಮಯ ಮಿತಿಯು ಯಾವಾಗ ಕೊನೆಗೊಳ್ಳುತ್ತದೆ ಎಂದು ತಿಳಿದಾಗ ನಾವು ನಿರ್ಧಾರದಲ್ಲಿ ಹೆಚ್ಚಿನ ಶ್ರಮವನ್ನು ಹೂಡುತ್ತೇವೆ.’ ಎಂದು ಒಂದು ಅಧ್ಯಯನ ತಂಡ ಹೇಳಿದೆ. ಅಷ್ಟೇ ಅಲ್ಲ ಕಡಿಮೆ ಆಯಾಸವನ್ನು ಅನುಭವಿಸುತ್ತೇವೆ. ಇದು ಗಡುವಿನ ಶಕ್ತಿ ಅಲ್ಲದೇ ಮತ್ತೇನೂ ಅಲ್ಲ. ದೊಡ್ಡ ಅಥವಾ ಮಹತ್ವದ ನಿರ್ಧಾರಗಳಿಗೆ ಹೆಚ್ಚಿನ ಗಡುವನ್ನು ಅನ್ವಯಿಸಿ.ಒಳ್ಳೆಯದು ಮತ್ತು ಕೆಟ್ಟದ್ದೆಂದು ಯೋಚಿಸಿಹೆಚ್ಚಿನ ವಿಶ್ಲೇಷಣೆಯು ಹೆಚ್ಚಿನ ಆಯ್ಕೆಗಳಿದ್ದಲ್ಲಿ ನಿರ್ಧರಿಸುವುದನ್ನು ಇನ್ನೂ ಹೆಚ್ಚು ನೆನಗುದಿಗೆ ಬೀಳುವಂತೆ ಮಾಡುತ್ತದೆ. ನಿರ್ಧಾರ ತೆಗೆದುಕೊಂಡಾದ ಮೇಲೆಯೂ ಫಲಿತಾಂಶದ ಕುರಿತಾಗಿ ಯೋಚಿಸುವುದು ಒಳ್ಳೆಯದಲ್ಲ. ಇಂಥ ಸಂದರ್ಭದಲ್ಲಿ ನಿರ್ಧಾರ ಮುಳಗಿಸಬಹುದು ಇಲ್ಲವೇ ತೇಲಿಸಬಹುದು. ವಿಶ್ಲೇಷಣೆ ಸಕಾರಾತ್ಮಕವಾಗಿರಲಿ. ಕೆಲವೊಮ್ಮೆ ಆಪ್ತರೊಂದಿಗೆ ಚರ್ಚಿಸಿ ನಿರ್ಧರಿಸುವುದು ಸೂಕ್ತವೆನಿಸುವುದು. ನಿರ್ಧರಿಸುವಾಗ ಆಯ್ಕೆಗಳನ್ನು ಒಳ್ಳೆಯದು ಕೆಟ್ಟದ್ದು ಎಂದು ವಿಭಜಿಸುವುದು ಸೂಕ್ತ. ಇದೊಂದು ತರಹ ಬೆಳೆಯಲ್ಲಿನ ಕಳೆ ತೆಗೆಯುವ ಪ್ರಕ್ರಿಯೆಯಂತೆ. ಒಳ್ಳೆಯ ಮತ್ತು ಕೆಟ್ಟ ಎಂಬ ಎರಡು ಕಾಲಮ್ ಮಾಡಿಕೊಂಡು ಆಯ್ಕೆಗಳನ್ನು ವಿಭಜಿಸಿ ಈ ಕೌಶಲ್ಯ ನಿರ್ಧರಿಸುವಿಕೆಯನ್ನು ಸರಳಗೊಳಿಸುತ್ತದೆ ಮತ್ತು ತ್ವರಿತಗೊಳಿಸುತ್ತದೆ. ನಿರ್ಣಯಿಸುವ ವಿಷಯದ ಕುರಿತು ಯೋಚಿಸುವುದು ಸೂಕ್ತ ಇದರಿಂದ ಸರಿಯಾಗಿ ಮೌಲ್ಯಮಾಪನ ಮಾಡಬಹದುದು. ಆದರೆ ಅತಿಯಾಗಿ ಯೋಚಿಸುವುದು ಸಮಸ್ಯೆಯಾಗುತ್ತದೆ.ಕಾಗದದಲ್ಲಿ ಬರೆಯಿರಿಎಲ್ಲ ಆಯ್ಕೆಗಳು ಹೆಚ್ಚು ಕಡಿಮೆ ಸರಿ ಸಮಾನ ಮೌಲ್ಯವನ್ನು ಹೊಂದಿವೆ ಎಂದು ತೋರುತ್ತಿದ್ದರೆ ಉತ್ತಮವೆನಿಸಿದವುಗಳನ್ನು ಪ್ರತ್ಯೇಕ ಕಾಗದದಲ್ಲಿ ಬರೆದು ನಂತರ ಯಾದೃಚ್ಛಿಕವಾಗಿ ಒಂದನ್ನು ಆರಿಸಿ ನಿರ್ಧರಿಸಬಹುದು. ನಿರ್ಧಾರಗಳು ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ ಆದ್ದರಿಂದ ಇದು ದೊಡ್ಡ ನಿರ್ಧಾರಗಳಿಗೆ ಸೂಕ್ತವಲ್ಲ. ಸಣ್ಣ ಪುಟ್ಟ ನಿರ್ಧಾರಗಳಿಗೆ ಇದು ಹೇಳಿ ಮಾಡಿಸಿದ ಕೌಶಲ್ಯದಂತೆ ಕಾರ್ಯ ನಿರ್ವಹಿಸುತ್ತದೆ.ಈ ಕ್ಷಣದಲ್ಲಿ ಜೀವಿಸಿನಿರ್ಧರಿಸುವಿಕೆ ಮಾನಸಿಕವಾಗಿ ನಮ್ಮನ್ನು ಗೊಂದಲಕ್ಕೆ ಬೀಳಿಸುತ್ತದೆ. ಪ್ರತಿ ಹೆಜ್ಜೆಯ ಫಲಿತಾಂಶವನ್ನು ನೋಡಲು ಇಚ್ಛಿಸುತ್ತೇವೆ ಹೀಗಾಗಿ ಕೈಯಲ್ಲಿರುವ ಸಮಯ ಸೋರಿ ಹೋಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದ್ದರಿಂದ ಸರಳವಾಗಿ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಅತಿಯಾಗಿ ಯೋಚಿಸಿ ಸಮಯ ವ್ಯರ್ಥ ಮಾಡದಂತೆ ನಿಮ್ಮಷ್ಟಕ್ಕೆ ನೀವು ವೀಕ್ಷಕರಾಗಿ ಕಾರ್ಯ ನಿರ್ವಹಿಸಿ.ಕೆಲಸದಲ್ಲಿ ಉತ್ಪಾದಕತೆಯನ್ನು ಬಾನೆತ್ತರಕ್ಕೆ ಏರಿಸಿ ನಿರ್ಧಾರದಲ್ಲಿ ತೀವ್ರಗೊಳ್ಳಲು ಹೆಚ್ಚು ಪರಿಣಾಮಕಾರಿಯಾಗಿ ಇರಬೇಕೆಂದರೆ ವರ್ತಮಾನದತ್ತ ಹೆಚ್ಚು ಗಮನ ನೀಡಬೇಕು. ನಿರ್ಧರಿಸುವಲ್ಲಿಯೇ ಹೆಚ್ಚು ಸಮಯ ತೆಗೆದುಕೊಂಡು ಕಾರ್ಯಾನುಷ್ಟಾನಕ್ಕೆ ಸಮಯ ಇಲ್ಲದಂತೆ ಮಾಡಿಕೊಳ್ಳುತ್ತೇವೆ. ದುಡುಕಿನ ನಿರ್ಧಾರ ಹಾಳುಗೆಡುವುದೇ ಹೆಚ್ಚು. ಈ ಕ್ಷಣದಲ್ಲಿ ಜೀವಿಸಿ ನಿರ್ಣಯಿಸಿ.ವೈಫಲ್ಯವನ್ನು ಸ್ವೀಕರಿಸಿತ್ವರಿತ ನಿರ್ಧಾರ ಸದಾ ಕಾಲ ಉತ್ತಮವಾಗಿಯೇ ಫಲ ನೀಡುತ್ತವೆ ಎಂದೇನಿಲ್ಲ. ಕೆಲವೊಮ್ಮೆ ಬಿರುಗಾಳಿಯಂತೆ ಸಮಸ್ಯೆಗಳನ್ನು ತಂದು ಚೆಲ್ಲಬಹುದು. ತಪ್ಪು ನಿರ್ಧಾರಗಳು ವೈಫಲ್ಯದ ಉಡುಗೊರೆಯನ್ನು ನೀಡಬಹುದು ಆದ್ದರಿಂದ ವೈಫಲ್ಯವನ್ನು ಸ್ವೀಕರಿಸುವ ಮನೋಭಾವವನ್ನು ಹೊಂದುವುದು ಒಳಿತು. ವೈಫಲ್ಯ ಜೀವನದ ಅವಿಭಾಜ್ಯ ಅಂಗ ಅದರಿಂದ ಬಹಳಷ್ಟನ್ನು ಕಲಿಯುತ್ತೇವೆ ಎನ್ನುವುದೂ ನಿಜ.ಸೋಲು ನಮ್ಮ ಹಿನ್ನೆಡೆಗೆ ಕಾರಣವಾಗದಂತೆ ನೋಡಿಕೊಳ್ಳಬೇಕು.ಕೊನೆ ಹನಿಜೀವನ ಆಯ್ಕೆಗಳ ಸರಮಾಲೆ. ಬೇಕಾದುದನ್ನು ಆರಿಸಿಕೊಳ್ಳುವುದೇ ನಿರ್ಧಾರ. ಎಲ್ಲ ಪರಿಸ್ಥಿತಿಗಳಲ್ಲಿ ನೂರಕ್ಕೆ ನೂರರಷ್ಟು ತ್ವರಿತ ಉತ್ತಮ ನಿರ್ಧಾರ ತೆಗೆದುಕೊಳ್ಳುವಷ್ಟು ಪರಿಪೂರ್ಣರು ಯಾರೂ ಇಲ್ಲ. ಇಲ್ಲಿ ಪರಿಪೂರ್ಣತೆ ಮುಖ್ಯವಲ್ಲ. ಶೀಘ್ರ ಮತ್ತು ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಮುಖ್ಯ. ತ್ವರಿತ ಉತ್ತಮ ನಿರ್ಧಾರ ನಮ್ಮನ್ನು ವೃತ್ತದೊಳಗೆ ಮತ್ತು ಹೊರಗೆ ಗೆಲುವಿನತ್ತ ಕರೆದೊಯ್ಯಲು ಸಹಕಾರಿ. ನಡೆಯುವ ದಾರಿಯಲ್ಲಿ ನಿರ್ಣಯದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗುವುದು ಅಷ್ಟೊಂದು ಸುಲಭದ ಕೆಲಸವೇನಲ್ಲ ಹಾಗಂತ ಅಸಾಧ್ಯವುದುದೂ ಅಲ್ಲ. ಬದುಕಿನ ಕೆಲ ಚಿಕ್ಕ ತ್ವರಿತ ಉತ್ತಮ ನಿರ್ಣಯಗಳು ಕೆಲವೊಮ್ಮೆ ದೊಡ್ಡ ಪರಿಣಾಮವನ್ನು ಬೀರುತ್ತವೆ. ಅಂತರಂಗವು ಹೇಳಿದಂತೆ ಭಾವನೆಗಳಿಗೆ ಒತ್ತು ಕೊಟ್ಟು ತೆಗೆದುಕೊಂಡ ನಿರ್ಣಯಗಳು ಖಂಡಿತ ಒಳ್ಳೆಯ ದಾರಿಯಲ್ಲಿ ನಮ್ಮನ್ನು ನಡೆಸುತ್ತವೆ ಮತ್ತು ದೊಡ್ಡ ನಗು ಚೆಲ್ಲುವಂತೆ ಮಾಡುತ್ತವೆ. ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

You cannot copy content of this page

Scroll to Top