ಅಂಕಣ ಬರಹ ಪ್ರಸ್ತುತ ಸಾಂಸ್ಕೃತಿಕ ವಾತಾವರಣದಲ್ಲಿ ಫೇವರಟಿಸಂ, ಜಾತೀಯತೆ, ಧಾರ್ಮಿಕತೆ, ಎಡ-ಬಲ, ವಶೀಲಿ ಎಲ್ಲವೂ ಇವೆ ಡಾ ಪ್ರೇಮಲತ .ಬಿ. ಪರಿಚಯ ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಕಳೆದ 18 ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸ.ದಿನಪತ್ರಿಕೆ, ವಾರಪತ್ರಿಕೆ,ಮಾಸಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಲೇಖನಗಳು,ಅಂಕಣ ಬರಹ, ಕಥೆ, ಕವನಗಳು ಮತ್ತು ಪ್ರಭಂದಗಳನ್ನು ಬರೆದಿದ್ದಾರೆ.ತುಷಾರ ಚಿತ್ರಕವನ ಸ್ಪರ್ಧೆಯ ಬಹುಮಾನ, ಪ್ರಜಾವಾಣಿ ಪ್ರೇಮ ಪತ್ರ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಭಂದ ಸ್ಪರ್ದೆಯಲ್ಲಿ ಸಮಾಧಾನಕರ ಬಹುಮಾನ, ಕರ್ನಾಟಕ ಲೇಖಕಿಯರ ಸಂಘದ ಕವನ ಸ್ಪರ್ಧೆಯ ಬಹುಮಾನ, ಸಿಂಗಾಪೂರ್ ನಡೆಸುವ ಕಥಾ ಸ್ಪರ್ಧೆಯಲ್ಲಿ ಪ್ರಥಮ ಮತ್ತು ಕವನ ಸ್ಪರ್ದೆಯಲ್ಲಿ ದ್ವಿತೀಯ ಬಹುಮಾನಗಳನ್ನು ಪಡೆದಿದ್ದಾರೆ. ೨೦೨೦ ರ ಕಹಳೆ ಕಥಾ ಸ್ಪರ್ಧೆಯಲ್ಲಿ ಅವರದೊಂದು ಕಥೆ ಅತ್ಯುತ್ತಮ ಕಥೆಯೆನ್ನುವ ಗೌರವಕ್ಕೆ ಪಾತ್ರವಾಗಿದೆ. ಅವರ ಪ್ರಥಮ ಕಥಾ ಗುಚ್ಛ ’ಛಂದ ಪ್ರಕಾಶನದ’ ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು. ಸುಧಾ, ತರಂಗ, ಮಯೂರ, ಕನ್ನಡ ಪ್ರಭಾ ಪತ್ರಿಕೆಗಳಲ್ಲಿ ಕಥೆಗಳು ಪ್ರಕಟವಾಗಿವೆ.’ಬಾಯೆಂಬ ಬ್ರಂಹಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ. ಕನ್ನಡಪ್ರೆಸ್.ಕಾಂ ನಲ್ಲಿ ಆರು ತಿಂಗಳ ಕಾಲ ಅಂಕಣ ಬರಹವಾಗಿ ಪ್ರಕಟಗೊಂಡ ಅವರ ಬರಹಗಳು ಇದೀಗ ಪುಸ್ತಕ ರೂಪದಲ್ಲಿ ಹೊರಬಂದಿದೆ. ’ಕೋವಿಡ್ ಡೈರಿ’ ಎನ್ನುವ ಈ ಬರಹಗಳ ಗುಚ್ಛದ ಈ ಪುಸ್ತಕ ಈ ತಿಂಗಳ ನವಕರ್ನಾಟಕ ನಡೆಸಿದ ಸಮೀಕ್ಷೆಯಲ್ಲಿ ಟಾಪ್-ಟೆನ್ ಪುಸ್ತಕಗಳ ಪಟ್ಟಿಯಲ್ಲಿ ಸೇರಿದೆ.…………………………… ಕವಿತೆ, ಕಥೆಗಳನ್ನು ಯಾಕೆ ಬರೆಯುತ್ತೀರಿ? ಸೃಜನಾತ್ಮಕವಾಗಿ ಯಾವುದೋ ಒಂದು ನಿಮಿಷವನ್ನು ಕಟ್ಟಿಕೊಡುವ ತುಡಿತದಿಂದ. ಅದು ಮನಸ್ಸಿಗೆ ಸಂತೋಷವನ್ನು ನೀಡುವುದರಿಂದ. ಸಾಹಿತ್ಯ, ಕಥೆ, ಕವಿತೆಗಳನ್ನು ಓದುವುದರಿಂದ. ಕವಿತೆ, ಕತೆ ಹುಟ್ಟುವ ಕ್ಷಣ ಯಾವುದು? ಯಾವಾಗ ಬೇಕಾದರೂ ಆಗಬಹುದು. ಆದರೆ ಮನಸ್ಸಿನ ಮೇಲೆ ಯಾವುದೋ ಒಂದು ವಿಚಾರ ಮೋಡಕಟ್ಟಿದ ರೀತಿ ಆವರಿಸಿಕೊಂಡ ನಂತರ ಮಳೆಯಾಗಲೇ ಬೇಕು ಎನ್ನುವ ಧಾವಂತದ ರೀತಿಯಲ್ಲಿ ಬರಹಗಳೂ ಹುಟ್ಟಿ ಬಿಡುತ್ತವೆ. ಅಗಲೇ ತೃಪ್ತಿ ಮತ್ತು ಸಮಾಧಾನ. ಆದರೆ ಇದು ನನಗೆ ಬೇಕೆಂದಾಗ ಆಗುವುದಿಲ್ಲ. ನಿಮ್ಮ ಕವಿತೆ, ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು ? ಕವಿತೆಗಳು ಪ್ರೀತಿ, ಭಾವನೆ ಮತ್ತು ಪರಿಸರದ ಮೇಲೆ ಹೆಚ್ಚಿವೆ. ಪ್ರಚಲಿತ ಸಮಸ್ಯೆಗಳ ಬಗ್ಗೆ ಭಾವನಾತ್ಮಕವಾಗಿ ಬರೆದಿರುವುದು ಕಡಿಮೆ. ಕಾರಣ ಎಂದರೆ ಅಂಥಹ ವಿಚಾರಗಳು ಕವಿತೆಯ ಅಲಂಕಾರ, ರೂಪಕಗಳನ್ನು ನಿರ್ಲ್ಯಕ್ಷಿಸಿ ವಸ್ತುನಿಷ್ಠ ಮತ್ತು ವಾಸ್ತವಕ್ಕೆ ಸಂಭಂದಿಸಿದ ಲೇಖನಗಳೋ ಮತ್ತೊಂದೋ ಆಗಿರುವುದೇ ಹೆಚ್ಚು. ಕಥೆಗಳಲ್ಲಿ ಮನುಷ್ಯನ ಮನೋವ್ಯಾಪಾರದ ಬಗ್ಗೆ ಹೆಚ್ಚು ಬರೆದಿದ್ದೇನೆ. ನನ್ನ ಕಥೆಗಳ ವ್ಯಾಪ್ತಿಯಲ್ಲಿ ಸಮಾಜದ ಶೀತಲ ಕ್ರೌರ್ಯಗಳು ಎದ್ದು ಕಾಣುವಷ್ಟು ಇರುತ್ತವೆ.ಆದರೆ ತೀರ್ಮಾನಗಳಿರುವುದಿಲ್ಲ.ಅತಿಯಾದ ಭಾವುಕತೆ, ಉತ್ಪ್ರೇಕ್ಷೆ ಇರುವುದಿಲ್ಲ. ಆ ಮಟ್ಟಕ್ಕೆ ಮಿತವೂ ಹೌದು.ಪದೇ ಪದೇ ಕಾಡವ ವಿಷಯವೆಂದರೆ ಅದು ಮನುಷ್ಯ ಸಂಬಂಧಗಳ ನಡುವಿನ ಭಾವನಾತ್ಮಕ ಮತ್ತು ವಿನೋದತ್ಮಕ ಮನೋವ್ಯಾಪಾರ. ಕವಿತೆ, ಕತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ? ಖಂಡಿತ. ಹರೆಯವನ್ನಾದರೂ ಹತ್ತಿಕ್ಕಬಹುದು ಆದರೆ ಬಾಲ್ಯದ ನೆನಪುಗಳದ್ದು ಗಾಢ ಬಣ್ಣಗಳು. ಅವು ಬೇರೆ,ಬೇರೆ ಆಯಾಮಗಳಲ್ಲಿ ಮತ್ತೆ ಡಣಾ ಡಾಳಾಗಿ ಇಣುಕುತ್ತವೆ. ಸಮಕಾಲೀನ ಬದುಕಿನ ಸ್ಪಂದನೆಗಳೊಂದಿಗೆ ಉತ್ತಮ ಸಾಥ್ ನೀಡುತ್ತವೆ. ನೀವು ವೃತ್ತಿಯಿಂದ ದಂತ ವೈದ್ಯರು. ಇದು ನಿಮ್ಮ ಸೃಜನಶೀಲತೆಗೆ ನೆರವಾಗಿದಿಯ ಸದಾ ಜನರೊಂದಿಗೆ ಆತ್ಮೀಯವಾಗಿ ಒಡನಾಡಲು ಅವಕಾಶವಿರುವ ನನ್ನ ಕೆಲಸ ಜನರ ಬದುಕಿನ ಬಗ್ಗೆ ಬರೆಯುವ ಅವಕಾಶವನ್ನು ಕೂಡ ಹಿಗ್ಗಿಸುತ್ತದೆ. ದಿನಕ್ಕೆ ಇಪ್ಪತ್ತೈದು ಹೊಸ ಮುಖಗಳನ್ನು ನೋಡುತ್ತ, ಹೊಸ ಕಥೆಗಳನ್ನು ಕೇಳುತ್ತಲೇ ಇರುತ್ತೇವೆ. ಆದರೆ, ಈ ಅತಿವೃಷ್ಟಿ ಒಮ್ಮೊಮ್ಮೆ ಬರೆಯುವ ಗೀಳನ್ನು ತಗ್ಗಿಸುತ್ತದೇನೋ.ಕೆಲಸಮಾಡುವಾಗ ಇರುವ ಕರ್ತವ್ಯದ ದೃಷ್ಟಿಗೂ, ಬರಹಕ್ಕೆ ಕುಳಿತಾಗ ಬರುವ ಉಮೇದಿಗೂ ಯಾವ ನೇರ ತಾಳೆಯೂ ಇಲ್ಲದಿರಬಹುದು.ಆದರೆ ರೋಗಿಗಳನ್ನು ನಿಭಾಯಿಸಿದಂತೆಯೇ ಕಥೆಯ ಪಾತ್ರಗಳನ್ನು ಕೂಡ ನಿಭಾಯಿಸಲು ಪರೋಕ್ಷವಾದ ಪ್ರಭಾವ ಇದ್ದಿರಬಹುದು. ಬರೇ ಮೇಜು, ಕುರ್ಚಿ, ಕಂಪ್ಯೂಟರಿನ ನಡುವೆ ಕುಳಿತವರು ಕೂಡ ಅದ್ಭತವಾದ ಕಥೆಗಳನ್ನು ಹೆಣೆಯುವುದನ್ನು ಗಮನಿಸಿದ್ದೇನೆ.ಹಾಗಾಗಿ ಯಾರು ಬೇಕಾದರೂ ಬರೆಯಬಲ್ಲರು ಅನ್ನೋದರಲ್ಲಿ ಸಂಶಯವಿಲ್ಲ.ವೃತ್ತ ಪರಿಜ್ಞಾನ ಮತ್ತು ಬರಹದ ಭಾವುಕಥೆಯ ಜೊತೆಗೆ ವೃತ್ತಿಯ ಪ್ರಭಾವದಿಂದ ಬರುವ ಸ್ಥಿತಪ್ರಜ್ಞತೆಯನ್ನಂತೂ ನನ್ನ ಬರಹದಲ್ಲಿ ಖಂಡಿತ ನೋಡಬಹುದು. ಕೆಲವೊಮ್ಮೆ ಅದನ್ನು ಕಳೆದು ಬರೆಯುವುದು ಕೂಡ ತೊಡಕಾಗಿದೆಯೆನ್ನಬಹುದು. ವೃತ್ತಿ ಹಾಗೂ ಸೃಜನಶೀಲತೆ ಮತ್ತು ಅಪ್ತ ಬದುಕನ್ನು ನಿಭಾಯಿಸುವ ಕೌಶಲ್ಯ ಹೇಗದು? ದಿನದಲ್ಲಿ ಎಲ್ಲರಿಗೂ ಇರುವ ಅವೇ ೨೪ ಗಂಟೆಗಳನ್ನು ಪ್ರೀತಿಪಾತ್ರವಾದ ಮೂರಕ್ಕೂ ಹಂಚಲು ಇರುವ ಒಂದೇ ವಿಧಾನ ಎಂದರೆ, ಬರೇ ಎರಡರಲ್ಲಿ ಅಥವಾ ಒಂದರಲ್ಲೇ ತೊಡಗಿದವರಿಗಿಂತ ಹೆಚ್ಚು ಕಷ್ಟಪಟ್ಟು ಕೆಲಸಮಾಡುವುದು. ಜಾಣತನದಿಂದ ಸಮಯ ಪೋಲಾಗದಂತೆ ನೋಡಿಕೊಳ್ಳುವುದು. ಅಲಂಕಾರ, ಕಾಡು ಹರಟೆ, ಗಾಸಿಪ್, ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದೂರವಿದ್ದು ಏಕಾಂತದ ಸಮಯವನ್ನು ಉಳಿಸಿಕೊಳ್ಳುವುದು. ಕೆಲಸಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು. ಅತಿಯಾದ ನಿಯಮಗಳನ್ನು ಹಾಕಿಕೊಳ್ಳದೆ, ಅತಿಯಾಗಿ ಯಾವುದನ್ನೂ ಹಚ್ಚಿಕೊಳ್ಳದೆ ನಮ್ಮತನವನ್ನು ಕಾಪಾಡಿಕೊಳ್ಳುವ ಉಪಾಯಗಳನ್ನು ಪಾಲಿಸುವುದು.ಮಲ್ಟಿ ಟಾಸ್ಕಿಂಗ್ ಮೊದಲಿಂದಲೂ ಇತ್ತು.ಕಾಲ ಕ್ರಮೇಣ ಬದುಕು ಅವುಗಳನ್ನು ನಿಭಾಯಿಸುವ ಕಲೆಯನ್ನು ಕಲಿಸಿತು ಎನ್ನಬಹುದು. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಅದೊಂದು ಅವಿರತ ಚಕ್ರ. ಹಿಂದೊಮ್ಮೆ ಏಕತ್ವದ ಸಂಕುಚಿತ ಲೋಕವಿತ್ತು. ಅದು ಜಾಗತೀಕರಣದೊಂದಿಗೆ ಬಹುತ್ವಕ್ಕೆ ತೆರೆದುಕೊಂಡಿತು. ಅದಕ್ಕೆ ಬಹಳ ಸಮಯ ಹಿಡಿಯಿತು. ಅದು ಪೂರ್ಣವಾಗುವ ಮೊದಲೇ ನ್ಯಾಷನಲಿಸ್ಟಿಕ್ ಮೂವ್ ಮೆಂಟ್ ಗಳು ಶುರುವಾಗಿವೆ. ಅದು ಪೂರ್ಣವಾಗುವ ಮಾತಂತು ಖಂಡಿತ ಸಾಧ್ಯವಿಲ್ಲ. ಏಕೆಂದರೆ ಈ ಪ್ರಪಂಚ ವೈವಿಧ್ಯಮಯ. ಅದರಲ್ಲು ವೈಜ್ಞಾನಿಕ ಆವಿಷ್ಕಾರಗಳೊಂದಿಗೆ ಪ್ರಪಂಚ ಈಗ ಮುಷ್ಠಿಗಾತ್ರಕ್ಕೆ ತಿರುಗಿದೆ.ಸಾಮಾಜಿಕ ಮತ್ತು ಸಾಂಸ್ಕೃತಿಕ ಒಡನಾಟಗಳು, ವಾಣಿಜ್ಯ ವಿಚಾರಗಳು,ಜಾಗತಿಕ ಮಾರುಕಟ್ಟೆ , ಪ್ರವಾಸ, ಮಾಹಿತಿ ತಂತ್ರಜ್ಞಾನ ಇವೆಲ್ಲವೂ ಅಗಾಧವಾಗಿ ಜಾಗತಿಕ ಮಟ್ಟದಲ್ಲಿ ಬೆಳೆದಿರವ ಈ ಕಾಲದಲ್ಲಿ ಒಂದು ದೇಶದ ಜನರು ಹಲವು ದೇಶಗಳಲ್ಲಿ ಹಂಚಿಹೋಗಿದ್ದಾರೆ. ಇವೆಲ್ಲ ಸಾವಿರಾರು ವರ್ಷಗಳ ಕಾಲ ನಡೆದ ಸಂಘರ್ಷಗಳ, ಪರಿವರ್ತನೆಗಳ ಪರಿಣಾಮವೂ ಹೌದು. ಹಾಗಿರುವಾಗ ಅದನ್ನೆಲ್ಲ ಇಲ್ಲವಾಗಿಸಿ ಏಕತ್ವ ಅಥವಾ ಸ್ವ-ಹಿರಿಮೆಯ ಸಂಕುಚಿತ ಲೋಕಕ್ಕೆ ಹಿಂತಿರುಗಿ ಹೋಗುವ ಪ್ರಯತ್ನ ಅಪಹಾಸ್ಯದ್ದು. ಸ್ವಾರ್ಥಕ್ಕಾಗಿ ದೇಶವನ್ನು ಆಳವಾಗಿ ಒಡೆದು ಒಂದು ಬಣದ ಶ್ರೇಷ್ಠತೆಯನ್ನು ಮಾತ್ರ ಮೆರೆಸಲು ಮಾಡುವ ಪ್ರಯತ್ನ ಅಮೆರಿಕಾದಲ್ಲಾದಂತಹ ಅರಾಜಕತೆಯನ್ನು, ಅಧೀರತೆಯನ್ನು ಸೃಷ್ಠಿಸಬಲ್ಲದು.ಅದನ್ನು ಹೊರಗಿಟ್ಟು ಇಡೀ ದೇಶ ಒಂದು ಎನ್ನುವ ಒಗ್ಗಟ್ಟಿನ ಭಾವಕ್ಕೆ ಪುಷ್ಟಿ ಕೊಟ್ಟು ದೇಶದ ಏಳ್ಗೆಯ ಬಗ್ಗೆ ಯೋಚಿಸುವ ರಾಜಕಾರಣದ ಅಗತ್ಯವಿದೆ.ಪ್ರಪಂಚವೆಂಬ ಮನೆಯಲ್ಲಿ ಮನಸ್ಸನ್ನು ತೆರೆದಿಟ್ಟು ಬದುಕುವಲ್ಲಿನ ವೈವಿಧ್ಯತೆ, ವೈರುದ್ಧ್ಯತೆ, ಸಾಮ್ಯತೆ ಸೃಜನಶೀಲ ಮನಸ್ಸುಗಳ ವಿಕಸನಕ್ಕೆ ಅತ್ಯಗತ್ಯ. ಸ್ವಾರ್ಥದ ರಾಜಕೀಯ ಬೇರೆ ಬೇರೆ ರೂಪಗಳಲ್ಲಿ ಇದ್ದೆ ಇರುತ್ತದೆ. ದೊಡ್ಡ ಪ್ರಜಾ ಪ್ರಭುತ್ವದ ದೇಶಗಳಲ್ಲು ಸಹ. ಅದನ್ನು ಹಿತ ಮಿತವಾಗಿಡುವಲ್ಲಿ ಎಲ್ಲೆಡೆಯ ರಾಜಕೀಯ ಹೋರಾಟಗಳು ಸಮತೋಲನ ಸಾಧಿಸಬೇಕಷ್ಟೆ. ಎಡ-ಬಲಗಳ ತಿಕ್ಕಾಟ ಅಗತ್ಯವಿಲ್ಲದ ಸ್ವಾರ್ಥದ ರಾಜಕೀಯ ಮಾತ್ರ. ದೇಶ ಭಕ್ತಿಯೆನ್ನುವುದು ಎಡ-ಬಲಗಳ ರಾಜಕೀಯ ದಿಂದ ಹೊರತಾದ ವಿಚಾರ. ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ದೇವರನ್ನು ನಂಬುತ್ತೇನೆ. ನಾಸ್ತಿಕಳೇನಲ್ಲ. ಆದರೆ ಧರ್ಮದ ವಿಚಾರ ಬಂದಾಗ ಸಂಪ್ರದಾಯಸ್ಥಳಲ್ಲ. ಬೇರೆಲ್ಲ ಧರ್ಮಗಳನ್ನು ನಾನು ಗೌರವಿಸುತ್ತೇನೆ. ಆ ಬಗ್ಗೆ ನಾನು ಸಹಿಷ್ಣು. ದ್ವೇಷವನ್ನು ಬಿತ್ತುವ ನಂಜಿನ ಮಾತುಗಳು ನನಗೆ ಸಹ್ಯವಲ್ಲ.ನನಗೆ ಬೇಕಾದ ರೀತಿಯಲ್ಲಿ ಬದುಕುವ ಹಿಂದೂ ಆಗಿರುವ ಬಗ್ಗೆ ನನಗೆ ಹೆಮ್ಮೆಯಿದೆ. ಅದರ ಭಾವ ವೈಶಾಲ್ಯತೆಯ ಬಗ್ಗೆ ಪ್ರೀತಿಯಿದೆ. ಶಾಂತಿಯುತವಾಗಿ ಬದುಕಬೇಕಿದ್ದಲ್ಲಿ ನಾವು ಇತರರ ಬಗ್ಗೆ ಸಹಿಷ್ಣುತೆಯನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ.ಹಾಗೆ ಹಿಂದೂ ಧರ್ಮಕ್ಕೆ ’ಅಸಹಿಷ್ಣು’ ಎನ್ನುವ ಹಣೆ ಪಟ್ಟಿಯನ್ನು ಅಂಟಿಸುವ ಕೆಲಸ ನಡೆಯದಿರಲಿ.ಅವರವರ ಧರ್ಮ ಅವರವರಿಗೆ ದೊಡ್ಡದು. ಇನ್ನೊಂದು ಧರ್ಮವನ್ನು ಗೌರವಿಸದ ಎಲ್ಲರೂ ತಪ್ಪಿತಸ್ಥರೇ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ? ಇದು ಜಾಗತಿಕ ಯುಗ. ತೊರೆ-ಹಳ್ಳಗಳು ಹರಿದು ನದಿಯಾಗಿರುವ ಕಾಲ. ಅದರಲ್ಲಿ ರಾಜಕೀಯದ , ಸ್ವಾರ್ಥದ ಕಶ್ಮಲಗಳನ್ನು ಸೇರಿಸದಿದ್ದಲ್ಲಿ ಅದು ಹಲವು ಜೀವಗಳನ್ನು, ಸೃಜನಶೀಲತೆಯನ್ನು ಸಮೃದ್ಧವಾಗಿ ಬೆಳೆಸಬಲ್ಲದು. ಸಾಂಸ್ಕೃತಿಕ ಅರಿವು-ಆಳಗಳು ಹಿಗ್ಗಿಸಬಲ್ಲವು.ಪ್ರಸ್ತುತ ಸಾಂಸ್ಕೃತಿಕ ವಾತಾವರಣದಲ್ಲಿ ಫೇವರಟಿಸಂ, ಜಾತೀಯತೆ, ಧಾರ್ಮಿಕತೆ, ಎಡ-ಬಲ, ವಶೀಲಿ ಎಲ್ಲವೂ ಇವೆ. ಅದು ತಿಳಿಗೊಳ್ಳಬೇಕು. ಹೃದಯ ವೈಶಾಲ್ಯತೆ ಹೆಚ್ಚಾಗಬೇಕು.ಇವೆಲ್ಲ ಮೊದಲಿಂದಲೂ ಇದ್ದವಾದರೂ ಈಗೀಗ ’ಅತಿ ’ ಎನ್ನುವ ಮಟ್ಟಕ್ಕೆ ಬೆಳೆಯುತ್ತಿದೆ. ಒಳ್ಳೆಯ ವಿಚಾರ ಎಂದರೆ ಇವೆಲ್ಲದರಿಂದ ದೂರವಿರುವ, ಮುಕ್ತರಾಗಿರುವ ಜನರೂ ಇರುವುದು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಮೇಲಿನ ಮಾತೇ ಅನ್ವಯವಾಗುತ್ತದೆ. ಅದರಲ್ಲೂ ಹೊಸತಿನ ನಿರೀಕ್ಷೆಯಲ್ಲಿ ಸದಾ ತುಡಿಯುವ ಕನ್ನಡ ಸಾಹಿತ್ಯಕ್ಕೆ ದಡ ಕಟ್ಟಬಾರದು. ತಮಗೆ ತಿಳಿದ, ತಮ್ಮೂರಿನ, ತಮ್ಮ ಪ್ರಪಂಚದ ಬಗ್ಗೆ ಬರೆದದ್ದಷ್ಟೆ ಸಾಹಿತ್ಯ ಆಗಬಾರದು. ರಾಜಕೀಯ ಘೋಷಣೆಗಳು ಸಾಹಿತ್ಯಕ್ಕೆ ಅಗತ್ಯವಿಲ್ಲ. ಅರಿವೇ ಇಲ್ಲದೆ ಎಡ-ಬಲ ಎಂದು ಹಣೆಪಟ್ಟಿ ಹೊರುವ ಭಯದಲ್ಲಿ ಹಲವರು ವೈಚಾರಿಕ ಸಾಹಿತ್ಯರಚನೆಯನ್ನು ಮಾಡಲು ಹಿಂಜರಿಯಬೇಕಾದ ಕಾಲ ಘಟ್ಟವಿದು. ಇದು ನಿಜಕ್ಕೂ ವಿಶಾದನೀಯ.ವಿಮರ್ಶಕನೊಬ್ಬ ’ನಮ್ಮೂರಿನ ಬರಹಗಾರ” ಎಂಬ ಮೊಳ ಹಿಡಿದು ಸಾಹಿತ್ಯವನ್ನು ಅಳೆವಾಗ ಅತ್ಯಂತ ಬೇಸರವಾಗುತ್ತದೆ. ಪ್ರಾಂತೀಯತೆಯ ಸೊಗಡು ಸುಂದರವಾದರೂ ಮುಖ್ಯವಾಹಿನಿಯಲ್ಲಿ ಸೇರಿದಾಗ ಬರಹಗಳನ್ನು ಅವುಗಳ ತಂತ್ರ, ಸರಾಗತೆ, ವೈಚಾರಿಕತೆ, ಭಿನ್ನತೆ, ಪ್ರಾಮಾಣಿಕತೆ, ಕುಶಲತೆ, ನವಿರು, ಸೂಕ್ಷ್ಮತೆ ಮತ್ತು ಹೊಸತನ ಇನ್ನೂ ಮುಂತಾದ ಅಳತೆಗೋಲಿನಿಂದ ಅಳೆಯುವುದು ಸಾಹಿತ್ಯದ ಬೆಳವಣಿಗೆಗೆ ಅಗತ್ಯವೆನಿಸುತ್ತದೆ.ನಿಜವಾದ ವಿಮರ್ಶಾ ಸಾಹಿತ್ಯವೂ ವಿರಮಿಸಿ ಕುಳಿತಿರುವ ಕಾಲವಿದು. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ನಾನು ಅನಿವಾಸಿ ಭಾರತೀಯಳಾದ ಕಾರಣ, ಭಾರತದ ಚಲನೆಯನ್ನು ಅದರದ್ದೇ ಆದ ಚೌಕಟ್ಟಿನಿಂದ ಹೊರಗೆ ನಿಂತು ನೋಡಬಲ್ಲೆ.ಭಾತರ ಎಂತಹ ಅಗಾಧ ಮತ್ತು ಹೇಗೆ ಇತರೆ ದೇಶಗಳಿಗಿಂತ ಭಿನ್ನ ಎಂಬುದನ್ನು ಕಾಣಬಲ್ಲೆ.ತನ್ನದೇ ಸುಳಿಗಳ ಸೆಳೆತಕ್ಕೆ ಸಿಲುಕಿ ಚಲಿಸುವ ದೇಶ ನಮ್ಮದು. ಅದರ ಶಕ್ತಿ ಅಗಾಧವಾದ್ದು. ಹಿಂದೂಗಳು ಅತ್ಯಧಿಕ ಸಂಖ್ಯೆಯಲ್ಲಿರುವ ಏಕೈಕ ದೇಶವಾಗಿ ಭಾರತ ನೂರಾರು ಭಾಷೆ, ಸಂಸ್ಕೃತಿಗಳನ್ನು ಒಡಲಲ್ಲಿಟ್ಟುಕೊಂಡು ಸದಾ ಚೈತನ್ಯಮಯಿಯಾಗಿ ಮಿಡಿಯುವಂತದ್ದು. ಅಪಾರವಾದ ಜನಶಕ್ತಿಯನ್ನು ಪಡೆದ ಶಕ್ತಿಶಾಲಿ ದೇಶವಿದು. ಪ್ರತಿಭೆಗಂತೂ ಇಲ್ಲಿ ಕೊರತೆಯೇ ಇಲ್ಲ.ಆದರೆ ವ್ಯವಸ್ಥೆಗಳು ಒಟ್ಟಾಗಿ ದುಡಿಯಲು ಹೆಣಗುತ್ತವೆ. ಅತಿಯಾದ ಧಾರ್ಮಿಕತೆ ನಮ್ಮ ದೇಶದ ಅತ್ಯಂತ ದೊಡ್ಡ ತೊಡಕಾಗಿದೆ. ಅದರಿಂದ ಹೊರತಾಗಿ ಜಗತ್ತನ್ನು ನೋಡಲು ಬಹಳ ಜನರು ಅಶಕ್ತರಾಗುತ್ತಾರೆ. ಕಾನೂನು, ಪೋಲೀಸರು ಮತ್ತು ಭದ್ರತೆ ಇವು ಜನಸಾಮಾನ್ಯರ ಪರವಾಗಿ ಕೆಲಸಮಾಡಬೇಕಾಗಿರುವ ಅತ್ಯಂತ ಮುಖ್ಯ ವಿಚಾರಗಳು. ಅವುಗಳನ್ನು ಭದ್ರಪಡಿಸುವ,ಎಲ್ಲರಿಗೂ ಸಮಾನ ಸವಲತ್ತನ್ನು ನೀಡಬಲ್ಲ ರಾಜಕಾರಣ ಅತ್ಯಂತ ಮುಖ್ಯ.ಇಂತಹ ದೊಡ್ಡ ದೇಶ ಸಾಧ್ಯವಾದಷ್ಟು ಒಟ್ಟಾಗಿ ತುಡಿಯಬೇಕೆಂದರೆ ಒಗ್ಗಟ್ಟಿನ ಮಂತ್ರ ಪಠಣೆ ಅತ್ಯಂತ ಮುಖ್ಯ. ಒಡಕಿನ ಮಾತುಗಳು ಈ ದೇಶದ ಚಲನೆಗೆ ಮಾರಕ. ಕಾಲಚಕ್ರದ ಹೊಡೆತಕ್ಕೆ ಸಿಕ್ಕ ಭಾರತ ನಗರ ಪ್ರದೇಶಗಳಲ್ಲಿ ಬಹಳ ಬದಲಾಗುತ್ತ ನಡೆಯುತ್ತಿದೆ ಎನ್ನುವುದು ಕೂಡ ಸುಳ್ಳಲ್ಲ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಸಾಹಿತ್ಯ ನನ್ನ ಅಂದಂದಿನ ತೃಪ್ತಿ.ಇನ್ನೂ ಬರೆಯಬೇಕನ್ನುವ ಹಂಬಲವಿದೆ. ಅದಕ್ಕಿಂತ ಹೆಚ್ಚೇನು ಕನಸೇನಿಲ್ಲ.ಸವಾಲುಗಳಿಗೆ ತೆರೆದುಕೊಂಡು ಸೃಜನಶೀಲವಾದದ್ದೇನನ್ನೋ ರಚಿಸಬೇಕೆನ್ನುವ ತುಡಿತ ಇರುವವರೆಗೆ ಸಾಹಿತ್ಯ ರಚನೆ ನಡೆಯುತ್ತಿರುತ್ತದೆ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ನಾನು ಸಾಹಿತ್ಯವನ್ನು ಅಗಾಧವಾಗಿ ಓದಿಕೊಂಡವಳಲ್ಲ.ಸಾಹಿತ್ಯದ ವಿದ್ಯಾರ್ಥಿಯಲ್ಲ. ಸಾಹಿತ್ಯದ ವಾತಾವರಣದಲ್ಲಿ ಬೆಳೆದವಳಲ್ಲ. ವಶೀಲಿಯಂತೂ
ಅಂಕಣ ಬರಹ ಅಗ್ಘವಣಿಯ ಹಂಪಯ್ಯನ ವಚನವೊಂದರ ಐತಿಹಾಸಿಕ ವಿವೇಚನೆ ಅಗ್ಘವಣಿಯ ಹಂಪಯ್ಯನ ವಚನವೊಂದರ ಐತಿಹಾಸಿಕ ವಿವೇಚನೆ ಹಂಸಪತಿ ಗರುಡಪತಿ ವೃಷಭಪತಿ ರ‍್ವಜೀವಾಧಿಪತಿ ದೇವರಾಯ ಮಹಾರಾಯನ ಅರಸುತನ ಹೊಸತು ಓಲಗಕ್ಕೆ ಬಾರ; ಸಿಂಹಾಸನದಲ್ಲಿ ಕುಳ್ಳಿರ; ಸ್ತ್ರೀಲಂಪಟನಾಗಿ ಅಂತಃಪುರ ಬಿಟ್ಟು ಹೊರವಡ; ಕಪ್ಪಕಾಣಿಕೆಯನೊಪ್ಪಿಸಿಕೊಂಬವರಿಲ್ಲ. ಗುರುವೆಂಬ ತಳವಾರನಾಜ್ಞೆ ಕೆಟ್ಟಿತ್ತು. ತರೆದ ಬಾಗಿಲ ಮುಚ್ಚುವರಿಲ್ಲ; ಮುಚ್ಚಿದ ಬಾಗಿಲ ತೆರೆವರಿಲ್ಲ; ಹಂಪೆಯ ವಿರುಪಯ್ಯನ ಅರಸುತನ ಕೆಟ್ಟಿತ್ತು ಭಕ್ತರೆಂಬುವವರಿನ್ನು ಬದುಕಲೆಬಾರದು ೧ ಅಗ್ಘವಣಿಯ ಹಂಪಯ್ಯ ವಚನ ಚಳುವಳಿಯ ಕೊನೆಯ ಹಂತದಲ್ಲಿ ಬಂದವನು. ವಿಜಯನಗರದ ದೇವರಾಯ (ಕ್ರಿ.ಶ. ೧೨೮೬-೧೩೨೮) ನೆಂಬ ಅರಸನ ಕಾಲದಲ್ಲಿ ಇದ್ದವನೆಂದು, ರಾಘವಾಂಕ ಕವಿಯು ತನ್ನ ಹರಿಶ್ಚಂದ್ರ ಚಾರಿತ್ರ‍್ಯವನ್ನು ಈ ರಾಜನ ಆಸ್ಥಾನದಲ್ಲಿ ಓದಿದ್ದೆಂದೂ ತಿಳಿದುಬರುತ್ತದೆ ಎಂದು ಡಿ. ಎಲ್. ನರಸಿಂಹಾಚರ‍್ಯರು ಹೇಳಿದ್ದಾರೆ.೨ ಪ್ರಕೃತ ವಚನಕ್ಕೆ ಪಾಠಾಂತರವೂ ಇದ್ದು ಡಿ ಎಲ್ ಎನ್ ಶಕಟರೇಫೆಯನ್ನು ಎರಡು ಕಡೆ ಬಳಸಿದ್ದರೆ, ಎಂ. ಎಂ. ಕಲಬರ‍್ಗಿಯವರು ಸಾಮಾನ್ಯರಿಗಾಗಿ ಸಂಪಾದನೆ ಮಾಡುತ್ತಿರುವ ಕಾರಣದಿಂದ ರೇಫೆಯನ್ನು ಉಳಿಸಿಕೊಂಡು, ಶಕಟರೇಫೆಯನ್ನು ತೆಗೆದು ಹಾಕಲಾಗಿದೆ ಎಂದು ಸಂಪಾದಕೀಯದಲ್ಲಿ ಹೇಳಿದ್ದಾರೆ. ಜನಪ್ರಿಯ ಪ್ರತಿಯದನ್ನೇ ಈ ಲೇಖನಕ್ಕೆ ಬಳಸಿಕೊಳ್ಳಲಾಗಿದೆ. ಕುಂತಳದೇಶದಲ್ಲಿನ ಶಿವಭಕ್ತನಾದ ಹಂಪಯ್ಯನು, ಹದಿನಾರು ದಿಕ್ಕಿಗೂ ಹೋಗಿ ಪತ್ರಪುಷ್ಪಗಳನ್ನು ತಂದು ಶಿವನಿರ‍್ಪಿಸುವ ನಿಯಮವನ್ನು ಪಾಲಿಸುತ್ತಿದ್ದ. ಅದಲ್ಲದೆ ಶೀಲವಂತರಿಗೆ ಚಿಲುಮೆಯ ಅಗ್ಘವಣಿಯನ್ನು ತಂದುಕೊಡುವ ಕಾಯಕವನ್ನು ನಡೆಸುತ್ತಿದ್ದನೆಂದು ಇವನ ಶಿವಭಕ್ತಿಯ ಬಗೆಗೆ ಶಾಂತಲಿಂಗ ದೇಶಿಕನು ತನ್ನ ಭೈರವೇಶ್ವರ ಕಥಾಸೂತ್ರ ರತ್ನಾಕರ ಕೃತಿಯಲ್ಲಿ ತಿಳಿಸಿದ್ದಾನೆ.೩ ಅಗ್ಘವಣಿ ಹಂಪಯ್ಯನ ವಚನಗಳ ಅಂಕಿತ ‘ಹಂಪೆಯ ವಿರುಪಯ್ಯ’ ನೆಂದು ಎಲ್ಲ ವಿದ್ವಾಂಸರೂ ಹೇಳಿದ್ದಾರೆ. ಅವನ ನಾಲ್ಕು ವಚನಗಳು ಇದುವರೆವಿಗೂ ದೊರೆತಿವೆ.೪ ಡಾ. ಆರ್. ಚಲಪತಿಯವರು ‘ಪಂಚಾಕ್ಷರಿ, ಗುರು ಪಂಚಾಕ್ಷರಿ’ ಎಂಬೆರಡು ಹೊಸ ಅಂಕಿತಗಳನ್ನೂ ತಮ್ಮ ಕೃತಿಯಲ್ಲಿ ಅಗ್ಘವಣಿಯ ಹಂಪಯ್ಯನದೆಂದು ಸೂಚಿಸಿದ್ದಾರೆ.೫ ಶಿವಶರಣರ ವಚನ ಚಳುವಳಿಯಿಂದ ಗಾಢವಾಗಿ ಪ್ರಭಾವಿತನಾಗಿದ್ದ ಅಗ್ಘವಣಿಯ ಹಂಪಯ್ಯ, ಕಲ್ಯಾಣಕ್ರಾಂತಿಯ ನಂತರ ಪಲ್ಲಟವಾದ ಒಟ್ಟೂ ಚಳುವಳಿಯ ಉದ್ದೇಶ, ಅಧೋಗತಿಗೆ ಇಳಿದ ಸಾಮಾಜದ ಸ್ಥಿತಿಗತಿ ಮತ್ತು ರಾಜಪ್ರಭುತ್ವದ ನಡೆ ನುಡಿಗಳನ್ನು ತನ್ನ ವಚನದಲ್ಲಿ ಖೇದ, ಸಿಟ್ಟು ಮತ್ತು ವ್ಯಂಗ್ಯದಲ್ಲಿ ಹೊರಹಾಕಿದ್ದಾನೆ. ಅಗ್ಘವಣಿಯ ಹಂಪಯ್ಯನ ವಚನದ ‘ದೇವರಾಯ ಮಹಾರಾಯನ ಅರಸುತನ ಹೊಸತು’ ಸಾಲಿನ ಓದಿನಿಂದ ಅವನ ಕಾಲದ ಬಗೆಗೆ ಕೆಲವು ಅನುಮಾನಗಳು ಮೂಡುತ್ತವೆ. ಡಿ. ಎಲ್. ನರಸಿಂಹಾಚರ‍್ಯರು ವಚನಕಾರರ ನಂತರದವನು ಎಂದೂ, ಅವನ ಕಾಲವನ್ನು ಕ್ರಿಶ ೧೩೦೦ ಎಂದು ಹೇಳಿದ್ದಾರೆ.೬ ಕವಿಚರಿತಾಕಾರರು ಮತ್ತು ಇತರರು ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ.೭ ಹಂಪಯ್ಯ ತನ್ನ ವಚನದಲ್ಲಿ ನೇರವಾಗಿ ಸಂಬೋಧಿಸುವ ‘ದೇವರಾಯ’ ಕರ್ನಾಟಕವನ್ನಾಳಿದ ಪ್ರಖ್ಯಾತ ರಾಜಮನೆತನವಾದ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿ ಆಳಿದ ನಾಲಕ್ಕು ವಂಶಗಳಾದ ಸಂಗಮ, ಸಾಳುವ, ತುಳುವ ಮತ್ತು ಅರವೀಡು ವಂಶಗಳಲ್ಲಿನ ಮೊದಲನೆಯ ವಂಶವಾದ ಸಂಗಮ ವಂಶದ ದೊರೆ ೧ ನೇ ದೇವರಾಯ. ಸಂಗಮ ವಂಶದಲ್ಲಿಯೂ ಇಬ್ಬರು ದೇವರಾಯರ ಎಂಬ ಹೆಸರಿನ ರಾಜರು ಬೇರೆ ಬೇರೆ ಕಾಲಘಟ್ಟದಲ್ಲಿ ಆಳ್ವಿಕೆ ಮಾಡಿದ್ದಾರೆ. ೧ ನೇ ದೇವರಾಯ ಸಾ.ಶ ೧೪೦೬ – ೧೪೧೨-೧೩ ವರೆವಿಗೂ, ೨ ನೇ ದೇವರಾಯ ಸಾ.ಶ ೧೪೧೪ ರಿಂದ ೧೪೪೪ ರ ವರೆವಿಗೂ ವಿಜಯನಗರವನ್ನು ಆಳ್ವಿಕೆಯನ್ನು ಮಾಡಿದ್ದಾರೆ.೮ ದೇಸಾಯಿ ಪಾಂಡುರಂಗರಾಯರು ಇದೇ ಶತಮಾನದಲ್ಲಿಯೇ ದೇವರಾಯನ ಕಾಲವನ್ನು ತಿಳಿಸಿದರೂ ಸ್ವಲ್ಪ ಭಿನ್ನವಾದ ಕಾಲವನ್ನು ಕೊಟ್ಟಿದ್ದಾರೆ.೯ ೧ ನೇ ದೇವರಾಯನು ಸಿಂಹಾಸನಾರೂಢನಾದ ಕಾಲವನ್ನು ಸಾ.ಶ ೧೪೦೬ ಎಂದು ಕೊಟ್ಟಿದ್ದಾರೆ.೧೦ ಅಗ್ಘವಣಿಯ ಹಂಪಯ್ಯನ ವಚನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮತ್ತು ವಿಜಯನಗರದ ಅರಸರ ಇತಿಹಾಸವನ್ನು ಅವಲೋಕಿಸಿದರೆ, ಹಂಪಯ್ಯನು ೧ ನೇ ದೇವರಾಯನ ಆಸ್ಥಾನವನ್ನು ನೋಡಿರುವ, ಅವನ ಆಡಳಿತದಿಂದ ಬೇಸರವಾಗಿರು ಸಾಧ್ಯತೆಯೇ ಹೆಚ್ಚೆನಿಸುತ್ತದೆ. ಕವಿಚರಿತಾಕಾರರರು ಮಿ. ರ‍್ಬೌ ರವರು ಹೇಳುವ ದೇವರಾಯ ಇವನೇ ಆಗಿದ್ದಲ್ಲಿ ಇವನ ಕಾಲ ಸಾ.ಶ ೧೨೮೬-೧೩೨೮ ಆಗುತ್ತದೆ ಎಂದು ಕಾಲವನ್ನು ಆವರಣ ಚಿಹ್ನೆಯಲ್ಲಿ ಸೂಚಿಸಿದ್ದಾರೆ ಮತ್ತು ಡಿ ಎಲ್ ನರಸಿಂಗಾಚರ‍್ಯರೂ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ.೧೧ ಅದರಂತೆ ಮತ್ತಿನ್ನೊಂದು ದಾರಿಯಲ್ಲಿ ಅವಲೋಕಿಸುವುದಾದರೆ, ವಚನದಲ್ಲಿ ಬರುವ ‘ದೇವರಾಯ’ಎಂಬ ಪದವು ಸಾಂಕೇತಿಕವಾಗಿ ಪುರಾಣಪ್ರತೀಕವಾಗಿ ಬಳಕೆಯಾಗಿದ್ದು ಎಂದಿಟ್ಟುಕೊಂಡರೆ ದೇವತೆಗಳ ರಾಜನಾದ ‘ಇಂದ್ರ’ನ ಬಗೆಗಿನ ರ‍್ಥವನ್ನೂ ಧ್ವನಿಸುತ್ತದೆ. ಆದರೆ ಎರಡನೆಯದನ್ನ ಒಪ್ಪುವುದು ಕಷ್ಟ ಮತ್ತು ವಾಸ್ತವವಾಗಿ ಬದುಕಿದ ವಚನಕಾರರಿಗೆ ಮಾಡಿದ ದ್ರೋಹವಾಗುವ ಸಾಧ್ಯತೆ ಇರುವುದರಿಂದ ಮೊದಲನೆಯದನ್ನೇ ಒಪ್ಪಬಹುದು. ರಾಜರ ಎದುರಿಗೇ ಅವರ ಮತ್ತವರ ಪ್ರಭುತ್ವದ ಸಮಸ್ಯೆಗಳನ್ನು ಎತ್ತಿ ಮಾತನಾಡಿರುವುದಕ್ಕೆ ವಚನಕಾರರಲ್ಲಿ ಬಹಳಷ್ಟು ಸಾಕ್ಷಿಗಳು ದೊರೆಯುತ್ತವೆ. ಬಸವಾದಿ ಪ್ರಮಥರ ಪ್ರಭಾವದಿಂದ ಕೇವಲ ಪುರಾಣಪ್ರತೀಕವಾಗಿ ಮೇಲಿನ ‘ದೇವರಾಯ’ ಎಂಬುದನ್ನು ಅಗ್ಘವಣಿಯ ಹಂಪಯ್ಯ ಬಳಸಿರಲಾರನು. ಹಂಪಯ್ಯನ ಕಾಲದ ಬಗೆಗೆ ನಿಖರ ಮಾಹಿತಿ ನೀಡದಿದ್ದರೂ ಕವಿಚರಿತಾಕಾರರು ಮತ್ತು ಡಿ ಎಲ್ ನರಸಿಂಹಾಚರ‍್ಯರು ಊಹಿಸಿರುವ ‘ದೇವರಾಯನ ಕಾಲದವನು’ ಎನ್ನುವ ಮಾತನ್ನು ಹಾಗೂ ಸದ್ಯ ವಚನವೇ ಸ್ಪುರಿಸುವ ‘ದೇವರಾಯ ಮಹಾರಾಯನ ಆಸ್ಥಾನ ಹೊಸತು’ ಎನ್ನುವ ಸಾಲಿನ ‘ಆಸ್ಥಾನ ಹೊಸತು’ ಎನ್ನುವ ಪದದ ಮೂಲಕ ೧ ನೇ ದೇವರಾಯನ ಆರಂಭಿಕ ಕಾಲವನ್ನು ಸ್ಪಷ್ಟವಾಗಿ ಈ ವಚನ ಸೂಚಿಸುತ್ತಿದೆ. ಈ ಎಲ್ಲಾ ಕಾರಣಗಳಿಂದ ಮತ್ತು ಪಠ್ಯದ ಬಹುಮುಖ್ಯ ಪದಗಳ ಆಧಾರದ ಮೇಲೆ ಅಗ್ಘವಣಿಯ ಹಂಪಯ್ಯನು ವಿಜಯನಗರ ಸಾಮ್ರಾಜ್ಯವನ್ನು ಆಳಿದ ಸಂಗಮ ವಂಶದ ದೊರೆ ೧ ನೇ ದೇವರಾಯನ ಕಾಲದಲ್ಲಿ ಅಂದರೆ ಸಾ.ಶ ೧೪೦೬ – ೧೪೧೨-೧೩ ರಲ್ಲಿ ಇದ್ದನೆಂದು ಹೇಳಬಹುದು. ಇವನು ೧ ನೇ ದೇವರಾಯನ ನೈತ್ತಿಕ ಅಧಃಪತನವನ್ನು ಗಮನಿಸಿದ್ದನೆಂದು ವಚನದಲ್ಲಿನ ‘ಸ್ತ್ರೀಲಂಪಟನಾಗಿ ಅಂತಃಪುರ ಬಿಟ್ಟು ಹೊರವಡ’ ‘ತರೆದ ಬಾಗಿಲ ಮುಚ್ಚುವರಿಲ್ಲ; ಮುಚ್ಚಿದ ಬಾಗಿಲ ತೆರೆವರಿಲ್ಲ’ ಸಾಲುಗಳಿಂದ ತಿಳಿದು ಬರುತ್ತದೆ. ಇದೇ ವಿಷಯವನ್ನೂ ಇತಿಹಾಸಕಾರ ರಾಬರ್ಟ್ ಸಿವಿಲ್ಲರು ಫರಿಸ್ತಾ ಹೇಳಿದನೆಂದು ತಮ್ಮ ಕೃತಿಯಲ್ಲಿ ರಾಯನು ಹೆಣ್ಣಿಗಾಗಿ ಇಳಿದ ಅಧಃಪತನವನ್ನು ಕುರಿತು ಪ್ರಸ್ತಾಪಮಾಡಿದ್ದಾರೆ.೧೨ ಮೇಲಿನ ಅಭಿಪ್ರಾಯವನ್ನು ಭಾರತೀಯ ಇತಿಹಾಸಕಾರರಾದ ನೀಲಕಂಠ ಶಾಸ್ತ್ರಿಗಳೂ ದಾಖಲಿಸಿದ್ದಾರೆ.೧೩ ರಾಬರ್ಟ್ ಸಿವಿಲ್ಲರು ಫೆರಿಸ್ತಾ ಬರೆದಿರುವುದನ್ನು ತಮ್ಮ ಪುಸ್ತಕದಲ್ಲಿ ದಾಖಲಿಸಿರುವಂತೆ ರಾಯನು ಹುಡುಗಿಯನ್ನು ಪಡೆಯಲೋಸುಗ ನಡೆಸಿದ ಹುಚ್ಚುತನದ ಯಾತ್ರೆಯಲ್ಲಿ ಸಿಕ್ಕಿಹಾಕೊಕೊಂಡ ‘ರೈತ’ ಮನೆತದ ಹುಡುಗಿಯೆಂದು ಹೇಳಿದ್ದರೆ, ನೀಲಕಂಠ ಶಾಸ್ತ್ರಿಗಳು ‘ಚಿನ್ನಗೆಲಸ ಮಾಡುವ ಅಕ್ಕಸಾಲಿಗ’ ನ ಮಗಳೆಂದು ಹೇಳಿದ್ದಾರೆ. ಉಳಿದ ಅಭಿಪ್ರಾಯಗಳಲ್ಲಿ ಸಮಾನತೆಯಿದೆ. ನೈತ್ತಿಕತೆಯನ್ನೇ ಬುನಾದಿಯಾಗಿಟ್ಟು ಸಮಾಜವನ್ನ ಕಟ್ಟುವ ಕರ‍್ಯ ನರ‍್ವಹಿಸಿದ ವಚನಕಾರರ ಮರ‍್ಗವನ್ನು ಅಗ್ಘವಣಿಯ ಹಂಪಯ್ಯ ಮೆಚ್ಚಿದ್ದದ್ದನೆಂದು ಅವನ ವಚನದ ಗುರುವೆಂಬ ತಳವಾರನಾಜ್ಞೆ ಕೆಟ್ಟಿತ್ತು ಸಾಲಿನಿಂದಲೂ, ವಚನಕಾರರ ನಡೆ ನುಡಿಗೆ ವಿರುದ್ಧವಾದದ್ದನ್ನೂ ತನ್ನ ಕಣ್ಣಾರೆ ಕಂಡುದರ ಬಗೆಗೆ ಬೇಸರ, ಹಿಂಸೆಯಲ್ಲಿ ವಚನದ ‘ಹಂಪೆಯ ವಿರುಪಯ್ಯನ ಅರಸುತನ ಕೆಟ್ಟಿತ್ತು, ಭಕ್ತರೆಂಬುವವರಿನ್ನು ಬದುಕಲೆಬಾರದು’ ಎಂಬ ಮಾತುಗಳು ಬಂದಿವೆ. ಪ್ರಭುತ್ವದ ಮೇಲಿನ ಬೇಸರ, ಸಿಟ್ಟು, ವ್ಯಂಗ್ಯ ಅಭಿವ್ಯಕ್ತಿಯೇ ಪ್ರಸ್ತುತ ವಚನದ ಭಾವಕೇಂದ್ರವಾಗಿದೆ. ವಚನಕಾರರ ನಂತರ ವೈಶ್ಣವಪಂಥ ಬಂದ ನಂತರವು ವಚನಗಳು ರಚನೆಯಾಗುತ್ತಿದ್ದುದಕ್ಕೆ ಪ್ರಸ್ತುತ ವಚನವು ಸಾಕ್ಷಿಯಾಗಿದೆ. ಬದಲಾದ ಪ್ರಭುತ್ವ ಅದರ ನಾಯಕನಾದವನ ವೈಯುಕ್ತಿಕ ತರ‍್ತಿಗೆ ಅನುಗುಣವಾಗಿ ಪಲ್ಲಟವಾಗುವ ಸಾಮಾಜಿಕ ಉದ್ದೇಶ, ಮೌಲ್ಯಗಳ ಪಲ್ಲಟತೆಯ ಬಹುದೊಡ್ಡ ಸ್ಥಿತಿಯನ್ನ ವಾಚ್ಯವಾಗಿಯೇ ವಚನದಲ್ಲಿ ತಿಳಿಸುತ್ತಿದ್ದಾನೆ. ‘ಹಂಸಪತಿ’, ‘ಗರುಡಪತಿ’, ‘ವೃಷಭಪತಿ’ ಎಂದು ವಾಹನದ ಮೇಲೆ ಆರೂಢರಾಗುವ ಬ್ರಹ್ಮ, ವಿಷ್ಣು ಮತ್ತು ಶಿವನನ್ನ ಹೇಳುತ್ತಲೇ-ಪ್ರಭುತ್ವದಲ್ಲಿನ ಸೃಷ್ಟಿ, ಸ್ಥಿತಿ ಮತ್ತು ಲಯವನ್ನ ಹೇಳುತ್ತಿದೆ. ವಚನದ ನಂತರದ ಸಾಲಾದ ‘ರ‍್ವಜೀವಾಧಿಪತಿ’ ಪದವು ಬಹುದೊಡ್ಡ ವ್ಯಂಗ್ಯವಾಗಿ ರ‍್ವಹಿಸುತ್ತಿದೆ. ಮಾನವ ಜಾತಿಯನ್ನು ಒಂದೆಂದು ಬಗೆದ ವಚನಕಾರರ ಅನಂತರ ಪ್ರಭುತ್ವವು ತನ್ನ ಇರುವಿಕೆಯನ್ನು ರ‍್ಪಡಿಸುತ್ತಿರುವಾಗ ಹಂಪಯ್ಯ ವ್ಯಂಗ್ಯವಾಡುತ್ತಲೇ ಪ್ರಭುತ್ವಕ್ಕೆ ವಿರುದ್ಧವಾಗಿ ತನ್ನ ಅಭಿಪ್ರಾಯವನ್ನು ತಿಳಿಸುತ್ತಿದ್ದಾನೆ. ‘ದೇವರಾಯನ ಆಸ್ಥಾನ ಹೊಸತು’ ಎನ್ನುವಾಗ ಆಗತಾನೆ ಪ್ರಾರಂಭದ ಹಂತದಲ್ಲಿದ್ದ ಸಾಮ್ರಾಜ್ಯವನ್ನ ಅಥವಾ ಸಿಂಹಾಸನಾರೂಢನಾದ ೧ ನೇ ದೇವರಾಯನ ಬಗೆಗೆ ನೇರವಾಗಿಯೆ ಮಾತನಾಡುತ್ತಿದ್ದಾನೆ. ‘ಬಾರ’ ‘ಕುಳ್ಳಿರ’ ಅನ್ನುವ ನಿಧಿಷ್ಟ ಕ್ರಿಯಾಪದಗಳು ಮುಂದಿನ ಸಾಲು ಅತೀವ್ಯಂಗ್ಯವಾಗಿ ಕೆಲಸ ಮಾಡುತ್ತ, ರಾಜನಲ್ಲಿದ್ದ ‘ಸ್ತ್ರೀಲಂಪಟತೆ’ ಯ ಬಗೆಗೆ ನೇರವಾಗಿ ಹೇಳಿ ‘ಅಂತಃಪುರಬಿಟ್ಟು ಹೊರವಡ’ ಎನ್ನುವ ಪದವನ್ನ ಬಳಸಿ ಸ್ಪಷ್ಟವಾಗಿ ಆ ಕಾಲಘಟ್ಟದ ೧ ನೇ ದೇವರಾಯನ ರಾಜನ ಬಗೆಗೆ ಹೇಳುತ್ತಿದ್ದಾನೆ. ರಾಜ್ಯದ ಪ್ರಮುಖ ಆದಾಯದ ಹೊಣೆಯನ್ನೂ ನಿಭಾಯಿಸಲಾರದ ರಾಯನ ಹೀನಸ್ಥಿತಿಯನ್ನ ‘ಕಪ್ಪ ಕಾಣಿಕಯನ್ನೊಪ್ಪಿಸಿಕೊಂಬವರಿಲ್ಲ’ ಎನ್ನುವುದನ್ನ ಹೇಳಿದಾಗಲೇ, ರಾಜ್ಯ ಮತ್ತದರಲ್ಲಿನ ಪ್ರಭುತ್ವ ನೈತ್ತಿಕವಾಗಿ ಮತ್ತು ರ‍್ಥಿಕವಾಗಿ ದಿವಾಳಿತನಕ್ಕೆ ಮುಖಮಾಡಿರುವುದನ್ನ ಕಾಣಿಸುತ್ತಿದ್ದಾನೆ. ನಂತರದ ‘ಗುರುವೆಂಬ ತಳವಾರನ ಆಜ್ಞೆ ಕೆಟ್ಟಿತ್ತು’ ಸಾಲಿನ ಮೂಲಕ ಬಹುಮುಖ್ಯವಾದ ಒಂದು ಅಂಶದ ಬಗೆಗೆ ಗಮನ ಸೆಳೆಯುತ್ತಾನೆ. ತನ್ನ ಹಿಂದಿನ ವಚನ ಚಳುವಳಿಯಲ್ಲಿನ ಗುರುವಿನ ಮಹತ್ವದ ಬಗೆಗೆ, ‘ಅರಿವೇ ಗುರು’ ವಾದ ಸ್ಥಿತಿಯಿಂದ ಕೆಳಗಿಳಿದಿರುವುದರಿಂದಲೇ ಆದ ಬಹುದೊಡ್ಡ ಸಂಚಲನದ ಬಗೆಗೆ ಗಮನವಿದ್ದೇ ‘ಕೆಟ್ಟಿತ್ತು’ ಎನ್ನುವಾಗ ನಿದಿಷ್ಟ ರ‍್ತಮಾನ ಕ್ರಿಯಾಪದಗಳನ್ನ ಬಳಸಿದ್ದಾನೆ. ‘ತೆರೆದ ಬಾಗಿಲ’ ಅನ್ನುವ ಪದ ದೇಹದ ಅರಿಷಡ್ರ‍್ಗಗಳನ್ನ ತಿಳಿಸುತ್ತಿದೆ (ಗಮನಿಸಿ- ದೇಹವೇ ದೇಗುಲ ಅನ್ನುವುದರ ಪ್ರಭಾವವಿದೆ.) ‘ಮುಚ್ಚುವರಿಲ್ಲ’ ಅನ್ನುವ ಪದವೂ ಸಹಾ ನಿದಿಷ್ಟ ಕ್ರಿಯಾ ಪದವಾಗಿದ್ದು ಇದರಲ್ಲಿ ಒಂದು ವ್ಯಥೆಯ ಧ್ವನಿ ಹೊಮ್ಮುತ್ತಿದೆ. ‘ಮುಚ್ಚಿದ ಬಾಗಿಲ’ ಅನ್ನುವುದು ಜ್ಞಾನವನ್ನ, ನೈತ್ತಿಕತೆಯ ಪ್ರಜ್ಞೆಯನ್ನ ಸಂಕೇತಿಸುತ್ತಲೇ ಇಲ್ಲೂ ರ‍್ಧಿಷ್ಟ ಕ್ರಿಯಾಪದವನ್ನ ತಿಳಿಸುತ್ತಲೇ ‘ತೆರೆವರಿಲ್ಲ’ ಅನ್ನುವಾಗ ತನ್ನ ಅಸಹಾಯಕತೆಯನ್ನ ಜೊತೆಗೆ ಪ್ರಭುತ್ವದ ಅಧೋಗತಿಯನ್ನ ತಿಳಿಸುತ್ತಲೇ ಮುಂದಿನ ಕೆಟ್ಟಿರುವ ‘ಅರಸುತನ’ ವನ್ನ ಹೇಳುತ್ತಿದ್ದಾನೆ. ಅದರಲ್ಲಿಯೂ ಆ ಸಾಲಿನ ಬಹುಮುಖ್ಯ ಪದವೂ ‘ಕೆಟ್ಟಿತ್ತು’ ಇಂದಿಗೆ ಓದಿದರೆ ಭೂತಕಾಲ ಕ್ರಿಯಾಪದ ಮತ್ತೆ ರ‍್ತಮಾನಕಾಲದಲ್ಲಿಯೂ ಸ್ಪಷ್ಟವಾದ ಕೆಲಸ ಮಾಡುತ್ತ ‘ಕೆಟ್ಟ ಅರಸುತನ’ ವನ್ನ ಧ್ವನಿಸಿ, ಕೊನೆಗೆ ಈ ಹೀನಾವಸ್ಥೆಯನ್ನ ಕಂಡು ತನ್ನ ಒಟ್ಟೂ ಉದ್ದೇಶವಾದ ಬದುಕಿಯೂ ಪ್ರಯೋಜನವಿಲ್ಲವೆಂಬುದನ್ನ ಹೇಳುತ್ತಿದ್ದಾನೆ. ಕೊನೆಯ ಸಾಲಿನಲ್ಲಿನ ‘ಬದುಕಲೆ’ ಅನ್ನುವಾಗ ಅವನಲ್ಲಿನ ಒಳಗುದಿಯ ಕಾವನ್ನ ಹೇಳುವಲ್ಲಿ ಸಾಮಾನ್ಯವಾದ ಇಂದಿನ ದುಖಃದ ಸ್ಥಿತಿಯನ್ನೂ ಧ್ವನಿಸುವ ಹಾಗೆ ಮಾಡುತ್ತಿದೆ. ಆಶ್ಚರ್ಯದ ಸಂಗತಿ ಎಂದರೆ ರಾಜನ ಅಥವಾ ಪ್ರಭುತ್ವದ ವಿರುದ್ಧ ಆ ಕಾಲದಲ್ಲಿಯೇ ಬಹಳ ನೇರವಾಗಿ ಖಂಡಿಸುವ ಗುಣ ಮೆಚ್ಚಲೇಬೇಕಾದುದು. ಅದೇ ರಾಜ್ಯದಲ್ಲಿದ್ದು. ಈ ಗುಂಡಿಗೆಗೆ ಪ್ರಭಾವ ಬಸವಣ್ಣನ ನಡೆ ಇದ್ದರೂ ಇರಬಹುದು (ಊರಮುಂದೆ ಹಾಲಹಳ್ಳ ಹರಿಯುತಿರಲು ಬಿಜ್ಜಳನ ಭಂಡಾರವೆನಗೇಕಯ್ಯಾ, ನೆಲನಾಳ್ದನ ಹೆಣನೆಂದೊಡೆ ಒಂದಡಿಕೆಗೆ ಕೊಂಬರಿಲ್ಲ … ಇತ್ಯಾದಿ ಬಸವಣ್ಣನ ವಚನ ಮತ್ತು ನಡೆಯ ಪ್ರಭಾವ ಇದ್ದರೂ ಇರಬಹುದು) ಎಲ್ಲಕಾಲದಲ್ಲಿಯೂ ಬಂಡಾಯವನ್ನ ನಡೆಸುವವನ ಒಳ ಹೊರ ಸ್ಥಿತಿಯ ಶುಚಿತ್ವದ ದ್ಯೋತಕವಾಗಿ ಈ ವಚನ ನಿಂತಿದೆ. ಅಧಿಕಾರದಲ್ಲಿರುವವನ ನೈತ್ತಿಕ ಅಧಃಪತನ ಮತ್ತು ಅವನನ್ನಾಶ್ರಯಿಸಿರುವ ಎಲ್ಲರ ಪತನಕ್ಕೂ ನಾಂದಿ. ಕೊನೆಗೆ ಅದರ ಪರಿಣಾಮ ಸಮಾಜದಲ್ಲಿ ಕ್ಷುದ್ರತೆಯ ಅನಾವರಣಕ್ಕೆ ನಾಂದಿ. ವಚನಕಾರರಿಗೆ ಇದ್ದ ಭಾಷೆಯ ಬಳಕೆಯಲ್ಲಿನ ಬಹುಸೂಕ್ಷ್ಮತೆ ಬೆರಗಾಗಿಸುತ್ತದೆ. ಒಂದು ಕ್ರಿಯಾಪದವನ್ನ ಬಳಸುವಾಗಲಂತೂ ಅವರಲ್ಲಿನ ಸದ್ಯ-ಶಾಶ್ವತವನ್ನ ಹಿಡಿದಿಡುವಲ್ಲಿ ಅನುಭವ-ಅನುಭಾವ ಅಥವಾ ಭವಿಷ್ಯವನ್ನು ನುಡಿಯುವ ಮುಂಗಾಣ್ಕೆ, ಎಲ್ಲ ಕಾಲದಲ್ಲಿಯೂ ಅವರನ್ನು ಸಲ್ಲುವಂತೆ ಮಾಡಿದೆ. ಅಡಿಟಿಪ್ಪಣಿ ೦೧. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ ಎಂ ಕಲಬುರಗಿ. ಪು ೯೭೩ ಮತ್ತು ೯೭೪ (೨೦೧೬) ೦೨. ಪೀಠಿಕೆಗಳು ಲೇಖನಗಳು. ಡಿ ಎಲ್ ನರಸಿಂಹಾಚಾರ್. ಪುಟ ೪೬೯. (೧೯೭೧) ೦೩. ಶಿವಶರಣ ಕಥಾರತ್ನಕೋಶ. ತ ಸು ಶಾಮರಾಯ. ಪುಟ ೦೪. (೧೯೬೭) ೦೪. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ ಎಂ ಕಲರ‍್ಗಿ. ಪು ೯೩೫. (೨೦೧೬) ೦೫. ಪ್ರಾಚೀನ ಕನ್ನಡ ಸಾಹಿತ್ಯದ ಸಮಗ್ರ ಸೂಚಿ-೧. ಡಾ. ಆರ್.
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-9 ಆತ್ಮಾನುಸಂಧಾನ ಪಂಪನ ಬನವಾಸಿಗೆ ಪಯಣ ನಾನು ಎರಡನೆ ಇಯತ್ತೆ ಮುಗಿಸುವಾಗ ನಮ್ಮ ತಂದೆಯವರಿಗೆ ಶಿರ್ಶಿ ತಾಲೂಕಿನ ಬನವಾಸಿಗೆ ವರ್ಗವಾಯಿತು. ನಮ್ಮ ಕುಟುಂಬದಲ್ಲಿ ಮಾತ್ರವಲ್ಲ, ನಮ್ಮ ಇಡಿಯ ಕೇರಿಯೇ ದಿಗಿಲುಗೊಂಡಿತು. ಅಂದಿನ ದಿನಮಾನಗಳಲ್ಲಿ ನಮಗೆಲ್ಲ ಬನವಾಸಿಯೆಂಬುದು ವಿದೇಶ ಪ್ರವಾಸದಷ್ಟೇ ದೂರದ ಅನುಭವವನ್ನುಂಟು ಮಾಡುವಂತಿತ್ತು. ಭಯಾನಕವಾದ ಪರ್ವತ ಶ್ರೇಣಿಗಳ ಆಚೆಗಿನ ಘಟ್ಟ ಪ್ರದೇಶ ಎಂಬುದು ಒಂದು ಕಾರಣವಾದರೆ, ನಮ್ಮೂರ ಪಕ್ಕದ ಹನೇಹಳ್ಳಿಯಿಂದ ಶಿರ್ಶಿಗೆ ಹೊರಡುವ ಒಂದೇ ಒಂದು ಬಸ್ಸು ನಸುಕಿನಲ್ಲಿ ಹನೇಹಳ್ಳಿಯನ್ನು ಬಿಟ್ಟರೂ ಗೋಕರ್ಣದ ಮೂಲಕ ಮಿರ್ಜಾನಿನಲ್ಲಿ ಜಂಗಲ್ ನೆರವಿನಿಂದ ಅಘನಾಶಿನಿ ನದಿಯನ್ನು ದಾಟಿ, ಕತಗಾಲ್ ಇತ್ಯಾದಿ ಮುನ್ನಡೆದು ಭಯಂಕರ ತಿರುವುಗಳುಳ್ಳ ದೇವಿಮನೆ ಘಟ್ಟವನ್ನು ಹತ್ತಿಳಿದು ಶಿರ್ಶಿಗೆ ತಲುಪುವಾಗ ಮಧ್ಯಾಹ್ನ ದಾಟಿ ಹೋಗುತ್ತಿತ್ತು. ಮತ್ತೆ ಅಲ್ಲಿಂದ ಬನವಾಸಿಯ ಬಸ್ಸು ಹಿಡಿದು ಅಲ್ಲಿಗೆ ತಲುಪುವಾಗ ರಾತ್ರಿಯೇ ಆಗುತ್ತಿತ್ತು. ನಾನು ನನ್ನ ತಮ್ಮ ತಂಗಿಯರೆಲ್ಲ ಬಸ್ ಪ್ರಯಾಣದ ತಲೆಸುತ್ತು, ವಾಂತಿ ಇತ್ಯಾದಿಗಳಿಂದ ಬಳಲಿ ನಮ್ಮನ್ನು ಯಾರಾದರೂ ಎತ್ತಿಕೊಂಡೆ ಮನೆಗೆ ತಲುಪಿಸಬೇಕಾದ ಹಂತಕ್ಕೆ ಬಂದಿರುತ್ತಿದ್ದೆವು. ಈ ದ್ರಾವಿಡ ಪ್ರಾಣಾಯಾಮದ ಕಾರಣದಿಂದಲೂ ಬನವಾಸಿಯೆಂಬುದು ನಮ್ಮ ಕಣ್ಣಳತೆಗೆ ಮೀರಿದ ಊರು ಎಂಬ ಭಾವನೆ ನಮ್ಮವರಲ್ಲಿ ಬೆಳೆದು ನಿಂತಿತ್ತು. ಹೀಗಾಗಿಯೇ ಅಪ್ಪ ಕುಟುಂಬ ಸಹಿತ ಬನವಾಸಿಗೆ ಹೊರಟು ನಿಂತಾಗ ಬಂಧುಗಳು ಆತಂಕಗೊಂಡಿದ್ದು ಸಹಜ. ನನಗೋ ಈ ಎರಡು ವರ್ಷಗಳಲ್ಲಿಯೇ ಗಾಢ ಸ್ನೇಹಿತರಾಗಿ ಹಚ್ಚಿಕೊಂಡಿದ್ದ ಕುಪ್ಪಯ್ಯ ಗೌಡ, ಚಹಾದಂಗಡಿಯ ಗಣಪತಿಗೌಡ, ಮುಕುಂದ ಪ್ರಭು, ಇತ್ಯಾದಿ ಗೆಳೆಯರನ್ನು ಬಿಟ್ಟು ಹೋಗಬೇಕಲ್ಲ? ಎಂಬ ಚಿಂತೆ ಕಾಡಿತು. ಆದರೆ ಬನವಾಸಿಯಲ್ಲಿ ನೆಲೆನಿಂತ ಬಳಿಕ ಹೊಸತೊಂದು ಲೋಕವೇ ನಮ್ಮೆದುರು ತೆರೆದುಕೊಂಡ ಅನುಭವವಾಯಿತು. ಬಹಳ ಮುಖ್ಯವಾಗಿ ನಾಡುಮಾಸ್ಕೇರಿಯಲ್ಲಿನ ಜಾತೀಯತೆಯ ಕಹಿ ಅನುಭವಗಳಾಗಲಿ, ಕೀಳರಿಮೆಯಾಗಲೀ ನಮ್ಮನ್ನು ಎಂದಿಗೂ ಬಾಧಿಸಲಿಲ್ಲ. ನಾನು, ನನ್ನ ತಮ್ಮ ತಂಗಿಯರೆಲ್ಲ ಮಧುಕೇಶ್ವರ ದೇವಾಲಯದ ಆವರಣದಲ್ಲಿಯೇ ಯಾವ ಮುಜುಗರವೂ ಇಲ್ಲದೇ ಆಡಬಹುದಿತ್ತು. ಹನೇಹಳ್ಳಿಯವರೇ ಆಗಿದ್ದ ಕುಚಿನಾಡ ವೆಂಕಟ್ರಮಣ ಶಾನುಭೋಗರ ಕುಟುಂಬ, ಗಾಂವಕಾರ ಮಾಸ್ತರರು, ಅಗ್ಗರಗೋಣದ ಮೋಹನ ಮಾಸ್ತರರು, ರಾಮಚಂದ್ರ ಮಾಸ್ತರರು ಮೊದಲಾದವರ ಕುಟುಂಬಗಳು ಊರಿನವರೆಂಬ ಕಾರಣದಿಂದ ಸಹಜವಾಗಿಯೇ ಆಪ್ತವಾಗಿದ್ದವು. ಕುಚಿನಾಡ ಶಾನುಭೋಗರ ಮಕ್ಕಳೂ ನಮ್ಮ ಆಪ್ತ ಸ್ನೇಹಿತರಾಗಿಯೇ ದೊರೆತುದರಿಂದ ಅವರ ಕುಟುಂಬದೊಡನೆ ನಾವು ಅತಿ ಸಲಿಗೆ ಹೊಂದಿದ್ದೆವು. ಅಪ್ಪ ಬನವಾಸಿಯ ಒಡಿಯರ್’ ಮುಳಗುಂದ’ ಮುಂತಾದ ಶ್ರೀಮಂತ ಕುಟುಂಬದ ಮಕ್ಕಳಿಗೆ ರಾತ್ರಿಯ ಮನೆಪಾಠ ಹೇಳಲಾರಂಭಿಸಿದ ಬಳಿಕ ಅಂಥ ಮಕ್ಕಳ ಒಡನಾಟವೂ ನಮಗೆ ಸೌಹಾರ್ದಯುತವಾಗಿತ್ತು. ಬನವಾಸಿಯಲ್ಲಿ ನೆಲೆಸಿದ ಕೆಲವೇ ದಿನಗಳಲ್ಲಿ ಅಪ್ಪನ ಕೆಲವು ವಿಶಿಷ್ಟ ಪ್ರತಿಭೆಯಿಂದಾಗಿ ಅಲ್ಲಿನ ಸಾಂಸ್ಕೃತಿಕ ಸಂಘಟನೆಗಳಲ್ಲಿ ಸದಸ್ಯತ್ವ ಪಡೆಯುವ ಅವಕಾಶ ದೊರಕಿಸಿಕೊಂಡ. ಬನವಾಸಿಯ ಹವ್ಯಾಸಿ ನಾಟಕ ಮಂಡಳಿಯಲ್ಲಿ ಪ್ರಮುಖ ಸ್ತ್ರೀಪಾತ್ರಧಾರಿಯಾಗಿ ನಟಿಸುವ ಅವಕಾಶ ಪಡೆದು ಅಂದಿನ ದಿನಗಳಲ್ಲಿ ಮಹಿಳೆಯರು ರಂಗಪ್ರವೇಶಕ್ಕೆ ಹಿಂದೇಟು ಹಾಕುವುದರಿಂದ ಪುರುಷರೇ ಸ್ತ್ರೀಯರಪಾತ್ರ ನಿರ್ವಹಿಸಬೇಕಿತ್ತು. ಸಿನಿಮಾ ನಟರಂತೆ ಆಕರ್ಷಕ ವ್ಯಕ್ತಿತ್ವದ ಪಿ.ಜಿ. ಪ್ರಾತಃಕಾಲ ಎಂಬ ನಮ್ಮ ಹಿಂದಿ ಮೇಷ್ಟ್ರು ಯಾವುದೇ ನಾಟಕದ ಕಥಾ ನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದರೆ ಅಪ್ಪ ಕಥಾನಾಯಕಿಯಾಗಿ ಪಾತ್ರ ನಿರ್ವಹಿಸಿ ಅವರಿಗೆ ಸರಿಜೋಡಿಯೆನಿಸುತ್ತಿದ್ದ. ಅಪ್ಪನಿಗೆ ಉತ್ತಮ ಬರಹದ ಕೌಶಲ್ಯವೂ ಇದ್ದಿತ್ತು. ಬನವಾಸಿಯ ಅನೇಕ ಅಂಗಡಿ ಮುಂಗಟ್ಟುಗಳಿಗೆ ನಾಮಫಲಕಗಳನ್ನು ಬರೆದುಕೊಟ್ಟು ಎಲ್ಲರಿಗೂ ಬೇಕಾದವನಾದ. ಮಧುಕೇಶ್ವರ ದೇವಾಲಯದ ಆವರಣದೊಳಗೆ ಇರುವ ಎಲ್ಲ ಸಣ್ಣ ಪುಟ್ಟ ಗುಡಿಗಳಿಗೆ, ಕಲ್ಲಿನ ಮಂಟಪ ಇತ್ಯಾದಿಗಳಿಗೆ ಆಕರ್ಷಕವಾದ ನಾಮಫಲಕಗಳನ್ನು ಬರೆದು ಅಂಟಿಸಿ ದೇವಾಲಯದ ಆಡಳಿತ ಮಂಡಳಿಯ ಗೌರವಕ್ಕೂ ಪಾತ್ರನಾಗಿದ್ದ. ಹೀಗೆ ಅಪ್ಪ ಬನವಾಸಿಯಲ್ಲಿ ಪರಿಚಿತನಾಗುತ್ತಿದ್ದುದು ನಮಗೆಲ್ಲ ತುಂಬಾ ಅನುಕೂಲವಾಯಿತು. ಇಂಥವರ ಮಕ್ಕಳು ಎಂದು ಬಹುತೇಕ ಜನ ನಮ್ಮನ್ನು ಅಕ್ಕರೆಯಿಂದಲೇ ಕಾಣುತ್ತಿದ್ದರು. ಬನವಾಸಿಯ ಮಧುಕೇಶ್ವರ ದೇವರ ರಥೋತ್ಸವ, ದಸರಾ ಉತ್ಸವ, ನೆರೆಯ ಗುಡ್ನಾಪುರ ಜಾತ್ರೆ, ಬಂಕಸಾಣ ಜಾತ್ರೆಗಳು ಇತ್ಯಾದಿ ಮರೆಯಲಾಗದಂಥಹ ಸಾಂಸ್ಕೃತಿಕ ಸಂದರ್ಭಗಳು ನಮ್ಮ ಅನುಭವಕ್ಕೆ ದಕ್ಕಿದುದು ಬನವಾಸಿಯ ವಾಸ್ತವ್ಯದಲ್ಲಿಯೇ ಶೈಕ್ಷಣಿಕವಾಗಿ ಕೂಡಾ ನಮಗೆ ಉತ್ತಮ ತಳಪಾಯ ದೊರೆತುದು ಇದೇ ಊರಿನಲ್ಲಿ. ಬನವಾಸಿಯ ಹಿರಿಯ ಪ್ರಾಥಮಿಕ ಶಾಲೆ ಸುತ್ತಲಿನ ಪರಿಸರದಲ್ಲಿ “ಉತ್ತಮ ಶಾಲೆ” ಎಂಬ ಕೀರ್ತಿಗೆ ಪಾತ್ರವಾಗಿತ್ತು. ಸುತ್ತಮುತ್ತಲಿನ ಹಳ್ಳಿಗಳಿಂದ ಹಲವು ವಿದ್ಯಾರ್ಥಿಗಳು ಈ ಶಾಲೆಗೆ ಸೇರಿಕೊಳ್ಳುತ್ತಿದ್ದರು. ಶಾಲೆಗೆ ಸಮೀಪವೇ ಇದ್ದ ಸರಕಾರಿ ವಸತಿ ನಿಲಯದಲ್ಲಿ ಉಳಿದುಕೊಂಡು ಅಭ್ಯಾಸ ಮಾಡುತ್ತಿದ್ದರು. ಶಿಕ್ಷಣ ಕ್ರಮ ಮತ್ತು ಆಡಳಿತ ಶಿಸ್ತಿಗೆ ಬಹುಮುಖ್ಯ ಕಾರಣರೆನಿಸಿದವರು ಈ ಶಾಲೆಯ ಮುಖ್ಯಾಧ್ಯಾಪಕರಾದ ಖಾಜಿ ಮಾಸ್ತರರು. ವೈಯಕ್ತಿಕವಾಗಿಯೂ ತುಂಬಾ ಕಟ್ಟುನಿಟ್ಟಾದ ಶಿಸ್ತಿನ ಮನುಷ್ಯ. ಸ್ವಲ್ಪ ಕುಳ್ಳನೆಯ ವ್ಯಕ್ತಿಯಾದರೂ ಬಿಳಿಯ ಪಾಯಿಜಾಮಾ, ಬಿಳಿಯ ಶರ್ಟು, ಅದರಮೇಲೋಂದು ಕಪ್ಪನೆಯ ಓವರ್ ಕೋಟ್, ತಲೆಯ ಮೇಲೊಂದು ಕರಿಯ ಟೊಪ್ಪಿಗೆ, ಕಾಲಲ್ಲಿ ಚರಮರಿ ಜೋಡು ಮೆಟ್ಟ ಬಂದರೆಂದರೆ ಕಟೆದು ನಿಲ್ಲಿಸಿದಂಥ ಪರಸನ್ಯಾಲಿಟಿ. ಸದಾ ಘನ ಗಾಂಭೀರ್ಯದಲ್ಲಿ ಮುಖವನ್ನು ಗಂಟು ಹಾಕಿಕೊಂಡಂತಿರುವ ಖಾಜಿ ಮಾಸ್ತರರು ತಮ್ಮ ಕಣ್ಣುಗಳಿಂದಲೇ ಎಲ್ಲರನ್ನೂ ಕಂಟ್ರೋಲು ಮಾಡುವ ರೀತಿಯೇ ಅದ್ಭುತವಾಗಿತ್ತು!. ಎಲ್ಲ ಅಧ್ಯಾಪಕರನ್ನು ಹದ್ದು ಬಸ್ತನಲ್ಲಿಟ್ಟು ನಡೆಸುವ ಮಾಸ್ತರರ ಆಡಳಿತ ವ್ಯವಸ್ಥೆಯೇ ಶಾಲೆಯನ್ನು ಶಿಸ್ತು ದಕ್ಷತೆಗೆ ಹೆಸರುವಾಸಿಯಾಗುವಂತೆ ಮಾಡಿತ್ತು. ಶಾಲೆಯಲ್ಲಿ ಅತ್ಯಂತ ಕಟ್ಟು ನಿಟ್ಟಿನ ಸದಾ ಗಂಭೀರ ನಿಲುವಿನಲ್ಲಿರುವ ಖಾಜಿ ಮಾಸ್ತರರು ಅಂತರಂಗದಲ್ಲಿ ಅಪಾರವಾದ ಪ್ರೀತಿ-ಅಂತಃಕರಣವುಳ್ಳವರಾಗಿದ್ದರೆಂಬುದು ನನಗೆ ಮುಂದಿನ ದಿನಗಳಲ್ಲಿ ವೇದ್ಯವಾಯಿತು. ನಾನು ನಾಲ್ಕನೆಯ ತರಗತಿ ಓದುತ್ತಿರುವಾಗ ಬನವಾಸಿಯ ತುಂಬ ಭಯಂಕರವಾದ ಸಿಡುಬು ರೋಗ ವ್ಯಾಪಿಸಿತ್ತು. ನಮ್ಮ ಮನೆಯಲ್ಲೂ ನಮ್ಮ ತಾಯಿಯೊಬ್ಬಳನ್ನುಳಿದು ನಾನು, ಅಪ್ಪ ಮತ್ತು ತಮ್ಮ ತಂಗಿಯರೆಲ್ಲ ಸಿಡುಬು ರೋಗದಿಂದ ಹಾಸಿಗೆ ಹಿಡಿದಿದ್ದೆವು. ಮೈತುಂಬ ಸಿಡುಬಿನ ನೀರುಗುಳ್ಳೆಗಳೆದ್ದು ಬಾಳೆಎಲೆ ಹಾಸಿಗೆಯ ಮೇಲೆ ನಮ್ಮನ್ನೆಲ್ಲ ಮಲಗಿಸಿದ್ದರು. ಅತಿಯಾದ ನಿಶ್ಯಕ್ತಿ ಮತ್ತು ಮೈ ಉರಿಯಿಂದ ನಾವು ನರಳುತ್ತಿದ್ದರೆ ಅವ್ವ ನಮ್ಮ ಯಾತನೆಗೆ ಸಂಕಟ ಪಡುತ್ತಾ ಉಪಚರಿಸುತ್ತಾ ಓಡಾಡುತ್ತಿದ್ದಳು. ಅಪ್ಪನ ಸಹೋದ್ಯೋಗಿ ಶಿಕ್ಷಕರೆಲ್ಲಾ ಬಂದು ಸಾಂತ್ವನ ಹೇಳಿ ಹೋಗುತ್ತಿದ್ದರು. ಈ ಸಮಯದಲ್ಲಿ ಖಾಜಿ ಮಾಸ್ತರರು ತೋರಿದ ಕಾಳಜಿ, ಮಾಡಿದ ಉಪಕಾರ ಇನ್ನೂ ನನ್ನ ಕಣ್ಣಮುಂದೆ ಕಟ್ಟಿದಂತೆಯೇ ಇದೆ. ನಿತ್ಯವೂ ನಮಗೆ ಗಂಜಿ ಮತ್ತು ಹಣ್ಣು ಹಂಪಲುಗಳ ವ್ಯವಸ್ಥೆ ಮಾಡಿ ನಾವು ಸಂಪೂರ್ಣ ಗುಣಮುಖರಾಗುವವರೆಗೆ ತುಂಬಾ ಕಳಕಳಿಯಿಂದ ನೋಡಿಕೊಂಡರು. ಅವರು ಮತ್ತು ಅವರ ಸಹೋದ್ಯೋಗಿ ಶಿಕ್ಷಕರು ತೋರಿದ ಪ್ರೀತ್ಯಾದರಗಳೇ ನಮ್ಮನ್ನು ಖಾಯಿಲೆಗೆ ಬಲಿಯಾಗದಂತೆ ಬದುಕಿಸಿದ್ದವು ಅಂದರೆ ಉತ್ಪೆಕ್ಷೆಯಲ್ಲ! ಬಹುಶಃ ಖಾಜಿ ಮಾಸ್ತರರಂಥ ಮಹನಿಯರೇ ಸಮಾಜದಲ್ಲಿ ಮನುಷ್ಯರಾಗಿ ಮುಖವೆತ್ತಿ ಬಾಳಲು ಪೋಷಕ ದೃವ್ಯವಾಗಿ ಹೊರತೆರೆಂದು ನಾನೀಗಲೂ ದೃಢವಾಗಿ ನಂಬಿದ್ದೇನೆ *********************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ಅಂಕಣ ಬರಹ ಮರಿಕಪ್ಪೆ ಹಾರಿತು ಬಾವಿಯ ಹೊರಗೆ ಚಾವಣಿಯ ಹೊರೆ ಕಳೆದು ಶಿಥಿಲವಾದರೂ ನಿಂತೇ ಇದ್ದ ಗೋಡೆಯದು. ಆ ಮೋಟುಗೋಡೆಯ ಮಗ್ಗುಲಲ್ಲಿ ಕಪ್ಪೆಯಂತೆ ಹಾರಿ ಆ ಬದಿಯ ಕಿಟಕಿಯ ಚೌಕಟ್ಟಿಗೆ ಒಂದು ಕಾಲುಕೊಟ್ಟು ಬಲಗೈಯಿಂದ ಕಿಟಕಿಯ ಸರಳು ಹಿಡಿದು ಮೇಲೇರಿ ಎಡಗಾಲು ಎತ್ತಿ ಆ ಅರ್ಧಗೋಡೆಯ ಮೇಲೆ ಇಟ್ಟು ದೇಹವನ್ನು ನಿಯಂತ್ರಣಕ್ಕೆ ತಂದುಕೊಳ್ಳುತ್ತ ಕೈಗಳನ್ನೂ ಗೋಡೆಯ ಬೋಳುತಲೆ ಮೇಲೆ ಊರಿ ಪುಟ್ಟ ಲಗಾಟೆ ಹೊಡೆದು ಗೋಡೆ ಏರಿ ಕುಳಿತುಕೊಳ್ಳುತ್ತಿದ್ದೆವು. ನಮ್ಮ ಸಿಂಹಾಸನವದು. ಏರಿ ಕೂತವಳು ಮಹಾರಾಣಿ. ಉಳಿದವರು ನೆಲದಲ್ಲಿ ಕೂತು ಮಹಾರಾಣಿಯ ಆಜ್ಞೆಗೆ ಕಾಯಬೇಕು. ಭಾರತಿ ನಾಟಕದ ಮುಂದಿನ ಅಂಕದ ನೆನಪಿನಲ್ಲಿ ಗೊಣಗುತ್ತಿದ್ದಳು.” ಹೇ, ನಾಳೆ ನಾನು ಮಹಾರಾಣಿ. ನೆಲದಲ್ಲಿ ಎಷ್ಟು ಮಣ್ಣು ನೋಡು.” ರಸ್ತೆಯ ಮೇಲಿನ ಧೂಳು ಮಣ್ಣು ಹಾರಿ ಬಂದು ದಪ್ಪಗೆ ನೆಲದಲ್ಲಿ ಕೂತಿರುತ್ತಿತ್ತು. ನಾವು ಅದರಲ್ಲಿ ತೋರು ಬೆರಳಿನಿಂದ ಹೆಸರು ಬರೆಯುವುದೂ ಇತ್ತು. ಅಲ್ಲಿ ಆಟ ಆಡಿ ಹೋದ ಸಂಜೆ ಮನೆಯಲ್ಲಿ ಬಯ್ಗಳಿಗೆ ಏನೂ ಬರವಿಲ್ಲ. ಅಂಗಿಯೆಲ್ಲ ಕೆಂಪು. “ನಿಮಗೆ ಆಡಲು ಬೇರೆ ಜಾಗ ಇಲ್ವಾ”. ಅವಳ ಅಮ್ಮ ಒಂದೇ ಸಮನೆ ಗೊಣಗುತ್ತಿದ್ದರು. ಪಾಪ,ಹಗಲಿಡೀ ಹೋಟೇಲಿನ ಕೆಲಸ. ಈಗಿನಂತೆ ಗ್ರೈಂಡರ್ , ಮಿಕ್ಸಿಗಳಿಲ್ಲ. ಚಚ್ಚೌಕ ತೆರೆದ ಚಾವಡಿಯ ಮನೆ. ಮನೆಗೆ ಹಿಂದಿನಿಂದ ಬಾಗಿಲು. ಎದುರು ಹೋಟೇಲ್. ಒಳಗಡೆ ಕಾಲಿಟ್ಟರೆ ಮೊದಲು ಕಾಣಿಸುವುದೇ ದೊಡ್ಡದಾದ ಅರೆಯುವ ಕಲ್ಲು. ಸಂಜೆ ಐದು ಗಂಟೆಯಿಂದ ರಾತ್ರಿ 8.30 ರತನಕವೂ ಆಕೆಯ ಕೈಗಳು ಅದರ ಮೇಲೆ ವೃತ್ತಾಕಾರದಲ್ಲಿ ತಿರುಗುತ್ತಲೇ ಇರುತ್ತದೆ. ಅರೆಯುತ್ತಲೇ ಬದುಕು ಆಕೆಯನ್ನೇ ಅರೆದಂತೆ. ಅದನ್ನು ದಾಟಿದರೆ ಒಂದು ಕಬ್ಬಿಣದ ಒಲೆ. ಅದರ ಮೇಲೆ ಪಾತ್ರೆ. ಮುಂದುವರೆದರೆ ಉದ್ದದ ಎರಡು ಮೆಟ್ಟಲು, ನಂತರ ಅಡುಗೆ ಮನೆ. ಹಗಲಿನ ವೇಳೆ ಆಕೆ ದೊಡ್ಡ ಉರಿಯ ಮೂರು ಒಲೆಗಳ ಎದುರು ನಿಂತು ದೋಸೆ, ಬನ್ಸ್, ಪೋಡಿ,ಚಹಾ..ಎಂದು ಉರಿಯುತ್ತಾ ಇರುತ್ತಾಳೆ. ಅದರ ಪಕ್ಕ ಒಂದು ಬಾಗಿಲು. ಒಳಗಡೆ ಎರಡು ಕೊಠಡಿ. ಸಂಜೆ ಬೆಂಕಿಯೊಂದಿಗಿನ ಅನುಸಂಧಾನ ಮುಗಿಸಿ ಕೊಳ್ಳಿಯನ್ನು ಗಂಡನ ಸುಪರ್ದಿಗೆ ಕೊಟ್ಟು ಒಳಗೋಡಿ ಬರುತ್ತಾಳೆ. ಆಗ ಹೆಚ್ಚಾಗಿ ನಮ್ಮ ಪ್ರವೇಶ. ಕೆಂಪು ಬಣ್ಣದ ಅಂಗಿಯೊಂದಿಗೆ. ಅದು ಯಾವ ಬಣ್ಣವಿದ್ರೂ ಆ ಸಮಯ ಕೆಂಪಾಗಿರುತ್ತದೆ. ಸೂರ್ಯಾಸ್ತದ ರವಿಯಂತೆ. ಕಳ್ಳರಂತೆ ಒಳಹೊಕ್ಕು ಅಲ್ಲಿ ನಮ್ಮ ಅಟ,ಚರ್ಚೆ ಮುಂದುವರಿಯುತ್ತಿತ್ತು. ” ಕೈ ಇಡು..ಅಟ್ಟಮುಟ್ಟ ತನ್ನ ದೇವಿ ನಿನ್ನ ಗಂಡ ಎಲ್ಲಿ ಹೋದ..” ಅಂಗೈ ಅಂಗಾತವಾಗಿರಿಸಿ ಮುಚ್ಚಿ ತೆಗೆದು ಆಟ, ಕೆಲವೊಮ್ಮೆ ಕಣ್ಣಮುಚ್ಚಾಲೆ. ನಮ್ಮ ಅಂದಿನ ಖಳನಾಯಕನಾದ ಅವಳ ಅಣ್ಣನ ಪ್ರವೇಶದವರೆಗೂ ಮುಂದುವರಿಯುತ್ತಿರುತ್ತದೆ. ಅವನು ಬಂದು ಬಾಗಿಲ ಬಳಿ ನಿಂತು ಕಣ್ಣ ದೊಡ್ಡದು ಮಾಡುತ್ತಿದ್ದ. ” ಒಳಗೆ ಬರಲು ಯಾರು ಹೇಳಿದ್ದು? ನನ್ನ ಬೆದರಿಸುತ್ತಿದ್ದ. ನಾಯಿ ಉಂಟು. ಈಗ ನಾಯಿ ಬಿಡ್ತೇನೆ”. ನಾನು ಹೆದರಿ ಕಳ್ಳಬೆಕ್ಕಿನಂತೆ ಅಲ್ಲಿಂದ ಪಲಾಯನ ಮಾಡುತ್ತಿದ್ದೆ. ಅವಳ ಅಮ್ಮನ ಸ್ವರ ನನ್ನ ಹಿಂಬಾಲಿಸುತ್ತಿತ್ತು. ” ನೋಡು ಅವರ ಅಂಗಿ ನೋಡು, ಅದರ ಬಣ್ಣ ನೋಡು..ಹೇಗಾಗಿದೆ. ಯಾರು ಒಗೆಯೋದು.”‘ ಶ್ರೀಮತಿಯ ಕಣ್ಣಿನಲ್ಲಿ ಕಾಣುವ ಮುಂದಿನ ದೃಶ್ಯಗಳು ನನ್ನ ಮನಸ್ಸಿನ ಮಂಟಪದಲ್ಲೂ ಕುಣಿದು ನಾನು ಮುರಿದ ಗೋಡೆಯ ಸಿಂಹಾಸನದಲ್ಲಿ ಕೂತು ಅಜ್ಞಾಪಿಸುತ್ತಿದ್ದೆ ‘ ಕೂತು ಆಟ ಬೇಡ. ನಿಂತೇ ಮಾತನಾಡಬೇಕು.’ ಆಟದ ನಾಟಕ ಮುಂದುವರಿಯುತ್ತಿತ್ತು. ಇಲ್ಲಿ ರಾಣಿ,ಸಖಿಯರು,ಅಂತಃಪುರ ಇರುತ್ತಿತ್ತು. ನಾವು ನಾಲ್ಕು ಜನ ಸಖಿಯರು. ಆದರೆ ಮೂವರೇ ಇದ್ದಾಗ ಆಟಕ್ಕೆ ಚ್ಯುತಿಬಾರದಂತೆ ಆ ಪಾತ್ರವನ್ನು ಕಲ್ಪಿಸಿಕೊಂಡು ಮಾತನಾಡುತ್ತಿದ್ದೆವು. ಒಮ್ಮೆ ರಾಜಕುಮಾರಿಯರ ವಸ್ತ್ರ ಸಂಹಿತೆ ಬಗ್ಗೆ ಮಾತಾಗಿ ನಾವು ಒಂದೇ ರೀತಿಯ ವಸ್ತ್ರ ತಲೆಯ ಮೇಲಿನಿಂದ ಇಳಿಬಿಡಬೇಕು ಎಂಬ ನಿರ್ಣಯಕ್ಕೆ ಬಂದೆವು. ನನ್ನ ಒಬ್ಬ ಗೆಳತಿಯ ಬಳಿ ಅವಳಮ್ಮನ ಹಳದಿಬಣ್ಣದ ನೈಲಾನ್ ಸೀರೆಯ ಉದ್ದದ ತುಂಡಿತ್ತು. ಅದು ಬಹಳ ಚೆಂದವೂ ಇತ್ತು. ಅದರ ಮೇಲೆ ವಿವಿಧ ಹೂವುಗಳ ಚಿತ್ತಾರ. ನನ್ನ ಬಳಿಯೂ ಅದೇ ಬಣ್ಣದ ಅಮ್ಮನ ಸೀರೆ ಇದೆಯೆಂದೆ. ಶ್ರೀಮತಿ ನನ್ನಲ್ಲೂ ಇದೆ ಎಂದಳು. ಮರುದಿನ ನಾಟಕಕ್ಕೆ ವೇಷ ಭೂಷಣ ತಯಾರು. ಮರುದಿನ. ನಾವು ಮೂವರು ಗೆಳತಿಯರು ಸುಂದರವಾದ ಹಳದಿ ಬಣ್ಣದ ಪರದೆ ತಲೆಯ ಮೇಲಿನಿಂದ ಇಳಿಬಿಟ್ಟು ರಾಜಕುಮಾರಿಯರಾದೆವು. ಆದರೆ ಆಟದ ಅರ್ಧದಲ್ಲೇ ಗೆಳತಿಗೆ ಮನೆಯಿಂದ ಬುಲಾವ್. ಆಕೆ ಓಡಿದಳು.ಅವಳು ಹಿಂದಿನ ದಿನ ಹಳದಿ ಬಣ್ಣದ ತನ್ನ ಅಮ್ಮನ ಸೀರೆಯ ಸೆರಗು ಕತ್ತರಿಸಿ ತಂದಿದ್ದಳು!!. ಇದರ ಪರಿಣಾಮ, ಮುಂದಿನ ಕೆಲವು ದಿನಗಳ ಕಾಲ ಒಬ್ಬ ರಾಜಕುಮಾರಿಯ ಅನುಪಸ್ಥಿತಿಯಿಂದ ನಮ್ಮ ಗೋಡೆರಂಗದ ನಾಟಕ ರದ್ದಾಗಿತ್ತು. ಮಾತ್ರವಲ್ಲ ಅವರ ಮನೆಯ ಸುತ್ತ ಬಾರದಂತೆ ನಮಗೆ ನಿರ್ಬಂಧ ಹೇರಲಾಗಿತ್ತು. ರಂಗದ ಹಕ್ಕಿಗಳ ರೆಕ್ಕೆ ಪುಕ್ಕ ಈ ಆಟಗಳು. ನಮ್ಮ ಶಾಲೆಯ ಹಿಂದುಗಡೆ ಅಶ್ವಥ್ಥಮರದ ಕಟ್ಟೆಯಿತ್ತು. ಅಲ್ಲಿ ನಮ್ಮ ಮನೆಯಾಟ. ನಮ್ಮ ತರಗತಿಯ ಗೆಳತಿಯರು ಸೇರಿ ಆಟವಾಡುತ್ತಿದ್ದೆವು. ಸುಂದರ ಪಾತ್ರಗಳು, ಆ ಪಾತ್ರಗಳ ನಡುವಿನ ಸಂಭಾಷಣೆ, ಮಾತು, ನಗು, ಅಳು, ಸಂಬಂಧ ಆ ಕಟ್ಟೆಯ ಮೇಲೆ ಒಳಗೊಳಗಿಂದಲೇ ಅರಳುತ್ತಿತ್ತು. ಅಲ್ಲಿ ಅದೆಷ್ಟು ವೇಗದಲ್ಲಿ ಪಾತ್ರಗಳೂ ಬದಲಾಗುತ್ತಿದ್ದವು. ಅಪ್ಪ ಅಮ್ಮ ಮಗ, ಮಗಳು. ಅಜ್ಜ ಅಜ್ಜಿ, ಡಾಕ್ಟರ್,ಕಂಪೌಂಡರ್,ಮನೆ ಕೆಲಸದಾಳು,ಟೀಚರ್,ಅಂಗಡಿ ಆಸ್ಪತ್ರೆ,ಹೋಟೆಲ್, ಎಲ್ಲವೂ ನಮ್ಮ ಮನೆಯಾಟದ ಪಾತ್ರಗಳು. ಅಪ್ಪನ ಬಳಿ ಅಮ್ಮನ ದೂರುಗಳು. ಅಪ್ಪ ಮಕ್ಕಳನ್ನು ಕರೆದು ವಿಚಾರಣೆ, ಪುಟ್ಟಪುಟ್ಟ ಬಾಟಲುಗಳಲ್ಲಿ ಔಷಧಿ, ಇಂಜೆಕ್ಷನ್ ಚುಚ್ಚುವ ದಾದಿ, ಅಳುವ ಮಗು,ಹೀಗೇ ಕಂಡದ್ದೆಲ್ಲಾ ಪಾತ್ರಗಳೇ. ನಮ್ಮ ಶಾಲೆಯ ಹಿಂದುಗಡೆ ಖಾಲಿ ಜಾಗ. ಪುಟ್ಟ ಮೈದಾನ. ಅದರಾಚೆ ದೇವಾಲಯದ ಗದ್ದೆಗಳು. ಅಲ್ಲೇ ಜಾತ್ರೆಯ ಸಮಯದಲ್ಲಿ ಸರ್ಕಸ್, ಉಯ್ಯಾಲೆ,ಕುದುರೆ, ನಾಟಕ ಮೊದಲಾದವು ನಡೆಯುವುದು. ಜಾತ್ರೆಯ ನಂತರವೂ ಕೆಲದಿನ ಸರ್ಕಸ್ ನ ಮಂದಿ ಇರುತ್ತಿದ್ದರು. ನಾವು ನಮ್ಮ ಶಾಲೆಯ ಹಿಂಬದಿಗೆ ಹೋಗಿ ಅವರ ವೇಷ, ಪ್ರಾಣಿ, ಪಂಜರ ಮೊದಲಾದುವುಗಳನ್ನು ಅತ್ಯಂತ ಕುತೂಹಲದಲ್ಲಿ ನೋಡುವುದು. ಈ ಸರ್ಕಸ್ ನವರ ಬಳಿ ಸ್ಪಂಜಿನಿಂದ ತಯಾರಿಸಿದ ಬಣ್ಣದ ಗುಲಾಬಿ ಹೂಗಳು ಮಾರಾಟಕ್ಕಿದ್ದವು. ದೊಡ್ಡದು ಹಾಗೂ ಸಣ್ಣದು. ಒಂದು ಹೂವಿಗೆ ಒಂದು ರೂಪಾಯಿ. ನಮಗೆ ಅದರ ಬಹಳ ಆಸೆಯಾಗಿ ವ್ಯಾಮೋಹಕ್ಕೆ ತಿರುಗಿತ್ತು. ಆದರೆ ಹಣವೆಲ್ಲಿಂದ ಬರಬೇಕು? ಸಂಜೆ ನಮ್ಮ ಶಾಲೆಯ ಮೈದಾನದ ತುದಿಯಲ್ಲಿ ನಿಂತು ವಿಚಾರಿಸುತ್ತಿದ್ದೆವು. ನೀವು ಎಷ್ಟು ದಿನ ಇರುತ್ತೀರಿ? ಕೊನೆಗೂ ನಾವು 5-6 ಜನ ಸೇರಿ ಒಂದು ಗುಲಾಬಿ ಕೊಳ್ಳಲು ಹಣ ಸೇರಿಸಿದೆವು.ಅದನ್ನು ದಿನಕ್ಕೊಬ್ಬರು ಮನೆಗೆ ಕೊಂಡೊಯ್ಯುವುದು. ಬೆಳಗ್ಗೆ ಚೀಲದಲ್ಲಿ ಹಾಕಿ ಮತ್ತೆ ತರಬೇಕು.ನಾವು ಬಹಳ ಖುಷಿಯಲ್ಲಿ ನಮ್ಮ ಮೈದಾನದ ತುದಿಯಲ್ಲಿ ನಿಂತು ವ್ಯಾಪಾರ ಕುದುರಿದೆವು. ಗುಲಾಬಿ ಹೂ ನಮ್ಮೊಳಗೆ ಹೊಸ ಪಾತ್ರವಾಯಿತು. ಎಲ್ಲದರ ನಡುವೆ ಪುಟ್ಟ ದೀಪವೊಂದು ಅಂತರಂಗದಲ್ಲಿ ಬೆಳಗುತ್ತ ಯಾವುದೋ ಸಂದೇಶ ರವಾನಿಸುತ್ತಲೇ ಇತ್ತು. ಹೌದು, ಬಣ್ಣ ಹಾಕಿ ಹೊಸ ವೇಷದಲ್ಲಿ ವೇದಿಕೆ ಏರಬೇಕು. ಅಲ್ಲಿ ಎದುರುಗಡೆ ಅದೆಷ್ಟು ಜನ ತುಂಬಿಕೊಂಡಿರಬೇಕು. ಅವರೆದುರು ನಾನು ವಸಂತಸೇನೆ, ಶಕಾರ, ಶಬರಿ, ದ್ರೌಪದಿ, ಅಜ್ಜಿ ಓದಿಸಿದ ಕಥೆಗಳ ನಾಯಕಿ. ಎಲ್ಲರೂ ನನ್ನೊಳಗೆ ಬರಬೇಕು. ಅವರನ್ನು ಜನರೆದುರು ಕರೆತಂದು ತೋರಿಸಬೇಕು. ಅಭಿನಯಿಸಬೇಕು. ಆದರೆ ನನ್ನ ಒಳಗಿನ ಪಾತ್ರಗಳು, ಯಾರಾದರೂ ಕಣ್ಣರಳಿಸಿದರೂ ಅಜ್ಜಿಯ ಸೆರಗಿನ ಹಿಂದೆ ಮರೆಯಾಗುತ್ತಿದ್ದವು. ನಾಲ್ಕು ಜನ ನಿಂತರೆ ಎದುರು ಹೋಗಲಾಗದೆ ಕಾಲು ನಡುಗುತ್ತಿತ್ತು. ವೇದಿಕೆಯ ಮೆಟ್ಟಲಾದರೂ ಹತ್ತುವುದು ಆದೀತೇ? ನಾಲ್ಕನೆಯ ತರಗತಿಯಲ್ಲಿ ವಾರ್ಷಿಕೋತ್ಸವ ಸಮಯದ ಸೋಲು ಇದ್ದ ಸ್ವಲ್ಪ ಧೈರ್ಯವನ್ನೂ ಎತ್ತಿಕೊಂಡು ಓಡಿತ್ತು. ಅಂದು ಅಜ್ಜಿಯ ಎದುರು ಒದ್ದೆ ಬೆಕ್ಕಿನಮರಿಯಂತೆ ಕೂತಿದ್ದೆ. ಸೂತ್ರಧಾರಿಣಿ ಎತ್ತಿ ಮಡಿಲಿಗೆ ಎಳೆದು ಕೊಂಡಿದ್ದಳು” ಸೋಲಿಗೆ ಹೆದರಬಾರದು ನನ್ನ ಮಗೂ”ಬಿಕ್ಕುವ ಬಿಕ್ಕಿಗೆ ತಲೆ ನೇವರಿಸುತ್ತಾ ಮುಲಾಮು ಆದಳು. ” ನೀನು ಯುದ್ದ ಭೂಮಿಗೆ ಹೋಗಲು ನಿನ್ನನ್ನು ನೀನೇ ತಯಾರು ಮಾಡಬೇಕು. ಸೋಲು ಗೆಲುವಿನ ಬಗ್ಗೆ ಚಿಂತಿಸಬಾರದು. ರಣಭೂಮಿಯನ್ನೇ ನೋಡಲಿಲ್ಲ ನೀನು. ದಂಡನಾಯಕಿ ಆಗುವುದು ಹೇಗೆ? ‘ಬರೀ ದಂಡ’ ಆಗಬಾರದು. ಸೋಲಿನ ರುಚಿ ಸವಿದ ಬಳಿಕದ ಗೆಲುವಿಗೆ ಸಂತಸ ಹೆಚ್ಚು” ಆಗ ಏಳನೇ ತರಗತಿ. ಶಾಲೆಯಲ್ಲಿ ಹಲವಾರು ಪಠ್ಯೇತರ ಚಟುವಟಿಕೆಗಳು. ಡಿಬೇಟ್, ಭಾಷಣ, ಪದ್ಯ,ವಿದ್ಯಾರ್ಥಿ ನಾಯಕ ಚುನಾವಣೆಗಳು,ಮಂತ್ರಿಮಂಡಲ ಹೀಗೆ ಗರಿಗೆದರಿ ಕುಣಿಯುವ ಚಟುಚಟಿಕೆಗಳು. ಅಚ್ಚರಿಯ ತಿರುವಿಗೆ ಮುಖ ತಿರುಗಿಸಿತ್ತು ಬದುಕು. ಆಗೆಲ್ಲ ಪ್ರತೀ ತಿಂಗಳ ಎರಡನೆಯ ಶನಿವಾರ ಪಠ್ಯೇತರ ಚಟುವಟಿಕೆಗಳಿಗೆ ವೇದಿಕೆ. ” ನೋಡು ಬರುವ ಕಾರ್ಯಕ್ರಮ ನಮ್ಮ ಕ್ಲಾಸಿನದ್ದು ಆಗಬೇಕು. ಅದು ಬಹಳ ಚೆಂದ ಇರಬೇಕು. ಡ್ಯಾನ್ಸ್ ಬೇರೆ ಕ್ಲಾಸಿನವರು ಮಾಡ್ತಾರೆ. ನಾವು ನಾಟಕ ಮಾಡಬೇಕು. 30 ನಿಮಿಷ. ನೀನೇ ಅದರ ಎಲ್ಲ ಜವಾಬ್ದಾರಿ ವಹಿಸಬೇಕು. ಗೊತ್ತಾಯ್ತಾ” ನಮ್ಮ ಕ್ಲಾಸ್ ಟೀಚರ್ ಅವರು ನನ್ನತ್ತ ನೋಡಿ ಹೇಳುತ್ತಲೇ ಇದ್ದರು. . ನನಗೆ ಸಂತಸ,ಭಯ ಮಿಶ್ರಿತವಾದ ಭಾವ. ಪುಕುಪುಕು ಅನಿಸಿದರೂ ಮಾಡಲೇಬೇಕು ಎಂಬ ಹಠ. ಈ ಸಲ ಹೆದರಬಾರದು. ಅಜ್ಜಿಯನ್ನು ಗೋಗೆರೆದೆ. ಇದ್ದ ಕಥೆ ಪುಸ್ತಕ ರಾಶಿ ಹಾಕಿದೆ. ಹೊಸದರ ಸಂಭ್ರಮ. ಊಟ,ತಿಂಡಿಯೂ ರುಚಿಸದಂತೆ ನಾಟಕದ ನಶೆ ಆಟವಾಡುತ್ತಿತ್ತು. ಯಾವ ನಾಟಕ ಮಾಡಬಹುದು, ಹೇಗೆ, ಎಷ್ಟು ಪಾತ್ರಗಳು ಯಕ್ಷಗಾನದ ವೇಷಗಳು, ಚಂದಮಾಮದ ಚಿತ್ರಗಳು,ಅಜ್ಜಿ ಕಟ್ಟಿಕೊಟ್ಟ ಪಾತ್ರಗಳು ಎಲ್ಲವೂ ಎದುರಾದಂತೆ. ನಾರಾಯಣ ಮಾಮ ಕೊಟ್ಟ ಹಳೆಯ ಪುಸ್ತಕದಲ್ಲಿ ಮೂರು ಕಥೆಗಳಿದ್ದವು. ಅಜ್ಜಿಯ ಬಳಿ ಓಡಿದೆ. “ಸರಿ. ಅದನ್ನು ಚೆಂದ ಮಾಡಿ ಪುಸ್ತಕದಲ್ಲಿ ಮಾತುಗಳಾಗಿ ಬರಿ” ಎಂದಳು. ಅದು ದೊಡ್ಡ ಸಂಗತಿಯಲ್ಲ. ಅಶ್ವಥ್ಥ ಕಟ್ಟೆಯ ಮೇಲೆ, ಮೋಟು ಗೋಡೆಯ ಮೇಲೆ ಚಾಲ್ತಿಗೆ ತಂದ ಕೆಲಸ ಈಗ ಅಕ್ಷರಕ್ಕೆ ತರಬೇಕು. ವಾಲಿವಧೆ ಕಥೆ ನಾಟಕವಾಯಿತು. ಪ್ರತಿ ಪಾತ್ರಗಳೂ ನನ್ನೊಳಗೆ ಕುಣಿಯುತ್ತಿದ್ದವು. ನಾಟಕ ಮೂಡಿದ ನನ್ನ ಅರ್ಧ ಹರಿದ ಪುಸ್ತಕವನ್ನು, ಮಗುವನ್ನು ಅಪ್ಪಿಕೊಂಡು ನಡೆದಂತೆ ಶಾಲೆಗೆ ಕೊಂಡೊಯ್ದೆ. ಟೀಚರ್ ಸಲಹೆಯಂತೆ ಪಾತ್ರಗಳಿಗೆ ಗೆಳತಿಯರನ್ನು ಆರಿಸಿದೆ. ನನ್ನ ಚೆಂದದ ಗೆಳತಿ ತಾರೆಯಾದಳು,ಮತ್ತೊಬ್ಬಳು ಸುಗ್ರೀವ, ಇನ್ನೊಬ್ಬಳು ರಾಮ,ಲಕ್ಷ್ಮಣ.. ನಾಟಕದ ಪ್ರೀತಿಯಿಂದ ಬಂದ ಉಳಿದ ಸಂಗಾತಿಗಳನ್ನೆಲ್ಲ ತ್ರೇತಾಯುಗಕ್ಕೆ ಕಳುಹಿಸಲಾಯಿತು. ನಾನು ನಿರ್ದೇಶಕಿ. ಎಲ್ಲರಿಗೂ ಹೇಳಿಕೊಡುವ ಟೀಚರ್!..ಎಂತಹ ಸಂಭ್ರಮ, ಪುಳಕ. ಮನೆಗೆ ಬಂದು ನಾನು ಕಂಡ ಯಕ್ಷಗಾನ ನೆನಪಿಸಿ ಆ ಅಭಿನಯ ಮನಸ್ಸಿನ ರಂಗಕ್ಕೆ ಕರೆತರುತ್ತಿದ್ದೆ. ಅವರ ನಡಿಗೆ, ವೇಷ, ಮುಖದ ಭಾವ, ಚಲನೆ, ಸ್ವರ. ನಾನು ಬೇರಾವುದೋ ಲೋಕಕ್ಕೆ ಸೇರ್ಪಡೆಗೊಂಡ ಅಮಲು. ನನ್ನ ಗೆಳತಿಯರೂ ಸಂಭ್ರಮಿಸುತ್ತಿದ್ದರು. ಆ ತಿಂಗಳು ನೃತ್ಯದಲ್ಲಿ ಭಾಗವಹಿಸುವ ಸಹಪಾಠಿಗಳೆದರು ಜಂಭ.” ನಾವು ನಾಟಕ ಮಾಡಲಿಕ್ಕುಂಟು. ನೀವು ಎಂತ ಡ್ಯಾನ್ಸ್. “ ಇನ್ನೇನು ಬಂದೇಬಿಟ್ಟಿತು. ಕೇವಲ ಮೂರು ದಿನವಿದೆ ಅನ್ನುವಾಗ ನಮ್ಮ ಟೀಚರ್ ಟ್ರಾಯಲ್ ನೋಡಿ ನನ್ನ ಕರೆದವರು,” ಚೆಂದ ಆಗ್ತಾ ಉಂಟು . ನಮ್ಮ ರಂಜೂಗೆ ಒಂದು ಪಾತ್ರ ಕೊಡು” ರಂಜನ್ ನಮ್ಮ ಟೀಚರ್ ಮಗ. ಮೂರು ವರ್ಷದವನು. ಟೀಚರ್ ನನ್ನಲ್ಲಿ ಕೇಳುವುದು. ಹಾಗಿದ್ದರೆ ಇದನ್ನೂ ನಾನು ಮಾಡಲೇಬೇಕು. ಮನೆಗೆ ಬಂದೆ. ನಾಟಕವನ್ನು ಮತ್ತೆ ತಿರುವಿ ” ಅಂಗದ” ಮರಿಮಂಗ ಪುಟಕ್ಕನೆ ಜಿಗಿದ. ತಮ್ಮ ಸುಗ್ರೀವನ ಬಳಿ ಯುದ್ದಕ್ಕೆ ತೆರಳುವ ವಾಲಿಯನ್ನು ತಡೆದು ಪ್ರಶ್ನಿಸುವ ಕಂದ. ಟೀಚರ್ ಅಚ್ಚರಿಯಿಂದ ” ಹೇ ನಿಜವಾಗ್ಲೂ
ಅಂಕಣ ಬರಹ ಜೀವ ಜಂತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಥೆ ಹುಟ್ಟುತ್ತದೆ “ ಸುರೇಶ್ ಹೆಗಡೆ ಪರಿಚಯ: ಸುರೇಶ್ ಹೆಗಡೆ ಹೊನ್ನಾವರದ ಕರ್ಕಿ ಗ್ರಾಮದವರು .1952 ಜನನ. ಇವರ ತಂದೆ ಚಂದ್ರ ಮಾಸ್ತರ ಇವರ ಗುರು. ಹೊನ್ನಾವರ ಕಾಲೇಜಿನಿಂದ ವಿಜ್ಞಾನದ ವಿಷಯದಲ್ಲಿ ಪದವಿ ಪಡೆದರು. 1973 ರಲ್ಲಿ ಕರ್ನಾಟಕ ವಿದ್ಯುತ್ ನಿಗಮದಲ್ಲಿ 38 ವರ್ಷ ನೌಕರಿ ಮಾಡಿ ನಿವೃತ್ತರಾಗಿದ್ದಾರೆ. ಕತೆ ಬರೆಯುತ್ತಿದ್ದ ಇವರು ,ಅವುಗಳನ್ನು ಪ್ರಕಟಿಸಿದ್ದು, ನಿವೃತ್ತಿ ನಂತರ. 2020 ರಲ್ಲಿ ಇವರ ಮೊದಲ ಕಥಾ ಸಂಕಲನ ಇನಾಸ ಮಾಮನ ಟಪಾಲು ಚೀಲ ಪ್ರಕಟವಾಯಿತು. ಇದೇ ಹೆಸರಿನ ಕತೆ ಸಹ ತುಂಬಾ ಸೂಕ್ಷ್ಮ, ಸರಳವಾಗಿದೆ. ಚಿಕ್ಕಂದಿನಿಂದ ಯೌವ್ವನ ಕಾಲದ ಓದು ಇವರನ್ನು ಮಾಗಿಸಿದೆ. ಸುಧಾ ಮಯೂರ ಗಳಲ್ಲಿ ಬರೆಯುತ್ತಿದ್ದ ಇವರು , ನಾಟಕ ಅಭಿನಯದ ಹವ್ಯಾಸ ಸಹ ಹೊಂದಿದ್ದಾರೆ. ಆಕಾಶವಾಣಿಯಲ್ಲಿ ಸಹ ಭಾಗವಹಿಸುವಿಕೆ ಇದೆ. ನೆನಪುಗಳನ್ನು ಹೆಕ್ಕಿ ಬರೆಯುವ ಜಾಣತನ ಇವರಿಗೆ ಸಿದ್ಧಿಸಿದೆ. ಮಾನವೀಯ ಗುಣದ ಸುರೇಶ್ ಹೆಗಡೆ ಅವರು ಜಾತಿಯನ್ನು ಮೀರಿದ ಮನುಷ್ಯತ್ವ ಹೊಂದಿದವರು ಎಂಬುದು ಮುಖ್ಯ. ………… ೧) ಕತೆಗಳನ್ನು ಯಾಕೆ ಬರೆಯುತ್ತೀರಿ? ಮುಖ್ಯವಾಗಿ ನಾನು ಕತೆಗಳನ್ನು ಬರೆಯುವುದು ನನ್ನೊಳಗಣ ತುಡಿತಕ್ಕಾಗಿ (urges) ಯಾವುದಾದರೂ ಗಳಿಗೆಯಲ್ಲಿ ಹೊಸ ವಿಚಾರ ಹೊಳೆದಾಗ, ನನ್ನೊಳಗಣ ಹುಕಿ ಎಬ್ಬಿಸಿ ಕಥಾ ಹಂದರಕ್ಕೆ ಸಜ್ಜುಗೊಳಿಸುತ್ತದೆ. ೨) ಕತೆ ಹುಟ್ಟುವ ಕ್ಷಣ ಯಾವುದು? ಯಾವುದಾರೂ ಪುಸ್ತಕ ಓದುವಾಗ, ಹಿರಿಯರ ಜೊತೆ ಮಾತನಾಡುವಾಗ, ಸಮಾನ ಮನಸ್ಕರೊಂದಿಗೆ ಹರಟೆಗೆ ಇಳಿದಾಗ, ಪ್ರಕೃತಿಯ ವಿಕೃತಿಯನ್ನು ಗಮನಿಸಿದ ಕ್ಷಣಗಳಲ್ಲಿ ನನ್ನ ಕತೆಗಳು ಹುಟ್ಟಿಕೊಳ್ಳುತ್ತವೆ. ಯಾವುದಾದರು ಘಟನೆಗಳು ನನ್ನ ಭಾವನೆಗಳನ್ನ ತಟ್ಟಿದಾಗಲೂ ಭಾವನಾತ್ಮಕ ಕಥೆಗಳು ಹುಟ್ಟುತ್ತವೆ. ನಮ್ಮ ಸುತ್ತಣ ಪರಿಸರದಲ್ಲಿ ಒಂದಿಷ್ಟು ಜೀವ ಜಂತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲೊಂದು ಸುಂದರ ಕಥೆ ಮೂರ್ತಗೊಳ್ಳುತ್ತದೆ. ೩) ನಿಮ್ಮ ಕತೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ನನ್ನ ಜೀವನಾನುಭವದಿಂದ ಮೊಗೆದ ಘಟನೆಗಳು ಮತ್ತು ಅನುಭವಿಸುತ್ತಿರುವ ಪರಿಸರಗಳೇ ನನ್ನ ಕತೆಗಳ ವ್ಯಾಪ್ತಿ. ಬಾಲ್ಯದಲ್ಲಿ ನಾನು ಕಂಡ ಬಡತನ, ಮನೆತನ, ಗಳೆತನಗಳ ಮೆಲಕು, ಕಥೆಗಳಿಗೆ ಪುಷ್ಠಿ ಕೊಡುತ್ತವೆ. ಬರೆಯಬಹುದಾಗಿದ್ದರೂ, ನಾನು ಈ ಮೊದಲೇಕೆ ಸುಮ್ಮನೆ ಕುಳಿತುಬಿಟ್ಟೆ ಎಂಬುದು ನನ್ನನ್ನು ಪದೇ ಪದೇ ಕಾಡುತ್ತದೆ. ೪) ಕತೆಯಲ್ಲಿ ಬಾಲ್ಯ, ಹರೆಯ ಇಣುಕಿದೆಯಾ? ಹೌದು, ನನ್ನ ಕತೆಯ ಹರಿಹದಲ್ಲಿ ಎಲ್ಲಾ ಅವಸ್ಥೆಗಳೂ ಇವೆ. ಅವೇ ಕಥಾ ಪ್ರಸಂಗದ ಮೂಲ ವಸ್ತು. ೫) ಪ್ರಸ್ತುತ ರಾಜಕೀಯ ಸನ್ನಿವೇಷದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಇಂದಿನ ರಾಜಕೀಯ ಎನ್ನುವುದೊಂದು ಡೊಂಬರಾಟ. ಸಾಹಿತ್ಯ ಮತ್ತು ರಾಜಕೀಯ ಪರಸ್ಪರ ವಿರೋಧಾಭಾಸದ ಪದಗಳು. ಸಾಹಿತಿಯಾದವನು ರಾಜಕೀಯ ಪಲ್ಲಟಗಳಿಗೆ ತಲೆ ಹಾಕಬಾರದು. ಆದರೆ ರಾಜಕೀಯ ಸ್ಥಿತ್ಯಂತರಗಳು ಸಾಹಿತಿಯ ಬರಹಕ್ಕೆ ಗ್ರಾಸವಾಗಬಹುದು. ರಾಜಕೀಯ ವಿಡಂಬನೆಗಳಿಂದ ಸಾಹಿತಿಯೊಬ್ಬ ಪ್ರಜೆಗಳ ಕಣ್ಣು ತೆರೆಸಬಲ್ಲ. ೬) ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ಪ್ರತಿ ಮನುಷ್ಯನಿಗೂ ಒಂದು ಧರ್ಮಬೇಕು. ಅದು ಅವನ ಅಸ್ಮಿತೆಯ ಅಷ್ಟಬಂಧ. ಆ ಧರ್ಮವನ್ನು ಗೌರವಿಸಿ ಪಾಲಿಸಿದರೆ, ಅದೇ ಧರ್ಮ ಅವನನ್ನು ರಕ್ಷಿಸುತ್ತದೆ. ದೇವರು ಎನ್ನುವುದೊಂದು ನಿರಾಕಾರ, ಆಗೋಚರ ಶಕ್ತಿ. ಅದು ಇಡೀ ವಿಶ್ವವನ್ನ ನಿಯಂತ್ರಿಸುವ ಮಹಾಕಾಯ. ಅದನ್ನೇ ಮನುಷ್ಯ, ವಿವಿಧ ಬಣ್ಣ, ಆಕಾರ, ಹೆಸರು ಕೊಟ್ಟು ಭಾವನೆಯಿಂದ ಪೂಜಿಸುತ್ತಾನೆ. ದೇವರ ಮೇಲನ ಭಯ, ಭಕ್ತಿಯಿಂದಲೇ ಮನುಷ್ಯ ಇಂದು ಇನ್ನೂ ಪೂರ್ಣ ಹದ ತಪ್ಪಿಲ್ಲ. ೭) ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಬಗ್ಗೆ ನಿಮಗೆ ಏನೆನ್ನಿಸುತ್ತದೆ? ನನಗನ್ನಿಸಿದಂತೆ ಸಂಸ್ಕೃತಿ ಕಲುಷಿತಗೊಂಡಿದೆ. ವಿತಂಡವಾದ, ಅವಹೇಳನ, ‘ಇಸಂ’ಗಳಿಗೆ ಮನುಷ್ಯ ಕಟ್ಟು ಬಿದ್ದಿದ್ದಾನೆ. ಇವುಗಳಿಂದ ಹೊರಬಂದು, ನಮ್ಮ ಪರಂಪರೆಯನ್ನು ಅರ್ಥಮಾಡಿಕೊಂಡರೆ ನಮ್ಮ ಅದೇ ಸುಸಂಸ್ಕೃತಿ ಉಳಿದುಕೊಳ್ಳುತ್ತದೆ. ೮) ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಯಿಸುವಿರಿ? ಇದೊಂದು ದೊಡ್ಡ ‘ಲಾಬಿ’ ಎಂದೇ ಹೇಳಬೇಕು. ಎಡ, ಬಲ, ಜಾತಿ, ಕುಲ, ಪರಿವಾರ ಎನ್ನುತ್ತ, ಬಿರುದು ಬಾವಲಿ, ಪ್ರಶಸ್ತಿಗಳ ಬೆನ್ನುಹತ್ತಿ ರಾಜಕಾರಣ ಮಾಡಿ ಅಲ್ಲೊಂದು ಮೌಲಿಕ ಅದಃ ಪತನವಾಗುತ್ತಿದೆ. ಇದೊಂದು ದುರಂತ. ಈ ಸ್ಥಿತಿಯಲ್ಲಿ ಯಾವುದೇ ಬಲವಿಲ್ಲದ ಶಾಸ್ತ್ರೀಯ ಸಾಹಿತಿಗಳು ಎಲೆ ಮರೆಯ ಕಾಯಿಗಳಾಗೇ ಉಳಿದು ನೇಪಥ್ಯಕ್ಕೆ ಸರಿಯುತ್ತಾರೆ. ರಾಜಕಾರಣ ಸಾಹಿತ್ಯದಲ್ಲಿ ನುಸುಳದಿದ್ದರೆ, ಸಾಹಿತ್ಯಕ್ಕೆ ‘ಕಸು’ ಬರುತ್ತದೆ. ೯) ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತದೆ? ಈ ದೇಶವನ್ನು ಆಳಲು ಉದಾತ್ತ ಮನಸ್ಸಿನ ಒಂದೇ ಪಕ್ಷವಿರಬೇಕು. ನಾಯಕನ ನಿರ್ಣಯಕ್ಕೆ ಎಲ್ಲರ ಸಹಮತವಿರಬೇಕು. ದೇಶಕ್ಕೆ ಭವ್ಯ ಪರಂಪರೆ ಇದೆ. ಸುಭಿಕ್ಷವಾದ ರಾಮರಾಜ್ಯ ಕಂಡ ಖಂಡ ಇದು, ಬುದ್ದ, ಬಸವ, ಗಾಂಧಿ, ಅಶೋಕರ ನಾಡಿದು. ಇತಿಹಾಸ ಮರುಕಳಿಸಿ ನಮ್ಮ ದೇಶ ವೈಭವದಿಂದ ಮೆರೆಯುವದು ಮತ್ತೆ. ೧೦) ಸಾಹಿತ್ಯದ ಬಗ್ಗೆ ನಿಮ್ಮ ಕನಸೇನು? ಸಾಹಿತ್ಯದ ಕ್ಷೇತ್ರ ಸಾಗರದಂತೆ ವಿಶಾಲವಾಗಿದೆ. ಮೊಗೆದಷ್ಟೂ ಮತ್ತೆ ಸೊರೆಯುವ ಗಂಗೆ ಅದು. ಶತಮಾನಗಳಿಂದ ಅಭಿವೃದ್ಧಿಗೊಳಿಸಿಟ್ಟ ಸಾಹಿತ್ಯ ಪರಂಪರೆಯನ್ನು ಮುಕ್ಕಾಗದಂತೆ ಕಾಪಿಟ್ಟು, ಗಟ್ಟಿತನ ಕಳೆದು ಹೋಗದಂತೆ ಕಾಯಬೇಕು. ಸಾಹಿತ್ಯದಲ್ಲಿ ಮುಕ್ತ ಮನಸ್ಸು ಮತ್ತು ವಿಶಾಲ ಭಾವನೆ ಇರಬೇಕು. ಅದೇ ನನ್ನ ಕನಸು. ೧೧) ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು? ಕನ್ನಡದಲ್ಲಿ ಇಷ್ಟವಾದ ಸಾಹಿತಿ ಯಶವಂತ ಚಿತ್ತಾಲರು. ಇಷ್ಟವಾದ ಕವಿ- ಕೆ.ಎಸ್. ನರಸಿಂಹಸ್ವಾಮಿ. ಕೆ.ಎಸ್.ನ.ರ. ಮೈಸೂರ ಮಲ್ಲಿಗೆಯ ಘಮ ನನ್ನನ್ನು ಪದೇ ಪದೇ ಆವರಿಸಿಕೊಂಡು ಕಾಡುತ್ತದೆ. ಆಂಗ್ಲ ಸಾಹಿತ್ಯದಲ್ಲಿ ಇಷ್ಟವಾದ ಸಾಹಿತಿ – ಪೌಲೋ ಕೋಹಿಲೋ ಇಷ್ಟವಾದ ಕವಿ- ಜಾನ್ ಮಿಲ್ಟನ್, ಹದಿನೇಳನೇ ಶತಮಾನದ ಇಂಗ್ಲಿಷ್ ಕವಿಯ ಕ್ಲಿಷ್ಟ ಮಹಾಕಾವ್ಯ ‘ಪ್ಯಾರಾಡೈಸ್ ಲಾಸ್ಟ’ ಓದಿದಷ್ಟು ಹೊಸ ತತ್ವಕ್ಕೆ ಒಯ್ದು ಕಾಡುತ್ತದೆ. ಅದೊಂದು ವಿಭಿನ್ನ ಓದು. ೧೨) ಈಚೆಗೆ ಓದಿದ ಕೃತಿಗಳಾವವು? ಕಶೀರಾ- ಸಹನಾ ವಿಜಯಕುಮಾರ ೧೩) ನಿಮಗೆ ಇಷ್ಟವಾದ ಕೆಲಸವಾವುದು? ಓದು, ಬರಹ, ಹರಟೆ, ರುಚಿ ರುಚಿ ಅಡಿಗೆ ಮಾಡಿ ತಿನ್ನುವುದು, ತಿನಿಸುವುದು. ಹೂದೋಟ ಪಾಲನೆ. ೧೪) ನಿಮಗೆ ಇಷ್ಟವಾದ ಸ್ಥಳ ಯಾವುದು? ಮುಂಬಯಿ- ಅದೊಂದು ಬದುಕಲು ಕಲಿಸುವ ಪ್ರಕೃತಿ ಶಾಲೆ. ೧೫) ನಿಮ್ಮ ಪ್ರೀತಿಯ ತುಂಬಾ ಇಷ್ಟದ ಸಿನಿಮಾ ಯಾವುದು? ನಾನು ಇಷ್ಟ ಪಟ್ಟಿದ್ದು ಹಳೆಯ ಹಿಂದಿ ಚಿತ್ರ ‘ಸದ್ಮಾ’ – ಶ್ರೀದೇವಿ, ಕಮಲಹಾಸನ ೧೬) ನೀವು ಮರೆಯಲಾರದ ಘಟನೆ ಯಾವುದು ? ವಯಸ್ಸಾದ ಅಪ್ಪ, ನಮ್ಮಿಬ್ಬರನ್ನು ಆಟೋದಲ್ಲಿ ಕೂಡ್ರಿಸಿ, ತಾನು ಮಳೆಯಲ್ಲಿ ನಮ್ಮ ಹಿಂದಿನಿಂದ ಸೈಕಲ್ಲಿನಲ್ಲಿ ಟಾಕೀಸಿಗೆ ಬಂದಿದ್ದು. ೧೭) ಏನಾದರೂ ಹೇಳುವುದಿದೆಯಾ? ಹೌದು ನಾನು ಕಂಡ ಸತ್ಯದ ಮಾತು- ಜೀವನೋತ್ಸಾಹಕ್ಕೆ ವಯದ ಹಂಗಿಲ್ಲ. ನಾನು ಒಂದಿಷ್ಟು ಓದು ಬರಹದ ಜೊತೆಗೆ ಬೆಳೆಸಿಕೊಂಡ ಹವ್ಯಾಸ ಹೂದೋಟ ಪಾಲನೆ. ನನ್ನ ತಾರಸಿ ತೋಟ ಹಸಿರಿನಿಂದ ಕಂಗೊಳಿಸಿದೆ. ಹೂ ಸಸ್ಯಗಳ ಜೊತೆ ಫಲ ಬಿಡುವ ಗಿಡಗಳೂ ಇವೆ. ಲಿಂಬು, ಮಾವು, ದಾಳಿಂಬೆ, ಅಂಜೂರ ಇತ್ಯಾದಿ. ನಿತ್ಯವೂ ಕೆಲಹೊತ್ತು ನೀರು ಗೊಬ್ಬರ ಉಣಿಸುವ ನಡುವೆ ಸಸ್ಯ ಗಳ ಜೊತೆ ನನ್ನ ಮೌನ ಸಂವಾದ ನಡೆದಿರುತ್ತದೆ. ಸಸ್ಯಗಳು ಬಿಡುವ ಮೊಗ್ಗು, ಹೂ, ಹೀಚು, ಕಾಯಿ, ಹಣ್ಣಿನ ಪ್ರತಿ ಅವಸ್ಥೆಯಲ್ಲೂ ನನ್ನ ಖುಷಿಯ ಸಂವೇದನೆಗೆ ಅವು ಸ್ಪಂದಿಸುತ್ತವೆ. ಈ ಮುದುಕ ಸೇವೆ ಮಾಡುತ್ತಿದ್ದಾನೆಂಬ ಅನುಕಂಪಕ್ಕೆ ಇರಬೇಕು, ನನ್ನ ಮಾವಿನ ಗಿಡ ವರ್ಷಕ್ಕೆ ಎರಡು ಬಾರಿ ಕಾಯಿ ಬಿಡುತ್ತದೆ. ಹುಬ್ಬಳ್ಳಿಯ ತಮಿಳು ನರ್ಸರಿಯವನೇನೋ “ಇದು ಒಳ್ಳೆಯ ಜಾತಿ ಮಾವು” ಎಂದೇ ಕಸಿ ಗಿಡ ಕೊಟ್ಟಿದ್ದ. ಆದರೆ ನನ್ನ ದುರಾದೃಷ್ಟಕ್ಕೆ ಅದು ಬಿಡುತ್ತಿರುವುದು ಹುಳಿಮಾವು. ಹುಟ್ಟಿದ ಮಗ ಕಪ್ಪೆಂದು ಎಂದಾದರೂ ಎಸೆದು ಬಿಡುತ್ತಾರೆಯೇ? ಜೀರಿಗೆ ವಾಸನೆ ಮಾವಿನಕಾಯಿಯ ಉಪ್ಪಿನಕಾಯಿ ತುಂಬಾ ಸ್ವಾಧಿಷ್ಟ.! ಹೀಗಾಗಿ ಆ ಗಿಡ ನನಗಿಷ್ಟ. *********************************************************** ನಾಗರಾಜ ಹರಪನಹಳ್ಳಿ ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಅಂಕಣ ಬರಹ ಕಬ್ಬಿಗರ ಅಬ್ಬಿ ಕಾವ್ಯೋದ್ಭವ “ಗುರುಗಳೇ, ನನಗೆ ಸಂಗೀತ ಕಲಿಯಬೇಕು! ಕಲಿಸುವಿರಾ..” ಅಲ್ಲಲ್ಲಿ ಹರಿದರೂ ತಕ್ಕಮಟ್ಟಿಗೆ ಒಪ್ಪವಾಗಿದ್ದ ಅಂಗಿ, ಖಾಕಿ ಚಡ್ಡಿ ಧರಿಸಿದ ಹುಡುಗ, ‘ಧ್ರುಪದ್ ಗಂಧರ್ವ’ ಮನೆ ತಲಪಿದ್ದ. ಮನೆಯ ಬಂಧನ ಬಿಟ್ಟು, ಎರಡು ದಿನ, ಮೂರು ರಾತ್ರೆ ರೈಲು ಯಾತ್ರೆ ಮಾಡಿದಾಗ, ಹೊತ್ತು ತಂದದ್ದು ಕಪ್ಪು ಕಣ್ಣುಗಳ ತುಂಬಿದ ಕನಸು ಮಾತ್ರ. ಕಣ್ಣಲ್ಲಿ ಕಣ್ಣಿಟ್ಟು ಒಳಗಿನ ಭಾಷೆಯನ್ನು ಅರ್ಥ ಮಾಡಿಕೊಂಡವರಂತೆ ಗುರುಗಳು ಒಪ್ಪಿಕೊಂಡರು. ಗುರುಗಳ ಮನೆಯಲ್ಲಿಯೇ ವಾಸ. ಬೆಳಗ್ಗೆ ಗಡಿಯಾರದ ಲೋಲಕ ಢಣ್ ಢಣ್ ಎಂದು ನಾಲ್ಕು ಬಾರಿ ಆಂದೋಳಿಸಿದಾಗ ಎದ್ದು ಮನೆ,ಅಂಗಳ ಗುಡಿಸಬೇಕು. ಆ ಮೇಲೆ ಬಾವಿಯೊಳಗೆ ಬಿಂದಿಗೆಯಿಳಿಸಿ ಒಂದೊಂದೇ ಬಿಂದಿಗೆ ನೀರನ್ನು ತಂದು ಮನೆಯ, ಬಚ್ಚಲು ಮನೆಯ,ಅಡುಗೆ ಮನೆಯ ಹಂಡೆ ತುಂಬುವ ಕೆಲಸ. ಗುರುಗಳ ಅಂಗಳದಲ್ಲಿ ತಂಬೂರಿ ಕೂಡಾ ೫ ಗಂಟೆಗೇ ಎದ್ದು ಸ್ವರ ಹಚ್ಚಲು ತಂತಿ ಬಿಗಿ ಮಾಡುತ್ತಿತ್ತು. ತಂಬೂರಿಯ ಮಂದ್ರ ಶಡ್ಜಕ್ಕೆ ಗುರುಗಳು ಸ್ವರ ಹಚ್ಚುವಾಗ, ಉಳಿದ ಶಿಷ್ಯರು ತಮ್ ತಮ್ಮ ಕೊರಳನ್ನೂ ಸೇರಿಸಿದಾಗ ಅನುರಣನೆಗೆ, ಬೆಳಗಿನ ಮಂಜು ಕರಗುತ್ತಿತ್ತು. ಪೂರ್ವದಿಗಂತ ವರ್ಣಮಯವಾಗುತ್ತಿತ್ತು. ಗುರುಗಳ ಮನೆಗೆ ತಲಪಿದ್ದು ಅಮವಾಸ್ಯೆಯ ದಿನ. ಇಂದು ಆಗಲೇ ಹುಣ್ಣಿಮೆ. ರಾತ್ರೆ ಗುರುಗಳ ಪಾದ ಒತ್ತುತ್ತಾ ಹುಡುಗ ಅನ್ನುತ್ತಾನೆ. ” ಗುರುಗಳೇ, ನನಗೆ ಸಂಗೀತ ಪಾಠ ದಯವಿಟ್ಟು ಶುರುಮಾಡಿ” ” ಬೇಟೇ! ನಿನ್ನ ಸಂಗೀತ ಪಾಠ ಆಗಲೇ ಆರಂಭವಾಗಿದೆ. ರಾತ್ರೆಯ ಮೌನದಲ್ಲಿಯೂ ಪ್ರಕೃತಿಯ ಸಂಗೀತ ಆಲಿಸು. ಗಡಿಯಾರದ ಲೋಲಕದ ಆಂದೋಲನದಲ್ಲಿ ಇಂಪಿನಲೆ ಇಲ್ಲವೇ?. ಬಾವಿಯೊಳಗೆ ಬಿಂದಿಗೆ ನೀರನ್ನು ಸ್ಪರ್ಶಿಸಿದಾಗ ಆದ ಕಂಪನ ಬಾವಿಯೊಳಗಿಂದ ಮೊಳಗುವಾಗ ಅದರಲ್ಲಿ ಸಂಗೀತ ಆಲಿಸಿರುವೆಯಾ?. ಇಬ್ಬನಿಯ ಒಂದೊಂದೇ ಬಿಂದುಗಳು ತೊಟ್ಟಿಕ್ಕುವಾಗ ಅದರೊಳಗಿಂದ ಸ್ಪಂದಿಸುವ ಸ್ವರ ಸಾಮರಸ್ಯ ನೋಡಿರುವೆಯಾ?. ಇಂದು ಹುಣ್ಣಿಮೆಯ ರಾತ್ರಿ. ಕಿಟಿಕಿಯ ಹೊರಗೆ ನೋಡು. ಚಂದ್ರನ ಬೆಳಕಿನ ಉತ್ಕರ್ಷದಲ್ಲಿ ಪ್ರಕೃತಿಯ ಜೀವತಂತುಗಳು ಮಿಡಿಯುವ ಸಂಗೀತ ಕೇಳಿಸುತ್ತಿದೆಯಾ?. ಮಗೂ, ನಿನಗದು ಕೇಳಿಸಲು ನಿನ್ನ ಮನಸ್ಸೊಳಗೆ ಮೌನವನ್ನು ತುಂಬಿಸಬೇಕು. ಅಲೆಗಳು ಮೌನದ ನೆಲೆಯಲ್ಲಿ ಯೋಗ ಸಮಾಧಿ ಹೊಂದಬೇಕು.ಬೇಟಾ, ಅಂತಹ ಒಂದು ಶಾಂತಿಯ ಪ್ರಜ್ಞೆಯನ್ನು ಕ್ಷಣ ಕ್ಷಣವೂ ಅನುಭವಿಸುತ್ತಾ ಪ್ರಕೃತಿಯನ್ನು ಗಮನಿಸು. ಆಗ ಜೀವಕ್ರಿಯೆಯ ಪ್ರತೀ ಕ್ಷಣಗಳಲ್ಲಿ ಜೀವಲಯ, ಜೀವಸ್ವರ, ಭಾವತರಂಗ ನಿನಗೆ ಕೇಳಿಸುತ್ತೆ. ಆ ಸ್ವರ ಲಯ,ಭಾವದಲ್ಲಿ ಒಂದಾಗುವ, ತಾದಾತ್ಮ್ಯ ಅನುಭವಿಸುವ ಮನಸ್ಸು ನಿನಗೆ ಸಂಭವಿಸಲಿ. ಸಂಗೀತದ ಜೀವಾತ್ಮ ನಿನ್ನೊಳಗೆಯೇ ಸಾಕ್ಷಾತ್ಕಾರ ಆಗಲು ಇದೊಂದೇ ಮಾರ್ಗ. ಪ್ರಕೃತಿಯೇ ನಿನ್ನ ಸಂಗೀತದ ಮೊದಲ ಗುರು, ಮಗೂ.” ಕ್ಷಮಿಸಿ! ಮೇಲಿನ ಕಥೆಯಂತಹಾ ಕಥೆ ಕಳೆದ ಶತಮಾನದಲ್ಲಿ ಸಂಗೀತ ಕಲಿತ ಹಲವು ಮಹಾನ್ ಸಂಗೀತ ಕಲಾಕಾರರ ಬಾಲ್ಯದ ಕಲಿಕೆಯ, ಕಷ್ಟದ, ಸಮರ್ಪಣೆಯ ಕಥೆಯೇ. ಪ್ರಪಂಚದ ಪ್ರತಿಯೊಂದು ಸ್ಥಿತಿಯಲ್ಲೂ ಸಿಮ್ಮಟ್ರಿ, ಸೌಂದರ್ಯ ಇರುವ ಹಾಗೆಯೇ, ಪ್ರತೀ ಕ್ರಿಯೆಯಲ್ಲಿ, ಲಯವಿದೆ, ತರಂಗವಿದೆ, ಆವರ್ತನವಿದೆ ಮತ್ತು ಸಂಗೀತವೂ ಇದೆ. ಕಾವ್ಯದ ಉಗಮದಲ್ಲಿಯೂ,ಈ ಭಾವಲಯ, ಭಾವತರಂಗ, ಮತ್ತು ತುರೀಯಾವಸ್ತೆ ಅಂತರ್ಗತವಾಗಿದೆ. ಸಂಗೀತವಿರಲಿ ಕಾವ್ಯವಿರಲಿ, ಮೂಡುವ ಕ್ಯಾನುವಾಸು ಮನಸ್ಸೇ ತಾನೇ. ಹೆಣ್ಣುಗಂಡಿನ ಮಿಲನದಿಂದ ಎರಡು ಜೀವಕೋಶಗಳು ಒಂದಾಗಿ, ಆ ಕೋಶ, ಸ್ವವಿಭಜನೆಯಿಂದ, ಎರಡಾಗಿ, ಮತ್ತೆ ನಾಲ್ಕಾಗಿ, ಹಲವು ಲಕ್ಷ ಪುನರಾವರ್ತನೆಗಳ ನಂತರ 27 ಟ್ರಿಲಿಯನ್ ( 27 ಲಕ್ಷ ಕೋಟಿ ) ಜೀವಕೋಶಗಳ ದೇಹರೂಪೀ ಮಗುವಾಗುವುದು ಸೃಷ್ಟಿಯ ವಿಸ್ಮಯ. ಅದಕ್ಕಿಂತ ದೊಡ್ಡ ವಿಸ್ಮಯ, ಮನುಷ್ಯ ದೇಹದ, ಹೃದಯ, ಶ್ವಾಸಕೋಶ,, ಉದರ, ಕೈಕಾಲುಗಳು, ಮಿದುಳು, ಅಸಂಖ್ಯ ರಕ್ತನಾಳಗಳು ಹೇಗಿರಬೇಕು, ಎಲ್ಲಿರಬೇಕು, ಹೇಗೆ ಕೆಲಸ ಮಾಡಬೇಕು, ಇಷ್ಟೊಂದು ಎಂಜಿನಿಯರಿಂಗ್ ವ್ಯವಸ್ಥೆಗಳು ಹೇಗೆ ಟೀಮ್ ವರ್ಕ್ ಮಾಡ ಬೇಕು ಎಂಬ ಎಲ್ಲಾ ಜ್ಞಾನವೂ ಆ ಒಂದು ಕೋಶದೊಳಗಿಂದಲೇ ವಿಕಸಿತವಾಯಿತು ಎಂಬುದು. ಮಿದುಳಿನೊಳಗಿನ ಸಾಫ್ಟ್‌ವೇರ್ ಕೂಡಾ ಆ ಒಂದು ಕೋಶದೊಳಗಿಂದಲೇ ಇವಾಲ್ವ್ ಆಗಿ ಮಿದುಳಿನೊಳಗೆ ಇನ್‌ಸ್ಟಾಲ್ ಆಗಿದೆ. ಹುಟ್ಟಿದ ಮಗುವಿನ ಹಲವು ಪ್ರತಿಭೆಗಳೂ, ಆ ಕೋಶದಲ್ಲಿ ಬೀಜವಾಕ್ಯವಾಗಿದ್ದವು. ಹೀಗೆ ಎಲ್ಲವನ್ನೂ ತನ್ನ ಕೇಂದ್ರದಿಂದ ಸೃಜಿಸಿ, ಸೃಷ್ಟಿಯಾಗುವ ಕ್ರಿಯೆ, ಅಂತರಂಗದಿಂದ ಚಿಲುಮಿಸಿ ಹೊರಬರುವ ಕ್ರಿಯೆ, ಕಾವ್ಯೋದ್ಭವದ ಹಲವು ಸಾಧ್ಯತೆಗಳಲ್ಲಿ ಮೊದಲನೆಯದೂ ಹೌದು, ಮತ್ತು ಅತ್ಯಂತ ಸಂಕೀರ್ಣವೂ ಹೌದು. ಆದರೆ ಇಂತಹ ಪ್ರಯತ್ನದಿಂದ ಮೊಳೆತ ಕವಿತೆ, ಅನನ್ಯವೂ ಆತ್ಮಾರ್ಥಪೂರ್ಣವೂ ಆಗಿರುತ್ತೆ. ಇಂತಹ ಕವಿತೆಗಳನ್ನು ಸೃಜಿಸುವ ಕವಿ ರಸ ಋಷಿಗಳೇ ಆಗಿರುತ್ತಾರೆ. ಕುವೆಂಪು ಅವರ “ಓ ನನ್ನ ಚೇತನ, ಆಗು ನೀ ಅನಿಕೇತನ” ಇಂತಹ ಒಂದು ಸೃಷ್ಟಿ. ದ.ರಾ. ಬೇಂದ್ರೆಯವರ ‘ ನಾಕುತಂತಿ’ , ‘ಚೈತನ್ಯದ ಪೂಜೆ’ ಕವಿತೆಗಳೂ ಅಷ್ಟೇ. ” ಚೈತನ್ಯದ ಪೂಜೆ ನಡೆದSದ ನೋಡS ತಂಗಿ।। ಅಭಂಗದ ಭಂಗೀS ಸತ್ಯ ಎಂಬುವ ನಿತ್ಯದ ದೀಪ ಸುತ್ತೆಲ್ಲಾ ಅವನದೇ ರೂಪ ಪ್ರೀತಿ ಎಂಬುವ ನೈವೇದ್ಯ ಇದು ಎಲ್ಲರ ಹೃದಯದ ಸಂವೇದ್ಯ. ಸೌಂದರ್ಯ ಧ್ಯಾನಾ ಎದೆಯಲ್ಲಿ ಅಸ್ಪರ್ಶಾ ಚಿನ್ಮಯದಲ್ಲಿ ಆನಂದಗೀತ ಸಾಮSವೇದಾ ಸರಿಗಮ ನಾದಾ” ಇಂತಹ ಕವಿತೆಯನ್ನು ಬರೆಯಲು ಧ್ಯಾನಸ್ಥ ಸ್ಥಿತಿಯಲ್ಲಿ ಕವಿ ಹಗಲಿರುಳು ಸಾಧನೆ ಮಾಡಬೇಕು. ಕವಿತೆಯೇ , ತಪಸ್ಸಾಗಿ ಬದುಕಬೇಕು. ಒಳಗೊಳಗಿಂದಲೇ ಅರಳಬೇಕು. ಒಳಲೋಕದಿಂದ ಕವಿತೆ ಹುಟ್ಟುವ ಇನ್ನೊಂದು ವಿಧಾನ, ಕವಿಯ ತೀವ್ರ ಭಾವೋತ್ಕರ್ಷದ ಹರಿವು. ಬೇಂದ್ರೆಯವರ ಮಗನ ಸಾವಿನ ಸಂದರ್ಭದಲ್ಲಿ ತಮ್ಮ ಪತ್ನಿಯ ಕಣ್ಣೊಳಗೆ ಕಣ್ಣಿಟ್ಟು ನೋಡುವ ಕವಿ, ನೋವಿನ, ಹತಾಶೆಯ, ಅಸಹಾಯಕತೆಯ ಭಾವದ ತುರೀಯಕ್ಕೆ ತಲಪಿದಾಗ” ನೀ ಹೀಂಗ ನೋಡ ಬ್ಯಾಡ ನನ್ನ” ದಂತಹಾ ಕವಿತೆ ಜನ್ಮಿಸುತ್ತೆ. ಹೀಗೆ ಅಂತರಾಳದಿಂದ ರೂಪ ಪಡೆದು ಹೊರಬರುವ ಕವಿತೆಯ ಸ್ವರೂಪದಲ್ಲಿ ಯಾವುದೇ ಪೂರ್ವಯೋಜನೆ ಇರುವುದಿಲ್ಲ. ಈ ಕವಿತೆಯ,ಚಂದ, ಛಂದ, ಅರ್ಥ ಎಲ್ಲವೂ ಆ ಕ್ಷಣದ ಆ ಸ್ಥಿತಿಯ ಕ್ರೋಮೋಸೋಮ್ ಗಳ ಅಭಿವ್ಯಕ್ತಿ. ಕಾವ್ಯ ಹುಟ್ಟುವ ಇನ್ನೊಂದು ಬಗೆ, ಕಥಾ ಪಾತ್ರದೊಳಗೆ ಕವಿ ಮಾಡುವ ಪರಕಾಯ ಪ್ರವೇಶ. ಹಾಗೆ ಪ್ರವೇಶಿಸಿದ ಕವಿ, ಆ ಪಾತ್ರದ ಅಷ್ಟೂ ಅನುಭವಗಳನ್ನು, ಸ್ವಂತವಾಗಿಸಿ, ಹನಿಯಾಗಿ ಜಿನುಗುತ್ತಾನೆ. ಹೆಚ್.ಎಸ್.ವಿ. ಅವರು ಅಭಿನಯ ಮತ್ತು ಕಾವ್ಯ ಸೃಷ್ಟಿಯ ಬಗ್ಗೆ ಹೀಗೆ ಹೇಳುತ್ತಾರೆ. ” ಬರವಣಿಗೆಯಲ್ಲಿ ಅಭಿನಯವೇ ಇದೆಯಲ್ಲವೇ? ಕಾವ್ಯ, ಕಥೆ ಬರೆಯುವಾಗ ಅನೇಕ ಪಾತ್ರಗಳು ಬರುತ್ತವೆ. ಆ ಪಾತ್ರ ನಾನಾಗದೇ ಬರಹದಲ್ಲಿ ಸಹಜತೆ ಬರುವುದಿಲ್ಲ. ಬುದ್ಧಚರಿತವನ್ನೇ ನೋಡು, ರಾಹುಲನ ಮಾತುಗಳನ್ನು ನಾನು ಬರೆಯಬೇಕಾದರೆ ರಾಹುಲನನ್ನು ನಾನು ಆವಾಹಿಸಿಕೊಳ್ಳಬೇಕು. ಸೀತೆಯಾಗಬೇಕಾದರೆ ಸೀತೆಯ ಹೆಣ್ತನವನ್ನು ನಾನು ಪಡೆಯದಿದ್ದರೆ ಸಹಜತೆ ಬರುವುದಿಲ್ಲ. ಕವಿಯ ಮನಸ್ಸು ಅನೇಕ ಸ್ಥರಗಳಲ್ಲಿ ಸಂಚಾರ ಮಾಡುತ್ತಿರುತ್ತದೆ. ವಿಫುಲ ರೂಪ ಧಾರಿಣಿ ಕವಿಯ ಮನಸ್ಸು ಎಂದು ಕುವೆಂಪು ಹೇಳಿಲ್ಲವೇ. ಹಾಗೆ ಬರವಣಿಗೆ ಎಂಬುದು ಅಂತರಂಗದಲ್ಲಿ ಅಭಿನಯ. ಸಿನಿಮಾ, ನಾಟಕ ಎಂಬುದು ಬಹಿರಂಗದಲ್ಲಿ ತೋರಿಸಬೇಕಾದ್ದು.ಕವಿತೆ ಕಷ್ಟ ಏಕೆಂದರೆ ಅದರಲ್ಲಿ ಬರುವ ಎಲ್ಲಾ ಪಾತ್ರಗಳನ್ನೂ ಕವಿ ಅಭಿನಯಿಸಬೇಕು” ಹರಿಶ್ಚಂದ್ರ ಕಾವ್ಯದಲ್ಲಿ, ಚಂದ್ರಮತಿ, ತನ್ನ ಮಗ ಹಾವು ಕಚ್ಚಿ ಸತ್ತಾಗ, ವಿಲಪಿಸುವ ಸಾಲುಗಳು ಹೀಗಿವೆ. “ಬಂದರಂ ಲೋಹಿತಾಶ್ವಾ ಎಂದು ಬಟ್ಟೆಯೊಳು ನಿಂದರಂ ಲೋಹಿತಾಶ್ವಾ ಎಂದು ಗಾಳಿ ಗಿಱಿಕೆಂದಡಂ ಲೋಹಿತಾಶ್ವಾ ಎಂದು ಕರೆಕರೆದು ಬಿಡೆ ಬೀದಿಗಱುವಿನಂತೆ ಮಂದಮತಿಯಾಗಿರ್ದ ಚಂದ್ರಮತಿಗೊಬ್ಬನೈ ತಂದಿಂದು ಕೂಡೆ ಹೋಗಿರ್ದು ಕಂಡೆಂ ನಿನ್ನ ಕಂದನೊಂದುಗ್ರಫಣಿ ತಿಂದು ಜೀವಂಗಳೆದನೆಂದು ಹೇಳಿದನಾಗಳು” ಚಂದ್ರಮತಿಯ ಪ್ರಲಾಪ, ಕನ್ನಡ ಕಾವ್ಯಜಗತ್ತಿನ ಇತಿಹಾಸದಲ್ಲಿ ದುಃಖ ರಸದ ಮನಮುಟ್ಟುವ ಅಭಿವ್ಯಕ್ತಿಯಾಗಿ ಪರಿಗಣಿಸಲ್ಪಡುವುದರ ಹಿಂದೆ, ರಾಘವಾಂಕ ಕವಿ, ಚಂದ್ರಮತಿಯ ಪಾತ್ರದೊಳಗೆ ಹೊಕ್ಕು, ಮಗನ ಸಾವಿನ ತೀವ್ರ ಶೋಕದ ಅನುಭೂತಿಯನ್ನು ಅನುಭವಿಸಿ ಪಾತ್ರವೇ ತಾನಾಗಿ,ಬರೆದದ್ದು ಕಾರಣವಲ್ಲವೇ. ಕವಿತೆ ಹುಟ್ಟಲೇಬೇಕೇ?. ಕವಿತೆಯನ್ನು ಕಟ್ಟಲೂ ಬಹುದು. ಪ್ರಕೃತಿಯಿಂದ ಪ್ರೇರಣೆ ಪಡೆದು, ಬದುಕು ಕಟ್ಟಿಕೊಡುವ ಅನುಭವದ ಕಡುಬನ್ನು ಮೆದ್ದು ಅದರ ಆಧಾರದಲ್ಲಿ, ನವರಸಗಳ ಪಾಕ ಬಡಿಸಬಹುದು. ದೇಶ, ಸಮಾಜ, ಗಗನ, ಸೂರ್ಯ,ನದಿ, ಪ್ರೀತಿ, ಹೀಗೆ ಹತ್ತು ಹಲವು ನೂಲೆಳೆಗಳನ್ನು ನೇಯ್ದು ಪದ್ಯಮಾಡಬಹುದು. ಕವಿಗೆ ನಿಜ ಜೀವನದ ವಸ್ತುವೇ ಕಾವ್ಯ ವಾಸ್ತುವಾಗಿ ಕೆಲವೊಮ್ಮೆ ಹೊಲದ ನಡುವಿನ ಗುಡಿಸಲು, ಮತ್ತೊಮ್ಮೆ ಗಗನ ಚುಂಬಿ ಕಟ್ಟಡಗಳು, ಬಗೆ ಬಗೆಯ ಕಟ್ಟಡಗಳಂತಹ ಕವಿತೆಗಳು ನೆಲದ ಅಡಿಪಾಯದ ಮೇಲೆ ಎದ್ದು ನಿಲ್ಲುತ್ತವೆ. ಗುಂಪು ಗುಂಪಾಗಿ ಓಡುವ ಕುರಿಮಂದೆಯನ್ನು ಕಂಡಾಗ, ಕವಿ ನಿಸಾರ್ ಅಹಮದ್ ಅವರು ಹೀಗೊಂದು ಅಪೂರ್ವ ಕವಿತೆ ಬರೆಯುತ್ತಾರೆ. ” ಕುರಿಗಳು ಸಾರ್ ಕುರಿಗಳು ಸಾಗಿದ್ದೇ ಗುರಿಗಳು ಮಂದೆಯಲ್ಲಿ ಒಂದಾಗಿ ಸ್ವಂತತೆಯೇ ಬಂದಾಗಿ ಅದರ ಬಾಲ ಇದು ಮತ್ತೆ ಇದರ ಬಾಲ ಅದು ಮೂಸಿ ದನಿ ಕುಗ್ಗಿಸಿ ತಲೆ ತಗ್ಗಿಸಿ ಅಂಡಲೆಯುವ ನಾವು ನೀವು ಎಡ ದಿಕ್ಕಿಗೆ ಬಲ ದಿಕ್ಕಿಗೆ, ಒಮ್ಮೆ ದಿಕ್ಕುಪಾಲಾಗಿ ಹೇಗೆ ಹೇಗೋ ಏಗುತಿರುವ ಬರೀ ಕಿರುಚಿ ರೇಗುತಿರುವ ನೊಣ ಕೂತರೆ ಬಾಗುತಿರುವ ತಿನ್ನದಿದ್ದರು ತೇಗುತಿರುವ ಹಿಂದೆ ಬಂದರೊದೆಯದ ಮುಂದೆ ಬರಲು ಹಾಯದ ನಾವು ನೀವು ಅವರು ಇವರು ನಮ್ಮ ಕಾಯ್ವ ಕುರುಬರು” ಕಾಣುವ ವಸ್ತು, ಕ್ರಿಯೆ ಮತ್ತು ಡೈನಾಮಿಕ್ಸ್, ಕವಿಯ ಮನಸ್ಸೊಳಗೆ ಹಲವು ಕಲ್ಪನೆಗಳಿಗೆ, ಚಿಂತನೆಗಳಿಗೆ ಪ್ರೇರಣೆಯಾಗುತ್ತೆ. ಏನೋ ಹೇಳಬೇಕಾದ ತುಡಿತ, ಸಂದೇಶದ ಸಮೀಕರಣವಾಗಿ, ಹಲವು ಪ್ರತಿಮೆಗಳ ಮೂಲಕ ಕಾವ್ಯಕಟ್ಟಡವನ್ನು ಕವಿ ಕಟ್ಟುತ್ತಾರೆ. ಬೇಲೂರಿನ ಚನ್ನಕೇಶವ ದೇವಾಲಯದ ಶಿಲಾ ಪ್ರತಿಮೆಗಳು ಗೋಡೆಗಳಲ್ಲಿ ಸಾಲುಗಟ್ಟಿ ಒಂದು ಕತೆಯನ್ನು ಹೇಳುವ ಹಾಗೆಯೇ ಇದೂ. ಮೇಲಿನ ಕವಿತೆಯಲ್ಲಿ, ಕುರಿಗಳು ಅಂದರೆ ಬಹುಮುಖೀ ಪ್ರತಿಮೆ ಎಂದು ಬೇರೆ ಹೇಳಬೇಕಾಗಿಲ್ಲ ತಾನೇ. ನವ್ಯ ಮತ್ತು ನಂತರದ ಇಂತಹಾ ಕವಿತೆಗಳು ಅಬ್ಸ್ಟ್ರಾಕ್ಟ್ ಆಗಿರುವುದರಿಂದ, ಇವುಗಳ ಅರ್ಥ ಓದುಗನ ಗ್ರಹಿಕೆಗೆ, ಹ್ರಹಿಸುವ ಮನಸ್ಸಿನ ಪರದೆಯ ವಿನ್ಯಾಸಕ್ಕೆ ಸಾಪೇಕ್ಷವಾಗಿರುತ್ತೆ. ಕವಿತೆ ಕಟ್ಟುವ ಕ್ರಿಯೆಯಲ್ಲಿ, ಕವಿ ಮೊದಲೇ ಒಂದು ಪದಹಂದರದೊಳಗೆ ತನಗೆ ಹೇಳಬೇಕಾದ ಅರ್ಥ ತುಂಬಿ, ವ್ಯವಸ್ಥೆ ಯೊಳಗೆ ಹರಿಯಬಿಟ್ಟು, ಸಂಚಲನವೆಬ್ಬಿಸುವುದೂ ಒಂದು ಬಗೆ. ಸಮಾಜವಾದ, ಮಾರ್ಕ್ಸ್ ವಾದ, ಮಾನವತಾವಾದ, ಪರಿಸರವಾದ, ಹೀಗೆ ಹತ್ತು ಹಲವು ‘ಇಸಂ’ ಗಳನ್ನು ತನ್ನ ವಾಸ್ತುವಿನೊಳಗೆ ತುಂಬಿಸಿಕೊಂಡ ಕವಿತೆಗಳು ಕಳೆದ ಹಲವು ದಶಕಗಳಲ್ಲಿ ಮೂರ್ತರೂಪ ಪಡೆದಿವೆ. ಸಮಾಜದ ಬದಲಾವಣೆಗಾಗಿ, ಸಾಮಾಜಿಕ ಪ್ರಜ್ಞೆಯನ್ನು ಬಡಿದೆಬ್ಬಿಸಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದುವತ್ತ ಕವಿತೆಯನ್ನು ದುಡಿಸಿಕೊಳ್ಳುವ ಪ್ರಯತ್ನ ಇದು. ಕವಿತೆ ಬರೆಯಲು ಏಕಾಂತ ಬೇಕು. ಏಕಾಂತದೊಳಗೆ ಮನಸ್ಸು ಮೌನವಾಗ ಬೇಕು. ಇದೊಂದು ಥರಾ ಧ್ಯಾನದ ಹಾಗೆ. ನಿಧಾನವಾಗಿ ಮನಸ್ಸು ಅದರೊಳಗೆ ಇಳಿಯುತ್ತಾ, ಇಳಿದಂತೆ ಮನಸ್ಸು, ಕಾವ್ಯವಸ್ತುವಿನಲ್ಲಿ ಕೇಂದ್ರೀಕರಿಸಿ ಯಾವುದೋ ಒಂದು ಹಂತದಲ್ಲಿ ಕವಿತೆ ಅವತರಿಸಿ ಸಾಲುಗಳು ಹರಿಯುತ್ತವೆ. ಯಶವಂತ ಚಿತ್ತಾಲರು ಬೆಳಗ್ಗೆ ಮೂರು ಗಂಟೆಗೆ ಎದ್ದು, ದೀಪದ ಬೆಳಕಿನಲ್ಲಿ ಕತೆ ಬರೆಯುತ್ತಿದ್ದರಂತೆ. ಸುತ್ತಲೂ ಕತ್ತಲು, ದೀಪವೊಂದೇ ಜ್ಯೋತಿ. ಆ ಏಕಾಂತದಲ್ಲಿ ಜ್ಯೋತಿಗೆ ನೋಟ ಸಂಧಿಸಿದಾಗ ಕತೆಯ ಪಾತ್ರಗಳು ನಿಧಾನವಾಗಿ ನಿಚ್ಚಳವಾಗಿ ಕಣ್ಣಲ್ಲಿ ರೂಪುಗೊಂಡು ಕತೆಯಾಗುತ್ತಿದ್ದವಂತೆ. ಬೆಳಗಾದಂತೆ, ದೀಪದ ಜ್ಯೋತಿ ಮಂಜಾಗಿ ಕತೆಯ ಪಾತ್ರಗಳೂ ಮಾಯವಾದಾಗ ಕತೆ ಬರೆಯುವುದು ನಿಲ್ಲಿಸುತ್ತಿದ್ದರು,ಎಂದು ಹಿಂದೆಂದೋ ಓದಿದ ನೆನಪು. ಇಂತಹಾ ಅನುಸಂಧಾನದ ಜತೆಗೆ ಕವಿತೆ ಬರೆಯಲು ಅಗತ್ಯವಾದ ಸಾಹಿತ್ಯದ ಪರಿಣತಿ, ಪರಿಸರದತ್ತ, ಜೀವಪ್ರಪಂಚದ ಕಷ್ಟ ಸುಖಗಳತ್ತ ಸೂಕ್ಷ್ಮ ಸ್ಪಂದನೆ, ಕಲ್ಪನಾ ಸಾಮರ್ಥ್ಯ ಕೂಡಾ ಅಗತ್ಯ. ಹಾಗೆ ಪಕ್ವವಾದ ಕವಿಗೆ ಕವಿತೆ ಬರೆಯುವ ಚಾಲೆಂಜ್ ನೀವು ಕೊಡಬಹುದು. ಸಿನೆಮಾ, ನಾಟಕ, ಸೀರಿಯಲ್, ಗಳ ದೃಶ್ಯಕ್ಕೆ ಪೂರಕವಾದ ಕವಿತೆಗಳು ಒಂದು ರೀತಿಯಲ್ಲಿ ಹೊಸತನದ ತೆನೆಯೇ. ಉದಾಹರಣೆಗೆ, ಮುಕ್ತ
ಅಂಕಣ ಬರಹ ರುದ್ರಭೂಮಿಯಲೇ ಜ್ಞಾನೋದಯ ಅಲ್ಲಮಪ್ರಭು ಭಾರತೀಯ ದಾರ್ಶನಿಕ ಚರಿತ್ರೆಯಲ್ಲಿ ಬಹಳ ದೊಡ್ಡ ಹೆಸರು. ಹನ್ನೆರಡನೆಯ ಶತಮಾನದ ಬಹುದೊಡ್ಡ ತಾತ್ವಿಕ ವಚನಕಾರ. ಇವನಷ್ಟು ನಿಖರ, ನೇರ ಮತ್ತು ಸ್ಪಷ್ಟವಾಗಿ ತಾತ್ವಿಕ ಸಂಘರ್ಷಕ್ಕೆ ನಿಲ್ಲುವ ಮತ್ತೊಬ್ಬನನ್ನು ಹುಡುಕಿದರೂ ವಚನಕಾರರಲ್ಲಿ ಸಿಕ್ಕುವುದು ಬಹಳ ಕಷ್ಟ ಮತ್ತು ವಿರಳ. ಸಾಮಾಜಿಕ ಸುಧಾರಣೆಯೇ ಪ್ರಮುಖ ಧ್ಯೇಯವಾಗಿ ನಡೆದ ಚಳುವಳಿಯ ಉಪೋತ್ಪನ್ನವಾಗಿ ಹುಟ್ಟಿದವು ವಚನಗಳು. ಕೊಂಡುಗೊಳಿ ಕೇಶಿರಾಜನಿಂದ ಕೊನೆ ಕೊನೆಯ ವಚನಕಾರನೆಂದು ಕರೆವುದಾದರೆ ಅಗ್ಘವಣಿಯ ಹಂಪಯ್ಯನವರೆಗೂ ಈ ವಚನ ಚಳುವಳಿಯ ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಿಂತನೆಗಳು ಹರಿದಿವೆ. ಇಂದಿನ ಸಮಾಜಿಕ ಸಾಮರಸ್ಯ-ಅಭಿವೃದ್ಧಿಗೆ ವಚನಕಾರರನ್ನು ಮಾದರಿಯೆಂದೇ ಭಾವಿಸಿರುವಾಗ, ವಚನಗಳ ಪ್ರಭಾವ ಕಾಲಾತೀತವಾಗಿ ನಿಂತಿರುವುದು, ವಚನಗಳ ಹೊಂದಿರುವ ಧ್ಯೇಯದ ತೀವ್ರತೆ ಮತ್ತು ತುರ್ತು ಎಷ್ಟು ಮಹತ್ತರವಾದುದು ಎಂದು ತಿಳಿಯುತ್ತದೆ. ಕಾಶ್ಮೀರದ ರಾಜನೂ ಕಲ್ಯಾಣಕ್ಕೆ ಬಂದು, ಕಾಯಕಕ್ಕೆ ತೊಡಗುವಲ್ಲಿ ಪ್ರೇರಣೆಯಾದವರೆಂದರೆ ಅವರ ಕಾಯಕ ನಿಷ್ಟೆ, ಸಂಕಲ್ಪಶಕ್ತಿ, ಕ್ರಿಯಾಶಕ್ತಿಗಳು ತಿಳಿಯುತ್ತದೆ. ಅನುಭವ ಜನ್ಯ ಜ್ಞಾನ, ಭಾರತೀಯ ತತ್ವಶಾಸ್ತ್ರ ಪರಂಪರೆಯ ಆಳವಾದ ಅಧ್ಯಯನ, ಮತ್ತು ಆ ತತ್ವಗಳನ್ನು ಒಡೆದು ಆ ಜಾಗದಲ್ಲಿ ಮತ್ತೊಂದನ್ನು ಕಟ್ಟುವ ವಚನಕಾರರ ಕಾರ್ಯ ಮುಖ್ಯವಾದದ್ದು. ತಮ್ಮ ಕಾಲದಲ್ಲಿನಿಂತು ಹಿಂದಿನ ತತ್ವಗಳನ್ನು ಒರೆಗೆ ಹಚ್ಚಿ ಉತ್ತರ ಕಂಡುಕೊಳ್ಳುವ-ಉತ್ತರ ದೊರೆಯದಿದ್ದರೆ ಸಾರಸಗಟಾಗಿ ತಿರಸ್ಕರಿಸುವ ಅವರ ಕಾರ್ಯ ಎಲ್ಲ ಕಾಲಕ್ಕೂ ಮಾದರಿ. ಸಾಮಾಜಿಕವಾಗಿ ಬಸವಣ್ಣನನ್ನೂ, ಧಾರ್ಮಿಕವಾಗಿ ಚೆನ್ನ ಬಸವ್ಣನನ್ನೂ ನೋಡಿದಹಾಗೆ ವೀರಶೈವದ ತಾತ್ವಿಕ ದೊಡ್ಡ ಸಾಧ್ಯತೆಯನ್ನ ಕಂಡದ್ದು ಅಲ್ಲಮಪ್ರಭುವಿಲ್ಲಿ. ನಿಷ್ಟುರ, ವಿಡಂಬನೆ, ಸಂಕೀರ್ಣ ಭಾಷಾ ಪ್ರಯೋಗ, ವಿರುದ್ಧ ನೆಲೆಗಳ ಚಿತ್ರ ಸರನಿಯ ಪ್ರತಿಮೆಗಳು ಅಲ್ಲಮನ ವಿಶೇಷತೆಗಳು. ಅವನ ವಚನಗಳ ಅಧ್ಯಯನ ಇತರ ಭಾರತೀಯ ದರ್ಶನಗಳ ಅಧ್ಯಯನಕ್ಕೆ ದಾರಿ ಮಾಡಿ ಹೊಸ ಹೊಳಹುಗಳನ್ನ ನೀಡುತ್ತವೆ. “ಬೆಡಗು” ಅಲ್ಲಮನ ವಚನಗಳ ಶೈಲಿ ಎಂದೇ ಹೇಳಬಹುದು. ಅವಧೂತ ಪರಂಪರೆಯಲ್ಲಿ ಬೆಡಗಿಗೆ ಬಹುದೊಡ್ಡ ಶಕ್ತಿಯಿದೆ. ನೂರು ಮಾತುಗಳಲ್ಲಿ ಹೇಳುವುದನ್ನು ಒಂದು ಪದದಲ್ಲಿ ಹೇಳಿ, ಸಾವಿರ ಅರ್ಥಗಳು ಒಮ್ಮಿದ್ದೊಮ್ಮೆಗೆ ಹುಟ್ಟಿಬಿಡುವಂತೆ ಮಾಡುವ ಮಾತಿನ ಅತೀಉತ್ಕೃಷ್ಟ ಅಭಿವ್ಯಕ್ತಿಯದು. ಅನಿಮಿಷನಿಂದ ಇಷ್ಟಲಿಂಗ ದೊರೆಯುವವರೆಗೂ ಮಾಯೆಯ ಹೊಡೆತಕ್ಕೆ ಸಿಕ್ಕಿ ಮದ್ದಲೆ ಬಾರಿಸಿ ತೊಳಲಿದವನು ಅನಂತರ ಅದಕ್ಕೆ ವಿಮುಖವಾದ ಮೋಹಬಂಧ ಕಿತ್ತೆಸೆದು ಆಚೆಗೆ ನಿಂತು ಎಲ್ಲವನೂ ಜಾಗೃತ ಪ್ರಜ್ಞೆಯ ಮೂಲಕವೇ ನೋಡುವ ಕಣ್ಣು ಅಲ್ಲಮನದು. ಅವನ ವಚನಗಳ ಹಿಂದೆ ಜಾಗೃತಪ್ರಜ್ಞೆ ನಿರಂತರವಾಗಿ ಹರಿದಿರುವುದು ಇಂದಿಗೂ ತಿಳಿಯುತ್ತಿದೆ. ಈ ಪ್ರಜ್ಞಾನದಿಯ ಹರಿಯುವಿಕೆ ನಿರಂತರವಾಗಿ ಕೊನೆಗೆ ಭೋರ್ಗರೆತದ ನದಿಯಾಗಿ ನಿಂತದ್ದು ಅತಿಶಯೋಕ್ತಿಯಲ್ಲ. ಆ ಪ್ರಜ್ಞಾನದಿಯ ನೀರನ್ನು ಒಂದೆಡೆ ನಿಲ್ಲಿಸಿ ಎಲ್ಲರಿಗೂ ದೊರೆವಂತೆ ಶೋನ್ಯಸಿಂಹಾಸನದಲ್ಲಿ ನೆಲೆಯೂರುವಂತೆ ಮಾಡಿದ ಬಸವಣ್ಣನ ಕಾರ್ಯವೂ ಬಹುದೊಡ್ಡದು. ಅಲ್ಲಮನ ವಚನಗಳಲ್ಲಿ ಅಮೂರ್ತದ ದೈವದ ದಿಕ್ಕಿಗೆ ಕರೆಕೊಡುವ ದಾರಿ ಕಾಣುತ್ತದೆ. ಬಸವಣ್ಣ ಮೂರ್ತದಿಂದ ಅಮೂರ್ತಕ್ಕೆ ಕರೆಕೊಟ್ಟರೆ, ಅಲ್ಲಮ ಬಹಳ ನೇರ ನಡಿಗೆ ಅಮೂರ್ತದ ಕಡೆಗೆ ಕರೆ ಕೊಡುತ್ತಾನೆ. ಮೇಲ್ನೋಟಕ್ಕೆ ಇದು ವೈರುಧ್ಯ ಎನಿಸಿದರೂ ಯಾವುದೇ ಧರ್ಮದ ಮೂಲ ನೆಲೆಯೂ ಮೂರ್ತದಿಂದ ಅಮೂರ್ತಕ್ಕೆ ಚಲನೆಯೇ ಅಗಿರುತ್ತದೆ. ಕಾಲಾನಂತರ ಆಚರಣೆ ಮುಂದಾಗಿ ಅದರೊಡಲಿನ ತತ್ವ ಹಿಂದೆ ಸರಿದು, ಪ್ರಜ್ಞೆಯು ನಿಂತ ನೀರಾಗಿ ಹೋಗುತ್ತದೆ. ಧರ್ಮದ ಮೂಲ ಧ್ಯೇಯ ಜ್ಞಾನೋಪಾಸನೆ – ಜ್ಞಾನಸಂಪಾದನೆ. ಇವುಗಳು ಆದಾಗ ತನ್ನಿಂದ ತಾನೇ ಅಮೂರ್ತಕ್ಕೆ ಚೆಲಿಸುತ್ತದೆ. ಅಂತಹಾ ಚೆಲನೆಗೆ ಸಂಬಂಧಿಸಿದ ಅಲ್ಲಮನ ವಚನವೊಂದು ಅದ್ಭುತವಾಗಿದೆ. ಉತ್ತರಾಪಥದ ಮೇಲೆ ಮೇಘವರ್ಷ ಕರೆಯಲು ಆ ದೇಶದಲ್ಲಿ ಬರನಾಯಿತ್ತು! ಆ ದೇಶದ ಪ್ರಾಣಿಗಳೆಲ್ಲರೂ ಮೃತರಾದರು ಅವರ ಸುಟ್ಟ ರುದ್ರಭೂಮಿಯಲಿ ನಾ ನಿಮ್ಮನರಸುವೆ ಗುಹೇಶ್ವರ೧ ಮೊದಲ ಓದಿನಲ್ಲಿ ವಿಚಿತ್ರವೆಂಬಂತೆ ಕಂಡರೂ, ಇರದ ಒಳಗೆ ಬಹುದೊಡ್ಡ ಹಿಂದಿನ ಚಿಂತನೆಯನ್ನು ಒಡೆವ ಕ್ರಮವಿದೆ. ಇದು ಎರಡು ಪ್ರಮುಖ ಆಯಾಮಗಳಲ್ಲಿ ನಿರ್ವಚನಕ್ಕೆ ಒಳಪಡುತ್ತದೆ. ದೇಹದ ಮಟ್ಟದಲ್ಲಿ ಮತ್ತು ದೇಹವನ್ನು ನೆಚ್ಚಿಕೊಂಡು ಪ್ರಜ್ಞೆಯನ್ನು ಹಿಡಿತಕ್ಕೆ ತಂದುಕೊಳ್ಳುವ ತಂತ್ರಮಾರ್ಗಕ್ಕೆ ಏಕಕಾಲದಲ್ಲಿ ಅವುಗಳ ಕಾರ್ಯರೂಪದನ್ವಯ ಉತ್ತರ ಕೊಟ್ಟದ್ದಾಗಿದೆ. ದೇಹದ ಮಟ್ಟದಲ್ಲಿ ಈ ವಚನವು ‘ಉತ್ತರಾ ಪಥ’ ಎಂದರೆ ‘ತಲೆ’, ‘ಮೇಘವರ್ಷ’ವೆಂದರೆ ‘ಸುಧಾಧಾರಾ’ – ‘ಅಮೃತವರ್ಷಿಣಿ’ (ಜ್ಞಾನೋದಯವನ್ನ ಭಾರತೀಯ ತತ್ವಶಾಸ್ತ್ರಸಲ್ಲಿ ಗುರುತಿಸುವ ಪರಿಭಾಷೆ), ‘ದೇಶ’ಎಂದರೆ ‘ದೇಹ’, ‘ಪ್ರಾಣಿ’ಗಳು ಎಂದರೆ ‘ಪಂಚೇಂದ್ರಿಯ’ ಎನ್ನುವ ಅಂಶಗಳನ್ನು ತಿಳಿದರೆ, ದೇಹ ಮತ್ತು ಪಂಚೇಂದ್ರಿಯಗಳು ಲೋಲುಪತೆಯನ್ನು ಜ್ಞಾನೋದಯ ಕಾರಣದಿಂದ ಕಳೆದುಕೊಂಡರೆ, ಕಳೆದುಕೊಂಡು ಸುಮ್ಮನಾದರೆ, (ರಮಣರು ಇದನ್ನೇ ‘ಚುಮ್ಮಾಇರು’ ಎನ್ನುತ್ತಾರೆ) ಅಲ್ಲಿ ಸುಟ್ಟ ರುದ್ರಭೂಮಿಯು ನಿರ್ಮಾಣವಾಗುತ್ತದೆ. ಲೋಲುಪತೆ ಕಳೆದ ಅನಂತರ ಘಟಿಸುವ ಶೂನ್ಯಭಾವದಲ್ಲಿ ದೈವದ ಅಥವಾ ದೈವತ್ವದ ಸಾಕ್ಷಾತ್ಕಾರ ಸಾಧ್ಯವೆನ್ನುವುದು ಅಲ್ಲಮನ ಅಭಿಪ್ರಾಯ. ಇದನ್ನೇ ಮತ್ತೊಂದು ಪ್ರಮುಖವಾದ ಆಯಾಮದಲ್ಲಿಯೂ ವಿವೇಚನೆ ಮಾಡಬಹುದು. ತಾಂತ್ರಿಕ ಪದ್ದತಿಗಳಲ್ಲಿ ‘ಪಂಚ ಮ ಕಾರ’ಕ್ಕೆ ಬಹಳ ಪ್ರಾಧಾನ್ಯತೆ. ಮದ್ಯ, ಮಾಂಸ, ಮಾನಿನಿ, ಮೈಥುನ ಮತ್ತು ಮಂತ್ರಗಳ ಸಹಾಯದಿಂದ ಜ್ಞಾನವನ್ನು ಪಡೆಯಬಹುದೆಂದು ದೊಡ್ಡ ಚಲನೆಯನ್ನೇ ಉತ್ತರದಲ್ಲಿ ನಡೆಯಿತು. ಇಂದ್ರಿಯಕ್ಕೆ ಏನು ಬೇಕೋ ಅದನ್ನು ಪೂರೈಸಿಯೇ ಮನುಷ್ಯ ಅಸ್ಥಿತ್ವವನ್ನು ಕಂಡುಕೊಳ್ಳಬಹುದೆಂಬ ಮಾತಿಗೆ ಪ್ರಚೋದನೆಯಾಗಿ ಜ್ಞಾನಕ್ಕಿಂತ ಇಂದ್ರಿಯ ಸುಖಕ್ಕೆ ಒಳಗಾಗಿ ಹೋದವರೇ ಆ ಕಡೆಗೆ ಹೆಚ್ಚಾಗಿ ವಾಲಿದರು. ಇದರಿಂದ ಸಮಾಜದಲ್ಲಿ ಉಂಟಾಗುವ ಪ್ರಜ್ಞೆಯನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ಜ್ಞಾನೋದಯಕ್ಕೆ ಅಶಿಸಿದವರು ಹೆಚ್ಚಾಗುವುದನ್ನ ಅರಿತ ಅಲ್ಲಮ, ಕಾಶ್ಮೀರದಲ್ಲಿ ಈ ಚಿಂತನೆ ಪ್ರಾರಂಭವಾಗಿದ್ದಕ್ಕೆ ಇಲ್ಲಿ ಕಲ್ಯಾಪಟ್ಟಣದಲ್ಲಿ ಕುಳಿದು ಅದು ಸರಿಯಲ್ಲವೆಂದು ಕೊಟ್ಟ ಉತ್ತರವೆಂದೇ ಎನಿಸುತ್ತಿದೆ. ಇದೇ ಆಶಯವನ್ನು ಸ್ಪುರಿಸುವ ಮತ್ತೊಂದು ಅಲ್ಲಮನ ವಚನವನ್ನು ಗಮನಿಸಿ. ಊರೊಳಗಣ ಘನ ಹೇರಡವಿಯೊಳಗೊಂದು ಬೇರು ಮೇಲು ಕೊನೆ ಕೆಳಗಾಗಿ ಸಸಿ [ಹುಟ್ಟಿತ್ತು] ಆರೈದು ನೀರೆರೆದು ಸಲುಹಲಿಕ್ಕೆ ಅದು ಸಾರಾಯದ ಫಲವಾಯಿತ್ತಲ್ಲಾ ಬಾರುಗೊಂಬಿನಲುದುರಿದ ಹಣ್ಣ ಮೆಲಿದವ ಘೋರಸಂಸಾರಭವಕ್ಕೆ ಸಿಕ್ಕಿದ ಬೇರಿಂದಲಾದ ಫಲವ ದಣಿದುಂಡವ ಊರಿಂದ ಹೊರಗಾದ ಕಾಣಾ ಗುಹೇಶ್ವರ ಈ ವಚನವು ಬಹಳ ಕುತೂಹಲಕರವಾದ ಕೆಲವು ಮಾಹಿತಿಗಳನ್ನು ಮೇಲೆ ಹೇಳಿದಷ್ಟೇ ನಿಖರವಾಗಿ ಬಿಟ್ಟುಕೊಡುತ್ತಿದೆ. ಇಲ್ಲಿನ ವಿಶೇಷತೆಯೇ ಎರಡು ಅರ್ಥಗಳನ್ನು ಸ್ಪುರಿಸುವ ಪದವಾದ ‘ಊರು’. ವಚನದ ಆರಂಬದಲ್ಲಿ ‘ಊರು’ ಪದವು ‘ದೇಹ’ವೆಂದು ಅರ್ಥವಾದರೆ, ಕೊನೆಯಲ್ಲಿ ಬರುವ ‘ಊರು’ ‘ತೊಡೆ’ ಎಂದು ಅರ್ಥವಾಗುತ್ತದೆ. ಇದೊಂದು ಇತ್ಯಾತ್ಮಕ ಚಲನೆಯ ಆಸೆಹೊತ್ತ ನೇತ್ಯಾತ್ಮಕ ಪ್ರತಿಮೆಗಳ ಸಹಜ ಸಂಘಟ್ಟಣೆಯಲ್ಲಿ ಮೂಡಿದ ಅರ್ಥ. ಇದರ ಅನುಸಂಧಾನವೂ ಬಹಳ ಕುತೂಹಲಕರವಾಗಿದೆ. ‘ಆರೈದು’ ಎಂಬ ಸಂಖ್ಯಾ ಪದವನ್ನು ಬಿಡಿಸಿದರೆ, ‘ಆರು’ ಷಟ್ ಚಕ್ರಗಳನ್ನು, ‘ಐದು’ ಪಂಚೇಂದ್ರಿಯಗಳನ್ನು ತಿಳಿಸುತ್ತಿದೆ. ಮುಖ್ಯವಾಗಿ ತಲೆಕೆಳಕಾದ ವೃಕ್ಷದ ಪ್ರತಿಮೆ ‘ಬೇರು ಮೇಲು ಕೊನೆ ಕೆಳಗಾಗಿ ಸಸಿ [ಹುಟ್ಟಿತ್ತು]’ ಬಂದಿದೆ. ಆ ಮರ ಕೊಡುವ ಫಲದ ಸ್ಥಾನ ಕೆಳಗಿದೆ. ಅದನ್ನರಿಸಿ ‘ಹಣ್ಣ ಮೆಲಿದವ ಘೋರಸಂಸಾರಭವಕ್ಕೆ ಸಿಕ್ಕಿದ’. ಮತ್ತೊಂದು ಉಲ್ಟಾ ಪ್ರತಿಮೆ ಕೊನೆಯಲ್ಲಿ ಕೊಡುತ್ತಾನೆ ‘ಬೇರಿಂದಲಾದ ಫಲ’. ಇದನ್ನು ಬಹಳ ಕಷ್ಟದಲ್ಲಿ ಸಾಧಿಸಿಕೊಳ್ಳಬೇಕಾದ ಸ್ಥಿತಿ. ಆ ಫಲವನ್ನು ‘ದಣಿದುಂಡವ’ವನು ‘ಊರಿಂದ ಹೊರಗಾದ’. ಈ ವಚನದಲ್ಲಿಯೂ ದೇಹ, ದೇಹದ ಲೋಲುಪತೆ ಮತ್ತು ಪ್ರಜ್ಞೆಯನ್ನು ಹಿಡಿದುಕೊಳ್ಳುವ ಸಾಧ್ಯತೆಯ ಬಗೆಗೆ ಮಾತನಾಡುತ್ತಿದ್ದಾನೆ. ‘ಸಿಕ್ಕಿದ’ ಮತ್ತು ‘ಹೊರಗಾದ’ ಎಂಬ ಎರಡು ಕ್ರಿಯಾಪದವನ್ನು ಗಮನಿಸಿ. ಭೂತದ ಕ್ರಿಯೆಯನ್ನು ಹೇಳುತ್ತ ವರ್ತಮಾನದ ನಡೆಯನ್ನು ಎಚ್ಚರಿಸುತ್ತಿದ್ದಾನೆ. ಅಲ್ಲಮಪ್ರಭುವಿನ ನೇರ ಹಣಾಹಣಿ ತಂತ್ರಾಲೋಕದ ಕಡೆಗಿದೆ. ಮತ್ತದನ್ನು ನೆಚ್ಚಿಕೊಂಡು ನಡೆದವರಿಗೆ ಕೊಟ್ಟ ಪ್ರತಿಸ್ಪಂದನೆಯೂ ಅಗಿರಬಹುದು. ಮೆಲ್ನೋಟಕ್ಕೆ ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಸಣ್ಣ ಸಣ್ಣ ಸಾಲನ್ನು ಹೊಂದಿರುವ ವಚನವೆಂದು ಕರೆಸಿಕೊಳ್ಳುವ ಪ್ರಕಾರವೊಂದು, ಹೇರಳವಾಗಿ ರಚನೆಯಾಗಿದ್ದ ಅತಿಹೆಚ್ಚು ಶಿಷ್ಟವಾದ ‘ಅನುಷ್ಟಪ್’ ಛಂಧಸ್ಸಿಗೆ ಮುಖಾಮುಖಿಯಾಗುವುದು ದೇಸಿ ಮತ್ತು ಮಾರ್ಗದ ಮುಖಾಮುಖಿಯಲ್ಲದೆ ಮತ್ತಿನ್ನೇನೂ ಅಲ್ಲ. ಸಂಕೀರ್ಣವಾಗಿಯೇ ಹೇಳುವುದಾದರೆ, ಹನ್ನೆರಡನೆಯ ಶತಮಾನ ಕನ್ನಡನಾಡಿನಲ್ಲಿ ಘಟಿಸಿದ ಸಾಹಿತ್ಯ ಚಳುವಳಿಯೊಂದರ ಉಪೋತ್ಪನ್ನವಾದ ವಚನ ರೂಪವೊಂದು ತನ್ನೆಲ್ಲಾ ತಾತ್ವಿಕ, ಶಾಸ್ತ್ರ ಮತ್ತು ಅನುಭವ ಜನ್ಯ ಜ್ಞಾನದಿಂದ ರೂಪುಗೊಂಡು – ಮತ್ತೊಂದು ಶಾಸ್ತ್ರೀಯ ಕಾವ್ಯರೂಪಕ್ಕೆ, ಅದರ ತಾತ್ವಿಕ ಮಾರ್ಗಕ್ಕೆ ಕೊಟ್ಟ ಸಂಘರ್ಷದ ಆಹ್ವಾನವೆಂದರೆ ಅತಿಶಯೋಕ್ತಿಯೇನಲ್ಲ. ಶೂನ್ಯಸಂಪಾದನೆಗಳಲ್ಲಿ ಅಕ್ಕಮಹಾದೇವಿಯನ್ನು ಪರೀಕ್ಷಿಸುವ ಬಹುಮುಖ್ಯವಾದ ಘಟ್ಟವೊಂದಿದೆ. ಆ ಭಾಗವು ತನ್ನ ನಾಟಕೀಯತೆ, ತತ್ವ, ವೀರಶೈವ ಧರ್ಮದ ಮೂಲ ತತ್ವಗಳ ಶೋಧ, ಶರಣರ ನಡೆ ನುಡಿಯಲ್ಲಿನ ವಿಶೇಷತೆ ಮುಂತಾದ ಅಂಶಗಳ ಅಭಿವ್ಯಕ್ತಿಯಿಂದ ಅತೀಉತ್ಕೃಷ್ಟ ಭಾಗವಾಗಿ ಇಂದಿಗೂ ಓದುಗರ ಮನದಲ್ಲಿ ನೆಲೆ ನಿಂತಿದೆ. ಅಕ್ಕನನ್ನು ಪರೀಕ್ಷಿಸಿ, ಅವಳು ಆ ಪರೀಕ್ಷೆಯಲ್ಲಿ ಗೆದ್ದ ನಂತರ ಬಸವಣ್ಣನು ಮಡಿವಾಳತಂದೆ ಮತ್ತು ಅಲ್ಲಮರ ಸಮಕ್ಷಮದಲ್ಲಿ ಅಕ್ಕನನ್ನು, ಅವಳ ಸತ್ವವನ್ನು ಕೊಂಡಾಡುತ್ತಾನೆ. ಆ ಸಂದರ್ಭದ ವಚನವೊಂದಲ್ಲಿ ಅಲ್ಲಮನನ್ನು ಸಂಬೋಧಿಸಿ “ತಲೆವೆಳಗಾದ ಸ್ವಯಜ್ಞಾನಿ” ಎಂಬ ವಿಶೇಷಣವೊಂದನ್ನು ಆರೋಪಿಸುತ್ತಾರೆ. ಈ ವಿಶೇಷಣ ನಿಜವಾಗಿ ಸಾರ್ಥಕವಾಗಿರುವುದು ಮೇಲಿನ ವಚನದಲ್ಲಿ ಅಲ್ಲಮ ಕೊಟ್ಟಿರುವ “ಬೇರು ಮೇಲು ಕೊನೆ ಕೆಳಕಾಗಿ ಸಸಿ ಹುಟ್ಟಿತ್ತು” ಎಂಬ ಪ್ರತಿಮೆ ಮತ್ತು ಆ ಪ್ರತಿಮೆ ಮಾಡುತ್ತಿರುವ ಕಾರ್ಯದಿಂದ. ಒಟ್ಟಾರೆ ಭಾರತೀಯ ತತ್ವಶಾಸ್ತ್ರದಲ್ಲಿ ಯಾವುದೇ ಮರವನ್ನು ಯಾವುದೇ ದೊಡ್ಡ ದಾರ್ಶನಿಕನ ಜ್ಞಾನೋದಯದ ನೆಲೆಯಾಗಿ ಕಾಣುವಾಗ ಅಂತಹಾ ವೃಕ್ಷವನ್ನೇ ತಲೆಕೆಳಕಾಗಿ ಮಾಡಿ, ತತ್ವಗಳಾಚೆ ಬದುಕಿದೆ ಎಂಬುದನ್ನು ದಿಟ್ಟವಾಗಿ ಸಾರಿದ “ತಲೆವೆಳಗಾದ ಸ್ವಯಜ್ಞಾನಿ” ಅಲ್ಲಮ. ಪರಾಮರ್ಶನ ಗ್ರಂಥಗಳು : ೧. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ವಚನ ಸಂಖ್ಯೆ ೨೨೭. ಪು ೧೫೬ (೨೦೧೬) ೨. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ವಚನ ಸಂಖ್ಯೆ ೯೬೪. ಪು ೨೨೭ (೨೦೧೬) ೩. ಎನ್ನ ಭಕ್ತಿ ಶಕ್ತಿಯು ನೀನೆ ಎನ್ನ ಯುಕ್ತಿ ಶಕ್ತಿಯು ನೀನೆ ಎನ್ನ ಮುಕ್ತಿ ಶಕ್ತಿಯು ನೀನೆ ಎನ್ನ ಮಹಾಘನದ ನಿಲವಿನ ಪ್ರಭೆಯನ್ನುಟ್ಟು ತಲೆವೆಳಗಾದ ಸ್ವಯಜ್ಞಾನಿ ಕೂಡಲಸಂಗಯ್ಯನಲ್ಲಿ ಮಹಾದೇವಿಯಕ್ಕನ ನಿಲವ ಮಡಿವಾಳನಿಂದಱಿದು ಬದುಕಿದೆನಯ್ಯಾ ಪ್ರಭುವೆ ಹಲಗೆಯಾರ್ಯನ ಶೂನ್ಯಸಂಪಾದನೆ. ಸಂ. ಪ್ರೊ. ಎಸ್. ವಿದ್ಯಾಶಂಕರ, ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ. ವಚನ ಸಂಖ್ಯೆ ೧೦೭೫. ಪು ೪೬೭ ( ೧೯೯೮ ). ****************************************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.
ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….8 ನಾನೂ ಶಾಲೆಗೆ ಸೇರಿದೆ… ಅಪ್ಪನಿಗೆ ಅಲಗೇರಿಯಿಂದ ಕುಮಟಾ ತಾಲೂಕಿನ ಹನೇಹಳ್ಳಿ ಶಾಲೆಗೆ ವರ್ಗವಾಯಿತು. ಮತ್ತೆ ನಾವು ನಮ್ಮ ತಾಯಿಯ ತೌರೂರು ನಾಡುಮಾಸ್ಕೇರಿಗೆ ಬಂದು ನೆಲೆಸಬೇಕಾಯಿತು. ನಾಡು ಮಾಸ್ಕೇರಿಯಲ್ಲಿ ಆಗ ನಮ್ಮ ಜಾತಿಯ ಜನಕ್ಕೆ ಸ್ವಂತ ಭೂಮಿಯೆಂಬುದೇ ಇರಲಿಲ್ಲ. ಕೆಲವು ಕುಟುಂಬಗಳು ನಾಡವರ ಜಮೀನಿನ ಒಂದು ಮೂಲೆಯಲ್ಲಿ ಆಶ್ರಯ ಪಡೆದು ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದರು. ನಾಡುಮಾಸ್ಕೇರಿಯಲ್ಲಿ ನಾಡವರು ಇದ್ದುದರಲ್ಲಿಯೇ ಸ್ಥಿತಿವಂತರಾಗಿದ್ದರು. ಎಲ್ಲ ಕುಟುಂಬಗಳಿಗೂ ಅಲ್ಪಸ್ವಲ್ಪ ಬೇಸಾಯದ ಭೂಮಿಯೂ ಇದ್ದಿತ್ತು. ಮಾಸ್ಕೇರಿಯ ಈ ಭಾಗದಲ್ಲಿ ನಾಡವರು ವಾಸ್ತವ್ಯ ಇರುವುದರಿಂದಾಗಿಯೇ ನಾಡು ಮಾಸ್ಕೇರಿ’ ಎಂದು ಕರೆಯುತ್ತಿದ್ದಿರಬೇಕು. ಊರಿನ ಉತ್ತರ ಭಾಗದಲ್ಲಿ ಕೆಲವು ಬ್ರಾಹ್ಮಣರ ಮನೆಗಳಿದ್ದವು. ಹಾರ್ವರು ವಾಸಿಸುವ ಕಾರಣದಿಂದಲೇ ಈ ಭಾಗವನ್ನು ಹಾರೂ ಮಾಸ್ಕೇರಿ’ ಎಂದು ಕರೆಯುತ್ತಿದ್ದರು. ಬ್ರಾಹ್ಮಣರಿಗೆ ಸೇರಿದ ಜಮೀನಿನ ಮೂಲೆಯಲ್ಲಿಯೂ ಒಂದೆರಡು ನಮ್ಮ ಆಗೇರರ ಕುಟುಂಬಗಳು ಆಶ್ರಯ ಪಡೆದುಕೊಂಡಿದ್ದವು. ನಮ್ಮ ಅಜ್ಜಿಯ ಕುಟುಂಬ ನಾಡುಮಾಸ್ಕೇರಿ ಭಾಗದಲ್ಲಿ ನಾರಾಯಣ ನಾಯಕ ಎಂಬ ನಾಡವ ಜಾತಿಯ ಜಮೀನ್ದಾರರೊಬ್ಬರ ಗೇರು ಹಕ್ಕಲಿನಲ್ಲಿ ವಾಸವಾಗಿದ್ದಿತ್ತು. ನಮ್ಮ ತಂದೆಯವರು ಇಲ್ಲಿಗೆ ಬಂದ ಬಳಿಕ ಅಜ್ಜಿಯ ಮನೆಯ ಸಮೀಪವೇ ನಾರಾಯಣ ನಾಯಕರ ಅನುಮತಿಯಿಂದ ಒಂದು ಚಿಕ್ಕ ಹುಲ್ಲಿನ ಮನೆ ನಿಮಿಸಿಕೊಂಡರು. ಅಷ್ಟು ಹೊತ್ತಿಗೆ ನನಗೆ ಒಬ್ಬ ತಮ್ಮ (ನಾಗೇಶ) ಒಬ್ಬಳು ತಂಗಿ (ಲೀಲಾವತಿ) ಬಂದಾಗಿತ್ತು. ತಾಯಿಯ ತೌರಿನ ಕಡೆಯಿಂದ ಅಜ್ಜಿಮನೆಯಲ್ಲಿ ಅವ್ವನ ಚಿಕ್ಕಪ್ಪ ರಾಕಜ್ಜ ಮತ್ತು ಅವನ ಹೆಂಡತಿ ಮತ್ತು ರಾಕಜ್ಜನ ಚಿಕ್ಕಮ್ಮ ಜುಂಜಜ್ಜಿ ಎಂಬ ಮುದುಕಿ ವಾಸಿಸುತ್ತಿದ್ದರು. ಆದರೆ ಈ ಪ್ರತ್ಯೇಕತೆ ಬಹಳ ಕಾಲವೇನೂ ಇರಲಿಲ್ಲ. ನನಗೆ ಬುದ್ದಿ ತಿಳಿಯುವ ಹೊತ್ತಿಗೆ ರಾಕಜ್ಜನಿಗೆ ಇದ್ದ ಮೊದಲ ಹೆಂಡತಿ ತೀರಿಕೊಂಡಿದ್ದಾರೆ ಎಂದೂ ಈಗ ಇರುವವಳು ಅವನ ಎರಡನೆಯ ಹೆಂಡತಿ ಎಂದೂ ತಿಳಿದು ಬಂತು. ಆದರೂ ಅವರು ಅನ್ಯೋನ್ಯವಾಗಿ ಇದ್ದಂತೆ ನಮಗೆ ಕಾಣಿಸುತ್ತಿತ್ತು. ಆದರೆ ಮುಂದಿನ ಒಂದೆರಡು ವರ್ಷಗಳಲ್ಲಿಯೇ ರಾಕಜ್ಜನ ಎರಡನೆಯ ಹೆಂಡತಿ ತನ್ನ ತೌರಿಗೆಂದು ಅಂಕೋಲೆಯ ಬಾಸಗೋಡ ಎಂಬ ಊರಿನ ಕಡೆ ಹೋದವಳು ಮತ್ತೆ ಎಂದೂ ತಿರುಗಿ ಬಾರದೇ ಅಲ್ಲಿಯೇ ಯಾರನ್ನೋ ಕೂಡಿಕೆ’ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ಬಂದಿತ್ತು. ಆ ಬಳಿಕ ರಾಕಜ್ಜ ಮತ್ತು ಜುಂಜಜ್ಜಿ ನಮ್ಮದೇ ಮನೆಯ ಭಾಗವಾಗಿ ಹೋದರು. ರಾಕಜ್ಜ ಕೂಲಿ ಕೆಲಸಕ್ಕೆ ಹೋಗುತ್ತಿದ್ದರೆ, ಜುಂಜಜ್ಜಿ ಮನೆಯಲ್ಲಿಯೇ ಇದ್ದು ಅವ್ವನಿಗೆ ಮನೆಗೆಲಸದಲ್ಲಿ ನೆರವಾಗುತ್ತ ನಾವು ಮೂವರು ಮರಿಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಾ ಉಳಿದುಕೊಂಡಳು. ಇಷ್ಟೆಲ್ಲ ಪುರಾಣ ಹೇಳಿದ ಕಾರಣವೆಂದರೆ ನನ್ನನ್ನು ಮೊಟ್ಟ ಮೊದಲು ಶಾಲೆಗೆ ಕರೆದೊಯ್ದು ಸೇರಿಸಿದವಳೇ ಈ ಜುಂಜಜ್ಜಿ. ನನ್ನ ಹಠ, ತುಂಟತನ ಎಲ್ಲವನ್ನೂ ನಿರಾಳವಾಗಿ ಹಚ್ಚಿಕೊಂಡಿದ್ದ ಜುಂಜಜ್ಜಿಯೇ ಹಾರೂಮಾಸ್ಕೇರಿ ಭಾಗದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗೆ ಸೇರಿಸಲು ಕರೆದೊಯ್ದಿದ್ದಳು. ನನಗೆ ಇನ್ನೂ ಸರಿಯಾಗಿ ನೆನಪಿದೆ….. ಒಂದು ಪಾಯಿಜಾಮ, ನೆಹರೂ ಶರ್ಟ ಧರಿಸಿ ನಾನು ತುಂಬಾ ಜಬರ್ದಸ್ತ ಆಗಿಯೇ ಶಾಲೆಗೆ ಹೊರಟಿದ್ದೆ. ಆದರೆ ಅಲ್ಲಿಗೆ ಹೋದ ಬಳಿಕ ಶಾಲೆಯೆಂಬ ಶಾಲೆಯನ್ನು ಅದರೊಳಗಿರುವ ಮಾಸ್ತರರನ್ನೂ ಅಲ್ಲಿರುವ ಮಕ್ಕಳನ್ನೂ ಕಂಡದ್ದೇ ನನಗೆ ಕಂಡಾಬಟ್ಟೆ ಅಂಜಿಕೆಯಾಗಿ ಜುಂಜಜ್ಜಿಯ ಸೀರೆಯನ್ನೇ ಗಟ್ಟಿಯಾಗಿ ಹಿಡಿದುಕೊಂಡು ಅಳುತ್ತ ಶಾಲೆಯೇ ಬೇಡವೆಂದು ಹಠ ಮಾಡತೊಡಗಿದ್ದೆ. ಯಾರೋ ಮಾಸ್ತರರೊಬ್ಬರು ಸಂತೈಸಿ ಕರೆದೊಯ್ಯಲು ಮುಂದೆ ಬಂದಾಗ ಮತ್ತಷ್ಟು ಭಯಗೊಂಡು ಚೀರಾಟ ಮಾಡಿದೆ. ಜುಂಜಜ್ಜಿಗೆ ನನ್ನನ್ನು ಸಂತೈಸುವುದೇ ಕಷ್ಟವಾಗಿ ಒದ್ದಾಡುತ್ತ ನನ್ನನ್ನು ಹೇಗೋ ರಮಿಸಿ ಶಾಲೆಯ ಪಕ್ಕದಲ್ಲೇ ಇರುವ ಗೋವಿಂದ ಶೆಟ್ಟಿ ಎಂಬುವರ ಚಹಾದಂಗಡಿಗೆ ಕರೆತಂದಳು. ಅಂಗಡಿಯ ಮುಂಗಟ್ಟಿನಲ್ಲೇ ಇರುವ ಒಲೆಯಮೇಲೆ ಇರುವ ದೊಡ್ಡದೊಂದು ಪಾತ್ರೆಯಲ್ಲಿ ನೀರು ಕೊತಕೊತ ಕುದಿಯುತ್ತಿತ್ತು. ಅದರ ಮೇಲೆ ಚಹಾಪುಡಿ, ಸಕ್ಕರೆ ಬೆರೆಸಿದ ಕಿಟ್ಲಿ’ ಹೊಗೆಯುಗುಳುತ್ತ ಸುತ್ತೆಲ್ಲ ಚಹಾದ ಗಮ್ಮನೆ ಪರಿಮಳ ಹರಡುತ್ತ ಕುಳಿತಿತ್ತು. ನನಗೆ ಅಚ್ಚರಿ ಹುಟ್ಟಿಸಿದ ಸಂಗತಿಯೆಂದರೆ ಒಲೆಯ ಮೇಲಿಟ್ಟ ಆ ದೊಡ್ಡ ಪಾತ್ರೆಯೊಳಗಿಂದ ಕೇಳಿ ಬರುತ್ತಿದ್ದ ಕಿಣಿ ಕಿಣಿ ಶಬ್ಧ. ಅದೊಂದು ವಿಚಿತ್ರ ಮಾಯಾ ಪೆಟ್ಟಿಗೆಯೆಂಬಂತೆ ಅಚ್ಚರಿಯಿಂದ ನೋಡುತ್ತ ನನ್ನ ಅಳು ಯಾವುದೋ ಕ್ಷಣದಲ್ಲಿ ನಿಂತು ಹೋಗಿತ್ತು. ಚಹದಂಗಡಿ ಚಾಲೂ ಸ್ಥಿತಿಯಲ್ಲಿ ಇದೆ ಎಂಬುದನ್ನು ಗಿರಾಕಿಗಳಿಗೆ ತಿಳಿಸಲು ಪಾತ್ರೆಯಲ್ಲಿ ಒಂದು ತೂತು ಬಿಲ್ಲೆ’ (ಆಗಿನ ಕಾಲದ ಒಂದು ನಾಣ್ಯ) ಯನ್ನು ಹಾಕಿ ಇಡುವರೆಂದೂ ಅದು ನೀರು ಕುದಿಯುವಾಗ ಹಾರಾಡುತ್ತ ಪಾತ್ರೆಯ ತಳಕ್ಕೆ ಬಡಿದು ಲಯಬದ್ಧವಾದ ಕಿಣಿ ಕಿಣಿ ಸಪ್ಪಳ ಹೊರಡುವುದೆಂದೂ ತಿಳಿಯಲು ನಾನು ನನ್ನ ಎರಡನೆಯ ತರಗತಿಯವರೆಗೂ ಕಾಯಬೇಕಾಯಿತು. ಉಸೂಳಿ ಅವಲಕ್ಕಿ’ ಗೋವಿಂದ ಶೆಟ್ಟರ ಸ್ಪೇಶಲ್ ತಿಂಡಿಯಾಗಿತ್ತು. ಚೆನ್ನಾಗಿ ಬೇಯಿಸಿದ ಒಟಾಣೆ ಕಾಳುಗಳಿಗೆ ಒಗ್ಗರಣೆ ಹಾಕಿ ಸಿದ್ಧಪಡಿಸಿದ ಉಸೂಳಿ’ಯನ್ನು ಅವಲಕ್ಕಿ ಶೇವು ಬೆರೆಸಿಕೊಡುತ್ತಿದ್ದ ಶೆಟ್ಟರಿಗೆ ಅವುಗಳನ್ನು ಸಮಪ್ರಮಾಣದಲ್ಲಿ ಬೆರೆಸುವ ಹದ ತಿಳಿದಿತ್ತಂತೆ. ಹಾಗಾಗಿಯೇ ಗೋವಿಂದ ಶೆಟ್ಟರ ಉಸೂಳಿ ಅವಲಕ್ಕಿ ಸುತ್ತಲಿನ ನಾಡವರು, ಹಾಲಕ್ಕಿಗಳು, ನಾಮಧಾರಿಗಳು ಆಗೇರರಿಗೆಲ್ಲ ಮರಳು ಹಿಡಿಸುವಷ್ಟು ಪ್ರಿಯವಾದ ತಿಂಡಿಯಾಗಿತ್ತು. ಜುಂಜಜ್ಜಿ ನನಗೆ ಅಂದು ಉಸೂಳಿ ಅವಲಕ್ಕಿ ಪೊಟ್ಟಣ ಕೊಡಿಸಿದಳು. ಅದನ್ನು ತಿಂದಾದ ಬಳಿಕ ಅದೇ ಅಂಗಡಿಯಲ್ಲಿ ಸಿಗುವ ನಾಲ್ಕು ಚಕ್ಕುಲಿಗಳನ್ನೂ ನನ್ನ ನೆಹರೂ ಶರ್ಟಿನ ಎರಡೂ ಕಿಶೆಗಳಲ್ಲಿ ತುಂಬಿದ ಬಳಿಕವೇ ನಾನು ಶಾಲೆಗೆ ಎಂಟ್ರಿಕೊಟ್ಟಿದ್ದೆ. ನಾಡುಮಾಸ್ಕೇರಿಯವರೇ ಆದ ವೆಂಕಟ್ರಮಣ ಗಾಂವಕರ ಎಂಬುವರು ಶಾಲೆಯ ಮುಖ್ಯಾಧ್ಯಾಪಕರಾಗಿದ್ದರು. ಅಜಾನು ಬಾಹು ವ್ಯಕ್ತಿತ್ವ, ಅಚ್ಚಬಿಳಿಯ ಕಚ್ಛೆ ಪಂಚೆಯುಟ್ಟು ಅಂಥದ್ದೇ ಬಿಳಿಯ ನೆಹರೂ ಶರ್ಟ್ ತೊಟ್ಟ ವೆಂಕಟ್ರಮಣ ಗಾಂವಕರ ಕಟ್ಟುನಿಟ್ಟಿನ ಶಿಸ್ತಿಗೆ ಶಾಲೆಯ ಸಹ ಶಿಕ್ಷಕರೂ ಅಂಜಿ ವಿಧೇಯತೆ ತೋರುತ್ತಿದ್ದರು. ನನ್ನಂಥ ಮಕ್ಕಳು ಅವರ ಮುಂದೆ ಸುಳಿಯಲೂ ಭಯ ಪಡುತ್ತಿದ್ದರು. ಶಾಲೆಯ ವಾತಾವರಣದಿಂದ ಪಾರಾಗಿ ಹೊರಬರುವ ತವಕದಲ್ಲೇ ಇದ್ದ ನನ್ನನ್ನು ಇನ್ನೋರ್ವ ಗುರುಗಳು ಆತ್ಮೀಯವಾಗಿ ಕರೆದು ಪ್ರೀತಿಯಿಂದ ಮಾತನಾಡಿಸುತ್ತ ನನ್ನ ಭಯ ನಿವಾರಿಸಿ ಶಾಲೆಯ ಕುರಿತು ಪ್ರೀತಿ ಹುಟ್ಟಿಸಿದರು. ಅವರು ಕುಚೆನಾಡ ತಿಮ್ಮಣ್ಣ ಮಾಸ್ತರರೆಂದೂ ಅಂಕೋಲಾ ತಾಲೂಕಿನ ಬೇಲೇಕೇರಿ ಊರಿನವರೆಂದೂ ನನಗೆ ಅರಿವಾಗಲು ವರ್ಷಗಳೇ ಕಳೆದಿದ್ದವು… ಅಂತೂ ಜುಂಜಜ್ಜಿಯ ದೇಖರೇಖಿಯಲ್ಲಿ ನಾನೂ ಶಾಲೆಗೆ ಸೇರಿದೆ… ******* ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ಅಂಕಣಬರಹ ಗೊಂಬೆಗೆ ತೊಡಿಸಿದ ಬಣ್ಣದ ಅಂಗಿ ಅಳು ತಡೆಯದಾದಾಗ ಆಸರೆಯಾಗುತ್ತಿದ್ದದ್ದು ಒಂದೋ ಅಜ್ಜಿಯ ಮಡಿಲು, ಇಲ್ಲವಾದರೆ ಆ ತಾಯಿಯಂತಹ ಮರದ ತಣಿಲು. ದಪ್ಪದಪ್ಪದ ಎರಡು ಕಾಂಡಗಳು ಬುಡವೊಂದೇ,ಹೆಗಲೆರಡು ಎಂಬ ಹಾಗೆ ನಿಂತಿದ್ದ ಆಲದ ಮರ. ಅದನ್ನು ಅಪ್ಪಿ ಹಿಡಿದು ನಿಂತರೆ ಎಂತಹಾ ದುಗುಡ,ಭಯ,ದುಃಖವನ್ನೂ ಅದು ಹೀರಿ ನಾನು ಹಗುರವಾಗುತ್ತಿದ್ದೆ. ಯಾವುದೋ ಜನ್ಮಾಂತರದ ಬಂಧದ ಸಾಕ್ಷಿಯೇನೋ ಎಂಬಂತೆ ಮುಖ್ಯ ರಸ್ತೆಯ ಒಂದು ಬದಿಗೆ ಉದ್ದದ ನೆರಳು ಹಾಸಿ ನಿಂತ ಆಲದ ಮರವದು. ಅದರ ಪಕ್ಕದಲ್ಲೇ ತುಸು ಅಂತರ ಕಾಪಾಡಿಕೊಂಡು ಬಂದಂತೆ ಇರುವ ನೇರಳೆಮರ ಎರಡು ಮರಗಳ ನಡುವೆ ಹಿಂಬದಿಯಲ್ಲಿ ಪುಟ್ಟ ದೇಹದ ನೆಕ್ಕರೆ ಮಾವಿನ ಮರ, ಬಾಲ್ಯದ ನಮ್ಮ ಒಡನಾಡಿಗಳು. ಆ ಆಲದ ಮರದ ಬಿಳಲುಗಳನ್ನು ಹಿಡಿದು ನೇತಾಡುತ್ತಿದ್ದದ್ದು ,ಉಯ್ಯಾಲೆ ಆಡಿದ್ದೂ, ಅಂಗೈ ಗುಲಾಬಿಯಾಗಿ ಫೂ.ಫೂ ಎಂದು ಊದಿ ಉರಿ ಕಡಿಮೆಯಾಗಿಸಿಕೊಂಡದ್ದು..ನೇರಳೆ ಮರದ ಅಡಿಯಲ್ಲಿ ಕಾದು ಕಾದು ನೇರಳೆ ಹಣ್ಣ ಹೆಕ್ಕಿ ತಿಂದು ಬಾಯಿ ಮಾತ್ರವಲ್ಲ ಅಂಗಿ ಕೂಡ ಬಣ್ಣ ಮಾಡಿಕೊಳ್ಳುತ್ತಿದ್ದೆವು. ಮಳೆಗಾಲದಲ್ಲಿ ಜೋರಾಗಿ ಗಾಳಿ ಬೀಸಿ ಮಳೆ ಹನಿಯುವ ಮೊದಲೇ ಡುಮ್ ಡುಮ್ ಎಂದು ಈ ಕುಳ್ಳ ಮಾವಿನ ಮರ ಹಣ್ಣು ಬಿಸಾಕುತ್ತಿತ್ತು. ನಾವು ಒದ್ದೆಯಾಗುವ ಭಯವಿಲ್ಲದೆ ಓಡಿ ಹೋಗಿ ಹೆಕ್ಕುತ್ತಿದ್ದೆವು. ಆಲದ ಮರದ ಬುಡದಲ್ಲಿ ಕುಳಿತು ಮಾವಿನ ಹಣ್ಣು ಚೀಪುತ್ತಿದ್ದೆವು. ಈ ಮರಗಳ ನೆರಳನ್ನು ದಾಟಿ ಮುಂದೆ ಹೋಗುವಾಗ ಲೆಕ್ಕಮಾಡಿ ಮೂರೇ ಮನೆ. ಒಂದು ನನ್ನ ಗೆಳತಿಯ ಮನೆಯಾದರೆ, ಮತ್ತೆ ಪುಟ್ಟದಾದ ಮನೆ ಬೇಬಿಯವರದ್ದು. ಅಲ್ಲಿ ಕಡ್ಡಿ ದೇಹದ,ಎಲುಬಿನ ಹಂದರ ಕಾಣುವಂತೆ ಇರುವ ಅವರ ಐದಾರು ಗಂಡು ಮಕ್ಕಳು.ನಂತರದಲ್ಲಿ ಸಿಗುವುದು ಬೆಂಕಿಯ ಎದುರು ಊದುಗೊಳವೆ ಹಿಡಿದು ಕಬ್ಬಿಣದ ಉದ್ದದ ಕಡ್ಡಿ ಹಿಡಿದು ಕೆಲಸ ಮಾಡುವ ಮಾಧವ ಆಚಾರಿಯವರ ಅಂಗಡಿ. ಅಂಗಡಿ ಅಗಲಕ್ಕೆ ಬಾಯಿ ತೆರೆದು ಕೂತಿದ್ದರೆ ಅದರದ್ದೇ ಹಲ್ಲಿನಂತೆ ಎದುರು ಮೆಟ್ಟಲಿನಲ್ಲೇ ಕೂತುಕೊಳ್ಳುವ ಅವರ ಹೆಂಡತಿ,ಮಗಳು ಕಲಾವತಿ. ಅವರು ನಮಗೆ ಕಲಾವತಿಯಕ್ಕ. ರಜೆ ಬಂದಾಗ ಅಥವಾ ಇಳಿಸಂಜೆಗೆ ಎರಡು ಮನೆಯ ನಡುವಿನ ಓಣಿಯಲ್ಲಿ ನಡೆದು ಅವರ ಮನೆಯ ಕಿಟಕಿ ಬಳಿ ನಿಂತು ಕರೆಯಬೇಕು. ಕಲಾವತಿಯಕ್ಕ ಬಣ್ಣಬಣ್ಣದ ಪುಟ್ಟಪುಟ್ಟ ಬಣ್ಣದ ಬಾಟಲು ಹಿಡಿದು ಬರುತ್ತಾರೆ. ನಾವು ಕಿಟಕಿಯಿಂದ ನಮ್ಮ ಕೈ ಒಳಗೆ ತೂರಿಸಿದರೆ ಚುಮ್ ಅಂತ ತಂಪು ಉಗುರಿಗೆ ಇಳಿದು ಬಣ್ಣ ಕೈ ಬೆರಳಿನ ಉಗುರನ್ನು ತುಂಬಿಕೊಳ್ಳುತ್ತದೆ. ಎಷ್ಟು ಬಗೆಯ ಬಣ್ಣಗಳು. ಹಚ್ಚಿದ ನಂತರ ಅವರ ಎಚ್ಚರಿಕೆ. ” ಅಂಗಿಗೆ ತಾಗಿಸಬಾರದು. ಹಾಳಾದರೆ ಮತ್ತೆ ಹಚ್ಚುವುದಿಲ್ಲ” ಕೆಲವೊಮ್ಮೆ ಅವರ ಅಮ್ಮ ಕಿಟಕಿಯಲ್ಲಿ ಹಣಕಿ ಗದರಿಸುವುದೂ ಇದೆ. ” ಹೋಗಿ, ಹೋಗಿಯಾ..ಅವಳಿಗೆ ಮನೆಯಲ್ಲಿ ಕೆಲಸ ಇಲ್ಲವಾ” ರಂಗದ ಬಣ್ಣಗಳು ನಮ್ಮನ್ನು ನಮ್ಮಿಂದ ಪಲ್ಲಟಗೊಳಿಸುತ್ತ ಬೇರೇನೇನನ್ನೋ ಸೇರಿಸುತ್ತ ಹೋಗುವಾಗ ಕಲಾವತಿಯಕ್ಕನ ಚಿಕ್ಕಚಿಕ್ಕ ಬಣ್ಣದ ಬಾಟಲುಗಳ ದ್ರವ ನಮ್ಮನ್ನು ಸ್ಪರ್ಶಿಸಿ ಘನವಾಗುತ್ತಿದ್ದ ನೆನಪುಗಳು ಆಪ್ತವೆನಿಸಿಕೊಳ್ಳುತ್ತದೆ. ಕಲಾವತಿಯಕ್ಕನವರ ಅಂಗಡಿ( ಅವರನ್ನೂ) ಸವರಿದಂತೆ ದಾಟಿ ಹೋದರೆ ನಾರಾಯಣಮಾಮನ ಅಂಗಡಿ. ಊರವರಿಗೆ ಅದು ಕಾಮತ್ರ ಅಂಗಡಿಯಾದರೆ ನಮಗೆ ಮಕ್ಕಳಿಗೆ ಮಾತ್ರ ನಾರಾಯಣ ಮಾಮನ ಅಂಗಡಿ. ಅವರು ಆ ಅಂಗಡಿಯಲ್ಲಿ ಕೆಲಸಕ್ಕೆ ಇರುವುದು. ಜಿನಸು ಅಂಗಡಿಯಲ್ಲಿ ತೊಗರಿ,ಉದ್ದು,ಮೆಣಸು ಸಾಸಿವೆ ಕಾಗದದ ಪೊಟ್ಟಣದಲ್ಲಿ ಕೊಡುವುದು ಅಂದಿನ ಕ್ರಮ. ಆಗ ಪ್ಲಾಸ್ಟಿಕ್ ಉಪಯೋಗ ಬಹಳ ಇದ್ದ ನೆನಪಿಲ್ಲ. ಆ ಅಂಗಡಿಗೆ ರಾಶಿ ಪೇಪರ್, ಪುಸ್ತಕಗಳು ಬಂದು ಬೀಳುತ್ತಿತ್ತು. ಬಿಡುವಿನ ವೇಳೆಯಲ್ಲಿ ಇವರಿಗೆ ಅದನ್ನು ಪರಪರಪರ ಹರಿದು ತನಗೆ ಬೇಕಾಗುವ ಅಳತೆಗೆ ತುಂಡು ಮಾಡುವ ಕೆಲಸ. ಪುಸ್ತಕಗಳೂ ಬರುತ್ತಿದ್ದವು. ನಾವು ಅಂಗಡಿಗೆ ಸಾಮಾನು ತರಲು ಹೋಗಿ ಪಟ್ಟಿಯಲ್ಲಿರುವ ಪೊಟ್ಟಣಗಳು ನಮ್ಮ ಚೀಲ ಸೇರಿದರೂ ಚಾಕಲೇಟಿಗೆ ಕಾಯುವ ಹಾಗೆ ಸುಮ್ಮನೆ ಅವರ ಮುಖ ನೋಡುತ್ತಾ ನಿಲ್ಲುವುದು. ಅವರು ಸನ್ನೆಯಲ್ಲೇ ಮೂರು, ಎರಡು, ಆಮೇಲೆ, ಇಲ್ಲ ಹೀಗೆ ಸಂದೇಶ ರವಾನಿಸುವುದು. ನಮ್ಮನ್ನು ಅವರ ರೂಮಿನ ಬಳಿ ಆದಿತ್ಯವಾರ ಬರ ಹೇಳುವುದೂ ಇತ್ತು. ಆದಿತ್ಯವಾರ ಅವರಿಗೆ ರಜೆ. ಅಲ್ಲಿ ಈ ಮಾಮನ ಕೋಣೆಯಲ್ಲಿ ರಾಶಿ ಚಂದಮಾಮ ಮಾತ್ರವಲ್ಲ ಬಗೆಬಗೆಯ ಕಥೆ, ಚಿತ್ರದ ಪುಸ್ತಕಗಳು. ಚಂದಮಾಮ ಪುಸ್ತಕದ ಕಥೆಗಳು, ಜತೆಗೆ ಅದರೊಳಗಿನ ಅನೇಕ ಚಿತ್ರಗಳು ನನಗೆ ಅಚ್ಚುಮೆಚ್ಚು. ಪುಟಪುಟಗಳಲ್ಲೂ ಕಥೆಯ ಮೇಲ್ಗಡೆ, ಎಡಬದಿ ಅಚ್ಚಾದ ಹಲವು ಭಾವಾಭಿನಯದ,ಕತೆಗೆ ಹೊಂದುವ ಚಿತ್ರಗಳು ನೇರ ಇಳಿದುಬಂದು ಮನಸ್ಸಿನೊಳಗೆ ಜಾಗ ಹಿಡಿದು ಕೂರುತ್ತಿದ್ದವು. ಆ ಚಿತ್ರಗಳ ಹಾಗೆಯೇ ಮುಖಾಭಿನಯ ಮಾಡುವ ಹುಚ್ಚು ನನಗೆ. ಹೊಸಹೊಸ, ನವನವೀನ ಪಾತ್ರಗಳು ಭಿತ್ತಿಯಲ್ಲಿ ಆಟವಾಡುತ್ತಿದ್ದವು. ಕಲ್ಪನೆಯ ಲೋಕದ ಅನಿಯಂತ್ರಿತ ದಂಡಯಾತ್ರೆಗೆ ಇವುಗಳು ಸುರಿದು ಕೊಟ್ಟ ಕಪ್ಪ ಕಾಣಿಕೆ ಅಷ್ಟಿಷ್ಟಲ್ಲ. ಈಗಲೂ ವರ್ತಕ, ಬೇತಾಳ, ರಾಜ, ರಾಜಕುಮಾರಿ, ರೈತ ಎಂಬ ಪದದ ಒಳಗಿನ ಆತ್ಮದಂತೆ ಈ ಚಿತ್ರಗಳು ತೆರೆದುಕೊಳ್ಳುವ ಪರಿ, ಆ ವಿಸ್ಮಯ ಅನುಭವಿಸಿದವರಿಗಷ್ಟೇ ವೇದ್ಯ. ರಂಗದಲ್ಲೂ ಹೀಗೇ ತಾನೇ!. ಪುಟಪುಟಗಳನ್ನು ತಿರುಗಿಸಿದಂತೆ ಪಾತ್ರಗಳು ಬದಲಾಗುತ್ತಾ ನಾವು ನಾವಲ್ಲದ ನಾವೇ ಆಗಿ ತೆರೆದುಕೊಳ್ಳುವ ಸೋಜಿಗ. ನನ್ನ ಬಣ್ಣದ ಲೋಕದ ಬಾಗಿಲೇ ಚಂದಮಾಮ. ಅಂತಹ ಚಂದಮಾಮದ ರಾಶಿ ಹಾಕಿ ಕಬ್ಬಿಣದ ತುಂಡನ್ನು ಸೆಳೆಯುವ ಆಯಸ್ಕಾಂತದಂತೆ ನಮ್ಮನ್ನು ಈ ನಾರಾಯಣ ಮಾಮ ಆಟವಾಡಿಸುತ್ತಿದ್ದ. ಕೆಲವೊಮ್ಮೆ ಮಾತ್ರ ವಿಪರೀತ ಸಿಡುಕಿ ಕೋಲು ತೋರಿಸಿ ಹೆದರಿಸುತ್ತಿದ್ದುದೂ ಉಂಟು. ಆದಿತ್ಯವಾರ ನಮಗೆ ಭಾರೀ ಕೆಲಸಗಳು. ಈ ನಾರಾಯಣ ಮಾಮನ ರೂಮಿನ ತಲಾಶ್ ಮುಗಿಸಿ ಒಂದಷ್ಟು ಪುಸ್ತಕ ಕೈ,ಕಂಕುಳಲ್ಲಿಟ್ಟು ಹೊರ ಬಂದರೆ ಮುಖ್ಯರಸ್ತೆ. ರಸ್ತೆಯ ಇನ್ನೊಂದು ಬದಿಯಲ್ಲಿ ಬಾಬಣ್ಣನ ಅಂಗಡಿ. ಉದ್ದದ ಹಾಲ್ ನಂತಹ ಅಂಗಡಿಯ ನಡುವಿನಲ್ಲಿ ಬಾಗಿಲು. ಬಾಬಣ್ಣ ಒಂದು ಮೂಲೆಯಲ್ಲಿ ತನ್ನ ಟೈಲರಿಂಗ್ ಮೆಶಿನ್ ಹಿಂದೆ ಕೂತು ಟಕಟಕ ಶಬ್ದ ಹೊರಡಿಸುತ್ತಾ ಬಟ್ಟೆ ಹೊಲಿಯುತ್ತಿರುತ್ತಾರೆ. ಪಕ್ಕದಲ್ಲಿ ತುಂಡು ಬಟ್ಟೆಗಳ ಸಣ್ಣ ರಾಶಿ. ಇನ್ನೊಂದು ಬದಿಯಲ್ಲಿ ಉದ್ದದ ಒಂದು ಕೋಲು. ಮೂಗಿನ ತುದಿಗೆ ಅಂಟಿಕೊಂಡ ಕಪ್ಪು ಚೌಕಟ್ಟಿನ ದಪ್ಪ ಕನ್ನಡಕ, ಕಪ್ಪು ಬಿಳಿ ಸಂಧಾನ ಮಾಡಿಕೊಂಡಂತೆ ಬೆರೆತಿರುವ ತಲೆಗೂದಲು, ಬಾಯಿಯಲ್ಲಿ ತುಂಬಿಕೊಂಡ ಬೀಡ. ನಮ್ಮ ಧಾಳಿ ಅವರ ಅಂಗಡಿಗೆ ಆಗುವುದನ್ನು ಕನ್ನಡಕದ ಮೇಲಿನಿಂದ ನೋಡಿ ” ಹುಶ್ ಹುಶ್” ಎಂದು ಕಾಗೆ ಓಡಿಸುವಂತೆ ತಾಂಬೂಲ ತುಂಬಿಕೊಂಡ ಬಾಯಿಯಿಂದಲೇ ಗದರಿಸುವಿಕೆ. ನಮಗೆ ಅದೆಲ್ಲ ಒಂದು ಚೂರೂ ಲೆಕ್ಕಕ್ಕಿಲ್ಲ. ನಾವು ಇನ್ನೊಂದು ಮೂಲೆಯಲ್ಲಿ ಬಿದ್ದಿರುವ ಸಣ್ಣ ಸಣ್ಣ ತುಂಡು ಬಟ್ಟೆಗಳ ದೊಡ್ಡ ರಾಶಿಯತ್ತ ಓಡುವುದು. ಪುಸ್ತಕ ಅಲ್ಲೇ ಮೂಲೆಯಲ್ಲಿ ಪೇರಿಸಿಟ್ಟು ಬಟ್ಟೆಗಳ ರಾಶಿಯಲ್ಲಿ ನಮ್ಮದು ಹುಡುಕಾಟ. ಗೋಪುರದಂತಿರುವ ರಾಶಿ ನಮ್ಮ ಹಾರಾಟಕ್ಕೆ ಕುಸಿದು ಆಕಾರ ಬದಲಾದಂತಾಗುವುದೂ, ಕೆಲವೊಮ್ಮೆ ನಾವೇ ಮೇಲೆ ಏರಿ ಕೆಳಗೆ ಹಾರಿ ಬಿದ್ದು ಕೂಗುವುದು ಸಾಮಾನ್ಯ ಸಂಗತಿ. ಆಗ ಬಾಬಣ್ಣ ತನ್ನ ಸ್ವಸ್ಥಾನದಿಂದ ಪಕ್ಕದಲ್ಲಿದ್ದ ಕೋಲು ತಗೊಂಡು ಓಡಿ ಬರುತ್ತಾರೆ. ನಮಗೆ ಅದು ಆಟದ ಎರಡನೇ ಭಾಗ. ನಾವು ಬಟ್ಟೆಯ ರಾಶಿಗೆ ಸುತ್ತು ಬರುವುದು,ಹಾರುವುದು ಮೇಲೇರುವುದು. ಹಿಂಭಾಲಿಸುವ ಬಾಬಣ್ಣ “ಹ್ಹೇ ಹ್ಹೇ” ಬಟ್ಟೆಯ ರಾಶಿಗೆ ತನ್ನ ಕೋಲಿನಿಂದ ಹೊಡೆಯುವುದು. ನಾವು ಬಾಬಣ್ಣನಿಂದ ತಪ್ಪಿಸಿಕೊಂಡು ಓಡುವುದು. ಬಾಯಲ್ಲಿದ್ದ ಕವಳದಿಂದ ಸಲೀಸಾಗಿ ಬಯ್ಯುವುದೂ ಸಾಧ್ಯವಾಗದೆ ಬಾಗಿಲ ಬಳಿ ಓಡಿ ಬೆರಳೆರಡು ತುಟಿಗಳ ಮೇಲಿಟ್ಟು ಬಾಯಿಯಲ್ಲಿದ್ದ ಕೆಂಪು ರಸವನ್ನು ಪುರ್ರೆಂದು ಪಿಚಕಾರಿಯಂತೆ ಉಗುಳಿ ಬರುವಾಗ ನಾವು ಒಳಗೆ ಅಡಗಿಯಾಗುತ್ತಿತ್ತು. ” ಹೊರಗೆಬನ್ನಿ, ಬನ್ನಿಯಾ..” ಅಂತ ಕೂಗಿ ಕೂಗಿ ಮತ್ತೆ ಹೋಗಿ ತನ್ನ ಕುರ್ಚಿಗೆ ಅಂಟುತ್ತಿದ್ದರು. “ಲಗಾಡಿ ಹೋಯ್ತು ಇಡೀ ಅಂಗಡಿ. ಈ ಬಟ್ಟೆಗಳನ‌್ನು ಸರಿ ಮಾಡುವುದು ಯಾರು? ಇನ್ನೊಮ್ಮೆ ಯಾರಾದರೂ ಬಟ್ಟೆ ರಾಶಿ ಹತ್ತಬೇಕು. ಹೊರಗೆ ಹೋಗಲು ಬಿಡುವುದಿಲ್ಲ. ಇಲ್ಲೇ ಕಟ್ಟಿ ಹಾಕ್ತೇನೆ” ಎನ್ನುತ್ತಿದ್ದರು. ಅಪರೂಪಕ್ಕೊಮ್ಮೆ ಅವರ ಕೈಗೆ ಸಿಕ್ಕಿಬಿದ್ದರೂ ಅವರು ಹೊಡೆದದ್ದಿಲ್ಲ. ನಾವು ಕಿರುಚಿದ್ದಷ್ಟೆ. ಅವರ ಊರು ಯಾವುದು, ಎಲ್ಲಿಂದ ಬರುತ್ತಿದ್ದರು ಗೊತ್ತಿಲ್ಲ. ಅವರೆಂದರೆ ನಮಗೆ ಬಹಳ ಪ್ರೀತಿ. ನಾನೂ ಯಾರೂ ಇಲ್ಲದ ಸಮಯ ಹೋಗಿ ಬಣ್ಣದ ಬಟ್ಟೆ ತುಂಡು ಆರಿಸಿ ಅವರ ಬಳಿ ಹೋಗಿ ” ನನ್ನ ಗೊಂಬೆಗೆ ಅಂಗಿ ಹೊಲಿದು ಕೊಡ್ತೀರಾ” ಎಂದರೆ ಪ್ರೀತಿಯಿಂದ ದಿಟ್ಟಿಸಿ “ಇದು ಚಿಕ್ಕದಾಯಿತು. ತಡಿ, ಬಂದೆ” ಎನ್ನುತ್ತಾ ಆ ಬಟ್ಟೆ ರಾಶಿಯಿಂದ ಬೇರೆ ಬಟ್ಟೆ ಆರಿಸುತ್ತಿದ್ದರು. ಇದು ಬೇಡ ಅಂದರೆ ಇದು, ಇದು ಎಂದು ಕೆಲವು ತುಂಡು ಬಟ್ಟೆ ತೋರಿಸಿ ಒಂದನ್ನು ಆರಿಸಿ ನಾಳೆ ಅಂಗಿ ಮಾಡಿ ಕೊಡ್ತೇನೆ., ಎಂದು ಹೊಲಿದು ಕೊಡುವ ಮಮತಾಮಯಿ. ನಾನು ನನ್ನ ಉಳಿದ ಇಬ್ಬರು ಗೆಳತಿಯರಿಗೆ ತೋರಿಸಿ ಅವರೂ ಬಂದು ಹಠಕ್ಕೆ ಬೀಳುತ್ತಿದ್ದರು. ಆಗ ಕೋಪ ಮಾಡಿ ” ನನ್ನ ಅಂಗಡಿಯೊಳಗೆ ಬಂದರೆ ಜಾಗ್ರತೆ. ಹೋಗಿ ಹೊರಗೆ” ಎಂದು ಗದರಿಸಿದರೂ ಮೂರು ಅಂಗಿಗಳು ನಮ್ಮಲ್ಲಿರುವ ಒಂದು ಗೊಂಬೆಗೆ ತಯಾರಾಗುತ್ತಿದ್ದವು. ಕಿಟಕಿಯ ಬಳಿ ಕುಳಿತುಕೊಳ್ಳುವ ಬಾಬಣ್ಣ ಕಿಟಕಿಯ ದಂಡೆಯಲ್ಲಿ ಒಂದು ರೆಡಿಯೋ ಇಟ್ಟಿದ್ದರು. ಅದರಲ್ಲಿ ಬರುವ ಕಾರ್ಯಕ್ರಮಗಳನ್ನು ಕೇಳುತ್ತ ಕೆಲಸ ಮಾಡುತ್ತಿದ್ದರು. ಶಾಲಾ ಮಕ್ಕಳ ಅಂಗಿ, ಚಡ್ಡಿ. ಪ್ಯಾಂಟ್. ಹುಡುಗಿಯರ ಫ್ರಾಕ್, ಉದ್ದಲಂಗ, ರವಕೆ, ಸ್ಕರ್ಟ್, ಸೀರೆಯ ಬ್ಲೌಸ್. ಬಾಬಣ್ಣನ ಅಂಗಡಿಯಲ್ಲಿ ರೂಪುಗೊಳ್ಳುತ್ತಿದ್ದವು. ಅವರಿಗೆ ಯಾರೂ ಸಹಾಯಕರು ಇಲ್ಲ. ಅವರೇ ಎಲ್ಲವನ್ನೂ ಮಾಡುತ್ತಿದ್ದರು. ತಮ್ಮ ಬಳಿಯ ಟೇಪ್ ಹಿಡಿದು ಅಳತೆ ಮಾಡು, ಬಟ್ಟೆ ಕತ್ತರಿಸು, ಹೊಲಿದು ಕೊಡು. ಹೊಸ ಪಾತ್ರ ಕಟ್ಟಿಕೊಡುವ ನಿರ್ದೇಶಕನಂತೆ ಅವರ ಅಂಗಡಿಯಲ್ಲಿ ಬಗೆಬಗೆಯ ದಿರಿಸುಗಳು ಹುಟ್ಟಿ ಅಲ್ಲಲ್ಲಿ ರಾಶಿ ಬೀಳುತ್ತಿದ್ದವು. ಅವರು ಮಾಡಿಕೊಡುವ ಚೆಂದದ ವಸ್ತೃಗಳನ್ನು ಕಂಡು ಏಕಲವ್ಯನಂತೆ ನಾವೂ ನಮ್ಮ ಗೊಂಬೆಗೆ ದಿರಿಸು ತಯಾರಿಸುತ್ತಿದ್ದೆವು. ನಮ್ಮ ಗೊಂಬೆಗೆ ಪ್ರೀತಿಯಿಂದ ನೇವರಿಸಿ ಮಗ್ಗದ ಸೀರೆಯ ತುಂಡಿನಿಂದ ಸೀರೆ ಮಾಡಿ ಸುತ್ತಿ ಸೆರಗು ತಲೆಯ ಮೇಲಿನಿಂದ ಬರುವಂತೆ ಹಾಕಿದರೆ ಪುಟ್ಟ ಪುಟಾಣಿ ಗೊಂಬೆ ಅಜ್ಜಿಯಾಗಿ ಬಿಡುತ್ತಿದ್ದಳು. ಅವಳನ್ನು ದಪ್ಪ ಮಾಡಲು ಮೊದಲು ಒಂದೆರಡು ಬಟ್ಟೆ ಸುತ್ತಿ ಕೊನೆಗೆ ಮಗ್ಗದ ತುಂಡು ಉಡಿಸುತ್ತಿದ್ದೆವು. ಸಿಲ್ಕ್ ಸೀರೆಯಂತಹ ಹೊಳಪು ಬಟ್ಟೆ ಸಿಕ್ಕಿದರೆ ನಮ್ಮ ಗೊಂಬೆ ರಾಜಕುಮಾರಿ. ತಲೆಯ ಮೇಲಿನಿಂ ದ ಆ ಬಟ್ಟೆ ಎರಡೂ ಬದಿ ಇಳಿಸಿ ಬಿಡುವುದು. .ಮತ್ತೊಂದು ಬಣ್ಣದ ಬಟ್ಟೆ ಅದಕ್ಕೆ ಸುತ್ತಿ ನವೀನ ಮಾದರಿಯ ಬೊಂಬಾಯಿ ವಸ್ತೃ ಶೃಂಗಾರ. ಈಗ ಬೊಂಬೆ, ಮುಂಬಯಿಯ ಷಹರಸುಂದರಿ. ಬೊಂಬೆ ಅಮ್ಮನಾದರೆ ಸಾಧಾರಣ ಸೀರೆ ಚೆಂದ ಮಾಡಿ ಸೆರಗು ಹಾಕಿ ತಯಾರು ಮಾಡುತ್ತಿದ್ದೆವು. ಫ್ರಾಕ್ ಹಾಕಿಸಿದರೆ ಬೊಂಬೆ ಚಂದದ ಶಾಲಾ ಹುಡುಗಿ. ಹೀಗೆ ನಮ್ಮಲ್ಲಿದ್ದ ಒಂದೇ ಒಂದು ಬೊಂಬೆ, ನಮ್ಮ ಬಣ್ಣದ ಚೌಕಿಯೊಳಗಿಂದ ಮೇಕಪ್ ಮಾಡಿಸಿಕೊಂಡು ಹಲವು ಪಾತ್ರಗಳಾಗಿ ಹೊಳೆಯುತ್ತಿತ್ತು. ಬಟ್ಟೆಗಳ ಉದ್ದ ವ್ಯತ್ಯಾಸವಾದರೆ ಪುಟ್ಟ ಹೊಲಿಗೆ ಬೇಕಾದರೆ ಮತ್ತೆ ಗೊಂಬೆಯ ಜೊತೆಗೇ ಹೋಗಿ ಬಾಬಣ್ಣನಿಗೆ ದುಂಬಾಲು ಬೀಳುತ್ತಿದ್ದೆವು. ನಮ್ಮ ಬಳಿ ಪುಟ್ಟದಾದ ಒಂದು ಡಬ್ಬಿ. ಅದರೊಳಗೆ ವೇಷದ ಬಟ್ಟೆಗಳು. ಅದೆಷ್ಟು ಬಗೆಬಗೆ. ಕೆಲವೊಮ್ಮೆ ಪುರುಸೊತ್ತಿದ್ದರೆ ಬಾಬಣ್ಣ ಹೊಸ ರೀತಿಯ ಅಂಗಿ ಹೊಲಿದು ಅವರೇ ಅದಕ್ಕೊಂದು ಹೆಸರಿಟ್ಟು ಕನ್ನಡಕದ ಮೇಲಿನಿಂದ ನಮ್ಮ ಮೇಲೆ ಕಣ್ಣು ಹರಿಸಿ, ಸ್ಥಿರಗೊಳಿಸಿ ನಗುತ್ತಿದ್ದರು. ಚೌಕಿಯಲ್ಲಿ ಬಗೆಬಗೆಯ ಪಾತ್ರಗಳು ಜನ್ಮ ತಾಳುವುದೂ ಹೀಗೇ ತಾನೇ..ಒಬ್ಬ ನಿರ್ದೇಶಕ. ಒಂದು
ಅಂಕಣ ಬರಹ ಸಂಕ್ರಾಂತಿ ಬಂತೋ ರತ್ತೋ ರತ್ತೋ ಸಂಕ್ರಾಂತಿ ಎಂದ ಕೂಡಲೇ ನೆನಪಾಗುವುದೇ ಚಂದದ ರೇಷಿಮೆ ಲಂಗ ತೊಟ್ಟು ಉದ್ದ ಜಡೆ ಹೆಣೆದುಕೊಂಡು, ಘಮ ಘಮ ಮಲ್ಲಿಗೆ ಹೂ ಮುಡಿದು, ಏನೆಲ್ಲ ಸಾಧ್ಯವಿರುತ್ತದೋ ಅಷ್ಟೆಲ್ಲಾ ಅಲಂಕಾರ ಮಾಡಿಕೊಂಡು ನೆರೆಹೊರೆಯವರಿಗೆ ಎಳ್ಳು ಬೆಲ್ಲ ಹಂಚಲು ಹೊರಡುತ್ತಿದ್ದದ್ದು… ಸಂಕ್ರಾಂತಿ ಹಬ್ಬದ ಪ್ರಮುಖ ಆಕರ್ಷಣೆಯೇ ಇದಾಗಿರುತ್ತಿತ್ತಾದರೂ ಸಂಕ್ರಾಂತಿಗಿರುವ ಆಕರ್ಷಣೆಗಳ ದೊಡ್ಡಪಟ್ಟಿಯೂ ಇರುತ್ತಿತ್ತು. ಸಂಕ್ರಾಂತಿ ಹೆಣ್ಣುಮಕ್ಕಳ ಹಬ್ಬ ಎನಿಸಿಬಿಡುತ್ತಿತ್ತು. ಅದೆಷ್ಟೋ ದಿನಗಳ ತಯಾರಿ ಈ ಹಬ್ಬಕ್ಕೆ. ಹದಿನೈದು ದಿನಗಳಿಗೆ ಮುಂಚೆಯೇ ಎಳ್ಳು-ಬೆಲ್ಲ ತಯಾರಿಸಲು ಬೇಕಿರುವ ವಸ್ತುಗಳ ಖರೀದಿಸಿ ತರುತ್ತಿದ್ದೆವು. ಮನೆಯಲ್ಲಿ ಇರುತ್ತಿದ್ದ ಅಚ್ಚುಗಳಿಗೆ ಜೀವ ಬರುತ್ತಿತ್ತು. ನಾನಾ ನಮೂನಿಯ ಸಕ್ಕರೆ ಅಚ್ಚುಗಳು ಕುತೂಹಲ ಮತ್ತು ಬಾಯಲ್ಲಿ ನೀರೂರಿಸುವ ಸಕ್ಕರೆ ಗೊಂಬೆಗಳನ್ನು ನಮ್ಮದುರು ತಂದು ನಿಲ್ಲಿಸುತ್ತಿದ್ದವು. ಅದೆಷ್ಟು ಚಂದದ ಬಣ್ಣಗಳು ಇವುಗಳದ್ದು! ಈ ಗೊಂಬೆಗಳನ್ನು ನೋಡುತ್ತಾ ನೋಡುತ್ತಾ ಚಪ್ಪರಿಸಿ ತಿನ್ನಬಹುದಿತ್ತು ಎನ್ನುವುದೇ ನಮ್ಮ ದೊಡ್ಡ ಅಚ್ಚರಿಯಾಗಿರುತ್ತಿತ್ತು… ಸಕ್ಕರೆ ಗೊಂಬೆಗಳಾದ ಮೇಲೆ ಇನ್ನು ಎಳ್ಳು-ಬೆಲ್ಲದ ತಯಾರಿಕೆ. ಊರೆಲ್ಲ ಎಳ್ಳು ಬೀರಿಯಾದ ಮೇಲೂ ತಿಂಗಳೊಪ್ಪತ್ತಿಗಾಗುವಷ್ಟು ಎಳ್ಳು ಬೆಲ್ಲ ಉಳಿಯಲೇ ಬೇಕಿತ್ತು… ನಾವೆಲ್ಲ ಮಕ್ಕಳಂತೂ ಸಂಕ್ರಾಂತಿ ಮುಗಿದು ಎಷ್ಟೋ ದಿನಗಳಾದರೂ ಸಂಕ್ರಾಂತಿ ಕಾಳು ಕೇಳುವುದನ್ನು ಬಿಡುತ್ತಿರಲಿಲ್ಲ. ಅದೆಷ್ಟು ಸವಿ… ಅದೆಂತಹಾ ಸವಿ…ಎಳ್ಳು ಸಂಬಂಧವನ್ನು ವೃದ್ಧಿಸುತ್ತದೆ ಮತ್ತು ಬೆಲ್ಲ ಆ ಸಂಬಂಧವನ್ನು ಮಧುರವಾಗಿಸುತ್ತದೆ ಎನ್ನುವ ನಂಬಿಕೆ ಇದೆ ಈ ಎಳ್ಳು-ಬೆಲ್ಲದ ಹಿಂದೆ. ಅದಕ್ಕೆ ಬಣ್ಣ ಬಣ್ಣದ ಜೀರಿಗೆ ಪೆಪ್ಪರಮೆಂಟು, ಬಣ್ಣ ಬಣ್ಣದ ಸಕ್ಕರೆಯ ಸಂಕ್ರಾಂತಿ ಕಾಳು, ಹುರಿದ ಶೇಂಗಾ, ಪುಟಾಣಿ, ಒಣ ಕೊಬ್ಬರಿ, ಸಣ್ಣಗೆ ತುಂಡು ಮಾಡಿದ ಬೆಲ್ಲ ಎಲ್ಲವನ್ನೂ ಬೆರೆಸಿಯಾದ ಮೇಲೆಯೇ ಎಳ್ಳು-ಬೆಲ್ಲ ತಯಾರಾಗುತ್ತಿದ್ದದ್ದು. ಚಳಿಗಾಲದ ಈ ಹಬ್ಬ ವಾತಾವರಣಕ್ಕೆ ಅನುಗುಣವಾಗಿ ಆಚರಿಸಲ್ಪಡುತ್ತಿದ್ದ ರೀತಿಯಿಂದಲೂ ಖುಷಿಯ ಹಬ್ಬ. ಚಳಿಯ ದಿನಗಳಲ್ಲಿ ಮನುಷ್ಯನ ದೈಹಿಕ ಚಟುವಟಿಕೆಗಳು ನಿಧಾನಗತಿಯಲ್ಲಿರುತ್ತವೆ. ಅಂತಹ ಸಮಯದಲ್ಲಿ ಹಬ್ಬದ ನೆವದಲ್ಲಿ ದೇಹವನ್ನು ತಣಿಸುವ ಒಂದಷ್ಟು ಆಚರಣೆಗಳು ಮೈ ಮನಸಿಗೆ ಮುದನೀಡುತ್ತದೆ. ಎಳ್ಳು, ಕೊಬ್ಬರಿಗಳಲ್ಲಿ ಎಣ್ಣೆಯ ಅಂಶವಿರುತ್ತದೆ. ಇವು ಶೀತ, ವಾತವನ್ನು ದೂರ ಮಾಡುತ್ತವೆ. ಕಬ್ಬು ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಎಳ್ಳು, ಕಡಲೆ ಬೀಜಗಳಿಂದ ಕ್ಯಾಲ್ಶಿಯಂ ದೊರೆತರೆ ಬೆಲ್ಲದಿಂದ ಕಬ್ಬಿಣಾಂಶ ದೊರೆಯುತ್ತದೆ. ಮತ್ತೆ ಪೊಂಗಲ್ ತಯಾರಿಸಲು ಬಳಸುವ ಹೆಸರು ಬೇಳೆಯಲ್ಲಿ ವಿಟಮಿನ್ ಸಿ ಇರುತ್ತದೆ ಮತ್ತು ಮಣಸು-ಜೀರಿಗೆ ಜೀರ್ಣಶಕ್ತಿ ವೃದ್ಧಿಸುತ್ತದೆ. ಇವೆಲ್ಲವನ್ನೂ ಗಮನಿಸಿದಾಗ ನಮ್ಮ ಪೂರ್ವಿಕರು ಧಾರ್ಮಿಕವಾಗಿ ರೂಪಿಸಿದ ಆಚರಣೆಗಳ ಹಿಂದೆ ಒಂದಲ್ಲ ಒಂದು ವೈಜ್ಞಾನಿಕ ತಳಹದಿ ಅಡಗಿರುವುದು ಕಂಡುಬರುತ್ತದೆ. ಎಲ್ಲವನ್ನೂ ಮೂಢನಂಬಿಕೆ ಎಂದು ತಳ್ಳಿಹಾಕುವ ಮೊದಲು ಯಾವುದನ್ನು ಅನುಸರಿಸಬೇಕು, ಯಾವುದನ್ನು ಬಿಡಬೇಕು ಎನ್ನುವುದನ್ನು ಅರಿಯಬೇಕಿದೆ. ಮತ್ತು ನಮ್ಮ ಸಂಸ್ಕೃತಿಯ ಉಳಿವೂ ಇಂತಹ ಆಚರಣೆಗಳಲ್ಲಿಯೇ ಇರುತ್ತದೆ ಎನ್ನುವುದನ್ಬು ನಾವು ಮರೆಯಬಾರದು. ಪಥವ ಬದಲಿಸಿದ ಸೂರ್ಯ ಮೊಳಗಿ ಸಂಕ್ರಾಂತಿ ತೂರ್ಯ ಸವೆದಿದೆ ದಾರಿ ಕವಿದಿದೆ ಮಂಜು ಬದಲಾವಣೆ ಅನಿವಾರ್ಯ -ಬಿ.ಆರ್.ಲಕ್ಷ್ಮಣ ರಾವ್ ಸೂರ್ಯ ತನ್ನ ಇಷ್ಟು ದಿನದ ಪಥವನ್ನು ಬದಲಿಸಿ ಮತ್ತೊಂದು ಪಥದಲ್ಲಿ ತಿರುಗಲು ಶುರು ಮಾಡುತ್ತಾನೆ. ಹಿಂದೂ ಪಂಚಾಂಗದ ಪ್ರಕಾರ ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಎಂದು ಮೇಷ ರಾಶಿ ಪ್ರವೇಶಿಸಿದಾಗ ಸೌರಮಾನ ಯುಗಾದಿ ಎಂದು ತುಲಾ ರಾಶಿ ಪ್ರವೇಶಿಸಿದ ದಿನವನ್ನು ಕಾವೇರಿ ತೀರ್ಥೋದ್ಭವ ತುಲಾ ಸಂಕ್ರಮಣ ಎಂದು ಆಯಾನಾಧಾರದ ಮೇಲೆ ಆಚರಿಸಲಾಗುತ್ತದೆ ಮತ್ತು ಈ ದಿನ ಪೌರಾಣಿಕ ಹಿನ್ನೆಲೆಯಲ್ಲಿ ಊರ್ಧ್ವ ಲೋಕಗಳಾದ ಬುವರ್ಲೋಕ(ತಪಸ್ಸಿನಲ್ಲಿ ಮಗ್ನರಾದ ಮುನಿಗಳು ವಾಸ ಮಾಡುವ ಲೋಕ) ಸ್ವರ್ಗಲೋಕದಲ್ಲಿ(ಇಂದ್ರಾದಿ ಅಷ್ಟದಿಕ್ಪಾಲಕರು, ನವಗ್ರಹಗಳು,ಅನೇಕ ಪ್ರತ್ಯಧಿದೇವತೆಗಳು ವಾಸಮಾಡುವ ಲೋಕ) ಸೂರ್ಯೋದಯ ವಾಗುವ ಕಾಲವನ್ನು ನಾವು ಉತ್ತರಾಯಣದ ಸಂಕ್ರಾಂತಿ ಹಬ್ಬ ಎಂದು ಆಚರಿಸುವ ವಾಡಿಕೆ. ಈ ದಿನವನ್ನು ಒಂದು ಪವಿತ್ರ ದಿನ ಎಂದು ಭಾವಿಸಲಾಗಿದೆ ಕಾರಣ ಲೋಕಕಲ್ಯಾಣ ಕರ್ತರಾದ ದೇವತೆಗಳು ಎಚ್ಚರಗೂಳ್ಳುವ ದಿನ ಇದು ಎನ್ನುವ ಧಾರ್ಮಿಕ ನಂಬಿಕೆ. ಆದರೆ ಅವರು ಸ್ನಾನ ಸಂಧ್ಯಾವಂದನೆ ಮುಗಿಸಿ ಕಾರ್ಯಮಗ್ನರಾಗುವುದು ಮುಂದಿನ ರಥಸಪ್ತಮಿಯ ದಿನ ಎಂಬ ಪ್ರತೀತಿಯೂ ಇದೆ. ಮಹಾಭಾರತದ ಭೀಷ್ಮಾಚಾರ್ಯರು ಯುದ್ದಮುಗಿದು ಶರಶಯ್ಯೆಯಲ್ಲಿ ಪವಡಿಸಿದ್ದರೂ, ದೇಹ ಬಾಣಗಳ ಇರಿಯುವಿಕೆಯಿಂದ ನೋಯುತ್ತಿದ್ದರೂ ಪ್ರಾಣಬಿಡಲು ಉತ್ತರಾಯಣದ ಪುಣ್ಯಕಾಲಕ್ಕಾಗಿ ಕಾದರಂತೆ ಎಂದು ಮಹಾಭಾರತ ನಮಗೆ ತಿಳಿಸಿಕೊಡುತ್ತದೆ. ಉತ್ತರಾಯಣ ಪುಣ್ಯಕಾಲದ ಈ ಹಬ್ಬ ಸುಗ್ಗಿಯನ್ನು ಸಾರುವ ಹಬ್ಬವಾಗಿದೆ. ಈ ದಿನ ಹೊಸ ಅಕ್ಕಿಯಲ್ಲಿ ಪೊಂಗಲ್ ಮಾಡಿ ದೇವರಿಗೆ ನೈವೇದ್ಯ ಮಾಡುತ್ತಾರೆ. ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್ ಎಂದೇ ಕರೆಯಲಾಗುತ್ತದೆ. ರೈತರು ಹೊಲದಲ್ಲಿ ಬೆಳೆದ ಧಾನ್ಯಗಳನ್ನು ಕಟಾವು ಮಾಡುವ ಸಮಯವಿದು. ದನಕರುಗಳನ್ನು ತೊಳೆದು, ಅಲಂಕರಿಸಿ, ಮೇವನ್ನು ಉಣಿಸಿ ಮೆರವಣಿಗೆ ಮಾಡುತ್ತಾರೆ. ಹೊಸ ಧಾನ್ಯಗಳಿಂದ ಹುಗ್ಗಿ ಮಾಡಿ ನೈವೇದ್ಯವಾಗಿ ಅರ್ಪಿಸಿ, ಎಳ್ಳನ್ನು ದಾನ ಮಾಡುವ ಪದ್ಧತಿ ತಲತಲಾಂತರದಿಂದ ನಡೆದುಕೊಂಡು ಬಂದಿದೆ. ಈ ದಿನ ಸಣ್ಣ ಮಕ್ಕಳನ್ನು ಮಣೆಯ ಮೇಲೆ ಕೂರಿಸಿ, ಎಳ್ಳು, ಎಲಚಿಹಣ್ಣು(ಬಾರೀ ಹಣ್ಣು), ಕಾಸು, ಬಾಳೆಹಣ್ಣಿನ ತುಂಡುಗಳು, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಕಬ್ಬುಗಳನ್ನು ಬೆರೆಸಿ ತಲೆಯ ಮೇಲಿಂದ ಎರೆದು ಆರತಿ ಮಾಡುತ್ತಾರೆ. ಇದಕ್ಕೆ ಕರಿ ಎರೆಯುವುದು ಎನ್ನುತ್ತಾರೆ. ಹಬ್ಬದ ಸಂತಸದೊಂದಿಗೆ ಮಕ್ಕಳ ಹಟಮಾರಿತನ, ತುಂಟತನ ಕಡಿಮೆಯಾಗುತ್ತದೆ ಎನ್ನುವ ನಂಬಿಕೆ ಇದೆ ಇದರ ಹಿಂದೆ. ಸೃಜನಾತ್ಮಕವಾಗಿರುವವರು ಸಕ್ಕರೆಯಿಂದ ತಯಾರಿಸಿದ ಕುಸುರು ಕುಸುರಾಗಿರುವ ಎಳ್ಳನ್ನು (ಕುಸುರೆಳ್ಳು) ರಟ್ಟಿನ ಮೇಲೆ ಅಂಟಿಸಿ, ಬಳೆ, ಕಿರೀಟ, ಸೊಂಟದಪಟ್ಟಿ, ಕಾಲಿಗೆ ಗೆಜ್ಜೆ, ಕೊಳಲು, ಸರ ಹೀಗೆ ಎಲ್ಲವನ್ನೂ ತಯಾರಿಸಿ ಮಕ್ಕಳಿಗೆ ತೊಡಿಸಿ ರಧಾಕೃಷ್ಣರನ್ನಾಗಿ ತಯಾರು ಮಾಡಿ ಹಬ್ಬದ ಮೆರುಗನ್ನು ಹೆಚ್ಚಿಸುತ್ತಾರೆ. ಅಂದು ಬೆಳಗ್ಗೆ ತಲೆಸ್ನಾನ ಮಾಡಿ, ದೇವರ ಪೂಜೆ ನೆರವೇರಿಸಿ ಪಿತೃಗಳಿಗೆ ತರ್ಪಣ ಕೊಡುತ್ತಾರೆ. ಅನುಕೂಲವಿದ್ದರೆ ನದಿ ಸ್ನಾನ ಮಾಡುತ್ತಾರೆ. ಮಕರ ಸಂಕ್ರಂತಿಯಂದು ತೀರ್ಥಸ್ನಾನ ಮಾಡಿದರೆ ಪುಣ್ಯ ಫಲವಿದೆಯೆಂಬ ನಂಬಿಕೆ ಇದೆ. ಸಂಜೆ ಹೆಂಗಳೆಯರು ತಟ್ಟೆಯಲ್ಲಿ ಎಳ್ಳು, ಕಬ್ಬಿನ ತುಂಡು, ಬಾಳೆಹಣ್ಣು, ಸಕ್ಕರೆ ಅಚ್ಚು, ತಾಂಬೂಲ ಸಹಿತ ಮನೆ ಮನೆಗೂ ಹಂಚಿ ಬರುತ್ತಾರೆ. ಭಾಗವತದಲ್ಲಿ ಕೃಷ್ಣ ಬಲರಾಮರು ಈ ದಿನ ಮಥುರಾಕ್ಕೆ ಬಂದು ಕಂಸನನ್ನು ಕೊಂದರು ಎಂಬುದಾಗಿ ಬರುತ್ತದೆ. ನಿರಂತರ ಸೃಷ್ಟಿಯ ತಿಗುರಿ ಸೂರ್ಯ ಆಡಿಸುವ ಬುಗುರಿ ಭ್ರಮಣಲೋಲೆ ಸಂಕ್ರಮಣಶೀಲೆ ನಿತ್ಯನೂತನೆ ಧರಿತ್ರಿ -ಬಿ.ಆರ್.ಲಕ್ಷ್ಮಣ ರಾವ್ ವೈಜ್ಞಾನಿಕವಾಗಿ ನೋಡುವುದಾದರೆ ಇಂದಿನ ಈ ದಿನ ಕ್ರಾಂತಿವೃತ್ತದಲ್ಲಿ ಸೂರ್ಯನು ತನ್ನ ಪಥವನ್ನು ಬದಲಿಸುವ ದಿನ. ಆಧುನಿಕ ವಿಜ್ಞಾನಿಗಳ ಪ್ರಕಾರ ಸೂರ್ಯ ಒಂದು ನಕ್ಷತ್ರ. ಅವನಿಗೆ ಪರಿಭ್ರಮಣ ಇಲ್ಲ. ಆದರೆ ಅಕ್ಷ ಪರಿಭ್ರಮಣ ಇದೆ. ಈಗ ನಮ್ಮ ವಿಜ್ಞಾನ ಇಡೀ ಸೌರಮಂಡಲವೇ ನಿಧಾನವಾಗಿ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಸರಿಯುತ್ತಿದೆ ಎಂದು ಸಾಧಿಸಿ ತೋರಿಸಿಕೊಟ್ಟಿದೆ. ಒಟ್ಟಿನಲ್ಲಿ ವಿಶ್ವದ ಪ್ರತಿಯೊಂದು ಕಾಯಕ್ಕೂ ಚಲನೆ ಇದೆ. ಬದಲಾವಣೆ ಜಗದ ನಿಯಮ, ನಿರಂತರ ಚಲನೆ ವಿಶ್ವದ ನಿಯಮ… ಜಡತೆ ನಿರಾಸೆಯ ತೊಡೆದು ಭರವಸೆಯಲಿ ಮುನ್ನಡೆದು ಹೊಸ ವಿಕ್ರಮಗಳ ಮೆರೆಯಲೀ ನಾಡು ನಗೆ ನೆಮ್ಮದಿಯನ್ನು ಹರಿಸಿ -ಬಿ.ಆರ್.ಲಕ್ಷ್ಮಣ ರಾವ್ ಎನ್ನುವ ಬಿ.ಆರ್.ಲಕ್ಷ್ಮಣರ ಮಾತಿನಂತೆ ನಮ್ಮ ಬದುಕು ಹೊಸ ಭರವಸೆಯ ದಿಕ್ಕಿನೆಡೆಗೆ ತಿರುಗಲಿ… ಪ್ರಪಂಚವನ್ನೇ ತಲ್ಲಣಗೊಳ್ಳುವಂತೆ ಮಾಡಿರುವ ಕೊರೋನಾವನ್ನು ಸೂರ್ಯನ ಹೊಸ ಪ್ರಭೆ ಸಂಹರಿಸಲಿ. ಬದುಕು ಮತ್ತೊಮ್ಮೆ ಹಳಿಗೆ ಬಂದು ಪ್ರಯಾಣ ಸಸೂತ್ರವಾಗಲಿ ಎನ್ನುವ ಆಸೆ ಮತ್ತು ಹಾರೈಕೆಯೊಂದಿಗೆ ನಾವೆಲ್ಲ “ಎಳ್ಳುಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡೋಣ” ಅಲ್ಲವಾ… ಈ ಭುವಿಯಾಗಲಿ ಸ್ಪೂರ್ತಿ ನಮ್ಮ ನಾಡಿಗೆ ಮರಳಲಿ ಗತ ಕೀರ್ತಿ ನಮ್ಮ ನಾಡಿಗೆ ಹೊಸ ನಡೆನುಡಿ ಬರಲಿ ನಮ್ಮ ಹಾಡಿಗೆ ಹೊಸಹುರುಪನು ತರಲಿ ನಮ್ಮ ನಾಡಿಗೆ -ಬಿ.ಆರ್.ಲಕ್ಷ್ಮಣರಾವ್ ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.







