“ಯಾವ ಕನ್ನಡಿಗನ ಮನೆಯಲ್ಲಿ
ಕೆಲವಾದರೂ ಕನ್ನಡ ಕೃತಿಗಳಿಲ್ಲವೋ
ಅದು ಕನ್ನಡಿಗನ ಮನೆಯೇ ಎಂದು ಪ್ರಶ್ನಿಸುವಂತಾಗಬೇಕು”
– ಕಮಲಾಹಂಪನಾ
ರಾಮಕೃಷ್ಣ ಗುಂದಿ ಆತ್ಮಕಥೆ
ಭಾಗ – 54
ಪ್ರಚಾರ ಬಯಸದ ಪ್ರತಿಭಾ ಸಂಪನ್ನ : ನನ್ನ ತಂದೆ ಗಣಪು ಮಾಸ್ತರ
ಅಂಕಣ ಸಂಗಾತಿ ಗಜಲ್ ಲೋಕ ಶ್ರೀದೇವಿಯವರ ಗಜಲ್ ಸಿರಿ ಸಂಪತ್ತು ಹಲೋ…. ಏನು ಮಾಡ್ತಾ ಇದ್ದೀರಾ, ಏನು ಓದುತ್ತಾ ಇದ್ದೀರಾ …? ಇಂದು ತಮ್ಮ ಮನವನ್ನು ತಣಿಸಿದ, ತಣಿಸುತ್ತಿರುವ ಓರ್ವ ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ. ಶುಭ ಮುಂಜಾವು.. ಭುವನೇಶ್ವರಿಯ ಮಕ್ಕಳಾದ ಕನ್ನಡದ ಮನಸುಗಳಿಗೆ ನಮಸ್ಕಾರಗಳು…. “ಸ್ವರ್ಗದ ವಾಸ್ತವತೆ ನಮಗೆ ತಿಳಿದಿದೆ ಆದರೆ ಹೃದಯವನ್ನು ಸಂತೋಷವಾಗಿಟ್ಟುಕೊಳ್ಳಲು ಇದೊಂದು ಒಳ್ಳೆಯ ಆಲೋಚನೆ ‘ಗಾಲಿಬ್‘” –ಮಿರ್ಜಾ ಗಾಲಿಬ್ ಮನುಷ್ಯ ಭಾವನೆಗಳ ಗೊಂಚಲು. ಆ ಭಾವನೆಗಳ ತಾಯಿಬೇರು ಪ್ರೀತಿ! ಇದೊಂದು ಅನುಪಮವಾದ ಅನುಭಾವ. ಈ ಅನುಭಾವದ ಪ್ರಸಾದ ಹಂಚುತ್ತಿರುವ ಆಲಯವೆಂದರೆ ಅದು ನೊಂದ-ಬೆಂದ-ಸ್ಥಿತಪ್ರಜ್ಞ ಮನಸುಗಳ ಕುಲುಮೆಯಲ್ಲಿ ಪಕ್ವಗೊಂಡ ಸಾರಸ್ವತ ಜಗತ್ತು. ಈ ಪರಪಂಚ ಮನುಕುಲದ ಅಂತರಂಗ ಹಾಗೂ ಬಹಿರಂಗಗಳೆರಡರ ದರ್ಪಣದ ಜೊತೆ ಜೊತೆಗೆ ಮನುಷ್ಯನ ಕೃತ್ಯಗಳನ್ನು ಸಾಣೆ ಹಿಡಿಯುವ ಸೂಕ್ಷ್ಮ ಕೆಲಸವನ್ನೂ ಮಾಡುತ್ತಿದೆ. ಈ ನೆಲೆಯಲ್ಲಿ ಬರಹ ಭಾವನೆಗಳ ತವರೂರು. ‘ಬರಹ ಸಂಭ್ರಮಿಸುವ ಪಲ್ಲಕ್ಕಿಯಲ್ಲ, ಸಂತೈಸುವ ತೊಟ್ಟಿಲು.’ ಅನಾಥ ಹೃದಯಗಳಿಗೂ ತನ್ನ ಮಡಿಲಲ್ಲಿ ಮಲಗಿಸಿಕೊಂಡು ಜೋಗುಳ ಹಾಡುತ್ತ ಬಂದಿದೆ. ಈ ಮಾತು ಎಲ್ಲ ಭಾಷೆಯ ಅಕ್ಷರದವ್ವನಿಗೂ ಅನ್ವಯಿಸುತ್ತದೆ. ಮರಭೂಮಿಯ ಕಾವು, ಆತಿಥ್ಯದ ವಿನಯದಲ್ಲಿ ಅರಳಿದ ಗಜಲ್ ಹೃದಯವಂತಿಕೆಯ ಕುರುಹಾಗಿ ಇಡೀ ಮನುಕುಲವನ್ನೆ ವ್ಯಾಪಿಸಿದೆ. ಕಳೆದ ೨-೩ ವಸಂತಗಳಲ್ಲಿ ‘ಗಜಲ್’ ಪೈರು ಹುಲುಸಾಗಿ ಬೆಳೆಯುತ್ತಿದೆ. ಆ ‘ಗಜಲ್’ ಕೃಷಿಕಾರರಲ್ಲಿ ಶ್ರೀಮತಿ ಶ್ರೀದೇವಿ ಕೆರೆಮನೆಯವರೂ ಒಬ್ಬರು. ಉತ್ತರ ಕನ್ನಡ ಜಿಲ್ಲೆಯ ಹಿರೇಗುತ್ತಿಯಲ್ಲಿ ಜನಿಸಿರುವ ಶ್ರೀದೇವಿ ಕೆರೆಮನೆಯವರು ಶಿರಸಿಯ ಜಾನ್ಮನೆ ಎಂಬಲ್ಲಿ ಪ್ರಾಥಮಿಕ ಶಿಕ್ಷಣ, ಸಂಪಖಂಡ ಎನ್ನುವಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿ, ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಮುಗಿಸಿ ಕುಮಟಾದಲ್ಲಿ ಬಿ.ಇಡಿ ಪದವಿಯನ್ನು ಮುಗಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಇಂಗ್ಲೀಷ್ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಶ್ರೀಯುತರು ಕಳೆದ17 ವರ್ಷಗಳಿಂದ ಸಿ ಬರ್ಡ್ ನಿರಾಶ್ರಿತರ ಕಾಲೋನಿಗಳಲ್ಲಿ ಇಂಗ್ಲೀಷ ಭಾಷಾ ಶಿಕ್ಷಕಿಯಾಗಿ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಪ್ರಸ್ತುತವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮದ ಸರಕಾರಿ ಪ್ರೌಢಶಾಲೆ (ಪುನರ್ವಸತಿ) ಯಲ್ಲಿ ಆಂಗ್ಲ ಭಾಷೆಯ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ೫೦ ಕ್ಕೂ ಹೆಚ್ಚು ತರಬೇತಿಯನ್ನು ಜಿಲ್ಲಾ ಹಾಗೂ ತಾಲೂಕಾ ಹಂತದಲ್ಲಿ ನೀಡಿದ್ದಾರೆ. ಬೋಧನೆಯ ಜೊತೆ ಜೊತೆಗೆ ತಮ್ಮನ್ನು ಬರಹದಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ಶ್ರೀದೇವಿ ಕೆರೆಮನೆ ಅವರು ಹಲವಾರು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಕಾವ್ಯ, ಕಥೆ, ವಿಮರ್ಶೆ, ಪ್ರಬಂಧ, ಅಂಕಣ ಬರಹ ಹಾಗೂ ಗಜಲ್ ಲೋಕದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರ ಕೃತಿಗಳ ಪರಿಚಯದತ್ತ ಹೆಜ್ಜೆ ಹಾಕೋಣ ಬನ್ನಿ..!! ಪ್ರಕಟಣೆಗಳು- ಕವನ ಸಂಕಲನಗಳು : ನಾನು ಗೆಲ್ಲುತ್ತೇನೆ, ಮೌನದ ಮಹಾ ಕೋಟೆಯೊಳಗೆ, ಗೆಜ್ಜೆ ಕಟ್ಟದ ಕಾಲಲ್ಲಿ, ಬೈಟೂ ಚಹಾ ಕವನಗಳು, ಮೈ ಮುಚ್ಚಲೊಂದು ತುಂಡು ಬಟ್ಟೆ… ಕೆರೆಮನೆಯವರು ಹಲವಾರು ವಾರ ಪತ್ರಿಕೆ, ಮಾಸ ಪತ್ರಿಕೆಗಳಿಗೆ ಪ್ರಸ್ತುತ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವಂತಹ ಅಂಕಣ ಬರಹಗಳನ್ನು ಬರೆದಿದ್ದಾರೆ. ಆ ಎಲ್ಲ ಬಿಡಿ ಬಿಡಿ ಅಂಕಣ ಬರಹಗಳನ್ನು ಒಂದೆಡೆ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅವುಗಳಲ್ಲಿ ‘ಪ್ರೀತಿ ಎಂದರೆ ಇದೇನಾ?,’ ‘ಹೆಣ್ತನದ ಆಚೆ-ಈಚೆ’, ಉರಿವ ಉಡಿ’, ‘ಮನದಾಳದ ಮಾತು,’ ‘ವರ್ತಮಾನದ ಉಯ್ಯಾಲೆ,’ … ಮುಂತಾದವುಗಳು. ಕಥಾಸಂಕಲನಗಳು : ಬಿಕ್ಕೆ ಹಣ್ಣು, ಚಿತ್ತ ಚಿತ್ತಾರ.. ಇವುಗಳೊಂದಿಗೆ “ಅಂಗೈಯೊಳಗಿನ ಬೆಳಕು” ವಿಮರ್ಶಾ ಸಂಕಲನವಾದರೆ, “ಗೂಡು ಕಟ್ಟುವ ಸಂಭ್ರಮದಲ್ಲಿ” ಪ್ರಬಂಧ ಬರಹಗಳ ಸಂಕಲನವಾಗಿದೆ. ಗಜಲ್ ಸಂಕಲನಗಳು : ‘ಅಲೆಯೊಳಗಿನ ಮೌನ’, ‘ನನ್ನ ದನಿಗೆ ನಿನ್ನ ದನಿಯು’, (ಇದೊಂದು ಗಜಲ್ ಜುಗಲ್ ಸಂಕಲನ) ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಪಾದರಸದಂತೆ ಕ್ರಿಯಾಶೀಲರಾಗಿರುವ ಕೆರೆಮನೆ ಅವರಿಗೆ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿಗಳೊಂದಿಗೆ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಶ್ರೀ ವಿಜಯ ಪ್ರಶಸ್ತಿ, ಸಾರಾ ಅಬೂಬಕರ್ ಪ್ರಶಸ್ತಿ, ದೇವಾಂಗನಾ ಶಾಸ್ತ್ರಿ ಕಥಾ ಪ್ರಶಸ್ತಿ, ಅಂತರಾಷ್ಟ್ರೀಯ ಮಹಿಳಾ ವರ್ಷದ ದತ್ತಿ ಪ್ರಶಸ್ತಿ, ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ, ಬಸವರಾಜ ಕಟ್ಟಿಮನಿ ಪ್ರಶಸ್ತಿ, ಬೇಂದ್ರೆ ಯುವ ಗೃಂಥ ಪುರಸ್ಕಾರ, ಸಿಂಗಾಪುರ ಕಥಾ ಪ್ರಶಸ್ತಿ , ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಸಾವಿತ್ರಿಬಾಯಿ ಫುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಅಮ್ಮ ಪ್ರಶಸ್ತಿ… ಪ್ರಮುಖವಾಗಿವೆ. ಕಾವ್ಯದ ಸಿಂಡರೇಲಾ ಎಂದರೆ ಅದು ‘ಗಜಲ್’ ಪ್ರಕಾರ. ಗಜಲ್ ಎನ್ನುವುದು ಸಾಮಾನ್ಯನ ಯೋಗ. ಈ ಹಿನ್ನೆಲೆಯಲ್ಲಿ ಗಜಲ್ ರಚನೆಗೆ ಗಜಲ್ ಗೋ ಪ್ರೀತಿ ಪೂರ್ಣ ಹೃದಯವನ್ನು ಹೊಂದಿರುವುದು ಮುಖ್ಯ. ಗಜಲ್ ಗೋ ಸವಿನುಡಿಯ ಸಿರಿಗುಡಿ ಕಟ್ಟುವ ಶಿಲ್ಪಿ. ಗಜಲ್ ಜನತೆಯ ಎದೆ ತಣಿಸುವುದರ ಜೊತೆಗೆ ಅವರ ಬಾಳಿಗೆ ಊರುಗೋಲಾಗುತ್ತದೆ, ಊರುಗೋಲಾಗಬೇಕು. ಕೆಲವೊಮ್ಮೆ ಗಜಲ್ ಸವಿಯಾಗಿರುವಂತೆ ಕಂಡರೂ ಪೊಡವಿಯನ್ನೆಲ್ಲ ತಲ್ಲಣಿಸುವ ಸಿಡಿಲಿನ ಮಿಂಚಾಗಿಯೂ ಕಂಗೊಳಿಸುತ್ತದೆ. ಗಜಲ್ ಎಂದರೆ ಸೊನ್ನೆಯಲ್ಲಿ ಸ್ವರ್ಗವನ್ನೂ, ಶೂನ್ಯದಲ್ಲಿ ಪೂರ್ಣತ್ವವನ್ನೂ ಸೃಜಿಸಿ ನಿಲ್ಲುವ ಹೃದಯಗಳ ಮಿಡಿತ. ಈ ನೆಲೆಯಲ್ಲಿ ಗಜಲ್ ಭವ್ಯವೂ ಹೌದು ; ದಿವ್ಯವೂ ಹೌದು!! ಕೆರೆಮನೆ ಅವರ ಗಜಲ್ ಗಳಲ್ಲಿ ಈ ಎಲ್ಲ ಅಂಶಗಳು ಒಳಗೊಂಡಿವೆ. ಬದುಕಿನ ಎಲ್ಲ ಮಗ್ಗುಲುಗಳು ಇಲ್ಲಿ ಸಾಕ್ಷಾತ್ಕಾರಗೊಂಡಿವೆ. “ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ” ಈ ಮೇಲಿನ ಷೇರ್ ಮಾತು ಮತ್ತು ಮೌನಗಳ ವಿವಿಧ ಆಯಾಮಗಳನ್ನು ಪರಿಚಯಿಸುತ್ತಿದೆ. “ಭಾಷೆಯೆಂಬ ಜ್ಯೋತಿ ಬೆಳಗದೆ ಹೋದರೆ ಇಡೀ ಮನುಕುಲವೇ ಕತ್ತಲಲ್ಲಿ ಮುಳುಗಿರುತಿತ್ತು” ಎಂಬ ದಂಡಿಯ ಹೇಳಿಕೆ ಭಾಷೆಯ, ಮಾತಿನ ಮಹತ್ವವನ್ನು ಸಾರುತ್ತದೆ. ಅಬಾಲವೃದ್ಧರಾದಿಯಾಗಿ ಎಲ್ಲರ ನಡುವೆ ಸಂಬಂಧದ ಕೊಂಡಿ ಬೆಸೆಯುವುದು, ಸಂಬಂಧದ ಕೊಂಡಿ ಕಳಚುವುದು ‘ಮಾತು’ ಎನ್ನುವ ಅಸ್ತ್ರವೇ! ಈ ದಿಸೆಯಲ್ಲಿ ಮಾತು ನಮ್ಮ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ಅದರ ಬಳಕೆಯ ಮೇಲೆ ಅವಲಂಬಿಸಿರುತ್ತದೆ. ಭಾವ ತೀವ್ರತೆ ಬಾಯಿಯನ್ನು ಹೇಗ್ಹೇಗೋ ಹರಿಯಬಿಟ್ಟಾಗ ಕತ್ತಿಗಿಂತಲೂ ಮೊನಚಾಗಿ ಎದುರಿರುವ ವ್ಯಕ್ತಿಯನ್ನು ಘಾಸಿ ಮಾಡುತ್ತದೆ. ಸೌಜನ್ಯ, ದಾಕ್ಷಿಣ್ಯ, ಪರರ ಮನೋಧರ್ಮ ಸಹಿಷ್ಣುತೆ, ಶಿಷ್ಟಾಚಾರ ಪಾಲನೆ ಎಲ್ಲವನ್ನೂ ಭಾವತೀವ್ರತೆ ತಿಂದು ಹಾಕಿಬಿಡುತ್ತದೆ ಎಂಬುದು ಕೆರೆಮನೆಯವರ ಅಂಬೋಣವಾಗಿದೆ. ಭಾವ ಮಾತಾಗುವ ಮೊದಲು ತುಸು ಶಿಷ್ಟಾಚಾರದ ಹಿತನುಡಿಗೆ ಕಿವಿಕೊಡುವ ತಾಳ್ಮೆ ಅಗತ್ಯ ಎಂಬುದು ಮನವರಿಕೆಯಾಗುತ್ತದೆ. ಇದರಂತೆಯೇ ಮೌನಕ್ಕೂ ಅಗಾಧವಾದ ಶಕ್ತಿಯಿದೆ. ಇದರಲ್ಲಿ ಶಾಂತಿಯೂ ಇದೆ, ಕ್ರಾಂತಿಯೂ ಇದೆ. ಕಡಿಮೆ ಮಾತನಾಡಿದರೆ ನಾವು ಹಲವಾರು ಸಮಸ್ಯೆಗಳಿಂದ ಮುಕ್ತರಾಗಬಹುದು. ಆದರೆ ಎಷ್ಟೊ ಸಲ ಮೌವವೇ ಎದುರಿಗಿರುವ ವ್ಯಕ್ತಿಯನ್ನು ಕೊಲ್ಲುವ ಅಸ್ತ್ರವೂ ಆಗುತ್ತದೆ ಎಂಬುದನ್ನು ಗಜಲ್ ಗೋ ಅವರು ತುಂಬಾ ಸೂಕ್ಷ್ಮವಾಗಿ ಇಲ್ಲಿ ದಾಖಲಿಸಿದ್ದಾರೆ. ಬರವಣಿಗೆಗೆ ಒಂದು ಅದ್ಭುತ ಶಕ್ತಿಯಿದೆ. ಅಂತೆಯೇ ಆಲ್ಫ್ರೆಡೋ ಕಾಂಡೆಯವರು ಹೇಳಿದ ಈ ಮಾತು ಅಕ್ಷರಶಃ ಸತ್ಯವಾಗಿದೆ. “ಬರಹಗಾರನಾಗುವುದು ಜೀವನವನ್ನು ಸಾವಿನಿಂದ ಕದಿಯುವುದು”. ಈ ನೆಲೆಯಲ್ಲಿ ಗಮನಿಸಿದಾಗ ಬರವಣಿಗೆ ನಮ್ಮ ಆತ್ಮಸಂಗಾತಿಯೇ ಹೌದು. ನಮ್ಮ ನೋವಿಗೆ ಮಿಡಿಯುತ್ತದೆ, ಕಂಬನಿಯನ್ನು ಒರೆಸುತ್ತದೆ, ಧೈರ್ಯ ತುಂಬುತ್ತದೆ, ಆತ್ಮವಿಶ್ವಾಸದಿಂದ ಬಾಳಲು ಪ್ರೇರೇಪಿಸುತ್ತದೆ. ಈ ಕಾರಣಕ್ಕಾಗಿಯೇ ಗಜಲ್ ಗೋ ಶ್ರೀದೇವಿ ಕೆರೆಮನೆ ಅವರು ತಮ್ಮ ಈ ಒಂದು ಷೇರ್ ನಲ್ಲಿ ಬರವಣಿಗೆಯ ಹಿಂದಿನ ಬೆಳಕನ್ನು ಓದುಗರ ಮನದ ಮಂದೆ ಪ್ರಕಟಿಸಿದ್ದಾರೆ. “ಕಣ್ಣಂಚಿಂದ ಜಾರಿದ ಹನಿಯ ಹಿಡಿದಿಡಲಾಗದೆ ಬರೆಯುತಿದ್ದೇನೆ ಎದೆಯೊಳಗೆ ಹಚ್ಚಿಟ್ಟ ಪುಟ್ಟ ಹಣತೆ ಆರದಿರಲೆಂದು ಬರೆಯುತ್ತಿದ್ದೇನೆ“ ಕಂಗಳಿಂದ ಜಾರಿದ ಕಂಬನಿ ಕೆನ್ನೆಯನ್ನು ತೇವಗೊಳಿಸುತ್ತದೆ ಅವನಿಗೆ ಚುಂಬಿಸುತ್ತದೆ. ಅದನ್ನು ಹಿಡಿದಿಡಲು ಸಾಧ್ಯವಿಲ್ಲ. ಆ ನೋವಿನ ಛಾಯೆಯಾಗಿಯೆ ಬರವಣಿಗೆ ರೂಪ ಪಡೆದಿರುವುದನ್ನು ಇಲ್ಲಿ ಗಮನಿಸಬಹುದು. ಇಲ್ಲಿ ಬಳಕೆಯಾದ ‘ಹಣತೆ’ ಈ ಷೇರ್ ನ ಧ್ವನಿಯಾಗಿದೆ. ಅದನ್ನು ಮನೋಮಂದಿರದಲ್ಲಿ ಆರದಂತೆ ಕಾಪಿಡುವುದೆ ಈ ಬರವಣಿಗೆ, ಈ ಸಾಹಿತ್ಯ ಎನ್ನಬಹುದು. ನಾವು ಉಸಿರಾಡುತ್ತಿರುವ ಜಗತ್ತಿನಲ್ಲಿ ಕರುಣೆ ಹಾಗೂ ಕ್ಷಮೆ ಮಾನವತ್ವದ ಬಹುದೊಡ್ಡ ಆಧಾರ ಸ್ಥಂಭಗಳು. ಈ ಕರುಣೆ ಹಾಗೂ ಕ್ಷಮೆಯನ್ನು ಮರೆತವರು ಮಾನವನೆಂಬ ಮುಖವಾಡದ ನೆರಳಿನಲ್ಲಿ ಜೀವಿಸಬೇಕಾಗುತ್ತದೆ. ಕರುಣೆ ಹಾಗೂ ಕ್ಷಮೆಯನ್ನು ಮರೆತ ಸಮಾಜಕ್ಕೆ ಶಾಂತಿಯನ್ನು ಹುಡುಕಿದರೂ ಸಿಗಲಾರದು. ಈ ಹಿನ್ನೆಲೆಯಲ್ಲಿ ‘ಗಜಲ್’ ಮಧುಬಟ್ಟಲು ಕರುಣಾರಸದಿಂದಲೆ ತುಂಬಿದೆ. ನೋವಿಗೂ ನೋವಾಗದಂತೆ ಅಪ್ಪಿ ಮುದ್ದಿಸುವ ಜೀವ ಚೈತನ್ಯ ಇದಕ್ಕಿದೆ. ಈ ಕಾರಣಕ್ಕಾಗಿಯೇ ಇಂದು ಗಜಲ್ ಜನಸಾಮಾನ್ಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿದೆ. ಈ ದಿಸೆಯಲ್ಲಿ ಶ್ರೀಮತಿ ಶ್ರೀದೇವಿ ಕೆರೆಮನೆ ಅವರಿಂದ ಮತ್ತಷ್ಟು, ಮೊಗೆದಷ್ಟೂ ಗಜಲ್ ಗಳು ಉದಯಿಸಲಿ ಎಂದು ಆಶಿಸುತ್ತ, ಶುಭ ಕೋರುತ್ತೇನೆ. “ಹಗೆತನವಾದರೂ ಸರಿ ಮನಸನ್ನು ನೋಯಿಸಲು ಬಾ ಬಾ ಮತ್ತೊಮ್ಮೆ ನನ್ನನ್ನು ತೊರೆದು ಹೋಗಲು ಬಾ“ –ಅಹಮದ್ ಫರಾಜ್ ಮುಂದಿನ ವಾರ.. ಅಂದರೆ ಗುರುವಾರ, ಮತ್ತೊಬ್ಬ ತಮ್ಮ ಕುತೂಹಲ ತಣಿಸುವ ಗಜಲ್ ಮಾಂತ್ರಿಕರೊಂದಿಗೆ ನಿಮ್ಮ ಮುಂದೆ ಬಂದು ನಿಲ್ಲುವೆ. ಅಲ್ಲಿಯವರೆಗೂ ತುಂಬು ಹೃದಯದ ಧನ್ಯವಾದಗಳು… ಡಾ. ಮಲ್ಲಿನಾಥ ಎಸ್. ತಳವಾರ ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ
ಅಂಕಣ ಸಂಗಾತಿ ನೆನಪಿನದೋಣಿಯಲಿ ದಸರಾ ಮೈಸೂರು ದಸರಾ ಎಷ್ಟೊಂದು ಸುಂದರಾ ಚೆಲ್ಲಿದೆ ನಗೆಯಾ ಪನ್ನೀರ ಎಲ್ಲೆಲ್ಲೂ ನಗೆಯಾ ಪನ್ನೀರ ಬಾಲ್ಯ ಎಂದರೆ ಹಬ್ಬಗಳ ಆಚರಣೆ ಮನದಲ್ಲಿ ಎಂದಿಗೂ ಹಸಿರು . ಅದರಲ್ಲೂ ಮೈಸೂರಿನಲ್ಲಿ ಹುಟ್ಟಿ ಬೆಳೆದ ನನಗೆ ದಸರಾ ಎಂದರೆ ಜೀವನದ ಒಂದು ಅವಿಭಾಜ್ಯ ಅಂಗದಂತೆ. ದಸರೆಯನ್ನು ನೆನಪು ಮಾಡಿಕೊಳ್ಳದ ನೆನಪಿನ ದೋಣಿಯ ಪಯಣ ಅರ್ಥಹೀನ ಅನ್ನಿಸಿಬಿಡುತ್ತದೆ. ಹಾಗಾಗಿಯೇ ಇಂದಿನ ನೆನಪಿನ ದೋಣಿಯ ಯಾನವಿಡೀ ದಸರೆಯ ಸ್ಮರಣೆ. ನವರಾತ್ರಿ ದಸರಾ ಎಂದರೆ ಧಾರ್ಮಿಕ ಆಧ್ಯಾತ್ಮಿಕ ಸಾಂಸ್ಕೃತಿಕ ಸಂಭ್ರಮಗಳ ಸಂಗಮ.ಬಾಲ್ಯದಲ್ಲಿ ಆಧ್ಯಾತ್ಮಿಕ ಆಯಾಮದ ಬಗ್ಗೆ ಬಿಡಿ. ಅಂತಹದ್ದೇನೂ ಇಲ್ಲ . ಆದರೆ ಧಾರ್ಮಿಕ ಆಚರಣೆಗಳು ಹಾಗೂ ಸಾಂಸ್ಕೃತಿಕ ಸಂಭ್ರಮಗಳು! ಇಡೀ ಬಾಲ್ಯದ ಸೊಗಸನ್ನು ಇಮ್ಮಡಿಗೊಳಿಸಿದ ಶ್ರೀಮಂತವಾಗಿಸಿದ ಅನುಭವಗಳು ಅವು. ಮೊದಲನೆಯ ಅರ್ಧವಾರ್ಷಿಕ ಪರೀಕ್ಷೆಗಳು ಮುಗಿದು ರಜೆ ಶುರುವಾಗಿ ಬಿಡುತ್ತಿತ್ತು. ಮೈಸೂರು ಅಂದಮೇಲೆ ಮಹಾಲಯ ಅಮಾವಾಸ್ಯೆಯಿಂದಲೇ ರಜೆ . ದಸರೆ ಎಂದರೆ ಮನೆಯೊಳಗಿನ ಸಂಭ್ರಮ ಹೊರಗಿನ ಸುತ್ತಾಡುವ ಸಂಭ್ರಮ ಎರಡೂ. ಮೈಸೂರಿನ ನಿವಾಸಿಯಾದ ನನಗೆ ದಸರೆಯೆಂದರೆ ಆಗಮಿಸಿದ ನೆಂಟರಿಷ್ಟರ, ದಿನವೂ ಮಾಡುವ ಹಬ್ಬದಡಿಗೆಗಳ ಸಂಜೆಯ ಸಾಂಸ್ಕೃತಿಕ ಸಮಾರಂಭಗಳ ನೆನಪು ಸಾಲಾಗಿ ಬರುತ್ತದೆ. ಮೊದಲಿಗೆ ಗೊಂಬೆ ಕೂಡಿಸುವ ಸಂಭ್ರಮದ ಬಗ್ಗೆ ಹೇಳಿಬಿಡುವೆ. ನಮ್ಮ ಮನೆಯಲ್ಲಿ ಮೂಲಾನಕ್ಷತ್ರ ಸಪ್ತಮಿಯ ದಿನದಿಂದ ಗೊಂಬೆ ಕೂರಿಸುವ ಸಂಪ್ರದಾಯ. ಹಾಗಾಗಿ ಪಾಡ್ಯದ ದಿನದಿಂದಲೇ ರಾಗಿ ಮೊಳಕೆ ಹಾಕುವ ಕೆಲಸ . ಅಟ್ಟದಲ್ಲಿದ್ದ ಹಸಿರು ಟ್ರಂಕ್ ಕೆಳಗಿಳಿದ ಕೂಡಲೇ ನಾವು ಮೂವರೂ ಅದರ ಸುತ್ತ. ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಒಂದೊಂದೇ ಗೊಂಬೆಗಳು ಈಚೆಗೆ ಬರುತ್ತಿದ್ದಂತೆ ಒಂದೊಂದು ರೀತಿಯ ಉದ್ಗಾರದ ಸ್ವಾಗತ. ದೇವರ ಮಣ್ಣಿನ ವಿಗ್ರಹಗಳು ಬಂದಾಗ ಸ್ವಲ್ಪ ಮೌನವೇ. ಆದರೆ ಶೆಟ್ಟ ಶೆಟ್ಟಿ ಗೊಂಬೆಗಳು ಬಂದವೆಂದರೆ ಓ ಎಂಬ ಉದ್ಗಾರ. ವಿದೂಷಕ ಗೊಂಬೆಗಳು ಬಂದಾಗ ಹಾಹಾ ಹೋ ಹೋ. ಕಿರುಚಬೇಡಿರೇ ಎಂಬ ಅಮ್ಮನ ಎಚ್ಚರಿಕೆಯ ಮಾತು ನಮ್ಮ ಅಬ್ಬರದ ಮಧ್ಯೆ ಉಡುಗಿಹೋಗುತ್ತಿತ್ತು. ಇದು ಹೊಸದು ಅದು ಹೊಸದು ಅಂಥ ಹಣಕಿ ಹಾಕುವುದು. ಮುಟ್ಟಬೇಡಿ ಒಡೆಯಬೇಡಿ ಅಂಥ ಮಧ್ಯೆಮಧ್ಯೆ ತಾಕೀತು . ಇವುಗಳ ಮಧ್ಯೆ ಪ್ರತಿವರ್ಷವೂ ಅಮ್ಮ ಪ್ರತಿಯೊಂದು ಗೊಂಬೆಯನ್ನು ಅದು ಅಲ್ಲಿ ತಗೊಂಡಿದ್ದು ಇದು ಇಲ್ಲಿ ತಗೊಂಡಿತ್ತು ಎನ್ನುವ ಪರಿಚಯದ ಪ್ರಸ್ತಾವನೆ . ಹಳೆಯ ನೆಂಟರನ್ನು ಬರಮಾಡಿಕೊಂಡಂತೆ .ಈಗಿನ ಹಾಗೆ ಥೀಮ್ ಪ್ರಕಾರ ಜೋಡಿಸುವುದೇನೂ ಇರುತ್ತಿರಲಿಲ್ಲ .ಸ್ವಲ್ಪ ಮಟ್ಟಿನ ಬದಲಾವಣೆ ವರ್ಷದಿಂದ ವರ್ಷಕ್ಕೆ ಅಷ್ಟೇ. ಅತಿಶಯವಾಗಿ ಹೊಸ ಗೊಂಬೆಗಳು ಏನೂ ಸೇರುತ್ತಿರಲಿಲ್ಲ .ನನಗೆ ನೆನಪಿದ್ದಂತೆ ಬಳಪದ ಕಲ್ಲಿನ ದೇಗುಲದ ಗೋಪುರದ ಒಂದು ಮಾದರಿ ಇತ್ತು .ಮರಳು ತಂದು ಬೆಟ್ಟದ ರೀತಿ ಮಾಡಿ ಮೆಟ್ಟಿಲು ಕಲ್ಲುಗಳನ್ನು ಜೋಡಿಸಿ ತುದಿಯಲ್ಲಿ ದೇಗುಲದ ಮಾದರಿ ಇಟ್ಟರೆ ಅದೇ ಚಾಮುಂಡಿ ಬೆಟ್ಟ .ಟ್ರೇಗಳಲ್ಲಿ ಹಾಕಿದ ರಾಗಿ ಮೊಳಕೆ ಬಂದಿರುತ್ತಿದ್ದವು. ಅವುಗಳ ಮಧ್ಯೆ ಗಾಜಿನ ಬಿಲ್ಲೆ ಇಟ್ಟರೆ ಅದೇ ಮದ್ಯದ ಕೆರೆ ಕಟ್ಟೆಗಳು .ಆಗ ಬಿನಾಕಾ ಟೂತ್ಪೇಸ್ಟಿನ ಜೊತೆ ಪ್ಲಾಸ್ಟಿಕ್ಕಿನ ಸಣ್ಣ ಸಣ್ಣ ಪ್ರಾಣಿಯ ಆಕೃತಿಗಳನ್ನು ಕೊಡುತ್ತಿದ್ದರು. ಅವುಗಳನ್ನು ಮಧ್ಯೆ ಮಧ್ಯೆ ಇಡುತ್ತಿದ್ದೆವು..ಜೇಡದ ಮಣ್ಣಿನ ಗೊಂಬೆಗಿರುತ್ತಿದ್ದವು. ಅದರಲ್ಲಿ ಒಂದು ಶೆಟ್ಥರ ಗಂಡ ಹೆಂಡತಿ ಗೊಂಬೆ .ಅವುಗಳ ಮುಂದೆ ಪುಟ್ಟ ಪುಟ್ಟ ಪ್ಲಾಸ್ಟಿಕ್ ತಟ್ಟೆಯಲ್ಲಿ ಅಕ್ಕಿ ಬೇಳೆ ಎಲ್ಲ ತುಂಬಿ ಇಟ್ಟು ರಟ್ಟಿನ ಬೋರ್ಡ್ ತಗುಲಿ ಹಾಕಿ ಪ್ರಾವಿಷನ್ ಸ್ಟೋರ್ .ಬಳಪದ ಕಲ್ಲಿನ ಪ್ಲಾಸ್ಟಿಕ್ಕಿನ ಹಾಗೂ ಹಿತ್ತಾಳೆಯ ಅಡಿಗೆ ಪಾತ್ರೆಗಳ ಮಿನಿಯೇಚರ್ ಸೆಟ್ ಇದ್ದು ಅವುಗಳನ್ನು ಜೋಡಿಸುತ್ತಿದ್ದೆವು.ನಾವೇ ತಯಾರಿಸಿದ ಮಣಿಯಿಂದ ಮಾಡಿದ ಸಾಮಾನುಗಳೂ. ಆಗ ಸಿಗುತ್ತಿದ್ದ ಟಿನ್ನಿನ ಡಬ್ಬಿಗಳನ್ನು ಜೋಡಿಸಿ ಅವುಗಳ ಮೇಲೆ ಮಂಚದ ಹಲಿಗೆಗಳ ಹಂತಗಳನ್ನು ಮಾಡಿ ಬಿಳಿ ಪಂಚೆ ಹಾಸಿ ಗೊಂಬೆ ಜೋಡಿಸುತ್ತಿದ್ದು. ಮಧ್ಯದಲ್ಲಿ ಪಟ್ಟದ ಗೊಂಬೆಗಳು ಮತ್ತು ಕಳಶ .ಅಮ್ಮನ ಮನೆಯಲ್ಲಿ ಸಪ್ತಮಿ ಮೂಲಾ ನಕ್ಷತ್ರದಿಂದ ಬೊಂಬೆ ಕೂಡಿಸುವ ಪರಿಪಾಠ .ಅಯ್ಯೋ ಮೊದಲಿನಿಂದ ಕೂಡಿಸಬಾರದೇ ಅಂತ ಬೇಸರ .ಈಗಿನ ಹಾಗೆ ವರ್ಷವರ್ಷವೂ ಹೊಸ ಸೆಟ್ ತೆಗೆದುಕೊಳ್ಳುವ ಪರಿಪಾಠವೂ ಇರಲಿಲ್ಲ ಅಷ್ಟು ಹಣವೂ ಇರಲಿಲ್ಲ. ಇದ್ದುದರಲ್ಲೇ ಸಂತೋಷಪಡುವ ಬುದ್ದಿಯಂತೂ ಸಮೃದ್ಧಿಯಾಗಿತ್ತು. ಮುಖ್ಯ ಆಡಂಬರ ವೈಭವ ತೋರಿಸಿಕೊಳ್ಳುವ ಬುದ್ಧಿ ಇರಲಿಲ್ಲ ಸಾಂಪ್ರದಾಯಿಕ ಧಾರ್ಮಿಕ ಆಚರಣೆ ಎಂಬುದು ಆಗಿನ ಅಭ್ಯಾಸ . ಸಂಜೆಗೆ ಕುಂಕುಮಕ್ಕೆ ಕರೆದವರ ಮನೆಗೆಲ್ಲ ಗುಂಪು ಕಟ್ಟಿಕೊಂಡು ಹೋಗುವುದು .ಹಾಗೆ ನಮ್ಮ ಮನೆಗೆ ಬಂದಾಗ ನಾವು ಆತಿಥೇಯರು .ಎಲ್ಲರ ಮನೆಯ ಗೊಂಬೆ ಬಾಗಿನ ಹಾಕಿಸಿಕೊಳ್ಳಲು ಒಂದು ಡಬ್ಬಿ. ಪ್ರತಿಯೊಬ್ಬರ ಮನೆಯಲ್ಲೂ ಹಾಡು ನೃತ್ಯ ಏಕಪಾತ್ರ ಅಭಿನಯ ಶ್ಲೋಕ ಹೇಳುವುದು ಯಾವುದಾದರೂ ಒಂದು ಮಾಡಿದ ಮೇಲೇ ಅವರ ಮನೆಯಲ್ಲಿ ಬಾಗಿನ ಕೊಡುತ್ತಿದ್ದುದು. ಒಂದು ರೀತಿಯ “ಪ್ರತಿಭಾ ಕಾರಂಜಿ”. ನಾವು ಮೂವರೂ ಸತ್ಯು ಮತ್ತು ಅವಳ ಮೂವರು ತಮ್ಮಂದಿರು ಎದುರುಮನೆಯ ಹರ್ಷ ಅವನ ಇಬ್ಬರು ತಮ್ಮಂದಿರು ಭಾರತಿ ಹಾಗೂ ಅವಳ ಮೂವರು ತಂಗಿಯರು ಜೊತೆಗೆ ಬಂದ ನೆಂಟರಿಷ್ಟರ ಮಕ್ಕಳು ಮೊದಲಾದಂತೆ 1ದೊಡ್ಡ ಪಟಾಲಮ್ಮೇ ಹೊರಡುತ್ತಿತ್ತು . ಈ ಕುಂಕುಮಕ್ಕೆ ಕರೆಯುವ ಪದ್ದತಿ ಇದು 1 ರೀತಿಯ ಬೈ ಡಿಫಾಲ್ಟ್ . 1ದಿನ ಕರೆದರೆ ಇಡೀ ನವರಾತ್ರಿಗೆ ಆಹ್ವಾನ ಅಂತ ಅರ್ಥ. ನಮ್ಮ ಮನೆಯ ಚರುಪುಗಳು ಮೊದಲೇ ಡಿಸೈಡೆಡ್ .ಸರಸ್ವತಿ ಹಬ್ಬದ ದಿನ ಎರೆಯಪ್ಪ, ಅಷ್ಟಮಿಯ ದಿನ ಆಂಬೊಡೆ ನವಮಿಯ ದಿನ ರವೆ ಉಂಡೆ ಹಾಗೂ ವಿಜಯದಶಮಿಗೆ ಕೊಬ್ಬರಿಮಿಠಾಯಿ ಅಥವಾ ಸೆವೆನ್ಕಪ್ .ಮೊದಲೇ ಮಾಡಿಟ್ಟುಕೊಂಡಿದ್ದರೆ ದಸರಾ ಜಂಬೂಸವಾರಿಯಿಂದ ಬಂದ ತಕ್ಷಣ ಸುಲಭ ಎಂದು. ಇನ್ನೂ ಕೆಲವರು ಬಿಸ್ಕತ್ತು ಚಾಕಲೇಟು ಬಾಳೆಹಣ್ಣು ಕೊಡುತ್ತಿದ್ದುದೂ ಉಂಟು . ಸರಸ್ವತಿ ಹಬ್ಬದ ದಿನ ಎಲ್ಲ ಪುಸ್ತಕಗಳನ್ನು ಪೂಜೆಗಿಟ್ಟು ಬಿಡುತ್ತಿದ್ದೆವು. ನಾಲ್ಕು ದಿನ ಓದು ಅಂತ ಅನ್ನಬಾರದು ಹಾಗೆ. ಆಯುಧ ಪೂಜೆಯಲ್ಲಿ ಕತ್ತರಿ ಚಾಕು ಎಲ್ಲದಕ್ಕೂ ಪೂಜೆ. ದಿನಾಲೂ ಅರಮನೆಯಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳಿಗೆ ಭೇಟಿ . ಆಚೆ ಹುಲ್ಲ ಮೇಲೆ ಕುಳಿತು ದೊಡ್ಡ ತೆರೆಯಲ್ಲಿ ಒಳಗಿನ ಕಲಾಪಗಳನ್ನು ವೀಕ್ಷಿಸುವುದು ಜೊತೆಗೆ ಕುರುಕುಲು ಬಿಸಿ ಬಿಸಿ ಕಡಲೆ ಕಾಯಿ ಚುರುಮುರಿ ಒಗ್ಗಗರಣೆ ಪುರಿಗಳು ದಸರೆಯ ಗೊಂಬೆ ಬಾಗಿನದ ಚರುಪುಗಳು. ಅಬ್ಬಾ ಎಂಥ ಸವಿ ಗಳಿಗೆಗಳು. ಒಂದು ದಿನ ಫಲಪುಷ್ಪ ಪ್ರದರ್ಶನದ ಭೇಟಿ.ಅಲ್ಲಿ ಸಮೋಸ ತುಂಬಾ ಚೆನ್ನಾಗಿರ್ತಿತ್ತು .ಈಗಲೂ ನೆನೆಸಿಕೊಂಡರೆ ಬಾಯಲ್ಲಿ ನೀರು. ಎಲ್ಲದಕ್ಕಿಂತ ಹೆಚ್ಚು ಕಾತರದಿಂದ ಕಾಯ್ತಾ ಇದ್ದಿದ್ದು ದಸರಾ ಜಂಬೂ ಸವಾರಿಗೆ. ಮೆರವಣಿಗೆ ನೋಡಲು ಫಲಾಮೃತ ಮಹಡಿ ಮೇಲೆ ಜಾಗ ಕಾದಿರಿಸಿಕೊಂಡು ರಾಶಿ ತಿಂಡಿಗಳನ್ನು ಹೊತ್ತು ಅಕ್ಕಪಕ್ಕದ ಮನೆಯವರ ಜೊತೆ ನಮ್ಮ ತಂಡ ಹೊರಡುತ್ತಿತ್ತು. ಊರಿನಿಂದ ತಂದ ಬಂದ ನೆಂಟರು ತಂದ ತಿಂಡಿ ಉಳಿದ ಚರುಪು ಗಳು ಹಾಗೂ ಇದಕ್ಕಾಗಿಯೇ ವಿಶೇಷವಾಗಿ ಮಾಡಿಕೊಂಡಅವಲಕ್ಕಿ ಪುರಿ ಒಗ್ಗರಣೆ ಕಡಲೆಪುರಿ ಒಗ್ಗರಣೆಗಳು. ಎಲ್ಲಾ ತಿಂಡಿಗಳು ಬರುವಷ್ಟರಲ್ಲಿ ಖಾಲಿ . ಅಕ್ಕಪಕ್ಕದ ಸ್ನೇಹಿತರು ನಾಲ್ಕೈದು ಮನೆಯವರು ಕೂಡಿ ಸಿಟಿ ಬಸ್ ನಲ್ಲಿ ಅಲ್ಲಿಗೆ ತಲುಪಿ ಜಾಗ ಹಿಡಿದುಕೊಂಡು ಪಟ್ಟಾಂಗ ಹೊಡೆಯುತ್ತ ಮೆರವಣಿಗೆ ಬರುವ ತನಕ ಸಮಯ ದೂಡಿ ನಂತರ ಕೃಷ್ಣರಾಜ ಸರ್ಕಲ್ ಸುತ್ತುತ್ತಿದ್ದ ಆಕರ್ಷಕ ದೃಶ್ಯ ಕಣ್ಣು ತುಂಬಿಕೊಳ್ಳುತ್ತಿದ್ದವು ಮೊದಲು ಆ ಅಜಾನುಬಾಹು ಗೊಂಬೆಗಳ ಕುಣಿತ ಕುದುರೆ ವೇಷ ನಂದಿಕೋಲು ಕೋಲಾಟ ಡೊಳ್ಳು ಮದ್ದಳೆಯ ಎಷ್ಟು ಹೊತ್ತು ಬಾರಿಸುತ್ತಾ ಕುಣಿಯುತ್ತಿದ್ದರು. ವಿವಿಧ ರೀತಿಯ ಸ್ತಬ್ಧಚಿತ್ರಗಳನ್ನು ನೋಡಿ ನಮ್ಮ ವಿಮರ್ಶೆ ಮೌಲ್ಯಮಾಪನ .ನಾವು ಹೇಳಿದ ತರಹವೇ ಮಾರನೆಯ ದಿನ ಬಹುಮಾನ ಪ್ರಕಟವಾಗಿದ್ದರಂತೂ ನಮ್ಮನ್ನು ಹಿಡಿಯುವವರೇ ಇರಲಿಲ್ಲ. ಕಡೆಯಲ್ಲಿ ತಾಯಿ ಚಾಮುಂಡಿಯ ಬಂಗಾರದ ಪಲ್ಲಕ್ಕಿ ಪಲ್ಲಕ್ಕಿ ದರ್ಶನ. ಮಧ್ಯೆ ಮಧ್ಯೆ ತಿಂಡಿ ತೀರ್ಥ ಸೇವನೆ ಅಂತೂ ಸಾಂಗವಾಗಿ ನಡೆದೇ ಇರುತ್ತಿತ್ತು. ವಾಪಸ್ಸು ಬರುವಾಗ ಮಾತ್ರ ಫಲಾಮೃತ ಐಸ್ ಕ್ರೀಂ ಕೊಡಿಸುವ ಭರವಸೆ .ಪ್ರತಿ ವರ್ಷ ಮೆರವಣಿಗೆಗೂ ಮಳೆಗೂ ಏನೋ ನಂಟು ಕೆಲವೊಮ್ಮೆ ಮಧ್ಯದಲ್ಲೇ ಧಾರಾಕಾರ ಮಳೆ ಸುರಿದು ತೊಯ್ದು ಮುದ್ದೆಯಾದರೂ ಚೆಲ್ಲಾಪಿಲ್ಲಿಯಾಗದ ಕದಲದ ಜನಸ್ತೋಮ .ಮಳೆಯಲ್ಲಿ ಐಸ್ಕ್ರೀಮ್ ತಿನ್ನುವ ಅಭ್ಯಾಸ ಶುರುವಾದದ್ದು ಆಗಲೇ ಅನ್ನಿಸುತ್ತೆ .ಇನ್ನು ಮನೆಗೆ ನೆಂಟರು ಬಂದಿದ್ದಂತೂ ಇನ್ನೂ ಮಜಾ .ಅಮ್ಮ ಪ್ರತಿ ವಿಜಯದಶಮಿಯಂದು ಜಾಮೂನ್ ಬಿಸಿ ಬೇಳೆ ಬಾತ್ ಮಾಡುತ್ತಿದ್ದರು. ಹನ್ನೊಂದು ಮೂವತ್ತಕ್ಕೆ ಊಟ ಮುಗಿಸಿ ಹನ್ನೆರಡು ಮೂವತ್ತಕ್ಕೆ ಫಲಾಮೃತ ಬಳಿ ಹಾಜರು ಅಲ್ಲಿಂದ ತುಂಬಾ ಚಂದ ಕಾಣುತ್ತಿತ್ತು ಮೆರವಣಿಗೆ. ಸುಮಾರು ವರ್ಷಗಳವರೆಗೂ ಇದೇ ಪರಿಪಾಠ ಇತ್ತು .ಈ ಪರಿಪಾಠ ಹೆಚ್ಚುಕಡಿಮೆ ದೂರದರ್ಶನದಲ್ಲಿ ಮೆರವಣಿಗೆ ತೋರಿಸುವ ತನಕವೂ ನಡೆಯಿತು ನಂತರ ಮನೆಯಲ್ಲೇ ಕುಳಿತು ದೂರದರ್ಶನದಲ್ಲಿ ನೋಡುವ ಅಭ್ಯಾಸ ಆರಂಭವಾಯಿತು. ಈಗ ಗೋಲ್ಡನ್ ಪಾಸ್ ಇದ್ದರೂ ಹೋಗಲು ಮನಸ್ಸಿಲ್ಲ. ಸಣ್ಣ ಸಣ್ಣ ಸಂತೋಷಗಳಿಗೆ ಉಲ್ಲಾಸ ಪಡುವುದನ್ನು ಕಳೆದುಕೊಂಡು ಬಿಟ್ಟಿದ್ದೇವೆ ಅನ್ಸುತ್ತೆ . ಇನ್ನು ಮೈಸೂರಿನ ದಸರಾ ವಸ್ತು ಪ್ರದರ್ಶನ ಅದು ವಿಜಯದಶಮಿ ಕಳೆದ ಮೇಲಿನ ಭೇಟಿ ಕೊಡುವ ವಾಡಿಕೆ ಏಕೆಂದರೆ ಆ ವೇಳೆಗೆ ಎಲ್ಲಾ ಅಂಗಡಿಗಳು ಬಂದಿರುತ್ತಿದ್ದವು. ಪ್ರತಿವರ್ಷ 2ಅಥವಾ 3ಬಾರಿ ಭೇಟಿ . ಶುರುವಲ್ಲೇ ಸಿಗುವ ಕಾಟನ್ ಕ್ಯಾಂಡಿ ಇಂದ ಹಿಡಿದು ಕಡೆಯಲ್ಲಿನ ಮಸಾಲೆ ದೋಸೆಯ ತನಕ ಸಿಕ್ಕಿದ್ದನ್ನೆಲ್ಲಾ ಮೆಲ್ಲುವ ಪರಿಪಾಠ .ದೊಡ್ಡ ದೊಡ್ಡ ಹಪ್ಪಳ ಚುರುಮುರಿ ಮೆಣಸಿನಕಾಯಿ ಬಜ್ಜಿ ಐಸ್ಕ್ರೀಮ್ ಒಂದೇ ಎರಡೇ ಅಷ್ಟೆಲ್ಲ ತಿನ್ನುತ್ತಿದ್ದುದು ನಾವೇನಾ ಅಂತ ಈಗ ಯೋಚಿಸಿದರೆ ಆಶ್ಚರ್ಯವಾಗುತ್ತೆ. ಸಂಜೆ 4ಗಂಟೆಗೆ ಒಳಗೆ ಪ್ರವೇಶವಾದರೆ 8 ಎಂಟೂವರೆ ತನಕ ಸುತ್ತು ಸುತ್ತಿ ನಂತರ ಮನೆಗೆ ವಾಪಸ್ . ಆಗ ಈಗಿನಷ್ಟು ಆಟಗಳೇ ಇರಲಿಲ್ಲ. ಜಯಂಟ್ ವೀಲ್ ಮಾತ್ರ . ಅದರಲ್ಲೂ ನಾವು ಕುಳಿತುಕೊಳ್ಳ ದಿದ್ದುದರಿಂದ ಸೇಫ್ . ಆದರೆ ಸರಕಾರಿ ವಿಭಾಗಗಳು ಹಾಕಿದ ಎಲ್ಲ ಸ್ಟಾಲ್ ಗಳನ್ನು ಪಾರಂಗತವಾಗಿ ನೋಡುತ್ತಿದ್ದೆವು ಅದರಲ್ಲಿ ಕಾಡು ಅರಣ್ಯ ಇಲಾಖೆಯ ಕೊಡುಗೆ ತುಂಬಾ ವಿಶೇಷ ಆಕರ್ಷಣೆ. ಗೌರಿ ಹಬ್ಬಕ್ಕೆ ಕೊಟ್ಟ ದುಡ್ಡು ಮತ್ತು ವರ್ಷದ ಇಡೀ ಉಳಿತಾಯಗಳು ಖರ್ಚಾಗುತ್ತಿದ್ದು ವಸ್ತುಪ್ರದರ್ಶನದಲ್ಲಿ . ಬಿಂದಿ ಕ್ಲಿಪ್ಪು ಬಳೆ ಸರ ಒಂದೇ ಎರಡೇ ಈ ಹಣದಲ್ಲಿ ಯಾವುದು ತೆಗೆದುಕೊಳ್ಳಬೇಕು ಎಂದು ಪ್ರಾಮುಖ್ಯತೆ ಮತ್ತು ಮೂವರು ಬೇರೆ ಬೇರೆಯದನ್ನು ತೆಗೆದುಕೊಂಡು ವಿನಿಮಯ ಮಾಡಿಕೊಳ್ಳುವ ಪದ್ಧತಿ . ಈಗ ವಸ್ತುಪ್ರದರ್ಶನಕ್ಕೆ ಭೇಟಿ ಕೊಡಲೇ ಬೇಸರ .ಇನ್ನೂ ಹೋದರೂ ಸುಮ್ಮನೆ 1 ಸುತ್ತು ಹಾಕಿ ಬರುವುದೇ ವಿನಃ ಸರಕಾರಿ ವಿಭಾಗಗಳ ಕಡೆ ಹೋಗುವುದೇ ಇಲ್ಲ ಏಕೆ ಈ ನಿರಾಸಕ್ತಿ ಅಂತ ಮಾತ್ರ ಗೊತ್ತಿಲ್ಲ. ಇನ್ನೂ ಮನೆಗೆ ಬಂದ ನೆಂಟರ ಜೊತೆ ನಂಜನಗೂಡು ಶ್ರೀರಂಗಪಟ್ಟಣ ಚಾಮುಂಡಿಬೆಟ್ಟ ಭೇಟಿಗಳು ದಸರೆಯ ಸಮಯದಲ್ಲಿ ಕಡ್ಡಾಯ ನಡೆಯುತ್ತಿದ್ದವು ಅಂತೂ ಕಾಲ ಕಳೆಯಲು ದೈನಂದಿನ ಏಕಾ ಗಿ ಏಕತಾನತೆಯಿಂದ ಪಾರಾಗಲು ಇವು ಆಗ ಇದ್ದ ಮಾರ್ಗಗಳು .ಅದನ್ನು ಪೂರ್ಣಪ್ರಮಾಣದಲ್ಲಿ ಅನುಭವಿಸಿ ಖುಷಿಯ ಸ್ಮರಣೆಗಳನ್ನು ಮೆಲುಕಬುತ್ತಿ ಗಳನ್ನಾಗಿಸಿಕೊಂಡು ಈಗ ಸವಿಯುವುದು. ಪ್ರತಿ ದಿನ ದೇವಿ ಗೀತೆಗಳನ್ನು ಕೀರ್ತನೆಗಳನ್ನು ಹಾಡುವುದು ಲಲಿತಾ ಸಹಸ್ರನಾಮ ಪಠಣೆ ಮಹಿಷಾಸುರ ಮರ್ದಿನಿ ಸ್ತೋತ್ರ ಇವು ಆಗಿನ ಆಧ್ಯಾತ್ಮಿಕ ಆಚರಣೆಗಳು ಅನ್ನಬಹುದೇನೋ . ಮದುವೆಯ ನಂತರ ಅತ್ತೆ ಮನೆಯಲ್ಲಿ
ಅಂಕಣ ಸಂಗಾತಿ ಗಜಲ್ ಲೋಕ ರಜಪೂತರ ಗಜಲ್ ನಾದದಲ್ಲೊಂದು ಸುತ್ತು … ಹಾಯ್…. ಏನು ಯೋಚಿಸ್ತಾ ಇದ್ದೀರಾ, ಇಂದು ಯಾವ ವಾರ ಎಂದೋ…? ನಾನು ಓರ್ವ ಗಜಲ್ ಗೋ ಅವರ ಪರಿಚಯದೊಂದಿಗೆ ಬಂದಿದ್ದೇನೆ ಎಂದರೆ ಇಂದು ‘ಗುರುವಾರ’ ಎಂದಲ್ಲವೇ…!! ಶುಭೋದಯ, ನನ್ನ ಎಲ್ಲ ಕಸ್ತೂರಿ ಕನ್ನಡದ ಹೃದಯಗಳಿಗೆ ಈ ಮಲ್ಲಿನಾಥನ ಮಲ್ಲಿಗೆಯಂತ ನಮಸ್ಕಾರಗಳು. “ಆ ಹೆಜ್ಜೆಗಳ ಸದ್ದನ್ನು ನಾವು ಬಹಳ ಮೊದಲೇ ತಿಳಿಯುತ್ತೇವೆ ಹೇಯ್ ಜೀವನವೇ..ನಾವು ನಿನ್ನನ್ನು ದೂರದಿಂದಲೇ ಗುರುತಿಸುತ್ತೇವೆ” –ಫಿರಾಕ್ ಗೋರಖಪುರಿ ‘ಜೇನು’ ಎಂದ ತಕ್ಷಣವೇ ನಮ್ಮ ಬಾಯಿಯು ಒದ್ದೆಯಾಗುತ್ತದೆ, ಅಲ್ಲವೆ..! ನಾವು ಜೇನು ಸವಿಯೋದು ರುಚಿಗಾಗಿಯಾದರೂ ಅದರ ಫಲ ಮಾತ್ರ ರುಚಿಯ ಆಚೆಗೆ ಇದೆ! ಆ ಜೇನಿನ ಮಕರಂದವು ನಮ್ಮ ದೇಹವನ್ನು ಪ್ರವೇಶಿಸಿ ರಕ್ತದ ಉತ್ಪತ್ತಿಗೆ ಕಾರಣವಾಗುತ್ತದೆ, ನಮ್ಮ ಸದೃಢ ಆರೋಗ್ಯಕ್ಕೆ ಬುನಾದಿಯಾಗುತ್ತದೆ. ಇದರಂತೆಯೇ ಸಾಹಿತ್ಯದಿಂದ ಮನೋರಂಜನೆ ದೊರೆಯುತ್ತದೆ ಎಂಬುದು ಮೇಲ್ನೋಟಕ್ಕೆ ದಿಟವೆನಿಸಿದರೂ ಸಾಹಿತ್ಯದ ಕರಾಮತ್ತು ಮನೋರಂಜನೆಯನ್ನು ದಾಟಿಕೊಂಡು ವ್ಯಕ್ತಿಯ ವ್ಯಕ್ತಿತ್ವದ ವಿಕಾಸಕ್ಕೆ, ಸಂಸ್ಕಾರಕ್ಕೆ ತಳಪಾಯ ಹಾಕುತ್ತದೆ, ಹಾಕುತ್ತಿದೆ ಕೂಡ! ಕಾಂತೆಯಂತೆ ಸಂತೈಸುತ್ತದೆ, ತಾಯಿಯಂತೆ ಜೋಗುಳವಾಡುತ್ತದೆ, ಇವಾಗಲೂ ಇದನ್ನೆ ಮಾಡುತ್ತಿದೆ! ಪ್ರತಿ ಭಾಷೆಯ ಬೇರುಗಳಲ್ಲಿ ಅಕ್ಷರದ ಅಕ್ಷಯ ಪಾತ್ರೆ ಇದೆ. ಇದು ಮನುಕುಲಕ್ಕೆ ಬೆಂಗಾವಲಾಗಿ, ಜ್ಯೋತಿಯಾಗಿ ಬೆಳಕನ್ನು ನೀಡಿದೆ, ನೀಡುತ್ತಿದೆ. ಕನ್ನಡದ ಹಣತೆಯು ಹಲವರ ಬೌದ್ಧಿಕ ಚಲನೆಯಿಂದ ದೇದಿಪ್ಯಮಾನವಾಗಿ ಪ್ರಕಾಶಿಸುತ್ತಿದೆ. ಇದಕ್ಕೆ ಅನ್ಯ ಭಾಷೆಯ ಸಾಹಿತ್ಯ ರೂಪಗಳು ತೈಲದಂತೆ ಸಾಥ್ ನೀಡುತ್ತಿವೆ. ಅಂತಹ ತೈಲಗಳಲ್ಲಿ ‘ಗಜಲ್’ ಗೆ ವಿಶಿಷ್ಟವಾದ ಸ್ಥಾನವಿದೆ. ಆಧ್ಯಾತ್ಮಿಕ ನೆಲೆಯಲ್ಲಿ ಜಗುಲಿ ಮೇಲೆ ರಂಗೋಲಿ ಹಾಕುತಿದೆ, ಜೊತೆ ಜೊತೆಗೆ ರಸೋಯಿ ಕೋಣೆಯಲ್ಲಿ ಅನ್ನಪೂರ್ಣೆಯಾಗಿಯೂ ಕಾರ್ಯ ನಿರ್ವಹಿಸುತಿದೆ. ಈ ನೆಲೆಯಲ್ಲಿ ಇಡೀ ಮನುಕುಲಕ್ಕೆ ದಾರಿ ದೀಪವಾಗಿದೆ. ಕನ್ನಡದಲ್ಲಿ ಇಂದು ಅಸಂಖ್ಯಾತ ಗಜಲ್ ಗೋ ಇದ್ದಾರೆ. ಅವರುಗಳಲ್ಲಿ ಉತ್ತಮ ಗಜಲ್ ಗೋ ಹಾಗೂ ಸುಶ್ರಾವ್ಯ ಕಂಠಾಧಿಪತಿಯಾದ ವಿಜಯಪುರದ ಶ್ರೀ ಪ್ರಕಾಶ್ ಸಿಂಗ್ ರಜಪೂತ್ ಅವರು ಪ್ರಮುಖರು. ಶಿಶುಪಾಲಸಿಂಗ್ ರಘುನಾಥಸಿಂಗ್ ರಜಪೂತ್ ಹಾಗೂ ಶ್ರೀಮತಿ ಶಶಿಕಲಾಬಾಯಿ ದಂಪತಿಗಳ ಮುದ್ದಿನ ಮಗುವಾಗಿ ಶ್ರೀ ಪ್ರಕಾಶ್ ಸಿಂಗ್ ರಜಪೂತ್ ಅವರು 1954ರ ಅಕ್ಟೋಬರ್ 24 ರಂದು ಜನಿಸಿದ್ದಾರೆ. ಡಿಪ್ಲೋಮಾ ಇನ್ ಇಲೆಕ್ಟ್ರೀಕಲ್ ಇಂಜಿನಿಯರಿಂಗ್ ಶಿಕ್ಷಣ ಪೂರೈಸಿ ತಮ್ಮನ್ನು ತಾವು ಓರ್ವ ವ್ಯಾಪಾರಿಯಾಗಿ ತೊಡಗಿಸಿಕೊಂಡಿರುವ ಶ್ರೀಯುತರು ಪ್ರವೃತ್ತಿಯಿಂದ ಬಹುಭಾಷಾ ಕವಿಗಳು ಹಾಗೂ ಗಾಯಕರು ಆಗಿ ಸಾಂಸ್ಕೃತಿಕ ಲೋಕದಲ್ಲಿ ಚಿರಪರಿಚಿತರಾಗಿದ್ದಾರೆ. ಕನ್ನಡ, ಹಿಂದಿ, ಇಂಗ್ಲೀಷ್, ಮರಾಠಿ, ಗುಜರಾತಿ ಹಾಗೂ ಉರ್ದು ಭಾಷೆಗಳನ್ನು ಬಲ್ಲವರಾಗಿದ್ದು, ಈ ಭಾಷೆಗಳಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ವಿಶೇಷವಾಗಿ ಭಾಷಾಂತರ ಕಾರ್ಯದಲ್ಲಿ ನಿರತರಾಗಿರುವ ರಜಪೂತ್ ರವರು ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು.. ಮುಂತಾದ ಶರಣರ ವಚನಗಳನ್ನು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಹೆಸರಾಂತ ಹಿಂದಿ, ಉರ್ದು ಕವಿಗಳ 80 ಗಜಲ್ ಗಳನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ. ಹರಿವಂಶರಾಯ ಬಚ್ಚನ್ ಅವರ ‘ಮಧುಶಾಲಾ’ ಕೃತಿಯನ್ನು ಕನ್ನಡ ಮತ್ತು ಮರಾಠಿ ಭಾಷೆಗೆ ಅನುವಾದಿಸಿದ್ದಾರೆ. ಕಬೀರ್ ದಾಸ್, ರಹೀಮ್, ತುಳಸಿದಾಸರ ದೋಹೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇದರೊಂದಿಗೆ ಹಲವಾರು ಹಿಂದಿ ಕವಿಗಳ ಕಾವ್ಯವನ್ನು ಕನ್ನಡ ಅಂಗಳದಲ್ಲಿ ಬಿತ್ತನೆ ಮಾಡಿದ್ದಾರೆ. ಇನ್ನೂ 2014ರಲ್ಲಿ “ಬಾಳಿನ ರಾಗ” ಎಂಬ 54 ಗಜಲ್ ಗಳ ಸಂಕಲನವನ್ನು ಪ್ರಕಟಿಸಿದ್ದಾರೆ. ಶಾರದೆಯ ಆರಾಧಕರಾದ ಶ್ರೀಯುತರು ಹಲವಾರು ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಸಕ್ರೀಯರಾಗಿದ್ದು, ವಿವಿಧ ಸಾಹಿತ್ಯ ಸಮ್ಮೇಳನಗಳು, ಕವಿಗೋಷ್ಠಿ, ಗಜಲ್ ಮುಶಾಯಿರಾ ದಂತಹ ಮಧುರ ಕ್ಷಣಗಳಲ್ಲಿ ತಮ್ಮ ನೆನಪುಗಳನ್ನು ಶಾಶ್ವತಗೊಳಿಸಿಕೊಂಡಿದ್ದಾರೆ. ಆಕಾಶವಾಣಿ, ದೂರದರ್ಶನ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿ ನಾಡಿನ ಜನರಿಗೆ ರಂಜಿಸಿದ್ದಾರೆ. ಹತ್ತು ಹಲವಾರು ಸಂಘ ಸಂಸ್ಥೆಗಳು ಪ್ರಕಾಶ್ ಸಿಂಗ್ ರಜಪೂತ್ ರವರ ಪಾರದರ್ಶಕ ವ್ಯಕ್ತಿತ್ವವನ್ನು ಪ್ರೀತಿಸುತ್ತ ಸನ್ಮಾನಿಸಿವೆ, ಗೌರವಿಸಿವೆ!! ವೃತ್ತಿ ಹೊಟ್ಟೆಯನ್ನು ತುಂಬಿಸಿದರೆ ಪ್ರವೃತ್ತಿ ಹೃದಯದ ಹಸಿವನ್ನು ನೀಗಿಸುತ್ತದೆ. ಅಂತೆಯೇ ವ್ಯಕ್ತಿ ಹವ್ಯಾಸದಲ್ಲಿ ತನ್ನ ದಣಿವನ್ನು ಮರೆಯುತ್ತಾನೆ. ಈ ನೆಲೆಯಲ್ಲಿ ಗಜಲ್ ಗೋ ಪ್ರಕಾಶ್ ಸಿಂಗ್ ರಜಪೂತ್ ರವರ ಗಜಲ್ ಭಾವ ದೀಪ್ತಿಯ ಚಲನೆ ನಿರಂತರವಾಗಿ ಸಾಗುತ್ತಿದೆ. ಹಿಂದಿ, ಉರ್ದು ಗಜಲ್ ತೋಟಗಳಲ್ಲಿ ಸುಳಿದಾಡಿ ಆಕರ್ಷಿತರಾದ ಇವರು ತಮ್ಮ ಗಜಲ್ ಗಳಲ್ಲಿ ಭಾವಯಾನಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತ, ಸಂಗೀತಕ್ಕೆ ಅಳವಡಿಸುತ್ತ ಬಂದಿದ್ದಾರೆ. ಕೇವಲ ತಮ್ಮ ಗಜಲ್ ಗಳನ್ನು ಮಾತ್ರ ಹಾಡದೇ, ಇನ್ನಿತರರ ಗಜಲ್ ಗಳನ್ನು ಹಾಡಿ ಸಂಭ್ರಮಿಸುವುದು ಅವರ ಸಕಾರಾತ್ಮಕ ವ್ಯಕ್ತಿತ್ವದ ಕೈಗನ್ನಡಿಯಾಗಿದೆ! ಗಜಲ್ ಎಂದರೆ ಅಂತರಂಗ ಅನಾವರಣಗೊಳಿಸುವ ಧ್ಯಾನಸ್ಥ ಸ್ಥಿತಿ. ಇದು ಆಡಂಬರದ ಡಂಗುರ ಸಾರುವ ದುಡಿಯಲ್ಲ, ಇದೊಂದು ಮನಸ್ಸಿಗೆ ಮುದ ನೀಡುವ ಢಮರುಗ. ಮಧ್ಯರಾತ್ರಿಯಲ್ಲೂ ಮನದ ಸ್ಮೃತಿಯಲ್ಲಿ ನೇಸರನನ್ನು ಮೂಡಿಸುವ ಗಜಲ್ ಹೃದಯದ ಬಡಿತವಾಗಿದ್ದು, ಕಲಾರಸಿಕರನ್ನು ತನ್ನ ತೆಕ್ಕೆಯಲ್ಲಿ ಹಿಡಿದುಕೊಂಡು ವಿಶ್ವಪರ್ಯಟನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇದೊಂದು ಭಾವಪೂರ್ಣ ಕಾವ್ಯ ಪ್ರಕಾರ!! “ಅವಳ ನಗೆ ಮುತ್ತು ನಾನು ಸಂಗ್ರಹಿಸಬೇಕು ಪಾಲಿನಲ್ಲಿ ಬಂದ ಪಾತ್ರ ನಾ ವಹಿಸಬೇಕು” ಎನ್ನುವ ಮತ್ಲಾ ಬಯಕೆಗಳ ಜೊತೆ ಜೊತೆಗೆ ಕರ್ಮ ಸಿದ್ಧಾಂತವನ್ನು ಅರುಹುತ್ತಿದೆ. ನಗೆ ಮುತ್ತು ಸಂಗ್ರಹಿಸುವ ಕಾರ್ಯಕ್ಕೆ ತೊಡಗಿರುವ ಮನವು ‘ಪಾಲಿಗೆ ಬಂದದ್ದು ಪಂಚಾಮೃತ’ ಎನ್ನುವ ಸ್ಥಿತಪ್ರಜ್ಞೆಗೆ ಅಂಟಿಕೊಂಡಿರುವುದು ಮನದಟ್ಟಾಗುತ್ತದೆ. ಪ್ರೀತಿಯ ದಾರಿಯಲ್ಲಿ ಎರಡು ಕವಲುಗಳು ಇರುವುದನ್ನು ಈ ಷೇರ್ ಸೂಚ್ಯವಾಗಿ ದಾಖಲಿಸುತ್ತದೆ. ‘ಮುತ್ತು ಸಂಗ್ರಹಿಸಿದರೆ’ ಶೃಂಗಾರ, ‘ಪಾಲಿನಲ್ಲಿ ಬಂದ ಪಾತ್ರ’ ಎಂಬುದು ವಿಪ್ರಲಂಭ ಶೃಂಗಾರವನ್ನು ಪ್ರತಿಧ್ವನಿಸುತ್ತಿದೆ. “ಯಾರು ತಂದೆ, ಯಾರು ತಾಯಿ, ಬಾಳಲು ಬೇಕು ರೂಪಾಯಿ ಹೊಟ್ಟೆ ತುಂಬಾ ಜೀವ ಬೇಡಿದೆ, ನುಂಗಲು ರಾಗಿಯ ಮುದ್ದಿ“ ಎನ್ನುವ ಈ ಷೇರ್ ಜೀವನದ ಆಯಾಮಗಳ ಜೊತೆಗೆ ಬಾಳಿನ ಅಂತಿಮ ದರ್ಶನವನ್ನು ಮಾಡಿಸುತ್ತದೆ. ಇಲ್ಲಿಯ ಮಿಸರೈನ್ ಸಂವಾದ ರೂಪದಲ್ಲಿ ಮೂಡಿ ಬಂದಿವೆ. ಈ ಜಗದೊಳಗೆ ಎಲ್ಲ ಸಂಬಂಧಗಳ ರಿಂಗ್ ಮಾಸ್ಟರ್ ದುಡ್ಡು ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಹಸಿದ ಒಡಲಿಗೆ ಬೇಕಾಗಿರುವುದು ತುತ್ತು ಅನ್ನ ಮಾತ್ರ!! ಈ ಕಾರಣಕ್ಕಾಗಿಯೇ ದುಡ್ಡನ್ನು ಉಪ್ಪಿಗೆ ಹೋಲಿಸಲಾಗಿದೆ. ಮನುಷ್ಯನ ಬದುಕೆನ್ನುವುದು ಕೊಳಲಿನ ನಾದದಂತೆ, ನುಡಿಸಲು ಬಂದರೆ ಅದುವೇ ಗೆಲುವು, ಇಲ್ಲದಿದ್ದರೆ….! ಈ ಮಾತು ನಮ್ಮ ಗಜಲ್ ಅಮೃತವರ್ಷಿಣಿಗೂ ಅನ್ವಯವಾಗುತ್ತದೆ. ಗಜಲ್ ರಚನೆಯೆಂದರೆ ಗಾಢವಾದ ಮೌನದೊಳಗಿನ ಕಲರವ, ತಪಸ್ಸಿನೊಳಗಿನ ಪ್ರವಚನ ; ನಿದ್ದೆಯಲ್ಲಿನ ಸೂಪ್ತಾವಸ್ಥೆಯಂತೆ. ಗಜಲ್ ಗೋ ಪ್ರಕಾಶ್ ಸಿಂಗ್ ರಜಪೂತ್ ರವರ ಗಜಲ್ ಗಾನಯಾನ ದಣಿವರಿಯದ ಪಾರಿವಾಳದಂತೆ ಆಗಸದಲ್ಲಿ ರೆಕ್ಕೆ ಬಿಚ್ಚಿ ಹಾರಾಡಲಿ ಎಂದು ಹೃನ್ಮನದಿ ಶುಭ ಕೋರುತ್ತೇನೆ. “ಎಲ್ಲ ಕೆಲಸ ಹೂವೆತ್ತಿದಂತೆ ಹಗುರವಾಗೋದು ಕಷ್ಟ ಮನುಷ್ಯರಾಗಿ ಹುಟ್ಟಿದವರಿಗೂ ಮನುಷ್ಯರಾಗೋದು ಕಷ್ಟ!” –ಮಿರ್ಜಾ ಗಾ0ಲಿಬ್ ಮುಂದಿನ ವಾರ.. ಅಂದರೆ ಗುರುವಾರ, ಮತ್ತೊಮ್ಮೆ ನಿಮ್ಮ ನೆಚ್ಚಿನ ಗಜಲ್ ಉಸ್ತಾದರೊಂದಿಗೆ ನಿಮ್ಮ ಮುಂದೆ ಪ್ರತ್ಯಕ್ಷನಾಗುವೆ. ಅಲ್ಲಿಯವರೆಗೂ ಧನ್ಯವಾದಗಳು… ಡಾ. ಮಲ್ಲಿನಾಥ ಎಸ್. ತಳವಾರ ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ
ಅಂಕಣ ಸಂಗಾತಿ ನೆನಪಿನದೋಣಿಯಲಿ ವರ್ತನೆಯವರು ಪ್ರಲಾಪಿಸಬೇಡ ನೆನೆದು ಹಪಹಪಿಸಿ ಕಳೆದುಹೋದದ್ದನ್ನ ಕಾಲ ಏಕಾಏಕಿ ಬಂದು ಮೇದದ್ದನ್ನ ನೆನೆ ಇದನು ಮರೆಯದೆ ಲುಕ್ಸಾನಿಗೆದೆ ಮರುಗದೆ ಕಳೆದುಕೊಂಡದ್ದು ನಿನ್ನೊಡನೆ ಇದ್ದಷ್ಟು ದಿನ ಹಿಗ್ಗ ನೀಡಿದ್ದನ್ನ ಕೆ ಎಸ್ ನಿಸಾರ್ ಅಹ್ಮದ್ ಅಂದು ವಾಯುವಿಹಾರ ಮುಗಿಸಿ ಬಂದ ರವೀಶ್ “ನೋಡು ದಿನಾ ಹಾಲಿನ ಪ್ಯಾಕೆಟ್ ತೊಗೋತಿದ್ನಲ್ಲ ಪಾಪ ಆ ವ್ಯಕ್ತಿ ಕರೋನಾ ಬಂದು ಹೋಗಿ ಬಿಟ್ನಂತೆ ಪಾಪ” ಎಂದು ಪೇಚಾಡಿಕೊಂಡರು. ಯಾಕೋ ನನಗೆ ಥಟ್ಟಂತ ನನ್ನ ಬಾಲ್ಯ ನೆನಪಾಯಿತು. ಅಂದು ನನ್ನ ಹುಟ್ಟಿದ ಹಬ್ಬ. ಅಂದೇ ಬೆಳಿಗ್ಗೆ ನಮ್ಮ ಮನೆಗೆ ಮೊಸರು ವರ್ತನೆಗೆ ಹಾಕುತ್ತಿದ್ದವಳ ಮರಣದ ಸುದ್ದಿಯೂ ಬಂತು.ಅಮ್ಮ ಹುಟ್ಟುಹಬ್ಬವನ್ನೇ ಮರುದಿನಕ್ಕೆ ಪೋಸ್ಟ್ ಪೋನ್ ಮಾಡಿ ಅವಳ ಮರಣದ ಶೋಕಾಚರಣೆ ಆಚರಿಸಿದರು. ನನ್ನ ಮುಖ ಕೊಂಚ ಗಡಿಗೆ ಗಾತ್ರ ಆಗಿದ್ದು ಸುಳ್ಳಲ್ಲ. ವರ್ತನೆಯೆಂದರೆ ನಿಘಂಟಿನಲ್ಲಿ ನಡವಳಿಕೆ ರೂಢಿ ಎಂದು ಅರ್ಥ . ಆದರೆ ಜನಸಾಮಾನ್ಯರ ಭಾಷೆಯಲ್ಲಿ ದಿನವೂ ಅಥವಾ ನಿಯಮಿತವಾಗಿ ವಸ್ತುಗಳನ್ನು ಸರಬರಾಜು ಮಾಡಿ ತಿಂಗಳಿಗೊಮ್ಮೆ ಹಣ ಪಡೆಯುವವರಿಗೆ ವರ್ತನೆಯವರು ಎಂದು ಕರೆಯುವ ಅಭ್ಯಾಸ. ಪ್ರತಿಯೊಂದಕ್ಕೂ ಅಂಗಡಿಯನ್ನು ಅವಲಂಬಿಸದ ಕಾಲ ಅದು. ಮನೆಯ ಬಾಗಿಲಿಗೆ ಹಾಲು ಮೊಸರು ಹೂವು ತರಕಾರಿ ಎಲ್ಲವನ್ನೂ ಒದಗಿಸುತ್ತಿದ್ದರು. ಒಮ್ಮೊಮ್ಮೆ ಈಗಿನ ಆನ್ ಲೈನ್ ಸೇವೆಗಳನ್ನು ನೋಡಿದಾಗ ಅದೇ ನೆನಪಾಗುತ್ತದೆ .ಆದರೆ ಆಗಿನ ಆತ್ಮೀಯತೆ ಪರಿಚಯದ ಭಾವ ಇಂದಿನ ತಲುಪಿಸುವ ವ್ಯವಸ್ಥೆಗಳಿಗೆಲ್ಲಿ ಬರಬೇಕು? ಹಾಲಿನ ಗಡಿಗೆಗಳನ್ನು ಬಿದಿರಿನ ಬುಟ್ಟಿಯಲ್ಲಿ ಇಟ್ಟುಕೊಂಡು ಬರುತ್ತಿದ್ದ ಹಾಲಿನ ಮಹದೇವಮ್ಮ ನನ್ನ ನೆನಪಿನಿಂದ ಏಕೋ ಇನ್ನೂ ಮರೆಯಾಗಿಯೇ ಇಲ್ಲ .ಹಸಿರು ಅಥವಾ ಕೆಂಪು ಚೌಕಳಿಯ ಹತ್ತಿ ಸೀರೆ ಎಲ್ಲದಕ್ಕೂ ಬಿಳಿ ರವಿಕೆಯನ್ನೇ ತೊಟ್ಟು ಹಣೆತುಂಬ ಕಾಸಗಲ ಕುಂಕುಮ ಇಟ್ಟ ನಲ್ವತ್ತೈದು ಐವತ್ತರ ಆಸುಪಾಸಿನ ಮಹಿಳೆ. ಸಾಸಿವೆ ಎಳ್ಳು ಬೆರೆಸಿದಂಥ ಬಣ್ಣದ ನೆರೆತಲೆ. ಕಾಡು ಹೂವಾದರೂ ಸರಿ ಹೂ ಮುಡಿಯದೆ ಇರುತ್ತಿರಲಿಲ್ಲ. ಕೈತುಂಬಾ ಜರುಗಲು ಸಾಧ್ಯವಿರದಷ್ಟು ಗುತ್ತನಾಗಿ ಹಸಿರುಬಳೆ ತೊಡುತ್ತಿದ್ದಳು .ತಪ್ಪದೆ ರೇಡಿಯೋದ 7 ಮೂವತ್ತೈದರ ಕನ್ನಡ ವಾರ್ತೆಯ ಸಮಯಕ್ಕೆ ಹಾಲು ತರುತ್ತಿದ್ದ ಅವಳ ಸಮಯಪಾಲನೆ ನಿಜಕ್ಕೂ ಆಶ್ಚರ್ಯ . ಆಗ ಲೀಟರ್ ಕಾಲ ಅಲ್ಲ ಪಾವು ಸೊಲಿಗೆ ಗಳಲ್ಲಿ ಅಳತೆ. ಹೆಚ್ಚು ಹಾಲು ತೆಗೆದುಕೊಂಡ ದಿನ ಒಂಟಿಕೊಪ್ಪಲ್ ಕ್ಯಾಲೆಂಡರ್ನಲ್ಲಿ + ಚಿಹ್ನೆ ಹಾಕಿ ಎಷ್ಟು ಹೆಚ್ಚು ಎಂದು ಬರೆಯುವ ಕೆಲಸ ಹಾಗೆಯೇ ತೆಗೆದುಕೊಳ್ಳದ ,ಕಡಿಮೆ ತೆಗೆದುಕೊಂಡಾಗ _ ಚಿಹ್ನೆ ಹಾಕಿ ಗುರುತು ಮಾಡುತ್ತಿದ್ದುದು . ತಿಂಗಳ ಕೊನೆಯಲ್ಲಿ ಅವಳು ಹೇಳಿದ ಲೆಕ್ಕ ನಮ್ಮದಕ್ಕೆ ತಾಳೆಯಾಗುತ್ತಿತ್ತು ಅಷ್ಟೊಂದು ಮನೆಗಳ ಲೆಕ್ಕಾಚಾರ ಬಾಯಿಯಲ್ಲೇ ನೆನಪಿಡುವ ಅವಳ ಬುದ್ದಿವಂತಿಕೆ ನಿಜಕ್ಕೂ ಶ್ಲಾಘನೀಯವೇ. ಮಕ್ಕಳ ಮದುವೆ ಮಾಡಿದಾಗಲೆಲ್ಲ ನವವಧುವರರನ್ನು ಕರೆದುಕೊಂಡು ಬಂದು ಆಶೀರ್ವಾದ ಕೊಡಿಸುತ್ತಿದ್ದಳು . ವಾರದಲ್ಲಿ ಒಂದೋ ಎರಡೋ ದಿನ ಹನ್ನೊಂದು ಗಂಟೆಗೆ ವಾಪಸ್ಸು ಹೋಗುವಾಗ ಅಮ್ಮ ಕೊಟ್ಟ ತಿಂಡಿ/ಊಟವನ್ನು ಮಾಡಿ ಹೋಗುತ್ತಿದ್ದಳು. ಬೆಳಿಗ್ಗೆ ಬಂದಾಗ ಒಮ್ಮೊಮ್ಮೆ ಕೇಳಿ ಕಾಫಿ ಕುಡಿಯುತ್ತಿದ್ದಳು. ನಾನು ದೊಡ್ಡವಳಾದಾಗ ಕೊಬ್ಬರಿ ತುಪ್ಪ ಆರೈಕೆಗೆಂದು ಅಕ್ಕರೆಯಿಂದ ತಂದುಕೊಟ್ಟದ್ದು ಇನ್ನೂ ಹಸಿರು . ನನ್ನ ಕಡೆಯ ತಂಗಿಗೆ 1ಪುಟ್ಟ ಗಿಂಡಿಯ ತುಂಬಾ ಹಾಲು ಕೊಡುತ್ತಿದ್ದಳು; ಅದಕ್ಕೆ ಲೆಕ್ಕವಿಡುತ್ತಿರಲಿಲ್ಲ. ಮೊಸರಿನ ಗಂಗಮ್ಮ ಇವಳಿಗಿಂತ ಭಿನ್ನ ಸ್ವಲ್ಪ ನಾಜೂಕಿನ ನಾರಿ ..ಆಗಿನ ಕಾಲದ ಲೆಕ್ಕದಲ್ಲಿ ಸ್ಟೈಲ್ ವಾಲಿ . ಮೂವತ್ತರ ಒಳಗಿನ ವಯಸ್ಸು .ಮಧ್ಯಾಹ್ನ ಹನ್ನೊಂದು ಗಂಟೆ ಸಮಯಕ್ಕೆ ಬರುತ್ತಿದ್ದಳು .ನಾವು ಶಾಲೆಗೆ ಹೋಗದ ದಿನಗಳಲ್ಲಿ ಮಾತ್ರ ಅವಳ ದರ್ಶನ ಭಾಗ್ಯ . ಮೊಸರು ಮಜ್ಜಿಗೆಯ ಗಡಿಗೆಗಳನ್ನು ಬಿದಿರಿನ ಬುಟ್ಟಿಯಲ್ಲಿ ಒಪ್ಪವಾಗಿ ಇಟ್ಟು ಕೊಂಡು ಬಂದು ಅಚ್ಚುಕಟ್ಟಾಗಿ ಅಳೆದುಕೊಡುತ್ತಿದ್ದಳು. ಇವಳಿಗೋ ಲೆಕ್ಕದ ಗಂಧವೇ ಇಲ್ಲ .ಅದನ್ನು ಮುಚ್ಚಿಟ್ಟುಕೊಳ್ಳಲು “ನೀವು ಕೊಟ್ಟಷ್ಟು ಕೊಡಿ ಮೋಸ ಮಾಡೋರಲ್ಲ ಬಿಡಿ” ಅಂದುಬಿಡುತ್ತಿದ್ದಳು. ಪಾಪ 9 ತಿಂಗಳು ತುಂಬುವವರೆಗೂ ಗರ್ಭಿಣಿ ಹೆಂಗಸು ಬಂದು ಮೊಸರು ವ್ಯಾಪಾರ ಮಾಡ್ತಿದ್ದಳು. ಹೆರಿಗೆಯಲ್ಲಿ ಕಷ್ಟವಾಗಿ ಸತ್ತುಹೋದಳು. ಈ ಪ್ರಸಂಗವನ್ನೇ ನಾನು ಮೇಲೆ ಹೇಳಿದ್ದು. ಮನೆಯ ತೋಟದಲ್ಲಿ ರಾಶಿ ಹೂ ಬಿಟ್ಟಿದ್ದರಿಂದ ಹೂವಿಗೆ ವರ್ತನೆಯವರಿರಲಿಲ್ಲ . ಆದರೆ ಒಬ್ಬ ಹಣ್ಣು ಮುದುಕಿ ಹತ್ತಿರದ ಹಳ್ಳಿಯಿಂದ ಸಂಪಿಗೆ ಕೆಂಡ ಸಂಪಿಗೆ ಹೂ ತರುತ್ತಿದ್ದರು. ಬಂದಾಗಲೆಲ್ಲ ಅಮ್ಮ ಬೋಣಿ ಮಾಡಬೇಕು ಕಾಫಿ ತಿಂಡಿ ತೀರ್ಥ ಕೊಡಬೇಕು ಅವರಿಗೆ .ಪೈಸೆಗೆ 1ಸಂಪಿಗೆ ಹೂವು ಹತ್ತು ಇಪ್ಪತ್ತು ಸಂಪಿಗೆ ಹೂಗಳನ್ನು ಪೋಣಿಸಿ ದಿಂಡೆ ಮಾಡಿ ಮುಡಿದು ಕೊಳ್ಳುತ್ತಿದ್ದೆವು. ಆಕೆಯ ಹೆಸರೇನೋ ಮರೆತು ಹೋಗಿದೆ . ಆದರೆ ಏಕವಚನದಲ್ಲಿ ಮಾತನಾಡಿಸಿ ಆನಂತರ ನಮ್ಮ ತಂದೆಯಿಂದ ಬೈಗುಳ ಮತ್ತು ಹಾಗೆ ಮಾಡಬಾರದೆಂಬ ಧೀರ್ಘ ಲೆಕ್ಚರ್ ಕೇಳಿದ್ದು ಮರೆತಿಲ್ಲ. ಭಿಕ್ಷುಕರನ್ನೂ ಬಹುವಚನದಿಂದ ಮಾತನಾಡಿಸುವ ನನ್ನ ಅಭ್ಯಾಸಕ್ಕೆ ಇದು ನಾಂದಿಯಾಗಿತ್ತು. ಹಾಗೆಯೇ ದೂರದ ಎಲೆತೋಟದ ಬಳಿಯಿಂದ ತಂದು ವಿಳ್ಳೆಯದೆಲೆ ಕವಳಿಗೆ ಲೆಕ್ಕದಲ್ಲಿ ಕೊಡುತ್ತಿದ್ದ ಎಲೆಯ ನಂಜಮ್ಮ ಸಹ ಒಬ್ಬರು ವರ್ತನೆಯವರು . ಅವರ ಕಿವಿಯ ತೂತು ತುಂಬಾ ದೊಡ್ಡದಾಗಿದ್ದು ಈಗ ನಾವು ಗೌರಿ ಬಾಗಿನಕ್ಕೆ ಇಡುವ ಬಳೆಬಿಚ್ಚೋಲೆಯನ್ನೇ ಕಿವಿಗೆ ಧರಿಸಿಕೊಳ್ಳುತ್ತಿದ್ದುದು ನಮ್ಮ ಬೆರಗಿಗೆ ಆಗ ಕಾರಣವಾಗಿತ್ತು. ಆಕೆಯೂ ಬಂದಾಗಲೆಲ್ಲಾ ಕಾಫಿ ಕೇಳಿ ಕುಡಿಯುತ್ತಿದ್ದರು. ಒಮ್ಮೊಮ್ಮೆ ಮಾತ್ರ ಊಟ ಮಾಡುತ್ತಿದ್ದರು. ಇನ್ನೊಬ್ಬ ವ್ಯಕ್ತಿ ಸೈಕಲ್ ನಲ್ಲಿ ಬೇರೆ ಬೇರೆ ಡಬ್ಬಗಳನ್ನು ಕಟ್ಟಿಕೊಂಡು ಬಂದು ಎಣ್ಣೆ ಮಾರುತ್ತಿದ್ದುದು ನೆನಪು . ಕಡಲೆಕಾಯಿ ಎಣ್ಣೆ, ಎಳ್ಳೆಣ್ಣೆ, ಕೊಬ್ಬರಿಎಣ್ಣೆ, ಹರಳೆಣ್ಣೆ ಇದೆಲ್ಲಾ ಆತನ ಬಳಿಯೇ ತೆಗೆದುಕೊಳ್ಳುತ್ತಿದ್ದುದು. ಪ್ರತೀ ಶನಿವಾರ ಬರುತ್ತಿದ್ದರು ಅನ್ನಿಸತ್ತೆ . ಆತನ ತಿಳಿನೀಲಿ ಷರಟು ಹಾಗೂ ತಲೆಗೆ ಕಟ್ಟಿಕೊಳ್ಳುತ್ತಿದ್ದ ಟವಲ್ ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇದೆ . ಇನ್ನೊಬ್ಬಾತನೂ ಹಾಗೆ ಸೈಕಲ್ಲಿನಲ್ಲಿ ಬರುತ್ತಿದ್ದರು. ಆಯಾ ಕಾಲದಲ್ಲಿ ಸಿಗುವ ಹಣ್ಣುಗಳನ್ನು ತಂದು ಮಾರುತ್ತಿದ್ದರು . ಆಗೆಲ್ಲಾ ಕೆಜಿಯ ಲೆಕ್ಕವೇ ಇಲ್ಲ ಇಡೀ ಹಲಸು, ಗೂಡೆಗಟ್ಟಲೆ ಮಾವು ಕಿತ್ತಳೆ, ಗೊನೆಬಾಳೆ ಹೀಗೆಯೇ. ತೆಂಗಿನಕಾಯಿಯಂತೂ ಪ್ರತಿ ಬಾರಿಯೂ ತರುತ್ತಿದ್ದರು . ಸೊಪ್ಪು ತರಕಾರಿಯ ತಾಯಮ್ಮ, ಪೌರಕಾರ್ಮಿಕ ನಾಗಿ, ತೋಟದ ಕೆಲಸ ಮಾಡಲು ಬರುತ್ತಿದ್ದ ರಂಗಯ್ಯ ಎಲ್ಲರೂ ನೆನಪಿನಲ್ಲಿದ್ದಾರೆ .ಮನೆಗೆ ಬರುವ ಅತಿಥಿಗಳಿಗೆ ಕೊಡುವಂತೆ ಕಾಫಿ ತಿಂಡಿ ಊಟ ಕೊಟ್ಟು ಆದರಿಸುತ್ತಿದ್ದ ಅಮ್ಮ ಅವರಿಗೆಲ್ಲಾ ಅನ್ನಪೂರ್ಣೆಯೇ. ಹಬ್ಬಗಳ ವಿಶೇಷ ಭಕ್ಷ್ಯಗಳು, ಗೋಕುಲಾಷ್ಟಮಿ ತಿಂಡಿ, ಸಂಕ್ರಾಂತಿಯ ಎಳ್ಳು ಎಲ್ಲದರಲ್ಲೂ ಅವರಿಗೆ ಪಾಲು ಇದ್ದೇ ಇರುತ್ತಿತ್ತು. ಅದರ ಜೊತೆಗೆ ಮಕ್ಕಳನ್ನು ಚೆನ್ನಾಗಿ ಓದಿಸಿರಿ ಎಂಬ ಬೋಧನೆಯೂ ಕೂಡ. ಹಳೆಯ ಬಟ್ಟೆಗಳು, ಉಪಯೋಗಿಸಿದ ವಸ್ತುಗಳು ಇವನ್ನೆಲ್ಲಾ ನೆನಪಿನಲ್ಲಿಟ್ಟುಕೊಂಡು ಇವರಿಗೆ ಇವರಿಗೆ ಎಂದು ವಿತರಿಸುತ್ತಿದ್ದುದು, ಅವರ ಮನೆಯ ಸಮಾರಂಭಗಳಿಗೆ ಉಡುಗೊರೆ ಹಣ ಕೊಡುತ್ತಿದ್ದುದು ಆಗ ಏನೂ ಅನಿಸದಿದ್ದರೂ ಈಗ ಅಮ್ಮ ಅಪ್ಪನ ವಿಶಾಲ ಮನೋಭಾವದ ಅರಿವಾಗಿಸುತ್ತಿದೆ. ತೀರ ಬಡತನದ ಹಾಲು ಕೊಳ್ಳಲು ಶಕ್ತಿಯಿರದ ಕುಟುಂಬವೊಂದಿತ್ತು. ಆ ಮನೆಯ ಮಗುವಿಗೆ ಅಂತ 1 ಲೋಟ ಹಾಲು ಕೊಟ್ಟು ಹೋಗ್ತಿದ್ದರು ವರ್ತನೆಯವರು ಆಗೆಲ್ಲಾ. ಈಗ ಆ ರೀತಿಯ ಜನರನ್ನು ಕಾಣಲು ಸಾಧ್ಯವೇ? ಈಗಿನ ಹಾಗೆ ಸದಾ ಕೈಯಲ್ಲಿ ಹಣ ಓಡಾಡದ ಅಂದಿನ ದಿನಗಳಲ್ಲಿ ಸಂಬಳ ಬಂದ ಕೂಡಲೇ ಇವರಿಗೆಲ್ಲ ಹಣಪಾವತಿ .ಒಮ್ಮೆ ಹೆಚ್ಚು ಲೆಕ್ಕವಾದಾಗ ಸ್ವಲ್ಪ ಉಳಿಸಿಕೊಂಡು ಮುಂದಿನ ತಿಂಗಳಿಗೂ ಕ್ಯಾರಿ ಫಾರ್ವರ್ಡ್ ಮಾಡುತ್ತಿದ್ದುದು. ಸಾವು ಮದುವೆ ಊರಿನ ಓಡಾಟ ಅಂತ ಹೆಚ್ಚುವರಿ ಖರ್ಚುಗಳು ಇದ್ದಾಗಲೂ ಅಷ್ಟೇ. ಎಲ್ಲ ಸಮಯಕ್ಕೂ ಫ್ಲೆಕ್ಸಿಬಲ್. ಹಾಗೆಯೇ ಅವರಿಗೆ ಹೆಚ್ಚಿನ ಅಗತ್ಯವಿದ್ದಾಗ ನಮ್ಮಿಂದ ಮುಂಗಡವಾಗಿ ಹಣ ತೆಗೆದುಕೊಂಡು ತಿಂಗಳು ತಿಂಗಳು ಉತ್ತಾರ ಹಾಕ್ಕೊಳ್ತಾ ಹೋಗುವುದು. ಆ ಲೆಕ್ಕಾಚಾರಗಳನ್ನು ಕೇಳಿದರೆ ಒಂಥರಾ ಖುಷಿಯ ಅನುಭವ .ಎಲ್ಲಾ ಬಾಯಿಮಾತಿನ ಗಣಿತ ವಿಶ್ವಾಸದ ಲೆಕ್ಕಾಚಾರ . ಬರೀ ವ್ಯಾವಹಾರಿಕವಾಗಿಯಲ್ಲದೆ ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆಗಳಿಂದ ಕೂಡಿದ ಸಂಬಂಧಗಳು ಅವು. ಒಬ್ಬರಿನ್ನೊಬ್ಬರ ಹರ್ಷಕ್ಕೆ ಸಂತಸಪಟ್ಟು ಸಂಕಟದಲ್ಲಿ ಸಹಾನುಭೂತಿ ತೋರುತ್ತಿದ್ದ ಅಂದಿನ ಕಾಲ ಸಮರಸದ ಪಾಠವನ್ನು ಸೋದಾಹರಣ ಕಲಿಸುತ್ತಿತ್ತು. ನಿಜ! ಜಾತಿಯ ಕಟ್ಟುಪಾಡುಗಳು ಆಗ ಸಮಾಜದಲ್ಲಿ ಇನ್ನೂ ಬಿಗಿಯಾಗಿತ್ತು. ಅದನ್ನು ಮೀರದೆಲೆಯೇ ಸೌಹಾರ್ದದ ನಂಟಿತ್ತು ಮಿಡಿಯುವ ತುಡಿತವಿತ್ತು. ಜಾತಿಯ ಬೇಲಿಯನ್ನೂ ಮೀರಿ ಅಂತಃಕರಣದ ಸರಿತೆ ಹರಿಯುತ್ತಿತ್ತು . ಬರುಬರುತ್ತಾ ಅಂಗಡಿಗಳು ಮಾಲ್ ಗಳು ಹೆಚ್ಚಿದಂತೆಲ್ಲಾ ವರ್ತನೆಯವರು ಕಡಿಮೆಯಾಗಿದ್ದಾರೆ . ಇದ್ದರೂ ಮೊದಲಿನಂತೆ ವ್ಯವಧಾನದಿಂದ ಕೂತು ಮಾತನಾಡುವಷ್ಟು ಕಷ್ಟಸುಖ ವಿಚಾರಿಸುವಷ್ಟು ಸಮಯ ತಾಳ್ಮೆ ಯಾರಿಗಿದೆ? ಕಾಲನ ನಾಗಾಲೋಟದಲ್ಲಿ ನಾವೂ ರೇಸಿಗೆ ಬಿಟ್ಟ ಕುದುರೆಗಳಂತೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಓಡುತ್ತಲೇ ಇದ್ದೇವೆ . ವರ್ತನೆಯವರು ಇರಲಿ ಮನೆಯವರ ಜತೆ ತಾನೆ ಸಮಾಧಾನದಿಂದ ಕುಳಿತು ಮಾತನಾಡುವ ಹರಟೆ ಹೊಡೆಯುವ ಕಷ್ಟಸುಖ ಹಂಚಿಕೊಳ್ಳುವ ಪುರುಸೊತ್ತಾದರೂ ನಮಗಿದೆಯೇ? ವಿಲಾಪಿಸಬೇಡ ಕಳೆದುಕೊಂಡದ್ದಕ್ಕೆ ನೀನೇ ಕಳೆದು ಹೋಗುವ ಮುನ್ನ ಮೃತ್ಯು ಹೊತ್ತೊಯ್ದು ಮತ್ತೊಬ್ಬನಿಗೆ ಅರ್ಪಿಸುವ ಮುನ್ನ ನಿನ್ನ ಜೀವದನರ್ಘ್ಯ ಅಪರಂಜಿಯನ್ನ ನಿಸಾರ್ ಅಹ್ಮದ್ ನಿಜ! “ಪುರಾಣಮಿತ್ಯೇವ ನ ಸಾಧುಸರ್ವಂ” ಎಂಬಂತೆ ನೆನಪಿನ ಭಿತ್ತಿಯ ಹರಳುಗಳನ್ನು ನೋಡಿ ನೆನೆದು ಖುಷಿ ಪಡಬೇಕು. ಇಲ್ಲದುದಕ್ಕೆ ಪರಿತಪಿಸಬಾರದು. ಕಾಲಪ್ರವಾಹದಲ್ಲಿ ಸಾಗಿಹೋಗುವ ಹುಲ್ಲು ಕಡ್ಡಿಯಂತೆ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಾ ಹಳೆಯ ನೆನಪಿನ ಮೆಲುಕಿನ ಬೇರುಗಳಲ್ಲಿ ಹೊಸ ಅನುಭವದ ಚಿಗುರು ಪಲ್ಲವಿಸುತ್ತಿರಬೇಕು. ಇದುವೇ ಜೀವನ ಇದು ಜೀವ ತಾನೇ? “ಕಾಲಾಯ ತಸ್ಮೈ ನಮಃ “. ಸುಜಾತಾ ರವೀಶ್ ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಬಯಕೆ ಲೇಖಕಿಯವರದು.
ಪುಷ್ಪಲತಾದಾಸ್ ಅವರು ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಗಾಂಧಿವಾದಿ ಮತ್ತು ಅಸ್ಸಾಂನ ಶಾಸಕಿಯೂ ಕೂಡ ಆಗಿದ್ದರು


