ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ತುಂಡು ರೊಟ್ಟಿ

ಪುಸ್ತಕ ಸಂಗಾತಿ ವರ್ತಮಾನಕ್ಕೆ ಮುಖಾಮುಖಿಯಾಗುವ ಪ್ರತಿಭಟನಾತ್ಮಕ ಕಾವ್ಯ ಜ.೩೧ ಶಿಗ್ಗಾವಿಯಲ್ಲಿದ್ದೆ. ಕನಕ ಶರೀಫ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಪುಸ್ತಕ ಬಿಡುಗಡೆ ಹೀಗೆ ಮೂರು ಆಯಾಮಗಳ ಸಮಾರಂಭವನ್ನು ಉತ್ತರ ಸಾಹಿತ್ಯ ವೇದಿಕೆ ಹಾಗೂ ನೇತಾಜಿ ಪ್ರಕಾಶನದವರು, ಗೆಳೆಯ ರಂಜಾನ್ ಕಿಲ್ಲೆದಾರ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಕವನ ವಾಚನದ ನೆಪದಲ್ಲಿ ಶಿಗ್ಗಾಂವ್ ತಲುಪಿದ್ದೆ. ಅಲ್ಲಿದ್ದ ಗೆಳೆಯ ಅಲ್ಲಾಗಿರಿರಾಜ್ ಕನಕಗಿರಿ” ಸರ್ಕಾರ ರೊಕ್ಕ ಮುದ್ರಿಸಬಹುದು,ತುಂಡು ರೊಟ್ಟಿಯನ್ನಲ್ಲ .. ” ಎಂಬ ಅವರ ಕವನ ಸಂಕಲನವನ್ನು ನನ್ನ ಕೈಗಿಟ್ಟರು‌ . ಆ ಸಂಕಲನದ ರಕ್ಷಾ ಪುಟದ ಕೊನೆಗೆ ‘ ನೀವು ಎದೆಗೆ ಗುಂಡು ಹೊಡೆದರೆ’ ಎಂಬ ಕವಿತೆ ಮೊದಲ ಓದಿಗೆ ಥಟ್ಟನೆ ನನ್ನ ಗಮನ ಸೆಳೆಯಿತು. ಕ್ರಾಂತಿಯ ಕಿಡಿಯಂತೆ ಇದ್ದ ಆ ಕವಿತೆಯನ್ನು ಓದಿದ ತಕ್ಷಣ, ನನ್ನ ವ್ಯಾಟ್ಸಪ್ ಸ್ಟೇಟಸ್‌ ನಲ್ಲಿ ಹಂಚಿಕೊಂಡೆ. ೨೦೨೦ರಲ್ಲೇ ಎರಡು ಮುದ್ರಣ ಕಂಡ ಕವಿತಾ ಸಂಕಲನ ಇದಾಗಿತ್ತು. ಮೋಹನ್ ಕುರುಡಗಿ ಕಾವ್ಯ ಪ್ರಶಸ್ತಿ ಪಡೆದುಕೊಂಡ ” ತುಂಡು ರೊಟ್ಟಿ ” ಈಗಾಗಲೇ ಕನ್ನಡ ಕಾವ್ಯಾಸಕ್ತರ ಗಮನ ಸೆಳೆದಿದೆ. ‌ವರ್ತಮಾನಕ್ಕೆ ಮುಖಾಮುಖಿಯಾಗುವ ಪ್ರತಿಭಟನಾತ್ಮಕ ಕಾವ್ಯ ಸಿಟ್ಟು ,ಆಕ್ರೋಶ, ಕವಿತೆಯಾಗುವ ಪರಿ, ಪ್ರಭುತ್ವ ಹೋರಾಟದ ಧ್ವನಿ ಹತ್ತಿಕ್ಕಿದಾಗ ; ಪ್ರತಿಕ್ರಿಯೆಯಾಗಿ ಹುಟ್ಟಿದ ಕಾವ್ಯ ತುಂಡು ರೊಟ್ಟಿ. ಆಕ್ರೋಶದ ಕಾವ್ಯ ಪ್ರೀತಿ ,ಕರುಣೆ‌‌ ಹಂಚಿ, ಪ್ರಭುತ್ವದ‌ ಠೇಂಕಾರ ಸಹ ಕರಗುವಂತೆ ಕವಿತೆ ಬರೆಯುವ, ಅಲ್ಲಾಗಿರಿರಾಜ್ ಸಮಾಜದ ನಡುವೆ ನೋವಿನ ಧ್ವನಿಗಳಿಗೆ ಕಿವಿಯಾದವರು. ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ ಎಂಬ ಉದ್ದದ ಸಾಲನ್ನು ಕವನ ಸಂಕಲನದ‌ ಮುಖಪುಟ ಆವರಿಸಿದೆ. ತುಂಡು ರೊಟ್ಟಿ ಅಥವಾ ರೊಟ್ಟಿ ಎಂದು ಸಂಕಲನದ ಹೆಸರು ಇದ್ದರೂ ಸಾಕಿತ್ತು. ಸಂಕಲನದ‌ ತಲೆ ಬರಹ ಪರಿಣಾಮಕಾರಿಯಾಗಿಯೇ ಇರುತ್ತಿತ್ತು.ರೈತ ,ರೊಟ್ಟಿ, ರೊಕ್ಕ,‌ಪ್ರಭುತ್ವ, ಕುರುಡು ಪ್ರಭುತ್ವ ಮುಖಾಮುಖಿಯಾಗುವ ಪರಿಯೇ ಓದುಗನಲ್ಲಿ ಕಾವ್ಯದ ಎಚ್ಚರ ಮೂಡಿಸುವಂತಹದ್ದು. ತಾಯ ಮೊಲೆಹಾಲು ವಿಷವಾದ ಕಾಲವಿದು. ಕರುಳು ,ಹೃದಯವಿಲ್ಲದ ಅಧಿಕಾರ , ಆಡಳಿತ ಶಾಹಿಯನ್ನು ಎಚ್ಚರಿಸುವ ಜಾಗೃತ ಕಾವ್ಯ ನಮಗೀಗ ಬೇಕು. ಕನ್ನಡ ಪ್ರಜ್ಞೆ ಪರಿಸರ ಅಂಥದ್ದು. ಅಂತಹ ನಾಡಿ ಮಿಡಿತ ಹಿಡಿದು ಬರೆಯುವ ಕವಿ ಅಲ್ಲಾಗಿರಿರಾಜ್ ರೊಟ್ಟಿ ಕವಿತೆಯಲ್ಲಿ ಅದನ್ನು ಸಾಧಿಸಿದ್ದಾರೆ. ” ನೆತ್ತರಿನ ಮಳೆ ಬಿದ್ದ” ಕವಿತೆಯ ಮೇಲೆ ಲಂಕೇಶರ ಕೆಂಪಾದವೋ ಎಲ್ಲಾ ಕೆಂಪಾದವೋ, ಒಣಗಿದ್ದ ಗಿಡಮರ‌ ನೆತ್ತರ ಕುಡಿದ್ಹಾಂಗ ಕೆಂಪಾದವೋ…ಕವಿತೆಯ ದಟ್ಟ ಛಾಯೆಯಿದೆ. ಲಂಕೇಶರ ಕವಿತೆಯನ್ನು ಮುರಿದು ಕಟ್ಟಿದ ಹಾಗೆ ಇದೆ ನೆತ್ತರಿನ ಮಳೆ ಬಿದ್ದ ಕವಿತೆ.“ಚಪ್ಪಲಿ ಕಥೆ ” ಎಂಬ ಹೆಸರಿನ ಕವಿತೆ ವಾಚ್ಯ ಎನಿಸಿದರೂ ಅಂತಿಮ ಸಾಲಿನಲ್ಲಿ ಧ್ವನಿ ಕಾರಣ ಗೆಲ್ಲುತ್ತದೆ.“ಅಪ್ಪ ಎಂದೂ ಮುಗಿಯದ ಕನಸು” ಕವಿತೆ ಅಪ್ತವಾಗಿದೆ. ‘ಅಪ್ಪ ಕವಿತೆಯ ಕೊನೆಯ ಸಾಲಿನಂತೆ’ ಎನ್ನುವ ಸಾಲು ಮನ‌ಮೀಟುತ್ತದೆ. ಅಲ್ಲದೇ” ನನ್ನವ್ವ ತೀರಿ‌ಕೊಂಡಾಗನನ್ನಪ್ಪ ಅಂದೇ ಒಳ ಒಳಗೇಸತ್ತಿದ್ದ “ಎನ್ನುವ ಸಾಲು ಸಹೃದನನ್ನು ಕಾಡದೇ ಇರದು. ಲಾಕ್ ಡೌನ್ ಮತ್ತು ನಾಯಿ ದಿನಚರಿ ಕವಿತೆ ೨೦೨೦ ನೇ ವರ್ಷದ ಕೋವಿಡ್ ಕರಾಳತೆಯನ್ನು ರಾಚುತ್ತದೆ. ಮನುಷ್ಯರಾಗೋಣ ಕವಿತೆ ಕೋಮುಸೌಹಾರ್ದತೆ ಹಾಗೂ ಭಾರತೀಯತೆಯನ್ನು ಕಟ್ಟಿಕೊಡುತ್ತದೆ. ಕವಿಯ ಕಳಕಳಿ , ಉದ್ದೇಶ ಇಂತಹ ಕವಿತೆಗಳ ಮೂಲಕ ದಾಖಲಾಗುತ್ತದೆ.” ಲಾಲ್ ಸಲಾಂ ಚೆಗು” ಎಂಬ ಕವಿತೆಯಲ್ಲಿ ಕವಿ ಚೆಗೆವಾರನನ್ನು ನೆನಪಿಸಿಕೊಂಡಿದ್ದಾರೆ. ಇದೊಂದು ಸಶಕ್ತ ಕವಿತೆ.ಕ್ರಾಂತಿ ಗೀತೆಯಂತಿದೆ.” ನಿನ್ನ ಕಣ್ಣ ಕಿಂಡಿಯಲ್ಲಿ ಜಗದ ಹಸಿದವರ ದನಿಯಿದೆಶೋಷಿತರ ಹೆಗಲಮೇಲೆ ನಿನ್ನ ಲಾಲ್ ಝೆಂಡಾ ಇನ್ನೂ ಘರ್ಜಿಸಿದೆ” ಎನ್ನುತ್ತಾನೆ ಕವಿ.ನನ್ನ ಕವಿತೆಯಲ್ಲಿಎಂಜಲು ಅನ್ನ ಕಾಯುವ ಅನಾಥ ಬೀದಿ ಮಕ್ಕಳ ಎದೆಯ ಹಾಡು ನನ್ನ ಕವಿತೆಅಕ್ಕ ತಂಗುಯರ ಎದೆಯ ಹಾಡುಲೋಕದ‌ ಹಸಿವು ನೀಗಿಸಿದ ಅನ್ನದಾತರ‌ ಎದೆಯ ಹಾಡುನನ್ನ ಕವಿತೆನನ್ನದೇ ಅಲ್ಲಹಸಿದವರ ಹಾಡು ” ಎಂಬಲ್ಲಿ ಕವಿತೆ ಸಾರ್ವಜನಿಕರದ್ದು, ಶ್ರಮಜೀವಿಗಳದ್ದು ಎಂಬ ಸಂದೇಶವನ್ನು ಕವಿ ಸಮಾಜಕ್ಕೆ ನೀಡುತ್ತಾ ಸಾಗುತ್ತಾನೆ. ” ಅಲ್ಲಿ ವರ್ಣ- ಇಲ್ಲಿ ಧರ್ಮ ” ಎಂಬ ಕವಿತೆಯಲ್ಲಿ ವರ್ಣ ಬೇಧ , ಧರ್ಮಬೇಧ ಇರುವಾಗ ಮನುಷ್ಯರು ಮನುಷ್ಯರಾಗುವುದು ಯಾವಾಗ ? ಎಂಬ ಪ್ರಶ್ನೆ ಎತ್ತುತ್ತಾನೆ ಕವಿ.ಧರ್ಮದ ಅಮಲು ಬಣ್ಣದ ಧಿಮಾಕು ಇನ್ನೆಷ್ಟು ದಿನ ? ಇಂತಹ ಪ್ರಶ್ನೆಗಳನ್ನು ಎತ್ತುವ ಮೂಲಕ ಸಕಾಲಿಕ ,ಸಮಾಕಾಲಿನ ಸಮಸ್ಯೆಗೆ ಮುಖಾಮುಖಿಯಾಗಿ ಕಾವ್ಯವನ್ನು ಎಚ್ಚರಿಕೆಯ ಗಂಟೆಯಾಗಿ ಭಾರಿಸಿದ್ದಾರೆ.ಗೋಡೆ ಎತ್ತರವಾಗುತ್ತಿದೆ ನಿನ್ನ ನನ್ನ ನಡುವೆ , ಧರ್ಮದ ವಿಷಗಾಳಿ ಕುಡಿದು ಎನ್ನುವ ಆತಂಕ ಸಹ ಕವಿಗಿದೆ. ಮಂದಿರ‌ ಮಸೀದಿ ಮೇಲಿನ ಬಿಳಿ ಪಾರವಾಳ ರಕ್ತ ಕಾರುವ ಮುನ್ನ ಕಫನ್ ಸುತ್ತಿಕೊಳ್ಳಬೇಕು ಎಂದು ತಮಗೆ ತಾವೇ ಹೇಳಿಕೊಂಡ ಆತ್ಮಾವಾಲೋಕನದ ಕವಿತೆಗಳು ಓದುಗುನಲ್ಲಿ ಅಚ್ಚರಿಯ ಬದಲಾವಣೆ ತರದೇ ಇರಲು ಸಾಧ್ಯವೇ? ಹೀಗೆ ಕವಿ ಆತಂಕವನ್ನು ತೋಡಿಕೊಳ್ಳತ್ತಲೇ ಆಶಾವಾದವನ್ನು ಸಹ ಇಲ್ಲಿನ‌ ಕವಿತೆಗಳು ಸಾರುತ್ತವೆ. ************************************** ನಾಗರಾಜ ಹರಪನಹಳ್ಳಿ

ತುಂಡು ರೊಟ್ಟಿ Read Post »

ಪುಸ್ತಕ ಸಂಗಾತಿ

ಪರಿಮಳದ ಹನಿಗಳು

ಪುಸ್ತಕ ಸಂಗಾತಿ ಪರಿಮಳದ ಹನಿಗಳು “ಸಖ ಸತ್ತ ಹೃದಯ ಮಸಣ ಸೇರಿತು ನಿನ್ನ ಕುಡಿಮೀಸೆಯ ಕುಂಚ ದಿಂದ ತುಟಿಯ ಮಾಸ್ತಿಗಲ್ಲಿಗೆ ಹೆಸರು ಬರೆದುಬಿಡು ಭಗ್ನ ಪ್ರೇಮಿಗಳು ಅಧ್ಯಯನಕ್ಕೆ ಬರುತ್ತಾರೆ”. ಇದು ಎ. ಎಸ್. ಮಕಾನದಾರ ಅವರ “ಪ್ಯಾರಿ ಪದ್ಯ” ಹನಿಗವನ ಸಂಕಲನದ ಒಂದು ಹನಿ. “ ಮನಸ್ಸಿನ ಆಳದಲ್ಲಿ ಮುದಿವಯಸ್ಸಿನವರಿಗಿಂತ ಯುವ ಜನರೇ ಹೆಚ್ಚು ಏಕಾಂಗಿತನವನ್ನು ಅನುಭವಿಸುತ್ತಾರೆ” ಅನ್ನೋ  ಮಾತಿದೆ. ಆ ಏಕಾಂತಕ್ಕೆ ಸಂಗಾತಿಯೇ ಕವಿತೆ.  ಇಲ್ಲಿರುವ ಹನಿಗವನಗಳು ಪ್ರೀತಿ, ಪ್ರೇಮ ವಿರಹ ಹಾಗೂ ಶೋಷಣೆಯ ವಿರುದ್ಧ ತಣ್ಣಗಿನ ಹನಿಯಂತೆ ಕೆಲವು ಬಾರಿ ನುಡಿದರೆ, ಮತ್ತೊಮ್ಮೆ ಭೋರ್ಗರೆವ ನದಿಯಂತೆ ಬೊಬ್ಬಿರುತ್ತವೆ.  ಪ್ರೇಮ ಕವಿ ಪ್ರೀತಿಯ ತಳಮಳವನ್ನು ಅದರ ಜೊತೆಗೆ ಸೃಷ್ಟಿಯ ಸೊಬಗನ್ನು ಅದರ ವಿಶ್ವರೂಪ ಅನನ್ಯತೆಯನ್ನು ಶಬ್ದಗಳ ಹಾರದಲ್ಲಿ ಪೋಣಿಸುವ ಪ್ರಯತ್ನವನ್ನು ತನ್ನ ಅನುಭವಗಳ ಆಧಾರದ ಮೇಲೆ ಮಾಡುತ್ತಲೇ ಕಾವ್ಯ ಕನ್ನಿಕೆಯ ಸೆರಗಲ್ಲಿ ಪುಷ್ಪವೇಷ್ಟಿತ ಪರಿಮಳವನ್ನು ತುಂಬುವ ಪ್ರಯತ್ನ ಮಾಡುತ್ತಾನೆ. ಅಂತಹ ಪ್ರೇಮದ ತಹತಹವನ್ನು ತೋಡಿಕೊಳ್ಳುವ ಇಲ್ಲಿಯ ಸಾಲುಗಳು ವಿಚಿತ್ರವಾಗಿ ಆಕರ್ಷಿಸುತ್ತವೆ. ಇಂತಹ ಸಾಲುಗಳನ್ನು  ಉರ್ದು ಸಾಹಿತ್ಯದಲ್ಲಿ ಹೇರಳವಾಗಿ ಶಾಯರಿ ರೂಪದಲ್ಲಿ ಬಳಸುತ್ತಾರೆ. ಅಂತಹ ಆಕರ್ಷಕ ಉರ್ದು ಪದಗಳನ್ನು ಕನ್ನಡಕ್ಕೆ ಹೊಂದಿಸಿಕೊಂಡು ಇಲ್ಲಿಯ  ಹನಿಗಳಿಗೆ ತೀವ್ರತೆಯನ್ನು ನೀಡಿದ್ದಾರೆ ಎ. ಎಸ್. ಮಕಾನದಾರ. ಪ್ರೇಮ ಮತ್ತು ವಿರಹ ಇಲ್ಲಿಯ ಹನಿಗವನಗಳಲ್ಲಿ ವ್ಯಕ್ತವಾಗಿಯೂ ಅಲ್ಲಿಯೇ ಸಾಮಾಜಿಕ ಅಂತರಗಳಿಗೆ, ವಿಘಟನಾ ವಿಧಾನಗಳಿಗೆ ಸಣ್ಣ ಚಾಟಿಯನ್ನು ಬೀಸುತ್ತವೆ ಕವನಗಳು. “ಕಬರಸ್ಥಾನದಲ್ಲಿ ಜಾಗ ನಿಗದಿಯಾಗಿದೆ ಸ್ಮಾರಕ ಶಿಲೆ ಕೆತ್ತಲಾಗಿದೆ ದಿನಾಂಕ ಬಿಟ್ಟಿದ್ದಾನೆ ಕಲೆಗಾರ ಜನಾಜ್ ಇನ್ನೇನು ಬರಬಹುದು ಅನ್ನ ತಿನ್ನುವ ಕೈಗಳಿಗೆ ಧರ್ಮದ ಅಮಲು ಏರಿದೆ ಪಂಡಿತರ ಭಾಷಣ ಪಾಶಾಣಕ್ಕಿಂತ ಸಿಹಿಯಾಗಿದೆ” ಎನ್ನುವ ಸಾಲುಗಳಲ್ಲಿ ಜ್ಞಾನವಲಯವನ್ನು ತರಾಟೆಗೆ ತೆಗೆದುಕೊಂಡರೆ, ಧರ್ಮದ ಕುರುಡನ್ನು ವಿಡಂಬಿಸುತ್ತಾರೆ. ಪ್ರೇಮದಲ್ಲಿಯೇ  ಧ್ಯಾನಸ್ಥ ಸ್ಥಿತಿಯನ್ನ ಕಂಡ ಕವಿ ಪರಂಪರೆ ನಮ್ಮಲ್ಲಿದೆ.  “ಡೆತ್ ಇನ್ ಲವ್. ಲವ್ ಇನ್ ಡೆತ್” ಪ್ರೀತಿಯಲ್ಲೆ ಸಾವು, ಸಾವಿನಲ್ಲಿಯೂ ಮೂಡುವ ಪ್ರೀತಿ. ಆ ಸ್ಥಿತಿ ಇಲ್ಲಿದೆ. “ಖಬರ್‌ನಲ್ಲಿ ಲೀನವಾಗಿರುವೆ ದೀಪವಾಗಿ ಬಂದರೆ ಪತಂಗವಾಗಿ ಸುತ್ತುವೆ” ಇಂತಹ ಸೊಗಸಾದ ಸಾಲುಗಳು ನೆನಪಿನಲ್ಲಿ ಉಳಿದೇ ಬಿಡುತ್ತವೆ. “ಸಾವಿನ ಕದ ತಟ್ಟಿದ ಫಕೀರನಿಗೆ ಜೀವದ ಹಂಗೂ ಇಲ್ಲಾ ಸಾವಿನ ಹಂಗೂ ಇಲ್ಲಾ ಚಮಲಾದ ಚುಂಗ ಇದೆ ತೋಡಿದ ಗೋರಿ ಜನಾಜಾ ತಬ್ಬಿದರೂ ತಬ್ಬಲಿ ಆಗಲಾರ ಪ್ಯಾರಿ” . ಸಾಹಿತ್ಯದ ವಸ್ತು ಇತಿಹಾಸವೇ ಇರಲಿ, ಸಮಕಾಲೀನ ಸಂಗತಿಯೇ ಆಗಿರಲಿ, ಅದು ಸತ್ಯಕ್ಕೆ ವಿಮುಖವಾಗಿರಬಾರದು. ಭಾವ ಜಗತ್ತಿನ ಉತ್ಪ್ರೇಕ್ಷೆ ಇದ್ದರೂ ವಾಸ್ತವಕ್ಕೆ ನಿಕಟವಾಗಿರಬೇಕು. ಇಲ್ಲಿ ಒಂದೇ ಕವನದಲ್ಲಿ ಬಳಕೆಯಾಗಿರುವ  ಫಕೀರ, ಚಮಲಾ, ಚುಂಗ, ಜನಾಜ್ , ಪ್ಯಾರಿ ಇತ್ಯಾದಿ ಉರ್ದು ಪದಗಳು ಕಟ್ಟಿಕೊಟ್ಟ ಸಂವೇದನೆ ಮಹತ್ವದ್ದು. ಸಾವು, ಬದುಕು, ಹಂಗು, ಗೋರಿ, ತಬ್ಬಲಿ ಕನ್ನಡದಲ್ಲಿ ಮಾತಾಡಿದರೆ,ಉಳಿದವು ಉರ್ದುವಿನಲ್ಲಿ ಮಾತನಾಡಿಯೂ ಸಮಕಾಲೀನವೂ ಆಗಿವೆ ಹಾಗೇ ಇತಿಹಾಸದ ಉದ್ದಕ್ಕೂ ಹಬ್ಬಿದ ಪ್ರೇಮಜಗತ್ತಿನ ವಿಷಾದವೇ ಆಗಿದೆ. ಪ್ರೀತಿಯ ಹಂಬಲಿಕೆಯ ಇನ್ನೊಂದು ಕವನ ಹೇಳುವ ಆಶಯ ಹಳತಾದರೂ ಬಳಸಿದ ಉಪಮೆಗಳು ಮನಃಸೆಳೆಯುತ್ತವೆ. “ಸಾಕಿ ನಿನ್ನ ಪ್ರೀತಿ ಹಿಡಿ ನವಣಿಯಷ್ಟು ಪಡೆದೆ ತೀರಲು ಮಾಡಿಕೊಂಡಿರುವೆ ಸಾಲ ಪಡಿ ಹೊನ್ನಿನಷ್ಟು.” ಈ ಅಲ್ಪ ಸಾಲುಗಳು ಹೇಳುವುದು ಅಲ್ಪವೇನಲ್ಲ ಅವಳ ಪ್ರೀತಿಗಾಗಿ ಹಂಬಲಿಸಿದವನಿಗೆ ಸಿಕ್ಕಿದ್ದು ಹಿಡಿ ನವಣೆಯಷ್ಟು. ಅಲ್ಪ ಪ್ರೀತಿ. ಆದರೆ ನವಣೆ ಅಲ್ಪವಾಗುವುದಾರೂ ಹೇಗೆ? ಹಾಗೇ ಪ್ರೇಮಿ ಅದಕ್ಕಾಗಿ ಹಂಬಲಿಸಿ ಮಾಡಿದ್ದು ಪಡಿ ಹೊನ್ನಿನಷ್ಟು ಸಾಲ. ಸಾಲಗಾರನಾಗಲೂ ಹಿಂದೆ ಮುಂದೆ ನೋಡದಂತಹ ಸ್ಥಿತಿ ಅವನದು.  ಮನಸ್ಸನ್ನು ಉಲ್ಲಸಿತಗೊಳಿಸುವುದು ಕಾವ್ಯ. ರಸಸ್ವಾದನೆಯೇ ಕವಿತೆ ಮೂಲ ಆಶಯ. ಇಲ್ಲಿಯ ಕವಿತೆಗಳು ಪ್ರೇಮ ರಸಾನುಭವದ ಮತ್ತನ್ನು ಓದುಗನಿಗೆ ಕುಡಿಸುವಂತಿವೆ. ಪ್ರೇಮಬದುಕಿನ ಕ್ಷಣಗಳು ಸುಖದ ದುಃಖದ ನೋವಿನ, ನಿರಾಶೆಯ, ಆಕ್ರೋಶದ ಅನುಭವಗಳನ್ನು  ಇಲ್ಲಿ ಬಿಚ್ಚು ನುಡಿಗಳಲ್ಲಿ ತೆರೆದಿಡಲಾಗಿದೆ. “ಧರ್ಮ, ಧರ್ಮಗುರುವಿನ ಉಪದೇಶ ಸಾಕು ರಟ್ಟೆಯ ಬಲ ರೊಟ್ಟಿಯ ರುಚಿ ಕುರಿತು ಉಪದೇಶ ಬೇಕು. ಪ್ರೇಮದ ಒಳದನಿಯನ್ನು ಮುಕ್ತವಾಗಿ ಅಭಿವ್ಯಕ್ತಿಸುವ  ಹನಿಗವನಗಳನ್ನು ಓದುತ್ತಾ ಪ್ರೀತಿಯ ಕಾವು ಮೈಗೂ ಏರಿದಂತಾಗಿ ಓದುಗ ಮೈಮರೆಯಬಹುದು. ಪ್ರೇಮದ ಅಭಿವ್ಯಕ್ತಿಗೆ ಅಂತಹ ಹೃದಯವಿದೆ. ಕತ್ತಲೆಯಾಚೆಗಿನ ಅನೂಹ್ಯ ನಿಗೂಢತೆಗಳನ್ನು ಶೋಧಿಸುವ ಬೆಳಕಿನ ಸೂಡಿಗಾಗಿ ಹುಡುಕುತ್ತಾ, ಆ ತೇಜದ ಹಂಬಲವನ್ನೇ ಕಣ್ಣಲ್ಲಿ ಸೃಷ್ಟಿಸಿಕೊಂಡವ ಒಂದೋ  ಕವಿಯಾಗಿರಲು ಸಾಧ್ಯ. ಇಲ್ಲ ವ್ಯಾಕುಲ ಪ್ರೇಮಿಯಾಗಿರಬಹುದು. ತಂತ್ರದ ಮೂಲಕ ರಚಿಸಿದ ವಿನ್ಯಾಸ ಯಾವಾಗಲೂ ಸುಂದರವಾಗಿಯೇ ಇರುತ್ತದೆ. ಈ ಪ್ರಯತ್ನ ಎಲ್ಲ ಪ್ರಕಾರಗಳಿಗೂ ಅನ್ವಯಿಸುತ್ತದೆ. ಆದರೆ ಮಕಾನದಾರ ಅವರ ಎಲ್ಲ ಹನಿಗವನಗಳು ವಿನ್ಯಾಸಕ್ಕೆ ಪಕ್ಕಾಗಿಲ್ಲ. ಆದರೆ ಆಶಯದಲ್ಲಿ ಹಿಂದೆ ಬಿದ್ದಿಲ್ಲ. ಅರ್ಥದಲ್ಲಿ ಸೋತಿಲ್ಲ. ಹಾಗಾಗಿ ಓದುಗ ಒಮ್ಮೆ ಕೈಗೆತ್ತಿಕೊಂಡರೆ ಸರಸರನೇ ಓದಿ ಮುಗಿಸುವವರೆಗೂ ಸರಾಗವಾಗಿ ಕರೆದೊಯ್ಯುತ್ತವೆ ಹನಿಗಳು.ಕೆಲವನ್ನು ಗಪದ್ಯದ ಗತಿಯಲ್ಲಿ ಕಟ್ಟಿಕೊಟ್ಟರೆ ಇನ್ನು ಕೆಲವು ಎರಡು ಸಾಲುಗಳ ಪದ ಮಿತಿಯಲ್ಲಿ ಅರ್ಥ ಮಹತ್ತನ್ನು ಮೈಗೂಡಿಸಿಕೊಂಡಿವೆ. ಅಲ್ಲಲ್ಲಿ ಅಸ್ಪಷ್ಟ ಪದ್ಯಗಳು ಇದ್ದು ಅವು ಸಂಕಲನದ ಒಟ್ಟಂದಕ್ಕೆ ಭಂಗ ತರುವುದಿಲ್ಲ. ಕವಿ ಇನ್ನಷ್ಟು ಈ ಕವಿತಾ ಬಂಧದೊಳಗೆ ಮುಳುಗಿ ಸಾಕಿಯನ್ನು ಇನ್ನು ಒಳಗೊಳ್ಳುವ ಪ್ರಯತ್ನ ಮಾಡಿದ್ದರೆ ಹನಿಗವನಗಳು ಇನ್ನಷ್ಟು ಉತ್ಕಟವಾಗಿ ಹೊಮ್ಮುತ್ತಿದ್ದವು.  ಕವಿತೆಗಳಿಗೆ ಸುಂದರ ಚಿತ್ರಗಳ ಬರೆದು ಹನಿಗವನಗಳ ಗಹನತೆಯನ್ನು ಹೆಚ್ಚಿಸಿದ ಚಿತ್ರಕಾರನಿಗೂ ಹಾಗೂ ಕವಿಗೂ ಶುಭಾಶಯಗಳು. ******************************************** ನಾಗರೇಖಾ ಗಾಂವಕರ್

ಪರಿಮಳದ ಹನಿಗಳು Read Post »

ಪುಸ್ತಕ ಸಂಗಾತಿ

“ಸರಹದ್ದುಗಳಿಲ್ಲದ ಭೂಮಿಯಕನಸು:

ಪುಸ್ತಕ ಸಂಗಾತಿ ಸರಹದ್ದುಗಳಿಲ್ಲದ ಭೂಮಿಯಕನಸು ಕನ್ನಡ ಕಾವ್ಯ ಲೋಕದ ಹೊಸ ಬೆಳಕು ಕವಯಿತ್ರಿ ನಿರ್ಮಲಾ ಶೆಟ್ಟರ 2020 ರಲ್ಲಿ ಕನ್ನಡ ಸಾಹಿತ್ಯದ ಕಾವ್ಯ ಲೋಕಕ್ಕೆ ಕೊಟ್ಟ ಹೊಸ ನೋಟದ ಕೃತಿ ‘ಸರಹದ್ದುಗಳಿಲ್ಲದ ಭೂಮಿಯ ಕನಸು’. ಹೌದು ಕವಿ ಹಾಗೆ. ಕವಿತೆಗಳಿಗೆ ಸರಹದ್ದುಗಳಿರುವುದಿಲ್ಲ. ಕಾವ್ಯ ಸದಾ ಮನುಷ್ಯ ಮನುಸ್ಸು ಗಳನ್ನು ಬೆಸೆಯುವ ,ಹೊಸ ಹೊಸ ಕನಸು ಕಾಣುವ, ಶೋಷಣೆಯ ಬಂಧಗಳ ಮುರಿದು , ಹೊಸ ಹುಡುಕಾಟ ಮಾಡುತ್ತಿರುತ್ತದೆ. ಅದು ಕಾವ್ಯದ ಕ್ರಿಯೆ. ಕನ್ನಡದ ಪರಂಪರೆಯೇ ಹಾಗೆ. ವಚನಗಳ ಬೇರುಗಳಿಂದ ಚಿಗಿಯುವ ಹೊಸ ಚಿಗುರು ಸರಹದ್ದುಗಳಿಲ್ಲದ ದೇಶ ದೇಶಗಳ ಮನಸುಗಳನ್ನು ಬೆಸೆಯುವುದೇ ಆಗಿರುತ್ತದೆ. ಬದುಕಿನ ಅಸಂಗತತೆ, ಸಂಕೀರ್ಣ ಮನಸ್ಥಿತಿಗಳ , ಆತಂಕ, ತಳಮಳದ ಮನಸುಗಳ ಮಧ್ಯೆ ಹುಟ್ಟುವ ಕಾವ್ಯ , ಕಸುವುಗೊಳ್ಳುವುದೇ ಸಂಕೋಲೆಗಳಿಲ್ಲದ ಭೂಮಿಯಲ್ಲಿ ನಿಂತು ಮನುಷ್ಯತ್ವದ ಕನಸು ಕಂಡಾಗ. ಕವಿ ಸಂತನ ಹಾಗೆ. ನಾಳಿನ ಬೆಳಕಿಗೆ ವರ್ತಮಾನದಲ್ಲಿ ನಿಂತು ಹಂಬಲಿಸುತ್ತಿರುತ್ತಾನೆ. ಕರುಣೆ ಮತ್ತು ದಯೆಯನ್ನು ಉಡಿಯಲ್ಲಿಟ್ಟು ಹಂಚುವ ಮನಸೊಂದು ಕವಯಿತ್ರಿಯ ಒಡಲಲ್ಲಿ ತಣ್ಣಗೆ ಹರಿವ ನದಿಯಂತೆ , ಈ ಸಂಕಲನದ ಕವಿತೆಗಳಲ್ಲಿ ಹರಿದಿದೆ. ಪ್ರಕೃತಿಯ ಸೂಕ್ಷ್ಮ ಗಮನಿಸುವಿಕೆ ಹಾಗೂ ಅದರಿಂದ ಕವಯಿತ್ರಿ ಕಟ್ಟಿಕೊಡುವ ಪ್ರತಿಮೆಗಳು ನಿರ್ಮಲಾ ಶೆಟ್ಟರ್ ಅವರ ಕವಿತೆಗಳಿಗೆ ಶಕ್ತಿ, ಕಸುವು ನೀಡಿವೆ.ಭೂಮಿಯ ಚಲನೆ, ಹುಲ್ಲುಗರಿಕೆ, ಕತ್ತಲು, ಬೆಳಕು, ದೀಪಗಳನ್ನು ಅವರು ವಿವಿಧ ಕವಿತೆಗಳಲ್ಲಿ ಪಡಮೂಡಿಸುವ,ಗ್ರಹಿಸುವ ಮತ್ತು ಅವುಗಳಿಂದ ಹೊರಡಿಸುವ ಧ್ವನಿ ಸೊಗಸಾಗಿದೆ. ಅರ್ಥಗರ್ಭಿತ ವಾಗಿದೆ. ಚಲಿಸುವಗಾಳಿಗೂ ಉಸಿರು ಕಟ್ಟುವುದನ್ನು ಗ್ರಹಿಸುವ ಶಕ್ತಿ ಅದ್ಭುತವಾದುದು. ” ಬಯಲ ಸಂತಾನವಾದ ಬಣ್ಣಬಯಲಾಗಿ ನಿಲ್ಲುವುದುಸುಗಂಧ ಹರಡಿಕೊಂಡಷ್ಟೇ ಸರಳವಲ್ಲಗಾಳಿಗೂ ಉಸಿರು ಸಿಕ್ಕಿಕೊಂಡಂತೆ(ಸರಹದ್ದುಗಳಿಲ್ಲದ ಭೂಮಿಯ ಕನಸು) ಹೀಗೆ ಚೆಂದ ಪ್ರತಿಮೆಗಳ ಮೂಲಕ ಬಣ್ಣ ಹಚ್ಚಿಕೊಂಡು ಬಣ್ಣವೇ ಆಗುವ, ದಾರಿ ಬಲು ದೀರ್ಘ ಎನ್ನುತ್ತಾ , ಆ ದಾರಿಗೆ ಸರಹದ್ದುಗಳಿಲ್ಲ. ಸರಹದ್ದುಗಳಿಲ್ಲದ ದಾರಿ ಭೂಮಿಯ ಮೇಲೆ ಹಾಸಿಕೊಂಡಿದೆ. ಭೂಮಿ ಸಹ ತನ್ನ ಪಾಡಿಗೆ ತಾನು ಸುತ್ತುತ್ತಿದೆ. ಮನುಷ್ಯ ಮಾತ್ರರಾದ ನಾವು ಮಾತ್ರ ಚಲಿಸಿದೇ ಸ್ಥಗಿತ ವ್ಯವಸ್ಥೆಯ ಭಾಗವಾಗಿದ್ದೇವೆ ಎಂಬ ಧ್ವನಿ ಇಲ್ಲಿ ಕಾಣ ಸಿಗುತ್ತದೆ. ಜಗಕೆ ಬೆಳಕು ಹರಿಯುವುದಿಲ್ಲ ಎಂಬ ಕವಿತೆಯಲ್ಲಿ ಸಹ” ಏನೊಂದು ಸಿಕ್ಕದೆ ಹೋದರೂ ದಕ್ಕಿಸಿಕೊಂಡದ್ದುಬೆಳಗು ಕತ್ತಲೆಯ ಮೀರಿದ್ದೆಂದು ಹೇಗೆ ಹೇಳಲಿ”ಈ ಒಳನೋಟ, ಬದುಕಿನ ಧ್ಯಾನ ಕವಿಗೆ ಮಾತ್ರ ಕಾಣುವ ಹೊಳಹು .” ಮಾತಿಲ್ಲದಮೌನವೂ ಅಲ್ಲದನಸುಕಿನಲಿ ಅರಳಿದ ಹೂ” ಹೀಗೆ ಕವಿತೆಗಳು ಓದುಗನನ್ನು ಹೊಸ ಅರ್ಥವ್ಯಾಪ್ತಿಗೆ ಕರೆದೊಯ್ಯುತ್ತವೆ. “ಕಲ್ಲಿನೆದೆ ಸೀಳಿತಲೆಯೆತ್ತಿ ಗಾಳಿಗೆ ಬಳುಕುವ ಗರಿಕೆ” ಎಂಬ ಸಾಲು ‘ನಮಿಸುವುದಾದರೆ ತಡವೇಕೆ’ ಎಂಬ ಕವನದಲ್ಲಿದೆ. ಇದೇ ಕವಿತೆಯ ಕೊನೆಯ ಸಾಲು ಹೀಗಿದೆ…” ಒಮ್ಮೆ ನಮಿಸಿ ಬಿಡಿಬೆಳಗುವ ದೀಪದಧ್ಯಾನದಲಿರುವ ಕತ್ತಲಿಗೆ”ಕವಯಿತ್ರಿಗೆ ಗರಿಕೆ ಹಾಗೂ ಕತ್ತಲು ಸಹ ಮುಖ್ಯವಾಗುವುದು ಹೀಗೆ.. ಗರಿಕೆ ಹುಲ್ಲು ಮತ್ತೆ ” ನಿಮ್ಮ ತಕ್ಕಡಿಯಲಿ ” ಎಂಬ ಕವಿತೆಯಲ್ಲಿ ಪುರುಷಾಹಂಕಾರವನ್ನು ಮೆಟ್ಟಿ ನಿಲ್ಲುತ್ತದೆ.ನಿಮ್ಮೊಳಗಿನ ಅಹಂ ಬಿಟ್ಟು ನೋಡಿ…….. “ಒಲವೆಂಬುದು ಹೀಗೂ ನಳನಳಿಸುವುದುಲೆಕ್ಕವಿಲ್ಲದ ತುಳಿತಕೆ ಎದೆಯೊಡ್ಡಿಯೂ ,ತಲೆ ಎತ್ತಿ ನಿಂತ ಹುಲ್ಲಿನಂತೆ…” “ಬೆಂಕಿ ಇರುವಲ್ಲಿ ಕುದಿತವಿದ್ದದ್ದೆಒಲೆಯಾದರೂ ; ಎದೆಯಾದರೂ…..” ಬದುಕಿನ ನಿಷ್ಠುರತೆಯನ್ನು ಎಷ್ಟು ಚೆಂದದ ರೂಪಕದಲ್ಲಿ ಹೇಳುತ್ತಾಳೆ ಕವಯಿತ್ರಿ. ಇದರ ಹಿಂದಿನ ನೋವು ಮಾತ್ರ ಊಹೆಗೆ ನಿಲುಕದ್ದು. “ಹೇಳಬೇಕಿಲ್ಲ” ಎಂಬ ಕವಿತೆಯಲ್ಲಿ ಹಕ್ಕಿಯ ಕೂಗು,ಆ ನಗು …ಅಳಿದು ಹೋಗಬೇಕೆಂದಿದ್ದ ನಿನ್ನ ಹೀಗೆ ಉಳಿಸಿಬಿಟ್ಟವು ಎಂಬುದು ಬದುಕಿನ ಭಾವನಾತ್ಮಕತೆಯ ಮಹತ್ವ ಸಾರುತ್ತವೆ. ‘ನಾವು ಹೀಗೆಯೆ’ ಕವಿತೆ ಬಂಡಾಯವನ್ನು ಸಾರುತ್ತಲೇ, ಪುರುಷ ಚಂಚಲತೆಯ ದಟ್ಟವಾಗಿ ಹಿಡಿದಿಡುತ್ತಲೇ, ಕೊನೆಯಲ್ಲಿ ….ಇನ್ನಾದರೂ ಮುಖಕ್ಕೆ ಮುಖ ಕೊಟ್ಟು ; ಕಣ್ಣಲಿ ಕಣ್ಣು ನೆಟ್ಟು ಮಾತಾಡುತ್ತಲಿರಿ ; ಹಗಲ ಬೆಳಕಿನಲಿ …….. ಎಂಬಲ್ಲಿ ಪ್ರಾಮಾಣಿಕತೆಯನ್ನು ಹೆಣ್ಣು ಬಯಸುತ್ತಾಳೆ ಎಂಬ ದನಿಯಿದೆ. “ದೇಹವನ್ನು ಸುಮ್ಮನಿರಿಸಿ” ಕವಿತೆ ಹೆಣ್ಣಿನ ಬದುಕಿನ ಆರ್ತನಾದವಿದೆ. ದಿನ ನಿತ್ಯದ ಜಂಜಾಟದಲ್ಲಿ ಬದುಕು ಸೆವೆಯುವ ಹಾದಿಯಿದೆ. ಸಪ್ಪಳ ಮಾಡದಿರು ಗಾಳಿಯೆ ಬೆಳದಿಂಗಳಲಿನಲ್ಲನ ಪಿಸುಮಾತು ಕೇಳದಾದೀತುಕಾದ ಅದೆಷ್ಟೋ ಮೌನಹದಗೆಟ್ಟ ಮಾತು ಮರೆತು ಮೂಕವಾದೀತು(ಗಾಳಿಗೊಂದು ವಿನಂತಿ) ಎಂಬಲ್ಲಿ ಮನಸು ಎಷ್ಟು ಸೂಕ್ಷ್ಮಗ್ರಾಹಿ. ಗಾಳಿಗೆ ವಿನಂತಿ ಮಾಡುವ ವಿನಯ ಕವಿಗೆ ಮಾತ್ರ ದಕ್ಕುವಂತಹದ್ದು. ಧರೆಯೊಡಲ ಧ್ಯಾನದಲ್ಲಿ ಇಳೆಗೆ ಮಳೆ ಕರೆಯುವ ಧ್ಯಾನವಿದೆ. ಬೆತ್ತಲಿನ ಇಳೆಯ ಕಣ್ಣ ಪಾಪೆಯ ಕನಸ ತಣಿಸುವ ಹಂಬಲ ಎದ್ದು ಕಾಣುತ್ತದೆ. ಮೈ ಬಿರಿದ ಅವನಿಯಲಿ ಕಳೆ ಕಳೆದು ಕೂಡುವ ,ಕೂಡುವಿಕೆ ಮೀರಿದ; ತೀರಿದರೂ ತೀರದ ಹಂಬಲವಿದೆ. ಸಾಂಗತ್ಯದ ಬಾಯಾರಿಕೆ ಇದು ಎನ್ನುವ ಕವಯಿತ್ರಿ, ನಾನೊಂದು ದೀಪ, ನಾನೊಂದು ಮರ, ಹೂ, ನದಿ, ಮೊಡ ಎಂದು ಸಾರುತ್ತಾಳೆ. ತಡೆಯಲಾರಿರಿ , ತೊರೆದು ನಡೆದಿರುವೆ ದೇಶ ಭಾಷೆಯ ಹಂಗನು ; ಅಳಿಯಬೇಕಿಲ್ಲಿ ಉಳಿಯಬೇಕೆಂದರೆ ಎನ್ನುತ್ತಾ ,ಬದುಕಿನ ತತ್ವ ಸಾರುತ್ತಾಳೆ. ಹೀಗೆ ಸರಹದ್ದುಗಳಿಲ್ಲದ ಭೂಮಿಯಲ್ಲಿ ಬುದ್ಧ, ಬಸವ ,ಗಾಂಧಿ ಸಹ ಬಂದು ನಿಂತು ಮಾತಾಡುತ್ತಾರೆ, ಕವಯಿತ್ರಿಯು ಮಗನೊಡನೆ ಮುಖಾಮುಖಿಯಾಗುತ್ತಾರೆ.ಹೀಗೆ ತನ್ನ ಸುತ್ತಣ ಜಗತ್ತಿನ ಜೊತೆ ಕವಯಿತ್ರಿ ನಿರ್ಮಲಾ ಮುಖಾಮುಖಿಯಾಗಿ, ಅಂತರ್ಮುಖಿಯಾಗಿ, ಪ್ರಶ್ನಿಸಿಕೊಳ್ಳುತ್ತಾ, ಪ್ರಶ್ನಿಸುತ್ತಾ ಹೊಸ ನೋಟ ಸಮಾಜದ ಮುಂದಿಡುತ್ತಾರೆ. ಹೊಸ ಬದುಕಿನಲ್ಲಿ ಬೇಲಿಗಳಿಲ್ಲ ; ‘ಅಹಂ’ ಅಳಿದು ಮನುಷ್ಯರಾಗುವ ಹೊಸ ಅನುಸಂಧಾನವನ್ನು ಕಾವ್ಯ ಜಗತ್ತಿನ ಮುಂದಿಟ್ಟಿದ್ದಾರೆ. ಧ್ಯಾನದಿಂದ, ಧ್ಯಾನಿಸಿದ ಮೇಲೆಯೂ ಉಳಿಯುವ ಹೊಸತನದ ಹಂಬಲ,ಮನುಷ್ಯತ್ವದ ಹುಡುಕಾಟ ಇಲ್ಲಿ ಅನನ್ಯವಾಗಿ , ಅಂರ್ತಧ್ವನಿಯಾಗಿ, ಗಂಗೆಯಾಗಿ ಹರಿದಿದೆ. ಧ್ಯಾನಿಸದೆ ಕವಿತೆ ದಕ್ಕದು, ಪ್ರೀತಿಯ ಬದುಕೂ ದಕ್ಕದು ಎಂಬ ಒಳದನಿ ಇಲ್ಲಿದೆ. ********************************** ನಾಗರಾಜ ಹರಪನಹಳ್ಳಿ

“ಸರಹದ್ದುಗಳಿಲ್ಲದ ಭೂಮಿಯಕನಸು: Read Post »

ಪುಸ್ತಕ ಸಂಗಾತಿ

ಪುಸ್ತಕ ಬಿಡುಗಡೆ

ಪುಸ್ತಕ ಸಂಗಾತಿ ‘ಗೌರಿಯೊಂದಿಗೆ ಏಕಾಂತ_ಲೋಕಾಂತ‘ ಸ್ನೇಹಿತರೆ…ಗೌರಿಯೊಂದಿಗೆ ಏಕಾಂತ_ಲೋಕಾಂತ ಪುಸ್ತಕ ಬಿಡುಗಡೆಯ ಆಹ್ವಾನ ಪತ್ರಿಕೆ ಇಲ್ಲಿದೆ. ಆಸಕ್ತರೆಲ್ಲರೂ ಸಮಯ ಸರಿದೂಗಿಸಿಕೊಂಡು ನಮಗೆ ಜೊತೆಯಾಗಿ…!! ಭೇಟಿಯಾಗಿ ಬಾಂಧವ್ಯ ಬೆಸೆದುಕೊಳ್ಳುವ. ಪ್ರೀತಿಯಿಂದ- ಚಾರು ಪ್ರಕಾಶನ ಒಟ್ಟು ಪುಟಗಳು 200ಬೆಲೆ ರೂ 150/- ಪ್ರತಿಗಳಿಗಾಗಿ ಸಂಪರ್ಕಿಸಿ94483806379380788349080-266603037.Charu PrakashanaCurrent Account number64054262366IFSC Code SBI no 040014State Bank Of India.Basavanagudi BranchBengaluru 560004 Parvateesh Bilidaale Charu Prakashana No 83, 3rd Floor Pride plaza building 5th Main Near Adarsha College T R Mill Road Chamaraja pete Bangaluru_560018 Phone 080 _26603637Mobile 9448380637. *********************************************************************** ರಾಜೇಶ್ವರಿ ಭೋಗಯ್ಯ

ಪುಸ್ತಕ ಬಿಡುಗಡೆ Read Post »

ಪುಸ್ತಕ ಸಂಗಾತಿ

ಕಲ್ಲಳ್ಳಿ ಗಜಲ್

ಪುಸ್ತಕ ಸಂಗಾತಿ ಕಲ್ಲಳ್ಳಿ ಗಜಲ್ ಸಂಕಲನದ ಹೆಸರು : ಕಲ್ಲಳ್ಳಿ ಗಜಲ್ ಲೇಖಕರು : ದೊಡ್ಡ ಕಲ್ಲಳ್ಳಿ ನಾರಾಯಣಪ್ಪ ಬೆಲೆ : ೧೨೦/- ದೊಡ್ಡ ಕಲ್ಲಳ್ಳಿ ನಾರಾಯಣಪ್ಪನವರು ವೃತ್ತಿಯಲ್ಲಿ ಪದವೀಧರ ಶಿಕ್ಷಕರಾಗಿದ್ದು, ಪ್ರವೃತ್ತಿಯಾಗಿ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಪ್ರತಿಭೆ. ಇವರು ಈಗಾಗಲೇ ಉತ್ತತೀಯ ಹಾಡು, ಎದೆಯೊಳಗಿನ ಇಬ್ಬನಿ, ಬೆಂಗಾಡು ಎಂಬ ಮೂರು ಸಂಕಲನಗಳನ್ನು ಹೊರ ತಂದಿದ್ದು ಈ ಕಲ್ಲಳ್ಳಿ ಗಜಲ್ ನಾಲ್ಕನೇ ಸಂಕಲನವಾಗಿದೆ.  ಇವರ ಪ್ರತಿಭೆಯನ್ನು ಗುರುತಿಸಿ ಇವರಿಗೆ ಗೋವಿಂದ ದಾಸ್ ಪ್ರಶಸ್ತಿ, ಬೆಳಕು ಸಾಹಿತ್ಯ ಪ್ರಶಸ್ತಿ, ಕುವೆಂಪು ಅನಿಕೇತನ ಪ್ರಶಸ್ತಿ ಇವರ ಮುಡಿಗೇರಿದೆ. ಸೌಮ್ಯ ಸ್ವಭಾವದ, ಮಗು ಮನದ ದೊನಾ ರವರು ಎಂತಹವರನ್ನು ತನ್ನತ್ತ ಸೆಳೆಯುವ ಸ್ವಾಭಾವದವರಾಗಿದ್ದಾರೆ.  ನಾನು ಗಜಲ್ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲು ಇವರೇ ಪ್ರೇರಣೆ ಎಂದರೆ ತಪ್ಪಾಗಲಾರದು.               ಕಲ್ಲಳ್ಳಿ ಗಜಲ್ ಈ ಸಂಕಲನದ ಹೆಸರು, ಮುಖಪುಟದ ವಿನ್ಯಾಸ ಒಂದು ರೀತಿಯಲ್ಲಿ ವಿಭಿನ್ನವಾಗಿ ಮೂಡಿದ್ದು ಚಿತ್ತಾಕರ್ಷಕ ರೇಖಾ ಚಿತ್ರಗಳು ಅದರೊಳಗೆ ಹುದುಗಿಸಿಕೊಂಡಿರುವ ಜೀವದ ಉಸಿರು,  ನೆಲೆ ಎಲ್ಲರ ಗಮ್ಯವನ್ನು ಬೇರೆ ಲೋಕದತ್ತ ಸೆಳೆಯುತ್ತದೆ. ನಮ್ಮ ಮಾಲೂರಿನ ಸಾಹಿತ್ಯ ಪರಿಚಾರಕರಾಗಿದ್ದ  ನಮ್ಮೆಲ್ಲರ ಹಿರಿಯಣ್ಣನಂತಿದ್ದ ಉದಯೋನ್ಮುಖ ಕವಿಗಳಿಗೆ ನೆಲೆ ನಿಲ್ಲಲು ವೇದಿಕೆ ಕಲ್ಪಿಸಿ ಬೆನ್ನು ತಟ್ಟುತಿದ್ದ  ” ಕುಂಚ ”  ಅಂದರೆ ಕುಂತೂರು ಚಂದ್ರಪ್ಪನವರು ( ಇವರು ಈಗ ಇಲಿಲ್ಲ..!!  ಪ್ರಪಂಚವನ್ನೇ ತಲ್ಲಣಗೊಳಿಸಿ ತನ್ನ ಭಾಹು ತೆಕ್ಕೆಗೆ ತೆಗೆದುಕೊಂಡು ಅಪೋಷಣ ಗೈದ  ಮಹಾ ಮಾರಿ ಕರೋನಾ ಈ ಪುಣ್ಯಾತ್ಮನನ್ನು ತನ್ನ ಉದರದ ಹಸಿವಿಗೆ ಅಪೋಷಣ ಮಾಡಿದ್ದು ದುರ್ದೈವ.  ನಮ್ಮನೆಲ್ಲ ಅಗಲಿ ಅನಾಥರನ್ನಾಗಿಸಿದ್ದು  ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಇನ್ನೂ ಯಾರು ಆ ಸ್ಥಾನ ತುಂಬಲಾರರು.) ಇಂತಹ ವ್ಯಕ್ತಿಗೆ ಈ ಸಂಕಲನ ಅರ್ಪಿಸಿ ತಮ್ಮ ಘನತೆಯನ್ನು ದೊನಾ ಹೆಚ್ಚಿಸಿಕೊಂಡಿದ್ದಾರೆ. ಕೃತಘ್ನರೇ ತುಂಬಿರುವ ಕಲಿಯುಗದಲ್ಲಿ ಕೃತಜ್ಞತೆಯ ಈ ಕರುಣಾಳುವಿನ ಈ ಕಾರ್ಯ ಖುಷಿಕೊಟ್ಟಿತು. ಲೇಖಕರ ಪರಿಚಯ ತುಸು ಹೆಚ್ಚೆನಿಸಿದರೂ ನಾನು ಪರಿಚಯಿಸುವುದು ಸಮಂಜಸವೂ , ಔಚಿತ್ಯ ವೂ ಎಂದು ಭಾವಿಸಿರುವೆ. ಇನ್ನೂ ಸಂಕಲನದ ಸುತ್ತ ಸಮಚಿತ್ತ…             ಅರಬ್ಬೀ, ಪರ್ಷಿಯ ಉರ್ದು ಕಾವ್ಯ  ಪ್ರಕಾರದ ಜನಪ್ರಿಯ ಸಾಹಿತ್ಯ ರೂಪ  ಗಜಲ್. ಗಜಲ್ ತನ್ನ ಪ್ರೇಯಸಿಯೊಡನೆ ಸಂವಾದಿಸುವ , ಲಲ್ಲೆಯೊಡಿಯುವ ಕಾವ್ಯವೆಂದೇ ಹೆಸರುವಾಸಿ . ಹಾಡುಗಬ್ಬವೂ ಹೌದು. ನಾರಾಯಣಪ್ಪನವರ ನುಡಿಯಲ್ಲೇ ಹೇಳುವುದಾದರೆ  ಗಜಲ್, ಎಲ್ಲಾ ರೀತಿಯ ಪ್ರಮಾಣಗಳನ್ನು ಧಿಕ್ಕರಿಸಿ ಗಡಿ ಮಡಿಗಳನ್ನು ಮೀರಿ ಬಹುತ್ವವನ್ನು ಸಾರುವ ಮತ್ತು ಜೀವನ ಪ್ರೀತಿಯನ್ನು ಹೆಚ್ಚಿಸುವ ಒಂದು ಚಿಕಿತ್ಸಕ ಕಾವ್ಯ ಪ್ರಕಾರವಾಗಿದೆ. ನಮ್ಮ ಅಂತರಂಗದಲ್ಲಿ ಒಲವಿನ ಕಿರುದೀಪ ಹಚ್ಚಿಡುವ ಮೂಲಕ ಸಮಚಿತ್ತ ಸಾಧಿಸಲು ನೆರವಾಗುತ್ತದೆ. ತಲ್ಲಣಿಸುವ ಜೀವಕ್ಕೆ  ಸಾಂತ್ವನ ನೀಡುವ ಬೇಲಿಯ ಹೂ !  ಹತ್ತಾರು ಕವಲು ದಾರಿಗಳ ಮುಂದೆ ಗೊಂದಲದ ಗೂಡಾಗಿ ನಿಂತ ಸಾಮಾನ್ಯ ಪಯಣಿಗನ ಪಾಡು.  ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡುವುದಾದರೆ ನಾನಾ ವೈರುದ್ಯಗಳ ನಡುವೆಯೂ ಅನ್ನದ ಹಾಡು ಹಾಡುತ್ತಿರುವ ನೇಗಿಲ ಯೋಗಿಯ ಬೆವರು. ಇವೆಲ್ಲವೂ ಗಜಲ್ ನ ಬೇರುಗಳಾಗಬೇಕು.‌  ಇತ್ತೀಚೆಗೆ ಗಜಲ್ ಕಾವ್ಯ ಪ್ರಕಾರ ಕನ್ನಡ ಸಾಹಿತ್ಯಕ್ಕೂ ಲಗ್ಗೆಯಿಟ್ಟು ತನ್ನ ಅರ್ಥ ವಿಸ್ತಾರ , ಬಹುಮುಖ ಆಯಾಮಗಳು ಕಾವ್ಯಸಕ್ತರನ್ನು  ತನ್ನತ್ತ ಸೆಳೆದು ಹೆಚ್ಚೆಚ್ಚು ತೊಡಗಿಸಿಕೊಳ್ಳುವಂತೆ ಜನಪ್ರಿಯತೆ ಪಡೆಯುತ್ತಿರುವ ಕಾವ್ಯ. ಕೇವಲ ಉತ್ತರ ಕರ್ನಾಟಕದ ಕಪ್ಪುನೆಲದ ಕವಿಗಳೇ ಹೆಚ್ಚಾಗಿ ದುಡಿಸಿಕೊಳ್ಳುತ್ತಿದ್ದ ಈ ಗಜಲ್ ಇತ್ತೀಚೆಗೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ  ಅಲ್ಲೊಬ್ಬ ಇಲ್ಲೊಬ್ಬ ಗಜಲ್ ಕಾರರನ್ನು ಹುಟ್ಟು ಹಾಕಿ ನದಿ – ನಾಲೆಗಳಲ್ಲಿ ಹರಿಯುವಂತೆ ಕನ್ನಡದ ಗಜಲ್ ಕಂಪು ನಾಡಿನುದ್ದಗಲಕ್ಕೂ ಪಸರಿಸುತ್ತಿರುವುದು ಸಂತೋಷದ ಸಂಗತಿ. ನಾಡಿನ ಹೆಸರಾಂತ ಗಜಲ್ ಕವಿಗಳಾದ ಅಲ್ಲಾ ಗಿರಿರಾಜ್ ( ಈ ಸಂಕಲನದ ಮುನ್ನುಡಿಕಾರರು) ಗಿರೀಶ್ ಜಕಾಪುರೆ,  ಪ್ರಭಾವತಿ ದೇಸಾಯಿ, ಅರುಣಾ ನರೇಂದ್ರ, ಶ್ರೀದೇವಿ ಕೆರೆಮನೆ, ಪ್ರೇಮ ಹೂಗಾರ್, ಹಾಗೂ ಪ್ರಭುದ್ದ ರಾದ ಸುಜಾತ ಲಕ್ಮನೆ  ಶಮಾ ಜಮಾದಾರ್ , ಚಂಪೂ, ನೂರ್ ಅಹ್ಮದ್  ನಾಗನೂರ್ ಮುಂತಾದ ಹಲವಾರು ಕವಿಗಳ ಸಾಲಿನಲ್ಲಿ ನಮ್ಮ ಈ ಕೋಲಾರದ  ಚಿನ್ನ ದೊನಾ ಹೊಳಪು ಕಾಣುತ್ತಿರುವುದು ಹೆಮ್ಮೆಯ ವಿಷಯ.         ಹುಟ್ಟು ಬಡತನ, ಶೋಷಣೆಯ ಬೇಗುದಿಯಲ್ಲಿ ಬೆಂದ ನಾರಾಯಣಪ್ಪನವರು  ಸಮಾಜದಲ್ಲಿನ ಅಸಮಾನತೆ, ಅಂಧಾನುಕರಣೆ , ಜಾತೀಯತೆ, ಧರ್ಮ ರಾಜಕಾರಣ , ಬಡತನ, ಮುಂತಾದ ವಿಷಯಗಳ ಕಡೆ ತಮ್ಮ ಮೃದು, ಮಧುರ ಬಂಡಾಯದ ಬರಹಗಳಿಂದಲೇ  ತಿದ್ದುವ ಬದಲಾವಣೆ ಬಯಸುವ  ಮನಸ್ಸುಳ್ಳವರಾಗಿದ್ದಾರೆ. ಅಷ್ಟೇ ಅಲ್ಲದೆ ಪ್ರೀತಿ ಪ್ರೇಮದ ಸೆಳೆತದ ಅತ್ತರಿನ ನೆಶೆಯಂತೆ ಮಧು ಬಟ್ಟಲೊಳಗೆ ಪ್ರೇಮಾಂಕುರದ ಜೀವ ದ್ರವ್ಯ ತುಂಬಿ ಈ ಸಂಕಲನದ ಮೂಲಕ ಉಣ ಬಡಿಸಲು  ಶಕ್ತರಾಗಿದ್ದಾರೆ.  ಈ ಸಂಕಲನವು ೪೦ ಗಜಲ್ ಗಳನ್ನು ಹೊಂದಿದೆ. *ನನ್ನ ಎದೆಗೆ ಬಿದ್ದ ನಾಣಿಯ ಗಜಲ್ ನ ಕೆಲವು ಸಾಲುಗಳು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ನನ್ನ ಕೇರಿ ಗಾಯಗೊಂಡವರ ಶಾಶ್ವತ ದವಾಖಾನೆ ಒಂದೇ ಒಂದು ಗಾಯಕ್ಕಾದರೂ ನಾನು ಔಷಧಿಯಾಗಬೇಕು. ಗ..೨ ಇಲ್ಲಿ ನೋಡಿ ಬಂಡಾಯದ ಬಂಡ ! ಈ ಒಂದು ದ್ವಿಪದಿ ಇವರ ಹುಟ್ಟು ಶೋಷಣೆಯ ಅನಾವರಣ ಮಾಡಿಸುತ್ತದೆ.  ಇವರದಷ್ಟೇ ಅಲ್ಲ ; ಸಮಾಜದ ಕೆಳಸ್ತರದ ಪ್ರತಿಯೊಬ್ಬರ ನೋವು ಇಲ್ಲಿದೆ.  ಜಾತಿ , ಸಮುದಾಯದ ಹೆಸರಲ್ಲಿ ಸಾಮಾನ್ಯರ ಮುಂದೆ ಅಧಿಕಾರಕ್ಕಾಗಿ ಮಂಡಿಯುರುವ ಮಂದಿ ಮುಂದೆ ಸಾಮ್ರಾಜ್ಯ ಆಳುವರು . ಆದರೆ ಕತ್ತಲಾಗಿದ್ದ  ಕೇರಿಯ ಗೂಡಿನ  ಜನರ ನೋವು ಇಂಗುವುದೇ ಇಲ್ಲ.. !! ಎಂಬುದನ್ನು ಮಾರ್ಮಿಕವಾಗಿ ಹೇಳಿದ್ದಾರೆ. ಹೃದಯಗಳಿಲ್ಲದ ಕಣಿವೆಯಲ್ಲಿ ಒಂದೇ ಸಮನೆ ಕಿರುಚುತಿದ್ದಾಳೆ ಬಾಯಿಗೆ ತುರುಕಿದ ಬಟ್ಟೆಯ ಮೇಲೆ ಕಸೂತಿಯ ಹಾಕುತ್ತಿದ್ದಾಳೆ .  ಗ…೫ ಬಯಲ  ಎದೆಯ ತುಂಬಾ  ಬೆಳದಿಂಗಳೆಂಬ ಹಾಲು ಒಸರುವ ಹೊತ್ತಿನಲ್ಲಿ ಯಾರೋ ಇಲ್ಲಿ ಸತ್ತ ಹಸುಳೆಯನ್ನು ಬಟ್ಟೆಯಲ್ಲಿ ಸುತ್ತಿ ಎಸೆದು ಹೋಗಿದ್ದಾರೆ.. ಗ..೧೬. ಎಷ್ಟು ದುರಂತ ಅಲ್ವಾ ?  ಅವಿದ್ಯಾವಂತರಿಗಿಂತಲೂ ವಿದ್ಯಾವಂತ ನಮ್ಮ ಸಮಾಜ.. ಮನುಷ್ಯತ್ವದ ಬಗ್ಗೆ ಮಾತಾನಾಡುವ ನಾವು ಸಮಾಜದಲ್ಲಿ ನೆಲೆಯೂರಿ ನೆಡೆಯುತ್ತಿರುವ ಸ್ತ್ರೀ ಶೋಷಣೆ  (ಹೆಣ್ಣು ಶಿಶು ಹತ್ಯೆ , ಅತ್ಯಾಚಾರ,  ದೌರ್ಜನ್ಯ ) ದ ವಿರುದ್ಧ ಮೌನವಹಿಸಿರುವುದರ  ವ್ಯಂಗ್ಯ ವಾಡಿದ್ದಾರೆ. ನೆಲ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಕವಿಗಳನ್ನು ನೇಮಿಸಿದೆಯಂತೆ ಕಲ್ಲಳ್ಳಿ ವಿಪರ್ಯಾಸ ಅಲ್ವಾ ಈಗೀಗ ಕವಿತ್ವವು ಕೀರ್ತೀಗಾಗಿ ಮಾರಲ್ಪಡುತ್ತಿದೆ. ಗ…೨೧ ನೋಯುವಷ್ಟು ನಿಂದಿಸಿದವರು ನೊಣ ಕೂರದಂತೆ ನೋಡಿಕೊಳ್ಳುತ್ತಾರೆ ನನ್ನ ಹೆಣದ ಮೇಲೆ ಮತ್ತೆ ಅತ್ತರು ಚೆಲ್ಲುತ್ತಾರೆ ನೀನು ಸುಮ್ಮನೆ ನಗಬೇಕು… ಗ.೩೬ ಈ  ಎರಡು ಗಜಲ್ ನ ಪ್ರತಿ ಶೇರ್ ಗಳು ಮತ್ತೆ ಮತ್ತೆ ಓದಿಸಿಕೊಂಡು ಹೋಗುತ್ತೆ.  ಸಮಾಜದಲ್ಲಿನ ಜನರ ವಾಸ್ತವಿಕತೆಯ ಮನಸ್ಥಿತಿ, ಗೋಮುಖ ವ್ಯಾಘ್ರತೆಯ ಕರಾಳ ರೂಪವನ್ನು ಸಮಯ ಸಾಧಕತನದ ಸಾಚಾತನವನ್ನೂ ! ಕವಿ ವಿಡಂಬನಾತ್ಮಕ ರೂಪಕಗಳಲ್ಲಿ ಚಿತ್ರಿಸಿ ಓದಗನ್ನು  ಅಲ್ಲೇ ಹಿಡಿದಿಡುವಂತ್ತೆ ಮಾಡಿದ್ದಾರೆ. ಇವಿಷ್ಟು ಕೇವಲ ಉದಾಹರಣೆ ಮಾತ್ರ ಸಂಕಲನದಲ್ಲಿ ಇನ್ನೂ ಹಲವಾರು ಬಗೆಯ ಬಹುಮುಖ ವಸ್ತು , ವಿಷಯಗಳ ಮೇಲೆ ಬೆಳಕು ಚೆಲ್ಲುವ , ಪ್ರತಿರೋದಿಸುವ ಸಂವೇದನಾಶೀಲ ಕೆಲಸ ಮಾಡಿದ್ದಾರೆ. ಕಲ್ಲಳ್ಳಿಯವರು ಒಬ್ಬ ಪ್ರತಿಭಾನ್ವಿತ , ಗಟ್ಟಿ ಗಜಲ್ ಕಾರರು . ಇವರ ಕಾವ್ಯದ ಭಾಷೆ, ಸರಳ  ಸಾಮಾನ್ಯನು ಎದೆಗವಿಚಿಕೊಳ್ಳುವಷ್ಟು ಸುಂದರ ಸಶಕ್ತ. ಪ್ರಾಂತೀಯ ಭಾಷೆಯ ಸೊಗಡನ್ನು ಮೈಗೂಡಿಸಿಕೊಂಡಿರುವ  ಈ ಸಂಕಲನದ ಕೆಲವು ಗಜಲ್ ಗಳ ಮಿಸ್ರಗಳು ಸ್ವತಂತ್ರತೆಯ ಲಯ ತಪ್ಪಿದಂತೆ , ಭಾವಾಭಿವ್ಯಕ್ತಿಯ ಏಕತಾನತೆಯನ್ನು ಹೊಂದಿರುವಂತೆ ಕಂಡು ಬಂತು ಇದು ನನ್ನ ಊಹೆಗೂ ನಿಲುಕದ ಮುದ್ರಾ ದೋಷವೋ ಅಥವಾ ತಿದ್ದುವಾಗ ಆದ ದೋಷವೋ ಇರಬೇಕು ಎಂದೆನಿಸಿತು.  ಓದುಗನಾದ ನನ್ನ ದೃಷ್ಠಿಯಲ್ಲಿ ಭಿನ್ನತೆಯೂ ಇರಬಹುದು.!! ಕವಿ ಭಾವಕ್ಕೆ ದಕ್ಕೆಯಾಗದಿರಲಿ.  ಮುಂದೆ ಇದರತ್ತ ಗಮ್ಯ ನೀಡಲಿ.    ಇವರ ಈ ಸಂಕಲನ ಕನ್ನಡ ಸಾರಸ್ವತ ಲೋಕದಲ್ಲಿ ದಾಪುಗಾಲಿಟ್ಟು  ಕೀರ್ತಿ ಪತಾಕೆಯ ಶಿಖರವೇರಲಿ. ಇನ್ನಷ್ಟು ಮತ್ತಷ್ಟು ಕೃತಿಗಳು ಇವರಿಂದ ಹೊರ ಬರಲಿ ಎಂದು  ಪ್ರೀತಿಯಿಂದ ಶುಭ ಹಾರೈಸುತ್ತೇನೆ. ********************************************* ಅಶೋಕ ಬಾಬು ಟೇಕಲ್.

ಕಲ್ಲಳ್ಳಿ ಗಜಲ್ Read Post »

ಪುಸ್ತಕ ಸಂಗಾತಿ

ಆಡುಭಾಷೆಯ ಸವಿ ಗೋದಾನ.

ಪುಸ್ತಕ ಸಂಗಾತಿ ಆಡುಭಾಷೆಯ ಸವಿ     ಗೋದಾನ. ಕನ್ನಡ ನುಡಿ’  ಯನ್ನು   ಮೂರು ರೀತಿಯಿಂದ ಅಭಿವ್ಯಕ್ತ    ಗೊಳಿಸಬಹುದೆಂದು ಗೊತ್ತಿರುವ ಸಂಗತಿ. ಅದು ಶಿಷ್ಟ, ಜಾನಪದ ಮತ್ತು ಆಡು ಭಾಷೆ.ನಾನು,ನೀವೂ ಸೇರಿದಂತೆ ಬರಹಗಾರ,ಬರಹಗಾರ್ತಿಯರು, ಅರಿತೋ ಅರಿಯದೆಯೋ,ಗ್ರಾಂಥಿಕ ಭಾಷೆಗೆ ಮರುಳಾಗಿಬಿಟ್ಟಿದ್ದೇವೆ.ಜನಪದ ಭಾಷೆಗೆ ಹತ್ತಿರ ವಾಗಿದ್ದ,ಅಡುಕನ್ನಡವನ್ನು ಜೀವಂತವಾಗಿಟ್ಟವರು ನಮ್ಮ ಗ್ರಾಮೀಣ ಜನಾಂಗ.ಅವರಿಗೆ ಶಿಷ್ಟ ಜನಗಳು ಮಾಡುತ್ತಿರುವ ಅನ್ಯಾಯ ಇದು ಎಂದೇ ಹೇಳಬಹುದು ಎಂದು ನಾನು ಇದೇ ಅಂಕಣದಲ್ಲಿ ಈ ‌ಮೊದಲೇ ಹೇಳಿದಂತೆ ನೆನಪು. ನಮ್ಮ ಓದು ,ಕತೆ,ವಸ್ತು,ಪಾತ್ರ,ವಾಕ್ಯ ರಚನೆ ಗಳ ಜೊತೆಗೆ ಭಾಷಾ ಸಂಪತ್ತಿನ ಕಡೆಗೂ ಜ್ಞಾನ ಹಾಯಿಸಿದಾಗ ಬಳಕೆಯಾದ ಭಾಷೆಯ ಪ್ರಭೇದ  ಗಮನಕ್ಕೆ ಬರುವಂತಾಗುತ್ತದೆ. ಆಗ ಮಾತ್ರ,ನಮ್ಮ ರಾಚನಿಕ ಕ್ರಿಯೆಯಲ್ಲಿ ಅದು ಪದ್ಯವೇಆಗಿರಲಿ,ಗದ್ಯವೇ ಆಗಿರಲಿ, ನಮ್ಮ ಆಯ್ಕೆಯ ಭಾಷೆ ಎಂತಹದು,  ಅದು ಎಷ್ಟು,ಹಿತ ಮತ್ತು  ಸಹ್ಯ  ಎನ್ನು ವುದರ ಕಡೆಗೆ ನಮ್ಮ ಒಲವು ಸಹಜವಾಗಿ ಬೆಳೆಯುತ್ತದೆ. ಈ ಹಿನ್ನೆಲೆಯಲ್ಲಿ ಶೀಕಾಂತ  ಕಕ್ಕೇರಿಯವರು ರಚಿಸಿದ, ಮುನ್ಷಿ ಪ್ರೇಮಚಂದ ಅವರ ಕಾದಂಬರಿ,’ಗೋದಾನ ‘ ಆಧಾರಿತ ಅದೇ ಶೀರ್ಷಿಕೆಯ ನಾಟಕವನ್ನು ನೋಡಬೇಕಾಗುತ್ತದೆ.ಅಚ್ಚ ಹೈದರಾಬಾದ್ ಕರ್ನಾಟಕದ ಭಾಷೆಯಲ್ಲಿ ರಚಿತವಾಗಿರುವ ಇದು ೩೯೦ ಪುಟಗಳ,೪೩ ಪಾತ್ರಗಳ,೩೪ ದೃಶ್ಯಗಳ ( ಅಂಕಗಳು ಎಂದು ವಿಭಜನೆಯಿಲ್ಲ) ಸುದೀರ್ಘಾವಧಿಯ ನಾಟಕ. ಇದು ನನಗೆ ಖುಷಿ ನೀಡಲು ಕಾರಣವಾದ ಎರಡು ಸಂಗತಿಗಳನ್ನು ಹೇಳಿ ವಿಷಯ ಪ್ರವೇಶಿಸಲು ಇಷ್ಟಪಡುತ್ತೇನೆ ೧. ಗೋದಾನ ನಾಟಕದ ಭಾಷೆ, (ಮೇಲೆ ಹೇಳಿದ ಆಡು ಭಾಷೆ) .೨. ಶ್ರೀಕಾಂತ ಕಕ್ಕೇರಿಯವರ ಹೈದರಾಬಾದ್ ನಲ್ಲಿ ಹುಟ್ಟಿ ಬೆಳೆದವರು. ಪ್ರತಿಷ್ಟಿತ ನೃಪತುಂಗ ಶಾಲೆಯ ವಿದ್ಯಾರ್ಥಿ ಮತ್ತು ಉಸ್ಮಾನಿಯ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಪದವೀಧರರು. ರಾಯಚೂರು ಕಲಬುರ್ಗಿಗಳ ಇಂಜನಿಯರಿಂಗ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು.ಸಮುದಾಯ ಸಂಘಟನೆಯೊಂದಿಗೆ ಗುರುತಿಸಿ ಕೊಂಡವರು.ಉತ್ತಮ ನಾಟಕಕಾರರು,ನಟರೂ,ರಂಗತಜ್ಞರೂ ಹೌದು. ಇಷ್ಟೆಲ್ಲ ಹೇಳಿಯಾದ ಮೇಲೆ ಗೋದಾನ ನಾಟಕದ ವೈಶಿಷ್ಟ್ಯ ಕುರಿತು ಹೇಳಬೆಕಾಗಿಲ್ಲಎಂದು ಕೊಳ್ಳಲೇ ? ಆದರೂ ಪರಿಚಯಾತ್ಮಕ ವಾಗಿ ಒಂದೆರಡು ಮಾತು ಅಗತ್ಯ ಎನಿಸುತ್ತಿದೆ. ಹಾಗೆ ನೋಡಿದರೆ,  ನಮ್ಮಲ್ಲಿ   ದಲಿತ ಸಾಹಿತ್ಯ ತನ್ನದೇ ಆದ ನೆಲೆ ಕಂಡುಕೊಂಡಿದ್ದು ೧೯೭೦ ಸುಮಾರಿಗೆ ಎಂದು ಹೇಳಬಹುದು.ದಲಿತ ಜನಾಂಗದ ವಿರುದ್ದ ಆಗುತ್ತ ಬಂದಿರುವ, ಅನ್ಯಾಯ, ಅತ್ಯಾಚಾರದ ವಿರುದ್ಧ ಸಿಡಿದೆದ್ದು ನಡೆದ ಹೋರಾಟವನ್ನೇ ಕನ್ನಡ ಸಾಹಿತ್ಯ ಬಂಡಾಯ ಚಳುವಳಿ ಎಂದು ಗುರುತಿಸಲಾಯಿತು. ಮತ್ತು ಜನಾಂಗದ ವಿರುದ್ಧ ಉಂಟಾದ ದಬ್ಬಾಳಿಕೆಗಳು ಅಕ್ಷರರೂಪ ಪಡೆದುಬಂದ ಸಾಹಿತ್ಯವೇ ದಲಿತ ಸಾಹಿತ್ಯ ಎನಿಸಿಕೊಂಡಿತು.ಇನ್ನೂ ಹೇಳುವದಾದರೆ,ದಲಿತ ಸಾಹಿತ್ಯದ ಕುರುಹು ನಮಗೆ ೧೧ ನೆಯ ಶತಮಾನದಲ್ಲಿ ಸಿಗುತ್ತವೆ.ಕಲ್ಯಾಣ ಕ್ರಾಂತಿಯ ತಳಹದಿ,ದಲಿತ ಬಂಡಾಯ ಸಾಹಿತ್ಯದ ನಾಂದಿ ಎಂದೇ ಹೇಳಬಹುದು.ತೆಲುಗಿನ ವಿಪ್ಲವ ಸಂಘಟನಕಾರರಾದ,ಶ್ರೀ ವರವರರಾವ ಹೇಳಿದ ಮಾತೊಂದು ನೆನಪಿಗೆ ಬಂತು.” ವಿಪ್ಲವ ಸಂಘಟನೆಯ ಮೂಲ ಬೇರುಗಳನ್ನು ನಾವು  ಬಸವಣ್ಣನವರ ವಿಚಾರಧಾರೆ ಯಲ್ಲಿ ಕಾಣುತ್ತೇವೆ ” ಅಂದಿನ ದಿನಗಳಲ್ಲಿಯ ‘ಸಾಯುಧ ಪೋರಾಟ’ ವಿರಸಂ ಸ್ಥಾಪನೆ,ಜನನಾಟ್ಯಮಂಡಲಿ,ದಿಗಂಬರ ಕವಿಗಳು, ಹೀಗೆ ಎಲ್ಲವೂ ಆಂಧ್ರ-ತೆಲಂಗಾಣಗಳಲ್ಲಿ ನಡೆದ ಹೋರಾಟಗಳು ನೆನಪಿಗೆ ಬರುತ್ತವೆ..ಕನ್ನಡ ಸಾಹಿತ್ಯ ಸಂದರ್ಭಕ್ಕೆ ಬಂದಾಗ, ಕುವೆಂಪು,ಕಾರಂತ ಮುಂತಾದವರು ತಮ್ಮಕೃತಿಗಳಲ್ಲಿ ಈ ಶೋಷಣೆಯ ವಿರುದ್ದ ದನಿ ಎತ್ತಿ ದಲಿತ ಸಾಹಿತ್ಯಕ್ಕೆ ನಾಂದಿ ಹಾಡಿದರು. ನಂತರದ ದಿನಗಳಲ್ಲಿ ಬರಗೂರು ರಾಮಚಂದ್ರಪ್ಪ,ದೇವನೂರು ಮಹದೇವ,ಚೆನ್ನಣ್ಣ ವಾಲಿಕಾರನಂತವರು ಇದಕ್ಕೆ ಒಳ್ಳೆಯ ತಿರುವು ನೀಡಿದರು.   ಬಂಡಾಯ ಸಾಹಿತ್ಯ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿ ಇರುವಾಗ,ದಲಿತರು ಬರೆದದ್ದೇ ದಲಿತ ಸಾಹಿತ್ಯ ಎನ್ನುವ ವಾದವೂ ಕೇಳಿ ಬಂದಿತು. ಅದಿಲ್ಲಿ ಬೇಡ. ಮುನ್ಷಿ ಪ್ರೇಮಚಂದರ ‘ಗೋದಾನ’ವೂ  ಇದೇ ವಿಷಯವನ್ನು ಪ್ರತಿಪಾದಿಸಿರುವುದು ನೋಡಿದಾಗ ಇಂತಹ ಬದುಕು ಮತ್ತದರ ವಿರುದ್ಧದ ದನಿ ದೇಶಾದ್ಯಂತ ಒಕ್ಕೊರಲಿನಿಂದ  ಸಾಗಿ ಬಂದಿದೆ ಇಂದಿಗೂ ಅದು ಕೇಳಿ ಬರುತ್ತಲೇ ಇದೆ. ಎಂದೇ ಹೇಳಬಹುದು ಕ್ರಿ.ಶ.೧೯೩೬ ರಲ್ಲಿದ್ದ ದೇಶದ ಪರಿಸ್ಥಿತಿಗಳಾದ,ಜಮೀನುದಾರಿ, ವಸಾಹತು ಶಾಹಿ,ಹೊಸದನ್ನು ಒಪ್ಪಿ ಕೊಳ್ಳದ, ಹಳೆಯದನ್ನೂ ಬಿಡಲಿಚ್ಛಿಸದ,ಹಮ್ಮಿನ ವಿಲಾಸೀ ಜೀವನಕ್ಕೆ ಒಗ್ಗಿಹೋದ,ಊರ ಜಹಗೀರದಾರರುಗಳಾದ, ರಾಜಾಸಾಬ್, ಬಾಪುಸಾಬ್, ಅವರಿಗೆ ಸಾಲಕೊಟ್ಟು ಆ ಹಣದಲ್ಲಿಯೇ,ಜಹಗೀರದಾರಗಳೊಂದಿಗೆ, ವಿಲಾಸಿ ಜೀವನ ನಡೆಸುವ ಪಟ್ಟಣವಾಸಿಗಳು. ಜಹಗೀರದಾರರರ  ಬಾಲ ಬಡುಕರಾಗಿ,ಅವರ ಹೆಸರಿನಲ್ಲ ರೈತಾಪಿ ಜನಗಳ ಶೋಷಣೆ ಮಾಡುತ್ತ ಸಿರಿವಂತ ರಾಗಿ ಬೆಂದ ಮನೆಯ ಗಳ ಹಿರಿದು ಕೊಳ್ಳಲು ಸದಾ ಅತೀ ದುಷ್ಟ ಮತ್ತು ಅಮಾನವೀಯ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ,  ತಿಪ್ಪಣ್ಣಾಚಾರ,ವೆಂಕಪ್ಪ ಕುಲಕರ್ಣಿ,ಸೀನಪ್ಪ ಸೆಟ್ಟಿ ಹೀಗೆ  ಸ್ವಾತಂತ್ರ ಪೂರ್ವ ಬದುಕಿನ ಭರ್ಝರಿ  ವಸ್ತು ಮತ್ತು ಹಿನ್ನೆಲೆ ಗೋದಾನಕ್ಕಿದೆ. ನಾಟಕದ ಮುಖ್ಯ ಪಾತ್ರಧಾರಿ ನಿಂಗಪ್ಪನ ಸುತ್ತ ತಿರುಗುವ ಗೋದಾನ ನಾಟಕದ ಈ ನಾಯಕ ನನ್ನು ಶೋಷಿಸದವರೇ ಇಲ್ಲ ಎನ್ನುವುದು ಸರಿ .ಆದರೂ ಅವನು ತಾನು ನಂಬಿದ ಒಳ್ಳೆಯ ಗುಣಗಳನ್ನು ಎಂತಹ ಪರಿಸ್ಥಿತಿಯಲ್ಲೂ ರಾಜಿ ಮಾಡಿಕೊಳ್ಳದ ಉಸಿರಿರುವತನಕ ಮರ್ಯಾದೆಗೆ ಮಹತ್ವಕೊಟ್ಟ ವ್ಯಕ್ತಿ ನಿಂಗಪ್ಪ. ಅಂಕದ ಪರದೆ ಮೇಲೇರುತ್ತಿದ್ದಂತೆ ,ನಿಂಗಪ್ಪನ ಸಂಭಾಷಣೆಯೊಂದಿಗೇನೆ ನಾಟಕ ಆರಂಭವಾಗುತ್ತದೆ. ‘ನಿಂಗ ತಿಳಿಲಾರದ್ರಾಗ ತಲೀ ಹಾಕಾಕ ಬರಬ್ಯಾಡ,ಸುಮ್ಕ ನನ ಕೋಲು ಕೊಡು,ನಿನ್ನ ಕೆಲಸಾ ಏನೈತಿ ಆಟು ಮಾಡು,ನಾನು ನಾಕ ಮಂದ್ಯಾಗ ಓಡ್ಯಾಡತೀನಿ ಅಂತ ಜೀವಂತ ಅದೀನಿ.ಇಲ್ಲಾಂದ್ರ ನಮ್ಮ ಗತಿ ಏನಾಕ್ಕಿತ್ತೋ ಅಂತ ಆ ಶಿವಗss ಗೊತ್ತು.ಊರಾಗ ಇಷ್ಟು ಜನ ಅದಾರು,ಒಬ್ಬರ ಮ್ಯಾಗ ಜೋರು ಜಬರ ದಸ್ತಿ ಇಲ್ಲ. ಒಬ್ಬರ ಮ್ಯಾಗ ಯಾವ ಖಟ್ಲೇನೂ ಇಲ್ಲ.ಒಬ್ಬರ ಕೈ ಕೆಳಗ ದುಡಿತೀವಿ ಅಂದಮ್ಯಾಕ ಅವ್ರ ಕಾಲ ಹಿಡ್ಕೊಂಡು ಬದಕೊದೆ ಪಾಡss” ಇದು ಕಕ್ಕೇರಿಯವರಿಗೆ ಭಾಷೆಯ ಮೇಲಿರುವ ಬಿಸುಪು.ಇಡೀ 390 ಪುಟಗಳುದ್ದಕ್ಕೂ ಒಂದೇ ಹದ ಒಂದೇ ಸಂಯಮ. ಆಕಳ ಹೊಟ್ಟೆಯಲ್ಲಿ ಅಚ್ಛೇರು ಬಂಗಾರ ಎನ್ನುವ ಮಾತಿನಂತೆ, ಆಕಳ ಮಹತ್ವವನ್ನು ಪ್ರಾರಂಭದ ದೃಶ್ಯವೇ ನಮಗೆ ಮನನ ಮಾಡಿಕೊಡುತ್ತದೆ.ಹೆಚ್ಚು ಹಣ ಬರುವದೆಂದು ತಿಳಿದರೂ ಸವ್ಕಾರನಿಗೆ ಅದನ್ನು ಮಾರಲು,ನಿರಾಕರಿಸುವ ಲಕ್ಷ್ಮಣ ನಲ್ಲಿ ಗೋಸಂಪತ್ತಿನ ಮಹತ್ವತೆಯ  ಅರಿವಿದೆ. ‘ ಅಂವಗೆಲ್ಲಿ ಆಕಳಾ ಬೇಕಾಗೇತಿ,ಅದನ್ನ ಒಯ್ದು,ಯಾರೆರೆ ಆಫಿಸರರ್ಗೊಳಿಗೆ ಕಾಣಿಕಿ ಕೊಡತಾನ.ಅವ್ರಿಗೆ ಗೋ ಸೇವಾ ಮಾಡೋದೆಲ್ಲಿ ಬೇಕಾಗೇತಿ ? ಅವ್ರಿಗೆ ರಕ್ತ ಹೀರೊದೊಂದು ಗೊತ್ತೈತಿ.’………..ನಮಗೂ ಧರ್ಮ ಕರ್ಮ ಅನ್ನೋದು ಐತಿ……..ಅದರ ಸೇವಾ ಮಾಡತಿss,ಅದಕ್ಕ ಪ್ರೀತಿ ತೊರುಸ್ತಿss ಆಗ ಗೋಮಾತ ನಮಗ ಆಸೀರ್ವಾದ ಮಾಡ್ಯಾಳು’.ಗೋದಾನ ಶೀರ್ಷಿಕೆಗೆ ಶಿಖರ ಪ್ರಾಯದಂತಿರುವ ಈ ಮಾತಿನ ಸುತ್ತಮುತ್ತ ನಾಟಕ ದ ವಸ್ತು ತಿರುಗುತ್ತದೆ. ನಿಂಗಪ್ಪ, ಒಕ್ಜಲುತನ,ಗೇಣಿ,ಕಂದಾಯ,ಸಾಲ,ಜಮೀನು ಒತ್ತೆ,ಊರ ಜಹಗೀರದಾರ,ಮುಂತಾದವುಗಳ ಸುಳಿಯಲ್ಲಿ ಸಿಲುಕಿ ಗಿರಕಿ ಹೊಡೆಯುತ್ತ ತನ್ನ ಬಡತನದಲ್ಲಿ ಬೆಂದು ಬಸವಳಿದರೂ,ಮರ್ಯಾದೆಯನ್ನು,ರಕ್ಷಸಿಕೊಳ್ಲುತ್ತ,ಬೇರೆಯವರ ಕಷ್ಟ ಕೋಟಲೆಗಳನ್ನು,ತನ್ನದೆಂದೇ ತಿಳಿದು ಅವರಿಗೆ ಸಹಾಯ ಹಸ್ತ ಚಾಚುತ್ತ, ಸುಖವನ್ನು ಕಾಣದೆ ಕೊನೆಯುಸಿರೆಳೆಯುತ್ತಾನೆ ಅವನ ಕ್ಷಮೆ ಗುಣಕ್ಕೆ ಅನೇಕ ದೃಷ್ಟಾಂತಗಳು ನಾಟಕದ ಉದ್ದಕ್ಕೂ ಸಿಗುತ್ತವೆ . ತನ್ನ ಆಕಳಿಗೆ ಒಡಹುಟ್ಟಿದ ತಮ್ಮನೇ ವಿಷಹಾಕಿ ಕೊಂದರೂ ಅವನನ್ನು  ಕ್ಷಮಿಸುವ ದೊಡ್ಡ ಗುಣ,ಅಪರಾಧಿ ಭಾವನೆಯಿಂದ ಊರಿನಿಂದ ಪರಾರಿಯಾದ ತಮ್ಮನ ಹೆಂಡತಿ ದಯನೀಯ ಸ್ಥಿತಿ ಹೊಂದಿದಾಗ ಅವಳನ್ನು ರಕ್ಷಿಸುವುದು, ಸ್ವಂತ ಮಗನೇ ಪರರ ಹೆಣ್ಣನ್ನು.  ಮದುವೆಯಾಗಿ ತಂದು ಮನೆಯಲ್ಲಿ ಬಿಟ್ಟು ಓಡಿ ಹೋದಾಗ ಅರ್ಧ ಊರಿನ ಜನವೇ ಎದುರು ನಿಂತರೂ ಅವಳಿಗೆ ಆಶ್ರಯ ನೀಡಿ ರಕ್ಷಿಸುವುದು,  ಸಂಗತಿಗಳು ಬಹಳ ಪರಿಣಾಮಕಾರಿಯಾಗಿವೆ. ಇಡೀ ಊರು ಒಂದಾಗಿ ನಿಂಗಪ್ಪ ನನ್ನು ಶೊಷಿಸಿ ಅವನನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದರೂ ,ಎದೆ ಕೊಟ್ಟು ನಿಲ್ಲುವ ದೃಶ್ಯ ಮನ ಮಿಡಿಯುವಂತಿದೆ.ಹಾಗೆಯೇ ದಾನವ್ವನ ಪಾತ್ರ ಸಹ,ಇಡೀನಾಟಕದ ಜೀವಾಳವೆನ್ನುವಂತಿದೆ.ನಿಂಗಪ್ಪನನ್ನು ಪ್ರತಿ ಕಷ್ಟದ ಸಂದರ್ಭದಲ್ಲಿ ಅವನಿಗೆ ಹೆಗಲುಕೊಟ್ಟು ನಿಲ್ಲುವ ಮತ್ತು ಅವನಿಗೆ ಮೋಸ ಮಾಡಿದವರ ಜೊತೆ ಅವರು ಯಾರೇ ಇರಲಿ ಅವರೊಂದಿಗೆ ಜಗಳ ಕಾಯುವ ದಾನವ್ವನ ಪಾತ್ರವೂ ನಮ್ಮ ಮನ ಗೆಲ್ಕುವಂತೆ ಚಿತ್ರಿತವಾಗಿದೆ. ಅವಳ ಹೇಳುವ ಸಂಭಾಷಣೆಯನ್ನು ನಾಟಕಕಾರರು ಅಷ್ಟೇ ಹರಿತವಾಗಿ ರಚಿಸಿದ್ದಾರೆ.ಒಂದು ತುಣುಕು: ” ನಾ ಒಂದು ಕಾಳೂ ಕೊಡಾಂಗಿಲ್ಲ.ಒಂದು ಪೈ ದಂಡಾ ಕೊಡಾಂಗಿಲ್ಲ.ದಮ್ಮಿದ್ದವರು ಬಂದು ನನ್ನ ಕಡಿಂದ ವಸೂಲ ಮಾಡಲಿ.ಛಲೋ ಆಟಾ ಹೂಡ್ಯಾರss ದಂಡದ ನೆವಾ ಮಾಡಿss ನಮ್ಮ ಆಸ್ತಿನೆಲ್ಲಾ ಕಸಗೊಂಡು ಬ್ಯಾರೋರಿಗೆ ಕೊಟ್ಟ ಬಿಡಬೌದು ಅಂತ ವಿಚಾರ ಮಾಡಿರೇನೋ ? ನಮ್ಮ ಹೊಲಾ ತ್ವಾಟಾ ಎಲ್ಲ ಮಾರಿ ಮಸ್ತಿ ಮಾಡಬೌದ ಅನಕೊಂಡೀರೆನೋ ? ಆದ್ರ ಈ ದಾನವ್ವ ಜೀವಂತ ಇರೋತನ ಅದ್ಯಾವ್ದೂ ನಡಗುಡಾಂಗಿಲ್ಲ……” ಎನ್ಉವ ದಾನವ್ವ ನಮಗೆ ಹೋರಾಟದ ಬದುಕಿನ ಮಹಾನ ಮಹಿಳೆ ಎನಿಸುತ್ತಾಳೆ.  ಉಳಿದೆಲ್ಲ ಪಾತ್ರಗಳು ಪೂರಕ ಪಾತ್ರಗಳಾಗಿ ಶಹರಿನ ವಿಲಾಸೀ ಜೀವನವನ್ನು  ಆದಷ್ಟೂ ಬೇರೆಯವರ ಹಣದಲ್ಲಿ ಚೈನಿ ಮಾಡುವ ಪಾತ್ರಗಳಾಗಿ ,ಒಂದು ರೀತಿಯ ಒಣಹಮ್ಮಿನಲ್ಲಿ ಬದುಕುವಂತೆ ಕಾಣುತ್ತವೆ. ಕಕ್ಕೇರಿವರ ಒಂದು ವಿಶೇಷತೆ ಎಂದರೆ ಇಡೀ ನಾಟಕ,ಮತ್ತು ಮೂಲ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳನ್ನು ಒಂದು ಚೂರೂ ಮೂಲಕ್ಕೇ ಚ್ಯತಿ ಬಾರದಂತೆ ಮತ್ತು ನಮ್ಮ ಗ್ರಾಮೀಣ ಸಂಸ್ಕೃತಿಗೆ ಸರಿದೂಗುವಂತೆ ಮಾರ್ಪಾಟು ಮಾಡಿಕೊಂಡಿದ್ದು.ನಾಟಕದ ಎಲ್ಲಾ ವ್ಯವಹಾರಗಳು,  ಮತ್ತು ಘಟನೆಗಳು  ನಮ್ಮ ಊರಿನ ನಮ್ಮ ಕಣ್ಣೆದುರೇ ನಡೆಯತ್ತವೆ ಎಂಬಂತೆ ಹೆಣೆಯಲ್ಲಟ್ಟಿವೆ. ಅದಕ್ಕಾಗಿ ಅವರು ಪಟ್ಟ ಶ್ರಮ,ಭಾಷೆಯ ಬಳಕೆಯಲ್ಲಿ ಕಾಪಡಿಕೊಂಡು ಬಂದಿರುವ ಸಂಯಮ ಅಚ್ಚರಿ ಪಡುವಂತದ್ದು.ಅಚ್ಚುಕಟ್ಟಾದ ಮತ್ತು ದೀರ್ಘವಾಗಿದ್ದರೂ ಓದಿಸಿಕೊಂಡು ಹೋಗುವ ಶಕ್ತಿ ತುಂಬಿರುವ ನಾಟಕಕಾರರು ,ಓದುಗರ ಮನಸ್ಸಿನ ಮೇಲೆ  ದಟ್ಟ ಪರಿಣಾಮ ಬೀರುವ ಸಂವೇದನಾ ಶೀಲ ನಾಟಕವಾಗಿದೆ.ಇದರಿಂದಾಗಿ  ಸರ್ವ ರೀತಿಯಿಂದ  ಅಭಿನಂದನಾರ್ಹರಾಗುತ್ತಾರೆ. ಕೃತಿಗೆ ಬಹುಮೌಲಿಕ ಮುನ್ನುಡಿ ಬರೆದ ಸಿ.ಬಸವಲಿಂಗಯ್ಯ ನವರು ಒಂದು‌ಮಾತು ಹೇಳುತ್ತಾರೆ.’ ಮೂರು ನೆಲೆಯಲ್ಲಿ ಪಾತ್ರಗಳು,ಸಾಮಾಜಿಕ,ಆರ್ಥಿಕ, ಸಾಂಸ್ಕೃತಿಕ ನಡಾವಳಿಗಳಲ್ಲಿ ವಿಭಜನೆಗೊಂಡಿರುವುದು,……ಉತ್ತರ ಕರ್ನಾಟಕದಲ್ಲಿಯೇ ಹುಟ್ಟಿದೆ’ ಎಂಬ ಮಾತಿಗೆ ನಾನೂ ದನಿಗೂಡಿಸುತ್ತೇನೆ.. ಅವರೇ ಹೇಳುವಂತೆ ” ರಂಗ ಪ್ರಯೋಗಕ್ಕೆ ಅಳವಡಿಸುವಾಗ,ಕೆಲವು ದೀರ್ಘ ದೃಶ್ಯಗಳನ್ನು ಸಂಕ್ಷಿಪ್ತ ಗೊಳಿಸಿಕೊಳ್ಳುವುದು ಪ್ರೇಕ್ಷಕರ ಸಹನೆಯ ದೃಷ್ಟಿಯಿಂದ ಅವಶ್ಯಕವಾಗಿದೆ. ” ಎನ್ನುವ ವಿಚಾರಕ್ಕೆ ಎರಡು ಮಾತಿಲ್ಲ ಅದರ ರಂಗಪ್ರಯೋಗ ನೋಡುವ ಕುತೂಹಲ ನನಗೂ ಇದೆ. **************************************************************                         ಗೋನವಾರ ಕಿಶನ್ ರಾವ್

ಆಡುಭಾಷೆಯ ಸವಿ ಗೋದಾನ. Read Post »

ಪುಸ್ತಕ ಸಂಗಾತಿ

ಇ-ಬುಕ್ ಬಿಡುಗಡೆ

ಇ-ಬುಕ್ ಬಿಡುಗಡೆ ಮೂಚಿಮ್ಮ” ಕಥಾಸಂಕಲನ ಬಿಡುಗಡೆಯ ಕಾರ್ಯಕ್ರಮ ಕನ್ನಡದ ಯುವ ತಲೆಮಾರಿನ ಭರವಸೆಯ ಕಥೆಗಾರರಾಗಿ ಹೊರಹೊಮ್ಮುತ್ತಿರುವ ಡಾ.ಅಜಿತ್ ಹರೀಶಿ ಅವರ “ಮೂಚಿಮ್ಮ” ಕಥಾ ಸಂಕಲನ ಇಬುಕ್, ಆಡಿಯೋ ಬುಕ್ ಹಾಗೂ ಮುದ್ರಿತ ರೂಪದಲ್ಲಿ ಮೈಲ್ಯಾಂಗ್ ಪ್ರಕಾಶನ ಹೊರ ತಂದಿದೆ. ಅದರ ಬಿಡುಗಡೆ ಕಾರ್ಯಕ್ರಮ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀ.ರವೀಂದ್ರ ಭಟ್ಟರು ಕನ್ನಡಕ್ಕೆ ಅಜಿತ್ ಒಬ್ಬ ಸೂಕ್ಷ್ಮ ಬರಹಗಾರರಾಗಿ ದಕ್ಕುತ್ತಿದ್ದಾರೆ. ಅವರ ಕೃತಿಗಳು ಇನ್ನಷ್ಟು ಸಮಾಜಮುಖಿಯಾದ ತಲ್ಲಣಗಳಿಗೆ ಕನ್ನಡಿ ಹಿಡಿಯುವಂತೆ ರೂಪುಗೊಳ್ಳಲಿ ಅನ್ನುವ ಆಶಯ ವ್ಯಕ್ತಪಡಿಸಿದರು. ಇನ್ನೊಬ್ಬ ಅತಿಥಿ ಸಾಹಿತಿ ಶ್ರೀ ಜೋಗಿಯವರು ಮಾತನಾಡಿ ಕನ್ನಡಕ್ಕೆ ಹೊಸ ಓದುಗರನ್ನು ಕರೆತರುವ ಯುವ ಬರಹಗಾರರು ಹೆಚ್ಚಬೇಕು. ಅಜಿತ್ ಅವರ ಕೃತಿಗಳಲ್ಲಿ ಆ ಸತ್ತ್ವವಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಲೇಖಕ ಅಜಿತ್ ಹರೀಶಿ ಹಾಗೂ ಮೈಲ್ಯಾಂಗ್ ಸಂಸ್ಥೆಯ ಮುಖ್ಯಸ್ಥರಾದ ಪವಮಾನ್ ಅಥಣಿ ಅವರು ಹಾಜರಿದ್ದರು. ಮೂಚಿಮ್ಮ ಪುಸ್ತಕ ಇಬುಕ್, ಆಡಿಯೋ ಮತ್ತು ಪ್ರಿಂಟ್ ಮೂರೂ ಆವೃತ್ತಿಯಲ್ಲಿ www.mylang.in ಮೂಲಕ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಿಮ್ಮ,ವಸಂತ ಶೆಟ್ಟಿ,ಮೈಲ್ಯಾಂಗ್ ಬುಕ್ಸ್ ಪರವಾಗಿಬೆಂಗಳೂರು+91-9986026994vasant@mylang.in ********************************************************

ಇ-ಬುಕ್ ಬಿಡುಗಡೆ Read Post »

You cannot copy content of this page

Scroll to Top