ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಒಂಟಿತನಕೆ ಆಸರೆ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಒಂಟಿತನಕೆ ಆಸರೆ” ಒಂಟಿ ಹೃದಯದ ಮೂಲೆಮೂಲೆಯಲಿ  ಕತ್ತಲು ಕವಿದಾಗ  ಯಾರೋ ಸಣ್ಣ ದೀಪ   ಹಚ್ಚಿದ ಭಾವ  ಆಸರೆಯಾಗಿ ಬರುವುದು ನೋಡಾಗ ಕಣ್ಣೀರ ಹನಿಯ ಜೊತೆ ಮಾತನಾಡುವ  ಗಾಳಿಯ ಸ್ಪರ್ಶವೇ ಸಾಂತ್ವನ  ಮೌನದ ನಡುವೆ ಬೆಳಕು ಹರಡುವ  ಭರವಸೆಯದೇ ಒಂದು ಬಂಧನ ನೀ ಒಂಟಿಯಲ್ಲ, ಜಗವೇ ಜೊತೆಯಿದೆ  ಚುಕ್ಕಿಗಳು ಸಾಕ್ಷಿ ನಮ್ಮ ಪಯಣಕೆ  ನಿನ್ನ ನೋವಿಗೂ ಒಂದು ಅರ್ಥವಿದೆ  ಬದುಕು ಚಿಗುರುವುದು ವಸಂತ ನಿನಗಾಗಿ ಕಾಲ ನೋವನ್ನು ಮಾಯಿಸುವ ಮಂತ್ರ  ನಾಳೆಯೆಂಬ ಕನಸೇ ಆಸರೆ  ಎದ್ದು ನಿಂತರೆ ಸಾಕು ಗೆಳತಿ  ಒಂಟಿತನವೂ ತಾನೆ ದೂರ ಸರಿವ ಕರೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಒಂಟಿತನಕೆ ಆಸರೆ” Read Post »

ನಿಮ್ಮೊಂದಿಗೆ

ಸುನಂದ ಅರುಣ್ ಕುಮಾರ್ ಗೋಸಿ ಅವರಿಂದ”ದೇವರ ದಾಸಿಮಯ್ಯ ಅವರ ವಚನಗಳ ಪ್ರಸಾರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ” ಗೊರೂರು ಅನಂತರಾಜು

ವಚನ ಸಂಗಾತಿ ಗೊರೂರು ಅನಂತರಾಜು ಸುನಂದ ಅರುಣ್ ಕುಮಾರ್ ಗೋಸಿ  “ದೇವರ ದಾಸಿಮಯ್ಯ ಅವರ ವಚನಗಳ ಪ್ರಸಾರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ” ಶ್ರೀಮತಿ ಸುನಂದ ಅರುಣ್ ಕುಮಾರ್ ಗೋಸಿ ಅವರು ಆದ್ಯ ವಚನಕಾರ ದೇವರ ದಾಸಿಮಯ್ಯನವರ ಎಲ್ಲಾ 176 ವಚನಗಳನ್ನು ಪ್ರಸಿದ್ಧ ಗಾಯಕ ಗಾಯಕಿಯರಿಂದ ಹಾಡಿಸಿ ಭಾವಾಥ೯ ಸಹಿತ ದೃಶ್ಯಿಕರಿಸಿ ಯೂ ಟ್ಯೂಬ್ ನಲ್ಲಿ ಹಾಕಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದಾರೆ. ಶ್ರೀಮತಿ ಸುನಂದ ಅರುಣ್ ಕುಮಾರ್ ಗೋಸಿಯವರ ತಂದೆ ಶೇಷಾದ್ರಿ ಮತ್ತು ತಾಯಿ ಕಮಲಮ್ಮನವರು. ಇವರು ಬೆಂಗಳೂರಿನ ನಿವಾಸಿಗಳಾಗಿದ್ದು, ಪತಿ ಅರುಣ್ ಕುಮಾರ್ ರವರು ಇಂಜಿನಿಯರಿಂಗ್ ವೃತ್ತಿಯಲ್ಲಿ ಸೇವೆ ಸಲ್ಲಿಸಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಮಕ್ಕಳಾದ ಆಕಾಶ್, ಮಹೇಶ್, ಸೊಸೆ ಐಶ್ವರ್ಯ, ಸ್ನಾತಕೋತ್ತರ ಪದವಿ ಮುಗಿಸಿ, ಮೊಮ್ಮಗ ಆವಿಯನ್ ಅಮೇರಿಕದಲ್ಲಿ ನೆಲಿಸಿದ್ದಾರೆ. ಇವರು ಸಮಾಜದ ಕಳಕಳಿಯುಳ್ಳವರಾಗಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜದ ಏಳಿಗೆಯ ಸದುದ್ದೇಶದಿಂದ ದೇವಾಂಗ ಇತಿಹಾಸವನ್ನು ಸಂಗ್ರಹಿಸಿ, ತಾವೇ ನಿರ್ಮಿಸಿದ ಗೋಸಿ ಯೂನಿವರ್ಸ ( Gosi Universe ) ಎಂಬ ಅಂತರ್ಜಾಲ ತಾಣದಿಂದ (Website) ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತು ದೇವಲ ಮಹರ್ಷಿ ಹಾಗು ದಾಸಿಮಯ್ಯನವರ ಜೀವನ ಚರಿತ್ರೆಯನ್ನು ವಿಕಿಪೀಡಿಯದಲ್ಲಿ ದಾಖಲಿಸಿದ್ದಾರೆ.ವಚನ ಸಾಹಿತ್ಯಕ್ಕೆ ಭದ್ರಬುನಾದಿಯನ್ನು ಹಾಕಿ ಬಸವಾದಿ ಪ್ರಮಥರಿಗೆ ಮಾರ್ಗದರ್ಶನ ಮಾಡಿದ ಆದ್ಯ ವಚನಕಾರ, ವಚನ ಬ್ರಹ್ಮ , ಶ್ರೀ ದೇವರ ದಾಸಿಮಯ್ಯನವರು ರಚಿಸಿರುವ ಎಲ್ಲಾ 176 ವಚನಗಳನ್ನು ರಾಗ ಸಂಯೋಜನೆ ಮಾಡಿಸಿ, ಮೊಟ್ಟಮೊದಲ ಬಾರಿಗೆ “ವಚನ ಬ್ರಹ್ಮನ ವಚನಾಮೃತ” ಎಂಬ ನಾಮದಿಂದ, ವಚನ, ಗಾಯನ, ಮತ್ತು ಭಾವಾರ್ಥ ಸಹಿತ ದೃಶ್ಯೀಕರಿಸಿ, ಸಾಹಿತ್ಯ ಲೋಕ ಹಾಗೂ ಸಮಾಜಕ್ಕೆ ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಲೋಕ ಕಲ್ಯಾಣಾರ್ಥಕ್ಕಾಗಿ ನಿರ್ಮಿಸಿದ ಈ ಮಹತ್ಕಾರ್ಯವನ್ನು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅವರು ದಾಖಲಿಸಿ ಸನ್ಮಾನಿಸಿದ್ದಾರೆ.ಇದರ ಸಂಪೂರ್ಣ ನಿರ್ದೇಶನ ಹಾಗೂ ನಿರ್ಮಾಣವನ್ನು, ಅವರ ಕುಟುಂಬದ ಸಹಕಾರದೊಂದಿಗೆ ಲೋಕಾರ್ಪಣೆ ಮಾಡಿ.ಈ ಎಲ್ಲಾ ವಚನಗಳನ್ನು ನಿರಂತರವಾಗಿ ವೀಕ್ಷಿಸಲು, Gosi Universe, You tube Channel ನಲ್ಲಿ ಪ್ರಸಾರ ಮಾಡಿರುತ್ತಾರೆ. ಹಾಗು ಮೊಟ್ಟ ಮೊದಲ ಬಾರಿಗೆ ದಾಸಿಮಯ್ಯ ವಚನಗಳನ್ನು, ದೂರದರ್ಶನ ಚಂದನ ವಾಹಿನಿಯಲ್ಲಿ ಕೂಡ ಪ್ರಸಾರ ಮಾಡಿಸಿರುತ್ತಾರೆ. ಇವರ ಈ ಮಹತ್ಕಾರ್ಯವನ್ನು ಗುರುತಿಸಿ ಹಲವಾರು ಸಂಘ – ಸಂಸ್ಥೆಗಳು ಪ್ರಶಸ್ತಿ ಸನ್ಮಾನಗಳನ್ನು ನೀಡಿ ಗೌರವಿಸಿವೆ. ಮೇಡಂ ಕುಟುಂಬದ ಈ ಮಹತ್ಕಾರ್ಯ ಸಮಾಜ ಮೆಚ್ಚುವಂತಹದ್ದಾಗಿದೆ. ಗೊರೂರು ಅನಂತರಾಜು, ಹಾಸನ9449462879ವಿಳಾಸ: ಹುಣಸಿನಕೆರೆ ಬಡಾವಣೆ,29ನೇ ವಾರ್ಡ್, 3 ನೇ ಕ್ರಾಸ್,ಹಾಸನ – 573 201

ಸುನಂದ ಅರುಣ್ ಕುಮಾರ್ ಗೋಸಿ ಅವರಿಂದ”ದೇವರ ದಾಸಿಮಯ್ಯ ಅವರ ವಚನಗಳ ಪ್ರಸಾರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ” ಗೊರೂರು ಅನಂತರಾಜು Read Post »

ಕಾವ್ಯಯಾನ, ನಿಮ್ಮೊಂದಿಗೆ

ಟಿ.ಪಿ.ಉಮೇಶ್ ಅವರ ಕವಿತೆ “ಹೃದಯ ಒಡೆದಾಗ”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಹೃದಯ ಒಡೆದಾಗ” ಹೃದಯ ಒಡೆದಾಗ ಪ್ರತಿಯೊಂದು ನೋವು ಒಲವಿನ ಕಥೆಗಳಾಗಿ ಮೂಡಿ ಬರುತ್ತವೆ;ಬಿಸಿ ಕಣ್ಣೀರಿನ ಹನಿಹನಿಯಲ್ಲು ಕುದಿಮೌನದ ಮಾತುಗಳೆ ಹರಿದು ನಿಲ್ಲುತ್ತವೆ! ಈ ಅಶಾಂತಿ, ಈ ಕಾತರ, ಈ ಅಸಹಾಯತೆಯ ನೆರಳಲ್ಲಿ ನೀನಿರುವೆ ನನ್ನೊಲವೆ;ಪ್ರೇಮದ ಪ್ರತಿಯೊಂದು ಸಾಕ್ಷಿ ಜೀವಂತ ಬೆದರು ಬೊಂಬೆಯಾಗಿ ಕುಣಿಯುತ್ತವೆ ಜೀವವೆ! ಪ್ರೇಮ ಮೌನ ಹೊದ್ದ ತುಟಿಗಳ ಮೇಲೆ ನಿಂತಿರುವ ಅಪೂರ್ಣ ಕನಸುಗಳ ದಾರಿಯದು;ಪ್ರೇಮಿಯ ಹೃದಯದ ಪ್ರತಿ ಬಡಿತವು ಮಳೆಯಿರದ ನದಿಯ ಹರಿವಿನಂತೆ ಸಾಗುವುದು! ಹೃದಯದ ಪುಸ್ತಕದ ಪ್ರತಿಯೊಂದು ನೆನಪಿನ ಪುಟಗಳ ನವಿರಾಗಿ ತಿರುಗಿಸುವುದು!ಪ್ರೀತಿ ಏಕಾಂಗಿಯಾಗಿ ಖಾಲಿ ಪ್ರತಿಧ್ವನಿಯಲ್ಲಿ ದುಃಸ್ವಪ್ನಗಳ ಕಂಡಂತೆ ಊಳಿಡುವುದು! ಭಗ್ನ ಪ್ರೇಮಿಯಷ್ಟೇ ಏಕಾಂತದ ನಿಶ್ಶಬ್ದದಲ್ಲಿ ತನ್ನೊಂದಿಗೇ ಮಾತಾಡುವುದು!ಭ್ರಮೆಯ ಮಾತುಗಳ ಪ್ರತಿ ಪದದಲ್ಲೂ ನಿನ್ನದೇ ನೆನಪು ಮಧುರವಾಗಿ ತುಳುಕುವುದು! ನಿನ್ನ ನೆನಪು ಹುಟ್ಟು ಮಚ್ಚೆಯಂತೆ ಬರಡು ಹೃದಯವನ್ನು ಸುದೀರ್ಘವಾಗಿ ಆಳುವುದು!ಕಣ್ಣೀರೇ ಒಲವಿನ ಭಾಷೆಯಾಗಿ ಪ್ರೇಮದ ಸಿಹಿಕಹಿಯ ಮುಚ್ಚುಮರೆಯಿಲ್ಲದೆ ಹಾಡುವುದು! ಪ್ರೀತಿಸಿದ ಹೃದಯ ವಿಚಿತ್ರ ಯಾತನೆಯ ಘಮಲು ಅದರ ಸ್ವಭಾವವೇ ಅರ್ಥವಾಗದು;ವಿರಹದ ಗಾಯದ ಉರಿಯನ್ನೆಲ್ಲ ನಿನ್ನ ಪ್ರೀತಿಯ ಗುರುತಿನ ಸ್ಮಾರಕವಾಗಿ ಸ್ಮರಿಸುವುದು! ಟಿ.ಪಿ.ಉಮೇಶ್

ಟಿ.ಪಿ.ಉಮೇಶ್ ಅವರ ಕವಿತೆ “ಹೃದಯ ಒಡೆದಾಗ” Read Post »

ನಿಮ್ಮೊಂದಿಗೆ

ಅಶ್ಫಾಕ ಪೀರಜಾದೆ ಅವರ ಕವಿತೆ “ಕವಿ ಹೃದಯ ಹಾಡುತ್ತಿಲ್ಲ !”

ಕಾವ್ಯ ಸಂಗಾತಿ ಅಶ್ಫಾಕ ಪೀರಜಾದೆ “ಕವಿ ಹೃದಯ ಹಾಡುತ್ತಿಲ್ಲ !” ಈ ನಿಶ್ಶಬ್ಧದ ನಿಗೂಢ ಗರ್ಭದಿಂದಕೇಳಿ ಬರಬಹುದೆ ಸಣ್ಣದಾದ ಸದ್ದುಬಿಸಿ ಉಸಿರಿನ ಮಿಡಿತ ತಾಕಬಹುದೆಕಾಣಬಹುದೆ ಅಗೋಚರ ಸತ್ಯಎಲ್ಲ ಅಸ್ಪಷ್ಟ ಮಂಜು ಮುಸುಕು ನಾಲಿಗೆ ಸೀಳಿ ತಗೆದರೂ ಒಂದು ಮಾತು ಇಲ್ಲಮಿದುಳೆಲ್ಲ ತಡಕಾಡಿ ಬರೆದರೂ ಒಂದಕ್ಷರಆತ್ಮದ್ದು ಮೌನ ರೋಧನಮೋಡ ಕಟ್ಟದೆ ಮುಗಿಲಿನಿಂದಮರಭೂಮಿಗೆ ಮಳೆಯ  ಮುನ್ಸೂಚನೆಯೇ !ಒಳಗೊಳಗೆ ಶಾಂತ ಸುನಾಮಿ ಪೆನ್ನು ಪಾರ್ಶ್ವವಾಯು ಪೀಡಿತಮಿದುಳು ಖಾಲಿ ಕಾಗದ ಅಸ್ಖಲಿತ ಭಾವನೆಗಳ ಬಟಾ ಬಯಲುಮೋದಲಿನಂತೆ ಕೌದಿಯೊಳಗೆ ಕನಸು  ಮೊಟ್ಟೆಯಿಡುತ್ತಿಲ್ಲ ಮೊಳಕೆಯೊಡಿತ್ತಿಲ್ಲ ಕಾಳು ಮಡಿಕೆಯೊಳಗೆಪುಸ್ತಕದಲಿ ನವಿಲುಗರಿ ಈಗಮರಿ ಹಾಕುವುದು ಮರೆತಿದೆ ಬಸಿರಾಗುವುದಿಲ್ಲ ಭಾವನೆಗಳುಸ್ಪರ್ಶಕೆ ಮನಸ್ಸು ಸ್ಪಂದಿಸುತ್ತಿಲ್ಲಸಂವೇದನಾ ರಹಿತ ಹೃದಯಒಲವ ಕ್ಷಾಮ ಕಾಡುತಿದೆಖಾಲಿತ! ತಬ್ಬಲಿತನ!! ಯಾಕೋ ಗೊತ್ತಿಲ್ಲ ಇತ್ತೀಚೆಗೆಕತ್ತಲೆ ಕರಗುತ್ತಿಲ್ಲ ಸೂರ್ಯನ ಬೆಳಕಿಗೂಕವಿ ಹೃದಯ ಹಾಡುವುದು ನಿಲ್ಲಿಸಿದೆಸಂಭವಿಸು ಪುನರುತ್ಥಾನ  ಕಾಯುತಿರುವೆ ಮುಗಿಲಿನತ್ತ ಮುಖ ಮಾಡಿ ಅನ್ನದಾತನಂತೆತಮ್ಮವರೆಲ್ಲರನ್ನು ಕಳೆದುಕೊಂಡುಒಂಟಿಯಾಗಿ ಯದ್ಧ ವಿರಾಮಕೆ ಪ್ರಜೆಯಂತೆ.. ಅಶ್ಫಾಕ ಪೀರಜಾದೆ.

ಅಶ್ಫಾಕ ಪೀರಜಾದೆ ಅವರ ಕವಿತೆ “ಕವಿ ಹೃದಯ ಹಾಡುತ್ತಿಲ್ಲ !” Read Post »

ನಿಮ್ಮೊಂದಿಗೆ

ಶ್ರೀ ಹರಿಹರ ಶಿವಕುಮಾರ್‌ ಅವರ “ಅನನ್ಯ ಅಲ್ಲಮ” ಅವಲೋಕನ ಡಾ.ಶಶಿಕಾಂತ್‌ ಪಟ್ಟಣ

ಪುಸ್ತಕ ಸಂಗಾತಿ. ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಶ್ರೀ ಹರಿಹರ ಶಿವಕುಮಾರ್‌ “ಅನನ್ಯ ಅಲ್ಲಮ” ಅನನ್ಯ ಅಲ್ಲಮ ಉತ್ತಮ ಆಕರ ಗ್ರಂಥ ಲೇಖಕರು  ಶ್ರೀ ಹರಿಹರ ಶಿವಕುಮಾರಪ್ರಕಾಶಕರು ಹರಿವು ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರುಬೆಲೆ 180 ರೂಪಾಯಿವರ್ಷ 2026 ನಾಡಿನ ಹಿರಿಯ ಅನುಭಾವಿ ಚಿಂತಕರು ಸಾಹಿತಿಗಳೂ ಆದ ಶ್ರೀ ಹರಿಹರ ಶಿವಕುಮಾರ ಬೆಂಗಳೂರು ಇವರು ಹರಿವು ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಪ್ರಕಾಶಕರ ಮೂಲಕ ಅನನ್ಯ ಅಲ್ಲಮ ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿದ್ದು ವಚನ ಸಾಹಿತ್ಯದ ಮೌಲ್ಯವನ್ನು ಪಸರಿಸುವ ವೈಚಾರಿಕ ನೆಲೆಯಲ್ಲಿ ರೂಪಗೊಂಡ ಸಿದ್ಧಾಂತಗಳ ಚರ್ಚೆಗೆ ಅವಕಾಶ ಮಾಡಿಕೊಡುವ ಸಂಗ್ರಹಕ್ಕೆ ಯೋಗ್ಯವಾದ ಒಂದು ಸುಂದರ ಆಕರ ಗ್ರಂಥ. ಶ್ರೀ ಹರಿಹರ ಶಿವಕುಮಾರ ಬೆಂಗಳೂರು ಇವರು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನವರು.ವಚನ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಅಪರೂಪದ ಪ್ರಬುದ್ಧ ಪ್ರಾಮಾಣಿಕ ವ್ಯಕ್ತಿ.ಅನನ್ಯ ಅಲ್ಲಮ ಎಂಬ ಕೃತಿಯಲ್ಲಿ ಇವರು ಅಲ್ಲಮ ಪ್ರಭುಗಳ 75 ಸರಳ ಸ್ಥಲ ಕಟ್ಟಿನ ವಚನಗಳನ್ನು ಆಯ್ಕೆ ಮಾಡಿದ್ದಾರೆ. ಅಲ್ಲಮರ ವಚನ ವಿಶ್ಲೇಷಣೆ ಚಿಂತನೆ ನಿಜಕ್ಕೂ ಕಬ್ಬಿಣದ ಕಡಲೆ ಇದ್ದ ಹಾಗೆ. ಲೇಖಕರಿಗೂ ಅಲ್ಲಮರ ವಚನ ವಿಶ್ಲೇಷಣೆ ಒಂದು ಕಠಿಣ ಪರಿಶ್ರಮವೆಂದು ತಿಳಿದುಕೊಂಡು ತಮ್ಮದೇ ಆದ ಅನುಭವವನ್ನು ಸಂಕಲನದಲ್ಲಿಪದ ಅರ್ಥ ,ವಚನಾರ್ಥ, ಪದಪ್ರಯೋಗಾರ್ಥ ಎಂಬ ಮೂರು ಭಾಗಗಳಲ್ಲಿ ಮಾಡಿದ್ದು ವಾಚಾರ್ಥ ಗೂಢಾರ್ಥ ಲಕ್ಷಾರ್ಥಗಳ ಕಡೆಗೆ ಗಮನ ಕೊಟ್ಟಿದ್ದಾರೆ. ಅಲ್ಲಮರ ಬೆಡಗಿನ ವಚನಗಳು ಮತ್ತು ಅವುಗಳಲ್ಲಿರುವ ಪದಗಳಿಗೆ ಸಮಾನವಾದ ಅರ್ಥ ಹುಡುಕುವ ಪ್ರಯತ್ನ ಇವರದ್ದಾಗಿದೆ. ನಂತರ ಸಾಂದರ್ಭಿಕವಾಗಿ ಆ ಬೆಡಗಿನ ಪದಗಳ ಅರ್ಥವನ್ನು ಇಂದಿನ ಜಗತ್ತಿಗೆ ಅನುಗುಣವಾಗಿ ಸಮಯೋಚಿತವಾಗಿ ಅರ್ಥೈಸುವ ಇವರ ಶೈಲಿ ತುಂಬಾ ಚೆನ್ನಾಗಿದೆ. ಇವರ ನಿರಂತರ ಪರಿಶ್ರಮ ಹಾಗೂ ಶೃದ್ಧೆ ಅಲ್ಲಮರ ಬೆಡಗಿನ ವಚನಗಳನ್ನು ಸರಳವಾಗಿ ಅರ್ಥೈಸಲು ಒಂದು ಸುಂದರ ಆಕರ ಪುಸ್ತಕ ಕೃತಿಯನ್ನು ಲೋಕಾರ್ಪಣೆ ಮಾಡಿದ್ದು ಅತ್ಯಂತ ಅಪರೂಪದ ಪ್ರಬುದ್ಧ ಕಾರ್ಯವೆಂದೆನಿಸುತ್ತದೆ.ವಚನಗಳ ಅರ್ಥಗಳ ವಿವರಣೆ ಇನ್ನಷ್ಟು ವಿಸ್ತರಣೆಗೊಂಡಿದ್ದರೆ ಇನ್ನೂ ಹೆಚ್ಚಿನ ಸೊಗಡು ಎದ್ದು ಕಾಣುತಿತ್ತು. ಇದು ಶ್ರೀ ಶಿವಕುಮಾರ ಅವರ ಪ್ರಥಮ ಕೃತಿಯಾಗಿದೆ. ಮುಂದಿನ ದಿನಗಳಲ್ಲಿ ಅವರಿಂದ ಇನ್ನೂ ಹೆಚ್ಚು ಹೆಚ್ಚು ಕೃತಿಗಳು ಲೋಕಾರ್ಪಣೆಯಾಗಲಿ ಎಂದು ಹಾರೈಸುತ್ತೇನೆ. ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಶ್ರೀ ಹರಿಹರ ಶಿವಕುಮಾರ್‌ ಅವರ “ಅನನ್ಯ ಅಲ್ಲಮ” ಅವಲೋಕನ ಡಾ.ಶಶಿಕಾಂತ್‌ ಪಟ್ಟಣ Read Post »

ನಿಮ್ಮೊಂದಿಗೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಸಮರಸವು ಮೂಡಲಿ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಸಮರಸವು ಮೂಡಲಿ” ಈ ನೆಲದ ಭಾಷೆಯಿದುಬುದ್ಧ ಬಸವರ ವಚನಗಳುಸತ್ಯ ಸಮತೆ ಶಾಂತಿ ಪ್ರೀತಿಮನುಜ ಪಥದ ಮಂತ್ರವು ನಾನು ಹುಟ್ಟಿ ನಾವು ಬೆಳೆದುನಾಡ ಗೋಡೆ ಕಟ್ಟ ಬೇಕುವರ್ಗ ವರ್ಣ ಬೇಧ ಅಳೆದುದೇಶ ಒಂದೇ ಎನ್ನ ಬೇಕು ನೇಯ್ಗೆ ಕೃಷಿ ಗ್ರಾಮ ರಾಜ್ಯಬಾಪು ಕನಸಿನ ಭಾರತಭಗತ ಸಿಂಗರ ತ್ಯಾಗ ನೆಲದಬಾಬಾಸಾಹೇಬರ ಭಾರತ ದ್ವೇಷ ಮತ್ಸರ ಕರಗಿ ಹೋಗಲಿಮಮತೆ ಪ್ರೀತಿ ಅರಳಲಿಕೊಲೆ ಹಿಂಸೆ ಮಾಯವಾಗಿಸಮರಸವು ಮೂಡಲಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಸಮರಸವು ಮೂಡಲಿ” Read Post »

ನಿಮ್ಮೊಂದಿಗೆ

ಗೊರೂರು ಅನಂತರಾಜು ಅವರ ಕವಿತೆ ” ಕವಿ ಕಾಡಿಗೆ ಹೋದ”

ಕಾವ್ಯ ಸಂಗಾತಿ ಗೊರೂರು ಅನಂತರಾಜು ” ಕವಿ ಕಾಡಿಗೆ ಹೋದ” ಬಾರಯ್ಯ ಕವಿ ಕಾಡಿಗೆ ಈಗ ಬಂದೆಗ್ಯಾಸ್ ಮುಗಿದಿದೆಯೇಇಲ್ಲ ವನದೇವ ಸೌದೆ ಒಲೆಗೆ ಬೆಂಕಿ ಹಾಕಿ ಬಹಳ ದಿನಗಳಾದವುವಿಶ್ವ ಗುರುಗಳು ಯುದ್ಧಕ್ಕೆ ಅಲ್ಪ ವಿರಾಮ ಹಾಕಿದ್ದಾರೆರಾಮನಾಮ ಜಪಿಸುತ್ತಾ ವನವಾಸಕ್ಕೆ ಬಂದೆಮರ ಕಡಿಯಲು ಬಂದೆಯಾ ಮೂರ್ಖಹನುಮಂತನು ಲಂಕೆಗೆ ಬೆಂಕಿ ಇಟ್ಟನುಇವರು ಅಲ್ಲಿ ಬಾಂಬ್ ಬಿಟ್ಟರುಮನೆಯಲ್ಲಿ ಗ್ಯಾಸ್ ಟ್ರಬಲ್  ಮಕ್ಕಳು ಉಪವಾಸಹೆಂಡತಿ ಓಡಿಸಿದ್ದಾಳೆ ಅದಕ್ಕೆ ನಿನಗೆ ವನವಾಸಶ್ರೀಕೃಷ್ಣ ರಾಯಬಾರಿಗೆ ಪ್ರಾರ್ಥಿಸಿಕೊಅವರಿಗೆ ಭಗವದ್ಗೀತೆ ಬೋಧಿಸಿ ಯುದ್ಧ ನಿಲ್ಲಿಸಲಿ. ಗೊರೂರು ಅನಂತರಾಜು

ಗೊರೂರು ಅನಂತರಾಜು ಅವರ ಕವಿತೆ ” ಕವಿ ಕಾಡಿಗೆ ಹೋದ” Read Post »

ನಿಮ್ಮೊಂದಿಗೆ

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಬೋಳುಮರವೂ ಭರವಸೆ ತೋರುತಿದೆ ಈಗಚಿಗುರೆಲೆ ಹೊಸತು ಸಂದೇಶ ಸಾರುತಿದೆ ಈಗ ಖಾಲಿ ಕೊಂಬೆ ಮೇಲೀಗ ಕೋಗಿಲೆ ದರ್ಬಾರುಕುಹೂ ಕುಹೂ ಕೂಗೋ ರಾಗ ಕೇಳುತಿದೆ ಈಗ ನೋವು-ನಲಿವುಗಳಿದ್ದಾಗಲೇ ಬಾಳಿಗೊಂದರ್ಥಬೇವು ಬೆಲ್ಲ ರುಚಿಯ ಜಿಹ್ವೆ ನೋಡುತಿದೆ ಈಗ ಸೃಷ್ಠಿ‌ ತಾ ಸೊಬಗು ತೋರೇ ಅದೆಂಥ ಗಾರುಡಿಕ್ರೋಧಿನಾಮ ಘಳಿಗೆ ಶುಭ ಕೋರುತಿದೆ ಈಗ ಕುಂಬಾರನಿಗೆ ಯುಗಾದಿಯೇ ಹೊಸ ವರ್ಷವುರತ್ನಪಕ್ಷಿಯೇ ಕಣ್ಣ ಮುಂದಣ ಹಾರುತಿದೆ ಈಗ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ನಿಮ್ಮೊಂದಿಗೆ

ಧಾರಾವಾಹಿ ಸಂಗಾತಿ-16 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆ ಕಟ್ಟೆ ಜ್ವಾಲೆಯೊಡಲಿನ ಕ್ರೋಧಜ್ವಾಲೆಯದು ಎನಗೆ ಶಾಪವನುಣಿಸಿತು              ಜ್ವಾಲೆಯೊಡಲಿನ ಕ್ರೋಧಜ್ವಾಲೆಯದು ಎನಗೆ ಶಾಪವನುಣಿಸಿತು ಜ್ವಾಲೆಯನ್ನು ನಿರಾಸೆಗೊಳಿಸಿತು ಕಲಹಕ್ಕೊಪ್ಪದ ಉನ್ಮುಖನ ಮಾತು. ಉನ್ಮುಖ ಯುದ್ಧೋನ್ಮುಖನಾಗಲಿಲ್ಲ. ಹರಿಭಕ್ತಮುಖದವನಾಗಿ ಶಾಂತಭಾವದಿ ಕುಳಿತ. ಶ್ರೀಕೃಷ್ಣನ ಸಹಾಯವನ್ನು ಪಡೆದು ಬಂದಿರುವ ನನ್ನ ಜೊತೆ ಯುದ್ಧವನ್ನು ಮಾಡುವ ಮನಸ್ಸಿರಲಿಲ್ಲ ಅವನಿಗೆ. ಜ್ವಾಲೆಯ ರೀತಿಯದು ಹಿಂದಣ ತ್ರೇತಾಯುಗದ ಶೂರ್ಪನಖಿಯ ನೆನಪನ್ನು ಮೂಡಿಸಿತು ಅವನಿಗೆ. ತನಗೊಲಿಯದೆ ಮೂಗು ಕೊಯ್ದವರ ಮೇಲಿನ ಸೇಡಿಗೆ ರಾಮ ರಾವಣ ಸಂಘರ್ಷವನ್ನು ತಂದಿತ್ತ ಶೂರ್ಪನಖಿಯಂತೆಯೇ ತನ್ನಕ್ಕನ ಕಲಹಪ್ರಿಯವಾದ ನಡೆಯಿದೆ ಎನಿಸಿತು ಅವನಿಗೆ. ಆ ಮಾತನ್ನೇ ಕಟುವಾಗಿ ಆಡಿ ಅವಳನ್ನು ಬೈದು ಅಲ್ಲಿಂದ ಕಳುಹಿಸಿಕೊಟ್ಟ. ಅಕ್ಕನ ರೋಷದ ನೆಪದಲ್ಲಿ ನನ್ನನ್ನು ಎದುರುಹಾಕಿಕೊಳ್ಳುವ ಮನಮಾಡಿ ಅಪಾಯಕ್ಕೆ ಮನೆಮಾಡಿಕೊಡುವ ಆಸಕ್ತಿಯಿರಲಿಲ್ಲ ಉನ್ಮುಖನಿಗೆ.       ತಮ್ಮನಿಂದಲೂ ತಿರಸ್ಕೃತಳಾದ ಜ್ವಾಲೆ ಪಯಣವನ್ನು ಬೆಳೆಸುತ್ತಾ ಹೋದವಳು ಗಂಗಾತೀರವನ್ನು ಸೇರಿದಳು. ಪಾಪ ಪರಿಹಾರ ಪುಣ್ಯಜಲದಂತೆ ಹರಿಹರಿಯುತ್ತಿದ್ದ ಗಂಗೆಯನ್ನು ಕಂಡಳು. ಅಮರನದಿಯದು ಜ್ವಾಲೆಯಲ್ಲಿ ಅಮರಭಾವವನ್ನು ಬಿತ್ತಬೇಕಿತ್ತು. ಆದರೆ ಮೊಳಕೆಯೊಡೆದದ್ದು ಅಸುರಭಾವ. ಕೆಲವರ ವರ್ತನೆ ಹಾಗೆಯೇ. ದಿವ್ಯವಾದದ್ದನ್ನು ದರ್ಶಿಸಿದಾಗಲೂ ದುಷ್ಟಭಾವವೇ ಅವರಲ್ಲಿ ಚಿಗುರೊಡೆಯುತ್ತದೆ. ಆ ಬಗೆಯಲ್ಲಿ ಅವರ ಮನೋಭೂಮಿಕೆ ಸಿದ್ಧಗೊಂಡಿರುತ್ತದೆ. ಗಂಗೆಯನ್ನು ಬಳಸಿಕೊಂಡು ತನ್ನಂತರಂಗದ ಮಾತ್ಸರ್ಯಕ್ಕೊಂದು ಗಮ್ಯವನ್ನು ಕಾಣಿಸುವ ಕುಯೋಚನೆ ಮೂಡಿತು ಜ್ವಾಲೆಯಲ್ಲಿ.       ದೋಣಿ ನಡೆಸುವವರೊಂದಷ್ಟು ಜನ ಗಂಗಾತಟದಲ್ಲಿಯೇ ಕುಳಿತಿದ್ದರು. ಅವರನ್ನು ನೋಡುತ್ತಾ ಜ್ವಾಲೆ “ಗಂಗಾನದಿಯ ಒಂದು ಬಿಂದೂ ನನ್ನ ದೇಹವನ್ನು ಸೋಂಕದಂತೆ ನನ್ನನ್ನು ಈ ದಡದಿಂದ ಆ ದಡದೆಡೆಗೆ ಒಯ್ಯುವವರು ಯಾರಾದರೂ ಇರುವಿರಾ?” ಎಂದಳು.      ಅಂಬಿಗರಿಗೆ ಅಚ್ಚರಿಯಾಯಿತು. ಹನಿ ಹನಿ ಗಂಗಾಜಲವದು ಪರಮ ಪಾವನ ಪುಣ್ಯ ಪವಿತ್ರ ಎಂದು ನಂಬುವ ಅನೇಕಾನೇಕ ಜನರನ್ನವರು ಕಂಡಿದ್ದರು. ಗಂಗೆಯ ನೀರದು ಮೈಯ್ಯನ್ನು ಸ್ಪರ್ಶಿಸಿದರೆ ಘನಮಲಿನವೆಂಬ ಬಗೆಯಲ್ಲಿ ಮಾತನ್ನು ಆಡಿದವರಿರಲಿಲ್ಲ; ವರ್ತಿಸಿದವರಿರಲಿಲ್ಲ. ಜ್ವಾಲೆಯ ರೀತಿಯದು ಹೊಸದೆನಿಸಿತು ಅವರಿಗೆ. “ಬಂದದ್ದಾವ ಉದ್ದೇಶದಿಂದ? ಗಂಗಾಜಲವನ್ನು ಮುಟ್ಟಬಾರದು ಎಂದೆನಲು ಕಾರಣವೇನು?” ಎಂದು ವಿಸ್ಮಯ ಭಾವದಲ್ಲಿ ಕೇಳಿದರು.      ತನ್ನ ಪಾಡಿಗೆ ಹರಿಯುತಿರುವ ಗಂಗೆಗೆ ಕೌತುಕ ಹುಟ್ಟುವಂತೆ ಆ ಜ್ವಾಲೆ “ಗಂಗೆಗೆ ಒಂದು ದೋಷವಿದೆ. ಅದೇನೆಂದು ನಿಮಗೆ ಹೇಳಲಾರೆ. ಆ ಗಂಗೆಯೇ ನನ್ನೆದುರು ಮೈದೋರಲಿ. ಹೇಳುತ್ತೇನೆ” ಎಂದಳು.     ಅಪವಾದದ ಅಪನುಡಿಯದು ಅಂಜಿಸಿತು ಅಮರನದಿಯನ್ನು. ತನಗಿರುವ ದೋಷ ಅದಾವುದು ಎನ್ನುವುದನ್ನು ತಿಳಿಯುವ ಕುತೂಹಲಿಯಾದಳು ಗಂಗೆ. ತಕ್ಷಣವೇ ಪ್ರತ್ಯಕ್ಷಳಾದಳು. “ಇನ್ನೊಬ್ಬರ ದೋಷಗಳನ್ನೂ, ಪಾಪಗಳನ್ನೂ ದೂರ ಮಾಡುವವಳೆಂದು ವೇದಶಾಸ್ತçಗಳು ಗುರುತಿಸಿವೆ ನನ್ನನ್ನು. ಸೋಂಕಬಾರದು ಎನ್ನನ್ನು ಎಂದು ದೂಷಿಸುತ್ತಿರುವವಳು ನೀನು. ಇದಕ್ಕೆ ಕಾರಣವೇನು?” ಎಂದು ಆಶ್ಚರ್ಯದಿಂದ ಕೇಳಿದಳು ಜ್ವಾಲೆಯಲ್ಲಿ.      ಮೋಡಿಯ ಮಾತುಗಳನ್ನಾಡಿದಳು ಜ್ವಾಲೆ. “ನಾನೇನೂ ನಿನ್ನನ್ನು ಬೈದದ್ದಲ್ಲ. ಲೋಕರೂಢಿಯ ಮಾತನ್ನು ಹೇಳಿದ್ದೇನೆ ಅಷ್ಟೇ. ಮಕ್ಕಳಿಲ್ಲದ ಬಂಜೆಯನ್ನು ದೋಷವಿರುವವಳು ಎಂದು ಗುರುತಿಸುವ ಕ್ರಮವುಂಟು ಈ ಲೋಕದೊಳಗೆ” ಎಂದಳು.      ಗಂಗೆಗೆ ಈ ಮೊದಲಿಗಿಂತಲೂ ಹೆಚ್ಚಿನ ಅಚ್ಚರಿಯಾಯಿತು. ಕೋಪ ಬಂತು. “ಇಚ್ಛಾಮರಣಿಯೆಂದು ಹೆಸರು ಪಡೆದು, ತ್ರೆöÊಲೋಕ ವೀರನೆಂದು ಖ್ಯಾತಿ ಗಳಿಸಿದ ಭೀಷ್ಮ ನನ್ನ ಮಗನಾಗಿರುವಾಗ ನನ್ನನ್ನು ಮಕ್ಕಳಿಲ್ಲದವಳೆಂದು ಹಂಗಿಸುವುದು ಸರಿಯಲ್ಲ” ಎಂದು ಜ್ವಾಲೆಯನ್ನು ಬೈದಳು.      ವಾಸ್ತವವಾಗಿ ಜ್ವಾಲೆಗೆ ಬೇಕಿದ್ದುದೂ ಅದೇ, ಗಂಗೆಯ ಮನವನ್ನು ಕೆರಳಿಸುವುದು. ಭೀಷ್ಮ ಗಂಗಾಸುತನೆನ್ನುವುದು ಜ್ವಾಲೆಗೆ ತಿಳಿಯದ ಸಂಗತಿಯೇನಲ್ಲ. ಎಂಟು ಮಕ್ಕಳನ್ನು ಪಡೆದ ಗಂಗೆ ಕೊನೆಯದಾಗಿ ಭೀಷ್ಮನನ್ನು ಮಾತ್ರ ಉಳಿಸಿಕೊಂಡ ಬಗೆ ಜ್ವಾಲೆಗೆ ಗೊತ್ತಿತ್ತು. ಬಿಂದು ಬಿಂದುಗಳನ್ನು ಒಂದೊಂದಾಗಿ ಕ್ರಮಿಸುತ್ತಾ ಜ್ವಾಲೆ ಸಾಗಿಬಂದದ್ದು ಈ ಘನಸಿಂಧುವಿನೆಡೆಗೆ, ಭೀಷ್ಮ ಮರಣವನ್ನು ತಿಳಿಸುವ ಅಂತಿಮ ಗಳಿಗೆಯ ಕಡೆಗೆ. “ಹೌದು! ನಿನ್ನ ಸುತ ಭೀಷ್ಮ ಎನ್ನುವುದು ಗೊತ್ತಿದೆ. ಅವನು ವೀರ ಎನ್ನುವ ಅರಿವೂ ಇದೆ. ಅವನು ಇನ್ನೂ ಹೆಚ್ಚಿನ ಔನ್ನತ್ಯವನ್ನು ಗಳಿಸುತ್ತಿದ್ದನೋ ಏನೋ! ಆದರೆ ಆ ಅರ್ಜುನ ಕುರುಕ್ಷೇತ್ರ ಕದನದಲ್ಲಿ ನಿನ್ನ ತನುಜನನ್ನು ಕೊಂದುಹಾಕಿದ. ಹೀಗಿರುವಾಗ ನೀನು ಮಕ್ಕಳಿಲ್ಲದವಳು ಎಂದೇ ಕರೆಸಿಕೊಳ್ಳಬೇಕಾಗುತ್ತದೆ” ಎಂಬ ನುಡಿಸಿಡಿಲು ಸಿಡಿಯಿತು ಜ್ವಾಲೆಯೊಳಗಿಂದ.      ಒಣಗಿದ ಮರಕ್ಕೆ ಬಿದ್ದ ಕಿಚ್ಚು ಹಸಿಹಸಿಯಾದ ಗಿಡವನ್ನೂ ಸುಟ್ಟುಹಾಕುವಂತೆ, ಈಗಾಗಲೇ ನನ್ನ ಮೇಲಿನ ಮುನಿಸಿನಿಂದ ಉರಿಯುತ್ತಿದ್ದ ಜ್ವಾಲೆಯ ಅಂತರಂಗದ ಕಿಚ್ಚು ಗಂಗೆಯ ಮನವನ್ನೂ ಸುಟ್ಟಿತು. ಮಗ ಭೀಷ್ಮ ಅಳಿದನೆಂಬ ಸುದ್ದಿಯನ್ನು ತಾಳಿಕೊಳ್ಳುವುದಕ್ಕಾಗಲಿಲ್ಲ ಅವಳಿಗೆ. ಭೀಷ್ಮ ಮರಣಕ್ಕೆ ಕಾರಣನೆನಿಸಿದ ನನ್ನ ಮೇಲೆ ಕ್ರೋಧ ಉಕ್ಕಿಬಂತು. “ನನ್ನ ಮಗನನ್ನು ಯುದ್ಧದಲ್ಲಿ ಕೊಂದ ಆ ಅರ್ಜುನನ ತಲೆಯನ್ನು ಅವನ ಮಗನೇ ಇನ್ನು ಆರು ತಿಂಗಳುಗಳಲ್ಲಿ ಯುದ್ಧದಲ್ಲಿ ಕೊಚ್ಚಿ ಕೆಡಹಲಿ” ಎಂದು ಶಾಪ ಕೊಟ್ಟು, ಮತ್ತೆ ಮೊದಲಿನ ಸ್ಥಿತಿಯನ್ನು ಪಡೆದಳು.      ಜ್ವಾಲೆಯ ಕ್ರೋಧಜ್ವಾಲೆಯಿಂದಾಗಿ ನಾನು ಗಂಗೆಯ ಶಾಪಕ್ಕೆ ತುತ್ತಾದೆ. ಅಲ್ಲಿಗೇ ಜ್ವಾಲೆಯ ದ್ವೇಷವದು ತಣಿಯಲಿಲ್ಲ. ನನ್ನನ್ನು ಕೊಲ್ಲುವ ಹರಿತವಾದ ಬಾಣವಾಗುತ್ತೇನೆ ಎಂದು ಬಯಸಿದವಳು ಅಲ್ಲಿಯೇ ಗಂಗೆಯ ತೀರದಲ್ಲಿ ಅಗ್ನಿಪ್ರವೇಶ ಮಾಡಿದಳು. ಮಣಿಪುರದ ಅರಸನಾಗಿದ್ದ ಬಭ್ರುವಾಹನನ ಬತ್ತಳಿಕೆಯಲ್ಲಿನ ಹರಿತ ಬಾಣವಾದಳು.      ಗಂಗೆ ನನಗಿತ್ತ ಶಾಪವದು ಅಶ್ವಮೇಧ ಯಾಗದ ಪೂರ್ಣತೆಗೆ ಸಂಚಕಾರವನ್ನೊಡ್ಡುವ ಘನಶಾಪವಾಗಿತ್ತು. ಶಾಪ ನಿಜವಾಗುವ ಗಳಿಗೆಯನ್ನು ಅದೆಂತು ಮೀರುವೆನೋ! ನನಗೆ ತಿಳಿದಿರಲಿಲ್ಲ.                                          ಡಾ. ವಿಶ್ವನಾಥ ಎನ್ ನೇರಳಕಟ್ಟೆ         

Read Post »

ನಿಮ್ಮೊಂದಿಗೆ

ಮಹಿಳಾದಿನದ ವಿಶೇಷ, ನಾಗರತ್ನ ಎಚ್ ಗಂಗಾವತಿ

ಮಹಿಳಾದಿನದ ವಿಶೇಷ, ನಾಗರತ್ನ ಎಚ್ ಗಂಗಾವತಿ ಶಕ್ತಿಯ ಪ್ರತಿರೂಪ ಹೆಣ್ಣು ಮಹಿಳೆಯರು ಕುಟುಂಬದ ಆಧಾರ ಸ್ಥಂಭವಾಗಿದ್ದು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಆದರೆ ಹಿಂದೂ ಅನೇಕ ಸಾಮಾಜಿಕ ಅಡೆತಡೆಗಳನ್ನು ಎದುರಿಸುತ್ತಿರುವುದು ದುಃಖಕರ. ಕುಟುಂಬದ ನಿರ್ವಹಣೆಯಿಂದ ಹಿಡಿದು ಬಾಹ್ಯಾಕಾಶದ ವರೆಗೂ ಮಹಿಳೆ ಪುರುಷನಿಗೆ ಸಮಾನವಾಗಿ ಸಾಧನೆ ಮಾಡುತ್ತಿದ್ದರು ಲಿಂಗ ಸಮಾನತೆ ಮತ್ತು ಶಿಕ್ಷಣ ಭದ್ರತೆಯ ವಿಷಯದಲ್ಲಿ ಇಂದಿಗೂ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾಳೆ. “*ಯತ್ರ ನಾರಿಸ್ತು ಪೂಜಂತೆ ರಮಂತು ತಂತ್ರ ದೇವತಾ*” ಎಂಬ ವೇದವಾಕ್ಯದಂತೆಎಲ್ಲಿ ನಾರಿಯನ್ನು ಪೂಜಿಸುತ್ತಾರೆ ಅಲ್ಲಿ ದೇವರುಗಳು ನೆಲೆಸಿರುತ್ತಾರೆ ಎನ್ನುವಂತೆ ಪ್ರತಿಯೊಬ್ಬರೂ ಕೂಡ ಹೆಣ್ಣನ್ನು ಗೌರವಿಸುವುದು ಅಷ್ಟೇ ಮುಖ್ಯ. ಹಾಗೂ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಸ್ಥಾನಮಾನವೂ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿದೆ. ಮಹಿಳಾ ಸಬಲೀಕರಣವು ಸಮಾನ ಅವಕಾಶಗಳನ್ನುಒದಗಿಸುವ ಮೂಲಕ ಸಮೃದ್ಧ ಸಮಾಜದ ನಿರ್ಮಾಣಕ್ಕೆ ಅಡಿಪಾಯವಾಗಿದೆ. ಆದರೂ ಕೂಡ ಹೆಣ್ಣು ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂದು ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದಾರೆ ಹಾಗೂ ವಿಜ್ಞಾನ, ತಂತ್ರಜ್ಞಾನ ,ರಾಜಕೀಯ ಮತ್ತು ಕಾರ್ಪೊರೇಟ್ ವಲಯಗಳಲ್ಲಿ ಮಹಿಳೆಯರು  ಸಾಧನೆ ಮಾಡುತ್ತಿದ್ದಾರೆ. ಸಮಾಜದ ಮತ್ತೊಂದು ದುಃಖಕರ ಸಂಗತಿ ಎಂದರೆ ಈಗಲೂ ಕೂಡ ಹೆಣ್ಣಿನ ಮೇಲೆ ದೌರ್ಜನ್ಯಗಳು ಕಿರುಕುಳ ಬ್ರೂಣ ಹತ್ಯೆ ಗಳು ದೊಡ್ಡ ಪಿಡುಗುಗಳಾಗಿವೆ. ಮಹಿಳೆಯರ ಸಬಲೀಕರಣ ಎಂದರೆ ಕೇವಲ ಉದ್ಯೋಗವಲ್ಲ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಇಡೀ ಕುಟುಂಬಕ್ಕೆ ಶಿಕ್ಷಣ ನೀಡಿದಂತೆ ಕಾನೂನುಗಳ ಕಟ್ಟುನಿಟ್ಟಿನ ಜಾರಿ ಸುರಕ್ಷಿತ ವಾತಾವರಣ ಮತ್ತು ಪುರುಷರ ಮನೋಭಾವನೆಯಲ್ಲಿ ಬದಲಾವಣೆ ತರುವುದು ಅತಿ ಮುಖ್ಯವಾಗಿದೆ. ಹಾಗೂ ಮಹಿಳೆಯರು ಬಲಿಷ್ಠವಾದಾಗ ಮಾತ್ರ ಸಮಾಜವು ಬಲಿಷ್ಠ ವಾಗುತ್ತದೆ. ಎನ್ನುವಂತೆ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಸಮಾನತೆಯತ್ತ ಧನಾತ್ಮಕ ಹೆಜ್ಜೆ ಇಡುತ್ತಿದ್ದು ನಿಜವಾದ ಪ್ರಗತಿಯನ್ನು ಸಾಧಿಸಲು ಕಾರಣವಾಗುತ್ತಿದೆ. ಸ್ವ ಸಹಾಯ ಗುಂಪುಗಳ ಮೂಲಕ ಉದ್ಯೋಗಾವಕಾಶಗಳು ಮತ್ತು ಆಸ್ತಿ ಹಕ್ಕು ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡಿವೆ. ತಾಳ್ಮೆಯ ಗುಣವೇ ಹೆಣ್ಣಿನ ಗೆಲುವಿಗೆ ಕಾರಣ ಎನ್ನುವಂತೆ ಮಹಿಳೆ ತನ್ನ ತಾಳ್ಮೆಯಿಂದ ಎಲ್ಲರನ್ನು ಗೆಲ್ಲುವ ಸಾಮರ್ಥ್ಯವನ್ನು ಹೊಂದಿದ್ದಾಳೆ. *ಹೆಣ್ಣು ಸಂಸಾರದ ಕಣ್ಣು*  ಎನ್ನುವಂತೆ ಕುಟುಂಬದಲ್ಲಿ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಾ ಎಲ್ಲರ ಮನಸ್ಸನ್ನು ಗೆಲ್ಲುವ ಮನೆ ಬೆಳಗುವ ಮಹಾಲಕ್ಷ್ಮಿಯಂತೆ ಎಲ್ಲರನ್ನ ಸಂತೈಸಿ ಮನಸನ್ನ ಗೆಲ್ಲುವ ಪ್ರತಿಭೆ ಇವಳು. ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ ಪ್ರತಿಯೊಂದು ಹಂತದಲ್ಲೂ ತನ್ನದೇ ಆದ ಜವಾಬ್ದಾರಿ ಯೊಂದಿಗೆ ಸಂಸಾರವನ್ನು ನಡೆಸುವಲ್ಲಿ ಯಶಸ್ಸನ್ನು ಕಾಣುವ ನಗೆಯ ಚಿಲುಮೆ . ಸ್ವಾತಂತ್ರ್ಯ ಹೋರಾಟದಲ್ಲಿ ಕೂಡ ಮಹಿಳೆ ತನ್ನ ಅಪ್ರತಿಮ ಸಾಧನೆಯನ್ನು ಮಾಡಿದ್ದಾಳೆ.ಉದಾಹರಣೆ:  ಕಿತ್ತೂರಾಣಿ ಚೆನ್ನಮ್ಮ, ಜಾನ್ಸಿ ರಾಣಿ ಲಕ್ಷ್ಮೀಬಾಯಿ ,ಒನಕೆ ಓಬವ್ವ, ರಾಣಿ ಅಬ್ಬಕ್ಕ, ಇನ್ನು ಹಲವಾರು ಮಹಿಳೆಯರು ತಮ್ಮದೇ ಆದ ಸಾಧನೆಯನ್ನು ಮಾಡಿದ್ದಾರೆ. ಆದರೂ ಇಂದಿನ ಆಧುನಿಕ ಸಮಾಜದಲ್ಲಿ ಮಹಿಳೆ ಒತ್ತಡದ ಬದುಕಿನಲ್ಲಿ ಹಲವಾರು ಸಮಸ್ಯೆಗಳನ್ನ ಎದುರಿಸಿ ಮೆಟ್ಟಿ ನಿಲ್ಲುವ ಧೈರ್ಯವಂತೆ ಹೆಣ್ಣು. ಪ್ರತಿ ವರ್ಷವೂ ಕೂಡ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾರೆ ಹಾಗೂ ಅಂದು ಹಲವಾರು ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಗೌರವಿಸಿ ಸನ್ಮಾನಿಸುತ್ತಾರೆ.  ವಿಶೇಷವಾಗಿ ಕಾರ್ಮಿಕ ಚಳುವಳಿಗಳ ಭಾಗವಾಗಿ ಈ ಆಚರಣೆ ಪ್ರಾರಂಭವಾಯಿತು. 1975ರಲ್ಲಿ ಯುನೈಟೆಡ್  ನೇಷನ್ ಅಧಿಕೃತವಾಗಿ ಮಾರ್ಚ್ 8 ಅನ್ನು ಅಂತಾರಾಷ್ಟ್ರೀಯ ಮಹಿಳಾ ದಿನವಾಗಿ ಘೋಷಿಸಿತು. ಉದ್ದೇಶವೇನೆಂದರೆ ಮಹಿಳೆಯರ ಮೇಲಿನ ದೌರ್ಜನ್ಯ ತಡೆ , ಸಮಾನ ವೇತನ, ರಾಜಕೀಯ ಸಾಮಾಜಿಕ  ಪ್ರಾತಿನಿಧ್ಯ ಮತ್ತು ಲಿಂಗ ತಾರತಮ್ಯ ತೊಡೆದು ಹಾಕುವುದು. ಆದರೂ ಹೆಣ್ಣಿನ ಬಗ್ಗೆ ಹೇಳುವುದಾದರೆ ಪದಗಳೇ ಸಾಲದು ಪ್ರತಿಯೊಬ್ಬರೂ ಕೂಡ ಹೆಣ್ಣನ್ನು ಗೌರವಿಸಿದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ. ನಾಗರತ್ನ ಎಚ್ ಗಂಗಾವತಿ

ಮಹಿಳಾದಿನದ ವಿಶೇಷ, ನಾಗರತ್ನ ಎಚ್ ಗಂಗಾವತಿ Read Post »

You cannot copy content of this page

Scroll to Top