ಕಾವ್ಯಯಾನ
ಸ್ಮಿತಾ ಅಮೃತರಾಜ್ ಯಾವುದೋ ಒಂದು ಅದೃಶ್ಯ ಗಳಿಗೆಯಲ್ಲಿ ಹೇಗೋ ಬಂದು ನುಸುಳಿಕೊಂಡಿದೆಯಲ್ಲ ನನ್ನ_ನಿನ್ನ ನಡುವಲ್ಲೊಂದು ತೆಳು ಗೆರೆ. ಎಳೆದದ್ದು ನೀನಲ್ಲವೆಂದೆ ನಾನಂತೂ ಮೊದಲೇ ಅಲ್ಲ ಕಂಡೂ ಕಾಣದಂತಿರುವ ಎಳೆ ಸೂಕ್ಷ್ಮ ಗೆರೆ ಹಾಗಾದರೆ ಬಂದದ್ದಾದರೂ ಎಲ್ಲಿಂದ? ಇಂಚಿಂಚೇ ಬೆಳೆಯುತ್ತಿದೆ ಬಲಿಯುತ್ತಿದೆ. ಇಬ್ಬರಿಗೂ ಅದರ ಮೇಲೆ ಅಸಡ್ಡೆ ಎಳೆಯದ ಗೆರೆಯನ್ನು ಅಳಿಸುವುದೇತಕೆ? ಮಿತಿ ಮೀರಿ ಬೆಳೆದು ಗೆರೆಯೇ ಗೊಡೆಯಾದರೆ ನನಗೆ ನೀನು,ನಿನಗೆ ನಾನು ಕಾಣಿಸುವುದಾದರೂ ಎಂತು? ಗೆರೆಯ ಮೊನಚು ಈಗ ಎದೆಯವರೆಗೂ ಬಂದು ತಾಕಿ ಭಯ ಹುಟ್ಟಿಸುತ್ತಿದೆ. ಗೆರೆಗಳು ಒಂದನ್ನೊಂದು ಕೂಡಿಸುತ್ತದೆ. ಕೆಲವೊಮ್ಮೆ ಗುಣಿಸಿ,ಭಾಗಿಸಿ,ಕಳೆದು ಬರೇ ಶೇಷವನ್ನಷ್ಟೇ ಉಳಿಸಿಬಿಡುತ್ತದೆ ಕೂಡ… ಇಲ್ಲಿ ತೀರಾ ನಿಗಾ ಬೇಕು. ಬಿಡು, ಹೇಗೋ ಹುಟ್ಟಿಕೊಂಡಿದೆ ಸಧ್ಯ ಕಂಡಿತಲ್ಲ! ಬಿಗುಮಾನ ಬಿಟ್ಟು ಬಾ ಬೇಗ ಅಳಿಸಿ ಬಿಡೋಣ. ಆ ನಡುವಲ್ಲಿ ಕಂಡೂ ಕಾಣದಂತಿರುವ ಕನ್ನಡಿಯೊಂದ ತೂಗಿ ಬಿಡೋಣ. ********









