ಮಕ್ಕಳ ಕವಿತೆ ಗಾಂಧಿತಾತ ಗಾಂಧಿತಾತ ನಮ್ಮತಾತ ದೇಶಕ್ಕಾಗಿ ಮಡಿದ ಮಹಾತ್ಮಾನಾತ…|| ಪ|| ಬಾಲ ಮೋಹನ ಗಾಂಧಿ ತಾಯಿ-ಗುರುವಿನ ಮಾತಿನಲ್ಲೇ ಜಗವ ಬೆಳಗಲು ಹೊರಟುಬಿಟ್ಟ…|| ೧|| ಶಾಲೆಯಲ್ಲಿ ಜಾಣನಲ್ಲ ನೀತಿಯಲ್ಲಿ ಜಗವಬಲ್ಲ ಅಂತರಾತ್ಮ ಬಂಧದಲ್ಲಿ ನಡೆದುಬಿಟ್ಟ….|| ೨|| ಬಡವ ನನ್ನ ದೇಶ ಕೋಟು ಸೂಟು ಬೇಡ ಪಂಚೆವುಟ್ಟು ಸಾಗಿಬಿಟ್ಟ…|| ೩|| ಅಸ್ತ್ರ ಎಂದು ಹಿಡಿಯಲಿಲ್ಲ ಹನಿ ರಕ್ತ ಚೆಲ್ಲಲಿಲ್ಲ ಯುದ್ಧ ಮಾತ್ರ ಗೆದ್ದುಬಿಟ್ಟ….|| ೪|| ಸತ್ಯಾಗ್ರಹ ಶಸ್ತ್ರದಿಂದ ಅಹಿಂಸೆ ಮಾರ್ಗದಲ್ಲಿ ಬ್ರಿಟಿಷರನ್ನು ನಡುಗಿಸಿಟ್ಟ…|| ೫|| ಮಾಡು ಇಲ್ಲ ಮಡಿ ದೇಶ ಬಿಟ್ಟು ನಡಿ ಎನುತಾ ಬ್ರಿಟಿಷರನ್ನು ತೊಲಗಿಸಿಟ್ಟ…|| ೬|| ಸತ್ಯ ಶಾಂತಿ ನ್ಯಾಯ ಕರ್ಮ ಸಹನೆ ಪ್ರೀತಿ ನನ್ನ ಧರ್ಮ ಎನುತಾ ಅಜ್ಞಾನ ಅಂಧಕಾರವ ಕಳಚಿಬಿಟ್ಟ….|| ೮|| ನನ್ನ ಜೀವನವೇ ನನ್ನ ಸಾರ ಎನ್ನುತಾ ಬದುಕಿಬಿಟ್ಟ….|| ೯|| ************************ ಮಲಿಕಜಾನ ಶೇಖ…
ಗಾಂಧಿ ವಿಶೇಷ ಗಾಂಧಿ ಎಂಬ ಶಕ್ತಿ! ಗಾಂಧೀಜಿ ‘ – ಎಂಬುದು ಒಂದು ವ್ಯಕ್ತಿಯೇ, ಒಂದು ಸಂಸ್ಥೆಯೇ, ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕ, ನೈತಿಕ ಚಿಂತನೆಗಳ ಮೊತ್ತವೇ? ಹೇಗೆ ಅರ್ಥೈಸಬೇಕು ? ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎಲ್ಲಿ ಹೋದರೂ ಜನರನ್ನು ಆಯಸ್ಕಾಂತದಂತೆ ಸೆಳೆಯುತ್ತಿದ್ದರು. ನಿಸ್ವಾರ್ಥ, ನಿರ್ಭೀತಿ, ಆಧುನಿಕ ಮನೋಭಾವ ಹಾಗೂ ಪಾರಂಪರಿಕ ನಿಷ್ಠೆ, ಸಮುದಾಯ ನಿಷ್ಠೆ, ಸರಳತೆ ಮೊದಲಾದವನ್ನು ಉಸಿರಾಡುತ್ತ ಜಾತಿ-ಮತಗಳಲ್ಲಿ ಸಮಭಾವ ಕಂಡವರು. ಗೀತೆ ಮತ್ತು ಉಪನಿಷತ್ತಿನ ಆರಾಧಕರು. ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡವರು. ಇಂದಿನ ಧಾವಂತದ, ನೆಮ್ಮದಿಯಿರದ, ಹಣವೇ ಮುಖ್ಯವಾಗಿರುವ, ಅಪನಂಬಿಕೆ, ಅಸಹಿಷ್ಣುತೆ ಗಳು ಆಳವಾಗಿ ಬೇರು ಬಿಡುತ್ತಿರುವ ಈ ಕಾಲದಲ್ಲಿ ಗಾಂಧೀಜಿಯವರ ಆದರ್ಶಗಳು, ಜೀವನ ವಿಧಾನ ಪರಿಹಾರೋಪಾಯಗಳಾಗಿವೆ. ಮೋಹನ ದಾಸ್ ಕರಮಚಂದ ಗಾಂಧಿ 1915ರಲ್ಲಿ ಗಾಂಧೀಜಿಯಾಗಿ ಭಾರತಕ್ಕೆ ಬಂದಿಳಿಯುವ ಮೊದಲೇ ಅವರಿಗೆ ದಕ್ಷಿಣ ಆಫ್ರಿಕಾದಲ್ಲಿ ಆಡಳಿತದ ದೌರ್ಜನ್ಯದ ವಿರುದ್ಧ ಸೆಣೆಸಾಡಿ ಅದನ್ನು ಮಣಿಸಿದ ಅನುಭವವಿತ್ತು. ಅವರು ಅಲ್ಲಿನ ಕಾರ್ಮಿಕ ವರ್ಗದವರ ಬೆಂಬಲಕ್ಕೆ ನಿಂತು ಅವರಿಗೆ ಸಿಗಬೇಕಾದ ಗೌರವ ಹಾಗೂ ಸ್ಥಾನ-ಮಾನವನ್ನು ದೊರಕಿಸಿಕೊಟ್ಟು ಭಾರತಕ್ಕೆ ಹಿಂದಿರುಗಿದ್ದರು. ಆಗ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚುತ್ತಿತ್ತು. ಮೊದಲೇ ಮಹಾಯುದ್ದದ ಸಂದರ್ಭದಲ್ಲಿ ಸ್ವಾತಂತ್ರ್ಯವನ್ನು ಭಾರತಕ್ಕೆ ನೀಡಬಹುದೆಂಬ ಆಸೆಯಿಂದ ಬ್ರಿಟಿಷರ ಪರ ಹೋರಾಡಿದ ಭಾರತೀಯರಿಗೆ ನಿರಾಸೆ ಕಾದಿತ್ತು. ಗಾಂಧೀಜಿಯವರ ರಾಜಕೀಯ ಗುರುಗಳಾಗಿದ್ದ ರಾಜಾಜಿಯವರು ದಕ್ಷಿಣ ಆಫ್ರಿಕಾದಲ್ಲಿ ಅವರ ಹೋರಾಟವನ್ನು ಗಮನಿಸಿ ಭಾರತದಲ್ಲಿ ಅವರ ಅವಶ್ಯಕತೆಯನ್ನು ಮನಗಂಡರು. ಗಾಂಧೀಜಿಯವರ ಸತ್ಯಾಗ್ರಹ, ಸ್ವರಾಜ್ಯದ ಕಲ್ಪನೆ ಮೊದಲದ ವಿಶಿಷ್ಟ ಅಸ್ತ್ರಗಳು, ಸಿದ್ಧಾಂತಗಳಾಗಲೇ ವಿಶ್ವದಲ್ಲಿ ಜನಪ್ರಿಯವಾಗಿದ್ದವು. ಅವರ ಅಹಿಂಸೆಯ ಹಾದಿಗೆ ವಿಶ್ವವೇ ಬೆರಗಾಗಿತ್ತು. ಅದೇ ಹೊತ್ತಿಗೆ ಭಾರತದಲ್ಲಿ ಹೋರಾಟದ ಚುಕ್ಕಾಣಿ ಹಿಡಿಯಬಲ್ಲ ನಾಯಕನ ಅವಶ್ಯಕತೆ ಇತ್ತು. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ ಯಶಸ್ಸು ಭಾರತದಲ್ಲಿ ವರದಾನವಾಯ್ತು. ಅದಾಗಲೇ ಭಾರತದಲ್ಲಿ ಘಟಾನುಘಟಿ ನಾಯಕರು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿದ್ದರು.ಲಾಲ್,ಬಾಲ್, ಪಾಲ್, ರಾಜಾಜಿ, ಭಗತ್ ಸಿಂಗ್, ಅರುಣಾ ಅಸಫ್ ಅಲಿ, ಪಂತುಲು, ಚಂದ್ರಶೇಖರ ಆಜಾದ್, ಚಿತ್ತರಂಜನ್ ದಾಸ್, ಬಟುಕೇಶ್ವರ ದತ್, ಸುಖದೇವ್, ಅಲ್ಲೂರಿ ಸೀತಾರಾಮ ರಾಜು, ಶ್ರೀ ಅರಬಿಂದೋ, ರಾಸ್ ಬೆಹಾರಿ ಬೋಸ್, ಸುರೇಂದ್ರನಾಥ್ ಟ್ಯಾಗೋರ್, ಸುಭಾಷ್ ಚಂದ್ರ ಬೋಸ್, ಲಿಯಾಕತ್ ಅಲಿ, ಅಸಫ್ ಅಲಿ, ಸರ್ದಾರ್ ಪಟೇಲ್, ಜವಾಹರಲಾಲ್ ನೆಹರು, ಶೌಕತ್ ಅಲಿ, ಸರೋಜಿನಿ ನಾಯ್ಡು ಮೊದಲಾದ ಅನೇಕಾನೇಕ ಹಿರಿಕಿರಿಯ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ತಮ್ಮ ಮಾರ್ಗಗಳಲ್ಲಿ ಇದ್ದರು. ಇವರನ್ನೆಲ್ಲ ಮೀರಿ ಆಗ ತಾನೇ ಭಾರತಕ್ಕೆ ಬಂದಿಳಿದ ಗಾಂಧೀಜಿ ಕೆಲವೇ ವರ್ಷಗಳಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚುಕ್ಕಾಣಿಯನ್ನು ಹಿಡಿಯುವಂತಾದದ್ದು ‘ ಮಹಾತ್ಮ’ ಎಂದು ರವೀಂದ್ರನಾಥ ಟ್ಯಾಗೋರರಂಥ ಧೀಮಂತರಿಂದ ಕರೆಸಿಕೊಂಡಿದ್ದು ಒಂದು ಅನನ್ಯ ಕಥೆ. ಅವರು ಈ ಬೆಳವಣಿಗೆಗೆ ಬಹುಮುಖ್ಯ ಕಾರಣ ಬಡವರ, ಕೆಳವರ್ಗದವರ, ಕಾರ್ಮಿಕರ ಬಗೆಗೆ ಇದ್ದ ಅವರ ಮಾನವೀಯ ಧೋರಣೆಗಳು, ಸಮಾನತೆಯ ದೃಷ್ಟಿಕೋನ, ಅಪಾರ ಸಹನೆ, ಶಾಂತಿ, ತ್ಯಾಗದ ಮನೋಭಾವ ಎಂತಲೇ ಹೇಳಬಹುದು. ಅದುವರೆಗೆ ನಾಯಕರು ಜನರ ಮಧ್ಯೆ ಜನರಿಗಾಗಿ ತಮ್ಮನ್ನು ಗುರುತಿಸಿಕೊಂಡಿದ್ದು ಕಡಿಮೆ, ತಿಲಕರಂಥ ಕೆಲವರನ್ನು ಹೊರತುಪಡಿಸಿ. ಹಾಗಾಗಿ ಗಾಂಧೀಜಿ ಜನನಾಯಕರಾದರು. ಅವರನ್ನು ಹಿಂಬಾಲಿಸಲು ಜನಸಾಗರವೇ ಕಾದು ನಿಲ್ಲುತ್ತಿತ್ತು. ಅವರ ಒಂದು ಹೇಳಿಕೆಯಿಂದ ಸತ್ಯಾಗ್ರಹ ಆರಂಭವಾಗುತ್ತಿತ್ತು ಅಥವಾ ನಿಲ್ಲುತ್ತಿತ್ತು!! ಇದು ಗಾಂಧೀಜಿಯವರ ಆಂತರಿಕ ಶಕ್ತಿ. ಅದು ಜನರ ಮನೋಬಲವನ್ನು ಹೆಚ್ಚಿಸಬಲ್ಲ ನೈತಿಕ ಶಕ್ತಿಯಾಗಿ ಇಡೀ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮಗೆ ಕಂಡುಬರುತ್ತದೆ. ಇಂದು ನಾವು ‘ ಜನಾಭಿಪ್ರಾಯ’ ಎಂಬ ಪದವನ್ನು ಆಗಾಗ ಬಳಸುತ್ತೇವೆ. ಇದನ್ನು ಮೊದಲು ನೀಡಿದವರು ಗಾಂಧೀಜಿ. ಅದನ್ನು ಅವರು ‘ public opinion’ ಎಂದು ಕರೆದರು ಹಾಗೂ ಆ ಜನಾಭಿಪ್ರಾಯವೇ ಮುಖ್ಯ ಎಂಬುದನ್ನು ಅವರು ಪ್ರತಿಪಾದಿಸಿದರು. ತಮ್ಮ ಅಭಿಪ್ರಾಯವನ್ನು ಎಂದೂ ಯಾರ ಮೇಲೂ ಅವರು ಹೇರಲಿಲ್ಲ. ಹಾಗೆಂದು ತಾವು ನಂಬಿದ, ನಿರ್ಧರಿಸಿದ ಹೆಜ್ಜೆಗಳಿಂದ ಅವರೆಂದೂ ಹಿಂದೆ ಸರಿಯಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಪದೇ ಪದೇ ಅವಮಾನಿತರಾದ ಸಂದರ್ಭವೇ ಇರಲಿ, ಅಲ್ಲಿನ ಭಾರತೇತರು ಅವರ ಮೇಲೆ ಮಾರಣಾಂತಿಕ ಪ್ರಹಾರ ಮಾಡಿದಾಗಲೇ ಇರಲಿ ಅಥವಾ ಭಾರತದಲ್ಲಿ ಅವರಿಗೆ ನೆಹರು, ಪಟೇಲ್, ಬೋಸ್ ಮೊದಲಾದವರೊಂದಿಗೆ ಭಿನ್ನಾಭಿಪ್ರಾಯಗಳಿದ್ದಾಗಲೂ ಅವರು ತಮ್ಮ ಹೆಜ್ಜೆಯಿಂದ, ನಿರ್ಧಾರದಿಂದ ಹಿಂದೆ ಸರಿದದ್ದಿಲ್ಲ. ಅವರ ಸತ್ಯಾಗ್ರಹ ತಂತ್ರ ದಕ್ಷಿಣ ಆಫ್ರಿಕಾದಲ್ಲಿ ಯಶಸ್ವಿಯಾದಂತೆ ಭಾರತದಲ್ಲೂ ಆಯಿತು.ಅವರು ಸತ್ಯಾಗ್ರಹಕ್ಕೆ ಕುಳಿತುಕೊಳ್ಳುತ್ತಾರೆಂದರೆ ಬ್ರಿಟಿಷರೊಂದಿಗೆ ಸ್ವಾತಂತ್ರ್ಯ ಹೋರಾಟಗಾರರೂ ಹೆದರುತ್ತಿದ್ದರು. ಇಂಥ ಅಹಿಂಸೆಯ ಹೋರಾಟ ಮಾರ್ಗವನ್ನು ಅದುವರೆಗೂ ಜಗತ್ತು ಕಂಡಿರಲಿಲ್ಲವಾದ್ದರಿಂದ ಅದನ್ನು ಎದುರಿಸುವ ಮಾರ್ಗವೇ ಇರಲಿಲ್ಲ. ಅದಕ್ಕೆ ತಲೆಬಾಗುವುದೊಂದೇ ಆಗಿದ್ದ ಮಾರ್ಗ!! ಈ ಸತ್ಯಾಗ್ರಹಕ್ಕೆ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ್ದ ಆಹಾರದ ಪ್ರಯೋಗವೇ ಪ್ರೇರಣೆಯೂ ಹಾಗೂ ಯಶಸ್ಸಿನ ಗುಟ್ಟೂ ಆಯಿತು ಎನ್ನಬಹುದು. ಅವರು ಅನ್ನಾಹಾರಗಳನ್ನು ಮಿತಿಗೊಳಿಸುವುದು, ಆಗಾಗ ತ್ಯಜಿಸುವುದರ ಮೂಲಕ ದೈಹಿಕ, ಮಾನಸಿಕ ಹಾಗೂ ನೈತಿಕ ಶಕ್ತಿಯನ್ನು ವರ್ಧಿಸಿಕೊಳ್ಳುವ ವಿನೂತನ ಪ್ರಯೋಗವನ್ನು ಅಲ್ಲಿ ಮಾಡಿದ್ದರು. ಅಲ್ಲದೇ ಅಲ್ಲಿ ತಮ್ಮ ಮನೆಯಿಂದ 6-7ಮೈಲು ದೂರದಲ್ಲಿರುತ್ತಿದ್ದ ಕಛೇರಿಗೆ, ಇತರ ಸ್ಥಳಗಳಿಗೆ ನಡೆದೇ ಹೋಗುತ್ತಿದ್ದುದು ಮುಂದೆ ಭಾರತದಲ್ಲಿ ದಂಡಿ ಮೊದಲಾದ ಸತ್ಯಾಗ್ರಹಗಳನ್ನು ಕಾಲ್ನಡಿಗೆಯಲ್ಲಿ ಮಾಡಲು ಸಾಧ್ಯವಾಯಿತು. ಇಂಥ ಅವರು ಕಾಣ್ಕೆ ಬಹಳ ಹಿರಿದು. ಅವರೊಬ್ಬ ದೂದದರ್ಶಿ. ಅವರ ಅನನ್ಯ ಸಂಗ್ರಾಮ ಮಾರ್ಗದಿಂದಲೇ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ದಿಕ್ಕು ದೊರೆಯಿತು. ಅವರ ಈ ಮಾರ್ಗವನ್ನು ವಿಶ್ವದ ಇತರ ರಾಷ್ಟ್ರಗಳ ನಾಯಕರು ತಮ್ಮ ನೆಲದ ಸ್ವಾತಂತ್ರ್ಯ ಹೋರಾಟಕ್ಕೆ ಬಳಸಿಕೊಂಡರು. ಅಮೇರಿಕಾದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಆಫ್ರಿಕಾದ ನೆಲ್ಸನ್ ಮಂಡೇಲಾ, ಮ್ಯಾನ್ಮಾರ್ ನ ಆಂಗ್ ಸಾನ್ ಸೂಕಿ ಮೊದಲಾದವರು ಗಾಂಧೀಜಿಯವರ ಮಾರ್ಗವನ್ನೇ ತಾವು ಆಯ್ದುಕೊಂಡಿದ್ದಾಗಿ ಹೇಳಿದ್ದಾರೆ. ಅವರದು ನಿರ್ಮೋಹಿ ಬಿಡುವಿಲ್ಲದ ದುಡಿತ. ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ ಅವರು ವಿರಮಿಸಲಿಲ್ಲ. ಪಂಜಾಬಿನ ಗಡಿ ಭಾಗದಲ್ಲಿ ನಡೆಯುತ್ತಿದ್ದ ದಂಗೆಯ ನಿರಾಶ್ರಿತರನ್ನು ಕುರಿತು ಭಾಷಣ ಮಾಡಲು ಹೋಗಿದ್ದರು. ಅವರು ಪ್ರತಿಪಾದಿಸಿಕೊಂಡು ಬಂದಿದ್ದ ಅವರ ಕನಸಿನ ಕೂಸಾದ ‘ ಗ್ರಾಮ ಸ್ವರಾಜ್ಯ’ ಅನುಷ್ಠಾನಕ್ಕೆ ಬರಲಿಲ್ಲ. ಒಬ್ಬ ಪತ್ರಕರ್ತ ಅವರನ್ನು ಈ ಬಗ್ಗೆ ಕೇಳಿದಾಗ ಅವರು, ‘ ಈಗ ನಾನೇನು ಮಾಡಲಿ? ಅದಕ್ಕೆ ಆ ಶಕ್ತಿಯಿದ್ದರೆ ಅದು ಉಳಿದುಕೊಳ್ಳುತ್ತದೆ ‘ ಎಂದು ವಿರಾಗಿಯಂತೆ ಮಾತನಾಡಿದ್ದರು. ಸುಮಾರು 75 ವರ್ಷಗಳ ನಂತರ ಅದಕ್ಕೆ ಆ ಶಕ್ತಿ ಇದೆ ಎಂದು ಮತ್ತೆ ಸಾಬೀತಾಗಿದೆ. ಇಂದು ಜಗತ್ತೇ ಗಾಂಧೀಜಿಯವರ ತತ್ವಗಳಿಗೆ ಮನಸೋಲುತ್ತಿದೆ. ಅಮೇರಿಕಾದ ಟ್ರಂಪ್, ಇಂಗ್ಲೆಂಡಿನ ಪ್ರಧಾನಿ ಗಾಂಧೀಜಿಯನ್ನು ಸ್ಮರಿಸುತ್ತಾರೆ. ಅವರನ್ನು ‘ ನೇಕೆಡ್ ಫಕೀರ್’ ಎಂದು ಕರೆದ ಜನರೇ ಅವರನ್ನು ಆರಾಧಿಸುತ್ತಿದ್ದಾರೆ. ಇದೇ ಕಾಲಚಕ್ರ. ಗಾಂಧಿ ಕೇವಲ ಒಂದು ಚಿಂತನೆಯಲ್ಲ. ಅದೊಂದು ಜೀವನ ವಿಧಾನ. ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಆಹಾರ, ನಿದ್ರೆ, ವ್ಯಾಯಾಮ, ಔಷಧಿ, ಸಂಯಮ ಮೊದಲಾದ ಎಲ್ಲ ಪ್ರಯೋಗಗಳು ಅವರ ನಿರಂತರ ಹೋರಾಟದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ನೆರವಾಗಿವೆ. ಅವರ ಈ ಯಶಸ್ವಿ ಪ್ರಯೋಗಗಳೇ ಸತ್ಯಾಗ್ರಹ, ಗುಡಿಕೈಗಾರಿಕೆ, ಸರ್ವೋದಯ, ಸ್ವದೇಶಿ ಮೊದಲಾದ ಅಸ್ತ್ರಗಳಾದವು, ಮಾರ್ಗಗಳಾದವು. ಕಳೆದೆರಡು ದಶಕಗಳಿಂದ ಭಾರತದಲ್ಲಿ ಮತ್ತೆ ಗಾಂಧಿ ಮಂತ್ರ ಅನುರಣಿಸುತ್ತಿರುವ ಒಳ್ಳೆಯ ಬೆಳವಣಿಗೆ ನಡೆದಿದೆ. ಜಾಗತೀಕರಣದ ಹೊಡೆತಕ್ಕೆ ನಲುಗಿದ ಭಾರತಕ್ಕೆ ಗಾಂಧೀಜಿಯವರ ಹಳ್ಳಿಗಳನ್ನು ಉದ್ಧರಿಸುವ ಸ್ವರಾಜ್ಯದ ಹಾದಿ ಬೇಕೆನ್ನಿಸುತ್ತಿದೆ. ಸಧ್ಯದ ಕೊರೊನಾ ಆಘಾತದಲ್ಲಂತೂ ವಿಶ್ವವೇ ಗಾಂಧಿಯುಗಕ್ಕೆ ತೆರೆದುಕೊಳ್ಳುವ ಹಾಗೆ ಕಾಣಿಸುತ್ತಿದೆ. 1885ರ ಹೊತ್ತಿಗೇ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಕಾರ್ಮಿಕರ ವಲಸೆಯನ್ನು ವಿರೋಧಿಸಿ ಮಾತನಾಡಿದ್ದರು. ನಾವು ವಾಸಿಸುವ ಸ್ಥಳದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕೆಂದು ಹೇಳುತ್ತ ಸಮುದಾಯ, ಆಶ್ರಮ ಪದ್ಧತಿಯ ವಾಸಕ್ಕೆ ತಮ್ಮವರನ್ನು ಅಣಿಗೊಳಿಸಿದ್ದರು. ಅದನ್ನೇ ಭಾರತದಲ್ಲಿ ಅವರು ಸಬರಮತಿ ಮೊದಲಾದ ಆಶ್ರಮಗಳನ್ನು ಸ್ಥಾಪಿಸಿ ಮುಂದುವರೆಸಿದ್ದರು. ಸರಳ ಜೀವನ ನಡೆಸುವುದು ಬಹಳ ಕಷ್ಟ. ಹಾಗಾಗಿಯೇ ಗಾಂಧೀಜಿ ಸಾಮಾನ್ಯರಿಗೆ ನಿಲುಕಿದಂತೆ ಆಳರಸರಿಗೆ ನಿಲುಕಲಿಲ್ಲ. ಇಂದು ಗಾಂಧೀಜಿಯ ಮಾರ್ಗ ಜಗತ್ತಿಗೆ ಉಳಿದ ಏಕೈಕ ಮಾರ್ಗವಾಗಿದೆ. ಅದರಲ್ಲಿ ಭಯೋತ್ಪಾದನೆ, ಬಡತನ, ಅಹಿಂಸೆ, ಅಶಾಂತಿ ಮೊದಲಾದ ಜಾಗತಿಕ ಪಿಡುಗುಗಳಿಗೆ ಮದ್ದಿದೆ. ಅವರೊಂದು ವ್ಯಕ್ತಿಯಲ್ಲಿ, ಶಕ್ತಿಯೂ ಅಲ್ಲ. ಅವರೊಂದು ಜೀವನ ಪದ್ಧತಿ, ಚಿಂತನಾ ಕ್ರಮ. ಕೊಂಡು ಉಣ್ಣುವುದು ಸುಲಭ. ಬೆಳೆದು ಉಣ್ಣುವುದು ಕಷ್ಟ. ಅವರು ಬೆಳೆದು ಉಂಡರು, ಉಟ್ಟರು, ಉಣ್ಣಿಸಿದರು. ಅದಕ್ಕೆ ಹಣಕ್ಕಿಂತ ಸಹನೆ, ಕರ್ತೃತ್ವ ಶಕ್ತಿ, ಪರಿಶ್ರಮ ಅಗತ್ಯ. ಇವ್ಯಾವೂ ಬೇಡವಾದ 20ನೇ ಶತಮಾನದ ಕೊನೆಯ ಹಾಗೂ 21ನೇ ಶತಮಾನದ ಆದಿಯ ಭಾರತಕ್ಕೆ ಈಗ ಗಾಂಧಿ ಬೇಕಾಗಿದ್ದಾರೆ ; ತಡವಾಗಿಯಾದರೂ. ಗಾಂಧೀಜಿಯವರನ್ನು ಭಾರತದಲ್ಲಿ ರಾಜಕೀಯ ನೆಲೆಯಲ್ಲಿ ಮಾತ್ರ ನೋಡಲಾಗುತ್ತದೆ. ಆದರೆ ಇಂದಿನ ಸಾಂಸ್ಕೃತಿಕ, ಸಾಹಿತ್ಯಕ ರಾಜಕೀಯಕ್ಕೂ ಅವರು ಪ್ರಸ್ತುತರಾಗುತ್ತಾರೆ. ಮಾಧ್ಯಮಗಳೂ ಸೇರಿದಂತೆ ಈ ಎಲ್ಲ ಕ್ಷೇತ್ರಗಳಲ್ಲಿ ನಡೆಯುವ ಭ್ರಷ್ಟಾಚಾರ , ಪ್ರಶಸ್ತಿಗಳಿಗಾಗಿ , ಪದವಿಗಳಿಗಾಗಿ, ಬೇರೆ ಬೇರೆ ಅಕಾಡೆಮಿಗಳ ಹುದ್ದೆಗಳಿಗೆ ಬರಹಗಾರರು, ಸಾಹಿತಿಗಳು, ಮಾಧ್ಯಮಗಳ ಮಂದಿ ಮೊದಲಾದವರು ಸದಾ ಓಲೈಕೆಗಳು, ಗುಂಪುಗಾರಿಕೆ, ಲಾಬಿಯಲ್ಲಿ ನಿರತರಾಗಿರುವವರು ಗಾಂಧೀಜಿಯವರ ಬಗ್ಗೆ, ಅವರ ಚಿಂತನೆಗಳ ಬಗ್ಗೆ ಮೊದಲು ಅರಿಯಲಿ. ರಾಜಕೀಯಕ್ಕಿಂತ ಈ ಕ್ಷೇತ್ರಗಳು ಹೆಚ್ಚು ಹೊಲಸಾಗಿವೆ. ದುರಾಚಾರಗಳು ಹೆಚ್ಚು ನಡೆಯುತ್ತವೆ ಎಂಬುದು ಸೂರ್ಯ ಸತ್ಯ. ***************************************** ನೂತನ ದೋಶೆಟ್ಟಿ
ಗಾಂಧಿ ವಿಶೇಷ ಗಾಂಧಿ ಮತ್ತು ನಾವು ನೀನು ನಶೆಯಲ್ಲಿ ಬಿದ್ದುದು ಒಂದೇ ಸಲಮೇಲೆದ್ದೆ ಇನ್ನೆಂದೂ ಬೀಳದ ಹಾಗೆ….ಸಾಮಾನ್ಯತೆಯಿಂದ ಏರಿದೆ ಅಸಾಮಾನ್ಯತೆಯೆಡೆಗೆಆತ್ಮಶಕ್ತಿಯ ಮೇರುವನ್ನೇರುತ್ತ ಮಹಾತ್ಮನಾದೆ…ನಿತ್ಯ ತಾರಕ ಮಂತ್ರವಾಯಿತು ರಾಮನಾಮ ನಿನಗೆಸತ್ಯಾಗ್ರಹ,ಅಹಿಂಸೆ,ಅಪರಿಗ್ರಹ ಮಂತ್ರದಂಡಗಳುಬಿದ್ದವರನ್ನೆತ್ತಿದೆ,ಸ್ವತಂತ್ರ ಭಾರತದಿ ಉಸಿರಾಡಿದೆವು ನಶೆಯಲ್ಲಿ ನಾವೂ ಹಲವು ಸಲ ಬಿದ್ದೆವು….ಮತ್ತೆ ಮತ್ತೆ ಬಿದ್ದೆವು ಮತ್ತೆಂದೂ ಏಳದ ಹಾಗೆ!ಮಾಣಿಕ್ಯದ ಬೆಲೆಯರಿಯದ ನಮಗೆ…ಸ್ವಾತಂತ್ರ್ಯವೂ ಮತ್ತೇರಿಸುವ ವಸ್ತುವಾಯಿತುಅಮಲಿನಲಿ ಕಳೆದುಕೊಂಡಿದ್ದೇವೆ ನಮ್ಮನ್ನು ನಾವೇಗಾಂಧಿ,ಕಲಿಯಲಿಲ್ಲ ಪಾಠ ತಪ್ಪುಗಳಿಂದ ನಾವೆಂದೂಗಾಂಧೀಜಿ ಪೆಟ್ಟಿಗೆ ತತ್ತರಿಸಿತು ಅಂಗ್ರೇಜಿ ಸಾಮ್ರಾಜ್ಯಅವ್ಯಕ್ತ ಅಸ್ತ್ರ ಪ್ರಯೋಗಕ್ಕೆ ಶರಣಾದದ್ದೇ ವಿಸ್ಮಯಮನುಷ್ಯನಿಗೆ ಮನುಷ್ಯನಾಗಿ ಸ್ಪಂದಿಸಿದರೀತಿಅನನ್ಯಕೋಟಿ ಭಾರತೀಯರ ಬಯಕೆಗೆತುಡಿವದನಿಯಾದೆನಿನ್ನ ಸಾಧನೆಗಳಿಗೆ ತವರಾಯಿತು ದಕ್ಷಿಣ ಆಫ್ರಿಕಾ!!ಹೆಜ್ಜೆ ಹೆಜ್ಜೆಗೆ ತೊಡರಿದ ಅಪಮಾನಗಳ ಸರಮಾಲೆಮುಂದಿನ ಶ್ರೇಷ್ಠ ಗೆಲುವಿಗೆ ಮೆಟ್ಟಿಲಾಯಿತು ಸೋಲೆಮಹಾತ್ಮನಾಗುವ ಹಾದಿಯ ಕಲ್ಲು ಮುಳ್ಳುಗಳಎಡಹಿದ್ದು ಇಲ್ಲೇ, ಅಪಾರ ಸಹನೆ ತೋರಿದ್ದು ಇಲ್ಲೇ!ಬರಲಿರುವ ಸ್ವಾತಂತ್ರ್ಯ ಹೋರಾಟಕ್ಕೆ ಪೂರ್ವಸಿದ್ಧತೆಸ್ವಾರ್ಥವಿನಿತಿಲ್ಲ, ನಿಷ್ಕಾಮ ದಳಗಳ “ಹೊಂದಾವರೆ”ಇರುವಲ್ಲಿಂದ ಇಲ್ಲಿವರೆ ಹೊರಳಿ ನೋಡದಿರು ತಂದೆಸ್ವಾರ್ಥದ ಹುಳುಗಳಾಗಿದ್ದೇವೆ ಎನ್ನಲು ಮನನಾಚಿದೆಹಣದ ಝಣ ಝಣ ಝಣತ್ಕಾರ ಕುಣಿಸುತಿದೆಅವನಿವನ,ಇವನವನ ಕಾಲೆಳೆಯುವುದೇ ದಂಧೆಪ್ರಕೃತಿ ಗೆ ಎದುರಾಗಿ ನಡೆದೀಗ ಫಲವುಣ್ಣುತ್ತಿದ್ದೇವೆ“ಕರೋನ”ಮಾರಣಹೋಮ ತಡೆಯಿಲ್ಲದೆಸಾಗಿದೆರಾಮರಾಜ್ಯದ ಸುಂದರಕನಸುಗಳ ಕಟ್ಟಿ ಕೊಟ್ಟೆ!!ನನಸಾಗಿಸುವ ಕಸುವು ನಮಗಿರಲಿಲ್ಲ ತಂದೆ!!!ಆಗಿದೆ ಅವ್ಯವಸ್ಥೆಯಗೂಡು,ಮನುಜನೆದೆಬೆಂಗಾಡು ******************************************* ಗಿರಿಜಾ ರಾಜ್
ಗಾಂಧಿ ವಿಶೇಷ ಗಾಂದೀಜಿ “ಸತ್ಯ, ಅಹಿಂಸೆ, ಸರ್ವೋದಯ, ಸತ್ಯಾಗ್ರಹ”ನಿಮ್ಮ ಈ ತತ್ವ ಗಳು ಇಂದಿಗೂ ಪ್ರಸ್ತುತಎಷ್ಟು ಸಲ ತಿಳಿ ಹೇಳಿದರೂ ಸಹ,ಕಲಿಯಲಿಲ್ಲ ಆದರೆ ಮಾನವ ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳುತನಗಿಷ್ಟಬಂದಂತೆ ತಿರುಚುವನು ವಾಸ್ತವವನ್ನುಆಗಬೇಕಿಲ್ಲ ಅವನಿಗೆ ಸರ್ವೋದಯಇಲ್ಲದಿದ್ದವರ ಕರೆ ಬರೀ ಅರಣ್ಯ ರೋದನ ಅಹಿಂಸೆ ಪದಕ್ಕೀಗ ಅರ್ಥವೇನುಹಿಂಸೆಯಲ್ಲೇ ನಡೆಯುತ್ತಿದೆ ಪ್ರಪಂಚಮನಸ್ಸು ಇರಬೇಕು ತಿಳಿಬಾನಿನಂತೆಪಡೆಯಬೇಕು ಶಾಂತಿಯಿಂದ, ಸತ್ಯಾಗ್ರಹದಿಂದ ತಿಳಿಹೇಳುವುದು ಹೇಗೆ, ಈಗಿನ ಬುದ್ದಿಜೀವಿಗಳಿಗೆಬರೀ ಅಕ್ಟೋಬರ್ ಅಲ್ಲಿ ನೆನೆದರೆ ಸಾಲದುಗಾಂಧೀಜಿ ಹಾಗು ಅವರ ತತ್ವಗಳನ್ನುಅಳವಡಿಸಿಕೊಳ್ಳಿ ಬದುಕಲ್ಲಿ, ಮತ್ತದು ಮರಳಿ ಬಾರದು **************************** ಡಾ. ಸಹನಾ ಪ್ರಸಾದ್
ಗಾಂಧಿ ವಿಶೇಷ ಹೇ ರಾಮ್ ಹೇ ರಾಮ್…..ಬಿಕ್ಕುತಿದೆ ನೋಡಲ್ಲಿ ಸತ್ಯಅಹಿಂಸೆ, ವಿಷಾದದ ಕತ್ತಲಲಿಎಲ್ಲಿಯೋ ಕೇಳುತಿದೆ ಹೇ ರಾಮ್……ಗರಿಗರಿ ನೋಟುಗಳೆಣಿಕೆಯೊಳಗೆಹೂತು ಹೋದ ಸತ್ಯಕೆ ಕಂಬನಿ ಮಿಡಿದುಕೂಗುತಿದೆ ಧನಿಯೊಂದು ಹೇ ರಾಮ್ಭಗವದ್ಗೀತೆ ಹಿಡಿಯುವಕಳಂಕಕರಗಳಿಗೆ ಬೆಚ್ಚಿದೆ ನ್ಯಾಯ ದೇವತೆಮತ್ತಷ್ಟೂ ಕೇಳುತಿಹುದು ಹೇ ರಾಮ್……ಬಲ್ಲಿದವರ ದಾಸ್ಯ ಸಂಕೋಲೆಯಲಿಬಡವರ ಸ್ವಾತಂತ್ರ್ಯ ನರಳಿಹುದುಕೇಳಿ ಬರುತಿದೆ ದನಿಯೊಂದು ಹೇ ರಾಮ್…..ಹೊರಟಿಹುದು ಹಿಂಸೆಯ ಮೆರವಣಿಗೆಶಾಂತಿ ಧೂತನ ಅಹಿಂಸಾ ಮುಖವಾಡ ಹೊತ್ತುಕನಸೊಳಗೂ ದನಿ ಕೇಳಿದೆ ಹೇ ರಾಮ್…..ರಾಮರಾಜ್ಯದ ಕನಸು ಹುಸಿಯಾದುದಕೆವಿಷಾದ ನಗೆ ಚೆಲ್ಲಿದೆಗೋಡೆ ಮೇಲಿನ ಗಾಂಧಿ ಚಿತ್ರಮತ್ತೆ ಕೇಳುತಿದೆ ಹೇ ರಾಮ್…… ******************************** ಕೆ.ಟಿ. ಜಯಶ್ರೀ
ಗಾಂಧಿವಿಶೇಷ ಸರ್ವೋದಯ ಪ್ರತಿಯೊಬ್ಬರ ಅಗತ್ಯಗಳನ್ನು ಪ್ರಕ್ರತಿ ಪೂರೈಸಬಲ್ಲದು ಆದರೆ ಆಕರ್ಷಣೆಗಳನ್ನು ಖಂಡಿತ ಅಲ್ಲ. ಇದು ರಾಷ್ಟ್ರಪಿತ ಗಾಂಧೀಜಿ ಯವರ ನುಡಿ ಮುತ್ತು. ಅವರ ಗುರಿ ಸ್ವಾತಂತ್ರ್ಯ ಸಂಪಾದನೆಯ ಜೊತೆ ಜೊತೆಗೆ ಆನಂತರದ ದಿನಗಳ ರಾಜಕೀಯ ಶಿಕ್ಷಣ ಆರ್ಥಿಕತೆ ಕೃಷಿ ಮತ್ತು ಕೈಗಾರಿಕೆಯ ಮುನ್ನೋಟ ಸಿದ್ಧಪಡಿಸಿ ತಮ್ಮಕನಸನ್ನು ನನಸಾಗಿಸಲೂ ರಚನಾತ್ಮಕ ಯೋಜನೆಗಳನ್ನು ಹಮ್ಮಿಕೊಂಡಿದ್ದರು . ಅವರ ಮೂಲ ಧ್ಯೇಯ ಸರ್ವರಿಗೆ ಸಮ ಬಾಳು ಸರ್ವರಿಗೆ ಸಮ ಪಾಲು. ರಾಷ್ಟೀಯ ಏಕತೆಯು ಸಾಮಾಜಿಕ ಸೌಹಾರ್ದತೆಯಿಂದ ಮಾತ್ರ ಸಾಧ್ಯ ಎಂಬುದು ಗಾಂಧೀಜಿಯವರ ನಿಲುವಾಗಿತ್ತು. ಕೋಮು ,ಅಸ್ಪ್ರಶ್ಯತೆ ,ಶೋಷಣೆ ರಹಿತ ಸಮಾಜದಿಂದ ನವ ಭಾರತ ನಿರ್ಮಾಣ ರಾಮ ರಾಜ್ಯ ಸಾಧ್ಯವೆಂದರು. ಈ ಸರ್ವೋದಯದ ಪರಿಕಲ್ಪನೆ ಗಾಂಧೀಜಿಯವರಿಗೆ ದೊರಕಿದ ರೀತಿ ಬಹಳ ಸ್ವಾರಸ್ಯಕರವಾದುದು.ಕಾನೂನು ಪದವೀಧರರಾಗಿದ್ದ ಗಾಂಧೀಜಿಯವರು 1893 ರಲ್ಲಿ ದಕ್ಷಿಣ ಆಫ್ರಿಕದ ಕಂಪನಿಯೊಂದರಲ್ಲಿ ಉದ್ಯೋಗ ನಿರ್ವಹಿಸಲು ಹೋಗಿದ್ದಾಗ ಜೋಹಾನ್ಸ್ ಬರ್ಗ್ನ ನಿಂದ ರೈಲು ಪ್ರಯಾಣ ಮಾಡುತ್ತಿದ್ದರು ಆಗ ಅವರ ಕಿರಿಯ ಮಿತ್ರ ಪೋಲಕ್ ಎಂಬುವರು ಈ ಪುಸ್ತಕ ನಿಮ್ಮೊಂದಿಗಿರಲಿ ಪ್ರಯಾಣದ ವೇಳೆ ಓದಿರಿ ನಿಮಗಿದು ಸಮ್ಮತವಾಗುವುದು ಎಂದು ಹೇಳಿ ರಸ್ಕಿನ್ ಬರೆದಿದ್ದ ಅಂಟು ದಿಸ್ ಲಾಸ್ಟ್ ,ಕಟ್ಟಕಡೆಯವನತ್ತ , ರೈಲು ಹೊರಡುತ್ತಿದ್ದಂತೆ ಪುಸ್ತಕದ ಹವ್ಯಾಸವಿದ್ದ ಗಾಂಧೀಜಿ ಓದಲಾರಂಭಿಸಿದರು ಅದನ್ನು ಮುಗಿಸುವವರೆಗೂ ಹೊರ ಪ್ರಪಂಚದ ಅರಿವೇ ಇರಲಿಲ್ಲ . ಇದರಿಂದ ಅವರು ಕಂಡುಕೊಂಡ ಮೂರು ಅಂಶವೆಂದರೆ 1,ವ್ಯಕ್ತಿಯ ಹಿತ ಆತನ ಸಮಾ ಜದ ಹಿತದಲ್ಲಿಯೆ ಅಡಗಿದೆ. 2.ವ್ಯಕ್ತಿಯಲ್ಲಿ ಮೇಲು ಕೀಳೆಂಬುದಿಲ್ಲ.ವೃತ್ತಿಯಲ್ಲೂ ಮೇಲು ಕೀಳೆಂಬುದಿಲ್ಲ ಸಮಾನ ಗೌರವ ಮುಖ್ಯ . 3. ಶ್ರಮ ಜೀವಿಗಳ ಜೀವನವೇ ಶ್ರೇಷ್ಟ . ಈ ಹೊತ್ತಿಗೆ ಯನ್ನು ತಮ್ಮ ಮಾತೃಭಾಷೆ ಗುಜರಾತಿಗೆ ಅನುವಾದಿಸಿದರು ಸರ್ವೋದಯವೆಂದು ಹೆಸರಿಟ್ಟರು . ಸುಮಾರು 2000 ವರ್ಷಗಳ ಹಿಂದೆ ಜಿನಾಚಾರ್ಯ ಸಮಂತಭದ್ರರು ಈ ಸರ್ವೋದಯ ಪವಿತ್ರವಾದುದು ಒಳ್ಳೆಯದು ಎಂದಿದ್ದಾರೆ.ಸರ್ವೋದಯದ ಹಾದಿಯನ್ನು ಅನುಸರಿಸಿದವರೆಂದರೆ, 1.ಮಹಾತ್ಮ ಗಾಂಧೀಜಿ- ಭಾರತಕ್ಕೆ ಬಂದ ಮೇಲೆ ಸಾಬರಮತಿ ಮತ್ತು ಸೇವಾಗ್ರಾಮಗಳಲ್ಲಿ ಶ್ರಮಾಧಾರಿತ ಜೀವನಕ್ರಮ ಜಾರಿಗೆ ತಂದರು. 2 ವಿನೋಬಾ ಭಾವೆಯವರು 1951_ರಲ್ಲಿ ತೆಲಂಗಾಣದ ಪೋಚಮ್ ಎಂಬ ಹಳ್ಳಿಯಲ್ಲಿ ಭೂದಾನ ಪ್ರಾರಂಭಿಸಿದರು. ೭೫೦೦೦ ಕಿಮೀ ಪಾದ ಯಾತ್ರೆಮಾಡಿ ಉಳ್ಳವರಿಂದ ಇಲ್ಲದವರಿಗೆ ಭೂಮಿ ಹಂಚಿದ್ದರು ಜೊತೆಗೆ ಸಂಪತ್ತಿನ ದಾನ ,ಜ್ಞಾನ ದಾನ ,ಶ್ರಮ ದಾನ, ವನ್ನು ಜಾರಿಗೊಳಿಸಿದರು. 3. ಜಯಪ್ರಕಾಶ್ ನಾರಾಯಣ್. ೧೯೨೯ರಲ್ಲಿ ಗಾಂಧೀಜಿಯವರನ್ನು ಭೇಟಿ ಮಾಡಿದ್ದರು . ೨೫ವರ್ಷ ಹೋರಾಟ ನಡೆಸಿ ೧೯೬೫ _ರಲ್ಲಿ ಶಾಂತಿಯುತ ಹೋರಾಟಕ್ಕಾಗಿ ಮ್ಯಾಗ್ಸೇಸ್ ಪ್ರಶಸ್ತಿ ಲಭಿಸಿತ್ತು. ಮಧ್ಯ ಪ್ರದೇಶದ ಚಂಬಲ್ ಕಣಿವೆ ಢಕಾಯಿತರನ್ನು ತಮ್ಮ ಆತ್ಮ ಶಕ್ತಿಯ ಮೂಲಕ ಪರಿವರ್ತಿಸಿದರು. ಪ್ರಪಂಚದಲ್ಲಿ ಎಲ್ಲರೂ ಒಳ್ಳೆಯದನ್ನು ಹೇಳಿದ್ದಾಗಿದೆ ಉಳಿದಿರುವುದು ಆಚರಣೆ ಮಾತ್ರ.-ಸ್ಯಾಕ್ರಟೀಸ್ ಲೋಕಾ ಸಮಸ್ತಸುಖಿನೋಭವಂತು ಎಂಬ ವೇ ದದಸಾರವೇ ಸರ್ವೋದಯದ ತಾತ್ಪರ್ಯವಾಗಿದೆ. ಕರೋನಾದಿಂದ ನಾವು ಸಾಕಷ್ಟು ಪಾಠ ಕಲಿತಿದ್ದೇವೆ ,ಇನ್ನು ಮುಂದಾದರೂ ನಮ್ಮಲ್ಲಿ ಮಾನವೀಯ ಮೌಲ್ಯಗಳು ಜಾಗೃತ ಗೊಳ್ಳಲಿ ಹಾಗೆ ಸದಾಶಯದ ಹಾದಿ ನಮ್ಮದಾಗಲಿ. ಜೈ ಭಾರತ್. ******************************* ಶ್ರೀವಲ್ಲಿ ಶೇಷಾದ್ರಿ.
ಗಾಂಧಿ ವಿಶೇಷ ಹೇ ರಾಮ್ !! ಸಣಕಲು ಕಡ್ಡಿರಪ್ಪನೆ ಕಣ್ಣಿಗೆ ರಾಚುವ ಎಲುಬಿನ ಹಂದರಸದಾ ನೆತ್ತಿಗೆ ಹತ್ತಿದ ಶಾಂತಿ ಮಂತ್ರ; ಸತ್ಯದಅಮಲುಕೈಯಲ್ಲೊಂದು ಊರುಗೋಲುಬೆನ್ನು ಎದೆ ಸುತ್ತಿದೊಂದು ಬಿಳಿ ಶಾಲುಕಣ್ಣಿಗಂಟಿದ ಚಷ್ಮಮೊಣಕಾಲ ಮೇಲೆ ಪಂಚೆಸುತ್ತ ನೆರೆದ ಒಂದಷ್ಟು ಜನರ ಸಂತೆ !ನನ್ನೀ ವೇಷಕ್ಕೆ ಆತ ಗುರಿಯಿಟ್ಟು ಹೊಡೆದ !ಸತ್ಯಕ್ಕಲ್ಲ; ಶಾಂತಿಗಲ್ಲ !ಹೋಗಲಿ ಬೇಕಾಗಿದ್ದೇನೆಂದುಆತ ತೂರಿದ ಗುಂಡಿಗೂ ಅರಿವಿಲ್ಲ !ಅದು ನನ್ನ ಗುಂಡಿಗೆಗೂ ಇನ್ನೂ ದಕ್ಕಿಲ್ಲ !ನನ್ನ ಕೊಂದದ್ದಷ್ಟೆ –ಆತ ತಿರುಗಿ ನೋಡಲಿಲ್ಲ !ನಿರ್ಭಾವುಕನಾದನೇ, ಗಳಗಳ ಅತ್ತನೇತಪ್ಪಿತಸ್ಥ ಮನೋಭಾವವಿತ್ತೇಅಥವಾ ಸೆಟೆದು ನಿಂತನೇನಾನು ಗಮನಿಸಲಿಲ್ಲ !! ಪ್ರಾಣ ಹೋದದ್ದಷ್ಟೆ !ಹೋಗುವಾಗ ಆ ಕ್ಷಣ ಹೊರಬಿತ್ತಲ್ಲ ಅದೇ“ಹೇ ರಾಮ್” !!ಬಾಯಿಂದ ಬಂದ ಮೂರಕ್ಷರದ ಈಪದದಲ್ಲಿಗುಂಡು ಎದೆಗೆ ಕಚ್ಚಿಕೊಂಡಆ ಕ್ಷಣಗಳನು ನಾನು ಮರೆಯಲು ಯತ್ನಿಸಿದಂತೆಲ್ಲದೇಶದ ಮೂಲೆ ಮೂಲೆಯಲ್ಲೂರಾಜಕೀಯದ ಬೇಳೆ ಬೇಯಿಸಲುನನ್ನ ಹೆಸರ ಬಳಸಿಯೇ ತಯಾರಾಗುತ್ತದೆಮೋಸದ ಅಡುಗೆ !ನನ್ನ ಈ ಸತ್ತಮೂಗಿಗೂ ರಪ್ ಎಂದು ರಾಚುತ್ತದೆಕಮಟು ವಾಸನೆ !ಗುಂಡು ತೂರಿದವನಿಗೂ ಇಲ್ಲಿ ಸಾವಿಲ್ಲ !ತೂರಿಸಿಕೊಂಡ ನನಗೂ !!ಗೋ ಹತ್ಯೆಗೆ ನನ್ನ ಹೆಸರುಹೆಂಡಕ್ಕೆ, ಸತ್ಯಕ್ಕೆ ಶಾಂತಿಗೆ ಅಹಿಂಸೆಗೂ ನನ್ನಹೆಸರಿನ ತಳುಕು !ಅನುಷ್ಠಾನಕ್ಕಿಲ್ಲದ ಉಪದೇಶಕ್ಕಷ್ಟೇಸೀಮಿತವಾದನನ್ನೀ ಹೆಸರಿಗಂಟಿದ ಇಂಥ ಪದಗಳಚಲಾವಣೆಯಲ್ಲಿಬಿಳಿ ಟೋಪಿ ಹಾಕಿದ ಮಂದಿಯ ಜೇಬಲ್ಲಿಝಣಝಣ ಕಾಂಚಾಣ !ಜನರ ತಲೆ ಸವರಿ ಕಟ್ಟಿದ ಗಗನಚುಂಬೀ ಭವನಗಳೇಇವರ ವಾಸಸ್ಥಾನ !ಗಾಂಧಿ ಜನಿಸಿದ ನಾಡಲ್ಲೇ ಗಳಿಗೆಗೊಂದುಕ್ಷಣಕ್ಕೊಂದು ಹಿಂಸೆ, ಅನಾಚಾರ, ಅತ್ಯಾಚಾರಗಳಸರಣಿ ಸರಣಿ ದೃಷ್ಟಾಂತ !ದೇಶದ ರಾಜಕೀಯದ ಪಡಸಾಲೆಯಲ್ಲಿ ನನ್ನ ಅಂತೆನನಗೆ ಗುಂಡಿಕ್ಕಿದವನದೇ ಮಂತ್ರ !!ನಮ್ಮಿಬ್ಬರನೂ ಇಲ್ಲಿ ಇಡಲಾಗುತ್ತದೆ ಸದಾಜೀವಂತ !ಮತ್ತೆ ಮತ್ತೆ ಹುಟ್ಟುತ್ತೇವೆ, ಸಾಯುತ್ತೇವೆ –ಮುಕ್ತಿಯಿರಲಿ;ನೆಮ್ಮದಿಯೂ ಇಲ್ಲದೇ ಅತಂತ್ರ !!ಸತ್ಯ ಶಾಂತಿ ಅಹಿಂಸೆಯ ಎನ್ನ ಕನಸುಗಳೆಲ್ಲಆಗುವುದೆಂದು ಊರ್ಜಿತ !?ಹೇ ರಾಮ್ ! ಹೇ ರಾಮ್ !ಆಗುವುದೆಂದು ಊರ್ಜಿತ ?! ****************************************** ಸುಜಾತಾ ಲಕ್ಮನೆ
ಗಾಂಧಿ ವಿಶೇಷ ‘ಹಿಂದ್ ಸ್ವರಾಜ್’ನಲ್ಲಿ ಗಾಂಧಿ ಚಿಂತನೆ : ತಮ್ಮ ‘ಹಿಂದ್ ಸ್ವರಾಜ್’ ಎಂಬ ಮಹತ್ವದ ಕೃತಿಯಲ್ಲಿ ಗಾಂಧೀಜಿಯವರು ಹೇಳುವ ಮಾತುಗಳನ್ನು ಓದಿದರೆ ಭಾರತಕ್ಕಾಗಿ ಎಂಥ ಒಂದು ಸರಳ ಬದುಕಿನ ಕನಸನ್ನು ಅವರು ಕಂಡಿದ್ದರು ಎಂಬುದರ ಅರಿವಾಗುತ್ತದೆ. ಈ ಕೃತಿಯಲ್ಲಿ ಅವರ ಆಲೋಚನೆಗಳು ಹೀಗೆ ಸಾಗುತ್ತವೆ : ‘ಆಧುನಿಕತೆ ಎಂದರೇನು ? ಸಾಮಾನ್ಯರು ಹೇಳುವಂತೆ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಹಾಕಿಕೊಳ್ಳುವುದೆ? ಹೊಸ ಹೊಸ ಯಂತ್ರಗಳನ್ನು ಆವಿಷ್ಕರಿಸಿ ನಮ್ಮ ಶಾರೀರಿಕ ಶ್ರಮವನ್ನು ಹಗುರಗೊಳಿಸಿಕೊಳ್ಳುವುದೆ? ಪಾಶ್ಚಾತ್ಯ ನಾಗರಿಕತೆ ಇಂದು ಎತ್ತ ಸಾಗಿದೆ, ನಮ್ಮ ದೇಶಕ್ಕೆ ಅವರು ತಂದ ನಾಗರಿಕತೆ ನಮ್ಮ ಬದುಕನ್ನು ಎಷ್ಟರ ಮಟ್ಟಿಗೆ ಉತ್ತಮಗೊಳಿಸಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಒಮ್ಮೆ ಆಲೋಚಿಸಿ ನೋಡಿ. ಎತ್ತಿನ ಗಾಡಿಯಲ್ಲೋ ಕಾಲು ನಡಿಗೆಯಲ್ಲೋ ಊರಿಂದೂರಿಗೆ ಸಂಪರ್ಕವಿಟ್ಟುಕೊಂಡು ನಮ್ಮ ಜನರು ಸುಂದರ ಬದುಕನ್ನು ಸಾಗಿಸುತ್ತಿದ್ದ ಕಾಲವೊಂದಿತ್ತು. ಪಾಶ್ಚಾತ್ಯರಿಂದ ಬಂದ ಆಧುನಿಕತೆಯು ರೈಲುಗಳ ಮೂಲಕ ಭಾರತದ ಉತ್ತರ-ದಕ್ಷಿಣ ತುದಿಗಳನ್ನು ಜೋಡಿಸ ಒಂದಾಗಿಸಿತೆಂಬ ಭಾವನೆ ನಮ್ಮದು. ಆದರೆ ಉತ್ತರದಲ್ಲಿ ಹುಟ್ಟಿಕೊಂಡ ಅನೇಕ ಸಮಸ್ಯೆಗಳು ಕೂಡಾ ರೈಲುಗಳ ಮೂಲಕ ಶರವೇಗದಲ್ಲಿ ದಕ್ಷಿಣಕ್ಕೆ ರವಾನೆಯಾಗಲು ಸಾಧ್ಯ ಎಂಬ ಅದರ ಇನ್ನೊಂದು ಮುಖದ ಬಗ್ಗೆ ನಾವು ಯಾಕೆ ಆಲೋಚಿಸಲಿಲ್ಲ? ಆಧುನಿಕತೆಯ ಹೆಸರಿನಲ್ಲಿ ಇಂದು ಜಗತ್ತು ಭೋಗಮಯವಾಗುತ್ತಿದೆ. ಮೋಸ-ವಂಚನೆ-ಸುಲಿಗೆಗಳ ಮೂಲಕ ಹಣ ಗಳಿಸುವುದೊಂದೇ ಜನರ ಗುರಿಯಾಗಿ ಬಿಟ್ಟಿದೆ. ಊರಿನ ಹಿರಿಯರ ಮೂಲಕ ಜಗಳಗಳು ಇತ್ಯರ್ಥವಾಗಿ ನ್ಯಾಯ ಸಿಗುತ್ತಿದ್ದ ಕಾಲವೊಂದಿತ್ತು. ಜಗಳ ಯಾರ ಮಧ್ಯೆ ತಾನೇ ಬರುವುದಿಲ್ಲ? ರಕ್ತ ಹಂಚಿಕೊಂಡು ಹುಟ್ಟಿದ ಅಣ್ಣ-ತಮ್ಮಂದಿರು ಜಗಳವಾಡುವುದಿಲ್ಲವೆ? ಸಿಟ್ಟು ತಣಿದಾಗ ಎಲ್ಲವೂ ಸಹಜವಾಗಿ ಸರಿಯಾಗುತ್ತದೆ. ಆದರೆ ಆಂಗ್ಲರು ನಮಗೆ ಕಾನೂನು, ನ್ಯಾಯವಾದಿಗಳು ಮತ್ತು ಕೋರ್ಟು-ಕಛೇರಿಗಳನ್ನು ಕೊಡುಗೆಯಾಗಿತ್ತರು. ನಾವು ಜಗಳ ಮಾಡಿದರೆ ನಮ್ಮಲ್ಲಿರುವ ಹಣದ ಬಗ್ಗೆ ಮಾತ್ರ ಆಸಕ್ತಿ ಹೊಂದಿದ ಮೂರನೆಯವರಾದ ವಕೀಲರು-ನ್ಯಾಯಾಧೀಶರುಗಳು ಇಷ್ಟ ಬಂದಷ್ಟು ಕಾಲ ನಮ್ಮನ್ನು ಸತಾಯಿಸಿ ಕೊನೆಗೆ ತೀರ್ಪಿನ ಹೆಸರಿನಲ್ಲಿ ಏನೋ ಒಂದು ನಿರ್ಧಾರವನ್ನು ಘೋಷಿಸುತ್ತಾರೆ. ಹಾಗೆಯೇ ಸಹಜವಾದ ಔಷಧಿ ಮತ್ತು ಚಿಕಿತ್ಸೆಗಳು ನಮ್ಮ ಒಂದು ಜೀವನ ಕ್ರಮವಾಗಿತ್ತು. ಎಷ್ಟೋ ರೋಗಗಳು ಕಾಲ ಬಂದಾಗ ತಮ್ಮಷ್ಟಕ್ಕೆ ತಾವೇ ಗುಣವಾಗುತ್ತಿದ್ದವು. ನಮ್ಮ ದೇಹದ ಆರೋಗ್ಯವನ್ನು ನೋಡಿಕೊಳ್ಳುವ ಹೊಣೆ ನಮ್ಮದಲ್ವೆ? ನಾವು ನಮ್ಮ ಆಹಾರ-ವ್ಯಾಯಾಮಗಳ ಬಗ್ಗೆ ಅಸಡ್ಡೆ ತೋರಿಸಿದರೆ ಅದರಿಂದುಂಟಾಗುವ ತೊಂದರೆಗಳನ್ನು ಸಹಿಸಿಕೊಳ್ಳಲು ನಮ್ಮ ದೇಹ-ಮನಸ್ಸುಗಳು ಸಿದ್ಧವಾಗಿರಬೇಕು. ಆದರೆ ಆಧುನಿಕತೆಯು ನಮಗೆ ವಿವಿಧ ವೈದ್ಯರುಗಳನ್ನೂ ವೈವಿಧ್ಯಮಯ ಔಷಧಿಗಳನ್ನೂ ಕೊಟ್ಟಿದೆ. ಪರಿಣಾಮವಾಗಿ ನಾವು ನಮ್ಮ ದೇಹಬಲ ಮತ್ತು ಮನೋಬಲಗಳನ್ನು ಕಳೆದುಕೊಂಡು ಗುಲಾಮರಾದೆವು. ಆಧುನಿಕತೆಯ ಇನ್ನೊಂದು ಕೊಡುಗೆಯಾದ ಮಾಧ್ಯಮಗಳು ಶ್ರೀಸಾಮಾನ್ಯನನ್ನು ಮಾಹಿತಿಗಳ ಜಾಲದಲ್ಲಿ ಸಿಲುಕಿಸಿ ನಿಜವನ್ನು ಮರೆಮಾಚಿ ಆತನನ್ನು ಭ್ರಮಾಲೋಕಕ್ಕೆ ಒಯ್ಯುವಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ. ಸತ್ಯಾಗ್ರಹದ ಮೂಲಕ ನಾವು ಬಯಸಿದ್ದನ್ನು ಸಾಧಿಸಲು ಹೇಗೆ ಸಾಧ್ಯ ಎಂದು ಆಧುನಿಕ ಮನಸ್ಸು ಕೇಳಬಹುದುೆ. ಯಾಕೆಂದರೆ ಅದಕ್ಕೆ ಗೊತ್ತಿರುವುದು ಆಯುಧಗಳ ಪ್ರಯೋಗ ಮಾತ್ರ. ಪಾಶ್ಚಾತ್ಯರು ನಮಗೆ ಇತಿಹಾಸದ ಘಟನೆಗಳನ್ನು ದಾಖಲಿಸುವ ವಿದ್ಯೆಯನ್ನು ಹೇಳಿ ಕೊಟ್ಟರು. ಏನು ಮಹಾ ಇತಿಹಾಸವೆಂದರೆ ? ಕೇವಲ ರಾಜ ಮಹಾರಾಜರುಗಳು ಅಧಿಕಾರ ದಾಹದಿಂದ ಕುರುಡರಾಗಿ ನಡೆಸಿದ ಯುದ್ಧಗಳ ಮತ್ತು ಹರಿಸಿದ ನೆತ್ತರ ಹೊಳೆಗಳ ಕಥೆ ತಾನೆ ? ನಿಜವಾದ ಇತಿಹಾಸವನ್ನು ಸೃಷ್ಟಿಸಿದವರು ಕೋಟಿ ಕೋಟಿ ಸಂಖ್ಯೆಯಲಿರುವ ನಮ್ಮ ರೈತರು, ಕೆಲಸಗಾರರು, ಕಲಾವಿದರು, ಕವಿಗಳು ಮತ್ತು ಚಿತ್ರಕಾರರು ಅಲ್ಲವೆ? ಅವರು ಬೆಳೆಸಿಕೊಂಡ ಆತ್ಮಬಲಗಳ ಮುಂದೆ ತಮ್ಮ ಮನಸ್ಸನ್ನೇ ಗೆಲ್ಲಲಾಗದ ದುರ್ಬಲ ವ್ಯಕ್ತಿತ್ವದ ರಾಜರುಗಳೆಲ್ಲಿ? ಆತ್ಮ ಬಲವಿಲ್ಲದವರು ಹಿಂಸೆಯ ಮೂಲಕ ಕಟ್ಟುವ ರಾಜ್ಯ ಎಷ್ಟು ಕಾಲ ಉಳಿಯಬಲ್ಲುದು? ಸತ್ಯಾಗ್ರಹಕ್ಕೆ ಇರುವ ಬೆಂಬಲ ಆತ್ಮಬಲದ್ದು. ಇದರ ಮೂಲಕ ಗೆಲುವು ಸಾಧಿಸಲು ಸಾಧ್ಯವಿಲ್ಲವೆಂಬುದು ಮೂರ್ಖತನ. ಇಂಥ ನೂರಾರು ಮೌಲ್ಯಗಳಿಂದ ತುಂಬಿರುವ ಗಾಂಧೀಜಿಯ‘ಹಿಂದ್ ಸ್ವರಾಜ್’ ಎಲ್ಲರೂ ಓದಲೇ ಬೇಕಾದ ಒಂದು ಅಮೂಲ್ಯ ಕೃತಿ. ಸಮಾಜದಲ್ಲಿ ಒಳ್ಳೆಯದನ್ನು ಅಹಿಂಸಾತ್ಮಕವಾಗಿ ಸಾಧಿಸಲು ಆಧುನಿಕ ಮನುಷ್ಯನಿಗೆ ಗಾಂಧೀಜಿಯವರು ನೀಡಿದ ಸಂದೇಶಗಳ ಸಾರಸತ್ವವನ್ನು ಹೀಗೆ ಸಂಗ್ರಹಿಸಿ ಹೇಳಬಹುದು ೧. ಒಳ್ಳೆಯದು ಎನ್ನುವುದು ಬಸವನ ಹುಳದಂತೆ ಪಯಣಿಸುತ್ತದೆ. ಕಾಯುವ ತಾಳ್ಮೆ ಇರಲಿ. ೨. ಅಹಿಂಸೆಯೆಂಬುದು ನಿಧಾನವಾಗಿ ಬೆಳೆಯುವ ಮರ. ಅದರ ಬೆಳವಣಿಗೆ ಕಣ್ಣಿಗೆ ಕಾಣಿಸದು. ಆದರೆ ಅದು ಖಚಿತ. ೩. ಬರೇ ಒಳ್ಳೆಯತನದಿಂದ ಅಷ್ಟೇನೂ ಉಪಯೋಗವಿಲ್ಲ. ಅದರ ಜತೆಗೆ ವಿವೇಕ, ಧೈರ್ಯ ಮತ್ತು ಸಂಕಲ್ಪಶಕ್ತಿಗಳಿರಬೇಕು. ಆತ್ಮನಿಷ್ಠೆಯ ಜತೆಗೆ ವಿವೇಚನೆಯನ್ನೂ ಬೆಳೆಸಿಕೊಳ್ಳ ಬೇಕು. ೪. ತತ್ವವಿಲ್ಲದ ರಾಜಕೀಯ, ಶ್ರಮವಿಲ್ಲದ ಸಂಪತ್ತು, ನೈತಿಕತೆಯಿಲ್ಲದ ವಾಣಿಜ್ಯ, ಗುಣವಿಲ್ಲದ ವಿದ್ಯೆ, ವಿವೇಕವಿಲ್ಲದ ಸಂತೋಷ, ಮಾನವೀಯತೆಯಿಲ್ಲದ ವಿಜ್ಞಾನ, ಮತ್ತು ತ್ಯಾಗವಿಲ್ಲದ ಆರಾಧನೆ- ಇವು ನಾವು ಸದಾ ದೂರವಿರಬೇಕಾದ ಏಳು ಮಹಾ ಪಾಪಗಳು. ೫. ನನ್ನ ಅನುಮತಿಯಿಲ್ಲದೆ ಯಾರೂ ನನ್ನನ್ನು ನೋಯಿಸಲಾರರು. ೬. ಸೇಡು ಅನ್ನುವುದು ಯಾವಾಗಲೂ ಇಡೀ ಜಗತ್ತನ್ನು ಕುರುಡಾಗಿಸಿಯೇ ಕೊನೆಯಾಗುತ್ತದೆ. ೭. ದುರ್ಬಲರು ಯಾವತ್ತೂ ಕ್ಷಮಿಸಲಾರರು. ಕ್ಷಮಿಸುವ ಶಕ್ತಿಯಿರುವುದು ಸಬಲರಿಗೆ ಮಾತ್ರ. ೮. ನೀವು ನಾಳೆಯೇ ಸಾಯುವಿರಿ ಎಂಬ ಆಲೋಚನೆಯೊಂದಿಗೆ ಕೆಲಸ ಮಾಡಿ. ನಿಮ್ಮ ಜೀವನ ಶಾಶ್ವತವೇನೋ ಎಂಬಂತೆ ಜ್ಞಾನ ಸಂಪಾದಿಸಿ. ೯. ನಿಮ್ಮನ್ನು ಹುಡುಕಿಕೊಳ್ಳುವ ಅತ್ಯುತ್ತಮ ಉಪಾಯವೆಂದರೆ ಬೇರೆಯವರ ಸೇವೆಯಲ್ಲಿ ನಿಮ್ಮನ್ನು ನೀವೇ ಮರೆಯುವುದು. ೧೦. ಅವರು ನಿಮ್ಮನ್ನು ಮೊದಲು ಕಡೆಗಣಿಸಬಹುದು. ನಂತರ ನಗಬಹುದು, ನಂತರ ಹೋರಾಡಬಹುದು, ನಂತರ ನೀವೇ ಗೆಲ್ಲುವಿರಿ. ೧೧. ನೀವು ಮಾನವತೆಯಲ್ಲಿ ನಂಬಿಕೆ ಕಳೆದುಕೊಳ್ಳಬಾರದು; ಮಾನವತೆ ಒಂದು ಸಾಗರ. ಸಾಗರದ ಕೆಲವು ಬಿಂದುಗಳು ಕೊಳಕಾಗಿ ಬಿಟ್ಟರೆ ಸಾಗರ ಕೊಳಕಾಗುವುದಲ್ಲ. ಆರೋಗ್ಯವೇ ಮನುಷ್ಯನ ನಿಜವಾದ ಐಶ್ವರ್ಯ. ಬೆಳ್ಳಿ ಬಂಗಾರಗಳ ಗಟ್ಟಿಗಳಲ್ಲ. ೧೨. ಸಂತೋಷ ಸಿಗುವುದು ನೀವು ಆಲೋಚಿಸುವ, ಹೇಳುವ ಮತ್ತು ಮಾಡುವ ವಿಷಯಗಳಲ್ಲಿ ಸಾಮರಸ್ಯವಿದ್ದಾಗ. ೧೩. ಕ್ರಿಯೆಯ ವಿನಃ ನೀವು ಎಲ್ಲೂ ತಲುಪಲಾರಿರಿ. ೧೪. ಭವಿಷ್ಯವು ನೀವು ವರ್ತಮಾನದಲ್ಲಿ ಏನು ಮಾಡುತ್ತೀರಿ ಎಂಬುದನ್ನು ಅವಲಂಬಿಸಿದೆ. ೧೫. ಭೂಮಿಯು ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸುತ್ತದೆ. ಪ್ರತಿಯೊಬ್ಬನ ದುರಾಸೆಯನ್ನಲ್ಲ. ೧೬. ಶಕ್ತಿಯು ದೈಹಿಕ ಸಾಮರ್ಥ್ಯದಿಂದ ಬರುವುದಲ್ಲ. ಅಸೀಮ ಮನೋಬಲದಿಂದ ಮಾತ್ರ. ೧೭. ನಿಮ್ಮ ಕ್ರಿಯೆಗಳ ಪರಿಣಾಮವೇನೆಂದು ನಿಮಗೆ ಗೊತ್ತಿರಲಾರದು. ಆದರೆ ನೀವು ಏನೂ ಮಾಡದಿದ್ದರೆ ಪರಿನಾಮವೇ ಇರಲಾರದು. ೧೮. ಸ್ವಾತಂತ್ರ್ಯಕ್ಕೆ ನಿಜವಾದ ಬೆಲೆ ಬರುವುದು ತಪ್ಪು ಮಾಡಲಿಕ್ಕೂ ಸ್ವಾತಂತ್ರ್ಯವಿದ್ದರೆ ಮಾತ್ರ. ೧೯. ನೀವು ಮುಷ್ಟಿಯನ್ನು ಬಿಗಿ ಹಿಡಿದು ಕೈ ಕುಲುಕಲಾರಿರಿ. *********************************** ಡಾ.ಪಾರ್ವತಿ ಜಿ.ಐತಾಳ್
ಗಾಂಧಿ ವಿಶೇಷ ‘ನಮ್ಮ ಮಹಾತ್ಮ’ ಎಸ್. ವಿಜಯಗುರುರಾಜ ಗುಜರಾತಿನ ಸುಪುತ್ರಕಸ್ತೂರ್ ಬಾ ರ ಬಾಳಮಿತ್ರಆಫ್ರಿಕನ್ ಹಕ್ಕುಗಳಿಗಾಗಿ ಹೋರಾಡಿಅಜೇಯನಾದ ಬ್ಯಾರಿಸ್ಟರ್ ಮೇಲು ಕೀಳಿನ ಕತ್ತಲೆಯ ಕಳೆದುಐಕಮತ್ಯ ಸಾಧಿಸಿದ ಸಾಧಕಸಾಬರ್ಮತಿ ಆಶ್ರಮದಿ ನೆಲೆಸಿಚರಕದಿ ನೂಲು ನೇಯ್ದ ಗುರಿಕಾರಮಹೋನ್ನತ ಧ್ಯೇಯಗಳ ಹರಿಕಾರ ಉಪ್ಪಿನ ಸತ್ಯಾಗ್ರಹದಿ ದಂಡೀಯಾತ್ರೆಯಪಾದ ಸವೆಸಿದ ದಂಡನಾಯಕಉಪವಾಸ ಸತ್ಯಾಗ್ರಹಗಳ ಕೈಗೊಂಡುಹರಿಜನ ಅಸ್ಪೃಷ್ಯತೆಗಳ ನಿವಾರಿಸಿಮದ್ಯಪಾನ ವಿರೋಧಿ ಚಳುವಳಿಗಳ ಮುನ್ನಡೆಸಿದ ಮಹಾತ್ಮ ಕಸ್ತೂರ್ ಬಾ ಆಶ್ರಮದ ಆಶ್ರಯಧಾತೆಅನಾಥೆ ಲಕ್ಷಿö್ಮಯ ಲಾಲಿಸಿದ ಮಹಾಮಾತೆಸೇವಾಗ್ರಾಮದ ಕರ್ಮಭೂಮಿಯಲಿಕುಷ್ಠ ರೋಗಿಗಳ ಪಾಲಿಸಿದ ಶುಶ್ರೂಷಕಿಖಾದಿಯ ಒರಟಿನಿಲಿ ಮೃದು ಮನಸ ಸಾಧ್ವಿಧರ್ಮ ತ್ಯಾಗಗಳ ಸೇವಾ ಸಂಘರ್ಷಗಳಲಿಬಾಪುವಿನ ಬಲಗೈ ಆದ ಬಾ ಭಾರತಾಂಬೆಯ ಸೆರೆಯ ಬಿಡಿಸಲುಬ್ರಿಟಿಷರ ಕಪಿಮುಷ್ಟಿ ಸಡಿಸಲುಸೆರೆಮನೆಯೇ ಮನೆಯಾಗಿಸಿದಬಾಪೂ ಬಾ ರ ಜೀವನ ಯಾನಸ್ವಾತಂತ್ರö್ಯ ತಂದಿತ್ತು ಸ್ವಾತಂತ್ರö್ಯ ಗೀತೆ ಹಾಡಿಹೇ ರಾಮ್ ಹೇ ರಾಮ್ಎನ್ನುತ ಅಮರನಾದನಮ್ಮ ಮಹಾತ್ಮ ******************************
ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ
ಲೇಖನ ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ ಡಾ. ಸಹನಾ ಪ್ರಸಾದ್ ಇಂದಿನ ಜೀವನ ಬಹಳ ಸ್ಪರ್ಧಾತ್ಮಕವಾದುದು.ನಮ್ಮ ಯುವ ಜನಾಂಗವನ್ನು ನೋಡಿದಾಗ ಕೆಲವೊಮ್ಮೆ “ ಅಯ್ಯೋ ಪಾಪ” ಎನ್ನಿಸುವುದುಂಟು.ಎಷ್ಟು ಓದಿದರೂ ಸಾಲದು, ಎಷ್ಟು ಕಷ್ಟಪಟ್ಟರೂ, ಎಷ್ಟು ಅಂಕೆಗಳು ತೆಗೆದರೂ ಸಾಕಾಗುವುದಿಲ್ಲ. ಯಾವಾಗಲೂ ಒತ್ತಡದ ಬದುಕು. ಚಿಕ್ಕ ತರಗತಿಗಳಿಂದಲೇ ಶುರು.ತರಹ ತರಹದ ಕ್ಲಾಸುಗಳು, ಮನೆ ಪಾಠಗಳು, ಒಂದು ತರಗತಿಯಿಂದ ಇನ್ನೊಂದಕ್ಕೆ ಯಾವಾಗಲೂ ಓಟ. ನರ್ಸರಿಗೆ ಸೇರುವ ಮೊದಲೇ “ಕೋಚಿಂಗ್”. ವಿಧ ವಿಧವಾದ ಬಣ್ಣಗಳು,ಆಕೃತಿಗಳು, ಪದ್ಯಗಳನ್ನು ಕಂಠ ಪಾಠ ಮಾಡಬೇಕು. ತಾಯಿ ಪ್ರೀತಿಯಿಂದ ಮುದ್ದು ಮಾಡುತ್ತಾ ಕಲಿಸಬೇಕಾದ ವಿಷಯಗಳನ್ನು ಈಗ ದುಡ್ಡು ಕೊಟ್ಟು ಶಿಕ್ಷೆಯ ತರಹ ಕಲಿಸುವ ತರಗತಿಗಳು, ಅವನ್ನು ಅಳು ಮುಖದಿಂದ ಕಲಿವ ಮಕ್ಕಳು.ಸಂಜೆ ಆರಾಮವಾಗಿ ಆಟವಾಡಿಕೊಂಡಿರಬೇಕಾದ ಮಕ್ಕಳು ತರಗತಿಯಲ್ಲಿರುವುದನ್ನು ನೋಡಿದರೆ ಬೇಸರವಾಗುತ್ತದೆ, ಆಟವಾಡಿ ಬೆಳೆಯಬೇಕಾದ ಎಳೆ ಮನುಸ್ಸುಗಳು ಈ ರೀತಿಯ ಸತತವಾದ ಧಾಳಿಯಿಂದ ಕೊರಗುವ ಸಾಧತೆಗಳೂ ಇವೆ. ಎಷ್ಟೋ ಸಲ ತಾವು ಮಾಡಲಾಗದಿದ್ದನ್ನು ಮಕ್ಕಳಿಂದ ಮಾಡಿಸುವ, ತಮ್ಮ ಅಪೂರ್ಣ ಕನಸುಗಳನ್ನು ಅವರ ಮೂಲಕ ಸಾಕಾರಗೊಳಿಸುವ ಪೋಷಕರೂ ಸಿಗುತ್ತಾರೆ.ನಮ್ಮ ಮಕ್ಕಳ ಅಭಿವೃದ್ಧಿ ಎಲ್ಲಾ ರೀತಿಯಲ್ಲೂ ಆಗಲಿ, ಅವರ ಬೆಳವಣಿಗೆ ಪರಿಪೂರ್ಣವಾಗಲಿ ಎಂದು ಸದ್ದುದ್ದೇಶ ಹೋಂದಿರುವ ಮಾತಾ ಪಿತೃಗಳೂ ಇದ್ದಾರೆ. ಕೆಲವು ಮಕ್ಕಳು ಅತಿಯಾಗಿ ಚೂಟಿಯಾಗಿರುತ್ತಾರೆ.ಅಂತಹ ಮಕ್ಕಳನ್ನು ಹಿಡಿಯುವುದು ಬಲು ಕಷ್ಟ., ತಂಟೆ ಮಾಡದೆ, ಏನೋ ಒಂದು ತೊಂದರೆಗೆ ಸಿಕ್ಕಿಹಾಕಿಕೊಳ್ಳದೆ ಇದ್ದರೆ ಆ ಮಕ್ಕಳಿಗೆ ಸಮಾಧಾನವೇ ಇಲ್ಲ. ಅಂತಹ ಮಕ್ಕಳಿಗೆ ಈ ರೀತಿಯ ತರಗತಿಗಳಿಗೆ ಸೇರಿಸುವುದರಿಂದ ಸ್ವಲ್ಪ ಮಟ್ಟಿಗೆ ಅವರ ತುಂಟತನ ಕಡಿಮೆಯಾಗುತ್ತದೆ ಹಾಗೂ ಜ್ನಾನಾಭಿವೃದ್ಧಿ ಕೂಡ ಆಗುತ್ತದೆ.“ಮಕ್ಕಳಿಗೆ ಕಷ್ಟ ಎಂದರೇನು, ಅವರಿಗೆ ಇನ್ನೇನು ಕೆಲಸವಿರುತ್ತದೆ? ಎಲ್ಲ ಕಡೆ ಕರೆದೊಯ್ಯಲು,ಕೇಳಿದ್ದೆಲ್ಲಾ ಕೊಡಿಸಲು ನಾವಿದ್ದೇವೆ, ಕಲಿಯಲು ಏನು ಕಷ್ಟ” ಎಂದು ಕೇಳುವ ಪೋಷಕರು ಬಹಳ. ಅದು ನಿಜವೇ ಆದರೂ, ಮಕ್ಕಳ ಇಷ್ಟ ಹಾಗೂ ಆಸಕ್ತಿಯನ್ನೂ ಗಮನಿಸಿ ಪೋಷಕರು ಮುಂದುವರೆಯುವುದು ಮುಖ್ಯ.ಎಷ್ಟೋ ಜನ ವಿದ್ಯಾರ್ಥಿಗಳಿಗೆ ವಿಜ್ಞಾನ ಕಷ್ಟ. ಅದರಲ್ಲೂ ಗಣಿತವೆಂದರೆ ಅಲರ್ಜಿ.ಅಂತಹ ಮಕ್ಕಳನ್ನು ಬಲವಂತವಾಗಿ ವಿಜ್ಞಾನ ಓದುವುದಕ್ಕೆ ನೂಕಿದರೆ ಅದು ತುಂಬಾ ತಪ್ಪು.ಎಷ್ಟೂ ಜನ ಪೀಯೂಸೀಯಲ್ಲಿ ಗಣಿತ ತೆಗೆದುಕೊಂಡು, ಒದ್ದಾಡಿ, ಆಮೇಲೆ ತಮ್ಮ ತಮ್ಮ ಆಸಕ್ತಿಯ ಮೇಲೆ ಬೇರೆ ವಿಷಯ ಓದುವುದುಂಟು. ಕೆಲವು ಪೋಷಕರು ಇದನ್ನು ಅರ್ಥ ಮಾಡಿಕೊಂಡು ಮಕ್ಕಳಿಗೆ ಉತ್ತೇಜನ ನೀಡಿದರೆ,, ಇನ್ನೂ ಕೆಲವರು ಇದರಿಂದ ತಮ್ಮ ಅಭಿಮಾನಕ್ಕೆ ಧಕ್ಕೆ ಎಂದೇ ಭಾವಿಸುತ್ತಾರೆ. ಖ್ಯಾತ ವೈದ್ಯರೊಬ್ಬಳ ಮಗಳು ಕಲಾ ವಿಭಾಗಕ್ಕೆ ಸೇರಲು ಬಂದಿದ್ದಳು.ಅವಳು ಮುಂಚೆ ಓದಿದ್ದು ವಿಜ್ಞಾನ. ಅಂಕೆಗಳೂ ಸುಮಾರು ಚೆನ್ನಾಗಿಯೇ ಬಂದಿತ್ತು. ಸಾಮಾನ್ಯವಾಗಿ ಕೇಳುವಂತೆ ಯಾಕೆ ಈ ಬದಲಾವಣೆ ಎಂದು ವಿಚಾರಿಸಿದಾಗ , ಅವಳು ಹೇಳಿದ್ದು “ ನನಗೆ ಮುಂಚಿಂದಲೂ ಕಲೆಯ ಬಗ್ಗೆ ಒಲವು,ಅದರಲ್ಲೂ ಆಂಗ್ಲ ಸಾಹಿತ್ಯ ನನ್ನ ಅಚ್ಚು ಮೆಚ್ಚಿನ ವಿಷಯ.ಆದರೆ ನಮ್ಮ ಕುಟುಂಬದಲ್ಲಿ ಎಲ್ಲರೂ ವಿಜ್ಞಾನ ಓದಿದವರೆ, ವೈದ್ಯ ಅಥವಾ ಎಂಜಿನಿಯರ್ ಆಗಿರುವರೆ. ಇದುವರೆಗೂ ನಾನು ತೆಗೆದಿರುವ ಅಂಕಿಗಳಿಗೂ, ನನ್ನ ಆಸಕ್ತಿಗೂ ಏನೂ ಸಂಭಂಧವಿಲ್ಲ.ಅದೆಲ್ಲ ಟ್ಯೂಷನ್ ಮಹಿಮೆ ಅಷ್ಟೇ”. ಅವಳ ತಾಯಿಯ ಮುಖ ಕೋಪದಿಂದ ಗಂಟಿಕ್ಕಿತ್ತು.” ನಾನು ನನ್ನ ಆಸ್ಪತ್ರೆಯನ್ನು ಇವಳು ಮುಂದುವರೆಸುತ್ತಾಳೆ,ಅದನ್ನು ಬೆಳೆಸುತ್ತಾಳೆ ಎಂದು ಕನಸು ಕಟ್ಟಿದ್ದೆ.ಇವಳಿಗೆ ಅದರ ಪರಿವೆಯೇ ಇಲ್ಲ”. ಅವರ ಮಾತಿಗೆ ಸೊಪ್ಪು ಹಾಕದೆ ಆ ಹುಡುಗಿಗೆ ಸೀಟ್ ಕೊಡುವುದೆಂದು ನಿರ್ಧರಿಸಿದೆವು. ಆದರೆ ಸ್ವಲ್ಪ ದಿನದ ನಂತರ ತಿಳಿದುದೆಂದರೆ ಅವಳಿಗೆ ಬಲವಂತವಾಗಿ ಇಂಜಿನೀರಿಂಗ್ ಸೀಟ್ ಕೊಡಿಸಿದ್ದರು.ಕೆಲವು ವರುಷದ ನಂತರ ಸಿಕ್ಕಾಗ ಹೇಗಿದ್ದೆಯ ಎಂದು ಕೇಳಿದರೆ, ಅವಳ ಮಾತಿನಲ್ಲಿ ರೋಷ ಹೆಪ್ಪುಗಟ್ಟಿತ್ತು. ಎಲ್ಲ ಸೆಮ್ಮಿಸ್ಟರ್ನಲ್ಲೂ “ ಬ್ಯಾಕ್ ” ಇದೆ.ನಮ್ಮ ಮನೆಯವರ ಸಮಾಧಾನಕ್ಕಾಗಿ ಓದುತ್ತಿದ್ದೇನೆ. ಆದರೆ ಮನಸ್ಸೆಲ್ಲ ಸಾಹಿತ್ಯದ ಮೇಲೆ. ಕೆಲವೊಮ್ಮೆ, ಅವರಿಗೆ ಬುದ್ಧಿ ಕಲಿಸಲಿಕ್ಕಾದರೂ ಇದೆ ರೀತಿ ನಪಾಸಾಗುತಲೇ ಇರೋಣ ಎನಿಸುತ್ತದೆ”. ಅವಳ ಬಿಚ್ಚು ಮನಸ್ಸಿನ ಮಾತು ಕೇಳಿ ಎದೆ ಧಸಕ್ಕೆಂದಿತು. “ ನೋಡಮ್ಮ, ಇದು ನಿನ್ನ ಬದುಕು. ನೀನು ಇದೇ ರೀತಿ ಅಂಕಿಗಳು ತೆಗೆಯುತ್ತಿದ್ದರೇ , ನಿನಗೆ ಒಳ್ಳೆಯ ಕೆಲಸ ಸಿಗುವುದು, ನೀನು ನಿನ್ನ ಸಾಹಿತ್ಯದ ಕಡೆ ಗಮನ ಕೊಡುವುದಕ್ಕಾಗುವುದೇ ಇಲ್ಲ.ಯೋಚಿಸು, ಅವರಿಗೆ ಬುದ್ಧಿ ಕಲಿಸಲು ಹೋಗಿ ನಿನ್ನ ಬದುಕನ್ನು ನೀನೆ ನಾಶ ಮಾಡಿಕೊಳ್ಳಬೇಡ “ ಎಂದು ಹೇಳಿದಾಗ ಅವಳ ಕಣ್ಣಲ್ಲಿ ಅರ್ಥವಾದ ಭಾವ ಕಂಡು ಬಂದಿತು.”. ಅಡ್ಮಿಷನ್ ಸಮಯದಲ್ಲಿ ಮಕ್ಕಳ ಜತೆ ಪೋಷಕರಿಗೂ “ ಕೌನ್ಸಿಲ್ಲಿಂಗ್” ಬೇಕಾಗುತ್ತದೆ.ಮಕ್ಕಳಿಗೆ ನಮ್ಮ ಬದುಕಿನ ಒಂದು ಭಾಗದಂತೆ ನೋಡದೆ, ಅವರಿಗೂ ಅವರದೇ ಆದ ವ್ಯಕ್ತಿತ್ವ ಇದೆಯೆಂದು ಅರಿತು ಅವರನ್ನು ಗೌರವಿಸಿದಾಗ, ಅವರ ಬದುಕೂ ಸುಂದರ, ನಮ್ಮ ಬದುಕೂ ಸಾರ್ಥಕ! *****************************************
ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ Read Post »


