ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಸುಭಾಷಿತಗಳ ಸ್ವಾರಸ್ಯ

ಲೇಖನ ಸಂಗಾತಿ  ಸುಭಾಷಿತಗಳ ಸ್ವಾರಸ್ಯ ಎಂ. ಆರ್. ಅನಸೂಯ ಬಾಲ್ಯದಲ್ಲಿ ಅವಳು ಮನೆಯ ಹಿರಿಯರು ತಮ್ಮ ಮಾತು  ಕತೆಗಳಲ್ಲಿ ಸಮಯಾನುಸಾರ ಬಳಸುತ್ತಿದ್ದ ಗಾದೆಗಳನ್ನು  ಕೇಳಿಸಿಕೊಂಡೇ  ಬೆಳೆದವಳು. ಹೀಗಾಗಿಯೇ ನೂರಾರು  ಗಾದೆಗಳು ಅವಳ ನಾಲಿಗೆಯ ತುದಿಯಲ್ಲಿದ್ದವು. ಅವಳ ಹಿರಿಯರು ಅನಕ್ಷರಸ್ಥರಾದರೂ ಸಹ ಅವರ ನಾಲಿಗೆಯ ಮೇಲೆ ಸರಾಗವಾಗಿ ಬಳಸಲ್ಪಡುತ್ತಿದ್ದ ಗಾದೆಗಳ ಕುರಿತ ಮೆಚ್ಚುಗೆಯ ಜೊತೆಯಲ್ಲೇ ಹಿರಿಯರ ಸಂದರ್ಭೋಚಿತ ಗಾದೆಗಳ ಬಳಕೆಯ ವಾಕ್ಚಾತುರ್ಯಕ್ಕೆ ಬೆರಗಾಗುತ್ತಿದ್ದಳು ಗಾದೆಗಳಂತೆ ಸರ್ವಜ್ಞನ ಹಾಗೂ ಬಸವಣ್ಣನ ವಚನಗಳು ನಮ್ಮ ನಾಡಾಡಿಗಳ ಮಾತುಕತೆಗಳ ನಡುವೆ  ನುಸುಳಲು  ಕಾರಣ ಅವುಗಳ ಭಾಷೆಯ  ದೇಸಿತನ  ಮತ್ತು ಸರಳತೆ  ಎಂಬುದರಲ್ಲಿ ಎರಡು ಮಾತಿಲ್ಲ. ಗಾದೆಗಳನ್ನು ನಾಣ್ಣುಡಿ ಹಾಗೂ ಲೋಕೋಕ್ತಿ ಎಂದು ಸಹಾ  ಕರೆಯಲಾಗುತ್ತದೆ. ಗಾದೆಗಳು ಜನಸಾಮಾನ್ಯರ ನಡುವೆ ಬಳಕೆಯಲ್ಲಿರುವ  ಮಾತುಗಳಾಗಿರುವುದೇ ಇದಕ್ಕೆ ಕಾರಣ. ಈ ಗಾದೆಗಳು ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಸತ್ಯಗಳೇ ಆಗಿದ್ದೂ  ಜನರ  ಸಂಸ್ಕೃತಿಯ  ಪ್ರತಿಧ್ವನಿಗಳಾಗಿವೆ. ಅವಳು ಪ್ರೌಢಶಾಲೆಗೆ ಕಾಲಿಟ್ಟಾಗ ಅಲ್ಲಿ ಪ್ರತಿನಿತ್ಯ ಶಾಲಾ ಆರಂಭದ ವೇಳೆಯಲ್ಲಿ ಸಾಮೂಹಿಕವಾಗಿ ರಾಷ್ಟ್ರಗೀತೆ ಹಾಡಿದ ನಂತರ ಸರದಿಯ ಮೇಲೆ ಹತ್ತನೇ ತರಗತಿಯಲ್ಲಿ ಓದುವ ವಿದ್ಯಾರ್ಥಿನಿಯರು ಅಂದಿನ ವರ್ತಮಾನ ಪತ್ರಿಕೆ  ವಾಚನ ಮಾಡುವ ಪರಿಪಾಠವಿತ್ತು. ಮೊಟ್ಟಮೊದಲಿಗೇ ಅಂದಿನ ಸುಭಾಷಿತವನ್ನು ಓದಬೇಕು. ನಂತರ ಅಂದಿನ ಪತ್ರಿಕೆಯ ಮುಖ್ಯಾಂಶಗಳನ್ನು ಓದಬೇಕು. ಅಂತ್ಯದಲ್ಲಿ ಕ್ರೀಡಾ ವಾರ್ತೆಗಳು. ಸರದಿಯ ಪ್ರಕಾರ ಬಂದ ವಾರ್ತಾ ವಾಚಕಿಯು ಶಾಲೆಗೆ ಮುಂಚಿತವಾಗಿ ಬಂದು ಪತ್ರಿಕೆಯ ಮುಖ್ಯಾಂಶಗಳನ್ನು ಗುರುತು ಮಾಡಿಕೊಂಡು ಸಿದ್ಧಳಾಗ ಬೇಕಿತ್ತು. ಪ್ರತಿದಿನದ ಸುಭಾಷಿತ ಅಥವಾ ಸೂಕ್ತಿಗಳನ್ನು   ತನಗೆ ತಿಳಿದಂತೆ  ಅರ್ಥೈಸಿಕೊಳ್ಳುತ್ತಿದ್ದಳು.  ಪ್ರತಿದಿನದ ಸುಭಾಷಿತಗಳನ್ನು ಕಿವಿಗೊಟ್ಟು ಕೇಳುತ್ತ ತನಗರಿವಿಲ್ಲದೆ ಅವಳು ಅದರ ಅಭಿಮಾನಿಯಾಗಿಬಿಟ್ಟಳು. ಅದ್ಯಾವ ಪರಿಯ ಗೀಳು ಹತ್ತಿತೆಂದರೆ  ಒಂದು ನೋಟ್ ಬುಕ್ ನ್ನು ಕೊಂಡುಕೊಂಡು  ಅದರಲ್ಲಿ  ದಿನಪತ್ರಿಕೆಯಲ್ಲಿ ಬರುತ್ತಿದ್ದ ಸುಭಾಷಿತಗಳನ್ನು  ಬರೆದುಕೊಳ್ಳತೊಡಗಿದಳು. ಹತ್ತನೇ ತರಗತಿಯವರೆಗು ಮುಂದುವರಿದ ಈ ಹವ್ಯಾಸವನ್ನು ಆ ನೋಟ್ ಬುಕ್ ಕಳೆದುಹೋಗುವ ತನಕ ಮುಂದುವರಿಸಿ ಕೊಂಡು ಬಂದಿದ್ದಳು. ಮುಂದೆ ಆ  ಹವ್ಯಾಸಕ್ಕೆ ಪೂರ್ಣ ವಿರಾಮ ಇಟ್ಟರೂ, ಸುಭಾಷಿತವನ್ನು ಓದಿ ಆಸ್ವಾದಿಸುವ ಅಭಿರುಚಿ ಮಾತ್ರ ಇಂದಿನವರೆಗೂ ಮುಂದುವರಿದಿದೆ.  ಸುಭಾಷಿತಗಳು ಈಗ ಮುಖಹೊತ್ತಿಗೆ( F B )ಯಲ್ಲಂತೂ ಪ್ರೇರಣಾತ್ಮಕ ಅಥವ ಧನಾತ್ಮಕ ಉಲ್ಲೇಖಗಳೆಂಬ ಹೊಸ ದಿರಸನ್ನು  ಧರಿಸಿವೆ. ಬುದ್ಧ ನುಡಿಗಳು  ಹಾಗೂ ಝೆನ್ ನುಡಿಗಳು ಅದ್ಭುತ ! ಇಂತಹ ಉಲ್ಲೇಖಗಳನ್ನು ಓದುತ್ತ ಮನನ ಮಾಡಿಕೊಳ್ಳುವ ಖಯಾಲಿ ಈಗಲೂ  ಅವಳಿಗೆ ಕಡಿಮೆಯಾಗಿಲ್ಲ. ಧನಾತ್ಮಕ ಉಲ್ಲೇಖಗಳು ಒಮ್ಮೊಮ್ಮೆ ಎಷ್ಟು ಪರಿಣಾಮ ಬೀರುತ್ತವೆಯೆಂದರೆ ನಮ್ಮ ಬದುಕಿನ ದೃಷ್ಟಿಕೋನವನ್ನು ಬದಲಿಸುವ ಕಸುವನ್ನು ಹೊಂದಿರುತ್ತವೆ.  “ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ. ನಿಮ್ಮ ಮೂಲಕ ಬಂದಿದ್ದಾರೆಯೇ ಹೊರತು ನಿಮ್ಮಿಂದಲ್ಲ. ನಿಮ್ಮ ಜೂತೆಗೆ ಇದ್ದರೂ ನಿಮಗೆ ಸೇರಿದ್ದಲ್ಲ. ಅವರ ದೇಹಗಳಿಗೆ ನೀವು ಮನೆಯಾಗಬಹುದೇ ಹೊರತು ಆತ್ಮಗಳಿಗಲ್ಲ”  ಕವಿ ಖಲೀಲ್ ಗಿಬ್ರಾನ್ ನ ಈ ಮಾತುಗಳು ಮಕ್ಕಳಲ್ಲಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡು ನಿರಾಶರಾದಂಥ ತಂದೆ ತಾಯಿಗಳ ಮನಸ್ಥಿತಿಗೆ ಪರಿಹಾರ ಸೂಚಕವಾಗಿ ಅವರ ಚಿಂತನೆಯ ದಿಕ್ಕನ್ನು ಬದಲಾಯಿಸಬಹುದು. “ಪದೇ ಪದೇ ಕಷ್ಟಗಳು ಬರುತ್ತಿವೆ ಅಂದ್ರೆ ನಿನ್ನ ಹಣೆಯ ಬರಹ ಸರಿ ಇಲ್ಲ ಅಂತ ಅಲ್ಲ. ಮುಂದೆ ನಿನಗೋಸ್ಕರ ತುಂಬಾ ಒಳ್ಳೆಯ ದಿನಗಳು ಕಾಯುತ್ತಿವೆ ಎಂದರ್ಥ” ನಮಗೆ ದಿಕ್ಕು ತೋಚದ ಕ್ಷಣಗಳಲ್ಲಿ ಈ ಮೇಲಿನ ಮಾತು ಆಶಾಕಿರಣದಂತೆ ಕಂಡು ಭರವಸೆ ತುಂಬುತ್ತಲೇ ಹೊಸ ಹೊಳಹುಗಳನ್ನು ತೋರುತ್ತವೆ. ಆಶಾವಾದಿ ಮಾತ್ರ ಪ್ರತಿ ಕಷ್ಟದಲ್ಲೂ ಅವಕಾಶಗಳನ್ನು ಕಂಡುಕೊಳ್ಳುತ್ತಾನೆ ಎಂಬ ಮಾತು ಅದೆಷ್ಟು ನಿಜ ! ಕೆಲವೊಂದು ಉಲ್ಲೇಖಗಳನ್ನು ಓದಿದಾಗ ಅವು ನಮ್ಮ ಅಂತರಾಳದ ಅನಿಸಿಕೆಗಳೇನೋ ಎಂಬಂತೆ ಆಪ್ತವಾಗಿ ಬಿಡುತ್ತವೆ.ಕೆಳಗಿನ ಸಾಲುಗಳು ಅದೆಷ್ಟು ಆಪ್ತವಾಗುತ್ತವೆ ” ನನ್ನ ಬಿಟ್ಟು ಹೋದವರಿಗೆ ಎರಡು ವಿಷಯ ಹೇಳೋಕೆ  ಇಷ್ಟಪಡ್ತೀನಿ. ಒಂದು sorry ಮತ್ತೊಂದು Thank you Sorry  ಯಾಕಂದ್ರೆ ನಾನು ನಿನ್ನನ್ನು ತುಂಬಾ ಹಚ್ಕಂಡಿದ್ದಕ್ಕೆ Thank you  ಯಾಕಂದ್ರೆ ನನಗೆ ಏಕಾಂಗಿಯಾಗಿ ಬದುಕುವುದು ಹೇಗೆ ಅಂತ ತೋರಿಸಿದ್ದಕ್ಕೆ “ ಸಶಕ್ತ ಉಲ್ಲೇಖಗಳು ನಮ್ಮನ್ನು ನಾವೇ ಸ್ವವಿಮರ್ಶೆಗೆ ತೊಡಗಿಸಿಕೊಳ್ಳುವಲ್ಲಿ ದಾರಿ ತೋರುತ್ತವೆ. ಕೆಳಗಿರುವ ಸಾಲುಗಳು ಇದಕ್ಕೊಂದು ನಿದರ್ಶನ.  “ನಿನ್ನ ಬಲಹೀನತೆಗಳ ಅರಿವಿದ್ದರೆ ನೀನು ಅತ್ಯಂತ ಬಲಶಾಲಿ ನಿನ್ನ ದೋಷಗಳನ್ನು ಗುರುತಿಸುವಿಯಾದರೆ ಬಲು ಸಾಹಸಿ  ಮತ್ತು ನಿನ್ನ ತಪ್ಪುಗಳನ್ನು ನೀನೇ ತಿದ್ದಿಕೊಳ್ಳುವೆಯಾದರೆ ಬಲು ಬುದ್ಧಿವಂತ” ರಚನಾತ್ಮಕ ಉಲ್ಲೇಖಗಳು ನಾವು ಆತ್ಮವಂಚನೆ ಮಾಡಿ ಕೊಳ್ಳದಂತೆ ತಡೆಯುವಂಥ ತಾಕತ್ತನ್ನು ಹೊಂದಿರುತ್ತವೆ.  “ಮನಸ್ಸಿನ ನ್ಯಾಯಾಲಯದಲ್ಲಿ  ಮನಸ್ಸಾಕ್ಷಿಯೇ ನ್ಯಾಯಾಧೀಶ” “ಜನ್ಮಪೂರ್ತಿ ಪುಸ್ತಕ ಓದಿದೆ ಏನು ಕಲಿಯಲಾಗಲಿಲ್ಲ   ಹತ್ತಿರದಿಂದ ಕೆಲವು ಮುಖಗಳ ಓದಿದೆ ನೂರಾರು ಪಾಠ ಕಲಿತೆ ”  ಬದುಕು ಕಲಿಸುವ ಪಾಠ ಇದೇ ಅಲ್ಲವೇ ?  ಸಕಾರಾತ್ಮಕವಾದ ದೃಷ್ಟಿಕೋನವುಳ್ಳ ಉಲ್ಲೇಖಗಳು ನಮ್ಮೊಳಗಿನ ಹುಡುಕಾಟಕ್ಕೆ ಅನುವು ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತವೆ.   ” ದೇವರನ್ನು ಯಾರೋ ಕೇಳಿದರು ನಿನ್ನ ಪ್ರೀತಿ ಮತ್ತು  ಮನುಷ್ಯನ ಪ್ರೀತಿಯ ನಡುವೆ ಏನು ವ್ಯತ್ಯಾಸವಿದೆ ಎಂದು?  ದೇವರು ಹೇಳಿದ ಆಗಸದಲ್ಲಿ ಹಾರುವ ಹಕ್ಕಿಯ ನೋಡಿ ಖುಷಿ ನೋಡುವುದೇ ನನ್ನ ಪ್ರೀತಿ. ಅದೇ ಹಕ್ಕಿಯನ್ನು ಪಂಜರದಲ್ಲಿ ಇರಿಸಿಕೊಳ್ಳುವುದೇ ಮನುಷ್ಯನ ಪ್ರೀತಿ”   ಅದೆಷ್ಟು ಅರ್ಥಗರ್ಭಿತ ! ಅಂತಃಕರಣಕ್ಕೆ ಹತ್ತಿರವಾಗುವ  ಉಲ್ಲೇಖಗಳು ನಮ್ಮ ಬದುಕಿನ ಹಿನ್ನೋಟ ನೋಡಲು ಅವಕಾಶ ಒದಗಿಸುತ್ತವೆ “ಜೀವನದಲ್ಲಿ ಖುಷಿಯಾಗಿರಬೇಕು ಅಂದ್ರೆ ಯಾರಿಂದಲೂ ಏನನ್ನು ಬಯಸಬಾರದು”   ಹಾಗೂ “ಯಾವುದೇ ಒಬ್ಬ ವ್ಯಕ್ತಿಯ ಮೇಲೆ  ಅತಿ ನಂಬಿಕೆಯಿಟ್ಟು ನೋಡಿ  ‌. .  ಅದೇ ವ್ಯಕ್ತಿ ಬೇರೆ ಯಾರನ್ನೂ ನಂಬಲಾರದ ಹಾಗೆ  ಪಾಠ ಕಲಿಸುತ್ತಾನೆ “ ಮನ ಮುಟ್ಟುವ ಉಲ್ಲೇಖಗಳು ನಾವು ನಡೆದು ಬಂದ  ಹಾದಿಯನ್ನು ನೆನಪಿಸುತ್ತ ಮನವನ್ನು ಆರ್ದ್ರಗೊಳಿಸಿ ಕಾಠಿಣ್ಯತೆಯನ್ನು ಕರಗಿಸುವ ಸಹೃದಯಿ ಸಾಲುಗಳಾಗ ಬಹುದು. ಕೆಲವು ಉಲ್ಲೇಖಗಳೂ ನಮ್ಮ ಮನದಾಳದ ಮಾತುಗಳ ಮಾರ್ದ್ವನಿಗಳಾಗಿ ಹೊರಹೊಮ್ಮಿಬಿಡುತ್ತವೆ. “ಕಾಲಿಗಾದ ಗಾಯ ಹೇಗೆ ನಡೆಯಬೇಕೆಂದು ಕಲಿಸಿದರೆ ಮನಸ್ಸಿಗಾದ ಗಾಯ ಹೇಗೆ ಬದುಕಬೇಕೆಂದು ಕಲಿಸುತ್ತದೆ      ಕೆಲವು ಭಾವಪೂರ್ಣ ಸೂಕ್ತಿಗಳಂತೂ ನಮ್ಮ ಸಂಕಟದ  ಸಂದರ್ಭಗಳಲ್ಲಿ ಸಖಿಯಂತೆ ಸಾಂತ್ವನಗೊಳಿಸ ಬಲ್ಲವು   ಕೆಳಗಿನ ಸಾಲುಗಳನ್ನು ನೋಡಿ ” ನಿನಗಾದ ನೋವನ್ನು ಮರೆತುಬಿಡು ಆದರೆ ಅದರಿಂದ ಕಲಿತ  ಪಾಠವನ್ನು ಎಂದಿಗೂ ಮರೆಯಬೇಡ “ ನನಗೆ ನಾನೇ ಎನ್ನುವಂಥ ಉತ್ಕಟ ಕ್ಷಣಗಳಲ್ಲಿ ಏಕಾಂಗಿ ಯಾಗಿ ನಿಂತಿರುವಾಗ ಸ್ಪೂರ್ತಿದಾಯಕ ಉಲ್ಲೇಖಗಳು ನಮ್ಮ ಜೊತೆಯಾಗಿ ಕೈ ಹಿಡಿದು ನಡೆಸುತ್ತವೆ.  ಡಿ.ವಿ.ಜಿ. ಅವರ  ಈ ಸಾಲುಗಳು ಚೈತನ್ಯ ತುಂಬುವ ಪರಿಗೆ ನಾವು ಬೆರಗಾಗಲೇ ಬೇಕು. ” ಓರ್ವನೇ ನಿಲುವಿಗೆ ನೀನುತ್ಕಟ  ಕ್ಷಣಗಳಲಿ ಧರ್ಮಸಂಕಟಗಳಲಿ ಜೀವನ ಸಮರದಲಿ ನಿರ್ವಾಣ ದೀಕ್ಷೆಯಲಿ , ನಿರ್ಯಾಣ  ಘಟ್ಟದಲ್ಲಿ ನಿರ್ಮಿತ್ರನಾಗಿರಲು  ಕಲಿ  –  ಮಂಕುತಿಮ್ಮ ಇಂತಹ ಮಹಾಶಕ್ತಿ ಲೋಕೋಕ್ತಿಗಳಿಗಿರುವುದರಿಂದಲೇ ಸಹೃದಯಿಗಳ ಮನಗಳಲ್ಲಿ ನೆಲೆ ನಿಂತು ಆತ್ಮವಿಶ್ವಾಸ ತುಂಬಿ  ಸಾಧನೆಗೆ  ಮೌನವಾಗಿ ಪೂರಕವಾಗಿವೆ. ಇನ್ನು ಋಣಾತ್ಮಕ ಭಾವ ಸ್ಪುರಿಸುವ ಉಲ್ಲೇಖಗಳನ್ನು ಮರೆಯುವಂತಿಲ್ಲ. ವಿಷಾದ ಭಾವ ಆವರಿಸಿದ ಮನಕ್ಕೆ  ಕ್ಷಣ ಕಾಲವಾದರೂ ಸಮಾಧಾನ ಸಿಗಬಹುದು. ಖಿನ್ನತೆ ತುಂಬಿದ ಮನಗಳಿಗೆ ಹಿತವಾಗಿಯೆ ಕಂಡರೂ ಅವರನ್ನು ಮತ್ತಷ್ಟು ಖಿನ್ನತೆಗೆದೂಡುವಂಥ ಸಾಧ್ಯತೆಗಳನ್ನು ತಳ್ಳುವ ಹಾಗಿಲ್ಲ. ಸಮಸ್ಯೆಗಳು ಎದುರಾದಾಗ ಪಲಾಯನವಾದಿ ಮಾರ್ಗವನ್ನನುಸರಿಸದೆ ಅವುಗಳನ್ನು ಎದುರಿಸಿ ನಿಲ್ಲುವ ಆತ್ಮವಿಶ್ವಾಸವು ನಮ್ಮದಾಗಬೇಕು. ಈ ದಿಸೆಯಲ್ಲಿ ನಿಂತು ಯೋಚಿಸಿದಾಗ ಜೀವನೋತ್ಸಾಹ ತುಂಬುವ ಧನಾತ್ಮಕ ಸೂಕ್ತಿಗಳು ಅಥವಾ ಚಿಂತನೆಗಳು ಅತ್ಯವಶ್ಯಕ.ಇಂತಹ ಚಿಂತನೆಗಳು ನಮ್ಮನ್ನು ದ್ವೇಷದಿಂದ ವಿಮುಖರನ್ನಾಗಿಸಿ ಸಹಿಷ್ಣುತಾ ಮನೋಭಾವ ಬೆಳೆಸುತ್ತ ಸ್ವಾರ್ಥವೆನ್ನುವುದು ಕಡಿಮೆಯಾಗಿ ನಮ್ಮನ್ನು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಹೃದಯಿ ಮನದ ದೃಷ್ಟಿಕೋನವನ್ನು ಬೆಳೆಸುತ್ತವೆ. ಅಂತರ್ಮುಖಿ ವ್ಯಕ್ತಿಗಳಾಗಿ ಆತ್ಮಸಾಂಗತ್ಯ ಹೊಂದುತ್ತ ನಮ್ಮನ್ನು ನಾವು ಸ್ಟವಿಮರ್ಶೆ ಮಾಡಿಕೊಂಡಾಗ ಮಾತ್ರವೇ ನಮ್ಮೊಳಗಿನ  ಅರಿವಿನ ಪ್ರಣತಿ ಬೆಳಗುತ್ತದೆ. 

ಸುಭಾಷಿತಗಳ ಸ್ವಾರಸ್ಯ Read Post »

ಇತರೆ

ಅಭಿನಂದನೆಗಳು

ಅಭಿನಂದನೆಗಳು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಸರ್ಕಾರಿ ಪ್ರೌಢಶಾಲೆ ಯಲ್ಲಿ ಹಿಂದಿ ಭಾಷಾ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ನಿರ್ಮಲಾ ಶೆಟ್ಟರ ನಮ್ಮ ಸಂಗಾತಿ ಪತ್ರಿಕೆಯ ಬರಹಗಾರರೂ ಆಗಿದ್ದಾರೆ.ಅವರ 2020 ರಲ್ಲಿ ಪ್ರಕಟವಾದ ಸರಹದ್ದುಗಳಿಲ್ಲದ ಭೂಮಿಯ ಕನಸು ಕೃತಿಗೆ ಈ ಮೊದಲೇ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಮುದ್ದಣ ರತ್ನಾಕರವರ್ಣಿ ಅನಾಮಿಕ ದತ್ತಿ ಬಹುಮಾನ ಸಂದಿರುತ್ತದೆ. ಈಗ ಸೇಡಂನಿಂದ ಕೊಡಮಾಡುವ ಅಮ್ಮ ಪ್ರಶಸ್ತಿಯು ಲಭಿಸಿದ್ದು, ಇದೇ ತಿಂಗಳು 26ನೇ ದಿನಾಂಕ ದಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಈ ಸಂದರ್ಭದಲ್ಲಿ ಸಂಗಾತಿ ಬಳಗದಿಂದ ಅವರಿಗೆ ಶುಭ ಹಾರೈಕೆಗಳು.

ಅಭಿನಂದನೆಗಳು Read Post »

ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-42 ಏಕನಾಥ ಗುರೂಜಿಯವರ ಪ್ರಖ್ಯಾತಿ ಬಹಳ ಬೇಗನೇ ತಮ್ಮೂರನ್ನು ದಾಟಿ ದೂರ ದೂರದ ಊರು, ನಗರಗಳಿಗೂ ಹಬ್ಬಿತು. ಹಾಗಾಗಿ ಮುಂದೆ ಈಶ್ವರಪುರದ ಸುತ್ತಮುತ್ತದ ಕೆಲವು ಜಿಲ್ಲೆಗಳ ಹಲವಾರು ಬೃಹತ್ ನಾಗಬನಗಳು ಇವರಿಂದಲೇ ಜೀರ್ಣೋದ್ಧಾರಗೊಳ್ಳಲು ಕ್ಷಣಗಣನೆಯಲ್ಲಿದ್ದವು. ಅವನ್ನೆಲ್ಲ ಆದಷ್ಟು ಬೇಗ ಮುಗಿಸಿಬಿಡಬೇಕೆಂಬ ಆತುರ ಅವರಲ್ಲಿತ್ತು. ಆದರೆ ತಮ್ಮ ಯಶಸ್ಸನ್ನು ಮೆಚ್ಚಿ ಆಗಾಗ ಹರಿದು ಬರುವ ಅಭಿನಂದನೆ ಮತ್ತು ಪ್ರಶಸ್ತಿ ಪುರಸ್ಕಾರಗಳಂಥ ಪ್ರತಿಷ್ಠಿತ ಸಮಾರಂಭಗಳು ಹಾಗೂ ಅವುಗಳ ನಡುವೆ ತಮ್ಮ ಜೀವನೋಪಾಯದ ಧಾರ್ಮಿಕ ಚಟುವಟಿಕೆಗಳೆಲ್ಲವೂ ಕೂಡಿ ಆ ಜೀರ್ಣೋದ್ಧಾರ ಕಾರ್ಯಗಳನ್ನು ತಡೆಹಿಡಿಯುತ್ತಿದ್ದವು. ಇವೆಲ್ಲದರ ನಡುವೆ ಅವರು ಭಾಗೀವನದ ಸಮೀಪದ ದೇವರಕಾಡಿನ ಮೇಲೆ ಇಟ್ಟುಕೊಂಡಿದ್ದ ಮಹತ್ವಾಕಾಂಕ್ಷೆಯ ಕೆಲಸವೊಂದು ಹಗಲಿರುಳು ಅವರನ್ನು ಭಾದಿಸುತ್ತಿತ್ತು. ಆದ್ದರಿಂದ ಅದರ ಕುರಿತೂ ಅವರು ಸುಮ್ಮನೆ ಕುಳಿತಿರಲಿಲ್ಲ. ಸಮಯ ಸಿಕ್ಕಾಗಲೆಲ್ಲ ಆ ಕಾರ್ಯದಲ್ಲಿ ತೊಡಗುತ್ತಿದ್ದರು. ಆ ಹಾಡಿ ಮತ್ತದರ ಸುತ್ತಮುತ್ತಲಿನ ಪ್ರದೇಶವು ಬಹಳ ಹಿಂದೆ ಅಲ್ಲಿ ವಾಸಿಸುತ್ತಿದ್ದ ಶೀನಯ್ಯ ಎಂಬವನ ಕುಟುಂಬಕ್ಕೆ ಸೇರಿದ್ದೆಂದೂ ಅವರಲ್ಲಿ ಬಹುತೇಕರು ಎಲ್ಲೆಲ್ಲೋ ಹಂಚಿ ಹೋಗಿದ್ದು ಸದ್ಯ ಆ ಅರಣ್ಯದ ಹತ್ತಿರದ ಹಳೆಯ ಮನೆಯಲ್ಲಿ ಅವನ ಕುಟುಂಬದ ಇಬ್ಬರು ಹಿರಿಯರು ಮಾತ್ರವೇ ಉಳಿದಿರುವರೆಂದೂ ಆ ಮನೆತನದ ನಾಗ, ಪರಿವಾರ ದೈವಗಳು ಅನಾದಿ ಕಾಲದಿಂದಲೂ ಆ ಮನೆಯ ಸಣ್ಣ ಕೋಣೆಯಲ್ಲಿ ಪೂಜೆಗೊಳ್ಳುತ್ತಿವೆಯೆಂದೂ ರಾಘವನ ಗುಪ್ತ ಅಧ್ಯಯನದಿಂದ ಗುರೂಜಿಯವರಿಗೆ ತಿಳಿದು ಬಂದಿತ್ತು. ಹಾಗಾಗಿ ಆ ಬೃಹತ್ತ್ ಅರಣ್ಯವನ್ನು ತೆರವುಗೊಳಿಸಿ ಅಲ್ಲಿ ಭವ್ಯವಾದ ನಾಗನ ದೇವಸ್ಥಾನವೊಂದನ್ನು ನಿರ್ಮಿಸಬೇಕು ಮತ್ತದರ ಸಮೀಪದ ಮದಗವನ್ನು ನಾಗ ದೇವಳಕ್ಕೆ ಸಂಬಂಧಿಸಿದ ಸುಂದರ ಪುಷ್ಕರಣಿಯನ್ನಾಗಿ ಮಾರ್ಪಡಿಸಿ ಆ ಕ್ಷೇತ್ರವನ್ನು ಬಹಳ ಕಾರಣಿಕದ ಪುಣ್ಯಭೂಮಿಯನ್ನಾಗಿ ಮಾಡಬೇಕೆಂಬ ವಿಶೇಷ ಯೋಜನೆಯು ಗುರೂಜಿಯವರೊಳಗೆ ನಿರಂತರ ಮಥಿಸುತ್ತಲೇ ಇತ್ತು.    ಆ ದೇವರ ಕಾಡಿನಲ್ಲಿ ತಾವು ಸ್ಥಾಪಿಸಬೇಕಾದ ನಾಗ ದೇವಸ್ಥಾನದ ಕುರಿತ ತಮ್ಮ ಆಕಾಂಕ್ಷೆಯನ್ನು ಸಿದ್ಧಿಸಿಕೊಳ್ಳಬೇಕಾದ ಮಾರ್ಗೊಪಾಯದ ಚಿತ್ರಣವನ್ನೂ ಹಾಗೂ ಅದಕ್ಕೆ ಬೇಕಾದ ಸೂಕ್ತ ನಕ್ಷೆಯನ್ನೂ ತಮ್ಮೊಳಗೆಯೇ ತಯಾರಿಸುತ್ತಿದ್ದ ಗುರೂಜಿಯವರು ಆವತ್ತೊಂದು ಶುಭಗಳಿಗೆಯಲ್ಲಿ ಆಪ್ತ ಸಹಾಯಕ ರಾಘವನನ್ನು ಕರೆದು ತಮ್ಮ ಯೋಜನೆಯನ್ನು ಅವನಿಗೆ ಕೂಲಂಕಷವಾಗಿ ವಿವರಿಸಿದರು. ಆದರೆ ಅದನ್ನು ಕೇಳಿದ ಅವನು ವಿಪರೀತ ಭಯಕ್ಕೆ ಬಿದ್ದು ಆ ಕೆಲಸಕ್ಕೆ ಸಹಕಾರ ನೀಡಲು ಹಿಂಜರಿದುಬಿಟ್ಟ. ಅದರಿಂದ ಗುರೂಜಿಯವರು ಸ್ವಲ್ಪ ನಿರಾಶರಾದರು. ಆದರೆ ಅವರು ಬೆನ್ನು ಹಿಡಿದರೆ ಬೇತಾಳನಂಥ ಸ್ವಭಾವದವರು. ಆದ್ದರಿಂದ ಅವನ ಭಯವನ್ನು ಕಂಡವರು ಮೆಲುವಾಗಿ ನಕ್ಕು, ‘ನೋಡು ರಾಘವಾ, ಇದು ನಮ್ಮ ಸ್ವಾರ್ಥಕ್ಕೋ ಅಥವಾ ಹಣದ ಲಾಭಕ್ಕೋ  ಹಮ್ಮಿಕೊಂಡಿರುವ ಕಾರ್ಯವೆಂದು ಯಾವತ್ತಿಗೂ ಭಾವಿಸಬೇಡ. ಇದೇನಿದ್ದರೂ ನಮ್ಮ ಊರು ಮಾತ್ರವಲ್ಲದೇ ಇಡೀ ಲೋಕ ಕಲ್ಯಾಣಾರ್ಥವಾಗಿ ಬಹಳ ಹಿಂದೆಯೇ ನಾವು ಸಂಕಲ್ಪಿಸಿಕೊಂಡಿರುವ ಪುಣ್ಯಕಾರ್ಯವಿದು! ಅಷ್ಟಲ್ಲದೇ ಈ ದೈವೀ ಕಾರ್ಯವು ನಿನ್ನ ಹೊರತು ಬೇರೆ ಯಾರಿಂದಲೂ ಸಾಧ್ಯವಾಗುವಂಥದ್ದಲ್ಲ! ಯಾಕೆಂದರೆ ಇದಕ್ಕೆ ಅದರದ್ದೇ ಆದ ಶುದ್ಧ ನೇಮನಿಷ್ಠೆ ಮತ್ತು ಗಟ್ಟಿ ಆತ್ಮಬಲವಿರುವವರೇ ಬೇಕಾಗುತ್ತದೆ. ಅವೆಲ್ಲವೂ ನಿನ್ನಲ್ಲಿವೆ. ಆದ್ದರಿಂದಲೇ ಈ ಕೆಲಸಕ್ಕೆ ನಿನ್ನನ್ನು ಆರಿಸಿರುವುದು. ಇದನ್ನು ನೀನು ಭಕ್ತಿಯಿಂದ ಕೈಗೊಳ್ಳುತ್ತಿಯಾದರೆ ನಿನಗೆ ಯಾವ ಕಂಟಕವೂ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಅಷ್ಟು ಮಾತ್ರವಲ್ಲದೇ ನೀನಿದನ್ನು ಸರಿಯಾಗಿ ನಡೆಸಿಕೊಟ್ಟೆಯೆಂದರೆ ಅದೇ ನಾಗನ ಹೆಸರಿನಲ್ಲಿ ನಿನಗೊಂದು ಐದು ಸೆಂಟ್ಸ್ ಒಳ್ಳೆಯ ಜಾಗವನ್ನೂ ಎರಡು ಸಾವಿರ ಚದರಡಿಯ ಚಂದದ ತಾರಸಿ ಮನೆಯನ್ನೂ ಉಡುಗೊರೆಯಾಗಿ ನೀಡುವ ಆಸೆ ನಮಗಿದೆ. ಯಾವುದಕ್ಕೂ ಯೋಚಿಸಿ ನೋಡು!’ ಎಂದರು ಗಂಭೀರವಾಗಿ. ಗುರೂಜಿಯವರಿಂದ ಉದುರುತ್ತಿದ್ದ ದುಬಾರಿ ನುಡಿಮುತ್ತುಗಳನ್ನು ಆಸ್ಥೆಯಿಂದ ಹೆಕ್ಕಿಕೊಳ್ಳುತ್ತಿದ್ದ ರಾಘವನಿಗೆ ನಾಗನ ಹೆಸರಿನಲ್ಲಿ ಅವರು ನೀಡುತ್ತೇವೆಂದ ಉಡುಗೊರೆಯು ತಟ್ಟನೆ ಅವನ ಭಯವನ್ನೂ ಹಿಂಜರಿಕೆಯನ್ನೂ ಹೊಡೆದೋಡಿಸಿಬಿಟ್ಟಿತು. ‘ಆಯ್ತು ಗುರೂಜಿ. ನನ್ನಿಂದ ನಾಲ್ಕು ಜನರಿಗೆ ಒಳ್ಳೆಯದಾಗುವುದಾದರೆ ತಮಗಾಗಿ ಯಾವ ಕೆಲಸ ಮಾಡಲೂ ಸಿದ್ಧ! ಎಲ್ಲವೂ ತಮ್ಮ ಮಾರ್ಗದರ್ಶನದಿಂದಲೇ ನಡೆದರೆ ಸಾಕು!’ ಎಂದು ಎದೆ ಸೆಟೆಸಿ ಒಪ್ಪಿಗೆ ಸೂಚಿಸಿದ. ಅಷ್ಟು ಕೇಳಿದ ಗುರೂಜಿಯವರ ತುಟಿಯಂಚಿನಲ್ಲಿ ವ್ಯಂಗ್ಯ ನಗುವೊಂದು ಮಿಂಚಿ ಮರೆಯಾಯಿತು. ‘ಹೌದು ರಾಘವಾ ಸರಿಯಾದ ಮಾತು. ನಾವು ಯಾವಾಗಲೂ ಹಾಗೆಯೇ ಯೋಚಿಸುತ್ತ ಜೀವನದಲ್ಲಿ ಮೇಲೆ ಬರುವುದು ಹೇಗೆಂಬುದನ್ನು ಕಲಿಯಬೇಕು. ನೀನು ನಮ್ಮೊಂದಿಗೆ ಇರುವವರೆಗೆ ನಿನ್ನ ರಕ್ಷಣೆಯ ಜವಾಬ್ದಾರಿಯೂ ನಮ್ಮದು!’ ಎಂದು ಗುರೂಜಿ ಅವನಲ್ಲಿ ಇನ್ನಷ್ಟು ಧೈರ್ಯ ತುಂಬಿದರು. ಹಾಗಾಗಿ ಅವರು ಗೊತ್ತುಪಡಿಸಿದ ಶುಭದಿನದಂದು ರಾಘವ ತನ್ನ ಕೆಲಸವನ್ನಾರಂಭಿಸಿದ. ಒಂದು ನರಪಿಳ್ಳೆಗೂ ಸುಳಿವು ಸಿಗದಷ್ಟು ಜಾಗ್ರತೆಯಿಂದ ಆ ದೇವರಕಾಡನ್ನು ಕೆಲವು ಬಾರಿ ಪ್ರವೇಶಿಸಿದವನು, ಅದರೊಳಗೆ ನಾಗಬನ ಮತ್ತು ಭೂತಸ್ಥಾನಗಳು ಇರುವ ಕುರುಹುಗಳನ್ನು ಬಹಳವೇ ಹುಡುಕಾಡಿದ. ಆದರೆ ಆ ಅರಣ್ಯದೊಳಗೆ ಅವನಿಗೆ ಅಂಥ ಯಾವ ಗುರುತುಗಳೂ ಕಾಣಿಸಲಿಲ್ಲ. ಅದರಿಂದ ತೀವ್ರ ನಿರಾಶನಾದ. ತನ್ನ ಇಂಥ ಶ್ರಮಕ್ಕೆ ಗುರೂಜಿಯವರಿಂದ ಕಡಿಮೆಯೆಂದರೂ ನಲವತ್ತು ಲಕ್ಷ ರೂಪಾಯಿಗಳಷ್ಟು ದೊಡ್ಡ ಮೊತ್ತದ ಬಹುಮಾನವು ಸಿಗುವುದರಲ್ಲಿತ್ತು. ಆದರೂ ತನ್ನ ದುರಾದೃಷ್ಟಕ್ಕೆ ಕೈತಪ್ಪಿತಲ್ಲ…! ಎಂದೂ ಕೊರಗಿದ. ಹಾಗಾಗಿ ಅವನಿಗೆ ನಾಗದೇವನ ಮೇಲೆ ವಿಪರೀತ ಕೋಪ ಬಂತು.  ‘ಛೇ! ಛೇ! ಇದೇನಿದು ನಾಗದೇವಾ…! ನಿನಗೊಂದು ಭದ್ರವಾದ ನೆಲೆಯನ್ನು ಕಲ್ಪಿಸಲಿಕ್ಕಾಗಿಯೇ ನಾನೂ ಗುರೂಜಿಯವರೂ ಕೂಡಿ ಒದ್ದಾಡುತ್ತಿರುವುದು ನಿನಗೂ ಕಾಣಿಸುತ್ತಿಲ್ಲವಾ? ಹೀಗಿರುವಾಗ ನಿನ್ನ ಉದ್ಧಾರಕ್ಕೆ ನೀನೇ ಮನಸ್ಸು ಮಾಡದಿದ್ದರೆ ಹೇಗೆ ಹೇಳು…!’ ಎಂದು ಅಸಹನೆಯಿಂದ ಗೊಣಗುತ್ತ ಹಿಂದಿರುಗಿದ.    ತನ್ನ ಪತ್ತೇಧಾರಿ ಕೆಲಸವು ವ್ಯರ್ಥವಾದುದನ್ನು ಗುರೂಜಿಯವರಿಗೆ ಬೇಸರದಿಂದ ವಿವರಿಸಿದ. ಆದರೆ ಆ ಸುದ್ದಿ ಕೇಳಿದ ಗುರೂಜಿಯವರಿಗೆ ಆಘಾತವಾಯಿತು. ‘ಅಯ್ಯಯ್ಯೋ… ನಾಗದೇವಾ! ಅಂಥದ್ದೊಂದು ಪುರಾತನವಾದ ಹಾಡಿಯೊಳಗೆ ನಾಗ, ದೈವಸ್ಥಾನಗಳು ಇರಲೇಬೇಕೆಂದು ತಾವು ಭಾವಿಸಿದ್ದು ಹೇಗೆ ಸುಳ್ಳಾಗಿಬಿಟ್ಟಿತು ಪರಮಾತ್ಮಾ…?’ ಎಂದು ಯೋಚಿಸಿ ತೀವ್ರ ಕಳವಳಪಟ್ಟರು. ಆಗ ಅವರನ್ನು ಇನ್ನೊಂದು ಸಂಗತಿಯೂ ತಲೆ ತಿನ್ನತೊಡಗಿತು. ದಿನನಿತ್ಯ ಒಂದಲ್ಲ ಒಂದು ವಿಧದ ತರಲೆ, ತಾಪತ್ರಯಗಳನ್ನು ತಮ್ಮಲ್ಲಿಗೆ ಹೊತ್ತು ತರುತ್ತಿರುವಂಥ ಬುಕ್ಕಿಗುಡ್ಡೆಯ ನಿವಾಸಿಗಳಿಗೂ ಮತ್ತು ಮುಖ್ಯವಾಗಿ ಭಾಗೀವನದ ಸುಮಿತ್ರಮ್ಮ ಹಾಗೂ ಶಂಕರನಿಗೂ ಅದೊಂದು ಪುರಾತನವಾದ ಕಾರಣಿಕದ ನಾಗಬನವೆಂದೂ, ಈಗ ಅಲ್ಲಿನ ದೈವದೇವರುಗಳೆಲ್ಲ ನೀರು ನೆರಳಿಲ್ಲದೆ ಹತಾಶೆಗೊಂಡು ಗ್ರಾಮದ ಮೇಲೆ ಕುಪಿತರಾಗಿದ್ದಾರೆಂದೂ ಅದರ ಸೂಚನೆಯೇ ಆ ವಠಾರದಲ್ಲಿ ನಾಗರಹಾವು ಕಾಣಿಸಿಕೊಳ್ಳುತ್ತಿರುವುದೆಂದೂ ಮತ್ತು ಆದಷ್ಟು ಬೇಗ ಅದನ್ನು ಜೀರ್ಣೋದ್ಧಾರ ಮಾಡಲೇಬೇಕೆಂದೂ ಸ್ವತಃ ನಾಗದೇವನೇ ಆಜ್ಞೆ ಮಾಡಿದ್ದಾನೆ!’ ಎಂದೂ ತಾವು ಅದೆಷ್ಟು ಬಾರಿ ತಮ್ಮ ಹೊಸ ಜ್ಯೋತಿಷ್ಯಕ್ರಮದ ಪ್ರಕಾರ ಹೇಳುತ್ತ ಬಂದಿಲ್ಲ!    ಅಯ್ಯೋ ದೇವಾ…! ಇನ್ನೇನು ಮಾಡುವುದಪ್ಪಾ…? ಜನರಿಗೆ ತಮ್ಮ ಮೇಲೆ ನಂಬಿಕೆ, ಗೌರವ ಹೊರಟು ಹೋಯಿತೆಂದರೆ ಮುಂದೆ ತಮ್ಮ ಜೀವನದ ಗತಿಯೇನು? ಎಂದುಕೊಂಡ ಅವರು ತೀವ್ರ ಚಿಂತೆಗೊಳಗಾದರು. ಆದರೂ ತೋರಿಸಿಕೊಳ್ಳದೆ, ‘ಸರಿ, ಸರಿ. ಪರ್ವಾಗಿಲ್ಲ ರಾಘವ ಆ ಕುರಿತು ಇನ್ನೊಮ್ಮೆ ಮಾತಾಡುವ. ನಮ್ಮಲ್ಲಿ ಆ ಇಚ್ಛೆಯನ್ನು ಹುಟ್ಟಿಸಿದ ನಾಗನೇ ಏನಾದರೊಂದು ದಾರಿ ತೋರಿಸುತ್ತಾನೆ. ಈಗ ನೀನು ಹೋಗು…!’ ಎಂದು ತಾಳ್ಮೆಯಿಂದ ಹೇಳಿ ಅವನನ್ನು ಕಳುಹಿಸಿದರು. ಆದರೆ ಆಮೇಲೆ ಮತ್ತೆ ಅದೇ ಚಿಂತೆಗೆ ಬಿದ್ದರು. ಕೊನೆಗೂ ಅವರಿಗೊಂದು ಉಪಾಯ ಹೊಳೆಯಿತು. ಮೊದಲಿಗೆ ಅದನ್ನು ಕಾರ್ಯಗತಗೊಳಿಸಲು ಭಯಪಟ್ಟರು. ಬಳಿಕ ಗಟ್ಟಿ ಮನಸ್ಸು ಮಾಡಿದರು. ‘ಹೌದು. ತಮ್ಮ ಬಹು ಅಪೇಕ್ಷಿತವಾದ ಈ ಬೃಹತ್ತ್ ಯೋಜನೆಯೊಂದು ನೆರವೇರಬೇಕಾದರೆ ಅದೇ ಸರಿಯಾದ ಮಾರ್ಗ. ಅಷ್ಟಕ್ಕೂ ನಾವೇನು ಜನರ ಮನೆ ಮಠ ಒಡೆದು ದೇವರಕ್ಷೇತ್ರ ನಿರ್ಮಿಸಲು ಹೊರಟಿದ್ದೇವಾ, ಇಲ್ಲವಲ್ಲಾ! ಭೂಮಿಗೆ ಭಾರವಾಗಿರುವ ಒಂದಷ್ಟು ಕ್ರೂರಮೃಗಗಳೂ, ವಿಷಜಂತುಗಳೂ ಮತ್ತು ಕೆಲಸಕ್ಕೆ ಬಾರದ ಕ್ರಿಮಿಕೀಟ, ಹಕ್ಕಿಪಕ್ಷಿಗಳೂ ತುಂಬಿ ಜನರಿಗೆ ಆಗಾಗ ಹಾನಿಯಾಗುತ್ತಿರುವಂಥ ಆ ಕಗ್ಗಾಡನ್ನು ದೇವರ ಹೆಸರಿನಲ್ಲಿ ಕಡಿದು ಜೀರ್ಣೋದ್ಧಾರ ಮಾಡುವುದರಿಂದ ನಾಡಿಗೆ ಒಳ್ಳೆಯದಾಗುತ್ತದೆಯೇ ಹೊರತು ಕೆಟ್ಟದ್ದಾಗಲಿಕ್ಕಿದಿಲ್ಲ! ಆದ್ದರಿಂದ ತಾವು ಅಂದುಕೊಂಡ ಕಾರ್ಯವನ್ನು ಹೇಗಾದರೂ ಸಾಧಿಸಿ ಜನರು ತಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲೇಬೇಕು ಎಂದು ನಿರ್ಧರಿಸಿದರು.    ಆವತ್ತು ಅಮಾವಾಸ್ಯೆಯ ದಿನ. ಅಂದು ದಟ್ಟ ಕಾರ್ಗತ್ತಲ ನಡುರಾತ್ರಿಯಲ್ಲಿ ರಾಘವನನ್ನು ನಿಶ್ಶಬ್ದವಾಗಿ ಕೂರಿಸಿಕೊಂಡ ಗುರೂಜಿಯವರ ಕಾರು ಪೋರ್ಟಿಕೋದಿಂದ ಹೊರಬಿತ್ತು. ಸ್ವಲ್ಪಹೊತ್ತಿನಲ್ಲಿ ಹೂಮ್ಮಣ್ಣು ಗ್ರಾಮವನ್ನು ತಲುಪಿತು. ಅಲ್ಲಿ ಒಂದು ಕಡೆ ಸುಮಾರು ಮೂರು ಶತಮಾನಗಳಷ್ಟು ಪ್ರಾಚೀನವಾದ ದೊಡ್ಡ ನಾಗಬನವೊಂದು ಕೆಲವು ಕಾಲದ ಹಿಂದೆ ಗುರೂಜಿಯವರ ಸುಪರ್ದಿಯಲ್ಲಿಯೇ ಜೀರ್ಣೋದ್ಧಾರಗೊಂಡಿತ್ತು. ಆದರೆ ಬನಕ್ಕೆ ಸಂಬಂಧಪಟ್ಟವರು ಅಲ್ಲಿನ ಹಳೆಯ ನಾಗನ ಕಲ್ಲುಗಳನ್ನು ಇನ್ನೂ ವಿಸರ್ಜನೆ ಮಾಡಿರಲಿಲ್ಲ. ಈಗ ಮಬ್ಬು ಬೆಳಕಿನ ಬ್ಯಾಟರಿಯನ್ನು ಹಿಡಿದುಕೊಂಡ ಗುರೂಜಿಯವರು ನಿಧಾನವಾಗಿ ಆ ಬನವನ್ನು ಹೊಕ್ಕರು. ಅವರ ಹಿಂದೆ ರಾಘವನೂ ನಡುಗುತ್ತ ಹೆಜ್ಜೆ ಹಾಕಿದ. ಗುರೂಜಿಯವರು ತಮಗೆ ಬೇಕಾದ ಕೆಲವು ನಾಗನ ಕಲ್ಲುಗಳನ್ನು ಬೇಗಬೇಗನೇ ಆಯ್ದು ರಾಘವನಿಂದ ಕಾರಿನ ಡಿಕ್ಕಿಗೆ ತುರುಕಿಸಿದರು. ಬಳಿಕ ಕೂಡಲೇ ಅವರ ಕಾರು ಮಿಂಚಿನ ವೇಗದಲ್ಲಿ ಅಲ್ಲಿಂದ ಮಾಯವಾಗಿ ಭಾಗೀವನದ ಸಮೀಪದ ದೇವರಕಾಡಿನೆದುರು ಪ್ರತ್ಯಕ್ಷವಾಯಿತು. ಅಲ್ಲೊಂದು ದೈತ್ಯ ರೆಂಜೆಮರದ ಬುಡದಲ್ಲಿ ರಾಘವ ಹಿಂದಿನ ದಿನ ರಾತ್ರಿಯೇ ತೋಡಿಟ್ಟಿದ್ದ ಹೊಂಡದೊಳಗೆ ಆ ಕಲ್ಲುಗಳನ್ನು ಸಾಲಾಗಿ ಇಟ್ಟು ಯಾರಿಗೂ ಚೂರೂ ಸುಳಿವು ಸಿಗದಂತೆ ಮಣ್ಣು ಮುಚ್ಚಿ ಅದರ ಮೇಲೆ ತರಗೆಲೆಗಳನ್ನು ಹರಡಿ ಮರೆಮಾಚಿದವರು ಕ್ಷಣದಲ್ಲಿ ಮನೆಯನ್ನು ಸೇರಿದರು.    ಈ ಅದ್ಭುತ ಕಾರ್ಯಸಾಧನೆ ನಡೆದ ಆರು ತಿಂಗಳ ಬಳಿಕ ಗುರೂಜಿಯವರು ಆ ದೇವರಕಾಡಿನಲ್ಲಿ ನಾಗನ ದೇವಸ್ಥಾನ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಲು ಮುಂದಾದರು. ಜಾಗದ ವಾರಸುದಾರರಾದ ಮುದಿ ಗಂಡಹೆಂಡತಿಯನ್ನೂ ಅವರ ದೂರದೂರದ ಕೆಲವು ಸಂಬಂಧಿಕರನ್ನೂ ರಾಘವನ ಮೂಲಕ ಸಂಪರ್ಕಿಸಿ ಅಲ್ಲಿನ ದೈವದೇವರುಗಳ ಕಾರಣಿಕವನ್ನು ಕಣ್ಣಾರೆ ಕಂಡಂತೆ ಅವರಿಗೆ ವಿವರಿಸಿದರು. ಅದೇ ಕಾರಣಕ್ಕೆ ಭಾಗೀವನದೊಳಗೂ ನಾಗಧೂತನು ಸುತ್ತಾಡುತ್ತಿರುವ ಉದಾಹರಣೆಯನ್ನೂ ನೀಡಿ ಅವರಲ್ಲೂ ದೋಷದ ಭೀತಿಯನ್ನು ಸೃಷ್ಟಿಸಿ ಸಜ್ಜುಗೊಳಿಸಿದರು. ಒಂದು ಶುಭದಿನದಂದು ಊರ ಮುಖ್ಯಸ್ಥರನ್ನೂ ಕಾಡಿನ ವಾರಸುದಾರರನ್ನೂ ಮತ್ತು ಭಾಗಿವನದವರನ್ನೂ ಆ ಕಾಡಿನಲ್ಲಿ ಬಂದು ಸೇರುವಂತೆ ಆಜ್ಞಾಪಿಸಿದರು. ಆ ದಿನವೂ ಬಂದಿತು. ಅಂದು ಸೂರ್ಯೋದಯವಾಗಿ ಒಂದು ಗಳಿಗೆಯ ಬಳಿಕ ಗುರೂಜಿಯವರು ಸರ್ವಸಮಸ್ತರ ಸಮ್ಮುಖದಲ್ಲಿ ದೇವರಕಾಡನ್ನು ಪ್ರವೇಶಿಸಲು ಹೊರಟು ಬಂದವರು ಕಾರಿನಿಂದಿಳಿದು ಕಾಡಿನತ್ತ ಹೆಜ್ಜೆ ಹಾಕಿದರು. ಆಗ ಅಲ್ಲಿ ವಿಲಕ್ಷಣ ವಿದ್ಯಾಮಾನವೊಂದು ಸಂಭವಿಸತೊಡಗಿತು.     ಆ ಅರಣ್ಯದ ಸಮೃದ್ಧಿಯಲ್ಲೂ ಮತ್ತು ಸುತ್ತಲಿನ ಜನಜೀವನದ ಸಂರಕ್ಷಣೆಯಲ್ಲೂ ಪ್ರಮುಖ ಪಾತ್ರವಹಿಸಿರುವ ಕಟ್ಟಿರುವೆಗಳ ದೊಡ್ಡ ಕುಟುಂಬವೊಂದು ಮಿತಿಮೀರಿ ಬೆಳೆದ ತಮ್ಮ ಸಂಸಾರ ಬಾಹುಳ್ಯದಿಂದಾಗಿ ಒಂದೇ ಗೂಡಿನೊಳಗೆ ವಾಸಿಸಲಾಗದೆ ಹೊಸ ಪ್ರದೇಶಗಳಿಗೆ ವಲಸೆ ಹೋಗಲು ನಿರ್ಧರಿಸಿದ್ದವು. ಆದ್ದರಿಂದ ಅವುಗಳು ಅಂದು ಬೆಳಗ್ಗಿನಿಂದಲೇ ಶಿಸ್ತಿನ ಸಿಪಾಯಿಗಳಂತೆ ಕವಲು ಕವಲುಗಳಾಗಿ ಪ್ರಯಾಣ ಬೆಳೆಸಿದ್ದವು. ಅಲ್ಲಿನ ಹಸಿರು ಸಂರಕ್ಷಣೆಯಲ್ಲಿ ತೊಡಗಿದ್ದ ಗೆದ್ದಲ ಕುಟುಂಬವೂ ತಮ್ಮ ವಂಶೋತ್ಪತಿಗಾಗಿ ಹೊಸ ಹುತ್ತಗಳನ್ನು ಕಟ್ಟುವುದರಲ್ಲಿ ನಿರತವಾಗಿದ್ದವು. ಆ ಅಡವಿಯ ಅಸಂಖ್ಯಾತ ಕ್ರಿಮಿಕೀಟಗಳು ತಮ್ಮ ಜೀವನ ನಿರ್ವಹಣೆಯ ಮೂಲಕವೇ ವಿವಿಧ ಬಗೆಯಿಂದ ಹಸಿರು ಪರಿಸರದ ಸ್ವಚ್ಛತೆಯಲ್ಲಿತೊಡಗಿದ್ದವು. ಅನೇಕ ಜಾತಿ ಮತ್ತು ಪ್ರಭೇದಗಳ ಹಾವುಗಳು ಇಲಿ, ಹೆಗ್ಗಣ, ಕಪ್ಪೆ, ಹಲ್ಲಿ, ಅರಣೆ, ಓತಿಕ್ಯಾತ ಮತ್ತು ಉಡಗಳಂಥ ಜೀವರಾಶಿಗಳ ಚಟುವಟಿಕೆಯೂ ಅವಕ್ಕೆ ಸಂಬಂಧಿಸಿದ ಆಹಾರದ ಜೀವಿಗಳ ಕೋಲಾಹಲ, ಕಲರವಗಳೂ ಕಾಡಿನೊಳಗಿನ ಜೀವಂತಿಕೆಯನ್ನು ಸಾರುತ್ತಿದ್ದವು. ಗೊರವಂಕ, ಮಂಗಟ್ಟೆ, ನವಿಲು, ಜಿಂಕೆ, ಕಾಡುಕೋಣ, ಚಿಟ್ಟೆಹುಲಿ, ಹಂದಿ, ಬರಿಂಕಗಳಂಥ ವನ್ಯಪ್ರಾಣಿಗಳ ಕೆನೆತ, ನೆಗೆತ ಗುಟುರು ಗರ್ಜನೆಗಳು ಅರಣ್ಯದ ಮೌನಕ್ಕೆ ಹೊಸ ಮೆರುಗನ್ನು ನೀಡಿ ಮಾರ್ದನಿಸುತ್ತ ಆ ಕಾಡು ಮನೋಹರವಾಗಿ ನಳನಳಿಸುತ್ತಿತ್ತು. ಆದರೆ ಕೆಲವೇ ಕ್ಷಣದಲ್ಲಿ ಅಲ್ಲೊಂದು ಕೆಟ್ಟ ಅಪಶಕುನದ ಛಾಯೆಯೂ ಉದ್ಭವಿಸಿಬಿಟ್ಟಿತು.

Read Post »

ಇತರೆ

ಸರಣಿ ಬರಹ ಅಂಬೇಡ್ಕರ್ ಓದು ಬಾಲ್ಯ ಭಾಗ-ಒಂದು ಭಾರತದಲ್ಲಿ ಶತಶತಮಾನಗಳಿಂದ ಐದನೇ ಒಂದು ಭಾಗದಷ್ಟು ಜನರನ್ನು ಶೂದ್ರರೆಂದು, ಅಸ್ಪೃಶ್ಯರೆಂದು, ಅಂತ್ಯಜರೆಂದು, ಅಪವಿತ್ರರೆಂದು, ಅವರ್ಣಿಯರೆಂದು ಮಲಿನರೆಂದು ಊರ ಹೊರಗೆ ಪಶುವಿಗಿಂತ ಕೀಳಾಗಿ ಅಮಾನವೀಯ ಜೀವನ ಸಾಗಿಸುತ್ತಾ ಸವರ್ಣೀಯರಿಂದ ತುಳಿಯಲ್ಪಟ್ಟ ಸಮುದಾಯವೆ ನಿಮ್ನ ವರ್ಗದ ಜನ, ಋಗ್ವೇದದ ಪುರುಷ ಸೂಕ್ತದಲ್ಲಿ ವರ್ಣಿಸಿದಂತೆ ಪುರುಷನೆಂಬಾತನ ಮುಖದಿಂದ ಬ್ರಾಹ್ಮಣರು, ಬಾಹುಗಳಿಂದ ಕ್ಷತ್ರೀಯರು, ತೊಡೆಯಿಂದ ವೈಶ್ಯರು ಮತ್ತು ಪಾದದಿಂದ ಶೂದ್ರರು ಜನಿಸಿದರೆಂದು ಜನರನ್ನು ವರ್ಗಿಕರಿಸಿ ಶೂದ್ರರನ್ನು ಇನ್ನು ನಿಮ್ನಕರಿಸಿ ಚಂಡಾಲರನ್ನು ಅಸ್ಪೃಶ್ಯರೆಂದು ಅತ್ಯಂತ ಹೀನ ನಿಕೃಷ್ಠ ಅವಮಾನವಿತೆಯಿಂದ ನಡೆಸಿಕೊಂಡು ಬಂದಿದ್ದು ಸತ್ಯ ಸಂಗತಿಯಾಗಿದೆ,  ಶೂದ್ರರನ್ನು ಹೊಲೆಯ, ಮಾದಿಗ, ಚಮ್ಮಾರ, ಡೋರ, ಭಂಗಿ, ಇತ್ಯಾದಿ ಜಾತಿಗಳಿಂದ ಹಣೆಪಟ್ಟಿ ಕಟ್ಟಿ ಊರ ಒಳಗೆ ಬರದಂತೆ, ದೇವಸ್ಥಾನ ಪ್ರವೇಶಿಸದಂತೆ ಊರಿನ ಕೆರೆ ಬಾವಿಗಳಿಂದ ನೀರು ಮುಟ್ಟಿ ತೆಗೆದುಕೊಳ್ಳದಂತೆ ನಿರ್ಭಂದಿಸಿ, ಬಹಿಸ್ಕರಿಸಿ ಅವರ ನೆರಳೂ ತಮ್ಮ ಮೇಲೆ ಬಿಳದಂತೆ ಮುಟ್ಟಿಸಿಕೊಳ್ಳದಂತೆ ದೂರವಿರಿಸಿ ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದ ಕಾಲವದು, ಅಸ್ಪೃಶ್ಯತೆಯ ಕರಾಳ ವಾತಾವರಣ ಕಾಲದಲ್ಲಿ 1891 ನೇ ಇಸ್ವಿಯ ಏಪ್ರಿಲ್ 14 ನೇ ತಾರಿಖಿನ ದಿನದಂದು ಮಧ್ಯಪ್ರದೇಶದ ಮಹೌ ಎಂಬಲ್ಲಿ ರಾಮಜಿ ಸಕ್ಪಾಲ ಮತ್ತು ಭೀಮಾಬಾಯಿ ದಂಪತಿಗಳಿಗೆ 14 ನೇ ಮಗುವಾಗಿ ಭೀಮರಾವ ಅಂಬೇಡ್ಕರ್ ಜನಿಸುತ್ತಾರೆ. ಹದಿನಾಲ್ಕು ಮಕ್ಕಳಲ್ಲಿ ಬದುಕುಳಿದವರು ಬಾಳಾರಾವ, ಆನಂದರಾವ ಮತ್ತು ಭೀಮಾರಾವ ಗಂಡುಮಕ್ಕಳಾದರೆ ಮಂಜುಳಾ, ತುಳಸಿ ಹೆಣ್ಣು ಮಕ್ಕಳು, ರಾಮಜಿ ಸಕ್ಪಾಲರು ಅವರ ತಂದೆ ಮಾಲೋಜಿ ಸಕ್ಪಾಲರಂತೆ ಬ್ರಿಟಿಷ ಸೈನ್ಯದಲ್ಲಿ ಸುಭೇದಾರಾಗಿ ಸೇವೆ ಸಲ್ಲಿಸಿದವರು. ತಾಯಿ ಭೀಮಾಬಾಯಿ ಠಾಣಾ ಜಿಲ್ಲೆಯ ಮುರ್ಚಾದ ಗ್ರಾಮದವರಾಗಿದ್ದರು, ತಾಯಿಯ ಸಂಬಂಧಿಕರು ಬ್ರಿಟಿಷ ಸೈನ್ಯದಲ್ಲಿ ಸುಭೇದಾರರಾಗಿದ್ದರು,  ರಾಮಜಿಯವರಂತೆ ಅವರು ಕೂಡಾ ಕಬೀರ ಪಂಥದ ಅನುಯಾಯಿಯಾಗಿದ್ದರು. ಭೀಮ ಎರಡು ವರ್ಷ ವಯಸ್ಸಿನವನಿದ್ದಾಗ ರಾಮಜಿ ಸಕ್ಪಾಲ ನಿವೃತ್ತಿ ಹೊಂದುತ್ತಾರೆ, ನಿವೃತ್ತಿ ನಂತರ ಮಹಾರಾಷ್ಟ್ರ, ಕೊಂಕಣದ ದಾಪೋಲಿಗೆ ಬಂದು ನೆಲೆಸುತ್ತಾರೆ ರಾಮಜಿ ಸಕ್ಪಾಲ ತುಂಬಾ ಸರಳ ಜೀವಿ ಮಾಂಸಹಾರ ಮಧ್ಯಪಾನದಿಂದ ದೂರವಿದ್ದವರು, ಸದಾ ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದ, ಅವರಿಗೆ ಕೆಲಸ ಸಿಗದೆ ಇದ್ದಾಗ ಸಂಸಾರ ಸಾಗಿಸೋದು ಕಷ್ಟವಾಗುತ್ತದೆ. ಕೆಲಸ ಅರಸಿಕೊಂಡು ಸಾತಾರಕ್ಕೆ ಬಂದು ನೆಲೆಸುತ್ತಾರೆ ಇಲ್ಲಿಯೇ, ಭೀಮ ಮತ್ತು ಆತನ ಅಣ್ಣಂದಿರು ಪ್ರಾಥಮಿಕ ಶಾಲೆಗೆ ಸೇರಿಕೊಳ್ಳುತ್ತಾರೆ, ಮಕ್ಕಳನ್ನು ಒಳ್ಳೆಯ ವಿದ್ಯಾವಂತರನ್ನಾಗಿ ಮಾಡುವ ಕನಸನ್ನು ರಾಮಜಿ ಹೊಂದಿರುತ್ತಾರೆ, ಆದರೆ ಸಾತಾರಕ್ಕೆ ಬಂದ ಕೆಲವೆ ದಿನಗಳಲ್ಲಿ ಭೀಮಾಬಾಯಿ ತೀರಿಕೊಳ್ಳುತ್ತಾರೆ ಇದು ರಾಮಜಿ ಸಕ್ಪಾಲ ಕುಟುಂಬಕ್ಕೆ ಬಾರಿ ಆಘಾತವನ್ನುಂಟು ಮಾಡುತ್ತದೆ. ತಾಯಿ ತೀರಿಕೊಂಡಾಗ ಭೀಮನಿಗೆ ಆಗ ಇನ್ನು ಐದು ವರ್ಷ ವಯಸ್ಸು, ರಾಮಜಿ ಸಕ್ಪಾಲರ ಕುಟುಂಬದ ನಿರ್ವಹಣೆ ಮಕ್ಕಳ ಪಾಲನೆ ಪೋಷಣೆಯ ಹೋರೆ ತಂಗಿ ಮೀರಾಬಾಯಿ ಮೇಲೆ ಬೀಳುತ್ತದೆ, ಕಷ್ಟದಲ್ಲಿಯು ರಾಮಜಿ ಸಕ್ಪಾಲರು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಅವರ ಸರಳ ಸಜ್ಜನಿಕೆಯ ಸನ್ನಡತೆ ಮಕ್ಕಳ ಮೇಲೆ ಬಹಳಷ್ಟು ಪ್ರಭಾವವನ್ನು ಬೀರಿತ್ತು. ಭೀಮನು ಸಾತಾರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಡ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಾನೆ. ಅಸ್ಪೃಶ್ಯತೆಯ ನರಕಯಾತನೆ ಕಹಿ ನೋವುಗಳ ಅನುಭವ ಆಗಲೇ ದರ್ಶನವಾಗ ತೋಡಗಿತ್ತು. ತಾನು ಮಹಾರ ಜಾತಿಗೆ ಸೇರಿದವನು ಮಹಾರ ಅಸ್ಪೃಶ್ಯತೆ ಜಾತಿ ಎಂಬುದರ ಶಾಲಾ ದಿನಗಳ ಅನುಭವಗಳನ್ನು ಮುಂದೆ ಅಂಬೇಡ್ಕರರು ಬೆಳೆದು ದೊಡ್ಡವರಾದಾಗ ತಮ್ಮ ಆತ್ಮಕಥನ “ವೇಟಿಂಗ್ ಫಾರ ವಿಸಾ” ಅಂದರೆ ವಿಸ್ ಕ್ಕಾಗಿ ಕಾಯುವ ಜನ ಎಂಬ ಬರಹಗಳಲ್ಲಿ ಪ್ರಸ್ತೂತ ಪಡೆಸಿದ್ದಾರೆ. 1901 ರಲ್ಲಿ ನಡೆದ ಒಂದು ಘಟನೆ ಭೀಮಜಿ ಮಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಬರಪೀಡತದಿಂದಾಗಿ ಸಾವಿರಾರು ಜನರು ಹೊಟ್ಟೆಪಾಡಿಗಾಗಿ ಉದ್ಯೋಗವಿಲ್ಲದೆ ಸಯುವಂತಾಗಿತ್ತು, ಆ ಸಂದರ್ಭದಲ್ಲಿ ಬಾಂಬೆ ಸರಕಾರವು ಖಟವ್ ತಾಲೂಕಿನ ಗೋರೆಗಾಂವ ಗ್ರಾಮದಲ್ಲಿ ಕೆರೆ ನಿರ್ಮಾಣ ಕಾರ್ಯ ಆರಂಭಿಸಿ ಜನರಿಗೆ ಉದ್ಯೋಗ ಒದಗಿಸುತ್ತದೆ. ರಾಮಜಿ ಕೆಲಸ ಹುಡುಕಿಕೊಂಡು ಗೋರೆಗಾಂವಗೆ ಹೋಗುತ್ತಾರೆ, ಅಲ್ಲಿ ಹಣ ಬಟವಾಡೆ ಮಾಡುವ ಗುಮಾಸ್ತನ ಕೆಲಸ ಸಿಗುತ್ತದೆ. ಕೆಲಸ ಸಿಕ್ಕಿದ್ದರಿಂದ ಆಗ ಅಲ್ಲಿಯೆ ಉಳಿದುಕೊಂಡಿದ್ದರು ಬೇಸಿಗೆ ಕಾಲವಾಗಿದ್ದರಿಂದ ಶಾಲೆಗಳಿಗೆ ರಜೆ ಘೋಷಿಸಿರುತ್ತದೆ. ರಜಾ ದಿನಗಳಲ್ಲಿ ತನ್ನ ಜೊತೆ ಕಾಲ ಕಳೆಯಲು ಗೋರೆಗಾಂವಗೆ ಬರಲು ಮಕ್ಕಳಿಗೆ ರಾಮಜಿ ಪತ್ರ ಬರೆದಿದ್ದರು. ಭೀಮ ತನ್ನ ಅಣ್ಣ ಮತ್ತು ಅಕ್ಕನ ಮಗನೊಂದಿಗೆ ಕೂಡಿ ಮೂವರು ಗೋರೆಗಾಂವಗೆ ರೈಲು ಮೂಲಕ ಪ್ರಯಾಣ ಮಾಡುತ್ತಾರೆ ಹೊಸ ಹೊಸ ಬಟ್ಟೆತೊಟ್ಟುಕೊಂಡು ಅತ್ತೆ ಮೀರಾಬಾಯಿ ಮಾಡಿದ ರುಚಿ ರುಚಿಯಾದ ಅಡುಗೆಯ ಬುತ್ತಿ ಕಟ್ಟಿಕೊಂಡು ಒಂದಿಷ್ಟು ದುಡ್ಡು ಹೊಂದಿಸಿಕೊಂಡು ರೈಲು ಬಂಡಿಯಲ್ಲಿ ಪ್ರಯಾಣ ಮಾಡುತ್ತಾರೆ ಮೊದಲಸಲ ರೈಲು ಬಂಡಿಯಲ್ಲಿ ಪ್ರಯಾಣ ಮಾಡುತ್ತಿರುವುದು ಅವರ ಆನಂದಕ್ಕೆ ಪಾರವೆ ಇರಲಿಲ್ಲ. ಗೋರೆಗಾಂವ ಗ್ರಾಮಕ್ಕೆ ರೈಲು ಮಾರ್ಗ ಇಲ್ಲದ್ದರಿಂದ ಹತ್ತಿರದ ಗ್ರಾಮ ಮಾಸೂರ ನಿಲ್ದಾಣಕ್ಕೆ ರೈಲು ಬಂದು ತಲುಪಿದಾಗ ಸಂಜೆಯಾಗಿತ್ತು, ಅಲ್ಲಿಂದ ಗೋರೆಗಾಂವಗೆ ಹೋಗಲು ಹತ್ತು ಮೈಲು ದೂರ ಕ್ರಮಿಸಬೇಕಿತ್ತು, ಆಗಲೇ ಸಂಜೆ ಆಗಿದ್ದರಿಂದ ರಾತ್ರಿ ಕತ್ತಲಾಗುವುದರೊಳಗಾಗಿ ಅಲ್ಲಿಗೆ ತಲುಪಬೇಕೆಂದು ನಿರ್ಧರಿಸುತ್ತಾರೆ. ಭೀಮ ಮತ್ತು ಆತನ ಸಹೋದರರು ರೈಲಿನಿಂದ ಕೆಳಗೆ ಇಳಿದು ನಿಂತು ನೋಡುತ್ತಾರೆ. ಅಲ್ಲಿ ಪರಿಚಿತರು ಯಾರು ಕಾಣುವುದಿಲ್ಲ ತಾವು ಇಂತದಿನ ಬರುವುದಾಗಿ ಪತ್ರ ಬರೆದಿದ್ದರಿಂದ ಅಪ್ಪ ತಮ್ಮನ್ನು ಕರೆದುಕೊಂಡು ಹೋಗಲು ಸೇವಕನನ್ನು ಕಳುಹಿಸಿರುತ್ತಾನೆಂದು ನೋಡುತ್ತಾರೆ. ಭೀಮನು ಬರೆದ ಪತ್ರ ಅಂಚೆಯವನು ರಾಮಜಿಗೆ ತಲುಪಿಸದೆ ಇಟ್ಟುಕೊಂಡಿದ್ದು ಮಕ್ಕಳು ಬರುತ್ತಿರುವುದು ರಾಮಜಿಗೆ ತಿಳಿದಿರಲಿಲ್ಲ. ಅಂಚೆಯವನ ಎಡವಟ್ಟಿನಿಂದ ಅವರನ್ನು ಕರೆದುಕೊಂಡುಹೊಗಲು ಯಾರು ಬಂದಿರಲಿಲ್ಲ. ಮಕ್ಕಳು ಚಿಂತಿತರಾಗುತ್ತಾರೆ. ಭೀಮ ಹೇಗೋ ಉಪಾಯಮಾಡಿ ಅಲ್ಲಿದ್ದ ಸ್ಟೇಷನ ಮಾಸ್ತರನ ಸಹಾಯದೊಂದಿಗೆ ಒಂದು ಎತ್ತಿನ ಬಂಡಿಯನ್ನು ಗೋತ್ತು ಮಾಡಿಕೊಂಡು ಅಲ್ಲಿಂದ ಗೋರೆಗಾಂವಗೆ ಹೊರಡುತ್ತಾರೆ. ಹುಡುಗರು ಹೊಸ ಬಟ್ಟೆ ತೊಟ್ಟಿದ್ದರಿಂದ ಮೊದ ಮೊದಲು ಬಂಡಿಯವನಿಗೆ ಅವರು ಅಸ್ಪೃಶ್ಯರೆಂದು ಸಂಶಯ ಬಂದಿರಲಿಲ್ಲ. ಹೇಗೋ ಏನೋ ಸ್ವಲ್ಪ ದೂರ ಹೋಗುವುದರಲ್ಲಿ ಎತ್ತಿನ ಬಂಡಿಯವನಿಗೆ ಇವರು ಮಹಾರರೆಂಬುವುದು ಗೋತ್ತಾಗಿ ಗೊಬ್ಬರ ಸಾಗಿಸುವ ತನ್ನ ಬಂಡಿ ಮೈಲಿಗೆ ಮಾಡಿದರೆಂದು ಕೋಪಗೊಂಡು ಬೈಯುತ್ತ ಬಂಡಿಯ ನೊಗ ಬಿಚ್ಚಿ ಮೇಲಿಂದ ಸುರಿಯುವಂತೆ ಎತ್ತಿ ಬಿಟ್ಟು ಬಂಡಿಯಲ್ಲಿ ಕುಳಿತ ಹುಡುಗರನ್ನು ಕೆಳಗೆ ಬಿಳಿಸಿ ಬಿಡುತ್ತಾನೆ. ಮಕ್ಕಳು ಭಯಗೊಂಡು ಚಿಂತಿತರಾಗಿ ನೋವನ್ನು ಸಹಿಸಿಕೊಂಡು, ಬಂಡಿಯವನಿಗೆ ತಮ್ಮನ್ನು ಕರೆದುಕೊಂಡು ಹೋಗುವಂತೆ ಬೇಡಿಕೊಳ್ಳುತ್ತಾರೆ. ಬಂಡಿಯವನು ಹುಡುಗರನ್ನು ದಿಟ್ಟಿಸುತ್ತಾ ನೀವು ಅಸ್ಪೃಶ್ಯರು, ಬಂಡಿ ಮುಟ್ಟಿ ಮೈಲಿಗೆ ಮಾಡಿದ್ದಿರಿ ನೀವು ಬೇರೆ ಬಂಡಿ ನೋಡಿಕೊಳ್ಳಿ ಎನ್ನುತ್ತಾನೆ. ಭೀಮನು ಉಪಯಮಾಡಿ ಬಂಡಿಯವನಿಗೆ ಅಣ್ಣ ನಾವು ಎರಡರಷ್ಷು ಬಾಡಿಗೆ ಕೊಡುತ್ತೆವೆ. ಮೇಲಾಗಿ ನಾವೆ ಬಂಡಿ ನಡೆಸುತ್ತೆವೆ, ಎಂದಾಗ ಎರಡು ಪಟ್ಟು ಬಾಡಿಗೆ ಸಿಗುವುದು ಖಾತ್ರಿಯಾದಗ ಬಂಡಿಯವನು ಹುಡುಗರನ್ನು ಕರೆದುಕೊಂಡು ಹೋಗಲು ಒಪ್ಪಿಕೊಳ್ಳುತ್ತಾನೆ. ರೈಲು ಬಂಡಿಯ ಪ್ರಾಯಾಣದ ಖುಷಿಯಲ್ಲಿ ಮುಂಜಾನೆಯಿಂದ ಊಟಮಾಡಿರಲಿಲ್ಲ. ರುಚಿಯಾಗಿ ಅಡುಗೆ ಮಾಡಿಕೊಂಡು ತಂದಿದ್ದ ಬುತ್ತಿಯನ್ನು ಊಟಮಾಡಬೇಕೆಂದರೆ ದಾರಿ ಉದ್ದಕ್ಕು ಯಾರು ನೀರು ಕೊಟ್ಟಿರಲಿಲ್ಲ. ಸುಂಕದ ಕಟ್ಟೆಗೆ ಬಂದು ತಲುಪಿದಾಗ ತಡರಾತ್ರಿ ಯಾಗಿತ್ತು. ಕತ್ತಲಾಗಿದ್ದರಿಂದ ರಾತ್ರಿ ಕಳೆದು ನಸುಕಿನ ಜಾವ ಪ್ರಯಾಣ ಬೆಳೆಸುವುದಾಗಿ ನಿರ್ಧರಿಸಿ ಅಲ್ಲಿಯೇ ಉಳಿದುಕೊಳ್ಳುತ್ತಾರೆ. ಅಲ್ಲಿ ಬಹಳಷ್ಟು ಎತ್ತಿನ ಬಂಡಿಗಳು ವಿಶ್ರಾಂತಿಗೆ ತಂಗಿದ್ದವು. ಅಸಿವು ನೀರಡಿಕೆ ಯಾಗಿತ್ತು ಎಲ್ಲಿಯು ನೀರು ಸಿಕ್ಕಿರಲಿಲ್ಲ ಬಂಡಿಯವನು ಕೈಮಾಡಿ ತೋರಿಸಿ ಅಲ್ಲಿ ಸುಂಕದ ಸಂಗ್ರಹಗಾರನ ಗುಡಿಸಲು ಇದೆ ಅಲ್ಲಿಗೆ ಹೋಗಿ ನೀರು ತರಬಹುದು, ನೀವು ಮಹಾರ ಅಂತ ಹೇಳಬೇಡಿ, ಮುಸಲ್ಮಾನರು ಅಂತ ಹೇಳಿ ನಿಮ್ಮ ಅದೃಷ್ಟ! ನೀರು ಸಿಗಬಹುದು ಎಂದು ಹೇಳಿದನು ಭೀಮನು ಸ್ವಲ್ಪ ದೂರದಲ್ಲಿ ಇದ್ದ ಸುಂಕದ ಸಂಗ್ರಹಕಾರನ ಹತ್ತಿರ ಹೋಗಿ ಹಸಿವು ಆಗಿದೆ, ನೀರಿಲ್ಲ ಊಟಮಾಡಲು ನೀರುಕೊಡಲು ಕೇಳುತ್ತಾರೆ ಸಂಗ್ರಹಕಾರ ಯಾರು ನೀವು ಎಂದು ಪ್ರಶ್ನಿಸುತ್ತಾನೆ. ಉರ್ದು ಬರುತ್ತಿರುವುದರಿಂದ ಭೀಮ ಉರ್ದುವಿನಲ್ಲಿ ಮುಸಲ್ಮಾನರು ಎನ್ನುತ್ತಾನೆ. ನಿಮಗಾಗಿ ನೀರು ಇಡೋಕೆ, ಆಗುತ್ತಾ? ಗುಡ್ಡದ ಮೇಲೆ ನೀರು ಇದೆ ಅಲ್ಲಿಗೆ ಹೋಗಿ ಎಂದು ನೀರು ಕೋಡದೆ ಸುಂಕದ ಸಂಗ್ರಹಕಾರ ಸುಮ್ಮನಾದ. ರಾತ್ರಿ ಸಮಯ ಗುಡ್ಡದ ಮೇಲೆ ಹೋಗುವುದರಿಂದ ಅಪಾಯವೆಂದು ತಿಳಿದು, ಬುತ್ತಿ ಇದ್ದರು ಯಾರು ನೀರು ಕೋಡದೆ ಇದ್ದುದ್ದರಿಂದ ಊಟಮಾಡದೆ ಉಪವಾಸ ಮಲಗುತ್ತಾರೆ. ರಕ್ಷಣೆಗಾಗಿ ಮೂವರು ಒಬ್ಬರಾದ ಮೇಲೆ ಒಬ್ಬ ಸರದಿಯಂತೆ ಎಚ್ಚರವಿದ್ದು ಇನ್ನಿಬ್ಬರು ಮಲಗುವಂತೆ ರಾತ್ರಿ ಕಳೆದು, ಮುಂಜಾನೆ ಗೋರೆಗಾಂವಗೆ ತಲುಪಿದ್ದರು. ನಿಸರ್ಗದ ನೀರನ್ನು ಕುಡಿಯಲು ಬಿಡದ, ಸಗಣಿ ಸಾಗಿಸುವ ಬಂಡಿಯಲ್ಲಿ ಕೂಡ್ರಲು ಬಿಡದ ಈ ಅಸ್ಪೃಶ್ಯತೆಯ ಕರಾಳ ಘಟನೆ ಒಂಭತ್ತು ವರ್ಷದ ಬಾಲಕ ಭೀಮನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು. ——————————— ಸೋಮಲಿಂಗ ಗೆಣ್ಣೂರ

Read Post »

ಇತರೆ

ಸೋಮಣ್ಣನ ಸಂಕಟಗಳು

ಹಾಸ್ಯ ಲೇಖನ ಸೋಮಣ್ಣನ ಸಂಕಟಗಳು ಸೋಮಣ್ಣ ನಮ್ಮ ಮನೆಗೆ ಹಾಲು ಹಾಕಲು ಬರುತ್ತಾರೆ.ಮನೆ ಕಡೆ ಹೊಲ,ಗದ್ದೆ ,ತೋಟ ಅಂತ ಜಮೀನು ಕೂಡ ಚೆನ್ನಾಗಿದೆ.ಒಂದಷ್ಟು ಮನೆ ಕಟ್ಟಿ ಬಾಡಿಗೆ ಕೂಡ ಕೊಟ್ಟಿದ್ದಾರೆ.ಇಷ್ಟು ಆದಾಯ ಸಾಲದು ಅಂತ ಡೈರಿ ಏಜೆನ್ಸಿ ಕೂಡ ತೊಗೊಂಡು ಮನೆ ಮನೆಗೆ ಹಾಲು ಹಾಕುತ್ತಾರೆ.ಒಟ್ಟಾರೆಯಾಗಿ ಮನೆ ಕಡೆ ಚೆನ್ನಾಗಿದ್ದಾರೆ. ಸೋಮಣ್ಣ ಒಳ್ಳೆ ಹಸನ್ಮುಖ ವ್ಯಕ್ತಿ.ಹಾಲು ಕೊಡಲು ಬಂದಾಗ ,ನನಗೆ ರಜೆಯಿದ್ದ ದಿನವಾಗಿ, ಒಂದಷ್ಟು ಬಿಡುವಿದ್ದರೆ ಒಂದು ನಾಲ್ಕು ಕಷ್ಟ ಸುಖದ ಮಾತನಾಡಿ ಹೋಗುತ್ತಾರೆ.ಅಂತಹ ಒಂದು ದಿನ ಮಾತಾಡಿಕೊಂಡು”ಏನ್ ಸೋಮಣ್ಣ ,ಚೆನ್ನಾಗಿದ್ದೀರಾ? ಮಕ್ಳು  ಏನ್  ಮಾಡ್ಕೊಂಡವ್ರೆ?” ಅಂತ ಕೇಳಿದೆ. ಸೋಮಣ್ಣ ನಿಟ್ಟುಸಿರು ಬಿಡುತ್ತಾ,”ಏನ್ ಚಂದ ಬುಡಿ ಮೇಡಂ,ಯಾಕಾದ್ರೂ ಮದ್ವೆಯಾಗಿ ಮಕ್ಳು ಮಾಡ್ಕೊಂಡೆ ಅಂತ  ಆಗ್ಬುಟ್ಟದೆ”  ಎಂದರು. ನನಗೆ ಆಶ್ಚರ್ಯವಾಯಿತು.” ಅಲ್ಲ ಸೋಮಣ್ಣ,ಇಬ್ರೂ ಮಕ್ಳನ್ನ  ಎಂಜಿನಿಯರಿಂಗ್  ಓದ್ಸಿದ್ದಿರಾ,ಒಳ್ಳೆ ಮಕ್ಳು ನಿಮ್ಮವು, ಅದ್ಯಾಕೆ  ಹಂಗಂತಿರ.?” ಅಂದೆ. ಸೋಮಣ್ಣ,” ಓದಕ್ಕೇನೋ ಓದ್ದೋ,ಆದ್ರೆ ಕೆಲ್ಸವೇ  ಸಿಕ್ಕಿಲ್ಲ  ನೋಡಿ, ಏನ್ಮಾಡೋದು?”  ಅಂದ್ರು. ನನಗೆ  ಯಾವಾಗಲೋ  ಒಂದು  ಸಾರಿ  ಅವರು ” ಮಗ ಕ್ಲಾಸ್ ಒನ್ ಕಂಟ್ರಾಕ್ಟರ್  ಆಗಿ ಕೆಲ್ಸ ಮಾಡ್ತಾ  ಅವ್ನೆ,” ಅಂದಿದ್ದು  ನೆನಪಾಯಿತು. ಅದಕ್ಕೆ  ಕೇಳಿದೆ, “ಯಾಕೆ? ಕಾಂಟ್ರಾಕ್ಟ್  ಮಾಡ್ಸೋದು  ಬಿಟ್  ಬಿಟ್ನ,” ಎಂದಿದ್ದಕ್ಕೆ ” ಕಾಂಟ್ರಾಕ್ಟ್ ಏನೋ  ಮಾಡುಸ್ತ  ಅವ್ನೆ, ದುಡ್ಡು  ವಸಿ ಪರವಾಗಿಲ್ಲ ಮಾಡವ್ನೆ , ಆದ್ರೆ  ಅವರವ್ವಂಗೆ  ಸಮಾಧಾನ್ವೆ ಇಲ್ಲ. ದಿನಾ ಬೆಳಿಗ್ಗೆ ಎದ್ರೆ,” ಮಗಂಗೆ ಗೋರ್ ಮೆಂಟ್  ಕೆಲ್ಸ  ಕೊಡುಸ್ನಿಲ್ಲ  ನೀನು,” ಅಂತ ಹಂಗುಸ್ತಳೆ..ನೀವೇ  ಹೇಳಿ  ಮೇಡಂ  ಈಗ  ಗೋರ್ ಮೆಂಟ್ ಕೆಲ್ಸ ಅಷ್ಟು ಸುಲಭಕ್ಕೆ ಸಿಕ್ಕದಾ? ಕಿರಿಮಗನೂ ಎಸ್ ಐ ಆಗ್ಬೇಕು ಅಂತ ಮೂರ್ ಸತಿ ಪರೀಕ್ಷೆ ಬರ್ದ,ಫಿಸಿಕಲ್ ಆಯ್ತದೆ, ಬರೆಯೋದ್ರಲ್ಲಿ ಹೊಯ್ತದೇ,ಇವ್ಳು ‘ನಮ್ಮ ಕಡೆವ್ರು ಮಿನಿಸ್ಟ್ರು ಆಗವ್ರಲ್ಲ ಅವ್ರ ಕೇಳಿ ಕೊಡ್ಸಿ’,ಅಂತ ಜೀವ ತಿಂತಾವ್ಳೆ.”ಲೆ, ಈಗ ಕಾಲ ಕೆಟ್ಟೋಗದೆ  ಕಣೆ,ಹಿಂದ್ಲಂಗಲ್ಲ, ಎಲ್ಲಾ ಆನ್ಲೈನ್ ಮಾಡ್ಬುಟ್ಟವ್ರೆ. ಯಾರಿಗ್  ಕೆಲ್ಸ ಕೊಟ್ಟವ್ರೆ,ಮೆರಿಟ್  ಎಷ್ಟು ,ಎಲ್ಲಾ ಕಂಪ್ಯೂಟ್ರು ತೋರಿಸಿ ಬುಡ್ತದೆ. ಹಂಗೆ  ಹಿತ್ಲು ಬಾಗ್ಲಿಂದ ಕೆಲ್ಸ ಕೊಡ್ಸಕ್ಕೆ  ಹೋದ್ರೆ ಬಾಕಿ ಹೈಕ್ಳು ಬುಡಕ್ಕಿಲ್ಲ,ಕೇಸ್ ಹಾಕೊತ್ತವೆ, ಆ ಮಿನಿಸ್ಟ್ರು ಅವನ ಹಕ್ಕಳಿಗೇ ಕೆಲ್ಸ ಕೊಡ್ಸಕ್ಕಾಕ್ಕಿಲ್ಲ, ಇನ್ನು ನಮ್ ಹೈಕ್ಳಿಗೆ ಎಲ್ಲಿಂದ  ಕೊಡ್ಸಾನು? ,ಸುಮ್ನಿರು  ಅಂದ್ರೂ  ಕೇಳಕ್ಕಿಲ್ಲ,”  ಎಂದು ಬೇಜಾರಿಂದ  ಹೇಳಿದರು. ” ನಿಮ್ಮ ಮನೆದೇ ಮಸ್ತಾಗಿ  ಅದಲ್ಲ,ಅದು ಸಾಲ್ದ, ಒಬ್ಬ ಕಾಂಟ್ರಾಕ್ಟ್ ಮಾಡುಸ್ಲಿ, ಇನ್ನೊಬ್ಬುನ್ನ  ಜಮೀನಿಗ್  ಬುಡಿ,” ಎಂದೆ. “ಮೇಡಂ,ಅದು ಆಕ್ಕಿಲ್ವಂತೆ  ಅವಳ್ಗೆ, ‘ಹುಡ್ಗ  ಕೆಲ್ಸದ್ ಮೇಲವ್ನೆ  ಅಂದ್ರೆ  ಒಳ್ಳೆ  ಕಡೆ  ಹೆಣ್  ಕೊಡ್ತರೆ,ಇಲ್ದಿದ್ರೆ ಯಾರ್  ಕೊಡ್ತರೆ?’  ಅಂತಳೆ.’ ಈಗ ನಾನ್  ಕೆಲ್ಸದಲ್ಲಿ ಇಲ್ದಿದ್ರೂ  ನೀನು  ನನ್ನ  ಮದ್ವೆ ಆದ್ಯಲ್ಲ, ಹಂಗೇ ಅವುಕ್ಕೂ ಯಾರಾದ್ರೂ ಸಿಕ್ತಾರೆ ಬುಡು’,ಅಂದ್ರೆ, “ನಮ್ಮಪ್ಪಂಗೆನೋ ತಲೆ ಕೆಟ್ಟಿತ್ತು ,ನಿಂಗ್ ಕೊಟ್ಟ, ಈಗ್ಲವ್ರು  ಕೊಟ್ಟಾರಾ?” ಅಂತಳೆ ಮೇಡಂ, ಹೆಚ್ಗೆ  ಓದಿಲ್ಲ  ಮೇಡಂ  ಅವ್ಳು, ಆದ್ರೂ ಮಾತಾಡ್ ಬೇಕಾದ್ರೆ ಬರೀ ಲಾ ಪಾಯಿಂಟೇ  ಬತ್ತವೆ .ನಾನ್  ಏನ್ ಹೇಳಿದ್ರೂ  ಕೇಳಕ್ಕಿಲ್ಲ. ನಂಗೆ ರೋಸಿ ಹೋಗದೆ.ಯಾಕಾದ್ರೂ ಮದ್ವೆಯಾಗಿ ಮಕ್ಳು ಹುಟ್ಟುಸ್ದೆ,ಅಂತ  ದಿನಾ  ಕೊರಗಂಗ್  ಆಗದೆ,” ಅಂತ ಹೇಳಿ, “ಬತ್ತಿನೀ ಮೇಡಂ, ಇನ್ನೂ ಸುಮಾರ್ ಮನೆಗೆ ಹಾಲ್ ಹಾಕ್ಬೇಕು.” ಅನ್ನುತ್ತಾ ಹೋದರು.ನಾನು ನಗು ತಡೆದುಕೊಂಡು ಒಳಬಂದೆ.

ಸೋಮಣ್ಣನ ಸಂಕಟಗಳು Read Post »

ಇತರೆ

ಪಕ್ಷಿಗಳೋ… ಪಕ್ಷಿವೀಕ್ಷಕರೋ

ಲೇಖನ ಪಕ್ಷಿಗಳೋ… ಪಕ್ಷಿವೀಕ್ಷಕರೋ ಸಂಧ್ಯಾ ಕೋಟೇಶ್ವರ “ಸರ್ ಸರ್,  ನನ್ನ ಫೋಟೋನೂ ತೆಗೀರಿ ಸರ್.  ಮೇಡಂ,  ನಾನು ಪ್ರತಿದಿನದ  ಹಾಗೇ ಇವತ್ತೂ ತುಂಬಾ ಕಲರ್ ಫುಲ್ ಆಗಿ ಬಂದಿದೀನಿ. ನನ್ನ ಫೋಟೋ ತೆಗೀರಿ.  ಇವಾಗ ತಿರುಗಿ ನಿಲ್ಲುತ್ತೇನೆ.  ಈ ಕಡೆ ಕ್ಲಿಕ್ ಮಾಡಿ”.  ಹೀಗೇ ಬೇಡಿಕೆಗಳ ಪಟ್ಟಿ ಮುಗಿಯದಷ್ಟು.  ಎಷ್ಟು ಫೋಟೋ ಹೊಡೆದರೂ ಹೊಡೆಯುವವರಿಗೆ ಬೇಜಾರಾಗುತ್ತಿಲ್ಲ.  ಹೊಡೆಸಿಕೊಳ್ಳುವವರಿಗಂತೂ ಒಂದು ಚೂರು ಮುಲಾಜಿಲ್ಲ.  ಇದು ಯಾವ ಸ್ಟುಡಿಯೋ ಅಂದುಕೊಳ್ತಾ ಇದ್ದೀರಾ?  ಚಳಿಗಾಲ ಬಂತೆಂದರೆ ಸಾಕು,  ಫೋಟೋಗಾಗಿ ಬೇಡಿಕೆ ಇಡುವವರು ರಂಗುರಂಗಿನ ವಲಸೆ ಪಕ್ಷಿಗಳು.  ಹುಚ್ಚು ಹಿಡಿದಂತೆ ತಲ್ಲೀನರಾಗಿ ಕ್ಲಿಕ್ಕಿಸುವವರು ಪಕ್ಷಿವೀಕ್ಷಕರು.  ಒಂದು ವಿಶೇಷ ಪಕ್ಷಿಯ  ಕರೆ ಕೇಳುತ್ತಲೇ ಏನೇನೋ ಚರ್ಚೆ ಮಾಡುತ್ತಾ ಕೂತವರೆಲ್ಲಾ ಒಂದೇ ಸಮನೆ ತಂತಮ್ಮ  ಕ್ಯಾಮರ ಬಳಿ ಓಡುತ್ತಾರೆ. ಎಲ್ಲರ ಎದೆ ಬಡಿತ ಜೋರಾಗುತ್ತದೆ. ಏದುಸಿರು ಬಿಡುತ್ತಾರೆ. ಆ ಬಣ್ಣ ,  ಮೈಕಟ್ಟು ಸುಮ್ಮನೆ ನಿಂತು ಆನಂದಿಸುತ್ತಾರೆ.  ಎಷ್ಟು ನೋಡಿದರೂ ತೃಪ್ತಿ ಇಲ್ಲ. ಅದು ಓಡಿದ ಕಡೆ ಎಲ್ಲಾ ಓಡಿ,  ಬೇರೆ ಬೇರೆ ಅಂಗುಲಗಳಲ್ಲಿ ಅದರ ಅಂದ ಸವಿಯುತ್ತಾರೆ. ತಮಗೆ ಬೇಕಾದಷ್ಟು ಕ್ಲಿಕ್ಕಿಸಿ ಮತ್ತೆ ಬಂದು ಸುಮ್ಮನೆ  ಕುಳಿತು ಬಿಡುತ್ತಾರೆ.  ಇದು ಈಗ ಅಂತಲ್ಲ.  ಪ್ರತಿ ಬಾರಿ ಹೊಸ ಪಕ್ಷಿ ನೋಡಿದಾಗಲೂ ಇದೇ ಧಾವಂತದಿಂದ  ಪಕ್ಷಿ ವೀಕ್ಷಕರು ಧಾವಿಸುತ್ತಾರೆ.  ಮುಂಜಾವಿನ ಸರ‍್ಯೋದಯದ ಮುಂಚೆ ಗಾಢ ಮೌನದಲ್ಲಿರುವ ಪ್ರಕೃತಿ, ಚಿಲಿಪಿಲಿ ನಿನಾದದಲಿ ಎಲ್ಲರ ಉಸಿರು ಬಿಗಿ ಹಿಡಿಸಲು ತಯಾರಿ ನಡೆಸುತ್ತಿದೆಯೋ ಅನ್ನಿಸುತ್ತದೆ. ತಂಪಾಗಿರುವ ಮೌನಕ್ಕೆ,  ನಿದ್ರಿಸುತ್ತಿರುವ ಗಿಡ ಗಂಟಿಗಳಿಗೆ,  ಬಿದಿರು ಕಡ್ಡಿಗಳಿಗೆ,  ಪೊದೆಗಳಿಗೆಲ್ಲ ಚಲನೆ ಕೊಡುವುದೇ ಈ ಪಕ್ಷಿಗಳ ಚಟುವಟಿಕೆ.  ಇವುಗಳ ಅಂದ ಅನುಭವಿಸುವವನೇ ಬಲ್ಲ. ಒಂದಕ್ಕೆ ಮೈ ತುಂಬಾ ಒಂದೇ ಬಣ್ಣ; ಇನ್ನೂ ಕೆಲವು ಒಂದೊಂದು ಇಂಚಿಗೂ ಚಂದದ ಒಂದೊಂದು,  ಬಣ್ಣ,  ವಿನ್ಯಾಸವನ್ನು ಬಳಿದುಕೊಂಡಿರುತ್ತದೆ.  ಕೆಲವಕ್ಕೆ ಯಾರೋ ಅದ್ಭುತ ಕಲಾವಿದ, ಕುಂಚವನ್ನು ದಟ್ಟ ಶ್ರೀಮಂತ ಬಣ್ಣಕ್ಕದ್ದಿ ರಾಚಿ ಬಿಟ್ಟಿರಬೇಕು.  ಕೆಲವು ಪಕ್ಷಿಗಳು ಎದುರು ಬಂದು ಕುಳಿತಾಗಲಂತೂ ಸೃಷ್ಠಿಕರ‍್ತ ಎಷ್ಟು ರಸಿಕನಿರಬಹುದು ಎನಿಸುತ್ತದೆ.  ಪಕ್ಷಿಗಳ ಲಗುಬಗೆ ಒಂದೆಡೆಯಾದರೆ ಇನ್ನು ಪಕ್ಷಿ ವೀಕ್ಷಕರ ಸಂಭ್ರಮ ನೋಡಬೇಕು. ಪಕ್ಷಿಗಳನ್ನು ಹುಡುಕಿಕೊಂಡು ಹೋಗುವ ಒಂದು ಗುಂಪಿದೆ. ಅವರನ್ನು ಬರ್ಡರ್ಸ  ಅಥವಾ  ಪಕ್ಷಿವೀಕ್ಷಕರು ಅಂತ ಕರೀತಾರೆ. ಇವರಲ್ಲಿ ವೃತ್ತಿಪರರು ಹಾಗು ಹವ್ಯಾಸಿಗಳು ಇರುತ್ತಾರೆ. ಪಕ್ಷಿಗಳನ್ನು ಗಮನಿಸುವುದು, ಅವರ ಚಲನವಲನ ಕಂಡು ಆನಂದಿಸುವುದು ಎಷ್ಟು ಖುಷಿ ಕೊಡುತ್ತದೋ , ಈ  ಪಕ್ಷಿವೀಕ್ಷಕರನ್ನು ನೋಡುವುದು ಅಷ್ಟೇ ಮಜಾ ಕೊಡುತ್ತದೆ. ಅವರಿಗೆ ಪ್ರಕೃತಿಯ ಚಿಕ್ಕ ಚಿಕ್ಕ ಬದಲಾವಣೆಗಳು ಪ್ರಚೋದಿಸುತ್ತವೆ. ಸಾಮಾನ್ಯರಿಗೆ ಬಹುಶಃ ಕಾಗೆ,ಮೈನಾ, ಕೊಕ್ಕರೆ, ಬಾತುಕೋಳಿ , ಇಂತಹ ಕೆಲವು ಪಕ್ಷಿಗಳ  ಹೆಸರು ತಿಳಿದಿರುತ್ತದೆ.  ಬೇರೆ ಎಲ್ಲಾ ಪಕ್ಷಿಗಳೂ ಒಂದೇ ತರಹ ಕಾಣಿಸುತ್ತದೆ.  ಆದರೆ ಇವರಿಗೆ ಪಕ್ಷಿಯ ಮೇಲಿನ ಒಂದು ಚಿಕ್ಕ ವಿವರವೂ ಮುಖ್ಯವಾಗುತ್ತದೆ.  ಪಕ್ಷಿಯ ಆವಾಸ, ಗಾತ್ರ, ಆಕಾರ,  ಬಣ್ಣ,  ಕೂಗು ಇವೆಲ್ಲದಕ್ಕೂ  ಸೂಕ್ಷ್ಮ ಗ್ರಾಹಿಗಳಾಗಿರುತ್ತಾರೆ.  ಆಗಸದ ಅಂಚಲ್ಲಿ ಎಷ್ಟೋ ಎತ್ತರದಲ್ಲಿ ಹಾರುವ ಪಕ್ಷಿಯ ಹೆಸರನ್ನು ಥಟ್ ಅಂತ ಹೇಳುತ್ತಾರೆ.  ಇಷ್ಟೇ ಅಲ್ಲ,  ಪಕ್ಷಿಗಳ ನಡವಳಿಕೆಗಳು ಕೂಡಾ ಮುಖ್ಯವಾಗುತ್ತದೆ. ಪಕ್ಷಿಗಳನ್ನು ನೋಡಿದಂತೆ ತಮ್ಮ ದಾಖಲೆ ಯ ಪಟ್ಟಿಗೆ ಸೇರಿಸುತ್ತಾರೆ.  ಅದರಲ್ಲಿ ಒಂದು ಹೊಸದು ಸರ‍್ಪಡೆಯಾದರೂ ಏನೋ ಖುಷಿ.  ಈಗ ಚಳಿಗಾಲ ಶುರುವಾಗಿದೆ ನೋಡಿ, ಈಗಂತೂ ಹಬ್ಬ.‌ ದೇಶ ವಿದೇಶಗಳಿಂದ ಪಕ್ಷಿಗಳು ವಲಸೆ ಬಂದಿರುತ್ತವೆ. ತಾವು  ನೋಡದೆ ಇರುವ ಪಕ್ಷಿ  ಒಂದು ಜಾಗದಲ್ಲಿ ಇದೆ ಎಂದು ತಿಳಿದು ಬಂದರೆ ಸಾಕು,  ಮಳೆ,  ಗಾಳಿ,  ಧೂಳು,ಕೊಚ್ಚೆ ಯಾವುದನ್ನೂ ಲೆಕ್ಕಿಸದೆ ಅದನ್ನು ನೋಡಲು ಅಣಿಯಾಗಿ ಹೊರಟುಬಿಡುತ್ತಾರೆ.  ಇನ್ನೇನಾದರೂ  ಅವರನ್ನು ಗಮನಿಸಲು ತೊಡಗಿದರೆ ಮೊದಲ ಸಲ ನೋಡಿದರೆ ಕಿರಿಕಿರಿಯಾಗುತ್ತದೆ.  ನಂತರ ಹುಚ್ಚು ಅನಿಸುತ್ತದೆ ! ಇದೊಂಥರಾ ಪ್ರಕೃತಿಯೊಂದಿಗೆ ಬೆರೆಯುವ ಹುಚ್ಚು.  ನಿರ‍್ಗದ ಮಡಿಲಲ್ಲಿ ಲೀನವಾಗುವ ಹುಚ್ಚು.  ಯಾವುದೋ ಪಕ್ಷಿ ನೀರ ಸೆಲೆಯಲ್ಲಿ ಮಿಂದು ಮೈ ಕೊಡವಿ ಎದ್ದರೆ ಇವರ ಮೈ ಎಲ್ಲಾ ರೋಮಾಂಚನ.  ಹಕ್ಕಿಯೊಂದು ಆಹಾರಕ್ಕಾಗಿ ಮೀನೋ,  ಕೀಟವನ್ನೋ ಬಾಯಲ್ಲಿ ಹಿಡಿದರೆ ಆ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವ ತವಕ. ಬಯಲಿನ  ಮೂಲೆಯಲ್ಲಿ ಒಂದು ಕೂಗು ಕೇಳಿದರೂ, ಅತೀವವಾದ ಆನಂದದಿಂದ ಅದನ್ನು ಹುಡುಕಿ ಅಲೆಯುತ್ತಾರೆ. ಅವರ ಕಣ್ಣ ಮುಂದೆ ಒಂದೊಂದು ಸುಯ್ನ್ ಅಂತ ಸುಳಿದಾಗಲೂ ವಿಚಿತ್ರವಾದ ಕೌತುಕವೊಂದು ಅವರ ಕಣ್ಣಂಚಲಿ ಮೂಡುತ್ತದೆ.  ಆ ಪಕ್ಷಿಯ ಬರುವಿಕೆಗಾಗಿ,  ಒಂದು ನೋಟಕ್ಕಾಗಿ ದಿನವಿಡೀ ಕಾಯುತ್ತಾರೆ. ಬಹುಶಃ ಆ ತಾಳ್ಮೆಯನ್ನೂ ಪ್ರಕೃತಿಯೇ ಕಲಿಸಿರಬೇಕು. ಪಕ್ಷಿವೀಕ್ಷಕರ ನಿರ‍್ಗದ ಬಗೆಗಿನ ಕಳಕಳಿಯೂ  ಶ್ಲಾಘನೀಯ. ಮರ ಕಡಿಯುವುದರಿಂದ,  ಕೆರೆಗಳ ನಾಶದಿಂದ, ಜನರ ಹಾವಳಿಯಿಂದ  ಪಕ್ಷಿಗಳ ವಾಸಸ್ಥಾನಕ್ಕೆ ತೊಂದರೆಯಾಗುವುದರ ಬಗ್ಗೆ ದನಿಯೆತ್ತುತ್ತಾರೆ.  ಕಟ್ಟಿರುವ ಗೂಡು ನಾಶವಾಗದಂತೆ ಕಾಳಜಿ ವಹಿಸುತ್ತಾರೆ.  ಅಪಾಯದ ಅಂಚಿನಲ್ಲಿರುವ ಸಂಕುಲದ ಬಗ್ಗೆ ಮರುಗುತ್ತಾರೆ.  ಇವರ ಆಸಕ್ತಿಯಿಂದ ಪಕ್ಷಿಸಂಕುಲ ಉಳಿದು ಪರಿಸರ ಸಮೃದ್ಧಿಯಾಗಿರಲಿ ಎಂಬುದೇ ಆಶಯ.

ಪಕ್ಷಿಗಳೋ… ಪಕ್ಷಿವೀಕ್ಷಕರೋ Read Post »

ಇತರೆ

ಸಂತೆಯೊಳಗೆ ನಿಂತ ಕಬೀರ: ಅಕ್ಷರ ಸಂತ ಹಾಜಬ್ಬ

ಸಂತೆಯೊಳಗೆ ನಿಂತ ಕಬೀರ: ಅಕ್ಷರ ಸಂತ ಹಾಜಬ್ಬ   ಒಬ್ಬ ಮನುಷ್ಯ ಸಮಾಜಮುಖಿಯಾಗಿ ಚಿಂತಿಸಲು ಒಂದು ಕಾರಣ, ಘಟನೆ ಆತನೊಳಗೆ ಅಡಗಿರುತ್ತದೆ. ಪ್ರತಿಯೊಬ್ಬ ಮನುಷ್ಯನು ಶಿಕ್ಷಣವಂತನಾಗಬೇಕು, ಯಾರೂ ಕೂಡ ಶಿಕ್ಷಣದಿಂದ ವಂಚಿತನಾಗಬಾರದು ಎಂದು ಶಿಕ್ಷಣಕ್ಕಾಗಿಯೇ ದುಡಿಯುತ್ತ ಅದರ ಸೇವೆಯಲ್ಲಿಯೇ ನಿರತರಾಗಿರುವ ಹರೇಕಳ ಹಾಜಬ್ಬರು ಸರ್ಕಾರಕ್ಕಲ್ಲದೆ ಜನ ಸಾಮಾನ್ಯರಿಗೂ ಮಾದರಿ. ಮಂಗಳೂರು ತಾಲ್ಲೂಕಿನ ಹರೇಕಳ ಗ್ರಾಮದವರಾದ ಹಾಜಬ್ಬರು ತೀರಾ ಹಿಂದುಳಿದ ಗ್ರಾಮೀಣ ಪ್ರದೇಶದವರು. ಬೀದಿಬದಿಯಲ್ಲಿ ಬುಟ್ಟಿಯೊತ್ತು ಕಿತ್ತಲೆ ಹಣ್ಣನ್ನು ಮಾರಿ ಅದರಿಂದಲೇ ತಮ್ಮ ಕುಟುಂಬದ ಜೀವನ ನಡೆಸುವ ಕಾಯಕ ಯೋಗಿ. ಔಪಚಾರಿಕವಾದ ಶಿಕ್ಷಣವನ್ನೆ ಹೊಂದಿರದ ಇವರು ತುಳು ಮತ್ತು ಬ್ಯಾರಿ ಭಾಷೆಗಳ ಬಗ್ಗೆ ಮಾತ್ರ ತಿಳುವಳಿಕೆಯುಳ್ಳವರು. ಹೀಗೆ ಒಂದು ದಿನ ಕಿತ್ತಲೆ ಮಾರುತ್ತ ಒಂದು ಕೈಯಲ್ಲಿ ಬುಟ್ಟಿ ಹಿಡಿದು, ಮತ್ತೊಂದು ಕೈಯಲ್ಲಿ ಕಿತ್ತಲೇ ಹಿಡಿದು ಮಾರುತ್ತ ಸಾಗುವಾಗ 68 ವರ್ಷದ ವೃದ್ಧ ಇಂಗ್ಲೀಷ್ ದಂಪತಿಗಳು ಕಿತ್ತಲೇ ಹಣ್ಣನ್ನು ಕೊಂಡುಕೊಳ್ಳಲು “How Much” ಎಂದು ಕೇಳುತ್ತಾರೆ. ವರ್ಷಾನುಗಟ್ಟಲೆ ವ್ಯಾಪಾರ ಮಾಡುತಿದ್ದರು ಅದಕ್ಕೆ ಪ್ರತಿಕ್ರಿಯಿಸಲು ಸಾಧ್ಯವಾಗದೆ ಮುಜುಗರಕ್ಕೊಳಗಾಗುತ್ತಾರೆ. ಇದಕ್ಕೆ ಮೂಲಕಾರಣ ನಾನು ಶಿಕ್ಷಣದಿಂದ ವಂಚಿತನಾಗಿರುವುದು ಎಂಬುದನ್ನು ಮನಗಾಣುತ್ತಾರೆ. ಈ ಘಟನೆಯೆ ಅವರ ಶಿಕ್ಷಣಕ್ರಾಂತಿಯ ತಿರುವು. ಹಾಜಬ್ಬರ ಹರೇಕಳ ಗ್ರಾಮದಲ್ಲಿ ಶಾಲೆಯೆ ಇರಲಿಲ್ಲ. ಈ ಕಾರಣಕ್ಕಾಗಿಯೆ ಅವರು ಶಿಕ್ಷಣವನ್ನೆ ಕಾಣಲಿಲ್ಲ. ಅಲ್ಲದೆ ಹಾಜಬ್ಬರು ಆ ಊರಿಗೆ ಶಾಲೆ ತರುವ ತನಕ ಅಲ್ಲಿನ ಮಕ್ಕಳು ಶಿಕ್ಷಣವಿಲ್ಲದೆ ಮೂಲಭೂತ ಹಕ್ಕಿನಿಂದ ವಂಚಿತರಾಗಿದ್ದರು. ನನಗಂತೂ ಶಿಕ್ಷಣ ಸಿಗಲಿಲ್ಲ, ಆದರೆ ಇಂದಿನ ಪೀಳಿಗೆ ಶಿಕ್ಷಣದಿಂದ ವಂಚಿತರಾಗಬಾರದೆಂದು, ಆ ಕಡುಬಡತನ ಜೊತೆಗೆ ಕಿತ್ತಲೆ ಹಣ್ಣು ವ್ಯಾಪಾರದ ನಡುವೆ ಸರ್ಕಾರಿ ಕಛೇರಿ, ಸಂಬಂಧಪಟ್ಟ ಅಧಿಕಾರಿಗಳ ಬಳಿಗೆ ಅಲೆದಾಡಿದರು. ಅವರ ಅಲೆದಾಟದ ಪರಿಶ್ರಮಕ್ಕೆ 17 ಜೂನ್ 2000 ನೇ ಇಸವಿಯಲ್ಲಿ ಹರೇಕಳಕ್ಕೆ ಪ್ರಾಥಮಿಕ ಶಾಲೆ ಮಂಜೂರಾಯಿತು.  ಸರ್ಕಾರ ಶಾಲೆಯನ್ನೆನೊ ಮಂಜೂರು ಮಾಡಿದೆ, ಆದರೆ ಮಕ್ಕಳಿಗೆ ಪಾಠ ಮಾಡಲು ಕಟ್ಟಡವಿಲ್ಲ. ಹೀಗಿರುವಾಗ ಹಾಜಬ್ಬರು ತಾವು ಕಿತ್ತಲೆ ಹಣ್ಣು ಮಾರಿ ಉಳಿತಾಯ ಮಾಡಿದ್ದ 25.000 ರೂ ಜೊತೆಗೆ ಇತರೆ ದಾನಿಗಳಿಂದ ಹಣ ಸಂಗ್ರಹಿಸಿ ಒಂದು ಎಕರೆ ಭೂಮಿ ಖರೀದಿಸಿ  ಮಕ್ಕಳಿಗೆ ಕಟ್ಟಡ ನಿರ್ಮಾಣ ಮಾಡಿಸಿಕೊಟ್ಟರು. ಇದೀಗ ಆ ಶಾಲೆ ಪ್ರಾಥಮಿಕದೊಂದಿಗೆ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿದೆ. ಇಂದಿಗೂ ಸಹ ತನಗೆ ಬರುವ ಲಕ್ಷಾಂತರ ರೂ ಪ್ರಶಸ್ತಿ ಮೊತ್ತವನ್ನು ತಮಗಾಗಿ ಬಳಸದೆ ಶಾಲೆ ಅಭಿವೃದ್ಧಿಗಾಗಿಯೇ ಬಳಸುತ್ತಾರೆ. ವಿವಿಧ ದಾನಿಗಳಿಂದ ಈ ವರೆವಿಗೂ 70 ಲಕ್ಷ ರೂ ದೇಣಿಗೆ ಸಂಗ್ರಹಿಸಿ ಅದನ್ನು ಶಾಲೆಯ ಅಭಿವೃದ್ಧಿಗೆ ಬಳಸಿ ಯಶಸ್ವಿಯಾಗಿ ಅಕ್ಷರ ಸಂತನಾಗಿ ಜನಮಾಸದಲ್ಲಿ ನೆಲೆಸಿದ್ದಾರೆ. ಅಕ್ಷರ ಸಂತ ಹಾಜಬ್ಬರ ಕುರಿತು ಇರ್ಸತ್ ಪಜೀರ್ ರವರು ‘ಹರಕೇಳ ಹಾಜಬ್ಬ ಜೀವನ ಚರಿತ್ರೆ’ ಎಂಬ ಪುಸ್ತಕವನ್ನು ಬರೆದರು. ಅನಂತರ ಹಾಬಜ್ಜರ ಜೀವನ ಚರಿತ್ರೆಯನ್ನು ಮಂಗಳೂರು ವಿಶ್ವವಿದ್ಯಾನಿಲಯ ಪಠ್ಯಕ್ರಮದಲ್ಲಿ ಸೇರಿಸಿತು. ಇವರ ಸಮಾಜ ಸೇವೆಯನ್ನು ಮೆಚ್ಚಿ ಬ್ರಿಟಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್ (BBC) 2012 ರಲ್ಲಿ ‘ಅಕ್ಷರವಿಲ್ಲದ ಹಣ್ಣು ಮಾರಾಟಗಾರನ ಭಾರತೀಯ ಶಿಕ್ಷಣ ಕನಸು’ ಎನ್ನುವ ಶೀರ್ಷಿಕೆಯಡಿ ಲೇಖನ ಪ್ರಕಟಿಸಿತು.  CNN, IBN ಮತ್ತು Relaince Foundation ನವರು ‘The Real Hero’ ಪ್ರಶಸ್ತಿ ನೀಡಿದರು.  ಇದೀಗ ಅವರಿಗೆ ಭಾರತೀಯ ಸರ್ಕಾರ ಕೊಡಮಾಡುವ 2020 ರ ನಾಗರೀಕ ಪ್ರಶಸ್ತಿಯಾದ ಪದ್ಮಶ್ರೀ ಭಾಜನರಾಗಿದ್ದಾರೆ. ಪ್ರಶಸ್ತಿ ತೆಗೆದುಕೊಳ್ಳುವಾಗಲೂ ರಾಷ್ಟ್ರಪತಿ ಭವನಕ್ಕೆ ಬರಿಗಾಲಿನಲ್ಲಿಯೇ ತೆರಳಿ ಸ್ವೀಕರಿಸಿದ ಇವರು ಶಿಕ್ಷಣ ಕ್ರಾಂತಿಯ ಕಣ್ಣಂತೆಯೆ.  ತಾನು ಒಂದಕ್ಷರವನ್ನು ಕಲಿಯದೆ ಈ ತಲೆಮಾರಿನ ಮಕ್ಕಳಿಗೆ ಅರಿವಿನ ದೀಪವನ್ನು ಬೆಳಗಿಸುತ್ತಲೆ, ತಾನು ಮಾತ್ರ ಎಡಗೈಯಲ್ಲಿ ಬುಟ್ಟಿಯೊತ್ತು ಬಲಗೈಯಲ್ಲಿ ಕಿತ್ತಲೆ ಹಣ್ಣಿಡಿದು ಶಾಲೆ ಮತ್ತು ಮಕ್ಕಳ ಓದಿನ ಬಗೆಯೆ ಧ್ಯಾನಿಸುತ್ತಿರುವ ಅಕ್ಷರ ಸಂತ ಹರೇಕಳ ಹಾಜಬ್ಬರು ಈ ಕಾಲಮಾನದಲ್ಲಿ ಸಂತೆಯೊಳಗೆ ನಿಂತ ಕಬೀರ. ಹಾರೋಹಳ್ಳಿ ರವೀಂದ್ರ

ಸಂತೆಯೊಳಗೆ ನಿಂತ ಕಬೀರ: ಅಕ್ಷರ ಸಂತ ಹಾಜಬ್ಬ Read Post »

ಇತರೆ

‘ಅಲ್ಲಮ ಕಾವ್ಯ ಪ್ರಶಸ್ತಿ’ಗೆ ಯುವಕವಿಗಳಿಂದ ಹಸ್ತಪ್ರತಿ ಆಹ್ವಾನ

ಬೆಂಗಳೂರಿನ ಅಲ್ಲಮ ಪ್ರಕಾಶನದಿಂದ ಅಲ್ಲಮ ಕಾವ್ಯ ಪ್ರಶಸ್ತಿಗಾಗಿ ನಲವತ್ತೈದು ವರ್ಷದೊಳಗಿನ ಯುವಕವಿಗಳಿಂದ ಹಸ್ತಪ್ರತಿ ಆಹ್ವಾನ.

‘ಅಲ್ಲಮ ಕಾವ್ಯ ಪ್ರಶಸ್ತಿ’ಗೆ ಯುವಕವಿಗಳಿಂದ ಹಸ್ತಪ್ರತಿ ಆಹ್ವಾನ Read Post »

ಇತರೆ, ಮಕ್ಕಳ ವಿಭಾಗ

ಕುದುರೆ ಸವಾರ

ಮಕ್ಕಳ ಕವಿತೆ ಕುದುರೆ ಸವಾರ ಸೋಮಲಿಂಗ ಬೇಡರ ಬಂದನೊಬ್ಬ ಸವಾರಬಿಳಿಯ ಕುದುರೆ ಹತ್ತಿಕೋರೆ ಮೀಸೆ ತಿರುವುತಓಣಿ ಓಣಿ ಸುತ್ತಿ ಓಣಿ ಮಕ್ಕಳೆಲ್ಲರುನೋಡುತವನ ಮೆಚ್ಚಿಕುದುರೆ ಹಿಂದೆ ನಡೆದರುಹಾಕುತವರು ಹೆಜ್ಜಿ ಊರ ಜಾತ್ರೆ ಮರುದಿನಕುಸ್ತಿ ಗೆದ್ದ ವೀರತಾನೇ ಎನುತ ಗತ್ತಲಿಸಾರುತ್ತಿದ್ದ ಧೀರ ಬೆಳಗುತ್ತಿದ್ದರಾರುತಿದೃಷ್ಟಿ ಬೊಟ್ಟು ಇಟ್ಟುನಗುತಲಿದ್ದ ಸವಾರಹೆಚ್ಚು ಹೆಮ್ಮೆ ಪಟ್ಟು ಢಂ! ಎಂದು ಒಮ್ಮೆಲೆಸಿಡಿಯಿತಲ್ಲಿ‌ ಮದ್ದುಕುದರೆ ಬೆಚ್ಚಿ ನೆಗೆಯಲುಬಿದ್ದನವ ಜಟ್ಟಿಯು ಕಣ್ಣು ಬಿಟ್ಟು ನೋಡಿದನಗುತಲಿದ್ದ ತಮ್ಮಮಂಚದಿಂದ ತಿಮ್ಮನುಬಿದ್ದು ಎದ್ದ ಸುಮ್ಮ!

ಕುದುರೆ ಸವಾರ Read Post »

ಇತರೆ

ಬಲಿ ಚಕ್ರವರ್ತಿಯ ಹತ್ಯೆಯ ಜೊತೆಗೆ ಸಾಂಸ್ಕೃತಿಕ ಹತ್ಯೆಯು ನಡೆದು ಹೋಗಿದೆ

ಬಲಿ ಚಕ್ರವರ್ತಿಯ ಹತ್ಯೆಯ ಜೊತೆಗೆ ಸಾಂಸ್ಕೃತಿಕ ಹತ್ಯೆಯು ನಡೆದು ಹೋಗಿದೆ ಹಾರೋಹಳ್ಳಿ ರವೀಂದ್ರ ಬಲಿ ಚಕ್ರವರ್ತಿಯ ರಾಜ್ಯವು ಮಹಾರಾಷ್ಟ್ರದಿಂದ ಅಯೋಧ್ಯೆವರೆವಿಗೂ ವ್ಯಾಪಿಸಿತ್ತು. ಈತನ ಆಳ್ವಿಕೆಯಲ್ಲಿ ಯಾರಿಗೂ ತೊಂದರೆ ಇರಲಿಲ್ಲ. ಬಲಿಯ ರಾಜ್ಯದಲ್ಲಿ ಯಾರಿಗೂ ದುಃಖವಿರಲಿಲ್ಲ. ಗೂಂಡಾಗಿರಿಗಂತು ಅವಕಾಶವೇ ಇರಲಿಲ್ಲ. ಆದರೆ ವಿದೇಶಿ ದಾಳಿಕೋರರಾದ ಆರ್ಯರು ಇದನ್ನು ಸಹಿಸದೆ ಬಲಿಯನ್ನು ಕೊಂದು ಐತಿಹಾಸಿಕ ಚರಿತ್ರೆಯನ್ನು ಪುರಾಣದೊಳಗೆ ತುರುಕಿ ಮಕ್ಕಳನ್ನು ರಂಜಿಸುವ ಕಥೆಯನ್ನಾಗಿ ಸೃಷ್ಟಿಸಲಾಗಿದೆ. ವಾಮನ ಭಿಕಾರಿಯ ವೇಷದಲ್ಲಿ ಬಂದು ಮೂರು ಹೆಜ್ಜೆ ಭೂಮಿ ಕೇಳಿದನಂತೆ ಬಲಿಯು ಅದಕ್ಕೆ ಸಮ್ಮತಿಸಿದನಂತೆ, ವಾಮನ ಮೂರು ಹೆಜ್ಜೆಯಲ್ಲಿ ಒಂದು ಹೆಜ್ಜೆಯನ್ನು ಭೂಮಿಗೆ ಇಟ್ಟನಂತೆ, ಭೂ ಮಂಡಲವೇ ಆವರಿಸಿಕೊಳ್ಳಿತಂತೆ. ಮತ್ತೊಂದು ಹೆಜ್ಜೆಯನ್ನು ಆಕಾಶಕ್ಕೆ ಇಟ್ಟನಂತೆ, ಆಕಾಸವೇ ಆವರಿಸಿಕೊಳ್ಳಿತಂತೆ. ಮತ್ತೊಂದು ಹೆಜ್ಜೆಯನ್ನು ಎಲ್ಲಿ ಹಿಡುವುದು ಎಂದಾಗ ಬಲಿಯು ನನ್ನ ತಲೆ ಮೇಲಿರಿಸಿ ಎಂದನಂತೆ. ಬಲಿಯ ತಲೆ ಮೇಲೆ ಪಾದವಿಟ್ಟಾಕ್ಷಣ ಬಲಿಯು ಪಾತಾಳಕ್ಕೆ ಹೋದನಂತೆ. ವಾಮನವಿಟ್ಟ ಪಾದ ಭೂಮಿಯನ್ನೆಲ್ಲಾ ಆವರಿಸಿಕೊಂಡಿತೆಂದರೆ ಭೂ ಮಂಡಲದ ಜೀವರಾಶಿಗಳು ಪಾದದ ಕೆಳಗೆ ಸಿಕ್ಕಿ ಯಾವೊಂದು ಜೀವಿಯು ಸಾಯಲಿಲ್ಲವೇ? ಪ್ರಸ್ತುತದಲ್ಲಿ ಸೌರಮಂಡಲದ ಅನ್ವೇಷಣೆಗೆಂದು ಸಾವಿರಾರು ಕೋಟಿ ಖರ್ಚು ಮಾಡಿ ವಿಜ್ಞಾನಿಗಳನ್ನು ಕಳುಹಿಸುತ್ತಿದ್ದಾರೆ. ಅದರ ಬದಲಾಗಿ ಆಕಾಶಕ್ಕೆ ಪಾದವಿಟ್ಟ ವಾಮನ ಪಾದವೇರಿಯೇ ಕಂಡು ಹಿಡಿಯಬಹುದಿತ್ತಲ್ಲ? ಭೂಮಿಗೊಂದು ಕಾಲು, ಆಕಾಶಕ್ಕೊಂದು ಪಾದವಿಡುವ ಮುನ್ನ ವಾಮನ ನಿಂತಿದ್ದ ಜಾಗಯಾವುದು? ಆಕಾಶಕ್ಕೊಂದು ಕಾಲು, ಭೂಮಿಗೊಂದು ಕಾಲಿಟ್ಟಮೇಲೆ, ಮೂರನೇ ಪಾದವನ್ನು ಬಲಿಯ ಮೇಲಿಡಲು ಎಲ್ಲಿಂದ ತಂದ? ಇಷ್ಟೆಲ್ಲಾ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಕೊಡಲು ಅವರಲ್ಲಿ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಇತಿಹಾಸವನ್ನು ತಿರುಚಿ ವಿರೂಪಗೊಳಿಸುವುದಷ್ಟೇ ಅವರ ಕಾಯಕವಾಗಿದೆ. ಕಶ್ಯಪನ ಮಗ ಪ್ರಹ್ಲಾದ, ಪ್ರಹ್ಲಾದನ ಮಗ ವಿರೋಚನ. ಈ ವಿರೋಚನನ ಮಗನೇ ಬಲಿ. ಕಶ್ಯಪನನ್ನು ಮೋಸದಿಂದ ಕೊಂದರು. ಬಲಿರಾಜನ ತಾತ ಪ್ರಹ್ಲಾದನನ್ನು ವಂಚಿಸಿ ತಂದೆಯ ವಿರುದ್ಧವೇ ಎತ್ತಿಕಟ್ಟಿ ತಮ್ಮ ಕೈವಶ ಮಾಡಿಕೊಂಡಿದ್ದರು. ಅನಂತರ ಇವರ ಎಲ್ಲಾ ನಯವಂಚನೆಯ ಬುದ್ಧಿ ಅರ್ಥವಾಗಿ ಆರ್ಯ ಸಂಸ್ಕೃತಿಯನ್ನು ವರ್ಜಿಸಿ ಮುಂದೆ ಬೌದ್ಧ ಉಪಾಸಕನಾದ. ವಿರೋಚನನು ಮತ್ತು ಬಲಿಯು ಕೂಡ ಆರ್ಯ ಸಂಸ್ಕೃತಿಯ ವಿರೋಧಿಗಳೇ ಆಗಿದ್ದರೂ. ವಿರೋಚನನ ನಂತರ ಸಾಮ್ರಾಜ್ಯ ಬಲಿಯ ಕೈಗೆ ಬಂತು. ಈತನ ಆಳ್ವಿಕೆಯನ್ನು ಹೇಗಾದರು ಮಾಡಿ ಕಸಿದುಕೊಳ್ಳಬೇಕೆಂದು ವಾಮನ ತನ್ನ ಸೇನೆಯನ್ನು ಕೂಡಿಕೊಂಡು ಬಲಿಯ ರಾಜ್ಯಕ್ಕೆ ನುಗ್ಗಿ, ರಾಜಧಾನಿಯ ಸಮೀಪದಲ್ಲಿ ಬೀಡುಬಿಟ್ಟಿದ್ದ. ಬಲಿಗೆ ವಾಮನ ಮಾಡಿದ ಅನಿರೀಕ್ಷಿತ ದಾಳಿಯ ಕಲ್ಪನೆ ಇಲ್ಲವಾದ್ದರಿಂದ ಅಲ್ಪ ಸೈನ್ಯದೊಡನೆಯೆ ಹೋರಾಡಿದ. ಆತನಿಗೆ ತಮ್ಮ ಸಾಮ್ರಜ್ಯದಾಧ್ಯಂತ ಯುದ್ಧದ ಸಲುವಾಗಿ ಸೈನ್ಯ ಕರೆಸುವಷ್ಟು ಸಮಯವೂ ಇರಲಿಲ್ಲ. ವಾಮನೊಡನೆ ಯುದ್ದ ನಡೆದು ಬಲಿರಾಜ ಹತನಾದ. ಬಾಣಾಸುರ ವಾಮನನ್ನು ಹತ್ತಿಕ್ಕಲು ಸಾಕಷ್ಟು ಸಾಹಸ ಮಾಡಿದರು ಸಾಧ್ಯವಾಗದೇ ಸೈನ್ಯದೊಡನೆ ವಾಪಸ್ಸು ಮರಳಿಬಿಟ್ಟ. ಬಾಣಾಸುರ ಬರುವಷ್ಟರಲ್ಲಿ ಎರಡನೇ ಬಲಿಗೆ ಅಧಿಕಾರವಹಿಸಿ ಸಾಮ್ರಾಜ್ಯದಲ್ಲಿನ ಸಮಸ್ತ ಜನರು ‘ದ್ವಿಜರ ಅಧಿಕಾರ ಹೋಗಬೇಕು ಬಲಿಯ ರಾಜ್ಯ ಬರಬೇಕು’ ಎಂದು ದೀಪ ಹಚ್ಚಿದ್ದರು.  ಆ ದಿವಸದಿಂದ ಇಂದಿಗೂ ನಮ್ಮ ನೆಲಮೂಲರು ದೀಪ ಹಚ್ಚುತ್ತಲೇ ಇದ್ದಾರೆ. ಬಲಿರಾಜನ ಸರದಾರರಿಗೆಲ್ಲಾ ಈ ವಿಷಯ ತಿಳಿದು ಬಾಣಾಸುರನ ಬಳಿ ಬಂದರು. ಈ ವಿಷಯ ತಿಳಿದ ಆರ್ಯರು ಜೀವ ಕೈಲಿ ಹಿಡಿದುಕೊಳ್ಳಲು ಪ್ರಾರಂಭಿಸಿದರು. ಎಲ್ಲಾ ಸೈನ್ಯವನ್ನು ತೆಗೆದುಕೊಂಡು ಹೋದ ಬಾಣಾಸುರ ವಾಮನನ್ನು ಅವನ ಸೈನ್ಯದ ಸಮೇತ ಧೂಳಿಪಟ ಮಾಡಿದನು. ಅನಂತರ ವಾಮನ ಅಪಮಾನಿತನಾಗಿ ಹಿಮಾಲಯ ಪರ್ವತಕ್ಕೆ ಓಡಿಹೋದ. ಇದಾದ ಬಳಿಕ ಅಬಾಲವೃದ್ಧ ಸ್ತ್ರೀಯರಿಗೆ ಅಪಾರ ಆನಂದವಾಗಿ ಕಾರ್ತೀಕ ಶುದ್ಧ ದ್ವಿತೀಯದಂದು ತಮ್ಮ ಬಾಂಧುಬಾಂಧವರನ್ನು ಕರೆಯಿಸಿ ಯಥಾಪ್ರಕಾರ ಭೋಜನಾ ಕೂಟ ಏರ್ಪಡಿಸಿ ಆರತಿ ಮಾಡಿ ದೀಪಗಳನ್ನೆಲ್ಲಾ ಹಚ್ಚುವ ಮೂಲಕ ‘ಇಡಾಪೀಡಾ ಹೋಗಲಿ ಬಲಿರಾಜ್ಯ ಬರಲಿ’ ಎಂದು ಬಲಿರಾಜನನ್ನು ನೆನೆಯುತ್ತಾರೆ. ‘ಡಾ.ಬಿ.ಆರ್.ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳು- ಸಂಪುಟ 21’ ಕನ್ನಡ ಸಂಸ್ಕೃತಿ ಇಲಾಖೆ ತಂದಿರುವ 2015ರ ಪರಿಷ್ಕೃತ ಮುದ್ರಣದಲ್ಲಿ  ಪದ್ಮಪುರಾಣದಲ್ಲಿನ ಬಲಿಯ ವಿಷಯವನ್ನು ಹೀಗೆ ಪ್ರಸ್ತಾಪಿಸಿದ್ದಾರೆ. ಬಲಿನಾಮ ಮಹಾದೈತ್ಯೋ ದೇವಾರಿರಪರಾಜಿತಃ ಧರ್ಮೇಣ ಯಶ ಸಾಚೈವ ಪ್ರಜಾ ಸಂರಕ್ಷಣೇ ಚ ತಸ್ಮಿನ್ ಶಾಸತಿ ರಾಜ್ಯಂ ತು ತ್ರೈಲೋಕ್ಯ ಹತಕಷ್ಟಕಮ್ ನಾರಯೋ ವ್ಯಾಧಯೋಪಾಡಪಿ ನಾಧಯೋಯಾ ಕಥಂ ಚ ನ ಅನಾವೃಷ್ಟಿಧಮರ್ೋ ವಾ ನಾಸ್ತಿ ಶಬ್ದೋ ನ ದುರ್ಜನಃ ಸ್ವಸ್ನೇ ಪಿ ನೈವ ಧೃಶ್ಯತೇ ಬಲೌ ರಾಜ್ಯ ಪ್ರಶಾಸತಿ ಮೇಲಿನ ಪದ್ಮಪುರಾಣದ ಉಲ್ಲೇಖದ ಅರ್ಥ ಹೀಗಿದೆ : ಬಲಿ ಹೆಸರಿನ ಮಹಾದೈತ್ಯ ದೇವರ ಶತ್ರುವಾಗಿ ಅಪರಾಜೇಯನಾಗಿದ್ದ. ಧರ್ಮ ಯಶ ಮತ್ತು ಪ್ರಜೆಗಳ ರಕ್ಷಣೆಯಲ್ಲಿ ಅವನು ಅತ್ಯಂತ ತರ್ಕಬದ್ಧವಾಗಿದ್ದ. ಬಲಿಯ ರಾಜ್ಯದಲ್ಲಿ ಯಾರಿಗೂ ದುಃಖವಿರಲಿಲ್ಲ, ಯಾರು ಯಾರಿಗೂ ಶತ್ರುವಾಗಿರಲಿಲ್ಲ. ಯಾರಿಗೂ ಯಾವ ಚಿಂತೆಯೂ ಇರಲಿಲ್ಲ. ಅವನ ಆಡಳಿತ ಕಾಲದಲ್ಲಿ ಜನರ ದುಃಖ ಕಷ್ಟ ದೂರವಾಗಿತ್ತು. ಅವನ ರಾಜ್ಯದಲ್ಲಿ ನೀರಿನ ಕೊರತೆ ಇರಲಿಲ್ಲ. ಗೂಂಡಾಗಿರಿ, ಹಠಮಾರಿತನ ಇರಲಿಲ್ಲ. ಮತ್ತು ಕನಸಿನಲ್ಲಿಯೂ ಸಹ ಅಂಥವರು ಕಾಣಿಸುತ್ತಿರಲಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರ ಉಲ್ಲೇಖವನ್ನು ಗಮನಿಸಿದರೆ ಬಲಿ ರಾಜ್ಯವು ಎಂತಹ ಪ್ರಜಾಪ್ರಭುತ್ವ ಮಾದರಿಯನ್ನು ಒಳಗೊಂಡಿತ್ತು ಎಂಬುದು ಸ್ಪಷ್ಟವಾಗುತ್ತದೆ. ಆದರೆ ವೈದಿಕರು ಇಂತಹ ಬಹುದೊಡ್ಡ ಚರಿತ್ರೆಯನ್ನು ವಿರೂಪಗೊಳಿಸಿದ್ದಾರೆ. ಬಲಿ ಚಕ್ರವತರ್ಿಯ ವಂಶಾವಳಿಯ ಪರಂಪರೆಯು ಮೂಲತಹ ಬೌದ್ಧ ಪರಂಪರೆಯನ್ನು ಸಾರಿಕೊಂಡು ಬಂದವರು. ಬೌದ್ಧರ ಈ ಪರಂಪರೆಯನ್ನು ನಾಶ ಮಾಡಲೆಂದೆ ಚರಿತ್ರೆಯನ್ನೆಲ್ಲಾ ವಿರೂಪಗೊಳಿಸಿ ಇವರನ್ನು ಜನರು ನೆನೆಯಬಾರದು ಬೌದ್ಧ ಚರಿತ್ರೆ ತಿಳಿಯಬಾರದೆಂದು ಹೀಗೆ ವ್ಯವಸ್ಥಿತವಾಗಿ ಹತ್ತಿಕ್ಕಲಾಗಿದೆ. ಭಗವಾನ್ ಬುದ್ಧರ ಪೂರ್ವ ಚರಿತ್ರೆ ಹಾಗೂ ಬುದ್ಧರ ನಂತರದ ಚರಿತ್ರೆ ಎರಡನ್ನು ವಿರೂಪಗೊಳಿಸಲಾಗಿದೆ. ಭಗವಾನ್ ಬುದ್ಧರಿಗೂ ಹಿಂದೆ ಬೌದ್ಧ ಪರಂಪರೆ ಅಸ್ಥಿತ್ವದಲ್ಲಿತ್ತು. 1911 ರಲ್ಲಿ ಆರ್.ಡಿ. ಬ್ಯಾನರ್ಜಿಯವರು ಸಿಂಧೂ ಬಯಲಿನ ಹರಪ್ಪ ಮತ್ತು ಮಹೆಂಜೊದಾರೊಗಳಲ್ಲಿ ಭೂ ಉತ್ಕನನ ಮಾಡುವಾಗ ಸಿಕ್ಕ ಚಕ್ರ ಮತ್ತು ಪಶುಪತಿನಾಥನ ಕೆತ್ತನೆಗಳು ಬೌದ್ಧ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಬುದ್ಧರು ಬರುವ ಮುನ್ನವೇ ಹಿಂದೆ ಈ ಸಂಸ್ಕೃತಿ ಇತ್ತು ಎಂದು ಅಭಿಪ್ರಾಯ ಪಡುತ್ತಾರೆ. ಪ್ರತಾಪ್ ಚೆಟ್ಸೆ ಅವರ ಇಂಗ್ಲೀಷ್ ಮೂಲ ಕೃತಿಯಾದ ‘ದ ರೆವ್ಯುಲುಷನರಿ ಬುದ್ಧ’ ಕೃತಿಯನ್ನು ‘ಕ್ರಾಂತಿಕಾರಿ ಬುದ್ಧ’ಎಂದು ಲೇಖಕ ಹಾಗೂ ಪತ್ರಕರ್ತ ರವಿಂದ್ರ ಸುಂಟನಕರ  Ravindra N S ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ. ಈ ಕೃತಿಯಲ್ಲು ಸಹ ಬುದ್ಧರು ನಾನೆ ಮೊದಲಲ್ಲ ನಾನು 28ನೇಯವನು. ನನಗಿಂತ ಹಿಂದೆಯೇ ಪಶುಪತಿನಾಥ, ಚಕ್ರವಾಕ, ಬಾವಲಿ, ಪ್ರಹ್ಲಾದ, ವಿರೋಚನಾ ಮುಂತಾದ ಬೌದ್ಧ ತತ್ವಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರದಲ್ಲಿ ನಿರಂತರ ಅಧ್ಯಯನಕಾರರಾಗಿದ್ದರು. ಅವರ ತತ್ವಶಾಸ್ತ್ರ ಮತ್ತು ಸಂಖ್ಯಾಶಾತ್ರವನ್ನು ನಾನು ಕೂಡ ಅಳವಡಿಸಿಕೊಂಡಿದ್ದೇನೆ ಹಾಗಾಗಿ ನಾನು 28ನೇ ಬುದ್ಧ ಎಂದು ಕರೆದುಕೊಂಡಿರುವುದು ಕ್ರಾಂತಿಕಾರಿ ಬುದ್ಧ ಪುಸ್ತಕದಲ್ಲಿ ದಾಖಲಾಗಿದೆ. ಬುದ್ಧ ಎನ್ನುವ ಪದ ಹೆಸರಲ್ಲ ಅದೊಂದು ಡಿಸಿಗ್ನೇಶನ್. ಕಾಲಾನಂತರದಲ್ಲಿ ಅದು ಹೆಸರಿನ ಸ್ವರೂಪ ಪಡೆದುಕೊಂಡಿದೆ. ಬುದ್ಧ ಪೂರ್ವ ಮತ್ತು ಭಗವಾನ್ ಬುದ್ಧರ ನಂತರ ಚರಿತ್ರೆಯನ್ನು ಎರಡು ರೀತಿಯಲ್ಲಿ ವಿರೂಪಗೊಳಿಸಲಾಗಿದೆ. ಭಗವಾನ್ ಬುದ್ಧರ ಪೂರ್ವದಲ್ಲಿ ಬರುವ ಬಲಿ ಚಕ್ರವರ್ತಿಯ ವಂಶಜರು ಮೂಲತಹ ಬೌದ್ಧ ಪ್ರತಿಪಾದಕರಾಗಿದ್ದು ಅವರನ್ನು ಪುರಾಣಗಳಲ್ಲಿ ಬರೆದುಕೊಂಡು ಹಿಂದೂಕರಣ ಮಾಡಿಕೊಳ್ಳಲಾಗಿದೆ ಜೊತೆಗೆ ಅವರನ್ನು ದುಷ್ಟರು ಎಂಬಂತೆ ಬಿಂಬಿಸಲಾಗಿದೆ. ಭಗವಾನ್ ಬುದ್ಧರ ಅನಂತರದ ಚರಿತ್ರೆಯನ್ನು ಮೂಲಭಾಷೆಗೆ ಬರೆಯದೆ ಸಂಸ್ಕೃತದಲ್ಲಿ ಬರೆದುಕೊಂಡು ಅದನ್ನು ಮೂಲನಿವಾಸಿಗಳು ಓದಿ ತಿಳಿದುಕೊಳ್ಳದ ರೀತಿಯಲ್ಲಿ ಬಂಧಿಸಲಾಗಿದೆ. ಒಂದು ವೇಳೆ ಓದಿದರು ಸಹಿತ ಬುದ್ಧರ ನಿಜವಾದ ಚರಿತ್ರೆಯು ಜನರ ಕೈಗೆ ಸಿಗದಂತೆ ಮಾಡಲಾಗಿದೆ.  ಈ ರೀತಿ ಮಾಡಿದವರಲ್ಲಿ ಮೊದಲಿಗರು ಬ್ರಾಹ್ಮಣ ಲೇಖಕ ಅಶ್ವಘೋಷ ‘ಬುದ್ಧಚರಿತಂ’ ಬರೆಯುವ ಮೂಲಕ ಬೌದ್ಧ ಸಂಸ್ಕೃತಿ ಹಾಗೂ ಬುದ್ಧರ ನಿಜವದ ಬೊಧನೆಗಳನ್ನು ವಿರೂಪಗೊಳಿಸಿದ್ದಾರೆ ಎಂದು ‘ದ ರೆವ್ಯುಲುಷನರಿ ಬುದ್ಧ’ ಕನ್ನಡಾನುವಾದ ‘ಕ್ರಾಂತಿಕಾರಿ ಬುದ್ಧ’ ಕೃತಿಯಲ್ಲಿ ನಾವು ಬುದ್ಧರ ಚಿಂತನೆಗಳನ್ನು ಹೇಗೆ ಹತ್ಯೆ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಬೌದ್ಧ ಸಂಸ್ಕೃತಿ ಮತ್ತು ಜೀವನ ಕ್ರಮ ವೈಜ್ಞಾನಿಕವಗಿದ್ದು ಯಾವುದೇ ಮೌಢ್ಯವನ್ನು ಬೆಂಬಲಿಸಿಲ್ಲ. ಆದರೆ ವಿಪ್ರರು ಬೌದ್ಧ ಚರಿತ್ರೆಯನ್ನು ಧ್ವಂಸಗೊಳಿಸಿದ್ದಾರೆ. ಬುದ್ಧರ ಪೂರ್ವದಲ್ಲಿನ ಪಶುಪತಿನಾಥ, ಚಕ್ರವಾಕ, ಬಾವಲಿ, ಪ್ರಹ್ಲಾದ ಮತ್ತು ವಿರೋಚನರಂತಹ ಮಹಾನ್ ಬೌದ್ಧರನ್ನು ಅವರ ತಾತ್ವಿಕತೆಯನ್ನು ಪೌರಾಣಿಕಗೊಳಿಸಿ ಜನರನ್ನು ಧಿಕ್ಕು ತಪ್ಪಿಸಿದ್ದಾರೆ. ಬಲಿಯನ್ನು ಕೊಲ್ಲುವ ಮೂಲಕ ಬೌದ್ಧ ಸಂಸ್ಕೃತಿ ಬಿಂಬವನ್ನು ಅಳಿಸಲಾಗಿದೆ. ಭಗವಾನ್ ಬುದ್ಧರ ಮರಣದ ನಂತರ ಸಾಹಿತ್ಯಾತ್ಮಕ ಚರಿತ್ರೆಯನ್ನು ಭಗ್ನಗೊಳಿಸಲಾಗಿದೆ. ಈ ಮೂಲಕ ಎರಡು ರೀತಿಯ ಸಾಂಸ್ಕತಿಕ ಹತ್ಯೆಯನ್ನು ವೈದಿಕರು ಬಹಳ ಕುತಂತ್ರದಿಂದ ಮಾಡಿದ್ದರೆ. ಇನ್ನು ಮುಂದಾದರು ನಮ್ಮ ಚರಿತ್ರೆಯನ್ನು ಮತ್ತೆ ಪುನರುತ್ಥಾನಗೊಳಿಸಿಕೊಳ್ಳುವ ಕಡೆ ನಾವು ಹೆಜ್ಜೆಯನ್ನಿಡಬೇಕಿದೆ.

ಬಲಿ ಚಕ್ರವರ್ತಿಯ ಹತ್ಯೆಯ ಜೊತೆಗೆ ಸಾಂಸ್ಕೃತಿಕ ಹತ್ಯೆಯು ನಡೆದು ಹೋಗಿದೆ Read Post »

You cannot copy content of this page

Scroll to Top