ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಶಿಕ್ಷಣ

ಇಂದಿನ ಶಿಕ್ಷಕ

ಲೇಖನ ಇಂದಿನ ಶಿಕ್ಷಕ ಸುಮಾ ಕಿರಣ್ ಮಿತ್ರರೇ, ಒಂದು ಇಪ್ಪತ್ತೈದು ವರ್ಷಗಳಷ್ಟು ಹಿಂದಕ್ಕೆ ನಮ್ಮ ನೆನಪನ್ನು ಹೊರಳಿಸಿದ್ದೇ ಆದರೆ… ಬಹಳಷ್ಟು ಮನಸ್ಸಿಗೆ ಮುದ ನೀಡುವ ನೆನಪುಗಳು ಗರಿಗೆದರುತ್ತವೆ! ಅದರಲ್ಲಿ ಒಂದು, ನಮ್ಮ ಶಾಲಾ ದಿನಗಳು. ಶಾಲೆ ಎಂಬುದು ನಮ್ಮ ಪಾಲಿಗೆ ಕೇವಲ ವಿದ್ಯೆ ಕಲಿಯುವ ಜಾಗದಂತೆ ಇರದೆ, ವಿದ್ಯಾ ದೇಗುಲದಂತೆ ಗೋಚರಿಸುತ್ತಿತ್ತು. ಅದಕ್ಕಾಗಿಯೇ ತರಗತಿಯ ಒಳಗೆ ಹೋಗುವ ಮೊದಲು ಶಾಲೆಯ ಮುಂಭಾಗದ ಗೋಡೆಗೆ ಸಾಲಾಗಿ ನಮ್ಮ ಚಪ್ಪಲಿಗಳನ್ನು ಜೋಡಿಸಿಟ್ಟು ಬರಿಗಾಲಲ್ಲಿ ಕುಳಿತು ಪಾಠ ಕೇಳುತ್ತಿದ್ದೆವು. ಇನ್ನೂ ಬಹಳಷ್ಟು ಶಾಲೆಗಳಲ್ಲಿ ಬೆಂಚು, ಕುರ್ಚಿಯ ವ್ಯವಸ್ಥೆ ಇರದೆ ನೆಲದ ಮೇಲೆ ಕುಳಿತು ಪಾಠ ಕೇಳುವ ಪದ್ಧತಿ ಇತ್ತು. ಬಹುಶಃ ಇದಕ್ಕೆ ಕಾರಣ ವಿದ್ಯಾರ್ಥಿಗಳಾದ ನಾವು ಅಧ್ಯಾಪಕರ ಸರಿ ಸಮಕ್ಕೆ ಕುಳಿತುಕೊಳ್ಳದೆ ವಿನಯ, ವಿಧೇಯತೆಯನ್ನು ರೂಡಿಸಿಕೊಳ್ಳಲಿ… ಎಂದಿರಬಹುದೇನೊ! ಹಾಗೆಯೇ ನಮ್ಮ ಅಧ್ಯಾಪಕರ ಬಗೆಗೆ ಅಪಾರ ಗೌರವ, ಪ್ರೀತಿ, ಭಯ-ಭಕ್ತಿ ಎಲ್ಲವೂ ತುಂಬಿರುತ್ತಿತ್ತು. ಅಧ್ಯಾಪಕರೊಂದಿಗೆ ವಾದ ಮಾಡುವುದಿರಲಿ; ಅಧ್ಯಾಪಕರು ಅಷ್ಟು ದೂರದಲ್ಲಿ ಕಂಡರೂ ಸಾಕು ನಮ್ಮ ತೊಡೆಗಳಲ್ಲಿ ನಡುಕ ಹುಟ್ಟುತ್ತಿತ್ತು. ಅಧ್ಯಾಪಕರು ನೀಡುತ್ತಿದ್ದ ಶಿಕ್ಷೆಗಳು ಕೂಡ ಅಷ್ಟೇ ಕಠಿಣವಾಗಿ ಇರುತ್ತಿತ್ತು. ಇನ್ನೊಂದು ಬಾರಿ ಅಂತಹ ತಪ್ಪು  ಮಾಡದಂತೆ ಸದಾ ಎಚ್ಚರಿಸುವ ರೀತಿಯಲ್ಲಿ ಶಿಕ್ಷೆಗಳು ಇರುತ್ತಿದ್ದವು. ಅಧ್ಯಾಪಕರ ಬಗ್ಗೆ ಕೇವಲ ನಮಗೆ ಮಾತ್ರವಲ್ಲ ಮನೆ ಮಂದಿ, ಊರವರಿಗೆಲ್ಲ ಗೌರವ ಭಾವ. ಮನೆಯಲ್ಲಿ ನಾವೇನಾದರೂ ಅಧ್ಯಾಪಕರ ಬಗ್ಗೆ ದೂರು ಹೇಳಿದ್ದೆ ಆದರೆ, ಮನೆಯವರಿಂದ ನಮಗೇ ನಾಲ್ಕು ಗುದ್ದು ಬಿದ್ದು ನಮ್ಮ ಬಾಯಿ ಮುಚ್ಚುತ್ತಿತ್ತು. ಎಲ್ಲಿಯಾದರೂ ಅಧ್ಯಾಪಕರನ್ನು ನಮ್ಮ ಪಾಲಕರು ಕಂಡದ್ದೇ ಆದರೆ, ಅವರ ಬಾಯಿಯಿಂದ ಬರುತ್ತಿದ್ದ ಒಂದೇ ಪದ “ಗಂಡಿಗ್ ಸಮ ನಾಲ್ಕು ಹಾಕಿ ಮೇಷ್ಟ್ರೇ, ಹೇಳಿದ್ದ್ ಕೆಂತಿಲ್ಲ “. ಇನ್ನು ಅಧ್ಯಾಪಕ ವೃತ್ತಿ ಎನ್ನುವುದು ಗೌರವಕ್ಕೆ ಪಾತ್ರವಾದ ವೃತ್ತಿಯಾಗಿತ್ತು. ಶ್ರೇಷ್ಠ ವೃತ್ತಿ ಎಂಬ ಹೆಗ್ಗಳಿಕೆ ಕೂಡ ಇತ್ತು. “ಶಿಕ್ಷಕರು” ಎಂದರೆ ಊರಿನಲ್ಲೆಲ್ಲ ಒಂದು ಘನತೆ ಇತ್ತು. ಅವರ ಮಾತಿಗೆ ಊರವರು ಬೆಲೆ ಕೊಡುವ ಜೊತೆಗೆ ಶಿಕ್ಷಕರು ಊರಿನಲ್ಲಿರುವ ಎಲ್ಲರ ಮನೆಯವರೊಂದಿಗೆ ಆತ್ಮೀಯ ಒಡನಾಟ ಹೊಂದಿರುತ್ತಿದ್ದರು. ಶಿಕ್ಷಕರಿಗೆ ದೊರಕುತ್ತಿದ್ದ ಈ ಪರಿಯ ಪ್ರೀತಿ, ಗೌರವಗಳಿಂದಾಗಿ ಮುಂದಿನ ತಲೆಮಾರಿನವರೂ ಶಿಕ್ಷಕರಾಗುವ ಕನಸು ಕಾಣುತ್ತಿದ್ದರು ಎಂದರೆ ತಪ್ಪಾಗಲಾರದೆನೋ? ಮಿತ್ರರೇ, ಈಗ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸ್ವಲ್ಪ ಅವಲೋಕಿಸೋಣವೇ? ಅಧ್ಯಾಪಕರೊಂದಿಗೆ ವಾದಿಸುವ,  ಅಧ್ಯಾಪಕರಿಗೆ ವಾಟ್ಸಪ್ ನಲ್ಲಿ ಸಂದೇಶ ಕಳುಹಿಸುವ ಇಂದಿನ ವಿದ್ಯಾರ್ಥಿಗಳಿಂದ ಅದ್ಯಾವ ಪರಿಯ ವಿನಯ ವಿಧೇಯತೆಗಳನ್ನು ನಿರೀಕ್ಷಿಸಲು ಸಾಧ್ಯ  ನೀವೇ ಹೇಳಿ! ಇನ್ನು ತಮ್ಮ ಮಕ್ಕಳ ಶಿಕ್ಷಕರ ಬಗ್ಗೆ ಪಾಲಕರಿಗೇ ಕಿಂಚಿತ್ತು ಗೌರವವಿಲ್ಲ. ಮಕ್ಕಳ ಎದುರಿನಲ್ಲಿ ಅವರ ಶಿಕ್ಷಕರನ್ನು ಏಕವಚನದಲ್ಲಿ ಹೀಯಾಳಿಸುವಾಗ ಮಕ್ಕಳಿಗಾದರೂ ಗೌರವ ಅದೆಲ್ಲಿಂದ ಮೂಡಬೇಕು? ಪಾಲಕರಾದ ನಾವು,  ನಮ್ಮ  ಹಿರಿಯರು ಅದ್ಯಾವ ಪರಿಯ ವಿನಯದಿಂದ ನಮ್ಮ ಶಿಕ್ಷಕರೊಂದಿಗೆ ವ್ಯವಹರಿಸುತ್ತಿದ್ದರು ಎಂಬುದನ್ನು ಈ ಕ್ಷಣಕ್ಕೆ ಮರತೇ ಬಿಟ್ಟಿರುತ್ತೇವೆ. ಇನ್ನು ತಮ್ಮ ಶಾಲಾ ಮಕ್ಕಳಿಗೆ ಹೊಡೆಯುವುದಂತಿರಲಿ; ಗಟ್ಟಿಯಾಗಿ ಗದರಿದರೂ ಅದೊಂದು ಅಪರಾಧದಂತೆ ಕಂಡು, ಅಧ್ಯಾಪಕರು ಮಹಾನ್ ಅಪರಾಧಿಗಳಂತೆ ಬಿಂಬಿತರಾಗುತ್ತಾರೆ. “ನನ್ನ ಮಗುವಿಗೆ ನಿಮ್ಮ ಶಿಕ್ಷಕರು ಗದರಿದರಂತೆ? ಅವನು ಶಾಲೆಗೆ ಬರಲು ಒಪ್ಪುತ್ತಿಲ್ಲ” ಎಂದು ಶಾಲಾ ಪ್ರಾಂಶುಪಾಲರೊಂದಿಗೆ ದೂರುವ ಪಾಲಕರು ಕ್ಷಣ ಕಾಲ ಹಿಂತಿರುಗಿ ನೋಡಿದ್ದರೆ… ಕೋಲಿನಲ್ಲಿ ಬಾಸುಂಡೆ ಬರುವಂತೆ ಬಡಿದಾಗಲೂ ಚಕಾರವೆತ್ತದ ನಮ್ಮ ಪಾಲಕರು ಕಣ್ಮುಂದೆ ತೇಲುತ್ತಾರೆ. ಇಂದಿನ ಮಕ್ಕಳಿಗೆ ಅವರು ತಪ್ಪು ಮಾಡಿದಾಗ ತಿದ್ದಲು ಅವಶ್ಯಕವಾದ ಸಣ್ಣ ಮಟ್ಟದ ದಂಡನೆ ಪಾಲಕರಿಂದ ಯಾ ಶಿಕ್ಷಕರಿಂದ ಆಯಾ ಕಾಲಕ್ಕೆ ವಿಧಿಸಲ್ಪಡದೆಯೇ ಇರುವುದರಿಂದಲೇ ನಾಗರಿಕ ಸಮಾಜದಲ್ಲಿ ತಪ್ಪಿನ ಮೇಲೆ ತಪ್ಪು ಎಸಗುತ್ತಾ ಕಾನೂನಿನ ಕುಣಿಕೆಗೆ ಸಿಲುಕಿ ಪೋಲೀಸರಿಂದ ಹೊಡೆತ ತಿನ್ನುವ ಮಟ್ಟಕ್ಕೆ ಬೆಳೆಯುತ್ತಿದ್ದಾರೆ! ಮಕ್ಕಳಿಗೆ ಹೊಡೆಯಬಾರದು, ಬೈಯಬಾರದು… ಇದನ್ನೆಲ್ಲ ಹೇಗೋ ಶಿಕ್ಷಕರು ಸಹಿಸಿಯಾರು. ಆದರೆ, ಬೋರ್ಡ್ ಮೇಲೆ ಬರೆದ ನೋಟ್ಸ್ ಅನ್ನು ಮಗು ಬರೆಯದಿದ್ದಾಗಲೂ ಅದು ಶಿಕ್ಷಕರದ್ದೆ ತಪ್ಪು! ಮಗುವಿನ ನೋಟ್ಸ್ ಪೂರ್ಣಗೊಳಿಸುವುದು, ಮಗು ಉತ್ತಮ ಅಂಕ ಗಳಿಸುವುದು…  ಎಲ್ಲದಕ್ಕೂ ಹೊಣೆಗಾರರು ಶಿಕ್ಷಕರೇ! ಗಮನಿಸಿ – ಮನೆಯಲ್ಲಿ ಇರುವ ನಮ್ಮ ಒಂದೇ ಮಗುವಿನ ನೋಟ್ಸ್ ಅನ್ನು ಪೂರ್ಣಗೊಳಿಸುವಲ್ಲಿ ಸಹಕರಿಸಲು ಆಗದ ಪಾಲಕರು ನಾವು. ಅದೇ ಒಬ್ಬ ಶಿಕ್ಷಕ ತರಗತಿಯಲ್ಲಿರುವ ನಲವತ್ತು ವಿದ್ಯಾರ್ಥಿಗಳನ್ನು ನೋಡಬೇಕು. ಅದೂ ಕೇವಲ ಒಂದೇ ತರಗತಿಯಲ್ಲ! ಅಂತಹ ಕನಿಷ್ಠ ಆರು ತರಗತಿಗಳನ್ನು ಪ್ರತಿನಿತ್ಯ ಗಮನಿಸಬೇಕು ಎಂದಾದರೆ ನಿಜಕ್ಕೂ ಶಿಕ್ಷಕರ ಬಗ್ಗೆ ಕರುಣೆ ಮೂಡುವುದಿಲ್ಲವೇ? ಮಿತ್ರರೇ, ಒಬ್ಬ ಶಿಕ್ಷಕ ಕೂಡ ಎಲ್ಲರಂತೆ  ಸಾಮಾನ್ಯ ಮನುಷ್ಯ! ತನ್ನ ವೃತ್ತಿಯ ಮೇಲಿನ ಗೌರವ, ಪ್ರೀತಿ, ಬದ್ಧತೆಯಿಂದ ತನ್ನ ಮುಂದಿರುವ ಎಲ್ಲಾ ಸವಾಲುಗಳನ್ನು ನಗುನಗುತ್ತಾ ಎದುರಿಸುವ ಕಲೆಗಾರಿಕೆ ಶಿಕ್ಷಕನಿಗೆ ಕರಗತವಾಗಿರುತ್ತದೆ. ಹಾಗೆಂದು ಪಾಲಕರಾದ ನಾವು ಎಲ್ಲ ತಪ್ಪುಗಳನ್ನು ಶಿಕ್ಷಕರ ಕುತ್ತಿಗೆಗೆ ಕಟ್ಟಿ ನಿರಾಳವಾಗಿ ಇರಲು ಸಾಧ್ಯವೇ? ಖಂಡಿತ ನಾವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲಕ್ಷಗಟ್ಟಲೆ ಹಣವನ್ನು ಶಿಕ್ಷಣ ಸಂಸ್ಥೆಗಳ ಮೇಲೆ ಸುರಿದಿದ್ದೇವೆ. ಹಾಗೆಂದು ಶಿಕ್ಷಕರು ನಾವು ಬಯಸಿದಂತೆ ಇರಬೇಕು ಎಂಬುದು ಯಾವ ಪರಿಯ ನ್ಯಾಯ? ಕ್ಷಣ ಕಾಲ ಯೋಚಿಸಿ, ನೀವು ಮಹಾನಗರಗಳಲ್ಲಿ ಇದ್ದರೆ ಈ ಅನುಭವ ಖಂಡಿತ ನಿಮಗಾಗಿರುತ್ತದೆ. ನೀವು ವೃತ್ತಿ ನಿರತರಾಗಿದ್ದು ನಿಮ್ಮ ಒಂದು ಮಗುವನ್ನು ನೋಡಿಕೊಳ್ಳಲು ಆಯಾಗಳಿಗೆ ತಿಂಗಳಿಗೆ ಕನಿಷ್ಠ 20 ಸಾವಿರಕ್ಕೂ ಅಧಿಕ ಹಣ ಚೆಲ್ಲಿರುತ್ತೀರಿ. ಆದರೆ, ಒಬ್ಬ ಖಾಸಗಿ ಶಾಲಾ ಶಿಕ್ಷಕ/ಅಧ್ಯಾಪಕ ಇದಕ್ಕೂ ಕಡಿಮೆ ಸಂಬಳಕ್ಕೆ ಪ್ರತಿದಿನ ಪ್ರತಿ ತರಗತಿಯಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸುಧಾರಿಸಿ, ಅವರ ಎಲ್ಲ ಅಹವಾಲುಗಳನ್ನು ತಾಳ್ಮೆಯಿಂದ ಕೇಳಿ, ಕ್ಷಣ ಕ್ಷಣಕ್ಕೂ ಅವರೆಡಗೆ ಕಾಳಜಿ ತೋರಿ, ಊಟದಿಂದ ಹಿಡಿದು ಪಾಠದವರೆಗೆ ಗಮನಿಸುತ್ತಾರೆ. ಅಂತಹ ಶಿಕ್ಷಕರ ಬಗ್ಗೆ ನಮಗದೆಷ್ಟು ಗೌರವ ಅಭಿಮಾನವಿರಬೇಕು. ಈಗಲಾದರೂ ಈ ಬಗ್ಗೆ ಯೋಚಿಸೋಣವೇ?? ಸುಮಾ ಕಿರಣ್

ಇಂದಿನ ಶಿಕ್ಷಕ Read Post »

ಇತರೆ, ವ್ಯಕ್ತಿ ಪರಿಚಯ

ನಟ, ನಾಟಕಕಾರ, ಕವಿ, ಕಲಾವಿದ ಎಲ್ಲಕ್ಕೂ ಮಿಗಿಲಾಗಿ ‘ಮಾನವಪ್ರೇಮಿ’ ಸಾಹಿತಿ ಸತೀಶ ಕುಲಕರ್ಣಿ.!

ವ್ಯಕ್ತಿ ಚಿತ್ರ ನಟ, ನಾಟಕಕಾರ, ಕವಿ, ಕಲಾವಿದ ಎಲ್ಲಕ್ಕೂ ಮಿಗಿಲಾಗಿ ‘ಮಾನವಪ್ರೇಮಿ’ ಸಾಹಿತಿ ಸತೀಶ ಕುಲಕರ್ಣಿ ನಟ, ನಾಟಕಕಾರ, ಕವಿ, ಕಲಾವಿದ ಎಲ್ಲಕ್ಕೂ ಮಿಗಿಲಾಗಿ ‘ಮಾನವಪ್ರೇಮಿ‘ ಸಾಹಿತಿ ಸತೀಶ ಕುಲಕರ್ಣಿ.! — ನಟ — ನಾಟಕಕಾರ, ಕವಿ — ಕಲಾವಿದ — ಎಲ್ಲಕ್ಕೂ ಮಿಗಿಲಾಗಿ ‘ಮಾನವಪ್ರೇಮಿ’ ಅತಿಮಾನುಷ ಸರಳ, ಸಹಜ, ಪ್ರಾಕೃತಿಕ ಮನುಷ್ಯ ಸತೀಶ ಕುಲಕರ್ಣಿಯವರು ಹುಟ್ಟಿದ್ದು ಧಾರವಾಡದಲ್ಲಿ. ತಂದೆ ನೀಲಕಂಠರಾವ್‌ ಕುಲಕರ್ಣಿ, ತಾಯಿ ಲೀಲಾಬಾಯಿ ಕುಲಕರ್ಣಿ ಅಂತ. ಚಿಕ್ಕಂದಿನಿಂದಲೂ ನಾಟಕದ ಬಗೆಗೆ ಬೆಳೆದ ಅಭಿರುಚಿಯಿಂದ ಹಲವಾರು ನಾಟಕಗಳ ಅಭಿನಯ ಮತ್ತು ನಿರ್ದೇಶನ ಮಾಡಿದವರು..! ಪಿ.ಲಂಕೇಶರ ತೆರೆಗಳು, ಜೋಕುಮಾರಸ್ವಾಮಿ, ಕುಂಟಾಕುಂಟಾ ಕುರವತ್ತಿ, ಪ್ರಸ್ತುತ, ಬಂಗಾರದ ಕೊಡ, ಗಾಂಧಿ ಹಚ್ಚಿದ ಗಿಡ, ಪರಸಪ್ಪನ ಕಥೆ, ಅನಾಮಿಕ, ಕಂಪ್ಯೂಟರ್, ದೊಡ್ಡಮನುಷ್ಯ, ಹಾವು ಬಂತು ಹಾವು, ಗಗ್ಗಯ್ಯನ ಗಡಿಬಿಡಿ, ಗಾಡಿ ಬಂತು ಗಾಡಿ ಮುಂತಾದವುಗಳಲ್ಲಿ ಅಭಿನಯ ಮತ್ತು ನಿರ್ದೇಶನ ಮಾಡಿದವರು ಸತೀಶ ಕುಲಕರ್ಣಿಯವರು. ಅಲ್ಲದೇ ದೂರದರ್ಶನ ಧಾರಾವಾಹಿಗಳಲ್ಲೂ ನಟನೆ, ಭಾಗ್ಯಶ್ರೀ, ಸ್ವಾತಂತ್ರ್ಯ ಸಂಗ್ರಾಮದ ಪುಟಗಳು, ವೈಶಾಲಿ ಕಾಸರವಳ್ಳಿಯವರ ಮೂಡಲಮನೆ ಧಾರಾವಾಹಿಯಲ್ಲಿ, ಪ್ರಮುಖವಾದುವುಗಳಲ್ಲಿ ನಟಿಸಿದವರು..! ಆಕಾಶವಾಣಿಯ ಹಲವಾರು ನಾಟಕ, ಕವಿಗೋಷ್ಠಿಗಳಲ್ಲಿಯೂ ಭಾಗಿಯಾದವರು ಸತೀಶ ಕುಲಕರ್ಣಿಯವರು. ಅಲ್ಲದೇ ಬೆಂಕಿಬೇರು, ನೆಲದ ನೆರಳು, ವಿಷಾದಯೋಗ, ಗಾಂಧಿಗಿಡ, ಕಂಪನಿ ಸವಾಲ್‌ ಮುಂತಾದ ಕವನ ಸಂಕಲನಗಳನ್ನು ಪ್ರಕಟಿಸಿದವರು..! ಇವರ ಸಾಹಿತ್ಯದ ಕೆಲಸಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ, ಹಾವನೂರು ಪ್ರತಿಷ್ಠಾನ, ಕಡಕೋಳ ಪ್ರತಿಷ್ಠಾನ, ವಾಯುವ್ಯ ಕರ್ನಾಟಕ ಸಾರಿಗೆ ಕನ್ನಡ ಕ್ರಿಯಾ ಸಮಿತಿಯ ಪ್ರಶಸ್ತಿಗಳನ್ನು ಪಡೆದವರು..! ಅಲ್ಲದೇ ಹಾವೇರಿ ಜಿಲ್ಲಾ ಸಾಂಸ್ಕೃತಿಕ ಉತ್ಸವ ಸಮಿತಿ, ‘ಕರ್ನಾಟಕ ನಾಟಕ ಅಕಾಡಮಿ’ ಜಿಲ್ಲಾ ಸಮಿತಿ ಮುಂತಾದ ಸಂಸ್ಥೆಗಳಲ್ಲಿ ವಹಿಸುಹಿಸಿರುವ ಪ್ರಮುಖ ಪಾತ್ರಗಳನ್ನು ಮಾಡಿದವರು ನಮ್ಮ ಸತೀಶ ಕುಲಕರ್ಣಿಯವರು..! ಯುವರಂಗದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಇವರು ಬರೆದು ನಿರ್ದೇಶಿಸಿದ ‘ಬಂಗಾರಕೊಡ’ ನಾಟಕಕ್ಕೆ ರಾಜ್ಯದ ಅತ್ಯುತ್ತಮ ನಟ ಮತ್ತು ನಿರ್ದೇಶಕ ಪ್ರಶಸ್ತಿಯನ್ನೂ ಪಡೆದವರು ನಮ್ಮ ಸತೀಶ ಕುಲಕರ್ಣಿಯವರು. ಜೋಗದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟ, ‘ಕತೆಯಾದ ಕಾಳ’ ನಾಟಕಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗಳಿಸಿದವರು. ರಾಜ್ಯಮಟ್ಟದ ಹಾಸ್ಯನಾಟಕ ಸ್ಪರ್ಧೆಯಲ್ಲಿ ‘ಸಾಹೇಬರ ನಾಯಿ’ ನಾಟಕಕ್ಕೆ ಅತ್ಯುತ್ತಮ ನಟ ಮತ್ತು ನಿರ್ದೇಶಕ ಪ್ರಶಸ್ತಿಯನ್ನು, ಹೀಗೆಯೇ ನಮ್ಮ ಸತೀಶ ಕುಲಕರ್ಣಿಯವರು ತಮ್ಮ ಸಾಹಿತ್ಯದ ಕೆಲಸದ ಜೊತೆಯಲ್ಲಿ, ಮುಂತಾದ ರಂಗಭೂಮಿ ಚಟುವಟಿಕೆಗಳಿಗೆ ಪ್ರಶಸ್ತಿಗಳನ್ನು ಪಡೆದವರು ಸಾಹಿತಿ ಸತೀಶ ಕುಲಕರ್ಣಿಯವರು..! # ಹಾಗೆಯೇ ಇತ್ತೀಚಿಗೆ ಹಾವೇರಿಯಲ್ಲಿ ಸತೀಶ ಕುಲಕರ್ಣಿಯವರ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭವಾಗಿತ್ತು..! — ಹಿರಿಯ ಕವಿ ಸತೀಶ ಕುಲಕರ್ಣಿಯವರ ಎರಡು ಪುಸ್ತಕಗಳು ಇದೇ ಜುಲೈ 29 ರಂದು ಬಿಡುಗಡೆಯಾದ್ದವು..! ‘ಸತೀಶ್ ಸಮಗ್ರ ಕವಿತೆಗಳು’ (ಕಾವ್ಯ) ಮತ್ತು ‘ಓದೊಳಗಿನ ಓದು’ (ವಿಮರ್ಶಾ ಲೇಖನಗಳು) ಎಂಬ ಎರಡು ಪುಸ್ತಕಗಳನ್ನು ಹೆಸರಾಂತ ವಿಮರ್ಶಕ  ಡಾ.ಜಿ.ಎಸ್.ಅಮೂರ ಬಿಡುಗಡೆ ಮಾಡಿದ್ದರು..! ನಾಡಿನ ಹಿರಿಯ ಕವಿ ದಿವಂಗತ ಚನ್ನವೀರ ಕಣವಿಯವರು ಅಧ್ಯಕ್ಷತೆ ವಹಿಸಿದ್ದರು. ಸಮಗ್ರ ಕಾವ್ಯ ಕುರಿತು ಖ್ಯಾತ ವಿಮರ್ಶಕ ಡಾ.ಚಂದ್ರಶೇಖರ ನಂಗಲಿ ಮತ್ತು ‘ಓದೊಳಗಿನ ಓದು’ ಕೃತಿಯ ಕುರಿತು ಶ್ರೀಮತಿ.ಪುಷ್ಪಾ ಶೆಲವಡಿಮಠ ಮಾತನಾಡಿದ್ದರು..! ಮುಖ್ಯ ಅತಿಥಿಗಳಾಗಿ ಕವಿಪ್ರನಿನಿ ನೌಕರರ ಸಂಘ, ಹಾವೇರಿ ವೃತ್ತದ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ ಮುದಕಣ್ಣನವರ ಮತ್ತು ಖ್ಯಾತ ಕವಿ ಡಾ.ಸರಜೂ ಕಾಟ್ಕರ ಆಗಮಿಸಿದ್ದರು..!  ಕಣವಿಯರ ಮಾತುಗಳು ಬಂಡಾಯದ ಅಬ್ಬರ ಇಳಿದ ಮೇಲೂ ಕವಿತ್ವದ ಮೂಲಕ ತನ್ನತನ ಉಳಿಸಿಕೊಂಡು ನಿಸರ್ಗಧಾತು ಮತ್ತು ಪ್ರೇರಣೆಗೆ ಶಕ್ತಿಯಾಗಿರುವ ಎರಡು ಕೃತಿಗಳನ್ನು ನೀಡಿರುವ ಸಹೃದಯಿ ಕವಿ ಸತೀಶ ಕುಲಕರ್ಣಿ ಪ್ರವರ್ಧರಿಗೆ ಮಾದರಿ ಎಂದೂ ನಾಡೋಜ ಹಿರಿಯ ಕವಿ ಚೆನ್ನವೀರ ಕಣವಿ ಅಭಿಪ್ರಾಯ ಪಟ್ಟಿದ್ದರು..!  ಜಿ.ಎಸ್.ಅಮೂರವರ ಮಾತುಗಳು ಕಾಲ ಘಟ್ಟದ ಚಳವಳಿಗಳು ತೀವ್ರತೆ ಪಡೆದುಕೊಂಡು ವಿಚಾರವಾದಿಗಳು ಬಂಡಾಯ ಸಂಘಟನೆ ಉಗಮಕ್ಕೆ ನಾಂದಿ ಹಾಡಿದ್ದರೂ ಇತ್ತೀಚಿನ ರಾಜಕೀಯ ಚಳುವಳಿಗಳ ಪ್ರಖರತೆಯಲ್ಲಿ ಈ ಬಂಡಾಯದ ಧ್ವನಿ ಕ್ಷೀಣವಾಗಿ ತನ್ನತನ ಕಳೆದುಕೊಂಡಿದೆ ಎಂದು ಹಿರಿಯ ಲೇಖಕ ಹಾಗೂ ವಿಮರ್ಶಕ ಡಾ.ಜಿ.ಎಸ್.ಅಮೂರ ತಮ್ಮ ಪ್ರಾಮಾಣಿಕ ಅಭಿಪ್ರಾಯ ಪಟ್ಟಿದ್ದರು..!  ಈ ಎಲ್ಲಾ ಮಾತುಗಳು ಸಾಹಿತಿ, ಹೋರಾಟಗಾರ ಸತೀಶ ಕುಲಕರ್ಣಿಯವರ ಬಗೆಗಿನ ಸೂಕ್ತ, ಸಮಂಜಸ ಮತ್ತು ಸಕಾಲಿಕ, ಸಮರ್ಪಕವಾಗಿಯೂ, ಮತ್ತು ಅನನ್ಯವಾಗಿಯೂ ಇದ್ದವು..! # ಹಾಗಾದರೆ ಆ ಪುಸ್ತಕಗಳ ಸಂಕ್ಷಿಪ್ತ ಪರಿಚಯವು ಇಲ್ಲಿದೆ ನೋಡಿ… — # ಸತೀಶ್ ‘ಸಮಗ್ರ ಕವಿತೆಗಳು’ — ಕಳೆದ ನಾಲ್ಕು ದಶಕಗಳಿಂದ ಸತೀಶ ಕುಲಕರ್ಣಿಯವರು ಪ್ರಕಟಿಸಿದ ಆರು ಸಂಕಲನಗಳ ಒಂದನೂರಾ ಎಂಬತ್ತೇಳು ಕವಿತೆಗಳು ಈ ಸಮಗ್ರ ಕಾವ್ಯ ಸಂಪುಟದಲ್ಲಿವೆ. ಬೆಂಕಿ ಬೇರು (1973), ನೆಲದ ನೆರಳು (1974), ಒಡಲಾಳ ಕಿಚ್ಚು (1980), ವಿಷಾದ ಯೋಗ (1994), ಗಾಂಧೀ ಗಿಡ (2001) ಹಾಗೂ ಕಂಪನಿ ಸವಾಲ್ (2006) ಸಂಕಲನದ ಕವಿತೆಗಳಿವೆ..! ಈಗಾಗಲೆ ಐದು ವಿಶ್ವ ವಿದ್ಯಾಲಯಗಳ ಪಠ್ಯ ಪುಸ್ತಕಗಳಲ್ಲಿ ಇಲ್ಲಿಯ ಕವಿತೆಗಳು ಆಯ್ಕೆಯಾಗಿವೆ. ಇಂಗ್ಲೀಷ, ಹಿಂದಿ ಹಾಗೂ ತೆಲಗು ಭಾಷೆಗೂ ಇಲ್ಲಿಯ ಕೆಲವು ಕವಿತೆಗಳು ಅನುವಾದವಾಗಿವೆ..! “ಸತೀಶರ ಕಟ್ಟತೇವ ನಾವು ಕಟ್ಟತೇವ” ಅತ್ಯಂತ ಪ್ರಸಿದ್ದ ಕ್ರಾಂತಿಗೀತೆಗಳಲ್ಲಿ ಒಂದಾಗಿದೆ..! # ‘ಓದೊಳಗಿನ ಓದು’ — ಇದು ಲೇಖಕರ ಮೊದಲ ಸ್ವತಂತ್ರ್ಯ ಗದ್ಯ ಕೃತಿ ಇದರಲ್ಲಿ ಒಟ್ಟು ಮುವತ್ತಾರು ವಿಮರ್ಶ ಲೇಖನಗಳಿವೆ. ಮಹಿಳಾ ವಿಶ್ವವಿದ್ಯಾಲಯ, ಸಾಹಿತ್ಯ ಅಕಾಡಮಿ ಒಳಗೊಂಡಂತೆ ಪ್ರಕಟಿಸಿದ ಹಲವು ಲೇಖನಗಳಲ್ಲದೇ ಕನ್ನಡದ ಮಹತ್ವದ ಐದು ಜನ ಲೇಖಕರ ಸಮಗ್ರ ಅಧ್ಯಯನದ ಲೇಖನಗಳು ಇದರಲ್ಲಿವೆ..! ಬೇರೆ ಬೇರೆ ಕೃತಿಗಳಿಗೆ ಬರೆದ ಮುನ್ನುಡಿಗಳು ಕೂಡ ‘ಓದೊಳಗಿನ ಓದು’ ವಿಮರ್ಶಾ ಕೃತಿಯಲ್ಲಿವೆ..! ಇಷ್ಟು ಹೇಳಿ ಕವಿ, ನಾಟಕಕಾರ, ಹೋರಾಟಗಾರ ಸತೀಶ ಕುಲಕರ್ಣಿಯವರ ಬಗೆಗೆ ಒಂದೆರಡು ಈ ಮಾತುಗಳನ್ನು ಮುಗಿಸುತ್ತೇನೆ ನಾನು… ಈ ಪುಸ್ತಕಗಳು ಬೇಕಾದವರು ಇಲ್ಲಿ ಸಂಪರ್ಕಿಸಬಹುದು —  ಸತೀಶ ಕುಲಕರ್ಣಿ    ಬಸವೇಶ್ವರ ನಗರ    ಹಾವೇರಿ — 581110    ಫೋನ್ ನಂಬರ್ — 9845408934 ಕೆ.ಶಿವು.ಲಕ್ಕಣ್ಣವರ

ನಟ, ನಾಟಕಕಾರ, ಕವಿ, ಕಲಾವಿದ ಎಲ್ಲಕ್ಕೂ ಮಿಗಿಲಾಗಿ ‘ಮಾನವಪ್ರೇಮಿ’ ಸಾಹಿತಿ ಸತೀಶ ಕುಲಕರ್ಣಿ.! Read Post »

ಇತರೆ

ಎಚ್.ಎಸ್.ಅನುಪಮಾರೂ ಮತ್ತು ಅವರ ‘ಕೋವಿಡ್ — ಡಾಕ್ಟರ್ ಡೈರಿ’ ಕಥೆಗಳ ಸಂಕಲನಯೂ..! —

ಎಚ್.ಎಸ್.ಅನುಪಮಾರೂ ಮತ್ತು ಅವರ ‘ಕೋವಿಡ್ — ಡಾಕ್ಟರ್ ಡೈರಿ’ ಕಥೆಗಳ ಸಂಕಲನಯೂ..! —

ಎಚ್.ಎಸ್.ಅನುಪಮಾರೂ ಮತ್ತು ಅವರ ‘ಕೋವಿಡ್ — ಡಾಕ್ಟರ್ ಡೈರಿ’ ಕಥೆಗಳ ಸಂಕಲನಯೂ..! — Read Post »

ಇತರೆ

ಶೂದ್ರ ಶ್ರೀನಿವಾಸ್ ಮತ್ತು ಪಿ.ಲಂಕೇಶ್ ರ ಒಂದು ಮನಮುಟ್ಟುವ ಪಿಸುಮಾತು

ಲೇಖನ

ಶೂದ್ರ ಶ್ರೀನಿವಾಸ್ ಮತ್ತು ಪಿ.ಲಂಕೇಶ್ ರ ಒಂದು ಮನಮುಟ್ಟುವ ಪಿಸುಮಾತು

ಶೂದ್ರ ಶ್ರೀನಿವಾಸ್ ಮತ್ತು ಪಿ.ಲಂಕೇಶ್ ರ ಒಂದು ಮನಮುಟ್ಟುವ ಪಿಸುಮಾತು Read Post »

You cannot copy content of this page

Scroll to Top