ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ, ಲಹರಿ

“ಕಾವೇರಿ ಒಂದು ನೋವಿನ ನಗೆಯಾಗಿ ಸದಾ ಎದೆಯಲ್ಲಿರುತ್ತಾಳೆ..”ಪ್ರೇಮಾ ಟಿ ಎಂ ಆರ್‌ ಅವರ ಲಹರಿ

ಲಹರಿ ಸಂಗಾತಿ ಪ್ರೇಮಾ ಟಿ ಎಂ ಆರ್‌ ಅವರ ಲಹರಿ “ಕಾವೇರಿ ಒಂದು ನೋವಿನ ನಗೆಯಾಗಿ ಸದಾ ಎದೆಯಲ್ಲಿರುತ್ತಾಳೆ..” ಒಂದು ಕಪ್ ಕೊಫಿ ಹೊಯ್ಕೊಂಡು ಬಿಡೋಣ ಅನ್ನುವ ಮನಸಿನ ಗಿಂಜಾಟಕ್ಕೆ  ಕಭಿಕಭಿ ರಾಜಿಯಾಗುವದು. ಕಿಚನ್ನಿನ ಪುಟ್ಟ ಗ್ಲಾಸ್ ಶೋಕೇಸಿನ ಬಾಗಿಲು ತೆರೆದರೆ ಮಣ್ಣಿನ ಬಣ್ಣದ ದೊಡ್ಡ  ಕಾಫಿ ಮಗ್ ಕೈಗೆ ತಗಲಿತು.‌ ಹಾಗೇ ಎತ್ತಿಕೊಂಡು ಮೈ ಸವರಿದೆ. ಕ್ಷಣ ಎಲ್ಲೋ ಜಾರಿತು ಮನ.. ಈಗ ಹೇಗಿರಬಹುದು…? ಯಾವುದೋ ನೆನಪಿಗೆ ಮನ ಬಿರಿಯಿತು.. ಆ ಕೊಫಿಮಗ್ ಬರೀ ಆಗಾಗ ಸವರಿ ಒಳಗಿಡೋಕೆ ಮಾತ್ರ… ಅದ್ರಲ್ಲಿ ನಾನ್ಯಾವತ್ತೂ ಕುಡಿದಿಲ್ಲ, ಕುಡ್ಯೋದಿಲ್ಲ. ಅಂಥದ್ದೊಂದು ಎದೆ ಕರಗುವ ನೆನಪು ಥಳಕುಗೊಂಡಿದೆ ಅದರಲ್ಲಿ.. ಕೈಲಿದ್ದ ಕೊಫಿಮಗ್ ಒಳಕ್ಕೆ ನೂಕಿ, ಬೇರೊಂದನ್ನು ಎತ್ತಿಕೊಂಡು, ಕುದಿದಹಾಲು ಕಾಫಿಪುಡಿ ಸಕ್ಕರೆ ಸುರಿದುಕೊಂಡು  ಕಲಕುತ್ತ ಮತ್ತೆ ಅಂಗಳಕ್ಕೆ  ಬಂದೆ. ಎಲ್ಲಿದ್ದವೋ ಪುಟ್ಟಪುಟ್ಟ ಎರಡು ಬಿಳಿ ಚಿಟ್ಟೆ ಮರಿಗಳು ಆಗಷ್ಟೇ ಅರಳುವ ಕಾಯಕದಲ್ಲಿರುವ ಗೂಡುಮೊಗ್ಗುಗಳ ಬಳಿಯಲ್ಲಿ ಸುಳಿದಾಡುತ್ತಿದ್ದವು. ಈಗ ಮನಸ ಹಿಡಿದಿಡೋಕೆ ಸಾಧ್ಯವಾಗಲಿಲ್ಲ.. ಎರಡೂವರೆ ದಶಕಗಳ ಹಿಂದಕ್ಕೆ ಜಿಗಿದು ಗಡಕ್ಕನೆ ಬ್ರೇಕ್ ಒತ್ತಿಕೊಂಡು ನಿಂತಿತು ಮನಸೆಂಬ ಮಂಗ್ಯ..        ಇದೇ ಚಳಿಗಾಲ ಡಿಸೆಂಬರ್ ತಿಂಗಳ ಕೊನೆಯ ದಿನಗಳಿರಬಹುದು, ಕರಾವಳಿ ಉತ್ಸವ ಮುಗಿದಿತ್ತು. ಎಲ್ಲೆಲ್ಲಿಂದಲೋ  ಬಂದ ಬಯಲ ವ್ಯಾಪಾರೀ ಅಲೆಮಾರಿಗಳು ಕಡಲದಂಡೆಯ ಮೇಲೆಯೇ ಬೀಡು ಬಿಟ್ಟಿದ್ದರು. ಬೆಳಗಿನ ಹೊತ್ತು ಇಂದಿನಂತೆಯೇ ಹೊರಗಿನ ಮೆಟ್ಟಿಲಮೇಲೆ ಕೂತು ಎಳೆ ಬಿಸಿಲಿಗೆ ಮೈಯೊಡ್ಡಿದ್ದೆ.. ಕಪ್ಪು ಬಸೀರಿ.. ಕಪ್ಪುಬಸಿ.. ಕೂಗುತ್ತ ಬಂದ ಹೆಣ್ಣೊಂದು ಗೇಟಲ್ಲಿ ನಿಂತಿತ್ತು. ಪಕ್ಕದಲ್ಲೊಂದು  ಪುಟ್ಟಮ್ಮ..‌ ಬೇಡ ಹೋಗವ್ವ… ಅಂದೆ “ಯವ್ವಾ ಸೆನ್ನಾಗೈತೆ ಒಂದ್ಕಿತಾ ನೋಡ್ರವ್ವ” ಪಿರಿಪಿರಿಗುಟ್ಟಿದಳು… ಸರಿ ಬಾ.. ಅವಳ ಕಪ್ಪುಬಸಿಗಿಂತ ಪಕ್ಕದಲ್ಲಿ ನಿಂತ ಪಾದರಸದಂತೆ ನಿಂತಲ್ಲಿ ನಿಲ್ಲದ ಕಪ್ಪು ಹುಡುಗಿ ನನ್ನ ಸೆಳೆದಿದ್ದಳು.‌ ಬುಟ್ಟಿ ಇಳಿಸಿದಳು. ಪೂರಾ ಗುಂಜಾಡಿದೆ.. “ಬ್ಯಾಡವ್ವೋ, ಒಂಚೂರು ಚೆನ್ನಾಗಿಲ್ಲ ಬಿಡು, ಸುಮ್ನೆ ನಿನ್ನ ಟೇಮು ಹಾಳು, ನಂಗೂ ಹೊತ್ತಾತು, ತಿಂಡಿಯಾಗಿಲ್ಲ ಇನ್ನೂ..” ಅಂದೆ.. “ಅವ್ವಾ, ಒಂದಾರ ತಗಳವ್ವ, ಇನ್ನ ಬೋಣಿ ಆಗಿಲ್ಲ, ಮೊದಲ್ಕ ನಿನ್ಮನಿ ಹೊಕ್ಕೀನೀ” ಅಂದ್ಲು.. “ಇಲ್ಲವ್ವ, ಪಸಂದಾಗಿಲ್ಲ, ವಸಿ ನಿಲ್ಲು” ಎಂದು ಒಳಹೋದೆ. ಇಡ್ಲಿ ಪಾತ್ರೆ ಘಮ್ಮನೆ ಸುಂಯ್ಗುಡುತ್ತಿತ್ತು. ಎರಡು ಬಿಸಿಬಿಸಿ ಹಬೆಯಾಡುವ ಇಡ್ಲಿ ತಟ್ಟೆಗೆ ಹಾಕಿಕೊಂಡು ಮೇಲೊಂದಷ್ಟು ಚಟ್ನಿ ಹಾಕ್ಕೊಂಡು, ಒಂದ್ಹಿಡಿ ಒಣದ್ರಾಕ್ಷಿ ಇಟ್ಕೊಂಡು ಬಂದು ಬೊಗಸೆಗೆ ಹಾಕಿ, “ದ್ರಾಕ್ಷಿ ಮಗೀಗೆ ತಿನ್ಸು, ಇಡ್ಲಿ ನೀನು ತಿನ್ನು ಅಂದೆ..‌ ಎಳೆಕೂಸನ್ನ ನೋಡ್ತಾ ಅಲ್ಲೇ ತುಸು ದೂರ ಕೂತೆ. ಗೋಲಮುಖದಲ್ಲಿ ಕಡುನೀಲಿ ಮಿಂಚುಗಣ್ಣು, ಚೂಪು ಮೂಗು, ಕಪ್ಪುಕಂಚಿನ ಬಣ್ಣ, ಸರ್ರನೆ ಜಾರುವ ನುಣ್ಪುಗೂದಲು.. ಅವಳಿಗೆ ನನ್ನಲ್ಲಿ ಆಸಕ್ತಿಯಿಲ್ಲ. ಬೊಗಸೆಗೆ ಬಿದ್ದ ಒಣ ದ್ರಾಕ್ಷಿಯನ್ನು ಕೊಳಕು ಫ್ರಾಕಿನ ಬದಿಯ ಕಿಸೆಗೆ ತುಂಬುವ ಪ್ರಯತ್ನ ಮಾಡುತ್ತಿದ್ದಳು.. ದ್ರಾಕ್ಷಿ ಬದ್ದೀತೆಂಬ ಕಾಳಜಿಗೆ ಬೊಗಸೆ ಮುಚ್ಚಿಟ್ಟುಕೊಂಡೇ ಕಿಸೆಯೆಡೆಗೆ ಬಾಗುವ ಸರ್ಕಸ್ ನೋಡಿ ಕಳ್ಳು ಚುಳ್ಳೆಂತು. ಆಗಷ್ಟೇ ಸ್ನಾನಮಾಡಿ ಬಂದಿದ್ದೆ. ಪೂಜೆ ಮುಗಿದಿರಲಿಲ್ಲ. ಅವಳನ್ನು ಮುಟ್ಟಿದ್ರೆ ಮತ್ತೆ ಸ್ನಾನ ಮಾಡ್ಬೇಕು… ಅಷ್ಟು ಕೊಳಕಾಗಿದ್ದಳು.  ಮಾರುದೂರ ನಿಂತವಳು ಬುಗ್ಗನೆ ವಾಸನೆ ಬಡಿಯುತ್ತಿದ್ದಳು.. ಅವಳೊಳಗೆ ತುಂಟ ಕೃಷ್ಣ ಕಾಣುತ್ತಿದ್ದ ನನಗೆ.  ಕೈತೊಳ್ಕೊಂಡ್ರಾಯ್ತು, ಬಾಗಿ ಅವಳ ಅಂಗಿ ಹಿಡಿದು ಬಳಿಗೆಳೆದುಕೊಂಡು ಒಣದ್ರಾಕ್ಷಿ ಕಾಳುಗಳನ್ನು ಕಿಸೆಗೆ ತುಂಬಿಸಿದೆ.  ಇಷ್ಟಗಲ ಕಣ್ಣುಗಳು ಇನ್ನಷ್ಟು ಅರಳಿದವು. ನನ್ನ ಹಿಡಿತದಿಂದ ನುಣುಚಿಕೊಂಡು ಅಷ್ಟುದೂರ ನಿಂತು ಉಬ್ಬಿದ ಕಿಸೆಯಮೇಲೆ‌ ಕೈಯಾಡಿಸಿಕೊಂಡವಳು ಕಿಸಕ್ಕನೆ  ನಕ್ಕಳು. ಎರಡೂ ಕೆನ್ನೆಯ ನಡುವೆ ಸುಳಿಗುಳಿ ಅರಳಿಕೊಂಡಿತು. ನಾನದರಲ್ಲಿ  ಕರಗುವ ಮೊದಲೇ ಹೂಗಳ ಮೇಲೆ ಹರಿದಾಡುವ ಬಿಳಿಚಿಟ್ಟೆಯ ಮರಿಗಳ ಹಿಂದಿಂದೆ ಓಡಿ ಹಿಡಿಯಲು ಕೈಚಾಚಿದಳು. ಹಾರುವ  ಚಿಟ್ಟೆ ಮರಿಗಳ ಜೊತೆಗೆ ತಾನೂ ಪಾದರಸದಂತೆ ಹರಿದಾಡತೊಡಗಿದಳು. ಅವಳ ತೊಡೆಮುಚ್ಚದ ಪುಟ್ಟ ಸ್ಕರ್ಟ್ ಅವಳೊಂದಿಗೆ ಚಿಮ್ಮುತ್ತಿತ್ತು.. ಮತ್ತೆಮತ್ತೆ ಮುಖಕ್ಕೆ ಮುತ್ತುವ ತುಂಡುಗೂದಲುಗಳನ್ನು ಗತ್ತಿನಿಂದ ಹಿಂದಕ್ಕೆ ನೂಕುತ್ತಿದ್ದಳು. ಯಾಕೋ ಅಕ್ಕರೆಯುಕ್ಕಿತು..  ಮಣ್ಣು ಮೆತ್ತಿಕೊಂಡ ಹಿಮ್ಮಡಿ ತುಂಬು ಪಾದ  ಗಮನ ಸೆಳೆದವು. “ಎಷ್ಟು ದಣಿದವೋ ಪಾದಗಳು. ಒಂದಷ್ಟು ಎಣ್ಣೆಯುಜ್ಜಿ ಬಿಸಿಬಸಿ ನೀರಲ್ಲಿ ಮೈತೊಳೆದರೆ ಪರಿಯಂತೆ ಹೊಳೆದಾಳು ಪುಟ್ಟವ್ವ..” ನನ್ನ ಯೋಚನೆಗೆ ನಗು ಬಂತು. ‘ಯಾರದೋ ಕೂಸು ಆಸೆನೋಡು?’ ತಲೆಮೇಲೊಂದು ಮೊಟಕಿಕೊಂಡೆ..  ಇಡ್ಲಿ ತಿಂದು ಮುಗಿಸಿದ ಹೆಣ್ಣು “ಅವ್ವಾ ನೀರ್ಕೊಡ್ರಿ ವಸಿ ಗಂಗಾಳ ತೊಕ್ಕೊಡ್ತೀನಿ”  ತಟ್ಟೆ ತೊಳ್ಸೋಕೆ ಅವ್ಸರ ಮಾಡಿದ್ಲು. “ಏನೂಬೇಡ, ಕೊಡವ್ವ  ನನ್ಕೈಯ್ಯಲ್ಲಿ, ನಾನೇ ತೊಳ್ಕೊಂತೇನೆ ಅಂದೆ. “ಅಯ್ಯೋ ಬ್ಯಾಡವ್ವ, ನಮ್ಮೆಂಜ್ಲು ನೀ ತೊಳಿತೀಯಾ? ನಮ್ಗೆ ಪಾಪ ಬತ್ತೈತೆ.” ಕೊಸರಿದಳು. “ಸರಿ ನಾನ್ಯಾವಾಗಾದ್ರೂ ಕಾಲ್ತಪ್ಪಿ ನಿನ್ ಜೋಪ್ಡೀತಾವ ಬಂದ್ರೆ, ನೀನೇನಾರ ಒಂದ್ಗುಟ್ಗಿ ನೀರು ಕೊಟ್ಟೀ ಅಂದ್ಕೊ, ತಟ್ಟೆ ತೊಳಿಸ್ತೀಯಾ ನನ್ಕಡೆ!” ಕೇಳಿದೆ. ‘ಯವ್ವಾ ನೀಯಾಕ್ಬಂದಿ ನಮ್ಮ ಗುಡ್ಸಲ್ಕೆ’ ಎಂದು ಕೆನ್ನೆಗೆ ಹೊಡ್ಕೊಳ್ಳುತ್ತಲೇ ಎಂಜಲು ತಟ್ಟೆ ನನ್ಕೈಲಿಟ್ಟು ನಿನ್ನ ಹೊಟ್ಟೆ ತಣ್ಣಗಿರ್ಲಿ ಅವ್ವ.” ಹರಸಿದಳು. “ಏಟ್ ವರ್ಷಾತು ಮಗೀಗೆ? ಚಂದದಾಳ. ಕಾಲಿಗೊಂದು ಚಪ್ಲೀನೂ ಹಾಕಿಲ್ವಲ್ಲ, ಈ ಎಳೆಕೂಸನ್ನ ಯಾಕೆ ಹಿಡ್ಕೊಂಡು ಬರೋಕೋದೆ?” ಅಲ್ಲೇ ಕೂತು ಮಾತಿಗಿಳಿದೆ. “ಮತ್ತೆಲ್ಬಿಡ್ಬೇಕ್ರಿ ಮಗೀನ.?” “ನಿನ್ಗಂಡ ಏನ್ಮಾಡ್ತಾನ.. ಜೋಪ್ಡಿ ಒಳ್ಗ ಕುಡ್ದ ಬಿದ್ದಾನಾ..? ತಲಿಮ್ಯಾಲ ಒಂದ್ಗಡ್ಗಿ ತಣ್ಣೀರ್ ಸುರ್ದು ಎಬ್ಸಿ ಮಗೀನ ಅವನ್ತಾವ ಬಿಟ್ಟ ಬರ್ಬೇಕು ತಾನೇ..” ಕೋಪ ಕಾರಿದೆ… “ನನ್ನ ಕೂಸಲ್ರಿ ಅವ್ವಾ, ಮೊಮ್ಮಗ್ಳೂರೀ.” ನಾನು ಮಿಕಿಮಿಕಿ ಅವ್ಳನ್ನೇ ನೋಡಿದೆ. ಇನ್ನೂ ಮೂವತ್ತೈದರೊಳಗಿನ ಕೆಂಚು ದೇಹದ ಹೆಣ್ಣು, ಆಗ್ಲೇ ಮೊಮ್ಮಗ್ಳಾ..?ಹುಬ್ಬೇರಿಸಿದೆ.. “ಹೂಂನ್ರವ್ವಾ.. ಇದ್ರವ್ವ ಹೆರ್ಗಿ ಕಾಲಕ್ಕೆ ಸತ್ತೋತ್ರಿ..” ಕಣ್ಣೊರಸಿಕೊಂಡಳು. “ಇವ್ಳ ಅಪ್ಪ ಏನ್ಮಾಡ್ತಾನೆ? ಮತ್ತೆ ನಿನ್ಗಂಡ?” “ಯವ್ವ ಅದ್ನೆಲ್ಲ ನೀವು ಕೇಳ್ಬಾರ್ದು, ನಾವು ಹೇಳ್ಬಾರ್ದೂರಿ.. ನಾನೂ ಅಪ್ನ ಮುಖ ಕಂಡಿರ್ಲಿಲ್ರಿ  ನನ್ಮಗ್ಳೂ ಅಪ್ಪ್ನ ಮುಖ ಕಂಡಿಲ್ರೀ… ಇದ್ಕೂ ಅಪ್ಪನ್ನಾಕ ಯಾರಿಲ್ರೀ..” ನಿಸ್ಸಂಕೋಚದ ನುಡಿ. ಒಮ್ಮೆ ನನ್ನ ಮೈ ನಡುಗಿತು. ಅವಳ ಮುಖದಲ್ಲಿನ ಭಾವನೆಗಳನ್ನು ಓದೋಕಾಗ್ಲಿಲ್ಲ ನನಗೆ..ನಿರ್ಭಾವವಾಗಿದ್ದಳು…  ಹೊಕ್ಕುಳಲ್ಲಿ ಹುಟ್ಡಿದ ಚಳಿ ಇಡೀ ಎದೆಯ ಆವರಿಸಿ ಕ್ಚಣ ನಡುಗಿದೆ.. “ನಮ್ಮವ್ವ ಅದಾಳ್ರೀ…‌ ಆಕೀನೂ ಕಪ್ಪ ಬಸೀ ಮಾರಾಕಂತ ಹೊಂಟೋಯ್ತಾಳೆ..‌ ಹಾಂಗಾಗಿ ಕೂಸ್ನ ನನ್ಜೊತೀನ ಕಟ್ಗೊಂಡ್ ಬತ್ತೀನ್ರಿ.” ಅಂದ್ಲು.  ಯಾಕೋ ಅಂಗಾಂಗಗಳೆಲ್ಲ ಮರಗಟ್ಟಿದಂತೆ ಮಿಸುಕಾಡಿದೆ..  “ಯವ್ವಾ ಬತ್ತೀವ್ರಿ, ಬುಟ್ಟಿಗ್ ಒಸಿ ಕೈಹಚ್ರಿ, ಭಾರೈತ್ರಿ” ಅಂದ್ಲು.. ಈಗ ಸಾವರಿಸಿಕೊಂಡೆ..                 “ಅವ್ವಾ, ನಿಮ್ಗೊಂದು ಕೇಳ್ತೇನೆ ಬೈಯ್ಬ್ಯಾಡ” ಅಂದೆ..  ತಡೆದು ನಿಂತಳು.  ಮಗೀನ ನನಗ್ ಕೊಟ್ಬಿಡವ್ವಾ.. ಚಂದಾಗಿ ಸಾಕೊಂತೀನಿ, ನಿನಗ್ ನೆನ್ಪಾದಾಗ ಯಾವಾಗ್ಬೇಕೋ ಅವಾಗ್ಬಂದು ನೋಡ್ಕೊಂಡೋಯ್ತಾ ಇರು,  ಇಕೀಗ ಸಾಲಿ ಕಲ್ಸಿ ದೋಡ್ಡ ನೌಕ್ರೀ ಮಾಡಿಸ್ತೀನಿ, ನನ್ನ ಮಗನ್ಮೇಲೆ ಆಣಿ ಮಾಡ್ತೀನಿ. ನನ್ಮಗಾ ಬ್ಯಾರೆ ಈ ಮಗೀ ಬ್ಯಾರೆ  ಯಾವತ್ತೂ ಮಾಡಂಗಿಲ್ಲವ್ವ, ಕೊಟ್ಬಿಡು” ಅಂದೆ. ಒಂದು ಕ್ಷಣ ಅವಳ ದೃಷ್ಟಿ ಕ್ರೂರವಾಯಿತು, “ಕೂಸ್ಬೇಕಿದ್ರ ಒಂದ್ಹೆತ್ಕೊಳ್ಳಾಕ ಏನ್ಬಂದಿತ್ತ ಬ್ಯಾನಿ, ಬ್ಯಾರೆದವ್ರ ಕೂಸಿಗೆ ಬಾಯ್ಬಿಡ್ತಿ.. ಯವ್ವಾ ಹೆಂತಾಕಿ ನೀನು? ” ದುರುಗುಟ್ಟಿದವಳು ಮತ್ತೆ ಮೆದುವಾದಳು.. ಯವ್ವಾ, ಅದೊಂದ ಕೇಳ್ಬ್ಯಾಡವ್ವ.. ಕೂಸಿನ್ಮ್ಯಾಲ  ನನ್ ಜೀವಾನೇ ಮಡಿಕಂಡೀನಿ, ಮುನ್ಸಕಬ್ಯಾಡವ್ವ” ದೈನ್ಯವಾಗಿ ಹೇಳಿದವಳು, ದೊಗ್ಗಾಲುಕೊಟ್ಟು ಹೆಣಗಿ ಭಾರದ ಬುಟ್ಟಿ ತಲೆಮೇಲೆ ಹೊತ್ತು, “ಲೇ  ಕಾವೇರಿ ಬಾರಿತ್ತಾಗ.. ಹೋಗಾನ” ಗೇಟಿನತ್ತ ನಡೆದಳು.. ಕಾವೇರಿ ಮರಿಜಿಂಕೆಯಂತೆ ಜಿಗಿದು ಅಜ್ಜಿಯ ಬೆನ್ನಟ್ಟಿದಳು.. ಅವಳು ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಳು.. ನಾನು ಸರಿಯೆಂದು ದೃಢಪಡಿಸಲು ನನ್ನಲ್ಲಿ ಮಾತುಗಳಿರಲಿಲ್ಲ..  ಹಿಂದ್ಹಿಂದೇ ನಡೆದು ಬಂದಿದ್ದೆ.. ಗೇಟು ದಾಟುವ ಮುನ್ನ ಏನನ್ನಿಸಿತೋ..ಹಿಂತಿರುಗಿದಳು.. ಕಂಪೌಂಡ್ ವಾಲಿನ ಮೇಲೆ ಬುಟ್ಟಿಯೂರಿ ಹೆಗಲ ಚೀಲಕ್ಕೆ ಕೈಹಾಕಿ ಚಂದದ ಮಣ್ಣುಬಣ್ಣದ ದೊಡ್ಡ ದೊಡ್ಡ ಕಾಫಿ ಮಗ್ ಗಳ ಆರರ ಸೆಟ್ ಹೊರತೆಗೆದಳು, “ತಗಳ್ರವ್ವ  ಇದ್ನ.. ಇದ್ ಪಸಂದಾಗೈತಾ ಯೋಳಿ” ಅಂದ್ಲು…. ಯಾಕೋ ನಿರಾಕರಿಸಲು ಮನಸು ಬಾರದೇ ‘ಎಷ್ಟಾಗ್ತೈತೆ?’ ಅಂದೆ. “ಕೊಡವ್ವ, ನಿಂಗ್ ಯೋನ್ ಕೊಡ್ಬಕನ್ಸತೈತಿ ಅದ್ನ ಕೊಡು” ಅಂದ್ಲು… ಐದ್ನೂರು ತಂದು ಕೈಲಿಟ್ಟೆ… ಮುನ್ನೂರು ಸಾಕು ಅಂದ್ಲು.. ಇಟ್ಕಳವ್ವ ಕಾವೇರಿಗೆ ಚಪ್ಲಿ ಕೊಡ್ಸು ಅಂದೆ. “ಬತ್ತೀನವ್ವಾ, ನಿನ್ಮನ್ಸು ನಾ ಬಲ್ಲೆ, ತೆಪ್ಪಾತು ಕಣವ್ವಾ, ಮತ್ಯಾವಾಗ್ಲೋ ಕಾಲ್ತೆಪ್ಪಿ ಈ ಊರಿಗ್ಬಂದ್ರ ಮತ್ತ ಮಗೀನ ತೋರಿಸ್ಕೊಂಡು ಹೋಕ್ಕೀನಿ.. ಆದ್ರ ಇದೇ ಕೊನಿ, ಮಗೀನ ಬೇಡ್ಬ್ಯಾಡ” ಕಪ್ಪುಬಸೀರಿ ಒದರುತ್ತ ಸಾಗಿದಳು.. ತಿರುಗಿ ತಿರುಗಿ ನನ್ನೇ ನೋಡುತ್ತ ಅಜ್ಜಿಯ ಕೈಹಿಡಿದು ಕುಣಿಕುಣಿದು ಸಾಗಿದ ಕಾವೇರಿಯನ್ನು ದೇವಸ್ಥಾನದ ಮುರ್ಕಿ ತಿರುಗುವತನಕ ನೋಡುತ್ತ ನಿಂತೆ… ಈ ಪುಟ್ಟ ಕಾವೇರಿಗೊಂದು ಅಪ್ಪನಿಲ್ಲದ ಕೃಷ್ಣೆ ಹುಟ್ಟದ ಹಾಗೇ ಇವಳನ್ನು ನಿನ್ನ ಕಣ್ಣಲ್ಲಿಟ್ಕೊಂಡು ತಲೆ ಕಾಯುವದು ತಂದೆ… ಎದೆ ರೋಧಿಸುತ್ತಿತ್ತು…. ಮತ್ತೆ ಅವಳು ಈ ಬೀದಿಗೆ ಬಂದಿಲ್ಲ. ನಾನವಳ ಮರೆತಿಲ್ಲ…. ಒಂದು ನೋವಿನ ನಗೆಯಾಗಿ ಸದಾ ನನ್ನೊಳಗೆ ಇದ್ದಾಳೆ ಕಾವೇರಿ…. ನಿಮ್ಮ ಪ್ರೇಮಾ… ಪ್ರೇಮಾ ಟಿ ಎಂ ಆರ್

“ಕಾವೇರಿ ಒಂದು ನೋವಿನ ನಗೆಯಾಗಿ ಸದಾ ಎದೆಯಲ್ಲಿರುತ್ತಾಳೆ..”ಪ್ರೇಮಾ ಟಿ ಎಂ ಆರ್‌ ಅವರ ಲಹರಿ Read Post »

ಇತರೆ, ಗಜಲ್ ದುನಿಯಾ

“ಗಜಲ್ ಮನಸುಗಳಿಗಾಗಿ, ಗಜಲ್ ಕುರಿತು ಒಂದಿಷ್ಟು ವಿಚಾರಗಳು.” ಡಾ. ಮಲ್ಲಿನಾಥ ಎಸ್. ತಳವಾರ

ಗಜಲ್‌ ಸಂಗಾತಿ ಡಾ. ಮಲ್ಲಿನಾಥ ಎಸ್. ತಳವಾರ “ಗಜಲ್ ಮನಸುಗಳಿಗಾಗಿ, ಗಜಲ್ ಕುರಿತು ಒಂದಿಷ್ಟು ವಿಚಾರಗಳು.” ಎಲ್ಲರಿಗೂ ನಮಸ್ಕಾರಗಳು…ಗಜಲ್.. ಇದು ಕೇವಲ ಕಾವ್ಯ ಪ್ರಕಾರವಲ್ಲ, ಇದೊಂದು ಜೀವನ ಶೈಲಿ, ತಹಜೀಬ್ ಹಾಗೂ ಸಂವೇದನೆಗಳ ಒಂದು ಭಾಗ. ಹೃದಯದ ಆಳದಿಂದ ಹೊರಬರುವ ನಿಜವಾದ ಧ್ವನಿ. ಇದು ಭಾವನೆಗಳು, ಪ್ರೀತಿ, ನೋವು ಮತ್ತು ಭರವಸೆಯ ಸುಂದರ ಅಭಿವ್ಯಕ್ತಿ. ಇದೊಂದು ಎಕ್ಸರೇ ಇದ್ದಂತೆ, ನಮ್ಮೊಳಗಿನ ಗಾಯ ತೋರಿಸಿ ಅರಿತುಕೊಳ್ಳಲು ಸಹಕರಿಸುತ್ತದೆ. ಗಜಲ್… ಕನ್ನಡದಲ್ಲಿ ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಚಲಿತದಲ್ಲಿರುವ ಹಾಗೂ ಹೆಚ್ಚೆಚ್ಚು ಓದುಗರನ್ನೂ- ಬರಹಗಾರರನ್ನು ಸೆಳೆಯುತ್ತಿರುವ ಕಾವ್ಯ ಪ್ರಕಾರ. ಕನ್ನಡದ ಭಾಗಶಃ ಸಾಹಿತ್ಯಾಸಕ್ತರು ಗಜಲ್ ಗಳನ್ನು ಬರೆಯಲು, ಓದಲು ಹಾಗೂ ಗಜಲ್ ಕುರಿತು ತಿಳಿದುಕೊಳ್ಳಲು ಆಸಕ್ತರಾಗಿದ್ದಾರೆ. ಇಂಥ ಗಜಲ್ ಕನ್ನಡ ಸಾರಸ್ವತ ಲೋಕವನ್ನು ಪ್ರವೇಶಿಸಿ ಅರ್ಧ ಶತಮಾನವೇ ಉರುಳಿದೆ. ಇಂದು ಗಜಲ್ ಕಾವ್ಯ ಪ್ರಕಾರ ಅಸಂಖ್ಯಾತ ಸಹೃದಯಿಗಳಿಂದ ಕನ್ನಡ ಸಾಹಿತ್ಯ ಪರಪಂಚದಲ್ಲಿ ಸಕ್ರೀಯವಾಗಿದೆ. ಈ ಗಜಲ್ ಕಾವ್ಯ ಪ್ರಕಾರ ಹತ್ತು ಹಲವಾರು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಅವುಗಳನ್ನು ಆಂತರಿಕ ಹಾಗೂ ಬಾಹ್ಯ ಲಕ್ಷಣಗಳೆಂದು ವಿಂಗಡಿಸಲಾಗಿದೆ. ಇಂದು ನಾವು ಈ ಲಕ್ಷಣಗಳನ್ನು ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದೇವೆ, ಅಳವಡಿಸಿಕೊಳ್ಳುತಿದ್ದೇವೆ ಹಾಗೂ ಆ ದಿಸೆಯಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ. ಮತ್ಲಾ, ಮಕ್ತಾ, ರದೀಫ್ ಹಾಗೂ ಕಾಫಿಯಾ… ಇವು ಗಜಲ್ ನ ನಾಲ್ಕು ಅಂಗಗಳು. ಇವುಗಳಲ್ಲಿ ‘ರದೀಫ್’ ಐಚ್ಛಿಕವಾಗಿದ್ದು, ಉಳಿದವುಗಳು ಗಜಲ್ ನ ಜೀವಾಳವಾಗಿವೆ. ಇವುಗಳ ಹೊರತು ಗಜಲ್ ರಚನೆಯಾಗದು. ಯಾರಾದರೂ ಬರೆದಿದ್ದಾರೆ, ಬರೆಯುತ್ತಾರೆ ಎಂದರೆ ಅದು ಗಜಲ್ ಎಂದೆನಿಸಿಕೊಳ್ಳದೆ, ಕಾವ್ಯ ಎಂದೆನಿಸಿಕೊಳ್ಳುವುದು! ಗಜಲ್ ಮೂಲಭೂತವಾಗಿ ಷೇರ್ ಮಾದರಿಯಲ್ಲಿ ಇರುವಂತದ್ದು. ಈ ಷೇರ್ ನ ಪ್ರತಿ ಮಿಸ್ರಾ ಸ್ವತಂತ್ರವಾಗಿದ್ದು, ಒಂದಕ್ಕೊಂದು ಪೂರಕವಾಗಿಯೋ ಅಥವಾ ವಿರುದ್ಧಮುಖವಾಗಿಯೊ ಇರಬೇಕು. ಮಿಸ್ರಾ-ಎ-ಊಲಾದ ಕೊನೆಯಲ್ಲಿಯ ಕೌತುಕತೆ ಮಸ್ರಾ-ಎ-ಸಾನಿಯ ಆರಂಭದಲ್ಲಿ ರೂಪ ಪಡೆಯಬೇಕು. ಅವು ಒಂದರೊಳಗೊಂದು ತಳುಕು ಹಾಕಿಕೊಂಡಿರಬಾರದು. ಇದುವೇ ಕಾವ್ಯವನ್ನು ‘ಗಜಲ್’ ಆಗಿಸುವತ್ತ ಮುನ್ನಡೆಯುತ್ತದೆ. ಇಂಥ ಗಜಲ್ ಗೆ ‘ಮತ್ಲಾ’ ತುಂಬಾ ಅವಶ್ಯಕ. ಇದು ಮನೆಗೆ ಹೊಸ್ತಿಲು ಇರುವಂತೆ! ಇನ್ನೂ ‘ಮತ್ಲಾ’ ಅಂದರೆ ಆರಂಭ, ಉದಯ ಎಂದರ್ಥ. ಇಲ್ಲಿ ಏನು ಹೇಳಬೇಕಾಗಿದೆ ಎನ್ನುವುದರ ನಿರ್ಣಯ, ಗಜಲ್ ಕಾರರ ಉದ್ದೇಶವಿರುತ್ತದೆ. ಗಜಲ್ ಒಳಗೊಂಡಿರಬಹುದಾದ, ಒಳಗೊಳ್ಳಬಹುದಾದ ವಿಷಯ, ಮೀಟರ್, ವಜನ್, ಬೆಹರ್ ಹಾಗೂ ಕವಾಫಿ (ಕಾಫಿಯಾಗಳು) ಆಯ್ಕೆಯನ್ನು ನಿರ್ಧರಿಸುತ್ತದೆ. ‘ಮತ್ಲಾ’ ಏನು ಒಳಗೊಂಡಿರುತ್ತದೆಯೋ ಅದುವೇ ಇಡೀ ಗಜಲ್ ನ ಉದ್ದಕ್ಕೂ ಬರಬೇಕು. ಅದು ಅಲಾಮತ್ ಆದರೂ ಸರಿ, ಮೀಟರ್, ಬೆಹರ್ ಆದರೂ ಸರಿಯೆ! ಅಂತೆಯೇ ಶಾಯರ್/ಶಾಯರಾ ಆದವರು ಮತ್ಲಾವನ್ನು ತುಂಬಾ ಪ್ರಜ್ಞಾಪೂರ್ವಕವಾಗಿ ರೂಪಿಸಿಕೊಂಡು ಹೋಗಬೇಕು. ಇದೊಂದು ರೀತಿಯಲ್ಲಿ ಗಜಲ್ ನ ಉಳಿದ ಅಶ್ಆರ್ ಗೆ ಸ್ಪಷ್ಟಿಕರಣ ಕೊಡುವ ರೀತಿಯಲ್ಲಿ ಇರುತ್ತದೆ, ಇರಬೇಕು! ಇದು ಗಜಲ್ ನ ಸೌಂದರ್ಯಕ್ಕೆ ಬಾಗಿಲು, ಭಾವ ಲೋಕಕ್ಕೆ ಪ್ರವೇಶದ್ವಾರವಿದ್ದಂತೆ. ಇದು ಅಷ್ಟೊಂದು ಸರಳವಲ್ಲ, ಸುಲಭವೂ ಅಲ್ಲ. ಪ್ರತಿಯೊಬ್ಬರೂ ಇದನ್ನು ‘ಸವಾಲು’ ಎಂದು ಸ್ವೀಕರಿಸಿ ಗಜಲ್ ರಚನೆಗೆ ಮುಂದಾಗಬೇಕು. ‘ಮಕ್ತಾ’ ಎಂದರೆ ಅಂತ್ಯ, ಮುಕ್ತಾಯ. ಗಜಲ್ ಗೆ ‘ಮತ್ಲಾ’ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ‘ಮಕ್ತಾ’. ಇದು ಗಜಲ್ ಗೆ ಒಂದು ತಾರ್ಕಿಕ ಹಾಗೂ ಭಾವನಾತ್ಮಕ ಅಂತ್ಯವನ್ನು ನೀಡುತ್ತದೆ. ಅಂದರೆ, ಶಾಯರ್/ಶಾಯರಾ ಅವರ ಇಂಗಿತ, ಆಶಯ ಹಾಗೂ ಉದ್ದೇಶವನ್ನು ಈಡೇರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅಂದರೆ, ಅವರ ಅಂತಿಮ ಮಾತು, ಸಂದೇಶ ಹಾಗೂ ವೈಯಕ್ತಿಕ ಧ್ವನಿಗೆ ವೇದಿಕೆಯನ್ನು ಒದಗಿಸುತ್ತದೆ. ಈ ಷೇರ್ ಓದುತಿದ್ದಂತೆಯೇ ಗಜಲ್ ಮುಗಿಯಿತು ಎಂಬ ಭಾವ ಸಹೃದಯ ಓದುಗರಲ್ಲಿ, ಕೇಳುಗರಲ್ಲಿ ಬರುತ್ತದೆ, ಬರಬೇಕು. ಇಂತಹ ‘ಮಕ್ತಾ’ಗೆ ಇನ್ನೊಂದು ಬಹುಮುಖ್ಯವಾದ ಲಕ್ಷಣವಿದೆ. ಅದೆಂದರೆ ‘ತಖಲ್ಲುಸ’. ತಖಲ್ಲುಸ್ ಅಂದರೆ ಶಾಯರ್/ಶಾಯರಾ ಅವರ ಗುರುತು. ಇಲ್ಲಿ ಅವರು ತಮ್ಮ ಹೆಸರು, ಇಲ್ಲವೇ ತಮ್ಮ ಇಷ್ಟದ ಹೆಸರನ್ನು ಬಳಸುತ್ತಾರೆ. ಇದು ಹೆಚ್ಚಾಗಿ ‘ನಾಮವಾಚಕ’ವಾಗಿಯೇ ಬಳಕೆಯಾಗಿದೆ. ಆದಾಗ್ಯೂ ಈ ತಖಲ್ಲುಸ್ ರೂಪಕವಾಗಿ ಬಳಕೆಯಾದರೆ ‘ಮಕ್ತಾ’ಗೆ ಒಂದು ಅನುಪಮ ಕಳೆ ಬರುತ್ತದೆ. ‘ತಖಲ್ಲುಸ್’ ಬಳಕೆ ಐಚ್ಛಿಕವಾಗಿದ್ದರೂ ಅದರ ಉಪಸ್ಥಿತಿಯೇ ‘ಮಕ್ತಾ’ಗೆ ಅನ್ವರ್ಥಕವಾಗಿದೆ. ಒಂದುವೇಳೆ ಬೇಮಕ್ತಾ ಷೇರ್ ಇದ್ದರೆ ಅದನ್ನು ಗಜಲ್ ನ ಕೊನೆಯ ಷೇರ್ ಎಂದು ಗುರುತಿಸುವುದು ಕಷ್ಟ! ಇನ್ನೂ ಕಾಫಿಯಾ… ಗಜಲ್ ನ ಉಸಿರು, ಕವಾಫಿ (ಕಾಫಿಯಾಗಳು) ಹೊರತುಪಡಿಸಿ ಗಜಲ್ ಅನ್ನು ಊಹಿಸಿಕೊಳ್ಳಲೂ ಆಗದು! ಕಾಫಿಯ ಆಯ್ಕೆ ಶಾಯರ್/ಶಾಯರಾ ಅವರ ಸೃಜನಶೀಲತೆ, ಗಜಲ್ ಮೇಲಿನ ಪ್ರೀತಿ-ಹುಚ್ಚನ್ನು ಅವಲಂಬಿಸುತ್ತದೆ. ಗಜಲ್ ಕಲಿಕೆಯ ಆರಂಭಿಕ ಹಂತದಲ್ಲಿ ‘ಕಾಫಿಯಾ’ವನ್ನು ಸಾಮಾನ್ಯವಾಗಿ ‘ಪ್ರಾಸ’ ಎಂದು ಗುರುತಿಸಲಾಗುತ್ತದೆ. ಆದರೆ ‘ಪ್ರಾಸ’ ಎಂಬ ಸಾಮಾನ್ಯೀಕರಣ ತುಂಬಾ ಅಪಾಯಕಾರಿ! ಏಕೆಂದರೆ ಕಾಫಿಯಾ ಎಂದರೆ ಕೇವಲ ಪ್ರಾಸವಲ್ಲ, ರವಿ/ರವೀಶ್ ಹೊಂದಿದ್ದರೆ ಸಾಲದು. ಸಾಧ್ಯವಾದಷ್ಟು ಸಮತೂಕ ಹಾಗೂ ಸಮ ಅಕ್ಷರಗಳಿಂದ ಕೂಡಿದ್ದು ರೌಫ್, ಕೈದ್ ಒಳಗೊಂಡಿರಬೇಕು. ಏಕ ಅಲಾಮತ್ -ಬಹು ಅಲಾಮತ್ ರೂಢಿಸಿಕೊಂಡಿರಬೇಕು. ಇದು ಅಷ್ಟೊಂದು ಸುಲಭವಲ್ಲ, ಇದಕ್ಕೆ ಬದ್ಧತೆ ಮತ್ತು ಅಭ್ಯಾಸ ಬೇಕು. ಇದು ಸೃಜನಶೀಲತೆಗೆ ಅಡ್ಡಿಪಡಿಸುತ್ತದೆ ಎಂದು ಭಾವಿಸುವುದು ತರವಲ್ಲ, ಬದಲಿಗೆ ಇದುವೇ ಸೃಜನಶೀಲತೆ ಎಂದು ಬಯಸಬೇಕು! ಪರಿಪೂರ್ಣ ಕವಾಫಿಯ ಆಯ್ಕೆಯೇ ಗಜಲ್ ಅನ್ನು ಗೆಲ್ಲಿಸುತ್ತದೆ. ಅಂತೆಯೇ ಕವಾಫಿ ಗಜಲ್ ನ ಧ್ವನಿಯನ್ನು ಬಲಪಡಿಸುವಂತಿರಬೇಕು, ಗಜಲ್ ನ ಭಾವಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಆರಿಸಬೇಕು. ಸಂದರ್ಭಕ್ಕೆ ತಕ್ಕಂತೆ ಭಾವಪೂರ್ಣವಾಗಿ, ಅರ್ಥಪೂರ್ಣವಾಗಿ ಇರಬೇಕು. ಇಂತಹ ‘ಕಾಫಿಯಾ’ ಇಲ್ಲದ ಬರಹ ಕಾವ್ಯವಾಗಬಹುದೇ ಯಾವತ್ತೂ ಗಜಲ್ ಆಗದು! ಇದು ಕಹಿಯೆನಿಸಿದರೂ ಸತ್ಯ! ರದೀಫ್.. ಗಜಲ್ ಗೆ ಹಾಡುಗಬ್ಬದ ಪೋಷಾಕು ತೊಡಿಸುವ ವಿಶಿಷ್ಟ ಲಕ್ಷಣವನ್ನು ಹೊಂದಿದೆ. ‘ಗಜಲ್’ ಶಿಷ್ಟ ಸಾಹಿತ್ಯ ಪ್ರಕಾರವಾದರೂ ರದೀಫ್ ಇದಕ್ಕೆ ಜಾನಪದೀಯ ರೂಪವನ್ನು ನೀಡುವಲ್ಲಿ ಶ್ರಮಿಸುತ್ತದೆ. ಗಜಲ್ ಗೆ ವಿಶಿಷ್ಟ ಗೇಯತೆ, ಲಾಲಿತ್ಯ ಮತ್ತು ಭಾವತೀವ್ರತೆಯನ್ನು ನೀಡುತ್ತದೆ. ಇದುವೇ ಜನರ ನಾಲಿಗೆಯ ತುದಿಯಲ್ಲಿ ಜೀವಂತವಾಗಿ ಉಳಿಯುವಂತೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ರದೀಫ್ ನ ಆಯ್ಕೆಗೆ ಸಮರ್ಪಕ ಯೋಚನೆ ಅವಶ್ಯಕ. ಅನಗತ್ಯ ಪದಗಳ, ಶಬ್ಧಗಳ ಬಳಕೆ ರಸಭಂಗ ಮಾಡುತ್ತದೆ ಎಂಬುದನ್ನು ಮರೆಯಬಾರದು! ಸಾಮಾನ್ಯವಾಗಿ ದಿನನಿತ್ಯ ಬಳಸುವ ಪದಗಳಿಗಿಂತ ವಿಭಿನ್ನವಾಗಿಯೂ, ಗಾಢಭಾವ, ಸುಲಭವಾಗಿ ಉಚ್ಚರಿಸಬಲ್ಲಂತಹ ಪದಗಳ ಆಯ್ಕೆ ಮಾಡಬೇಕು. ರದೀಫ್ ಗಜಲ್ ನ ಕಾಂತಿ, ರಮ್ಯತೆ ಹಾಗೂ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಈ ಹಿನ್ನೆಲೆಯಲ್ಲಿ ಗಜಲ್ ಗೆ ‘ರದೀಫ್’ ಅತ್ಯವಶ್ಯಕ. ಆದಾಗ್ಯೂ ಇದರ ಬಳಕೆ ಐಚ್ಛಿಕವಾಗಿದೆ! ಇನ್ನೂ ಗಜಲ್‌ನ ಭಾಷೆ ಲಾಲಿತ್ಯಪೂರ್ಣ, ಸಂಕೇತಾತ್ಮಕ ಮತ್ತು ಸಂವೇದನಾಶೀಲವಾಗಿರಬೇಕು. ನೇರವಾದ ಹೇಳಿಕೆಗಳ ಬದಲು ಸೂಚನೆ, ಸಂಕೇತ ಮತ್ತು ರೂಪಕಗಳ ಮೂಲಕ ಭಾವವನ್ನು ಹೇಳುವುದು ಗಜಲ್‌ನ ಮುಖ್ಯ ಲಕ್ಷಣವಾಗಿದೆ. ಭಾಷೆ ಸರಳವಾಗಿದ್ದರೂ ಅರ್ಥದಲ್ಲಿ ಗಾಢತೆ ಹೊಂದಿರಬೇಕು. ರೂಪಕ, ಪ್ರತೀಕ, ಅಲಂಕಾರ, ವ್ಯಂಗ್ಯಗಳ ಸಮೃದ್ಧ ಬಳಕೆಯಾಗಬೇಕು. ಪ್ರತಿ ಷೇರ್ ಸ್ವತಂತ್ರವಾಗಿದ್ದರೂ ಭಾಷೆಯ ಲಯ ಮತ್ತು ಭಾವದ ತೀವ್ರತೆ ಗಜಲ್‌ಗೆ ಏಕತೆಯನ್ನು ನೀಡಬೇಕು. ಉರ್ದೂ ಗಜಲ್ ಪರಂಪರೆಯಲ್ಲಿ ಪರ್ಷಿಯನ್–ಅರಬಿ ಪದಗಳ ಪ್ರಭಾವ ಕಂಡುಬಂದರೂ, ಕನ್ನಡ ಗಜಲ್‌ನಲ್ಲಿ ದೇಸಿ, ತದ್ಭವ ಮತ್ತು ತತ್ಸಮ ಪದಗಳ ಸಮನ್ವಯ ಕಾಣಸಿಗುತ್ತದೆ. ಈ ನೆಲೆಯಲ್ಲಿ ಗಮನಿಸಿದಾಗ ಗಜಲ್‌ನ ಭಾಷೆ ಹೇಳುವುದಕ್ಕಿಂತ ಸೂಚಿಸುವುದರ ಕಡೆಗೆ, ವಿವರಿಸುವುದಕ್ಕಿಂತ ಅನುಭವಿಸಿಸುವುದರ ಕಡೆಗೆ ಗಮನ ಹರಿಸುತ್ತದೆ ಎಂಬುದು ಮನವರಿಕೆಯಾಗುತ್ತದೆ. ಅಂದರೆ ಗಜಲ್ ಕೋಮಲ, ಮೃದುತ್ವ ಮತ್ತು ಹೃದಯ ತಟ್ಟುವ ಪದಗಳ ಬಳಕೆಯನ್ನು ನಿರೀಕ್ಷಿಸುತ್ತದೆ. ಅಂತೆಯೇ ಇಲ್ಲಿ ಬೌದ್ಧಿಕತೆಗಿಂತ ಹೃದಯವಂತಿಕೆ ಅತ್ಯವಶ್ಯಕ! ಇಂದು ಗಜಲ್ ಕೇವಲ ಪ್ರೇಮಕ್ಕೆ ಸೀಮಿತವಾಗಿ ಉಳಿದಿಲ್ಲ; ಮಾನವನ ಅಂತರಂಗ ಮತ್ತು ಸಮಾಜದ ವಿವಿಧ ಆಯಾಮಗಳನ್ನು ಸ್ಪರ್ಶಿಸುತ್ತಿದೆ. ಪ್ರೇಮ ಮತ್ತು ವಿರಹ, ನೋವು ಮತ್ತು ಮನೋವ್ಯಥೆ, ತತ್ತ್ವ ಮತ್ತು ಅಸ್ತಿತ್ವದ ಪ್ರಶ್ನೆಗಳು, ಸಾಮಾಜಿಕ ವ್ಯಂಗ್ಯ ಮತ್ತು ವಿರೋಧ, ಆಧ್ಯಾತ್ಮಿಕ ಮತ್ತು ಸೂಫಿ ಭಾವನೆ, ನೆನಪು, ಕನಸು ಮತ್ತು ಹಂಬಲ.. ಎಲ್ಲವನ್ನೂ ಗಜಲ್ ಒಳಗೊಳ್ಳುತ್ತಿದೆ! ಆದರೆ ಒಂದನ್ನು ನಾವು ಮರೆಯಬಾರದು, ಅದೆಂದರೆ ಅಭಿವ್ಯಕ್ತಿಯ ಕ್ರಮ! ಗಜಲ್ ಯಾವುದೇ ವಿಷಯವನ್ನು ಒಳಗೊಳ್ಳಬಹುದು, ಆದರೆ ಅದು ಸಹೃದಯ ಓದುಗರ, ಕೇಳುಗರ ಹೃದಯದ ಕದ ತಟ್ಟಬೇಕು! ಪ್ರತಿಯೊಂದು ಕಾವ್ಯದ ಬಗ್ಗೆ ಮಾತಾಡುವಾಗಲೆಲ್ಲ ನಾವು ‘ಆತ್ಮ’ದ ಉಲ್ಲೇಖ ಮಾಡುತ್ತೇವೆ. ಅಂದರೆ, ಬಾಹ್ಯ ಲಕ್ಷಣಗಳಿಗಿಂತಲೂ ಆಂತರಿಕ ಭಾವಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂಬ ನೆಲೆಯಲ್ಲಿ! ಹೌದು, ಪ್ರತಿ ಬರಹದ ಮೂಲ ಸ್ಥಾಯಿಯೇ ಅದು ಒಳಗೊಂಡಿರಬಹುದಾದ ಧ್ವನಿ, ರಸ! ಹಾಗಂತ ಬಾಹ್ಯ ಲಕ್ಷಣಗಳನ್ನು ನಿರಾಕರಿಸುವಂತಿಲ್ಲ. ಏಕೆಂದರೆ ನಮಗೆ ಮೊದಲು ಗೋಚರಿಸುವುದೆ ಭೌತಿಕ ಶರೀರ, ನಂತರವಷ್ಟೇ ಆತ್ಮದ ಪರಿಚಯ! ಇಲ್ಲಿ ಇನ್ನೊಂದು ಅಪಾಯವಿದೆ, ಏನೆಂದರೆ ಲಕ್ಷಣಗಳು ಕೇವಲ ‘ಹಿಟ್ಟಿನ ಹುಂಜ’ವನ್ನು ತಯಾರಿಸುವಂತಾಗಬಾರದು! ಆಂತರಿಕ ಹಾಗೂ ಬಾಹ್ಯ ಲಕ್ಷಣಗಳ ಸಾಮರಸ್ಯ ಶಾಯರ್/ಶಾಯರಾ ಸಾಧಿಸುವಂತಾಗಬೇಕು. ಆವಾಗಲೇ ಗಜಲ್ ಉದಯಿಸಲು ಸಾಧ್ಯ, ಸಾರಸ್ವತ ಲೋಕದಲ್ಲಿ ನೆಲೆಯೂರಲು ಸಾಧ್ಯ ಹಾಗೂ ರಸಿಕರ ನಾಲಿಗೆಯ ತುದಿಯಲ್ಲಿ ನುಲಿಯಲೂ ಸಾಧ್ಯ! ಡಾ. ಮಲ್ಲಿನಾಥ ಎಸ್. ತಳವಾರ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರು,ಕನ್ನಡ ಅಧ್ಯಯನ ವಿಭಾಗ,ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ,ಕಲಬುರಗಿ ೫೮೫ ೧೦೩

“ಗಜಲ್ ಮನಸುಗಳಿಗಾಗಿ, ಗಜಲ್ ಕುರಿತು ಒಂದಿಷ್ಟು ವಿಚಾರಗಳು.” ಡಾ. ಮಲ್ಲಿನಾಥ ಎಸ್. ತಳವಾರ Read Post »

ಇತರೆ

“ರಾಷ್ಟ್ರೀಯ ಕೈ ಬರಹ ದಿನಾಚರಣೆ” ಗಾಯತ್ರಿ ಸುಂಕದ

ಕೈಬರಹ ಸಂಗಾತಿ ಗಾಯತ್ರಿ ಸುಂಕದ “ರಾಷ್ಟ್ರೀಯ ಕೈ ಬರಹ ದಿನಾಚರಣೆ” ಕೈ ಬರಹದ ಚಿತ್ರ ರಂಗಮ್ಮ ಹೊದೇಕಲ್ ಕಂಪ್ಯೂಟರ್ ಬಂದಾಗಿನಿಂದ ಬಹುಶಃ ನಮಗೆ ಕೈ ಬರಹ   ಮರೆತು ಹೋಗಿದೆ. ಆದರೂ ಚಿಕ್ಕವರಿದ್ದಾಗ ಕಾಪಿ ರೈಟಿಂಗ್ ಬುಕ್ ತಂದು ಬರೆದಿದ್ದು ಇನ್ನೂ ಹಸಿರಾಗಿದೆ.ನಮ್ಮ ಕೈ ಬರಹ ನಮ್ಮ ವ್ಯಕ್ತಿತ್ವವನ್ನು ಕೂಡ ಸೂಚಿಸುತ್ತದೆ.ನೀವು. ಎಡಗಡೆಗೆ ವಾಲಿಸಿ ಬರೆದರೆ ಹತಮಾರಿಗಳು, ನಿಮ್ಮದೇ ನಡೆಯ ಬೇಕೆಂಬ ಅಹಂ ಉಳ್ಳವರು.ನೀವು ಬಲಗಡೆಗೆ ವಾಲಿಸಿ ಬರೆದರೆ ಎಲ್ಲಿ ಹೋದರೂ ಹೊಂದಿ ಕೊಳ್ಳುವ ವ್ಯಕ್ತಿತ್ವ ಉಳ್ಳವರು ಮತ್ತು ಸ್ವಭಾವತಃ ಒಳ್ಳೆಯವರು.ನೀವು ನೇರವಾಗಿ ಬರೆದರೆ ಸದಾ ಕ್ರಿಯಾಶೀಲರು ಎಂದರ್ಥ.ನೀವು ಎರಡು ಗೆರೆಗೆ ಹತ್ತಿಸಿ ಬರೆದರೆ ನೀವು ಸ್ವಭಾವತಃ   ಯಾರೊಡನೆ  ಜಾಸ್ತಿ  ಬೇರೆಯದೇ ಒಬ್ಬರೇ ಇರಲಿಕ್ಕೆ ಇಚ್ಛೆ ಪಡುವರು.ನೀವು ಎರಡು ಗೆರೆಗಳ ನಡುವೆ ಬರೆದರೆ ಹಗಲುಗನಸು ಕಾಣುವ ವ್ಯಕ್ತಿತ್ವ ಉಳ್ಳವರು.ನೀವು ತುಂಬಾ ಜಾಗ ಬಿಟ್ಟು  ಪುಟ ತುಂಬಿಸುವವರು ಇದ್ದರೆ ನೀವು ಸೋಮಾರಿ ಮತ್ತು ಟೈಮ್ ಪಾಸ್ ಮಾಡುವ ವ್ಯಕ್ತಿತ್ವ ಉಳ್ಳವರು.ನೀವು ಸ್ವಲ್ಪವೂ  ಜಾಗ ಬಿಡದೆ ಪುಟ. ತುಂಬಿಸುವವರೂ ಇದ್ದರೆ ನೀವು ಸಮಯಕ್ಕೆ ತುಂಬಾ ಮಹತ್ವ ಕೊಡುವವರು ಆಗಿರುತ್ತೀರಿ.   ತಪ್ಪಾಗಿದ್ದ ಶಬ್ದವನ್ನು ತುಂಬ ಜೋರಾಗಿ ಹೊಡೆದು ಹಾಕುವವರು ಆಗಿದ್ದರೆ, ನೀವು ಇನ್ನೊಬ್ಬರಿಗೆ  ಮುಖಕ್ಕೆ ಹೊಡೆಯುವಂತೆ ಮಾತನಾಡುವ ವ್ಯಕ್ತಿತ್ವ ಉಳ್ಳವರು ಆಗಿರುತ್ತೀರಾ.ನೀವು ದುಂಡಗೆ ಅಂದವಾಗಿ ಬರೆಯುವವರು ಆಗಿದ್ದರೆ, ನೀವು ಆಲ್ರೌಂಡರ್ ಾಗಿರುತ್ತೀರಾ. ನೀವು ಗಜಿಬಿಜಿ ಬರೆಯುವವರು ಆಗಿದ್ದರೆ, ನೀವು ಮಾನಸಿಕವಾಗಿ. ಸ್ಥಿರತೆ ಇಲ್ಲದೆ  ಚಂಚಲ ವ್ಯಕ್ತಿ ಆಗಿರುತ್ತೀರ.ನಮ್ಮ ಜೀವನದಲ್ಲಿ ಬದಲಾವಣೆಗಳು ಆದರೆ, ನಮ್ಮ ಕೈ ಬರಹದಲ್ಲಿ ಕೂಡ ಬದಲಾವಣೆ. ಆಗಿರುತ್ತದೆ.ನಮ್ಮ ಕೈ. ಬರಹ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ತುಂಬ ವೇಗವಾಗಿ ಚಿಂತಿಸಿ ಬರೆಯುವವರು ಇದ್ದರೆ, ಅವರ ಸಹಿ ರನ್ನಿಂಗ್ ಲೆಟರ್ಸ್ ಆಗಿರುತ್ತದೆ.ಎಷ್ಟೊಂದು  ಇಂಟರೆಸ್ಟಿಂಗ್ ಅಲ್ಲವೇ!ಒಂದು ಸಾರಿ ಚೆಕ್ ಮಾಡಿ ಕೊಳ್ಳಿ. ಗಾಯತ್ರಿ ಸುಂಕದ

“ರಾಷ್ಟ್ರೀಯ ಕೈ ಬರಹ ದಿನಾಚರಣೆ” ಗಾಯತ್ರಿ ಸುಂಕದ Read Post »

ಇತರೆ

“ಅವಮಾನದ ತಿರುವುಗಳು ಗೆಲುವಿನ ಮೈಲಿಗಲ್ಲುಗಳು” ಜಯಶ್ರೀ.ಜೆ. ಅಬ್ಬಿಗೇರಿ

ಜೀವನ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ “ಅವಮಾನದ ತಿರುವುಗಳು ಗೆಲುವಿನ ಮೈಲಿಗಲ್ಲುಗಳು” ನಾನೀಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ಅವಮಾನದ ಒಂದು ಪ್ರಸಿದ್ಧ ಉದಾಹರಣೆ; ಪವಿತ್ರ ನರ್ಮದಾ ನದಿಯಲ್ಲಿ ಒಮ್ಮೆ ಸಂತ ಏಕನಾಥ ಸ್ನಾನ ಮಾಡಿ ಹೊರ ಬರುತ್ತಿದ್ದ.ಆಗ ಪಠಾಣನೊಬ್ಬ ಮನದಲ್ಲಿ ವಿಷ ತುಂಬಿಕೊAಡು ಸಂತನ ಮೇಲೆ ಉಗುಳಿದ. ಏಕನಾಥ ‘ಜೈ ವಿಠ್ಠಲ’ ಎನ್ನುತ್ತ ಮತ್ತೆ ನರ್ಮದೆಗಿಳಿದ. ಈ ರೀತಿ ಮುಂಜಾನೆಯಿoದ ಸಂಜೆಯವರೆಗೂ ಇಬ್ಬರ ನಡುವೆ ನಡೆಯಿತು ಯಾರು ಸೋಲುತ್ತಾರೆಂದು ನದಿ ತಟದಲ್ಲಿ ಜನ ನಿಂತು ನೋಡುತ್ತಿದ್ದರು. ಕೊನೆಗೆ ಪಠಾಣ, ಸಂತರನ್ನು ಉದ್ದೇಶಿಸಿ ನಾನು ಯಾವುದೇ ಕಾರಣವಿಲ್ಲದೇ ನಿಮ್ಮನ್ನು ಹೀಗೆ ಅವಮಾನಗೊಳಿಸುತ್ತಿದ್ದೇನೆ ಅಶುದ್ಧಿಗೊಳಿಸುತ್ತಿದ್ದೇನೆ.ಆದರೆ ನೀವು ನನ್ನ ಮೇಲೆ ಕೋಪಿಸಿಕೊಳ್ಳದೇ ನಗುತ್ತಲೇ ನನ್ನನ್ನು ಸ್ವೀಕರಿಸುತ್ತಿದ್ದೀರಿ ಇದು ಹೇಗೆ ಸಾಧ್ಯವೆಂದು ಕೇಳಿದ. ’ನೀನು ನನ್ನ ಪೋಷಕ.’ನಿನ್ನಿಂದಾಗಿ ಇಂದು ಪವಿತ್ರ ನರ್ಮದೆಯಲ್ಲಿ ಇಷ್ಟು ಬಾರಿ ಮಿಂದೆದ್ದೆ. ನನ್ನನ್ನು ಶುದ್ಧೀಕರಿಸಿಕೊಳ್ಳಲು ಒಂದು ಅವಕಾಶ ನೀಡಿದೆ ಎಂದನoತೆ. ಫೋರ್ಡ್ ಕಾರಿನ ಹೆನ್ರಿ ,ವಿಮಾನ ಸಂಶೋಧಿಸಿದ ರೈಟ್ ಬ್ರದರ್ಸ್, ಅಬ್ರಹಾಂ ಲಿಂಕನ್,ಇತಿಹಾಸ ಪ್ರಸಿದ್ಧ ಚಾಣಕ್ಯ, ಮಹಾತ್ಮ ಗಾಂಧಿ, ಹಿಂದಿ ಚಿತ್ರ ಲೋಕದ ದಿಗ್ಗಜ ಅಮಿತಾಬ್ ಬಚನ್, ಸಾವಿರ ಸಂಶೋಧನೆಗಳ ಸರದಾರ ಥಾಮಸ್ ಅಲ್ವಾ ಎಡಿಸನ್‌ನಂಥ ಸಾವಿರ ಗೆಲುವಿನ ಸರದಾರರು ಅವಮಾನದ ತಿರುವುಗಳನ್ನೇ ಗೆಲುವಿನ ಮೈಲಿಗಲ್ಲುಗಳನ್ನಾಗಿ ರೂಪಿಸಿಕೊಂಡಿದ್ದು ಈಗ ಇತಿಹಾಸ.  ಅವಮಾನವನ್ನು ಹೇಗೆ ಸ್ವೀಕರಿಸುತ್ತೇವೆ ಎನ್ನುವುದರ ಮೇಲೆ ಅವು ಮೈಲಿಗಲ್ಲುಗಳಾಗುವುದು ಅವಲಂಬಿತವಾಗುತ್ತದೆ.ಅವಮಾನವನ್ನು ಅನುಭವಿಸಿದವರು ಕೋಟಿ ಕೋಟಿ ಜನ ಆದರೆ ಅದನ್ನು ಗಂಭೀರವಾಗಿ ಕೈಗೆತ್ತಿಕೊಂಡವರ ಸಂಖ್ಯೆ   ಸಾವಿರ ಇಲ್ಲವೇ ಲಕ್ಷ ದಾಟುವುದಿಲ್ಲ. ಉಳಿದವರಿಗೆ ಸವಾಲಾಗದೇ ಕಾಡದೇ ಇದ್ದುದು ಎದುರಿಸಿ ನಿಲ್ಲಬೇಕೆನ್ನುವವರಿಗೆ ಸವಾಲಾಗಿ ಕಂಡಿದ್ದು ನಿಜ. ಅಳ್ಳೆದೆಯವರಿಗೆ ಅವಮಾನವೆಂಬ ಪದವೇ ದೂರ ಸರಿಯುವಂತೆ ಮಾಡುವುದೂ ಅಷ್ಟೇ ಸತ್ಯ. ದೂರು ಸರಿಯುವ ಬದಲು ಗಟ್ಟಿ ಧೈರ್ಯ ಮಾಡಿದರೆ ಅವಮಾನದೊಂದಿಗೆ  ಮುಖಾಮುಖಿಯಾಗಬಹುದು. ಹಾಗಾದರೆ ಅವಮಾನವೆಂದರೇನು? ಅದರ ಲಕ್ಷಣಗಳೇನು? ಪರಿಣಾಮಗಳು ಎಂಥವು? ಅದನ್ನು ನಿರ್ವಹಿಸುವ ಕಲೆ ಹೇಗೆ ಎಂಬುದನ್ನು ತಿಳಿಯೋಣ ಬನ್ನಿ. ಅವಮಾನವೆಂದರೆ. . . . ? ಯಾರಿಗೂ ಹೇಳಿಕೊಳ್ಳಲಾಗದ ಅನುಮಾನದ ನೋವುಗಳನ್ನು ಎದೆಯ ತೆಕ್ಕೆಯಲ್ಲಿ ಬಚ್ಚಿಟ್ಟುಕೊಂಡು ತಿರುಗುವ ನೋವು ನಮ್ಮ ಶತ್ರುಗಳಿಗೂ ಬೇಡ. ‘ “ನಮ್ಮ ಭೀಮ ಗಾತ್ರದ ಶಕ್ತಿಗಳನ್ನು ಲವಲೇಶಕ್ಕೂ ಬೆಲೆ ಇಲ್ಲದಂತೆ ಲಘುವಾಗಿಸುವ ಪ್ರಯತ್ನ ನಡೆಸುವುದೇ ಅವಮಾನ.” ಅವಮಾನಿಸಿಯೇ ನಮ್ಮ ಗಮನ ಸೆಳೆಯುವವರೂ ಕಾಣ ಸಿಗುತ್ತಾರೆ. ಅದಕ್ಕೆಲ್ಲ ಬೇಸರಿಸಿಕೊಳ್ಳುವ ಹಾಗಿಲ್ಲ. ಅವರ ಹೀಯಾಳಿಕೆಯನ್ನೇ ಹೆಗ್ಗಳಿಕೆಯಾಗಿಸಿಕೊಳ್ಳುವುದೇ ಜಾಣತನ. ಭಯ ಆತಂಕದಿoದಲೇ ಪಡೆಯಬೇಕಾದುದನ್ನು ಮನಸಾರೆ ಸ್ವೀಕರಿಸಿದರೂ ಅಗಾಧ ಬದಲಾವಣೆಯನ್ನು ತರುವ ಅಪಾರ ಶಕ್ತಿ ಅವಮಾನಕ್ಕೆ ಉಂಟು. ಅವಮಾನಿಸಿದವರ ಮುಂದೆ ತಲೆ ಎತ್ತಿ ಬದುಕಬೇಕೆಂದರೆ ಅವಮಾನವನ್ನೇ ಉತ್ಸಾಹವಾಗಿಸಿಕೊಳ್ಳಬೇಕು. ಅದೇ ಉತ್ಸಾಹ ನಮ್ಮನ್ನು ಉತ್ತೇಜಿಸುತ್ತದೆ. ಹೀಗೆ ದೊರೆತ ಉತ್ಸಾಹ ಬದಲಾಗುತ್ತ ಬೆಳೆಯುತ್ತ ಹೋಗುತ್ತದೆ. ಸನ್ಮಾನದತ್ತ ತಂದು ನಿಲ್ಲಿಸುತ್ತದೆ. ಲಕ್ಷಣ ಕಪಾಳಮೋಕ್ಷ,ಗುದ್ದುವುದು, ಅಪಹಾಸ್ಯದ ನಗು, ಮುಖದಲ್ಲಿಯ ಅಭಿವ್ಯಕ್ತಿ  ಹೀಗೆ ದೈಹಿಕವಾಗಿರಬಹುದು. ಇಲ್ಲವೇ ಸಾಮಾನ್ಯವಾಗಿ ವ್ಯಂಗ್ಯವಾಡುವುದು, ಅಣುಕಿಸುವುದು, ಅವಾಚ್ಯ ಶಬ್ದಗಳ ಬಳಕೆ ಅಸಂಬದ್ಧ ಟೀಕೆಗಳನ್ನು ಮಾಡುವುದಿರಬಹುದು. ಪರಿಣಾಮಗಳು ಅವಮಾನ ಮಾಡುವ ಅಡ್ಡ ಪರಿಣಾಮಗಳು ಒಂದೇ ಎರಡೇ? ಅದರ ಪಟ್ಟಿ ಮಾಡುತ್ತ ಸಾಗಿದರೆ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಮೊದಲನೆಯದಾಗಿ ನಮ್ಮ ಸಂತೋಷವನ್ನೇ ಹಾಳು ಮಾಡುತ್ತದೆ. ಆತ್ಮವಿಶ್ವಾಸವನ್ನು ಸ್ವ ಗೌರವವನ್ನು ಒಮ್ಮಿಂದೊಮ್ಮೆಲೇ ಕೆಳಕ್ಕೆ ತಳ್ಳುತ್ತದೆ.ಏಕಾಂಗಿಯಾಗಿಸುತ್ತದೆ. ಸಿಟ್ಟು ತರಿಸುತ್ತದೆ. ಆತಂಕಕ್ಕೆ ಒಳಪಡಿಸುತ್ತದೆ. ಅಷ್ಟೇ ಅಲ್ಲ ಇನ್ನೂ ಮುಂದಕ್ಕೆ ಹೋಗಿ ಖಿನ್ನತೆಯೂ ಆವರಿಸುವಂತೆ ಮಾಡುತ್ತದೆ. ನಿರ್ವಹಿಸುವ ಬಗೆ ಹಲವು ಅವು ಇಲ್ಲಿವೆ ನೋಡಿ   ಸಿಟ್ಟು ಅವಮಾಕ್ಕೆ ಸಿಟ್ಟಿನಿಂದ ಉತ್ತರಿಸುವುದು ನಿಜಕ್ಕೂ ತುಂಬ ಅಶಕ್ತವೆನಿಸುತ್ತದೆ. ಅವಮಾನಿಸಿದವರನ್ನು ಮತ್ತು ಅವಮಾನವನ್ನು ಅತಿ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಅವಮಾನದಲ್ಲಿ ಸತ್ಯವಿದೆ ಎನಿಸುತ್ತದೆ. ಮನದ ಸ್ಥಿರತೆಯನ್ನು ತಗ್ಗಿಸುತ್ತದೆ. ಮತ್ತಷ್ಟು ಅವಮಾನಕ್ಕೆ ಎಡೆಮಾಡುತ್ತದೆ. ಹೀಗಾಗಿ ಅವಮಾನವನ್ನು ಸಿಟ್ಟಿನಿಂದ ಎದುರಿಸುವುದ ಅಷ್ಟು ಸೂಕ್ತವಲ್ಲ ಎನಿಸುತ್ತದೆ. ಸ್ವೀಕರಿಸುವಿಕೆ ಮೇಲ್ನೋಟಕ್ಕೆ ಅವಮಾನವನ್ನು ಸ್ವೀಕರಿಸುವುದು ಅಶಕ್ತವೆನಿಸಿದರೂ ಸಶಕ್ತ ವಿಧಾನವಾಗಿದೆ. ಅವಮಾನಿತಗೊಂಡಾಗ ಮೂರು ವಿಷಯಗಳನ್ನು ಪರಿಗಣಿಸಬೇಕು. ಅವಮಾನ ಸತ್ಯದ ಆಧಾರದ ಮೇಲಿದೆಯೇ? ಅವಮಾನಿಸಿದವರು ಯೋಗ್ಯರೇ? ಅವಮಾನ ಏಕೆ ಮಾಡಲ್ಪಟ್ಟಿತು? ಸತ್ಯವೆನಿಸಿದರೆ, ಯೋಗ್ಯರೆನಿಸಿದರೆ, (ಪಾಲಕರು, ಗುರುಗಳು, ಗೆಳೆಯರು) ಉದ್ದೇಶ ಒಳ್ಳೆಯದಿತ್ತು ಎನಿಸಿದರೆ ಅವಮಾನವ ಮಾಡಿದವರು ನೀವು ಗೌರವಿಸುವ ವ್ಯಕ್ತಿಯಾಗಿದ್ದರೆ ಆ ಅವಮಾನವನ್ನು ಉಡಾಫೆ ಮಾಡುವಂತಿಲ್ಲ. ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಸತ್ಯಾಸತ್ಯತೆಯನ್ನು ಅರಿತು ಬದಲಾಗಲು ಸ್ವೀಕರಿಸಬೇಕು. ಮರಳಿಸುವಿಕೆ ಅವಮಾನವನ್ನು ಮರಳಿಸುವಿಕೆಯಲ್ಲಿ ಕೆಲವೊಂದಿಷ್ಟು ವಿಷಯಗಳು ಹುದುಗಿವೆ. ಆದ ಅವಮಾನ ಮರಳಿಸಲು ಯೋಗ್ಯವಾಗಿರಬೇಕು. ಸರಿಯಾದ ಸಮಯಕ್ಕೆ ಜಾಣತನದಿಂದ ಉತ್ತರಿಸುವಂತಿರಬೇಕು.’ಪರಿಪೂರ್ಣತೆಯನ್ನು ಕಡಿಮೆ ಮಾಡುವುದು ವಿರಳವಾಗಿ ಉತ್ತಮ ಪ್ರತಿಕ್ರಿಯೆ’ ಎಂದಿದ್ದಾನೆ ಆಸ್ಕರ್ ವೈಲ್ಡ್. ಆದರೆ ಹೀಗೆ ಕಡಿಮೆ ಮಾಡುವ ಪ್ರತಿಕ್ರಿಯೆಯ ಒಂದು ಮುಖ್ಯ ಸಮಸ್ಯೆ ಎಂದರೆ ಎಷ್ಟೇ ಜಾಣರಾಗಿದ್ದರೂ ಅದು ನಮ್ಮನ್ನು ಅವಮಾನಿಸಿದವರ ಮಟ್ಟಕ್ಕೆ ಇಳಿಸುತ್ತದೆ. ಹೀಗಾಗಿ ಇದು ಅಂದವಾದ ದುರ್ಬಲವಾದ ವಿಧಾನ. ಇದರಲ್ಲಿನ ಅವಮಾನಿಸಿದವರನ್ನು ಕೆರಳಿಸಿ ಮತ್ತಷ್ಟು ಆಕ್ರಮಣಗಳನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚು. ಆದರೆ ಈ ವಿಧಾನವನ್ನು ಹಾಸ್ಯಮಯವಾಗಿ ಗೆಳೆಯರೊಂದಿಗೆ ಸಮವಯಸ್ಕರೊಂದಿಗೆ ಬಳಸಬಹುದು. ಅಲಕ್ಷಿಸುವಿಕೆ ಹಾಸ್ಯ, ಶೋಚನೀಯವಾಗಿ ಮರಳಿಸುವಿಕೆಯ ಫಲಿತಾಂಶವನ್ನು ಪಡೆದಿದೆ. ನಿಮ್ಮ ಉತ್ತರ ಮೋಜಿನದಾಗಿರಬೇಕು. ಸರಿಯಾದ ಸಮಯಕ್ಕೆ ಸರಿಯಾದ ಭಾವದೊಂದಿಗೆ ಹೇಳುವಂತಿರಬೇಕು. ನಿಜದಲ್ಲಿ ಅವಮಾನವನ್ನು ಅಲಕ್ಷಿಸುವಿಕೆ ಬಹು ಸರಳ ಮತ್ತು ಹೆಚ್ಚು ಪರಿಣಾಮಕಾರಿ ವಿಧಾನ ಎನ್ನಬಹುದು. ಈ ವಿಧಾನವು ಅಪರಿಚಿತರೊಂದಿಗೆ ಸರಿಯಾಗುತ್ತದೆ. ಆದರೆ ಇದು ನಮ್ಮ ವೈಯಕ್ತಿಕ ವೃತ್ತಿಪರ ಸಂಬoಧಗಳೊoದಿಗೆ ಸರಿ ಹೊಂದುವುದಿಲ್ಲ.ಇoಥ ಸಂದರ್ಭದಲ್ಲಿ ಸರಿಯಾದ ಶಬ್ದವನ್ನು ಬಳಸುವುದು ಆಯ್ಕೆಗೆ ಅರ್ಹವಾದುದು.ಶಬ್ದ ಬಳಸುವಾಗ ನಮ್ಮ ಎಲ್ಲೆಗಳನ್ನು ಮೀರದಂತೆ ಪುನಃ ದೃಢಪಡಿಸಲು ಪ್ರಯತ್ನಿಸಬೇಕು. ವೈಯಕ್ತಿಕ ಮತ್ತು ವೃತ್ತಿಪರ ಆರೋಗ್ಯಕರ ಪರಿಸರ ನಿರ್ಮಿಸುವುದು ಒಂದು ಸವಾಲಿನ ಸಂಗತಿಯೇ ಸರಿ. ಇಲ್ಲಿ ಶಾರೀರಿಕ  ಎಲ್ಲೆಗಳನ್ನು ಎಷ್ಟರಮಟ್ಟಿಗೆ ನಿರ್ಧಿಷ್ಟವಾಗಿ ಕಾಪಾಡಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಇದೊಂದು ನಾಯಿ ಬಾಲವನ್ನು ನೆಟ್ಟಗಾಗಿಸಿದಂತೆ.ಪ್ರತಿ ಬಾರಿ ಅದನ್ನು ಪುನಃ ದೃಢಪಡಿಸುವಾಗಲು ಅದು ಬಿಡಿಸದಂತೆ ಡೊಂಕಾಗಿರುತ್ತದೆ. ಇದಕ್ಕೆ ಸಾಕಷ್ಟು ಪ್ರಯತ್ನ ಬೇಕು. ಕೆಲವು ಬಾರಿ ಧೈರ್ಯವೂ ಬೇಕಾಗುತ್ತದೆ. ಆದರೆ ಈ ವಿಧಾನವನ್ನು ಪ್ರಾರಂಭದಿoದಲೇ ರೂಢಿಸಿಕೊಂಡರೆ ಇದು ಬಹು ಪರಿಣಾಮಕಾರಿ ವಿಧಾನ. ಅವಮಾನ ಅಪರಾಧವಲ್ಲ ಅವಮಾನವನ್ನು ಅಪರಾಧವೆಂದು ಎಂದೂ ತಿಳಿಯಬಾರದು. ಅಪರಾಧವು ನಾವು ಅವಮಾನಕ್ಕೆ ಪ್ರತಿಕ್ರಿಯಿಸುವುದರಲ್ಲಿದೆ. ನಮ್ಮ ಪ್ರತಿಕ್ರಿಯೆಗಳು ನಮ್ಮ ಹತೋಟಿಯಲ್ಲಿರುತ್ತವೆ. ಒಬ್ಬ ಗಮಾರನನ್ನು ಗಮಾರನೆಂದು ನಿರೀಕ್ಷಿಸುವುದು ಅಸಮಂಜಸವಾಗಿದೆ. ಅವನ ಕೆಟ್ಟ ನಡುವಳಿಕೆಯಿಂದ ನಮ್ಮನ್ನು ಅಪರಾಧಿಗಳೆಂದುಕೊoಡರೆ ನಮ್ಮನ್ನು ನಾವು ದೂಷಿಸಿಕೊಳ್ಳಬೇಕಾಗುತ್ತದೆ. ಆಯ್ಕೆ ಆದ್ಯತೆಗಳೂ ಕಾರಣವಾಗುತ್ತವೆ. ಅದಕ್ಕಾಗಿಯೇ ಸುತ್ತಲಿನ ಲೋಕ ಚಾಲ್ತಿ ಪಡೆಯುತ್ತದೆ. ಮೇಲ್ನೋಟದಲ್ಲಿ ಅವಮಾನವೆನಿಸುವುದು ಅವಮಾನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ನಮ್ಮೊಳಗಿನ ಚೇತನವನ್ನು ಬಡಿದೆಬ್ಬಿಸುವ ದೊಡ್ಡ ಕೆಲಸವನ್ನು ಮಾಡುವ ಮಾಯಾ ಶಕ್ತಿಯನ್ನು  ಹೊಂದಿರುತ್ತದೆ ಎಂಬುದನ್ನು ತಿಳಿದು ನಮ್ಮ ಶಕ್ತಿ ದೌರ್ಬಲ್ಯವನ್ನು ಅಳೆದು ತೂಗಿ ನೋಡಿ ಸಾಧಿಸಬೇಕಾದ ಗುರಿಗೆ ಗುರಿ ಇಡಬೇಕು. ಅನುಮತಿಯಿಲ್ಲದೇ ಅವಮಾನವಿಲ್ಲ ‘ನಿನ್ನ ಅನುಮತಿ ಇರಲಾರದೇ ನಿನ್ನನ್ನು ಯಾರೂ ಅನುಮಾನಿಸಲಾರರು.’ ಎಂಬುದು ಅನುಭವಿಕರ ನುಡಿ. ಅನುಮಾನದ ಭೀತಿ ಇರುವವರೆಗೂ ಅನುಮಾನಗಳು ನಮ್ಮನ್ನು ಸುತ್ತುವರೆಯುತ್ತವೆ. ಅನುಮಾನದ ಭೀತಿ ತೊರೆದ ಮೇಲೆ ನಮ್ಮನ್ನು ಬಿಟ್ಟು ತೊಲಗುತ್ತವೆ. ಅವಮಾನಕ್ಕೆ ಪ್ರತಿಕ್ರಿಯಿಸಿ ಮತ್ತೆ ಅವಮಾನಿಸಿಕೊಳ್ಳುವುದು ಮೂರ್ಖತನವೇ ಸರಿ.ಅವಮಾನಕ್ಕೆ ಪ್ರತಿಯಾಗಿ ಅಸಂಬದ್ಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತ ಕುಳಿತರೆ ನಡೆಯುವ ದಾರಿ ತಪ್ಪಿ ಹೋಗುತ್ತದೆ. ಅವಮಾನ ಎದುರಿಸುವಾಗ ಎಚ್ಚರದಿಂದಿರು. ಅವಮಾನವೆಂಬ ಹೆಸರಿನಲ್ಲಿ ಜೀವನದ ಖಾತೆಗೆ  ನಷ್ಟ. ಜನರ ದೃಷ್ಟಿಯಲ್ಲಿ ಅವಮಾನ ಸಣ್ಣದಿರಲಿ ದೊಡ್ಡದಿರಲಿ ನಮ್ಮ ಪಾಲಿಗಂತೂ ಅದು ದೊಡ್ಡ ಕಹಿಯೇ ‘ಅವಮಾನ ಹೆಚ್ಚಿದಷ್ಟು ಹೆಚ್ಚು ಲಾಭ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರೆ ಮಾತ್ರ..’ ಕೊನೆ ಹನಿ ಗೆಲುವಿನೆಡೆಗೆ ಪಯಣ ಬೆಳೆಸುವಾಗ ಅವಮಾನ ಕಟ್ಟಿಟ್ಟ ಬುತ್ತಿ. ಇಲ್ಲಿ ಅವಮಾನ ಯಾರಿಗಿಲ್ಲ ಹೇಳಿ.ಲೋಕದಲ್ಲಿ ಹುಟ್ಟಿದ ಎಲ್ಲರೂ ಅವಮಾನ ಅನುಭವಿಸಿದವರೆ. ಹೆಜ್ಜೆ ಹೆಜ್ಜೆಗೂ ಕಾಡುವ ಅವಮಾನ ಗೆಲುವಿನ ಏಣಿ ಏರಿ ಯಶಸ್ಸಿನ ಶಿಖರವನ್ನು ಮುಟ್ಟಲು ಕಾರಣವಾಗತ್ತದೆ.ಸಣ್ಣ ಪುಟ್ಟ ಘಟನೆಗಳ ಅವಮಾನವೂ ಗಮನ ಸೆಳೆಯುತ್ತದೆ. ಒಮ್ಮೊಮ್ಮೆಯಂತೂ ನಿರುತ್ಸಾಹ ಮೂಡಿಸಿ ಹಿಂಡಿ ಹಿಪ್ಪಿ ಮಾಡಿ ಬಿಡುತ್ತದೆ. ಅವಮಾನಗಳಿಗೆ ಹೆದರುವ ಅಗತ್ಯವಿಲ್ಲ. ಅನಗತ್ಯ ಅವಮಾನವಾಗಿದ್ದರೆಅದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯತೆಯಿಲ್ಲ. ಎಲ್ಲರೂ ನಮ್ಮನ್ನು ಮೆಚ್ಚಿಕೊಂಡರೆ ನಾವು ಶುದ್ಧರಾಗುವುದಿಲ್ಲ. ಶುದ್ಧೀಕರಣ ಇತರರು ನಮ್ಮನ್ನು ಪರೀಕ್ಷೆಗೆ ಒಡ್ಡಿದಾಗ ಟೀಕಿಸಿದಾಗ ಉಂಟಾಗುತ್ತದೆ. ಅನುಮಾನವೆಂಬ ದೌರ್ಬಲ್ಯವನ್ನು ಮೆಟ್ಟಿ ನಿಲ್ಲಬೇಕು. ಅವಮಾನದ ಸಂದರ್ಭದಲ್ಲಿ ಗೆಳೆಯರು ಬಂಧುಗಳು ಕೈ ಬಿಟ್ಟರೂ ಸಂಗಾತಿಯಾಗಿ ನಿಲ್ಲುವುದೇ ಆತ್ಮವಿಶ್ವಾಸ.ಅವಮಾನದ ಪ್ರತಿ ತಿರುವನ್ನು ಸವಾಲಾಗಿ ಸ್ವೀಕರಿಸಿದರೆ ಒಂದೊoದು ಅವಮಾನದ ಪ್ರತಿ ತಿರುವೂ ನಿಮ್ಮ ಗೆಲುವಿನ ಮೈಲಿಗಲ್ಲುಗಳಾಗಿ ಜನರು ನಮ್ಮನ್ನು ಅಭಿಮಾನದಿಂದ ತಿರುಗಿ ನೋಡುವಂತೆ ಮಾಡುತ್ತವೆ.ಅವಮಾನಿಸಿದವರೇ ಸನ್ಮಾನಿಸುವಂತೆ ಬೆಳೆದು ತೋರಿಸುವುದೇ ಅವಮಾನಕ್ಕೆ ತಕ್ಕ ಉತ್ತರವಲ್ಲವೇ? ಜಯಶ್ರೀ ಜೆ ಅಬ್ಬಿಗೇರಿ

“ಅವಮಾನದ ತಿರುವುಗಳು ಗೆಲುವಿನ ಮೈಲಿಗಲ್ಲುಗಳು” ಜಯಶ್ರೀ.ಜೆ. ಅಬ್ಬಿಗೇರಿ Read Post »

ಇತರೆ

ಲೈಕು.ಕಮೆಂಟುಗಳಿಗಾಗಿ ಬಲಿಯಾದ ಒಂದುಜೀವ!ವಿಶೇಷ ಲೇಖನ, ಐಗೂರು ಮೋಹನ್ ದಾಸ್ ಜಿ.

ಜಾಲತಾಣ ಸಂಗಾತಿ ಐಗೂರು ಮೋಹನ್ ದಾಸ್ ಜಿ. ಲೈಕು.ಕಮೆಂಟುಗಳಿಗಾಗಿ ಬಲಿಯಾದ ಒಂದುಜೀವ! ಒಂದು ಮಾತು :ಕೆಲ ದಿನಗಳ ಹಿಂದೆ ದೇವರನಾಡು ಕೇರಳ ರಾಜ್ಯದಲ್ಲಿ,ಸಾಮಾಜಿಕ ಜಾಲತಾಣದ ಹುಚ್ಚು ಮೋಹದಿಂದ ಯುವತಿಯೊಬ್ಬಳ ಹುಚ್ಚಾಟಕ್ಕೆ, ಒಂದು ಮನೆಯ ‘ಬೆಳಕು’ವಾಗಿದ್ದ ‘ದೀಪಕ್’ ಎನ್ನುವ ಯುವಕ ‘ಆತ್ಮಹತ್ಯೆ’ ಮಾಡಿಕೊಂಡಿರುವ ವಿಚಾರ ನಿಮಗೂ ಗೊತ್ತಿರಬೇಕು.    ಈ ಯುವತಿಯ ಸುಳ್ಳು ಆರೋಪದಿಂದ ಒಂದು ಗಂಡು ಜೀವ ಹೋಗಿದೆ…. ಪ್ರಜ್ಞಾವಂತ ಜನತೆ ಈ ಯುವತಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.   ಇಂದು ಈ ಆತ್ಮಹತ್ಯೆ ಪ್ರಕರಣದಲ್ಲಿ ಯುವತಿಯ ‘ಬಂಧನ’ವಾಗಿದೆ.ಆದರೆ ದೇಶದ ಕಾನೂನು ವ್ಯವಸ್ಥೆ ಈ ತಪ್ಪಿಗೆ ಏನು ‘ಶಿಕ್ಷೆ’ ನೀಡುತ್ತದೆ ಎಂಬುವುದು ಗೊತ್ತಿಲ್ಲ…!ಯಾವುದೇ ತಪ್ಪು ಮಾಡದೇ ಸಮಾಜದಲ್ಲಿ ತಲೆ ತಗ್ಗಿಸಿ ನಿಲ್ಲುವಂತಹ ದಿನಗಳು ಬಂದರೇ, ಉತ್ತಮ ಗುಣ-ನಡತೆಯನ್ನು ಹೊಂದಿರುವ ದೀಪಕ ನಂತಹ ಒಳ್ಳೆಯ ಗುಣವಂತ ಮಂದಿ  ನಾಚಿಕೆಯಿಂದ ‘ಆತ್ಮಹತ್ಯೆ’ಯಂತಹ ಕೆಟ್ಟನಿಧಾ೯ರವನ್ನು ತೆಗೆದುಕೊಳ್ಳುತ್ತಾರೆ… ಜೊತೆಗೆ ಈಗ ಸಾಮಾಜಿಕ ಜಾಲತಾಣ ಗಳು  ಉರಿಯುವ ಬೆಂಕಿಗೆ ತುಪ್ಪ ಸುರಿದ ರೀತಿಯಾಗಿದೆ…!   ಒಂದು ಹೆಣ್ಣು’ ಜನಪ್ರಿಯತೆ’ ಹೊಂದಲು ಮಾಡಿದ ತಪ್ಪಿಯಿಂದ, ಒಂದು ಕುಟುಂಬವೇ ಕಣ್ಣೀರು ಸುರಿಸುತ್ತಿದೆ… ಎಲ್ಲಾಡೆ ಈ ಪಾಳು ಜನ್ಮದ ಹೆಣ್ಣಿನ ಮೇಲೆ ‘ಶಾಪ’ ದ ಮಳೆ ಸುರಿಸುತ್ತಿದೆ…!ಆದರಿಂದ ಈ ಪ್ರಕರಣವನ್ನು ಧೀಘ೯ವಾಗಿ ಎಳೆಯುವುದು ಇಲ್ಲ..! ಬದಲಾಗಿ ಈ ಪ್ರಕರಣದ ಸರ್ವ ದುರಂತಕತೆಯನ್ನು ಎರಡು ಗೆರೆಯ ಕವಿತೆಯೊಂದಿಗೆ ಮುಗಿಸುವೆ..!ಇದು ಮಲಯಾಳಂ ಕವಿಯೊಬ್ಬರು ಬರೆದ ಕವಿತೆಯ ‘ಅನುವಾದ ‘ವಾಗಿದೆ…! ದುರಂತ..!  ‘ಸ್ತನ’  ತಾಗಿಒರ್ವನ ಸಾವು…!!?.  ಐಗೂರು ಮೋಹನ್ ದಾಸ್ ಜಿ.

ಲೈಕು.ಕಮೆಂಟುಗಳಿಗಾಗಿ ಬಲಿಯಾದ ಒಂದುಜೀವ!ವಿಶೇಷ ಲೇಖನ, ಐಗೂರು ಮೋಹನ್ ದಾಸ್ ಜಿ. Read Post »

ಇತರೆ

“ಅಲ್ಲಮ ಪ್ರಭು ವಚನ ವಿಶ್ಲೇಷಣೆ” ವಿಜಯಲಕ್ಷ್ಮಿ ಹಂಗರಗಿ

ವಚನ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಅಲ್ಲಮ ಪ್ರಭು ವಚನ ವಿಶ್ಲೇಷಣೆ” ಸತಿಯ ಕಂಡು ಬೃತಿಯಾದ ಬಸವಣ್ಣ ಸತಿಯ ಕಂಡು ಬೃತಿಯಾದ ಬಸವಣ್ಣ ಸತಿಯ ಕಂಡು ಬೃತಿಯಾದ ಬಸವಣ್ಣಬೃತಿಯಾದ ಬ್ರಹ್ಮಚಾರಿಯಾದ ಬಸವಣ್ಣಬ್ರಹ್ಮಚಾರಿಯಾಗಿ ಭವಗೆಟ್ಟನಯ್ಯ ಬಸವಣ್ಣಗೃಹೇಶ್ವರ ನಿಮ್ಮಲ್ಲಿ ಬಾಲ ಬ್ರಹ್ಮಚಾರಿಯಾಗಿ ಬಸವಣ್ಣ ಒಬ್ಬನೇ-ಅಲ್ಲಮ ಪ್ರಭುಗಳು. ಪ್ರಾಪಂಚಿಕ ಬದುಕಿನ ವಿಷಯಾದಿಗಳ, ಆಮಿಷ, ಆಸೆ ಆಕರ್ಷಣೆಗಳ ಕಂಡು ಬಸವಣ್ಣ ವೃತ್ತಿಯಾದನು. ಅವುಗಳನ್ನು ಹೊರತುಪಡಿಸಿ ಶುದ್ಧನಾದ ಆಚಾರವಂತ ಗುಣವಂತ ವೃತವನ್ನು ಹಿಡಿದನು. ಕಾಮ ಕ್ರೋಧ ಮೋಹ ಲೋಭ ಮದ ಮತ್ಸರ ಮುಂತಾದ ಅರಿ ಷಡ್ ವರ್ಗಗಳ ಬೆಂಕಿಗೆ ಸಿಲುಕದೆ ತನ್ನ ನಿಯಮ   ವೃತವನ್ನು ಆಚರಿಸಲು ಸತಿಯೇನೆಂಬ ವ್ಯಾಮೋಹದಿಂದ ದೂರವಿರಲು ಬೃತೀಯಾದ (ವೃತಿ) ಬಸವಣ್ಣ.ಬೃತಿಯಾದ ಬ್ರಹ್ಮಚಾರಿಯಾದ ಬಸವಣ್ಣವೃತ್ತಿಯಾದ ಬಸವಣ್ಣ ಬ್ರಹ್ಮಚಾರಿಯಾಗಿ ಇಂತಹ ಸಂಸಾರಿಕ ಮೋಹಕ್ಕೆ ಸಿಲುಕದೆ ಭವ ಭವದಲ್ಲಿ ಬೆಂದು ಬಳಲಿ ಮುಕ್ತಿ ಕಾಣದೆ ಪರದಾಡುವದಕ್ಕಿಂತ,ಪ್ರಾಪಂಚಿಕ ಬದುಕಿನಲ್ಲಿ ಪಾರಮಾರ್ಥಿಕ ದೀಕ್ಷೆ ಪಡೆದ ಬಸವಣ್ಣ ಜ್ಞಾನಮಾರ್ಗದಲ್ಲಿ ನಡೆದನು. ಬ್ರಹ್ಮಚಾರಿ ಎನ್ನುವುದು ಕೇವಲ ಸನ್ಯಾಸತ್ವಕ್ಕೆ ಸೀಮಿತ ಪದವಲ್ಲ. ಸೃಷ್ಟಿ ಸ್ಥಿತಿ ಲಯದ ಜೊತೆಗೆ ಕಾಯ ಮನಸ್ಸು ಆತ್ಮಗಳ ನಿರಂತರ ಮಿಲನಗಳ ಶೋಧನೆಯ ಬ್ರಹ್ಮಚಾರಿತನ. ಹಾಗೆ ವ್ರತವ ಹಿಡಿದು ಬ್ರಹ್ಮಚಾರಿಯಾದ ಬಸವಣ್ಣ.ಬ್ರಹ್ಮಚಾರಿಯಾಗಿ ಭವಗೆಟ್ಟಣಯ್ಯಾ ಬಸವಣ್ಣಅಪೂರ್ವ ಬ್ರಹ್ಮಚಾರಿತನ ಸ್ವೀಕರಿಸಿದ ಬಸವಣ್ಣನವರು ಭವದಿಂದ ಮುಕ್ತರಾದರು. ಭವದಲ್ಲಿ ಸಿಲುಕದೆ ಭತ್ತನಾದರು ಬಸವಣ್ಣನು. ತನ್ನ ಭವದ ಪಾಶ ಕಳೆದುಕೊಂಡು ಭಕ್ತಿ ಮಾರ್ಗದಲ್ಲಿ ನಿತ್ಯಮುಕ್ತರಾದರು ಬಸವಣ್ಣ.ಗುಹೇಶ್ವರ ನಿಮ್ಮಲ್ಲಿ ಬಾಲಬ್ರಹ್ಮಚಾರಿ ಯಾದ ಬಸವಣ್ಣ ಒಬ್ಬನೇಬಸವಣ್ಣನವರು ಮದುವೆಯಾಗಿ ಮಂತ್ರಿ ಪದವಿ ಪಡೆದು ಐಶ್ವರ್ಯ ಅಂತಸ್ತು ಇದ್ದರೂ ಅವುಗಳನ್ನು ತ್ಯಜಿಸಿ ಭೃತ್ಯಚಾರದ ಭಕ್ತ ಪದವಿಯಿಂದ ನಿರ್ಲಪ್ತರಾದರು.ಇಂತಹ ಘನ ಮಹಿಮರು ಗುಹೇಶ್ವರ ಲಿಂಗದಲ್ಲಿ ಬಾಲ ಬ್ರಹ್ಮಚಾರಿಯಾಗಿ ಬಸವಣ್ಣ ಒಬ್ಬನೇ. ಹುಟ್ಟಿನಿಂದ ವಿರಕ್ತ ಭಾವಸಮತೆ ಧ್ಯಾನ ಮುಕ್ತಿಯತ್ತ ಆಸಕ್ತನಾದವರು ಬಸವಣ್ಣನವರು ಬಾಲ ಬ್ರಹ್ಮಚಾರಿ ಹುಟ್ಟು ಬ್ರಹ್ಮಚಾರಿ ಆಗಿ ಬದುಕಿದವರು. ವ್ಯವಸ್ಥೆಯ ಎಲ್ಲ ಬಂಧನಗಳನ್ನು ಸಂಕೋಲೆಗಳನ್ನು ಕಿತ್ತುಹಾಕಿ, ಆಡಂಬರಗಳನ್ನು ಧಿಕ್ಕರಿಸಿ ಮುಕ್ತ ಸಾರ್ವಕಾಲಿಕ ಸಮಾನತೆ ಸಮಾಜ ಕಟ್ಟಲು ಬಾಲ್ಯದಿಂದಲೇ ಸಂಕಲ್ಪ ಮಾಡಿದವರು ಸೃಷ್ಟಿಯಲ್ಲಿ ಬಸ್ವಣ್ಣನೊಬ್ಬರೇ ಎಂದು ಅಲ್ಲಮಪ್ರಭುಗಳು ಬಸವಣ್ಣನವರ ದಿವ್ಯ ವ್ಯಕ್ತಿತ್ವದ ಗುಣ ಗಾನ ಮಾಡುತ್ತಾರೆ. ವಿಜಯಲಕ್ಷ್ಮಿ ಹಂಗರಗಿ

“ಅಲ್ಲಮ ಪ್ರಭು ವಚನ ವಿಶ್ಲೇಷಣೆ” ವಿಜಯಲಕ್ಷ್ಮಿ ಹಂಗರಗಿ Read Post »

ಇತರೆ

“ಹಲವು ಸಿನಿಮಾಗಳ ಕಥಾಸಂಗಮ ಬಿಗ್ ಬಾಸ್ ಗಿಲ್ಲಿನಟ” ಗೊರೂರು ಅನಂತರಾಜು

ಮಾಧ್ಯಮ ಸಂಗಾತಿ ಗೊರೂರು ಅನಂತರಾಜು “ಹಲವು ಸಿನಿಮಾಗಳ ಕಥಾಸಂಗಮ ಬಿಗ್ ಬಾಸ್ ಗಿಲ್ಲಿನಟ” ಗಿಲ್ಲಿ ನಟ ಗೆದ್ದಿದ್ದಾರೆ. ದಡದಪುರದ ಹಳ್ಳಿಯ ರೈತಾಪಿ ಕುಟುಂಬದ ಹುಡುಗ ಗೆಲುವಿನ ದಡ ಸೇರಿದ್ದಾರೆ. ಗಿಲ್ಲಿ ಗೆಲುವನ್ನು ಹಾಗೆ ಮೆಲುಕು ಹಾಕುತ್ತಾ ಹೋದೆ. ಹಲವು ಸಿನಿಮಾ ದೃಶ್ಯಗಳು ನೆನಪಾದವು. ಸಿನಿಮಾ ಕಥೆಗೂ ಬಾಸ್ ಬಾಸ್ ಶೋಗೂ ವ್ಯತ್ಯಾಸ ಇದೆ. ಅಂತೆಯೇ ಸಾಮ್ಯತೆಯೂ ಇದೆ. ಆದರೂ ಟಿವಿ ವೀಕ್ಷಕರಾದ ನಮಗೆ ಎರಡೂ ಒಂದೇ. ಸಿನಿಮಾದಲ್ಲಿ ಕಟ್ ಅಂಡ್ ಆಕ್ಷನ್ ಇರುತ್ತದೆ. ಇಲ್ಲಿ ಇರುವುದಿಲ್ಲ ಅಷ್ಟೇ. ನಮ್ಮ ಬಾಲ್ಯ ಜೀವನದಲ್ಲಿ ಟಿವಿ ಇರಲಿಲ್ಲ. ಆಗೆಲ್ಲಾ ನಮಗೆ ಮನರಂಜನೆ ನೀಡುತ್ತಿದ್ದಿದ್ದು ಸಿನಿಮಾಗಳೇ. ಗಿಲ್ಲಿಯಂತೆ ಸಿನಿಮಾ ನೋಡುವ ಚಟಕ್ಕೆ ಬಿದ್ದು ಓದಿನಲ್ಲಿ ಹಿಂದೆ ಬಿದ್ದು ಜಸ್ಟ್ ಪಾಸ್ ಸ್ಟೂಡೆಂಟ್‌ಗಳು ನಾವು. ಸಿನಿಮಾವೊಂದರಲ್ಲಿ ಪ್ರೇಮಕತೆಯನ್ನು ಕೇಂದ್ರವಾಗಿಸಿ ಪೋಷಕ ಪಾತ್ರಗಳಿಂದ ಸಾಂಸರಿಕ ಕಥೆಯನ್ನು ಹೆಣೆಯಲಾಗುತ್ತ ಬಂದಿರುವುದನ್ನು ಕಾಣಬಹುದು. ಒಬ್ಬ ಹೀರೋನನ್ನು ಸೃಷ್ಟಿಸುವವಳು ಹೀರೋಯಿನ್. ಪ್ರೇಮಕಾವ್ಯದ ಹಾಡುಗಳು, ಮರ ಸುತ್ತವ ಪ್ರೇಮಿಗಳು, ಇವರ ಹಾಡು ನೃತ್ಯದ ದೃಶ್ಯಗಳಿಗೆ ಹಿನ್ನಲೆಯಲ್ಲಿ ಪ್ರಕೃತಿ ಸಿರಿಯ ಸೊಬಗನ್ನು ಸೆರೆ ಹಿಡಿಯುವುದು ಸಿನಿಮಾದ ಒಂದು ಭಾಗ. ಇಲ್ಲಿ ನಾವು ಪುಟ್ಟಣ ಕಣಗಾಲ್‌ರನ್ನು ನೆನೆಯಲೇ ಬೇಕು. ಒಳ್ಳೆಯ ಹೀರೋ ಎನಿಸಿಕೊಳ್ಳಬೇಕಿದ್ದರೆ ಅವನೆದರು ವಿಲನ್ ಇಲ್ಲವಾದರೇ ಹೀರೋ ಜೀರೋ ಹೌದಷ್ಟೇ. ಇದಷ್ಟೇ ಆದರೆ ಸಿನಿಮಾ ರಂಜಿಸುವುದೇ..? ಇಲ್ಲಾ ಅಲ್ಲೊಬ್ಬ ಗಿಲ್ಲಿ ನಟನಂತಹ ಹಾಸ್ಯ ನಟ ಇರಬೇಕು. ಈ ಫಾರ್ಮುಲಾಗಳಲ್ಲೇ ಸಿನಿಮಾ ರೀಲು ಸುತ್ತಿಕೊಂಡು ಬಂದಿವೆ. ಇಂತಹ ಫಾರ್ಮುಲಾಗಳು ಬಿಗ್ ಬಾಸ್‌ನಲ್ಲಿ ಗೋಚರಿಸುತ್ತವೆ. ಇಲ್ಲಿಯ ಲವ್ ತರಹದ ಸ್ಟೋರಿ ರೆಡಿಮೇಡ್ ಅಗಿರಲಿಲ್ಲಾ. ಆದರೂ ಜನರಿಗೆ ಇಷ್ಟವಾಯ್ತು. ರಾಜಕುಮಾರ್ ಭಾರತಿ ಅಭಿನಯದ ಬಂಗಾರದ ಮನುಷ್ಯ ಭಲೆ ಜೋಡಿ ಸಿನಿಮಾ ನೋಡಿದಂತಾಯಿತು. ಸಂಪತ್ತಿಗೆ ಸವಾಲ್ ಸಿನಿಮಾದಲ್ಲಿ ಜಗಳಗಂಟಿ ಮಂಜುಳ ಮತ್ತು ರಾಜಕುಮಾರ್ ನಟನೆಯನ್ನು ನೆನಪಿಸಿದ್ದು ಗಿಲ್ಲಿನಟ ಅಶ್ವಿನಿಗೌಡರ ಜಗಳದ ಜುಗಲ್‌ಬಂದಿ. ಗಿಲ್ಲಿ ರಘು ಜೋಡಿ ಸಾಧು ಕೋಕಿಲ ದೊಡ್ಡಣ್ಣರ ಹಾಸ್ಯ ಜೋಡಿ ಎನಿಸಿತು. ಇನ್ನೂ ಮಕ್ಕಳಿಗೆ ಟಾಮ್ ಅಂಡ್ ಜರ‍್ರಿ ಕಾರ್ಟೂನ್ ಫಿಲಂ ನೋಡಿದಷ್ಟೇ ಖುಷಿ. ಗಿಲ್ಲಿ ಎಂಬ ಎರಡಕ್ಷರದ ಹೆಸರು ಮಕ್ಕಳ ನಾಲಿಗೆಯಲ್ಲಿ ನಲಿಯಿತು. ರಕ್ಷಿತಾಶೆಟ್ಟಿ ಗಿಲ್ಲಿ ನಡುವಿನ ಬಾಂಧವ್ಯ ಸಿನಿಮಾ ಕಥೆಯ ಅಣ್ಣ ತಂಗಿಯರಂತೆ ಗೋಚರಿಸಿತು. ರಾಜಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಸಿನಿಮಾದಲ್ಲಿ ಜಡೆಯಂತೆ ಕೂದಲು ಬಿಟ್ಟ ಮುತ್ತಣ್ಣನನ್ನು ಊರು ಬಿಟ್ಟು ಓಡಿಸಲಾಗುತ್ತಿದೆ. ಮುತ್ತಣ್ಣ ಬೆಂಗಳೂರಿಗೆ ಬಂದು ಮೇಯರ್ ಆದಂತೆ ಗಿಲ್ಲಿ ವಿನರ್ ಆಗಿದ್ದಾರೆ. ಅಲ್ಲಿ ಭಾರತಿ ಮುತ್ತಣ್ಣನ ಜಡೆ ಕಟ್ ಮಾಡಿದರೆ ಇಲ್ಲಿ ಕಾವ್ಯ ಶೈವ ಗಿಲ್ಲಿಗೆ ತಲೆ ಬಾಚಿಕೊಳ್ಳಲು ಬಾಚಣಿಕೆ ಪ್ರಸೆಂಟ್ ಮಾಡುತ್ತಾರೆ. ಆದರೂ ತಲೆ ಬಾಚಿಕೊಳ್ಳದೇ ಇದ್ದಾಗಲೇ ಗಿಲ್ಲಿ ಚೆನ್ನಾಗಿ ಕಾಣಿಸುತ್ತಿದ್ದರು ಎಂದಿತು ಒಂದು ಹುಡುಗಿ. ಆಗಿನ ವಿಲನ್ ನಾಗಪ್ಪನಂತೆ ವೀಕ್ಷಕರಿಗೆ ಗೋಚರಿಸಿದ್ದು ಧ್ರುವಂತ್. ಬಂಗಾರದ ಪಂಜರ ಸಿನಿಮಾದಲ್ಲಿ ಕುರಿ ಕಾಡು ಹಳ್ಳಿಯ ಬದುಕಿನೊಂದಿಗೆ ಹೊಂದಿಕೊಂಡ ಪಾತ್ರ ನಗರಕ್ಕೆ ಬಂದು ಎಷ್ಟೇ ಶ್ರೀಮಂತಿಕೆ ಐಷರಾಮಿ ಬದುಕು ಇದ್ದರೂ ಹೊಂದಿಕೊಳ್ಳಲಾಗದೇ ಹಳ್ಳಿಯ ಬದುಕೇ ನನಗಿಷ್ಟ ಎಂದು ಒದ್ದಾಡುತ್ತದೆ. ಬಂಗಾರದ ಪಂಜರದಲ್ಲಿ ಕೂಡಿ ಹಾಕಿದಂತೆ ಬಿಗ್ ಬಾಸ್ ಮನೆಯಲ್ಲೂ ಕೂಡಿ ಹಾಕಿ ಒಂದಿಷ್ಟು ಟಾಸ್ಕ್ ನೀಡಿ ಉಳಿದಂತೆ ಅಲ್ಲಿ ನಡೆಯುವ ಗಲಾಟೆ ಗದ್ದಲ, ವಿರಸ ಸರಸ ಸಲ್ಲಾಪ ದೃಶ್ಯಗಳನ್ನೇ ಹೆಕ್ಕಿ ತೆಗೆದು ತೋರಿಸಲಾಗುತ್ತದೆ. ನಾವಾದರೂ ಅಷ್ಟೇ ಒಂದು ಒಳ್ಳೆಯ ಭಾಷಣ ಇದೆ ಕೇಳಲು ಬನ್ನಿ ಎಂದರೆ ಬರುವರೇ ? ಅದೇ ಎಲ್ಲಾದರೂ ಜಗಳ ನಡೆಯುತ್ತಿರಲಿ ಅದನ್ನು ನಿಂತು ನೋಡುವವರೇ ಹೆಚ್ಚು. ಜಗಳ ಮನುಷ್ಯನನ್ನು ಕುತೂಹಲದಿಂದ ಆಕರ್ಷಿಸುವುದು ಇದಕ್ಕೆ ಕಾರಣ. ಹಳ್ಳಿಯ ಅರಳಿಕಟ್ಟೆಯಲ್ಲಿ ಊರಿನ ಜಗಳ ವಿಷಯ ಚರ್ಚೆಗೆ ಬರುವುದು ಸರ್ವೆ ಸಾಮಾನ್ಯ. ಸೀರಿಯಸ್ ಆದ ಜಗಳದ ವಿಷಯವನ್ನು ವಿಡಂಬಿಸಿ ಹೇಳುವುದು ಒಂದು ಕಲೆ. ಅದು ಸಮಯಪ್ರಜ್ಞೆ. ತಮಾಷೆಯಾಗಿ ಮಾತನಾಡುವ ವ್ಯಕ್ತಿಯ ಸುತ್ತಾ ಜನ ಸೇರಿ ನಗುವುದು ಸಹಜವೇ. ಮನೆ ಜಗುಲಿಯಲ್ಲಿ ಹೆಂಗಸರು ಅವರಿವರ ಮನೆ ವಿಷಯ ಮಾತನಾಡಿಕೊಳ್ಳುತ್ತಾ ಅವರೆಕಾಯಿ ಸುಲಿಯುತ್ತಿರುವುದನ್ನು ನೋಡುವುದಿಲ್ಲವೇ? ಹಿಂದೆ ನಾನೊಂದು ಹನಿಗವನ ಬರೆದಿದ್ದೆ.ನಮ್ಮೂರಿನ ಕೆಲ ಹೆಂಗಸರುಕಟು ವಿಮರ್ಶಕರುದಿನ ಚಾವಡಿಯಲ್ಲಿನೆರೆಮನೆ ಕತೆಯನ್ನುಕಟುವಾಗಿ ವಿಮರ್ಶಿಸುತ್ತಿರುತ್ತಾರೆಹಾಸ್ಯವಾಗಿ ಮಾತನಾಡುವುದು ಒಂದು ಕಲೆಗಾರಿಕೆ. ಇನ್ನೊಬ್ಬರ ನಡೆನುಡಿಯನ್ನು ಅನುಕರಿಸಿ ಅಣಕಿಸಿ ಮಿಮಿಕ್ರಿ ಮಾಡುವುದು ನೋಡಿದ್ದೇವೆ. ಅದು ಒಂದು ಕಲೆ. ಹಾಸ್ಯದ ಒಂದು ಪ್ರಕಾರ. ಇದು ಗಿಲ್ಲಿಯಲ್ಲಿದ್ದ ಒಂದು ಗುಣ ಲಕ್ಷಣ. ಅವರ ಮುಖವಾಡವಿಲ್ಲದ ಗ್ರಾಮೀಣ ಭಾಷೆ ನಡೆನುಡಿ ಗ್ರಾಮೀಣ ಜನರಿಗೆ ಇಷ್ಟವಾಯಿತು. ಪ್ರಾರಂಭದಲ್ಲಿ ನಾನು ಬಿಗ್ ಬಾಸ್ ನೋಡದೇ ಮಲಗಿಬಿಡುತ್ತದೆ. ಒಂಬತ್ತೂವರೆಗೆ ಮಲಗುವುದು ನನ್ನ ದಿನಚರಿ. ಐದಾರು ವಾರಗಳ ನಂತರ ನಿಧಾನವಾಗಿ ನೋಡುತ್ತಾ ಕಡೆಕಡೆಗೆ ಪೂರ್ತಿ ನೋಡಿಯೇ ಮಲಗುತ್ತಿದ್ದೆ. ಗಿಲ್ಲಿಯ ಸುತ್ತಲೇ ಕ್ಯಾಮರಗಳು ಗಿರಕಿ ಹೊಡೆಯಲು ಗಿಲ್ಲಿನಟನ ಹಾಸ್ಯಪ್ರಜ್ಞೆಗೆ ಆಕರ್ಷಿತನಾದೆ. ಸಾಮಾಜಿಕ ಜಾಲ ತಾಣಗಳಲ್ಲಿ ಗಿಲ್ಲಿ ಗೆಲ್ಲುವ ಮಾತು ಜೋರಾಗಿ ಅವರ ಹಿಂದಿನ ಕಾಮಿಡಿ ಶೋ ಶಾರ್ಟ್ ಫಿಲಂಗಳನ್ನು ನೋಡಿದೆ. ಎಲ್ಲೋ ಒಂದು ಕಡೆ ನರಸಿಂಹರಾಜು, ಮಿಸ್ಟರ್ ಬೀನ್, ಚಾರ್ಲಿ ಚಾಪ್ಲಿನ್, ಸಾಧು ಕೋಕಿಲರ ಹಾಸ್ಯಾಭಿನಯ ಸ್ಮರಿಸಿ ಅವೆಲ್ಲವೂ ಗಿಲ್ಲಿ ನಟನೆಯಲ್ಲಿ ಗೋಚರಿಸಿದವು. ಒಂದು ಕಾಲದಲ್ಲಿ ನಮ್ಮ ಹಳ್ಳಿಗೆ ತೊಗಲುಗೊಂಬೆ ಮೇಳದವರು ಬಂದು ಮನರಂಜನೆ ನೀಡುತ್ತಿದ್ದರು. ಊರಲ್ಲಿ ಜಾತ್ರೆ ಹಬ್ಬಕ್ಕೆ ಹುಡುಗರು ನಾಟಕ ಕಲಿಯುತ್ತಿದ್ದರು. ಕಲಿಯುವುದಕ್ಕೆ ಮೂರು ತಿಂಗಳು ಊರಲ್ಲಿ ಮನರಂಜನೆ. ನಂತರ ಸಿದ್ಧತೆ ಪ್ರದರ್ಶನದ ಸಂತೋಷದ ಕ್ಷಣಗಳನ್ನು ವರ್ಷವಿಡಿ ನೆನಪಿಸಿಕೊಳ್ಳುತ್ತೇವೆ. ನಾಟಕ ಅಂದು ದೊಡ್ಡ ಮನರಂಜನೆ. ನಾಟಕ ರಂಗದಿಂದಲೇ ಬಂದ ಕಲಾವಿದರು ಸಿನಿಮಾ ರಂಗದಲ್ಲಿ ಪ್ರಸಿದ್ಧರಾದರು. ಆದರೆ ಸಿನಿಮಾವೇ ನಾಟಕಕ್ಕೊ ದೊಡ್ಡ ತೊಡಕಾಯಿತು. ಟಿವಿ ಮನೆಗೆ ಬಂತು. ಬಿಟ್ಟಿ ಸಿನಿಮಾ ಮನೆಯಲ್ಲೇ ನೋಡುವಾಗ ದುಡ್ಡು ಕೊಟ್ಟು ನೋಡಲು ಜನ ಥಿಯೇಟರ್‌ಗೆ ಬರುತ್ತಿಲ್ಲ. ನ್ಯೂಸ್ ಚಾನಲ್‌ಗಳು ಮಹಿಳೆಯರಿಗೆ ಪ್ರಿಯವಾಗದೇ ಧಾರಾವಾಹಿಗೆ ಮೊರೆಹೋದರು. ಧಾರಾವಾಹಿ ಕಲಾವಿದರು ಬಿಗ್‌ಬಾಸ್‌ಗೆ ಬಂದರು. ಇವರಿಗೆ ಪ್ರತಿಸ್ಫರ್ಧಿಗಳಾಗಿ ಮಾತಿನ ಮಲ್ಲರು, ಸಾಮಾಜಿಕ ಜಾಲತಾಣದ ಜಾಣರು, ಗಾಯಕರು ಮಿಕ್ಸಿಂಗ್ ಆದರು. ಉಪ್ಪು, ಕಾರ, ಹುಳಿ, ಬೆಳ್ಳುಳ್ಳಿ ಬೆರೆತು ರುಚಿಯಾದ ಊಟ ಅಡಿಗೆ ಮನೆ ಬೆಳಕಿಗೆ ಬಂತು. ನಲ್ಲಿ ಮೂಳೆ ತಿಂದು ಗಿಲ್ಲಿ ಗೆದ್ದರು. ಜಾಣ ವಿದ್ಯಾರ್ಥಿಯಂತೆ ಯಾರ ತಂಟೆಗೂ ಹೋಗದೆ ಟಾಸ್ಕ್ನಲ್ಲಿ ಫಸ್ಟ್ ಕ್ಲಾಸ್ ಬಂದರೂ ಧನುಷ್ ವೀಕ್ಷಕರ ಹೃದಯ ಗೆಲ್ಲಲು ವಿಫಲರಾದರು. ಗಿಲ್ಲಿ ಗೆಲುವಿಗೆ ಕಾವ್ಯ ಶೈವ, ಅಶ್ವಿನಿಗೌಡ, ರಘು, ರಕ್ಷಿತ ಶೆಟ್ಟ ಮತ್ತು ರಜತ್ ಅವರ ಪಾತ್ರ ಅದು ನೆಗಟಿವ್ ಆಗಿರಲಿ ಪಾಸಿಟಿವ್ ಆಗಿರಲಿ ಪರೋಕ್ಷವಾಗಿ ನೆರವಾಗಿದೆ. ಅದು ಒಂದು ಧಾರವಾಹಿಯಂತೆ, ಸಿನಿಮಾದಂತೆ ಜನರಿಗೆ ಮನರಂಜನೆ ನೀಡಿದೆ. ಮೊದಲೇ ಪರೀಕ್ಷೆಗೆ ಸಿದ್ಧವಾಗಿ ಬಂದಿದ್ದ ಗಿಲ್ಲಿನಟ ಸಂದರ್ಭ ಸನ್ನಿವೇಶಗಳನ್ನು ತಮ್ಮ ಅನುಕೂಲಕ್ಕೆ ಸೂಕ್ತವಾಗಿ ಬಳಸಿಕೊಂಡು ಹಾಸ್ಯ ವಿಡಂಬನೆ ಮಾತಿನಿಂದಲೇ ಜನಮನ ಗೆದ್ದರು. ಗೊರೂರು ಅನಂತರಾಜು,

“ಹಲವು ಸಿನಿಮಾಗಳ ಕಥಾಸಂಗಮ ಬಿಗ್ ಬಾಸ್ ಗಿಲ್ಲಿನಟ” ಗೊರೂರು ಅನಂತರಾಜು Read Post »

ಇತರೆ

“ಕಿಲಾಪತ್ ಸೇನಾನಿಗರು.1921” ಹಮೀದ್ ಹಸನ್ ಮಾಡೂರು ಅವರ ಕವಿತೆ

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಕಿಲಾಪತ್ ಸೇನಾನಿಗರು.1921” ಸ್ವಾತಂತ್ರ್ಯದ….ವೀರಾಧಿ ವೀರರಿವರು,ಮಲೆಬಾರ ಮಣ್ಣಿನ ಧೀರರು,ಕಿಲಫತ್ ಕದನದ ಯೋಧರಿವರು,ಕೇರಳದ ಮಾಪಿಲ ಕಾಕರು,ಮಲಬಾರಿನ ಕೆಚ್ಚೆದೆಯ ಸೇನಾನಿಗರು,!    ಅಂದು ಆ ನಮ್ಮವರು,   ಹಿರಿಯರು ಕಿರಿಯರೆಲ್ಲರು,   ಎದೆಯೊಡ್ಡಿ ಹೋರಾಡಿದವರು,   ಜನ್ಮಭೂಮಿಗೆ ಸ್ವಾತಂತ್ರ್ಯ ತಂದವರು,   ಕಿಚ್ಚಿನ ಮಾಪಿನ ಕಾಕರು,   ಮಲಬಾರಿನ ಕೆಚ್ಚೆದೆಯ ಸೇನಾನಿಗರು,!   ಬಿಳಿಯರ ಬಿಲಗಳ…ಮುತ್ತಿಟ್ಟು ಘರ್ಜಿಸಿದವರು,ಸ್ವಾತಂತ್ರ್ಯಕ್ಕಾಗಿ ಬಲಿಯಾದವರು,ಬಂದೂಕಿಗೆ ಎದೆಕೊಟ್ಟ ದೇಶ ಭಕ್ತರುಭಾರತದ ಮಾಪಿಲ ಸುಪುತ್ರರು,ಮಲಬಾರಿನ ಕೆಚ್ಚೆದೆಯ ಸೇನಾನಿಗರು,!    ಸ್ವಾತಂತ್ರ್ಯದ ಕಿಚ್ಚಲಿ…   ಸೆಣದಾಡಿ ಗೆದ್ದ ಕಿಲಾಪತರು,   ಸ್ವಾತಂತ್ರ್ಯ ಭಾರತದ ಕನಸಿಗರು,   1921ರ ಧೀರಾ ಕಿಲಾಪತ್ ಸೇನಾನಿಗರು,   ಕೇರಳ ಮಣ್ಣಿನ ಮಾಣಿಕ್ಯರು   ಮಲಬಾರಿನ ಕೆಚ್ಚೆದೆಯ ಸೇನಾನಿಗರು,!   ಸ್ವಾತಂತ್ರ್ಯದ ಧ್ಯೇಯಕೆ…ಒಕ್ಕೊರಲ ಕೂಗಿಗೆ ಬ್ರಿಟಿಷರು,ಸೋಲ ಉಣಿಸಿ, ಬೆಚ್ಚಿಸಿ ಬಿಟ್ಟವರು,ಬ್ರಿಟೀಷರ ಕೋವಿಗೆ ಜೀವ ತೆತ್ತವರುಎದೆಯೊಡ್ಡಿದ ಬಲಿದಾನಿಗಳು,ಮಲಬಾರಿನ ಕೆಚ್ಚೆದೆಯ ಸೇನಾನಿಗರು.! ಹಮೀದ್ ಹಸನ್ ಮಾಡೂರು.

“ಕಿಲಾಪತ್ ಸೇನಾನಿಗರು.1921” ಹಮೀದ್ ಹಸನ್ ಮಾಡೂರು ಅವರ ಕವಿತೆ Read Post »

ಇತರೆ

‌”ಸ್ತ್ರೀ ಮತ್ತು ಬೇಂದ್ರೆ ಸಾಹಿತ್ಯ” ವಿಶೇಷ ಲೇಖನ, ಡಾ.ಯಲ್ಲಮ್ಮ ಕೆ

ಸಾಹಿತ್ಯ ಸಂಗಾತಿ ಡಾ.ಯಲ್ಲಮ್ಮ ಕೆ ‌”ಸ್ತ್ರೀ ಮತ್ತು ಬೇಂದ್ರೆ ಸಾಹಿತ್ಯ” ನಾನು ಮತ್ತೆ ಮತ್ತೆ ಏನನ್ನಾದರೂ ಬರೆಯಲೇಬೇಕು ಎಂದುಕೊಂಡಾಗಲೆಲ್ಲ.., ಬರಿಲಿಕ್ಕೇನಿದೆ? ಎಂಬ ಪ್ರಶ್ನೆ ಧುತ್ತೆಂದು ಕಣ್ಮುಂದೆ ಬಂದು ನಿಲ್ಲುತ್ತದೆ! ಈಗಾಗಲೇ ಸಾಕಷ್ಟು ಜನ ಬರೆದು-ಹೊಟ್ಟೆ ಹೊರೆದು ಹಾಕಿದ್ದು ಎದುರಿಗೆ ಗುಡ್ಡೆಬಿದ್ದಿರುವಾಗ ನಾನಿನ್ನೂ ಓದೋದು ಬಾಳಷ್ಟಿದೆ ಅನಿಸುವ ಹೊತ್ತಲೇ ನನ್ನ ಆತ್ಮೀಯರಲ್ಲೋರ್ವರು ಯಾವುದೋ ಸಮಯ-ಸಂದರ್ಭದ ನಿಮ್ಮಿತ್ತ ಲೇಖನವೊಂದನ್ನು ಬರೆದುನೀಡುವಂತೆಯೂ, ಹಾಗೆನೇ ವಿಷಯವಸ್ತುವೊಂದನ್ನು ಸೂಚಿಸಿದರು ಕೂಡ; ಉದಾ: ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ ಎಂದಿಟ್ಟುಕೊಳ್ಳೋಣ. ಇಲ್ಲಿ ಬೇಂದ್ರೆ ಎಂಬ ಹೆಸರನ್ನು ತೆಗೆದು ಕನ್ನಡದ ಖ್ಯಾತನಾಮ ಯಾವೊಬ್ಬ ಕವಿ-ಸಾಹಿತಿಯ ಹೆಸರು ಸೇರಿಸಿದರೂ ಸರಿಯೆ! ಪತ್ರಿಕಾ ವರದಿ, ದತ್ತಕಾರ‍್ಯ ರೂಪದ, ಅಕಾಡೆಮಿಕ್ ರೀತೀಯಲ್ಲಿ ಸಂಶೋಧನಾ ಲೇಖನಗಳನ್ನು ಯಾರೂ ಕೂಡ ಬರೆಯಬಹುದೆಂದು ಯೋಚಿಸುತ್ತಿರುವಾಗಲೇ.., ಒಂದು ಸಾಮಾನ್ಯ ಸರಳ ಸೂತ್ರವೆಂಬಂತೆ – ತಾಯಿ, ಪ್ರೇಯಸಿ, ಗೃಹಿಣಿ, ಮೃದು ಸ್ವಭಾವ, ಮಮತೆ ಮತ್ತು ವಾತ್ಸಲ್ಯದ ಪ್ರತಿರೂಪದ, ಗುಣವತಿ, ಸಹನಶೀಲೆ, ಕ್ಷಮಯಾ ಧರಿತ್ರಿ, ದೈವೀಶಕ್ತಿರೂಪಿಣಿ ಎಂಬ ಸ್ತ್ರೀರೂಪಗಳು ಎಲ್ಲ ಕಾಲ ಮತ್ತು ಕವಿ-ಸಾಹಿತ್ಯದಲ್ಲೂ ಕಂಡುಬರುವಂತಹ ಗಮನೀಯ ಅಂಶಗಳು ಎಂದೆನ್ನಬಹುದೇ? ಇಲ್ಲವೇ ಸ್ತ್ರೀ ವಾಸ್ತವ ಬದುಕಿನ ಅನಾವರಣ-ಚಿತ್ರಣವೆಂದೆನ್ನಬಹದೇ?ಚಾರ್ಲ್ಸ್ ಡಾರ್ವಿನ್‌ನ ಸಿದ್ಧಾಂತದನ್ವಯ ಆದಿಮಾನವನಿಂದ್ಹಿಡಿದು ಆಧುನಿಕ ಮತ್ತು ಆಧುನಿಕೋತ್ತರ ಮಾನವನ ಜೀವವಿಕಸನದ ಹಾದಿಯನ್ನೊಮ್ಮೆ ಸಿಂಹಾವಲೋಕನ ಕ್ರಮದಿ ಗ್ರಹಿಸಿದಾಗ ಮಾತು ಮತ್ತು ಬುದ್ಧಿಬಲದ ದೆಸೆಯಿಂದ ಪ್ರಾಣಿಪ್ರಪಂಚದಿಂದ ಭಿನ್ನವೆನಿಸಿಕೊಂಡು ಮುನ್ನಡೆಯ ಹಾದಿಯಲ್ಲಿ ಜೈವಿಕ ಆಧಾರದಿ ಗಂಡು-ಹೆಣ್ಣೆಂಬ ಭೇದ, ಬಲಿಷ್ಠರು-ಅಶಕ್ತರು ಎಂಬ ವರ್ಗ ಸಂಘರ್ಷದಿ ಮೇಲೂ-ಕೆಳಗೂ, ಕೆಳಗೂ-ಮೇಲಾಗಿ ಸಾಗುತ್ತಲೇ ಸಂಘಜೀವಿ ಮನುಷ್ಯ ಸುತ್ತಣ ತನ್ನದೇ ಆದ ಗುಂಪು ಅಥವಾ ಸಮುದಾಯ ಅದಕ್ಕೊಂದು ಆಚಾರ-ವಿಚಾರ, ರೀತಿ-ನೀತಿ-ನಿಯಮಗಳೆಂಬ [ವಿವಾಹ, ಕುಟುಂಬ, ಜಾತಿ, ಮತ, ಧರ್ಮ] ಸಾಮಾಜಿಕ ಚೌಕಟ್ಟನ್ನು ನಿರ್ಮಿಸಿಕೊಂಡ; ಈ ಚೌಕಟ್ಟಿನೊಳಗಡೆ ಸ್ತ್ರೀ ತನಗೊದಗಿದ ಪಾತ್ರಗಳನ್ನು ಅತ್ಯಂತ ಮನೋಜ್ಞವಾಗಿ ಅನುಭವಿಸುತ್ತ.., ಅಭಿನಯಿಸುತ್ತ ತನ್ನ ಬದುಕಿನ ಪಾಡನ್ನೇ ಹಾಡನ್ನಾಗಿಸಿ ಹಾಡುತ್ತ ಹೆಜ್ಜೆಯ ಹಿಂದೆ ಹೆಜ್ಜೆಯ ಗೆಜ್ಜೆನಾದವಗೈಯುತ ಸಾಗುತ್ತಲೇ ಗಂಡಿನ ಅವಜ್ಞೆಗೆ ಗುರಿಯಾದಳೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.ಈ ಅವಜ್ಞೆಯ ದೆಸೆಯಿಂದಾಗಿಯೇ ಸ್ತ್ರೀ ಮನುಕುಲ-ವಂಶೋದ್ಧಾರದ ತಂತ್ರವಾಗಿಯೂ, ಮಕ್ಕಳನ್ನು ಹೆರುವ ಯಂತ್ರವಾಗಿಯೂ, ಬೋಗ-ಲಾಲಸೆಯ ವಸ್ತುವಾಗಿಯೂ, ಬಿಕರಿಯ ಸರಕಾಗಿಯೂ; ಬಾಲ್ಯ, ಯವ್ವೌನ ಮತ್ತು ಮುಪ್ಪನ್ನು ಕ್ರಮವಾಗಿ ತಂದೆ-ಗಂಡ ಮತ್ತು ಮಕ್ಕಳ ಸಂರಕ್ಷಣೆಯಲ್ಲಿಯೇ ಬಾಳಿ ಬದುಕಬೇಕಾದ ದುಸ್ಥಿತಿಯನ್ನು ತಲುಪಿದ ಸಂದರ್ಭ – ವಚನ ಮತ್ತು ದಾಸ ಸಾಹಿತ್ಯದ ಜ್ಞಾನಪ್ರಕಾಶದಿ ಅಂದಕಾರವ ಕಳೆದು ಬೆಳಕಿನ ಯುಗಾದಿಯೆಡೆಗೆ ಪಯಣಿಸಿ.., ನವ್ಯ, ನವೋದಯ, ಪ್ರಗತಿಶೀಲ, ದಲಿತ ಮತ್ತು ಬಂಡಾಯ, ತರುವಾಯ ಅಸ್ಮಿತೆಯ ಕುರುಹಾಗಿ ಬೆಳೆದುಬಂದ ಸ್ತ್ರೀವಾದಿ ಸಾಹಿತ್ಯ ಇತ್ಯಾದಿ ಪ್ರಕಾರಗಳು ಬೆಳೆದುಬಂದದ್ದು ಕಣ್ಮುಂದಿನ ಇತಿಹಾಸ.ಕನ್ನಡ ಭಾಷೆ ಮತ್ತು ಸಾಹಿತ್ಯದ ಸಂದರ್ಭದಿ ಸ್ತ್ರೀ-ಹೆಣ್ಣನ್ನು ನೋಡುವುದಾದರೆ.., ಮುಖ್ಯವಾಗಿ ಹೆಣ್ಣನ್ನು ಪುರುಷ ಅಥವಾ ಪುರುಷ ಪ್ರಧಾನ ಸಮಾಜ ಕಂಡಿರುವ ದೃಷ್ಟಿ, ಹೆಣ್ಗಳ್ಳಿನ ಪುರುಷ ಹೆಣ್ಣನ್ನು ಕಂಡಿರುವ ದೃಷ್ಟಿ, ಹೆಣ್ಣನ್ನು ಹೆಣ್ಣು ಕಂಡಿರುವ ದೃಷ್ಟಿ ಎಂದು ಈ ಮೂರು ಆಯಾಮಗಳಲ್ಲಿ ಅವಲೋಕಿಸುವುದು ಉತ್ತಮ ಮಾರ್ಗವಾದೀತು ಎಂದು ನನಗನಿಸುತ್ತೆ. ನಾವು ಹೀಗೆ ಆಲೋಚಿಸುವಾಗ ಜನ್ಮದತ್ತವಾಗಿ ವರವಾಗಿಯೋ ಶಾಪವಾಗಿಯೋ ನಮಗಂಟಿಕೊಂಡು ಬಂದಿರುವ ಪೂರ್ವಾಗ್ರಹಗಳು ಯಾವುದೇ ಒಂದು ವಸ್ತು-ವಿಷಯ-ಸಂಗತಿಯ ಕುರಿತಾಗಿ ಕೇಳುವಾಗ, ಮಾತನಾಡುವಾಗ, ಓದುವಾಗ, ಬರೆಯುವಾಗ; ಚರ್ಚಿಸಲು, ತರ್ಕಿಸಲು, ವಿಶ್ಲೇಷಿಸಲು ತೊಡಗಿದಾಗ ಶೂನ್ಯದಿಂದ ಏನನ್ನೂ ಸೃಷ್ಟಿಸಲಾಗದು ಎಂಬ ಮಾತಿಗೆ ಮಣೆಹಾಕುತ್ತ.., ಹಲ-ಕೆಲವು ಪೂರ್ವಾಗ್ರಹಗಳನ್ನು ಹೊತ್ತುಕೊಂಡೇ ಮುನ್ನಡೆಯುತ್ತೇವೆ; ನೀವು ಏನೇ ಮಾತಾಡಿದರೂ ಆ ಮಾತಿನ ಲಯ ಮತ್ತು ದಾಟಿ, ಏನೇ ಬರೆದರೂ ಆಬರಹದ ಓಘ ಅಥವಾ ಶೈಲಿಯಿಂದಲೇ ಎಡ-ಬಲ-ಮಧ್ಯಂತರಗಳೆಂಬ ಕವಲಿಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಒಂದು ಖಯಾಲಿಯಿಂದ ಹೊರಬಂದರೇ ಮಾತ್ರ ಈ ಮೂರು ಆಯಾಮಗಳಲ್ಲಿ ಸ್ತಿçÃಯನ್ನು ಸಮಗ್ರವಾಗಿ ಗ್ರಹಿಸಬಹುದು ಎಂಬುದು ನನ್ನ ಮನದಿಂಗಿತವಾಗಿದೆ. ಹೆಣ್ಣನ್ನು ಪುರುಷ ಅಥವಾ ಪುರುಷ ಪ್ರಧಾನ ಸಮಾಜ ಕಂಡಿರುವ ದೃಷ್ಟಿ:ಅನುಕೂಲ ಮತ್ತು ಅನನಕೂಲ, ಸಮ್ಮತಿ-ಅಸಮ್ಮತಿಯ ಹಿನ್ನಲೆಯಲ್ಲಿ ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ, ಹೆಣ್ಣಿಗೆ ಹಣ್ಣೇ ಶತ್ರು, ಎರಡು ಜಡೆಯನ್ನು ಕೂಡಿಸಲಾಗದು, ಹೆಣ್ಮಕ್ಕಳ ಬುದ್ಧಿ ಮೊಣಕಾಲ ಕೆಳಗೆ ಎಂದು ಜರೆಯುವ, ಹೆಣ್ಣು ಗಂಡಿನ ಬಾಳಿಗೆ ಕಣ್ಣಾಗುವ ಅದೇ ಹೆಣ್ಣು ಹುಣ್ಣಾಗುವ ಇಬ್ಬದಿತನದ ಧೋರಣೆಯ ಪೂರ್ವಾಗ್ರಹಗಳಿಂದ, ಕಣ್ಣಿಗೆ ಮಣ್ಣೆರೆಚುವ ಮಾತುಗಳ ಪ್ರೇರೇಪಣೆಯಿಂದ ನೋಡಿದಾಗ; ತಾಯಿಯಾದವಳು ಮಗ-ಸೊಸೆಯನ್ನು, ಮಗಳು-ಅಳಿಯನನ್ನು ಕಾಣುವ ಬಗೆ, ಅತ್ತೆ ಒಡೆದ ಕಂಚಿಗೆ ಬೆಲೆಯಿಲ್ಲ ಎಂಬ ಮನೋಧೋರಣೆ, ಅದೇ ಸೊಸೆ – ಅತ್ತೆ-ಮಾವ-ನಾದಿನಿ-ಮೈದುನನ್ನು ಕಾಣುವ ಬಗೆಗೂ ಅದೇ ತನ್ನ ಅಣ್ಣ-ತಮ್ಮ, ಅಕ್ಕ-ತಂಗಿಯರನ್ನು ಕಾಣುವ ಬಗೆಗೂ ತುಂಬ ವ್ಯತ್ಯಾಸವನ್ನು ಕಾಣಬಹುದು. ಅಂಗೀಯ ಮ್ಯಾಲಂಗಿ ಚಂದೇನೋ ನನ ರಾಯ ಎಂಬ ಗರತಿಯು ಸವತಿಯನ್ನು ಕಾಣುವ ಬಗೆ, ಗಂಡನಾದವನು ಮತ್ತೊಬ್ಬಾಕೆಯ ಸಂಗಡದಲ್ಲಿರುವುದನ್ನು ತಿಳಿದು ಆಕೆಯನ್ನು ಕಾಣುವ ಬಗೆ, ತಾಯಿ ಸತ್ತಮ್ಯಾಲೆ ತಂದೆ ಚಿಗಪ್ಪ ಅಂತ! ಮಲತಾಯಿ ಆ ತಬ್ಬಲಿ ಮಕ್ಕಳನ್ನು ಹಾಗೂ ತನ್ನ ಹೊಟ್ಟೆಯ ಮಕ್ಕಳನ್ನು ಕಾಣುವ ಬಗೆಯನ್ನು ಕತೆ, ಕವಿತೆ, ಕಾದಂಬರಿಗಳಲ್ಲಿ ಅಷ್ಟೇ ಅಲ್ಲದೇ ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು ಈ ಮೇಲಿನ ಆಯಾಮದಲ್ಲಿ ನೋಡಬಹುದಾಗಿದೆ.ಹೆಣ್ಣನ್ನು ತಾಯ್ಗಳ್ಳಿನ ಅಥವಾ ಹೆಣ್ಗಳ್ಳಿನ ಪುರುಷ ಕಂಡಿರುವ ದೃಷ್ಟಿ:ಹೆಣ್ಣು ಅಂದಂದಿನ ಕಾಲಘಟ್ಟದಿ ಕೌಟುಂಬಿಕ ಮತ್ತು ಸಾಮಾಜಿಕ ಜನ-ಜೀವನದಲ್ಲಿ ಅನುಭವಿಸಿದ ಯಮ-ಯಾತನೆಗಳನ್ನು ತುಂಬ ಹತ್ತಿರದಿಂದ ಕಂಡುಂಡ ತಾಯ್ಗಳ್ಳಿನ ಅಥವಾ ಹೆಣ್ಗಳ್ಳಿನ ಹೃದಯ ಆದ್ರವಾಗಿ ಮಿಡಿದ ಭಾವನೆಗಳ ಒಟ್ಟಂದದಿ ಚಿತ್ರಿತವಾದ ಸ್ತ್ರೀ–ತಾಯಿ, ಪ್ರೇಯಸಿ, ಸದ್ಗೃಹಿಣಿಯಾಗಿ ಕಂಡಿರುವಂತದ್ದು. ಒಟ್ಟಾರೆಯಾಗಿ ಬೇಂದ್ರೆ ಸಾಹಿತ್ಯವನ್ನು ಅವಲೋಕಿಸಿದಾಗ ಈ ಮೇಲಿನ ಆಯಾಮದಲ್ಲಿ ಮೂಡಿಬಂದಿರುವಂತದ್ದು ಎಂಬುದರಲ್ಲಿ ಎರಡು ಮಾತಿಲ್ಲ.ಸೌಂಧರ‍್ಯವೆಂಬುದುಕಣ್ಣಿನ ತುತ್ತಲ್ಲಕಣ್ಣಿಗೂ ಕಣ್ಣಾಗಿಒಳಗಿಹುದುರೂಪ-ಲಾವಣ್ಯಕೆಅಳೆಯಲುಬಾರದುಅವುಗಳೇಇದರೊಂದು ಕಣವಿಹವು.ಸೌಂಧರ‍್ಯ ಎಂದರೆ ಅದು ಬರೀ ಕಣ್ಣು ಸೆರೆಹಿಡಿಯುವ ಹೊರದೃಶ್ಯವಲ್ಲ, ಕಣ್ಣು ನೋಡುವುದಕ್ಕಿಂತ ಗಾಡವಾಗಿ, ಮನಸ್ಸು, ಹೃದಯದಿಂದ ಮಾತ್ರವೇ ಗ್ರಹಿಸಬಹುದಾದ ಒಳಗಿನ ಗುಣವೇ ನಿಜವಾದ ಸೌಂಧರ‍್ಯ. ಅದನ್ನು ನಾವು ತೂಕ, ಬಣ್ಣ, ಮುಖದ ರೀತಿ ಇತ್ಯಾದಿಗಳಿಂದ ಅಳೆಯಲು ಸಾಧ್ಯವಿಲ್ಲ, ನಾವು ಕಾಣುವ ರೂಪ-ಲಾವಣ್ಯವು ಆ ನಿಜವಾದ ಸೌಂಧರ‍್ಯದ ಒಂದು ಚಿನ್ನದ ಕಣ, ಸಣ್ಣ ಭಾಗ ಮಾತ್ರವೇ ಆಗಿದೆ. ನಿಜವಾದ ಸೌಂಧರ‍್ಯ ಕಣ್ಣಿಗೂ ಮೀರಿದ, ಹೃದಯದಿ ಅನುಭವವಾಗುವ, ಒಳಗಿನ ಮೌನ-ಮೌಲ್ಯಗಳಲ್ಲಿ ಅಡಗಿದೆ. ಮನುಷ್ಯನ ಸೌಂಧರ‍್ಯ ಬಾಹ್ಯ ರೂಪದಲ್ಲಿಲ್ಲ; ಹೃದಯ, ಗುಣ, ಸ್ವಭಾವ, ಆಂತರ‍್ಯದ ಪ್ರಕಾಶ – ಇವುಗಳೇ ನಿಜವಾದ ಸೌಂರ‍್ಯ ಎಂಬರ್ಥದಿ ಬೇಂದ್ರೆಯವರು ಸ್ತ್ರೀಯನ್ನು ಚಿತ್ರಿಸಿದ್ದಾರೆ. ಮಾತಿನಲ್ಲಿರುವಂಥಮೌನದ ಧ್ವನಿಯಿಂದವಿವ್ಹಲತೆಬೆಳೆಯುವುದಿಬ್ಬರಲಿಇಬ್ಬರ ಮನವಾಗಇಬ್ಬಗೆಯಾಗುವುದುಒಬ್ಬರಿಗೂ ಸುಖವಿಲ್ಲಬದುಕಿನಲಿ.ಮಧುರವಾದ ಸಂಬಂಧದಲ್ಲಿ ಹೇಳದಿರುವ ಮೌನ, ಒಡೆದ ಮಾತುಗಳು, ವ್ಯಕ್ತಗೊಳ್ಲದ ನೋವು-ನಲಿವು, ಇವು ಎರಡು ಹೃದಯ[ಮನಸ್ಸು]ಗಳನ್ನು ದೂರ ಮಾಡುತ್ತವೆ. ಮಾತುಕ[ವಿ]ತೆ, ನೇರ ಸಂಭಾಷಣೆಯಿರದ ಸಂಬಂಧದಲ್ಲಿ ಇಬ್ಬರೂ ಸುಖವನ್ನು ಕಾಣಲಾಗದು, ಗಂಡ-ಹೆಂಡಿರ ಗಂಧಾ ತೀಡಿದ್ಹಂಗ ಇರಬೇಕಾ, ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಜನಪದರ ಗಾದೆಮಾತು ಸುಳ್ಳಾಗೇ.., ಅದು ವಿಚ್ಛೇದನದಿ ರ‍್ಯಾವಸಾನಗೊಳ್ಳುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ.ಪಾದ ಪದ್ಧತಿಯಲ್ಲಿಪದ ಕೂಡಿ ಬರುವಾಗಯಾರಾರೆ ಗುರು-ಲಘು ಎಣಿಸುವರೆ?ಯಾ ರಾಗವೆಂದರುಯಾ ರಾಗ ಕೇಳುವರುಅನುರಾಗವನುರಣಿಸಿತಣಿಸುತಿರೆ!.ಪದಗಳ ನಿಯಮ, ಛಂದಸ್ಸು, ಗುರು-ಲಘು, ರಾಗ-ತಾಳ ಇವೆಲ್ಲವೂ ಕೇವಲ ತಾಂತ್ರಿಕ ಇತಿ-ಮಿತಿಗಳು, ಆದರೆ ಸಂಕಷ್ಟದ ಬದುಕಿನ ಪಾಡೇ ಹಾಡಾಗಿ ಹೃದಯದಿ ಹುಟ್ಟುವ ಪದವು [ಅನುರಾಗ, ಭಾವ, ಪ್ರೀತಿ, ನಿಸ್ಸಳ ಸ್ಪಂದನೆ] ಪಾದ ಪದ್ದತಿಯಲ್ಲಿ ಅಂದರೆ ಕಾಲ್ನಡಿಗೆಯ ರೂಪದಿ ಎಡ-ಬಲವೆಂದೆಣಿಸದೆ ಜತೆಗೂಡಿ ಮುನ್ನಡೆಯುತ್ತಿರಾಗ.., ಗುರು-ಲಘು ಎಣಿಸುವರೆ? ಇಲ್ಲಿ ನಿಯಮಗಳಿಗಿಂತ ಭಾವ ತೀವ್ರತೆಯೇ ಕವಿತೆಯ ಜೀವವಾಗಿ, ರಾಗಕೆ ಶ್ರವಣ, ಮನಸ್ಸಿಗೆ ತಣಿ[ಮುದ]ವನ್ನು ನೀಡುತ್ತದೆ ಎಂಬರ್ಥದಿ ಗಂಡು-ಹೆಣ್ಣಿನ ಅನುರಾಗ-ದಾಂಪತ್ಯ ಜೀವನಕ್ಕೆ ಮುನ್ನಡಿ ಬರೆಯುತ್ತ..,ನಾನು ಬಡವಿ ಆತ ಬಡವಒಲವೆ ನಮ್ಮ ಬದುಕುಬಳಸಿಕೊಂಡೆವದನೆ ನಾವುಅದಕು ಇದಕು ಎದಕು.ಆತ ಕೊಟ್ಟ ವಸ್ತು ಒಡವೆನನಗೆ ಅವಗೆ ಗೊತ್ತುತೋಳುಗಳಿಗೆ ತೋಳ ಬಂದಿಕೆನ್ನೆ ತುಂಬ ಮುತ್ತು.ಕುಂದು ಕೊರತೆ ತೋರಲಿಲ್ಲಬೇಕು ಹೆಚ್ಚಿಗೇನು?ಹೊಟ್ಟೆಗಿತ್ತ ಜೀವ ಫಲವತುಟಿಗೆ ಹಾಲು ಜೇನು.ಎಂದು ಒಲವೆ ನಮ್ಮ ಬದುಕು ಎಂಬೀ ಕವಿತೆಯ ಮೂಲಕ ಸಮರಸವೇ ಜೀವನವೆಂಬ ಸಾಮರಸ್ಯದ ಬದುಕಿಗೆ ಕನ್ನಡಿ ಹಿಡಿಯುತ್ತಾರೆ.ಪುಟ್ಟ ವಿಧವೆ:ಬಾಲ್ಯವಿವಾಹ, ಸತಿ ಪದ್ಧತಿ ನಿಷೇಧ, ಮಹಿಳಾ ಶಿಕ್ಷಣ, ವಿಧವಾ ಪುನರ್ವಿವಾಹ, ಮಹಿಳಾ ಹಕ್ಕುಗಳ ಪರ ಹೋರಾಟ, ಮಹಿಳಾ ಸ್ವಾತಂತ್ರ್ಯ, ಸ್ವಾವಲಂಬನೆ, ಸ್ವಾಭಿಮಾನಕ್ಕೆ ಒತ್ತಾಯ, ಗ್ರಾಮಗಳಲ್ಲಿ ಮಹಿಳಾ ಆರೋಗ್ಯ ಮತ್ತು ಅರಿವು ಎಂಬಿತ್ಯಾದಿ ವಿಚಾರಗಳ ದಿಸೆಯಲ್ಲಿನ ಸಮಾಜ ಸುಧಾರಣೆಯ ಮೊದಲ ಪ್ರಮುಖ ಧ್ವನಿಯೆಂದರೆ – ರಾಜಾ ರಾಮ್‌ಮೋಹನ್ ರಾಯ್, ತದನಂತರದಿ ಈಶ್ವರಚಂದ್ರ ವಿದ್ಯಾಸಾಗರ, ಮಹಾತ್ಮ ಗಾಂಧಿ, ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ, ಅನ್ನಿಬೆಸೆಂಟ್, ದ್ವಾರಕನಾಥ್ ಗಂಗೂಲಿ, ಕಸ್ತೂರಬಾ ಗಾಂಧಿ, ಕರ್ನಾಟಕದಲ್ಲಿ ಟಿ.ನರಸಿಂಹಾಚಾರ‍್ಯ, ಡಿ.ವಿ.ಗುಂಡಪ್ಪ ಈ ಎಲ್ಲ ಮಹನೀಯರ ಹೋರಾಟದ ಫಲವೆಂಬಂತೆ; ಹರಬಿಲಾಸ್ ಸರ್ಡಾ ಅವರು ಮಂಡಿಸಿದ – ೧೯೨೯ ರ ಸರ್ಡಾ ಕಾಯ್ದೆ / ಅhiಟಜ ಒಚಿಡಿಡಿiಚಿge ಖesಣಡಿಚಿiಟಿಣ ಂಛಿಣ  – ಇದು ಭಾರತೀಯ ಬಾಲ್ಯವಿವಾಹ ನಿಯಂತ್ರಣದ ಮೊದಲ ಕಾನೂನು ಜಾರಿಯಾಯಿತು.ಈ ಹಿನ್ನಲೆಯಲ್ಲಿ ಹೆಣ್ಣಿನ ವೈದವ್ಯದ ಬಾಳಿನ-ಗೋಳಿನ ಕತೆಯನ್ನು ನೋಡಲಾಗದೆ ಇದನ್ನು ಕಾನೂನಾತ್ಮಕವಾಗಿ ಸಂಪೂರ್ಣವಾಗಿ ತೊಡೆದುಹಾಕಲು ಶ್ರಮಿಸಿದವರು ಪ್ರಾತಃ ಸ್ಮರಣೀಯರು. ಇಂತದ್ದೇ ಒಂದು ನೈಜ ಘಟನೆ ಬೇಂದ್ರೆಯವರ ಮನಕಲಕಿದ್ದರ ಪರಿಣಾಮ – ಪುಟ್ಟವಿಧವೆ ಕವಿತೆಯಲ್ಲಿ ಚಿತ್ರಿಸಿದ್ದಾರೆ;ಆಕೆಯಿದ್ದಳು ಕೂಸು; ಈತನಿನ್ನೂ ಹುಡುಗಅವರ ತಾಯ್ತಂದೆಗಳ ಹಿಗ್ಗು ಎಷ್ಟು!ಧರ್ಮದಾ ಹೆಸರಿನಲಿ ಅವರ ಕೈಕೂಡಿಸಲುಇವರಿಗೆನಿಸಿತು ಹರ್ಷ ಹಬ್ಬದಷ್ಟು.ಹತ್ತು ದಿವಸಕೆ ಹಾಳು ಮುತ್ತೈದೆತನ ಹೋಗಿವೈದವ್ಯ ಸಂಪತ್ತು ಪಡೆದಳಾಕೆ;ಮನೆಯವರು ವೈದಿಕರು, ಊರು ಧರ್ಮದ ತವುರು;ಶಾಸ್ತ್ರವಿರೆ ಬೇರೆಯ ವಿಚಾರವೇಕೆ?ಕುರುಡು ಧರ್ಮಕ್ಕೆ ಸ್ಮಾರಕವು ನಿಂತಂತಾಕೆಮೈಮರೆತು ನಿಂತಾಗ ಗೂಗೆ ಹಾಡಿತ್ತು,ಮುದ್ರೆಯೊತ್ತುವ ಕಣ್ಣು ಮೋರೆ ನೋಡಿತೊಮ್ಮೆಊರ ಕೃಷ್ಣನ ಕಥೆಗೆ ಕೋಡು ಮೂಡಿತ್ತು.ಈ ಒಂದು ಕವಿತೆ: ತಂದೆ-ತಾಯಂದಿರ ಜವಾಬ್ದಾರಿ, ಕನ್ಯಾದಾನ, ಕೌಟುಂಬಿಕ ರಕ್ಷಣೆ, ಅನಿಶ್ಚಿತತೆಯ ಬಾಳು, ಅಕಾಲಿಕ ಮರಣ, ವೈದವ್ಯ ಪ್ರಾಪ್ತಿ, ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ನಮ್ಮ ಅಜ್ಞಾನಕ್ಕೆ ಹೆಣ್ಣಿನ ಬಾಳು ಆಹುತಿಯಾದುದರ ಕುರುಹಾಗಿ ಪುಟ್ಟ ವಿಧವೆ ನಮ್ಮ ಕಣ್ಮುಂದೆ ನಿಲ್ಲುತ್ತಾಳೆ, ಕಂಬನಿ ಮಿಡಿಯುವಂತೆ ಮಾಡುತ್ತಾಳೆ,ಹುಬ್ಬಳ್ಳಿಯಾಂವಾ:ಬೇಂದ್ರೆಯವರ ಪ್ರತಿಕಾ ಓದಿನ ಅಭಿರುಚಿ ಎಷ್ಟಿತ್ತೆಂದರೆ.., ಅದೊಂದು ಗೀಳಾಗಿ ಅಂಟಿಕೊಂಡಿತ್ತೆಂದು ಹೇಳಬಹುದೆನೋ, ಹುಬ್ಳಿಯಿಂದ ವಾರಕ್ಕೆ ಮೂರು ದಿನ ಅಚ್ಚಾಗಿ ಹೊರಡುತ್ತಿದ್ದ ಪತ್ರಿಕೆ ಅನಿವರ‍್ಯ ಕಾರಣಗಳಿಂದ ಅಚ್ಚಿನ ಮನೆಯಲ್ಲಿ ಬೆಚ್ಚಗೆ ಕುಳಿತದ್ದರಿಂದ; ಪತ್ರಿಕೆ ಬಾರದೇ ಇದ್ದಾಗ, ಓದದೇ ಇದ್ದಾಗ ಆಗುನ ಮನಸ್ಸಿನ ಚಡಪಡಿಕೆ; ಇಲ್ಲಿ ಸಾಗಂತ್ಯ ತೊರೆದು ಹೋದ ಇನಿಯನ ನೆನವರಿಕೆ, ಕನವರಿಕೆ ಭಾವ ತೀವ್ತೆಯಿಂದ ಹೊರಹೊಮ್ಮಿದ ಕವಿತೆ ಈ ಹುಬ್ಬಳ್ಳಿಯಾಂವಾ ಎಂದು ಹೇಳಬಹುದು.ಮಾತು ಮಾತಿಗೆ ನಕ್ಕನಗಿಸಿ ಆಡಿಸ್ಯಾಡಾಂವಾಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ.ಇರು ಅಂದರ ಬರತೇನಂತ ಎದ್ದು ಹೊರಡಾಂವಾಮಾರೀ ತೆಳಗ ಹಾಕಿತೆಂದರ ಇದ್ದು ಬಿಡಾಂವಾ ಚಹಾದ ಜೋಡಿ ಚೂಢಾಧಾಂಗ ನೀ ನನಗಂದಾಂವಾಚೌಡಿಯಲ್ಲ ನೀ ಚೂಡಾಮಣಿಯಂತ ರಮಿಸ ಬಂದಾಂವಾಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ?ಇಲ್ಲಿ ಗಂಡಿನ ಅನುರಾಗದಿ ಮಿಂದೆದ್ದ ಹೆಣ್ಣಿನ ಮನದಾಳದ ಇರಿಸು-ಮುರಿಸು, ಮುನಿಸು, ಸರಸ-ಸಲ್ಲಾಪ-ಸಂಭಾಷಣೆಯ ನೆನಹು, ಇನಿಯನ ಬರವಿನ ನಿರೀಕ್ಷೆ, ಕಾತರ, ಕಾವಳ ಭಾವದಿ ಬರುವ ಹಾದಿಯ ಎದುರು ನೋಡುತ್ತಾ ನಿಂತ ಪ್ರೇಯಸಿಯ ಮನದಾಳದಿ ಬಚ್ಚಿಟ್ಟ ಭಾವನೆಗಳನ್ನು ನಮ್ಮೆದುರಿಗೆ ಬೇಂದ್ರೆಯವರು ಬಿಚ್ಚಿಟ್ಟಿದ್ದಾರೆ.ಹುಣ್ಣಿವಿ ಚಂದಿರನ ಹೆಣ:ಮಗ ಸತ್ತ ಸುದ್ದಿ ತಿಳಿದು ದಿಗ್ಭ್ರಮೆಗೊಂಡು, ಕಂಬನಿಗರೆಯದೆ ಕಲ್ಲಾಗಿ ಮೂಲೆಹಿಡಿದು ಕೂತ ಹೆಂಡತಿಯ ಮುಖಭಾವವನ್ನು – ನೀ ಹೀಂಗ ನೋಡಬ್ಯಾಡ ನನ್ನ ನಿನ್ನ ನೇರ ದಿಟ್ಟಿಯನ್ನು ಎದುರಿಸುವ ಶಕ್ತಿ ನನಗಿಲ್ಲ, ಎಂದು ಪರಿಪರಿಯಾಗಿ ಸಂತೈಯಿಸುತ್ತ – ನಕ್ಯಾಕ ಮರಸತೀ ದುಃಖ? ಎದೆ ಬಡಿಸಿ ಕೆಡವು ಬಿರಿಗಣ್ಣು ಬ್ಯಾಡ

‌”ಸ್ತ್ರೀ ಮತ್ತು ಬೇಂದ್ರೆ ಸಾಹಿತ್ಯ” ವಿಶೇಷ ಲೇಖನ, ಡಾ.ಯಲ್ಲಮ್ಮ ಕೆ Read Post »

ಇತರೆ

“ಸಾವಿನಲ್ಲೂ ಸಾರ್ಥಕತೆ ಮೆರೆದ…ನೀರಜಾ ಭಾನೋಟ್.” ವೀಣಾ ಹೇಮಂತ್‌ ಗೌಡ ಪಾಟೀಲ್

ವ್ಯಕ್ತಿ ಸಂಗಾತಿ “ಸಾವಿನಲ್ಲೂ ಸಾರ್ಥಕತೆ ಮೆರೆದ… ನೀರಜಾ ಭಾನೋಟ್.” ವೀಣಾ ಹೇಮಂತ್‌ ಗೌಡ ಪಾಟೀಲ್ ಸಾವಿನಲ್ಲೂ ಸಾರ್ಥಕತೆ ಮೆರೆದ…ನೀರಜಾ ಭಾನೋಟ್. ಕೇವಲ 22 ವರ್ಷದ ಹರಯದಲ್ಲಿ ಆಕೆ ತನ್ನ ಬದುಕಿನಲ್ಲಿ ಮೊತ್ತ ಮೊದಲ ಬಾರಿಗೆ ಅಂತರಾಷ್ಟ್ರೀಯ ವಿಮಾನ ಯಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದಳು. ಆ ದಿನ ಸಪ್ಟಂಬರ್ 5 1986. ತನ್ನ ಹುಟ್ಟು ಹಬ್ಬಕ್ಕೆ ಎರಡು ದಿನ ಮೊದಲು ಫ್ರಾಂಕ್ ಫರ್ಟ್ ಮೂಲಕವಾಗಿ ನ್ಯೂಯಾರ್ಕ್ ಗೆ ತೆರಳುತ್ತಿದ್ದ ಅಂತರಾಷ್ಟ್ರೀಯ ವಿಮಾನ ಪ್ಯಾನ್ ಆ್ಯಮ್  ವಿಮಾನ ಸಂಖ್ಯೆ 73  ಎಂಬ ಹೆಸರಿನ ಆ ವಿಮಾನವು ಕರಾಚಿಯಲ್ಲಿ ನಸುಕಿನ ಜಾವ ಐದು ಗಂಟೆಯ ಸುಮಾರಿಗೆ  ಇಂಧನವನ್ನು ತುಂಬಿಸಲು ರನ್‌ ವೇಯಲ್ಲಿ ನಿಂತಿತ್ತು. ಆಗ ಸೆಕ್ಯೂರಿಟಿ ಗಾರ್ಡ್ಗಳಂತೆ ವೇಷ ಧರಿಸಿದ ನಾಲ್ವರು ಯುವಕರು ವಿಮಾನವನ್ನು ಪ್ರವೇಶಿಸಿದರು  ಒಳ ಬಂದ ನಾಲ್ಕು ಜನ ಯುವಕರು ಜೋರಾಗಿ ಆರ್ಭಟ ಮಾಡಿದಾಗ ಪ್ರಯಾಣಿಕರೆಲ್ಲರೂ ಭಯದಿಂದ ಕಿರುಚಿದರು. ವಿಮಾನದ ಸಿಬ್ಬಂದಿಗಳು ಕೂಡ ನಿಂತಲ್ಲಿಯೇ ತಣ್ಣಗಾದರೂ…. ಆಕೆ ಮಾತ್ರ ಧೈರ್ಯದಿಂದ ಸನ್ನಿವೇಶವನ್ನು ಎದುರಿಸುವ ಮನಸ್ಥಿತಿಯನ್ನು ಹೊಂದಿದ್ದಳು.ವಿಮಾನದ ಮುಖ್ಯ ಫ್ಲೈಟ್ ಅಟೆಂಡೆಂಟಾಗಿ ಕಾರ್ಯನಿರ್ವಹಿಸುತ್ತಿದ್ದ ಕೇವಲ 22 ರ ಹರೆಯದ ಆಕೆ ತನ್ನ ಬದುಕಿನಲ್ಲಿ ಅತಿ ಮುಖ್ಯ ಮಾರ್ಗವನ್ನು ಪ್ರಥಮ ಬಾರಿಗೆ ಪ್ರಯಾಣಿಸಲಿದ್ದಳು…. ಆಕೆಯೇ ನೀರಜಾ ಭಾನೋಟ್. ವಿಮಾನವನ್ನು ಅಪಹರಿಸಿದ ಹೈಜಾಕರ್ ಗಳನ್ನು ನೋಡಿಯೇ ವಿಮಾನದ ಪ್ರಯಾಣಿಕರು ಗಾಬರಿಗೊಂಡರೆ ನೀರಜಾ ಮಾತ್ರ ಕೊಂಚವೂ ಧೃತಿಗೆಡದೆ ನೂರಾರು ಜನರ ಜೀವವನ್ನು ಉಳಿಸಿದಳು. ಅತ್ಯಂತ ಸೂಕ್ಷ್ಮವಾಗಿ ( ಅದರಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗಳಿಗೆ ಹೈಜಾಕರ್ ಗಳಿಗೂ ಕೂಡ ಗೊತ್ತಾಗದಷ್ಟು )ಆಕೆ ಹೈಜಾಕರ್ ಗಳ ಕೋಡ್ ಸಂಖ್ಯೆಯನ್ನು ಇಂಟರ್ಕಾಂನಲ್ಲಿ ತನ್ನ ಮೇಲಧಿಕಾರಿಗಳಿಗೆ ಕಳುಹಿಸಿದ್ದಳು  ಕಾಕ್ ಪಿಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ರಿವ್ ಸಿಬ್ಬಂದಿಯವರು ಅದರಲ್ಲೂ ವಿಶೇಷವಾಗಿ ಪೈಲೆಟ್ ಗಳು ತಮ್ಮ ತಲೆಯ ಮೇಲಿರುವ ಓವರ್ ಹೆಡ್ ಹ್ಯಾಚ್ಗಳ ಮೂಲಕ ಅಲ್ಲಿಂದ ತಪ್ಪಿಸಿಕೊಂಡು ಹೊರಟು ಹೋದರು…. ಸಾಧಾರಣವಾಗಿ ಹೈಜಾಕರ್ ಗಳ ಕೈಯಲ್ಲಿ ಪೈಲೆಟ್ ಗಳು ಸಿಕ್ಕಾಗ ಹೈಜಾಕರಗಳು ಅವರನ್ನು ವಿಮಾನವನ್ನು ತಮ್ಮಿಷ್ಟ ಬಂದ ಜಾಗಕ್ಕೆ ಹಾರಿಸಲು ಒತ್ತಾಯಿಸುತ್ತಾರೆ… ಅವರ ಈ ತಂತ್ರವನ್ನು ತಡೆ ಹಿಡಿಯಲು ಹಾಗೂ ವಿಮಾನವು ನೆಲದಲ್ಲಿಯೇ ಇರುವಂತೆ ಮಾಡಲು ವಿಮಾನಯಾನ ಸಿಬ್ಬಂದಿಗಳಿಗೆ ಈ ಕುರಿತು ತರಬೇತಿ ನೀಡಲಾಗಿರುತ್ತದೆ…. ಈಗಾಗಲೇ ಪ್ಯಾನ 73 ಎಂಬ ಹೆಸರಿನ ಆ ವಿಮಾನವನ್ನು ಹೈಜಾಕ್ ಮಾಡುವ ತಂತ್ರ ತುಸುಮಟ್ಟಿಗೆ ವಿಫಲಗೊಂಡಿತ್ತು ಆದರೆ 379 ಜನ ಪ್ರಯಾಣಿಕರು ಹಾಗೂ ಇನ್ನುಳಿದ ಗಗನಯಾನ ಸಿಬ್ಬಂದಿಗಳು ಉಗ್ರರ ಕೈಯಲ್ಲಿ ಸಿಲುಕಿದ್ದರು. ಮುಂದಿನ ಸುಮಾರು 17 ಗಂಟೆಗಳ ಕಾಲ ನೀರಜಾ ಉಗ್ರಗಾಮಿಗಳು ಹಾಗೂ ಮುಗ್ಧ ಪ್ರಯಾಣಿಕರ ನಡುವೆ ತಡೆಗೋಡೆಯಾಗಿ ನಿಂತುಕೊಂಡರು. ಆ ಎಲ್ಲ ಹೈಜಾಕರ್ ಗಳು ಅಬು ನಿಡಲ್ ಆರ್ಗನೈಜೇಷನ್ ಎಂಬ ಪ್ಯಾಲಸ್ಟನಿಯನ್ ಮಿಲಿಟರಿ ಗುಂಪಾಗಿತ್ತು. ಅವರ ಪ್ರಮುಖ ಗುರಿ ಅಮೆರಿಕದ ಪ್ರಜೆಗಳಾಗಿದ್ದರು…. ಎಲ್ಲ ಪ್ರಜೆಗಳ ಪಾಸ್ ಪೋರ್ಟ್ ಗಳನ್ನು ಅವರು ಪರೀಕ್ಷಿಸುತ್ತಿದ್ದರು.  ನೀರಜಾ ಮತ್ತು ಆಕೆಯ ಸಹೋದ್ಯೋಗಿಗಳು ಅತ್ಯಂತ ಸೂಕ್ಷ್ಮವಾಗಿ ಅಮೆರಿಕದ ಪಾಸ್ಪೋರ್ಟ್ ಹೊಂದಿರುವವರ ಪಾಸ್ಪೋರ್ಟ್ ಗಳನ್ನು ಸಂಗ್ರಹಿಸಿ ಸೀಟುಗಳ ಕೆಳಗೆ ಬಚ್ಚಿಡಲು ಆರಂಭಿಸಿದರು. ಮತ್ತೆ ಕೆಲವರ ಪಾಸ್ಪೋರ್ಟ್ ಗಳನ್ನು ಕಸದ ಬುಟ್ಟಿಗಳ ಹಿಂದೆಯೂ,ತಲೆಯ ಮೇಲಿರುವ ಬ್ಯಾಗುಗಳನ್ನು ಇಡುವ ಕಂಪಾರ್ಟ್ಮೆಂಟುಗಳ ನಡುವೆ  ಅಡಗಿಸಿ ಇಟ್ಟರು. ಮತ್ತೆ ಕೆಲ ಪಾಸ್ಪೋರ್ಟ್ ಗಳನ್ನು ಆಕೆ ಟಾಯ್ಲೆಟ್ ನ ನೀರಿನಲ್ಲಿ ಫ್ಲಶ್ ಮಾಡಿ ಇನ್ನಿಲ್ಲದಂತೆ ಮಾಡಿದಳು. ಅತ್ಯಂತ ಚಾಣಾಕ್ಷತೆ ಹಾಗೂ ಶಾಂತ ಮನಸ್ಥಿತಿಯಿಂದ ಆಕೆ ಅಮೆರಿಕದ ನಿವಾಸಿಗಳನ್ನು ಗುರುತಿಸಿ ಅವರನ್ನು ಸೂಕ್ಷ್ಮವಾಗಿ ಎಚ್ಚರಿಸಿದಳು. ಇಡೀ ವಿಮಾನದಲ್ಲಿರುವ ಯಾವುದೇ ಪ್ರಯಾಣಿಕರು ಗಾಬರಿಗೊಳ್ಳದೆ ಇರುವಂತೆ ಅವರನ್ನು ಪ್ರಶಾಂತವಾಗಿ ಇರಿಸಲು ಆಕೆ ಪ್ರಯತ್ನಿಸಿದಳು  ಅಳುವ ಚಿಕ್ಕ ಮಕ್ಕಳನ್ನು ಸಮಾಧಾನಿಸಿದ ಆಕೆ ಹಿರಿಯರಿಗೆ ಏನೂ ಆಗುವುದಿಲ್ಲ, ಧೈರ್ಯದಿಂದಿರಿ ಎಂದು ಭರವಸೆ ನೀಡಿದಳು. ಹಿಂದಿ, ಇಂಗ್ಲಿಷ್, ಪಂಜಾಬಿ ಭಾಷೆಗಳಲ್ಲಿ ಪ್ರಬುದ್ಧತೆಯನ್ನು ಹೊಂದಿದ್ದ ಆಕೆ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರೊಂದಿಗೆ ಲಘು ಸಂಭಾಷಣೆಯಲ್ಲಿ ನಿರತಳಾಗಿ ಅವರ ಭಯವನ್ನು ಹೋಗಲಾಡಿಸಲು ಪ್ರಯತ್ನಿಸಿದಳು. ಆಕಸ್ಮಿಕದಲ್ಲಿ ಬದುಕುಳಿದ ನೂರಾರು ಜನ ಪ್ರಯಾಣಿಕರು ಆಕೆ ಅತ್ಯಂತ ಚಿಕ್ಕ ಹುಡುಗಿಯಾಗಿದ್ದರೂ ಕೂಡ ಹೆದರಿದ್ದರೂ ಕೂಡ ತನ್ನ ಹೆದರಿಕೆಯನ್ನು ಯಾರಿಗೂ ತೋರಿಸದೆ ನಮ್ಮಂತಹ ನೂರಾರು ಜನರಿಗೆ ಧೈರ್ಯ ತುಂಬಿದ ಕಾರಣವೇ ನಾವು ನಮ್ಮ ದುಃಖವನ್ನು ಹೊರ ಹಾಕದೆ ಇರಲು ಸಾಧ್ಯವಾಯಿತು ಎಂದು ಹೇಳಿದರು ಗಂಟೆಗಳ ಕಾಲ ಹೈಜಾಕರ್ಸ್ ಮತ್ತು ವಾಯುಯಾನ ಸಂಸ್ಥೆಯ ನಡುವೆ ಮಾತುಕತೆ, ಸಂಧಾನ ಪ್ರಕ್ರಿಯೆ ನಡೆದು ಒಂದು ಹಂತದಲ್ಲಿ ನಿಲುಗಡೆಯಾಯಿತು. ಇದು ಹೈಜಾಕರ್ಸ್ ಗಳಲ್ಲಿ ತಳಮಳವನ್ನು ಉಂಟು ಮಾಡಿತು ಇದೇ ಸಮಯದಲ್ಲಿ ವಿಮಾನದ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಪರಿಸ್ಥಿತಿ ಒದಗಿತು. ಕ್ಯಾಬಿನ್ ಲೈಟ್ ಗಳು ಪಕ ಪಕ ಮಾಡಲಾರಂಭಿಸಿ ಅಂತಿಮವಾಗಿ ಎಲ್ಲರನ್ನು ಕತ್ತಲೆಗೆ ದೂಡಿ ಆರಿ ಹೋದವು. ಹೀಗೆಯೇ 17 ಗಂಟೆಗಳು ಕಳೆದು ಹೋದವು. ಇದು ಹೈಜಾಕರ್ಸಗಳಲ್ಲಿ ಸಿಟ್ಟು ಮತ್ತು ಆತಂಕವನ್ನು ಹೆಚ್ಚಿಸಿ ಆಗ ಅವರು ಸರ್ಕಾರವನ್ನು ಹೆದರಿಸಲು ಗನ್ ಫೈಯರ್ ಆರಂಭಿಸಿದರು   ಜನನಿಬಿಡವಾದ ಕ್ಯಾಬಿನ್ ನಲ್ಲಿ ಒಂದೊಮ್ಮೆ ಗುಂಡಿನ ಮೊರೆತ ಶುರುವಾದಾಗ ಆ ಗಾಢವಾದ ಕತ್ತಲಿನಲ್ಲಿ ಭಯದ ಕೇಕೆ ಹಾಕುತ್ತ ಪ್ರಯಾಣಿಕರು ಸೀಟುಗಳ ಅಡಿಯಲ್ಲಿ ಕಿರುಚುತ್ತಾ ಅಡಗಿಕೊಳ್ಳಲು ಪ್ರಯತ್ನಿಸಿದರು. ಇದೇ ಸಮಯದಲ್ಲಿ ನೀರಜಾ ಅತ್ಯಂತ ಚಾಣಾಕ್ಷತೆಯಿಂದ ಓಡಿ ಹೋಗಿ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದಳು. ತೆರೆಯಲು ಅಪಾರ ಶಕ್ತಿಯ ಅವಶ್ಯಕತೆ ಇದ್ದು ಆಕೆ ಪ್ರಯಾಣಿಕರನ್ನು ಬಾಗಿಲಿನ ಕಡೆ ಜೋರಾಗಿ ತಳ್ಳುತ್ತಾ ಆ ಬಾಗಿಲಿನ ಮೂಲಕ ಹಾರಿ ಓಡಿ ತಪ್ಪಿಸಿಕೊಳ್ಳಲು ಕೂಗಿ ಹೇಳಿದಳು    ಜೀವಭಯದಿಂದ ತತ್ತರಿಸಿದ ಜನರು ತುರ್ತು ನಿರ್ಗಮದ ಬಾಗಿಲಿನ ಮೂಲಕ ರನ್ ವೇ ಮೂಲಕ ಇಳಿದು ಓಡಿ ಹೋಗಲು ಪ್ರಯತ್ನಿಸಿದರು ಮತ್ತೆ ಕೆಲವರು ಬಿದ್ದು ಗಾಯಗೊಂಡರು. ಕೆಲವರಿಗೆ ಗುಂಡಿನ ಪೆಟ್ಟು ತಗುಲಿತ್ತು.. ಆದರೂ ಕೂಡ ಅವರೆಲ್ಲರೂ ಅಲ್ಲಿಂದ ತಪ್ಪಿಸಿಕೊಂಡಿದ್ದರು.ಇನ್ನೇನು ಎಲ್ಲರೂ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ ಎಂಬ ಹೊತ್ತಿಗೆ ನೀರಜಾಳ ಕಣ್ಣಿಗೆ ಮೂರು ಜನ ಪುಟ್ಟ ಮಕ್ಕಳು ತಮ್ಮ ಸೀಟಿಗೆ ಅಂಟಿಕೊಂಡು ಕುಳಿತು ಭಯದಿಂದ ತತ್ತರಿಸುತ್ತಿರುವುದು ಕಂಡು ಬಂತು. ಒಂದು ಕ್ಷಣ ಕೂಡ ಅಳುಕದೆ ಆಕೆ ಆ ಮಕ್ಕಳ ಬಳಿಗೆ ಓಡಿ ಹೋಗಿ ಅವರನ್ನು ಬಳಸಿ ಎತ್ತಿಕೊಂಡು ತುರ್ತು ನಿರ್ಗಮನದ ಬಾಗಿಲ ಬಳಿ ಧಾವಿಸಿ ಅವರನ್ನು ಎತ್ತಿ ಹೊರಗೆ ಹಾಕಿದಳು. ಇದನ್ನು ನೋಡುತ್ತಿದ್ದ ಉಗ್ರರು ಆ ಮಕ್ಕಳತ್ತ ಹಾರಿಸಿದ ಗುಂಡುಗಳು ನೀರಜಾಗೆ ತಗುಲಿದವು. ಆಕೆಯ ಪುಟ್ಟ ದೇಹ ರಕ್ತಸಿಕ್ತವಾಯಿತು.ಆಸ್ಪತ್ರೆಗೆ ತಲುಪುವ ಮುನ್ನವೇ 22 ವರ್ಷ 11 ತಿಂಗಳು 29 ದಿನಗಳ ಇನ್ನೇನು ಮುಂದಿನ ಎರಡು ದಿನಗಳಲ್ಲಿ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದ ಆಕೆ ವಿಪರೀತ ರಕ್ತಸ್ರಾವದಿಂದ ಅಸು ನೀಗಿದಳು. . 20 ಜನರು ಆ ದುರ್ಘಟನೆಯಲ್ಲಿ ಮರಣ ಹೊಂದಿದರೆ ಒಟ್ಟು 359 ಪ್ರಯಾಣಿಕರು ರಕ್ಷಿಸಲ್ಪಟ್ಟರು. ದುರ್ಘಟನೆಯಲ್ಲಿ ಮರಣ ಹೊಂದಿದ ಹಾಗೂ ಬದುಕುಳಿದವರ ಸಂಖ್ಯೆಯಲ್ಲಿನ ಅಗಾಧ ವ್ಯತ್ಯಾಸದ ಅನುಪಾತವನ್ನು ನೋಡಿ ಜನ ದಿಗ್ಭ್ರಮೆಗೊಂಡರು…. ಈ ಸಮಯದಲ್ಲಿ ಎಲ್ಲರಿಗೂ ಅರಿವಾಗಿದ್ದು ನೀರಜಾಳ ಸಮಯೋಚಿತ ಆಲೋಚನೆಗಳು ಹಾಗೂ ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿನ ಪ್ರಯತ್ನ. ಅಂತಿಮ ಘಟ್ಟದಲ್ಲಿ ಪೈಲೆಟ್ ಗಳಿಗೆ ಎಚ್ಚರಿಕೆ ನೀಡಿ ಅವರು ವಿಮಾನದಿಂದ ತಪ್ಪಿಸಿಕೊಂಡು ಹೋಗುವಂತೆ ಮಾಡುವ ಮೂಲಕ ಆಕೆ ಘಟನೆಗೆ ಅತಿ ದೊಡ್ಡ ತಿರುವನ್ನು ನೀಡಿದಳು. ಅತಿ ದೊಡ್ಡ ಹತ್ಯಾಕಾಂಡವಾಗಬೇಕಿದ್ದ ದುರ್ಘಟನೆಯು ಆಕಸ್ಮಿಕ ದುರಂತದಲ್ಲಿ ಪರ್ಯವಸಾನವಾಯಿತು. ಭಾರತ ಮಾತ್ರವಲ್ಲದೆ ಪಾಕಿಸ್ತಾನ ಮತ್ತು ಅಮೆರಿಕದಲ್ಲಿ ಆಕೆಗೆ ಮರಣೋತ್ತರ ಗೌರವವನ್ನು ಸಲ್ಲಿಸಲಾಯಿತು.ಭಾರತ ದೇಶವು ಶಾಂತಿ ಸಮಯದಲ್ಲಿ ನೀಡುವ ಅತ್ಯುನ್ನತ ಗೌರವ ಪ್ರಶಸ್ತಿಯಾದ ಅಶೋಕ ಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ಆಕೆಗೆ ನೀಡಿ ಗೌರವಿಸಿದ್ದು, ನೀರಜಾ ಈ ಗೌರವ ಪಡೆದ ಅತ್ಯಂತ ಚಿಕ್ಕ ವಯಸ್ಸಿನ ವ್ಯಕ್ತಿ ಹಾಗೂ ಮೊದಲ ಮಹಿಳಾ ನಾಗರಿಕಳಾಗಿದ್ದಾಳೆ. ವಿಶ್ವಸಂಸ್ಥೆಯು ಆಕೆಗೆ ವಿಮಾನಯಾನ ಸುರಕ್ಷಾ ಫೌಂಡೇಶನ್ ನಾಯಕತ್ವದ ಪ್ರಶಸ್ತಿಯನ್ನು ನೀಡಿ ( ಫ್ಲೈಟ್ ಸೇಫ್ಟಿ ಫೌಂಡೇಶನ್ ಹೀರೋಯಿಸಂ ಅವಾರ್ಡ್ )ಗೌರವಿಸಿದೆ. ಇದರ ಜೊತೆಗೆ ಜಸ್ಟಿಸ್ ಫಾರ್ ಕ್ರೈಂ ಅವಾರ್ಡ್ ಪ್ರಶಸ್ತಿಯನ್ನು ನೀಡಿದೆ. ಪಾಕಿಸ್ತಾನ ಸರ್ಕಾರವು ಆಕೆಗೆ ತಂಗ ಯೇ ಇನ್ಸಾನಿಯತ್ ( ಅವಾರ್ಡ್ ಫಾರ್ ಹುಮ್ಯಾನಿಟಿ ) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಆದರೆ ಇದೆಲ್ಲಕ್ಕಿಂತ ಮಿಗಿಲಾಗಿ ಆ ದಿನದ ದುರ್ಘಟನೆಯಲ್ಲಿ ರಕ್ಷಿಸಲ್ಪಟ್ಟ ಪ್ರಯಾಣಿಕರಿಂದ ಆಕೆಗೆ ದೊರೆತಿದೆ. ಅಮೆರಿಕದ ಓರ್ವ ಪ್ರಜೆ ಸನ ಶೈನ್ ವೇ ಸುವಾಲ ಎಂಬ ಹೆಣ್ಣು ಮಗಳು ತನ್ನ ಮಗಳಿಗೆ ಆಕೆಯನ್ನು ರಕ್ಷಿಸಿದ ನೀರಜಾ ಎಂಬ ಹೆಸರಿನಿಂದ ಪುನರ್ ನಾಮಕರಣ ಮಾಡಿದಳು. ಸಾಕಷ್ಟು ಜನ ಆಕೆಯನ್ನು ದೈವ ರಕ್ಷಕಿ (ಗಾರ್ಡಿಯನ್ ಏಂಜಲ್) ಎಂದು ಕರೆದರು. ಆಕೆಯಿಂದ ರಕ್ಷಿಸಲ್ಪಟ್ಟ ಮೂರು ಜನ ಮಕ್ಕಳ ಪಾಲಕರು ಆಕೆ ತನ್ನನ್ನು ತಾನು ಬಲಿಕೊಟ್ಟು ನಮ್ಮನ್ನು ಉಳಿಸಿದಳು ಎಂದು ಆಕೆಯನ್ನು ಕೊಂಡಾಡಿದರು  2016ರಲ್ಲಿ ಬಾಲಿವುಡ್ ಆಕೆಯ ಹೆಸರಿನಲ್ಲಿ ನೀರಜಾ ಎಂಬ ಚಿತ್ರವನ್ನು ನಿರ್ಮಾಣ ಮಾಡಿ ಆಕೆಯ ಕಥೆ ಲಕ್ಷಾಂತರ ಜನರಿಗೆ ತಲುಪುವಂತೆ ಮಾಡಿತು. ಏರ್ಪೋರ್ಟ್ ಗಳು, ಸ್ಕಾಲರ್ಶಿಪ್ ಗಳು ಹಾಗೂ ಪ್ರಶಸ್ತಿಗಳು ಆಕೆಯ ಹೆಸರಿನಲ್ಲಿ ನೀಡಲ್ಪಟ್ಟವು. ಇದೆಲ್ಲಕ್ಕಿಂತ ಶಾಶ್ವತವಾದ ನೆನಪನ್ನು ಕೆತ್ತಲಾಗಿದ್ದು ಯಾವುದೇ ಅಮೃತ ಶಿಲೆಯ ಇಲ್ಲವೇ ಕಂಚಿನ ಫಲಕದಲ್ಲಿ ಅಲ್ಲ ಬದಲಾಗಿ 369 ಜನ ಪ್ರಯಾಣಿಕರು ತಮ್ಮ ತಮ್ಮ ಕುಟುಂಬಗಳಿಗೆ ಮರಳಿ ದೊರೆತದ್ದು. ಇಂದಿಗೂ ಆ ಕುಟುಂಬಗಳ ಸಂತೋಷದ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ  ಮುಂತಾದ ಕಾರ್ಯಕ್ರಮಗಳನ್ನು ಆಚರಿಸಿಕೊಳ್ಳಲು ಕಾರಣವಾದದ್ದು ಪಾತಕಿಗಳ ವಿರುದ್ದ ನೀರಜಾಳ ಸೋಲೊಪ್ಪಿಕೊಳ್ಳದಿರುವ ಮನೋಭಾವ. ನೀರಜಾ ಭಾನೋಟ್ ಸೈನಿಕಳಾಗಿರಲಿಲ್ಲ.. ಆಕೆಗೆ ಇಂತಹ ಆಕಸ್ಮಿಕಗಳ ವಿರುದ್ಧ ಹೋರಾಡುವ ಯಾವುದೇ ತರಬೇತಿ ಇರಲಿಲ್ಲ. ಅತ್ಯಂತ ಚಿಕ್ಕ ವಯಸ್ಸಿನ ಸಾಮಾನ್ಯವಾಗಿ ವಿಮಾನ ಪರಿಚಾರಕರು ನಿರ್ವಹಿಸುವ ಕರ್ತವ್ಯದ ಬದ್ಧತೆ ಮಾತ್ರ ಆಕೆಯದಾಗಿತ್ತು….ಆದರೆ ದುಷ್ಟ ಶಕ್ತಿಗಳು ಆಕೆಯ ವಿಮಾನವನ್ನು ಏರಿದಾಗ ಆಕೆ ಅಲ್ಲಿಂದ ಓಡಿ ಹೋಗಲಿಲ್ಲ, ಅಡಗಿಕೊಳ್ಳಲಿಲ್ಲ ಬದಲಾಗಿ ಆಕೆ ಕತ್ತಲು ಮತ್ತು ಬೆಳಕಿನ ನಡುವೆ ಗೋಡೆಯಾಗಿ ನಿಂತಳು…. ಹಾಗೂ ತನ್ನ ಕೊನೆಯ ಉಸಿರಿನವರೆಗೂ ಅಚಲವಾದ ರಕ್ಷಣಾ ಗೋಡೆಯಾಗಿ ಪರಿಣಮಿಸಿದಳು  ಆಕೆಯ ಮುಂದೆ ಇಡೀ ಬದುಕು ಇತ್ತು. ಪ್ರೀತಿಸುವ ತಂದೆ ತಾಯಿ ಒಡಹುಟ್ಟಿದವರ ಕಾಳಜಿ ಕೂಡ…. ಆದರೆ ಆಕೆ ತನ್ನ ಬದುಕನ್ನೇ 350ಕ್ಕೂ ಹೆಚ್ಚು ಜನ ಅಪರಿಚಿತ ಪ್ರಯಾಣಿಕರ ಭವಿಷ್ಯಕ್ಕಾಗಿ ಮುಡುಪಾಗಿಟ್ಟಳು ಅದುವೇ ಆಕೆಯ ಮಹತಿ…. ಕರ್ತವ್ಯ ಪ್ರಜ್ಞೆ ಹಾಗೂ ಶಿಸ್ತಿನ ಅತ್ಯಂತ ಶುದ್ಧವಾದ ರೂಪ ನೀರಜಾ  ಈ ಜಗತ್ತಿಗೆ ನೀರಜಾ ಭಾನೋಟಿ ಏನೂ ಅಲ್ಲ ಆದರೆ ಆ 359 ಜನ ಪ್ರಯಾಣಿಕರ ಬದುಕಿಗೆ ಆಕೆಯೇ ಎಲ್ಲಾ. ಆಕೆಯಿಂದಲೇ ಅವರೆಲ್ಲ ಇಂದು ಬದುಕಿ ಬಾಳುತ್ತಿರುವುದು…… ಸಾವಿನಲ್ಲೂ ಸಾರ್ಥಕತೆ ಕಂಡವಳು ನೀರಜಾ ಆಕೆಗೆ ನಮ್ಮ ತುಂಬು ಹೃದಯದ ನಮನಗಳು ವೀಣಾ ಹೇಮಂತ್ ಗೌಡ ಪಾಟೀಲ್

“ಸಾವಿನಲ್ಲೂ ಸಾರ್ಥಕತೆ ಮೆರೆದ…ನೀರಜಾ ಭಾನೋಟ್.” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

You cannot copy content of this page

Scroll to Top