ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಲಾಕ್ಡೌನ್ ಕಾಲಘಟ್ಟದ ದಾಂಪತ್ಯ

ಲೇಖನ ಲಾಕ್ಡೌನ್ ಕಾಲಘಟ್ಟದ ದಾಂಪತ್ಯ ಅಂಜಲಿ ರಾಮಣ್ಣ ಬೆಳಗಿನಲ್ಲಿ ಅವನು ಬಲು ಸುಭಗ. ರಾತ್ರಿಯಾಯಿತೆಂದರೆ ಕೀಚಕನೇ ಮೈಯೇರಿದ್ದಾನೆ ಎನ್ನುವಂತೆ ಇರುತ್ತಿದ್ದ. ಅವಳ ಮೈಮೇಲಿನ ಹಲ್ಗುರುತು, ಉಗುರ್ಗೆರೆ, ಸಿಗರೇಟಿನ ಬೊಟ್ಟು ಕತ್ತಲಲ್ಲೂ ಮಿರಮಿರ ಉರಿಯುತ್ತಿತ್ತು. ಸಹಿಸುತ್ತಲೇ ಅವಳ ದಾಂಪತ್ಯಕ್ಕೆ ಮೂರು ವರ್ಷ ಕಳೆದುಹೋಗಿತ್ತು. ಸ್ನಾನದ ನೀರು ಬಿದ್ದರೆ ಧಗಧಗ ಎನ್ನುವ ದೇಹ ದಹನಕ್ಕೆ ಹೆದರಿದ್ದ ದಾಕ್ಶಾಯಣಿ  ಅವಳು ಅದೆಷ್ಟೋ ದಿನಗಳಿಗೆ ಒಮ್ಮೆ ಸ್ನಾನ ಮಾಡುತ್ತಿದ್ದಳು. ಕತ್ತಲಲ್ಲಿ ಅವಳಾತ್ಮವನ್ನು ಹೀಗೆ ಚರ್ಮದಂತೆ ಸಂಸ್ಕರಿಸುತ್ತಿದ್ದವ ಬೆಳಕಿನಲ್ಲಿ ಬೆಕ್ಕಿನ ಮರಿಯಂತೆ ಆಗುತ್ತಿದ್ದ. ಆಫೀಸಿನಲ್ಲಿ ಬಹಳವೇ ಪ್ರಾಮಾಣಿಕ. ನೆಂಟರಿಷ್ಟರ ಗೋಷ್ಠಿಯಲ್ಲಿ ಇವನೇ ಗೋಪಾಲಕೃಷ್ಣ. ಸಹಿಸಿದಳು, ಸಹಿಸಿದಳು ಅವಳು. ಸಹನೆ ಖಾಲಿಯಾಯ್ತು. ಉಪಾಯ ಒಂದು ಯಮಗಂಡಕಾಲದಂತೆ ಅವಳ ತಲೆ ಹೊಕ್ಕಿತು.  ನಿತ್ಯವೂ ಅವನ ರಾತ್ರಿ ಊಟದಲ್ಲಿ ಬೇಧಿ ಮಾತ್ರೆ ಬೆರಸಿಕೊಡಲು ಶುರುವಿಟ್ಟಳು. ಆರು ತಿಂಗಳು ಮೈಯ್ಯಿನ ನೀರು ಆರಿ ಅವನು ಹೈರಾಣಾದ. ಸ್ಕ್ಯಾನಿಂಗ್ ಸೆಂಟರ್ಗಳಿಂದ ತಿಮ್ಮಪ್ಪನ ದರುಶನದವರೆಗೂ ಎಡುಕಾಡುತ್ತಾ ಮೆತ್ತಗಾದ. ಇವಳ ಮನಸ್ಸು ಉಸಿರಾಡಲು ಶುರುವಿಟ್ಟಿತು, ಶರೀರದ ಮೇಲಿನ ಗಾಯ ಒಣಗುವತ್ತ ಮುಖ ಮಾಡಿತ್ತು. ಅವಳು ಈ ಕಥೆಯನ್ನು ಮತ್ತ್ಯಾರದ್ದೋ ಜೀವನದ ಘಟನೆಯಂತೆ ಏರಿಳಿತವಿಲ್ಲದೆ ಹೇಳಿದಾಗ ಸಂಬಂಧಗಳ ನಡುವಿನ ಥಣ್ಣನೆಯ ಕ್ರೌರ್ಯಕ್ಕೆ ದಂಗಾಗಿ ಹೋಗಿದ್ದೆ. ದೌರ್ಜನ್ಯಕ್ಕೆ ದಶಕಂಠ ಎಂದರಿವಿದ್ದವಳಿಗೆ ಅದು ಮುಖವಿಹೀನ ಎನ್ನುವುದು ಅರಿವಿಗೆ ಬಂದಿತ್ತು. ಹೀಗೆ ಗಂಡಹೆಂಡಿರು ಅವರ ಸಮಸ್ಯೆಗಳನ್ನು ಹೇಳಿಕೊಂಡಾಗಲೆಲ್ಲಾ ಟೆಬಲ್‍ನ ಈ ಬದಿಯಲ್ಲಿ ಕುಳಿತ ನನ್ನದು ಸಾಧಾರಣವಾಗಿ ಒಂದು ಸಿದ್ಧ ಉತ್ತರ ಇರುತ್ತಿತ್ತು  “ಒಟ್ಟಿಗೆ ಕುಳಿತು ಮಾತನಾಡಿ” ಅಥವಾ “ಹೆಚ್ಚು ಸಮಯವನ್ನು ಒಬ್ಬರ ಜೊತೆ ಒಬ್ಬರು ಕಳೆಯಿರಿ” ಎನ್ನುತ್ತಿದ್ದೆ.   ಉದ್ಯೋಗ, ಹಣ ಇವುಗಳ ಬೆನ್ನ ಮೇಲೆ ತಮ್ಮ ವಿಳಾಸವನ್ನು ಕೆತ್ತಿಡಬೇಕು ಎನ್ನುವ ಧಾವಂತದಲ್ಲಿಯೇ ಶ್ವಾಸಕೋಶ ತುಂಬಿಕೊಳ್ಳುವ ಅವನು-ಅವಳು ಇವರ ಮಧ್ಯೆ ಸಮಯ ಮತ್ತು ಮಾತು ಇವುಗಳನ್ನುಳಿದು ಇನ್ನೆಲವೂ ಇರುವುದನ್ನು ಕಂಡಿದ್ದರಿಂದ, ಬಂದವರಿಗೆಲ್ಲಾ “ಟೈಮ್ ಕೊಟ್ಟು ಟೈಮ್ ಕೊಳ್ಳಿ” ಎನ್ನುತ್ತಿದ್ದೆ. ಇದನ್ನು ಕೇಳಿಸಿಕೊಂಡಿತೇನೋ ಎನ್ನುವ ಹಾಗೆ ಬಂದು ಬಿಟ್ಟಿತು ಕರೋನ ಸಾಂಕ್ರಾಮಿಕ ಪಿಡುಗು. ನಾನೊಂದು ತೀರ ನೀನೊಂದು ತೀರ ಎಂದು ಹಾಡುತ್ತಿದ್ದವರೆಲ್ಲಾ, ನೀನೆಲ್ಲೋ ನಾನಲ್ಲೇ ರಾಗವಾಗುವಂತೆ ಆಯಿತು. ಆಹಾ, ಇನ್ನು ಎಲ್ಲರ ದಾಂಪತ್ಯ ಕೆ.ಎಸ್.ನ ಅವರ ಕವಿತೆಗಳಂತೆ ಎಂದು ಭಾವಿಸುವ ಹೊತ್ತಿನಲ್ಲಿ ವಿಶ್ವಸಂಸ್ಥೆಯಾದಿಯಾಗಿ, ಸಚಿವಾಲಯ ಮತ್ತು ಪ್ರಪಂಚದಾದ್ಯಂತ ಹಲವಾರು ವಿಶ್ವವಿದ್ಯಾಲಯಗಳು “ ಲಾಕ್ಡೌನ್ ಸಮಯದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಗಣನೀಯ ಏರಿಕೆ” ಎನ್ನುವ ಕ್ಷಾರ ಸತ್ಯವನ್ನು ಒಮ್ಮೆಲೆ ಅಂಕಿಅಂಶಗಳ ಸಹಿತ ಹೊರಹಾಕಿರುವುದು ದಾಂಪತ್ಯ ಎನ್ನುವ ಪರಿಕಲ್ಪನೆಯನ್ನು ಮೂಕವಾಗಿಸಿದೆ. ಮನೆಯಿಂದಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಹೆಚ್ಚಿದೆ. ಅದೆಷ್ಟೋ ಮನೆಗಳಲ್ಲಿ ನಿರುದ್ಯೋಗ ಎನ್ನುವ ವೈರಸ್ ಕಣ್ಣೀರಾಗಿ ಹರಿಯುತ್ತಿದೆ. ಶಾಲೆಗಳಿಲ್ಲದೆ ಮಕ್ಕಳು ಬಳ್ಳಿಗೆ ಭಾರ ಎನ್ನುವಂತಾಗಿದೆ. ಹೆಣ್ಣು-ಗಂಡಿನ ನಡುವಲ್ಲಿ ಮಾಧುರ್ಯ ಕುರುಡಾಗಿದೆ, ಸಂಯಮ ಮನೆಬಿಟ್ಟು ಹೊರಟಿದೆ. ಅಹಂ ಅಸಹನೆಯಲ್ಲಿ ಮಾತಾಗುತ್ತಿದೆ. ಮೌನ ನೋವು ನುಂಗುತ್ತಿದೆ. “ಮೇಡಂ ನಿಮ್ಮನ್ನು ಮೀಟ್ ಮಾಡಬೇಕು” ಎಂದು ಫೋನ್‍ನಲ್ಲಿದ್ದವಳು ಕೇಳಿದಾಗ “ಈಗ ಕಷ್ಟ, ಲಾಕ್ದೌನ್ ಇದೆಯಲ್ಲ” ಎಂದೆ. “ನೀವೇ ಏನಾದರೂ ಸಲಹೆ ಕೊಡಿ, ನನ್ನಿಂದ ಇನ್ನು ಈ ಮದುವೆಯನ್ನು ತಡೆದುಕೊಳ್ಳಲು ಆಗುತ್ತಿಲ್ಲ” ಎಂದವಳ ಮದುವೆಗೆ ಮೂವತ್ತಾರು ತಿಂಗಳಷ್ಟೇ. “ಏನಾಯ್ತು?” ಎನ್ನುವ ಚುಟುಕು ಪ್ರಶ್ನೆಗೆ ಅವಳು “ ಮೇಡಂ ಆಫೀಸಿಗೆ ಹೋಗುತ್ತಿದ್ದಾಗ ಹೇಗೊ ಎರಡೆರಡು ಶಿಫ್ಟ್ ಹಾಕಿಸಿಕೊಂಡು ಮ್ಯಾನೇಜ್ ಮಾಡ್ತಿದ್ದೆ. ಆದರೆ ಈಗ ನಮ್ಮ ಆಫೀಸಿನಲ್ಲಿ ಇನ್ನೊಂದು ವರ್ಷ ಮನೆಯಿಂದಲೇ ಕೆಲಸ ಮಾಡಿ ಎಂದು ಬಿಟ್ಟಿದ್ದಾರೆ. ನನ್ನ ಗಂಡನಿಗೂ ಮನೆಯಿಂದಲೇ ಕೆಲಸ. ಜೊತೆಲಿರೋದು ಬಹಳ ಕಿರಿಕಿರಿ” ಎಂದು ಮುಂದುವರೆದಳು. “ ಹತ್ತು ನಿಮಿಷಕೊಮ್ಮೆ ನನ್ನ ಅತ್ತೆ ಊರಿನಿಂದ ಮಗನಿಗೆ ಫೋನ್ ಮಾಡ್ತಾರೆ. ಅವರಿಗೆ ನಾವಿಬ್ಬರು ಮನೆಲಿದ್ದೀವಿ ಒಟ್ಟಿಗೆ ಎಂದರೆ ಏನೋ ಇನ್ಸೆಕ್ಯುರಿಟಿ. ಏನೇನೋ ಮಗನ ಕಿವಿಗೆ ಊದುತ್ತಾರೆ. ಅದನ್ನು ಕೇಳಿಕೊಂಡು ನನ್ನ ಗಂಡ ಇಲ್ಲಸಲ್ಲದ್ದಕ್ಕೆ ಜಗಳ ಮಾಡ್ತಾನೆ. ಪ್ಲೀಸ್ ಏನಾದರು ಲೀಗಲ್ ರೆಮಿಡಿ ಹೇಳಿ ಮೇಡಂ” ಎಂದು ನನ್ನ ಕಿವಿ ತುಂಬಿಸಿದಳು. ಒಳ್ಳೆ ಅಡುಗೆ ಮಾಡಿಕೊಂಡು ತಿನ್ನಿ, ಪುಸ್ತಕ ಓದಿ, ಒಟ್ಟಿಗೆ ಟಿವಿ ನೋಡಿ, ರಾತ್ರಿಗಳನ್ನು ರಂಗಾಗಿಸಿಕೊಳ್ಳಿ ವಗೈರೆ ವಗೈರೆ ಸಲಹೆಗಳು ಲಾಕ್ಡೌನ್ ಕಾಲಘಟ್ಟದ ದಾಂಪತ್ಯಕ್ಕೆ ಅದೆಷ್ಟು ಪೇಲವ. ಒಂದೇ ಮುಖವನ್ನು ಸದೊಂಭತ್ತು ಕಾಲವೂ  ನೋಡುತ್ತಿದ್ದರೆ ಆಕ್ಸಿಟೋಸಿನ್ ಹಾರ್ಮೋನ್ ತನ್ನ ಫ್ಯಾಕ್ಟರಿಯನ್ನು ಬಂದು ಮಾಡಿಬಿಡುತ್ತದೆ ಎನ್ನಿಸುತ್ತೆ. ಅಥವಾ ಸೈರಣೆಗೂ ಕೋವಿಡ್-19 ಆಕ್ರಮಣ ಮಾಡಿದೆಯೇನು? ಪರಸ್ಪರ ವಿಶ್ವಾಸ , ಗೌರವಗಳು ಆಷಾಢಕ್ಕೆ ತವರಿಗೆ ಹೋದವೇನು?! ಮನೆವಾರ್ತೆ ಸಹಾಯಕಿಯ ಹೆಸರು ರಾತ್ರಿ ಹತ್ತು ಗಂಟೆಗೆ ಮೊಬೈಲ್‍ನಲ್ಲಿ ಸದ್ದಾದಾಗ “ಓಹೋ ನಾಳೆ ಪಾತ್ರೆ ತೊಳೆಯಬೇಕಲ್ಲಪ್ಪಾ” ಎಂದು ಗೊಣಗಿಕೊಂಡು “ಏನು” ಎಂದೆ.  ಅವಳು ಜೋರಾಗಿ ಅಳುತ್ತಾ “ಅಕ್ಕಾ ನಂಗೆ ಜೀವ್ನ ಸಾಕಾಯ್ತಕ್ಕ, ಏನಾರಾ ಮಾಡ್ಕೊಳವಾ ಅನ್ದ್ರೆ ಮಕ್ಕ್ಳ್ಮುಕ ಅಡ್ಡ ಬತ್ತದೆ” ಎಂದು ಗೋಳಾದಳು. “ ಮೊದ್ನಾಗಿದ್ದ್ರೆ ಬೆಳಗೆಲ್ಲಾ ಗಾರೆ ಕೆಲ್ಸುಕ್ಕ್ ಓಗಿ ಎನ್ಗೋ ಸನ್ಜೆಗೆ ಬಾಟ್ಲೀ ತಂದು ಕುಡ್ಕೊಂಡು, ಉಣ್ಣಕ್ಕಿಕ್ದಾಗಾ ಉಣ್ಣ್ಕೊಂಡು ಮನೀಕೊಳೋನು. ಈಗ ಮನೇಲೆ ಇರ್ತಾನೆ ಅಕ್ಕ. ಕುಡ್ಯಕ್ಕೂ ಸಿಂಕ್ತಿಲ್ಲ. ಸುಮ್ಕೆ ಇಲ್ಲ್ದಕೆಲ್ಲಾ ಕ್ಯಾತೆ ತಗ್ದು ಒಡಿತಾನೆ ಅಕ್ಕ. ಮೈಯಲ್ಲಾ ಬಾಸುಂಡೆ ಬಂದೈತೆ” ಅವಳು ಅಳುತ್ತಿದ್ದಳು. “ಅಳ್ಬೇಡ ಸುಮ್ಮ್ನಿರು. ಪೋಲಿಸ್ ಕಂಪ್ಲೇಂಟ್ ಕೊಡ್ತೀನಿ ಅನ್ನು” ಎನ್ನುವ ಸಲಹೆ ಕೊಟ್ಟೆ. “ ಉಂ, ಅಕ್ಕ ಅಂಗೇ ಏಳ್ದೆ ಅದ್ಕೆ ಈಗ ಲಾಕ್ಡೋನು ಯಾವ ಪೋಲೀಸು ಏನು ಮಾಡಲ್ಲ. ಅದೇನ್ ಕಿತ್ಕೋತೀಯೋ ಕಿತ್ಕೋ ಓಗು ಅಂದ ಕಣಕ್ಕ” ಎಂದು ಮುಸುಗುಟ್ಟಿದಳು. ಕರೋನಾದ ಕರಾಳ ಮುಖ ಕಾಣುತ್ತಿರುವುದು ಬರೀ ಆಸ್ಪತ್ರೆಗಳಲ್ಲಿ ಅಲ್ಲ ಅದೆಷ್ಟು ಗುಡಿಸಲು, ಶೆಡ್ಡುಗಳಲ್ಲೂ ವೆಂಟಿಲೇಟರ್ಗಳನ್ನು ಬಯಸುತ್ತಿದೆ ಬದುಕು. ವಿವಾಹ ಆಪ್ತಸಮಾಲೋಚನೆ ಎನ್ನುವ ವಿಷಯವನ್ನೇ ವಿದೇಶದ  ಕಾಲೇಜುಗಳಲ್ಲಿ ಕಲಿಸಲಾಗುತ್ತದೆ. ಮದುವೆಗೆ ಮೊದಲೇ ವಧು-ವರ ಇಬ್ಬರಿಗೂ ಸಂಸಾರ ಎಂದರೆ ಏನು ಎಂದು ಹೇಳಿಕೊಡುವ, ಹೊಂದಾಣಿಕೆಯ ಪಾಠ ಮಾಡುವ ತರಬೇತಿ ಶಿಬಿರಗಳು ಈಗ ನಮ್ಮ ದೇಶದಲ್ಲೂ ವ್ಯಾಪಾರ ಮಾಡುತ್ತಿವೆ. ಮದುವೆಯಾದವಳಿಗೆ ಸ್ತ್ರೀಧನ ಹಕ್ಕು ತಿಳಿ ಹೇಳುತ್ತೆ ಕಾನೂನು. ದೇಹಗಳ ಸಮಾಗಮದ ಬಗ್ಗೆ, ಲೈಂಗಿಕ ಆರೋಗ್ಯದ ಬಗ್ಗೆ ಖುಲ್ಲಂಖುಲ್ಲಾ ವಿವರಿಸಲು ತಜ್ಞರಿದ್ದಾರೆ. ಗಂಡಹೆಂಡತಿಯರ ಜಗಳ ಉಂಡು ಮಲಗುವ ತನಕ ಎಂದು ಕಂಡುಕೊಂಡಿದ್ದ ಮನೆ ಹಿರೀಕರೂ ’ಸಲಹೆಕೋರ’ರಾಗಿದ್ದಾರೆ. ಕೌಟುಂಬಿಕ ನ್ಯಾಯಾಲಯ ಇದೆ, ಸಹಾಯವಾಣಿ ಕೆಲಸ ಮಾಡುತ್ತಿದೆ. ಸ್ನೇಹಿತರಿದ್ದಾರೆ. ಮನೆ ಕಟ್ಟುವವರಿದ್ದಾರೆ. ಮನಮುರುಕಿದ್ದಾರೆ. ಹಳೆ ಹುಡುಗಿ ನೆನಪೂ ಇದೆ ಹೊಸಗೂಸ ತೊಟ್ಟಿಲು ತೂಗುತ್ತಿದೆ. ಇಬ್ಬರಿಗೂ ಆಸ್ತಿ ಜಗಳವಿದೆ, ಮುನಿಸು ಕದನವೂ ಇದೆ. ಶಾಂತಿ ನೆಮ್ಮದಿ ಕುಂಟಿದರೂ ಮನೆ ಮೂಲೆಯಲ್ಲಿ ಇನ್ನೂ ಇದೆ. ಹೀಗೆ ’ಇರುವ’ ಇವರುಗಳು ಯಾರೂ ಊಹೆ ಮಾಡಿದ್ದಿರದ ಒಂದೇ ವಿಷಯ  “ ಗಂಡ ಹೆಂಡತಿ ಹೆಚ್ಚು ಸಮಯ ಜೊತೆಯಲ್ಲಿ ಇದ್ದರೆ ಕೌಟುಂಬಿಕ ದೌರ್ಜನ್ಯ ಹೆಚ್ಚುತ್ತದೆ” ಎನ್ನುವುದು.  ಮುಂದಿನ ವರ್ಷ ತಮ್ಮ ಮದುವೆಯ ಅರವತ್ತನೆಯ ವಾರ್ಷಿಕೋತ್ಸವಕ್ಕೆ ಖುಷಿಯಿಂದಲೇ ತಯಾರಿ ಮಾಡಿಕೊಳ್ಳುತ್ತಿದ ಆ ಯಜಮಾನನಿಗೆ ನಿತ್ಯವೂ ಕ್ಲಬ್‍ಗೆ ಹೋಗಿ ಒಂದು ಪೆಗ್ ಜೊತೆ ನಾಲ್ಕು ಸುತ್ತು ಇಸ್ಪೀಟಾಟ ಮುಗಿಸಿ ಸ್ನೇಹಿತರ ಜೊತೆ ಹರಟಿ ಬರುವುದು, ಮೂವತ್ತು ವರ್ಷಗಳಿಂದ ರೂಢಿಸಿಕೊಂಡಿದ್ದ ಹವ್ಯಾಸ. ಈಗಾತ ಹಿರಿಯ ನಾಗರೀಕ. ಕರೋನ ಹೊಸಿಲಲ್ಲೇ ಕುಳಿತಿದೆ. ಕ್ಲಬ್‍ಗೆ ಹೋಗುವುದು ಇನ್ನು ಕನಸಿನಂತೆಯೇ. ಯಜಮಾನನಿಗೆ ಈಗ ಜುಗುಪ್ಸೆ. ಸಿಟ್ಟು ತೋರಿಸಲು ಮನೆಯಲ್ಲಿ ಇರುವುದು ಎಂಭತ್ತರ ಹೆಂಡತಿ ಮಾತ್ರ. ಆಕೆ ಈಗ ದೂರದೇಶದ ಮಗಳು ಅಳಿಯನಿಗೆ ನಿತ್ಯವೂ ಫೋನ್ ಮಾಡಿಕೊಂಡು ಅಳುತ್ತಾರೆ. “ಇವರ ಬೈಗುಳ ತಡೆಯಕ್ಕಾಗ್ತಿಲ್ಲ” ಎಂದು ಗೋಳಿಡುತ್ತಾರೆ. ವಯಸ್ಸು ನಡೆದಂತೆ ಮನಸ್ಸು ಕೂರುವುದು ಎಂನ್ನುವ ನಂಬಿಕೆ ಇದ್ದ ದಾಂಪತ್ಯಗಳಲ್ಲಿ ಈಗ ಕರೋನ ಮಾಗುವಿಕೆಯನ್ನು ಅನಿರ್ಧಿಷ್ಟ ಕಾಲಕ್ಕೆ ಮುಂದೂಡಿದೆ.  ಅದೆಷ್ಟೋ ವರ್ಷಗಳ ಹಿಂದೆಯೇ ಹಳ್ಳಿ ಬಿಟ್ಟು ಪಟ್ಟಣ ಸೇರಿದ ಇವನು ಈ ಊರಿನಲ್ಲಿಯೇ ಟ್ಯಾಕ್ಸಿ ಓಡಿಸುತ್ತಲೇ ಒಂದು ಸೈಟು, ವಾಸಕ್ಕೆ ಮನೆ ಮತ್ತು ಮದುವೆಯನ್ನೂ ಮಾಡಿಕೊಂಡ. ಈಗ ಒಂದು ವರ್ಷದಲ್ಲಿ ತಮ್ಮನನ್ನು ಅವನಾಕೆಯನ್ನೂ ಕರೆಸಿಕೊಂಡು ತನ್ನ ಬಳಿಯೇ ಇರಿಸಿ ಕೊಂಡಿದ್ದಾನೆ. ತಮ್ಮನಿಗೆ ಅಪಾರ್ಟ್‍ಮೆಂಟ್ ಒಂದರಲ್ಲಿ ಸೆಕ್ಯುರಿಟಿ ಕೆಲಸ ನಾದಿನಿಗೆ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಕೊಡಿಸಿ ನೆಮ್ಮದಿಯ ಮೀಸೆ ತಿರುವುತ್ತಾ ಸುಖದಿಂದ ಇದ್ದ.  ಬಸುರಿ ಹೆಂಡತಿ ಮೊದಲ ಮಗುವಿನೊಡನೆ ಊರಿಗೆ ಹೋದೊಡನೆ ಲಾಕ್ಡೌನ್ ಬಂತು. ಮನೆಯಲ್ಲಿನ ಮೂವರೂ ಈಗ ಬರಿಗೈಯಾಗಿದ್ದಾರೆ. ಹತ್ತಿದ ಜಗಳ ಹರಿಯುತ್ತಿಲ್ಲ. ಅಣ್ಣತಮ್ಮರ ಜಗಳದ ನಡುವೆ ಬಿಡಿಸಲು ಹೋದವಳ ತಲೆಗೆ ಹಾರೆಯೇಟು ಬಿದ್ದಿದೆ. ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಅಜ್ಞಾವಸ್ಥೆಯಲ್ಲಿ ಬಿದ್ದಿದ್ದಾಳೆ.  ಮದುವೆ ಇಲ್ಲದ ಮೂವರು ಅಕ್ಕಂದಿರು ಅವರ ಹಾಸಿಗೆ ಹಿಡಿದ ತಾಯ್ತಂದೆಯರು ನಡುವೆ ಮನೆಗೊಬ್ಬನೇ ಕುಲೋದ್ಧಾರಕ. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾನೆ. ಬಾಲ್ಯದಿಂದಲೂ ಅಕ್ಕಂದಿರ ಮಾತಿಗೆ, ಬಿರುಸಿಗೆ ನಲುಗಿದ್ದವ ಒಂದ್ನಾಲ್ಕು ವರ್ಷವಾದರೂ ಎದೆ ಪೂರ್ತಿ ಉಸಿರು ತುಂಬಿಕೊಳ್ಳಲು ಬಯಸಿದ್ದ. ಮೊನ್ನೆ ಜನವರಿಯಲ್ಲಿ ಅವನ ಕಂಪನಿಯವರು ಒಂದು ಪ್ರಾಜೆಕ್ಟಿಗೆ ಇವನನ್ನು ಮುಖ್ಯಸ್ಥನನ್ನಾಗಿಸಿ ಸಿಂಗಾಪೂರಿಗೆ ವರ್ಗಾವಣೆ ನೀಡಿದ್ದರು. ಉತ್ಸಾಹದಲ್ಲಿ ಹೊರಟಿದ್ದವನೀಗ ವರ್ಗಾವಣೆಯ ರದ್ದತಿ ಪತ್ರ ಮಾತ್ರ ಹಿಡಿದಿಲ್ಲ, ಕೆಲಸ ಕಳೆದುಕೊಳ್ಳುವ ಭಯವನ್ನೂ ಹೊತ್ತು ಕುಳಿತಿದ್ದಾನೆ. ಹೌದು, ಕುಟುಂಬ ಎಂದರೆ ಕೇವಲ ಗಂಡ ಹೆಂಡಿರಲ್ಲ ಅದಕ್ಕೇ ದೌರ್ಜನ್ಯ ಎಂದರೂ ಅವರಿಬ್ಬರ ನಡುವಿನದ್ದು ಮಾತ್ರವಲ್ಲ. ಭೂಗೋಳದ ಈ ಭಾಗ “ಸಂಬಂಧಗಳು ಋಣದಿಂದ ಆಗುವುದು” ಎಂದು ನಂಬಿದ್ದರೆ ಆ ಭಾಗ “ಮದುವೆಗಳು ಸ್ವರ್ಗದಲ್ಲಿ ನಿರ್ಧಾರವಾಗುತ್ತವೆ” ಎಂದು ನೆಚ್ಚಿದೆ. ಆದರೆ ಬಂದೆರಗಿರುವ ವೈರಸ್ ಮಾತ್ರ ಜಗತ್ತು ದುಂಡಗಿದೆ ಮತ್ತು ಮನುಷ್ಯ ಮೂಲಭೂತವಾಗಿ ಒಂದು ಪ್ರಾಣಿ ಮಾತ್ರ ಎನ್ನುವ ಸತ್ಯವನ್ನು ಬೇಧವಿಲ್ಲದೆ  ಪುನಃಪ್ರಸಾರ ಮಾಡುತ್ತಿದೆ. ಅರ್ಥಶಾಸ್ತ್ರಜ್ಞರು ಕೋವಿಡ್-19ಗಾಗಿಯೇ ಇನ್ಸ್ಯೂರೆನ್ಸ್ ತೆಗೆದುಕೊಳ್ಳಿ ಎನ್ನುತ್ತಿದ್ದಾರೆ. ಸೀಲ್‍ಡೌನ್ ಆಗಿರುವ ಸಂಬಂಧಗಳು ಕೌಟುಂಬಿಕ ದೌರ್ಜನ್ಯದಲ್ಲಿ ನೊಂದವರಿಗೆ ಯಾವುದಾದರೂ ವಿಮೆ ಇದೆಯೇ ಎಂದು ಹುಡುಕುತ್ತಿವೆ. ಅವಳಿಗೆ ಹದಿಮೂರುಹದಿನಾಲ್ಕು ವರ್ಷ ವಯಸ್ಸಿರಬೇಕು. ಮೂಕಿ ಕಿವುಡಿ ಹುಡುಗಿ. ಸಣ್ಣ ಕೋಣೆಯ ಮನೆಯಲ್ಲಿ ಕೆಲಸ ಕಳೆದುಕೊಂಡ ಹನ್ನೊಂದು ಜನ ಇರಬೇಕಾದ ಪ್ರಸ್ತುತತೆ. ಭಾರ ಕಳಚಿಕೊಳ್ಳಲು ಇವಳ ಕೈಮೇಲೆ ಹೆಸರು, ಊರಿನ ಹಚ್ಚೆ ಹಾಕಿಸಿ ಯಾವುದೋ ರೈಲು ಹತ್ತಿಸಿ ಮನೆಯವರೇ ಕಳುಹಿಸಿಬಿಟ್ಟಿದ್ದಾರೆ. ಪ್ರೀತಿ, ಸಾಹಚರ್ಯ ಎಲ್ಲಾ ಅನಿವಾರ್ಯದ ಕೈಗೆ ಸಿಕ್ಕಿ ವಿರುದ್ಧ ದಿಕ್ಕಿನಲ್ಲಿ ಪ್ರಯಾಣ ಬೆಳಿಸಿವೆ. ಮೊದಲೆಲ್ಲಾ ಇವುಗಳಿಗೆ ಯಾರೋ ತುತ್ತುಣಿಸಿ ಮತ್ತ್ಯಾರೋ ನೀರು ಹನಿಸುತ್ತಿದ್ದರು. ಆದರೀಗ ಸಹಾಯ ಹಸ್ತ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದೆ. ಅಮ್ಮನಿಗೆ ಅಪ್ಪ ಬೇಡವಾಗಿದ್ದಾನೆ, ಅವನಿಂದ ಮಕ್ಕಳು ದೂರವಾಗಿದ್ದಾರೆ, ಅಣ್ಣತಮ್ಮಂದಿರ ಫೋನ್ ಕರೆನ್ಸಿ ಖಾಲಿಯಾಗಿದೆ. ವಾರೆಗಿತ್ತಿ ನಾದಿನಿಯರು ತಮ್ಮತಮ್ಮ ಸ್ಥಿತಿಗಳನ್ನು ತಕ್ಕಡಿಯಲ್ಲಿ ತೂಗುತ್ತಿದ್ದಾರೆ. ಸಚಿವ, ವೈದ್ಯ, ಉಪಾಧ್ಯಾಯ, ಪೋಲೀಸ್, ಪುರೋಹಿತ ಯಾರನ್ನೂ ಬಿಟ್ಟಿಲ್ಲ ಎಂದು ಕೂಗುತ್ತಿದ್ದ ಮಾಧ್ಯಮಗಳಿಗೂ ಕರೋನ ಆಸ್ಪತ್ರೆಯಲ್ಲಿ ವಾರ್ಡ್ ಖಾಲಿ ಇಲ್ಲ ಎನ್ನುವ ಬೋರ್ಡ್ ಎದುರಾಗುತ್ತಿದೆ. ಇವರೆಲ್ಲರಿಗೂ ಕುಟುಂಬ ಇದೆ. ನಾಲ್ಕು ಗೋಡೆಗಳ ಮಧ್ಯೆ ದೌರ್ಜನ್ಯ ವಲಸೆ ಹೋಗಲೂ ಆಗದೆ ಕಾರ್ಮಿಕನಂತೆ ನೋಯುತ್ತಿದೆ, ನೋಯಿಸುತ್ತಿದೆ. ಆದರೂ ಪ್ರಪಂಚ ಕುಟುಂಬವನ್ನು ಹಿಡಿದಿಡುವ ಪ್ರಯತ್ನ ಬಿಟ್ಟಿಲ್ಲ. ಅದಕ್ಕೇ ಮಾನಸಿಕ ತಜ್ಞರು ತಾವು ಸಹಾಯ ಮಾಡಲು ತಯಾರಿದ್ದೇವೆ ಎಂದು ಸಹಾಯವಾಣಿಗಳ ಮೂಲಕ ಕೂಗಿ ಹೇಳುತ್ತಿದ್ದಾರೆ. ಸಹಾಯ ಬೇಕಿದ್ದವರು ನೆವ ಹೇಳದೆ ಪಡೆಯಬೇಕಿದೆ ಅಷ್ಟೆ.  ******************************** ಲೇಖನ ಕೃಪೆ:ಮೈಸೂರಿನ ಆಂದೋಲನ ಪತ್ರಿಕೆ ಮತ್ತು ಅಸ್ಥಿತ್ವ ಲೀಗಲ್ ಬ್ಲಾಗ್

ಲಾಕ್ಡೌನ್ ಕಾಲಘಟ್ಟದ ದಾಂಪತ್ಯ Read Post »

ಇತರೆ, ಜೀವನ

ಸಿರಿಗರ ಹೊಡೆದವರ. . . . .

ಸಾರ್ವಜನಿಕವಾಗಿ ನಮ್ಮ ನಡೆ ನುಡಿ ಅಂದರೆ ನಾವು ಕಾಣಿಸಿಕೊಳ್ಳುವ ರೀತಿ ನಡೆಯುವಾಗಿನ ಗತ್ತು ನಿಲ್ಲುವ ಭಂಗಿ ಕೂರುವ ಬಗೆ ಮಾತನಾಡುವ ಪರಿ ಇದರ ಮೇಲೆ ವ್ಯಕ್ತಿಯ ವ್ಯಕ್ತಿತ್ವದ ಕುರಿತಾಗಿ ಒಂದು ಚಿತ್ರಣ ರೂಪುಗೊಳ್ಳುತ್ತದೆ. ಆದರೆ ಕೇವಲ ಆಂಗಿಕ ಭಾಷೆಯಿಂದಲೇ ವ್ಯಕ್ತಿ ಅಹಂಕಾರಿ ಇಲ್ಲವೇ ವಿನಯವಂತ ಎಂದು ನಿರ್ಣಯಿಸಿ ಬಿಡುವುದು ಹಲವು ಸಲ ತಪ್ಪು ಎಂದೆನಿಸುವುದು

ಸಿರಿಗರ ಹೊಡೆದವರ. . . . . Read Post »

ಇತರೆ, ಜೀವನ

ನಮ್ಮದೇ ಇಷ್ಟವ ಆಗಾಗ.. ಕೇಳಿಕೊಳುವ ಇನ್ನಾದರೂ

ಬೆಳಕಿನ ಕವಿ ಜಿ ಎಸ್ ಶಿವರುದ್ರಪ್ಪನವರು ಹೇಳುವಂತೆ, “ಹಣತೆ ಹಚ್ಚುತ್ತೇನೆ ನಾನೂ, ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ, ಇರುವಷ್ಟು ಹೊತ್ತು ನನ್ನ ಮುಖ ನೀನು, ನಿನ್ನ ಮುಖ ನಾನು ನೋಡಬಹುದೆಂಬ ಆಸೆಯಿಂದ……..”

ನಮ್ಮದೇ ಇಷ್ಟವ ಆಗಾಗ.. ಕೇಳಿಕೊಳುವ ಇನ್ನಾದರೂ Read Post »

ಇತರೆ, ಜೀವನ

ಬದಲಾಗುತ್ತ ಹೋದ ಅವಳ ದೇವರು

ಬದಲಾಗುತ್ತ ಹೋದ  ಅವಳ ದೇವರು  ಎಂ. ಆರ್. ಅನಸೂಯ ಅವಳು ಏಳೆಂಟು ವರ್ಷದವಳಿದ್ದಾಗ  ಅಮ್ಮ ಹೇಳಿದ್ದು ಕೇಳಿದಾಗ ದೇವರೆಂದರೆ ಭಕ್ತಿಯಿಂದ ಕೇಳಿದರೆ ಸಾಕು ಕೇಳಿದ್ದನ್ನೆಲ್ಲಾ ಕೊಡುವಂಥಾ ಸರ್ವಶಕ್ತನೆಂಬ ನಂಬಿಕೆ. ತಾಯಿಯ ಕೈ ಹಿಡಿದು ನಡೆವ ಮಗುವಿನ ನಂಬಿಕೆ, ಮಳೆ ಬರುವುದೆಂದು ಬೀಜ ಬಿತ್ತನೆ ಮಾಡುವ ರೈತನ ನಂಬಿಕೆ ದೇವರ ಪ್ರಸಾದವೆಂದು ಕಣ್ಣಿಗೊತ್ತಿಕೊಂಡು ತಿನ್ನುವಂಥ  ಭಕ್ತರ ನಂಬಿಕೆ. ಭಕ್ತಿಯೆಂದರೆ ಹೇಗಿರಬೇಕು ಎಂಬುದಕ್ಕೆ ಅಮ್ಮನ ಮಾತೇ ವೇದವಾಕ್ಯ.ದಾಸವಾಳ ಹಾಗೂ ಗಿಡದ ಮೇಲೆ ಮೊಸರು ಚೆಲ್ಲಿದಂತೆ ಮೈತುಂಬ ಹೂ ಬಿಟ್ಟ ನಂದಿ ಬಟ್ಟಲ ಹೂಗಳನ್ನು ಬಿಡಿಸಿ ತಂದು ಮಾಲೆಯನ್ನು ಕಟ್ಟಿ ಪುಟ್ಟ ದೇವರ ಗೂಡನ್ನು ಒರೆಸಿ ಸಾರಿಸಿ ದೇವರ ಭಾವ ಚಿತ್ರಗಳಿಗೆ ನಂದಿ ಬಟ್ಟಲ ಹೂವಿನ ಹಾರ ಹಾಕಿ, ದೇವರ ವಿಗ್ರಹಗಳಿಗೆ ದಾಸವಾಳ ಹೂಗಳನ್ನು ಮುಡಿಸಿ, ಹಣತೆ ಹಚ್ಚಿ ಕೈ ಮುಗಿದು ನಿಂತು ಕಣ್ಮುಚ್ಚಿ ಚಿತ್ರ ವಿಚಿತ್ರ ಬೇಡಿಕೆ ಗಳನ್ನಿಡುವುದು ಏಕೆಂದರೆ ದೇವರು ಸರ್ವಶಕ್ತ ಹಾಗೂ ದಯಾಮಯಿ ! ಆ ಮುಗ್ಧ ಮನಕ್ಕೆ ಅದೊಂದು ತನ್ಮಯಗೊಳಿಸುವ ಆಪ್ಯಾಯಮಾನವಾದಂಥ ಪ್ರೀತಿಯ ಕೆಲಸ.  ಬೇಡಿಕೆಗಳು ಈಡೇರದಿದ್ದರೂ ದೇವರನ್ನೇನು ದೂರಲಿಲ್ಲ ಕಡಿಮೆಯಾಗದ ಭಕ್ತಿ ನಿಷ್ಠೆ. ಏಕೆಂದರೆ ತನ್ನ ಭಕ್ತಿಯಲ್ಲೇ ಏನೋ ಕೊರತೆಯೆಂಬ ಭಾವವಷ್ಟೆ. ಗಣೇಶೋತ್ಸವದ ಹಾಗು ರಾಮನವಮಿಯ ಹರಿಕಥೆಗಳನ್ನು ನಿದ್ದೆಮಾಡದೆ ಕೇಳಿದ ಕಥೆಗಳು ಇದಕ್ಕೆ ಪೂರಕ. ಪ್ರತಿ ನವರಾತ್ರಿಯಲ್ಲಿ ಅಮ್ಮನೂ ಅನೂಚಾನವಾಗಿ ಮಾಡಿದ ದೇವಿ ಮಹಾತ್ಮೆಪಾರಾಯಣವನ್ನು ಬಾಲ್ಯದಿಂದಲೆ ಮುಂದುವರೆಸಿದಳು ಕೌಮಾರ್ಯದ ತನಕ ಸೊಗಸಾದ ಬದುಕಿನಿಂದಾಗಿ ಎಲ್ಲ ಚಂದವೇ.ಒರಗಲು ಹೆತ್ತವರ ಹಾಗೂ ಒಡಹುಟ್ಟಿದವರ  ಹೆಗಲು.ಮುಂದಿನ ಹಂತಗಳಲ್ಲಿ ಅವಳ ಬದುಕು ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ಬದುಕು ಬಂದಂತೆ ಸ್ವೀಕರಿಸದೆ ಗತ್ಯಂತರವಿಲ್ಲ. ಬದುಕಲ್ಲಿ ಬಂದ ನೋವು,ಅವಮಾನ,ತಿರಸ್ಕಾರಗಳನ್ನೆದುರಿಸುತ್ತಲೇ ಗಟ್ಟಿಯಾದಳು.ಬದುಕಕಲಿಸಿದ ಪಾಠಗಳಿಗೆ ಋಣಿಯಾದಳು. ಒಂಟಿಯಾಗಿ ಅಸಹಾಯಕಳಾಗಿ ಸೋತಾಗ ಕಣ್ಣೀರು ಹಾಕುತ್ತ ದೇವರ ಮುಂದೆ ಕೂತು ಕ್ಷಣಿಕ ನೆಮ್ಮದಿಯ ಕಂಡವಳು. ಎಂತಹ ಸೋಲಿನಲ್ಲು ಕಂಗಾಲಾಗದ ಸ್ವಾಭಿಮಾನಿಯಾದ ಅವಳ ಅವಿರತ ಶ್ರಮಕ್ಕೆ ಹಾಗು ಬಿಡದ ಪ್ರಯತ್ನಗಳಿಗೆ ಅವಳ ದೇವರು ಜೊತೆಗಿದ್ದಾನೆಂಬ ಭರವಸೆಯ ಭಾವವೊಂದೇ ಸಾಕು ಅವಳಿಗೆ ಹತ್ತಾಳಿನ ಬಲ ಕೊಡುತ್ತಿತ್ತು.ತನ್ನ ಗುರಿ ಮುಟ್ಟುವ ತನಕ ಅವಳಿಗೆ ಅದೇ ಧ್ಯಾನ ಅದೇ ಪ್ರಪಂಚ. ಅವಳ ದೇವರು ಮಂದಿರದಲ್ಲಿರದೆ ಅವಳು ತೊಡಗಿದ ಕಾಯಕದಲ್ಲಿ ಕಾಣುತ್ತಿದ್ದ. ಜ್ಞಾನ ದೇಗುಲವಾದ ಶಾಲೆಯ  ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಅವಕಾಶವೊದಗಿದ್ದು ತನ್ನ ಸುಕೃತವೆಂದೇ ಭಾವಿಸಿದಳು. ಸರ್ಕಾರಿ ಶಾಲೆಯ ಬಡ ಮಕ್ಕಳನ್ನು ದೇವರ ಮಕ್ಕಳೆಂದೇ ಭಾವಿಸಿ ಪ್ರಾಮಾಣಿಕತೆ  ಹಾಗೂ ಅರ್ಪಣಾ ಭಾವದಿಂದ ಕಲಿಸಿದಳು. ಅವಳೆಂದು ಗಂಟೆಗಟ್ಟಲೆ ಪೂಜೆ ಮಾಡಲೇ ಇಲ್ಲ.ಅವಳ ನಂಬಿಕೆಯ ದೇವರ ಮುಂದೆ  ಕೈಮುಗಿದು ಕ್ಷಣ ಕಾಲ ಕಣ್ಮುಚ್ಚಿದರೆ ಸಾಕಷ್ಟೆ. ಅಶಕ್ತರಿಗೆ ಕೈಲಾದ ಸಹಾಯ, ಹಸಿದ ಹೊಟ್ಟೆಗೆ ಅನ್ನವಿಡುತ್ತ ಅನ್ನಗಳಿಕೆಯ ದಾರಿ ತೋರುವುದು ಅವಳ ದೇವರಿಗೆ ಇಷ್ಟವೆಂಬ ಸ್ವಷ್ಟ ಅರಿವಿತ್ತು. ಪುಣ್ಯ ಕ್ಷೇತ್ರಗಳ ಯಾತ್ರೆಯೆಂದರೆ ಪ್ರವಾಸದ ಅನುಭವದೊಂದಿಗೆ  ದೈವ ದರ್ಶನವಷ್ಟೆ. ಕಾಶಿಯವಿಶ್ವನಾಥನ ದರ್ಶನ ಭಾಗ್ಯಕ್ಕಿಂತ ಅವಳು ಕಾಯುತ್ತಿರುವುದು ಜೀವ ಚೈತನ್ಯದಾಯಿನಿಯು ಜೀವನದಿಯಾದ ಗಂಗೆಯ ವಿಶಾಲ ಹರಿವನ್ನು ಕಣ್ತುಂಬಿ ಕೊಳ್ಳುವ  ಧನ್ಯತಾ ಭಾವದ ಅಮೃತ  ಘಳಿಗೆಗಾಗಿ. ಅವಳೇ ಕೈಯಾರೆ ಬೆಳೆಸಿದ ಹೂ ಗಿಡಗಳ ಹೂ ಬಿಡಿಸಿ ಮನೆಯಲ್ಲಿನ ದೇವರನ್ನು ಅಲಂಕರಿಸಿ ನೋಡಿ ತೃಪ್ತಿ ಪಡುವುದು ಇಂದಿಗೂ ಅವಳಿಗೆ ಇಷ್ಟವಾದ ಕೆಲಸವೇ. ಮನೆಯಲ್ಲಿ ಪೂಜಿಸುವಾಗ ಆಗುವ ತಲ್ಲೀನತೆಯನ್ನು ಅರೆಗಳಿಗೆಯಾದರೂ ಅನುಭವಿಸಿದ ಅವಳಿಗೆ ಇನ್ಯಾವ ಜಾತ್ರೆ, ಯಾತ್ರೆಗಳ ಜನ ಜಂಗುಳಿಯ ನಡುವೆ ಅಂಥಾ ಏಕಾಗ್ರತೆ ಲಭ್ಯವಾಗಲೇ ಇಲ್ಲ. ಜಿ.ಎಸ್.ಶಿವರುದ್ರಪ್ಪ ನವರ ಕವಿತೆಯಲ್ಲಿ ಕಾಣುವ “ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” ಎಂಬ ಸಾಲುಗಳನ್ನು ಅಂತರ್ಗತ ಮಾಡಿ ಕೊಂಡವಳು  ಜನ ಮಾನಸರ ನಂಬಿಕೆಯ ಶ್ರದ್ಧಾ ಕೇಂದ್ರಗಳಾಗಿರುವ ಮಂದಿರಗಳ ವಿರೋಧಿಯೇನಲ್ಲ. ಮಂದಿರದಲ್ಲಿನ ಆದಿ ಶಕ್ತಿಗೆ ಕೈ ಮುಗಿವಂತೆ ಚರ್ಚ್ ಗಳಲ್ಲಿನ ಏಸುಮಾತೆಗೂ ಕೈಮುಗಿದು ನಿಂತವಳು. ಇಡೀ ಪ್ರಪಂಚವನ್ನೆ ಆಳುವಂಥ ಅತಿಮಾನುಷ ಶಕ್ತಿಯೊಂದಿದೆ ಎಂಬುದು ಅವಳ  ಅಚಲ  ನಂಬಿಕೆ. ಪ್ರಕೃತಿಯೇ ದೇವರೆನ್ನುತ್ತ ತನ್ನ ಇತಿಮಿತಿಯಲ್ಲೇ ಬೀದಿ ಗಿಡಗಳಿಗೆ ನೀರೆರೆದು ಗೊಬ್ಬರ ಸುರಿದು ಬೆಳೆಸುತ್ತ ತೃಪ್ತಿ ಕಂಡವಳು.ತಾನು ಬೆಳೆಸಿದ ಗಿಡಗಳಲ್ಲಿ ತನ್ನೊಂದಿಗೆ ಪಕ್ಷಿ ಪ್ರಾಣಿಗಳ ಪಾಲಿದೆ ಎಂಬುದನ್ನವಳು ಅರಿತವಳು. ಹಸಿದ ಬೀದಿನಾಯಿಗೆ ಉಣಿಸಿಡುವ ಹಾಗೆಯೇ ಬೀದಿ ಬದಿಯ ಮರಗಳಿಗೆ ನೀರೆರೆಯುತ್ತಾಳೆ ಹರಿಜನರೆಂದು ಕರೆಯುತ್ತ ಹರಿದರ್ಶನಕ್ಕೆಡೆ ಮಾಡಿಕೊಡದ ಅಸ್ಮೃಶ್ಯತಾ ಆಚರಣೆಗೆ ವಿರೋಧವಿದೆ. ಅವಳ ದೇವರು ಜೀವಪರ ಕಾಳಜಿಯುಳ್ಳ ದೇವನೂರರ  ಗ್ರಾಮ ದೇವತೆ ” ಮನೆ ಮಂಚಮ್ಮ” ನಲ್ಲಿದ್ದಾನೆ. ಜೀವಪರವಾದ ಮಾನವೀಯ ಮನಸ್ಸುಗಳಿಗೆ ದೇವರೊಲಿಯುತ್ತಾನೆಂಬುದು ಅವಳ ಗ್ರಹಿಕೆ. ಆದ್ದರಿಂದಲೇ “ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲಯ್ಯಾ ನೀನು” ಎಂಬ ಅಕ್ಕನ ವಚನವನ್ನು ಅವಳೆಂದೂ ಮರೆಯಳು “ಬದಲಾವಣೆ ಜಗದ ನಿಯಮ” ವೆನ್ನುವಂತೆ ನಮ್ಮಲ್ಲಿನ ಚಿಂತನೆಗಳು ನಿಂತ ನೀರಾಗದೆ ಹರಿಯುವ ಹೊಳೆಯಾಗ   ಬೇಕು. ಹೂ ಅರಳಿ ದಂತೆ ವಿಕಾಸವಾಗ ಬೇಕು. ಬಾಲ್ಯದ ಅವಳ ದೇವರಂತೆ  ಮಂದಿರದ ಕೂತು ಪೂಜೆ ಪುರಸ್ಕಾರ ಇತ್ಯಾದಿಗಳಿಗೆ  ಒಲಿಯುವವನಲ್ಲ ಈಗ ಆವಳ ದೇವರು ಅಶಕ್ತರ, ದೀನ ದಲಿತರ ಸೇವೆಗೆ ಒಲಿಯುವ, ಪರಿಸರದ ವಿನಾಶವನ್ನು ತಡೆಗಟ್ಟುವುದನ್ನು ಮೆಚ್ಚುವ  ದೇವರು. ಹೀಗೆ ಅವಳ ದೇವರ ಸ್ವರೂಪವು ಕೂಡಾ ಬದಲಾಗಿದೆ  ******************************

ಬದಲಾಗುತ್ತ ಹೋದ ಅವಳ ದೇವರು Read Post »

ಇತರೆ, ಜೀವನ

ಯಶಸ್ಸು ಮತ್ತು ಸಾಧನೆ

ಲೇಖನ ಯಶಸ್ಸು ಮತ್ತು ಸಾಧನೆ ಮಾಲಾ ಕಮಲಾಪುರ್ ಪ್ರತಿಯೊಬ್ಬ ಮನುಷ್ಯನು ಯಶಸ್ಸನ್ನು ಬಯಸುತ್ತಾನೆ. ಅತ್ತ್ಯುತ್ತಮ ಗುಣ ಮಟ್ಟದ ಜೀವನ ವನ್ನು ಅನುಭವಿಸಲು ಹಂಬಲಿಸುತ್ತಾನೆ. ಆದರೆ ಅದನ್ನು ಸಾಧಿಸಿ ಅಂಥ ಜೀವನ ನಡೆಸುವವರು ಕೆಲವರು ಮಾತ್ರ ಬಲವಾದ ನಂಬಿಕೆ ವಿಶ್ವಾಸ ಇದ್ದವರು ಹಿಡಿದ ಕಾರ್ಯ ವನ್ನು ಸಾಧಿಸಿಯೇ ತೀರುತ್ತಾರೆ. ಇಂಥವರಿಗೆ ಕಾಲು ಎಳೆಯುವವರು ಸಾವಿರಾರು.ಎಲ್ಲಿ ಸಾಧನೆ ಮಟ್ಟ ಇರುತ್ತದೆಯೋ ಅಲ್ಲಿ ಟೀಕಿಸುವವರು ನಮ್ಮ ಹಿಂದೆಯೇ ಇರುವರು . ನಾವುಹಿಂದೆ ನೋಡದೆ ಮುಂದೆ ಸಾಗುತ್ತ ಹೋಗಬೇಕು ಹಿತೈಷಿಗಳ ಮಾರ್ಗ ದರ್ಶನಇದ್ದರೆ ಸಾಕು ನಾವು ಗುರಿ ಮುಟ್ಟುವುದರಲ್ಲಿ ಸಂಶಯವೇ ಇಲ್ಲಾ.ಅಬ್ರಹಾಂಲಿಂಕನ್ ಜೀವನದಲ್ಲಿ ಸಾಕಷ್ಟು ನೋವು ಸಂಕಟ ಜನರ ಅಸೂಹೆ ಇವೆಲ್ಲದರ ನಡುವೆ ದೃತಿ ಗೆಡದೆ ಸಂಪೂರ್ಣ ಆತ್ಮ ವಿಶ್ವಾಸ ದಿಂದ ತಮ್ಮ ಗುರಿ ತಲುಪಿದರು.ಮುಖ್ಯ ವಾಗಿ ನಮ್ಮಲ್ಲಿ ಪ್ರಾಮಾಣಿಕತೆ ಇದ್ದು ಸರಳ ಭಾವನೆ ಇದ್ದಾಗ ನಮಗೆ ದೇವರಲ್ಲಿ ಅಚಲವಾದ ಭಕ್ತಿ ವಿಶ್ವಾಸ ಇದ್ದರೆ ನಾವು ನಮ್ಮ ಗುರಿ ಮುಟ್ಟುತ್ತೇವೆ.ವಿನಯ ಮತ್ತು ಸೌಜನ್ಯ ಸ್ವಭಾವ ನಮ್ಮ ಮನಸಿನ ಕನ್ನಡಿ ನಾವು ಮತ್ತೊಬ್ಬರಾಗುವದು ಬೇಡ ನಾವು ನಾವಾದರೆ ಸಾಕು ನಮ್ಮ ಜೀವನ ದಲ್ಲಿ ಅದೆಷ್ಟೋ ಆನಂದ ಅನುಭವಿಸುತ್ತವೆ. ಇದನ್ನು ನೋಡಿ ಕೆಲವರು ಅಸೂಹೆ ಮಾಡಿ ಕುಹಕ ನಗು ತೋರಿಸಿದರು ನಾವು ನಿರ್ಲಕ್ಷಿಸಬೇಕು ಅದೊಂದೇ ದಾರಿ. ಮುಖ್ಯವಾಗಿ ನಾವು ಮಾಡುವ ಕೆಲಸ ಕಾರ್ಯ ಮತ್ತು ಯಾವುದೇ ವಿದ್ಯೆ ಯಲ್ಲಿ ವಿಚಾರದಲ್ಲಿ ನಿಖರ ಮತ್ತು ದಿಟ್ಟ ವಿಚಾರವೇ ನಮಗೆ ಇದ್ದರೆ ಸಾಕು. ನಮ್ಮಲ್ಲಿ ಆತ್ಮ ವಿಶ್ವಾಸವೇ ನಮ್ಮನ್ನು ಎತ್ತಿ ಹಿಡಿಯುತ್ತದೆ. ನಾವು ಯಾವುದೇ ಸನ್ಮಾರ್ಗದಲ್ಲಿ ಇದ್ದಾಗ ನಮ್ಮ ಮನಸು ಯಾರಿಗೂ ಬಗ್ಗುವುದಿಲ್ಲ ನಾವು ಯಾವುದೇ ಕಲೆ ಮತ್ತು ವಿದ್ಯೆ ಕಲಿಯಬೇಕಾದರೆ ವಯಸ್ಸು ಬೇಕಾಗಿಲ್ಲ ನಮ್ಮ ದೇಹಕ್ಕೆ ವಯಸ್ಸಾದರೂ ನಮ್ಮ ಮನಸ್ಸಿಗೆ ಆಗಿರುವುದಿಲ್ಲ. ನಮ್ಮಲ್ಲಿ ಸದ್ರಡ ಮನಸ್ಸು ವಿವೇಚನಾ ಶಕ್ತಿ, ಸಾಧಿಸುವ ಸಂಕಲ್ಪವೇ ನಮ್ಮ ಯಶಸ್ಸಿನ ಮೆಟ್ಟಲುಗಳು.ಇದಕ್ಕೆ ಉದಾಹರಣೆ ಯಾಗಿ ನೋಡಬೇಕೆಂದರೆ ಅಕ್ಷರ ಕಲಿಯದೆ ನಿಸ್ವಾರ್ಥ ಮನಸ್ಸಿನಿಂದ ಸೇವೆ ಮಾಡಿದ ಸಾಲು ಮರದ ತಿಮ್ಮಕ್ಕ ಅದೆಷ್ಟು ಗಿಡ ಮರಗಳನ್ನು ಮಕ್ಕಳಂತೆ ಪ್ರೀತಿಸಿ ಬೆಳೆಸಿದವರು ಮುಪ್ಪು ವಯಸ್ಸಿನಲ್ಲೂ ಹುರುಪು ಅವರಿಗೆ.ಅವರ ಸೇವೆ ಇಡೀ ಜಗತ್ತು ಬೆರಗಾಗುವಂತೆ ನೋಡುತ್ತಿದೆ. ಹಿಂದೆ ನಮ್ಮೆಲ್ಲರ ಪೂರ್ವಜರು ಯಾವುದೇ ಪೈಪೋಟಿ ಮಾಡದೇ ಅಚಲ ನಿರ್ಧಾರ ಮತ್ತು ನಿಷ್ಕಲ್ಮಶ ಮನಸ್ಸು, ನಿಸ್ವಾರ್ಥ ಸೇವಾ ಮನೋಭಾವದಿಂದ, ಯಾರಿಗೂ ಮನಸ್ಸನ್ನು ನೋಯಿಸದೆ ಬದುಕಿನಲ್ಲಿ ತನ್ನದೇ ಛಾಪು ಮೂಡಿಸಿದವರು.ನಾವು ಸಮಯಕ್ಕೆ ಮತ್ತು ನಮಗೆ ದಾರಿತೋರಿಸುವ ಗುರುಗಳಿಗೆ ಬೆಲೆ ಕೊಟ್ಟಾಗ ನಮ್ಮ ಜೀವನ ಸ್ವಲ್ಪ ಮಟ್ಟಿಗಾದರೂ ಸಾರ್ಥಕವಾದಿತು.ನಾವು ಒಂದಿಷ್ಟು ಅವರ ಮಾರ್ಗ ದಲ್ಲಿ ಸಾಗೋಣ. ಇದ್ದುದರಲ್ಲಿ ನೈಜ ಸುಖ, ಶಾಂತಿ ಪಡೆಯೋಣ.ಸಾತ್ವಿಕ ವಿಚಾರ, ಸಂತೃಪ್ತಿ ಮತ್ತು ಸಕಾರಾತ್ಮ ವಿಚಾರ ಇವು ನಮ್ಮ ಯಶಸ್ಸಿಗೆ ಬೆಳಕು ತೋರಿಸುವ ದಾರಿ ದೀಪಗಳೆಂದರೆ ತಪ್ಪಾಗದು. ********************************

ಯಶಸ್ಸು ಮತ್ತು ಸಾಧನೆ Read Post »

ಇತರೆ, ಜೀವನ

ಆತ್ಮ ವಿಶ್ವಾಸವಿರಲಿ…

ಲೇಖನ ಆತ್ಮ ವಿಶ್ವಾಸವಿರಲಿ… ರಶ್ಮಿ ಹೆಗಡೆ ಕ್ರಿ.ಶ 1306 ರಲ್ಲಿ ಸ್ಕಾಟ್ ಲ್ಯಾಂಡನ್ನು ಆಳುತ್ತಿದ್ದ ರಾಬರ್ಟ್ ಬ್ರೂಸ್ ಎಂಬ ದೊರೆ ತನ್ನ ಧೈರ್ಯ  ಧೈರ್ಯ,ಶೌರ್ಯಕ್ಕೆ ಹೆಸರಾಗಿದ್ದ. ಒಮ್ಮೆ ಇಂಗ್ಲೆಂಡಿನ ದೊರೆ ತನ್ನ ಸುಸಜ್ಜಿತವಾದ ಸೈನ್ಯದೊಂದಿಗೆ ಸ್ಕಾಟ್ ಲ್ಯಾಂಡ್ ಮೇಲೆ ದಾಳಿ ನಡೆಸಿದ. ಬ್ರಿಟಿಷ್ ಸೈನ್ಯದೆದುರು ಬಹಳ ಚಿಕ್ಕದಾಗಿದ್ದರೂ,ಹೋರಾಟ ಮನೋಭಾವ ಹೊಂದಿದ್ದ ತನ್ನ ಸೈನ್ಯವನ್ನು ಬ್ರೂಸ್ ಆರು ಬಾರಿ ಮುನ್ನಡೆಸಿದ. ದುರದೃಷ್ಟವೆಂಬಂತೆ ಆರು ಬಾರಿಯೂ ಆತನ ತುಕಡಿ ಸೋಲುಂಡಿತ್ತು,ರಾಜ್ಯವನ್ನು ಉಳಿಸಿಕೊಳ್ಳುವ ಎಲ್ಲ ಎಲ್ಲ ಭರವಸೆಗಳನ್ನೂ ಕಳೆದುಕೊಂಡಿತು.ಚದುರಿದ ಸೈನ್ಯದಲ್ಲಿ ಉಳಿದ ಕೆಲವೇ ಕೆಲವು ಸೈನಿಕರೂ ಜೀವದ ಆಸೆಗಾಗಿ ರಣರಂಗದಿಂದ ದೂರ ಸರಿದರು.ಸೋಲನ್ನೇ ಅರಿಯದ ಬ್ರೂಸ್ ಆತ್ಮಸ್ಥೈರ್ಯ ಕಳೆದುಕೊಂಡು ಕಂಗಾಲಾದ. ಜೀವ ಉಳಿಸಿಕೊಳ್ಳಲು ತಲೆಮರೆಸಿಕೊಂಡ. ಗುಡ್ಡ ಬೆಟ್ಟ, ಕಣಿವೆಗಳಲ್ಲಿ ಏಕಾಂಗಿಯಾಗಿ ಅಲೆಯತೊಡಗಿದ.ಹೀಗಿದ್ದಾಗ ಒಮ್ಮೆ ಜೋರಾಗಿ ಮಳೆ ಸುರಿಯಲಾರಂಭಿಸಲು ಬ್ರೂಸ್ ಒಂದು ಗುಹೆಯಲ್ಲಿ ಬಂದು ಆಶ್ರಯ ಪಡೆದ. ನಡೆದಿದ್ದನ್ನು ಮೆಲುಕುಹಾಕುತ್ತ ಕುಳಿತಿದ್ದ ಬ್ರೂಸ್ ನನ್ನು ನಾಜೂಕಾಗಿ ಬಲೆ ನೇಯುತ್ತಿರುವ ಪುಟ್ಟ ಜೇಡವೊಂದು ಆಕರ್ಷಿಸಿತು.ನೇಯುವಾಗ ಪ್ರತಿಬಾರಿಯೂ ವಿಫಲಗೊಂಡು ಬೀಳುತ್ತಿದ್ದ ಜೇಡ ಮತ್ತೆ ಮೇಲೇರುತ್ತಿತ್ತು.  ಪ್ರತಿಬಾರಿ ಬಿದ್ದಾಗಲೂ ಮೊದಲಿಗಿಂತ ಹೆಚ್ಚಿನ ಎಚ್ಚರಿಕೆವಹಿಸುತ್ತಿದ್ದ ಜೇಡ ಕೊನೆಗೂ ಬಲೆ ನೇಯುವುದರಲ್ಲಿ  ಯಶಸ್ವಿಯಾಯಿತು. ಸೋಲಿಗೆ ಹೆದರದೆ,ಆತ್ಮವಿಶ್ವಾಸ ತೊರೆಯದೆ,ಸತತವಾಗಿ ಪ್ರಯತ್ನಿಸಿ,ಸೋಲನ್ನೇ ಸೋಲಿಸಿದ ಜೇಡದ ಆತ್ಮಬಲ ಹಾಗೂ ಕಾರ್ಯವೈಖರಿ ಬ್ರೂಸ್  ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು. ಬ್ರೂಸ್ ತನ್ನ ವೈಫಲ್ಯಕ್ಕೆ ತಾನೇ ಸವಾಲೊಡ್ಡಿದ. ಅಷ್ಟು ಚಿಕ್ಕ ಕೀಟವೇ ಸೋಲನೊಪ್ಪಿಕೊಳ್ಳದಿರುವಾಗ ತಾನೇಕೆ ತನ್ನ ಪತನವನ್ನು ಒಪ್ಪಿಕೊಳ್ಳಲಿ ಎಂದು ಯೋಚಿಸುತ್ತ,ಹೊಸ ಹುರುಪಿನೊಂದಿಗೆ ಹೊಸ ವ್ಯಕ್ತಿಯಾಗಿ ಗುಹೆಯನ್ನು ತೊರೆದ. ಮತ್ತೆ ಸೈನ್ಯವನ್ನು ಕಟ್ಟಲು ನಿರ್ಧರಿಸಿ ಜನರನ್ನು ಸೇರಿಸಿದ. ಮೊದಲಿಗಿಂತ ಹೆಚ್ಚು ಬಲಿಷ್ಠವಾದ ಸೈನ್ಯ ಕಟ್ಟಿದ. ಮತ್ತದೇ ಬ್ರಿಟಿಷ್ ದೊರೆಯೊಂದಿಗೆ ಹೋರಾಡಿ ತನ್ನ ರಾಜ್ಯವನ್ನು ಮರಳಿ ಪಡೆದ. ಬ್ರಿಟಿಷರಿಂದ ಸ್ಕಾಟ್ಲೆಂಡ್ ನ್ನು ಮುಕ್ತಗೊಳಿಸಿ ಹೊಸ ಇತಿಹಾಸವನ್ನೇ ರಚಿಸಿದ. ” ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ,ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದೆಂದೂ”ಎಂಬ ಸಾಲುಗಳು ಇಂದಿಗೂ ಸತ್ಯ.ಯಶಸ್ಸಿನ ಮೂಲ ಮಂತ್ರವೆಂದರೆ ಅದು ‘ಆತ್ಮವಿಶ್ವಾಸ’. ಸಾಧನೆಯ ಹಾದಿಯಲ್ಲಿ ನಡೆಯುವವನಿಗೆ ತೊಡಕುಗಳು ಅನೇಕ.  ಕಲ್ಲು ಮುಳ್ಳು,ಬಿಸಿಲು ಬವಣೆಗಳಿರದ ದಾರಿ ಯಾವುದಿದ್ದೀತು? ಅದೆಷ್ಟೋ ಬಾರಿ ಸಾಧನೆಯತ್ತ ಸಾಗುವ ಮೊದಲ ಹೆಜ್ಜೆಗಳು ತಡವರಿಸಿದಾಗ,ಭಯಪಟ್ಟು,ಮುನ್ನಡೆವ ಭರವಸೆ ಕಳೆದುಕೊಂಡು ಮುಂದೆ ಹೆಜ್ಜೆ ಇಡುವುದನ್ನೇ ನಿಲ್ಲಿಸಿ ಬಿಡುತ್ತೇವೆ. ಹಾಗಂತ ಮುನ್ನಡೆವ ಶಕ್ತಿ ಇಲ್ಲವೆಂದಲ್ಲ,ಆ ಶಕ್ತಿಯ ಪರಿಚಯ ನಮಗೇ ಇರುವುದಿಲ್ಲವಷ್ಟೇ! ಜೀವನದಲ್ಲಿ  ಗುರಿಯೊಂದಿದ್ದರೆ ಸಾಲದು, ಗುರಿಯತ್ತ ಪಯಣಿಸಲು ಬೇಕಾದ ಸಮಚಿತ್ತ,ತಾಳ್ಮೆ ಹಾಗೂ ಏಕಾಗ್ರತೆಯ ಜೊತೆಗೆ ಮುಖ್ಯವಾಗಿ ಇರಬೇಕಾದ್ದು ‘ಆತ್ಮವಿಶ್ವಾಸ’.   “ಧೈರ್ಯಮ್ ಸರ್ವತ್ರ ಸಾಧನಂ” ಎಂದು ಆತ್ಮವಿಶ್ವಾಸದಿಂದ ಎದ್ದು ನಿಂತು ಧೈರ್ಯದಿಂದ ಪ್ರಯಾಣ ಮುಂದುವರೆಸುವ ಗುಣ ನಮ್ಮೆಲ್ಲರಲ್ಲಿದ್ದರೆ ಯಾವ ಸಾಧನೆಯೂ ಎಟುಕದ ನಕ್ಷತ್ರವಾಗಲಾರದು. ಯಶಸ್ಸಿನ ಹೆಬ್ಬಯಕೆಯ ಜೊತೆ ಆತ್ಮವಿಶ್ವಾಸವೂ ಜೊತೆಗಿದ್ದಾಗ, ಸ್ವಸಾಮರ್ಥ್ಯದ ಮೇಲಿನ ನಂಬಿಕೆಯು ವಿಫಲತೆಯ ತೀವ್ರ ಭಯವನ್ನು ಮೆಟ್ಟಿನಿಂತಾಗ ಖಂಡಿತವಾಗಿ ಯಶಸ್ಸು ನಮ್ಮದಾಗುತ್ತದೆ **************************************

ಆತ್ಮ ವಿಶ್ವಾಸವಿರಲಿ… Read Post »

ಇತರೆ, ಜೀವನ

ಕಾನೂನು, ಮಹಿಳೆ ಮತ್ತು ಅರಿವು

ಅಂಜಲಿ ರಾಮಣ್ಣ ಬರೆಯುತ್ತಾರೆ
ಇದು ನನಗೆ ಕಲಿಸಿದ್ದು ಎರಡು ಪಾಠ. ಒಂದು ಹೆಂಗಸು ಮನಸ್ಸು ಮಾಡಿದರೆ, ಬುದ್ಧಿಯ ಮೂಲಕ ಗಳಿಸಿಕೊಂಡ ಆತ್ಮವಿಶ್ವಾಸ ಇದ್ದರೆ ಯಾರದ್ದೇ ಆಗಿರಲಿ, ಯಾವುದೇ ರೀತಿಯ ಮುಜುಗರವನ್ನು ಹೋಗಲಾಡಿಸಬಲ್ಲಳು

ಕಾನೂನು, ಮಹಿಳೆ ಮತ್ತು ಅರಿವು Read Post »

ಇತರೆ, ಜೀವನ

ನೀರು ಕುಡಿಯಿರಿ

ಲೇಖನ ನೀರು ಕುಡಿಯಿರಿ ಆಶಾ ಸಿದ್ದಲಿಂಗಯ್ಯ ಜನರು ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ನೀರನ್ನು ಕುಡಿಯುವುದೇ ಮರೆತಿದ್ದಾರೆ ಆದರೆ ನೀರು ಆರೋಗ್ಯಕ್ಕೆ ಅತ್ಯವಶ್ಯಕ.. ನಮ್ಮ ಉಳಿವಿಗಾಗಿ ನೀರು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಬಾಯಾರಿಕೆಯನ್ನು ನೀಗಿಸುವುದಕ್ಕೆ ಮಾತ್ರವಲ್ಲ, ದೇಹ ಸರಿಯಾಗಿ ಕೆಲಸ ಮಾಡಲು ಹಾಗೂ ರೋಗ ಮುಕ್ತವಾಗಿಡಲು ನೀರು ಅಗತ್ಯ. ದೇಹದ ತೂಕ ಇಳಿಸಲು ಸಹ ನೀರು ಕುಡಿಯುವುದು ಸಹಾಯಕಾರಿ. ಬಿಸಿನೀರು ಕುಡಿದರೆ ದೇಹದ ತೂಕ ಕಡಿಮೆ ಆಗಲು ಸಹಾಯ ಆಗುತ್ತಾ? ನಮ್ಮ ದೇಹದ ಸುಮಾರು 70% ರಷ್ಟು ನೀರಿನಿಂದ ಕೂಡಿದೆ ಹಾಗೂ ದೇಹದ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ, ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ಪ್ರತಿದಿನ 2-3 ಲೀಟರ್ ನೀರನ್ನು ಸೇವಿಸುವುದು ಅತ್ಯಗತ್ಯ. ತಣ್ಣನೆ ಮತ್ತು ಬಿಸಿನೀರು ಎರಡೂ ತಮ್ಮದೇ ಆದ ಬಾಧಕಗಳನ್ನು ಹೊಂದಿವೆ. ತೀವ್ರವಾದ ವರ್ಕೌಟ್‌ ನಂತರ ತಣ್ಣಗಾಗಲು ಒಂದು ಲೋಟ ತಣ್ಣೀರು ನಿಮಗೆ ಸಹಾಯ ಮಾಡುತ್ತದೆ, ಆದರೆ ಬಿಸಿನೀರು ದೇಹದಿಂದ ಟಾಕ್ಸಿನ್‌ ಹೊರಹಾಕಲು ಸಹಾಯ ಮಾಡುವುದರೊಂದಿಗೆ ಆಹಾರವನ್ನು ಉತ್ತಮವಾಗಿ ಜೀರ್ಣಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಕುಡಿಯುವ ನೀರು ವಿಶೇಷವಾಗಿ ಬಿಸಿನೀರು ತೂಕ ಕರಗಿಸಲು ಸಹಾಯ ಮಾಡುತ್ತದೆ. ಅದು ನಿಜವೇ? ಹೆಚ್ಚು ನೀರು ಕುಡಿಯುವುದರಿಂದ ಒಬ್ಬ ವ್ಯಕ್ತಿಯು ತೂಕ ಕಳೆದು ಕೊಳ್ಳುತ್ತಾನೆ. ಇದಕ್ಕೆ  ಕಾರಣವೆಂದರೆ ನೀರು ಹೊಟ್ಟೆ ತುಂಬಿರುವ ಫೀಲ್‌ ನೀಡುತ್ತದೆ, ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ಸಹಕರಿಸುತ್ತದೆ. ವಿಷಕಾರಿ ತ್ಯಾಜ್ಯವನ್ನು ಹೊರಹಾಕುತ್ತದೆ, ಎಂದು ಸಂಶೋಧನೆಯೊಂದು ಹೇಳಿದೆ. 2003ರಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನದ ಪ್ರಕಾರ, ಬಿಸಿನೀರನ್ನು ಕುಡಿಯುವುದರಿಂದ ತೂಕ ಇಳಿಸುವ ಪ್ರಕ್ರಿಯೆಯನ್ನು ಹೆಚ್ಚಿಸಬಹುದು. ಊಟಕ್ಕೆ ಮುಂಚಿತವಾಗಿ 500 ಮಿಲಿ ನೀರನ್ನು ಕುಡಿಯುವುದು ಮೆಟಾಬಾಲಿಸಮ್‌  30% ಹೆಚ್ಚಿಸುತ್ತದೆ. ಪ್ರತಿದಿನ ಬೆಳಿಗ್ಗೆ ಅಥವಾ ದಿನವಿಡೀ ಬಿಸಿ ಅಥವಾ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ತೂಕ ಇಳಿಸುವ ಪ್ರಕ್ರಿಯೆಗೆ ಮೂರು ವಿಧಗಳಲ್ಲಿ ಸಹಾಯವಾಗುತ್ತದೆ. ಬಿಸಿನೀರು ಕುಡಿಯುವುದರಿಂದ ನಿಮ್ಮ ದೇಹದ ಉಷ್ಣತೆ ಬದಲಾಗುತ್ತದೆ. ನೀರಿನ ಬೆಚ್ಚಗಿನ ತಾಪಮಾನವನ್ನು ಸರಿದೂಗಿಸಲು, ನಮ್ಮ ದೇಹವು ಆಂತರಿಕ ತಾಪಮಾನವನ್ನು ಕಡಿಮೆ ಮಾಡುತ್ತದೆ ಮತ್ತು ಚಯಾಪಚಯವನ್ನು ಸಕ್ರಿಯಗೊಳಿಸುತ್ತದೆ. ದೇಹದಲ್ಲಿನ ಕೊಬ್ಬನ್ನು ಒಡೆಯುತ್ತದೆ ಮತ್ತು ಅವುಗಳನ್ನು ಅಣುಗಳಾಗಿ ಪರಿವರ್ತಿಸುತ್ತದೆ, ಇದರಿಂದಾಗಿ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಫ್ಯಾಟ್‌ ಬರ್ನ್‌ ಸುಲಭಗೊಳಿಸುತ್ತದೆ. ಹಸಿವನ್ನು ನೀಗಿಸಲು ಬೆಚ್ಚಗಿನ ನೀರು ಸಹಾಯ ಮಾಡುತ್ತದೆ. ನಿಮ್ಮ ಊಟಕ್ಕೆ 30 ನಿಮಿಷಗಳ ಮೊದಲು ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿದರೆ ನಿಮ್ಮ ಕ್ಯಾಲೊರಿ ಬರ್ನ್ ಆಗುವುದರಲ್ಲಿ ಅನುಮಾನವೇ ಇಲ್ಲ. ಜೀರ್ಣಕ್ರಿಯೆಯ ಪ್ರಕ್ರಿಯೆಯ ಸುಗಮವಾಗಿಸಲು ನೀರು ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ನಮಗೆ  ಜೀರ್ಣಿಸಿಕೊಳ್ಳಲು ಕಷ್ಟಪಡುವ ಆಹಾರ ಕಣಗಳನ್ನು ಸಹ ಕರಗಿಸಿ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಬಿಸಿನೀರು ನರಮಂಡಲವನ್ನು ಶಾಂತಗೊಳಿಸುತ್ತದೆ. ನಮ್ಮ ನರಮಂಡಲವು ಶಾಂತವಾಗಿದ್ದಾಗ, ನಾವು ಕಡಿಮೆ ನೋವುಗಳನ್ನು ಅನುಭವಿಸುವುದಲ್ಲದೆ, ದಿನವಿಡೀ ಶಾಂತವಾಗಿರಲು ನಮಗೆ ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬಿಸಿನೀರು ನಿಮ್ಮ ಕರುಳನ್ನು ಸಂಕುಚಿತಗೊಳಿಸುತ್ತದೆ, ಇದು ಕರುಳಿನಲ್ಲಿನ ಅಡಚಣೆಯನ್ನು ಕಡಿಮೆ ಮಾಡಿ ಮಲ ವಿಸರ್ಜನೆ ಸುಲಭಗೊಳಿಸುತ್ತದೆ. ಕುಡಿಯುವ ನೀರು ವ್ಯಕ್ತಿಯ ದೇಹದ ಉಷ್ಣತೆಯನ್ನು ಹೆಚ್ಚಿಸಿ ಬೆವರುವಂತೆ ಮಾಡುತ್ತದೆ. ಬೆವರುವಿಕೆಯ ರಂಧ್ರಗಳಿಂದ ಟಾಕ್ಸಿನ್‌ ಹೊರಹಾಕುತ್ತದೆ ************************************************************************

ನೀರು ಕುಡಿಯಿರಿ Read Post »

ಇತರೆ, ಜೀವನ

ಮಾತು ಮನವನ್ನು ಅರಳಿಸಬೇಕು

ಲೇಖನ ಮಾತು ಮನವನ್ನು ಅರಳಿಸಬೇಕು ಮಾಲಾ ಕಮಲಾಪುರ್ ಭಾಷೆ ಮನುಷ್ಯನಿಗೆ  ಲಭಿಸಿದ ದೈವ ದತ್ತ ವರ ವಾದರೆ ಮಾತು ನಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಮೂಲಕ ಅಮೂಲ್ಯ ಸಾಧನ ಆಗಿದೆ. ಮಾತು ನಮ್ಮ ಬದುಕನ್ನು ಕಟ್ಟುತ್ತದೆ. ಇದು ವ್ಯಕ್ತಿಯ  ಬಿಚ್ಚಿಡುವ ಪಾರಿಜಾತದ ಪರಿಮಳದಂತೆ. ನಾವಾಡುವ ಮಾತು ಪುಷ್ಪದ ದಳದಂತೆ. ಮಾತಿನ ಬಳಕೆ  ಬಲ್ಲವರು ಮಾಣಿಕ್ಕ್ಯ ತರುತ್ತಾರೆ. ಬಳಿಕೆ ಅರಿಯದವರು ಜಗಳ ತರುತ್ತಾರೆ.ಮನುಷ್ಯನು  ಯಾವುದೇ ಲೌಕಿಕ ವಾದ ವಸ್ತು ಗಳಿಂದ ಅಲಂಕಾರ ಮಾಡಿಕೊಂಡರು ಶೋಭಿಸುವುದಿಲ್ಲ. ಆದರೆ ಒಳ್ಳೆಯ ಮಾತು ಮತ್ತು ಪ್ರಾಮಾಣಿಕ  ಮಾತುಗಳಿಂದ  ಅಲಂಕಾರ ದಿಂದ  ಶೋಭಿಸುತ್ತಾನೆ. ಮನುಷ್ಯನ  ಅಂತಸ್ತಾಗಲಿ, ಕುಲವಾಗಲಿ ಯಾವದು ಆತನ ಯಶಸ್ಸಿಗೆ ಕಾರಣವಾಗುವುದಿಲ್ಲ. ಮಧುರ ಮಾತೇ ಆತನ ಗೆಲುವಿಗೆ ಕಾರಣವಾಗುತ್ತದೆ.ಮಾತು ಮನವನ್ನು ಅರಳಿಸವೇಕು, ಹೃದಯತಣಿಸಿ ಜೀವಕ್ಕೆ ಕಳೆಯನ್ನು ತುಂಬ ಬೇಕು. ಶರಣರಾಗಲಿ, ದಾಸರಾಗಲಿ ತಮ್ಮ ನಡೆ ನುಡಿ ಸಾಮರಸ್ಯದ  ಬೆಸುಗೆಯನ್ನೇ ಬೆಸೆದಿದ್ದಾರೆ. ಅದಕ್ಕೆ ಬಸವಣ್ಣ ನವರು ನುಡಿದಡೇ  ಮುತ್ತಿನ ಹಾರದಂತೆ ಇರಬೇಕು, ನುಡಿದರೆ ಮಾಣಿಕ್ಕ್ಯದ  ದೀಪ್ತಿಯಂತಿರಬೇಕು, ನುಡಿದಡೆ ಸ್ಪಟಿಕದ ಸಲಾಕೆಯಂತಿರಬೇಕು ಎಂದು ಸಾರಿದ್ದಾರೆ.ನಾವು ಮಾತನಾಡುವಾಗ ಸಮಯ ಸಂಧರ್ಭ ಅವಲೋಕಿಸಿ ಮಾತನಾಡಬೇಕು. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ಪ್ರಚಲಿತ ಗಾದೆ ಮಾತು ಇದೆ ಮಾತಿಗೆ ಕ್ಷಮೆ ಕೇಳಬಹದು ಆದರೆ ಅದರಿಂದಾಗುವ ನೋವು ಶಮನವಾಗುವುದಿಲ್ಲ. ಪುರಾಣ ಕಾಲದಲ್ಲಿಯೂ ಋಷಿ ಮುನಿಗಳ ಮಾತು ಕೋಪ ತಾಪ ದಿಂದ ಹೊರ ಬಂದಾಗ ಶಾಪವಾಗುತ್ತಿತ್ತು. ಅವರು ಅರಳಿದ ಹೃದಯದಿಂದ ಮಾತು ವರವಾಗುತಿತ್ತು. ಬಲ್ಲವರು ಕಡಿಮೆ ಮಾತುಗಳಲ್ಲಿ ಮೌಲ್ಲ್ಯಾ ಧಾರಿತ ವಿಷಯಗಳನ್ನು ಬಿಚ್ಚಿಡುತ್ತಾರೆ. ಮಾತು ಹಿತವಾದಷ್ಟು ಒಳಿತು. ಅದಕ್ಕೆ ನಮ್ಮ ಹಿರಿಯರು ಮಾತು ಬೆಳ್ಳಿ ಮೌನ ಬಂಗಾರ ಎಂದಿದ್ದಾರೆ.ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ನಾಲಿಗೆ ಒಳ್ಳೇದು ಆದರೆ ನಾಡೆಲ್ಲ ಒಳ್ಳೇದು. ಅದಕ್ಕೆ ನಮ್ಮ ಹಿರಿಯರು ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಅಂತ ಹೇಳಿದರು. ಮೃದುವಾದ ಮಾತು ಕಠೋರ ವ್ಯಕ್ತಿ ಗಳ ಹೃದಯವನ್ನು ಕರಗಿಸುತ್ತದೆ ಪ್ರಾಮಾಣಿಕ ಮಾತು ಮನುಷ್ಯನ ಕೀರ್ತಿಯನ್ನು ಹೆಚ್ಚಿಸುತ್ತದೆ. ************************

ಮಾತು ಮನವನ್ನು ಅರಳಿಸಬೇಕು Read Post »

You cannot copy content of this page

Scroll to Top