ಅಂಕಣ ಬರಹ ಸುಜಾತಾ ಎನ್. ರವೀಶ್ ಸುಜಾತಾ ಎನ್. ಮೈಸೂರಿನಲ್ಲಿಯೇ ಹುಟ್ಟಿ ಬೆಳೆದದ್ದು .ಬಿಕಾಂ ಪದವೀಧರೆ. ಅನಂತರ ಅಂಚೆ ದೂರಶಿಕ್ಷಣದ ಮೂಲಕ ಎಂಕಾಂ ಪದವಿ ಪೂರೈಸಿದರು. ಚಿಕ್ಕಂದಿನಿಂದ ಓದುವ ಹವ್ಯಾಸ ಇತ್ತು. ಶಾಲೆ ಕಾಲೇಜು ಪತ್ರಿಕೆಗಳಲ್ಲಿ ಕಥೆ ಕವನಗಳು ಪ್ರಕಟವಾದವು. ಭಾರತೀಯ ಜೀವ ವಿಮಾ ನಿಗಮ ಮೈಸೂರು ಶಾಖೆ ೫ ರಲ್ಲಿ ವೃತ್ತಿ. ಈ ಮಧ್ಯೆ ಸುದೀರ್ಘ ಮೂವತ್ತು ವರ್ಷಗಳ ಅವಧಿಯಲ್ಲಿ ಓದುವ ಹವ್ಯಾಸ ಮುಂದುವರಿದಿದ್ದರೂ ಏಕೋ ಬರವಣಿಗೆ ಕೈ ಹಿಡಿದಿರಲಿಲ್ಲ. ಇತ್ತೀಚೆಗೆ ಮೂರು ವರ್ಷಗಳಲ್ಲಿ ಎಫ್ .ಬಿ. , ವಾಟ್ಸಾಪ್ ಗ್ರೂಪುಗಳಲ್ಲಿ ಸಕ್ರಿಯವಾದರು. ನಂತರ ,ಕವನಗಳ ಕೃಷಿ ಮತ್ತೆ ಮೊದಲಾಗಿ ಈಗ ಐನೂರಕ್ಕೂ ಹೆಚ್ಚು ಕವನಗಳು, ೨೦೦ ಗಝಲ್ಗಳು ರಚಿಸಿದ್ದಾರೆ. ರುಬಾಯಿ, ಟಂಕಾ ,ಹಾಯಿಕು, ವಚನ ಇನ್ನಿತರ ಪ್ರಕಾರಗಳು ರಚಿಸಿದ್ದಾರೆ. ಈಗ ಸೋದರ ಮುತ್ತುಸ್ವಾಮಿಯವರ ಪ್ರೋತ್ಸಾಹದಶ್ರೀಯುತ ನಾಗೇಶ ಮೈಸೂರು ಅವರು ಸಂಪಾದಿಸಿದ “ನಾವು ನಮ್ಮವರು” ಕವನ ಸಂಕಲನದಲ್ಲಿನ ಅವರ ‘ ನನ್ನ ಮುಖವಾಡಗಳು’ ಎಂಬ ಕವನವನ್ನು ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿಎಸ್ ಸಿ ತರಗತಿಯ ಪೂರಕ ಪಠ್ಯವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇವರ ಪ್ರಥಮ ಸಂಕಲನ “ಅಂತರಂಗದ ಆಲಾಪ” ೭೬ ಕವನಗಳ ಸಂಕಲನವಾಗಿದ್ದು ಮೇ ೨೦೧೯ ರಲ್ಲಿ ಲೋಕಾರ್ಪಣೆಗೊಂಡಿದೆ .ಸಾಹಿತ್ಯೋತ್ಸವ ಎಂಬ ಮುಖ ಹೊತ್ತಿಗೆಯ ಸಾಹಿತ್ಯಿಕ ಗುಂಪಿನ ನಿರ್ವಾಹಕರಲ್ಲಿ ಒಬ್ಬಳಾಗಿದ್ದಾರೆ. ಅಲ್ಲಿನ ಸಾಪ್ತಾಹಿಕ ಕವನ ಸ್ಪರ್ಧೆ “ಪದ ಪದ್ಯೋತ್ಸವ”ದ ನಿರ್ವಹಣೆ ನಡೆಸುತ್ತಿದ್ದಾರೆ ಮುಖಾಮುಖಿಯಲ್ಲಿ ಈ ಸಲ ಸುಜಾತ ರವೀಶ್ ಮೈಸೂರು ಅವರನ್ನು ಮಾತಾಡಿಸಿದ್ದಾರೆ ನಾಗರಾಜ ಹರಪನಹಳ್ಳಿ. ” ನಾನು ದೇವರನ್ನು ಖಂಡಿತಾ ನಂಬುತ್ತೇನೆ “ ಕವಿತೆಗಳನ್ನು ಯಾಕೆ ಬರೆಯುತ್ತೀರಿ ನನ್ನ ಮನಸ್ಸಿನ ನೋವನ್ನಾಗಲಿ, ನಲಿವನ್ನಾಗಲಿ ಆಂತರಿಕ ತುಮುಲ ದ್ವಂದ್ವಗಳನ್ನಾಗಲಿ, ಒಂದು ವಿಷಯದ ಬಗೆಗಿನ ಜಿಜ್ಞಾಸೆಯಾಗಲಿ, ಕೆಲವೊಮ್ಮೆ ಸಣ್ಣಪುಟ್ಟ ಸಂಭ್ರಮಗಳನ್ನಾಗಲಿ, ಇವುಗಳನ್ನೆಲ್ಲಾ ಹೊರಹಾಕುವ ಹಂಚಿಕೊಳ್ಳುವ ಮಾಧ್ಯಮ ನನಗೆ ಕವಿತೆ . ಕವಿತೆ ಹುಟ್ಟುವ ಕ್ಷಣ ಯಾವುದು ? ಮನಸ್ಸಿನ ಭಾವನೆಗಳನ್ನು ಒಳಗೇ ಅದುಮಿಟ್ಟುಕೊಳ್ಳಲಾಗದೇ ಈ ಕ್ಷಣ ಪದಗಳಲ್ಲಿ ಹೊರಹಾಕಲೇಬೇಕು , ಅವು ಅದಮ್ಯ ಎನಿಸಿದ ಆ ಹೊತ್ತು .ಇದ್ದಕ್ಕಿದ್ದ ಹಾಗೆ ಪದಪುಂಜಗಳು ತಲೆಯಲ್ಲಿ ಮೂಡಿ ಬಿಡುತ್ತವೆ. ಆ ಕ್ಷಣ ಅವುಗಳನ್ನು ಬರೆದಿಡಬೇಕು ನಂತರ ಬರೆವೆನೆಂದರೆ ಆ ಕ್ಷಣದ ತೀವ್ರತೆ ಅದೇ ಪದಗಳು ಮತ್ತೆ ಬರುವುದಿಲ್ಲ . ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? . ಹೆಚ್ಚಾಗಿ ನನ್ನ ಕವನಗಳೆಲ್ಲ ಭಾವನಾಜಗತ್ತಿಗೆ ಸಂಬಂಧಪಟ್ಟಂಥವು. ನಿತ್ಯ ಜೀವನದ ಸುಖ ದುಃಖಗಳು. ಸುತ್ತಣ ಪ್ರಕೃತಿಯ ದೃಶ್ಯಗಳು. ಒಮ್ಮೊಮ್ಮೆ ಸಮಾಜದಲ್ಲಿ ನಡೆಯುವ ಅನ್ಯಾಯ ಅನಾಚಾರಗಳು ನನ್ನ ಕವಿತೆಗೆ ಕಾರಣವಾಗಿವೆ . ಕೆಲವೊಂದು ವಸ್ತುಗಳು ಸಂಧರ್ಭಗಳು ಹಾಗೂ ಸ್ಥಳಗಳು ಕವಿತೆಗೆ ವಸ್ತುವಾಗಿಸಿದೆ ಪುರಾಣದ ಪಾತ್ರಗಳು ನನ್ನ ಮತ್ತೊಂದು ಮೆಚ್ಚಿನ ವಿಷಯ ಊರ್ಮಿಳೆ, ಗಾಂಧಾರಿ, ಕೈಕೇಯಿ, ಅಹಲ್ಯೆ, ಭೀಷ್ಮ, ಕರ್ಣ ಇವರೆಲ್ಲ ನನ್ನ ಕವನದಲ್ಲಿ ಬಂದು ಹೋಗಿದ್ದಾರೆ . ಆದರೆ ಅನುಭವದ ಕೊರತೆಯೋ ನನ್ನ ದೌರ್ಬಲ್ಯವೋ ಗೊತ್ತಿಲ್ಲ ಮನಸ್ಸಿನ ಭಾವನೆ ತುಮುಲಗಳೇ ಹೆಚ್ಚಾಗಿ ನನ್ನನ್ನು ಕಾಡಿ ಕವಿತೆ ಬರೆಸುತ್ತವೆ. ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಖಂಡಿತ… ಕವಿತೆಗಳು ಬಾಲ್ಯ ಹರೆಯದ ಮೆಲುಕುಗಳು ಅನುಭವದ ಪಡಿ ನೋಟಗಳೇ ಅಗಿವೆ .ಮುಗ್ಧತೆ ಬೆರಗು ತುಂಬಿದ ನೋಟ ಪ್ರಪಂಚದೆಡೆಗಿನ ಅಚ್ಚರಿ ಇದೆಲ್ಲ ಬಾಲ್ಯದ ಕಾಣಿಕೆಯಾದರೆ ,ನನ್ನ ಹೆಚ್ಚಿನ ಪ್ರೇಮ ಕವಿತೆಗಳಲ್ಲಿ ಹರೆಯ ಇಣುಕಿ ಹಾಕಿದೆ . ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ನಿಸ್ವಾರ್ಥ ಹಾಗೂ ಜನಹಿತಕ್ಕಾಗಿ ಮಿಡಿಯುವುದು ಇದು ರಾಜಕೀಯಕ್ಕೆ ಬರುವವರ ಮೂಲಭೂತ ಮಂತ್ರ. ಆದರೆ ಅದೇ ಕಣ್ಮರೆಯಾಗುತ್ತಿರುವ ವಿಪರ್ಯಾಸದ ದುರಂತ ಕಣ್ಣಿಗೆ ಕಟ್ಟುತ್ತಿದೆ ವಿಷಾದ ತರಿಸುತ್ತಿದೆ . ಜನಗಳ ಏಳಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡ ನಾಯಕರುಗಳ ಕೊರತೆ ನಮ್ಮಲ್ಲಿ ಕಾಡುತ್ತಿದೆ ಅಂತಹ ನಾಯಕರನ್ನು ಬೆಳೆಸಿ ಆರಿಸುವುದು ನಮ್ಮಗಳ ಕರ್ತವ್ಯವೂ ಎಂಬುದು ನೆನಪಿಗೆ ಬರುತ್ತದೆ . ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ನಾನು ದೇವರನ್ನು ಖಂಡಿತಾ ನಂಬುತ್ತೇನೆ ದೇವರು ಎಂಬುದು ಒಂದು ನಂಬಿಕೆ ಹಾಗೂ ಗಮ್ಯವಾದರೆ ಧರ್ಮಗಳು ಅದನ್ನು ಸೇರುವ ಮಾರ್ಗಗಳು. ದಾರಿ ಯಾವುದಾದರೇನು ಗಮ್ಯವನ್ನೇ ಮುಟ್ಟುತ್ತವೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಸಾಂಸ್ಕೃತಿಕ ವಾತಾವರಣದ ಪರಿಭಾಷೆ ಬದಲಾಗುತ್ತಿದೆ ಮೊದಲೆಲ್ಲಾ ಮುಖತಃ ನಡೆಯುತ್ತಿದ್ದ ಕಾರ್ಯಕ್ರಮಗಳು ಈಗ ದೂರದರ್ಶನ ಹಾಗೂ ಆನ್ ಲೈನ್ ಮೂಲಕ ನಡೆಯುತ್ತಿವೆ. ಎಲ್ಲೋ ವೈಯುಕ್ತಿಕ ಸಂಪರ್ಕ ಹಾಗೂ ಅದರ ಮೂಲಕ ನಡೆಯುತ್ತಿದ್ದ ವಿಶಿಷ್ಟ ಸಂವಹನದ ಕೊರತೆ ಎದ್ದು ಕಾಣುತ್ತಿದೆ. ಸಂಗೀತವಾಗಲಿ ನೃತ್ಯವಾಗಲಿ ಕಲೆಯ ಪ್ರದರ್ಶನಕ್ಕಿಂತ ತಾಂತ್ರಿಕತೆಯ ಅದ್ಧೂರೀಕರಣ ಕಣ್ಣಿಗೆ ರಾಚುತ್ತದೆ. ವೈಭವ ಹಾಗೂ ಪ್ರದರ್ಶನಪ್ರಿಯತೆ ಹೆಚ್ಚಾಗುತ್ತಿದೆ. ಕಲೆಗಾಗಿ ಕಲೆ ಎನ್ನುವುದು ಮಾಯವಾಗಿ ಎಲ್ಲದರಲ್ಲೂ ವಾಣಿಜ್ಯೀಕರಣದ ಭರಾಟೆ . ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ತೀರಾ ಇತ್ತೀಚೆಗೆ 2 ವರ್ಷದಿಂದ ಬರೆಯುತ್ತಾ ಬಂದಿರುವ ನನಗೆ ಅದರ ಪರಿಚಯ ಇಲ್ಲ .ಬರೆಯುವ ಸಾಹಿತ್ಯ ಗಟ್ಟಿಯಾಗಿದ್ದರೆ ಇಂದಲ್ಲ ನಾಳೆ ಮೌಲ್ಯ ಇದ್ದೇ ಇದೆ ಎನ್ನುವ ನಂಬಿಕೆ ಇದೆ. ಇನ್ನು ಪರಿಷತ್ತು ಹಾಗೂ ಇನ್ನಿತರ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ ಹೇಳ ಬೇಕೆಂದರೆ ಹಿಡಿಯಬೇಕಾದ ಹಾದಿಯನ್ನು ಬಿಟ್ಟು ಬೇರೆತ್ತಲೋ ಸಾಗುತ್ತಿದೆ ಅಂತ ಅನ್ನಿಸುತ್ತೆ . ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉನ್ನತ ಪರಂಪರೆ ಸಂಸ್ಕ್ರತಿಯ ದೇಶ ನನ್ನದು ಅಂತ ಬರಿ ಗತ ಇತಿಹಾಸದ ಬಗ್ಗೆ ಗರ್ವ ಪಡದೆ ಈ ಯುಗದಲ್ಲಿ ಹೇಗೆ ಮುನ್ನಡೆಯಬೇಕೆಂಬ ಕಡೆ ಹೆಚ್ಚು ಗಮನ ಕೊಡಬೇಕಾಗಿದೆ. ಹೊಸ ಚಿಗುರು ಹಳೆ ಬೇರು ಎಂಬ ತತ್ವದಡಿಯಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸುವ ಕೆಲಸ ಆಗಬೇಕಿದೆ. ಆದರೆ ಸ್ವಹಿತಾಸಕ್ತಿ ರಾಜಕೀಯ ದೊಂಬರಾಟಗಳ ಮಧ್ಯೆ ಮೂಲೋದ್ದೇಶ ಮರೆತು ಕವಲುದಾರಿಯಲ್ಲಿ ಸಾಗುತ್ತಿದೆ ಎನ್ನಿಸುತ್ತದೆ . ಜನರಲ್ಲಿ ಇನ್ನೂ ಹೆಚ್ಚಿನ ದೇಶಪ್ರೇಮ ಜಾಗೃತಿ ಮೂಡಿಸಬೇಕು. ಆದರೆ ಮಾಡುವರ್ಯಾರು ? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರು ಯಾರು ಎಂಬ ಹಾಗೆ. ಸ್ವಾತಂತ್ರ್ಯ ಪೂರ್ವದಲ್ಲಿ ಮೂಡಿದ್ದ ಐಕ್ಯತೆ ಅದೇ ಕೆಚ್ಚು ಈಗಲೂ ಬಂದರೆ ನಾವು ಏನನ್ನಾದರೂ ಸಾಧಿಸಬಹುದು . ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ನನಗೇನೂ ಅಂಥ ದೊಡ್ಡ ಕನಸುಗಳಿಲ್ಲ. ಇನ್ನೂ ಇನ್ನೂ ಓದುತ್ತಾ ಮತ್ತಷ್ಟು ಹೆಚ್ಚಿನ ಮೌಲಿಕ ಸಾಹಿತ್ಯ ರಚಿಸಬೇಕೆಂಬ ಬಯಕೆ ಅಷ್ಟೆ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ಕನ್ನಡದಲ್ಲಿ ಕುವೆಂಪು ಮತ್ತು ಎಸ್ ಎಲ್ ಭೈರಪ್ಪ ಅವರು. ಕುವೆಂಪು ಅವರು ವರ್ಣಿಸುವ ಪ್ರಕೃತಿ ಅವರ ಪದಗಳ ಪ್ರಯೋಗ ಕುತೂಹಲ ಮೂಡಿಸುತ್ತವೆ ಮತ್ತೆ ಮತ್ತೆ ಓದಬೇಕೆನಿಸುತ್ತದೆ .ಭೈರಪ್ಪನವರ ಯೋಚನಾಲಹರಿ ಅವರ ಪಾತ್ರಗಳ ಸಂಕೀರ್ಣತೆ ಯೋಚನೆಗಳಿಗೆ ಅವರು ಕೊಡುವ ಸ್ಪಷ್ಟತೆ ಮತ್ತು ಅವರು ಕಥೆ ಕಟ್ಟುವ ರೀತಿ ತುಂಬಾ ಇಷ್ಟವಾಗುತ್ತದೆ. ಇಂಗ್ಲಿಷಿನಲ್ಲಿ ಹೆಚ್ಚು ಓದಿಕೊಂಡಿಲ್ಲ ಆದರೆ ಶೇಕ್ಸ್ ಪಿಯರ್ ಇಷ್ಟ . ಈಚೆಗೆ ಓದಿದ ಕೃತಿಗಳಾವವು? ಡಾ ರಾಜಶೇಖರ ಜಮದಂಡಿ ಅವರು ಸಂಪಾದಿಸಿದ ಪ್ರಮುಖ ನೂರು ಲೇಖಕರ ಅಪ್ಪನ ಬಗ್ಗೆ ಬರೆದ ಆಪ್ತ ಬರಹಗಳು ” ಅಪ್ಪನ ಹೆಗಲು “. ತಮ್ಮ ತಂದೆಯವರ ಬಗ್ಗೆ ಪ್ರಮುಖ ಲೇಖಕರುಗಳು ಬರೆದ ಲೇಖನವನ್ನು ಸಂಪಾದಿಸಿದ್ದಾರೆ ಓದಲು ಆಸಕ್ತಿದಾಯಕವಾಗಿದೆ ದಿ” ಲಾಸ್ಟ್ ಲೆಕ್ಚರ್” ರ್ಯಾಂಡಿ ಪಾಶ್ ಅವರು ಬರೆದು ಕನ್ನಡಕ್ಕೆ ಉಮೇಶ್ ಅವರು ಅನುವಾದಿಸಿದ ಪುಸ್ತಕ. ಕ್ಯಾನ್ಸರ್ ನಿಂದ ಇನ್ನೇನು ಸಾವು ಖಚಿತ ಎನ್ನುವ ವ್ಯಕ್ತಿಯೊಬ್ಬ ತನ್ನ ಮಕ್ಕಳಿಗಾಗಿ ತನ್ನ ಆಲೋಚನೆಗಳನ್ನು ತೆರೆದಿಡುವ ಹಾಗೂ ಜೀವನದ ಸಾರವನ್ನು ಶಬ್ದಗಳಲ್ಲಿ ಹಿಡಿದಿಡುವ ಅಪರೂಪದ ಪ್ರಯತ್ನ. ಮನಸ್ಸಿಗೆ ತುಂಬಾ ತಟ್ಟಿತು ನಿಮಗೆ ಇಷ್ಟವಾದ ಕೆಲಸ ಯಾವುದು? ಓದು ಬರವಣಿಗೆ ಬಿಟ್ಟರೆ, ಅಡುಗೆ ಮಾಡುವುದು ನಿಮಗೆ ಇಷ್ಟವಾದ ಸ್ಥಳ ಯಾವುದು ? ಕುಪ್ಪಳ್ಳಿಯ ಕವಿಶೈಲ. ತುಂಬಾ ವರ್ಷಗಳಿಂದ ನೋಡಬೇಕೆಂದಿದ್ದೆ. ಈಗ ಕಳೆದ 2 ವರ್ಷದಲ್ಲಿ 2 ಬಾರಿ ಸಂದರ್ಶಿಸಿದ್ದೇನೆ. ಆ ಮನೆಯ ಗಹನ ಗಂಭೀರತೆ, ಕವಿ ಶೈಲ ದಲ್ಲಿನ ಒಂದು ರೀತಿಯ ನಿಗೂಡತೆ, ಹರಡಿ ಹಾಸಿ ಚೆಲ್ಲಿದ ಪ್ರಕೃತಿ ಸೌಂದರ್ಯ ಎಲ್ಲಾ ನನ್ನ ಮನಸ್ಸನ್ನು ಸೆರೆಹಿಡಿದಿವೆ. ಅಲ್ಲಿ ಓಡಾಡುವಾಗಲೆಲ್ಲ ಇಲ್ಲಿ ರಸಋಷಿ ಗಳು ನಡೆದಿದ್ದರು ಎಂಬ ಭಾವವೇ ಒಂದು ರೀತಿಯ ಪುಳಕ ತರುತ್ತದೆ . ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು? ಹಿಂದಿಯ ದೋ ಆಂಖೆ ಬಾರಹ್ ಹಾಥ್ ಹಾಗೂ ಕನ್ನಡದ ಶರಪಂಜರ ನೀವು ಮರೆಯಲಾರದ ಘಟನೆ ಯಾವುದು? ಯಾವುದೇ ವಶೀಲಿ ಶಿಫಾರಸ್ಸು ಇಲ್ಲದೆ “ನಾವು ನಮ್ಮವರು” ಎಂಬ ಸಂಪಾದಿತ ಸಂಕಲನದಲ್ಲಿನ ನನ್ನ “ಮುಖವಾಡಗಳು” ಕವನವನ್ನು ಕುವೆಂಪು ವಿಶ್ವವಿದ್ಯಾಲಯದ ಎರಡನೇ ಬಿ ಎಸ್ಸಿಯ ಪೂರಕ ಪಠ್ಯವಾಗಿ ಆಯ್ಕೆಮಾಡಿದ್ದು. ತುಂಬಾ ಖುಷಿ ಕೊಟ್ಟ ಸಂಗತಿಯೂ ಹೌದು ಹೇಳಲೇ ಬೇಕಾದ ಕೆಲ ಸಂಗತಿಗಳು; ಕಾಲೇಜು ಓದುವ ಕಾಲದಲ್ಲಿ ಬರೆಯುವ ಹವ್ಯಾಸ ಇತ್ತು .ಅದನ್ನು ಮುಂದುವರಿಸಿಕೊಂಡು ಹೋಗಲು ಆಗದಿದ್ದುದಕ್ಕೆ ಖೇದವಿದೆ. ಅದಕ್ಕಾಗಿಯೇ ಈಗ ಬರೆಯುವ ಆಸಕ್ತಿಯಿರುವವರಿಗೆ “ಸಾಹಿತ್ಯೋತ್ಸವ” ಎಂಬ ಮುಖಹೊತ್ತಿಗೆಯ ಗುಂಪಿನ ನಿರ್ವಾಹಕಿಯಾಗಿ ಕೈಲಾದಷ್ಟು ಪ್ರೋತ್ಸಾಹ ನೀಡುತ್ತಿದ್ದೇನೆ . ಇಷ್ಟು ಬರೆಯುವ ತುಡಿತ ಮಿಡಿತ ಇಟ್ಟುಕೊಂಡು ಇಷ್ಟು ದಿನ ಬರೆಯದೆ ಹೇಗೆ ಸುಮ್ಮನಿದ್ದೆ ಎಂದು ನನ್ನ ಬಗ್ಗೆ ನನಗೇ ಆಶ್ಚರ್ಯ ಉಂಟಾಗುತ್ತದೆ. ಈಗಂತೂ ದಿನಕ್ಕೆ ಏನಾದರೂ ಚೂರು ಬರೆಯದಿದ್ದರೆ ಆಗುವುದೇ ಇಲ್ಲ . ಇನ್ನು ನನ್ನ ಬರವಣಿಗೆಯ ಬಗ್ಗೆ ಹೇಳಬೇಕೆಂದರೆ ಸಾಹಿತ್ಯ ಕ್ಷೇತ್ರದಲ್ಲಿ ಈಗ ಅಂಬೆಗಾಲಿಡುತ್ತಿರುವ ತೊದಲು ನುಡಿ ಆಡುತ್ತಿರುವ ಮಗು ನಾನು. ನನ್ನ ಪ್ರಥಮ ಸಂಕಲನದ ವಿಮರ್ಶೆ ಮಾಡಿದ ಶ್ರೀಯುತ ಪ್ರಕಾಶ ಕಡಮೆ ಅವರು ಹೇಳಿದಂತೆ ಪ್ರಾಸದ ತ್ರಾಸ ಕಳಚಿಕೊಳ್ಳಬೇಕಾಗಿದೆ, ಅಂತರಂಗದ ಪರಿಧಿಯನ್ನು ದಾಟಿ ಯೋಚನೆಗಳು ಕವಿತೆಗಳು ವಿಸ್ತೃತ ವಿಶಾಲ ಹರಹಿಗೆ ಚಾಚಿಕೊಳ್ಳಬೇಕಾಗಿದೆ. ಸಾಮಾಜಿಕ ತುಡಿತ ಮಿಡಿತಗಳಿಗೆ ಸಾಕ್ಷಿಯಾಗಬೇಕಾಗಿದೆ. ಇವೆಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಂಡು ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಹಿತ್ಯ ಕೃಷಿ ನಡೆಸಬೇಕಾಗಿದೆ ಮತ್ತಷ್ಟು ಮೌಲ್ಯಯುತ ಬರವಣಿಗೆಯನ್ನು ಕೊಡಬೇಕಿದೆ. ************************************************************************ ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಅಂಕಣ ಬರಹ ಗಾನ್ ವಿತ್ ದ ವಿಂಡ್ ಗಾನ್ ವಿತ್ ದ ವಿಂಡ್ಮೂಲ ಇಂಗ್ಲಿಷ್ : ಮಾರ್ಗರೆಟ್ ಮಿಶೆಲ್ ಕನ್ನಡಕ್ಕೆ : ಶ್ಯಾಮಲಾ ಮಾಧವಪ್ರ : ಅಂಕಿತ ಪುಸ್ತಕಪ್ರಕಟನೆಯ ವರ್ಷ : ೨೦೦೪ : ಎಂದಿನಂತೆ ಶ್ಯಾಮಲಾ ಮಾಧವ ತಮ್ಮ ಅನುವಾದಕ್ಕಾಗಿ ಒಂದು ಕ್ಲಾಸಿಕ್ ಕಾದಂಬರಿಯನ್ನು ಎತ್ತಿಕೊಂಡಿದ್ದಾರೆ. ೧೮೬೧ರಲ್ಲಿ ಅಮೆರಿಕಾದಲ್ಲಿ ನಡೆದ ಅಂತರ್ಯುದ್ಧದ ಸಂದರ್ಭದ ಒಂದು ಕಥೆ ಇಲ್ಲಿದೆ. ಆದ್ದರಿಂದ ಕಥೆಯ ಜತೆಜತೆಗೇ ಯುದ್ಧದ ವರ್ಣನೆಯೂ, ಅದರಿಂದಾಗುವ ಅನಾಹುತಗಳ ವರ್ಣನೆಯೂ ಸಾಗುತ್ತದೆ. ದಕ್ಷಿಣ ಅಮೇರಿಕಾದ ಜಾರ್ಜಿಯಾದ ಟಾರಾ ಎಂಬಲ್ಲಿನ ಒಂದು ಪ್ಲಾಂಟೇಷನ್ ಮಾಲೀಕರ ಮುದ್ದಿನ ಮಗಳು ಸ್ಕಾರ್ಲೆಟ್ ಓಹರಾ. ಅವಳು ತನ್ನನ್ನು ಮದುವೆಯಾಗಲು ಬಂದ ಅನೇಕ ಯುವಕರನ್ನು ನಿರಾಕರಿಸಿ ಆಶ್ಲೆ ವಿಲ್ಕಿಸ್ ಎಂಬವನನ್ನು ಇಷ್ಟಪಟ್ಟು ಮದುವೆಯಾಗ ಬಯಸುತ್ತಾಳೆ. ಆದರೆ ಆಶ್ಲೆ ಆಗಲೇ ಸಾಮಾನ್ಯ ರೂಪಿನ ಕೃಶಕಾಯದ ಹುಡುಗಿ ಮೆಲಾನಿ ಹ್ಯಾಮಿಲ್ಟನ್ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆAದು ತಿಳಿದಾಗ ಅವಳು ನಿರಾಶಳಾಗುತ್ತಾಳೆ. ಆದರೂ ಆಶ್ಲೆ ಮೇಲಿನ ಅವಳ ಪ್ರೀತಿ ಕಡಿಮೆಯಾಗುವುದಿಲ್ಲ. ಆ್ಲಶ್ಲೆ ಅವಳನ್ನು ತಿರಸ್ಕರಿಸುವುದನ್ನು ಸಾಹಸಪ್ರಿಯ ಮತ್ತು ಒರಟು ಸ್ವಭಾವದ ರ‍್ಹೆಟ್ ಬಟ್ಲರ್ ಎಂಬವನು ನೋಡುತ್ತಾನೆ. ಅವನಿಗೆ ಸ್ಕಾರ್ಲೆಟ್ ಮೇಲೆ ಮನಸ್ಸಿರುತ್ತದೆ. ಆಶ್ಲೆಯ ಮೇಲೆ ಸೇಡು ತೀರಿಸುವುದಕ್ಕೋಸ್ಕರವೋ ಎಂಬAತೆ ಸ್ಕಾರ್ಲೆಟ್ ಭೋಳೆ ಸ್ವಭಾವದ ಮೆಲಾನಿಯ ಅಣ್ಣ ಚಾರ್ಲ್ಸ್ ಹ್ಯಾಮಿಲ್ಟನ್‌ನನ್ನು ವಿವಾಹವಾಗುತ್ತಾಳೆ. ಆದರೆ ಚಾರ್ಲ್ಸ್ ಯುದ್ಧಕ್ಕೆ ಹೋದವನು ಅಲ್ಲೇ ಸಾಯುತ್ತಾನೆ. ಸ್ಕಾರ್ಲೆಟ್‌ಗೆ ತಾನು ಗರ್ಭಿಣಿಯೆಂದು ಗೊತ್ತಾಗುತ್ತದೆ. ಟಾರಾದಲ್ಲಿ ವೈರಿಗಳ ದಾಳಿಯ ಕಾರಣದಿಂದ ಅನ್ನಾಹಾರಕ್ಕೆ ಕಷ್ಟವಾಗಿ ಸ್ಕಾರ್ಲೆಟ್ ಮೆಲಾನಿಯ ಜತೆಗೂಡಿ ಅಟ್ಲಾಂಟಾಕ್ಕೆ ಹೋಗಿ ವಾಸಿಸುತ್ತಾಳೆ. ಅಲ್ಲಿ ಅವಳು ಪುನಃ ರ‍್ಹೆಟ್ ನನ್ನು ಭೇಟಿಯಾಗುತ್ತಾಳೆ. ಅವನು ಅವಳನ್ನು ತನ್ನ ಒರಟು ಮಾತುಗಳಿಂದ ನೋಯಿಸುತ್ತಾನಾದರೂ ಟಾರಾದ ಸಾಮಾಜಿಕ ಅಗತ್ಯಗಳಿಗೆ ಅವಳು ಸ್ಪಂದಿಸಬೇಕೆಂದು ಪ್ರೋತ್ಸಾಹಿಸುತ್ತಾನೆ. ಮೆಲಾನಿ ಹೆರಿಗೆಯ ನೋವಿನಲ್ಲಿದ್ದಾಗ ವೈರಿಗಳಾದ ಯಾಂಕಿಗಳು ಅಟ್ಲಾಂಟಕ್ಕೂ ಮುತ್ತಿಗೆ ಹಾಕುತ್ತಾರೆ. ಆಗ ಸ್ಕಾರ್ಲೆಟ್ ಮೆಲಾನಿಯನ್ನೂ ಅವಳ ಮಗುವನ್ನೂ ತನ್ನ ಮಗುವನ್ನೂ ಕರೆದುಕೊಂಡು ಟಾರಾಕ್ಕೆ ಬರುತ್ತಾಳೆ. ಟಾರಾದಲ್ಲೂ ಯಾಂಕಿಗಳ ಆಕ್ರಮಣದ ಪರಿಣಾಮವಾಗಿ ಸಾಕಷ್ಟು ಅನಾಹುತಗಳಾಗಿವೆ. ಸ್ಕಾರ್ಲೆಟ್‌ಳ ತಾಯಿ ತೀರಿಹೋಗಿ ತಂದೆಗೆ ಬುದ್ಧಿಭ್ರಮಣೆಯಾಗಿದೆ. ಪ್ಲಾಂಟೇಷನ್ ಪೂರ್ತಿಯಾಗಿ ಆಕ್ರಮಣಕಾರರಿಂದ ಹಾಳಾಗಿ ಹೋಗಿದೆ. ಅಲ್ಲದೆ ಆಸ್ತಿಯ ಮೇಲಿನ ತೆರಿಗೆಯನ್ನು ಹೆಚ್ಚು ಮಾಡಿದ್ದಾರೆಂದೂ ಅವಳ ಆಸ್ತಿಯನ್ನು ಲಪಟಾಯಿಸುವುದು ಅವರ ಉದ್ದೇಶವೆಂದೂ ಸ್ಕಾರ್ಲೆಟ್ಳಿಗೆ ಸುದ್ದಿ ಸಿಗುತ್ತದೆ. ತನ್ನ ಆಸ್ತಿಯನ್ನು ತಾನು ಉಳಿಸಲೇ ಬೇಕೆಂದು ಅವಳು ತೆರಿಗೆಯ ಹಣವನ್ನು ಸಂಪಾದಿಸಲು ಅಟ್ಲಾಂಟಕ್ಕೆ ಬರುತ್ತಾಳೆ. ಟಾರಾದ ಪ್ಲಾಂಟೇಷನನ್ನು ಮೊದಲ ಸ್ಥಿತಿಗೆ ತಂದೇ ತೀರುವೆನೆಂದು ಹಠ ತೊಡುತ್ತಾಳೆ. ಆದರೆ ಹಣ ಸಂಪಾದಿಸುವ ವಿಚಾರದಲ್ಲಿ ಅವಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಒಂದು ಹಂತದಲ್ಲಿ ರ‍್ಹೆಟ್‌ನನ್ನು ಮದುವೆಯಾಗುತ್ತಾಳೆ. ಅವನಿಂದ ಒಂದು ಮಗುವನ್ನೂ ಪಡೆಯುತ್ತಾಳೆ. ಆದರೆ ಸ್ವಲ್ಪ ಕಾಲದ ನಂತರ ರ‍್ಹೆಟ್ ಅವಳನ್ನು ತಿರಸ್ಕರಿಸುತ್ತಾನೆ. ಆಗ ಸ್ಕಾರ್ಲೆಟ್‌ಗೆ ತಾನು ಅವನನ್ನು ಪ್ರೀತಿಸುತ್ತಿದ್ದೇನೆಂದು ಅರಿವಾಗುತ್ತದೆ, ಅವನ ಪ್ರೀತಿಯನ್ನು ಹೇಗಾದರೂ ಮಾಡಿ ಸಂಪಾದಿಸಲೇ ಬೇಕೆಂದು ಅವಳು ನಿರ್ಧರಿಸುವುದರೊಂದಿಗೆ ಕಾದಂಬರಿ ಮುಗಿಯುತ್ತದೆ. ಸ್ಕಾರ್ಲೆಟ್‌ಳ ದಿಟ್ಟತನದ ಚಿತ್ರಣವಷ್ಟೇ ಕಾದಂಬರಿಯ ಪ್ರಮುಖ ಅಂಶವಲ್ಲ. ಪುರುಷಾಹಂಕಾರ, ಹಠ, ಪ್ರತೀಕಾರ, ಅಧಿಕಾರ ದಾಹಗಳ ಕಾರಣದಿಂದ ನಡೆಯುವ ಯುದ್ಧವು ಸ್ತ್ರೀಯರ ಬದುಕನ್ನು ಯಾವ ರೀತಿ ಮೂರಾಬಟ್ಟೆ ಮಾಡುತ್ತದೆ ಅನ್ನುವುದನ್ನು ಚಿತ್ರಿಸುವುದು ಕಾದಂಬರಿಯ ಉದ್ದೇಶವಾಗಿದೆ. ಎಲ್ಲರ ಬದುಕೂ ಯುದ್ಧವು ಉಂಟು ಮಾಡುವ ಅನಾಹುತಗಳಿಂದಾಗಿ ಗಾಳಿಯ ಹೊಡೆತಕ್ಕೆ ಸಿಕ್ಕಿ ಸೂತ್ರ ಕಿತ್ತ ಗಾಳಿಪಟದಂತಾಗುತ್ತದೆ ಅನ್ನುವುದು ಶೀರ್ಷಿಕೆಯ ಅರ್ಥ. ಶ್ಯಾಮಲಾ ಮಾಧವ ಅವರ ಅನುವಾದವು ಎಂದಿನಂತೆ ಹೃದ್ಯವಾಗಿದೆ ********************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಕಬ್ಬಿಗರ ಅಬ್ಬಿ ಮನಸ್ಸು ಕಟ್ಟಿದ ಕೇರಿ ಮತ್ತು ಸಾಕ್ಷೀಪ್ರಜ್ಞೆ ಆ ಸಾಯಂಕಾಲ ಪಶ್ಚಿಮ ಘಟ್ಟದ ಮೇಲ್ ಮೆಟ್ಟಿಲು ಗಳಲ್ಲಿ ಒಂದಾದ, ‘ಕೊಟ್ಟಿಗೆಹಾರ’ ದಿಂದ ಸೈಕಲ್ ತುಳಿಯುತ್ತಾ ಇಳಿದರೆ ಘಟ್ಟದ ಬುಡದಲ್ಲಿ ಧರ್ಮಸ್ಥಳ. ಪಶ್ಚಿಮದ ಅರಬ್ಬೀ ಸಮುದ್ರ ಅಲೆಯೆಬ್ಬಿಸಿ ಸೂರ್ಯಾಲಿಂಗನಕ್ಕೆ ತೋಳು ಚಾಚಿ ಕಾಯುತ್ತಿತ್ತು. ಅದು ಚಾರ್ಮಾಡಿ ಘಟ್ಟ. ಯಾವಾಗಲೂ ಹತ್ತುವ ರಸ್ತೆ ಎಂದೂ ಮುಗಿಯದ ಪಯಣದಂತಿದ್ದರೆ, ಇಳಿಯುವ ರಸ್ತೆ ಹಾಗಲ್ಲ. ಮೈಭಾರ ಹೆಚ್ಚಿದ್ದಷ್ಟು ಬೇಗ ಭಾರ ಇಳಿಸುವ ತವಕ ಅದಕ್ಕೆ. ಅದೆಷ್ಟು ತಿರುವುಗಳೋ!. ಸೈಕಲ್ ಚಕ್ರಗಳು ಅಲೆಕ್ಸಾಂಡರ್ ನ ಕುದುರೆಯ ಹಾಗೆ ನಾಗಾಲೋಟ ಓಡಲು ಕಾರಣ, ಚಕ್ರವೂ ಅಲ್ಲ, ನನ್ನ ತುಳಿಸಾಮರ್ಥ್ಯವೂ ಅಲ್ಲ!. ಅದು ಭೂಮಿತಾಯಿಯ ಗುರುತ್ವಾಕರ್ಷಣ ಶಕ್ತಿ. ರಸ್ತೆಯಲ್ಲಿ ಇರುವ ತಿರುವುಗಳು ಹೆಂಗಳೆಯರು ಮುಂಗುರುಳಿಗೆ ಹಾಕುವ ಪಿನ್ ನಂತಹ (ಹೆಯರ್ ಪಿನ್ ) ತಿರುವುಗಳು. ಹೋಗುವ ದಿಶೆಯನ್ನು ರಸ್ತೆ, ಒಮ್ಮಿಂದೊಮ್ಮೆಯೇ ವಿರುದ್ಧ ದಿಕ್ಕಿಗೆ ತಿರುಗಿಸುತ್ತೆ. ‘ನನ್ನ ದಿಕ್ಕನ್ನು ನಾನೇ ನಿರ್ಧರಿಸುವೆ ‘ ಎಂಬ ಜಂಭವಿದ್ದರೆ, ಇಳಿಜಾರಿನ ಯಮಪ್ರಪಾತ ಬಾಯ್ತೆರೆದು ಕಾಯುತ್ತೆ. ಸಾಯಂಕಾಲದ ಬಣ್ಣ ಬಣ್ಣದ ಮದಿರೆ ಹೀರಿದ ಗಗನದಲ್ಲಿ ಗಾಳಿ ತೂರಾಡುತ್ತೆ. ವಾತಾವರಣದ ನೋಹಕ ನಶೆಯಲ್ಲಿ ರಸ್ತೆ, ಪಸ್ಚಿಮಘಟ್ಟಗಳ ದಟ್ಟ ಕಾಡುಗಳನ್ನು ಬಳಸಿ, ಕೆಳನೆಗೆಯುವ ತೊರೆಗಳಲ್ಲಿ ನೆನೆದು ಇಳಿದಂತೆ,ಅದಕ್ಕಂಟಿದ ಸೈಕಲ್ ಚಕ್ರಗಳು ತಿರು ತಿರುಗಿ ಓಡುತ್ತವೆ. ಆಗಸದಲ್ಲಿ ಹಕ್ಕಿಗಳು ತಮಗೆ ಬೇಕಾದಂತೆ ರೆಕ್ಕೆ ತೇಲಿಸಿ ಇಳಿಯುತ್ತವೆ,ಅದು ಚಂದ. ಅವುಗಳಿಗೆ ರಸ್ತೆಯ ಅಗತ್ಯವೂ ಇಲ್ಲ, ಬಂಧನವೂ ಇಲ್ಲ. ಹಾಗಂತ ಅವು ದಿಶಾಹೀನ ಅಲ್ಲ. ರಾತ್ರೆಯಾದಂತೆ, ರೊಮ್ಯಾಂಟಿಕ್ ಆಗಿದ್ದ ಬಣ್ಣಗಳೂ, ಕತ್ತಲೆಯ ಕಪ್ಪಿಗೆ ಸಮರ್ಪಣೆ ಮಾಡಿಕೊಂಡು, ನಮ್ಮ ಪರ್ಸೆಪ್ಷನ್ ನಲ್ಲಿ ಪರಿಸರದ ಗಾಢಕತ್ತಲೆಯಲ್ಲಿ ಕಳೆದುಹೋಗುತ್ತವೆ. ಘಟ್ಟಗಳ ಬುಡಕ್ಕಿಳಿದಾಗ ದಟ್ಟ ಕತ್ತಲು. ತಲೆಯೆತ್ತಿ ನೋಡಿದರೆ ಬೆಟ್ಟಗಳ ಸಾಲುಗಳ ಚಿತ್ರ ಅಕ್ಷಿಪಟಲದಲ್ಲಿ ಮೂಡವು. ಅನುಭವಕ್ಕೂ ಬಾರವು. ಸೈಕಲ್ ಒಂದು ಮ್ಯಾಜಿಕ್!. ಇದರಲ್ಲಿ ಕುಳಿತು ಎಡಕ್ಕೆ ವಾಲಿದರೂ,ಬಲಕ್ಕೆ ವಾಲಿದರೂ ಬೀಳುತ್ತೀರಿ!. ಸೈಕಲ್ ಎಡಕ್ಕೋ ಬಲಕ್ಕೋ ವಾಲಿದರೆ,ಕೂಡಲೇ ದೇಹಭಾರವನ್ನು ವಿರುದ್ಧ ದಿಕ್ಕಿಗೆ ವಾಲಿಸಿ ಸಮತೋಲಿಸಬೇಕು. ದೇಹ, ಸೈಕಲ್ ನ ಜತೆಗೂಡಿ, ಗುರುತ್ವ ಕೇಂದ್ರವನ್ನು, ಸೈಕಲ್ ನ ಒಟ್ಟೂ ಘನತ್ವದ ಮಧ್ಯಬಿಂದುವಿನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಹಾಗೆ ಸಂಪಾದಿಸಿದ ಸಮದೃಷ್ಟಿಯೇ ಸೈಕಲ್ ಗೂ, ಚಲನೆಗೂ ಸಮತೋಲನ ತಂದುಕೊಟ್ಟು ಗುರಿಯತ್ತ ಮುಖಮಾಡುತ್ತೆ. ಮನಸ್ಸು ಕೂಡಾ ಅಷ್ಟೇ, ಎಡಕ್ಕೋ,ಬಲಕ್ಕೋ, ಯಾವುದೇ ಸಿದ್ಧಾಂತದತ್ತ ವಾಲಿದರೆ, ಚಲನಶೀಲತೆಗೆ ಅಗತ್ಯವಾದ ಬ್ಯಾಲೆನ್ಸ್ ಅನ್ನು ಕಳೆದುಕೊಳ್ಳುತ್ತದೆ, ಅಯಸ್ಕಾಂತಕ್ಕೆ ಅಂಟಿ ನಿಂತ ಕಬ್ಬಿಣದ ತುಂಡಿನ ಹಾಗೆ. ಸೈಕಲ್ ನನ್ನು ನಿಂತಲ್ಲೇ ಬ್ಯಾಲೆನ್ಸ್ ಮಾಡಲು ಅತ್ಯಂತ ಕಷ್ಟ. ಸೈಕಲ್ ನಲ್ಲಿ ಕುಳಿತು ಅದು ಚಲನಶೀಲವಾದಾಗ ಬ್ಯಾಲನ್ಸ್ ಸುಲಭ. ಪ್ರಕೃತಿಯ ಸಹಜತತ್ವ ಚಲನಶೀಲತೆಯಲ್ಲಿಯೇ ಸಮತೋಲನ ಕಾಣುವಂತೆಯೇ ಸೈಕಲ್ ಸವಾರಿಯೂ ಕಾಣುತ್ತೆ. ಯಾವುದೇ ಸವಾರಿಯಲ್ಲಿ, ಅದು, ಸೈಕಲ್, ಬಸ್ಸು,ರೈಲು, ವಿಮಾನ ಎಲ್ಲದರಲ್ಲೂ, ಪ್ರಯಾಣಿಕನ ಪ್ರಜ್ಞೆ ಮತ್ತು ಪರಿಸರದ ಅವಸ್ಥೆಗಳಲ್ಲಿ ಸಾಪೇಕ್ಷತೆ ಕೆಲಸ ಮಾಡುತ್ತೆ. ವೇಗವಾಗಿ ಚಲಿಸುವ ರೈಲಿನಲ್ಲಿ ಕುಳಿತಾಗ, ಹೊರಗೆ ಕಾಣುವ ಮರಗಳು, ಕಟ್ಟಡಗಳು ಎಲ್ಲವೂ ವೇಗವಾಗಿ ಹಿಮ್ಮುಖವಾಗಿ ಚಲಿಸುವ ಅನುಭವ ಆಗುತ್ತಲ್ಲ. ಅದೇ ಸಾಪೇಕ್ಷ ಅನುಭವ. ಅಂದರೆ, ಡೈನಮಿಕ್ ವ್ಯವಸ್ಥೆಯಲ್ಲಿ ಅನುಭವ, ಚಲಿಸುವ ದೇಹ ಮತ್ತು ಮನಸ್ಸಿನ ಮೇಲೆ ( ಫ್ರೇಮ್ ಆಫ್ ರೆಫರೆನ್ಸ್), ಚಲಿಸುವ ದಿಕ್ಕಿನ ಮೇಲೆ ಮತ್ತು ಪರಿಸರದ ಅವಸ್ಥೆಯ ಮೇಲೆ ಅವಲಂಬಿತವಾಗಿರುವಾಗ, ಕಾವ್ಯಪ್ರಜ್ಞೆಯೂ, ಸಿದ್ಧಾಂತಗಳನ್ನು ರೂಪಿಸುವ ತಾರ್ಕಿಕ ಮನಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಆದ್ದರಿಂದ ಯಾತ್ರೆಯುದ್ದಕ್ಕೂ, ನಮ್ಮ ಅಬ್ಸರ್ವೇಷನ್ ನ ಮೇಲೆ ಇತ್ಯಾತ್ಮಕ ಅಭಿಪ್ರಾಯಗಳನ್ನು ಸ್ಥಿರೀಕರಿಸುವುದು ಮತ್ತು ಪ್ರತಿಪಾದಿಸುವುದು, ನಿತ್ಯಚಲನಶೀಲವಾದ ಪ್ರಕೃತಿ ತತ್ವಕ್ಕೆ ಪೂರಕವಾಗದು. ಸೈಕಲ್ ಸವಾರ ಚಲಿಸುತ್ತಾ ಹೋಗುತ್ತಿದ್ದಂತೆ, ಕಾಲ ಹಿಂದಕ್ಕೆ ಓಡುತ್ತೆ. ವಿಪರ್ಯಾಸವೆಂದರೆ ಸೈಕಲ್ ಸವಾರ ಯಾತ್ರೆ ಮುಗಿಸಿ ಹಿಂತಿರುಗಬಲ್ಲ. ಆದರೆ, ಕಾಲ ಹಿಂತಿರುಗಲ್ಲ. ಅದು ಏಕಮುಖೀ. ಒಮ್ಮೆ ಭೂತಕಾಲವಾದ ವರ್ತಮಾನ, ಪುನಃ ವರ್ತಮಾನಕ್ಕೆ ಹಿಂತಿರುಗಲ್ಲ!. ಇವಿಷ್ಟು ತಯಾರಿಯೊಂದಿಗೆ ವಿಜಯ್ ದಾರಿಹೋಕ ಅವರ ಕವಿತೆ ” ಸೈಕಲ್,ರಸ್ತೆ, ತುಡಿತ ಇತ್ಯಾದಿ” ಎಂಬ ಕವಿತೆಯನ್ನು ನೋಡೋಣ. ** ** ** *** ಸೈಕಲ್,ರಸ್ತೆ, ತುಡಿತ ಇತ್ಯಾದಿ ಎಲ್ಲ ಮರೆತ ಒಂದು ಹಳೆಯ ಊರಕೇರಿಯ ದಾರಿಗುಂಟ ಸತತ …ಸೈಕಲ್ ತುಳಿವ ತುಡಿತ….! ಇನ್ನೇನು …ದಿನ ಕಳೆದು, ಹುಟ್ಟಿಗೆ ಸಿದ್ದವಾದ ರಾತ್ರಿಗೆ, ಸಂಜೆಯ ಹುಂಜದ ಹಂಗಿಲ್ಲ..! ಅಪರಿಚಿತ ಊರಕೇರಿಯ ದಿಕ್ಕು.. ಹಣ್ಣು ಹಣ್ಣಾದ ರಸ್ತೆಗೂ ಎಂತಹ ಸೊಕ್ಕು…! ತುಸುವೇ ಹೊತ್ತಿನ ಬಳಿಕ.. ನಾನು ತಲುಪುವ ಕೇರಿಯಾದರೂ ಎಂಥದು..?? ಮುದಿ ಲಾಟೀನಿನ ಮಂದ ಬೆಳಕಲ್ಲಿ ಮಿಂದ ಮುಖಗಳೊ,ಮಿಣುಕುವ ಕಣ್ಣುಗಳೋ ಆ ಊರಿನಲ್ಲಿ.. ? ನೀರವತೆಯ ಬೆನ್ನಟ್ಟಿ ಗಾಳಿಯನ್ನು ಗೋಳಿಕ್ಕುವ ತೆಳು ಹಾಡಿನಂಥ ಸದ್ದುಗಳೋ ಆ ಊರಿನಲ್ಲಿ..!? ಒಣ ಗಂಡಸರು,ಇಲಿಗಳಂತ ಮಕ್ಕಳು,ಬಳೆಯ ಹೆಂಗಸರೋ ಆ ಊರಿನಲ್ಲಿ..? ನನ್ನನು ಅಲ್ಲಿ ಊಹಿಸುವ ಉಮೇದಿಗೆ ದುಗುಡ ಕೂಡ ಬೆರೆತಿದೆ..! ಒಂದೋ, ಅಪರಿಚಿತ ಗುಡಿಸಲೊಂದರಲ್ಲಿ ಮಂಕು ದೀಪದ ಸುತ್ತ ಕೆಲವರ ಮುಂದೆ ಪ್ರಕಟಗೊಳ್ಳುವೆ, ಹೇಳುವೆ, ಕೇಳುವೆ ಹುಬ್ಬು ಗಂಟಿಕ್ಕಿ… ಗಹ ಗಹಿಸಿ ನಗುವೆ, ಪವಡಿಸುವೆ… ಇಲ್ಲವೋ.. ಮೇಲೆ ಚುಕ್ಕಿಗಳ ಅಣಕಿಗೆ ಅಳುಕುತ್ತಾ ಎಲ್ಲಿ ತಂಗಲಿ ಎಂದು ಅತ್ತಿಂದಿತ್ತ ಅಲೆವೆ,ಸವೆವೆ ಒಂದೇ ಸಮನೆ , ಮಟ ಮಟ ರಾತ್ರಿಯು ನೆತ್ತಿಗೇರುವ ತನಕ …? ಹಳತು ಮರೆತ ಕೇರಿಯ ದಾರಿಗುಂಟ ಸತತ ಸೈಕಲ್ ತುಳಿವ ತುಡಿತ..? ಎದುರು ಸಪೂರ ಕಾಲುಗಳ ಮೇಲೆ ಬಂದ ಎಷ್ಟೊಂದು ಗಂಟುಗಳೂ, ಮೂಟೆಗಳು, ಎವೆಯೆಕ್ಕದೆಯೆ ನನ್ನ ನೋಡುತ ಸಾಗುವ ಪರಿಗೆ ಕಂಗಾಲಾಗಿ ಕಿವಿಗೆ ಗಾಳಿ ಹೊಕ್ಕಂತೆ ಸೈಕಲ್ ಓಡಿತು..! ಈ ನಡುವೆ ರಸ್ತೆ ತುಸುವೇ ಮಿಸುಕಾಡಿ ಹೇಳಿದ್ದು ಹೀಗೆ.. ನನ್ನ ಬಾಲದ ಮೇಲೆ ಸವಾರಿ ಮಾಡುತ್ತೀಯಾ..? ನನ್ನ ಹೆಡೆಯ ಭಾಗಕೆ ಬಂದು ತಲುಪು ನೋಡುವಾ..! ……. ಹಳತು, ಮರೆತ ಕೇರಿಯ ದಾರಿಗುಂಟ ಸತತ ಸೈಕಲ್ ತುಳಿವ ತುಡಿತ..! ** ** ** ** ಎಲ್ಲ ಮರೆತ ಒಂದು ಹಳೆಯ ಊರಕೇರಿಯ ದಾರಿಗುಂಟ, ಸತತ …ಸೈಕಲ್ ತುಳಿವ ತುಡಿತ….! ಹಳೆಯ ಊರಕೇರಿ, ಮರೆತು ಹೋಗಿದ್ದರೂ, ಎಲ್ಲೋ ಮನಸ್ಸಿನ ಮೂಲೆ ಕೋಣೆಯಲ್ಲಿ ಅಚ್ಚಾಗಿದೆ!. ಬಾಲ್ಯದ್ದು ಇರಬಹುದು, ಊರಕೇರಿ ಎನ್ನುವುದು, ಒಂದು ಸಾಮಾಜಿಕ ವ್ಯವಸ್ಥೆ,ತಾನೇ. ಆ ವ್ಯವಸ್ಥೆ, ಊರಿಗೇ ಸೀಮಿತವೂ ಹೌದು, ಕೇರಿಯ ಕಟ್ಟು ಕಟ್ಟಳೆಯಿಂದ ಬಂಧಿತವೂ ಹೌದು. ಕವಿತೆಯುದ್ದಕ್ಕೂ ಕವಿಗೆ ಆ ಕೇರಿಯ ಬಗ್ಗೆ ಬಣ್ಣ ಬಣ್ಣದ ಕನಸಿಲ್ಲ. ಆದರೆ ಅದರ ಸುತ್ತ ಸೈಕಲ್ ತುಳಿಯುವ ತುಡಿತ. ಅಂದರೆ ಆತ ಬರೇ ವೀಕ್ಷಕ ( ಅಬ್ಸರ್ವರ್) ಆಗುತ್ತಾನೆ. ಸೈಕಲ್ ತುಳಿಯುತ್ತಾ, ನೋಡುವಾಗ, ಊರಕೇರಿಯ ಸ್ಥಾವರ ಚಿತ್ರ, ಜಂಗಮ ಫ್ರೇಮ್ ನ ಮೂಲಕ ಕಾಣುವ ತುಡಿತವೇ?. ‘ದಿನ ಕಳೆದು ಹುಟ್ಟಿಗೆ ಸಿದ್ಧವಾದ ರಾತ್ರಿ’ ಅನ್ನುವ ಕವಿ ಕಲ್ಪನೆಗೆ ಅನನ್ಯತೆಯಿದೆ. ನಮ್ಮ ಮನಸ್ಸು ಹಗಲಿನ, ಬೆಳಕಿನ ಪಕ್ಷಪಾತಿ. ಆದರೆ ಹಗಲಿನದ್ದು ಮತ್ತು ರಾತ್ರಿಯದ್ದು ಪರಸ್ಪರ ಪೂರಕ ಮತ್ತು ಸಾಪೇಕ್ಷ( ರಿಲೇಟಿವ್) ಅಸ್ತಿತ್ವ. ಅದಕ್ಕೇ ರಾತ್ರೆಯ ಹುಟ್ಟು ತುಂಬಾ ತಾತ್ವಿಕ ಕಲ್ಪನೆ. ಹಾಗೆಯೇ ಇನ್ನೊಂದು ಅಪೂರ್ವ ಸಾಲು, ಹಣ್ಣು ಹಣ್ಣಾದ ರಸ್ತೆ!. ರಸ್ತೆ ಹಣ್ಣಾಗುವುದು ಎಂದರೆ, ದಿನವಿಡೀ ಚಲಿಸುವ ವಾಹನಗಳ ತುಳಿತದಿಂದ ಬಳಲಿ ಹಣ್ಣಾದದ್ದೇ?. ಅಥವಾ ಚಲಿಸುವ ವಾಹನಗಳಿಗೆ ದಾರಿತೋರಿ, ದಾರಿಯೇ ಆಗಿ, ಪಕ್ವವಾದ ಅನುಭವವೇ?. ದಾರಿ ಸಿಗದ ಯಾತ್ರಿಕರಿಗೆ ದಾರಿಯಾಗಿ ಅತೀವ ಹೆಮ್ಮೆಯ ಸೊಕ್ಕು, ರಸ್ತೆಗೆ!. ಆ ಕೇರಿಯ ಲಾಟೀನು ಮುದಿಯಾಗಿದೆ. ನೀರವತೆಯ ಬೆನ್ನಟ್ಟಿ ಗಾಳಿಯನ್ನು ಗೋಳಿಕ್ಕುವ ತೆಳುಹಾಡುಗಳಂತಹಾ ಸದ್ದುಗಳು, ಒಣ ಗಂಡಸರು, ಹೀಗೆ ಕವಿ ಕೇರಿಯ ವಿವರಣೆ ಕೊಡುವಾಗ, ಒಂದು ರಸಹೀನ,ಜೀವಭಾವ ರಹಿತ ವ್ಯವಸ್ಥೆಯ ಚಿತ್ರ ಮೂಡುತ್ತೆ. ಬದಲಾವಣೆಗೆ ಒಗ್ಗದೆ ಕಾಲದಲ್ಲಿ ಕಾಲವಾದ ವ್ಯವಸ್ಥೆಯನ್ನು, ಚಲನಶೀಲ ಮನಸ್ಸು ಸೈಕಲ್ ತುಳಿಯುತ್ತಾ ಕಾಣುತ್ತೆ. ಗಮನಿಸಿ!, ನೋಟಕನ ಸೈಕಲ್ ನಿಲ್ಲಿಸಿ ನೋಡುವುದಿಲ್ಲ, ಚಲಿಸುತ್ತಲೇ ಇರುತ್ತೆ. ” ಅಪರಿಚಿತ ಗುಡಿಸಲೊಂದರಲ್ಲಿ ಮಂಕು ದೀಪದ ಸುತ್ತ ಕೆಲವರ ಮುಂದೆ ಪ್ರಕಟಗೊಳ್ಳುವೆ, ಹೇಳುವೆ, ಕೇಳುವೆ ಹುಬ್ಬು ಗಂಟಿಕ್ಕಿ… ಗಹ ಗಹಿಸಿ ನಗುವೆ, ಪವಡಿಸುವೆ… ಇಲ್ಲವೋ.. ಮೇಲೆ ಚುಕ್ಕಿಗಳ ಅಣಕಿಗೆ ಅಳುಕುತ್ತಾ ಎಲ್ಲಿ ತಂಗಲಿ ಎಂದು ಅತ್ತಿಂದಿತ್ತ ಅಲೆವೆ,ಸವೆವೆ ಒಂದೇ ಸಮನೆ , ಮಟ ಮಟ ರಾತ್ರಿಯು ನೆತ್ತಿಗೇರುವ ತನಕ …” ಈ ಸಾಲುಗಳನ್ನು ಓದುವಾಗ, ಕವಿ, ಈ ವ್ಯವಸ್ಥೆಯನ್ನು ದಿಕ್ಕರಿಸಿ ಬಂದಂತಿದೆ. ವ್ಯವಸ್ಥೆಯನ್ನು ನಿಂತ ನೀರಾಗಿಸಿದ, ರಸಹೀನವಾಗಿಸಿದ ಕೆಲವು ಮಂದಿಯ ಬಗ್ಗೆ ಆಕ್ರೋಶ ಇದೆ. ಅದನ್ನು ಪ್ರಶ್ನಿಸುವ ಆಸೆಯಿದೆ. ಆದರೆ ಆ ವ್ಯವಸ್ಥೆ, ತನ್ನ ಪ್ರಶ್ನೆಗಳಿಂದ ಬದಲಾಗಲ್ಲ ಎಂಬ ಆಸಮಧಾನವೂ ಇದೆ. ‘ಮಟ ಮಟ ರಾತ್ರಿಯು ನೆತ್ತಿಗೇರುವ ತನಕ’ ಎಂಬ ಈ ಸಾಲುಗಳು ಸೂರ್ಯ ನೆತ್ತಿಗೇರುವ ಹಾಗೆಯೇ ರಾತ್ರಿಯೂ, ಎಂಬ ಹೊಸ ಕಲ್ಪನೆಯನ್ನು ಬಿಂಬಿಸುವ ಜತೆಗೇ, ನಿರಾಶಾದಾಯಕ ಮನಸ್ಥಿತಿಯ ಕ್ಶಿತಿಜವನ್ನೂ ಪರಿಚಯಿಸುತ್ತೆ. ಹಳತನ್ನು ಮರೆತು ಹೊಸತಿಗೆ ತೆರೆಯುವ ಕೇರಿಯ ಗುಂಟ ಸೈಕಲ್ ತುಳಿಯಬೇಕೆಂಬ ಹಂಬಲ ಕವಿ ಮನಸ್ಸಲ್ಲಿ ಇದ್ದಂತಿದೆ. “ಸಪೂರ ಕಾಲುಗಳ ಮೇಲೆ ಬಂದ ಎಷ್ಟೊಂದು ಗಂಟುಗಳು, ಮೂಟೆಗಳು” ಕಾಲುಗಳು, ದೇಹಕ್ಕೂ, ದೇಹ ಹೊರುವ ಹೊರೆಗೂ ಆಧಾರ. ಆದರೆ ಆಧಾರ, ಅಡಿಪಾಯ, ಗಟ್ಟಿಯಾಗಿಲ್ಲ. ಪೋಷಕಾಂಶಗಳ ಕೊರತೆಯಿಂದ ಕಾಲುಗಳು ಸಪೂರವಾಗಿವೆ. ವ್ಯವಸ್ತೆಯ ಜೀವಪೋಶಕ ಅಂಶ ವಿರಳವಾದಾಗ, ಆಧಾರ ಸ್ಥಂಭಗಳು ದುರ್ಬಲವಾಗುತ್ತವೆ. ಆ ದುರ್ಬಲ ವ್ಯವಸ್ಥೆ ಹೊತ್ತಿರುವ ಮೂಟೆಗಳು ಮಣ ಭಾರ. ಗಂಟುಗಳು ಎಂದರೆ, ಕ್ಲಿಷ್ಟವಾದ, ಬಿಡಿಸಲಾಗದ ಅಥವಾ ಬಿಡಿಸಲು ಪ್ರಯತ್ನವೇ ಮಾಡದೆ ಕ್ಲಿಷ್ಟವಾದ ಸಮಸ್ಯೆಗಳನ್ನು, ಪ್ರತಿನಿಧಿಸುವಂತಿದೆ. ಸೈಕಲ್ ನಲ್ಲಿ ಸವಾರನಾದ ಕವಿಗಯನ್ನು ಈ ಪ್ರಶ್ನೆಗಳು ಅಧೀರನನ್ನಾಗಿಸುತ್ತವೆ. ” ಈ ನಡುವೆ ರಸ್ತೆ ತುಸುವೇ ಮಿಸುಕಾಡಿ ಹೇಳಿದ್ದು ಹೀಗೆ.. ನನ್ನ ಬಾಲದ ಮೇಲೆ ಸವಾರಿ ಮಾಡುತ್ತೀಯಾ..? ನನ್ನ ಹೆಡೆಯ ಭಾಗಕೆ ಬಂದು ತಲುಪು ನೋಡುವಾ..!” ಕೇರಿಯ ಸುತ್ತಲಿನ ರಸ್ತೆಯೇ ಈಗ ಮಾತಾಡುತ್ತೆ. ಸಮಸ್ಯೆಯ ಅಗಾಧತೆಯ ಪರಿಚಯ ಮಾಡಿಕೊಡುತ್ತೆ. ಈ ಕವಿತೆಯಲ್ಲಿ ಸೈಕಲ್ ಸವಾರ, ವ್ಯಕ್ತಿಯೇ ಆಗಬೇಕಿಲ್ಲ. ನಮ್ಮ ಮನಸ್ಸಿನೊಳಗಿನ ಸಾಕ್ಷೀ ಪ್ರಜ್ಞೆಯೂ ಆಗಬಹುದು. ನಾವು ಅನುಭವ ರೂಪದಲ್ಲಿ ಸಂಗ್ರಹಿಸಿದ ವಿಷಯಗಳ ಆಧಾರದಲ್ಲಿ ಮನಸ್ಸೊಳಗೇ ಕೇರಿ ನಿರ್ಮಾಣ ( ಪೂರ್ವಾಗ್ರಹ) ಮಾಡುತ್ತೇವೆ. ನಮ್ಮ ಸಾಕ್ಷಿ ಪ್ರಜ್ಞೆ ನಿರಂತರವಾಗಿ ಅದರ ಸುತ್ತ ಸುತ್ತುತ್ತದೆ, ಪ್ರಶ್ನಿಸುವ ಪ್ರಯತ್ನ ಮಾಡುತ್ತೆ. ಆದರೆ, ಮನಸ್ಸಿನಲ್ಲಿ ರೂಪುಗೊಂಡ, ಮೂರ್ತವಾದ ಅಭಿಪ್ರಾಯ, ಸಿದ್ಧಾಂತಗಳು, ಬದಲಾವಣೆಯನ್ನು, ಪ್ರತಿರೋಧಿಸುತ್ತವೆ. ಅದರೂ ಸಾಕ್ಷಿಪ್ರಜ್ಞೆ ಸೈಕಲ್ ತುಳಿಯುತ್ತಲೇ ಇರುತ್ತೆ. ಅದೊಂದು ನೆವರ್ ಎಂಡಿಂಗ್ ಸ್ಪಿರಿಟ್ . ಈ ಸೈಕಲ್ ಯಾತ್ರೆ ಒಂದು ಪೂರ್ತಿ ಬದುಕಿನ ಪಯಣವೂ ಆಗಬಹುದು. ಮನೋಲೋಕದೊಳಗೆ ದಿನ ನಿತ್ಯ ಹಳತು ಹೊಸತರ ನಡುವೆ, ಸಿದ್ಧಾಂತಗಳ ವೈರುಧ್ಯಗಳ ನಡುವೆ, ಭಾವ ಬುದ್ಧಿ ಗಳ ನಡುವೆ ನಡೆಯುವ ಸಂಘರ್ಷಗಳು, ಸೈಕಲ್ ಸವಾರನ ವೀಕ್ಷಕ ವಿವರಣೆಯಲ್ಲಿ ದಾಖಲಾದಂತೆಯೂ ಅನ್ವಯಿಸಬಹುದು. ವ್ಯಕ್ತಿ ಮತ್ತು ವ್ಯವಸ್ಥೆ ಗಳ ನಡುವಿನ ತಾಕಲಾಟವಾಗಿಯೂ ನೋಡಬಹುದು ಈ ಕವಿತೆಯಲ್ಲಿ ‘ಕೇರಿ’ಯ ಪ್ರತಿಮೆಯನ್ನು ಕವಿ ಬಹಳ ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಇದೇ ರೀತಿ ದ.ರಾ. ಬೇಂದ್ರೆಯವರೂ ಕೇರಿಯ ರೂಪಕವನ್ನು ತಮ್ಮ ಕವನ ” ಬಾರೋ ಸಾಧನ ಕೇರಿಗೆ” ತುಂಬಾ ಧನಾತ್ಮಕವಾಗಿ ಬಳಸಿದ್ದಾರೆ. “ಬಾ ಬಾರೋ, ಬಾರೋ ಬಾರೋ ಬಾರೊ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ
ಅಂಕಣ ಬರಹ ಪ್ರಾಮಾಣಿಕರ ಅಹಮಿಕೆ ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದ ಮಲೆನಾಡಿನ ಗಾಂಧಿ ಎಂದೂ ಕರೆಯಲಾಗುತ್ತಿದ್ದ ಕಡಿದಾಳು ಮಂಜಪ್ಪನವರು ಲೇಖಕರೂ ಆಗಿದ್ದರೆಂಬುದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಅವರು `ಪಂಜರವಳ್ಳಿಯ ಪಂಜು’ `ನಾಳೆಯ ನೆಳಲು’ `ಕ್ರಾಂತಿಕೂಟ’ ಕಾದಂಬರಿಗಳನ್ನು ಬರೆದರು. ಆದರೆ ಇವಕ್ಕಿಂತ ಅವರ ಆತ್ಮಕಥೆಯೇ (`ನನಸಾಗದ ಕನಸು’) ಚೆನ್ನಾಗಿದೆ. ಅದರಲ್ಲಿ 40-50ರ ದಶಕದ ರಾಜಕಾರಣದ ಸ್ಮøತಿಗಳಿವೆ; 20ನೇ ಶತಮಾನದ ಮೊದಲ ಭಾಗದ ಮಲೆನಾಡಿನ ಚಿತ್ರಗಳಿವೆ. ಕುತೂಹಲ ಹುಟ್ಟಿಸುವುದು ಅದರ ನಿರೂಪಣೆ ಮತ್ತು ಆ ಮೂಲಕ ಹೊಮ್ಮುವ ಲೋಕದೃಷ್ಟಿ.ಮಂಜಪ್ಪನವರು ಆತ್ಮಕತೆಯನ್ನು “ನಾನು ಜನ್ಮ ತಾಳಿದ್ದು ನಮ್ಮ ಕುಟುಂಬದ ಮನೆಯ ಪಕ್ಕದಲ್ಲಿದ್ದ ಕೋಳಿಕೊಟ್ಟಿಗೆಯಲ್ಲಿ. ಅಂದಿನ ಕಾಲದಲ್ಲಿ ವಾಸದ ಮನೆಯಲ್ಲಿ ಹೆರಿಗೆಯಾಗುವುದು ನಿಷಿದ್ಧವಾಗಿತ್ತು. ಆ ಕಾರಣ ಹೆಂಗಸರಿಗೆ ಪ್ರಸವ ವೇದನೆ ಪ್ರಾರಂಭವಾದ ತಕ್ಷಣ ವಾಸದ ಮನೆಯಿಂದ ಹೊರಗಡೆ ಇಡುತ್ತಿದ್ದರು’’ ಎಂದು ಆರಂಭಿಸುತ್ತಾರೆ. ಅವರಿಗೆ ಆತ್ಮಕತೆಯ ಜತೆಗೆ ತಮ್ಮ ಕಾಲದ ಮಲೆನಾಡಿನ ಸಂಪ್ರದಾಯಗಳನ್ನೂ ಕಾಣಿಸುವ ಉದ್ದೇಶವಿದೆ. ಅವರು ಕಾಣಿಸುವ ಕೆಲವು ಸಂಪ್ರದಾಯ ಮತ್ತು ಆಚರಣೆಗಳಂತೂ ಭೀಕರವಾಗಿವೆ. ಅವುಗಳಲ್ಲಿ ಮಹಿಳೆಯರ ಸಾವು ಮತ್ತು ಗಂಡಸರ ಮರುಮದುವೆಯೂ ಒಂದು: “ಆಗಿನ ಕಾಲದಲ್ಲಿ ಮಲೆನಾಡಿನಲ್ಲಿ ಮಲೇರಿಯಾ ಹಾವಳಿಯಿಂದ ಗರ್ಭಿಣಿಯರೂ ಬಾಣಂತಿಯರೂ ಹೆಚ್ಚು ಸಂಖ್ಯೆಯಲ್ಲಿ ಸಾಯುತ್ತಿದ್ದರು. ಇದರ ಪರಿಣಾಮವಾಗಿ ಹೆಂಗಸರ ಸಂಖ್ಯೆ ದಿನೇದಿನೇ ಕ್ಷೀಣವಾಗುತ್ತಿತ್ತು. ಆದ್ದರಿಂದ ಹೆಣ್ಣುಗಳಿಗಾಗಿ ಬಹಳ ಪೈಪೋಟಿ ಇತ್ತು. ಶ್ರೀಮಂತ ವಿಧುರರು ಎರಡು ನೂರು ರೂಪಾಯಿಗಳಿಂದ ಐದುನೂರರ ರೂಪಾಯಿಗಳವರೆಗೆ ಹೆಣ್ಣುಗಳಿಗೆ ತೆರಕೊಟ್ಟು ಮದುವೆಯಾಗುತ್ತಿದ್ದರು. ಈ ಕಾರಣದಿಂದ ನಮ್ಮ ತಂದೆಗೆ ತಮ್ಮ ಸಹೋದರಿಯರ ಮದುವೆ ಮಾಡಲು ಯಾವ ತೊಂದರೆಯೂ ಆಗಲಿಲ್ಲ.’’ ಒಂದು ಪ್ರದೇಶದ ಭೌಗೋಳಿಕ ಸನ್ನಿವೇಶಕ್ಕೂ ಪುರುಷರ ಬಹುಪತ್ನಿತ್ವಕ್ಕೂ, ಅವರ ಸಿರಿವಂತಿಕೆಗೂ, ಗರ್ಭಧಾರಣೆ ಹೆರಿಗೆ ಮುಂತಾದ ಮಹಿಳೆಯರ ಜೈವಿಕ ಆವರ್ತನಗಳಿಗೂ ಇಲ್ಲಿ ಏರ್ಪಟ್ಟಿರುವ ಸಂಬಂಧ ವಿಶಿಷ್ಟವಾಗಿದೆ. ಪುರುಷ ವ್ಯವಸ್ಥೆ ಮಲೇರಿಯಾದಂತಹ ಸನ್ನಿವೇಶವನ್ನೂ ತನಗೆ ಬೇಕಾದಂತೆ ಬಳಸಿಕೊಂಡಿರುವ ಪರಿ ದಿಗ್ಭ್ರಮೆ ತರುತ್ತದೆ. ಮಲೆನಾಡಲ್ಲಿ ಹೆರಿಗೆಯಿಂದ ಮಾತ್ರವಲ್ಲ, ಹಾವು ಕಚ್ಚಿ, ಸೇತುವೆಯಂತಿದ್ದ ಸಂಕಮುರಿದು, ನೆರೆಯಲ್ಲಿ ಕೊಚ್ಚಿಹೋಗಿ- ನಾನಾ ಕಾರಣಕ್ಕೆ ಜನ ಸಾಯುವುದನ್ನು ಮಂಜಪ್ಪ ದಾಖಲಿಸುತ್ತಾರೆ. ಈ ದುರಂತಗಳಿಗೆ ನಾಗರಿಕ ಸೌಲಭ್ಯಗಳಿಲ್ಲದೆ ಇರುವುದು ಅರ್ಧ ಕಾರಣವಾದರೆ, ದಲಿತರು ಬಡವರು ಸ್ತ್ರೀಯರನ್ನು ಕುರಿತ ಸಾಮಾಜಿಕ ಧೋರಣೆ ಇನ್ನರ್ಧ ಕಾರಣ. ಗರ್ಭಿಣಿಯರಾಗುತ್ತಿದ್ದ ವಿಧವೆಯರಿಗೆ ವಿಧಿಸುತ್ತಿದ್ದ ಶಿಕ್ಷೆ ಹಾಗೂ ಅಸ್ಪøಶ್ಯತೆಯ ಆಚರಣೆಗಳಂತೂ ಅಮಾನುಷ. ಗತಕಾಲದ ಕರ್ನಾಟಕವನ್ನು ಎಗ್ಗಿಲ್ಲದೆ ಕೀರ್ತಿಸುವ ಸಂಸ್ಕøತಿ ಚಿಂತಕರು, ಎಷ್ಟೊಂದು ಆತ್ಮವಂಚಕ ಬರೆಹಗಳನ್ನು ಮಾಡಿದರು ಎಂದು ಕಸಿವಿಸಿಯಾಗುತ್ತದೆ. ಬಹುಶಃ ಬ್ರಿಟಿಶರ ಜತೆ ಬಂದ ಪಾಶ್ಚಿಮಾತ್ಯ ಆಧುನಿಕತೆ, ದಲಿತರ ಮತ್ತು ಮಹಿಳೆಯರ ಪಾಲಿಗೆ ಬಿಡುಗಡೆಕೋರನಾಗಿ ಕಾಣಿಸಿದ್ದು ಸಹಜವಾಗಿದೆ. ಲೇಖಕರು ವಸ್ತುಸ್ಥಿತಿಯನ್ನು ಅಡಗಿಸದೆ ಎಲ್ಲವನ್ನೂ ದಾಖಲಿಸುತ್ತಾರೆ.ಲೇಖಕರು ವಕೀಲರಾಗಿದ್ದರಿಂದ ದಿನಾಂಕ, ಮೊಕದ್ದಮೆಯ ಸಂಖ್ಯೆ, ಸಮಯ, ವ್ಯಕ್ತಿಯ ಮತ್ತು ಊರಿನ ಹೆಸರು, ಹಣದ ಮೊಬಲಗು ಇತ್ಯಾದಿಯನ್ನು ಅಂಕಿಸಂಖ್ಯೆ ಸಮೇತ ಕೊಡುತ್ತಾರೆ. “ಉತ್ತರೋತ್ತರ ನಮ್ಮ ತಂದೆ ತಾರೀಖು 24.10.1887ರಂದು ರಿಜಿಸ್ಟರ್ ಆಗಿದ್ದ ಮೂಲಗೇಣಿ ಕರಾರಿನ ಪ್ರಕಾರ ಶ್ರೀರಾಮಚಂದ್ರಾಪುರದ ಮಠದಿಂದ 5 ಎಕರೆ 38ಗುಂಟೆ ತರಿ ಜಮೀನನ್ನೂ 38ಗುಂಟೆ ಅಡಿಕೆ ಬಾಗಾಯ್ತನ್ನು 3 ಗುಂಟೆ ಖುಷ್ಕಿ ಭೂಮಿಯನ್ನೂ ಮೂಲಗೇಣಿಗೆ ಪಡೆದರು’’-ತರಹದ ವಾಕ್ಯಗಳು ಇಲ್ಲಿ ಸಾಕಷ್ಟಿವೆ. ಇವುಗಳಿಂದ ಬರೆಹಕ್ಕೆ ಒಂದು ನಮೂನೆಯ ಖಚಿತತೆ ಬಂದಿದೆ. ಇದುವೇ ಬರೆಹವು ಕಲ್ಪನಾಶಕ್ತಿಯನ್ನು ಬಳಸಿಕೊಳ್ಳುವುದಕ್ಕೆ ತೊಡಕನ್ನೂ ಒಡ್ಡಿದೆ. ತಾವು ಓದುತ್ತಿದ್ದ ಶಾಲೆ ಮೂರು ತಿಂಗಳಿಗೊಮ್ಮೆ ಸುಟ್ಟುಹೋಗುತ್ತಿತ್ತು ಎಂದು ಲೇಖಕರು ನಿರ್ಲಿಪ್ತವಾಗಿ ದಾಖಲಿಸಿ ಮುಂದೆ ಹೋಗುತ್ತಾರೆ. ಅವರೇ ಪ್ರಸ್ತಾಪಿಸುವ ಕ್ರೂರ ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳು ಸೇಡು ತೀರಿಸಿಕೊಳ್ಳುತ್ತಿದ್ದ ಬಗೆ ಇದ್ದೀತು ಇದು ಎಂದು ಊಹಿಸಲು ಮರೆಯುತ್ತಾರೆ. ಆತ್ಮಕತೆಗಳಲ್ಲಿ ಮುಖ್ಯವಾದುದು ಗತಕಾಲದ ಖಚಿತ ವಿವರಗಳಷ್ಟೇ ಅಲ್ಲ; ಅವನ್ನು ಮಂಡಿಸುವ ದೃಷ್ಟಿಕೋನ, ಅವನ್ನು ವಿಶ್ಲೇಷಿಸಿ ವ್ಯಾಖ್ಯಾನಿಸಿ ಸಮಕಾಲೀನ ಬದುಕನ್ನು ಜೀವಂತಗೊಳಿಸುವ ದಾರ್ಶನಿಕತೆ ಕೂಡ.ಮಲೆನಾಡನ್ನೂ ತಮ್ಮ ಬದುಕನ್ನೂ ಒಟ್ಟಿಗೇ ಮಂಡಿಸುತ್ತಿರುವ ಮಂಜಪ್ಪನವರದು ಉದಾರ ಮಾನವತಾವಾದಿ ದೃಷ್ಟಿಕೋನ. ಕುವೆಂಪು ಸಮಕಾಲೀನರಾಗಿದ್ದ ಅವರು ತಕ್ಕಮಟ್ಟಿಗೆ ವೈಚಾರಿಕ ಮನೋಭಾವ ರೂಢಿಸಿಕೊಂಡಿದ್ದರು. ಆದರೆ ಅವರ ವೈಚಾರಿಕತೆ ಕೆಳಜಾತಿಯ ಸಂಪ್ರದಾಯಗಳನ್ನು ಮೌಢ್ಯವೆಂದು ಹೀಗಳೆಯುವಂತಹದ್ದು; ಗಣ ಬರಿಸುವುದನ್ನು ಅವರು ಕ್ಷುದ್ರದೇವರು ಎಂದು ಕರೆಯುತ್ತಾರೆ. ಆದರೂ ಮಲೆನಾಡಿನ ಕೆಲವು ಆಚರಣೆಗಳನ್ನು ಸಮರ್ಥಿಸಿಕೊಳ್ಳುತ್ತಾರೆ. “ಜನಸಾಮಾನ್ಯರಲ್ಲಿ ಅಗಾಧ ಮೌಢ್ಯವಿದ್ದರು ಕೂಡ ಅವರಲ್ಲಿ ಸುಸಂಸ್ಕøತಿಯಿತ್ತು” ಎನ್ನುತ್ತಾರೆ. ಮಲೆನಾಡಿಗರು ಹೆಂಡ ಕುಡಿಯುವುದನ್ನು ವ್ಯಾಖ್ಯಾನಿಸುತ್ತ “ನಾಟಿಕಾಲದಲ್ಲಿ ವಿಪರೀತ ಮಳೆ ಬರುತ್ತಿದುದರಿಂದ ನಾಟಿ ಕೆಲಸಕ್ಕೆ ಹೋಗಿ ಮನೆಗೆ ಬಂದ ನಂತರ ಸಾಮಾನ್ಯವಾಗಿ ಎಲ್ಲರೂ ಅಕ್ಕಿಹೆಂಡವನ್ನು ಸೇವಿಸುತ್ತಿದ್ದರು. ಅಕ್ಕಿಯ ಹೆಂಡ ಕುಡಿದವರು ದೃಢಕಾಯರಾಗಿ ಆರೋಗ್ಯವಂತರಾಗಿದ್ದರು. ಅವರುಗಳ ಮುಖದಲ್ಲಿ ರಕ್ತ ಚಿಮ್ಮುವಂತಿತ್ತು’’ ಎಂದು ವ್ಯಾಖ್ಯಾನಿಸುತ್ತಾರೆ. ಮಿತಿಯೆಂದರೆ, ಅವರೊಳಗೆ ಹೊಕ್ಕಿರುವ ಕುವೆಂಪು ಚಿಂತನೆ ಪುರೋಹಿತಶಾಹಿ ವಿರೋಧದ ವೈಚಾರಿಕ ಪ್ರಜ್ಞೆಯಾಗಿ ಬದಲಾಗದೆ ಹೋಗುವುದು. ಲೇಖಕರು ಆರಂಭದಲ್ಲೇ “ನನ್ನ ಬರವಣಿಗೆಯಲ್ಲಿ ಅಸತ್ಯದ ಮಾತುಗಳು ಸೇರದಿರುವಂತೆ ಅನುಗ್ರಹಿಸಬೇಕೆಂದು” ದೇವರಲ್ಲಿ ಪ್ರಾರ್ಥಿಸುತ್ತಾರೆ. ತನ್ನನ್ನು ಸತ್ಯದ ಪ್ರತಿಪಾದಕನೆಂದು ಬಿಂಬಿಸಿಕೊಳ್ಳುವ ಈ ಧೋರಣೆ ಬಂದಿದ್ದು, ತನ್ನ ವೈಯಕ್ತಿಕ ಮಿತಿಗಳನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಬಲ್ಲ ಗಾಂಧೀಜಿಯ ಪ್ರಾಮಾಣಿಕತೆಯಿಂದ; ಅವರ `ಸತ್ಯದೊಡನೆ ನನ್ನ ಪ್ರಯೋಗಗಳು’ ಎಂಬ ಆತ್ಮಕತೆಯಿಂದ. “ನಾನೊಬ್ಬ ಯಃಕಶ್ಚಿತ್ ವ್ಯಕ್ತಿ. ಭೂಹೀನ ಗೇಣಿದಾರನೊಬ್ಬನ ಮಗನಾಗಿ ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬೆಳೆದು ಜೀವನದಲ್ಲಿ ಹಲವು ವಿಧವಾದ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದವನು. ಅನೇಕ ಎಡರು ತೊಡರುಗಳನ್ನು ಎದುರಿಸಿದ್ದ ನಾನು ಅಂದು ಕಷ್ಟಪಟ್ಟಂತೆಯೇ ತಮ್ಮ ಜೀವನದಲ್ಲಿ ಇಂದು ಕಷ್ಟ ಪಡುತ್ತಿರುವ ಜನರಿಗೆ ನನ್ನ ಅನುಭವದಿಂದ ಅಲ್ಪಸ್ವಲ್ಪವಾದರೂ ಪ್ರಯೋಜನವಾಗಬಹುದು ಎಂಬ ಆಶೆ’’ಯಿಂದ ಆತ್ಮಕತೆ ಬರೆದಿರುವುದಾಗಿ ಲೇಖಕರು ಹೇಳಿಕೊಳ್ಳುತ್ತಾರೆ. ಈ ಉದ್ದೇಶವು ತನ್ನ ಆದರ್ಶ ವ್ಯಕ್ತಿತ್ವವನ್ನು ಪ್ರಜ್ಞಾಪೂರ್ವಕವಾಗಿ ಮಂಡಿಸುವುದಕ್ಕೆ ಪೂರ್ವಪೀಠಿಕೆಯಂತಿದೆ. ತನ್ನನ್ನು ಚಾರಿತ್ರ್ಯವಂತನೆಂದು ಬಿಂಬಿಸಿಕೊಳ್ಳುವ ಇಲ್ಲಿನ ಗುಣವೇ ಬರೆಹದ ಪ್ರಾಮಾಣಿಕತೆಗೆ ಚ್ಯುತಿ ತರುತ್ತದೆ. ಆತ್ಮಕತೆ ಬರೆಯುವವರ ಬಾಳು ಪ್ರಾಮಾಣಿಕತೆಯಿಂದ ಕೂಡಿರಬಹುದು. ಅದನ್ನು ಕಟ್ಟಿಕೊಡುವಾಗ ನೈತಿಕ ಅಹಂಕಾರ ಕೂಡಿಕೊಂಡರೆ, ಅಲ್ಲಿನ ವಿನಯ ಕೃತಕವಾಗುತ್ತದೆ. ಸ್ವಂತ ಬದುಕನ್ನು ಶೋಧಿಸಿ ಮರುಮೌಲ್ಯಮಾಪನ ಮಾಡಿಕೊಳ್ಳುವ ಆತ್ಮಕತೆಗಳು ಆತ್ಮಸಂಭಾವಿತನವಿಲ್ಲದ ಕಾರಣದಿಂದಲೇ ಸಹಜವಾಗಿ ಕಾಣುತ್ತವೆ. ಇಂದಿರಾ ಲಂಕೇಶ್, ಇಳಾವಿಜಯಾ, ಸಿಎನ್ಆರ್, ನವರತ್ನ ರಾಮರಾವ್ ಮುಂತಾದವರ ಆತ್ಮಕತೆಗಳು ತಟ್ಟನೆ ನೆನಪಾಗುತ್ತಿವೆ. ಕುವೆಂಪು ಅವರಲ್ಲೂ ಆತ್ಮಸಂಭಾವಿತನವಿದೆ. ಆದರೆ ಅದನ್ನು ದಾಟಿ ಸ್ವಮಿತಿಯನ್ನು ಹೇಳಿಕೊಳ್ಳಬಲ್ಲ ದಿಟ್ಟತನವೂ ಅವರಲ್ಲಿದೆ. ಆತ್ಮಕತೆಗಳು ಬರೆದವರ ವ್ಯಕ್ತಿತ್ವದ ಕನ್ನಡಿಗಳೇನೂ ಹೌದು. ಆದರೆ ಕೆಲವು ಕನ್ನಡಿಗಳು ತೋರಿಸುವ ಬಿಂಬಗಳು ಪೂರ್ತಿ ಅವರವೇ ಆಗಿರುವುದಿಲ್ಲ. ಈ ಅರಕೆಯಿಂದ ಆತ್ಮಕತೆಗಳಿಗೆ ಬಿಡುಗಡೆಯೂ ಇಲ್ಲ. ಅವು ಓದುಗರ ಮೆಚ್ಚುಗೆ ಮತ್ತು ಸಣ್ಣಸಂಶಯದಲ್ಲೇ ತಮ್ಮ ಅಸ್ತಿತ್ವವನ್ನು ಪಡೆದುಕೊಂಡಿರುತ್ತವೆ. ******************************************************** ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಅಂಕಣ ಬರಹ-01 ಆತ್ಮಕತೆಯ ಮೊದಲ ಕಂತು.. ಅಸ್ತಿತ್ವವಿಲ್ಲದ ಅವ್ವನ ಹೆಜ್ಜೆಗಳು ಅಕ್ಟೋಬರ್, ೧, ೨೦೦೮ ಕಾರವಾರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲನಾಗಿ ಕರ್ತವ್ಯಕ್ಕೆ ಹಾಜರಾದೆ. ಕಳೆದ ಮೂವತ್ಮೂರು ವರ್ಷಗಳ ಸುದೀರ್ಘ ಅವಧಿಯಲ್ಲಿ ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿರುವಾಗಿನ ಸಿಹಿ ಕಹಿ ನೆನಪುಗಳ ಚಿಪ್ಪಿನಿಂದ ಪೂರ್ತಿಯಾಗಿ ಹೊರಬರುವುದು ಇನ್ನೂ ಸಾಧ್ಯವಾಗಿರಲಿಲ್ಲ. ಮುಂದಿನ ವೃತ್ತಿನಿರತ ಬದುಕಿನ ನಾಲ್ಕು ವರ್ಷಗಳನ್ನು ಕಾರವಾರದ ಹೊಸ ಪರಿಸರದಲ್ಲಿ ಹೇಗೆ ಹೊಂದಿಸಿಕೊಳ್ಳಬೇಕೆಂಬ ಆಲೋಚನೆ ಒಂದುಕಡೆ ಮನಸ್ಸನ್ನು ಕೊರೆಯುತ್ತಿತ್ತು. ಕಾಲೇಜ್ ಕ್ಯಾಂಪಸ್ಸಿನ ಆವರಣದಲ್ಲಿಯೇ ಪ್ರಾಚಾರ್ಯರ ವಸತಿ ಗ್ರಹದ ಅನುಕೂಲತೆಯಿದೆ. ಅಗತ್ಯವೆನಿಸುವ ಎಲ್ಲ ಮೂಲಭೂತ ಸೌಲಭ್ಯಗಳೂ ಇದ್ದವು. ಸಮುದ್ರ ತೀರದ ನಿಸರ್ಗದ ಸಹಜ ಸುಂದರ ವಾತಾವರಣವೂ ಇದೆ. ಕೇವಲ ನಮ್ಮ ಮನಸ್ಸುಗಳನ್ನು ಇಲ್ಲಿಯ ಪರಿಸರ ಮತ್ತು ಮನುಷ್ಯ ಸಂಬಂಧ ಗಳೊಡನೆ ಹೊಂದಾಣಿಕೆ ಮಾಡಿಕೊಳ್ಳಲು ಸಜ್ಜಾಗುತ್ತಿದ್ದೆವು. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಹಿರಿಯ ಮಗ ಸಚಿನ್, ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಇಂಜಿನಿಯಿಂಗ್ ಓದುತ್ತಿರುವ ಎರಡನೆಯ ಮಗ ಅಭಿಷೇಕ್ ನಮ್ಮ ವಸತಿಗ್ರಹ ಮತ್ತು ಕಾಲೇಜ್ ಕ್ಯಾಂಪಸ್ ನೋಡುವುದಕ್ಕಾಗಿಯೇ ಕಾರವಾರಕ್ಕೆ ಬಂದಿದ್ದರು. ಒಂದು ರಾತ್ರಿ ಊಟ ಮುಗಿಸಿ ಕಾಲೇಜು ಮೈದಾನದಲ್ಲಿ ಹೆಂಡತಿ ಮಕ್ಕಳೊಡನೆ ಹೀಗೆ ಹರಟುತ್ತಾ ತಿರುಗಾಡುತ್ತಿದ್ದೆ. ಮೈದಾನದ ಎದುರುಗಡೆ ರಾಷ್ಟ್ರೀಯ ಹೆದ್ದಾರಿ ಹದಿನೇಳರ ಆಚೆ ಸ್ಮಶಾನದ ಕಂಪೌಂಡಿನ ಹೆಬ್ಬಾಗಿಲು ಸರಿಯಾಗಿ ಗೋಚರಿಸುತ್ತಿತ್ತು. ಐದಾರು ದಶಕಗಳ ಹಿಂದೆ ಬರಿಯ ಸಮುದ್ರದ ಬೇಲೆಯಾಗಿದ್ದ ಇದೇ ಸ್ಮಶಾನ ಭೂಮಿಯಲ್ಲಿ ಅಜ್ಜಿಯನ್ನು ಮಣ್ಣುಮಾಡಿದ ಘಟನೆಯನ್ನು ಅವ್ವನ ಬಾಯಿಂದ ಕೇಳಿದ್ದು ನೆನಪಾಯಿತು. ಮಕ್ಕಳಿಗೆ ಹೇಳಿದೆ, “ಐವತ್ತಾರು ವರ್ಷಗಳ ಹಿಂದೆ ನಿಮ್ಮ ಮುತ್ತಜ್ಜಿ ಇದೇ ಸ್ಮಶಾನದಲ್ಲಿ ಮಣ್ಣಾಗಿದ್ದಾಳೆ. ನಾನಾವಾಗ ಎರಡು ತಿಂಗಳ ತೊಟ್ಟಿಲ ಮಗುವಾಗಿದ್ದೆ. ಈಗ ಇಷ್ಟು ವರ್ಷಗಳ ಬಳಿಕ ಈ ಸ್ಥಿತಿಯಲ್ಲಿ ಇಲ್ಲಿಗೆ ಬಂದು ಅಜ್ಜಿಯ ಸಮಾಧಿ ಸ್ಥಳ ನೋಡಬಹುದೆಂದು ಕನಸು ಮನಸ್ಸಿನಲ್ಲಿಯೂ ಯೋಚಿಸಿರಲಿಲ್ಲ. ಜೀವನ ಅಂದ್ರೆ ಹೀಗೆಯೇ ಚಿತ್ರವಿಚಿತ್ರ ತಿರುವುಗಳು ನೋಡಿ,” ಎಂದು ಮಾತು ಮುಗಿಸುವಾಗ ನಾನು ಅನಪೇಕ್ಷಿತವಾಗಿ ಭಾವುಕನಾಗಿದ್ದೆ. ಹೆಂಡತಿ ಮಕ್ಕಳಿಗೆ ಸಖೇದಾಶ್ಚರ್ಯ!. ಕುಟುಂಬದವರಿಲ್ಲ. ಜಾತಿ ಬಾಂಧವರಿಲ್ಲ. ಇಂಥಲ್ಲಿ ಅಜ್ಜಿಯ ಹೆಣ ಮಣ್ಣು ಮಾಡಿದ್ದಾರೆ ಅಂದರೆ ನಂಬುವುದಕ್ಕೆ ಆಗದ ಸ್ಥಿತಿಯಲ್ಲಿದ್ದರು. ಅವರಿಗೆ ಆರು ದಶಕಗಳ ಹಿಂದಿನ ಇತಿಹಾಸದ ತುಣುಕೊಂದನ್ನು ಕಥೆಯಾಗಿಸಿ ಹೇಳಬೇಕಾಯಿತು. ಮೈದಾನದ ಕಲ್ಲು ಬೆಂಚಿನ ಮೇಲೆ ಅವರನ್ನು ಕೂಡ್ರಿಸಿಕೊಂಡು ನಮ್ಮ ಅವ್ವನ ನತದ್ರಷ್ಟ ತಾಯಿ ನಾಗಮ್ಮಜ್ಜಿಯ ಪುರಾಣ ಬಿಚ್ಚಿದೆ…. ಕುಮಟಾ ತಾಲೂಕಿನ ನಾಡುಮಾಸ್ಕೇರಿ ಎಂಬ ಪುಟ್ಟ ಗ್ರಾಮದ ಕೃಷಿಕೂಲಿಕಾರ ದಂಪತಿಗಳಾದ ಕೃಷ್ಣ-ನಾಗಮ್ಮ ನಮ್ಮ ಅವ್ವ ತುಳಸಿಯ ತಂದೆ ತಾಯಿಯರು. ತಂದೆ ಕೃಷ್ಣ ಆಗೇರ ನಿರಕ್ಷರಿಯಾದರೂ ಉತ್ತಮ ಯಕ್ಷಗಾನ ಕಲಾವಿದನಾಗಿದ್ದ. ಶೃಂಗಾರ ಪಾತ್ರಗಳಿಗೆ ಹೇಳಿ ಮಾಡಿಸಿದಂತ ವ್ಯಕ್ತಿತ್ವ ಅವನದ್ದಾಗಿತ್ತೆಂದು ಅವ್ವ ಆಗಾಗ ನೆನಪಿಸಿಕೊಳ್ಳುತ್ತಿದ್ದಳು. ತಮ್ಮ ಒಬ್ಬಳೇ ಮಗಳು ತುಳಸಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದೇ ಕನಸು ಕಟ್ಟಿಕೊಂಡು ತಾಯಿ ತಂದೆಯರಿಬ್ಬರೂ ಮಗಳನ್ನು ಶಾಲೆಗೆ ಸೇರಿಸಿದ್ದರು. ಆದರೆ ದೈವೇಚ್ಛೆ ಹಾಗಿರಲಿಲ್ಲ. ದುರ್ದೈವದಿಂದ ತಂದೆ ಕೃಷ್ಣ ಆಗೇರ ಖಚದೇವಯಾನಿ’ ಯಕ್ಷಗಾನ ಬಯಲಾಟದಲ್ಲಿ ಖಚನ ಪಾತ್ರ ಮಾಡುತ್ತಿದ್ದಾಗ ರಂಗದಲ್ಲಿಯೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ. ನಾಲ್ವತ್ತರ ಹರೆಯದ ತಂದೆ ತೀರಿಕೊಂಡಾಗ ಮಗಳು ತುಳಸಿ ಇನ್ನೂ ಮೂರನೆಯ ತರಗತಿಯ ಮುಗ್ಧ ಬಾಲಕಿ. ಊರಿನ ಕೆಲವು ದಲಿತರಿಗೆ ಅಂಕೋಲಾ ತಾಲೂಕಿನ ಹಿಲ್ಲೂರಿನ ಅರಣ್ಯಭೂಮಿಯನ್ನು ಬೇಸಾಯಕ್ಕಾಗಿ ಸರಕಾರ ಮಂಜೂರಿ ನೀಡಿತು. ನಾಡುಮಾಸ್ಕೇರಿಯಲ್ಲದೆ ಸುತ್ತಲಿನ ಹೆಗ್ರೆ, ಅಗ್ರಗೋಣ ಮುಂತಾದ ಗ್ರಾಮಗಳಲ್ಲಿ ಕೂಲಿಮಾಡಿಕೊಂಡಿದ್ದ ಆರೆಂಟು ದಲಿತ ಕುಟುಂಬಗಳು ಸ್ವಂತ ಜಮೀನು ಹೊಂದುವ ಉತ್ಸಾಹದಲ್ಲಿ ಹಿಲ್ಲೂರಿಗೆ ಹೊರಟು ನಿಂತವು. ವಿಧವೆ ನಾಗಮ್ಮಜ್ಜಿ ತನ್ನ ಮಗಳನ್ನು ಕಟ್ಟಿಕೊಂಡು ತಾನೂ ಹಿಲ್ಲೂರಿನೆಡೆಗೆ ಮುಖ ಮಾಡಿದಳು. ಅಲ್ಲಿಗೆ ಅವ್ವನ ಓದುವ ಕನಸು ಭಗ್ನವಾಯಿತು. ನಾಗಮ್ಮಜ್ಜಿ ತಾನೂ ಸ್ವಂತ ಜಮೀನು ಹೊಂದುವ ಆಸೆಯಿಂದ ತನ್ನ ಮಗಳೊಂದಿಗೆ ಹಿಲ್ಲೂರಿಗೆ ಬಂದಳಾದರೂ ಅವಳಿಗೆ ಜಮೀನು ಮಂಜೂರಿಯಾಗಲಿಲ್ಲ. ಸಂಬಂಧಿಕರ ಇದ್ದುಕೊಂಡು ಜಮೀನು ಪಡೆದವರ ಭೂಮಿಯನ್ನು ಹದಗೊಳಿಸುವ ಕಾರ್ಯದಲ್ಲಿ ಕೂಲಿಯಾಗಿ ದುಡಿದಳು. ಗಟ್ಟಿಗಿಟ್ಟಿಯಾದ ನಾಗಮ್ಮಜ್ಜಿ ಬೆಟ್ಟದ ಭೂಮಿಯ ಬಿದಿರು ಹಿಂಡುಗಳನ್ನು ಕಡಿದು ಬೆಂಕಿಯಿಟ್ಟು ಬಯಲು ಮಾಡಿ, ಕುಠಾರಿ ಹಿಡಿದು ನೆಲ ಅಗೆಯುವ ಕಾಯಕ ನಿಷ್ಠೆಯನ್ನು ಕಂಡ ಬ್ರಿಟಿಷ್ ಅಧಿಕಾರಿಯೊಬ್ಬರು “ನಾಗಮ್ಮನಿಗೆ ಲ್ಯಾಂಡ್ ಸ್ಯಾಂಕ್ಶನ್ ಮಾಡಲೇಬೇಕು” ಎಂದು ಹಠ ಹಿಡಿದು ಅವಳ ಹೆಸರಿಗೂ ಹತ್ತು ಎಕರೆ ಅರಣ್ಯ ಭೂಮಿ ಮಂಜೂರಿ ಮಾಡಿಸಿದರು. ತನ್ನದೇ ಎಂಬ ಭೂಮಿ ದೊರೆತ ಬಳಿಕ ಇನ್ನಷು ಕಷ್ಟಪಟ್ಟು ದುಡಿದ ನಾಗಮ್ಮಜ್ಜಿ ಭೂಮಿಯನ್ನು ಹದಗೊಳಿಸಿಕೊಂಡು ಬೇಸಾಯಕ್ಕೆ ಅಣಿಗೊಳಿಸಿದಳು. ಆದರೆ ಪಟ್ಟಾ ಬರೆಯುವ ಸ್ವಜಾತಿ ಬಂಧು ಶಾನುಭೋಗನೊಬ್ಬ ದಾಖಲೆಗಳಲ್ಲಿ ಈ ಎಲ್ಲ ಜಮೀನನ್ನು ನಾಗಮ್ಮ ಎಂಬ ತನ್ನ ಹೆಂಡತಿಯ ಹೆಸರಿಗೆ ದಾಖಲಿಸಿದ್ದ: ಆರೆಂಟು ವರ್ಷಗಳು ಕಳೆದ ಮೇಲೆಯೇ ತನಗೆ ವಂಚನೆಯಾದ ಸಂಗತಿ ನಾಗಮ್ಮಜ್ಜಿಯ ಅರಿವಿಗೆ ಬಂತಾದರೂ ತನ್ನ ಭೂಮಿಗಾಗಿ ಕಾನೂನು ಇತ್ಯಾದಿ ಬಳಸಿಕೊಂಡು ಹೋರಾಟ ಮಾಡಲು ಅವಳ ಬೆಂಬಲಕ್ಕೆ ಯಾರೂ ಇರಲಿಲ್ಲ. ಬೇರೆದಾರಿಯಿಲ್ಲದೆ ನಾಗಮ್ಮಜ್ಜಿ ತನ್ನ ಮಗಳೊಂದಿಗೆ ಸ್ವಂತ ಊರು ನಾಡುಮಾಸ್ಕೇರಿಗೆ ಮರಳಿದಳು. ***************************************************** ಡಾ.ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ…
ಅಂಕಣ ಬರಹ-01 ನಾಂದಿ ಪದ್ಯ ತೆಂಗಿನ ಮಡಲಿನಿಂದ ನೇಯ್ದ ತಟ್ಟಿ ಆ ಮನೆಯ ಹೊರ ಆವರಣದ ತಡೆ ಗೋಡೆ. ಮಣ್ಣಿನ ನೆಲಕ್ಕೆ ಮಣ್ಣಿನದ್ದೇ ಪರಿಮಳ. ಮಳೆಗಾಲದಲ್ಲಿ ಆ ಮನೆಯ ನೆಲವು ನೀರ ಒಸರಿಗೆ ಹಸಿ ಹಸಿಯಾಗುತ್ತದೆ. ಹೊರಗೆ ಧೋ ಎನ್ನುವ, ಹನಿಹನಿ ಟಪಟಪ ಹನಿಸಿ ಮರ್ಮರಿಸುವ, ಗುನುಗುವ, ಆರ್ಭಟಿಸುವ ಹಠಮಾರಿ ಮಳೆ. ಚಾಪೆಯಂತೆ ಹೆಣೆದ ಆ ತಟ್ಟಿಯನ್ನು ನನ್ನ ಪುಟ್ಟ ಬೆರಳಿನಲ್ಲಿ ಅಗಲಿಸಿ ಒಂದು ಕಣ್ಣನ್ನು ಆ ಖಾಲಿಗೆ ಹೊಂದಿಸಿ..ಇನ್ನೊಂದು ಕಣ್ಣ ಮುಚ್ಚಿ ಹೊರಗೆ ಸುಯ್ಯುತ್ತಿದ್ದ ಮಳೆಯೊಂದಿಗೆ ಮುಗ್ಧ ಮನಸ್ಸಿನ ಅವ್ಯಕ್ತ ಅನುಸಂಧಾನ ನಡೆಯುತ್ತಿತ್ತು. ಎದೆಗೆ ಹೊಯ್ಯತ್ತಿದ್ದ ಭಾವಗಳಿಗೆ ಅಕ್ಷರದ ರೂಪವಿಲ್ಲ. ಆದರೆ ಕಣ್ಣುಗಳಲ್ಲಿ ಚುಕ್ಕಿಗಳ ಹೊಳಪು. ಸ್ಪಷ್ಟವಾಗದ ಅವರ್ಣನೀಯ ಮಾತುಗಳು ಗಿರಕಿ ಹೊಡೆಯುತ್ತಿದ್ದವು. ಅದೇ ಭಾವವನ್ನು ಹೊತ್ತು ಮುಖ ತಿರುಗಿಸುತ್ತಿದ್ದೆ. ಮಗ್ಗದ ಸೀರೆ ಉಟ್ಟ, ಉದ್ದದ ಮೂಗುತಿ, ನತ್ತು ಮೂಗಿಗೇರಿಸಿಕೊಂಡು, ಹಣೆಯಲ್ಲಿ ದೊಡ್ಡದಾಗಿ ಹುಣ್ಣಿಮೆಯ ಚಂದ್ರನಂತ ಕುಂಕುಮ ತಂಪಾಗಿ ನಗುತ್ತಿದ್ದರೆ ..ಅದರದೇ ಬೆಳಕು ಹೊದ್ದಂತೆ ಕಣ್ಣು ಮುಖದಲ್ಲಿ ಮಿಂಚಿನಂತಹ ಬೆಳಕು ಹಾರಿಸಿ ಎದುರಿನ ಕೆಳತುಟಿ ಕಚ್ಚಿ ಕೂತ ಎರಡು ಹಲ್ಲು ಬಿಡುತ್ತಿದ್ದಳು ನನ್ನಜ್ಜಿ. ನಾನು ಮತ್ತೆ ಕಣ್ಣನ್ನು ಹೊರಗಿನ ಮಳೆಗೆ ಸಿಲುಕಿಸುತ್ತಿದ್ದೆ. “ಇನ್ನು ಸ್ವಲ್ಪ ದಿನ ಆಮೇಲೆ ಆಟ ಶುರು..ಈ ಮಳೆ ನಿಲ್ಲುತ್ತಲೇ ಒಂದೊಂದೇ ಮೇಳ ಹೊರಡಲು ಶುರುವಾಗುತ್ತದೆ”. ಒಂದೇ ನೆಗೆತಕ್ಕೆ ಆಕೆಯ ತೆಕ್ಕೆಗೆ ಜೋತು ಬೀಳುತ್ತಿದ್ದೆ. ಮಳೆಯ ಸದ್ದಿನಾಚೆ ಅದನ್ನೂ ಮೀರಿಸುವಂತೆ ಚಂಡೆಯ ಸದ್ದು ಕಿವಿಯೊಳಗೆ ಅನುರಣಿಸಿದಂತೆ ತೊನೆಯುತ್ತಿದ್ದೆ. ಬಣ್ಣಬಣ್ಣದ ವಸ್ತೃ, ಕಿರೀಟ. ಅಬ್ಬಾ!ಆ ಶಕರನ ಮುಖ, ತೆರೆದುಕೊಂಡ ಕಣ್ಣು. ಅದರ ಸುತ್ತ.ಬಣ್ಣದ ರೇಖೆಗಳು. ಅದು ರಾಕ್ಷಸ ವೇಷ. ಎದೆಯಲ್ಲಿ ಬಂದು ಕೂತ ಉರೂಟು ಭಯ..ಶಕಾರ ಎದ್ದ. ಹೋಓಓಓಒ…ಥೈ ಥೈಥೈ… “ಎಲ್ಲೀ…ಆ ವಶಂತ ಶೇನೆ” ದೇಹದೊಳಗೆ ತುಂಬಿಕೊಳ್ಳುವ ಅದು ಯಾವುದೋ ಆವೇಶ. ನಾಯಿ ಓಡಿಸಲು ಮೂಲೆಯಲ್ಲಿ ಕೂತ ಕೋಲು ಬಿಲ್ಲು ಬಾಣವಾಗಿ ಮನಸಿನೊಳಗಿನ ಆ ಪುರುಷಾಕೃತಿ ಮುಖಕ್ಕೆ ಕಟ್ಟಿದ ಕಂಗಿನ ಹಾಳೆಯ ತುಂಡಿನ ಮುಖವಾಡದಿಂದ ಅನಾವರಣಗೊಳ್ಳುತ್ತಿತ್ತು. ನನ್ನ ಪುಟ್ಟ ದೇಹವನ್ನು ತನ್ನ ಆಧೀನಕ್ಕೆ ತಂದು ಕುಣಿಸುತ್ತಿತ್ತು. “ಶಕರ” ಹೂಂಕರಿಸುತ್ತಿದ್ದ. “ಹ್ಹೇ…ವಶಂತಶೇನೆ..ಎಲ್ಲಿರುವೆ. ಬಂದೆ ನಾನು… “ ಕೇವಲ ಎರಡು ಹಲ್ಲಿನ ಬೊಜ್ಜುಬಾಯಿ ಅಗಲಿಸಿ ಈ ಸೂತ್ರಧಾರಿ ನನ್ನಜ್ಜಿ ನಗುತ್ತಿದ್ದಳು…ನಗು ನಗು.. ” ಅಬ್ಬಬ್ಬಾ..ಈ ಶಕರನ ಧಾಳಿ ತಡಕೊಳ್ಳುವುದು ಕಷ್ಟ. ಏ.. ನಿಲ್ಲಿಸು..ನಿನ್ನ ವಶಂತ..ಶೇನೆ ಬರುತ್ತಾಳೆ..ಇಲ್ಲದಿದ್ರೆ ಈಗ ಕೋಲು ಬರ್ತದೆ.” ಮತ್ತೆ ನಗು. ಆ ನಗುವಿನಿಂದ ಮತ್ತಷ್ಟು ಹುಮ್ಮಸ್ಸು ಏರಿ ತೆಂಗಿನ ಕಾಯಿಯ ತುದಿ ಸಿಪ್ಪೆ ಸಮೇತ ( ಅದು ವಸಂತಸೇನೆಯ ಮುಡಿ) ಹಿಡಿದು ಎಳೆತರುತ್ತಿದ್ದೆ. ಕುಣಿತ..ಸುತ್ತುಸುತ್ತಿ ಸುತ್ತಿ ಗಿರ್ ಗಿಟಿ ಹಾಕಿ ಒದ್ದೆ ನೆಲದಲ್ಲಿ ಕುಸಿಯುತ್ತಿದ್ದೆ. ನನ್ನೊಳಗೆ ಚಂಡೆಯ ಅಬ್ಬರ ಏರುತ್ತಲೇ ಇತ್ತು. ವಸಂತಸೇನೆ ಆರ್ತಳಾಗಿ ಅಜ್ಜಿಯತ್ತ ನೋಡುವಂತೆ ಭಾಸವಾಗುತ್ತಿತ್ತು. “ರಕ್ಷಿಸಿ..ಎಲ್ಲಿ ನನ್ನ ಚಾರುದತ್ತ..” “ತರ್ತೇನೆ ಈಗ ಕೋಲು..ನಿನ್ನ ಪಾಠ ಪುಸ್ತಕ ಎಲ್ಲುಂಟು. ಅದು ಚೀಲದಿಂದ ಹೊರ ಬರಲಿಕ್ಕೆ ಉಂಟಾ.. ಆಟದ ಸುದ್ದಿ ತೆಗೆದದ್ದೇ ದೊಡ್ಡ ತಪ್ಪಾಯ್ತು. ನೋಡ್ತೇನೆ ನಿನ್ನ ಮಾರ್ಕು.ಕುಂಡೆಗೆ ಬಿಸಿ ಬರೆ ಹಾಕಲಿಕ್ಕುಂಟು..ಆಮೇಲೆ ಶಕಾರ,ವಸಂತಸೇನೆ.” ಅವಳ ಜೋರು ಕಿವಿಯ ಬದಿಯಿಂದ ಹಾದುಹೋದರೆ ಒಳಗಿಳಿದು ಸದ್ದು ಮಾಡುವುದು ಯಕ್ಷಗಾನದ ಆ ಪಾತ್ರಗಳು. ಶುರುವಾಗುತ್ತಿತ್ತು. ಪುಟ್ಟ ಮನಸ್ಸಿನೊಳಗೆ ರಂಗಿನಾಟ..ಬಣ್ಣ ಗಾಢವಾಗುತ್ತಲೇ ಹೋಗುತ್ತಿತ್ತು. ಕಲ್ಪನಾಲೋಕದೊಳಗಿನ ಒಡ್ಡೋಲಗ. ರಾಜ, ರಾಣಿ ರಾಜಕುಮಾರ, ರಾಕ್ಷಸ ಅವತರಿಸಿ ನನ್ನಲ್ಲಿ ನಶೆ ಏರಿಸುತ್ತಿದ್ದ ಪರಿ. ಹನಿದ ಮಳೆ ಕ್ಷೀಣವಾಗುತ್ತಾ,ಆಗುತ್ತಾ, ಮಾಯಾ ಲೋಕದೆಡೆಗೆ ಸರಿದು ಹೋದರೆ..ಬಿಳಿಬಿಳಿ ಚಳಿ ಧರೆಗಿಳಿಯುತ್ತಿತ್ತು. ಪೆಟ್ಟಿಗೆ ಸೇರಿದ್ದ ಪುರಾಣದ ಪಾತ್ರಗಳ ರಂಗಸಜ್ಜಿಕೆ ಮೈ ಕೊಡವಿ ಎದ್ದು..ಮೇಳಗಳು ಸಂಚಾರಕ್ಕೆ ಹೊರಡುತ್ತಿದ್ದವು. ಇರುಳು ಕವಿಯುತ್ತಲೇ ಯುಗ ಬದಲಾಗಿ ತ್ರೇತಾ ,ದ್ವಾಪರ ತೆರೆದುಕೊಂಡು ರಾಮ,ಕೃಷ್ಣ ಎಲ್ಲರೂ ಧರೆಗಿಳಿಯುತ್ತಿದ್ದರು. ಅಜ್ಜಿಯ ಸೊಂಟದಲ್ಲಿ ಕೂತು ಆರಂಭವಾದ ನನ್ನ ಅವಳ ಈ ಯಕ್ಷಲೋಕದೆಡೆಗಿನ ಪಯಣ ಅವಳ ಕೈ ಹಿಡಿದು ನಾನು ನಡೆಸುವವರೆಗೂ ಸಾಗಿತ್ತು. ರಾತ್ರಿ ಬಯಲಾಟದ ವೀಕ್ಷಣೆ.. ಹಗಲಿಗೆ ಅರೆಮಂಪರಿನಲ್ಲಿ ಒಳಗಡೆಯ ಚಂಡೆಯ ಸದ್ದಿಗೆ ಸಿಕ್ಕಿದ ಕೋಲು ಹಿಡಿದು ಕುಣಿತ..ಅಮ್ಮನ ಹಳೆಯ ಸೀರೆ ತುಂಡು, ಸೋದರ ಮಾವನ ಲುಂಗಿಗಳು..ಒಡ್ಡೋಲಗದ ಪರದೆ, ಬಗೆಬಗೆಯ ವಸ್ತ್ರಗಳಾಗಿ ಕಲ್ಪನಾಲೋಕದ ಭ್ರಮರವು ಮನಸೋ ಇಚ್ಛೆ ಹಾರುತ್ತಲೇ ಇತ್ತು. ಶಾಲೆಗೆ ಹೋಗಿ ಕೂತರೂ ವೇಷ ಎದುರುಬಂದಂತೆ.. “ಬಂದಳು..ಚೆಲು..ವೆ ಚಿತ್ರಾಂಗದೆ.” ಅದೆಷ್ಟು ಹೊಸ ಹೊಸ ಪಾತ್ರಗಳು ಮನಃಪಟಲದಲ್ಲಿ ಅರಳಿ ನಾನೇ ಅದಾಗಿ ರೂಪುಗೊಳ್ಳುವ ಚೆಂದವೆಂತಹುದು…ಆಹಾ..ನನಗೋ ಅವರನ್ನು ಅಲ್ಲಿಂದ ಬಿಡುಗಡೆಗೊಳಿಸಿ ಹೊರತರಬೇಕಾದ ತುರ್ತು. ಪಕ್ಕದಲ್ಲಿ ಕೂತ ಗೆಳತಿಯರಿಗೆ ಸ್ಲೇಟಿನಲ್ಲಿ ಟೀಚರ್ ಕೊಟ್ಟ ಲೆಕ್ಕ ಬಿಡಿಸಿ, ಮಗ್ಗಿ ಬರೆದು ಆಮಿಷ ಹುಟ್ಟಿಸುತ್ತಿದ್ದೆ. ಆಮೇಲೆ ನಾನು ಕಥೆ ಹೇಳುವುದನ್ನು ನೀನು ಕೇಳಬೇಕು. ಮನೆಗೆ ಓಡಬಾರದು ಹೀಗೆ ಹಲವು ಒಳ ಒಪ್ಪಂದಗಳು. ಹೊಸ ಹೊಸ ಪಾತ್ರಗಳು ನನ್ನಲ್ಲಿ ಬಣ್ಣ ಹಚ್ಚಿಕೊಳ್ಳುತ್ತಿದ್ದವು. ರಾತ್ರಿ ಎದೆಗಿಳಿದ ಅವುಗಳ ಮಾತುಗಳು ಚೂರು ಪಾರು ಮಾರ್ಪಾಡು ಹೊಂದಿ ಬಣ್ಣದ ಚಿತ್ತಾರದ ಗ್ಲಾಸಿನಲ್ಲಿ ತುಂಬಿದ ಶರಭತ್ತಿನ ರುಚಿಯಂತೆ ವ್ಯಕ್ತವಾಗುತ್ತಿದ್ದವು. ಮತ್ತೆ ಆ ಪಾತ್ರಗಳಿಗೆ ಹೆಸರು ಹುಡುಕುವ ಪರದಾಟ. ಸೌದಾಮಿನಿ, ಧಾರಿಣಿ, ಮೈತ್ರೇಯಿ, ವೈದೇಹಿ..ಎಲ್ಲರೂ ಬಿಂಕ ಲಾಸ್ಯದಿಂದ ಗೆಜ್ಜೆ ಕಟ್ಟಿ ಮನೆ ಕದ ತೆರೆದು ಹೊರಗಡೆ ಹಾರುತ್ತಿದ್ದರು. ಅದೊಂದು ಅದ್ಭುತ ಲೋಕ. ಅರಿವಿನ ಜಗತ್ತು ಮೊಳಕೆಗೊಳ್ಳುವ ಮುನ್ನವೇ ಅಜ್ಜಿಯೆಂಬ ಅಚ್ಚರಿಯ ಮಾಂತ್ರಿಕಳು ನನ್ನೊಳಗೆ ಕಲ್ಪನೆಯ ಪ್ರಪಂಚ ತೆರೆದು ತೋರಿಸಿ ನನ್ನನ್ನು ಅಲ್ಲಿ ಕೂರಿಸಿದ್ದಳು. ತನ್ನ ಚಿರಿಟಿ ಹೋದಂತಹ ಸೊಂಟದಲ್ಲಿ ನನ್ನ ಕೂರಿಸಿ ಥಂಡಿ ಗಾಳಿಯ ಒರೆಸುತ್ತ ದೇವಾಲಯದ ಎದುರಿನ ಗದ್ದೆ, ಶಾಲೆಯ ಎದುರಿನ ಬಯಲು, ಯಾರದೋ ಮನೆಯಂಗಳದಲ್ಲಿ ನಡೆವ ಹರಕೆಯ ಬಯಲಾಟ ಒಂದನ್ನೂ ಬಿಡದೆ ರಾತ್ರಿ ತೆಂಗಿನೆಣ್ಣೆ, ಉಪ್ಪು ಬೆರೆಸಿದ ಕುಚುಲಕ್ಕಿ ಗಂಜಿ ಉಣಿಸಿ ಕಂಡೊಯ್ಯುತ್ತಿದ್ದಳು. ಅಲ್ಲೇ ಆ ಮಣ್ಣಿನ ನೆಲದಲ್ಲಿ ಕಣ್ಣು ಬಾಯಿ ಕಿವಿ,ಮೂಗು, ಮೈಯೆಲ್ಲ ಅರಳಿಸಿ ಕೂತು ಆಟ ನೋಡುತ್ತಿದ್ದೆ. ಈ ಜಗದ ತಂತು ಕಡಿದು ಅಲ್ಲೆಲ್ಲೋ ಸೇರಿದಂತೆ..ಎಂತಹ ವಿಸ್ಮಯ ಪ್ರಪಂಚವದು. ದೇವತೆಗಳು ಬರುತ್ತಿದ್ದರು. ಸುಂದರ ಉದ್ಯಾನವನ, ಅತಿ ಸುಂದರ ರಾಜಕುಮಾರಿ, ಆ ರಾಜ..ಈ ರಾಕ್ಷಸ.. ಮತ್ತೆ ಯುದ್ದ..ಆರ್ಭಟ. ಅತ್ಯಂತ ಮನೋಜ್ಞವಾಗಿ, ಚಾಕಚಕ್ಕತೆಯಿಂದ ,ಕೌಶಲ್ಯದ ಮಾತುಗಳ ಕೊಂಡಿಗಳು ಕ್ಕೋ ಕೊಟ್ಟಂತೆ,ಅರಳು ಅರಳಿದಂತೆ ಹರಡಿಕೊಳ್ಳುತ್ತಿದ್ದವು. ರಾಜಕುಮಾರಿಯ ಜೊತೆಗಿನ ಸಖಿಯಾಗಿ, ಆ ರಾಜಕುಮಾರಿಯೇ ನಾನಾಗಿ ಅಲೆದಾಟ,ನಗು,ಅಳು, ವಿರಹದ ಅರ್ಥವೇ ಇಣುಕದ ವಯಸ್ಸಿನಲ್ಲಿ ವಿರಹ ಶೃಂಗಾರ ಎಲ್ಲವೂ ತಣ್ಣಗೆ ಮುಗ್ಧ ಮನಸ್ಸಿನ ಒಳಗಿಳಿಯುತ್ತಿತ್ತು. ಆಗೆಲ್ಲ ರಾಮಾಯಣ, ಮಹಾಭಾರತದ ಕಥೆಗಳು ಹಾಗೂ ಅಲ್ಲಿ ಸಿಗುವ ಉಪಕಥೆಗಳು ಬಯಲಾಟದ ಪ್ರಸಂಗಗಳಾಗಿರುತ್ತಿದ್ದವು. ಭಕ್ತಿಪ್ರಧಾನ,ನೀತಿಭೋದಕ ಕಥೆಗಳು. ಇಂತಹ ಸಂದರ್ಭದಲ್ಲೇ ಆ ಪುಟ್ಟ ವಯಸ್ಸಿನಲ್ಲಿ ನೋಡಿದ ವಸಂತಸೇನೆ ಎಂಬ ಪ್ರಸಂಗ ಬಹಳ ಆಳಕ್ಕಿಳಿದು ನನ್ನ ಕುಣಿಸುತ್ತಿತ್ತು. ನಿಜವೆಂದರೆ ನಂತರದ ದಿನಗಳಲ್ಲಿ ಕಥೆ ಮಾಸಿದರೂ, ಅದರಲ್ಲಿ ಬರುವ ವಸಂತಸೇನೆಯ ಪ್ರೀತಿ ಹಾಗೂ ಖಳನಾಯಕ ಶಕರನ ಗಟ್ಟಿ ಸೀಳುಧ್ವನಿಯ ಮಾತು ಉಳಿದುಬಿಟ್ಟಿತು. ಶಕರ ಬಂದ ಎಂದರೆ ಹೆದರಿಬಿಡುತ್ತಿದ್ದೆ. ಮತ್ತೆ ನಾನೇ ಶಕರನಾಗಿ ಕುಣಿಕುಣಿದು.. ‘ಎಲ್ಲಿ ಆ ವಶಂತ ಶೇನೆ ‘ ಎನ್ನುತ ಅದೇ ಶೈಲಿಯಲ್ಲಿ ದೊಡ್ಡ ಹೆಜ್ಜೆ ಇರಿಸಿ ಸಂಭ್ರಮಿಸುತ್ತಿದ್ದೆ. ಹಗಲಲ್ಲಿ ಶಕರನಾಗಿ ಬದಲಾಗುವ ನಾನು ರಾತ್ರಿ ಊಟದ ಸಮಯ ಬಂದು ಶಕರ ಎಂದರೆ ಹೆದರಿ ಗಬಗಬ ಉಣ್ಣುತ್ತಿದ್ದೆ. ರಾತ್ರೆಯಾದರೆ ನಾನು ಥೇಟು ವಸಂತಸೇನೆ!. ರಂಗ ಏರುವ ಆಸೆ,ನಶೆ..ತೀರದ ಹುಚ್ಚಿಗೆ ಈ ಬಯಲಾಟಗಳೇ ಮೊದಲ ಸಜ್ಜಿಕೆ. ನಿಂತಲ್ಲಿ, ಕೂತಲ್ಲಿ ಶಕರ, ವಸಂತಸೇನೆ, ಶ್ವೇತಕುಮಾರ, ದ್ರೌಪದಿ, ದಮಯಂತಿ,..ಸಾಲು ಸಾಲು ಪಾತ್ರಗಳು ನನ್ನನ್ನು ಗಟ್ಟಿಯಾಗಿ ಆವರಿಸಿಕೊಳ್ಳತೊಡಗಿದವು. ಎಲ್ಲೋ ಒಂದಿನಿತು ಮರೆಗೆ ಹೋಗಲು ಯತ್ನಿಸಿದರೆ ಈ ಜಾದೂಗಾರಿಣಿ ಅಜ್ಜಿ ಮತ್ತೆ ಮತ್ತೆ ತುತ್ತು ಇಡುವಾಗ, ತಲೆಗೆ ನೀರು ಹೊಯ್ಯುವಾಗ, ಎಣ್ಣೆಯಿಟ್ಟು ಜಡೆ ಹೆಣೆಯುವಾಗ, ಬೇಸರದ ಕ್ಷಣಗಳಲ್ಲಿ ಮುದ್ದಿಸುವಾಗ ಕಥೆಯ ಮಾಲೆ ಹೊರತೆಗೆದು ಒಂದೊಂದಾಗಿ ಬಿಡಿಸುತ್ತಿದ್ದಳು. ಓಹ್..ಎಂತಹ ಶ್ರೀಮಂತ ದಿನಗಳವು. ಆ ದಿನಗಳು ನನ್ನ ನಾಟಕ ಬದುಕಿನ ಮೊದಲ ಪುಟಗಳು ಅನ್ನಲೇ,ಅಥವಾ ಮುನ್ನುಡಿ ಬರಹ ಅನ್ನಲೇ. ************************************************************************ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.
ಅಂಕಣ ಬರಹ ಗುರುತುಗಳು ಗುರುತುಗಳುಮೂಲ ಮಲೆಯಾಳ ; ಸೇತು ಕನ್ನಡಕ್ಕೆ : ಡಾ.ಅಶೋಕ್ ಕುಮಾರ್ಪ್ರಕಾಶನ : ಕೇಂದ್ರಸಾಹಿತ್ಯ ಅಕಾಡೆಮಿಪ್ರಕಟಣೆಯ ವರ್ಷ : ೨೦೧೧ಬೆಲೆ : ರೂ.೨೦೦ಪುಟಗಳು : ೩೪೬ ಇದು ಮುಖ್ಯವಾಗಿ ಸಿಂಗಲ್ ಪೇರೆಂಟ್ ಆಗಿರುವ ಒಬ್ಬ ತಾಯಿ ಮತ್ತು ಮಗಳ ಸುತ್ತ ಹೆಣೆಯಲಾದ ಕತೆ. ತಾಳ ತಪ್ಪಿದ ವೈವಾಹಿಕ ಜೀವನದಿಂದ ನೊಂದು ಸ್ವತಂತ್ರವಾಗಿ ಬಾಳುತ್ತೇನೆಂದು ಸಬರ್‌ವಾಲ್ ಕುಟುಂಬವು ನಡೆಸುತ್ತಿರುವ ಒಂದು ಕಂಪೆನಿಯ ಹೆಚ್.ಆರ್.ಮುಖ್ಯಸ್ಥೆಯಾಗಿ ಸೇರುತ್ತಾಳೆ ಪ್ರಿಯಂವದಾ ಮೆನೋನ್. ಬುದ್ಧಿವಂತೆಯಾದ ಆಕೆ ಪರಿಶ್ರಮ ಪಟ್ಟು ದುಡಿಯುವವಳು. ತನ್ನ ಪ್ರೀತಿಯ ಮಗಳು ನೀತುವನ್ನು ಎಂ.ಬಿ.ಎ.ಓದಿಸುತ್ತಿದ್ದಾಳೆ. ಅಪ್ಪನ ಪ್ರೀತಿಯೆಂದರೆ ಏನೆಂದು ತಿಳಿಯದ ನೀತು ವಾಚಾಳಿಯಾಗಿ ಬೆಳೆಯುತ್ತಾಳೆ ಒಮ್ಮೆ ತನ್ನ ಉದ್ಯೋಗದ ಒಂದು ಭಾಗವಾಗಿ ಗೋವಾದಲ್ಲಿ ನಡೆಯುವ ಉದ್ಯಮಿಗಳ ಸೆಮಿನಾರಿನಲ್ಲಿ ಪ್ರಿಯಂವದಾ ಪ್ರಬಂಧ ಮಂಡಿಸುತ್ತಾಳೆ. ಅಲ್ಲಿ ಆಕೆ ಬಹಳ ಹಿಂದಿನಿಂದಲೂ ತನ್ನ ಗುರುವೆಂದು ಭಾವಿಸಿ ಗೌರವಿಸುತ್ತಿದ್ದ ಡಾ.ರಾಯ್ ಚೌಧುರಿಯನ್ನು ಭೇಟಿಯಾಗುತ್ತಾಳೆ. ಮಾತನಾಡುತ್ತ ಆತನಿಗೆ ಮಾನಸಿಕವಾಗಿ ತುಂಬ ಹತ್ತಿರವಾಗುತ್ತಾಳೆ. ಅವರ ಸಂಬಂಧ ಊರಿಗೆ ಮರಳಿದ ನಂತರವೂ ಮುಂದುವರಿಯುತ್ತದೆ. ಆದರೆ ಆತನೊಂದಿಗಿನ ಅಮ್ಮನ ಈ ಆತ್ಮೀಯತೆ ನೀತುವಿಗೆ ಇಷ್ಟವಾಗುವುದಿಲ್ಲ. ನೀತುವಿನ ತಿರಸ್ಕಾರವು ಪ್ರಿಯಂವದೆಯ ಔದ್ಯೋಗಿಕ ಮತ್ತು ಕೌಟುಂಬಿಕ ಜೀವನದ ಸಂತೋಷಕ್ಕೆ ಭಂಗ ತರುತ್ತದೆ. ತನ್ನ ಮನೆಗೆ ಬರುವ ನೀತುವಿನ ಗೆಳತಿಯರ ಮೂಲಕ ಅವಳ ಜತೆಗೆ ರಾಜಿ ಮಾಡಿಕೊಳ್ಳಲು ಪ್ರಿಯಂವದಾ ಪ್ರಯತ್ನಿಸುತ್ತಾಳೆ. ನೀತು ಹರಿನಾರಾಯಣನೆಂಬ ತನ್ನ ಬುದ್ಧಿಜೀವಿ ಸಹಪಾಠಿಯ ಸ್ನೇಹ ಬೆಳೆಸುತ್ತಾಳೆ. ಗೆಳತಿಯರು ಬೇಡವೆಂದು ಉಪದೇಶಿಸಿದರೂ ಉಪಯೋಗವಾಗುವುದಿಲ್ಲ. ನೀತು ಅಮ್ಮನನ್ನು ನಿರ್ಲಕ್ಷಿಸಿ ವಿದೇಶದಲ್ಲಿದ್ದ ತನ್ನ ಅಪ್ಪ ರಂಜಿತ್‌ಗೆ ಹತ್ತಿರವಾಗಲು ಪ್ರಯತ್ನಿಸುತ್ತಾಳೆ. ಹತಾಶಳಾದ ಪ್ರಿಯಂವದಾಳ ಕನಸುಗಳಲ್ಲಿ ಅವಳು ಗೋವಾದಲ್ಲಿ ಕಂಡ ಪಾತ್ರಗಳು ಮತ್ತೆ ಮತ್ತೆ ಬರುತ್ತವೆ. ತನ್ನ ಮನೆಯಲ್ಲಿ ಸಹಾಯಕ್ಕೆಂದು ಪ್ರಿಯಂವದಾ ನಿವೇದಿತಾ ಎಂಬ ಪರ್ಸನಲ್ ಮ್ಯಾನೇಜರ್‌ನ್ನು ನೇಮಿಸಿಕೊಳ್ಳುತ್ತಾಳೆ. ರೇವತಿ ಎಂಬ ನಿಜನಾಮಧೇಯವುಳ್ಳ ಆಕೆಯನ್ನು ಕಂಪೆನಿಯಲ್ಲೂ ತನ್ನ ಜೂನಿಯರಾಗಿ ನೇಮಿಸಿಕೊಳ್ಳುತ್ತಾಳೆ. ರೇವತಿಯ ಜತೆ ಸೇರಿ ಪ್ರಿಯಂವದಾ ಕಂಪೆನಿಯಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತಾಳೆ. ಮಗಳ ಬಗ್ಗೆ ಚಿಂತೆಯಿಂದಾಗಿ ಕೆಲಸ ಮಾಡಲಾಗದೆ ಕಂಪೆನಿಯಿಂದ ದೀರ್ಘಕಾಲದ ರಜಕ್ಕಾಗಿ ಅರ್ಜಿ ಹಾಕುತ್ತಾಳೆ. ಇದರೆಡೆಯಲ್ಲಿ ನೀತುವಿನ ಮನಃಪರಿವರ್ತನೆಯಾಗಿ ಅವರಿಬ್ಬರೂ ಊರಲ್ಲಿ ನೆಲೆಸಲು ಬರುತ್ತಾರೆ. ಉಳಿದದ್ದನ್ನು ಓದುಗರ ಕಲ್ಪನೆಗೆ ಬಿಟ್ಟು ಕಾದಂಬರಿ ಇಲ್ಲಿಗೆ ಮುಕ್ತಾಯವಾಗುತ್ತದೆ. ಕಾದಂಬರಿಯಲ್ಲಿ ಅಲ್ಲಲ್ಲಿ ಬರುವ ಮಳೆಗೆ ಅತೀವ ಸೌಂದರ್ಯವೂ ಆಕರ್ಷಣೆಯೂ ಇದೆ. ಬದುಕಿನ ಸಂಕೀರ್ಣ ಸಮಸ್ಯೆಗಳು, ಮನುಷ್ಯ ಸಂಬಂಧಗಳ ವಾಸ್ತವ ಸತ್ಯ ಹಾಗೂ ಟೊಳ್ಳುತನ, ಸ್ವಪ್ನ ಸದೃಶ ನಿರೂಪಣೆಯೊಂದಿಗೆ ಇಲ್ಲಿ ತಾಯಿ-ಮಗಳ ಬದುಕು ಚಿತ್ರಣಗೊಂಡಿದೆ. ಅದಮ್ಯವೂ ಸಂಕೀರ್ಣವೂ ಆದ ಮನುಷ್ಯ ಮನಸ್ಸು ಅನುಭವಿಸುವ ಸಂಕಟಗಳಿಗೆ ಸರಳ ಉತ್ತರಗಳನ್ನು ಪಡೆಯುವ ಬಗೆಯನ್ನು ಕಾದಂಬರಿ ಹೇಳುತ್ತದೆ. ಒಂದು ಊರಿನ ಎಲ್ಲಾ ಸುಖ-ದುಃಖಗಳನ್ನು ಕಪ್ಪು-ಬಿಳುಪುಗಳೊಂದಿಗೆ ಶರೀರದ ಮೇಲೆ ಗುರುತುಗಳಾಗಿಸಿದ ಹಿಮ-ಧ್ರುವಗಳಲ್ಲಿ ಏಕಾಂತ ಧ್ಯಾನದಲ್ಲಿ ಮುಳುಗಿದ ಪೆಂಗ್ವಿನ್‌ಗಳು ಪೂರ್ವಜನ್ಮದಲ್ಲಿ ವಿಧವೆಗಳಾಗಿದ್ದವೆಂದೂ ಅವುಗಳ ಕುಲದಲ್ಲಿ ಹುಟ್ಟಿದ ಪ್ರಿಯಂವದಾಳ ಹಾಗೂ ಮಗಳು ನೀತುವಿನ ಕತೆಗಳನ್ನು ಪ್ರಕೃತಿಯೊಂದಿಗೆ ಮಿಳಿತಗೊಳಿಸಿ ಸೇತು ಅವರು ಮನೋಜ್ಞವಾಗಿ ಪ್ರಸ್ತುತಗೊಳಿಸಿದ್ದಾರೆ. ನಗರೀಕರಣಕ್ಕೊಳಗಾದ ಬದುಕಿನಲ್ಲಿ ಮನುಷ್ಯ ಮನಸ್ಸುಗಳ ಆತಂಕ, ತಲ್ಲಣ, ಕೌಟುಂಬಿಕ ಬದುಕಿನ ಸಂಘರ್ಷಗಳು,ಹಾಗೂ ಎಡೆಬಿಡದೆ ಅನುಭವಿಸುವ ನೋವು ಈ ಕಾದಂಬರಿಯಲ್ಲಿವೆ. ಭೌತಿಕ ಜಗತ್ತಿನ ಆಂತರಿಕ ಸಂಘರ್ಷಗಳ ನಡುವೆ ವ್ಯಕ್ತಿಯ ಮನಸ್ಸುಗಳು ಸೃಷ್ಟಿಸುವ ವಿಚಿತ್ರ ಅನುಭವಗಳು ಓದುಗರಲ್ಲಿ ಹೊಸ ಕುತೂಹಲವನ್ನು ಹುಟ್ಟಿಸುತ್ತವೆ. ಮೂಲ ಮಲೆಯಾಳದ ಸುಭಗ ಶೈಲಿಗೆ ನಿಷ್ಠರಾಗಿ ಅಶೋಕ ಕುಮಾರ್ ಅವರು ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ************************************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಅಂಕಣ ಬರಹ “ಸಿಕ್ಕಿತಾ ಎಂದರೆ ಸಿಕ್ಕಿಲ್ಲ ಎಂಬುದೇ ಉತ್ತರ…” ಆಗಾಗ ಕೆಲವರು ಬರಹವನ್ನೂ ಮತ್ತು ಬರೆದ ಬರಹಗಾರನನ್ನೂ ಒಂದೆನ್ನುವಂತೆ ಭಾವಿಸಿ ಅನುಮಾನದಿಂದ ನೋಡುವುದನ್ನು ನೋಡುತ್ತಿರುತ್ತೇವೆ. ಗೆಳೆಯರು ಇದನ್ನು ಬಾರಿ ಬಾರಿ ಹೇಳಿಕೊಳ್ಳುತ್ತಿರುತ್ತಾರೆ. ಅಲ್ಲದೆ ಇದು ಪ್ರತಿಯೊಬ್ಬ ಬರಹಗಾರನಿಗೂ ಒಂದಲ್ಲಾ ಒಂದು ಬಾರಿ ಎದುರಿಸಬೇಕಾಗಿ ಬರುವ ಸಾಮಾನ್ಯ ಸನ್ನಿವೇಶವೂ ಆಗಿರುತ್ತದೆ. ಆದರೆ ಓದುಗರು ಒಂದು ಮಾತನ್ನು ನೆನಪಿನಲ್ಲಿಡಬೇಕು. ಅವನು ಬರಹಗಾರ… ತನಗೆ ಕಂಡ, ಅನುಭವಿಸಿದ, ಇರರ ಅನುಭವದಿಂದ ಅರಿತ ಎಲ್ಲವನ್ನೂ ಒಂದಾಗಿಸಿ ಬರಹದ ಮೂಲತತ್ವದ ಅಚ್ಚಿಗೆ ಸುರಿದು ಓದುಗರಿಗೆ ಮೆಚ್ಚುಗೆಯಾಗುವಂತೆ ಉಣಬಡಿಸುತ್ತಾನೆ. ಸದಾ ತನ್ನದೇ ವ್ಯಯಕ್ತಿಕ ಅನುಭವವನ್ನು ಬರೆಯುವುದಾದರೆ ಅದು ಅವನ ಆತ್ಮಚರಿತ್ರೆ ಆಗುತ್ತದೆ ಹೊರತು ಸಾಹಿತ್ಯ ನಿಸಿಕೊಳ್ಳುವುದಿಲ್ಲ. ಹೆಣ್ಣೊಬ್ಬಳು ಲೈಂಗಿಕ ವಿವರಗಳನ್ನು ತನ್ನ ಬರಹಗಳಲ್ಲಿ ಬಳಸಿದಾಕ್ಷಣ ಅವಳ ಚಾರಿತ್ರ್ಯವಧೆಗೆ ನಿಂತುಬಿಡುವುದು ಎಷ್ಟು ಸಮಂಜಸ. ಹಾಗಂತ ಪುರುಷ ಲೇಖಕರ ಸ್ಥಿತಿಯೂ ಚನ್ನಾಗೇನೂ ಇಲ್ಲ. ಆದರೆ ಸಮಾಜ ಅವರಿಗೆ ಒಂದು ಸಣ್ಣ ಮಾರ್ಜೀನನ್ನು ಕೊಡುತ್ತದೆ ಅಷ್ಟೇ. ಇವತ್ತಿಗೆ ಪರಿಸ್ಥಿತಿ ಒಂಚೂರು ಸುಧಾರಿಸಿಕೊಂಡಿದೆ ಆದರೂ ಕುಹಕದ ನಗು ಮತ್ತು ಅನುಮಾನದ ದೃಷ್ಟಿ ಸಂಪೂರ್ಣ ಮರೆಯಾಗಿಲ್ಲ. ನವರಸ ಎಂದರೆ ಶೃಂಗಾರ, ಹಾಸ್ಯ, ವೀರ, ಅದ್ಭುತ, ಭಯಾನಕ, ಶಾಂತ, ಕರುಣಾ, ರೌದ್ರ, ಭೀಭತ್ಸ… ಎಲ್ಲವೂ ಸೇರಬೇಕು. ಅದೇ ರೀತಿ ಪ್ರತಿ ಕಲೆಯೂ ನವರಸಗಳಿಂದಲೇ ತುಂಬಿ ಪರಿಪೂರ್ಣವಾಗಬೇಕು. ಅದಕ್ಕೆ ಸಾಹಿತ್ಯವೂ ಹೊರತಲ್ಲ. ಹೀಗಿರುವಾಗ ಅದರಲ್ಲಿನ ಒಂದು ಭಾವವನ್ನೇ ನಿರಾಕರಿಸಿಬಿಡುವುದು ಪರಿಪೂರ್ಣತೆಗೆ ಧಕ್ಕೆಯಾದಂತಲ್ಲವೇ… ಒಮ್ಮೆ ನನ್ನ ಒಂದು ಕತೆಯನ್ನು ಓದಿದ ಗೆಳತಿಯೊಬ್ಬಳು “ಅವನು ಯಾರು, ಈಗ ಎಲ್ಲಿದ್ದಾನೆ” ಎಂದೆಲ್ಲಾ ಕೇಳಲು ಶುರುಮಾಡಿದಳು. “ಇಲ್ಲ ಮಾರಾಯ್ತಿ, ಹಾಗೆಲ್ಲ ಎಂತದ್ದೂ ಇಲ್ಲ. ಯಾರದ್ದೋ ಕತೆ ಅದಕ್ಕೆ ಸ್ಫೂರ್ತಿ ಅಷ್ಟೇ… ಮತ್ತೆ ಉಳಿದದ್ದೆಲ್ಲ ಕಟ್ಟುಕತೆ ಅದು…” ಎಂದು ಎಷ್ಟು ಹೇಳಿದರೂ ಅವಳು ನಂಬಲು ಸಿದ್ಧಳಾಗಲೇ ಇಲ್ಲ! ಇರಲಿ, ನಮ್ಮ ಸುತ್ತಮುತ್ತಲ ಬದುಕು, ಸಮಾಜ ನಮ್ಮನ್ನು ಬಹಳಷ್ಟು ಪ್ರಭಾವಿಸುತ್ತವೆ. ಆ ಪ್ರಭಾವವೇ ನಮ್ಮನ್ನು ಬೆಳೆಸುತ್ತವೆ. ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಕೆಲವೊಮ್ಮೆ ತೀರಾ ಹತ್ತಿರದ ಸಂಬಂಧಿಗಳೇ ನಮ್ಮ ಕತೆ ಅಥವಾ ಕವಿತೆಯ ನಾಯಕರೂ ಆಗಿಬಿಡುತ್ತಾರೆ. ಅದು ಇನ್ನೊಂಥರದ ಬಿಸಿತುಪ್ಪ. ಅದು ಅವರು ಇಷ್ಟಪಡುವಂತಹ ರೀತಿಯಲ್ಲಿದ್ದರೆ ಸರಿ, ಇಲ್ಲವಾದರೆ ಅವರ ವಿರಸವನ್ನೂ ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ. ಇದೆಲ್ಲವನ್ನೂ ಮೀರಿ ಬರಹಗಾರ ಬರಹವನ್ನು ಉಳಿಸಬೇಕಿರುತ್ತದೆ. ಮನುಷ್ಯರು ಅಳಿಯುತ್ತಾರೆ. ಪಾತ್ರಗಳು ಉಳಿಯುತ್ತವೆ. ಬರಹಗಾರ ಅಳಿಯುತ್ತಾನೆ ಪುಸ್ತಕಗಳಷ್ಟೇ ಉಳಿಯುತ್ತವೆ. ಬರಹ ಒಂದಿಡೀ ಕಾಲಮಾನದ ಧ್ಯೋತಕವಾಗಿರುತ್ತದೆ. ಒಬ್ಬ ವ್ಯಕ್ತಿಯ ವಿವರ ಬರಹದ ಮೂಲಕ ಸಾಮಾನ್ಯೀಕಣಗೊಳ್ಳುತ್ತದೆ. ಇಲ್ಲವಾದರೆ ಓದುವ ಬಹಳಷ್ಟು ಮಂದಿ ಇದು ನನ್ನದೇ ಮಾತು, ಇದು ನನ್ನದೇ ವಿವರ, ಇದು ನನ್ನದೇ ಪರಿಸ್ಥಿತಿ ಎನ್ನುವಂತೆ ಓದಿಕೊಳ್ಳುವರಲ್ಲ ಹೇಗೆ… ಮತ್ತೆ ಬರಹಗಾರನಿಗೂ ತಾನು ಕಂಡುಂಡ ವಿಚಾರವನ್ನು ಕತೆ ಅಥವಾ ಕವಿತೆಗೆ ಬ್ಲೆಂಡ್ ಮಾಡುವ ಕಲೆ ತಿಳಿದಿರಬೇಕಿರುತ್ತದೆ. ಆದರೆ ಒಂದು ಭಾವತೀವ್ರತೆಯಲ್ಲಿ ಬರೆಯ ಹೊರಟ ಹುಮ್ಮಸ್ಸಿನಿಂದಾಗಿ ಬರಹ ವಾಚ್ಯವಾಗುವುದನ್ನು ತಪ್ಪಿಸುವುದು ಕಷ್ಟವಾಗಿಬಿಡುತ್ತದೆ. ಆಗ ಪು.ತಿ.ನ.ರು ಹೇಳಿದ ಭವನಿಮಜ್ಜನ ಮತ್ತು ಲಘಿಮಾ ಕೌಶಲ ನೆನಪಾಗಬೇಕು ಮತ್ತು ಈ ಕಷ್ಟದಿಂದ ಪಾರಾಗುವುದನ್ನು ಪ್ರತಿಯೊಬ್ಬ ಬರಹಗಾರನೂ ಕಲಿಯಬೇಕು. ಎಲ್ಲವನ್ನೂ ವಾಚ್ಯವಾಗಿ ಹೇಳುವುದಾದರೆ ಕತೆ, ಕವಿತೆ, ಪ್ರಬಂಧ… ಎನ್ನುವ ಯಾವ ಸಾಹಿತ್ಯ ಪ್ರಕಾರಗಳ ಅವಶ್ಯಕತೆಯೂ ಇರುವುದಿಲ್ಲ. ಯಾವುದೇ ಬರಹ ವಾಚ್ಯವಾಗುತ್ತಾ ಹೋದಂತೆ ಓದುಗರ ಚಿಂತನೆಗೆ, ವಿಚಾರಕ್ಕೆ ಅವಕಾಶವೇ ಇಲ್ಲದಂತೆ ಆಗಿಬಿಡುತ್ತದೆ. ಎಲ್ಲವನ್ನೂ ಬರಹಗಾರನೇ ಹೇಳಿಬಿಟ್ಟ ಮೇಲೆ ವಿಚಾರ ಮಾಡಲಿಕ್ಕೆ ಇನ್ನೇನುಳಿಯುತ್ತದೆ?! ವಾಚ್ಯತೆ ಬರಹಗಾರನ ಬಹು ದೊಡ್ಡ ಶತ್ರು. ಅದನ್ನು ಮೀರುವುದೆಂದರೆ, ಮೊಸರನ್ನಕ್ಕೆ ಬಿದ್ದ ಕಲ್ಲನ್ನು ಎತ್ತಿ ಪಕ್ಕಕ್ಕಿಟ್ಟು ಸೇವಿಸುವಷ್ಟೇ ನಾಜೂಕಾಗಿ ಮಾಡಬೇಕಾದ ಕೆಲಸ. ಆ ನಾಜೂಕುತನ ಅಭ್ಯಾಸ ಮತ್ತು ಅಧ್ಯಯನ ಬಲದಿಂದ ಸಾಧ್ಯ. ಅವಸರದಿಂದ ಬರೆಯಲು ಹೊರಡುವ ಇಂದಿನ ಬರಹಗಾರರಿಗೆ ಸಾಹಿತ್ಯದ ಇತಿಹಾಸ ಬೇಕಿಲ್ಲ. ಹಿರಿಯರನ್ನು ಓದುವುದು ಬೇಡವಾಗುತ್ತಿದೆ. ಒಂದಷ್ಟು ಬರಹಗಳು ಪ್ರಕಟವಾದ ಕೂಡಲೇ ಅಹಮ್ಮಿಗೆ ಗುರಿಯಾಗಿಬಿಡುತ್ತೇವೆ. ಅದು ನಮ್ಮ ವಯಸ್ಸಿಗೆ ಸಹಜವಾದ ಕಾರಣ ಅದನ್ನು ಮೀರುವುದು ಸುಲಭವಲ್ಲ. ಆದರೆ ಹೆಚ್ಚು ಹೆಚ್ಚು ಓದುತ್ತಾ ಹೋದಂತೆ ಆ ಪೊರೆ ತನ್ನಿಂತಾನೆ ತನ್ನ ಅಸ್ತಿತ್ವವನ್ನು ಕಳಚಿಕೊಳ್ಳುತ್ತದೆ. ಯಾವುದೇ ಕಲೆಯಿರಲಿ ಅದು ಮನಸ್ಸನ್ನು ತಟ್ಟುವಂತಹ ಶಕ್ತಿಯನ್ನು ಹೊಂದಿರುತ್ತದೆ. ಅದು ಮೊದಲು ಕಲಾವಿದನನ್ನೇ ತನ್ನ ಹತೋಟಿಗೆ ತೆಗೆದುಕೊಳ್ಳುತ್ತದೆ. ನಂತರವೇ ಅದು ಅದರ ಆರಾಧಕನನ್ನು ತಲುಪುವುದು. ಒಮ್ಮೆ ಅದು ತನ್ನ ಹಿಡಿತಕ್ಕೆ ಯಾರನ್ನಾದರೂ ಸಿಲುಕಿಸಿಕೊಂಡುಬಿಟ್ಟಿತೆಂದರೆ ಅದು ಆ ವ್ಯಕ್ತಿಯನ್ನು ವಿನೀತನನ್ನಾಗಿಸಿಬಿಡುತ್ತದೆ. ಅಹಂಕಾರ ಇನ್ನಿಲ್ಲ ಅವನಲ್ಲಿ! ಸಾಹಿತ್ಯದ ಅಂತಿಮ ಪ್ರಭಾವವೂ ಅದೇ ಆಗಬೇಕಿದೆ. ಸಾಹಿತ್ಯ ಒಟ್ಟಾರೆ ನಮ್ಮ ವ್ಯಕ್ತಿತ್ವವನ್ನು ಪ್ರಭಾವಿಸಬೇಕು, ಮತ್ತದು ಧನಾತ್ಮಕವಾಗಿಯೇ… ಅದೇ ಅದರ ನಿಜವಾದ ಶಕ್ತಿ. ಹೀಗೆ ಇಷ್ಟೆಲ್ಲಾ ಸಾಹಿತ್ಯದ ಧ್ಯಾನ, ಗುಣಗಾನ… ಮಾಡಿಯಾದ ನಂತರವೂ ಅದರ ನಾಡಿ ಮಿಡಿತ ಸಿಕ್ಕಿತಾ ಎಂದರೆ ಸಿಕ್ಕಿಲ್ಲ ಎಂಬುದೇ ಉತ್ತರ… ************************************************************ –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಅಂಕಣ ಬರಹ ಹೊಸ ದನಿ ಹೊಸ ಬನಿ ೧೬ ಹುಚ್ಚು ಆದರ್ಶಗಳಿಲ್ಲದ ಭಾವ ಭಿತ್ತಿಯ ಸಹಜ ನಿರೂಪಣೆ ನಾಗರೇಖಾ ಗಾಂವಕರ್ ಕವಿತೆಗಳು ಅವಳ ಮಾಂಸ ಮಜ್ಜೆಯ ನೆರಳು, ಮುಟ್ಟಿನ ವಾಸನೆಬಡಿಯದೇ, ಪೊಗರಿದ ಅವನೆಂಬವನ ಹುಡುಕಿ ಸೋತಿದ್ದೇನೆ, ಹುಡುಕಿ ಕೊಡು ಹೇ! ಪ್ರಭು. ಎಂದು ಗಟ್ಟಿಯಾಗಿ ಪ್ರಶ್ನಿಸುತ್ತಲೇ ಸುರುವಾಗುವ ಈ ಕವಿತೆ ಗಂಡಿನ ಅಹಮ್ಮನ್ನು ಗುರಾಯಿಸುತ್ತಲೇ ಕಡೆಗೆ ಆದರವನ ದೇವರಿಗೆ ಅವಳ ಮಾಂಸ ಮಜ್ಜೆಯ ನೆರಳು, ಮುಟ್ಟಿನ ವಾಸನೆ ಮೈಲಿಗೆಯಂತೆ. ಆ ದೇವನೆಂಬವನ ಹುಡುಕಿ ಕೊಡು ಹೇ! ಪ್ರಭು (ಹುಡುಕಿ ಕೊಡು) ಎನ್ನುವಾಗ ಸಾಮಾನ್ಯವಾಗಿ “ಅವನು” ಎಂದರೆ “ದೇವರು” ಎಂದೇ ಅರ್ಥೈಸಲಾಗುವ “ಅವನನ್ನೇ” ಹುಡುಕಿಕೊಡು ಎಂದು ಕೇಳುವ ಗತ್ತು ತೋರುತ್ತಲೇ ಒಟ್ಟೂ ಸಾಮಾಜಿಕ ವ್ಯವಸ್ಥೆಯ ಅಸ್ತಿತ್ವನ್ನೇ ಅಲುಗಾಡಿಸುವ ಉತ್ತರವೇ ಇಲ್ಲದ ಪ್ರಶ್ನೆಯನ್ನೆತ್ತುವ ಈ ಕಾವ್ಯಧ್ವನಿ ಶ್ರೀಮತಿ ನಾಗರೇಖಾ ಗಾಂವಕರ ಅವರದ್ದು. ನಾಗರೇಖಾ ಗಾಂವಕರ್ ಸಂಗಾತಿಯ ಓದುಗರಿಗೆ ಪರಿಚಿತ ಹೆಸರು. ಈಗಾಗಲೇ ಸಂಗಾತಿಯೂ ಸೇರಿದಂತೆ ಹಲವು ವೆಬ್ ಪತ್ರಿಕೆಗಳಲ್ಲದೇ ಮಯೂರ, ಕನ್ನಡಪ್ರಭ, ಉದಯ ವಾಣಿ ಪತ್ರಿಕೆಗಳಲ್ಲೂ ಇವರ ಕವಿತೆಗಳು ಆಗಾಗ ಪ್ರಕಟವಾಗುತ್ತಲೇ ಇರುತ್ತವೆ. ದಾಂಡೇಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಇವರು ಕಳೆದ ವರ್ಷ ಪ್ರಕಟಿಸಿದ್ದ “ಬರ್ಫದ ಬೆಂಕಿ” ಕವನ ಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘದ ಬಹುಮಾನ ನಿನ್ನೆಯಷ್ಟೇ ಘೋಷಣೆಯಾಗಿದೆ. ಏಣಿ ಮತ್ತು ಪದಗಳೊಂದಿಗೆ ನಾನು, ಬರ್ಫದ ಬೆಂಕಿ[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ[ಅಂಕಣ ಬರಹ ಕೃತಿ] ಸಮಾನತೆಯ ಸಂಧಿಕಾಲದಲ್ಲಿ [ಮಹಿಳಾ ಸಮಾನತೆಯ ಕುರಿತ ಅಂಕಣ ಬರಹ ಕೃತಿ] ಪ್ರಕಟಿಸಿರುವ ಇವರ ಸಂಕಲನಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾರಾಮಲಿಂಗಪ್ಪದತ್ತಿ ಪ್ರಶಸ್ತಿ, ಡಾ. ಬೆಟಗೇರಿ ಕೃಷ್ಣಶರ್ಮ ಕಾವ್ಯ ಪ್ರಶಸ್ತಿ ಮತ್ತು ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿಗಳು ಲಭಿಸಿವೆ. ಆಯತಪ್ಪಿ ಫಳಾರನೇ ಕೆಳಗುರುಳಿದಾಗ; ಬಿದ್ದರೂ, ಗುದ್ದಿದರೂ ಲೋಹದ ಹಣತೆ ನೆಗ್ಗಬಹುದು, ಮತ್ತೆದ್ದು ನಗಲೂಬಹುದು ಆದರೆ ಚೂರಾದದ್ದು ಮೆದು ಮೈಯ ಮಣ್ಣಹಣತೆ ಎಂದೂ ಈ ಕವಿಗೆ ಗೊತ್ತಿರುವ ಕಾರಣಕ್ಕೇ ಇವರ ಪದ್ಯಗಳು ಅನುಭವ ವಿಸ್ತರಣದ ಚೌಕಟ್ಟಿನಾಚೆಗೆ ಉಕ್ಕದೇ ಹಾಗೆಯೇ ಸೀಮಿತ ವ್ಯಾಸದ ಪರಿವೃತ್ತದೊಳಗಿದ್ದೂ ಒತ್ತಡದ ಹೇರನ್ನು ನಿಭಾಯಿಸುವ ಪರಿ ಅಪರೂಪದ್ದಷ್ಟೇ ಅಲ್ಲ ಅದು ನಿಜ ಬದುಕಿನಲ್ಲೂ ಹೆಣ್ಣು ಅಡವಳಿಸಿಕೊಳ್ಳಲೇ ಬೇಕಾದ ಸಹಜ ದಾರಿಯೂ ಆಗಿದೆ. ಇಂಥ ಚಿಂತನೆಯ ಮುಂದುವರೆದ ಶೋಧವಾಗಿ ಒಂದಿಷ್ಟು ಆಚೀಚೆ ಜರುಗಿಸಹೋದರೂ ಕೈಗೆ ಹತ್ತಿದ ಕಬ್ಬಿಣದ ಮುಳ್ಳು ರಕ್ತ ಬಸಿಯಿತು… ಅಂದಿನಿಂದ ಬೇಲಿಯಲ್ಲಿ ಚಿಗುರ ಕಾಣುವ ಕನಸೂ ಕುಸಿಯಿತು.. ಎಂದು ಈ ಕವಿ “ಬೇಲಿಗಳು” ಎನ್ನುವ ಕವಿತೆಯಲ್ಲಿ ಒಟ್ಟೂ ನಾಶವಾಗುತ್ತಲೇ ಇರುವ ಸಂಬಂಧಗಳನ್ನು ಬೇಲಿಯೆಂಬ ಪ್ರತಿಮೆಯ ಮೂಲಕವೇ ವಿಷಾದಿಸುತ್ತಾರೆ. ಪದಗಳೊಂದಿಗೆ ನಾನು ಎನ್ನುವ ಕವಿತೆಯಲ್ಲಿ ಪದಗಳೆಂದರೆ ನನಗೆ ಅಚ್ಚುಮೆಚ್ಚು ದಿನಂಪ್ರತಿಯ ಅಭ್ಯಾಸವೂ ಪದಗಳ ಹೊಸೆಯುವುದರಲ್ಲಿ, ಮಸೆಯುವುದರಲ್ಲಿ: ಆದರೆ ಆ ಪದಗಳಿಗೆ ಶಬ್ದಕೋಶದಿ ಅರ್ಥಗಳ ಹುಡುಕಿ ಸೋತಿದ್ದೇನೆ. ಎಂದು ಶಬ್ದಾಡಂಬರದ ವೈಯಾರವನ್ನು ಶಬ್ದಗಳು ಶಬ್ದ ಮಾಡುವ ಪರಿಯನ್ನು ಅರುಹುತ್ತಲೇ ಪದಗಳೆಂದರೆ ನನಗೆ ಅಲರ್ಜಿ ನನ್ನೊಳಗಿನ ನನ್ನನ್ನು ಹೊರಗಟ್ಟಿ ಅಣಕಿಸಿ ನಗುತ್ತವೆ. ಹಾಡಾಗುವ ಬದಲು ಹಾವಾಗಿ ಹಗೆಯ ಹೊಗೆ ಹಬ್ಬಿಸುತ್ತವೆ ಪದಗಳೆಂದರೆ ನನಗೆ ಅಲರ್ಜಿ ಪಟ್ಟಾಂಗದಲ್ಲಿ ಪದಗಳ ಭರ್ಜರಿ ಬೇಟೆಯಾಡುವ ನಾನು ಕಾರ್ಯಹೀನ ಕೆಲಸಗೇಡಿಯಾಗುತ್ತೇನೆ. ಎನ್ನುವಾಗ ಹುಟ್ಟಿದ ದ್ವಿತ್ವವನ್ನು ಕಾಣಿಸುತ್ತಾರೆ. ಒಮ್ಮೆ ಹಿತವಾದದ್ದು ಮುಂದಿನ ಕ್ಷಣದಲ್ಲೇ ಬೇಡವೆಂದೆನಿಸುವ ಮನುಷ್ಯನ ಮಿತಿಯನ್ನು ಈಪದ್ಯ ಹೇಳುತ್ತಿದೆಯೋ ಅಥವ ಕವಿಯು to be or not to be ಎಂಬ ಗೊಂದಲದ ದ್ವಂದ್ವ ಮೀರದ ambiguity ಯೆಂಬ ಪಾಶ್ಚಿಮಾತ್ಯರ ಕಾವ್ಯ ಮೀಮಾಂಸೆಯ ಪ್ರತಿಪಾದಕರಾಗಿಯೂ ಕಾಣುತ್ತಾರೆ. ಹಾಗೆಂದು ಈ ಕವಿ ಬರಿಯ ಒಣ ತರ್ಕ ಮತ್ತು ಸಿದ್ಧಾಂತಗಳ ಗೋಜಲಲ್ಲೇ ನರಳದೆ ಅಪರೂಪಕ್ಕೆ ಈ ಮಳೆಗೂ ಕರುಣೆಯಿಲ್ಲ ಹಸಿಮನಗಳಲಿ ಹುಸಿ ಬಯಕೆಗಳ ಕುದುರಿಸಿ ಕಾಡುತ್ತದೆ ಎಂದೂ ಒಲವನ್ನು ಕುರಿತು ಧೇನಿಸುತ್ತಲೇ ಆ ಹುಡುಗನಿಗೆ ಇದೆಲ್ಲವನೂ ಹೇಗೆ ಉಲಿಯಲಿ? ಕಂಪು ಹೆಚ್ಚಾಗಿ ಜೋಂಪು ಹತ್ತಿದೆ, ಕಣ್ಣುಗಳು ಮತ್ತೇರಿ ಪಾಪೆಯೊಳಗೆ ಮುದುರಿದೆ ಕಣ್ಣ್ಗತ್ತಲ ಗುಹೆಯಲ್ಲಿ ಮಿಣುಕು ಹಚ್ಚುವ ನಿನ್ನ ಬಿಂಬವ ಹೇಗೆ ಮರೆಮಾಚಲಿ ಹುಡುಗ? ಎಂದು ರೊಮ್ಯಾಂಟಿಕ್ ಮೂಡಿನಲ್ಲಿ ಕೇಳುತ್ತಾರಲ್ಲ ಆಗ ಆ ಪದ್ಯ ಮು(ಹು)ಟ್ಟಿಸಿದ ಬಿಸಿಯನ್ನು ಓದುಗ ಸುಲಭದಲ್ಲಿ ಮರೆಯಲಾರ!! ಈ ಮುದುಕಿಯರೇ ಹೀಗೆ ಮನೆಯ ಸಂದುಹೋದ ಬಣ್ಣಕ್ಕೆ ಸಾಕ್ಷಿಯಾಗುತ್ತಾರೆ…. ಎಂದೆನುವ ಪದ್ಯದ ಶೀರ್ಷಿಕೆ ಈ ಹಿಂದೆ ಇದೇ ಶೀರ್ಷಿಕೆಯಲ್ಲಿ ಪ್ರತಿಭಾ ನಂದಕುಮಾರ ಪದ್ಯವಾಗಿಸಿದ್ದನ್ನು ಓದಿದ್ದವರಿಗೆ ಸಪ್ಪೆ ಎನಿಸುವುದು ಸುಳ್ಳೇನಲ್ಲ. ದೇಹವೊಂದು ಪದಾರ್ಥವಾಗದೇ ಕಲ್ಪಿತ ಭ್ರಮೆಗಳಲ್ಲಿ ಹುಟ್ಟುವ ಅವನನ್ನು ಆವಾಹಿಸಿಕೊಳ್ಳುತ್ತಾಳೆ ಆಘ್ರಾಣಿಸುತ್ತಾಳೆ, ಬಿಚ್ಚಿ ಹರಹಿದ ಹೆರಳುಗಳ ನಡುವೆ ಬಂಧಿಸುತ್ತಾಳೆ ಪರವಶಳಾಗುತ್ತಾಳೆ ಅವಳು ಅವನಿಲ್ಲದೇ ಅವಳ ದೇವರು ಇರುವುದಾದರೂ ಹೇಗೆ? ಆ ದೇವನಿಗಾಗಿ ಕಾಯುತ್ತಾಳೆ ಅವಳು ಕಾಯತ್ತಲೇ ಇರುತ್ತಾಳೆ ಅವಳು. ಎನ್ನುವ ತುಂಬು ಭರವಸೆಯ ಈ ಕವಿ ಒಂದೇ ಧಾಟಿಯಲ್ಲಿ ಬರೆದುದನ್ನೇ ಬರೆಯುತ್ತಿರುವವರ ನಡುವೆ ವಿಭಿನ್ನತೆಯನ್ನೇ ಮುಖ್ಯ ಸ್ಥಾಯಿಯಾಗಿರಿಸಿಕೊಂಡ ಮತ್ತು ಮಹಿಳಾ ಕಾವ್ಯ ಎನ್ನುವ ಹೆಸರಲ್ಲಿ ಹಾಕಿಕೊಂಡಿದ್ದ ಬೇಲಿಯನ್ನು ಸರಿಸಿ ಆ ಅದೇ ಮಹಿಳಾ ಕಾವ್ಯವು ಸಂಕೀರ್ಣತೆಯನ್ನು ಮೀರಿದ ಅನುದಿನದ ಅಂತರಗಂಗೆಯ ಗುಪ್ತಗಾಮಿನೀ ಹರಿವಿನ ವಿಸ್ತಾರ ಮತ್ತು ಆಳದ ಪ್ರಮಾಣವನ್ನು ಗುರ್ತಿಸುತ್ತಾರೆ. “ತರಗೆಲೆ” ಶೀರ್ಷಿಕೆಯ ಪದ್ಯವೇ ಈ ಕವಿಯು ನಂಬಿರುವ ಒಟ್ಟೂ ಜೀವನ ಮೌಲ್ಯವನ್ನು ಪ್ರತಿನಿಧಿ ಸುತ್ತಿ ದೆ. ಆ ಸಾಲು ಹಾರುವ ಪುಟ್ಟ ಗುಬ್ಬಿಯ ಬಾಯೇರಿ ಮೊಟ್ಟೆಗೆ ಮಂದರಿಯಾಗಿ, ಪುಟಪುಟ ನೆಗೆತದ ಮರಿಗುಬ್ಬಿಗಳ ಕಾಲಡಿಗೆ ರೋಮಾಂಚನಗೊಳ್ಳಬೇಕು ಚಿಲಿಪಿಲಿಯೂದುವ ತೊದಲು ನುಡಿಗಳಿಗೆ ಕಿವಿಯಾಗಬೇಕು. ಜೀವವಿಲ್ಲದ ಒಣ ಎಲೆಯೆಂದವರ ಕಡೆಗೊಮ್ಮೆ ನಲ್ಮೆಯ ನಗೆ ಬೀರಬೇಕು ಇಂಥ ಭಾವ ಭಿತ್ತಿಯ ಮತ್ತು ಹುಚ್ಚು ಆದರ್ಶಗಳಿಲ್ಲದ ಇದ್ದುದನ್ನೇ ಸರಿಯಾಗಿ ಸ್ಪಷ್ಟವಾಗಿ ಸದುದ್ದೇಶದ ಚಿಂತನೆಯ ಈ ಕವಿಯ ಐದು ಕವಿತೆಗಳ ಪೂರ್ಣ ಪಾಠ ನಿಮ್ಮ ಓದಿಗೆ ಶಿಫಾರಸು ಮಾಡುತ್ತೇನೆ. —————————————————————————————– ೧. ಎದೆ ಬೆಳಕು ಮತ್ತು ಕಣ್ಣ ಕಾಡಿಗೆ ನಿನ್ನ ಉತ್ತರೀಯಕ್ಕೆ ಅರಿವಿಲ್ಲದೇ ಬಳಿದ ನನ್ನ ಕೆಂಪು ತುಟಿರಂಗು ಇನ್ನೂ ಹಸಿಹಸಿ ಆಗಿಯೇ ಇದೆ ಇಳಿಸಂಜೆಗೆ ಹಬ್ಬಿದ ತೆಳು ಮಂಜಿನಂತಹ ಹುಡುಗ ಮಸುಕಾಗದ ಕನಸೊಂದು ಕಣ್ಣಲ್ಲೇ ಕಾದು ಕೂತಿದೆ ನೀನೊಲಿದ ಮರುಗಳಿಗೆ ಭವದ ಹಂಗು ತೊರೆದೆ ಮುಖ ನೋಡದೇ ಮಧುರಭಾವಕ್ಕೆ ಮನನೆಟ್ಟು ಒಳಹೃದಯದ ಕವಾಟವ ಒಪ್ಪಗೊಳಿಸಿ ಮುಗ್ಧಳಾದೆ ಈಗ ನೆನಪುಗಳ ಮುದ್ದಾಡುತ್ತಿರುವೆ ಮುದ್ದು ಹುಡುಗ, ನಿನ್ನ ಒಲವಿಂದ ಬರಡಾದ ಒರತೆಗೂ ಹಸಿಹಸಿ ಬಯಕೆ ಒಣಗಿದ ಎದೆಗೂ ಲಗ್ಗೆ ಇಡುವ ಹನಿ ಜಿನುಗಿನ ಕುಪ್ಪಳಿಸುವಿಕೆ ಗೊತ್ತೇ ನಿನಗೆ? ಈ ತಂಗಾಳಿಯೂ ತೀರದ ದಿಗಿಲು ಹತ್ತಿಸಿಕೊಂಡ ಏಕಾಂಗಿ ಮೃಗದಂತೆ ಸುಂಯ್ಯನೇ ಹಾಗೇ ಬಂದು ಹೀಗೆ ಹೊರಟುಹೋಗುತ್ತದೆ ಮರೆತ ಕನಸುಗಳಿಗೆ ಕಡ ಒದಗಿಸಿ ಬೆನ್ನು ಹತ್ತುತ್ತದೆ ಈ ಮಳೆಗೂ ಕರುಣೆಯಿಲ್ಲ ಹಸಿಮನಗಳಲಿ ಹುಸಿ ಬಯಕೆಗಳ ಕುದುರಿಸಿ ಕಾಡುತ್ತದೆ ಇದೆಲ್ಲವನೂ ಹೇಗೆ ಉಲಿಯಲಿ? ಕಂಪು ಹೆಚ್ಚಾಗಿ ಜೋಂಪು ಹತ್ತಿದೆ, ಕಣ್ಣುಗಳು ಮತ್ತೇರಿ ಪಾಪೆಯೊಳಗೆ ಮುದುರಿದೆ ಕಣ್ಣ್ಗತ್ತಲ ಗುಹೆಯಲ್ಲಿ ಮಿಣುಕು ಹಚ್ಚುವ ನಿನ್ನ ಬಿಂಬವ ಹೇಗೆ ಮರೆಮಾಚಲಿ ಹುಡುಗ? ನೀನಾದರೋ ಭೂವ್ಯೋಮಗಳ ತಬ್ಬಿ ನಿಂತ ಬೆಳಕ ಕಿರಣ ಕಣ್ಣ ಕಾಡಿಗೆಯ ಕಪ್ಪು, ಅದಕ್ಕೆ ಎದೆಯೊಳಗೆ ಬೆಳಕ ಹಚ್ಚಿದೆ, ಕಣ್ಣ ಮುಂದೆ ಇಲ್ಲದೆಯೂ ಕಣ್ಣ ಕಾಡಿಗೆಗೆ ಬಣ್ಣ ಬಳಿದೆ. ಮುದ್ದು ಹುಡುಗ, ಹೀಗಾಗೇ ದಿನಗಳೆದಂತೆ ನನ್ನ ಕಣ್ಣ ಕೆಳಗಡೆ ಕಪ್ಪು ಬರೀ ಕಪ್ಪು ೨. ಶತಶತಮಾನಗಳ ತಲೆಬರಹ ತಪ್ಪುವ ಹಾದಿಗಳ ಗುಂಟ ಅರಿವಿನ ಸೂಡಿ ಸಿಗಬಹುದೇ ಎಂದು ಕಾಯುತ್ತಲೇ ಇದ್ದಾರೆ ಜನ ದಂಧುಗಗಳ ಸಾಲೇ ಸಾಲು ಎದುರಾಗುತ್ತ ಬೇಸತ್ತ ಮನಸ್ಸುಗಳು ಒಂದನ್ನೊಂದು ಹದತಪ್ಪುತ್ತಲೇ ಬದುಕ ಹದಕ್ಕೆ ಕಾಯಿಸಿಕೊಳ್ಳುವ ಕನಸು ನನಸಾಗದ ಹಾದಿಯ ಮೇಲೆ ಸೌಧಕಟ್ಟುತ್ತಿದ್ದಾರೆ ಶತಶತಮಾನಗಳಿಂದ ಜನ ಹಾವಿನ ಹಾದಿಯನ್ನು ಹೂವೆಂದುಕೊಂಡು ನಂಜಿಗೆ ಬಲಿಯಾಗುತ್ತಿದ್ದಾರೆ ಜನ ಮಧ್ಯದ ಕಡಲಿಗೆ ಮುಗಿಬಿದ್ದು ಮದ್ದೆ ಸಿಗದೇ ಮಾರಿಕೊಂಡ ಮನಸ್ಸಿನ ಕೂಪದೊಳಗಿನ ನೆನಪುಗಳ ಒಂದೊಂದಾಗಿ ಗೋರಿಯೊಳಗೆ ಹೂತು ಹಾಕುತ್ತಲೇ ಮರೆತು ಅದನ್ನೆ ಎದೆಯ ಹಾಡಾಗಿಸಿಕೊಳ್ಳುತ್ತಿದ್ದಾರೆ ಶತಶತಮಾನಗಳಿಂದ ಜನ ಯಾವ ಎತ್ತರಕ್ಕೆ ಏರಿದರೂ ಜಾರುವ ಭಯದಲ್ಲಿಯೇ ಬಸವಳಿಯುತ್ತಾರೆ ಜನ ಬೆಳಕನ್ನು ಮುತ್ತಿಕ್ಕುವ ಆಸೆಗೆ ಬಲಿಬಿದ್ದು ಕೈತಪ್ಪಿ ಬೆಂಕಿಯನ್ನು ಅಪ್ಪಿ ಸುಟ್ಟಗಾಯದ ನೋವಿಗೆ ಮುಲಾಮು ಹಚ್ಚುತ್ತ ಮುಲುಗುಡುತ್ತಿದ್ದಾರೆ ಜನ ಪರಂಪರೆಯ ಮೊರದಲ್ಲಿ ಬದಲಾವಣೆಯ ಅಕ್ಕಿ ಆರಿಸುತ್ತಾ ಕಸವರವನ್ನು ಕಸವೆಂದು ತೆಗೆತೆಗೆದು ಚೆಲ್ಲುತ್ತಿದ್ದಾರೆ ಜನ ನೆಮ್ಮದಿಯ ಹುಡುಕುತ್ತಾ ದೇಗುಲಗಳ ಘಂಟೆಗಳ ಬಾರಿಸುತ್ತ ಪರಮಾತ್ಮ ಎನ್ನುತ್ತ ಪಂಥಗಳ ಕಟ್ಟಿಕೊಳ್ಳುತ್ತಲೇ ನಡೆದಿದ್ದಾರೆ ಶತಶತಮಾನಗಳಿಂದ ಜನ ೩. ಗುಪ್ತಗಾಮಿನಿ ಅಲ್ಪ ನುಡಿಯಲ್ಲಿ ತತ್ವ ವಿಚಾರ ಪುರಾಣಗಳ ಪಠಣ, ನಿತ್ಯ ವಾಚನ ವಾಚಾಳಿತನವಿಲ್ಲ-ವಚನ ಬಲು ಭಾರ ಮಿತ ಭಾಷಿ ನಾನೆಂಬ ಕೀಟಕೊರೆತ-ಮೆದುಳು ಊತ ಎಲ್ಲ ದುರ್ಗಮ ದಾರಿ ಕ್ರಮಿಸಿ ಬಂದಿಹೆ ಏರುವ ಮೊದಲು ಗದ್ದುಗೆ ನನಗಾರು ಸಮನಿಲ್ಲ ನನ್ನಿಂದಲೆ ಎಲ್ಲ ಸರ್ವಥಾ ಸಲ್ಲ ಅಲ್ಲೂ ವಾಸನೆ ನಾ ಸರಳ, ಸಜ್ಜನ ನೀತಿ ನೇಮಗಳ ಪರಿಪಾಲಕ, ಸತ್ಯ ಶಾಂತಿಗಳ ಪೂಜಕ, ಎನಗಿಂತ ಹಿರಿಯರಿಲ್ಲ ನನ್ನಂತೆ ಯಾರಿಲ್ಲ, ಕನವರಿಕೆ ಬೇರೆನಿಲ್ಲ, ಒಳಬೆರಗು-ಅದೇ ಯಾವ ಧನ್ವಂತರಿಯ ಬಳಿಯಿಲ್ಲ ಮದ್ದು ಬಿಳಿಯ ಜುಬ್ಬದ ಒಳಗೆ ಕರಿಯ ಕೋಟಿನ ಗುಂಡಿಯಲ್ಲಿ ರೇಷ್ಮೇ ಮಕಮಲ್ಲಿನ ನುಣುಪಲ್ಲಿ ಸದ್ದಿಲ್ಲದೇ ಠೀಕಾಣಿ ಜರಡಿ ಹಿಡಿದರೂ ಜಾರದಂತೆ ಅಂಟಿಕೂತಿದೆ ನಾನು ಹೋದರೆ ಹೋದೇನು ಕನಕನಿಗಾದ ಉದಯಜ್ಞಾನ ನಮಗೇಕಿಲ್ಲ ಬಿಡು ಆ ಹಂತ ಏರಿಲ್ಲ ಆ ಮರ್ಮ ಸರಳಿಲ್ಲ. ೪. ಪದಗಳೊಂದಿಗೆ ನಾನು ಪದಗಳೆಂದರೆ ನನಗೆ ಅಚ್ಚುಮೆಚ್ಚು ದಿನಂಪ್ರತಿಯ ಅಭ್ಯಾಸವೂ ಪದಗಳ ಹೊಸೆಯುವುದರಲ್ಲಿ, ಮಸೆಯುವುದರಲ್ಲಿ: ಆದರೆ ಆ ಪದಗಳಿಗೆ ಶಬ್ದಕೋಶದಿ ಅರ್ಥಗಳ ಹುಡುಕಿ ಸೋತಿದ್ದೇನೆ. ಹೊಸ ಹಾಡಿಗೆ ಕುಣಿದಾಡುವ ನವಿಲುಗಳ ದಾರಿ ಕಾಯುತ್ತ, ನಾನೇ ನವಿಲಾಗಬಯಸುತ್ತೇನೆ. ಮತ್ತೆ ಕುಕಿಲದ ಗಾನಕ್ಕೆ ಪದ ಜೋಡಿಸಿ ಶ್ರುತಿ ಕೂಡಿಸಿ ಹಾಡಾಗ ಬಯಸುತ್ತೇನೆ. ಪದಗಳು ಪರಾರಿಯಾಗುತ್ತವೆ ಆಗೊಮ್ಮೆ ಈಗೊಮ್ಮೆ ಸುಳಿವುಕೊಡದೆ, ಪಕ್ಕಾ ಪರದೇಶಿಯಂತೆ. ಹಳಹಳಿಸಿ ನೋಡುತ್ತೇನೆ: ಪದಗಳ ಜೋಡಿಸಿ ಇಡಲಾಗದ್ದಕ್ಕೆ. ನಡುರಾತ್ರಿಯಲ್ಲಿ ಕಂದೀಲ ಬೆಳಕಿನಲ್ಲಿ ನಡಗುವ ಕೈಗಳು ಆಡಿಯಾಡುತ್ತವೆ ಕೆತ್ತಿದ ಪದಗಳ ಮೇಲೆ, ಕಂಗಳಿಂದ ಉದುರಿದ ಮುತ್ತೊಂದು ಕರ ಸೋಕಿದಾಗ ಎಚ್ಚರ ಗೊಳ್ಳುತ್ತ ಸಡಿಲವಾಗಿಲ್ಲ ಎಲ್ಲಪದಗಳು ಅವಕ್ಕೆ ಸಂದೂಕದ ಪೆಟ್ಟಿಗೆಯಲ್ಲಿಟ್ಟು ಕಾಪಿಡು ಎನ್ನುತ್ತದೆ ಮನಸ್ಸು. ಪದಗಳೆಂದರೆ ನನಗೆ ಅಲರ್ಜಿ ನನ್ನೊಳಗಿನ ನನ್ನನ್ನು ಹೊರಗಟ್ಟಿ ಅಣಕಿಸಿ ನಗುತ್ತವೆ. ಹಾಡಾಗುವ ಬದಲು ಹಾವಾಗಿ ಹಗೆಯ ಹೊಗೆ ಹಬ್ಬಿಸುತ್ತವೆ ಪದಗಳೆಂದರೆ ನನಗೆ ಅಲರ್ಜಿ ಪಟ್ಟಾಂಗದಲ್ಲಿ ಪದಗಳ ಭರ್ಜರಿ ಬೇಟೆಯಾಡುವ ನಾನು ಕಾರ್ಯಹೀನ ಕೆಲಸಗೇಡಿಯಾಗುತ್ತೇನೆ. ಪದಗಳೆಂದರೆ ಅಚ್ಚುಮೆಚ್ಚು ಅಲರ್ಜಿ ನನಗೆ ಪರಪರನೆ ಕೆರೆದುಕೊಳ್ಳುವ ಚಟವಿದ್ದ ಹಾಗೆ. ೫. ಹುಡುಕಿ ಕೊಡು ಅವಳ ಮಾಂಸ ಮಜ್ಜೆಯ ನೆರಳು, ಮುಟ್ಟಿನ ವಾಸನೆಬಡಿಯದೇ, ಪೊಗರಿದ ಅವನೆಂಬವನ ಹುಡುಕಿ ಸೋತಿದ್ದೇನೆ, ಹುಡುಕಿ ಕೊಡು ಹೇ! ಪ್ರಭು. ಒಡಲ ಮಾಂಸದ ಹೊದಿಕೆಯೊಳಗೆ ಜೀವವ ಹದವಾಗಿ ಕಾಪಿಟ್ಟು ಅವನುಸಿರ ಹಸಿರ ಮಾಡಿ ಹಣ್ಣಾದವಳು ರಕ್ತ ಹೀರಿದ ಬಟ್ಟೆಯ ಹಿಂಡಿ ನಿಂತವಳ ಸೆರಗು ಹಿಡಿದು ಕಾಡಿದವನ ಎದೆಗವುಚಿಕೊಂಡವಳು ಮಾಂಸಕಲಶದ ತೊಟ್ಟು ಬಾಯಿಗಿಟ್ಟೊಡನೆ ಕಿರುನಕ್ಕು ಕಣ್ಣುಮಿಟುಕಿಸಿದವನ ಲೊಚಲೊಚ ರಕ್ತ ಹೀರುವವನ ಕಣ್ಣೊಳಗೆ ತುಂಬಿಸಿಕೊಂಡವಳು ಅವಳಿಲ್ಲದೇ ಜಗದ ಬೆಳಕಿಗೆ ಕಣ್ಣು
ಅಂಕಣ ಬರಹ ಮೆಹಬೂಬ್ ಮುಲ್ತಾನಿ ಪರಿಚಯ: ಮೆಹಬೂಬ್ ಮುಲ್ತಾನಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕನದಿಕೊಪ್ಪ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಕಾಲಿನ ಓದು ಬರಹ ವೇದಿಕೆ ಕಟ್ಟಿಕೊಂಡು ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಹಿಂದಿ,ಉರ್ದು, ಮರಾಠಿ, ಆಂಗ್ಲ ಭಾಷೆಯ ಸಾಹಿತ್ಯ ಅನುವಾದ, ವಿಶೇಷವಾಗಿ ಕವಿತೆಗಳ ಅನುವಾದ ಇವರ ಇಷ್ಟದ ಕೆಲಸ. ಕವಿತೆ ಬರೆಯಲು ಪ್ರಾರಂಭಿಸಿದ್ದಾರೆ. ತುಂಬಾ ಜೀವನ ಪ್ರೀತಿಯ ಮನುಷ್ಯ ನಮ್ಮ ಮೆಹಬೂಬ್ ಮುಲ್ತಾನಿ ಈ ವಾರದ ಮುಖಾಮುಖಿಯಲ್ಲಿ ಕವಿ ಮೆಹಬೂಬ್ ಮುಲ್ತಾನಿಯನ್ನು ಮಾತಾಡಿಸಿದ್ದಾರೆನಾಗರಾಜ ಹರಪನಹಳ್ಳಿ ” ನನ್ನ ಕವಿತೆಯ ವಸ್ತು ಪ್ರೀತಿ ಮತ್ತು ಧರ್ಮ “ “ ದೇವರು -ಧರ್ಮದಲ್ಲಿ ನನಗೆ ಅಷ್ಟಾಗಿ ನಂಬಿಕೆಯಿಲ್ಲ “ ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಕವಿತೆ ಯಾಕೆ ಬರೆಯುತ್ತೇನೆ ಎನ್ನುವುದಕ್ಕೆ ನಿರ್ದಿಷ್ಟ ಉತ್ತರ ಹೇಳಲಾಗದು. ಮನಸ್ಸಿನ ಬೇಗುದಿ ಹೊರಹಾಕಲು ನಾನು ಕವಿತೆಯ ಮೊರೆ ಹೋಗುತ್ತೇನೆ. ಕವಿತೆ ಹುಟ್ಟುವ ಕ್ಷಣ ಯಾವುದು ? ನಿರ್ದಿಷ್ಟ ಸಮಯ ಅಂತೆನೂ ಇಲ್ಲ .ಯಾವುದೋ ಒಂದು ಕ್ಷಣದಲ್ಲಿ ಹೊಳೆದ ಸಾಲುಗಳು ಆಗಾಗ ಕವಿತೆಯ ರೂಪ ತಾಳುತ್ತವೆ ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಪ್ರೀತಿ ಮತ್ತು ಧರ್ಮ ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಹಾ..ಬಾಲ್ಯಕ್ಕೆ ಅಷ್ಟು ಅವಕಾಶವಿಲ್ಲ , ಹರೆಯ ಕವಿತೆಗಳಲ್ಲಿ ಆವರಿಸಿದೆ. ಪ್ರಸ್ತುತ ರಾಜಕೀಯಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ತಲ್ಲಣದ ದಿನಗಳಿವು. ಕಾಯಬೇಕಾದವರೆ ಕೊಲ್ಲುವವರಾಗಿರುವ ಸನ್ನಿವೇಶ ಇದೆ. ಸಮಚಿತ್ತದಿಂದ ಇರುವುದು ಈ ಕ್ಷಣದ ಅವಶ್ಯಕತೆ. ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಇವೆರಡರಲ್ಲೂ ನನಗೆ ಅಷ್ಟಾಗಿ ನಂಬಿಕೆಯಿಲ್ಲ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಸಾಂಸ್ಕೃತಿಕ ವಾತಾವರಣ ಹದೆಗೆಟ್ಟಿದೆ. ಇಸಂಗಳು ಸಾಂಸ್ಕೃತಿಕ ಲೋಕವನ್ನು ಆಳುತ್ತಿವೆ. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಇದು ಸಾಹಿತ್ಯದ ಎಲ್ಲರಿಗೂ ತಿಳಿದಿರು ವಿಷಯ. ಬಾಲ ಬಡಿಯುವವರು ಮುಂದಿದ್ದಾರೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಅತೃಪ್ತಿ ಇದೆ ಅಷ್ಟೇ.. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಬೇರೆ ಬೇರೆ ದೇಶದ,ಭಾಷೆಯ ಭಿನ್ನ ಸಂವೇದನೆಯ ಸಾಹಿತ್ಯಿಕ ಕೃತಿಗಳನ್ನು ಅನುವಾದಿಸುವುದು.. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ಕನ್ನಡದಲ್ಲಿ ಎಚ್ ಎಸ್ ಶಿವಪ್ರಕಾಶ ನನ್ನಿಷ್ಟದ ಕವಿ.ಆಂಗ್ಲಭಾಷೆಯಲ್ಲಿ ರೈನರ್ ಮಾರಿಯಾ ರಿಲ್ಕ ನನ್ನ ಪ್ರೀತಿಯ ಕವಿ . ಈಚೆಗೆ ಓದಿದ ಕೃತಿಗಳಾವವು? ಕೆಂಪು ಮುಡಿಯ ಹೆಣ್ಣು, ಪದ ಕುಸಿಯೆ ನೆಲವಿಲ್ಲ, ಬದುಕು ಮಾಯೆಯ ಆಟ, ಚಿಲಿ ಕೆ ಜಂಗಲೊಸೆ( ಹಿಂದಿ), ಖುಷಿಯೊಂಕೆ ಗುಪ್ತಚರ ( ಹಿಂದಿ), ನಿಮಗೆ ಇಷ್ಟವಾದ ಕೆಲಸ ಯಾವುದು? ಶಿಕ್ಷಕ ವೃತ್ತಿ ನಿಮಗೆ ಇಷ್ಟವಾದ ಸ್ಥಳ ಯಾವುದು ? ನಮ್ಮ ಮನೆ ಮತ್ತು ಶಾಲೆ ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು? ಮಿಲನ( ಕನ್ನಡ), ರಬ್ ನೇ ಬನಾ ದಿ ಜೋಡಿ( ಹಿಂದಿ) ನೀವು ಮರೆಯಲಾರದ ಘಟನೆ ಯಾವುದು? ಒಮ್ಮೆ ನಮ್ಮ ಮೇಲೆ ಹೆಜ್ಜೆನು ದಾಳಿ ಮಾಡಿದವು. ಇನ್ನೆನೂ ಸಾಯುತ್ತೇವೆ ಎನ್ನುವಾಗ ಭಾಷೆ,ಜಾತಿ, ಧರ್ಮಗಳನ್ನು ಮೀರಿದ ಮಾನವೀಯ ವ್ಯಕ್ತಿ ಯೊಬ್ಬ ನಮಗೆ ಸಹಾಯ ಮಾಡಿದ. ಅವತ್ತು ನನಗೆ ಪ್ರೀತಿ ಮತ್ತು ಮಾನವೀಯತೆಯ ಅವಶ್ಯಕತೆ ಎಷ್ಟಿದೆ ಎನ್ನುವ ಅರಿವು ಮೂಡಿತು. ಇದು ನನ್ನ ಜೀವನದ ಮರೆಯಲಾರದ ಘಟನೆ. ************************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ









