ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಎಡವಿದವನಿಗೂ ಸಣ್ಣ ಸಹಾನುಭೂತಿ ಸಿಗಲಿ ಬಹುಶಃ ನಾನವಾಗ ನಾಲ್ಕನೆಯ ತರಗತಿಯಲ್ಲಿದ್ದೆ. ಅಂದು ಭಾನುವಾರ. ಅವತ್ತು ನಾವೆಲ್ಲ ಹೀಗೇ ಆಟ ಆಡುತ್ತಿದ್ದೆವು. ಶಾಲೆಯ ಸುತ್ತಮುತ್ತ ನಾನು, ಶ್ರುತಿ, ಸ್ವಪ್ನ ಮತ್ತೆ ಇನ್ನೂ ಒಂದಿಷ್ಟು ಗೆಳತಿಯರು, ಆಡಿ ಆಡಿ ಸುಸ್ತಾದೆವು. ಕೊನೆಗೆ ನೀರು ಕುಡಿಯಬೇಕೆನಿಸಿತು ಎಲ್ಲರಿಗೂ. ಅಲ್ಲಿಯೇ ಇದ್ದ ಬೋರನ್ನು ಹೊಡೆಯತೊಡಗಿದೆವು. ನೀರು ಬಂತು. ಒಬ್ಬೊಬ್ಬರೇ ನೀರು ಹೊಡೆಯುವುದು, ಉಳಿದೆಲ್ಲರು ಸರತಿಯಲ್ಲಿ ಮುಖತೊಳೆದು ನೀರುಕುಡಿಯುವುದು ಮಾಡುತ್ತಿರುವಾಗ, ನಾನೊಂದಿಷ್ಟು ಬೋರು ಹೊಡೆಯುವ ಉಳಿದವರು ಕುಡಿಯಲಿ ಎಂದು ಹಿಂದೆ ಬಂದೆ. ಆದರೆ ಅಚಾನಕ್ ಬೋರಿನ ಸಂದಿಯಲ್ಲಿ ಶ್ರುತಿ ಕಿರುಬೆರಳು ಇಟ್ಟಿದ್ದು ಗೊತ್ತೇ ಆಗಿರಲಿಲ್ಲ. ನಾನು ಹೊಡೆದ ಮೊದಲ ಹೊಡೆತಕ್ಕೇ ಅವಳು ಪ್ರಾಣ ಹೋಗುವಂತೆ ಚೀರಿಬಿಟ್ಟಿದ್ದಳು. ನನಗಾದ ಗಾಬರಿಯೂ ವರ್ಣಿಸಲಸದಳ. ಅವಳ ಕೈಯಿಂದ ಧಾರಾಕಾರ ರಕ್ತ ಸುರಿಯತೊಡಗಿತ್ತು. ಅಲ್ಲೇ ಇದ್ದ ಅಕ್ಕಪಕ್ಕದ ಮನೆಯವರು ಅರಶಿನ ತಂದು ಗಾಯಕ್ಕೆ ಒತ್ತಿ ಬಟ್ಟೆ ಕಟ್ಟಿದರು. ಅವಳನ್ನು ಸಮಾಧಾನಿಸುತ್ತಿದ್ದರು. ಉಳಿದ ಗೆಳತಿಯರೆಲ್ಲರೂ ಅವಳ ಆಜೂ ಬಾಜೂ ನಿಂತು ಅವಳನ್ನು ಸಮಾಧಾನಿಸತೊಡಗಿದರು. ಅವಳ ಅಳು ತಹಬದಿಗೆ ಬರತೊಡಗಿತ್ತು. ಯಾರೊಬ್ಬರೂ ನನ್ನನ್ನು ಅತಿಯಾಗಿ ಬೈದದ್ದು ನೆನಪಿಲ್ಲ. ಆದರೆ ಅವರೆಲ್ಲರ ದೃಷ್ಟಿ ಮಾತ್ರ ನನ್ನನ್ನು ತಪ್ಪಿತಸ್ಥಳೆಂದು ನೋಡುತ್ತಿದ್ದವು. ಅದು ಮಾತ್ರ ಚಂದ ನೆನಪಿದೆ. ಶ್ರುತಿ ನನ್ನ ಕಡೆ ತಿರುಗಿಯೂ ನೋಡಲಿಲ್ಲ. ಅವಳಿಗೆ ಬಹಳ ನೋವಾಗಿತ್ತು.  ಆ ಕ್ಷಣ ಭೂಮಿ ಬಾಯಿಬಿಡಬಾರದಾ ಅಂತನಿಸಿದ್ದು ಸುಳ್ಳಲ್ಲ ನನಗೆ. ಅವಳ ಅಪ್ಪ ಅಮ್ಮ ನನಗೆ ಬಯ್ಯುತ್ತಾರಾ? ನನ್ನ ಅಪ್ಪ ಅಮ್ಮನಿಗೆ ನಾ ಹೀಗೆ ಮಾಡಿದೆ ಅಂತ ಗೊತ್ತಾದರೆ ಖಂಡಿತಾ ಹೊಡೆಯುತ್ತಾರೆ, ಈಗ ಏನು ಮಾಡಲಿ? ಮತ್ತೆ ನನ್ನೊಂದಿಗೆ ಅವಳು ಆಟಕ್ಕೆ ಬರುವುದಿಲ್ಲವಾ? ಇಲ್ಲಿಗೆ ಎಲ್ಲ ಮುಗಿಯಿತಾ? ಅದೆಂಥ ಆತಂಕ, ಭಯ, ಹಿಂಸೆ ಆಗತೊಡಗಿತೆಂದರೆ, ನನ್ನೊಂದಿಗೆ ಧೈರ್ಯಹೇಳಲಿಕ್ಕೆ ಯಾರೂ ಇರಲಿಲ್ಲ. ಏನು ಮಾಡಲಿ, ಎತ್ತ ಹೋಗಲಿ, ಮನೆಗೆ ಹೋಗಲಾ, ಬೇಡವಾ… ಹೋಗದೆ ಆದರೂ ಎಲ್ಲಿ ಹೋಗಲಿ… ಕಾಡತೊಡಗಿತು. ಅವತ್ತು ಅದೆಷ್ಟು ಸಂಕಟವಾಗಿತ್ತು ನನಗೆ. ಬಹಳ ಅತ್ತಿದ್ದೆ. ಅಷ್ಟೊಂದು ರಕ್ತವನ್ನ ಅದೇ ಮೊದಲು ನಾನು ನೋಡಿದ್ದದ್ದು. ವಿಪರೀತ ಭಯವಾಗಿಬಿಟ್ಟಿತ್ತು. ಶ್ರುತಿ ಅಳುತ್ತಿದ್ದರೆ, ಅವಳನ್ನು ತಬ್ಬಿ ಸಂತೈಸಬೇಕು ಅನಿಸುತ್ತಿತ್ತು. ಆದರೆ ಸುತ್ತಲಿದ್ದ ಯಾರೂ ಅದಕ್ಕೆ ಅವಕಾಶ ಕೊಡದಂತೆ ಅವಳನ್ನು ತಮ್ಮ ಕರುಣೆಯ ಅರಿವೆಯಲ್ಲಿ ಸುತ್ತಿಟ್ಟುಬಿಟ್ಟಿದ್ದರು. ನನ್ನ ಅಳು ಯಾರಿಗೂ ಕಾಣಲಿಲ್ಲ. ಅವತ್ತೆಲ್ಲ ಬಹಳ ಹೊತ್ತು ಹೊರಗೇ ಎಲ್ಲೆಲ್ಲೋ ಅಲೆದು ಮನೆಗೆ ಬಂದೆ. ನಾನು ಎಣಿಸಿದಷ್ಟು ಘೋರವಾದದ್ದು ಏನೂ ನಡೆಯಲಿಲ್ಲ. ಆದರೆ ಆ ಘಟನೆಯ ನಂತರ ಶ್ರುತಿ ಮತ್ತೆ ನಾನು ಮತ್ತೆ ಆಟ ಆಡಲಿಲ್ಲ. ಬಹುಶಃ ನನ್ನೊಂದಿಗೆ ಆಟವಾಡಲಿಕ್ಕೆ ಭಯವಾಯಿತಾ ಅವಳಿಗೆ, ಅಥವಾ ಅವಳ ಅಪ್ಪ ಅಮ್ಮನಿಗೆ ಬೇಸರವಾಗಿತ್ತಾ, ಅಥವಾ  ಬೇರೆ ಏನಾದರೂ ಆಯಿತಾ… ಏನೇನೋ ತಳಮಳಗಳು… ಅವರ ಕಣ್ಣೋಟಗಳು ವಿಚಿತ್ರವಾಗಿರುತ್ತಿದ್ದವು. ಅವುಗಳ ಅರ್ಥ ತಿಳಿಯುವಷ್ಟು ದೊಡ್ಡವಳಿರಲಿಲ್ಲ ನಾನು… ಆದರೆ ಶ್ರುತಿಯ ಬಗ್ಗೆ ನೆನೆದಾಗಲೆಲ್ಲ ಪಾಪ ಎನಿಸುತತಿತ್ತು. ಅವಳಿಗೆ ನಿಜಕ್ಕೂ ಬಹಳ ನೋವಾಗಿತ್ತು. ಅವಳ ಅಪ್ಪ ಅಮ್ಮನಿಗೂ ಬೇಸರವಾಗಿದ್ದಿರಬಹುದು… ಅದು ತಪ್ಪೂ ಅಲ್ಲ… ಆದರೆ ಬಹಳ ವರ್ಷಗಳ ನಂತರ ನಾನೀಗ ಶಿಕ್ಷಕಿ… ನನ್ನದೇ ಶಾಲೆಯಲ್ಲಿ ಇಂತಹ ಅದೆಷ್ಟೋ ಘಟನೆಗಳಿಗೆ ನಾನು ಪ್ರತಿನಿತ್ಯ ಸಾಕ್ಷಿಯಾಗುತ್ತಿರುತ್ತೇನೆ. ಆದರೆ ಇಂತಹ ಆಕಸ್ಮಿಕ ಪ್ರಕರಣಗಳಲ್ಲಿ ಸಹಾನುಭೂತಿ ಎನ್ನುವುದು ಅವಘಡಕ್ಕೆ ಗುರಿಯಾದವರಿಗೆ ಸಿಗುವಷ್ಟು ಸುಲಭವಾಗಿ ಅದನ್ನು ಮಾಡಿದವರಿಗೆ ಸಿಗುವುದಿಲ್ಲ. ಅವರ ಅರಿವನ್ನು ಮೀರಿ ನಡೆದ ಘಟನೆಯೊಂದು ಅವರನ್ನು ಅದೆಷ್ಟು ನೋಯುವಂತೆ, ಅವಮಾನ ಪಡುವಂತೆ ಮಾಡಿಬಿಡುತ್ತದೆಂದರೆ ಅದು ಅಳತೆಗೂ ಮೀರಿದ್ದು. ನಾನೀಗ ಶಿಕ್ಷಕಿಯಾಗಿ ಬಹಳಷ್ಟು ಸರ್ತಿ ಇಂತಹ ಘಟನೆಗಳು ನಡೆದಾಗ ಇಬ್ಬರ ಪರವಾಗಿಯೂ ನಿಲುವು ತೆಗೆದುಕೊಳ್ಳುತ್ತೇನೆ. ಗುರಿಯಾದವರಿಗೆ ಸಹಾನುಭೂತಿ ತೋರಿಸುವ ಹೊತ್ತಿನಲ್ಲೇ ಮಾಡಿದವರು ದುರುದ್ದೇಶದಿಂದಾಗಲೀ, ಉದ್ದೇಶ ಪೂರ್ವಕವಾಗಿಯೋ ಅಥವಾ ಕೆಟ್ಟ ಉದ್ದೇಶದಿಂದಲೋ ಖಂಡಿತ ಮಾಡಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟು ಇಬ್ಬರಲ್ಲೂ ಒಂದು ಸ್ನೇಹ ಹಾಗೇ ಉಳಿದಿರುವಂತೆ ನೋಡಿಕೊಳ್ಳುತ್ತಿರುತ್ತೇನೆ. ಮತ್ತೆ ಮಾಡಿದವರಿಗೆ ಅದರ ಬಗ್ಗೆ ತಿಳುವಳಿಕೆ ಹೇಳಿ ಮುಂದೆ ಹೀಗಾಗದಂತೆ ಜಾಗ್ರತೆ ವಹಿಸಲು ತಿಳಿಸಿಕೊಡುತ್ತಿರುತ್ತೇನೆ. ಒಮ್ಮೆ ಹೀಗಾಯಿತು. ಊಟದ ವೇಳೆಯಲ್ಲಿ ಮೂರನೇ ತರಗತಿಯ ಹುಡುಗನೊಬ್ಬ ತರಗತಿಯ ಕೋಣೆಗೆ ಜೋರಾಗಿ ನುಗ್ಗುವಾಗ, ತನ್ನ ಸಹಪಾಟಿಯ ಮೇಲೆ ಮುಗ್ಗರಿಸಿ ಬಿದ್ದಿದ್ದಾನೆ. ಆ ಹೊಡೆತಕ್ಕೆ ಇವನ ಮುಖ ಬೆಂಚಿಗೆ ತಗುಲಿ, ಮೂಗಲ್ಲಿ ರಕ್ತ ಸೋರತೊಡಗಿದೆ. ಅಂದು ಜೋರಾಗಿ ನುಗ್ಗಿದವನಿಗೆ ಹಾಗೆ ಒಳ ನುಗ್ಗಿದ್ದಕ್ಕಾಗಿ ಬೈದೆವಾದರೂ ನೋವಾದವನಿಗೆ, ಅವನು ಬೇಕಂತ ಮಾಡಿಲ್ಲ, ಮತ್ತೆ ಅವ ನಿನ್ನ ಸಹಪಾಠಿ ಮತ್ತು ಗೆಳೆಯ ತಾನೆ ಎಂಬುದನ್ನು ಮನವರಿಕೆ ಮಾಡಿಕೊಟ್ಟೆವು ಮತ್ತೆ ಅವನಿಗೆ ಸೂಕ್ತ ಚಿಕಿತ್ಸೆಯನ್ನೂ ಮಾಡಿದೆವು (ಇಂತಹ ನಿತ್ಯದ ಅದೆಷ್ಟೋ ಘಟನೆಗಳಿಗೆ ಶಿಕ್ಷಕರಾದ ನಾವು ಸದಾ ಸಿದ್ಧರಿರಲೇಬೇಕಿರುತ್ತದೆ…). ಆದರೂ ಎಲ್ಲೋ ಒಂದು ಕಡೆ ಅವನ ಪೋಷಕರು ಶಾಲೆಗೆ ಬಂದು ಗಲಾಟೆ ಮಾಡಬಹುದು, ಬೀಳಿಸಿದ ಮಗುವಿಗೂ ಏನಾದರೂ ಬೈಯ್ಯಬಹುದು… ಅಂತೆಲ್ಲ ಭಯ ನಾವೆಲ್ಲ ಶಿಕ್ಷಕರಿಗೂ ಇತ್ತು. ಆದರೆ ಹಾಗಾಗಲಿಲ್ಲ. ಮರು ದಿನ ಅವ ಶಾಲೆಗೆ ಬಂದ. ಮೂಗಿನ ಗಾಯ ದೊಡ್ಡದಾಗಿ ಕಾಣುತ್ತಿತ್ತು. ಆದರೆ ಅವ ತನ್ನ ತಂದೆ ತಾಯಿಯರಿಗೆ ತಾನೇ ಹೇಗೋ ಶಾಲೆಯಲ್ಲಿ ಬಿದ್ದೆ ಎಂದು ಹೇಳಿದ್ದನಂತೆ. ಮತ್ತೆ ಮರುದಿನದಿಂದ ಅವರಿಬ್ಬರೂ ಏನೂ ಆಗಿಲ್ಲದಂತೆ ಪಕ್ಕ ಪಕ್ಕವೇ ಕೂತು ಆಡಿಕೊಂಡು, ಓದಿಕೊಳ್ಳತೊಡಗಿದರು… ಹೀಗೆ ಇಂತಹ ಘಟನೆಗಳಲ್ಲಿ ಎಲ್ಲ ಸುಖ ಅನ್ನಿಸಿದಾಗ ಸದಾ ನನ್ನ ಬಾಲ್ಯದ ಆ ಘಟನೆ ನೆನಪಾಗಿ, ಸಧ್ಯ ಈ ಮಕ್ಕಳಿಗೆ ಹಾಗಾಗಲಿಲ್ಲವಲ್ಲ ಅನಿಸಿ ಮನಸು ಹಗುರವಾಗುತ್ತದೆ… ************************************************* –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

ಅಂಕಣ ಸಂಗಾತಿ

ಪ್ರಪಂಚದಲ್ಲಿ ಬಹುಶಃ ತಪ್ಪೇ ಮಾಡದಿರುವ ಒಬ್ಬನೇ ಒಬ್ಬ ವ್ಯಕ್ತಿ ಇರಲಿಕ್ಕಿಲ್ಲ. ಯಾವುದಾದರೂ ಒಂದು ಸಂದರ್ಭದಲ್ಲಿ ಏನಾದರೂ ಒಂದು ತಪ್ಪನ್ನು ಮಾಡಿರಲೇ ಬೇಕು. ಮಾಡಿದ ತಪ್ಪನ್ನು ಒಪ್ಪಿಕೊಳ್ಳದೆ , ತಾನು ಯಾವಾಗಲೂ ಸರಿ ಎಂಬ ವರ್ತನೆಯನ್ನು ತೋರಿಸುವ ಬಹಳಷ್ಟು ಮಂದಿಯಿದ್ದಾರೆ

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಏಕತಾರಿ ಕಣ್ಮರೆ ಹಲವು ವರುಷಗಳಿಂದ ತತ್ವಪದ ಗಾಯಕರನ್ನು ಭೇಟಿಮಾಡುತ್ತ, ಅವರು ಹಾಡುವ ಪದಗಳನ್ನು ಕೇಳುತ್ತ ತಿರುಗಾಡುತ್ತಿದ್ದೇನೆ. ಈ ಗಾಯನದಲ್ಲಿ ಜೀವಾಳದಂತೆ ಬಳಕೆಯಾಗುತ್ತಿದ್ದ ಏಕತಾರಿ ಮರೆಯಾಗುತ್ತಿರುವುದು ಕಾಣುತ್ತಿದೆ. ಯಾಕಿರಬಹುದು? ಇದರ ಪರಿಣಾಮ ಏನಾಗಿದೆ? ವಿಚಾರ ಮಾಡಬೇಕಿನಿಸಿತು. ತಾಡಿಸಿದರೆ ನುಡಿವ ತೊಗಲಿನ ತಮಟೆ, ಡೋಲು, ಮೃದಂಗ, ಢಕ್ಕೆ, ಹಲಗೆ, ದಮಡಿ, ದಪ್ಪು, ಉರುಮೆಗಳಿವೆ; ಗಾಳಿ ವಾದ್ಯಗಳಾದ ಹಾರ್ಮೋನಿಯಂ, ಕೊಳಲು, ಶಹನಾಯಿಗಳಿವೆ; ಮೀಟಿದರೆ ನಾದ ಹೊರಡಿಸುವ ವೀಣೆ, ಕಿನ್ನರಿ, ಚೌಡಿಕೆ, ಏಕತಾರಿ, ಸಾರಂಗಿಯಂತಹ ತಂತಿವಾದ್ಯಗಳೂ ಇವೆ. ಇವುಗಳಲ್ಲಿ ಏಕತಾರಿಯದೇ ಒಂದು ವಿಶಿಷ್ಟ. ಇದು ಏಕ್‍ತಾರ್(ಒಂದು ತಂತಿ) ಎಂಬ ಹಿಂದೂಸ್ತಾನಿ ಪದದಿಂದ ಹುಟ್ಟಿದೆ. ಇದೇ ಶಬ್ದವಿನ್ಯಾಸದಲ್ಲಿ ಸಿತಾರ್ (ಛೇತಾರ್) ಹೆಸರೂ ಬಂದಿರಬೇಕು. ಬಿಗಿದು ಕಟ್ಟಿದ ತಂತಿ ತನ್ನ ಸೆಡವಿನಲ್ಲಿ ಕಡ್ಡಿಯೊ ಬೆರಳೊ ತಾಗಿದರೆ ಝುಂ ಎಂದು ನಾದ ಹೊಮ್ಮಿಸುತ್ತದೆ. ಭಾರತದಾದ್ಯಂತ ಇರುವ ತಂತಿವಾದ್ಯಗಳನ್ನು ದೆಹಲಿಯ ಸಂಗೀತ ಮತ್ತು ನಾಟಕ ಅಕಾಡೆಮಿ ಮ್ಯೂಸಿಯಮ್ಮಿನಲ್ಲಿ ಇಡಲಾಗಿದೆ. ಅವುಗಳ ಕೆಳಗೆ ಅವನ್ನು ಬಳಸುವ ಕಲಾವಿದರ ವಿವರಗಳೂ ಇವೆ. ಪರಿಶೀಲಿಸಿದರೆ, ಹೆಚ್ಚಿನವು ವಿವಿಧ ಗುರುಪಂಥಗಳಿಗೆ ಸಂಬಂಧಿಸಿದವು. ಬಾವುಲರು, ನಾಥರು, ತತ್ವಪದಕಾರರು, ಮಂಟೆಸ್ವಾಮಿಯ ಅನುಯಾಯಿಗಳಾದ ತಂಬೂರಿಯವರು ಇದರ ವಾದಕರು. ಈ ತಂತೀವಾದ್ಯಗಳಿಗೂ ಅನುಭಾವಕ್ಕೂ ಯಾವುದೊ ಬಗೆಯ ಸಂಬಂಧವಿದೆ. ಶಿಶುನಾಳರು ಕೂಡ ‘ತರವಲ್ಲ ತಗೀ ನಿನ ತಂಬೂರಿ’ ಎಂಬಲ್ಲಿ ಸೂಚಿಸುವುದು ತಂತಿವಾದ್ಯವನ್ನೇ. ತಂಬೂರಿ ಚೌಡಿಕೆ ಸಿತಾರ್ ಏಕತಾರಿ ವೀಣೆ ಸರೋದ್ ಮುಂತಾದ ತಂತಿವಾದ್ಯಗಳನ್ನು ಕಲಾವಿದರು ದೇಹಕ್ಕೆ ತಗುಲಿಸಿಕೊಂಡು ನುಡಿಸುವರು ಮತ್ತು ಹಾಡುವರು. ಇದು ಅವರ ದೇಹದಿಂದಲೇ ನಾದ ಹೊರಡುತ್ತಿರುವಂತೆ ತೋರುವುದು. ಮೊದಲಿಂದಲೂ ದೇಹಕ್ಕೂ ತಂತೀವಾದ್ಯಗಳಿಗೂ ಜೈವಿಕ ಸಮೀಕರಣವಿದೆ. ಇದನ್ನು ಬಸವಣ್ಣನವರ `ಎನ್ನ ಕಾಯವ ದಂಡಿಗೆಯ ಮಾಡಯ್ಯ’ ವಚನ ನಾಟಕೀಯವಾಗಿ ಸೂಚಿಸುತ್ತದೆ. ಅಲ್ಲಿ ಮನುಷ್ಯ ಕಾಯದ ಅಂಗಾಂಗಗಳಾದ ಕಾಯ ಶಿರ ಬೆರಳುಗಳು ದಂಡಿಗೆ ಸೋರೆಬುರುಡೆ ಕಡ್ಡಿಗಳಾಗಿ ಪಲ್ಲಟಗೊಂಡು ವಾದ್ಯವಾಗಿ ರೂಪಾಂತರ ಪಡೆಯುತ್ತವೆ. ಕೊನೆಯಲ್ಲಿ ಕೂಡಸಂಗಮದೇವನಿಗೆ ಬತ್ತೀಸರಾಗವನ್ನು ಹಾಡಲು ಕೋರಲಾಗುತ್ತದೆ. ಅಲ್ಲಿರುವುದು `ಉರದಲ್ಲಿ ಒತ್ತಿಬಾರಿಸು’ ಎಂಬ ವಿನಂತಿ. ಉರವು (ಎದೆ)ಭಾವನೆಗಳ ಆಗರವೆನ್ನಲಾಗುವ ಹೃದಯವಿರುವ ಜಾಗ. `ಒತ್ತಿಬಾರಿಸು’ ಎಂಬ ಸೂಚನೆಯಲ್ಲಿ ಶೃಂಗಾರದ ಛಾಯೆಯೂ ಇದೆ.  ಮಾನವ ದೇಹವು ತಂತಿವಾದ್ಯವಾಗಿ ರೂಪಾಂತರಗೊಳ್ಳುವ ಈ ಕ್ರಿಯೆ ಎಲ್ಲಮ್ಮ ಸಂಪ್ರದಾಯದಲ್ಲಿ ಇನ್ನೂ ನಿಚ್ಚಳ. ದೇವಿಯು ಹಗೆಯಾದ ಕಾರ್ತವೀರ್ಯನನ್ನು ಕೊಂದು, ಅವನ ಬೆನ್ನೆಲುಬಿನಿಂದ ಚೌಡಿಕೆಯ ದಂಡವನ್ನೂ ನರದಿಂದ ತಂತಿಯನ್ನೂ ತ¯ಚೆಂಡಿನಿಂದ ಬುರುಡೆಯನ್ನೂ ಬೆರಳಿನಿಂದ ಕಡ್ಡಿಯನ್ನೂ ಮಾಡಿಕೊಂಡು ಹಾಡುತ್ತಾಳೆ. ಸಿದ್ಧರ ಕಥನಗಳಲ್ಲಿ ಅವರು ಕೊಲ್ಲಾಪುರದ ಮಾಯಿಯನ್ನು ಕೊಂದು ಅವಳ ಅಂಗಾಂಗಗಳಿಂದ ವಾದ್ಯಮಾಡಿ ನುಡಿಸುವರು. ಈಗಲೂ ಏಕತಾರಿಯಲ್ಲಿ ಬಳಸುವ ಒಣಸೋರೆಯನ್ನು ಬುರುಡೆ (ಕಪಾಲ) ಎಂದೇ ಕರೆಯುವುದು. ಕಿನ್ನರಿ  ಜೋಗಿಗಳು ಅಥವಾ ನಾಥರು ಕಪಾಲದಲ್ಲಿ ಆಹಾರ ಸ್ವೀಕರಿಸುವ ಪದ್ಧತಿಯಿತ್ತು. ಈಗ ಅವರ ಆಚರಣೆಗಳ್ಲಲಿ ಅದರ ಜಾಗದಲ್ಲಿ ಸೋರೆಯ ಬುರುಡೆ ಬಂದಿವೆ.  ಹೀಗೆ ದೇಹದ ಜತೆ ಸಮೀಕರಣಗೊಳ್ಳುವ ಕಿನ್ನರಿ ಇಲ್ಲವೇ ಏಕತಾರಿ ಹೊರಡಿಸುವ ನಾದವು, ತನ್ನನ್ನು ನುಡಿಸುತ್ತಿರುವ ಕಲಾವಿದನ ದೇಹದ ಜತೆ ಏಕೀಭವಿಸುತ್ತದೆ. ಅವರಿಬ್ಬರ ಮಿಲನದಿಂದ ಹುಟ್ಟುವ ನಾದವು ಯೌಗಿಕ ಪರಿಭಾಷೆಯಲ್ಲಿ ವಿಶಿಷ್ಟ ಅರ್ಥವನ್ನೂ ಪಡೆದಿದೆ. ಏಕತಾರಿ ನುಡಿಸುತ್ತ ಹಾಡುವಾಗ ಹಾಡಿನೊಳಗಿನ ತತ್ವವು ಅಂತರಂಗೀಕರಣಗೊಳ್ಳುತ್ತ, ಕಣ್ಮುಚ್ಚಿ ಹಾಡುವವರು ತಮ್ಮೊಳಗೇ ಸಂವಾದಿಸುತ್ತ  ಮೈಮರೆಯುವರು. ತಮ್ಮನ್ನು ತಾವು ಅರಿತು ತಾವೇ ದೈವವಾಗುವುದು ತತ್ವಪದಗಳ ಒಳಗಿರುವ ತತ್ವಾಶಯ. ಸಾಧನೆಯಲ್ಲಿ ತೊಡಗಿರುವವರು ಉಸಿರಾಟವನ್ನು ನಿಯಂತ್ರಿಸುತ್ತ ಮನಸ್ಸನ್ನು ಗೊತ್ತಿನಲ್ಲಿ ನಿಲ್ಲಿಸುವ ಅವಸ್ಥೆ ತಲುಪಿದಾಗ- ಅಂದರೆ ಸಮಾಧಿ ಅವಸ್ಥೆಯಲ್ಲಿ ಬಗೆಬಗೆಯ ನಾದಗಳು ಕೇಳಿಸುತ್ತವೆಯಂತೆ. ಅಲ್ಲಮ ಈ ಅನುಭವವನ್ನು `ತಾಳೋಷ್ಟ್ರ ಸಂಪುಟವೆಂಬುದು ನಾದಬಿಂದು ಕಳಾತೀತ’ ಎಂದು ಹೇಳುವನು. ಯೋಗದ ಪರಿಭಾಷೆಯಲ್ಲಿ `ಅನಾಹತ ನಾದ’ವೆಂಬ ಮಾತಿದೆ. ನಾದದ ಪ್ರಸ್ತಾಪವು ಯೌಗಿಕ ಸಾಧಕರಲ್ಲಿ ನಾನಾ ಅರ್ಥಗಳಲ್ಲಿ ಕಾಣಿಸುವ ನುಡಿಗಟ್ಟಾಗಿದೆ. ಸಾಧಕರು ತಮ್ಮನ್ನು ತಾವು ಅರಿಯುವ ಸಾಧನೆಯಲ್ಲಿ ಭಾಷಾತೀತವಾದ ನಾದವು ಟ್ರಾನ್ಸ್ ಅವಸ್ಥೆಗೆ ಒಯ್ಯುವ ಸಾಧನವಾಗಿ ದುಡಿಯುತ್ತ ಬಂದಿರುವುದು. ಸೂಫಿಗಳಲ್ಲೂ ಸಂಗೀತವನ್ನು ಸಾಧನೆಯ ಉಪಕರಣವಾಗಿ ಬಳಸುವರು. ಆದರೂ ಅಲ್ಲಿ ತಂತೀವಾದ್ಯ ಕಡಿಮೆ. ಇರಾನ್ ಆಫಘಾನಿಸ್ಥಾನ್ ಬಲೂಚಿಸ್ಥಾನ್‍ಗಳ ಸೂಫಿಗಾಯನದಲ್ಲಿ ತಂತೀವಾದ್ಯವಿದೆ. ಬಂಗಾಲದ ಬಾವುಲರನ್ನು ತಂತೀವಾದ್ಯ ಹೊರತುಪಡಿಸಿ ಕಲ್ಪಿಸಿಕೊಳ್ಳುವಂತೆಯೇ ಇಲ್ಲ. ಹೀಗೆ ಯೋಗಲೋಕದ ಹಾಡಿಕೆಯಲ್ಲಿ ವಿಶಿಷ್ಟ ಸ್ಥಾನವುಳ್ಳ ಏಕತಾರಿ ಕಣ್ಮರೆಯಾಗುತ್ತಿದೆ. ಹಳೇಮೈಸೂರು ಭಾಗದಲ್ಲಿ ಅದು ಉಳಿದುಕೊಂಡಿದ್ದು, ಉತ್ತರ ಕರ್ನಾಟಕದಲ್ಲಿ ಗಾಯಬ್ ಆಗಿದೆ. ಅಪರೂಪಕ್ಕೆ ಏಕತಾರಿಗಳು ಕಂಡರೂ ಅವು ಬುರುಡೆ ಒಡೆದ, ದಂಡ ಮುರಿದ, ತಂತಿ ಹರಿದ ಅವಸ್ಥೆಯಲ್ಲಿವೆ. ಅವುಗಳ ಜಾಗದಲ್ಲಿ ಯೂರೋಪಿನಿಂದ ಆಗಮಿಸಿರುವ ಹಾರ್ಮೋನಿಯಂ ವಿರಾಜಮಾನವಾಗಿದೆ. ಹಳಬರನ್ನು ಕೇಳಿದರೆ, ತಮ್ಮ ಕಾಲದಲ್ಲಿ ಇದ್ದುದು ಏಕತಾರಿ ಮಾತ್ರ ಎನ್ನುವರು.  “ನಾವು ಫಸ್ಟಿಗೆ ತಂಬೂರಿ ಕಾಯೊಳಗೆ ಹಾಡತಿದ್ದಿವಿ. ಈಗ ಅದನ್ನ ಬಿಟ್ಟು 15-20 ವರ್ಷವಾಯಿತು. ತಂಬೂರಿ ಕಾಯೀನೂ ಈಗ ಸಿಗದಂಗಾಗಿದೆ’’ ಎಂದು ಬಲ್ಲಟಗುಡ್ಡದಿಂದ ಬಂದಿದ್ದ ಗಾಯಕ ಅಂಬಾಮಠದ ಜಾತ್ರೆಯಲ್ಲಿ ಹೇಳಿದ. ಆದರೆ ಈಗ ತಂಬೂರಿ ಇಲ್ಲವಾದ ಬಗ್ಗೆ ಅವನಲ್ಲಿ ಆತಂಕವೇನಿರಲಿಲ್ಲ.   ಹಿಂದೂಸ್ತಾನಿ ಸಂಗೀತ ಪದ್ಧತಿಯು ಉತ್ತರ ಕರ್ನಾಟಕದಲ್ಲಿ ಪ್ರವೇಶಿಸಿದ ಬಳಿಕ, ಅದರ ಜತೆ ಹಾರ್ಮೊನಿಯಂ ನುಗ್ಗಿ ಏಕತಾರಿಯನ್ನು ಹಿಂತಳ್ಳಿತು. ಇದರಿಂದ ತತ್ವಪದ ಹಾಡಿಕೆಗೆ ಹಿಂದೂಸ್ತಾನಿ ಸಂಗೀತಗಾರರ ಹಾಗೆ ಕಛೇರಿಯ ರೂಪ ಸಿಕ್ಕಿತು. ಕಲಬುರ್ಗಿ ಸೀಮೆಯ ಬಹಳಷ್ಟು ತತ್ವಪದ ಗಾಯಕರು, ಹಿಂದೂಸ್ತಾನಿ ಸಂಗೀತಗಾರರಂತೆ, ಬೆಂಗಳೂರಿನ ಸುಗಮ ಸಂಗೀತ ಕಲಾವಿದರಂತೆ, ತಾವೇ ಪೇಟಿ ಬಾರಿಸುತ್ತ, ತತ್ವಪದ ಹಾಡುತ್ತ ದೊಡ್ಡ ಸಭೆಗಳಲ್ಲಿ ಹಾಡುವರು. ಏಕತಾರಿಯು ಸಣ್ಣಗುಂಪಿನ ಸಾಧಕರ ನಡುವಿದ್ದರೆ, ಹಾರ್ಮೊನಿಯಂ ತತ್ವಪದಗಳನ್ನು ದೊಡ್ಡ ಸಭಾ ಕಾರ್ಯಕ್ರಮಗಳಿಗೆ ವಿಸ್ತರಿಸಿದೆ. ಏಕತಾರಿ ಹಾಡುವವರಿಗೆ ತತ್ವದೊಳಗಿನ ಅರ್ಥವನ್ನು ಒಳಬಿಟ್ಟುಕೊಂಡು ಅಂತರ್ಮುಖಿಯಾಗಿಸುತ್ತಿದೆ; ಹಾರ್ಮೊನಿಯಂ ತಬಲಗಳು ಹಾಡುವವರನ್ನು ವೃತ್ತಿಪರನನ್ನಾಗಿಸುತ್ತಿವೆ. ಇದಕ್ಕೆ ತಕ್ಕಂತೆ ಸಂಸ್ಕøತಿ ಇಲಾಖೆಯು ಗ್ರಾಮೀಣ ಕಲಾವಿದರನ್ನು ಉತ್ತೇಜಿಸುವ ಭಾಗವಾಗಿ ಹಾರ್ಮೊನಿಯಂ ವಿತರಿಸುತ್ತಿದೆ. ಇವೆಲ್ಲವೂ ಏಕತಾರಿಯ ನಿರ್ಗಮವನ್ನು ತೀವ್ರಗೊಳಿಸಿವೆ. ಒಂದು ವಾದ್ಯದ ಕಣ್ಮರೆಯಿಂದ ಅಥವಾ  ಆಗಮನದಿಂದ ಹಾಡು ಪರಂಪರೆಯಲ್ಲಿ ಏನಾಗುತ್ತದೆ? ತತ್ವಪದ ಸಾಹಿತ್ಯವು ಏಕತಾರಿಯ ಜತೆಗೆ ಸಂಹವನವಾಗುವಂತೆ, ಹಾರ್ಮೊನಿಯಂ ಗದ್ದಲದಲ್ಲಿ ಸಂಹವನವಾಗುವುದಿಲ್ಲ. ಜನ ಕೂಡ ತತ್ವಪದಗಳ ಅರ್ಥದ ಹಂಗಿಲ್ಲದೆ ಒಟ್ಟಾರೆ ಸದ್ದನ್ನು ಆಲಿಸುವಂತೆ ತೋರುತ್ತಿದೆ. ವಾದ್ಯಗಳ ಈ ಆಗಮನ ಇಲ್ಲವೇ ಕಣ್ಮರೆಯು ಸಾಹಿತ್ಯ ಸಂಗೀತ ಮತ್ತು ಅನುಭಾವ ದರ್ಶನದ ಮೂರೂ ಸ್ತರಗಳಲ್ಲಿ  ಪಲ್ಲಟಗಳನ್ನು ತಂದಿದೆ. ಇಂತಹ ಸನ್ನಿವೇಶದಲ್ಲಿ ಏಕತಾರಿಯನ್ನು ಬಿಡದೆಯೂ ಸಾಹಿತ್ಯದ ಅರ್ಥಕ್ಕೆ ಚ್ಯುತಿತಾರದೆ ಕಲಾವಿದರಾಗಿ ವಿಸ್ತರಣೆ ಪಡೆದಿರುವ ಮರೆಪ್ಪದಾಸರ ತಂಡ ವಿಶಿಷ್ಟವೆನಿಸುತ್ತದೆ. ಯಲಬುರ್ಗ ಸೀಮೆಯ ಮಾರೆಪ್ಪ ತಂಡ ಏಕತಾರಿ ಬಳಸುವ ಬಗೆ ಅಪೂರ್ವ. ಅವರು ತಂತಿಗಳನ್ನು ಬೆರಳು ಇಲ್ಲವೇ ಕಡ್ಡಿಯಿಂದ ಮೀಟದೆ, ಸಣ್ಣದೊಂದು ಕೋಲಿಂದ ಬಾರಿಸುತ್ತ ಹಾಡುವರು. ಮತ್ತೂ ವಿಶೇಷವೆಂದರೆ, ಇದರ ಜತೆ ಪಶ್ಚಿಮದ ವಯಲಿನನ್ನು(ಪಿಟೀಲು) ಬಳಸುವುದು. ನಾನು ಕಂಡಂತೆ ಪಿಟೀಲು ಬಳಸಿ ಹಾಡುವ ಏಕೈಕ ತತ್ವಪದ ಗಾಯಕರ ತಂಡವಿದು. ಒಂದೆಡೆ ಯೂರೋಪಿನಿಂದ ಬಂದ, ಹೆಸರಲ್ಲೇ ಸಾಮರಸ್ಯ ಅರ್ಥವುಳ್ಳ ಹಾರ್ಮೋನಿಯಂ, ಏಕತಾರಿಯ ಗಂಟಲನ್ನು ಹಿಸುಕಿದೆ; ಇನ್ನೊಂದೆಡೆ ಯೂರೋಪಿನ ವಯಲಿನ್, ಏಕತಾರಿಯ ಜತೆ ಅಪೂರ್ವ ಗೆಳೆತನ ಸಾಧಿಸಿದೆ. ಯೂರೋಪು ಭಾರತದ ಜತೆ ಸಾವು ಬದುಕಿನ ಆಟವನ್ನು ವಾದ್ಯಗಳ ಜತೆ ಮಾತ್ರವಲ್ಲ, ಇಡೀ ಸಂಸ್ಕøತಿಯ ಜತೆಯೇ ಮಾಡಿದೆ. ಎಂತಲೇ ನಾವದನ್ನು ಇಡಿಯಾಗಿ ದ್ವೇಷಿಸುವ ಇಲ್ಲವೇ ಪ್ರೀತಿಸುವ ಸರಳ ಸನ್ನಿವೇಶದಲ್ಲಿ ನಾವಿಲ್ಲ. ಅಸಮ್ಮತಿ-ಸಮ್ಮತಿಗಳನ್ನು ವಿಷಯವಾರು ಹಾಗೂ ಸಂದರ್ಭಾನುಸಾರ ಮಾಡುವ ಇಕ್ಕಟ್ಟಿನೊಳಗೆ ಸಿಲುಕಿದ್ದೇವೆ. ಈ ಇಕ್ಕಟ್ಟು ಸಾವು ಬದುಕಿನ ಅನುಭವ ಕೊಡುತ್ತಿದೆ. ಚೋದ್ಯವೆಂದರೆ, ಕೆಲವರಿಗೆ ಸಾವಿನ ಅನುಭವವಾಗುವ ಅಂಶವು, ಉಳಿದವರಿಗೆ ಮರುಹುಟ್ಟಿಗೆ ಕಾರಣವಾಗುವುದು. ಎಲ್ಲ ಸಮಾಜಗಳಲ್ಲೂ ಜೀವಂತ ಪರಂಪರೆಗಳು ಕಳೆದುಕೊಳ್ಳುವ ಪಡೆದುಕೊಳ್ಳುವ ದ್ವಂದ್ವಾತ್ಮಕ ಪ್ರಕ್ರಿಯೆಯಲ್ಲಿಯೇ ರೂಪುಗೊಳ್ಳುತ್ತಿರುತ್ತವೆ. ಕಳೆತ ಮತ್ತು ಪಡೆತಗಳ ಫಾಯದೆ ಲುಕ್ಸಾನುಗಳು ಲೆಕ್ಕಕ್ಕೆ ಸಿಗದಷ್ಟು ಸಂಕೀರ್ಣವಾಗಿರುತ್ತವೆ. ********************************************** ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ  ಸಾಲುಗಟ್ಟಿದ  ಮನಸ್ಸುಗಳು ಮನೆ ಕಟ್ಟುವಾಗ ಮೊದಲು  ಕಲ್ಲಿನಿಂದ ಗಟ್ಟಿಯಾದ ಅಡಿಪಾಯ, ಆಮೇಲೆ ಕಟ್ಟುವುದೇ ಗೋಡೆ!. ತಳಪಾಯದ ನಾಲ್ಕೂ ಅಂಚುಗಳುದ್ದಕ್ಕೂ ನಾಲ್ಕು ಗೋಡೆಗಳು ಮಧ್ಯದಲ್ಲಿ ಸ್ಪೇಸ್ ಮತ್ತು ಗಾಳಿ ಬಂಧಿಸಲ್ಪಡುತ್ತದೆ. ಒಳಗೆ ಮತ್ತೊಂದಷ್ಟು ಗೋಡೆಗಳು. ಡ್ರಾಯಿಂಗ್ ರೂಂ ಮತ್ತು ಮಲಗುವ ಕೋಣೆ ನಡುವೆ ಗೋಡೆ, ಮನೆಗೆ ಬರುವ ಆಗಂತುಕರಿಂದ ಪ್ರೈವೆಸಿ ಅತ್ಯಗತ್ಯ.  ಆಮೇಲೆ ಅಡುಗೆ ಕೋಣೆ ಮತ್ತು ಡೈನಿಂಗ್ ರೂಂ ನಡುವೆ ಗೋಡೆಗಳು. ಮತ್ತೆ, ದೇವರ ಕೋಣೆ ಎನ್ನಲ್ಪಡುವ ಗೂಡಿನಂತಹ ಚಿಕ್ಕ ಕೋಣೆಗೂ ಗೋಡೆಗಳು, ಒಳಗೆ ದೇವರನ್ನು ಕೂರಿಸಲು. ಸಮಾಜವಾದಕ್ಕೇ ಸವಾಲು, ಈ ಪ್ರೈವೇಟ್ ಎನ್ನುವ ಮನೆ!. ಮನೆಯ ಹೊರಗೆ, ಮನೆಯೂ ಸುರಕ್ಷಿತವಾಗಲಿ ಎಂದು ಕಾಂಪೌಂಡ್ ಗೋಡೆ. ಅದಕ್ಕೆ ಒಂದು ಗೇಟು. ಗೇಟಲ್ಲಿ ಬೋರ್ಡು, ‘ನಾಯಿಗಳಿವೆ ಎಚ್ಚರಿಕೆ’ !.  ಮನೆಯೊಳಗೆ ಸ್ವಂತ ಹಣ, ಚಿನ್ನ ಇತ್ಯಾದಿಗಳನ್ನು ನಗರದ ಕಳ್ಳರಿಂದ, ಢಕಾಯಿತರಿಂದ ಸುರಕ್ಷಿತವಾಗಿ ಬಚ್ಚಿಡಲು ಉಕ್ಕಿನ ಕಪಾಟುಗಳು, ಅದಕ್ಕೆ ದೊಡ್ಡ ಬೀಗ. ಕಳ್ಳರು ಮನೆಯೊಳಗೆ ನುಗ್ಗದಂತೆ ಬಾಗಿಲು. ಅದನ್ನು ಒಳಗಿಂದ ಲಾಕ್ ಮಾಡಲು ಕದ, ಉಕ್ಕಿನ ಚಿಲಕ ಇತ್ಯಾದಿ. ಮನೆ ಮನೆಗಳ ಸಾಲುಗಳು, ಅವುಗಳ ನಡುವೆ ಬೀದಿಗಳು. ಬೀದಿಗಳಿಗೆ ಸಂಖ್ಯೆಗಳು, ಹೆಸರುಗಳೂ ಬೇಕು,ವಿಳಾಸಕ್ಕಾಗಿ. ಮನೆಗಳ ತ್ಯಾಜ್ಯಗಳನ್ನು ನಗರದ ಹೊರಗೆ ಹರಿಯುವ ನದಿಗೆ ಸಾಗಿಸಲು ಕೊಳಚೆ ಚರಂಡಿಗಳು ನೆಲದಡಿಯಲ್ಲಿ. ಆ ಚರಂಡಿಗಳನ್ನು ಮುಚ್ಚಿ ಸುಂದರವಾಗಿ ಕಲ್ಲು ಚಪ್ಪಡಿಗಳನ್ನು ಹಾಸಲಾಗಿದೆ!. ನಗರ ನಿರ್ಮಲವಾಗಿರಬೇಕಲ್ಲ!!. ನಾಗರೀಕತೆ ಅಥವಾ ಸಿವಿಲೈಸೇಷನ್ ಎಂಬ ಪದದ ಜತೆಗೆ ಒಂದು ವ್ಯವಸ್ಥೆ ಇದೆ. ಒಂದರ ಬಗುಲಲ್ಲಿ ಒಂದು ಹೀಗೆ ಅನುಶಾಸಿಸಿ, ಕಟ್ಟಿದ ಸಾಲುಗಳು, ಸಾಲು ಸಾಲುಗಳು , ಒಂದು ಸಾಲಿನ ಮೇಲೆ ಇನ್ನೊಂದಷ್ಟು ಸಾಲುಗಳಾಗಿ ಇಟ್ಟಿಗೆಗಳನ್ನು ಪೇರಿಸಿ ಸಿಮೆಂಟ್ ನಿಂದ ಚೆನ್ನಾಗಿ ಒಂದಕ್ಕೊಂದು ಅಂಟಿಸಿ ಗೋಡೆ ಕಟ್ಟಿ, ಬಾಗಿಲು  ಕೂಡಿಸಿ, ಅಂತಃಕರಣವನ್ನೂ ಒಳಗೆ ಬಂಧಿಸಿದರೆ ಅದು ನಗರದ ಮನೆಯಾಗುತ್ತೆ. ನಗರದ ವ್ಯವಸ್ಥೆಯೊಳಗೆ ನಾಗರಿಕ ಸಮಾಜ ಸಂವಹಿಸಿ ಬದುಕುವಾಗ, ವ್ಯಾಪಾರಿಗಳು, ಕವಿಗಳು, ಕಾರ್ಮಿಕರು, ಆಫೀಸರುಗಳು, ಆಳುವವರು, ಆಳಿಸಿಕೊಳ್ಳುವವರು, ಕಳ್ಳರು, ಹೀಗೆ ಎಲ್ಲರೂ ಉಸಿರಾಡುವ ಪಟ್ಟಣದ ಗಾಳಿ ಒಂದೇ. ನಗರದ ನಿಯಮಗಳು,  ಒಂದು ರೀತಿ ಕವಿತೆಯ ವ್ಯಾಕರಣದ ಹಾಗೆ!. ಬಂಧ, ಛಂದದ ಕೋಶದೊಳಗೆ ಟ್ರಾಫಿಕ್ ನಿಯಮಗಳನ್ನು ಪಾಲಿಸಲೇ ಬೇಕು. ನಮ್ಮ ದೇಹದ ಕೋಟ್ಯಂತರ ಜೀವಕೋಶಗಳೂ ಒಂದು ಕ್ರಮಬದ್ಧತೆಗೇ ಒಳಪಟ್ಟು, ಜೀವಕೋಶಗಳ ನಗರವನ್ನೇ ಕಟ್ಟಿಕೊಂಡಿವೆ. ಅಂತಹಾ ದೇಹದ ಸುವ್ಯವಸ್ಥಿತ ಪಟ್ಟಣದೊಳಗೆ ಅಂತರ್ಗತವಾಗಿ ಮನುಷ್ಯ ಚೇತನ ಸದಾ ಕ್ರಿಯಾಶೀಲವಾಗಿದೆ. ಬಸವಣ್ಣ ಹೇಳಿದ ಸ್ಥಾವರದೊಳಗಿನ ಜಂಗಮವದು. ಹಾಗಿದ್ದರೆ, ಹೊಸ ಹೊಸ ಯೋಚನೆಗಳು, ಸೃಜನಶೀಲ ತತ್ವಗಳು ರೂಪ ತಳೆಯುವುದು ಹೇಗೆ!. ಮನುಷ್ಯ ಪ್ರಜ್ಞೆಯ ಚೇತನ ಸ್ವರೂಪಕ್ಕೆ ಮನೆಯ ವ್ಯಾಖ್ಯೆ ಏನು?. ವ್ಯವಸ್ಥೆಯ ಮಿತಿ, ನಿಯಮಗಳನ್ನು ಮೀರಿದ ಚೇತನ ಸ್ವರೂಪವನ್ನು ಕುವೆಂಪು ನೋಡುವ ಬಗೆ ಹೀಗಿದೆ ಅಲ್ಲವೇ. ” ಓ! ನನ್ನ ಚೇತನ ಆಗು ನೀ ಅನಿಕೇತನ || ರೂಪ ರೂಪಗಳನು ದಾಟಿ ನಾಮ ಕೋಟಿಗಳನು ಮೀಟಿ ಎದೆಯ ಬಿರಿಯ ಭಾವದೀಟಿ ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರಿ ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು ಕೊನೆಯನೆಂದು ಮುಟ್ಟದಿರು ಓ! ಅನಂತವಾಗಿರು “ ದೇಹ, ಮನಸ್ಸು ಮತ್ತು ಚೇತನ ಇವುಗಳು ಒಂದಾಗಿ ಪ್ರಕಟವಾಗುವುದೇ ಮನುಷ್ಯನ ರೂಪದಲ್ಲಿ. ದೇಹ ಮತ್ತು ಮನಸ್ಸಿಗೆ ಮನೆ ಬೇಕು, ವ್ಯವಸ್ಥೆ ಬೇಕು, ಸಮಾಜ ಬೇಕು. ನಾಗರಿಗತೆಯ ಎಲುಬು ಗೂಡೊಳಗೆ ಸಿದ್ಧಾಂತಗಳೂ ಮನೆಮಾಡುತ್ತವೆ. ಇವುಗಳೆಲ್ಲವೂ ನಮ್ಮ ಬದುಕನ್ನು, ಬದುಕುವ ಬಗೆಯನ್ನು, ಚಿಂತನೆಯನ್ನು ಒಂದು ಚೌಕಟ್ಟಿನೊಳಗೆ ಕೂಡಿಸುವಾಗ, ಅದಕ್ಕೊಂದು ಸ್ಥಿರತೆ, ಸಮತೋಲನ ಪ್ರಾಪ್ತವಾಗುತ್ತೆ. ಆದರೆ, ವಿಕಸನಕ್ಕೆ ತಹತಹಿಸುವ ಸೃಜನಶೀಲತೆಗೆ, ಚೇತನಕ್ಕೆ ಈ ಎಲ್ಲವೂ ಬಂಧನಗಳೇ.  ರೂಪ ಮತ್ತು ಸ್ವರೂಪ ಎಂಬ ಡೆಫೆನಿಷನ್ ನನ್ನು ದಾಟಲು, ಹೆಸರಿನ ಅಚ್ಚೊತ್ತು ಎಂಬ ಸ್ವಚಿತ್ರ ರೇಖೆಗಳನ್ನು ಮೀರಿ, ಎಲ್ಲ ತತ್ವದ ಎಲ್ಲೆ ಮೀರಿ ಅನಂತವೇ ಗುರಿಯಾಗಿ ವಿಸ್ತರಿಸುವುದು ಚೇತನ.  ಮನೆ ಕಟ್ಟುವುದು ಎಂದರೆ, ಈ ಚೈತನ್ಯದ ವಿಕಸನಕ್ಕೆ ಪೂರ್ಣವಿರಾಮ ಹಾಕಿದಂತೆ. ಸದಾ ಚಲನಶೀಲವೇ ಚೇತನ. ಹಾಗಿದ್ದರೆ ಮನುಷ್ಯನಿಗೆ ಮನೆಯೇ ಬೇಡವೇ?.ಹಾಗೆಂದು ಕವಿಯ ಭಾವವಲ್ಲ.  ಸ್ಥಿರ ಮತ್ತು ಚಲನಶೀಲ ಶಕ್ತಿಗಳು ನಮ್ಮೊಳಗೆ ಒಂದಕ್ಕೊಂದು ತಳಕು ಹಾಕಿಕೊಂಡು ಸದಾ ಟಗ್ ಆಫ್ ವಾರ್ ನಡೆಸುತ್ತಲೇ ಇರುತ್ತವೆ.  ಸೃಜನಶೀಲ ಪ್ರಜ್ಞೆ, ಕವಿಯಾಗುತ್ತದೆ, ಕಲಾವಿದನಾಗುತ್ತದೆ. ಸದಾ ವಿಕಸನದತ್ತ ತುಡಿಯುವ ಮನಸ್ಸು ರಾತ್ರೆ ಮನೆಯೊಳಗೆ ಬೆಚ್ಚಗೆ ನಿದ್ರಿಸುತ್ತೆ. ನೇಸರನ ಮೊದಲ ಕದಿರು ಕನಸುಗಾರನ ಕನಸಿಗೆ, ಕಲ್ಪನೆಗೆ,  ಸ್ಪೂರ್ತಿಯಾಗುತ್ತೆ. ಮನೆ ಹಳೆಯದಾದಾಗ ಹೊಸ ಮನೆ ಕಟ್ಟ ಬೇಕಾದರೆ, ಮೊದಲು ಹಳೆಯ ಅಡಿಪಾಯ, ಗೋಡೆಗಳನ್ನು ಮುರಿದು ತೆಗೆದು, ಹೊಸ ಮನಸ್ಥಿತಿಗನುಗುಣವಾಗಿ, ಕನಸು,ಕಲ್ಪನೆಗಳಿಗನುಗುಣವಾಗಿ ಪುನಃ ಇಟ್ಟಿಗೆಗಳನ್ನು ಒಂದೊಂದೇ ಜೋಡಿಸಿ- “ಕಟ್ಟುವೆವು ನಾವು ಹೊಸ ಮನೆಯೊಂದನು!” ನಗರವನ್ನು ಕಟ್ಟುವ ಪ್ರಕ್ರಿಯೆ, ನಗರದ ವ್ಯವಸ್ಥೆ ಇವುಗಳೆಲ್ಲಾ, ಮನಸ್ಸಿನ, ನಾಗರಿಕ ಸಮಾಜಪ್ರಜ್ಞೆಗೆ ಹಿಡಿಯುವ ಕನ್ನಡಿ ತಾನೇ. ಕಂಬಾರರ ಇಟ್ಟಿಗೆಯ ಪಟ್ಟಣದ ಎದೆಬಡಿತ ಹೀಗಿದೆ.  ಇಟ್ಟಿಗೆಯ ಪಟ್ಟಣ ಹಸಿರನಲ್ಲ, ಈ ನಗರದಲ್ಲಿ ಬಿತ್ತಿ ಬೆಳೆಯುತ್ತಾರೆ ಮಣ್ಣಿನಿಟ್ಟಿಗೆಯನ್ನ. ಇಟ್ಟಿಗೆ ಬೆಳೆಯುತ್ತದೆ, ಕಟ್ಟಡವಾಗುತ್ತದೆ. ಕಟ್ಟಡ ಆಕಾಶದವಕಾಶವನ್ನ ಚುಚ್ಚಿ ಬಿಸಿ ಮಾಡುತ್ತದೆ. ಸೂರ್ಯನ ಬಿಸಿಲಿಗೆ ದೀಪದ ಬೆಳಕಿಗೆ ಕಿಸಕ್ಕಂತ ಹಲ್ಲು ಕಿರಿದು ಹಳದಿಯ ನಗು ನಗುತ್ತದೆ. ಕಟ್ಟಡದ ಇಕ್ಕಟ್ಟು ಸಡಿಲಿ, ಬಿರುಕಿನಲ್ಲಿ ಹಸಿರು ಇಣುಕಿದರೆ, ಇಟ್ಟಿಗೆ ಅದರ ಕತ್ತು ಹಿಸುಕಿ ಕೊಲ್ಲುತ್ತದೆ. ಪಾಪಾತ್ಮ ಹಸಿರು ಹುತಾತ್ಮನಾಗದೆ ಸಾಯುತ್ತದೆ. ಗೊತ್ತಾ ನಿಮಗೆ- ಈ ಸಿಟಿಯೊಳಗೆ ಆತ್ಮದ ಮಾರ್ಕೆಟ್ಟಿದೆ. ತಲೆಯ ಕೊಯ್ದು, ತೊಗಲ ಸುಲಿದು ತಿಪ್ಪರಲಾಗ ತೂಗು ಹಾಕಿದರೆ ತಗೊ, ಹಲೊ ಕಾಸಿಗೊಂದು ಕಿಲೊ ಕೊಸರಿಗೊಂದು ಕಿಲೊ. ತಲೆ ತಿಂಬವರಿಗೆ ಸೂಚನೆ: ಅದು ಹಲ್ಕಿರಿದು ಅಣಕಿಸಿದರೆ ಹೆದರಬೇಡಿರಿ. ***  ***  *** ಮಣ್ಣು, ಹಸಿರು ಮತ್ತು ಜನಪದ, ಇವಗಳ ನಡುವೆ ಆತ್ಮಸಂಬಂಧ. ಯಾವ ಶಾಸ್ತ್ರದ, ತಂತ್ರಜ್ಞಾನದ, ಲಿಪಿಯ ಸಹಾಯ ಇಲ್ಲದೇ  ಪೀಳಿಗೆಯಿಂದ ಪೀಳಿಗೆಗೆ ಬಾಯಿಮಾತುಗಳಿಂದ ದಾಟುತ್ತಾ, ಜನಜೀವನದ ಅನುಭವದ ಸತ್ವವನ್ನೂ ಹೀರಿ ಬೆಳೆಯುವ ಜ್ಞಾನ ಪ್ರಕಾರ, ಜಾನಪದ. ಜಾನಪದದ ಒಂದೊಂದು ಹೆಜ್ಜೆಗಳೂ ಒಂದೊಂದು ಪೀಳಿಗೆ. ಇದೆಲ್ಲಾ ಯಾಕೆ ಹೇಳಿದೆ ಎಂದರೆ, ಚಂದ್ರಶೇಖರ ಕಂಬಾರ ಅವರು ಜನಪದದಲ್ಲೇ ಬೇರು ಕಂಡ ಬರಹಗಾರರು. ಅವರ ಕವಿತೆಗಳಲ್ಲಿ, ಅಂತರ್ಗತ ಜನಪದ ಧ್ವನಿಯಿದೆ. ಈ ಕವಿತೆಗಾಗಿ, ಜಾನಪದದ ಇನ್ನೊಂದು ಮುಖವನ್ನೂ ಹೇಳಬೇಕು. ಸಾಮಾನ್ಯವಾಗಿ ಹಳ್ಳಿಯ ಜನ ಮುಗ್ಧರು, ಮನುಷ್ಯ ಮನುಷ್ಯನ ನಡುವೆ ಇರುವ ಸಂಬಂಧ, ಪ್ರೀತಿ ಗೌರವಗಳನ್ನು ಅತ್ಯಂತ ಶುಧ್ಧ ಅಂತಃಕರಣದಿಂದ ಅನುಭವಿಸುವ ಮಂದಿ ಇವರು. ಇಟ್ಟಿಗೆಯ ಪಟ್ಟಣ ಈ ಕವಿತೆಯಲ್ಲಿ, ಇಟ್ಟಿಗೆ ಮೇಲೆ ಇಟ್ಟಿಗೆ ಬೆಳೆದು ಪಟ್ಟಣವಾಗಿ, ಆಕಾಶದವಕಾಶ ನುಂಗುವುದು ಮೊದಲ ಚರಣ. ಬೆಳೆವ ಹಸಿರಿನ ಅವಕಾಶವನ್ನೂ ಆಕಾಶದ ಮೂರೂ ಸ್ವತಂತ್ರ ಆಯಾಮಗಳನ್ನು ಪಟ್ಟಣ ನುಂಗಿದೆ. ಒಂದುಕಡೆ ಜಗತ್ತಿಗೇ ಉಸಿರು ಕೊಡುವ ಹಸಿರು ಕಳೆಯಿತು ಎಂದಾದರೆ, ಅದರ ಜತೆಗೆ ನ್ಯಾಚುರಲ್ ಆದ ಮನುಷ್ಯ ಪ್ರಜ್ಞೆಯೂ, ಮತ್ತು ಜೀವಜಾಲದ ನೈಸರ್ಗಿಕ ವಿಕಾಸಕ್ಕೆ ಅಗತ್ಯವಾದ ಫ್ರೀ ಸ್ಪೇಸ್ ( ಆಕಾಶದವಕಾಶ) ಕೂಡಾ ಸಂಕುಚಿತವಾಗಿದೆ.   ಅಷ್ಟು ಮಾತ್ರವಲ್ಲದೆ, ಕಿಸಕ್ಕನೆ ಹಲ್ಕಿರಿದು ಹಳದಿ ನಗು ನಗುತ್ತದೆ! ಕಾಮಾಲೆ ರೋಗ ಬಂದವರಿಗೆ, ಎಲ್ಲವೂ ಹಳದಿಯಾಗಿ ಕಂಡು, ಹಳದಿಯೇ ಜಗತ್ತು,ಹಳದಿಯೇ ಸತ್ಯ. ಇಟ್ಟಿಗೆ,ಪಟ್ಟಣವಾದಾಗ, ಅದಕ್ಕೆ ಅದರ ಮಾರ್ಗವೇ ಸರಿ ಎನ್ನುವ ಕಾಮಾಲೆ ದೃಷ್ಟಿಯೇ, ಅದಕ್ಕೇ ಹಳದಿ ನಗುವೇ !! ಸಾಧಾರಣವಾಗಿ ಅಶುಭ್ರ ಹಲ್ಲುಗಳು ಹಳದಿಯಾಗಿರುತ್ತವೆ. ಹಾಗೆ ನಕ್ಕಾಗ, ನಗುವಿನಲ್ಲಿ,ಹಳದಿ ಹಲ್ಲು ಇಣುಕುತ್ತವೆ. ಇದು ಹಳದಿ ನಗುವೇ?. ಇಟ್ಟಿಗೆಯ ಪಟ್ಟಣ ಮತ್ತು ಹಾಗೆ ಮೋನೋಕ್ರೊಮ್ಯಾಟಿಕ್, ಬೆಳವಣಿಗೆ, ಅಶುಬ್ರ ಅನ್ನುವ ಧ್ವನಿಯೇ? ಇನ್ನೊಂದು ವಿಷಯ, ಇಟ್ಟಿಗೆಗೆ ನಿರ್ದಿಷ್ಟ ಆಕಾರ, ಇದೆ. ಇಟ್ಟಿಗೆ, ವೆಲ್ ಡಿಫೈನ್ಡ್. ಹಸಿರಿಗೆ ಯಾವಾಗಲೂ ಫ್ರೀ ಡೆಫಿನಿಷನ್.  ಇದೇ ಎಂಬ ಆಕಾರ, ಚಚ್ಚೌಕಾರದ ಆಕೃತಿಗಳಿಂದ ಚೂಪು ಮೂಲೆಗಳಿಂದ ಮೀರಿದ್ದು ಹಸಿರು. ಅದಕ್ಕೇ ಹಸಿರು,ಸ್ವಾತಂತ್ರ್ಯದ ಪ್ರತೀಕ. ಇಟ್ಟಿಗೆ,ಮನುಷ್ಯ ನಿರ್ಮಿತ. fixed ಆಕಾರ, fixed ಚಿಂತನಾವಕಾಶ. ಕಟ್ಟಡದ ಬಿರುಕಿನಲ್ಲಿ, ಹಸಿರು ಚಿಗುರಿದರೆ ಅದನ್ನೂ ಈ ಇಟ್ಟಿಗೆ ನುಂಗಿ ಹಾಕುತ್ತದೆ!. ಕೋಡಗಾನ ಕೋಳಿ ನುಂಗಿತ್ತಾ ಅಂತ ಸಿಕ್ಕಿದ್ದೆಲ್ಲಾ ನುಂಗುತ್ತಾ ಸಾಗುವ ಇಟ್ಟಿಗೆ, ತನ್ನ, ಮತ್ತು ಇನ್ನಿತರ ಇಟ್ಟಿಗೆಗಳ ಅಮಾನುಷ ಬಂಧದಲ್ಲಿ ನೈಸರ್ಗಿಕ ತತ್ವಕ್ಕೆ, ಪ್ರೀತಿ,ಸ್ವಾತಂತ್ರ್ಯಕ್ಕೆ ಜಾಗವನ್ನು ಕೊಡುವುದಿಲ್ಲ, ಮಾತ್ರವಲ್ಲ, ಅದನ್ನು ಕತ್ತು ಹಿಸುಕಿ ಕೊಲ್ಲುತ್ತದೆ. ಪಟ್ಟಣದಲ್ಲಿ ಮನುಷ್ಯಮುಖೀ,ಜೀವನ್ಮುಖೀ ಸತ್ವಕ್ಕೆ ಜಾಗವಿಲ್ಲ, ಮನುಷ್ಯಸಹಜ ಬೆಳವಣಿಗೆಗೆ ಸ್ವಾತಂತ್ರ್ಯವೂ ಇಲ್ಲ. ಹುತಾತ್ಮನಾಗದೆ ಸಾಯುತ್ತದೆ, ಪಾಪಾತ್ಮ ಹಸಿರು!. ಹಸಿರು ಪಾಪಾತ್ಮವಾಗಿ ಕಾಣುವುದು, ಮೇಲಿನ ಚರಣದ ಕಾಮಾಲೆ ದೃಷ್ಟಿಗೆ.  ಯಾವುದೇ ಉದ್ದೇಶ ಸಾಧಿಸದೇ ಕೊಲ್ಲಲ್ಪಟ್ಟಾಗ, ಅ ಸಾವಿಗೆ ಹುತಾತ್ಮ ಪಟ್ಟವೂ ಸಿಗಲ್ಲ. ಈ ಪಟ್ಟಣದಲ್ಲಿ ಆತ್ಮದ ಮಾರ್ಕೆಟ್ ಇದೆ! ಪಟ್ಟಣದ ವ್ಯಾಪಾರೀ ಮನೋಭಾವ, ಆತ್ಮವನ್ನೂ ಮಾಡಿಕೊಳ್ಳಲು ಸಿಧ್ಧ. ವ್ಯಾಪಾರ ಕೇಂದ್ರಿತ, ಬಂಡವಾಳಶಾಹಿ ವ್ಯವಸ್ಥೆ, ಹಣಕ್ಕಾಗಿ, ಆತ್ಮವನ್ನೂ ಮಾರಬಲ್ಲದು. ಆತ್ಮ ಎಂದರೆ ಇಲ್ಲಿ, ಅಧ್ಯಾತ್ಮಿಕ ಅರ್ಥವೇ ಆಗಬೇಕೆಂದಿಲ್ಲ, ಆತ್ಮ ಎಂದರೆ, ಮನುಷ್ಯನೊಳಗಿನ ಜೀವಪ್ರಜ್ಞೆ, ಸ್ವಂತಿಕೆ  ಅಂತಲೂ ಅಂದುಕೊಳ್ಳಬಹುದು. ಅಂತಹ ವ್ಯವಸ್ಥೆಯಲ್ಲಿ, ತಲೆ ಕಡಿದು, ಸಿಪ್ಪೆ ಸುಲಿದು, ಉಲ್ಟಾ ನೇತು ಹಾಕಿದರೂ ಯಾರಿಗೂ ಏನೂ ವೇದನೆಯಿಲ್ಲ, ಸಂವೇದನೆಯೂ ಸತ್ತಿದೆ. ತಲೆ ಕಡಿದದ್ದರಿಂದ, ಯೋಚನಾಶಕ್ತಿಯೂ ವಿವೇಚನಾಶೀಲತೆಯೂ ಗತವಾಗಿದೆ. ‘ಇಟ್ಟಿಗೆಯ ಪಟ್ಟಣ’ ಇಲ್ಲಿ ನಿರ್ದಯೀ, ಅಮಾನುಷ ವ್ಯಾಪಾರೀ ಜಗತ್ತನ್ನು ಪ್ರತಿಧ್ವನಿಸುತ್ತದೆ. ‘ತಲೆ ತಿಂಬವಗೆ’ ಎಂಬ ಪದ, ಅನೇಕ ಯೋಚನೆಗಳಿಗೆ ಮನದ ಕದ ತೆರೆಯುತ್ತದೆ. ಜಾನಪದಕ್ಕೆ ಮನೆ ಕಟ್ಟುವ, ಮನೆಯೊಳಗಿನ ಕಟ್ಟುಪಾಡುಗಳ ಜರೂರತ್ತಿಲ್ಲ. ಅದು ಕುವೆಂಪು ಅವರ ಕವಿತೆಯ, ಚೇತನ ಸ್ವರೂಪಿ. ಹಾಗೆಯೇ ಪ್ರೇಮಸ್ವರೂಪಿ,ಸಂವೇದನಾ ಸ್ವರೂಪಿ ಕೂಡಾ. ಕಂಬಾರರ ಕವಿತೆಯ ಇಟ್ಟಿಗೆಯ ಪಟ್ಟಣ, ಶಿಷ್ಟ ಮನಸ್ಸಿನ ಹಿಡಿತದ  ಮತ್ತು ಜಾನಪದದ ಚೋಮನ ದುಡಿಯ ಬಡಿತದ ನಡುವಿನ ಸಂಘರ್ಷ. ನಗರ ಕಟ್ಟುತ್ತಾ ತನ್ನದೇ ವರ್ತುಲ ಬೆಳೆಸುವ ಮಹತ್ವಾಕಾಂಕ್ಷೆಯ ದಾರಿಯಲ್ಲಿ ಪ್ರಕೃತಿಯ ಇತರ ಎಲ್ಲಾ ಜೀವ ವೇತನಗಳನ್ನು ಶೋಷಿಸುವ, ಕೊಲ್ಲುವ ನಾಗರಿಕ ಸಮಾಜದ ವಿಕೃತ ಮನಸ್ಸನ್ನು ಕವಿತೆ ಚಿತ್ರಿಸುತ್ತದೆ. ಕೊನೆಗೆ “ನಾಗರಿಕತೆ” ಎಂದರೇನು ಎಂಬ ಮೂಲಭೂತ ಪ್ರಶ್ನೆ ನಮ್ಮನ್ನು ತೀವ್ರವಾಗಿ ಕಾಡುತ್ತೆ. ************************************************** ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಆತ್ಮಕತೆ–03 ಅಕ್ಷರ ಬೀಜದ ಬೆಳಕಿನತ್ತ….. ಗುಂದಿ ಹಿತ್ತಲಿನ ಎರಡೂ ಕುಟುಂಬಗಳು ಗೇಯ್ದು ಉಣ್ಣುವ’ ಬದುಕಿನಲ್ಲಿ ಸಂತೃಪ್ತಿ ಕಂಡಿದ್ದವು. ಅಕ್ಷರ ದಾರಿದ್ರö್ಯದ ದಟ್ಟ ಬಡತನವೊಂದು ಅವರಿಗೆ ಬಡತನವೇ ಅನ್ನಿಸಿರಲಿಲ್ಲ. ಅಂಥ ಕುಟುಂಬಗಳಲ್ಲಿ ಗಣಪು ಎಂಬ ಹುಡುಗನೊಬ್ಬ ಹೇಗೋ ಅಕ್ಷರ ಕಲಿಕೆಗೆ ಆಸೆಪಟ್ಟು ಅಕ್ಷರ ಬೀಜದ ಬೆಳಕಿನ ಬೆನ್ನು ಹತ್ತಿದ. ಸಮೀಪದ ಹೆಗ್ರೆ ಶಾಲೆಯಲ್ಲಿ ಅ, ಆ ಕಲಿಕೆಯ ಹಂತದಲ್ಲೆ ತಾಯಿ ತೀರಿಕೊಂಡಳು. ಶಾಲೆ ಕಲಿಯುವ ಹಂಬಲಕ್ಕೆ ಮತ್ತುಷ್ಟು ತೊಡಕುಗಳಾದವು. ಮತ್ತೆ ಕೆಲವು ದಿನಗಳ ಬಳಿಕ ಯಾರದೋ ಸಹಾಯದಿಂದ ಹನೇಹಳ್ಳಿಯ ಸರಕಾರಿ ಹಾಸ್ಟೆಲ್ಲು ಸೇರಿಕೊಂಡು ಓದಲಾರಂಭಿಸಿದ. ಆದರೆ ಮನೆಯಲ್ಲಿ ಯಾರಿಗೂ ಗಣಪು ಶಾಲೆಗೆ ಸೇರಿದ್ದು ಸರಿಬರಲಿಲ್ಲ. ಅಕ್ಕಂದಿರು ಅಣ್ಣಂದಿರೆಲ್ಲ ಸಾಣೆಕಟ್ಟೆಯ ಉಪ್ಪಿನಾಗರ ಕೆಲಸಕ್ಕೆ ಸೇರಿ ಅನ್ನದ ದಾರಿ ಕಂಡುಕೊಂಡಿದ್ದರು. ಗಣಪು ಅದೇ ಕೆಲಸಕ್ಕೆ ಅವರೆಲ್ಲರನ್ನು ಕೂಡಿಕೊಳ್ಳಬೇಕೆಂಬುದು ಅವರೆಲ್ಲ ಒತ್ತಾಸೆಯಾಗಿತ್ತು. ಒತ್ತಾಯದಿಂದ ಶಾಲೆ ಬಿಡಿಸಿ ಮನೆಗೆ ಕರೆತಂದರಾದರೂ ಗಣಪು ಆಗರದ ಕೆಲಸಕ್ಕೆ ಯಾವ ಬಗೆಯಿಂದಲೂ ಒಪ್ಪಿಕೊಳ್ಳಲಿಲ್ಲ. ನಾಡವರ ಮನೆಯ ದನಗಳನ್ನು ಮೇಯಿಸುವ ಕೆಲಸಕ್ಕೆ ನೇಮಿಸಲಾಯಿತು. ಮನಸ್ಸಿಲ್ಲದ ಮನಸ್ಸಿನಲ್ಲಿ ಗಣಪು ಗೋವಳಿಗನಾದ. ‘ಹಣೆಯ ಬರಹವೊಂದು ಸರಿಯಾಗಿದ್ದರೆ ಅದನ್ನು ಯಾರೂ ಕೆಡಿಸಲಾರರು’ ಎಂಬ ಹಳೆಯ ನಂಬಿಕೆಯ ಮಾತೊಂದಿದೆ. ಗಣಪು ಮತ್ತೆ ಅಕ್ಷರದ ದಾರಿಯಲ್ಲಿ ನಡೆಯುವಂತೆ ಮಾಡಿದ ವಿಚಿತ್ರ ಘಟನೆಯೊಂದು ನಡೆದು ಹೋಯಿತು… ಅಗ್ಗರಗೋಣದ ಏಸುಮನೆ ನಾರಾಯಣ ನಾಯಕ ಎಂಬುವವರ ಮಗ ಯಶವಂತ ಹನೇಹಳ್ಳಿಯ ಶಾಲೆಯಲ್ಲಿ ಗಣಪುವಿನ ಸಹಪಾಠಿಯಾಗಿದ್ದವನು. ಅಗ್ರಗೋಣದಿಂದ ಹನೇಹಳ್ಳಿಗೆ ಗದ್ದೆ ಬಯಲಿನ ದಾರಿಯಲ್ಲಿ ಹೋಗುವಾಗ ನಡುವೆ ಗುಂದಿಹಿತ್ತಲಿನ ಬದಿಯಲ್ಲೇ ಕಾಲು ದಾರಿಯಿದೆ. ಯಶವಂತ ಅದೇ ದಾರಿಯಲ್ಲಿ ನಡೆಯುತ್ತಾ ಗಣಪುವಿನ ಜೊತೆಸೇರಿ ಮುಂದುವರಿಯುವುದು ರೂಢಿಯಾಗಿತ್ತು. ಇದೇ ಕಾರಣದಿಂದ ಇಬ್ಬರಲ್ಲೂ ಅನ್ಯೋನ್ಯತೆ ಬೆಳೆದು ಗಾಢ ಸ್ನೇಹ ಬೆಸೆದುಕೊಂಡಿತ್ತು. ಗಣಪು ಶಾಲೆ ಬಿಟ್ಟು ದನಕಾಯ ಹತ್ತಿದ ಬಳಿಕ ಯಶವಂತನಿಗೆ ಒಂಟಿತನ ಕಾಡಿತು. ಗುಂದಿಹಿತ್ತಲಿನಿಂದ ಮುಂದಿನ ಹನೇಹಳ್ಳಿಯ ದಾರಿ ಬೇಸರ ಹುಟ್ಟಿಸಿತು. ಒಂದು ದಿನ ಶಾಲೆಗೆ ಹೊರಟವನು ದಾರಿಯನ್ನು ಬದಲಿಸಿ ಹಳ್ಳದ ಈಚೆ ನಾಡುಮಾಸ್ಕೇರಿ ಭಾಗದ ಗದ್ದೆ ಬಯಲಲ್ಲಿ ಗಣಪು ದನ ಮೇಯಿಸುತ್ತಿರುವಲ್ಲಿಗೆ ಬಂದು, “ಗಣಪು ನೀನು ಶಾಲೆಗೆ ಬರದಿದ್ರೆ ನನಗೂ ಶಾಲೆ ಬೇಡವೇ ಅನಿಸ್ತಿದೆಯೋ” ಎಂದು ತನ್ನ ದುಃಖ ತೋಡಿಕೊಂಡ. ಅಂದು ಇಡಿಯ ದಿನ ಗಣಪುವಿನ ಜೊತೆ ಇದ್ದು ದನ ಮೇಯಿಸುವಲ್ಲಿ ಆಟವಾಡುತ್ತ ಸಂಜೆ ಶಾಲೆ ಬಿಡುವ ಸಮಯ ನೋಡಿ ಮನೆಗೆ ಮರಳಿದ. ಯಶವಂತ ಅಂದು ಶಾಲೆಗೆ ಹೋಗದಿರುವ ಸಂಗತಿ ಮನೆ ಮಂದಿಗೆನೂ ತಿಳಿಯಲಿಲ್ಲ. ಯಶವಂತ ಮರುದಿನವೂ ಗಣಪು ಇರುವಲ್ಲಿಗೆ ಬಂದ…. ಆಡುತ್ತ ದಿನ ಕಳೆದ. ಇದು ರೂಢಿಯಾಯಿತು. ಪಾಟೀಚೀಲದೊಂದಿಗೆ ಮನೆಯಿಂದ ಶಾಲೆಗೆ ಹೋಗುವ ಸಂಭಾವಿತನಂತೆ ಹೊರಡುವ ಯಶವಂತ ದಿನವೂ ಗಣಪು ಇದ್ದಲ್ಲಿಗೆ ಬಂದು ಸಮಯ ಕಳೆದು ಮರಳುತ್ತಿದ್ದ. ಅಂಥ ಒಂದು ದಿನ ಯಶವಂತ ಬಂದದ್ದೆ ಯಾವುದೋ ಆಟದಲ್ಲಿ ಇಬ್ಬರೂ ಮೈಮರೆತಿದ್ದರೆ ಗಣಪು ಬಯಲಿನಲ್ಲಿ ಬಿಟ್ಟ ದನಗಳೆಲ್ಲ ಜಮೀನ್ದಾರ್ ಗಾಂವಕರರೊಬ್ಬರ ಕಾರುಗದ್ದೆಗೆ ನುಗ್ಗಿ ಹಾಯಾಗಿ ಮೇಯ ತೊಡಗಿದವು. ಆಕಸ್ಮಿಕವಾಗಿ ಬಯಲಿಗೆ ಬಂದ ಗಾಂವಕರರು ಹಸನಾಗಿ ಮೊಳಕೆಯೊಡೆದಿದ್ದ ಕಾರುಗದ್ದೆ ದನಗಳ ಮೇವಿನ ಕಣವಾದುದನ್ನು ಕಂಡು ಕೆಂಡಾಮಂಡಲವಾದರು. ಗದ್ದೆ ಹಾಳೆಯ ಮೇಲಿನ ಲುಕ್ಕಿ ಗಿಡದ ಬರಲು ಕಿತ್ತುಕೊಂಡದ್ದೇ ಗಣಪುವನ್ನು ಹಿಡಿದು ಬಾರಿಸತೊಡಗಿದರು. ಕಾದ ಕಬ್ಬಿಣದ ಸಲಾಕೆಯಂತೆ ಲುಕ್ಕಿ ಬರಲಿನ ಬಾಸುಂಡೆಗಳೆದ್ದುದನ್ನು ಖಾತ್ರಿ ಪಡಿಸಿಕೊಂಡೇ ಗಾಂವಕರರು ಗಣಪುವಿನ ಕೈ ಬಿಟ್ಟಿದ್ದರು. ಯಶವಂತ ದಿಕ್ಕುಗೆಟ್ಟವನಂತೆ ಊರಿನತ್ತ ಓಡಿದ್ದ. ನೋವು ಅವಮಾನಗಳಿಂದ ಜರ್ಜರಿತನಾದ ಗಣಪು ಗದ್ದೆ ಹಾಳೆಯ ಮೇಲೆ ಕುಸಿದು ಕುಳಿತ. ತನ್ನ ಬೆನ್ನಿಗೆ ಬಾಸುಂಡೆಗಳು ಮೂಡುವಂತೆ ಬಾರಿಸಿದ ಗಾಂವಕರರಿಗಿಂತ ತನ್ನ ತಂದೆ ಅಕ್ಕಂದಿರು ಅಣ್ಣನ ಮೇಲೆ ಸಿಟ್ಟು ಉಕ್ಕಿ ಬಂತು. ತನ್ನನ್ನು ಶಾಲೆ ಬಿಡಿಸಿ ಕರೆತಂದು ದನ ಕಾಯಲು ಹಚ್ಚಿದ ಅವರೆಲ್ಲ ಅಪ್ಪಟ ವೈರಿಗಳಂತೆ ಭಾಸವಾದರು. ಮತ್ತೆ ಮನೆಗೆ ಹೋದರೂ ತನ್ನದೇ ತಪ್ಪೆಂದು ಆರೋಪಿಸಿ ಪೆಟ್ಟು ಕೊಡುತ್ತಾರೆ ಎಂಬ ಭಯವೂ ಆಯಿತು. ಮತ್ತೆಂದೂ ಮನೆಕಡೆ ಕಾಲಿಡಲೇಬಾರದು ಎಂದು ಗಣಪು ಆಕ್ಷಣದಲ್ಲಿ ನಿರ್ಧರಿಸಿದ. ತಾಯಿ ತೀರಿದ ಬಳಿಕ ಆಗಾಗ ಮನೆಗೆ ಬಂದು ಸಾಂತ್ವನ ಹೇಳಿ ತನ್ನನ್ನು ವಿಶೇಷವಾಗಿ ಮದ್ದು ಮಾಡುತ್ತಿದ್ದ ಸಾಣೆಕಟ್ಟೆಯ ದೊಡ್ಡಮ್ಮ ಹಮ್ಮಜ್ಜಿ’ ನೆನಪಾದಳು. ಗಣಪು ಅಳುತ್ತಲೇ ಸಾಣೆಕಟ್ಟೆಯತ್ತ ಹೆಜ್ಜೆ ಹಾಕಿದ. ರಾಮಕೃಷ್ಣ ಅವರ ತಂದೆ-ತಾಯಿ ಸಾಣೆಕಟ್ಟೆಯಲ್ಲಿ ದೊಡ್ಡಮ್ಮನ ಮಡಿಲಲ್ಲಿ ತಲೆಯಿಟ್ಟು ಬಿಕ್ಕಳಿಸಿದ ಗಣಪು ತಾನು ಮತ್ತೆಂದೂ ಊರಿಗೆ ಹೋಗುವುದಿಲ್ಲವೆಂದೂ ತನ್ನನ್ನು ಮತ್ತೆ ಶಾಲೆಗೆ ಸೇರಿಸೆಂದೂ ಪರಿಪರಿಯಾಗಿ ಬೇಡಿಕೊಂಡ. ತಬ್ಬಲಿ ಕಂದನ ಆಕ್ರಂದನಕ್ಕೆ ಅಂತಃಕರಣ ಕಲುಕಿದಂತಾದ ಹಮ್ಮಜ್ಜಿ ಗಣಪುವನ್ನು ಗಟ್ಟಿಯಾಗಿ ಎದೆಗೆ ಅಪ್ಪಿಕೊಂಡು ತಾಯ್ತನದ ಪ್ರೀತಿಯೆರೆಯುತ್ತ ಬೆನ್ನ ಮೇಲಿನ ಬಾಸುಂಡೆಗಳಿಗೆ ಎಣ್ಣೆ ಲೇಪಿಸತೊಡಗಿದಳು. ************************************************************************ ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ…

Read Post »

ಅಂಕಣ ಸಂಗಾತಿ, ಕಗ್ಗಗಳ ಲೋಕ

ಅಂಕಣ ಬರಹ ಕಗ್ಗಗಳ ಲೋಕ ಆದರಣೀಯ ಡಾII ಡಿ. ವಿ. ಗುಂಡಪ್ಪನವರು ರಚಿಸಿದ ‘ಮಂಕುತಿಮ್ಮನ ಕಗ್ಗ’ ಒಂದು ಮೇರುಕೃತಿ. ಅವರ ಒಂದೊಂದು ಮುಕ್ತಕವೂ ಕೂಡ ಸಾರ್ವಕಾಲಿಕ ಸತ್ಯ! ಜೀವನದಲ್ಲಿ ಎದುರಾಗುವ ಸಾವಿರಾರು ಪ್ರಶ್ನೆಗಳಿಗೆ ತತ್ವಶಾಸ್ತ್ರ,ಸ್ವಾನುಭವ ಮತ್ತು ಆಧ್ಯಾತ್ಮದ ಹಿನ್ನೆಲೆಯಲ್ಲಿ ಉತ್ತರ ನೀಡುವ ಕಗ್ಗಗಳು ಓದುಗರಿಗೆ ಆಪ್ತವಾಗಿ ಬಿಡುತ್ತವೆ. ಒಬ್ಬ ಸಾಮಾನ್ಯ ಮನುಷ್ಯನಂತೆ ಮೈತ್ರಿಭಾವದಿಂದ ಬರೆದ ಈ ಕಗ್ಗಗಳು ಅಸಂಖ್ಯ ಮಂದಿಗೆ ಸಾಂತ್ವನ ನೀಡುತ್ತವೆ. “ಎಲ್ಲದರಲ್ಲೂ, ಎಲ್ಲರಲ್ಲೂ ಒಳ್ಳೆಯದನ್ನೇ ಕಂಡು , ಜೀವನದ ಸೊಬಗನ್ನು ಸವಿಯಬೇಕು” ಎಂದು ದಾರಿತೋರುವ ದಿವ್ಯಚೇತನ ನಮ್ಮ ಗುಂಡಪ್ಪನವರು. ಹೊಸ ಪೀಳಿಗೆಯ ಓದುಗರಿಗೆ ಡಿ.ವಿ.ಜಿ.ಯವರ ಕಗ್ಗಗಳ ಪರಿಚಯಿಸುವುದು ನನ್ನೀ ಬರಹಗಳ ಉದ್ದೇಶವಾಗಿದೆ ಮುಕ್ತಕ- ೬೦೦ ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ I ಕುದುರೆ ನೀನ್ , ಅವನು ಪೇಳ್ದಂತೆ ಪಯಣಿಗರು II ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು I ಪದ ಕುಸಿಯೆ ನೆಲವಿಹುದು ಮಂಕುತಿಮ್ಮ II ಭಾವಾರ್ಥ : ನಮ್ಮ ಬದುಕೇ ಒಂದು ಜಟಕಾಬಂಡಿ. ಆ ಬಂಡಿಯನ್ನು ಎಳೆದುಕೊಂಡು ಹೋಗುವ ಕುದುರೆಗಳು ನಾವು. ಬಂಡಿಯನ್ನೆಳೆಯುವುದು ನಮ್ಮ ಕಾರ್ಯವೇ ಹೊರತು ದಾರಿಯನ್ನು ಆಯ್ಕೆ ಮಾಡುವ ಹಕ್ಕು ನಮಗಿಲ್ಲ. ಬಂಡಿಯ ಒಡೆಯನಾದ ವಿಧಿಯು ತೋರಿದ ಹಾದಿಯಲ್ಲೇ ನಾವು ನಡೆಯಬೇಕು. ಅದು ಸುಖದ ಹಾದಿಯೋ, ದುಃಖದ ಹಾದಿಯೋ – ನಾವದನ್ನು ಆಯ್ಕೆ ಮಾಡುವಂತಿಲ್ಲ. ಬಾಲ್ಯ, ಯೌವನಾವಸ್ಥೆಯಲ್ಲಿ ಓಡಿದ ಪಾದಗಳು ವೃದ್ಧಾಪ್ಯ ತಲುಪಿದಾಗ ಸೋತು ಹೋಗಿ ಕುಸಿದುಬಿದ್ದಾಗ , ಭೂಮಿಯ ಮೇಲೆ ದಹನವೋ ದಫನವೋ ಆಗುವಲ್ಲಿಗೆ ನಮ್ಮ ಬದುಕಿನ ಓಟ ಕೊನೆಗೊಳ್ಳುತ್ತದೆ. ಬದುಕೆಂದರೆ ಇಷ್ಟೇ!! ಮುಕ್ತಕ – ೬೬೧ ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ Iಫಲ ಮಾಗುವಂದು ತುತ್ತೂರಿ ದನಿಯಿಲ್ಲIIಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲIಹೊಲಿ ನಿನ್ನ ತುಟಿಗಳನು ಮಂಕುತಿಮ್ಮ ಭಾವಾರ್ಥ: ಅತೀ ಸೂಕ್ಷ್ಮವಾದ ಮೊಳಕೆಗೆ ಭೂಮಿಯ ಮಣ್ಣಿನ ಪದರವನ್ನು ಒಡೆದು ಹೊರಬರುವುದು ಸುಲಭದ ಮಾತಲ್ಲ. ಆದರೂ ಅದು ತಾನೊಂದು ದೊಡ್ಡ ಸಾಧನೆಯನ್ನು ಮಾಡುತ್ತಿದ್ದೇನೆಂದು ಕೂಗಿ ಹೇಳಲ್ಲ. ಮಧುರವಾದ ಸವಿಯನ್ನು ಕೊಡುವ ಫಲವು ತನ್ನ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ. ಸೌರವ್ಯೂಹಕ್ಕೆ ಒಡೆಯನಾದ ಸೂರ್ಯನು ಹಗಲು ಹೊತ್ತು ಬೆಳಕನ್ನು ನೀಡಿದರೆ, ರಾತ್ರಿ ಚಂದ್ರನು ತಂಪನ್ನೀಯುವನು. ಇವರು ಮೌನವಾಗಿ ತಮ್ಮ ಕಾಯಕವನ್ನು ಮಾಡುವರೇ ಹೊರತು ತಮ್ಮ ಹಿರಿತನದ ಬಗ್ಗೆ ಜಂಬ ಪಟ್ಟುಕೊಂಡಿಲ್ಲ. ಇವರೆಲ್ಲಾ ತಮ್ಮ ಪಾಡಿಗೆ ತಮ್ಮ ಕಾಯಕವನ್ನು ಮೌನವಾಗಿ ಮಾಡುತ್ತಿರುವಾಗ ನೀನ್ಯಾಕೆ ಅವರಂತೆ ಮೌನವಾಗಿರಬಾರದು ಎಂದು ಮನುಷ್ಯರನ್ನು ಪೂಜ್ಯ ಡಿ.ವಿ.ಜಿ ಯವರು ಕೇಳುತ್ತಾರೆ. ******************************** ವಾಣಿ ಸುರೇಶ್ ಕಾಮತ್ ವಾಣಿ ಸುರೇಶ್ ಕಾಮತ್ , ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು ಬೆಂಗಳೂರು ವಾಸಿ. ಓದು ಮತ್ತು ತೋಟಗಾರಿಕೆ ಇವರ ಹವ್ಯಾಸ.

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ರಂಗ ರಂಗೋಲಿ-03 ಜಾತ್ರೆಯ ಲೋಕ ಕಲಾವಿದಳೆನಿಸಿಕೊಳ್ಳುವ ಹಂಬಲಿಕೆಗೆ,ಒಲವಿಗೆ ಬಾಲ್ಯದ ಅನುಭವಸ್ವನಗಳು  ಓಂ ಕಾರಗಳಾಗಿ ಮೂಡಿರಬೇಕು. ಹಲವು ಕಥೆಗಳು,ಹಲವು ಪಾತ್ರಗಳು,ಆ ಪಾತ್ರಗಳ ಅಭಿನಯ..ಎದುರಿಗೊಬ್ಬ ಕಾಣದ ನಿರ್ದೇಶಕ. ಅವನಿಗೆ ಶರಣಾಗಿ ಬದುಕಿನ ರಂಗಭೂಮಿಯಲ್ಲಿ ಬಗೆಬಗೆಯ ಪಾತ್ರ ಕಥೆ ಅನಾವರಣಗೊಳ್ಳುತ್ತಿತ್ತು. ಈ ‘ಸಿರಿ’ ನೋಟ ಒಬ್ಬ ಕಲಾವಿದೆಯ ಒಳಗನ್ನು..ಅಥವಾ ಕಲೆಯ ಬಗ್ಗೆ ಅತೀವ ಪ್ರೀತಿಭಾವವನ್ನು ಚಿಲುಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಊರ ಉತ್ಸವ ಮುಗಿದರೂ ಅದೇ‌ ಮಂಪರು.  ನಾಲ್ಕು ದಿನದ ಜಾತ್ರೆ ರಥೋತ್ಸವದೊಂದಿಗೆ ಸಂಪನ್ನಗೊಳ್ಳುತ್ತಿತ್ತು. ಮರುದಿನವೂ ಹಗಲಿಗೆ ಬೆಳಗಾದಾಗ ಜಾತ್ರೆಗದ್ದೆ ಖಾಲಿ ಖಾಲಿ. ಗದ್ದೆಯಲ್ಲಿ ಚದುರಿ ಬಿದ್ದಿರುವ ಒಡೆದ ಬಳೆ, ಮಣ್ಣಿನೆದೆಗೆ ಒತ್ತಿಕೊಂಡ ಕುಂಕುಮದ ಗುರುತು, ಹಿಂಗಾರ ಹೊರಕವಚ, ಮತ್ತೆ ಇನ್ನಾವುದೋ ಊರಿನ ಜಾತ್ರೆ ಮಿನುಗಲು ಹೋಗುವ ಕಾಯಕಕ್ಕೆ ತಮ್ಮ ಸಂತೆ ಸರಂಜಾಮು ಕಟ್ಟುತ್ತಿರುವ ಕೆಲಸಗಾರರು, ಮಕ್ಕಳನ್ನು ಹೊತ್ತು, ಜೀಕಿ ಜೀಕಿ ಆ ಹದಬಿಸಿಯ ಬಿಸುಪು ಕಳಚಿಕೊಳ್ಳದೆ ಮೌನವಾಗಿ ಕೂತ ಆಟದ ಕುದುರೆಗಳು, ಕೊಂಡಿ ಕಳಚಿಕೊಂಡ ತೊಟ್ಟಿಲು, ಇನ್ನೂ ಸಾಮಾನುಗಳನ್ನು ಕಟ್ಟುವ ಮುನ್ನದ ಕೊನೆಯ ವ್ಯಾಪಾರದ ನಿರೀಕ್ಷೆಯಲ್ಲಿ ಕಣ್ಣಪಿಳುಕಿಸುವ ಪಾತ್ರೆ ಅಂಗಡಿಯವನು, ರಟ್ಟಿನ ಪೆಟ್ಟಿಗೆಯೊಳಗೆ ಸೇರಿಕೊಳ್ಳುತ್ತಿರುವ ಚಪ್ಪಲಿಗಳು,  ಎಸೆದ ಪತ್ರ, ಐಸ್ ಕ್ಯಾಂಡಿ ರಸಿಕ ಬಾಯಲ್ಲಿ ಕರಗಿ ಅನಾಥವಾದ ಕಡ್ಡಿಗಳು.ಮಣ್ಣಿಗೆ ಸಿಲುಕಿಕೊಂಡ ಜಿಲೇಬಿ ತುಂಡು, ಮಿಠಾಯಿ, ಒಂದು ರೂಪಾಯಿ ನಾಣ್ಯ, ಒಂದು ನೋಟು. ಅದೆಷ್ಟು ನೋಟಗಳು! ಒಂದೇ ಎರಡೇ ಈ ಪಳೆಯುಳಿಕೆಗಳು. ನಿನ್ನೆ ತೆರೆದುಕೊಂಡ ಕಥೆಗಳು ಇದೀಗ ಬಾಯಿ ಕಳೆದು ಚೌಕಿಯಲ್ಲಿ ಮುಖ ಬಣ್ಣ ತೊಳೆಯುತ್ತಿವೆ. ಎಲ್ಲವನ್ನೂ ಕಣ್ಣಿನಲ್ಲೇ ಹೆಕ್ಕಿಕೊಂಡರೂ ನಾವು ಗೆಳತಿಯರು ಮುಗಿ ಬೀಳುವುದು ಜಾತ್ರೆಯ ಸಮಯದಲ್ಲಿ ಬಳೆ ಮಾರುತ್ತಿದ್ದ ಅಂಗಡಿಗಳಿದ್ದ ಸಾಲಿಗೆ. ಇನ್ನೂ ಒಂದೆರಡು ಹೆಂಗಸರು ಬಟ್ಟೆಯ ಒಡಲಿಗೆ ಕಟ್ಟಿದ ಬಳೆಗಳನ್ನು ಹಾಕಿ ಗಂಟು ಬಿಗಿಯುತ್ತಿರುತ್ತಾರೆ. ನಾವು ಅಲ್ಲಿ ಬಿದ್ದಿರುವ ಬಣ್ಣದಬಳೆಗಳ ಚೂರುಗಳನ್ನು ಆಯುತ್ತಿದ್ದೆವು. ಜಾಸ್ತಿ ಸಿಕ್ಕಿದಷ್ಟು ನಮ್ಮ ಹರ್ಷ ಹೆಚ್ಚುತ್ತಿತ್ತು. ಅವನ್ನು ತಂದು ಆ ಚೂರುಗಳನ್ನು ಒಂದೊಂದಾಗಿ ಬೆಂಕಿಯ ಮುಖಕ್ಕೆ  ಅದರ ನಡು ಭಾಗ ಹಿಡಿದು ಸಣ್ಣನೆಯ ಬಲದಲ್ಲಿ ಬಾಗಿಸಿ ತುದಿ ಜೋಡಿಸುತ್ತಿದ್ದೆವು. ಇದು ಕಡಿದ ತುಂಡನ್ನು ಜೋಡಿಸುವ ಕಲೆ, ಅಂಕಗಳನ್ನು ಸೂತ್ರಧಾರ ಕಟ್ಟಿ ಒಂದಾಗಿಸಿದ ರಂಗಾವಳಿ. ಬಹಳ ಸಂಭ್ರಮದ ಕೆಲಸವದು.  ಮುಂದಿನ ಕೆಲವು ದಿನಗಳು ಮನೆಯ ಹಿಂದಿನ ಹಿತ್ತಲಲ್ಲಿ ನಾವು ಗೆಳತಿಯರು ಯಾವಯಾವುದೋ ಗಿಡದ ಸೊಪ್ಪು ಕೈಯಲ್ಲಿ ಹಿಡಿದು ಆವೇಶಗೊಳ್ಳುವ ಸಿರಿಯ ಲಯದಲ್ಲಿ ಕಾಲು ಹಿಂದೆ ಮುಂದೆ ಹೆಜ್ಜೆ ಹಾಕುತ್ತ ಸಿರಿಯನ್ನು ಅಭಿನಯಿಸುತ್ತಿದ್ದೆವು. ” ಯಾಕೆ ಈ‌ ಪ್ರಾಣಿಗೆ ಅನ್ಯಾಯ ಮಾಡಿದೆ?.. ಈ ಊಟ ಸರಿಕೊಡದೆ ಗುಡ್ಡೆಗೆ ಸೊಪ್ಪುತರಲು ಕಳುಹಿಸಿದೆಯಾ..? “ ಕಣ್ಣು ಮೇಲೆ ಕೆಳಗೆ, ಉರುಟು ಉರುಟಾಗಿ ತಿರುಗಿಸಿ ‘ಸಿರಿ’ವಂತೆಯ ಪ್ರಶ್ನೆ. ಉಳಿದ ಗೆಳತಿಯರು ಪಾದಕ್ಕೆ ತಲೆಯೂರಿ ತಪ್ಪಾಯ್ತು, ಎಂಬ ಕ್ಷಮಾಪಣೆ. ಒಳಮನೆಯಲ್ಲಿ ಕೆಲಸದಲ್ಲಿದ್ದ ಅಜ್ಜಿ ಹೊರಬಂದಳೋ ಸಿರಿ ಅಡಗಿ ನಾವು ನಾವಾಗುತ್ತಿದ್ದೆವು. “ಏನದು.. ಕೂದಲೆಲ್ಲ ಬಿಚ್ಚಿಕೊಂಡು, ಏನು ನಿಮ್ಮ ಅವತಾರ. ಜಾತ್ರೆಯಲ್ಲಿ ಸಿರಿ ಆವೇಶಗೊಂಡ ಹಾಗೆ..ಅದೆಲ್ಲ ಆಟ ಆಡಬಾರದೂ..ದೇವರಿಗೆ ಕೋಪ ಬರ್ತದೆ.” ಎಂದು ಎಚ್ಚರಿಸುತ್ತಿದ್ದಳು. ಅವಳು ಸರಿದು ಹೋದ ತಕ್ಷಣ ನಮ್ಮ ಆಟ ಮುಂದುವರಿಯುತ್ತಿತ್ತು. ದೇವರ ಪೂಜೆ, ಆರತಿ, ಪಂಚಕಜ್ಜಾಯ, ಮಡಿಯುಟ್ಟ ಪೂಜೆಯ ಭಟ್ಟರು, ದೇವಾಲಯ ಶುಚಿಗೊಳಿಸುವ ಕೆಲಸಗಾರರು, ವಾದ್ಯ ಎಲ್ಲವೂ ಆಟದ ಪಾತ್ರಗಳು. ಊರ ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಈ ಬಗೆಯ ಉತ್ಸವಗಳು ಮಕ್ಕಳ ಹಸಿ ಮನಸ್ಸಿಗೆ ಚಿತ್ತಾರ ಬರೆಯುತ್ತಿತ್ತು. ಸಾಂಸ್ಕೃತಿಕ ಆಚರಣೆ,ಸಂಸ್ಕೃತಿಯ ಪರಿಚಯವು ಥಿಯರೀ ಆಂಡ್ ಪ್ರಾಕ್ಟಿಕಲ್ ರೂಪದಲ್ಲಿ ಮಸ್ತಿಷ್ಕಕ್ಕೆ ಸೇರಿ ಒಂದು ಪರಿಮಳ ವ್ಯಂಜನದ ಸಂಚಲನ. ಹಲವಾರು ದಿನಗಳು ನಮಗೆ ಚರ್ಚೆಗೆ ಮುಖ್ಯ ವಿಷಯವೂ ಅದೇ ಆಗಿರುತ್ತಿತ್ತು. ಇದರಿಂದ ಬದುಕಿನ ಬಗೆಬಗೆಯ ಪಾತ್ರಗಳ ಚಲನೆ, ಭಾವನೆ, ಆ ವ್ಯವಹಾರಗಳನ್ನು ತೆರೆದ ಕಣ್ಣು, ಮನಸ್ಸಿನಿಂದ ನೋಡುವ,ಕಾಣುವ ಅವಕಾಶವನ್ನು ನಾವು ಪಡಕೊಂಡೆವು.    ಜಾತ್ರೆಯ ಕೊನೆಯ ರಾತ್ರೆ ರಥೋತ್ಸವದಂದು ಊರಲ್ಲಿ ಟೆಂಟಿನ ಯಕ್ಷಗಾನ ಆಟ. ತಪ್ಪಿಸದೇ ಹೋಗಬೇಕಾದ ಹರಕೆಯಂತಹ ಒಳಬದ್ದತೆ. ಮನೆಯಲ್ಲಿ ಬೇಡವೆಂದರೂ ಹೋಗುವುದೇ. ರಂಗಸ್ಥಳದ ಹತ್ತಿರ, ಎದುರು ಸಾಲಲ್ಲಿ  ರಾತ್ರಿಯಿಡೀ ಮಣ್ಣು ನೆಲದಲ್ಲಿ ಕೂತು ನೋಡುತ್ತ ಅಲ್ಲೇ ನಿದ್ದೆಯ ಭಾರಕೆ ರೆಪ್ಪೆ ಮುಚ್ಚಿ ದೇಹ ಅಡ್ಡವಾದಾಗಲೂ ಒಳಲೋಕದಲ್ಲಿ ಆಟವು ಮುಂದುವರಿಯುತ್ತಿತ್ತು. ಅಲ್ಲಿ ನಾನೇ ಬಣ್ಣದ ವೇಷವಾಗಿ ಕುಣಿಯುತ್ತಿದ್ದೆ. ಸಿರಿ, ಆವೇಶ, ವೀರಭದ್ರ, ಯಕ್ಷಗಾನದ ನೂತನ ಪ್ರಸಂಗ. ಅಲ್ಲಿ ಬರುವ ಗೆಜ್ಜೆ ನಾದದ ಸುಂದರ ಸ್ತ್ರೀ ವೇಷ. ಎಲ್ಲ  ಕನಸಿಗೆ ಧಾಳಿ ಇಟ್ಟು ಹೊಸ ಪ್ರಸಂಗವೊಂದು ನಡೆಯುತ್ತಿತ್ತು. ಮತ್ತೆ ಭಾರದ ರೆಪ್ಪೆ ತೆರೆದು ಯಕ್ಷಗಾನದ ವೀಕ್ಷಣೆ. ಜಾತ್ರೆ ಮುಗಿದು ಅದೆಷ್ಟೋ ಕಾಲದವರೆಗೆ  ನನ್ನ ಒಳಗೆ ಈ ಪ್ರಸಂಗಗಳು ಆಟ ಆಡುತ್ತಿದ್ದವು. ಬೇಸಿಗೆ ಕಳೆದು ಮಳೆ. ಒಳಹೊರಗೆ ಮಳೆಯಂತೂ ಸುರಿದಿತ್ತು. ಅದು ಮುಂಗಾರಿನ ಮಳೆ..ಕರಾವಳಿಯ ಮಳೆ. ಧೋ. ಎಡೆಯಿರದೇ ಸುರಿ ಸುರಿದು ಹೊಸ ಲೋಕವನ್ನು ಕಟ್ಟಿಕೊಡುವ ಮಳೆ. ಭೂಮಿ  ಬಿತ್ತನೆಗೆ ತಯಾರಾಗಿ, ಒದ್ದೆ.ಒದ್ದೆ‌, ಒಳಗೆ ಅತೃಪ್ತ ಮನಸ್ಸು ಚಿಗುರಲು ಚಡಪಡಿಸುತ್ತಿತ್ತು. ಸಿರಿ, ಕುಣಿತ, ಯಕ್ಷಗಾನ ನಲಿತ, ಮಾತು, ಚೆಂಡೆ ನಾದ. ಎಂತದೋ ಸುಪ್ತ ಆಸೆ. ಬಲವಾಗುತ್ತ ಹೋಗುತ್ತಿತ್ತು. ಅದಕ್ಕೆ ಪೂರಕ ಆಹಾರವಾಗಿ ಸಿಕ್ಕಿದ್ದು ಅಕ್ಷರ ಲೋಕ, ಅಕ್ಕರೆಯ ಪುಸ್ತಕಗಳ ಲೋಕ. ****************************************** ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಹೊಸ ಅಂಕಣ ಧಮ್ಮಲಾಲ್ ಛೋಪ್ರಾ ತೆಲುಗು ಮೂಲ : ಮಧುರಾಂತಕಂ ನರೇಂದ್ರಕನ್ನಡಕ್ಕೆ : ಕುಂ. ವೀರಭದ್ರಪ್ಪಪ್ರ : ಆಕೃತಿ ಪುಸ್ತಕ, ಬೆಂಗಳೂರುಪ್ರಕಟಣೆಯ ರ್ಷ : ೨೦೧೭ಬೆಲೆ : ರೂ.೧೦೦ಪುಟಗಳು : ೧೧೨ ವಿಶಿಷ್ಟ ಕಥಾವಸ್ತು, ತಂತ್ರ ಮತ್ತು ವಿನ್ಯಾಸಗಳಿರುವ  ಈ ಕಾದಂಬರಿಯಲ್ಲಿ  ನಡೆಯುವ ಹೆಚ್ಚಿನೆಲ್ಲ ಘಟನೆಗಳು ಮತ್ತು ಪಾತ್ರಗಳು ಎದುರಾಗುವ ಸನ್ನಿವೇಶಗಳು ಆಮ್‌ಸ್ಟರ್‌ಡಾಂ ನಗರದ ವಿಮಾನ ನಿಲ್ದಾಣದಲ್ಲಿ ನಡೆಯುತ್ತವೆ . ಕಥೆಯ ನಿರೂಪಕ ವಿಚಿತ್ರ ಹೆಸರಿನ ಗರ‍್ರಂಕೊಂಡ ಗರ‍್ರಂ ಪುರೌತು. ಜೈಸಲ್ಮೇರ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ.  ಆತ ಮೆಕ್ಸಿಕೋದಲ್ಲಿ ನಡೆಯುವ  ಒಂದು ವಿಚಾರಸಂಕಿರಣದಲ್ಲಿ  ಭಾಗವಹಿಸಲು ಹೊರಟಿದ್ದಾನೆ.  ಮೊದಲ ಬಾರಿ ವಿದೇಶ ಪ್ರಯಾಣ ಮಾಡುತ್ತಿರುವುದರಿಂದ  ತನಗೆ ಅಲ್ಲಿಗೆ ಹೋಗುವ  ಯಾರಾದರೂ ಇನ್ನೊಬ್ಬರು ಪ್ರಯಾಣಿಕರ  ಜತೆಗೆ ಟಿಕೆಟ್ ಮಾಡಿಸಬೇಕೆಂದು  ಏಜೆಂಟರಲ್ಲಿ ಕೇಳಿಕೊಂಡ ಪ್ರಕಾರ  ಆತನಿಗೆ ಸಿಗುವ ಜತೆಗಾರ  ಅತಿ ವಿಚಿತ್ರ ಸ್ವಭಾವದ ಧಮ್ಮಲಾಲ್ ಛೋಪ್ರಾ.  ಅವನು ವಿಶ್ವವಿದ್ಯಾನಿಲಯದ  ಪ್ರಾಧ್ಯಾಪಕನಲ್ಲ.  ಒಬ್ಬ ವ್ಯಾಪಾರಿ.  ಸ್ವಂತ ಆಸಕ್ತಿಯಿಂದ ಎಂ.ಬಿ.ಎ.ಕಲಿತು  ಸಂಶೋಧನೆ ಮಾಡಿ ಪಿ.ಹೆಚ್.ಡಿ.ಪಡೆದವನು. ಆದರೆ ಆತ ಆರಂಭದಿಂದಲೂ ಬಹಳ ವಿಚಿತ್ರವಾಗಿ ಮಾತನಾಡುವುದನ್ನು ನಿರೂಪಕ ಗಮನಿಸುತ್ತಾನೆ.  ಇಂಗ್ಲಿಷ್ ಸರಿಯಾಗಿ ಗೊತ್ತಿಲ್ಲದ ಅವನು ಹಿಂದಿಯಲ್ಲೇ ಸಂಭಾಷಿಸುತ್ತಾನೆ.  ಹಿಂದಿ ಸರಿಯಾಗಿ ಮಾತನಾಡಲಾಗದ ತೆಲುಗಿನವನಾದ ನಿರೂಪಕ ಇಂಗ್ಲಿಷ್ ಮತ್ತು ಹಿಂದಿ ಬೆರೆಸಿ ಹೇಗೋ ನಿಭಾಯಿಸುತ್ತಾನೆ.  ಆಮ್‌ಸ್ಟರ್‌ಡಾಂನಲ್ಲಿ  ಅದ್ಭುತಗಳು  ಸಂಭವಿಸುತ್ತವೆ, ನೋಡುತ್ತಿರಿ’ ಎನ್ನುವ ಧಮ್ಮಲಾಲ್ ಛೋಪ್ರಾ  ತನಲ್ಲಿ ಇದೆಲ್ಲವನ್ನೂ ಮುಂದಾಗಿ ತಿಳಿಸುವ ಆರನೇ ಇಂದ್ರಿಯ ಸಕ್ರಿಯವಾಗಿದೆ ಎನ್ನುತ್ತಾನೆ. ಆಮ್‌ಸ್ಟರ್ ನದಿಗೆ ಕಟ್ಟಿದ ಅಣೆಕಟ್ಟಿನ ನಗರಿ ಆಮ್‌ಸ್ಟg ಡಾಂನಲ್ಲಿ   ಜಲದಿಗ್ಭಂಧನದಲ್ಲಿ ನಾವು ಸಿಲುಕಲಿದ್ದೇವೆ’ ಅನ್ನುತ್ತಾನೆ . ಹುಚ್ಚನಂತೆ ಏನೇನೋ ಬಡಬಡಿಸುವ ಆತನ ಮಾತುಗಳು ನಿರೂಪಕನನ್ನು ಗೊಂದಲಕ್ಕೀಡು ಮಾಡುತ್ತವೆ.        ಮೆಕ್ಸಿಕೋದಲ್ಲಿ  ಎಂಟು ದಿನಗಳ ಕಾಲ ಕಳೆದು ದೆಹಲಿಗೆ ಮರಳಿ ಬರುತ್ತಾ ಆಮ್‌ಸ್ಟರ್‌ಡಾಂನಲ್ಲಿ  ಅವರು ೨೪ ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ಕಳೆಯಬೇಕಾಗುತ್ತದೆ.  ಅಲ್ಲಿ ಅವರಿಗೆ ವಿಚಿತ್ರ ಅನುಭವಗಳಾಗುತ್ತವೆ.  ವಿಮಾನ ನಿಲ್ದಾಣಗಳಲ್ಲಿ ಭಯೋತ್ಪಾದಕರು ಇಡುವ  ಬಾಂಬುಗಳುಂಟು ಮಾಡಿದ ಅನಾಹುತಗಳಿಂದ  ಆತಂಕಗೊಂಡ ಅಧಿಕಾರಿಗಳು  ಪ್ರತಿಯೊಬ್ಬ ಪ್ರಯಾಣಿಕರನ್ನೂ  ಅನುಮಾನದ ದೃಷ್ಟಿಯಿಂದಲೇ ನೋಡುತ್ತಾರೆ.  ಸೆಕ್ಯೂರಿಟಿಗಳು ಭದ್ರತೆಯ ಬಿಗಿಯನ್ನು ಹೆಚ್ಚಿಸಿ ಅನಗತ್ಯ ಪ್ರಶ್ನೆಗಳಿಂದ ಅವರನ್ನು ಮಾನಸಿಕ ಹಿಂಸೆಗೆ ಗುರಿ ಪಡಿಸುತ್ತಾರೆ. ತಿನ್ನಲು ಸರಿಯಾದ ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ಅವರು ಬಳಲುತ್ತಾರೆ.  ಅವರನ್ನು ಸೇರಿಸಿಕೊಂಡ ಹೋಟೆಲಿನೊಳಗಿನ ವಾತಾವರಣ  ಭಯಜನಕವಾಗಿರುತ್ತದೆ.  ಅವರು ಹೊಕ್ಕು ಬರುವ ಕತ್ತಲ ಲೋಕ ಇಡಿಯ ಜಗತ್ತನ್ನು ತುಂಬಿರುವ  ಸಂರ‍್ಷದ ಯಾತನೆಯನ್ನು ಪ್ರತಿಬಿಂಬಿಸುತ್ತದೆ. ಕೊನೆಯ ತನಕವೂ ಛೋಪ್ರಾ ತಾನೊಬ್ಬ ಆಧ್ಯಾತ್ಮಿಕ ಗುರು ಎಂಬಂತೆ ರ‍್ತಿಸುತ್ತಾನೆ. ಆದರೆ ನಿರೂಪಕ ಅದನ್ನು ನಂಬುವುದಿಲ್ಲ.  ಈ ಕಾದಂಬರಿ ಆಧುನಿಕ ಜಗತ್ತಿನ ಸ್ಥಿತಿಗೆ ಹಿಡಿದ  ಕನ್ನಡಿಯಂತಿದೆ. ಅನುವಾದದ ಭಾಷೆ ಪ್ರಬುದ್ಧವಾಗಿದೆ ******************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಅರಿತವರ ಮರೆತು ಸಾಗುವುದೆಂದರೆ … ನಮ್ಮನ್ನು ನಾವು ಹುಡುಕಿಕೊಳ್ಳುವುದು ಎಂದರೆ ಏನು? ನಮ್ಮೊಳಗೆ ನಾವು ಇಳಿಯುವುದು ಎಂದರೆ ಏನು? ನಮಗೇ ಕಾಣದ ನಮ್ಮನ್ನು ಕಂಡುಕೊಳ್ಳುವುದು ಎಂದರೆ ಏನು? ಮತ್ತೆ ಈ ಧಾವಂತದ ಬದುಕಲ್ಲಿ ಅದಕ್ಕೆ ತಗುಲುವ ಸಮಯವನ್ನು ಉಳಿಸಿಟ್ಟುಕೊಳ್ಳುವ ವ್ಯವಧಾನವಾದರೂ ನಮ್ಮಲ್ಲಿ ಉಳಿದಿದೆಯಾ… ಇಂತಹ ಹಲವಾರು ಉತ್ತರ ಸಿಗದ ಪ್ರಶ್ನೆಗಳು, ಗೊಂದಲಗಳು ನನ್ನನ್ನು ಸದಾ ಕಾಡುತ್ತಿರುತ್ತದೆ. ಇಂಥವಕ್ಕೆ  ನಾನೇ ನಾನು ಉತ್ತರಿಸಿಕೊಳ್ಳಬೇಕಿರುತ್ತದೆ. ಆದರೆ ಕೆಲವೊಮ್ಮೆ ಎಂತಹ ಸಂದಿಗ್ಧತೆ ಒದಗಿಬರುತ್ತದೆ ಎಂದರೆ ಉತ್ತರಿಸುವುದಿರಲಿ ಪ್ರಶ್ನೆಯನ್ನು ಎದುರಿಸುವುದೂ ಕಷ್ಟವೇ… ಎಷ್ಟೋ ಪ್ರಶ್ನೆಗಳಿಗೆ ಉತ್ತರಗಳು ಇರುವುದಿಲ್ಲ. ಮತ್ತೊಂದಿಷ್ಟು ಪ್ರಶ್ನೆಗಳಿಗೆ ಉತ್ತರಗಳಿದ್ದರೂ ಅವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ನಾವು ಇರುವುದಿಲ್ಲ. ನಾವು ಹಸುಗಳನ್ನ ಸಾಕ್ತೇವೆ, ಹೊತ್ತು ಹೊತ್ತಿಗೆ ಸರಿಯಾಗಿ ಹುಲ್ಲು ಮೇಯಿಸ್ತೇವೆ, ಅದು ಅಲ್ಲಿ ಹೋಗಬಾರದು, ಇಲ್ಲಿ ಮೇಯಬಾರದು ಹೀಗೆ ನಮಗೆ ಬೇಕಾದಂತೆ ಒಂದು ಚೌಕಟ್ಟಿನೊಳಗಿಟ್ಟು ಬೆಳೆಸ್ತೇವೆ. ನಮ್ಮ ಪ್ರಕಾರ ಅದು ಒಂದೂ ತಪ್ಪೇ ಮಾಡಿಲ್ಲ! ಆದರೆ ಬೀದಿಯ ದನ ಹಾಗಲ್ಲ, ಮನಸಿಗೆ ಬಂದ ಕಡೆ ಹೋಗ್ತದೆ, ಮನಸಿಗೆ ಬಂದದ್ದು ಮಾಡ್ತದೆ, ಮನಸಿಗೆ ಬಂದದ್ದನ್ನ ತಿನ್ತದೆ…. ಅದಕ್ಕೆ ಯಾವ ನಿರ್ಬಂಧಗಳಿಲ್ಲ. ಅದು ಗೋ ಮಾತೆ ಎಂದು ಪೂಜೆಗೆ ಸಲ್ಲುವ ಹೊತ್ತಲ್ಲೇ ಹೀನಾಮಾನವಾಗಿ ಒದೆ ಮತ್ತು ಬೈಗುಳಗಳನ್ನೂ ತಿಂದಿರುತ್ತದೆ. ಆದರೆ ಅದರ ಅನುಭವಗಳು ಎಷ್ಟು ಸಂಪದ್ಭರಿತ! ಅದರ ಬದುಕು ಅದೆಷ್ಟು ಸಂಪನ್ನ! ನಿಮಗೆ ಈ ಎರೆಡು ದನಗಳಲ್ಲಿ ಯಾವ ದನದ ಬದುಕು ಇಷ್ಟ ಎಂದು ಯಾರಾದರೂ ಒಂದು ವೇಳೆ ನಮ್ಮನ್ನು ಕೇಳಿದರೆ ನಮಗೆ ಬೀದಿ ದನದ ಬದುಕೇ ಇಷ್ಟ, ಆದರೆ ನಮ್ಮ ಆಯ್ಕೆ ಮಾತ್ರ ಸಾಕಿದ ದನ ಎಂದಾಗಿರುತ್ತದೆ. ಕಾರಣ ನಮಗೆ ಸಮಾಜವನ್ನು ಎದುರಿಸುದಾಗಲೀ, ಧಿಕ್ಕರಿಸುವುದಾಗಲೀ ಬೇಕಾಗೂ ಇಲ್ಲ, ಸಾಧ್ಯವೂ ಇಲ್ಲ ಹಾಗಾಗಿ. ಹಾಗಾಗಿಯೇ ನಾವು ಸಮಾಜದ ನಿರೀಕ್ಷೆಯ ಚಾಳೀಸು ತೊಟ್ಟು ಪ್ರತಿಯೊಂದನ್ನೂ ಪ್ರತಿಯೊಬ್ಬರನ್ನೂ  ಅದು ನಿರ್ಮಿಸಿಕೊಟ್ಟ ಚೌಟ್ಟಿನ ಒಳಗೇ ನೋಡಲು ಬಯಸುತ್ತೇವೆ. ಒಂದು ವೇಳೆ ಯಾರಾದರೂ ಅದನ್ನು ಮೀರಲು ಪ್ರಯತ್ನಿಸಿದರೆ ನಾವೇ ಮೊದಲಾಗಿ ಅವರ ಕಾಲು ಹಿಡಿದು ಹಿಂಜಗ್ಗುತ್ತೇವೆ, ಅವರ ಆತ್ಮವಿಶ್ವಾಸ ಕುಗ್ಗಿಸುವ ಅಷ್ಟೂ ಮಾತನ್ನು ಒಂದೂ ಬಿಡದಂತೆ ಆಡುತ್ತೇವೆ. ನಮ್ಮ ಮನಃಸಾಕ್ಷಿಗೆ ನಾವು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಬಿದ್ದ ತೋಳಕ್ಕೆ ಕಲ್ಲು ಬೀಸುವುದರಲ್ಲಿ ಸಿಗುವ ಸುಖ, ಒಣ ಆತ್ಮಸಾಕ್ಷಿಯ ಗೊಡ್ಡು ಉಪದೇಶಕ್ಕೆ ಕಿವಿಯಾಗುವುದರಲ್ಲಿ ನಮಗೆ ಖಂಡಿತಾ ಸಿಗಲಾರದು . ನನಗೆ ಸ್ವಾತಂತ್ರ್ಯ ಎಂದರೆ ಯಾವುದು ಮನುಷ್ಯತ್ವವನ್ನ ಮೀರುವುದಿಲ್ಲವೋ, ಇನ್ನೊಬ್ಬರಿಗೆ ತೊಂದರೆ ಉಂಟು ಮಾಡುವುದಿಲ್ಲವೋ, ದುಷ್ಟ ಮತ್ತು ಕ್ರೂರ ಅಲ್ಲವೋ ಅದೆಲ್ಲವನ್ನೂ ನಾವು ಮಾಡಬಹುದು ಎಂದು. ಆದರೆ ಒಬ್ಬರ ರೆಕ್ಕೆಗಳನ್ನು ಕತ್ತರಿಸಿ ಹಾಕಿ ಅವರ ಹಾರುವ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವುದಕ್ಕಿಂತ ದೊಡ್ಡ ಕ್ರೂರತೆ ಮತ್ತೊಂದಿರಲಾರದು. ಆದಾಗ್ಯೂ ತಪ್ಪುಗಳು ಒಂದು ಹಂತದವರೆಗೆ ಮನುಷ್ಯನನ್ನು ಮಾಗಿಸುತ್ತವೆ. ತಪ್ಪು ಮಾಡಿದವನು ಒಳಗೊಳಗೆ ಗಟ್ಟಿಯಾಗುತ್ತಾ ಹೋಗುತ್ತಾನೆ. ಅವನ ಬದುಕಿನ ಪಾಠ ಅವನನ್ನು ವಜ್ರಕಠೋರವಾ ಗಿಸುತ್ತದೆ. ಅವನು ಎಂಥದ್ದೇ ಪರಿಸ್ಥಿತಿ ಬರಲಿ ಎದುರಿಸಲು ಸದಾ ತಯಾರಿರುತ್ತಾನೆ. ತಪ್ಪುಗಳು ನಮಗೆ ಬದುಕನ್ನು ನೋಡುವ ವಿಭಿನ್ನ ದೃಷ್ಟಿಕೋನವನ್ನು ತೋರಿಸಿಕೊಡುತ್ತವೆ, ನಮ್ಮ ಸರಿಗಳು ಬದುಕನ್ನು ಹೀಗೇ ನೋಡಬೇಕೆನ್ನುವ ದಾರಿಯ ನಿರ್ದಿಷ್ಟತೆಯನ್ನು ಮನಗಾಣಿಸುತ್ತವೆ. ನಮ್ಮ ತಪ್ಪುಗಳು ನಮಗಷ್ಟೇ ಅಲ್ಲದೆ ಇತರರಿಗೂ ಪಾಠವಾಗಬಲ್ಲವು. ಮತ್ತು ಇತರರ ತಪ್ಪುಗಳು ನಮ್ಮ ಪುಸ್ತಕದ ಪಾಠವೂ ಆಗಬೇಕು. ಆದರೆ ಕೆಲವೊಮ್ಮೆ ಅಮೂಲ್ಯ ಕ್ಷಣಗಳನ್ನು, ಅಮೂಲ್ಯ ವ್ಯಕ್ತಿಗಳನ್ನು ಸುಮಧುರ ಬಾಂಧವ್ಯವನ್ನು ನಮ್ಮ ಸ್ವಯಂಕೃತ ಅಪರಾಧದಿಂದ ಕಳೆದುಕೊಂಡುಬಿಡುತ್ತೇವಲ್ಲ ಅದು ಪರಮ ಯಾತನಾಮಯ… ಅದು ಯಾರಲ್ಲೂ ಹಂಚಿಕೊಂಡು ಹಗುರಾಗುವಂಥದ್ದಲ್ಲ. ನಮ್ಮಿಂದ ಅಪಾರವಾದದ್ದನ್ನು ನೀರೀಕ್ಷಿಸುವ, ನಮ್ಮನ್ನು ತಮ್ಮ ಬದುಕಿನ ಪರಮಾರ್ಥ ಎಂದು ತಿಳಿದವರನ್ನು ಧಿಕ್ಕರಿಸಿ ಹೊರಡುತ್ತೇವಲ್ಲ… ಆ ಕ್ಷಣದ ಬಗ್ಗೆ ನಿಜಕ್ಕೂ ಧಿಕ್ಕಾರವಿದೆ ನನಗೆ. ಒಂದು ಪ್ರೀತಿ, ಅಸಖ್ಖಲಿತ ಪ್ರೇಮ, ಪವಿತ್ರ ಸ್ನೇಹ, ಮಮತೆ ಅಂತಃಕರಣವೆಲ್ಲವನ್ನು ತಿರಸ್ಕರಿಸಿಬಿಡುತ್ತೇವಲ್ಲ… ಬಹುಶಃ ಆ ಒಂದು ಕ್ಷಣ ನಾವು ನಮ್ಮ ಹೃದಯದ ಮಾತುಗಳಿಗೆ ಕಿವುಡರಾಗಿಬಿಟ್ಟಿರುತ್ತೇವೆ. ಅದರಲ್ಲೂ ಆಯ್ಕೆಗಳಿದ್ದು ಒಂದನ್ನು ಮಾತ್ರ ಆರಿಸಬೇಕಾದ ಶರತ್ತಿದ್ದಾಗಲಂತೂ ಆರಿಸಿಕೊಂಡದ್ದರ ಸುಖವೇ ಅನುಭವಕ್ಕೆ ನಿಲುಕದಷ್ಟು ಕಳೆದುಕೊಂಡದ್ದರ ದುಃಖ ಆವರಿಸಿಬಿಟ್ಟಿರುತ್ತದೆ. ಆದರೆ ಬದುಕಿನ ನಿಯಮವೇ ಹಾಗಿದೆ. ಒಂದನ್ನು ಪಡೆಯಲು ಮತ್ತೊಂದನ್ನು ಕಳೆದುಕೊಳ್ಳಲೇಬೇಕು! ಆದರೆ ನಂಬಿಕೆಯನ್ನು ಕಳೆದುಕೊಳ್ಳುವುದಿದೆಯಲ್ಲ… ಅದು ನಮ್ಮ ಬದುಕಿನ ಬೇರನ್ನೇ ಅಲುಗಾಡಿಸಿಬಿಡುತ್ತದೆ. ಸರಿ ನಮ್ಮವರನ್ನು ಬಿಟ್ಟು ಹೊರಟಾದ ಮೇಲೆ ಏನಾದೆವು ಎಂದೊಮ್ಮೆ ಹಿಂತಿರುಗಿ ನೋಡಿದರೆ ನಮ್ಮ ಹೆಜ್ಜೆಗಳಷ್ಟೂ ಅವರೇ ಕಲಿಸಿದ ಸಂಸ್ಕಾರದಚ್ಚಿನಲ್ಲಿ… ಇವತ್ತು ನಾವೇನಾಗಿರುತ್ತೇವೋ ಅದಷ್ಟೂ ಅವರು ನೀಡಿದ ಶಿಕ್ಷಣ. ನಮ್ಮ ಬದುಕು ಮುನ್ನಡೆದದ್ದೇ ಅದರ ಸೂಚಕ. ಬಿಟ್ಟುಬಂದೆವೆಂದುಕೊಂಡದ್ದು ಸದಾ ಹಿಂಬಾಲಿಸುತ್ತಲೇ ಬಂದಿರುವುದು ಅರಿವಾಗಿಲ್ಲದ ಸತ್ಯ. ನಮ್ಮ ಪ್ರತಿ ಕೆಲಸದಲ್ಲೂ ಅವರು ನೆನಪಾಗುತ್ತಾರೆ. ನಮ್ಮ ಪ್ರತಿ ನಡೆ ನುಡಿಯಲ್ಲೂ ಅವರೇ ಅವರು ಕಾಣಿಸಿಕೊಂಡು ಹನಿ ನೀರಾಗಿ ಉರುಳುತ್ತಾರೆ. ಅವರೊಂದಿಗಿನ ಒಂದೊಂದು ಕ್ಷಣವೂ ಮುತ್ತುಗಳಾಗುತ್ತವೆ. ಹೊಳೆಯುತ್ತವೆ. ಕರೆಯುತ್ತವೆ. ನೆನಪಾಗಿ ತಬ್ಬುತ್ತವೆ. ಸಂತೈಸಿ ತಲೆ ನೇವರಿಸಿ ಹಣೆಯ ಮೇಲೊಂದು ಮುತ್ತಿಡುವರಿಲ್ಲದೆ ಖಾಲಿ ಎದೆಯ ಮೀಂಟುವ ನೋವನ್ನು ಸಹಿಸಲಾಗದೆ ನರಳುವಾಗ ತಾವೂ ಮರುಗುತ್ತವೆ. ಅರಿತವರ ಮರೆತು ಸಾಗುವುದೆಂದರೆ ಸಳುಕು ಹಿಡಿದ ಎದೆಯನ್ನು  ಅಬ್ಬೊತ್ತಿಕೊಂಡು, ಬಾಯಿಗೆ ಬಟ್ಟೆ ತುರುಕಿ, ನಿಶ್ಯಬ್ಧವಾಗಿ ಬಿಕ್ಕುವುದು… ಇದರಿಂದ ಯಾರಿಗೆ ತಾನೆ ಮುಕ್ತಿ ಇದೆ… ನಾವೆಲ್ಲ ಪಕ್ಕಾ ವ್ಯಾಪಾರಿಗಳು. ಲೇವಾದೇವಿ ನಮಗೆ ಬಹಳ ಚನ್ನಾಗಿ ಗೊತ್ತು. ನಮಗೆ ಪ್ರೀತಿಗಿಂತಲೂ ಭೌತಿಕ ವಸ್ತುಗಳೇ ಬದುಕಿನ ಅನಿವಾರ್ಯ ಎನಿಸುತ್ತವೆ.  ಅತ್ಯಂತ ಹೆಚ್ಚು ಪ್ರೀತಿಸುವ ಜೀವ ಪಕ್ಕದಲ್ಲಿ ಇರುವಾಗಲೂ ಹಣ ಐಶ್ವರ್ಯ ಆಸ್ತಿ ಅಂತಸ್ತು ದೊಡ್ಡದು ಎನಿಸುತ್ತದೆ ನಮಗೆ. ಮತ್ತೀ ಸಮಾಜವಾದರೂ ಅದನ್ನೇ ಅನಿವಾರ್ಯವೆನ್ನಿಸಿಬಿಡುವಂತೆ ಮಾಡಿಬಿಡುತ್ತದೆ. ನಾವು ನಮ್ಮ ಆಂತರ್ಯಕ್ಕೆ ಪ್ರಿಯವಾಗುವ ಬದಲು, ದುಡ್ಡಿನ ಬಾಲ ಹಿಡಿಯಲು ಹೊರಟುಬಿಡುತ್ತೇವೆ. ಈಗ ನಮ್ಮಲ್ಲಿ ಬಹಳ ಒಳ್ಳೆಯ ಗಾದೆ ಮಾತುಗಳು ಹುಟ್ಟಿಕೊಳ್ಳುತ್ತವೆ, penny saved is a penny gained, ನಾವು ಉಳಿಸಿಟ್ಟ ಹಣವೇ ನಮ್ಮ ನಿಜವಾದ ಮಿತ್ರ, ತಾಮ್ರದ ಕಾಸು ಅಣ್ಣ ತಮ್ಮಂದಿರನ್ನೇ ಅಗಲಿಸಿತಂತೆ (ಅದಕ್ಕೆ, ಮೊದಲೇ ಅಣ್ಣ ತಮ್ಮಂದಿರು ದೂರ ದೂರ ಇದ್ದು ಬಿಡಬೇಕು!), ದುಡ್ಡಿದ್ದವನೇ ದೊಡ್ಡಪ್ಪ… ಇವೆಲ್ಲ ನಮ್ಮ ಬದುಕಿನ ಮೊಟ್ಟೋಗಳಾಗುವ ಹೊತ್ತಿನಲ್ಲಿ ದುಡ್ಡನ್ನು ಮೀರಿದ ಅನುಭೂತಿಯೊಂದು ಇದೆ ಮತ್ತು ಅದು ನಮ್ಮ ಬದುಕಿನ ಕೇಂದ್ರವಾಗಬೇಕಿದೆ ಎನ್ನುವ ದನಿ ಕೀರಲಾಗಿ ಭೌತಿಕದ ಧ್ವನಿವರ್ಧಕದ ಅಬ್ಬರದ ನಡುವೆ ಇಲ್ಲವೇ ಆಗಿಬಿಡುತ್ತಿರುವುದು ಸಂಕಟ ಉಂಟು ಮಾಡುತ್ತದೆ… ************************************* ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

You cannot copy content of this page

Scroll to Top