ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-32 ಫೆಬ್ರವರಿ ಕಡೆಯ ವಾರದಲ್ಲಿ ನಮಗೆ ವರ್ಗಾವಣೆಯ ಆದೇಶ ಬಂದದ್ದು ಮಾರ್ಚ್ ಆರನೆಯ ತಾರೀಕು ರಿಲೀವ್ ಆಗಬೇಕಿತ್ತು. ಯಾವಾಗಲೂ ಶನಿವಾರ ಮಧ್ಯಾಹ್ನ ರಿಲೀಫ್ ಆಗುವಂತೆ ಬರುತ್ತಿದ್ದ ಆದೇಶ ಈ ಬಾರಿ ಸೋಮವಾರ ಸಂಜೆ ರಿಲೀವ್ ಆಗುವ ಹಾಗೆ ಬಂದಿತ್ತು. ಐದನೆಯ ತಾರೀಕು ಶಿವರಾತ್ರಿ ಬಂದಿದ್ದರಿಂದ ನಾವು ಮೈಸೂರಿಗೆ ಹೋಗಲೇಬೇಕಿತ್ತು. ಹಾಗಾಗಿ ಅಂದೇ ಬಂದು ಅಂದೆ ವಾಪಸ್ ಆಗುವ ಸರ್ಕಸ್ ಸಹ ಮಾಡಿ ಬಿಟ್ಟೆವು. ಆರನೆಯ ತಾರೀಕು ಬೆಳಿಗ್ಗೆ 5:30 ಬಸ್ಸಿಗೆ ಹೊರಟು ಸಕಲೇಶಪುರಕ್ಕೆ ಬಂದೆವು. ಅಂದೇ ನಾವು ಶಾಖಾ ಸಿಬ್ಬಂದಿಗೆ ಊಟ ಕೊಡಿಸುವ ಕಾರ್ಯಕ್ರಮ ಸಹ ಇತ್ತು .ಬೆಳಿಗ್ಗೆ ಹೋಟೆಲ್ನಲ್ಲಿ ತಿಂಡಿ ತಿಂದು ಮಧ್ಯಾಹ್ನ ನಮ್ಮದೇ ಆತಿಥ್ಯದ ಊಟ ಮಾಡಿ ಶಾಖಾಧಿಕಾರಿಗಳನ್ನು ವಿನಂತಿಸಿಕೊಂಡು ನಾಲ್ಕು ವರೆಗೆ ವಿದಾಯ ಸಮಾರಂಭವನ್ನು ಆಯೋಜಿಸಿಕೊಂಡು ಅಂತೂ ಇಂತೂ ಆರು ಗಂಟೆ ಬಸ್ಸಿಗೆ ಮೈಸೂರಿಗೆ ಹತ್ತಿದೆವು ಬಂದು ತಲುಪಿದಾಗ ರಾತ್ರಿ 11:00 ಗಂಟೆ. ಸುಲೋಚನ ಅವರ ಅಕ್ಕನ ಮನೆಯಲ್ಲಿ ಉಳಿದುಕೊಂಡು ಬೆಳಿಗ್ಗೆ ಎದ್ದು ನಂಜನಗೂಡಿಗೆ ಹೋಗಿ ಅಲ್ಲಿಂದ ಚಾಮರಾಜನಗರಕ್ಕೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು . ನಾನು ಸೋಮವಾರ ಬೆಳಿಗ್ಗೆ ಅಂದರೆ ಏಳನೆಯ ತಾರೀಕು ಮಾರ್ಚ್ 2000 ರಂದು ನಂಜನಗೂಡಿಗೆ ಡ್ಯೂಟಿ ರಿಪೋರ್ಟ್ ಮಾಡಿಕೊಂಡೆ. ಮಾಮೂಲಿನಂತೆ ಒಂದು ಕೈಯಲ್ಲಿ ಬ್ಯೂಟಿ ರಿಪೋರ್ಟ್ ಮತ್ತೊಂದು ಕೈಯಲ್ಲಿ ಮೈಸೂರಿಗೆ ವರ್ಗಾವಣೆಗೆ ಅರ್ಜಿ. ಅಶೋಕಪುರಂ ರೈಲ್ವೆ ಸ್ಟೇಷನ್ ಗೆ ಹೋಗಿ ಮೂರು ತಿಂಗಳ ಪಾಸ್ ರೆಡಿ ಮಾಡಿಸಿಕೊಂಡು ಹಿಂದಿನ ಕಹಿ ಅನುಭವದ ಆಧಾರದ ಮೇಲೆ ಅಲ್ಲಿಯೇ ಸಹಿ ಮಾಡಿ ಮಹಿಳಾ ಭೋಗಿಗೆ ಹತ್ತಿದೆ. ಅಲ್ಲಿಯೇ ನಮ್ಮ ಶಾಖೆಯ ಜಯಲಕ್ಷ್ಮಿ ಅವರ ಭೇಟಿಯು ಆಯಿತು. ಈಗ ಶಾಖೆ ಮೊದಲಿನಂತೆ ದೇವಸ್ಥಾನದ ಬಳಿಯ ಬಜಾರ್ ರಸ್ತೆಯಲ್ಲಿ ಇರದೆ ತನ ಸ್ವಂತ ಕಟ್ಟಡಕ್ಕೆ ಶಿಫ್ಟ್ ಆಗಿತ್ತು .ನಂತರ ಸಂತೆಗೆ ಹೋಗುವ ದಾರಿಯಲ್ಲಿ ಮಧ್ಯೆ ಬಲಗಡೆ ನಮ್ಮ ಶಾಖಾ ಕಚೇರಿ ಇತ್ತು. ಮುಖ್ಯ ರೈಲ್ವೆ ಸ್ಟೇಷನ್ ನಿಂದ ಶಾಖೆಗೆ ಬರಲು ತಡವಾಗುತ್ತಿದ್ದ ಕಾರಣ ಎಲ್ಲರೂ ಸುಜಾತಪುರಂ ರೈಲ್ವೆ ಸ್ಟೇಷನ್ ನಲ್ಲಿಯೇ ಇಳಿದು ಅಲ್ಲಿ ಓಡಾಡುತ್ತಿದ್ದ ಖಾಸಗಿ ಟೆಂಪೋಗಳಲ್ಲಿ ಹುಲ್ಲಹಳ್ಳಿ ಸರ್ಕಲ್ಗೆ ಬಂದು ಇಳಿಯುತ್ತಿದ್ದೆವು. ಆಗ ಆ ಟೆಂಪೋಗಳಲ್ಲಿ ಚಾರ್ಜ್ ಒಂದು ರೂಪಾಯಿ ಮಾತ್ರ ಇತ್ತು .ಹುಲ್ಲಹಳ್ಳಿ ಸರ್ಕಲ್ ನಿಂದ 3-4 ನಿಮಿಷದ ನಡಿಗೆ ನಮ್ಮ ಶಾಖೆಗೆ. ಸಂಜೆ ಮಾತ್ರ ಮುಖ್ಯ ಸ್ಟೇಶನ್ಗೆ ನಡೆದು ಹೋಗಲು ಸಮಯ ಇತ್ತು. ಕೆಲವೊಮ್ಮೆ ಸುಸ್ತಾಗಿದ್ದಾಗ ಹೊರಡಲು ತಡವಾದರೆ ಅಥವಾ ಸಂತೆಯಲ್ಲಿ ಕೊಂಡ ತರಕಾರಿಗಳಿದ್ದರೆ ಆಗ ಮೂರು ನಾಲ್ಕು ಜನ ಸೇರಿ ಆಟೋದಲ್ಲಿ ಸ್ಟೇಷನ್ನಿಗೆ ಬರುತ್ತಿದ್ದೆವು. ಮೊದಲಿನಿಂದ ಪರಿಚಯವಿದ್ದ ಜಯಲಕ್ಷ್ಮಿ ಮತ್ತು ನಾಗಮಣಿ ಜೊತೆಗೆ ಹೊಸ ಪರಿಚಯವಾದ ಕವಿತಾ ನಿಕ್ಕಮ್ ವಿದ್ಯಾ ಚಂದ್ರಶೇಖರ್ ಮೊದಲಾದವರು. ಆಂಧ್ರಪ್ರದೇಶದ ರಜನಿ ಸಹ ಇಲ್ಲಿಯೇ ಇದ್ದಳು .ಮುಂದೆ ಅವಳು ಪದೋನ್ನತಿ ತೆಗೆದುಕೊಂಡು ಈಗ ಹೈದರಾಬಾದ್ ನಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದಾಳೆ. ಅಲ್ಲಿಯೇ ಪರಿಚಯವಾದದ್ದು ನಮ್ಮದೇ ಯೂನಿಯನ್ ನಲ್ಲಿ ಇದ್ದ ಇಂದುಮತಿ. ಮೊದಲು ಬಸ್ ನಲ್ಲಿ ಓಡಾಡುತ್ತಿದ್ದಳು ನಂತರ ಅವರ ಸ್ವಂತ ಮನೆ ನಮ್ಮ ಮನೆಯ ಬಳಿಗೆ ಇದುದರಿಂದ ಅಲ್ಲಿಗೆ ಶಿಫ್ಟ್ ಆದ ಮೇಲೆ ನನ್ನ ಜೊತೆಗೆ ರೈಲಿನಲ್ಲಿ ಓಡಾಡಲು ಆರಂಭಿಸಿದಳು. ನನಗೆ ತುಂಬಾ ಆಪ್ತ ಗೆಳತಿ. ಈಗಲೂ ನಮ್ಮ ಸ್ನೇಹ ಅಷ್ಟೇ ಸದೃಢವಾಗಿದೆ ನಂಜನಗೂಡು ನನಗೆ ಕೊಟ್ಟ ಅನರ್ಘ್ಯ ಸ್ನೇಹ ರತ್ನಗಳಲ್ಲಿ ಅವಳು ಒಬ್ಬಳು. ಈ ಹಿಂದೆ ಮಂಡ್ಯದಲ್ಲಿ ನನ್ನೊಂದಿಗೆ ಕೆಲಸ ಮಾಡಿದ್ದ ಮಂಜುಳಾ ಮತ್ತು ಮೊದಲೇ ಪರಿಚಿತರಾಗಿದ್ದ ಶಶಿಕಲಾ ಗಿರಿಜಾ ಇವರೆಲ್ಲ ಇದೇ ಶಾಖೆಯಲ್ಲಿ ಇದ್ದರು ತುಂಬಾ ಸ್ನೇಹ ಮಯ ವಾತಾವರಣ ತುಂಬಾ ಖುಷಿಯಾಗಿತ್ತು.ಹುಲ್ಲಹಳ್ಳಿ ಸರ್ಕಲ್ ನಲ್ಲಿ ಇಳಿದ ತಕ್ಷಣ ಅಲ್ಲಿ ಒಬ್ಬ ಕಾಯಂ ಆಗಿ ಸೈಕಲ್ಲಿನಲ್ಲಿ ಹೂವ ಮಾರುತಿದ್ದ .ಅವನ ಬಳಿ ಹೂವು ಕೊಂಡು ಮುಂದೆ ನಮ್ಮ ಪ್ರಯಾಣ .ಅಲ್ಲೇ ಮಧ್ಯದಲ್ಲಿ ಇದ್ದದ್ದು ಸುಬ್ಬಣ್ಣನ ಹೋಟೆಲ್ ಇಡ್ಲಿ ಚಟ್ನಿ .ಜೊತೆಗೆ ಟೊಮ್ಯಾಟೋ ಗೊಜ್ಜು ಕೊಡುತ್ತಿದ್ದರು ತುಂಬಾ ರುಚಿಯಾಗಿರುತ್ತಿತ್ತು. ಕೆಲವೊಮ್ಮೆ ತಿಂಡಿ ಸರಿಯಾಗಿ ತಿನ್ನದೆ ಬರುತ್ತಿದ್ದಾಗ ಅಥವಾ ತಿಂಡಿ ತಿನ್ನದೇ ಬಂದಾಗ ಅಲ್ಲಿ ಇಡ್ಲಿ ತಿಂದು ಮುಂದುವರೆಯುವುದು. ಇಲ್ಲದಿದ್ದರೆ ವೈಟು ಕಾಫಿ ಕುಡಿದು ಹೋಗುತ್ತಿದ್ದೆವು. ಮಧ್ಯಾಹ್ನ 12 ಗಂಟೆ ಹಾಗೂ ಅಪರಾಹ್ನ ನಾಲ್ಕು ಗಂಟೆಯ ಕಾಫಿ ಅಲ್ಲಿಯೇ ಪಕ್ಕದಲ್ಲಿ ಇದ್ದ ಒಂದು ಮಲಯಾಳಿ ಬೇಕರಿಯಲ್ಲಿ ಬೇಸಿಗೆ ಕಾಲವಾದರೆ ವಿವಿಧ ಹಣ್ಣುಗಳ ಜ್ಯೂಸ್ ಸಹ ಸಿಗುತ್ತಿತ್ತು. ಅಲ್ಲದೆ ಶಾಖೆಯ ಮುಂದೆಯೇ ಒಬ್ಬ ಎಳನೀರು ಮಾರುತ್ತಾ ನಿಂತಿರುತ್ತಿದ್ದ. ಒಟ್ಟಿನಲ್ಲಿ ನಮ್ಮ ಹೊಟ್ಟೆ ಪೂಜೆಗೆ ಮೋಸ ಬಂತು ಇರಲಿಲ್ಲ. ಸ್ವಲ್ಪ ದಿನಗಳಾದ ನಂತರ ಟೆಂಡರ್ ಕರೆದು ನಮ್ಮ ಶಾಖೆಯಲ್ಲಿಯೇ ವಾಹನ ನಿಲುಗಡೆ ಜಾಗದಲ್ಲಿ ಒಂದು ಕ್ಯಾಂಟೀನ್ ಓಪನ್ ಆಯಿತು. ಸತೀಶ್ ಎನ್ನುವವರು ಅದನ್ನು ಆರಂಭಿಸಿದ್ದರು ಬೆಳಗಿನ ಹೊತ್ತು ಏನಾದರೂ ಒಂದು ತಿಂಡಿ ಮಧ್ಯಾಹ್ನ ಅಣ್ಣ ಸಾಂಬಾರ್ ಮಜ್ಜಿಗೆ ಹಾಗೂ ಸಂಜೆಯ ಹೊತ್ತು ಏನಾದರೂ ಕರಿದ ತಿಂಡಿ ಸಿಗುತ್ತಿತ್ತು ಕಾಫಿ ಟೀ ಮಜ್ಜಿಗೆ ಯಾವಾಗಲೂ ಸಿಗುತ್ತಿತ್ತು.ಯಾರಾದರೂ ಒಬ್ಬರು ಊಟ ತರದಿದ್ದರೆ ಕ್ಯಾಂಟೀನ್ ನಲ್ಲಿಯೇ ತರಿಸಿಕೊಳ್ಳುತ್ತಿದ್ದೆವು. ಇಬ್ಬರು ಮೂವರು ತಂದಿಲ್ಲದಿದ್ದಾಗ ಹುಲ್ಲಹಳ್ಳಿ ಸರ್ಕಲ್ ನಲ್ಲಿ ಇದ್ದ ರಾಮಪ್ರಸಾದ್ ಹೋಟೆಲಿಗೆ ಹೋಗುತ್ತಿದ್ದೆವು. ಶನಿವಾರ ಮಧ್ಯಾಹ್ನದ ಹೊತ್ತು ಮೂರು ಗಂಟೆಗೆ ರೈಲು ಇದ್ದುದರಿಂದ ಪ್ರತಿ ಶನಿವಾರ ಯಾವುದಾದರೂ ಹೋಟೆಲ್ ಗೆ ಅಥವಾ ಕ್ಯಾಂಟೀನ್ ನವರು ಚೆನ್ನಾಗಿರುವ ತಿಂಡಿ ಮಾಡಿದರೆ ಅದನ್ನೇ ತಿಳಿದುಕೊಳ್ಳುತ್ತಿದ್ದೆವು ಅಂದು ಡಬ್ಬಿ ತರುವುದು ನಮಗೆಲ್ಲಾ ನಿಷಿದ್ಧ. ಹೊಸ ವ್ಯವಹಾರಗಳ ವಿಭಾಗದಲ್ಲಿ ಇದ್ದ ಉನ್ನತ ದರ್ಜೆ ಸಹಾಯಕರು ವರ್ಗಾವಣೆಯಾಗಿ ಹೋಗಿದ್ದರಿಂದ ಮಾರ್ಚ್ ವರ್ಷಾಂತ್ಯದ ಬಿಜಿ ಸಮಯವೂ ಆಗಿದ್ದರಿಂದ ನನ್ನನ್ನು ಹೊಸ ವ್ಯವಹಾರ ವಿಭಾಗಕ್ಕೆ ನಿಯುಕ್ತಿಗೊಳಿಸಿದರು. ಅಲ್ಲಿ ಶ್ರೀವತ್ಸ ಮತ್ತು ಮಹಾದೇವನ್ ಅವರು ಸಹಾಯಕರು. ನಾಗರಾಜ್ ಅವರು ಸಹಾಯಕ ಆಡಳಿತ ಅಧಿಕಾರಿಗಳು ಆಗ ತುಂಬಾ ಪ್ರಪೋಸಲ್ಗಳು ಬರುತ್ತಿತ್ತು ಕೆಲಸವು ಹೆಚ್ಚು ಇರುತ್ತಿತ್ತು ವರ್ಷಾಂತ್ಯವಾದ್ದರಿಂದ ಕೆಲವೊಂದು ರಜೆಯ ದಿನ ಭಾನುವಾರಗಳಲ್ಲೂ ಬರಬೇಕಿತ್ತು. ಶನಿವಾರವಂತೂ ಸಂಜೆಯ ರೃಲಿಗೇ ವಾಪಸ್ ಆಗುತ್ತಿದ್ದುದು. ಆದರೂ ಸಹ ತುಂಬಾ ಖುಷಿಯ ವಾತಾವರಣ. ಎಲ್ಲರೂ ಹೊಂದಿ ಕೆಲಸ ಮಾಡುತ್ತಿದ್ದರಿಂದ ಹೆಚ್ಚು ಹೊರೆ ಎನಿಸುತ್ತಿರಲಿಲ್ಲ. ನಾಲ್ಕೈದು ತಿಂಗಳ ಬಳಿಕ ಶಾಖಾಧಿಕಾರಿಗಳು ಅವರ ಕೊಠಡಿಗೆ ಕರೆಸಿ ನನ್ನನ್ನು ವಿಕ್ರಯ ವಿಭಾಗದಲ್ಲಿ ಕೆಲಸ ಮಾಡಲು ಸೂಚಿಸಿದರು.  ಆಗ ಆ ವಿಭಾಗದಲ್ಲಿ ಒಬ್ಬರೇ ಉನ್ನತ ಶ್ರೇಣಿ ಸಹಾಯಕರು ಪ್ರಸಾದ್ ಎಂಬುವವರು ಇದ್ದು ಸಹಾಯಕರು ಯಾರು ಇರಲಿಲ್ಲ. ಹಾಗಾಗಿ ನನ್ನನ್ನು ಅಲ್ಲಿಯೇ ಕೆಲಸ ಮಾಡಲು ವಿನಂತಿಸಿರು. ನನಗೆ ಹೊಸ ವ್ಯವಹಾರ ಹಾಗೂ ವಿಕ್ರಯ ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವ ಇದ್ದುದು .ಸಕಲೇಶಪುರದಲ್ಲಿ ಸ್ವಲ್ಪ ದಿನಗಳ ಕಾಲ ಕಚೇರಿ ಸೇವಾ ವಿಭಾಗದಲ್ಲಿ ಮಾಡಿದ್ದೆ. ಆದರೆ ಪಾಲಿಸಿ ಸೇವಾ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶವೇ ದೊರೆತಿರಲಿಲ್ಲ .ಹಾಗಾಗಿ ಶಾಖಾಧಿಕಾರಿಗಳಿಗೆ ಮುಂದಿನ ಬದಲಾವಣೆಯ ಸಮಯದಲ್ಲಿ ನನಗೆ ಪಾಲಿಸಿ ಸೇವಾ ವಿಭಾಗವನ್ನೇ ಕೊಡಬೇಕು ಎಂದು ಕೋರಿಕೊಂಡೆ ಅವರು ಸಹ ಒಪ್ಪಿಕೊಂಡರು.ವಿಕ್ರಯ ವಿಭಾಗದಲ್ಲಿ ಪ್ರಸಾದ್ ಮತ್ತು ನಾನು ಒಳ್ಳೆಯ ಸೇವೆ ಸಲ್ಲಿಸಿದ್ದೆವು. ಇಬ್ಬರೂ ಒಳ್ಳೆಯ ಕೆಲಸಗಾರರಾದ್ದರಿಂದ ಹಂಚಿಕೊಂಡು ಮಾಡುತ್ತಿದ್ದೆವು. ೨೦೦೦ ನನಗೆ ಅಷ್ಟೇನೂ ಖುಷಿಯದ್ದಾಗಿರಲಿಲ್ಲ. ಅಮ್ಮನ ಆರೋಗ್ಯ ಆಗಾಗ್ಗೆ ಹದಗೆಟ್ಟು ಆಸ್ಪತ್ರೆಗೆ ಸೇರಿಸುವುದು ಕರೆದುಕೊಂಡು ಬರುವುದು ನಡೆದೇ ಇತ್ತು. ಆದರೂ ಛಾಯ ಮತ್ತು ಪ್ರಸನ್ನ ಅವರು ಪಿರಿಯಾಪಟ್ಟಣದಲ್ಲಿ ಮಾಡಿದ್ದ ಮನೆಗೆ ಹೋಗಿ ಸ್ವಲ್ಪ ದಿನ ಇದ್ದು ಬಂದಿದ್ದರು. ನಾವೂ ಒಂದೆರಡು ಬಾರಿ ಹೋಗಿ ಬಂದಿದ್ದೆವು. ಕೊನೆಗೆ ಯಾವ ಪ್ರಯತ್ನವೂ ಫಲ  ಕೊಡದೆ ಜನವರಿ ೬ ೨೦೦೦ ದಂದು ನಮ್ಮನ್ನೆಲ್ಲಾ ಬಿಟ್ಟು ಅಮ್ಮ ಹೊರಟೇ ಬಿಟ್ಟಳು. ಅಂದು ಸೋಮವಾರ . ಹಿಂದಿನವಾರ ರಜೆ ಹಾಕಿ ಅಮ್ಮನ ಜೊತೆಯಲ್ಲೇ ಇದ್ದೆ. ಅಂದು ರೈಲಿನಲ್ಲಿ ಹೊರಟು ಕಛೇರಿ ತಲುಪುವಷ್ಟರಲ್ಲಿ ಫೋನ್ ಬಂದಿದೆ. ನಾನು ತಲುಪಿದ ಕೂಡಲೇ ತುಂಬಾ ಸೀರಿಯಸ್  ವಾಪಸ್ ಹೋಗಿ ಎಂದು ಸ್ಕೂಟರ್ ನಲ್ಲಿ ಕರೆದುಕೊಂಡು ಬಂದು ಬಸ್ ಹತ್ತಿಸಿದರು. ಮೈಸೂರಲ್ಲಿ ರವೀಶ್ ಬಂದು ಮನೆಗೆ ಕರೆದುಕೊಂಡು ಬಂದರು.ಊರುಗಳಿಂದ ಎಲ್ಲಾ‌ ಬಂದು ಸೇರಿ ಅಮ್ಮನನ್ನು ಅಂತಿಮ ಬಾರಿಗೆ ಕರೆದುಕೊಂಡು ಹೊರಟಾಗ ಸಂಜೆ. ನಾನು ದಿನಾ ವಾಪಸಾಗುವ ರೈಲು ಕೂ ಅಂತ ಕೂಗ್ತಿತ್ತು.  ಶಾಖಾಧಿಕಾರಿಗಳು ಕೆಲವರು ಸ್ನೇಹಿತರು ಸುಲೋಚನಾ ಎಲ್ಲ ಬಂದಿದ್ದರು. ಈಗಲೂ ಸಂಜೆ ರೈಲಿನ ಕೂಗು ಕಿವಿಗೆ ಬಿದ್ದಾಗಲೆಲ್ಲಾ ಅಂದಿನ ಆ ಸಂಜೆಯ ಮಡುಗಟ್ಟಿದ ದುಃಖ ಮರುಕಳಿಸುತ್ತದೆ.ಈಗಲೂ ಇದನ್ನು ಬರೆಯುವಾಗ ಕಣ್ಣು ತುಂಬಿ ನೀರು ಹರಿದು ಮಂಜಾಗುತ್ತಿದೆ. ಸಧ್ಯಕ್ಕೆ ನಿಲ್ಲಿಸುವೆ.(ಮುಂದಿನ ವಾರಕ್ಕೆ ಮುಂದುವರೆಯುವುದು) ಸುಜಾತಾ‌ ರವೀಶ್

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-31 ಈ ಮನೆಯ ಬಾಲ್ಕನಿಯಲ್ಲಿ ನಿಂತರೆ ಇಡೀ ಸಂತೆಯೇ ಕಾಣುತ್ತಿತ್ತು ಗುರುವಾರದ ದಿನ ಬಂತು ಬೆಳಗ್ಗೆ 6 ಗಂಟೆಯಿಂದಲೇ ಜನಗಳ ಗಾಡಿಗಳ ಓಡಾಟ ಮತ್ತೆ ಸಂಜೆಯವರೆಗೂ ಇದೇ ರೀತಿ ರಸ್ತೆ ಬ್ಯುಸಿ ಇರುತ್ತಿತ್ತು. ಸಂಜೆ ಸಂತೆ ಕೆ ಬಂದ ಕೆಲವು ಸಹೋದ್ಯೋಗಿಗಳು ಮನೆಗೆ ಬರುತ್ತಿದ್ದರು ಹಳೆಯ ಮನೆಯ ಬಳಿಯಿದ್ದ ಪರಿಚಿತರು ಬರುತ್ತಿದ್ದರು ಹಾಗಾಗಿ ಗುರುವಾರ ನಾವು ಸಂಜೆ ತುಂಬಾ ಬ್ಯುಸಿ ಆಗಿಬಿಡುತ್ತಿದ್ದೆವು. ಅದೇ ರಸ್ತೆಯ ಕೊನೆಯಲ್ಲಿ ಬಸ್ ಡಿಪೋ ಇದುದರಿಂದ ಬಹಳಷ್ಟು ಬಸ್ ಓಡಾಟ ಸದಾ ಇರುತ್ತಿತ್ತು .ಹೀಗಾಗಿ ಬಾಲ್ಕನಿ ಸದಾ ಧೂಳಾಗಿಯೇ ಇರುತ್ತಿತ್ತು . ಆಗ ಪುಟ್ಟ ಮಗುವಾಗಿದ್ದ ನನ್ನ ತಂಗಿಯ ಮಗ ನಿಶ್ಚಯ್ ಗಂತೂ ಓಡಾಡುತ್ತಿದ್ದ ಆ ಕೆಂಪು ಬಸ್ ಗಳನ್ನು ನೋಡುವುದೇ ಒಂದು ಖುಷಿ.ಈ ಮನೆಯಲ್ಲಿ ಇದ್ದಾಗಲೇ ನಮ್ಮ ಅತ್ತೆ ಮಾವ ಸಹ ಬಂದು ಒಂದು ವಾರ ಇದ್ದರು ನಮ್ಮ ಅತ್ತೆಯ ತಾಯಿಯ ಮನೆ ಸಕಲೇಶಪುರದ ಹತ್ತಿರದ ಊರೇ ಆದ್ದರಿಂದ ಅಲ್ಲಿಗೂ ಒಮ್ಮೆ ಹೋಗಿ ಬಂದರು. ನನ್ನ ಮೈದುನ ಹಾಗೂ ಓರಗಿತ್ತಿ ಸಹ ಒಮ್ಮೆ ಇಲ್ಲಿಗೆ ಬಂದಿದ್ದರು. ಅವರೊಂದಿಗೆ ನಾವು ಹೊರನಾಡು ಹೋಗಿ ದೇವಿ ದರ್ಶನ ಮಾಡಿ ಬಂದೆವು ದಿನವೇ ಐ ಆರ್ ಡಿ ಎ ಬಿಲ್ ಸಹ ಮಂಡಿಸಲ್ಪಟ್ಟು ಇದ್ದಕ್ಕಿದ್ದಂತೆ ಆ ದಿನ ಸ್ಟ್ರೈಕ್ ಕೊಟ್ಟಿದ್ದರು ಹಾಗಾಗಿ ರಜೆಯ ಬದಲು ಸ್ಟ್ರೈಕ್ ನಲ್ಲಿ ಭಾಗವಹಿಸುವ ಹಾಗೆ ಆಯಿತು. ಏನಿದು ಐಆರ್‌ಡಿಎ ಬಿಲ್? ಇದುವರೆಗೆ ಏಕಸ್ವಾಮ್ಯವಾಗಿ ಇದ್ದ ಭಾರತೀಯ ಜೀವವೀಮನಿಗಮ ಮತ್ತು ವಿಮಾ ವಲಯ ಈಗ ಒಂದು ಪ್ರಾಧಿಕಾರದ ಮಿತಿಗೆ ಒಳಪಟ್ಟು ಹೊರಗಿನ ಸಂಸ್ಥೆಗಳು ಸಹ ಜೀವವಿಮ ವಹಿವಾಟು ನಡೆಸಲು ಅರ್ಹವಾಗುತ್ತಿದ್ದವು. ಭಾರತೀಯ ಜೀವ ವಿಮಾ ನಿಗಮದ ಸಾರ್ವಭೌಮತ್ವಕ್ಕೆ ಉಂಟಾಯಿತು. IRDAI ಎನ್ನುವುದು ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ಸ್ವಾಯತ್ತ ಮತ್ತು ಶಾಸನಬದ್ಧ ಸಂಸ್ಥೆಯಾಗಿದೆ. ಇದು ಭಾರತದಲ್ಲಿ ವಿಮಾ ಕ್ಷೇತ್ರವನ್ನು (Insurance Sector) ನಿಯಂತ್ರಿಸುವ ಮತ್ತು ಅಭಿವೃದ್ಧಿಪಡಿಸುವ ಸರ್ವೋಚ್ಚ ಸಂಸ್ಥೆಯಾಗಿದೆ.​ಇದನ್ನು 1999 ರಲ್ಲಿ ‘IRDA ಕಾಯ್ದೆ’ಯ ಅಡಿಯಲ್ಲಿ ರಚಿಸಲಾಯಿತು.ಮಲ್ಹೋತ್ರಾ ಸಮಿತಿಯ ಶಿಫಾರಸಿನ ಮೇರೆಗೆ IRDAI ಅಸ್ತಿತ್ವಕ್ಕೆ ಬಂದಿತು.​ಕೇಂದ್ರ ಕಚೇರಿ ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿದೆ. ​IRDAI ಸ್ಥಾಪನೆಯ ಹಿಂದೆ ಪ್ರಮುಖವಾಗಿ ಮೂರು ಉದ್ದೇಶಗಳಿವೆ:​ವಿಮಾದಾರರ ಹಿತರಕ್ಷಣೆ: ವಿಮೆ ಮಾಡಿಸಿದ ಗ್ರಾಹಕರಿಗೆ ಯಾವುದೇ ಅನ್ಯಾಯವಾಗದಂತೆ ನೋಡುವುದು.​ಕ್ಷೇತ್ರದ ನಿಯಂತ್ರಣ: ವಿಮಾ ಕಂಪನಿಗಳು ಸರಿಯಾದ ನಿಯಮಗಳನ್ನು ಪಾಲಿಸುತ್ತಿವೆಯೇ ಎಂದು ಮೇಲ್ವಿಚಾರಣೆ ಮಾಡುವುದು.​ಅಭಿವೃದ್ಧಿ: ವಿಮಾ ಕ್ಷೇತ್ರವು ವ್ಯವಸ್ಥಿತವಾಗಿ ಬೆಳೆಯಲು ಪೂರಕವಾದ ವಾತಾವರಣ ನಿರ್ಮಿಸುವುದು.​IRDAI ಈ ಕೆಳಗಿನ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ:​ಪರವಾನಗಿ ನೀಡುವುದು: ಹೊಸ ವಿಮಾ ಕಂಪನಿಗಳಿಗೆ ವ್ಯವಹಾರ ನಡೆಸಲು ಪರವಾನಗಿ (License) ನೀಡುವುದು ಮತ್ತು ಅದನ್ನು ನವೀಕರಿಸುವುದು.​ನಿಯಮಗಳ ರೂಪಣೆ: ವಿಮಾ ಪಾಲಿಸಿಗಳು ಹೇಗೆ ಇರಬೇಕು, ಪ್ರೀಮಿಯಂ ದರಗಳು ಮತ್ತು ಕ್ಲೈಮ್ (Claim) ಇತ್ಯರ್ಥದ ಬಗ್ಗೆ ನಿಯಮಗಳನ್ನು ರೂಪಿಸುವುದು.​ದೂರುಗಳ ಪರಿಹಾರ: ವಿಮಾ ಕಂಪನಿ ಮತ್ತು ಗ್ರಾಹಕರ ನಡುವೆ ವಿವಾದ ಉಂಟಾದಾಗ ಅದನ್ನು ಬಗೆಹರಿಸಲು ವೇದಿಕೆ ಕಲ್ಪಿಸುವುದು.​ಬಂಡವಾಳದ ಮೇಲ್ವಿಚಾರಣೆ: ವಿಮಾ ಕಂಪನಿಗಳು ಗ್ರಾಹಕರ ಹಣವನ್ನು ಹಿಂತಿರುಗಿಸಲು ಬೇಕಾದಷ್ಟು ಆರ್ಥಿಕ ಸಾಮರ್ಥ್ಯ ಹೊಂದಿವೆಯೇ ಎಂದು ಪರಿಶೀಲಿಸುವುದು.​ತರಬೇತಿ ಮತ್ತು ಶಿಕ್ಷಣ: ವಿಮಾ ಏಜೆಂಟ್‌ಗಳಿಗೆ ಬೇಕಾದ ಅರ್ಹತೆ ಮತ್ತು ತರಬೇತಿಯ ಮಾನದಂಡಗಳನ್ನು ನಿಗದಿಪಡಿಸುವುದು. ಅಂದಿನ ದಿನಗಳಲ್ಲಿ ಈ ವಿದ್ಯಮಾನಗಳು ತುಂಬಾ ಆತಂಕವನ್ನು ಹುಟ್ಟಿಸಿದ್ದು ಮುಂದಿನ ದಿನಗಳು ಹೇಗೋ ಏನೋ ಎಂಬ ದಿಗಿಲು ಸಹ ಉಂಟಾಗಿತ್ತು. ಆದರೆ ಜೀವ ವಿಮಾನ ನಿಗಮ ತನ್ನ ಸಮರ್ಥ ಆರ್ಥಿಕ ನೀತಿ ಹಾಗೂ ದಕ್ಷ ಆಡಳಿತ ವಿಧಾನಗಳಿಂದ ಈ ಹೊರಗಿನ ಸ್ಪರ್ಧೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಾ ಬಂದಿದೆ ಎಂದು ಹೆಮ್ಮೆಯಿಂದ ಹೇಳಬಹುದು. ಜೂನ್ 1999ರಲ್ಲಿ ನನ್ನ ತಂಗಿ ಪ್ರಯಾಣ ವಿವಾಹ ಆಯಿತು. 15 ದಿನಗಳ ಕಾಲ ರಜೆ ತೆಗೆದುಕೊಂಡು ಹೋಗಿ ಮದುವೆ ಮುಗಿಸಿ ಬಂದಾಯಿತು. ಮದುವೆ ತಿಂಡಿಗಳನ್ನು ಇಟ್ಟಿದ್ದ ಬ್ಯಾಗ್ ಸಕಲೇಶಪುರಕ್ಕೆ ಬರುವಾಗ ಮರೆತು ಬಂದಿದ್ದೆವು. ರವೀಶ್ ಸಹ ಅಂದು ನನ್ನ ಜೊತೆಗೆ ಬಂದುಬಿಟ್ಟಿದ್ದರು ಇನ್ನು ತಿಂಡಿಗಳು ಮಿಸ್ ಆಗುತ್ತದೆ ಎಂದು ಅಷ್ಟು ಆಯಾಸವಾಗಿದ್ದರು ಸಹ ಮಧ್ಯಾಹ್ನವೇ ನಮ್ಮ ತಂದೆ ಅದನ್ನೆಲ್ಲ ತೆಗೆದುಕೊಂಡು ಸಕಲೇಶಪುರಕ್ಕೆ ಬಂದಿದ್ದರು. ಅದನ್ನು ನೆನೆಸಿಕೊಂಡರೆ ಈಗಲೂ ಕಣ್ಣು ತುಂಬಿ ಬರುತ್ತದೆ ಆ ಪ್ರೀತಿಗೆ ಯಾವುದು ತಾನೇ ಸಾಟಿಯಾದೀತು?ಅಣ್ಣ ಅಲ್ಲಿದ್ದಾಗಲೇ ನವ ವಿವಾಹಿತ ಜೋಡಿಯು ಸಹ ಸಕಲೇಶಪುರಕ್ಕೆ ಬಂದಿದ್ದರು ಅಲ್ಲಿ ಸುತ್ತ ಮುತ್ತಲಿನ ಹಾರ್ಲೆ ಎಸ್ಟೇಟ್ ಟೀ ಫ್ಯಾಕ್ಟರಿ ಅವೆಲ್ಲವನ್ನು ಆಗ ಹೋಗಿ ನೋಡಿಕೊಂಡು ಬಂದೆವು. ಸುಲೋಚನಾ ಸಹ ನಮ್ಮೊಂದಿಗೆ ಆಗ ಬಂದಿದ್ದರು.ಮದ್ದೂರಿನಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಇದ್ದ ನನ್ನ ತಂಗಿ ಔಅಯಳಿಗೆ ಮದುವೆಯ ನಂತರ ಹುಣಸೂರಿಗೆ ವರ್ಗ ಆಯಿತು. ಅವಳ ಪತಿ ಪ್ರಸನ್ನ ಅವರು ಸಹ ಜೀವವಿಮನಿಗಮದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕೆಆರ್ ನಗರಕ್ಕೆ ಸೇರಿದಂತಿದ್ದ ಬೆಟ್ಟದ ಪುರದಲ್ಲಿ ಇದ್ದರು. ಅವರು ನಮಗೆ ಬ್ಯಾಚ್ ನ ಹಿಂದಿನ ಮೊದಲ ಲಿಸ್ಟ್ ನಲ್ಲಿ ಆಯ್ಕೆಯಾದ ಅಭ್ಯರ್ಥಿ ಸಹಾಯಕರಾಗಿ ಆಯ್ಕೆಯಾದವರು ನಂತರ ಅಭಿವೃದ್ಧಿ ಅಧಿಕಾರಿಯಾಗಿ ಬದಲಾವಣೆ ತೆಗೆದುಕೊಂಡಿದ್ದರು .ಇಬ್ಬರಿಗೂ ಮಧ್ಯದ ಜಾಗವಾದ ಪಿರಿಯಾಪಟ್ಟಣದಲ್ಲಿ ಮನೆ ಮಾಡಿದ್ದರು.ಅಲ್ಲಿ ಕಚೇರಿ ಸೇವಾ ವಿಭಾಗಕ್ಕೆ ನನಗೆ ಬದಲಾವಣೆ ಸಿಕ್ಕಿತು ಆಗ ಹಿಂದಿ ದಿನಾಚರಣೆಯ ಸಂದರ್ಭ ಬಂದಿತ್ತು. ಆಗ ಸುಮಾರು ಸ್ಪರ್ಧೆಗಳನ್ನು ಏರ್ಪಡಿಸಿ ಎಲ್ಲರೂ ಭಾಗವಹಿಸಲು ಅನುಕೂಲವಾಗುವ ಹಾಗೆ ಒಂದು ಅಂತ್ಯಾಕ್ಷರಿ ಸ್ಪರ್ಧೆಯನ್ನು ಸಹ ಏರ್ಪಡಿಸಿದೆವು ನಾನು ಮತ್ತು ಸುಲೋಚನಾ ಸೇರಿ ಅದನ್ನು ನಡೆಸಿಕೊಟ್ಟವು ಅಲ್ಲಿ ಎಲ್ಲರಿಗೂ ಅದು ತುಂಬಾ ಇಷ್ಟವಾಗಿತ್ತು. ಹೀಗೆ ಒಂದು ಕನ್ನಡದ ಅಂತ್ಯಾಕ್ಷರಿ ಮಾಡಿ ಎಂದು ಹೇಳಿ ಅಲ್ಲಿನ ಅಭಿವೃದ್ಧಿ ಅಧಿಕಾರಿಗಳು ಬಹುಮಾನದ ಪ್ರಾಯೋಜಕತ್ವ ವಹಿಸಿಕೊಂಡರು. ಆಗೊಮ್ಮೆ ಕನ್ನಡ ಅಂತ್ಯಾಕ್ಷರಿಯನ್ನು ಸಹ ನಡೆಸಿಕೊಟ್ಟಿದ್ದೆವು. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು ಅವುಗಳಿಗೆ ಬಹುಮಾನಗಳನ್ನು ಆರಿಸಿ ತರುವುದು ಇವೆಲ್ಲವೂ ತುಂಬಾ ಖುಷಿ ಕೊಟ್ಟ ಕೆಲಸ. ನನಗೆ ಸಹಾಯಕ ಆಗಿದ್ದ ರಘು ಅವರು ಅಲ್ಲಿನ ಅಂಗಡಿಗಳ ಮಾಲೀಕರನ್ನು ಚೆನ್ನಾಗಿ ಬಲ್ಲವರಾದ್ದರಿಂದ ಒಳ್ಳೆಯ ಚೌಕಾಸಿ ನಡೆಸಿ ಗುಣಮಟ್ಟದ ಸಾಮಾನುಗಳನ್ನು ಆದಷ್ಟು ರಿಯಾಯಿತಿಯಲ್ಲಿ ಕೊಂಡು ಬರುತ್ತಿದ್ದೆವು.ನಾವು ಹೋಗಿದ್ದಾಗ ಉಮೇಶ್ ಭಟ್ ಎನ್ನುವವರು ಅಲ್ಲಿನ ಉಪ ಶಾಖಾಧಿಕಾರಿಗಳಾಗಿದ್ದವು ಅವರು ನಟಿ ವಿನಯ ಭಟ್ ಅವರ ಕುಟುಂಬ ಸ್ನೇಹಿತರು ಒಮ್ಮೆ ಸಕಲೇಶಪುರದ ಬಳಿ ಶೂಟಿಂಗ್ ಗೆ ಬಂದಿದ್ದ ವಿನಯ ಭಟ್ ಅವರು ಅವರ ಮನೆಗೆ ಬಂದಿದ್ದರಂತೆ. ಆಗ ನಮ್ಮ ಶಾಖೆಯ ಎಲ್ಲರೂ ಅವರ ಮನೆಗೆ ಹೋಗಿ ಆಕೆಯನ್ನು ಮಾತನಾಡಿಸಿಕೊಂಡು ಬಂದರಂತೆ ನಾನು ಸುಲೋಚನಾ ಆಗ ರಜೆ ಹಾಕಿ ಮೈಸೂರಿಗೆ ಬಂದು ಬಿಟ್ಟಿದ್ದೆವು. ಹಾಗಾಗಿ ನಮಗೆ ಆ ಭೇಟಿ ಸಾಧ್ಯವಾಗಲಿಲ್ಲ ನಮಗೆ ಪುಸ್ತಕದ ಮೇಲಿನ ಪ್ರೀತಿ ನೋಡಿ ಉಮೇಶ್ ಭಟ್ ಅವರು ಹಸ್ತ ಸಾಮುದ್ರಿಕೆಯ ಬಗ್ಗೆ ಇದ್ದ ಒಂದು ಇಂಗ್ಲಿಷ್ ಪುಸ್ತಕವನ್ನು ನಮಗೆ ಅವರು ವರ್ಗವಾಗಿ ಹೋಗುವಾಗ ಉಡುಗೊರೆಯಾಗಿ ಕೊಟ್ಟಿದ್ದರು. ಅವರು ಹೋದ ನಂತರ ಮೈಸೂರಿನ ಬ್ರಾಂಚ್ ಒಂದರಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದ ರಾಜೇಂದ್ರ ಪ್ರಸಾದ್ ಎನ್ನುವವರು ಉಪಶಾಖಾಧಿಕಾರಿಗಳಾಗಿ ಬಂದಿದ್ದರು. ನಾವು ವಾಪಸ್ ಮನೆ ಶಿಫ್ಟ್ ಮಾಡುವ ಸಂದರ್ಭದಲ್ಲಿ ರವೀಶ್ ಅವರನ್ನು ಕರೆದುಕೊಂಡು ಹೋಗಿ ಸಕಲೇಶಪುರದ ವಿಶೇಷವಾದ ಕಾಫಿ ಬೊಡ್ಡೆಯ ಅಲಂಕಾರಿಕ ಸಾಮಗ್ರಿಗಳನ್ನು ಕೊಳ್ಳಲು ಸಹಾಯ ಮಾಡಿದ್ದರು. ಅವುಗಳಲ್ಲಿ ಒಂದು ಈಗಲೂ ನಮ್ಮ ಮನೆಯಲ್ಲಿ ಇದೆ ಸಕಲೇಶಪುರದಲ್ಲಿ ಕೆಲಸ ಮಾಡಿದ ದಿನಗಳ ನೆನಪಿನ ಕುರುಹಾಗಿ. ಛಾಯಾ ಮತ್ತು ಪ್ರಸನ್ನ ನಿರ್ಮಲ ಟ್ರಾವೆಲ್ಸ್ ನ ಮಧ್ಯ ಇಂಡಿಯಾ ಪ್ರವಾಸಕ್ಕೆ ಹೋಗಲು ಯೋಜನೆ ಮಾಡಿದರು. ನಮ್ಮ ತಂದೆ ತಾಯಿ ಹಾಗೂ ಪ್ರಸನ್ನ ಅವರ ತಂದೆ ತಾಯಿ ಅವರುಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಉದ್ದೇಶ ಇತ್ತು ನಮಗೂ ಹೇಗೂ ಎಲ್ ಟಿ ಸಿ ದೊರೆಯುತ್ತಿದ್ದರಿಂದ ನಾನು ಮತ್ತು ರವೀಶ್ ಸಹ ಹೊರಡಲು ನಿಶ್ಚಯಿಸಿದೆವು. ಭಾರತೀಯ ಜೀವವಿಮಾನ ನಿಗಮದಲ್ಲೇ ಅಭಿವೃದ್ಧಿ ಅಧಿಕಾರಿಯಾಗಿರುವ ಪ್ರಸನ್ನ ಅವರ ಅಣ್ಣ ಪ್ರಭಾಕರ್ ಹಾಗೂ ಅವರ ಪತ್ನಿ ಶಾಮಲಾ ಮತ್ತು ಮಗಳು ಪ್ರೇರಣಾ ಸಹ ನಮ್ಮ ಜೊತೆಗೆ ಸೇರಿಕೊಂಡರು. ಹೀಗೆ ಹನ್ನೆರಡು ಜನಗಳ ನಮ್ಮ ಗುಂಪು ಮಂಗಳೂರಿನಿಂದ ಹೊರಟ ಆ ಪ್ರವಾಸದಲ್ಲಿ ಸೇರಿದೆವು ತುಂಬಾ ಚೆನ್ನಾಗಿ ನಡೆದ ಪ್ರವಾಸ ಈಗಲೂ ಒಂದು ಸವಿ ನೆನಪು. ನಾವು ಸಕಲೇಶಪುರದಿಂದಲೇ ಮಂಗಳೂರಿಗೆ ಹೋಗಿದ್ದೆವು ಮತ್ತು ಮಂಗಳೂರಿನಿಂದಲೇ ಮತ್ತೆ ವಾಪಸ್ಸಾದೆವು. ಅವರೆಲ್ಲ ಹೊರಡುವಾಗ ಮಂಗಳೂರಿಗೆ ಬಂದಿದ್ದರು. ವಾಪಸ್ ಆಗುವಾಗ ಹುಬ್ಬಳ್ಳಿಯಿಂದಲೇ ಮೈಸೂರಿಗೆ ವಾಪಸ್ ಹೋದರು. ನನ್ನ ಕಡೆಯ ತಂಗಿ ವೈಶಾಲಿ ಮತ್ತು ಮುರಳಿ ಮಗು ಚಿಕ್ಕವನಿದ್ದುದರಿಂದ ಬರಿ ಮಂಗಳೂರು ಪ್ರವಾಸಕ್ಕೆ ಮಾತ್ರ ಜೊತೆಯಾಗಿ ನಂತರ ಮೈಸೂರಿಗೆ ವಾಪಸ್ ಆದರು. ಹಾಗೆ ಹೀಗೆ ಎನ್ನುವಂತೆ ದಿನಗಳು ಕಳೆದು ಮುಂದಿನ ಪದೋನ್ನತಿಗಳ ಸಮಯ ಬಂದೇ ಬಿಟ್ಟಿತು. ಆ ಬಾರಿ ಅದು ತಡವಾಗಿ ಮಾರ್ಚ್ ತಿಂಗಳ ತನಕ ಎಳೆದುಕೊಂಡು ಹೋಗಿದ್ದು. ಬಹಳ ಕಾಲದಿಂದ ನಿರೀಕ್ಷೆ ಇದ್ದ ವರ್ಗಾವಣೆ ಪಟ್ಟಿ ಪ್ರಕಟವಾಗಿತ್ತು ನನಗೆ ನಂಜನಗೂಡಿಗೆ ಸಿಕ್ಕಿತ್ತು ಸ್ವಲ್ಪವೇ ಅಂತರದಿಂದ ಸುಲೋಚನಾ ಅವರಿಗೆ ನಂಜನಗೂಡು ತಪ್ಪಿ ಹೋಗಿ ಚಾಮರಾಜನಗರಕ್ಕೆ ವರ್ಗಾವಣೆ ಸಿಕ್ಕಿತು. ಓಡಾಡಬಹುದಾಗಿತ್ತು ಅವರ ಮನೆ ನಂಜನಗೂಡಿನಲ್ಲಿ ಇದ್ದುದರಿಂದ. ಸ್ವಲ್ಪ ಸಮಾಧಾನ ಅಷ್ಟೇ. ಆದರೆ ಮತ್ತೊಂದು ಸಮಸ್ಯೆ ಎದುರಾಗಿತ್ತು.ನಾವಿದ್ದ ಮನೆಯ ಮಾಲೀಕ ತುಂಬಾ ಸಾಲದ ಸುಳಿಗಳಿಗೆ ಸಿಕ್ಕಿಕೊಂಡು ಮನೆ ಕೋರ್ಟ್ ಆದೇಶದಲ್ಲಿ ಇತ್ತು. ನಾವು ಕೊಟ್ಟಿದ್ದ ಮುಂಗಡ ಹಣ 15000 ವಾಪಸ್ ಮಾಡುವ ಸ್ಥಿತಿಯಲ್ಲಿ ಆತ ಇರಲಿಲ್ಲ .ಆದರೆ ನಾವು ಮನೆಯನ್ನು ಬಿಡಲೇಬೇಕಿತ್ತು.‌ ಕೆಲವರು ಕೊಟ್ಟ ಸಲಹೆಯಂತೆ ಒಂದೆರಡು ಹಳೆಯ ಸಾಮಾನುಗಳನ್ನು ಅಲ್ಲಿಯೇ ಬಿಟ್ಟು ಮನೆಯ ಬೀಗವನ್ನು ಸಕಲೇಶಪುರದಲ್ಲೇ ಇದ್ದ ರವೀಶ್ ಅವರ ಊರಿನವರೇ ಆದ ಸತ್ಯ ಮತ್ತು ಮೋಹನ್ ಅವರಿಗೆ ಕೊಟ್ಟು ಬಂದೆವು. ಆ ಕಾಲಕ್ಕೆ ೧೫೦೦೦ ಸಣ್ಣ ಮೊತ್ತವೇನಲ್ಲ. ವಾಪಸ್ಸು ಬಾರದಿದ್ದರೆ ಹೇಗಪ್ಪಾ ಅಂತಲೂ ಚಿಂತೆ. ಆದರೆ ನಮ್ಮ ತಂದೆ ಮಾತ್ರ ಭರವಸೆ ಇಟ್ಟುಕೊಂಡು ಹೇಳುತ್ತಿದ್ದರು ಕಷ್ಟಪಟ್ಟು ದುಡಿದ ಹಣ ಖಂಡಿತ ವಾಪಸ್ ಬಂದೆ ಬರುತ್ತದೆ ಎಂದು ಅವರ ಆಶೀರ್ವಾದದಂತೆ ಒಂದೆರಡು ತಿಂಗಳ ಬಳಿಕ ಆ ಮನೆಯನ್ನು ಬೇರೊಬ್ಬರು ಕೊಂಡುಕೊಂಡು ಮುಂಗಡ ಹಣ ವಾಪಸ್ ಕೊಟ್ಟು ಕೀ ಪಡೆದುಕೊಂಡರಂತೆ. ಫೋನ್ ಮಾಡಿ ತಿಳಿಸಿದ ಮೇಲೆ ರವೀಶ್ ಅವರು ಹೋಗಿ ಹಣ ತೆಗೆದುಕೊಂಡು ಬಂದರು ಮನಸ್ಸಿಗೆ ಸ್ವಲ್ಪ ನಿರಾಳವಾಯಿತು. ಮೊದಲು ನಾವಿದ್ದ ಮನೆ ಕಟ್ಟಿದ್ದಾಗ ವಾರ್ಡ್ರೋಬ್ ಕೆಲಸಗಳನ್ನು ಮಾಡಿರಲಿಲ್ಲ ಹೀಗಾಗಿ ನಾವು ವಾಪಸ್ ಬರುವಾಗ ಮತ್ತೆ ಮನೆಗೆ ಪೇಂಟ್ ಮಾಡಿಸಿ ವಾರ್ಡ್ರೋಬ್ ಗಳನ್ನು ಮಾಡಿಸಿಕೊಂಡು ಬಂದೆವು..(ಮುಂದಿನವಾರಕ್ಕೆ) ಸುಜಾತಾ ರವೀಶ್

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ವೃತ್ತಿ ಬದುಕಿನ ಹಿನ್ನೋಟ-30 ಸುಜಾತಾ ರವೀಶ್ ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೩೦ ಬುಕ್ ಮಾಡಿದ್ದ ಬೈಕ್ ಬಂದಿದ್ದು ಅಷ್ಟರೊಳಗೆ ಪರ್ಮನೆಂಟ್ ಲೈಸೆನ್ಸ್ ಸಹ ಸಿಕ್ಕಿತ್ತು . ಆದರೆ ನನಗೆ ಗಾಡಿ ಓಡಿಸಲು ಬರುತ್ತಿರಲಿಲ್ಲ. ಬೈಕ್ ಪೂಜೆ ಮಾಡಿಸಿ ಮೈಸೂರಿನಿಂದ ರವೀಶ್ ಬೈಕ್ ಓಡಿಸಿಕೊಂಡು ಸಕಲೇಶಪುರಕ್ಕೆ ಬಂದಿದ್ದರು. ಕೆಲವೊಮ್ಮೆ ಹಾಗೆ ಶುಕ್ರವಾರ ಸಕಲೇಶಪುರಕ್ಕೆ ಬರುತ್ತಿದ್ದರು ಶನಿವಾರ ಮಧ್ಯಾಹ್ನ ಆಫೀಸ್ ಮುಗಿದ ನಂತರ ಅವರ ಊರಿಗೆ ಬೈಕ್ ನಲ್ಲೆ ಹೋಗುತ್ತಿದ್ದೆವು. ಕೆಲವೊಮ್ಮೆ ಅವರು ಮೊದಲೇ ಬಂದು ಮೈಸೂರಿಗೆ ಸಹ ಬೈಕ್ ನಲ್ಲಿ ನಾಲ್ಕು ಐದು ಬಾರಿ ಬಂದಿದ್ದೇವೆ .ಹಾಗೆ ಬರುವಾಗ ಒಮ್ಮೆ ಸಕಲೇಶಪುರದಿಂದ ರಾಮನಾಥಪುರದ ಬಳಿ ಇರುವ ಇವರ ಊರಿನ ತನಕವೂ ಒಂದೇ ಸಮ ಮಳೆ. ಪಕ್ಕದಲ್ಲಿ ನದಿ ಹರಿಯುತ್ತಿದ್ದು ಆ ಅನುಭವ ಇಂದಿಗೂ ಮರೆಯಲಾಗದಷ್ಟು ಮನಸ್ಸಿನಲ್ಲಿ ನಿಂತುಬಿಟ್ಟಿದೆ.ಇನ್ನು ಸಕಲೇಶಪುರದ ಮಳೆಯ ಬಗ್ಗೆ ಹೇಳದಿದ್ದರೆ ಖಂಡಿತ ಆಗುವುದಿಲ್ಲ. ಜೂನ್ ತಿಂಗಳಿನಲ್ಲಿ ಆರಂಭವಾಗುವ ಮಳೆ ಕೆಲವೊಮ್ಮೆ ರಭಸ ಕೆಲವೊಮ್ಮೆ ಮೆತ್ತಗೆ ಅಷ್ಟೇ ದಿನವಿಡೀ ಸುರಿಯುತ್ತಲೇ ಇರುತ್ತಿತ್ತು ಮಳೆ ಅಂದರೆ ಪ್ರಾಣ ಬಿಡುವ ನನಗಂತೂ ಅಲ್ಲಿದ್ದ ಎರಡು ವರ್ಷವೂ ಒಂದು ರೀತಿ ಖುಷಿ ಕೊಟ್ಟಿತ್ತು. ಆದರೆ ಬಟ್ಟೆಗಳು ಒಣಗುತ್ತಿರಲಿಲ್ಲ ಒರೆಸಿಕೊಂಡ ಟವಲ್ ಹರವದಿದ್ದರೆ ಸಂಜೆಯ ವೇಳೆಗೆ ಕಪ್ಪಗೆ ಬೂಸ್ಟು ಬರುತ್ತಿತ್ತು .ಸಾಮಾನುಗಳಂತೂ ಸ್ವಲ್ಪವೇ ತೆಗೆದುಕೊಂಡು ಬರಬೇಕಿತ್ತು. ಅಕಸ್ಮಾತ್ ಊರಿಗೆ ಹೋಗಿ ಬಿಟ್ಟರೆ ಬರುವ ವೇಳೆಗೆ ಅವೆಲ್ಲ ಬೂಸ್ಟ್ ಹಿಡಿದದ್ದೇ ಹೌದು. ತರಕಾರಿಗಳು ಅಷ್ಟೇ ಆಗ ಫ್ರಿಜ್ ಸಹ ಇರಲಿಲ್ಲ .ತಂದ ತರಕಾರಿಗಳನ್ನು ಕ್ಲೀನಾಗಿ ಒರೆಸಿ ಒಂದಕ್ಕೊಂದು ತಾಗದಂತೆ ಹರವಿ ಇಟ್ಟರೆ ಬಚಾವ್. ಇಲ್ಲದಿದ್ದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬೆಳ್ಳನೆಯ ಬೂಸ್ಟು ಅವುಗಳನ್ನು ಅಲಂಕರಿಸಿ ಬಿಟ್ಟಿರುತ್ತಿತ್ತು.ಆ ಮಳೆಯ ಆರ್ಭಟಕ್ಕೆ ಎಲ್ಲೋ ಬಿದ್ದ ಮರ ವಿದ್ಯುತ್ ತಂತಿ ಕಟ್ಟಾಗಿ ದಿನವಿಡೀ ಏನು! ವಾರವಿಡೀ ವಿದ್ಯುತ್ ಸರಬರಾಜು ಬಂದಾಗುತ್ತಿತ್ತು. ಆಗೆಲ್ಲಾ ನೀರು ಹೊತ್ತು ಹೊತ್ತು ಸಾಕಾಗುತ್ತಿತ್ತು. ಮಹಡಿಯ ಮೇಲಿನ ಮನೆ ಎಂದು ಹೇಳಿದ್ದೆ ಅಲ್ಲವೇ ಆ ಮೆಟ್ಟಲುಗಳು ಸಹ ಪಾಚಿ ಕಟ್ಟಿಕೊಂಡು ಬಿಡುತ್ತಿದ್ದವು. ಸದ್ಯ ಒಂದು ಬಾರಿಯೂ ಬಿದ್ದಿಲ್ಲ ಅದು ನನ್ನ ಪುಣ್ಯ.ಈ ಎಲ್ಲಾ ತೊಂದರೆಗಳ ಮಧ್ಯೆಯೂ ಆ ಜಿಟಿ ಜಿಟಿ ಸುರಿಯುವ ಮಳೆಯ ಸದ್ದು ಒಂದು ರೀತಿ ಜೋಗುಳದ ಹಾಗೆ ಕೇಳಿಸುತ್ತಿತ್ತು. ಸದಾ ಕಚೇರಿಗೆ ಹೋಗುವಾಗ ಬರುವಾಗ ಛತ್ರಿ ಎಡೆಬಿಡದ ಆಪ್ತ ಸಂಗಾತಿಯಾಗಿ ಬಿಟ್ಟಿತ್ತು. ಆದರೆ ಮೈಸೂರಿನಲ್ಲಿ ಇದ್ದಾಗ ಆಗಾಗ ಕಾಡುತ್ತಿದ್ದ ಮೈಗ್ರೇನ್ ಸಕಲೇಶಪುರಕ್ಕೆ ಹೋದಮೇಲೆ ಎಲ್ಲೋ ಮಾಯವೇ ಆಗಿಬಿಟ್ಟಿತ್ತು . ಆ ಚಳಿ ಪ್ರದೇಶದಲ್ಲಿ ತಲೆನೋವು ಇನ್ನೂ ಹೆಚ್ಚಾಗಬಹುದು ಎಂದ ಎಂದು ಹೆದರಿದ್ದ ನನಗೆ ಇದೊಂದು ನಿರಾಳತೆ.ಊರಿನಿಂದ ಆಚೆ ಒಂದೆರಡು ಕಿಲೋಮೀಟರ್ ಹೋದರೆ ಸಾಕಿತ್ತು ಕಣ್ಣಿಗೆ ರಾಚುವಷ್ಟು ಹಸಿರು .ತುಂಬಾ ಸುಂದರ ವಾತಾವರಣ ಬೈಕಿನಲ್ಲಿ ಸುತ್ತೆಲ್ಲಾ ಓಡಾಡಿದ್ದೆವು.ಹೀಗೆ ಬಂದು ಶನಿವಾರ ಸುಲೋಚನಾ ಅವರು ಮೈಸೂರಿಗೆ ಹೋಗಿದ್ದರು. ರವೀಶ್ ಸಕಲೇಶಪುರಕ್ಕೆ ಬಂದು ನಾವು ಧರ್ಮಸ್ಥಳ ಸುಬ್ರಹ್ಮಣ್ಯಕ್ಕೆ ಹೋಗುವ ಪ್ರೋಗ್ರಾಮ್ ಆಗಿತ್ತು ಆದರೆ ಆ ಬುಧವಾರವೇ ನನಗೆ ಮದ್ರಾಸ್ ಐ ಬಂದು ವಕ್ಕರಿಸಿ ಬಿಟ್ಟಿತ್ತು. ಆಫೀಸಿನ ಬಳಿಯೇ ಇದ್ದ ಒಂದು ಡಾಕ್ಟರ್ ಶಾಪ್ ಗೆ ತೋರಿಸಿ ಔಷಧಿ ಅಯಿಂಟ್ಮೆಂಟ್ ತೆಗೆದುಕೊಂಡಿದ್ದೆ. ಅದೇನೋ ಭಂಡ ಧೈರ್ಯದಲ್ಲಿ ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿ ಬಸ್ಸಿನಲ್ಲೇ ಧರ್ಮಸ್ಥಳಕ್ಕೆ ಹೋಗಿ ಬಂದಿದ್ದೆವು. ಅಲ್ಲೇ ಒಂದು ಮೂಲೆಯಲ್ಲಿ ಕುಟೀರದಂತೆ ಇದ್ದ ಹೋಟೆಲ್ ನಲ್ಲಿ ತಿಂದ ಮಂಗಳೂರು ಬಜ್ಜಿಯ ರುಚಿ ಇನ್ನು ಸ್ಮೃತಿ ಪಟಲದಲ್ಲಿ ಹಸಿರಾಗಿಯೇ ಇದೆ. ಅಲ್ಲಿ ದರ್ಶನ ಮುಗಿಸಿ ಸುಬ್ರಹ್ಮಣ್ಯಕ್ಕೆ ಬಂದು ಸಂಜೆಯ ವೇಳೆಗೆ ಸಕಲೇಶಪುರಕ್ಕೆ ವಾಪಸಾಗಿದ್ದೆವು. ಸುಬ್ರಹ್ಣಣ್ಯದ ಅವಲಕ್ಕಿ ತುಂಬಾ ಫೇಮಸ್. ತುಂಬಾ ರುಚಿಕರ ಕೂಡ. ಕಟ್ಡಿಸಿಕೊಂಡು ಬಂದಿದ್ದೆವು.ಒಂದು ಬಾರಿ ಮೈಸೂರಿಗೆ ಬಂದಾಗ ಅಮ್ಮನನ್ನು ಸ್ವಲ್ಪ ದಿನ ಇರಲು ಕರೆದುಕೊಂಡು ಬಂದಿದ್ದೆ ಬೆಂಗಳೂರಿಗೆ ಹೋಗಿದ್ದ ನಮ್ಮ ತಂದೆ ಅಲ್ಲಿಂದ ನೇರವಾಗಿ ಬಂದರು. ನಮ್ಮ ಸುಮಿತ್ರ ದೊಡ್ಡಮ್ಮ ಅವರ ಪತಿ ಶಿವಾನಂದ್ ದೊಡ್ಡಪ್ಪ ಸಹ ಬಂದು ನಮ್ಮೊಡನೆ ಹದಿನೈದು ದಿನಗಳ ಕಾಲ ಇದ್ದಿದ್ದು ನಿಜಕ್ಕೂ ಮರೆಯಲಾಗದ ಒಂದು ಸುಂದರ ನೆನಪು.ಬಂದು ರಿಪೋರ್ಟ್ ಮಾಡಿಕೊಂಡ ಮಾರನೆಯ ದಿನವೇ ಅಲ್ಲೇ ಮುಖ್ಯರಸ್ತೆಯಲ್ಲಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ 2 ಸದಸ್ಯ ಕಾರ್ಡುಗಳನ್ನು ಮಾಡಿಸಿಕೊಂಡಿದ್ದೆವು ಅಲ್ಲಿನ ಗ್ರಂಥಪಾಲಕರು ಚಂದ್ರಶೇಖರ್ ಧೂಲೇಕರ್ ಅನ್ನುವವರು. ಅವರು ಸಹ ಲೇಖಕರು. ನಮ್ಮ ಆಸಕ್ತಿ ನೋಡಿ ಅವರಿಗೂ ಖುಷಿಯಾಗಿತ್ತು. ಕೆಲವೊಮ್ಮೆ  ಪೇಯಿಂಗ್ ಗೆಸ್ಟ್ ನಲ್ಲಿ ಇದ್ದಾಗ ಮಾಡಲು ಬೇರೆ ಕೆಲಸವಿಲ್ಲದೆ ಓದುವುದೊಂದೇ ಹವ್ಯಾಸ. ಪ್ರತಿದಿನ ಪುಸ್ತಕ ಬದಲಾಯಿಸಿ ಕೊಂಡು ಬರುತ್ತಿದ್ದೆವು.  ಬಹಳಷ್ಟು ಪುಸ್ತಕಗಳನ್ನು ಅಲ್ಲಿ ಓದಿದ್ದೇವೆ. ಹಾಗೆಯೇ ಕಚೇರಿಯ ನಿಯತಕಾಲಿಕೆಗಳು ಸಹ ಬಸ್ಟ್ಯಾಂಡ್ ಎದುರಿಗೆ ಇದ್ದ ಒಂದು ಗೂಡಿನ ಅಂಗಡಿಯಿಂದ ತೆಗೆದುಕೊಳ್ಳುತ್ತಿದ್ದು ಒಂದು ಪುಸ್ತಕ ಇಟ್ಟು ಅದರಲ್ಲಿ ಎಂಟ್ರಿ ಮಾಡಿಸಿ ಸಹಿ ಹಾಕುತ್ತಿದ್ದು ಅಷ್ಟೇ, ಅಲ್ಲಿಯೂ ಬಹಳ ಜನ ಪುಸ್ತಕ ಓದುತ್ತಿದ್ದು ಒಂದು ರೀತಿ ಸಾಹಿತ್ಯಕ ವಾತಾವರಣ ಇತ್ತು. ಇನ್ನು ಸುಲೋಚನಾ ನಾನು ಅಂತೂ ಸರಿ ಒಂದೇ ತರಹದ ಪುಸ್ತಕದ ಹುಳುಗಳು ತುಂಬಾ ಚೆನ್ನಾಗಿತ್ತು. ಈ ವಿಷಯದಲ್ಲಿ ನಿಮ್ಮಿಬ್ಬರಿಗೂ ಒಂದೇ ಗುಣ ಎಂದು ಹೇಳಿ ಪದೋನ್ನತಿ ತೆಗೆದುಕೊಳ್ಳಲು ಕಾರಣರಾದ ಟಿ ಎಂ ಪರಶಿವಮೂರ್ತಿಯವರಿಗೆ ಧನ್ಯವಾದಗಳನ್ನು ತಿಳಿಸಲೇ ಬೇಕು.ಸುಲೋಚನಾ ಅವರು ಅಷ್ಟೇ ತುಂಬಾ ಹೊಂದಾಣಿಕೆಯ ಗುಣದವರು. ನಮ್ಮಿಬ್ಬರಿಗೂ ಒಂದೇ ಒಂದು ಬಾರಿಯಾದರೂ  ಬಿನ್ನಾಭಿಪ್ರಾಯ ಬರಲಿಲ್ಲ. ಕಡೆಯವರೆಗೂ ಮೊದಲ ದಿನದ ಸ್ನೇಹ ಮುಂದುವರೆದುಕೊಂಡು ಬಂದಿತು. ನಿಜಕ್ಕೂ ಅವರ ಅಗಲಿಕೆ ನನಗಂತೂ ಒಂದು ತುಂಬಲಾರದ ನಷ್ಟ .ಇದುವರೆಗೂ ಅವರ ಬಗ್ಗೆ ಬರೆಯಲೇ ಸಾಧ್ಯವಾಗಿರಲಿಲ್ಲ ಈಗಲೇ ಅವರ ವಿಷಯ ಕಣ್ಣೀರಿಲ್ಲದೆ ಬರೆಯಲು ಸಾಧ್ಯವಾಗುತ್ತಿರುವುದು.ನಮ್ಮ ಮನೆಯಿದ್ದ ಕುಶಾಲನಗರ ಬಡಾವಣೆ ಎತ್ತರದಲ್ಲಿ ಇದ್ದುದರಿಂದ ಊರಿನ ದೇವಸ್ಥಾನ ನದಿ ತೀರ ಎಲ್ಲಾ ಕಿಟಕಿಯಿಂದಲೇ ತುಂಬಾ ಚೆನ್ನಾಗಿ ಕಾಣಿಸುತ್ತಿತ್ತು ಆ ಹಸಿರು ಮೇಲೆ ಜಿಟಿಪಿಟಿ ಮಳೆ ಕಿಟಕಿಯ ಬಳಿ ಕುಳಿತರೆ ಸಾಕು ಒಳ್ಳೆಯ ಸುಮನೋಹರ ದೃಶ್ಯ.ಅಲ್ಲಿದ್ದಾಗಲೇ ಸೆಪ್ಟೆಂಬರ್ 1998ರಲ್ಲಿ ನನ್ನ ತಂಗಿ ವೈಶಾಲಿಯ ಮಗ ನಿಶ್ಚಯ್ ಹುಟ್ಟಿದ್ದು ಆ ಸಮಯದಲ್ಲಿ ನಾನು 15 ದಿನ ರಜೆ ಹಾಕಿ ಮೈಸೂರಿಗೆ ಬಂದಿದ್ದೆ. ನಮ್ಮ ಮನೆಯ ಮೊಟ್ಟ ಮೊದಲ ಮೊಮ್ಮಗು ಅವನು ಎಲ್ಲರಿಗೂ ತುಂಬಾ ಖುಷಿಯಾಗಿತ್ತು. ಗರ್ಭಿಣಿಯಾಗಿದ್ದಾಗ ವೈಶಾಲಿ ಒಮ್ಮೆ ಅವಳ ಪತಿಯೊಂದಿಗೆ ಬೈಕ್ ನಲ್ಲೆ ಸಕಲೇಶಪುರಕ್ಕೆ ಬಂದಿದ್ದಳು ಎಲ್ಲರಿಂದ ಬೈಗುಳಗಳನ್ನು ತಿಂದಿದ್ದಳು.ಇನ್ನು ಫೆಲೋಶಿಪ್ ಪರೀಕ್ಷೆಗಳ ವಿಷಯಕ್ಕೆ ಬಂದರೆ ಓದಲು ಮನಸೇ ಬಂದಿರಲಿಲ್ಲ ಆದರೆ ಮೂರು ಪರೀಕ್ಷೆಗಳನ್ನು ತೆಗೆದುಕೊಂಡಾಗ ಮಧ್ಯೆ ಸಕಲೇಶಪುರಕ್ಕೆ ಹೋಗಲು ಸಾಧ್ಯವಿರದ ಕಾರಣ ರಜೆ ಸಿಗುತ್ತಿತ್ತು ಹಾಗಾಗಿ ಒಂದು ವಾರ ಮೈಸೂರಿನಲ್ಲಿ ಇರಬಹುದು ಎಂಬ ಆಸೆಗೆ ಅಲ್ಲಿದ್ದ ಎರಡು ವರ್ಷವೂ ನಾಮಕಾವಸ್ತೆಗೆ ಪರೀಕ್ಷೆ ತೆಗೆದುಕೊಂಡು ಬಂದು ಅರ್ಧ ಗಂಟೆ ಪರೀಕ್ಷೆ ಅಟೆಂಡ್ ಮಾಡಿ ವಾಪಸ್ ಹೋಗುತ್ತಿದ್ದುದು.ಹೀಗೇ ನಡೆದುಕೊಂಡು ಹೋಗುವಾಗ ನಾವಿದ್ದ ಮನೆಯ ಓನರ್ ರಾಜಮ್ಮ ಅವರ ಕಿರಿಕ್ ಆರಂಭವಾಯಿತು ಯಾರೋ ಅವರಿಗೆ ಆಫೀಸಿನಿಂದ ಮನೆಯನ್ನು ಲೀಸ್ ಮಾಡಿಸಿದರೆ ಎಲ್ ಐ ಸಿ ಇಂದಲೇ ಬಾಡಿಗೆ ಪಾವತಿ ಆಗುತ್ತದೆ. ಈಗ ಇರುವವರು ಬಿಟ್ಟರೂ ತಕ್ಷಣ ಮತ್ತೆ ಎಲ್ಐಸಿಯವರೆ ಬರಬಹುದು ಎಂಬ ವಿಷಯ ತಿಳಿದಿತ್ತು .ಹಾಗಾಗಿ ಮನೆಯನ್ನು ಲೀಸ್ ಮಾಡಿಸಿ ಎಂದು ಒಂದೇ ವರಾತ ಹಚ್ಚಿದರು. ಹಾಗೆ ಲೀಸ್ ಮಾಡಿಸಿದರೆ ನಮಗೆ ತೊಂದರೆ ಆಗುತ್ತಿತ್ತು. ನಾವು ಕೊಡುವ ಬಾಡಿಗೆಗಿಂತ ಮನೆಭತ್ಯ ಹೆಚ್ಚು ಬರುತ್ತಿತ್ತು .ಆರ್ಥಿಕವಾಗಿ ನಷ್ಟವಾಗುತ್ತಿತ್ತು. ಆದರೆ ಅವರಿಗೆ ಬರುವ ಹಣಕ್ಕಂತೂ ಏನು ವ್ಯತ್ಯಯ ಆಗುತ್ತಿರಲಿಲ್ಲ ನಾವು ಕೊಟ್ಟರೆ ಏನು ಎಲ್ಐಸಿ ಇಂದ ಬಂದರೆ ಏನು? ಆದರೆ ಆಕೆ ಕೇಳಲೇ ಸಿದ್ಧವಿರಲಿಲ್ಲ. ಲೀಸ್ ಮಾಡಿಸದಿದ್ದಲ್ಲಿ ಮನೆ ಬಿಟ್ಟುಬಿಡಿ ಎಂದು ಖಡಾ ಖಂಡಿತವಾಗಿ ಹೇಳಿದರು .ಮತ್ತೆ ಮಾಡುವುದೇನು ಬೇರೆ ಮನೆಯ ಹುಡುಕಾಟಕ್ಕೆ ತೊಡಗಿದೆವು. ಈ ಬಾರಿ ರವೀಶ್ ಅವರೇ ಬಂದು ಮನೆ ಹುಡುಕಲು ಸಹಾಯ ಮಾಡಿದರು.ಸಕಲೇಶಪುರದ ದೇವಸ್ಥಾನದ ಬೀದಿ ಸಂತೆಗೆ ಹತ್ತಿರದ ಗಾಯತ್ರಿ ಟೆಂಟ್ ಪಕ್ಕದ ಬಿಲ್ಡಿಂಗ್. ಮುಖ್ಯರಸ್ತೆಯಲ್ಲಿ ಬೇಕರಿ ನಡೆಸುತ್ತಿದ್ದವರು ಈ ಮನೆಯನ್ನು ಕಟ್ಟಿಸಿದ್ದರು .ಎರಡನೆಯ ಅಂತಸ್ತಿನಲ್ಲಿ ಎರಡು ಮನೆಗಳು. ಎದುರು ಬದುರು. ಅದರಲ್ಲಿ ಬೀದಿಯ ಕಡೆಗೆ ಮುಖ ಮಾಡಿದ ಮನೆಗೆ ನಾವು ಹೋಗುವುದು ಎಂದು ನಿರ್ಧಾರವಾಯಿತು ಹೊಸ ಮನೆ ಚೆನ್ನಾಗಿತ್ತು. ಹೋಗುತ್ತಲೇ ಇದ್ದ ಹಾಲ್ ವರಾಂಡದಷ್ಟೇ ಚಿಕ್ಕದಿತ್ತು .ಒಂದು ರೂಮ್ ಸ್ವಲ್ಪ ಪರವಾಗಿಲ್ಲ ಅಡುಗೆ ಮನೆ ಮಾತ್ರ ಹಾಲ್ ನಷ್ಟೇ ದೊಡ್ಡದಾಗಿ ಇತ್ತು. ಪಾತ್ರೆ ತೊಳೆಯಲು ಸಿಂಕ್ ಕಟ್ಟೆ ಎಲ್ಲಾ ಒಂದು ರೀತಿ ಚೆನ್ನಾಗಿ ಅನುಕೂಲಕರವಾಗಿ ಈಗಿರುವ ಮನೆಗಿಂತ ಚೆನ್ನಾಗಿಯು ಇತ್ತು. ಮೈಸೂರಿನಿಂದ ಬರುವಾಗ ದೇವಸ್ಥಾನದ ಬಳಿಯೇ ತಿಳಿದುಕೊಂಡರೆ ಮನೆಗೆ ಹೋಗಿ ನಂತರ ಆಫೀಸಿಗೆ ಬರಲು ಅನುಕೂಲವಾಗಿತ್ತು. ಇಲ್ಲಿ ಕೊಡುತ್ತಿದ್ದಷ್ಟೇ ಬಾಡಿಗೆ ಅಷ್ಟೇ ಅಡ್ವಾನ್ಸ್ ಇದ್ದಿದ್ರಿಂದ ಆರ್ಥಿಕವಾಗಿಯೂ ಏನು ತೊಂದರೆ ಅನಿಸಲಿಲ್ಲ. ಮನೆ ಬಿಡುತ್ತೇವೆ ಎಂದು ಹೇಳಿದಾಗ ಆಕೆಗೆ ಒಂದು ತರಹ ಆಯಿತು ನಾವು ಅವಳು ಹೇಳಿದಂತೆ ನಡೆಯಲಿಲ್ಲ ಎಂದು ಬೇಸರ ಇದ್ದರೂ ತೋರ್ಪಡಿಸಿಕೊಳ್ಳದೆ ಅಡ್ವಾನ್ಸ್ ಅನ್ನು ಸಕಾಲಕ್ಕೆ ಕೊಟ್ಟು ಸಹಕರಿಸಿದರು ಪಾಪ. ಆದರೆ ಅವರ ಲೆಕ್ಕಾಚಾರ ತಪ್ಪಿತಲ್ಲ  ನಮಗೆ ಬೇಗ ಮನೆ ಸಿಕ್ಕಿತಲ್ಲ ಅದು ನಮ್ಮ ಪುಣ್ಯ. ಈ ಮನೆಗೆ ರಸ್ತೆಯ ಕಡೆ ಒಂದು ಸಣ್ಣ ಬಾಲ್ಕನಿ ಸಹ ಇದ್ದು ಸಂಜೆಯ ವೇಳೆ ಕುಳಿತುಕೊಳ್ಳಲು ಅಲ್ಲೇ ಕುಳಿತು ಓದಲು ಎಲ್ಲಾ ಅನುಕೂಲವಿತ್ತು. ಆದರೆ ಕರೆಂಟು ಇಲ್ಲದಿದ್ದಾಗ ಮಾತ್ರ ಎರಡೆರಡು ಅಂತಸ್ತು ನೀರು ಬರಬೇಕಾಗಿದ್ದು ಮಾತ್ರ ದೊಡ್ಡ ಪನಿಶ್ಮೆಂಟ್. 3 _ 4 ಬಾರಿ ಆ ರೀತಿ ವಿದ್ಯುತ್ ನಿಲುಗಡೆಯಾಗಿ ನೀರು ಹೊರುವಂತಾಗಿತ್ತು. ಈ ಸಮಯದಲ್ಲಿ ನಮ್ಮ ತಂದೆಯವರಿಗೆ 60 ವರ್ಷ ತುಂಬಿತು ಷಷ್ಠ್ಯಬ್ದಿ ಸಮಾರಂಭವನ್ನು ಸಹ ಮೈಸೂರಿನಲ್ಲಿ ನಾವು ಮೂರು ಜನ ಅಕ್ಕ-ತಂಗಿಯರು ಸೇರಿ ಆಚರಿಸಿದೆವು. ವೈಶಾಲಿ ಆಗ ೩ ತಿಂಗಳ ಬಾಣಂತಿ. ನಮ್ಮ ತಾಯಿಗಂತೂ ತುಂಬಾ ಸಂತೋಷವಾಗಿತ್ತು.ಆನಂತರ ನಿಶ್ಚಯ್ ನಾಮಕರಣ. ಹೀಗೆ ಒಂದರ ಹಿಂದೊಂದು ಶುಭ ಸಮಾರಂಭಗಳು ನಡೆಯುತ್ತಿದ್ದವು. ನಮ್ಮ ಸೋದರತ್ತೆಯ ಮಗ ಶ್ರೀನಾಥನ ಮದುವೆ  ಆಗಲೇ ನಡೆದದ್ದು. ಆ ಸಮಯದಲ್ಲಿ ನಮಗೆ ಆಡಿಟ್ ನಡೆಯುತ್ತಿದ್ದುದರಿಂದ ನಾನು ಮದುವೆಗೆ ಹೋಗಲಾಗಲಿಲ್ಲ. ಸೋದರಮಾವ ಸೋಮುಮಾವನ ಮಗಳು ನಂದಿನಿ ಮದುವೆಗೆ ಅಮ್ಮ ಹೋಗಲೇಬೇಕಿತ್ತು. ನನ್ನ ತಂಗಿ ಬಾಣಂತಿ. ನಾನು ರಜೆ ಹಾಕಿ ಮೈಸೂರಿಗೆ ಹೋಗಿ ಅಮ್ಮನನ್ನು ಮದುವೆಗೆ ಕಳಿಸಿದೆ.ಚಿಕ್ಕಪ್ಪನ ಮಗ ಸಂಜೀವನ ಮದುವೆ ಬೆಂಗಳೂರಲ್ಲಿ ಆಯಿತು. ಶನಿವಾರ ಮಧ್ಯಾಹ್ನ ಆಫೀಸು ಮುಗಿಸಿ ಹೊರಟಿದ್ದು. ಗೊತ್ತಾಗದೆ ಷಟಲ್ ಬಸ್ನಲ್ಲಿ ಕೂತು ತಡವಾಗಿ ಬೆಂಗಳೂರು ತಲುಪಿದ್ದೊಂದು ದೊಡ್ಡ ಸಾಹಸ. ನಮ್ಮ ನಿಗಮದಲ್ಲಿ ಹೊಸದಾಗಿ ಪದೋನ್ನತಿ ಹೊಂದಿದವರಿಗೆ ತರಬೇತಿ ಕಾರ್ಯಕ್ರಮ ಇರುತ್ತದೆ .ಹೀಗಾಗಿ ನನಗೆ 25 5 98 ರಿಂದ 28 5 98ರ ವರೆಗೆ ಹೈದರಾಬಾದಿನ ಡೆಕ್ಕನ್ ಕಾಂಟಿನೆಂಟಲ್ ಹೋಟೆಲ್ ನಲ್ಲಿ ತರಬೇತಿಗೆ ಕರೆ ಬಂದಿತ್ತು .ನನ್ನೊಂದಿಗೆ ನಂದ ಶ್ರೀ ಕಟ್ಟಿ ಅಂದರೆ ಈ ಮುಂಚೆ ವಿಭಾಗೀಯ ಕಚೇರಿಯಲ್ಲಿ ನನ್ನ ಜೊತೆಗಿದ್ದ ನನ್ನದೇ ಬ್ಯಾಚ್ನ ಗೆಳತಿ. ಅವಳಿಗೆ ಮದುವೆಯಾಗಿ ಬೆಳಗಾವಿಗೆ

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-29 ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೨೯ ಈ ಹಿಂದೆ ಮೈಸೂರಿನಿಂದ ವರ್ಗವಾಗಿ ಹೋಗಿದ್ದ ರೇಣುಕುಮಾರಿ ಹಾಗೂ ಪದ್ಮಿನಿ ಎನ್ನುವರು ಅಲ್ಲಿ ಒಬ್ಬರ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಇದ್ದರು. ಅವರು ಮತ್ತೆ ವಾಪಸ್ ಮೈಸೂರಿಗೆ ವರ್ಗವಾಗಿದ್ದರಿಂದ ಅವರ ಜಾಗದಲ್ಲಿ ಆ ಹಾಸ್ಟೆಲಿಗೆ ನಾವು ಸೇರುವುದು ಎಂದು ಈಗಾಗಲೇ ನಾನು ಸುಲೋಚನ ನಿರ್ಧರಿಸಿದ್ದೆವು. ರವೀಶ್ ನನ್ನ ಜೊತೆ ಬರಲು ನಿರ್ಧರಿಸಿದ್ದರಿಂದ ಸುಲೋಚನ ಅವರ ಅಕ್ಕ ಬರುವುದು ಬೇಡ ಎಂದು ಹೇಳಿ ನಾವು ಡಿಸೆಂಬರ್ ೧ ೧೯೯೭ರ  ಬೆಳಿಗ್ಗೆ 5:30 ಬಸ್ಸಿಗೆ ಸಕಲೇಶಪುರಕ್ಕೆ ಹೊರಟೆವು.ಮೊದಲು ರವೀಶ್ ಅವರ ಸಂಬಂಧಿ ಸತ್ಯ ಅವರ ಮನೆಗೆ ಹೋಗಿ ತಿಂಡಿ ತಿಂದು ನಂತರ ಆಫೀಸಿನ ಕಡೆ ಹೋದೆವು. ಮಾಮೂಲಿನಂತೆ ಡ್ಯೂಟಿ ರಿಪೋರ್ಟ್ ಹಾಗೂ ವರ್ಗಾವಣೆ ಅರ್ಜಿ ಎರಡನ್ನು ಸಲ್ಲಿಸಿಆಯಿತು. ಆದರೆ ಕನ್ಫರ್ಮೇಷನ್ ಆಗುವ ತನಕ ನಮ್ಮ ಅರ್ಜಿಗೆ ಮಾನ್ಯತೆ ಇರುವುದಿಲ್ಲ.  ನಾನು ಈಗಾಗಲೇ ಹೊಸ ವ್ಯವಹಾರ ವಿಭಾಗದಲ್ಲಿ ವಿಭಾಗ ಕಚೇರಿಯಲ್ಲಿ ಇದ್ದುದರಿಂದ ನನಗೆ ಅದೇ ಡಿಪಾರ್ಟ್ಮೆಂಟ್ ಕೊಟ್ಟರು. ಸುಲೋಚನಾ ಅವರು ಪಾಲಿಸಿ ಸೇವಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಅವರಿಗೆ ಗೊತ್ತಿದ್ದ ಅದೇ ಡಿಪಾರ್ಟ್ಮೆಂಟ್. ಮಧ್ಯಾಹ್ನ ರವೀಶ್ ಅವರು ವಾಪಸ್ ಹೋದರು. ಸಂಜೆ ಕಚೇರಿ ಮುಗಿದ ನಂತರ ರೇಣು ಅವರ ಜೊತೆಯಲ್ಲಿ ಹಾಸ್ಟೆಲ್ ಗೆ ಹೋದೆವು. ಈಗಾಗಲೇ ಅಲ್ಲಿ ಮತ್ತೊಬ್ಬರು ಉಪಾಧ್ಯಾಯಿನಿ ಶಿಲ್ಪ ಎನ್ನುವವರು ಇದ್ದರು.  ಒಟ್ಟು ಮೂರು ಜನ ಒಂದು ಕೋಣೆಯಲ್ಲಿ ಇದ್ದುದ್ದು. ನಾವು ಹೊಸಬರು ಡ್ಯೂಟಿ ರಿಪೋರ್ಟ್ ಮಾಡಿಕೊಂಡ ನಂತರ ಮುಂದಿನ ವಾರ ಅವರು ಅಲ್ಲಿಂದ ರಿಲೀವ್ ಆಗಬೇಕಿದ್ದು ಹಾಗಾಗಿ ಆ ಒಂದು ವಾರ ಆ ಚಿಕ್ಕ ಕೋಣೆಯಲ್ಲಿ ನಾವು ಇರಲು ಸಾಧ್ಯವಿರಲಿಲ್ಲ. ಆ ಪ್ರಶ್ನೆ ನಮಗೆ  ಎದುರಾಗಿಯೇ ಇರದುದ್ದರಿಂದ ಎಲ್ಲಿ ಇರುವುದು ಎನ್ನುವ ಪ್ರಶ್ನೆ ಉದ್ಭವವಾಯಿತು. ಸಂಬಂಧಿಗಳ ಮನೆ ಸಹ ಚಿಕ್ಕದಾಗಿದ್ದರಿಂದ ಅಲ್ಲಿ ಉಳಿಯುವುದು ಸಾಧ್ಯವಿರಲಿಲ್ಲ. ಕಡೆಗೆ ಊರಿಗೆ ವಾಪಸ್ ಆಗಿ ಮುಂದಿನ ವಾರ ಬರುವುದು ಎಂಬ ನಿರ್ಧಾರಕ್ಕೂ ಬಂದೆವು. ಸದ್ಯ ಅಲ್ಲಿಯೇ ಮೂರು ಜನ ಬೇರೆ ನಮ್ಮ ಕಚೇರಿಯ ಉದ್ಯೋಗಿಗಳು ಒಂದು ಮನೆ ಮಾಡಿಕೊಂಡು ಇದ್ದರು. ಇನ್ನುಳಿದ ಐದು ದಿನ ಇಲ್ಲಿಯೇ ಇರಿ ಎಂದು ಅವರು ಆಹ್ವಾನಿಸಿದ್ದರಿಂದ ರಜೆ ಹಾಕುವ  ಯೋಚನೆ ಕೈ ಬಿಟ್ಟು ಅಲ್ಲಿಯೇ ಇರಬೇಕಾಯಿತು. ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಇದ್ದ ಅವರ ಮನೆ ಅಲ್ಲೇ ಬಸ್ಟಾಂಡ್. ಎದುರಿಗೆ ಆಫೀಸ್. ಅಂತೂ ಅವರ ಜೊತೆ ಅವರಿಗೆ ತೊಂದರೆ ಕೊಟ್ಟುಕೊಂಡು 5 ದಿನ ಇದ್ದು ಹಾಸ್ಟೆಲ್ ಗೆ ಅಡ್ವಾನ್ಸ್ ಕೊಟ್ಟು ಜಾಗ ಖಚಿತಪಡಿಸಿಕೊಂಡಿದ್ದಾಯಿತು.ನನಗೆ ಹೊಸ ವ್ಯವಹಾರ ವಿಭಾಗದಲ್ಲಿ ಆಗ ಜವರಯ್ಯ ಮತ್ತು ಕುಮಾರ್ ಎಂಬುವವರು ಸಹಾಯಕರು. ಇಸ್ಮಾಯಿಲ್ ಎನ್ನುವರು ಅಲ್ಲಿನ ರೆಕಾರ್ಡ್ ಕ್ಲರ್ಕ್. ತುಂಬಾ ಹೊಂದಿಕೊಳ್ಳುವಂತಹ ವ್ಯಕ್ತಿತ್ವದವರು. ಅಲ್ಲಿ ಇದ್ದ ಚಂದ್ರು ಎನ್ನುವವರು ಕ್ಯಾಶಿಯರ್ ಆಗಿ ಹೋಗಿದ್ದರು ಸ್ವಲ್ಪ ಕೆಲಸ ಬಾಕಿ ಉಳಿದಿತ್ತು ಡಿಸೆಂಬರ್ ಅಂತ್ಯದ ವೇಳೆಗೆ ಶೆಡ್ಯೂಲ್ ಗಳನ್ನು ಸಲ್ಲಿಸಬೇಕಿತ್ತು ಅದರ ಕಡೆಯ ಕೆಲಸ ಏನು ಆಗಿರಲಿಲ್ಲ ಸ್ವಲ್ಪ ಹೆಚ್ಚಿನ ಶ್ರಮ ಹಾಕಬೇಕಿತ್ತು.ಐದು ವರೆಗೆ ಸರಿಯಾಗಿ ನಾವು ಹೊರಟರೆ ಅಲ್ಲಿ ಎಲ್ಲರಿಗೂ ಆಶ್ಚರ್ಯ. ಎಲ್ಲರೂ ಅಲ್ಲಿ ಆರು ವರೆ ಏಳು ಗಂಟೆಯ ತನಕ ಆಫೀಸಿನಲ್ಲಿಯೇ ಇರುತ್ತಿದ್ದವರು. ಕೆಲಸ ಬಾಕಿ ಉಳಿದಿದ್ದವರು ಕೆಲಸ ಮಾಡುತ್ತಿದ್ದರು. ಇಲ್ಲದಿದ್ದವರು ಕೇರಂ ಅಥವಾ ಟಿಟಿ ಆಡುತ್ತಾ ಕಾಲ ಕಳೆಯುತ್ತಿದ್ದರು. ಬಹಳಷ್ಟು ಜನ ಮನೆಗಳಿಂದ ದೂರ ಬಂದು ಇಲ್ಲಿ ರೂಮ್ ಮಾಡಿಕೊಂಡು ಇರುತ್ತಿದುದರಿಂದ ಇಲ್ಲಿ ಅದೇ ಸಂಸ್ಕೃತಿ ಬೆಳೆದು ಬಂದಿತ್ತು. ಆ ಒಂದು ವಾರ ನಾವು ಉಳಿದಿದ್ದ ನಮ್ಮ ಉದ್ಯೋಗಿಗಳು ಎಲ್ಲರೂ ಉಡುಪಿಯ ಕಡೆಯವರು. ಅವರಲ್ಲಿ ನೀರಜ ಎನ್ನುವವರಿಗೆ ಮದುವೆಯಾಗಿ ಒಂದು ಮಗುವಿತ್ತು. ಈ ಹಿಂದೆ ಪೋಸ್ಟಲ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದವರು ಅದನ್ನು ಬಿಟ್ಟು ಇಲ್ಲಿ ಸೇರಿದ್ದರು. ಮಂಗಳೂರಿಗೆ ವರ್ಗಾವಣೆ ಅರ್ಜಿ ಕೋರೊದ್ದರು. ಪ್ರತಿ ಶನಿವಾರ ಮಧ್ಯಾಹ್ನ ಅವರು ಮಂಗಳೂರಿಗೆ ಹೋಗಿ ಸೋಮವಾರ ಬೆಳಿಗ್ಗೆ ವಾಪಸ್ ಆಗುತ್ತಿದ್ದರು. ಇನ್ನೊಬ್ಬರು ಶುಭದಾ. ಅವರು ಅಷ್ಟೇ ಉಡುಪಿಯವರು. ಅವರ ತಂದೆ ಸಹ ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದರು ಅವರಿಗೂ ಒಂದು ಪುಟ್ಟ ಮಗು ಇತ್ತು .ಮತ್ತು ಒಬ್ಬರು ಶ್ರೀಲತಾ ಆಗತಾನೇ ವಿವಾಹವಾಗಿ ವಿವಾಹದ ಆಧಾರದ ಮೇಲೆ ಮಂಗಳೂರಿಗೆ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಈಗ ಅವರೊಂದಿಗೆ ನಾವು ಇಬ್ಬರು ಸೇರಿದ್ದೆವು ತುಂಬಾ ಒಳ್ಳೆಯವರು ಚೆನ್ನಾಗಿ ಹೊಂದಿಕೊಂಡು ಹೋಗುತ್ತಿದ್ದರು ನಮ್ಮ ಕಡೆಯ ಅಡುಗೆ ಇಷ್ಟವಾಗಿದ್ದರಿಂದ ಆ ಐದು ದಿನ ಅಡುಗೆಯ ಹೊಣೆ ನಾನೇ ಹೊತ್ತಿದ್ದೆ ಅಲ್ಲಿ ಎಷ್ಟು ಹೊಂದಾಣಿಕೆ ಇತ್ತೆಂದರೆ ಹಾಸ್ಟೆಲ್ ಬದಲು ಅಲ್ಲೇ ಮುಂದುವರೆಯಬಹುದಿತ್ತು ಆದರೆ ಐದು ಜನಕ್ಕೆ ಆ ಮನೆ ಸ್ವಲ್ಪ ಚಿಕ್ಕದಾಗುತ್ತಿತ್ತು ಹಾಗಾಗಿ ಆ ಯೋಜನೆ ಕೈ ಬಿಟ್ಟೆವು. ನಮ್ಮ ಜೊತೆಗೆ ಶಶಿಕಲಾ ಎನ್ನುವವರು ಹುಣಸೂರಿನಿಂದ ಇಲ್ಲಿಗೆ ಉನ್ನತ ದರ್ಜೆ ಸಹಾಯಕಿಯಾಗಿ ಬಂದಿದ್ದರು ಅವರಿಗೆ ಇಬ್ಬರು ಮಕ್ಕಳು, ಬೆಂಗಳೂರಿನಲ್ಲಿ ಅವರ ಪತಿ ಹಾಗೂ ತಾಯಿಯ ಮನೆ ಇತ್ತು ಪ್ರತಿವಾರ ಬೆಂಗಳೂರಿಗೆ ಹೋಗಲು ಕಷ್ಟ ಎಂದು ಎರಡು ವಾರಕ್ಕೊಮ್ಮೆ ಹೋಗುತ್ತಿದ್ದರು ಅವರು ಈ ಬೇರೆ ಇನ್ನೊಂದು ಹಾಸ್ಟೆಲ್ ಸೇರಿದ್ದರು ಆದರೆ ಅದು ನಾನ್-ವೆಜ್ ಸಹ ಇರುವುದರಿಂದ ನಾವು ಹೋಗಲು ಇಷ್ಟಪಡಲಿಲ್ಲ.ಮೊದಲು ನಮ್ಮ ಶಾಖೆ ಬಸ್ ನಿಲ್ದಾಣದ ಎದುರಿನ ರಸ್ತೆ ಮಸೀದಿಯ ಎದುರು ಇತ್ತು ಆದರೆ ಜನವರಿ ತಿಂಗಳಿನಲ್ಲಿ ಬಸ್ ನಿಲ್ದಾಣದ ಎದುರು ಮುಖ್ಯರಸ್ತೆಯ ಒಂದು ಹೊಸ ಕಾಂಪ್ಲೆಕ್ಸ್ ನ ೧ ಹಾಗೂ ೨ ನೆಯ ಮಹಡಿಗೆ ಸ್ಥಳಾಂತರ ಗೊಳ್ಳಲಿತ್ತು. ಆ ನಿಟ್ಟಿನಲ್ಲಿ ಪ್ಯಾಕಿಂಗ್ ಮತ್ತು ಸಾಗಣೆ ಕೆಲಸಗಳ ಹೊರೆಯೂ ಇತ್ತು.ಈ ಹಿಂದೆ ಹೊಸದಾಗಿ ಕೆಲಸಕ್ಕೆ ಸೇರುವಾಗ ನಮ್ಮ ಜೊತೆಯ ಬ್ಯಾಚ್ನಲ್ಲಿ ಇದ್ದ ಮುಕುಂದನ್ ಅವರೂ ಸಹ ಉನ್ನತ ದರ್ಜೆ ಸಹಾಯಕರಾಗಿ ಈ ಶಾಖೆಯಲ್ಲೇ ಇದ್ದರು. ವಿಕ್ರಯ ವಿಭಾಗದಲ್ಲಿ ಅವರಿದ್ದುದು. ಅವರ ಪತ್ನಿ ಅಲ್ಲಿನ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದುದರಿಂದ ಅವರು ಇಲ್ಲಿಗೆ ವರ್ಗಾವಣೆ ತೆಗೆದುಕೊಂಡಿದ್ದರು. ನಮ್ಮ ಹೊಸ ವ್ಯವಹಾರ ವಿಭಾಗಕ್ಕೆ ಸಹಾಯಕ ಆಡಳಿತ ಅಧಿಕಾರಿಯಾಗಿ ಇದ್ದವರು ಮಂಜುನಾಥ್ ಎಂಬವರು ಅವರ ಪತ್ನಿ ನವರತ್ನಮ್ಮ ಅವರು ಸಹ ನಮ್ಮ ನಿಗಮದ ಉದ್ಯೋಗಿ ಅದೇ ಶಾಖೆಯಲ್ಲಿ ಇದ್ದರು. ಇತ್ತೀಚಿಗೆ ಸರ್ವಿಸ್ ನಲ್ಲಿ ಇದ್ದಾಗಲೇ ನವರತ್ನ ಅವರು ನಿಧನ ಹೊಂದಿದ್ದರು. ತುಂಬಾ ಒಳ್ಳೆಯವರು. ಸ್ನೇಹಜೀವಿ ಕೂಡ. ಮೊದಲ ವಾರ ಶನಿವಾರ ಮುಗಿದ ನಂತರವೇ ನಾನು ಸುಲೋಚನಾ ಮೈಸೂರಿಗೆ ವಾಪಸ್ ಆದೆವು. ಆನಂತರ ಒಂದೆರಡು ಮೂರು ದಿನ ರಜಾ ಹಾಕಿ ಮತ್ತೆ ಬರುವುದು ಎಂದು ನಿರ್ಧರಿಸಿದ್ದರಿಂದ ಗುರುವಾರದ ದಿನ ಸಕಲೇಶಪುರಕ್ಕೆ ಹೋಗಿ ಸಂಜೆ ಹಾಸ್ಟೆಲ್ ಗೆ ಹೋದೆವು. ಸಕಲೇಶಪುರದ ಚಂಪಕ ನಗರದಲ್ಲಿ ರೋಟರಿ ಎಕ್ಸ್ಟೆಂಶನ್ ಎಂದು ಅದನ್ನು ಕರೆಯುತ್ತಿದ್ದರು. ಮೊದಲ ದಿನ ಮಾತನಾಡಲು ಹೋದಾಗಲೇ ತಲಾ 600 ಅಡ್ವಾನ್ಸ್ ತೆಗೆದುಕೊಂಡಿದ್ದರು. ಚಿಕ್ಕ ರೂಂ ಒಂದು ಡಬಲ್ ಕಾಟ್ ಹಾಕಿದರೆ ಬೆಳಗ್ಗೆ ಸ್ವಲ್ಪ ಜಾಗ ಉಳಿದಿರುತ್ತಿತ್ತು ಅಷ್ಟೇ, ಮೂರು ಜನ ಆದುದರಿಂದ ಹಾಸಿಗೆಯನ್ನು ಸಹ ನಾವೇ ತೆಗೆದುಕೊಳ್ಳಬೇಕು ಎಂದು ಹೇಳಿದರು. ಇಬ್ಬರು ಮಂಚದ ಮೇಲೆ ಒಬ್ಬರು ನೆಲದ ಮೇಲೆ. ಏಕೋ ವಾತಾವರಣವೇ ಸರಿ ಹೋಗಲಿಲ್ಲ .ಇನ್ನು ಊಟ ತಿಂಡಿ ಆ ದೇವರಿಗೆ ಪ್ರೀತಿ .ಎಲ್ಲಾ ಮಾಡಿ ಡೈನಿಂಗ್ ಟೇಬಲ್ ಮೇಲೆ ಇಟ್ಟುಬಿಡುತ್ತಿದ್ದರು. ನಾವು ತಿನ್ನಲು ಹೋಗುವ ವೇಳೆಗೆ ಆರಿ ಅಕ್ಷತೆ ಆಗಿರುತ್ತಿತ್ತು. ಲೆಕ್ಕಾಚಾರವಾಗಿ ಅಷ್ಟೇ ಇಡುತ್ತಿದ್ದರು ನಮಗೇನು ಆ ರುಚಿ ಗೆ ಹೆಚ್ಚು ಬೇಕಾಗುತ್ತಲೂ ಇರಲಿಲ್ಲ. ಆದರೆ ಒಂದು ತರಹ ಇರಸುಮುರಸು ಮೊದಲ ದಿನದಿಂದಲೇ. ನಾಲ್ಕೈದು ದಿನ ಕಳೆದ ನಂತರ ನಮಗೆ ಇಲ್ಲಿ ಸರಿ ಬರುವುದಿಲ್ಲ ಬೇರೆ ಮನೆ ಮಾಡಿಕೊಳ್ಳುವ ಎಂದು ನಿರ್ಧರಿಸಿದೆವು. ಆಫೀಸಿನಲ್ಲಿ ಎಲ್ಲರಿಗೂ ಮನೆ ನೋಡಲು ಹೇಳಿದೆವು.  ಸಂಜೆ ಆಯಿತೆಂದರೆ ಯಾರಾದರೂ ಮನೆ ಖಾಲಿ ಇದೆ ಎಂದು ಹೇಳಿದ ಕಡೆ ಹೋಗುವುದು. ಮನೆ ನೋಡುವುದು .ಆದರೆ ಯಾಕೋ ಯಾವುದೂ ಸರಿ ಹೋಗುತ್ತಿರಲಿಲ್ಲ. ಸರಿ ಹೋದ ಮನೆಗೆ ಸಿಕ್ಕಾಪಟ್ಟೆ ಬಾಡಿಗೆ. ಸಕಲೇಶಪುರ ಬೆಂಗಳೂರಿಗಿಂತಲೂ ದುಬಾರಿ ಎಂದು ನಮಗೆ ಅರಿವಾಗಿದ್ದು ಆಗಲೇ. ಹೋಗಲಿ ಎಂದರೆ ಯಾವುದು ಸರಿ ಹೋಗುತ್ತಲೂ ಇರಲಿಲ್ಲ .ಮೈಸೂರಿನಿಂದಲೇ ಒಂದಷ್ಟು ಪುಡಿಗಳು ಚಟ್ನಿಪುಡಿ ಮೆಂತ್ಯದ ಹಿಟ್ಟು ಅನ್ನದ ಪುಡಿ ತುಪ್ಪ ಮತ್ತು ಉಪ್ಪಿನಕಾಯಿ ತೊಕ್ಕುಗಳನ್ನು ತೆಗೆದುಕೊಂಡು ಹೋಗಿದ್ದರಿಂದ ಹೇಗೋ ಅದನ್ನೇ ಬಳಸಿಕೊಂಡು ಊಟ ಮಾಡುತಿದ್ದೆವು. ಬೆಳಿಗ್ಗೆ ಕಾಫಿಗೆ ಹೋದಾಗ ಎದುರುಗಿನ ಹೋಟೆಲ್ನಲ್ಲಿ ಅಲ್ಲಿನ ಸ್ಪೆಷಾಲಿಟಿ ಕಡುಬು ಮತ್ತು ಅಕ್ಕಿ ರೊಟ್ಟಿ ಒಂದರಲ್ಲಿ ಅರ್ಧ ಮಾಡಿ ತ ತಿನ್ನುತ್ತಿದ್ದುದು.  ಸಂಜೆ ಕಚೇರಿ ಮುಗಿದ ನಂತರ ಮನೆ ಹುಡುಕಲು ಯಾರಾದರೂ ಮನೆಗೆ ಹೋದಾಗ ಅಲ್ಲಿ ಕಾಫಿ ಇನ್ನೇನಾದರೂ ಆತಿಥ್ಯ ಆಗುತ್ತಿತ್ತು. ಇಲ್ಲದಿದ್ದರೆ ಸಂಜೆಯ ವೇಳೆಯೂ ಅಲ್ಲಿ ಹೋಗಿ ತಿಂಡಿ ತಿಂದು ಮನೆಗೆ ಹೋಗುತ್ತಿದ್ದುದು.. ಹೋದ ತಕ್ಷಣ ಒಂದರ್ಧ ಲೋಟ ಕಾಫಿ ಕೊಡುತ್ತಿದ್ದರು ಅಷ್ಟೇ. ರಾತ್ರಿಯ ಊಟವೂ ಅಷ್ಟೇ ಬೆಳಗ್ಗೆ ಉಳಿದದ್ದನ್ನು ಹಾಕುತ್ತಿದ್ದು ಎಷ್ಟು ಬಾರಿ ಹೇಳಿದರು ಒಂದು ದಿನವೂ ಬಿಸಿ ಊಟ ತಿಂಡಿ ಹಾಕಲಿಲ್ಲ .ಆ ಡಿಸೆಂಬರ್ ಚಳಿಗೆ ಆ ಊರಿನ ವಾತಾವರಣಕ್ಕೆ ಆರಿದ್ದು ತಿನ್ನುವುದು ತುಂಬಾ ಹಿಂಸೆ ಎನಿಸುತ್ತಿತ್ತು. ಯಾವಾಗ ನಾವು ನಮಗೆ ಬೇರೆ ಮನೆ ಮಾಡುತ್ತೇವಪ್ಪಾ ಅಂತ ಅನ್ನಿಸತೊಡಗಿತ್ತು. ಯಾವುದೇ ಹಾಸ್ಟೆಲ್ ನಲ್ಲಿದ್ದು‌ ಅಭ್ಯಾಸ ಇಲ್ಲದ ನಮಗೆ ಹೊರಗಿನ ಊಟದ ಕಷ್ಟ ಏನೆಂದು ಆಗ ಅರ್ಥವಾಯಿತು. ಅಲ್ಲದೆ ಹೆಚ್ಚು ಕಡಿಮೆ ಮೂರು ಕಿಲೋಮೀಟರ್ ದೂರ ಇತ್ತು ಅದು ನಮ್ಮ ಕಚೇರಿಯಿಂದ. ಹೋಗಿ ಬರುವುದು ಸಹ ಕಷ್ಟವೇ. ಸದ್ಯ ಆಗ ಡಿಸೆಂಬರ್ ನಲ್ಲಿ ಮಳೆ ಇಲ್ಲದಿದ್ದರಿಂದ ಹೇಗೋ ನಡೆಯಿತು ಹಾಗಾಗಿ ಕಚೇರಿಗೆ ಹತ್ತಿರದ ಸ್ಥಳಗಳಲ್ಲಿ ನಾವು ಮನೆ ಹುಡುಕುತ್ತಿದ್ದು. ಕೆಲವು ದೂರದ ಪ್ರದೇಶ ಏರಿಯಾದಲ್ಲಿ ಮನೆ ಸಿಕ್ಕುತ್ತಿದ್ದರು ನಮ್ಮ ಬಳಿ ವಾಹನ ಇಲ್ಲದ್ದರಿಂದ ಅಲ್ಲಿನ ಮಳೆ ಸಮಯದಲ್ಲಿ ಓಡಾಡಲು ಕಷ್ಟ ಎಂದು ಎಲ್ಲರೂ ಹೇಳಿದ್ದರಿಂದ ದೂರದ ಏರಿಯಾಗಳಿಗೆ ಹೋಗಲು ಮನಸ್ಸು ಮಾಡಲಿಲ್ಲ.ಕಡೆಗೆ ಕಚೇರಿಯಿಂದ ಒಂದೇ ಕಿಲೋಮೀಟರ್ ದೂರ ಇದ್ದ ಕುಶಾಲನಗರ ಎಕ್ಸ್ಟೆಂಶನ್ ಎಂಬಲ್ಲಿ ಮಹಡಿಯ ಮೇಲೆ ಒಂದು ಮನೆ ಖಾಲಿ ಇದೆ ಎಂದು ತಿಳಿಯಿತು ರಾಜಮ್ಮ ಎನ್ನುವವರು ಅಲ್ಲಿನ ರಾಜಕೀಯ ಪುಡಾರಿ ಅವರದೇ ಮನೆ. ಕೆಳಗಡೆ ಅವರದೊಂದು ದೊಡ್ಡ ಮನೆ. ಪಕ್ಕದಲ್ಲಿ ಸ್ವಲ್ಪ ಜಾಗ ಅವರ ಮನೆಗೆ ಸೇರಿದಂತೆಯೇ ಮಹಡಿಯ ಮೇಲೆ ಎರಡು ಮನೆಗಳು ಅಲ್ಲಿ ಕೆಳಗಡೆ ಅಟಾಚ್ಡ್ ಬಾತ್ರೂಮ್ ಇರುವಂತಹ ಎರಡು ಕೊಠಡಿಗಳು. ಅಂತಹ ಒಂದು ಕೊಠಡಿಯಲ್ಲಿ ನಮ್ಮದೇ ಆಫೀಸಿನ ಹೊಸ ರೆಕ್ರೂಟ್ಮೆಂಟ್ ಆದ ಆನಂದ್ ಮತ್ತು ಮೋಹನ್ ಎನ್ನುವವರು ಇದ್ದುದರಿಂದ ಅವರ ಮೇಲಿನ ಮನೆ ಖಾಲಿಯಾಗುತ್ತದೆ ಎಂದು ತಿಳಿಸಿದರು. ಹಾಗಾಗಿ ಅಲ್ಲಿ ನೋಡಲು ಹೋದೆವು. ಅವರ ಮನೆಯಲ್ಲಿ ಟೀ ಚೌಚೌ ಆತಿಥ್ಯ ಸ್ವೀಕರಿಸಿ ಮನೆ ನೋಡಲು ಹೋದೆವು. ಒಂದು ರೂಮಿನ ಮನೆ. ಮನೆ ಏನೋ ಚೆನ್ನಾಗಿತ್ತು ಆದರೆ ಅಲ್ಲಿ ಯಾರು

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-28 ಪದೋನ್ನತಿ ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೨೮ ೧೯೯೭……..  ಮಕ್ಕಳಾಗಲು ಎಷ್ಟೇ ಚಿಕಿತ್ಸೆ ತೆಗೆದುಕೊಂಡರೂ ಫಲಕಾರಿಯಾಗದೆ ಏಕೋ ತುಂಬಾ ಬೇಸರ. ಹಾರ್ಮೋನ್ ಚಿಕಿತ್ಸೆಯ ಪರಿಣಾಮ ತೂಕದಲ್ಲಿ ಹೆಚ್ಚಳ. ಒಂದು ತರಹ ಖಿನ್ನತೆಗೆ ಒಳಗಾಗುತ್ತಿದ್ದೆ. ವಿಭಾಗೀಯ ಕಛೇರಿಯಲ್ಲಿ ಡಿಪಾರ್ಟ್ಮೆಂಟ್ ಬದಲಾವಣೆಗೆ ಅವಕಾಶವಿರಲಿಲ್ಲ ಆಗ. ಇತ್ತೀಚೆಗೆ ೧೫ ವರ್ಷಗಳಿಂದ ಶಾಖೆಗಳಲ್ಲಿರುವಂತೆ ೩ ವರ್ಷಕ್ಕೊಮ್ಮೆ ಬದಲಾವಣೆ ಇದೆ. ಈಗ ನನ್ನೊಂದಿಗೆ ಸಹಾಯಕರಾಗಿ ರಾಮಚಂದ್ರ ಮತ್ತು ಉನ್ನತದರ್ಜೆ ಸಹಾಯಕರಾಗಿ ಮುರಳಿ ಇದ್ದರು. ಸಹಾಯಕ ವಿಭಾಗಾಧಿಕಾರಿಯಾಗಿ  ಶ್ರೀಮತಿ ಪ್ರಮದಾ ಪ್ರಕಾಶ್ ಅವರು ಬೆಂಗಳೂರಿನಿಂದ ಬಂದಿದ್ದರು. ಇದೇ ಮೊದಲು ನಾನು ಮಹಿಳಾ ಅಧಿಕಾರಿಯೊಂದಿಗೆ ಕೆಲಸ ಮಾಡಿದ್ದು. ಸುವರ್ಣ ಅವರಂತೂ ಇದ್ದರು. ತುಂಬಾ ಸೌಹಾರ್ದಕರ ವಾತಾವರಣವಿತ್ತು. ಆ ಸಮಯದಲ್ಲೇ ನನ್ನ ತಂಗಿ ವೈಶಾಲಿಯ ವಿವಾಹವೂ ಜರುಗಿದ್ದು. ಪ್ರಮದಾ ಮೇಡಂ ಅವರು ತುಂಬಾ ತಿಳಿ ಹೇಳಿ ಉನ್ನತ ದರ್ಜೆ ಸಹಾಯಕಿಯಾಗಿ ಬಡ್ತಿ ತೆಗೆದುಕೊಳ್ಳಲು ಪ್ರೇರೇಪಿಸಿದರು. ಸ್ಥಳ ಬದಲಾವಣೆ ಆದರೆ ಚಿಕಿತ್ಸೆಗು ಒಳ್ಳೆಯದು ಎಂದು ಅವರು ಹೇಳಿದ ಮಾತು ನನ್ನಲ್ಲೂ ಒಂದು ಹೊಸ ಆಸೆ ಮೂಡಿಸಿತು. ಹಾಗಾಗಿ ಆ ವರ್ಷ ಉನ್ನತ ದರ್ಜೆ ಸಹಾಯಕರ ಬಡ್ತಿಗಾಗಿ ಕರೆ ಕೊಟ್ಟಾಗ ನಾನು ಸಹ ಅರ್ಜಿ ಕೊಟ್ಟೆ. ನಮ್ಮ ತಂದೆ ಅಂತೂ ಉದ್ಯೋಗದಲ್ಲಿ ಮುಂದೆ ಬರಲಿ ಎಂದು ತುಂಬಾನೇ ಇಷ್ಟಪಡುತ್ತಿದ್ದರು ಹಾಗಾಗಿಯೇ ನನ್ನ ತಂಗಿ ಸಹ  ಸಹಾಯಕ ಅಧಿಕಾರಿಯಾಗಿ ಹೋಗಿದ್ದು.  ನನಗೂ ಅವರು ಬಡ್ತಿ ತೆಗೆದುಕೊಳ್ಳಲು ಹೇಳಿ ಅದನ್ನು ರವೀಶ್ ಅವರು ಅನುಮೋದಿಸಿದಾಗ ಆಯಿತು ಎಂದುಕೊಂಡಿದ್ದೆ. ಸಾಮಾನ್ಯ ಎಲ್ಲರಿಗೂ ದಿನ ಓಡಾಡುವ ಸ್ಥಳಕ್ಕೆ ಪೋಸ್ಟಿಂಗ್ ಆಗುತ್ತಿತ್ತು . ಒಂದು ಅಥವಾ ಎರಡು ವರ್ಷ ಹೀಗೆ ಓಡಾಡಿದ ನಂತರ ಮೈಸೂರಿಗೆ ವಾಪಸ್ ಬರಬಹುದಿತ್ತು. ಆದರೂ ಕೆಲವು ಗೆಳತಿಯರು ಆರಾಮವಾಗಿ ಮೈಸೂರಿನಲ್ಲಿ ಇರುವುದನ್ನು ಬಿಟ್ಟು ಓಡಾಡುವ ತೊಂದರೆ ತೆಗೆದುಕೊಳ್ಳುವುದು ಏಕೆ ಎಂದು ಸಹ ಕೇಳಿದ್ದರು. ಆದರೂ ಬದಲಾವಣೆಗೆ ಏನೋ ಒಂದು ರೀತಿಯ ತುಡಿತ ಏಕತಾನತೆಯಿಂದ ದೂರ ಹೋಗುವ ಆಸೆ ನನ್ನನ್ನು ಪದೋನ್ನತಿಗೆ ಪ್ರಯತ್ನಿಸುವ ಹಾಗೆ ಮಾಡಿತು. ಇದಕ್ಕೂ ಒಂದು ಪ್ರವೇಶ ಪರೀಕ್ಷೆ ಇರುತ್ತದೆ. ಆದರೆ ಅಸೋಸಿಯೇಟ್ ಪರೀಕ್ಷೆ ಪಾಸಾದವರಿಗೆ ಪ್ರವೇಶ ಪರೀಕ್ಷೆಯಿಂದ ರಿಯಾಯಿತಿ. ಆ ವೇಳೆಗೆ ನನ್ನದು ಅಸೋಸಿಯೇಟ್  ಆಗಿದ್ದರಿಂದ ನಾನು ನೇರ ಸಂದರ್ಶನಕ್ಕೆ ಅರ್ಹಳಾಗಿದ್ದೆ. ಎಂದಿನಂತೆ ಆ ಸಂದರ್ಶನಕ್ಕೆ ನಮ್ಮ ಹೊಸ ವ್ಯವಹಾರ ವಿಭಾಗದಿಂದ ಕೇಳಬಹುದಾದ ಸಂಭವನೀಯ ಪ್ರಶ್ನೆಗಳ ಪಟ್ಟಿ ನಾನೇ ತಯಾರು ಮಾಡಿ ಕೊಟ್ಟಿದ್ದೆ. ಆ ಬಾರಿ ಸಂದರ್ಶನ ಸಮಿತಿಯಲ್ಲಿ ನಮ್ಮ ಹೊಸ ವ್ಯವಹಾರ ವಿಭಾಗದ ಆಡಳಿತ ಅಧಿಕಾರಿಯಾಗಿದ್ದ ಶ್ರೀ ಟಿ ಎಂ ಪರಶಿವಮೂರ್ತಿ ಅವರು ಹಾಗೂ ಪಕ್ಕದಲ್ಲಿ ಇದ್ದ ಯೋಜನಾ ವಿಭಾಗದ ಸಹಾಯಕ ವಿಭಾಗ ಅಧಿಕಾರಿಯಾದ ಶ್ರೀ ಅಶ್ವತ್ಥ ನಾರಾಯಣಾಚಾರ್ ಅವರು ಇದ್ದರು. ನಂಜನಗೂಡಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿರುವಾಗ ಅಶ್ವತ್ಥನಾರಾಯಣಾಚಾರ್  ಅವರೇ ನಮ್ಮ ಶಾಖಾಧಿಕಾರಿ ಆಗಿದ್ದರು . ಆ ಸಮಿತಿಯ ಅಧ್ಯಕ್ಷರಾಗಿ ಗೃಹ ಸಾಲ ವಿಭಾಗದ ಶ್ರೀ ನಾಗರಾಜ್ ಅವರು ನಿಯುಕ್ತರಾಗಿದ್ದರು. ವಿಭಾಗಿಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಒಂದು ಅನುಕೂಲವೆಂದರೆ ಸಂದರ್ಶನ ಸಮಿತಿಯ ಎಲ್ಲರೂ ನಮಗೆ ತಿಳಿದವರಾಗಿ ಜೊತೆಯಲ್ಲಿ ಕೆಲಸ ಮಾಡಿದವರಾಗಿದ್ದರಿಂದ ಸಂದರ್ಶನ ಎಂದರೆ ಒಂದು ವಿಶೇಷ ಭಯ ಇರುವುದಿಲ್ಲ. ಸಂದರ್ಶನದ ಸ್ವಲ್ಪ ದಿನ ಮುಂಚೆ ಒಂದು ಹೊಸ ಚೂಡಿದಾರ್ ಕೊಂಡಿದ್ದೆ .ಅದನ್ನೇ ಸಂದರ್ಶನಕ್ಕೆ ಹಾಕಿಕೊಂಡು ಹೋಗುವುದು ಎಂದು ನಿರ್ಧರಿಸಿದೆ. ನನಗೆ ಇಷ್ಟವಾದ ಬೂದಿ ಬಣ್ಣದ ಡ್ರೆಸ್ ಅದು. ಸಂದರ್ಶನದ ಕೊಠಡಿ ಒಳಗೆ ಪ್ರವೇಶಿಸಿ  ಅವರುಗಳಿಗೆ ವಂದಿಸಿ ಕುರ್ಚಿಯಲ್ಲಿ ಕುಳಿತಿದ್ದಾಯಿತು. ಪರಶಿವಮೂರ್ತಿಯವರು ನಗುನಗುತ್ತಲೆ ಏನ್ರೀ ಕೇಳೋದು ನಿಮ್ಮನ್ನ ನೀವೇ ತಯಾರು ಮಾಡಿ ಕೊಟ್ಟಿರುವುದು ಈ ಪಟ್ಟಿ ಎಂದರು. ನಂತರ ನಮ್ಮ ಹೊಸ ವ್ಯವಹಾರ ವಿಭಾಗದಲ್ಲಿ ಅವರು ಹೊಸಬರಾಗಿದ್ದಾಗ ಅವರಿಗೆ ಅಲ್ಲಿನ ಕೆಲಸ ನಾನೇ ಹೇಳಿಕೊಟ್ಟಿದ್ದು.  ಹಾಗಾಗಿ ಏನು ಕೇಳಲಿ ಎಂದು ತಮಾಷೆ ಮಾಡಿದ್ದರು. ಅಶ್ವಥನಾರಾಯಣಚಾರ್ ಅವರು ಸಹ ಒಂದೆರಡು ಔಪಚಾರಿಕ ಪ್ರಶ್ನೆಗಳನ್ನು ಕೇಳಿದರು ಅಷ್ಟೇ. ನಾಗರಾಜ ಅವರು ಪಾಲಿಸಿ ಸರ್ವಿಸ್ ಗೆ ಸಂಬಂಧಿಸಿದಂತೆ ಒಂದೆರಡು ಪ್ರಶ್ನೆಗಳನ್ನು ಕೇಳಿದರು. ನನಗೆ ನೆನಪಿರುವುದು ಕಚೇರಿಯಲ್ಲೇ ಪಾಲಿಸಿ ಬಾಂಡ್ ಕಳೆದು ಹೋದಾಗ ಅದರ ತಯಾರಿಕೆಗಾಗಿ ಪಾಲಿಸಿದಾರರಿಂದ ವಸೂಲು ಮಾಡಬೇಕಾದ ಹಣ ಎಷ್ಟು ಎಂದು. ಕಚೇರಿಯಲ್ಲಿ ನಾವೇ ಪಾಲಿಸಿ ಕಳೆದು ಹಾಕಿದಾಗ ನಮ್ಮ ಖರ್ಚಿನಲ್ಲೇ ನಕಲು ಪ್ರತಿಯನ್ನು ತಯಾರು ಮಾಡಬೇಕು ಅದಕ್ಕಾಗಿ ಒಂದು ಆಫೀಸ್ ನೋಟ್ ತಯಾರು ಮಾಡಬೇಕು. ಪಾಲಿಸಿದಾರರಿಂದ ಯಾವ ಹಣವನ್ನು ಪಡೆಯುವಂತಿಲ್ಲ ಎಂದು ಹೇಳಿದ್ದಕ್ಕೆ ಅವರು ತಲೆಯಾಡಿಸಿದರು ಅಷ್ಟೇ. 10 ನಿಮಿಷಗಳಲ್ಲಿ ನನ್ನ ಸಂದರ್ಶನ ಮುಗಿದು ಹೋಗಿತ್ತು ನಮ್ಮ ವಿಭಾಗದ ಎದುರುಗಡೆಯ ಕೊಠಡಿಯಲ್ಲಿ ಸಂದರ್ಶನ ನಡೆದದ್ದು ಹಾಗಾಗಿ ಬಂದವರು ಎಲ್ಲ ನನ್ನ ಸೀಟಿನ ಬಳಿ ಕುಳಿತಿರುತ್ತಿದ್ದರು. ಕೆಲವರನ್ನಂತೂ ಬಹಳ ಪ್ರಶ್ನೆ ಕೇಳಿದ್ದರು ಎಂದು ತಿಳಿಯಿತು. ಹೀಗೆ ಪದೋನ್ನತಿಗೆ ಆಯ್ಕೆ ಮಾಡುವಾಗ ನಾವು ಮಾಡಿದ ಸೇವಾ ಅವಧಿ ಹಾಗೂ ನಮಗೆ ಪ್ರತಿ ವರ್ಷ ಕೊಡುವ ನಮ್ಮ ಸಿ ಅರ್ ಅಂದರೆ ನಮ್ಮ ಕೆಲಸದ ಬಗೆಗಿನ ವಾರ್ಷಿಕ ವರದಿ ಮತ್ತು ಸಂದರ್ಶನದಲ್ಲಿ ನಾವು ಕಳಿಸಿದ ಅಂಕ ಇವೆಲ್ಲವುಗಳನ್ನು ಆಧರಿಸಿ ಅಂಕೆಗಳನ್ನು ಕೊಡುತ್ತಾರೆ. ನಮ್ಮ ಜೀವ ವಿಮಾ ನಿಗಮದ ಒಂದು ಅಲಿಖಿತ ನಿಯಮದಂತೆ ಅಂದು ಶನಿವಾರ ಮಧ್ಯಾಹ್ನ ಫಲಿತಾಂಶ ಹೊರಬಿದ್ದಿತ್ತು. ಅರ್ಹತೆವಾರು ಪಟ್ಟಿಯಲ್ಲಿ ನನ್ನದು ಮೊದಲ ಹೆಸರು. ಇಷ್ಟೆಲ್ಲಾ ಆದರೂ ಒಂದು ರೀತಿಯ ಸಂಧಿಗ್ಧ. ಹೋಗುವುದು ಬೇಡವೋ ಎಂದು. ನೋಡೋಣ ಎಲ್ಲಿಗೆ ಪೋಸ್ಟಿಂಗ್ ಸಿಕ್ಕತ್ತೆ ಅದರ ಮೇಲೆ ನಿರ್ಧರಿಸೋಣ ಎಂದುಕೊಂಡಿದ್ದು.  ನಾನು ಆಯ್ಕೆ ಮಾಡಿ ಕೊಟ್ಟಿದ್ದ ಸ್ಥಳಗಳು ಕೆ ಆರ್ ನಗರ ಹುಣಸೂರು ಮತ್ತು ಚಾಮರಾಜನಗರ ಆದರೆ ನನ್ನ ಜೊತೆ ಆಯ್ಕೆಯಾದವರು ನನಗಿಂತ ವಯಸ್ಸಿನಲ್ಲಿ ಸೀನಿಯರ್ ಆಗಿದ್ದರಿಂದ ದಿನವು ಓಡಾಡಬಹುದಾದ ಈ ಸ್ಥಳಗಳು ಸಹ ನನಗೆ ಸಿಗುವ ಸಾಧ್ಯತೆ ಇರಲಿಲ್ಲ. ಆ ಪಟ್ಟಿ ಬಿಟ್ಟರೆ ಮುಂದೆ ಒಂದು ಕಂಟಿನ್ಜೆನ್ಸಿ ಪಟ್ಟಿಯಲ್ಲಿ ಕೆ ಆರ್ ಪೇಟೆ ಸಿಗುವ ಸಾಧ್ಯತೆ ಇತ್ತು. ದಿನವೂ ಓಡಾಡಬಹುದಾದರು ಹೆಚ್ಚು ಬಸ್ಸುಗಳು ಇರಲಿಲ್ಲ ಮತ್ತು ರಸ್ತೆ ಸಹ ತುಂಬಾ ಕೆಟ್ಟದಾಗಿ ಇತ್ತು . ನಂಜನಗೂಡಿನಲ್ಲಿ ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಸುಲೋಚನಾ ಅವರಿಗೂ ಪದೋನ್ನತಿ ಸಿಕ್ಕಿದ್ದು ಅವರು ಸಹ ಪೋಸ್ಟಿಂಗ್ ವಿಷಯದಲ್ಲಿ ಸಂದಿಗ್ಧದಲ್ಲಿ ಇದ್ದರು ನಮ್ಮ ಆಡಳಿತ ಅಧಿಕಾರಿಯಾಗಿದ್ದ ಟಿ ಎಂ ಪರಶಿವಮೂರ್ತಿ ಅವರು ಸುಲೋಚನಾ ಅವರಿಗೆ ಬಹಳ ಆಪ್ತರು ಅವರು ನಮ್ಮಿಬ್ಬರ ಜೊತೆ ಮಾತನಾಡಿ ನಿಮ್ಮಿಬ್ಬರ ಸ್ವಭಾವ ತುಂಬಾ ಚೆನ್ನಾಗಿ ಹೊಂದುತ್ತದೆ ಇಬ್ಬರು ಮಾತನಾಡಿಕೊಂಡು ಒಂದೇ ಕಡೆಗೆ ಪೋಸ್ಟಿಂಗ್ ತೆಗೆದುಕೊಳ್ಳಿ ಒಂದು ವರ್ಷ ಒಟ್ಟಿಗೆ ಇದ್ದು ನಂತರ ವಾಪಸ್ ಬರಬಹುದು ಎಂದರು. ರವೀಶ್ ಮತ್ತು ನನ್ನ ತಂದೆ ಸಹ ದಿನ ಓಡಾಡಿ ಕಷ್ಟಪಡುವುದರ ಬದಲು ಇದು ಒಳ್ಳೆಯ ಸಲಹೆ ಎಂದಾಗ ಸಂಬಂಧ ಪಟ್ಟವರೊಡನೆ ಮಾತನಾಡಿದಾಗ ಇಬ್ಬರನ್ನು ಒಟ್ಟಿಗೆ ಸಕಲೇಶಪುರಕ್ಕೆ ಪೋಸ್ಟಿಂಗ್ ಮಾಡಿದರು. ಈಗಾಗಲೇ ಮೊದಲ ವರ್ಷಗಳಲ್ಲಿ ಹೋದವರು ಅಲ್ಲಿ ಒಂದು ಪ್ಲೇಯಿಂಗ್ ಗೆಸ್ಟ್ ಮನೆಯಲ್ಲಿ ಇದ್ದರು ಎಂಬ ವಿಷಯ ತಿಳಿದು ಹೋಗೋಣ ಎಂದು ನಾನು ಸುಲೋಚನಾ ನಿರ್ಧರಿಸಿದೆವು.ರವೀಶ್ ಅವರ ಊರಿನ ಕೆಲವರು ಆಗ ಸಕಲೇಶಪುರದಲ್ಲೇ ಇದ್ದುದರಿಂದ ಅವರ ಸಹಾಯ ಪಡೆಯಬಹುದು ಎಂಬ ಒಂದು ನಂಬಿಕೆಯು ಇತ್ತು.ಸರಿ ಹೋಗುವುದು ನಿರ್ಧಾರವಾಗಿ ವಿಭಾಗಿಯ ಕಚೇರಿಯ ಎಲ್ಲರಿಗೂ ಸಿಹಿ ಹಂಚಿದ್ದು ಆಯಿತು ನಮ್ಮ ವಿಭಾಗದವರು ಮತ್ತು ನನಗೆ ಆಪ್ತರಾಗಿದ್ದ ಸರಸ್ವತಿ ಕಮಲ ಮತ್ತು ಸುಮಾ ಇವರುಗಳನ್ನು ಕರೆದುಕೊಂಡು ಹೋಗಿ ಫಾರಸ್ ಹೋಟೆಲಿನಲ್ಲಿ ಪಾರ್ಟಿ ಕೊಡಿಸಿದ್ದು ಆಯಿತು. ಸುಮಾ ಮತ್ತು ಕಮಲ ಒಂದು ಚೆಂದದ ವ್ಯಾನಿಟಿ ಬ್ಯಾಗ್ ಅನ್ನು ನಮಗೆ ಗಿಫ್ಟ್ ಆಗಿ ನೀಡಿದರು. ನಮ್ಮ ಹೊಸ ವ್ಯವಹಾರ ವಿಭಾಗದವರು ಸೇರಿಕೊಂಡು ಒಂದು ಸೂಟ್ಕೇಸ್ ಉಡುಗೊರೆ ನೀಡಿದರು. ನಾನು ತುಂಬಾ ಅಮೃತಾಂಜನ್ ಅಥವಾ ಜಂಡು ಬಾಮನ್ನು ಹಣೆಗೆ ಹಚ್ಚಿಕೊಳ್ಳುತ್ತಲೇ ಇರುತ್ತಿದ್ದೆ .ಅದಕ್ಕೆ ಮುರಳಿಯವರು ರೇಗಿಸಿ ಇಲ್ಲಿಯೇ ಇಷ್ಟೊಂದು ಬಳಸುತ್ತೀರಿ . ಇನ್ನು ಆ ಥಂಡಿ ಪ್ರದೇಶದಲ್ಲಿ ಎಷ್ಟೊಂದು ಬೇಕಾಗುತ್ತದೆ. ಒಂದು ಡಝನ್ ಗಿಫ್ಟ್ ಕೊಡೋಣವಾ  ಅಂತ ರೇಗಿಸಿದ್ದರು. ಅಂತೂ ಏಳು ವರ್ಷಗಳಿಂದ ಇದ್ದ ವಿಭಾಗೀಯ ಕಚೇರಿಯನ್ನು ಬಿಡಲು ತುಂಬಾನೇ ಬೇಸರ ಅನಿಸಿತು. ಆದರೂ ಹೊಸ ಜಾಗ ಹೊಸ ಸವಾಲುಗಳು ಒಂದು ರೀತಿಯ ಥ್ರಿಲ್ ಎಂದು ಕೂಡ ಎದುರು ನೋಡುತ್ತಿದ್ದೆ. ಸುಜಾತಾ ರವೀಶ್

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-23 ಗಲಭೆಗಳು ಬಂದ್ಗಳು ಇತ್ಯಾದಿ ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೨೩ ನಾವು ವಿಭಾಗಿಯ ಕಚೇರಿಗೆ ವರ್ಗವಾಗಿ ಬಂದ ಸಮಯವೇ ಸರಿ ಇರಲಿಲ್ಲವೋ ಏನೋ ಡಿಸೆಂಬರ್ ೧೯೯೧ಲ್ ರಲ್ಲಿ ಕಾವೇರಿ ವಿವಾದ ಆರಂಭವಾಯಿತು. ಇಡೀ ತಿಂಗಳು ಗಲಭೆ . ಕನ್ನಡ ಚಳುವಳಿಯ ಜನಗಳು ಆಫೀಸಿಗೆ ನುಗ್ಗಿ ಕಚೇರಿಯನ್ನು ಬಂದ್ ಮಾಡಿಸುತ್ತಿದ್ದರು. ಸರಿ ನಂತರ ಅಲ್ಲಿಂದ ಮತ್ತೆ ಮನೆಯ ಕಡೆ ಪಯಣ. ಅಷ್ಟು ಹೊತ್ತಿಗೆ ಬಸ್ ಗಳ ಓಡಾಟ ನಿಂತು ಹೋಗಿರುತ್ತಿತ್ತು .ಆಟೋಗಳು ವಿಪರೀತ ದುಡ್ಡು ಕೇಳುತ್ತಿದ್ದರು. ಆದರೂ ಹೆಚ್ಚು ಜನರನ್ನು ಕೂಡಿಸಿಕೊಂಡು ಹೋಗುತ್ತಿದ್ದುದರಿಂದ ಎಲ್ಲರೂ ಸೇರುವ ಒಂದು ಕಾಮನ್ ಪ್ಲೇಸ್ ತನಕ ಆಟೋದಲ್ಲಿ ಬಂದು ಅಲ್ಲಿಂದ ಮುಂದೆ ನಟರಾಜ ಸರ್ವಿಸ್. ಒಂದು ರೀತಿಯ ಶಿಕ್ಷೆಯೇ ಸರಿ. ಆದರೆ ಆಫೀಸಿಗೆ ಬಂದು ಹಾಜರಾತಿಗೆ ಸಹಿ ಹಾಕದಿದ್ದಲ್ಲಿ ಅಂದು ಬಂದ್ ಇದ್ದರೂ ಸಹ ರಜೆ ಕೊಡಬೇಕಿತ್ತು . ಹೆಚ್ಚು ರಜೆಗಳು ಇರುತ್ತಿರಲ್ಲವಾದ್ದರಿಂದ ಕಷ್ಟಪಟ್ಟು ಹೇಗಾದರೂ ಬಂದು ಆಫೀಸ್ ಬಂದ್ ಆದ ನಂತರ ವಾಪಸ್ ಹೋಗುತ್ತಿದ್ದೆವು. ನಮ್ಮ ವಿಭಾಗೀಯ ಕಚೇರಿ ಹಾಗೂ ಶಾಖೆ ಎರಡು ಎರಡೂ ನಗರದ ಹೃದಯ ಭಾಗದಲ್ಲಿ ಇದ್ದುದರಿಂದ ಯಾವುದೇ ಒಂದು ಗಲಭೆ ಆದರೂ ಶಾಖೆಗಳು ಮುಚ್ಚುತ್ತಿದ್ದುದು ಗ್ಯಾರಂಟಿ. ಮುಖ್ಯವಾಗಿ ಡಿಸೆಂಬರ್ 1991ರಲ್ಲಿ ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದಾದ್ಯಂತ ತೀವ್ರವಾಗಿ ಭುಗಿಲೆದ್ದವು, ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಆದೇಶಗಳ ವಿರುದ್ಧ ನಡೆದ ಪ್ರತಿಭಟನೆಗಳಿಂದ ಪ್ರಾರಂಭವಾಗಿ, ತಮಿಳರ ಮೇಲೆ ಹಿಂಸಾಚಾರ, ಆಸ್ತಿಪಾಸ್ತಿ ಹಾನಿ ಮತ್ತು ತಮಿಳರು ರಾಜ್ಯ ತೊರೆಯುವ ಪರಿಸ್ಥಿತಿಗೆ ಕಾರಣವಾಯಿತು, ಇದು ರಾಜ್ಯದ ಇತಿಹಾಸದ worst riots ಎಂದು ಕರೆಯಲ್ಪಟ್ಟಿತು. ಗಲಾಟೆಗಳಿಗೆ ಕಾರಣ ಕಾವೇರಿ ನ್ಯಾಯಮಂಡಳಿ ಆದೇಶ. ಭಾರತ ಸರ್ಕಾರ ನೇಮಿಸಿದ ಕಾವೇರಿ ಜಲ ವಿವಾದ ನ್ಯಾಯಮಂಡಳಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಆದೇಶಿಸಿತ್ತು, ಇದನ್ನು ವಿರೋಧಿಸಿ ಕರ್ನಾಟಕದಲ್ಲಿ ಪ್ರತಿಭಟನೆಗಳು ತೀವ್ರಗೊಂಡವು.ನ್ಯಾಯಮಂಡಳಿಯ ಆದೇಶದಂತೆ ನೀರು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರ ನಿರಾಕರಿಸಿದಾಗ ಪ್ರತಿಭಟನೆಗಳು ಹಿಂಸೆಗೆ ತಿರುಗಿದವು.ಮೈಸೂರು, ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ನಗರಗಳಲ್ಲಿ ತಮಿಳರ ಮೇಲೆ ಗುಂಪುಗಳ ದಾಳಿಗಳು ನಡೆದವು. ತಮಿಳು ಪತ್ರಿಕೆಗಳ ಕಚೇರಿಗಳಿಗೆ ಬೆಂಕಿ ಹಚ್ಚುವುದು ಸೇರಿದಂತೆ ದೊಡ್ಡ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಯಿತು.ಸಾವಿರಾರು ತಮಿಳು ಕುಟುಂಬಗಳು ಭಯದಿಂದ ಕರ್ನಾಟಕವನ್ನು ತೊರೆದರು.ಕನ್ನಡಪರ ಸಂಘಟನೆಗಳು ಕರೆ ನೀಡಿದ ಬಂದ್ ಪ್ರತಿಭಟನೆಗಳು ಹಿಂಸಾಚಾರಕ್ಕೆ ಕಾರಣವಾದವು. ಪೊಲೀಸರ ಗುಂಡೇಟು ಸೇರಿದಂತೆ ಹಲವು ಸಾವುಗಳು ಸಂಭವಿಸಿದವು (ಅಂದಾಜು 28 ಜನರು ಮೈಸೂರಿನಲ್ಲಿ).ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಸುಮಾರು ಒಂದು ತಿಂಗಳ ಕಾಲ ಮುಚ್ಚಬೇಕಾಯಿತು.ಆರ್ಥಿಕ ನಷ್ಟ: ಆಸ್ತಿಪಾಸ್ತಿ ನಷ್ಟ ಅಂದಾಜು 19 ಕೋಟಿ ರೂ. ಇತ್ತು.ಈ ಗಲಾಟೆಗಳು ಕಾವೇರಿ ವಿವಾದದ ಉದ್ವಿಗ್ನತೆಯನ್ನು ಮತ್ತು ಕನ್ನಡಿಗರು ಹಾಗೂ ತಮಿಳರ ನಡುವಿನ ಸಂಬಂಧದಲ್ಲಿ ಉಂಟಾಗಿದ್ದ ಉದ್ವಿಗ್ನತೆಯನ್ನು ತೋರಿಸಿಕೊಟ್ಟವು. ನಮಗೂ ಆ ಡಿಸೆಂಬರ್ ತಿಂಗಳಲ್ಲೇ 6 _ 7 ದಿನ ಕಚೇರಿಗಳನ್ನು ಮುಚ್ಚಿಸಿದ್ದರು. ನಂತರದ 1993 ಡಿಸೆಂಬರ್ ನಲ್ಲಿ ಬಾಬರಿ ಮಸೀದಿ ಪ್ರಕರಣ ಸಂಬಂಧ ಮೈಸೂರಿನಲ್ಲಿ ಕೋಮು ಗಲಭೆಗಳು ಆರಂಭವಾದವು ನಮ್ಮ ಕಚೇರಿಗಳಿದ್ದ ನಜರ್ಬಾದ್ ಏರಿಯಾ ಸೂಕ್ಷ್ಮ ಪ್ರದೇಶ ಎಂಬ ಹೆಸರು ಪಡೆದಿತ್ತು. ಅಲ್ಲಿ ಮುಸ್ಲಿಂ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿತ್ತು ಹೆಚ್ಚು ಕಡಿಮೆ 27 ದಿನ ಕರ್ಫ್ಯೂ ಜಾರಿಯಲ್ಲಿತ್ತು. ಕರ್ಫ್ಯೂ ಹಾಕಿದ ವಿಷಯ ಮೊದಲೇ ಗೊತ್ತಿದ್ದ ಸಮಯದಲ್ಲಿ ಶಾಖೆಗೆ ಹೋಗುತ್ತಲೇ ಇರಲಿಲ್ಲ. ಕೆಲವೊಮ್ಮೆ ಕರ್ಫ್ಯೂ ಮುಂದುವರಿಸಿದ ವಿಷಯ ತಿಳಿಯದೆ ನಮ್ಮ ಏರಿಯಾಗಳ ಕಡೆ ಕರ್ಫ್ಯೂ ಜಾರಿಯಲ್ಲಿ ಇಲ್ಲದೆ ಇದ್ದಾಗ ಬಸ್ ಗಳು ಸಹ ಓಡಾಡುತ್ತಿದ್ದುದರಿಂದ ಶಾಖೆಗೆ ಹೋಗುತ್ತಿದ್ದೆವು. ದಾರಿಯಲ್ಲೇ ಪೊಲೀಸರು ತಡೆದು ಬೈದು ವಾಪಸ್ಸು ಕಳಿಸುತ್ತಿದ್ದರು ಅಲ್ಲದೆ ಒಂದು ರೀತಿಯ ಭಯ ಮಿಶ್ರಿತ ವಾತಾವರಣ. ಕೋಮುಗಲಭೆ ಅಂದರೆ ಹಾಗೆಯೇ. ಆಗ ಇಡೀ ಮೈಸೂರು ಪ್ರಕ್ಷುಬ್ಧ. ಹೊರಗೆ ಓಡಾಡಲು ಭಯ ಉಂಟಾಗುವ ಪರಿಸ್ಥಿತಿ. ಆ ಬಾರಿ ಎಂದು  ಅರೆ ಮಿಲಿಟರಿ ಹಾಗೂ ಮಿಲಿಟರಿ ಪಡೆಗಳನ್ನು ಸಹ ಕರೆಸಿಬಿಟ್ಟಿದ್ದರಿಂದ ಓಡಾಡುವ ದಾರಿಯಲ್ಲಿ ಸೈನಿಕರನ್ನು ಕಾಣುವಂತೆ ಆಗಿತ್ತು .ಇದು ಅಪರೂಪದ ಸಂಗತಿ ಆದ್ದರಿಂದ ಅವರ ಕಡೆ ಭಯದಿಂದಲೇ ನೋಡಿಕೊಂಡು ಹೋಗಬೇಕಾಗಿತ್ತು. ನನಗೆ ಇನ್ನೂ ಚೆನ್ನಾಗಿ ನೆನಪಿದೆ ಡಿಸೆಂಬರ್ 6 ನಮ್ಮ ತಾಯಿಯ ಹುಟ್ಟುಹಬ್ಬ .ಅಂದು ಸಂಜೆ ಅದಕ್ಕಾಗಿಯೇ ಜಾಮೂನ್ ಮತ್ತು ಸಿಹಿ ಅಡಿಗೆ ಮಾಡಿದ್ದರು ಟಿವಿ ನೋಡುತ್ತಾ ಊಟ ಮಾಡುವಾಗ ಬಾಬರಿ ಮಸೀದಿ ಧ್ವಂಸದ ದೃಶ್ಯಗಳನ್ನು ನೋಡುತ್ತಾ ಊಟ ಮಾಡಿದೆವು .ಆದರೆ ಮಾರನೆಯ ದಿನದಿಂದ ಮೈಸೂರಿನಲ್ಲಿ ನಡೆದ ಆ ಹಿಂಸಾಚಾರ ಮತ್ತು ಭಯದ ವಾತಾವರಣ ನೆನೆಸಿಕೊಂಡಾಗ ಈಗಲೂ ಮನಸ್ಸಿಗೆ ಒಂದು ರೀತಿಯ ಕಸಿವಿಸಿ ಉಂಟಾಗುತ್ತದೆ. ಆಗ ನಮ್ಮ ಬಳಿ ದ್ವಿಚಕ್ರ ವಾಹನಗಳು ಇಲ್ಲದಿದ್ದರಿಂದ ಬಸ್ ನಲ್ಲಿಯೇ ಓಡಾಟ ಹೋಗುತ್ತಾ ಬಸ್ ಸಿಕ್ಕಿದರು ಬರುವ ವೇಳೆಗೆ ಬಸ್ ಓಡಾಟ ನಿಂತು ಹೋಗಿರುತ್ತಿತ್ತು ಹಾಗಾಗಿ ಹೆಚ್ಚಿನ ಅಂಶ ನಡೆದೆ ಮನೆ ಸೇರುತ್ತಿದ್ದೆವು. ಆ ದಿಕ್ಕಿನಲ್ಲಿ ಹೋಗುವ ಎಲ್ಲರೂ ಒಟ್ಟಾಗಿ ನಡೆಯುವುದು ಅಂದಿನ ದಿನಗಳ ಸಾಮಾನ್ಯ ಪದ್ಧತಿಯಾಗಿ ಹೋಗಿತ್ತು. ಈ ನಡೆಯುವ ಕಷ್ಟಕ್ಕಾಗಿಯೇ ಬಂದಾದರೂ ಕಚೇರಿ ಬಂದ್ ಆಗುವುದು ಬೇಡಪ್ಪ ಎನ್ನಿಸಿ ಬಿಡುತ್ತಿತ್ತು ಮುಂದೆ ನಮ್ಮದೇ ದ್ವಿಚಕ್ರವಾಹನಗಳಲ್ಲಿ ಹೋಗುವಾಗ ರಜೆ ಸಿಕ್ಕಿದ ಖುಷಿ ಇರುತ್ತಿತ್ತು. ಇನ್ನು ಕಚೇರಿಯ ಕೆಲಸದ ವಿಷಯಕ್ಕೆ ಬಂದರೆ ನನ್ನ ಜೊತೆ ಸಹಾಯಕರಾಗಿದ್ದ ರಾಮನ್ ಅವರು ಉನ್ನತ ದರ್ಜೆ ಸಹಾಯಕರಾಗಿ ಪದೋನ್ನತಿ ಹೊಂದಿ ವರ್ಗವಾಗಿ ಹೋದರು ಈ ಹಿಂದೆ ಹೇಳಿದಂತೆ ವಿದ್ಯಾರಣ್ಯ ಅವರು ಹೋದಾಗಿನಿಂದ ನಮ್ಮ ವಿಭಾಗದಲ್ಲಿ ಉನ್ನತ ಶ್ರೇಣಿ ಸಹಾಯಕರು ಇರಲಿಲ್ಲ ಈಗ ಸತ್ಯನಾರಾಯಣ ಎನ್ನುವವರು ಸೋಮವಾರಪೇಟೆಯಿಂದ ವರ್ಗವಾಗಿ ಬಂದರು ಅಲ್ಲದೆ ರಾಮನ್ ಅವರ ಜಾಗಕ್ಕೆ ಸುಧಾ ಎನ್ನುವವರು ಸಿಎ ಬ್ರಾಂಚ್ ನಿಂದ ವರ್ಗವಾಗಿ ಬಂದರು. ಈ ವೇಳೆಗಾಗಲೇ ಎಸ್ಎಂಎಸ್ ಗೋಪಾಲನ್ ಅವರು ನನಗೆ ಒಳ್ಳೆಯ ಮಾರ್ಗದರ್ಶನ ನೀಡಿ ಚೆನ್ನಾಗಿ ತರಬೇತಿ ಕೊಟ್ಟುಬಿಟ್ಟಿದ್ದರು. ಒಳ್ಳೆ ಶಾಲೆಯ ಪರೀಕ್ಷೆಗೆ ಓದುವಂತೆ ಇಲಾಖೆಯ ಸುತ್ತೋಲೆಗಳನ್ನು ಚೆನ್ನಾಗಿ ಮನನ ಮಾಡಿಕೊಂಡಿರುತ್ತಿದ್ದೆ. ಹಾಗೆಲ್ಲ ಹೊಸ ಹೊಸ ಪ್ಲಾನ್ ಗಳು ಬಂದಾಗ ವಲಯ ಕಛೇರಿಯಿಂದ ಸುತ್ತೋಲೆಗಳು ಬರುತ್ತಿದ್ದವು ಹಾಗೆ ವಿಭಾಗಕ್ಕೆ ಸಂಬಂಧಿಸಿದ ಏನಾದರೂ ತಿದ್ದುಪಡಿಗಳು ಬದಲಾವಣೆಗಳು ಸಹ ಸುತ್ತೋಲೆಗಳ ಮೂಲಕವೇ ಬರುತ್ತಿತ್ತು ಇಲ್ಲಿ ಅವುಗಳನ್ನು ನಾವು ಮತ್ತೆ ಟೈಪ್ ಮಾಡಿಸಿ ಸೈಕ್ಲೋ ಸ್ಟೈಲ್ ಮಾಡಿ ಪ್ರತಿಗಳನ್ನು ಮಾಡಿ ಶಾಖಾ ಕಚೇರಿಗಳಿಗೆ ಕಳಿಸಿಕೊಡುತ್ತಿದ್ದೆವು. ವಿಭಾಗಿಯ ಕಚೇರಿಯ ಕ್ರಮ ಸಂಖ್ಯೆಗಳು ಸಹ ಸುತ್ತೋಲೆಗಳಲ್ಲಿ ಇರುತ್ತಿದ್ದವು. ಇವೆಲ್ಲ ಸಂಖ್ಯೆಗಳನ್ನು ನನ್ನ ನೆನಪಿನಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಯಾರಾದರೂ ಫೋನ್ ಮಾಡಿ ಕೇಳಿದಾಗ ಅಲ್ಲಲ್ಲೇ ಮಾರ್ಗದರ್ಶನ ನೀಡುವಷ್ಟು ಹೊಸ ವ್ಯವಹಾರ ವಿಭಾಗದಲ್ಲಿ ಪಳಗಿ ಬಿಟ್ಟಿದ್ದೆ .ಇದಕ್ಕೆಲ್ಲ ನಮ್ಮ ಆಡಳಿತಾಧಿಕಾರಿಗಳವರೇ ಕಾರಣ. ತಮಗೆ ತಿಳಿದ ಎಲ್ಲಾ ವಿಷಯಗಳು ನಮಗೆ ತಿಳಿಸಿಕೊಟ್ಟು ಸಹಾಯ ಮಾಡುತ್ತಿದ್ದರು. ಸಹಾಯಕ ವಿಭಾಗಾಧಿಕಾರಿಗಳಾಗಿದ್ದ ಆಚಾರ್ಯ ಅವರು ಸಹ ನಿವೃತ್ತಿ ಹೊಂದಿ ವಿ ನರಸಿಂಹನ್ ಎನ್ನುವ ಅಧಿಕಾರಿಗಳು ಆ ಜಾಗಕ್ಕೆ ಬಂದಿದ್ದರು. ಅವರು ಸಹ ಆಗ ಫೆಲೋ ಶಿಪ್ ಮಾಡಿದ ಕೆಲವೇ ಜನಗಳಲ್ಲಿ ಒಬ್ಬರು. ತುಂಬಾ ವಿಷಯ ತಿಳಿದುಕೊಂಡಿದ್ದರು. ಆದರೆ ಮಾತೃ ಭಾಷೆ ತಮಿಳು ಆದ್ದರಿಂದ ಕನ್ನಡದಲ್ಲಿ ವ್ಯವಹರಿಸಲು ಸ್ವಲ್ಪ ತೊಡಕು ಇತ್ತು .ಹಾಗಾಗಿ ಯಾರದೇ ಫೋನ್ಗಳು ಬಂದರೆ ನನ್ನನ್ನು ಅಥವಾ ಆಡಳಿತ ಅಧಿಕಾರಿಗಳನ್ನು ಕರೆಯುತ್ತಾ ಇದ್ದರು. ನಾನು ವಿಭಾಗೀಯ ಕಚೇರಿಗೆ ಬಂದ 3-4 ತಿಂಗಳಲ್ಲಿ ಅಲ್ಲಿನ ಶೀಘ್ರ ಲಿಪಿಕಾರ್ತಿ ಸುವರ್ಣ ಅವರು ಹೆರಿಗೆ ರಜೆಗೆ ಹೋಗಿದ್ದರು ಅಲ್ಪಕಾಲದ ರಜೆ ಆದ್ದರಿಂದ ಅವರ ಜಾಗಕ್ಕೆ ಬೇರೆಯವರನ್ನು ಕೊಟ್ಟಿರಲಿಲ್ಲ ನನಗೆ ಬೆರಳಚ್ಚು ಬರುತ್ತಿದ್ದುದರಿಂದ ನಾನೇ ಆ ಜಾಗದ ಕೆಲಸವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದೆ. ಉಕ್ತಲೇಖನ ಕೊಡುವ ಪ್ರಮೇಯಗಳು ಅಷ್ಟೇನೂ ಬರುತ್ತಿರಲಿಲ್ಲ. ವಿಷಯ ಹೇಳಿದರೆ ಸಾಕು ನಾನೇ ಪತ್ರಗಳನ್ನು ಡ್ರಾಫ್ಟ್ ಮಾಡಿ ಟೈಪ್ ಮಾಡಿ ಕೊಟ್ಟು ಬಿಡುತ್ತಿದ್ದೆ.  ಆಗ ಸೈಕ್ಲೊ ಸ್ಟೈಲ್ ಅಂದರೆ ಕಲ್ಲಚ್ಚು ಪ್ರತಿಗಳ ಕಾಲ ಈಗಿನ ಹಾಗೆ ಜೆರಾಕ್ಸ್ ಹೆಚ್ಚು ಉಪಯೋಗದಲ್ಲಿ ಇರಲಿಲ್ಲ ಕಾರ್ಬನ್ ಶೀಟ್ ಇರುವ ಸೈಕ್ಲೋ ಸ್ಟೈಲ್ ಶೀಟ್ ಗಳಲ್ಲಿ ಟೈಪ್ ಮಾಡಿ ಕೊಟ್ಟರೆ ಅದನ್ನು ಸಹಿ ಮಾಡಿ ಕೊಟ್ಟ ನಂತರ ಹೆಚ್ಚಿನ ಪ್ರತಿಗಳನ್ನು ಕಲ್ಲಚ್ಚು ಯಂತ್ರದಲ್ಲಿ ತೆಗೆದು ಕೊಡುತ್ತಿದ್ದರು. ಈಗ ಪ್ರತಿಯೊಂದಕ್ಕೂ ಜೆರಾಕ್ಸ್ ಬಂದಿದೆ ಕಾಗದದ ಪ್ರತಿಗಳ ಬಳಕೆಯೂ ಕಡಿಮೆಯಾಗಿದೆ ಎಲ್ಲವೂ ಕಂಪ್ಯೂಟರ್ಗಳಲ್ಲಿಯೇ. ನಾವು ನೋಡ ನೋಡುತ್ತಿದ್ದಂತೆಯೇ ಎಷ್ಟೆಲ್ಲಾ ಬದಲಾವಣೆಗಳಿಗೆ ಸಾಕ್ಷಿಯಾದೆವಲ್ಲ ಎನಿಸುತ್ತದೆ. ವಿಭಾಗಿಯ ಕಚೇರಿಗಳಿಂದ ಶಾಖಾ ಕಚೇರಿಗೆ ಪರಿಶೀಲನೆಗೆಂದು ಹೋಗುವುದು ಒಂದು ಕ್ರಮ .ಆಗ ಅದಕ್ಕೆ ಕ್ವಾಲಿಟಿ ಕಂಟ್ರೋಲ್ ಎಂಬ ಪಾರಭಾಷಿಕ ಪದ ಇತ್ತು. ಈಗ ಅದನ್ನು ಕ್ವಾಲಿಟಿ ಮ್ಯಾನೇಜ್ಮೆಂಟ್ ಅನಾಲಿಸಿಸ್ ಎಂಬ ಹೆಸರಿನಿಂದ ಕರೆಯುತ್ತಾರೆ. ಒಬ್ಬರು ಅಧಿಕಾರಿ ಹಾಗೂ ಮತ್ತೊಬ್ಬರು ಉನ್ನತ ದರ್ಜೆ ಸಹಾಯಕರು ಅಥವಾ ಸಹಾಯಕರು ಅವರೊಂದಿಗೆ ಹೋಗುವುದು ವಾಡಿಕೆ. ಈವರೆಗೆ ರಾಮನ್ ಅವರು ಇದುದರಿಂದ ಅವರೇ ಎಲ್ಲಾ ಕಡೆಗೂ ಹೋಗುತ್ತಿದ್ದರು ನನಗೂ ವಿಭಾಗದ ಎಲ್ಲಾ ವಿಷಯಗಳು ಅಷ್ಟು ಚೆನ್ನಾಗಿ ತಿಳಿದಿರಲಿಲ್ಲ ಹಾಗಾಗಿ ನಾನು ಹೋಗಲು ಆಗಿರಲಿಲ್ಲಈಗ ರಾಮನ್ ಅವರು ಹೋದ ಮೇಲೆ ನಾನೇ ಸೀನಿಯರ್ ಆದ್ದರಿಂದ ಅಲ್ಲದೆ ಗೋಪಾಲನ್ ಸರ್ ಅವರಿಗೆ ನನ್ನ ಮೇಲೆ ತುಂಬಾ ನಂಬಿಕೆ ಇರುವುದರಿಂದ ನನ್ನನ್ನು ಅವರೊಂದಿಗೆ ಈ ರೀತಿಯ ಕ್ವಾಲಿಟಿ ಕಂಟ್ರೋಲ್ ಟೂರ್ ಗಳಿಗೆ ಬರಲು ಹೇಳುತ್ತಿದ್ದರು ಆದರೆ ತುಂಬಾ ದೂರದ ಕಡೆಗಳಿಗೆ ನನಗೆ ಹೋಗಲು ಆಗುತ್ತಿರಲಿಲ್ಲ ಹಾಗಾಗಿ ಶ್ರೀರಂಗಪಟ್ಟಣ ನಂಜನಗೂಡು, ಮೈಸೂರಿನ ವಿವಿಧ ಶಾಖೆಗಳು ಕೆ ಆರ್ ನಗರ ಹುಣಸೂರು ಹಾಗೂ ಕೊಳ್ಳೇಗಾಲ ಒಂದು ಬಾರಿ ಚಾಮರಾಜನಗರಕ್ಕೂ ಸಹ ಹೋಗಿದ್ದ ನೆನಪು ಈ ರೀತಿ ಅವರೊಂದಿಗೆ ಹೋಗುತ್ತಿದ್ದೆ. ಅಲ್ಲಿ  ಆಯಾಯಾ ಅವಧಿಯಲ್ಲಿ ವಿತರಿಸಿದ ಪಾಲಿಸಿಗಳ ಕಡತಗಳನ್ನು ತರಿಸಿ ಸರಿಯಾದ ರೀತಿಯಲ್ಲಿ ಮಾಡಿದ್ದಾರೆಯೇ ಎಂಬುದನ್ನು ಪರೀಕ್ಷಿಸಬೇಕು. ಏನಾದರೂ ತಪ್ಪುಗಳು ಇದ್ದಲ್ಲಿ ಅವುಗಳನ್ನು ಬರೆದುಕೊಂಡು ಹೋಗುವುದು ಮತ್ತು ಅಲ್ಲಿಯೇ ನಡೆಯುತ್ತಿದ್ದ ಚರ್ಚೆಗಳಲ್ಲಿ ಅವುಗಳನ್ನು ಹೇಳಿ ತಿದ್ದಿಕೊಳ್ಳಲು ಹೇಳುತ್ತಿದ್ದೆವು. ವಾಪಸ್ಸು ಬಂದ ನಂತರ ಅದರ ಬಗ್ಗೆ ಒಂದು ವರದಿಯನ್ನು ತಯಾರಿಸಿ ವಿಭಾಗಿಯ ಅಧಿಕಾರಿಗಳ ಗಮನಕ್ಕೆ ತಂದು ಶಾಖೆಗೆ ಕಳುಹಿಸಿ ಕೊಡುತ್ತಿದ್ದೆವು.ಈ ರೀತಿ ತಿಂಗಳಲ್ಲಿ ನಾಲ್ಕು ಅಥವಾ ಐದು ದಿನಗಳು ಈ ರೀತಿಯ ಕ್ವಾಲಿಟಿ ಕಂಟ್ರೋಲ್ ಟೂರ್ ಗಳಿಗೆ ಹೋಗುತ್ತಿದ್ದು ಮಾಮೂಲಿ ಗಿಂತ ಸ್ವಲ್ಪ ಬೇಗನೆ ಹೊರಡಬೇಕಿತ್ತು ಹಾಗೂ ಬರುವುದು ಸಹ ತಡವಾಗುತ್ತಿತ್ತು ಆದರೆ ಈ ರೀತಿಯ ಟೂರ್ಗಳಿಗೆ ಪ್ರವಾಸ ಭತ್ಯೆ ಕೊಡುತ್ತಿದ್ದರಿಂದ ಅದು ಒಂದು ರೀತಿಯ ಆಕರ್ಷಣೆ .ಬಸ್ ಚಾರ್ಜ್ ಮಾತ್ರ ಖರ್ಚು ಮಾಡಿದರೆ ಬಸ್ ಚಾರ್ಜ್ ನೊಂದಿಗೆ ಒಂದು ದಿನದ ಪ್ರಯಾಣ ಭತ್ಯೆ ಸಿಗುತ್ತಿತ್ತು. ಆಗ ಒಂದು ದಿನಕ್ಕೆ ನೂರು ರೂಪಾಯಿಗಳ ವರೆಗೂ ಪ್ರವಾಸ ಭತ್ಯೆ ಸಿಗುತ್ತಿತ್ತು. ಈ ರೀತಿ ಮನಸ್ಸಿಗೆ ಒಂದು ರೀತಿ ಖುಷಿ ಕೊಡುವ ಕೆಲಸ. ದಿನಗಳು ಉರುಳುತ್ತಿದ್ದದು ಗೊತ್ತಾಗುತ್ತಲೇ ಇರಲಿಲ್ಲ. ಮುಂದಿನ ವಾರ,ಇಲಾಖಾ ಪರೀಕ್ಷೆಗಳು ಸುಜಾತಾ ರವೀಶ್

Read Post »

You cannot copy content of this page

Scroll to Top