ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಗೆಳೆಯನ ಮಕ್ಕಳು

ಗೆಳೆಯನ ಮಕ್ಕಳು ಅಂಕಣ ಬರಹ ಎಷ್ಟೊ ವರ್ಷಗಳ ಬಳಿಕ ಗೆಳೆಯನ ಮನೆಗೆ ಹೋಗಬೇಕಾಯಿತು. ಅವನೂ ಅವನ ಹೆಂಡತಿಯೂ ಪ್ರೀತಿಯಿಂದ ಬರಮಾಡಿಕೊಂಡರು. ನಾನು ಅವರ ಮನೆ ಹೊಕ್ಕಾಗ ಎಂಟು ವರ್ಷದ ಮಗಳು ಬೊಂಬೆಗೆ ಸೀರೆಯುಡಿಸುತ್ತಿದ್ದಳು. ಹನ್ನೆರಡು ವರುಷದ ಮಗ ಸೋಫಾದಲ್ಲಿ ಮೈಚೆಲ್ಲಿ ಕಾಲನ್ನು ಆಗಸಕ್ಕೆ ಚಾಚಿ ಲ್ಯಾಪ್‍ಟಾಪಿನಲ್ಲಿ ವಿಡಿಯೊ ಗೇಂ ಆಡುತ್ತಿದ್ದ. ಮನೆಗೆ ಬಂದು ಹೋದವರ ಬಗ್ಗೆ ಖಬರಿಲ್ಲದಷ್ಟು ತನ್ಮಯನಾಗಿದ್ದ. ನನ್ನ ಗೆಳೆಯ `ಅಪ್ಪಿ ನೋಡೊ. ನನ್ನ ಕ್ಲಾಸ್‍ಮೇಟ್ ಬಂದಾನ. ಅಂಕಲ್‍ಗೆ ನಮಸ್ಕಾರ ಮಾಡು’ ಎಂದರೂ ಕಣ್ಣೆತ್ತಿ ನೋಡಲಿಲ್ಲ. ನಾನೊಯ್ದ ತಿಂಡಿಯನ್ನು ಹದ್ದುಗಣ್ಣಿನಿಂದ ಗಮನಿಸಿದ್ದನೆಂದು ಕಾಣುತ್ತದೆ, ಲಕ್ಕನೆ ಎತ್ತಿಕೊಂಡು ಪ್ಯಾಕು ಹರಿದು ಮುಕ್ಕತೊಡಗಿದ. ಲ್ಯಾಪ್‍ಟಾಪ್ ಆಟ ಮುಗಿದ ಬಳಿಕ ಕಾರ್ಟೂನು ಸಿನಿಮಾ ಟಿವಿಯಲ್ಲಿ ಹಾಕಿಕೊಂಡು ಕುಳಿತ. ನನಗೆ ಅವನ ಜತೆಗೆ ಮಾತಾಡಲೇಬೇಕೆಂದು ಹಠ ಹುಟ್ಟಿತು. ಆತ ನನ್ನ ಪ್ರಶ್ನೆಗಳಿಗೆ ನನ್ನತ್ತ ನೋಡದೆ ಜವಾಬುಕೊಡುತ್ತಿದ್ದ. ಗಮನಿಸಿದೆ: ಅವನ ಕನ್ನಡದಲ್ಲಿ ಬಣ್ಣಕ್ಕೆ ಮತ್ತು ಅಂಕಿಗಳಿಗೆ ಮನೆಮಾತಿನಲ್ಲಿ ಗುರುತಿಸುವ ಶಬ್ದಗಳಿರಲಿಲ್ಲ. ಮಕ್ಕಳನ್ನು ನಮ್ಮಿಚ್ಛೆಯಂತೆ ರೂಪಿಸಬೇಕಾಗಿಲ್ಲ. ಅವು ತಮ್ಮಿಚ್ಛೆಯಂತೆಯೇ ರೂಪುಗೊಳ್ಳಲಿ. ಸಾಧ್ಯವಾದರೆ ನಾವು ಅವುಗಳಿಂದ ಕಲಿಯೋಣ ಎಂದ ಚಿಂತಕ ಖಲೀಲ್ ಗಿಬ್ರಾನನ ಹಿತನುಡಿ ಚರ್ಚಾಸ್ಪದ ಅನಿಸಿತು. ನನ್ನ ಮುಖವನ್ನೇ ಗಮನಿಸುತ್ತಿದ್ದ ಗೆಳೆಯ ತುಸುನಗುತ್ತ ಹೇಳಿದ: `ದೋಸ್ತಾ, ನೋಡಿದೆಯಾ ಕಾಲ ಹೆಂಗ ಚೇಂಜಾಗದ? ನಾವು ಸಣ್ಣೋರಿದ್ದಾಗ ಗೋಲಿ ಚೆಂಡು ಚಿನ್ನಿದಾಂಡು ಆಡ್ತಿದ್ದೆವು. ಈಗಿನವಕ್ಕೆ ಆಡೋಕೆ ಲ್ಯಾಪ್‍ಟಾಪೇ ಬೇಕು’.ಅವನ ದನಿಯಲ್ಲಿ ಹೊಸ ತಲೆಮಾರಿನ ಮಕ್ಕಳ ಅಭಿರುಚಿ ಬದಲಾದ ಬಗ್ಗೆ ಸಣ್ಣಗಿನ ವಿಷಾದವಿತ್ತು. ಅದರೊಳಗೆ `ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ಬೆಳೆಸಿದ್ದೇನೆ’ ಎಂಬ ಹಮ್ಮೂ ಕೂಡಿದಂತಿತ್ತು. ಭಾರತದ ಬಹುತೇಕ ಪ್ರಜೆಗಳ ಕೈಗೀಗ ಮೊಬೈಲು ಬಂದಿವೆ. ಹಲವರಿಗೆ ಕಂಪ್ಯೂಟರ್ ಲ್ಯಾಪ್‍ಟಾಪು ಟ್ಯಾಬುಗಳೂ ಸಿಕ್ಕಿವೆ. ಈ ತಂತ್ರಜ್ಞಾನ ಚಾಲಿತ ಸರಕುಗಳ ಆಗಮನದಿಂದ ಬಾಳಿನ ಗತಿಯಲ್ಲಿ ವಿಚಿತ್ರ ವೇಗ ಬಂದಿದೆ. ಮನೆಗೆಲಸ ಮಾಡುವ ಮಹಿಳೆಯಿಂದ ಹಿಡಿದು ದಿನಗೂಲಿ ಹುಡುಕುವವರ ತನಕ, ವ್ಯಾಪಾರಿಯಿಂದ ರೈತರ ತನಕ ಅನೇಕರ ಕಸುಬಿನಲ್ಲಿ ಸಂಚಲನ ಮೂಡಿದೆ; ಬರೆಹಗಾರರ, ಅಧ್ಯಾಪಕರ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯವವರ ಹಾಗೂ ಪತ್ರಕರ್ತರ ಬದುಕಿನಲ್ಲಿ ಹೊಸ ನೆಗೆತ ಸಿಕ್ಕಿದೆ. ಇದೊಂದು ಕ್ರಾಂತಿಕಾರಿ ಪಲ್ಲಟವೇ ಸೈ. ಆದರೆ ಈ ಸಂಚಲನೆ-ಪಲ್ಲಟಗಳ ಜತೆಗೆ ಈ ಸರಕು-ಸಲಕರಣೆಗಳಿಂದ, ಮಕ್ಕಳ ಮತ್ತು ತರುಣರ ವರ್ತನೆಯಲ್ಲಿ ಒಂದು ಬದಲಾವಣೆಯಾಗಿದೆ. ಅವರು ಮನುಷ್ಯ ಸಂಪರ್ಕವೇ ಇಲ್ಲದೆ ಅತಿದೀರ್ಘವಾದ ಕಾಲವನ್ನೂ ಏಕಾಂಗಿಯಾಗಿ ಕಳೆಯಬಲ್ಲವರಾಗಿದ್ದಾರೆ. ಪಕ್ಕದಲ್ಲಿ ಎದುರುಗಡೆ ಯಾರಿದ್ದಾರೆ ಎಂಬ ಖಬರಿಲ್ಲದೆ, ಮೈಕ್ರೊಫೋನ್ ಬೆಂಡೋಲೆಯನ್ನು ಕಿವಿಗೆ ತುರುಕಿಕೊಂಡು ಹಾಡುಕೇಳುತ್ತ ಧ್ಯಾನಸ್ಥರಾಗಿ ತಮ್ಮ ಜಗತ್ತನ್ನು ಸೃಷ್ಟಿಸಿಕೊಂಡು ಮುಳುಗಬಲ್ಲವರಾಗಿದ್ದಾರೆ; ಮೊಬೈಲ್ ಪರದೆಯ ಮೇಲೆ ಬೆರಳಾಡಲು ಬಿಟ್ಟು ಕಣ್ಣನ್ನು ಅಂಟಿಸಿ ಕಾಲಕಳೆವವರಾಗಿದ್ದಾರೆ; ಹೊರಗಿಂದ ಕರೆ ಬರಲಿ ಬಾರದಿರಲಿ, ಅಲ್ಲಾವುದ್ದೀನನು ಮಾಯಾದೀಪವನ್ನು ಕೈಸೆರೆ ಮಾಡಿಕೊಂಡಿರುವಂತೆ ಅವರ ಅಂಗೈಗಳು ಮೊಬೈಲುಧಾರಿಯಾಗಿವೆ. ಕೆಲವರ ಮನೆಯಲ್ಲಿ ಚಿಕ್ಕಮಕ್ಕಳು ಅತಿಥಿಗಳ ಮೇಲುಬಿದ್ದು ಸ್ನೇಹ ಮಾಡಿಕೊಂಡು, ಉಪಾಯವಾಗಿ ಮೊಬೈಲನ್ನೆಗರಿಸಿ ಗೇಮನ್ನಾಡಲು ಆರಂಭಿಸುವುದುಂಟು. ಆನೆ ಕೋತಿಯ ಬೊಂಬೆಗಳ ಜಾಗದಲ್ಲಿ ಗನ್ನುಹಿಡಿದ ಸೈನಿಕರು ಟ್ಯಾಂಕುಗಳು ಬಂದಿದ್ದವು-ಅಮೆರಿಕದ ಕೆಟ್ಟ ಯುದ್ಧಸಂಸ್ಕತಿಯ ಅನುಕರಣೆಯಾಗಿ. ಈಗ ಮೊಬೈಲಾಟಿಕೆ ಬಂದಿವೆ. ಎಳೆಕೂಸಿಗೂ ನಿಜವಾದ ಮತ್ತು ಆಟಿಕೆಯ ಮೊಬಲುಗಳ ವ್ಯತ್ಯಾಸ ಗೊತ್ತಿದೆ. ಇನ್ನೊಬ್ಬ ಮಿತ್ರ ಹೇಳುತ್ತಿದ್ದ: `ನನ್ನ ಮಗ ಎಷ್ಟೇ ಅಳುವಿನಲ್ಲಿರಲಿ, ಮೊಬೈಲು ಕೊಟ್ಟರೆ ಗಪ್‍ಆಗ್ತಾನ.’ ರೈಲಿನಲ್ಲೊ ಬಸ್ಸಿನಲ್ಲೊ ಅಕ್ಕಪಕ್ಕ ಕೂತವರು, ಹತ್ತು ನಿಮಿಷದಲ್ಲಿ ಮುಗುಳುನಗು ವಿನಿಮಯ ಮಾಡಿಕೊಂಡು ಎಲ್ಲಿಗೆ ಹೊರಟಿದ್ದೀರಿ ಯಾಕೆ ಎಂದು ಸುರುಮಾಡಿ, ತಮ್ಮ ಸ್ಟೇಶನ್ ಬರುವ ಹೊತ್ತಿಗೆ ಎಷ್ಟೆಲ್ಲ ಹಂಚಿಕೊಳ್ಳುವ ಪದ್ಧತಿ ಹಿಂದಿನಿಂದಿತ್ತು. ಇದು ಅನಗತ್ಯವಾಗಿ ಗುದ್ದಲಿ ಹಿಡಿದು ವೈಯಕ್ತಿಕ ವಿಷಯದ ಹೊಲವನ್ನು ಅಗೆಯುವ ಕುತೂಹಲಿಗಳ ಕಾಟಕ್ಕೂ ಕಾರಣವಾಗಿತ್ತು. ಆದರೆ ಮೊಬೈಲುಗಳಲ್ಲಿ ಮುಳುಗಿದ ಸಹಪಯಣಿಗರಿಂದ ಈಗ ಮಾತುಕತೆಯೇ ನಿಂತಿದೆ. ದೂರದಲ್ಲಿದ್ದ ಜನರನ್ನು ಪರಸ್ಪರ ಸಂಪರ್ಕಿಸಲು ಹುಟ್ಟಿದ ತಂತ್ರಜ್ಞಾನ, ಪರಸ್ಪರ ಜನರ ಸಂಪರ್ಕವನ್ನೇ ಕಡಿದುಹಾಕಿದೆ.ಕೇಳುವ ಓದುವ ಕ್ರಿಯೆಗಿಂತ ನೋಡುವ ಮಾಧ್ಯಮದ ಶಕ್ತಿ ಪ್ರಚಂಡ. ಅದಕ್ಕೆ ತಂತ್ರಜ್ಞಾನ ಸೇರಿಕೊಂಡು ಮತ್ತಷ್ಟು ವಶೀಕರಣ ಮಾಡಿದೆ. ಹೊಸ ತಲೆಮಾರು ತಂತ್ರಜ್ಞಾನವನ್ನು ಬೇಗ ತನ್ನದಾಗಿಸಿಕೊಳ್ಳುತ್ತದೆ. ಪ್ರಶ್ನೆಯೆಂದರೆ, ಕೇಡು ಸಂಭವಿಸಿದರೆ ಕಾರಣ ತಂತ್ರಜ್ಞಾನವೊ, ತಂತ್ರಜ್ಞಾನ ಬಳಸುತ್ತಿರುವ ಮನೋಧರ್ಮವೊ? ತಂತ್ರಜ್ಞಾನ ಸಾಮಾನ್ಯವಾಗಿ ಮೌಲ್ಯನಿರ್ಲಿಪ್ತ. ಯಾರು ಯಾತಕ್ಕಾಗಿ ಬಳಸುತ್ತಿದ್ದಾರೆ ಎನ್ನುವುದರ ಮೇಲೆ ದೋಷಪೂರ್ಣವೊ ಉಪಯುಕ್ತವೊ ಅನಾಹುತಕಾರಿಯೊ ಆಗುತ್ತದೆ. ಅದೊಂದು ಇಬ್ಬಾಯ ಕತ್ತಿ. ಬುಲ್ಡೋಜರನ್ನು ದಿಬ್ಬಕಡಿದು ರಸ್ತೆ ಮಾಡಲು, ಕಬ್ಬಿಣದ ಅದಿರನ್ನು ಅಕ್ರಮವಾಗಿ ಅಗಿಯಲು, ಹೆಣಗಳ ಸಾಮೂಹಿಕ ಸಂಸ್ಕಾರ ಮಾಡಲು ಅಥವಾ ತಮ್ಮ ಭೂಮಿ ಬಿಟ್ಟುಕೊಡದ ರೈತರ ಮನೆಕೆಡವಿ ಒಕ್ಕಲೆಬ್ಬಿಸಲು ಬಳಸಬಹುದು. ಭಾಷೆ ವಿಷಯದಲ್ಲೂ ಅಷ್ಟೆ. ತನಗೆ ತಾನೇ ಇಂಗ್ಲೀಶು ಕೆಡುಕೂ ಅಲ್ಲ ಒಳಿತೂ ಅಲ್ಲ. ಸಮಾಜ ಬಳಸುವ ವಿಧಾನದಿಂದ ಅದರ ಪರಿಣಾಮ ನಿಶ್ಚಿತವಾಗುತ್ತದೆ. ಹೀಗಾಗಿ ಸಮಸ್ಯೆ ಇರುವುದು ತಂತ್ರಜ್ಞಾನದಲ್ಲಲ್ಲ. ಅದನ್ನೊಂದು ಬದುಕಿನ ಭಾಗ್ಯವೆಂದು ಭಾವಿಸಿ ಸಂಭ್ರಮಿಸುತ್ತಿರುವ, ಅದರಿಂದ ಫರಿಣಾಮ ಏನಾಗುತ್ತಿದೆ ಎಂದು ಪರೀಕ್ಷಿಸಿಕೊಳ್ಳದ ಸಾಮಾಜಿಕ ಮನೋಭಾವದಲ್ಲಿ. ನಮ್ಮ ಮಕ್ಕಳು ಕಂಪ್ಯೂಟರ್‍ನಲ್ಲಿ ಆಟವಾಡುತ್ತವೆ, ಇಂಗ್ಲೀಶ್ ಮೀಡಿಯಂನಲ್ಲಿ ಓದುತ್ತಿವೆ, ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಹಿಡಿದಿವೆ, ವಿದೇಶದಲ್ಲಿವೆ, ನಾವು ನಿವೃತ್ತಿಯಾಗುವಾಗ ಪಡೆದ ಸಂಬಳವನ್ನು ಈಗಲೇ ಗಳಿಸುತ್ತಿವೆ-ಮುಂತಾದ ಗರಿಗಳನ್ನು ತಲೆಗೆ ಸಿಕ್ಕಿಸಿಕೊಂಡು ತಿರುಗಾಡುವ ಮಧ್ಯಮವರ್ಗದ ತಂದೆತಾಯಿಗಳಿದ್ದಾರೆ. ಈ ಸಾಧನೆಗಳ ಫಲವಾಗಿ ಏನೆಲ್ಲ ಕಳೆದುಹೋಗಿದೆ ಎಂಬುದರ ಲೆಕ್ಕವನ್ನೇ ಅವರು ಮಾಡಿದಂತಿಲ್ಲ ಅಥವಾ ಈಗ ಮಾಡಲಾರಂಭಿಸಿದ್ದಾರೆ. ಅವರು ಕಂಡ ಕನಸು ನಿಜವಾಗಿರಬಹುದು. ಅದಕ್ಕಾಗಿ ದೊಡ್ಡಮನೆಗಳಲ್ಲಿ ಒಂಟಿ ಬದುಕನ್ನು ದೂಡುವ ಬೆಲೆಯನ್ನೂ ಅವರು ತೆರಬೇಕಾಗಿದೆ. ಈ ಅನಾಥಪ್ರಜ್ಞೆಗೆ ಅವರು ಮಾತ್ರವಲ್ಲ, ಅವರನ್ನು ಸೆಳೆದಿರುವ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯೂ ಕಾರಣ. ಯಾರೋ ಹೇಳಿದ ಮಾತು ನೆನಪಾಗುತ್ತಿದೆ: `ಎಸೆಲ್ಸಿ ಫೇಲಾದ ದಡ್ಡಮಗ ಇದ್ದಿದ್ದರೆ ನಾವು ಬಹುಶಃ ಕೊನೆಗಾಲದಲ್ಲಿ ಒಂಟಿಯಾಗಿರುತ್ತಿರಲಿಲ್ಲ’. ದಡ್ಡಮಕ್ಕಳ ತಂದೆತಾಯಂದಿರೂ ಬೇರೆ ಕಾರಣದಿಂದ ಒಂಟಿಯಾಗಿರುವ ನಿದರ್ಶನಗಳಿವೆ. ಆದರೆ ಬೇಕೆಂದಾಗ ನೋಡಲು ಆಗದಷ್ಟು ಮಕ್ಕಳನ್ನು ಮತ್ತು ತಾಯ್ತಂದೆಯರನ್ನು ದೂರ ಮಾಡಿರುವ ಒಂಟಿತನದ ಸ್ವರೂಪವೇ ಬೇರೆ. ದೇಶಗಳ ದೂರವೀಗ ದೊಡ್ಡ ಸಮಸ್ಯೆಯಲ್ಲ. ಆದರೆ ಭೌತಿಕವಾದ ಅದು ಮಾನಸಿಕ ದೂರವೂ ಸಾಂಸ್ಕøತಿಕ ವಿಚ್ಛೇದನವೂ ಆಗುತ್ತಿರುವುದು ಸಮಸ್ಯೆಯಾಗಿದೆ.ಹೊಸತಲೆಮಾರು ಅಪ್ಪಅಜ್ಜಂದಿರ ಹಾಗೆ ಬದುಕಬೇಕು ಎಂದು ಯಾರೂ ನಿರೀಕ್ಷಿಸಬಾರದು. ಹಾಗೆ ಬದುಕುವುದು ಯಾವ ತಲೆಮಾರಿಗೂ ಸಾಧ್ಯವಿಲ್ಲ. ಪ್ರತಿ ತಲೆಮಾರು ತನ್ನದೇ ಲೋಕದೃಷ್ಟಿಯನ್ನು ಜೀವನ ನಡೆಸುವ ಕ್ರಮವನ್ನೂ ವೈಯಕ್ತಿಕ ಅಭಿರುಚಿಯಿಂದಲೊ ಪರಿಸರದ ಒತ್ತಡದಿಂದಲೊ ಪಡೆದುಕೊಳ್ಳುತ್ತದೆ. ಅದು ಅದರ ಹಕ್ಕು ಕೂಡ. ಹಳೆಯ ಮತ್ತು ಹೊಸ ತಲೆಮಾರುಗಳ ನಡುವೆ ಮೌಲ್ಯಗಳ ತಿಕ್ಕಾಟವನ್ನೇ ಕನ್ನಡದ ಕತೆ ಕಾದಂಬರಿಗಳು ಚಿತ್ರಿಸುತ್ತ ಬಂದಿವೆ- `ಇಂದಿರಾಬಾಯಿ’ಯಿಂದ ಹಿಡಿದು `ತೇರು’ `ಗಾಂಧಿಬಂದ’ `ಹಳ್ಳಬಂತು ಹಳ್ಳ’ತನಕ. ಸಮಸ್ಯೆಯೆಂದರೆ, ಹೊಸ ತಲೆಮಾರು ತನ್ನ ಬದುಕನ್ನು ಸ್ವಂತ ವಿವೇಚನೆ ಮತ್ತು ನಿರ್ಧಾರದಿಂದ ರೂಪಿಸಿಕೊಳ್ಳುತ್ತಿದೆಯೇ? ಬೇರೆ ಯಾವ್ಯಾವೊ ಬಲಾಢ್ಯ ಶಕ್ತಿಗಳು ಅದನ್ನು ರೂಪಿಸುತ್ತಿಲ್ಲವೇ? ಮಾರುಕಟ್ಟೆ ನಮ್ಮ ಶಿಕ್ಷಣವನ್ನು, ಅದರಿಬೇಕಾದ ಮಾಧ್ಯಮವನ್ನು, ನಾವಾಡುವ ಭಾಷೆಯನ್ನು, ಮಾಡುವ ಉದ್ಯೋಗವನ್ನು ಅಷ್ಟೇಕೆ ನಮ್ಮ ಆಲೋಚನೆ ವರ್ತನೆಗಳನ್ನು ಸಹ ಪ್ರಭಾವಿಸುತ್ತಿದೆ. ಇಲ್ಲಿ ಸ್ಪರ್ಧೆ, ಗೆಲುವು, ಯಶಸ್ಸು, ವ್ಯಕ್ತಿವಾದಗಳು ಹೊಸ ಮೌಲ್ಯಗಳಾಗುತ್ತಿವೆ; ಬೇರಿಲ್ಲದ ಹೊಸತಲೆಮಾರು ಮತ್ತು ಅನಾಥಪ್ರಜ್ಞೆಯ ಹಳೆಯ ತಲೆಮಾರು ನಿರ್ಮಾಣವಾಗುತ್ತಿವೆಯೇ? ವಿಚಾರ ಮಾಡಬೇಕು. ವಿಜ್ಞಾನ ತಂತ್ರಜ್ಞಾನ ಪ್ರಧಾನವಾದ ಶಿಕ್ಷಣ ಪಡೆದು ದೇಶಾಂತರ ಚಲನೆ ಪಡೆದಿರುವ ಮಕ್ಕಳ ಸೀಮೋಲ್ಲಂಘನೆಯ ಬಗ್ಗೆ, ಸರೀಕರ ಎದುರು ಬಡಾಯಿ ಕೊಚ್ಚಿಕೊಳ್ಳುವ ತಂದೆತಾಯಿಗಳು, ಏಕಾಂತದಲ್ಲಿ ಚಡಪಡಿಸುತ್ತಿರುತ್ತಾರೆ. ಮಕ್ಕಳಿಗೆ ಲ್ಯಾಪ್‍ಟಾಪು ಕೊಡಿಸುವಾಗ, ಶಾಲೆಗೆ ಹೋಗಲು ಅಂಗಿಯಿಲ್ಲದ ಚಪ್ಪಲಿಯಿಲ್ಲದ ಮಕ್ಕಳು ಬೀದಿಯ ತುದಿಗಿವೆ ಎಂಬುದನ್ನು ಅವರು ಯೋಚಿಸಲಿಲ್ಲ; ನೀಲಿ ಯೂನಿಫಾರ್ಮ್ ಹಾಕಿಕೊಂಡು ಬರಿಗಾಲಲ್ಲಿ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳು ಹಾಗಿರಲು ವ್ಯವಸ್ಥೆ ಮಾತ್ರವಲ್ಲ, ಮಧ್ಯಮವರ್ಗದವರ ಸ್ವಕೇಂದ್ರಿತ ಆಲೋಚನ ಕ್ರಮವೂ ಕಾರಣವೆಂದು ಅವರಿಗೆ ಹೊಳೆಯಲಿಲ್ಲ; ಸುತ್ತಲಿನ ಪರಿಸರದ ಬಗ್ಗೆ ಮಕ್ಕಳನ್ನು ಸೆನ್ಸಿಟೈಜ್ ಮಾಡಲು ಯತ್ನಿಸಲಿಲ್ಲ. ಮಕ್ಕಳನ್ನು ಹೆರುವ ಜೈವಿಕ ಕ್ರಿಯೆ ಸುಲಭ. ಅವನ್ನು ಪರಿಸರದ ಬಗ್ಗೆ ಪ್ರೀತಿ ಕಾಳಜಿ ಕಲಿಸಿ ಸೂಕ್ಷ್ಮಸಂವೇದಿ ಮನುಷ್ಯರನ್ನಾಗಿ ಮಾಡುವುದು ಕಷ್ಟದ ಕೆಲಸ. ಸಮಸ್ಯೆ ಆಧುನಿಕತೆ ವಿಜ್ಞಾನ ತಂತ್ರಜ್ಞಾನಗಳಲ್ಲಿಲ್ಲ. ಅದರಲ್ಲಿ ಅಳವಟ್ಟಿರುವ ವ್ಯಕ್ತಿವಾದಿ ಲಾಭಕೋರ ಮೌಲ್ಯಪ್ರಜ್ಞೆಗಳಲ್ಲಿದೆ. ಬದಲಾಗಿರುವ ಯುಗಧರ್ಮವನ್ನು ಅರ್ಥಮಾಡಿಕೊಳ್ಳುವಲ್ಲಿ ಅಥವಾ ಅದಕ್ಕೆ ಹೊಂದಿಕೊಳ್ಳುವಲ್ಲಿ ಸೋತಿರುವುದರಿಂದ ನನ್ನೊಳಗೆ ಈ ಭಾವುಕ ಗೊಣಗಾಟಗಳು ಹುಟ್ಟುತ್ತಿವೆಯೆ? ನನ್ನ ಗೆಳೆಯ ಮಗನನ್ನು ಇನ್ಸೆನ್ಸಿಟಿವ್ ಮಾಡುತ್ತ ಕೊನೆಗಾಲದಲ್ಲಿ ಅನಾಥನಾಗುವ ಹಾದಿಯಲ್ಲಿ ಹೊರಟಿರಬಹುದೇ? ನಿರ್ಣಯಕ್ಕೆ ಬರದೆ ಮನಸ್ಸು ಹೊಯ್ದಾಡಿತು.ಬೀಳ್ಕೊಡುವಾಗ ಮಂಕು ಕವಿದಂತಿದ್ದ ಗೆಳೆಯನ ಮುಖವನ್ನು ಮರುಕದಿಂದ ನಿಟ್ಟಿಸಿದೆ. ಅದು ನನ್ನ ಮುಖದಂತೆಯೇ ಕಂಡಿತು. ಅವನ ಕೈಯನ್ನು ಹಿಸುಕಿ ನನ್ನ ಅನುಭೂತಿಯನ್ನು ಬಿಸುಪಿನಲ್ಲಿ ದಾಟಿಸಲು ಯತ್ನಿಸಿದೆ. ನಾನೊಬ್ಬನೇ ಅಲ್ಲ ಪಯಣಿಗ ಎಂಬಂತೆ ಅವನ ತುಟಿಯ ಬಿರುಕಿನಲ್ಲಿ ನಗೆ ತುಳುಕಿತು. ************************ ಲೇಖಕರ ಬಗ್ಗೆ: ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

ಗೆಳೆಯನ ಮಕ್ಕಳು Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಹಾವು ತುಳಿದೇನೇ?

ರಾಜ್ಯಮಟ್ಟದ ಪತ್ರಿಕೆಗಳ ಜಿಲ್ಲಾ ಆವೃತ್ತಿಯ ತುದಿಮೂಲೆಯಲ್ಲಿ ಮುದ್ರಿತವಾಗುವ ಒಂದು ಕಾಲಂ ನನ್ನನ್ನು ಸದಾ ಕಾಡುತ್ತದೆ. ಅದೆಂದರೆ `ಅಪರಾಧ ಸುದ್ದಿ’. ಕೆಲವು ಪತ್ರಿಕೆಗಳು ಈ ಶೀರ್ಷಿಕೆಯನ್ನು ಕೆಂಪಕ್ಷರಗಳಲ್ಲಿಟ್ಟು ಅದರ ಕೆಳಗೆ ವರದಿ ಪ್ರಕಟಿಸುತ್ತವೆ. ಈ ರಕ್ತವರ್ಣವು ಅಪಾಯ ಮತ್ತು ಸಾವನ್ನು ಸಂಕೇತಿಸಲಿ ಎಂಬುದು ಅವುಗಳ ಇರಾದೆಯಿರಬೇಕು. ಅಲ್ಲಿ ಎರಡು ಮಾದರಿಯ ಸುದ್ದಿಗಳಿರುತ್ತವೆ. ಮೊದಲನೆಯವು-ಬೈಕುಗಳ್ಳರ ಬಂಧನ, ಸರಗಳ್ಳತನ, ಮನೆಯ ದರೋಡೆ, ಭೀಕರಕೊಲೆ, ಪ್ರಿಯಕರನೊಂದಿಗೆ ವಿವಾಹಿತ ಸ್ತ್ರೀ ಪರಾರಿ, ಮಣ್ಣುಕುಸಿದು ಕೂಲಿಗಾರನ ಜೀವಂತ ಸಮಾಧಿ, ಜಾತ್ರೆಯಲ್ಲಿ ಗುಂಪು ಘರ್ಷಣೆ, ಬಣವೆ ದಹನ, ಟ್ರಿಪ್ಪರ್ ಡಿಕ್ಕಿಹೊಡೆದು ಕಾರು ನುಜ್ಜುಗುಜ್ಜು, ಎಮ್ಮೆ ಅಡ್ಡಬಂದು ಬೈಕ್ ಸವಾರನಿಗೆ ಪೆಟ್ಟು ಇತ್ಯಾದಿ. ಎರಡನೆಯವು-ಕುರಿಗಳಿಗೆ ಸಿಡಿಲು ಬಡಿದಿದ್ದು, ಹಾವು ಕಚ್ಚಿ ಸತ್ತಿದ್ದು, ರೈತನಿಗೆ ಕಾಡುಹಂದಿ ತಿವಿದಿದ್ದು, ದನಗಾಹಿಗಳ ಮೇಲೆ ಕರಡಿ ಹಲ್ಲೆ, ಭಕ್ತರ ಮೇಲೆ ಜೇನುದಾಳಿ, ನಾಯಿಯನ್ನು ಚಿರತೆ ತಿಂದಿದ್ದು ಮುಂತಾದವು.ಮೊದಲನೆಯವು ಮಾನನಿರ್ಮಿತ ಅಪರಾಧಗಳಾದರೆ, ಎರಡನೆಯವು ನಿಸರ್ಗವೂ ಪಾಲುಗೊಂಡಿರುವ ದುರಂತಗಳು. ಪ್ರಶ್ನೆಯೆಂದರೆ ಎರಡನೆಯವು ನಿಜಕ್ಕೂ `ಅಪರಾಧ’ಗಳೇ? ಸಾವು ನೋವಿನ ಅಂಶವಿರುವುದರಿಂದಲೂ, ಪೋಲಿಸರು ಮಹಜರು ನಡೆಸುವುದರಿಂದಲೂ ಇವು `ಅಪರಾಧ’ದ ಸುದ್ದಿಗಳು ನಿಜ. ವಾಸ್ತವದಲ್ಲಿ ಇವು ಮನುಷ್ಯರು ಆಹ್ವಾನಿಸಿಕೊಂಡು ಅಥವಾ ಅವರ ಕೈಮೀರಿ ನಡೆದ ದುರಂತಗಳು ಕೂಡ. ಆದರಲ್ಲೂ ಹಾವುಕಚ್ಚುವುದು ಅಪರಾಧ ಎನ್ನುವವರಿಗೆ, ತನ್ನ ಪಾಡಿಗೆ ಹೋಗುತ್ತಿದ್ದ ಹಾವನ್ನು ಜನ ಚಚ್ಚುವುದು ಅಪರಾಧ ಎನಿಸುವುದಿಲ್ಲವೇಕೆ? ರಾಜ್ಯ ಮಟ್ಟಕ್ಕೇರದೆ ಎರಡನೇ ಪುಟದ ಸ್ಥಳಿಯ ಸುದ್ದಿಗಳಾಗಿ ಪ್ರಕಟವಾಗುವ ಈ `ಸಣ್ಣ’ ವರದಿಗಳನ್ನು ಮುಂಜಾನೆಯ ಗಡಿಬಿಡಿಯಲ್ಲಿರುವ ವಾಚಕರು ನಿರ್ಲಕ್ಷಿಸಿ, ರಾಜ್ಯ-ರಾಷ್ಟ್ರದ ದೊಡ್ಡ ಸುದ್ದಿಗಳಿಗೆ ಹೋಗಲು ತವಕಿಸುತ್ತಾರೆ. ಹೀಗಾಗಿ ಇವು ನಿರ್ಲಕ್ಷಿತವಾಗಿಯೇ ಉಳಿದುಬಿಡುತ್ತವೆ. ಎಷ್ಟೊ ಸಲ ಇವು ಸ್ಥಳೀಯ ಸ್ಟಿಂಜರನ ಅಸ್ತಿತ್ವದ ಭಾಗವಾಗಿ ಪುಟತುಂಬುವ ಫಿಲ್ಲರುಗಳಾಗಿರುತ್ತವೆ. ಆದರಿವು ನಿರ್ಲಕ್ಷಿಸುವ ಸುದ್ದಿಗಳೇ? ಬಳ್ಳಾರಿ ಜಿಲ್ಲೆಯಲ್ಲೇ ನೂರಾರು ಜನ ಹಾವು ಕಡಿದು ಸಾಯುತ್ತಾರೆಂದ ಮೇಲೆ, ಕರ್ನಾಟಕದ ಲೆಕ್ಕ ಎಷ್ಟಿರಬಹುದು? ವರ್ಷಕ್ಕೆ ಭಾರತದಲ್ಲಿ ಹಾವುಕಚ್ಚಿ ಸಾಯುವವರ ಸಂಖ್ಯೆ 50 ಸಾವಿರವಂತೆ. `ಅಪರಾಧ’ ಸುದ್ದಿಯ ನಮೂನೆಯೊಂದನ್ನು ಇಲ್ಲಿ ಉಲ್ಲೇಖಿಸಬಹುದು: “ಹಾವುಕಚ್ಚಿ ಇಬ್ಬರ ಸಾವು: ಬುಧವಾರ ರಾತ್ರಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಯುವಕರು ಹಾವಿನ ಕಡಿತಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಹೊಸಪೇಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ನಾಗೇನಹಳ್ಳಿಯಲ್ಲಿ ಮಲಗಿದ್ದ ಮಿನಗಿನಾಗ (15) ಮತ್ತು ಶಿವಪ್ಪ (19) ಎಂಬುವರು ಸಾವನ್ನಪ್ಪಿದರು. ಮಿನಗಿನಾಗನಿಗೆ ಗುಡಿಸಲಿನಲ್ಲಿ ಇದ್ದಾಗ ಹಾವು ಕಚ್ಚಿದರೆ, ಶಿವಣ್ಣನಿಗೆ ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚ್ಚಿತ್ತು. ಮಿನಗಿನಾಗ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದರೆ, ಶಿವಣ್ಣ ಸ್ಥಳದಲ್ಲಿಯೇ ಸಾವನಪ್ಪಿದ ಎಂದು ಪೋಲಿಸ್ ಮೂಲಗಳು ತಿಳಿಸಿವೆ.’’ಗಾಬರಿ ಹುಟ್ಟಿಸುವುದು ಹಾವು ಕಚ್ಚಿದ್ದಲ್ಲ; ಇದು ಮಾಮೂಲಿ ಎಂಬಂತಿರುವ ಬರೆಹದ ನಿರ್ಲಿಪ್ತತೆ. ದಿನಾ ಕೊಲ್ಲುವ ಮತ್ತು ಸಾಯುವ ಈ ಸುದ್ದಿಯನ್ನು ಬರೆಬರೆದು ಬಹುಶಃ ಸ್ಥಳೀಯ ಪತ್ರಕರ್ತರೂ ದಣಿದಿರಬೇಕು. ಯಾಕೆಂದರೆ, ಈ ಹಾವುಗಳು ಸ್ಕೂಲಿಗೆ ಹೋಗಿದ್ದ ಮಗುವಿಗೆ, ಮನೆಯಲ್ಲಿ ಮಲಗಿದ್ದವರಿಗೆ, ಕೆಲವೊಮ್ಮೆ ಒಂದೇ ಮನೆಯಲ್ಲಿದ್ದ ಐದಾರು ಜನರಿಗೆ, ಕೋಳಿ ಇಟ್ಟಿರುವ ಮೊಟ್ಟೆಯನ್ನು ತೆಗೆಯಲು ಬುಟ್ಟಿಯೊಳಗೆ ಕೈಹಾಕಿದ ಮುದುಕಿಗೆ, ಹುಲ್ಲುಕೊಯ್ಯಲು ಹೋದ ತರುಣನಿಗೆ, ರಾತ್ರಿ ಗದ್ದೆಗೆ ನೀರು ಹಾಯಿಸಲು ಹೋದವರಿಗೆ, ಬೆಳೆ ಕೊಯ್ಯುವವರಿಗೆ, ಕೊಯ್ದು ಹಾಕಿದ ಬೆಳೆಯನ್ನು ಸಿವುಡುಗಟ್ಟಲೆಂದು ಬಾಚಿಕೊಂಡವರಿಗೆ ಕಚ್ಚುತ್ತವೆ. ಕಬ್ಬಿನಗದ್ದೆಯನ್ನು ಸರಸಕ್ಕೆ ಆರಿಸಿಕೊಂಡ ಪ್ರೇಮಿಗಳನ್ನೂ ಬಿಟ್ಟಿಲ್ಲ. ಒಮ್ಮೆ ತಮ್ಮ ಮಗಳನ್ನು ವಿಶ್ವವಿದ್ಯಾಲಯಕ್ಕೆ ಸೇರಿಸಲು ಬಂದ ಒಬ್ಬರು ಬಗಲುಕೋಲು ಮೆಟ್ಟಿಕೊಂಡು ಕಷ್ಟಪಟ್ಟು ಕ್ಯಾಂಪಸ್ಸಿನಲ್ಲಿ ಓಡಾಡುತ್ತಿದ್ದರು. ಅವರ ಕಾಲನ್ನು ಕಂಡು ಏನಾಯಿತು ಎಂದು ಕೇಳಿದೆ. ಅವರು ಲೈನ್‍ಮನ್. ಕಂಬಹತ್ತುವಾಗ ಬುಡದಲ್ಲಿದ್ದ ಹಾವು ಕಚ್ಚಿ ಮೊಣಕಾಲತನಕ ಕಾಲನ್ನೇ ಕತ್ತರಿಸಲಾಗಿದೆ. ಹಾವು ಕಚ್ಚಲು ಹೊಲವೇ ಬೇಕಾಗಿಲ್ಲ.ಮನುಷ್ಯರನ್ನು ಸಾಯುವಂತೆ ಕಚ್ಚುವುದು ಒಂದೊ ನಾಗರ ಇಲ್ಲವೇ ಕನ್ನಡಿ(ವೈಪರ್) ಹಾವು. ಬಳ್ಳಾರಿ ಜಿಲ್ಲೆಯ ಸ್ಥಳೀಯ ಸುದ್ದಿಗಳ ಪ್ರಕಾರ, ಹೆಚ್ಚು ಜನರು ಹಾವಿನಿಂದ ಸತ್ತಿರುವುದು ಹೊಲಗೆಲಸದಲ್ಲಿ. ಅದೂ ಅಪರಾತ್ರಿಯಲ್ಲಿ. ಮೇಲ್ಕಾಣಿಸಿದ ಸುದ್ದಿಯಲ್ಲಿರುವವರ ಹೆಸರಲ್ಲೇ ಸರ್ಪದ ಹೆಸರೂ, ಸರ್ಪವನ್ನು ಒಡವೆಯಂತೆ ಧರಿಸುವ ಶಿವನ ಹೆಸರೂ ಇರುವುದು ಒಂದು ವ್ಯಂಗ್ಯ.ಈ ಸರ್ಪಸಾವುಗಳಿಗೆ ನಿಜವಾದ ಕಾರಣವೇನು? ಹಾವುಗಳ ಜಾಗದಲ್ಲಿ ಜನ ವಾಸವಾಗಿದ್ದಾರೆಯೊ ಅಥವಾ ಹಾವೇ ಜನರ ಜಾಗಕ್ಕೆ ಹರಿದು ಬರುತ್ತಿವೆಯೊ? ಹಾವಿನಿಂದ ಕಚ್ಚಿಸಿಕೊಳ್ಳದಂತೆ ಎಚ್ಚರಿಕೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲವೆ? ಕಚ್ಚಿದರೆ ಕೂಡಲೇ ಅವರನ್ನು ಬದುಕಿ ಉಳಿಸುವ ಆರೋಗ್ಯದ ಸೌಲಭ್ಯ ಎಷ್ಟರಮಟ್ಟಿಗಿದೆ? ಮೊದಲರಡು ಪ್ರಶ್ನೆಗಳು ಪರಿಸರಕ್ಕೆ ಸಂಬಂಧಪಟ್ಟವು. ಮೂರನೆಯದು ಕೆಲಸಗಾರರ ಎಚ್ಚರಗೇಡಿತನದ್ದು; ಕೊನೆಯದು ವ್ಯವಸ್ಥೆಗೆ ಸಂಬಂಧಿಸಿದ್ದು ಮತ್ತು ಗಂಭೀರವಾದದ್ದು. ಯಾಕೆಂದರೆ, ಹೆಚ್ಚಿನ ಪ್ರಸಂಗಗಳಲ್ಲಿ ಹಾವು ಕಡಿತಕ್ಕೆ ಒಳಗಾದವರು ಆಸ್ಪತ್ರೆ ತಲುಪುವ ಮುನ್ನ ದಾರಿಯಲ್ಲೇ ಕೊನೆಯುಸಿರು ಎಳೆಯುತ್ತಾರೆ; ಇಲ್ಲವೇ ಆಸ್ಪತ್ರೆಗೆ ಹೋದಾಗ ತುರ್ತುಚಿಕಿತ್ಸೆ ಸಿಗದೆ ಸಾಯುತ್ತಾರೆ. ಇಲ್ಲಿ ಅಪರಾಧ ಕೇವಲ ಹಾವಿನದಲ್ಲ; ಕಚ್ಚಿಸಿಕೊಂಡ ಕೆಲಸಗಾರರದ್ದಲ್ಲ; ಅವರನ್ನು ಉಳಿಸಿಕೊಳ್ಳಲಾಗದ ವ್ಯವಸ್ಥೆಯದು ಸಹ. ಸಾವು ವಯೋ ಸಹಜವಾಗಿ ಬಂದರೆ ದೋಷ ಕೊಡಬೇಕಿಲ್ಲ. ಅಸಹಜವಾಗಿ ಅಕಸ್ಮಾತ್ ಬಂದರೆ, ಅದನ್ನು ತಡೆಯುವ ಸಿದ್ಧತೆ ನಾಗರಿಕ ಸಮಾಜದಲ್ಲಿ ಇರಬೇಕು. ಹಾಗಿಲ್ಲದೆ ಇರುವುದೇ ಸಾಮಾಜಿಕ ಅಪರಾಧ.ಪಶ್ಚಿಮದ ದೇಶಗಳಲ್ಲೂ ಹಾವು ಕಚ್ಚುತ್ತವೆ. ಆದರೆ ಅಲ್ಲಿ ಸಾಯುವವರ ಸಂಖ್ಯೆ ಕಡಿಮೆ. ಕಚ್ಚಿದರೂ ಉಳಿಸಿಕೊಳ್ಳುವ ವ್ಯವಸ್ಥೆ ಅಲ್ಲಿ ಚೆನ್ನಾಗಿದ್ದಂತಿದೆ. ಭೂಕಂಪ, ನೆರೆ, ಸುನಾಮಿ, ಚಂಡಮಾರುತ ಬಂದಾಗ ಅಲ್ಲೂ ಸಂಭವಿಸುವ ಸಾವುನೋವುಗಳ ಪ್ರಮಾಣ ಕಡಿಮೆ. 90ರ ದಶಕದಲ್ಲಿ ಲಾತೂರಿನ ಭೂಕಂಪವಾದಾಗ ಹೆಚ್ಚು ಜನ ಸತ್ತಿದ್ದು ಮನೆಗಳ ಕಚ್ಚಾ ರಚನೆಯಿಂದ. ಬಂಗಾಳ ಕೊಲ್ಲಿಯಲ್ಲಿ ಏಳುವ ಚಂಡಮಾರುತಗಳು ಪೂರ್ವ ಕರಾವಳಿಯಲ್ಲಿ ತಾಂಡವನೃತ್ಯ ಮಾಡಿದಾಗಲೂ ಇದೇ ಕತೆ. ನಾಗರಿಕ ಸಮಾಜವಾಗಿ ನಾವು ಕಟ್ಟಿಕೊಂಡಿರುವ ವ್ಯವಸ್ಥಿತವಲ್ಲದ ವ್ಯವಸ್ಥೆಯಿಂದ ಸಕಾಲಿಕ ನೆರವಿಲ್ಲದೆ ಹೆಚ್ಚು ಜನ ಮರಣಿಸುತ್ತಾರೆ. ಕಣಿವೆಗೆ ಬಿದ್ದ ಹಸುವಿರಲಿ, ನೆರೆಯಲ್ಲಿ ಕೊಚ್ಚಿಹೋಗುವ ವ್ಯಕ್ತಿಯಿರಲಿ, ಮನೆಗೆ ಬೆಂಕಿಬಿದ್ದಾಗ ಸಿಕ್ಕಿಕೊಂಡ ಮಗುವಿರಲಿ, ಯೂರೋಪು ಜಪಾನು ಅಮೆರಿಕಗಳ ವ್ಯವಸ್ಥೆ ಪ್ರಾಣವುಳಿಸಲು ಎಷ್ಟು ಮುತುವರ್ಜಿ ವಹಿಸುತ್ತದೆ ಎಂಬುದನ್ನು ಟಿವಿ ನೋಡುವವರೆಲ್ಲ ಬಲ್ಲರು. ಇದು ಅಲ್ಲಿನ ನಾಗರಿಕ ವ್ಯವಸ್ಥೆ ತನ್ನ ಜನರಿಗೆ ಬದ್ಧವಾಗಿರುವುದರ ಸಂಕೇತ ಮಾತ್ರವಲ್ಲ, ಎಚ್ಚೆತ್ತ ನಾಗರಿಕ ಪ್ರಜ್ಞೆಯುಳ್ಳ ಸಮಾಜ ಆಳುವ ವ್ಯವಸ್ಥೆಗಳನ್ನು ದಕ್ಷವಾಗಿ ಇಟ್ಟುಕೊಂಡಿರುವುದರ ಸಂಕೇತ ಕೂಡ.ನಾವೊಂದಿಷ್ಟು ಗೆಳೆಯರು, ಉತ್ತರ ಕರ್ನಾಟಕದ ಪ್ರವಾಹದಿಂದ ಶೆಡ್ಡುಗಳಲ್ಲಿ ಬದುಕುತ್ತಿದ್ದವರ ಜತೆ ವಾರಕಾಲ ಇದ್ದೆವು. ಹೆಂಚಿನಂತೆ ಕಾದ ಶೆಡ್ಡುಗಳು. ಜತೆಗೆ ಹಾವು ಹುಪ್ಪಡಿ ಕಾಟ. ವ್ಯವಸ್ಥೆಯ ಬೇಹೊಣೆಯಿಂದ ಕಷ್ಟಪಡುವ ಜನರ ಲೆಕ್ಕ ಬರೆಯಲು ತಕ್ಕ ಕಿರ್ದಿ ಪುಸ್ತಕವೇ ಇಲ್ಲವೆನಿಸಿತು. ಇದೆಲ್ಲ `ಅಪರಾಧ’ದ ವರ್ತುಲದಲ್ಲಿ ಬರುವುದೇ ಇಲ್ಲ. ಕೊಲೆಯೆಂದೂ ಅನಿಸುವುದಿಲ್ಲ. ಭೂಪಾಲದಲ್ಲಿ ಜನರನ್ನು ಕೊಂದಿದ್ದು ವಿಷಾನಿಲವೊ ಜನರನ್ನು ವಿಪತ್ತುಗಳಿಂದ ರಕ್ಷಿಸುವ ಹೊಣೆಹೊರದ ವ್ಯವಸ್ಥೆಯೊ? ನಾಲ್ಕು ದಶಕಗಳಾಗುತ್ತಿದ್ದರೂ ಅಲ್ಲಿನ ಜನಕ್ಕೆ ತಕ್ಕ ಪರಿಹಾರ ಸಿಕ್ಕಿಲ್ಲ. ಎಂಡೋಸಲ್ಫಾನ್ ಪೀಡಿತರು ತಮ್ಮದಲ್ಲದ ತಪ್ಪಿಗೆ ನರಳುತ್ತಲಿದ್ದಾರೆ. ಇವರಿಗೂ ಬೆಂಕಿಬೀಳುವ ನೊರೆಕಾರುವ ಬೆಂಗಳೂರಿನಂಚಿನ ಕೆರೆಗಳಿಗೂ ವ್ಯತ್ಯಾಸವಿಲ್ಲ. ಡ್ಯಾಮಿನ ಕೆಳಗಣ `ಭತ್ತದ ಕಣಜ’ ಎನ್ನಲಾಗುವ ಊರುಗಳಲ್ಲಿ ಸುರಿಯಲಾಗುತ್ತಿರುವ ಕ್ರಿಮಿನಾಶಕಗಳು ಎಷ್ಟು ಜೀವಿಗಳ ಆರೋಗ್ಯವನ್ನು ಹೇಗೆ ಕೆಡಿಸಿವೆಯೊ ಯಾರು ಬಲ್ಲರು? ನಂಜನ್ನು ಎಗ್ಗಿಲ್ಲದೆ ಚೆಲ್ಲಾಡಿ ಸಮೂಹಗಳ ಪ್ರಾಣಕ್ಕೆ ಕುತ್ತಿಡುವ ಕೆಲಸಗಳಿಗಿಂತ ಕಚ್ಚುವ ಹಾವುಗಳು ಕಡಿಮೆ ಅಪಾಯಕಾರಿ. ಶಿಶುನಾಳರ `ಹಾವು ತುಳಿದೇನೇ ಮಾನಿನಿ’ ತತ್ವಪದದಲ್ಲಿ ಹಾವು ಆನುಭಾವಿಕ ಅರ್ಥದಲ್ಲಿರುವ ರೂಪಕ. ಸಿದ್ಧಲಿಂಗಯ್ಯನವರ `ಹಾವುಗಳೇ ಕಚ್ಚಿ’ ಕವನದಲ್ಲಿ ಜನರ ಎಚ್ಚೆತ್ತಪ್ರಜ್ಞೆಯ ಸಂಕೇತ. ಹಾವನ್ನು ದಾಸಿಮಯ್ಯ ಹಸಿವಿಗೆ ಹೋಲಿಸಿದರೆ ಅಕ್ಕ ಕಾಮಕ್ಕೆ ಪ್ರತಿಮಿಸುವಳು. ಹಾವನ್ನು ಪ್ರತಿಮೆ ರೂಪಕವಾಗಿಸಿರುವ ಈ ಯಾರೂ ಅದನ್ನು ಕೇವಲ ಹಗೆಯನ್ನಾಗಿ ಪರಿಭಾವಿಸಿಲ್ಲ. ಹಾವನ್ನು ಆರಾಧಿಸುವ ಮತ್ತು ಚಚ್ಚಿಹಾಕುವ ಮನೋಭಾವಕ್ಕಿಂತ ಭಿನ್ನವಾದ ದೃಷ್ಟಿಕೋನವಿದು. ಕಚ್ಚಿಸಿಕೊಳ್ಳದಂತೆ ಒಡನಾಡುವುದು ಸಾಧ್ಯವಾಗುವುದಾದರೆ, ಹಾವಿನ ಸಂಗ ಲೇಸು ಕಾಣಯ್ಯ ಎಂದು ಹೇಳುವಲ್ಲಿ, ದಿಟ್ಟತನ ಮಾತ್ರವಲ್ಲ ವೈರುಧ್ಯಗಳನ್ನು ಸಂಭಾಳಿಸುವ ವಿವೇಕವೂ ಇದೆ.ಕೊಂದಹರು ಎಂಬುದನರಿಯದ ಹಾವು ತುಳಿದವರನ್ನಷ್ಟೆ ಕಚ್ಚುತ್ತದೆ. ಅದರ ನೆಲೆಯನ್ನು ಆಕ್ರಮಿಸಿಕೊಂಡು, ಉಣಿಸಿನ ಸರಪಣಿಯನ್ನು ಭಗ್ನಪಡಿಸಿರುವ ನಾವು, ದಿಟದ ನಾಗರ ಕಂಡೊಡನೆ ಕೊಲ್ಲುತ್ತಿದ್ದೇವೆ. ಅಧಿಕಾರಸ್ಥರು ರೈತರ ಹೊಲಗದ್ದೆಯನ್ನು ನೀರು ಬೆಟ್ಟವನ್ನು ಕಿತ್ತು ಉದ್ಯಮಿಗಳಿಗೆ ಮಾರುವುದು `ಅಪರಾಧ ಸುದ್ದಿ’ ಆಗುವುದೇ ಇಲ್ಲ. ಈಗ ಜನರನ್ನು ಕೊಲ್ಲಲು ಹಾವುಗಳೇ ಬೇಕಿಲ್ಲ. ಡೆಂಗಿ ಸೊಳ್ಳೆಗಳೇ ಸಾಕು. ಬಳ್ಳಾರಿ ಜಿಲ್ಲೆಯಲ್ಲಿ ಡೆಂಗಿಜ್ವರದಿಂದ ಬಹಳ ಜನ ಜೀವ ಕಳೆದುಕೊಂಡಿದ್ದಾರೆ. ನಾಡಿನಲ್ಲಿ ಜನರ ಜೀವದಷ್ಟು ಅಗ್ಗವಾದ ವಸ್ತು ಬೇರೆಯಿಲ್ಲ. ಇಂತಹ ವ್ಯವಸ್ಥೆಯಲ್ಲಿ, ಆತ್ಮರಕ್ಷಣೆಗಾಗಿ ಕಚ್ಚುವ ಹಾವುಗಳು ಅಪರಾಧಿಗಳಾಗಿ ಬಿಂಬಿತವಾಗುವುದು ಸಹಜವೇ ಆಗಿದೆ. ****************************************************** ಲೇಖಕರ ಬಗ್ಗೆ: ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

ಹಾವು ತುಳಿದೇನೇ? Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಉಗಾದಿ ಚಿತ್ರಗಳು ಕೆರೆಕೋಡಿ ಪಕ್ಕದಲ್ಲಿದ್ದ ಬೀದಿಯೊಂದರಲ್ಲಿ ನನ್ನ ತಾರುಣ್ಯ ಕಳೆಯಿತು. ಅಲ್ಲಿ ಬೆಸ್ತರು, ಈಡಿಗರು, ಬಡಗಿಗೆಲಸದ ಆಚಾರಿಗಳು, ಕಮ್ಮಾರರು, ಮಂಡಕ್ಕಿಭಟ್ಟಿಯವರು, ಮೇದಾರರು ಇದ್ದರು. ಎಲ್ಲರೂ ಬಸವಣ್ಣನವರ ವಚನದಲ್ಲಿ ಬರುವಂತೆ `ಅಂದಂದೆ ಹುಟ್ಟಿತ್ತು ಅಂದಂದೆ ಹೊಂದಿತ್ತು’ ಎಂಬಂತೆ ಹಗಲ ದುಡಿಮೆ- ರಾತ್ರಿಯ ಊಟದ ಅವಸ್ಥೆಯವರು. ಒಬ್ಬರ ಮನೆಯ ಹಬ್ಬ ಇಡೀ ಬೀದಿಯ ಹಬ್ಬವಾಗುತ್ತಿತ್ತು. ರಂಜಾನ್ ದಿನ ಶೀರ್‍ಕುರುಮಾ ಬಟ್ಟಲನ್ನು ಬೀದಿಯ ಎಲ್ಲರ ಮನೆಗೆ ತಲುಪಿಸುವುದು ನಮಗೆ ಲೋಕಮಹತ್ವದ ಕಾಯಕವಾಗಿತ್ತು. ಉಗಾದಿಯ ದಿನ ಬೇರೆಯವರ ಮನೆಗಳಿಂದ ಬರುತ್ತಿದ್ದ ಹೋಳಿಗೆ, ಕೋಸಂಬರಿ, ಹೋಳಿಗೆ ಸಾರು, ಚಿತ್ರಾನ್ನ, ಮಜ್ಜಿಗೆ ಮೆಣಸಿನಕಾಯಿ, ಸಂಡಿಗೆಗಳಿಂದ ಅಲಂಕೃತವಾದ ದೊಡ್ಡ ತಾಟನ್ನು ಬಾಗಿಲಲ್ಲಿ ಖುದ್ದು ನಿಂತು ಸ್ವಾಗತಿಸುವ ಕೆಲಸವನ್ನು ಮುತುವರ್ಜಿಯಿಂದ ನಾವು ಮಾಡುತ್ತಿದ್ದೆವು. ಮಕ್ಕಳು ಅವರಿವರ ಮನೆಯ ಅಡಿಗೆಗೆ ಕಾಯಬಾರದೆಂದು ಅಮ್ಮ ಹೋಳಿಗೆ ಮಾಡುತ್ತಿದ್ದಳು. ಆದರೆ ನೆರೆಮನೆಯ ಹೋಳಿಗೆಯ ಸ್ವಾದವೇ ಬೇರೆ. ಬೀದಿಯ ಜನ, ಉಗಾದಿಯಂದು ಹೊತ್ತು ಕಂತುವ ಸಮಯಕ್ಕೆ ಪುರಿಭಟ್ಟಿಯ ಅಕ್ಕಿ ಒಣಗಲು ಮಾಡಿದ್ದ ಕಣದಲ್ಲಿ ಜಮಾಯಿಸುತ್ತಿತ್ತು. ಕೆರೆ ಕೆಳಗಿನ ಅಡಿಕೆ ತೋಟಗಳ ತಲೆಯ ಮೇಲೆ, ಬಣ್ಣಬಣ್ಣದ ಮೋಡಗಳು ವಿವಿಧ ಆಕೃತಿಗಳಲ್ಲಿ ಲಾಸ್ಯವಾಡುವ ಪಡುವಣದಾಗಸದಲ್ಲಿ, ಬೆಳ್ಳಿ ಕುಡುಗೋಲಿನಂತಹ ಉಗಾದಿ ಚಂದ್ರನನ್ನು ಹುಡುಕುವ ಕಾರ್ಯ ನಡೆಸುತ್ತಿತ್ತು. ನಾವು ವಯಸ್ಸಾಗಿ ಕಣ್ಣು ಮಂಜಾದವರಿಗೆ ಚಂದ್ರನನ್ನು ತೋರಿಸುವ ಕೆಲಸ ಮಾಡುತ್ತಿದ್ದೆವು. ಅವರ ಬೆನ್ನಹಿಂದೆ ನಿಂತು, ಅವರ ಎಡಹೆಗಲ ಮೇಲೆ ಕೈಯಿಟ್ಟು, ಅವರ ಕಿವಿಯ ಪಕ್ಕ ನಮ್ಮ ಕೆನ್ನೆ ತಂದು, ತೋರುಬೆರಳನ್ನು ನಿಮಿರಿಸಿ ಚಂದ್ರನಿಗೆ ಅವರ ದಿಟ್ಟಿಯನೊಯ್ದು ಮುಟ್ಟಿಸಲು ಯತ್ನಿಸುತ್ತಿದ್ದೆವು. “ಅಗೋ ಆ ಕರೇ ಮಾಡ ಐತಲ್ಲಜ್ಜಿ, ಅದರ ಪಕ್ಕ ಮೊಸಳೆ ತರಹ ಒಂದು ಮಾಡ ಎದ್ದೀತಲ್ಲ, ಅದರ ಬಲಗಡೀಕ್ ನೋಡು, ಸಣ್ಣಗೆ ಬೆಳ್ಳಗೆ ಗೆರೆ ಥರ” ಎಂದು ವೀಕ್ಷಕ ವಿವರಣೆ ಕೊಡುತ್ತಿದ್ದೆವು. ರಂಜಾನ್ ತಿಂಗಳಲ್ಲೂ ಚಂದ್ರನನ್ನು ಹೀಗೇ ಹುಡುಕುತ್ತಿದ್ದವು. ಅವನು ಕಂಡನೆಂದರೆ ನಾಳೆ ನಮಾಜು ಗ್ಯಾರಂಟಿ. ಉಗಾದಿ ಚಂದ್ರನನ್ನು ತೋರಿಸುವಾಗ ಈಡಿಗರ ಅಜ್ಜಿಗೆ ಕಾಣದಿದ್ದರೂ ಚದುರಿದ ಮೋಡದ ಚೂರನ್ನು ಕಂಡು `ಹ್ಞೂಕಣಪ್ಪಾ, ಕಾಣ್ತುಕಾಣ್ತು. ಸ್ವಾಮೀ ನಮಪ್ಪಾ. ಈಸಲ ಒಳ್ಳೆ ಮಳೆಬೆಳೆ ಕೊಡಪ್ಪಾ” ಎಂದು ಮುಗಿಲಿಗೆ ಕೈಮುಗಿಯುತ್ತಿತ್ತು. ಅದೇ ಹೊತ್ತಲ್ಲಿ ಅಪ್ಪ, ಬೀದಿಯಲ್ಲಿ ಹಿರೀಕನಾಗಿ ಅಂಗಳದಲ್ಲಿ ಕುರ್ಚಿ ಹಾಕಿಕೊಂಡು ಜಗದ್ಗುರುವಿನಂತೆ ಪಾದಗಳನ್ನು ನೀಟಾಗಿ ಜೋಡಿಸಿಕೊಂಡು ಕೂರುತ್ತಿದ್ದ. ಚಿಕ್ಕವರೆಲ್ಲರೂ ಅಪ್ಪನಿಗೆ `ಸಾಬರೇ ಚಂದ್ರ ಕಾಣ್ತು, ಆಶೀರ್ವಾದ ಮಾಡ್ರಿ’ ಎಂದು ಕಾಲುಮುಟ್ಟಿ ಹಾರೈಕೆ ಪಡೆಯುತ್ತಿದ್ದರು. ಯುಗಾದಿ ಹಬ್ಬದ ದಿನ ಭದ್ರಾವತಿ ಆಕಾಶವಾಣಿಯವರು ಬೆಳಗಿನ ವಾರ್ತೆಗಳ ಬಳಿಕ 7.45ಕ್ಕೆ `ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಹಾಡನ್ನು ಕಡ್ಡಾಯವೆಂಬಂತೆ ಹಾಕುತ್ತಿದ್ದರು. ಜಾನಕಿಯವರ ದನಿಯಲ್ಲಿ ಮೂಡಿಬಂದಿರುವ ಬೇಂದ್ರೆ ವಿರಚಿತ ಈ ಹಾಡು, ನನ್ನ ಸ್ಮತಿಯಲ್ಲಿ ಭದ್ರವಾಗಿ ಕೂತಿದೆ. ಕೋಡಿಹಳ್ಳದ ದಂಡೆಗೆ ಹೊಂಗೆಗಿಡಗಳಿದ್ದ ಕಾರಣ “ಹೊಂಗೆಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಬರುತಿದೆ” ಎಂಬ ಸಾಲು ನಮಗೆ ಅನುಭವವೇದ್ಯವಾಗಿತ್ತು. ಈ ಸಾಲನ್ನು ಮೈಸೂರಿನಲ್ಲಿ ಕುಕ್ಕರಹಳ್ಳಿ ಪಕ್ಕದ ಹಾಸ್ಟೆಲಿನಲ್ಲಿರುವಾಗ, ಕೆರೆದಂಡೆಯ ಮೇಲೆ ಅಡ್ಡಾಡುತ್ತ ಮತ್ತೂ ದಿವಿನಾಗಿ ಅನುಭವಿಸಿದೆ. ಸಾಹಿತ್ಯದ ವಿದ್ಯಾರ್ಥಿಯಾಗಿ `ಯುಗಾದಿ’ ಕವನ ಓದುವಾಗ ಗೊತ್ತಾಯಿತು- ಇದು ನಿಸರ್ಗದ ಸಂಭ್ರಮಾಚರಣೆಯ ಹಾಡು ಮಾತ್ರವಲ್ಲ, ವಿಷಾದಗೀತೆ ಕೂಡ ಎಂದು. “ವರುಷಕೊಂದು ಹೊಸ ಜನುಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವ ಜಾತಕೆ; ಒಂದೇ ಜನ್ಮದಲಿ ಒಂದೇ ಬಾಲ್ಯ ಒಂದೇ ಹರೆಯ ನಮಗದಷ್ಟೇ ಏತಕೆ?”ಎಂಬ ಪ್ರಶ್ನೆ ನನ್ನೊಳಗೆ ಕಂಪನದಾಯಕ ಅಸಹಾಯಕತೆ ಹುಟ್ಟಿಸಿತು. ಯಾಕೀ ಅನ್ಯಾಯ ಎಂದು ಆಕ್ರೋಶ ಬರಿಸಿತು. ಯುಗದ ಆದಿಯನ್ನು ಸೂಚಿಸುವ ಈ ಹಬ್ಬ, ಕಾಲನ ಕಠೋರತೆಯನ್ನೂ ಸೂಚಿಸುತ್ತ ತಲ್ಲಣವನ್ನು ನನ್ನೊಳಗೆ ಖಾಯಂ ಸ್ಥಾಪಿಸಿಬಿಟ್ಟಿತು. ಇದನ್ನೆಲ್ಲ ಧೇನಿಸುತ್ತ್ತ ಮನೆಯ ಮುಂದೆ ನಾವೇ ಬೆಳೆಸಿರುವ ಹೊಂಗೆಗಿಡಗಳನ್ನು ನೋಡುತ್ತೇನೆ. ನಮ್ಮ ತಾಪತ್ರಯಗಳಲ್ಲಿ ಅವಕ್ಕೆ ವಾರದಿಂದ ನೀರುಣಿಸುವುದಕ್ಕೂ ಆಗಿರಲಿಲ್ಲ. ಎಮ್ಮೆಗಳು ಕೋಡಿನ ತುರಿಕೆ ಕಳೆಯಲು ತಿಕ್ಕಾಡಿದ್ದರಿಂದ ಲಾಠಿಜಾರ್ಜಿಗೆ ಒಳಗಾದ ಭಿಕ್ಷರಂತಾಗಿದ್ದವು ಅವು. ಆದರೀಗ ಗಾಯಗೊಂಡ ಅವುಗಳ ಕೊಂಬೆಗಳಿಂದ ಜೀವರಸ ಹೊಮ್ಮಿದಂತೆ ತೆಳುಕೆಂಬಣ್ಣದ ತಳಿರು ಮೂಡಿವೆ-ಯಾರ ಹಂಗೂ ಇಲ್ಲದೆ ದೇಹದೊಳಗಿನ ಜವ್ವನವು ಉಕ್ಕಿ ಮುಖದಲ್ಲಿ ಕಾಂತಿ ಹೊಮ್ಮಿಸುವಂತೆ.ಕಳೆದೆರಡು ವಾರಗಳಿಂದ ನಮ್ಮ ಹಿತ್ತಲ ಮರಗಿಡಗಳು ಎಲೆಯುದುರಿಸುತ್ತಿವೆ. ನನ್ನ ಹೆಂಡತಿ ಗೊಣಗಿಕೊಂಡು ಅವನ್ನು ಗುಡಿಸುತ್ತ ಮರದ ಬುಡಕ್ಕೇ ಸುರಿಯುತ್ತಿದ್ದಾಳೆ. ಎಲೆಯುದುರುವ ಸದ್ದು ಸಾಮಾನ್ಯವಾಗಿ ಕೇಳುವುದಿಲ್ಲ. ಆದರೆ ದಿವಿಹಲಸಿನ ಗಿಡದ ದಪ್ಪನೆಯ ಎಲೆ ಕಳಚಿ ಬೀಳುವ ಖಟ್ ಸದ್ದು ಮಾತ್ರ ಶ್ರವಣೀಯ. ತನ್ನ ಮೈಯ ತೊಗಲೊಡೆದು ಹುಟ್ಟಿದ ಎಲೆಯನ್ನು ವರ್ಷವಿಡೀ ಇರಿಸಿಕೊಂಡಿದ್ದ ಮರ, ಹಣ್ಣಾದ ಬಳಿಕ ಎಷ್ಟು ನಿರಾಳವಾಗಿ ಕೈಬಿಡುತ್ತಿದೆ! ಚಿಕ್ಕಂದಿನಲ್ಲಿ ಅಮ್ಮ ಹೇಳುತ್ತಿದ್ದಳು. ಸ್ವರ್ಗದಲ್ಲಿ ಒಂದು ಮರವಿದೆಯಂತೆ. ಅದರಲ್ಲಿ ನಮ್ಮ ಹೆಸರಿನ ಎಲೆಗಳಿವೆಯಂತೆ. ಅದು ಉದುರಿದ ದಿನ ಇಲ್ಲಿ ನಮ್ಮ ಪ್ರಾಣ ಹೋಗುತ್ತದಂತೆ. ಉದುರಿದ ಎಲೆಯ ಜಾಗದಲ್ಲಿ ಹೊಸ ಚಿಗುರು ಬರಬಹುದು. ಆದರೂ ಉದುರಿದ ಎಲೆಯ ತಬ್ಬಲಿತನ ಇನ್ನಿಲ್ಲದಂತೆ ಕಾಡುತ್ತದೆ. ಎಲೆಯುದುರಿಸಿದ ಮರಗಳೀಗ ಮುಂದಿನ ಉಗಾದಿ ತನಕ ಅಭಯಕೊಡುವಂತೆ ಚಿಗುರುತ್ತಿವೆ. ಮನೆಯೆದುರಿನ ಬೇವು ಮುತ್ತಿನ ಮೂಗುಬೊಟ್ಟಿನಂತಹ ಹೂಗಳನ್ನು ಗೊಂಚಲಾಗಿ ಬಿಟ್ಟಿದೆ. ಇಂತಹ ಋತುಚಕ್ರದ ಯಾವ ಕರಾರಿಗೂ ಸಹಿಹಾಕದ ಬಾಳೆಗೆ ಎಲೆಬದಲಿಸುವ ಗರಜಿಲ್ಲ. ಕೆಂಡಸಂಪಿಗೆ ಗಿಡದಲ್ಲಿ ಉಳಿದಿರುವ ಕೊನೆಯ ಮೊಗ್ಗುಗಳು, ಮನೆಗೆಲಸಕ್ಕೆ ಹೋಗಿಬರುವ ಬಡ ಹುಡುಗಿಯರಂತೆ ಸೊರಗಿ ಸಣ್ಣಗೆ ಅರಳುತ್ತಿವೆ. `ಇದು ಗೊಡ್ಡು ಬಿದ್ದಿದೆ ಕಂಡ್ರಿ, ಕಡಿದು ಎಸೀರಿ ಅತ್ಲಾಗೆ’ ಎಂದು ಸಾರ್ವಜನಿಕ ಒತ್ತಾಯವಿದ್ದರೂ, ನನ್ನ ವೀಟೊ ಕಾರಣದಿಂದ ನಿಂತಿರುವ ಕಾಡುನೆಲ್ಲಿ, ರೆಂಬೆಗಳಲ್ಲಿ ಗಿಣಿಹಸುರಿನ ಸಣ್ಣಚಿಗುರು ತಳೆದು ಇನ್ನೊಂದು ಅವಕಾಶ ಕೊಡಿ ಎಂದು ಅರ್ಜಿ ಹಾಕುತ್ತಿದೆ. ನುಗ್ಗೆ, ಜೋಗಮ್ಮನ ಜಡೆಗಳಂತೆ ಕಾಯಿಗಳನ್ನು ಇಳಿಬಿಟ್ಟು ತೃಪ್ತಿಯಿಂದ ನಿಂತಿದೆ. ಅಂಜೂರ ಮಾತ್ರ ಎಮ್ಮೆಕಿವಿಯಂತಹ ಎಲೆಗಳ ಮೇಲೆ ಧೂಳನ್ನು ಹೊತ್ತು ತಾಪ ಕೆರಳಿಸುತ್ತಿದೆ. ಜಂಬುನಾಥನ ಬೆಟ್ಟದಲ್ಲಿ ನಿಶ್ಯಬ್ದವಾಗಿ ಮಲಗಿದ್ದ ಅದಿರನ್ನು ಬಲಾತ್ಕಾರವಾಗಿ ಮೇಲೆಬ್ಬಿಸಿ, ವಿದೇಶಗಳಿಗೆ ಕಳಿಸಿ ರೊಕ್ಕ ಬಾಚುತ್ತಿರುವ ಧಣಿಗಳು ಎಲ್ಲಿದ್ದಾರೊ ಏನೊ, ಅವರು ಹಬ್ಬಿಸಿದ ಧೂಳು ನಮ್ಮ ಮರದೆಲೆಗಳ ಮೇಲೆ ತಬ್ಬಲಿಯಂತೆ ಪವಡಿಸಿದೆ. ಗಣಿಯೂರಲ್ಲಿ ನೆಲೆಸಿರ್ದ ಬಳಿಕ ಕೆಂಧೂಳಿಗೆ ಅಂಜಿದೊಡೆ ಹೇಗೆ ಎಂದುಕೊಂಡು, ವಾಸ್ತವವಾದಿ ಅಂಜೂರ ಗಿಡ ನೀಳತೊಟ್ಟಿನ ಚಪ್ಪಟೆಮುಖದ ಹಸಿರುಕಾಯನ್ನು ಮೈತುಂಬ ಕಚ್ಚಿಕೊಂಡಿದೆ. ಆದರೆ ಇಷ್ಟಪಟ್ಟು ನೆಟ್ಟ ಬದಾಮಿ ಮಾವು ಮಾತ್ರ ಚಿಗುರಿ ನಿರಾಶೆ ತಂದಿದೆ. ಅದರ ಕೆಂದಳಿರು ಮೋಹಕವಾಗಿದೆ. ಅದು ಈ ಸಲ ಫಲವಿಲ್ಲ ಎಂದು ಕೊಟ್ಟಿರುವ ನೋಟಿಸಾಗಿದ್ದು ಅದರ ಸೌಂದರ್ಯ ಅಹಿತವಾಗಿ ಕಾಣುತ್ತಿದೆ. ವಸಂತಮಾಸದಲ್ಲಿ ಮಾವಿನ ಚಿಗುರು ತಿನ್ನಲು ಕೋಗಿಲೆಗಳು ಬಂದು ಕೂಗುತ್ತವೆ ಎಂಬುದು ಕವಿಸಮಯ. ನಮ್ಮ ಮಾವಿನ ಮರ ಕಂಡಂತೆ ಸದಾ ಮೆರೂನ್ ಬಣ್ಣದ ಕೆಂಬೂತಗಳು ಬಂದು ಕುಳಿತು, ಗಂಟಲನ್ನು ಕ್ಯಾಕರಿಸಿ ಸರಿಪಡಿಸಿಕೊಳ್ಳುವವರಂತೆ ಖ್‍ಖ್‍ಖ್ ನಾದ ಹೊರಡಿಸುತ್ತ ಸುರತಕೇಳಿ ಮಾಡುತ್ತವೆ. ಇಷ್ಟಾಗಿಯೂ ಮೂರು ಕೊಂಬೆಗಳು ಚಿಗರದೆ ಕಪ್ಪುಹಸಿರಿನ ಹಳೇಎಲೆಗಳನ್ನು ಇಟ್ಟುಕೊಂಡು, ಹೂತು ಮಾವು ಬಿಡುವ ಭರವಸೆ ನೀಡುತ್ತಿವೆ. ಒಂದಷ್ಟು ಬಲಿತ ಕಾಯಿ, ಒಂದಷ್ಟು ಮಿಡಿ, ಒಂದಷ್ಟು ಹೂವು ಎಲ್ಲವೂ ಒಟ್ಟೊಟ್ಟಿಗೆ ಇವೆ. ಅರೆಹುಚ್ಚನಂತಿರುವ ಮಾವಿನ ಮರವನ್ನೂ, ಬೀದಿ ಮಣ್ಣಲ್ಲಿ ಆಡಿಬಂದ ಮಗುವಿನಂತಹ ಅಂಜೂರ ಗಿಡವನ್ನೂ ನೋಡುತ್ತಿರುವಂತೆ, ಉಗಾದಿ ವಿಚಿತ್ರ ಭಾವವನ್ನು ಸ್ಫುರಿಸುತ್ತಿದೆ. ಬಾಲ್ಯದ ಮಧುರ ನೆನಪುಗಳೂ, ಬೇಂದ್ರೆ ಕವನ ಹುಟ್ಟಿಸಿದ ಕಂಪನಗಳೂ ಕೆಂಧೂಳಿನ ವಾಸ್ತವತೆಗಳೂ ಮಿಶ್ರಗೊಂಡು ನುಗ್ಗುತ್ತಿವೆ. ತಮ್ಮೆಲ್ಲ ದುಗುಡಗಳೊಳಗೆ ಬದುಕುವ ಯಾವುದೊ ತ್ರಾಣ ಜನರಲ್ಲಿದೆ. ಹಬ್ಬ ಬರುವುದೇ ದಣಿದ ಜೀವಗಳಿಗೆ ಚೈತನ್ಯ ತುಂಬಲು. ಬೀದಿಯಲ್ಲಿ ಕಟ್ಟುತ್ತಿರುವ ಕಟ್ಟಡಗಳನ್ನು ಕಾಯಲೆಂದು ಊರುಬಿಟ್ಟು ಬಂದಿರುವ ವಾಚ್‍ಮನ್ ಶೆಡ್ಡುಗಳತ್ತ ನೋಡಿದೆ. ಕವನದ ಮೊದಲ ಭಾಗದಲ್ಲಿರುವ `ಭೃಂಗದ ಕೇಳಿ’ ಮಕ್ಕಳಿಂದ ಹೊಮ್ಮಿ ಬರುತ್ತಿದೆ. ಕವನದ ಕೊನೆಯ ಭಾಗವನ್ನೇ ಧೇನಿಸುತ್ತ ವಿಷಾದಮುಖಿಯಾಗಿರುವ ನನ್ನನ್ನು ಅಣಕಿಸುತ್ತಿದೆ. ಯುಗಕ್ಕೆ ಆದಿ ಯಾವುದೊ ಏನೊ? ಅದರ ಅಂತ್ಯವನ್ನೇ ಕುರಿತು ಯಾಕೆ ಚಿಂತಿಸಬೇಕು. ಮನುಷ್ಯರಿಗೆ ಅಂತ್ಯವಿರುವುದು ನಿಜ. ಆದರೆ ಪಯಣದ ಹಾದಿಯಲ್ಲಿ ದೊರಕುವ ನೋಟಗಳು ಅನಂತವಾಗಿವೆ. ಇದು ಬೇಂದ್ರೆಯವರಿಗೂ ಅರಿವಿತ್ತು. ಎಂತಲೇ ತಾವೇ ಬರೆದ `ಯುಗಾದಿ’ ಕವನಕ್ಕೆ ಡಿಕ್ಕಿಹೊಡೆಯುವಂತೆ `ಈ ತುಂಬಿಬಾಳು ತುಂಬಿರುವ ತನಕ ತುಂತುಂಬಿ ಕುಡಿಬೇಕು’ ಎಂಬ ಸಾಲನ್ನೂ ಬರೆದರು. ಉಮರ್ ಖಯಾಮನನ್ನು ಕನ್ನಡಿಸುತ್ತ ಹುಟ್ಟಿದ ಸಾಲುಗಳಿವು. ಸಾವು ಹತಾಶೆಯನ್ನು ಮಾತ್ರವಲ್ಲ, ತೀವ್ರವಾಗಿ ಬದುಕುವ ಉತ್ಕಟತೆಯನ್ನೂ ಹುಟ್ಟಿಸಬಲ್ಲದು. (ಪಂಡಿತ್ ಬಿಜಾಪುರೆ ಲೇಖನಕ್ಕೆ ಸಿಕ್ಕ ಮೆಚ್ಚುಗೆ ಕಂಡಬಳಿಕ, ಈ ಹಿಂದೆ ಬರೆದ ಆದರೆ ಪುಸ್ತಕರೂಪದಲ್ಲಿನ್ನೂ ಬಂದಿರದ ಕೆಲವು ಟಿಪ್ಪಣಿಗಳನ್ನು ಹಂಚಿಕೊಳ್ಳಬಹುದು ಅನಿಸಿ ಈ ಈ ಬರಹ.) *********************** ಲೇಖಕರ ಬಗ್ಗೆ: ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಪೇಟಿಮಾಂತ್ರಿಕ ಬೆಳಗಾವಿಯಲ್ಲಿರುವ ಪಂಡಿತ್ ರಾಮಭಾವು ಬಿಜಾಪುರೆ ಅವರನ್ನು ಕಾಣಬೇಕೆಂದು ನನಗೆ ಅನಿಸಿತು. ಮಿತ್ರರಾದ ಕುಸಗಲ್ಲರಿಗೆ ವಿಷಯ ತಿಳಿಸಲು `ನಾವು ಇದೇ ಊರಾಗಿದ್ರೂ ಅವರ ಮನೀಗ್ ಹೋಗಿಲ್ಲ, ಬರ್ರಿ ಸರ’ ಎಂದು ಕರೆದೊಯ್ಯಲು ಒಪ್ಪಿದರು. ಮುಸ್ಸಂಜೆ ಹೊತ್ತಿಗೆ ಶ್ರೀ ಕುಸುಗಲ್ಲ, ಅವರ ಮಗಳು ಕವಿತಾ, ಸ್ನೇಹಿತ ಡಾ. ಕೋಲ್ಕಾರ ಅವರೊಡನೆ ಬಿಜಾಪುರೆ ಅವರಲ್ಲಿಗೆ ಹೊರಟೆ. ಹಳೇ ಬೆಳಗಾವಿಯ ಬೀದಿಗಳು. ಪಶ್ಚಿಮಘಟ್ಟದ ಜಿರ್ರೋ ಮಳೆಧಾರೆ. ಕಚಿಪಿಚಿ ಕೆಸರು. ಹಸುರು ಕಕ್ಕುವ ಗಿಡಮರಪೊದೆ. ಮನೆಯ ಛಾವಣಿ ಕಾಂಪೌಂಡು ಗೋಡೆಗಳು ಹಸಿರು ಸ್ವೆಟರುಟ್ಟಂತೆ ಬೆಳೆದ ಹಾವಸೆ. ಮಬ್ಬುಕವಿದ ಬೂದಿಬಡುಕ ಆಗಸದಲ್ಲಿ ಶಿವಸೇನೆಯ ಮಾರುದ್ದದ ಭಗವಾಧ್ವಜಗಳ ಪಟಪಟ-ಇತ್ಯಾದಿ ಕಣ್ಣೊಳಗೆ ತುಂಬಿಕೊಳ್ಳುತ್ತಿರಲು ಮನೆ ಮುಟ್ಟಿದೆವು.  ಸಾಧಾರಣ ಮನೆ. ಬಾಗಿಲು ತೆರೆದವರು ಹಣ್ಣುಹಣ್ಣಾದ ಮುದುಕಿ. ಅದು ‘ಕಷಾ ಸಾಠಿ ಆಲ?’ (ಏನು ಬಂದಿರಿ?) ಎಂದು ಹಣೆಸುಕ್ಕು ಮಾಡಿಕೊಂಡು ಪ್ರಶ್ನೆ ಒಗೆಯಿತು. ‘ಬಿಜಾಪುರೆ ಮಾಸ್ತರನ್ನು ಕಾಣಬೇಕಿತ್ತು’ ಎನ್ನಲು ‘ಹಂಗೇನ್ರಿ. ಬರ್ರಿ, ಒಳಗ ಬರ್ರಿ. ಕುಂದರ್ರಿ. ಮ್ಯಾಲ ಹುಡ್ರುಗೆ ಅಭ್ಯಾಸ ಮಾಡಿಸಲಿಕ್ಕೆ ಹತ್ಯಾರ’ ಎಂದು ಬರಮಾಡಿಕೊಂಡರು. ‘ತಾವು ಬಿಜಾಪುರೆಯವರಿಗೆ..?’ ಎನ್ನಲು ‘ಕಿರೀ ಮಗಳ್ರೀ’ ಎಂದು ಜವಾಬು ಸಿಕ್ಕಿತು. ಮಗಳೇ ಇಷ್ಟು ಹಣ್ಣಾಗಿರಬೇಕಾದರೆ, ಅಪ್ಪ ಇನ್ನೆಷ್ಟು ಕಳಿತಿರಬೇಕು ಎಂದುಕೊಂಡು ಕುಳಿತೆವು. ಹತ್ತು ಮಿನಿಟು ಮುಗಿದಿರಬೇಕು. ‘ಪಾಠ ಮುಗಿದಿದೆ, ಅತಿಥಿಗಳು ಮೇಲೆ ಹೋಗಬಹುದು’ ಎಂದು ಸಂದೇಶ ಬಂತು. ಕರೆಂಟು ಹೋಗಿ ಕತ್ತಲಾಗುತ್ತಿತ್ತು. ಪಾಚಿಹಿಡಿದ ಪಾವಟಿಗೆಗಳನ್ನು ಹುಶಾರಾಗಿ ಹತ್ತಿ ಮೇಲೆ ಹೋದೆವು.ಸಣ್ಣದೊಂದು ಖೋಲಿಯಲ್ಲಿ ಗ್ಯಾಸ್‍ಬತ್ತಿಯ ಬೆಳಕಲ್ಲಿ ಬಿಜಾಪುರೆ ಲೋಡುತೆಕ್ಕೆಗೆ ಒರಗಿದ್ದರು. ಇಬ್ಬರು ಶಿಷ್ಯರು-ಅತಿಥಿ ಸತ್ಕಾರದಲ್ಲಿ ನೆರವಾಗಲೆಂದೊ ಏನೊ-ಅಲ್ಲೇ ಗೋಡೆಗೊರಗಿ ಕುತೂಹಲದ ದಿಟ್ಟಿತೊಟ್ಟು ನಿಂತಿದ್ದರು. ಅವರು ಗುರುಗಳಿಗೆ ಕೋಟು ತೊಡಿಸಲು ನೆರವಾಗಿರಬೇಕು. ತಿಳಿಯಾಗಸ ಬಣ್ಣದ ಕೋಟಿನ ಗುಂಡಿಗಳನ್ನು ಬಿಜಾಪುರೆ ಆಗಷ್ಟೆ ಹಾಕಿಕೊಳ್ಳುತ್ತಿದ್ದರು. ಆ ಕೋಟಿನಲ್ಲಿ ಲಕ್ಷಣವಾಗಿ ಕಾಣುತ್ತಿದ್ದರು. ಆರಡಿ ಎತ್ತರದ, ತಲೆಕೆಳಗಾಗಿ ಹಿಡಿದ ತಂಬೂರಿಯಂತಿದ್ದ ನೆಟ್ಟನೆ ಕಾಯದ ಬಿಜಾಪುರೆ, ವಯೋಸಹಜ ಸೊರಗಿದ್ದರು. ಗಾಂಧಿಕಿವಿ. ವಿಶಾಲ ಹಣೆ. ಕರೀಟೊಪ್ಪಿಗೆ. ಹೊಳೆವ ಕಣ್ಣು. ಪೇಟಿ ಮನೆಗಳ ಮೇಲೆ ಆಡಲೆಂದೇ ಮಾಡಿದಂತಿರುವ ನೀಳ್‍ಬೆರಳು. ಎದುರುಗಡೆ ಅರ್ಧ ಕತ್ತರಿಸಿಟ್ಟ ಕುಂಬಳಕಾಯಿಯ ಹೊಳಕೆಗಳಂತೆ ವಿಶ್ರಾಂತ ಸ್ಥಿತಿಯಲ್ಲಿರುವ ತಬಲಗಳು. ಬಗಲಿಗೆ ಹಾರ್ಮೊನಿಯಂ.  ಬಿಜಾಪುರೆ ಭಾರತದ ಬಹುತೇಕ ಹಿಂದೂಸ್ಥಾನಿ ಗಾಯಕರಿಗೆ ಸಾಥಿದಾರರಾಗಿ ಹಾರ್ಮೋನಿಯಂ ನುಡಿಸಿದವರು. ನಾವು ನಮಸ್ಕರಿಸಿ ಸುತ್ತ ಕೂತೆವು. ‘ಹ್ಞಾಂ ಹೇಳ್ರಿ. ಏನ್ ಬಂದದ್ದು? ಎಲ್ಲಿಂದ ಬಂದಿರಿ?’ ಎಂದರು ಬಿಜಾಪುರೆ. ‘ನಿಮ್ಮನ್ನು ಕಾಣಲೆಂದೇ ಬಂದೆವು’ ಎಂದೆವು. ‘ಛಲೋ ಆತು. ಥಂಡಿ ಅದ. ಚಾ ಕುಡಿಯೋಣಲ್ಲ?’ ಎಂದು ಶಿಷ್ಯನತ್ತ ನೋಡಲು ಆತ ಮರಾಠಿಯಲ್ಲಿ `ಈಗ ತಂದೆ’ ಎಂದು ಕೆಳಗೆ ದೌಡಿದನು. “ನಿಮ್ಮ ಆರೋಗ್ಯದ ಗುಟ್ಟು ಏನು?’ ಎಂದೆ. ಆತ್ಮವಿಶ್ವಾಸ ತುಂಬಿದ ಗಟ್ಟಿದನಿಯಲ್ಲಿ `‘ಸಂಗೀತ. ನಮ್ಮ ಸಂಗೀತ ಮಂದಿಯೆಲ್ಲ ದೀರ್ಘಾಯುಷ್ಯದೋರು. ಹಾಡೋದೇ ದೊಡ್ಡ ಪ್ರಾಣಾಯಾಮ ಆಗ್ತದ’’ ಎಂದು ನಕ್ಕರು. ಹಿನ್ನೆಲೆ ಕೆದಕಿದೆ: “ನಮ್ಮ ಮುತ್ಯಾ ಮೂಲಮಂದಿ ಬಿಜಾಪುರದವರಂತ. ನಮ್ಮಪ್ಪ ಸಾಲಿ ಮಾಸ್ತರ ಇದ್ದರು. ದೊಡ್ಡ ಸಾಹಿತಿ. ಸಂಗೊಳ್ಳಿ ರಾಯಣ್ಣ ನಾಟಕ ಬರದೋರು. ಅವರಿಗೆ ಅಥಣಿ ತಾಲೂಕ ಕಾಗವಾಡಕ್ಕ ವರ್ಗ ಆಯ್ತು. ಮುಂದ ಬೆಳಗಾಂವ್ಞಿ ಸೇರಿಕೊಂಡಿವಿ’ ಎಂದರು. ಸಂಗೀತದ ಹಿನ್ನೆಲೆ ಕೇಳಿದೆ: ‘ರಾಮಕೃಷ್ಣ ಬುವಾ ವಝೆ ನನ್ನ ಗುರುಗಳು. ನನಗ ವೋಕಲ್ ಕಲೀಲಿಕ್ಕ ಆಸೆಯಿತ್ತು. ಯಾನ್ ಮಾಡೋದರಿ,  ದನಿ ಒಡದಬಿಡ್ತು. ಆವಾಜ್ ಹೋಗಿಬಿಡ್ತು. ಅದಕ್ಕ ಈ ಪೇಟಿ ಕಡಿ ಬಂದಬಿಟ್ಟೆ. ಈಗಲೂ ಥೋಡಥೋಢ ಹಾಡ್ತೀನಿ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ಲ, ಬಸವರಾಜ ರಾಜಗುರು, ಕುಮಾರಗಂಧರ್ವ, ಮಾಣಿಕವರ್ಮ, ಅಮೀರಖಾನ್- ಹೀಂಗ ಬೇಕಾದಷ್ಟ ಮಂದಿಗೆ ಸಾಥ್ ಮಾಡೀನಿ” ಎಂದರು. `ಯಾರ ಜತೆ ಹೆಚ್ಚು ಸಂತೋಷ ಸಿಕ್ಕಿತು’ ಎನ್ನಲು `ಅಮೀರ್‍ಹುಸೇನ್ ಖಾನ್ ಹಾಡಿಕೆಗೆ. ಅವರು ಭಯಂಕರ ಛಲೋ ಹಾಡ್ತಿದ್ದರು’ ಎಂದರು. ಹೀಗೇ ಹೊರಗೆ ಹನಿಯುತ್ತಿದ್ದ ತುಂತುರು ಮಳೆಯಂತೆ ಮಾತುಕತೆ ನಡೆಯಿತು. ಅವರ ಮಾತೊ, ಫಾರಸಿ ಮರಾಠಿ ಕನ್ನಡ ಹದವಾಗಿ ಬೆರೆತದ್ದು. ನಮಗೆ ಅವರು ಪೇಟಿಯ ಮೇಲೆ ಬೆರಳಾಡಿಸಿ ನಾದ ಹೊರಡಿಸಿದರೆ, ಕಿವಿಯ ಮೇಲೆ ಹಾಕಿಕೊಂಡು ಹೋಗಬೇಕು ಎಂದಾಸೆ. ಸಂಗೀತವೇ ಒಂದು ಸಂಕರ ಕಲೆ. ಬೆರಕೆಯಿಲ್ಲದೆ ಅದು ಹುಟ್ಟುವುದೇ ಇಲ್ಲ. ಅದರಲ್ಲಿ ಈ ಹಾರ್ಮೊನಿಯಂ ತಾನು ಹುಟ್ಟಿಸುವ ಸಮಸ್ತ ಸ್ವರಗಳನ್ನು ಬೆರೆಸುವ ಮಾಯಾಮಂಜೂಷ. ಹಿಂದೊಮ್ಮೆ ಅದರ ಕವಚ ತೆಗೆದು ಅದು ಹೇಗೆ ಕೆಲಸ ಮಾಡುತ್ತದೆ ಎಂದು ಪರೀಕ್ಷಿಸಿದ್ದೆ. ಕುಲುಮೆಯ ತಿದಿಯಂತೆ ಹಿಂಬದಿಯ ತೂತುಗಳ ಮೂಲಕ, ಪ್ರಾಣಾಯಾಮದ ಕುಂಭಕದಂತೆ ಗಾಳಿ ಒಳಗೆ ತುಂಬಿಕೊಳ್ಳುತ್ತದೆ. ಮುಂಭಾಗದಲ್ಲಿರುವ ಕರಿಬಿಳಿ ಮನೆಗಳನ್ನು ಬೆರಳಿಂದ ಒತ್ತಿದರೆ, ತುಂಬಿಕೊಂಡ ಉಸಿರು ಅಗತ್ಯಕ್ಕೆ ತಕ್ಕನಾಗಿ ರಂಧ್ರ್ರವಿರುವ ಕೊಂಡಿಗಳ ತುದಿಗಳಿಂದ ಹೊರಟು ಬಗೆಬಗೆಯ ಏರಿಳಿತಗಳಲ್ಲಿ ನಾದ ಹೊಮ್ಮಿಸುತ್ತದೆ. ಏಕಕಾಲಕ್ಕೆ ಹೊಮ್ಮುವ ಈ ಹಲವು ನಾದಗಳು ಒಂದಾಗುತ್ತ ಹೊಳೆಯಂತೆ ಹರಿಯುತ್ತವೆ. ನಾನು ಶೇಷಾದ್ರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿ ಅವರ ಹಾರ್ಮೋನಿಯಂ ಕೇಳಿರುವೆ. ಪುಟ್ಟರಾಜರು ಪೇಟಿಯನ್ನು ಶಹನಾಯಿ ದನಿ ಹೊರಡುವಂತೆ ನುಡಿಸಬಲ್ಲವರಾಗಿದ್ದರು. ಕಂಪನಿ ನಾಟಕಗಳು ಶುರುವಾಗುವಾಗ ಗವಾಯಿ ಮಾಸ್ತರನು ಪೇಟಿಯ ಮೇಲೆ ಬೆರಳಾಡಿಸಿದರೆ, ಇಡೀ ಥಿಯೇಟರಿನ ಶಾಬ್ದಿಕ ಕಸವನ್ನೆಲ್ಲ  ಕಸಬರಿಕೆ ತೆಗೆದುಕೊಂಡು ಗುಡಿಸಿದಂತಾಗಿ, ಮನಸ್ಸೂ ವಾತಾವರಣವೂ ಶುದ್ಧವಾಗಿ,  ರಸಿಕರಿಗೆ ನಾಟಕ ನೋಡಲು ಬೇಕಾದ ಸಹೃದಯ  ಮನಃಸ್ಥಿತಿ ಸಿದ್ಧವಾಗುತ್ತದೆ. ಪೇಟಿಯಿಲ್ಲದೆ ನಾಟಕವಿಲ್ಲ. ಹರಿಕತೆಯಿಲ್ಲ. ಸಿನಿಮಾ ಗೀತೆಗಳಿಲ್ಲ. ಭಜನೆಯಿಲ್ಲ. ಭಾರತೀಯ ಸಂಗೀತದಲ್ಲಿ ಹಾರ್ಮೋನಿಯಂ ಸರ್ವಾಂತರ್ಯಾಮಿ.ಹೀಗೆ ಬಹುರೂಪಿಯಾದ ಈ ವಾದ್ಯ ಸ್ಥಳೀಕವಲ್ಲ. ಯೂರೋಪಿನಿಂದ ಬಂದಿದ್ದು. ಅದು ವಲಸೆ ಬಂದು ಇಲ್ಲಿನ ಅಗತ್ಯಗಳಿಗೆ ರೂಪಾಂತರ ಪಡೆದ ಕತೆ ರೋಚಕ. ಅದರ ಜತೆ ಮುಕ್ಕಾಲು ಶತಮಾನ ಕಾಲ ಕಳೆದಿರುವ ಬಿಜಾಪುರೆ ಹೇಳಿದರು: ‘ನೋಡ್ರಿ. ಇದು ಪ್ಯಾರಿಸ್ಸಿಂದು. ನಾಟಕಕ್ಕ ಅಂತ ತಂದದ್ದು. ನಮ್ಮ ಹಿಂದೂಸ್ತಾನಿ ಸಂಗೀತಕ್ಕ ಇದರಷ್ಟು ಯೋಗ್ಯ ಟ್ಯೂನಿಂಗ್ ಕೊಡೋದು ಮತ್ತ ಬ್ಯಾರೆ ಯಾವುದು ಇಲ್ಲ’.  ಸಂಗೀತ ಕಛೇರಿಯಲ್ಲಿ ತಬಲ ಪೇಟಿ ತಂಬೂರಿ ಮುಂತಾದ ಪಕ್ಕವಾದ್ಯದ ಸಾಥಿದಾರರು ಎಷ್ಟೇ ಪ್ರತಿಭಾವಂತರಿದ್ದರೂ, ಅವರದು ಎರಡನೇ ಸ್ಥಾನ. ಕೇಂದ್ರಬಿಂದು ಹಾಡುಗಾರರು; ವಾದ್ಯಸಂಗೀತವಿದ್ದರೆ ವಾದ್ಯಕಾರರು. ಎರಡನೇ ಸ್ಥಾನದಲ್ಲಿರಬೇಕಾದ ಇಕ್ಕಟ್ಟೇ ಕೆಲವಾದರೂ ಪ್ರತಿಭಾವಂತರನ್ನು ಪ್ರಯೋಗಗಳಿಗೆ ಪ್ರೇರೇಪಿಸಿರಬೇಕು. ವಿಜಾಪುರೆ ಸ್ವತಂತ್ರವಾಗಿ ಪೇಟಿ ಬಾರಿಸುತ್ತ, ಅದರಲ್ಲಿ ಹಾಡುಗಳನ್ನು ನುಡಿಸುತ್ತಿದ್ದರಂತೆ. ಅದನ್ನು ಗಾಯಕಿ ಶೈಲಿ ಎನ್ನುವರು. “ಹಾರ್ಮೊನಿಯಂ ಹಾಡಿನಂಗ ಬಾರಿಸೋನು ನಾನ ಒಬ್ಬನೇ ಉಳದೀನಿ. ಹಾಡಿನ ಧ್ವ್ವನಿ ಬರೋಹಂಗ ಇದರ ಮ್ಯಾಲ ಸಂಶೋಧನ ಮಾಡೀನಿ’ ಎಂದು ಮಗುವಿನಂತೆ ಬಚ್ಚಬಾಯಲ್ಲಿ ನಕ್ಕರು. ನಮಗೆ ಅದೃಷ್ಟವಿರಲಿಲ್ಲ. ವಿಜಾಪುರೆ ಪೇಟಿ ನುಡಿಸಲು ಒಲ್ಲೆನೆಂದರು.  ಪಾಠ ಹೇಳಿ ದಣಿದಿದ್ದರೊ, ಅರೆಗತ್ತಲೆಯಲ್ಲಿ ಬೇಡವೆನಿಸಿತೊ ತಿಳಿಯದು. ‘ಈಗ ಬೇಡ. ತಬಲ ಸಾಥಿಯಿಲ್ಲ. ಇನ್ನೊಮ್ಮೆ ಬರ್ರಿ. ಬೇಕಾದಷ್ಟು ನುಡಸ್ತೀನಿ. ನನ್ನ ಶಿಷ್ಯರು ಹಾರ. ಅವರು ಹಾಡ್ತಾರ’ ಎಂದು ಶಿಷ್ಯರಿಗೆ ‘ಭಾಳಾ, ಯೂನಿವರ್ಸಿಟಿಯಿಂದ ಪ್ರೊಫೆಸರ್ ಮಂದಿ ಬಂದಾರ. ಥೋಡ ಹಾಡ್ರಿ’ ಎಂದರು. ಕೇಳಿದರೆ ತಮ್ಮ ಕರುಳನ್ನೂ ಬಗೆದುಕೊಡುವಷ್ಟು ಭಕ್ತಿ ತುಂಬಿದಂತಿದ್ದ ಆ ತರುಣ ತರುಣಿ, ಗುರುವಿನ ಅಪ್ಪಣೆ ನೆರವೇರಿಸುತ್ತಿರುವ ಆನಂದವನ್ನೂ ಅಪರಿಚಿತರ ಮುಂದೆ ಸಂಕೋಚವನ್ನೂ ಸೂಸುತ್ತ, ತಲಾ ಒಂದೊಂದು ಮರಾಠಿ ಅಭಂಗ ಹಾಡಿದರು. ಅದೇ ಹೊತ್ತಿಗೆ ಸಂಗೀತಪಾಠದಿಂದ ಮಗಳನ್ನು ಕರೆದೊಯ್ಯಲು ಬಂದಿದ್ದ ಒಬ್ಬ ತಾಯಿ, ತನ್ನ ಕರುಳಕುಡಿ ಹಾಡುವುದನ್ನು ಮರೆಯಲ್ಲಿ ನಿಂತು ನೋಡುತ್ತ ಆನಂದ ಪಡುತ್ತಿದ್ದುದು ಮಬ್ಬುಬೆಳಕಲ್ಲೂ ಫಳಫಳಿಸುತ್ತಿತ್ತು. ಬಿಜಾಪುರೆ ತಾವು ಕೊಟ್ಟ ಗುಟುಕನ್ನು ತುಪ್ಪುಳಿಲ್ಲದ ಮರಿಗಳು ನುಂಗುವುದನ್ನು ನೋಡುವ ತಾಯ್ ಹಕ್ಕಿಯಂತೆ, ಮಡಿಲಲ್ಲಿ ಮಲಗಿದ ಕೂಸು ತಾನು ಉಚ್ಚರಿಸಿದ ಶಬ್ದಗಳನ್ನು ತೊದಲುತೊದಲಾಗಿ ಅನುಕರಿಸುತ್ತಿರಲು ಗಮನಿಸುವ ಅಜ್ಜಿಯಂತೆ, ಶಿಷ್ಯರ ಮುಖಗಳನ್ನೇ ತದೇಕ ನೋಡುತ್ತಿದ್ದರು. ಚಹ ಬಂತು. ಸಂಗೀತ ಕೇಳಲಾಗದ ನಿರಾಸೆಯಲ್ಲಿ ಚಹ ಸೇವಿಸುತ್ತಿರುವಾಗ, ಬಿಜಾಪುರೆ “ಈಗ ಗುರ್ತಾಯ್ತಲ್ಲ, ಮತ್ತೊಮ್ಮೆ ಬರ್ರಿ. ಇಡೀ ದಿವಸ ಬೇಕಾರ ಕೂಡೋಣು. ಬೇಕಾದಂಗ ಬಾರಸ್ತೀನಿ. ಇನ್ನ ಕರ್ನಾಟಕದೊಳಗ ಗಂಗೂಬಾಯಿ ನಾನೂ ಏಣಗಿ ಬಾಳಪ್ಪ ಮೂವರಿದ್ದಿವಿ. ಗಂಗೂಬಾಯಿ ಹ್ವಾದಳು. ನಾವಿಬ್ಬರು ಉಳದೀವಿ’ ಎಂದರು. ಮುಂದೆ ಅವರು (1917-2010) ಕಳಿತ ಎಲೆ ಚಳಿಗಾಲದಲ್ಲಿ ಸಣ್ಣಸಪ್ಪಳ ಹೊರಡಿಸಿ ಹಗುರಾಗಿ ನೆಲಕ್ಕೆ ಇಳಿಯುವಂತೆ ಹೋಗಿಬಿಟ್ಟರು. ಅವರ ಹಾರ್ಮೊನಿಯಂ ಕೇಳುವ ಕನಸು ಹಾಗೆಯೇ ಉಳಿದುಬಿಟ್ಟಿತು. (ನಾನು ಹಿಂದೆ ಪಂಡಿತ್ ಬಿಜಾಪುರೆ ಅವರ ಮೇಲೆ ಬರೆದಿದ್ದ ಪುಟ್ಟಲೇಖನವಿದು. ಬೆಳಗಾವಿಯ ಕವಿ ಕವಿತಾ ಕುಸುಗಲ್ಲ ಇದನ್ನು ಓದಬಯಸಿದರು. ಇದು ಆ ಬರೆಹ.) ********************** ಲೇಖಕರ ಬಗ್ಗೆ: ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

You cannot copy content of this page

Scroll to Top