ಮತ್ತೆ ಮೈಸೂರು ತಲುಪಿದಾಗ ಅಂಡಮಾನ್ ನ ಮಧುರ ನೆನಪುಗಳು ತುಂಬಿ ತುಂಬಿ ನಮ್ಮೊಂದಿಗೆ ಬಂದಿದ್ದವು
ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-9 ಮಡ್ ವೊಲ್ಕೆನೊ, ಭೂಮಿಯ ಅಡಿಯಲ್ಲಿ ಕೆಲವು ರಾಸಾಯನಿಕಗಳು ಕೊಳೆತು ಉಂಟಾದ ಗ್ಯಾಸ್ ನಿಂದಾಗಿ ಭೂಮಿಯನ್ನು ಬಿರಿದು ಕೆಸರು ಮೇಲಕ್ಕೆ ಚಿಮ್ಮುತ್ತದೆ. ಭೂಮಿಯ ತಳದಿಂದ ಕಲ್ಲಿನ ಚೂರುಗಳು, ಮರಳುಗಲ್ಲುಗಳು, ಸಮುದ್ರದ ಕೆಸರು, ಕೆಂಪು ಮತ್ತು ಹಸಿರು ಬಣ್ಣದ ಕಲ್ಲುಗಳು ಚಿಮ್ಮಿ ಮೇಲೆ ಬಂದು ಹರಿಯುತ್ತವೆ. ಬಿಸಿಯಾದ ಕೆಸರು ಹರಿದು ಬಂದು ನೋಡಲು ಸಿಮೆಂಟಿನಂತ ರಾಡಿಯಾಗಿ ನಿಂತಿತ್ತು. ಕೆಸರಿನ ಬುದ್ಬುದಗಳು, ನೀರ್ಗುಳ್ಳೆಗಳು ಆ ಜಾಗದಿಂದ ಹೊರಗೆ ಚಿಮ್ಮುತ್ತವೆ. ಅಂಡಮಾನ್ ದ್ವೀಪದಲ್ಲಿ ಒಟ್ಟು ಹನ್ನೊಂದು ಇಂತಹ ಮಣ್ಣಿನ ಜ್ವಾಲಾಮುಖಿಗಳಿವೆಯಂತೆ. ಅವುಗಳಲ್ಲಿ ಎಂಟು ಭರಟಾಂಗ್ ದ್ವೀಪದಲ್ಲೇ ಇವೆ. ಉಳಿದವು ಉತ್ತರ ಅಂಡಮಾನ್ ಪ್ರದೇಶದಲ್ಲಿವೆ. ರಷ್ಯಾ, ಉಕ್ರೇನ್, ಇಟೆಲಿ, ರೊಮಾನಿಯಾ, ಚೈನಾ, ಇರಾನ್, ಪಾಕಿಸ್ತಾನಗಳಲ್ಲೂ ಇಂತಹ ಕೆಸರಿನ ಜ್ವಾಲಾಮುಖಿಗಳಿವೆಯಂತೆ. ಮೇಲೆ ಹತ್ತಿ ಹೋಗಲು ಮೆಟ್ಟಿಲುಗಳಿವೆ. ಮಧ್ಯ ಮಧ್ಯ ನಡೆದು ಹೋಗುವ ದಾರಿ, ನಡುನಡುವೆ ಮೆಟ್ಟಿಲುಗಳು. ಹೋಗುವ ಮತ್ತು ಬರುವ ದಾರಿ ಸ್ವಲ್ಪ ಪ್ರಯಾಸದಾಯಕವಾಗಿದ್ದರೂ ಅಪರೂಪದ, ಇಂಥದ್ದೊಂದು ಸೃಷ್ಟಿಯ ವೈಚಿತ್ರ್ಯವು ನೋಡಲು ಸಿಕ್ಕಿತು. ಬಣ್ಣ ಹಸಿಯಾಗಿದೆ ಎಂದು ಬೋರ್ಡ್ ಹಾಕಿದ್ದರೂ ಒಮ್ಮೆ ಮುಟ್ಟಿ ನೋಡಿ ಪರೀಕ್ಷಿಸಬೇಕೆಂದು ಅನಿಸುವುದು ಸಹಜ. ಹಾಗೆಯೇ ಇಲ್ಲಿ ಬಿಸಿಯಾಗಿದೆ ಎಂದು ಹೇಳಿದ್ದರೂ, ಸಣ್ಣಗೆ ಹೊಗೆ ಬರುತ್ತಾ ಇದ್ದರೂ, ಮೆಲ್ಲ ಹರಿದು ಬರುತಿದ್ದ ಆ ರಾಡಿಯನ್ನು ಒಮ್ಮೆ ಬೆರಳಿನಿಂದ ಮುಟ್ಟಿದೆ. ಸುಡುವಂತಲ್ಲದಿದ್ದರೂ ಬಿಸಿ ಇತ್ತು. ಅಷ್ಟೇ.. ಅಲ್ಲಿ ಹತ್ತಿ ಹೋಗಿ ಸುಧಾರಿಸಿಕೊಂಡು ಸ್ವಲ್ಪ ಹೊತ್ತು ಅಲ್ಲಿದ್ದು ವಾಪಸ್ ಕೆಳಗೆ ಬಂದೆವು. ಮತ್ತೆ ದೋಣಿ ಹತ್ತಿ ಭರಟಾಂಗ್ ಜೆಟ್ಟಿಗೆ ಬಂದು ಅಲ್ಲಿಂದ ಫೆರ್ರಿ ಕ್ರಾಸ್ ಮಾಡಿ ಇನ್ನೊಂದು ಭಾಗಕ್ಕೆ ಬಂದು ಅಲ್ಲಿ ಚಿಕ್ಕ ಮನೆಯಂತ ಹೋಟೆಲ್ ಒಂದರಲ್ಲಿ, ಬಹುಷಃ ಅದು ಒಂದೇ ಹೋಟೆಲ್ ಇರಬೇಕು ಅಲ್ಲಿ. ಊಟಕ್ಕೆಂದು ಕರೆತಂದರು. ಅಲ್ಲಿಗೆ ಬರುವ ಪ್ರವಾಸಿಗರು ಅದೇ ಹೋಟೆಲ್ ಗೆ ಬರಬೇಕಿತ್ತು ಅನಿಸುತ್ತದೆ. ತುಂಬಾ ಜನ ತುಂಬಿದ್ದರು ಅಲ್ಲಿ. ಅಂತೂ ಇಂತೂ ಸ್ವಲ್ಪ ಕಾದ ಮೇಲೆ ಒಳ್ಳೆಯ ಊಟ ಸಿಕ್ಕಿತು. ಅನ್ನ, ಸಾಂಬಾರು, ಪಲ್ಯ, ಹಪ್ಪಳ, ಉಪ್ಪಿನಕಾಯಿ ನಮ್ಮೂರಿನ ಊಟದ ಹಾಗೇ ಇತ್ತು. ಸಹಜವಾಗಿ ಭಯಂಕರ ಹಸಿವೆಯೂ ಆಗಿತ್ತು. ಅಮೃತದಂತೆ ರುಚಿ ಅನಿಸಿತು ಎಲ್ಲರಿಗೂ. ಅಲ್ಲಿಂದ ಹೊರಡುವಾಗ ಎಲ್ಲರೂ ಅಂದರೆ ನಮ್ಮ ಯುವಪೀಳಿಗೆ, ರಾಕೇಶ್ ಅವರನ್ನು ನೀವು ಆದಿವಾಸಿಗಳನ್ನು ತೋರಿಸಲೇ ಇಲ್ಲ ಎಂದು ಪೀಡಿಸುತಿದ್ದರು. ಈಗ ಸಿಗಬಹುದು ನೋಡೋಣ, ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಹೊರಗೆ ಬರುತ್ತಾರೆ ಎಂದರು. ನಾವು ಬಂದ ಬಸ್ಸು ನಮಗಾಗಿ ಕಾದಿತ್ತು ಅಲ್ಲಿ. ಫೋಟೊ ತೆಗೆಯಬಾರದೆಂದು ಎಚ್ಚರಿಸಿದ್ದರೂ ಯಾರೋ ಮಹಿಳೆಯೊಬ್ಬರು ಆದಿವಾಸಿ ಮಹಿಳೆಯನ್ನು ಕಂಡಕೂಡಲೇ ತಮ್ಮ ಫೋನ್ ಕೈಗೆ ತಗೊಂಡು ಕ್ಲಿಕ್ ಮಾಡುವಾಗ ಫ್ಲಾಶ್ ಬೆಳಕು ಅದು ಹೇಗೆ ಆ ಆದಿವಾಸಿ ಮಹಿಳೆಗೆ ತಿಳಿಯಿತೊ, ಬಸ್ಸು ನಿಲ್ಲಿಸಿ ಹತ್ತಿ ಬಂದು ಆ ಫೋಟೊ ತೆಗೆದ ಮಹಿಳೆಯನ್ನೇ ಹಿಗ್ಗಾ ಮುಗ್ಗಾ ಥಳಿಸಿ ಹಾಕಿದ್ದು ಉದಾಹರಣೆಯಾಗಿ ಹೇಳಿ ನಮ್ಮನ್ನೆಲ್ಲಾ ಹೆದರಿಸಿ ಇಟ್ಟರು ರಾಕೇಶ್ ಸರ್. ತುಂಬಾ ನಿಧಾನವಾಗಿ ಚಲಿಸುತ್ತವೆ ಅಲ್ಲಿ ವಾಹನಗಳು, ಪ್ರಕೃತಿ ಸೌಂದರ್ಯದ ಜೊತೆಗೆ ಆದಿವಾಸಿಗಳ ದರ್ಶನ ಭಾಗ್ಯ ಸಿಗಬಹುದೆನ್ನುವ ಸಣ್ಣ ಆಸೆಯಿಂದ ಕೂಡ. ಒಬ್ಬರನ್ನಾದರೂ ತೋರಿಸಿಯೇ ತೋರಿಸುತ್ತೇವೆ ಎಂಬ ಆಶ್ವಾಸನೆ ನೀಡಿದ್ದರು ನಮ್ಮ ಬಸ್ ಡ್ರೈವರ್. ಮುಂದೆ ಮುಂದೆ ಸಾಗುತ್ತಿರುವಾಗ ಅಲ್ಲಿ ನೋಡಿ ಅಂದಿದ್ದು ಕೇಳಿಸಿತು. ಅಲ್ಲಿ ಎಂದರೆ ಎಲ್ಲಿ ಎಂದು ನೋಡುವುದರೊಳಗೆ ಒಬ್ಬ ಆರು ಅಡಿಗಳಿಗಿಂತಲೂ ಎತ್ತರದ ಹದವಾದ ತೂಕದ ಕಟ್ಟು ಮಸ್ತಾದ ಕಪ್ಪು ಎಂದರೆ ಮಿರಿ ಮಿರಿ ಮಿಂಚುವ ಕಪ್ಪು ಬಣ್ಣದ ಆಕರ್ಷಕ ನಿಲುವಿನ ಆದಿವಾಸಿ ಯುವಕ ನಿಂತಿದ್ದ. ಮೈಮೇಲೆ ಬರ್ಮುಡಾ ಮಾತ್ರ ಧರಿಸಿದ್ದ. ಪಕ್ಕದಲ್ಲಿ ಅದೇ ನಿಲುವಿನ ಚಿಕ್ಕ ಗಾತ್ರ ಎನ್ನುವಂತಿದ್ದ ಒಂದು ಮಗುವಿತ್ತು. ಆ ದೃಶ್ಯ ಈಗಲೂ ಕಣ್ಣ ಮುಂದಿದೆ. ಅವನು ಯಾವ ವಾಹನವನ್ನೂ ನೋಡುತ್ತಿರಲಿಲ್ಲ. ನಮ್ಮಂತೆಯೇ ನಮ್ಮ ಹಿಂದೆ ಮುಂದೆ ವಾಹನಗಳು ಆಮೆ ವೇಗದಲ್ಲಿ ಚಲಿಸುತ್ತಾ ಇದ್ದವು. ಮತ್ತೆ ಮುಂದೆ ಹೋಗುತಿದ್ದಂತೆ ಒಬ್ಬಳು ಮಹಿಳೆ. ಅವಳು ಮಾತ್ರ ನೈಟಿ ಹಾಕಿಕೊಂಡಿದ್ದಳು. ಅಲ್ಲೊಂದು ಬಸ್ಸಿನವರು ಅವರ ಬಳಿ ಇದ್ದ ತಿನ್ನುವ ವಸ್ತುಗಳು, ಬಟ್ಟೆ, ಇನ್ನೂ ಏನೇನೋ ಹೊರಗೆ ಎಸೆಯುತಿದ್ದರು. ಆ ಹೆಂಗಸು ಬಗ್ಗಿ ಒಂದೊಂದನ್ನೂ ಹೆಕ್ಕುವುದರಲ್ಲೇ ಮಗ್ನಳಾಗಿದ್ದಳು. ಹಾಗೆಲ್ಲಾ ಏನೂ ಎಸೆಯಬೇಡಿ ಎಂದು ಮತ್ತೊಮ್ಮೆ ನಮ್ಮ ಮ್ಯಾನೇಜರ್ ನಮಗೆ ಹೇಳಿದರು. ಎಲ್ಲರೂ ಹೀಗೆ ಹೆಕ್ಕಿಕೊಳ್ಳುವುದಿಲ್ಲ, ಕೆಲವರು ಸಿಟ್ಟಾಗುತ್ತಾರೆ ಎಂದರು. ಮುಂದೆ ನಾವು ಕಾದು ನಿಂತಿದ್ದ ಗೇಟ್ ದಾಟಿ ಬಂದು ಬಸ್ ನಿಲ್ಲಿಸಿ, ಚಾ, ಕಾಫಿ ಕುಡಿಯುವವರಿಗೆ, ಶೌಚಾಲಯಕ್ಕೆ ಹೋಗುವವರಿಗೆಂದು ಸ್ವಲ್ಪ ಬಿಡುವು ಕೊಟ್ಟರು. ಇವತ್ತು ನಮಗೆ ಶಾಪಿಂಗ್ ಗೆ ಕರೆದುಕೊಂಡು ಹೋಗುತ್ತೇವೆಂದು ಹೇಳಿದ್ದರಲ್ಲಾ! ನಾವೂ ಬೇಗ ಹೋಗೋಣ ಎಂದು ಅವಸರ ಮಾಡುತಿದ್ದೆವು. ಈಗ ಬರುವಾಗ ಪೋರ್ಟ್ ಬ್ಲೇರ್ ನ ಬೇರೊಂದು ದಿಕ್ಕಿನಿಂದ ಬಸ್ಸು ಬಂದಿದ್ದರಿಂದ ಆ ಊರಿನ ಸಿಟಿಯಂತಹ ಭಾಗ ನೋಡಲು ಸಿಕ್ಕಿತು. ಸಿಗ್ನಲ್, ವಾಹನಗಳ, ಜನರ ಸಂದಣಿಯಿತ್ತು ಅಲ್ಲಿ. ಸಿಂಡಿಕೇಟ್ ಬ್ಯಾಂಕ್ ನ ಶಾಖೆ ನೋಡಿದೆವು. ಜೀವ ವಿಮಾ ಕಛೇರಿಯೂ ಇತ್ತು. ನೋಡಲು ಗೋವಾದಂತದ್ದೇ ಊರು. ಈಗ ನಮಗೆ ಬೇರೊಂದು ಭವ್ಯವಾದ ಹೋಟೆಲ್ ಲ್ಲಿ ತಂಗಲು ವ್ಯವಸ್ಥೆ ಮಾಡಿದ್ದರು. ಬೇಗ ಬೇಗ ನಮ್ಮ ರೂಮುಗಳನ್ನು ನೋಡಿ ಖರೀದಿಗೆಂದು ಹೊರಟು ಬಂದರೆ.. ಆರು ಗಂಟೆಗೆ ಅಂಗಡಿಗಳು ಬಂದ್. (ಮುಂದುವರೆಯುವುದು…) ********************** –ಶೀಲಾ ಭಂಡಾರ್ಕರ್.
ಅಂಕಣ ಬರಹ
ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ
ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ
ಸರಣಿಬರಹ………..
ಅದ್ಯಾಯ-8
ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-8 ಸ್ಕೂಬಾ ಡೈವಿಂಗ್ ಬಗ್ಗೆ ಓದಿ ಮಾತ್ರ ಗೊತ್ತು. ಸತೀಶ್ ಅವರನ್ನು ಬಿಟ್ಟು ನಾನು ಡೈವ್ ಮಾಡಲು ಹೋಗುವುದು ಸಾಧ್ಯವಿರಲಿಲ್ಲ. ಮಕ್ಕಳಿಬ್ಬರೂ ಗಣೇಶಣ್ಣನ ಕುಟುಂಬದ ಜೊತೆ ಸ್ಕೂಬಾ ಡೈವಿಂಗ್ ನ ಅನುಭವವನ್ನು ಪಡೆಯಲು ಹೋದರು. ಅಂಡಮಾನ್ ಗೆ ಹೊರಡುವಾಗ ಮಾಡಿದ ತಯಾರಿಯಲ್ಲಿ ಸಾಕಷ್ಟು ಚಿಲ್ಲರೆ ದುಡ್ಡು ಐವತ್ತು, ನೂರು, ಇನ್ನೂರರ ನೋಟುಗಳನ್ನು ಇಟ್ಟುಕೊಂಡಿದ್ದೆವು. ಹತ್ತು ಇಪ್ಪತ್ತರ ನೋಟುಗಳು ಕೂಡಾ. ಆದರೆ ಇಲ್ಲಿಯವರೆಗೆ ಎಲ್ಲಿಯೂ ನಾವು ಖರ್ಚು ಮಾಡುವ ಪ್ರಮೇಯವೇ ಬಂದಿರಲಿಲ್ಲ. ಶಾಪಿಂಗ್ ಗೆಂದು ಕೊನೆಯ ದಿನ ಕರೆದುಕೊಂಡು ಹೋಗುತ್ತೇವೆಂದು ದರ್ಶನ್ ಮತ್ತು ರಾಕೇಶ್ ಆಶ್ವಾಸನೆ ಕೊಟ್ಟಿದ್ದರು. ಈ ದಿನದ ನೀರಿನ ಆಟಗಳ ಖರ್ಚು ಮಾತ್ರ ನಾವು ಕೊಡಬೇಕಾಗಿತ್ತು. ಸ್ಕೂಬಾ ಡೈವಿಂಗ್ ಲ್ಲಿ ಎರಡು ವಿಧ. Sea shore diving ಅಂದರೆ ದಡದಿಂದಲೇ ಸಮುದ್ರದ ತಳಕ್ಕೆ ಕೊಂಡು ಹೋಗುವುದು. ಇನ್ನೊಂದು deep sea diving. ದೊಡ್ಡದಾದ ದೋಣಿಯಲ್ಲಿ ಸಮುದ್ರದ ನಡು ಭಾಗಕ್ಕೆ ಕೊಂಡೊಯ್ದು ಅಲ್ಲಿಂದ ಜಿಗಿದು ಆಳಕ್ಕೆ ಹೋಗುವುದು. ಡೀಪ್ ಸೀ ಗೆ ಹೋಗುವುದೆಂದು ತೀರ್ಮಾನಿಸಿ ಎಲ್ಲರೂ ಹೊರಟರು. ಒಬ್ಬೊಬ್ಬರಿಗೆ ನಾಲ್ಕುವರೆ ಸಾವಿರ ರೂಪಾಯಿಗಳು. ಇವರು ಹೋಗುವ ಮೊದಲೇ ಒಂದು ತಂಡ ಹೊರಡುತ್ತಿರುವುದರಿಂದ ಇನ್ನು ಒಂದು ಗಂಟೆ ಕಾಯಬೇಕಿತ್ತು. ಅಲ್ಲಿಯವರೆಗೆ ಗಾಜಿನ ತಳದ ದೋಣಿಯಲ್ಲಿ ಸಮುದ್ರ ಯಾನಕ್ಕೆಂದು ಮಕ್ಕಳು ಮೂವರು ತಯಾರಾದರು. ಸಮುದ್ರದ ಆಳದಲ್ಲಿರುವ ಸುಂದರ ಪ್ರಪಂಚ ಗಾಜಿನ ಮೂಲಕ ಕೂತಲ್ಲಿಂದಲೇ ನೋಡಬಹುದಿತ್ತು. ಇದನ್ನಾದರೂ ನೋಡಬಹುದು ಅಂದುಕೊಂಡಿದ್ದೆ ಆದರೆ ಸಣ್ಣಗೆ ತಲೆ ಸುತ್ತುವ ಸಂಭವವಿದೆ ಎಂದುದರಿಂದ ಬೇಡವೆನಿಸಿತು. ಸಮುದ್ರದೊಳಗೆ ದೂರ ದೂರ ನಡುವಿನವರೆಗೂ ದೋಣಿಯಲ್ಲಿ ವಿಹರಿಸುವುದು, ದೋಣಿ ಓಲಾಡುವಾಗ ಕೆಳಗಿನ ದೃಶ್ಯವನ್ನು ವೀಕ್ಷಿಸುವುದು ಒಂದು ರೀತಿಯಲ್ಲಿ ಪುಳಕವೇನೋ ಸರಿ. ತಲೆಯೊಳಗೆ, ಹೊಟ್ಟೆಯೊಳಗೆ ವಿಚಿತ್ರ ಸಂಕಟವಂತೂ ಆಗಿಯೇ ಆಗುತ್ತದೆ. ಮೊದಲಿನ ರೀತಿಯಾಗಿದ್ದರೆ ಪರವಾಗಿರಲಿಲ್ಲ. ಈಗ ಜವಾಬ್ದಾರಿ ನನ್ನ ಮೇಲಿರುವುದರಿಂದ ನಾನು ಆರೋಗ್ಯವಾಗಿರುವುದು ಮುಖ್ಯವಾಗಿತ್ತು. ಮಕ್ಕಳು ಬಂದು ಅವರು ನೋಡಿದ್ದನ್ನು ಬಣ್ಣಿಸಿದ್ದೇ ಬಣ್ಣಿಸಿದ್ದು. ಅವರ ಖುಷಿ ನೋಡಿಯೇ ನನಗೂ ತೃಪ್ತಿಯಾಯಿತು. ಸ್ಕೂಬಾ ಡೈವಿಂಗ್ ಮಾಡುವವರಿಗೆ ಮೊದಲು ಕೆಲವು ಸೂಚನೆಗಳನ್ನು ನೀಡುತ್ತಾರೆ. ಕೆಲವು ಎಚ್ಚರಿಕೆಗಳು ಮತ್ತು ಕೆಲವು ಕೈ ಸನ್ನೆಗಳನ್ನು ಕಲಿಸುತ್ತಾರೆ. ನಾನು ಆರಾಮಾಗಿದ್ದೇನೆ, ಉಸಿರಾಟಕ್ಕೇನೂ ತೊಂದರೆಯಿಲ್ಲ, ಅಥವಾ ನನಗೆ ತೊಂದರೆ ಆಗುತ್ತಿದೆ, ನಾನು ಮೇಲೆ ಹೋಗಬೇಕು ಈ ತರದ ಸಂದೇಶಗಳನ್ನು ಕೈ ಸನ್ನೆಯಿಂದ ತಿಳಿಸಲು ಅಭ್ಯಾಸ ಮಾಡಿಸಿ, ಅವರಿಗೆ ಡೈವಿಂಗ್ ಉಡುಪುಗಳನ್ನು ತೊಡಲು ಕೊಟ್ಟರು. ಮೈಗೆ ಅಂಟಿಕೊಂಡಂತಹ ಬಿಗಿಯಾದ ಉಡುಪಿನಲ್ಲಿ ಎಲ್ಲರೂ ಸುಂದರವಾಗಿ ಕಾಣುತಿದ್ದರು. ನಮ್ಮ ದೀಕ್ಷಾಳಿಗೆ ಸಿಕ್ಕಿದ್ದು ಸ್ವಲ್ಪ ಬಿಗಿ ಇತ್ತಂತೆ. ಕನ್ನಡಿಯಲ್ಲಿ ನೋಡಿಕೊಂಡಾಗ ಚಂದ ಕಾಣ್ತಿದೆಯಲ್ಲಾ ಇರಲಿ ಅಂದುಕೊಂಡು ಸುಮ್ಮನಿದ್ದಳು. ಅವರನ್ನೆಲ್ಲಾ ಒಂದು ದೊಡ್ಡ ದೋಣಿಯೊಳಗೆ ಕೂರಿಸಿ ಕರೆದುಕೊಂಡು ಹೋದರು. ಪ್ರತಿಯೊಬ್ಬರಿಗೂ ಒಬ್ಬೊಬ್ಬ ಡೈವಿಂಗ್ ತರಬೇತಿ ಹೊಂದಿದ ಸಹಾಯಕರಿರುತ್ತಾರೆ. ಆಮ್ಲಜನಕದ ಭಾರವಾದ ಸಿಲಿಂಡರ್ ಗಳನ್ನು ಹೊತ್ತು ಅದರ ಪೈಪ್ ನಿಂದ ಬರುವ ಗಾಳಿಯಲ್ಲಿ ಬಾಯಿಯಿಂದ ಉಸಿರಾಡಬೇಕು. ಅದರ ಎಲ್ಲಾ ನಿರ್ದೇಶನಗಳನ್ನು ಮೊದಲೇ ನೀಡಿರುತ್ತಾರೆ. ನಾವಿಬ್ಬರೂ ಒಂದು ಉದ್ದವಾದ ಕಲ್ಲಿನ ಬೆಂಚ್ ನೋಡಿ ಅಲ್ಲಿ ಕೂತೆವು. ಸಮುದ್ರದ ಅಲೆಗಳ ಸೌಂದರ್ಯ ನೋಡುತ್ತಾ ಕೂತಾಗ ಇಂಥಾದೊಂದು ದಿನ ನಾವು ಈ ದ್ವೀಪಕ್ಕೆ ಬಂದು ಹೀಗೆ ಕೂತು ಯಾವುದೇ ಚಿಂತೆಯಿಲ್ಲದೆ ಕಾಲ ಕಳೆಯುತ್ತೇವೆ ಎಂದು ಯಾವತ್ತೂ ಯೋಚಿಸಿಯೂ ಇರಲಿಲ್ಲ. ಕೂತಲ್ಲೇ ಸತೀಶ್ ಆಕಳಿಸಲು ತೊಡಗಿದರು. ನಿದ್ರೆ ಬರ್ತಿದೆ ಎಂದು ಆ ಬೆಂಚ್ ಮೇಲೆ ಉದ್ದಕ್ಕೆ ಮಲಗಿದರು. ಸಮುದ್ರದ ಅಲೆಗಳಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದುದರರಿಂದ ಸ್ಕೂಬಾ ಡೈವಿಂಗ್ ಗೆ ಹೊರಟವರನ್ನು ಅಲ್ಲಿಯೇ ಸ್ವಲ್ಪ ತಡೆದು ನಿಲ್ಲಿಸಿದ್ದರು. ಸುಮಾರು ಮುಕ್ಕಾಲು ಗಂಟೆಯ ನಂತರ ವಾತಾವರಣ ತಿಳಿಯಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದುದರಿಂದ ಮುಂದುವರೆದು ಹೋಗಿದ್ದರು. ಅದರ ಬಗ್ಗೆ ಅಲ್ಲಿ ಧ್ವನಿವರ್ದಕದಲ್ಲಿ ಘೋಷಿಸಿದುದರಿಂದ ನಮಗೆ ತಿಳಿಯಿತು. ಇಷ್ಟು ದೂರದ ಊರಿಗೆ ಬಂದು ಸಣ್ಣ ಪುಟಾಣಿ ಮಕ್ಕಳನ್ನು ಹೊರತು ಪಡಿಸಿದರೆ, ಎರಡು ಗಂಟೆಗಳಷ್ಟು ಕಾಲ ಸಮುದ್ರ ತೀರದಲ್ಲಿ ನಿಶ್ಚಿಂತೆಯಿಂದ ಮಲಗಿದ್ದು ಇವರೊಬ್ಬರೇ ಇರಬಹುದು ಎಂದು ಮನಸ್ಸಿನಲ್ಲೇ ನಗುತ್ತಾ ಕುಳಿತೆ. ನಾಲ್ಕೈದು ಜನರನ್ನು ಒಮ್ಮೆ ಕರೆದುಕೊಂಡು ಸಮುದ್ರದಾಳಕ್ಕೆ ಜಿಗಿದಿದ್ದಾರೆ. ಉಳಿದವರನ್ನು ದೋಣಿಯಲ್ಲೇ ಕೂರಿಸಿದ್ದರು. ಆ ದೋಣಿ ಸಮುದ್ರದ ಮೇಲೆ, ನಿಂತಲ್ಲಿಯೇ ನಿಂತು ತೇಲಾಡುವಾಗ ತಲೆ ಸುತ್ತಿದಂತೆ ಆಗುತಿತ್ತಂತೆ. ಡೈವಿಂಗ್ ತರಬೇತಿ ಪಡೆದು ಅಲ್ಲಿ ಕೆಲಸಕ್ಕೆಂದು ದೂರದೂರದ ಊರಿನಿಂದ ಹುಡುಗರು ಬಂದು ಸೇರಿದ್ದಾರೆ. ನೀರಿನೊಳಗೆ ಫೋಟೊಗಳನ್ನು ಕೂಡಾ ಅವರದೇ ಕ್ಯಾಮರಾಗಳಲ್ಲಿ ತೆಗೆದು ಕೊಡುತ್ತಾರೆ ಅವರವರ ಸಹಾಯಕರು. ಒಬ್ಬ ಹುಡುಗ ಯಾರ ಜೊತೆ ಹೋಗಲು ಕಳಿಸಿದರೂ ಹೋಗದೆ ದೀಕ್ಷಾಳ ಜೊತೆ ಹೋಗಲು ಎಂದು ಹೊರಟಾಗ ಅವನ ಜತೆ ಇದ್ದವರು ಅವನನ್ನು ಛೇಡಿಸಿ ನಕ್ಕರಂತೆ. ಸಮುದ್ರದೊಳಗೆ ಜಿಗಿದು ಸ್ವಲ್ಪ ಹೊತ್ತು ಉಸಿರಾಟ ಅಭ್ಯಾಸ ಆಗೋವರೆಗೆ ಸೆಣಸಾಡಿ ಉಡುಪು ಬಿಗಿಯಾಗಿದ್ದರಿಂದಲೋ ಏನೋ ಉಸಿರು ಕಟ್ಟಿದಂತಾಗಿ ಮೇಲೆ ಕರೆದು ಕೊಂಡು ಹೋಗಲು ಸನ್ನೆ ಮಾಡಿದಳಂತೆ. ಧಾತ್ರಿ, ಶ್ರೀಪಾದ ಇಬ್ಬರೂ ಆರಾಮಾಗಿದ್ದರು. ಗಣೇಶಣ್ಣನಿಗೂ ಮೊದಲಿಗೆ ಕಸಿವಿಸಿಯಾದರೂ ನಂತರ ಸರಿ ಹೋಯ್ತಂತೆ. ಸರಸ್ವತಿಯೂ ಖುಷಿಯಿಂದ ಎಲ್ಲವನ್ನೂ ನೋಡಿ ಅನುಭವಿಸಿ ಬಂದಿದ್ದರು. ಆಳದಲ್ಲಿ ಅದೆಷ್ಟು ಸುಂದರವೆಂದು ತಿಳಿಸಲು ಅವರ ಬಳಿ ಶಬ್ದಗಳೇ ಇರಲಿಲ್ಲ. ಬಣ್ಣ ಬಣ್ಣದ ಮೀನುಗಳು ನಮ್ಮನ್ನು ತಾಕಿಕೊಂಡೇ ಚಲಿಸುತ್ತವಂತೆ, ಒಳಗಿನ ಹವಳದ ಗಿಡಗಳಿಂದ ಬಣ್ಣಬಣ್ಣದ ಬೆಳಕು ಬಂದಂತೆ, ನೀಲಿ, ಕೆಂಪು, ನೇರಳೆ, ಹಳದಿ ಬಣ್ಣದ ಹವಳದ ಗುಪ್ಪೆಗಳು ನೋಡಲು ಕಣ್ಣೇ ಸಾಲುವುದಿಲ್ಲ. ಒಮ್ಮೆ ನೀರಿನೊಳಗೆ ಅಭ್ಯಾಸವಾಯಿತೆಂದರೆ ಮತ್ತೆ ಮೇಲೆ ಬರಲು ಮನಸ್ಸೇ ಬರುವುದಿಲ್ಲವಂತೆ. ದೀಕ್ಷಾ ಮೇಲೆ ಬಂದವಳೇ ಗಳಗಳನೆ ವಾಂತಿ ಮಾಡಿದ್ದು ನೋಡಿ ಆ ಹುಡುಗನ ಸಂಗಡಿಗರು ಮತ್ತೆ ಅವನನ್ನು ಛೇಡಿಸಿ ನಕ್ಕರಂತೆ. ಅವನು ಆಮೇಲೆ ಇವಳ ಕಡೆ ತಿರುಗಿಯೂ ನೋಡಿಲ್ಲ ಎಂದು ಹೇಳಿ, ಇನ್ನೊಮ್ಮೆ ನಾನು ಡೈವ್ ಮಾಡಿಯೇ ಮಾಡ್ತಿನಿ ಅವರೆಲ್ಲಾ ನಕ್ಕರಲ್ಲ, ಅವರ ಎದುರಿಗೆ ನಾನು ಚೆನ್ನಾಗಿ ಒಂದು ಗಂಟೆ ಸಮುದ್ರದೊಳಗೆ ಇದ್ದು ಬರ್ತೀನಿ ನೋಡ್ತಿರಿ. ಎಂದು ಆಮೇಲೆ ಸ್ವಲ್ಪ ಸೌಖ್ಯವಾದ ಮೇಲೆ ರಾಕೇಶ್ ಸರ್ ಬಳಿ ನಾಳೆ ಮತ್ತೆ ಮಾಡಬಹುದಾ ಎಂದು ಕೇಳಿದಳು. ಅವರು ಇಲ್ಲಮ್ಮಾ, ಸ್ಕೂಬಾ ಡೈವ್ ಮಾಡಿದ ಇಪ್ಪತ್ತನಾಲ್ಕು ಗಂಟೆಗಳ ನಂತರವೇ ವಿಮಾನಯಾನ ಮಾಡಬೇಕು ಎನ್ನುವ ನಿಯಮವಿದೆ , ಎಚ್ಚರಿಕೆಯ ದೃಷ್ಟಿಯಿಂದ ಅದಕ್ಕಾಗಿಯೇ ನಾವು ಹೊರಡುವ ಒಂದು ದಿನ ಮುಂಚೆ ಈ ಚಟುವಟಿಕೆಗಳಿಗಾಗಿ ಇಡುತ್ತೇವೆ ಎಂದರು. ಹಾಗಾದರೆ ಬರುವ ವರ್ಷ ನಾನೊಬ್ಬಳೇ ಬರ್ತೇನೆ ಎಂದು ಅವರ ಬಳಿ ಹೇಳಿದಳು. ಸಮುದ್ರದಿಂದ ಮೇಲೆ ಬಂದ ಮೇಲೆ ಎಲ್ಲರಿಗೂ ಹೊಟ್ಟೆಯೊಳಗೆ ಸಂಕಟವಾಗಿ, ಯಾರೂ ಮದ್ಯಾಹ್ನದ ಊಟ ಮಾಡುವ ಯೋಚನೆಯಲ್ಲೇ ಇಲ್ಲ. ಸ್ವಲ್ಪ ಮೊಸರನ್ನ, ಸ್ವಲ್ಪ ಹಣ್ಣುಗಳನ್ನು ತಿಂದರೂ ಅದೂ ಹೊಟ್ಟೆಯೊಳಗೆ ಮಾತನಾಡಲು ಶುರು ಮಾಡಿತೆಂದು ಸುಮ್ಮನೆ ಹಾಗೆ ಬಿದ್ದುಕೊಂಡಿದ್ದರು. ನಮ್ಮದೆಲ್ಲಾ ಊಟ ಅವರು ಬರುವುದರೊಳಗೆ ಆಗಿತ್ತು. ಮತ್ತೆ ನಮ್ಮ ಪ್ರಯಾಣ ಪೋರ್ಟ್ ಬ್ಲೇರ್ ಗೆ ಹಡಗಿನಲ್ಲಿ ಹೋಗುವುದಿತ್ತು. ಈ ಸಲ ಹಡಗಿನಲ್ಲಿ ಮೇಲಿನ ಅಂತಸ್ತು ಇತ್ತು. ನಮ್ಮನ್ನು ಮೇಲಿನ ಅಂತಸ್ತಿನಲ್ಲಿ ಕೂರಿಸಿದರು. ಹಡಗಿನೊಳಗೆ ಸ್ಯಾಂಡ್ ವಿಚ್ ಮತ್ತು ಜ್ಯೂಸ್ ಕೊಟ್ಟಿದ್ದರಿಂದ ಊಟ ಮಾಡದೇ ಇದ್ದವರಿಗೆ ಅದನ್ನು ತಿಂದು ಸ್ವಲ್ಪ ಹಾಯೆನಿಸಿತು. ನನಗೆ ಸಣ್ಣಗೆ ಚಳಿಯಾಗಲು ಶುರುವಾಯ್ತು. ದೀಕ್ಷಾ ಅವಳ ಬ್ಯಾಗ್ ನಿಂದ ಒಂದು ಶಾಲು ತೆಗೆದು ನನಗೆ ಕೊಟ್ಟಳು. ಅದು ಅವಳ ಪ್ರೀತಿಯ ಶಾಲ್. ಹೊದ್ದುಕೊಂಡು ಬೆಚ್ಚಗೆ ಕೂತಿದ್ದು ನೆನಪಿದೆ. ಅದರ ಋಣ ನಮ್ಮೊಂದಿಗೆ ಆವತ್ತೇ ತೀರಿ ಕೊನೆಯಾಗುತ್ತದೆಂದು ಅಂದುಕೊಂಡಿರಲಿಲ್ಲ. ಇವತ್ತಿಗೂ ಶಾಲಿನ ಬಗ್ಗೆ ಮಾತನಾಡುವುದನ್ನು ಅವಳು ಬಿಟ್ಟಿಲ್ಲ. ಮೈಸೂರಿಗೆ ಅರ್ಬನ್ ಹಾಟ್ ಪ್ರದರ್ಶನ ಬಂದಾಗ ಖರೀದಿಸಿದ ತಿಳಿ ಗುಲಾಬಿ ಬಣ್ಣದ ಮೇಲೆ ಬಿಳಿಯ ಸಣ್ಣ ಸಣ್ಣ ಹೂಗಳಿದ್ದ ಕಾಶ್ಮೀರಿ ಶಾಲು ಅದು. ಕೊರೊನಾ ಶುರು ಆಗುವ ಮೊದಲೇ ಮತ್ತೊಮ್ಮೆ ಬಂತೆಂದು ಹೋಗಿ ಹುಡುಕಿದರೆ ಆ ಅಂಗಡಿಯೇ ಬಂದಿರಲಿಲ್ಲ. ಮೊನ್ನೆ ಮೊನ್ನೆ ಬಂದ ಹುನರ್ ಹಾಟ್ ಲ್ಲಿ ಹುಡುಕಿದರೂ ಇಲ್ಲ. ಅವಳನ್ನು ಖುಷಿ ಪಡಿಸೋಣ ಎಂದು ದುಬಾರಿ ಪಶ್ಮಿನಾ ಶಾಲು ಖರೀದಿಸಿ ತಂದುಕೊಟ್ಟರೂ ಆ ಶಾಲಿನಷ್ಟು ಚೆನ್ನಾಗಿಲ್ಲ ಎಂದೇ ಅಂದಳು. (ಮುಂದುವರೆಯುವುದು..) ************************************************************* – ಶೀಲಾ ಭಂಡಾರ್ಕರ್.
ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-6 ಹೌರಾ ಬ್ರಿಜ್ ಹತ್ರ ಬಂದು ನಿಂತು ಸ್ವಲ್ಪ ಹೊತ್ತು ಫೋಟೊ ಶೂಟ್ ಎಲ್ಲಾ ಆಗುವಾಗ, ಅಲ್ಲಿವರೆಗೆ ಸರ್ಕಸ್ ಮಾಡಿ ಬಂದಿದ್ದು ಸಾಕಾಗಿ ಹೋಯ್ತೇನೊ. ಇನ್ನು ಸಾಕು. ವಾಪಸ್ ಹೋಗೋಣ ಅಂದರು ಸತೀಶ್. ನೀರಿನಲ್ಲಿ ನಕ್ಷತ್ರ ಮೀನು, ಜೆಲ್ಲಿ ಮೀನು ಇನ್ನೇನೇನೊ ನೋಡುತ್ತಾ ಮಕ್ಕಳು ಮುಂದೆ ಹೋಗಿದ್ದರು.ನೀವು ಮುಂದೆ ಹೋಗಿ ನೋಡಿ ಬನ್ನಿ. ನಾವಿಲ್ಲೇ ಕೂತಿರ್ತೇವೆ ಎಂದು ಸರಸ್ವತಿಗೆ ಹೇಳಿದೆ. ಅಲ್ಲೇ ಒಂದು ಬಂಡೆಯ ಮೇಲೆ ಕೂತು ಸಮುದ್ರ ನೋಡುತ್ತಾ ಇದ್ದಾಗ ನಮ್ಮ ಮ್ಯಾನೇಜರ್ ಬಂದು, ನೀವಿಲ್ಲೇ ಇದ್ದೀರಾ? ಮುಂದೆ ಹೋಗಿ ಬನ್ನಿ ಸರ್ ಎಂದು ಹೇಳಿದರು. ಅವರಿಗೆ ಆಗ್ತಿಲ್ಲ. ಅದಕ್ಕೆ ಇಲ್ಲೇ ಕೂತೆವು ಅಂದೆ. ಯಾಕೆ? ಏನಾಯ್ತು? ಎಂದು ಗಾಬರಿಯಾದರು. ಏನಿಲ್ಲ. ಈಗ ಏನೂ ಆಗಿದ್ದಲ್ಲ. ಒಂದೂವರೆ ವರ್ಷದ ಹಿಂದೆ ಬ್ರೈನ್ ಸ್ಟ್ರೋಕ್ ಆದ ವಿಷಯ ಹೇಳಿದೆ. ನನಗೆ ಗೊತ್ತೇ ಆಗಿಲ್ಲ. ನೀವು ಮೊದಲೇ ಹೇಳಿದ್ದರೆ ನಾನಿಲ್ಲಿ ಅವರ ಜೊತೆ ಇದ್ದು ನೋಡಿಕೊಳ್ತಾ ಇದ್ದೆ. ನೀವು ಹೋಗಿ ಬರಬಹುದಿತ್ತು, ಈಗ ಹೋಗಿ ನಾನಿಲ್ಲಿರ್ತೇನೆ ಅಂದರು. ಅಷ್ಟರೊಳಗೆ ಎಲ್ಲರೂ ವಾಪಸ್ ಬರುತ್ತಾ ಇದ್ದರು. ಅಲ್ಲೊಂದಿಷ್ಟು ಹೊತ್ತು ಮತ್ತೆ ಫೋಟೊ ಶೂಟಿಂಗ್ ಆಯಿತು. ನಂತರ ನಾವು ಹೋಗಿದ್ದು ಲಕ್ಷ್ಮಣಪುರ ಬೀಚ್ ಗೆ. ಸೂರ್ಯ ಮುಳುಗೋದನ್ನು ನೋಡಲು ಅಲ್ಲಿ ತುಂಬಾ ಜನ ಬರ್ತಾರೆ. ಸಂಜೆ ಐದೂವರೆಗೆ ಸೂರ್ಯಾಸ್ತ. ನಾವು ಬೇಗ ಹೋಗಿ ಕೂತರೆ ಒಳ್ಳೆಯ ದ್ರಶ್ಯ ನೋಡಲು ಸಿಗುತ್ತೆ ಅಂತ ಮತ್ತೆ ಬಸ್ಸಿನಲ್ಲಿ ನೀಲ್ ದ್ವೀಪದ ಪಶ್ಚಿಮಕ್ಕಿರುವ ಆ ಬೀಚ್ ತಲುಪುವಾಗ ಐದು ಗಂಟೆ. ಸಣ್ಣ ಚಿರೋಟಿ ರವೆಯಂತ ಮರಳು, ಪುಸ್ ಪುಸ್ ಜಾರುತ್ತಾ ಹೆಜ್ಜೆ ಇಟ್ಟಲ್ಲೇ ಇದ್ದ ಹಾಗೆ, ಮುಂದೆ ಸಾಗುತ್ತಲೇ ಇಲ್ಲ. ಅಂತೂ ಹೋಗಿ ಸೂರ್ಯಾಸ್ತ ಆಗುವ ಜಾಗಕ್ಕೆ ಹೋಗಿ ಸೇರಿದೆವು. ಕಲ್ಲಿನ ಬೆಂಚ್ ತರ ಮಾಡಿ ಇಟ್ಟಿದ್ದಾರೆ. ಜಾಗ ಸಿಕ್ಕಿದಲ್ಲಿ ಕೂತೆವು. ಪಕ್ಕದಲ್ಲಿ ಚಾ ಅಂಗಡಿ. ಯಾವತ್ತೂ ಚಾ ಕುಡಿಯದ ನನಗೆ ಆವತ್ತು ಚಹಾದ ಪರಿಮಳ ತುಂಬಾ ಇಷ್ಟವಾಗಿ ಎಲ್ಲರೊಂದಿಗೆ ನಾನೂ ಚಹಾ ಕುಡಿದೆ. ಇನ್ನೂ ಹತ್ತು ಹದಿನೈದು ನಿಮಿಷ ಬಾಕಿ ಇತ್ತು. ನಮ್ಮ ಜೊತೆಯಲ್ಲಿ ಬಂದವರಲ್ಲಿ ನವವಿವಾಹಿತ ಜೋಡಿ ಒಂದಿತ್ತು. ನಮ್ಮ ಮಕ್ಕಳಿಗೆ ಈ ಬೀಚ್ ಲ್ಲಿ ಅವರಿಬ್ಬರೂ ಸ್ನೇಹಿತರಾದರು. ಎಲ್ಲರೂ ಜೊತೆ ಸೇರಿ ನಗುತ್ತಾ ಹರಟುತ್ತಾ ಹಾಯಾಗಿ ಸಮುದ್ರದ ಬಳಿ ಇದ್ದರು. ಆ ಜಾಗದಲ್ಲಿ ಸಮುದ್ರ ಸ್ವಲ್ಪ ಆಳವಾಗಿದೆ, ತುಂಬಾ ಮುಂದೆ ಹೋಗೋದೆಲ್ಲ ಬೇಡ. ಸೂರ್ಯಾಸ್ತ ನೋಡಿದ ಕೂಡಲೇ ರೆಸಾರ್ಟ್ ಗೆ ಹೊರಡೋದು ಎಂದು ಬರುವಾಗ ಬಸ್ಸಿನಲ್ಲೇ ಹೇಳಿದ್ದರು. ಸೂರ್ಯ ಉರಿಯುತ್ತಾ ಇದ್ದವನೇ.. ಇದ್ದಕ್ಕಿದ್ದ ಹಾಗೆ ಸುತ್ತಲೂ ಆಕಾಶ ಕೆಂಪು ಕೆಂಪಾಗಿ ಮೆಲ್ಲ ಮೆಲ್ಲನೆ ಆ ಕೆಂಪಿನೊಳಗೆ ಜಾರುತ್ತಾ ಸಮುದ್ರವನ್ನೂ ಕೆಂಪಾಗಿಸುತ್ತಾ.. ಸಮುದ್ರದ ನೀರು ನೀಲಿ ಹಸುರಿನ ಜೊತೆ ಕೆಂಪನ್ನೂ ಸೇರಿಸಿ ವರ್ಣರಂಜಿತ. ಅಬ್ಬಾ ನೋಡಲು ಕಣ್ಣುಗಳೇ ಸಾಲುವುದಿಲ್ಲ! ನೋಡನೋಡುತ್ತಿದ್ದಂತೆಯೇ ಸೂರ್ಯ ಸಮುದ್ರದೊಳಗೆ ಕರಗಿಯೇ ಹೋದ. ನೋಡಲು ಕೂತವರ ಮುಖದ ಮೇಲಿನ ಭಾವನೆಗಳ ಜೊತೆ ಆಕಾಶದ ರಂಗೂ ಸೇರಿ ಸುತ್ತಮುತ್ತೆಲ್ಲ ಕೆಂಪಾದವೋ ಎಲ್ಲಾ ಕೆಂಪಾದವೋ.. ಆ ನೀಲಿ ಸಾಗರ, ಸುತ್ತಲಿದ್ದ ಹಸುರು ಮರಗಳು, ಕೂತ ನಾವಷ್ಟೂ ಜನರೂ ಕೆಂಪಾದೆವು!! ಸಂಜೆಯಾ ರಾಗಕೆ ಬಾನು ಕೆಂಪೇರಿದೆ!! ಅಕ್ಷರಶಃ ಕೆಂಪೇರಿತ್ತು. ಎದ್ದು ಬರಲು ಯಾರಿಗೂ ಮನಸ್ಸಿಲ್ಲ.ಹಾಗೇ ಕಾಲೆಳೆದು ನಡೆದು ಬರುವಾಗ ಮಸುಕು ಕತ್ತಲಲ್ಲಿ ಕೆಂದಾಳೆ ಸೀಯಾಳವನ್ನು ಮಾರುತ್ತಾ ನಿಂತವನನ್ನು ದಾಟುವಾಗ ಒಮ್ಮೆಲೇ ಎಲ್ಲರಿಗೂ ಎಳನೀರು ಕುಡಿಯುವ ಬಯಕೆಯಾಯಿತು. ಅದ್ಭುತ ರುಚಿಯ ಆ ಕೆಂದಾಳೆಯ ನೀರು ಒಂದೇ ಚಿಟಿಕೆ ಉಪ್ಪು ಬೆರೆಸಿದ ಹಾಗೆ ಇತ್ತು. ನಮ್ಮನ್ನು ನೋಡಿ ಇನ್ನೂ ಕೆಲವರು ಸೇರಿದರು. ನೋಡ ನೋಡುತಿದ್ದಂತೆ ಅವನ ಸೈಕಲಲ್ಲಿದ್ದ ಅಷ್ಟೂ ಎಳನೀರು ಮಾರಾಟವಾಗಿ ಹೋಯಿತು. ಬಸ್ಸು ಹತ್ತುವುದರೊಳಗೆ ದೊಡ್ಡವಳು.. ಅಮ್ಮಾ ಅಮ್ಮಾ ಅಮ್ಮಾ ನೋಡಿಲ್ಲಿ ಇವಳು ಜೆನಿಶಾ.. ಇದು ಇವಳ ಗಂಡ ಪ್ರವೀಣ್. ಎಂದು ಪರಿಚಯ ಮಾಡಿ ಕೊಟ್ಟಳು.ಶ್… ಏನಿದು.. ಇದು, ಗಂಡ. ಹಾಗೆಲ್ಲಾ ಅನ್ನಬಾರದು ಅಂದೆ.ಆಯ್ತಮ್ಮಾ ನೀನು ಕೂತ್ಕೊ ಎಂದು ಅವರ ಹರಟೆಯಲ್ಲಿ ಅವರು ಮಗ್ನರಾದರು. ಅಷ್ಟರವರೆಗೆ ಇಬ್ಬರು ಹುಡುಗಿಯರು ಒಬ್ಬ ಹುಡುಗ ಒಬ್ಬರಿಗೊಬ್ಬರು ಕೀಟಲೆ ಮಾಡಿಕೊಂಡಿದ್ದವರಿಗೆ ಈಗ ಇನ್ನಿಬ್ಬರು ಸೇರಿ ಅವರ ಲೋಕವೇ ಬೇರೆಯಾಯ್ತು. ಈ ರೆಸಾರ್ಟ್ ತುಂಬಾ ದೊಡ್ಡದಾಗಿದ್ದು ಪ್ರತ್ಯೇಕ ಕಾಟೇಜ್ ಗಳು ತುಂಬಾ ಚೆನ್ನಾಗಿದ್ದವು. ಸುತ್ತಲೂ ಮರಗಿಡಗಳು, ನಮ್ಮನ್ನು ಬಾರ್ಜಲ್ಲಿ ಕರೆದುಕೊಂಡು ಬಂದು ಹೌರಾ ಬ್ರಿಜ್ ನೋಡಲು ಹೋದಾಗ ನಮ್ಮ ಲಗ್ಗೇಜ್ ಗಳು ಇಲ್ಲಿ ಈ ರೆಸಾರ್ಟಲ್ಲಿ ಬಂದು ಕೂತಿದ್ದವು. ನಮ್ಮ ನಮ್ಮ ಕಾಟೇಜ್ ಯಾವುದೆಂದು ನಮಗೆ ತಿಳಿಸಿ, ನಮ್ಮ ಲಗ್ಗೇಜ್ ಗಳನ್ನು ಅಲ್ಲಿನ ಹುಡುಗರು ತಂದಿರಿಸಿದರು. ನಾವೆಲ್ಲಾ ಮತ್ತೊಮ್ಮೆ ಸ್ನಾನ ಮಾಡಿ ಶುಚಿಯಾಗಿ ಎಂಟು ಗಂಟೆಗೆ ರೆಸ್ಟೋರೆಂಟ್ ಗೆ ಬರಬೇಕು ಎಂದು ಹೇಳಿದ್ದರಿಂದ ಅಲ್ಲೇ ಹೋಗಿ ಕೂತೆವು. ಮಾರನೆ ದಿನದ ಕಾರ್ಯಕ್ರಮದ ಬಗ್ಗೆ ತಿಳಿಸಲು ರಾಕೇಶ್ ಮತ್ತು ದರ್ಶನ್ ನಿಂತಿದ್ದರು.ನಾಳೆ ನೀಲ್ ಐಲ್ಯಾಂಡ್ ಲ್ಲಿರುವ ಡೈವಿಂಗ್ ಸ್ಪಾಟ್ ಲ್ಲಿ ಸ್ಕೂಬಾ ಡೈವಿಂಗ್, ಸ್ನೊರ್ಕ್ಲಿಂಗ್, ಗಾಜಿನ ತಳದ ದೋಣಿಯಲ್ಲಿ ಸಮುದ್ರಯಾನ ಮುಂತಾದ ಚಟುವಟಿಕೆಗಳಿಗಾಗಿ ಕರೆದುಕೊಂಡು ಹೋಗುತ್ತೇವೆ. ಸ್ಕೂಬಾ ಡೈವಿಂಗ್ ಮಾಡುವಆಸಕ್ತಿ ಉಳ್ಳವರು ತಯಾರಾಗಿರಿ. ಮದ್ಯಾಹ್ನದವರೆಗೆ ಸಮುದ್ರದ ಬಳಿ ಕಾಲ ಕಳೆದು ಊಟದ ನಂತರ ಮತ್ತೆ ನಾವು ಹಡಗಿನಲ್ಲಿ ಪೋರ್ಟ್ ಬ್ಲೇರ್ ಗೆ ಹೋಗುವವರಿದ್ದೇವೆ ಎಂದು ತಿಳಿಸಿದರು. ರಾತ್ರಿ ಒಳ್ಳೆಯ ನಿದ್ರೆ ಅತೀ ಅವಶ್ಯಕ, ಸಾಕಷ್ಟು ನೀರು ಕುಡಿಯುತ್ತಾ ಇರಿ. ಮತ್ತು ನಾಳೆ ಬೆಳಗಿನ ಉಪಹಾರದಲ್ಲಿ ಎಣ್ಣೆ ಪದಾರ್ಥವನ್ನು ಸೇವಿಸಬೇಡಿ. ಬ್ರೆಡ್, ಬನ್ ಮತ್ತು ಹಣ್ಣುಗಳನ್ನು ಸೇವಿಸಿದರೆ ಒಳ್ಳೆಯದು ಎಂದು ಸೂಚನೆಗಳನ್ನು ಕೊಟ್ಟರು. ಬೆಳಿಗ್ಗೆ ನಿಗದಿತ ಸಮಯಕ್ಕೆ ತಯಾರಾಗಿ ನಮ್ಮ ಸಾಮಾನುಗಳ ಜೊತೆಗೆ ರೆಸ್ಟೋರೆಂಟ್ ಗೆ ಬಂದು ಉಪಹಾರ ಸೇವಿಸಿ ಲಗ್ಗೇಜ್ ಗಳನ್ನು ಅಲ್ಲಿಯೇ ಬಿಟ್ಟು ನಾವೆಲ್ಲರೂ ಬಸ್ಸಿನಲ್ಲಿ ಸಮುದ್ರ ತೀರಕ್ಕೆ ಹೋದೆವು. ಈ ನನ್ನ ಪ್ರವಾಸ ಕಥನದಲ್ಲಿ ನಮ್ಮ ಸುಖಪ್ರವಾಸದ ಬಗ್ಗೆ ನಿಮಗೆ ನನಗೆ ನೆನಪಿದ್ದಷ್ಟು ತಿಳಿಸುತಿದ್ದೇನೆ. ಪ್ರವಾಸ ವೆಂದರೆ ಸಾಹಸ ಎಂದುಕೊಂಡವರಿಗೆ ನೀರಸವೆನಿಸಬಹುದು.ಸಾಮಾನ್ಯವಾಗಿ ನಾವು ಸಂಸಾರದ ಏಕತಾನತೆಯಿಂದ ಬಿಡುಗಡೆ ಹೊಂದಲು ಒಂದಿಷ್ಟು ಸಮಯವನ್ನು ಬೇರೆ ವಾತಾವರಣದಲ್ಲಿ ಕಳೆಯಲು ಎಂದು ಹೋಗುತ್ತೇವೆ. ಆದರೆ ಬಂದ ಮೇಲೆ ಹೋದ ಖುಷಿಗಿಂತ ಕಿರಿಕಿರಿಯೇ ಜಾಸ್ತಿ ಅನಿಸಿ, ಯಾಕಾದರೂ ಹೋಗಬೇಕಿತ್ತೋ! ಅನಿಸುವುದೂ ಇದೆ. ನಾವು ಅಂಡಮಾನ್ ಗೆ ಹೋಗಿ ಬಂದು ಒಂದು ವರ್ಷದ ಮೇಲಾಯ್ತು. ಬಂದ ಕೂಡಲೇ ಬರೆಯಬೇಕು ಎಂದುಕೊಂಡಿದ್ದೆ. ಏನು ಬರೆದರೂ ನಮ್ಮ ಮಧುರ ಅನುಭವಕ್ಕಿಂತ ಸಪ್ಪೆ ಅನಿಸುತಿತ್ತು. ಹಾಗಾಗಿ ಕೈ ಬಿಟ್ಟಿದ್ದೆ. ಅದಾದ ಸ್ವಲ್ಪ ದಿನಕ್ಕೆ ಕೊರೊನಾ, ಲಾಕ್ ಡೌನ್ ಎಂದು ಬೇರೆಯೇ ಪ್ರಪಂಚದಲ್ಲಿದ್ದಂತೆ ದಿನ ಕಳೆದ ಮೇಲೆ ಅಂಡಮಾನ್ ನೆನಪು ಮರೆತೇ ಹೋಗಿತ್ತು. ಇತ್ತೀಚೆಗೆ ರೇಖಾ ಗೌಡ ಅವರು ಪೂರ್ಣ ಚಂದ್ರ ತೇಜಸ್ವಿಯವರ ಅಂಡಮಾನ್ ಪ್ರವಾಸ ಮತ್ತು ನೈಲ್ ಮಹಾನದಿ ಎಂಬ ಪುಸ್ತಕ ಓದಿ ಅಂಡಮಾನ್ ಬಗ್ಗೆ ಬಹಳ ಆಸೆಯಿಂದ ಬರೆದಿದ್ದರು. ಆಗ ನಾವು ಹೋಗಿ ಬಂದ ವಿಷಯ ಹೇಳಿದ್ದೆ ಅವರಿಗೆ. ನೀವು ನಿಮ್ಮ ಅನುಭವ ಬರೆಯಿರಿ ಎಂದು ತುಂಬಾ ಒತ್ತಾಯಿಸಿದರು. ಬರೆಯಲು ಶುರು ಮಾಡಿದಾಗ ಏನೂ ಸರಿಯಾಗಿ ನೆನಪಿರಲಿಲ್ಲ. ಆಮೇಲಾಮೇಲೆ ಒಂದೊಂದೇ ನೆನಪಾಗಲು ತೊಡಗಿತು. ನಾನೂ ಐದಾರು ದಿನಗಳಿಂದ ಅಂಡಮಾನ್ ಲ್ಲೇ ಇದ್ದಂತೆ ಅನಿಸುತ್ತಿದೆ. (ಮುಂದುವರೆಯುತ್ತದೆ..) ********* ಶೀಲಾ ಭಂಡಾರ್ಕರ್.
ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-5 ಹ್ಯಾವ್ಲೊಕ್ ಲ್ಲಿ ನಮ್ಮ ರೆಸಾರ್ಟ್ ಹಿಂಭಾಗದ ಸಣ್ಣ ಖಾಸಗಿ ಬೀಚ್ ನ ಉದ್ದಕ್ಕೂ ಸರಸ್ವತಿ ಮತ್ತು ನಾನು ಎಷ್ಟು ದೂರ ನಡೆದೆವೋ ವಾಪಸ್ಸು ಬರಬೇಕೆಂದೇ ಅನಿಸಲಿಲ್ಲ. ಮಕ್ಕಳು ಅಲ್ಲಿ ಇಲ್ಲಿ ಓಡಾಡಿಕೊಂಡು ಮೊಬೈಲಲ್ಲಿ, ಕ್ಯಾಮರಾದಲ್ಲಿ ಫೋಟೊ ತೆಗೆದುಕೊಳ್ಳುವುದರಲ್ಲೇ ಮಗ್ನರಾಗಿದ್ದರು. ಗಣೇಶಣ್ಣ ಸತೀಶ್ ಇಬ್ಬರೂ ಅಲ್ಲಿದ್ದ ಬೆಂಚ್ ಮೇಲೆ ಆರಾಮಾಗಿ ಅಲೆಗಳನ್ನು ನೋಡುತ್ತಾ ಕೂತರು. ನಾವು ತಿರುಗಿ ಬಂದರೂ ಮಕ್ಕಳಿಗೆ ರೂಮು ಸೇರಲು ಮನಸ್ಸೇ ಇಲ್ಲ. ಇನ್ನೂ ಸ್ವಲ್ಪ ಇನ್ನೂ ಸ್ವಲ್ಪ ಹೊತ್ತು ಎಂದು ಅಲ್ಲೇ ಇದ್ದುದರಿಂದ ನಾವೂ ಅಲ್ಲೇ ಕೂತು, ಅದು ಇದು ಮಾತು ಹಾಡು ಎಂದು ಹತ್ತೂವರೆಯವರೆಗೆ ಸಮಯ ಕಳೆದು, ಮರುದಿನ ಬೆಳಿಗ್ಗೆ ಎಂಟು ಗಂಟೆಯ ಒಳಗೆ ತಯಾರಾಗಲು ಹೇಳಿದುದರಿಂದ ಮಕ್ಕಳನ್ನು ಹೊರಡಿಸಿ ನಮ್ಮ ನಮ್ಮ ಕಾಟೇಜ್ ಸೇರಿದೆವು. ನಮ್ಮ ಮಕ್ಕಳು ಇಬ್ಬರಿದ್ದುದರಿಂದ ಎಲ್ಲಾ ಕಡೆ, ಅವರಿಗೆ ಪ್ರತ್ಯೇಕ ಕೊಠಡಿ ಅಥವಾ ಕಾಟೇಜ್ ಸಿಗುತಿತ್ತು. ಆದರೆ ಶ್ರೀಪಾದನಿಗೆ ಮಾತ್ರ ಪ್ರತೀ ಸಲವೂ ಅಪ್ಪ ಅಮ್ಮನ ಜೊತೆಯೇ ಅವರ ಕೋಣೆಯೊಳಗೆ ಇನ್ನೊಂದು ಹಾಸಿಗೆ ಹಾಸಿ ಕೊಡುತಿದ್ದರು. ಆ ಒಬ್ಬಳೇ ಬಂದ ಹುಡುಗಿಗೆ ಒಬ್ಬಳಿಗೇ ಒಂದು ಕೋಣೆ. ಇದು ಅನ್ಯಾಯ ಎಂದು ಶ್ರೀಪಾದನಿಗಿಷ್ಟು ಕೀಟಲೆ ಮಾಡುತಿದ್ದರು ಈ ಹುಡುಗಿಯರು. ಇನ್ನೊಮ್ಮೆ ಎಲ್ಲಾದರೂ ಹೋಗುವಾಗ ಅವನ ಟಿಕೇಟ್ ಬೇರೆಯೇ ತಗೊಳ್ಳಿ ಎಂದು ಅವನ ಅಪ್ಪ ಅಮ್ಮನಿಗೆ ಇವರ ಸಲಹೆ. ಪ್ರತಿಯೊಂದು ಕೋಣೆಗೂ ಪ್ರತೀ ದಿನ ಎರಡು ಲೀಟರಿನ ನೀರಿನ ಬಾಟಲ್ ಒದಗಿಸುತಿದ್ದರು. ಬೆಳಗ್ಗಿನ ತಿಂಡಿ ಮತ್ತು ರಾತ್ರಿಯ ಊಟ ನಾವು ಉಳಿದುಕೊಳ್ಳುವ ಹೊಟೇಲ್ ಅಥವಾ ರೆಸಾರ್ಟ್ ಗಳಲ್ಲೇ ಆಗುತಿತ್ತು. ಮದ್ಯಾಹ್ನದ ಊಟವನ್ನು ಆದಷ್ಟು ಒಳ್ಳೆಯ ಹೊಟೇಲ್ ಹುಡುಕಿ ಕರೆದುಕೊಂಡು ಹೋಗುತಿದ್ದರು. ಊಟ ತಿಂಡಿಗೆ ಎಲ್ಲೂ ಯಾವ ತೊಂದರೆಯೂ ಆಗಲಿಲ್ಲ. ಬೆಳಿಗ್ಗೆ ಎದ್ದು ಏಳೂವರೆಗೆ ತಯಾರಾಗಿ ಬೆಳಗಿನ ಉಪಹಾರ ತೆಗೆದುಕೊಂಡು ನಾವು ಹೋಗಲಿದ್ದಿದ್ದು ಅಂಡಮಾನ್ ನಲ್ಲಿ ಮಾತ್ರವಲ್ಲ ಇಡೀ ಏಷಿಯಾದಲ್ಲೇ ಸುಂದರ ರಾಧಾನಗರ್ ಬೀಚ್ ಗೆ. ಅಲ್ಲಿ ಸ್ನಾನ ಮಾಡಲು, ಸಮುದ್ರದಲ್ಲಿ ಆಟವಾಡಲು ಅನುಕೂಲಕರ ವಾತಾವರಣವಿದೆ. ಬಟ್ಟೆ ಬದಲಿಸಲು ವ್ಯವಸ್ಥೆಯೂ ಇತ್ತು. ನಮಗೆ ಅಲ್ಲಿ 12 ರ ವರೆಗೆ ಸಮಯವಿತ್ತು. ಎಲ್ಲರೂ ಮನಸೋ ಇಚ್ಛೆ ಸಮಯ ಕಳೆದರು. ಅಂಡಮಾನಿನ ಸಮುದ್ರದ ಬಗ್ಗೆ ಯೋಚಿಸುವಾಗ ಮೊದಲೆಲ್ಲ.. ಕಾಲಾಪಾನಿ ಎಂಬ ಶಬ್ದವೊಂದು ಭೀಕರವಾಗಿ ಕಿವಿಯೊಳಗೆ ಮೊಳಗುತಿದ್ದುದರಿಂದ ನನಗೇನೋ ಆ ನೀರು ವಿಷಪೂರಿತ, ಗಲೀಜು, ಕರ್ರಗೆ.. ಹೀಗೆ ಏನೇನೋ ಕಲ್ಪನೆಗಳಿದ್ದವು. ಆದರೆ., ಬಂಗಾಳ ಕೊಲ್ಲಿಯ ಸೌಂದರ್ಯಕ್ಕೆ ಸಾಠಿಯೇ ಇಲ್ಲ ಎಂಬುದು ಸ್ವತಃ ನೋಡಿದ ಮೇಲೆ ತಿಳಿಯಿತು. ತಿಳಿ ನೀಲಿ, ತಿಳಿ ಹಸಿರು, ನೀರಿನ ಮೇಲೆ ಬಿಳಿ ನೊರೆಯ ಸಾಲು ಷಿಫಾನ್ ಸೀರೆಯ ಮೇಲೆ ಕಸೂತಿ ಹೊಲಿದಂತೆ ನೋಡಲು ಅತೀ ಸುಂದರ. ತಿಳಿಯಾದ ನೀರು, ಎಲ್ಲೆಲ್ಲೂ ಶುಭ್ರ, ಸ್ವಚ್ಛ, ಸಣ್ಣ ಮರಳು. ಎಳೆ ಬಿಸಿಲಿನ ನಮ್ಮ ಆ ಬೆಳಗಿನ ಸಮಯ. ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತಿತ್ತು. ಎಷ್ಟೇ ವರ್ಣಿಸಿದರೂ ಆ ನೀರಿನ ಸೊಬಗಿನ ಮುಂದೆ ಶಬ್ದಗಳು ಸಪ್ಪೆಯಾಗುತ್ತವೆ. ಹ್ಯಾವ್ಲೊಕಿಂದ ಹತ್ತು ಕಿ.ಮೀಟರ್ ದೂರದ ರಾಧಾನಗರ ಬೀಚ್ ಗೆ ನಮ್ಮನ್ನು ಬಸ್ಸಿನಲ್ಲಿ ಕರೆತಂದಿದ್ದರು. ಸಾವಕಾಶವಾಗಿ ಒಂದಿಷ್ಟು ಸಮಯವನ್ನು ಯಾವುದೇ ಗಡಿಬಿಡಿಗಳಿಲ್ಲದೆ ಕಳೆದೆವು. ಹ್ಯಾವ್ಲೊಕ್ ದ್ವೀಪಕ್ಕೆ ಬರುವವರೆಗೆ ಟೂರ್ ಮ್ಯಾನೇಜರ್ ಜೊತೆ ನಮ್ಮ ಪ್ರವಾಸದಲ್ಲಿ ಜೊತೆಗೂಡಿದ್ದು ನಮ್ಮನ್ನು ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದಿಂದ ಕರೆದೊಯ್ಯಲು ಬಂದ ವಿಜಯ್ ಅನ್ನುವ ಹುಡುಗ. ಅಲ್ಲಿಂದ ಮುಂದೆ.. ನಾವು ಹಡಗಿನಲ್ಲಿ ಪ್ರಯಾಣ ಮಾಡಿ ಹ್ಯಾವ್ಲೊಕ್ ದ್ವೀಪಕ್ಕೆ ಬಂದು ತಲುಪಿದಾಗ ಅಲ್ಲಿ ನಮಗೆ ರೆಸಾರ್ಟ್ ಮತ್ತಿತರ ಎಲ್ಲಾ ವ್ಯವಸ್ಥೆ ಮಾಡಿದ್ದು ದರ್ಶನ್. ಮೂಲತಃ ತಮಿಳುನಾಡಿನವರು. ಅವರ ತಂದೆ ಎಷ್ಟೋ ವರ್ಷಗಳ ಹಿಂದಿನಿಂದ ಅಂಡಮಾನ್ ನಲ್ಲಿ ನೆಲೆಸಿ ಟೂರಿಸಂ ನಡೆಸುತಿದ್ದಾರೆ. ಓದು ಮುಗಿಸಿ ದರ್ಶನ್ ಈಗ ಅಪ್ಪನ ಜೊತೆ ಸೇರಿದ್ದಾನೆ. ವ್ಯವಸ್ಥಿತವಾಗಿ, ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳನ್ನೂ ಮರೆಯದೆ ನಮ್ಮ ಪ್ರವಾಸವನ್ನು ಅತ್ಯಂತ ಸುಖಮಯವಾಗುವಂತೆ ಮಾಡಿದ ಕೀರ್ತಿ ನಿರ್ಮಲಾ ಟ್ರಾವೆಲ್ಸ್ ಜೊತೆಗೆ ವಿಜಯ್ ಮತ್ತು ದರ್ಶನ್ ಅವರದು. ಪೋರ್ಟ್ ಬ್ಲೇರ್ ನಷ್ಟು ಮುಂದುವರಿದಿಲ್ಲವಾದುದರಿಂದ ಈ ಸಣ್ಣ ದ್ವೀಪಗಳಲ್ಲಿ ಇರುವುದರಲ್ಲೇ ಒಳ್ಳೆಯ ಹೋಟೆಲಲ್ಲಿ ಮದ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಿಸಿದ್ದರು. ಶುಚಿ-ರುಚಿಯಾದ ಊಟದ ನಂತರ ನಮ್ಮ ಪ್ರಯಾಣ ಮುಂದುವರಿಯಿತು. ನಾವು ಇಂದು ಹೋಗಿ ಸೇರಬೇಕಿರುವುದು ಮತ್ತೊಂದು ದ್ವೀಪಕ್ಕೆ. ಎರಡೂ ದ್ವೀಪಗಳು ಒಂದರಿಂದೊಂದು ಬೇರ್ಪಟ್ಟು ಇರೋದ್ರಿಂದ ಸಮುದ್ರ ಯಾನ ಮಾತ್ರವೇ ಇಲ್ಲಿಯ ಸಂಪರ್ಕ ಸಾಧನ. ಸರಕಾರಿ ಫೆರ್ರಿಯಲ್ಲಿ ನಮ್ಮ ಬಸ್ಸಿನ ಜೊತೆಗೆ ನಮ್ಮ ಪ್ರಯಾಣ ನೀಲ್ ಐಲ್ಯಾಂಡ್ ಗೆ. ನೀಲ್ ಐಲ್ಯಾಂಡ್ ಈಗ ಶಹೀದ್ ದ್ವೀಪವೆಂದು ಮರುನಾಮಕರಣಗೊಂಡಿದೆ. ಬಾರ್ಜ್ ಅಥವಾ ಫೆರ್ರಿಯಲ್ಲಿ ಒಂದೂವರೆ ಗಂಟೆ ಪ್ರಯಾಣ ಮಾಡಿ ನಾವು ನೀಲ್ ದ್ವೀಪದ ಸಮುದ್ರದೊಳಗಿನ ಹವಳದ ಗಿಡಗಳನ್ನು ಮತ್ತು ನೈಸರ್ಗಿಕ ಸೇತುವೆಯನ್ನು ನೋಡಲು ಹೋದೆವು. ನೈಸರ್ಗಿಕವಾಗಿ ಕಲ್ಲುಗಳ ರೂಪದಲ್ಲಿ ಹವಳದ ದಿಂಡಿನಂತಹ ರಚನೆಗಳು ಪ್ರತೀ ಹೆಜ್ಜೆ ಹೆಜ್ಜೆಗೂ ಸಿಗುತಿದ್ದವು. ಉಬ್ಬರವಿಲ್ಲದ ಸಮುದ್ರ ತೀರವದು, ಕಲ್ಲು ಬಂಡೆಗಳಂತ ರಚನೆಗಳು. ಅಲೆಗಳ ಬಡಿತಕ್ಕೆ ನೈಸರ್ಗಿಕವಾಗಿ ಸಮುದ್ರದೊಳಗೆ ಇಂತಹ ಅನೇಕ ಆಕಾರಗಳ ಸೃಷ್ಟಿಯಾಗಿದೆ. ಕಲ್ಲುಗಳ ಮೇಲಿನಿಂದ, ನೀರಿನೊಳಗೆ ತುಂಬಾ ದೂರ ನಡೆದು ಹೋದ ಮೇಲೆ ನೋಡಲು ಸಿಕ್ಕಿದ್ದು ಇಂತಹ ಹವಳದ ಕಲ್ಲುಗಳಿಂದಲೇ ರಚಿತವಾದ ನೈಸರ್ಗಿಕ ಸೇತುವೆ. ಪಶ್ಚಿಮ ಬಂಗಾಳಕ್ಕೂ ಅಂಡಮಾನ್ ಗೂ ವಿಶೇಷ ನಂಟು. ಅನೇಕ ವರ್ಷಗಳದು. ಸೆಲ್ಯುಲರ್ ಜೈಲಿನ ಸಂಬಂಧವೆಂದೂ ಹೇಳಬಹುದು. ಬಂಗಾಳದ ಅನೇಕ ಕ್ರಾಂತಿಕಾರಿ ಹೋರಾಟಗಾರರನ್ನು ಶಿಕ್ಷೆಗೆಂದು ಅಂಡಮಾನ್ ಜೈಲಿಗೆ ಖೈದಿಗಳನ್ನಾಗಿ ಕರೆತಂದಿದ್ದರಿಂದ, ಬಂಗಾಳದ ಜನತೆಗೆ ತಮ್ಮ ಪೂರ್ವಜರ ಬಗ್ಗೆ ಅಪಾರ ಹೆಮ್ಮೆ ಮತ್ತು ಗರ್ವ. ಅಂಡಮಾನ್ ದ್ವೀಪ ಬಂಗಾಳದ ಜನತೆಗೆ ತೀರ್ಥಕ್ಷೇತ್ರಕ್ಕೆ ಸಮ. ಈಗಲೂ ಅಂಡಮಾನ್ ದ್ವೀಪ ಸಮೂಹಗಳಲ್ಲಿ ಬಂಗಾಳಿಗಳು ನೆಲೆಯೂರಿದ್ದಾರೆ. ಅಲ್ಲಿಯೇ ತಮ್ಮ ವ್ಯಾಪಾರ, ಕಸುಬುಗಳನ್ನು ಕೈಗೊಳ್ಳುತಿದ್ದಾರೆ. ನೈಸರ್ಗಿಕವಾಗಿ ರಚನೆಯಾದ ಸೇತುವೆಗೆ ಬಂಗಾಳದ ಜನರು ಮೊದಲಿಗೆ ರಬೀಂದ್ರ ಸೇತು ಎಂದು ಕರೆದರು. ಕಾಲಾನಂತರ ಕಲ್ಕತ್ತಾದ ಹೌರಾ ಬ್ರಿಜ್ ಗೆ ಹೋಲಿಸಿ ಇದನ್ನೂ ಹೌರಾ ಬ್ರಿಜ್ ಎಂದೇ ಕರೆಯುತ್ತಾರೆ. – ಅಂಡಮಾನ್ ಆಲ್ಬಂ (ಮುಂದುವರೆಯುವುದು..) ******************** ಶೀಲಾ ಭಂಡಾರ್ಕರ್.
ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-4 ಬೆಳಗಿನ ಜಾವ ಐದೂವರೆಗೆ ಇಲ್ಲಿಯ ಏಳುವರೆಯಷ್ಟು ಬೆಳಕು ಮತ್ತು ಎಳೆ ಬಿಸಿಲು. ಒಳ್ಳೆಯ ನಿದ್ರೆಯಾಗಿ ತಾಜಾತನ ತುಂಬಿಕೊಂಡಂತೆ ಮೈ ಮನಸ್ಸು ಉಲ್ಲಸಿತವಾಗಿತ್ತು. ಮನೆಯಲ್ಲಿದ್ದರೆ ಹಲವಾರು ಕೆಲಸಗಳು ಸಾಲಾಗಿ ಧಬಧಬನೆ ಮೈ ಮೇಲೆ ಬಿದ್ದ ಹಾಗೆ ಧಾವಿಸಿ ಬರುತಿದ್ದವು. ಇಲ್ಲಿ ಯಾವ ಕೆಲಸದ ಗೊಡವೆಯೂ ಇಲ್ಲದೆ ಹಾಯಾಗಿ ಆ ಬೆಳಗಿನ ಜಾವವನ್ನು ಆನಂದಿಸಿದೆ. ಸ್ನಾನಾದಿಗಳನ್ನು ಮುಗಿಸಿ ಬೆಳಗಿನ ಉಪಹಾರವೂ ಆಯಿತು. ಈ ದಿನ ಮೊದಲಿಗೆ ತಿರಂಗಾ ಪಾರ್ಕ್, ನಂತರ ಮ್ಯೂಸಿಯಂ ಮತ್ತು ಗವರ್ನಮೆಂಟ್ ಸಾಮಿಲ್. ಇಷ್ಟಾದ ಮೇಲೆ ನಮ್ಮ ಮೊದಲ ಹಡಗಿನ ಪ್ರಯಾಣ. ಸ್ವರಾಜ್ ದ್ವೀಪಕ್ಕೆ. ಹ್ಯಾವ್ಲೊಕ್ ಐಲ್ಯಾಂಡ್ ನ ಸ್ವದೇಶಿ ಹೆಸರು. ನೇತಾಜಿ ಸುಭಾಷ್ ಚಂದ್ರ ಬೋಸ್ ರ ಸ್ಮರಣಾರ್ಥವಾಗಿ ಸ್ವರಾಜ್ ದ್ವೀಪವೆಂದು ನಾಮಕರಣವಾಗಿದೆ. ತಿರಂಗಾ ಪಾರ್ಕ್ ನಲ್ಲಿ ಸ್ವಲ್ಪ ಹೆಚ್ಚು ಹೊತ್ತು ಕಳೆಯಲು ಬಿಟ್ಟಿದ್ದರು. ಮಕ್ಕಳೆಲ್ಲಾ ದೊಡ್ಡದಾದ ಆ ಪಾರ್ಕ್ ನ ಮೂಲೆ ಮೂಲೆಗಳಲ್ಲೂ ಫೋಟೊಗಳನ್ನು ಕ್ಲಿಕ್ಕಿಸುತಿದ್ದರು. ಸಮುದ್ರದ ದಂಡೆಯ ಮೇಲಿನ ಆ ಪಾರ್ಕ್ ಸುಂದರವಾಗಿತ್ತು. ಅಲ್ಲಿಂದ ಮ್ಯೂಸಿಯಂ ಗಳ ಕಟ್ಟಡ ಹತ್ತಿರಲ್ಲೇ ಇತ್ತು. ಅಂಡಮಾನ್ ನ ಜನ ಜೀವನ, ಅಲ್ಲಿಯ ಆದಿವಾಸಿಗಳ ಬಗ್ಗೆ ಚಿತ್ರಗಳು, ಸಮುದ್ರದಾಳದ ಜೀವ ಜಂತುಗಳ ಪರಿಚಯ, ಹವಳದ ಗಿಡಗಳು ಹೀಗೆ ಹಲವಾರು ವಸ್ತುಗಳು ಮ್ಯೂಸಿಯಮ್ ನಲ್ಲಿ ನೋಡಲು ಸಿಕ್ಕಿದವು. ಸಮುದ್ರಿಕಾ ಮರೈನ್ ಮ್ಯೂಸಿಯಮ್, ಪ್ರಾಣಿಶಾಸ್ತ್ರ ವಿಭಾಗ, ಮಾನವ ಶಾಸ್ತ್ರ, ಮತ್ಸ್ಯ, ಗುಡ್ಡಗಾಡು ಇವುಗಳ ಪ್ರತ್ಯೇಕ ಮ್ಯೂಸಿಯಮ್ ಗಳು ಹತ್ತಿರದಲ್ಲೇ ಇದ್ದುದರಿಂದ ಸುಮಾರು ಒಂದು ಗಂಟೆಗೂ ಹೆಚ್ಚಿನ ಸಮಯ ಇಲ್ಲಿ ಸುಂದರವಾಗಿ ಕಳೆಯಿತು. ಅಲ್ಲಿಂದ ಗವರ್ನಮೆಂಟ್ ಸಾಮಿಲ್, ಮರದ ಕೆತ್ತನೆಯ ಹಲವಾರು ಪೀಠೋಪಕರಣಗಳು, ಹಲವಾರು ಅಲಂಕಾರಿಕ ವಸ್ತುಗಳು. ನೋಡಿ ಕಣ್ತುಂಬಿಕೊಂಡೆವಷ್ಟೆ. ಅವುಗಳನ್ನು ಇಲ್ಲಿ ತರುವುದೂ ಕಷ್ಟ. ಮತ್ತೊಂದು.. ಪ್ರವಾಸಿಗರೆಂದು ಬೆಲೆಯೂ ಕೈಗೆಟಕದಷ್ಟಿತ್ತು. ಈ ಕಾರ್ಖಾನೆಯು 19 ನೆ ಶತಮಾನದಲ್ಲಿ 1883 ರಲ್ಲಿ ಕಟ್ಟಲ್ಪಟ್ಟಾಗ ಭಾರತದಲ್ಲಷ್ಟೇ ಅಲ್ಲ ಏಷಿಯಾದಲ್ಲೇ ಅತೀ ದೊಡ್ಡ ಮರದ ಕಾರ್ಖಾನೆಯಾಗಿತ್ತು. ಇದು ಅತ್ಯಂತ ಪುರಾತನವಾಗಿದ್ದು ಹಲವಾರು ಜಾತಿಯ ಮರದ ತೊಲೆಗಳನ್ನು, ಹಲಗೆಗಳನ್ನು ಇಲ್ಲಿ ಯಂತ್ರದ ಸಹಾಯದಿಂದ ಕೊಯ್ಯುವ ಈ ಕಾರ್ಖಾನೆಯಲ್ಲಿ ವರ್ಷಕ್ಕೆ ಸುಮಾರು 20000 ತೊಲೆಗಳನ್ನು ಸಂಗ್ರಹಿಸಿ ಪೋರೈಸಲಾಗುತ್ತದೆ. ಬ್ರಿಟಿಷರು ಈ ಕಾರ್ಖಾನೆಯನ್ನು ಸ್ಥಾಪಿಸಿ ಇಲ್ಲಿಂದ ದೊಡ್ಡ ಪ್ರಮಾಣದಲ್ಲಿ ಮರಗಳ ತೊಲೆಗಳನ್ನು, ಹಲಗೆಗಳನ್ನು ಲಂಡನ್ , ನ್ಯೂಯಾರ್ಕ್ ಮುಂತಾದ ಪಟ್ಟಣಗಳಿಗೆ ರಫ್ತು ಮಾಡುತಿದ್ದರು. 1942 ರಲ್ಲಿ ಜಪಾನಿಯರ ಬಾಂಬ್ ದಾಳಿಗೆ ತುತ್ತಾಗಿದ್ದ ಈ ಕಾರ್ಖಾನೆಯನ್ನು ಮತ್ತೆ ಪುನರ್ ನಿರ್ಮಿಸಲಾಯಿತು. ಬೆಳಿಗ್ಗೆ ನಾವು ಹೊರಡುವಾಗಲೇ ನಮ್ಮ ಲಗ್ಗೇಜ್ ಗಳನ್ನು ತಂದು ಲಾಂಜ್ ಲ್ಲಿ ಇಟ್ಟಿದ್ದುದರಿಂದ, ನಮಗಿಂತ ಮೊದಲೇ ಅವುಗಳು ನಮ್ಮ ಹಡಗು ನಿಲ್ದಾಣ ಅಥವಾ ಬಂದರಿನ ಬಳಿ ನಮಗಾಗಿ ಕಾಯುತಿದ್ದವು. ಟ್ರಾಲಿಗಳಲ್ಲಿ ತುಂಬಿಸಿ ತಳ್ಳಿಕೊಂಡು ಒಂದೆರಡು ಫರ್ಲಾಂಗ್ ದೂರ ನಡೆಯುವುದಿತ್ತು. ಸಾಮಾನುಗಳ ಟ್ರಾಲಿ ತಳ್ಳುವ ಕೆಲಸ ಶ್ರೀಪಾದ ಮತ್ತು ಧಾತ್ರಿಯದು. ಅವರೇ ಸ್ವಇಚ್ಛೆಯಿಂದ ಅದನ್ನು ಮಾಡುತಿದ್ದರು. ಹಡಗಿನ ಸ್ಟೋರೇಜ್ ಒಳಗೆ ನಮ್ಮ ಲಗ್ಗೇಜ್ ಗಳನ್ನು ಇಟ್ಟು ಹಡಗಿನ ಒಳಗೆ ಪ್ರವೇಶಿಸಿ ನೋಡಿದರೆ ವಿಮಾನದಲ್ಲಿರುವಂತೆಯೇ ಆಸನಗಳು. ಎರಡೂವರೆ ಗಂಟೆಗಳ ಪ್ರಯಾಣವಿತ್ತು ಪೋರ್ಟ್ ಬ್ಲೇರ್ ನಿಂದ ಸ್ವರಾಜ್ ದ್ವೀಪಕ್ಕೆ.ಗಾಜಿನ ಕಿಟಕಿಗಳಿಂದ ಸಮುದ್ರವನ್ನು ವೀಕ್ಷಿಸಬಹುದು. ಸಮುದ್ರದ ಮೇಲೆ ಹಡಗು ತೇಲುತ್ತಾ ಬಳುಕುತ್ತಾ ಸಾಗುವಾಗ ಏನೋ ಹೊಸ ಅನುಭವ. ದೊಡ್ಡ ಅಲೆಗಳು ಬಂದಾಗ ಹಡಗನ್ನೇ ಎತ್ತಿ ಎಸೆದಂತಾದಾಗ ಜೋರಾಗಿ ಕಿರುಚಬೇಕೆನಿಸುತ್ತದೆ. ಆದರೂ ಹಡಗಿನ ಪ್ರಯಾಣವೊಂದು ವಿಶಿಷ್ಟ ಆನಂದವನ್ನು ನೀಡಿತು. ಪ್ರಯಾಣದಲ್ಲಿನ ಹೊಟ್ಟೆ ತೊಳಸುವಿಕೆ, ತಲೆ ಸುತ್ತುವುದು ಇವೆಲ್ಲಾ ಸಾಮಾನ್ಯವಾಗಿ ಎಲ್ಲರ ಅನುಭವಕ್ಕೆ ಬರುತ್ತದೆ. ನಮಗೆ ಆ ದಿನ ಮದ್ಯಾಹ್ನದ ಊಟವನ್ನು ಪ್ಯಾಕ್ ಮಾಡಿ ತಂದು ಎಲ್ಲರಿಗೂ ಹಂಚಿದ್ದರು. ಒಬ್ಬೊಬ್ಬರಿಗೂ ಎರಡು ಚಪಾತಿ ಮತ್ತು ಪಲ್ಯ. ಮತ್ತು ವೆಜ್ ಪಲಾವ್ ಮತ್ತು ಸಲಾಡ್, ಜೊತೆಗೆ ಜ್ಯೂಸ್ ಕೊಟ್ಟಿದ್ದರು. ಪ್ರಯಾಣ ಸ್ವಲ್ಪ ಅಭ್ಯಾಸ ಆದ ಮೇಲೆ ಸೇವಿಸಲು ಹೇಳಿದ್ದರಿಂದ ಯಾರಿಗೂ ತಿನ್ನುವ ಅವಸರವಿರಲಿಲ್ಲ. ಅಲ್ಲದೇ ಹೊಟ್ಟೆ ಸಂಕಟವಾಗಿ ವಾಂತಿ ಬಂದರೆ ಎಂದು ಪೇಪರ್ ಬ್ಯಾಗ್ ಗಳನ್ನೂ ಇಟ್ಟಿದ್ದರು. ಹಡಗು ಸಾಗುತ್ತಿರುವಾಗ ಮಧ್ಯದಲ್ಲಿ ಜೋರಾದ ಗಾಳಿ ಬೀಸುವುದು, ದೊಡ್ಡ ದೊಡ್ಡ ಅಲೆಗಳು ಸಮುದ್ರದ ಅಡಿಯಿಂದ ಉಕ್ಕುವುದು ಮುಂತಾದ ಪ್ರತಿಕೂಲ ವಾತಾವರಣ ಉಂಟಾದಾಗ ವಿಮಾನದಲ್ಲಿದ್ದಂತೆಯೇ ಇಲ್ಲಿಯೂ ಮೈಕ್ ನಲ್ಲಿ ಹೇಳುತ್ತಾರೆ. ಸಣ್ಣಗೆ ಭಯವಾದರೂ ಕೂಡ ಪ್ರತಿಯೊಂದು ಕ್ಷಣವನ್ನೂ ಯಥೇಚ್ಛವಾಗಿ ಆನಂದಿಸಿದ್ದನ್ನು ಮಾತ್ರ ಮರೆಯುವಂತಿಲ್ಲ. ಮಾರ್ಗ ಮಧ್ಯದಲ್ಲಿ ಹಲವಾರು ಚಿಕ್ಕ ಚಿಕ್ಕ ದ್ವೀಪಗಳು ನೋಡಲು ಸಿಗುತ್ತವೆ. ಅಲ್ಲಿ ಜನ ಸಂಚಾರವಾಗಲಿ, ವಾಸವಾಗಲಿ ಕಾಣಲಿಲ್ಲ. ಎರಡೂವರೆ ಗಂಟೆಗಳ ಹಡಗಿನ ಪ್ರಯಾಣ ಮುಗಿಯುವುದರೊಳಗೆ ಎಲ್ಲರೂ ಊಟ ಮಾಡಿ ಮುಗಿಸಿದರು. ಸ್ವರಾಜ್ ದ್ವೀಪವನ್ನು ತಲುಪಿದಾಗ ನಮಗಾಗಿ ಬಸ್ ಕಾದು ನಿಂತಿತ್ತು. ಲಗ್ಗೇಜ್ ಗಳನ್ನೆಲ್ಲಾ ಅವರೇ ಎತ್ತಿ ಬಸ್ಸಿನ ನಾಲ್ಕು ಸೀಟಿನಲ್ಲಿ ಜೋಡಿಸಿ, ನಮ್ಮನ್ನೂ ಕೂರಿಸಿ ನಮಗಾಗಿ ಮೊದಲೇ ಕಾದಿರಿಸಿದ್ದ ರೆಸಾರ್ಟ್ ಗೆ ಕರೆತಂದರು. ಸುಂದರವಾದ ಜಾಗ, ಒಳ್ಳೆಯ ವಾತಾವರಣ, ಪಕ್ಕದಲ್ಲೇ ರೆಸ್ಟೋರೆಂಟ್ ಇತ್ತು. ನಮ್ಮ ಸಾಮಾನುಗಳನ್ನು ನಮ್ಮ ನಮ್ಮ ಕೋಣೆಯ ಒಳಗೆ ತಂದಿಟ್ಟರು. ಪರಸ್ಪರ ಪರಿಚಯಕ್ಕಾಗಿ ಎಲ್ಲರನ್ನೂ ಒಂದೇ ಸ್ಥಳದಲ್ಲಿ ಕರೆದು ನಿಲ್ಲಿಸಿದಾಗ, ಎಲ್ಲರೂ ಅವರವರ ಕುಟುಂಬವನ್ನು ಪರಿಚಯಿಸಿದರು. ಹದಿನಾರು- ಹದಿನೇಳು ವಯಸ್ಸಿರಬಹುದು, ಒಬ್ಬಳೇ ಹುಡುಗಿಯೊಬ್ಬಳು ನಮ್ಮ ಜೊತೆ ಬಂದಿದ್ದಳು. ಅವಳು ಇದು ಎರಡನೇ ಬಾರಿ ಅಂಡಮಾನ್ ಪ್ರವಾಸಕ್ಕೆ ಬರುವುದಂತೆ. ಯಾರೊಂದಿಗೂ ಮಾತಿಲ್ಲ, ಅವಳಷ್ಟಕ್ಕೆ ಅವಳು ಒಬ್ಬಳೇ ಇರುತಿದ್ದಳು. ಒಂದು ರೀತಿಯ ಖಿನ್ನತೆ ಅವಳನ್ನು ಕಾಡುತ್ತಿದೆಯೇನೋ ಅನಿಸುವಷ್ಟು ನಿರ್ಲಿಪ್ತಳಾಗಿ ಇರುತಿದ್ದಳು. ನಾವು ಉಳಿದುಕೊಂಡ ಆ ರೆಸಾರ್ಟ್ ನ ಹಿಂಭಾಗದಲ್ಲಿ ಖಾಸಗಿ ಬೀಚ್ ಇತ್ತು. ಸಣ್ಣದಾದ ತೀರ. ಅತಿಯಾದ ಅಲೆಗಳ ಅಬ್ಬರವಿಲ್ಲ. ಅಲ್ಲಿ ಹೋಗಿ ಕೂತ ನಮಗೆ ಎದ್ದು ಬರಲು ಮನಸ್ಸೇ ಬರಲಿಲ್ಲ. ರಾತ್ರಿ ಎಂಟರಿಂದಲೇ ಊಟ ಶುರು. ಯಾರಿಗೆ ಯಾವಾಗ ಬೇಕೋ ಹೋಗಿ ಊಟ ಮಾಡಬಹುದಿತ್ತು. ನಾವು ಊಟವಾದ ಮೇಲೆ ಮತ್ತೆ ಸಮುದ್ರ ತೀರಕ್ಕೆ ಹೋಗಿ ಕೂತೆವು. ಸಂಜೆಯ ಕತ್ತಲ ನೀರವತೆ, ಸಮುದ್ರದ ಸಣ್ಣನೆ ಮೊರೆತ, ಬೀಸುವ ಹಿತವಾದ ಉಪ್ಪು ನೀರಿನ ಗಾಳಿ, ಚಂದ್ರನ ಮೃದುವಾದ ಬೆಳಕು ಈ ಸಮಯವಿಲ್ಲೇ ನಿಲ್ಲಬಾರದೇ ಅನಿಸುವಂತಿತ್ತು. (ಮುಂದುವರೆಯುವುದು..) ************************* ಶೀಲಾ ಭಂಡಾರ್ಕರ್.
ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ—ಎರಡು ಟ್ರೀಣ್ … ಟ್ರೀಣ್.. ಅಬ್ಬಾ ಯಾರಿದು ಇಷ್ಟು ಹೊತ್ತಿಗೆ ಫೋನ್ ಮಾಡ್ತಿರೋದು ಎಂದು ಗಾಬರಿಯಲ್ಲಿ ಎದ್ದರೆ.. ಎಲ್ಲಿದ್ದೇನೆಂದು ತಿಳಿಯುವುದಕ್ಕೆ ಸ್ವಲ್ಪ ಹೊತ್ತು ಬೇಕಾಯ್ತು. ಎದ್ದು ಫೋನ್ ಕೈಗೆ ತಗೊಂಡೆ.. ಹಲೋ ಎನ್ನುವುದರೊಳಗೆ ಆ ಕಡೆಯಿಂದ ಮೇಡಮ್ ಇನ್ನು ಅರ್ಧ ಗಂಟೆಯೊಳಗೆ ರೆಡಿಯಾಗಿ ಲಾಂಜ್ ಗೆ ಬನ್ನಿ ಎನ್ನುವುದು ಕೇಳಿಸಿತು. ಹೂಂ ಎನ್ನುವುದರೊಳಗೆ ಫೋನ್ ಇಟ್ಟಾಯ್ತು. ಯಾವ ಮೇಡಮ್? ಯಾವ ಲಾಂಜ್! ಹೊತ್ತಲ್ಲದ ಹೊತ್ತಿನಲ್ಲಿ ಮಲಗಿ ಎದ್ದರೆ ಹೀಗೆ ಆಗುವುದು. ಇಡೀ ರಾತ್ರಿ ಬಯಲಾಟ ನೋಡಿ ಬಂದು ಮಲಗಿದವರಿಗೆ ಆಗುವಂಥದೇ ಅಮಲು ನನ್ನನ್ನು ಆವರಿಸಿತ್ತು. ಸ್ವಲ್ಪ ಸ್ವಲ್ಪವೇ ತಿಳಿಯಾದ ಮೇಲೆ ಎಲ್ಲವೂ ನೆನಪಿಗೆ ಬರಲು ಶುರುವಾಯ್ತು. ನಿನ್ನೆ ರಾತ್ರಿ ನಾವು ಇನ್ನೊವಾದಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದು. ನಮಗೆ ಕೂತುಕೊಳ್ಳಲು ಆರಾಮಾಗಲಿ ಎಂದು ನಮ್ಮ ಎಲ್ಲಾ ಲಗ್ಗೇಜನ್ನು ವಾಹನದ ಮೇಲೆ ಜೋಡಿಸಿ ಕಟ್ಟಿದ್ದು. ನಮ್ಮ ದೊಡ್ಡವಳಿಗೆ ಸ್ವಲ್ಪ ಕೀಟಲೆ ಬುದ್ಧಿ. “ಅವರು ಅಷ್ಟು ಗಟ್ಟಿಯಾಗಿ ಕಟ್ಟಿಲ್ಲ ಅಂತ ಅನಿಸುತ್ತೆ ನನಗೆ, ಈಗ ಯಾವುದಾದರೂ ಬ್ಯಾಗ್ ಬಿದ್ದು ಹೋದರೆ? ಧಾತ್ರಿ ಬ್ಯಾಗ್ ಮೇಲೆ ಇಟ್ಟಿರೋದ್ರಿಂದ ಅದೇ ಮೊದಲು ಬೀಳೋದು. ಗೊತ್ತಾಗೋದ್ರೊಳಗೆ ಎಷ್ಟೋ ದೂರ ಬಂದು ಬಿಟ್ಟಿರುತ್ತೇವೆ.” ಎಂದೆಲ್ಲಾ ಹೇಳುತ್ತಾ ಇದ್ದಾಗ ನಾನು ಗದರಿದೆ. ಸುಮ್ನಿರು ನೀನು ಹಾಗೆಲ್ಲ ಹೇಳ್ಬೇಡ ಅಂದೆ. ಈಗ ಧಾತ್ರಿಗೆ ನಿಜವಾಗಲೂ ಭಯ ಶುರುವಾಯ್ತು. “ನನ್ನ ಬ್ಯಾಗ್ ಬಿದ್ರೆ ಇನ್ನು ಐದು ದಿನ ನಾನೇನು ಹಾಕಿಕೊಳ್ಳಲಿ? ನನ್ನ ಬಟ್ಟೆ ಒಂದೂ ಇಲ್ಲವಲ್ಲ!” ಬ್ಯಾಗ್ ಬೀಳುವುದಿಲ್ಲ ಎಂದು ಧೈರ್ಯ ಹೇಳೋದು ಬಿಟ್ಟು ಒಬ್ಬೊಬ್ಬರೂ ಒಂದೊಂದು ಸಲಹೆ ಕೊಡಲು ತೊಡಗಿದೆವು. ಅವಳು ಅಳುವುದೊಂದು ಬಾಕಿ. ಕೊನೆಗೆ ಅವಳೇ ಸಮಾಧಾನ ಮಾಡಿಕೊಂಡು. ಲಗ್ಗೇಜ್ ಗಟ್ಟಿಯಾಗಿ ಕಟ್ಟಿದ್ದೀರಲ್ಲ, ಬ್ಯಾಗ್ ಬೀಳೋದಿಲ್ಲ ಅಲ್ವಾ ? ಎಂದು ಡ್ರೈವರನ್ನೇ ಕೇಳಿದಳು. ಇಲ್ಲಮ್ಮ ಛಾನ್ಸೇ ಇಲ್ಲ ಎಂದು ಅವರಂದ ಮೇಲೆ ನೆಮ್ಮದಿಯಿಂದ ಕೂತಳು. ನಮ್ಮ ವಿಮಾನ ಪೋರ್ಟ್ಬ್ಲೇರ್ ನ ವೀರ ಸಾವರ್ಕರ್ ನಿಲ್ದಾಣದಲ್ಲಿ ಇಳಿದಾಗ ಹೊರಗೆ ಇಣುಕಿ ನೋಡಿ ನಾವು ಕನಸು ಕಂಡಿದ್ದು ನಿಜವಾಯಿತಲ್ಲ ಎಂದು ಮೈಮನವೆಲ್ಲ ಪುಳಕ. ವಿಮಾನದಿಂದ ಇಳಿಯಲು ಒಬ್ಬರ ಹಿಂದೆ ಒಬ್ಬರು ಸಾಲಾಗಿ ಬರುವಾಗ ಒಮ್ಮೆಲೇ ಏನೋ ನೆನಪಾಗಿ ಪಿಚ್ಚೆನಿಸಿತು. ನಮ್ಮಜ್ಜಿ ಒಮ್ಮೆ ಪೇಪರ್ ಓದುತ್ತಾ ಜೋರಾಗಿ, ಇವರನ್ನೆಲ್ಲಾ ಅಂಡಮಾನ್ ಜೈಲಿಗೆ ಕಳಿಸಬೇಕು. ಬ್ರಿಟಿಷರ ಕಾಲಾಪಾನಿ ಶಿಕ್ಷೆ ಕೊಡಿಸಬೇಕು. ಎಂದು ಗೊಣಗುತಿದ್ದಾಗ ಅಲ್ಲೇ ಕನ್ನಡಿಯ ಮುಂದೆ ನಿಂತು ತಲೆ ಬಾಚಿಕೊಳ್ಳುತಿದ್ದ ದೊಡ್ಡಪ್ಪ , ಯಾರನ್ನು ಕಳಿಸಬೇಕು ಅಂಡಮಾನಿಗೆ? ಕೊಲೆ ಸುಲಿಗೆ ಅತ್ಯಾಚಾರಕ್ಕೆಲ್ಲಾ ಅಂಡಮಾನಿಗೆ ಕಳಿಸುತ್ತಿರಲಿಲ್ಲ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡುತಿದ್ದವರನ್ನು ಮಾತ್ರ ಕಳಿಸುತಿದ್ದರು. ಎಂದು ಹೇಳಿದಾಗ, ಅಲ್ಲೇ ಇದ್ದ ನನಗೆ ಕಾಲಾಪಾನಿ ಎಂದರೆ ಕಪ್ಪು ನೀರು ಅದ್ಯಾವ ತರದ ಶಿಕ್ಷೆ ಎಂದು ಯೋಚಿಸುವಂತಾಗಿತ್ತು. ನಾವೀಗ ಪ್ರವಾಸಕ್ಕೆಂದು ಖುಷಿಯಿಂದ ಬಂದಿದ್ದೇವೆ. ಮತ್ತೆ ನಮ್ಮ ಊರಿಗೆ ಹೋಗುವಾಗ ಇನ್ನಷ್ಟು ಸಂತೋಷದಿಂದ ಒಳ್ಳೆಯ ನೆನಪುಗಳನ್ನು ಹೊತ್ತು ಕೊಂಡೊಯ್ಯುತ್ತೇವೆ. ಆದರೆ.. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಇಲ್ಲಿಗೆ ಕರೆದುಕೊಂಡು ಬಂದಾಗ ಅವರು ಈ ನೆಲದ ಮೇಲೆ ಕಾಲಿಟ್ಟ ಗಳಿಗೆಯಲ್ಲಿ ಮತ್ತೆ ತಮ್ಮ ಊರಿಗೆ ಹಿಂತಿರುಗುವ ಕನಸು ಕೂಡ ಕಾಣದೆ, ಋಣ ಹರಿದುಕೊಂಡಂತೆ ಇಟ್ಟ ಆ ಒಂದೊಂದು ಹೆಜ್ಜೆಯೂ ಅದೆಷ್ಟು ಭಾರವಿದ್ದಿರಬಹುದು! ಯೋಚನೆಗೆ ಬಿದ್ದಿದ್ದೆ. ವಿಮಾನ ನಿಲ್ದಾಣದ ಹೊರಗೆ ಬಂದು ನಿಂತಾಗ ವತಿಕಾ ಇಂಟರ್ನ್ಯಾಷನಲ್ ಎಂಬ ಬೋರ್ಡ್ ಹಿಡಿದುಕೊಂಡು ನಿಂತ ಹುಡುಗ, ವಿಜಯ್ ನಮ್ಮನ್ನು ನಗುಮೊಗದಿಂದ ಸ್ವಾಗತಿಸಿ ನಮ್ಮ ಲಗ್ಗೇಜ್ ಗಳನ್ನೆಲ್ಲಾ ಒಂದು ವಾಹನಕ್ಕೆ ತುಂಬಿಸಿ, ನಮ್ಮನ್ನು ಮತ್ತೊಂದು ಮಿನಿಬಸ್ ಒಳಗೆ ಹತ್ತಲು ಹೇಳಿದಾಗ, ಅರೆಬರೆ ನಿದ್ದೆಯಿಂದ ಎದ್ದ ನನ್ನ ಯಜಮಾನರು ನಮ್ಮ ಬ್ಯಾಗು ನಮ್ಮ ಬ್ಯಾಗು ಎಂದು ಕಿರುಚಲು ಶುರು ಮಾಡಿದರು. ನಾವೆಲ್ಲರೂ ಸಮಾಧಾನದಿಂದ ನಾವು ಹೋಗುವಲ್ಲಿಗೇ ಬರುತ್ತೆ ಅದು ಎಂದರೆ ಒಂದು ಕ್ಷಣ ಒಪ್ಪಿದರೂ ಮರುಕ್ಷಣ ಮತ್ತೆ ಅದನ್ನೇ ಹೇಳುತ್ತಾ ಗಾಬರಿಯಾಗುತಿದ್ದರು. ಆಗ, ದೀಕ್ಷಾ ಮಾತು ಮರೆಸಲು “ಅಪ್ಪಾ.. ನೋಡಿಲ್ಲಿ. ನಾವೆಲ್ಲಿ ಬಂದಿದ್ದೇವೆ ಗೊತ್ತಾ? ಅಂಡಮಾನ್ ಇದು.” ಎಂದಳು. ” ಗೋವಾ ಕರಕೊಂಡು ಬಂದು ಅಂಡಮಾನ್ ಅಂದ್ರೆ ನಾನು ನಂಬಲ್ಲ.” ಅವರೆಂದಾಗ ನಮ್ಮ ಜೊತೆಯಲ್ಲಿದ್ದ ಉಳಿದವರು ಅರ್ಥವಾಗದೆ ಗಲಿಬಿಲಿಯಾಗಿದ್ದು ನಮಗೆ ತಿಳಿಯಿತು. ಪರಸ್ಪರ ಪರಿಚಯವಾಗದುದರಿಂದ ಯಾರೂ ಏನೂ ಕೇಳಲಿಲ್ಲ. ನಾವೂ ನಮ್ಮಷ್ಟಕ್ಕೆ ಇದ್ದೆವು. ಇವರು ನಡುನಡುವೆ ನಮ್ಮ ಲಗ್ಗೇಜನ್ನು ನೆನಪಿಸಿಕೊಂಡು ಕೇಳುತಿದ್ದರು. ನಮ್ಮ ಪಶ್ಚಿಮ ಕರಾವಳಿಯ ಊರುಗಳಂಥದ್ದೇ ಊರು ಇದು. ಅದೇ ರೀತಿಯ ಸಣ್ಣ ಸಣ್ಣ ಗಲ್ಲಿಗಳಂತ ರಸ್ತೆಗಳು. ಗೋವಾ ಎಂದು ಅನಿಸಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಬಾಗಿಲು ಬಡಿದ ಶಬ್ದವಾಯಿತು. ಮಕ್ಕಳು ಆಗಲೇ ತಯಾರಾಗಿ ಬಂದಿದ್ದರು. ನಾವೂ ತಯಾರಾಗಿಯೇ ಇದ್ದುದರಿಂದ ಮತ್ತೇನೂ ವಿಶೇಷವಾದ ಕೆಲಸವಿರಲಿಲ್ಲ. ಸತೀಶ್ ಅವರನ್ನು ನಿದ್ದೆಯಿಂದ ಎಚ್ಚರಿಸಿ ಕೂರಿಸಿದೆವು. ಒಂದು ನಿದ್ದೆಯಾದರೆ ಅದರ ಮುಂಚಿನ ವಿಷಯ ಮರೆತಿರುತ್ತದೆ ಅವರಿಗೆ. ಈಗ ಬ್ಯಾಗ್ ವಿಷಯ ಸಂಪೂರ್ಣ ಮರೆತಿದ್ದರು. ನಮ್ಮೊಂದಿಗೆ ಲಾಂಜ್ಗೆ ನಡೆದು ಬಂದರು. ಊಟ ಮುಗಿಸಿ ಸರಿಯಾಗಿ ಒಂದು ಗಂಟೆಗೆ ನಮ್ಮನ್ನು ಅಲ್ಲಿಯೇ ಬಂದು ಸೇರಲು ಹೇಳಿದರು ನಮ್ಮ ಟೂರ್ ಮ್ಯಾನೆಜರ್, ರಾಕೇಶ್ ಸರ್. ಮೊದಲೇ ತಯಾರಾಗಿ ನಿಂತ ಎರಡು ವಾಹನಗಳಲ್ಲಿ ನಾವೆಲ್ಲ ಹೊರಟೆವು. ಅಂಡಮಾನ್ ಪ್ರವಾಸದ ಬಹು ಮುಖ್ಯವಾದ ಪ್ರಸಿದ್ಧ ಸೆಲ್ಯುಲರ್ ಜೈಲ್ಗೆ ಭೇಟಿ ಆ ದಿನದ ನಮ್ಮ ಕಾರ್ಯಕ್ರಮವಾಗಿತ್ತು. ಜೈಲಿನ ಆವರಣ ವಿಶಾಲವಾಗಿದ್ದು ಎತ್ತರದ ಕಟ್ಟಡಗಳನ್ನು ನೋಡುವಾಗ, ಜೊತೆಗೆ ನಮಗೆಂದು ನೇಮಿಸಿದ ಗೈಡ್ ಪಟಪಟನೆ ಇತಿಹಾಸವನ್ನು ವಿವರಿಸುತ್ತಿರುವಾಗ ಗತಕಾಲಕ್ಕೆ ಹೋದಂತೆ ಭಾಸವಾಯಿತು. ಕಾಲಾಪಾನಿ ಎಂದರೆ ಕಪ್ಪು ನೀರು ಅಲ್ಲ. ಅದು ಕಾಲ್ ಕಾ ಪಾನಿ, ಕಾಲಾ ಪಾನಿ. ಕಾಲ್ ಎಂದರೆ ಕಾಲ ಅಥವಾ ಮೃತ್ಯು. ಆ ಬಂಗಾಳ ಕೊಲ್ಲಿಯ ಸಮುದ್ರದ ನೀರು, ದಾಟುತ್ತಿರುವಾಗ ಆಗಿನ ಖೈದಿಗಳಿಗೆ ಮೃತ್ಯುವಿನ ನೀರಾಗಿ ಕಂಡದ್ದರಲ್ಲಿ ಸತ್ಯವಿದೆ. ಒಮ್ಮೆ ಆ ಸಮುದ್ರ ದಾಟಿ ಅಂಡಮಾನ್ ನ ಈ ಜೈಲು ಪ್ರವೇಶಿಸಿದವರು ಮತ್ತೆಂದೂ ತಮ್ಮ ತಾಯ್ನಾಡಿಗೆ ಮರಳುವುದು ಕನಸಲ್ಲೂ ಸಾಧ್ಯವಿರಲಿಲ್ಲ. ಜೈಲಿನ ಕಟ್ಟಡ ನಕ್ಷತ್ರ ಮೀನಿಗಿರುವಂತೆ ಮಧ್ಯದ ಗೋಪುರದ ಕಟ್ಟಡಕ್ಕೆ ಸುತ್ತಲೂ ಏಳು ರೆಕ್ಕೆಗಳಿದ್ದಂತೆ ಕಟ್ಟಲ್ಪಟ್ಟಿತ್ತು. ಕಾಲಕ್ರಮೇಣ ಕಟ್ಟಡಗಳು ಬಿದ್ದು ಹೋಗಿ ಮೂರು ರೆಕ್ಕೆಗಳು ಮಾತ್ರ ಉಳಿದಿವೆ. ಇಲ್ಲಿ ನಾನು ನಿಮಗೆ ಇಸವಿಗಳು, ಆ ವೈಸ್ರಾಯ್ ಗಳ ಹೆಸರುಗಳನ್ನೆಲ್ಲಾ ಹೇಳುತ್ತಾ ಕುಳಿತರೆ, ನಿಮಗೆ ಇತಿಹಾಸದ ತರಗತಿಯಲ್ಲಿ ಪಾಠ ಕೇಳುವಂತಾಗಿ ನಿದ್ದೆ ಬಂದೀತು. ಜೈಲಿನ ಒಂದು ರೆಕ್ಕೆಯ ಮುಂಭಾಗದಲ್ಲಿ ಇನ್ನೊಂದು ರೆಕ್ಕೆಯ ಹಿಂಭಾಗವಿದ್ದು ಪ್ರತಿ ರೆಕ್ಕೆ ಅಥವಾ ವಿಂಗ್, ಮೂರು ಮೂರು ಅಂತಸ್ತುಗಳನ್ನು ಹೊಂದಿವೆ. ಸಣ್ಣ ಸಣ್ಣ ಕೊಠಡಿಗಳಿಗೆ ಎತ್ತರದ ಸೂರು. ಹತ್ತು ಅಡಿಗಳಷ್ಟು ಎತ್ತರದಲ್ಲಿ ಗಾಳಿ ಬೆಳಕು ಒಳ ಬರಲು ಒಂದು ಸಣ್ಣ ಕಿಂಡಿ. ಹಾಗಾಗಿ ಒಬ್ಬರ ಸಂಪರ್ಕ ಇನ್ನೊಬ್ಬರಿಗಿರಲಿಲ್ಲ. ಕೊಠಡಿಯ ಚಿಲಕ, ಬೀಗಗಳು ಕೈಗೆ ಎಟುಕದಷ್ಟು ದೂರವಿದ್ದವು. ನಾವು ಹೋದಾಗ ರಿಪೇರಿ ಕಾರ್ಯ ನಡೆಯುತಿದ್ದು ಒಂದು ವಿಂಗ್ ನ್ನು ನೋಡಲು ಅನುಮತಿ ಇದ್ದಿತ್ತು. ವೀರ ಸಾವರ್ಕರ್ ಅವರನ್ನು ಆಗ ಮೂರನೆಯ ಅಂತಸ್ತಿನ ಕೊನೆಯ ಕೊಠಡಿಯಲ್ಲಿಟ್ಟಿದ್ದರು. ಅವರ ಜ್ಞಾಪಕಾರ್ಥ ಆ ಕೊಠಡಿಯೊಳಗೆ ಅವರ ಭಾವಚಿತ್ರವನ್ನು ಇಡಲಾಗಿದೆ. ವಿನಾಯಕ ಸಾವರ್ಕರ್ ಅವರ ಸಹೋದರನನ್ನೂ ಅದೇ ಜೈಲಿನಲ್ಲಿಟ್ಟರೂ ಎಂದೂ ಪರಸ್ಪರ ಭೇಟಿಯಾಗಿರಲಿಲ್ಲವಂತೆ. ಆಗಿನ ಉಗ್ರಾಣ, ಅಡುಗೆ ಕೋಣೆಗಳು, ಗಲ್ಲು ಶಿಕ್ಷೆಯ ಕೋಣೆ, ಮತ್ತು ಕಠಿಣ ಶಿಕ್ಷೆಗಳನ್ನು ಕೊಡುತಿದ್ದ ಜಾಗ ಎಲ್ಲವನ್ನೂ ನೋಡಿದೆವು. ಎತ್ತುಗಳಂತೆ ಗಾಣವನ್ನು ಸುತ್ತಿ ಕೊಬ್ಬರಿ ಮತ್ತು ಸಾಸಿವೆಯಿಂದ ಎಣ್ಣೆ ತೆಗೆಯಬೇಕಿತ್ತು. ಒಬ್ಬರಿಗೆ ದಿನಕ್ಕೆ ಇಂತಿಷ್ಟು ಎಣ್ಣೆ ಎಂದು ನಿಗದಿ ಮಾಡುತಿದ್ದರು. ಕೈ ಕಾಲುಗಳಿಗೆ ಸರಪಳಿಗಳನ್ನು ಕೋಳಗಳನ್ನು ಕಟ್ಟಿ ಇಡುತಿದ್ದರು. ಕಠಿಣ ಶಿಕ್ಷೆಯ ದೊರಗಾದ ಬಟ್ಟೆಯ ಉಡುಪನ್ನು ಧರಿಸಬೇಕಿತ್ತು. ಅದರಿಂದ ಅವರಿಗೆ ಭಯಂಕರ ಶೆಖೆ, ನವೆ, ಉರಿ, ತುರಿಕೆಗಳು ಶುರುವಾಗುತಿದ್ದವು. ಖೈದಿಗಳನ್ನು ಶಿಕ್ಷಿಸುತಿದ್ದ ಎಲ್ಲಾ ಕ್ರಮಗಳನ್ನು ಅಲ್ಲಿ ಪ್ರದರ್ಶನಕಿಟ್ಟಿದ್ದಾರೆ. ಮಧ್ಯದ ಗೋಪುರದ ಮೇಲ್ಭಾಗದಿಂದ ಕಾಣುವ ಸುಂದರ ಸಮುದ್ರದ ದೃಶ್ಯ ರಮಣೀಯ. ಜೈಲಿನ ಅಧಿಕಾರಿಗಳು, ಕಾವಲುಗಾರರು ಆ ಗೋಪುರದ ಮೇಲಿನಿಂದ ಎಲ್ಲಾ ಆಗುಹೋಗುಗಳನ್ನು ವೀಕ್ಷಿಸುತಿದ್ದರಂತೆ. ಸ್ವಾತಂತ್ರ್ಯಾ ನಂತರ ಈಗ ಆವರಣದೊಳಗೆ ಐನೂರು ಹಾಸಿಗೆಗಳ, ನಲವತ್ತು ವೈದ್ಯರಿರುವ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿದೆ. ಶ್ರೀ ಗೋವಿಂದ ವಲ್ಲಭ ಪಂತ್ ಆಸ್ಪತ್ರೆ. ಎರಡು ಜ್ಯೋತಿಗಳು ಹುತಾತ್ಮರ ಸ್ಮರಣಾರ್ಥ ಹಗಲು ರಾತ್ರಿ ಬೆಳಗುತ್ತಲೇ ಇವೆ. ಅವುಗಳನ್ನು ಉರಿಸಲು ಪ್ರತಿ ತಿಂಗಳಿಗೆ ನಲವತ್ತೆಂಟು ಗ್ಯಾಸ್ ಸಿಲಿಂಡರ್ ಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಉಚಿತವಾಗಿ ಪೂರೈಸುತ್ತಿದೆ. ಮದ್ಯಾಹ್ನ ಒಂದೂವರೆಯಿಂದ ಸಾಯಂಕಾಲ ಐದರವರೆಗೆ ಜೈಲಿನ ವೀಕ್ಷಣಾ ಸಮಯ. ಮತ್ತೆ ಸಂಜೆ ಆರರಿಂದ ಏಳೂವರೆಯ ವರೆಗೆ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮವಿತ್ತು. ನಡುವಿನ ಒಂದು ಗಂಟೆಯ ಸಮಯವನ್ನು ಕಳೆಯಲು ನಮ್ಮನ್ನು ಕೊರ್ಬಿನ್ಸ್ ಬೀಚ್ ಗೆ ಕರೆದುಕೊಂಡು ಹೋದರು. ಪ್ರತಿಯೊಂದು ಕಡೆಯೂ ಟಿಕೇಟ್ ಗಳನ್ನು ಖರೀದಿಸುವುದು, ಸೀಟುಗಳನ್ನು ಕಾಯ್ದಿರಿಸುವುದೆಲ್ಲವನ್ನೂ ಅವರೇ ಮಾಡುತ್ತಾರೆ. ಹಾಗಾಗಿ ಯಾವ ಗಡಿಬಿಡಿಯೂ ನಮಗಿರಲಿಲ್ಲ. ಹಾಯಾಗಿ ಸಮುದ್ರವನ್ನು ನೋಡುತ್ತಾ ಕುಳಿತುಕೊಂಡೆವು. ಸರಿಯಾದ ಸಮಯಕ್ಕೆ ನಮ್ಮನ್ನು ಮತ್ತೆ ಜೈಲಿನ ಬಳಿ ಕೊಂಡೊಯ್ದು ವ್ಯವಸ್ಥಿತ ರೀತಿಯಲ್ಲಿ ನಮ್ಮನ್ನೆಲ್ಲಾ ಆಸನಗಳಲ್ಲಿ ಕೂರಿಸಲಾಯಿತು. ವಾರದಲ್ಲಿ ನಾಲ್ಕು ದಿನ ಈ ಪ್ರದರ್ಶನ ಹಿಂದಿ ಇಂಗ್ಲೀಷ್ ಎರಡೂ ಭಾಷೆಗಳಲ್ಲಿರುತ್ತದೆ. ಕಾರ್ಯಕ್ರಮ ಶುರುವಾಗುತಿದ್ದಂತೆ ಅಲ್ಲಿದ್ದ ಪುರಾತನ ಅರಳಿ ಮರ ಮಾತನಾಡಲು ತೊಡಗಿತು. ( ಮುಂದುವರೆಯುವುದು..) **************************** ಶೀಲಾ ಭಂಡಾರ್ಕರ್. ಗೃಹಿಣಿ, ಹಲವಾರು ಹವ್ಯಾಸಗಳಲ್ಲಿ ಬರವಣಿಗೆಯೂ ಒಂದು. ಅನೇಕ ಕವನಗಳು, ಲಲಿತ ಪ್ರಬಂಧಗಳು, ಪೌರಾಣಿಕ ಪಾತ್ರಗಳ ಸ್ವಗತಗಳನ್ನು ಬರೆದಿದ್ದು.ತಪ್ತ ಮೈಥಿಲಿ, ರಾಮಾಯಣದ ಊರ್ಮಿಳೆಯ ಪಾತ್ರದ ಕಥನವು ಎಚ್ಚೆಸ್ಕೆಯವರ ನೂರರ ಸಂಭ್ರಮದಲ್ಲಿ ಬಿಡುಗಡೆಯಾಗಿರುತ್ತದೆ.
ಅಂಕಣ ಬರಹ
ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ
ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ
ಸರಣಿಬರಹ………..
ಅದ್ಯಾಯ—ಒಂದು

