ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪರಿಧಾವಿ

ಪುಸ್ತಕ ವಿಮರ್ಶೆ ಪರಿಧಾವಿ ಡಾ. ಅಜಿತ ಹೆಗಡೆಯವರ – ಪರಿಧಾವಿ-ಆಧುನಿಕ ಬದುಕಿನ ಕನ್ನಡಿ. ಎದುರಾದ ಅಡೆತಡೆಗಳಿಗೆ ಮುಖ ಕೊಟ್ಟು ಬದುಕುವ  ಆ ಸಂಘರ್ಷವನ್ನೆ ಬದುಕೆಂದು ಸ್ವೀಕರಿಸುವ ಜನರು ಜನಸಾಮಾನ್ಯರು. ಅವರ ಬದುಕಿನಲ್ಲಿ ಸಂಭವಿಸದ ಘರ್ಷಣೆಗಳಿಲ್ಲ, ಉಂಟಾಗದ ವಿಕೋಪಗಳಿಲ್ಲ. ನಡೆಯದ ಕಥೆಗಳಿಲ್ಲ. ಹಾಗಾಗಿ ಹಿಂದಿನ ಕಥೆಗಳಿಗೂ ಇಂದಿನ ಕಥೆಗಳಿಗೂ ಅಂತಹ ವ್ಯತ್ಯಾಸಗಳೇನೂ ಇರುವುದಿಲ್ಲ. ಮಾನವ ಸ್ವಭಾವಗಳು ಎಲ್ಲ ಜನಾಂಗಕ್ಕೂ, ಎಲ್ಲ ಕಾಲಕ್ಕೂ ಒಂದೇ ರೀತಿ ಇದ್ದರೂ ಕಾಲಧರ್ಮಕ್ಕೆ ತಕ್ಕಂತೆ ಈ ಜನಸಾಮಾನ್ಯರ ಜೀವನ ಸಂಘರ್ಷವೂ ಭಿನ್ನ ಪಾತಳಿಯಲ್ಲಿ ಮೈತಾಳಿಬರುವುದು. ಹಾಗಾಗಿ ಇತ್ತೀಚಿನ ಕಥೆಗಳು ಏಡ್ಸ ಎಂಬ ಭೀಕರ ಕಾಯಿಲೆಯ ಕುರಿತೋ, ವಿವಾಹ ವಿಚ್ಛೇದನದ ಕುರಿತೋ, ಇಲ್ಲವೇ ಆತ್ಮರತಿಯ ಕುರಿತೋ ಆಗಿದ್ದರೂ ಅವು ಬದಲಾದ ಕಾಲಘಟ್ಟದ ಮಾನವನ ಬದುಕಿನ ರೀತಿಗಳೇ ಆಗಿವೆ. ಇಂತಹ ಸಂಗತಿಗಳು ನಮ್ಮ ಬದುಕಿನಲ್ಲೋ ಇಲ್ಲವೇ ನಮ್ಮ ಸುತ್ತಲಿನ ಜಗತ್ತಿನಲ್ಲಿ ಕಂಡಾಗ ಸಂವೇದನಾಶೀಲವ್ಯಕ್ತಿ ಅದನ್ನು ಪದಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡುತ್ತಾನೆ. ಸ್ಪಂದನೆಯ ಅಥವಾ ಅಭಿವ್ಯಕ್ತಿಯ ಹತ್ತಾರು ಬಗೆಗಳಲ್ಲಿ ಕಥಾ ಲೋಕ ಹೆಚ್ಚು ಪರಿಣಾಮಕಾರಿಯಾಗಿ, ವಿಸ್ತೃತವಾಗಿ ಘಟನೆಯ ಓರೆಕೋರೆಗಳನ್ನು ಸೂಕ್ಷ್ಮ ವಿಚಾರಗಳನ್ನು ಎಳೆಎಳೆಯಾಗಿ ಬಿಡಿಸಿಡಲು ಸಹಾಯಮಾಡುತ್ತದೆ. ಹಾಗಾಗಿ ಸಣ್ಣಕಥೆಗಳು ಇಂದಿಗೂ ಸಹೃದಯ ಓದುಗರ ಅಚ್ಚುಮೆಚ್ಚಿನ ಪ್ರಕಾರ. ಸಂಕಷ್ಟದ ಬದುಕನ್ನು ಸವೆದ ಜೀವನ, ಇಲ್ಲವೇ ಸುತ್ತಮುತ್ತಲಿನ ಜನರ ಪಡಿಪಾಟಲಿಗೆ ತೆರೆದ ಕಣ್ಣಿನಿಂದ ವೀಕ್ಷಿಸುವ ಚಿಕಿತ್ಸಕ ಮನೋಗುಣ ಯಾರಲ್ಲಿ ಇರುವುದೋ ಆ ವ್ಯಕ್ತಿಯ ಜೀವನಾನುಭವ ಗಾಢ ಎಂಬುದನ್ನು ನಮ್ಮ ಹಿರಿಯರು ಒಪ್ಪಿಕೊಂಡಿರುವ ಸಿದ್ಧಾಂತ. ಡಾ.ಅಜಿತ ಹೆಗಡೆಯವರ ಕಥಾ ಸಂಕಲನ ಪರಿಧಾವಿ ಅ ನಿಟ್ಟಿನಲ್ಲಿ ಪ್ರತಿಬಿಂಬಿತವಾಗಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಅಜಿತ್ ತಮ್ಮ ಚಿಕಿತ್ಸಕ್ ನೋಟದಿಂದ ಇಲ್ಲಿಯ ಕಥೆಗಳನ್ನು ಹಣೆದಿರುವುದು ವೇದ್ಯವಾಗುತ್ತದೆ. ಸಂಕಲನದಲ್ಲಿ ಮೂರನೇ ಕಥೆ ತಾಯಿ  ಆಶಯದಲ್ಲಿ ಬಹು ಮೌಲಿಕವಾಗಿದೆ. ನಮ್ಮ ಸಂಪ್ರದಾಯಸ್ಥ ಸಮಾಜದ ಗೊಡ್ಡು ಆಚರಣೆಗಳಿಂದ ಕಟ್ಟಿದ ಸಂಬಂಧಗಳಿಗಿಂತ ಹೃದಯಗಳೆರಡು ಒಪ್ಪಿಕೊಂಡ ಪರಿಶುದ್ಧ  ಸಂಬಂಧದ ದೀಘರ್ಾಯುಷ್ಯವನ್ನು ಪ್ರಶ್ತುತ ಪಡಿಸಿದ ರೀತಿ ಬಹಳ ಆಪ್ತವಾಗುತ್ತದೆ. ತಾಯ್ತನ ಎನ್ನುವುದು ಕೂಡಾ ಕೇವಲ ಹೇರುವುದರಿಂದ ಮಾತ್ತ ಬರುವುದು ಎಂಬುದಕ್ಕೆ ತಾಯಮ್ಮ ಅಪವಾದವಾಗುತ್ತಾರೆ. ಅವರ ತಾಯ್ತನ ಅಂತಃಕರಣದ್ದು. ಅವಿವಾಹಿತರಾದ ಪಂಪಯ್ಯ ಮೇಷ್ಟ್ರ ಜೀವನದ ಅನಿವಾರ್ಯತೆಗೆ ಮನೆಗೆಲಸದ ಹೆಂಗಸಾಗಿ ಬಂದ ತಾಯಮ್ಮ ಮಾಗಿದ ಜೀವನದ ಹಾದಿಯಲ್ಲಿ ಮೇಷ್ಟ್ರ ಜೊತೆಯಾಗಿ, ಆನಂತರ ಅವರಿಬ್ಬರಲ್ಲಿ ಬೆಸೆವ  ಬಂಧ  ಜಾತಿಯಲ್ಲಿಯೇ ಶಾಸ್ತ್ರೋಕ್ತವಾಗಿ ವಿವಾಹ ಬಂಧನಕ್ಕೆ ಒಳಗಾದ ಸದಾಶಿವ ಮತ್ತು ಆತನ ಪತ್ನಿಯ ವಿಘಟಿತ ಬದುಕಿನ ರೀತಿಯನ್ನು  ತುಲನಾತ್ಮಕವಾಗಿ  ವಿವೇಚಿಸುವಂತೆ ಮಾಡುತ್ತದೆ. ಮಕ್ಕಳನ್ನು ಹೆಡೆಯದಿದ್ದರೂ ತಾಯಮ್ಮ ತಾಯಿ ಪದಕ್ಕೆ ಅನ್ವರ್ಥಕವಾಗಿ ಕಥೆಯಲ್ಲಿ ಪ್ರತಿಬಿಂಬಿತವಾಗಿರುವುದು ಕೂಡಾ ಗಮನಾರ್ಹ ಸಂಗತಿ. ಗಟ್ಟಿ ಸಂಬಂಧಗಳು ಹುಟ್ಟುವುದು ಹೃದಯಂತರಾಳದಲ್ಲಿ ಹೊರತೂ, ಬಾಹ್ಯ ಚಹರೆ ಅಥವಾ ಒಪ್ಪಂದಗಳ ಮೇಲಲ್ಲ. ಮಾನಸಿಕ ಒಪ್ಪಂದವೇ ನಿಜವಾದ ವಿವಾಹ. ಹಾಗೇ ತಾಯ್ತನವೂ ಕೇವಲ ಶರೀರಜನ್ಯ ಸಾಮಥ್ರ್ಯದಿಂದ ಹುಟ್ಟುವ ಪದವಲ್ಲ ಎಂಬುದನ್ನು ಮನಗಾಣಿಸುತ್ತದೆ ಕಥೆ ಸಂಕಲನ ಮೊದಲ ಕಥೆ ಆಶ್ಲೇಷ ಈಶ ಎಂಬ ಹೆಸರಿನಿಂದಲೇ ಕಥೆಯುದ್ದಕ್ಕೂ ಮೂಡುವ ಪಾತ್ರ.  ಆಧುನಿಕ ಜಗತ್ತಿನ ಐಶಾರಾಮಿ ಖಾಯಿಲೆಯಲ್ಲಿ ಒಂದಾದ ಏಡ್ಸಗೆ ಒಳಗಾಗಿ ಬದುಕಿದ್ದೂ ಸತ್ತು, ಸತ್ತರೂ ಎರವಾಗಿ ಹೋಗುವ ಪಾತ್ರ.  ಜೀವನದಲ್ಲಿ ಎದುರಾಗುವ ಅದೆಷ್ಟೋ ಬದಲಾವಣೆಗಳು, ಮಾಡುವ ಅಪರಾಧಗಳು ನಮ್ಮ ಸ್ವಯಂಕೃತವಾಗಿರುತ್ತವೆ. ಕೆಲವೊಮ್ಮೆ ಅದೃಷ್ಟ ಕೈ ಹಿಡಿದಂತೆ ಮಾಡಿ ಮಾಯಾಜಾಲದ ಸುಳಿಗೆ ಸಿಕ್ಕಿಸಿ, ಕೊನೆಗೊಮ್ಮೆ ಯಾರಿಗೂ ಬೇಡವಾದ ಜೀವನವನ್ನು ಬಳುವಳಿಯಾಗಿ ನೀಡಿಬಿಡುವುದು. ಹಣದ ಹರಿವು ಅದು ತಂದುಕೊಡುವ ಸವಲತ್ತು  ಸುಖದ ಸುಪ್ಪತ್ತಿಗೆ ಜೊತೆಗೆ ಆಪತ್ತು  ಮತ್ತು ಚಟ್ಟದ ಹಾಸಿಗೆ ಎಲ್ಲವನ್ನೂ ಮನೋಜ್ಞವಾಗಿ ಚಿತ್ರಿಸಿರುವರು. ಅದೂ ಕೂಡಾ ಆಧುನಿಕ ಈ ಜಗತ್ತಿನ ಮಹಾಮಾರಿ ಏಡ್ಸ್ ಎಂಬ ಭೀಕರ ಕಾಯಿಲೆಯೂ ಆಗಿರಬಹುದು. ವೈದ್ಯ ವೃತ್ತಿಯ ಡಾ. ಅಜಿತರಿಗೆ ಇಂತಹ  ನೈಜ ಘಟನೆಗಳು ದಿನದ ಅನುಭವಗಳಾಗಿರುತ್ತವೆ. ಅವುಗಳಿಗೆ ಸಂವೇದನಾಶೀಲ ವೈದ್ಯನೊಬ್ಬನ ಶಬ್ದ ರೂಪದ ಪ್ರತಿಕೃತಿಯಂತಿದೆ ಈ ಕಥೆ. ಶೀರ್ಷಕಾ ಕಥೆ  ಪರಿಧಾವಿ ಶುದ್ಧ ನೈಸಗರ್ಿಕ ನೆಲೆಗಳನ್ನು ನಾಶ ಮಾಡುತ್ತಿರುವ ಕಾಪರ್ೋರೆಟ್ ಜಗತ್ತಿನ ಕೈವಾಡವನ್ನು ಬಿಂಬಿಸುತ್ತಾ  ಸಾಮಾಜೀಕರಣದ ಹೊಸ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತದೆ. ಹಳೆಯ ಸಂಪ್ರದಾಯ, ಗೊಡ್ಡು ಆಚಾರಗಳನ್ನು ಕಿತ್ತು ಹಾಕಬೇಕೆಂಬ ಸಂದೇಶವಿದೆ. ಜಾತೀಯತೆಯ ಕರಿನೆರಳಿಂದ ಮುಕ್ತಗೊಂಡ ಸಮಾಜ, ಬಂಡವಾಳಶಾಹಿ ಜಗತ್ತಿನ ಕಪಿಮುಷ್ಟಿಯಿಂದ ದೂರನಿಂತು ಸಹಜ ಬದುಕಿಗೆ ತೆರೆದುಕೊಂಡ ಜೀವನ ಖುಷಿಗೆ ಕಥೆಯಲ್ಲಿ ಸ್ಥಾನವಿದೆ. ಕಥಾ ಅಂತ್ಯ ಅದನ್ನೆ ಸ್ಪಷ್ಟಿಕರಿಸುತ್ತದೆ. ಕಾನೇರಿಯ ನಾರಾಯಣ ಹೆಗಡೆಯವರ ಮೊಮ್ಮಗ ಪವನ ಹೆಸರಿಗೆ ತಕ್ಕಂತೆ ಈ ಎಲ್ಲ ಬದಲಾವಣೆಯ ಗಾಳಿ ಹೊತ್ತು ತರುತ್ತಾನೆ. ಇದು ಸಾಮಾಜಿಕ ವ್ಯವಸ್ಥೆಯ ಪುನನರ್ಿಮಾಣದ ಬಹುದೊಡ್ಡ ಆಶಯ ಹೊಂದಿರುವ ಕಥೆ ಎಂದೆನ್ನಿಸುತ್ತದೆ ಆತ್ಮರತಿ ಕಥೆ ಭಾರತೀಯ ಸಮಾಜ ಇಂದಿಗೂ ಸಹಜವಾಗಿ ಒಪ್ಪಿಕೊಳ್ಳದ, ಅಸಹ್ಯದಿಂದ ಮೂಗುಮುರಿಯುವ ಸಲಿಂಗ ಕಾಮ ಮತ್ತು ಆತ್ಮರತಿಗಳ ಕುರಿತು ಮಾತನಾಡುತ್ತದೆ. ಹೊಸ ಜಗತ್ತಿನ ಬದುಕಿನ ಶೈಲಿಯನ್ನು ಸ್ವಾಗತಿಸುವ ಆಧುನಿಕ ಮನೋಭಾವದ ಕಥೆಗಾರರು ಈ ವಿಷಯದಲ್ಲಿ ಮಾತ್ರ ಕಥೆಯಲ್ಲಿ ನೀಲಾಳನ್ನು  ದುರಂತದ ಪಾತ್ರವಾಗಿ ಚಿತ್ರಿಸಿದಂತಿದೆ. ನೈಸಗರ್ಿಕ ಜಗತ್ತು ಒಪ್ಪಿದ ಗಂಡು ಹೆಣ್ಣುಗಳ ಮಿಲನ ನೀಡಿದ ಸುಖಾನುಭೂತಿಗೂ,ತೃಪ್ತಿಯನ್ನು ನೀಡದ ಆತ್ಮರತಿ ಅಥವಾ ಸಲಿಂಗ ಕಾಮ ನೈಸಗರ್ಿಕ ವಿರೋಧಿ ಎಂಬ ತತ್ವವನ್ನು ಕಥೆ ಹೇಳುತ್ತದೆ. ವಿಕ್ಷಿಪ್ತ ಮನಸ್ಥಿತಿಯನ್ನು ಬಹುಚೆನ್ನಾಗಿ ನಿರ್ವಹಿಸಿದ ಕಥೆ. ಟೊಮೆಟೋ ಕೆಚಪ್ ಎಂಬ ಕಥೆಯಂತೂ ವಿವಾಹಕ್ಕೆ ಪರಸ್ಪರ ಸಿದ್ಧವಾದ   ಹೃದಯಗಳೆರಡು ನಡೆಸುವ ಸಂಭಾಷಣೆಯಿಂದಲೇ ಸಿದ್ಧಗೊಂಡಿದೆ. ಇದು ಕಥೆಗಾರರ ನೈಜ ಪ್ರತಿಭೆಗೆ ಸಾಕ್ಷಿ. ಹಿಂದಿನ ಕಾಲದಲ್ಲಿ ವಿವಾಹಗಳು ಗುರುಹಿರಿಯರ ಒಪ್ಪಿಗೆಯಿಂದ ವಿವಾಹ ಮಧ್ಯವತರ್ಿಗಳ ನೆರವಿನಿಂದ ನಡೆಯುತ್ತಿದ್ದರೆ ಇಂದು ಆಧುನಿಕ ವೈವಾಹಿಕ ವ್ಯವಸ್ಥೆಯಲ್ಲಿ ಅಂತಜರ್ಾಲದಲ್ಲಿ ಮೆಟ್ರಿಮೋನಿಯಲ್ ಪ್ರೋಫೈಲ್ಗಳ ಮೂಲಕ ಕುದುರುವ ವಿವಾಹಗಳು, ಭವಿಷ್ಯದಲ್ಲಿ ಗಂಡು ಹೆಣ್ಣು ಪರಸ್ಪರ  ಹೊಂದಿಕೊಳ್ಳುವ ಸಂದರ್ಭದಲ್ಲಿ ಗಂಡು ಹೆಣ್ಣು ವಿವಾಹಪೂರ್ವ ಒಬ್ಬರನ್ನೊಬ್ಬರು ಅರಿತುಕೊಳ್ಳಲು ನಡೆಸುವ ಏಕಾಂತದ ಭೇಟಿಗಳು, ವ್ಯಕ್ತಿತ್ವವನ್ನು ಟೊಮೆಟೋ ಕೆಚಪ್ ಮೂಲಕ ಅಥರ್ೈಸಲು ಬಳಸುವ ಉಪಮೆಗಳು, ಹೊಟೆಲ್ಲಿನಲ್ಲಿ ಮೆನು ಆಯ್ಕೆಯ ಮೂಲಕ ಹೆಣ್ಣಿನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬಯಸುವ ಗಂಡು ಹೀಗೆ ವಿನೂತನ ರೀತಿಯಲ್ಲಿ ಕಥೆ ಹೆಣೆದಿದ್ದಾರೆ. ಆದರೆ ಹೆಣ್ಣನ್ನು ಆರಿಸುವ ಪೂರ್ಣ ಸ್ವಾತಂತ್ರ್ಯವನ್ನು ಗಂಡಿಗೆ ಮಾತ್ರ ನೀಡಿ ಆಧುನಿಕ ಜಗತ್ತು ಸಮಾನತೆಯ ತಳಹದಿ ಅಲ್ಲ ಎಂದು ಬಿಂಬಿಸುವಂತೆ ಗಂಡಿಗೆ ಮಾತ್ರ ಆ ಆಯ್ಕೆಯ ಸ್ವಾತಂತ್ರ್ಯ ನೀಡಿದ್ದು ಸ್ತ್ರೀ ದೃಷ್ಟಿಕೋನದಿಂದ  ನೋಡಿದಾಗ ಕೊಂಚ ನಿರಾಶೆ ಮೂಡಿಸುತ್ತದೆ. ಹನ್ನೆರಡು ಕಥೆಗಳ ಈ ಸಂಕಲನದಲ್ಲಿಯ ಸಂಧಾನ ಆಯ ‘ಸಮೀಕರಣ’ ‘ವ್ಯವಚ್ಛೇದ’ ಮುಂತಾದ ಕಥೆಗಳು ಬದುಕಿನ ವೈರುಧ್ಯಗಳನ್ನು ಸಮರ್ಥವಾಗಿ ಹಿಡಿದಿಟ್ಟ ಕಥೆಗಳೆಂದೇ ಹೇಳಬೇಕು.  ವೈವಿಧ್ಯಮಯ ವಿಷಯ ವಸ್ತುಗಳಿಂದ ಗಮನ ಸೆಳೆಯುವ ಇಲ್ಲಿಯ ಕಥೆಗಳು ಕಥನ  ಶೈಲಿಯಲ್ಲಿ ಕೊಂಚ ಅತಿಯಾದ ವಿವರಣೆಗಳು  ಅನಗತ್ಯ ಎನಿಸಿಕೊಳ್ಳುತ್ತವೆ. ಮುನ್ನುಡಿಯಲ್ಲಿ ಖ್ಯಾತ ಕಥೆಗಾರರಾದ ಶ್ರೀಧರ ಬಳಿಗಾರರ ಅಭಿಪ್ರಾಯದಂತೆ ಪಾತ್ರ ಹಾಗೂ  ಕಥಾ ಹಂದರದ ಬೆಳವಣಿಗೆಯಲ್ಲಿ ಆಗಾಗ ಉದ್ದೇಶಪೂರ್ವಕ ಇತಿಮಿತಿಗಳನ್ನು ಹಾಗೂ ಕೆಲವೊಮ್ಮೆ  ಅತೀ ಪ್ರಜ್ಞಾಪೂರ್ವಕವಾಗಿ ಪಾತ್ರಗಳ ಬಳಸಿಕೊಳ್ಳುವುದರಿಂದ ಕೆಲವು ಕಥೆಯ ನಿರೂಪಣೆಯಲ್ಲಿ ಒಂದಿಷ್ಟು ಕೃತಕತೆ. ಹೀಗಿದ್ದೂ ಡಾ. ಅಜಿತರ ಕಥೆಗಳು ಆಪ್ತವಾಗಲು ಕಾರಣ ಅವರು ಆದರ್ಶ ಪಾತ್ರಗಳ ಸೃಷ್ಟಿಗಿಂತ  ವಾಸ್ತವಿಕ ತಮ್ಮ ಸುತ್ತಮುತ್ತಲಿನ ಪಾತ್ರಗಳನ್ನು ಕಥೆಯಲ್ಲಿ ನಿರ್ವಹಿಸುವ ಪ್ರಯತ್ನ ಮಾಡಿದ್ದು. ಇಲ್ಲಿಯ ಕಥೆಗಳು ಇಂದಿನ  ಸಾಮಾಜಿಕ ಲೋಕದ ಮಾನಸಿಕ ವಿಕೃತಿಗಳನ್ನು ಎತ್ತಿ ತೋರಿಸುತ್ತಾ ಕೊನೆಯಲ್ಲಿ ಕನಿಕರದ ಅಂತಃಕರಣಕ್ಕೆ ಸಾಕ್ಷಿಯಾಗುವಂತಹ ಕ್ಲೈಮಾಕ್ಸ ನೀಡುತ್ತವೆ. ********** ನಾಗರೇಖಾ ಗಾಂವಕರ

ಪರಿಧಾವಿ Read Post »

ಪುಸ್ತಕ ಸಂಗಾತಿ

ಬಿತ್ತಿದ ಬೆಂಕಿ

ಬಿತ್ತಿದ ಬೆಂಕಿ ಇಲ್ಲಿ ಬಿತ್ತಿದ ಬೆಂಕಿ ಸುಡುವುದಿಲ್ಲ, ಪರಿವರ್ತಿಸಿ ಬೆಳೆಸುತ್ತದೆ. ಇತ್ತೀಚೆಗೆ ಕಾದಂಬರಿಕಾರರು ಮತ್ತು ಹಿರಿಯ ಲೇಖಕರು, ಕವಿತೆಗಳನ್ನು ರಚಿಸುವುದರಲ್ಲಿ ತೊಡಗಿರುವುದು ಆಸಕ್ತಿಕರ ಸಂಗತಿ. ನಾನು ಗಮನಿಸಿದಂತೆ ಅವರಲ್ಲಿ ಎಸ್. ದಿವಾಕರ, ಇಂದ್ರಕುಮಾರ್ ಎಚ್.ಬಿ ಜೊತೆಗೆ ಶ್ರೀಧರ ಬನವಾಸಿ ಅವರು ಪ್ರಮುಖರು. ಏಕೆ ಹೀಗೆ ಎಂಬುದು ಕೂಡಾ ಚರ್ಚಾರ್ಹ ಸಂಗತಿಯೇ! ಫಕೀರ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಶ್ರೀಧರ ಬನವಾಸಿ ಅವರು ಬೇರು (2017) ಕಾದಂಬರಿಯ ಮೂಲಕ ಮನೆಮಾತಾದವರು. ಬೇರು ಒಟ್ಟು ಒಂಬತ್ತು ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅವರು ಈ ಮೊದಲೇ ತಿಗರಿಯ ಹೂಗಳು ( 2014) ಎಂಬ ಕವನ ಸಂಕಲನ ರಚಿಸಿದ್ದಾರೆ. ಅಮ್ಮನ ಆಟೋಗ್ರಾಫ್, ದೇವರ ಜೋಳಿಗೆ, ಬ್ರಿಟಿಷ್ ಬಂಗ್ಲೆ ಅವರ ಕಥಾಸಂಕಲನಗಳು. ತಿಗರಿಯ ಹೂಗಳು ಕವನ ಸಂಕಲನದಲ್ಲಿ ಹೆಣ್ಣು, ನಿಸರ್ಗ, ತಾನು, ಕವಿತೆಗಳ ಬಗ್ಗೆ ಬರೆದಿದ್ದ ಶ್ರೀಧರರು ಈ ಸಂಕಲನದಲ್ಲಿ ಇದೇ ವಿಚಾರಗಳ ಅಂತಃಸತ್ವ, ಆಧ್ಯಾತ್ಮ, ಇಹ- ಪರ ಮತ್ತು ಮನೋವ್ಯಾಪಾರಗಳನ್ನು ಚಿತ್ರಿಸಲು ಯತ್ನಿಸಿದ್ದಾರೆ. ಅಂತಹ ಒಂದು ಪ್ರಯತ್ನದಲ್ಲಿ ಬರುವ ಸಾಲುಗಳು.. ” ಜಗದ ಗಗನ ಕುಸುಮವೆಂಬಂತೆಮುಗಿಲ ಲೋಹದ ಹಕ್ಕಿಯು ಹಾರುತ್ತಿತ್ತು” ಮುನ್ನುಡಿಯಲ್ಲಿ ಡಾ.ಮಲರ್ ವಿಳಿ ಕೆ ಅವರು ಹೇಳಿದಂತೆ ಇಲ್ಲಿ ಕವಿಯ ವರ್ಣನೆಯ ಶಕ್ತಿ ಅನಾವರಣವಾಗಿದೆ. ಸಿಕ್ಕಿದ್ದು ಮತ್ತು ದಕ್ಕಿದ್ದು, ಈ ಎರಡು ತುದಿಗಳ ನಡುವಿನ ತೊಳಲಾಟವೇ ಕಾವ್ಯದ ದರ್ದು, ದಂದುಗ. ಈ ಅಂತರದ ಬಗ್ಗೆ ಶ್ರೀಧರರು ನಿಗಾವಹಿಸಿರುವುದು ಅವರ ಕಾವ್ಯ ಚಿಂತನೆಯ ವಿಶೇಷ ಎಂದು ಡಾ.ಎಚ್.ಎಸ್ ಶಿವಪ್ರಕಾಶ್ ಅವರು ಬೆನ್ನುಡಿಯಲ್ಲಿ ಹೇಳಿರುವುದು ತುಂಬಾ ಪ್ರಸ್ತುತವಾಗಿದೆ. ‘ಕೊನೆ ಎಂದಿಗೋ’ ಕವಿತೆಯು ತಪ್ಪುಗಳು ಘಟಿಸುವ ಕುರಿತಾಗಿದೆ, ಆದ ತಪ್ಪುಗಳು ಪುನರಾವರ್ತನೆ ಆಗಬಾರದು ಎಂಬ ಆಸ್ಥೆಯಿದೆ. ಆದರೂ ಅಪರಾಧಗಳಾಗುತ್ತವೆ. ಮತ್ತೆ ಪಶ್ಚಾತ್ತಾಪ, ಕ್ಷಮೆಯಾಚನೆ ಎಲ್ಲಾ! ಹೀಗೆ ಕೊನೆ ಎಂದಿಗೋ? ಎಂಬ ಪ್ರಶ್ನೆಯಲ್ಲಿ ಕವನ ಮುಗಿಯುತ್ತದೆ. ನೀ ಬಂಧಿಯಲ್ಲ! ಎಂಬ ಕವಿತೆಯನ್ನು ನೋಡಿ.. “ ಕಟುಕನ ಕತ್ತಿಗೆ ದೇಹ ಯಾವುದಾದರೇನು?ಎಷ್ಟು ರುಚಿಯಿದ್ದರೇನು! ಕತ್ತಿ ಅನುಭವಿಸಿತೇ?“ “… ಅನಿರೀಕ್ಷಿತ ಆಕರ್ಷಣೆಯ ಬೆಸುಗೆಯೂ ಆಗಿಬಿಡುತ್ತದೆಸುಂದರ ತನುಘಟದ ಮಾಯೆಯ ಬತ್ತಳಿಕೆಯಲ್ಲಿ” ವಾಸ್ತವವಾದ ಜಗತ್ತಿನ ಅನಾವರಣ ಮಾಡಿದ್ದಾರೆ. “ರಕ್ತ ಚಿಮ್ಮುವ ಹೃದಯದಲ್ಲಿಯಾವ ವ್ಯಾಘ್ರವು ಅಡಗಿಹುದೋ?” ಸೂರ್ಯನ ಸುತ್ತಲೂ ಕತ್ತಲು ಕವನದ ಸಾಲುಗಳು ರಾಜಕೀಯದ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತದೆ. “ಹೊಕ್ಕಳ ಬಳ್ಳಿಯ ರಕ್ತಜಿನುಗುತಿದೆ….…….ಕ್ರೌರ್ಯ ತುಂಬಿದ ಧರ್ಮದ ಹೃದಯದಲಿಅದೆಂಥ ರಾಕ್ಷಸನು ಅಡಗಿರುವನೋ ?” ‘ಧರ್ಮದ ಬತ್ತಳಿಕೆಯಲ್ಲಿ ‘ ಕವಿತೆಯಲ್ಲಿ ಧರ್ಮದ ನಕಾರಾತ್ಮಕ ಬಳಕೆಯ ಕುರಿತು ಕವಿ ಮಿಡಿದಿದ್ದಾರೆ. ಕೆಲವು ತರ್ಕಗಳು ಆಧ್ಯಾತ್ಮಿಕ ತುಡಿತ ತುಂಬಿದ ಕವಿತೆ. ” ಹುಟ್ಟಿದ ಪ್ರೀತಿಬಿತ್ತಿದ ಬೆಂಕಿಎರಡೂ ಭಯಾನಕಸುಡುವುದು ಒಂದು ಒಳಗೆಇನ್ನೊಂದು ಹೊರಗೆ” ಸತ್ಯದ ಹುಡುಕಾಟದಲ್ಲಿ ತೊಡಗಿದ ಕವಿಗೆ ಕಾಣುವ ಮತ್ತು ಕಾಡುವ ಸಂಗತಿಯಿದು. ವೃಕ್ಷಮಾತೆ ಪರಿಸರದ ಕುರಿತು, ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ಇರುವ ಕವಿತೆ. ಬಡವನ ನೊಗದಾಗ ನೂರೆಂಟು ಭಾರ ಮತ್ತು ಮುತ್ತೈದೆಯ ಮೂಗುತಿ ಜನಪದ ಶೈಲಿಯ ಗಮನಾರ್ಹ ಕವಿತೆಗಳು. ಹೀಗೆ ಭಾಷೆ, ವಿಷಯ ವೈವಿಧ್ಯವನ್ನು ಹೊಂದಿರುವ ಈ ಕವನ ಸಂಕಲನದ ಸೊಗಸನ್ನು ಓದಿಯೇ ಅನುಭವಿಸಬೇಕು. ಒಂದು ಒಳ್ಳೆಯ ಕವನ ಸಂಕಲನ. ಬಿತ್ತಿದ ಬೆಂಕಿ ಕವನ ಸಂಕಲನವನ್ನು ಒಮ್ಮೆ ಓದಿ.************* ಡಾ. ಅಜಿತ್ ಹರೀಶಿ

ಬಿತ್ತಿದ ಬೆಂಕಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಅಲೆಮಾರಿಯ ದಿನದ ಮಾತುಗಳು ಅನುದಿನದ ಅನುಭಾದ ನುಡಿಗಳು(ಗಂಗಾಧರ ಅವಟೇರ ಅವರ “ಅಲೆಮಾರಿಯ ದಿನದ ಮಾತುಗಳು”) ಪ್ರೊ.ಗಂಗಾಧರ ಆವಟೇರ ಬಹುಕಾಲದ ಗೆಳೆಯ.ಬೊಗಸೆ ತುಂಬ ಪ್ರೀತಿ ತುಂಬಿಕೊಂಡೇ ಮಾತನಾಡುವಾತ. ಮನದಲ್ಲಿ, ಮಾತಲ್ಲಿ ಎರಡಿಲ್ಲದ ನೇರ ನುಡಿಯ ತುಂಬ ಹೋರಾಟದ ಬದುಕನ್ನು ಬದುಕುತ್ತ ಬಂದಾತ.ಅದಕ್ಕೆ ಹಿನ್ನೆಲೆಯಾಗಿಯೇ ಬದುಕಿದಾತಸದ್ಯಕ್ಕೆ ಇತಿಹಾಸ ಪ್ರಸಿದ್ಧ ಕುಕನೂರ ತಾಲೂಕಿನ‌ ಮಹಾದೇವ ದೇವಾಲಯ ನೆಲೆಸಿರುವ ಇಟಗಿಯ ಶ್ರೀ ಮಹೇಶ್ವರ ಪಿ.ಯು.ಕಾಲೆಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಮಹಾಲಿಂಗಪೂರದಲ್ಲಿ ಉಪನ್ಯಾಸಕನಾಗಿದ್ದಾಗಿನಿಂದಲೂ ಅವರ ಆತ್ಮೀಯ ಸ್ನೇಹದ ಸವಿ ನನಗೆ ದೊರಕಿದುದುಂಟು.ಅದನ್ನೆಲ್ಲ ಬರೆಯಲು ಇದು ಉಚಿತ ವೇದಿಕೆಯಲ್ಲ.ಸದ್ಯಕ್ಕೆ ‘ಅಲೆಮಾರಿಯ ದಿನದ ಮಾತುಗಳು ‘ಕೃತಿಯನ್ನು ನನ್ನ ಮುಂದಿಟ್ಟುಕೊಂಡು ಆ‌ ಕುರಿತು ನನ್ನ ಅನಿಸಿಕೆ ವ್ಯಕ್ತ ಮಾಡಲು ಹೊರಟಿದ್ದೇನೆ. ಗಂಗಾಧರ ಅವರ ಬಗ್ಗೆ ಬರೆಯುವಾಗ ಬಹುವಚನ ಬಳಸುವದು ಸ್ನೇಹಕ್ಕೆ ಮಾಡಿದ ಅಪಚಾರ ಎಂದು ಞಬಾವಿಸಿ ಏಕವಚನವನ್ನೆ ಬಳಸಿದ್ದೇನೆ.‌ ಅಲೆಮಾರಿ ಎನ್ನುವ ಪದಕ್ಕು ಗಂಗಾಧರನಿಗೂ ಬಿಡದ ನಂಟು.ಅವನು ಮೂಲತಃ ಅಲೆಮಾರಿಯೇ. ಪ್ರಥಮತಃ ಕವಿಯಾದ ಅವನಲ್ಲೊಂದು ಕವಿ ಜೀವವಿದೆ.ಅದು ಬಡವರ ನೋವಿಗೆ ಮಿಡಿಯುವ,ಅನ್ಯಾಯ ಕಂಡಾಗ ಆಕ್ರೋಶಗೊಳ್ಳುವ ಹೃದಯದ ಮಿಡಿತವಿರುವ ಜೀವ .ಹೀಗಾಗಿ ಇಲ್ಲಿರುವ ದಿನದ ಮಾತುಗಳಲ್ಲಿ ವ್ಯಕ್ತಮಾಡುವ. ವಿಚಾರಗಳು ಗದ್ಯಗಂಧಿಯಾದರೂ ಪದ್ಯದ ಭಾವವನ್ಬು ಬಿಟ್ಟಿಲ್ಲ.ಇಂದು ನಮ್ಮಯುವಜನಾಂಗ ಅತಿಯಾಗಿ ಓದುವ ಪುಸ್ತಕ ಯಾವಿದಾದರೂ ಅದು ಪೇಸ್ ಬುಕ್.ಅವರು ಎಲ್ಲಿ ಓದುತ್ತಾರೆಯೋಅಲ್ಲಿಯೆ ಅವರಿಗೆ ಒಳಿತಾಗುವಂಥದನ್ನು,ಉಪಯುಕ್ತವಾಗುವದನ್ನು ನೀಡಬೇಕು.ಮತ್ತೆ ದೀರ್ಘವಾದುದನ್ನು ಬರೆದರೆ ಓದಲು ಯಾರಿಗೆ ಪುರುಸೊತ್ತಿದೆ? ಓದುಗರ ನರನಾಡಿ ಗೊತ್ತಿರುವ ಲೇಖಕ ಇಂತಹುದನ್ನು ಪ್ರಯತ್ನ‌ಮಾಡುತ್ತಾನೆ. ಅವಟೇರ ಅದರಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ.ದಿನಕ್ಕೊಂದರಂತೆ ತಮ್ಮವ್ಯಾಟ್ಸಪ್ ಮತ್ತು‌ಮುಖಪುಟದಲ್ಲಿ ಬರೆದು ಹಾಕಿದ ಬರಹಗಳನ್ನು ಸಂಗ್ರಹಿಸಿ ಇಲ್ಕಿ ನೀಡಿದ್ದಾರೆ. ಇವು ಕವಿತೆಗಳೇ? ಗದ್ಯದ ತುಣುಕಗಳೇ?ಚಿಂತನೆಗಳೇ? ಹಾಗೆ ನೋಡಿದರೆ ಎಲ್ಲವೂ ಹೌದು.ಆದ್ದರಿಂದ ಬೆನ್ನುಡಿ ಬರೆದ ಹಿರಿಯ ಕವಿಮಿತ್ರ ಡಾ.ಗುಂಡಣ್ಣ ಕಲಬುರ್ಗಿ ಗದ್ಯಗಂಧಿ ಇವುಗಳನ್ನು ಬರಹಗಳು ಎಂದಿದ್ದಾರೆ.ಕನ್ನಡದಲ್ಲಿ ಗಪದ್ಯ ಎಂಬ ಪ್ರಕಾರವೊಂದಿದೆ ಅಂತಹ ಪ್ರಕಾರಕ್ಕೆ ಸೇರಬಹುದಾದ ಲೇಖಗಳಿವು ಎನ್ನಬಹುದು. ಆದರೆ ಇಲ್ಲೊಂದು ಅಪಾರ ಓದಿನ ಅನುಭವದ ಮೂಸೆಯಲ್ಲಿ ಹೃದ್ಯಗೊಂಡ ಮನಸ್ಸಿದೆ. ಕವಿತ್ವದ ಮೂಸೆಯಲ್ಲಿ ಹದಗೊಂಡ ದನಿಯಿದೆ.ಕನ್ನಡದಲ್ಲಿ ಇಂತಹದೊಂದು ಸಂಕಲನ ಬಂದಿದೆಯೇ ? ಅಥವಾ ಇದೇ ಮೊದಲಿನದೆ ?ಪ್ರಾಜ್ಞರು ಹೇಳಬೇಕು.ನಾನು ಬಲ್ಲಂತೆ ಇದು ಪ್ರಥಮ ಪ್ರಯತ್ನವೇ ಇರಬೇಕು. ಅಲೆಮಾರಿ ಮಾತ್ರ ಬದುಕಿನ ಆಳವಾದ ಅನುಭವ ಗಳಿಸಬಲ್ಲ.ನಮ್ಮ ಹಿಂದಿನ ಹಿರಿಯರು ದೇಶ ಸುತ್ತಬೇಕು,ಕೋಶ ಓದಬೇಕು ಎನ್ನುತ್ತಿದ್ದರು.ಗಂಗಾಧರ ಅವರು ಬರೀ ದೇಶ ಸುತ್ತಿಲ್ಲ ಅವರ ಬದುಕುನಿಡಸೂರಿನಿಂದ ಆರಂಭವಾಗಿಅಮೀನಗಡ ಹುನಗುಂದ,ಧಾರಚಾಡ,ಮೂಡಲಗಿ,ತೇರಸದಾಳ,ರಬಕವಿ,ಮಹಾಲಿಂಗಪೂರ,ಕೆಸರಗೊಪ್ಪ,ಈಗ ಸದ್ಯಕ್ಕೆ ಇಟಗಿಯಲ್ಲಿ ನೆಲೆನಿಂತಿದೆ.ಬದುಕಿನ ಅನ್ನಕ್ಕಾಗಿ ಅವರು ಮಾಡಿದ ಸಾಹಸವೂ ಕೂಡ ಒಂದು ದೊಡ್ಡ ಪ್ರಬಂಧದ ವಸ್ತುವಾದೀತು. ದಾರಿಯೆಂದರೆ ಬದುಕಿಗ ಸಂಬಂಧಿಸಿದ್ದು.ಅದು ಚಲನಶೀಲರಿಗೆ ಮಾತ್ರ ದಕ್ಕಿದ್ದು. ಅಲೆದಾಡಬೇಕುನೆಲೆಯಿಲ್ಲದ ಅಲೆಮಾರಿಯಂತೆ ಎನ್ನುವ ವಾಕ್ಯದಂತೆ ಆರಂಭವಾಗುವ ಈ ಅನುಭವೋಕ್ತಿಗಳು ಬದುಕಿನ ಸೂತ್ರಗಳನ್ನು ವಿವರಿಸುತ್ತವೆ.ಸೋಲುಗಳನ್ನು ಎದುರಿಸಿ ,ಎದುರಿಸಿ ಗಟ್ಟಿಗೊಂಡ ಮನಸ್ಸುಕೊನೆಗೆ ಈ ಸ್ಥಿತಿ ಮುಟ್ಟುತ್ತದೆ. ಸೋಲು ಪ್ರತಿಯೊಬ್ಬರನ್ನುಕ್ಷಣ ಕಾಲ ಅಸ್ತಿತ್ವವನ್ನೂ ಅಲುಗಾಡಿಸುತ್ತದೆ ನಿಜ.ಆದರೆ ಅದೇ ಅಂತಿಮವಲ್ಲ ಎಂಬ ತಿಳಿವಳಿಕೆ ಇರಬೇಕು ಹೀಗೆ ಅನುಭವ ಹರಳುಗಟ್ಟಿದಾಗ ಮಾತ್ರ ಇಂತಹ ಸೂಕ್ತಿಗಳು ಬರಲು ಸಾಧ್ಯ.ಮಾಡಿದ ಉಪಕಾರವನ್ನು ಮರೆಯುವದು ಎಷ್ಟು ಕೃತಘ್ನತೆಯರೂಪ ಎನ್ನುವದನ್ನು ವಿವರಿಸಲು ಮತ್ತೊಬ್ಬರು‌ ಮಾಡಿದಉಪಕಾರವನ್ನು ಮರೆತವರುಹೆತ್ತ ತಂದೆ ತಾಯಿಗಳನ್ನುಮರೆತರೆ ಆಶ್ಚರ್ಯ ಪಡಬೇಕಾಗಿಲ್ಲ ಇಂತಹ ಮಾತುಗಳು ಇಂದಿನ ಜನಾಂಗಕ್ಕೆಒಂದಿಷ್ಟಾದರೂ ಯೋಚನೆ ಮಾಡಲು ಹಚ್ಚುತ್ತವೆ.ಮನೆ, ಕುಟುಂಬ,ತಂದೆ, ತಾಯಿ ಇತ್ಯಾದಿ ಮೌಲ್ಯಗಳನ್ನು ಮರೆಯುತ್ತಿರುವ ಜನಕ್ಕೆ ಹಿತವಚನ‌ ನೀಡುತ್ತವೆ. ನಮಗೆ ದ್ವೇಷ ಮಾಡಲುಬಹಳಷ್ಟು ದಿನ ಇಲ್ಲಇರುವಷ್ಟು ದಿನಎಲ್ಲರನ್ನು ಪ್ರೀತಿಸೋಣ ಇಂಥ ಮಾತುಗಳು ಏಲ್ಲೊ ಓದಿದ ಮಾತು ಎನಿಸುತ್ತವೆ.ಆದರೂ ಒಂದು ಸಂದೇಶ ಅಲ್ಕಿ ಇದ್ದೇ ಇದೆ.ಉಪನ್ಯಾಸಕರಾಗಿ ಹತ್ತಾರು ವರುಷ ಕಳೆದಿರುವ ಗಂಗಾಧರ ಅಂಥವರಿಗೆ ಮಾತ್ರ ವಿದ್ಯಾರ್ಥಿ ವಿದ್ಯಾರ್ಥಿನಿಯರ ನಡುವಿನ ಈ ಅಂತರ ಹೊಳೆಯಲು ಸಾಧ್ಯ ವಿದ್ಯಾರ್ಥಿಗಳುಎಂದರೆಸುಂದರವಾದ ಕನಸುಗಳ‌ಮೇಲೆ ಸವಾರಿ ಮಾಡುವ ಸರದಾರರುವಿದ್ಯಾರ್ಥಿನಿಯರುಎಂದರೆವಾಸ್ತವವನ್ನು ಅರಗಿಸಿಕೊಂಡು ನೆಲದ ಮೇಲೆಹೂವು ಭಾರವಾದ ಹೆಜ್ಜೆ ಹಾಕುವ ಶ್ರಮಜೀವಿಗಳು ಕಾಲೆಜು ಹಂತದ ಹುಡುಗ ಹುಡುಗಿಯರ ಮನಸ್ಥಿತಿಯನ್ಬು ಅರಿತ ಆವಟೇರ‌ ಅವರು ಹುಡುಗರು ಹೇಗೆ ಕನಸುಗಳಲ್ಲಿ ಕರಗಿ ಹೋಗುತ್ತಾರೆ?ಹುಡುಗಿಯರು ಹೇಗೆ ವಾಸ್ತವ ಅರಿತು ಶ್ರಮ‌ಹಾಕಿ ಮುಂದೆ ಬರುತ್ತಾರೆ ಎನ್ನುವದನ್ನು ಸೂಕ್ಷ್ಮವಾಗಿ ಗುರುತಿಸುತ್ತಾರೆ.ಇಂದು ಕಾಲೇಜುಗಳ‌ ಫಲಿತಾಂಶವನ್ನು ನೋಡಿದಾಗ ಈ ಅನಭವೋಕ್ತಿ ನಿಜ ಎನಿಸುತ್ತದೆ.ಬಹಳ ಹಿಂದೆ ಕವಿ ಡುಂಡಿರಾಜ್ ಹುಡುಗಿಯರು ಮುಂದೆ ಮುಂದೆಹುಡುಗರು ಅವರ ಹೊಂದೆ ಹಿಂದೆ ಎಂಬ ಚುಟುಕು ಬರೆದಿದ್ದನ್ನು ನೆನಪಿಸಬಹುದು.ಎಲ್ಲ ಕಲೆಗಳಿಗಿಂತ ಜೀವನ ಎಂಬುದು ಪರಮ ಕಲೆ.ಅದನ್ನು ಹೇಳಿ ಕೊಡಲು ಮಾತ್ರ ಯಾವುದೆ ಶಾಲೆ‌ ಕಾಲೆಜು ಗಳಿಲ್ಲ. ಅದರಲ್ಲಿ ಯಶಸ್ವಿಯಾದವರಿಗೆ ಯಾವುದೆ ವಿಶ್ವ ವಿದ್ಯಾಲಯ ದ ಪ್ರಮಾಣ ಪತ್ರದ ಅಗತ್ಯವಲ್ಲ. ಬದುಕುವ ಕಲೆಕರಗತ ಮಾಡಿಕೊಂಡವರಿಗೆಯಾವುದೆ ವಿಶ್ವ ವಿದ್ಯಾಲಯದಅರ್ಹತೆಯ ಪ್ರಮಾಣ ಪತ್ರದ ಅಗತ್ಯವಿಲ್ಲ ಬದುಕು ಸರಳ ರೇಖೆಯಲ್ಲಅದರಲ್ಲಿಯೂ ಆಗಾಗ ವಕ್ರರೇಖೆಯಪ್ರತಿಪಫಲನಗಳು ಉಂಟಾಗುತ್ತವೆ ಇಂತಹ ಮಾತುಗಳು ಬದುಕಿನ ವ್ಯಾಖ್ಯಾನ‌ಮಾಡಲು ಹವನಿಸುತ್ತವೆ.ಯೋಗ ಎಂಬ‌ ಮಾತಿಗೆ ಅರ್ಥ ಹೇಳುತ್ತ ಯೋಗ ವ್ಯಾಯಾಮವಲ್ಲದೇಹ ಮತ್ತು ಮನಸ್ಸುಗಳನಿಯಂತ್ರಣ ಮಾಡುವ ಸಾಧನ ಎಂದು ವಿವರಿಸಿರುವದು ಒಂದು ರೀತಿಯಲ್ಲಿ ಯೋಗ ಚಿತ್ತವೃತ್ತಿ ನಿರೋಧ ಎಂಬ ಪರಂಪರೆಯ ಮಾತನ್ನು ನೆನಪಿಸುತ್ತದೆ.ಮಾತಿನ‌ ಬಗೆಗಿನ ಅವರ ಚಿಂತನೆ ಹೀಗಿದೆ. ನಾವು ಆಡುವ ಮಾತುಉದಯಿಸುವ ಸೂರ್ಯನ ಕಿರಣಗಳಂತೆಹೊಳೆಯುತ್ತಿರಲಿ,ಆದರೆಅವುಗಳು ಯಾರನ್ನು ಸುಡದಿರಲಿ ಎನ್ನುವ ಚಿಂತನೆ ಮಾತು ಸುಡುವ ಬೆಂಕಿಯಾ ಗಬಾರದು, ಬೆಳಗುವ ಹಣತೆಯಾಗಬೇಕು ಎನ್ನುವ ದನ್ನು ನೆನಪಿಸುತ್ತದೆ.ಹೀಗೆ ಇಲ್ಲಿನ ಮಾತುಗಳು ಸಂಕ್ಷಿಪ್ತವಾಗಿದ್ದಂತೆ ಕಾವ್ಯಾತ್ಮಕವಾಗಿವೆ.ಆದರೆ ದೀರ್ಘವಾಗುತ್ತಾ ಹೋದಂತೆ ಜಾಳು ಜಾಳು ಎನಿಸುತ್ತವೆ .ಕವಿತೆಯೆ ಆಗಲಿ,ಒಂದು ಸೂಕ್ತಿಯೇ ಆಗಲಿ ಅದು ವಿವರಣೆಯಾಗುತ್ತಾ ನಡೆದಂತೆ ಅವುಗಳ ಅರ್ಥ ಸಾಂದ್ರತೆ ಕಡಿಮೆಯಾಗುತ್ತದೆ. ದೇವರು,ಧರ್ಮ ಇಂತಹ ಅನುಭಾವದ ಮಾತುಗಳೂ ಇವೆ. ಪ್ರೊ.ಗಂಗಾಧರ ಅವಟೇರ ಅವರ ಸ್ನೇಹವಲಯ ದೊಡ್ಡದು.ಹೀಗಾಗಿ ಅರವತ್ತು ಪುಟಗಳ ಈ -ಅಲೆಮಾರಿಯ ದಿನದ ಮಾತುಗಳು -ಸಂಕಲನ ಕ್ಕೆ ೩೬ ಪುಟಗಳ ಬೇರೆಯವರ ಅಭಿಪ್ರಾಯ, ಮುನ್ನುಡಿ ಪ್ರಸ್ತಾವನೆಗಳೇ ಇವೆ.ಮೂಗುತಿ ಮುಂಭಾರ ಎನ್ನುವಂತೆ! ಇರಲಿ ಪ್ರೀತಿಯ ಭಾರ ತುಸು ಹೆಚ್ಚಾದರೂ ತಡೆಯಬಹಯದಲ್ಲವೇ.ಮೊಬಾಯಲ ಮಾಧ್ಯಮದ ಮೂಲಕ ಜೀವನ ಸಂದೇಶ ಹಂಚಿದ ಗೆಳೆಯರನ್ನು ಅಭನಂದಿಸುತ್ತೇನೆ.ನನಗೆ ಕವಿ ಗಂಗಾಧರ ಆವಟೇರ ಇಷ್ಟ.ಅವರು ಇನ್ನಷ್ಟು ಕವಿತೆ ಬರೆಯಲಿ ಎಂದು ಹಾರೈಸುತ್ರೇನೆ. ********* ಡಾ.ಯ.ಮಾಯಾಕೊಳ್ಳಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಲೋಕಪ್ರಸಿದ್ದ ಸಚಿತ್ರ ಮಕ್ಕಳ ಕತೆಗಳು ಮಕ್ಕಳ ಸಾಹಿತ್ಯ ಕೃತಿ ಪರಿಚಯ ಪುಸ್ತಕದ ಹೆಸರು- ಲೋಕಪ್ರಸಿದ್ದ ಸಚಿತ್ರ ಮಕ್ಕಳ ಕತೆಗಳು ಲೇಖಕರು – ಪ್ರೊ. ಎಚ್. ಜಿ. ಸಣ್ಣಗುಡ್ಡಯ್ಯ ಪ್ರಕಾಶಕರು – ಅಕ್ಷಯ ಪ್ರಕಾಶನ – ತುಮಕೂರು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮಕ್ಕಳಿಗೆ ಹೆಚ್ಚು ಕುತೂಹಲ ಕೆರಳಿಸಿ ಅವರಿಗೆ ನೀತಿಯನ್ನು ತಿಳಿಸುವ ಬಹುಮುಖ್ಯ ಪ್ರಕಾರವೆಂದರೆ ಈ ಕಥಾಪ್ರಕಾರ. ಇದು ಮಕ್ಕಳಲ್ಲಿ ಕಲ್ಪನಾ ಕೌಶಲ್ಯವನ್ನು ಬೆಳೆಸುವುದಲ್ಲದೆ ಆಲಿಸುವ ಸಾಮರ್ಥ್ಯವನ್ನು ಕೂಡ ಹೆಚ್ಚಿಸುತ್ತದೆ. ಮಕ್ಕಳ ಅಚ್ಚುಮೆಚ್ಚಿನ ಪ್ರಕಾರವಾದ ಕತೆಗಳು ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡುವಲ್ಲಿಯೂ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಇದಕ್ಕೊಂದು ಉತ್ತಮ ನಿದರ್ಶನವಾಗಿ ವೀರಮಾತೆ ಜೀಜಾಬಾಯಿಯವರು ಚಿಕ್ಕಂದಿನಲ್ಲೇ ಶಿವಾಜಿಯಲ್ಲಿ ಉದಾತ್ತ ಗುಣಗಳನ್ನು ಬೆಳೆಸಿದ ಪರಿಯನ್ನು ನಾವಿಲ್ಲಿ ಸ್ಮರಿಸಬಹುದು. ಇಂತಹ ಈಗಾಗಲೇ ಲೋಕದಲ್ಲಿ ಪ್ರಚಲಿತದಲ್ಲಿದ್ದು ಮೆಚ್ಚುಗೆಯ ಮೂಲಕ ಹೃದಯವಾಸಿಯಾಗಿರುವ ಒಟ್ಟು ಮೂವತ್ತ ನಾಲ್ಕು ಲೋಕಪ್ರಸಿದ್ದ ಸಚಿತ್ರ ಮಕ್ಕಳ ಕಥಾಗುಚ್ಛವೇ ಈ ಹೊತ್ತಗೆಯಾಗಿದೆ. ಇದರ ಲೇಖಕರು ಪ್ರೊ. ಎಚ್. ಜಿ. ಸಣ್ಣಗುಡ್ಡಯ್ಯನವರು ಹಾಗೂ ಪ್ರಕಾಶಕರು ಅಕ್ಷಯ ಪ್ರಕಾಶನ, ತುಮಕೂರು. ಇದರಲ್ಲಿನ ಕಥೆಗಳಿಗೆ ಸೂಕ್ತವಾದ ಚಿತ್ರಗಳನ್ನು ರಚಿಸಿ ಪುಸ್ತಕದ ಸೊಗಸನ್ನು ಕಲಾವಿದೆಯಾದ ಶ್ರೀಮತಿ ಸಿ. ಎಸ್ ನಿರ್ಮಲ ಕುಮಾರಿಯವರು ಹೆಚ್ಚಿಸಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ಲೋಕದಲ್ಲಿ ಪ್ರಸಿದ್ದವಾಗಿರುವಂತಹ ನಾವು ನೀವೆಲ್ಲರೂ ನಮ್ಮ ಬಾಲ್ಯವನ್ನು ಸವಿದು ಬೆಳೆದು ಇಂದು ಕಣ್ಮರೆಯಾಗಿರುವ ಅತ್ಯಮೂಲ್ಯ ಮೌಲ್ಯಗಳುಳ್ಳ ಈ ಕತೆಗಳನ್ನು ಮಕ್ಕಳಮಟ್ಟಕ್ಕೆ ಅರ್ಥವಾಗುವಂತೆ ಲೇಖಕರು ಬಹಳ ಸರಳ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಮುಖಪುಟವು ಗಮನಸೆಳೆಯುವಂತಿದ್ದು ಆಕರ್ಷಕ ಸನ್ನಿವೇಶದ ಚಿತ್ರವನ್ನು ಒಳಗೊಂಡಿದೆ. ಈ ಪುಸ್ತಕಕ್ಕೆ ಬೆನ್ನುಡಿಯನ್ನು ಡಿ. ಸುಮಿತ್ರ ಸಣ್ಣಗುಡ್ಡಯ್ಯನವರು ಬರೆದಿದ್ದಾರೆ. ಒಳಪುಟಗಳಲ್ಲಿರುವ ಪ್ರತಿಯೊಂದು ಕತೆಯೂ ಉನ್ನತ ಮೌಲ್ಯವನ್ನು ಹೊಂದಿದ್ದು ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೆ ಬೀರುತ್ತವೆ. ಬೆಕ್ಕು ಕಲಿಸಿದ ಪಾಠ ಕತೆಯು ಅಲ್ಪಜ್ಞಾನಿಯಾದವನು ಎಂದಿಗೂ ಗರ್ವ ಪಡಬಾರದು. ಮರಕ್ಕಿಂತ ಮರ ದೊಡ್ಡದಿರುತ್ತದೆ ಎಂಬ ನೀತಿಯನ್ನು ಸಾರಿದರೆ, ಹುಡುಗಿಯನ್ನು ಬಯಸಿದ ಸಿಂಹ ಕತೆ ವಿವೇಚನೆಯಿಲ್ಲದೆ ಯಾರಿಗೂ ಕೋಪದಲ್ಲಿ ಮತ್ತು ಖುಷಿಯಲ್ಲಿ ಮಾತು ಕೊಡಬಾರದು ಎಂಬುದನ್ನು ತಿಳಿಸುತ್ತದೆ. ಕೋತಿ ಚೇಷ್ಟೆ ಕತೆಯು ಆತುರದ ಬುದ್ದಿಯಿಂದ ಪೇಚಾಟಕ್ಕೆ ಸಿಲುಕಿಕೊಳ್ಳುವ ಪ್ರಸಂಗವನ್ನು ತಿಳಿಸಿದರೆ ಠಕ್ಕ ನರಿ ಕತೆಯು ಅಸೆ, ಆಮಿಷ, ಅನಿವಾರ್ಯತೆಗೆ ಒಳಗಾಗಿ ವಂಚನೆಯ ಬಲೆಯಲ್ಲಿ ಸಿಲುಕಿಕೊಳ್ಳುವ ಪರಿಯನ್ನು ತೋರಿಸಿಕೊಡುತ್ತದೆ. ಚೇಷ್ಟೆಯ ಫಲ ಕತೆಯು ಚೇಷ್ಟೆ ಅತಿಯಾದರೆ ಆಪತ್ತಿನ ಸಂದರ್ಭದಲ್ಲೂ ಸಹಾಯ ಸಿಗದೇ ಹೋಗುವ ನೀತಿಯನ್ನು ತಿಳಿಸುತ್ತದೆ. ಪರಸ್ಪರ ಸಹಾಯ ಕತೆಯಲ್ಲಿ ಒಬ್ಬರಿಗೊಬ್ಬರು ಸಹಕಾರ ಇಲ್ಲದಿದ್ದರೆ ಒಬ್ಬಂಟಿಯಾಗಿ ಹೆಚ್ಚಿನ ಹೊರೆಯನ್ನು ಹೊರಬೇಕಾದ ಪರಿಸ್ಥಿತಿಯನ್ನು ತಿಳಿದರೆ ಕೋಟಿಯ ನ್ಯಾಯ ಕತೆಯಲ್ಲಿ ಬೆಕ್ಕುಗಳ ಪರಸ್ಪರ ಜಗಳದಿಂದ ಇಬ್ಬರ ಜಗಳ, ಮೂರನೆಯವರಿಗೆ ಲಾಭ ಎಂಬುದನ್ನು ತಿಳಿಯಬಹುದು. ಮೇಕೆಗಳ ಮೇಲಾಟವು ಗರ್ವದಿಂದ ಹಳ್ಳಕ್ಕೆ ಬೀಳುವುದನ್ನು ತೋರಿಸಿದರೆ ಚಿನ್ನದ ಮೊಟ್ಟೆಯ ಕೋಳಿ ಕತೆಯು ಅತಿ ಆಸೆ ಗತಿಗೇಡು ಎಂಬುದನ್ನು ಅರಿವು ಮಾಡಿಕೊಡುತ್ತದೆ. ಮುದುಕಿಯ ಹುಂಜ ಕತೆಯು ಕೇವಲ ತನ್ನಿಂದಲೇ ಬೆಳಗಾಗುವುದಿಲ್ಲ ಎಂಬ ನೀತಿ ಹೇಳಿದರೆ ಮಗು ಯಾರದು? ಕತೆಯು ಸತ್ಯಕ್ಕೆ ಜಯವಿದೆ ಎಂಬುದನ್ನು ನಿರೂಪಿಸುತ್ತದೆ. ಬುದ್ದಿವಂತ ದೊರೆ ಕತೆಯಲ್ಲಿ ಸತ್ಯವು ಯಾವುದಾದರೊಂದು ರೀತಿಯಲ್ಲಿ ಅರಿವಾಗುತ್ತದೆ ಎಂಬುದನ್ನು ತಿಳಿಸಿದರೆ ಯಾರ ಶಕ್ತಿ ಹೆಚ್ಚು? ಕತೆಯು ಗಾಳಿಗಿಂತಲೂ ಸೂರ್ಯನೇ ಶಕ್ತಿಶಾಲಿ ಎಂಬ ತೀರ್ಮಾನವನ್ನು ಕೊಡುತ್ತದೆ. ದುಂದುಗಾರ್ತಿ ಕತೆಯು ಮಾತಿಗೂ ವರ್ತನೆಗೂ ಇರುವ ಸತ್ಯವನ್ನು ಅರಿಯುವ ನೀತಿಯನ್ನು ತಿಳಿಸಿದರೆ ಬೆಕ್ಕಿನ ಕೊರಳಿಗೆ ಘಂಟೆ ಕತೆಯು ಕಲ್ಪನೆಯ ಕನಸುಗಳೆಲ್ಲವೂ ನನಸಾಗುವುದಿಲ್ಲ ಎಂಬುದನ್ನು ತಿಳಿಸುತ್ತವೆ. ಓಟದ ಸ್ಪರ್ಧೆಯಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಸೋಲುಂಟಾಗುತ್ತದೆ ಮತ್ತು ತಾಳ್ಮೆಯಿಂದ ಕಠಿಣವಾದದ್ದನ್ನು ಸಾಧಿಸಬಹುದು ಎಂಬುದನ್ನು ತಿಳಿಸುತ್ತದೆ. ವೇಷ ಕತೆಯು ಸತ್ಯವನ್ನು ಹೆಚ್ಚುಕಾಲ ಬಚ್ಚಿಡುವುದಕ್ಕೆ ಸಾಧ್ಯವಿಲ್ಲ ಎಂಬ ನೀತಿಯನ್ನು ಸಾರಿದೆ. ಹೀಗೆ ದೊರೆ ಮತ್ತು ಆಮೆ, ನರಿ ಮತ್ತು ಕೊಕ್ಕರೆ, ಸಿಂಡರೆಲ್ಲ, ಸೊಹ್ರಬ್ ಮತ್ತು ರುಸ್ತುಮ್, ಬ್ಲೆನ್ಹೀಮ್ ಯುದ್ಧ, ಡೊಂಬರ ಚೆನ್ನೆ, ಕುರೂಪಿ ಬಾತುಕೋಳಿ ಮರಿ, ತೊಟಕಪ್ಪ, ಸಿರಾಕ್ಯೂಸಿನ ಇಬ್ಬರು ಅಪೂರ್ವ ಸ್ನೇಹಿತರು, ಜಾರ್ ಚಕ್ರವರ್ತಿ ಮತ್ತು ರೈತ, ಪ್ರೀತಿಯ ಮೂಲಕ ನೀತಿ, ಬೊ ಬೊನ ತುಂಟಾಟ, ನಾವಾಬಾಯಣ, ಮದುವಣಿಗನ ಪ್ರೇತ, ಪಾಪದ ಹುಡುಗ ಪೀಟರ್, ಸಾಂಕೊ ಪಾಂಜಾನ ತೀರ್ಪುಗಳು ಮತ್ತು ವ್ಯರ್ಥವಾದ ವರಗಳು.. ಹೀಗೆ ಒಂದೊಂದು ಕತೆಯೂ ವಿಭಿನ್ನವಾಗಿದ್ದು ಓದಿದಾಗ ಒಂದು ರಸಮಯ ಅನುಭವವನ್ನು ನೀಡುತ್ತವೆ. ಒಟ್ಟಾರೆಯಾಗಿ ಈಗಾಗಲೇ ಲೋಕಪ್ರಸಿದ್ಧವಾಗಿ ಜನರ ಮನದಲ್ಲಿ ಅಚ್ಚೂತ್ತಿದ್ದ ಕತೆಗಳನ್ನು ಮಕ್ಕಳಿಗೆಂದು ತಮ್ಮದೇ ಆದ ಸರಳ ಭಾಷೆಯಲ್ಲಿ ಪ್ರೊ. ಜಿ ಎಸ್ ರವರು ಬರೆದಿದ್ದಾರೆ. ಇಲ್ಲಿಯ ಪಾತ್ರಗಳ ಜಾಣ್ಮೆ, ಸಾಹಸ, ಛಲ, ಸಹನೆ ಮುಂತಾದ ಸದ್ಗುಣಗಳು ಮಕ್ಕಳನ್ನು ಪ್ರೇರೇಪಿಸಲಿ, ಅವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲಿ ಎಂಬುದು ಇಲ್ಲಿಯ ಕತೆಗಳ ಹೂರಣ. ಇಂಥದ್ದೊಂದು ಕೃತಿ ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವಲ್ಲಿ ಅಮೂಲ್ಯ ಕೊಡುಗೆಯನ್ನು ನೀಡಿದೆ. ಈ ಪುಸ್ತಕವು ಪೋಷಕರಲ್ಲಿ ಹಾಗೂ ಮಕ್ಕಳಲ್ಲಿ ಒಳ್ಳೆಯ ಓದಿನ ಅಭಿರುಚಿಯನ್ನು ಬೆಳೆಸುವಂತ ಕೃತಿಯಾಗಿದೆ.. ********* ತೇಜಾವತಿ ಹೆಚ್. ಡಿ.

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಬರ್ಫದ ಬೆಂಕಿ ಬರ್ಫದ ಬೆಂಕಿ ಕವನ ಸಂಕಲನ ಲೇಖಕರು- ನಾಗರೇಖಾ ಗಾಂವ್ಕರ್ ಸಾಧನ ಪಬ್ಲಿಕೇಷನ್ ದಾಂಡೇಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿರುವ ನಾಗರೇಖಾ ಗಾಂವ್ಕರ್ ಅವರ ಮೂರನೇ ಕವನ ಸಂಕಲನವಿದು. ಏಣಿ ಎಂಬ ಪ್ರಥಮ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ದೊರೆತಿದೆ. ಇನ್ನೊಂದು ಪದಗಳೊಂದಿಗೆ ನಾನು ಎಂಬ ಕವನ ಸಂಕಲನ. ಪಾಶ್ಚಿಮಾತ್ಯ ಸಾಹಿತ್ಯ ಲೋಕ ಭಾಗ-೧ ಮತ್ತು ಆಂಗ್ಲ ಸಾಹಿತ್ಯ ಲೋಕ ಭಾಗ -೨ ಎಂಬ ಎರಡು ವಿಮರ್ಶಾತ್ಮಕ ಕೃತಿಗಳನ್ನು ಇವರು ರಚಿಸಿದ್ದಾರೆ. ಈ ಕವನ ಸಂಕಲನದಲ್ಲಿ ಒಟ್ಟು ನಲವತ್ಮೂರು ಕವಿತೆಗಳಿವೆ. ಅ) ಮಾಗುವುದೆಂದರೆ – ಅಡಿಯಲ್ಲಿ ಹನ್ನೆರಡು ಬ)ಅವಳ ಕವಿತೆಗಳು- ಇದರಲ್ಲಿ ಹದಿಮೂರು ಕ) ಕಾಲಾತೀತ ಕವಿತೆಗಳು- ಎಂಟು ಡ)ಬಾನ್ಸುರಿಯ ನಾದ- ಹತ್ತು ಕವಿತೆಗಳಿವೆ. ಮೊದಲು ಕವಿತೆ ಆಳವೆಂಬ ಅರಿವು ನೋಡಿ… ಎದೆಗಿಳಿದ ಅಕ್ಷರಗಳು ಶೋಕೇಸಿನ ಕಪಾಟಿನಲ್ಲಿ ಗಾಜಿನ ಕೋಣೆಯಲ್ಲಿ ತಳತಳಿಸುವ ಪದಕವಾಗಲ್ಲ.. ನೆಲಕ್ಕಿಳಿಯಬೇಕು, ಕೆಸರ ಕೊಳದ ನೈದಿಲೆಯಾಗಬೇಕು. ಬೆಳಕಿನ ಹಾಡ ಹೊಮ್ಮಿಸಬೇಕು. ಅವಳು ನಡೆಯುತ್ತಿದ್ದಾಳೆ… ಕವಿತೆಯಲ್ಲಿ ಅಕ್ಷರದ ಅರಮನೆಗೆ ಪರಿಮಳವ ಮಾರಿ ಬರಬೇಕು. ಎಂತಹ ಸೊಗಸಾದ ಸಾಲುಗಳು.! ಶೀರ್ಷಿಕೆ ಕವಿತೆಯಾದ ಬರ್ಫದ ಬೆಂಕಿಯಲ್ಲಿ… ಉಕ್ಕುವ ಕಡಲ ಮೋಹಿಸುವ ಅವಳ ಹಠಕ್ಕೆ ಬರ್ಫದ ಬೆಂಕಿಯ ಕುಡಿವ ಹುಚ್ಚು. ಸೀದು ಹೋದರೂ ಬಿಸಿಯುಸಿರ ಹಂಬಲದ ಪಾತ್ರೆ ಮತ್ತೆ ಮತ್ತೆ ತಿಕ್ಕಿ ತಿಕ್ಕಿ ಶುಭ್ರವಾಗಿಡುವುದೇ ಅವಳ ದಿವ್ಯ ಭಕ್ತಿ. ರಾತ್ರಿಯಲ್ಲಿ ಹಗಲಿನ ಪಾಳಿ…ಸ್ವಗತದ ಸಾಲುಗಳಿರಬಹುದು. ತೆಕ್ಕೆಯೊಳಗಿಳಿದ ಪದಗಳ ಉಸಿರೊಳಗೆ ಬಚ್ಚಿಟ್ಟುಕೊಂಡೇ ಕಾಯ್ದುಕೊಂಡೇ ಹಾಡು ಹೆಣೆಯುವುದೆಂದರೆ ರಾತ್ರಿಯಲ್ಲೂ ಹಗಲಿನ ಪಾಳಿ. ಮಾತ್ರಿಯೋಷ್ಕಿ ಕವಿತೆಯ ಗೊಂಬೆಯೊಳಗಿನ ಗೊಂಬೆಯ ಸೃಷ್ಟಿ ಚೆನ್ನಾಗಿದೆ. ಗೂಸಬಮ್ಸ ನಿರೀಕ್ಷೆಯಲ್ಲಿ ಕವಿತೆ ಗಮನಿಸಿ… ಗಗನ ಚುಂಬಿ ಕಟ್ಟಡದ ಏರುವ ಇಳಿಯುವ ಎಸ್ಕಲೇಟರಗಳ ಮೇಲೆ ಕಿರುಸೊಂಟದ ಏಳು ಮಲ್ಲಿಗೆ ತೂಕದ ಹೆಣ್ಣುಗಳನ್ನು ಧಡೂತಿ ತೊಡೆಗಳ ಇಳಿಬಿದ್ದ ಸ್ತನಗಳ ಭಾರ ಜೀವ ಹೊತ್ತ ಗಜಗಾಮಿನಿಯರನ್ನು ಕಂಡು ಅರೆರೆ.. ಎಂದುಕೊಳ್ಳುತ್ತ ಮೈ ರೋಮ ನಿಮಿರಿತೆ? ಕಾಣದೇ ವ್ಯಗ್ರಗೊಂಡೆ. ‌….. ಮಿಂಚು ಕಂಗಳ ಸುಂದರಾಂಗರ ಕಣ್ಣಿನ ಸಂಚಲನೆಗೆ ಕೆತ್ತಿಸಿಕೊಂಡ ಮುಖಗಳ ಮಾದಕತೆಗೆ ಇದ್ದ ಸೆಳೆತಕ್ಕೆ ಮನಸ್ಸು ಜೋಲಿ ಹೊಡೆದು ಕೈ ನೋಡಿದರೆ ರೋಮಾಂಚನ ವ್ಯಾಕ್ಸಾಯನ. ನಾಗರೇಖಾರ ವೈವಿಧ್ಯತೆಯ ಝಲಕ್ ಇಲ್ಲಿದೆ. ಮುನ್ನುಡಿಯಲ್ಲಿ ಹಿರಿಯರಾದ ಶ್ರೀ ಸುಬ್ರಾಯ ಚೊಕ್ಕಾಡಿ ಅವರು ಹೇಳಿರುವಂತೆ- ವಸ್ತು ವೈವಿಧ್ಯ, ಭಾವವಿಲಾಸ, ಹೊಸ ರೂಪಕಗಳ ಸೃಷ್ಟಿ, ಸೂಕ್ಷ್ಮಜ್ಞತೆ, ಭಾಷೆಯ ಪರಿಣಾಮಕಾರಿ ಬಳಕೆ, ಪಕ್ವ ಚಿಂತನೆಗಳ ಕಾರಣಗಳಿಗಾಗಿ ನಾಗರೇಖಾ ಅವರು ಕಾವ್ಯಾಸಕ್ತರು ಗಮನಿಸಲೇಬೇಕಾದ ಕವಯತ್ರಿಯಾಗಿದ್ದಾರೆ. ಒಮ್ಮೆ ಓದಲೇಬೇಕಾದ ಕೃತಿ ‘ ಬರ್ಫದ ಬೆಂಕಿ’. ********** ಡಾ. ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ನಿನ್ನ ಪ್ರೀತಿಯ ನೆರಳಿನಲ್ಲಿ… ನೋವು ನಲಿವಿನ ಸ್ಪಂದನ ನಿನ್ನ ಪ್ರೀತಿಯ ನೆರಳಿನಲ್ಲಿ… ನೋವು ನಲಿವಿನ ಸ್ಪಂದನ ಲೇಖನಗಳ ಸಂಕಲನ ಎನ್. ಆರ್ ರೂಪಶ್ರೀ ಬೆನಕ ಬುಕ್ಸ್ ಬ್ಯಾಂಕ್ ಮೈಸೂರಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿರುವ ರೂಪಶ್ರೀ ಅವರ ಜ್ಞಾನ ಜ್ಯೋತಿ – ಆಧ್ಯಾತ್ಮಿಕ ಲೇಖನಗಳ ಸಂಕಲನ, ಮೌನ ಕಾಲ ಮತ್ತು ಕನಸ ತುಂಬಿದ ಕವಿತೆ ಎಂಬ ಕವನ ಸಂಕಲನಗಳು, ನೆನಪಿನ ನವಿಲುಗರಿ ನೆಲಕ್ಕೆ ಬಿದ್ದಿತ್ತು, ಹೆಜ್ಜೆಯಲ್ಲಿ ಗೆಜ್ಜೆನಾದ ಕಥಾಸಂಕಲನಗಳು ಈ ಹಿಂದೆ ಪ್ರಕಟಗೊಂಡಿವೆ. ಮೂಲತಃ ಶಿರಸಿಯವರಾದ ಇವರು ಕವಿ ಕಾವ್ಯ ಬಳಗ ಎನ್ನುವ ಸಾಹಿತ್ಯ ಸಂಘಟನೆಯ ಸಂಚಾಲಕಿಯಾಗಿ ಬಹಳ ಕ್ರಿಯಾಶೀಲರು ಕೂಡ. ಲೇಖಕಿಯರ ಸಂಘ ಕೊಡಮಾಡುವ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಪ್ರಶಸ್ತಿ ಇವರಿಗೆ ದೊರೆತಿದೆ. ಪುಸ್ತಕಗಳು ಪ್ರಾಣ ಸ್ನೇಹಿತರು. ಅವು ನಗಿಸುತ್ತವೆ, ಅಳಿಸುತ್ತವೆ ಮತ್ತು ಈ ಬದುಕಿನ ಅರ್ಥ ಹುಡುಕುವಂತೆ ಮಾಡುತ್ತವೆ ಎಂಬ ಕ್ರಿಸ್ಟೋಫರ್ ಪಾವೊಲಿನಿ ಅವರ ಮಾತು ಒಳಪುಟದಲ್ಲಿ ಇದೆ. ಇದು ರೂಪಶ್ರೀ ಅವರ ಮಾತೂ ಆಗಿರಬಹುದು. ಏಕೆಂದರೆ ಅವರೇ ಹೇಳಿಕೊಂಡಂತೆ ‘ ಇವು ನನ್ನ ಭಾವನೆಗಳನ್ನೆಲ್ಲ ಹಿಡಿದಿಟ್ಟು ಹರಿಯಬಿಟ್ಟಿರುವ ಬರಹಗಳು’. ಒಟ್ಟು ಇಪ್ಪತ್ತೇಳು ಕಥೆ, ಲಹರಿ ಮತ್ತು ಬರಹಗಳು ಈ ಕೃತಿಯಲ್ಲಿ ಇವೆ. ಇದಕ್ಕೆ ಕನ್ನಡದ ಖ್ಯಾತ ಕಾದಂಬರಿಗಾರ್ತಿ ಎಸ್.ಮಂಗಳಾ ಸತ್ಯನ್ ಮುನ್ನುಡಿ ಬರೆದು ಹಾರೈಸಿದ್ದಾರೆ. ಇಲ್ಲಿನ ಪ್ರತಿಯೊಂದು ಬರಹಗಳೂ ಪ್ರೀತಿ ಪ್ರೇಮದ ಕುರಿತಾಗಿರುವುದು ವಿಶೇಷ. ಆದರೆ ಎಲ್ಲಾ ಬರಹಗಳು ವಿಶಿಷ್ಟ ಮತ್ತು ವಿಭಿನ್ನ ರೀತಿಯಲ್ಲಿವೆ. ಮನುಷ್ಯತ್ವದ ಗುಣಗಳೇ ಮಾಯವಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರೀತಿ, ಸ್ನೇಹ, ಕರುಣೆ, ವಾತ್ಸಲ್ಯಗಳೆಂಬ ಹುಟ್ಟನ್ನು ಹಿಡಿದು ರೂಪಶ್ರೀ ನಮ್ಮನ್ನು ಸಂಸಾರ ಶರಧಿಯನ್ನು ದಾಟಿಸಲು ಪ್ರಯತ್ನ ಮಾಡಿದ್ದಾರೆ. ಮಂಗಳಾ ಅವರು ಹೇಳಿರುವಂತೆ – ವೃತ್ತಿ ಮತ್ತು ಸಂಸ್ಕಾರಗಳು ನಮ್ಮ ಬದುಕಿನ ಅಂಗಗಳು. ಮದುವೆ, ಪ್ರೀತಿ ಪ್ರೇಮ ಪುರುಷನಿಗಿಂತ ಹೆಣ್ಣಿನ ಬದುಕಿನ ಮೇಲೆ ಒಂದು ವಿಶಿಷ್ಟ ಪರಿಣಾಮವನ್ನು ಬೀರುತ್ತದೆ ಎಂಬ ಅಂಶ ಈ ಕೃತಿಯಲ್ಲಿ ಅಡಕವಾಗಿರುವ ಬರಹಗಳಲ್ಲಿ ಕಂಡುಬರುತ್ತದೆ.ದಿಟ್ಟತನದ ಮಹಿಳೆ ಇಲ್ಲಿದ್ದಾಳೆ. ನನ್ನ ಪ್ರೀತಿಯ ನೆರಳಿನಲ್ಲಿ, ಮೌನ ಮುರಿಯದ ಪ್ರೀತಿ, ಮೌನ ಗರ್ಭದೊಳಗೆ, ದೂರ ತೀರದ ಪ್ರೀತಿ ಮತ್ತು ಮರೆತೆನೆಂದರೂ ಮರೆಯದ ಪ್ರೀತಿ.. ಅದು ಆಕೆಯ ರೀತಿ ; ಹೆಚ್ಚು ಮುದ ನೀಡಿದ ಬರಹಗಳು. ಪ್ರೀತಿಯ ಪಾರಿಜಾತ ಪಸರಿಸುತ್ತಿದೆ, ನೆನಪುಗಳ ಸಂಕೋಲೆಯಲ್ಲಿ ಬಂಧಿಯಾಗ ಹೊರಟು, ಅದೇ ಮಳೆ, ಮಿಂಚು, ಆಲಿಕಲ್ಲು, ಬದುಕ ಪ್ರೀತಿಗೊಂದು ದೀಪ ಹಚ್ಚಿ, ನೀ ನನಗೆ ಏನಾಗಬೇಕೋ ಇತ್ಯಾದಿಗಳು ಇಷ್ಟವಾದವು. ಈ ಕೃತಿಯ ಪ್ರಕಾಶಕರು ಮತ್ತು ನಿಮ್ಮೆಲ್ಲರ ಮಾನಸ ಪತ್ರಿಕೆಯ ಸಂಪಾದಕರಾದ ಗಣೇಶ ಕೋಡೂರು ಅವರು ಬೆನ್ನುಡಿಯಲ್ಲಿ ಹೇಳಿರುವಂತೆ ಈ ಸಂಕಲನದ ಓದು ನಿಮ್ಮ ಬದುಕಿನಲ್ಲಿ ಗೊತ್ತಿಲ್ಲದಂತೆ ಹೊಸದೊಂದು ಉತ್ಸಾಹವನ್ನು ಚಿಮ್ಮಿಸುತ್ತದೆ. ಒಮ್ಮೆ ಈ ಕೃತಿಯನ್ನು ಓದಿ. ********** ಡಾ.ಅಜಿತ ಹರೀಶಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪ್ರಶಸ್ತಿ-ಪುರಸ್ಕಾರ

ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ -2019 ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ -2019 ಕನ್ನಡದ ಸಣ್ಣ ಕತೆಗಾರರಿಗೆ ಉತ್ತೇಜನ ನೀಡಲು ಪ್ರತಿ ವರ್ಷ ನೀಡುತ್ತಿರುವ ಡಾ . ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ 2019 ರ ಪ್ರಶಸ್ತಿ ಚನ್ನಪ್ಪ ಕಟ್ಟಿ ಅವರ ” ಏಕತಾರಿ ” ಕಥಾ ಸಂಕಲನಕ್ಕೆ ಸಂದಿದೆ . ಡಾ. ಎಸ್ ಜಿ ಸಿದ್ದರಾಮಯ್ಯ , ಅರುಣ್ ಜೋಳದ ಕೂಡ್ಲಗಿ ಮತ್ತು ವಿನಯಾ ವಕ್ಕುಂದ ಅವರುಗಳಿದ್ದ ಸಮಿತಿ ಈ ಕಥಾಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ . ಚನ್ನಪ್ಪ ಕಟ್ಟಿಯವರ ಕಥಾ ಸಂಕಲನದ ಎಲ್ಲಾ ಕಥೆಗಳು ನೆಲದ ಬೇರುಗಳನ್ನು ಹೀರಿಕೊಂಡು ಬದುಕಿನ ಸ್ಥಿತ್ಯಂತರಗಳನ್ನು ಸೂಕ್ಶ್ಮವಾಗಿ ಕಟ್ಟಿ ಕಲಾ ಕೃತಿಯ ಅನುಭವ ನೀಡುತ್ತಾ ಬದಲಾದ ಕಾಲಘಟ್ಟಗಳ ಮನುಷ್ಯ ಸಂಬಂಧಗಳ ನಾಡಿ ಮಿಡಿತವನ್ನು ನೀಡುತ್ತವೆ . ಈ ಕಾರಣಕ್ಕಾಗಿ “ಏಕತಾರಿ”ಕಥಾ ಸಂಕಲನವನ್ನು ಸಮಿತಿ ಒಮ್ಮತದಿಂದ ಆಯ್ಕೆ ಮಾಡಿದೆ . ಡಾ.ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ***********************************

ಪ್ರಶಸ್ತಿ-ಪುರಸ್ಕಾರ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಜಾಂಬ್ಳಿ ಟುವಾಲು ಜಾಂಬ್ಳಿ ಟುವಾಲು ಕಥಾಸಂಕಲನ ಲೇಖಕರು- ರಾಜು ಹೆಗಡೆ ಪ್ರಕಾಶನ – ಅಂಕಿತ ಪುಸ್ತಕ ಶಿರಸಿಯಲ್ಲಿ ಕನ್ನಡ ಉಪನ್ಯಾಸಕರಾಗಿರುವ ಪ್ರೊ.ರಾಜು ಹೆಗಡೆ ಉತ್ತರ ಕನ್ನಡದ ಪ್ರಮುಖ ಕವಿ ಮತ್ತು ಕಥೆಗಾರ.ಉ.ಕದ ಗಡಿರೇಖೆಯೊಳಗೆ ತಮ್ಮ ಕಥಾಲೋಕ ಸೃಷ್ಟಿಸಿಕೊಂಡು ಇಲ್ಲಿಯೇ ನೆಲೆಸಿರುವ ಬರಹಗಾರ. ಜಾಂಬ್ಳಿ ಟುವಾಲು ಎಂಬ ಹೆಸರಿನ ಯಾವುದೇ ಕಥೆ ಇಲ್ಲಿಲ್ಲ. ಆದರೆ ‘ಕುರುರಾಯ ಇದನೆಲ್ಲ ಕಂಡು..’ ಎಂಬ ಕಥೆಯಲ್ಲಿ ಟವೆಲ್ ಇಟ್ಟು ಹೋದವರ ಜಗಳದ ಪ್ರಸಂಗ ಬರುತ್ತದೆ. ಕಥೆಗಳನ್ನು ಜಾಂಬ್ಳಿ – ಇಲ್ಲಿ ಆರು ಕಥೆಗಳು ಇವೆ. ಟುವಾಲು- ಇಲ್ಲಿಯೂ ಆರು ಕಥೆಗಳಿವೆ. ಮತ್ತು ಅನುಬಂಧದಲ್ಲಿ ನಾಲ್ಕು ಕಥೆಗಳಾಗಿ ವಿಂಗಡಿಸಲಾಗಿದೆ. ಅಪಾರ ಪಾಂಡಿತ್ಯವನ್ನು ಪಡೆದಿದ್ದರೂ ರಾಜು ಹೆಗಡೆ ಅವರು ಅದನ್ನು ಕಥೆಗಳಲ್ಲಿ ತುರುಕಿಲ್ಲ. ಸರಳ ಮತ್ತು ಉತ್ತರ ಕನ್ನಡದ ಭಾಷೆಯಲ್ಲಿ ಕತೆ ಹೇಳುತ್ತಾ ಹೋಗಿದ್ದಾರೆ. ವಿನೋದದ ಪ್ರಸಂಗವನ್ನು ಚಂದಾಗಿ ಹೇಳಬಲ್ಲ ಹೆಗಡೆಯವರು ‘ ಲಾರಿ ಏರಿದ ಕಾಡು ‘ ಎಂಬ ಕತೆಯಂತಹ ಕತೆಯಲ್ಲಿ ವಿಷಾದವನ್ನು ಸಟಕ್ಕನೆ ತಂದು ಕಾಡುವರು. ಕತ್ತಲೆ ಮೌನ ಮತ್ತು… ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ಮೊದಲ ಬಹುಮಾನ ಪಡೆದ ಕಥೆ. ಇಲ್ಲಿ ಗಜಾನನ, ತಿಮ್ಮಣ್ಣ (ತಿರುಮಲೇಶ) ಮತ್ತು ಗೌರಿಯ ಸುತ್ತ ಸುತ್ತುತ್ತಾ ಊರನ್ನೂ ಒಳಗೊಳ್ಳುವ ಕಥೆ. ಸಣ್ಣ ಪುಟ್ಟ ಚಾಲ್ ನಲ್ಲೆ ಚಿತ್ರಣ ಕಟ್ಟಿಕೊಡುವುದು ಇವರ ನಿರೂಪಣೆಯ ವಿಶೇಷ. ಚಾವಿ ಕಥೆ ಅತ್ಯಂತ ಸಣ್ಣ ಸಮಯದಲ್ಲಿ ನೆಡೆಯುವ ಸಾಮಾನ್ಯ ಘಟನೆ. ಆದರೆ ಅದು ರಾಜು ಹೆಗಡೆ ಅವರ ಕೈಯಲ್ಲಿ ಕಲಾತ್ಮಕವಾಗಿ ಹೊರಹೊಮ್ಮಿದೆ. ಪಾರಿಜಾತದ ಗೀರು ಒಂದು ವಿಶಿಷ್ಟವಾದ ಕಥೆ.ಇಲ್ಲಿಯ ಪ್ರೇಮಿಗಳ ವಾತಾವರಣ ಈಗಿನ ಕಾಲಘಟ್ಟದ್ದಾದರೂ, ಇಬ್ಬರೂ ಪ್ರೌಢರು. ವಿಪ್ರಲಂಭ ಕೂಡಾ ಎಕ್ಸ್ಟ್ರಾ ಮರೈಟಲ್ ರಿಲೇಶನ್ ಶಿಪ್ ಬಗ್ಗೆ ರೋಮ್ಯಾಂಟಿಕ್ ನಿರೂಪಣೆಯಲ್ಲಿ ಸಾಗುತ್ತದೆ. ಲಾಸ್ಟ್ ಪೆಗ್,ಫ್ರಿಜ್ಜು, ಲೌಕಿಕ ದಂತಹ ಕತೆಗಳು ಯಾವುದೇ ಪ್ರಕಾರದ ಹಂಗಿಲ್ಲದೆ ಓದುವ ಮತ್ತು ಕೇವಲ ಓದುವ ಖುಷಿಯನ್ನು ಕೊಡುತ್ತವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಒಮ್ಮೆ ಓದಲೇಬೇಕಾದ ಕೃತಿ ಈ ‘ ಜಾಂಬ್ಳಿ ಟುವಾಲು. ***********. ಡಾ.ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ನಾನು ಅಘೋರಿಯಲ್ಲ “ನಾನು ಅಘೋರಿಯಲ್ಲ”” – Santoshkumar Mehandale 10 ವರ್ಷದ ಹಿಂದೆಯೇ ತರಂಗದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ, ರಾಜ್ಯಮಟ್ಟದ ಜನಪ್ರಿಯ ಕಾದಂಬರಿ ಎಂದೆನಿಸಿಕೊಂಡ, (ಬಹುಶ ಹಲವು ಪ್ರಶಸ್ತಿಯೂ ) ಪುಸ್ತಕ….    ನನ್ನ ಬಹುದೊಡ್ಡ ಹೊಟ್ಟೆಯುರಿ ಅಂದ್ರೆ ಈ ಲೇಖಕರು,  ಇವರ ಬರಹಗಳು ನಂಗೆ ಪರಿಚಯವಾದದ್ದು ತೀರ ಇತ್ತೀಚಿಗೆ, ಇಷ್ಟು ವರ್ಷ ನಾನೀ ಲೇಖಕರ ಪುಸ್ತಕ ಬರಹ ಎಲ್ಲಾ ಮಿಸ್  ಮಡ್ಕೊಂಡೇ ಅಂತನ್ನಿಸೋದು ಇವರ ಕೆಲವು ಪುಸ್ತಕಗಳು ಸಿಗದಿದ್ದಾಗ, ಅವನು ಗಂಧರ್ವ….  ಯಾವ ಪ್ರೀತಿಯೂ…. ಓದಿದ ನಂತರ ಸರ್ ನಿಮ್ಮ ಯಾವ್ಯಾವ ಬುಕ್ಸ್ ಲಭ್ಯ ಇದೇ ಕಳಿಸಿಬಿಡಿ ಅಂತಾ ತರಿಸಿಕೊಂಡಿದ್ದೆ ಆದರೇ ಮಿಸ್ ಆದ ಪುಸ್ತಕಗಳಲ್ಲೊಂದು “”ನಾನು ಅಘೋರಿಯಲ್ಲ “”   ನನ್ನದೊಂದು (ದುರ )ಅಭ್ಯಾಸ ಅಂದ್ರೆ ನಂಗೆ ಯಾವುದೇ ಬುಕ್ ಬೇಕಂದ್ರೂ ಇನ್ನೊಬ್ರತ್ರ ಇಸ್ಕೊಳೋದು ಲೈಬ್ರರಿಲಿ ತರೋದು ಆಗೋಲ್ಲ, ಆದ್ರೆ ಮಾರ್ಕೆಟ್ ನಲ್ಲಿ ಸಿಗದಿದ್ದಾಗ ಲೈಬ್ರರಿ ಮೊರೆ ಅನಿವಾರ್ಯ, ಹೀಗೇ ಯಾವ್ದೋ ಬುಕ್ ತರೋದಿತ್ತು ಹಾಗೂ ಈ ಮೆಹಂದಳೆ ಸರ್ ದು, ನಂದೂ ಬುಕ್ಸ್ ಅಲ್ಗೆ ತಳ್ಪಸೋಣಾ ಅಂತಾ ಹೋದಾಗ ಕಣ್ಣಿಗೆ ಬಿದ್ದದ್ದು ಈ ನಾನು ಅಘೋರಿಯಲ್ಲ, ಒಂದ್ಸಲ ಆದ ಖುಷಿಗೆ ಪಾರವಿರಲಿಲ್ಲ, ನಿನ್ನೆ ಇಡೀ ದಿನ ಮಾಡಬೇಕಾದ ಎಲ್ಲಾ ಕೆಲ್ಸ ಬಿಟ್ಟು ಕೂತು ಓದಿ ಮುಗ್ಸಿದ್ದೀನಿ, ನನ್ನನಿಸಿಕೆ ಕೇವಲ ಅನಿಸಿಕೆ ನಿಮ್ಮ ಮುಂದೆ…   ಈ ಅಘೋರಿ ಅನ್ನೋ ಪದಾನೇ ನನ್ನ ವಿಚಿತ್ರವಾಗಿ ಸೆಳೆಯತ್ತೆ, ಇದರ ಬಗ್ಗೆ ಓದಿಲ್ಲ ಕೇಳಿಲ್ಲ ಅಂತಲ್ಲ, ಬಹುಶ: ಅಘೋರಿ ಅಂದ್ರೆ ಒಂಥರಾ ಭಯ ಗಾಬರಿ ಏನೋ ಮುಜುಗರದಂತಹ ಫೀಲಿಂಗ್, ಅವ್ರೇನೋ ಬೇರೇ ಗ್ರಹದವರ ಎಂಬ ಅಸ್ಪೃಶ್ಯ ಅಲ್ದೇ ಸರಿಯಾಗಿ ಹೇಳ್ಬೇಕಂದ್ರೆ ಅಸಹ್ಯ ಅನ್ನೋ ಭಾವನೇನೇ ಜಾಸ್ತಿ, ಆದರೇ ಈ ಪುಸ್ತಕದ ವಿಶೇಷ ಅಂದ್ರೆ ಇದನ್ನ ಓದಿದರೆ ಸರಿಯಾಗಿ ಅರ್ಥೈಸಿಕೊಂಡರೆ ಲೇಖಕರು “”ಅಘೋರಿಗಳ “” ಬಗೆಗಿನ ಎಲ್ಲಾ ಪೂರ್ವಗ್ರಹಗಳನ್ನೂ ನಿವಾರಿಸಿಬಿಡುತ್ತಾರೆ ಮಾತ್ರವಲ್ಲ ಅವರೊಂದಿಗೆ ಒಂದು ಮಾನವೀಯ ಗೌರವ ಭಾವವೂ ಹುಟ್ಟಿಕೊಳ್ಳುತ್ತೆ, ಮತ್ತೆಂದೂ ಪೂರ್ವಾಪರ ವಿವೇಚನೆ ಇಲ್ದೆ ಅಘೋರಿಗಳನ್ನ ನೀವು ನಿರಾಕರಿಸಲಾರಿರಿ ಡ್ಯಾಮ್ ಶ್ಯೂರ್…..    ಸಾಮಾಜಿಕ ವ್ಯವಸ್ಥೆಯ ಮೂರ್ನಾಲ್ಕು ರಂಗಗಳನ್ನು ಒಂದಕ್ಕೊಂದು ಕೊಂಡಿಗಳನ್ನ ಜೋಡಿಸೋದನ್ನು ಪರಸ್ಪರ ಒಬ್ರಿಗೊಬ್ರು ದ್ರೋಹವೆಸಗೋದನ್ನೂ , ಅದರೊಳಗೂ ಹರಡಿ ಘಮಿಸುವ ನಿರ್ಮಲ ನಿಷ್ಕಲ್ಮಶ ಪ್ರೀತಿಯನ್ನು ಅದ್ಬುತವಾಗಿ ಎಲ್ಲೂ ಕಿಂಚಿತ್ತು ಬೇಸರವಾಗದಂತೆ ಎಲ್ಲಿಯೂ ಯಾವ ಚಿಕ್ಕ ಲೋಪವೂ ಬಾರದಂತೆ,  ಬೇಸರವಾಗದoತೆ ಕಥೆ ಹೆಣೆದಿರುವ ಲೇಖಕರ ಕೌಶಲ್ಯ ಮನಸೆಳೆಯುತ್ತದೆ.. ವೈಜ್ಞಾನಿಕಥೆಗೆ  ಅಧ್ಯಾತ್ಮದ,  ವಾಮಲೋಕದ ಅಘೋರ ವಿಜ್ಞಾನ, ಹೇಗೆ ಒಂದಕ್ಕೊಂದು ತಳುಕು ಹಾಕಿಕೊಳ್ಳಬಲ್ಲದು ಹಾಗೂ ಪರಸ್ಪರರ ಅವನತಿಗೂ ಕಾರಣವಾಗಬಲ್ಲದು ಎಂಬುದನ್ನು ಮಾರ್ತಾಂಡ ಬಾಬಾ ಹಾಗೂ ಅಧ್ವೈತ ಸ್ವಾಮಿ ಮೂಲಕ ಅರಿವನ್ನು ನೀಡಿದ್ದಾರೆ ಹಾಗೂ ಅಘೋರಿಗಳೂ ತಮ್ಮ ಸಿದ್ಧಿಯನ್ನು ಲೋಕ ಕಲ್ಯಾಣಕ್ಕೆ ಉಪಯೋಗಿಸುವ ಬಗ್ಗೆ ಖಂಡಿತವಾಗಿಯೂ ಸಾಮಾನ್ಯ ಜನಕ್ಕೆ ತಿಳುವಳಿಕೆ ಇರಲಾರದು, ಅಘೋರ ವಿಜ್ಞಾನ ಕೂಡ ವೈಜ್ಞಾನಿಕ ಆಧಾರಿತ ಅನ್ನೋದನ್ನೂ ಸರಳವಾಗಿ ಅರ್ಥವಾಗುವಂತೆ ಬಿಡಿಸಿಟ್ಟಿದ್ದಾರೆ, ನಮ್ಮ  ಆಡಳಿತ ವೈಖರಿ ಅಧಿಕಾರಿ ವರ್ಗದ ಕೆಲವು ವಿಫಲತೆ, ಭ್ರಷ್ಟಾಚಾರ, ಧರ್ಮವನ್ನು ದುರುಪಯೋಗ ಪಡಿಸಿಕೊಳ್ಳುವ ದುರವಸ್ಥೆ ಖೇದವೆನಿಸುತ್ತದೆ, ಮನುಷ್ಯನ ದುರಾಸೆಯಿಂದ ಸಮಾಜಕ್ಕಾಗುವ ಹಾನಿ ನಷ್ಟವನ್ನು ಅಗ್ನಿಹೋತ್ರಿ ಎಂಬ ವಿಜ್ಞಾನಿ ತನ್ನ ಅದ್ಬುತ ಪಾಂಡಿತ್ಯದಾಚೆಗೂ ಪ್ರಯೋಗವನ್ನು ಅಧೂರಿಯಾಗಿ ಬಿಟ್ಟು ತನ್ನನ್ನು ತನ್ನ ದಶಕಗಳ ಶ್ರಮವನ್ನು ಬೂದಿ ಮಾಡಿಕೊಳ್ಳುವ ಅಸಾಹಾಯಕತೆ ಗಲಿಬಿಲಿಗೊಳಿಸತ್ತೆ, ಅಘೋರಿಗಳ ವಾಮಮಾರ್ಗದ  ಭೀಭಿತ್ಸ  ಭೀಕರ ಆಚರಣೆಯ ಬಗ್ಗೆ ಮಾತ್ರಾ ತಿಳಿದವರಿಗೆ ಅದರ  ಹಿಂದಿನ ಸಾಮಾಜಿಕ ಕಳಕಳಿ, ಹಿತದೃಷ್ಟಿ ಅರಿವಿಗೆ ಬಂದ್ರೆ ಅಘೋರ ಲೋಕ ಹಾಗೂ ಅಘೋರಿಗಳ ಬಗೆಗಿನ ತಪ್ಪು ತಿಳುವಳಿಕೆ ಅಂತರ ಕಡಿಮೆಯಾಗಿ ಅವರೊಂದಿಗೆ ಒಂದು ಮಾನವೀಯ ಸಂವಹನ ಸಾದ್ಯವಾಗಬಲ್ಲದು, ಇದು  ಇನ್ನೊಮ್ಮೆ ಪ್ರತಿಲಿಪಿಯಲ್ಲಾದರೂ ಬರಲಿ ಎಂಬುದು ನನ್ನ ಕೋರಿಕೆ, ಇಲ್ಲಿನದೇ ಒಂದಷ್ಟು ಓದುಗರು ಓದಲು ಅನುಕೂಲ ಆಗಬಹುದೆಂಬುದು ನನ್ನಾಶಯ,   ಇನ್ನು ರೇಶಿಮೆ ಜರತಾರಿನ ಸೀರೆಯಲ್ಲಿ ಬೆಳ್ಳಿ ಝರಿಯಂತೆ ನಿಕ್ಷಿಪ್ತವಾಗಿ ಎಲ್ಲರಲ್ಲಿಯೂ ಸೇರಿಕೊಂಡಿರೋದು, “”ಪ್ರೇಮ ಎಂದರೆ ಆಕಾರಕ್ಕೆ ನಿಲುಕದ….    ಕಲ್ಪನೆಗೆ ನಿಲುಕದ……. ಮನಸ್ಸು… !!       ಒಂದು   “”ಪ್ರಚ್ಚನ್ನ ಮೌನ “”” ಆದಿ ಪುರಾಣ ಕಾಲದಿಂದಲೂ ಇಂದಿನವರೆಗೂ ಸಾವಿರಾರು ಪ್ರೇಮ ಕಥೆಗಳು ಆಗಿಹೋಗಿವೆ, ಒಂದಷ್ಟು ಸುಖಾಂತ ಒಂದಷ್ಟು ದುಃಖಾಂತ, ಎರಡರ ಬಯಕೆಯೂ ನಿಸ್ವಾರ್ಥ… ತ್ಯಾಗ…. ಅದೆಲ್ಲಕಿಂತ ತಾದ್ಯಾತ್ಮತೆಯನ್ನ…. ಎಂದು ಇತಿಹಾಸಗಳಿಂದ ಅರಿತವರು ತುಂಬಾ ಕಡಿಮೆ ಮಂದಿ…. ಈ  ಲೇಖಕ ಮಹಾನುಭಾವರ ಪ್ರೇಮದ ಪ್ರೀತಿಯ ವ್ಯಾಖ್ಯಾನಗಳು ಅತೀ ಸುಂದರ ಚೇತೋಹಾರಿ ಮನೋಲ್ಲಾಸಗೊಳಿಸುವಂತದ್ದು, ನಮ್ಮಂತ ಆಡಲಾರದ ಅನುಭವಿಸಲಾರದ ಬಿಸಿತುಪ್ಪದಂತೆ ನುಂಗಲಾರದೆ ಉಗುಳಲಾರದೇ ಸಂಕಟ ಪಡುವ ಮನಗಳಿಗೆ ಕೊಂಚ ಧೈರ್ಯ ತುಂಬಿ ಅಗತ್ಯವಾದದ್ದನ್ನು ಕೇಡಿಲ್ಲದ, ಅನ್ಯಾಯವಲ್ಲದ ರೀತಿಯಲ್ಲಿ ಎಟುಕಿಸಿಕೊಳ್ಳುವ, ಮನಃಸ್ಥಿತಿಗೆ ತಂದು ಬದುಕಿಗೆ ಅಲ್ಪ ಸ್ವಲ್ಪ  ನೆಮ್ಮದಿ ಚೈತನ್ಯ ತುಂಬುವಂತಹುದು, ಹೌದು ಇನ್ನೊಬ್ಬರಿಗೆ ಕೇಡೆಣಿಸದಂತ ಯಾವ ಪ್ರೀತಿಯೂ ಅನೈತಿಕವಲ್ಲ ಎಂದೇ ಸಾರಿದವರಲ್ಲವೇ….?? ಮನಸ್ಸಿನ ಅನುಭೂತಿಗೊಂದು ಆಯಾಮ ಕಲ್ಪಿಸುವುದೇ ಪ್ರೇಮವಾ?? ಇದ್ದಷ್ಟೂ ಮತ್ತಷ್ಟು ಬೇಕೆಂದುಕೊಳ್ಳುವುದು ಪ್ರೇಮವಾ?? ಜಾಜಿ ಮಲ್ಲೆಯ ಘಮಲಾ??  ಮುಂಜಾವಿನ ಇಬ್ಬನಿಯ ಮೃದುತ್ವವಾ?? ನಗುವ ಗಾಳಿಯ ಸಣ್ಣಸುಳಿಯ ಕಲರವವಾ?? ಮೊದಲ ಮಳೆಯ ಮಣ್ಣಿನ ವಾಸನೆಯ ಗಾಢತೆಯಾ?? ಪ್ರೇಮವೊಂದು ನೆರವೇರುವುದಕ್ಕಿಂತ ಅದು ನೆರವೇರಲಿರುವ ನಿರೀಕ್ಷೆ ತುಂಬಾ ಹಿತವಾಗಿರುತ್ತದೆಂದು ಯಾಕೆನಿಸುತ್ತದೆಯೋ… ಮಲ್ಲಿಗೆ ಬಳ್ಳಿಯ ತೂಗುವಿಕೆಯ  ಲಾಸ್ಯವಾಗಿ ಮನದಲ್ಲಿ ಬೆಳದಿಂಗಳಾಗಿ, ಇಂಧ್ರಧನುಸ್ಸಾಗಿ,, ಚಿನ್ನದ ಮೋಡಗಳ ಗರಿಗಳಾಗಿ… ಇದಕ್ಕಿಂತ ಹಿತವಾದುದು ಖಂಡಿತಾ ಇದರ ಮೀರಿದ ಹಿತವಿಲ್ಲ ಎಂದೇ ನಮ್ಮನಿಸಿಕೆಯೂ ಲೇಖಕರೇ… ಮೈನವಿರೇಳಿಸುವ ಅಘೋರ ಲೋಕದ ವಿದ್ಯಮಾನಗಳಾಗಲಿ…., ಹಿಪ್ನಾಟೈಸ್…., ಆರತ್ಯುಂಗ…. ವರ್ಣಗೋಲ….  ಕಡೆಗೆ ಕಾನ್ಫಿಡೆನ್ಸ್ ಏನೇ ಇರಲಿ, ಯಾವುದೇನು ಮಾಡಿದರೂ ಮನಸ್ಸನ್ನು ಕಂಡು ಹಿಡಿಯುವ ತಂತ್ರಜ್ಞಾನ ಮಾತ್ರಾ ಎಟುಕಲಾರದೇನೋ…???  ಅಂತದ್ದೊಂದು ಎಟುಕಬಾರದು ಕೂಡಾ… ಅದೇ ಈ ಸಕಲ ಜೀವಗಳಿಗೂ ಜಗತ್ತಿಗೂ ಶುಭ……   ಹೌದು ಪ್ರೇಮವೆಂದರೆ ಅಪೂರ್ವ ಶಾಂತಿ….        “”””ಪ್ರಚ್ಚನ್ನ ಮೌನ  “””” ಅದ್ಬುತ ಪ್ರೇಮ ರಾಸಾಯನದೊಂದಿಗೆ ಅಘೋರಿಗಳ ಹೊಸಮುಖ ಪರಿಚಯಿಸಿದ, ಒಂದು ನಿಗೂಢವನ್ನ ಅನಾವರಣಗೊಳಿಸಿದ ಲೇಖಕರಿಗೆ ವಂದನೆ ಅಭಿನಂದನೆಗಳು… ಹೀಗೇ ಬರೀತಾ ಇರಿ… ನಮ್ಮೆಲ್ಲ ಅಭಿಮಾನಿಗಳ ಪ್ರೀತಿಯ ಕಸುವು ನಿಮಗಿರಲಿ… ************ ಪದ್ಮಜಾ ಜೋಯಿಸ್

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಕೃತಿ ಪರಿಚಯ ತಲ್ಲಣಗಳ ಪಲ್ಲವಿ ಪುಸ್ತಕ: ತಲ್ಲಣಗಳ ಪಲ್ಲವಿ (ಕಥಾ ಸಂಕಲನ) ಲೇಖಕರು: ಅನುಪಮಾ ರಾಘವೇಂದ್ರ ಉಡುಪುಮೂಲೆ ಪುಸ್ತಕ: ತಲ್ಲಣಗಳ ಪಲ್ಲವಿ (ಕಥಾ ಸಂಕಲನ) ಲೇಖಕರು: ಅನುಪಮಾ ರಾಘವೇಂದ್ರ ಉಡುಪುಮೂಲೆ ನೃತ್ಯ ಶಿಕ್ಷಕಿಯಾಗಿರುವ ಅನುಪಮಾ ರಾಘವೇಂದ್ರ ಉಡುಪುಮೂಲೆ ಅವರು ಕಾಸರಗೋಡಿನ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ನಾಟ್ಯ ವಿದುಷಿಯೂ, ಎಡನೀರಿನ ಭೂಮಿಕಾ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷೆಯೂ ಆಗಿರುವ ಇವರು ಬಹುಮುಖ ಪ್ರತಿಭೆಯವರು. ಇತ್ತೀಚೆಗೆ ಯಕ್ಷಗಾನ ಕ್ಷೇತ್ರಕ್ಕೂ ಪ್ರವೇಶಿಸಿದ ಅನುಪಮಾ ಅವರು ಈಗಾಗಲೇ ‘ಕಲಾತರಂಗ ಕಲಾಂತರಂಗ’ ಎಂಬ ಲೇಖನ ಸಂಕಲನವನ್ನೂ, ‘ಹತ್ತಗುಳು’ ಎಂಬ ಹವ್ಯಕ ಕಥಾ ಸಂಕಲನವನ್ನೂ ಪ್ರಕಟಿಸಿದ್ದಾರೆ. ಕಳೆದ ಎಪ್ರೀಲ್ 24 ರಂದು ಎಡನೀರು ಮಠದಲ್ಲಿ ಶ್ರೀಗುರುಗಳ ದಿವ್ಯ ಹಸ್ತದಿಂದ ಇವರ ಮೂರನೇ ಕೃತಿ ‘ತಲ್ಲಣಗಳ ಪಲ್ಲವಿ’ ಕಥಾ ಸಂಕಲನವು ಬಿಡುಗಡೆಗೊಂಡಿತು. ಭೂಮಿಕಾ ಪ್ರತಿಷ್ಠಾನದಿಂದ ಪ್ರಕಟಗೊಂಡ ಈ ಸಂಕಲನಕ್ಕೆ ಡಾ. ಹರಿಕೃಷ್ಣ ಭರಣ್ಯ ಅವರು ಮುನ್ನುಡಿ ಬರೆದಿದ್ದಾರೆ. ಶ್ರೀಮತಿ ಪ್ರಸನ್ನ ವಿ. ಚೆಕ್ಕೆಮನೆಯವರು ಬೆನ್ನುಡಿ ಬರೆದಿದ್ದಾರೆ. ಇದರಲ್ಲಿ ಒಟ್ಟು 12 ಸಣ್ಣ ಕಥೆಗಳಿದ್ದು ಬೇಗನೆ ಓದಿ ಮುಗಿಸಬಹುದಾಗಿದೆ. ಅವರು ಗೃಹಿಣಿಯಾಗಿದ್ದರೂ ಸಮಾಜದೊಳಗಿನ ಸೂಕ್ಷ್ಮ ವಿಚಾರಗಳನ್ನು ಗಮನಿಸುವುದನ್ನು ಕಾಣಬಹುದು. ವಿಚಾರಗಳನ್ನು ಗ್ರಹಿಸಿ ಭಿನ್ನವಾದ ವಸ್ತುಗಳನ್ನಿಟ್ಟುಕೊಂಡು ತನ್ನದೇ ಆದ ಶೈಲಿಯಲ್ಲಿ ಕಥೆಗಳನ್ನು ಕಟ್ಟಿ ಓದುಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಕಥೆ ‘ಜೀವಜಲ’ದಲ್ಲಿ, ಅಣ್ಣ ಶಂಕರ ಹಳ್ಳಿಯಲ್ಲಿ ಶಿಕ್ಷಕ ವೃತ್ತಿಯೊಂದಿಗೆ ಕೃಷಿ ಮಾಡುತ್ತಾ ಬದುಕುತ್ತಾನೆ. ಹೊರ ದೇಶಗಳಲ್ಲಿ ದುಡಿಯುವವರಿಗೆ ಕೆಲಸ ಖಾಯಂ ಅಲ್ಲ. ಆರ್ಥಿಕ ಕುಸಿತ ಉಂಟಾಗುವಾಗ ಕಂಪೆನಿಯವರು ನೌಕರರನ್ನು ಮರಳಿ ಊರಿಗೆ ಕಳಿಸುವಾಗ ಅವರಿಗೆ ಹುಟ್ಟೂರೇ ಗತಿ ಎಂಬ ಸತ್ಯದ ದರ್ಶನವಾಗುತ್ತದೆ. ತಪ್ಪುತಿಳುವಳಿಕೆಯಿಂದ ಅಣ್ಣನ ಮೇಲೆ ಅಸಮಾಧಾನವಿದ್ದ ಶಶಾಂಕನಿಗೆ ಕೊನೆಗೆ ಹೊಸ ಬದುಕು ಕಟ್ಟಿಕೊಳ್ಳಲು ಅಣ್ಣನ ಸಹಾಯವನ್ನೇ ಸ್ವೀಕರಿಸಬೇಕಾಗುತ್ತದೆ. ಇಲ್ಲಿ ಶಂಕರ್ ಅಣ್ಣನಾಗಿ, ಅಪ್ಪನಾಗಿ ಕಾಣಿಸುತ್ತಾನೆ. ‘ಮರೆತೇನೆಂದರು ಮರೆಯಲಿ ಹ್ಯಾಂಗ’ ಕಥೆಯಲ್ಲಿ ಮನೆಯಲ್ಲಿರುವವರನ್ನು ನಾವು ಹೇಗೆ ಪ್ರೀತಿಸುತ್ತೇವೋ ಹಾಗೆಯೇ ಸಾಕಿದ ಪ್ರಾಣಿಗಳನ್ನೂ ಅಷ್ಟೇ ಕಾಳಜಿಯಿಂದ, ಪ್ರೀತಿಯಿಂದ ನೋಡಿಕೊಳ್ಳುವುದನ್ನು ಕಾಣಬಹುದು. ‘ಆ ಮಾತು’ ಕಥೆಯಲ್ಲಿ ಒಬ್ಬ ಗುರುವಾಗಿದ್ದು ತನ್ನ ಮಗಳಿಗೆ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಬದಲು, ಸ್ವಂತ ಸುಖಕ್ಕಾಗಿ ಹಿರಿಯರನ್ನೂ ದೂರವಿರಿಸಲು ಕಿವಿಮಾತು ಹೇಳುವುದನ್ನು ಕಾಣುವಾಗ ಆತನ ಮೇಲಿಟ್ಟ ನಂಬಿಕೆ ಒಡೆದುಹೋಗುತ್ತದೆ. ‘ಅನಾಘ್ರಾಣಿತ ಕುಸುಮ’ ಕಥೆಯಲ್ಲಿ ಸಂಪತ್ತಿನ ಮುಂದೆ ಸಂಬಂವಗಳೂ ಮೌಲ್ಯ ಕಳೆದುಕೊಳ್ಳುತ್ತವೆ. ಗಂಡನಿಂದ ವಿಚ್ಛೇದನ ಪಡೆದ ಹೆಣ್ಣೊಬ್ಬಳು ಸಮಾಜದಲ್ಲಿ ಬದುಕಲು ಕೃತಕ ಗರ್ಭಧಾರಣೆಯ ಮೂಲಕ ಮಗುವನ್ನು ಪಡೆಯುವುದು, ಯಾರ ಹಂಗೂ ಇಲ್ಲದೆ ಆಕೆಯನ್ನು ಬೆಳೆಸಲು ಪಟ್ಟ ಕಷ್ಟ, ಮದುವೆ ಮಾಡಿಸಿ ಮೊಮ್ಮಕ್ಕಳನ್ನಾಡಿಸುತ್ತಾ ಆಕೆ ತನ್ನ ನೋವನ್ನು ಮರೆಯುವ ಚಿತ್ರಣವಿದೆ. ‘ಯಶೋದೆ…ಕೃಷ್ಣನ ಬೆಳೆಸಿದರೇನು… ಕಥೆಯಲ್ಲಿ ಲಾವಣ್ಯ ಮೂರು ಬಾರಿ ತನ್ನ ಮಗುವನ್ನು ಕಳೆದುಕೊಂಡಾಗ ಕೆಲಸದಾಕೆ ಕಮಲಿಯ ಮಗುವನ್ನು ತನ್ನ ಮಗುವೆಂದೇ ಸಾಕುತ್ತಾಳೆ. ಮುಂದೊಂದು ದಿನ ಮಗುವಿನ ಜನ್ಮ ರಹಸ್ಯ ತಿಳಿಯುವಾಗ ಕೆಲಸದಾಕೆ ಕಮಲಿಯ ಮೇಲೆ ಕನಿಕರಗೊಳ್ಳುತ್ತಾಳೆ. ಲಾವಣ್ಯನ ಸಣ್ಣ ಮನಸ್ಸಿನ ಮುಂದೆ ಕಮಲಿಯ ಹೃದಯ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತಾರೆ. ಧಾತ್ರಿಯ ಸ್ಥಿತಿಯನ್ನು ಯಶೋದಾ ನಂದನ ಕೃಷ್ಣನಿಗೆ ಹೋಲಿಸುತ್ತಾರೆ. ಪ್ರಸ್ತುತ ಸಮಾಜದ ಜ್ವಲಂತ ಸಮಸ್ಯೆಯೊಂದು ಅವ್ಯಕ್ತ ಕಥೆಯಲ್ಲಿದೆ. ಹೆತ್ತವರು ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರುವುದನ್ನು, ಮಕ್ಕಳ ಕನಸುಗಳಿಗೆ ಬಣ್ಣ ಬಳಿಯದೆ ಅವರ ನಿರ್ಧಾರಗಳಿಗೆ ಆಸೆ-,ಆಕಾಂಕ್ಷೆಗಳಿಗೆ ಮನ್ನಣೆ ನೀಡದೆ ತಮ್ಮ ನಿರ್ಧಾರಗಳನ್ನು ಅವರ ಮೇಲೆ ಹೇರಿ ತಮ್ಮದೇ ದಾರಿಯಲ್ಲಿ ಅವರನ್ನು ನಡೆಸುವುದನ್ನೂ, ಕೊನೆಗೆ ಮಕ್ಕಳ ಸಾವಿಗೂ ಕಾರಣವಾಗುವುದನ್ನು ಗಮನಿಸಬಹುದು. ‘ಜ್ವಾಲಾಮುಖಿ’ ಕಥೆಯಲ್ಲಿ ಮಹಾ ಭಾರತದಲ್ಲಿ ಬರುವ ಅಂಬೆಯ ಪಾತ್ರವನ್ನು ವಿಭಿನ್ನ ನೆಲೆಯಲ್ಲಿ ಚಿತ್ರಿಸಿದ್ದಾರೆ. ‘ಸಮರ್ಪಣೆ’ ಕಥೆಯಲ್ಲಿ ಲೇಖಕಿಗೆ ಯಕ್ಷಗಾನದ ಮೇಲಿರುವ ಅಪಾರ ಪ್ರೀತಿ ಗೋಚರಿಸುತ್ತದೆ. ಯಕ್ಷಗಾನದ ನಡುವೆ ನಡೆಯುವ ಹಾಸ್ಯಪ್ರಸಂಗಗಳನ್ನು ಮೆಲುಕು ಹಾಕುತ್ತಾ ಕೇಚ ಎಂಬ ಕೇಶವನ ಮೂಲಕ ತನ್ನ ಜೀವನವನ್ನೇ ಯಕ್ಷಗಾನಕ್ಕಾಗಿ ಮುಡಿಪಾಗಿರಿಸುವ ಕಲಾವಿದನನ್ನು ಪರಿಚಯಿಸುತ್ತಾರೆ. ‘ಮತ್ತೆ ಹಾಡಿತು ಕೋಗಿಲೆ’ ಕಥೆಯಲ್ಲಿ ವಿಧವೆಯಾದ ಜಯಶ್ರೀಯ ಬಾಳಿಗೆ ಪ್ರಸನ್ನನ ಆಗಮನವಾದಾಗ ಅವರ ಬದುಕಿನಲ್ಲಿ ಮತ್ತೊಮ್ಮೆ ವಸಂತಕಾಲ ಬರುತ್ತದೆ. ‘ಕ್ವಚದಪಿ ಕುಮಾತಾ ನ ಭವತಿ…’ ಕಥೆಯಲ್ಲಿ ಸಹನಾ- ಕಿಶೋರ್ ದಂಪತಿಗೆ ಅವಳಿ ಮಕ್ಕಳಾದಾಗ ಗಂಡು ಮಗು ಆರೋಗ್ಯದಿಂದಿದ್ದರೂ, ಹೆಣ್ಣು ಮಗುವಿಗೆ ಸೊಂಟದಿಂದ ಕೆಳಗೆ ಊನವಾಗಿತ್ತು. ಹೆತ್ತ ತಾಯಿಯೇ ಆ ಮಗುವನ್ನು ‘ಅಮ್ಮ ತೊಟ್ಟಿಲು’ ಕೇರ್ ಟೇಕಿಂಗ್ ಹೋಮ್ ಗೆ ಕಳುಹಿಸುವಾಗ ಮಗ ಅನ್ವಿತ್ ತಂಗಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ತಾಯಿ ತಂದೆಯರಿಗಿರಬೇಕಾದ ಕಾಳಜಿ ಪ್ರೀತಿ ಅನ್ವಿತ್ ಗೆ ತಂಗಿಯಲ್ಲಿದೆ. ಆಕೆ ಸರ್ವಾಂಗೀಣ ಬೆಳವಣಿಗೆಗೆ, ಆಕೆಯ ಉಜ್ವಲ ಭವಿಷ್ಯ ರೂಪಿಸುವಲ್ಲಿ ಅಣ್ಣನ ಪಾತ್ರ ದೊಡ್ಡದು. ಮುಂದೆ ಅನಿತ ಸಂಗೀತದಲ್ಲಿ ಸಾಧನೆ ಮಾಡಿದಾಗ ಮಗನ ಮುಂದೆಯೇ ಅಪ್ಪ ಅಮ್ಮ ಚಿಕ್ಕವರಾಗಿಬಿಡುತ್ತಾರೆ. ಶಾಂತ..ಮ್ಮಾ…, ನಾಲ್ಕು ದಿನದ ಈ ಬದುಕಿನಲ್ಲಿ, ಎಂಬ ಕಥೆಗಳೂ ಈ ಸಂಕಲನದಲ್ಲಿ ಗಮನ ಸೆಳೆಯುತ್ತವೆ. ಇಲ್ಲಿನ ಕಥೆಗಳಲ್ಲಿ ಸಂದರ್ಭೋಚಿತವಾಗಿ ಸಂಸ್ಕೃತದ ವಾಕ್ಯಗಳನ್ನೂ ಬಳಸಿರುತ್ತಾರೆ. ಅವರ ಕಥೆಗಳಲ್ಲಿ ಆರೋಗ್ಯಕರವಾದ ಕೌಟುಂಬಿಕ ಚಿತ್ರಣವಿದೆ. ಸಮಾಜಕ್ಕೊಂದು ಸಂದೇಶವಿದೆ. ಸಂಪತ್ತಿಗಿಂತಲೂ ಸಂಬಂಧಗಳಿಗೆ ಪ್ರಾಧಾನ್ಯ ನೀಡುತ್ತಾರೆ. ಪ್ರೀತಿ, ನಂಬಿಕೆಗಳಿಂದಲೇ ಸಂಬಂಧಗಳು ಗಟ್ಟಿಯಾಗಿ ನೆಲೆನಿಲ್ಲುತ್ತವೆ ಎಂಬುದನ್ನು ಕಥೆಗಳ ಮೂಲಕ ತಿಳಿಸುತ್ತಾರೆ. ಇಲ್ಲಿನ ಹೆಚ್ಚಿನ ಕಥೆಗಳೂ ಕೂಡ ಸುಖಾಂತ್ಯವನ್ನು ಕಾಣುತ್ತವೆ. ಹಾಗೂ ಇಲ್ಲಿನ ಕಥೆಗಳೆಲ್ಲವೂ ಒಂದಕ್ಕಿಂತ ಒಂದು ವ್ಯತ್ಯಸ್ಥವಾಗಿದ್ದು ಓದುಗರಲ್ಲಿ ಕುತೂಹಲ ಮೂಡಿಸುತ್ತಾ ಓದಿಸಿಕೊಂಡು ಹೋಗುತ್ತವೆ. *********** ಚೇತನಾ ಕುಂಬ್ಳೆ

ಪುಸ್ತಕ ಸಂಗಾತಿ Read Post »

You cannot copy content of this page

Scroll to Top