ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಲೋಕಪ್ರಸಿದ್ದ ಸಚಿತ್ರ ಮಕ್ಕಳ ಕತೆಗಳು ಮಕ್ಕಳ ಸಾಹಿತ್ಯ ಕೃತಿ ಪರಿಚಯ ಪುಸ್ತಕದ ಹೆಸರು- ಲೋಕಪ್ರಸಿದ್ದ ಸಚಿತ್ರ ಮಕ್ಕಳ ಕತೆಗಳು ಲೇಖಕರು – ಪ್ರೊ. ಎಚ್. ಜಿ. ಸಣ್ಣಗುಡ್ಡಯ್ಯ ಪ್ರಕಾಶಕರು – ಅಕ್ಷಯ ಪ್ರಕಾಶನ – ತುಮಕೂರು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮಕ್ಕಳಿಗೆ ಹೆಚ್ಚು ಕುತೂಹಲ ಕೆರಳಿಸಿ ಅವರಿಗೆ ನೀತಿಯನ್ನು ತಿಳಿಸುವ ಬಹುಮುಖ್ಯ ಪ್ರಕಾರವೆಂದರೆ ಈ ಕಥಾಪ್ರಕಾರ. ಇದು ಮಕ್ಕಳಲ್ಲಿ ಕಲ್ಪನಾ ಕೌಶಲ್ಯವನ್ನು ಬೆಳೆಸುವುದಲ್ಲದೆ ಆಲಿಸುವ ಸಾಮರ್ಥ್ಯವನ್ನು ಕೂಡ ಹೆಚ್ಚಿಸುತ್ತದೆ. ಮಕ್ಕಳ ಅಚ್ಚುಮೆಚ್ಚಿನ ಪ್ರಕಾರವಾದ ಕತೆಗಳು ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡುವಲ್ಲಿಯೂ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಇದಕ್ಕೊಂದು ಉತ್ತಮ ನಿದರ್ಶನವಾಗಿ ವೀರಮಾತೆ ಜೀಜಾಬಾಯಿಯವರು ಚಿಕ್ಕಂದಿನಲ್ಲೇ ಶಿವಾಜಿಯಲ್ಲಿ ಉದಾತ್ತ ಗುಣಗಳನ್ನು ಬೆಳೆಸಿದ ಪರಿಯನ್ನು ನಾವಿಲ್ಲಿ ಸ್ಮರಿಸಬಹುದು. ಇಂತಹ ಈಗಾಗಲೇ ಲೋಕದಲ್ಲಿ ಪ್ರಚಲಿತದಲ್ಲಿದ್ದು ಮೆಚ್ಚುಗೆಯ ಮೂಲಕ ಹೃದಯವಾಸಿಯಾಗಿರುವ ಒಟ್ಟು ಮೂವತ್ತ ನಾಲ್ಕು ಲೋಕಪ್ರಸಿದ್ದ ಸಚಿತ್ರ ಮಕ್ಕಳ ಕಥಾಗುಚ್ಛವೇ ಈ ಹೊತ್ತಗೆಯಾಗಿದೆ. ಇದರ ಲೇಖಕರು ಪ್ರೊ. ಎಚ್. ಜಿ. ಸಣ್ಣಗುಡ್ಡಯ್ಯನವರು ಹಾಗೂ ಪ್ರಕಾಶಕರು ಅಕ್ಷಯ ಪ್ರಕಾಶನ, ತುಮಕೂರು. ಇದರಲ್ಲಿನ ಕಥೆಗಳಿಗೆ ಸೂಕ್ತವಾದ ಚಿತ್ರಗಳನ್ನು ರಚಿಸಿ ಪುಸ್ತಕದ ಸೊಗಸನ್ನು ಕಲಾವಿದೆಯಾದ ಶ್ರೀಮತಿ ಸಿ. ಎಸ್ ನಿರ್ಮಲ ಕುಮಾರಿಯವರು ಹೆಚ್ಚಿಸಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ಲೋಕದಲ್ಲಿ ಪ್ರಸಿದ್ದವಾಗಿರುವಂತಹ ನಾವು ನೀವೆಲ್ಲರೂ ನಮ್ಮ ಬಾಲ್ಯವನ್ನು ಸವಿದು ಬೆಳೆದು ಇಂದು ಕಣ್ಮರೆಯಾಗಿರುವ ಅತ್ಯಮೂಲ್ಯ ಮೌಲ್ಯಗಳುಳ್ಳ ಈ ಕತೆಗಳನ್ನು ಮಕ್ಕಳಮಟ್ಟಕ್ಕೆ ಅರ್ಥವಾಗುವಂತೆ ಲೇಖಕರು ಬಹಳ ಸರಳ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಮುಖಪುಟವು ಗಮನಸೆಳೆಯುವಂತಿದ್ದು ಆಕರ್ಷಕ ಸನ್ನಿವೇಶದ ಚಿತ್ರವನ್ನು ಒಳಗೊಂಡಿದೆ. ಈ ಪುಸ್ತಕಕ್ಕೆ ಬೆನ್ನುಡಿಯನ್ನು ಡಿ. ಸುಮಿತ್ರ ಸಣ್ಣಗುಡ್ಡಯ್ಯನವರು ಬರೆದಿದ್ದಾರೆ. ಒಳಪುಟಗಳಲ್ಲಿರುವ ಪ್ರತಿಯೊಂದು ಕತೆಯೂ ಉನ್ನತ ಮೌಲ್ಯವನ್ನು ಹೊಂದಿದ್ದು ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೆ ಬೀರುತ್ತವೆ. ಬೆಕ್ಕು ಕಲಿಸಿದ ಪಾಠ ಕತೆಯು ಅಲ್ಪಜ್ಞಾನಿಯಾದವನು ಎಂದಿಗೂ ಗರ್ವ ಪಡಬಾರದು. ಮರಕ್ಕಿಂತ ಮರ ದೊಡ್ಡದಿರುತ್ತದೆ ಎಂಬ ನೀತಿಯನ್ನು ಸಾರಿದರೆ, ಹುಡುಗಿಯನ್ನು ಬಯಸಿದ ಸಿಂಹ ಕತೆ ವಿವೇಚನೆಯಿಲ್ಲದೆ ಯಾರಿಗೂ ಕೋಪದಲ್ಲಿ ಮತ್ತು ಖುಷಿಯಲ್ಲಿ ಮಾತು ಕೊಡಬಾರದು ಎಂಬುದನ್ನು ತಿಳಿಸುತ್ತದೆ. ಕೋತಿ ಚೇಷ್ಟೆ ಕತೆಯು ಆತುರದ ಬುದ್ದಿಯಿಂದ ಪೇಚಾಟಕ್ಕೆ ಸಿಲುಕಿಕೊಳ್ಳುವ ಪ್ರಸಂಗವನ್ನು ತಿಳಿಸಿದರೆ ಠಕ್ಕ ನರಿ ಕತೆಯು ಅಸೆ, ಆಮಿಷ, ಅನಿವಾರ್ಯತೆಗೆ ಒಳಗಾಗಿ ವಂಚನೆಯ ಬಲೆಯಲ್ಲಿ ಸಿಲುಕಿಕೊಳ್ಳುವ ಪರಿಯನ್ನು ತೋರಿಸಿಕೊಡುತ್ತದೆ. ಚೇಷ್ಟೆಯ ಫಲ ಕತೆಯು ಚೇಷ್ಟೆ ಅತಿಯಾದರೆ ಆಪತ್ತಿನ ಸಂದರ್ಭದಲ್ಲೂ ಸಹಾಯ ಸಿಗದೇ ಹೋಗುವ ನೀತಿಯನ್ನು ತಿಳಿಸುತ್ತದೆ. ಪರಸ್ಪರ ಸಹಾಯ ಕತೆಯಲ್ಲಿ ಒಬ್ಬರಿಗೊಬ್ಬರು ಸಹಕಾರ ಇಲ್ಲದಿದ್ದರೆ ಒಬ್ಬಂಟಿಯಾಗಿ ಹೆಚ್ಚಿನ ಹೊರೆಯನ್ನು ಹೊರಬೇಕಾದ ಪರಿಸ್ಥಿತಿಯನ್ನು ತಿಳಿದರೆ ಕೋಟಿಯ ನ್ಯಾಯ ಕತೆಯಲ್ಲಿ ಬೆಕ್ಕುಗಳ ಪರಸ್ಪರ ಜಗಳದಿಂದ ಇಬ್ಬರ ಜಗಳ, ಮೂರನೆಯವರಿಗೆ ಲಾಭ ಎಂಬುದನ್ನು ತಿಳಿಯಬಹುದು. ಮೇಕೆಗಳ ಮೇಲಾಟವು ಗರ್ವದಿಂದ ಹಳ್ಳಕ್ಕೆ ಬೀಳುವುದನ್ನು ತೋರಿಸಿದರೆ ಚಿನ್ನದ ಮೊಟ್ಟೆಯ ಕೋಳಿ ಕತೆಯು ಅತಿ ಆಸೆ ಗತಿಗೇಡು ಎಂಬುದನ್ನು ಅರಿವು ಮಾಡಿಕೊಡುತ್ತದೆ. ಮುದುಕಿಯ ಹುಂಜ ಕತೆಯು ಕೇವಲ ತನ್ನಿಂದಲೇ ಬೆಳಗಾಗುವುದಿಲ್ಲ ಎಂಬ ನೀತಿ ಹೇಳಿದರೆ ಮಗು ಯಾರದು? ಕತೆಯು ಸತ್ಯಕ್ಕೆ ಜಯವಿದೆ ಎಂಬುದನ್ನು ನಿರೂಪಿಸುತ್ತದೆ. ಬುದ್ದಿವಂತ ದೊರೆ ಕತೆಯಲ್ಲಿ ಸತ್ಯವು ಯಾವುದಾದರೊಂದು ರೀತಿಯಲ್ಲಿ ಅರಿವಾಗುತ್ತದೆ ಎಂಬುದನ್ನು ತಿಳಿಸಿದರೆ ಯಾರ ಶಕ್ತಿ ಹೆಚ್ಚು? ಕತೆಯು ಗಾಳಿಗಿಂತಲೂ ಸೂರ್ಯನೇ ಶಕ್ತಿಶಾಲಿ ಎಂಬ ತೀರ್ಮಾನವನ್ನು ಕೊಡುತ್ತದೆ. ದುಂದುಗಾರ್ತಿ ಕತೆಯು ಮಾತಿಗೂ ವರ್ತನೆಗೂ ಇರುವ ಸತ್ಯವನ್ನು ಅರಿಯುವ ನೀತಿಯನ್ನು ತಿಳಿಸಿದರೆ ಬೆಕ್ಕಿನ ಕೊರಳಿಗೆ ಘಂಟೆ ಕತೆಯು ಕಲ್ಪನೆಯ ಕನಸುಗಳೆಲ್ಲವೂ ನನಸಾಗುವುದಿಲ್ಲ ಎಂಬುದನ್ನು ತಿಳಿಸುತ್ತವೆ. ಓಟದ ಸ್ಪರ್ಧೆಯಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಸೋಲುಂಟಾಗುತ್ತದೆ ಮತ್ತು ತಾಳ್ಮೆಯಿಂದ ಕಠಿಣವಾದದ್ದನ್ನು ಸಾಧಿಸಬಹುದು ಎಂಬುದನ್ನು ತಿಳಿಸುತ್ತದೆ. ವೇಷ ಕತೆಯು ಸತ್ಯವನ್ನು ಹೆಚ್ಚುಕಾಲ ಬಚ್ಚಿಡುವುದಕ್ಕೆ ಸಾಧ್ಯವಿಲ್ಲ ಎಂಬ ನೀತಿಯನ್ನು ಸಾರಿದೆ. ಹೀಗೆ ದೊರೆ ಮತ್ತು ಆಮೆ, ನರಿ ಮತ್ತು ಕೊಕ್ಕರೆ, ಸಿಂಡರೆಲ್ಲ, ಸೊಹ್ರಬ್ ಮತ್ತು ರುಸ್ತುಮ್, ಬ್ಲೆನ್ಹೀಮ್ ಯುದ್ಧ, ಡೊಂಬರ ಚೆನ್ನೆ, ಕುರೂಪಿ ಬಾತುಕೋಳಿ ಮರಿ, ತೊಟಕಪ್ಪ, ಸಿರಾಕ್ಯೂಸಿನ ಇಬ್ಬರು ಅಪೂರ್ವ ಸ್ನೇಹಿತರು, ಜಾರ್ ಚಕ್ರವರ್ತಿ ಮತ್ತು ರೈತ, ಪ್ರೀತಿಯ ಮೂಲಕ ನೀತಿ, ಬೊ ಬೊನ ತುಂಟಾಟ, ನಾವಾಬಾಯಣ, ಮದುವಣಿಗನ ಪ್ರೇತ, ಪಾಪದ ಹುಡುಗ ಪೀಟರ್, ಸಾಂಕೊ ಪಾಂಜಾನ ತೀರ್ಪುಗಳು ಮತ್ತು ವ್ಯರ್ಥವಾದ ವರಗಳು.. ಹೀಗೆ ಒಂದೊಂದು ಕತೆಯೂ ವಿಭಿನ್ನವಾಗಿದ್ದು ಓದಿದಾಗ ಒಂದು ರಸಮಯ ಅನುಭವವನ್ನು ನೀಡುತ್ತವೆ. ಒಟ್ಟಾರೆಯಾಗಿ ಈಗಾಗಲೇ ಲೋಕಪ್ರಸಿದ್ಧವಾಗಿ ಜನರ ಮನದಲ್ಲಿ ಅಚ್ಚೂತ್ತಿದ್ದ ಕತೆಗಳನ್ನು ಮಕ್ಕಳಿಗೆಂದು ತಮ್ಮದೇ ಆದ ಸರಳ ಭಾಷೆಯಲ್ಲಿ ಪ್ರೊ. ಜಿ ಎಸ್ ರವರು ಬರೆದಿದ್ದಾರೆ. ಇಲ್ಲಿಯ ಪಾತ್ರಗಳ ಜಾಣ್ಮೆ, ಸಾಹಸ, ಛಲ, ಸಹನೆ ಮುಂತಾದ ಸದ್ಗುಣಗಳು ಮಕ್ಕಳನ್ನು ಪ್ರೇರೇಪಿಸಲಿ, ಅವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲಿ ಎಂಬುದು ಇಲ್ಲಿಯ ಕತೆಗಳ ಹೂರಣ. ಇಂಥದ್ದೊಂದು ಕೃತಿ ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವಲ್ಲಿ ಅಮೂಲ್ಯ ಕೊಡುಗೆಯನ್ನು ನೀಡಿದೆ. ಈ ಪುಸ್ತಕವು ಪೋಷಕರಲ್ಲಿ ಹಾಗೂ ಮಕ್ಕಳಲ್ಲಿ ಒಳ್ಳೆಯ ಓದಿನ ಅಭಿರುಚಿಯನ್ನು ಬೆಳೆಸುವಂತ ಕೃತಿಯಾಗಿದೆ.. ********* ತೇಜಾವತಿ ಹೆಚ್. ಡಿ.

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಬರ್ಫದ ಬೆಂಕಿ ಬರ್ಫದ ಬೆಂಕಿ ಕವನ ಸಂಕಲನ ಲೇಖಕರು- ನಾಗರೇಖಾ ಗಾಂವ್ಕರ್ ಸಾಧನ ಪಬ್ಲಿಕೇಷನ್ ದಾಂಡೇಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿರುವ ನಾಗರೇಖಾ ಗಾಂವ್ಕರ್ ಅವರ ಮೂರನೇ ಕವನ ಸಂಕಲನವಿದು. ಏಣಿ ಎಂಬ ಪ್ರಥಮ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ದೊರೆತಿದೆ. ಇನ್ನೊಂದು ಪದಗಳೊಂದಿಗೆ ನಾನು ಎಂಬ ಕವನ ಸಂಕಲನ. ಪಾಶ್ಚಿಮಾತ್ಯ ಸಾಹಿತ್ಯ ಲೋಕ ಭಾಗ-೧ ಮತ್ತು ಆಂಗ್ಲ ಸಾಹಿತ್ಯ ಲೋಕ ಭಾಗ -೨ ಎಂಬ ಎರಡು ವಿಮರ್ಶಾತ್ಮಕ ಕೃತಿಗಳನ್ನು ಇವರು ರಚಿಸಿದ್ದಾರೆ. ಈ ಕವನ ಸಂಕಲನದಲ್ಲಿ ಒಟ್ಟು ನಲವತ್ಮೂರು ಕವಿತೆಗಳಿವೆ. ಅ) ಮಾಗುವುದೆಂದರೆ – ಅಡಿಯಲ್ಲಿ ಹನ್ನೆರಡು ಬ)ಅವಳ ಕವಿತೆಗಳು- ಇದರಲ್ಲಿ ಹದಿಮೂರು ಕ) ಕಾಲಾತೀತ ಕವಿತೆಗಳು- ಎಂಟು ಡ)ಬಾನ್ಸುರಿಯ ನಾದ- ಹತ್ತು ಕವಿತೆಗಳಿವೆ. ಮೊದಲು ಕವಿತೆ ಆಳವೆಂಬ ಅರಿವು ನೋಡಿ… ಎದೆಗಿಳಿದ ಅಕ್ಷರಗಳು ಶೋಕೇಸಿನ ಕಪಾಟಿನಲ್ಲಿ ಗಾಜಿನ ಕೋಣೆಯಲ್ಲಿ ತಳತಳಿಸುವ ಪದಕವಾಗಲ್ಲ.. ನೆಲಕ್ಕಿಳಿಯಬೇಕು, ಕೆಸರ ಕೊಳದ ನೈದಿಲೆಯಾಗಬೇಕು. ಬೆಳಕಿನ ಹಾಡ ಹೊಮ್ಮಿಸಬೇಕು. ಅವಳು ನಡೆಯುತ್ತಿದ್ದಾಳೆ… ಕವಿತೆಯಲ್ಲಿ ಅಕ್ಷರದ ಅರಮನೆಗೆ ಪರಿಮಳವ ಮಾರಿ ಬರಬೇಕು. ಎಂತಹ ಸೊಗಸಾದ ಸಾಲುಗಳು.! ಶೀರ್ಷಿಕೆ ಕವಿತೆಯಾದ ಬರ್ಫದ ಬೆಂಕಿಯಲ್ಲಿ… ಉಕ್ಕುವ ಕಡಲ ಮೋಹಿಸುವ ಅವಳ ಹಠಕ್ಕೆ ಬರ್ಫದ ಬೆಂಕಿಯ ಕುಡಿವ ಹುಚ್ಚು. ಸೀದು ಹೋದರೂ ಬಿಸಿಯುಸಿರ ಹಂಬಲದ ಪಾತ್ರೆ ಮತ್ತೆ ಮತ್ತೆ ತಿಕ್ಕಿ ತಿಕ್ಕಿ ಶುಭ್ರವಾಗಿಡುವುದೇ ಅವಳ ದಿವ್ಯ ಭಕ್ತಿ. ರಾತ್ರಿಯಲ್ಲಿ ಹಗಲಿನ ಪಾಳಿ…ಸ್ವಗತದ ಸಾಲುಗಳಿರಬಹುದು. ತೆಕ್ಕೆಯೊಳಗಿಳಿದ ಪದಗಳ ಉಸಿರೊಳಗೆ ಬಚ್ಚಿಟ್ಟುಕೊಂಡೇ ಕಾಯ್ದುಕೊಂಡೇ ಹಾಡು ಹೆಣೆಯುವುದೆಂದರೆ ರಾತ್ರಿಯಲ್ಲೂ ಹಗಲಿನ ಪಾಳಿ. ಮಾತ್ರಿಯೋಷ್ಕಿ ಕವಿತೆಯ ಗೊಂಬೆಯೊಳಗಿನ ಗೊಂಬೆಯ ಸೃಷ್ಟಿ ಚೆನ್ನಾಗಿದೆ. ಗೂಸಬಮ್ಸ ನಿರೀಕ್ಷೆಯಲ್ಲಿ ಕವಿತೆ ಗಮನಿಸಿ… ಗಗನ ಚುಂಬಿ ಕಟ್ಟಡದ ಏರುವ ಇಳಿಯುವ ಎಸ್ಕಲೇಟರಗಳ ಮೇಲೆ ಕಿರುಸೊಂಟದ ಏಳು ಮಲ್ಲಿಗೆ ತೂಕದ ಹೆಣ್ಣುಗಳನ್ನು ಧಡೂತಿ ತೊಡೆಗಳ ಇಳಿಬಿದ್ದ ಸ್ತನಗಳ ಭಾರ ಜೀವ ಹೊತ್ತ ಗಜಗಾಮಿನಿಯರನ್ನು ಕಂಡು ಅರೆರೆ.. ಎಂದುಕೊಳ್ಳುತ್ತ ಮೈ ರೋಮ ನಿಮಿರಿತೆ? ಕಾಣದೇ ವ್ಯಗ್ರಗೊಂಡೆ. ‌….. ಮಿಂಚು ಕಂಗಳ ಸುಂದರಾಂಗರ ಕಣ್ಣಿನ ಸಂಚಲನೆಗೆ ಕೆತ್ತಿಸಿಕೊಂಡ ಮುಖಗಳ ಮಾದಕತೆಗೆ ಇದ್ದ ಸೆಳೆತಕ್ಕೆ ಮನಸ್ಸು ಜೋಲಿ ಹೊಡೆದು ಕೈ ನೋಡಿದರೆ ರೋಮಾಂಚನ ವ್ಯಾಕ್ಸಾಯನ. ನಾಗರೇಖಾರ ವೈವಿಧ್ಯತೆಯ ಝಲಕ್ ಇಲ್ಲಿದೆ. ಮುನ್ನುಡಿಯಲ್ಲಿ ಹಿರಿಯರಾದ ಶ್ರೀ ಸುಬ್ರಾಯ ಚೊಕ್ಕಾಡಿ ಅವರು ಹೇಳಿರುವಂತೆ- ವಸ್ತು ವೈವಿಧ್ಯ, ಭಾವವಿಲಾಸ, ಹೊಸ ರೂಪಕಗಳ ಸೃಷ್ಟಿ, ಸೂಕ್ಷ್ಮಜ್ಞತೆ, ಭಾಷೆಯ ಪರಿಣಾಮಕಾರಿ ಬಳಕೆ, ಪಕ್ವ ಚಿಂತನೆಗಳ ಕಾರಣಗಳಿಗಾಗಿ ನಾಗರೇಖಾ ಅವರು ಕಾವ್ಯಾಸಕ್ತರು ಗಮನಿಸಲೇಬೇಕಾದ ಕವಯತ್ರಿಯಾಗಿದ್ದಾರೆ. ಒಮ್ಮೆ ಓದಲೇಬೇಕಾದ ಕೃತಿ ‘ ಬರ್ಫದ ಬೆಂಕಿ’. ********** ಡಾ. ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ನಿನ್ನ ಪ್ರೀತಿಯ ನೆರಳಿನಲ್ಲಿ… ನೋವು ನಲಿವಿನ ಸ್ಪಂದನ ನಿನ್ನ ಪ್ರೀತಿಯ ನೆರಳಿನಲ್ಲಿ… ನೋವು ನಲಿವಿನ ಸ್ಪಂದನ ಲೇಖನಗಳ ಸಂಕಲನ ಎನ್. ಆರ್ ರೂಪಶ್ರೀ ಬೆನಕ ಬುಕ್ಸ್ ಬ್ಯಾಂಕ್ ಮೈಸೂರಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿರುವ ರೂಪಶ್ರೀ ಅವರ ಜ್ಞಾನ ಜ್ಯೋತಿ – ಆಧ್ಯಾತ್ಮಿಕ ಲೇಖನಗಳ ಸಂಕಲನ, ಮೌನ ಕಾಲ ಮತ್ತು ಕನಸ ತುಂಬಿದ ಕವಿತೆ ಎಂಬ ಕವನ ಸಂಕಲನಗಳು, ನೆನಪಿನ ನವಿಲುಗರಿ ನೆಲಕ್ಕೆ ಬಿದ್ದಿತ್ತು, ಹೆಜ್ಜೆಯಲ್ಲಿ ಗೆಜ್ಜೆನಾದ ಕಥಾಸಂಕಲನಗಳು ಈ ಹಿಂದೆ ಪ್ರಕಟಗೊಂಡಿವೆ. ಮೂಲತಃ ಶಿರಸಿಯವರಾದ ಇವರು ಕವಿ ಕಾವ್ಯ ಬಳಗ ಎನ್ನುವ ಸಾಹಿತ್ಯ ಸಂಘಟನೆಯ ಸಂಚಾಲಕಿಯಾಗಿ ಬಹಳ ಕ್ರಿಯಾಶೀಲರು ಕೂಡ. ಲೇಖಕಿಯರ ಸಂಘ ಕೊಡಮಾಡುವ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಪ್ರಶಸ್ತಿ ಇವರಿಗೆ ದೊರೆತಿದೆ. ಪುಸ್ತಕಗಳು ಪ್ರಾಣ ಸ್ನೇಹಿತರು. ಅವು ನಗಿಸುತ್ತವೆ, ಅಳಿಸುತ್ತವೆ ಮತ್ತು ಈ ಬದುಕಿನ ಅರ್ಥ ಹುಡುಕುವಂತೆ ಮಾಡುತ್ತವೆ ಎಂಬ ಕ್ರಿಸ್ಟೋಫರ್ ಪಾವೊಲಿನಿ ಅವರ ಮಾತು ಒಳಪುಟದಲ್ಲಿ ಇದೆ. ಇದು ರೂಪಶ್ರೀ ಅವರ ಮಾತೂ ಆಗಿರಬಹುದು. ಏಕೆಂದರೆ ಅವರೇ ಹೇಳಿಕೊಂಡಂತೆ ‘ ಇವು ನನ್ನ ಭಾವನೆಗಳನ್ನೆಲ್ಲ ಹಿಡಿದಿಟ್ಟು ಹರಿಯಬಿಟ್ಟಿರುವ ಬರಹಗಳು’. ಒಟ್ಟು ಇಪ್ಪತ್ತೇಳು ಕಥೆ, ಲಹರಿ ಮತ್ತು ಬರಹಗಳು ಈ ಕೃತಿಯಲ್ಲಿ ಇವೆ. ಇದಕ್ಕೆ ಕನ್ನಡದ ಖ್ಯಾತ ಕಾದಂಬರಿಗಾರ್ತಿ ಎಸ್.ಮಂಗಳಾ ಸತ್ಯನ್ ಮುನ್ನುಡಿ ಬರೆದು ಹಾರೈಸಿದ್ದಾರೆ. ಇಲ್ಲಿನ ಪ್ರತಿಯೊಂದು ಬರಹಗಳೂ ಪ್ರೀತಿ ಪ್ರೇಮದ ಕುರಿತಾಗಿರುವುದು ವಿಶೇಷ. ಆದರೆ ಎಲ್ಲಾ ಬರಹಗಳು ವಿಶಿಷ್ಟ ಮತ್ತು ವಿಭಿನ್ನ ರೀತಿಯಲ್ಲಿವೆ. ಮನುಷ್ಯತ್ವದ ಗುಣಗಳೇ ಮಾಯವಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರೀತಿ, ಸ್ನೇಹ, ಕರುಣೆ, ವಾತ್ಸಲ್ಯಗಳೆಂಬ ಹುಟ್ಟನ್ನು ಹಿಡಿದು ರೂಪಶ್ರೀ ನಮ್ಮನ್ನು ಸಂಸಾರ ಶರಧಿಯನ್ನು ದಾಟಿಸಲು ಪ್ರಯತ್ನ ಮಾಡಿದ್ದಾರೆ. ಮಂಗಳಾ ಅವರು ಹೇಳಿರುವಂತೆ – ವೃತ್ತಿ ಮತ್ತು ಸಂಸ್ಕಾರಗಳು ನಮ್ಮ ಬದುಕಿನ ಅಂಗಗಳು. ಮದುವೆ, ಪ್ರೀತಿ ಪ್ರೇಮ ಪುರುಷನಿಗಿಂತ ಹೆಣ್ಣಿನ ಬದುಕಿನ ಮೇಲೆ ಒಂದು ವಿಶಿಷ್ಟ ಪರಿಣಾಮವನ್ನು ಬೀರುತ್ತದೆ ಎಂಬ ಅಂಶ ಈ ಕೃತಿಯಲ್ಲಿ ಅಡಕವಾಗಿರುವ ಬರಹಗಳಲ್ಲಿ ಕಂಡುಬರುತ್ತದೆ.ದಿಟ್ಟತನದ ಮಹಿಳೆ ಇಲ್ಲಿದ್ದಾಳೆ. ನನ್ನ ಪ್ರೀತಿಯ ನೆರಳಿನಲ್ಲಿ, ಮೌನ ಮುರಿಯದ ಪ್ರೀತಿ, ಮೌನ ಗರ್ಭದೊಳಗೆ, ದೂರ ತೀರದ ಪ್ರೀತಿ ಮತ್ತು ಮರೆತೆನೆಂದರೂ ಮರೆಯದ ಪ್ರೀತಿ.. ಅದು ಆಕೆಯ ರೀತಿ ; ಹೆಚ್ಚು ಮುದ ನೀಡಿದ ಬರಹಗಳು. ಪ್ರೀತಿಯ ಪಾರಿಜಾತ ಪಸರಿಸುತ್ತಿದೆ, ನೆನಪುಗಳ ಸಂಕೋಲೆಯಲ್ಲಿ ಬಂಧಿಯಾಗ ಹೊರಟು, ಅದೇ ಮಳೆ, ಮಿಂಚು, ಆಲಿಕಲ್ಲು, ಬದುಕ ಪ್ರೀತಿಗೊಂದು ದೀಪ ಹಚ್ಚಿ, ನೀ ನನಗೆ ಏನಾಗಬೇಕೋ ಇತ್ಯಾದಿಗಳು ಇಷ್ಟವಾದವು. ಈ ಕೃತಿಯ ಪ್ರಕಾಶಕರು ಮತ್ತು ನಿಮ್ಮೆಲ್ಲರ ಮಾನಸ ಪತ್ರಿಕೆಯ ಸಂಪಾದಕರಾದ ಗಣೇಶ ಕೋಡೂರು ಅವರು ಬೆನ್ನುಡಿಯಲ್ಲಿ ಹೇಳಿರುವಂತೆ ಈ ಸಂಕಲನದ ಓದು ನಿಮ್ಮ ಬದುಕಿನಲ್ಲಿ ಗೊತ್ತಿಲ್ಲದಂತೆ ಹೊಸದೊಂದು ಉತ್ಸಾಹವನ್ನು ಚಿಮ್ಮಿಸುತ್ತದೆ. ಒಮ್ಮೆ ಈ ಕೃತಿಯನ್ನು ಓದಿ. ********** ಡಾ.ಅಜಿತ ಹರೀಶಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪ್ರಶಸ್ತಿ-ಪುರಸ್ಕಾರ

ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ -2019 ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ -2019 ಕನ್ನಡದ ಸಣ್ಣ ಕತೆಗಾರರಿಗೆ ಉತ್ತೇಜನ ನೀಡಲು ಪ್ರತಿ ವರ್ಷ ನೀಡುತ್ತಿರುವ ಡಾ . ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ 2019 ರ ಪ್ರಶಸ್ತಿ ಚನ್ನಪ್ಪ ಕಟ್ಟಿ ಅವರ ” ಏಕತಾರಿ ” ಕಥಾ ಸಂಕಲನಕ್ಕೆ ಸಂದಿದೆ . ಡಾ. ಎಸ್ ಜಿ ಸಿದ್ದರಾಮಯ್ಯ , ಅರುಣ್ ಜೋಳದ ಕೂಡ್ಲಗಿ ಮತ್ತು ವಿನಯಾ ವಕ್ಕುಂದ ಅವರುಗಳಿದ್ದ ಸಮಿತಿ ಈ ಕಥಾಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ . ಚನ್ನಪ್ಪ ಕಟ್ಟಿಯವರ ಕಥಾ ಸಂಕಲನದ ಎಲ್ಲಾ ಕಥೆಗಳು ನೆಲದ ಬೇರುಗಳನ್ನು ಹೀರಿಕೊಂಡು ಬದುಕಿನ ಸ್ಥಿತ್ಯಂತರಗಳನ್ನು ಸೂಕ್ಶ್ಮವಾಗಿ ಕಟ್ಟಿ ಕಲಾ ಕೃತಿಯ ಅನುಭವ ನೀಡುತ್ತಾ ಬದಲಾದ ಕಾಲಘಟ್ಟಗಳ ಮನುಷ್ಯ ಸಂಬಂಧಗಳ ನಾಡಿ ಮಿಡಿತವನ್ನು ನೀಡುತ್ತವೆ . ಈ ಕಾರಣಕ್ಕಾಗಿ “ಏಕತಾರಿ”ಕಥಾ ಸಂಕಲನವನ್ನು ಸಮಿತಿ ಒಮ್ಮತದಿಂದ ಆಯ್ಕೆ ಮಾಡಿದೆ . ಡಾ.ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ***********************************

ಪ್ರಶಸ್ತಿ-ಪುರಸ್ಕಾರ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಜಾಂಬ್ಳಿ ಟುವಾಲು ಜಾಂಬ್ಳಿ ಟುವಾಲು ಕಥಾಸಂಕಲನ ಲೇಖಕರು- ರಾಜು ಹೆಗಡೆ ಪ್ರಕಾಶನ – ಅಂಕಿತ ಪುಸ್ತಕ ಶಿರಸಿಯಲ್ಲಿ ಕನ್ನಡ ಉಪನ್ಯಾಸಕರಾಗಿರುವ ಪ್ರೊ.ರಾಜು ಹೆಗಡೆ ಉತ್ತರ ಕನ್ನಡದ ಪ್ರಮುಖ ಕವಿ ಮತ್ತು ಕಥೆಗಾರ.ಉ.ಕದ ಗಡಿರೇಖೆಯೊಳಗೆ ತಮ್ಮ ಕಥಾಲೋಕ ಸೃಷ್ಟಿಸಿಕೊಂಡು ಇಲ್ಲಿಯೇ ನೆಲೆಸಿರುವ ಬರಹಗಾರ. ಜಾಂಬ್ಳಿ ಟುವಾಲು ಎಂಬ ಹೆಸರಿನ ಯಾವುದೇ ಕಥೆ ಇಲ್ಲಿಲ್ಲ. ಆದರೆ ‘ಕುರುರಾಯ ಇದನೆಲ್ಲ ಕಂಡು..’ ಎಂಬ ಕಥೆಯಲ್ಲಿ ಟವೆಲ್ ಇಟ್ಟು ಹೋದವರ ಜಗಳದ ಪ್ರಸಂಗ ಬರುತ್ತದೆ. ಕಥೆಗಳನ್ನು ಜಾಂಬ್ಳಿ – ಇಲ್ಲಿ ಆರು ಕಥೆಗಳು ಇವೆ. ಟುವಾಲು- ಇಲ್ಲಿಯೂ ಆರು ಕಥೆಗಳಿವೆ. ಮತ್ತು ಅನುಬಂಧದಲ್ಲಿ ನಾಲ್ಕು ಕಥೆಗಳಾಗಿ ವಿಂಗಡಿಸಲಾಗಿದೆ. ಅಪಾರ ಪಾಂಡಿತ್ಯವನ್ನು ಪಡೆದಿದ್ದರೂ ರಾಜು ಹೆಗಡೆ ಅವರು ಅದನ್ನು ಕಥೆಗಳಲ್ಲಿ ತುರುಕಿಲ್ಲ. ಸರಳ ಮತ್ತು ಉತ್ತರ ಕನ್ನಡದ ಭಾಷೆಯಲ್ಲಿ ಕತೆ ಹೇಳುತ್ತಾ ಹೋಗಿದ್ದಾರೆ. ವಿನೋದದ ಪ್ರಸಂಗವನ್ನು ಚಂದಾಗಿ ಹೇಳಬಲ್ಲ ಹೆಗಡೆಯವರು ‘ ಲಾರಿ ಏರಿದ ಕಾಡು ‘ ಎಂಬ ಕತೆಯಂತಹ ಕತೆಯಲ್ಲಿ ವಿಷಾದವನ್ನು ಸಟಕ್ಕನೆ ತಂದು ಕಾಡುವರು. ಕತ್ತಲೆ ಮೌನ ಮತ್ತು… ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ಮೊದಲ ಬಹುಮಾನ ಪಡೆದ ಕಥೆ. ಇಲ್ಲಿ ಗಜಾನನ, ತಿಮ್ಮಣ್ಣ (ತಿರುಮಲೇಶ) ಮತ್ತು ಗೌರಿಯ ಸುತ್ತ ಸುತ್ತುತ್ತಾ ಊರನ್ನೂ ಒಳಗೊಳ್ಳುವ ಕಥೆ. ಸಣ್ಣ ಪುಟ್ಟ ಚಾಲ್ ನಲ್ಲೆ ಚಿತ್ರಣ ಕಟ್ಟಿಕೊಡುವುದು ಇವರ ನಿರೂಪಣೆಯ ವಿಶೇಷ. ಚಾವಿ ಕಥೆ ಅತ್ಯಂತ ಸಣ್ಣ ಸಮಯದಲ್ಲಿ ನೆಡೆಯುವ ಸಾಮಾನ್ಯ ಘಟನೆ. ಆದರೆ ಅದು ರಾಜು ಹೆಗಡೆ ಅವರ ಕೈಯಲ್ಲಿ ಕಲಾತ್ಮಕವಾಗಿ ಹೊರಹೊಮ್ಮಿದೆ. ಪಾರಿಜಾತದ ಗೀರು ಒಂದು ವಿಶಿಷ್ಟವಾದ ಕಥೆ.ಇಲ್ಲಿಯ ಪ್ರೇಮಿಗಳ ವಾತಾವರಣ ಈಗಿನ ಕಾಲಘಟ್ಟದ್ದಾದರೂ, ಇಬ್ಬರೂ ಪ್ರೌಢರು. ವಿಪ್ರಲಂಭ ಕೂಡಾ ಎಕ್ಸ್ಟ್ರಾ ಮರೈಟಲ್ ರಿಲೇಶನ್ ಶಿಪ್ ಬಗ್ಗೆ ರೋಮ್ಯಾಂಟಿಕ್ ನಿರೂಪಣೆಯಲ್ಲಿ ಸಾಗುತ್ತದೆ. ಲಾಸ್ಟ್ ಪೆಗ್,ಫ್ರಿಜ್ಜು, ಲೌಕಿಕ ದಂತಹ ಕತೆಗಳು ಯಾವುದೇ ಪ್ರಕಾರದ ಹಂಗಿಲ್ಲದೆ ಓದುವ ಮತ್ತು ಕೇವಲ ಓದುವ ಖುಷಿಯನ್ನು ಕೊಡುತ್ತವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಒಮ್ಮೆ ಓದಲೇಬೇಕಾದ ಕೃತಿ ಈ ‘ ಜಾಂಬ್ಳಿ ಟುವಾಲು. ***********. ಡಾ.ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ನಾನು ಅಘೋರಿಯಲ್ಲ “ನಾನು ಅಘೋರಿಯಲ್ಲ”” – Santoshkumar Mehandale 10 ವರ್ಷದ ಹಿಂದೆಯೇ ತರಂಗದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ, ರಾಜ್ಯಮಟ್ಟದ ಜನಪ್ರಿಯ ಕಾದಂಬರಿ ಎಂದೆನಿಸಿಕೊಂಡ, (ಬಹುಶ ಹಲವು ಪ್ರಶಸ್ತಿಯೂ ) ಪುಸ್ತಕ….    ನನ್ನ ಬಹುದೊಡ್ಡ ಹೊಟ್ಟೆಯುರಿ ಅಂದ್ರೆ ಈ ಲೇಖಕರು,  ಇವರ ಬರಹಗಳು ನಂಗೆ ಪರಿಚಯವಾದದ್ದು ತೀರ ಇತ್ತೀಚಿಗೆ, ಇಷ್ಟು ವರ್ಷ ನಾನೀ ಲೇಖಕರ ಪುಸ್ತಕ ಬರಹ ಎಲ್ಲಾ ಮಿಸ್  ಮಡ್ಕೊಂಡೇ ಅಂತನ್ನಿಸೋದು ಇವರ ಕೆಲವು ಪುಸ್ತಕಗಳು ಸಿಗದಿದ್ದಾಗ, ಅವನು ಗಂಧರ್ವ….  ಯಾವ ಪ್ರೀತಿಯೂ…. ಓದಿದ ನಂತರ ಸರ್ ನಿಮ್ಮ ಯಾವ್ಯಾವ ಬುಕ್ಸ್ ಲಭ್ಯ ಇದೇ ಕಳಿಸಿಬಿಡಿ ಅಂತಾ ತರಿಸಿಕೊಂಡಿದ್ದೆ ಆದರೇ ಮಿಸ್ ಆದ ಪುಸ್ತಕಗಳಲ್ಲೊಂದು “”ನಾನು ಅಘೋರಿಯಲ್ಲ “”   ನನ್ನದೊಂದು (ದುರ )ಅಭ್ಯಾಸ ಅಂದ್ರೆ ನಂಗೆ ಯಾವುದೇ ಬುಕ್ ಬೇಕಂದ್ರೂ ಇನ್ನೊಬ್ರತ್ರ ಇಸ್ಕೊಳೋದು ಲೈಬ್ರರಿಲಿ ತರೋದು ಆಗೋಲ್ಲ, ಆದ್ರೆ ಮಾರ್ಕೆಟ್ ನಲ್ಲಿ ಸಿಗದಿದ್ದಾಗ ಲೈಬ್ರರಿ ಮೊರೆ ಅನಿವಾರ್ಯ, ಹೀಗೇ ಯಾವ್ದೋ ಬುಕ್ ತರೋದಿತ್ತು ಹಾಗೂ ಈ ಮೆಹಂದಳೆ ಸರ್ ದು, ನಂದೂ ಬುಕ್ಸ್ ಅಲ್ಗೆ ತಳ್ಪಸೋಣಾ ಅಂತಾ ಹೋದಾಗ ಕಣ್ಣಿಗೆ ಬಿದ್ದದ್ದು ಈ ನಾನು ಅಘೋರಿಯಲ್ಲ, ಒಂದ್ಸಲ ಆದ ಖುಷಿಗೆ ಪಾರವಿರಲಿಲ್ಲ, ನಿನ್ನೆ ಇಡೀ ದಿನ ಮಾಡಬೇಕಾದ ಎಲ್ಲಾ ಕೆಲ್ಸ ಬಿಟ್ಟು ಕೂತು ಓದಿ ಮುಗ್ಸಿದ್ದೀನಿ, ನನ್ನನಿಸಿಕೆ ಕೇವಲ ಅನಿಸಿಕೆ ನಿಮ್ಮ ಮುಂದೆ…   ಈ ಅಘೋರಿ ಅನ್ನೋ ಪದಾನೇ ನನ್ನ ವಿಚಿತ್ರವಾಗಿ ಸೆಳೆಯತ್ತೆ, ಇದರ ಬಗ್ಗೆ ಓದಿಲ್ಲ ಕೇಳಿಲ್ಲ ಅಂತಲ್ಲ, ಬಹುಶ: ಅಘೋರಿ ಅಂದ್ರೆ ಒಂಥರಾ ಭಯ ಗಾಬರಿ ಏನೋ ಮುಜುಗರದಂತಹ ಫೀಲಿಂಗ್, ಅವ್ರೇನೋ ಬೇರೇ ಗ್ರಹದವರ ಎಂಬ ಅಸ್ಪೃಶ್ಯ ಅಲ್ದೇ ಸರಿಯಾಗಿ ಹೇಳ್ಬೇಕಂದ್ರೆ ಅಸಹ್ಯ ಅನ್ನೋ ಭಾವನೇನೇ ಜಾಸ್ತಿ, ಆದರೇ ಈ ಪುಸ್ತಕದ ವಿಶೇಷ ಅಂದ್ರೆ ಇದನ್ನ ಓದಿದರೆ ಸರಿಯಾಗಿ ಅರ್ಥೈಸಿಕೊಂಡರೆ ಲೇಖಕರು “”ಅಘೋರಿಗಳ “” ಬಗೆಗಿನ ಎಲ್ಲಾ ಪೂರ್ವಗ್ರಹಗಳನ್ನೂ ನಿವಾರಿಸಿಬಿಡುತ್ತಾರೆ ಮಾತ್ರವಲ್ಲ ಅವರೊಂದಿಗೆ ಒಂದು ಮಾನವೀಯ ಗೌರವ ಭಾವವೂ ಹುಟ್ಟಿಕೊಳ್ಳುತ್ತೆ, ಮತ್ತೆಂದೂ ಪೂರ್ವಾಪರ ವಿವೇಚನೆ ಇಲ್ದೆ ಅಘೋರಿಗಳನ್ನ ನೀವು ನಿರಾಕರಿಸಲಾರಿರಿ ಡ್ಯಾಮ್ ಶ್ಯೂರ್…..    ಸಾಮಾಜಿಕ ವ್ಯವಸ್ಥೆಯ ಮೂರ್ನಾಲ್ಕು ರಂಗಗಳನ್ನು ಒಂದಕ್ಕೊಂದು ಕೊಂಡಿಗಳನ್ನ ಜೋಡಿಸೋದನ್ನು ಪರಸ್ಪರ ಒಬ್ರಿಗೊಬ್ರು ದ್ರೋಹವೆಸಗೋದನ್ನೂ , ಅದರೊಳಗೂ ಹರಡಿ ಘಮಿಸುವ ನಿರ್ಮಲ ನಿಷ್ಕಲ್ಮಶ ಪ್ರೀತಿಯನ್ನು ಅದ್ಬುತವಾಗಿ ಎಲ್ಲೂ ಕಿಂಚಿತ್ತು ಬೇಸರವಾಗದಂತೆ ಎಲ್ಲಿಯೂ ಯಾವ ಚಿಕ್ಕ ಲೋಪವೂ ಬಾರದಂತೆ,  ಬೇಸರವಾಗದoತೆ ಕಥೆ ಹೆಣೆದಿರುವ ಲೇಖಕರ ಕೌಶಲ್ಯ ಮನಸೆಳೆಯುತ್ತದೆ.. ವೈಜ್ಞಾನಿಕಥೆಗೆ  ಅಧ್ಯಾತ್ಮದ,  ವಾಮಲೋಕದ ಅಘೋರ ವಿಜ್ಞಾನ, ಹೇಗೆ ಒಂದಕ್ಕೊಂದು ತಳುಕು ಹಾಕಿಕೊಳ್ಳಬಲ್ಲದು ಹಾಗೂ ಪರಸ್ಪರರ ಅವನತಿಗೂ ಕಾರಣವಾಗಬಲ್ಲದು ಎಂಬುದನ್ನು ಮಾರ್ತಾಂಡ ಬಾಬಾ ಹಾಗೂ ಅಧ್ವೈತ ಸ್ವಾಮಿ ಮೂಲಕ ಅರಿವನ್ನು ನೀಡಿದ್ದಾರೆ ಹಾಗೂ ಅಘೋರಿಗಳೂ ತಮ್ಮ ಸಿದ್ಧಿಯನ್ನು ಲೋಕ ಕಲ್ಯಾಣಕ್ಕೆ ಉಪಯೋಗಿಸುವ ಬಗ್ಗೆ ಖಂಡಿತವಾಗಿಯೂ ಸಾಮಾನ್ಯ ಜನಕ್ಕೆ ತಿಳುವಳಿಕೆ ಇರಲಾರದು, ಅಘೋರ ವಿಜ್ಞಾನ ಕೂಡ ವೈಜ್ಞಾನಿಕ ಆಧಾರಿತ ಅನ್ನೋದನ್ನೂ ಸರಳವಾಗಿ ಅರ್ಥವಾಗುವಂತೆ ಬಿಡಿಸಿಟ್ಟಿದ್ದಾರೆ, ನಮ್ಮ  ಆಡಳಿತ ವೈಖರಿ ಅಧಿಕಾರಿ ವರ್ಗದ ಕೆಲವು ವಿಫಲತೆ, ಭ್ರಷ್ಟಾಚಾರ, ಧರ್ಮವನ್ನು ದುರುಪಯೋಗ ಪಡಿಸಿಕೊಳ್ಳುವ ದುರವಸ್ಥೆ ಖೇದವೆನಿಸುತ್ತದೆ, ಮನುಷ್ಯನ ದುರಾಸೆಯಿಂದ ಸಮಾಜಕ್ಕಾಗುವ ಹಾನಿ ನಷ್ಟವನ್ನು ಅಗ್ನಿಹೋತ್ರಿ ಎಂಬ ವಿಜ್ಞಾನಿ ತನ್ನ ಅದ್ಬುತ ಪಾಂಡಿತ್ಯದಾಚೆಗೂ ಪ್ರಯೋಗವನ್ನು ಅಧೂರಿಯಾಗಿ ಬಿಟ್ಟು ತನ್ನನ್ನು ತನ್ನ ದಶಕಗಳ ಶ್ರಮವನ್ನು ಬೂದಿ ಮಾಡಿಕೊಳ್ಳುವ ಅಸಾಹಾಯಕತೆ ಗಲಿಬಿಲಿಗೊಳಿಸತ್ತೆ, ಅಘೋರಿಗಳ ವಾಮಮಾರ್ಗದ  ಭೀಭಿತ್ಸ  ಭೀಕರ ಆಚರಣೆಯ ಬಗ್ಗೆ ಮಾತ್ರಾ ತಿಳಿದವರಿಗೆ ಅದರ  ಹಿಂದಿನ ಸಾಮಾಜಿಕ ಕಳಕಳಿ, ಹಿತದೃಷ್ಟಿ ಅರಿವಿಗೆ ಬಂದ್ರೆ ಅಘೋರ ಲೋಕ ಹಾಗೂ ಅಘೋರಿಗಳ ಬಗೆಗಿನ ತಪ್ಪು ತಿಳುವಳಿಕೆ ಅಂತರ ಕಡಿಮೆಯಾಗಿ ಅವರೊಂದಿಗೆ ಒಂದು ಮಾನವೀಯ ಸಂವಹನ ಸಾದ್ಯವಾಗಬಲ್ಲದು, ಇದು  ಇನ್ನೊಮ್ಮೆ ಪ್ರತಿಲಿಪಿಯಲ್ಲಾದರೂ ಬರಲಿ ಎಂಬುದು ನನ್ನ ಕೋರಿಕೆ, ಇಲ್ಲಿನದೇ ಒಂದಷ್ಟು ಓದುಗರು ಓದಲು ಅನುಕೂಲ ಆಗಬಹುದೆಂಬುದು ನನ್ನಾಶಯ,   ಇನ್ನು ರೇಶಿಮೆ ಜರತಾರಿನ ಸೀರೆಯಲ್ಲಿ ಬೆಳ್ಳಿ ಝರಿಯಂತೆ ನಿಕ್ಷಿಪ್ತವಾಗಿ ಎಲ್ಲರಲ್ಲಿಯೂ ಸೇರಿಕೊಂಡಿರೋದು, “”ಪ್ರೇಮ ಎಂದರೆ ಆಕಾರಕ್ಕೆ ನಿಲುಕದ….    ಕಲ್ಪನೆಗೆ ನಿಲುಕದ……. ಮನಸ್ಸು… !!       ಒಂದು   “”ಪ್ರಚ್ಚನ್ನ ಮೌನ “”” ಆದಿ ಪುರಾಣ ಕಾಲದಿಂದಲೂ ಇಂದಿನವರೆಗೂ ಸಾವಿರಾರು ಪ್ರೇಮ ಕಥೆಗಳು ಆಗಿಹೋಗಿವೆ, ಒಂದಷ್ಟು ಸುಖಾಂತ ಒಂದಷ್ಟು ದುಃಖಾಂತ, ಎರಡರ ಬಯಕೆಯೂ ನಿಸ್ವಾರ್ಥ… ತ್ಯಾಗ…. ಅದೆಲ್ಲಕಿಂತ ತಾದ್ಯಾತ್ಮತೆಯನ್ನ…. ಎಂದು ಇತಿಹಾಸಗಳಿಂದ ಅರಿತವರು ತುಂಬಾ ಕಡಿಮೆ ಮಂದಿ…. ಈ  ಲೇಖಕ ಮಹಾನುಭಾವರ ಪ್ರೇಮದ ಪ್ರೀತಿಯ ವ್ಯಾಖ್ಯಾನಗಳು ಅತೀ ಸುಂದರ ಚೇತೋಹಾರಿ ಮನೋಲ್ಲಾಸಗೊಳಿಸುವಂತದ್ದು, ನಮ್ಮಂತ ಆಡಲಾರದ ಅನುಭವಿಸಲಾರದ ಬಿಸಿತುಪ್ಪದಂತೆ ನುಂಗಲಾರದೆ ಉಗುಳಲಾರದೇ ಸಂಕಟ ಪಡುವ ಮನಗಳಿಗೆ ಕೊಂಚ ಧೈರ್ಯ ತುಂಬಿ ಅಗತ್ಯವಾದದ್ದನ್ನು ಕೇಡಿಲ್ಲದ, ಅನ್ಯಾಯವಲ್ಲದ ರೀತಿಯಲ್ಲಿ ಎಟುಕಿಸಿಕೊಳ್ಳುವ, ಮನಃಸ್ಥಿತಿಗೆ ತಂದು ಬದುಕಿಗೆ ಅಲ್ಪ ಸ್ವಲ್ಪ  ನೆಮ್ಮದಿ ಚೈತನ್ಯ ತುಂಬುವಂತಹುದು, ಹೌದು ಇನ್ನೊಬ್ಬರಿಗೆ ಕೇಡೆಣಿಸದಂತ ಯಾವ ಪ್ರೀತಿಯೂ ಅನೈತಿಕವಲ್ಲ ಎಂದೇ ಸಾರಿದವರಲ್ಲವೇ….?? ಮನಸ್ಸಿನ ಅನುಭೂತಿಗೊಂದು ಆಯಾಮ ಕಲ್ಪಿಸುವುದೇ ಪ್ರೇಮವಾ?? ಇದ್ದಷ್ಟೂ ಮತ್ತಷ್ಟು ಬೇಕೆಂದುಕೊಳ್ಳುವುದು ಪ್ರೇಮವಾ?? ಜಾಜಿ ಮಲ್ಲೆಯ ಘಮಲಾ??  ಮುಂಜಾವಿನ ಇಬ್ಬನಿಯ ಮೃದುತ್ವವಾ?? ನಗುವ ಗಾಳಿಯ ಸಣ್ಣಸುಳಿಯ ಕಲರವವಾ?? ಮೊದಲ ಮಳೆಯ ಮಣ್ಣಿನ ವಾಸನೆಯ ಗಾಢತೆಯಾ?? ಪ್ರೇಮವೊಂದು ನೆರವೇರುವುದಕ್ಕಿಂತ ಅದು ನೆರವೇರಲಿರುವ ನಿರೀಕ್ಷೆ ತುಂಬಾ ಹಿತವಾಗಿರುತ್ತದೆಂದು ಯಾಕೆನಿಸುತ್ತದೆಯೋ… ಮಲ್ಲಿಗೆ ಬಳ್ಳಿಯ ತೂಗುವಿಕೆಯ  ಲಾಸ್ಯವಾಗಿ ಮನದಲ್ಲಿ ಬೆಳದಿಂಗಳಾಗಿ, ಇಂಧ್ರಧನುಸ್ಸಾಗಿ,, ಚಿನ್ನದ ಮೋಡಗಳ ಗರಿಗಳಾಗಿ… ಇದಕ್ಕಿಂತ ಹಿತವಾದುದು ಖಂಡಿತಾ ಇದರ ಮೀರಿದ ಹಿತವಿಲ್ಲ ಎಂದೇ ನಮ್ಮನಿಸಿಕೆಯೂ ಲೇಖಕರೇ… ಮೈನವಿರೇಳಿಸುವ ಅಘೋರ ಲೋಕದ ವಿದ್ಯಮಾನಗಳಾಗಲಿ…., ಹಿಪ್ನಾಟೈಸ್…., ಆರತ್ಯುಂಗ…. ವರ್ಣಗೋಲ….  ಕಡೆಗೆ ಕಾನ್ಫಿಡೆನ್ಸ್ ಏನೇ ಇರಲಿ, ಯಾವುದೇನು ಮಾಡಿದರೂ ಮನಸ್ಸನ್ನು ಕಂಡು ಹಿಡಿಯುವ ತಂತ್ರಜ್ಞಾನ ಮಾತ್ರಾ ಎಟುಕಲಾರದೇನೋ…???  ಅಂತದ್ದೊಂದು ಎಟುಕಬಾರದು ಕೂಡಾ… ಅದೇ ಈ ಸಕಲ ಜೀವಗಳಿಗೂ ಜಗತ್ತಿಗೂ ಶುಭ……   ಹೌದು ಪ್ರೇಮವೆಂದರೆ ಅಪೂರ್ವ ಶಾಂತಿ….        “”””ಪ್ರಚ್ಚನ್ನ ಮೌನ  “””” ಅದ್ಬುತ ಪ್ರೇಮ ರಾಸಾಯನದೊಂದಿಗೆ ಅಘೋರಿಗಳ ಹೊಸಮುಖ ಪರಿಚಯಿಸಿದ, ಒಂದು ನಿಗೂಢವನ್ನ ಅನಾವರಣಗೊಳಿಸಿದ ಲೇಖಕರಿಗೆ ವಂದನೆ ಅಭಿನಂದನೆಗಳು… ಹೀಗೇ ಬರೀತಾ ಇರಿ… ನಮ್ಮೆಲ್ಲ ಅಭಿಮಾನಿಗಳ ಪ್ರೀತಿಯ ಕಸುವು ನಿಮಗಿರಲಿ… ************ ಪದ್ಮಜಾ ಜೋಯಿಸ್

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಕೃತಿ ಪರಿಚಯ ತಲ್ಲಣಗಳ ಪಲ್ಲವಿ ಪುಸ್ತಕ: ತಲ್ಲಣಗಳ ಪಲ್ಲವಿ (ಕಥಾ ಸಂಕಲನ) ಲೇಖಕರು: ಅನುಪಮಾ ರಾಘವೇಂದ್ರ ಉಡುಪುಮೂಲೆ ಪುಸ್ತಕ: ತಲ್ಲಣಗಳ ಪಲ್ಲವಿ (ಕಥಾ ಸಂಕಲನ) ಲೇಖಕರು: ಅನುಪಮಾ ರಾಘವೇಂದ್ರ ಉಡುಪುಮೂಲೆ ನೃತ್ಯ ಶಿಕ್ಷಕಿಯಾಗಿರುವ ಅನುಪಮಾ ರಾಘವೇಂದ್ರ ಉಡುಪುಮೂಲೆ ಅವರು ಕಾಸರಗೋಡಿನ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ನಾಟ್ಯ ವಿದುಷಿಯೂ, ಎಡನೀರಿನ ಭೂಮಿಕಾ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷೆಯೂ ಆಗಿರುವ ಇವರು ಬಹುಮುಖ ಪ್ರತಿಭೆಯವರು. ಇತ್ತೀಚೆಗೆ ಯಕ್ಷಗಾನ ಕ್ಷೇತ್ರಕ್ಕೂ ಪ್ರವೇಶಿಸಿದ ಅನುಪಮಾ ಅವರು ಈಗಾಗಲೇ ‘ಕಲಾತರಂಗ ಕಲಾಂತರಂಗ’ ಎಂಬ ಲೇಖನ ಸಂಕಲನವನ್ನೂ, ‘ಹತ್ತಗುಳು’ ಎಂಬ ಹವ್ಯಕ ಕಥಾ ಸಂಕಲನವನ್ನೂ ಪ್ರಕಟಿಸಿದ್ದಾರೆ. ಕಳೆದ ಎಪ್ರೀಲ್ 24 ರಂದು ಎಡನೀರು ಮಠದಲ್ಲಿ ಶ್ರೀಗುರುಗಳ ದಿವ್ಯ ಹಸ್ತದಿಂದ ಇವರ ಮೂರನೇ ಕೃತಿ ‘ತಲ್ಲಣಗಳ ಪಲ್ಲವಿ’ ಕಥಾ ಸಂಕಲನವು ಬಿಡುಗಡೆಗೊಂಡಿತು. ಭೂಮಿಕಾ ಪ್ರತಿಷ್ಠಾನದಿಂದ ಪ್ರಕಟಗೊಂಡ ಈ ಸಂಕಲನಕ್ಕೆ ಡಾ. ಹರಿಕೃಷ್ಣ ಭರಣ್ಯ ಅವರು ಮುನ್ನುಡಿ ಬರೆದಿದ್ದಾರೆ. ಶ್ರೀಮತಿ ಪ್ರಸನ್ನ ವಿ. ಚೆಕ್ಕೆಮನೆಯವರು ಬೆನ್ನುಡಿ ಬರೆದಿದ್ದಾರೆ. ಇದರಲ್ಲಿ ಒಟ್ಟು 12 ಸಣ್ಣ ಕಥೆಗಳಿದ್ದು ಬೇಗನೆ ಓದಿ ಮುಗಿಸಬಹುದಾಗಿದೆ. ಅವರು ಗೃಹಿಣಿಯಾಗಿದ್ದರೂ ಸಮಾಜದೊಳಗಿನ ಸೂಕ್ಷ್ಮ ವಿಚಾರಗಳನ್ನು ಗಮನಿಸುವುದನ್ನು ಕಾಣಬಹುದು. ವಿಚಾರಗಳನ್ನು ಗ್ರಹಿಸಿ ಭಿನ್ನವಾದ ವಸ್ತುಗಳನ್ನಿಟ್ಟುಕೊಂಡು ತನ್ನದೇ ಆದ ಶೈಲಿಯಲ್ಲಿ ಕಥೆಗಳನ್ನು ಕಟ್ಟಿ ಓದುಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಕಥೆ ‘ಜೀವಜಲ’ದಲ್ಲಿ, ಅಣ್ಣ ಶಂಕರ ಹಳ್ಳಿಯಲ್ಲಿ ಶಿಕ್ಷಕ ವೃತ್ತಿಯೊಂದಿಗೆ ಕೃಷಿ ಮಾಡುತ್ತಾ ಬದುಕುತ್ತಾನೆ. ಹೊರ ದೇಶಗಳಲ್ಲಿ ದುಡಿಯುವವರಿಗೆ ಕೆಲಸ ಖಾಯಂ ಅಲ್ಲ. ಆರ್ಥಿಕ ಕುಸಿತ ಉಂಟಾಗುವಾಗ ಕಂಪೆನಿಯವರು ನೌಕರರನ್ನು ಮರಳಿ ಊರಿಗೆ ಕಳಿಸುವಾಗ ಅವರಿಗೆ ಹುಟ್ಟೂರೇ ಗತಿ ಎಂಬ ಸತ್ಯದ ದರ್ಶನವಾಗುತ್ತದೆ. ತಪ್ಪುತಿಳುವಳಿಕೆಯಿಂದ ಅಣ್ಣನ ಮೇಲೆ ಅಸಮಾಧಾನವಿದ್ದ ಶಶಾಂಕನಿಗೆ ಕೊನೆಗೆ ಹೊಸ ಬದುಕು ಕಟ್ಟಿಕೊಳ್ಳಲು ಅಣ್ಣನ ಸಹಾಯವನ್ನೇ ಸ್ವೀಕರಿಸಬೇಕಾಗುತ್ತದೆ. ಇಲ್ಲಿ ಶಂಕರ್ ಅಣ್ಣನಾಗಿ, ಅಪ್ಪನಾಗಿ ಕಾಣಿಸುತ್ತಾನೆ. ‘ಮರೆತೇನೆಂದರು ಮರೆಯಲಿ ಹ್ಯಾಂಗ’ ಕಥೆಯಲ್ಲಿ ಮನೆಯಲ್ಲಿರುವವರನ್ನು ನಾವು ಹೇಗೆ ಪ್ರೀತಿಸುತ್ತೇವೋ ಹಾಗೆಯೇ ಸಾಕಿದ ಪ್ರಾಣಿಗಳನ್ನೂ ಅಷ್ಟೇ ಕಾಳಜಿಯಿಂದ, ಪ್ರೀತಿಯಿಂದ ನೋಡಿಕೊಳ್ಳುವುದನ್ನು ಕಾಣಬಹುದು. ‘ಆ ಮಾತು’ ಕಥೆಯಲ್ಲಿ ಒಬ್ಬ ಗುರುವಾಗಿದ್ದು ತನ್ನ ಮಗಳಿಗೆ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಬದಲು, ಸ್ವಂತ ಸುಖಕ್ಕಾಗಿ ಹಿರಿಯರನ್ನೂ ದೂರವಿರಿಸಲು ಕಿವಿಮಾತು ಹೇಳುವುದನ್ನು ಕಾಣುವಾಗ ಆತನ ಮೇಲಿಟ್ಟ ನಂಬಿಕೆ ಒಡೆದುಹೋಗುತ್ತದೆ. ‘ಅನಾಘ್ರಾಣಿತ ಕುಸುಮ’ ಕಥೆಯಲ್ಲಿ ಸಂಪತ್ತಿನ ಮುಂದೆ ಸಂಬಂವಗಳೂ ಮೌಲ್ಯ ಕಳೆದುಕೊಳ್ಳುತ್ತವೆ. ಗಂಡನಿಂದ ವಿಚ್ಛೇದನ ಪಡೆದ ಹೆಣ್ಣೊಬ್ಬಳು ಸಮಾಜದಲ್ಲಿ ಬದುಕಲು ಕೃತಕ ಗರ್ಭಧಾರಣೆಯ ಮೂಲಕ ಮಗುವನ್ನು ಪಡೆಯುವುದು, ಯಾರ ಹಂಗೂ ಇಲ್ಲದೆ ಆಕೆಯನ್ನು ಬೆಳೆಸಲು ಪಟ್ಟ ಕಷ್ಟ, ಮದುವೆ ಮಾಡಿಸಿ ಮೊಮ್ಮಕ್ಕಳನ್ನಾಡಿಸುತ್ತಾ ಆಕೆ ತನ್ನ ನೋವನ್ನು ಮರೆಯುವ ಚಿತ್ರಣವಿದೆ. ‘ಯಶೋದೆ…ಕೃಷ್ಣನ ಬೆಳೆಸಿದರೇನು… ಕಥೆಯಲ್ಲಿ ಲಾವಣ್ಯ ಮೂರು ಬಾರಿ ತನ್ನ ಮಗುವನ್ನು ಕಳೆದುಕೊಂಡಾಗ ಕೆಲಸದಾಕೆ ಕಮಲಿಯ ಮಗುವನ್ನು ತನ್ನ ಮಗುವೆಂದೇ ಸಾಕುತ್ತಾಳೆ. ಮುಂದೊಂದು ದಿನ ಮಗುವಿನ ಜನ್ಮ ರಹಸ್ಯ ತಿಳಿಯುವಾಗ ಕೆಲಸದಾಕೆ ಕಮಲಿಯ ಮೇಲೆ ಕನಿಕರಗೊಳ್ಳುತ್ತಾಳೆ. ಲಾವಣ್ಯನ ಸಣ್ಣ ಮನಸ್ಸಿನ ಮುಂದೆ ಕಮಲಿಯ ಹೃದಯ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತಾರೆ. ಧಾತ್ರಿಯ ಸ್ಥಿತಿಯನ್ನು ಯಶೋದಾ ನಂದನ ಕೃಷ್ಣನಿಗೆ ಹೋಲಿಸುತ್ತಾರೆ. ಪ್ರಸ್ತುತ ಸಮಾಜದ ಜ್ವಲಂತ ಸಮಸ್ಯೆಯೊಂದು ಅವ್ಯಕ್ತ ಕಥೆಯಲ್ಲಿದೆ. ಹೆತ್ತವರು ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರುವುದನ್ನು, ಮಕ್ಕಳ ಕನಸುಗಳಿಗೆ ಬಣ್ಣ ಬಳಿಯದೆ ಅವರ ನಿರ್ಧಾರಗಳಿಗೆ ಆಸೆ-,ಆಕಾಂಕ್ಷೆಗಳಿಗೆ ಮನ್ನಣೆ ನೀಡದೆ ತಮ್ಮ ನಿರ್ಧಾರಗಳನ್ನು ಅವರ ಮೇಲೆ ಹೇರಿ ತಮ್ಮದೇ ದಾರಿಯಲ್ಲಿ ಅವರನ್ನು ನಡೆಸುವುದನ್ನೂ, ಕೊನೆಗೆ ಮಕ್ಕಳ ಸಾವಿಗೂ ಕಾರಣವಾಗುವುದನ್ನು ಗಮನಿಸಬಹುದು. ‘ಜ್ವಾಲಾಮುಖಿ’ ಕಥೆಯಲ್ಲಿ ಮಹಾ ಭಾರತದಲ್ಲಿ ಬರುವ ಅಂಬೆಯ ಪಾತ್ರವನ್ನು ವಿಭಿನ್ನ ನೆಲೆಯಲ್ಲಿ ಚಿತ್ರಿಸಿದ್ದಾರೆ. ‘ಸಮರ್ಪಣೆ’ ಕಥೆಯಲ್ಲಿ ಲೇಖಕಿಗೆ ಯಕ್ಷಗಾನದ ಮೇಲಿರುವ ಅಪಾರ ಪ್ರೀತಿ ಗೋಚರಿಸುತ್ತದೆ. ಯಕ್ಷಗಾನದ ನಡುವೆ ನಡೆಯುವ ಹಾಸ್ಯಪ್ರಸಂಗಗಳನ್ನು ಮೆಲುಕು ಹಾಕುತ್ತಾ ಕೇಚ ಎಂಬ ಕೇಶವನ ಮೂಲಕ ತನ್ನ ಜೀವನವನ್ನೇ ಯಕ್ಷಗಾನಕ್ಕಾಗಿ ಮುಡಿಪಾಗಿರಿಸುವ ಕಲಾವಿದನನ್ನು ಪರಿಚಯಿಸುತ್ತಾರೆ. ‘ಮತ್ತೆ ಹಾಡಿತು ಕೋಗಿಲೆ’ ಕಥೆಯಲ್ಲಿ ವಿಧವೆಯಾದ ಜಯಶ್ರೀಯ ಬಾಳಿಗೆ ಪ್ರಸನ್ನನ ಆಗಮನವಾದಾಗ ಅವರ ಬದುಕಿನಲ್ಲಿ ಮತ್ತೊಮ್ಮೆ ವಸಂತಕಾಲ ಬರುತ್ತದೆ. ‘ಕ್ವಚದಪಿ ಕುಮಾತಾ ನ ಭವತಿ…’ ಕಥೆಯಲ್ಲಿ ಸಹನಾ- ಕಿಶೋರ್ ದಂಪತಿಗೆ ಅವಳಿ ಮಕ್ಕಳಾದಾಗ ಗಂಡು ಮಗು ಆರೋಗ್ಯದಿಂದಿದ್ದರೂ, ಹೆಣ್ಣು ಮಗುವಿಗೆ ಸೊಂಟದಿಂದ ಕೆಳಗೆ ಊನವಾಗಿತ್ತು. ಹೆತ್ತ ತಾಯಿಯೇ ಆ ಮಗುವನ್ನು ‘ಅಮ್ಮ ತೊಟ್ಟಿಲು’ ಕೇರ್ ಟೇಕಿಂಗ್ ಹೋಮ್ ಗೆ ಕಳುಹಿಸುವಾಗ ಮಗ ಅನ್ವಿತ್ ತಂಗಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ತಾಯಿ ತಂದೆಯರಿಗಿರಬೇಕಾದ ಕಾಳಜಿ ಪ್ರೀತಿ ಅನ್ವಿತ್ ಗೆ ತಂಗಿಯಲ್ಲಿದೆ. ಆಕೆ ಸರ್ವಾಂಗೀಣ ಬೆಳವಣಿಗೆಗೆ, ಆಕೆಯ ಉಜ್ವಲ ಭವಿಷ್ಯ ರೂಪಿಸುವಲ್ಲಿ ಅಣ್ಣನ ಪಾತ್ರ ದೊಡ್ಡದು. ಮುಂದೆ ಅನಿತ ಸಂಗೀತದಲ್ಲಿ ಸಾಧನೆ ಮಾಡಿದಾಗ ಮಗನ ಮುಂದೆಯೇ ಅಪ್ಪ ಅಮ್ಮ ಚಿಕ್ಕವರಾಗಿಬಿಡುತ್ತಾರೆ. ಶಾಂತ..ಮ್ಮಾ…, ನಾಲ್ಕು ದಿನದ ಈ ಬದುಕಿನಲ್ಲಿ, ಎಂಬ ಕಥೆಗಳೂ ಈ ಸಂಕಲನದಲ್ಲಿ ಗಮನ ಸೆಳೆಯುತ್ತವೆ. ಇಲ್ಲಿನ ಕಥೆಗಳಲ್ಲಿ ಸಂದರ್ಭೋಚಿತವಾಗಿ ಸಂಸ್ಕೃತದ ವಾಕ್ಯಗಳನ್ನೂ ಬಳಸಿರುತ್ತಾರೆ. ಅವರ ಕಥೆಗಳಲ್ಲಿ ಆರೋಗ್ಯಕರವಾದ ಕೌಟುಂಬಿಕ ಚಿತ್ರಣವಿದೆ. ಸಮಾಜಕ್ಕೊಂದು ಸಂದೇಶವಿದೆ. ಸಂಪತ್ತಿಗಿಂತಲೂ ಸಂಬಂಧಗಳಿಗೆ ಪ್ರಾಧಾನ್ಯ ನೀಡುತ್ತಾರೆ. ಪ್ರೀತಿ, ನಂಬಿಕೆಗಳಿಂದಲೇ ಸಂಬಂಧಗಳು ಗಟ್ಟಿಯಾಗಿ ನೆಲೆನಿಲ್ಲುತ್ತವೆ ಎಂಬುದನ್ನು ಕಥೆಗಳ ಮೂಲಕ ತಿಳಿಸುತ್ತಾರೆ. ಇಲ್ಲಿನ ಹೆಚ್ಚಿನ ಕಥೆಗಳೂ ಕೂಡ ಸುಖಾಂತ್ಯವನ್ನು ಕಾಣುತ್ತವೆ. ಹಾಗೂ ಇಲ್ಲಿನ ಕಥೆಗಳೆಲ್ಲವೂ ಒಂದಕ್ಕಿಂತ ಒಂದು ವ್ಯತ್ಯಸ್ಥವಾಗಿದ್ದು ಓದುಗರಲ್ಲಿ ಕುತೂಹಲ ಮೂಡಿಸುತ್ತಾ ಓದಿಸಿಕೊಂಡು ಹೋಗುತ್ತವೆ. *********** ಚೇತನಾ ಕುಂಬ್ಳೆ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಆಡಾಡತ ಆಯುಷ್ಯ ಆಡಾಡತ ಆಯುಷ್ಯ ಆತ್ಮ – ಕತೆಗಳು ಗಿರೀಶ ಕಾರ್ನಾಡ ಮನೋಹರ ಗ್ರಂಥಮಾಲಾ ಆಡಾಡತ ಆಯುಷ್ಯ ಗಿರೀಶ್ ಕಾರ್ನಾಡರ ಆತ್ಮಕಥನ. ಈ ಕತೆಯನ್ನು ಅವರು ಹನ್ನೊಂದು ಅಧ್ಯಾಯಗಳಲ್ಲಿ ಹೇಳಿದ್ದಾರೆ. ಪ್ರಾಕ್ಕು – ತಾಯಿ ಕೃಷ್ಣಾಬಾಯಿ ಮಂಕೀಕರ ( ಕುಟ್ಟಾಬಾಯಿ) ಅವರ ಬದುಕಿನ ಕುರಿತು ಇದರಲ್ಲಿ ಅವರು ಹೇಳಿದ್ದಾರೆ. ಬಾಲಚಂದ್ರ ಎಂಬ ಮಗ ಹುಟ್ಟಿ ಒಂದು ವರ್ಷದೊಳಗೇ ಗಂಡ ತೀರಿಕೊಳ್ಳುತ್ತಾನೆ. ನಂತರ ಅವರ ಭಾವ ಅವಳನ್ನು ಡಾ. ಕಾರ್ನಾಡರ ಬಳಿ ನರ್ಸ್ ಕೋರ್ಸಿಗೆ ಸೇರಿಸುತ್ತಾರೆ.ಐದು ವರ್ಷಗಳ ಕಾಲ ಅವರ ಮನೆಯಲ್ಲೇ ಇದ್ದ ಕುಟ್ಟುಬಾಯಿ ಮುಂದೆ ಅಗ್ನಿಸಾಕ್ಷಿಯಾಗಿ ಡಾ. ಕಾರ್ನಾಡರನ್ನು ಮದುವೆಯಾಗುತ್ತಾರೆ. ಅವರಿಗೆ ವಸಂತ, ಪ್ರೇಮಾ, ಗಿರೀಶ್ ಮತ್ತು ಲೀನಾ ಜನಿಸುತ್ತಾರೆ. ಮುಂದೆ ಮೊದಲ ಗಂಡನಿಗೆ ಜನಿಸಿದ ಬಾಲಚಂದ್ರನ ಮನಸ್ಥಿತಿಯ ವಿವರಗಳಿವೆ, ಗೋಕರ್ಣ ಅಡ್ಡಹೆಸರು ಹೋಗಿ ಕಾರ್ನಾಡ್ ಆದ ಮಾಹಿತಿಗಳಿವೆ. ಶಿರಸಿ – ಶಿರಸಿಯ ಪಂಡಿತ ಕಾಟೇಜ್ ಹಾಸ್ಪಿಟಲ್ ಗೆ ಗಿರೀಶರ ತಂದೆ ವೈದ್ಯರಾಗಿ ಬರುತ್ತಾರೆ. ಶಿರಸಿ ಸಿದ್ದಾಪುರ ಮಧ್ಯದ ಕಾಡಿನ ವರ್ಣನೆಯಿದೆ. ಕುಮಟಾ ರಸ್ತೆಯ ದೇವಿಮನೆ ಘಟ್ಟದಲ್ಲಿ ಪಟ್ಟೆ ಹುಲಿಗಳನ್ನು ನೋಡಿದ್ದನ್ನು ಗಿರೀಶರು ನೆನಪಿಸಿಕೊಳ್ಳುತ್ತಾರೆ. ಆಗ ಕುಮಟಾ- ಸಿದ್ಧಾಪುರ ಮಧ್ಯೆ ಕಲ್ಲಿದ್ದಲು ಬಳಸುವ ಬಸ್ಸುಗಳು ಒಂದೆರಡು ಓಡಾಡುತ್ತಿದ್ದವಂತೆ! ಆಯಿ ಬಾಪ್ಪಾ ಜೊತೆ ವಾಸಿಸುವ ಗಿರೀಶರ ಬಾಲ್ಯದ ನೆನಪುಗಳು ಇಲ್ಲಿವೆ. ನಿಲೇಕಣಿಯಲ್ಲಿ ಚಂಪಾಷಷ್ಠಿಯ ದಿನ ನಡೆಯುವ ತೇರಿನ ವಿವರ ಇಲ್ಲಿದೆ. ಇದು ಏಳೆಂಟು ಸಾರಸ್ವತ ಕುಟುಂಬಗಳು ಮಾಡುತ್ತಿದ್ದ ಖಾಸಗಿ ರಥೋತ್ಸವ ಆಗಿತ್ತಂತೆ. ಚಿತ್ರಾಪುರ ಮಠದ ಬಗ್ಗೆ ಇಲ್ಲಿ ಅವರು ಬರೆದಿದ್ದಾರೆ. ಶಿರಸಿಯ ಐದುಕತ್ರಿ, ಚರ್ಚ್, ಫಾದರ್, ನೀಲೇಕಣಿ ವೆಂಕಟರಾಯರು, ಆವೆ ಮರಿಯಾ ಕಾನ್ವೆಂಟ್, ಮಾರಿಕಾಂಬಾ ಹೈಸ್ಕೂಲ್, ಯಕ್ಷಗಾನ, ಅಡಿಕೆ ತೋಟ, ಹುಲಿಮನೆ ಸೀತಾರಾಮ ಶಾಸ್ತ್ರಿಗಳ ನಾಟಕ ಮಂಡಳಿ, ಮಾರಿಕಾಂಬಾ ದೇವಸ್ಥಾನ,ಬೇಡರ ಕುಣಿತ, ಕತೆ- ಕವಿತೆಗಳ ಪ್ರಾರಂಭಿಕ ಪಾಠ ಮಾಡಿದ ಜಿ.ಕೆ ಹೆಗಡೆ ಮಾಸ್ತರರ ಚಿತ್ರಣವನ್ನು ಅವರು ಇಲ್ಲಿ ಕಟ್ಟಿ ಕೊಟ್ಟಿದ್ದಾರೆ. ಧಾರವಾಡ: ಐವತ್ತೊಂದು ಮನೆ – ಸಹಕಾರಿ ತತ್ವದಡಿ ಭಾನಪ ( ಚಿತ್ರಾಪುರ ಸಾರಸ್ವತ) ರು ಕಟ್ಟಿದ ಹೌಸಿಂಗ್ ಕೊಲೋನಿಯ ವಿವರಗಳು ಈ ಅಧ್ಯಾಯದಲ್ಲಿವೆ. ಹುಬ್ಬಳ್ಳಿ- ಧಾರವಾಡ, ಶಿರೂರ ಶಂಕರಾಯರ ಬಗ್ಗೆ ಇಲ್ಲಿ ಹೇಳಿದ್ದಾರೆ. ಧಾರವಾಡ: ಕರ್ನಾಟಕ ಕಾಲೇಜು- ಕಾರ್ನಾಡ್ ಕುಟುಂಬ ಶಿರಸಿ ಬಿಟ್ಟು ಧಾರವಾಡಕ್ಕೆ ಹೋಗುವುದು ೧೯೫೨ರಲ್ಲಿ. ಇಲ್ಲಿನ ಸಾಹಿತ್ಯ ಮತ್ತು ಶಿಕ್ಷಣದ ಬಗ್ಗೆ ಈ ಅಧ್ಯಾಯದಲ್ಲಿ ಹೇಳಲಾಗಿದೆ. ಆಲೂರು ವೆಂಕಟರಾಯರು, ವಿ.ಕೃ ಗೋಕಾಕ, ಬೇಂದ್ರೆ, ಶ್ರೀರಂಗ, ರಾಮಾನುಜನ್, ವಿ.ಜಿ ಭಟ್ ಕುರಿತು ಉಲ್ಲೇಖಗಳಿವೆ. ಮುಂಬಯಿ, ಆಕ್ಸ್ಫರ್ಡ್, ಮದ್ರಾಸ್, ಶೃಂಗೇರಿ ಅಧ್ಯಾಯಗಳಲ್ಲಿ ಗಿರೀಶರು ತಮ್ಮ ಓದಿನ ದಿನಗಳ ಮತ್ತು ವೃತ್ತಿ ಜೀವನದ ಆರಂಭದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಹಳೆ ಮೈಸೂರು: ಹೊಸ ಅಲೆ, ಪುಣೆ: ಫಿಲ್ಮ್ ಹಾಗೂ ಟೆಲಿವಿಜನ್ ಇನ್ಸ್ಟಿಟ್ಯೂಟ್ ಮತ್ತು ಅರ್ಧ ಕಥಾನಕ ಅಧ್ಯಾಯಗಳಲ್ಲಿ ಗಿರೀಶರು ತಮ್ಮ ನೌಕರಿ, ನಾಟಕ, ಸಿನಿಮಾ ರಂಗ ಮತ್ತು ವೈವಾಹಿಕ ಜೀವನದ  ಕುರಿತು ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ತಾನು ಹುಟ್ಟುತ್ತಲೇ ಇರಲಿಲ್ಲ ಎಂದೂ ಮತ್ತು ಕೊನೆಯಲ್ಲಿ, ಸುದೀರ್ಘ ಕಾಲ ಪ್ರೀತಿಸಿದ ಸರಸ್ವತಿಯನ್ನು ಮದುವೆಯಾಗುತ್ತೀಯಾ ಎಂದು ಕೇಳುವಾಗಿನ ಘಟನೆಗಳು ಸ್ವಾರಸ್ಯಕರವಾಗಿವೆ. ಆತ್ಮಕತೆಗಳನ್ನು ಇಷ್ಟಪಡುವ ಮತ್ತು ಗಿರೀಶ್ ಕಾರ್ನಾಡರ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುವ ಎಲ್ಲರೂ ಖಂಡಿತವಾಗಿ ಓದಲೇಬೇಕಾದ ಪುಸ್ತಕವಿದು. ******* ಡಾ. ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಬರ್ಫದ ಬೆಂಕಿ ನಾಗರೇಖಾ ಗಾಂವಕರ್ ಗೆಳತಿ ನಾಗರೇಖಾ ಗಾಂವಕರ ಅವರ ಪುಸ್ತಕಗಳು ತಲುಪಿ ಬಹಳ ದಿನಗಳಾದರೂ ಓದಿದ್ದು ಈ ವಾರ..ಭರವಸೆಯ ಕವಯಿತ್ರಿ, ಕತೆಗಾರ್ತಿಯಾಗಿ ಗುರುತಿಸಿಕೊಳ್ಳುತ್ತಿರುವ ಉತ್ತರ ಕನ್ನಡದವರು. “ಬರ್ಫದ ಬೆಂಕಿ” ಹೆಸರೇ ಹೇಳುವಂತೆ ಹೊಸ ರೀತಿಯ ಕಾವ್ಯ ಕಟ್ಟುವಿಕೆಯ ಪ್ರಯತ್ನ. ನನಗೆ ಸ್ವಲ್ಪ ಸಂಕೀರ್ಣವೆನಿಸಿದ ಕವಿತೆಗಳನ್ನು ಶ್ರೀ ಸುಬ್ರಾಯ ಚೊಕ್ಕಾಡಿಯವರ ಮುನ್ನುಡಿಯ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಇಲ್ಲಿನ ಕವಿತೆಗಳು ಭಾವ, ಅನುಭವದ ಹಿನ್ನೆಲೆಯಲ್ಲಿ ಸಹಜವಾಗಿ ಹೊಮ್ಮಿದಂಥವು. ಮಾಗುವುದೆಂದರೆ ಅವಳ ಕವಿತೆಗಳು ಕಾಲಾತೀತ ಕವಿತೆಗಳು ಬಾನ್ಸುರಿಯ ನಾದ ಎಂಬ ವಿಭಾಗಗಳಡಿ ಕವಿತೆಗಳು ದಾಖಲಾಗಿವೆ. ಅಕ್ಷರಗಳು ಶೋಕೇಸಿನ ಪದಕವಾಗಲ್ಲ, ಕೆಸರಿನ ನೈದಿಲೆಯೂ, ಬೆಳಕಿನ ಹಾಡೂ ಆಗಬೇಕು ಎಂಬ ಆಳದ ಅರಿವಿದೆ ಇಲ್ಲಿ. ಅಸ್ಮಿತೆಯ ಹಂಗಿಲ್ಲದ, ಕಾಯಕವೇ ಯೋಗವಾದ ಬೆಳಕಿನ ಪುಂಜಗಳಿಗೂ, ಸೂಟು ಬೂಟು ವಿಚಿತ್ರ ಆಕ್ಸೆಂಟುಗಳ ಜಂಭದ ಬೀಜಕ್ಕೂ ನಡುವೆ ಗೋಜಲಿನ ಗೂಡಾದ ಮನ ಶೂನ್ಯಕ್ಕೆ ಶರಣಾಗುವುದಿದೆ, ದೇಸಿ, ದೈನೇಸಿತನಕ್ಕಾಗಿ ಹಂಬಲಿಸುವುದಿದೆ ಇಲ್ಲಿ. ಕಾಯುವುದು, ನೋಯುವುದು, ಕೊರಗುವುದು, ಬೇಯುವುದು, ಮಾಗುವುದು ಹೇಗೆಂದರೆ ಬೆಂಕಿಯನ್ನು ಅಂಗೈಲಿಟ್ಟುಕೊಂಡು ಹೊಳಪಿನ ಚುಕ್ಕಿಯನ್ನು ಹಣೆಯಲ್ಲಿ ಧರಿಸುವುದು!! ಉಕ್ಕುವ ಕಡಲ ಮೋಹಿಸುವ ಇವರ ಹಟಕ್ಕೆ ಬರ್ಫದ ಬೆಂಕಿ ಕುಡಿವ ಹುಚ್ಚಿದೆಯಂತೆ. ಸುರಿದು ಹೋದ ಎಣ್ಣೆಯ ದೀಪ ಹಚ್ಚಲಾಗದೇ ಕತ್ತಲಲ್ಲಿ ಕಳೆದ ಹಸಿಹಸಿ ಬಯಕೆಯ ಬೆಳದಿಂಗಳ ರಾತ್ರಿಯಿದೆಯಂತೆ!! ಅವಳ ದ್ವಂದ್ವ, ತಲ್ಲಣಗಳು, ಅಬ್ಬಾ!! ರಾತ್ರಿಯಲ್ಲಿ ಹಗಲಿನ ಪಾಳಿ ಮಾಡುತ್ತಲೇ ನಡೆಯುತ್ತಿದ್ದಾಳೆ ಅವಳು. ನಾಜೂಕು ಬಳೆಗಳು ಗಾಯಗೊಳಿಸಿ ಬೇಡಿಯಾಗಿಸುವ, ಮೂಗುತಿ ಘಾಸಿಗೊಳಿಸುವ, ನಂಜು ತೆಗೆವ ಅರಿಶಿನವೂ ಕೆರೆತ ತಂದಿಡುವ, ಗೆಜ್ಜೆಯ ಸದ್ದೂ ಸಂತೆಯಾಗುವ, ತಾಳಿಯ ನೀರೂ ತಾಳಿಕೊಳ್ಳದ ನಿರಾಕರಣೆಯಲ್ಲೂ ಅವನನ್ನೇ ಒಳಗೊಳ್ಳುವುದು, ತನು ಬಂಧನವ ಮೀರಿ ಮನಗುದುರೆಗೆ ನಾಗಾಲೋಟ ಕಲಿಸುವ ಅವಳು. ಹೆಣ್ಣಿನ ಕುತ್ತಿಗೆಗೆ ಮಾತ್ರ ತೂಗು ಹಾಕುವ ಗುರುತಿನ ಕಾರ್ಡನ್ನು , ಪರದಾ ಬುರ್ಖಾ, ಕುಂಕುಮವನ್ನು, ತನ್ನ ಹೆಸರಿನೊಡನೆ ಅವನ ಹೆಸರು ಜೋಡಿಸುವುದನ್ನು, ಮಾಧವಿ, ಶಕುಂತಲೆ, ಪಾಂಚಾಲಿಯರನ್ನು ನಿರಾಕರಿಸುತ್ತ “ಹೆಂಡತಿಯಾಗಲಾರೆ” ಎನ್ನುವ ಅವಳು..ಬಿಂಕ ಬಿನ್ನಾಣ, ಒನಪು, ವೈಯಾರದ ಹಂಗು ತೊರೆದ, ಜಡ್ಡುಗಟ್ಟಿದ ಕೈಗಳ, ಮಾಸಿದ ಬಳೆಗಳ ಭೂಮಿ ತೂಕದ ಹೆಣ್ಣು ಅವಳು.. ಇಲ್ಲಿ ಸ್ವಾತಂತ್ರ್ಯವೂ ಬಂಧನವೂ ಕೈ ಜೋಡಿಸಿದೆ. ಬಾಯಿಲ್ಲದವನ ಕೂಗಿಗೆ ಕಂಚಿನ ಕಂಠ ಎರವಲು ಸಿಕ್ಕಿದೆ…ದಲಿತ ಕೇರಿಯಲಿ ದಿಗ್ವಿಜಯ…ರಾಮ ರಹೀಮರ ಮನೆಯ ಬೆಂಡು ಬತ್ತಾಸು, ಸಿರಕುರಮಾ ಮಾತು ಬಿಟ್ಟಿವೆ..ಕಾಲಾತೀತ ಕವಿತೆಗಳು ಹೀಗಿವೆ. “ನನ್ನ ಪೇಲವ ಮುಖದ ಮ್ಲಾನತೆಗೆ ನಿನ್ನ ನಿರಾಕರಣೆ ಕಾರಣ ಎನ್ನಬೇಕೆನಿಸುವುದಿಲ್ಲ. ಮುಂಗುರುಳ ಹೆರಳುಗಳು ನಿನ್ನ ಕೈ ಬೆರಳ ಸಂದಿಯಲ್ಲಿ ಹೊರಳಿ ನರಳಿ ಬೆಳಕಾದವಂತೆ. ನನಗೇನೂ ಈ ಬಂಧಕ್ಕೆ ಹೆಸರಿಡಬೇಕೆಂದು ಅನ್ನಿಸುವುದೇ ಇಲ್ಲ. “ ಎಡತಾಕುವ ಬೆಕ್ಕಿನಂತೆ ಸುತ್ತುತ್ತಿದ್ದವ ಅಪರೂಪದ ಬಿಳಿ ಪಾರಿವಾಳವಾದ. ಆದರೂ ಹಳೆಯ ಉಸಿರ ಬಸಿರ ಕಡತಗಳ ತೆಗೆದೊಮ್ಮೆ ನೋಡಬೇಕೆನಿಸುತ್ತದೆ. ಓದಬಲ್ಲೆನೇ ಹಳೆಯ ದಿಟ್ಟಿಯ ಹಿಡಿದು.. “ಗೋಪಿಕೆಯರ ಕಮಲದಳ ಕಣ್ಣುಗಳ ದಂತ ಕದಳಿ ಮೈ ನುಣುಪು ತೋಳುಗಳ ನಡುವೆಯೂ ಅದೆಂತಹ ಸೆಳೆತ ಶ್ಯಾಮಗೆ ರಾಧೆಯೆಡೆಗೆ. ಅವನ ಕನಸಿನ ತುಂಬಾ ಮುತ್ತಾಗುವುದು ಮಣಿ ಪೋಣಿಸುವುದು ಆಕೆ ಮಾತ್ರ.” ದೇಹ ಮೀರಿದ ಪ್ರೇಮದ ಠೇವಣಿ ಇಟ್ಟಿದ್ದು ಮೊನ್ನೆ ಮೊನ್ನೆಯಷ್ಟೇ ನಗದಾಗಿದೆ ಈಗ ನಾನು ಅವನೂ ಕೂಡಿಯೇ ಮನೆ ಕಟ್ಟುತ್ತಿದ್ದೇವೆ. “ಸೀತೆಯಂತಿರಬೇಕು ನೀನು ಎಂದಾಗಲೆಕ್ಲ ನಾನೆನ್ನುತ್ತಿದ್ದೆ ನೀನು ರಾಮನಾದರೆ.. ಅಷ್ಟೇ ಪಲ್ಲಟಿಸಿಬಿಟ್ಟಿತು ಬದುಕು.. ಕಲ್ಪನೆಯಲ್ಲಿ ತೇಲುತ್ತಲೇ, ವಾಸ್ತವದಲ್ಲಿನ ನಡಿಗೆಯಿದು. ಬರ್ಫದಂತೆ‌ ತಣ್ಣಗಿದ್ದರೂ, ಉರಿವ ಬೆಂಕಿಯದು. ಹೀಗೇ… ಬೆಳಕು, ಕಡಲು, ಬೆಂಕಿ, ರಾತ್ರಿ, ಆಗಸ, ಗಾಳಿ…ಪ್ರಕೃತಿಯೊಡನೆಯ ಪ್ರೀತಿ, ಸಂಕೀರ್ಣತೆ ..ಒಂದೆಡೆ, ಅವಳ ತರ್ಕ, ತಲ್ಲಣಗಳು, ತಾಕತ್ತು, ದೌರ್ಬಲ್ಯ, ಶೋಷಣೆ ಮತ್ತೊಂದೆಡೆ.. ಜಾತಿ, ಧರ್ಮ, ಆಚರಣೆ ಇನ್ನೊಂದು ಕಡೆ…ಪ್ರೀತಿ, ವಿರಹ,ಬಯಕೆ, ವಿಷಾದ ಮಗದೊಂದೆಡೆ… *********** ಅಮೃತಾ ಮೆಹಂದಳೆ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಮಗರಿಬ್ ಗಜಲ್ ಕೃತಿ: ಮಗರಿಬ್ ಗಜಲ್ ಸಂಕಲನ ಲೇಖಕರು: ಸಾವನ್ ಕೆ ಸಿಂಧನೂರು ಪ್ರಕಾಶನ: ಅಮ್ಮಿ ಪ್ರಕಾಶನ* ಗಜಲ್ ಉರ್ದು ಕಾವ್ಯದ ಅತ್ಯಂತ ಜನಪ್ರಿಯ ರೂಪ. ಉರ್ದು ಸಾಹಿತ್ಯದಲ್ಲಿ ಜನಪ್ರಿಯವಾಗಿರುವ ಗಜಲ್ ಗಂಭೀರ ಕಾವ್ಯವೂ ಹೌದುಪ್ರಾಯಶಃ ಹನ್ನೊಂದನೇ ಶತಮಾನದಲ್ಲಿ ಪ್ರಾರಂಭವಾಗಿರಬೇಕು. ಗಜಲ್ ಅನ್ನು ಉರ್ದು ಕಾವ್ಯದ ರಾಣಿ ಎನ್ನುತ್ತಾರೆ. ಗಜಲ್ ಅಂದರೆ ಫಾರಸಿ ಭಾಷೆಯಲ್ಲಿ ಜಿಂಕೆ! ಸ್ವಚ್ಛಂದವಾಗಿ ಕಾಡಿನಲ್ಲಿ ಓಡಾಡುವ ಈ ಜಿಂಕೆ ಸೆರೆಸಿಕ್ಕಾಗ ಹೊರಡಿಸುವ ಅರ್ತನಾದವೇ ಕರುಣಾ ರಸವನ್ನೊಳಗೊಂಡ `ಗಜಲ್~ ಎಂದು ಅರ್ಥೈಸುತ್ತಾರೆ.  ಗಜಲ್ ರಾಣಿಯ ಹುಚ್ಚು ಹಿಡಿಸಿಕೊಂಡು ಅವಳದೇ ಧ್ಯಾನದಲ್ಲಿ ತಲ್ಲಿನರಾದವರ ಸಾಲಿನಲ್ಲಿ ಸಾವನ್ ಕೆ ಸಿಂಧನೂರು ಅವರು ಹೊಸ ಸೇರ್ಪಡೆಯಾಗುತ್ತಿದ್ದಾರೆ. ಸಾವನ್ ಕೆ ಸಿಂಧನೂರು ಅವರು ರಸಾಯನಶಾಸ್ತ್ರದಲ್ಲಿ ಪದವಿ ಪಡೆದು ಪ್ರೌಢಶಾಲೆಯಲ್ಲಿ ಲೆಕ್ಕಾಚಾರದ ಗಣಿತ ಶಿಕ್ಷಕರಾದ ಇವರಿಗೆ ಕನ್ನಡ ಸಾಹಿತ್ಯದ ಸೆಳೆತ ತೀರ್ವವಾಗಿ ಕಾಡಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು, ಪದವಿ ಓದುತ್ತಿರುವಾಗಲೇ ಸಾಹಿತ್ಯದ ಅಭಿರುಚಿ ಹಚ್ಚಿಸಿಕೊಂಡಿದ್ದ ಇವರಿಗೆ ವೃತ್ತಿಯ ಒತ್ತಡ, ಸಾಂಸಾರಿಕ ಜೀವನ ಕಟ್ಟಿಹಾಕಿತ್ತು, ಮತ್ತೆ ಇವರಿಗೆ ಸಾಹಿತ್ಯದ ಜೀವಸೆಲೆ ಪುಟಿದೇಳುವಂತೆ ಮಾಡಿದ್ದು ವಾಟ್ಸಪ್ ಬಳಗವಾದ ಹನಿ ಹನಿ ಇಬ್ಬನಿ ಸಾಹಿತ್ಯ ಬಳಗ. ಗಜಲ್ ರಾಣಿಯ ಹುಚ್ಚು ಇವರಿಗೆ ಅಷ್ಟಿಷ್ಟು ಹಿಡಿಯಲಿಲ್ಲ ತೀರ್ವವಾಗಿ ಹುಚ್ಚು ಹಿಡಿಸಿಕೊಂಡ ಪರಿಣಾಮ ಇವರ ಚೊಚ್ಚಲ ಗಜಲ್ ಸಂಕಲನವಾದ ಮಗರೀಬ್ ಗಜಲ್ ಸಂಕಲನ. ಈ ಗಜಲ್ ಸಂಕಲನದಲ್ಲಿ ಒಟ್ಟು ೫೨ ಗಜಲ್ ಗಳಿವೆ. ಇವರೇ ಹೇಳಿಕೊಂಡಂತೆ ನನ್ನ ಪಾಲಿನ ದ್ರೋಣಾಚಾರ್ಯ ಶ್ರೀ ಅಲ್ಲಾಗಿರಿರಾಜ್ ರವರು ಎಂದು , ಅಲ್ಲಾಗಿರಿರಾಜ್ ಅವರ ಗಜಲ್ ಗಳ ಓದು, ಹಾಗೂ ಹನಿ ಹನಿ ಇಬ್ಬನಿ ಬಳಗದಿಂದ ನನ್ನಲ್ಲೂ ಗಜಲ್ ಬರೆಯುವ ಶಕ್ತಿ ಇದೆ ಎಂದು ಹುರಿದುಂಬಿಸಿದ ಪರಿಣಾಮ ಈ ಗಜಲ್ ಗಳು. ಇವರ ಗಜಲ್ ಸಂಕಲನದಲ್ಲಿ ವಾಸ್ತವದಲ್ಲಿ ನಡೆಯುವ ಘಟನೆಗಳೇ ವಸ್ತುವಿಷಯಗಳಾಗಿವೆ, ಪ್ರೀತಿ ಪ್ರೇಮದ ಕಡೆ ವಾಲಿದರೂ ವಾಸ್ತವದಲ್ಲಿ ನಡೆಯುವ ಘಟನೆಗಳಿಗೂ ಧ್ವನಿಯಾಗಿದ್ದಾರೆ. ಮಹಾತ್ಮಾ ಗಾಂಧಿಯವರು ಇವರನ್ನು ಕಾಡಿ ಗಜಲ್ ಬರೆಸಿದ್ದಾರೆಂದೆ ಹೇಳಬೇಕು, ಗಾಂಧಿಯ ಕೋಲು, ಕನ್ನಡಕ ರೂಪಕಗಳನ್ನಾಗಿ ಬಳಸಿಕೊಂಡಿದ್ದಾರೆ. ಸ್ತ್ರೀ ಸಂವೇದನೆ, ವಿರಹ, ರೈತನ ದಾರುಣ ಸ್ಥಿತಿ, ಹೆಣ್ಣಿನ ಮುಟ್ಟಿನ ಬಗ್ಗೆ, ಜಾತಿ ,ಧರ್ಮ, ಪ್ರೀತಿ, ದ್ವೇಷ ಹೀಗೆ ಪ್ರತಿಯೊಂದು ವಿಷಯ ವಸ್ತುವಿನಿಂದ ಈ ಗಜಲ್ ಸಂಕಲನ ಗಮನ ಸೆಳೆಯುತ್ತದೆ.*”ಕಾದಿರುವನು ಸಾವನ್ ನಿನ್ನ ಪ್ರೇಮ ತುಂಬಿದ ಸುರಪಾನಕ್ಕೆ**ಸುರಿದುಬಿಡು ಅಮರವಾಗಲಿ ಜೀವ ಉಳಿಸಿಬಿಡು ಮರಳಬೇಡ ಚಿನ್ನ”*ಪ್ರೇಮ ಎಲ್ಲರನ್ನೂ ಕಾಡುತ್ತದೆ ಅದರಂತೆ ಸಾವನ್ ಅವರನ್ನು ಕಾಡಿದ ಪರಿಣಾಮ ಈ ಮೇಲಿನ ಶೇರ್ *”ಹಾಡುವ ಹಕ್ಕಿಗೂ ಗಂಟಲು ಕಟ್ಟಿದೆ ಕಣ್ಣೀರಿನಿಂದ ಕಟ್ಟಬೇಕಿದೆ ಜಲಾಶಯ**ಕೇಡುಗಾಲಕ್ಕೂ ಸೋಬಾನೆ ಹಾಡೆಂದರೆ ಮದ್ದು ಬೇಡಿದ್ದೇ ತಪ್ಪಾ”*ಹಾಡುವ ಹಕ್ಕಿಗೂ ನೋವಿದೆ ಎನ್ನುವ ಆಶಯ ವ್ಯಕ್ತಪಡಿಸುವ ಗಜಲ್ ಇದಾಗಿದೆ. ಗಂಟಲು ಕಟ್ಟಿದೆ ಕಣ್ಣೀರಾಗಿ ಹೊರಗೆ ಬಂದರೆ ಜಲಾಶಯವಾಗಬಹದು ಎನ್ನುವಲ್ಲಿ ನೋವು ಎಷ್ಟಿದೆ ಎನ್ನುವುದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ *”ಇದಹದೊಳಗೆ ಪರ ಹುಡುಕುವ ಊರಿನೊಳು ಒಬ್ಬಂಟಿ ಪಯಣಿಗ ನಾನು**ಮಧು ಪಾತ್ರೆಗೆ ತುಟಿ ತಾಕದೆ ನಶೆ ಏರಿದ ವ್ಯಸನಿ ಮಧುಮಗ ನಾನು”*ಒಬ್ಬಂಟಿ ಪಯಣಿಗ ನಾನು ಪ್ರೀತಿ ಪ್ರೇಮವನ್ನೆ ಹಂಚುತ್ತಾ ಸಾಗುವವನು, ಜಾತಿ ಧರ್ಮ ಎನ್ನುತ್ತಾ ತಿರುಗುವವರ ಮಧ್ಯೆ ಪ್ರೀತಿ ಹಂಚುವೆ ಎನ್ನುತ್ತಾರೆ ಈ ಗಜಲ್ ನಲ್ಲಿ.*”ನಿದಿರೆ ಇಲ್ಲದೆ ಹೆಣೆದ ಕನಸುಗಳಿಗೆ ಪ್ರಸವ ಪೂರ್ವ ಗರ್ಭಪಾತ**ಜನ್ನತ್ ಗೂ ನಿನಗೂ ಒಂದೇ ಹೆಸರು ನರಕಕ್ಕೆ ತಳ್ಳುವ ಹುನ್ನಾರವೇ ಗೆಳತಿ”*ಬಡತನವನ್ನು ನೋಡಿ ತೊರೆದು ಹೋದ ಅವಳ ಬಗೆಗೆ ಎದೆಯಾಳದ ನೋವು ಹೊರಚೆಲ್ಲಿದ್ದಾರೆ, ಅದೇಷ್ಟು ಸುಂದರವಾದ ರೂಪಕ ಕೊಟ್ಟಿದ್ದಾರೆ ಈ ಗಜಲ್ ನಲ್ಲಿ, ನಿದಿರೆಯಿಲ್ಲದೆ ಹೆಣೆದ ಕನಸುಗಳನ್ನು ಕೊಂದುಹೋದವಳು ಎಂದು ಅವಲತ್ತುಕೊಳ್ಳುತ್ತಾರೆ. *”ಹಸಿರ ಸಿರಿಯ ಸೊಬಗು ನೋಡವ್ವ ಗೆಳತಿ**ಕರುನಾಡು ಇದು ಸ್ವರ್ಗಕ್ಕೆ ಸಮನವ್ವ ಗೆಳತಿ”*ಕನ್ನಡನಾಡಿನ ವರ್ಣನೆ, ಕನ್ನಡದ ಲಿಪಿ, ಜ್ಞಾನ, ಧ್ಯಾನ, ಕನ್ನಡ ನಾಡಲ್ಲೇ ಹುಟ್ಟಬೇಕು ಎಂಬ ಅಭಿಮಾನ ಮೂಡಿಸುವ ಗಜಲ್ ಇದಾಗಿದೆ. *”ಉಸಿರು ಬಿಡುವಾಗಲು ರಾಮನನ್ನೇ ನೆನೆದು ರಾಮರಾಜ್ಯ ಕಂಡ ಕನಸುಗಾರ**ರಘುಪತಿ ರಾಜನ ಜೊತೆ ಈಶ್ವರ ಅಲ್ಲಾನನ್ನೇ ಸೇರಿಸಿ ತಿರಂಗ ಲೆಹರಾಯಿಸಲು ಗಾಂಧಿಯಲ್ಲದೆ ಇನ್ನಾರು?”*ಗುಂಡಿಗೂ ಗುಂಡಿಗೆ ಒಡ್ಡಲು ಗಾಂಧಿಯಿಂದ ಮಾತ್ರ ಸಾಧ್ಯ ಎನ್ನುವ ಇವರ ಗಜಲ್ ಗಾಂಧಿಯ ಬಗೆಗೆ ಹೆಮ್ಮೆಯ ಭಾವ ಮೂಡುಸುತ್ತದೆ *”ದೇಹವಷ್ಟೆ ಬೇಕಿದ್ದರೆ ಬಿಸಿ ತಾಕಿಸಿ ಕುಲುಮೆ ಲೋಹಕ್ಕೆ ನೀರು ಕುಡಿಸುತ್ತಿದ್ದೆ**ಸುರಪಾನದಂತ ಮೊಹಬ್ಬತಿಗೆ ಈಗಲೂ ಬೊಗಸೆಯಿದೆ ವಿಷಕಾರಿದವಳೇ ನನ್ನ ತಪ್ಪೇನು”*ಮೋಸ ಮಾಡಿದ ಅವಳ ಬಗ್ಗೆ ಮಾರ್ಮಿಕವಾಗಿ ರೂಪಕಗೊಂದಿಗೆ ಮೂಡಿಬಂದ ಗಜಲ್ ಇದು ವಿರಹ ವೇದನೆಯನ್ನು ಅದೇಷ್ಟು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.*”ಬೀಜ ಬಿತ್ತುವ ಹಿಮ್ಮತ್ ಇದೆ ಎಂದು ಸೆಟೆದು ಸಾಗುವ ಯಜಮಾನರೇ**ಹಡೆವ ಬ್ಯಾನಿಯ ಜಹನ್ನುಮ್ಮಿನ ಪಡೆಯಲು ನೋವು ಯಾರು ಸಿದ್ದರಿಹರಿಲ್ಲಿ ಸಖಿ”*ಪುರುಷ ಸಮಾಜದ ಮೇಲೆ ಹೆಣ್ಣಿನ ಆಕ್ರೋಶ ವ್ಯಕ್ತವಾಗುವ ಈ ಗಜಲ್ ನಲ್ಲಿ ಬೀಜ ಬಿತ್ತುವದೇ ಯೋಗ್ಯತೆಯಾ ಎಂದು ಪ್ರಶ್ನಿಸುತ್ತಲೆ ಹಡೆವ ಬ್ಯಾನಿ ನಿಮಗೆ ಗೊತ್ತಿದೆಯಾ ಎಂದು ಪ್ರಶ್ನಿಸುತ್ತಾ ಹೆಣ್ಣಿನ ನೋವಿನ ಚಿತ್ರಣವನ್ನು ಕಟ್ಟಿಕೊಡುತ್ತಾರೆ. *”ಇರುವುದೊಂದು ಗೋಳ ಅದೆಷ್ಟು ಬೇಲಿ ಹಾಕುವಿರಿ ನೀವು**ಬಿತ್ತಿದ್ದೆ ಬೆಳೆಯುವಿರಿ ಬೇವ ರಾಶಿಯ ಜಾಗದಲ್ಲಿ ಜೇನಿಲ್ಲ ಯಾಕೇ?”*ಇರುವುದೊಂದೆ ಭೂಮಿ ಅದೆಷ್ಟು ಬೇಲಿ ಹಾಕುವಿರಿ ಎಂದು ಮನುಜನನ್ನು ಪ್ರಶ್ನಿಸುತ್ತಾರೆ, ಜಾತಿ, ಧರ್ಮದದಿಂದ ಬೇಲಿಯಾಕುವ ಮಂದಿಯನ್ನು ತಣ್ಣಗೆ ಕುಟುಕಿದ್ದಾರೆ.*”ಸತ್ತ ದೇಹದ ಕಫನಿನ ಮೇಲೆ ಅವರು ಎಸೆಯಬಲ್ಲರು ಪರಿಹಾರ ಸಾವನ್**ಅನ್ನ ಬೆಳೆವ ಮಣ್ಣ ಕಲೆಗೆ ಇನ್ನಾರು ಗತಿ ಆಳಿದ ನೋಡು ಭೂಮಿ ಪುತ್ರ”*ರೈತನ ಶವದ ಮೇಲೆ ಪರಿಹಾರದ ಎಂಜಲು ಕಾಸನ್ನು ಮಾತ್ರ ರಾಜಕಾರಣಿಗಳಿಂದ ಕೊಡಲು ಸಾಧ್ಯ, ಉತ್ತಿ ಬಿತ್ತಿ ಬೆಳೆಯಲು ಅವರಿಂದ ಸಾಧ್ಯವಿಲ್ಲ ಅದು ಭೂಮಿಪುತ್ರನೆಂಬ ರೈತನಿಂದ ಮಾತ್ರ ಎಂದು ರೈತನ ಬಗ್ಗೆ ಒಂದೊಳ್ಳೆ ಗಜಲ್ ರಚಿಸಿದ್ದಾರೆ. ಸಲಿಂಗಿಗಳ ಕುರಿತಾಗಿ ಮೂಡಿಬಂದ ಗಜಲ್ ಅವರ ಬಗ್ಗೆ ಕರುಣೆಯ ನೋಟ ಬೀರುವಂತೆ ಮಾಡುತ್ತದೆ. ಅವರು ಮನುಷ್ಯರಲ್ಲವೇ ಎಂದು ಚಿಂತಿಸುವಂತೆ ಮಾಡುತ್ತದೆ.ಮದುವೆಗೆ ಹೆಣ್ಣು ಹುಡುಕುವ ಬ್ರಹ್ಮಚಾರಿ ಹುಡುಗರ ಮನದ ಅಳಲನ್ನು ದೇವರಿಗೆ ಮುಟ್ಟಿಸುತ್ತಿದ್ದಾರೆ. ಒಳ್ಳೆಯ ಸತಿಯನ್ನು ಕರುಣಿಸು ಎಂದು ಹುಡುಗರ ಪರವಾಗಿ ಮೊರೆಯಿಡುತ್ತಿದ್ದಾರೆ. ಮುಟ್ಟಿನ ಬಗ್ಗೆ ಮೂಡಿಬಂದ ಗಜಲ್ ಹಾಗೂ ಭಾರತದ ಬಗೆಗಿನ ಪ್ರೇಮದ ಗಜಲ್ ಗಳು ಗಮನ ಸೆಳೆಯುತ್ತವೆ. ಮಾತೃಭಾಷೆ ಹಿಂದಿ ಇರುವುದರಿಂದ ಉರ್ದು ಪದಗಳನ್ನು ಗಜಲ್ ಗಳಲ್ಲಿ ಬಳಸುವುದರ ಮೂಲಕ ಗಜಲ್ ಪಂಚ್ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀಯುತ ಸಾವನ್ ಕೆ ಸಿಂಧನೂರು ಅವರ ಮೊದಲ ಗಜಲ್ ಸಂಕಲನವಾದ್ದರಿಂದ ಹಾಗೂ ಅಧ್ಯಯನದ ಕೊರತೆ ಇರುವುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಬಹುತೇಕ ಗಜಲ್ ಗಳು ಮುರದ್ದಪ್ಪ ಗಜಲ ಗಳಾಗಿದ್ದು ಕೆಲವು ಗಜಲ್ ಗಳು ಆಜಾದಿ ಗಜಲ್ ಗಳಾಗಿವೆ. ಗಜಲ್ ಲೋಕದಲ್ಲಿ ಭರವಸೆಯ ಗಜಲ್ ಕವಿಯಾಗಿ ಭಾಗಶಃ ಯಶಸ್ವಿಯಾಗಿದ್ದಾರೆಂದೆ ಹೇಳಬಹುದು. ಗಜಲ್ ಬಗೆಗೆ ಅಧ್ಯಯನ ಮಾಡಲಿ ಇನ್ನೂ ಹೆಚ್ಚು ಗಜಲ್ ಸಂಕಲನಗಳನ್ನು ನಾಡಿಗೆ ಕೊಡುಗೆಯಾಗಲಿ ನೀಡಲಿ ಎಂದು ಹಾರೈಸುತ್ತೇನೆ. ********** ಶಿವಕುಮಾರ ಮೋ ಕರನಂದಿ

ಪುಸ್ತಕ ಸಂಗಾತಿ Read Post »

You cannot copy content of this page

Scroll to Top