ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಥಾಗುಚ್ಛ

ಉಡ್ಡಾಣ

ಕಥೆ ಉಡ್ಡಾಣ ಹೇಮಾ ಸದಾನಂದ್  ಅಮೀನ್   ಎಡೆಬಿಡದೆ ಅಳುವ ಆ ಮಗುವಿನ  ತಾಯಿಯ ಬೇಜವಾಬ್ದಾರಿತನವನ್ನು ನೋಡಿ ಯಾರೂ ಸಿಡಿಮಿಡಿಗೊಳ್ಳುವದು ಸಹಜವೇ. ಆದರೆ ಇದು  ಫಸ್ಟ್ ಕ್ಲಾಸ್ ಕಂಪಾರ್ಟ್ಮೆಂಟಿನಲ್ಲಿ  ಆಗಿರುವುದರಿಂದ ಕೇವಲ ಮುಖ ಸಿಂಡರಿಸಿ, “  ತಾನು ಡಿಸ್ಟರ್ಬ್ ಆಗಿದ್ದೇನೆ. ದಯಮಾಡಿ ನಿಮ್ಮ ಸಮಸ್ಯೆಯನ್ನು  ಆದಷ್ಟು ಬೇಗ ಬಗೆಹರಿಸಿಕೊಳ್ಳಿ “ ಎಂದು ವಕ್ರ ದೃಷ್ಟಿಯಿಂದಲೇ ಎಚ್ಚರಿಕೆ ಕೊಡುವ ಮನಸ್ಥಿತಿಯುಳ್ಳವರ ಮಧ್ಯ ಮೂರೂ ತಿಂಗಳ ಗರ್ಭಿಣಿಯಾಗಿದ್ದ  ಸಮೀಕ್ಷಳ ಮನಸ್ಸು  ತೀರ ವಿಚಲಿತಗೊಂಡಿತ್ತು. ಆಕೆ ಆ ತಾಯಿ ಮಗುವನ್ನು ಒಂದೇ ಸವನೆ ನೋಡುತ್ತಾ ಇದ್ದಳು. ಮಗು ಅಳುತ್ತಿದ್ದರೆ ಅದನ್ನು ಪುಸಲಾಯಿಸಿ ಸಮಾಧಾನಪಡಿಸುವುದನ್ನು ಬಿಟ್ಟು ಯಾವುದೋ ಲೋಕದಲ್ಲಿ ಮಗ್ಮಳಾಗಿರುವ ಆಕೆಯ ನಿಸ್ತೇಜ ಕಣ್ಣುಗಳು ಒಂದು ಕಥೆಯನ್ನು ಹೇಳಿದರೆ ಆಕೆಯ ಸ್ಟ್ರೇಟ್ನಿಂಗ್ ಮಾಡಿ ಚದುರಿದ ಹೆರಳು, ಮ್ಯನಿಕೂರ್ ಪೆಡಿಕ್ಯೂರ್ ಮಾಡಿ ಬಣ್ಣ  ಮಾಸುತ್ತಾ ಬಂದಿರುವ ನೀಲ ಬೆರಳುಗಳು , ಕೆನ್ನೆಯ ಸುತ್ತ ಹೊಂಬಣ್ಣದ ರೋಮಗಳಿಂದ ಮಸುಕು ಮಸುಕಾಗಿ   ಹೊಳೆಯುತ್ತಿರುವ ಮುಖ.  ಸೀರೆಯೂ ಅಷ್ಟೇ, ಪ್ರಿಂಟೆಡ್ ರವಕೆಗೆ ತೆಳುವಾದ ಪ್ಲೇನ್ ಹಸಿರು ಬಣ್ಣದಾಗಿದ್ದು ಆಕೆ  ನೋಡಲು ಒಂಥರ ಅಪ್ಸರೆ ಅಲ್ಲವಾದರೂ ತೆಳುವಾಗಿ ಚೆಂದವಾಗಿದ್ದಳು.  ಅಳುತ್ತಿರುವ ಮಗುವನು ಮುದ್ದಾಡಿ ಮುಖ ಒರೆಸುವುದಾಗಲಿ, ನೀರು ಕುಡಿಸುವುದಾಗಲಿ ಏನೂ ಮಾಡದೇ ತನ್ನದೇ ಗುಂಗಿನಲ್ಲಿರುವಾಗ ಸಮೀಕ್ಷಾಳ ಅನುಮಾನದ ಗರಿ ಶಿಥಿಲಗೊಂಡಿತು .  “ ಈ ಮಗು ಅವಳದ್ದೇ ಆಗಿದ್ದರೆ ಆಕೆ ಇಷ್ಟು ಅಳುತ್ತಿರುವ ಮಗುವನ್ನು ನೋಡಿಯೂ ಸುಮ್ಮನಿರಲು ಸಾಧ್ಯವೇ ಇಲ್ಲ .  ಬಹುಶಃ ಯಾರದ್ದೋ ಮಗುವನ್ನು ಕದ್ದು ತಂದಿರಬಹುದೇ?  ಮತ್ತೊಮ್ಮೆ ಛೆ!   ಈಗೀಗ ತಲೆಯಲ್ಲಿ ವಾಟ್ಸ್ ಆಪ್ಗಳಲ್ಲಿ ಓಡಾಡುವ ಸಂದೇಶಗಳೇ ಇಂತಹ ಅನುಮಾನದ ಹುಳುಗಳು”  ಎಂದು ತನ್ನಲ್ಲಿಯೇ ನಕ್ಕು ಅಕ್ಕಪಕ್ಕ ನೋಡಿದಳು . ಎಲ್ಲರೂ ಕಿವಿಗೆ ಇಯರ್ ಫೋನ್ ವಾಯರ್ ಸಿಕ್ಕಿ  ಭ್ರಮಾಲೋಕದಲ್ಲಿ ಸಂಚರಿಸುತ್ತಿದ್ದರು. ಇಂತಹ  ಹೊಳೆಯುತ್ತಿರುವ ನಿರ್ಭಾವುಕ ಮುಖಗಳೊಂದಿಗೆ ಪಯಣಿಸುತ್ತಿರುವ ಸಮೀಕ್ಷಗೆ ಸಂತೋಷ, ಘನತೆಯ ವಿಷಯಕ್ಕಿಂತ  ಬೇಜಾರಾದದ್ದೇ ಜಾಸ್ತಿ.  ಕಳೆದ ಆರು ವಾರಗಳಿಂದ ಸಿ. ಎಸ್. ಟಿ.   ಲೋಕಲಿನ  ಫಸ್ಟ್ ಕ್ಲಾಸ್ ಕಂಪಾರ್ಟ್ಮೆಂಟನಲ್ಲಿ ದಿನಾ ನೋಡುತ್ತಿರುವ ಪರಿಚಿತ ಮುಖಗಳೇ,  ಆದರೂ ಯಾರೂ ಒಬ್ಬರನೊಬ್ಬರು ಒಂದು ಕಿರುನಗೆ ಚೆಲ್ಲಿ ಮಾತಾನಾಡಿಸುವ ಸೌಜನ್ಯ ಬಿಡಿ ಪಕ್ಕದಲಿ ಸೀಟು ಖಾಲಿಯಿದ್ದರೂ , ಸರಿದು ಕೂರಲು ತುಟಿಬಿಚ್ಚದ ಮೂಕ ಜಗತ್ತೆಂದು ಸಮೀಕ್ಷಳ ಸಮೀಕ್ಷೆಯಾಗಿತ್ತು. ಇದೇ  ದ್ವಿತೀಯ  ದರ್ಜೆಯಲ್ಲಾಗಿದ್ದರೆ , ತನ್ನ ಪೂರ್ತಿ ಶಕ್ತಿಯ ಬಂಡವಾಳದಿಂದ ಒಳನುಗ್ಗಿ ಸೀಟಲ್ಲಿ ಕೂತವರು ತಮ್ಮ ಮನೆಯವರೇ ಎನ್ನುವಂತೆ “ ಎಲ್ಲಿ ಇಳಿಯಬೇಕೆಂದು ಕೇಳಿ ತನ್ನ ಆರಾಮಿನ ಸೌಕರ್ಯ ಮಾಡಿಕೊಳ್ಳುವುದಷ್ಟೇ ಅಲ್ಲದೇ ಇತರರಿಗೂ ಖಾಲಿ ಸೀಟುಗಳಿದ್ದರೆ ಕರೆದು ಕೂರಿಸುವ ಮನೋಭಾವ. ಯಾತ್ರಿಗಳೇ ಅಲ್ಲ , ಅಲ್ಲಿ ವ್ಯಾಪಾರ ಮಾಡುತ್ತಿರುವ ಹೆಣ್ಣು ಮಕ್ಕಳು ನಮ್ಮವರೇ ಆಗುತ್ತಾರೆ. ಒಬ್ಬರ ಮಡಿಲಲ್ಲಿಟ್ಟ ಕ್ಲಿಪ್ಪುಗಳ ಬಿಂದಿಗಳ ಟ್ರೇಗಳಿಗೆ ಒಂದೇ ಮನೆಯವರಂತೆ ಹತ್ತಾರು ಮಂದಿ ಮುಗಿಬಿದ್ದು ಚರ್ಚೆ ಮಾಡಿ ಖರೀದಿಸಿದ ಸಣ್ಣ ವಸ್ತುಗಳಲ್ಲಿಯೂ ದೊಡ್ಡ ಖುಷಿ ಪಡುತ್ತಾರೆ. ಇದೆಲ್ಲಾ ರಘುನಂದನನಿಂದಾಗಿಯೇ. “  ಮಗುವಿನ ಸುರಕ್ಷೆಯ ದೃಷ್ಟಿಯಿಂದ’   ಎಂದು ಫಸ್ಟ್ ಕ್ಲಾಸಿನ ಪಾಸ್ ತಂದು ಸಮೀಕ್ಷಳ ಕೈಯಲಿಟ್ಟಾಗ ಒಪ್ಪದೆ ಬೇರೆ ದಾರಿ ಇರಲಿಲ್ಲ. ಈಗ ಈ ಮಗುವಿನ ಅಳಲು ಹೃದಯಕ್ಕೆ ಅಪ್ಪಳಿಸಿ  ಚಿಗುರುತ್ತಿರುವ ಆಕೆಯ ತಾಯ್ತನವೇ ಇದ್ದಿದ್ದೂ ಅನುಮಾನದತ್ತ ಮುಖ ಮಾಡಿ,  ಆ ತಾಯಿ ಮಗುವಿನ ಪೋಟೋ ಕ್ಲಿಕಿಸಿ ರಘುನಂದನನಿಗೆ ಕಳುಹಿಸುವಂತೆ ಮಾಡಿತ್ತು. ಆ ಸಂದೇಶವನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಪರಿಗಣಿಸುವುದಕ್ಕಿಂತ ವಿಷಯವನ್ನು ನಿರ್ಲಕ್ಷಿಸಿ  ಸಮೀಕ್ಷಳ ಭಾವನೆಗಳನ್ನು ನೋಯಿಸಬಾರದೆಂದು,  ಅವಳಿಂದ ಪೂರ್ತಿ ಮಾಹಿತಿ ಪಡೆದು,  ರೇಲ್ವೆ ಪೋಲಿಸರಿಗೆ ದೂರು ಸಲ್ಲಿಸಿ, ಅವರು ವಿಕ್ರೋಲಿ ಸ್ಟೇಷನಿನಲ್ಲಿರೈಲು ಹತ್ತಿ ಮುಂದಿನ ಸ್ಟೇಷನಿನಲ್ಲಿ ಅವಳೊಂದಿಗೆ ಇಳಿಯುತ್ತಾರೆ.”  ಎಂದು ಸಂದೇಶ ಕಳುಹಿಸಿದ, ಪೊಲೀಸರಿಗೆ  ನಿನ್ನ ಹೆಸರು ಹೇಳದೆ ದೂರು ನೀಡಿರುವೆನು ಆದ್ದರಿಂದ  ಇವೆಲ್ಲಾ ಗೊಂದಲಗಳಲ್ಲಿ  ಬೀಳದೇ ನಿನ್ನ ಪಾಡಿಗೆ ನೀನು ಆಫೀಸಿಗೆ ಹೋಗು ಎಂದೂ ಒತ್ತೊತ್ತಿ ಹೇಳಿದ್ದ. ಸರಿ ಎಂದು ಒಪ್ಪಿದ್ದವಳನ್ನು ಆ ಅನುಮಾನಸ್ಥ ತಾಯಿ ಮಗುವಿನ ಹಿಂದೆ ಹೋಗಲು ಕಾದಿದ್ದು ಮನ ಮಾಡಿದ್ದು ಯಾರು ಎಂದಾಗ, ಅವಳ ಸೆಕೆಂಡ್ ಕ್ಲಾಸ್ ಮೆಂಟಾಲಿಟಿಯೋ, ಅವಳ ತಾಯ್ತನವೋ, ಅಲ್ಲ ಅವಳಲ್ಲಿರುವ ಹೆಣ್ತನವೋ ಗೊತ್ತಿಲ್ಲ?   ಆ ತಾಯಿ ಮಾತ್ರ ಎಷ್ಟೂ ಕಾಡಿ ಬೇಡಿದರೂ ಲೇಡಿ ಕ್ವಾನ್ಸ್ಟೇಬಲಿನ ಕರುಣೆ ಕರಗಲಿಲ್ಲ. ಅದು ಅವರ ವೃತ್ತಿಗೂ ಸರಿ ಬರುವುದಿಲ್ಲ ಅನ್ನಿ.      ಘಾಟ್ಕೊಪರ್ ಪ್ಲಾರ್ಟಫಾರ್ಮಿನ ಮಧ್ಯದಲ್ಲಿದ್ದ  ವಿಚಾರಣೆ, ಕೊಠಡಿಗೆ ಆಕೆಯ ಕೈ ಎಳೆದು ತರುತ್ತಿದ್ದಂತೆ ನಿಬಿಡ ಜನರ ಕಣ್ಣಿಗೆ ಕುತೂಹಲದ ತುತ್ತಾಗಿದ್ದಳು. ಮಗುವನ್ನು ಎದೆಗಾತು, “ ನಾನು ಮಗು ಕದ್ದಿಲ್ಲ ಸಾರ್ ” ಎಂದೇ ಗೋಗರೆಯುತ್ತಾ ಪೋಲಿಸ್ ಅಧಿಕಾರಿಯ ಮುಂದೆ ಕೂತವಳ ಬಾಯಿ ಒಣಗಿ ಕಣ್ಣು ತೇವವಾಗಿತ್ತು.  ಸಮೀಕ್ಷ ತಾನಾಗಿಯೇ ಮುಂದು ಬಂದು “ ನಾನೇ  ದೂರು ಕೊಟ್ಟರುವುದು. ಮಗು ಎಷ್ಟೊತ್ತಿನಿಂದ ಅಳುತ್ತಿದ್ದರೂ  ಪ್ರತಿಕ್ರಿಯೆಯೇ ಇಲ್ಲದೆ ತನ್ನಳೊಳಗೆ ಗುಂಗಿನಲ್ಲಿರುವುದು, ಅ ಮಗುವೂ ತಾಯಿಯ ಮಡಿಲಲ್ಲಿ ಅಪರಿಚಿತರ ಕೈಯಲ್ಲಿರುವಂತೆ ಚಡಪಡಿಸುತ್ತಿರುವುದನ್ನು  ನೋಡಿ ಅನುಮಾನ ಬಂತು ಸರ್ ಎಂದಳು. “ಡಾಟ್ಸ್  ಗುಡ್ ಯು ಡನ್ ಆ ಗುಡ್ ಜಾಬ್ “  ಎಂದು ಅವಳನ್ನೂ ಕೂರಿಸಿ  ಮಗುವಿಗೂ ನೀರು ಕುಡಿಸಲು ಹೇಳಿ ಆ ತಾಯಿಗೆ  ಕುಡಿಯಲು ನೀರು ಕೊಟ್ಟು,  ವಿಚಾರಣೆಗೆ  ಇಳಿದರು. ವಿಚಾರಣೆ ಗಡುಸಾದಂತೆ,  ಅವಳೊಳಗಿನ ಮೌನ ಈ ಅನಿರೀಕ್ಷಿತ  ಪ್ರಶ್ನೆಗಳನ್ನು  ಕೇಳಿ ಕೇಳಿ  ರೋಸಿ , “ ಇನ್ನೆಷ್ಟು ಬಾರಿ ಹೇಳಲಿ  ನನ್ನದೇ ಮಗು ಇದು.  ನಾನೇ  ಈ ಮಗುವಿನ ತಾಯಿ  “. ಅಲ್ಲಿಯೇ ಇದ್ದ ಹಿರಿಯ ಅಧಿಕಾರಿ ಪಟವರ್ಧನ್ ಸರ್,ಅವಳ  ಒಳಗುದಿತವನ್ನು ಅರ್ಥೈಸಿಕೊಂಡು,    ಒತ್ತಾಯವಾಗಿ ಕೇಳುವ ಪ್ರಶ್ನೆಗಳನ್ನೇ ಮೃದುವಾಗಿ,  “ ನೋಡಿ ನೀವು ನನ್ನ ಸಹೋದರಿಯಂತೆ, ನಿಮ್ಮ ಹೆಸರೇನು, ಯಾವ ಊರು ,  ಮಗುವಿಷ್ಟು ಅಳಲು ಕಾರಣವೇನು?  ಮಗುವ್ಯಾಕೆ ನಿಮ್ಮನ್ನು  ಅಪರಿಚಿತರಂತೆ ಕಾಣುತಿದೆ?  ಅನಿರೀಕ್ಷಿತ  ಪ್ರಶ್ನೆಗಳನ್ನು  ಭೇದಿಸಿ  ಆಕೆ ಗಂಟಲು  ಸಡಿಲು ಗೊಳಿಸುತ್ತಾ  ಉತ್ತರಕ್ಕೆ ತೆರೆದುಕೊಂಡಳು. …………………………   ಶಾಲೆಯಲ್ಲಿ  ಮಾತ್ರ ಶರೈಯೂ . ಖೇಡಿನಲ್ಲಿ ಎಲ್ಲರಿಗೂ  ಶರು . ನಮ್ಮೂರು ಇಲ್ಲೇ ಹತ್ತಿರ,  ಕರ್ಜತ್ದಿಂದ  ಐದು ಕಿಲೋಮೀಟರ್ ದೂರ. ಸಾಂಜಾ ಖೇಡ್ ಅಂತ. ರುಕುಮಾಯಿ ಮಂದಿರದ ಹಿಂಬದಿ ನಮ್ಮ ಮನೆ.  ಅಪ್ಪ ಸಣ್ಣ ಕಾರಖಾನೆಗೆ ಕೆಲ್ಸಕ್ಕೆ ಹೋಗ್ತಿದ್ರು .  ಅಮ್ಮ ಮನೆಯಲ್ಲೇ.  ನಾನು ಮತ್ತು ನನ್ನ ಜೊತೆಗೆ ಹುಟ್ಟಿದ ಅವಳಿ ತಮ್ಮ ಸಾರ್ಥಕ್.  ಸಾರ್ಥಕನಿಗೆ ಮಿರ್ಗಿ ಹುಟ್ಟು ಕಾಯಿಲೆಯಾಗಿ ಬಂದಿತ್ತು. ಆತನ   ಹದಗೊಂಡಿದ್ದ ಜೀವಕ್ಕೆ ನಮ್ಮ ಮನೆ    ಆಸ್ಪತ್ರೆಯಂತೆ . ಗುಳಿಗೆ, ಟಾನಿಕ್ , ಡ್ರಾಪ್ಸ್  ಕಿಟಕಿಯ ಪಕ್ಕದಲ್ಲಿ  ಮಗುಮ್ಮಾಗಿ  ಕೂತು ತನ್ನ ಉಪಸ್ಥಿತಿಯನ್ನು ವ್ಯಕ್ತಪಡಿಸುತ್ತಿತ್ತು.   ಆ ಎಳೆಯ ಜೀವ  ಈ ನೋವು, ಬೇಸರ , ದ್ವೇಷ, , ನಿರಾಶೆಯ ಒತ್ತಡಗಳನ್ನು  ಎಷ್ಟು ಸಹಿಸಿಕೊಳ್ಳಲು ಸಾಧ್ಯ? ,    ಅಷ್ಟಕ್ಕೂ ಕೆಲವು ಅನಿವಾರ್ಯಗಳು ಅವನ   ಸ್ವಾಸ್ಥ್ಯಕ್ಕಾಗಿಯೇ ಮಾಡಬೇಕಾಗಿತ್ತು.  ಅಪ್ಪ ಡಬಲ್ ಕೂಲಿ ಮಾಡುತ್ತಿದ್ದ. ಅಮ್ಮ ದೇವಸ್ಥಾನದ ಚಾಕರಿಗೆ ಹೋಗುತ್ತಿದ್ದಳು. ಮನೆಯಲ್ಲಿ ಕಿವಿ ಸರಿ ಕೇಳದ ಅಜ್ಜಿ ನಮ್ಮಿಬ್ಬರನ್ನು  ನೋಡಿಕೊಳ್ಳುತ್ತಿದ್ದಳು. ನೋಡಿಕೊಳ್ಳುವುದೇನು ? ಒಮ್ಮೊಮ್ಮೆ  ನಾವು ಆತ್ತು ಆತ್ತು ಕಂಗಾಲಾದರೂ ಅಜ್ಜಿ ಕೇಳದೆ ವಿಠಲಾ …….. ಪಾಂಡುರಂಗ….  ನಾಮಾವಳಿಯಲ್ಲಿ  ಮಗ್ನರಾಗಿದ್ದಾಗ  ಪಕ್ಕದ ಮನೆಯವರು ಬಂದು “  ಏ ಕಿವುಡೆ.. ಕಿವಿಯಂತು ಪೊಳ್ಳಾಗಿದೆ ಕಣ್ಣಿಗೂ ಕಾಣಿಸ್ತಿಲ್ವಾ ? ಎಂದು  ಅಣಕಿಸುತ್ತಿದ್ದರು.  ಕೊನೆಗೂ ಕಣ್ಣೆವೆಯಲ್ಲಿಟ್ಟು ಕಾದ ಮಗುವನ್ನು ಬೆಂಬಿಡದೆ ವಿಧಿ  ಕೊಂಡೊಯ್ಯಿತು.  ಹತ್ತು ವರುಷ ನಮ್ಮೊಂದಿಗಿದ್ದು   ತೀರಿಹೋದವನ ನೆನಪು ಮರೆಯಾಗಲು ಸಾಧ್ಯವೇ?   ಅಮ್ಮನಿಂದ ಈ ಆಘಾತ ಸಹಿಸಲಾರದೆ ಆಕೆಯೂ ದಿನೇ …ದಿನೇ  ಕುಸಿಯಲಾರಂಭಿಸಿದಳು. ಮನೆಯ ಎರಡು ಗೋಡೆಯ ಪಕ್ಕದಲ್ಲಿ  ಎರಡು ಜೀವಂತ ಶವಗಳಂತೆ ಅಜ್ಜಿ ಮತ್ತು  ಅಮ್ಮ . ಯಾರ್ ಮಾಡ್ತಾರೆ ಸಾಹೇಬ್?  , ಅಪ್ಪ ಮಾತ್ರ ಬಿರುಗಾಳಿಗೆ ಎದೆಕೊಟ್ಟು ನಿಂತಂತೆ ಸೆಟೆದು ನಿಂತಿದ್ದ. ಅಮ್ಮನಿಗೂ “ ಹೇ ಶ್ಯಾಮೆ, ಇನ್ನು ನಮ್ಮ ಮಗನನ್ನು   ಇವಳಲ್ಲೇ ಕಾಣಬೇಕೆಂದು  ಹೇಳಿದರೂ,   “ ತನ್ನ ಕಡೆ ಕಾಲದ ಆಸರೆ , ಅಪ್ಪನ ದೇಹಕ್ಕೆ ಕೊಳ್ಳಿ ಇಡುತ್ತಿದ್ದ”  ಎನ್ನುವ  ಖಾಲಿತನದ ಛಾಯೆ  ಅವನ ಚಹರೆಯಲ್ಲೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಬದುಕು ಒಳ್ಳೆಯದನ್ನೂ ಕೆಟ್ಟದನ್ನೂ ಒಂದೇ  ಗಿರಣಿಯಲ್ಲಿ ಪುಡಿ ಮಾಡುತ್ತೆ”  ಎನ್ನುವಂತೆ  ಜೀವನವಂತೂ ಸಾಗುತ್ತಿತ್ತು.   ಅಮ್ಮನ ಕಾಯಿಲೆ ಅಪ್ಪನ ಸಾಲದ ಇಳಿಸುವ ಒತ್ತಡದ ಮಧ್ಯೆ ನಾನು  ಹತ್ತನೇವರೆಗೆ ಮಾತ್ರ ಕಲಿತೆ.  ಮನೆಯೊಳಗಿನ ಎಲ್ಲಾ ಕೆಲಸ ಮಾಡಿ ಮುಂದೆ ಕಲಿಯುವುದು ಕಷ್ಟಕರವಾಗಿತ್ತು. ಹಾಗೆ ಹೆಚ್ಚು ಕಲಿಯುವ ಆಸೆಯಾಗಲಿ,  ದೊಡ್ಡ ದೊಡ್ಡ ಕನಸುಗಳನ್ನು ಹೃದಯದಲ್ಲಿಟ್ಟು ಅರಳಿಸುವ ಆಕಾಂಕ್ಷೆಯಾಗಲಿ ನನ್ನಲ್ಲಿ ಅಂದೂ ಇರಲಿಲ್ಲ.  ಇಂದೂ ಇಲ್ಲ. ಎನ್ನುವಾಗ ಅವಳ ನಿಸ್ತೇಜ ಕಣ್ಣುಗಳ ಭಾವ ಸಾಕ್ಷಿಯಾಗಿದ್ದವು.  ಅಜ್ಜಿ ಸಾಯುವ ಮೊದಲು ನಿನ್ನ ತಲೆಗೆ ಅಕ್ಷತೆಯ ಎರಡು ಕಾಳು ಹಾಕ್ಬೇಕೆಂಬ ಒತ್ತಾಯಕ್ಕೆ ಮಣಿದು ನಾನು ಮದುವೆಗೆ ಒಪ್ಪಿದೆ. ಕಿಶೋರ್ ಸಿಂಪಲ್ ಆಗಿಯೇ ನನ್ನನ್ನು ನೋಡಲು ಬಂದಿದ್ದ. ಆ ಕ್ಷಣದಲ್ಲಿ  ಅವಳ  ಕೆನ್ನೆಗಳು  ಅರಳಿ ಕಣ್ಣಲಿ  ಸಣ್ಣ ಬೆಳಕು ಮಿನುಗಿದಂತೆ, “ ಕಿಶೋರನಿಗೆ ಮಾತ್ರ ಹಾಗಲ್ಲ.  ಅವನ ಕಣ್ಣಲ್ಲಿ ಕನಸುಗಳು ನಕ್ಷತ್ರ ರಾಶಿಗಳಂತೆ    ಮಿನುಗುತ್ತಲೇ ಇತ್ತು.  ಅದ್ಯಾವ ಸುಖಕ್ಕಾಗಿ ನನ್ನನ್ನು  ಮದುವೆಯಾದನೋ ಗೊತ್ತಿಲ್ಲ.   ಮದುವೆ ತೀರ ಸರಳವಾಗಿ ಮಾಡಿ ಮುಗಿಸಿದ್ದಕ್ಕೂ ಅವನ ಸಹಮತವಿತ್ತು. ಮುಂಬಯಿಯಲ್ಲಿ  ಸ್ವಂತ ಮನೆಯಂತ ಇರಲಿಲ್ಲ.  ಸ್ವಂತ ಮನೆಯೇ ಆಗಬೇಕೆಂಬ ಬಯಕೆಯೂ ನನ್ನಲ್ಲಿ ಇರಲಿಲ್ಲ.  ಕುರ್ಲಾದ ಬೈಠಕ್ ಚಾಳಿಯಲ್ಲಿಯ ಮಾಳಿಗೆಯಲ್ಲಿ ಬಾಡಿಗೆದಾರನಾಗಿರುತ್ತಿದ್ದ.   ನಮ್ಮ ಮೊದಲ ರಾತ್ರಿಯೂ ಅದೇ  ಹತ್ತು ಬೈ ಹತ್ತರ ಆ ಸಣ್ಣ ಕೋಣೆಯಲ್ಲಿಯೇ ನಡೆದಿತ್ತು. ಔಷಧಿಗಳ  ಕಮಟು ವಾಸನೆಯಿಂದ ಹೊರಬಂದ ಈ ಸಣ್ಣ ಕೋಣೆಯೂ ಅಂದು ಸ್ವರ್ಗದಂತೆ ಕಂಡಿತ್ತು. ಟ್ರೇನುಗಳ ಅವಜಾಹಿಗಳ ಸಂತೆಯ ಮದ್ಯೆಯೂ ಶರೂನ ಕಥೆ ಕೇಳುವುದರಲ್ಲಿ ಎಲ್ಲರೂ ತಲ್ಲೀನರಾಗಿದ್ದ್ರರು.  ಗಡಿಯಾರದ ಮುಳ್ಳು ಮೌನವಾಗಿದ್ದರೂ , ಸಿಲಿಂಗ್ ಪ್ಯಾನಿನ  ಟರ್ ಟರ್ ಟರ್ ಸದ್ದಿನ  ಏಕತಾನತೆ ಹುಂ… ಗುಡುವಂತ್ತಿತ್ತು.  ಮಧ್ಯ ಒಂದೊಂದು ಕ್ಷಣದ ಅಂತರದಲ್ಲಿ ಸಮೀಕ್ಷಾ ಮೊಬೈಲ್ ಗುಂಡಿ ಒತ್ತಿ ಸಮಯ ನೋಡಿದಳು. ಆಗಲೇ ರಘುನಂದನನ ಜೊತೆಗೆ ಆಫೀಸಿನ ಕರೆಗಳು   ಮೆಸೇಜ್ಗಳು ಬಂದು ತೆಪ್ಪಗೆ ಬಿದ್ದಿದ್ದವು. ಅದನ್ನು  ಹಾಗೆಯೇ  ಸ್ಕ್ರೀನ್ ಆಫ್ ಮಾಡಿ, ಬ್ಯಾಗಿನೊಳಗಿಟ್ಟಳು.  ಕೈಗೆ ತಾಗಿದ ನೀರಿನ ಬಾಟಲಿಯಿಂದ ಒಂದು ಗುಟುಕು ನೀರು ಗಂಟಲೊಳಗೆ ಇಳಿಸಿ, ಶರೂಗೆ ನೀರು ಬೇಕಾ ಎಂದು ಸನ್ನೆ ಮಾಡಿದಳು. ತನ್ನ ನೆನಪಿನ ಲೋಕದಿಂದ ಹೊರಬರಲು ಮನಸ್ಸಿಲ್ಲದ ಆಕೆ  ಬೇಡವೆಂದು ತಲೆಯಾಡಿಸಿ ಮುಂದುವರಿದಳು. ಪಕ್ಕದ್ದಲ್ಲಿದ್ದ ಲೇಡಿ  ಕಾಂಸ್ಟೇಬಲ್ , “ನಿನ್ನ ಗಂಡ ಏನ್ ಮಾಡುತ್ತಿದ್ದ”  ಎಂದು ಗದರಿಸುತ್ತಾ  ಮಧ್ಯ ಬಾಯಿ ಹಾಕಿದಾಗಲೂ  .  ಪಟವರ್ಧನ್ ಸರ್, ” ಸ್ವಲ್ಪ ತಾಳ್ಮೆ ಇರಲಿ, ಆಕೆ ಹೇಳ್ತಿದ್ದಾಳಲ್ಲ ” ಎಂದು ಖಡಕ್ ಆಗಿಯೇ ಹೇಳಿದರು.  “ಇದು ಬೇಕಿತ್ತಾ ?’  ಎನ್ನುವಂತೆ   ಬೆಕ್ಕಿನಂತೆ ಮುಖ ಸಪ್ಪಗೆ ಮಾಡಿ ಕುಳಿತಳು. ಶರೂ,  “ಸಾಹೇಬ್, ನನ್ನ ಕಿಶೋರ್ “ಅಶ್ವಬಲ”  ಕೇಬಲಲ್ಲಿ ಕೆಲಸ ಮಾಡುತ್ತಿದ್ದ.  ಟಿ.ವಿ. ಕೇಬಲ್ ಜೋಡಿಸುವುದು  , ಹಣ ವಸೂಲಿ, ಮತ್ತೆ ಗಿರಾಕಿಗಳ ಏನಾದರೂ

ಉಡ್ಡಾಣ Read Post »

ಕಥಾಗುಚ್ಛ

ಒಂದು ತಪ್ಪು ಗಂಟು

ಒಂದು ತಪ್ಪು ಗಂಟು ಎಸ್.ನಾಗಶ್ರೀ ಅದು ಕಾರ್ತೀಕ ಮಾಸದ ಪ್ರಾರಂಭದ ದಿನಗಳು. ಸಂಜೆ ಬೇಗ ಕಳೆದು ರಾತ್ರಿಯ ಚಾದರ ಹೊದ್ದು ಸುತ್ತಲೂ ಕತ್ತಲು. ಪ್ರತಿಮನೆಯ ಮುಂದೂ ಬೆಳಗುವ ಹಣತೆಗಳು. ಪ್ರಕಾಶ್ ರೆಡ್ಡಿ ಅಂದೂ ಸಂಜೆ ಏಳರ ಸಿಗರೇಟ್ ಹಚ್ಚಿ ಮನೆಯ ಮುಂದೆ ಕುರ್ಚಿ ಹಾಕಿ ಕುಳಿತಿದ್ದ. ಚಳಿ ಏಕೋ ಮೂಳೆಗಿಳಿಯುವಷ್ಟು ಏರಿದೆ ಎನಿಸಿ ಬಿಸಿ ಕಾಫಿಗೆ ಸೈಲೂ ಎಂದು ಕೂಗಿ, ಅರೆಘಳಿಗೆ ಹಿಂದಕ್ಕೆ ಒರಗಿದ. ಬೇಡಬೇಡವೆಂದರೂ ಪ್ರತಿ ಕಾರ್ತೀಕದಲ್ಲಿ ನೆನಪಾಗಿ ಹೃದಯ ಭಾರವಾಗುವ ಆ ಘಟನೆಯ ಕಿಡಿ ಇವತ್ತೂ ಫಳಾರನೆ ಸೋಕಿತ್ತು. ವಾವೆಯಲ್ಲಿ ಚಿಕ್ಕಮ್ಮನ ಮಗಳು ಪಾರ್ವತಿ ತಂಗಿಯಾಗಬೇಕು. ಇಡೀ ನಮ್ಮ ಮನೆತನಕ್ಕೆ ತಿಳಿಗೋಧಿ ಬಣ್ಣಕ್ಕಿದ್ದದ್ದು ಅವಳೊಬ್ಬಳೇ. ಬಟ್ಟಲುಗಣ್ಣು, ಅರ್ಧಚಂದ್ರಾಕಾರದ ಹಣೆ, ಕಡುಗಪ್ಪು ಅಲೆಅಲೆ ಕೂದಲು. ಅವಳು ಸೀರೆಯುಟ್ಟು ನಿಂತರೆ ದೇವಿ ಕಳೆ. ಗಂಡಿನ ಕಡೆಯವರೇ ಮನೆಗೆ ಬಂದು ಕೇಳಿ, ಮದುವೆ ಮಾಡಿಕೊಂಡು ಹೋಗ್ತಾರೆ ನೋಡಿ ಅಂತ ಆಡಿಕೊಳ್ಳೋರು ಸುತ್ತಮುತ್ತಲ ಜನ. ಚಿಕ್ಕಪ್ಪ ಚಿಕ್ಕಮ್ಮನೂ ಇದ್ದೊಬ್ಬ ಮಗಳಿಗೆ ಸಾಕಷ್ಟು ನಗ ಕೂಡಿಸಿಯೇ ಇದ್ದರು. ಎಲ್ಲರಿಗೂ ಬೇಕಾದವರಾಗಿ ಎಲ್ಲರ ಕಷ್ಟಕ್ಕೂ ಆಗುತ್ತಿದ್ದ ಅವರ ಒಳ್ಳೆಯತನಕ್ಕೆ ಮೆಚ್ಚಿಯೇ ಸಾಕ್ಷಾತ್ ಪಾರ್ವತಿ ಹುಟ್ಟಿಬಂದಿರಬಹುದು ಎಂದಿದ್ದರು ಊರ ಅರ್ಚಕರು. ಅವಳಿಗಿಂತ ಮೂರು ವರ್ಷ ದೊಡ್ಡವನಾದ ನನಗೂ ಹೆಚ್ಚು ತರ್ಕಕ್ಕೆ ಸಿಲುಕದೆ ಅದನ್ನು ನಂಬುವುದೇ ಹಿತವಾಗಿತ್ತು. ಬಾಲ್ಯದ ಪ್ರತಿ ಬೇಸಿಗೆರಜೆಯಲ್ಲೂ ತಮ್ಮ ಸುಧೀರನನ್ನು ಕರೆದುಕೊಂಡು ಅವರ ಊರಿಗೆ ಹೋಗುವುದು ಪ್ರಿಯವಾದ ಸಂಗತಿಯಾಗಿತ್ತು. ಮೊದಮೊದಲು ಅಪ್ಪನೇ ಕರೆದುಕೊಂಡು ಹೋಗಿ ಬಿಡುತ್ತಿದ್ದುದು ಆಮೇಲೆ ಬಸ್ಸು ಹತ್ತಿಸಿ ಕಳಿಸುವ ಸಲೀಸಿಗೆ ಸಿಕ್ಕಿತ್ತು. ದಾರಿಯುದ್ದಕ್ಕೂ ಸಿನಿಮಾಗೀತೆಗಳ ಗುನುಗುತ್ತಾ ಅಮ್ಮ ಕಟ್ಟಿಕೊಟ್ಟ ಚಕ್ಕುಲಿ, ಬಿಸ್ಕತ್ ಬಾಯಾಡಿಸುತ್ತಾ ಊರು ತಲುಪುವ ಮಜಾ. ಅಲ್ಲಿಂದಾಚೆಗೆ ಚಿಕ್ಕಮ್ಮನ ಮುದ್ದು. ಚಿಕ್ಕಪ್ಪನೊಂದಿಗೆ ಕೆರೆಯಲ್ಲಿ ಈಜು ಹೊಡೆಯುವ ಆಟ. ಪಾರ್ವತಿಯನ್ನೂ ಜೊತೆ ಮಾಡಿಕೊಂಡು ಊರಹಬ್ಬ, ಸಂತೆಗೆ ಸುತ್ತುವುದು… ಸಂತೋಷದಲ್ಲಿ ದಿನಗಳೆಯುವುದು ಕಷ್ಟವಲ್ಲ. ದುಃಖದಲ್ಲಿ ನಿಮಿಷ ನಿಮಿಷವೂ ದೂರ..ಭಾರ. ಸೈಲೂ ಕೈಯಲ್ಲಿ ಕಾಫಿ ಹಿಡಿದೇ ಬಂದಿದ್ದಳು. ಇವಳಾದರೂ  ಕಷ್ಟಕಾಲದಲ್ಲಿ ಇರದಿದ್ದರೆ ಎಂದೋ ಕುಡಿತಕ್ಕೆ ಬಲಿಯಾಗಿ ಸಾಯುತ್ತಿದ್ದೆ. ಮಕ್ಕಳು ಮರಿ ಸಂಸಾರ ಅನ್ನೋದು ಹೆಣ್ಣೊಬ್ಬಳಿಂದಲೇ ಗಟ್ಟಿಯಾಗುವುದು ಎಂಥಾ ಸೋಜಿಗ. ” ಇವತ್ತು ರಾತ್ರಿಗೆ ಏನು ಮಾಡಲಿ? ಸೋಮವಾರ ಬೇರೆ… ಏನು “ ” ಎಂತಾದ್ರೂ ಮಾಡು.. ಅವರೆಕಾಯಿ ಬಿಟ್ಟು”  ” ಬೇಕಂದ್ರೂ ಆಗಲ್ಲ. ನಿನ್ನೆಗೇ ಅವರೆ ಮುಗಿದಾಯ್ತು. ಟೊಮೇಟೋ ಬಾತ್ ಮಾಡ್ತೀನಿ . ಅನಿಗೂ ಇಷ್ಟ” ಆಯ್ತು ಎನ್ನಲೂ ಬಾಯಿ ಬರದೆ ಮತ್ತೊಂದು ಸಿಗರೇಟು ಹಚ್ಚಿ ಆಕಾಶಕ್ಕೆ ಮುಖಮಾಡಿ ಕೂತ. ಅವರೆಕಾಯಿ ಅಂದ್ರೆ ಪಾರ್ವತಿಗೆ ಎಷ್ಟು ಆಸೆ. ಅವಳು ಮದುವೆಯಾಗಿ ಹೋದಕಡೆ ಅವರೆ ಸಿಗುವುದೇ ಕಷ್ಟ ಅಂತ ಅಮ್ಮನೇ ಕೆಜಿಗಟ್ಟಲೆ ತಂದು ಬಿಡಿಸಿ ಗಂಟುಕಟ್ಟಿ ತೆಗೆದುಕೊಂಡು ಹೋಗಿ ಕೊಡುತ್ತಿದ್ದಳು.ಅಮ್ಮನ ಕೈ ಧಾರಾಳ. ಚಿಕ್ಕಮ್ಮನದು ಕಮ್ಮಿಯಲ್ಲ. ಪಾರ್ವತಿಯ ಕೈ ಎಂತದ್ದು ತಿಳಿಯಲು ಒಮ್ಮೆಯೂ ಅವರ ಮನೆಗೆ ಹೋಗುವ ಭಾಗ್ಯವೇ ಬರೆಯಲಿಲ್ಲ ದೇವರು. ಅಷ್ಟಕ್ಕೂ ಪ್ರಕಾಶ್ ರೆಡ್ಡಿಗೆ ಆ ಘಟನೆ ವಿವರವಾಗಿ ಕಾಡಲು ಕಾರಣ ಇಂದು ಮಧ್ಯಾಹ್ನ ಅವನ ಮೊಬೈಲ್ಗೆ ಬಂದ ಮೆಸೇಜ್. ” ನಮಸ್ತೇ ಮಾವ. ನಾನು ವೈಶಾಲಿ. ಇಲ್ಲಿ ಎಲ್ಲರೂ ಕ್ಷೇಮ. ಅಲ್ಲಿ ಎಲ್ಲರೂ ಕ್ಷೇಮವೆಂದು ಭಾವಿಸುವೆ. ನನ್ನ ತಂಗಿ ಸುರಭಿಗೆ ಮದುವೆ ಗೊತ್ತಾಗಿದೆ. ಅಂಗೀರಸ ಗೋತ್ರದವರು.ಹುಡುಗ ಇಂಜಿನಿಯರ್.ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾನೆ. ತುಂಬಾ ಒಳ್ಳೆಯ ಜನ. ಬಹುಶಃ ಮುಂದಿನ ಏಪ್ರಿಲ್ ನಲ್ಲಿ ಮದುವೆ. ಹುಡುಗನ ಫೋಟೋ ಕಳಿಸಿರುವೆ ನೋಡಿ. ಹೆಚ್ಚಿನ ವಿವರಗಳನ್ನು ನಂತರ ಮೆಸೇಜ್ ಮಾಡುವೆ. ನಿಮ್ಮ ಸಪ್ರೇಮ ಆಶೀರ್ವಾದವನ್ನು ಕೋರುವ, ವೈಶಾಲಿ. ಮನೆಗೆ ಹೋಗುವ ಮುನ್ನ ಮೆಸೇಜ್ ಡಿಲಿಟ್ ಮಾಡಿ. ಅತ್ತೆಗೆ ತಿಳಿದು ನಿಮಗೆ ಕಷ್ಟವಾಗುವುದು ಬೇಡ.” ಆ ಮೆಸೇಜ್ ಅನ್ನು ಓದಿದಾಗಿಲಿಂದಲೂ ಪ್ರಕಾಶ್ ರೆಡ್ಡಿಗೆ ತಾನು ಹೋಗಲಾಗದ ತಂಗಿಯ ಮನೆ, ಅವಳ ಮಕ್ಕಳ ನೆನಪಾಗಿ ಕಡೇಪಕ್ಷ ಈ ಮದುವೆಗಾದರೂ ಹೋಗಿಬಿಡಲೇ ಎನ್ನಿಸಿತ್ತು. ಪಾರ್ವತಿಯ ಗಂಡ ನರಸಾರೆಡ್ಡಿ ಅಣ್ಣ-ತಂಗಿಯ ಸಂಬಂಧಕ್ಕೇ ಅಪಾರ್ಥ ಹಚ್ಚಿ ಹಂಗಿಸುವುದು, ತವರಿಗೂ ಕಳುಹಿಸದೆ ಹಿಂಸಿಸುವುದು, ತನಗಿಂತ ಸಾವಿರಪಟ್ಟು ಅಂದವಾಗಿರುವುದು ಹೆಂಡತಿಯ ತಪ್ಪು ಎಂದೇ ಭಾವಿಸಿ ವಿಕೃತಿ ಮೆರೆಯುವುದನ್ನು ಚಿಕ್ಕಮ್ಮನೇ ಕಣ್ಣೀರು ಸುರಿಸುತ್ತಾ ಗೊಗ್ಗರು ಗಂಟಲಿನಲ್ಲಿ ಹೇಳಿ ರೋದಿಸಿದ್ದಳು. ವರ್ಷಕ್ಕೋ ಎರಡು ವರ್ಷಕ್ಕೋ ಒಮ್ಮೆ ಅಳಿಯನ ಪರವಾನಗಿ ತೆಗೆದುಕೊಂಡು ಒಂದೆರಡು ದಿನದ ಮಟ್ಟಿಗೆ ಹೋಗಿ ನೋಡಿ ಬರುತ್ತಿದ್ದ ಚಿಕ್ಕಮ್ಮ ಚಿಕ್ಕಪ್ಪ ನಮ್ಮ ಸಂಬಂಧವನ್ನು ಕಳೆದುಕೊಳ್ಳಲಿಲ್ಲ. ಆದರೂ ಮಾತಿಗೆ ಕೂತರೆ ಪಾರ್ವತಿಯ ವಿಷಯವೇ ಮುಂದಾಗಿ ಎಲ್ಲರೂ ನೋವಿನಲ್ಲಿ ವಿಲಗುಟ್ಟುವುದು ಏಕೆಂದು ಮಾತು ಕಡಿಮೆಯಾಯ್ತು. ಉಣ್ಣಲು ಉಡಲು ಯಾವ ತಾಪತ್ರಯವೂ ಇರದ ಅವರು ಮೌನವಾಗಿ ಕೂತು ಉಂಡೆದ್ದು ಬರಲು ಯಾಕಷ್ಟು ದೂರ ಹೋಗಬೇಕೆನ್ನುವ ಉತ್ತರ ಹೊಳೆಸಿಕೊಂಡು ನೆಪಮಾತ್ರದ ನೆಂಟರಾಗಿಬಿಟ್ಟರು. ಅಮ್ಮ ಮಾತ್ರ ತಾನು ಬದುಕಿರುವಷ್ಟು ದಿನ ಯಾರಿಗೂ ಹೆದರಿ ಮಗಳ ಸಂಬಂಧ ಕಡಿದುಕೊಳ್ಳಲಾರೆನೆಂದು ಅವರೆಕಾಯಿ ಕಾಲದಲ್ಲಿ ಕೆಜಿಗಟ್ಟಲೆ ಅವರೆ ಬಿಡಿಸಿ ಗಂಟುಕಟ್ಟಿಕೊಂಡು ಪಾರ್ವತಿಯ ಮನೆಗೆ ಹೋಗಿ ಕೊಟ್ಟು ಒಪ್ಪೊತ್ತು ಊಟ ಮುಗಿಸಿಯೇ ಬರುತ್ತಿದ್ದಳು. ಆ ದಾಷ್ಟಿಕ, ಮಗಳ ಮನೆ ನನಗೂ ಹಕ್ಕಿದೆ ಎನ್ನುವ ಧೈರ್ಯ ಚಿಕ್ಕಮ್ಮನಿಗೆ ಒಲಿಯಲೇ ಇಲ್ಲ. ಸೈಲೂ ಊಟಕ್ಕೆ ತಟ್ಟೆಯಿಟ್ಟು ರೆಡ್ಡಿಯನ್ನು ಕರೆಯಲು ಬಂದವಳೇ ಬೀದಿಕಂಬದ ಬೆಳಕಿನಲ್ಲೂ ಗುರುತಿಸಬಹುದಾಗಿದ್ದ ಅವನ ಒದ್ದೆ ಕೆನ್ನೆಯನ್ನು ಕಂಡು ಅಚ್ಚರಿಪಟ್ಟಳು. ” ಇದೇನಿದು…ಮುಖವೆಲ್ಲಾ ಒದ್ದೆ. ಕಣ್ಣು ಕೆಂಪುಗಟ್ಟಿದೆ.ಆರಾಮಿಲ್ವಾ?” ಎನ್ನುತ್ತಾ ಸೆರಗಿನ ಅಂಚು ತೆಗೆದು ಮುಖವೊರೆಸಿ ಅವನ ಜೊಂಪೆಕೂದಲ ಮೇಲೆ ಕೈಯಾಡಿಸಿದಳು. ಅವನು ಅವಳನ್ನು ನೋಡಲು ಬಂದಾಗಲೇ ಒಂದು ಸಣ್ಣ ರಿಕ್ವೆಸ್ಟು ಎನ್ನುತ್ತಾ, ” ಮನೆಯಿಂದಾಚೆಗೆ ಚೂಡಿದಾರ್, ಇನ್ನೊಂದು ಮತ್ತೊಂದು ಹಾಕಿದ್ರೂ ಪರವಾಗಿಲ್ಲ.ಆದರೆ ಮನೆಯಲ್ಲಿ ಸೀರೆ ಉಟ್ಟರೆ ನನಗೆ ಬಹಳ ಖುಷಿ ” ಅಂದಿದ್ದ. ಸರ್ಕಾರಿ ಕೆಲಸ. ಆರಡಿ ಆಳು. ಒಳ್ಳೆ ಮನೆತನ.‌ಭೂಮಿಯೂ ಇದ್ದವರು. ಮನೇಲಿ ಸೀರೆ ಉಡಬೇಕು ಅಂದ ಮಾತ್ರಕ್ಕೆ ಬೇಡ ಅನ್ನಲಾದೀತೆ? ಹು ಅನ್ನು ಅಂತ ಸೈಲೂ ಅಮ್ಮನ ಒತ್ತಾಯ. ಸೈಲೂ ಹೂ ಅಂದ ತಿಂಗಳಿಗೇ ಮದುವೆ. ಮೂರು ವರ್ಷದೊಳಗೆ ಇಬ್ಬರು ಮಕ್ಕಳು. ಕಷ್ಟ ಅಂತನಿಸದ ಸಹಜ ಸಂಸಾರ. “ಸೈಲೂ ಒಂದು ಚೇರ್ ತಂದು ಇಲ್ಲೇ ಕೂರು. ಒಂದು ಚಿಕ್ಕ ತೊಂದರೆ…ನೀನಾದ್ರೆ ಏನಾದ್ರು ಪರಿಹಾರ ಹೇಳಬಹುದು” ಅಂದ. ಅವಳು ಮಕ್ಕಳಿಗೆ ಬಡಿಸಿಕೊಟ್ಟು, ತಿನ್ತಾ ಇರಿ. ಹತ್ತು ನಿಮಿಷ ಬಂದೆ ಅಂತ ಬಾಗಿಲು ಮುಂದೆ ಸರಿಸಿ ಬಂದಳು. ರಾತ್ರಿ ಹೊತ್ತು ಎಲ್ಲರೂ ಬಾಗಿಲು ಜಡಿದು, ಮನೆಯೊಳಗೆ ಟಿವಿ ನೋಡುತ್ತಾ ಊಟ ಮಾಡುವ ಸಮಯ. ನಾವಿಲ್ಲಿ ಮಾತಾಡಿಕೊಂಡರೂ ಕೇಳಿಸಿಕೊಂಡರೆ ಎನ್ನುವ ಅನುಮಾನಕ್ಕೆ ಆಸ್ಪದವೇ ಇಲ್ಲ. ಈಗೀಗ ಜನಕ್ಕೆ ಯಾರ ಮಾತಿನ ಮೇಲೂ ಅಂತಹ ಕುತೂಹಲ, ಆಸಕ್ತಿ ಉಳಿದಿಲ್ಲ. ಎಲ್ಲರೂ ಎಲ್ಲವನ್ನೂ ಟಾಂ ಟಾಂ ಮಾಡುವುದರಲ್ಲೇ ಇದ್ದಾರೆ ಹೊರತು, ಪಿಸುಮಾತಿಗೆ ಕಿವಿಗೊಡಲು ಯಾರಿಗೂ ಪುರುಸೊತ್ತಿಲ್ಲ ಎನಿಸಿತು ಅವಳಿಗೆ. ” ಈಗ… ನಮ್ಮ ಪಾರ್ವತಿ ತರಹಾನೇ ಒಬ್ಬಳು ಹೆಣ್ಣುಮಗಳನ್ಕೋ. ಅವಳ ಮಗಳಿಗೆ ಮದುವೆ ನಿಶ್ಚಯವಾಗಿದೆ. ಅಣ್ಣನಿಗೆ ವಿಷಯ ತಿಳಿಸಲು ಕೂಡ ಯಾವುದೋ ಸಮಸ್ಯೆ ಅಡ್ಡವಾಗಿ, ಮಗಳ ಕೈಲಿ ವಾಟ್ಸಪ್ ಮೆಸೇಜ್ ಮಾಡ್ಸಿದ್ದಾಳೆ. ಅತ್ತಿಗೆಗೆ ವಿಷಯ ತಿಳಿದ್ರೆ ಏನೋ ಎಡವಟ್ಟು ಕಾದಿದೆ ಬೇರೆ. ಈಗ ಅಣ್ಣನಾದೋನು ಏನು ಮಾಡ್ತಾನೆ? “ ” ನಿಮ್ಮಂತೋನಾದ್ರೆ ಕೈಲಾದ ಸಹಾಯ ಮಾಡ್ತಾನೆ. ಗುಟ್ಟಾಗಿ ಮದುವೆಗೆ ಹೋಗಿ ಬರ್ತಾನೆ. ಇಲ್ಲಾಂದ್ರೆ ತನ್ನ ಸ್ಥಿತಿ ಹೀಗ್ಹೀಗೆ ಅಂತ ತಂಗಿಗೆ ಫೋನ್ ಮಾಡಿಯಾದ್ರೂ ಸಮಾಧಾನ ಹೇಳ್ತಾನೆ” ” ಆ ಮೆಸೇಜ್ ಈಗ ನಂಗೇ ಬಂದಿದೆ. ಈಗ ನಾನು ಫೋನ್ ಮಾಡಿ ನನ್ನ ಕೈಲಾದ ಸಹಾಯ ಮಾಡ್ತೀನಿ ಅಂತೀನಿ. ಆಗ?” ” ಮಾಡಿ. ಆದರೆ ಈಗ ಮೆಸೇಜ್ ಕಳ್ಸಿರೋದು ಯಾರು?” ” ಯಾರೋ ಬ್ರಾಮಿನ್ಸ್… ಗೋತ್ರ ಅಂತೆಲ್ಲಾ ಇತ್ತು. ನಮ್ ಫ್ರೆಂಡ್ ವಿಶ್ವನಾಥನ್ನ ಕೇಳಿದ್ದಕ್ಕೆ ಬ್ರಾಮಿನ್ಸ್ ಗೋತ್ರ. ನಮ್ಕಡೆನೂ ಅದೇ ಗೋತ್ರದವರಿದ್ದಾರೆ ಅಂದ” ” ಮಿಸ್ಸಾಗಿ ಮೆಸೇಜು ನಿಮಗೆ ಬಂದಿರಬೋದು. ಅದಕ್ಯಾಕೆ ಇಷ್ಟು ಒದ್ದಾಟ?ಒಂದ್ಸಲ ಫೋನ್ ಮಾಡಿ. ಆಗಿದ್ದಾಗ್ಲಿ. ಈಗ ಊಟಕ್ಕೆ ಬನ್ನಿ” ಅಂದು ಹೊರಟಳು. ಊಟಕ್ಕೆ ಮೊದಲು ಇದನ್ನ ನೇರ ಮಾಡ್ತೀನಿ ಅಂದುಕೊಳ್ತಾ, ಪ್ರಕಾಶ್ ರೆಡ್ಡಿ ವೈಶಾಲಿ ನಂಬರ್ಗೆ ಕಾಲ್ ಮಾಡಿದ. ಅತ್ತಲಿಂದ ಗಂಡಸಿನ ದನಿ. ” ಇಲ್ಲ ಸರ್. ಅದು ರಾಂಗ್ ನಂಬರ್ ಇರಬೇಕು. ನಮಗೆ ಪ್ರಕಾಶ್ ರೆಡ್ಡಿ ಅಂತ ಯಾರೂ ಪರಿಚಯ ಇಲ್ಲ. ನಮಗೆ ಯಾವ ಸಹಾಯನೂ ಬೇಡ. ಪ್ಲೀಸ್… ಮೆಸೇಜ್ ಮತ್ತೆ ನಂಬರ್ ಡಿಲಿಟ್ ಮಾಡಿ. ಅವರು ಯಾರೋ ಅಂದ್ಕೊಂಡು ನಿಮಗೆ ಮೆಸೇಜ್ ಮಾಡಿದಾರೆ. ಸಾರಿ ಸರ್… ಮತ್ತೆ ಕಾಲ್ ಮಾಡೋಕೆ ಹೋಗ್ಬೇಡಿ. ಗುಡ್ ನೈಟ್ ಸರ್. ಥ್ಯಾಂಕ್ಯೂ” ಅನ್ನುತ್ತಾ ಕಾಲ್ ಕಟ್ ಮಾಡಿದ. *************************************************

ಒಂದು ತಪ್ಪು ಗಂಟು Read Post »

ಕಥಾಗುಚ್ಛ

ನಂಬಿಕೆ : ಮರು ಪ್ರಶ್ನೆ

ಸಣ್ಣ ಕಥೆ  ನಂಬಿಕೆ : ಮರು ಪ್ರಶ್ನೆ ರೇಷ್ಮಾ ನಾಯ್ಕ, ಶಿರಸಿ ಯಾರು ಒಳ್ಳೆ ಕೆಲ್ಸ ಮಾಡ್ತಾರೋ ಅವ್ರ ಪರ ದೇವ್ರು ನಿಂತಿರ್ತಾನೆ ಯಾವುದೇ ರೀತಿಲಿ ಸಮಸ್ಯೆಗಳಿಗೆ ಪರಿಹಾರಾನೂ ಸೂಚಿಸುತ್ತಾನೆ ಎಂದ ಮಾತಿಗೆ;  ಮಗಳು , ” ಹಾಗಾದ್ರೆ ಜಗತ್ತಿಗೆ ಕರೋನ ಬಂದಿದೆ ಇಷ್ಟೆಲ್ಲ ಕಷ್ಟ ಪಡ್ತಿದೀವಿ ಶಾಲೆಗೂ ಹೋಗೋಕಾಗ್ತಿಲ್ಲ  ಯಾಕಮ್ಮ ದೇವ್ರು ಪರಿಹಾರಾನೇ ಸೂಚಿಸ್ತಿಲ್ಲ?”  ಎಂದಳು. ಕಂದಾ, ” ದೇವ್ರು ಅನ್ನೋದು ಒಂದು ನಂಬಿಕೆ , ಧೈರ್ಯ. “ ನಿಂಗೆ ಜ್ವರ ಬಂದಾಗ ಹೆದ್ರಬೇಡ ನಾವ್ ನಿಂಜೊತೆಗೆ ಇರ್ತೀವಿ. ಹಾಸ್ಪಿಟಲ್ ಗೂ ಹೋಗ್ಬಂದಿವಿ. ನಿಂಗೇನು ಆಗಲ್ಲ ಅಂದಾಗ ;  ನಿಂಗೆ ಬಂದಿರೋ ಜ್ವರ ಸ್ವಲ್ಪ ಕಡಿಮೆ ಆದ ಹಾಗೆ ಅನ್ನಿಸುತ್ತಲ್ಲ….  ಹಾಗೆ, ಮತ್ತೂ ಇಲ್ಲಿ ”  ಜ್ವರ ಕಡಿಮೆ ಯಾಗದಿದ್ರೂ ನಾವ್ ಕೊಡೊ ಭದ್ರತೆ ಕೆಲ್ಸ ಮಾಡುತ್ತೆ ” ಎಂದೆ ಹಾಗಾದ್ರೆ , ಒಂದ್ ಕೆಲ್ಸ ಮಾಡ್ತಿನಮ್ಮ ;  ” ದೇವಸ್ಥಾನಕ್ಕೆ ನಾವಿಬ್ಬರೂ ಹೋದ ಹಾಗೆ.. ಚಿತ್ರ ಬಿಡಿಸ್ತಿನಮ್ಮ … ಆಗ ನಾವು ಅಲ್ಲಿಗೆ ಹೋದ ಹಾಗೆ …. ಯಾಕಂದ್ರೆ ದೇವ್ರು ಮನಸಿನ ನಂಬಿಕೆ ಅಲ್ವಾ ”  ಅಂದಳು ಈಗ ಉತ್ತರಿಸಲಾಗದೆ ತಡವರಿಸುವ ಸರದಿ ನನ್ನದಾಯ್ತು.. *******************************************

ನಂಬಿಕೆ : ಮರು ಪ್ರಶ್ನೆ Read Post »

ಕಥಾಗುಚ್ಛ

ಸುಳಿಗಾಣ

ಸಣ್ಣ ಕತೆ. ಸುಳಿಗಾಣ ಶೋಭಾ ನಾಯ್ಕ .ಹಿರೇಕೈ ರಾತ್ರಿಯಿಡಿ ನಿದ್ದೆಯಿಲ್ಲದೆ ಕೆಂಡದುಂಡೆಯಾದ ಕಣ್ಣುಗಳನ್ನುಜ್ಜಿಕೊಂಡು ಹಾಸಿಗೆಯಿಂದೆದ್ದ ಮಾದೇವ ರೂಢಿಯಂತೆ ಕೊಟ್ಟಿಗೆಯ  ಕಡೆ ಕಣ್ಣು ಹಾಯಿಸಿದ.  ಉಕ್ಕಿ ಬಂದ ಸಿಟ್ಟು, ಅಳು ಎಲ್ಲವನ್ನೂ ನುಂಗಿಕೊಂಡು ” ಛೇ.. ”  ಎಂದು ಬಲಗಾಲನ್ನೆತ್ತಿ ದೊಪ್ಪೆಂದು  ನೆಲಕ್ಕೆ ಬಡಿದವನೆ, ಏನೋ ತೀರ್ಮಾನ ಮಾಡಿದವನಂತೆ ತಂಗಿಯನ್ನಾದರೂ  ‘ವಿದ್ಯಾಗಿರಿ’ ಹೈಸ್ಕೂಲ್ ಮೆಟ್ಟಿಲ ಹತ್ತಿಸಿಯೇ ತೀರಬೇಕೆಂದು, ತನಗೆ ಕಲಿಸಿದ ಮಾಸ್ತರರ ಮನೆಯತ್ತ ಹೋಗುತ್ತಿದ್ದಾಗ, ” ಈ ಮಾಸ್ತರರ ಮನೆಯಲ್ಲಿ ಎಲ್ಲರನ್ನೂ ಒಳ ಸೇರಿಸಿ ಬಿಡ್ತಾರಪ್ಪ. ನಮಗೆ ಕೊಡೋ ಲೋಟದಲ್ಲೇ .. ಅವರಿಗೂ ಚಾ ಕೊಡ್ತಾರೆ.  ಶೀ… ಹೇಸಿಗೆ.”ಎಂದು ಕಬ್ಬಿನ ಗದ್ದೆಯ  ರವದಿಯ ಸಂದಿಯಿಂದ ಕೇಳಿ ಬಂದ ಮಾತು ಗಾಯದ ಮೇಲೆಯೇ ಬರೆ ಎಳೆದಂತಾದರೂ  ಎದೆಗುಂದದ ಅವನ ಹೆಜ್ಜೆಗಳು ಮತ್ತೂ ಬಿರುಸಾದವು. ತಮ್ಮೂರ ಶಾಲೆಯಲ್ಲೇ ಏಳನೇ ತರಗತಿ ಮುಗಿಸಿ ಇನ್ನೇನು ಹೈಸ್ಕೂಲ್  ಹತ್ತಬೇಕಾದ ಅವನಿಗೆ , ಕುಡಿತದಿಂದ   ಸಾಲ ಮಾಡಿ ಮಾಡಿ ಸತ್ತ ಅಪ್ಪನ ಸಾವಿನಿಂದ ಆಘಾತವಾಯಿತು. ಇದ್ದ ತುಂಡು ಹೊಲ ಪಂಚಾಯ್ತಿ ಕಟ್ಟೆಯಲ್ಲಿ ಸಾಲ ಕೊಟ್ಟವರ ಪಾಲಾಯಿತು ಎರಡು ವರುಷಗಳವರೆಗೆ. ಓದುವ ಆಸೆ ಕೈಬಿಟ್ಟ ಹುಡುಗ  ಹತ್ತಾರು ಮನೆಯ ದನಗಾವಲಿಗೆ ನಿಂತು,  ಮನೆಯ ಚಿಕ್ಕ ಪುಟ್ಟ ಖರ್ಚು ನಿಭಾಯಿಸಿ  ಮನೆಯ ಪುಟ್ಟ ಯಜಮಾನನಾದಾಗ, ಅವ್ವಳ ದಿನ ನಿತ್ಯದ ಅಳು ನಿಂತದ್ದು ಗಮನಿಸಿದ ಹುಡುಗ ಹೇಗಾದರೂ ಮಾಡಿ ತನ್ನ ಹೊಲವನ್ನು ತಮ್ಮದಾಗಿಸಿಕೊಳ್ಳಬೇಕೆಂದುಕೊಂಡ. ಇದೇ ವೇಳೆಗೆ  ಇವನ ಸಾಲದೊಡೆಯ  ತನ್ನದೆರಡು ಹೋರಿ ಕರುಗಳನ್ನು  ಸಾಕಿಕೊಳ್ಳಲು ಅನುಮತಿ ಕೊಟ್ಟು ಬಿಟ್ಟಾಗ ಹುಡುಗನಿಗೆ ಸ್ವರ್ಗಕ್ಕಿನ್ನು ಒಂದು ಗೇಣೂ ಅಂತರವಿಲ್ಲ ಅನ್ನಿಸಿಬಿಟ್ಟಿತು. ದಿನವೂ ತಾನೇ ಮೇಯಿಸಿಕೊಂಡು ಬರುವ ಹೋರಿ ಕರುಗಳೀಗ ತನ್ನವೇ ಆಗುತ್ತಿವೆ.   ಸಂತೋಷಕ್ಕೆ ಪಾರವಿಲ್ಲದೆ ಹುಲ್ಲು,  ಸೊಪ್ಪು, ಸದೆ, ಅಕ್ಕಚ್ಚು, ನೀರು ಎಂದು ಮಕ್ಕಳಂತೆ ಪಾಲನೆ ಮಾಡಿದ. ರಾಮ , ಲಕ್ಷ್ಮಣರೆಂದೂ ಹೆಸರೂ ಇಟ್ಟು ಬಿಟ್ಟ. ಬಿಸಿನೀರಿನಿಂದ ಮೈ ತೊಳೆದು  ಕಿವಿ ಚಟ್ಟೆ, ಮೂಗ ಹೊಳ್ಳೆಯೊಳಗೆಲ್ಲ ಸೇರಿ ಬಿಡುವ  ಉಣುಗನ್ನೂ ಬಿಡದೆ ತೆಗೆದು ಆರೈಕೆ ಮಾಡಿದ.ಎರಡು ವರುಷದೊಳಗೆ   ನೋಡಿದವರ ಕಣ್ಣು ಬೀಳುವಂತೆ  ಬೆಳೆದು ನಿಂತ ಹೋರಿಗಳೀಗ ಎತ್ತುಗಳಾಗೋ ಕಾಲ.  ಸುಳಿಗಾಣ ಕಟ್ಟಿ, ತಿದ್ದಿ ಗದ್ದೆ ಹೂಳಲು ರಾಮ , ಲಕ್ಷ್ಮಣರು ಸಿದ್ಧವಾಗುತ್ತಿರುವ ಸುದ್ದಿ   ಸಾಲ ದೊಡೆಯನಿಗೆ ( ಹೋರಿಗಳೊಡೆಯನೂ )   ತಲುಪಿಯೇ ಬಿಟ್ಟಿತ್ತು. ಮರು ದಿನವೇ ಹೊಸದೆರಡು ಜೊತೆ ದಾಬದ ಕಣ್ಣಿಯೊಂದಿಗೆ ಬಂದ ಆತ  ರಾಮ ಲಕ್ಷ್ಮಣರ ಕತ್ತಿಗೆ ಬಿಗಿದು, ” ಮಾದ,  ನಮ್ಮನೆ ಕೊಟ್ಟಿಗೆ ಬೇರೆ ಮಾಡಾಯ್ತೋ.. ಜಾಗಕ್ಕೇನೂ ಬರ ಇಲ್ಲ ಈಗ.  ನಿನ್ ಲೆಕ್ಕಾಚಾರ ಮುಂದೆ ಮುಗಿಸಿದರಾತು, ಹ್ಯಾಗಾದರೂ ಸಗಣಿಗಿಗಣಿ ಬಳಸ್ಕಂಡಿಯಲ್ಲ ಇಷ್ಟು ದಿನ . ಹೈ.. ಹೈ.. ” ಎನ್ನುತ್ತಾ ಹೋರಿಗಳೆರಡನ್ನೂ ಎಳೆದುಕೊಂಡು ಹೊರಟೇ ಬಿಟ್ಟಾಗ , ಇತ್ತ ಮಾದೇವ ಎಚ್ಚರ ತಪ್ಪಿ ಬಿದ್ದ ಸುದ್ದಿ ಊರಲ್ಲೆಲ್ಲ ಹಬ್ಬಿ   ಎಲ್ಲರೂ  ‘ ಅಯ್ಯೋ’ ಅಂದಿದ್ದು ಬಿಟ್ಟರೆ  ಮತ್ತೇನೂ ಆಗಲೇ ಇಲ್ಲ . ಮನೆಯತ್ತ ಬರುತಿದ್ದ ಮಾದೇವನ ಕಂಡಾಗ  ಅವನ ಕತೆ ನೆನಪಿಸಿ ಕಣ್ಣಂಚು ಒದ್ದೆ ಮಾಡಿಕೊಂಡ ಮಾಸ್ತರರ ಹೆಂಡತಿ  ಚಹಕ್ಕಿಡಲು ಒಳಗೆ ಹೋದಳು. ***************************************************

ಸುಳಿಗಾಣ Read Post »

ಕಥಾಗುಚ್ಛ

ಮುಗಿಲ ಮಲ್ಲಿಗೆ

ಕಥೆ ಮುಗಿಲ ಮಲ್ಲಿಗೆ ರೂಪಕಲಾ ಕೆ.ಎಂ. ಕತ್ತಲೆಯ ಸೆರಗನ್ನು ಹೊದ್ದು ಮಲಗಿದ್ದ ರಸ್ತೆಯಲ್ಲಿ, ವೇಗವಾಗಿ ಚಲಿಸುತ್ತಿದ್ದ ಬಸ್ಸು.. ಅದಕ್ಕಿಂತಲೂ ವೇಗದಲ್ಲಿ ಓಡುತ್ತಿತ್ತು ಹರೀಶನ ಮನಸ್ಸು. ಆಗಾಗ ಎದುರಾಗುವ ವಾಹನಗಳ ಬೆಳಕು ಬಂದು ಕಣ್ಣಿಗೆ ಹೊಡೆದರೂ, ಮನಸ್ಸು ಮಾತ್ರ ಕತ್ತಲೆಯ ಗೂಡಾಗಿತ್ತು.. ಪಕ್ಕದ ಸೀಟಿನಲ್ಲಿ ರಾಧಿಕ ಗಾಢವಾದ ನಿದ್ರೆಯಲ್ಲಿದ್ದಳು.. ಬಸ್ಸಿನ ಪ್ರಯಾಣದಲ್ಲಿಯೂ ಗೊರಕೆ ಹೊಡೆಯುತ್ತ ಮಲಗಿದ್ದ ಸಹ ಪ್ರಯಾಣಕರನ್ನು ನೋಡಿ, ‘ಚಿಂತೆಯಿಲ್ಲದವರೆಗೆ ಸಂತೆಯಲ್ಲೂ ನಿದ್ರೆಯಂತೆ’ ಅನ್ನೊ ಮಾತು ಅವನಿಗೆ ನೆನಪಾಯಿತು.. ಅವನ ಮನ ಪದೇ ಪದೆ ಪ್ರದೀಪನನ್ನೇ ಮೆಲಕು ಹಾಕುತ್ತಿತ್ತು. ‘ಈಗ ಅವನಿಗೆ ಎಷ್ಟು ಖೂಷಿಯಾಗುತ್ತೋ!?, ಪ್ರತಿ ಬಾರಿಯು ಊರಲ್ಲಿದ್ದಾಗ “ನಮ್ಮ ಊರಿಗೆ ಒಂದು ಬಾರಿ ಬಾರೋ, ಆಗ ಗೊತ್ತಾಗುತ್ತೆ.. ಹಳ್ಳಿಯ ಸೊಬಗು ಹೇಗಿರುತ್ತೆ ಅಂತ. ಸಿಟಿಯಲ್ಲಿ ಜೀವನ ಮಾಡೋರಿಗೆ ಪ್ರಕೃತಿಯ ಸೌಂದರ್ಯ ಹೇಗೆ ಗೊತ್ತಾಗುತ್ತೆ ಹೇಳು” ಎಂದಿದ್ದ.. ಈಗ ಊರಿಗೆ ಬರ್ತಿದಿವಿ ಅನ್ನೋ ಪತ್ರ ಕೈ ಸೇರುವಷ್ಟರಲ್ಲಿಯೇ ನಾವೂ ಊರಲ್ಲಿ ಇರ್ತೀವಿ..ಅಬ್ಬಾ ಅವನ ಖುಷಿ ನಮ್ಮ ಕಣ್ಣಾರೇ ನೋಡಬೇಕು’… ಯೋಚನೆಗೆ ಭಂಗ ತರುವಂತೆ ಸಡನ್ ಬ್ರೇಕ್ ಹೊಡೆದಾಗ ಗಾಢವಾದ ನಿದ್ರೆಯಲ್ಲಿದ್ದವರೂ ಕೂಡ ಬೆಚ್ಚಿ ಬಿದ್ದು,ಏನಾಯಿತು ಎಂದು ಸುತ್ತ ಮುತ್ತ ಕತ್ತಲಿನಲ್ಲಿಯೇ ಕಣ್ಹಾಯಿಸಿ ಹುಡುಕುತ್ತಿದ್ದರು. “ಅಬ್ಬಾ, ಏನಾಯ್ತು ಹರೀಶ್!?,” ಮುಂದಿನ ಸೀಟು ಹಣೆಗೆ ತಾಗಿ ನೋವಾದ ಕಡೆ ಒತ್ತುತ್ತ ಕೇಳಿದಳು ರಾಧಿಕ. ಎದ್ದು ನೋಡುವನಿದ್ದ ಅಷ್ಟರಲ್ಲಿಯೇ ಕಂಡೆಕ್ಟರ್ ಬಂದು ” ಏನಾಗಿಲ್ಲ ಹಸು ಅಡ್ಡ ಬಂತು” ” ನೋಡಿ ನಡ್ಸೋಕ್ಕಾಗಲ್ವಾ?, ತಲೆಗೆಷ್ಟು? ಪೆಟ್ಟು ಬಿತ್ತು” ಹಿಂದೆ ಸೀಟಲ್ಲಿದ್ದವರ ಮಾತಿಗೆ.. ” ನೋಡಿ ನಡೆಸ್ತಾ ಇರೋದಕ್ಕೆ ಅಪಾಯ ತಪ್ಪಿದ್ದು ಸರ್. ಇಲ್ಲವಾಗಿದ್ರೆ ಬಸ್ಸು ಪಲ್ಟಿ ಹೊಡಿತಿತ್ತೋ ಅಥವಾ….” ಗುಣುಗುತ್ತಾ ಮುಖ ನೋಡಿ ಹೋದ ಕಂಡೆಕ್ಟರ್ ಮಾತಿಗೆ ಹರೀಶ್ ಹೌದು ಎನ್ನುವಂತೆ ತಲೆ ಆಡಿಸಿದನು. ಹಿಂದೆಯಿಂದ ಮಾತುಗಳು ಕೇಳುತ್ತಲೇ ಇದ್ದವು. ಯಾವುದನ್ನು ತಲೆಗೆ ಹಾಕಿಕೊಳ್ಳದೇ ತನ್ನಷ್ಟಕ್ಕೆ ತಾನು ರಸ್ತೆ ಕಡೆ ದೃಷ್ಟಿ ಇಟ್ಟಿದ್ದ ಡ್ರೈವರ್ ಹತ್ತಿರ ಹೋಗಿ “ಇವುರ್ಗಳಿಗೆ ಬಸ್ಸಲ್ಲು ಹ್ಯಾಂಗ್ ನಿದ್ರೆ ಬತ್ತದೆ ಅಂತ..ದಿನಾ ಓಡಾಡೋ ನಮಗೆ ನಿದ್ದೆ ಇಲ್ಲದಿದ್ದರೂ ನಿದ್ದೆ ಬರಲ್ಲ. ಇನ್ನು ಮೇಲಾಗಿ ಸಲಹೆ ಕೊಡ್ತಾವ್ರೆ”..ಗೊಣಗಿದ ಕಂಡೆಕ್ಟರಿಗೆ.. ” ಏನೋ ನಿಂದು?, ಯಾಕೆ ಗೊಣಗ್ತಿಯಾ.. ಯಾರು ಏನಂದ್ರು ಈಗ?..ಅವರನ್ನು ಬಂದು ಇಲ್ಲಿ ಕೂರಲು ಹೇಳು” ” ಸಾಯ್ಲಿ ಬಿಡಣ್ಣೋ.. ಜೀವ ಹೋದ್ರೂ ನಿದ್ದೆ ಬೇಕು ಅನ್ನೋ ಜನ್ಗಳು”.. ಹರೀಶ ಅವರಿಬ್ಬರ ಮಾತು ಕೇಳಿ ರಾಧಿಕಳ ಕಡೆ ತಿರುಗಿ ನೋಡಿ ನಕ್ಕಾಗ ” ಅವ್ರು ನಂಗಲ್ಲ ಹೇಳಿದ್ದು ಆಯ್ತಾ.. ನೀನೇನೋ ನನ್ನ ನೋಡಿ ನಗ್ಲಿಕ್ಕೆ?,.. ” ಅಯ್ಯೋ ರಾಮ. ನಾನೇನೇ ಅಂದೇ ಈಗ!?,. ” ಏನಿಲ್ಲ ಬಿಡು” ಎನ್ನುತ ರಗ್ಗನ್ನು ಸರಿ ಮಾಡಿಕೊಂಡು ಮುದುರಿ ಮಲಗಿದಳು. ———— ಸೂರ್ಯ ಇನ್ನು ನಿದ್ರೆಯಿಂದ ಎದ್ದಿರಲಿಲ್ಲ ಆಗಲೇ ಹಕ್ಕಿಗಳಿಗೆ ಬೆಳಗಾಗಿತ್ತು.. ಅಲ್ಲಲ್ಲಿ ತಂಬಿಗೆ ಹಿಡಿದು ಹೋಗುವ ಜನರನ್ನು ಕಂಡು… “ಅಬ್ಬಾ ರಸ್ತೆ ಬದಿಯಲ್ಲೇ?…ಕರ್ಮ. ಮರ್ಯಾದೆ ಸಹ ಇರಲ್ವಾ ಇವರಿಗೆಲ್ಲಾ?” ಮೂಗು ಮುಚ್ಚಿಕೊಂಡು ರಾಧಿಕ ಸಿಟ್ಟಿನಲ್ಲಿ ಹೇಳಿದಾಗ.. ” ಇದೆಲ್ಲಾ ಹಳ್ಳಿ ಕಡೆ ಕಾಮನ್ ರಾಧಿಕ, ಇಲ್ಲಿ ಇಷ್ಟೆ.. ಇನ್ನೂ ಕೆಲವು ಕಡೆ ಮಹಿಳೆಯರು ಕೂಡ!”… ” ಬೇಡ ಬಿಡು ಆ ಮಾತು.. ಇವರನ್ನೆಲ್ಲಾ ತಿದ್ದಲು ಆ ಬ್ರಹ್ಮನೇ ಬರಬೇಕೇನೋ… ಅದಿರಲಿ ಈಗ ಪ್ರದೀಪನ ಮನೆ ಎಲ್ಲಿ ಅಂತ ನಿಂಗೆ ಗೊತ್ತಾ?” ” ಇಲ್ಲ,..ಇರು.., ಅಲ್ಲಿ ಯಾರಾನ್ನಾದರೂ ಕೇಳೋಣ” ಎನ್ನುತ್ತ ಸ್ವಲ್ಪ ಮುಂದೆ ನಡೆದರು. ಅಲ್ಲಿಯೇ ಇದ್ದ ಸಣ್ಣ ಗೂಡಂಗಡಿಯಲ್ಲಿ ಇಬ್ಬರು ಟೀ ಕುಡಿದು ವಿಚಾರಿಸಿದಾಗ… ಅವರು ಹೋಗಬೇಕಾದ ಊರು ಇನ್ನು ಒಂದು ಕಿಲೋ ಮೀಟರ್ ದೂರವಿರುವುದಾಗಿಯು ” ಇಲ್ಲೇ ಒಂದು ಆಟೋ ಬತ್ತದೆ ಈಗ. ಅದು ಆ ಊರಿಗೆ ಹೋಗತ್ತೆ ಅದರಲ್ಲಿ ಹೋಗಿ” ಅಂಗಡಿಯವರು ಹೇಳಿದಾಗ ಸರಿಯೆಂದು ಆಟೋಕ್ಕಾಗಿ ಕಾದು ನಿಂತರು. —– ರಾಧಿಕ ಮತ್ತು ಹರೀಶ್ ಮಾರನ ಹಳ್ಳಿ ಪ್ರವೇಶಿಸಿದ ಕೂಡಲೆ ಅಲ್ಲಿ ಯಾರನ್ನಾದರೂ ಕೇಳಿದರೆ ಪ್ರದೀಪನ ಬಗ್ಗೆ ತಿಳಿಯುತ್ತದೆಂದು ಯೋಚಿಸಿದ್ದರು.ಆದರೆ ಅಲ್ಲಿಯೇ ಆಡುತಿದ್ದ ಮಕ್ಕಳನ್ನು ಕೇಳಿದಾಗ ಇವರಿಬ್ಬರ ಕಡೆ ವಿಚಿತ್ರವಾಗಿ ನೋಡಿದರು.ಅದಕ್ಕು ಕಾರಣವಿತ್ತು. ರಾಧಿಕಳ ಉಡುಗೆ ಹರೀಶನ ಉಡುಗೆಯು ಒಂದೇ ತೆರನಾಗಿದ್ದವು. ಮುಂದೆ ಹೋಗಿ ಅಲ್ಲಿಯೇ ಹಲಸಿನ ಮರದ ಕಟ್ಟೆಯಲ್ಲಿ ಕುಳಿತ ಹಿರಿಯರನ್ನು ಕೇಳಿದರು. ಅವರಲ್ಲಿ ಹಿರಿಯರಾದ ಒಬ್ಬರು ಅವರಿಬ್ಬರನ್ನು ತೀಕ್ಷ್ಣವಾಗಿ ನೋಡಿ ” ಅವ , ನಿಮಗ್ ಹ್ಯಾಗ್ ಗೊತ್ತು?” ಎಂದರು. ಅವರ ಮಾತು ಅರ್ಥವಾಗದೆ ಇಬ್ಬರು ಒಬ್ಬರನ್ನೊಬ್ಬರು ಮುಖ ನೋಡಿಕೊಂಡರು.ಅದನ್ನರಿತ ಹಿರಿಯರು ” ಎಲ್ಲಿಂದ ಬಂದ್ರಿ” ” ಸಿಟಿಯಿಂದ, ಪ್ರದೀಪನನ್ನು ಕಾಣಬೇಕಿತ್ತು. ನಾವೆಲ್ಲ ಒಟ್ಟಿಗೆ ಓದಿದವರು” ” ಈಗ ನಿಮಗಾ ಅವ ಸಿಗಂಗಿಲ್ರಿ” ” ಅಂದ್ರೆ!!?” ” ಬನ್ರಿ, ಅವರ ಮನೆಯಾಗ ಬಿಡ್ತೀನಿ” ಎಂದವರೇ ಆ ಹಿರಿಯರು ಎದ್ದು ಮುಂದೆ ಹೆಜ್ಜೆ ಹಾಕಿದರು. ಅವರಿಬ್ಬರೂ ಹಿಂಬಾಲಿಸಿದರು. ಊರಿನ ಹಲವಾರು ಮನೆಗಳನ್ನು ದಾಟಿ ದೊಡ್ಡದೊಂದು ಮನೆಯ ಮುಂದೆ ಬಂದು ನಿಂತು!,. ” ಅದೇ ಅವ್ರ ಮನೆ” ಎಂದರು. ” ಥ್ಯಾಂಕ್ಸ್ ಸರ್” ಎಂದವರೇ ಮನೆಯ ಮುಂದೆ ಹೋಗಿ ಬಾಗಿಲ ಬಳಿ ನಿಂತು ಹರೀಶ ಒಳ ನೋಡುತ್ತ ಕರೆದನು. ” ಪ್ರದೀಪ್,ಪ್ರದೀಪ್” ಇವರ ಸ್ವರ ಕೇಳಿ ಒಳಗಿನಿಂದ ಬಂದ ವ್ಯಕ್ತಿಯನ್ನು ” ಸರ್,ಪ್ರದೀಪ ಇಲ್ವಾ?” ” ನೀವ್ಯಾರು?” “ನಾವು ಅವನ ಫ್ರೆಂಡ್ಸ್. ಕಾಲೇಜಲ್ಲಿ ಒಟ್ಟಿಗೆ ಓದುತ್ತಿದ್ದೆವು, ತುಂಬಾ ತಿಂಗಳಿಂದ ಅವನಿಂದ ಯಾವುದೇ ಸಂಪರ್ಕ ಸಿಗುತ್ತಿಲ್ಲ.ಹಾಗಾಗಿ ನಾವೇ ಬಂದ್ವಿ”. ” ಹೋ, ಹೌದಾ!!,. ಬನ್ನಿ ಒಳಗ, ಪ್ರದೀಪನು ನನ್ನ ಮಗನೇ.ನನ್ನ ಹೆಸರು ಶಿವಪ್ಪ ಅಂತ” ” ನಮಸ್ತೆ ಸರ್,ನಾನು ಹರೀಶ ಅಂತ,ಇವರು ರಾಧಿಕ.ನಾವು ಮೂವರು ಬೆಸ್ಟ್ ಫ್ರೆಂಡ್ಸ್”, “ಹೌದ,ಬನ್ನಿ ಕೂತ್ಕಳ್ಳಿ,ಈಗ ಬಂದೆ” ಎಂದು ಒಳ ಹೋಗಿ ಕುಡಿಯಲು ನೀರು ತಂದರು. ದೂರದಿಂದ ಬಂದವರಿಗೆ ಊಟೋಪಚಾರದ ವ್ಯವಸ್ಥೆಯು ಆದ ನಂತರ ನಿಧಾನವಾಗಿ ಮಾತಿಗೆ ಇಳಿದರು. “ಸರ್, ಈಗ ಅವನೆಲ್ಲಿದ್ದಾನೆ?”. ” ಪ್ರದೀಪ,!? ಈಗ ಎಲ್ಲಿದ್ದಾನೆ ಅಂತ ಹೇಳದು,ನಮಗಾ ಗೊತ್ತಿದ್ದರ ಮನೆಯಲ್ಲಿಯೆ ಇರ್ತಿದ್ದ.ಆದ್ರ ದೇವರು ನಮಗಾ ಅನ್ಯಾಯ ಮಾಡ್ದ” ಎಂದು ನಿಟ್ಟುಸಿರು ಬಿಟ್ಟರು.ಕಣ್ಣಿನಿಂದ ನೀರು ಹೊರ ಬಂದಿತ್ತು .ಇಬ್ಬರಿಗೂ ಗಾಬರಿ .ಅವನಿಗೆ ಏನಾಗಿರ ಬಹುದು?. ಒಳಗಿನಿಂದ ಅಳುವ ಶಬ್ದ ಕೇಳಿ ಬಂತು. ” ಸರ್, ದಯವಿಟ್ಟು ಹೇಳಿ ,ಪ್ರದೀಪನಿಗೆ ಏನಾಯ್ತು?,ಈಗ ಎಲ್ಲಿದ್ದಾನೆ?.” ಕಣ್ಣು ಒರೆಸಿಕೊಂಡು ಹೇಳಲು ಶುರು ಮಾಡಿದರು. ” ಅವನಿಗೆ ಹುಚ್ಚು ಹಿಡಿತಪ್ಪಾ,ಈಗ ಎಲ್ಲಿದ್ದಾನಂತ ಗೊತ್ತಿಲ್ಲ.ಯಾರಾದರು ಅವನನ್ನ ನೋಡಿದೊರು ಬಂದು ಹೇಳ್ತಾರ! ನಾವು ಹೋಗೋದ್ರೊಳಗ ಅವ ಅಲ್ಲಿರಲ್ಲ.ಇದೇ ಆಗದೇಪ್ಪ ಆರು ತಿಂಗಳಿಂದ”, ಬಿಕ್ಕಿದರು. ಹರೀಶ್ ಕುಳಿತಲ್ಲಿಂದ ಎದ್ದು ಬಂದು ಅವರ ಕೈ ಹಿಡಿದು ಸಮಾಧಾನ ಮಾಡುತ್ತ ಕೇಳಿದ. ” ಇದೆಲ್ಲ ಹೇಗಾಯ್ತು ಸರ್”, ” ಪಿರುತಿ ಮಾಡಿದ್ದನಪ್ಪ..ಆ ಮಗ ಸತ್ತು ಹೋದ್ಲು,ಅದರ ನೋವು ತಡಿಲಾರ್ದೆ ಇವ ಹುಚ್ಚ ಆದ.ಸ್ವಲ್ಪ ದಿನ ತಡಿದಿದ್ರೆ ಇಬ್ಬರ ಮದುವೆ ನಾವೇ ಮಾಡೋರು.ಆದ್ರ ದೇವ್ರಿಗ ನಮ್ಮ ಮೇಲ ಕರುಣೆ ಇಲ್ಲ ನೋಡಿ.ಇದ್ದ ಒಬ್ಬ ಮಗನ್ನ ಹೀಗಾ ಮಾಡ್ಬಿಟ್ಟ”, ಮತ್ತೆ ಅಳಲು ಶುರು ಮಾಡಿದ್ರು.ರಾಧಿಕಳ ಕಣ್ಣಲ್ಲಿ ಆಗಲೆ ನೀರು ಇಳಿಯುತಿತ್ತು.ಮನೆಯ ಒಳಗಿನ ಅಳು ಸ್ವಲ್ಪ ಕಡಿಮೆ ಆಗಿತ್ತು.ಶಿವಪ್ಪನವರ ದುಃಖ ನೋಡಲಾಗದೆ ಹರೀಶ್ ನಿಧಾನವಾಗಿ ಎದ್ದು ಹೊರ ಬಂದ.ರಾಧಿಕ ಕೂಡ ಅವನ ಹಿಂದೆಯೆ ಬಂದಳು. ಏನೋ ಯೋಚಿಸಿದವರಂತೆ ಮತ್ತೆ ಒಳಗಡೆ ಬಂದವರು ಕುರ್ಚಿಯಲ್ಲಿ ಕುಳಿತರು. ” ಸರ್ ನಮಗೆ ಪ್ರದೀಪನ ಪೂರ್ಣ ಮಾಹಿತಿ ಬೇಕು.ಕಾಲೇಜು ಬಿಟ್ಟು ಬಂದಲ್ಲಿಂದ ಇಲ್ಲಿ ಏನಾಯಿತು ಅಂತ ತಿಳಿಸಲು ಆಗತ್ತ.ನಮಗೆ ನಮ್ಮ ಮೆಚ್ಚಿನ ಗೆಳೆಯನ ಜೀವನ ಹೀಗೆ ಆಗಿದ್ದು ನಂಬಲು ಆಗುತ್ತಿಲ್ಲ.ದಯವಿಟ್ಟು ವಿವರವಾಗಿ ತಿಳಿಸಿ ಸರ್”, ಅವರಿಬ್ಬರನ್ನು ಒಮ್ಮೆ ನೋಡಿದರು.’ಪ್ರದೀಪನ ವಯಸ್ಸಿನವರೆ’ ಅನ್ನಿಸಿತು.ಹರೀಶನನ್ನು ನೋಡಿ ಮಗನ ನೆನಪಾಗಿ ಕಣ್ತುಂಬಿ ಬಂದವು. ನಡೆದ ಕಥೆ ಹೇಳಲು ಶುರು ಮಾಡಿದರು. “ನಂಗಾ ಇಬ್ರು ಮಕ್ಳು.ಮಗಳ ಮದ್ವಿ ಆಗದೆ. ಇವ ಓದು ಮುಗ್ಸಿ ಊರಿಗೆ ಬಂದ.ನಾವು ಅವ್ನ ಕೆಲ್ಸದ ವಿಷಯ ಏನೂ ಹೇಳಿಲ್ಲ.ಮನೇಲಿ ಮೂರು ತಲೆಮಾರಿಗೂ ಕೂತು ಉಣ್ಣೊಷ್ಟು ಇರುವಾಗ ಅವ ಕೆಲಸಕ್ಕೆ ಹೋಗೂ ಅಗತ್ಯ ನಂಗಿರ್ಲಿಲ್ಲ”, ಮಾತು ನಿಲ್ಲಿಸಿ ಒಳಗೆ ನೋಡಿದರು. ಹೆಂಡತಿಗೆ ತನ್ನ ಮಾತು ಕೇಳಿದರೆ?. ” ನಿಮ್ಗೆ ದಣಿವಿಲ್ಲಾಂದ್ರಾ ತೋಟಕ್ ಹೋಗುಣಾ?”, ಮೂವರು ಎದ್ದು ಹೊರ ಹೋಗುವಾಗ ಲಕ್ಷ್ಮಮ್ಮನವರು ಹೊರ ಬಂದರು.ಅವರಿಗೆ ತೋಟಕ್ಕೆ ಹೋಗಿ ಬರುತ್ತೆವೆಂದು ಹೇಳಿ ಹೊರಟರು. *** ಊರ ಹೊರಗಿನ ಹೊಲದ ಮಧ್ಯದಲ್ಲಿ ಒಂದು ಪುಟ್ಟ ಮನೆ. ಸುತ್ತಲೂ ಹಚ್ಚ ಹಸಿರಾದ ಪೈರು.ಹೂ ಬಿಟ್ಟು ಭತ್ತದ ತೆನೆ ಬಿಡುವ ಸಮಯ.ಗಾಳಿ ಬಂದರೆ ಪೈರಿನ ಪರಿಮಳ ಮೂಗಿಗೆ ತಾಗಲು, ‘ಅಹ್ಹಾ’,ಎಷ್ಟೊಂದು ಅಹ್ಲಾದಕರ. ಗದ್ದೆ ಅಂಚಿನ ಮೇಲೆ ಮೆಲ್ಲನೆ ಹೆಜ್ಜೆ ಹಾಕುತ್ತ ನಡೆಯುತಿದ್ದಳು ಮಲ್ಲಿ. “ಯಾರಲ್ಲಿ?”. ಕೂಗಿಗೆ ಹೆದರಿ ನಿಂತಳು.ತಿರುಗಿ ನೋಡಿದರೆ ತನಗೆ ಸ್ವಲ್ಪ ದೂರದಲ್ಲಿಯೆ ಒಬ್ಬರು ದ್ವಿಚಕ್ರ ವಾಹನದಲ್ಲಿ ನಿಂತಿದ್ದರು. ಅವರನ್ನು ಎಂದೂ ನೋಡಿರಲಿಲ್ಲ .’ಯಾರಿರ ಬಹುದು?’ಎಂದು ಕುತೂಹಲದಲ್ಲಿರುವಾಗಲೆ ಮತ್ತದೇ ದ್ವನಿ. “ನಿನ್ನನ್ನೆ ಕೇಳಿದ್ದು, ಯಾರು ನೀನು?.ಎಲ್ಲಿಯೂ ನೋಡಿದ ನೆನಪಿಲ್ಲ.ಹೊಸ ಮುಖದ ಹಾಗೆ ಕಾಣುತ್ತಿಯ!?” “ನಾನು ಮಲ್ಲಿ,ಸುಬ್ಬಣ್ಣನ ಮಗಳು” “ಹೌದಾ!!?.ನಮ್ಮ ಸುಬ್ಬಣ್ಣನ ಮಗಳಾ?.ಇಷ್ಟು ದಿನ ಎಲ್ಲಿದ್ದೆ?.ಒಂದು ದಿನವು ಕಾಣಲಿಲ್ಲ!!?” ” ನಾನು ಸಿಟಿಯಲ್ಲಿನ ಚಿಕ್ಕಪ್ಪನ ಮನೆಯಲ್ಲಿದ್ದು ಕಲಿತಿದ್ದೆ” “ಎಷ್ಟನೆ ಕ್ಲಾಸಿನವರೆಗೆ ಓದಿದ್ದಿಯಾ” “ಹತ್ತು, ಪಾಸು”. “ಮುಂದೆ!?” ಅವರ ಮಾತನ್ನು ತಡೆಯುವಂತೆ “ನೀವ್ಯಾರು!?”ಎಂದು ಕೇಳಿ ನಾಲಿಗೆ ಕಚ್ತಿಕೊಂಡಳು. “ಹೋ, ನೋಡಿದ್ಯಾ ನಿನ್ನ ಬಗ್ಗೆ ಕೇಳುವ ಆತುರದಲ್ಲಿ ನಾನು ಯಾರು? ಅಂತ ಹೇಳಲೆ ಇಲ್ಲ ಅಲ್ವಾ?.ನಾನು ಈ ಊರಿನ ಗೌಡರ ಮಗ ಪ್ರದೀಪ. ನಿನ್ನ ತಂದೆ ನಮ್ಮ ಮನೆಯಲ್ಲೆ ಕೆಲಸ ಮಾಡೋದು.ನಿನ್ನ ಹಾಗೆಯೆ ಸಿಟಿಯಲ್ಲಿ ಓದುತಿದ್ದೆ.ಈಗ ಸಧ್ಯಕ್ಕೆ ಓದು ಮುಗಿಯಿತು.ಕೆಲಸಕ್ಕೆ ಪ್ರಯತ್ನ ನಡೆಸಬೇಕು.” ಸಾಕ? ಎನ್ನುವಂತೆ ಅವಳ ಕಡೆ ನೋಡಿದನು. ಒಂದೇ ಉಸಿರಲ್ಲಿ ಮಾತನಾಡಿ ಮುಗಿಸಿದ ಅವನನ್ನೇ ತದೇಕ ಚಿತ್ತದಿಂದ ನೋಡುತಿದ್ದಳು.ಅವನೂ ಸಹ ಮಾತು ನಿಲ್ಲಿಸಿ ಮಲ್ಲಿಯ ಕಡೆ ನೋಡಲು ಇಬ್ಬರ ಕಣ್ಣುಗಳ ಮಿಲನವಾಯಿತು.ಮಲ್ಲಿ ಅವನ ನೋಟಕ್ಕೆ ನಾಚಿ ತಲೆ ತಗ್ಗಿಸಿದಳು.ಪ್ರದೀಪ ಮಾತ್ರ ಮಲ್ಲಿಯ ಅಂದವನ್ನು ಸವಿಯುವದರಲ್ಲೆ ಮಗ್ನನಾದ. ಹಾಲು ಕೆನ್ನೆಯ ದುಂಡನೆಯ ಮುಖದಲ್ಲಿ ಕಾಡಿಗೆಯ ಅಗತ್ಯವೇ ಇಲ್ಲದಂತೆ ಹೊಳೆಯುವ ಕಣ್ಗಳು..ನೀಳವಾಗಿ ಉದ್ದವಾದ ಕೂದಲನ್ನು ಎಣ್ಣೆ ಹಾಕಿ ಬಲವಂತವಾಗಿ ಬಾಚಿದಂತೆ ಕಂಡರು, ಅವಳಿಗದು ಅಂದ ತಂದಿತ್ತು.ಬಲ ಕಿವಿಯ ಹತ್ತಿರ ಇಳಿ ಬಿದ್ದ ಗುಂಗುರು ಕೂದಲು. ಕಿವಿಯಲ್ಲಿ ಸಣ್ಣದೊಂದು ಓಲೆ. ಎರಡೂ ಕೈಯಲ್ಲಿ ನಾಲ್ಕೇ ನಾಲ್ಕು ಮಣ್ಣಿನ ಕೆಂಪು ಬಳೆಗಳು ಅವಳ ಬಿಳಿ ಕೈಗಳಿಗೆ ಮುದ್ದಾಗಿದ್ದವು. ಹೆಚ್ಚೇನು ಎತ್ತರವಿಲ್ಲದ ಅತಿ ದಪ್ಪವು ಅಲ್ಲದ ಅವಳು, ಒಮ್ಮೆ ನೋಡಿದರೆ ಮತ್ತೆ ತಿರುಗಿ ನೋಡಬೇಕೆನ್ನಿಸುವ ಶರೀರ,ಅದರಲ್ಲೂ ಮೈಯನ್ನಪ್ಪಿದ ಲಂಗ ರವಿಕೆಯಲ್ಲಿನ ದೇಹದ ಸಿರಿ, ಪ್ರದೀಪನಿಗೆ ಸಿಟಿಯ ವೈಯ್ಯಾರಿಯರ ಮಧ್ಯೆ ಕೂಡ ಮಲ್ಲಿಯೇ ಅಂದವಾಗಿ ಕಂಡಿದ್ದಳು. ಪ್ರದೀಪನ ಕಣ್ಣು ತನ್ನ ಮೇಲಿರುವುದು ಅರಿತ ಮಲ್ಲಿ, ಮೆಲ್ಲನೆ ನಾಚಿ ಜಿಂಕೆಯಂತೆ ಓಡುವ ಸನ್ನಾಹ ಪ್ರದೀಪನ ಅರಿವಿಗೆ ಬಂದದ್ದೆ ತಡ ಅವಳನ್ನು ತಡೆಯುತ್ತಾ ”

ಮುಗಿಲ ಮಲ್ಲಿಗೆ Read Post »

ಕಥಾಗುಚ್ಛ

ಮರಳಿ ತವರಿಗೆ

ಸಣ್ಣ ಕಥೆ ಮರಳಿ ತವರಿಗೆ ನಾಗರಾಜ್ ಹರಪನಹಳ್ಳಿ ಕರೋನಾ ಕಾರಣವಾಗಿ ತವರು ಮನೆಗೆ ಕೊಲ್ಲಾಪುರ ದಿಂದ ಬಂದಿದ್ದ ರೋಶನಿ ತನ್ನೆರಡು‌ ಮಕ್ಕಳೊಂದಿಗೆ ಹೈಸ್ಕೂಲ್ ಗೆಳತಿ ಶರ್ಮಿತಾಳನ್ನು ಕಾಣಲು ಹೊರಟಳು.ಮಲೆ ‌ನಾಡಿನ ಒಂಟಿ ಮನೆಗಳು ಅಡಿಕೆ ತೆಂಗು ಹಾಗೂ ಕಾಡಿನ ಮರಗಳ ಮಧ್ಯೆ ಅಡಗಿರುವುದೇ ಹೆಚ್ಚು. ಶರ್ಮಿತಾಳ ತಾಯಿ ಮನೆ ಎದುರು ದನಗಳಿಗೆ ಕರಡ ಬೆಳೆಯಲು ಬಿಟ್ಟಿದ್ದ ಬಯಲು ಭೂಮಿ , ಜೂನ್  ತಿಂಗಳು ಎರಡು ವಾರ  ಸುರಿದ  ಮಳೆಯ ಕಾರಣ , ಅದಾಗಲೇ ಹಸಿರಾಗಿ ಇತ್ತು.‌‌  ಮೊದಲ ಮಹಡಿಯ ಮೇಲಿನ ಕಾರಿಡಾರ್ ನಿಂದ ತನ್ನ ಮನೆಯತ್ತ ಹೆಣ್ಮಗಳೊಬ್ಬಳು  ಮಕ್ಕಳೊಂದಿಗೆ ಬರುತ್ತಿರುವುದ ಗಮನಿಸಿ,  ‘ ಆಯಿ ,  ಯಾರೋ ನೆಂಟರು ಬಂದ್ರೆ’  ಅಂತ ಕೂಗಿ ಸೂಚನೆ ಕೊಟ್ಟಳು. ಮನೆಯಿಂದ ಹೊರ ಬಂದ ಆಯಿ , ದೂರದಿಂದಲೇ ಭಟ್ಟರ ಮನೆ ಮಗು ಅಂಬಂಗೆ ಕಾಣ್ತದೆ.  ಅವಳು ಈಚೆಗೆ ನಾಲ್ಕು ವರ್ಷ ಆಯಿತು ;  ಈಕಡೆ ಬಂದಿರಲಿಲ್ಲ.‌ ಈಗ ಬಂದಿರಬೇಕು ಎಂದ ಆಯಿ  ,ಬಳ್ಳಿಯಲ್ಲಿ ಅರಳಿದ ಮಲ್ಲಿಗೆ ಹೂ ಬಿಡಿಸಿತೊಡಗಿದಳು. ಪುಟಾಣಿ‌ ಮಕ್ಕಳೊಂದಿಗೆ ಮನೆ ಹತ್ತಿರ  ಬಂದಂತೆ ಆಕೆ ರೋಶನಿ ! ,  ತನ್ನ ಹೈಸ್ಕೂಲ್ ಗೆಳತಿ ಎಂದು ಶರ್ಮಿತಾಳಿಗೆ  ಮನದಟ್ಟಾಗುತ್ತಿದ್ದಂತೆ , ಕಣ್ಣುಗಳು ಅರಳಿದವು.  ಮನೆಯಂಗಳಕ್ಕೆ ಬಂದದ್ದೇ ನಗುವಿನ‌ ವಿನಿಮಯ, ಆತ್ಮೀಯ ‌ಅಪ್ಪುಗೆಯ ನಂತರ‌ ಇಬ್ಬರೂ  ಮಾತಿಗಿಳಿದರು .   ಗಂಟೆಗಟ್ಟಲೆ ಮಾತು.‌ ಅಪರೂಪಕ್ಕೆ ಹತ್ತು ವರ್ಷಗಳ ನಂತರದ ಭೇಟಿ.‌ ಕೇಳಬೇಕೆ? ಉತ್ಸಾಹ , ಕುತೂಹಲಗಳು ಮರದ ಕವಲುಗಳು  ಮುಗಿಲ ಕಡೆ ಮುಖ ಮಾಡಿದಂತೆ , ಮನಸು ದೂರ ಕಾಣುವ ದಿಗಂತ ನೋಡುತ್ತಲೇ ಗೆಳತಿರ ಕಣ್ಣೋಟಗಳು ಬೆರೆತಿದ್ದವು.  ಶರ್ಮಿತಾ ಈಗ ಕವಯಿತ್ರಿಯಾಗಿದ್ದಳು. ರೋಶನಿಯ ‘ಆಯಿ’  ಈ‌ ಸುದ್ದಿಯನ್ನು ‌ಕೊಲ್ಲಾಪುರದಿಂದ ಬಂದ ಮೊದಲ ದಿನವೇ  ಶರ್ಮಿತಾಳ ಸುದ್ದಿ ಮಾತಾಡಿ ಕುತೂಹಲ ನೂರ್ಮಡಿಸಿದ್ದಳು .  ಆ ಕುತೂಹಲ ತಣಿಸಿಕೊಳ್ಳಲು, ಅವಳ  ಕವನ ಸಂಕಲನ ಪಡೆಯಲು ಹಾಗೂ ಗೆಳತಿಯ ಪ್ರಸಿದ್ಧಿ ಅರಿತು ಖುಷಿಪಡಲು  ರೋಶನಿ ಬಂದದ್ದಾಗಿತ್ತು. ಅಂತೂ ಕವಯಿತ್ರಿಯ ಸುದ್ದಿ  ಕೇಳಿದ ಮೇಲೆ ; ತನ್ನ ಲಂಡನ್ ಪ್ರವಾಸ, ಅಲ್ಲಿನ ಜನ ,‌ಜೀವನ, ಯುವ ಜನರ ಬದುಕು, ಪ್ರೀತಿ, ಮುಕ್ತವಾದ ಜೀವನೋತ್ಸಾಹ , ಪ್ರಾಜೆಕ್ಟ್ ವರ್ಕ  ಬಗ್ಗೆ ಮಾತು ಹೊರಳಿ ಕೊಂಡವು ಹಾಗೂ ಕೊಲ್ಲಾಪುರದಿಂದ ಮರಳಿ ತವರಿಗೆ ಬಂದ ಕಾರಣದ  ವಿವರಗಳು  ಒಂದೊಂದೆ ಎಳೆ ಎಳೆಯಾಗಿ ಮಾತಲ್ಲಿ  ನಡೆಯುತ್ತಾ  ಹೋದವು.  ಸಮಾಜಶಾಸ್ತ್ರ ಅಧ್ಯಯನ, ಪಿಎಚ್ಡಿ  ಮಾಡಿದ್ದು …ಎಲ್ಲಾ ಹೇಳಿದ ನಂತರ ; ಗಂಡನ ಕಡೆ ಮಾತು‌ ಹೊರಳಿತು. ‘ ಹೇಗೆ ನಿಮ್ಮ ಮನೆಯವರು ಅಂತ ‘  ಪ್ರಶ್ನೆ ಎಸೆದಳು ಶರ್ಮಿತಾ . ‌ ಹಾಗೆ ನೋಡಿದರೆ ಶರ್ಮಿತಾಳ‌ ಊರಿನವನೇ ಆಗಿದ್ದ ವಿನಾಯಕ ಎಂಜಿನಿಯರಿಂಗ್ ಮಾಡಿ, ದೇಶ ಅಲೆದು,  ಮುಂಬಯಿ, ಪುಣೆ ಸುತ್ತಿ ಕೊಲ್ಲಾಪುರದಲ್ಲಿ ‌ನೆಲೆ ನಿಂತಿದ್ದ.‌   ಕರೋನಾ ಕಾರಣವಾಗಿ‌ ಅವನು ತನ್ನ ಮೂಲ ಮನೆಗೆ ಮರಳಿದ್ದ.‌ ಪಕ್ಕದ ವಾಟಗಾರ ಗ್ರಾಮದ ಹೈಸ್ಕೂಲ್ ಸಹಪಾಠಿ ರೋಶನಿಯನ್ನೇ ಮದುವೆಯಾಗಿದ್ದ. ಸಹಜವಾಗಿ ಕೇಳಿದ ಪ್ರಶ್ನೆ ಅದಾಗಿತ್ತು. ಒಂದು‌ ನಿಟ್ಟುಸಿರು ಬಿಟ್ಟ ರೋಶನಿ “ದೇಶ ವಿದೇಶ ಸುತ್ತಿದರೂ ಗಂಡಸರ‌ ಅನುಮಾನ ಹೋಗಲ್ಲ ಬಿಡು.‌ಅದೇ ಮೊಬೈಲ್ ಹಿಡಿದರೆ ತಕರಾರು.‌ ಕಾಣದ ಸಂಶಯಗಳು ಇದ್ದದ್ದೆ.‌ ಗಂಡಸರಿಗೆ ಎಷ್ಟು ಪ್ರೀತಿ ‌ಕೊಟ್ಟರೂ ,ಸಂಶಯಿಸುವುದ ಬಿಡಲ್ಲ ಎಂದು” ಮೌನವಾದಳು. ತನ್ನ ಸಮಸ್ಯೆಯೂ ಅದೇ ಎಂದು ಹೇಳಬೇಕೆಂದ ಶರ್ಮಿತಾಳ ತುಟಿತನಕ ಬಂದ ಮಾತು ತಡೆದು,‌ಮಾತು ಬದಲಿಸಿದಳು. ಹಾಗೂ  ನೀ‌ನು ಬರೆ ಏನಾದ್ರೂ ಅಂದ್ಲು.‌ “ಹು,‌ ಇನ್ನು ಬರೆಯಬೇಕು. ನೀನು ನಮ್ಮೂರಿಗೆ ಹೆಸರು ತಂದಿದಿಯಾ” .ಅದೇ ಸಂಭ್ರಮ.‌ ನೀ‌‌ ಕೊಟ್ಟ ಕಾವ್ಯದ ಪುಸ್ತಕ ನನ್ನತ್ತೆ ಇಟ್ಟುಕೊಂಡರು. ಅವರ ಮಗಳಿಗೆ ಕೊಡಲು. ನನಗೆ ಮತ್ತೊಂದು ‘ಮಲ್ಲಿಗೆ ದಂಡೆ’ ಕೊಡು ಎಂದು‌ ನಸು‌ನಕ್ಕಳು….ರೋಶನಿ. ಅವಳ ಮಾತಿನ  ಕಣ್ ಮಿಂಚು ಶರ್ಮಿತಾಳ ಎದೆಯೊಳಗೆ ಬೆಳಕು ಹಚ್ಚಿದಂತಾಯಿತು. *********************************

ಮರಳಿ ತವರಿಗೆ Read Post »

ಕಥಾಗುಚ್ಛ

ದನ ಕಾಯೋದಂದ್ರ ಏನ ಮ್ಮ

ಕಿರುಗಥೆ ದನ ಕಾಯೋದಂದ್ರ ಏ‌ನಮ್ಮ ರಶ್ಮಿ .ಎಸ್. ಅರ್ನಿ, ಹೋಂವರ್ಕ್‌ ಮಾಡಿಲ್ಲ… ಇಲ್ಲಮ್ಮ… ಮಾಡಾಂಗಿಲ್ಲ? ಇಲ್ಲಮ್ಮ… ಆಯ್ತು ಹಂಗಾರ… ನಾಳೆಯಿಂದ ಸಾಲೀಗೆ ಹೋಗಬ್ಯಾಡ… ದನಾ ಕಾಯಾಕ ಹೋಗು… ದನಾ ಕಾಯೂದಂದ್ರೇನಮ್ಮ.. ದನಾ ಕಾಯೂದಂದ್ರ ಒಂದು ನಾಲ್ಕು ಎಮ್ಮಿ ಕೊಡಸ್ತೀನಿ. ಎಮ್ಮಿ ಎಲ್ಲೆಲ್ಲಿ ಅಡ್ಡಾಡ್ತಾವ ಅಲ್ಲೆಲ್ಲ ಅದರ ಹಿಂದ ಹಿಂದೇ ಅಡ್ಯಾಡಬೇಕು. ಶಗಣಿ ಹಾಕಿದ್ರೂ, ಸುಸು ಮಾಡಿದ್ರೂ ಅದರ ಜೊತಿಗೇ ಇರಬೇಕು. ಶಗಣಿ ಹಾಕೂದಂದ್ರ? ಎಮ್ಮಿ ಕಕ್ಕಾ ಮಾಡೂದು.. ಅವಾಗೂ ಬಿಟ್ಟು ಹೋಗೂಹಂಗಿಲ್ಲಾ? ಇಲ್ಲ… ಓಹ್‌… ಆಸಮ್‌…ನಾ ಎಮ್ಮೀ ಜೊತೀಗೆ ಇರಬೇಕು.. ಹೌದು… ಅಮ್ಮಾ.. ಹಂಗಾರ ನಾ ಎಮ್ಮೀ ಒಲ್ಲೆ… ಅಮ್ಮಾನ ಕಾಯ್ತೀನಿ. ನೀ ಎಲ್ಲಿ ಹೋದ್ರೂ ನಿನ್ನ ಹಿಂದ ಇರ್ತೀನಿ. ಆಫೀಸಿಗೆ ಬರ್ತೀನಿ. ಮನ್ಯಾಗೂ ನಿನ್ನ ಜೊತಿಗೆ ಇರ್ತೀನಿ. ಬಾತ್‌ರೂಮಿಗೂ ಬರ್ತೀನಿ… ಪ್ಲೀಸ್‌ ಅಮ್ಮಾ… ನಾ ಅಮ್ಮಾಗ ಕಾಯ್ತೀನಿ. ಬೇಕಂದ್ರ ಅಪ್ಪಾಗೂ ಕಾಯ್ತೀನಿ… ಸಾಲೀ ಒಲ್ಲೆ… ……

ದನ ಕಾಯೋದಂದ್ರ ಏನ ಮ್ಮ Read Post »

ಕಥಾಗುಚ್ಛ

ನಿರುತ್ತರ

ಕಥೆ ನಿರುತ್ತರ ಚಂದ್ರಿಕಾ ನಾಗರಾಜ್  ಹಿರಿಯಡಕ ಸೆರಗಿನಲ್ಲಿ ಹೆರಕಿ ತಂದಿದ್ದ ಹೂವುಗಳನ್ನು ಒಂದೊಂದಾಗಿಯೇ ತನ್ನ ಪಾಡಿಗೆ ತಾನು, ಹಮ್ಮು ಬಿಮ್ಮಿಲದೇ, ಪ್ರಫುಲ್ಲ ಮನಸ್ಥಿಯಲ್ಲಿ ಹರಿಯುತ್ತಿದ್ದ ತೊರೆಯಲ್ಲಿ ಹರಿಯ ಬಿಡುತ್ತಿದ್ದೆ. ಅದು ಹೂವ ಚಿತ್ತಾರದ ಸೀರೆಯುಟ್ಟ ನೀರೆಯಂತೆ ಬಳುಕುತ್ತಾ ಸಾಗುತ್ತಿತ್ತು.  ನಾನೇಕೋ ಇಂದು ಅದನ್ನು ಆಸ್ವಾದಿಸುವ ಮನಸ್ಥಿತಿಯಲ್ಲಿ ಇಲ್ಲ.  ಕೈಗಳು ಶಾಂತವಾಗಿ ತೊರೆಯ ಮೈ ಸವರುತ್ತಿತ್ತಷ್ಟೆ, ಮನವು ಪ್ರಕ್ಷುಬ್ಧ ಕಡಲಾಗಿತ್ತು.  ದುಃಖ ಹೆಪ್ಪು ಗಟ್ಟಿತ್ತು. ಅದು ಒಡೆದು ಹೋಗಲು ಅವನೇ ಬರಬೇಕು‌.  ಅವನ ಮೈಗಂಧವ  ತಂಗಾಳಿ ನನ್ನ ನಾಸಿಕಗಳಿಗೆ ಸವರಿ ಹೋದರೆ ಸಾಕು ನಾನು ಅದಾಗಲೇ ನಿಟ್ಟುಸಿರಾಗಬಲ್ಲೆ…ಅವನ ಹೆಜ್ಜೆಯ ಸಪ್ಪಳವ ತರಗೆಲೆಗಳು ಮೆತ್ತಗೆ ಚೀರಿ ಕಿವಿಗೆರೆದು ಹಾರಿದರೆ ಸಾಕು ನಾನು ಚುರುಕಾಗಬಲ್ಲೆ  ಇತರೆಡೆ ಗಮನವ ಹರಿಸದೆ ಪಂಚೇಂದ್ರೀಯಗಳು ಕೇವಲ ಆತನ ಹಾದಿಯತ್ತ ತಮ್ಮ ಚಿತ್ತ ಹರಿಸಿವೆ. ಬರಲಿ ಆತ, ಒಂದೊಮ್ಮೆ ಎದುರು ನಿಲಲಿ…ಇರುಳಲಿ ನಿಶಾಚರ ಪ್ರಾಣಿಯಂತಾಗಿದ್ದ ಮನವು ಆತನೆದೆಯಲಿ ನಿದ್ರಿಸಿಬಿಡುವುದೋ…ಮುಂಜಾವಿನಲಿ, ಹಕ್ಕಿಗಳಿಂಚರದಿ ಬೆರೆತು ತಾನು ಹಾಡಾಗದೆ ಉಳಿದ ದನಿ ಮಾತಾಗುವುದೋ…ಅಪರಾಹ್ನದಿ ಸೂರ್ಯದೇವನ  ತಾಪದಲಿ ಮಿಂದು ಬೆಂದಿರುವ ಈ ಒಡಲು ಅವನ ಸುಕೋಮಲ ಸ್ಪರ್ಷಕೆ ತಣಿದು ಕಡಲಾಗುವುದೋ… ಮುಸ್ಸಂಜೆಯ ಈ ರಂಗು ಕೆನ್ನೆಗಂಟಿ ಲಜ್ಜೆಯ ಮಜ್ಜೆಯಾಗುವುದೋ…ಅಥವಾ ವಿರಹದ ಕುಪಿತತೆಯ ಕುರುಹಾಗುವುದೋ…  ಹ್ಹ ಹ್ಹ! ನಿನ್ನ ಬಗೆಗೆ ನನಗೆ ಗೊತ್ತಿಲ್ಲವೇ!.. ಅವನು ಬರುತ್ತಾನೆ..ಒಂದೋ ನೀನವನನ್ನು ನೋಡಿ ಮುಖವ ಸಿಂಡರಿಸುತ್ತಿಯೇ…ಅವನು ಬಳಿ ಬಂದಂತೆ ಒಂದು ಮೋಡ ಮಗದೊಂದು ಮೋಡವ ಬೆಂಬತ್ತುವಂತೆ ನಿಮ್ಮಿಬ್ಬರ ಆಟ ನಡೆಯುತ್ತದೆ. ಮತ್ತೆ ಅವು ಸೇರಲೇ ಬೇಕಲ್ಲವೇ…ಇಲ್ಲವಾದಲ್ಲಿ, ಅವನು ಬರುತ್ತಿರುವಂತೆ ಪಂಜರದಿಂದ ಹೊರಬಿಟ್ಟ ಪಕ್ಷಿಯಂತೆ, ಬೇಡನಿಟ್ಟ ಬಲೆಗೆ ಸಿಲುಕಿದ ಜಿಂಕೆಯೊಂದ ಅದು ಯಾರೋ ಬಿಡಿಸಿದಾಗ  ಛಂಗನೆ ನೆಗೆಯುತ್ತದೆ ನೋಡು ಹಾಗೆ ನೀನು ಓಡಿ ಹೋಗಿ ಆತನ ಯೋಗ ಕ್ಷೇಮ ವಿಚಾರಿಸುತ್ತೀಯೇ, ಸೂರ್ಯ ದೇವನು ತನ್ನೊಡಲ ಸೇರಲು ಕಡಲ ಮೈಬಣ್ಣ ರಂಗೇರುವಂತೆ,  ಅವನ ಮೊಗದಲ್ಲರಳೋ ಕಿರುನಗೆ ನಿನ್ನ ಮೊಗದಲ್ಲಿ ನಸುಗೆಂಪ ಹಮ್ಮಿಸುತ್ತದೆ. ಅಲ್ಲವೇ…!? ಮನದ ಮಾತುಗಳು ಕಲ್ಪನಾ ರೂಪದಲ್ಲಿ ದೃಶ್ಯಗಳಾಗಿ ನಯನಗಳ ಮುಂದೆ ಚಲಿಸಿದಾಗ ನಾನು ಪಿಸು ನಕ್ಕು ತಣ್ಣಗೆ ಹರಿಯುತ್ತಿದ್ದ ತೊರೆಯೊಳಗೆ ಕಾಲ ಇಳಿಬಿಟ್ಟು ಹರ್ಷಿಸಲಾರಂಭಿಸಿದೆ. ಅಷ್ಟರಲ್ಲಾಗಲೆ  ಮೀನುಗಳು ನನ್ನ ಪಾದೋಪಚಾರಕ್ಕೆ ತೊಡಗಿಕೊಂಡವು. ನನ್ನೊಳಗೆ ಕಚಗುಳಿಯ ಅನುಭೂತಿ…ಮೆಲ್ಲನೆ ಬಾಗಿ ನೀರ ಬೊಗಸೆಯಲಿ ಹಿಡಿದು ನೋಡಿದೆ ನನ್ನದೇ ಪ್ರತಿಬಿಂಬ…ಕಾಯುವಿಕೆಯಲಿ ನೋಟವ ನೆಟ್ಟು  ಕಳೆಗುಂದಿರುವ ನೇತ್ರಗಳು…ಚಿಂತನೆಗಳಲಿ ಗಂಟು ಕಟ್ಟಿರುವ ಹುಬ್ಬು, ನೊಸಲು…ಒಲವ ಸುಗಂಧಕ್ಕೆ ಕಾದು ಸೋಲೊಪ್ಪಿಕೊಂಡಿರುವ ನಾಸಿಕ…ಸಾವಿರ ಮಾತುಗಳ ಆಡುವ ತವಕತೆ ಮರೆಯಾಗಿ ಮೌನಕ್ಕೆ ಶರಣಾಗಿರುವ ತುಟಿಗಳು…ನೀರುಣ್ಣದೆ ಬಾಡಿದ ನೈದಿಲೆಯಂತಾಗಿರುವ ಮುಗುಳ್ನಗೆಗೆ ಹಿಗ್ಗಬೇಕಾಗಿದ್ದ ಕೆನ್ನೆ ಗಲ್ಲಗಳು…ಹೌದು, ನಿರೀಕ್ಷೆಗಳು ಸುಡುತ್ತವೆ. ಚಿಂತೆ, ಚಿಂತನೆಗಳನ್ನು ಸೀಳಿ ಆ ಗಾನ ಹೊಮ್ಮಿತು…ಕೊಲ್ಮಿಂಚೊಂದು ಬಂದು ಅಂಧಕಾರದಿ ಬೆವಿತಿರೋ ಜಗವ ಒಮ್ಮೆಗೆ ಬೆಳಗಿ ಹೋದಂತೆ ನನ್ನೊಳಗೆ ಭಾಸವಾಯಿತು. ಮುರಳಿಯ ಗಾನ…ಇದೇ ರಾಗಕೆ ಕಾಯುತ್ತಿದ್ದ ಕರ್ಣಗಳು ನೆಟ್ಟಗಾದವು, ಕಂಗಳು ಮಿಂಚಿದವು, ನಾಸಿಕ ಕೆರಳಿದವು, ತುಟಿಗಳು ಅರಳಿದವು…ಅತ್ತ ಹೊರಟೆ…ಹೌದು, ಇದು ಅವನದೇ ವೇಣುವಿನ ನಾದ…ಇಷ್ಟು ಕಾಯಿಸಿ, ಸತಾಯಿಸಿ ಇದೀಗ ಬಂದನೇ…ಒಡತಿ ಹಾಕುವ ಕಾಳಿಗಾಗಿ ಹಸಿವಿನಿಂದ ಕಾದು ಕೂರುವ ಪಂಜರದ ಶುಕದಂತೆ ನಾನು ಚಡಪಡಿಸಿ ಬಿಟ್ಟೆನಲ್ಲಾ…ನಾನೇ ಬಳಿ ಸಾಗಿ ಬರಲೆಂದು ಅಲ್ಲೆಲ್ಲೋ ಕುಳಿತು ಸುನಾದ ನುಡಿಸುತ್ತಿದ್ದಾನಲ್ಲಾ ಎಂದು ಹುಸಿಗೋಪ ನಟಿಸುತ್ತಾ ನಡೆದೆ…ಇದೀಗಲೇ ಹೋಗಿ ಅವನ ಹೆಗಲಿಗೊರಗಿ ಜಗವ ಮರೆಯಬೇಕು! ಪಾದಗಳು ಅದ್ಯಾವುದೋ ಶಕ್ತಿ ಒಲಿದಿರುವಂತೆ  ಹೆಜ್ಜೆ ಇಡುತ್ತಿದ್ದವು. ಆಗಲೇ ಆ ದೃಶ್ಯ ಕಾಲುಗಳಿಗೆ ವಿರಾಮ ನೀಡಿತು.  ಎಂತಹ ತನ್ಮಯತೆ! ಜಗವ ಮರೆಯಿಸಿ, ತಾನೂ  ಮರೆತಿರುವ ಜಗದ್ದೋದ್ಧಾರಕ..! ಇಳಿ ಸಂಜೆಯಲಿ ತಂಗಾಳಿಯ ಹಾಸುತ್ತಿರುವ ಹಸನ್ಮುಖಿ! ಜೊತೆಗೆ ಅವನ ಮಡಿಲಲಿ ತಲೆ ಇಟ್ಟು ಕಣ್ಣೆವೆಗಳ ಮುಚ್ಚಿ ಅದ್ಯಾವುದೋ ಅವ್ಯಾಹತ ಆನಂದದಿ ಮುಳುಗಿರುವ ದೇವಿ ರುಕ್ಮಿಣಿ. ಹೆಗಲು ಖಾಲಿ…! ಆದರೆ!? ಅವನ ಮನ ತುಂಬಿದೆಯಲ್ಲವೇ..?  ಹಿಂತಿರುಗಿ ನಡೆದೆ… ನಾ ರಾಧೆ… ****************************

ನಿರುತ್ತರ Read Post »

ಕಥಾಗುಚ್ಛ

ನಿಯತ್ತು

ಕಥೆ ನಿಯತ್ತು ಎಂ. ಆರ್.ಅನಸೂಯ ಹೊರಗಡೆ ಯಾರೋ ಬೆಲ್ ಮಾಡಿದರು,ಆಗ  ಅಡುಗೆ ಮನೆಯಲ್ಲಿದ್ದ ಜಾನಕಿ ಅಲ್ಲಿಂದಲೇ ಮಗಳಿಗೆ” ನೋಡೇ ಸುಧಾ ಅದ್ಯಾರು”. ಬಾಗಿಲು ತೆಗೆಯದೆ ಕಿಟಕಿಯಿಂದಲೇ ಹೊರಗಡೆ ನಿಂತಿದ್ದವರನ್ನು ಸುಧಾ “ಯಾರು ಬೇಕಿತ್ತು”  ಎಂದು ಕೇಳಿದಳು. ಸುಮಾರು ಐವತ್ತು ವರ್ಷದ  ಅವರು “ನನ್ನ ಹೆಸರು ಇಸ್ಮಾಯಿಲ್. ನಿಮ್ಮ ತಾಯಿಯವರ ಹತ್ರ ಮಾತಾಡ ಬೇಕಿತ್ತು . ಸ್ವಲ್ಪ ಕರೆಯಮ್ಮ’ ಎಂದರು.  ಒಳಗೆ  ಬಂದು ” ಅಮ್ಮ, ಅದ್ಯಾರೊ  ಇಸ್ಮಾಯಿಲ್ ಅಂತೆ ನಿನ್ನತ್ರ ಮಾತಾಡಬೇಕಂತೆ” ಎಂದಾಗ ಯಾರಪ್ಪ ಅವ್ರು ಎನ್ನುತ್ತಾ ಬಂದು ಅವರನ್ನು  ನೋಡುತ್ತಿದ್ದಂತೆಯೇ ” ಓ ನೀವಾ” ಎಂದರು. ಆ ವ್ಯಕ್ತಿ ಕೈ ಮುಗಿದು ನಮಸ್ಕರಿಸುತ್ತ ” ಒಳಗೆ ಬರಬಹುದೇನ್ರಮ್ಮ” ಎಂದು ಕೇಳುತ್ತ ಅಲ್ಲೇ ನಿಂತಿದ್ದರು. ಆಗ ಜಾನಕಿ ಇಷ್ಟವಿಲ್ಲದಿದ್ದರೂ “ಬನ್ರಿ”ಎನ್ನ ಬೇಕಾಯ್ತು. ಜಾನಕಿ ಕುಳಿತುಕೊಳ್ಳಿ ಎಂದು ಕುರ್ಚಿ ಕಡೆ ತೋರಿಸಿದರು  ಕುಳಿತ ಮೇಲೆ “ನಿಮಗೆ ನನ್ನ ಮೇಲೆ ಸಿಟ್ಟೈತೆ. ಬೇಜಾರ್ ಮಾಡ್ಕಬೇಡ್ರಿ. ನಿಮಗೆ ಸಿಟ್ಟು ಬರಂಗೆ ನಡ್ಕಂಡಿದೀನಮ್ಮ ಏನೋ ಕೆಟ್ಟ ಕಾಲ. ಇವತ್ತು ನಿಮ್ಮ ಋಣ ತೀರಿಸೊ ಕಾಲ ಬಂತ್ರಮ್ಮ. ತಗೊಳ್ರಿ ನೀವು ಕೊಟ್ಟ ಐವತ್ತು ಸಾವಿರವನ್ನ ಅಸಲಷ್ಟೆ ಕೊಡ್ತಿರೋದು. ನನ್ನ ಕೈಲಾಗದು ಇಷ್ಟೇನಮ್ಮ ಮುಂದೆ ಆ ಅಲ್ಲಾ ಶಕ್ತಿ ಕೊಟ್ರೆ ಬಡ್ಡೀನು ತೀರಿಸಿ ಬಿಡ್ತೀನಿ”  ಎನ್ನುತ್ತಾ ಟೇಬಲ್ ಮೇಲೆ ನೋಟುಗಳ ಕಂತೆಯಿಟ್ಟರು. ಆಗ ಜಾನಕಿ ದುಡ್ಡನ್ನು ತೆಗೆದುಕೊಳ್ಳುತ್ತ “ಈ ದುಡ್ಡು ಮತ್ತೆ     ವಾಪಸ್ ಬರುತ್ತೆ ಅನ್ಕೊಂಡೇ ಇರಲಿಲ್ಲ. ಅದರ  ಆಸೇನ ನಾವು ಯಾವತ್ತೋ ಕೈ ಬಿಟ್ಟು ಸುಮ್ಮನಾಗಿದ್ವಿ. ಏನೋ ನಿಮಗೆ  ಆ ದೇವರು ಒಳ್ಳೆ ಬುದ್ದಿ ಕೊಟ್ನಲ್ಲ. ನಾವು ನಿಮ್ಮ ಸ್ಥಿತಿ ಅರ್ಥ ಮಾಡ್ಕಂಡು ವಿಧಿಯಿಲ್ಲದೆ ಸುಮ್ಮನಾಗಿ ಬಿಟ್ವಿ  ಆ ದುಡ್ಡು ನಮ್ಮದಾಗಿದ್ದರೆ ನಮಗೆ ಸಿಗುತ್ತೆ ಇಲ್ಲದಿದ್ದರೆ ಇಲ್ಲಾ ಅಂತ” ಎಂದು ಹೇಳಿ ಸುಧಾಳಿಗೆ ಟೀ ಮಾಡಲು ಹೇಳಿದರು.ಟೀ ಕುಡಿಯುವಾಗ ” ನೀವು ಎಲ್ಲಿದೀರಿ ಈಗ” ಎಂದು ಜಾನಕಿ ಕೇಳಿದರು”ನಾನು ಬೆಂಗ್ಳೂರಲ್ಲೆ ಇದೀನಿ ನಾನವತ್ತು ನಿಮ್ಮನೆಗೆ ಬಂದಿದ್ನಲ್ಲ ಅದರ  ಮಾರನೆಯ ದಿನವೇ ಬೆಂಗ್ಳೂರಿಗೆ  ಹೋಗ್ಬಿಟ್ಟೆ. ಸಾಲ ಕೊಟ್ಟವರು  ಸುಮ್ಮನೆ ಬಿಡ್ತಾರಾ. ಸಾಲಗಾರರ ಕಾಟ  ತಡೀಲಾರದೆ ಅಂಗಡಿಯಲ್ಲಿದ್ದ ಸಾಮಾನು ಮಾರಿ ಅಂಗಡಿ ಮನೇನ ಅಡವಿಟ್ಟು ಸಾಲ ತೀರ್ಸಿದೆ ಬಾಡಿಗೆಯನ್ನು  ಮತ್ತೊಬ್ಬ ಸಾಲಗಾರನಿಗೆ ಬರೆದು ಕೊಟ್ಟುಬಿಟ್ಟೆ. ಮಗ ಓದ್ತಿದ್ದ. ಮನೆ ನಡಿಬೇಕಲ್ಲ. ಬೆಂಗಳೂರಲ್ಲಿದ್ದ ನನ್ನ ಹೆಂಡ್ತಿ ಅಣ್ಣನೆ ನಿಮ್ಮಂಥಾ ದೊಡ್ಡ ವ್ಯಾಪಾರಸ್ಥರ ಹತ್ರ ಸ್ಟೋರ್ ಕೀಪರ್  ಕೆಲ್ಸ ಕೊಡಿಸಿದ. ನನ್ನ ಕೆಲಸ ಅವ್ರಿಗೆ ಇಷ್ಟ ಆಯ್ತು. ಅವ್ರೇ ರಾತ್ರಿ ವಾಚ್ಮನ್ ಕೆಲಸನೂ ನನಗೆ ಕೊಟ್ರು.ಇರಕ್ಕೆ ಒಂದು ರೂಂ  ಕೊಟ್ರು. ಎರಡೂ  ಕೆಲ್ಸಕ್ಕೂ ಸೇರಿ  ಮೂವತ್ತು ಸಾವಿರ ಕೊಡ್ರಿದ್ರು. ಮನೆಗೆ ಹದಿನೈದು ಸಾವಿರ ಕೊಟ್ಟರೆ. ಸಾಲಕ್ಕಂತ ಹತ್ತು ಸಾವ್ರ ಹೋಗಿ ನನ್ನ ಖರ್ಚಿಗೆ  ಐದು ಸಾವಿರ ಇಟ್ಕಂತಿದ್ದೆ. ನಮ್ಮಮ್ಮನೂ ನನ್ನ ಹೆಂಡ್ತಿ ಮನೇಲಿ ಸುಮ್ನೆ ಇರದೆ ಹೂ ಕಟ್ಟಿ ಸಂಪಾದನೆ ಮಾಡಿದ್ರು. ಈಗ ಮಗನಿಗೆ ಕೆ.ಇ.ಬಿ. ನಲ್ಲಿ ಕೆಲಸ ಸಿಕ್ಕಿತು ಶಿವಮೊಗ್ಗದಲ್ಲಿ ಮನೆ ಮಾಡಿ ವರ್ಷ ಆಯ್ತು. ಎಲ್ಲರೂ ಅಲ್ಲೆ ಇದ್ದಾರೆ.ಮಗನು ದುಡಿದು ಸಾಲ ತೀರಿಸ್ತಿದಾನೆ.ಮನೆನೂ ಬಾಡಿಗೆ ಕೊಟ್ಟು ಅದರ ದುಡ್ಡನ್ನು ಸಾಲಕ್ಕೆ ಕಟ್ತಾ ಇದೀವಿ. ಸಾಲ ತೀರಿದ  ಮೇಲೆ ಮಗನಿಗೆ ಮದ್ವೆ ಮಾಡಿ ನಾನು ಕೆಲ್ಸ ಬಿಟ್ಬಿಟ್ಟು ಬಂದು ಎಲ್ಲಾರೂ ಒಂದತ್ರ ಇರ್ತಿವಿ. ಈ ಐವತ್ತು ಸಾವಿರ ನಾನು ದುಡಿದಿರ  ದುಡ್ಡು. ನಾನು ಊರು ಬಿಟ್ಟೋಗಿ ಎಂಟು ವರ್ಷ ಆಯ್ತು ವನವಾಸ ಆದಂಗಾಯ್ತು ಮಗನಿಗೆ ಕೆಲಸ ಸಿಕ್ಕಿದ ಮೇಲೆ ನೆಮ್ಮದಿಯಾಗಿ ನಿರಾಳವಾಯ್ತು”ಎಂದು ಹೇಳಿ ಮುಗ್ಸಿದ.  ಸುಧಾಳನ್ನು ನೋಡಿ “ಎಲ್ಲಾ ಅವರಜ್ಜಿ ಇದ್ದಂಗೆ” ಎಂದು ಹೇಳಿ ಜಾನಕಿಯವರ ಅತ್ತೆ ಕಮಲಮ್ಮನವರನ್ನು ಕೇಳಿದ  ಅವರು ತಮ್ಮ ಮಗಳ ಮನೇಲೀ ನಾಲ್ಕೈದು ದಿನ ಇದ್ದು ಬರಲು ಹೋಗಿದ್ದಾರೆ ಎಂದಾಗ ಅವರ ಕೈ ರುಚಿಯನ್ನು ಕೊಡುತ್ತಿದ್ದ ಊಟತಿಂಡಿಯನ್ನು ನೆನೆದು ಹೊಗಳಿದರು ಜಾನಕಿಯ ಗಂಡ ಪ್ರಕಾಶಣ್ಣನು ಬೆಂಗಳೂರಿಗೆ ಹೋದ ವಿಚಾರ ತಿಳಿದು ಮತ್ತೊಮ್ಮೆ ಬಂದಾಗ ಮಾತಾಡಿಸ್ತೀನಿ ಎನ್ನುತ್ತ ಹೊರಡುವಾಗ ಮತ್ತೆ ನಡೆದ ವಿಷಯಗಳಿಗೆಲ್ಲ ಬೇಸರ ಮಾಡಿ ಕೊಳ್ಳಬಾರದೆಂದುಹೇಳಿದರು. ಅವರು ಹೋದ ಮೇಲೆ ಸುಧಾ ” ಯಾರಮ್ಮ ಇವ್ರು ನನಗೀಗ ಇವರನ್ನು ನೋಡಿದ ನೆನಪಾಯ್ತು” ಎಂದು  ಕೇಳಿದಾಗ ಜಾನಕಿ “ಅದೊಂದು ದೊಡ್ಡ ಕತೆ” ಎನ್ನುತ್ತಲೇ ಅಡುಗೆ ಮನೆಯತ್ತ ನಡೆದರೆ ಸುಧಾ ಸಹಾ ಅವರ ಹಿಂದೆಯೇ ಹೊರಟಳು. ಜಾನಕಿ ಕಥೆಯ ಪೀಠಿಕೆ ಶುರು ಮಾಡಿದಳು “ಈಗ ಬಂದಿದ್ದಲ್ಲ ಇಸ್ಮಾಯಿಲ್ ಅವ್ರ ತಂದೆ ಇಬ್ರಾಹಿಂ ಹಾಗು ನಿಮ್ಮ ತಾತ ಚಿಕ್ಕಂದಿನಿಂದ್ಲೂ ಒಳ್ಳೆಯ ಸ್ನೇಹಿತರು ಇಬ್ಬರ ನಡುವೆ ಹಣಕಾಸಿನ ವ್ಯವಹಾರವೂ ಇತ್ತು. ಅದು ನಂಬಿಕೆ ಹಾಗೂ ನಿಯತ್ತಿನಿಂದ ಕೂಡಿತ್ತು. ಆ ಸ್ರೇಹ ಹಾಗೆ ಮುಂದುವರಿಯುತ್ತ ಅವರ ಮಕ್ಕಳ ಕಾಲಕ್ಕೂ ಬಂದಿತ್ತು ಎರಡು ಕುಟುಂಬಗಳ ನಡುವಿನ ವಿಶ್ವಾಸಕ್ಕೆ ಯಾವುದೇ  ಭಂಗ ಬರದೆ ಎಲ್ಲವು ಚೆನ್ನಾಗೆ ಇತ್ತು. ಇಬ್ರಾಹಿಂರವರು ಸಣ್ಣಕಿರಾಣಿ ಅಂಗಡಿ ಇಟ್ಟಿದ್ದರು. ಅವರಪ್ನ ತೀರಿಕೊಂಡ ಮೇಲೆ ಇಸ್ಮಾಯಿಲ್ ನಡೆಸಿಕೊಂಡು ಹೋಗುತ್ತಿದ್ದರು. ಅಂಗಡಿಯ ಜೊತೆಗೆ ತೆಂಗಿನಕಾಯಿಯ ಹೋಲ್ ಸೇಲ್ ವ್ಯಾಪಾರ ಮಾಡುವ ಉತ್ಸಾಹದಿಂದ ಶುರುಮಾಡಿದರು.  ತಾವು ಕೂಡಿಟ್ಟ ಹಣದೊಂದಿಗೆ ಸ್ಟಲ್ಪ ಸಾಲವನ್ನು ಮಾಡಿ ಹಣ ಹೊಂದಿಸಿಕೊಂಡು ಹೊಸ ವ್ಯವಹಾರಕ್ಕೆ ಹಾಕಿದ್ದರು ಯಾಕೋ ಏನೋ ಹೊಸ ವ್ಯವಹಾರದಲ್ಲಿ ಏಳ್ಗೆಯಾಗದೆ  ನಷ್ಟವಾಗ ತೊಡಗಿತು. ಹೊಸ ವ್ಯವಹಾರದ ಆಸಕ್ತಿಯ ಫಲವಾಗಿ ಕಿರಾಣಿ ಅಂಗಡಿಯೂ ಸರಿಯಾಗಿ ನಡೆಯದೆ  ಅದರಲ್ಲೂ ಆದಾಯ ಕಡಿಮೆಯಾಯಿತು.ಅಂದುಕೊಂಡ ಹಾಗೆ ಏನೂ ನಡೆಯದೆ ಎಲ್ಲವೂ ಏರುಪೇರಾಗಿ ಬಿಟ್ಟಿತು ಒಟ್ನಲ್ಲಿ ಗ್ರಹಚಾರ ಕೆಟ್ಟ ಪರಿಣಾಮವೋ ಏನೋ ಅವರ ಕೆಟ್ಟ ದಿನಗಳು ಪ್ರಾರಂಭವಾದವು. ಅದು ಸಾಲದೆಂಬಂತೆ  ಆಗಲೇ ಅವರ ತಾಯಿಗೆ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಬೇಕಾಯ್ತು. ಹೊಸ ವ್ಯವಹಾರದಲ್ಲಾದ ನಷ್ಟ ಮತ್ತು ಆಸ್ಪತ್ರೆ ಖರ್ಚಿಗಾಗಿ ಮತ್ತೆ ಸಾಲಮಾಡದೆ ಬೇರೆ ದಾರಿಯೆ ಇರಲಿಲ್ಲ ಆಗ ನಮ್ಮ ಹತ್ರ ಒಂದು ಲಕ್ಷ ರೂಪಾಯಿ ಸಾಲ ತೆಗೆದರು. ಅವರ ತಾಯಿ ಆರೋಗ್ಯವಂತರಾಗಿ ಮನೆಗೇ  ಬಂದರೂ ಹಣಕಾಸಿನ ಪರಿಸ್ಥಿತಿ ಮಾತ್ರ ತೀರ ಹದಗೆಟ್ಟು ಹೋಗಿತ್ತು ಸಾಲಗಾರರ ಕಾಟದಿಂದಾಗಿ ಮರ್ಯಾದೆಗೆ ಹೆದರಿ ಅವರದೆ ಸ್ವಂತ ಅಂಗಡಿ ಮನೆಯನ್ನು ಭೋಗ್ಯಕ್ಕೆ ಹಾಕಿ ಅರ್ಧ ಸಾಲ ತೀರಿಸಿ ಹೆಂಡತಿಯ ಒಡವೆಗಳನ್ನೂ ಮಾರಿದರು. ಆಗ ನಿಮ್ಮಪ್ಪ ಸಾಲದ ದುಡ್ಡು ಕೇಳಿದರು. ಆಗ ಅವನಲ್ಲಿದ್ದ ಐವತ್ತು ಸಾವಿರ ಕೊಟ್ಟು “ಉಳಿದ ಹಣ ಈಗಲೇ ಕೊಡಕ್ಕೆ ಆಗಲ್ಲ. ಬೇರೆ ಕಡೆ ಇನ್ನೂ ಸಾಲ ಐತೆ ನೀವು ಈಗಲೇ ಕೊಡಬೇಕು ಅಂದ್ರೆ ನೇಣು ಹಾಕ್ಕಂಡು ಸಾಯದು ಬಿಟ್ರೆ ಇನ್ನೇನೂ ಮಾಡಕ್ಕಾಗಲ್ಲ. ನನಗೆ ಸ್ಟಲ್ಪ ಟೈಂ ಕೊಡ್ರಿ ನಿಮ್ಮ ಋಣ ಇಟ್ಕೊಂಡು ಸಾಯಲ್ಲ” ಎಂದು ಕೈ ಮುಗಿದು ಕೇಳ್ಕಂಡಿದ್ದರು. ಆಗ ನಿಮ್ಮಅಜ್ಜಿ ನಿಮ್ಮಪ್ಪನ ಹತ್ರ “ಪ್ರಕಾಶ, ಒತ್ತಡ ಹಾಕ್ಬೇಡ. ನಿಯತ್ತಿನ ಮನುಷ್ಯನೇ ಪಾಪ.ಲೇಟಾದ್ರು ದುಡ್ಡು ಬರುತ್ತೆ”ಎಂದುಹೇಳ್ಬಿಟ್ಟಿದ್ದರು.   ಮಾರನೇ ದಿನವೇ ಇಸ್ಮಾಯಿಲ್ ಊರು ಬಿಟ್ಟಿದ್ದ. ಆಗ ನಿಮ್ಮಪ್ಪ ಹಣ ವಾಪಸ್ ಬರುವ ಆಸೆಯನ್ನೇ ಕೈ ಬಿಟ್ಟರು “ಅದಾದ ಮೇಲೆ ಇವತ್ತೇ ನಾನು ನೋಡ್ತಿರೋದು. ಇನ್ನು ಮುಂದಿನ ಕತೆನೆಲ್ಲಾ ಅವನೇ ಹೇಳಿದನಲ್ಲ. ಅಂತು ಅವ್ರ ನಿಯತ್ತು ಮೆಚ್ಚಬೇಕು.ಅದಕ್ಕೆ ಅಲ್ವೇ ಹೇಳೋದು ದುಡ್ಡು ಶಾಶ್ವತ ಅಲ್ಲ ಅಂತ “ಎಂದು ಜಾನಕಿ ಹೇಳಿದರೆ ” ಎಂಟು ವರ್ಷ ಆದ ಮೇಲೆ ಅವರಾಗೇ ಬಂದು ದುಡ್ಡು ಕೊಟ್ಟು ಸಾಲ ತೀರ್ಸಿದಾರೆ.ಅವ್ರು ನಿಜವಾಗ್ಲೂ ಈಗಿನ ಕಾಲಕ್ಕೇ ಗ್ರೇಟ್ ಕಣಮ್ಮ”ಎಂದು ಸುಧಾ ಸಹಾ ಹೊಗಳಿದಳು. …….

ನಿಯತ್ತು Read Post »

ಕಥಾಗುಚ್ಛ

ಮಿಸ್ಟರ್ ಅನ್ ಫ್ರೆಂಡ್

ತೆಲುಗಿನಿಂದ ಅನುವಾದವಾದ ಕಥೆ ತೆಲುಗು ಮೂಲಃ ಶ್ರೀ ರಾಮದುರ್ಗಂ ಮಧುಸೂದನ ರಾವು                   ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು ಈಗೇನು ಮಾಡೋದು…..? ಗೇಟಿನಿಂದಲೇ ಹೊರಗೋಡಿಸಿದ್ದರೆ ಚೆನ್ನಾಗಿರೋದಾ….. ಈಗಂತೂ ಆ ಛಾನ್ಸ್ ಇಲ್ಲ. ಬಂದು ಕೂತಿದ್ದಾನೆ. ಬರೀ ಪರರ ಜೀವನಗಳಲ್ಲಿ ಇಣುಕಿ ನೋಡುವುದು ಬಿಟ್ಟರೆ ಇಷ್ಟು ವರ್ಷಗಳ ತನ್ನ ಜೀವನದಲ್ಲಿ ಮಾಡಿದ್ದು ಬೇರೇ ಏನಾದರೂ ಇದೆಯಾ ? ಎಲ್ಲಿ ಸಿಕ್ಕರೆ ಅಲ್ಲಿ…. ಯಾವಗ ಸಿಕ್ಕರೆ ಅವಾಗ…. ಹೇಗೆ ಸಿಕ್ಕರೆ ಹಾಗೆ ತೂರಿಬಿಡೋದೇ! ********** ಉಂಡಾಡಿ….. ಗಾಳಿ ಜೀವ…. ಶಿವಕುಮಾರನ ನೆನಪು ಬಂದಾಕ್ಷಣ ಮನಸ್ಸಿನಲ್ಲಿ ಹೊಳೆಯುವ ತಕ್ಷಣದ ಮಾತು ಆ ಎರಡೇ ! ನನಗಿನ್ನೂ ಚೆನ್ನಾಗಿ ನೆನಪಿದೆ. ಅವನನ್ನ ಜೀಜೆ ( ಗಾಳಿ ಜೀವ) ಎಂದು ಕರೆಯುತ್ತಿದ್ದೆವು. ನನ್ನ ಜೀವನದಲ್ಲಿ ಕನಸಿನಲ್ಲೂ ಸ್ವಾಗತಿಸದ ಮನುಷ್ಯ ಯಾರಾದರೂ ಇದ್ದಾರಾ ಎಂದರೆ ಅದು ಅವನೊಬ್ಬನೇ ! ಹಾಗಂತ ಇಬ್ಬರೂ ಗಟ್ಟಿಯಾಗಿ ಜಗಳ ಮಾಡಿಲ್ಲ. ಮಾತಾಡಿದ್ದು ಸಹ ತುಂಬಾ ಕಮ್ಮಿ !                                                           ********** ಶಾಲಾ ಜೀವನದ ಸಹಪಾಠಿ. ಯಾವಾಗಲೂ ಯಾವ ಗಿಡದ ಕೆಳಗೋ ಅಥವಾ ಆಟದ ಮೈದಾನದಲ್ಲೋ ಕಾಣಿಸಿಕೊಳ್ಳುತ್ತಿದ್ದ…. ತುಂಡಾದ ಗಾಳಿ ಪಟದ ಹಾಗೆ ! ನೋಡಿದಾಗಲೆಲ್ಲ ನಗುತ್ತಿದ್ದ….. ತನ್ನೆತ್ತರದ ನಿರ್ಲಕ್ಷ್ಯದಂತೆ ! ಧರಿಸುವ ದಿರಿಸಿನ ಮೇಲೆ ಗಮನ ಇರುತ್ತಿರಲಿಲ್ಲ. ಕಾಲಲ್ಲಿ ಚಪ್ಪಲಿ ಇಲ್ಲದೆ ತಿರುಗುತ್ತಿದ್ದ ಒಬ್ಬನೇ ವಿದ್ಯಾರ್ಥಿ ನಮ್ಮ ಶಾಲೆಯಲ್ಲಿ ಎಂದರೆ ಇವನೇ ! ಅಷ್ಟೇ ಅಲ್ಲ. ನನ್ನ ಸ್ವಾಭಿಮಾನಕ್ಕೆ ಮೊದಲಸಲ ಧಕ್ಕೆ ತಂದವನೂ ಇವನೇ. ಸದಾ ಕ್ಲಾಸಿನಲ್ಲಿ ನಾನೇ ಮೊದಲಿಗನಾಗುವಂತೆ ನೋಡಿಕೊಳ್ಳುತ್ತಿದ್ದೆ. ಟೆನ್ತ್ ಕ್ಲಾಸಿನ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಶಿವ ಲೆಕ್ಕದಲ್ಲಿ ಮೊದಲಿಗನಾಗಿದ್ದ. ಆ ದಿನಗಳಲ್ಲಿ ಅದೊಂದು ಸೆನ್ಸೇಷನ್ ! ಹಿಂದಿನ ಬೆಂಚಿನಲ್ಲಿ ಇದ್ದಾನಾ ಇಲ್ಲವಾ ಎನ್ನುವಷ್ಟು ಸೈಲೆಂಟಾಗಿ ಇರುವ ಹುಡುಗ ಇದ್ದಕ್ಕಿದ್ದಂತೆ ಎಲ್ಲರ ಕಣ್ಣಿಗೆ ಬಿದ್ದ. ’ ಎಷ್ಟು ಸೈಲೆಂಟಾಗಿರ್ತೀಯಲ್ಲ… ಅಷ್ಟು ಮಾರ್ಕ್ ಹೇಗೆ ತೆಗೆದೆ ಮಾರಾಯಾ ’ ಅಂತ ಕೇಳಿದರೆ… ’ ಓದಿದ್ದೇ ಬಂದರೆ ಯಾರಾದರೂ ತೆಗೀತಾರೆ. ಇದರಲ್ಲೇನಿದೆ ’ ಅಂತ ಕಾಜುವಲ್ಲಾಗಿ ಉತ್ತರ ಕೊಟ್ಟಿದ್ದ. ಆದರೆ ಸೋಜಿಗದ ಸಂಗತಿ ಎಂದರೆ ಮತ್ತೆ ಯಾವಾಗಲೂ ಅವನು ಅಷ್ಟು ಮಾರ್ಕು ತೆಗಿಯಲಿಲ್ಲ. ಬರೀ ಬೇಕಾಗುವಷ್ಟು ಮಾರ್ಕುಗಳಿಂದಲೇ ಟೆನ್ತ್ ಪಾಸಾದ. ಆಗಲೇ ಅವನ ತಂದೆ ತೀರಿಹೋದರು. ಮನೆ ನಡೆಯೋದೇ ಕಷ್ಟವಾಯಿತು. ಸರಿಯಾಗಿ ಆರು ತಿಂಗಳ ನಂತರ….. ಬೀದಿ ಕೊನೆಯ ಶಿವಾಲಯದಲ್ಲಿ ಪೂಜಾರಿಯಾಗಿ ಕಾಣಿಸಿಕೊಂಡ. ಅಲ್ಲಿಯವರೆಗೆ ಮಾತ್ರ ನನಗೆ ನೆನಪು. ಮತ್ತೆ ನಾನು ಆ ಊರು ಬಿಟ್ಟಿದ್ದೆ… ಅಲ್ಲಿಯ ನೆನಪುಗಳನ್ನು ಸಹ. ****** ಇದೆಲ್ಲ ನಲವತ್ತು ವರ್ಷಗಳ ಕೆಳಗಿನ ಮಾತು ! ಇವತ್ತು ಮತ್ತೆ ನೆನಪಿಗೆ ತಂದುಕೊಳ್ಳಬೇಕಾಗಿದೆ. ಎಲ್ಲಿಯ ಕರ್ನೂಲು ಎಲ್ಲಿಯ ಕೆನಡಾ. ತಾನು ಇಲ್ಲಿಗೆ ಹೇಗೆ ಬಂದದ್ದು ?… ತಾನು ಇಲ್ಲಿರುವುದು ಮೂರನೆಯ ಕಣ್ಣಿಗೆ ಗೊತ್ತಿರಲಿಲ್ಲ…. ಅಂಥಾದ್ರಲ್ಲಿ ಇವನಿಗೆ ಹೇಗೆ ಗೊತ್ತಾಯಿತು ? ರಿಷಿಗೆ ಸಿಟ್ಟು ಉಕ್ಕುಕ್ಕಿ ಬರುತ್ತಿತ್ತು …. ತನ್ನ ಮೇಲೆ…. ತನ್ನ ಬದುಕಿನ ಮೇಲೆ…. ಶಿವನ ಮೇಲೆ….. ಮಾತಾಡಿಸಲೇ ಬೇಕಾಗಿ ಬಂದ ಈ ಸಂದರ್ಭದ ಮೇಲೆ. ….. ಈಗೇನು ಮಾಡೋದು? ಮತ್ತೆ ಪ್ರಶ್ನೆ ಮೊದಲಿಗೇ ಬಂತು. ತಲೆ ಕೊಡವಿ ಎದ್ದ ಅನಿವಾರ್ಯವೆನ್ನುವಂತೆ. ******* ಐದೇ ನಿಮಿಷದ ಆತಿಥ್ಯ. ಅದೂ ಎಷ್ಟು ಬೇಕೋ ಅಷ್ಟು. “ ಹಾಯ್ ! ಹೇಗಿದ್ದಿಯಾ ?…. ಸಾರೀ ಹೇಗಿದ್ದೀರಿ? “ ರಿಷಿಯನ್ನು ನೋಡಿದ ಶಿವ ವಿಶ್ ಮಾಡಿದ. “ ಫರ್ವಾ ಇಲ್ಲ. ನೀನು ಹೇಗಿದ್ದೀಯಾ ?” ತುಟಿಯ ಮೇಲೆ ಬಲವಂತದ ನಗೆಯನ್ನು ಬಳೆದುಕೊಂಡ ರಿಷಿ. “ ಓ ಸೂಪರ್ ! ಎರಡು ವಾರದ ಹಿಂದೆ ಕೆನಡಾಗೆ ಬಂದೆ. ನನ್ನ ಅಣ್ಣನ ಮಗ ಇಲ್ಲಿ ಡಾಕ್ಟರ್. ಅವನೇ ತುಂಬಾ ಒತ್ತಾಯ ಮಾಡಿ ಎಳ್ಕೊಂಡು ಬಂದ… ಕೆನಡಾ ತೋರಿಸ್ತೇನೆ ಅಂತ.” ಶಿವ ತಮಾಷೆಯಾಗಿ ನಗುತ್ತಾ ಮಾತಾಡ್ತಿದ್ದರೆ ರಿಷಿ ನಿರ್ವಿಕಾರವಾಗಿ ನೋಡುತ್ತಿದ್ದ. ಅದೇ ನಗು.. ನಲವತ್ತು ವರ್ಷ ಕಳೆದರೂ ಮಾಸಿಲ್ಲ. ಅವನಲ್ಲಿ ನಗು ಹೇಗೆ ಹುಟ್ಟುತ್ತೋ ರಿಷಿಗೆ ಅರ್ಥವಾಗದ ವಿಷಯ. ತಾನು ದಿನಾಲೂ ಐದಾರು ಮೀಟಿಂಗ್ ಅಟೆಂಡ್ ಮಾಡ್ತಾನೆ. ಕಂಪೆನಿಗಳಿಗೆ ಸಂಬಂಧ ಪಟ್ಟ ಸೀರಿಯಸ್ ನಿರ್ಣಯಗಳನ್ನು… ನಿರ್ದಾಕ್ಷಿಣ್ಯ ನಿರ್ಣಯಗಳನ್ನು.. ಹೀಗೆ ಚಿಟಿಕೆ ಹೊಡೆಯೋದರಲ್ಲಿ ತೊಗೊಳ್ಳಬಲ್ಲ. ಆದರೆ ಈ ತರದ ನಗೆಗಾಗಿ ಎಂದೂ ಪ್ರಯತ್ನಿಸಿಲ್ಲ. ತನ್ನ ಪರ್ಸನಲ್ ಟ್ರೈನರ್ ನ ದೂರು ಇದೇ ! “ ಸರ್! ನೀವೆಲ್ಲ ಓಕೇ. ಆದರೆ ನಿಮ್ಮಲ್ಲಿ ಸ್ಮೈಲ್ ಈಸ್ ಮಿಸ್ಸಿಂಗ್ ! “ ಅಂತ. ಶಿವನ್ನ ನೋಡಿದಾಗ ಮತ್ತೆ ಆ ಮಾತುಗಳು ನೆನಪಿಗೆ ಬಂದವು. “ ಡಾಕ್ಟರಾ….” “ ಹೌದು. ಗೌರೀಪತಿ ವೇದುಲ….. ಆನ್ಕಾಲಜಿಸ್ಟ್. ಅವನ ಹೆಂಡತಿ ಹಾರಿಕಾ, ರೇಡಿಯಾಲಜಿಸ್ಟ್. “ ರಿಷಿ ತಲೆ ಅಲ್ಲಾಡಿಸಿದ. ಏನೂ ಮಾತಾಡಲಿಲ್ಲ. ಕಣ್ಣ ಹಿಂದೆ ಒಂದು ನೆರಳು ಹಾದು ಮರೆಯಾಯ್ತು. “ ನೀನು ಇಲ್ಲಿದ್ದೀಯಾ ಅಂತ ಗೊತ್ತಾಯ್ತು. ಕರ್ನೂಲಿನ ದೋಸ್ತನನ್ನು ಕೆನಡಾದಲ್ಲಿ ಭೇಟಿ ಮಾಡೋದು…. ಭಾರೀ ಗಮ್ಮತ್ತಾಗಿದೆ ಅಲ್ಲಾ …” ರಿಷಿ ಮುಜುಗರದಿಂದ ಮಿಸುಕಾಡಿದ. “ ಶಿವ…. ಸಾರೀ. ನನಗೆ ಪ್ರಿ ಫಿಕ್ಸ್ಡ್ ಷೆಡ್ಯೂಲ್ ಇದೆ… ಮತ್ತೆ ಸಿಗೋಣ… “ “ ಓ ಹೌದಾ… ಇಟ್ಸ್ ಒಕೆ.. ಖಂಡಿತಾ ಸಿಗೋಣ. “ “ ಹೇಗೆ ಹೋಗ್ತಿಯಾ ….ಇರು. ನನ್ನ ಡ್ರೈವರ್ ಡ್ರಾಪ್ ಮಾಡ್ತಾನೆ “ ಫೋನ್ ಮಾಡಲು ಹೋದ ರಿಷಿಯನ್ನು ಶಿವ ತಡೆದ. “ ಬೇಡ… ಬೇಡ. ಡಾಕ್ಟರ್ ನ ಕಾರಿದೆ. ಅವರಿಬ್ಬರೂ ಬರೋದ್ರಲ್ಲಿ ರಾತ್ರಿಯಾಗತ್ತೆ. ನಾನು ಸ್ವಲ್ಪ ಹಾಗೆ ಒಂದು ಸುತ್ತು ಹಾಕಿ ಮನೆ ಸೇರ್ತೀನಿ…..” ಬಾಗಿಲ ವರೆಗೆ ಹೋದ ಶಿವ ಹಿಂದಿರುಗಿದ. “ ರಿಷಿ! ಎಲ್ಲಾ ಸರಿಯಾಗಿದೆಯಾ.. “ ಒಂದು ಕ್ಷಣ ಕಾಲ ನಿಶ್ಶಬ್ದ… “ ಯಾ… ಯಾಕೆ ಹಾಗೆ ಕೇಳ್ತಿದ್ದಿ ?” ತಡವರಿಸುತ್ತಾ ಕೇಳಿದ ರಿಷಿ. “ಏನಿಲ್ಲ. ಜಸ್ಟ್ ಕೇಳಬೇಕೆನಿಸಿತು. ಇಂಡಿಯಾಗೆ ವಾಪಸ್ ಹೊಗೋದರಲ್ಲಿ ಮತ್ತೆ ಸಿಗ್ತೀನಿ.” ಶಿವ ಹೋದಮೇಲೆ ಸೋಫಾದ ಮೇಲೆ ಕುಸಿದ ನಿತ್ರಾಣವಾಗಿ. ************ ರಿಷಿ ತನ್ನ ಜೀವನದಲ್ಲಿ ಯಾವುದುಕ್ಕಾಗಿಯೂ ನಿಲ್ಲಲಿಲ್ಲ. ಧಾವಂತದಲ್ಲೇ ಐದು ದಶಕ ದಾಟಿದ್ದ. ಕೆಲಸಕ್ಕೆ ಸೇರಿದ್ದರಿಂದ ಹಿಡಿದು…. ನೂರಾರು ಜನಕ್ಕೆ ಕೆಲಸ ಕೊಡುವ ಹುದ್ದೆಗೆ ತುಂಬಾ ಸುಲಭವಾಗಿ ಸೇರಿದ್ದ. ಈ ಪಯಣದಲ್ಲಿ ಕಷ್ಟಗಳು ಇರಲಿಲ್ಲವೆಂತಲ್ಲ, ಬೇಕಾದಷ್ಟು.. ಅದರೆ ಅವುಗಳನ್ನು ಲೆಕ್ಕ ಮಾಡದಷ್ಟು ನಿರ್ಲಕ್ಷ್ಯ ಅಭ್ಯಾಸ ಮಾಡಿಕೊಂಡಿದ್ದ.  ಗುರಿ ಮುಟ್ಟ ಬೇಕಾದರೆ…. ಮುಟ್ಟುವ ವರೆಗೆ ಪ್ರಯತ್ನಿಸುವುದೇ … ಎನ್ನುವ ಸೂತ್ರವನ್ನು ನಂಬಿದ್ದ… ಮತ್ತೆ ಆಚರಿಸಿದ್ದ. ನಲವತ್ತರ ವಯಸ್ಸಿಗೆ ಉದ್ದಿಮೆದಾರ. ರಿಷಿ ಸೊಲ್ಯೂಷನ್ಸ್ ಅಂತ ಶುರುವಾಗಿ ಈಗ ರಿಷಿ ಗ್ರೂಪ್ ಆಫ್ ಇಂಡಸ್ಟ್ರೀಸ್ ವರೆಗೆ ಬೆಳೆಸಿದ್ದ. ಮಗಳಿಗೆ ಮದುವೆ ಮಾಡಿ ಅಳಿಯನಿಗೆ ಕಂಪೆನಿಯಲ್ಲಿ ಹೊಣೆಗಾರನನ್ನಾಗಿ ಮಾಡಿದ. ಮಗ ಎಂಡಿ ಯಾಗಿದ್ದು ಗ್ರೂಪಿನ ವ್ಯವಹಾರಗಳನ್ನೆಲ್ಲ ನೋಡಿಕೊಳ್ಳುತ್ತಿದ್ದ. ಆದರೆ ಜೀವನದಲ್ಲಿ ಮೊದಲನೆಯ ಸಲ ಬಹು ಆಶ್ಚರ್ಯವಾಗಿ ಸ್ವಲ್ಪ ನಿಲ್ಲಬೇಕಾಗಿ ಬಂತು. ಆರಾಮದ ಸಲುವಾಗಿ ಕೆನಡಾಗೆ ಬಂದಿದ್ದ. ರಿಷಿಗೆ ಕೆನಡಾ ಫೇವರೆಟ್ ಪ್ಲೇಸ್. ತನ್ನ ಹೆಂಡತಿ ಮಹಿತಾ ತೀರಿಕೊಂಡ ಮೇಲೆ ಪೇರಿಕೊಂಡ ಒಬ್ಬಂಟಿತನವನ್ನು ಹೋಗಲಾಡಿಸಲು ಪ್ರತಿ ವರ್ಷವೂ ಇಲ್ಲಿಗೆ ಬರುತ್ತಿದ್ದ. ರಿಷಿಗೆ ಮೊದಲಿನಿಂದಲು ಯಾವ ವಿಷಯವನ್ನಾದರೂ ಗೋಪ್ಯವಾಗಿ ಇಡುವುದು ಅಭ್ಯಾಸ. ಅದೂ ಕಂಪೆನಿಯ ವಿಷಯವೆಂದರೆ ಇನ್ನೂ ಸರಿ.. ತೀರ ಕಠಿಣವಾಗಿರುತ್ತಿದ್ದ. ತಾನು ಕೆನಡಾಗೆ ಬಂದಿರುವ ವಿಷಯ ಯಾರಿಗೂ ಗೊತ್ತಾಗಂತೆ ನೋಡಿಕೊಂಡಿದ್ದ. ಎಲ್ಲ ಪಕ್ಕಾ ಪ್ಲಾನ್ ಮಾಡಿಯೇ ತನ್ನ ಟೂರ್ ಕನ್ಪರ್ಮ್ ಮಾಡಿಕೊಂಡಿದ್ದ. ಬಂದು ಒಂದು ತಿಂಗಳಾಗಿದ್ದರು ತಾನು ಇಲ್ಲಿ ಇರುವುದು ಯಾರಿಗೂ ಗೊತ್ತಾಗದ ಹಾಗೆ ತನ್ನ ಪರ್ಸನಲ್ ಸ್ಟಾಫ್ ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲಾ ಆದರೂ, ಶಿವ ಅದು ಹೇಗೆ ಕಂಡು ಹಿಡಿದ? ಸ್ವಲ್ಪ ಹೊತ್ತಿಗೆ ಏನೋ ಹೊಳೆಯಿತು. ಅವನಿಗೆ ವಿಷಯ ಹೇಗೆ ತಿಳಿಯಿತೋ ಅರ್ಥವಾಯಿತು. ********** “ ಹಾಯ್ ಸರ್……ಹೇಗಿದ್ದೀರಿ? “ ಎನ್ನುತ್ತ ಗೌರೀಪತಿ ನಗುತ್ತ ಒಳಬಂದ. “ ಯಾ ಫರ್ವಾ ಇಲ್ಲ….” ಧ್ವನಿ ಬಾವಿಯೊಳಗಿಂದ ಬಂದಂತೆ ನೀರಸವಾಗಿತ್ತು. “ ಒನ್ ಮಿನಿಟ್…. “ ಎನ್ನುತ್ತ ಪಲ್ಸ್, ಬಿಪಿ ಚೆಕ್ ಮಾಡಿದ. “ ಹಾ.. ಒಕೆ. ಹೇಳಿ. ತುಂಬಾ ನಿತ್ರಾಣ ಎನಿಸುತ್ತಿದೆಯೇ …” ’ ಹೌದು. ತುಂಬಾನೇ….ಒಮ್ಮೊಮ್ಮೆ ಏಳಲಿಕ್ಕೆ ಸಹ ಬರದ ಹಾಗೆ….” “ ವೆಲ್… “ ಯಾರಿಗೋ ಕಾಲ್ ಮಾಡಿದ. “ ಸರ್. ಇವತ್ತಿನಿಂದ ನಿಮಗೆ ಪರ್ಸನಲ್ ಡೈಟಿಷಿಯನ್ ಬರ್ತಾರೆ. ಷಿ ಈಜ್ ಬೃಂದಾ ಫ್ರಂ ಅವರ್ ಹಾಸ್ಪಿಟಲ್. ನಿಮ್ಮ ಆಹಾರದ ವಿಷಯ ಎಲ್ಲಾ ಪೂರ್ತಿಯಾಗಿ ತಾನೇ ನೋಡಿಕೊಳ್ತಾಳೆ. ಮೆಡಿಸಿನ್ ಕಂಟಿನ್ಯೂ ಮಾಡಿ. ಹೋಪ್ ಎವ್ರೀ ಥಿಂಗ್ ಗುಡ್..” . ಎದ್ದ. “ ಅಂದಹಾಗೆ ಚಿಕ್ಕಪ್ಪ ನಿಮ್ಮನ್ನ ಕೇಳಿದೆನೆಂದು ಹೇಳಲು ಹೇಳಿದ್ದಾರೆ. ಅವರು ನಿಮಗೆ ಕಾಲ್ ಮಾಡ್ತಾರಲ್ಲಾ..” “ ಯಾ.. ಜಿಡ್ಡು ಕೃಷ್ನಮೂರ್ತಿಯವರ ಪ್ರವಚನ ಕಳಿಸ್ತಾನೆ..” “ ಎಕ್ಸಲೆಂಟ್ ರಿಷಿಯವರೇ ! ಚಿಕ್ಕಪ್ಪ ನಂಥವರು ಒಬ್ಬರಿದ್ದರೆ ಸಾಕು ಎಷ್ಟು ಕಷ್ಟ ಬಂದರೂ ತಡೆದು ಕೊಳ್ಳಬಹುದು. ತುಂಬ ಕೂಲ್ ಪರ್ಸನಾಲಿಟಿ…. “ ಗೌರೀಪತಿಹೊರಟಿರಲು…“ ಡಾಕ್ಟರ್… ನಾನು ಇದರಿಂದ ಹೊರಬೀಳುತ್ತೀನಾ…. “ ರಿಷಿ ಅನೂಹ್ಯವಾಗಿ ಪ್ರಶ್ನಿಸಿದ. ಗೌರೀಪತಿಯ ಮುಖದಲ್ಲಿಯ ಬಣ್ಣಗಳು ಬದಲಾದವು. ಮತ್ತೆ ತಕ್ಷಣ ಸರಿಪಡಿಸಿಕೊಂಡ. “ ವೈನಾಟ್…ನಿಮ್ಮಲ್ಲಿ ಇಂಪ್ರೂವ್ ಮೆಂಟ್ ಕಾಣ್ತಿದೆ… ಡೋಂಟ್ ವರ್ರಿ ಸರ್. ನಾವಿದ್ದೀವಲ್ಲ “ ರಿಷಿಯ ಮುಖದಲ್ಲಿ ಒಂದು ನಿರ್ಲಿಪ್ತ ನಗೆ. “…. ಅದಕ್ಕೆ ನನಗೆ ಡಾಕ್ಟರ್ ಗಳೆಂದರೆ ಇಷ್ಟ. ಪ್ರಾಣಾನೇ ಹೊಗ್ತಾ ಇದ್ರೂ ಸರಿ… ನಿಮಗೇನೂ ಆಗಲ್ಲ ಅಂತ ಧೈರ್ಯಕೊಡ್ತಿರ್ತಾರೆ. “ “ ರಿಷಿಜೀ. ಈ ಸಮಯದಲ್ಲಿ ನೀವು ತುಂಬಾ ಯೋಚನೆ ಮಾಡಬೇಡಿ. ಜಸ್ಟ್ ಲಿವ್ ದಿಸ್ ಮೊಮೆಂಟ್. ದಟ್ಸಾಲ್. ಇಷ್ಟೆಲ್ಲ ಜೀವನಾನ್ನ ನೋಡಿದೀರಿ. ನಿಮಗೆ ಗೊತ್ತಿರದ ಫಿಲಾಸಫಿ ಏನಿರತ್ತೆ ಹೇಳಿ? ಆದ್ರೂ ನಿಮಗೇ ಗೊತ್ತಿದ್ದ ಹಾಗೆ…. ಎವೆರಿಬಡಿ ಷುಡ್ ಎಗ್ಜಿಟ್…. ಟುಡೇ ಆರ್ ಟುಮಾರೋ….. ರೈಟ್. ಹಾಗಾದ್ರೆ ನಾನು ಬರ್ಲಾ. ಟೇಕ್ ಕೇರ್. “ ಗೌರೀಪತಿ ಹೊರಟು ಹೋದ. ಒಂದಷ್ಟು ವಿಶ್ವಾಸ ಮತ್ತೊಂದಷ್ಟು ನಂಬಿಕೆಯನ್ನು ಬಿತ್ತುತ್ತಾ.. *************** ಪರಿಸ್ಥಿತಿಗಳು ಬದಲಾಗುವುದಕ್ಕೆ ವರ್ಷಗಳು ಬೇಕಾಗಿಲ್ಲ. ಕೆಲ ದಿನ, ಗಂಟೆಗಳು, ನಿಮಿಷಗಳು ಸಾಕು. ರಿಷಿಗೆ ಇತ್ತೀಚೆಗೆ ಇದು ಅನುಭವಕ್ಕೆ ಬರುತ್ತಿತ್ತು. ಸಮಯ ತುಂಬಾ ಭಾರವಾಗಿ ಸಾಗುತ್ತಿತ್ತು. ರೂಮ್ ಬಿಟ್ಟು ಹೊರಗೆ ಹೋಗಿ ಅದೆಷ್ಟು ದಿನವಾಗಿತ್ತೋ ? ಸದಾ ಲ್ಯಾಪ್ ಟಾಪಿನಲ್ಲಿ ಬ್ಯುಸಿಯಾಗಿರುತ್ತಿರುವ ರಿಷಿಯ ಕೈಯಲ್ಲಿ ಜಿಡ್ಡು ಕೃಷ್ಣಮೂರ್ತಿಯವರ ಪುಸ್ತಕ ಕಾಣುತ್ತಿದೆ. ಯಾರೂ ತನ್ನನ್ನು ಡಿಸ್ಟರ್ಬ್ ಮಾಡದಂತೆ ಏಕಾಂತ ಸೃಷ್ಟಿಸಿಕೊಂಡ ರಿಷಿ ಸದ್ಯ ಒಬ್ಬಂಟಿ ತನದಿಂದ ಒದ್ದಾಡುತ್ತಿದ್ದ. ಇಷ್ಟೂ ದಿನ ತನ್ನನ್ನು ಹಿಡಿದು ನಿಲ್ಲಿಸಿದ ಆತ್ಮ ನಿರ್ಭರತೆ ಮೆಲ್ಲಗೆ ಕರಗುತ್ತಿತ್ತು. ಯಾಕೋ ಪಯಣ ಮುಗಿಯುತ್ತದೆ ಎನ್ನುವ ಫೀಲಿಂಗ್. ಸಣ್ಣ ಸಣ್ಣ ವಿಷಯಗಳಿಗೇ ತುಂಬಾ ಎಮೋಷನಲ್ ಆಗ್ತಿದ್ದ.. ಕಣ್ಣು ತೇವವಾಗದ ದಿನಗಳೇ ಇಲ್ಲಾಂತ ಆಗಿತ್ತು. ಆ ಗಟ್ಟಿತನ… ಮೊಂಡುತನ…. ಪಾದರಸವನ್ನು ಮೀರಿಸುವ ಚುರುಕು ಮೇಧಾಶಕ್ತಿ ಎಲ್ಲಾ ಏನಾಗಿವೆ ? ಏನೋ! ಶಿವ ಆಗಾಗ ಫೋನ್ ಮಾಡಿ ಮಾತಾಡುತ್ತಿದ್ದ. ಶುರುವಿನಲ್ಲಿ

ಮಿಸ್ಟರ್ ಅನ್ ಫ್ರೆಂಡ್ Read Post »

You cannot copy content of this page

Scroll to Top