ಮುಗಿಲ ಮಲ್ಲಿಗೆ
ಕಥೆ ಮುಗಿಲ ಮಲ್ಲಿಗೆ ರೂಪಕಲಾ ಕೆ.ಎಂ. ಕತ್ತಲೆಯ ಸೆರಗನ್ನು ಹೊದ್ದು ಮಲಗಿದ್ದ ರಸ್ತೆಯಲ್ಲಿ, ವೇಗವಾಗಿ ಚಲಿಸುತ್ತಿದ್ದ ಬಸ್ಸು.. ಅದಕ್ಕಿಂತಲೂ ವೇಗದಲ್ಲಿ ಓಡುತ್ತಿತ್ತು ಹರೀಶನ ಮನಸ್ಸು. ಆಗಾಗ ಎದುರಾಗುವ ವಾಹನಗಳ ಬೆಳಕು ಬಂದು ಕಣ್ಣಿಗೆ ಹೊಡೆದರೂ, ಮನಸ್ಸು ಮಾತ್ರ ಕತ್ತಲೆಯ ಗೂಡಾಗಿತ್ತು.. ಪಕ್ಕದ ಸೀಟಿನಲ್ಲಿ ರಾಧಿಕ ಗಾಢವಾದ ನಿದ್ರೆಯಲ್ಲಿದ್ದಳು.. ಬಸ್ಸಿನ ಪ್ರಯಾಣದಲ್ಲಿಯೂ ಗೊರಕೆ ಹೊಡೆಯುತ್ತ ಮಲಗಿದ್ದ ಸಹ ಪ್ರಯಾಣಕರನ್ನು ನೋಡಿ, ‘ಚಿಂತೆಯಿಲ್ಲದವರೆಗೆ ಸಂತೆಯಲ್ಲೂ ನಿದ್ರೆಯಂತೆ’ ಅನ್ನೊ ಮಾತು ಅವನಿಗೆ ನೆನಪಾಯಿತು.. ಅವನ ಮನ ಪದೇ ಪದೆ ಪ್ರದೀಪನನ್ನೇ ಮೆಲಕು ಹಾಕುತ್ತಿತ್ತು. ‘ಈಗ ಅವನಿಗೆ ಎಷ್ಟು ಖೂಷಿಯಾಗುತ್ತೋ!?, ಪ್ರತಿ ಬಾರಿಯು ಊರಲ್ಲಿದ್ದಾಗ “ನಮ್ಮ ಊರಿಗೆ ಒಂದು ಬಾರಿ ಬಾರೋ, ಆಗ ಗೊತ್ತಾಗುತ್ತೆ.. ಹಳ್ಳಿಯ ಸೊಬಗು ಹೇಗಿರುತ್ತೆ ಅಂತ. ಸಿಟಿಯಲ್ಲಿ ಜೀವನ ಮಾಡೋರಿಗೆ ಪ್ರಕೃತಿಯ ಸೌಂದರ್ಯ ಹೇಗೆ ಗೊತ್ತಾಗುತ್ತೆ ಹೇಳು” ಎಂದಿದ್ದ.. ಈಗ ಊರಿಗೆ ಬರ್ತಿದಿವಿ ಅನ್ನೋ ಪತ್ರ ಕೈ ಸೇರುವಷ್ಟರಲ್ಲಿಯೇ ನಾವೂ ಊರಲ್ಲಿ ಇರ್ತೀವಿ..ಅಬ್ಬಾ ಅವನ ಖುಷಿ ನಮ್ಮ ಕಣ್ಣಾರೇ ನೋಡಬೇಕು’… ಯೋಚನೆಗೆ ಭಂಗ ತರುವಂತೆ ಸಡನ್ ಬ್ರೇಕ್ ಹೊಡೆದಾಗ ಗಾಢವಾದ ನಿದ್ರೆಯಲ್ಲಿದ್ದವರೂ ಕೂಡ ಬೆಚ್ಚಿ ಬಿದ್ದು,ಏನಾಯಿತು ಎಂದು ಸುತ್ತ ಮುತ್ತ ಕತ್ತಲಿನಲ್ಲಿಯೇ ಕಣ್ಹಾಯಿಸಿ ಹುಡುಕುತ್ತಿದ್ದರು. “ಅಬ್ಬಾ, ಏನಾಯ್ತು ಹರೀಶ್!?,” ಮುಂದಿನ ಸೀಟು ಹಣೆಗೆ ತಾಗಿ ನೋವಾದ ಕಡೆ ಒತ್ತುತ್ತ ಕೇಳಿದಳು ರಾಧಿಕ. ಎದ್ದು ನೋಡುವನಿದ್ದ ಅಷ್ಟರಲ್ಲಿಯೇ ಕಂಡೆಕ್ಟರ್ ಬಂದು ” ಏನಾಗಿಲ್ಲ ಹಸು ಅಡ್ಡ ಬಂತು” ” ನೋಡಿ ನಡ್ಸೋಕ್ಕಾಗಲ್ವಾ?, ತಲೆಗೆಷ್ಟು? ಪೆಟ್ಟು ಬಿತ್ತು” ಹಿಂದೆ ಸೀಟಲ್ಲಿದ್ದವರ ಮಾತಿಗೆ.. ” ನೋಡಿ ನಡೆಸ್ತಾ ಇರೋದಕ್ಕೆ ಅಪಾಯ ತಪ್ಪಿದ್ದು ಸರ್. ಇಲ್ಲವಾಗಿದ್ರೆ ಬಸ್ಸು ಪಲ್ಟಿ ಹೊಡಿತಿತ್ತೋ ಅಥವಾ….” ಗುಣುಗುತ್ತಾ ಮುಖ ನೋಡಿ ಹೋದ ಕಂಡೆಕ್ಟರ್ ಮಾತಿಗೆ ಹರೀಶ್ ಹೌದು ಎನ್ನುವಂತೆ ತಲೆ ಆಡಿಸಿದನು. ಹಿಂದೆಯಿಂದ ಮಾತುಗಳು ಕೇಳುತ್ತಲೇ ಇದ್ದವು. ಯಾವುದನ್ನು ತಲೆಗೆ ಹಾಕಿಕೊಳ್ಳದೇ ತನ್ನಷ್ಟಕ್ಕೆ ತಾನು ರಸ್ತೆ ಕಡೆ ದೃಷ್ಟಿ ಇಟ್ಟಿದ್ದ ಡ್ರೈವರ್ ಹತ್ತಿರ ಹೋಗಿ “ಇವುರ್ಗಳಿಗೆ ಬಸ್ಸಲ್ಲು ಹ್ಯಾಂಗ್ ನಿದ್ರೆ ಬತ್ತದೆ ಅಂತ..ದಿನಾ ಓಡಾಡೋ ನಮಗೆ ನಿದ್ದೆ ಇಲ್ಲದಿದ್ದರೂ ನಿದ್ದೆ ಬರಲ್ಲ. ಇನ್ನು ಮೇಲಾಗಿ ಸಲಹೆ ಕೊಡ್ತಾವ್ರೆ”..ಗೊಣಗಿದ ಕಂಡೆಕ್ಟರಿಗೆ.. ” ಏನೋ ನಿಂದು?, ಯಾಕೆ ಗೊಣಗ್ತಿಯಾ.. ಯಾರು ಏನಂದ್ರು ಈಗ?..ಅವರನ್ನು ಬಂದು ಇಲ್ಲಿ ಕೂರಲು ಹೇಳು” ” ಸಾಯ್ಲಿ ಬಿಡಣ್ಣೋ.. ಜೀವ ಹೋದ್ರೂ ನಿದ್ದೆ ಬೇಕು ಅನ್ನೋ ಜನ್ಗಳು”.. ಹರೀಶ ಅವರಿಬ್ಬರ ಮಾತು ಕೇಳಿ ರಾಧಿಕಳ ಕಡೆ ತಿರುಗಿ ನೋಡಿ ನಕ್ಕಾಗ ” ಅವ್ರು ನಂಗಲ್ಲ ಹೇಳಿದ್ದು ಆಯ್ತಾ.. ನೀನೇನೋ ನನ್ನ ನೋಡಿ ನಗ್ಲಿಕ್ಕೆ?,.. ” ಅಯ್ಯೋ ರಾಮ. ನಾನೇನೇ ಅಂದೇ ಈಗ!?,. ” ಏನಿಲ್ಲ ಬಿಡು” ಎನ್ನುತ ರಗ್ಗನ್ನು ಸರಿ ಮಾಡಿಕೊಂಡು ಮುದುರಿ ಮಲಗಿದಳು. ———— ಸೂರ್ಯ ಇನ್ನು ನಿದ್ರೆಯಿಂದ ಎದ್ದಿರಲಿಲ್ಲ ಆಗಲೇ ಹಕ್ಕಿಗಳಿಗೆ ಬೆಳಗಾಗಿತ್ತು.. ಅಲ್ಲಲ್ಲಿ ತಂಬಿಗೆ ಹಿಡಿದು ಹೋಗುವ ಜನರನ್ನು ಕಂಡು… “ಅಬ್ಬಾ ರಸ್ತೆ ಬದಿಯಲ್ಲೇ?…ಕರ್ಮ. ಮರ್ಯಾದೆ ಸಹ ಇರಲ್ವಾ ಇವರಿಗೆಲ್ಲಾ?” ಮೂಗು ಮುಚ್ಚಿಕೊಂಡು ರಾಧಿಕ ಸಿಟ್ಟಿನಲ್ಲಿ ಹೇಳಿದಾಗ.. ” ಇದೆಲ್ಲಾ ಹಳ್ಳಿ ಕಡೆ ಕಾಮನ್ ರಾಧಿಕ, ಇಲ್ಲಿ ಇಷ್ಟೆ.. ಇನ್ನೂ ಕೆಲವು ಕಡೆ ಮಹಿಳೆಯರು ಕೂಡ!”… ” ಬೇಡ ಬಿಡು ಆ ಮಾತು.. ಇವರನ್ನೆಲ್ಲಾ ತಿದ್ದಲು ಆ ಬ್ರಹ್ಮನೇ ಬರಬೇಕೇನೋ… ಅದಿರಲಿ ಈಗ ಪ್ರದೀಪನ ಮನೆ ಎಲ್ಲಿ ಅಂತ ನಿಂಗೆ ಗೊತ್ತಾ?” ” ಇಲ್ಲ,..ಇರು.., ಅಲ್ಲಿ ಯಾರಾನ್ನಾದರೂ ಕೇಳೋಣ” ಎನ್ನುತ್ತ ಸ್ವಲ್ಪ ಮುಂದೆ ನಡೆದರು. ಅಲ್ಲಿಯೇ ಇದ್ದ ಸಣ್ಣ ಗೂಡಂಗಡಿಯಲ್ಲಿ ಇಬ್ಬರು ಟೀ ಕುಡಿದು ವಿಚಾರಿಸಿದಾಗ… ಅವರು ಹೋಗಬೇಕಾದ ಊರು ಇನ್ನು ಒಂದು ಕಿಲೋ ಮೀಟರ್ ದೂರವಿರುವುದಾಗಿಯು ” ಇಲ್ಲೇ ಒಂದು ಆಟೋ ಬತ್ತದೆ ಈಗ. ಅದು ಆ ಊರಿಗೆ ಹೋಗತ್ತೆ ಅದರಲ್ಲಿ ಹೋಗಿ” ಅಂಗಡಿಯವರು ಹೇಳಿದಾಗ ಸರಿಯೆಂದು ಆಟೋಕ್ಕಾಗಿ ಕಾದು ನಿಂತರು. —– ರಾಧಿಕ ಮತ್ತು ಹರೀಶ್ ಮಾರನ ಹಳ್ಳಿ ಪ್ರವೇಶಿಸಿದ ಕೂಡಲೆ ಅಲ್ಲಿ ಯಾರನ್ನಾದರೂ ಕೇಳಿದರೆ ಪ್ರದೀಪನ ಬಗ್ಗೆ ತಿಳಿಯುತ್ತದೆಂದು ಯೋಚಿಸಿದ್ದರು.ಆದರೆ ಅಲ್ಲಿಯೇ ಆಡುತಿದ್ದ ಮಕ್ಕಳನ್ನು ಕೇಳಿದಾಗ ಇವರಿಬ್ಬರ ಕಡೆ ವಿಚಿತ್ರವಾಗಿ ನೋಡಿದರು.ಅದಕ್ಕು ಕಾರಣವಿತ್ತು. ರಾಧಿಕಳ ಉಡುಗೆ ಹರೀಶನ ಉಡುಗೆಯು ಒಂದೇ ತೆರನಾಗಿದ್ದವು. ಮುಂದೆ ಹೋಗಿ ಅಲ್ಲಿಯೇ ಹಲಸಿನ ಮರದ ಕಟ್ಟೆಯಲ್ಲಿ ಕುಳಿತ ಹಿರಿಯರನ್ನು ಕೇಳಿದರು. ಅವರಲ್ಲಿ ಹಿರಿಯರಾದ ಒಬ್ಬರು ಅವರಿಬ್ಬರನ್ನು ತೀಕ್ಷ್ಣವಾಗಿ ನೋಡಿ ” ಅವ , ನಿಮಗ್ ಹ್ಯಾಗ್ ಗೊತ್ತು?” ಎಂದರು. ಅವರ ಮಾತು ಅರ್ಥವಾಗದೆ ಇಬ್ಬರು ಒಬ್ಬರನ್ನೊಬ್ಬರು ಮುಖ ನೋಡಿಕೊಂಡರು.ಅದನ್ನರಿತ ಹಿರಿಯರು ” ಎಲ್ಲಿಂದ ಬಂದ್ರಿ” ” ಸಿಟಿಯಿಂದ, ಪ್ರದೀಪನನ್ನು ಕಾಣಬೇಕಿತ್ತು. ನಾವೆಲ್ಲ ಒಟ್ಟಿಗೆ ಓದಿದವರು” ” ಈಗ ನಿಮಗಾ ಅವ ಸಿಗಂಗಿಲ್ರಿ” ” ಅಂದ್ರೆ!!?” ” ಬನ್ರಿ, ಅವರ ಮನೆಯಾಗ ಬಿಡ್ತೀನಿ” ಎಂದವರೇ ಆ ಹಿರಿಯರು ಎದ್ದು ಮುಂದೆ ಹೆಜ್ಜೆ ಹಾಕಿದರು. ಅವರಿಬ್ಬರೂ ಹಿಂಬಾಲಿಸಿದರು. ಊರಿನ ಹಲವಾರು ಮನೆಗಳನ್ನು ದಾಟಿ ದೊಡ್ಡದೊಂದು ಮನೆಯ ಮುಂದೆ ಬಂದು ನಿಂತು!,. ” ಅದೇ ಅವ್ರ ಮನೆ” ಎಂದರು. ” ಥ್ಯಾಂಕ್ಸ್ ಸರ್” ಎಂದವರೇ ಮನೆಯ ಮುಂದೆ ಹೋಗಿ ಬಾಗಿಲ ಬಳಿ ನಿಂತು ಹರೀಶ ಒಳ ನೋಡುತ್ತ ಕರೆದನು. ” ಪ್ರದೀಪ್,ಪ್ರದೀಪ್” ಇವರ ಸ್ವರ ಕೇಳಿ ಒಳಗಿನಿಂದ ಬಂದ ವ್ಯಕ್ತಿಯನ್ನು ” ಸರ್,ಪ್ರದೀಪ ಇಲ್ವಾ?” ” ನೀವ್ಯಾರು?” “ನಾವು ಅವನ ಫ್ರೆಂಡ್ಸ್. ಕಾಲೇಜಲ್ಲಿ ಒಟ್ಟಿಗೆ ಓದುತ್ತಿದ್ದೆವು, ತುಂಬಾ ತಿಂಗಳಿಂದ ಅವನಿಂದ ಯಾವುದೇ ಸಂಪರ್ಕ ಸಿಗುತ್ತಿಲ್ಲ.ಹಾಗಾಗಿ ನಾವೇ ಬಂದ್ವಿ”. ” ಹೋ, ಹೌದಾ!!,. ಬನ್ನಿ ಒಳಗ, ಪ್ರದೀಪನು ನನ್ನ ಮಗನೇ.ನನ್ನ ಹೆಸರು ಶಿವಪ್ಪ ಅಂತ” ” ನಮಸ್ತೆ ಸರ್,ನಾನು ಹರೀಶ ಅಂತ,ಇವರು ರಾಧಿಕ.ನಾವು ಮೂವರು ಬೆಸ್ಟ್ ಫ್ರೆಂಡ್ಸ್”, “ಹೌದ,ಬನ್ನಿ ಕೂತ್ಕಳ್ಳಿ,ಈಗ ಬಂದೆ” ಎಂದು ಒಳ ಹೋಗಿ ಕುಡಿಯಲು ನೀರು ತಂದರು. ದೂರದಿಂದ ಬಂದವರಿಗೆ ಊಟೋಪಚಾರದ ವ್ಯವಸ್ಥೆಯು ಆದ ನಂತರ ನಿಧಾನವಾಗಿ ಮಾತಿಗೆ ಇಳಿದರು. “ಸರ್, ಈಗ ಅವನೆಲ್ಲಿದ್ದಾನೆ?”. ” ಪ್ರದೀಪ,!? ಈಗ ಎಲ್ಲಿದ್ದಾನೆ ಅಂತ ಹೇಳದು,ನಮಗಾ ಗೊತ್ತಿದ್ದರ ಮನೆಯಲ್ಲಿಯೆ ಇರ್ತಿದ್ದ.ಆದ್ರ ದೇವರು ನಮಗಾ ಅನ್ಯಾಯ ಮಾಡ್ದ” ಎಂದು ನಿಟ್ಟುಸಿರು ಬಿಟ್ಟರು.ಕಣ್ಣಿನಿಂದ ನೀರು ಹೊರ ಬಂದಿತ್ತು .ಇಬ್ಬರಿಗೂ ಗಾಬರಿ .ಅವನಿಗೆ ಏನಾಗಿರ ಬಹುದು?. ಒಳಗಿನಿಂದ ಅಳುವ ಶಬ್ದ ಕೇಳಿ ಬಂತು. ” ಸರ್, ದಯವಿಟ್ಟು ಹೇಳಿ ,ಪ್ರದೀಪನಿಗೆ ಏನಾಯ್ತು?,ಈಗ ಎಲ್ಲಿದ್ದಾನೆ?.” ಕಣ್ಣು ಒರೆಸಿಕೊಂಡು ಹೇಳಲು ಶುರು ಮಾಡಿದರು. ” ಅವನಿಗೆ ಹುಚ್ಚು ಹಿಡಿತಪ್ಪಾ,ಈಗ ಎಲ್ಲಿದ್ದಾನಂತ ಗೊತ್ತಿಲ್ಲ.ಯಾರಾದರು ಅವನನ್ನ ನೋಡಿದೊರು ಬಂದು ಹೇಳ್ತಾರ! ನಾವು ಹೋಗೋದ್ರೊಳಗ ಅವ ಅಲ್ಲಿರಲ್ಲ.ಇದೇ ಆಗದೇಪ್ಪ ಆರು ತಿಂಗಳಿಂದ”, ಬಿಕ್ಕಿದರು. ಹರೀಶ್ ಕುಳಿತಲ್ಲಿಂದ ಎದ್ದು ಬಂದು ಅವರ ಕೈ ಹಿಡಿದು ಸಮಾಧಾನ ಮಾಡುತ್ತ ಕೇಳಿದ. ” ಇದೆಲ್ಲ ಹೇಗಾಯ್ತು ಸರ್”, ” ಪಿರುತಿ ಮಾಡಿದ್ದನಪ್ಪ..ಆ ಮಗ ಸತ್ತು ಹೋದ್ಲು,ಅದರ ನೋವು ತಡಿಲಾರ್ದೆ ಇವ ಹುಚ್ಚ ಆದ.ಸ್ವಲ್ಪ ದಿನ ತಡಿದಿದ್ರೆ ಇಬ್ಬರ ಮದುವೆ ನಾವೇ ಮಾಡೋರು.ಆದ್ರ ದೇವ್ರಿಗ ನಮ್ಮ ಮೇಲ ಕರುಣೆ ಇಲ್ಲ ನೋಡಿ.ಇದ್ದ ಒಬ್ಬ ಮಗನ್ನ ಹೀಗಾ ಮಾಡ್ಬಿಟ್ಟ”, ಮತ್ತೆ ಅಳಲು ಶುರು ಮಾಡಿದ್ರು.ರಾಧಿಕಳ ಕಣ್ಣಲ್ಲಿ ಆಗಲೆ ನೀರು ಇಳಿಯುತಿತ್ತು.ಮನೆಯ ಒಳಗಿನ ಅಳು ಸ್ವಲ್ಪ ಕಡಿಮೆ ಆಗಿತ್ತು.ಶಿವಪ್ಪನವರ ದುಃಖ ನೋಡಲಾಗದೆ ಹರೀಶ್ ನಿಧಾನವಾಗಿ ಎದ್ದು ಹೊರ ಬಂದ.ರಾಧಿಕ ಕೂಡ ಅವನ ಹಿಂದೆಯೆ ಬಂದಳು. ಏನೋ ಯೋಚಿಸಿದವರಂತೆ ಮತ್ತೆ ಒಳಗಡೆ ಬಂದವರು ಕುರ್ಚಿಯಲ್ಲಿ ಕುಳಿತರು. ” ಸರ್ ನಮಗೆ ಪ್ರದೀಪನ ಪೂರ್ಣ ಮಾಹಿತಿ ಬೇಕು.ಕಾಲೇಜು ಬಿಟ್ಟು ಬಂದಲ್ಲಿಂದ ಇಲ್ಲಿ ಏನಾಯಿತು ಅಂತ ತಿಳಿಸಲು ಆಗತ್ತ.ನಮಗೆ ನಮ್ಮ ಮೆಚ್ಚಿನ ಗೆಳೆಯನ ಜೀವನ ಹೀಗೆ ಆಗಿದ್ದು ನಂಬಲು ಆಗುತ್ತಿಲ್ಲ.ದಯವಿಟ್ಟು ವಿವರವಾಗಿ ತಿಳಿಸಿ ಸರ್”, ಅವರಿಬ್ಬರನ್ನು ಒಮ್ಮೆ ನೋಡಿದರು.’ಪ್ರದೀಪನ ವಯಸ್ಸಿನವರೆ’ ಅನ್ನಿಸಿತು.ಹರೀಶನನ್ನು ನೋಡಿ ಮಗನ ನೆನಪಾಗಿ ಕಣ್ತುಂಬಿ ಬಂದವು. ನಡೆದ ಕಥೆ ಹೇಳಲು ಶುರು ಮಾಡಿದರು. “ನಂಗಾ ಇಬ್ರು ಮಕ್ಳು.ಮಗಳ ಮದ್ವಿ ಆಗದೆ. ಇವ ಓದು ಮುಗ್ಸಿ ಊರಿಗೆ ಬಂದ.ನಾವು ಅವ್ನ ಕೆಲ್ಸದ ವಿಷಯ ಏನೂ ಹೇಳಿಲ್ಲ.ಮನೇಲಿ ಮೂರು ತಲೆಮಾರಿಗೂ ಕೂತು ಉಣ್ಣೊಷ್ಟು ಇರುವಾಗ ಅವ ಕೆಲಸಕ್ಕೆ ಹೋಗೂ ಅಗತ್ಯ ನಂಗಿರ್ಲಿಲ್ಲ”, ಮಾತು ನಿಲ್ಲಿಸಿ ಒಳಗೆ ನೋಡಿದರು. ಹೆಂಡತಿಗೆ ತನ್ನ ಮಾತು ಕೇಳಿದರೆ?. ” ನಿಮ್ಗೆ ದಣಿವಿಲ್ಲಾಂದ್ರಾ ತೋಟಕ್ ಹೋಗುಣಾ?”, ಮೂವರು ಎದ್ದು ಹೊರ ಹೋಗುವಾಗ ಲಕ್ಷ್ಮಮ್ಮನವರು ಹೊರ ಬಂದರು.ಅವರಿಗೆ ತೋಟಕ್ಕೆ ಹೋಗಿ ಬರುತ್ತೆವೆಂದು ಹೇಳಿ ಹೊರಟರು. *** ಊರ ಹೊರಗಿನ ಹೊಲದ ಮಧ್ಯದಲ್ಲಿ ಒಂದು ಪುಟ್ಟ ಮನೆ. ಸುತ್ತಲೂ ಹಚ್ಚ ಹಸಿರಾದ ಪೈರು.ಹೂ ಬಿಟ್ಟು ಭತ್ತದ ತೆನೆ ಬಿಡುವ ಸಮಯ.ಗಾಳಿ ಬಂದರೆ ಪೈರಿನ ಪರಿಮಳ ಮೂಗಿಗೆ ತಾಗಲು, ‘ಅಹ್ಹಾ’,ಎಷ್ಟೊಂದು ಅಹ್ಲಾದಕರ. ಗದ್ದೆ ಅಂಚಿನ ಮೇಲೆ ಮೆಲ್ಲನೆ ಹೆಜ್ಜೆ ಹಾಕುತ್ತ ನಡೆಯುತಿದ್ದಳು ಮಲ್ಲಿ. “ಯಾರಲ್ಲಿ?”. ಕೂಗಿಗೆ ಹೆದರಿ ನಿಂತಳು.ತಿರುಗಿ ನೋಡಿದರೆ ತನಗೆ ಸ್ವಲ್ಪ ದೂರದಲ್ಲಿಯೆ ಒಬ್ಬರು ದ್ವಿಚಕ್ರ ವಾಹನದಲ್ಲಿ ನಿಂತಿದ್ದರು. ಅವರನ್ನು ಎಂದೂ ನೋಡಿರಲಿಲ್ಲ .’ಯಾರಿರ ಬಹುದು?’ಎಂದು ಕುತೂಹಲದಲ್ಲಿರುವಾಗಲೆ ಮತ್ತದೇ ದ್ವನಿ. “ನಿನ್ನನ್ನೆ ಕೇಳಿದ್ದು, ಯಾರು ನೀನು?.ಎಲ್ಲಿಯೂ ನೋಡಿದ ನೆನಪಿಲ್ಲ.ಹೊಸ ಮುಖದ ಹಾಗೆ ಕಾಣುತ್ತಿಯ!?” “ನಾನು ಮಲ್ಲಿ,ಸುಬ್ಬಣ್ಣನ ಮಗಳು” “ಹೌದಾ!!?.ನಮ್ಮ ಸುಬ್ಬಣ್ಣನ ಮಗಳಾ?.ಇಷ್ಟು ದಿನ ಎಲ್ಲಿದ್ದೆ?.ಒಂದು ದಿನವು ಕಾಣಲಿಲ್ಲ!!?” ” ನಾನು ಸಿಟಿಯಲ್ಲಿನ ಚಿಕ್ಕಪ್ಪನ ಮನೆಯಲ್ಲಿದ್ದು ಕಲಿತಿದ್ದೆ” “ಎಷ್ಟನೆ ಕ್ಲಾಸಿನವರೆಗೆ ಓದಿದ್ದಿಯಾ” “ಹತ್ತು, ಪಾಸು”. “ಮುಂದೆ!?” ಅವರ ಮಾತನ್ನು ತಡೆಯುವಂತೆ “ನೀವ್ಯಾರು!?”ಎಂದು ಕೇಳಿ ನಾಲಿಗೆ ಕಚ್ತಿಕೊಂಡಳು. “ಹೋ, ನೋಡಿದ್ಯಾ ನಿನ್ನ ಬಗ್ಗೆ ಕೇಳುವ ಆತುರದಲ್ಲಿ ನಾನು ಯಾರು? ಅಂತ ಹೇಳಲೆ ಇಲ್ಲ ಅಲ್ವಾ?.ನಾನು ಈ ಊರಿನ ಗೌಡರ ಮಗ ಪ್ರದೀಪ. ನಿನ್ನ ತಂದೆ ನಮ್ಮ ಮನೆಯಲ್ಲೆ ಕೆಲಸ ಮಾಡೋದು.ನಿನ್ನ ಹಾಗೆಯೆ ಸಿಟಿಯಲ್ಲಿ ಓದುತಿದ್ದೆ.ಈಗ ಸಧ್ಯಕ್ಕೆ ಓದು ಮುಗಿಯಿತು.ಕೆಲಸಕ್ಕೆ ಪ್ರಯತ್ನ ನಡೆಸಬೇಕು.” ಸಾಕ? ಎನ್ನುವಂತೆ ಅವಳ ಕಡೆ ನೋಡಿದನು. ಒಂದೇ ಉಸಿರಲ್ಲಿ ಮಾತನಾಡಿ ಮುಗಿಸಿದ ಅವನನ್ನೇ ತದೇಕ ಚಿತ್ತದಿಂದ ನೋಡುತಿದ್ದಳು.ಅವನೂ ಸಹ ಮಾತು ನಿಲ್ಲಿಸಿ ಮಲ್ಲಿಯ ಕಡೆ ನೋಡಲು ಇಬ್ಬರ ಕಣ್ಣುಗಳ ಮಿಲನವಾಯಿತು.ಮಲ್ಲಿ ಅವನ ನೋಟಕ್ಕೆ ನಾಚಿ ತಲೆ ತಗ್ಗಿಸಿದಳು.ಪ್ರದೀಪ ಮಾತ್ರ ಮಲ್ಲಿಯ ಅಂದವನ್ನು ಸವಿಯುವದರಲ್ಲೆ ಮಗ್ನನಾದ. ಹಾಲು ಕೆನ್ನೆಯ ದುಂಡನೆಯ ಮುಖದಲ್ಲಿ ಕಾಡಿಗೆಯ ಅಗತ್ಯವೇ ಇಲ್ಲದಂತೆ ಹೊಳೆಯುವ ಕಣ್ಗಳು..ನೀಳವಾಗಿ ಉದ್ದವಾದ ಕೂದಲನ್ನು ಎಣ್ಣೆ ಹಾಕಿ ಬಲವಂತವಾಗಿ ಬಾಚಿದಂತೆ ಕಂಡರು, ಅವಳಿಗದು ಅಂದ ತಂದಿತ್ತು.ಬಲ ಕಿವಿಯ ಹತ್ತಿರ ಇಳಿ ಬಿದ್ದ ಗುಂಗುರು ಕೂದಲು. ಕಿವಿಯಲ್ಲಿ ಸಣ್ಣದೊಂದು ಓಲೆ. ಎರಡೂ ಕೈಯಲ್ಲಿ ನಾಲ್ಕೇ ನಾಲ್ಕು ಮಣ್ಣಿನ ಕೆಂಪು ಬಳೆಗಳು ಅವಳ ಬಿಳಿ ಕೈಗಳಿಗೆ ಮುದ್ದಾಗಿದ್ದವು. ಹೆಚ್ಚೇನು ಎತ್ತರವಿಲ್ಲದ ಅತಿ ದಪ್ಪವು ಅಲ್ಲದ ಅವಳು, ಒಮ್ಮೆ ನೋಡಿದರೆ ಮತ್ತೆ ತಿರುಗಿ ನೋಡಬೇಕೆನ್ನಿಸುವ ಶರೀರ,ಅದರಲ್ಲೂ ಮೈಯನ್ನಪ್ಪಿದ ಲಂಗ ರವಿಕೆಯಲ್ಲಿನ ದೇಹದ ಸಿರಿ, ಪ್ರದೀಪನಿಗೆ ಸಿಟಿಯ ವೈಯ್ಯಾರಿಯರ ಮಧ್ಯೆ ಕೂಡ ಮಲ್ಲಿಯೇ ಅಂದವಾಗಿ ಕಂಡಿದ್ದಳು. ಪ್ರದೀಪನ ಕಣ್ಣು ತನ್ನ ಮೇಲಿರುವುದು ಅರಿತ ಮಲ್ಲಿ, ಮೆಲ್ಲನೆ ನಾಚಿ ಜಿಂಕೆಯಂತೆ ಓಡುವ ಸನ್ನಾಹ ಪ್ರದೀಪನ ಅರಿವಿಗೆ ಬಂದದ್ದೆ ತಡ ಅವಳನ್ನು ತಡೆಯುತ್ತಾ ”









