ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಧನ್ಯ ಮಿಲನ

ಕಥೆ ಧನ್ಯ ಮಿಲನ ಸರೋಜಾ ಶ್ರೀಕಾಂತ್ ಅಮಾತಿ ರಾಧೆ,ರಾಧೆ….ಅದೇ ಧ್ವನಿ!…..ಹೌದು ಇದು ಅದೇ ಧ್ವನಿ,ಕೃಷ್ಣ ….ಕೃಷ್ಣ ! ಎಲ್ಲವಿತಿರುವೆ!? ಎದುರಿಗೊಮ್ಮೆ ಬರಬಾರದೆ? ಅದೆಷ್ಟೋ ವರುಷಗಳ ನಂತರ ಮತ್ತೆ ಕೃಷ್ಣ ಬಂದಿದ್ದ.ಅದೇ ತೇಜಸ್ಸು,ನಗುದುಂಬಿದ ಮುಖ ಕೃಷ್ಣನ ದರ್ಶನವಾಗುತ್ತಲೇ ನದಿ ದಂಡೆಯ ಆ ಉರಿಬಿಸಿಲೂ ಹಿತವೆನಿಸಿಸುತ್ತಿತ್ತು ರಾಧೆಗೆ.ಅಬ್ಬಾ! ,ಅಂತೂ ಬಂದೆಯಲ್ಲ ಸ್ವಾಮಿ ಇಷ್ಟು ವರ್ಷಗಳು ಬೇಕಾದವೆ ಈ ರಾಧೆಯನ್ನು ಕಾಣಲು? ಅಂದಾಗ ನೀನೆಂದೂ ನನ್ನ ಜೊತೆಯೇ ಇರುವೆ ರಾಧೆ ಏಕೆ ನಿನಗೆ ಹಾಗೇಣಿಸುವುದಿಲ್ಲವೇ?ಭೇಟಿ ವಿಳಂಬವಾಯಿತೆಂದು ನನ್ನನ್ನೇ ಮರೆತು ಬಿಟ್ಟೆಯಾ ಹೇಗೆ? ಇಲ್ಲ ಕೃಷ್ಣ ಇಲ್ಲ ನೀ ನನ್ನೊಳಗೇ ಇರುವೆ ನಿನ್ನನ್ನು ಹೃದಯದಲ್ಲಿ ಕೂಡಿ ಹಾಕುವ ಮೊದಲೇ ನೀ ಮಾತಿನಲ್ಲಿ ಸೋಲಿಸಿ ಬಿಡುವೆ ನಿನ್ನಿಂದ ಸೋಲಲೂ ಅದೃಷ್ಟವೇ ಬೇಕು ಅಲ್ಲವೇ ಕೃಷ್ಣ? ಇಷ್ಟು ಕಾಯಿಸುವುದು ನಿನಗೆ ಸರಿಯೇ ಕೃಷ್ಣ…. ನದಿ ದಂಡೆಯ ಮರಳಿನ ಪ್ರತಿ ಕಣ ಕಣಕ್ಕೂ ಗೊತ್ತು ನಾ ನಿನ್ನನೆಷ್ಟು ಹಂಬಲಿಸಿದೆ ಎಂದು ಹಸಿರು ಹಾಸಿದ ಗರಿಕೆ ಪಕ್ಕದಲ್ಲಿಯೇ ನಗುತ್ತ ಅರಳಿರುವ ಸುಂದರ ಹೂಗಳು,ಸೂಸುವ ಈ ತಂಗಾಳಿಗೆ,ಗಿಡ ,ಮರ ,ಬಳ್ಳಿ ಅಷ್ಟೇ ಏಕೆ ನದಿಯೊಳಗೀಜಾಡುವ ಬಣ್ಣಬಣ್ಣದ ಮೀನಿನ ಕಣ್ಣಿಗೂ ನನ್ನ ಪ್ರೀತಿ ಕಂಡಿರಬಹುದು ಕೃಷ್ಣ .ಅವನ್ನೊಮ್ಮೆ ನೋಡಿ ಬಿಡು ಸಾಕು ನನ್ನ ಮನಸ್ಸಿನ ತುಮುಲ,ವಿರಹ ಎಲ್ಲವೂ ನಿನಗೆ ಗೊತ್ತಾಗುವುದು ಕೃಷ್ಣ. ಇಷ್ಟೊಂದು ಚಂದದ ಮಧುರ ವಾಣಿ ಎಲ್ಲಿಂದ ಕಲಿತೆ ರಾಧೆ!? ಹೃದಯವಾಸಿಯಾದ ಶ್ರೀಕೃಷ್ಣನ ಸಹವಾಸದಿಂದಲೇ ಇದೆಲ್ಲವೂ ಸಂಭವಿಸಿರಬೇಕಷ್ಟೇ ನನ್ನದೆನಿಲ್ಲ ಕೃಷ್ಣ.ಹೇಗಿರುವೆ ರಾಧೆ ತುಸು ಕೆಲಸ,ಕಾರ್ಯದಲ್ಲಿ ಮಗ್ನಳಾದಂತೆ ಕಾಣುತ್ತದೆ. ಅದೆಂತದೂ ಮಹಾ ಕಾರ್ಯವಿಲ್ಲ ಬಿಡು ಕೃಷ್ಣ ನೆನೆದವರ ಮನದಲ್ಲಿ ಎಂಬಂತೆ ನೀ ಬಂದಿರುವೆ ಅಷ್ಟೇ ಸಾಕೆನಗೆ. ಕುಶಲೋಪಚಾರದ ಬಳಿಕ ಸರಿ ರಾಧೆ ನಾನಿನ್ನು ಬರಲೇ!?…. ಸಂಜೆ ಮತ್ತೆ ಇದೇ ನದಿ ದಂಡೆಯಲ್ಲಿ ಸಿಗುವೆ ಎಂದು ಹೊರಟೇ ಬಿಟ್ಟ ಕೃಷ್ಣ. ಹೀಗೆ ಬಂದು ಹಾಗೆ ಹೋಗುವುದೇ ಕೃಷ್ಣ ನಾನೊಪ್ಪುವುದಿಲ್ಲ ಒಂದರೆಗಳಿಗೆಯಾದರೂ ನೀ ಇರಲೇಬೇಕು ಎಂದು ಮುನಿಸಿಕೊಂಡ ರಾಧೆ ಹಿಂತಿರುಗಿ ನೋಡುವಷ್ಟರಲ್ಲಿ ಕೃಷ್ಣನೇ ಕಾಣುತ್ತಿಲ್ಲ.ಅತ್ತ,ಇತ್ತ ಸುತ್ತಲೂ ಹುಡುಕಿದ ರಾಧೆಗೆ ಏನಿದು ಇದೆಲ್ಲ ಬರೀ ನನ್ನ ಭ್ರಮೆಯೊ ಹೇಗೆ ಏನೊಂದು ತೋಚುತ್ತಿಲ್ಲವೆಂದು ಮತ್ತೆ ಸುತ್ತೆಲ್ಲವೂ ಕಣ್ಣಾಡಿಸುತ್ತ ಕೃಷ್ಣ ಕಾಣದಂತಾದಾಗ ಬೇಸರದಿಂದ ಮನೆಕಡೆ ಹೆಜ್ಜೆ ಹಾಕಿದಳು ರಾಧೆ. ಇದೇನಿದು ಆಶ್ಚರ್ಯ!…. ಹಿಂತಿರುಗಿ ನೋಡಿದಾಗ ಕಣ್ಮರೆಯಾಗಿದ್ದ ಕೃಷ್ಣ ಮನೆಯಂಗಳಕ್ಕೆಲ್ಲ ನೆರಳಾಗಿರೋ ಆ ಬೇವಿನ ಮರಕ್ಕೆ ಕಟ್ಟಿದ ಉಯ್ಯಾಲೆಯಲ್ಲಿ ಕೊಳಲನಿಡಿದು ಕುಳಿತಿರುವ.ಕಣ್ಣುಗಳನ್ನುಜ್ಜುತ್ತ ಮತ್ತೆ,ಮತ್ತೇ ಆ ಕಡೆಗೆ ದೃಷ್ಟಿ ನೆಟ್ಟಾಗ ರಾಧೆಯ ಎದೆಬಡಿತ ಜೋರಾಯಿತು!.ಕೃಷ್ಣನ ಮರು ಆಗಮನ ಒಂದು ಕಡೆ ಸಂತಸದ ಸುಗ್ಗಿ,ಮತ್ತೊಂದೆಡೆ ಮೊದಲ ಘಟನೆಯಂತೆ ಇದೂ ಕೂಡ ನನ್ನ ಭ್ರಮೆಯೇ ಎಂಬ ಭಯದ ನಿಗಿ ಕೆಂಡ.ಸಂಜೆ ಬರುವೆನೆಂದ ಕೃಷ್ಣ   ಈಗಲೇ ಮರಳಿದ್ದು ಯಾಕೆ “ಏನಾದರೂ ಮರೆತಿರಬಹುದೇ!?….ಅಥವಾ ಬೇಕಂತಲೇ ನನ್ನ ಆಟ ಆಡಿಸುವ ಸಂಚೆ? ….ಅದಕ್ಕೆ ಅಲ್ಲವೆ ಅವನನ್ನು ಕಳ್ಳ ಅನ್ನುವುದು ಹೀಗೆ ಅದೆಷ್ಟೋ ಪ್ರಶ್ನೆಗಳ ಸರಮಾಲೆಯೇ ರಾಧೆಯ ಮನವನ್ನು ನಲುಗಿಸಿಬಿಟ್ಟವು.ತುಸು ಸಮಾಧಾನಿಸಿಕೊಂಡ ರಾಧೆ ಅಂತರ್ಯಾಮಿ ಶ್ಯಾಮನೆ ಆಪತ್ಬಾ0ಧವ ಅವನೇ ನನ್ನ ಜೊತೆಗಿರುವಾಗ ನನಗಿನ್ನೇತರ ಭಯ!?…. ಅಂದುಕೊಳ್ಳುತ್ತಲೇ ಕೃಷ್ಣನ ಬಳಿ ಹೋಗುತ್ತಾಳೆ. ಕೃಷ್ಣ  ತನ್ನ ಸನಿಹ ಬರುತ್ತಿರುವ ರಾಧೆಯನ್ನು ಕಂಡು ಮುಗುಳ್ನಗುತ್ತಾನೆ. ಉಯ್ಯಾಲೆಯಲ್ಲಿ ತನ್ನ ಪಕ್ಕದಲ್ಲೇ ಕುಳಿತುಕೊಳ್ಳುವಂತೆ ಸನ್ನೆ ಮಾಡುತ್ತ ಕೃಷ್ಣ ತಾನೇ ಮಾತಿಗಿಳಿಯುತ್ತಾನೆ.” ಎಷ್ಟೋ ವರುಷಗಳ ನಂತರದ ನಮ್ಮಿಬ್ಬರ ಈ ಸುಮಧುರ ಭೇಟಿಯನ್ನು ಅಷ್ಟು ಸುಲಭದಲ್ಲಿ ಮುಗಿಸುವೆನೇ ರಾಧೆ!?….ಅಂದಾಗ ಮೌನವಾಗಿಯೇ ಇದ್ದ ರಾಧೆ ಕೃಷ್ಣನ ಮುಖ ನೋಡುವುದರಲ್ಲೇ ತಲ್ಲೀನಳಾಗಿದ್ದಾಳೆ.”ಏ… ರಾಧೆ ಅಂತ ಜೋರಾಗಿ ಕೂಗುತ್ತ ಅವನು ಕೈ ಸ್ಪರ್ಶಿಸಿದಾಗ ಪುಳಕಿತಳಾದ ರಾಧೆ ವಾಸ್ತವಕ್ಕೆ ಮರಳುತ್ತಾಳೆ.ಬೀಸೋ ತಂಗಾಳಿಗೆ ಬೇವಿನ ಮರದ ಪುಟ್ಟ,ಪುಟ್ಟ ತಿಳಿ ಹಳದಿ ಬಣ್ಣದ ಪುಷ್ಪಗಳು ಆಗೊಮ್ಮೆ,ಈಗೊಮ್ಮೆ ಸುರಿಯೋ ತುಂತುರು ಮಳೆ ಹನಿಯ ರೀತಿ ಕೃಷ್ಣನ ಕೆನ್ನೆಯನ್ನು ಮೃದುವಾಗಿ ತಟ್ಟುತ್ತಿವೆ.ಆಗಲೇ ಮತ್ತೊಂದು ವಸಂತ ಋತು ಬಂದಾಯಿತೇ!? ಅಷ್ಟು ಬೇಗನೆ ಬೇವಿನ ಮರ ಚಿಗುರಿ,ಹಸಿರಾಗಿ ಮತ್ತೇ ಹೂ ಕೂಡ ಬಿಟ್ಟಿತೇ!?…. ಇದಕ್ಕೆಲ್ಲ ಕಾರಣ ನನ್ನ ಕೃಷ್ಣನ ಆಗಮನವೇ ಅಥವಾ ನಾನೇ ಈ ಮೊದಲು ಅದನ್ನೆಲ್ಲ ಗಮನಿಸಿರಲಿಲ್ಲವೇ!?…… ಅದೇಷ್ಟೋತ್ತು ಮೌನವಹಿಸುವೆ ರಾಧೆ ಹಾಗೆಯೇ ಸಲುಗೆಯಿಂದ ಮತ್ತೊಮ್ಮೆ ಕೃಷ್ಣನೆಂದು ಕರೆಯಬಾರದೆ? ಎಂಬ ಕೃಷ್ಣನ ಅಂತರಾಳದ ಮಾತುಗಳನ್ನು ರಾಧೆಯ ಅಂತರಂಗ ಆಲಿಸುತ್ತಲೇ ಕೃಷ್ಣ…. ಅಂತ ಕೂಗಿದಳು ರಾಧೆ. ಈಗ ಬಾಹ್ಯ ಪ್ರಪಂಚದ ಮತ್ತಾವ ಚಿಂತೆಗಳು ಅವಳಲ್ಲಿರಲಿಲ್ಲ ಹೃನ್ಮನದೊಳಗೆಲ್ಲ ಕೃಷ್ಣನೊಬ್ಬನೇ…. ಹೌದು ಕೃಷ್ಣ, ಮತ್ತಾವ ಸಂಬಂಧದಲ್ಲೂ ಇರದ,ಅಕ್ಷರಕ್ಕೂ ನಿಲುಕದ ,ಪದಗಳಿಗೂ ಸಿಗದ ಅನನ್ಯ ಅನುಬಂಧ ನಮ್ಮದು ಎಂದು ಕೃಷ್ಣನ ಭುಜಕ್ಕೊರಗುತ್ತಾಳೆ  ರಾಧೆ….!. ಹೌದು ರಾಧೆ ನಿನ್ನ ಮಾತು ಅಕ್ಷರಶಃ ನಿಜ!…. ಸ್ನೇಹ,ಪ್ರೇಮ,ಪ್ರೀತಿ ಅವೆಲ್ಲವುಗಳನ್ನು ಮೀರಿದ ನಮ್ಮಿ ಅನುಬಂಧಕ್ಕೆ ಅದಾವುದೇ ಹೆಸರಿಲ್ಲ.ಉಸಿರಿಗೂ ಮತ್ತೊಂದು ಹೆಸರು ಬೇಕೇ ರಾಧೆ!? ಅಂದಿಗೂ,ಇಂದಿಗೂ ಮುಂದೆಯೂ ನಮ್ಮಿ ಮೈತ್ರಿಯು ಚಿರಂಜೀವಿ. ದೂರದಲ್ಲಿದ್ದಷ್ಟಕ್ಕಿಂತ ದ್ವಿಗುಣದ ಸನಿಹ ಅಂದರೂ ತಪ್ಪಿಲ್ಲ ರಾಧೆ.ಮೆಲ್ಲನೆ ಕಣ್ತೆರೆದ ರಾಧೆಗೆ ಇದಾವುದನ್ನು ಅರಗಿಸಿಕೊಳ್ಳುವ ಶಕ್ತಿಯೂ ಇಲ್ಲ, ಯುಕ್ತಿಯೂ ಬರುತ್ತಿಲ್ಲ. ಮತ್ತೇನೋ ನೆನಪಾದವಳಂತೆ ಒಂದೇ ಒಂದು ಕ್ಷಣ ಕೃಷ್ಣ, ಹೀಗೋಗಿ ಹಾಗೆಯೇ ಬರುವೆ ಎಂದು ಒಂದೇ ಉಸಿರಿನಲ್ಲಿ ಓಡುತ್ತಾ ದೇವರ ಮನೆಯಲ್ಲಿ ಜೋಪಾನವಾಗಿಟ್ಟ ಕೃಷ್ಣನ ಆ ಬಂಗಾರದ ಕೊಳಲನ್ನು ರೇಷ್ಮೆಯ ವಸ್ರ್ತದ ಸಮೇತ ತಂದು ಅವನೆದುರಿಗೆ ಹಿಡಿದು ಕೊಳಲು ನುಡಿಸಲೇಬೇಕೆಂದು ಹಠ ಹಿಡಿಯುತ್ತಾಳೆ.ರಾಧೆಯ ಮುಗ್ಧ ಹೃದಯಕ್ಕೆ ಸೋತ ಕೃಷ್ಣ ಆ ಕೊಳಲನ್ನೆತ್ತಿಕೊಂಡು ರಾಧೆಯನ್ನು ನೆನೆಯುತ್ತ ನಾದ ಹೊಮ್ಮಿಸುವಾಗ  ಗೋವುಗಳೆಲ್ಲ ಎಷ್ಟೋ ವರುಷದ ನಂತರ ತೇಲಿ ಬಂದ  ಸುಂದರ ಕೊಳಲ ನಾದಕ್ಕೆ ತಲೆದೂಗುತ್ತ ಕೊರಳಲ್ಲಿನ ಗಂಟೆಯ ಸಪ್ಪಳ ಮಾಡುತ್ತಿವೆ.ನವಿಲೊಂದು ನಾಟ್ಯವಾಡುತ್ತ ಅವರತ್ತ ಬರುತ್ತದೆ.ಇಷ್ಟು ವರ್ಷದ ತಪಸ್ಸು ಈಗ ಫಲ ಕೊಟ್ಟಿರುವಂತೆ ರಾಧೆಯ ಸಂತಸಕ್ಕೆ ಪಾರವೇ ಇಲ್ಲ.ತನಗರಿವಿಲ್ಲದಂತೆಯೇ ರಾಧೆ ನೃತ್ಯ ಮಾಡುತ್ತ ಕೃಷ್ಣನಿಗೆ ವಂದಿಸುತ್ತಾಳೆ…. ಅಭಿನಂದಿಸುತ್ತಾಳೆ.ಬಿಸಿಲ ತಾಪಕ್ಕೆ  ಸುರಿದ ಕೃಷ್ಣನ ಮುಖದ ಮೇಲಿನ ಬೆವರು ಹನಿಯನ್ನು ತನ್ನ ಚಿತ್ತಾರದ ಸೀರೆ ಸೆರಗಿನಿಂದ ಮೃದುವಾಗಿ ಒರೆಸುತ್ತ ಆಯಾಸವಾಯಿತೆ ಕೃಷ್ಣ?… ನೀ ಬಂದ ಖುಶಿಯಲ್ಲಿ  ನನ್ನನ್ನೇ ನಾ ಮರೆತೆ ನಿನಗೆ ಹಸಿವಾಗಿರಬಹುದು ತಾಳು ಎಂದು ಅಡುಗೆ ಕೋಣೆಯತ್ತ ನಡೆಯುತ್ತಾಳೆ. ಅದೆಂಥ ಅನನ್ಯ ಭಕ್ತಿ ನನ್ನಲ್ಲಿವಳಿಗೆ…. ಶ್ಯಾಮನೆಂದು ಧ್ಯಾನಿಸೋ ಮೊದಲೇ ಸ್ಮರಿಸಲಿ ರಾಧೆಯನ್ನೇ ಅನ್ನೋ ವರವನ್ನು ಪ್ರಧಾನಿಸುವಾಗಲೇ ಬೆಳ್ಳಿ ಬಟ್ಟಲಲ್ಲಿ ಬೆಣ್ಣೆ ಹಿಡಿದುಕೊಂಡು ಬಂದ ರಾಧೆ ತಗೋ ಕೃಷ್ಣ ನಿನಗಿಷ್ಟವಾದದ್ದನ್ನೇ ತಂದಿರುವೆ ಎನ್ನುತ್ತಾ ತಾನೇ ಕೈತುತ್ತು ಕೊಡುವಳು.ಬೇರಾವ ಮೋಹಪಾಶವಿರದ ಶುದ್ಧ ಪ್ರೀತಿ ನಿನ್ನದು ರಾಧೆ ಅದೇನು ವರ ಬೇಕು ಕೇಳು ಅಂದಾಗ ಏನು ವರ ಕೇಳಲಿ ಕೃಷ್ಣ!?…. ನನ್ನೆಲ್ಲ ಆಗು ಹೋಗು,ಮೂಲಗಳಿಗೆ ಸೃಷ್ಟಿ, ಕಾರಣಕರ್ತ ನೀನೇ ಇರುವಾಗ ನನ್ನ ಬೇಕು ಬೇಡಗಳೆಲ್ಲ ನಿನಗೇ ಗೊತ್ತು ಹೀಗಿದ್ದೂ ನನ್ನನ್ನು ಪರೀಕ್ಷಿಸುವ ಹುನ್ನಾರವೇ!?….. ಅಥವಾ ಇಷ್ಟು ವರುಷದಲ್ಲಿ ರಾಧೆ ಬದಲಾಗಿರುವಳೆಂಬ ಭಾವನೆಯೇ!?…. ಇಲ್ಲ ಕೃಷ್ಣ ಇಲ್ಲ ನೀನೆಲ್ಲವನ್ನೂ ಅರಿತಿರುವೆ, ಅರಿಯದವನಂತೇಕೆ ನಟಿಸುವೆ!? ಕಣ್ಣೊಳಗಿನ ದೃಷ್ಟಿಗೇಕೆ ವರ್ಣನೆ…. * ಸೃಷ್ಟಿಸಿದ ಬೊಂಬೆಗಳಲ್ಲೆಲ್ಲ ನಿನ್ನದೇ ಜೀವಂತಿಕೆ ನನ್ನೊಳಗಿನ ನಿನಗಾವ ಆರಾಧನೆ ಪೂಜಿಸುವ ಪದಗಳೆಲ್ಲ ನೀನಿತ್ತ ಕಾಣಿಕೆ! ಸದಾ ನಿನ್ನ ಹೃದಯದಲ್ಲಿ ವಾಸಮಾಡಿಕೊ ಎನ್ನ.ಅದರ ಹೊರತು ಮತ್ತಾವ ವರವು ಬೇಕಿಲ್ಲ ಅದರ ಅಗತ್ಯವೂ ನನಗಿಲ್ಲ ಕೃಷ್ಣ ಅಂದಾಗ .ತಥಾಸ್ತು ಅಂತಾನೆ ಕೃಷ್ಣ.ಅಷ್ಟೊತ್ತಿಗಾಗಲೇ ಸೂರ್ಯನು ಪಡುವಣ ದಿಕ್ಕಿನೆಡೆಗೆ ಧಾವಿಸುತ್ತಿದ್ದ.ಅದು ಅವನಿಗೂ ವಿರಮಿಸುವ ಹೊತ್ತಲ್ಲವೇ!?…. ಹಕ್ಕಿಗಳೆಲ್ಲ ಬಾನಂಗಳದಿ ನೇಸರನ ವಿದಾಯ ಸಲ್ಲದು ಎಂಬಂತೆ ಏನೋ ಕಿಚಿ ಪಿಚಿ ಅನ್ನುತ್ತಿದ್ದವು. ಹೇ….! ಒಲವೇ ನಾನಿನ್ನು ಹೋಗಿ ಬರಲೇ!? ಅನ್ನೋ ಕೃಷ್ಣನೆದೆಯ ಸದ್ದು ರಾಧೆಯ ಹೃದಯಕ್ಕೂ ಕೇಳಿಸುತ್ತಿತ್ತು.ಮನವದೆಷ್ಟು ಬೇಡವೆಂದು ಕೂಗಿದರೂ ಕರ್ತವ್ಯದ ಕರೆ ದೇವರಿಗೂ ಉಂಟು ರಾಧೆ.ಅದಕ್ಕಾಗಿ ಮರಳಲೇಬೇಕು .”ಇಂದು ನಾ ನಿನ್ನೊಂದಿಗೆ ಕಳೆದ ಈ ಪ್ರತಿ ಕ್ಷಣಗಳೇ ನನಗೆ ಸ್ಫೂರ್ತಿ ಕೃಷ್ಣ” ನಿನ್ನ ಇಂದಿನ ಈ  ಭೇಟಿಯದು ನಾ ನಿರೀಕ್ಷಿಸದ,ಅವರ್ಣನೀಯ ಸಂಭ್ರಮದ ಸಂಗತಿ. ಈ ಮಧುರ ನೆನಪುಗಳೊಂದಿಗೆಯೇ ನಾನು ಜೀವಿಸುತ್ತೇನೆ ಅದು ಈ ಜನ್ಮದಲ್ಲಷ್ಟೇ ಅಲ್ಲ ನಾ ಜನಿಸೋ ಪ್ರತಿಜನ್ಮದಲ್ಲೂ ನಮ್ಮ ಈ ಪವಿತ್ರ ಅನುಬಂಧ ಹೀಗೆ ಇರುವುದು.ಹೋಗಿ ಬಾ ಕೃಷ್ಣ….. ಹೋಗಿ ಬಾ….ಎನ್ನುತ್ತಲೇ ಕೃಷ್ಣ ಅವಳಾತ್ಮದೊಳಗೆ ವಿಲೀನವಾದ…! *********************************************

ಧನ್ಯ ಮಿಲನ Read Post »

ಕಥಾಗುಚ್ಛ

ಬಂದು ಹೋಗುವ ಮಳೆಯಲ್ಲಿ

ಕಥೆ ಬಂದು ಹೋಗುವ ಮಳೆಯಲ್ಲಿ ತೆಲುಗಿನಲ್ಲಿ: ಅಫ್ಸರ್ ಕನ್ನಡಕ್ಕೆ : ಚಂದಕಚರ್ಲ ರಮೇಶ ಬಾಬು “ಈ ಶಿಥಿಲಗಳ ಬಣ್ಣಗಳು ನಿನ್ನ ಹಿಡಿತಕ್ಕೆ ತುಂಬಾ ಚೆನ್ನಾಗಿ ಬಂದಿವೆ. ಈ ಬಣ್ಣಾನ್ನ ಅಷ್ಟು ಖಚಿತವಾಗಿ ನಿನ್ನ ಕಾನ್ವಾಸ್ ಮೇಲೆ ಅದ್ಹೇಗೆ ತರ್ತೀಯೋ ಮಾರಾಯಾ ! ಏನ್ ಮಿಕ್ಸ್ ಮಾಡ್ತಿಯೋ ಗೊತ್ತಿಲ್ಲಾಗ್ಲೀ ! ಪ್ರತಿ ಚಿತ್ರದಲ್ಲೂ ಅವಕ್ಕೆ ಭಿನ್ನವಾದ ಮೈ ಬಣ್ಣ ಹೊಂದಿರುವ ಹೆಣ್ಣುಗಳು…. ಒಂದು ಮೋಡ…. ನನಗೆ ಗೊತ್ತಿದ್ದ ಹಾಗೆ ಹತ್ತು ವರ್ಷದಿಂದ ಇದೇ ಅಲ್ವಾ ನಿನ್ನ ಕಾನ್ವಾಸ್…..!” ಕಾನ್ವಾಸಿನ ಕಡೆಗೆ ಮತ್ತೊಂದು ಸಲ ತೀಕ್ಷ್ಣವಾಗಿ ನೋಡ್ತಾ ಅಂದಳು ಆವಳು. ಆ ಹತ್ತು ವರ್ಷದ ಟೈಮ್ ಲೈನ್ ನನಗಿಂತ ಅವಳಿಗೇ ಚೆನ್ನಾಗಿ ಗೊತ್ತು. ಹತ್ತು ವರ್ಷದ ಹಿಂದೇ ಅಲ್ವಾ, ಅಪ್ಪ ತೀರಿಹೋದ ಮೇಲೆ ಆ ಊರಿನಲ್ಲಿ ಇನ್ನು ತಮಗೆ ಏನೂ ಇಲ್ಲ ಅಂತ ಅನಿಸಿದ್ದು. ನಿರ್ವಾಹ ವಿಲ್ಲದೆ ಕೆಲಸದ ನೆವ ಮಾಡಿಕೊಂಡು ಹೈದರಾಬಾದಿಗೆ ತನ್ನನ್ನು ಅಮ್ಮನ ಜೊತೆಗೆ ಕರೆಸಿದ್ದಳು ಅವಳು. ಈ ನಗರವನ್ನು ಪ್ರೀತಿಸಬೇಕೆಂದು ತುಂಬಾ ಸಲ ಅಂದುಕೊಂಡಿದ್ದ. ಹಾಗೆ ಅಂದುಕೊಂಡಿದ್ದ ಪ್ರತಿ ಸರ್ತಿಯೂ ಖಂಡಿತವಾಗಿ ದ್ವೇಷಿಸಲು ಯಾವುದೋ ಒಂದು ಕಾರಣವನ್ನು ನಾಟಕೀಯವಾಗಿ ಸೃಷ್ಟಿಸುತ್ತಿತ್ತು ಈ ನಗರ. ಇನ್ನೇನು ಸ್ವಲ್ಪ ಸೆಟ್ಲ್ ಆಗುತ್ತಿದ್ದಾನೆ ಎನ್ನುವ ಹೊತ್ತಿಗೆ ಅಮ್ಮನನ್ನು ನುಂಗಿಬಿಟ್ಟಿತ್ತು ಈ ನಗರ. ತನ್ನ ಅಶಕ್ತತೆಯನ್ನು ಈ ನಗರಕ್ಕೆ ಆಪಾದಿಸುತ್ತಿದ್ದೇನಾ ? ಏನೋ ! ಕಾರಣಗಳನ್ನು ಬಗೆದು ತೆಗೆಯಲಿಲ್ಲ ಎಂದೂ. ಹಿಂದೆಗಿಂತಲೂ ಬದುಕಿನ ಬಗ್ಗೆಯ ಹೆದರಿಕೆ ಜಾಸ್ತಿಯಾದದ್ದಂತೂ ನಿಜ. ತನ್ನ ಅಶಕ್ತತೆ ಸಹ ಸತ್ಯವೇ. ತನಗೆ ಗೊತ್ತಿರುವ ನಿಜ ಅದು. ಮುಂದಕ್ಕೆ ಒಂದು ಹೆಜ್ಜೆ ಹಾಕಬೇನಿಸಿದರೂ ಇಲ್ಲಿಯವರೆಗೂ ಸಲೀಸಾಗಿ ನಡೆದಿದ್ದ ಜೀವನ ಚೆಲ್ಲಾಪಿಲ್ಲಿಯಾಗುತ್ತದೇನೋ ಎನ್ನುವ ದಿಗಿಲು. ಅವಳ ಜೊತೆಗಿನ ಪ್ರೀತಿ, ಮದುವೆ ಸಹ ಅಷ್ಟೇ ! ಕೆಲವು ಸೋತ ಹೆಜ್ಜೆಗಳು. ಕೆಲಸದ ಮೇಲೂ ಜಾಸ್ತಿ ನಂಬಿಕೆ ಇಲ್ಲ. ಮುಂಬರುವ ಘಳಿಗೆಗಳ ಬಗ್ಗೆ ಅನಿಶ್ಚತತೆ. ಈ ಕ್ಷಣದಲ್ಲಿ ಬದುಕಲಾರದ ಅಸ್ಥಿರತೆ. “ ಯಾಕಿಷ್ಟು ಹೆದರಿಕೆ ನಿನಗೆ ಪ್ರತಿಯೊಂದಕ್ಕೂ ? ಊರಲ್ಲಿರುವಾಗ ಇಷ್ಟು ಹೆದರಿಕೆ ಇರಲಿಲ್ಲ ಅಲ್ಲ ನಿನಗೆ ?” ಅಂತ ಕೊರಗುವ ಅಮ್ಮನಿಗೆ ನನ್ನಿಂದ ಉತ್ತರ ಸಿಗುತ್ತಿರಲಿಲ್ಲ. ಆದರೆ ಅಮ್ಮನಿಗೆ ಗೊತ್ತಂತ ಕಾಣತ್ತೆ, ನನ್ನೊಳಗಿನ ನಾನು ಏನು ಅಂತ. “ಈ ಶಿಥಿಲಗಳಡಿ ನೀನೇನೋ ಅಡಗಿಸ್ತಾ ಇದೀಯಾ” ಅಲ್ಲಿಗೆ ಬಹುಶಃ ನಾಲನೇ ಸಲ ನನ್ನ ಆ ಕಾನ್ವಾಸ್ ನಲ್ಲಿ ಇಣುಕಿದ್ದಳು ಅವಳು. ಕಾನ್ವಾಸಿಗೆ ಎಷ್ಟು ದೂರ ತಾನು ನಿಂತರೆ ಅದರಲ್ಲಿಯ ಚಿತ್ರ ಎಷ್ಟು ತನಗೆ ಹತ್ತಿರವಾಗಿ ಕಾಣುತ್ತದೋ ಅವಳಿಗೆ ಗೊತ್ತು. ಹಾಗೆ ನಿಂತಾಗ ಅವಳು ಚಿತ್ರದ ಒಂದು ಭಾಗವಾಗಿ ಹೋಗಿದ್ದಾಳೆ ಅನಿಸುತ್ತೆ. ಅದರಲ್ಲಿ ತಾನು ಬರೆಯಲು ಬಿಟ್ಟುಹೋದ ನೇರಳೆ ಬಣ್ಣದ ಯಾವುದೋ ಹೂವು ಆಗಿಂದಾಗಲೇ ಕಾನ್ವಾಸ್ ಮೇಲೆ ಅರಳಿದ ಅನುಭವವಾಗುತ್ತೆ. “ ಉತ್ತರ ಏನು ಅಂತಾ ಯೋಚನೇನಾ ? ಅಥವಾ ಇನ್ನೊಂದು ಪೆಯಿಂಟಿಂಗ್ ಬಗ್ಗೆ ಆಗಲೇ ಕಲ್ಪನೆ ಶುರೂನಾ?” ಹಾಗೇ ಒಂದು ನಗೆ ನಕ್ಕು ಸುಮ್ಮನಾಗಲು ಎಣಸಿದ ಅವನು. ಅವಳು ಒಪ್ಪುವುದಿಲ್ಲ. “ ಹೌದು. ನಿನ್ನಷ್ಟು ಪರೀಕ್ಷಿಸಿ ಯಾರೂ ನೋಡುವುದಿಲ್ಲ. ಅದಕ್ಕೆ ನಿನಗೇ ಚೆನ್ನಾಗಿ ಗೊತ್ತು. “ “ ನಿಜ ಹೇಳ್ಬೇಕಾದ್ರೆ ನನಗೂ ಏನೂ ಗೊತ್ತಿಲ್ಲ. ನೋಡಿದ್ದು ಹೇಳ್ತಾ ಇದೀನಿ ಅಷ್ಟೇ. ಆದರೆ ನಿನ್ನ ಪ್ರತಿ ಪೆಯಿಂಟಿಂಗ್ ನ ಹಿಂದೆ ನನಗೆ ಕಾಣದೇ ಉಳಿದದ್ದು ತುಂಬಾ ಇದೆ ಅನಿಸತ್ತೆ. ಖಂಡಿತ ಇರಲಿಕ್ಕೂ ಸಾಕು “ “ ಇರುತ್ತದೇನೋ ಗೊತ್ತಿಲ್ಲ ! ನಂಗಾದರೂ ಏನು ಗೊತ್ತು . ಚಿತ್ರ ಬರದಾದಮೇಲೆ ನನ್ನ ಕೆಲಸ ಮುಗೀತು “ “ ನೀನು ಮತ್ತೊಂದು ಭಾಷೆಯಲ್ಲಿ ಅರ್ಥೈಸುವವರೆಗೂ ನನಗೆ ನಿನ್ನ ಬಣ್ಣ, ರೇಖೆಗಳು ಅರ್ಥವಾಗುವುದಿಲ್ಲ. ಈ ಚಿತ್ರನೋಡು ! ಇಲ್ಲಿಗೆ ಹತ್ತು ಸಲ ಹತ್ತು ಕಡೆಯಿಂದ ನೋಡಿದೀನಿ. ಆದರೆ ಅದರಲ್ಲಿ ನೀನೇನು ಅಂತ ತಿಳಿತಾನೇ ಇಲ್ಲ. “ “ ಬಣ್ನ, ರೇಖೆಗಳೇ ಅದರ ಭಾಷೆ. ಅದರ ಭಾಷೆಯಲ್ಲಿರುವ ಆ ಚಿತ್ರ ನಿನಗೆ ಅರ್ಥವಾಗಲಿಲ್ಲ ಅಂದರೆ ಅದು ಸೋತಹಾಗೆ . ಆದರೂ ಒಂದು ಮಾತು ಹೇಳು. ನಿನಗೆ ನಾನು ಯಾಕೆ ಸಿಗಬೇಕು ?” “ ಏನೋ ಗೊತ್ತಿಲ್ಲ. ಸಿಕ್ಕಿದಷ್ಟು ಸಿಕ್ಕಲಿ ಅಂತ ಕಳೆದ ಹತ್ತು ವರ್ಷದಿಂದ ಅಂದುಕೊಳ್ತಾ ಇದೀನಿ. ಮೊದಲನೆ ಸಲ ನಿನ್ನ ಪೆಯಿಂಟಿಂಗ್ ಯಾವಾಗ ನೋಡಿದೆ ? ಆಗ ನಾನು ಹೇಗಿದ್ದೆ ? ಈಗ ಹೇಗಾಗಿದೀನಿ ? ಅಂತ ಆಲೋಚಿಸಿದರೆ ನಾನು ಅಂದು ನಾವು ಮೊದಲನೆ ಸಲ ಸಿಕ್ಕಾಗ ಹೇಗಿದ್ದೆನೋ ಈಗ್ಲೂ ಹಾಗೇ ಇದೀನಿ. ನಿನ್ನ ವಿಷಯ ಹಾಗಲ್ಲ. ನೀನು ಗೊತ್ತಾಗದೇ, ಗೊತ್ತಾದರೂ ಗೊತ್ತಾಗಿದೀಯ ಎನ್ನುವ ನಂಬಿಕೆ ಸಿಗದೇ….. “ ಹೀಗೆ ಸಮಯದ ಮೈಲುಗಲ್ಲುಗಳನ್ನು ನೆನಪಿಡಲಿಕ್ಕೆ ಹೇಗೆ ಸಾಧ್ಯ ಇವಳಿಗೆ ! ತನಗದು ಇಷ್ಟವೇ ಇಲ್ಲ. ನೆನಪುಗಳೆಂದರೆ ತುಂಬಾ ಭಯ. “ ಹೇಳಕ್ಕೆ ಆಗಲ್ಲ. “ ಒಮ್ಮೊಮ್ಮೆ ಅವಳು ಅಂತಾಳೆ. “ ನೀನು ಫುಲ್ ಟೈಮ್ ಆರ್ಟಿಸ್ಟ್ ಆಗಬೇಕು. ಈ ಪತ್ರಿಕೆಯ ಕೆಲಸ, ಮಧ್ಯಾಹ್ನದ ನಿದ್ದೆಯಿಂದ ಎದ್ದು ತಯಾರಾಗಿ ಹೋಗೋದು, ಅಲ್ಲೇನೋ ಗೀಚೋದು, ಅದು ನಿನ್ನ ಜೀವನ ಅಲ್ಲ ಅಂತ ಅನಿಸುತ್ತೆ. ಅದರ ಜೊತೆಗೆ ದಿನಾ ಇರೋ ಕೆಲಸದ ಅಭದ್ರತೆ, ಅವರಿಗೆ ನಿನ್ನ ಕೆಲಸ ಹಿಡಿಸೋದು, ಇಲ್ಲದ್ದು…” “ ಅದು ಮಾತ್ರ ಹೇಳ್ಬೇಡ. ಯಾರೂ ಇದನ್ನ ಫುಲ್ ಟೈಂ ಮಾಡೋಷ್ಟು ಭದ್ರತೆ ಇಲ್ಲ ಇಲ್ಲಿ. ಉಳಿದ ಕೊಸರೇ ಸಾಕು. “ ಕೆಲಸ ಅವಳಿಗಿಂತ ಹೆಚ್ಚೇನಲ್ಲ. ಆದರೆ, ಎಷ್ಟೋ ಇಷ್ಟವಾದ ತನ್ನನ್ನು ಬಿಟ್ಟುಕೊಂಡ ಹಾಗೆ, ಎಳ್ಳಷ್ಟೂ ಇಷ್ಟವಾಗದ ಕೆಲಸವನ್ನು ಆಕೆ ಬಿಡುವುದಿಲ್ಲ. ಅವಳು ಬಂದಹಾಗೆ ಬಂದು ಹೋಗಿಬಿಟ್ಟಳು. ಐದಾರು ವರ್ಷಗಳ ಪ್ರೀತಿ…. ಎರಡು ವರ್ಷಗಳ ಮದುವೆ, ನಂತರದ ಅಗಲಿಕೆ… ಈ ಎರಡು ವರ್ಷಗಳಲ್ಲಿ  ಅದೆಷ್ಟು ಬೆಳವಣಿಗೆಗಳು….. ಯಾವ ಆತ್ರದಲ್ಲೋ ಅವಳು ಗರ್ಭಿಣಿ ಆಗಬಹುದೇನೋ ಎನ್ನುವ ಮತ್ತೊಂದು ಸಂದಿಗ್ಧ… ಅಗಲಿಕೆಗೆ ಅದೊಂದೇ ಕಾರಣವಲ್ಲ ಅಂತ ಇಬ್ಬರಿಗೂ ಗೊತ್ತಿತ್ತು. ಮುಂಚಿತವಾಗಿ ನಿರ್ಧರಿಸಿದ ಹಾಗೆ ಇಬ್ಬರೂ ಮತ್ತೆ ಸಿಕ್ಕಾಗ ಮದುವೆ, ಮಕ್ಕಳ ಬಗ್ಗೆ ಮಾತನಾಡಿಕೊಳ್ಳಬಾರದು. ತಮ್ಮಿಬ್ಬರ ಜೀವನಗಳು ಕಳಚಿದ ಗಾಳಿಪಟಗಳ ತರ ಇರಬೇಕೆಂದೇನೂ ಇಲ್ಲ ಅಂತ ಮನದಟ್ಟಾದಾಗ, ಆ ವಿಷಯಗಳು ಹತ್ತಿರಬರಬೇಕಾಗಿಲ್ಲ. ಸ್ವಲ್ಪ ಹೊತ್ತು ಹಾಯಾಗಿ ಕಳೆಯಬೇಕು. ಮತ್ತೆ ಆ ಹಾಯಾದ ಸಮಯಕ್ಕಾಗಿ ಕಾಯಬೇಕು. ಅಷ್ಟೇ ! ಈಗಿನವರೆಗೆ ಹಾಗೇ ನಡೆದು ಬಂದಿದೆ. ಅವಳಿರುವ ಆ ಸ್ವಲ್ಪ ಹೊತ್ತು ಹಾಯಾಗಿರುತ್ತದೆ. ಅವಳು ಹೋದ ಮೇಲೆ ಸಹ ಅವಳ ನಗೆ ಆ ರೂಮಿನಲ್ಲಿ ಹರಡಿರುವ ಹಾಗೆ ಅನಿಸುತ್ತೆ. ಅದು ಬೇಕು ತನಗೆ ! ಬಹುಶಃ ಅವಳಿಗೂ ಬೇಕೆನೋ ! ಅದಕ್ಕೆ, ತಾನು ಇಷ್ಟಪಟ್ಟು ಮಾಡಿಕೊಂಡ ಎರಡನೆಯ ಮದುವೆಯ ನಂತರವೂ ತನ್ನ ಸ್ನೇಹವನ್ನು ಬಿಟ್ಟುಕೊಂಡಿಲ್ಲ. ಅವಳು ತನ್ನ ಸ್ನೇಹವನ್ನು ಬಿಟ್ಟಿಕೊಂಡಿದ್ದರೆ….. ಕೆಲ ಆಲೋಚನೆಗಳನ್ನು ತಡಗಟ್ಟುವುದು ಅಸಾಧ್ಯ. “ ಹೋಗ್ಬೇಡ “ ಅಂತ ಹೇಳಬೇಕು ಅನಿಸಿದರೂ ಇಲ್ಲಿಯವರೆಗೆ ತಾನು ಯಾರನ್ನೂ ಹಾಗೆ ನಿಲ್ಲಿಸಿರಲಿಲ್ಲ, ಬರುವವರನ್ನಾಗಲಿ, ಹೋಗುವವರನ್ನಾಗಲಿ. ಅವಳದೆಷ್ಟು ಸಲ ಬಂದಿದ್ದಾಳೋ, ಹೋಗಿದ್ದಾಳೋ ! ಸತ್ಯ ಹೇಳಬೇಕಾದರೆ, ಖಚಿತವಾದ ತನ್ನ ಮೌನವೇ ಅವಳು ಬಂದಾಗಲೆಲ್ಲಾ ಹೋಗಲಿಕ್ಕೆ ಕಾರಣವೇನೋ ! ೨ ತಾನು ಯಾಕೆ ಹೀಗೆ ? ಇಷ್ಟು ನೀರವತೆ ತನಗೇ ಕೆಲಸಲ ಹೆದರಿಕೆಯಾಗುತ್ತೆ.  ಅವಳನ್ನು ಪ್ರಥಮ ಬಾರಿಗೆ ಭೇಟಿಯಾದಾಗ ಅವಳಿಂದ ತಾನು ಏನು ಬಯಸಿದ್ದನೋ ನೆನಪಿಲ್ಲ. ಅವಳು ಹೇಳಿದ ಹಾಗೆ “ ನಿತ್ಯ ಹೆದರಿಕೆಗಳು”. ನಿಜ. ಆದರೆ ಈ ನಗರಕ್ಕೆ ಬರುವ ಮುನ್ನವೇ, ಈ ಕೆಲಸಕ್ಕೆ ಸೇರುವ ಮುನ್ನವೇ ಈ ಹೆದರಿಕೆಗಳು ತನ್ನಲ್ಲಿದ್ದವೇನೋ ! ಅವು ಹೈದರಾಬಾದಿಗೆ ಬಂದಮೇಲೆ ಮತ್ತಷ್ಟು ಜಾಸ್ತಿಯಾಗಿವೆ. ಮುಖ್ಯವಾಗಿ ಮನುಷ್ಯರು, ಗೆಳೆತನ, ಪರಿಚಯಗಳ ಅಪನಂಬಿಕೆಗಳಲ್ಲಿ ಬೆಳೆದ ಹೆದರಿಕೆ. ಇವೆಲ್ಲವನ್ನೂ ಮೀರಿ ತನಗೆ ತಾನೇ ಸೃಷ್ಟಿಸಿಕೊಂಡ ಭಯವಲಯ. ಒಮ್ಮೆ ದಿನಚರಿಯಲ್ಲಿ ತನ ಭಯಗಳ ಪಟ್ಟಿ ಮಾಡಿದ್ದ. ಮೊದಲನೆಯದು, ಈ ಜೀವನ ತನಗೆ ಏನೂ ಕೊಡುವುದಿಲ್ಲವೆಂದು. ಕೊಟ್ಟಹಾಗೆ ಮಾಡಿ ತಂದೆಯನ್ನು ಕಸಿದಿತ್ತು. ಇನ್ನೇನು ವಾಸಿಯಾಗಿದೆ, ಹೆದರಿಕೆ ಇಲ್ಲ ಎನ್ನುವ ಭರವಸೆಯಲ್ಲಿ ಮನೆಗೆ ತಂದ ಮೂರನೆಯ ದಿನವೇ ಅಪ್ಪ ನಿದ್ರೆಯಲ್ಲೇ ಸಾವನ್ನಪ್ಪಿದ್ದರು. ಹಾಗೇನೇ, ಪ್ರಾಣಕ್ಕಿಂತ ಹೆಚ್ಚಾದ ಅಮ್ಮ ಸಹ…. ಕಡೇ ಕ್ಷಣದವರೆಗೂ ಅಮ್ಮ ಇಲ್ಲದ ಜೀವನದ ಕಲ್ಪನೆಯೇ ಇದ್ದಿಲ್ಲ ತನಗೆ. ಎರಡನೆಯದು. ಈ ಸ್ನೇಹ, ಬಂಧಗಳು ಇವೆಲ್ಲ ಹತ್ತಿರವಾದಷ್ಟೂ ದೂರವಾಗಿ ನೋವು ಕೊಡುತ್ತವೆ ಅಂತ. ತಾನು ಚಿಕ್ಕವನಾದಂದಿನಿಂದ ನೋಡಿದರೆ ತನ್ನ ಜೊತೆ ಎಷ್ಟು ಜನ ಉಳಿದಿದ್ದಾರೆ ? ಇನ್ನೇನು ತುಂಬಾ ಹತ್ತಿರವಾದರು ಎನ್ನುವವರೆಲ್ಲ ನಿರ್ದಯವಾಗಿ ದೂರವಾಗಿದಾರೆ. ಅನೇಕ ಕಾರಣಗಳು. ಕೆಲವರ ಸಾವುಗಳು, ಕೆಲವರು ವಿದೇಶಗಳಿಗೆ ಹೋಗಿದ್ದು ಮತ್ತೆ ಕೆಲವರಲ್ಲಿ ಅಕಾರಣ ವೈರತ್ವಗಳು. ಇನ್ನು ಮೂರನೆಯದು. ಅದು ಅತಿ ದೊಡ್ಡ ಭಯ. ಅವಳು ಅದೆಷ್ಟು ಹತ್ತಿರ ಬರುತ್ತಾಳೋ, ಅಷ್ಟು ದೂರವಾಗುತ್ತಾಳೆ ಅಂತ. ಆ ಅಗಲಿಕೆಗೆ ತಾನು ಎಂದೂ ಸಿದ್ದನಿರುವುದಿಲ್ಲ ಎಂದು. ಒಂದು ಮಾತಲ್ಲಿ ಹೇಳಬೇಕಾದರೆ ತನ್ನಲ್ಲಿಯ ಇದ್ದೂ ಇಲ್ಲದ ಭಯಗಳಿಗೆಲ್ಲ ಮಕುಟಾಯಮಾನ ಅವಳು. ಅವಳು ಪ್ರಥಮಬಾರಿಗೆ ತನ್ನ ಜೀವನದಲ್ಲಿ ಬಂದಾಗ …. ತನಗೆ ಆಗಷ್ಟೇ ಬಣ್ಣಗಳ ಗುಟ್ಟು ತಿಳಿಯುತ್ತಿತ್ತು. ಕವನ ಬರೆಯುವುದು ಬಿಟ್ಟು ಬಣ್ಣಗಳಲ್ಲಿ ಅಡಗುವುದು ಶುರುವಾಗಿತ್ತು. ಅದು ಯಾವಾಗ….. ಡಿಗ್ರೀ ಮಾಡುವಾಗ… ಅಲ್ವಾ … ಹೌದು. ನಿಜವಾಗ್ಲೂ ಅಡಗುವುದೇ. ಆಗಿಂದಲೂ ಅವಳು ಹಾಗೇ ಇದಾಳೆ. ತಾನೇ ಹಾಗೇ ಇಲ್ಲ ಅಂತ ತನಗೆ ಗೊತ್ತು. ಅವಳಿಗೆ ಮುಚ್ಚು ಮರೆ ಇಲ್ಲ. ತಾನು ಹೇಳಬೇಕೆನ್ನುವುದನ್ನು ಮುಖದಮೇಲೆನೇ ಹೇಳಿಬಿಡುತ್ತಾಳೆ. ಅವಳ ಎದುರಲ್ಲಿ ತಾನು ಎರಡು ಭಿನ್ನ ಲೋಕಗಳಲ್ಲಿ ಓಡಾಡಿದ ಹಾಗೆ ಇರುತ್ತದೆ. ಅವಳಿಗೆ ಎಲ್ಲವನ್ನೂ ಹೇಳಿಬಿಡಬೇಕೆನಿಸುತ್ತದೆ. ಏನೂ ಹೇಳಲು ಇಲ್ಲದ ಜೀವನ ಅಂತಲೂ ಅನಿಸುತ್ತದೆ. ಕವನ ಬಿಟ್ಟದ್ದೇ ಮಾತಿನ ಮೇಲೆ ನಂಬಿಕೆಯೋ ಮತ್ತೊಂದೋ ಕಳೆದುಕೊಂಡಾಗ! ಇನ್ನೂ ಆ ಮಾತುಗಳಲ್ಲಿ ತಾನೇನೂ ಹೇಳಲಿಕ್ಕೆ ಇಲ್ಲ ಎಂದು ಖಾತ್ರಿ ಮಾಡಿಕೊಂಡ ಹಾಗೆ ಇರುತ್ತಾನೆ ತಾನು. ಮತ್ತೆ ಇವತ್ತು ಬರುತ್ತಾಳೆ ಅವಳು. ಈ ಒಬ್ಬಂಟಿ ಕೋಣೆಯನ್ನು ಅವಳಿಗೋಸ್ಕರ ಸ್ವಲ್ಪ ಸ್ವಚ್ಛ ಮಾಡಬೇಕೆಂದು ಅನಿಸುತ್ತೆ. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ  ಪುಸ್ತಕಗಳು, ಹಾಸಿಗೆ ಮೇಲೆ ಹರಡಿಕೊಂಡಿದ್ದ ಹೊದಿಕೆ, ದಿಂಬುಗಳು, ಕಿಚೆನ್ ನಲ್ಲಿಯ ನಾತ. ಯಾಕೆ ತೂಗೊಂಡಿದಾನೋ ಗೊತ್ತಿಲ್ಲದ ಡ್ರೆಸಿಂಗ್ ಟೇಬಲ್ ಮೇಲಿನ ಧೂಳು ಎಲ್ಲಾ ಸ್ವಚ್ಛ ಮಾಡಿ, ತಾನೂ ಸ್ನಾನ ಮಾಡಿ ಕೂರಬೇಕೆಂದು ಅಂದುಕೊಳ್ಳೋದು… ಇನ್ನು ಸ್ವಲ್ಪ ಹೊತ್ತಿನಲ್ಲಿ ಬರುತ್ತಾಳೆ ಅವಳು. ಅವಳು ಹೊತ್ತು ತರುವ ಪರಿಮಳ, ಮಿಂಚಿನಂತಿರುವ ನಗೆ, ಕೆಲ ಮಾತುಗಳು…. ತನಗೆ ಸದಾ ಬೇಕು. ಮತ್ತೆ ಕೆಲ ಸಮಯದಲ್ಲಿ ಬರುತ್ತಾಳೆ. ಅವೆಲ್ಲ ಅವಳ ಜೊತೆಯಾಗಿ ಬರುತ್ತವೆ. ಹೊರಟುಹೋಗುತ್ತವೆ. ನಂತರ ಬರೀ ತಾನೂ, ತನ್ನ ಬಣ್ಣಗಳ ಶಿಥಿಲಗಳು. ೩ ಬೇಸಿಗೆಯ ರಜೆಯಲ್ಲಿ ಮೊದಲನೆಯ ಸಲ ಹಾಗೆ ಬಂದಿದ್ದಳು ಅವಳು ! ಆ ರಜೆಗಳಲ್ಲಿ ವಾನ್ ಗೋಗ್ ನ ಜೀವನ ಚರಿತ್ರೆ “ ಲಸ್ಟ್ ಫರ್ ಲೈಫ್ “ ಅವಳು ತಂದು ಕೊಟ್ಟದ್ದೇ ! ನಂತರ ಸಹ ಅವಳು ಯಾವುದೋ ಒಂದು ತಂದುಕೊಡುತ್ತಲೇ

ಬಂದು ಹೋಗುವ ಮಳೆಯಲ್ಲಿ Read Post »

ಕಥಾಗುಚ್ಛ

ಚಿಕ್ಕಿಯ ಫೋಟೋ

ಕಥೆ ಚಿಕ್ಕಿಯ ಫೋಟೋ ಮಧುರಾ ಕರ್ಣಮ್ “ಚಿಕ್ಕಿ ಇಸ್ಕೂಲಿಗೆ ಬತ್ತೀಯೇನೆ? ಟೇಮಾಗ್ತಾ ಐತೆ” ಎಂದು ಕಮಲಿ ಕೂಗು ಹಾಕಿದಾಗ ಚಿಕ್ಕಿ “ಒಸಿ ನಿಂತ್ಕೊಳ್ಳೆ, ಬಂದೆ” ಎನ್ನುತ್ತ ತಟ್ಟೆಯಲ್ಲಿದ್ದ ತಂಗಳನ್ನ ಮುಗಿಸಿ ಕೈ ತೊಳೆದಳು. ಅಲ್ಲಲ್ಲಿ ಹರಿದ ಸ್ಕೂಲ್ ಬ್ಯಾಗ್ ಹೆಗಲಿಗೇರಿಸಿ “ನಾನ್ ಇಸ್ಕೂಲಿಗೆ ಹೋಗ್ಬರ್ತೀನಿ ಕಣವ್ವೋ” ಎಂದು ಕೂಗು ಹಾಕಿದಳು. “ಚಿಕ್ಕಿ, ಹಿಂದೆ ಒಂದ್ನಾಲ್ಕು ಪಾತ್ರೆ ಅವೆ, ತೊಳದ್ಹೋಗೆ” ಎಂಬ ಕೂಗು ಕೇಳಿಸದಂತೆ ಕಮಲಿಯ ಕೈಹಿಡಿದು ಓಡಿದಳು. “ಈ ಅವ್ವ ಹೋಗಾಗಂಟ ಕೆಲ್ಸ ಮಾಡಿದ್ರೂನು ಮತ್ತೆ `ಇದ್ ಮಾಡ್, ಅದ್ ಮಾಡ್, ಅಂತೈತೆ” ಎಂದು ದೂರು ಹೇಳುತ್ತ ನಡೆದಳು. ಅಷ್ಟರಲ್ಲಿ ಕಮಲಿ ಅವಳ ಕಿವಿ ಗಮನಿಸುತ್ತ “ಐ, ಕಿವಿಯೋಲೆ ಹೊಸ್ದೇನೆ? ಎಷ್ಟ ಚೆಂದಾಗೈತೆ” ಎನ್ನುತ್ತ ಮುಟ್ಟಿ ನೋಡಿದಳು. ಚಿಕ್ಕಿ ಇನ್ನೂ ಉತ್ಸಾಹಿತಳಾಗಿ “ಹ್ಞೂಂ ಕಣೇ. ಅಪ್ಪ ಜಾತ್ರೇಲಿಂದ ತಂದಿತ್ತು. ಅವ್ವಂಗ್ ಕೊಡ್ತು. ಅವ್ವ `ಇಂಥಾದ್ ತೊಟ್ಕೊಳಾಕ್ ನಾಯೇನ್ ಸಣ್ಣ ಮಗೀನಾ?’ ಅಂತ ಬೈತು. ಅದ್ಕೆ ಅಪ್ಪ ನನಕ್ಕೊಡ್ತು. ತಕ್ಷಣ ತೊಟ್ಕೊಂಬಿಟ್ಟೆ. ಈಗ ಶಾಲೇಗ್ ಬರೋವಾಗ ಅವ್ವ ನೋಡಿದ್ರೆ `ಬಿಚ್ಚಿಡು’ ಅಂತ ಬೈದು ಗಲಾಟೆ ಮಾಡ್ತಿತ್ತು” ಎಂದು ಹೇಳುತ್ತಾ ನಿಂತಳು. ಕಂಗಳಲ್ಲಿ ಸಂತಸದ ಮಹಾಪೂರ. ಕಮಲಿ ಕೂಡ ಅಷ್ಟೇ ಆನಂದದಿಂದ ತಿರುಗಿಸಿ ನೋಡಿ “ನಕ್‌ಸತ್ರ ಇದ್ದಂಗವೆ ಬಿಡು. ಭೋ ಸಂದಾಕವೆ” ಎಂದು ಪ್ರಶಂಸಿಸುತ್ತಾ ಮುನ್ನಡೆದಳು.  ಅವರು ಸಾಗಬೇಕಿದ್ದ ದಾರಿ ಇನ್ನೂ ದೂರವಿತ್ತು. ಸುಮಾರು ಎರಡು, ಎರಡೂವರೆ ಕಿ.ಮೀ. ಮಧ್ಯೆ ಹೊನ್ನೆ ದಿಬ್ಬ ದಾಟಿದರೆ ದೊಡ್ಡ ಬಯಲು. ಅದರಾಚೆ ಊರು ಆರಂಭವಾಗುತ್ತಿತ್ತು. ಅಲ್ಲೇ ಸರಕಾರಿ ಶಾಲೆ. ಊರಿನಿಂದ ಇವರ ಕೇರಿ ಬಲು ದೂರ. ಚಿಕ್ಕಿ, ಕಮಲಿ ಇಬ್ಬರೂ ಕೇರಿಯ ಹೂಗಳೇ. ಚಿಕ್ಕಿಯ ಅಪ್ಪ ಗಾರೆ ಕೆಲಸಕ್ಕೆ ಹೋದರೆ ಅವ್ವ ಮನೆ ಕೆಲಸಕ್ಕೆ ಹೋಗುತ್ತಾಳೆ. ಅವಳಿಗೊಬ್ಬ ತಮ್ಮ ಬೇರೆ. ಅವನಿಗೆ ಹುಶಾರಿಲ್ಲದಿದ್ದರೆ ಚಿಕ್ಕಿಯ ಶಾಲೆ ಗೋತಾ. ಈಗ ಅವನನ್ನು `ಲತಾ ಮೇಡಂ’ ಬಳಿ ಬಿಡುತ್ತಿದ್ದಾರೆ. ಅವರು ಆಟವಾಡಿಸುವುದಲ್ಲದೆ “ಅ, ಆ, ಇ, ಈ, ಎ, ಬಿ, ಸಿ, ಡಿ ” ಹೇಳಿಕೊಡುತ್ತಾರೆ. “ಜಾನಿ ,ಜಾನಿ, ಎಸ್ ಪಪ್ಪಾ” ಎಂದು ಅವನ ಬಾಯಲ್ಲಿ ಕೇಳಿದಾಗ ಚಿಕ್ಕಿಯ ಅವ್ವನಿಗೆ ಆನಂದವೋ ಆನಂದ. ಅವನನ್ನು “ಇಂಗ್ಲೀಸ್ ಸಾಲೆಗೆ ಸೇರ‍್ಸಾಣ” ಅಂತಿದಾಳೆ. ಚಿಕ್ಕಿಗೆ ಬೇಜಾರು. ಬಿಸಿಯೂಟ ಕೊಟ್ಟು, ಪುಸ್ತಕ, ಬಟ್ಟೆ ಕೊಟ್ಟರೂ ಚಿಕ್ಕಿ ಶಾಲೆಗೆ ಹೋಗೋದು ಅವಳಿಗಿಷ್ಟವಿಲ್ಲ. ಮನೇಲಿದ್ದರೆ ಕೊಂಚ ಕೆಲಸ ಕಾರ‍್ಯಕ್ಕಾಗುತ್ತೆ ಅಂತ ಧೋರಣೆ. ಚಿಕ್ಕಿಗೆ ಕಲೀಲೇಬೇಕೂಂತ ಆಸೆ. ಎಲ್ಲರ ಥರಾ ಇಂಗ್ಲೀಸಿನಲ್ಲಿ ಪಟ ಪಟ ಅರಳು ಹುರಿದಂತೆ ಮಾತನಾಡಬೇಕು. ದೊಡ್ಡ ನೌಕರಿ ಮಾಡಬೇಕು………ಏನೆಲ್ಲ.ಮತ್ತೆಲ್ಲ. ಅವಳ ಕನಸುಗಳೆಲ್ಲ ಮನೆಯಲ್ಲಿ ಮುಚ್ಚಿ ಕಮಲಿಯ ಮುಂದೆ ಬಿಚ್ಚಿಕೊಳ್ಳುತ್ತವೆ. ಕಮಲಿಯದೂ ಸುಮಾರು ಅದೇ ಸ್ಥಿತಿ. ಚಿಕ್ಕಿಯ ಬಣ್ಣ ಕಪ್ಪೋ ಕಪ್ಪು. ಎಣ್ಣೆ ಕಾಣದ ಕೂದಲು, ಚಪ್ಪಟೆ ಮೂಗು, ಬತ್ತಿದ ಕೆನ್ನೆಗಳು, ಅವಳಿಗೆ ಹೋಲಿಸಿದರೆ ಕಮಲಿಯೇ ಪರವಾಗಿಲ್ಲ. ಲಕ್ಷಣವಂತೆ. ಆದರೂ ಚಿಕ್ಕಿಗೆ ಸೌಂದರ‍್ಯ ವ್ಯಾಮೋಹ ಜಾಸ್ತಿ. ಒಡೆದ ಕನ್ನಡಿಯ ಮುಂದೆ ನಿಂತು ಮುಖ ನೋಡ್ಕೊಂಡಿದ್ದೇ ಬಂತು. ಪೌಡರ್ ಖಾಲಿಯಾದಾಗ ಮನೆಯಲ್ಲಿದ್ದ ಯಾವುದೋ ಹಿಟ್ಟನ್ನು ಬಳಿದುಕೊಳ್ಳುವ ಮೋಹ. “ಅಕ್ಕಿ ಹಿಟ್ಟು ಮನೇಲಿ ಉಳ್ಸಾಕಿಲ್ಲ ಈ ಕತ್ತೆ” ಎಂದು ಉಗಿಸಿಕೊಂಡರೂ ಬೇಜಾರಿಲ್ಲ. ಇತ್ತೀಚೆಗೆ ಶಾಲೆಯಲ್ಲಿ ಸುಗುಣ, ವಿಮಲ, ಎಲ್ಲ ಮೇಡಮ್‌ಗಳಂತೆ ಪೌಡರ್‌ಗಿಂತ ಮೊದಲು ಅದೇನೋ ಕ್ರೀಮು ತಿಕ್ಕುತ್ತಾರೆಂದು ಗೊತ್ತಾಗಿತ್ತು. ಅದನ್ನೊಂದು ಹೊಂದಿಸಲಾಗಿರಲಿಲ್ಲ. ಅವಳ ನಿಜವಾದ ಹೆಸರು ಚಿಕ್ಕೀರವ್ವ. ಅದು ಅವಳಜ್ಜಿಯ ಹೆಸರಂತೆ. ಅಜ್ಜಿ ಗತಿಸಿದ ವರ್ಷವೇ ಇವಳು ಹುಟ್ಟಿದ್ದಂತೆ. ಅದಕ್ಕೇ ಅವಳಪ್ಪನಿಗೆ ಅವಳನ್ನು ಕಂಡರೆ ತುಂಬಾ ಪ್ರೀತಿ. `ನಮ್ಮವ್ವಾನೇ ಮತ್ತೆ ಹುಟ್ಟಿ ಬಂದವ್ಳೆ’ ಎಂದು ತಮ್ಮವ್ವನ ಹೆಸರನ್ನೇ ಇಟ್ಟಾಗ ಚಿಕ್ಕಿಯ ಅವ್ವನಿಗೆ ಇರಿಸು-ಮುರಿಸು. `ತಲೆ ಮೇಲೆ ಕೂರಿಸ್ಕೋ ನಿಮ್ಮವ್ವನ್ನ’ ಎಂದು ಕಾಲೆಳೆಯುವುದೂ ಇತ್ತು. ಚಿಕ್ಕಿ ಶಾಲೆಗೆ ಹೋಗುವುದು ಅಪ್ಪನ ಒತ್ತಾಸೆಯಿಂದಲೇ. ಇಲ್ಲದಿದ್ರೆ ಅವಳವ್ವ ಅವಳನ್ನು ಮನೆ ಕೆಲಸಕ್ಕೆ ಕಳಿಸಿ ತಣ್ಣಗಾಗ್ತಿದ್ಲು. ಕಮಲಿಯದೂ ಹೆಚ್ಚು ಕಡಿಮೆ ಇದೇ ಕಥೆಯೇ. ಆದರೆ ಅವಳಿಗೆ ತಮ್ಮನ ಬದಲಾಗಿ ಅಕ್ಕ ಇದ್ದಳು. ಚಿಕ್ಕಿಗೆ ಫೋಟೋದ ಹುಚ್ಚು. ಜಾತ್ರೆಯಲ್ಲಿ ಅವರಪ್ಪ ತೆಗೆಸಿದ್ದ ಹಳೆಯ ಫೋಟೋ ಬಿಟ್ಟರೆ ಫೋಟೋಗಳೇ ಇರಲಿಲ್ಲ. ಅಪ್ಪನಿಗೆ ದುಂಬಾಲು ಬಿದ್ದರೂ “ಮುಂದಿನ ಜಾತ್ರೇಲಿ ತೆಗೆಸಾಣಂತೆ ಸುಮ್ಕಿರು” ಎಂದು ಬಿಟ್ಟಿದ್ದ. ಮಗುವಾಗಿದ್ದಾಗಿನ ಒಂದೇ ಒಂದು ಫೋಟೋ ಮಸುಕಾಗಿ ಹೀನಾಯ ಸ್ಥಿತಿಗೆ ತಲುಪಿತು. ಆದರೂ ಅದನ್ನು ದೇವರ ಪುಸ್ತಕದ ಮಧ್ಯೆ ಇಟ್ಟು ಜೋಪಾನ ಮಾಡಿದ್ದಳು. ಮದುವೇಲಿ ಅಷ್ಟೊಂದು ಫೋಟೋ ತಗೀತಾರೇಂದ್ರೆ ಅದಕ್ಕೋಸ್ಕರ ಮದುವೆಯಾಗಲೂ ಸಿದ್ಧವಿದ್ದಳು ಚಿಕ್ಕಿ. ಹನ್ನೆರಡು-ಹದಿಮೂರರ ವಯಸ್ಸಾದರೂ ಇನ್ನೂ ಪೀಚು ಪೀಚಾಗಿ ಎಳೇ ಮಕ್ಕಳಂತಿದ್ದಳು. ಇಬ್ಬರೂ ಕಿವಿಯೋಲೆ, ಮೇಷ್ಟ್ರುಗಳ ಬಗ್ಗೆ ಮಾತನಾಡುತ್ತಲೇ ಹೊನ್ನೆ ದಿಬ್ಬದ ಹತ್ತಿರ ಬಂದಿದ್ದರು. ದಿಬ್ಬ ಬಳಸಿ ಮಕ್ಕಳು ಬಯಲಿಗೆ ಬಂದಾಗ ನಿತ್ಯ ಬಣಗುಡುತ್ತಿದ್ದ ಖಾಲೀ ಬಯಲಿನಲ್ಲೊಂದು ಟೆಂಟು. ಒಂದಷ್ಟು ಜನ ನೆರೆದಿದ್ದಾರೆ. ಪ್ಯಾಟೆಯವರಂತಿದ್ದಾರೆ. ಒಬ್ಬ ಮೇಕಪ್ ಮ್ಯಾನ್ ಹುಡುಗಿಯ ಮುಖಕ್ಕೆ ಬಣ್ಣ ಬಳಿಯುತ್ತಿದ್ದಾನೆ. ಚಿಕ್ಕಿ ಕಮಲಿಯ ಕೈ ಅದುಮಿ ಖುಷಿಯಿಂದ “ಐ ಕಮಲಿ, ಅಲ್ನೋಡೇ ಸೂಟಿಂಗ್ ಐತೇನೋ, ಓಗಾಣ, ನೋಡಾಣ” ಎಂದು ಕುಪ್ಪಳಿಸಿದಳು. ಕಮಲಿಗೂ ಉತ್ಸಾಹ. “ಏನೋ ನಡೀತಿರ‍್ಬೋದು ಕಣೆ. ಆದ್ರೆ ಶಾಲೆಗ್ ಲೇಟಾದ್ರೆ ದಾನಪ್ಪ ಮೇಷ್ಟ್ರು ಬೈಯಾಕಿಲ್ವಾ? ಬಿಸಿಯೂಟ ತಪ್ಪೋಗ್ ಬಿಟ್ರೆ?” ಎನ್ನುತ್ತಾ ನಿಂತಳು. “ಅಯ್ಯ, ದಾನಪ್ಪ ಮೇಷ್ಟಿçಗ್ ತಾನೆ, `ಅವ್ವಂಗ್ ಹುಸಾರಿಲ್ಲ. ಕೆಲಸದ ಮನೆಗ್ಹೋಗಿ ಬಂದ್ವಿ’ ಅಂತ ಕಣ್ಣೀರಾಕ್ಕೊಂಡ್ ಯೋಳಿದ್ರೆ ಸುಮ್ಗಾಗ್ತಾರೆ ಬಾ” ಎಂದು ಕೈಹಿಡಿದು ಎಳೆದುಕೊಂಡೇ ಹೋದಳು. ದೊಡ್ಡ ಟೆಂಟಿನ ಹೊರಭಾಗದಲ್ಲೇ ಒಂದಿಬ್ಬರು ವಿವಿಧ ಬಗೆಯ ಕ್ಯಾಮೆರಾಗಳನ್ನಿಟ್ಟುಕೊಂಡು ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು. ದೊಡ್ಡ ಕಟೌಟ್. ಅದರ ಮೇಲೆ ಭೂಮಿ ಬಿರಿದು ಛಿದ್ರವಾಗುತ್ತಿರುವ ದೃಶ್ಯದ ಚಿತ್ರ. ಕೆಳಗೆ `ಪರಮಾಣು ಬೇಡ. ಪರಿಸರ ಉಳಿಸಿ’ ಎಂಬ ಘೋಷಣೆ. ಇನ್ನಿತರ ಏನೇನೋ ಫಲಕಗಳು ಸಿದ್ಧವಾಗುತ್ತಿದ್ದವು. ಅಲ್ಲೇನೋ ಪರಮಾಣು ರಿಯಾಕ್ಟರ್ ಬರುವ ಸುದ್ದಿಯಿತ್ತು. ಆದರೂ ಹಳ್ಳಿಗರಿಗೆ ಇದರ ಬಗ್ಗೆ ಜಾಸ್ತಿ ಗೊತ್ತಿಲ್ಲ. ಊರವರಿಗಂತೂ ಇವರು ಬಂದ ವಿಚಾರವೇ ಗೊತ್ತಿಲ್ಲ. ಇಲ್ಲವಾದಲ್ಲಿ ಆಗಲೇ ಅರ್ಧ ಊರು ಅಲ್ಲಿ ನೆರೆದಿರುತ್ತಿತ್ತು. “ಇದು ಸಾಲಲ್ಲ ವಿನೀತ್, ಇನ್ನೂ ಇಫೆಕ್ಟಿವ್ ಆಗರ‍್ಬೇಕು. ನೋಡಿದಾಕ್ಷಣ ಹೃದಯಕ್ಕೆ ತಟ್ಟುವಂತಿರಬೇಕು. ಕಂಗಳಿಂದ ನೀರು ಒಸರಬೇಕು. ಅಂತದ್ದೊಂದು ಆ್ಯಡ್ ಮಾಡಬೇಕು. ಅಂತಹ ಫೋಟೋ ಬೇಕು. ಈ ಭೂಮಿಯ ಚಿತ್ರಗಳೆಲ್ಲ ಹಳೆಯವಾದ್ವು. ಜನರಿಗೆ ಇವುಗಳಲ್ಲೇನೂ ಸೆಂಟಿಮೆಂಟ್ಸ ಉಳಿದಿಲ್ಲ” ಎಂದು ಗುಂಗುರು ಕೂದಲು ಬಾಚಿಕೊಳ್ಳುತ್ತಿದ್ದ ಹುಡುಗಿ ಸ್ಯಾಂಡ್ರಾ ಹೇಳಿದಾಗ ಕ್ಯಾಮೆರಾ ಹಿಡಿದ ಇಬ್ಬರ ಜೊತೆಗೆ ಇನ್ನಿಬ್ಬರು `ಹ್ಞೂಂ’ ಗುಟ್ಟಿದರು. ಗಡ್ಡದವನೊಬ್ಬ “ಏನಾದ್ರೂ ಡಿಫರೆಂಟ್ ಮಾಡ್ಬೇಕು. ಟಚಿಂಗ್, ಯು ನೋ ಟಚಿಂಗ್” ಎನ್ನುತ್ತ ಗಡ್ಡ ಕೆರೆದ. ಅಷ್ಟರಲ್ಲಿ ಇನ್ನೊಬ್ಬನ ಕ್ಯಾಮೆರಾ ಕಣ್ಣಿಗೆ ಹತ್ತಿರ ಬರುತ್ತಿದ್ದ ಹುಡುಗಿಯರು ಕಂಡರು. “ಏ, ಇಲ್ಲಿಗೇಕೆ ಬಂದ್ರಿ? ಹ್ಞಾಂ! ಏನ್ಕೆಲಸ ಇಲ್ಲಿ? ನಿಮಗೆ. ಹೋಗಿ, ಹೋಗಿ” ಎಂದು ಗದರಿಸಿದ ಕೈಯಲ್ಲಿ ಕೂಲಿಂಗ್ ಗ್ಲಾಸ್ ಹಿಡಿದ ವಿನೀತ್. ಇಬ್ಬರೂ ಹುಡುಗಿಯರು ಗಕ್ಕೆಂದು ನಿಂತರು. ಕಮಲಿ ಹೊರಡೋಣವೆಂದು ಕೈ ಹಿಡಿದು ಹಿಂದಕ್ಕೆ ಎಳೆದರೆ ಚಿಕ್ಕಿ ಅವಳ ಕೈ ಹಿಡಿದುಕೊಂಡೇ ಭದ್ರವಾಗಿ ನಿಂತಳು. “ಏನ್ಬೇಕು?” ಎಂದ ಇನ್ನೊಬ್ಬ. ಚಿಕ್ಕಿ ಗಟ್ಟಿ ಧರ‍್ಯ ಮಾಡಿ “ಫೋಟೋ ತೆಗೆಸ್ಕೋಬೇಕು” ಎಂದಳು ಕ್ಷೀಣವಾಗಿ. “ಫೋಟೋನಾ, ನಿಮ್ದಾ?” ಎನ್ನುತ್ತ ಎಲ್ಲರೂ ಒಂದು ಸುತ್ತು ಗಹಗಹಿಸಿ ನಕ್ಕರು. ಚಿಕ್ಕಿ, ಕಮಲಿಯರ ಕಣ್ಣುಗಳಲ್ಲಾಗಲೇ ನೀರು ಒಸರಿತ್ತು. “ನಿಮ್ ಫೋಟೋ ತೆಗೆಯಕ್ಕೆ ನಾವು  ಇಲ್ಲೀಗೂ ಬಂದ್ವಿ ಅನ್ಕೊಂಡ್ರಾ? ಹೋಗಿ, ಹೋಗಿ, ಶಾಲೆಗ್ ಹೋಗಿ” ಎಂದು ಗದರಿದ. “ಹೇಯ್, ಸ್ಟಾಪ್. . . .ಲಿಸನ್. . . .ನಿಮಗೆ ಫೋಟೋ ತೆಗೀಬೇಕಾ? ಇಲ್ಲಿ ಬನ್ನಿ ತೆಗೆಯೋಣ” ಎಂದು ಕರೆದಳು ಸ್ಯಾಂಡ್ರಾ. ಕಮಲಿಗೇನೊ ಹೆದರಿಕೆ. `ಬ್ಯಾಡ’ ಎನ್ನುತ್ತ ಹಿಂಜರಿದಳು. ಚಿಕ್ಕಿ ಮಾತ್ರ ಆಸೆ ತುಂಬಿದ ಕಂಗಳಿAದ ಮುಂದೆ ಬಂದಳು. ವಿನೀತ್ “ನಿನಗೇನು ಕೆಲಸವಿಲ್ಲವಾ ಸ್ಯಾಂಡ್ರಾ? ನಾಳೆ ಇಲ್ಲೀದೆಲ್ಲ ಪೇರ‍್ನಲ್ಲಿ ಬರುತ್ತೆ. ಮಧ್ಯಾಹ್ನ ಉಳಿದ ಎನ್.ಜಿ.ಓ.ದವರೆಲ್ಲ ರ‍್ತಾರೆ. ಪ್ರೊಟೆಸ್ಟ್ ಮಾಡ್ಬೇಕು. ಈ ಹಳ್ಳಿಮುಕ್ಕರ ಫೋಟೋ ತೆಗೀತಾ ಕೂತ್ಕೊ” ಎಂದು ಕೋಪಗೊಂಡ. “ಪ್ಲೀಸ್, ಎಲ್ರೂ ಎರಡು ನಿಮಿಷ ಸುಮ್ಮನಿರಿ” ಎಂದ ಸ್ಯಾಂಡ್ರಾ ಚಿಕ್ಕಿಯನ್ನು ಹತ್ತಿರ ಕರೆದಳು. “ನಿನ್ನ ಫೋಟೋ ತೆಗೀತೀನಿ. ಚಾಕಲೇಟೂ ಕೊಡ್ತೀನಿ. ನಾನ್ಹೇಳಿದಂತೆ ಪೋಸ್ ಕೊಡ್ತೀಯಾ” ಎಂದು ಕೇಳಿದಳು. “ಅಂಗಂದ್ರೆ?” ಚಿಕ್ಕಿ ಅಮಾಯಕಳಂತೆ ಪ್ರಶ್ನಿಸಿದಾಗ “ಊಂ, ನಗ್ತೀಯಾ, ಕೂಡ್ತೀಯಾ, ನಿಲ್ತೀಯಾ………?” ಎನ್ನುತ್ತ ಸ್ಯಾಂಡ್ರಾ ಕಷ್ಟಪಟ್ಟು ಉತ್ತರಿಸಿದಳು. “ಓ… ” ಎಂದ ಚಿಕ್ಕಿ ಮತ್ತೆ ಮೇಕಪ್‌ಮ್ಯಾನ್‌ನತ್ತ ಕೈತೋರಿದಳು. “ಓ ಹೊ ಹೋ……” ಎಂದು ಬಾಯಿಗೆ ಕೈ ಅಡ್ಡ ಇಟ್ಟು ನಕ್ಕ ಸ್ಯಾಂಡ್ರಾ “ಗೋಪಾಲ್, ಇವಳಿಗೆ ಮೇಕಪ್ ಮಾಡು” ಎಂದಳು. ಮುಂದೆ ಇಂಗ್ಲೀಷಿನಲ್ಲಿ ಏನ್ಹೇಳಿದಳೋ ಚಿಕ್ಕಿಗೆ ತಿಳಿಯಲಿಲ್ಲ. ಸ್ಕೂಲ್ ಬ್ಯಾಗ್ ಎಸೆದು ಕಮಲಿಯನ್ನೂ ಬಿಟ್ಟು ಓಡಿ ಹೋದಳು. ಬಂದ ದಾರಿಗೆ ಸುಂಕವಿಲ್ಲದಂತೆ ತಿರುಗಿದ ಕಮಲಿಯನ್ನು ಸ್ಯಾಂಡ್ರಾ ಹತ್ತಿರ ಕರೆಯುತ್ತ “ಇಲ್ಬಾ, ನೀನು ಗುಡ್ ಗರ್ಲ್ ಅಲ್ಲವಾ? ಚಾಕಲೇಟ್ ಕೊಡ್ತೀನಿ. ಅಲ್ಲಿರೋ ಮುಳ್ಳು, ಕಂಟಿಗಳನ್ನು ಆಯ್ದು ತರ‍್ತೀಯಾ?” ಎಂದು ಕೇಳಿದಳು. “ಕಮಲಿ, ತಕಂಬಾರೆ, ಫೋಟೋ ತೆಗೆಸ್ಗೊಂಡು ಇಬ್ರೂ ಬಿರ‍್ನೆ ಶಾಲೆಗೆ ಹೊಂಟು ಬಿಡಾಣ” ಎಂದು ಚಿಕ್ಕಿ ಕೂಗಿದಾಗ ಕಮಲಿಗೆ ಬೇರೆ ದಾರಿಯಿಲ್ಲ. ಚೀಲವಿಟ್ಟು ಆರಿಸಲು ನಡೆದಳು. ಸುತ್ತೆಲ್ಲ ಜನರಿಗೂ ಕುತೂಹಲ. ಸುಮ್ಮನೆ ನೋಡುತ್ತಿದ್ದರು. ಗೋಪಾಲನ ಮೇಕಪ್‌ನಲ್ಲಿ ಚಿಕ್ಕಿಯ ಕೆನ್ನೆ ಇನ್ನೂ ಬತ್ತಿತು. ಕಣ್ಣು ಆಳಕ್ಕಿಳಿದಿದ್ದವು. ಜಡೆ ಬಿಚ್ಚಲು ಹೇಳಿದ ಸ್ಯಾಂಡ್ರಾ ಕ್ಯಾಮೆರಾದಲ್ಲಿ ಅವಳನ್ನು ನಿಲ್ಲಿಸಿ, ಕೂಡಿಸಿ ಎರಡು ಫೋಟೊ ತೆಗೆದಳು. ಚಿಕ್ಕಿಗೆ ಖುಷಿಯೋ ಖುಷಿ. ಇನ್ನೂ ಹಲ್ಕಿರಿದಳು. ಉಹ್ಞೂಂ, ಅವಳಿಗೆ ತೃಪ್ತಿಯಾಗಲಿಲ್ಲ. ಕಮಲಿ ತಂದ ಮುಳ್ಳು-ಪೊದೆಗಳನ್ನು ಹರಡಿ ಅದರ ಪಕ್ಕ ಕುಳಿತುಕೊಳ್ಳಲು ಹೇಳಿದಳು. ಮಲಗಿಕೊಳ್ಳಲು ಹೇಳಿದಳು. ಮಲಗಿದ ಚಿಕ್ಕಿಗೆ ಅಲ್ಲೇ ಮೇಕಪ್. ಮತ್ತೆ ಮತ್ತೆ ಕೂದಲು ಕೆದರುವುದೂ ಇದ್ದೇ ಇತ್ತು. ಆಗಲೂ ಸಮಾಧಾನವಾಗದ ಸ್ಯಾಂಡ್ರಾ ಚಿಕ್ಕಿಯ ಸಮವಸ್ತ್ರ ತೆಗೆದು ಒಳಗಿನ ಹರಿದ ಪೆಟಿಕೋಟ್ ಮೇಲೆ ಮಲಗಿಸಿ ಭಂಗಿ ಸರಿಪಡಿಸಿದಳು. ಪಕ್ಕದಲ್ಲೇ ಒಂದು ಫಲಕವನ್ನಿಟ್ಟಳು. ಚಿಕ್ಕಿಗೆ ಇಷ್ಟು ಜನರ ಮುಂದೆ ಮಲಗುವುದು, ಅದೂ ಹರಿದ ಪೆಟಿಕೋಟ್ ಮೇಲೆ ಅವಮಾನವೆನಿಸಿದರೂ ವಿಧಿಯಿರಲಿಲ್ಲ. ಒಪ್ಪಿಕೊಂಡಾಗಿತ್ತಲ್ಲ. “ಐ ಸೀ, ಗುಡ್” ಎಂಬ ಉದ್ಗಾರಗಳು ಕೇಳಿ ಬಂದವು. ಸಮವಸ್ತ್ರ ಧರಿಸಿದ ಚಿಕ್ಕಿಯ ಮೇಕಪ್ ಒರೆಸಿದ ಗೋಪಾಲ್. ಸ್ಯಾಂಡ್ರಾ ಇಬ್ಬರ ಕೈಗೂ ಒಂದೊಂದು ಚಾಕಲೇಟನ್ನಿಟ್ಟಳು. “ನನ್ನ ಫೋಟೊ ಯಾವಾಗ ಕೊಡಾದು?” ಎಂದು ಕೇಳಿದ ಚಿಕ್ಕಿಗೆ ಸ್ಯಾಂಡ್ರಾ ನಗುತ್ತ “ನಾಳೆ ಬಿಟ್ಟು ನಾಡಿದ್ದಲ್ಲಿ ಪೇಪರ‍್ನಲ್ಲಿ ಬರುತ್ತೆ. ನೋಡ್ಕೊ.” ಎಂದಳು. ಚಿಕ್ಕಿಗೆ ಖುಷಿಯೋ ಖುಷಿ. “ಯಾವ ಪಫರ‍್ನಲ್ಲಿ ಬತ್ತದೆ?” ಎಂದು ಕೇಳಿದವಳಿಗೆ ಸ್ಯಾಂಡ್ರಾ “ಇಂಗ್ಲೀಷ್ ಪೇಪರ್ `ಟೈಮ್ಸ್ ಆಫ್ ಇಂಡಿಯಾ’ ದಲ್ಲಿ ಬರುತ್ತೆ. ಇಲ್ಲಿ ನಡೆದ್ದೆಲ್ಲ ಯಾರಿಗೂ ಹೇಳ್ಬೇಡಿ. ಫೋಟೋ ಬಂದ ಮೇಲೆ ನೋಡಿ. ಈಗ ಶಾಲೆಗೆ ಓಡಿ” ಎಂದು ಕಳಿಸಿದಳು ಸ್ಯಾಂಡ್ರಾ. ಚಿಕ್ಕಿ ದೂರ ನಿಂತು ಕಾಯುತ್ತಿದ್ದ ಕಮಲಿಯತ್ತ ಓಡಿದಳು. “ಕಮಲಿ, ನಾ ಫೋಟೊ ತಗೀವಾಗ ನಗ್ತಿದ್ನ? ಚೆಂದಾಕ ಬಿದ್ದದಾ ನನ್ನ ಫೋಟೊ?” ಅತಿ ಉತ್ಸಾಹ ಅವಳಿಗೆ. ಕಮಲಿಗೆ ಅಷ್ಟೇನೂ ಆನಂದವಿಲ್ಲ.

ಚಿಕ್ಕಿಯ ಫೋಟೋ Read Post »

ಕಥಾಗುಚ್ಛ

ಡಿಯರ್-ಟೈಗರ್!

ಕಥೆ ಡಿಯರ್-ಟೈಗರ್! ಡಾ. ಅರಕಲಗೂಡು ನೀಲಕಂಠ ಮೂರ್ತಿ ಹೆಣ್ಣು ಅಂದರೆ ಪ್ರಬಲವಾದ ಶಿಸ್ತು ಮತ್ತು ಕಬಂಧ ಬಾಹುಬಲದ  ಚೌಕಟ್ಟಿನಲ್ಲಿ ಬೆಳೆಯಬೇಕು; ಅಷ್ಟೇ ಕಟ್ಟುನಿಟ್ಟಿನ ಬೇಲಿಯೊಳಗೆ ಬದುಕಬೇಕು ಎಂಬ ಬಂಧಿಯಲ್ಲ. ಅವಳಿಗೂ ಸರ್ವಸ್ವತಂತ್ರದ ಬದುಕು ಇಷ್ಟ. ಖಂಡಿತ! ಇದು ಬಹುಶಃ ಎಲ್ಲರ  ಪಾಲಿನ ಸತ್ಯ.  ಆದರೆ, ಅನೇಕರಿಗೆ ಅಂಥ ಜೀವನ ಇರಲಿ, ಆ ರೀತಿಯ ಮುಕ್ತ ಯೋಚನೆ ಕೂಡ ಅಸಾಧ್ಯ, ಅನ್ನಿಸುವಷ್ಟು ‘ಸರಳುಗಳ ಹಿಂದಿನ ಬಾಳು!’. ವಾಸ್ತವವಾಗಿ, ಅವರಿಗೆ ಆ ಸರಳುಗಳನ್ನು ಎಣಿಸುವ ಧೈರ್ಯ ಸಹ ಇರಲಾರದು… ಕಲ್ಯಾಣಿ ಶಾಲೆಯಿಂದ ಬಂದವಳು, ಶಾಲೆಗೆ ಅಂತ ಅಲ್ಲಿಯ ಕಾಯಿದೆಯಂತೆ ತೊಟ್ಟಿದ್ದ ಸಮವಸ್ತ್ರ ಬಿಚ್ಚಿ ‘ಹೋಂ ಮೇಡ್ ಥರ ಬದಲಾಗಿ’, ಫ್ರೆಶ್ ಆಗಿ, ಕಾಫಿ ಮಾಡಿಕೊಂಡು ಹಜಾರದಲ್ಲಿ ಈಸಿ ಛೇರ್ ಆವರಿಸಿ, ಒಂದೊಂದೇ ಸಿಪ್ ಹೀರುತ್ತಾ, ಅದರೊಟ್ಟಿಗೆಯೇ  ಅಂತರ್ಮುಖಿಯಾದಂತೆ ಮೆದುಳ ತರಂಗಗಳಲಿ ತೇಲುತ್ತಿದ್ದಳು! ‘ಟೈಗರ್’ ಬರುವ ಸಮಯ ಹೀಗೆ ಅಂತ ಹೇಳುವ ಹಾಗಿರಲಿಲ್ಲ. ಹೌದು, ತನ್ನ ಗಂಡನನ್ನು ಅವಳು ‘ಟೈಗರ್’ ಎಂದು ಕರೆಯುತ್ತಿದ್ದಳು – ಅದು ಅವರಿಬ್ಬರೇ  ಇದ್ದಾಗ ಮಾತ್ರ. ಪಬ್ಲಿಕ್ಕಾಗಿ ಅವನು ಇವಳಿಗೆ ಸೂರ್ಯ. ವಾಸ್ತವವಾಗಿ ಅವನು  ಸೂರ್ಯತೇಜ್ – ಇದು ಪೂರ್ತಿ ಪಬ್ಲಿಕ್ಕಿಗಾಗಿ; ಹೊರ ಜಗತ್ತಿಗಾಗಿ. ಹೌದು, ಎಷ್ಟು ಜನ ಹೆಂಗಸರು ತನ್ನಂತೆ ಸಂಪೂರ್ಣ ಮುಕ್ತವಾಗಿ, ಸಡನ್ನಾಗಿ ಗಿಜಗುಟ್ಟುವ ರಸ್ತೆಯಲ್ಲಿ  ಬರ್ತ್ ಸೂಟ್ ನಲ್ಲೇ   ಓಡಾಡಿದ   ಆರ್ಕಿಮಿಡೀಸ್ ಥರ ಯೋಚಿಸಬಲ್ಲರು! ಹ್ಞಾ,ಹೌದಲ್ಲವೇ…? ಅಷ್ಟರಲ್ಲಿ ಯಾರೋ ಬೆಲ್ ಮಾಡಿದರು. ಹೋಗಿ ಬಾಗಿಲ ಪಕ್ಕದ ಕಳ್ಳ ಕಿಟಕಿ ತೆರೆದರೆ, ಮನೆ ಕೆಲಸದ ಬಾಯಮ್ಮ. ಕಿಟಕಿ ತೆರೆದದ್ದೇ, ನಿಂತಲ್ಲೇ ಸಂಕೋಚ ಇವರಿಗೆ. ‘ಈ ‘ಬಾಯಮ್ಮ’ನಿಗೆ ಪಾಪ ಮಾತಾಡೋ ಬಾಯೇ ಇಲ್ಲ. ಏನೇ ಕೇಳಿದರೂ, ಹ್ಞೂ,ಹ್ಞಾ; ಅಥವ ಇಲ್ಲ; ಅಥವ  ಎರಡು ಮೂರು ಅಕ್ಷರ ಅಷ್ಟೇ. ಆದರೂ, ಬಾಯಮ್ಮ! ಈ ಹುಟ್ಟು  ಹೆಸರುಗಳದ್ದೇ ಸೋಜಿಗದ ಸಂಗತಿ. ಅಂತ ಮನಸ್ಸಿನಲ್ಲೇ ಅಂದುಕೊಂಡು ಬಾಗಿಲು ತೆರೆದಳು, ಕಲ್ಯಾಣಿ. ಬಾಯಮ್ಮ ಒಳ ಬಂದು ಪಿಸು ಮತ್ತು ಗಡಸು ಮಿಶ್ರಣ ಅನ್ನಿಸುವಂಥ ದನಿಯಲ್ಲಿ ‘ಸ್ವಲ್ಪ ಕಾಸು ಬೇಕಾಗಿತ್ತು ಅಮ್ಮೋರೆ’ ಅಂತ ದೈನ್ಯದಲ್ಲಿ ಅನ್ನೋಥರ ಕೇಳಿದರು. ಅಯ್ಯೋ ಪಾಪ ಅನ್ನಿಸಿತು ಕಲ್ಯಾಣಿಗೆ. ಇದು ಇವರ ಬೆವರಿನ ಕಾಸಲ್ಲವೇ… ಒಂದು ತಿಂಗಳ ಸಂಬಳ ಒಟ್ಟಿಗೇ ಕೊಟ್ಟು ಕಳಿಸಿದಳು. ಏಣಿಯ ಮೇಲಿಂದ ರಪ್ಪಂತ ಒದ್ದಂತೆ ಕೆಳಗೆ ಬಿದ್ದರೂ ಸಹ ಸೊಲ್ಲಿಲ್ಲದಂತೆ ತೆವಳುವ  ಬಾಳು ಕೆಲವರದ್ದು… ಹೌದಲ್ಲವೇ! ನೋಡೋಣ, ನನ್ನ ಟೈಗರ್ ಈಗ, ಈ ಬೆಂಗಳೂರಿನ ನಿರಂತರ  ತುಂಬುಗರ್ಭದ ರಸ್ತೆಗಳಲ್ಲಿ ಎಲ್ಲಿ ಪ್ರಸವಕ್ಕಾಗಿ ಕಾಯುತ್ತ ಇರುವರೋ ಅಥವಾ ಇಂಚಿಂಚೇ ಹೊಟ್ಟೆಯೊಳಗಿಂದ ನೂಕಿಸಿಕೊಂಡಂತೆ ಬರುತ್ತಿರುವರೋ… ಎಂದು ಕಲ್ಯಾಣಿ ಮೊಬೈಲ್ ನಲ್ಲಿ ಟೈಗರ್ ಬಾಲ ಎಳೆದು ಕಾಲ್ ಮಾಡಿದಳು. ಆ ಕಡೆಯಿಂದ “ಹಲೋ”- ಪ್ರೇಮ ಘರ್ಜನೆ! ” ಇನ್ನೂ ಹೊರಟೇ ಇಲ್ಲ ಮೈ ಡಿಯರ್ ಡಿಯರ್; ಹೊರಟಾಗ ನಾನೇ ಫೋನ್ಮಾಡಿ ಘರ್ಜಿಸ್ತೀನಿ…” ಸಂಕ್ಷಿಪ್ತ ಅಷ್ಟೆ. ಈ ಐಟಿ ಆಫೀಸೇ ಹಾಗೆ; ಒಂದು ರೀತಿ ಅರಣ್ಯ ಇದ್ದ  ಹಾಗೆ! ಅಲ್ಲಿ, ಅರಣ್ಯದಲ್ಲಿ ಒಂದರ ಹಿಂದೆ ಇನ್ನೊಂದರ ತದೇಕ ಮಿಂಚಿನ ಓಟದ ಬೇಟೆ. ಇಲ್ಲಿ, ತಲೆಯ ಮೇಲೆ ಅದಕಿದ ಅಥವ ಅದಕಿಸಿಕೊಂಡಂಥ  ಕೆಲಸ…! ಅಂದಹಾಗೆ, ಈ ಎರಡು ಡಿಯರ್ ಗಳು ಏಕೆಂದರೆ, ಒಂದು ಎಲ್ಲರಂತೆ ಪ್ರೀತಿಯ ಸಂಕೇತ; ಇನ್ನೊಂದು ಜಿಂಕೆ! ಹೌದು, ಅವರು ನನಗೆ ಟೈಗರ್ ಆದಮೇಲೆ, ನಾನು ಅವರ ಜಿಂಕೆ ತಾನೆ! ಇದೇ ಥರ ಇನ್ನೂ ಯಾವ ಯಾವ ಮನೆಗಳಲ್ಲಿ ಬೇರೆ ಯಾವ ಯಾವ ಥರ ಪ್ರಾಣಿಗಳ  ಮೃಗಾಲಯಗಳೇ ಇರಬಹುದೋ ಏನೋ…! ಟೈಗರ್ ಘರ್ಜನೆ  ಮುಗಿದದ್ದೇ, ಮತ್ತೆ ನನ್ನ  ಮೊಬೈಲ್  ಪಿಟೀಲು…ಈಗ ಅಮ್ಮ. “ಹಲೋ ಅಮ್ಮ, ಎಲ್ಲ ಹೇಗಿದ್ದೀರಾ..?” ಅಮ್ಮ ಕಾತರದಲ್ಲಿ,  “ನಮ್ದಿರ್ಲಿ, ಈವತ್ತಿನ್ ರಿಸಲ್ಟ್ ಏನಾಯ್ತೇಳು..?” ನಾನು ಈ ಬೆಳಿಗ್ಗೆ ಮೆಡಿಕಲ್ ಟೆಸ್ಟ್ ಗಳಿಗೆ ಹೋಗಿದ್ದೆ; ಅದರ ಬಗ್ಗೆ ಕೇಳಿದ್ದರು. “ಸಂಜೆ ಸ್ಕೂಲಿಂದ ಬರುವಾಗ ಲ್ಯಾಬ್ ಕಡೆ ಹೋಗಿದ್ದೆ ಅಮ್ಮ; ಇನ್ನೂ ಒಂದೆರಡು ರಿಸಲ್ಟ್  ಬಂದಿಲ್ಲವಂತೆ, ಒಟ್ಟಿಗೇ ನಾಳೆ ಕೊಡ್ತಾರಂತೆ…” ನನ್ನ ಮಾತು ಕೇಳಿ ಅಮ್ಮನ ದುಗುಡ ಕಮ್ಮಿ ಆದ ಹಾಗೆ ಅನ್ನಿಸಲಿಲ್ಲ. ಹಾಗೇ ಅದೂ ಇದೂ ಮಾತಾಡ್ತಾ, “ನಿನ್ ಗಂಡನ್ನ ಕೇಳ್ದೆ ಅಂತೇಳು, ಈಗ ಇಡ್ತೀನಿ, ನನಗೂ ಕೆಲಸ ಇದೆ…” ಅಮ್ಮ ಡಿಸಪಾಯಿಂಟ್ ಆದಂತೆ ಅನ್ನಿಸಿತು. ಎಷ್ಟೇ ಆಗಲಿ, ತಾಯಿ ತಾನೆ; ಮಗಳಿಗೆ ಮದುವೆ ಆಗಿ, ಐದು ವರ್ಷಗಳೇ ಆಗಿದ್ದರೂ ಮಕ್ಕಳೇ ಇಲ್ಲ ಅಂದರೆ… ಹೌದು, ಟೈಗರ್ ಮತ್ತು ಡಿಯರ್ ಇಬ್ಬರೂ, ಇನ್ನೂ ‘ಸ್ಕೋರ್’ ಮಾಡಿರಲಿಲ್ಲ. ‘ಸೊನ್ನೆ-ಸವಾರಿ’ ಮಾಡ್ತಾ ಇದ್ದರು! ಅಂದರೆ,  ಅಪ್ಪ ಅಮ್ಮ ಆಗಿರಲಿಲ್ಲ… ನಾನೊಮ್ಮೆ ಬೇಡ ಅಂದರೆ, ಅವರೊಮ್ಮೆ ಬೇಡ ಅನ್ನೋರು… ಹೀಗೆ ಮೂರು ವರ್ಷ ಜೀಕು-ಜೀಕಾಟ ಆಡುತ್ತಾ ಉರುಳಿಸಿದ್ದೆವು… ಹಾಗಂತ, ಈ ಏರಿಳಿತದ ಆಟದ ನಡುವೆಯೂ, ನನ್ನ ಟೈಗರ್ ಏನೂ ಕಮ್ಮಿ ಇರಲಿಲ್ಲ! ಎಲ್ಲ ನಮೂನೆಯ ‘ಬೆಡ್ ರೂಂ ಯೋಗಾಸನ’ಗಳನ್ನೂ ಅರೆದು ಕುಡಿದಿದ್ದರು! ಅದರಿಂದ ನಾನು, ಒಮ್ಮೊಮ್ಮೆ ಅವರನ್ನ ತಿವಿದ ಹಾಗೆ, “ನೀವು ಒಂಥರಾ ‘ವಾತ್ಸಾಯನಾಸುರ’ ಇದ್ದಂತೆ” ಅಲ್ಲವಾ, ಅಂತ ರೇಗಿಸ್ತಿದ್ದೆ. ಅವರು, “ಹೌದ್ಹೌದು” ಅಂದು, ತುಂಟ ನಗು ಬೀರಿ, ಖುಷಿಯಲ್ಲಿ ತಿವಿದು ಬಿಡ್ತಿದ್ದರು!                        ಅಷ್ಟರಲ್ಲಿ, ನನ್ನ ಅಪ್ಪ ಅಮ್ಮನಿಗಿಂತ ಹೆಚ್ಚಾಗಿ, ಟೈಗರ್ ನನ್ನು ಹೆತ್ತು  ಹೊರಬಿಟ್ಟಿದ್ದ ಅತ್ತೆ ಮಾವ ತುಂಬಾ  ಬಲವಂತ ಹೇರುತ್ತಾ, ವರಾತ ಮಾಡೀ ಮಾಡಿ, ಕೊನೆಗೆ ಇವರಿಗೇ ಬೇಜಾರಾಗಿತ್ತು. ಹಾಗಾಗಿ, ನಮ್ಮಿಬ್ಬರ ನಡುವೆ, ಅದುವರೆಗೆ, ರಾತ್ರಿಹೊತ್ತಿನ ಸ್ವಚ್ಛಂದದ ಬ್ರೇಕ್  ಒತ್ತಲು ಇಡುತ್ತಿದ್ದ ಎಲ್ಲ ಥರ ‘ನಾಕಾಬಂದಿ’ಗಳನ್ನೂ ಕಿತ್ತೆಸೆದಿದ್ದವು! ಆದರೂ, ಊಹ್ಞೂ…ಮಕ್ಕಳ ಫ್ಯಾಕ್ಟರಿಗಳೇ  ಭೋರ್ಗರೆವ ನಮ್ಮ ಈ ಪುಣ್ಯ ನೆಲದ ಮಹಾಸಾಗರದಲ್ಲೂ, ನನ್ನಂತಹ ‘ಸುಕೃತೆ’ ಹಾಗೆಯೇ, ‘ಬಂಜೆ’ಯೋ ಎನಿಸುವಂತೆ  ಉಳಿದುಬಿಟ್ಟಿದ್ದೆ! ಅದು ನನಗಂತೂ ಹೆಮ್ಮೆ ಹಾಗೂ ಖುಷಿಯೇ ಆಗಿತ್ತು; ಏಕೆಂದರೆ ನನಗೆ ಮಾತ್ರ ಅಲ್ಲದೆ, ಟೈಗರ್ ಗೂ ಸಹ ಮಕ್ಕಳು ಅಂದರೆ ಬಿಲ್ಕುಲ್ ಬೇಕಾಗಿರಲಿಲ್ಲ! ಯಾವುದೇ ಥರದ ಎನ್ಕಂಬರೆನ್ಸಸ್ ಇಲ್ಲದೆ ಇಡೀ ಬದುಕನ್ನು ಬದುಕಬೇಕು ಅನ್ನುವ ಮಹದಾಸೆ ನಮ್ಮಿಬ್ಬರದು. ಆದರೆ, ಮೊಮ್ಮಕ್ಕಳು ಬೇಕು ಅಂತ ಹಂಬಲ ಇರುವವರು… ಅತ್ತೆ-ಮಾವ…? ಆಮೇಲೆ, ನನ್ನ ಅಮ್ಮ… ನನ್ನತ್ತೆ ಮಾವನವರಿಗೆ ಟೈಗರ್ ಆದಮೇಲೆ ಹುಟ್ಟಿದ್ದು ಇಬ್ಬರು ತಂಗಿಯರು. ಪಾಪ, ಇಬ್ಬರೂ, ಹೆಣ್ಣು ಹುಲಿಗಳ ಥರ ಇರಲಿಲ್ಲ. ತುಂಬಾ ಮೃದು! ಇಬ್ಬರೂ ಮದುವೆ ಆಗಿ  ಮಕ್ಕಳನ್ನೂ ಹಡೆದಿದ್ದಾರೆ. ಹಾಗಾಗಿ ನನ್ನ ಅತ್ತೆ ಮಾವನವರಿಗೆ  ಮೊಮ್ಮಕ್ಕಳೇನೂ ಇರಲಿಲ್ಲ ಅಂತಲ್ಲ. ಆದರೆ ನಮ್ಮತ್ತೆ ಪ್ರಕಾರ ಮಗನ ಮಕ್ಕಳು ಮಾತ್ರ ತಮ್ಮ ವಂಶೋದ್ಧಾರಕರು!… ಈ ರೀತಿ ಉದ್ಧಾರಕರಿಂದ ಮಾನವ ಇತಿಹಾಸದಲ್ಲಿ ಅದೆಷ್ಟು ವಂಶಗಳು ಎಂಥೆಂಥಾ ಏಣಿ ಹತ್ತಿವೆಯೋ ನಾ ಕಾಣೆ. ನೂರರ ಸೈನ್ಯವೇ ಇದ್ದೂ ಧೃತರಾಷ್ಟ್ರನ ವಂಶೋದ್ಧರ ಹೇಗಾಯಿತೆಂಬ ಭಯಂಕರ ನಿದರ್ಶನವೇ ಇಲ್ಲವೇ… ಅಂಥ ಕೆಟ್ಟ ದಾಯಾದಿ ಸಂತತಿ ಆಗಿಬಿಟ್ಟರೆ? ವಾಸ್ತವವಾಗಿ, ನಮ್ಮ ಮಾವನವರ ಮನಸ್ಸಿನಲ್ಲಿ ಮಕ್ಕಳ ಬಗ್ಗೆಯ ವಾಂಛೆ ಏನೋ ಹೇಗೋ ನಾನರಿಯೆ. ನನ್ನ ಮತ್ತು ನನ್ನ ಟೈಗರ್ ಅವರ ಹೃನ್ಮನಗಳ ವೇವ್ ಲೆಂಗ್ತ್ ಅದ್ಭುತ. ಇದೇ ಬಹುಷಃ, ನಮ್ಮಿಬ್ಬರ ಬದುಕಿನ ಬೆಳಕು!…ಕಹಿ ಸತ್ಯ ಏನೆಂದರೆ, ಪ್ರೇಮಪಾಶದಲ್ಲಿ ವಿವಾಹ ಬಂಧನ ಅಂತ ಆಗಿಬಿಟ್ಟರೆ…ಹೌದು, ಆಗಿಬಿಟ್ಟರೆ, ಎಷ್ಟು ಚಂದ, ಅನಿಸುತ್ತೆ ಅಲ್ಲವೇ? ಆದರೆ ನೈಜತೆ  ಬೇರೆ… ಪ್ರೇಮ ಬಂಧನವಾಗುವುದು ಮತ್ತು ಆಗಿ ಉಳಿಯುವುದು, ಎಲ್ಲ ಲಾಟರಿ ಆಟ! ಹಾಗಾಗಿ ಮದುವೆಗೆ ಮುನ್ನ ಅರ್ಥ ಮಾಡಿಕೊಳ್ಳಬೇಕು ಅಥವಾ ಮಾಡಿಕೊಂಡೇಬಿಟ್ಟೆವು ಅನ್ನುವುದು ಕಠೋರ ಅನರ್ಥ! ಎಲ್ಲರ ಬಾಳ್ವೆಯಲ್ಲೂ ಅಷ್ಟೆ… ಬದುಕ ಬಂಡಿ ಓಡುತ್ತಾ, ಓಡಿಸುತ್ತಾ ಅರ್ಥ ಹಿಗ್ಗುತ್ತಾ ಹಿಗ್ಗುತ್ತಾ,  ಓಡುತ್ತದೆ…ಹಾಗಂತ, ನಾನು ಪ್ರೇಮವಿವಾಹ ವಿರೋಧಿ ಖಂಡಿತ ಅಲ್ಲ… ಗೆಲುವಿಗೆ ತನ್ನದೇ ಆದ ಪ್ರಖರ ಕಿರಣಕಾಂತಿ ಇರುತ್ತದೆ… ಗೆಲುವಾದರೆ ಮಾತ್ರ! ಮತ್ತೆ ಮೊಬೈಲ್ ಗುಟುರು. ಹಲೋ…ಹಲೋ…ಕಟ್. ಮೊಬೈಲ್ ನಲ್ಲಿ ಸಹ ರಾಂಗ್ ನಂಬರ್! ಅಥವಾ ಈ ಕುಲಗೆಟ್ಟ ನೆಟ್ವರ್ಕ್ ಸಂತತಿಯೋ. ಮನುಷ್ಯನ ವಿಕಾಸ ಯಾವತ್ತೂ ಪರಿಪೂರ್ಣ ಅಲ್ಲವೇ ಅಲ್ಲ… ಜ್ಞಾನ-ವಿಜ್ಞಾನ ಅಗಾಧ ಇದ್ದೂ ಸಹ. ನನ್ನ ಬ್ಯಾಚಲರ್ ಡಿಗ್ರಿ ಸಹಪಾಠಿ ಮತ್ತು ಇಂದಿಗೂ ಓಕೆ ಎನಿಸುವಂಥ ಗೆಳತಿ, ಕ್ಷಮಾ. ಅವಳಿಗೂ ನನಗೂ ಒಳ್ಳೆಯ ಹೊಂದಾಣಿಕೆ. ಅಕಸ್ಮಾತ್ ಅಂಥ ಸಾಹಸೀ ಕಾಯಿದೆ ನಮ್ಮಲ್ಲೂ ಇದ್ದಿದ್ದರೆ, ಬಹುಶಃ ನಾವಿಬ್ಬರೂ ಏಕಲಿಂಗ ವಿವಾಹ ಆಗ್ತಿದ್ದೆವೋ ಏನೋ! ಇಬ್ಬರೂ ಕೂಡ ಅಷ್ಟೇ ‘ಬಿಡುಗಡೆ’ಯ ಮಾನಸಿಕ ಸ್ಥಿತಿ ಇದ್ದವರು. ಅವಳೀಗ ಇರುವುದು, ಮಸ್ಕಟ್ ನಲ್ಲಿ. ಎಲ್ಲ ರೀತಿಯ ಬಾರ್ಡರ್ ಗಳನ್ನೂ ಬಿಟ್ಟು ಬದುಕುವ ಮಹಿಳೆ, ಕ್ಷಮಾ; ಅಂಥವಳು ಈಗ ದೂರದ ಅರಬ್ಬರ ನಾಡಲ್ಲಿ!…ನಿಜ, ಅಂತಹ ಸೈಯಾಮೀಸ್ ಟ್ವಿನ್ ಗಳಂಥ ಗೆಳತಿ ಅಲ್ಲದೆ ಇರಬಹುದು ನಾವು; ಹಾಗಾದರೆ, ಹೇಗೆ ಅಂಥ ಮದುವೆ ಬಗ್ಗೆ ಮಾತಾಡಿದೆ? ಸಹಜ, ಹೌದಲ್ಲವೇ? ಹಾಗಾದರೆ ಗಂಡು ಹೆಣ್ಣು ಮದುವೆಯ ದಿನದ ಹೊತ್ತಿಗೆ ವಜ್ರಗಾರೆ ಥರ ಅಂಟಿದ ಆತ್ಮೀಯರೇ ಆಗಿರುವರೇ…? ಖಂಡಿತ ಇಲ್ಲವಲ್ಲ… ನೀವು ಹೇಗೇ ಇದ್ದು, ಹೇಗೇ ಮದುವೆ ಅಂತ ಆದರೂ ಸಹ ಅಂತ್ಯಕ್ಕೆ ಆಗುವುದೆಲ್ಲ ಅದೇ ಆದ್ದರಿಂದ  ತಾನೇ… ಒಂದೊಮ್ಮೆ ಅರಿವೆ ಕಾಣದ ಆದಿ ಮಾನವ ಹಗಲಿರುಳು ಬರೀ ಬೆತ್ತಲೆ; ಈಗ ಏಕಾಂತದಲ್ಲಿ ‘ನಾಗರಿಕ’ ಬೆತ್ತಲೆ…! ಇದರಿಂದಲೇ ತಾನೆ, ಕೊನೆಗೂ ಅನ್ಯೋನ್ನತೆ  ಅಂತ ಬಂದು, ಗಂಡನ  ಜೊತೆ ಹೆಂಡತಿಗೆ ಆತ್ಮೀಯತೆ ಬರೋದು…! ಹ್ಞಾ,..ಹೌದು, ಎಷ್ಟು ಜನ ಈ ನಗ್ನಸತ್ಯ ಒಪ್ಪುತ್ತಾರೆ…ಅದೂ ಒಂದು ಹೆಣ್ಣಿನ ಮೆದುಳಲ್ಲಿ ಬಂದ ಸತ್ಯಚಿಂತನೆಯಿಂದ…! ಕಾಲೇಜಿನಲ್ಲಿ ಇದ್ದಾಗಲೂ ನಾವಿಬ್ಬರೂ ಬೇರೆ ಹುಡುಗಿಯರ ಥರ ಇರಲಿಲ್ಲ — ಪೂರ್ತಿ ಗೌರಮ್ಮನೂ ಅಲ್ಲ ಅಥವ ಅರ್ಧ ಗೌರಿ ಇನ್ನರ್ಧ ಮಾಡರ್ನ್ ಅನ್ನೋ ಥರ ಕೂಡ ಅಲ್ಲ. ನಮ್ಮ ಸ್ಟೈಲೇ ಬೇರೆ; ಮಾಡರ್ನಿಟಿ ಎದ್ದು ಬಂದ ಹಾಗೆ! ಹುಡುಗರ ರೀತಿ ಡ್ರೆಸ್ ಮಾಡ್ತಾ, ಅವರ ಥರಾನೇ ಯಾರಾದರೂ ನೋಡಿದರೆ, ನಾವೂ ಎಗ್ಗಿಲ್ಲದೆ ಅವರನ್ನೇ ದುರುಗುಟ್ಟಿ ನೋಡೋದು, ವಿಶಲ್ ಹೊಡೆದರೆ ನಾವೂ ಅದೇ ಧಾಟಿಯಲ್ಲಿ ಪ್ರತಿಕ್ರಿಯೆ ಮಾಡೋದು, ಹೀಗೆಲ್ಲ!  ಯಾರಾದರೂ ಕಣ್ಣು ಹೊಡೆದರೆ ನಮ್ಮ ಕಣ್ಣೂ ಸುಮ್ಮನೆ ಇರಬಹುದಾ, ಖಂಡಿತ ಇಲ್ಲ. ಆ  ಕಡೆ   ಈಕಡೆ ನೋಡಿ, ಸಮಯ ಸರಿಯಾಗಿದ್ದರೆ!…ಆಗ ಹಾಗಿದ್ದೆವು ಅಂತ ಈಗಲೂ, ಮದುವೆ ಮುಂಜಿ ಆದಮೇಲೂ ಹಾಗೇ ಮಾಡಬಹುದಾ? ನನ್ನ ವಿಷಯ ಏನೋ ಬೇರೆ – ಯಾಕಂದರೆ ನನ್ನ ಗಂಡ ಹಾಗೇ ಇರೋದರಿಂದ. ಅದನ್ನ ನಾನು ಎಂದೂ ದುರುಪಯೋಗ ಮಾಡಿಕೊಂಡಿಲ್ಲ; ಅದೂ ಸತ್ಯ. ಹೌದು, ನಾಳೆ ಲ್ಯಾಬ್ ರಿಪೋರ್ಟ್ ಏನು ಬರಬಹುದು…ನನಲ್ಲೇ ಡಿಫೆಕ್ಟ್ ಇದ್ದರೆ? ಟೈಗರ್ ಏನು ಹೇಳಬಹುದು; ನಮ್ಮತ್ತೇಗೆ ಹೇಗನ್ನಿಸಬಹುದು? ಮಗನಿಗೆ  ಇನ್ನೊಂದು ಮದುವೆ ಆಗು ಅಂತ ಹೇಳಿ ಒತ್ತಾಯ ಮಾಡಬಹುದಾ? ಸಾಧ್ಯ ಇಲ್ಲ ಅನ್ನೋ ಹಾಗಿಲ್ಲ; ಅವರು ಅಂಥವರೇ. ಇನ್ನು ನಮ್ಮ ಮಾವನವರು; ಅವರಿಗೆ ನನ್ನ ಮೇಲೆ ಕನಿಕರ ಆಗಬಹುದು… ಈ ಯೋಚನಾಗುಂಗಿಗೆ ಕತ್ತರಿ ಹಾಕಿದ್ದು ಕಾಲಿಂಗ್ ಬೆಲ್. ಇದು ಗ್ಯಾರಂಟಿ ಟೈಗರ್ರೇ ಅನ್ನಿಸಿತು. ಹೌದು, ಜಿಂಕೆ ಬೇಟೆ ಆಡೋ ನನ್ನ  ಟೈಗರ್ ಬಂದರು. “ಸಾರಿ ರೀ, ಲೇಟಾಯ್ತು. ಇವತ್ತು ಹೆವಿ ವರ್ಕ್”.

ಡಿಯರ್-ಟೈಗರ್! Read Post »

ಕಥಾಗುಚ್ಛ

ಬದುಕು ಬಂದಂತೆ

ಕಥೆ ಬದುಕು ಬಂದಂತೆ ಅನಸೂಯ ಎಂ.ಆರ್. ಲತ ಮನೆಗೆ ಬಂದಾಗ ಎಂದಿನಂತೆ  ಸುಶೀಲಮ್ಮನು ಬಾಗಿಲು ತೆರೆಯದೆ  ಮನು ಬಂದಾಗ “ಅಜ್ಜಿ ಎಲ್ಲೊ” ಎಂದಳು. ” ಅಜ್ಜಿ ಮಲಗಿದಾರಮ್ಮ” ಎಂದ ಕೂಡಲೇ ವ್ಯಾನಿಟಿ ಬ್ಯಾಗ್ ಮತ್ತು ಲಂಚ್ ಬಾಕ್ಸ್ ನ್ನು ಟೇಬಲ್ ಮೇಲಿಟ್ಟು “ಅತ್ತೆ” ಎನ್ನುತ್ತಾ ರೂಂ ನೊಳಗೆ ಹೋದಳು ಮುಸುಕು ಹಾಕಿ ಮಲಗಿದ್ದ ಸುಶೀಲಮ್ಮ ಮುಸುಕನ್ನು ತೆಗೆಯುತ್ತಾ “ಯಾಕೋ, ಜ್ವರ ಬಂದಂತಾಗಿದೆ ಕಣಮ್ಮ” ಎಂದರು. ಅವರ ಹಣೆಯ ಮೇಲೆ ಕೈಯಿಟ್ಟು ನೋಡಿದ ಲತಾ ” ಬಹಳ ಜ್ವರ ಇದೆ. ನಡೀರಿ ಡಾಕ್ಟರ್ ಹತ್ರ ಹೋಗಿ ಬರೋಣ ಮೊದ್ಲು ಬಿಸಿ ಬಿಸಿ ಕಾಫಿ ಕುಡೀರಿ ಮಾಡ್ಕಂಡು ಬರ್ತಿನಿ ” ಎನ್ನತ್ತಾ ಅಡುಗೆ ಮನೆಗೆ ಹೋದಳು. ಮಗನಿಗೆ ಹಾರ್ಲಿಕ್ಸ್ ಕೊಟ್ಟು ತಮಗಿಬ್ಬರಿಗೂ ಕಾಫಿ ಮಾಡಿಕೊಂಡು ಬಂದು ಅತ್ತೆಗೂ ಕೊಟ್ಟು ತಾನು ಅಲ್ಲೆ ಕುಳಿತು ಕುಡಿದಳು  ನಂತರ ಮುಖ ತೊಳೆದು ಫ್ರೆಶ್ ಆದ ನಂತರ  ಮಗನಿಗೆ ಮನೆಯಲ್ಲಿರಲು ಹೇಳಿ ಆಟೋದಲ್ಲಿ ಅತ್ತೆಯನ್ನು ಕರೆದು ಕೊಂಡು ಕ್ಲಿನಿಕ್ ಗೆ ಹೊರಟಳು.ಪರಿಚಯದ ಡಾಕ್ಟರ್ ಗೆ ತೋರಿಸಿ ಮಾತ್ರೆ, ಹಣ್ಣುಗಳನ್ನು ತೆಗೆದುಕೊಂಡು ಮನೆಗೆ ಬಂದಳು.ಅವರನ್ನು ಮಲಗಿಕೊಳ್ಳಲು ಹೇಳಿ ಅಡುಗೆಯ ಕೆಲ್ಸವನ್ನು ಮುಗಿಸಿ ಅತ್ತೆಗೆ ರವೆಗಂಜಿ ಮಾಡಿ ಕುಡಿಯಲು  ಕೊಟ್ಟು ಮಾತ್ರೆಗಳನ್ನು ನುಂಗಿಸಿ ಆರಾಮಾಗಿ ಮಲಗಲು ಹೇಳಿ ಮಗನ ಓದಿಸಿ ನಂತರ ಇಬ್ಬರೂ ಊಟ ಮುಗಿಸಿ ಮಲಗಿದರು.ಬೆಳಿಗ್ಗೆ ಅತ್ತೆಯ ಜ್ವರ ಕಡಿಮೆಯಾಗಿದ್ದರೂ ಸಹ ಶಾಲೆಗೆ ರಜೆ ಹಾಕಿದಳು.ಮನುವನ್ನು ಶಾಲೆಗೆ ಕಳಿಸಿ ಅತ್ತೆ ತಿಂಡಿ ತಿಂದ ನಂತರ ಮಾತ್ರೆ ಕೊಟ್ಟು ಮಲಗಿಸಿದಳು  ಕೆಲಸವೆಲ್ಲ ಮುಗಿದ ಮೇಲೆ ಬೆಂಗಳೂರಿನಲ್ಲಿದ್ದ ವಿನುತಳ ಜೊತೆ ಮಾತಾಡಿ ಅತ್ತೆಗೆ ಜ್ವರ ಬಂದಿರುವ ವಿಷಯವನ್ನು ತಿಳಿಸಿದಳು ಅತ್ತೆ ಇನ್ನೂ ನಿದ್ರೆ ಮಾಡುವುದನ್ನು  ನೋಡಿ ಪಡಸಾಲೆಗೆ ಬಂದು ಕುಳಿತಳು. ಸುಶೀಲಮ್ಮ ಲತಾಳಿಗೆ ತನ್ನ ಗಂಡನ ತಾಯಿ ಮಾತ್ರವಲ್ಲ ಸೋದರತ್ತೆಯೂ ಸಹ ಆಗಿದ್ದರು.ಲತಾಳ ತಂದೆ ವೆಂಕಟೇಶ್ ಮೂರ್ತಿಯವರ ಅಕ್ಕನೇ ಸುಶೀಲಮ್ಮ.ಸುಶೀಲಮ್ಮತಮ್ಮ ಮೊದಲನೆಯ ಮಗ ರಾಜೇಶನಿಗೆ ತಮ್ಮನ ಮಗಳಾದ ಲತಳನ್ನು ತಂದು ಕೊಂಡಿದ್ದರು ಸುಶೀಲಮ್ಮಲತಳಿಗೆ ತಾಯಿಯೇ ಆಗಿದ್ದರು ಲತ B.SC.ಪದವೀಧರೆಯಾಗಿ ಸರ್ಕಾರಿ ಪ್ರಥಮ ದರ್ಜೆ  ಕಾಲೇಜಿನ ಉಪನ್ಯಾಸಕನಾಗಿದ್ದ ರಾಜೇಶನಿಗೆ ಲತಾ ತಕ್ಕ ಜೋಡಿಯಾಗಿದ್ದಳು. ರಾಜೇಶನ ತಮ್ಮ ಸುರೇಶ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನೀಯರ್ ಆಗಿ ಬೆಂಗಳೂರಿನಲ್ಲಿದ್ದನು. ಸುರೇಶ ತನ್ನ ಸಹೋದ್ಯೋಗಿಯೆ ಆದ ವಿನುತಳನ್ನು ಪ್ರೀತಿಸಿ ಮದುವೆಯಾಗಿದ್ದ. ಪತಿಯ ನಿಧನದ ನಂತರ ಪ್ರೀತಿಯಿಂದ ನೋಡಿಕೊಳ್ಳುವ ಇಬ್ಬರು ಮಕ್ಕಳ ಮನೆಯಲ್ಲಿ ಮೊಮ್ಮಕ್ಕಳೊಡನೆ ಕಾಲ ಕಳೆಯತ್ತ  ನೆಮ್ಮದಿಯಿಂದಿದ್ದರು.ಎಲ್ಲವು ಸರಿಯಾಗಿದ್ದ ಕಾಲದಲ್ಲೇ ಹಿರಿ ಮಗ ರಾಜೇಶನ ಸಾವು ಬರಸಿಡಿಲಿನಂತೆ ಎರಗಿತ್ತು. ಕಾಲೇಜ್ ಮುಗಿಸಿಕೊಂಡು ಬೈಕ್ ನಲ್ಲಿ ಬರುತ್ತಿರುವಾಗ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮರಣವನ್ನಪ್ಪಿದ್ದನು.ಆಗ ಮನು ನಾಲ್ಕನೆ ತರಗತಿಯಲ್ಲಿ ಓದುತ್ತಿದ್ದ. ಕಂಗಾಲಾಗಿದ್ದ ಲತ ಮಾನಸಿಕವಾಗಿ ಧೈರ್ಯವನ್ನು ಕಳೆದುಕೊಂಡಿದ್ದಳು.  ಇಂಥ ಸಮಯದಲ್ಲಿ ಅವಳಿಗೆ ಒತ್ತಾಸೆಯಾಗಿ ನಿಂತವರು ಅವಳ ತಮ್ಮ ವಿಜಯ್ ಹಾಗು ಮೈದುನ ಸುರೇಶ.ಲತಳ ತಂದೆ ತಾಯಿಯರಂತೂ ಮಗಳ ಪರಿಸ್ಥಿತಿಯನ್ನು ಕಂಡು  ಜರ್ಜರಿತವಾಗಿ ಬಿಟ್ಟಿದ್ದರು. ವರ್ಷ ಕಳೆಯುವಷ್ಟರಲ್ಲಿಯೆ ಅವಳಿಗೆ ಅನುಕಂಪ ಆಧಾರದ ಮೇಲೆ  ಅದೇ ಊರಿನ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲಾ ವಿಭಾಗಕ್ಕೆ ಪ್ರಥಮ ದರ್ಜೆ ಸಹಾಯಕಿಯ ಕೆಲಸ ಸಿಕ್ಕಿತು.ಹೊಸ ಪರಿಸರಕ್ಕೆ ಹೊಂದಿಕೊಂಡು ಗಮನವನ್ನು ಕೊಡುವ ಅನಿವಾರ್ಯತೆಯಲ್ಲೇ ರಾಜೇಶನ ಮರಣದ ದು:ಖವನ್ನು ಮರೆಯಲೆತ್ನಿಸಿದಳು. ಸುಶೀಲಮ್ಮ ಎಲ್ಲೂ ಹೋಗದೆ ಸೊಸೆ ಹಾಗೂ ಮೊಮ್ಮಗನ ಜೊತೆಯಲ್ಲಿರಲು ನಿರ್ಧಾರ ಮಾಡಿ ಅವರಿಗೆ ಆಸರೆಯಾಗಿದ್ದರು. ಎರಡನೆ ಮಗ ಸೊಸೆ ಅವರೇ ಇಲ್ಲಿಗೆ ಬಂದು ಹೋಗುವ ರೂಢಿ ಮಾಡಿಕೊಂಡರು. ಮಾರನೆ ದಿನ ಶಾಲೆಗೆ ಹೊರಡುವ ತಯಾರಿಯಲ್ಲಿದ್ದಾಗ ಅವಳ ಮೊಬೈಲ್ ಗೆ ರಂಜಿತಾಳ ಕರೆ.”ಇವತ್ತು ಬರ್ತಿರಾ ಸ್ಕೂಲ್ ಗೆ” “ಬರ್ತೀನಿ ರಂಜಿತ, ಅತ್ತೆ ಹುಷಾರಾಗಿದಾರೆ” ಎಂದು ಹೇಳಿ ಫೋನಿಟ್ಟಳು. ಶಾಲೆಗೆ ಹೊರಟು ನಿಂತು “ಅತ್ತೆ,ಬರಲಾ”. ಬಾಗಿಲು ಹಾಕಿಕೊಳ್ಳಲು ಬಂದ ಅತ್ತೆಗೆ “ಚೆನ್ನಾಗಿ ರೆಸ್ಟ್ ಮಾಡಿ”ಎಂದು ಹೊರಟಳು. ದಾರಿಯಲ್ಲಿ ಸಿಕ್ಕ ರಂಜಿತಳೊಡನೆ ಮಾತನಾಡುತ್ತ ಶಾಲೆ ತಲುಪಿದರು ಗಣಿತ ಶಿಕ್ಷಕಿ ರಂಜಿತಾಳ ಮನೆ ತಾನು ಶಾಲೆಗೆ ಹೋಗುವ ದಾರಿಯಲ್ಲೆ ಇದ್ದ ಕಾರಣ ಇಬ್ಬರಲ್ಲೂ ಆತ್ಮೀಯತೆಯಿತ್ತು ರಂಜಿತಾಳಿಗೆ ಇನ್ನು ಮದುವೆಯಾಗಿರಲಿಲ್ಲ. ಸಾದಾಸೀದ ಹುಡುಗಿಯಾಗಿದ್ದ ರಂಜಿತಾ ಲತಾಳೊಂದಿಗೆ ಮುಕ್ತವಾಗಿ ಎಲ್ಲವನ್ನು ಹೇಳಿಕೊಳ್ಳುತ್ತಿದ್ದಳು. ಅವಳಿಗೆ  ಒಬ್ಬ ತಂಗಿ ಹಾಗೂ ಒಬ್ಬ ತಮ್ಮ ಇದ್ದಾರೆ. ಅವರ ತಂದೆಯು ಶಿಕ್ಷಣ ಇಲಾಖೆಯಲ್ಲೆ ಕೆಲಸ ಮಾಡುತ್ತಿದ್ದರು. ಬೇಜವಾಬ್ಧಾರಿ ಮನುಷ್ಯನೆಂದು ಇಸ್ಪೀಟಾಡುವ ಚಟವಿದ್ದು ಬಹುಪಾಲು ಹಣವನ್ನೆಲ್ಲಾ ಕಳೆಯುತ್ತಾರೆಂದು ಅವಳಿಗೆ ಅವರಪ್ಪನ ಮೇಲೆ ಬೇಸರವಿತ್ತು.” ಸಾಯಂಕಾಲ ನೀವು ನಮ್ಮನೆಗೆ ಬರಬೇಕು. ನಮ್ಮಮ್ಮನಿಗೆ ಹೇಳಿ ಬಂದಿದ್ದೇನೆ. ನಿಮ್ಮನ್ನು ಕರ್ಕೊಂಡು ಬರ್ತೀನಿ ಅಂತ”ಎಂದುರಂಜಿತಾ ಹೇಳಿದಳು “ಏನಿವತ್ತುಮನೆಯಲ್ಲಿ ಸ್ಪೆಷಲ್ ರಂಜಿತ” “ಇವತ್ತು ನನ್ನ ತಮ್ಮನ ಹುಟ್ಟಿದ ಹಬ್ಬ.ಅಮ್ಮ ಸ್ಟೀಟ್ ಮಾಡಿರ್ತಾಳೆ. ನೀವು ಬರ್ತಿದೀರಾ ಅಷ್ಟೆ” PUC ಓದುತ್ತಿದ್ದ ತಮ್ಮನನ್ನು ಕಂಡರೆ ಅವಳಿಗೆ ಬಲು ಪ್ರೀತಿ.ಇಲ್ಲವೆನ್ನಲು ಮನಸ್ಸಾಗದೆ ಸರಿ ಎಂದಳು. ಮಧ್ಯಾಹ್ನ ಲಂಚ್ ಬ್ರೇಕ್ ನಲ್ಲಿ ಶಾಲೆಯ ಬಳಿಯಲ್ಲಿದ್ದ ಬುಕ್ ಸ್ಟಾಲ್ಗೆ ಹೋಗಿ ಇಂಗ್ಲೀಷ್ ಡಿಕ್ಸ್ ಷ್ಣರಿ ಕೊಂಡು ಕೊಂಡಳು. ಅವರ ಮನೆಗೆ ಹೋಗುತ್ತಿರುವುದು ಎರಡನೆ ಬಾರಿ. ಸಂಜೆ ರಂಜಿತಾಳೊಡನೆ ಅವರ ಮನೆಗೆ ಹೋದಾಗ ಅವರ ತಾಯಿ ಊಟ ಮಾಡಲು ಬಲವಂತ ಮಾಡಿದರು.ಊಟ ಬೇಡವೆಂದಾಗ ಆಗ ತಾನೆ ಮಾಡಿದ ಬಿಸಿ ಬಿಸಿ ಹೋಳಿಗೆ,ವಾಂಗೀಬಾತ್ ಮತ್ತು ಕೋಸಂಬರಿ ತಟ್ಟೆಯಲ್ಲಿ ಹಾಕಿಕೊಂಡು ಲತ ಹಾಗೂ ರಂಜಿತ ಇಬ್ಬರಿಗು   ಕೊಟ್ಟರು. ಮಾತಾಡುತ್ತಾ ತಿಂದಾದ ಮೇಲೆ ರಂಜಿತ ತಟ್ಟೆ ಒಳಗಿಡಲು ಹೋದಳು.ಡಿಕ್ಸ್ ಷ್ಣರಿ ಬುಕ್ ನ್ನು ತೆಗೆಯಲು ಎಡಭಾಗದಲ್ಲಿದ್ದ ಬ್ಯಾಗ್ ಕಡೆ ತಿರುಗಲು ರಂಜಿತಳ ತಂದೆ ಎಡಭಾಗದ ರೂಂ ನಲ್ಲಿ ನಿಂತುಕೊಂಡು ತನ್ನತ್ತಲೇ ವಿಕೃತ ದೃಷ್ಟಿಯಿಂದ ನೋಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಳು ಮೈಯೆಲ್ಲ ಭಯದಿಂದ ನಡುಗಿತು.ತಕ್ಷಣ ಎದ್ದು ರಂಜಿತಾ ಎಂದು ಕೂಗುತ್ತ ಅಡುಗೆ ಮನೆ ಕಡೆ ನೆಡೆದಳು ಹೊರಗಡೆ ಬಂದ ರಂಜಿತಾಳ ಕೈಗೆ ಬುಕ್ ಕೊಡುತ್ತ “ನಿನ್ನ ತಮ್ಮನಿಗೆ ಕೊಡು ಲೇಟಾಗುತ್ತೆ ಹೋಗ್ತೀನಿ”ಎನ್ನುತ್ತ ಹೊರಟು ರೂಂ  ಕಡೆ ನೋಡಿದರೆ ಇನ್ನೂ ಅಲ್ಲೇ ನಿಂತಿದ್ದಾನೆ.”ಯಾಕಿಷ್ಟೂ  ಬೇಗ ಹೊರಟ್ರಿ” ರಂಜಿತಾಳ ತಾಯಿ ಹೇಳಿದಾಗ”ನಮ್ಮತ್ತೆ ಯವರಿಗೆ ಜ್ವರ ಬಂದಿತ್ತಲ್ವ ಬೇಗ ಹೋಗ್ಬೇಕು” ಎನ್ನುತ್ತಲೆ  ಮನೆಯಿಂದ ಹೊರ ಬಂದು ಅಲ್ಲೇ ಹೋಗುತ್ತಿದ್ದ ಆಟೋ ನಿಲ್ಲಿಸಿ ಕುಳಿತು ಬೆವರಿದ ಮುಖವನ್ನು ಒರೆಸಿಕೊಂಡಳು.  ಬಾಗಿಲು ತೆಗೆದ ಅತ್ತೆ ಇವಳ ಮುಖವನ್ನು ನೋಡುತ್ತಾ “ಯಾಕಮ್ಮ ಒಂಥರಾ ಇದೀಯಾ”ಎಂದರು.”ತುಂಬಾನೆ ತಲೆ ನೋಯ್ತಿದೆ ಅತ್ತೆ” ಮುಖ ತೊಳೆದು ಬರಲು “ನಿಂಗು ಜ್ವರ ಬಂತ ಕಾಫಿ ಕುಡಿದು ಮಲಗಿಬಿಡು ನನಗೂ ಎರಡು ದಿನದಿಂದ ಒಂದೆ ಸಮನಾಗಿ ಮಲಗಿ ಸಾಕಾಗಿದೆ ನಾನೇ ಅಡುಗೆ ಮಾಡ್ತೀನಿ”ಎಂದರು.ಆಗ ಲತ ತಾನು ರಂಜಿತಳ ಮನೆಯಲ್ಲಿ ತಿಂದಿದ್ದನ್ನು ಹೇಳಿ ತನಗೆ ರಾತ್ರಿಯ ಊಟ ಬೇಡ ಎಂದು ರೂಂ ಗೆ ಹೋಗಿ ಮಲಗಿ ಬಿಟ್ಟಳು. ಆಟ ಆಡಿಕೊಂಡು ಬಂದ ಮಗನಿಗೆ “ತಲೆ ನೋಯ್ತಿದೆ ಕಣೋ ಇವತ್ತು ನೀನೇ ಓದ್ಕೊ”ಎಂದು ಮುಸುಕು ಹಾಕಿ ಮಲಗಿ ಬಿಟ್ಟಳು. ಆ ವಿಕೃತ ನೋಟ ಕಣ್ಣೆದುರು ಬಂದು ನಿಂತಾಗ ಮುಳ್ಳಿಂದ ಚುಚ್ಚಿದ ಅನುಭವ ಅವನೇಕೆ ನನ್ನನ್ನು ಹಾಗೇ ನೋಡಿದ ? ಎಷ್ಟು ಹೊತ್ನಿಂದ ನೋಡುತ್ತಿದ್ದನೊ? ನಾನು ರಂಜಿತ ಇಬ್ಬರು ಹೋಳಿಗೆ ತಿನ್ನುತ್ತಿರುವಾಗ ಎಡಭಾಗದ ರೂಂ ರಂಜಿತಳ ಬೆನ್ನಿನ ಕಡೆಯಿತ್ತೆಂಬುದು ನೆನಪಾಯ್ತು. ಹಾಗಾದ್ರೆ ಅಲ್ಲೆ ನಿಂತು ತುಂಬ ಹೊತ್ನಿಂದ ನೋಡುತ್ತಿದ್ದನೆ ನನಗೇಕೆ ಅದರ ಅರಿವಾಗಲಿಲ್ಲ? ಅಥವಾ ಬಾಗಿಲ ಹಿಂದೆ ನಿಂತು ನೋಡುತ್ತಿದ್ದು ರಂಜಿತ ತಟ್ಟೆ ಒಳಗಿಡಲು ಹೋದ ಕ್ಷಣದಲ್ಲಿ ನನಗೆ ಕಾಣುವಂತೆ ನಿಂತು ಕೊಂಡನೆ? ಆ ರೀತಿ  ಕೆಟ್ಟದಾಗಿ ನೋಡಲು ಕಾರಣವೇನು?ವಿಧವೆಯಾದವಳು ಗಂಡನಿಲ್ಲದ ಬದುಕೆಂದೇ?ಅಷ್ಟೊಂದು ತಾತ್ಸಾರವಾಯ್ತೆ ನನ್ನ ಬಾಳು? ಎಂಬ ಭಾವನೆಯಿಂದ ದು:ಖ ಒತ್ತರಿಸಿತು ರಾಜೇಶನ ನೆನಪಿನಿಂದ ಅಳುವೇ ಬಂದಂತಾಗಿ ಪಕ್ಕದಲ್ಲೆ ಓದಿಕೊಳ್ಳುತ್ತಿದ್ದ ಮಗನಿಗೆ ತಾನು ಅಳುತ್ತಿರುವುದು ಕೇಳ ಬಾರದೆಂದು ಮೌನವಾಗಿ ತುಟಿ ಕಚ್ಚಿಕೊಂಡೆ ಸಹಿಸಿದಳು ಬಿಗಿಮಾಡಿಕೊಂಡ ಮುಸುಕಿನೊಳಗಿನ ಕತ್ತಲಲ್ಲಿ ಅವಳ ಕಣ್ಣೀರು ಕರಗುತ್ತಿತ್ತು. ಬೆಳಕು ಬೇಡವೆನಿಸಿ”ಮನು,ಲೈಟ್ ಆರಿಸಿ ಅಜ್ಜಿ ರೂಂಗೆ ಹೋಗಿ ಓದಿಕೋ”ಎಂದಳು.ಕತ್ತಲು ಆಪ್ತವೆನಿಸಿತು.ತನ್ನನ್ನು ಬೆಚ್ಚಿ ಬೀಳಿಸಿದ ಅವನ ನೋಟ ಇರಿದಂತಾಗುತ್ತಿತ್ತು.ಯಾವತ್ತೂ ಯಾರೂ ಅಂತಹ ಕೆಟ್ಟ ಭಾವನೆಯಿಂದ ತನ್ನನ್ನು ನೋಡಿಲ್ಲ.ಇಂದೇಕೆ ಹೀಗಾಯ್ತು  ನನ್ನ ನಡೆನುಡಿಗಳಲ್ಲೆ ಏನಾದರು ದೋಷವಿದೆಯೆ ಎಂಬ ಭಾವನೆ ಬಂದರೂ ಅದಕ್ಕೆಡೆ ಮಾಡಿಕೊಡದಂತೆ ಅವಳು ತಾನಾಯ್ತು ತನ್ನ ಕೆಲಸವಾಯ್ತು ಎಂಬಂತಿರುವಾಗ ಅದು ಸಾಧ್ಯವೇ ಇಲ್ಲ ಎಂದವಳ ಮನಸ್ಸಿಗನಿಸಿದಾಗ ಕೊಂಚವೆ ನಿರಾಳವಾಯಿತು. ಈ ಯೋಚನೆಯಲ್ಲೆ ಯಾವಾಗ ನಿದ್ರೆ ಬಂತೆಂಬುದೆ ಗೊತ್ತಾಗಿಲ್ಲ.ಬೆಳಿಗ್ಗೆ ಎಚ್ಚರವಾಗಿ ನೋಡಲು ಮನು ಆಗಲೇ ಶಾಲೆಗೆ ಹೊರಡುತ್ತಿದ್ದ. ಅವನು ಶಾಲೆಗೆ ಹೋದ ಮೇಲೆ ಪ್ರಭಾರೆ ಮುಖ್ಯೋಪಧ್ಯಾಯಿನಿಯಾದ ಸುನಂದ ಮೇಡಂವರಿಗೆ ತಾನು ಈ ದಿನ ರಜೆ ಹಾಕುತ್ತೇನೆ ಎಂದು ತಿಳಿಸಿ, ಸ್ನಾನವಾದ ಮೇಲೆ ದೇವರ ಪೂಜೆಯನ್ನು ಮಾಡಿ ಅತ್ತೆಯ ಜೊತೆ ತಿಂಡಿಯನ್ನು ತಿಂದಳು. ಅತ್ತೆಯು ಟಿ.ವಿ ನೋಡುತ್ತಾ ಕೂತಾಗ ತಾನೆ ಆಡುಗೆ ಮಾಡಿದಳು. ಆಡುಗೆ ಮಾಡುತ್ತ ನೆನ್ನೆ ನಡೆದುದೆಲ್ಲವನ್ನೂ ಅತ್ತೆಗೆ ಹೇಳಿ ನಿರಾಳವಾಗುವ ಯೋಚನೆ ಬಂದ ಬೆನ್ನಲ್ಲೇ ಅತ್ತೆ ತಪ್ಪಾಗಿ ತಿಳಿದರೆ ಎಂಬ ಭಾವನೆಯೂ ಬಂದರೂ ಅತ್ತೆ ಹಾಗೆಲ್ಲಾ ತಿಳಿಯಲಾರರೆಂಬ ನಂಬಿಕೆ ಮಾತ್ರ ಬಲವಾಗಿತ್ತು ಕೆಲಸ ಮುಗಿಸಿ ಬಂದು ಅತ್ತೆ ಪಕ್ಕದಲ್ಲಿ ಕುಳಿತಳು.ಲತ ಅತ್ತೆಯ ತೊಡೆ ಮೇಲೆ ತಲೆಯಿಟ್ಟು ಅಳ ತೊಡಗಿದಳು “ಏನಾಯ್ತೆ ಲತಾ”ಅವಳ ತಲೆ ಸವರುತ್ತ ಕಣ್ಣೀರು ಹಾಕಿದರು.ಗಂಡನ  ನೆನಸಿಕೊಂಡು ದು:ಖ ಪಡುತ್ತಿರಬಹುದೆಂದು ಭಾವಿಸುತ್ತ “ಲತ ಸಮಾಧಾನ ಮಾಡ್ಕೊಳೆ ನಮ್ಮ ಪಾಲಿಗೆ ಬಂದಿದ್ದು ಅನುಭವಿಸ್ಲೆ ಬೇಕು. ಮಗನ ಮುಖ ನೋಡ್ಕಂಡು ನಮ್ಮ ಕಷ್ಟಗಳನ್ನು ಮರೀಬೇಕು.”ಎನ್ನುತ್ತಲೆ ಅವಳ ತೋಳನ್ನೆತ್ತಿ ಸೋಫಾದ ಮೇಲೆ ಪಕ್ಕಕ್ಕೆ ಕೂಡ್ರಿಸಿಕೊಂಡರು. ಪಕ್ಕದಲ್ಲಿ ಕೂತ ಲತ ಕಣ್ಣೊರೆಸಿಕೊಂಡು”ಅತ್ತೆ”ಎನ್ನುತ್ತ ಅವರ ಕೈ ಹಿಡಿದಳು.”ಯಾಕೆ, ಏನಾಯ್ತು ಹೇಳಮ್ಮ ಲತ” ಎಂದರು ಆಗ ಲತ ಹಿಂದಿನ ದಿನದ ಘಟನೆಯನ್ನು ಹೇಳಿಕೊಂಡು ನಿರಾಳವಾದಳು. “ಮದ್ವೆ ವಯಸ್ಸಿನ ಮಗಳಿದಾಳೆ ಅಂತ ಹೇಳ್ತಿಯ ಅವನಿಗೇನು ಬಂತೇ ಕೇಡುಗಾಲ. ಅದಕ್ಯಾಕೆ ಕೊರಗ್ತೀಯಾ ಇದ್ರಲ್ಲಿ ನಿನ್ನ ತಪ್ಪೇನೂ  ಇಲ್ವಲ್ಲ ಇನ್ಮೇಲೆ ಅವರ ಮನೆಗೆ ಹೋಗಲೇ ಬೇಡ ಇದನ್ನೆಲ್ಲ ಯಾರತ್ರನೂ ಹೇಳ್ಬೇಡ .ಇಂಥದಕ್ಕೆಲ್ಲ ಹೆದರಿಕೊಂಡ್ರೆ ಮುಗಿತು ನಮ್ಮ ಕಥೆ. ನಮ್ಮಹುಷಾರಿನಲ್ಲಿ ನಾವಿದ್ರೆ ಆಯ್ತು ಏಳು ಊಟ ಮಾಡಿ ಆರಾಮಾಗಿ ನಿದ್ದೆ ಮಾಡು. ಮನು ಬರೋ ಟೈಂಗೆ ಏನಾದ್ರು ತಿಂಡಿ ಮಾಡು” ಎಂದಾಗ ಲತಾ ಗೆಲುವಾದಳು  ಮಾರನೆ ದಿನ ಶಾಲೆಗೆ ಬಂದಾಗ ರಂಜಿತಳೊಡನೆ ಏನನ್ನು ತೋರಿಸಿಕೊಳ್ಳದೆ ಮಾಮೂಲಿನಂತಿದ್ದಳು. ರಂಜಿತಳದು ಇದ್ರಲ್ಲಿ ಏನೂ ತಪ್ಪಿಲ್ಲ ಎನಿಸಿತು.ಆ ಮಧ್ಯಾಹ್ನದ ವೇಳೆಗೆ ವೇಳೆಗೆ ಅನಿರೀಕ್ಷಿತವಾಗಿ ಯಾರೂ ನಿರೀಕ್ಷಿಸದೇ ಇದ್ದಂತೆ ಹೊಸ ಮುಖ್ಯೋಪಧ್ಯಾಯರ ಆಗಮನವಾದಾಗ ಸ್ವಲ್ಪ ಗಲಿಬಿಲಿ ಸೃಷ್ಟಿಯಾಯಿತು. ಕರ್ತವ್ಯಕ್ಕೆ ಹಾಜರಾದ ಬಗ್ಗೆ ಪ್ರಕ್ರಿಯೆಗಳು ಮುಗಿದ ನಂತರ ಸುನಂದ ಮೇಡಂರವರು  ಶಾಲಾ ಸಿಬ್ಬಂದಿ ವರ್ಗದವರನ್ನೆಲ್ಲಾ ಕರೆಸಿ ಹೊಸ ಉಪ ಪ್ರಾಂಶುಪಾಲರಾದ ರವಿಯವರನ್ನು ಪರಿಚಯಿಸಿದರು ಅಷ್ಟರಲ್ಲಿ ಶಾಲೆಯ ಅವಧಿ ಮುಗಿಯುತ್ತ ಬಂದಿದ್ದರಿಂದ ಎಲ್ಲರು ಮನೆಗೆ ಹೊರಟರು ಹೊಸ ಉಪ ಪ್ರಾಂಶುಪಾಲ  ರವಿ KES ಶ್ರೇಣಿಯ ಆಫೀಸರ್ ಎಂದು ತಿಳಿದು ಕಾರಣ ದಾರಿಯಲ್ಲಿ ರಂಜಿತ “ಇವರು ತುಂಬ ಸ್ತ್ರಿಕ್ಟ್ ಆಗಿರುತ್ತಾರೆ ಅನ್ಸುತ್ತೆ”ಎಂದು ಅಂದಾಜು ಮಾಡಿದ ಹಿಂದೆಯೆ “ನಮ್ಮ

ಬದುಕು ಬಂದಂತೆ Read Post »

ಕಥಾಗುಚ್ಛ

ಉಡ್ಡಾಣ

ಕಥೆ ಉಡ್ಡಾಣ ಹೇಮಾ ಸದಾನಂದ್  ಅಮೀನ್   ಎಡೆಬಿಡದೆ ಅಳುವ ಆ ಮಗುವಿನ  ತಾಯಿಯ ಬೇಜವಾಬ್ದಾರಿತನವನ್ನು ನೋಡಿ ಯಾರೂ ಸಿಡಿಮಿಡಿಗೊಳ್ಳುವದು ಸಹಜವೇ. ಆದರೆ ಇದು  ಫಸ್ಟ್ ಕ್ಲಾಸ್ ಕಂಪಾರ್ಟ್ಮೆಂಟಿನಲ್ಲಿ  ಆಗಿರುವುದರಿಂದ ಕೇವಲ ಮುಖ ಸಿಂಡರಿಸಿ, “  ತಾನು ಡಿಸ್ಟರ್ಬ್ ಆಗಿದ್ದೇನೆ. ದಯಮಾಡಿ ನಿಮ್ಮ ಸಮಸ್ಯೆಯನ್ನು  ಆದಷ್ಟು ಬೇಗ ಬಗೆಹರಿಸಿಕೊಳ್ಳಿ “ ಎಂದು ವಕ್ರ ದೃಷ್ಟಿಯಿಂದಲೇ ಎಚ್ಚರಿಕೆ ಕೊಡುವ ಮನಸ್ಥಿತಿಯುಳ್ಳವರ ಮಧ್ಯ ಮೂರೂ ತಿಂಗಳ ಗರ್ಭಿಣಿಯಾಗಿದ್ದ  ಸಮೀಕ್ಷಳ ಮನಸ್ಸು  ತೀರ ವಿಚಲಿತಗೊಂಡಿತ್ತು. ಆಕೆ ಆ ತಾಯಿ ಮಗುವನ್ನು ಒಂದೇ ಸವನೆ ನೋಡುತ್ತಾ ಇದ್ದಳು. ಮಗು ಅಳುತ್ತಿದ್ದರೆ ಅದನ್ನು ಪುಸಲಾಯಿಸಿ ಸಮಾಧಾನಪಡಿಸುವುದನ್ನು ಬಿಟ್ಟು ಯಾವುದೋ ಲೋಕದಲ್ಲಿ ಮಗ್ಮಳಾಗಿರುವ ಆಕೆಯ ನಿಸ್ತೇಜ ಕಣ್ಣುಗಳು ಒಂದು ಕಥೆಯನ್ನು ಹೇಳಿದರೆ ಆಕೆಯ ಸ್ಟ್ರೇಟ್ನಿಂಗ್ ಮಾಡಿ ಚದುರಿದ ಹೆರಳು, ಮ್ಯನಿಕೂರ್ ಪೆಡಿಕ್ಯೂರ್ ಮಾಡಿ ಬಣ್ಣ  ಮಾಸುತ್ತಾ ಬಂದಿರುವ ನೀಲ ಬೆರಳುಗಳು , ಕೆನ್ನೆಯ ಸುತ್ತ ಹೊಂಬಣ್ಣದ ರೋಮಗಳಿಂದ ಮಸುಕು ಮಸುಕಾಗಿ   ಹೊಳೆಯುತ್ತಿರುವ ಮುಖ.  ಸೀರೆಯೂ ಅಷ್ಟೇ, ಪ್ರಿಂಟೆಡ್ ರವಕೆಗೆ ತೆಳುವಾದ ಪ್ಲೇನ್ ಹಸಿರು ಬಣ್ಣದಾಗಿದ್ದು ಆಕೆ  ನೋಡಲು ಒಂಥರ ಅಪ್ಸರೆ ಅಲ್ಲವಾದರೂ ತೆಳುವಾಗಿ ಚೆಂದವಾಗಿದ್ದಳು.  ಅಳುತ್ತಿರುವ ಮಗುವನು ಮುದ್ದಾಡಿ ಮುಖ ಒರೆಸುವುದಾಗಲಿ, ನೀರು ಕುಡಿಸುವುದಾಗಲಿ ಏನೂ ಮಾಡದೇ ತನ್ನದೇ ಗುಂಗಿನಲ್ಲಿರುವಾಗ ಸಮೀಕ್ಷಾಳ ಅನುಮಾನದ ಗರಿ ಶಿಥಿಲಗೊಂಡಿತು .  “ ಈ ಮಗು ಅವಳದ್ದೇ ಆಗಿದ್ದರೆ ಆಕೆ ಇಷ್ಟು ಅಳುತ್ತಿರುವ ಮಗುವನ್ನು ನೋಡಿಯೂ ಸುಮ್ಮನಿರಲು ಸಾಧ್ಯವೇ ಇಲ್ಲ .  ಬಹುಶಃ ಯಾರದ್ದೋ ಮಗುವನ್ನು ಕದ್ದು ತಂದಿರಬಹುದೇ?  ಮತ್ತೊಮ್ಮೆ ಛೆ!   ಈಗೀಗ ತಲೆಯಲ್ಲಿ ವಾಟ್ಸ್ ಆಪ್ಗಳಲ್ಲಿ ಓಡಾಡುವ ಸಂದೇಶಗಳೇ ಇಂತಹ ಅನುಮಾನದ ಹುಳುಗಳು”  ಎಂದು ತನ್ನಲ್ಲಿಯೇ ನಕ್ಕು ಅಕ್ಕಪಕ್ಕ ನೋಡಿದಳು . ಎಲ್ಲರೂ ಕಿವಿಗೆ ಇಯರ್ ಫೋನ್ ವಾಯರ್ ಸಿಕ್ಕಿ  ಭ್ರಮಾಲೋಕದಲ್ಲಿ ಸಂಚರಿಸುತ್ತಿದ್ದರು. ಇಂತಹ  ಹೊಳೆಯುತ್ತಿರುವ ನಿರ್ಭಾವುಕ ಮುಖಗಳೊಂದಿಗೆ ಪಯಣಿಸುತ್ತಿರುವ ಸಮೀಕ್ಷಗೆ ಸಂತೋಷ, ಘನತೆಯ ವಿಷಯಕ್ಕಿಂತ  ಬೇಜಾರಾದದ್ದೇ ಜಾಸ್ತಿ.  ಕಳೆದ ಆರು ವಾರಗಳಿಂದ ಸಿ. ಎಸ್. ಟಿ.   ಲೋಕಲಿನ  ಫಸ್ಟ್ ಕ್ಲಾಸ್ ಕಂಪಾರ್ಟ್ಮೆಂಟನಲ್ಲಿ ದಿನಾ ನೋಡುತ್ತಿರುವ ಪರಿಚಿತ ಮುಖಗಳೇ,  ಆದರೂ ಯಾರೂ ಒಬ್ಬರನೊಬ್ಬರು ಒಂದು ಕಿರುನಗೆ ಚೆಲ್ಲಿ ಮಾತಾನಾಡಿಸುವ ಸೌಜನ್ಯ ಬಿಡಿ ಪಕ್ಕದಲಿ ಸೀಟು ಖಾಲಿಯಿದ್ದರೂ , ಸರಿದು ಕೂರಲು ತುಟಿಬಿಚ್ಚದ ಮೂಕ ಜಗತ್ತೆಂದು ಸಮೀಕ್ಷಳ ಸಮೀಕ್ಷೆಯಾಗಿತ್ತು. ಇದೇ  ದ್ವಿತೀಯ  ದರ್ಜೆಯಲ್ಲಾಗಿದ್ದರೆ , ತನ್ನ ಪೂರ್ತಿ ಶಕ್ತಿಯ ಬಂಡವಾಳದಿಂದ ಒಳನುಗ್ಗಿ ಸೀಟಲ್ಲಿ ಕೂತವರು ತಮ್ಮ ಮನೆಯವರೇ ಎನ್ನುವಂತೆ “ ಎಲ್ಲಿ ಇಳಿಯಬೇಕೆಂದು ಕೇಳಿ ತನ್ನ ಆರಾಮಿನ ಸೌಕರ್ಯ ಮಾಡಿಕೊಳ್ಳುವುದಷ್ಟೇ ಅಲ್ಲದೇ ಇತರರಿಗೂ ಖಾಲಿ ಸೀಟುಗಳಿದ್ದರೆ ಕರೆದು ಕೂರಿಸುವ ಮನೋಭಾವ. ಯಾತ್ರಿಗಳೇ ಅಲ್ಲ , ಅಲ್ಲಿ ವ್ಯಾಪಾರ ಮಾಡುತ್ತಿರುವ ಹೆಣ್ಣು ಮಕ್ಕಳು ನಮ್ಮವರೇ ಆಗುತ್ತಾರೆ. ಒಬ್ಬರ ಮಡಿಲಲ್ಲಿಟ್ಟ ಕ್ಲಿಪ್ಪುಗಳ ಬಿಂದಿಗಳ ಟ್ರೇಗಳಿಗೆ ಒಂದೇ ಮನೆಯವರಂತೆ ಹತ್ತಾರು ಮಂದಿ ಮುಗಿಬಿದ್ದು ಚರ್ಚೆ ಮಾಡಿ ಖರೀದಿಸಿದ ಸಣ್ಣ ವಸ್ತುಗಳಲ್ಲಿಯೂ ದೊಡ್ಡ ಖುಷಿ ಪಡುತ್ತಾರೆ. ಇದೆಲ್ಲಾ ರಘುನಂದನನಿಂದಾಗಿಯೇ. “  ಮಗುವಿನ ಸುರಕ್ಷೆಯ ದೃಷ್ಟಿಯಿಂದ’   ಎಂದು ಫಸ್ಟ್ ಕ್ಲಾಸಿನ ಪಾಸ್ ತಂದು ಸಮೀಕ್ಷಳ ಕೈಯಲಿಟ್ಟಾಗ ಒಪ್ಪದೆ ಬೇರೆ ದಾರಿ ಇರಲಿಲ್ಲ. ಈಗ ಈ ಮಗುವಿನ ಅಳಲು ಹೃದಯಕ್ಕೆ ಅಪ್ಪಳಿಸಿ  ಚಿಗುರುತ್ತಿರುವ ಆಕೆಯ ತಾಯ್ತನವೇ ಇದ್ದಿದ್ದೂ ಅನುಮಾನದತ್ತ ಮುಖ ಮಾಡಿ,  ಆ ತಾಯಿ ಮಗುವಿನ ಪೋಟೋ ಕ್ಲಿಕಿಸಿ ರಘುನಂದನನಿಗೆ ಕಳುಹಿಸುವಂತೆ ಮಾಡಿತ್ತು. ಆ ಸಂದೇಶವನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಪರಿಗಣಿಸುವುದಕ್ಕಿಂತ ವಿಷಯವನ್ನು ನಿರ್ಲಕ್ಷಿಸಿ  ಸಮೀಕ್ಷಳ ಭಾವನೆಗಳನ್ನು ನೋಯಿಸಬಾರದೆಂದು,  ಅವಳಿಂದ ಪೂರ್ತಿ ಮಾಹಿತಿ ಪಡೆದು,  ರೇಲ್ವೆ ಪೋಲಿಸರಿಗೆ ದೂರು ಸಲ್ಲಿಸಿ, ಅವರು ವಿಕ್ರೋಲಿ ಸ್ಟೇಷನಿನಲ್ಲಿರೈಲು ಹತ್ತಿ ಮುಂದಿನ ಸ್ಟೇಷನಿನಲ್ಲಿ ಅವಳೊಂದಿಗೆ ಇಳಿಯುತ್ತಾರೆ.”  ಎಂದು ಸಂದೇಶ ಕಳುಹಿಸಿದ, ಪೊಲೀಸರಿಗೆ  ನಿನ್ನ ಹೆಸರು ಹೇಳದೆ ದೂರು ನೀಡಿರುವೆನು ಆದ್ದರಿಂದ  ಇವೆಲ್ಲಾ ಗೊಂದಲಗಳಲ್ಲಿ  ಬೀಳದೇ ನಿನ್ನ ಪಾಡಿಗೆ ನೀನು ಆಫೀಸಿಗೆ ಹೋಗು ಎಂದೂ ಒತ್ತೊತ್ತಿ ಹೇಳಿದ್ದ. ಸರಿ ಎಂದು ಒಪ್ಪಿದ್ದವಳನ್ನು ಆ ಅನುಮಾನಸ್ಥ ತಾಯಿ ಮಗುವಿನ ಹಿಂದೆ ಹೋಗಲು ಕಾದಿದ್ದು ಮನ ಮಾಡಿದ್ದು ಯಾರು ಎಂದಾಗ, ಅವಳ ಸೆಕೆಂಡ್ ಕ್ಲಾಸ್ ಮೆಂಟಾಲಿಟಿಯೋ, ಅವಳ ತಾಯ್ತನವೋ, ಅಲ್ಲ ಅವಳಲ್ಲಿರುವ ಹೆಣ್ತನವೋ ಗೊತ್ತಿಲ್ಲ?   ಆ ತಾಯಿ ಮಾತ್ರ ಎಷ್ಟೂ ಕಾಡಿ ಬೇಡಿದರೂ ಲೇಡಿ ಕ್ವಾನ್ಸ್ಟೇಬಲಿನ ಕರುಣೆ ಕರಗಲಿಲ್ಲ. ಅದು ಅವರ ವೃತ್ತಿಗೂ ಸರಿ ಬರುವುದಿಲ್ಲ ಅನ್ನಿ.      ಘಾಟ್ಕೊಪರ್ ಪ್ಲಾರ್ಟಫಾರ್ಮಿನ ಮಧ್ಯದಲ್ಲಿದ್ದ  ವಿಚಾರಣೆ, ಕೊಠಡಿಗೆ ಆಕೆಯ ಕೈ ಎಳೆದು ತರುತ್ತಿದ್ದಂತೆ ನಿಬಿಡ ಜನರ ಕಣ್ಣಿಗೆ ಕುತೂಹಲದ ತುತ್ತಾಗಿದ್ದಳು. ಮಗುವನ್ನು ಎದೆಗಾತು, “ ನಾನು ಮಗು ಕದ್ದಿಲ್ಲ ಸಾರ್ ” ಎಂದೇ ಗೋಗರೆಯುತ್ತಾ ಪೋಲಿಸ್ ಅಧಿಕಾರಿಯ ಮುಂದೆ ಕೂತವಳ ಬಾಯಿ ಒಣಗಿ ಕಣ್ಣು ತೇವವಾಗಿತ್ತು.  ಸಮೀಕ್ಷ ತಾನಾಗಿಯೇ ಮುಂದು ಬಂದು “ ನಾನೇ  ದೂರು ಕೊಟ್ಟರುವುದು. ಮಗು ಎಷ್ಟೊತ್ತಿನಿಂದ ಅಳುತ್ತಿದ್ದರೂ  ಪ್ರತಿಕ್ರಿಯೆಯೇ ಇಲ್ಲದೆ ತನ್ನಳೊಳಗೆ ಗುಂಗಿನಲ್ಲಿರುವುದು, ಅ ಮಗುವೂ ತಾಯಿಯ ಮಡಿಲಲ್ಲಿ ಅಪರಿಚಿತರ ಕೈಯಲ್ಲಿರುವಂತೆ ಚಡಪಡಿಸುತ್ತಿರುವುದನ್ನು  ನೋಡಿ ಅನುಮಾನ ಬಂತು ಸರ್ ಎಂದಳು. “ಡಾಟ್ಸ್  ಗುಡ್ ಯು ಡನ್ ಆ ಗುಡ್ ಜಾಬ್ “  ಎಂದು ಅವಳನ್ನೂ ಕೂರಿಸಿ  ಮಗುವಿಗೂ ನೀರು ಕುಡಿಸಲು ಹೇಳಿ ಆ ತಾಯಿಗೆ  ಕುಡಿಯಲು ನೀರು ಕೊಟ್ಟು,  ವಿಚಾರಣೆಗೆ  ಇಳಿದರು. ವಿಚಾರಣೆ ಗಡುಸಾದಂತೆ,  ಅವಳೊಳಗಿನ ಮೌನ ಈ ಅನಿರೀಕ್ಷಿತ  ಪ್ರಶ್ನೆಗಳನ್ನು  ಕೇಳಿ ಕೇಳಿ  ರೋಸಿ , “ ಇನ್ನೆಷ್ಟು ಬಾರಿ ಹೇಳಲಿ  ನನ್ನದೇ ಮಗು ಇದು.  ನಾನೇ  ಈ ಮಗುವಿನ ತಾಯಿ  “. ಅಲ್ಲಿಯೇ ಇದ್ದ ಹಿರಿಯ ಅಧಿಕಾರಿ ಪಟವರ್ಧನ್ ಸರ್,ಅವಳ  ಒಳಗುದಿತವನ್ನು ಅರ್ಥೈಸಿಕೊಂಡು,    ಒತ್ತಾಯವಾಗಿ ಕೇಳುವ ಪ್ರಶ್ನೆಗಳನ್ನೇ ಮೃದುವಾಗಿ,  “ ನೋಡಿ ನೀವು ನನ್ನ ಸಹೋದರಿಯಂತೆ, ನಿಮ್ಮ ಹೆಸರೇನು, ಯಾವ ಊರು ,  ಮಗುವಿಷ್ಟು ಅಳಲು ಕಾರಣವೇನು?  ಮಗುವ್ಯಾಕೆ ನಿಮ್ಮನ್ನು  ಅಪರಿಚಿತರಂತೆ ಕಾಣುತಿದೆ?  ಅನಿರೀಕ್ಷಿತ  ಪ್ರಶ್ನೆಗಳನ್ನು  ಭೇದಿಸಿ  ಆಕೆ ಗಂಟಲು  ಸಡಿಲು ಗೊಳಿಸುತ್ತಾ  ಉತ್ತರಕ್ಕೆ ತೆರೆದುಕೊಂಡಳು. …………………………   ಶಾಲೆಯಲ್ಲಿ  ಮಾತ್ರ ಶರೈಯೂ . ಖೇಡಿನಲ್ಲಿ ಎಲ್ಲರಿಗೂ  ಶರು . ನಮ್ಮೂರು ಇಲ್ಲೇ ಹತ್ತಿರ,  ಕರ್ಜತ್ದಿಂದ  ಐದು ಕಿಲೋಮೀಟರ್ ದೂರ. ಸಾಂಜಾ ಖೇಡ್ ಅಂತ. ರುಕುಮಾಯಿ ಮಂದಿರದ ಹಿಂಬದಿ ನಮ್ಮ ಮನೆ.  ಅಪ್ಪ ಸಣ್ಣ ಕಾರಖಾನೆಗೆ ಕೆಲ್ಸಕ್ಕೆ ಹೋಗ್ತಿದ್ರು .  ಅಮ್ಮ ಮನೆಯಲ್ಲೇ.  ನಾನು ಮತ್ತು ನನ್ನ ಜೊತೆಗೆ ಹುಟ್ಟಿದ ಅವಳಿ ತಮ್ಮ ಸಾರ್ಥಕ್.  ಸಾರ್ಥಕನಿಗೆ ಮಿರ್ಗಿ ಹುಟ್ಟು ಕಾಯಿಲೆಯಾಗಿ ಬಂದಿತ್ತು. ಆತನ   ಹದಗೊಂಡಿದ್ದ ಜೀವಕ್ಕೆ ನಮ್ಮ ಮನೆ    ಆಸ್ಪತ್ರೆಯಂತೆ . ಗುಳಿಗೆ, ಟಾನಿಕ್ , ಡ್ರಾಪ್ಸ್  ಕಿಟಕಿಯ ಪಕ್ಕದಲ್ಲಿ  ಮಗುಮ್ಮಾಗಿ  ಕೂತು ತನ್ನ ಉಪಸ್ಥಿತಿಯನ್ನು ವ್ಯಕ್ತಪಡಿಸುತ್ತಿತ್ತು.   ಆ ಎಳೆಯ ಜೀವ  ಈ ನೋವು, ಬೇಸರ , ದ್ವೇಷ, , ನಿರಾಶೆಯ ಒತ್ತಡಗಳನ್ನು  ಎಷ್ಟು ಸಹಿಸಿಕೊಳ್ಳಲು ಸಾಧ್ಯ? ,    ಅಷ್ಟಕ್ಕೂ ಕೆಲವು ಅನಿವಾರ್ಯಗಳು ಅವನ   ಸ್ವಾಸ್ಥ್ಯಕ್ಕಾಗಿಯೇ ಮಾಡಬೇಕಾಗಿತ್ತು.  ಅಪ್ಪ ಡಬಲ್ ಕೂಲಿ ಮಾಡುತ್ತಿದ್ದ. ಅಮ್ಮ ದೇವಸ್ಥಾನದ ಚಾಕರಿಗೆ ಹೋಗುತ್ತಿದ್ದಳು. ಮನೆಯಲ್ಲಿ ಕಿವಿ ಸರಿ ಕೇಳದ ಅಜ್ಜಿ ನಮ್ಮಿಬ್ಬರನ್ನು  ನೋಡಿಕೊಳ್ಳುತ್ತಿದ್ದಳು. ನೋಡಿಕೊಳ್ಳುವುದೇನು ? ಒಮ್ಮೊಮ್ಮೆ  ನಾವು ಆತ್ತು ಆತ್ತು ಕಂಗಾಲಾದರೂ ಅಜ್ಜಿ ಕೇಳದೆ ವಿಠಲಾ …….. ಪಾಂಡುರಂಗ….  ನಾಮಾವಳಿಯಲ್ಲಿ  ಮಗ್ನರಾಗಿದ್ದಾಗ  ಪಕ್ಕದ ಮನೆಯವರು ಬಂದು “  ಏ ಕಿವುಡೆ.. ಕಿವಿಯಂತು ಪೊಳ್ಳಾಗಿದೆ ಕಣ್ಣಿಗೂ ಕಾಣಿಸ್ತಿಲ್ವಾ ? ಎಂದು  ಅಣಕಿಸುತ್ತಿದ್ದರು.  ಕೊನೆಗೂ ಕಣ್ಣೆವೆಯಲ್ಲಿಟ್ಟು ಕಾದ ಮಗುವನ್ನು ಬೆಂಬಿಡದೆ ವಿಧಿ  ಕೊಂಡೊಯ್ಯಿತು.  ಹತ್ತು ವರುಷ ನಮ್ಮೊಂದಿಗಿದ್ದು   ತೀರಿಹೋದವನ ನೆನಪು ಮರೆಯಾಗಲು ಸಾಧ್ಯವೇ?   ಅಮ್ಮನಿಂದ ಈ ಆಘಾತ ಸಹಿಸಲಾರದೆ ಆಕೆಯೂ ದಿನೇ …ದಿನೇ  ಕುಸಿಯಲಾರಂಭಿಸಿದಳು. ಮನೆಯ ಎರಡು ಗೋಡೆಯ ಪಕ್ಕದಲ್ಲಿ  ಎರಡು ಜೀವಂತ ಶವಗಳಂತೆ ಅಜ್ಜಿ ಮತ್ತು  ಅಮ್ಮ . ಯಾರ್ ಮಾಡ್ತಾರೆ ಸಾಹೇಬ್?  , ಅಪ್ಪ ಮಾತ್ರ ಬಿರುಗಾಳಿಗೆ ಎದೆಕೊಟ್ಟು ನಿಂತಂತೆ ಸೆಟೆದು ನಿಂತಿದ್ದ. ಅಮ್ಮನಿಗೂ “ ಹೇ ಶ್ಯಾಮೆ, ಇನ್ನು ನಮ್ಮ ಮಗನನ್ನು   ಇವಳಲ್ಲೇ ಕಾಣಬೇಕೆಂದು  ಹೇಳಿದರೂ,   “ ತನ್ನ ಕಡೆ ಕಾಲದ ಆಸರೆ , ಅಪ್ಪನ ದೇಹಕ್ಕೆ ಕೊಳ್ಳಿ ಇಡುತ್ತಿದ್ದ”  ಎನ್ನುವ  ಖಾಲಿತನದ ಛಾಯೆ  ಅವನ ಚಹರೆಯಲ್ಲೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಬದುಕು ಒಳ್ಳೆಯದನ್ನೂ ಕೆಟ್ಟದನ್ನೂ ಒಂದೇ  ಗಿರಣಿಯಲ್ಲಿ ಪುಡಿ ಮಾಡುತ್ತೆ”  ಎನ್ನುವಂತೆ  ಜೀವನವಂತೂ ಸಾಗುತ್ತಿತ್ತು.   ಅಮ್ಮನ ಕಾಯಿಲೆ ಅಪ್ಪನ ಸಾಲದ ಇಳಿಸುವ ಒತ್ತಡದ ಮಧ್ಯೆ ನಾನು  ಹತ್ತನೇವರೆಗೆ ಮಾತ್ರ ಕಲಿತೆ.  ಮನೆಯೊಳಗಿನ ಎಲ್ಲಾ ಕೆಲಸ ಮಾಡಿ ಮುಂದೆ ಕಲಿಯುವುದು ಕಷ್ಟಕರವಾಗಿತ್ತು. ಹಾಗೆ ಹೆಚ್ಚು ಕಲಿಯುವ ಆಸೆಯಾಗಲಿ,  ದೊಡ್ಡ ದೊಡ್ಡ ಕನಸುಗಳನ್ನು ಹೃದಯದಲ್ಲಿಟ್ಟು ಅರಳಿಸುವ ಆಕಾಂಕ್ಷೆಯಾಗಲಿ ನನ್ನಲ್ಲಿ ಅಂದೂ ಇರಲಿಲ್ಲ.  ಇಂದೂ ಇಲ್ಲ. ಎನ್ನುವಾಗ ಅವಳ ನಿಸ್ತೇಜ ಕಣ್ಣುಗಳ ಭಾವ ಸಾಕ್ಷಿಯಾಗಿದ್ದವು.  ಅಜ್ಜಿ ಸಾಯುವ ಮೊದಲು ನಿನ್ನ ತಲೆಗೆ ಅಕ್ಷತೆಯ ಎರಡು ಕಾಳು ಹಾಕ್ಬೇಕೆಂಬ ಒತ್ತಾಯಕ್ಕೆ ಮಣಿದು ನಾನು ಮದುವೆಗೆ ಒಪ್ಪಿದೆ. ಕಿಶೋರ್ ಸಿಂಪಲ್ ಆಗಿಯೇ ನನ್ನನ್ನು ನೋಡಲು ಬಂದಿದ್ದ. ಆ ಕ್ಷಣದಲ್ಲಿ  ಅವಳ  ಕೆನ್ನೆಗಳು  ಅರಳಿ ಕಣ್ಣಲಿ  ಸಣ್ಣ ಬೆಳಕು ಮಿನುಗಿದಂತೆ, “ ಕಿಶೋರನಿಗೆ ಮಾತ್ರ ಹಾಗಲ್ಲ.  ಅವನ ಕಣ್ಣಲ್ಲಿ ಕನಸುಗಳು ನಕ್ಷತ್ರ ರಾಶಿಗಳಂತೆ    ಮಿನುಗುತ್ತಲೇ ಇತ್ತು.  ಅದ್ಯಾವ ಸುಖಕ್ಕಾಗಿ ನನ್ನನ್ನು  ಮದುವೆಯಾದನೋ ಗೊತ್ತಿಲ್ಲ.   ಮದುವೆ ತೀರ ಸರಳವಾಗಿ ಮಾಡಿ ಮುಗಿಸಿದ್ದಕ್ಕೂ ಅವನ ಸಹಮತವಿತ್ತು. ಮುಂಬಯಿಯಲ್ಲಿ  ಸ್ವಂತ ಮನೆಯಂತ ಇರಲಿಲ್ಲ.  ಸ್ವಂತ ಮನೆಯೇ ಆಗಬೇಕೆಂಬ ಬಯಕೆಯೂ ನನ್ನಲ್ಲಿ ಇರಲಿಲ್ಲ.  ಕುರ್ಲಾದ ಬೈಠಕ್ ಚಾಳಿಯಲ್ಲಿಯ ಮಾಳಿಗೆಯಲ್ಲಿ ಬಾಡಿಗೆದಾರನಾಗಿರುತ್ತಿದ್ದ.   ನಮ್ಮ ಮೊದಲ ರಾತ್ರಿಯೂ ಅದೇ  ಹತ್ತು ಬೈ ಹತ್ತರ ಆ ಸಣ್ಣ ಕೋಣೆಯಲ್ಲಿಯೇ ನಡೆದಿತ್ತು. ಔಷಧಿಗಳ  ಕಮಟು ವಾಸನೆಯಿಂದ ಹೊರಬಂದ ಈ ಸಣ್ಣ ಕೋಣೆಯೂ ಅಂದು ಸ್ವರ್ಗದಂತೆ ಕಂಡಿತ್ತು. ಟ್ರೇನುಗಳ ಅವಜಾಹಿಗಳ ಸಂತೆಯ ಮದ್ಯೆಯೂ ಶರೂನ ಕಥೆ ಕೇಳುವುದರಲ್ಲಿ ಎಲ್ಲರೂ ತಲ್ಲೀನರಾಗಿದ್ದ್ರರು.  ಗಡಿಯಾರದ ಮುಳ್ಳು ಮೌನವಾಗಿದ್ದರೂ , ಸಿಲಿಂಗ್ ಪ್ಯಾನಿನ  ಟರ್ ಟರ್ ಟರ್ ಸದ್ದಿನ  ಏಕತಾನತೆ ಹುಂ… ಗುಡುವಂತ್ತಿತ್ತು.  ಮಧ್ಯ ಒಂದೊಂದು ಕ್ಷಣದ ಅಂತರದಲ್ಲಿ ಸಮೀಕ್ಷಾ ಮೊಬೈಲ್ ಗುಂಡಿ ಒತ್ತಿ ಸಮಯ ನೋಡಿದಳು. ಆಗಲೇ ರಘುನಂದನನ ಜೊತೆಗೆ ಆಫೀಸಿನ ಕರೆಗಳು   ಮೆಸೇಜ್ಗಳು ಬಂದು ತೆಪ್ಪಗೆ ಬಿದ್ದಿದ್ದವು. ಅದನ್ನು  ಹಾಗೆಯೇ  ಸ್ಕ್ರೀನ್ ಆಫ್ ಮಾಡಿ, ಬ್ಯಾಗಿನೊಳಗಿಟ್ಟಳು.  ಕೈಗೆ ತಾಗಿದ ನೀರಿನ ಬಾಟಲಿಯಿಂದ ಒಂದು ಗುಟುಕು ನೀರು ಗಂಟಲೊಳಗೆ ಇಳಿಸಿ, ಶರೂಗೆ ನೀರು ಬೇಕಾ ಎಂದು ಸನ್ನೆ ಮಾಡಿದಳು. ತನ್ನ ನೆನಪಿನ ಲೋಕದಿಂದ ಹೊರಬರಲು ಮನಸ್ಸಿಲ್ಲದ ಆಕೆ  ಬೇಡವೆಂದು ತಲೆಯಾಡಿಸಿ ಮುಂದುವರಿದಳು. ಪಕ್ಕದ್ದಲ್ಲಿದ್ದ ಲೇಡಿ  ಕಾಂಸ್ಟೇಬಲ್ , “ನಿನ್ನ ಗಂಡ ಏನ್ ಮಾಡುತ್ತಿದ್ದ”  ಎಂದು ಗದರಿಸುತ್ತಾ  ಮಧ್ಯ ಬಾಯಿ ಹಾಕಿದಾಗಲೂ  .  ಪಟವರ್ಧನ್ ಸರ್, ” ಸ್ವಲ್ಪ ತಾಳ್ಮೆ ಇರಲಿ, ಆಕೆ ಹೇಳ್ತಿದ್ದಾಳಲ್ಲ ” ಎಂದು ಖಡಕ್ ಆಗಿಯೇ ಹೇಳಿದರು.  “ಇದು ಬೇಕಿತ್ತಾ ?’  ಎನ್ನುವಂತೆ   ಬೆಕ್ಕಿನಂತೆ ಮುಖ ಸಪ್ಪಗೆ ಮಾಡಿ ಕುಳಿತಳು. ಶರೂ,  “ಸಾಹೇಬ್, ನನ್ನ ಕಿಶೋರ್ “ಅಶ್ವಬಲ”  ಕೇಬಲಲ್ಲಿ ಕೆಲಸ ಮಾಡುತ್ತಿದ್ದ.  ಟಿ.ವಿ. ಕೇಬಲ್ ಜೋಡಿಸುವುದು  , ಹಣ ವಸೂಲಿ, ಮತ್ತೆ ಗಿರಾಕಿಗಳ ಏನಾದರೂ

ಉಡ್ಡಾಣ Read Post »

ಕಥಾಗುಚ್ಛ

ಒಂದು ತಪ್ಪು ಗಂಟು

ಒಂದು ತಪ್ಪು ಗಂಟು ಎಸ್.ನಾಗಶ್ರೀ ಅದು ಕಾರ್ತೀಕ ಮಾಸದ ಪ್ರಾರಂಭದ ದಿನಗಳು. ಸಂಜೆ ಬೇಗ ಕಳೆದು ರಾತ್ರಿಯ ಚಾದರ ಹೊದ್ದು ಸುತ್ತಲೂ ಕತ್ತಲು. ಪ್ರತಿಮನೆಯ ಮುಂದೂ ಬೆಳಗುವ ಹಣತೆಗಳು. ಪ್ರಕಾಶ್ ರೆಡ್ಡಿ ಅಂದೂ ಸಂಜೆ ಏಳರ ಸಿಗರೇಟ್ ಹಚ್ಚಿ ಮನೆಯ ಮುಂದೆ ಕುರ್ಚಿ ಹಾಕಿ ಕುಳಿತಿದ್ದ. ಚಳಿ ಏಕೋ ಮೂಳೆಗಿಳಿಯುವಷ್ಟು ಏರಿದೆ ಎನಿಸಿ ಬಿಸಿ ಕಾಫಿಗೆ ಸೈಲೂ ಎಂದು ಕೂಗಿ, ಅರೆಘಳಿಗೆ ಹಿಂದಕ್ಕೆ ಒರಗಿದ. ಬೇಡಬೇಡವೆಂದರೂ ಪ್ರತಿ ಕಾರ್ತೀಕದಲ್ಲಿ ನೆನಪಾಗಿ ಹೃದಯ ಭಾರವಾಗುವ ಆ ಘಟನೆಯ ಕಿಡಿ ಇವತ್ತೂ ಫಳಾರನೆ ಸೋಕಿತ್ತು. ವಾವೆಯಲ್ಲಿ ಚಿಕ್ಕಮ್ಮನ ಮಗಳು ಪಾರ್ವತಿ ತಂಗಿಯಾಗಬೇಕು. ಇಡೀ ನಮ್ಮ ಮನೆತನಕ್ಕೆ ತಿಳಿಗೋಧಿ ಬಣ್ಣಕ್ಕಿದ್ದದ್ದು ಅವಳೊಬ್ಬಳೇ. ಬಟ್ಟಲುಗಣ್ಣು, ಅರ್ಧಚಂದ್ರಾಕಾರದ ಹಣೆ, ಕಡುಗಪ್ಪು ಅಲೆಅಲೆ ಕೂದಲು. ಅವಳು ಸೀರೆಯುಟ್ಟು ನಿಂತರೆ ದೇವಿ ಕಳೆ. ಗಂಡಿನ ಕಡೆಯವರೇ ಮನೆಗೆ ಬಂದು ಕೇಳಿ, ಮದುವೆ ಮಾಡಿಕೊಂಡು ಹೋಗ್ತಾರೆ ನೋಡಿ ಅಂತ ಆಡಿಕೊಳ್ಳೋರು ಸುತ್ತಮುತ್ತಲ ಜನ. ಚಿಕ್ಕಪ್ಪ ಚಿಕ್ಕಮ್ಮನೂ ಇದ್ದೊಬ್ಬ ಮಗಳಿಗೆ ಸಾಕಷ್ಟು ನಗ ಕೂಡಿಸಿಯೇ ಇದ್ದರು. ಎಲ್ಲರಿಗೂ ಬೇಕಾದವರಾಗಿ ಎಲ್ಲರ ಕಷ್ಟಕ್ಕೂ ಆಗುತ್ತಿದ್ದ ಅವರ ಒಳ್ಳೆಯತನಕ್ಕೆ ಮೆಚ್ಚಿಯೇ ಸಾಕ್ಷಾತ್ ಪಾರ್ವತಿ ಹುಟ್ಟಿಬಂದಿರಬಹುದು ಎಂದಿದ್ದರು ಊರ ಅರ್ಚಕರು. ಅವಳಿಗಿಂತ ಮೂರು ವರ್ಷ ದೊಡ್ಡವನಾದ ನನಗೂ ಹೆಚ್ಚು ತರ್ಕಕ್ಕೆ ಸಿಲುಕದೆ ಅದನ್ನು ನಂಬುವುದೇ ಹಿತವಾಗಿತ್ತು. ಬಾಲ್ಯದ ಪ್ರತಿ ಬೇಸಿಗೆರಜೆಯಲ್ಲೂ ತಮ್ಮ ಸುಧೀರನನ್ನು ಕರೆದುಕೊಂಡು ಅವರ ಊರಿಗೆ ಹೋಗುವುದು ಪ್ರಿಯವಾದ ಸಂಗತಿಯಾಗಿತ್ತು. ಮೊದಮೊದಲು ಅಪ್ಪನೇ ಕರೆದುಕೊಂಡು ಹೋಗಿ ಬಿಡುತ್ತಿದ್ದುದು ಆಮೇಲೆ ಬಸ್ಸು ಹತ್ತಿಸಿ ಕಳಿಸುವ ಸಲೀಸಿಗೆ ಸಿಕ್ಕಿತ್ತು. ದಾರಿಯುದ್ದಕ್ಕೂ ಸಿನಿಮಾಗೀತೆಗಳ ಗುನುಗುತ್ತಾ ಅಮ್ಮ ಕಟ್ಟಿಕೊಟ್ಟ ಚಕ್ಕುಲಿ, ಬಿಸ್ಕತ್ ಬಾಯಾಡಿಸುತ್ತಾ ಊರು ತಲುಪುವ ಮಜಾ. ಅಲ್ಲಿಂದಾಚೆಗೆ ಚಿಕ್ಕಮ್ಮನ ಮುದ್ದು. ಚಿಕ್ಕಪ್ಪನೊಂದಿಗೆ ಕೆರೆಯಲ್ಲಿ ಈಜು ಹೊಡೆಯುವ ಆಟ. ಪಾರ್ವತಿಯನ್ನೂ ಜೊತೆ ಮಾಡಿಕೊಂಡು ಊರಹಬ್ಬ, ಸಂತೆಗೆ ಸುತ್ತುವುದು… ಸಂತೋಷದಲ್ಲಿ ದಿನಗಳೆಯುವುದು ಕಷ್ಟವಲ್ಲ. ದುಃಖದಲ್ಲಿ ನಿಮಿಷ ನಿಮಿಷವೂ ದೂರ..ಭಾರ. ಸೈಲೂ ಕೈಯಲ್ಲಿ ಕಾಫಿ ಹಿಡಿದೇ ಬಂದಿದ್ದಳು. ಇವಳಾದರೂ  ಕಷ್ಟಕಾಲದಲ್ಲಿ ಇರದಿದ್ದರೆ ಎಂದೋ ಕುಡಿತಕ್ಕೆ ಬಲಿಯಾಗಿ ಸಾಯುತ್ತಿದ್ದೆ. ಮಕ್ಕಳು ಮರಿ ಸಂಸಾರ ಅನ್ನೋದು ಹೆಣ್ಣೊಬ್ಬಳಿಂದಲೇ ಗಟ್ಟಿಯಾಗುವುದು ಎಂಥಾ ಸೋಜಿಗ. ” ಇವತ್ತು ರಾತ್ರಿಗೆ ಏನು ಮಾಡಲಿ? ಸೋಮವಾರ ಬೇರೆ… ಏನು “ ” ಎಂತಾದ್ರೂ ಮಾಡು.. ಅವರೆಕಾಯಿ ಬಿಟ್ಟು”  ” ಬೇಕಂದ್ರೂ ಆಗಲ್ಲ. ನಿನ್ನೆಗೇ ಅವರೆ ಮುಗಿದಾಯ್ತು. ಟೊಮೇಟೋ ಬಾತ್ ಮಾಡ್ತೀನಿ . ಅನಿಗೂ ಇಷ್ಟ” ಆಯ್ತು ಎನ್ನಲೂ ಬಾಯಿ ಬರದೆ ಮತ್ತೊಂದು ಸಿಗರೇಟು ಹಚ್ಚಿ ಆಕಾಶಕ್ಕೆ ಮುಖಮಾಡಿ ಕೂತ. ಅವರೆಕಾಯಿ ಅಂದ್ರೆ ಪಾರ್ವತಿಗೆ ಎಷ್ಟು ಆಸೆ. ಅವಳು ಮದುವೆಯಾಗಿ ಹೋದಕಡೆ ಅವರೆ ಸಿಗುವುದೇ ಕಷ್ಟ ಅಂತ ಅಮ್ಮನೇ ಕೆಜಿಗಟ್ಟಲೆ ತಂದು ಬಿಡಿಸಿ ಗಂಟುಕಟ್ಟಿ ತೆಗೆದುಕೊಂಡು ಹೋಗಿ ಕೊಡುತ್ತಿದ್ದಳು.ಅಮ್ಮನ ಕೈ ಧಾರಾಳ. ಚಿಕ್ಕಮ್ಮನದು ಕಮ್ಮಿಯಲ್ಲ. ಪಾರ್ವತಿಯ ಕೈ ಎಂತದ್ದು ತಿಳಿಯಲು ಒಮ್ಮೆಯೂ ಅವರ ಮನೆಗೆ ಹೋಗುವ ಭಾಗ್ಯವೇ ಬರೆಯಲಿಲ್ಲ ದೇವರು. ಅಷ್ಟಕ್ಕೂ ಪ್ರಕಾಶ್ ರೆಡ್ಡಿಗೆ ಆ ಘಟನೆ ವಿವರವಾಗಿ ಕಾಡಲು ಕಾರಣ ಇಂದು ಮಧ್ಯಾಹ್ನ ಅವನ ಮೊಬೈಲ್ಗೆ ಬಂದ ಮೆಸೇಜ್. ” ನಮಸ್ತೇ ಮಾವ. ನಾನು ವೈಶಾಲಿ. ಇಲ್ಲಿ ಎಲ್ಲರೂ ಕ್ಷೇಮ. ಅಲ್ಲಿ ಎಲ್ಲರೂ ಕ್ಷೇಮವೆಂದು ಭಾವಿಸುವೆ. ನನ್ನ ತಂಗಿ ಸುರಭಿಗೆ ಮದುವೆ ಗೊತ್ತಾಗಿದೆ. ಅಂಗೀರಸ ಗೋತ್ರದವರು.ಹುಡುಗ ಇಂಜಿನಿಯರ್.ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾನೆ. ತುಂಬಾ ಒಳ್ಳೆಯ ಜನ. ಬಹುಶಃ ಮುಂದಿನ ಏಪ್ರಿಲ್ ನಲ್ಲಿ ಮದುವೆ. ಹುಡುಗನ ಫೋಟೋ ಕಳಿಸಿರುವೆ ನೋಡಿ. ಹೆಚ್ಚಿನ ವಿವರಗಳನ್ನು ನಂತರ ಮೆಸೇಜ್ ಮಾಡುವೆ. ನಿಮ್ಮ ಸಪ್ರೇಮ ಆಶೀರ್ವಾದವನ್ನು ಕೋರುವ, ವೈಶಾಲಿ. ಮನೆಗೆ ಹೋಗುವ ಮುನ್ನ ಮೆಸೇಜ್ ಡಿಲಿಟ್ ಮಾಡಿ. ಅತ್ತೆಗೆ ತಿಳಿದು ನಿಮಗೆ ಕಷ್ಟವಾಗುವುದು ಬೇಡ.” ಆ ಮೆಸೇಜ್ ಅನ್ನು ಓದಿದಾಗಿಲಿಂದಲೂ ಪ್ರಕಾಶ್ ರೆಡ್ಡಿಗೆ ತಾನು ಹೋಗಲಾಗದ ತಂಗಿಯ ಮನೆ, ಅವಳ ಮಕ್ಕಳ ನೆನಪಾಗಿ ಕಡೇಪಕ್ಷ ಈ ಮದುವೆಗಾದರೂ ಹೋಗಿಬಿಡಲೇ ಎನ್ನಿಸಿತ್ತು. ಪಾರ್ವತಿಯ ಗಂಡ ನರಸಾರೆಡ್ಡಿ ಅಣ್ಣ-ತಂಗಿಯ ಸಂಬಂಧಕ್ಕೇ ಅಪಾರ್ಥ ಹಚ್ಚಿ ಹಂಗಿಸುವುದು, ತವರಿಗೂ ಕಳುಹಿಸದೆ ಹಿಂಸಿಸುವುದು, ತನಗಿಂತ ಸಾವಿರಪಟ್ಟು ಅಂದವಾಗಿರುವುದು ಹೆಂಡತಿಯ ತಪ್ಪು ಎಂದೇ ಭಾವಿಸಿ ವಿಕೃತಿ ಮೆರೆಯುವುದನ್ನು ಚಿಕ್ಕಮ್ಮನೇ ಕಣ್ಣೀರು ಸುರಿಸುತ್ತಾ ಗೊಗ್ಗರು ಗಂಟಲಿನಲ್ಲಿ ಹೇಳಿ ರೋದಿಸಿದ್ದಳು. ವರ್ಷಕ್ಕೋ ಎರಡು ವರ್ಷಕ್ಕೋ ಒಮ್ಮೆ ಅಳಿಯನ ಪರವಾನಗಿ ತೆಗೆದುಕೊಂಡು ಒಂದೆರಡು ದಿನದ ಮಟ್ಟಿಗೆ ಹೋಗಿ ನೋಡಿ ಬರುತ್ತಿದ್ದ ಚಿಕ್ಕಮ್ಮ ಚಿಕ್ಕಪ್ಪ ನಮ್ಮ ಸಂಬಂಧವನ್ನು ಕಳೆದುಕೊಳ್ಳಲಿಲ್ಲ. ಆದರೂ ಮಾತಿಗೆ ಕೂತರೆ ಪಾರ್ವತಿಯ ವಿಷಯವೇ ಮುಂದಾಗಿ ಎಲ್ಲರೂ ನೋವಿನಲ್ಲಿ ವಿಲಗುಟ್ಟುವುದು ಏಕೆಂದು ಮಾತು ಕಡಿಮೆಯಾಯ್ತು. ಉಣ್ಣಲು ಉಡಲು ಯಾವ ತಾಪತ್ರಯವೂ ಇರದ ಅವರು ಮೌನವಾಗಿ ಕೂತು ಉಂಡೆದ್ದು ಬರಲು ಯಾಕಷ್ಟು ದೂರ ಹೋಗಬೇಕೆನ್ನುವ ಉತ್ತರ ಹೊಳೆಸಿಕೊಂಡು ನೆಪಮಾತ್ರದ ನೆಂಟರಾಗಿಬಿಟ್ಟರು. ಅಮ್ಮ ಮಾತ್ರ ತಾನು ಬದುಕಿರುವಷ್ಟು ದಿನ ಯಾರಿಗೂ ಹೆದರಿ ಮಗಳ ಸಂಬಂಧ ಕಡಿದುಕೊಳ್ಳಲಾರೆನೆಂದು ಅವರೆಕಾಯಿ ಕಾಲದಲ್ಲಿ ಕೆಜಿಗಟ್ಟಲೆ ಅವರೆ ಬಿಡಿಸಿ ಗಂಟುಕಟ್ಟಿಕೊಂಡು ಪಾರ್ವತಿಯ ಮನೆಗೆ ಹೋಗಿ ಕೊಟ್ಟು ಒಪ್ಪೊತ್ತು ಊಟ ಮುಗಿಸಿಯೇ ಬರುತ್ತಿದ್ದಳು. ಆ ದಾಷ್ಟಿಕ, ಮಗಳ ಮನೆ ನನಗೂ ಹಕ್ಕಿದೆ ಎನ್ನುವ ಧೈರ್ಯ ಚಿಕ್ಕಮ್ಮನಿಗೆ ಒಲಿಯಲೇ ಇಲ್ಲ. ಸೈಲೂ ಊಟಕ್ಕೆ ತಟ್ಟೆಯಿಟ್ಟು ರೆಡ್ಡಿಯನ್ನು ಕರೆಯಲು ಬಂದವಳೇ ಬೀದಿಕಂಬದ ಬೆಳಕಿನಲ್ಲೂ ಗುರುತಿಸಬಹುದಾಗಿದ್ದ ಅವನ ಒದ್ದೆ ಕೆನ್ನೆಯನ್ನು ಕಂಡು ಅಚ್ಚರಿಪಟ್ಟಳು. ” ಇದೇನಿದು…ಮುಖವೆಲ್ಲಾ ಒದ್ದೆ. ಕಣ್ಣು ಕೆಂಪುಗಟ್ಟಿದೆ.ಆರಾಮಿಲ್ವಾ?” ಎನ್ನುತ್ತಾ ಸೆರಗಿನ ಅಂಚು ತೆಗೆದು ಮುಖವೊರೆಸಿ ಅವನ ಜೊಂಪೆಕೂದಲ ಮೇಲೆ ಕೈಯಾಡಿಸಿದಳು. ಅವನು ಅವಳನ್ನು ನೋಡಲು ಬಂದಾಗಲೇ ಒಂದು ಸಣ್ಣ ರಿಕ್ವೆಸ್ಟು ಎನ್ನುತ್ತಾ, ” ಮನೆಯಿಂದಾಚೆಗೆ ಚೂಡಿದಾರ್, ಇನ್ನೊಂದು ಮತ್ತೊಂದು ಹಾಕಿದ್ರೂ ಪರವಾಗಿಲ್ಲ.ಆದರೆ ಮನೆಯಲ್ಲಿ ಸೀರೆ ಉಟ್ಟರೆ ನನಗೆ ಬಹಳ ಖುಷಿ ” ಅಂದಿದ್ದ. ಸರ್ಕಾರಿ ಕೆಲಸ. ಆರಡಿ ಆಳು. ಒಳ್ಳೆ ಮನೆತನ.‌ಭೂಮಿಯೂ ಇದ್ದವರು. ಮನೇಲಿ ಸೀರೆ ಉಡಬೇಕು ಅಂದ ಮಾತ್ರಕ್ಕೆ ಬೇಡ ಅನ್ನಲಾದೀತೆ? ಹು ಅನ್ನು ಅಂತ ಸೈಲೂ ಅಮ್ಮನ ಒತ್ತಾಯ. ಸೈಲೂ ಹೂ ಅಂದ ತಿಂಗಳಿಗೇ ಮದುವೆ. ಮೂರು ವರ್ಷದೊಳಗೆ ಇಬ್ಬರು ಮಕ್ಕಳು. ಕಷ್ಟ ಅಂತನಿಸದ ಸಹಜ ಸಂಸಾರ. “ಸೈಲೂ ಒಂದು ಚೇರ್ ತಂದು ಇಲ್ಲೇ ಕೂರು. ಒಂದು ಚಿಕ್ಕ ತೊಂದರೆ…ನೀನಾದ್ರೆ ಏನಾದ್ರು ಪರಿಹಾರ ಹೇಳಬಹುದು” ಅಂದ. ಅವಳು ಮಕ್ಕಳಿಗೆ ಬಡಿಸಿಕೊಟ್ಟು, ತಿನ್ತಾ ಇರಿ. ಹತ್ತು ನಿಮಿಷ ಬಂದೆ ಅಂತ ಬಾಗಿಲು ಮುಂದೆ ಸರಿಸಿ ಬಂದಳು. ರಾತ್ರಿ ಹೊತ್ತು ಎಲ್ಲರೂ ಬಾಗಿಲು ಜಡಿದು, ಮನೆಯೊಳಗೆ ಟಿವಿ ನೋಡುತ್ತಾ ಊಟ ಮಾಡುವ ಸಮಯ. ನಾವಿಲ್ಲಿ ಮಾತಾಡಿಕೊಂಡರೂ ಕೇಳಿಸಿಕೊಂಡರೆ ಎನ್ನುವ ಅನುಮಾನಕ್ಕೆ ಆಸ್ಪದವೇ ಇಲ್ಲ. ಈಗೀಗ ಜನಕ್ಕೆ ಯಾರ ಮಾತಿನ ಮೇಲೂ ಅಂತಹ ಕುತೂಹಲ, ಆಸಕ್ತಿ ಉಳಿದಿಲ್ಲ. ಎಲ್ಲರೂ ಎಲ್ಲವನ್ನೂ ಟಾಂ ಟಾಂ ಮಾಡುವುದರಲ್ಲೇ ಇದ್ದಾರೆ ಹೊರತು, ಪಿಸುಮಾತಿಗೆ ಕಿವಿಗೊಡಲು ಯಾರಿಗೂ ಪುರುಸೊತ್ತಿಲ್ಲ ಎನಿಸಿತು ಅವಳಿಗೆ. ” ಈಗ… ನಮ್ಮ ಪಾರ್ವತಿ ತರಹಾನೇ ಒಬ್ಬಳು ಹೆಣ್ಣುಮಗಳನ್ಕೋ. ಅವಳ ಮಗಳಿಗೆ ಮದುವೆ ನಿಶ್ಚಯವಾಗಿದೆ. ಅಣ್ಣನಿಗೆ ವಿಷಯ ತಿಳಿಸಲು ಕೂಡ ಯಾವುದೋ ಸಮಸ್ಯೆ ಅಡ್ಡವಾಗಿ, ಮಗಳ ಕೈಲಿ ವಾಟ್ಸಪ್ ಮೆಸೇಜ್ ಮಾಡ್ಸಿದ್ದಾಳೆ. ಅತ್ತಿಗೆಗೆ ವಿಷಯ ತಿಳಿದ್ರೆ ಏನೋ ಎಡವಟ್ಟು ಕಾದಿದೆ ಬೇರೆ. ಈಗ ಅಣ್ಣನಾದೋನು ಏನು ಮಾಡ್ತಾನೆ? “ ” ನಿಮ್ಮಂತೋನಾದ್ರೆ ಕೈಲಾದ ಸಹಾಯ ಮಾಡ್ತಾನೆ. ಗುಟ್ಟಾಗಿ ಮದುವೆಗೆ ಹೋಗಿ ಬರ್ತಾನೆ. ಇಲ್ಲಾಂದ್ರೆ ತನ್ನ ಸ್ಥಿತಿ ಹೀಗ್ಹೀಗೆ ಅಂತ ತಂಗಿಗೆ ಫೋನ್ ಮಾಡಿಯಾದ್ರೂ ಸಮಾಧಾನ ಹೇಳ್ತಾನೆ” ” ಆ ಮೆಸೇಜ್ ಈಗ ನಂಗೇ ಬಂದಿದೆ. ಈಗ ನಾನು ಫೋನ್ ಮಾಡಿ ನನ್ನ ಕೈಲಾದ ಸಹಾಯ ಮಾಡ್ತೀನಿ ಅಂತೀನಿ. ಆಗ?” ” ಮಾಡಿ. ಆದರೆ ಈಗ ಮೆಸೇಜ್ ಕಳ್ಸಿರೋದು ಯಾರು?” ” ಯಾರೋ ಬ್ರಾಮಿನ್ಸ್… ಗೋತ್ರ ಅಂತೆಲ್ಲಾ ಇತ್ತು. ನಮ್ ಫ್ರೆಂಡ್ ವಿಶ್ವನಾಥನ್ನ ಕೇಳಿದ್ದಕ್ಕೆ ಬ್ರಾಮಿನ್ಸ್ ಗೋತ್ರ. ನಮ್ಕಡೆನೂ ಅದೇ ಗೋತ್ರದವರಿದ್ದಾರೆ ಅಂದ” ” ಮಿಸ್ಸಾಗಿ ಮೆಸೇಜು ನಿಮಗೆ ಬಂದಿರಬೋದು. ಅದಕ್ಯಾಕೆ ಇಷ್ಟು ಒದ್ದಾಟ?ಒಂದ್ಸಲ ಫೋನ್ ಮಾಡಿ. ಆಗಿದ್ದಾಗ್ಲಿ. ಈಗ ಊಟಕ್ಕೆ ಬನ್ನಿ” ಅಂದು ಹೊರಟಳು. ಊಟಕ್ಕೆ ಮೊದಲು ಇದನ್ನ ನೇರ ಮಾಡ್ತೀನಿ ಅಂದುಕೊಳ್ತಾ, ಪ್ರಕಾಶ್ ರೆಡ್ಡಿ ವೈಶಾಲಿ ನಂಬರ್ಗೆ ಕಾಲ್ ಮಾಡಿದ. ಅತ್ತಲಿಂದ ಗಂಡಸಿನ ದನಿ. ” ಇಲ್ಲ ಸರ್. ಅದು ರಾಂಗ್ ನಂಬರ್ ಇರಬೇಕು. ನಮಗೆ ಪ್ರಕಾಶ್ ರೆಡ್ಡಿ ಅಂತ ಯಾರೂ ಪರಿಚಯ ಇಲ್ಲ. ನಮಗೆ ಯಾವ ಸಹಾಯನೂ ಬೇಡ. ಪ್ಲೀಸ್… ಮೆಸೇಜ್ ಮತ್ತೆ ನಂಬರ್ ಡಿಲಿಟ್ ಮಾಡಿ. ಅವರು ಯಾರೋ ಅಂದ್ಕೊಂಡು ನಿಮಗೆ ಮೆಸೇಜ್ ಮಾಡಿದಾರೆ. ಸಾರಿ ಸರ್… ಮತ್ತೆ ಕಾಲ್ ಮಾಡೋಕೆ ಹೋಗ್ಬೇಡಿ. ಗುಡ್ ನೈಟ್ ಸರ್. ಥ್ಯಾಂಕ್ಯೂ” ಅನ್ನುತ್ತಾ ಕಾಲ್ ಕಟ್ ಮಾಡಿದ. *************************************************

ಒಂದು ತಪ್ಪು ಗಂಟು Read Post »

ಕಥಾಗುಚ್ಛ

ನಂಬಿಕೆ : ಮರು ಪ್ರಶ್ನೆ

ಸಣ್ಣ ಕಥೆ  ನಂಬಿಕೆ : ಮರು ಪ್ರಶ್ನೆ ರೇಷ್ಮಾ ನಾಯ್ಕ, ಶಿರಸಿ ಯಾರು ಒಳ್ಳೆ ಕೆಲ್ಸ ಮಾಡ್ತಾರೋ ಅವ್ರ ಪರ ದೇವ್ರು ನಿಂತಿರ್ತಾನೆ ಯಾವುದೇ ರೀತಿಲಿ ಸಮಸ್ಯೆಗಳಿಗೆ ಪರಿಹಾರಾನೂ ಸೂಚಿಸುತ್ತಾನೆ ಎಂದ ಮಾತಿಗೆ;  ಮಗಳು , ” ಹಾಗಾದ್ರೆ ಜಗತ್ತಿಗೆ ಕರೋನ ಬಂದಿದೆ ಇಷ್ಟೆಲ್ಲ ಕಷ್ಟ ಪಡ್ತಿದೀವಿ ಶಾಲೆಗೂ ಹೋಗೋಕಾಗ್ತಿಲ್ಲ  ಯಾಕಮ್ಮ ದೇವ್ರು ಪರಿಹಾರಾನೇ ಸೂಚಿಸ್ತಿಲ್ಲ?”  ಎಂದಳು. ಕಂದಾ, ” ದೇವ್ರು ಅನ್ನೋದು ಒಂದು ನಂಬಿಕೆ , ಧೈರ್ಯ. “ ನಿಂಗೆ ಜ್ವರ ಬಂದಾಗ ಹೆದ್ರಬೇಡ ನಾವ್ ನಿಂಜೊತೆಗೆ ಇರ್ತೀವಿ. ಹಾಸ್ಪಿಟಲ್ ಗೂ ಹೋಗ್ಬಂದಿವಿ. ನಿಂಗೇನು ಆಗಲ್ಲ ಅಂದಾಗ ;  ನಿಂಗೆ ಬಂದಿರೋ ಜ್ವರ ಸ್ವಲ್ಪ ಕಡಿಮೆ ಆದ ಹಾಗೆ ಅನ್ನಿಸುತ್ತಲ್ಲ….  ಹಾಗೆ, ಮತ್ತೂ ಇಲ್ಲಿ ”  ಜ್ವರ ಕಡಿಮೆ ಯಾಗದಿದ್ರೂ ನಾವ್ ಕೊಡೊ ಭದ್ರತೆ ಕೆಲ್ಸ ಮಾಡುತ್ತೆ ” ಎಂದೆ ಹಾಗಾದ್ರೆ , ಒಂದ್ ಕೆಲ್ಸ ಮಾಡ್ತಿನಮ್ಮ ;  ” ದೇವಸ್ಥಾನಕ್ಕೆ ನಾವಿಬ್ಬರೂ ಹೋದ ಹಾಗೆ.. ಚಿತ್ರ ಬಿಡಿಸ್ತಿನಮ್ಮ … ಆಗ ನಾವು ಅಲ್ಲಿಗೆ ಹೋದ ಹಾಗೆ …. ಯಾಕಂದ್ರೆ ದೇವ್ರು ಮನಸಿನ ನಂಬಿಕೆ ಅಲ್ವಾ ”  ಅಂದಳು ಈಗ ಉತ್ತರಿಸಲಾಗದೆ ತಡವರಿಸುವ ಸರದಿ ನನ್ನದಾಯ್ತು.. *******************************************

ನಂಬಿಕೆ : ಮರು ಪ್ರಶ್ನೆ Read Post »

ಕಥಾಗುಚ್ಛ

ಸುಳಿಗಾಣ

ಸಣ್ಣ ಕತೆ. ಸುಳಿಗಾಣ ಶೋಭಾ ನಾಯ್ಕ .ಹಿರೇಕೈ ರಾತ್ರಿಯಿಡಿ ನಿದ್ದೆಯಿಲ್ಲದೆ ಕೆಂಡದುಂಡೆಯಾದ ಕಣ್ಣುಗಳನ್ನುಜ್ಜಿಕೊಂಡು ಹಾಸಿಗೆಯಿಂದೆದ್ದ ಮಾದೇವ ರೂಢಿಯಂತೆ ಕೊಟ್ಟಿಗೆಯ  ಕಡೆ ಕಣ್ಣು ಹಾಯಿಸಿದ.  ಉಕ್ಕಿ ಬಂದ ಸಿಟ್ಟು, ಅಳು ಎಲ್ಲವನ್ನೂ ನುಂಗಿಕೊಂಡು ” ಛೇ.. ”  ಎಂದು ಬಲಗಾಲನ್ನೆತ್ತಿ ದೊಪ್ಪೆಂದು  ನೆಲಕ್ಕೆ ಬಡಿದವನೆ, ಏನೋ ತೀರ್ಮಾನ ಮಾಡಿದವನಂತೆ ತಂಗಿಯನ್ನಾದರೂ  ‘ವಿದ್ಯಾಗಿರಿ’ ಹೈಸ್ಕೂಲ್ ಮೆಟ್ಟಿಲ ಹತ್ತಿಸಿಯೇ ತೀರಬೇಕೆಂದು, ತನಗೆ ಕಲಿಸಿದ ಮಾಸ್ತರರ ಮನೆಯತ್ತ ಹೋಗುತ್ತಿದ್ದಾಗ, ” ಈ ಮಾಸ್ತರರ ಮನೆಯಲ್ಲಿ ಎಲ್ಲರನ್ನೂ ಒಳ ಸೇರಿಸಿ ಬಿಡ್ತಾರಪ್ಪ. ನಮಗೆ ಕೊಡೋ ಲೋಟದಲ್ಲೇ .. ಅವರಿಗೂ ಚಾ ಕೊಡ್ತಾರೆ.  ಶೀ… ಹೇಸಿಗೆ.”ಎಂದು ಕಬ್ಬಿನ ಗದ್ದೆಯ  ರವದಿಯ ಸಂದಿಯಿಂದ ಕೇಳಿ ಬಂದ ಮಾತು ಗಾಯದ ಮೇಲೆಯೇ ಬರೆ ಎಳೆದಂತಾದರೂ  ಎದೆಗುಂದದ ಅವನ ಹೆಜ್ಜೆಗಳು ಮತ್ತೂ ಬಿರುಸಾದವು. ತಮ್ಮೂರ ಶಾಲೆಯಲ್ಲೇ ಏಳನೇ ತರಗತಿ ಮುಗಿಸಿ ಇನ್ನೇನು ಹೈಸ್ಕೂಲ್  ಹತ್ತಬೇಕಾದ ಅವನಿಗೆ , ಕುಡಿತದಿಂದ   ಸಾಲ ಮಾಡಿ ಮಾಡಿ ಸತ್ತ ಅಪ್ಪನ ಸಾವಿನಿಂದ ಆಘಾತವಾಯಿತು. ಇದ್ದ ತುಂಡು ಹೊಲ ಪಂಚಾಯ್ತಿ ಕಟ್ಟೆಯಲ್ಲಿ ಸಾಲ ಕೊಟ್ಟವರ ಪಾಲಾಯಿತು ಎರಡು ವರುಷಗಳವರೆಗೆ. ಓದುವ ಆಸೆ ಕೈಬಿಟ್ಟ ಹುಡುಗ  ಹತ್ತಾರು ಮನೆಯ ದನಗಾವಲಿಗೆ ನಿಂತು,  ಮನೆಯ ಚಿಕ್ಕ ಪುಟ್ಟ ಖರ್ಚು ನಿಭಾಯಿಸಿ  ಮನೆಯ ಪುಟ್ಟ ಯಜಮಾನನಾದಾಗ, ಅವ್ವಳ ದಿನ ನಿತ್ಯದ ಅಳು ನಿಂತದ್ದು ಗಮನಿಸಿದ ಹುಡುಗ ಹೇಗಾದರೂ ಮಾಡಿ ತನ್ನ ಹೊಲವನ್ನು ತಮ್ಮದಾಗಿಸಿಕೊಳ್ಳಬೇಕೆಂದುಕೊಂಡ. ಇದೇ ವೇಳೆಗೆ  ಇವನ ಸಾಲದೊಡೆಯ  ತನ್ನದೆರಡು ಹೋರಿ ಕರುಗಳನ್ನು  ಸಾಕಿಕೊಳ್ಳಲು ಅನುಮತಿ ಕೊಟ್ಟು ಬಿಟ್ಟಾಗ ಹುಡುಗನಿಗೆ ಸ್ವರ್ಗಕ್ಕಿನ್ನು ಒಂದು ಗೇಣೂ ಅಂತರವಿಲ್ಲ ಅನ್ನಿಸಿಬಿಟ್ಟಿತು. ದಿನವೂ ತಾನೇ ಮೇಯಿಸಿಕೊಂಡು ಬರುವ ಹೋರಿ ಕರುಗಳೀಗ ತನ್ನವೇ ಆಗುತ್ತಿವೆ.   ಸಂತೋಷಕ್ಕೆ ಪಾರವಿಲ್ಲದೆ ಹುಲ್ಲು,  ಸೊಪ್ಪು, ಸದೆ, ಅಕ್ಕಚ್ಚು, ನೀರು ಎಂದು ಮಕ್ಕಳಂತೆ ಪಾಲನೆ ಮಾಡಿದ. ರಾಮ , ಲಕ್ಷ್ಮಣರೆಂದೂ ಹೆಸರೂ ಇಟ್ಟು ಬಿಟ್ಟ. ಬಿಸಿನೀರಿನಿಂದ ಮೈ ತೊಳೆದು  ಕಿವಿ ಚಟ್ಟೆ, ಮೂಗ ಹೊಳ್ಳೆಯೊಳಗೆಲ್ಲ ಸೇರಿ ಬಿಡುವ  ಉಣುಗನ್ನೂ ಬಿಡದೆ ತೆಗೆದು ಆರೈಕೆ ಮಾಡಿದ.ಎರಡು ವರುಷದೊಳಗೆ   ನೋಡಿದವರ ಕಣ್ಣು ಬೀಳುವಂತೆ  ಬೆಳೆದು ನಿಂತ ಹೋರಿಗಳೀಗ ಎತ್ತುಗಳಾಗೋ ಕಾಲ.  ಸುಳಿಗಾಣ ಕಟ್ಟಿ, ತಿದ್ದಿ ಗದ್ದೆ ಹೂಳಲು ರಾಮ , ಲಕ್ಷ್ಮಣರು ಸಿದ್ಧವಾಗುತ್ತಿರುವ ಸುದ್ದಿ   ಸಾಲ ದೊಡೆಯನಿಗೆ ( ಹೋರಿಗಳೊಡೆಯನೂ )   ತಲುಪಿಯೇ ಬಿಟ್ಟಿತ್ತು. ಮರು ದಿನವೇ ಹೊಸದೆರಡು ಜೊತೆ ದಾಬದ ಕಣ್ಣಿಯೊಂದಿಗೆ ಬಂದ ಆತ  ರಾಮ ಲಕ್ಷ್ಮಣರ ಕತ್ತಿಗೆ ಬಿಗಿದು, ” ಮಾದ,  ನಮ್ಮನೆ ಕೊಟ್ಟಿಗೆ ಬೇರೆ ಮಾಡಾಯ್ತೋ.. ಜಾಗಕ್ಕೇನೂ ಬರ ಇಲ್ಲ ಈಗ.  ನಿನ್ ಲೆಕ್ಕಾಚಾರ ಮುಂದೆ ಮುಗಿಸಿದರಾತು, ಹ್ಯಾಗಾದರೂ ಸಗಣಿಗಿಗಣಿ ಬಳಸ್ಕಂಡಿಯಲ್ಲ ಇಷ್ಟು ದಿನ . ಹೈ.. ಹೈ.. ” ಎನ್ನುತ್ತಾ ಹೋರಿಗಳೆರಡನ್ನೂ ಎಳೆದುಕೊಂಡು ಹೊರಟೇ ಬಿಟ್ಟಾಗ , ಇತ್ತ ಮಾದೇವ ಎಚ್ಚರ ತಪ್ಪಿ ಬಿದ್ದ ಸುದ್ದಿ ಊರಲ್ಲೆಲ್ಲ ಹಬ್ಬಿ   ಎಲ್ಲರೂ  ‘ ಅಯ್ಯೋ’ ಅಂದಿದ್ದು ಬಿಟ್ಟರೆ  ಮತ್ತೇನೂ ಆಗಲೇ ಇಲ್ಲ . ಮನೆಯತ್ತ ಬರುತಿದ್ದ ಮಾದೇವನ ಕಂಡಾಗ  ಅವನ ಕತೆ ನೆನಪಿಸಿ ಕಣ್ಣಂಚು ಒದ್ದೆ ಮಾಡಿಕೊಂಡ ಮಾಸ್ತರರ ಹೆಂಡತಿ  ಚಹಕ್ಕಿಡಲು ಒಳಗೆ ಹೋದಳು. ***************************************************

ಸುಳಿಗಾಣ Read Post »

You cannot copy content of this page

Scroll to Top