ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – ೨೦೨೦

ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – ೨೦೨೦ ಬಿದಲೋಟಿ ರಂಗನಾಥ್ ಮತ್ತು ಡಾ. ಶೋಭಾ ನಾಯಕ್ ಗೆ ೨೦೨೦ ರ ಸಾಲಿನ ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ರಾಜ್ಯಮಟ್ಟದಲ್ಲಿ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿತ್ತು. ಈ ಸಲ ಒಟ್ಟು ೫೬ ಹಸ್ತಪ್ರತಿಗಳು ಬಂದಿದ್ದವು. ಕೊನೆಯ ಹಂತದಲ್ಲಿ ಅಂಕಗಳು ಸಮ ಬಂದ ಕಾರಣ ಇಬ್ಬರು ಕವಿಗಳ ಹಸ್ತಪ್ರತಿಗಳನ್ನು ಆಯ್ಕೆ ಮಾಡಲಾಗಿದೆ. ಉತ್ತರ ಕನ್ನಡ ಮೂಲದ ಶೋಭಾ ನಾಯಕ್ ರ ‘ಶಯ್ಯಾಗೃಹದ ಸುದ್ದಿಗಳು’ ಮತ್ತು ತುಮಕೂರು ಜಿಲ್ಲೆಯ ಮಧುಗಿರಿಯ ಬಿದಲೋಟಿ ರಂಗನಾಥರ ‘ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ’ ಹಸ್ತಪ್ರತಿಗಳು ಈ ಸಲದ ಕಾವ್ಯಪ್ರಶಸ್ತಿಗೆ ಆಯ್ಕೆಯಾಗಿವೆ. ಹಿರಿಯ ಕವಿಗಳಾದ ಸತೀಶ ಕುಲಕರ್ಣಿ ಮತ್ತು ಈಶ್ವರ್ ಹತ್ತಿ ತೀರ್ಪುಗಾರ ರಾಗಿದ್ದರು ವಿಜೇತ ಕವಿಗಳಿಬ್ಬರಿಗೂ ಪ್ರತ್ಯೇಕವಾಗಿ ೫,೦೦೦ ರೂ. ನಗದು ಬಹುಮಾನ ಮತ್ತು ಫಲಕಗಳನ್ನು ಡಿಸೆಂಬರ್ ತಿಂಗಳು ಕೊಪ್ಪಳದಲ್ಲಿ ನಡೆಯುವ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ವಿತರಿಸಲಾಗುವುದೆಂದುಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಮತ್ತು ತಳಮಳ ಪ್ರಕಾಶನದ ಪರವಾಗಿ ಮಹೇಶ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. **************************

ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – ೨೦೨೦ Read Post »

ಇತರೆ

ಕನ್ನಡ, ಕನ್ನಡವೇ ಆಗಿರಲಿ

ಗೌರಿ.ಚಂದ್ರಕೇಸರಿ. ಭಾಷೆಯ ಮೇಲೆ ಗಾಢವಾದ ಪ್ರಭಾವ ಬೀರುವ ಸಂಸ್ಕøತಿಯು ಭಾಷೆಯ ಹರಿವನ್ನು ಬದಲಾಯಿಸುತ್ತ ಹೋಗುತ್ತದೆ. ಕೊರಕಲಿನಗುಂಟ ನೀರು ಹರಿಯುವಂತೆ ಸಮಯ ಸಂದರ್ಭಕ್ಕೆ ತಕ್ಕಂತೆ ಹೊಸತನವನ್ನು ಪಡೆಯುತ್ತಲೇ ಹೋಗುತ್ತದೆ. 2500 ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ನಮ್ಮದು. ಬದಲಾವಣೆ ಆರೋಗ್ಯಕರವಾದದ್ದೇ. ಆದರೆ ಪರಕೀಯ ಶಬ್ದಗಳು ಕನ್ನಡದೊಡನೆ ಮಿಳಿತಗೊಂಡು ಹಾಡಿನ ರೂಪದಲ್ಲಿ ಕಿವಿಗೆ ಬೀಳುತ್ತಿದ್ದರೆ ಕೇಳಲು ಅಸಹನೀಯವೆನಿಸುತ್ತದೆ.      ತಳಹದಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಓದುವ ಇಂದಿನ ಮಕ್ಕಳು ಕನ್ನಡದ ಮೇಲೆ ಪ್ರಭುತ್ವವನ್ನು ಸಾಧಿಸಲು ಹೇಗೆ ಸಾಧ್ಯ? ಸರಳಗನ್ನಡದ ಎಷ್ಟೋ ಶಬ್ದಗಳ ಅರ್ಥವೇ ಗೊತ್ತಿಲ್ಲದ ಇಂದಿನ ಯುವಜನಾಂಗ ಕನ್ನಡ ಸಾಹಿತ್ಯವನ್ನು ಎಷ್ಟರ ಮಟ್ಟಿಗೆ ಅರ್ಥೈಸಿಕೊಳ್ಳಲು ಸಾಧ್ಯ? ಮನೋರಂಜನೆ ನೀಡುವಲ್ಲಿ ಅಗ್ರ ಸ್ಥಾನವನ್ನು ಹೊಂದಿರುವ ಸಿನಿಮಾ, ದೂರದರ್ಶನಗಳು ಇಂದಿನ ಯುವಜನಾಂಗದ ಆಶಯಕ್ಕೆ ಬದ್ಧರಾಗಿಬೇಕಾದ ಅನಿವಾರ್ಯತೆ ಬಂದೊದಗಿದೆ. ಅರ್ಥವಿಲ್ಲದ ಶಬ್ದಗಳು ಸಿನಿಮಾ ಸಾಹಿತ್ಯದಲ್ಲಿ ಜಾಗ ಪಡೆದು ಕನ್ನಡವೊಂದು ಕಲಬೆರಕೆ ಭಾಷೆಯಾಗಿ ಬೆಳೆಯುತ್ತಿದೆ. ವಿಪರ್ಯಾಸವೆಂದರೆ ಇಂತಹ ಹಾಡುಗಳೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತವೆ. ಬುದ್ಧಿಜೀವಿಗಳಾದ ಸಾಹಿತಿಗಳು, ಕವಿಗಳೂ ಇದಕ್ಕೆ ಒಗ್ಗಿ ಹೋಗಿದ್ದಾರೆ.      ಕನ್ನಡಕ್ಕೊಂದು ಹೊಸ ಕಾಯಕಲ್ಪ ಕೊಡುವ ಪ್ರಯತ್ನ ಎಂಬ ಯುವ ಜನಾಂಗದ ಅಂಬೋಣವನ್ನು ಹಿಂದಿನ ತಲೆಮಾರಿನವರು ಒಪ್ಪುವುದಾದರೂ ಹೇಗೆ? ಕನ್ನಡಕ್ಕೊಂದು ತನ್ನದೇ ಆದಂತಹ ಸೊಗಡಿದೆ. ಇಂಪು,ಕಂಪಿದೆ. ಕನ್ನಡದ ಗಂಧ ಗಾಳಿ ಇಲ್ಲದವರು ತಿಣುಕಾಡಿ ಬರೆಯುವ ಹಾಡುಗಳೇ ಇಂದು ಚಿತ್ರರಂಗದಲ್ಲಿ ಕೇಳಿಬರುತ್ತಿವೆ. ನಮ್ಮ ಅಕ್ಕ-ಪಕ್ಕದ ಮೂರ್ನಾಲ್ಕು ಭಾಷೆಯ ಶಬ್ದಗಳನ್ನು ಕಡ ಪಡೆದು ಒಂದು ಕವನವನ್ನು ಗೀಚಿ ಅದಕ್ಕೊಂದು ಕಿವಿಗಡಚಿಕ್ಕುವ ಸಂಗೀತವನ್ನು ಅಳವಡಿಸಿಬಿಟ್ಟರೆ, ಬೆಳಗಾಗುವುದರಲ್ಲಿ ಅದು ಚಿಕ್ಕ ಮಕ್ಕಳಾದಿಯಾಗಿ ಎಲ್ಲರ ಬಾಯಲ್ಲೂ ಕೇಳಿಬರುತ್ತದೆ.      ಹೊಸತನವನ್ನು ತರುವ ಹೆಸರಿನಲ್ಲಿ ಕನ್ನಡವನ್ನು ಕಂಗ್ಲೀಷ್ ಮಾಡುವುದಾಗಲಿ ಇಲ್ಲ, ಬೀದಿಯಲ್ಲಾಡುವ ಟಪೋರಿ ಭಾಷೆಯನ್ನು ಎತ್ತಿಕೊಂಡು ಕನ್ನಡಕ್ಕೆ ಸುರಿಯುವುದನ್ನು ಮಾಡಿದರೆ ಅದೊಂದು ಬರಹವಾಗಲಿ ಅಥವಾ ಹಾಡಾಗಲಿ ಆಗಲಾರದು. ಕನ್ನಡವನ್ನು ಕನ್ನಡ ಭಾಷೆಯನ್ನಾಗಿಯೇ ಉಳಿಸುವದು ಇಂದಿನ ಪೀಳಿಗೆಯ ಜವಾಬ್ದಾರಿಯಾಗಿದೆ. ಅನೇಕ ಪ್ರಕಾರಗಳಲ್ಲಿರುವ ಕನ್ನಡದ ಕೃತಿಗಳನ್ನು ಓದಿದಾಗ ಕನ್ನಡದ ಶ್ರೀಮಂತಿಕೆಯ ಅರಿವಾಗುತ್ತದೆ, ನಮ್ಮ ಶಬ್ದ ಸಂಗ್ರಹ ಬೆಳೆಯುತ್ತದೆ. ಹೊರಹೊಮ್ಮುವ ಭಾವನೆಗಳು ಕನ್ನಡಮಯವಾಗಿರುತ್ತವೆ ಆಗ ಮಾತ್ರ ಕನ್ನಡ ಭಾಷೆ ಕನ್ನಡವಾಗಿರಲು ಸಾಧ್ಯ. *******                                                                                    .                         .

ಕನ್ನಡ, ಕನ್ನಡವೇ ಆಗಿರಲಿ Read Post »

ಇತರೆ, ಜೀವನ

ಭೂತಾಯಿಗೆ ನಮನ

ಲೇಖನ ಭೂತಾಯಿಗೆ ನಮನ ರಾಘವೇಂದ್ರ ಈ ಹೊರಬೈಲು ಇವತ್ತು ರಾತ್ರಿಯೆಲ್ಲಾ ಎಚ್ರಾಗಿರ್ಬೇಕು, ಮಲಗ್ಬಿಟ್ಟಿಯೋ. ರಾತ್ರಿಯೆಲ್ಲ ಹಬ್ಬ ಮಾಡ್ಬೇಕು, ಹಬ್ಬದಾಗೆ ಎಚ್ರಾಗಿರ್ದೆ  ಹಂಗೆ ಮಲ್ಗಿದ್ರೆ ದೇವ್ರು ಶಾಪ ಕೊಡ್ತಾನೆ ಕಣೋ” ನಾನು ಚಿಕ್ಕ ಹುಡುಗನಾಗಿದ್ದಾಗ ನಮ್ಮಮ್ಮನಾಡಿದ ಮಾತುಗಳು ಎಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಕುಳಿತಿವೆ. “ಇದ್ಯಾವ ಹಬ್ಬನಪ್ಪ, ರಾತ್ರಿಯೆಲ್ಲ ಎಚ್ರಾಗಿರ್ಬೇಕಂತೆ” ಎಂದು ಗೊಣಗುಟ್ಟುತ್ತಾ ತೂಕಡಿಸುತ್ತಾ, ಅಮ್ಮನೋ ಅಪ್ಪನೋ ಹೇಳ್ತಾಯಿದ್ದ ಸಣ್ಣಪುಟ್ಟ ಕೆಲಸಗಳನ್ನು ಒಲ್ಲದ ಮನಸ್ಸಿನಿಂದ ನಿದ್ರೆಗಣ್ಣಿನಲ್ಲೇ ಮಾಡುತ್ತಾ, ಕೆಲವೊಮ್ಮೆ ಹೆಚ್ಚು ಕಡಿಮೆಯಾಗಿ, ಬೈಸಿಕೊಳ್ಳುತ್ತಾ ರಾತ್ರಿ ಕಳೆಯುತ್ತಿದ್ದ ಆ ದಿನಗಳನ್ನು ಮತ್ತು ಮಾರನೆ ದಿನ ಬೆಳ್ಳಂಬೆಳಗ್ಗೆ ಹೊಲದಲ್ಲಿ “ಅಚ್ಚಂಬ್ಲಿ ಅಳಿಯಂಬ್ಲಿ ಮುಚ್ಕಂಡ್ ತಿನ್ನೆ ಭೂಮ್ತಾಯಿ” ಎಂದು ಬೆಳೆಗಳಿಂದ ತುಂಬಿದ ಹೊಲದಲ್ಲಿ ಏನನ್ನೋ ಬೀರುತ್ತಾ, ಕೂಗುತ್ತಾ ಸಾಗುತ್ತಿದ್ದ ಅಪ್ಪನ ಧ್ವನಿಯನ್ನು ಮರೆಯಲು ಸಾಧ್ಯವೇ? ಸಾಂಸ್ಕೃತಿಕವಾಗಿ ಭಾರತವು ವಿಶ್ವದಲ್ಲೇ ಅತೀ ಶ್ರೀಮಂತ ರಾಷ್ಟ್ರ. ಹಬ್ಬ- ಹರಿದಿನಗಳ ವಿಷಯಕ್ಕೆ ಬಂದಿದ್ದೇ ಆದರೆ ನಮ್ಮಷ್ಟು ವಿವಿಧತೆ ಮತ್ತು ವಿಶೇಷತೆಯನ್ನು ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಒಂದೊಂದು ಹಬ್ಬವೂ ಅದರದೇ ವಿಶೇಷತೆ ಮತ್ತು ಪ್ರಾಮುಖ್ಯತೆಯಿಂದಾಗಿ ಗಮನ ಸೆಳೆಯುತ್ತದೆ. ಒಂದು ಕಾಲದಲ್ಲಿ ಭಾರತ ದೇಶದ ಹಬ್ಬಗಳೆಂದರೆ ಅವು ಭಕ್ತಿ, ಸಂಸ್ಕೃತಿ, ಬೆರೆಯುವಿಕೆ, ಸಂತೋಷಗಳ ಸಮ್ಮಿಲನವಾಗಿತ್ತು. ನಮ್ಮ ತಾತ ಮುತ್ತಾತಂದಿರೆಲ್ಲರೂ ಹಬ್ಬಗಳನ್ನು ಒಂದು ಭಯಕ್ಕಾಗಿ, ಭಕ್ತಿಗಾಗಿ, ಎಲ್ಲರ ಒಳಿತಿಗಾಗಿ ಗಾಂಭೀರ್ಯದಿಂದ ಆಚರಿಸುತ್ತಿದ್ದರು. ಆದರೆ ಇಂದು ಎಲ್ಲಾ ಬುಡ ಮೇಲಾಗಿದೆ. ಉದಾಹರಣೆಗೆ ಹೇಳಬೇಕೆಂದರೆ, ಗಣೇಶನ ಹಬ್ಬ, ದೀಪಾವಳಿ, ಹೋಳಿ ಮುಂತಾದವು ತಮ್ಮ ಮೂಲ ಅರ್ಥ ಕಳೆದುಕೊಂಡು ಅನರ್ಥದತ್ತ ಸಾಗುತ್ತಿವೆ. ಭಯ-ಭಕ್ತಿಯಿಂದ, ನಿರ್ಮಲ ಮನಸ್ಸಿನಿಂದ ಆಚರಿಸುತ್ತಿದ್ದ ಗಣೇಶನ ಹಬ್ಬ ಇಂದು ಹೊಡೆದಾಟ, ಕಿತ್ತಾಟದ ಹಬ್ಬವಾಗಿದೆ. ಯಾರೂ ತಪ್ಪಾಗಿ ಭಾವಿಸದೇ ಸೂಕ್ಷ್ಮವಾಗಿ ಗಮನಿಸಿದ್ದೇ ಆದರೆ, ಹಲವೆಡೆ ಗಣೇಶನ ಹಬ್ಬದಲ್ಲಿ ಗಣೇಶನೇ ಕಾಣೆಯಾಗಿ, ಅಶ್ಲೀಲ ಆರ್ಕೆಸ್ಟ್ರಾ, ಕುಡಿತ, ಕುಣಿತ, ಐಟಂ ಸಾಂಗುಗಳದ್ದೇ ಮೆರವಣಿಗೆ ನಡೆಯುತ್ತಿದೆ. ರಾಷ್ಟ್ರ ಕವಿ ಕುವೆಂಪುರವರ “ಕಟ್ಟಕಡೆಯಲಿ ದೇವರ ಗುಡಿಯಲಿ ಪೂಜಾರಿಯೇ ದಿಟದ ನಿವಾಸಿ ದೇವರೇ ಪರದೇಸಿ” ಎಂಬ ಮಾತಿನಂತೆ “ಕಟ್ಟಕಡೆಯಲಿ ಗಣೇಶನ ಹಬ್ಬದಲಿ ಆರ್ಕೆಸ್ಟ್ರಾ ಐಟಂ ಸಾಂಗುಗಳು, ಕುಡುಕರ ಹುಚ್ಚು ಕುಣಿತವೇ ದಿಟದ ನಿವಾಸಿ, ಗಣೇಶನೇ ಪರದೇಸಿ” ಅಲ್ವಾ? ದೀಪಗಳಿಂದ ಅಲಂಕೃತವಾಗಿ ಮನಸ್ಸಿನ ದುಃಖ ಕಳೆದು ಎಲ್ಲರ ಬಾಳಿಗೂ ಹರಷದ ಬೆಳಕನ್ನು ನೀಡುವಂತ ಹಬ್ಬವಾಗಲಿ ಎಂದು ಆಚರಿಸುತ್ತಿದ್ದ ‘ದೀಪಾವಳಿ ಹಬ್ಬ’ ಇಂದು ತನ್ನ ಅರ್ಥವನ್ನೇ ಕಳೆದುಕೊಂಡು ಪಟಾಕಿ ಮುಂತಾದ ಇಡೀ ಜೀವಸಂಕುಲಕ್ಕೇ ಕಂಟಕಪ್ರಾಯವಾದ ಸಿಡಿಮದ್ದುಗಳ ಸುಡುವಿಕೆಯ ಆಡಂಬರದಲ್ಲಿ ಮುಳುಗಿಹೋಗಿದೆ. ಹೆಚ್ಚು ಸಿಡಿಮದ್ದು ಸುಟ್ಟವನದೇ ಅದ್ದೂರಿ ದೀಪಾವಳಿ ಆಚರಣೆ ಎಂಬಂತಾಗಿರುವುದು ಶೋಚನೀಯ. ಇಂಥ ಆಡಂಬರದ, ಅಂತಸ್ತಿನ ಪ್ರತೀಕದಂತಿರುವ ಹಬ್ಬಗಳೆಂದರೆ ಮೊದಲಿನಿಂದಲೂ ನನಗೆ ಅದೇನೋ ಅಸಡ್ಡೆ. ಆದರೆ ಇಂತಹ ಹಬ್ಬಗಳ ನಡುವೆಯೇ ಅಂದು ನನ್ನ ನಿದ್ರೆಗೆಡಿಸಿ, ಅಮ್ಮ- ಅಪ್ಪನ ಬೈಗುಳಕ್ಕೆ ಎಡೆಮಾಡಿದ್ದ ಹಬ್ಬ, ಸದ್ದು-ಗದ್ದಲವಿಲ್ಲದೆ, ಇಡೀ ಜೀವಸಂಕುಲದ ತಾಯಿ, ನಿಜ ದೇವತೆ ಭೂಮಿತಾಯಿಯನ್ನು ಪೂಜಿಸುವ ‘ಭೂಮಿ ಹುಣ್ಣಿಮೆ’ ಇಂದಿಗೂ ಅರ್ಥವತ್ತಾಗಿ ನಡೆಯುತ್ತಿರುವ ಹಬ್ಬ. ನಗರ ಪ್ರದೇಶದ ಅದೆಷ್ಟೋ ಜನರಿಗೆ ಅರಿವೂ ಇರದ, ಹಳ್ಳಿಗಾಡಿನ ರೈತಾಪಿ ವರ್ಗದವರು ಆಚರಿಸಿಕೊಂಡು ಬರುತ್ತಿರುವ ಪಕ್ಕಾ ಗ್ರಾಮೀಣ ಹಬ್ಬ. ಗಣೇಶನ ಹಬ್ಬವಾದ ಹೆಚ್ಚು ಕಡಿಮೆ ಒಂದು ತಿಂಗಳ ಅಂತರದಲ್ಲಿ ಬರುವ ಹುಣ್ಣಿಮೆಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಭೂಮಿ ಹುಣ್ಣಿಮೆಯನ್ನು ‘ಸೀಗೆ ಹುಣ್ಣಿಮೆ’ ಎಂದೂ ಕರೆಯಲಾಗುತ್ತದೆ. ಭತ್ತ, ಜೋಳ, ಅಡಿಕೆ ಮುಂತಾದ ಬೆಳೆ ತೆನೆಬಿಡುವ ಸಮಯವಿದು. ಅಂದರೆ ಬೆಳೆಗಳು ಗರ್ಭ ಧರಿಸುವ ಕಾಲ. ಅಂದರೆ ಭೂತಾಯಿಯು ಗರ್ಭವತಿಯಾಗುವ ಸುಂದರ ಗಳಿಗೆ. ಬೆಳೆಗಳನ್ನೇ ಗರ್ಭ ಧರಿಸಿದ ಭೂತಾಯಿಯೆಂಬ ಭಕ್ತಿಯಿಂದ ಪೂಜಿಸುವ ನಮ್ಮ ಹಳ್ಳಿಗರು ಭತ್ತದ ಸಸಿಗೋ ಅಥವಾ ಅಡಕೆ ಗಿಡಕ್ಕೋ ಅಥವಾ ಜೋಳದ ಗಿಡಕ್ಕೋ ಅಥವಾ ನಾವು ಬೆಳೆದ ಯಾವುದೋ ಬೆಳೆಗೋ ಸೀರೆ ಉಡಿಸಿ, ಹೂವಿನ ಹಾರ ಹಾಕಿ, ತಾಳಿಯನ್ನು ಕಟ್ಟಿ ಹೆಣ್ಣಿನಂತೆ ಸಿಂಗಾರ ಮಾಡಿ, ಹೊಲಗಳಲ್ಲಿ, ಊರುಗಳಲ್ಲಿ ಸಿಗುವ ನಾನಾ ತರದ ಸೊಪ್ಪು, ತರಕಾರಿ, ಗೆಡ್ಡೆ-ಗೆಣಸುಗಳನ್ನು ಹಿಂದಿನ ದಿನವೇ ತಂದು (ಸೊಪ್ಪು ಹೆರಕುವ ಶಾಸ್ತ್ರ ಎಂಬುದು ಅದರ ಹೆಸರು), ಇಡೀ ರಾತ್ರಿ, ಮನೆಮಂದಿಯೆಲ್ಲಾ ಎಚ್ಚರವಿದ್ದು, ಒಂದು ರೀತಿಯ ಜಾಗರಣೆಯನ್ನೇ ಆಚರಿಸಿ, ಬಗೆಬಗೆಯ ಅಡುಗೆ ಮಾಡಿ, ವಿಶೇಷವಾದ ಖಾದ್ಯ ತಯಾರಿಸಿ, ಸೂರ್ಯ ಉದಯಿಸುವ ಮುನ್ನವೇ ಮಾಡಿದ ಖಾದ್ಯ, ಪೂಜಾ ಪರಿಕರಗಳನ್ನು ತೆಗೆದುಕೊಂಡು, ಹೊಲಕ್ಕೆ ತೆರಳಿ, ಸಿಂಗರಿಸಿದ ಸಸಿಗೆ ನಾನಾತರಹದ ಖಾದ್ಯಗಳನ್ನು ಎಡೆಯಿಟ್ಟು, ಪೂಜಿಸಿ, ನಂತರ ಹೊಲದಲ್ಲಿರುವ ಬೆಳೆಗಳ ಮೇಲೆ ‘ಅಚ್ಚಂಬಲಿ’ (ಬೆಳೆಗಳ ಮೇಲೆ ಬೀರಲು ತಯಾರಿಸುವ ವಿಶೇಷ ಖಾದ್ಯ) ಬೀರುವುದರ ಮೂಲಕ ‘ಬಯಕೆ ಶಾಸ್ತ್ರವನ್ನು’ ಮಾಡುತ್ತಾರೆ. ಆಮೇಲೆ ಮನೆಮಂದಿಯೆಲ್ಲ ಹೊಲದಲ್ಲಿಯೇ ಊಟಮಾಡಿಕೊಂಡು ವಾಪಾಸಾಗುವ, ಭೂತಾಯಿಯನ್ನು ಭಕ್ತಿಪೂರ್ವಕವಾಗಿ ಪೂಜಿಸುವ ಮನಮುಟ್ಟುವ ಹಬ್ಬ . ಹೀಗೆ ಆಚರಿಸುವ ಈ ವಿಶೇಷವಾದ ಹಬ್ಬ ಮನೆ-ಮನೆಯ ಹಬ್ಬವಾಗುವುದರ ಬದಲು ಎಲ್ಲೋ ಒಂದಿಷ್ಟು ಗ್ರಾಮಗಳಿಗೆ ಸೀಮಿತವಾಗಿರುವುದು ದುರಂತ. ಬರುಬರುತ್ತಾ ಜನರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಾ, ಕೃಷಿ ಜಮೀನು ಕೂಡಾ ದೊಡ್ಡ ದೊಡ್ಡ ಕಟ್ಟಡಗಳಿಗೆ ಜಾಗ ಬಿಟ್ಟುಕೊಟ್ಟು, ತಮ್ಮ ವಿಸ್ತಾರವಾದ ಹರವನ್ನು ಕಳೆದುಕೊಂಡಿವೆ. ಹಿಂದಿನ ದಿನಗಳ ನಿಷ್ಠೆ ಇಂದು ಈ ಹಬ್ಬದಲ್ಲೂ ಕಡಿಮೆಯಾಗುತ್ತಿರುವುದು ಸತ್ಯ. ಆದರೆ ಇಂತಹ ವಿಶೇಷ ಮತ್ತು ಭೂತಾಯಿಯನ್ನು ಪೂಜಿಸುವ ಹಬ್ಬವು ಸರ್ವರ ಹಬ್ಬವಾಗಲಿ. ಅದರ ಜೊತೆಗೆ ಅರ್ಥ ಕಳೆದುಕೊಂಡು ಎತ್ತೆತ್ತಲೋ ಸಾಗುತ್ತಿರುವ ಉಳಿದ ಹಬ್ಬಗಳೂ ಅರ್ಥಪೂರ್ಣವಾಗಿ ಭಕ್ತಿಯ, ಸ್ನೇಹದ, ಸಂಬಂಧದ, ಬೆರೆಯುವಿಕೆಯ ಧ್ಯೋತಕವಾಗಲಿ, ಅದರ ಮೂಲಕ ವೈವಿಧ್ಯಮಯ ಸಂಸ್ಕ್ರತಿಯ ನಮ್ಮ ದೇಶ ಸಾಂಸ್ಕೃತಿಕವಾಗಿ ಎಲ್ಲೆಲ್ಲೂ ರಾರಾಜಿಸಲಿ ಎಂಬುದೊಂದೇ ಆಶಯ. ************************************

ಭೂತಾಯಿಗೆ ನಮನ Read Post »

ಇತರೆ

ಉಪಯೋಗಿಸೋಣ, ಉಳಿಯೋಣ

ಲೇಖನ ಉಪಯೋಗಿಸೋಣ, ಉಳಿಯೋಣ ಶಾಂತಿವಾಸು ನಮ್ಮ ದೇಶದ ಪ್ರತಿ ರಾಜ್ಯವೂ ಅದರದೇ ಆದ ವೈಶಿಷ್ಟ್ಯ ಹಾಗೂ ಹಲವಾರು ಪದ್ಧತಿಯ ಆಚರಣೆಗಳು ಇರುವಂತೆ ನಮ್ಮ ಕರ್ನಾಟಕದ ನೆಲದ ಮೇಲಿನ ಪ್ರತಿಯೊಂದು ಪಂಗಡಗಳಿಗೆ, ಜಾತಿಗಳಿಗೆ, ಪ್ರಾಣಿಗಳು, ಜಾನುವಾರುಗಳಿಗೆ, ವಸ್ತುಗಳಿಗೆ ಹೀಗೆ ಎಲ್ಲಕ್ಕೂ ಪ್ರತ್ಯೇಕ ಹಬ್ಬಗಳಿವೆ. ಬೇರೆ ಬೇರೆ ಪ್ರದೇಶಗಳು ಹಾಗೂ ರಾಜ್ಯಗಳಿಂದ ಜೀವನವನ್ನರಸಿ ಬಂದು ನೆಲೆ ಕಂಡುಕೊಂಡ ಲಕ್ಷಾಂತರ ಜನರ ನೆಮ್ಮದಿಯ ನಮ್ಮ ಕರುನಾಡು, ಬಂದವರು ನಮ್ಮವರೇ ಎನ್ನುವ ಔದಾರ್ಯ ಮೆರೆದು, “ಬದುಕು, ಬದುಕಲು ಬಿಡು” ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ವಿಭಿನ್ನ ಸಂಪ್ರದಾಯವನ್ನಪ್ಪಿದ ಹೃದಯವಂತರ ನೆಲೆಬೀಡು. ಎರಡು ಸಾವಿರ ವರ್ಷಗಳಷ್ಟು ಹಳೆಯ ಭಾಷೆ ಹಾಗೂ ಸಂಸ್ಕೃತಿಯ ಬುನಾದಿ ಹೊಂದಿದ ನಮ್ಮ ಕನ್ನಡ ಭಾಷೆಯು ಸಾಮಾನ್ಯವಾಗಿ ಅಲುಗಾಡಿಸಲಾರದಷ್ಟು ಭದ್ರವಾಗಿದೆ ಎನ್ನುವುದು ಅತಿಶಯೋಕ್ತಿ ಎನಿಸುವುದಿಲ್ಲ. 65ನೇ ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ನಾವು ನಮ್ಮ ಕರ್ನಾಟಕವು ಕಂಡ ಮೊದಲುಗಳ ಕಡೆ ಗಮನ ಹರಿಸದಿದ್ದರೆ ಅದು ಕನ್ನಡವನ್ನೇ ಕಡೆಗಣಿಸಿದಂತೆ ಎಂದು ನನ್ನ ಭಾವನೆ. ಏಕೆಂದರೆ ಶತಶತಮಾನಗಳಿಂದ ಒಂದೊಂದೇ ಹೆಜ್ಜೆಯಿಟ್ಟು ಲೋಕವೇ ಕರ್ನಾಟಕದತ್ತ ಹೆಮ್ಮೆಯಿಂದ ತಿರುಗಿ ನೋಡುವಂತೆ ಮಾಡಿರುವುದರಲ್ಲಿ ಹಾಗೂ ಕರ್ನಾಟಕಕ್ಕೆ ಒಂದು ಪ್ರತ್ಯೇಕ ಸ್ಥಾನವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂಥ ಮೊದಲುಗಳೊಂದಿಗೆ ಕರ್ನಾಟಕ ಕನ್ನಡ ಭಾಷಾ ಸಾಹಿತ್ಯವನ್ನು ಉತ್ತುಂಗಕ್ಕೇರಿಸಿದ ಮಹನೀಯರ ಹಾಗೂ ಅವರ ಗ್ರಂಥಗಳ ಹೆಸರು, ಸಾಧನೆಗಳ ದೊಡ್ಡ ಪಟ್ಟಿಯೇ ಇದೆ.   1. ಕನ್ನಡದ ಮೊದಲ ದೊರೆ -ಮಯೂರವರ್ಮ 2. ಕನ್ನಡದ ಮೊದಲ ಕವಿ -ಪಂಪ 3. ಕನ್ನಡದ ಮೊದಲ ಶಾಸನ – ಹಲ್ಮಿಡಿ ಶಾಸನ 4. ಕನ್ನಡದ ತ್ರಿಪದಿ ಛಂದಸ್ಸಿನ ಮೊದಲ ಬಳಕೆ – ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ 5. ಕನ್ನಡದ ಮೊದಲ ಲಕ್ಷಣ ಗ್ರಂಥ – ಕವಿರಾಜಮಾರ್ಗ 6. ಕನ್ನಡದ ಮೊದಲ ನಾಟಕ – ಮಿತ್ರವಿಂದ ಗೋವಿಂದ 7. ಕನ್ನಡದ ಮೊದಲ ಮಹಮ್ಮದೀಯ ಕವಿ – ಶಿಶು ಸಂತ ಶಿಶುನಾಳ ಶರೀಫ 8. ಕನ್ನಡದ ಮೊದಲ ಕವಿಯತ್ರಿ – ಅಕ್ಕಮಹಾದೇವಿ 9. ಕನ್ನಡದ ಮೊದಲ ಸ್ವತಂತ್ರ  ಸಾಮಾಜಿಕ ಕಾದಂಬರಿ – ಇಂದಿರಾಬಾಯಿ 10. ಕನ್ನಡದ ಮೊದಲ ಪತ್ತೇದಾರಿ ಕಾದಂಬರಿ – ಚೋರಗ್ರಹಣ ತಂತ್ರ 11.ಕನ್ನಡದ ಮೊದಲ ಛಂದೋಗ್ರಂಥ – ಛಂದೋಂಬುದಿ (ನಾಗವರ್ಮ) 12. ಕನ್ನಡದ ಮೊದಲ ಸಾಮಾಜಿಕ ನಾಟಕ – ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ 13. ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ – ಜಾತಕ ತಿಲಕ 14. ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ – ವ್ಯವಹಾರ ಗಣಿತ 15. ಕನ್ನಡದ ಮೊದಲ ಕಾವ್ಯ- ಆದಿಪುರಾಣ 16. ಕನ್ನಡದ ಮೊದಲ ಕಾವ್ಯ – ವಡ್ಡಾರಾಧನೆ 17. ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ – ಗ್ರಾಮರ್ ಆಫ್ ದಿ ಕನ್ನಡ ಲ್ಯಾಂಗ್ವೇಜ್ 18. ಕನ್ನಡದ ಮೊದಲ ಪತ್ರಿಕೆ – ಮಂಗಳೂರ ಸಮಾಚಾರ 19. ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು – ಚಂದ್ರರಾಜ 20. ಕನ್ನಡದಲ್ಲಿ ಮೊದಲು ಕಥೆ ಬರೆದವರು – ಪಂಜೆ ಮಂಗೇಶರಾಯರು 21. ಕನ್ನಡದ ಮೊದಲ ಪ್ರೇಮ ಗೀತೆಗಳ ಸಂಕಲನ – ಒಲುಮೆ 22. ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು – ಎಚ್. ವಿ. ನಂಜುಂಡಯ್ಯ 23. ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ – ಆರ್. ನರಸಿಂಹಾಚಾರ್ 24. ಕನ್ನಡದ ಮೊದಲ ವಚನಕಾರರು –  ದೇವರ ದಾಸಿಮಯ್ಯ 25. ಹೊಸಗನ್ನಡದ ಮೊದಲ ಮಹಾಕಾವ್ಯ – ಶ್ರೀ ರಾಮಾಯಣ ದರ್ಶನಂ 26. ಪಂಪ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಕುವೆಂಪು 27. ಕನ್ನಡದ ಮೊದಲ ಕನ್ನಡ ಇಂಗ್ಲಿಷ್ ನಿಘಂಟು ರಚಿಸಿದವರು – ಆರ್. ಎಫ್. ಕಿಟೆಲ್ 28. ಕರ್ನಾಟಕದ ಮೊಟ್ಟ ಮೊದಲ ಸಂಕಲನ ಗ್ರಂಥ – ಸೂಕ್ತಿ ಸುಧಾರ್ಣವ 29.  ಮೊದಲ ಅಖಿಲ ಭಾರತ ಸಾಹಿತ್ಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ – ಬೆಂಗಳೂರು (1915) 30. ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ – ಕುವೆಂಪು 31. ಕನ್ನಡದ ಮೊದಲ ವಿಶ್ವಕೋಶ – ವಿವೇಕ ಚಿಂತಾಮಣಿ 32. ಕನ್ನಡದ ಮೊದಲ ವೈದ್ಯ ಗ್ರಂಥ – ಗೋವೈದ್ಯ 33. ಕನ್ನಡದ ಮೊದಲ ಪ್ರಾಧ್ಯಾಪಕರು – ಟಿ.ಎಸ್ .ವೆಂಕಣ್ಣಯ್ಯ 34. ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ – ಮಂದಾನಿಲ ರಗಳೆ 35. ಕನ್ನಡದ ಮೊದಲ ಹಾಸ್ಯ ಪತ್ರಿಕೆ – ವಿಕಟ ಪ್ರತಾಪ 36. ಕನ್ನಡದ ಮೊದಲ ವೀರಗಲ್ಲು ಶಾಸನ – ತಮ್ಮಟಗಲ್ಲು ಶಾಸನ 37. ಕನ್ನಡದ ಮೊದಲ ಹಾಸ್ಯ ಲೇಖಕಿ –  ಟಿ .ಸುನಂದಮ್ಮ ಜ್ಞಾನಪೀಠ ಪ್ರಶಸ್ತಿ ಪಡೆದು, ಕನ್ನಡದ ಹೆಸರನ್ನು ಉತ್ತುಂಗಕ್ಕೇರಿಸಿದ  ಮಹನೀಯರು 1. ಕುವೆಂಪು, 2. ದ.ರಾ. ಬೇಂದ್ರೆ 3. ಶಿವರಾಮ ಕಾರಂತರು 4.ಮಾಸ್ತಿ ವೆಂಕಟೇಶ ಅಯ್ಯಂಗಾರ್ 5.ವಿ.ಕೃ. ಗೋಕಾಕರು 6. ಯು. ಆರ್. ಅನಂತಮೂರ್ತಿ 7. ಗಿರೀಶ್ ಕಾರ್ನಾಡರು 8. ಚಂದ್ರಶೇಖರ ಕಂಬಾರರು        ಇಷ್ಟು ಭವ್ಯತೆಯನ್ನು ಹೊಂದಿರುವ ನಮ್ಮ ಕರ್ನಾಟಕವು 1956 ರ ನವಂಬರ್ ಒಂದರಂದು ಮೈಸೂರು ರಾಜ್ಯ ಹೆಸರಿನಲ್ಲಿ ಮೊದಲಿಗೆ ನಿರ್ಮಾಣವಾಯಿತು. ರಾಜ್ಯಗಳ ಪುನರ್ ವಿಂಗಡಣೆ ಕಾಯಿದೆಯ ಮೇರೆಗೆ ಜನ್ಮತಾಳಿದ ನವ ರಾಜ್ಯವು ಕೇವಲ ಕರ್ನಾಟಕ ಕನ್ನಡ ಭಾಷಾ ಪ್ರದೇಶಗಳ ಒಂದುಗೂಡಿಕೆಯಾಗಿ ಮಾತ್ರ ಇರಲಿಲ್ಲ. ಬದಲಿಗೆ ಸುಮಾರು 2000 ವರ್ಷಗಳ ಉಜ್ವಲ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯುಳ್ಳ ಕರ್ನಾಟಕ ನೆಲದಲ್ಲಿ ಜನ್ಮ ತಾಳಿದ ಕೋಟ್ಯಾಂತರ ಕನ್ನಡ ಜನತೆಯ ಹೃದಯವನ್ನು ಒಗ್ಗೂಡಿಸಿದ ದಿನವಿದು.        ಮೈಸೂರು  ರಾಜ್ಯವನ್ನೇ ಕರ್ನಾಟಕವೆಂದು ಕರೆಯಬೇಕೆಂಬ ಚರ್ಚೆಯು 1972 ರಲ್ಲಿ ಆರಂಭವಾದ ಇತಿಹಾಸವನ್ನು ಕೆದಕಿದರೆ, ಕರ್ನಾಟಕವೆಂಬ ಹೆಸರು ಮಹಾಭಾರತದಲ್ಲಿ ಉಲ್ಲೇಖವಿರುವ ದಾಖಲೆಯಿದೆ. ಅಂತೆಯೇ ಕ್ರಿ.ಶ. 450 ರಲ್ಲಿ ದಕ್ಷಿಣದಲ್ಲಿ ಆಳಿದ ಗಂಗ ಅರಸರ ಸಾಮ್ರಾಜ್ಯವು ಕರ್ನಾಟಕವೆಂದೇ ಹೆಸರಾಗಿದ್ದರೆ, ವಿಜಯನಗರ ಅರಸರು ಕರ್ನಾಟ ದೊರೆಗಳೆಂದು ಕರೆಯಲ್ಪಟ್ಟಿದ್ದಾರೆ. ಕನ್ನಾಡು, ಕರ್ನಾಟ ಎಂದು ಕೊನೆಗೆ “ಕರ್ನಾಟಕ”ವೆಂದು ಕರೆಯುವುದು ರೂಢಿಗೆ ಬಂದಿದೆ. ಕರ್ನಾಟಕತ್ವವೆಂದರೆ ಕೇವಲ ದೇಶಾಭಿಮಾನವೋ, ಭಾಷಾಭಿಮಾನವೋ ಅಥವಾ ಇತಿಹಾಸ ಅಭಿಮಾನವೋ ಅಲ್ಲದೆ ಮೂರು ಅಡಗಿರುವ ರಾಷ್ಟ್ರೀಯತೆಯನ್ನು ಒಪ್ಪಿ ಅಪ್ಪಿರುವ ತತ್ವವಾಗಿದೆ. 19 ಜಿಲ್ಲೆಗಳಾಗಿ ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಏಕೀಕರಣಗೊಳಿಸುವ ನಿಟ್ಟಿನಲ್ಲಿ 1905 ರಿಂದ 1920 ರ ಅವಧಿಯಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾಲಿಟ್ಟ ಕಾರ್ಯಕರ್ತರನ್ನು ಕನ್ನಡ ರಾಜ್ಯೋತ್ಸವ ಸಂಭ್ರಮಿಸುವ ಈ ಸಮಯದಲ್ಲಿ ನೆನೆಯುವುದು ಸರ್ವಸಮ್ಮತವಾಗಿದೆ. ಕರ್ನಾಟಕ ಏಕೀಕರಣಕ್ಕಾಗಿ ದನಿಯೆತ್ತಿದವರಲ್ಲಿ ಬೆನಗಲ್ ರಾಮರಾಯರು, ಆಲೂರು ವೆಂಕಟರಾಯರು, ಕಡಪ ರಾಘವೇಂದ್ರ ರಾವ್, ಮುದವೀಡು ಕೃಷ್ಣ ರಾವ್, ಗಂಗಾಧರ್ ರಾವ್ ದೇಶಪಾಂಡೆ, ಕೆ.ಸಿ. ರೆಡ್ಡಿ, ಕೆಂಗಲ್ ಹನುಮಂತರಾರು, ನಿಜಲಿಂಗಪ್ಪನವರು ಪ್ರಮುಖರೆನಿಸಿಕೊಂಡಿದ್ದಾರೆ. ಆಗ ನಮ್ಮ ಕರ್ನಾಟಕದ ಹಲವಾರು ಭಾಗಗಳು ಹೈದರಾಬಾದ್, ಮುಂಬೈ, ಮದ್ರಾಸು, ಡೆಲ್ಲಿ ಹಾಗೂ ಹಳೆ ಮೈಸೂರು ರಾಜ್ಯಗಳಿಗೆ ಸೇರಿಕೊಂಡಿದ್ದರೆ, ನೀಲಗಿರಿ, ಕೃಷ್ಣಗಿರಿ, ಅನಂತಪುರದ ಮಡಕಸಿರಾ ತಾಲ್ಲೂಕು, ಮಧೋಳ, ಸೊಂಡೂರು, ರಾಮದುರ್ಗ, ಜಮಖಂಡಿ, ಕೊಲ್ಲಾಪುರ ಇವೇ ಮೊದಲಾದ ಭಾಗಗಳು ಕರ್ನಾಟಕಕ್ಕೆ ಸೇರಿದ್ದವು. 1905 ರಲ್ಲಿ ಧಾರವಾಡದಲ್ಲಿ ನಡೆದ ಗ್ರಂಥಕರ್ತರ ಸಮ್ಮೇಳನದಲ್ಲಿ ಬೆನಗಲ್ ರಾಮರಾಯರು ಕರ್ನಾಟಕದ ಏಕೀಕರಣದ ಬಗ್ಗೆ ಭಾಷಣ ಮಾಡಿ ಮಾತನಾಡಿದ್ದು ಕರ್ನಾಟಕವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಇಟ್ಟ ಮೊದಲ ಹೆಜ್ಜೆ ಎಂದು ಹೇಳಲಾಗಿದೆ. 1905 ರಲ್ಲಿ ಲಾರ್ಡ್ ಕರ್ಜನ್ ಬಂಗಾಳವನ್ನು ವಿಭಜಿಸಲು ಯತ್ನಿಸಿದಾಗ ಬಂಗಾಳಿಯರು ಪ್ರತಿಭಟಿಸಿದ್ದನ್ನು ಸ್ಪೂರ್ತಿಯಾಗಿಸಿಕೊಂಡ ಆಲೂರು ವೆಂಕಟರಾಯರು ಕರ್ನಾಟಕದ ಏಕೀಕರಣದ ಮೊದಲನೇ ದನಿಯೆತ್ತಿದರು. ಏಕೀಕರಣದ ಅವಶ್ಯಕತೆಯನ್ನು ಮನದಟ್ಟು ಮಾಡುವ ನಿಟ್ಟಿನಲ್ಲಿ 1920 ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಸುಮಾರು 800 ಕಾಂಗ್ರೆಸ್ ಪ್ರತಿನಿಧಿಗಳು ಕರ್ನಾಟಕದಿಂದ ತೆರಳಿದ್ದು ದಿನದಿಂದ ದಿನಕ್ಕೆ ಏಕೀಕರಣದ ಹೋರಾಟ ಹೆಚ್ಚಾಗುತ್ತಿದ್ದುದಕ್ಕೆ ಸಾಕ್ಷಿಯಾಗಿದೆ. 1924 ರಲ್ಲಿ ಬೆಳಗಾವಿಯಲ್ಲಿ ನಡೆದ, ಗಾಂಧೀಜಿಯವರು ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಸಮ್ಮೇಳನದಲ್ಲಿಯೂ ಸಹ ಕರ್ನಾಟಕ ಏಕೀಕರಣ ಸಮ್ಮೇಳನವು ನಡೆಯಿತು. ಕರ್ನಾಟಕವನ್ನು ಏಕೀಕರಣಗೊಳಿಸುವ ನಿಟ್ಟಿನಲ್ಲಿ 1926ರಿಂದ 46 ರವರೆಗೂ ಸತತವಾಗಿ ಹಲವಾರು ಸಮ್ಮೇಳನಗಳು ನಡೆಯುತ್ತಲೇ ಇದ್ದವು. ಕರ್ನಾಟಕದ ಏಕೀಕರಣದ ಅವಶ್ಯಕತೆಯನ್ನು ಅರಿತ ಅಂದಿನ ಕಾಂಗ್ರೆಸ್ ಪಕ್ಷವು ಹೋರಾಟಕ್ಕೆ ಬೆಂಬಲ ನೀಡಿತು. ಅದನ್ನು ಮೈಸೂರ್ ಕಾಂಗ್ರೆಸ್ ಸಹ ಪುರಸ್ಕರಿಸಿತು. 1946 ರಲ್ಲಿ ಕರ್ನಾಟಕ ಮಹಾಸಭೆಯು ಏಕೀಕರಣದ ಮಂತ್ರವನ್ನು ಪುನರುಚ್ಚರಿಸಿತು. 1953 ರಲ್ಲಿ ಭಾಷಾವಾರು ರಾಜ್ಯವಾಗಿ ಆಂಧ್ರವು ಪ್ರಥಮ ಬಾರಿಗೆ ರೂಪುಗೊಂಡರೆ, ಅದೇ ವರ್ಷ ಹೈದರಾಬಾದಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕೆಂಗಲ್ ಹನುಮಂತರಾಯರು ಒತ್ತಾಯಪೂರ್ವಕವಾಗಿ ಏಕೀಕರಣದ ಭಾಷಣ ಮಾಡಿದರು. ಅಂದಿನ ಕೆ.ಪಿ.ಸಿ.ಸಿ ಅಧ್ಯಕ್ಷರಾದ ನಿಜಲಿಂಗಪ್ಪನವರು ಕೂಡ ಅದೇ ಮಂತ್ರವನ್ನು ಜಪಿಸುವುದರೊಂದಿಗೆ ಅಹೋರಾತ್ರಿ ಶ್ರಮಿಸಿದರು. ಅನೇಕ ಭಾಷಣಗಳು, ಮನವೊಲಿಕೆಗಳು ಫಲಕೊಡದಿದ್ದಾಗ 1953 ರಲ್ಲಿ ದಾವಣಗೆರೆಯಲ್ಲಿ ಸತ್ಯಾಗ್ರಹವು ಸಹ ನಡೆಯಿತು. ಹಂತಹಂತವಾಗಿ ಒಗ್ಗಟ್ಟನ್ನು  ಸಾರುತ್ತ ಏಕೀಕರಣದ ಅಗತ್ಯವನ್ನು ಮನದಟ್ಟು ಮಾಡುವಲ್ಲಿ ವರ್ಷಗಟ್ಟಲೆ ಹೋರಾಡಿದ ಫಲವಾಗಿ 1956 ರ ನವೆಂಬರ್ ಒಂದರಂದು ಏಕೀಕೃತ ರಾಜ್ಯ, ಅದು ನಮ್ಮ ಕರ್ನಾಟಕ ರಾಜ್ಯದ ಉದಯವಾಯಿತು. ಕರ್ನಾಟಕ ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು. ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ “ಮೈಸೂರು” ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತತ್ವ ಮಾನ್ಯತೆಗಾಗಿ ರಾಜ್ಯದ ಹೆಸರು 1972ರಲ್ಲಿ “ಕರ್ನಾಟಕ” ಎಂದು ಬದಲಾಯಿತು. ಈ ಸಂದರ್ಭದಲ್ಲಿ ದೇವರಾಜ್ ಅರಸುರವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಮುಂದಿನ ಪೀಳಿಗೆಯಾಗಿ ನಡೆಸಿದ ಹೋರಾಟದಲ್ಲಿ ಶಿವರಾಮ ಕಾರಂತರು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್. ಕೃಷ್ಣರಾವ್ ಮತ್ತು ಬಿ. ಎಂ. ಶ್ರೀಕಂಠಯ್ಯನವರ ಹೆಸರುಗಳಿವೆ. ಕೆಲವು ಕಾರಣಗಳಿಂದ ಕಾಸರಗೋಡು, ತಾಳವಾಡಿ, ಮಡಕಶಿರಾ, ಅಕ್ಕಲಕೋಟೆ, ಸೊಲ್ಲಾಪುರ, ಹೊಸೂರು ಇವೆಲ್ಲವೂ ಏಕೀಕೃತ ಕರ್ನಾಟಕದಿಂದ ಹೊರಗುಳಿದರೆ, 1565 ರಲ್ಲಿ ಒಡೆದು ಹೋಗಿದ್ದ ವಿಜಯನಗರ ಸಾಮ್ರಾಜ್ಯವು ಕರ್ನಾಟಕದ ನಕ್ಷೆಯಲ್ಲಿ ಸ್ಥಾನ ಪಡೆಯಿತು. ಕರ್ನಾಟಕದ ಗಡಿರೇಖೆಗಳು ಕಾರಣಾಂತರದಿಂದ ಕೆಲವು ಬಾರಿ ಹಿಗ್ಗಿ, ಕೆಲವು ಬಾರಿ ಕುಗ್ಗಿ ಹಲವು ಕಾರಣಗಳಿಂದ ನೆರೆ ರಾಜ್ಯಗಳಲ್ಲಿ ಹಂಚಿಹೋಗಿದ್ದ ಪ್ರದೇಶಗಳನ್ನು ಭೌಗೋಳಿಕವಾಗಿ ಹಾಗೂ ಮಾನಸಿಕವಾಗಿ ಬೆಸೆಯಲು ಯತ್ನಿಸಿದ ಅನೇಕ ಮಹನೀಯರು ಅಡ್ಡಬಂದ ಅನೇಕ ಎಡರು ತೊಡರುಗಳನ್ನು ಲೆಕ್ಕಿಸದೆ, ಕರ್ನಾಟಕದ ಏಕೀಕರಣಕ್ಕಾಗಿ ಚಳುವಳಿಗಳನ್ನು ನಡೆಸಿ ಅಖಂಡ ಕರ್ನಾಟಕವನ್ನು ನಮಗೆ ಉಡುಗೊರೆಯಾಗಿ ನೀಡಿದ ಈ ದಿನವೇ ನಮ್ಮ “ಕರ್ನಾಟಕ ರಾಜ್ಯೋತ್ಸವ” ಅಥವಾ “ಕನ್ನಡ ರಾಜ್ಯೋತ್ಸವ”. ಭಾಷಾ ನೀತಿಯಲ್ಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ಹಾಗೂ ತ್ರಿಭಾಷಾ ಸೂತ್ರದಡಿಯಲ್ಲಿ ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಮುಖ್ಯ ಭಾಷೆಯಾಗಿ ಪರಿಗಣಿಸಬೇಕೆಂಬ ವಿ.ಕೃ. ಗೋಕಾಕರು ರಚಿಸಿದ ವರದಿಯ ಬೇಡಿಕೆಯನ್ನು ಮುಂದಿಟ್ಟು ನಡೆದ “ಗೋಕಾಕ್ ಚಳುವಳಿಯಲ್ಲಿ” ಕನ್ನಡದ ಮೇರು ನಟ ಡಾಕ್ಟರ್ ರಾಜಕುಮಾರರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಹೀಗೆ ಕನ್ನಡವನ್ನು ಉಸಿರಾಡಿ, ಕನ್ನಡವೆಂಬ ಹೆಮ್ಮೆಯ ಕಿರೀಟವನ್ನು ನಮಗೆ ಬಿಟ್ಟು ಹೋದ ಮಹನೀಯರನ್ನು ನೆನೆಯುವುದು “ಕನ್ನಡ ರಾಜ್ಯದ ನಿಜವಾದ ಉತ್ಸವ” ಎನ್ನುವುದು ನನ್ನ ಅನಿಸಿಕೆ. ಈ ಮೇಲೆ ಹೆಸರಿಸಿರುವ, ಹೋರಾಡಿರುವ ಎಲ್ಲ ಮಹನೀಯರೂ ಕನ್ನಡವನ್ನು ಉಪಯೋಗಿಸಿದ್ದರಿಂದಲೇ ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಮಾನಸಿಕವಾಗಿ ಉಳಿದುಕೊಂಡಿದ್ದಾರೆ. ಭೂಮಿಯ ಮೇಲಿನ ಪ್ರತಿಯೊಂದಕ್ಕೂ ನಾಶವಿದೆ ಆದರೆ ಭಾಷೆಗಿಲ್ಲ. ಈ ನಿಟ್ಟಿನಲ್ಲಿ ಕನ್ನಡವನ್ನು ಆಸ್ವಾದಿಸಿ, ಅನುಭವಿಸಿ, ಭಾವನೆಗಳನ್ನು ಕನ್ನಡದಲ್ಲಿಯೇ ಪ್ರಕಟಿಸಿದ

ಉಪಯೋಗಿಸೋಣ, ಉಳಿಯೋಣ Read Post »

ಇತರೆ

ಅವಲಕ್ಕಿ ಪವಲಕ್ಕಿ

ಮಕ್ಕಳ ಕಥೆ ಅವಲಕ್ಕಿ ಪವಲಕ್ಕಿ ಗಿರೀಶ ಜಕಾಪುರೆ –                       ಅವಲಕ್ಕಿ ಪವಲಕ್ಕಿ             ಕಾಂಚಣ, ಮಿಣಮಿಣ             ಡಾಮ್ ಡೂಮ್ ಟಸ್ ಪುಸ್ಸ             ಕೋಯ್ ಕೊಟಾರ್             ಅವಲಕ್ಕಿ ಪವಲಕ್ಕಿ             ‘ಸಿರಿ ಟೀಚರ್ ಬಹಳ ಚೆಂದ ಹಾಡು ಹೇಳ್ತಾರೆ’ ಎಂದ ಚಿಂಟೂ ರಮಿಯತ್ತ ನೋಡುತ್ತ.             ‘ಅಷ್ಟೇ ಅಲ್ಲ ಮಾರಾಯಾ, ಎಷ್ಟು ಚೆಂದ ಡಾನ್ಸ್ ಹೇಳಿಕೊಡ್ತಾರೆ, ನೋಡು’ ಎಂದ ರಮಿ. ವಿಷಯ ಉತ್ಸಾಹದ್ದಾಗಿದ್ದರೂ ಅವನ ದನಿ ಏಕೋ ಸಪ್ಪಗಿತ್ತು.             ಚಿಂಟೂಗೆ ಅವಲಕ್ಕಿ ಅಂದರೆ ತುಂಬ ಇಷ್ಟ. ಬೇರೆ ಯಾವ ತಿಂಡಿಯೂ ಅವನಿಗೆ ಸೇರಲ್ಲ, ಅವಲಕ್ಕಿ ಇದ್ದರೆ ಅವನು ಬೇರೇನೂ ಬೇಡಲ್ಲ. ಈಗ ಸಿರಿ ಮೇಡಂ ಅವಲಕ್ಕಿ ಹಾಡು ಹೇಳಿಸಿದ್ದೂ ಅವನಿಗೆ ಇನ್ನಷ್ಟು ಖುಷಿ ಕೊಟ್ಟಿತ್ತು.             ಮೂರನೇ ಕ್ಲಾಸಿನ ಮಕ್ಕಳಿಗೆ ಅವರ ಕ್ಲಾಸ್‌ಟೀಚರ್ ಶ್ರೀದೇವಿ ಮೇಡಂ ಅವರು ವಾರ್ಷಿಕ ಸ್ನೇಹಸಮ್ಮೇಳನಕ್ಕಾಗಿ ಅವಲಕ್ಕಿ ಪವಲಕ್ಕಿ ಹಾಡಿನ ಪ್ರದರ್ಶನಕ್ಕೆಂದು ಮಕ್ಕಳಿಂದ ಅಂತಿಮ ರಿಹರ್ಸಲ್ ಮಾಡಿಸಿಕೊಳ್ಳುತ್ತಿದ್ದರು. ಊಟದ ಬಿಡುವಿತ್ತು. ಮಕ್ಕಳು ತಮ್ಮ ತಮ್ಮ ಟಿಫನ್ ಬಾಕ್ಸ್ ತೆರೆದು ತಿಂಡಿ ತಿನ್ನುತ್ತ ಮಾತಾಡುತ್ತಿದ್ದರು. ಚಿಂಟೂನ ಅಮ್ಮ ಅವನ ಫೆವ್ಹರಿಟ್ ಅವಲಕ್ಕಿ ಕೊಟ್ಟಿದ್ದರು. ರಮಿ ಮಾತ್ರ ಶಾಲೆಯ ಬಿಸಿಯೂಟದ ಅನ್ನ ತಿನ್ನುತ್ತಿದ್ದ. ಚಿಂಟೂ ಅವನಿಗೂ ಸ್ವಲ್ಪ ಅವಲಕ್ಕಿ ಕೊಟ್ಟು, ಅವನಿಂದ ತಾನೂ ಸ್ವಲ್ಪ ಅನ್ನ ಪಡೆದಿದ್ದ.             ‘ಯಾಕೋ ರಮಿ, ಸಪ್ಪಗಿದ್ದೀಯಾ?’ ಚಿಂಟೂ ಕೇಳಿದ.             ‘ನಾಳೆಯೇ ಗ್ಯಾದರಿಂಗ್ ಅಲ್ವಾ?’             ‘ಹೌದು, ಅದಕ್ಕೇನಾಯ್ತು?’             ‘ಸಿರಿ ಮೇಡಂ, ಗ್ಯಾದರಿಂಗ್ ಫೀಸ್ ಕೊಡಲು ಹೇಳಿದ್ರು. ನನ್ನಪ್ಪ ಇನ್ನೂ ಫೀಸ್ ಕಟ್ಟಿಲ್ಲ. ಫೀಸ್ ಕಟ್ಟದಿದ್ದರೆ ಗ್ಯಾದರಿಂಗ್‌ನಲ್ಲಿ ಭಾಗವಹಿಸಲು ಅವಕಾಶ ಇಲ್ಲ ಅಂತ ಹೇಳಿದ್ದಾರೆ’ ಎಂದ. ಮುಖ ಇನ್ನಷ್ಟು ಚಿಕ್ಕದಾಗಿತ್ತು.             ‘ಹೌದಲ್ವ? ಮತ್ತೆ, ಈಗ ಏನು ಮಾಡೋದು?’ ಚಿಂಟೂ ಕೇಳಿದ.             ‘ಅದೇ ತಿಳೀತಿಲ್ಲ, ಇವತ್ತು ಹೋಗಿ ಅಪ್ಪನಿಗೆ ಮತ್ತೆ ಫೀಸ್ ಕಟ್ಟಲು ಹೇಳುವೆ’ ಎಂದ. ಆಶಾಕಿರಣ ಮೂಡಿತು.             ಅವರು ತಿಂಡಿ ಮುಗಿಸಿ ಕೈತೊಳೆಯುವ ಹೊತ್ತಿಗೆ ಬೆಲ್ ಆಯ್ತು.             ಕ್ಲಾಸ್‌ನಲ್ಲಿ ಸಿರಿ ಟೀಚರ್ ‘ನೋಡಿ ಮಕ್ಕಳೆ, ನಾಳೆ ಎಲ್ಲರೂ ಸಾಯಂಕಾಲ ಗ್ಯಾದರಿಂಗ್ ಸಿದ್ಧತೆಯೊಂದಿಗೆ ಬರಬೇಕು, ನಿಮ್ಮ ತಂದೆ-ತಾಯಿ, ಅಕ್ಕ, ಅಣ್ಣ, ತಮ್ಮ, ತಂಗಿ ಎಲ್ಲರನ್ನೂ ಕರೆತರಬೇಕು. ನೀವು ಹಾಡೋದು, ಡಾನ್ಸ್ ಮಾಡೋದು ಅವರು ನೋಡಬೇಕು ತಾನೆ? ಸಂಜೆಯ ಟಿಫನ್ ತರೋದು ಮರೀಬಾರದು’ ಎಂದು ಸೂಚಿಸಿದರು.             ಮಕ್ಕಳೆಲ್ಲ ‘ಹೋ.. ಎಸ್ ಟೀಚರ್..’ ಎಂದರು ಹಿಗ್ಗಿನಿಂದ. ರಮಿಯ ದನಿ ಮಾತ್ರ ಕೇಳಿಸಲಿಲ್ಲ.             ಟೀಚರ್ ಮುಂದುವರಿದು ‘ಫೀಸ್ ಕೊಟ್ಟವರಿಗೆಲ್ಲ ಡಾನ್ಸ್ ಯುನಿಫಾರಂ ಕೊಡುತ್ತೇವೆ. ನಿಮ್ಮ ಕ್ಲಾಸ್‌ನಲ್ಲೇ ನೀವು ರೆಡಿ ಆಗಬೇಕು, ಹಾಂ, ಇನ್ನೊಂದು ಮಾತು ಫೀಸ್ ಕೊಡದಿರೋರಿಗೆ ಚಾನ್ಸ್ ಇಲ್ಲ, ತಿಳೀತಾ?’ ಎಂದರು.             ಮತ್ತೆ ಮಕ್ಕಳು ಕೇಕೇ ಹಾಕಿದರು. ರಮಿಯ ಕಣ್ಣು ತುಂಬಿ ಬಂದಿದ್ದವು.             ಶಾಲೆ ಬಿಟ್ಟು ಮರಳಿದ ಕೂಡಲೇ ಚಿಂಟೂ ತಾಯಿಯ ಬಳಿಗೆ ಹೋಗಿ ‘ಅಮ್ಮ, ಇವತ್ತು ನೀನು ಕೊಟ್ಟಿದ್ದ ಅವಲಕ್ಕಿ ತುಂಬಾ ಸಕತ್ತಾಗಿತ್ತು. ಚೂರೂ ಬಿಡದೇ ತಿಂದುಬಿಟ್ಟೆ, ಅಷ್ಟೇ ಅಲ್ಲ ರಮಿಗೂ ಸ್ವಲ್ಪ ಕೊಟ್ಟೆ. ನನ್ನಂತೆ ಅವನಿಗೂ ಅವಲಕ್ಕಿ ತುಂಬಾ ಇಷ್ಟ’ ಎಂದ.              ರಮಿ ವಿಷಯ ಬಂದ ಕೂಡಲೇ ಅವನ ದನಿಯಲ್ಲಿನ ಉತ್ಸಾಹ ಕಡಿಮೆಯಾಗಿತ್ತು, ಅವನ ಕಣ್ಣಲ್ಲಿನ ನೀರು ನೆನಪಾಗಿ ಪಾಪ ಅನಿಸಿತು.             ‘ಹೌದಾ, ಗುಡ್, ಜಾಣ ನೀನು. ದಿನಾಲೂ ಟಿಫನ್ ಬಾಕ್ಸ್ ಖಾಲಿ ಮಾಡಬೇಕು, ಚೆನ್ನಾಗಿ ತಿಂಡಿ ತಿನ್ನಬೇಕು, ಆಗ ನೀನು ಸ್ಟ್ರಾಂಗ್ ಆಗೋದು’ ಎಂದಳು ಅಮ್ಮ.             ಚಿಂಟೂ ‘ಹಾಗಿದ್ದರೆ ನೀನು ದಿನಾಲೂ ನನಗೆ ಅವಲಕ್ಕಿ ಕೊಡು. ಒಂದಲ್ಲ ಎರಡು ಬಾಕ್ಸ್ ಕೊಡು, ಎಲ್ಲ ಖಾಲಿ ಮಾಡುವೆ’ ಎಂದ.             ‘ಹಾಗಲ್ಲ ಮರಿ, ಇಷ್ಟ ಎಂದು ಒಂದೇ ಪದಾರ್ಥ ಹೆಚ್ಚು ತಿನ್ನಬಾರದು, ಹೊಟ್ಟೆ ಕೆಟ್ಟುಹೋಗುತ್ತದೆ, ಹೊಟ್ಟೆ ನೋವು ಪ್ರಾರಂಭ ಆದರೆ ನಿನಗೆ ಓದ್ಲಿಕ್ಕೂ ಆಗಲ್ಲ, ಬರೀಲಿಕ್ಕೂ ಆಗಲ್ಲ, ಡಾನ್ಸ್ ಮಾಡ್ಲಿಕ್ಕೂ ಆಗಲ್ಲ..’ ಎಂದರು.             ‘ಇಲ್ಲಮ್ಮ, ಏನೂ ಆಗಲ್ಲ, ನೀನು ಸುಮ್ಮನೆ ಹೇಳ್ತಿಯಾ. ನಾಳೆ ನೋಡು ನಾನು ಹೊಸ ಬಟ್ಟೆ ತೊಡ್ಕೊಂಡು ಹೇಗೆ ಡಾನ್ಸ್ ಮಾಡ್ತೀನಿ ಅಂತ. ಆದರೆ, ಪಾಪ ರಮಿ’             ‘ಏನಾಯ್ತು ಅವನಿಗೆ?’             ‘ಅಮ್ಮ, ಅವರು ಬಹಳ ಬಡವರು. ಅವನಪ್ಪ ಇನ್ನೂ ಗ್ಯಾದರಿಂಗ್ ಫೀಸ್ ಕಟ್ಟಿಲ್ಲ. ಸಿರಿ ಟೀಚರ್ ಫೀಸ್ ಕಟ್ಟಿಲ್ಲ ಅಂದ್ರೆ ಡಾನ್ಸಿಗೆ ಚಾನ್ಸ್ ಇಲ್ಲ ಅಂದ್ರು. ಗೊತ್ತಾ ಅಮ್ಮ, ಅವನಿಗೂ ನನ್ನಂತೆ ಅಲವಕ್ಕಿ ಅಂದರೆ ತುಂಬ ಇಷ್ಟ. ಆದರೆ ಅವನಮ್ಮ ಅವನಿಗೆ ಟಿಫನ್ ಬಾಕ್ಸ್ ಕೊಡಲ್ಲ. ಅವ ಶಾಲೆಯಲ್ಲಿ ಬಿಸಿಯೂಟ ತಿಂತಾನೆ..’ ಎಂದ ಉದಾಸೀನತೆಯಿಂದ.             ‘ಹೌದಾ? ಪಾಪ. ಇರಲಿ, ಈಗ ನೀನು ಓದ್ತಾ ಕೂತ್ಕೋ, ನಾನು ಅಡುಗೆ ಮಾಡಬೇಕು’ ಎನ್ನುತ್ತ ಅಮ್ಮ ಒಳಕ್ಕೆ ಹೋದರು. ಅವರ ಹಿಂದೆಯೇ ಚಿಂಟೂ ‘ಅಮ್ಮ, ಪ್ಲೀಸ್ ಅವಲಕ್ಕಿ ಮಾಡು’ ಎಂದ. ಅವನ ದ್ವನಿಯೂ ಅಡುಗೆ ಮನೆ ಸೇರಿತು. ‘ಇಲ್ಲ, ಪಾಪು, ಅವಲಕ್ಕಿ ಬೇಡ, ಪಪ್ಪಾ ಬಂದ್ಮೇಲೆ ಊಟ ಮಾಡುವಿಯಂತೆ’ ಎಂದಳು ಅಮ್ಮ ಒಳಗಿನಿಂದ.             ಚಿಂಟೂನ ತಂದೆ ಬಂದ ಮೇಲೆ ಊಟ ಮಾಡುವಾಗ ಆತ ‘ಪಪ್ಪಾ, ನಾಳೆ ಗ್ಯಾದರಿಂಗ್ ಇದೆ. ನೀವು ಬರಬೇಕೆಂದು ಸಿರಿ ಟೀಚರ್ ಹೇಳಿದ್ದಾರೆ’ ಎಂದ. ‘ಓಹ್, ಹೌದಾ, ನಾಳೆ ಡಾನ್ಸ್ ಮಾಡ್ತಿಯಾ? ಯಾವ ಹಾಡಿಗೆ?’ ಎಂದು ತಂದೆ ಕೇಳಿದರು. ಚಿಂಟೂ ಅವನ ಫೆವ್ಹರಿಟ್ ‘ಅವಲಕ್ಕಿ ಪವಲಕ್ಕಿ..’ ಹಾಡು ಶುರು ಮಾಡಿದ. ಹಾಡುತ್ತ ‘ಪಪ್ಪಾ, ರಮಿ ನನಗಿಂತ ಚೆಂದ ಡಾನ್ಸ್ ಮಾಡ್ತಾನೆ, ಬಹಳ ಚೆಂದ ಹಾಡ್ತಾನೆ. ಆದರೆ ಪಾಪ..’ ಎಂದ.  ಅಷ್ಟರಲ್ಲಿ ಅವನಮ್ಮ ‘ಈಗ ಹಾಡಿದ್ದು ಸಾಕು, ಊಟ ಮಾಡು’ ಎಂದು ಗದರಿಸಿದರು. ಚಿಂಟೂ ‘ಅಮ್ಮ, ಮರೆತೇ ಹೋಗಿತ್ತು ನೋಡು, ನಾಳೆ ಸಾಯಂಕಾಲದ ತಿಂಡಿಗೆ ಟಿಫನ್ ತರಬೇಕು ಅಂತ ಟೀಚರ್ ಹೇಳಿದಾರೆ, ಅವಲಕ್ಕಿ ಮಾಡು..’ ಎಂದ. ‘ಮತ್ತೆ ಶುರು ಮಾಡಿದಿಯಾ, ಒಂದು ಕೊಡ್ತೀನಿ ನೋಡು ಈಗ’ ಎಂದು ಅಮ್ಮ ಸ್ವಲ್ಪ ಸಿಟ್ಟಾದರು. ಚಿಂಟೂ ಸುಮ್ಮನೆ ಊಟ ಮಾಡಿ ಎದ್ದ. ಮಲಗಿದರೆ ನಿದ್ರೆ ಬರುತ್ತಿಲ್ಲ. ಪದೇ ಪದೇ ಸಿರಿ ಟೀಚರ್ ಮಾತು ನೆನಪಾಗ್ತಿವೆ, ಮತ್ತೆ ಮತ್ತೆ ರಮಿಯ ಕಣ್ಣೀರೂ ಕೂಡ ಕಣ್ಮುಂದೆ ಬರುತ್ತಿವೆ. ಪಾಪ, ರಮಿ..! ನಾಳೆ ಅವನು ಡಾನ್ಸ್ ಮಾಡುವಂತಿಲ್ಲ, ಅವನಿಗೆ ಹೊಸ ಯುನಿಫಾರಂ ಇಲ್ಲ..! ಮರುದಿನ, ಚಿಂಟೂ ತನ್ನ ತಂದೆ ತಾಯಿಯೊಂದಿಗೆ ಗ್ಯಾದರಿಂಗ್ ಶುರುವಾಗುವದಕ್ಕೂ ಅರ್ಧ ಗಂಟೆ ಮೊದಲು ಶಾಲೆ ತಲುಪಿದ. ಭರ್ಜರಿ ವೇದಿಕೆ ಸಿದ್ಧವಾಗಿತ್ತು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಕ್ಕಳು ಡ್ರೆಸ್ ಮಾಡಿಕೊಂಡು ಸಿದ್ಧರಾಗುತ್ತಿದ್ದರು. ಇವರು ಬಂದಿದ್ದನ್ನು ಗಮನಿಸಿದ ಸಿರಿ ಟೀಚರ್ ಬಳಿಬಂದು ‘ಬೇಗ ಬಾ ಚಿಂಟೂ, ನೀನು ರೆಡಿಯಾಗಬೇಕು. ಪ್ಯಾರೆಂಟ್ಸ್ ನೀವು ಹೋಗಿ ಹಾಲ್‌ನಲ್ಲಿ ಕುಳಿತುಕೊಳ್ಳಿ’ ಎಂದು ಅವರು ಚಿಂಟೂನನ್ನು ಕರೆದುಕೊಂಡು ಹೋದರು. ಅಪ್ಪ-ಅಮ್ಮಳತ್ತ ಕೈಬೀಸಿ ಚಿಂಟೂ ಡ್ರೆಸಿಂಗ್ ರೂಂನೊಳಗೆ ಹೋದ. ಅವನ ಕಣ್ಣುಗಳು ರಮಿಯನ್ನು ಹುಡುಕುತ್ತಿದ್ದವು. ಎಲ್ಲರೂ ಬಂದಿದ್ದರು. ಆದರೆ ರಮಿ ಮಾತ್ರ ಕಾಣಲಿಲ್ಲ. ಚಿಂಟೂ ಅಲ್ಲಿಂದ ಹೊರಬಂದು ಶಾಲೆಯ ಆವರಣದಲ್ಲೆಲ್ಲ ಹುಡುಕಿದ. ರಮಿ ಎಲ್ಲೂ ಇರಲಿಲ್ಲ. ಮರಳಿ ಡ್ರೆಸಿಂಗ್ ರೂಂಗೆ ಹೊರಟ. ವಾಟರ್ ಟ್ಯಾಂಕ್ ಹಿಂಬದಿಯಲ್ಲಿ ಯಾರೋ ಬ್ಯಾಗ್‌ಗೆ ತಲೆಯಿಟ್ಟು ಕುಳಿತಂತೆ ಅನಿಸಿತು. ಹೋಗಿ ನೋಡಿದ. ‘ಅರೆ, ರಮಿ, ಇಲ್ಯಾಕೆ ಕುಳಿತಿರುವೆ? ಬಾ ಒಳಗೆ’ ‘ಬೇಡ ಚಿಂಟೂ, ನನಗೆ ಹೊಟ್ಟೆ ನೋಯ್ತಿದೆ’ ‘ಸುಮ್ಮನೆ ಏನೇನೋ ಹೇಳಬೇಡ, ನಡೀ’ ‘ಇಲ್ಲ, ನಿಜಕ್ಕೂ ಹೊಟ್ಟೆ…’ ಎಂದ. ಅವನ ಕಣ್ಣು ತುಂಬಿದ್ದವು. ಚಿಂಟೂ ಅವನ ಕೈಹಿಡಿದುಕೊಂಡು ಒತ್ತಾಯದಿಂದ ಡ್ರೆಸಿಂಗ್ ರೂಂನೊಳಗೆ ಕರೆದುಕೊಂಡು ಹೋದ. ಎದುರಿಗೆ ಸಿರಿ ಟೀಚರ್ ನಿಂತಿದ್ದರು. ರಮಿಯ ಕಣ್ಣುಗಳು ನೆಲವನ್ನೇ ನೋಡುತ್ತಿದ್ದವು. ಚಿಂಟೂ ‘ಟೀಚರ್, ಟೀಚರ್, ನನಗೆ ಹೊಟ್ಟೆ ನೋವಾಗ್ತಿದೆ. ಬಹಳಷ್ಟು ಅವಲಕ್ಕಿ ತಿಂದಿದ್ದೆ. ಈ ನೋವಲ್ಲಿ ನನಗೆ ಡಾನ್ಸ್ ಮಾಡೋಕೆ ಆಗಲ್ಲ. ನೀವು ನನ್ನ ಯುನಿಫಾರಂ ರಮಿಗೆ ಕೊಡಿ. ಅವನು ಡಾನ್ಸ್ ಮಾಡಲಿ. ನಾನು ಮುಂದೆ ಕೂತು ನೋಡ್ತೆನೆ’ ಎಂದ. ಟೀಚರ್‌ಗೆ ಏನೋ ವಿಷಯ ಇದೆ ಎಂಬುದು ಅರ್ಥ ಆಯ್ತು. ‘ಏನಾಯ್ತು ಚಿಂಟೂ, ನಿಜಕ್ಕೂ ಹೊಟ್ಟೆ ನೋವಾ?’ ಎಂದು ಕೇಳಿದರು. ರಮಿಯ ಕಣ್ಣಲ್ಲೂ, ಚಿಂಟೂನ ಕಣ್ಣಲ್ಲೂ ನೀರೂರಿದ್ದವು. ‘ಇಲ್ನೋಡು, ರಮಿಯ ತಂದೆ ಫೀಸ್ ಕೊಡದಿದ್ದರೂ ಪರವಾಗಿಲ್ಲ. ಅವನಿಗಾಗಿಯೂ ನಾನು ಯುನಿಫಾರಂ ತಂದಿದ್ದೇನೆ. ಅವನೂ ತೊಟ್ಟುಕೊಂಡು ರೆಡಿಯಾಗಲಿ, ನೀನು ರೆಡಿಯಾಗು. ಬನ್ನಿ ಬೇಗ, ಬೇಗ’ ಎನ್ನುತ್ತ ಇಬ್ಬರನ್ನೂ ಸೆಳೆದು ಅಪ್ಪಿಕೊಂಡರು. ಮೂವರ ಕಣ್ಣು ತುಂಬಿದ್ದರೂ ತುಟಿಗಳಲ್ಲಿ ನಗು ಅರಳಿತ್ತು.   ವೇದಿಕೆ ಕಾರ್ಯಕ್ರಮ ಪ್ರಾರಂಭವಾಯ್ತು. ಒಂದೊAದಾಗಿ ಪ್ರದರ್ಶನ ಜರುಗಿದವು. ಮೂರನೇ ಕ್ಲಾಸಿನ ಸರದಿ ಬಂತು. ಮಕ್ಕಳೆಲ್ಲ ವೇದಿಕೆಗೆ ಬಂದರು. ಹಾಡಿನ ಯುನಿಫಾರಂನಲ್ಲಿ ಮಕ್ಕಳು ತುಂಬ ಮುದ್ದಾಗಿ ಕಾಣುತ್ತಿದ್ದರು. ಹಾಡು ಶುರುವಾಯ್ತು. ಅವಲಕ್ಕಿ ಪಲವಲಕ್ಕಿ             ಕಾಂಚಣ, ಮಿಣಮಿಣ             ಡಾಮ್ ಡೂಮ್ ಟಸ್ ಪುಸ್             ಕೋಯ್ ಕೊಟಾರ್             ಅವಲಕ್ಕಿ ಪವಲಕ್ಕಿ ಮಕ್ಕಳು ಬಲು ಉತ್ಸಾಹದಿಂದ ಕುಣಿದರು. ರಮಿ ಎಲ್ಲರಿಗಿಂತ ಚೆಂದ ಕುಣಿದ. ಅವನಿಗಿಂತ ಚೆಂದ ಎನ್ನುವಂತೆ ಚಿಂಟೂ ಕುಣಿದ. ಅವರ ಹರ್ಷಕ್ಕೆ ಪಾರವೇ ಇರಲಿಲ್ಲ. ಮಕ್ಕಳ ಕುಣಿತ ಕಂಡು ಸಿರಿ ಟೀಚರ್‌ಗೂ ಆನಂದ. ಹಾಡು ಮುಗಿದ ಕೂಡಲೇ ಎಲ್ಲರೂ ವೇದಿಕೆಯಿಂದ ನಿರ್ಗಮಿಸಿದರು. ರಮಿ ಬಹಳ ಹಿಗ್ಗಿನಲ್ಲಿದ್ದ. ಅಷ್ಟರಲ್ಲಿ ಅವನಿಗೆ ತಾನು ಮನೆಯಿಂದ ಬರುವಾಗ ಅಮ್ಮ ಕೊಟ್ಟಿದ್ದ ಟಿಫನ್ ಬಾಕ್ಸ್ ನೆನಪಾಯ್ತು. ‘ಏಯ್ ಚಿಂಟೂ, ಬಾ ಇಲ್ಲಿ. ಇವತ್ತು ನನ್ನಮ್ಮ ಟಿಫನ್ ಕಟ್ಟಿದ್ದಾಳೆ, ಬಾ ತಿನ್ನೋಣ’ ಎನ್ನುತ್ತ ಕೂಗಿದ. ಕೂಡಲೇ ಚಿಂಟೂ ಅವನ ಬಳಿ ಬಂದ. ಟಿಫನ್ ತೆರೆದು ನೋಡಿದರೆ ಅದರಲ್ಲಿಯೂ ‘ಅವಲಕ್ಕಿ..’..ಓಹ್…!! ಮತ್ತೆ ಶುರುವಾಯ್ತು… ಅವಲಕ್ಕಿ, ಪವಲಕ್ಕಿ             ಕಾಂಚಣ, ಮಿಣಮಿಣ             ಡಾಮ್ ಡೂಮ್ ಟಸ್ ಪುಸ್

ಅವಲಕ್ಕಿ ಪವಲಕ್ಕಿ Read Post »

ಇತರೆ, ವರ್ತಮಾನ

ಬರಗೂರರೆಂಬ ಬೆರಗು

ಲೇಖನ ಬರಗೂರರೆಂಬ ಬೆರಗು ಮಮತಾ ಅರಸೀಕೆರೆ ಪ್ರೊ.ಬರಗೂರು ರಾಮಚಂದ್ರಪ್ಪನವರ ಬಗ್ಗೆ ಬರೆಯುವುದೆಂದರೆ ಸಾಗರಕ್ಕೆ ಸೇರುವ ನದಿಗಳನ್ನು ಎಲ್ಲೋ ಕುಳಿತು ಎಣಿಸಿದಂತೆ.ಯಾವುದೇ ಉತ್ಪ್ರೇ  ಕ್ಷೆಯಿಲ್ಲದ ಮಾತುಗಳಿವು ಎಂದು ಅವರನ್ನು ಸನಿಹದಿಂದ ಬಲ್ಲವರಿಗೆಲ್ಲಾ ಚಿರಪರಿಚಿತ.ಅವರ ಹತ್ತು ಹಲವು ಮಜಲುಗಳ ವೈವಿಧ್ಯ ಚಟುವಟಿಕೆಗಳನ್ನು ಸಾಮಾನ್ಯವಾಗಿ ಎಲ್ಲರೂ ಬಲ್ಲರು.ನಾನಿಲ್ಲಿ ಬರಗೂರು ಸರ್ ಬಗ್ಗೆ ಅಕಾಡೆಮಿಕ್‌ ಅಲ್ಲದ ಕೆಲವೇ ಸರಳ ಮಾತುಗಳಲ್ಲಿ ಬರೆಯಲು ಪ್ರಯತ್ನಪಡುವೆ. ಬರಗೂರರನ್ನ ಕಂಡಿದ್ದು ಪತ್ರಿಕೆಗಳಲ್ಲಿ ಅಂಕಣಗಳ ಮೂಲಕ.ಸಾಮಾನ್ಯವಾಗಿ ಆಯ್ದ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಲೇಖನ, ಅಂಕಣಗಳನ್ನು ತಪ್ಪದೇ ಓದುತ್ತಿದ್ದೆ.ಬಿ.ಆರ್.ಬರಹಗಳನ್ನು ಮೆಚ್ಚುತ್ತಿದ್ದೆ.ನಂತರ ಅಲ್ಲಿಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ದೂರದಿಂದ ಗಮನಿಸಿ ಭಾಷಣಗಳನ್ನು ಆಲಿಸುತ್ತಿದ್ದೆ.ನನ್ನ ವೈಚಾರಿಕ ಗುರುಗಳು ಸ್ವಾಮಿಯವರು ಒಮ್ಮೆ ಬಿ.ಆರ್.ರನ್ನು ತಮ್ಮ ಗುರುಗಳೆಂದೂ, ತಮ್ಮ ಅಧ್ಯಯನದ ಸಲುವಾಗಿ ಅವರು ವಹಿಸುತ್ತಿದ್ದ ವಿಶೇಷ ಆಸಕ್ತಿಯನ್ನು, ಪ್ರೀತಿ ಕಾಳಜಿಯನ್ನೂ ವರ್ಣಿಸಿ ತುಂಬು ಮೆಚ್ಚುಗೆಯಿಂದ ಸ್ಮರಿಸುವಾಗ ಸರ್ ಬಗ್ಗೆ ಮತ್ತಷ್ಟು ಅಭಿಮಾನವಾಯ್ತು. ಸ್ವಾಮಿ ಗುರುಗಳ ದೃಷ್ಟಿಯಲ್ಲಿ ಬರಗೂರರಿಗೆ ವಿಶೇಷ ಸ್ಥಾನಮಾನ. ಅದೇ ಭಾವದ ಮುಂದುವರಿಕೆ ನನ್ನಲ್ಲೂ. ಬಿ.ಆರ್.ಸರ್‌ನ ತೀರಾ ಹತ್ತಿರದಿಂದ ಕಂಡದ್ದು ಶ್ರವಣಬೆಳಗೊಳದಲ್ಲಿ. ನಮ್ಮ ಪರಿಚಯದ ಸ್ನೇಹಿತರೊಬ್ಬರು ಶ್ರವಣಬೆಳಗೊಳದಲ್ಲಿ ಸಿನೆಮಾ ಶೂಟಿಂಗ್ ನೋಡಲು ಆಹ್ವಾನಿಸಿದ್ದರು.ಬರಗೂರರು ಸಿನೆಮಾ ನಿರ್ದೇಶಕರು. ಸ್ನೇಹಿತರೊಂದಿಗೆ ತೆರಳಿ, ಕೆಲವು ಹೊತ್ತು ಅಲ್ಲಿದ್ದು ಸರ್‌ನ ಕೂಡ ಕ್ಲುಪ್ತವಾಗಿ ಮಾತನಾಡಿಸಿ ವಾಪಸ್ ಬಂದ ನೆನಪು. ನಂತರ ಮಾತನಾಡಲು ಸಿಕ್ಕಿದ್ದು ತೀರಾ ಕಡಿಮೆ.ಒಂದೆರಡು ಕಾರ್ಯಕ್ರಮಗಳಲ್ಲಿ ಪರಿಚಯಿಸಿಕೊಂಡಾಗ ಆತ್ಮೀಯವಾಗಿಯೇ ಮಾತನಾಡಿಸಿದರು. ಸಾಂಸ್ಕೃತಿಕ ವಿಷಯಗಳಿಗಾಗಿ ಆಗಾಗ ನಾನು ಮೆಸೇಜ್ ಮಾಡಿದಾಗ ತಪ್ಪದೇ ಉತ್ತರಿಸುವರು.ಶಿಕ್ಷಣ ಇಲಾಖೆಯ ಸುಧಾರಣೆಗೆ ಸಂಬಂಧಿಸಿದಂತೆ ಕೆಲವು ಅಹವಾಲು ಹೊತ್ತು ಡಿ ಎಸ್ ಈ ಆರ್ ಟಿ ಗೆ ತೆರಳಿದ್ದಾಗ ಪುಸ್ತಕ ಕಮಿಟಿ ಅಧ್ಯಕ್ಷರಾಗಿದ್ದ ಅವರು ಸುಮಾರು ಅವಧಿಯ ಕಾಲ ನಮ್ಮೊಂದಿಗೆ ಮಾತನಾಡಿ ಸಹನೆಯಿಂದ ಆಲಿಸಿ ಸೂಕ್ತ ಪ್ರತಿಕ್ರಿಯೆ ನೀಡಿದಾಗ ಅವರ ಸರಳತೆ, ಸಹೃದಯತೆ ಕಾಳಜಿ ಬಗ್ಗೆ ಖುಷಿಯಾಗಿತ್ತು.ಕೆಲವು ದಿನಗಳ ನಂತರ ಡಿ.ಎಸ್.ಈ.ಆರ್.ಟಿಯಲ್ಲಿಯೇ ಒಂದು ಕಾರ್ಯಕ್ರಮ ಆಯೋಜಿಸಿ ಪಠ್ಯಪುಸ್ತಕಕ್ಕೆ ಸಂಬಂಧಿಸಿದಂತೆ, ಗ್ರಂಥಾಲಯ ಸುಧಾರಣೆ ಕುರಿತಂತೆ ಸಲಹೆ ಸೂಚನೆ ನೀಡಲು ಬರಹಗಾರ ಶಿಕ್ಷಕರನ್ನು ಆಹ್ವಾನಿಸಿದ್ದರು.ಪಠ್ಯಪುಸ್ತಕ ಕಮಿಟಿಯಲ್ಲಿ ಬರಹಗಾರರಿದ್ದರೆ ಅದರ ಸ್ವರೂಪ ಮತ್ತಷ್ಟು ಉತ್ತಮವಾಗುತ್ತಿತ್ತೇನೋ ಎಂದ ಅವರ ದೂರದರ್ಶಿತ್ವದ ಮಾತಿನ್ನೂ ನನಗೆ ನೆನಪಿದೆ. ಸಾಂಸ್ಕೃತಿಕ ನೀತಿಯ ವರದಿಯನ್ನು ಸಿದ್ದಪಡಿಸಿದ್ದು, ಅದರ ಜಾರಿಗೆ ಸಾಂಸ್ಕೃತಿಕ ವಲಯ ಒತ್ತಾಯಿಸುತ್ತಿದ್ದುದನ್ನು ಗಮನಿಸುತ್ತಿದ್ದೆ. ಮತ್ತು ಆ ಸಂಬಂಧ ಕೆಲವು ಸಂದೇಶ ಕಳಿಸಿದ್ದು ಬಿಟ್ಟರೆ ನಂತರ ಅವರ ಸಿನೆಮಾ ಆರಂಭವಾಗುವಾಗ ಮತ್ತೆ ಮೆಸೇಜ್‌ಗಳು. ಸಾಂಸ್ಕೃತಿಕ ವಲಯದ ಕೆಲವು ಅಸಂಬದ್ಧ ನಿರ್ಣಯಗಳಿಂದ ನಮಗೆ ಹತಾಶೆಯಾದಾಗ ಪುನಃ ಸಂಪರ್ಕ ಮಾಡಿದ್ದೆ.ತಡಮಾಡದೇ ಪ್ರತಿಕ್ರಿಯಿಸುತ್ತಿದ್ದ ಅವರ ಸಂವಹನ ಗುಣ ಭರವಸೆ ತುಂಬುತ್ತಿತ್ತು. ತೀರಾ ಇತ್ತೀಚೆಗೆ ಲಾಕ್‌ಡೌನ್‌ ಆರಂಭವಾದಾಗ ಎಲ್ಲರೂ ಭೀತಿಯಿಂದ ಗೃಹಬಂಧನದ ರುಚಿ ನೋಡುವಂತಾಯಿತು. ಏಕತಾನತೆ ಹಾಗೂ ಕ್ಲೇಷಗಳನ್ನು ತಾತ್ಕಾಲಿಕವಾಗಿ ಮರೆಸುವ ಸಾಧನವಾಗಿ ಬರಹ ನೆರವಿಗೆ ಬಂದು ಒಂದಷ್ಟು ಕವಿತೆ ಬರೆದು ಹಿರಿಯ ಲೇಖಕರಿಗೆ ಕಳಿಸುವಾಗ ಬಿ.ಆರ್.ಸರ್ ಗು ಕಳಿಸಿದೆ. ಸಕಾರಾತ್ಮಕ ಸ್ಪಂದನೆಯಿಂದ ಹುರಿಗೊಂಡೆ.ಅದೇ ವೇಳೆಗೆ ಕೋಲಾರದ ಗೆಳೆಯರ ಯೋಜನೆಯೊಂದಕ್ಕೆ ಬರಗೂರರನ್ನ ಯೂಟ್ಯೂಬ್  ಚಾನಲ್ ಗೆ ಮೌಖಿಕವಾಗಿ ಪರಿಚಯಿಸುವ ಸದಾವಕಾಶ ದಕ್ಕಿತು. ಆ ಸಂದರ್ಭದಲ್ಲಿ ಅವರ ಕುರಿತು ಮತ್ತಷ್ಟು ತಿಳಿಯುವ ಸಲುವಾಗಿ  ಅಂತರ್ಜಾಲ ತಡಕಾಡುವಾಗ ದಕ್ಕಿದ್ದು ಅಪಾರ ಸಾಮಗ್ರಿ . ಅಲ್ಲಿಂದ ಶುರುವಾಯಿತು ನನ್ನ ಹುಡುಕುವಿಕೆ.ಅದೆಷ್ಟೊಂದು ದಾಖಲೆಗಳು.ಯೂಟೂಬ್ , ಪತ್ರಿಕೆ, ವಿಕಿಪಿಡಿಯಾದಲ್ಲೆಲ್ಲೆಲ್ಲಾ ಬಹಳಷ್ಟು ಮಾಹಿತಿಗಳು. ಓದುತ್ತಾ, ನೋಡುತ್ತಾ ಅವುಗಳಲ್ಲಿ ಕೆಲವು ತಪ್ಪಿಹೋದಾವೆಂದು ಎಚ್ಚರ ವಹಿಸುವಾಗ ಎಫ್.ಬಿ. ಪೇಜ್‌ ತೆರೆದು ಅಲ್ಲಿ ಸಂಗ್ರಹಿಸುತ್ತಾ ಹೋದೆ. ಅವರ ಸಾಮಾಜಿಕ ತುಡಿತ, ಸ್ಪಂದನೆ ಇಷ್ಟವಾಗುತ್ತ ಮತ್ತಷ್ಟು ಮಗದಷ್ಟು ಅಭಿಮಾನಿಯಾದೆ. ಸಮಾಜವನ್ನು,ತನ್ನ ಸುತ್ತಲಿನ ಪ್ರತೀ ಸಂದರ್ಭವನ್ನು ಕುರಿತು ಅವರ ಅಪೂರ್ವ ಒಳನೋಟವುಳ್ಳ ಗ್ರಹಿಕೆ, ಆ ಅರಿವಿನ ವಿಸ್ತಾರ, ಓದಿನ ವ್ಯಾಪ್ತಿ, ಮುಂದ್ಗಾಣಿಕೆ, ಮುಂದಾಲೋಚನೆ ದೂರದೃಷ್ಟಿಯ ಮಾತುಗಳು ನನಗೆ ಬೇರೆಯದೇ ವಿಶ್ವವನ್ನು ಮನಗಾಣಿಸತೊಡಗಿದವು. ಪ್ರತೀ ಕದಲಿಕೆಯನ್ನು ಅವರು ಕಾಣುವ ರೀತಿ, ವಿಮರ್ಶಿಸುವ ಪರಿ, ವಿಶಿಷ್ಟ ಆಯ್ಕೆ, ವಸ್ತು, ಘಟನೆ, ವಾತಾವರಣ, ಮೊದಲಾದವನ್ನ ಕಾಣಬೇಕಾದ ನೋಟದ ಪರಿಚಯ, ಮೊದಲಾದವುಗಳಲ್ಲಿ ಅವರಿಗೆ ಅವರೇ ಸಾಟಿ. ಸೂಕ್ಷ್ಮಾತಿಸೂಕ್ಷ್ಮ ಸ್ವಭಾವದ ಮೇಷ್ಟ್ರು ಎಳೆ ಗರಿಕೆಯ ಚಲನೆಯಲ್ಲೂ ಅದ್ಭುತವನ್ನು ಕಾಣಬಲ್ಲರು.ಕೂದಲು ಸೀಳಿದಂತಹ ಆಂತರಿಕ ಅವಲೋಕನದ ತಾಕತ್ತು ಅವರ ಅಗಾಧ ಶಕ್ತಿ.ಇಷ್ಟೆಲ್ಲ ವಿಷಯವನ್ನ ಅಂತರ್ಜಾಲದ ಮೂಲಕ ಮಾತ್ರ ಪಡೆದ ನನಗೆ ಅವರ ಶಿಷ್ಯ ವರ್ಗದವರ ಮೇಲೆ ಅಸೂಯೆಯಾಗಿದ್ದಂತೂ ಖರೆ.ಯುವ ಸಮುದಾಯವನ್ನು, ಯುವ ಪೀಳಿಗೆಯನ್ನು ಬಿ.ಆರ್.ಸರ್ ಪ್ರೋತ್ಸಾಹಿಸುವ ಪರಿಯ ಬಗ್ಗೆ ಅವರ ಆತ್ಮೀಯರಿಂದಲೇ ತಿಳಿಯಬೇಕು.ಅವರಿಂದ ಸಹಾಯ ಸಹಕಾರ ಪಡೆದಿರುವ ಅಪಾರ ಶಿಷ್ಯ ಬಳಗದ ದಂಡೇ ಇದೆ. ಯೂಟೂಬಿನಲ್ಲಿ ಅವರ ಹಾಗೂ ಅವರ ಪತ್ನಿಯವರ ಆತಿಥ್ಯ ಸತ್ಕಾರಗಳ ಬಗ್ಗೆ ತಿಳಿದು ಅಚ್ಚರಿಯಾಗಿತ್ತು. ಚಳುವಳಿ, ಸಂಘಟನೆ ಸಾಮಾಜಿಕವಾಗಿ ತೊಡಗಿಸಿಕೊಂಡವರಿಗೆ ಸೃಜನಾತ್ಮಕತೆ ಸಾಧ್ಯವಿಲ್ಲ ಎಂಬುದೊಂದು ಮಾತಿದೆ.ಅದನ್ನ ಸಾರಾಸಗಟಾಗಿ ಸುಳ್ಳು ಎಂದು ಪ್ರತಿಪಾದಿಸಿದವರು ಮೇಷ್ಟ್ರು.ಸಂವೇದನಾಶೀಲ ಬರಹಗಳ ಮೂಲಕ ಎಲ್ಲವನ್ನೂ ಸಮತೂಗಿಸಿ ತೋರಿಸಿದವರು. ಪದ್ಯಗಳ ಮೂಲಕವೂ ನವಿರುತನವನ್ನು ಸೊಗಸಾಗಿ ನಿರೂಪಿಸಿದವರು.ಒಂದು ವಿಷಯವನ್ನು ವಿಂಗಡಿಸಿ ವಿಶ್ಲೇಷಿಸುವುದರ ಮೂಲಕ ಆವಾಹಿಸಿಕೊಳ್ಳುವ ಮಾರ್ಗಗಳನ್ನು ಪರಿಚಯಿಸಿದವರು. ನಾಣೊಂದು ಪದ್ಯದಲ್ಲಿ ಕೊಂಚ ಸಂಘರ್ಷವನ್ನು ಅಡಕಗೊಳಿಸಿದಾಗ ‘ ಸಂವಹನ ಬೀದಿಯಲ್ಲಿ ನಿಂತು ಜಗಳವಾಡಿದಂತಿರಬಾರದು’ಎಂಬ ಮಾತಿನ ಮೂಲಕ ನಯವಾದ ಮಾತಿನ ಪೆಟ್ಟು ಕೊಟ್ಟು ತಿದ್ದಿದವರು.ಸಿನೆಮಾ ಮಾಧ್ಯಮದ ಮೂಲಕ ಅವರು ಸಾಧಿಸಿದ್ದು ಬಹಳ.ಕಲಾತ್ಮಕತೆ ಮೂಲಕ ಸದಭಿರುಚಿಯನ್ನು ಯಥೇಚ್ಚವಾಗಿ ಹಂಚಿದವರು. ಒಂದೊಂದು ಸಿನೆಮಾವು ಕ್ಲಾಸಿಕ್.ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರ ಸಾಕಷ್ಟು ಕೆಲಸಗಳು ಇಂದಿಗೂ ಜನಜನಿತ.ಅವರ ಕತೆಗಳು, ಕವನಗಳು, ಅಂಕಣ ಬರಹಗಳು, ಕಾದಂಬರಿಗಳನ್ನು ಓದುವಾಗಅವರ ಸಂಪೂರ್ಣ ನಿಲುವು ಖಚಿವಾಗುತ್ತದೆ.ಬದ್ಧತೆ, ತಲ್ಲೀನತೆಗೆ ಅವರೇ ಮಾದರಿ.ವಿವಿಧ ಕ್ಷೇತ್ರಗಳಲ್ಲಿ ವೈವಿಧ್ಯತೆಯನ್ನು ಕಾಣಿಸಿದ ಅವರು ತೊಡಗಿಕೊಳ್ಳದ ಕ್ಷೇತ್ರಗಳೇ ಇಲ್ಲವೆನ್ನುವಷ್ಟು ಸಾಧಿಸಿದವರು. ಸ್ವತಃ ಪ್ರಾಧ್ಯಾಪಕರಾಗಿದ್ದು, ಈಗಲೂ  ಶೈಕ್ಷಣಿಕ ಸವಾಲುಗಳಿಗೆ ಸಕಾಲದಲ್ಲಿ ಧಾವಿಸಿ ನೀಡುವ ಸಲಹೆಗಳು, ರಾಜಕೀಯವಾಗಿ ಒದಗಿಸುವ ಮಾರ್ಗದರ್ಶನಗಳು ಮುತ್ಸದ್ದಿಯ ಅಸಾಧಾರಣಗುಣದವು. ಇಷ್ಟೆಲ್ಲಾ ಜ್ಞಾನ ದಕ್ಕಿದ್ದೂ ಕೂಡ ಪತ್ರಿಕೆ ಮತ್ತು ಅಂತರ್ಜಾಲದಲ್ಲಿಯೇ.ಇಷ್ಟೆಲ್ಲ ಹೇಳಲು ಅರ್ಹತೆಯಿದೆಯೋ ಇಲ್ಲವೋ,  ಸಂಕೋಚ ಮುಜುಗರದಿಂದಲೇ ಹೇಳಬೇಕಾಯಿತು. ಗ್ರಾಮೀಣ ಹಿನ್ನೆಲೆಯಿಂದ ಬದುಕನ್ನು ರೂಪಿಸಿಕೊಂಡು, ಸತತ ಪ್ರಯತ್ನ ಹಾಗೂ ನಿರಂತರ ಬದ್ಧತೆಯ ಛಲದ ಮೂಲಕ ಅಸಾಮಾನ್ಯ ಚಿಂತಕರಾದ, ಸಾಂಸ್ಕೃತಿಕ ಚಾಲಕರಾದ ಬಿ.ಆರ್.ಮೇಷ್ಟು ಜನ್ಮದಿನ ಅಕ್ಟೋಬರ್ ತಿಂಗಳಿನಲ್ಲಿಯೇ ಬರುತ್ತದೆ. ಈ ಹಿಂದೆ ಅವರ ಬಳಗ ಏರ್ಪಡಿಸಿದ್ದ ‘ಬರಗೂರು-೭೦, ವಿಚಾರ ಸಂಕಿರಣ’ ದಲ್ಲಿ ಪಾಲ್ಗೊಂಡ ಖುಷಿ ನನ್ನದು.ಈಗಲೂ ಇದೇ ಅಕ್ಟೋಬರ್ ೨೯ ರಂದು ಬೆಳಗ್ಗೆ ಅವರ ಶಿಷ್ಯವರ್ಗ ರಾಷ್ಟ್ರೀಯ ವೆಬಿನಾರ್‌ ಆಯೋಜಿಸಿ ಗುರುಗಳ ಬಗ್ಗೆ ಹಿರಿಯ ಲೇಖಕರಿಂದ ಮಾತನಾಡಿಸಲಿದ್ದಾರೆ.ಶೀರ್ಷಿಕೆ- ನಮ್ಮ ಮೇಷ್ಟ್ರು, ನಮ್ಮ ಹೆಮ್ಮೆ. ಹೆಮ್ಮೆಯ ಸಂಗತಿಯೇ. ಬರಗೂರರ ಬಳಗ, ಅಭಿಮಾನಿಗಳು, ಅವರ ಅನುಯಾಯಿಗಳ ಸಂಖ್ಯೆ ಅಪಾರ. ಅವರ ಕುರಿತು ಅದೆಷ್ಟೋ ಪಿ.ಎಚ್.ಡಿ.ಗಳಾಗಿವೆ. ಬರಹಗಳು, ಲೇಖನಗಳು ಬಂದಿವೆ. ಆ ಮಟ್ಟಕ್ಕಲ್ಲದಿದರೂ ಕಿರು ಅಭಿಮಾನಿಯಾಗಿ ಅಕ್ಷರಗಳಲ್ಲಿ ಹಿಡಿಯಲು ಸಾಧ್ಯವಾಗದೆ ಕೆಲವೇ ಪದಗಳಲ್ಲಿ ಗ್ರಹಿಕೆಗೆ ದಕ್ಕಿದಂತೆ ದಾಖಲಿಸಲು ಯತ್ನಿಸಿರುವೆ. ************************************** ಫೋಟೊ ಆಲ್ಬಂ

ಬರಗೂರರೆಂಬ ಬೆರಗು Read Post »

ಇತರೆ, ಜೀವನ

ಹೀಗೇಕೆ ನನ್ನವ್ವ ?

ಲೇಖನ ಹೀಗೇಕೆ ನನ್ನವ್ವ ? ಸುಮಾ ಆನಂದರಾವ್       ಇಂದೇಕೆ ನನ್ನವ್ವ ಪದೇ ಪದೇ ನೆನಪಾಗುತ್ತಿದ್ದಾಳೆ? ಅವಳೇಕೆ ಹಾಗಿದ್ದಳು?                  ಜೆರ್ಮನಿಯಲ್ಲಿ  ಒಬ್ಬ  ವಯೋ ವೃದ್ಧೆಯ ಪರಿಚಯವಾದಂದಿನಿಂದ ಗಮನಿಸುತ್ತಿದ್ದೇನೆ.  ಅವಳ ದಿಟ್ಟತನ ಅಚ್ಚರಿ ಉಂಟುಮಾಡುತ್ತಿದೆ. ಅವಳು ತನ್ನೆಲ್ಲಾ  ಕರ್ತವ್ಯ ಮುಗಿಸಿದ್ದಳು, ಮಕ್ಕಳನ್ನು ಓದಿಸಿ ಅವರ ಕಾಲಮೇಲೆ ಅವರು ನಿಲ್ಲುವ ಹಾಗೆ ಮಾಡಿದ್ದಾಳೆ. ಆಗಾಗ ಮಕ್ಕಳು ಬಂದು ಹೋಗುತ್ತಿರುತ್ತಾರೆ. ತೊಂಬತ್ತು ವರ್ಷಆದರೂ ತನ್ನ ಕೆಲಸ ತಾನೇ ಮಾಡಿಕೊಳ್ಳುತ್ತಾಳೆ, ಕೈಯಲ್ಲಿ ಕೋಲು  ಹಿಡಿದು ಸಣ್ಣ ನೂಕುವ ಗಾಡಿಯಲ್ಲಿ ಅಗತ್ಯ ವಸ್ತುಗಳನ್ನು ಕೊಂಡು ತರುತ್ತಾಳೆ, ಇಲ್ಲಿ ಬಹಳಷ್ಟು ವಯಸ್ಸಾದವರು ನಡೆದೇ ಹೋಗುತ್ತಿರುತ್ತಾರೆ. ಅವರೆಲ್ಲರೂ ಬೈಸಿಕಲ್ ತುಳಿಯುವ ಪರಿ ನೋಡಿದರೆ ಗೊತ್ತಾಗುತ್ತದೆ ,  ಇದೆಲ್ಲ ಅವರಿಗೆ ಚಿಕ್ಕಂದಿನ ಅಭ್ಯಾಸ ಎಂದು. ಮೊಮ್ಮಕ್ಕಳನ್ನು ಅಜ್ಜ ಅಜ್ಜಿಯರು ಸುತ್ತಾಟಕ್ಕೆ ಕರೆದುಕೊಂಡು ಹೋಗಿ ಅಲ್ಲಿಯ ವಿಷಯಗಳನ್ನು ತಿಳಿಸುವ ಪರಿ ಬೆರಗು ಮೂಡಿಸುತ್ತದೆ. ಇಲ್ಲಿಯ ಸರಕಾರ ನಿವೃತ್ತಿ ವೇತನ ಕೈತುಂಬ ಕೊಡುತ್ತಾರೆ, ಅಂತೇಲೆವಯಸ್ಸಾದವರು  ಕಣ್ಣಗೆ ಕಂಡ ಬಟ್ಟೆ ತೊಟ್ಟು ಸಂತಸದಿಂದ ಉತ್ಸಾಹವಾದ ಜೀವನ ನಡೆಸುತ್ತಾರೆ. ಅವರಲ್ಲೂ ಮಮಕಾರಗಳು, ಅನುಬಂಧಗಳಿವೆ. ಮಕ್ಕಳು ಮೊಮ್ಮಕ್ಕಳು, ಅಕ್ಕ ತಂಗಿ ಹೀಗೆ ಸಂಬಂಧಗಳು ಗಟ್ಟಿಯಾಗಿರುತ್ತವೆ ಎಂದು ತಿಳಿದದ್ದು ಆ ಜರ್ಮನ್ ಮಹಿಳೆಯಿಂದ. ಆಕೆಗೆ ಬದುಕನ್ನು ಎದುರಿಸುವ ರೀತಿಯನ್ನು ಅವರಮ್ಮ ” ಕ್ರಿಸ್ಟಿನಾ”  ಹೇಳಿಕೊಟ್ಟಳಂತೆ.               ” ಕ್ರಿಸ್ಟಿನಾ” ಆಕೆಯ ಫೋಟೋ ನೋಡಿದಾಗ ತಟ್ಟನೆ ನನಗೆ ನನ್ನವ್ವ ನೆನಪಾದಳು. ಈಗ್ಗೆ ಆಕೆ ಇದ್ದರೆ ೧೩೦ ವರ್ಷ. ಬಹುಶಃ ನನ್ನವ್ವನ ಆಸುಪಾಸಿನವಳೇ. ಕ್ರಿಸ್ಟಿನಾ ಎಷ್ಟು ಚೆಂದ ಇದ್ದಾಳೆ! ಆಧುನಿಕ ಮಹಿಳೆಯಂತೆ ಅಲಂಕಾರ! ವಿದ್ಯಾವಂತಳು, ವಿಜ್ಜ್ನಾನಿ,  ಸಬಲೆ. ಇಲ್ಲಿ ಹೆಣ್ಣುಮಕ್ಕಳಿಗೆ ಶತ ಶತಮಾನಗಳಿಂದಲೂ ಸಮಾನತೆ, ಸ್ವತಂತ್ರತೆಯ ಹಕ್ಕು ಇತ್ತು. ಆದರೆ ನನ್ನವ್ವ ಏಕೆ ಹಾಗಿದ್ದಳು?               ಅವ್ವ ಎಂದರೆ ನಮ್ಮ ತಂದೆಯ ತಾಯಿ ಹನುಮಕ್ಕ. ಅವಳದು ನಾಗಸಮುದ್ರ ತವರು ಮನೆ, ಗಂಡನ ಮನೆ ಸಂಡೂರು ತಾಲೂಕಿನ ಬಂಡ್ರಿ . ಆಕೆಗೆ ಐದು ಗಂಡುಮಕ್ಕಳು ಎರೆಡು ಹೆಣ್ಣು ಮಕ್ಕಳು. ತುಂಬು ಕುಟುಂಬ, ಗಂಡ ಶಾನುಭೋಗರು ರಾಘಪ್ಪ ದತ್ತು ಪುತ್ರ. ಆತನ ಅಜ್ಜಿಪುಟ್ಟಮ್ಮ ಮಗಳ ಮಗ ಅಂದರೆ  ಮೊಮ್ಮಗನನ್ನು ತನ್ನ ಸಮಸ್ತ ಆಸ್ತಿಗೂ ವಾರಸುದಾರನನ್ನಾಗಿ ಮಾಡಿದ್ದಳು.               ನನ್ನವ್ವ ಹನುಮಕ್ಕನಿಗೆ  ಕೊನೆಯ ಮಗ ನಮ್ಮಪ್ಪ.  ಹಾಗಾಗಿ ಅವ್ವನಿಗೆ ವಯಸ್ಸಾಗಿತ್ತು. ನಾನು ಹನ್ನೆರೆಡು ವಯಸ್ಸಿಗೆ ಬರುವವರೆಗೂ ಮಾತ್ರ ಇದ್ದಳು. ತಂಗಿ ತಮ್ಮಂದಿರು ಹುಟ್ಟುವವರೆಗೂ ಅವ್ವನೇ ಗೆಳತಿ. ನನ್ನಮ್ಮ , ಅವ್ವನಿಗೆ ತಮ್ಮನ ಮಗಳು ಸೋದರ ಸೊಸೆಯನ್ನೇ ಮಗನಿಗೆ ತಂದುಕೊಂಡಿದ್ದಳು. ಅವ್ವ  ಒಳ್ಳೆಯ ಬಣ್ಣ. ಉದ್ದನೆಯ ಮೂಗು, ಪುಟ್ಟ ಬಾಯಿ  ನಿಜಕ್ಕೂ ಸುಂದರಿ. ಆದರೆ ಮಡಿ ಹೆಂಗಸು. ಅಂತಹವರು ಉಡುವ ಸೀರೆಗಳು ಬೇರೆ ರೀತಿಯೇ ಇರುತ್ತಿದ್ದವು . ಯಾವಾಗಲು ಸೆರಗು ಹೊದ್ದು ತಲೆ ಮುಚ್ಚಿಕೊಂಡಿರುತ್ತಿದ್ದಳು .  ನಾನು ಅವ್ವನ ಪಕ್ಕ ಮಲಗುತ್ತಿದ್ದೆ ರಾತ್ರಿ ಹೊತ್ತು ಅವಳನ್ನು ಹತ್ತಿರದಿಂದ ನೋಡಿ ನನ್ನ ಮುಗ್ದ ಮನಸ್ಸಿಗೆ ನೂರಾರು ಯೋಚನೆ ಬರುತ್ತಿತ್ತು. ಅವ್ವನೇಕೆ ಎಲ್ಲರಹಾಗಿಲ್ಲ?               ಅವಳ ಆ ವಿರೂಪವು ಪ್ರಶ್ನಾರ್ಥಕ ಚಿನ್ಹೆ ಯಾಗಿರುತ್ತಿತ್ತು. ಒಂದೊಮ್ಮೆ ನಾನು ”ಅವ್ವ ನೀ ಹೀಗೇಕೆ? ಎಲ್ಲರಂತೇಕಿಲ್ಲ? ಎಂದಾಗ ಏನು ಹೇಳದೆ ಕಣ್ಣ ತುಂಬ ನೀರು ತುಂಬಿದಳು. ಅದೆಷ್ಟು ನೋವನುಂಗಿದ್ದಳೋ ಕಣ್ಣೀರನ್ನು ಹೊರಗೆ ಬಿಡದೆ ತಡೆಯುತ್ತಿದ್ದುದು ಕಣ್ಣಿಗೆ ಕಟ್ಟಿದಂತಿದೆ. ನನಗೆ ಅವ್ವನ ಮೇಲೆ ಅಪಾರ ಪ್ರೀತಿ. ಪ್ರತಿದಿನ ರಾತ್ರಿ ನನ್ನ  ತಲೆಸವರುತ್ತಾ ಬಂಡ್ರಿ  ಕತೆಯನ್ನೆಲ್ಲ ಹೇಳುತ್ತಿದ್ದಳು.               ಬಂಡ್ರಿಯ ಜಮೀನ್ದಾರ  ಸಾಹುಕಾರ ರಾಗಪ್ಪನಿಗೆ ತನ್ನಪ್ಪ ತನ್ನನ್ನು ಮದುವೆ  ಮಾಡಿ ಕೊಟ್ಟಿದ್ದು, ಅಜ್ಜಿ ಮೊಮ್ಮಗ ಇಬ್ಬರೇ ಇದ್ದ ಆ ಮನೆಗೆ ತಾನು ಕಾಲಿಟ್ಟಿದ್ದು, ಆ ಸಿರಿವಂತಿಕೆ, ಮರ್ಯಾದೆ ಎಲ್ಲವನ್ನು ಕಂಡು ಕೊನೆ ಕಾಲಕ್ಕೆ  ಊರಿನ ವ್ಯಾಜ್ಯದಲ್ಲಿ ಮುಗ್ದ ರಾಗಪ್ಪನ ಕರಗಿದ ಆಸ್ತಿ  ಎಲ್ಲವನ್ನು ಸಹಿಸಿ  ಗಟ್ಟಿಯಾದ ಬಂಡೆಯಂತಾಗಿದ್ದಳು ನನ್ನವ್ವ.               ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿ, ಐದು ಗಂಡುಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಿದ ಚತುರೆ ಅವ್ವ. ಊರಲ್ಲಿ ನಡೆಯುವ ಯಾವ ಕಲುಷಿತ ಗಾಳಿ ತನ್ನ ಮಕ್ಕಳ ಮೇಲೆ ಬೀಳದಂತೆ ತಡೆದು ಅವರನ್ನೆಲ್ಲ ಉಚ್ಛ ಹುದ್ದೆಗೆ ಸೇರಿಸಿದ ಧೈರ್ಯ ಮೆಚ್ಚಲೇಬೇಕು.               ತಾತ ತುಂಬಾ ಮೆದುಸ್ವಭಾವದವರಂತೆ ನಾನು ನೋಡಿರಲಿಲ್ಲ. ನನ್ನಪ್ಪನಿಗೆ ಕೆಲಸ ಸಿಕ್ಕ ಸಂತಸವನ್ನು ಊರೆಲ್ಲ ಹಂಚಿ  ಅಂದೇ ಇಹಲೋಕ ತ್ಯೆಜಿಸಿದರಂತೆ.  ಮಕ್ಕಳಿಗೆ ಹಾಸಿಗೆ ಇದ್ದುದರಲ್ಲಿ ಕಾಲು ಚಾಚು ರೀತಿ ಹೇಳಿಕೊಟ್ಟಿದ್ದು ಅವ್ವ. ಐದು ಜನರು ಒಳ್ಳೆಯ ಹುದ್ದೆಯಲ್ಲಿದ್ದರು. ಅವರ ವಿದ್ಯೆಯೇ ಅವರಿಗೆ ದಾರಿದೀಪವಾಗಿತ್ತು. ಅವ್ವ ಒಂದು ಮಾತು ಹೇಳುತ್ತಾ ಇದ್ದಳು “ಆಸ್ತಿ ಯಾವತ್ತೂ ಶಾಶ್ವತ  ಅಲ್ಲ ವಿದ್ಯೆ ಯಾವತ್ತೂ ಯಾರು ಕಸಿದುಕೊಳ್ಳದ ಆಸ್ತಿ”. ಅವ್ವನಿಗೆ ಆ ಊರು ಅಲ್ಲಿಯ ವ್ಯಾಜ್ಯಗಳು ಎಷ್ಟೊಂದು ಹೈರಾಣಗೊಳಿಸಿತ್ತೆಂದರೆ ತನ್ನ ಮಕ್ಕಳು ಯಾರು ಅಲ್ಲಿ ನೆಲೆಸಿಲ್ಲ ಎಂದು ಯಾವತ್ತೂ  ಕೊರಗುತ್ತಿರಲಿಲ್ಲ. ಬದಲಿಗೆ ಐದು ಜನರು ತಮ್ಮ ಕಾಲ ಮೇಲೆತಾವು ನಿಂತು ಅಚ್ಚುಕಟ್ಟಾಗಿ ಸಂಸಾರ ನಡೆಸುವುದ ಕಂಡು ಹೆಮ್ಮೆಪಟ್ಟುಕೊಳ್ಳುತ್ತಿದ್ದಳು.               ನಾಗಸಮುದ್ರದಿಂದ ನನ್ನವ್ವನ ತಮ್ಮ , ನನ್ನ ಅಮ್ಮನ ತಂದೆ  ತಾತ ಬಂದರೆ ಅಕ್ಕ ತಮ್ಮನ ಮಾತಿನ ಧಾಟಿ, ಉಭಯಕುಶಲೋಪರೀ, ಮಕ್ಕಳ ಬಳಿ ಹೇಳಲಾಗದ್ದನ್ನು ತಮ್ಮನ ಬಳಿ ಹೇಳುವುದು, ತಾತನೋ ಮಗಳು ಮೊಮ್ಮಕ್ಕಳ ಜೊತೆ ಅಕ್ಕನಿಗೂ ತವರು ಮನೆಗೆ ಕರೆದೊಯ್ಯುವುದು ಎಷ್ಟು ಚೆಂದ ಇತ್ತು! ತಾತನ ಪ್ರಭಾವ ಎಷ್ಟಿತ್ತೆಂದರೆ ಅಪ್ಪ ದೊಡ್ಡಪ್ಪಂದಿರೆಲ್ಲ ಅವ್ರಮ್ಮನನ್ನು ತಾತ ಕರೆದಂತೆ ತಾವು ಅಕ್ಕ ಅಂತೇಲೇ ಕರೆಯುತ್ತಿದ್ದರು.               ” ನನ್ನಕ್ಕ ತೆಳ್ಳಗೆ ಬೆಳ್ಳಗೆ ಹಣೆತುಂಬಾ ಕುಂಕುಮ ಇಟ್ಟು, ಜಡೆಹೆಣೆದ ಕೂದಲನ್ನು ತುರುಬು ಕಟ್ಟಿ, ಸಿಹಿ ನೀರ ಬಾವಿಯಿಂದ ತಲೆ ಮೇಲೊಂದು ಕೊಡ ಕೈಯ್ಯಲ್ಲೊಂದು ಕೊಡ ಹಿಡಿದು ಬರುತ್ತಿದ್ದಳು, ಆಗ ಎಷ್ಟು ಗಟ್ಟಿಮುಟ್ಟಾಗಿದ್ದಳು ಬಹಳ ಸುಂದರಿ ” ಎಂದು ತಮ್ಮ ಹೇಳುತ್ತಿದ್ದರೆ ನನ್ನವ್ವ ವಿಷಾದದ ನಗೆ ಬೀರುತ್ತಿದ್ದಳು. ಆ ನಗೆಯ ಹಿಂದೆ ಅದೆಷ್ಟು ನೋವಿತ್ತೋ               ಅವ್ವನಿಗೆ ಯಾರು ಹಾಗಿರಲು ಒತ್ತಾಯಮಾಡಿರಲಿಲ್ಲ, ಅಂದಿನ ಸಮಾಜಕ್ಕೆ ಹೆದರಿಯೋ ತನ್ನ ಗೆಳತಿಯರು ಅಕ್ಕತಂಗಿಯರಂತೆ  ತಾನಿರಬೇಕೆಂಬ ಭ್ರಮೆಯೋ ಒಟ್ಟಿನಲ್ಲಿ ವಿರೂಪಿಯಾಗಿದ್ದಳು.               ಇಂದು ಕ್ರಿಸ್ಟಿನಾಳ ಫೋಟೋ ನೋಡಿದಾಗಿಂದ ಮನದಲ್ಲೇನೋ ಹೊಯ್ದಾಟ. ನನ್ನವ್ವನಲ್ಲೂ ಅವಳಷ್ಟೇ ದಿಟ್ಟತನ, ಮಕ್ಕಳನ್ನು  ಸನ್ಮಾರ್ಗದಿ ಬೆಳೆಸುವ ಅಗಾಧ ಶಕ್ತಿ,ಕಷ್ಟಗಳನ್ನು ಸಹಿಸಿ ಕುಟುಂಬವನ್ನು ಮೇರು ಮಟ್ಟಕ್ಕೆ ತರುವಛಲ ಇವೆಲ್ಲ ಗಮನಿಸಿದಾಗ  ಅವಳೊಬ್ಬ ಕೌಟುಂಬಿಕ ವಿಜ್ಜ್ಞಾನಿಯಾಗಿದ್ದಳಲ್ಲವೇ ? ಮತ್ತೇಕೆ ಅವಳಿಗೆ ಆ ವಿರೂಪ?  ಅದು ಅವಳಿಗೆ ಹಿಡಿದ ಗ್ರಹಣವೇ?  ಗ್ರಹಣವಾಗಿದ್ದರೆ ಬಿಡಬೇಕಿತ್ತಲ್ಲವೇ? ಇಲ್ಲ ಅದು ಶಾಪ ಹೌದು ನನ್ನವ್ವ ಶಾಪಗ್ರಸ್ತೆ. ******************************************

ಹೀಗೇಕೆ ನನ್ನವ್ವ ? Read Post »

ಇತರೆ, ಲಹರಿ

ಪ್ರತಿಮೆಯೂ ಕನ್ನಡಿಯೂ..

ಸ್ವಗತ ಪ್ರತಿಮೆಯೂ ಕನ್ನಡಿಯೂ.. ಚಂದ್ರಪ್ರಭ.ಬಿ. ಪ್ರತಿಮೆಯೂ ಕನ್ನಡಿಯೂ “ತೋರಾ ಮನ ದರಪನ ಕೆಹಲಾಯೆಭಲೆ ಬುರೆ ಸಾರೆ ಕರಮೊಂ ಕೊ ದೇಖೆ ಔರ ದಿಖಾಯೆ..………….. ………… ……….. …………… ………… ಸುಖ ಕಿ ಕಲಿಯಾಂ ದುಃಖ ಕಿ ಕಾಟೇಂ ಮನ ಸಬ್ ಕಾ ಆಧಾರ / ಮನ ಸೆ ಕೋಯಿ ಬಾತ ಛುಪೆ ನಾ ಮನ ಕೆ ನೈನ ಹಜಾರ/ ಜಗ ಸೆ ಚಾಹೆ ಭಾಗ ಲೆ ಕೋಯಿ ಮನ ಸೆ ಭಾಗ ನ ಪಾಯೆ…..” “ಕಾಜಲ್” ಹಿಂದಿ ಸಿನಿಮಾ(೧೯೬೫) ದಲ್ಲಿ ಆಶಾ ಭೋಸ್ಲೆ ಹಾಡಿದ ಕೃಷ್ಣ ಭಜನೆ ಸಾಗುವುದು ಹೀಗೆ, ಸಾಹಿತ್ಯ ಸಾಹಿರ್ ಲುಧಿಯಾನ್ವಿ.ಮೀನಾಕುಮಾರಿ ಎಂಬ ಅಮರ ತಾರೆಯ ನಟನೆಯಲ್ಲಿ ಮೂಡಿ ಬಂದ ಅದ್ಭುತ..ಅಮರ ಗೀತೆ.‘ಮನುಜ ತನ್ನ ಮನಸ್ಸಿನಿಂದ ತಾನು ಓಡಿ ಹೋಗಲಾರ.. ಹೋಗಲಾಗದು’ ಎಂಬುದು ಕಟುವಾಸ್ತವ, ಮತ್ತದು ತುಂಬ ದೊಡ್ಡ ಸಂಗತಿ. ಚಲನಚಿತ್ರ ಗೀತೆಯೊಂದರಲ್ಲಿ ಇಂಥ ಲೋಕೋತ್ತರ ಸತ್ಯವನ್ನು ಹಿಡಿದಿಟ್ಟ ರೀತಿ ಕೂಡಾ ಅನನ್ಯ. ಕನ್ನಡದ ಸಂತ ಕವಿ ಸರ್ಪಭೂಷಣ ಶಿವಯೋಗಿ ಯ ಒಂದು ಜನಪ್ರಿಯ ತತ್ವ ಪದವೊಂದು ಇದನ್ನೇ ಇನ್ನೂ ವಿವರವಾಗಿ ಬಣ್ಣಿಸುತ್ತ ಸಾಗುತ್ತದೆ. “ಬಿಡು ಬಾಹ್ಯದೊಳು ಡಂಭವಮಾನಸದೊಳು ಎಡೆ ಬಿಡದಿರು ಶಂಭುವ/ಮನದೊಳು ವಂಚಿಸಿ ಹೊರಗೆ ನೀ ಕೀರ್ತಿಯಪಡೆದರೆ ಶಿವ ನಿನಗೊಲಿಯನು ಮರುಳೇ// ಜನಕಂಜಿ ನಡಕೊಂಡರೇನುಂಟು ಲೋಕದಿಮನಕಂಜಿ ನಡಕೊಂಬುದೇ ಚಂದ/ಜನರೇನು ಬಲ್ಲರು ಒಳಗಾಗೊ ಕೃತ್ಯವಮನವರಿಯದ ಕಳ್ಳತನವಿಲ್ಲವಲ್ಲ// ಮನದಲಿ ಶಿವ ತಾ ಮನೆ ಮಾಡಿಕೊಂಡಿಹಮನ ಮೆಚ್ಚಿ ನಡೆದರೆ ಶಿವ ತಾ ಮೆಚ್ಚುವ/ಮನಕಂಜಿ ನಡೆಯದೆ ಜನಕಂಜಿ ನಡೆದರೆಮನದಾಣ್ಮ ಗುರುಸಿದ್ಧ ಮರೆಯಾಗೊನಲ್ಲ// ‘ಮುಖ ಮನಸ್ಸಿನ ಕನ್ನಡಿ’ ಇದು ಕನ್ನಡದ ಬಲು ಜನಪ್ರಿಯ ನುಡಿಗಟ್ಟು. ದೇಶ, ಭಾಷೆಗಳ ಹಂಗು ಮೀರಿ ಮುಖ, ಮನಸ್ಸು, ಕನ್ನಡಿ – ಈ ಮೂರೂ ಪದಗಳಿಗಿರುವ ನಂಟನ್ನು ಶೋಧಿಸತೊಡಗಿದರೆ ಬಹು ಆಯಾಮಗಳ, ಮಾನವೀಯ ನೆಲೆಗಟ್ಟಿನ ಅನುಪಮ ಸಂಗತಿಯೊಂದು ಪದರುಪದರಾಗಿ ಬಿಚ್ಚಿಕೊಳ್ಳತೊಡಗುತ್ತದೆ. ಮನದ ಕನ್ನಡಿಯಲ್ಲಿ ತನ್ನ ತಾ ನೋಡಿಕೊಳ್ಳಲು ಅರಿತ ಜೀವಿಯಲ್ಲಿ ಒಂದು ಎಚ್ಚರ, ಒಂದು ಪ್ರಜ್ಞೆ ಸದಾವಕಾಲವೂ ಮೌನವಾಗಿ ಅಷ್ಟೇ ಸಹಜವಾಗಿ ಮೊರೆಯುತ್ತಿರುತ್ತದೆ. ಕನ್ನಡಿಯೆದುರು ಪರದೆ ಎಳೆದಿರುವಲ್ಲಿ ಅವಲೋಕನಕ್ಕೆ ಅವಕಾಶವೆಲ್ಲಿ!? ವೈಯಕ್ತಿಕ ನೆಲೆಯಲ್ಲೇ ಆಗಿರಲಿ ಸಮುದಾಯದ ನೆಲೆಯಲ್ಲೇ ಆಗಿರಲಿ ಪಾರದರ್ಶಕತೆ ಬೀರುವ ಪ್ರಭಾವ ಗಮನಾರ್ಹ. ತತ್ಪರಿಣಾಮವಾಗಿ ಅದರಿಂದ ದೊರಕುವ ಅಂತಿಮ ಫಲಿತಾಂಶವೂ ಅಷ್ಟೇ ಪರಿಣಾಮಕಾರಿ. ಹೀಗಿದ್ದೂ ಪ್ರತಿ ದಿನದ ಪ್ರತಿ ಹೆಜ್ಜೆಯಲ್ಲಿ ಮುಖವಾಡಗಳನ್ನು ಬದಲಾಯಿಸುತ್ತಲೇ ಸಾಗುವುದು ತೀರ ಸಹಜ ಎನ್ನುವ ರೀತಿಯಲ್ಲಿ ಬದುಕು ಸಾಗುವುದು. ನಿಜಕ್ಕೂ ಇದು ವಿಸ್ಮಯದ ಸಂಗತಿ. ನೈಜೀರಿಯನ್ ಕವಿ ಗೇಬ್ರಿಯಲ್ ಒಕಾರ ತನ್ನ “ಒಂದಾನೊಂದು ಕಾಲದಲ್ಲಿ” ಕವಿತೆಯಲ್ಲಿ ಹೇಳುವಂತೆ ಮನೆ, ಆಫೀಸು, ಬೀದಿ, ಸಭೆ ಸಮಾರಂಭ – ಹೀಗೆ ಯಾವುದಕ್ಕೆ ಎಂಥದು ಸೂಕ್ತವೊ ಅಂಥದೊಂದು ಮುಖವಾಡ ಧರಿಸಿ ಮುಗುಳ್ನಗುವೊಂದರಲ್ಲಿ ಅದನ್ನು ಅದ್ದಿ ತೆಗೆದು ಕಾರ್ಯ ಸಾಧಿಸಿಬಿಡುವುದು ನಮಗೆಲ್ಲ ರೂಢಿಯಾಗಿಬಿಟ್ಟಿದೆ. ಹೀಗಾಗಿ ನೈಜವಾದ ನಮ್ಮ ಮೂಲ ಮುಖದ ಅಸ್ತಿತ್ವವೇ ಕಳೆದುಹೋಗುತ್ತಿದೆ. ಇದು ತುಂಬ ಅಪಾಯಕಾರಿ. ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಎಲ್ಲಾ ಬಗೆಯ ಅರಾಜಕತೆಗೂ ದಾರಿ ಮಾಡಿಕೊಡುವಂಥದು. ಯಾರನ್ನೊ ಮೆಚ್ಚಿಸುವುದಕ್ಕಾಗಿ ಅಲ್ಲ, ಯಾರಿಗೊ ವರದಿ ಒಪ್ಪಿಸುವುದಕಾಗಿ ಅಲ್ಲ. ತನ್ನ ಆತ್ಮಸಾಕ್ಷಿ ಎದುರು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಆತ್ಮಸಾಕ್ಷಿ ಎದುರು ಸ್ವತಃ ಕುಬ್ಜನಾಗದಿರಲು ಮನದ ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಸಾಗುವ ಅಗತ್ಯ ಮನಸ್ಸನ್ನು ಎಡೆಬಿಡದೆ ಸತಾಯಿಸಿದಲ್ಲಿ ಸ್ವಾಸ್ಥ್ಯ ತಂತಾನೇ ಪಸರಿಸತೊಡಗುತ್ತದೆ. ಇದು ಆಮೆ ಗತಿಯಲ್ಲಿ ಸಂಭವಿಸುವ ಬಲು ನಿಧಾನವಾದ ಪ್ರಕ್ರಿಯೆ. ವ್ಯಕ್ತಿಯಿಂದ ಸಮಷ್ಟಿ ವರೆಗೆ ಸಾಗುವ ಸುದೀರ್ಘ ಪಯಣ. ಮನಸ್ಸಿದ್ದಲ್ಲಿ ಮಾರ್ಗ ಇದ್ದೇ ಇದೆಯಲ್ಲವೇ! ************************************

ಪ್ರತಿಮೆಯೂ ಕನ್ನಡಿಯೂ.. Read Post »

ಇತರೆ, ಜೀವನ

ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ

ಅನುಭವ ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ ಮಮತಾ ಅರಸೀಕೆರೆ ಬಯಸಿ ಬಂದದ್ದಲ್ಲ. ಹಂಬಲಿಸಿ ಪಡೆದದ್ದಲ್ಲ. ಒಂದು ಬಗೆಯ ಓರೆ ನೋಟದ ಕಸಿವಿಸಿಯ ಬಿಗುವಿನೊಡನೆ ಅನಿಚ್ಛಾಪೂರ್ವಕವಾಗಿ ಇಲಾಖೆಗೆ ಕಾಲಿಟ್ಟದ್ದು. ನಂತರ ಜರುಗಿದ್ದು ಬರೋಬ್ಬರಿ ಇಪ್ಪತ್ತು ವರ್ಷಗಳ ಅನಿಯಮಿತ ಅಡೆತಡೆಯಿಲ್ಲದ ಪ್ರಯಾಣ. ಇದೇ ಅಕ್ಟೋಬರ್ ೨೫ ಕ್ಕೆ ನಾನು ಶಿಕ್ಷಣ ಇಲಾಖೆಯ ಸದಸ್ಯಳಾಗಿ ಎರಡು ದಶಕಗಳೇ ಆಗುತ್ತಿದೆ. ನನ್ನಮ್ಮ ಕೂಡ ಇದೇ ಇಲಾಖೆಯಲ್ಲಿದ್ದವರು.ಅಪ್ಪ ಅಂಚೆ ಇಲಾಖೆ ಉದ್ಯೋಗಿ.ಅದೇಕೋ ತನ್ನ ಇಲಾಖೆ ಬಗ್ಗೆ ಅಸಡ್ಡೆಯಿದ್ದಬಅಪ್ಪನ ಉದ್ಯೋಗಕ್ಕಿಂತ ಸುಲಭವಾಗಿ ಸರಳವಾಗಿ ನಿರ್ವಹಿಸಬಹುದಾದ ಶಿಕ್ಷಕ ವೃತ್ತಿಯನ್ನೇ ನಾನೂ ಪಡೆಯಲಿ ಅಂತ ಅಮ್ಮ ಹಂಬಲಿಸಿದ್ದು ಅದರಂತೆಯೇ ಆದದ್ದು ಈಗ ಭೂತಕಾಲ. ಇಬ್ಬರಿಗೂ ದೊಡ್ಡ ದೊಡ್ಡ ಆಸೆ ಹಂಬಲಗಳಿಲ್ಲ. ಆದರೆ ನನ್ನ ಆಲೋಚನೆ ಸರಳವಾಗಿರಲಿಲ್ಲ. ಪೂರ್ಣವಾಗಿ ಗ್ರಾಮೀಣ ಪ್ರದೇಶದಲ್ಲಿಯೇ ಓದಿದ ನನಗೆ ಯಾರೂ ಮಾರ್ಗದರ್ಶಕರಿಲ್ಲದ್ದು, ಮುಂದಿನ ಹಂತದ ವಿದ್ಯೆ, ಉದ್ಯೋಗಗಳ ಪರಿಚಯವಿಲ್ಲದ್ದು ಹಿನ್ನಡೆ. ಸಣ್ಣಪುಟ್ಟ ಅವಕಾಶದಲ್ಲಿಯೇ ತುಂಬಾ ಪುಸ್ತಕಗಳನ್ನು ಓದುತ್ತಿದ್ದ ನನಗೆ ಪ್ರಾಥಮಿಕ ಪ್ರೌಢ ಹಂತ ಮುಗಿಯುತ್ತಿದ್ದಂತೆ ಶಿಕ್ಷಣ ಕ್ಷೇತ್ರ ಬೇಡವೆನಿಸತೊಡಗಿ ಬೇರೆ ಬೇರೆ ಸಾಧ್ಯತೆಗಳ ಕ್ಷೀಣ ಪರಿಚಯವಾಗತೊಡಗಿತ್ತು. ಶತಾಯ ನಿರಾಕರಿಸಿದರೂ ಮನೆಯ ಬಲವಂತಕ್ಕೆ ಕಡೆಗೂ ತರಬೇತಿಗೆ ಸೇರಿದ ಎರಡು ವರ್ಷಗಳು ಪಟ್ಟ ಹಿಂಸೆ ಮತ್ತು ಅಲ್ಲಿನ ಪರಿಸರ, ಸ್ನೇಹಿತರ ಒಲವಿನ ದಿನಗಳು ನನ್ನ ಮೇಲೆ ಅಧ್ಯಾಪಕರ ಕರುಣೆ, ಮೆಚ್ಚುಗೆ ಪ್ರೋತ್ಸಾಹ ಎಲ್ಲವೂ ನೆನಪಿನಲ್ಲಿವೆ. ಸದಾ ಚಡಪಡಿಸುತ್ತಿದ್ದ ನನ್ನ ಅಳಲಾಟವನ್ನು ಮನೆಯವರು ಕೇಳಿಸಿಕೊಳ್ಳದಿದ್ದರೂ ನನ್ನ ಅಧ್ಯಾಪಕರೂ ಸಹಿಸಿದ್ದು ಈಗಲೂ ಸೋಜಿಗ ನನಗೆ. ಶಿಕ್ಷಕ ವೃತ್ತಿ ಬೇಡವೆನಿಸದಿರಲೂ ಕಾರಣವಿತ್ತು. ಶೈಕ್ಷಣಿಕ ಸಾಮಾನ್ಯಜ್ಞಾನವನ್ನ  ಗಳಿಸಲು ತುಂಬಾ ಪ್ರಯತ್ನ ಪಡುತ್ತಿದ್ದ ನನಗೆ ಯಾವುದೇ ಸಾಮಾನ್ಯಜ್ಞಾನ ಸ್ಪರ್ಧೆಯಲ್ಲಿ ಯಾವತ್ತೂ ಪ್ರಥಮ ಸ್ಥಾನ. ಸ್ಥಳೀಯ, ಜಿಲ್ಲೆ, ರಾಜ್ಯ ಮಟ್ಟದ ಬಹಳಷ್ಟು ಸ್ಪರ್ಧೆಗಳಲ್ಲಿ ಬಹುಮಾನಗಳನ್ನ ಗಿಟ್ಟಿಸಿದ್ದರಿಂದಲೂ ತುಂಬಾ ಓದುತ್ತಿದ್ದುದರಿಂದಲೂ ಕೆ.ಎ.ಎಸ್‌ ಅಥವಾಐ.ಎ.ಎಸ್. ಮಾಡಬೇಕೆಂಬ ಹುಚ್ಚು ಹತ್ತಿತ್ತು. ಅದಾವುದೂ ಸಾಧ್ಯವಾಗದೇ ಖಿನ್ನತೆಗೆ ಬಿದ್ದೆ.ಖಿನ್ನತೆಯ ಪರ್ವ ಆರಂಭವಾದದ್ದು ಅಲ್ಲಿಂದಲೇ.ಕೆಲಸ ಸಿಕ್ಕ ಮೇಲೆ ಒಂದೆರಡು ಸಲ ಕೆ.ಎ.ಎಸ್. ಪರೀಕ್ಷೆ ಬರೆದು ಒಮ್ಮೆ ಮಾತ್ರ ಪ್ರಿಲಿಮಿನರಿಯಲ್ಲಿ ಯಶಸ್ವಿಯಾಗಿ ನಂತರ ಸಾಧ್ಯವಾಗದೇ ಪ್ರಯತ್ನವನ್ನೇ ಬಿಟ್ಟುಬಿಟ್ಟೆ. ಉದ್ಯೋಗವದಕ್ಕಿದ ಆಲಸ್ಯ ಜೊತೆಗೆತಿ ರುಗಾಟ, ಸಂಘಟನೆಯ ರುಚಿಯೂ ಕಾರಣ. ಇಷ್ಟವಿಲ್ಲದೇ ಬಹಳವೆಂದರೆ ಬಹಳ ಚಿಕ್ಕ ವಯಸ್ಸಿನಲ್ಲೇ ಉದ್ಯೋಗ ಹಿಡಿದು ನಂತರ ಓದುವುದು ಮುಂದುವರೆಸಿ ಬಿ.ಎ.  ಬಿ.ಎಡ್. ಎಂ.ಎ. ಮಾಡುವ ವೇಳೆಗೆ ಓದುವುದು ಸಾಕೆನಿಸಿತ್ತು.ರಂಗಭೂಮಿ, ಸಾಹಿತ್ಯ, ವಿಜ್ಞಾನ ಪರಿಷತ್ ಗೀಳು ಹಿಡಿದಿತ್ತು. ಒಂದಂತೂ ನಿಜ ನನ್ನ ಬೇರೆ ಬೇರೆ ಚಟುವಟಿಕೆಗೆ ನನ್ನ ಉದ್ಯೋಗ ಆತ್ಮವಿಶ್ವಾಸದ ದೀವಿಗೆ ಹಿಡಿದಿತ್ತು.ಸ್ವಾವಲಂಬನೆ ಬದುಕಿಗೆ ದಾರಿಯಾಗಿಯೂ, ಮನೆಯ ಆರ್ಥಿಕತೆಗೆ ಸಹಕಾರಿಯಾಗಿಯೂ ಒದಗಿಬಂತು. ಸತತ ೧೫ ಕ್ಕೂ ಹೆಚ್ಚು ವರ್ಷ ನನ್ನ ಓಡಾಟ, ರಂಗಭೂಮಿ ಚಟುವಟಿಕೆ, ಮೊದಲ ಬಾರಿಗೆ ಒಂದು ತಿಂಗಳು ರಜೆ ಪಡೆದು ನಾಟಕದಲ್ಲಿ ಅಭಿನಯಿಸಿದ್ದು, ಆ ಮೂಲಕ  ಶಿಕ್ಷಣದಲ್ಲಿ ರಂಗಕಲೆಯೆಂಬ ಎನ್.ಎಸ್.ಡಿ.ಯ ಮೂರು ತಿಂಗಳ ತರಬೇತಿ, ನಾಟಕ ನಿರ್ಮಾಣ, ಅಭಿನಯ, ಕಾಲೇಜುಗಳಲ್ಲಿ ಸತತವಾಗಿ ಸೆಮಿನಾರ್‌ಗಳು, ವಿಜ್ಞಾನ ಜಾಥಾಗಳು ಮೊದಲಾದ ಕ್ರಿಯಾತ್ಮಕತೆಗೆ ರಹದಾರಿಯೂ ಆಯಿತು.ಸುಮಾರು ಮೂರು ನಾಲ್ಕು ಬಾರಿ ಕರ್ನಾಟಕ ಸುತ್ತಿದ ಓಡಾಟದ ಹುಚ್ಚನ್ನ ಬೆಂಬಲಿಸಿದ್ದು ಇದೇ ಉದ್ಯೋಗ.ಯಾವುದೇ ಕೆಲಸಕ್ಕೂ ದಿಟ್ಟತನದಿಂದ ಮುನ್ನುಗ್ಗುವ ಪ್ರಕ್ರಿಯೆಯಿಂದ ಆರ್ಥಿಕ ಸ್ವಾವಲಂಬನೆ ಹೆಣ್ಣುಮಕ್ಕಳಿಗೆ ಅದೆಷ್ಟು ಮುಖ್ಯವೆಂಬುದನ್ನೂ ತಿಳಿಸಿಕೊಟ್ಟಿತ್ತು. ಇನ್ನು ನನ್ನ ನೌಕರಿಯ ಸ್ವರೂಪ ಸಹಜವಾಗಿ ವಯಸ್ಸಿನಲ್ಲಿ ಚಿಕ್ಕ ಮಕ್ಕಳೊಂದಿಗೆ ಒಡನಾಡುವುದು.ಅಷ್ಟೊತ್ತಿಗಾಗಲೇ ಈ ಹುದ್ದೆಗೂ ತೀವ್ರ ಪೈಪೋಟಿ ಏರ್ಪಟ್ಟಿದ್ದರೂ ಜಿಲ್ಲೆಗೆ ಆರನೇ ಸ್ಥಾನ ಪಡೆದು ಶಾಲೆಯೊಂದನ್ನು ಆರಿಸಿಕೊಂಡು ತಾಲೂಕು ಕೇಂದ್ರದಿಂದ ೫ ಕಿ.ಮೀ. ಇದ್ದ ನಾಗತೀಹಳ್ಳಿ ಎಂಬ ಆ ಗ್ರಾಮವನ್ನು ತಲುಪಿದಾಗ ನಿಜಕ್ಕೂ ಖುಷಿಯಾಗಿತ್ತು.ಒಂದಿಷ್ಟು ಒಳ ಪ್ರದೇಶ, ಸುತ್ತ ತೋಟ, ಹಸಿರಿನ ನಡುವಿನ ಹೆಂಚಿನದಾದರೂ ಸುಸಜ್ಜಿತ ಕಟ್ಟಡ.ಸೊಗಸೋ ಸೊಗಸು. ಮತ್ತು ಆ ಕಾಲಕ್ಕೆ ಆಧುನಿಕವೇ ಆಗಿದ್ದಂತಹ ಶಾಲೆಯದು ಸ್ಥಾಪನೆಯಾಗಿ ಸರಿಯಾಗಿ ೫೦ ವರ್ಷವಾಗಿತ್ತು.ಆಶ್ಚರ್ಯವೆಂದರೆ ಆ ಶಾಲೆಯಲ್ಲಿ ಎಲ್ಲಾ ಬಗೆಯ ಸೌಲಭ್ಯಗಳಿದ್ದವು. ಮೂರು ಕೊಠಡಿಗಳು, ಅಡುಗೆಮನೆ, ಶೌಚಾಲಯ, ಆಟದ ಮೈದಾನ, ಪೀಠೋಪಕರಣ, ನೀರಿನ ವ್ಯವಸ್ಥೆ, ಕಲಿಕೋಪಕರಣಗಳು, ಸಂಗೀತೋಪಕರಣಗಳು, ಆಟದ ಸಾಮಗ್ರಿಗಳು, ಮತ್ತೂ ವಿಸ್ಮಯವೆಂದರೆ ವಿಜ್ಞಾನದ ಉಪಕರಣಗಳು ಇದ್ದವು..ಉದಾ. ಟೆಲಿಸ್ಕೋಪ್, ಮೈಕ್ರೋಸ್ಕೋಪ್, ಪ್ರಯೋಗಾಲಯದಲ್ಲಿ ಉಪಯೋಗಿಸುವ ಸಾಮಗ್ರಿಗಳು, ಎಲ್ಲವೂ..ಏನುಂಟು ಏನಿಲ್ಲ.. ಅದು ಗ್ರಾಮವಾದರೂ ಇಡೀ ಗ್ರಾಮ ಒಂದೇ ಜನಾಂಗದವರು ಮತ್ತು ಎಲ್ಲರೂ ವಿದ್ಯಾವಂತರು, ಆರ್ಥಿಕವಾಗಿ ಸಬಲರು.ಅಷ್ಟರಲ್ಲಾಗಲೇ ಅಲ್ಲಿಗೂ “ಕಾನ್ವೆಂಟ್ ಶಿಕ್ಷಣದ ಬಿಸಿಗಾಳಿ ಸೋಕಿತ್ತು. ಕೆಲವರು ಇಂಗ್ಲೀಷ್ ಮಾಧ್ಯಮ ಆರಿಸಿಕೊಂಡು ಸಮೀಪದ ಆಂಗ್ಲ ಮಾಧ್ಯಮ ಶಾಲೆಗೆ ಆಟೋಗಳಲ್ಲಿ ಓಡಾಡುತ್ತಿದ್ದರೆ ಅಷ್ಟೇ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗೂ ಬರುತ್ತಿದ್ದರು.ಸ್ವಚ್ಛವಾಗಿ, ಮುದ್ದಾಗಿ ಕಾಣುತ್ತಿದ್ದ ಬುದ್ದಿವಂತ ಮಕ್ಕಳವರು.ವೈವಿಧ್ಯ ಆಚರಣೆಗಳೂ ಆ ಗ್ರಾಮದಲ್ಲಿದ್ದವು. ವರ್ಷಕ್ಕೊಮ್ಮೆಕೆಂಡ ತುಳಿಯುವ ಅದ್ದೂರಿ ಜಾತ್ರೆ, ಹುಣ್ಣಿಮೆ ಅಮಾವಾಸ್ಯೆಗೆ ಕಟ್ಲೆಗಳು, ಮಾದೇಶ್ವರ ಮೊದಲಾದವು.ಶ್ರಾವಣದಲ್ಲಿ ಪ್ರತಿ ಸೋಮವಾರ ಮನೆಮನೆಗೆ ಹೋಗಿ ಕಂತೆಭಿಕ್ಷೆ ಎತ್ತಿ ಒಟ್ಟಿಗೆ ಊಟ ಮಾಡುವುದು ಮತ್ತು ಆ ಸಮಯದಲ್ಲಿ ಯಾವುದೇ ಅನ್ಯಜಾತಿಯವರಿಗೆ ಊರಿನೊಳಗೆ ಪ್ರವೇಶವಿಲ್ಲ. ಮರುಳಸಿದ್ದೇಶ್ವರ ಗ್ರಾಮದೇವರಾದ್ದರಿಂದ ಅನ್ಯರ ಪ್ರವೇಶ ನಿಷಿದ್ಧ.ಊರಿನೊಳಗೆ ಮಾಂಸ, ಮದ್ಯ ಕೂಡ ತರುವಂತಿರಲಿಲ್ಲ ಮಾತ್ರವಲ್ಲ ಸೇವಿಸಿಯೂ ಬರುವಂತಿರಲಿಲ್ಲ.ನಮ್ಮಲ್ಲಿದ್ದ ಒಬ್ಬ ಮುಸ್ಲಿಂ ಮೇಷ್ಟಿಗೆ ಆ ದಿನ ಅಲಿಖಿತ ರಜೆ. ಮಾದೇಶ್ವರ ಹಾಗೂ ಕಟ್ಲೆಗಳಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ಹೀಗೆ ಸಣ್ಣಪುಟ್ಟ ನಿರ್ಬಂಧಗಳಿದ್ದ ಊರದು.ಮುಖ್ಯವಾಗಿ ಆ ಊರಿನ ಮಂದಿ ವೀರಗಾಸೆಯಲ್ಲಿ ಪರಿಣತರು. ಕಾರ್ಯಕ್ರಮಗಳಿಗಾಗಿ ದೇಶ ವಿದೇಶ ಸುತ್ತಿದ್ದರು.ಈ ಎಲ್ಲವನ್ನೂ ಸಾಂಸ್ಕೃತಿಕ ದೃಷ್ಟಿಕೋನದಿಂದ ನೋಡಲು ಕಲಿಯಲು ಸಾಧ್ಯವಾಯಿತು. ಒಂದಿಷ್ಟು ಮುನಿಸಿನಲ್ಲಿಯೇ ನವಂಬರ್ ೧ ರಂದು ಹುದ್ದೆ ಸ್ವೀಕರಿಸಲು ತೆರಳಿದೆ.ಅಲ್ಲಿನ ವಾತಾವರಣಕಂಡು ಮನಸ್ಸಾಗಲೇ ಅರಳಿತ್ತು.ಅಮ್ಮನ ಶ್ರಮದ ಫಲ ಈ ನೌಕರಿ.ಅವರಿಗಂತೂ ಹಿಗ್ಗು. ಆ ದಿನ ಅವರೂ ಜೊತೆಗಿದ್ದರು.ಅಕ್ಟೋಬರ್ ೨೫ ರಂದು ಆದೇಶ ಸ್ವೀಕರಿಸಿದರೂ ೫ ದಿನಗಳ ತರಬೇತಿ ಮುಗಿಸಿ ಶಾಲೆಗೆ ಪಾದವಿಟ್ಟದ್ದು ನವಂಬರ್ ೧ ನೇ ತಾರೀಕು.ಏಳನೇ ತರಗತಿಯವರೆಗೆ, ನಾಲ್ಕು ಮಂದಿ ಶಿಕ್ಷಕರಿದ್ದ ಶಾಲೆ. ವಿದ್ಯಾರ್ಥಿಗಳ ಸಂಖ್ಯೆಯೂ ಪರವಾಗಿಲ್ಲ ಎನ್ನುವಷ್ಟು.ಏಳನೇ ತರಗತಿಯವರಂತೂ ನನ್ನ ಎತ್ತರವೇ ಇದ್ದರು.ನಂತರ ಗೆಳೆಯರಾದರು.ಸಹೋದ್ಯೋಗಿಗಳ ಸಹಕಾರವಂತೂ ಬಹಳ ಸ್ಮರಣೀಯ.ಪರಸ್ಪರ ಸಹಕಾರ.ಪ್ರಬುದ್ಧ ನಡೆ, ಏನೇ ಕೆಲಸ ಮಾಡಬೇಕಿದ್ದರೂ ಮಾತನಾಡಿಕೊಂಡು ಆಚರಣೆಗೆ ತರುವುದು, ಸುಖ-ದುಃಖಗಳಲ್ಲಿ ಪಾಲ್ಗೊಳ್ಳುವಿಕೆ ಮೊದಲಾದ ಸ್ನೇಹ ಸೌಹಾರ್ದತೆಯಿತ್ತು.ಊರಿನ ಮಂದಿಯೂ ಅಷ್ಟೆ,  ಆ ಊರಲ್ಲಿದ್ದಷ್ಟೂ ದಿನ ಸಂಪರ್ಕ-ಸಹಕಾರಕ್ಕೇನೂ ಕೊರತೆಯಿರಲಿಲ್ಲ. ಬರೋಬ್ಬರಿ ೧೯ ವರ್ಷಗಳು ಒಂದೇ ಶಾಲೆಯಲ್ಲಿ ಸೇವೆ ನಿರ್ವಹಿಸಿದರೂ ಒಂದೇ ಒಂದು ಕಪ್ಪುಚುಕ್ಕಿಯಿಲ್ಲದೇ ಕೆಲಸ ಮಾಡಿದೆ. ಇವತ್ತಿಗೂ ಅಲ್ಲಿನ ಮನೆಮಗಳು ನಾನು.೧೫೦ ಮನೆಗಳಿರುವ ಗ್ರಾಮದಲ್ಲಿ ಯಾರ ಮನೆಗೆ ಕಾಲಿಟ್ಟರೂ ಆತಿಥ್ಯಕ್ಕೇನೂ ಬರವಿಲ್ಲ. ಕಾಲಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಇಬ್ಬರು ಶಿಕ್ಷಕರಾಗಿ ತರಗತಿಗಳೂ ಕಡಿಮೆಯಾದವು.ಊರೊಳಗೆ ನಾಲ್ಕೈದು “ಕಾನ್ವೆಂಟ್” ಬಸ್ಸುಗಳು ಕಾಲಿಟ್ಟವು. ನಾವು ಏನೇ ಆಶ್ವಾಸನೆಕೊಟ್ಟರೂ ಪೋಷಕರ ಅಕ್ಕ ಪಕ್ಕದ ಮನೆಗಳ ಮಕ್ಕಳೊಡನೆ  ಹೋಲಿಕೆ ಪ್ರಾರಂಭವಾಗಿ ನಮ್ಮ ಮಕ್ಕಳೆಲ್ಲರೂ ಆಂಗ್ಲಮಾಧ್ಯಮ ಆರಿಸಿಕೊಂಡು ಸರ್ಕಾರಿ ಶಾಲೆಯ ಕೊಠಡಿಗಳಿಗೆ ಬೀಗ ಹಾಕಿಸಿಯಾಯಿತು. ಅದಕ್ಕೂ ಮೊದಲು ಅಲ್ಲಿನ ಕರ್ತವ್ಯದ ಅವಧಿ ನಿಜಕಕೂ ಮರೆಯಲಾರದಂತದ್ದು.ವಿದ್ಯಾರ್ಥಿಗಳೊಂದಿಗೆ ಸಾಕಷ್ಟು ಪ್ರಯೋಗ ಮಾಡಿದೆ.ಪಠ್ಯಕ್ರಮವಲ್ಲದೇ ಬೇರೆ ಬೇರೆ ವಿಷಯಗಳನ್ನು ತಿಳಿಸಿ ಹೇಳುತ್ತಿದ್ದುದೇ ಹೆಚ್ಚು.ನನ್ನ ವಿಜ್ಞಾನ,ರಂಗಭೂಮಿಯ ಸಂಪರ್ಕ ಬಳಸಿಕೊಂಡು ಸಾಕಷ್ಟು ಕೆಲಸ ಮಾಡಿದೆ.ಪಠ್ಯಗಳನ್ನೆಲ್ಲ ರಂಗಕಲೆಯ ಮೂಲಕವೇ ಬೋಧನೆ ಮಾಡುತ್ತಿದ್ದುದು.ವಿಜ್ಞಾನ ಯೋಜನೆಗಳನ್ನು ತಯಾರಿಸಿಕೊಂಡು ಮಕ್ಕಳು ಬೇರೆ ಬೇರೆ ಕಡೆ ಪ್ರದರ್ಶನ ಕೊಟ್ಟವು. ವಿಜ್ಞಾನ ನಾಟಕಗಳನ್ನು ಮಾಡಿಸಿದೆ. ಪಠ್ಯೇತರ ಪರೀಕ್ಷೆಗಳನ್ನು ಕಟ್ಟಿಸಿದೆ.ಶಾಲೆಯಲ್ಲಿದ್ದ ವಿಜ್ಞಾನದ ಸಾಮಗ್ರಿಗಳನ್ನು ಬಳಸಿ ಪ್ರಯೋಗಗಳನ್ನು ಕೈಗೊಂಡೆವು.ಆಟದ ವಸ್ತುಗಳು, ಸಂಗೀತೋಪಕರಣಗಳು, ಗಣಿತ ಕಿಟ್‌ಗಳನ್ನು ಸಮರ್ಥವಾಗಿ ಬಳಸಿದೆವು.ಸಾಮಾನ್ಯಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಿ ಸತತವಾಗಿ ೫-೬ ವರ್ಷ ಬಹುಮಾನ ಗಳಿಸಿದರು.ಪ್ರತಿಭಾಕಾರಂಜಿಯಲ್ಲಿ ಪ್ರಶಂಸೆ ಗಿಟ್ಟಿಸಿದರು.ವಾರಕ್ಕೊಮ್ಮೆ ಪರಿಸರದೆಡೆಗೆ ಯಾತ್ರೆ ಸಾಗುತ್ತಿತ್ತು.ಅನೇಕ ಗಿಡಗಳನ್ನು ನೆಟ್ಟು ವಿದ್ಯಾರ್ಥಿಗಳೇ ಬೆಳೆಸಿದರು. ವಿಜ್ಞಾನ ಪರಿಷತ್ ಸಹಯೋಗದಲ್ಲಿ ಶಾಲೆಯ ಪಕ್ಕದಲ್ಲಿದ್ದ ಬಯಲಿನಲ್ಲಿ ನೂರಾರುಗಿಡ ನೆಟ್ಟೆವು. ಕೈತೋಟ ಮಾಡಿದೆವು.ಜನಗಳಿಗಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆವು.ಮಕ್ಕಳೊಂದಿಗೆ ಸಿನೆಮಾ ನೋಡಿದೆವು.ಪಿಕ್‌ನಿಕ್ ಹೋದೆವು.ಪಠ್ಯ ಹಾಗೂ ಪಠ್ಯೇತರ ವಿಷಯಗಳೆರಡೂ ಯಶಸ್ವಿಯಾಗಿ ಜತೆಜತೆಗೇ ಸಾಗಿತ್ತು.ಅಕ್ಷರದಾಸೋಹ ಆರಂಭವಾದಾಗ ಶುಚಿ ರುಚಿ ಆಹಾರ ಪೂರೈಸಿದೆವು.ಮಕ್ಕಳ ಆರೋಗ್ಯತಪಾಸಣೆ ಮಾಡಿಸಿದೆವು.ಬಡ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿತರಿಸಿದೆವು. ಎರಡು ಬಾರಿ ಬೇಸಿಗೆಯಲ್ಲಿ ಶಿಬಿರವನ್ನೂ ಏರ್ಪಡಿಸಿ ಊರಿನ ಮಕ್ಕಳನ್ನು ಸೇರಿಸಿ ರಂಗತರಬೇತಿಯನ್ನೂ ಕೊಡಿಸಿದ್ದಾಗಿತ್ತು.ವಿದ್ಯಾರ್ಥಿಗಳು ಅದ್ಭುತವಾಗಿ ಪ್ರದರ್ಶನ ನೀಡಿದ್ದರು.ಅಷ್ಟೇ ಅಲ್ಲದೇ ತೀರಾ ಇತ್ತೀಚೆಗೆ ಶಾಲೆಯನ್ನು ಮುಚ್ಚುವ ಮುನ್ನ ಹೊರಗಿನ ರಂಗ ತಂಡಗಳನ್ನು ಕರೆಸಿ ನಾಟಕೋತ್ಸವವನ್ನೂ ಆಯೋಜಿಸಿದ್ದೆವು.  ಈ ಎಲ್ಲಾ  ಚಟುವಟಿಕೆಗಳಿಗೂ ನಮ್ಮ ಮೇಷ್ಟುಗಳ  ಸಹಕಾರವಿತ್ತು. ಮಹತ್ವದ ವಿಷಯವೆಂದರೆ ಬಹಳಷ್ಟು ಮಂದಿ ಖ್ಯಾತನಾಮರು ಶಾಲೆಗೆ ಕಾಲಿಟ್ಟದ್ದು.ಅರಸೀಕೆರೆ ಮೂಲಕ ಹಾದು ಹೋಗುವ ಗೆಳೆಯರು, ಹಿರಿಯ ಲೇಖಕರು.ಸಾಹಿತಿಗಳು, ರಂಗಕರ್ಮಿಗಳು, ಸಂಗೀತಗಾರರು, ಅಧಿಕಾರಿಗಳು ನನ್ನನ್ನು ಸಂಪರ್ಕಿಸಿ ಕರೆ ಮಾಡಿ ಶಾಲೆಗೆ ಭೇಟಿಕೊಟ್ಟು ಹೋಗುತ್ತಿದ್ದದು ಸ್ಮರಣೀಯ ಸಂಗತಿ. ಹೆಸರು ಪಟ್ಟಿ ಮಾಡಿದರೆ ಅನೇಕವಾದೀತು. ಅವರಿಗೆಲ್ಲಾ ಶಾಲೆಯ ಆತಿಥ್ಯದಕ್ಕುತ್ತಿತ್ತು.ಸರಳ ಸಾಮಾನ್ಯರಂತೆ ಅವರೂ ಮಕ್ಕಳೊಂದಿಗೆ ಬೆರೆಯುತ್ತಿದ್ದaರು. ಧನಾತ್ಮಕ ಅಂಶಗಳನ್ನಷ್ಟೇ ದಾಖಲಿಸಿದೆನೇನೋ. ಋಣಾತ್ಮಕವಾಗಿ ವಿಷಯಗಳು ಸಾಕಷ್ಟು ಕಾಡಿದರೂ ಸಂತೋಷದ ಸಂಗತಿಗಳೆದುರು ಅವು ಕಾಲಕ್ರಮೆಣ ಮಾಸಿಹೋಗುವಂತವು.ಕೆಲವು ಕಿರಿಕಿರಿಗಳಾದವು. ನಾನೂ ಸಹ ಈ ಕೆಲಸದ ವಿಷಯಕ್ಕೆ ಕೆಲವೊಮ್ಮೆ ಉದಾಸೀನ ಮಾಡಿದ್ದಿದೆ.ಚಿಕ್ಕ ಪ್ರಾಯದಲ್ಲಿ ಕೆಲವು ತಪ್ಪು ಮಾಡಿದ್ದಿದೆ. ನೂರಕ್ಕೆ ನೂರಷ್ಟೇನೂ ಪ್ರಾಮಾಣಿಕವಾಗಿ ಕೆಲಸ ಮಾಡದಿದ್ದರೂ ವಿದ್ಯಾರ್ಥಿಗಳ ವಿಷಯದಲ್ಲಿ ಮಾತ್ರ ಯಾವುದೇ ತಾರತಮ್ಯಅಥವಾ ಅಸಡ್ಡೆ ಮಾಡಿದ್ದಿಲ್ಲ. ನನ್ನ ಕನಸುಗಳನ್ನು ಕೊಂದು ಹಾಕಿದ ಉದ್ಯೋಗವಿದೆಂದು ಅನೇಕ ಬಾರಿ ತೀರಾ ಖಿನ್ನತೆಗೆ ಬಿದ್ದು ಕೆಲಸ ಬಿಟ್ಟುಬಿಡುತ್ತೇನೆಂದಿದ್ದು ಅದೆಷ್ಟು ಸಲವೋ.ಅಸಾಧ್ಯ ನೆನಪಿನ ಶಕ್ತಿ ಕುಂದಿತೆಂದು ಪರಿತಾಪ ಪಟ್ಟಿದದೆಷ್ಟೋ.ಉದ್ವೇಗಕ್ಕೊಳಗಾಗಿ ಸಂಘಟನೆಯೆಡೆ ತೀವ್ರ ತೊಡಗಿಸಿಕೊಂಡು ತಾತ್ಕಾಲಿಕವಾಗಿ ಮರೆತದ್ದಿದೆ.ಸ್ವಾಭಿಮಾನಿತನವನ್ನು ದಕ್ಕಿಸಿದ ಉದ್ಯೋಗವೆಂದು ಸಮಾಧಾನ ಪಟ್ಟಿದ್ದಿದೆ.ಈಗಂತೂ ನಿರ್ಲಿಪ್ತ. ಶಾಲೆ ಮುಚ್ಚಿದ್ದು ನನ್ನ ಪಾಲಿಗೆ ಹಿನ್ನಡೆ.ಕನ್ನಡ ಮಾಧ್ಯಮದಲ್ಲಿ ಭವಿಷ್ಯವಿಲ್ಲವೆಂದು ಆಂಗ್ಲ ಮಾಧ್ಯಮ ಅರಸಿ ಹೋದ ಪೋಷಕರನ್ನು ಮನವೊಲಿಸಲು ಪ್ರಯತ್ನಿಸಿದರೂ ನನ್ನ ಮನೆ ಮಕ್ಕಳು ಅದೇ ಆಂಗ್ಲ ಮಾಧ್ಯಮದಲ್ಲಿ ಭವಿಷ್ಯ ಅರಸುವಾಗ, ಪೋಷಕರು ಆ ಕುರಿತು ಪ್ರಶ್ನಿಸುವಾಗ ಉತ್ತರ ತೋಚದೇ ಸುಮ್ಮನಾಗಿದ್ದೇನೆ. ಇಂಗ್ಲೀಷ್‌ನ ಪ್ರಭಾವಕ್ಕೆ ಸಿಲುಕಿದ ಮತ್ತು ಅಲ್ಲಿಯೇ ಮಕ್ಕಳ ಉಜ್ವಲ ಬೆಳಗನ್ನು ನಿರೀಕ್ಷಿಸುವ ತಂದೆತಾಯಿಗಳ ಮಹತ್ವಾಕಾಂಕ್ಷೆಯೂ ತಪ್ಪೆಂದು ಹೇಳಲಾಗದು. ಸತತ ಇಪ್ಪತ್ತು ವರ್ಷಗಳ ಶಿಕ್ಷಣ ಇಲಾಖೆ ನೀಡಿದ ಅಪಾರ ಅನುಭವದ ಅನೇಕ ದಿನಾಂಕ ಹಾಗೂ ದಿನಗಳು ಇಲ್ಲಿ ಸಂಕ್ಷಿಪ್ತವಾಗಿ ದಿನಚರಿಯಂತೆ ಮಾಹಿತಿ ದಾಖಲಿಸಿವೆ. ಸದ್ಯಕ್ಕೆ ಸಿ.ಆರ್.ಪಿ.ಯಾಗಿ ನನ್ನ ವಲಯಕ್ಕೆ ಸೇರಿರುವ  ಸರ್ಕಾರಿ ಶಾಲೆಗಳಲ್ಲಿ  ಬಹಳಷ್ಟು ಕೆಲಸ ಮಾಡಬೇಕೆಂಬ ಆಶಯವಿದೆ.ಇಲ್ಲೀವರೆಗಿನ ಸಹಾಯ ಸಹಕಾರಕ್ಕಾಗಿ ಗ್ರಾಮಸ್ಥರಿಗೂ, ಇಲಾಖೆಯ ಸಹದ್ಯೋಗಿಗಳಿಗೂ, ಸಹೃದಯ ಅಧಿಕಾರಿಗಳಿಗೂ, ಶಿಕ್ಞಣ ಇಲಾಖೆಗೂ ಆಭಾರಿ. **************************************

ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ Read Post »

ಇತರೆ, ಜೀವನ

ಬದಲಾದ ಕಾಲಕ್ಕೆ ಹಳ್ಳಿಯ ಬದುಕು

ಲೇಖನ ಬದಲಾದ ಕಾಲಕ್ಕೆ ಹಳ್ಳಿಯ ಬದುಕು ಸರಿತಾ ಮಧು ಹಳ್ಳಿಗಳ ದೇಶವೇ ನಮ್ಮದು. ಮೊದಲಾದರೆ ಸುಂದರ ಸ್ವರ್ಗದಂತೆ ಇದ್ದವು. ಕೂಡು ಕುಟುಂಬ, ಅದಕ್ಕೆ ಹೊಂದಿಕೊಂಡಂತೆ ಗದ್ದೆ- ತೋಟಗಳು, ರಕ್ತ ಸಂಬಂಧಗಳು ಹಾಗೂ ಮಾನವೀಯ ನೆಲೆಯಲ್ಲಿ ಒಟ್ಟಿಗೆ ಸೇರಿ ನಲಿಯುತ್ತಿದ್ದ ಸಂದರ್ಭಗಳು. ಮೂರು – ನಾಲ್ಕು ತಲೆಮಾರಿನ ಅನುಭವಗಳ ಬೆರೆತ ಸಂಸಾರ. ಮನೆಗಳಲ್ಲಿ ಆಡಂಬರವಿರಲಿಲ್ಲ ಮನಸಿನಲ್ಲಿ ಆತ್ಮೀಯತೆ ಇತ್ತು. ಅವಿಭಕ್ತ ಭಾವ ರಕ್ತಗತವಾಗಿ ಮುಂದುವರೆಯುತ್ತಿತ್ತು. ಹಣಕಾಸಿಗೆ ಅಡಚಣೆಯಿತ್ತು ಅದರ ಹೊರತು ಪರಿಶುದ್ಧವಾದ  ಬದುಕಿಗಲ್ಲ. ನಗರ ಜೀವನಕ್ಕೆ ಮನಸೋತ ಕೆಲವು ವ್ಯಕ್ತಿಗಳು ಮಾತ್ರ ಈ ವ್ಯವಸ್ಥೆಯ ವಿರೋಧಿಸಿ ಹೊರನಡೆದಿರಬಹುದು. ಶಾಲಾ ಶಿಕ್ಷಣದ ಜೊತೆ ಜೊತೆಗೆ ಹಿರಿಯರ ಮೂಲಕ ಅನೌಪಚಾರಿಕವಾಗಿ ಜೀವನ ಮೌಲ್ಯಗಳು ಒಟ್ಟುಗೂಡಿ ಮುಂದಿನ ಬದುಕಿಗೆ ಮೆರುಗು ತರುತ್ತಿದ್ದವು.ಹಳ್ಳಿಯ ಶಾಲೆಯಲ್ಲಿ ಕಲಿತ ನನ್ನನ್ನೂ ಒಳಗೊಂಡಂತೆ ಸಾವಿರಾರು ಕನಸುಗಳಿಗೆ ರೆಕ್ಕೆ ಹಚ್ಚಿದ್ದು ನಮ್ಮ ಹಳ್ಳಿಯೇ . ಇಲ್ಲಿಗೆ ಸುಮಾರು ಐವತ್ತು – ಅರವತ್ತು ವರ್ಷಗಳ ಹಿಂದಿನ ಜೀವನ ಬಹಳ ಕಠಿಣವಾಗಿತ್ತು. ಹೀಗಂತ ನನ್ನ ಅಪ್ಪ ಲೆಕ್ಕವಿಲ್ಲದಷ್ಟು ಸಲ ನಮ್ಮ ಬಳಿ ಹೇಳಿದ್ದಾರೆ. ಅವರು ವಾಸಿಸುತ್ತಿದ್ದ ಮನೆಯಲ್ಲಿ ಕನಿಷ್ಟ ಮೂವತ್ತು ಮಂದಿ ಇರುತ್ತಿದ್ದರು. ಊಟವೆಂದರೆ ಅವರಿಗೆ ಮೂಲಭೂತ ಅವಶ್ಯಕತೆ ಆಗಿತ್ತು. ಕಾರಣ ಈಗಿನಷ್ಟು  ಸುಖ ಸಮೃದ್ಧಿಯ ಭೋಜನವಿರುತ್ತಿರಲಿಲ್ಲ. ಅನ್ನದ ಊಟವೆಂದರೆ ಅದು ಹಬ್ಬ ಹರಿದಿನಗಳಿಗೆ ಮಾತ್ರವಂತೆ. ರಾತ್ರಿ ರೊಟ್ಟಿ ಊಟವಾದರೆ ಒಂದೆರಡು ರೊಟ್ಟಿಗಳನ್ನು ಪಲ್ಯದ ಸಮೇತ ಸುತ್ತಿ ಜೋಡಿಸಿಟ್ಟ  ಜೋಳದ ಚೀಲಗಳ ನಡುವೆ ಬಚ್ಚಿಡುತ್ತಿದ್ದರಂತೆ.ಅದು ರಹಸ್ಯವಾಗಿ ಬೆಳಗಿನ ತಿಂಡಿಗಾಗಿ.ಶಾಲೆಗೆ ಹೋಗುವಾಗ ತಿನ್ನುವುದಕ್ಕಾಗಿ. ಕಾರಣ ಈಗಿನಂತೆ ಮಕ್ಕಳ ಕೈತಿಂಡಿ ಇರುತ್ತಿರಲಿಲ್ಲ. ಹಾಗಾಗಿಯೇ ಅವರು ಸದೃಢ ವಾಗಿದ್ದಿರಬೇಕು. ಬಟ್ಟೆಗಳೂ ಕೂಡ ಅತಿ ಕಡಿಮೆ . ಆದರೆ ನಮ್ಮ ಈಗಿನ ಬದುಕು ವಿಭಿನ್ನವಾದ ನೆಲೆ ಕಂಡುಕೊಂಡಿದೆ. ಎಲ್ಲವೂ ಕೈಗೆಟುಕುವ ಅಂತರದಲ್ಲೇ ಇವೆ . ಸಾವೂ ಕೂಡಾ ಅಲ್ಲವೇ? ನಮ್ಮ ಹಿಂದಿನ ಹಳ್ಳಿ ಹಾಡು ಪಾಡು ಕಷ್ಟಕರ ವಾಗಿದ್ದಿರಬಹುದು. ಆದರೆ ಈಗಿನಂತೆ ಇರಲಿಲ್ಲ. ಎಲ್ಲವೂ ನಗರೀಕರಣದ   ಪ್ರಭಾವ . ಅನುಕರಿಸಿದ್ದು ತುಸು ಹೆಚ್ಚೇ ಆಯಿತಲ್ಲವೇ? ಆಧುನಿಕತೆಯ ಸೋಗಿಗೆ ಮುಗ್ಧ ಜನರು ಗುರುತೇ ಸಿಗದಷ್ಟು ಬದಲಾದರು. ಕುಟುಂಬಗಳು ಒಡೆದವು ಹಾಗೆಯೇ ಭಾವನೆಗಳೂ. ಮೊದಲೆಲ್ಲ ಬೀದಿಯಲ್ಲಿ ಜಗಳಗಳು ಸಾಮಾನ್ಯವಾಗಿ ಇದ್ದವು. ಅಲ್ಲಿಗೆ ಮಾತು ನೇರವಾಗಿ ಮುಗಿಯುತ್ತಿದ್ದವು. ಆದರೆ ಈಗ ಮುಸುಕಿನೊಳಗಿನ ಗುದ್ದಾಟ. ಮಾತುಗಳಿಲ್ಲದ ಒಳಗೊಳಗಿನ ಕಿಚ್ಚುಗಳು, ಸಲ್ಲದ ಮಾತುಗಳು. ನಿಜಕ್ಕೂ ಹಳ್ಳಿಗಳು ಬದಲಾಗಬಾರದಿತ್ತು. ಸೌಕರ್ಯಗಳಿಗೆ ಮನಸೋತ ಮಂದಿ ನೆಮ್ಮದಿಯನ್ನು ಬಲಿನೀಡಿದ್ದಾರೆ. ಹೊಲಗದ್ದೆಗಳು ಕ್ರಮೇಣ ತೋಟಗಳಾದವು. ಆಹಾರ ಬೆಳೆಗಳು ಮರೆಯಾಗಿ ವಾಣಿಜ್ಯ ಬೆಳೆಗಳಿಗೆ ಹೆಚ್ಚು ಆದ್ಯತೆ ನೀಡಲಾಯಿತು. ಮೊದಲಾದರೆ ವಸ್ತುಗಳ ವಿನಿಮಯದ ಮೂಲಕವೇ ಜೀವನ ನಡೆಯುತ್ತಿತ್ತು. ಮನೆಯಲ್ಲಿ ಎಲ್ಲವೂ ಚೀಲದಲ್ಲಿ , ಹಗೇವು ಅಥವಾ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದವು‌. ಆದರೆ ಈಗ ಹಳ್ಳಿಗಳಲ್ಲಿ ಭತ್ತ, ರಾಗಿ, ಜೋಳ, ಅವರೆ, ಉದ್ದು, ಕಡಲೆ ಹೀಗೆ ಬೆಳೆಗಳೇ ಇಲ್ಲ. ಮನೆಯಲ್ಲಿ ದನಕರುಗಳೂ ಇಲ್ಲ. ಸಾಕುವವರಿಲ್ಲದೇ ಎಲ್ಲವೂ ಮಾರಲ್ಪಟ್ಟವು. ಸ್ವಂತಿಕೆಯೂ ಬಿಕರಿಯಾಯಿತು ಈ ನಡುವೆ. ಎತ್ತುಗಳಿಲ್ಲದ ಜಾಗಕ್ಕೆ ಟ್ರ್ಯಾಕ್ಟರ್ಗಳು, ಎತ್ತಿನ ಬಂಡಿಯ ಜಾಗಕ್ಕೆ ಕಾರುಗಳು ಮನೆಯನ್ನು ಸೇರಿದವು. ಎಲ್ಲವೂ ಬಹಳ ಬೇಗ ಬದಲಾಗಿ ಬಿಟ್ಟಿತು. ಜೀವನ ಶೈಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ಕರೆದೊಯ್ದಿತು. ಬಣ್ಣ ಬಣ್ಣದ ಬಟ್ಟೆಗಳಂತೆ ಹೊದಿಕೆ ಮಾತ್ರ ಬದಲಾಗಲಿಲ್ಲ ಮನುಷ್ಯನೇ ಬದಲಾವಣೆಗೆ ಒಳಪಟ್ಟನು. ಕಾರಣ ಬದಲಾವಣೆ ಜಗದ ನಿಯಮ , ಏನಂತೀರಿ? ಆಹಾರ – ವಿಹಾರ , ಉಡುಗೆ- ತೊಡುಗೆ, ಮನೆ- ಸಂಸಾರ ಎಲ್ಲವೂ ಸಾರ್ವಜನಿಕವಾಗಿ ಪ್ರದರ್ಶನಗೊಂಡವು. ನಾಲ್ಕು ಗೋಡೆಗಳ ನಡುವಣ ಬದುಕು ನಾಲ್ಕು ದಿಕ್ಕುಗಳಲ್ಲಿ ಪ್ರಸಾರವಾಗಿದ್ದು ನಮ್ಮ ಸಾಧನೆಯೇ? ಹಳ್ಳಿಗಳಾದ್ರೂ ಮೊದಲಿನಂತೆ ಇರಬೇಕಿತ್ತು ಅಂತ ನನಗೆ ತುಂಬಾ ಸಲ ಅನಿಸಿದೆ. ಅದರಲ್ಲೂ ವಿಶೇಷವಾಗಿ ನಮ್ಮ ಅಮ್ಮನ ಅಡುಗೆಯ ವಿಷಯದಲ್ಲಿ ನಾನೂ ತುಂಬಾ ಮಿಸ್ ಮಾಡಿಕೊಳ್ಳಲು ಕಾರಣ ಇದೆ. ಅಮ್ಮ ಒಲೆಯಲ್ಲಿ ಅಡುಗೆ  ಮಾಡುತ್ತಿದ್ದ ದಿನಗಳವು. ಎಷ್ಟು ರುಚಿಯಾಗಿರುತ್ತಿತ್ತು ಅಂದರೆ ಈಗಲೂ ಬಾಯಿಯಲ್ಲಿ ನೀರೂರುತ್ತದೆ.ನಮ್ಮ ಮನೆಗೆ ಸದಾ ಬರುತ್ತಿದ್ದ ನನ್ನ ಅಪ್ಪನ ಸೋದರಮಾವ ಕೇವಲ ಸಾಂಬಾರನ್ನೇ ಸೊರ್ ಎಂದು ಕುಡಿದುಬಿಡುತ್ತಿದ್ದರು. ಇದಲ್ಲವೇ ಹಳ್ಳಿಯ ಊಟದ ಗಮ್ಮತ್ತು‌. ಈಗೆಲ್ಲಿದೆ ನಮಗೆ ಒಲೆ ಹಚ್ಚಿ ಅಡುಗೆ ಮಾಡುವ ಸಮಯ ಗ್ಯಾಸ್ ಮೇಲೆ ಕುಕ್ಕರ್ ಸೀಟಿ ಒಡೆಸಿ , ರುಬ್ಬುವ ಯಂತ್ರದಲ್ಲಿ ನುಣ್ಣಗೆ ಮಾಡಿ  ಜಠರಕ್ಕೆ ಕೆಲಸವನ್ನು ನೀಡದೇ ಬೊಜ್ಜು ಬರಿಸಿಕೊಂಡಿದ್ದು. ಬರೆಯುತ್ತಾ ಹೋದರೆ ಹಳ್ಳಿಯ ಜೀವನದ ಸೊಗಸಿಗೆ ಪದಗಳೇ ಕಡಿಮೆ. ನನಗಂತೂ ಹೀಗೆ ಹಲವಾರು ಬಾರಿ ಅನಿಸಿದ್ದು ಹೋದವರೆಲ್ಲ ಪುಣ್ಯಮಾಡಿದ್ದಿರಬೇಕು. ಸಂಪೂರ್ಣ ಜೀವನವನ್ನು ಅನುಭವಿಸಿದ್ದಾರೆ‌. ಮೊದಲ ಹಳ್ಳಿಯ ಬದುಕು ಮತ್ತೊಮ್ಮೆ ಬಾರದೇ? ******************************

ಬದಲಾದ ಕಾಲಕ್ಕೆ ಹಳ್ಳಿಯ ಬದುಕು Read Post »

You cannot copy content of this page

Scroll to Top